ಕುರುಗೋಡು ಪ್ರದೇಶವು ೧೫’, ೨೦’, ೫೫” ಅಕ್ಷಾಂಶ ೭೬’, ೫೦’, ೧೭” ರೇಖಾಂಶವನ್ನು ಹೊಂದಿದೆ. ಈ ಪ್ರದೇಶವು ಸಮುದ್ರಮಟ್ಟದಿಂದ ಸುಮಾರು ೪೬೦ ಮೀ. ಎತ್ತರದಲ್ಲಿದೆ. ಅತಿ ಗರಿಷ್ಠವಾದ ಬೆಟ್ಟದ ಎತ್ತರ ೫೯೯ ಮೀಟರ್‌ಗಳು. ಇಡೀ ಬೆಟ್ಟಗಳು ಗ್ರಾನೈಟಿಕ್ ನೈಸ್ ಶಿಲೆಗಳಿಂದ ಕೂಡಿವೆ. ಇದರಲ್ಲಿ ಕೋಳಿಗುಡ್ಡಿದ ಕಲ್ಲಿನ ಸಮೂಹ ಒಂದು ಗೊತ್ತಾದ ರೀತಿ ಹರಡಿದೆ. ಬೆಟ್ಟಗಳ ನಡುವೆ ಅಲ್ಲಲ್ಲಿ ಸಣ್ಣ ಬಯಲು ಪ್ರದೇಶವಿದೆ. ಅಲ್ಲಿಯ ತಗ್ಗು ಪ್ರದೇಶಗಳು ಹಿಂದೆ ನೀರಿನ ಪೂರೈಕೆಯ ತಾಣಗಳಾಗಿದ್ದವು. ಕುರುಗೋಡು ಬೆಟ್ಟಗಳ ಸಮೂಹವನ್ನು ಅತಿ ಎತ್ತರದಿಂದ ಸುಮಾರು ೧೦೦೦ ಅಡಿಯಿಂದ ನೋಡಿದರೆ ಪೂರ್ವಾಭಿಮುಖವಾಗಿ ಕುಳಿತ ಬಸವನ ರೀತಿ ಕಾಣುತ್ತದೆ. ಈ ಪ್ರದೇಶದಲ್ಲಿ ಪ್ರಾಚೀನ ಕಾಲದ ಕುರುಹುಗಳು ಹರಡಿಕೊಂಡಿವೆ. ಈ ಕುರುಹುಗಳಲ್ಲಿ ಮಧ್ಯಹಳೇಶಿಲಾಯುಗದಿಂದ ಇಂದಿನವರೆಗಿನ ಬದುಕಿನ ಅನೇಕ ಅಂಶಗಳು ಕಾಣಸಿಗುತ್ತವೆ. ಅಂದರೆ ಮಧ್ಯ ಹಳೇ ಶಿಲಾಯುಗ, ನೂತನಶಿಲಾಯುಗ, ಕಬ್ಬಿಣಯುಗದ ಬೃಹತ್‌ಶಿಲಾಯುಗ, ಆದಿಚಾರಿತ್ರಿಕ ಮತ್ತು ಚಾರಿತ್ರಿಕಯುಗದ ಕುರುಹುಗಳು ಎಂದು ಗುರುತಿಸಬಹುದಾಗಿದೆ. ಇಲ್ಲಿ ಮಾನವ ಜೀವನ ಸಂಸ್ಕೃತಿ ನಿರಂತರವಾಗಿ ಮುಂದುವರೆದಿದ್ದರಿಂದ ಇದರ ಭೌಗೋಳಿಕ ಪ್ರಾಮುಖ್ಯತೆಯನ್ನು ತಿಳಿಯಬಹುದು. ಸಮೃದ್ಧಿಯಾದ ಈ ಪ್ರದೇಶ ಚಾರಿತ್ರಿಕ ಅಂಶಗಳ ಬೀಡಾಗಿದೆ. ಒಟ್ಟಾರೆ ಕುರುಗೋಡಿನ ಸುಮಾರು ೨೦ ಚ.ಕಿ.ಮೀ. ಪ್ರದೇಶದಲ್ಲಿ ಸಾಂಸ್ಕೃತಿಕ ಕುರುಹುಗಳು ದೊರಕುತ್ತವೆ. ಅಲ್ಲಲ್ಲೆ ಪ್ರಾಚೀನ ಸಂಸ್ಕೃತಿಯ ಅವಶೇಷಗಳು ಹರಡಿ ಕೊಂಡಿವೆ. ಇತ್ತೀಚಿನ ದಿನಗಳಲ್ಲಿ ನಗರೀಕರಣದಿಂದ ಅನೇಕ ಕುರುಹುಗಳು ವರ್ಷದಿಂದ ವರ್ಷಕ್ಕೆ ಕಣ್ಮರೆಯಗುತ್ತಿವೆ. ಕುರುಗೋಡಿನ ಪ್ರತಿ ಬೆಟ್ಟಕ್ಕೂ ಒಂದೊಂದು ಹೆಸರಿದೆ. ಅವುಗಳನ್ನು ಕಂದಾಯ ಇಲಾಖೆಯ ದಾಖಲೆಯಲ್ಲಿ ಜಿಲೆಲಿ ಕೊಂಡ, ಹನುಮನಕೊಂಡ, ನಿಶಾನಿಕೊಂಡ, ಆಲಬಾವಿಕೊಂಡ, ರಾಮನಕೊಂಡ, ಐದುಗುಡ್ಡಕೊಂಡ, ಜಿಂಕಲಕೊಂಡ, ಬೈರಿಕಲ್ಲು ಮುಂತಾಗಿ ಗುರುತಿಸಲಾಗಿದೆ.

ಇಲ್ಲಿಯ ಪ್ರಾಗೈತಿಹಾಸಿಕ ನಿವೇಶನಗಳ ಕ್ರಮಬದ್ಧವಾದ ಸತತ ಪ್ರಾದೇಶಿಕ ಅನ್ವೇಷಣೆ ಹಾಗೂ ನಂತರದ ಉದ್ದೇಶಿತ ವೈಜ್ಞಾನಿಕ ಅಧ್ಯಯನಗಳಿಂದ ನಂಬಲು ಅಸಾಧ್ಯವಾದ ಮಾನವ ಸಂಸ್ಕೃತಿಯ ಅನೇಕ ವಿಕಸನ ಹಂತಗಳು ಇಲ್ಲಿ ಸ್ಪಷ್ಟವಾಗುತ್ತಾ ಬಂದಿದೆ. ಇದರಿಂದಾಗಿ ‌ಪ್ರಾಗೈತಿಹಾಸಿಕ ಕಾಲದ ಜೀವನ ವಿಧಾನ, ಸಂಸ್ಕೃತಿಯ ಘಟ್ಟಗಳು ಬೆಳಕಿಗೆ ಬಂದಿವೆ. ಪುರಾತತ್ವ ಅವಶೇಷಗಳ ಶೋಧನೆ ಮತ್ತು ಅವುಗಳ ಮಹತ್ವದ ಅರಿವು ಪ್ರಾಗೈತಿಹಾಸಿಕ ಕಾಲಸ ಸಂಸ್ಕೃತಿಯನ್ನು ತಿಳಿಯಲು ಅನುಕೂಲವಾಗುತ್ತದೆ. ಇತ್ತೀಚಿನ ಅನ್ವೇಷಣೆ ಹಾಗೂ ಉತ್ಖನನದಿಂದ ಅನೇಕ ಮಾಹಿತಿಗಳು ದೊರಕುತ್ತಿವೆ. ಈ ಅನ್ವೇಷಣೆ ಹಾಗೂ ಉತ್ಖನನದಿಂದ ಭಾಗಗಳಾಗಿವೆ. ೧. ಪ್ರಾಗೈತಿಹಾಸಿಕ ೨. ಐತಿಹಾಸಿಕ

ಈ ಪ್ರದೇಶವು ಮುಂಗಾರು ಹಾಗೂ ಹಿಂಗಾರು ಮಳೆಯ ಸೆರಗಿನ ಪ್ರದೇಶ. ಆದುದರಿಂದ ಅಲ್ಬೇಜಿಯ (Albizzia) ಅಕೇಶಿಯ ಅರಾಬಿಕ (Acacia Arabica) ಯುಪ್ರೊಬಿಯಸ್ (Euphorbias) ಜಾತಿಗಳಿಗೆ ಸೇರಿದ ಮರಗಿಡಗಳ ಪ್ರದೇಶವಾಗಿದೆ. ಇಂತಹ ಮರಗಿಡದ ಪ್ರದೇಶವನ್ನು ಅವಲಂಬಿಸುವ ಪ್ರಾಣಿಗಳಾದ ಮೊಲ, ಜಿಂಕೆಯಂತಹ ಸಣ್ಣ ಸಸ್ತನಿ ಪ್ರಾಣಿಗಳು ಇಲ್ಲಿ ಕಂಡುಬರುತ್ತವೆ.

ಇದಕ್ಕೆ ಪೂರಕವಾಗಿ ಹೇಳುವುದಾದರೆ ತೆಕ್ಕಲಕೋಟೆ, ಸಂಗನಕಲ್ಲು, ಹಳ್ಳೂರಿನಲ್ಲಿ ಅಲ್ಜಿಝಿಯಾ ಅಕಾಶಿಯ ಗುಂಪಿಗೆ ಸೇರಿದ ಸಸ್ಯಗಳು ಬೆಳೆಯುತ್ತಿದ್ದವು. ತೆಕ್ಕಲಕೋಟೆ, ಸಂಗನಕಲ್ಲು, ಹಳ್ಳೂರಿನಲ್ಲಿ ದೊರೆತಿರುವ ‘ಇದ್ದಿಲಿ’ನಿಂದ ಈ ಸಸ್ಯಗಳನ್ನು ಗುರುತಿಸಲಾಗಿದೆ. ಇಂದಿಗೂ ಸಹ ಉರುವಲು, ಬೇಸಾಯದ ಉಪಕರಣಗಳಿಗೆ ಇವನ್ನು ಬಳಸುತ್ತಾರೆ. ಈ ಪ್ರದೇಶವು ಕಪ್ಪು ಎರೆಮಣ್ಣಿನಿಂದ ಕೂಡಿದ್ದು, ಇಲ್ಲಿ ಮೇಲೆ ತಿಳಿಸಿದ ಕುರುಚಲುಗಿಡಗಳ ಪ್ರದೇಶದಿಂದ ಆವೃತ್ತವಾಗಿದೆ. ಮಣ್ಣು ಫಲವತ್ತಾದರೂ ಮಳೆ ಕಡಿಮೆ ಆದುದರಿಂದ ಇತ್ತೀಚಿನವರೆವಿಗೂ ಒಣ ಬೇಸಾಯಕ್ಕೆ ಒಳಪಟ್ಟಿತ್ತು, ಆದರೆ ತುಂಗಭದ್ರ ಅಣೆಕಟ್ಟು ನಿರ್ಮಾಣದಿಂದ ತೋಡಿದ ಕಾಲುವೆಗಳಿಂದಾಗಿ ಇವು ನೀರಾವರಿ ಭೂಮಿಯಾಗಿವೆ. ಇಲ್ಲಿಯ ಭೂ ಭೌತಿಕ ಸ್ವರೂಪ, ದೊರೆಯುವ ಅದಿರು, ಖನಿಜ ಶಿಲಾಸ್ತೋಮ, ಮಣ್ಣು, ಸಸ್ಯಗಳು, ಕೃಷಿಗೆ ಒಳಪಡಿಸಿದ ಮೂಲ ತಳಿಗಳ ಅಸ್ತಿತ್ವ ಇವೆಲ್ಲ ಒಕ್ಕಲು ಸಂಸ್ಕೃತಿಗೆ ಬೇಕಾದ ಸಂಪನ್ಮೂಲಗಳ ತಳಪಾಯವನ್ನು ಹಾಕಿವೆ. ಒಟ್ಟಾರೆ ಹೇಳುವುದಾದರೆ ಭೌಗೋಳಿಕವಾಗಿ ಇದು ಪ್ರಾಚೀನ ಪ್ರದೇಶ, ವಿಶಾಲವಾಗಿ ಹರಡಿಕೊಂಡಿದೆ. ಬೀದರ್, ಗುಲ್ಬರ್ಗ, ಬಳ್ಳಾರಿ ಈ ಸ್ಥಳಗಳು ಎರೆಮಣ್ಣಿನಿಂದ ಫಲವತ್ತಾಗಿದ್ದರೂ ಕಡಿಮೆ ಪ್ರಮಾಣದ ಮಳೆಯಿಂದಾಗಿ ಕೃಷಿ ಉತ್ಪನ್ನ ಗರಿಷ್ಠ ಪ್ರಮಾಣ ಮುಟ್ಟುವತ್ತ ಸೆಣಸುತ್ತಿವೆ.

ಕುರುಗೋಡಿನ ಬೆಟ್ಟ ಶ್ರೇಣಿಗಳನ್ನು ಅಭ್ಯಾಸ ಮಾಡುವ ಮುನ್ನ ಈ ಜಿಲ್ಲೆಯಲ್ಲಿರುವ ಇತರೆ ಬೆಟ್ಟಗುಡ್ಡದ ಸಾಲುಗಳ ಪರಿಚಯ ಹಾಗೂ ಅವುಗಳ ವ್ಯಾಪಿಸಿರುವ ಪ್ರದೇಶಗಳ ಬಗೆಗೆ ತಿಳಿಯುವುದು ಸೂಕ್ತವಾಗಿದೆ. ಇವುಗಳಲ್ಲದೆ ಇಲ್ಲಿ ಹರಿಯುವ ತುಂಗಭದ್ರ ಹಲವು ರೀತಿಯಲ್ಲಿ ಜನಜೀವನದ ಮೇಲೆ ಪ್ರಭಾವ ಬೀರಿದೆ. ಅಲ್ಲದೆ ಇಲ್ಲಿ ಅನೇಕ ಸಂಸ್ಕೃತಿ ನೆಲೆಗಳ ಇರುವಿಕೆಗೂ ಕಾರಣವಾಗಿದೆ. ಇಲ್ಲಿನ ಬೆಟ್ಟಗುಡ್ಡಗಳಲ್ಲಿ ದೊರೆಯುವ ನೀರನ್ನು ಆಧರಿಸಿ ಆದಿಮಾನವ ಈ ಸ್ಥಳವನ್ನು ಮಾಡಿರಬೇಕೆನಿಸುತ್ತದೆ.

ಬಳ್ಳಾರಿ ಜಿಲ್ಲೆಯ ಜೀವನದಿ ತುಂಗಭದ್ರ. ಇದು ಪಶ್ಚಿಮಘಟ್ಟದಲ್ಲಿ ಹುಟ್ಟಿ ಈ ಜಿಲ್ಲೆಯ ನೆಲದಲ್ಲಿ ಹಸಿರು ಹೊದಿಕೆ ಹೊದಿಸುವುದರಲ್ಲಿ ತನ್ನದ ಕಾಣಿಕೆ ನಿಡಿದೆ. ಜಿಲ್ಲೆಯ ಪಶ್ಚಿಮದಲ್ಲಿ ಈ ನದಿ ಧಾರವಾಡದೊಡನೆ ಗಡಿರೇಖೆಯಾದರೆ, ಉತ್ತರದಲ್ಲಿ ರಾಯಚೂರು ಜಿಲ್ಲೆಯೊಡನೆ ಗಡಿರೇಖೆಯಾಗಿದೆ. ಇದೇ ರೀತಿ ಈ ಜಿಲ್ಲೆಯಲ್ಲಿ ಅತೀ ಮುಖ್ಯವಾದ ಭೌಗೋಳಿಕ ಮೇಲ್ಮೈ ಲಕ್ಷಣವನ್ನು ಗುರುತಿಸಬಹುದಾಗಿದೆ. ಪೂರ್ವ ಹಾಗೂ ಪಶ್ಚಿಮದ ನಡುವೆ ಸಂಡೂರು ಬೆಟ್ಟಗಳ ಶ್ರೇಣಿಯಿದೆ. ಈ ಶ್ರೇಣಿಗಳು ಈಶಾನ್ಯದಿಂದ ಆಗ್ನೇಯದ ವರೆಗೂ ಹರಡಿವೆ. ಸಿರಗುಪ್ಪ ಹಾಗೂ ಬಳ್ಳಾರಿ ಜಿಲ್ಲೆಯ ಪೂರ್ವದ ಭಾಗ ಬಯಲು ಪ್ರದೇಶವಾಗಿದೆ. ಸಮತಟ್ಟಾಗಿರುವುದರಿಂದ ನೀರಿನ ಶೇಖರಣೆಗೆ ಕಣಿವೆಗಳು ವಿರಳವಾಗಿವೆ. ಅಲ್ಲಲ್ಲಿ ಇರುವ ತಗ್ಗಿನಿಂದಾಗಿ ಮಳೆಗಾಲದ ನೀರು ಇಂಗುವಂಥ ವ್ಯವಸ್ಥೆಯಿದೆ. ಈ ಪ್ರದೇಶವು ಸಮತಟ್ಟಾಗಿರುವುದರಿಂದ ಯಾವುದೇ ಹೆಚ್ಚಿನ ಮರಗಿಡಗಳು ಇರುವುದಿಲ್ಲ. ಅಲ್ಲದೆ ಈ ಪ್ರದೇಶ ಕಪ್ಪು ಎರೆಮಣ್ಣಿನಿಂದ ಕೂಡಿದೆ. ಸಮತಟ್ಟಾದ ಪ್ರದೇಶದಲ್ಲಿ ಅಲ್ಲಲ್ಲಿ ಸಣ್ಣ ಬೆಟ್ಟಗಳ ಸಾಲನ್ನು ಕಾಣಬಹುದು. ಈ ಸಾಲು ಒಂದು ತುದಿಯಿಂದ ಇನ್ನೊಂದು ತುದಿಯವರೆಗೂ ಅಂದರೆ ಪೂರ್ವ ಪಶ್ಚಿಮ, ಉತ್ತರ ದಕ್ಷಿಣ ಹೀಗೆ ಯಾವುದೇ ರೀತಿಯ ಬಹು ಉದ್ದವಾದ ಶ್ರೇಣಿಗಳಾಗಿರುವುದಿಲ್ಲ. ಆದರೆ ಬೆಟ್ಟಗಳು ಅಲ್ಲಲ್ಲಿ ಸಣ್ಣದ್ವೀಪಗಳ ರೀತಿಯಾಗಿ ಮೇಲೆದ್ದಿರುವುದನ್ನು ಕಾಣಬಹುದು. ಈ ರೀತಿ ಅಲ್ಲಲ್ಲಿ ಬೆಟ್ಟಗಳು ಗುಂಪುಗಳಾಗಿರುವುದನ್ನು ಸಾಮಾನ್ಯವಾಗಿ ದಖ್ಖನ್ ಪ್ರಸ್ತಭೂಮಿಯ ಹಲವೆಡೆ ಕಾಣಬಹುದು. ಈ ಲಕ್ಷಣಗಳು ಜಿಲ್ಲೆಯ ಪೂರ್ವದಿಕ್ಕಿನಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ. ಆದರೆ ಪಶ್ಚಿಮದಲ್ಲಿ ಕೆಲವೆಡೆ ಮಾತ್ರ ಕಪ್ಪು ಎರೆಭೂಮಿ ಇದ್ದರೂ ಅದರೊಡನೆ ಕೆಂಪು ಹಾಗೂ ಕಬ್ಬಿಣಾಂಶ ಹೊಂದಿದ ಕೆಂಪು ಮಣ್ಣಿನ ಭೂಮಿಯಿದೆ. ಆದರೆ ಹಡಗಲಿಯ ಭಾಗದಲ್ಲಿ ಮೇಲ್ಕಂಡ ಲಕ್ಷಣಗಳು ಸ್ವಲ್ಪ ಭಿನ್ನವಾಗಿವೆ. ಇಲ್ಲಿಯ ಬೆಟ್ಟ ಗುಡ್ಡಗಳು ಪೂರ್ವದಲ್ಲಿ ಕಂಡುಬರುವ ಭೂ ಪ್ರದೇಶಕ್ಕಿಂತ ಭಿನ್ನವಾಗಿವೆ. ಬೆಟ್ಟಗುಡ್ಡಗಳಿರುವುದರಿಂದ ಇಲ್ಲಿ ಸ್ವಲ್ಪ ಮಳೆ ಜಾಸ್ತಿ ಬೀಳುತ್ತದೆ. ಒರಟಾದ ನೆಲ ಹಾಗೂ ಎತ್ತರದ ದಿಣ್ಣೆಗಳು ಇಲ್ಲಿವೆ. ಅಲ್ಲದೆ ಇವು ಇಳಿಜಾರನ್ನು ಉತ್ತರದ ಕಡೆ ಹೊಂದಿದೆ. ಇದರಿಂದಾಗಿ ಮಳೆಯ ನೀರು ಉತ್ತರದಲ್ಲಿರುವ ಜೀವನದಿ ತುಂಗಭದ್ರೆಗೆ ಹರಿಯುತ್ತದೆ. ಪಶ್ಚಿಮದಲ್ಲಿ ಭೂ ಮೇಲ್ಮೈ ಎತ್ತರದಲ್ಲಿರುವ ಜೀವನದಿ ತುಂಗಭದ್ರೆಗೆ ಹರಿಯುತ್ತದೆ. ಪಶ್ಚಿಮದಲ್ಲಿ ಭೂ ಮೇಲ್ಮೈ ಎತ್ತರದಲ್ಲಿರುವುದರಿಂದ ಕುರುಚಲುಗಿಡದ ಸಣ್ಣ ಕಾಡುಗಳಿವೆ.

ಸಂಡೂರು ಬೆಟ್ಟಗಳ ಶ್ರೇಣಿಯು ಮಧ್ಯದಲ್ಲಿರುವುದರಿಂದ ಜಿಲ್ಲೆಯಲ್ಲಿ ಎದ್ದು ಕಾಣುತ್ತದೆ. ಅಲ್ದಲೆ ಅದು ಕಬ್ಬಿಣ, ಮ್ಯಾಂಗನೀಸ್ ಅದಿರಿನ ಅಗಾಧ ಭಂಡಾರವನ್ನು ಹೊಂದಿದೆ. ಆದುದರಿಂದ ಈ ಪ್ರದೇಶ ಕಬ್ಬಿಣ ಹಾಗೂ ಮ್ಯಾಂಗನೀಸ್ ಅದಿರಿನ ಗಣಿಗಾರಿಕೆಗೆ ಹೆಸರುವಾಸಿಯಾಗಿದೆ.

ಮೇಲೆ ತಿಳಿಸಿದ ಬೆಟ್ಟಗಳ ಸಾಲುಗಳಲ್ಲದೆ, ಈ ಜಿಲ್ಲೆಯಲ್ಲಿ ಕೆಲವು ಬಿಡಿ ಬಿಡಿಯಾದ ಬೆಟ್ಟಗಳ ಗುಂಪುಗಳಿವೆ. ಸಂಡೂರು, ಬೆಟ್ಟಗಳ ಉತ್ತರಕ್ಕೆ ದರೋಜಿ ಬೆಟ್ಟಗಳಿವೆ. ಇದು ದರೋಜಿ ಗ್ರಾಮದ ಬಳಿಯಿದೆ. ದರೋಜಿ ಹಾಗೂ ಸಂಡೂರು ಬೆಟ್ಟಗಳ ನಡುವೆ ಕಣಿವೆ ಪ್ರದೇಶವಿದ್ದು ವ್ಯವಸಾಯಕ್ಕೆ ಅನುಕೂಲವಾಗಿದೆ. ಅಲ್ಲದೆ ಫಲವತ್ತಾದ ಭೂಮಿಯನ್ನು ಹೊಂದಿದೆ. ನೀರಾವರಿಯಿಂದಾಗಿ ಹಸಿರು ಕಂಗೊಳಿಸುತ್ತಿದೆ. ದರೋಜಿ ಬೆಟ್ಟಗಳ ಉತ್ತರಕ್ಕೆ ಕಂಪ್ಲಿ ಬೆಟ್ಟಗಳ ಸಾಲುಗಳಿವೆ. ಈ ಎರಡೂ ಬೆಟ್ಟಗಳ ಸಾಲಿನ ನಡುವಿನ ಭೂ ಪ್ರದೇಶದ ಕಣಿವೆಯಲ್ಲಿ ವ್ಯವಸಾಯಕ್ಕೆ ಯೋಗ್ಯವಾದ ಭೂಮಿಯಿದೆ.

ಕಂಪ್ಲಿ ಬೆಟ್ಟಗಳ ಸಾಲಿನಂತೆ ಇನ್ನೊಂದು ಬೆಟ್ಟಗಳ ಸಾಲು ಕುರುಗೋಡು ಪ್ರದೇಶದಲ್ಲಿ ಕಂಡುಬರುತ್ತದೆ. ಇವುಗಳನ್ನು ಕುರುಗೋಡು ಬೆಟ್ಟಗಳು ಎಂದು ಕರೆಯಲಾಗುತ್ತದೆ. ಇದು ಉತ್ತರ ಪೂರ್ವ ದಿಕ್ಕಿಗಿದೆ. ಈ ಬೆಟ್ಟಗಳ ಸಾಲು ಸ್ವಲ್ಪದೂರದವರೆಗೆ ಮಾತ್ರ ಹರಡಿದೆ. ಹೀಗೆಯೆ ಕೆಲವು ಬೆಟ್ಟಗಳು ಎಂದರೆ ಬಳ್ಳಾರಿಯಲ್ಲಿರುವ ಬೆಟ್ಟಗಳ ಸಾಲು. ಈ ಬೆಟ್ಟಗಳು ಗುಂಪುಗಳ ರೀತಿಯಿದ್ದು ಎತ್ತರವಾಗಿ ಕಾಣಬರುತ್ತವೆ.

ಸಂಡೂರು ಬೆಟ್ಟಗಳಲ್ಲಿ, ಮಲ್ಲಪ್ಪನ ಗುಡ್ಡ ಮತ್ತು ಕಲ್ಲಹಲಿಗುಂದ, ಧಾರವಾಡ ಸಿಶ್ಟ್ ಶಿಲಾ ಶ್ರೇಣಿಯನ್ನು ಹೊಂದಿವೆ. ದರೋಜಿ, ಕಂಪ್ಲಿ, ಕುರುಗೋಡು ಹಂಪಿಯ ಬೆಟ್ಟಗಳನ್ನು ಸೇರಿಸಿಕೊಂಡು ಎಲ್ಲವೂ ಗ್ರಾನೈಟ್ ಶಿಲೆಗಳನ್ನು ಹೊಂದಿವೆ. ಇಲ್ಲಿನ ಸಿಶ್ಟ್ ಶಿಲಾವರ್ಗದ ಶ್ರೇಣಿಗಳಲ್ಲಿ ಎತ್ತರದ ಕೋಡು ಬೆಟ್ಟಗಳನ್ನು ಕಾಣಬಹುದು. ಅದರೊಡನೆ ದೊಡ್ಡ ಕೊರಕಲಿನ ಕಣಿವೆಗಳು ಇರುವುದು ಸಾಮಾನ್ಯ. ಈ ಗ್ರಾನೈಟ್ ಬೆಟ್ಟಗಳಲ್ಲಿ ಕಲ್ಲುಗಳ ಕುಪ್ಪೆಗಳು ದೊಡ್ಡ ದೊಡ್ಡ ರಾಶಿಯಾಗಿದ್ದು, ಇಲ್ಲಿ ಬೆಟ್ಟಗಳ ಗುಂಪನ್ನು ಕಾಣಬಹುದಾಗಿದೆ. ಈ ರೀತಿಯ ಬೆಟ್ಟಗಳ ಗುಂಪನ್ನು ರಾಯಚೂರು-ಚಿತ್ರದುರ್ಗ ಮತ್ತು ಬಳ್ಳಾರಿಯ ಕೆಲವು ಪ್ರದೇಶಗಳಲ್ಲಿ ಕಾಣಬಹುದು. ಈ ಬೆಟ್ಟಗಳ ವಿಶೇಷತೆ ಎಂದರೆ, ಈ ಬೆಟ್ಟಗಳು ಅಸಾಮಾನ್ಯ ಕಂದು ಇಲ್ಲವೆ ಬೂದು ವರ್ಣದ, ಈಗಾಗಲೇ ತಿಳಿಸಿರುವ ಗ್ರಾನೈಟ್ ಶಿಲಾವರ್ಗಕ್ಕೆ ಸೇರಿವೆ. ಈ ಪ್ರದೇಶದಲ್ಲಿ ಸಾಮಾನ್ಯವಾಗಿ ಇರುವ ಅತೀ ಹೆಚ್ಚಿನ ಉಷ್ಣ ಶೀತಗಳಿಂದಾಗಿ, ಅಂದರೆ ಹವಾಗುಣದ ವೈಪರೀತ್ಯದಿಂದಾಗಿ ದೊಡ್ಡ ಬಂಡೆಗಳು ಸೀಳಿವೆ. ಹೀಗೆ ಬಿರುಕು ಬಿಟ್ಟು ಸೀಳಿದವುಗಳಲ್ಲಿ ಕೆಲವು ಮುಂಚಾಚಿನ ಕಲ್ಲಾಸರೆಗಳಾದರೆ ಕೆಲವು ಗುಹೆಗಳಾಗಿವೆ. ಸಹಸ್ರಾರು ವರ್ಷಗಳ ನಿರಂತರವಾದ ಸವಕಳಿಯಿಂದ ಗುಹೆಗಳು ಹೆಚ್ಚಾಗಿ ಕಂಡುಬಂದಿವೆ. ಇವು ಆದಿ ಮಾನವನ ವಸತಿಗೆ ಆಸರೆಯಾಗುತ್ತಿದ್ದವು. ಬೆಟ್ಟಗಳಿಂದ ಸುತ್ತುವರಿದ ಎತ್ತರವಾದ ಭೂ ಪ್ರದೇಶ ಪ್ರಕೃತಿದತ್ತ ಸುರಕ್ಷತೆಯನ್ನು ನೀಡಿವೆ. ಆದಿಮಾನವರು ವಾಸಿಸುವುದಕ್ಕೆ ಯೋಗ್ಯವಾಗಿವೆ.

ಇಂತಹ ಬೆಟ್ಟಗಳ ಸಾಲಿನಲ್ಲಿ ನದಿ, ಸಣ್ಣನದಿ, ಹಳ್ಳಗಳು ಹರಿಯುವುದು ಸಾಮಾನ್ಯ ಈ ನೀರಿನ ಪ್ರದೇಶಗಳ ಆಸುಪಾಸಿನಲ್ಲಿ ಫಲವತ್ತಾದ ಮಣ್ಣಿನಿಂದ ಕಾಡು ಮತ್ತು ಕೃಷಿಗೆ ಯೋಗ್ಯವಾದ ಪ್ರದೇಶ ದೊರಕಿದೆ. ಆದಿಮಾನವನು ವ್ಯವಸಾಯಕ್ಕೆ ತೊಡಗುವುದಕ್ಕೆ ಮುನ್ನ ಇಲ್ಲಿ ಉತ್ತಮ ಸಸ್ಯವರ್ಗಗಳಿದ್ದು, ಆತನ ಹಸಿವನ್ನು ಇಂಗಿಸುವ ಆಹಾರ ಪೂರೈಕೆಯ ಭಂಡಾರವಾಗಿತ್ತು. ವ್ಯವಸಾಯದ ಕಸಬನ್ನು ಕರಗತಮಾಡಿಕೊಂಡ ನಂತರ ಈ ಸ್ಥಳಗಳಲ್ಲಿದ್ದ ಉತ್ತಮವಾದ ಭೂಮಿ ವ್ಯವಸಾಯಕ್ಕೆ ಆಸರೆಯಾಗಿವೆ. ಈ ತೆರನಾದ ಬದುಕು ಪ್ರಾಗೈತಿಹಾಸಿಕ ಚಿತ್ರಗಳಲ್ಲಿ ಬಿಂಬಿತವಾಗಿವೆ. ಪ್ರಾಗೈತಿಹಾಸಿಕ ಜನರ ಜೀವನದ ಆರ್ಥಿಕ ಸಫಲತೆ, ತಮಗೆ ಆಹಾರವಾದ ಪ್ರಾಣಿಗಳ ಅಭಿವೃದ್ಧಿ, ಬೇಟೆ, ತಮ್ಮ ಜನಾಂಗದ ವಂಶಾಭಿವೃದ್ಧಿ, ಮುಂತಾದ ವಿಷಯಗಳನ್ನಾಧರಿಸಿ ಚಿತ್ರಗಳನ್ನು ರಚಿಸಲಾಗಿದೆ. ಸಾಮಾನ್ಯವಾಗಿ ಒಬ್ಬ ವ್ಯಕ್ತಿ ತಾನು ಕಂಡದ್ದನ್ನು ಹಾಗೆಯೇ ಚಿತ್ರಿಸುವ ಕಲಾವಂತಿಕೆಯನ್ನು ಹೊಂದಿದ್ದ. ಅಂದರೆ ಛಾಯಾ ನಿರೂಪಣಾ ತಂತ್ರವನ್ನು ಬಳಸಿ ಬಯಲುಬಂಡೆ ಹಾಗೂ ಗುಹೆಗಳಲ್ಲಿ ಚಿತ್ರ ರಚಿಸಲಾಗಿದೆ. ಚಿತ್ರಗಳು ಬಹು ಪ್ರಭಾವಶಾಲಿಯಾಗಿದ್ದು ಸಂಕೇತದಲ್ಲಿ ಪರಿಣಾಮಕಾರಿಯಾಗಿದೆ.

ಬಳ್ಳಾರಿ ಜಿ‌ಲ್ಲೆಯ ಅನೇಕ ಪ್ರದೇಶಗಳಲ್ಲಿ ಪುರಾತತ್ವ ಅವಶೇಷಗಳು ಕಂಡುಬರುತ್ತವೆ. ಅವುಗಳಲ್ಲಿ ಬಳ್ಳಾರಿ, ಕಪ್ಪಗಲ್ಲು, ಸಂಗನಕಲ್ಲು, ಕುರಕುಪ್ಪೆ ಹಾಗೂ ಗಾದಿಗನೂರುಗುಳಲ್ಲಿ ಹೇರಳವಾಗಿ ಪ್ರಾಗೈತಿಹಾಸಿಕ ಕುರುಹುಗಳು ದೊರಕಿವೆ. ಈ ಸ್ಥಳಗಳಲ್ಲಿ ಆದಿ ಹಳೇ ಶಿಲಾಯುಗ, ಮಧ್ಯ ಹಳೇಶಿಲಾಯುಗ, ಅಂತಿಮ ಪ್ರಾಚೀನಶಿಲಾಯುಗ, ನೂತನ ಶಿಲಾಯುಗ – ತಾಮ್ರಶಿಲಾಯುಗ ಸಂಸ್ಕೃತಿಯ ಮತ್ತು ಬೃಹತ್‌ಶಿಲಾಯುಗದ ಹಲವಾರು ಅವಶೇಷಗಳು ದೊರಕಿವೆ.

ಆದಿ ಹಳೇಶಿಲಾಯುಗದ ಕೆಲವು ಮುಖ್ಯ ಅವಶೇಷಗಳು ಕುರುಗೋಡು ಆಸುಪಾಸಿನಲ್ಲಿ ಕಂಡುಬಂದಿದೆ. ಅವುಗಳಲ್ಲಿ ಮುಖ್ಯವಾದವು ಬಾದನಹಟ್ಟಿ, ಲಿಂಗಸೂಗೂರು, ದರೋಜಿ, ಜೋಗ, ಗಾದಿಗನೂರು ಮುಂತಾದ ಸ್ಥಳಗಳಲ್ಲಿ ದೊರಕಿವೆ. ಈ ಸ್ಥಳಗಳಲ್ಲಿ ಕಂಡುಬಂದ ಆಯುಧಗಳನ್ನು ಕುರುಗೋಡಿನಲ್ಲಿ ದೊರೆತ ಆಯುಧಗಳಂತೆ ಟ್ಯ್ರಾಪ್ ಶಿಲೆಯಿಂದ ಮಾಡಲಾಗಿದೆ. ಆದರೆ ಹಿರೆಕುರವತ್ತಿಯ ಅವಶೇಷಗಳನ್ನು ಬೆಣಚುಕಲ್ಲಿನಿಂದ ಮಾಡಲಾಗಿದೆ. ಬಳ್ಳಾರಿಯ ದೊಡ್ಡ ಬೆಟ್ಟದಲ್ಲಿ ನೂತನ ಶಿಲಾಯುಗದ ಅವಶೇಷಗಳನ್ನು ೧೮೭೨ರಲ್ಲಿ ಫ್ರೆಜರ್ ಅವರು ಮೊದಲು ಗುರುತಿಸಿದರು. ಇದಾದ ನಂತರ ೧೮೮೪ರಿಂದ ರಾಬರ್ಟ್‌ ಬ್ರೂಸ್‌ಫೂಟ್ ಅವರು ನೂತನ ಶಿಲಾಯುಗದ ಅವಶೇಷಗಳೊಡನೆ, ಕಬ್ಬಿಣ ಕರಗಿಸುವ ವಸ್ತುಗಳನ್ನು ಹಾಗೂ ಕುಲುಮೆಯನ್ನು ಗುರುತಿಸಿದರು. ಇದೇ ರೀತಿ ಕಪ್ಪಗಲ್‌ನಲ್ಲಿ ಆಯುಧಗಳನ್ನು ತಯಾರಿಸುವ ಕಲ್ಲು, ವಿವಿಧ ಹಂತದಲ್ಲಿ ಸಿದ್ಧಪಡಿಸಿದ ಆಯುಧಗಳು, ತ್ಯಾಜ್ಯಶಿಲೆ, ಸಂಪೂರ್ಣವಾಗಿ ತಯಾರಾದ ಆಯುಧಗಳು. ಹೀಗೆ ನೂತನ ಶಿಲಾಯುಗದ ಆಯುಧದ ಭಂಡಾರ ಎನ್ನುವಷ್ಟು ವಸ್ತುಗಳು ಇಲ್ಲಿ ದೊರಕಿವೆ. ಇಲ್ಲಿ ಆಯುಧಗಳ ತಯಾರಿಕೆಗೆ ವಿವಿಧ ಜಾತಿಯ ಶಿಲೆಗಳನ್ನು ಉಪಯೋಗಿಸಿದ್ದಾರೆ. ಟ್ಯ್ರಾಪ್‌ಶಿಲೆಗಳಿಂದ ಕುಟ್ಟುವ ಕಲ್ಲು, ಅರೆಯುವ ಕಲ್ಲನ್ನು ತಯಾರಿಸಿದ್ದರು, ಅಲಗುಗಳ ತಯಾರಿಕೆಯಲ್ಲಿ ಚರ್ಟ್‌ ಅಗೇಟ್, ಚಾಲ್ಸಿಡನಿ, ರಾಕ್‌ಕ್ರಿಸ್ಟಲ್‌ಗಳನ್ನು ಉಪಯೋಗಿಸಿ ಹಲವಾರು ರೀತಿಯ ಸೂಕ್ಷ್ಮ ಶಿಲಾಯುಧಗಳನ್ನು ತಯಾರಿಸಿರುವುದು ತಿಳಿದುಬರುತ್ತದೆ. ಈ ಸ್ಥಳದ ಹತ್ತಿರದಲ್ಲಿ ಬಯಲು ಬಂಡೆಯ ಚಿತ್ರಗಳು ಹಾಗೂ ರೇಖಾಚಿತ್ರಗಳು ಹೇರಳವಾಗಿ ದೊರಕುತ್ತವೆ. ಮನುಷ್ಯ, ಜಿಂಕೆ, ಗೂಳಿ ಮುಂತಾದ ಚಿತ್ರಗಳನ್ನು ನಿಖರವಾಗಿ ಬಿಡಿಸಲಾಗಿದೆ.

ಸಂಗನಕಲ್ಲು ಬಳ್ಳಾರಿಯ ಇನ್ನೊಂದು ಮುಖ್ಯ ಪ್ರದೇಶ. ಇಲ್ಲಿ ೧೯೪೮ರಲ್ಲಿ ಬಿ.ಸುಬ್ಬರಾವ್ ಅವರು ಉತ್ಖನನ ನಡೆಸಿದರು. ಇದು ಬ್ರಹ್ಮಗಿರಿ ಹಾಗೂ ಚಂದ್ರಗಿರಿಗಿಂಥ ಮಿಗಿಲಾದ ಕೆಲವು ಕುರುಹುಗಳನ್ನು ನೀಡಿದೆ. ಇಲ್ಲಿ ಮೇಲಿಂದ ಕೆಳಗಿನ ಸ್ತರಗಳನ್ನು ನೋಡುವುದಾದರೆ, ಮೊದಲನೆಯದು ಬೃಹತ್‌ಶಿಲಾಯುಗ. ಇದು ಕೈಗೊಡಲಿ ಸಂಸ್ಕೃತಿಯೊಡನೆ ಮಿಲನವಾಗಿರುವುದನ್ನು ಕಾಣಬಹುದು. ಇದರ ಕೆಳಭಾಗದಲ್ಲಿ ನೂತನಶಿಲಾಯುಗದ ಕೈಗೊಡಲಿಗಳನ್ನು ಗುರುತಿಸಲಾಗಿದೆ. ಇದರ ತಳಭಾಗದಲ್ಲಿ ಯಾವುದೇ ಮೃತ್‌ಪಾತ್ರೆ ದೊರಕದ ಸೂಕ್ಷ್ಮಶಿಲಾಯುಗದ ಅಲಗುಗಳ ರೀತಿಯಲ್ಲಿನ ಆಯುಧಗಳು ದೊರಕಿವೆ. ಇವನ್ನು ಟ್ರಾಪ್ ಹಾಗೂ ಮರಳು ಕಲ್ಲಿನಿಂದ ತಯಾರಿಸಲಾಗಿದೆ. ಇಲ್ಲಿ ದೊರೆತ ಅಗಾಧ ಪ್ರಮಾಣದ ನೂತನ ಶಿಲಾಯುಗದ ಆಯುಧಗಳನ್ನು ಗಮನಿಸಿ ಇದನ್ನು “ಬಳ್ಳಾರಿಯ ನೂತನಶಿಲಾಯುಗ”ದ ಉಪಕರಣಗಳನ್ನು ತಯಾರಿಸುವ ತಾಣವಾಗಿತ್ತು ಎಂದು ಗುರುತಿಸಲಾಗಿದೆ. ಇಲ್ಲಿ ತಯಾರಿಸಿದ ಅಲಗುಗಳು ವಿವಿಧ ಅಳತೆಯದ್ದಾಗಿದೆ. ಅರ್ಧಚಂದ್ರಾಕೃತಿ ಮತ್ತು ಕೊಳವೆಯಾಕಾರದ ಸೀಳುಗಳನ್ನು ತೆಗೆದ ಉಂಡೆಕಲ್ಲುಗಳೂ ಇಲ್ಲಿ ಹೇರಳವಾಗಿ ದೊರಕಿವೆ.

ಈ ಕಾಲಘಟ್ಟದಲ್ಲಿ ಸುಟ್ಟಮಣ್ಣಿನಿಂದ ಗೂಳಿ, ಪಕ್ಷಿಗಳನ್ನು ರಚಿಸಿರುವುದು ತಿಳಿದಿದೆ. ಇವುಗಳಲ್ಲದೆ ಸೂಕ್ಷ್ಮಶಿಲಾಯುಗದ ಕಾಲಮಾನವನ್ನು ಕ್ರಿ.ಪೂ. ೩೫೦೦ ಎಂದು ಗುರುತಿಸಲಾಗಿದೆ. ಈ ಸಾಂಸ್ಕೃತಿಕ ಹಂತದ ಕೆಲವು ಮಹತ್ವದ ಅಂಶಗಳು ಗಮನಾರ್ಹ. ಮೇಲ್ಮೈನಲ್ಲಿ ಕೆಲವು ಆಕೃತಿಗಳು ದೊರಕಿದ್ದು ಅವು ಸಾಕಷ್ಟು ಹಾಳಾಗಿರುವುದರಿಂದ ಕಾಲಮಾನ ನಿರ್ಧರಿಸುವುದು. ಕಷ್ಟಕರವಾಗಿದೆ. ಸೂಕ್ಷ್ಮಶಿಲಾಯುಗದ ಅನೇಕ ಉಪಕರಣಗಳನ್ನು, ಕುರುಗೋಡಿನ ವಜ್ರದುಂಡಿ ಬಸಪ್ಪನ ದೇಗುಲದ ಮುಂದಿನ ದಿಣ್ಣೆಯಲ್ಲಿ ಮತ್ತು ಜಿಂಕಲಕೊಂಡದ ಹಿಂಭಾಗದಲ್ಲಿ ದೊರಕುತ್ತವೆ. ವಜ್ರದುಂಡಿ ಬಸಪ್ಪನ ದೇಗುಲದ ಎದುರಿನ ಜಾಗದಲ್ಲಿ ಕಣ್ಣು ಕೋರೈಸುವಷ್ಟು ಬಿಳಿಕಲ್ಲಿನ ಸಣ್ಣ ತುಣುಕುಗಳನ್ನು ಕಾಣಬಹುದು. ಇವು ತಯಾರಿಕೆಯಲ್ಲಿ ಉಂಟಾದ ಪುಡಿಚಕ್ಕೆಗಳು. ಅನುಪಯುಕ್ತ ಕಲ್ಲುಚೂರುಗಳು, ಅರೆ ಉಪಕರಣಗಳು, ಸಿದ್ಧ ಉಪಕರಣಗಳು. ಈ ಪ್ರದೇಶವು ಉಪಕರಣಗಳನ್ನು ತಯಾರಿಸುವ ಕಾರ್ಯಾಗಾರದ ಮೊದಲನೆಯ ಹಂತದ್ದೆಂದು ತೋರುತ್ತದೆ. ಜಿಂಕಲಕೊಂಡದ ಹಿಂಭಾಗದಲ್ಲಿ ದೊರೆಯುವ ಅಲಗುಗಳನ್ನು ಜಾಸ್ಪರ್, ಅಗೇಟ್, ಚರ್ಟ್‌‌ನಿಂದ ಸಿದ್ಧಪಡಿಸಲಾಗಿದೆ.

ಉಪಕರಣಗಳನ್ನು ತಯಾರಿಸಿದ ವಸ್ತುಗಳು

ವಜ್ರದುಂಡಿ ಕಲ್ಲಿನಲ್ಲಿ ನೂತನಶಿಲಾಯುಗದ ಆಯುಧಗಳನ್ನು ತಯಾರಿಸಿರುವುದು ಹೇರಳವಾಗಿ ಕಂಡುಬರುತ್ತದೆ. ವಜ್ರದುಂಡಿ ಬಸಪ್ಪ ದೇವಾಲಯದ ಬಳಿ ವಜ್ರದುಂಡಿ ಶಿಲೆಯು ಉಂಡೆಕಲ್ಲುಗಳ ರೂಪದಲ್ಲಿ ಕಾಣಬರುತ್ತವೆ. ಹಾಗೆಯೇ ಬಾಳೇಕೊಳ್ಳದ ಪ್ರದೇಶದಲ್ಲಿ ವಜ್ರದುಂಡಿ ಕಲ್ಲುಗಳು ಹೇರಳವಾಗಿ ದೊರಕುತ್ತವೆ. ನೂತನಶಿಲಾಯುಗದ ಆಯುಧಗಳನ್ನು ಸ್ಥಳೀಯವಾಗಿ ತಯಾರಿಸಲಾಗಿದೆ. ಪಂಚಮುಖಿ ವೀರಭದ್ರನ ಎದುರು ಬೆಟ್ಟದಲ್ಲಿ ನೂತನಶಿಲಾಯುಗದ ಕೊಡಲಿಗಳನ್ನು ಹರಿತವಾಗಿ ಮಾಡಲು ಗ್ರಾನೈಟ್ ಕಲ್ಲಿನಲ್ಲಿ ಸಣ್ಣ ತಗ್ಗನ್ನು ಮಾಡಿ ಸತತವಾಗಿ ಉಜ್ಜಿರುವುದನ್ನು ಅಲ್ಲಲ್ಲಿ ಕಾಣಬಹುದು. ಇಂತಹ ತಗ್ಗನ್ನು ಪಂಚಮುಖಿ ವೀರಭದ್ರನ ಗುಡಿಯ ಮುಂದಿನ ಬೆಟ್ಟಗಳಲ್ಲಿಯೂ ಕಾಣಬಹುದು. ತಯಾರಿಕೆಯ ಪ್ರಕ್ರಿಯೆಯಲ್ಲಿ ತೊಡಗಿದ್ದಾಗ ಕೆಲವು ಕೊಡಲಿಗಳು ಮುರಿದು ಹಾಳಾಗಿರುವುದನ್ನು ಹಾಗೂ ತಯಾರಿಕೆಯ ವಿವಿಧ ಹಂತಗಳಲ್ಲಿರುವ ಕೊಡಲಿಗಳು ಕಂಡುಬರುತ್ತವೆ. ಕೈಗೊಡಲಿಗಳನ್ನು ತಯಾರಿಸುವ ಬೃಹತ್ ತಯಾರಿಕಾ ಪ್ರದೇಶ ಇದಾಗಿಲ್ಲದಿದ್ದರೂ, ತಮ್ಮ ಅಗತ್ಯಕ್ಕೆ ಅನುಗುಣವಾಗಿ ಬೇಕಾಗುವ ಕೊಡಲಿಗಳನ್ನು ಇಲ್ಲಿ ಸಿದ್ಧಪಡಿಸಿಕೊಂಡಿರುವುದಕ್ಕೆ ಅನೇಕ ನಿರ್ದಶನಗಳನ್ನು ಬಾಳೇಕೊಳ್ಳದಲ್ಲಿ ಗುರುತಿಸಬಹುದಾಗಿದೆ. ನೆಲದ ಮೇಲ್ಭಾಗದಲ್ಲಿ ಅಲ್ಲಲ್ಲಿ ಅಂದರೆ ಸಂಗಮೇಶ್ವರ ಗುಡಿ, ಉಜಾಳೇಶ್ವರ ಪೇಟೆಯ ಆಸುಪಾಸಿನಲ್ಲಿ ಅನೇಕ ಅಳತೆಯ ಕೈಗೊಡಲಿಗಳು ದೊರಕಿವೆ. ಈ ಎಲ್ಲಾ ಉಪಕರಣಗಳು ಉತ್ತಮ ರೀತಿಯಲ್ಲಿವೆ.

ಮಸ್ಕಿ ಹಾಗೂ ಸಂಗನಕಲ್ಲಿನ ಉತ್ಖನನದಲ್ಲಿ ಕಂಡುಬಂದಂತೆ ಇಲ್ಲಿಯೂ ಅದೇ ರೀತಿಯ ಅಂಶಗಳು ಕಾಣಸಿಗುತ್ತವೆ. ಸಂಗನಕಲ್ಲಿನ ಉತ್ಖನನದಲ್ಲಿ ಕಂಡುಬಂದ ಮೃತ್ಪಾತ್ರೇ ರಹಿತವಾದ ಹಂತವು ಇಲ್ಲಿ ಇದ್ದಿರಬಹುದು. ಇಲ್ಲಿ ನೂತನಶಿಲಾಯುಗಕ್ಕೆ ಸಂಬಂಧಿಸಿದ ಕೈಯಿಂದ ಸಿದ್ಧಪಡಿಸಿದ ಮೃತ್ಪಾತ್ರೆಗಳು ದೊರಕಿವೆ. ಈ ಹಂತವನ್ನು ನೂತನ ಶಿಲಾ-ತಾಮ್ರಯುಗದ ಆರಂಭಿಕ ಹಂತಕ್ಕೆ ಸೇರಿದವು ಎಂದು ಹೇಳಬಹುದಾಗಿದೆ.

ವಾಸ್ತವ್ಯದ ನೆಲೆ

ನೂತನಶಿಲಾಯುಗದ ನೆಲೆಗಳು ಹೆಚ್ಚಾಗಿ ನದಿಗಳ ಅಥವಾ ಉಪನದಿಗಳ ದಂಡೆ ಮೇಲೆ ಅಥವಾ ಸಮೀಪದಲ್ಲಿ ಇರುವುದು ಕಂಡುಬರುತ್ತವೆ. ಫಲವತ್ತಾದ ನೆಲೆ, ದನಕರುಗಳಿಗೆ ಬೇಕಾಗುವ ಹುಲ್ಲುಗಾವಲು, ಇವು ಸಾಮಾನ್ಯವಾಗಿ ಕಂಡುಬರುತ್ತವೆ. ಕುರುಗೋಡಿನ ಬೆಟ್ಟಗಳ ಕಣಿವೆಯಲ್ಲಿ ಪ್ರಸ್ತುತ ಹರಿಯುವ ಸಣ್ಣ ಹಳ್ಳಗಳು ಬೇಸಿಗೆಯನ್ನು ಹೊರತುಪಡಿಸಿ ನೀರಿಗೆ ಬಹಳವಾಗಿ ಅನುಕೂಲವಾಗಿವೆ. ಉಜಾಳೇಶ್ವರ ಪೇಟೆಯ ಬಳಿಯ ಹಿರೇಹಳ್ಳದ ಪ್ರದೇಶ, ಸನಿಹದಲ್ಲಿರುವ ಬೆಟ್ಟದ ತಪ್ಪಲು, ಆದಿಮಾನವನ ವಾಸಕ್ಕೆ ಯೋಗ್ಯವಾದ ಪ್ರದೇಶಗಳಾಗಿವೆ. ಬೆಟ್ಟಗುಡ್ಡಗಳ ಮಧ್ಯದ ಬಯಲಿನಲ್ಲಿ ಅನೇಕ ಕಡೆ ನೀರಿನ ಅವಶ್ಯಕತೆಗೆ ಬೇಕಾಗುವ ನೀರಿನ ಡೊಣೆಗಳಿವೆ. ಸುತ್ತಲೂ ಬೃಹತ್ ಕಲ್ಲುಗಳ ಕೋಟೆಯಂಥ ಪ್ರದೇಶವು ಸೂಕ್ತ ರಕ್ಷಣೆ ಒದಗಿಸಿವೆ. ಈ ಬೆಟ್ಟಗುಡ್ಡಗಳಲ್ಲಿ ಕಾಣಬರುವ ಅನೇಕ ಪ್ರಾಣಿಗಳನ್ನು ಆ ಜನರು ಬೇಟೆಯಾಡಿರಬೇಕು. ಬೆಟ್ಟಗಳ ಬುಡದಲ್ಲಿರುವ ಕರಿಮಣ್ಣಿನ ಫಲವತ್ತಾದ ಭೂಮಿ ವ್ಯವಸಾಯಕ್ಕೆ ಅಗತ್ಯವಾದ ಭೂಮಿಯಾಗಿದೆ. ಈ ಪ್ರದೇಶಗಳ ಹತ್ತಿರದಲ್ಲೇ ವಸತಿಗೆ ಯೋಗ್ಯವಾದ ಸ್ಥಳಗಳನ್ನು ಜನರು ಆಯ್ದುಕೊಂಡು ಸೂಕ್ತ ರಕ್ಷಣಾ ವ್ಯವಸ್ಥೆಯಲ್ಲಿ ಬದುಕು ನಡೆಸುತ್ತಿದ್ದರು ಎಂದು ತಿಳಿಯುತ್ತದೆ. ಒಟ್ಟಾರೆ ಈ ಪ್ರದೇಶವನ್ನು ಗಮನಿಸಿದರೆ ಕೆಲವು ನೆಲೆಗಳು ಸಣ್ಣಪುಟ್ಟ ಗುಂಡಿಗಳ ಬಳಿ ಇವೆ. ಇಲ್ಲಿ ಮಳೆಗಾಲದ ನಂತರ ನೀರು ಕಡಿಮೆಯಾಗುತ್ತಿದ್ದರೆ ಚಳಿಗಾಲದಲ್ಲಿ ಸುತ್ತಲಿನ ಪ್ರದೇಶದಿಂದ ನೀರು ಬಸಿದು ಹಸಿರು ಬೆಳೆಯುವುದಕ್ಕೆ ಸಹಕಾರಿಯಾಗಿತ್ತು. ಪ್ರಾಣಿಗಳ ಆಹಾರಕ್ಕೆ ಉತ್ತಮ ತಾಣವಾದ್ದರಿಂದ ಮನುಷ್ಯನು ಬೇಟೆಯಾಡುವುದಕ್ಕೆ ಉತ್ತಮ ನೆಲೆಯನ್ನು ಇಲ್ಲಿ ಕಂಡುಕೊಂಡಿದ್ದ.

ಕೈಗೊಡಲಿಗಳು

ವಜ್ರದುಂಡಿ ಕಲ್ಲುಗಳನ್ನು ಉಪಯೋಗಿಸಿ ಆಯುಧಗಳನ್ನು ತಯಾರಿಸುತ್ತಿದ್ದರು. ಆಯ್ದ ಕಲ್ಲನ್ನು ಒಂದು ಆಕಾರಕ್ಕೆ ತರುವುದು, ನಂತರ ಸಣ್ಣಸಣ್ಣ ಚಕ್ಕೆಗಳನ್ನು ತೆಗೆದು ಸಮತಲ ಮಾಡುವುದು, ಇದಾದನಂತರ ಉಜ್ಜಿ ನಯಮಾಡುವುದು, ನಂತರ ಇಡೀ ಭಾಗವನ್ನು ತಿಕ್ಕಿ ತಿಕ್ಕಿ ಹೊಳೆಯುವಂತೆ ಮಾಡಿರುವುದನ್ನು ಗುರುತಿಸಲಾಗಿದೆ. ಈ ರೀತಿಯ ಹಂತಗಳು ಸಂಗನಕಲ್ಲು, ತೆಕ್ಕಲಕೋಟೆ ಮುಂತಾದ ಕಡೆ ಕಂಡುಬಂದಿದೆ. ಕುರುಗೋಡಿನಲ್ಲೂ ಸಹ ಪಂಚಮುಖಿ ವೀರಭದ್ರ ಹಾಗೂ ಬಾಳೇಕೊಳ್ಳದಲ್ಲಿ ಸಣ್ಣ ಗುಡಿಗಳನ್ನು ದೊಡ್ಡ ಬಂಡೆಗಳ ಹರವಿನ ಮೇಲೆ ಸಿದ್ಧಪಡಿಸಿ ಅಲ್ಲಿ ಕೈಗೊಡಲಿಗಳನ್ನು ಉಜ್ಜಿ ಹೊಳಪಾಗುವಂತೆ ಮಾಡಿರುವುದನ್ನು ಗುರುತಿಸಬಹುದು.

ಈ ಪ್ರದೇಶದಲ್ಲಿ ದೊಡ್ಡ ಕಲ್ಲಿನ ಉಪಕರಣಗಳಲ್ಲದೆ ದ್ವಿಮುಖ ಅಲಗಿನ ನೀಳ ಚಕ್ಕೆಗಳು ಮತ್ತು ಚಕ್ಕೆಗಳನ್ನು ತೆಗೆದ ತಿರುಳುಗಲ್ಲುಗಳನ್ನು ಇಲ್ಲಿ ದೊರಕಿವೆ. ಈ ಅಲಗುಗಳು ಚಾಲ್ಸಿಡೆನಿ, ಜಾಸ್ಟರ್, ಚರ್ಟ್ ಅಗೇಟ್ ಮುಂತಾದ ಶಿಲೆಗಳಲ್ಲಿ ಉಪಯೋಗಿಸಿ ಅಲಗುಗಳನ್ನು ಸಿದ್ಧಪಡಿಸಿದ್ದಾರೆ. ನೀಳ ಚಕ್ಕೆಗಳನ್ನು ಅದರ ತುದಿ ಹಾಗೂ ಒಂದು ತ್ರಿಕೋನಾಕೃತಿಯ ಉಪಕರಣಗಳನ್ನು ಸಿದ್ಧಪಡಿಸಿ ಉಪಯೋಗಿಸಿರುವುದು ಇಲ್ಲಿ ಕಂಡುಬರುತ್ತದೆ. ವಜ್ರದುಂಡಿ ಬಸಪ್ಪ ದೇವಾಲಯದ ಮುಂಭಾಗದ ದಿಣ್ಣೆಯಲ್ಲಿ ವ್ಯಾಪಕವಾಗಿ ಅಲಗಿನ ತುಂಡುಗಳು, ನಿಷ್ಪ್ರಯೋಜಕವೆಂದು ನಿರಾಕರಿಸಿದ ತುಂಡುಗಳು, ಉಪಕರಣಕ್ಕೆ ಬೇಕಾದ ಮೂಲ ಶಿಲೆಗಳನ್ನು ಗುರುತಿಸಬಹುದು. ಕೋರ್‌ಗಳು ಹೀಗೆ ಜಿಂಕಲಕೊಂಡ ಗುಡ್ಡದ ಬಳಿಯೂ ಹೆಚ್ಚಿನ ಅಲಗಿನ ತುಂಡುಗಳು ದೊರಕುತ್ತವೆ.

ಮೃತ್ಪಾತ್ರೆಗಳು

ಇಲ್ಲಿನ ಮೃತ್ಪಾತ್ರೆಗಳನ್ನು ಕೈಯಿಂದಲೇ ಸಿದ್ಧಪಡಿಸಲಾಗಿದೆ. ಇವು ನಸುಕಂದು ಬಣ್ಣ ಹಾಗೂ ಕಪ್ಪೊತ್ತಿದ ಪಾತ್ರೆಗಳು ಇವುಗಳ ಮೇಲೆ ತೆಳ್ಳನೆಯ ಲೇಪನವಿದ್ದು, ಕೆಲವು ಒರಟಾದ ಮೇಲ್ಮೈಯನ್ನು ಹೊಂದಿವೆ. ಇಲ್ಲಿ ದೊಡ್ಡ ಗುಡಾಣಗಳು, ಮಧ್ಯಮ ಆಕಾರದ ಉಬ್ಬಿದ ಹೊಟ್ಟೆಯ ಗಡಿಗೆಗಳು, ಬಟ್ಟಲು, ಮುಚ್ಚಳ ಮುಂತಾದ ಆಕಾರಗಳಲ್ಲಲಿ ಉಪಯೋಗವಾಗುತ್ತಿದ್ದವು. ಗುಡಾಣಗಳನ್ನು ಶವ ಸಂಸ್ಕಾರಕ್ಕೂ ಉಪಯೋಗಿಸಿರುವುದು ತೆಕ್ಕಲಕೋಟೆಯ ಉತ್ಖನನದಲ್ಲಿ ಕಂಡುಬಂದಿವೆ. ಈ ಮೃತ್ಪಾತ್ರೆಗಳು ನೂತನ ಶಿಲಾಯುಗ-ತಾಮ್ರ ಶಿಲಾಯುಗಕ್ಕೆ ಸೇರಿವೆ. ಕೆಲವು ಮೃತ್ಪಾತ್ರೆಗಳ ಮೇಲೆ ರೇಖಾಚಿತ್ರಗಳನ್ನು ಬಿಡಿಸಲಾಗಿದೆ. ಕೆಲವು ಮೃತ್ಪಾತ್ರೆಯ ಬಾಯಿಯ ಭಾಗಕ್ಕೆ ಬೆರಳನ್ನು ಒತ್ತಿ ಉದ್ದಕ್ಕೂ ಮಣಿಗಳ ಹಾಗೆ ಸಿಂಗರಿಸಿರುವುದು ಕಂಡುಬರುತ್ತದೆ. ಅದೇ ರೀತಿ ಚವುಟುವುದರ ಮೂಲಕವೂ ಸಿಂಗರಿಸಲಾಗಿದೆ. ಕೆಲವು ರೇಖಾ ಚಿತ್ರಗಳು ಗಮನ ಸೆಳೆಯುತ್ತವೆ. ಕೆಲವು ರೀತಿಯ ಚಿಕ್ಕ ಆಕಾರಗಳನ್ನು ಅಂಟಿಸಿರುವುದೂ ಕಂಡುಬರುತ್ತವೆ. ಇವು ಮನುಷ್ಯಾಕೃತಿಯನ್ನು ಹೋಲುತ್ತವೆ. ಕುರುಗೋಡಿನ ಪೂರ್ವಕ್ಕೆ ಬೂದದಿನ್ನೆಗಳು ಇದ್ದ ಪ್ರದೇಶ ಕಂಡುಬರುತ್ತದೆ. ಕುರುಗೋಡಿಗೆ ಹತ್ತಿರದ ಕಪ್ಪಗಲ್ಲಿನಲ್ಲಿ ಬೂದಿದಿನ್ನೆಗಳ ಉತ್ಖನನವನ್ನು ನಡೆಸಲಾಗಿದೆ. ಹಾಗೆಯೇ ಗಾದಿಗನೂರು, ಕುಡುತಿನಿಯ ಬಳಿಯೂ ಬೂದಿದಿನ್ನೆಗಳಿವೆ. ರಾಬರ್ಟ್ ಬ್ರೂಸ್‌ಫೂಟ್ ೧೮೮೭ರಲ್ಲಿ ಕೆಲವು ಬೂದಿದಿನ್ನೆಗಳು ಮತ್ತು ಸುತ್ತಮುತ್ತಲಿನ ಶಿಲಾಯುಗದ ಸಂಸ್ಕೃತಿಯ ನೆಲೆಗಳನ್ನು ಪರಿಶೀಲಿಸಿ, ಅವುಗಳ ನೂತನ ಶಿಲಾಯುಗದ ಕಾಲದ್ದೆಂದು ನಿರ್ಧರಿಸಿದ್ದರು. ಸಗಣಿಯನ್ನು ಸುಮಾರು ೧೨೦೦ ಸೆಂಟಿ ಗ್ರೇಡ್‌ನಲ್ಲಿ ಸುಡುವುದರಿಂದ ಬೂದಿದಿನ್ನೆಗಳನ್ನು ನಿರ್ಮಾಣವಾಗಿವೆ ಎಂದು ಧೃಡಪಡಿಸಿದ್ದಾರೆ. ಡಾ. ಪದ್ಮಯ್ಯನವರ ಪ್ರಕಾರ ಕಾಡು ಪ್ರಾಣಿಗಳಿಂದ ದೂರವಿರಲು ಇಂತಹ ಸಗಣಿಯನ್ನು ಸುಡುವ ಕ್ರಿಯೆ ನಡೆಯುತ್ತಿತ್ತು ಎಂದು ತಿಳಿದುಬರುತ್ತದೆ. ಡಾ.ಸುಂದರ ಅವರು ಅಭಿಪ್ರಾಯ ಪಟ್ಟಿರುವಂತೆ ಇವು ದೊಡ್ಡ ಪ್ರಮಾನದ ಸ್ಮಾರಕ ದಹನಗಳಿಂದ ಉಂಟಾದುವು ಎಂದು ತಿಳಿಯಬಹುದಾಗಿದೆ.

ಬೂದಿಗುಡ್ಡಗಳು ಬಾಳೇಕೊಳ್ಳದ ಬುಡದಲ್ಲಿ ಉಜಾಳೇಶ್ವರ ದೇವಾಲಯದ ಬಳಿ ಕಂಡುಬಂದಿವೆ. ಹಾಗೆಯೆ ಬಾದನಹಟ್ಟಿಯಲ್ಲೂ ಕಂಡುಬಂದಿವೆ.

ಕಬ್ಬಿಣ ಯುಗದ ಬೃಹತ್ ಶಿಲಾಸಂಸ್ಕೃತಿ

ಬಳ್ಳಾರಿ ಜಿಲ್ಲೆಯ ಹಲವು ಸ್ಥಳಗಳಲ್ಲಿ ಈ ಸಂಸ್ಕೃತಿಯ ಜನ ವಾಸ್ತವ್ಯವಿದ್ದ ಸಾಂಸ್ಕೃತಿಕ ಅವಶೇಷಗಳು ದೊರಕಿವೆ. ಜೊತೆಗೆ ಈ ಹಂತದ ಹಿಂದಿನ ಶಿಲಾ-ತಾಮ್ರಯುಗ, ಅಲ್ಲದೆ ಬೃಹತ್‌ಶಿಲಾಯುಗದ ತರುವಾಯದ ಆದಿಇತಿಹಾಸ ಕಾಲದ ಜನವಾಸ್ತವ್ಯದ ಅವಶೇಷಗಳೂ ಕಂಡುಬಂದಿವೆ. ಹೀಗೆ ಮೂರು ಸಾಂಸ್ಕೃತಿಕ ಹಂತಗಳ ಜನರ ನೆಲಗಳು ಮಸ್ಕಿ, ಸಂಗನಕಲ್ಲು, ಚಂದ್ರವಳ್ಳಿ, ಬ್ರಹ್ಮಗಿರಿ ಮುಂತಾದ ಕಡೆಗಳಲ್ಲಿವೆ. ಆದರೆ ಜನ ವಾಸ್ತವ್ಯದ ನೆಲೆಗಳು ಬಳ್ಳಾರಿ, ರಾಯಚೂರು ಪ್ರದೇಶದಲ್ಲಿ ದೊರಕಿವೆ. ಉತ್ಖನನಗೊಂಡ ಪ್ರದೇಶಗಳಲ್ಲಿ ಅಂದರೆ ಸಂಗನಕಲ್ಲು, ಟಿ.ನರಸೀಪುರ ಇಲ್ಲಿ ಶಿಲಾ-ತಾಮ್ರಯುಗ ಸಂಸ್ಕ್ರತಿಯ ಅವಶೇಷಗಳು ಮತ್ತು ಕಬ್ಬಿಣ ಯುಗದ ಬೃಹತ್ ಶಿಲಾಯುಗ ಸಂಸ್ಕೃತಿಯ ಅವಶೇಷಗಳು ಗಣನೀಯ ಪ್ರಮಾಣದಲ್ಲಿ ದೊರಕಿವೆ. ಇಲ್ಲಿ ಎರಡು ಪರಸ್ಪರ ಸಂಬಂಧವಿದ್ದ ಬಗ್ಗೆ ಸ್ಪಷ್ಟವಾಗುತ್ತದೆ.

ವಾಸ್ತವ್ಯದ ನೆಲೆಗಳು

ಕಲ್ಲು ಬಂಡೆಗಳು, ಚಪ್ಪಡಿಗಳು ದೊರೆಯುವ ಬೆಟ್ಟಗುಡ್ಡಗಳ ಬಳಿ ಶಿಲಾಗೋರಿಗಳಿರುವುದು ಸಹಜ. ಬೆಟ್ಟಗುಡ್ಡಗಳ ತಪ್ಪಲಲ್ಲಿ, ಬೆಟ್ಟಗಳ ಸಮತಟ್ಟಾದ ಪ್ರದೇಶಗಳಲ್ಲಿ ಶಿಲಾಮಯವಾದ ಎರಡು ಭೂಮಿಗಳಲ್ಲಿ ಇಂಥ ನಿರ್ಮಿತಿಗಳಾಗುತ್ತಿದ್ದವೇ ಹೊರತು ಫಲವತ್ತಾದ ಭೂಮಿಯಲ್ಲಿ ಇವು ಹೆಚ್ಚಾಗಿ ಕಂಡುಬಂದಿಲ್ಲ. ಇಲ್ಲಿಯ ಜನರು ಅನೇಕ ಮಣಿಗಳು ಹಾಗೂ ಬಳೆಗಳನ್ನು ಉಪಯೋಗಿಸಬೇಕು. ಅಲಗುಗಳನ್ನು ಅಗೇಟ್, ಚರ್ಟ್‌ ಜಾಸ್ಫರ್ ಮುಂತಾದ ಶಿಲೆಗಳನ್ನು ಉಪಯೋಗಿಸಿ ತಯಾರಿಸಿದ್ದಾರೆ. ಇದೇ ಶಿಲೆಗಳಿಂದ ಮಣಿಗಳನ್ನು ವಿವಿಧ ಆಕಾರದಲ್ಲಿ ಮಾಡಿರುವುದು ಪಕ್ಕದ ತೆಕ್ಕಲಕೋಟೆ ಹಾಗೂ ಸಂಗನಕಲ್ಲಿನಲ್ಲಿ ಕೂಡ ಕಾಣಬಹುದು. ಇಲ್ಲಿ ವಿವಿಧ ರೀತಿಯ ಶಿಲೆಗಳನ್ನು ಉಪಯೋಗಿಸಿ ಅಲಗುಗಳನ್ನು ತಯಾರಿಸಿರುವುದು ಕಂಡುಬರುತ್ತದೆ. ಅಲಗುಗಳನ್ನು ಸಿದ್ಧಪಡಿಸಲು ವಿವಿಧ ಶಿಲೆಗಳ ಉಪಯೋಗ ತಿಳಿದಿದ್ದ ಜನರು ಮಣಿಗಳ ತಯಾರಿಕೆಯಲ್ಲಿಯೂ ಈ ಶಿಲೆಗಳನ್ನು ಉಪಯೋಗಿಸಿರಬೇಕು. ಇದಕ್ಕೆ ಪೂರಕವಾಗಿ ಕುರುಗೋಡಿನಲ್ಲಿ ಬಾಳೆಕೊಳ್ಳದಲ್ಲಿ ಚರ್ಟ್‌ನಿಂದ ಸಿದ್ಧಪಡಿಸಿದ ಒಂದು ಮಣಿ ದೊರಕಿದೆ.

ಕಲೆ

ನೂತನಶಿಲಾಯುಗದ ಜನರು ಮಣ್ಣಿನಗೊಂಬೆಗಳನ್ನು ಹಾಗೂ ಕಲ್ಲಾಸರೆಗಳಲ್ಲಿ ಅನೇಕ ವರ್ಣಚಿತ್ರಗಳನ್ನು ಬಿಡಿಸಿರುವುದು ಬಳ್ಳಾರಿ ಜಿಲ್ಲೆಯ ಅನೇಕ ಕಡೆಗಳಲ್ಲಿ ಕಾಣಬಹುದು. ಸಂಗನಕಲ್ಲಿನಲ್ಲಿ ಅನೇಕ ಆಕರ್ಷಕ ಸರಳಾಕೃತಿಗಳು, ಹಾಗೆಯೇ ರಾಯಚೂರು ಜಿಲ್ಲೆಯ ವಟಗಲ್‌ನಲ್ಲಿ ಸ್ತ್ರೀ ಆಕೃತಿಯನ್ನು ಮೃತ್ಪಾತ್ರೆಯ ಮೇಲೆ ಅಂಟಿಸಿರುವುದು ಕಂಡು ಬರುತ್ತದೆ. ತಾಮ್ರದ ತಂತಿಗಳು ತೆಕ್ಕಲಕೋಟೆ ಹಾಗೂ ವಟಗಲ್‌ನಲ್ಲಿ ದೊರಕಿದೆ. ಅಲ್ಲದೆ ರಾಯಚೂರು ಬಳಿಯ ವಟಗಲ್‌ನಲ್ಲಿ ಮಹಾರಾಷ್ಟ್ರದ ಚಂದೋಲಿಯ ರೀತಿಯ ಶವಸಂಸ್ಕಾರ ಪದ್ಧತಿ ರೂಢಿಯಲ್ಲಿದ್ದುದುರ ಬಗ್ಗೆ ಮಾಹಿತಿಯಿದೆ. ಮಹಾರಾಷ್ಟ್ರದ ಚಾಂದೋಲಿಯಲ್ಲಿ ದೊರೆತ ಮಗುವಿನ ಅಸ್ಥಿಪಂಜರದ ಕತ್ತಿನ ಸುತ್ತ ತಾಮ್ರದ ಮಣಿಗಳನ್ನು ಪೋಣಿಸಿದ ಸರ ದೊರೆತಿದೆ. ತಾಮ್ರದ ದಪ್ಪ ತಂತಿಯ ಬಳೆಗಳು ಸಾಮಾನ್ಯ, ಇಲ್ಲಿನ ರೇಖಾ ಚಿತ್ರದಲ್ಲಿ ಆಭರಣಗಳನ್ನು ಧರಿಸಿರುವುದು ಕಂಡುಬಂದಿವೆ.

ಕುರುಗೋಡಿನ ಗವಿ ರೇಖಾಚಿತ್ರಗಳಲ್ಲಿ ಆಕಳುಮ, ಜಿಂಕೆ, ಹುಲಿ, ಮನುಷ್ಯರ ಛಾಯಾ-ಕೃತಿಗಳು, ಕೈಹಿಡಿದು ನರ್ತಿಸುವ ನೃತ್ಯ ಸಮೂಹ, ಬೇಟೆ ಚಿತ್ರಣಗಳನ್ನು ಕಾಣಬಹುದು. ಗೂಳಿಯ ಚಿತ್ರ, ಸಮೂಹ ನೃತ್ಯ ಚಿತ್ರಗಳು ಇವು ಪಿಕ್ಕಳಿಹಾಳು, ತೆಕ್ಕಲಕೋಟೆ ಹಾಗೂ ವಟಗಲ್ ವರ್ಣಚಿತ್ರಗಳಲ್ಲಿ ಕಾಣಬಹುದು, ಇವು ಶಿಲಾ-ತಾಮ್ರಯುಗಕ್ಕೆ ಸೇರಿದವು. ಅದೇ ರೀತಿ ಕುಟ್ಟಿ ಸಿದ್ಧಪಡಿಸಿದ ಬಯಲು ಬಂಡೆಯ ರೇಖಾಚಿತ್ರಗಳು ಹಾಗೂ ತಂತ್ರಗಾರಿಕೆಯ ರೇಖಾ ಆಕೃತಿಗಳು, ಗೂಳಿ, ಹುಲಿ ಮುಂತಾದ ಆಕೃತಿಗಳಾಗಿದ್ದು ಅವು ಶಿಲಾ-ತಾಮ್ರಯುಗದ ಪಶುಸಂಗೋಪನೆಗೆ ಸಂಬಂಧಿಸಿದ ಜನರದ್ದಾಗಿತ್ತೆಂದು ನಿರ್ಧರಿಸಲಾಗಿದೆ. ಈ ರೀತಿಯ ಚಿತ್ರಗಳು ಕುರುಗೋಡಿನ ಅನೇಕ ಸ್ಥಳಗಳಲ್ಲಿ ಅಂದರೆ ಪಂಚಮುಖಿ ವೀರಭದ್ರ, ಬಾಳೇಕೊಳ್ಳದಲ್ಲಿ ರೇಖಾಚಿತ್ರಗಳಿದ್ದು ಅವು ಶಿಲಾ-ತಾಮ್ರಯುಗಕ್ಕೆ ಸೇರಿವೆ. ಫಲವತ್ತಾದ ಭೂಮಿಯಲ್ಲಿ ರೇಖಾಚಿತ್ರಗಳು ವಿರಳ. ಈ ಲೇಖನದಲ್ಲಿ ಕೇವಲ ಕಾಲಮಾನಕ್ಕೆ ಮಾತ್ರ ಈ ವಿಷಯವನ್ನು ಪ್ರಸ್ತಾಪಿಸಲಾಗಿದೆ. ಆದರೆ ಇದರ ವಿವರಣೆಯನ್ನು ಮುಂದಿನ ಲೇಖನದಲ್ಲಿ ಚರ್ಚಿಸಲಾಗಿದೆ.

ಕಬ್ಬಿಣದ ನಿಕ್ಷೇಪದ ಪ್ರದೇಶ, ಅಲಂಕಾರಿಕ ವಸ್ತುಗಳಾದ ಮಣಿಗಳ ತಯಾರಿಕೆಯ ಪ್ರದೇಶಗಳಲ್ಲಿ ಕಲ್ಗೋರಿ ನೆಲೆಗಳಿವೆ. ಈ ಕಾಲಘಟ್ಟದ ಜನರು ನೀರಿನ ವಿವಿಧ ಉಪಯೋಗಗಳನ್ನು ಕಂಡುಕೊಂಡಿದ್ದರಿಂದ ನೀರು ದೊರಕುವ ಸ್ಥಳಗಳಲ್ಲಿ ಕಲ್ಗೋರಿಗಳು ಕಾಣಬರುತ್ತವೆ.

ಕಲ್ಲುಗಳನ್ನು ವಿವಿಧ ಆಕಾರದಲ್ಲಿ ಕತ್ತರಿಸುವುದು, ಉಪಕರಣಗಳನ್ನು ಬಳಸಿ ವಿಶಿಷ್ಟ ವಾಸ್ತು ರಚನೆಯ ಕಲ್ಗೋರಿಗಳ ನಿರ್ಮಾಣ ಮಾಡುವುದು ಇವರಿಗೆ ಚೆನ್ನಾಗಿ ಪರಿಚಯವಿದ್ದಿರಬೇಕು. ಕಬ್ಬಿಣದ ವಿವಿಧ ಗೃಹೋಪಯೋಗಿ ವಸ್ತುಗಳು, ದಿನ ನಿತ್ಯದ ಬಳಕೆಗೆ ಬೇಕಾಗುವ ಸಾಮಾನು ಸರಂಜಾಮುಗಳನ್ನು ತಯಾರಿಸುವಲ್ಲಿ ಇವರು ನಿಪುಣರಾಗಿದ್ದರು.

ಈ ಸಂಸ್ಕೃತಿಯ ಜನ ಬಳಸುತ್ತಿದ್ದ ಲೇಪನವುಳ್ಳ ಪಾತ್ರೆಗಳು ಹಾಗೂ ತೆಳ್ಳನೆಯ ಹೊಳಪು ರಹಿತ ಪಾತ್ರೆಗಳು, ಸಾಮಾನ್ಯ ಗಾತ್ರದ ಪಾತ್ರೆಗಳು ಇವುಗಳನ್ನು ತಿರುಗಣಿ ಚಕ್ರದ ಮೇಲೆ ಮಾಡಿದ್ದರೆ, ದೊಡ್ಡ ಪಾತ್ರೆಗಳನ್ನು ಕೈಯಿಂದ ಸಿದ್ಧಪಡಿಸಿದ್ದಾರೆ. ತೆಳು ಲೇಪನದ ಕೆಂಪು ಮಸುಕು ಪಾತ್ರೆಗಳು, ಕಪ್ಪು ಕೆಂಪು ದ್ವಿವರ್ಣ ಪಾತ್ರೆಗಳು, ಕೆಂಪು, ಕಪ್ಪು ಬಣ್ಣದ ಪಾತ್ರೆಗಳು, ಕೊಡ, ಗುಡಾಣ, ಬಾನಿ, ಇಂತಹ ನಾನಾ ಪ್ರಕಾರಗಳಲ್ಲಿ ಈ ಪಾತ್ರೆಗಳು ದೊರೆಯುತ್ತವೆ. ಕುರುಗೋಡಿನಲ್ಲಿ ಅನೇಕ ರೀತಿಯ ಕಪ್ಪು-ಕೆಂಪು ಬಣ್ಣದ ದ್ವಿವರ್ಣದ ಪಾತ್ರೆಗಳ ಚೂರುಗಳು, ಅದರಲ್ಲೂ ಬೋಗುಣಿಯ ತರದ ದೊಡ್ಡ ಚೂರುಗಳು ಕಾಣಸಿಕ್ಕಿವೆ. ಕೆಲವು ಕಪ್ಪು, ಕೆಂಪು ಪಾತ್ರೆಗಳಲ್ಲಿ ಬಿಳಿ ಬಣ್ಣದ ರೇಖಾಚಿತ್ರಗಳಿವೆ. ಇವು ಸರಳವಾದವು, ವಿರುದ್ಧ ದಿಕ್ಕಿನಲ್ಲಿ ಬೇರೆಯಾಗಿರುವ ಸಮಾನಾಂತರದ ನಾಲ್ಕೈದು ಗಿಡ್ಡ ರೇಖೆಗಳನ್ನು ಜೋಡಿಸಿ ಇವುಗಳನ್ನು ರಚಿಸಲಾಗಿದೆ. ಒಂದೆರಡು ಪಾತ್ರೆಗಳ ಚೂರಿನಲ್ಲಿ ಗೀಚಿದೆ ಚಿತ್ರವಿದೆ. ಹಾಲುಬಾವಿಯ ಬಳಿ ಕೆಲವು ಬೃಹತ್ ಶಿಲಾಗೋರಿಗಳು ಕಂಡುಬಂದಿವೆ.

ಅಲಂಕಾರ ಸಾಧನಗಳು

ಅನೇಕ ಬಗೆಯ ಮಣಿಗಳನ್ನು ಅಗೇಟ್, ಜಾಸ್ಫರ್ ಮುಂತಾದ ಶಿಲೆಗಳಿಂದ ತಯಾರಿಸಿದ್ದಾರೆ, ಕೆಲವೊಮ್ಮೆ ಶಂಕದ ಬಳೆಯನ್ನು ತಯಾರಿಸಿ ತೊಟ್ಟಿರಬೇಕು. ಕುರುಗೋಡಿನ ಬಾಳೇಕೊಳ್ಳದ ಪೂರ್ವಕ್ಕಿರುವ ಇಳಿಜಾರಿನಲ್ಲಿ ಕತ್ತರಿಸಿದ ಶಂಖದ ಬಳೆಯ ಚೂರುಗಳು ಕಂಡುಬಂದಿವೆ. ಅಂದರೆ ಇತರ ನೆಲೆಗಳಂತೆ ಇವರೂ ಕೂಡ ಶಂಖವನ್ನು ಉಪಯೋಗಿಸಿದ್ದಾರೆ.

ಶವಕುಣಿಗಳು

ವೃತ್ತಾಕಾರದ ಶವಕುಣಿಗಳು ಸಂಗಮೇಶ ದೇವಾಲಯದ ಹಿಂಬದಿಯಲ್ಲಿ ಹಾಗೂ ಬೆಟ್ಟದ ಮೇಲೆ ಇತ್ತೆಂದು ಗುರುತಿಸಲಾಗಿದೆ. ಈ ಸ್ಥಳದಲ್ಲಿದ್ದ ವೃತ್ತಾಕಾರದ ಶವಕುಣಿಯನ್ನು ವ್ಯವಸಾಯ ಯೋಗ್ಯ ಭೂಮಿಯನ್ನಾಗಿ ಪರಿವರ್ತಿಸಲಾಗಿದೆ. ಆದರೆ ಆ ಪ್ರದೇಶದಲ್ಲಿ ಬೃಹತ್‌ಶಿಲಾಸಂಸ್ಕೃತಿಯ ಮೃತ್ಪಾತ್ರೆಗಳು ಹೇರಳವಾಗಿ ದೊರಕುತ್ತವೆ. ಕಪ್ಪು, ಕಪ್ಪು-ಕೆಂಪು ಬಣ್ಣದ ದ್ವಿವರ್ಣದ ಪಾತ್ರೆಗಳು ಹೇರಳವಾಗಿ ದೊರಕುತ್ತವೆ. ಬೃಹತ್‌ಶಿಲಾಯುಗದ ಸಂಸ್ಕೃತಿಯ ಜನರು ಸಾಮಾನ್ಯವಾಗಿ ಬಳಸುತ್ತಿದ್ದ ಈ ಬಗೆಯ ಪಾತ್ರೆಗಳ ಚೂರು ಈ ಪ್ರದೇಶದಲ್ಲಿ ದೊರಕಿವೆ. ಸಾಮಾನ್ಯವಾಗಿ ಕೆಲವು ಕಲ್ಗೋರಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೃತ್ಪಾತ್ರೆಗಳಿರುತ್ತವೆ. ಬೃಹತ್ ಶಿಲಾಗೋರಿಗಳು ಹಾಳಾದಾಗ ಹೂತಿಟ್ಟ ಈ ಪಾತ್ರೆಗಳನ್ನು ಹೊರತೆಗೆದು ಹಾಕಿದಾಗ ಸಣ್ಣ ಸಣ್ಣ ಚೂರುಗಳಾಗಿರುವುದನ್ನು ಕಾಣಬಹುದು.

ಶವಸಂಸ್ಕಾರಕ್ಕಾಗಿ ನಾನಾ ಪ್ರಕಾರದ ಗೋರಿಗಳನ್ನು ಈ ಜನರು ನಿರ್ಮಿಸಿದ್ದರು. ದಾರಿ ಕೋಣೆ, ಕಂಡಿಕೋಣೆ, ಜಂಬಿಟ್ಟಿಗೆ ಪ್ರಸ್ಥಭೂಮಿಯ ಆಳವಾಗಿ ಕೊರೆದ ಕೋಣೆ, ಮಣ್ಣಿನ ಶವಪೆಟ್ಟಿಗೆಗಳು, ದುಂಡು ವೃತ್ತಗಳು, ನಿಲಸಗಲ್ಲುಗಳು, ಕಲ್ಲುಕುಂಟೆಗಳು ಸಾಮಾನ್ಯ ರೂಪಗಳು. ಇಲ್ಲಿ ಎರಡನೇ ಬಾರಿಗೆ ಶವಸಂಸ್ಕಾರ ಮಾಡಲಾಗಿರುತ್ತದೆ. ಕೆಲವು ಗೋರಿಗಳಲ್ಲಿ ಒಂದಕ್ಕಿಂತ ಹೆಚ್ಚು ವ್ಯಕ್ತಿಯ ಅಸ್ಥಿಪಂಜರ, ಕಬ್ಬಿಣದ ಮತ್ತು ಕಲ್ಲಿನ ಆಯುಧಗಳು, ಮಣಿಗಳು ದೊರಕಿವೆ. ಈ ತೆರನಾದ ರೂಪಗಳು ಕರ್ನಾಟಕದಲ್ಲಿ ಅನೇಕ ಕಡೆ ಕಂಡುಬಂದಿವೆ. ಬೃಹತ್ ಶಿಲೆಗಳನ್ನು ಒಂದರ ಪಕ್ಕದಲ್ಲಿ ಒಂದನ್ನಿಟ್ಟು ಮಧ್ಯದಲ್ಲಿ ಕಲ್ಲಿನ ಚೆಕ್ಕೆಯಿಂದ ತುಂಬಿರುವಂತವು, ಕುರುಗೋಡಿನಲ್ಲಿ ದೊರಕಿವೆ. ಹಾಲುಬಾವಿ ಬಳಿ ಬೃಹತ್ ಶಿಲಾಗೋರಿಗಳು ಇದ್ದ ಬಗ್ಗೆ ತಿಳಿದುಬಂದಿದೆ. ಹಾಗೆಯೇ ಬಾದನಹಟ್ಟಿ, ಉಜಾಳ ಪೇಟೆಯ ಬಳಿ ಬೂದಿದಿಬ್ಬಗಳು ಇದ್ದ ಬಗ್ಗೆ ಮಾಹಿತಿಯಿದೆ. ಇದರಿಂದ ಪ್ರಾಗಿತಿಹಾಸ ಕಾಲದಿಂದ ಇಂದಿನವರೆಗೂ ಕುರುಗೋಡು ಸಂಸ್ಕೃತಿಯ ಬೀಡಾಗಿತ್ತು ಎನ್ನುವುದನ್ನು ಕಾಣಬಹುದು.

ಪರಾಮರ್ಶನ ಗ್ರಂಥಗಳು

೧. ಕೃಷ್ಣಮೂರ್ತಿ ಎಂ.ಎಸ್., ೧೯೭೭, ಕುರುಗೋಡು ಆನ್ ಆರ್ಕಿಯಾಲಾಜಿಕಲ್ ನೋಟ್, ಆರ್ಕಿಯಾಲಾಜಿಕಲ್ ಸ್ಟಡೀಸ್, ಮೈಸೂರು ವಿಶ್ವಿವಿದ್ಯಾನಿಲಯ, ಮೈಸೂರು.

೨. ಸುಂದರ ಅ., ೧೯೯೪, ಕರ್ನಾಟಕ ಪ್ರಾಗಿತಿಹಾಸ ಕಾಲದ ಕಲೆ, ಕರ್ನಾಟಕ ಲಲಿತಕಲಾ ಅಕಾಡೆಮಿ, ಬೆಂಗಳೂರು.

೩.ಫೂಟ್ ಆರ್.ಬಿ., ೧೯೧೬, ದಿ ಫೂಟ್ ಕಲೆಕ್ಷನ್ ಆಫ್ ದಿ ಇಂಡಿಯನ್ ಪ್ರಿ ಹಿಸ್ಟಾರಿಕ್ ಆಂಡ್ ಪ್ರೋಟೋ ಹಿಸ್ಟಾರಿಕ್ ಆಂಟಿಕ್ವಿಟೀಸ್‌, ನೋಟ್ಸ್ ಆನ್ ದೇರ್ ಏಜಸ್ ಆಂಡ್ ಡಿಸ್ಟ್ರಿಬ್ಯೂಷನ್, ಮದ್ರಾಸ್.

೪. ಅಭಿಶಂಕರ್ ಬಿ., ೧೯೭೨, ಬಳ್ಳಾರಿ ಡಿಸ್ಟ್ರಿಕ್ಟ್ ಗ್ಯಾಸೆಟಿಯರ್, ಮೈಸೂರ್ ಸ್ಟೇಟ್ ಗ್ಯಾಸೆಟಿಯರ್ಸ್, ಬೆಂಗಳೂರು