ಕುರುಗೊಡು ಪರಿಸರವು ಸಶಕ್ತವಾದ ದಖನ್ ಪ್ರಸ್ಥಭೂಮಿಯಲ್ಲಿರುವುದರಿಂದ ಸಹಜವಾಗಿ ಪ್ರಾಚೀನ ಕಾಲದಿಂದಲೂ ಜನವಸತಿಗೆ ತಕ್ಕುದಾದ ಪ್ರದೇಶವಾಗಿದೆ. ಶಿಲಾಯುಗದಲ್ಲಿ ಮಾನವ ಜೀವನ ಚಟುವಟಿಕೆಗೆ ಪೂರಕವಾದ ಬೆಟ್ಟಗುಡ್ಡಗಳು, ಅಲ್ಲಲ್ಲಿ ನೀರಿನ ಮೂಲಗಳು ಇಲ್ಲಿರುವುದರಿಂದ ಆ ಕಾಲದ ಮಾನವ ತನ್ನ ವಾಸ್ತವ್ಯಕ್ಕೆ ಈ ಪ್ರದೇಶವನ್ನು ಆಯ್ದುಕೊಂಡು ಜೀವನ ನಡೆಸಿರುವುದು ಪ್ರಾಚ್ಯಾವಶೇಷಗಳಿಂದ ತಿಳಿದು ಬರುತ್ತದೆ. ಇಲ್ಲಿ ಹಳೆಯ ಶಿಲಾಯುಗ, ಮಧ್ಯಶಿಲಾಯುಗ, ನೂತನಶಿಲಾಯುಗ, ಕಬ್ಬಿಣ ಯುಗದ ಬೃಹತ್‌ಶಿಲಾಯುಗ, ಆದಿಚಾರಿತ್ರಿಕ ಮತ್ತು ಚಾರತ್ರಿಕಯುಗ ಹೀಗೆ ನಿರಂತರವಾಗಿ ಮಾನವ ಜೀವನ ಸಂಸ್ಕೃತಿ ಎಡಬಿಡದೆ ಬೆಳೆದುಬಂದಿರುವುದು ಈ ಪ್ರದೇಶದ ಭೌಗೋಳಿಕ ಮತ್ತು ಚಾರಿತ್ರಿಕ ಮಹತ್ವವನ್ನು ಬಿಂಬಿಸುತ್ತದೆ.

ಅಕ್ಷರವಿನ್ನೂ ಉಗಮವಾಗಿರುವ ಶಿಲಾಯುಗದಲ್ಲಿ ಮಾನವ ತನ್ನ ಭಾವನೆಗಳನ್ನು ಚಿತ್ರಗಳ ರೂಪದಲ್ಲಿ ಅಭಿವ್ಯಕ್ತಿಸುತ್ತಿದ್ದರು. ಅಂಥ ಚಿತ್ರಗಳು ಅವನ ಖಾಯಂ ವಾಸಸ್ಥಾನಗಳಾಗಿದ್ದ ಗವಿಗಳಲ್ಲಾಗಲಿ ಇಲ್ಲವೇ ತಾತ್ಕಾಲಿಕ ಆಶ್ರಯ ತಾಣಗಳಾಗಿದ್ದ ಕಲ್ಲಾಸರೆಗಳಲ್ಲಿ ಮತ್ತು ಒಂದು ನಿರ್ದಿಷ್ಟ ಪ್ರದೇಶದ ಬಯಲು ಬಂಡೆಗಳಲ್ಲಿ ಕಂಡುಬರುತ್ತವೆ. ಗವಿ ಮತ್ತು ಕಲ್ಲಾಸರೆಗಳಲ್ಲಿ ವರ್ಣಚಿತ್ರ (ಸಾಮಾನ್ಯವಾಗಿ ಕೆಂಪು)ಗಳಿದ್ದರೆ, ಬಯಲು ಬಂಡೆಗಳಲ್ಲಿ ಕೊರೆದ ಇಲ್ಲವೇ ಕುಟ್ಟಿ ಮೂಡಿಸಿದ ಚಿತ್ರಗಳಿರುತ್ತವೆ. ಮನುಷ್ಯ ಹಾಗೂ ಪ್ರಾಣಿ (ವಿಶೇಷವಾಗಿ ಸಾಕುಪ್ರಾಣಿಗಳು) ಸಂಬಂಧಿತ ವಿಷಯದ ಸುತ್ತ ಕೇಂದ್ರೀಕೃತವಾಗಿರುವ ಇಂಥ ಚಿತ್ರಗಳಿಂದ ಆ ಕಾಲದ ಪಶುಪಾಲನೆ, ಬೇಟೆಗಾರಿಕೆ, ಸಮೂಹ ಕುಣಿತ, ನಂಬಿಕೆಗಳನ್ನು ಹಾಗೂ ಕಲಾಭಿಜ್ಞತೆ ಇವುಗಳನ್ನು ತಿಳಿಯಬಹುದಾಗಿದೆ.

ಕರ್ನಾಟಕದ ರಾಜ್ಯವು ಪ್ರಾಗಿತಿಹಾಸ ಕಾಲದ ಚಿತ್ರಗಳ ದೃಷ್ಟಿಯಿಂದ ಶ್ರೀಮಂತ ವಲಯವಾಗಿದೆ. ವಿಶೇಷವಾಗಿ ಬಳ್ಳಾರಿ ಜಿಲ್ಲೆಯ ಸಂಗನಕಲ್ಲು, ಕುರುಗೋಡು (ಬಳ್ಳಾರಿ ತಾ.) ತೆಕ್ಕಲುಕೋಟೆ (ಸಿರಗುಪ್ಪಾ ತಾ.), ಹಂಪಿ, ವೆಂಕಟಾಪುರ, ಕಮಲಾಪುರ, ನಾಗೇನಹಳ್ಳಿ ಮತ್ತು ಬುಕ್ಕಸಾಗರ (ಹೊಸಪೇಟೆ ತಾ.)ಗಳಲ್ಲಿ ಗವಿವರ್ಣಚಿತ್ರಗಳು ಕಪ್ಪಗಲ್ಲು, ಕುರುಗೋಡು, ಹಳಕುಂದಿ, ಬೆಳಗಲ್ಲು (ಬಳ್ಳಾರಿ ತಾ.) ಕಮಲಾಪುರ, ನಂದಿಬಂಡಿ (ಹೊಸಪೇಟೆ ತಾ.) ಅಪ್ಪಯ್ಯನ ಹಳ್ಳಿ (ಕೊಟ್ಟೂರು ತಾ.) ಮತ್ತು ರಾಜಾಪುರ, ಬೈರನಾಯಕನಹಳ್ಳಿಗಳಲ್ಲಿ ಬಯಲುಬಂಡೆ ಕೊರೆದ/ಕುಟ್ಟಿದ ಚಿತ್ರಗಳು ಕಂಡುಬಂದಿವೆ. ಕುರುಗೋಡಿನಲ್ಲಿ ಎರಡೂ ಪ್ರಕಾರದ ಚಿತ್ರಗಳು ಇವೆ.

[1]

ಕಪ್ಪಗಲ್‌ನ ಚಿತ್ರಗಳನ್ನು ೧೮೮೦ರ ಸುಮಾರಿಗೆ ಹೂಬರ್ಟ್‌‌ನಾಕ್ಸ್‌ರವರು ಶೋಧಿಸಿದ್ದು, ದೇಶದ ಬಂಡೆಚಿತ್ರಗಳ ಶೋಧನೆಯಲ್ಲಿ ಮೊದಲ ದಾಖಲೆಯಾಗಿದೆ.[2] ಕುರುಗೋಡಿನ ಚಿತ್ರಗಳನ್ನು ಪ್ರಥಮವಾಗಿ ಎಂ.ಎಸ್. ಕೃಷ್ಣಮೂರ್ತಿಯವರು[3] ನಂತರ ಡಾ. ಅ. ಸುಂದರರವರು[4] ಹಾಗೂ ಡಬ್ಲ್ಯೂ.ವಿ.ಎಸ್. ನರಸಿಂಹರವರು[5] ಶೋಧಿಸಿ ಬೆಳಕಿಗೆ ತಂದಿದ್ದಾರೆ. ಕೃಷ್ಣಮೂರ್ತಿಯವರು ಕೆಲವು ಚಿತ್ರಗಳ ಬಗೆಗೆ ಸಂಕ್ಷಿಪ್ತವಾಗಿ ವಿವರಸಿದ್ದರೆ, ಡಾ. ಅ. ಸುಂದರವರು ಹೊಸದಾಗಿ ಮತ್ತೆ ಕೆಲವು ನೆಲೆಗಳನ್ನು ಬೆಳಕಿಗೆ ತಂದು ಸ್ವಲ್ಪ ವಿವರವಾಗಿ ಚರ್ಚಿಸಿದ್ದಾರೆ. ನರಸಿಂಹರವರು ವಿಸ್ತೃತ ವಿಶ್ಲೇಷಣೆ ಮಾಡಿದ್ದಾರೆ. ಈ ಮೊದಲಿನ ಶೋಧನೆಗಳ ಹಿನ್ನೆಲೆಯಲ್ಲಿ ಮಾತ್ರ ನಾನು ಸ್ವತಃ ಕ್ಷೇತ್ರಕಾರ್ಯ ಕೈಗೊಂಡು ಗಮನಿಸಿದಂತೆ ಕುರುಗೋಡಿನ ಪ್ರಾಗಿತಿಹಾಸ ಕಾಲದ ಚಿತ್ರಕಲೆಯ ಅಧ್ಯಯನಾತ್ಮಕ ವಿಶ್ಲೇಷಣೆ ಮುಂದಿನಂತಿದೆ.

ಕಲಾನೆಲೆಗಳು

ನೆಲೆ-೧ : ಕುರುಗೋಡು ಮುಷ್ಟಗಟ್ಟೆ ರಸ್ತೆಯಲ್ಲಿ ಸಂಗಮೇಶ್ವರ ದೇವಾಲಯದ ಬಲಬದಿಯ ಗವಿ.

ಪ್ರಸ್ತುತ ಕಲ್ಲುಗಣಿಗಾರಿಕೆಯಿಂದಾಗಿ ಈ ಗವಿ ಸಂಪೂರ್ಣ ನಾಶವಾಗಿದೆ. ಡಾ. ಎಂ.ಎಸ್. ಕೃಷ್ಣಮೂರ್ತಿಯವರು ಗಮನಿಸಿದಂತೆ ಇಲ್ಲಿ ಗರ್ಭಧರಿಸಿದ ಜಿಂಕೆಯ ಚಿತ್ರ ಹಾಗೂ ಒಳಗಿನ ಗವಿಯಲ್ಲಿ ಕೆಲವು ಜನರು ಕೈಯಲ್ಲಿ ಕೋಲು, ಈಟಿ ಮೊದಲಾದ ಆಯುಧಗಳನ್ನು ಹಿಡಿದುಕೊಂಡು ಪ್ರಾಣಿಗಳನ್ನು ಬೇಟೆಯಾಡುತ್ತಿರುವಂತೆ, ನರ್ತಿಸುತ್ತಿರುವಂತೆ ಇರುವ ಮನುಷ್ಯರ ಚಿತ್ರಗಳು, ಆನೆ, ಕೋಣ, ಎಮ್ಮೆ, ಚಿಗರೆ ಮೊದಲಾದ ಪ್ರಾಣಿಗಳ ಚಿತ್ರಗಳಿದ್ದವು, ಇಲ್ಲಿಯೇ ಬಿಳಿಬಣ್ಣದ ಕೆಲವು ಮನುಷ್ಯ ರೇಖಾಚಿತ್ರಗಳನ್ನು ಕೂಡ ಬಿಡಿಸಲಾಗಿತ್ತು.

ನೆಲೆ-೨ : ಪಂಚಮುಖಿ ವೀರಭದ್ರ ದೇವಾಲಯದ ಎದುರು ನಂದಿಯ ಎಡಭಾಗದ ಕಲ್ಲಾಸರೆ ಬೆಟ್ಟದಲ್ಲಿ ಉತ್ತರಮುಖಿಯಾಗಿರುವ ಈ ಕಲ್ಲಾಸರೆ ಸುಮಾರು ೧೦ ಮೀ. ಎತ್ತರವಾಗಿದೆ. ವಿಶಾಲವಾದ ಕಲ್ಲಾಸರೆಯ ತುಂಬೆಲ್ಲ ಅನೇಕ ಚಿತ್ರಗಳಿದ್ದಂತೆ ತೋರುತ್ತದೆ. ಆದರೆ ಇಂದು ಬಹಳಷ್ಟು ಚಿತ್ರಗಳು ನಾಶವಾಗಿವೆ. ಉಳಿದ ಚಿತ್ರಗಳೂ ಬಹಳಷ್ಟು ಮಾಸಿಹೋಗಿವೆ.

ಕಲ್ಲಾಸರೆಯ ಎಡಭಾಗ ಹಾಗೂ ಮಧ್ಯಭಾಗದಲ್ಲಿ ಕೆಲವು ಚಿತ್ರಗಳನ್ನು ಗುರುತಿಸಬಹುದು. ಎಡಭಾಗದ ಮೂಲೆಯಲ್ಲಿ ಅತ್ಯಂತ ತೆಳುವಾದ ರೇಖೆಯಲ್ಲಿ ಬಿಡಿಸಿರುವ ಕೋಣದ ಚಿತ್ರ ರಚನಾಶೈಲಿಯಿಂದ ಗಮನ ಸೆಳೆಯುತ್ತದೆ. ೧.೬x೦.೬ ಮೀ. ಅಳತೆಯ ಇದು ಎತ್ತರವಾದ ಒಳಬಾಗಿರುವ ಕೋಡು, ಉದ್ದವೆನಿಸಿದರೂ ಸಹಜವಾಗಿರುವ ಮುಂಡದಿಂದ ಕೂಡಿದೆ. ಪುಷ್ಠಭಾಗಕ್ಕಿಂತ ಎದೆಯಭಾಗ ದಪ್ಪವಾಗಿದೆ. ಬಾಲ, ಶಿಶ್ನವನ್ನು ಬಿಡಿಸಲಾಗಿದೆ. ಇದರ ಮುಂಬದಿಯಲ್ಲಿ ಕೆಲವು ಚಿಕ್ಕ, ಚಿಕ್ಕ ಎಮ್ಮೆ (೦.೩ x ೦.೩ ಮೀ.). ಹಸು (೦.೨ x ೦.೨ ಮೀ.)ಮುಂತಾದ ಪ್ರಾಣಿಗಳ ಛಾಯಾರೂಪದ (ಪೂರ್ಣ ವರ್ಣ ತುಂಬಿದ) ಚಿತ್ರಗಳು, ಒಂದು ಬಾಹ್ಯ ರೇಖೆಯ (ವರ್ಣ ತುಂಬಿದ) ಪ್ರಾಣಿಯ ಚಿತ್ರಗಳಿವೆ. ಇಲ್ಲಿಯೇ ಕಡ್ಡಿಯಾಕೃತಿಯ ಎರಡು ಮನುಷ್ಯ ಚಿತ್ರಗಳು ಇದ್ದು, ಒರ್ವನ ಕೈಯಲ್ಲಿ ಕೋಲಿನಂತಹ ಉದ್ದವಾದ ವಸ್ತುವೊಂದಿದೆ. ಇಡೀ ಸನ್ನಿವೇಶವನ್ನು ಗಮನಿಸಲಾಗಿ ಇದು ಪಶುಪಾಲನೆಯ ದೃಶ್ಯ ಚಿತ್ರವೆಂದು ಗುರುತಿಸಬಹುದು.

ಮಧ್ಯಭಾಗದಲ್ಲಿ ದೊಡ್ಡ ಅಳತೆಯ ಅನೇಕ ಪ್ರಾಣಿಗಳ ಚಿತ್ರಗಳಿವೆ. ಅವುಗಳಲ್ಲಿ ಪರಸ್ಪರ ಎದುರಾಗಿ ನಿಂತ ಎರಡು ಜೋಡಿ ಜಿಂಕೆಗಳು, ಎರಡು ಗೂಳಿಗಳು ಒಂದು ಪಶು (?) ಜಿಂಕೆ ಮತ್ತು ಒಬ್ಬ ವ್ಯಕ್ತಿಯ ಚಿತ್ರಗಳನ್ನು ಗಮನಿಸಬಹುದಾಗಿದೆ. ಪರಸ್ಪರ ಎದುರಾಗಿ ನಿಂತ ಜೋಡಿ ಜಿಂಕೆಗಳು (ಪ್ರತಿಯೊಂದು ೦.೧೬ ಮೀ. ಉದ್ದ, ೦.೧೨ ಮೀ ಎತ್ತರ) ಮುಖಗಳನ್ನು ಮಾತ್ರ ಮಂಡದ ಹಿಂಭಾಗಕ್ಕೆ ಹೊರಳಿಸಿರುವುದು ಕುತೂಹಲದಾಯಕ. ಎರಡೂ ಜಿಂಕೆಗಳು ಹೊಂದಿಕೊಂಡಂತೆ ವೃತ್ತಾಕಾರದ ವಸ್ತುವನ್ನು ಇರಿಸಿದಂತಿದೆ. ಇವು ಛಾಯಾರೂಪದವು, ಈ ಜಿಂಕೆಯ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ದಷ್ಠ ಪುಷ್ಠವಾದ ಎರಡು ಗೂಳಿಗಳಿವೆ. (ಕ್ರಮವಾಗಿ ೦.೧೨ಮೀ ಎತ್ತರ, ೦.೧೮ ಮೀ ಉದ್ದ ಹಾಗೂ ೦.೧೩ ಮೀ ಉದ್ದ, ೦.೧೫ಮೀ. ಎತ್ತರ) ಮುಂದಿನ ಗೂಳಿಯ ಇಣಿ ದೊಡ್ಡ ಪ್ರಮಾಣದಲ್ಲಿದ್ದು, ಗಮನಾರ್ಹವೆನಿಸುತ್ತದೆ. ಇದರ ಕಾಲುಗಳನ್ನು ದ್ವಿ ಬಿಡಿ ರೇಖೆಯಲ್ಲಿ, ಹಿಂದಿನ ಗೂಳಿಯ ಕಾಲುಗಳನ್ನು ದ್ವಿಸಂಯುಕ್ತ ರೇಖೆಯಲ್ಲಿ ಬಿಡಿಸಲಾಗಿದೆ. ಕೆಳಭಾಗದಲ್ಲಿ ಒಂದು ಜಿಂಕೆ (೦.೧೨x೦.೧೨ಮೀ), ಜೋಡಿ ಜಿಂಕೆ ಹಾಗೂ ಮನುಷ್ಯನ ಕಡ್ಡಿಯಾಕೃತಿ ಚಿತ್ರವಿದೆ. ಮನುಷ್ಯ ಕಾಲುಗಳನ್ನು ಅಗಲಿಸಿ ನಿಂತಿದ್ದು ಶಿಶ್ನವನ್ನು ಬಿಡಿಸಲಾಗಿದೆ. ಪ್ರಾಯಶಃ ನಗ್ನ ಸ್ಥಿತಿಯಲ್ಲಿರಬೇಕು.

ನೆಲೆ-೩ : ಪಂಚಮುಖಿ ವೀರಭದ್ರ ದೇವಾಲಯದ ಉತ್ತರಕ್ಕಿಂತ ಬಾಳೇಕೊಳ್ಳದಲ್ಲಿ ಈ ಕಲ್ಲಾಸರೆ ಇದೆ. ಅಲ್ಲಿಯ ಶಿಥಿಲ ದೇವಾಲಯದಿಂದ ಈಶಾನ್ಯಕ್ಕೆ ಸುಮಾರು ಅರ್ಧ ಕಿ.ಮೀ. ದೂರದಲ್ಲಿ ಎರಡನೇ ಬೆಟ್ಟ ಸಾಲಿನಲ್ಲಿ ದಕ್ಷಿಣಾಭಿಮುಖವಾಗಿ ಇರುವ ಈ ಕಲ್ಲಾಸರೆ ನೆಲದಿಂದ ಸುಮಾರು ೨೦ಮೀ. ಎತ್ತರದಲ್ಲಿದೆ.

ಇಲ್ಲಿ ಒಂದು ಚಿರತೆ, ಮೂರು ಹುಲಿಗಳು ಮತ್ತು ಎರಡು ಜಿಂಕೆಗಳ ಚಿತ್ರಗಳಿವೆ. ಮೈಮೇಲೆ ಚುಕ್ಕೆಗಳಿರುವುದರಿಂದ ಇಲ್ಲಿಯ ಒಂದು ಪ್ರಾಣಿಯನ್ನು ಚಿರತೆ ಎಂದು ಗುರುತಿಸಬಹುದು. ಆದರೆ ಅದರ ದೇಹದ ರೂಪ ಚಿರತೆಯನ್ನು ಹೋಲುವುದಿಲ್ಲ. ಮೈಮೇಲೆ ಪಟ್ಟೆಗಳು ಹಾಗೂ ದೇಹದ ರಚನೆಯಿಂದ ಹುಲಿಗಳನ್ನು ಸ್ಪಷ್ಟವಾಗಿ ಗುರುತಿಸಬಹುದು. ಅವುಗಳಲ್ಲಿ ಒಂದಕ್ಕೆ ನೆಲದೆಡೆಗೆ ಬಾಗಿ ತುದಿಯಲ್ಲಿ ಸುರುಳಿ ಸುತ್ತಿಕೊಂಡಿರುವ ಬಾಲವಿದೆ. ಇನ್ನೊಂದು ಬಾಲವನ್ನು ಎತ್ತರಿಸಿ ಬಾಯಿಯನ್ನು ತೆರೆದಿದೆ. ಮತ್ತೊಂದು ಇದೇ ಭಂಗಿಯಲ್ಲಿದ್ದು, ಬಾಯಿಯನ್ನು ಹೆಚ್ಚು ಅಗಲಿಸಿ ತೆರೆದಿದೆ. ಮೊದಲನೆರಡು ಹುಲಿಗಳಿಗೆ ಕಿವಿಗಳನ್ನು ತೋರಿಸಲಾಗಿದೆ. ಜಿಂಕೆಗಳೆಂದು ತೋರುವ ಎರಡು ಪ್ರಾಣಿಗಳು ಒಂದರ ಬದಿ ಒಂದು ನಿಂತಂತೆ ತೋರುತ್ತದೆ. ಮುಖವನ್ನು ದೇಹದ ಹಿಂಭಾಗಕ್ಕೆ ಹೊರಳಿಸಿವೆ. ಇವುಗಳಿಗೆ ಕೋಡುಗಳನ್ನು ತೋರಿಸಲಾಗಿದೆ.

ನೆಲೆ-೪ : ಈ ಕಲ್ಲಾಸರೆ ಕೂಡ ಬಸರಿಕೊಳ್ಳದಲ್ಲಿದೆ. ಇಲ್ಲಿ ಚಿತ್ರಕಾರನು ಅಂಗಾತವಾಗಿ ಚಿತ್ರಗಳನ್ನು ಬಿಡಿಸಿರಲಿಕ್ಕೆ ಸಾಧ್ಯ. ಇಲ್ಲಿ ಆನೆಗಳ ಹಿಂಡಿನ ಚಿತ್ರವಿದೆ. ಚಿತ್ರಗಳು ಸ್ಪಷ್ಟವಿಲ್ಲ. ಮೂರು ಆನೆಗಳ ಮುಖ ಮತ್ತು ಸೊಂಡಿಲುಗಳನ್ನು ಸ್ಪಷ್ಟವಾಗಿ ಗುರುತಿಸಬಹುದು. ಇವು ರೇಖಾಚಿತ್ರಗಳು ಆನೆಗಳ ಹಿಂಬಂದಿಯ ಅರ್ಧಭಾಗ ಮಾತ್ರ ಸ್ಪಷ್ಟವಿದೆ. ಆದರೂ ಆನೆಗಳ ದೈಹಿಕ, ದಾಢ್ಯತೆಯನ್ನು ಪುಷ್ಠಭಾಗದಲ್ಲಿ ಬೆನ್ನನ್ನು ಕಮಾನಿನಂತೆ ಭಾಗಿಸಿರುವುದರಿಂದ ಎತ್ತಿ ತೋರಿಸಲಾಗಿದೆ. ಆದರೆ ಇದರ ಬಾಲ ಸ್ವಲ್ಪ ಉದ್ದ ಮತ್ತು ಉದ್ದಕ್ಕೂ ಕೂದಲಿನಂತೆ ಆ ಕಡೆ ಈ ಕಡೆ ಸಣ್ಣ ರೇಖೆಗಳಿವೆ. ವಾಸ್ತವವಾಗಿ ಆನೆಯ ಬಾಲದ ತುದಿಯಲ್ಲಿ ಕೂದಲಿನ ಸಣ್ಣಗೊಂಡೆಯಿರುವುದೇ ವಿನಾ ಉದ್ದಕ್ಕೂ ಕೂದಲಿರುವುದಿಲ್ಲ. ಆದ್ದರಿಂದ ಈ ಬಾಲದ ವಿಶಿಷ್ಟ ಲಕ್ಷಣದ ಮರ್ಮವನ್ನು ತಿಳಿಯಬೇಕಾಗಿದೆ.

ನೆಲೆ : ೫ : ಇದು ಎರಡನೇ ಸಂಖ್ಯೆಯ ಕಲ್ಲಾಸರೆಯಿಂದ ಸ್ವಲ್ಪ ಮುಂದಕ್ಕೆ ಇದೆ. ಇದು ಪೂರ್ವಾಭಿಮುಖವಾಗಿದ್ದು, ವಿಶಾಲವಾಗಿದೆ. ಇಲ್ಲಿ ಅನೇಕ ಚಿತ್ರಗಳಿದ್ದು, ಅವುಗಳು ಬಹಳಷ್ಟು ಮಾಸಿಹೋಗಿವೆ. ಇಲ್ಲಿ ಮೂರು ಕುದುರೆ, ನಾಲ್ಕು ಎತ್ತು, ಒಂದು ರೀತಿಯ ಬಳ್ಳಿ ಹಾಗೂ ಎರಡು ಪುರುಷ, ಒಂದು ಸ್ತ್ರೀಯ ಚಿತ್ರವಿದೆ.

ಮುಖಭಾಗ ನಾಶವಾಗಿರುವ ಕುದುರೆ (೦.೭೦ ಮೀ.x ೦.೫೭ ಮೀ.) ಛಾಯಾ ರೂಪದಲ್ಲಿದೆ. ಬಾಲದಲ್ಲಿ ಉದ್ದಕ್ಕೂ ರೋಮಗಳನ್ನು ತೋರಿಸಲಾಗಿದೆ. ಉಳಿದ ಎರಡು ಕುದುರೆಗಳು ಚಿಕ್ಕ ಅಳತೆಯಲ್ಲಿದ್ದು, ರೇಖಾಕೃತಿಗಳಾಗಿವೆ. ಪಶುಗಳು ಕೂಡ ರೇಖಾಕೃತಿಯವು ಕೋಡು, ಇಣಿ, ಬಾಲ ಸಹಜವಾಗಿವೆ. ೦.೩೦ಮೀx೦.೨೪ ಮೀ ಅಳತೆಯ ಹಾಗೂ ೦.೫೧x೦.೫೦ ಅಳತೆಯ ಎತ್ತುಗಳು ತುಂಬಾ ಸಹಜವಾದ ರಚನೆಗಳಾಗಿವೆ. ಉಳಿದ ಎರಡು ಪಶುಗಳು ಚಿಕ್ಕ ಆಕೃತಿಯವು. ಅವುಗಳಲ್ಲಿ ಒಂದು ಛಾಯಾರೂಪದಲ್ಲಿದ್ದೂ, ನಂತರ ಕಾಲದ ರಚನೆಯೆಂದು ತೋರುತ್ತದೆ.

ಮನುಷ್ಯ ಚಿತ್ರಗಳಲ್ಲಿ ಸ್ತ್ರೀಯ ಚಿತ್ರ ಗಮನ ಸೆಳೆಯುತ್ತದೆ. ೦.೫೫ ಮೀ ಎತ್ತರ ಕೋಲಿನಂತೆ ನೀಳವಾದ ಮುಂಡ, ಕಡ್ಡಿಯಂಥ ಕಾಲು, ಕೈಗಳು, ಸಹಜವಾದ ಕತ್ತು, ತಲೆಗಳಿವೆ. ತಲೆಯಲ್ಲಿ ಎರಡೂ ಬದಿಯಿಂದ ನೀಳವಾಗಿ ಇಳಿ ಬಿದ್ದಿರುವ ಜಡೆಗಳಿವೆ. ಎರಡೂ ಸ್ತನಗಳು ದೊಡ್ಡ ಪ್ರಮಾಣದಲ್ಲಿವೆ. ಈ ರೀತಿಯ ಸ್ತ್ರೀಯ ಚಿತ್ರ ಇಲ್ಲಿಯ ವಿಶೇಷವಾಗಿದೆ. ಎರಡು ಪುರುಷ ಚಿತ್ರಗಳಲ್ಲಿ ಒಂದು ಚಿಕ್ಕ ಅಳತೆಯ ಛಾಯಾರೂಪದಲ್ಲಿದೆ. ಇನ್ನೊಂದು ಕುಳಿತ ಭಂಗಿಯಲ್ಲಿದೆ. ಮುಖ ವೃತ್ತಕಾಲದಲ್ಲಿ ದೊಡ್ಡ ಪ್ರಮಾಣದಲ್ಲಿದೆ. ಉಳಿದಂತೆ ಮುಂಡ, ಕಾಲುಗಳು ಕಡ್ಡಿ ರೂಪದವು. ಇಲ್ಲಿಯೇ ೧.೬೦ಮೀ. ಉದ್ದವಿರುವ ಒಂದು ರೇಖಾಕೃತಿ ಇದೆ. ಇದಕ್ಕೆ ಕೆಳಭಾಗಕ್ಕೆ ನೇತುಬಿದ್ದಿರುವ ನಾಲ್ಕು ರೇಖೆಗಳು ಅವುಗಳ ತುದಿಯಲ್ಲಿ ಬಾಲದ ಗೋಡೆಯಂತೆ ಅಥವಾ ಬೇರುಗಳಂತೆ ಹಲವು ರೇಖೆಗಳಿವೆ. ಡಾ. ಅ.ಸುಂದರರವರು ಇದನ್ನು ಒಂದು ಜಾತಿಯ ಬಳ್ಳಿಯ ಚಿತ್ರವೆಂದು ಅಭಿಪ್ರಾಯ ಪಟ್ಟಿದ್ದಾರೆ.

ಇದೇ ಕಲ್ಲಾಸರೆಯ ದಕ್ಷಿಣ ಭಾಗದಲ್ಲಿ ಕೆಂಗಂದು ಬಣ್ಣದ ಜಿಂಕೆಯ ಚಿತ್ರ ಶೈಲಿಯು ಸುಂದರ, ಸರಳ ರಚನೆಯಾಗಿದೆ. ಬಾಲ ನೇರವಾಗಿದ್ದು, ಶಿಶ್ನವನ್ನು ಬಿಡಿಸಲಾಗಿದೆ.

ನೆಲೆ-೬ : ಪಂಚಮುಖಿ ವೀರಭದ್ರ ದೇವಾಲಯದ ಎದುರು ನಂದಿಯ ಹಿಂಭಾಗದಲ್ಲಿ ಈ ಕಲ್ಲಾಸರೆ ಇದೆ. ಇಲ್ಲಿಯ ಚಿತ್ರಗಳು ತೀರಾ ಮಾಸಿಹೋಗಿವೆ. ಇರುವ ಚಿತ್ರಗಳಲ್ಲಿ ಪ್ರಾಣಿ, ಮನುಷ್ಯರ ರೇಖಾಚಿತ್ರಗಳನ್ನು ಗುರುತಿಸಬಹುದು. ಚಿತ್ರ ನೆಲೆ ಐದರಲ್ಲಿರುವಂತಹ ಕಡ್ಡಿ ದೇಹ, ವೃತ್ತಾಕಾರದ ದೊಡ್ಡ ತಲೆಯ ಮನುಷ್ಯಾಕೃತಿಯೊಂದು ಇಲ್ಲಿದೆ.

ನೆಲೆ-೭ : ಗ್ರಾಮದ ಉತ್ತರಕ್ಕಿಂತ ಬೆಟ್ಟದ ಬೂದಿಕೊಳ್ಳದ ಪ್ರದೇಶದಲ್ಲಿ (ನವಶಿಲಾಯುಗದ ನೆಲೆ) ನೀರಿನ ಟ್ಯಾಂಕ್ ಹಿಂಬದಿಯಲ್ಲಿ ಈ ಕಲ್ಲಾಸರೆ ಇದೆ.

ಇಲ್ಲಿ ಏಳು ಮನುಷ್ಯ ಚಿತ್ರಗಳಿವೆ. ಎಲ್ಲವೂ ರೇಖಾ ಚಿತ್ರಗಳು. ಸುಮಾರು ೩೦ ಮೀ. ಎತ್ತರ ೦.೧೨ ಮೀ. ಅಗಲವಿರುವ ಮನುಷ್ಯ ಚಿತ್ರವೊಂದು ದೊಡ್ಡ ಅಳತೆಯಿಂದ ಗಮನ ಸೆಳೆಯುತ್ತದೆ. ದ್ವಿತ್ರಿಕೋನಾಕಾರದ ಮುಂಡವನ್ನು ಹೊಂದಿದ್ದು, ಕಾಲುಗಳನ್ನು ಅಗಲಿಸಿ ನಿಂತಿದೆ. ಕೈಗಳು ವಕ್ರವಾಗಿ ಕೆಳಕ್ಕೆ ಚಾಚಿವೆ. ಕತ್ತು, ವೃತ್ತಾಕಾರದ ತಲೆ ಇದೆ. ಬದಿಯಲ್ಲಿ ಕಡ್ಡಿಯಾಕಾರದ ಮೂರು ಮನುಷ್ಯ ಚಿತ್ರಗಳು ಸಾಲಾಗಿವೆ. ಎಲ್ಲವಕ್ಕೂ ಕೈ, ಕಾಲುಗಳು ಅಗಲಿಸಿವೆ. ಕೆಳಭಾಗದಲ್ಲಿ ಇದೇ ರೀತಿಯ ಎರಡು ಮನುಷ್ಯ ಚಿತ್ರಗಳಿದ್ದು, ಅವುಗಳಲ್ಲಿ ಒಂದು ಚಿತ್ರದಲ್ಲಿ ಕಾಲುಗಳನ್ನು ಅರೆ ಮಡಚಿ ಕುಳಿತಂತೆ ಚಿತ್ರಿಸಿದೆ. ಇಲ್ಲಿಯ ಇನ್ನೊಂದು ವ್ಯಕ್ತಿಯ ಚಿತ್ರ ಗಮನ ಸೆಳೆಯುತ್ತದೆ. ೦.೧೨x೦.೬ ಮೀ. ಅಳತೆಯ ಐದು ಕೈಗಳನ್ನು ಅಗಲಸಿದ್ದು, ಉದ್ದವಾದ ನಿಲುವಾಗಿ, ಧೋತಿಯನ್ನು ಧರಿಸಿದಂತೆ ತೋರುತ್ತದೆ.[6] ಇಂಥ ಚಿತ್ರವೊಂದು ಗಂಗಾವತಿ ತಾಲೂಕಿನ ಸಂಗಾಪುರದ ಐದನೆಯ ಕಲ್ಲಾಸರೆಯಲ್ಲಿದೆ. ಈ ಚಿತ್ರದ ವೈಶಿಷ್ಟ್ಯತೆಯನ್ನು ಗುರುತಿಸಬೇಕಾಗಿದೆ.

ನೆಲೆ-೮ : ಪಂಚಮುಖಿ ವೀರಭದ್ರ ದೇವಾಲಯದ ಹಿಂಬದಿಯ ಬೆಟ್ಟದಲ್ಲಿ ಈ ಕಲ್ಲಾಸರೆ ಇದೆ. ಇಲ್ಲಿಯ ಛಾವಣಿಯಲ್ಲಿ ಉಡದ ಚಿತ್ರ ಮತ್ತು ಗಿಡದಂಥ ಆಕೃತಿಯ ಚಿತ್ರ ಹಾಗೂ ಕೆಳಗಿನ ಆಸರೆಯ ಕಲ್ಲಿನಲ್ಲಿ ಎತ್ತಿನ ಚಿತ್ರ ಇದೆ. ಹಲ್ಲಿಯಾಕಾರದ ಉಡದ ಚಿತ್ರ ೦.೩೦ ಮೀ x೦.೧೨ ಮೀ ಅಳತೆಯದಾಗಿದ್ದು ಅಲಂಕರಣೆಯಿಂದ ಗಮನ ಸೆಳೆಯುತ್ತದೆ. ಚೂಪಾದ ಮೂತಿಯ ತಲೆ, ತೆಳುವಾದ ಕತ್ತು, ಎಲೆಯಾಕಾರದ ದಪ್ಪ ದೇಹ ಮತ್ತು ಉದ್ದವಾದ ಬಾಲವಿದೆ. ಮುಂದಿನ ಕಾಳುಗಳು ಮುಂದಕ್ಕೆ, ಹಿಂದಿನ ಕಾಲುಗಳು ಹಿಂದಕ್ಕೆ ಚಾಚಲ್ಪಟ್ಟಿವೆ. ಬೆನ್ನಿನ ಮಧ್ಯಭಾಗದಲ್ಲಿ ತಲೆಯಿಂದ ಪುಷ್ಠಭಾಗದವರೆಗೆ ನೇರ ರೇಖೆಯನ್ನು ಹಾಕಲಾಗಿದ್ದು, ಅದರಿಂದ ಎರಡೂ ಬದಿಗೆ ವಕ್ರವಾಗಿ ಸಾಲು ಗೆರೆಗಳನ್ನು ಎಳೆದಿರುವುದು ವಿಶೇಷ. ಇದೇ ರೀತಿಯಲ್ಲಿ ಸ್ವಲ್ಪ ಭಿನ್ನವಾದ ಉಡದ ಚಿತ್ರಗಳು ಹಿರೇಬೆನಕಲ್‌ನ ಹದಿನಾರನೇ ಕಲ್ಲಾಸರೆಯಲ್ಲಿವೆ.[7]

ಉಡದ ಬದಿಯಲ್ಲಿ ಒಂದು ವಿಶಿಷ್ಟ ಆಕೃತಿಯ ಚಿತ್ರವಿದೆ (೦.೨೪ ಮೀ.ಉದ್ದ) ಉದ್ದವಾದ ರೇಖೆಯನ್ನು ಮಧ್ಯವಾಗಿರಿಸಿ, ಮೇಲಿಂದ ಕೆಳಕ್ಕೆ ಐದು ಅಸಮ ವಜ್ರಾಕೃತಿಗಳನ್ನು ಹಾಕಲಾಗಿದೆ. ತೀರ ಕೆಳಗಿನದು ಹಲ್ಲಿಯ ಬಾಲದಂತೆ ಉದ್ದವಾಗಿದೆ. ಇದು ಯಾವ ಚಿತ್ರವೆಂದು ಗುರುತಿಸುವುದು ಕಷ್ಟ. ಕೆಳಗಿನ ಆಸರೆ ಕಲ್ಲಿನಲ್ಲಿ ಛಾಯಾರೂಪದ ಎತ್ತಿನ ಚಿತ್ರವಿದೆ. ರಚನಾಶೈಲಿಯಿಂದ ಇದು ನಂತರ ಕಾಲದ್ದೆಂದು ಹೇಳಬಹುದು.

ನೆಲೆ-೯ : ಕುರುಗೋಡು ಮುಷ್ಠಗಟ್ಟೆ ರಸ್ತೆಯಲ್ಲಿ ಸಂಗಮೇಶ್ವರ ದೇವಾಲಯದಿಂದ ಸುಮಾರು ಒಂದು ಕಿ.ಮೀ. ದೂರದಲ್ಲಿ ಈ ಕಲ್ಲಾಸರೆ ಇದೆ. ರಸ್ತೆಯ ಎಡಬದಿಗೆ ಹೊಂದಿಕೊಂಡಿರುವ ಇದು ಸುತ್ತಲೂ ಬಯಲಿನ ಮಧ್ಯದ ಸ್ವತಂತ್ರ ಕಲ್ಲಾಸರೆ. ಕಲ್ಲಾಸರೆಯ ಸಮುಚ್ಛಯದಲ್ಲಿ ದಕ್ಷಿಣ, ಉತ್ತರ ಮತ್ತು ಪಶ್ಚಿಮ ಬದಿಯ ಕಲ್ಲಾಸರೆಗಳಲ್ಲಿ ಚಿತ್ರಗಳಿವೆ. ಸದ್ಯ ಇದು ಜನಸಂಪರ್ಕದ ಪ್ರದೇಶವಾಗಿರುವುದರಿಂದ ಚಿತ್ರಗಳು ಬಹಳಷ್ಟು ಮಾಸಿ ಹೋಗಿವೆ.

ದಕ್ಷಿಣ ಬದಿಯ ಕಲ್ಲಾಸರೆಯಲ್ಲಿ ಒಂದು ದೊಡ್ಡ ಗೂಳಿಯ ಹಾಗೂ ಕೆಲವು ಚಿಕ್ಕ ಚಿಕ್ಕ ಪ್ರಾಣಿಗಳ ಚಿತ್ರಗಳನ್ನು ಗುರುತಿಸಬಹುದು. ಚಿಕ್ಕ ಪ್ರಾಣಿಗಳು ಏನೆಂದು ಹೇಳುವುದು ಕಷ್ಟ. ಕೊಡು, ಬಾಲವುಳ್ಳ ಒಂದು ಪಶುವಿನ ಮೈಮೇಲೆ ಪರಸ್ಪರ ಛೇದಿಸುವ ವಕ್ರ ರೇಖೆಗಳನ್ನು ಹಾಕಲಾಗಿದೆ.

ಉತ್ತರ ಬದಿಯಲ್ಲಿ ಕಲ್ಲಾಸರೆಯಲ್ಲಿ ಮೂರು ಪ್ರಾಣಿಗಳ ದೊಡ್ಡ ಚಿತ್ರಗಳಿವೆ. ಅವುಗಳಲ್ಲಿ ಎರಡು ತೀರಾ ಅಸ್ಪಷ್ಟವಾಗಿದ್ದು, ಗುರುತಿಸುವುದು ಅಸಾಧ್ಯ. ಆದರೆ ೦.೨೪ ಮೀ. ೦.೧೨ಮೀ. ಅಳತೆಯ ಹುಲಿಯ ಚಿತ್ರ ಸ್ಪಷ್ಟವಿದೆ. ಮುಖ, ಮುಂಡ, ಕಾಲು ಸಹಜವಾಗಿವೆ. ಕಿವಿಗಳನ್ನು ತೋರಿಸಲಾಗಿದೆ. ಬಾಲ ಮೇಲಕ್ಕೆ ಎತ್ತಿದ್ದು, ತುದಿಯಲ್ಲಿ ಸ್ವಲ್ಪ ಬಾಗಿಸಿದೆ. ಸಾಮಾನ್ಯವಾಗಿ ಅನೇಕ ಸಂದರ್ಭದಲ್ಲಿ ಪ್ರಾಣಿಗಳಿಗೆ ಕಾಲುಗಳನ್ನು ದ್ವಿಸಂಯುಕ್ತ ರೇಖೆಯಲ್ಲಿ ತೋರಿಸಲಾಗಿದ್ದರೂ ಇಲ್ಲಿ ನಾಲ್ಕು ಕಾಲುಗಳನ್ನು ಪ್ರತ್ಯೇಕವಾಗಿ ಬಿಡಿಸಿರುವುದು ಗಮನಾರ್ಹ, ಅಲ್ಲದೆ ಮೈಮೇಲೆ ಪಟ್ಟೆಗಳನ್ನು ಹಾಕಲಾಗಿದೆ. ಇದು ಹಂಪಿಯ ೨ನೇ ನೆಲೆಯ (ಮೊಸಳಯ್ಯನ ಗುಡ್ಡ) ಹುಲಿಯ ಚಿತ್ರವನ್ನು ಹೊಲುತ್ತಿರುವುದು ವಿಶೇಷ.

ಪಶ್ಚಿಮ ಬದಿಯ ಕಲ್ಲಾಸರೆಯಲ್ಲಿ ಪ್ರಾಣಿಯ ಚಿತ್ರ ೦.೨೪ x ೦.೧೨ಮೀ. ಹೊಂದಿದೆ. ಮೈಮೇಲೆ ಸಾಲಾಗಿ ಅಡ್ಡರೇಖೆಗಳನ್ನು ಹಾಕಲಾಗಿದೆ. ನಾಲ್ಕು ಕಾಲುಗಳು ಬಿಡಿಯಾಗಿವೆ. ಈ ರಚನೆಯನ್ನು ಗಮನಿಸಿದರೆ ಇದು ಕತ್ತೆಕಿರುಬ ಪ್ರಾಣಿಯ ಚಿತ್ರವೆಂದು ಹೇಳಬಹುದು.

ನೆಲೆ-೧೦ : ಕುರುಗೋಡು ಮುಷ್ಠಗಟ್ಟೆ ರಸ್ತೆಯಲ್ಲಿ ಕಣಿವೆಯ ನಂತರದಲ್ಲಿ ಬರುವ ಜಿಂಕೆಗುಡ್ಡದಲ್ಲಿ ಈ ಕಲ್ಲಾಸರೆ ಇರುವುದು ತಿಳಿಯುತ್ತದೆ. ರಸ್ತೆಯ ಎಡಬದಿಯಲ್ಲಿರುವ ಶಿಲಾಶಾಸನವಿರುವ ಗೂಡಿನ ಎದುರಿಗೆ ಜಿಂಕೆಗುಡ್ಡವಿದೆ. ಈ ಕಲ್ಲಾಸರೆಯಲ್ಲಿ ಕೆಲವು ಜಿಂಕೆಗಳ ಮತ್ತು ಹುಲಿಯ ಚಿತ್ರವಿದೆ.

ನೆಲೆ-೧೧ : ಜಿಂಕೆಗುಡ್ಡದ ಹಿಂಬದಿಯ ಕಣಿವೆಯಲ್ಲಿ ಈ ಕಲ್ಲಾಸರೆ ಇದೆ. ಇಲ್ಲಿ ಕೋಣ, ಸ್ತ್ರೀ ಪುರುಷರ ಸಂಭೋಗ ಸ್ಥಿತಿಯ ಚಿತ್ರಗಳು ಇವೆ. ಮನುಷ್ಯ ಚಿತ್ರಗಳು ರೇಖಾಕೃತಿಯಲ್ಲಿವೆ.

ನೆಲೆ-೧೨ : ಕುರುಗೋಡ ಮುಷ್ಠಗಟ್ಟೆ ರಸ್ತೆಯಲ್ಲಿ ಈಶ್ವರ ದೇವಾಲಯದ ರಸ್ತೆ ಬದಿಯ ಬೆಟ್ಟದಲ್ಲಿ ಈ ಕಲ್ಲಾಸರೆ ಇದೆ. ಇಲ್ಲಿ ಕೆಂಪು ಮತ್ತು ಬಿಳಿ ಬಣ್ಣದಲ್ಲಿ ರಚಿಸಿರುವ ಮೂರು ಮನುಷ್ಯ ಚಿತ್ರಗಳಿವೆ. ಇವು ಕಡ್ಡಿರೂಪದ ಚಿತ್ರಗಳು.

ನೆಲೆ-೧೩ : ಗ್ರಾಮದ ಪಶ್ಚಿಮಕ್ಕೆ ಹೊಂದಕೊಂಡಿರುವ ವಜ್ರಯ್ಯನ ಗುಡ್ಡದಲ್ಲಿ ಈ ಕಲ್ಲಾಸರೆ ಇದೆ. ಇಲ್ಲಿ ಚಾರಿತ್ರಿಕ ಕಾಲದ ಬಿಳಿಬಣ್ಣದಲ್ಲಿ ರಚಿಸಿರುವ ಅನೇಕ ಶಂಖ, ಚಕ್ರ, ತ್ರಿನಾಮಗಳ ವಿವಿಧ ರೀತಿಯ ಚಿತ್ರಗಳಿವೆ. ಒಂದು ಚಿಕ್ಕ ಆನೆ ಸವಾರನ ಚಿತ್ರವೂ ಇಲ್ಲಿದೆ.

ನೆಲೆ : ೧೪ : ಗ್ರಾಮದ ಪಶ್ಚಿಮಕ್ಕಿರುವ ಕೋಳಿಗುಡ್ಡದಲ್ಲಿಯ ಕಪ್ಪು, ಗುಂಡುಗಳಲ್ಲಿ ಕುಟ್ಟಿದ, ಕೊರೆದ ಗೂಳಿ, ಎತ್ತು ಮನುಷ್ಯ ಚಿತ್ರಗಳಿವೆ.

ನೆಲೆ : ೧೫ : ಪಂಚಮುಖಿ ವೀರಭದ್ರ ದೇವಾಲಯದ ಎದುರು ನಂದಿಯ ಸುತ್ತಮುತ್ತಲಿನ ಕಲ್ಲಾಸರೆಗಳ ನೆಲ ಬಂಡೆಗಳ ಮೇಲೆ ಚಿಕ್ಕ ಚಿಕ್ಕ ಕುಳಿಗಳನ್ನು ಸಾಲಾಗಿ ಮೂಡಿಸಿ ವೃತ್ತ, ಚೌಕ, ಆಯತಾಕಾರದ ಅಂಕಣಾಕೃತಿಗಳನ್ನು ಕೊರೆಯಲಾಗಿದೆ. ಇವು ತೀರ ಆಳವಾಗಿಲ್ಲ. ವೃತ್ತಗಳು ೦.೬೨ ಮೀ. ವ್ಯಾಸವನ್ನು ಹೊಂದಿವೆ. ಕೆಲವು ಚೌಕಾಕೃತಿಗಳು ೦.೪೨x೦.೫೬ ಮೀ. ಅಳತೆಯನ್ನು ಹಾಗೂ ಕೆಲವು .೩೬ಮೀ. ಚೌಕ ಅಳತೆಯನ್ನು ಹೊಂದಿವೆ. ಎಲ್ಲ ಚೌಕ, ಆಯತ, ವೃತ್ತಗಳಿಗೆ ಮಧ್ಯದಲ್ಲಿ ಅಡ್ಡ ಹಾಗೂ ಉದ್ದವಾಗಿ ಕುಳಿಯ ರೇಖೆಗಳಿವೆ.

ಚಿತ್ರಗಳ ವಿಶ್ಲೇಷಣೆ

ಪ್ರಾಗಿತಿಹಾಸಕಾಲದ ಈ ಚಿತ್ರಗಳು ಸಾಮಾನ್ಯ ವ್ಯಕ್ತಿಗಳಿಂದ ಬಿಡಿಸಲ್ಪಟ್ಟ ಸಾಂಪ್ರದಾಯಿಕ ಚಿತ್ರಗಳೇ ವಿನಃ ಪ್ರಬುದ್ಧ ಕಾಲಕೃತಿಗಳೇನಲ್ಲ. ಬಹುಮಟ್ಟಿಗೆ ಚಿತ್ರಿತ ನೆಲೆಗಳು ಸರಳವಾಗಿ ಕಣ್ಣಿಗೆ ಬೀಳದೆ ಬೆಟ್ಟದ ದುರ್ಗಮ ಭಾಗದಲ್ಲಿವೆ. ಇಂಥ ನೆಲೆಗಳನ್ನು ಹುಡುಕಿ ಚಿತ್ರಿಸಿರುವಲ್ಲಿ ಜೀವನಭರಣದ ಸುಗಮತೆಯ ಉದ್ದೇಶದ ಕಟ್ಟಳೆ ಪ್ರಧಾನವಾಗಿರುವುದನ್ನು ಗ್ರಹಿಸಬಹುದು. ಈ ಚಿತ್ರಗಳಲ್ಲಿ ಸಾಮಾನ್ಯವಾಗಿ ಪ್ರಾಣಿ ಚಿತ್ರಗಳೇ ಅಧಿಕವಾಗಿವೆ. ಮನುಷ್ಯ ಹಾಗೂ ಇತರ ಚಿತ್ರಗಳು ಇವೆ. ಇವುಗಳನ್ನು ಛಾಯಾ ಇಲ್ಲದೇ ಬಾಹ್ಯ ರೇಖಾ ರೂಪದಲ್ಲಿ ಬಿಡಿಸಲಾಗಿದೆ. ಚಿತ್ರಗಳೂ ಸಾಂಕೇತಿಕ ಆಕೃತಿಗಳೇ ವಿನಃ ನಿರ್ದಿಷ್ಟವಾಗಿ ಕಣ್ಣು, ಮೂಗು, ಕಿವಿ ಮುಂತಾದ ದೈಹಿಕ ಲಕ್ಷಣಗಳನ್ನು ಹೊಂದಿರುವುದಿಲ್ಲ. ಆದಾಗ್ಯೂ ಚಿತ್ರಗಳಲ್ಲಿ ಭಾವ ಭಂಗಿ ಸತ್ವಭರಿತವಾಗಿರುತ್ತದೆ. ಚಿತ್ರಗಳು ಆಕೃತಿ ಪ್ರಧಾನವಾಗಿರದೆ ಜೀವಂತಿಕೆಯನ್ನು ನಿದರ್ಶಿಸುತ್ತವೆ. ಸರಳವಾಗಿ ಎಳೆದ ಗೆರೆಗಳಲ್ಲಿ ಆಯಾ ಪ್ರಾಣಿಗಳ ಗುಣ ಸ್ವಭಾವಗಳು ಎದ್ದು ಕಾಣುತ್ತವೆ. ಆನೆ, ಗೂಳಿ, ಕಾಡುಕೋಣಗಳ ಗಾಂಭೀರ್ಯ ನಿಲುವು, ಜಿಂಕೆಗಳ ಮುಗ್ಧತೆ, ಚುರುಕುತನ ಚಿತ್ರಗಳಲ್ಲಿ ವ್ಯಕ್ತವಾಗುತ್ತದೆ. ಹೆಚ್ಚಿನ ಚಿತ್ರಗಳನ್ನು ಸಾಮಾನ್ಯವಾಗಿ ಕೆಮ್ಮಣ್ಣಿನಂಥ ಬಣ್ಣದಿಂದ ಚಿತ್ರಿಸಲಾಗಿದೆ. ತೆಳುಮಸುಕು ಬಿಳಿ ಬಣ್ಣವನ್ನು ಬಳಸಲಾಗಿದೆ. ಕಾಲಮಾನದ ವೈಪರೀತ್ಯದಿಂದ ಈ ಬಣ್ಣಗಳು ಮಾಸಿದ್ದು ಕೆಲವು ಕಡೆ ಚಿತ್ರಗಳನ್ನು ಗುರುತಿಸುವುದು ಕಠಿಣವಾಗಿದೆ.

ಚಿತ್ರ ಪ್ರಕಾರಗಳು : ಪಶು ಪ್ರಾಣಿಗಳು

ವೈವಿಧ್ಯ ಪ್ರಾಣಿಗಳು ಚಿತ್ರಿತಗೊಂಡಿರುವುದು, ಗಮನಾರ್ಹವಾಗಿದೆ. ಆನೆ, ಕೋಣ, ಎಮ್ಮೆ, ಚಿಗರೆ, ಜಿಂಕೆ, ಚಿರತೆ,ಹುಲಿ, ಕುದುರೆ, ಉಡ ಹಾಗೂ ಕತ್ತೆಕಿರುಬ ಪ್ರಾಣಿಗಳ ಚಿತ್ರಗಳು ಕಂಡುಬರುತ್ತವೆ. ಗೂಳಿ, ಹುಲಿ, ಕಾಡುಕೋಣಗಳ ನಿರ್ಭಯವಾಗಿ ಸಹಜವಾಗಿ ನಿಂತಾಗ ಎದ್ದು ಕಾಣುವ ಗಾಂಭೀರ್ಯತೆಯನ್ನು, ಜಿಂಕೆಗಳ ಮುಗ್ಧತೆಯನ್ನು ಸಹಜವಾಗಿ ಗೆರೆಗಳಲ್ಲಿ ಸೆರೆ ಹಿಡಿಯಲಾಗಿದೆ. ೨ನೆಯ ಕಲ್ಲಾಸರೆಯಲ್ಲಿ ತೆಳುವಾದ ರೇಖೆಯಲ್ಲಿ ಬಿಡಿಸಿರುವ ಕಾಡುಕೋಣದ ಚಿತ್ರ ಅತ್ಯಂತ ಸಹಜ, ಸುಂದರ ಚಿತ್ರವೆನ್ನಬಹುದು. ಉದ್ಧವಾಗಿ ಒಳಬಾಗಿರುವ ಕೋಡು, ಎದೆಭಾಗ ದಷ್ಟ ಪುಷ್ಠವಿರುವ ಮುಂಡಗಳು ಪ್ರಮಾಣಬದ್ಧವಾಗಿವೆ. ಇಲ್ಲಿಯೇ ಇರುವ ಜಿಂಕೆಗಳ ಚಿತ್ರಗಳೂ ಕುತೂಹಲ ಉಂಟುಮಾಡುತ್ತವೆ. ಅವು ಪರಸ್ಪರ ಎದುರುಬದುರಾಗಿ ನಿಂತಿದ್ದರೂ ಮುಖಗಳನ್ನು ಮುಂಡದ ಹಿಂಭಾಗಕ್ಕೆ ಹೊರಳಿಸಿವೆ. ಎರಡರ ಮಧ್ಯದಲ್ಲಿ ದುಂಡಾದ ವಸ್ತುವನ್ನು ಇರಿಸಿದಂತಿದ್ದು ವಿಶೇಷವೆನಿಸುತ್ತದೆ. ಜೊತೆಗೆ ಪರಸ್ಪರ ಎದುರು ಮುಖಮಾಡಿ ನಿಂತಿರುವ ಜಿಂಕೆಗಳು, ೩ನೆಯ ಕಲ್ಲಾಸರೆಯಲ್ಲಿ ಒಂದರ ಬದಿ ಒಂದು ನಿಂತಿರುವ ಜಿಂಕೆಗಳ ಚಿತ್ರಗಳು ವಿಶಿಷ್ಟ ರಚನೆ ಎನ್ನಿಸುತ್ತವೆ. ೫ನೆಯ ಕಲ್ಲಾಸರೆಯ ದಕ್ಷಿಣ ಬದಿಯಲ್ಲಿ ಬಿಡಿಸಿರುವ ಜಿಂಕೆಯ ಚಿತ್ರ ಒಂದು ಸರಳ ಸಹಜದ ರಚನೆ. ಬಾಲವನ್ನು ನೇರವಾಗಿ ಸೆಟಿಸಿ ಮುಖವನ್ನು ಮೇಲಕ್ಕೆತ್ತಿ ನಿಂತಭಂಗಿ ಕಲಾವಿದನ ಕಲಾಪ್ರಜ್ಞೆಗೆ ಸಾಕ್ಷಿಯಾಗಿದೆ. ೧ನೇ ಗವಿಯಲ್ಲಿದ್ದ ಗಬ್ಬದ ಜಿಂಕೆಯ ಚಿತ್ರ ಗಮನಾರ್ಹ. ಪ್ರಾಯಶಃ ಇದು ಮಾಂತ್ರಿಕ ಕಟ್ಟಳೆಗಳಿಗೆ ಸಂಬಂಧಿಸಿದ್ದು ಎನ್ನಬಹುದು.

ಮನುಷ್ಯ ಹಾಗೂ ವಿವಿಧ ಪ್ರಾಣಿಗಳು (೫ನೇ ಕಲ್ಲಾಸರೆ)

ಮನುಷ್ಯ ಹಾಗೂ ವಿವಿಧ ಪ್ರಾಣಿಗಳು (೫ನೇ ಕಲ್ಲಾಸರೆ)

ವಿವಿಧ ಪ್ರಾಣಿಗಳು (೨ನೆ ಕಲ್ಲಾಸರೆ)

ವಿವಿಧ ಪ್ರಾಣಿಗಳು (೨ನೆ ಕಲ್ಲಾಸರೆ)

೨ನೆಯ ಕಲ್ಲಾಸರೆಯಲ್ಲಿ ಗೂಳಿ ಎತ್ತುಗಳ ಚಿತ್ರಗಳಿವೆ. ಸಾಮಾನ್ಯವಾಗಿ ಅವೆರಡರ ದೇಹರಚನಾ ವಿನ್ಯಾಸ ಒಂದೇ ತೆರನಾಗಿರುತ್ತದೆ. ಇವುಗಳ ಚಿತ್ರರಚನಾ ಸಂದರ್ಭದಲ್ಲಿ ಚಿತ್ರರಚನಾಕಾರನಿಗೆ ಅವುಗಳ ವಿಶಿಷ್ಠ ಅಂಗಭಂಗಿಗಳ ಪರಿಕಲ್ಪನೆ ಇರಬೇಕಾಗುತ್ತದೆ. ಪ್ರಸ್ತುತ ಚಿತ್ರಗಳಲ್ಲಿ ಎತ್ತು, ಗೂಳಿಗಳ ಚಿತ್ರಗಳನ್ನು ಸ್ಪಷ್ಟವಾಗಿ ಗುರುತಿಸುವಂತೆ ಬಿಡಿಸಿರುವ ರೀತಿ ಗಮನಾರ್ಹವೆನಿಸುತ್ತದೆ. ಆಂಗಿಕವಾಗಿ ಗೂಳಿಯ ಇಣಿ ಎತ್ತಿನದಕ್ಕಿಂತ ದೊಡ್ಡ ದಾಗಿರುವುದು ಮತ್ತು ಎತ್ತು ಸಹಜ ಭಂಗಿಯಲ್ಲಿದ್ದರೆ ಗೂಳಿಯ ಗಾಂಭೀರ್ಯತೆ ಅದರ ಭಂಗಿಯಲ್ಲಿ ವ್ಯಕ್ತವಾಗುತ್ತಿದೆ. ೩ನೆಯ ಕಲ್ಲಾಸರೆ ಬೆಟ್ಟದ ಮೇಲ್ತುದಿಯಲ್ಲಿ ಇದೆ. ಇಕ್ಕಟ್ಟಾದ ಜಾಗದಲ್ಲಿರುವ ಇದರಲ್ಲಿ ಚಿತ್ರಗಳನ್ನು ಬಿಡಿಸಿರುವುದು ಆಶ್ಚರ್ಯದಾಯಕ. ಇಲ್ಲಿ ಹುಲಿ, ಚಿರತೆಯಂತಹ ಕ್ರೂರ ಪ್ರಾಣಿಗಳ ಚಿತ್ರಗಳಿವೆ. ಚಿರತೆಯ ಮೈಮೇಲೆ ಚುಕ್ಕೆಗಳನ್ನು ಹುಲಿಯ ಮೈಮೇಲೆ ಪಟ್ಟೆಗಳನ್ನು ಬಿಡಿಸಲಾಗಿದ್ದು, ಬಾಲ ಮೇಲಕ್ಕೆತ್ತಿರುವುದು ಸಹಜವೆನಿಸುತ್ತದೆ. ೯ನೆಯ ಕಲ್ಲಾಸರೆಯಲ್ಲಿಯ ಹುಲಿಯ ಚಿತ್ರ ದೊಡ್ಡ ಅಳತೆಯಲ್ಲಿದೆ. ಇದಕ್ಕೆ ನಾಲ್ಕು ಅಂಗಗಳನ್ನು ಬಿಡಿಸಿರುವುದು ಗಮನಾರ್ಹ.

ಹುಲಿ, ಚಿರತೆ, ಜಿಂಕೆಗಳು (೩ನೆ ಕಲ್ಲಾಸರೆ)

ಹುಲಿ, ಚಿರತೆ, ಜಿಂಕೆಗಳು (೩ನೆ ಕಲ್ಲಾಸರೆ)

21_290_KRGD-KUH

ಕತ್ತೆ ಕಿರುಬ, ಹುಲಿ (೯ನೆ ಕಲ್ಲಾಸರೆ)

ಕತ್ತೆ ಕಿರುಬ, ಹುಲಿ (೯ನೆ ಕಲ್ಲಾಸರೆ)

೪ನೇ ಕಲ್ಲಾಸರೆಯನ್ನು ಆನೆಗಳ ಹಿಂಡಿನ ಚಿತ್ರವಿದೆ. ಆನೆಗಳ ಮುಖಭಾಗ ಮತ್ತು ಹಿಂಬದಿಯ ಅರ್ಧಭಾಗ ಮಾತ್ರ ಸ್ಪಷ್ಟವಿದೆ. ಆದರೂ ಆನೆಗಳ ದೈಹಿಕ ದಾಢ್ಯತೆಯನ್ನು ಪುಷ್ಠಭಾಗದಲ್ಲಿ ಬೆನ್ನನ್ನು ಕಮಾನಿನಂತೆ ಬಾಗಿಸಿರುವುದರಿಂದ ಎತ್ತಿ ತೋರಿಸಲಾಗಿದೆ. ಆದರೆ ಇದರ ಬಾಲ ಸ್ವಲ್ಪ ಉದ್ದ ಮತ್ತು ಉದ್ದಕ್ಕೂ ಕೂದಲಿನಂತೆ ಆ ಕಡೆ ಈ ಕಡೆ ಸಣ್ಣ ರೇಖೆಗಳಿವೆ. ವಾಸ್ತವವಾಗಿ ಆನೆಯ ಬಾಲದ ತುದಿಯಲ್ಲಿ ಕೂದಲಿನ ಸಣ್ಣ ಗೊಂಡೆಯಿರುವುದೇ ವಿನಾಃ ಉದ್ದಕ್ಕೂ ಕೂದಲಿರುವುದಿಲ್ಲ. ಆದ್ದರಿಂದ ಈ ಬಾಲದ ವಿಶಿಷ್ಟ ಲಕ್ಷಣದ ಮರ್ಮವನ್ನು ತಿಳಿಯಬೇಕಾಗಿದೆ. ೮ನೆಯ ಕಲ್ಲಾಸರೆಯ ಉಡದ ಚಿತ್ರ ಕೂಡ ಒಂದು ವಿಶೇಷ ರಚನೆ. ಉಡದ ಮೈಮೇಲೆ ಮಧ್ಯಭಾಗದಿಂದ ಎರಡೂ ಬದಿಗೆ ವಕ್ರರೇಖೆಗಳನ್ನು ಹಾಕಲಾಗಿದೆ. ವಾಸ್ತವವಾಗಿ ಉಡದ ದೇಹದ ಮೇಲೆ ಈ ರೀತಿ ಇರುವುದಿಲ್ಲ ಹಾಗಾಗಿ ಈ ರೇಖೆಗಳು ಅಲಂಕರಣೆಯ ಉದ್ದೇಶದವೆಂದು ಹೇಳಬಹುದು. ಹಿರೇಬೆಣಕಲ್‌ನ ಹದಿನಾರ ನೆಯ ಕಲ್ಲಾಸರೆಯಲ್ಲಿಯೂ ಇದೇ ರೀತಿ ವಜ್ರಾಕೃತಿಯ ಅಕಂಕರಣೆಯುಳ್ಳ ಉಡದ ಚಿತ್ರಗಳನ್ನು ಇಲ್ಲಿ ಗಮನಿಸಬಹುದು. ಉಳಿದಂತೆ ಇತರ ಪ್ರಾಣಿಗಳ ಚಿತ್ರಗಳಲ್ಲಿ ವಿಶೇಷ ಅಂಶಗಳೇನಿಲ್ಲ.

ಮನುಷ್ಯ ಚಿತ್ರಗಳು

ಮನುಷ್ಯ ಚಿತ್ರಗಳು ಹೆಚ್ಚಾಗಿ ಒಂದೇ ರೀತಿಯಲ್ಲಿವೆ. ದ್ವಿತ್ರಿಕೋನಾಕಾರದ ಮುಂಡದ ರಚನೆಯಲ್ಲಿ ಛಾಯಾ ಇಲ್ಲವೇ ಬಾಹ್ಯರೇಖಾ ರೂಪದಲ್ಲಿವೆ. ಕೈಯ ಬೆರಳಿನಿಂದ ಗೆರೆ ಮೂಡಿಸಿ ಬಿಡಿಸಿರುವ ಮನುಷ್ಯ ಚಿತ್ರಗಳು ರೇಖಾರೂಪದಲ್ಲಿವೆ. ೭ನೇ ಕಲ್ಲಾಸರೆಯಲ್ಲಿಯ ಮನುಷ್ಯ ಚಿತ್ರ ೩೦ ಸೆಂ.ಮೀ. ಎತ್ತರವಿದ್ದು ಗಮನ ಸೆಳೆಯುತ್ತದೆ. ನಿಂತಭಂಗಿಯಲ್ಲಿದೆ. ಇಲ್ಲಿಯ ರೇಖಾರೂಪದ ಮನುಷ್ಯ ಚಿತ್ರಗಳ ಜೊತೆ ಇನ್ನೊಂದು ಮನುಷ್ಯ ಚಿತ್ರ ಕುತೂಹಲದಾಯಕವಾಗಿದೆ. ಉದ್ದವಾದ, ನಿಲುವಾಗಿ ಮತ್ತು ದೋತಿಯನ್ನು ಧರಿಸಿದಂತಿದೆ. ಇಂಥಹದೇ ಚಿತ್ರವೊಂದು ಗಂಗಾವತಿ ತಾಲ್ಲೂಕಿನ ಸಂಗಾಪುರದ ಐದನೆಯ ಕಲ್ಲಾಸರೆಯಲ್ಲಿದೆ. ಈ ಚಿತ್ರದ ವೈಶಿಷ್ಟ್ಯತೆಯನ್ನು ಗುರುತಿಸಬೇಕಾಗಿದೆ. ೧ನೇ ಗವಿಯಲ್ಲಿ ಆಯುಧ ಹಿಡಿದ ಮನುಷ್ಯ ಚಿತ್ರಗಳು, ಸಮೂಹ ಕುಣಿತದ ಚಿತ್ರಗಳಿವೆ. ಬಿಡಿ ಕೆಂಪು ಮತ್ತು ಬಿಳಿ ಬಣ್ಣದ ಕಡ್ಡಿರೂಪದ ಮನುಷ್ಯ ಚಿತ್ರಗಳು ವಿವಿಧ ಭಂಗಿಯಲ್ಲಿವೆ. ೫ನೇ ಕಲ್ಲಾಸರೆಯಲ್ಲಿರುವ ಸ್ತ್ರೀ ಚಿತ್ರವೊಂದು ಗಮನಾರ್ಹವಾಗಿದೆ. ಮುಂಡ ಕೋಲಿನಂತೆ ನೀಳವಾಗಿದ್ದು, ತಲೆಯಲ್ಲಿ ಜಡೆಗಳು ಎರಡೂ ಕಡೆ ಇಳಿಬಿದ್ದಿರುವುದು ಅಲ್ಲದೆ ಎರಡೂ ಸ್ತನಗಳನ್ನು ದೊಡ್ಡ ಪ್ರಮಾಣದಲ್ಲಿ ತೋರಿಸಲಾಗಿದೆ. ಸ್ತ್ರೀ ಚಿತ್ರಕ್ಕೆ ಸಂಬಂಧಿಸಿದಂತೆ ಇದೊಂದು ಅಪರೂಪದ ರಚನೆಯಾಗಿದೆ. ಕುಟ್ಟಿ ಮೂಡಿಸಿದ ಚಿತ್ರಗಳಲ್ಲಿ ಇತಿಹಾಸ ಕಾಲದ ಮನುಷ್ಯನ ಚಿತ್ರಗಳು ಹೆಚ್ಚಿವೆ.

ಇತರ ಚಿತ್ರಗಳು

ಇತರ ಚಿತ್ರಗಳಲ್ಲಿ ಪ್ರಾಣಿ ಸವಾರಿಯಂತಹ ಸಂಯುಕ್ತ ಚಿತ್ರಗಳು ಇಲ್ಲ. ಆದರೆ ೧೩ನೇ ಕಲ್ಲಾಸರೆಯಲ್ಲಿ ಇತಿಹಾಸ ಕಾಲದ ಬಿಳಿ ಬಣ್ಣದಲ್ಲಿ ರಚಿಸಿರುವ ಒಂದು ಚಿಕ್ಕ ಆನೆ ಸವಾರನ ಚಿತ್ರವಿದೆ. ಅದು ಅಂಥ ಗಮನಾರ್ಹವಾಗಿಲ್ಲ. ದೃಶ್ಯ ಚಿತ್ರಗಳಲ್ಲಿ ಕೆಲವು ಗಮನ ಸೆಳೆಯುತ್ತವೆ. ೧ನೇ ನೆಲೆಯಲ್ಲಿ ಸಾಲು ಕುಣಿತದ ದೃಶ್ಯವಿದೆ. ಹಾಗೇ ೨ನೇ ಕಲ್ಲಾಸರೆಯಲ್ಲಿ ಪಶುಪಾಲನೆಯ ದೃಶ್ಯವೊಂದನ್ನು ಗ್ರಹಿಸಬಹುದು. ವ್ಯಕ್ತಿಯೊಬ್ಬ ಕೈಯಲ್ಲಿ ಉದ್ದವಾದ ಕೋಲನ್ನು ಹಿಡಿದಿದ್ದು ಅವನ ಸುತ್ತಲೂ ಪಶುಗಳ ಚಿತ್ರಗಳಿವೆ. ಇದೊಂದು ವಿಶೇಷ ಚಿತ್ರ ಹಾಗೇ ೧೧ನೇ ಕಲ್ಲಾಸರೆಯಲ್ಲಿ ಸ್ತ್ರೀ ಪುರುಷರ ಸಂಭೋಗದ ಚಿತ್ರಗಳು ಗಮನೀಯ. ನೆಲೆ ೫ ರಲ್ಲಿ ಬಳ್ಳಿಯಂತಹ ವಿಶಿಷ್ಟ ಆಕೃತಿ ಹಾಗೂ ನೆಲೆ ೮ರಲ್ಲಿ ಐದು ವಜ್ರಾಕೃತಿಯ ಚಿತ್ರವೊಂದಿದೆ. ಸದ್ಯ ಇವು ಏನೆಂದು ಗುರುತಿಸಲಾಗುವುದಿಲ್ಲ.

ಇತಿಹಾಸ ಕಾಲದ ಬಿಳಿಬಣ್ಣದ ಚಿತ್ರಗಳು (೧೩ನೆ ಕಲ್ಲಾಸರೆ)

ಇತಿಹಾಸ ಕಾಲದ ಬಿಳಿಬಣ್ಣದ ಚಿತ್ರಗಳು (೧೩ನೆ ಕಲ್ಲಾಸರೆ)

ಕೊರೆದ ಚಿತ್ರಗಳಲ್ಲಿ ೧೫ನೇ ನೆಲೆಯಲ್ಲಿ ವರ್ಣಚಿತ್ರಿತ ಕಲ್ಲಾಸರೆಗಳ ಸುತ್ತಲಿನ ಬಂಡೆಗಳಲ್ಲಿ ಹಲವು ರೀತಿಯ ಚೌಕ, ಆಯತ ಹಾಗೂ ವೃತ್ತಾಕಾರದ ಅಂಕಣಾ ಕೃತಿಗಳು ಗಮನ ಸೆಳೆಯುತ್ತವೆ. ಇಂದಿಗೂ ಗ್ರಾಮೀಣ ಜನತೆ ಮನರಂಜನೆಗಾಗಿ ಆಡುವ ಹುಲಿಮನೆ, ಪಗಡೆಯಂತಹ ಆಟಗಳ ಅಂಕಣಗಳನ್ನು ಇವು ಹೋಲುತ್ತವೆ. ಇಂಥ ಆಟಗಳು ಮಧ್ಯಕಾಲೀನ ಹಾಗೂ ನಂತರದ ಇತಿಹಾಸ ಕಾಲದಲ್ಲೂ ಪ್ರಚಲಿತದಲ್ಲಿದ್ದ ಬಗ್ಗೆ ಕುರುಗೋಡಿನ ಸಂಗಮೇಶ್ವರ ದೇವಾಲಯದ ನೆಲದ ಹಾಸು ಬಂಡೆ ಹಾಗೂ ಕಕ್ಷಾಸನದ ಬಂಡೆಗಳಲ್ಲಿ ಕೆತ್ತಲಾಗಿರುವ ಅಂಕಣಾಕೃತಿಗಳಿಂದ ಗ್ರಹಿಸಬಹುದು. ಪ್ರಾಗಿತಿಹಾಸಕಾಲದ ನೆಲೆಗಳಲ್ಲಿ ಇಂಥ ಅಂಕಣಾಕೃತಿಗಳು ಹೆಚ್ಚಾಗಿ ಕಂಡುಬರುತ್ತವೆ. ವಿಶೇಷವಾಗಿ ಗಂಗಾವತಿ ತಾಲ್ಲೂಕಿನ ಹಿರೇಬೆಣಕಲ್, ಆಗೋಲಿ, ಸಿದ್ದಿಕೇರಿ, ಹೊಸಪೇಟೆ ತಾಲ್ಲೂಕಿನ ನಾಗೇನಹಳ್ಳಿಗಳಲ್ಲಿ ಇವೆ. ಈ ಹಿನ್ನೆಯಲ್ಲಿ ಇವು ಒಂದು ರೀತಿಯ ಆಟಕ್ಕೆ ಸಂಬಂಧಿಸಿರಬೇಕೆಂದು ಹೇಳಬಹುದು ಇವುಗಳ ಕುರಿತ ಹೆಚ್ಚಿನ ಅಧ್ಯಯನ ಅವಶ್ಯ.

ತಾಂತ್ರಿಕಾಂಶಗಳು

ಕುರುಗೋಡು ಪರಿಸರದ ಪ್ರಾಕ್ಚಾರಿತ್ರಿಕ ಚಿತ್ರಕಲೆಗಳ ನೆಲೆಗಳನ್ನು ಅನುಲಕ್ಷಿಸಿದಾಗ ಬಹುಮಟ್ಟಿಗೆ ಅವು ವಾಸದ ಸ್ಥಾನಗಳಿಗಿಂತ ತಾತ್ಕಾಲಿಕ ಆಶ್ರಯ ಪಡೆದಿದ್ದ ನೆಲೆಗಳಲ್ಲಿ ರಚಿತವಾಗಿರುವುದು ಕಂಡುಬರುತ್ತವೆ. ೧,೨ ಹಾಗೂ ೯ನೇ ಕಲ್ಲಾಸರೆಗಳು ಚಿತ್ರ ರಚನೆಗೆ ಪ್ರಶಸ್ಥವಾದ ಸ್ಥಳವಾಗಿವೆ. ಆದರೆ ೩,೪,೭ ಹಾಗೂ ೧೨ನೇ ನೆಲೆಗಳು ತಲುಪಲು ಕಠಿಣವಾದ ಬೆಟ್ಟದ ಭಾಗದಲ್ಲಿವೆ. ೩ನೆಯ ಕಲ್ಲಾಸರೆಯಂತೂ ನೆಲದಿಂದ ಸುಮಾರು ೨೦ ಅಡಿ ಎತ್ತರದಲ್ಲಿದೆ. ಇಲ್ಲಿ ಹಾಗೂ ೪ನೇ ಕಲ್ಲಾಸರೆಯಲ್ಲಿ ಅಂಗಾತವಾಗಿ ಮಲಗಿ ಪ್ರಯಾಸದಿಂದ ಮಾತ್ರ ಚಿತ್ರಗಳನ್ನು ಬಿಡಿಸಲು ಸಾಧ್ಯ. ಅದೇ ರೀತಿ ೫ ಹಾಗೂ ೮ನೇ ಕಲ್ಲಾಸರೆಗಳು ಬೆಟ್ಟದ ತೀರ ಮೇಲ್ಭಾಗದಲ್ಲಿವೆ. ತಾತ್ಕಾಲಿಕ ಆಶ್ರಯಕ್ಕೂ ಇವು ಯೋಗ್ಯವಾಗಿಲ್ಲ. ಸಾಮಾನ್ಯವಾಗಿ ಪ್ರಾಗಿತಿಹಾಸಕಾಲದ ಮಾನವ ತನ್ನ ಜೀವನ ಚಟುವಟಿಕೆಗೆ ಪೂರಕವಾಗಿದ್ದ ಸ್ಥಳಗಳಲ್ಲಿ ಚಿತ್ರಗಳನ್ನು ಬಿಡಿಸಿರುವುದು ಕಂಡುಬರುತ್ತವಾದರೂ ಕುರುಗೋಡು ಪ್ರದೇಶದಲ್ಲಿ ಭಿನ್ನ ನೆಲೆಗಳಲ್ಲಿ ಚಿತ್ರಗಳಿರುವುದು ವಿಶೇಷ. ಚಿತ್ರದ ನೆಲೆಗಳು, ಗಬ್ಬದ ಜಿಂಕೆ, ನಗ್ನ ಪುರುಷ – ಸ್ತ್ರೀ ಮುಂತಾದ ಚಿತ್ರಗಳನ್ನು ಅನುಲಕ್ಷಿಸಿದಾಗ ಇಲ್ಲಿ ಮಾಂತ್ರಿಕ ಕಟ್ಟಳೆಯ ಉದ್ದೇಶದಿಂದ ರಚಿತವಾಗಿರುವ ಸಾಧ್ಯತೆಯನ್ನು ಗ್ರಹಿಸಬಹುದು.

ಚಿತ್ರಗಳ ರಚನೆಗಾಗಿ ಮರದ ರೆಂಬೆಗಳ ತುದಿಯನ್ನು ಜಜ್ಜಿ ಮಾಡಿದ ಕುಂಚಗಳನ್ನು ಬಳಸಲಾಗಿದೆ. ಮನುಷ್ಯರ ಕಡ್ಡಿರೂಪದ ಚಿತ್ರಗಳನ್ನು ಬೆರಳಿನಿಂದ ಮೂಡಿಸಲಾಗಿದೆ. ಕೆಂಪು ಬಣ್ಣಕ್ಕಾಗಿ ಸುರಮ ಎಂಬ ಖನಿಜವನ್ನು, ಬಿಳಿ ಬಣ್ಣಕ್ಕಾಗಿ ಸುಣ್ಣವನ್ನು ಬಳಸಲಾಗಿದೆ. ಇಲ್ಲಿ ಚಿತ್ರಗಳು ಪ್ರಮಾಣದಲ್ಲಿ ಗಮನಾರ್ಹವಾಗಿಲ್ಲ. ೨ ಸೆಂ.ಮೀ. ನಿಂದ ಹಿಡಿದು. ೧.೬೦ ಮೀ. ಉದ್ದದ, ೦.೩೦ ಮೀ. ಎತ್ತರದ ಚಿತ್ರಗಳಿವೆ. ೨ನೆ ನೆಲೆಯ ಜಿಂಕೆ, ಕಾಡುಕೋಣ, ಗೂಳಿ, ೫ನೇ ನೆಲೆಯ ಜಿಂಕೆ, ೮ನೆ ನೆಲೆಯ ಉಡ, ೯ನೇ ನೆಲೆಯ ಹುಲಿ, ಕತ್ತೆಕಿರುಬ ಚಿತ್ರಗಳು ಶೈಲಿಯಲ್ಲಿ, ರಚನಾವಿನ್ಯಾಸದಲ್ಲಿ ಸಹಜ ಸುಂದರವಾಗಿದೆ.

ಕಾಲಮಾನ

ಪ್ರಾಗಿತಿಹಾಸಕಾಲದ ಚಿತ್ರಗಳ ಕಾಲನಿರ್ಣಯ ಸ್ವಲ್ಪ ಕ್ಲಿಷ್ಟಕರವಾದ ಸಂಗತಿ ಎನ್ನಬಹುದು ಆದಾಗ್ಯೂ ಚಿತ್ರಿತ ನೆಲೆಗಳ ಸಾಂಸ್ಕೃತಿಕ ಪರಿಸರ, ಬೇರೆಡೆಯಲ್ಲಿನ ಕಾಲ ನಿರ್ಧರಿತ ವಸ್ತು ಚಿತ್ರಗಳೊಡನೆ ಹೋಲಿಕೆ ಹಾಗೂ ಚಿತ್ರಗಳ ತಾಂತ್ರಿಕ ಅಂಶಗಳಿಂದ ಸ್ಥೂಲವಾಗಿ ಚಿತ್ರಗಳ ಕಾಲವನ್ನು ನಿರ್ಧರಿಸಬಹುದು.

ಕುರುಗೋಡು ಬೆಟ್ಟ ಪರಿಸರದಲ್ಲಿ ಈ ಮೊದಲೇ ನೂತನ ಶಿಲಾತಾಮ್ರಯುಗದಿಂದ ಹಿಡಿದು ಬೃಹತ್‌ಶಿಲಾಯುಗ, ಆದಿ ಇತಿಹಾಸ ಕಾಲದ ಅನೇಕ ಸಾಂಸ್ಕೃತಿಕ ಅವಶೇಷಗಳು ದೊರೆತಿರುವುದರಿಂದ ಆ ಕಾಲ ಘಟ್ಟಗಳೆಲ್ಲೆಲ್ಲ ಇಲ್ಲಿ ಮಾನವ ವಾಸ್ತವ್ಯದ ಸಂಗತಿ ಸ್ಪಷ್ಟವಾಗುತ್ತದೆ. ಇಲ್ಲಿಯ ಕೆಲವು ಚಿತ್ರಗಳು ಗಂಗಾವತಿ ತಾಲ್ಲೂಕಿನ ಶಿಲಾತಾಮ್ರಯುಗದ ನೆಲೆಗಳ, ಹಿರೇಬೆಣಕಲ್‌ನ ಬೃಹತ್‌ಶಿಲಾಯುಗದ ನೆಲೆಗಳ ಚಿತ್ರಗಳನ್ನು ಹೋಲುತ್ತಿರುವುದನ್ನು ಗುರುತಿಸಬಹುದು. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಚಿತ್ರಗಳ ಶೈಲಿ, ವರ್ಣ ಹಾಗೂ ತಂತ್ರಗಾರಿಕೆಯನ್ನು ಅನುಲಕ್ಷಿಸಲಾಗಿ ಇಲ್ಲಿಯ ಚಿತ್ರಗಳು ಬಹುಶಃ ಶಿಲಾತಾಮ್ರಯುಗದ ಕೊನೆಯ ಹಂತ (ಕ್ರಿ.ಪೂ. ಸುಮಾರು ೧೪೦೦-೮೦೦), ಬೃಹತ್ ಶಿಲಾಯುಗದ ಆದಿಮಧ್ಯಭಾಗದ (ಕ್ರಿ.ಪೂ. ಸುಮಾರು ೧೦೦೦-೫೦೦) ಕಾಲದ್ದೆಂದು, ಕೊರೆದ ಅಂಕಣಾಕೃತಿಗಳು ಬೃಹತ್‌ಶಿಲಾಯುಗ ಕಾಲದ, ಬಿಳಿವರ್ಣದ ಮತ್ತು ಕಟ್ಟಿ ಮೂಡಿಸಿದ ಚಿತ್ರಗಳು ಆದಿಚಾರಿತ್ರಿಕ ಕಾಲದ್ದವೆಂದು ನಿರ್ಣಯಿಸಬಹುದು.

ಸಮಾರೋಪ

ಕುರುಗೋಡು ಪ್ರದೇಶದ ಪ್ರಾಕ್ಚಾರಿತ್ರಿಕ ಚಿತ್ರಗಳ ಅಧ್ಯಯನದಿಂದ ಆ ಪರಿಸರದಲ್ಲಿ ವಾಸವಿದ್ದ ಪ್ರಾಚೀನ ಮಾನವ ತನ್ನ ಭಾವನೆಗಳ ಅಭಿವ್ಯಕ್ತಿಯ ಕಲಾಪ್ರಜ್ಞೆಯನ್ನು ಹೊಂದಿದ್ದನೆಂದು ತಿಳಿಯುತ್ತದೆ. ಸುಮಾರು ೧೫ಕ್ಕೂ ಹೆಚ್ಚಿನ ನೆಲೆಗಳಲ್ಲಿ ಚಿತ್ರಗಳು ಕಂಡುಬರುತ್ತಿರುವುದು ಗಮನಾರ್ಹವೇ ಸರಿ. ಇಲ್ಲಿಯ ಚಿತ್ರಗಳಲ್ಲಿ ಮನುಷ್ಯ ಚಿತ್ರಗಳಿಗಿಂತ ಪಶು ಪ್ರಾಣಿಗಳ ವೈವಿಧ್ಯತೆ ಇದೆ. ಚಿತ್ರಗಳ ವಿಷಯ ವಸ್ತು ವೈವಿಧ್ಯವಾಗಿಲ್ಲ. ಪ್ರಮಾಣದ ದೃಷ್ಟಿಯಿಂದ (ಅಳತೆ) ಚಿಕ್ಕ ಮತ್ತು ಮಧ್ಯಮ ಪ್ರಮಾಣದಲ್ಲಿವೆ. ಶೈಲಿ ಭಂಗಿಯಲ್ಲಿ ಕೆಲವು ಚಿತ್ರಗಳು ಕಲಾವಂತಿಕೆಯಿಂದ ಪರಿಪೂರ್ಣವೆನಿಸುತ್ತವೆ. ಕುಟ್ಟಿ/ಕೊರೆದ ಚಿತ್ರಗಳಿಗಿಂತ ವರ್ಣಚಿತ್ರಗಳು ಸಂಖ್ಯೆಯಲ್ಲಿ ಅಧಿಕವಾಗಿದೆ. ವರ್ಣಚಿತ್ರಕ್ಕೆ ಸಾಮಾನ್ಯವಾಗಿ ಕೆಮ್ಮಣ್ಣು ಬಳಸಲಾಗಿದೆ. ಬಿಳಿಬಣ್ಣವನ್ನು ತೀರ ವಿರಳವಾಗಿ ಬಳಸಲಾಗಿದೆ.

ಚಿತ್ರಗಳು ಆಯಾ ಕಾಲದ ಜೀವನ ವಿಧಾನ ಹಾಗೂ ನಂಬಿಕೆಗಳ ಸುತ್ತ ಕೇಂದ್ರಿಕೃತವಾಗಿರುವುದನ್ನು ಗುರುತಿಸಬಹುದು. ಪ್ರಾಚೀನ ಮಾನವ ತನಗೆ ಆಹಾರವಾಗಿರಬಹುದಾದ ಪ್ರಾಣಿಗಳ ಅಭಿವೃದ್ಧಿ, ಬೇಟೆ ಹಾಗೂ ತನ್ನ ಸಂತಾನಾಭಿವೃದ್ಧಿಯ ಮೂಲನೆಲೆಯಲ್ಲಿ ಚಿತ್ರಗಳು ರಚಿತವಾಗಿರುವುದು ಸ್ಪಷ್ಟ. ಚಿತ್ರಗಳ ಉದ್ದೇಶ ಈ ರೀತಿಯಲ್ಲಿ ಮಾಂತ್ರಿಕ ಹಿನ್ನೆಲೆಯನ್ನು ಹೊಂದಿದ್ದರೂ ಆ ಮೂಲಕ ಅವು ಕಟ್ಟಿಕೊಡುವ ಪ್ರಾಗಿತಿಹಾಸಕಾಲದ ಮಾನವನ ಜೀವನ ಚಟುವಟಿಕೆ ಅಪೂರ್ವ. ಅವನ ಪಶುಪಾಲನೆ, ಬೇಟೆಗಾರಿಕೆ, ಮನರಂಜನೆ ಸಮೂಹ ಕುಣಿತ, ಮಾಂತ್ರಿಕ ಆರಾಧನೆ. ಅವನು ಬಳಸುತ್ತಿದ್ದ ಆಯುಧಗಳು ಮುಂತಾದ ಸಂಗತಿಗಳು ಚಿತ್ರಗಳ ಮೂಲಕ ಅನಾವರಣಗೊಳ್ಳುತ್ತವೆ. ಹಾಗೇ ಚಿತ್ರಗಳು ಅವನ ಕಲಾ ಪ್ರಜ್ಞೆಗೆ ಸಾಕ್ಷಿಯಾಗಿವೆ.

ಚಿತ್ರಗಳು ಸಾಂಕೇತಿಕವಾಗಿದ್ದರೂ ಆ ಸಾಂಕೇತಿಕ ವಿನ್ಯಾಸ ಸತ್ವಶಾಲಿಯಾಗಿದೆ. ಭಾವಾಭಿ ವ್ಯಕ್ತಿಯಲ್ಲಿ ಪರಿಣಾಮಕಾರಿಯಾಗಿವೆ. ಪ್ರಾಗಿತಿಹಾಸಕಾಲದ ಈ ಕಲಾತ್ಮಕ ಅಂಶಗಳ ಪ್ರೇರಣೆಯ ಹಿನ್ನೆಲೆಯಲ್ಲಿ ಮುಂದೆ ಚರಿತ್ರೆಯುದ್ದಕ್ಕೂ ಸುಂದರ ದೇಗುಲದ ಕಲಾಕೃತಿಗಳು, ಶಿಲ್ಪಕಲಾಕೃತಿಗಳು ಕುರುಗೋಡು ಪ್ರದೇಶದಲ್ಲಿ ಸೃಷ್ಠಿಗೊಳ್ಳಲು ಕಾರಣವಾಯಿತೆನ್ನಬಹುದು.

 

[1] ಸುಂದರ ಅ., ೧೯೯೪, ಕರ್ನಾಟಕ ಪ್ರಾಗಿತಿಹಾಸ ಕಾಲದ ಕಲೆ, ಕರ್ನಾಟಕ ಲಲಿತಕಲಾ ಅಕಾಡೆಮಿ, ಬೆಂಗಳೂರು.

[2] ಫೂಟ್, ಆರ್.ಬಿ,; ೧೯೧೬, “ದಿ ಫೂಟ್ ಕಲೆಕ್ಷನ್ ಆಫ್ ದಿ ಇಂಡಿಯನ್ ಪ್ರಿ ಹಿಸ್ಟಾರಿಕ್ ಆಂಡ್ ಪ್ರೋಟೊ ಹಿಸ್ಟಾರಿಕ್ ಆಂಟಿಕ್ವಟಿಸ್, ನೋಟ್ಸ್ ಆನ್ ದೇರ್ ಏಜಸ್ ಆಂಡ್ ಡಿಸ್ಟ್ರಿಬ್ಯೂಷನ್” ಪುಟ ೮೭-೮೯, ಮದ್ರಾಸ್

[3] ಕೃಷ್ಣಮೂರ್ತಿ ಎಂ.ಎಸ್., ೧೯೭೭ಮ, “ಕುರುಗೋಡು ಆನ್ ಆರ್ಕಿಯಾಲಾಜಿಕಲ್ ನೋಟ್” ಆರ್ಕಿಯಾಲಾಜಿಕಲ್ ಸ್ಟಡೀಸ್, ಸಂ.೨, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು, ಪುಟ : ೧೦೬-೧೧೦.

[4] ಸುಂದರ ಅ., ಪೂರ್ವೋಕ್ತ

[5] ನರಸಿಂಹಮ್ ಡಬ್ಲ್ಯೂ.ವಿ.ಎಸ್., ೧೯೯೮ರಲ್ಲಿ ರಾಸಿ ಸಮ್ಮೇಳನದಲ್ಲಿ ಮಂಡಿಸಿದ ಕುರುಗೋಡು ಕಲೆಗೆ ಸಂಬಂಧಿಸಿದ ಪ್ರಬಂಧ (ಅನಾನುಕೂಲತೆಯಿಂದಾಗಿ ಈ ಪ್ರಬಂಧವನ್ನು ಗಮನಿಸಲು ಸಾಧ್ಯವಾಗಲಿಲ್ಲ).

[6] ಶರಣಬಸಪ್ಪ ಪಿ.ಕೋಲ್ಕಾರ., ೨೦೦೨ : ಕೊಪ್ಪಳ-ಹಂಪಿ ಪ್ರದೇಶದ ಪ್ರಾಗಿತಿಹಾಸ ಕಾಲದ ಕಲೆ, ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆಸಲ್ಲಿಸಿದ ಪಿಎಚ್‌.ಡಿ.ಪ್ರಬಂಧ (ಅಪ್ರಕಟಿತ)

[7] ಅದೇ.