ಬಳ್ಳಾರಿ ಜಿಲ್ಲೆಯಲ್ಲಿ ಪ್ರಾಗಿತಿಹಾಸ ಕಾಲದಿಂದಲೂ ಮಾನವನ ಅಸ್ತಿತ್ವದ ಕುರುಹುಗಳನ್ನು ನಿರಂತರವಾಗಿ ಕಾಣಬಹುದು. ಜಿಲ್ಲೆಯ ವಿವಿಧೆಡೆಗಳಲ್ಲಿ ಅವನು ಬಳಸಿದ ಶಿಲಾಯುಧಗಳು ಹಾಗೂ ರಚಿಸಿದ ಗವಿವರ್ಣಚಿತ್ರಗಳು ಕಂಡುಬಂದಿವೆ. ಅದೇ ರೀತಿ ಬೃಹತ್ ಶಿಲಾಯುಗದ ಅವಶೇಷಗಳು ದೊರೆತಿವೆ. ನಿಟ್ಟೂರು ಮತ್ತು ಉದೇಗೋಳಗಳಲ್ಲಿ ದೊರೆತ ಅಶೋಕನ ಶಾಸನಗಳಿಂದಾಗಿ ಚಾರಿತ್ರಿಕಯುಗ ಆರಂಭವಾಗುತ್ತದೆ. ಈ ಶಾಸನಗಳು ಅಶೋಕನ ಹೆಸರನ್ನು ನೇರವಾಗಿ ಪ್ರಸ್ತಾಪಿಸುವುದರಿಂದ ಇನ್ನೂ ಹೆಚ್ಚಿನ ಮಹತ್ವ ಪಡೆದಿವೆ. ನಿಟ್ಟೂರು ಮತ್ತು ನೆರೆಯ ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ ಸಮೀಪದಲ್ಲಿದ್ದು, ನಡುವೆ ಕುರುಗೋಡು ಪ್ರದೇಶವಿದೆ. ಇದರಿಂದ ಈ ಪ್ರದೇಶ ಮೌರ್ಯರ ಆಡಳಿತಕ್ಕೆ ಒಳಪಟ್ಟಿತ್ತೆಂಬುದು ಸುಸ್ಪಷ್ಟ. ಬ್ರಹ್ಮಗಿರಿಯ ಅಶೋಕನ ಶಾಸನದಲ್ಲಿ ಸುವರ್ಣಗಿರಿಯ ಉಲ್ಲೇಖವಿದ್ದು, ಈ ಪ್ರದೇಶ ಸುವರ್ಣಗಿರಿ ಪ್ರಾಂತ್ಯಕ್ಕೆ ಸೇರಿತ್ತು. ಆದರೆ ಸುವರ್ಣಗಿರಿ ಯಾವುದೆಂಬುದು ಇನ್ನೂ ಚರ್ಚೆಯಾಗಿಯೇ ಉಳಿದಿದೆ. ಕುರುಗೋಡು ಸಹ ಇದೇ ಪರಿಸರದಲ್ಲಿರುವುದರಿಂದ, ಇದರ ರಾಜಕೀಯ ಚರಿತ್ರೆಯನ್ನು ಇತಿಹಾಸ ಆರಂಭಕಾಲದಿಂದಲೂ ಗುರುತಿಸಬಹುದಾಗಿದೆ. ಅಂದರೆ ಕರ್ನಾಟಕದ ಆದಿಚಾರಿತ್ರಿಕ ನೆಲೆಗಳಾದ ಬ್ರಹ್ಮಗಿರಿ, ಚಂದ್ರವಳ್ಳಿ, ವಡಗಾಂವ-ಮಾಧವಪುರ, ಬನವಾಸಿ, ತಲಕಾಡು ಮತ್ತು ಹಂಪೆಗಳಂತೆ ಕುರುಗೋಡು ಸಹ ಪ್ರಾಚೀನ ನೆಲೆ.

ಬಳ್ಳಾರಿ ಜಿಲ್ಲೆಯ ಕೋಳೂರಿನ ಶಾಸನವೊಂದು ನಂದರನ್ನು, ಮೌರ್ಯರನ್ನು ಮತ್ತು ಕುಂತಲದೇಶವನ್ನು ಉಲ್ಲೇಖಿಸಿದೆ.

[1] ಬಳ್ಳಾರಿ ಪ್ರದೇಶವು ಕುಂತಲದೇಶಕ್ಕೆ ಸೇರಿತ್ತು. ಕುಂತಲದೇಶ ಪಾಂಡವರ ಕಾಲದಲ್ಲಿ ಪ್ರಸಿದ್ಧವಾಗಿದ್ದು, ಅದನ್ನು ಈಗ ಕುರುಗೋಡು ಎಂದು ಕರೆಯುತ್ತಾರೆ ಎನ್ನಲಾಗಿದೆ. [2]ಈ ಪ್ರಸಿದ್ಧ ಕುಂತಲದೇಶವನ್ನು ನಂದರು ಆಳಿದರೆಂದು ಶಿಕಾರಿಪುರದ ಶಾಸನವೊಂದು ಉಲ್ಲೇಖಿಸಿದೆ. [3]

ಕುರುಗೋಡಿನಲ್ಲಿ ಶಾತವಾಹನರ ಕಾಲಕ್ಕೆ ಸೇರುವ ಮಡಿಕೆ ಮತ್ತಿತರ ಅವಶೇಷಗಳು ಬೆಳಕಿಗೆ ಬಂದಿವೆ. ಕುರುಗೋಡು ಬೆಟ್ಟದ ಮುದ್ದುಗನ ಮೂಲೆ ಎಂಬಲ್ಲಿ ಶಾತವಾಹನರ ಕಾಲದ ನಾಲ್ಕು ಅಕ್ಷರಗಳ ಬಣ್ಣದ ಶಾಸನವೊಂದು ಬೆಳಕಿಗೆ ಬಂದಿದ್ದು, ಪ್ರಕಟಗೊಂಡಿದೆ.[4] ಇದು ಕಪ್ಪು ಬಣ್ಣದಲ್ಲಿ ಬರೆಯಲ್ಪಟ್ಟಿದ್ದು, ಮಳೆಗಾಳಿಗಳಿಂದಾಗಿ ಮಾಸಿದೆ. ಈ ಶಾಸನದ ಅಕ್ಷರವೊಂದನ್ನು “ಮ” ಎಂದು ಓದಲಾಗಿದೆ. ಅಕ್ಷರಗಳು ತ್ರಿಕೋನ ತಲೆಯನ್ನು ಹೊಂದಿದ್ದು, ಬ್ರಾಹ್ಮಿಲಿಪಿಯಲ್ಲಿವೆ. ಶಾಸನದ ಕಾಲವನ್ನು ಕ್ರಿ.ಶ. ೧ನೆಯ ಶತಮಾನ ಎಂದು ಹೇಳಲಾಗಿದೆ. ಕುರುಗೋಡು ಬೌದ್ಧಧರ್ಮದ ನೆಲೆಯಾಗಿತ್ತು.[5] ಸಮೀಪದ ಹಂಪೆಯಲ್ಲೂ ಕ್ರಿ.ಶ. ೧-೨ನೆಯ ಶತಮಾನಕ್ಕೆ ಸೇರಬಹುದಾದ ಶಾಸನೋಕ್ತ ಶಿಲ್ಪಫಲಕಗಳು ಉತ್ಖನನದಲ್ಲಿ ದೊರೆತಿವೆ.[6] ಪ್ರಾಕೃತ ಭಾಷೆ ಮತ್ತು ಬ್ರಾಹ್ಮಿ ಲಿಪಿಯ ಈ ಶಾಸನಗಳು ಬೌದ್ಧ ಸ್ತೂಪವೊಂದರ ಶಿಲ್ಪಫಲಕಗಳ ಮೇಲೆ ಬರೆಯಲ್ಪಟ್ಟಿವೆ. ಇವು ಹಂಪೆಯಲ್ಲಿದ್ದ ಬೌದ್ಧಸ್ತೂಪದ ಬಗೆಗೆ ಸೂಚನೆ ನೀಡುತ್ತವೆ. ಹಾಗೂ ಹಂಪೆ ಮೊದಲಿಗೆ ಬೌದ್ಧಕೇಂದ್ರವಾಗಿತ್ತೆಂಬುದು ಗಮನಾರ್ಹ. ಈ ಶಾಸನಗಳು ಶಾತವಾಹನರ ಕಾಲಕ್ಕೆ ಸೇರಿವೆ. ಕರ್ನಾಟಕದಲ್ಲಿ ಮೌರ್ಯರ ನಂತರ ಅವರ ಉತ್ತರಾಧಿಕಾರಿಗಳಾಗಿ ಶಾತವಾಹನರ ಕಾಲಕ್ಕೆ ಸೇರಿವೆ. ಕರ್ನಾಟಕದಲ್ಲಿ ಮೌರ್ಯರ ನಂತರ ಅವರ ಉತ್ತರಾಧಿಕಾರಿಗಳಾಗಿ ಶಾತವಾಹನರು ಆಡಳಿತ ನಡೆಸಿದರೆಂದು ಸ್ಪಷ್ಟವಾಗುವುದು. ಇದನ್ನು ನಂತರದ ಕಾಲದ ಶಾಸನಗಳು ಸಹ ಸಮರ್ಥಿಸುತ್ತವೆ. ಪಲ್ಲವ ಶಿವಸ್ಕಂದವರ್ಮನ ಹಿರೇಹಡಗಲಿಯ ಪ್ರಾಕೃತ ಶಾಸನದಲ್ಲಿ ‘ಶತವಾಹನೀರಠ್ಠ’ಎಂಬ ಉಲ್ಲೇಖವಿದೆ. [7] ಪಲ್ಲವರು, ತಮ್ಮ ರಾಜ್ಯಕ್ಕೆ ಸೇರ್ಪಡೆಗೊಂಡ ಹೊಸ ಪ್ರದೇಶಗಳನ್ನು ಗುರುತಿಸುವಾಗ ಈ ಮೊದಲು ಆಳ್ವಿಕೆ ನಡೆಸಿದ ಮನೆತನದ ಹೆಸರಿನಿಂದ ಕರೆದಿದ್ದಾರೆ. ಬಳ್ಳಾರಿಯನ್ನು ‘ಶಾತವಾಹನೀರಠ್ಠ’ ಎಂದು ಕರೆಯುವುದರ ಮೂಲಕ, ಇದು ಮೊದಲಿಗೆ ಶಾತವಾಹನರ ವಶದಲ್ಲಿದ್ದು, ನಂತರ ಪಲ್ಲವರ ಆಳ್ವಿಕೆಗೆ ಸೇರಿತ್ತೆಂಬುದನ್ನು ಸೂಚಿಸುತ್ತದೆ.

ಹಳೆಯ ಬಳ್ಳಾರಿ ಜಿಲ್ಲೆಯಲ್ಲಿದ್ದ ಆಲೂರು ತಾಲ್ಲೂಕಿನ (ಈಗ ಕರ್ನೂಲ್ ಜಿಲ್ಲೆ) ಮ್ಯಾಕದೋಣಿ ಶಾಸನವು ಸಹ ಪಲ್ಲವರಿಗೆ ಸೇರಿದ್ದು, ಬಳ್ಳಾರಿ ಪ್ರದೇಶ ಪಲ್ಲವರ ವಶದಲ್ಲಿತ್ತೆಂಬುದನ್ನು ಸೂಚಿಸುತ್ತದೆ.[8] ಪಲ್ಲವರ ನಂತರ ಈ ಪ್ರದೇಶ ಬನವಾಸಿಯ ಕದಂಬರ ವಶವಾಯಿತು. ಕುರುಗೋಡು ಬೆಟ್ಟದ ಮುದ್ದುಗನ ಮೂಲೆ ಎಂಬಲ್ಲಿ (ಕಪ್ಪು ಬಣ್ಣದ ಶಾಸನವಿರುವಲ್ಲಿ) ಕದಂಬರ ಕಾಲಕ್ಕೆ ಸೇರುವ ಪೆಟ್ಟಿಗೆ ತಲೆಯ ಆರು ಅಕ್ಷರಗಳ ಶಾಸನ ಕಂಡುಬಂದಿದೆ. ಇದರ ಕಾಲ ಕ್ರಿ.ಶ. ೪-೫ನೆಯ ಶತಮಾನವೆನ್ನಲಾಗಿದೆ. ಈ ಶಾಸನವನ್ನು ಕಾವಿ ಬಣ್ಣದಲ್ಲಿ ಬರೆದಿದೆ. ಮಳೆಗಾಳಿಗಳಿಂದಾಗಿ ಅಕ್ಷರಗಳು ಮಾಸಿದ್ದು, ಅದನ್ನು ನಮಧೆಯಸ್ಯ? ಎಂದು ಓದಲಾಗಿದೆ.[9] ಕ್ರಿ.ಶ. ೭ನೆಯ ಶತಮಾನದ ವೇಳೆಗೆ ಈ ಪ್ರದೇಶ ಬಾದಾಮಿ ಚಾಲುಕ್ಯರ ಆಳ್ವಿಕೆಗೆ ಒಳಪಟ್ಟಿತು.[10] ಕ್ರಿ.ಶ. ೬೮೬ರ ವಿನಯಾದಿತ್ಯನ ತಾಮ್ರಶಾಸನವು ಹಂಪೆಯನ್ನು ಪಂಪಾತೀರ್ಥವೆಂದು ಕರೆದು, ಭೂಮಿಯನ್ನು ದತ್ತಿಬಿಟ್ಟ ಬಗ್ಗೆ ತಿಳಿಸುತ್ತದೆ. ವಿನಯಾದಿತ್ಯ ತನ್ನ ಸೈನ್ಯದೊಂದಿಗೆ ಪಂಪಾತೀರ್ಥದಲ್ಲಿ ಬೀಡುಬಿಟ್ಟಿದ್ದನು. ಕುರುಗೋಡಿನ ಶಾಸನವೊಂದರಲ್ಲಿ ಸತ್ಯಾಶ್ರಯದ ಉಲ್ಲೇಖವಿದೆ. ಇದರ ಕಾಲವನ್ನು ಲಿಪಿ ದೃಷ್ಟಿಯಿಂದ ಎಂಟನೆಯ ಶತಮಾನಕ್ಕೆ ನಿರ್ದೇಶಿಸಿದ್ದಾರೆ.[11] ಇದು ಚಾಲುಕ್ಯ ಕೀರ್ತಿವರ್ಮನ ಕಾಲದ್ದಿರಬಹುದೆಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ.[12] ಇದರಲ್ಲಿ, ಕುರುಗೋಡಿನಲ್ಲಿ ಭೂಮಿಯನ್ನು ಅಳೆಯಲು ಹದಿನೆಂಟು ಗೇಣಿನ ಕೋಲು ಮತ್ತು ನವಿಲು ಪೊನ್ನು ನಾಣ್ಯದ ಬಳಕೆಯನ್ನು ಕುರಿತು ತಿಳಿಸುತ್ತದೆ.[13] ಸ್ಥಳೀಯರು ಇದನ್ನು ಕತ್ತೆ ಬಂಡೆ (ಕಟ್ಟೆಬಂಡೆ)ಶಾಸನ ಎಂದು ಕರೆಯುತ್ತಾರೆ. ಕುರುಗೋಡು ಬೆಟ್ಟದ ಮುದ್ದುಗನ ಮೂಲೆ ಹತ್ತಿರ ಬಂಡೆಯೊಂದರ ಮೇಲೆ ಬಾದಾಮಿ ಚಾಲುಕ್ಯರ ಕಾಲಕ್ಕೆ ಸೇರುವ ಶಾಸನವನ್ನು “ಗುಣಹಿತರು” ಎಂದು ಓದಲಾಗಿದ್ದು, ಇದು ವ್ಯಕ್ತಿಯೊಬ್ಬನನ್ನು ಉಲ್ಲೇಖಿಸುವುದೆನ್ನಲಾಗಿದೆ.[14] ಸಮೀಪದಲ್ಲಿರುವ ಕುಮಾರಸ್ವಾಮಿ ಬೆಟ್ಟದ ದೇವಾಲಯಗಳು ಮತ್ತು ಶಾಸನಗಳು ಈ ಪ್ರದೇಶ ಬಾದಾಮಿ ಚಾಲುಕ್ಯರ ಅಧೀನದಲ್ಲಿದ್ದ ಬಗ್ಗೆ ಸೃಷ್ಠೀಕರಿಸುತ್ತವೆ. ನಂತರ ಬಂದ ರಾಷ್ಟ್ರಕೂಟರು ಈ ಪ್ರದೇಶದಲ್ಲಿ ದೇವಾಲಯಗಳನ್ನು ನಿರ್ಮಿಸಿ ಶಾಸನಗಳನ್ನು ಹಾಕಿಸುತ್ತಾರೆ.

ರಾಷ್ಟ್ರಕೂಟರ ಮೂರನೆಯ ಕೃಷ್ಣನ ಕ್ರಿ.ಶ. ೯೪೭ರ ಶಾಸನದಲ್ಲಿ ಕುರುಗೋಡಿನ ಮಹಾಜನರು ಕೊಟ್ಟಿತ್ತೊಣೆಯ (ಕುಡುತಿನಿ) ದೇಕಮ್ಮನ ದೇವಾಲಯಕ್ಕೆ ದಾನ ನೀಡಿದ ಉಲ್ಲೇಖವುಂಟು.[15] ಕುರುಗೋಡು ಅಗ್ರಹಾರವಾಗಿದ್ದು, ಮಹಾಜನರ ಆಡಳಿತದಲ್ಲಿತ್ತೆಂಬುದು ಗಮನಾರ್ಹ ಸಂಗತಿ. ಇಲ್ಲಿನ ಮಹಾಜನರು ದೇವಾಲಯವೊಂದಕ್ಕೆ ದಾನದತ್ತಿಗಳನ್ನು ನೀಡುವುದರ ಮೂಲಕ ತಮ್ಮ ಆರ್ಥಿಕ ಸುಸ್ಥಿತಿಯನ್ನು ಪ್ರಕಟಿಸಿದ್ದಾರೆ. ಗೌಡ ದೇಶದಲ್ಲಿ ವರೇಂದ್ರಿ ಪ್ರದೇಶಕ್ಕೆ ಸೇರಿದ ತಡ ಗ್ರಾಮದ ಲೋಹಾಸನಿ ಬ್ರಹ್ಮಚಾರಿ ಗಧಾದರ ಎಂಬುವನು ಸಮೀಪದ ಕೊಳಗಲ್ಲಿನಲ್ಲಿ ಕಾರ್ತಿಕೇಯ ಮುಂತಾದ ದೇವರುಗಳನ್ನು ‌ಪ್ರತಿಷ್ಠಾಪಿಸಿಸದ ವಿಷಯ ಶಾಸನಗಳಿಂದ ತಿಳಿದು ಬರುತ್ತದೆ.[16] ಲೋಹ ಆಯುಧ ಕೆಲಸಗಾರರಾದ ಇವರು ಯುದ್ಧ ದೇವತೆಯಾದ ಕಾರ್ತಿಕೇಯನನ್ನು ಆರಾಧಿಸುವದರ ಮೂಲಕ, ಈ ಭಾಗದಲ್ಲಿ ಕಬ್ಬಿಣದ ಅದಿರು ಸಂಸ್ಕರಿಸಿ ಆಯುಧಗಳನ್ನು ತಯಾರಿಸುತ್ತಿದ್ದರು. ಸಮೀಪದ ಕುಮಾರ ಸ್ವಾಮಿ ಬೆಟ್ಟದಲ್ಲಿ ರಾಷ್ಟ್ರಕೂಟರ ಕಾಲದ ಕುಮಾರಸ್ವಾಮಿ ಅಥವಾ ಕಾರ್ತಿಕೇಯನ ದೇವಾಲಯವಿರುವುದು ಗಮನಾರ್ಹ. ದೇವಾಲಯವಿರುವ ಪರ್ವತ ಸಾಲು ಸಂಪೂರ್ಣವಾಗಿ ಲೋಹದ ಅದಿರಿನಿಂದ ಕೂಡಿದ್ದು, ಗಣಿಗಾರಿಕೆಯಲ್ಲಿ ಸಾವಿರಾರು ವರ್ಷಗಳ ಚರಿತ್ರೆಯನ್ನು ನಮ್ಮ ಮುಂದಿಡುತ್ತದೆ. ಪ್ರಾಚೀನ ಗಣಿಗಾರಿಕೆಗೆ ಸಂಬಂಧಿಸಿದ ಮಣ್ಣಿನ ಮೂಸೆ, ಕಿಟ್ಟ ಮತ್ತಿತರ ಅವಶೇಷಗಳು ಬೆಳಕಿಗೆ ಬಂದಿವೆ. ಈ ಲೋಹ ಸಂಪತ್ತಿನಿಂದಾಗಿ ಬಳ್ಳಾರಿ ಪ್ರದೇಶವು ಸಹಜವಾಗಿ ಅಶೋಕನ ಕಾಲದಿಂದಲೂ ಪ್ರಾಶಸ್ತ್ಯ ಪಡೆದು ವಿವಿಧ ರಾಜಮನೆತನಗಳ ಆಳ್ವಿಕೆಗೆ ಒಳಗಾಯಿತು.

ರಾಷ್ಟ್ರಕೂಟರ ನಂತರ ಆಳ್ವಿಕೆ ನಡೆಸಿದ ಕಲ್ಯಾಣ ಚಾಲುಕ್ಯರು ಈ ಪ್ರದೇಶದಲ್ಲಿ ಅನೇಕ ದೇವಾಲಯಗಳನ್ನು ನಿರ್ಮಿಸಿ ದಾನದತ್ತಿಗಳನ್ನು ನೀಡಿದರು. ಸಮೀಪದ ಕುಡುತಿನಿ ಗ್ರಾಮದಲ್ಲಿ ಮೊದಲ ದೊರೆ ಇಮ್ಮಡಿ ತೈಲಪನ (ಅಹವಮಲ್ಲ)ಕ್ರಿ.ಶ. ೯೭೬ರ ಶಾಸನ ಕಂಡುಬರುತ್ತದೆ.[17] ಈ ಶಾಸನದ ಲಭ್ಯತೆಯಿಂದಾಗಿ ಇಡೀ ರಾಷ್ಟ್ರಕೂಟರ ಸಾಮ್ರಾಜ್ಯ ಒಮ್ಮೆಲೆ ಕಲ್ಯಾಣ ಚಾಲುಕ್ಯರ ಅಧೀನಕ್ಕೆ ಒಳಗಾಗಿರಬಹುದಾದ ಸಾಧ್ಯತೆಯನ್ನು ಚರಿತ್ರೆಕಾರರು ಗುರುತಿಸಿದ್ದಾರೆ. ಇವರ ಸಾಮಂತರಾಗಿ ನೊಳಂಬರು, ನೊಳಂಬವಾಡಿ ೩೨,೦೦೦, ಕದಂಬಳಿಗೆ ೧೦೦೦, ಕೋಗಳಿ ೫೦೦, ಬಲ್ಲಕುಂದೆ ೩೦೦, ಕುದಿಯಹರವಿ ೭೦ ಮತ್ತು ಕರಿವಿಡಿ ೩೦ನ್ನು ಆಳುತ್ತಿದ್ದರು.[18] ಕ್ರಿ.ಶ. ೧೦೫೦ರಲ್ಲಿ ನೊಳಂಬ ನರಸಿಂಹನು ಬಲ್ಲಕುಂದೆ ಜೊತೆಗೆ ಕೋಗಳಿ, ಕದಂಬಳಿಗೆ ಮತ್ತು ಸಿಂದವಾಡಿಗಳನ್ನು ಆಳುತ್ತಿದ್ದ.[19] ಆದರೆ ಕ್ರಿ.ಶ. ೧೦೬೪ರ ನಂತರ ನೊಳಂಬವಾಡಿ, ಬಲ್ಲಕುಂದೆ ಸೇರಿದಂತೆ ಈ ಪ್ರದೇಶದ ಆಡಳಿತವನ್ನು ಚಾಲುಕ್ಯ ರಾಜಕುಮಾರರು ನಿರ್ವಹಿಸಿದರು.[20] ಕ್ರಿ.ಶ. ೧೦೭೨ರಲ್ಲಿ ಜಯಸಿಂಹನು ಕೋಗಳಿ, ಬಲ್ಲಕುಂದೆ ಮತ್ತು ನೊಳಂಬವಾಡಿಗಳನ್ನು ನೋಡಿಕೊಂಡಿದ್ದನು. ಹೀಗೆ ಕುರುಗೋಡು ಪ್ರದೇಶವನ್ನೊಳಗೊಂಡ ಬಲ್ಲಕುಂದೆ ೩೦೦ ಮತ್ತು ನೊಳಂಬವಾಡಿಗಳು ಕಲ್ಯಾಣ ಚಾಲುಕ್ಯರ ನೇರ ಆಡಳಿತಕ್ಕೆ ಒಳಗಾಗಿದ್ದವು. ಕ್ರಿ.ಶ. ೧೦೭೯ರ ನಂತರ ನೊಳಂಬವಾಡಿಯ ಆಡಳಿತವನ್ನು ಸಾಮಂತರಾದ ಪಾಂಡ್ಯರು ನಿರ್ವಹಿಸುತ್ತಾರೆ.[21] ಕ್ರಿ.ಶ. ೧೦೯೧ರಲ್ಲಿ ವಿಕ್ರಮಾದಿತ್ಯನ ರಾಣಿಯಾದ ಪಿರಿಯಕೇತಲದೇವಿ ಸಮೀಪದ ಸಿರಗುಪ್ಪೆಯನ್ನು ಆಳುತ್ತಿದ್ದಳು.[22] ಆಗ ಸಿಂದಕುಲದ ಮಹಾಸಾಮಂತ ಮನ್ನೆಯ ಚೊಕರಸನು ಕೇತಲೇಶ್ವರ ದೇವರಿಗೆ ಹಾಗೂ ಬ್ರಾಹ್ಮಣರಿಗೆ ಭೋಜನಕ್ಕಾಗಿ ಧಾನ್ಯವನ್ನು ನೀಡಿದನು. ಕ್ರಿ.ಶ. ೧೧೨೨ರ ಯರಬಾಳು ಶಾಸನವು ಸಿಂದರ ಅರಸ ಸೋವಿದೇವ, ವೀರಪಾಂಡ್ಯ ಮುಂತಾದವರು ವಿಕ್ರಮಾದಿತ್ಯನ ಮಾಂಡಲೀಕರಾಗಿದ್ದರೆಂದು ತಿಳಿಸುತ್ತದೆ.[23] ಇದರಿಂದ ಕುರುಗೋಡಿನ ಸಿಂದರು ಕಲ್ಯಾಣ ಚಾಲುಕ್ಯರ ನಿಷ್ಠಾವಂತ ಸಾಮಂತರಾಗಿದ್ದರು ಎಂದು ತಿಳಿಯುವುದು. ಕ್ರಿ.ಶ. ೧೧೬೨ರಲ್ಲಿ ಕಳಚುರ್ಯರಿಂದ ಅಧಿಕಾರ ವಂಚಿತರಾದ ಕಲ್ಯಾಣ ಚಾಲುಕ್ಯರ ಕೆಲಕಾಲ ಕಂಪಿಲಿಯಲ್ಲಿ ನೆಲಸಿದರು.[24] ಇಲ್ಲಿ ಅವರಿಗೆ ಉಚ್ಚಂಗಿ ಪಾಂಡ್ಯರು, ನಿಡುಗಲ್ಲಿನ ಚೋಳರು ಮತ್ತು ಸಿಂದರ ಬೆಂಬಲವಿತ್ತು. ಆದರೆ ಬಿಜ್ಜಳನ ದಾಳಿಯಿಂದಾಗಿ ಪಾಂಡ್ಯರು ಮತ್ತು ಸಿಂದರು ಕಳಚುರ್ಯರ ಸಾಮಂತರಾಗಿ ಮುಂದುವರೆಯುತ್ತಾರೆ. ಎಂದಿನಂತೆ ನೊಳಂಬವಾಡಿಯನ್ನು ಉಚ್ಚಂಗಿ ಪಾಂಡ್ಯರು ಆಳಿದರು.

ಸಮೀಪದ ತೆಕ್ಕಲಕೋಟೆಯಲ್ಲಿ ದೊರೆತ ಶಾಸನವೊಂದರಲ್ಲಿ ಬಿಜ್ಜಳನ ಉಲ್ಲೇಖವಿದ್ದು, ಸಿಂದ ಇಮ್ಮಡಿ ರಾಚಮಲ್ಲನು ಇವನ ಸಾಮಂತನಾಗಿದ್ದ ಎನ್ನಲಾಗಿದೆ.[25] ಕ್ರಿ.ಶ. ೧೧೭೬ರ ಕುರುಗೋಡಿನ ಶಾಸನವು,ಇಮ್ಮಡಿ ರಾಚಮಲ್ಲನು ಕಳಚುರ್ಯರ ರಾಯ ಮುರಾರಿಸೋವಿ ದೇವನ ಮಾಂಡಲಿಕನೆಂದಿದೆ.[26] ಕ್ರಿ.ಶ. ೧೧೭೭ರ ಕುರುಗೋಡಿನ ಇನ್ನೊಂದು ಶಾಸನ, ಕಲ್ಯಾಣದಿಂದ ಆಳುತ್ತಿದ್ದ ಕಳಚೂರಿ ಸಂಕಮದೇವ ಹಾಗೂ ಅವನ ಸಾಮಂತನಾದ ಸಿಂದ ವಂಶದ ಎರಡನೆಯ ರಾಚಮಲ್ಲನನ್ನು ಉಲ್ಲೇಖಿಸುತ್ತದೆ.[27] ಈ ಮೇಲಿನ ಶಾಸನಗಳು ಸಿಂದರು ಕಳಚುರ್ಯರ ಸಾಮಂತರಾಗಿ ಮುಂದುವರೆದರೆಂಬುದನ್ನು ಸ್ಪಷ್ಟಪಡಿಸುತ್ತವೆ. ಕ್ರಿ.ಶ. ೧೧೮೧-೮೨ರ ಕುರುಗೋಡಿನ ಮತ್ತೊಂದು ಶಾಸನವು, ಕಲ್ಯಾಣ ಚಾಲುಕ್ಯರ ನಾಲ್ಕನೆಯ ಸೋಮೇಶ್ವರನು ಕಲ್ಯಾಣದಲ್ಲಿ ಸಿಂಹಾಸನದಲ್ಲಿದ್ದನೆಂದು, ಈತನ ಸಾಮಂತನಾಗಿ ಸಿಂದರ ಎರಡನೆಯ ರಾಚಮಲ್ಲನು ಬಲ್ಲಕುಂದೆಯನ್ನು ಕುರುಗೋಡು ನೆಲೆಯಿಂದ ಆಳಿದನೆಂದು ತಿಳಿಸುತ್ತದೆ.[28] ಈ ವೇಳೆಗಾಗಲೇ ಹೊಯ್ಸಳರು ಮತ್ತು ಸೇವುಣರು ಪ್ರಬಲರಾಗಿದ್ದು, ಸ್ವತಂತ್ರಗೊಂಡಿದ್ದರು. ತುಂಗಭದ್ರ ಹೊಯ್ಸಳ ಮ ತ್ತು ಸೇವುಣರ ನಡುವೆ ತೀವ್ರ ಹೋರಾಟಗಳು ಆರಂಭಗೊಂಡವು, ಈ ಸ್ಥಿತಿಯಲ್ಲಿ ಸಿಂದರು ತಮ್ಮ ಅಸ್ತಿತ್ವವನ್ನು ಕಳೆದುಕೊಂಡರು.

ಕಲ್ಯಾಣ ಚಾಲುಕ್ಯರ ಸಾಮಂತರಾಗಿದ್ದ ನೊಳಂಬರ ಮೊದಲ ರಾಜಧಾನಿ ಹೆಂಜೇರು (ಈಗಿನ ಅನಂತಪುರ ಜಿಲ್ಲೆಯ ಮಡಕಶಿರ ತಾಲ್ಲೂಕಿನ ಹೇಮಾವತಿ ಗ್ರಾಮ). ತಲಕಾಡಿನ ಗಂಗರ ದಾಳಿಯಿಂದಾಗಿ ಕಂಫಲಿಗೆ ಬಂದು ಆಳ್ವಿಕೆ ನಡೆಸಿದರು.[29] ಇವರು ಆಳುತ್ತಿದ್ದ ಪ್ರದೇಶವನ್ನು ನೊಳಂಬವಾಡಿ, ೩೨,೦೦೦ ಎಂದು ಶಾಸನಗಳು ಕರೆದಿವೆ. ಕಲ್ಯಾಣ ಚಾಲುಕ್ಯರೊಂದಿಗೆ ಉತ್ತಮ ರಾಜಕೀಯ ಸಂಬಂಧಗಳನ್ನು ಬೆಳಸಿಕೊಂಡರು. ಇವರು ಸಿಂದರ ಮೇಲೆ ಯುದ್ಧ ಮಾಡಿದರು.[30] ಇವರ ಆಳ್ವಿಕೆಯಲ್ಲಿ ಕೆಲವರು ಬಲ್ಲಕುಂದೆಯಲ್ಲಿ ಬಸದಿಯನ್ನು ನಿರ್ಮಿಸಿದರು. ಜಗದೇಕಮಲ್ಲ ನೊಳಂಬನು, ನೊಳಂಬವಾಡಿ ಸೇರಿದಂತೆ ಬಲ್ಲಕುಂದೆಯನ್ನು ಆಳುತ್ತಿದ್ದನು.[31] ನನ್ನಿನೊಳಂಬ ಪಲ್ಲವ ಪೆರ್ಮಾಡಿದೇವನ ಕ್ರಿ.ಶ. ೧೦೪೫ರ ಶಾಸನದಲ್ಲಿ, ಉದಯಾದಿತ್ಯ ಸಿಂದರಸನ ಉಲ್ಲೇಖವಿದ್ದು, ದಾನದ ಭೂಮಿಯನ್ನು ಸಿಂದರ ದತ್ತಿ ಎಂದಿದೆ.[32] ಕ್ರಿ.ಶ. ೧೦೫೮ರಲ್ಲಿ ಜಗದೇಕಮಲ್ಲ ನೊಳಂಬ ಪಲ್ಲವ ಪೆರ್ಮಾನಡಿಯು ಕಂಪಲಿಯಲ್ಲಿ ರಾಜ್ಯಭಾರ ಮಾಡುತ್ತಿರುವಾಗ ಉದಯಾದಿತ್ಯನು ಉತ್ತಮರಾಶಿ ಪಂಡಿತನಿಗೆ ದಾನ ನೀಡಿದನು.[33] ಈ ಉದಯಾದಿತ್ಯನು ಕ್ರಿ.ಶ. ೧೦೪೫ರ ಶಾಸನದಲ್ಲಿ ಉಲ್ಲೇಖಗೊಂಡಿರುವ ಉದಯಾದಿತ್ಯ ಸಿಂದರಸನಿರಬೇಕು. ಹೀಗೆ ನೊಳಂಬರು ಕಲ್ಯಾಣ ಚಾಲುಕ್ಯರ ಸಾಮಂತರಾಗಿ ಕಂಪಲಿಯಿಂದ ಆಳ್ವಿಕೆ ನಡೆಸಿದರು. ಇದರಲ್ಲಿ ಬಲ್ಲಕುಂದೆಯು ಸೇರಿರುವುದರಿಂದ ಕುರುಗೋಡು ನೊಳಂಬರ ಆಳ್ವಿಕೆಗೆ ಒಳಪಟ್ಟಿತ್ತು. ನೊಳಂಬವಾಡಿಯಲ್ಲಿ ಬಲ್ಲಕುಂದೆ, ಕೋಗಳಿ, ಕದಂಬಳಿಗೆ, ಮಾಸವಾಡಿ, ಸಿಂದವಾಡಿ ಮೊದಲಾದ ಪ್ರಾಂತ್ಯಗಳು ಅಂತರ್ಗತವಾಗಿದ್ದವು. ನೊಳಂಬರು ವಾಸ್ತು ಮತ್ತು ಮೂರ್ತಿಶಿಲ್ಪದಲ್ಲಿ ತಮ್ಮದೇ ಶೈಲಿಯನ್ನು ಹುಟ್ಟುಹಾಕಿದರು. ಕಂಪ್ಲಿ ಮತ್ತು ಹಂಪೆಯಲ್ಲಿ ನೊಳಂಬರ ಶೈಲಿಯ ದೇವಾಲಯ ಮತ್ತು ಮೂರ್ತಿ ಶಿಲ್ಪಗಳನ್ನು ಕಾಣಬಹುದು. ಇವರ ನಂತರ ನೊಳಂಬ ವಾಡಿಯನ್ನು ಪಾಂಡ್ಯರು ಆಳಿದರು. ಉಚ್ಚಂಗಿ ಇವರ ರಾಜಧಾನಿ. ಸಿಂದರ ಚೋಕರಸ ಎಂಬುವನು ಪಾಂಡ್ಯರ ಸಾಮಂತರಾಗಿದ್ದನು.

ಮತ್ತೊಂದು ಪ್ರಮುಖ ಸಾಮಂತ ಮನೆತನವೆಂದರೆ ಕುರುಗೋಡು ಸಿಂದರು. ಸಿಂದರು ತಮ್ಮನ್ನು ನಾಗವಂಶದವರೆಂದು ಕರೆದುಕೊಂಡಿದ್ದಾರೆ. ಪ್ರಾಚೀನ ಅರಸು ಮನೆತನವಾದ ಸೇಂದ್ರಕರನ್ನು ಸಹ ನಾಗವಂಶದವರೆನ್ನಲಾಗಿದೆ. ಹೀಗಾಗಿ ನಾಗವಂಶದವರು ಕನ್ನಡ ನಾಡಿ ಮೂಲನಿವಾಸಿಗಳಾಗಿದ್ದಾರೆಂದು ಗುರುತಿಸಿದ್ದಾರೆ. ಬಾ.ರಾ.ಗೋಪಾಲ ಅವರು, ಸೇಂದ್ರಕರೆ ೧೦-೧೧ನೆಯ ಶತಮಾನಗಳಲ್ಲಿ ಸಿಂದರೆಂದು ವರ್ಣಿಸಲ್ಪಟ್ಟಿದ್ದಾರೆಂದು ತಿಳಿಸುತ್ತಾರೆ.[34] ಮಧ್ಯಪ್ರದೇಶದ ಬಸ್ತಾರ್ ಪ್ರದೇಶದ ಸಿಂದರ ನಡುವೆ ಸಂಬಂಧವನ್ನು ಗುರುತಿಸಲಾಗಿದೆ. ಸಿಂದರ ಪ್ರದೇಶವನ್ನು ಸಿಂದವಾಡಿ ಎಂದು ಕರೆಯಲಾಗಿದೆ.[35] ಕ್ರಿ.ಶ. ೭ನೆಯ ಶತಮಾನದ ಕುಕನೂರು ಶಾಸನದಲ್ಲಿ ಸಿಂದರ ಅತ್ಯಂತ ಪ್ರಾಚೀನ ಉಲ್ಲೇಖವಿದೆ. ಗಂಗರ ಶಾಸನಗಳಲ್ಲಿ ಸಿಂದನಾಡು ೮೦೦೦ ಎಂದು, ರಾಷ್ಟ್ರಕೂಟರ ಕ್ರಿ.ಶ. ೮೦೭ರ ನೇಸರಿ ತಾಮ್ರ ಶಾಸನದಲ್ಲಿ ಸಿಂದಮಂಡಲವೆಂದು, ಅಕಾಲವರ್ಷನ ಮಂತ್ರಾಲಯ ಶಾಸನದಲ್ಲಿ ಸಿಂದವಾಡಿ ೧೦೦೦ ಎಂದು ಭೂ ಪ್ರದೇಶಗಳ ಉಲ್ಲೇಖಗಳಿವೆ.[36] ಸಿಂದ ಎಂಬ ಪದಕ್ಕೆ ಪತಾಕೆ, ಧ್ವಜ ಹೊಂದಿದ ಅರಸ, ಜಯಿಸಿದ, ವಿಜಯಿಯಾದ ಎಂಬ ಅರ್ಥಗಳನ್ನು ನೀಡಲಾಗಿದೆ. ಸಿಂದರಲ್ಲಿ ಅನೇಕ ಶಾಖೆಗಳಿವೆ. ಇವರೆಲ್ಲರು, ತಮ್ಮ ಮೂಲಪುರುಷ ನಿಡುದೋಳ ಸಿಂದನೆಂದು ಹೇಳಿಕೊಂಡಿದ್ದಾರೆ. ಇವನು ಸಿಂದವಿಷಯವನ್ನು ಆಳುತ್ತಿದ್ದು, ಕದಂಬ ಮಯೂರವರ್ಮನ ಮಗಳು ಲಕ್ಷ್ಮಿಮತಿಯನ್ನು ವಿವಾಹವಾಗಿದ್ದನು ಎನ್ನಲಾಗಿದೆ.[37] ಈತನ ನಾಲ್ಕು ಮಕ್ಕಳಲ್ಲಿ ಬುಧಸೇವ್ಯ ಎಂಬುವನು ಬಳ್ಳರೆನಾಡಿನ (ಬಳ್ಳಾರಿ) ಅಧಿಪತಿಯಾಗಿದ್ದನು. ಇವನೇ ಕುರುಗೋಡು ಸಿಂದರ ಮೊದಲ ಅರಸನೆಂದು ಗುರುತಿಸಿದ್ದಾರೆ.[38] ರಾಷ್ಟ್ರಕೂಟ, ಕಲ್ಯಾಣ ಚಾಲುಕ್ಯ ಮತ್ತು ಕಳಚುರ್ಯರ ಮಾಂಡಲಿಕರಾಗಿ ಕುರುಗೋಡನ್ನು ರಾಜಧಾನಿ ಮಾಡಿಕೊಂಡು ಆಳ್ವಿಕೆ ನಡೆಸಿದ ಸಿಂದರನ್ನು ಚರಿತ್ರೆಕಾರರು, ಕುರುಗೋಡು ಸಿಂದರು ಎಂದೆ ಗುರುತಿಸಿದ್ದಾರೆ. ಆರಂಭದಲ್ಲಿ[39]  ಸಣ್ಣ ಮಾಂಡಲೀಕರಾಗಿದ್ದರು ಬಳ್ಳಾರಿ ಜಿಲ್ಲೆಯಲ್ಲಿ, ಕ್ರಿ.ಶ. ೯೪೭ರ ಕುಡುತಿನಿ ಶಾಸನದಲ್ಲಿ ಇವರ ಮೊದಲ ಉಲ್ಲೇಖವನ್ನು ಕಾಣಬಹುದು.[40] ಇದರಲ್ಲಿ “ಭೋಗವತಿಪುರವರೇಶ್ವನ ಮಕರಧ್ವಜಂ ಫಣೀಂದ್ರ ಕುಲಸಂಭವಂ ವ್ಯಾಘ್ರ ಮೃಗ ಲಾಂಚನಂ” ಎಂದು ವಿಶೇಷಣಗಳನ್ನುಳ್ಳ ಶ್ರೀ ಮಱಿಬಲ್ಲದಾಗ್ರ (ಅರಿಬಲ್ಲದ)? ಎಂಬುವನನ್ನು ಹೆಸರಿಸಿದೆ. ಕ್ರಿ.ಶ. ೯೬೬ರ ಬಲ್ಲಕುಂದೆ ಶಾಸನದಲ್ಲಿ ನನ್ನಿನೊಳಂಬನ ಅಣತಿಯಂತೆ ಸಿಂದರ ಮೇಲೆ ಯುದ್ಧ ಮಾಡಿದ ಉಲ್ಲೇಖವಿದೆ. ಇದರಿಂದ ಬಲ್ಲಕುಂದೆ ಪ್ರದೇಶದಲ್ಲಿ ಸಿಂದರ ಅಸ್ತಿತ್ವದ ಪ್ರಾಚೀನತೆ ತಿಳಿದುಬರುವುದು. ಹಾಗೂ ಬಲ್ಲಕುಂದೆ ನಾಡಿನಲ್ಲಿ ಆಳ್ವಿಕೆ ನಡೆಸಿರುವುದು ಸುಸ್ಪಷ್ಟ. ಅರಿಬಲ್ಲದಾಗ್ರನು ಬಲ್ಲಕುಂದೆ ನಾಡನ್ನು ಮಹಾಸಾಮಂತನಾಗಿ ಆಳಿದ್ದಾನೆ. ಇವನ ನಂತರ ಸುಮಾರು ೭೮ ವರ್ಷಗಳ ಕಾಲ ಈ ಮನೆತನದ ಚರಿತ್ರೆ ಅಸ್ಪಷ್ಟವೆನ್ನಲಾಗಿದೆ.[41] ಕ್ರಿ.ಶ. ೧೦೪೫ರ ಶಾಸನದಲ್ಲಿ ನೊಳಂಬರ ಸಾಮಂತನಾಗಿದ್ದ ಉದಯಾದಿತ್ಯ ಸಿಂದರಸನ ಉಲ್ಲೇಖವುಂಟು.[42]ಕ್ರಿ.ಶ. ೧೦೫೨ರ ತಳಕಲ್ಲು ಶಾಸನದಲ್ಲಿ ಸಿಂದಕುಲದ ಬರ್ಮರಸನ ಉಲ್ಲೇಖವಿದ್ದು. ನೊಳಂಬರ ಅಧೀನದಲ್ಲಿದ್ದನೆಂದು ತಿಳಿಸುತ್ತದೆ.[43]ಕ್ರಿ.ಶ. ೧೦೯೧ರ ಸಿರುಗುಪ್ಪ ಶಾಸನದಲ್ಲಿ ಸಿಂದಕುಲದ ಮನ್ನೆಯ ಚೋಕರಸನ ಉಲ್ಲೇಖವಿದೆ.[44] ಕ್ರಿ.ಶ. ೧೧೨೦ರ ಕೊಂಚಗೆರೆ ಶಾಸನದಲ್ಲಿ, ಭೀಮನ ಮಗ ಸೋವಿದೇವನು ಆಳುತ್ತಿದ್ದನೆಂದಿದೆ.[45] ಕ್ರಿ.ಶ. ೧೧೩೭ರ ಶಾಸನವೊಂದರಲ್ಲಿ ಸೋವಿದೇವನಿಗೆ ಐದು ಜನ ಮಕ್ಕಳಿದ್ದ ಸೂಚನೆ ದೊರೆಯುವುದು.[46] ಇದರಲ್ಲಿ ಎರಡನೆಯ ಭೀಮ, ರಾಚಮಲ್ಲ, ಫಣಿರಾಜ ಎಂಬ ಹೆಸರುಗಳು ದೊರೆಯುತ್ತವೆ. ಉಳಿದ ಹೆಸರುಗಳಿಂದ ಶಾಸನ ಭಾಗ ಸವೆದಿದೆ. ಇವರಲ್ಲಿ ರಾಚಮಲ್ಲನು ಮೊದಲನೆಯ ರಾಚಮಲ್ಲನೆಂದು ಪ್ರಸಿದ್ಧನಾಗಿದ್ದು, ಶಾಸನಗಳಲ್ಲಿ ಉಲ್ಲೇಖಿಸಲ್ಪಟ್ಟಿದ್ದಾನೆ.[47]

ಕ್ರಿ.ಶ. ೧೧೪೯ರ ಶಾಸನವೊಂದು ರಾಚಮಲ್ಲನು ಕಲ್ಯಾಣದ ಚಾಲುಕ್ಯರ ಮಾಂಡಲಿಕನಾಗಿದ್ದನೆಂದು ತಿಳಿಸುತ್ತದೆ.[48] ಬಲ್ಲಕುಂದೆ ಪ್ರದೇಶದ ಶಾಸನಗಳಲ್ಲಿ ಬಳ್ಳರೆಯ ರಾಚಮಲ್ಲ, ರಾಜಮಲ್ಲ, ಪಿರಿಯರಾಚಮಲ್ಲ ಹಾಗೂ ರಾಚಮಲ್ಲ ಎಂದು ಉಲ್ಲೇಖಗೊಂಡಿದ್ದಾನೆ.[49] ಇವನು ಕ್ರಿ.ಶ. ೧೧೩೯ರಿಂದ ೧೧೭೩ರ ವರೆಗೆ ಬಲ್ಲಕುಂದೆ ನಾಡನ್ನು ಆಳಿದನೆಂದು ಶಾಸನಗಳಿಂದ ತಿಳಿಯುವುದು.[50] ಅಪ್ರತಿಮ ಶಿವಭಕ್ತನಾಗಿದ್ದ ಇವನನ್ನು ಶಾಸನಗಳು ಹಾಡಹೊಗಳಿವೆ. ಇವನಿಗೆ ಮಾಕಲದೇವಿ ಮತ್ತು ಸೋವಲದೇವಿ ಎಂಬ ಇಬ್ಬರು ಪತ್ನಿಯರಿದ್ದರು. ಇವರಲ್ಲಿ ಮಾಕಲದೇವಿ ಹಿರಯ ರಾಣಿ. ಮಕ್ಕಳಿರಲಿಲ್ಲ. ಹಾಗಾಗಿ ಕಿರಿಯ ರಾಣಿ, ಸೋವಲದೇವಿಯ ಮಗನಾದ ಇರುಂಗೋಳನು ಬಲ್ಲಕುಂದೆ ನಾಡಿನ ಅಧಿಪತ್ಯ ವಹಿಸುತ್ತಾನೆ. ಇವನ ಮೊದಲ ಕ್ರಿ.ಶ. ೧೧೭೩ರ ಕುರುಗೋಡು ಶಾಸನದಲ್ಲಿದೆ.[51] ಇವನ ಹೆಂಡತಿ ಬಲದೇವಿ. ಇವಳಲ್ಲಿ ಹುಟ್ಟಿದ ಎರಡನೆಯ ರಾಚಮಲ್ಲ ಸಮರ್ಥ ಆಡಳಿತಗಾರನಾಗಿದ್ದು, ಬಲ್ಲಕುಂದೆ ನಾಡಿನ ಘನತೆ ಗೌರವಗಳನ್ನು ಎತ್ತಿಹಿಡಿದ. ಇವನು ಕಳಚುರ್ಯರ ರಾಯ ಮುರಾರಿಸೋವಿದೇವ ಮತ್ತು ಸಂಕಮದೇವರಿಗೆ ಮಾಂಡಲಿಕನಾಗಿದ್ದನು.[52] ಕ್ರಿ.ಶ. ೧೧೮೨ರಲ್ಲಿ ಕಲ್ಯಾಣ ಚಾಲುಕ್ಯ ದೊರೆ ತ್ರಿಭುವನಮಲ್ಲ ವೀರ ಸೋಮೇಶ್ವರನ ಸಾಮಂತನಾಗಿದ್ದನು.[53] ಕ್ರಿ.ಶ. ೧೧೮೬-೮೭ರಲ್ಲಿ ಸೇವುಣರ ಐದನೆಯ ಭಿಲ್ಲಮನು, ಸ್ವತಂತ್ರ ಅರಸನೆಂದು ಘೋಷಿಸಿಕೊಂಡರೂ ಕುರುಗೋಡಿನ ಸಿಂದರು ಮಾನ್ಯತೆ ನೀಡಲು ಒಪ್ಪಲಿಲ್ಲ.[54] ಎರಡನೆಯ ರಾಚಮಲ್ಲನು ಸಹ ಪರಮ ಶಿವಭಕ್ತನಾಗಿದ್ದನು. ಕುರುಗೋಡಿನ ಶಾಸನಗಳು ಇವನ ಶಿವಭಕ್ತಿಯನ್ನು ಕೊಂಡಾಡಿವೆ. ಕ್ರಿ.ಶ. ೧೧೯೫ರ ವೇಳೆಗೆ ಇಮ್ಮಡಿ ರಾಚಮಲ್ಲನು ಸ್ವತಂತ್ರವಾಗಿ ಬಲ್ಲಕುಂದೆ ನಾಡನ್ನು ಆಳುತ್ತಿದ್ದಂತೆ ಕಂಡುಬರುತ್ತದೆ.

ಕ್ರಿ.ಶ. ೧೧೯೯ರ ಹಂಪೆಯ ಶಾಸನವು ಕುರುಗೋಡಿನ ಇಮ್ಮಡಿ ರಾಚಮಲ್ಲನ ಮಗನಾದ ವೀರಕಲಿದೇವರಸನನ್ನು ಉಲ್ಲೇಖಿಸುತ್ತದೆ. ಬಲ್ಲಕುಂದೆಯ ಭಾಗವಾದ ದೊರವದಿ ನಾಡಿನಲ್ಲಿ ಪಂಪಾತೀರ್ಥವಿತ್ತೆಂದು (ಹಂಪೆ), ವೀರ ಕಲಿದೇವರಸನ ಸಾಮಂತನಾದ ಮಾದೆಯ ನಾಯಕನು ಅದರ ರಕ್ಷಣಾರ್ಥವಾಗಿ ಇಲ್ಲಿನ ಮತಂಗ ಪರ್ವತವನ್ನು ಆಳುತ್ತಿದ್ದನೆಂದು ತಿಳಿಸುತ್ತದೆ.[55] ಈ ವೇಳೆಗೆ ಹಂಪೆಯಲ್ಲಿ ಬ್ರಹ್ಮಪುರಿ ಇ‌ತ್ತು. ಅಂದರೆ ಹನ್ನೆರಡನೆಯ ಶತಮಾನಕ್ಕಾಗಲೇ ಹಂಪೆಯು ಪಟ್ಟಣದ ಸ್ವರೂಪವನ್ನು ಪಡೆದುಕೊಂಡಿತ್ತು. ಕಲಿದೇವರಸನು ತನ್ನ ತಂದೆಯ ಹೆಸರಿನಲ್ಲಿ ಹಂಪೆಯ ಹೇಮಕೂಟದಲ್ಲಿ ಇಮ್ಮಡಿ ರಾಚಮಲ್ಲೇಶ್ವರ ದೇವಾಲಯವನ್ನು ಕಟ್ಟಿಸಿದನು. ಹಂಪೆ ಸೇರಿದಂತೆ ಹೊಸಪೇಟೆ ತಾಲ್ಲೂಕಿನ ಬಹುಭಾಗಗಳು ಬಲ್ಲಕುಂದೆ ೩೦೦ರಲ್ಲಿ ಸೇರಿದ್ದವು ಹಾಗೂ ಕುರುಗೋಡಿನ ಸಿಂದರ ಆಡಳಿತಕ್ಕೆ ಒಳಗಾಗಿದ್ದವು. ಇಲ್ಲಿಂದ ಮುಂದೆ ಕುರುಗೋಡು ಸಿಂದರ ಶಾಸನಗಳು ದೊರೆಯುವುದಿಲ್ಲ.[56] ಬಹುಶಃ ಹೊಯ್ಸಳ ಮತ್ತು ಸೇವುಣರ ಪ್ರಾಬಲ್ಯದಿಂದಾಗಿ ಕುರುಗೋಡು ಸಿಂದರು ಮೂಲೆಗುಂಪಾಗಿರಬೇಕು. ಸಿಂದರು, ಈ ಮೊದಲೆ ತಿಳಿಸಿದಂತೆ ಶಿವನ ಅಪ್ರತಿಮ ಭಕ್ತರಾಗಿದ್ದರು. ಇಮ್ಮಡಿ ರಾಚನಮಲ್ಲನ ಶಾಸನವೊಂದು ಇದಕ್ಕೆ ಉತ್ತಮ ಉದಾಹರಣೆ. ಇದರಲ್ಲಿ ಇಮ್ಮಡಿ ರಾಚಮಲ್ಲನ ತಾತ ಮೊದಲನೆಯ ರಾಚಮಲ್ಲನು ಶರೀರ ಸಮೇತನಾಗಿ ಶಿವಗಣನಾಗಿ ಕೈಲಾಸಕ್ಕೆ ಹೋದನಂತೆ. ಹಾಗೂ ಉದ್ಭವ ರಾಚಮಲ್ಲೇಶ್ವರ ಲಿಂಗವಾಗಿ ನಿಂತನೆಂಬ ಕಥೆಯನ್ನು ಹೇಳಲಾಗಿದೆ.[57] ಇವರ ಕಾಲದಲ್ಲಿ ಕುರುಗೋಡು ಪಟ್ಟಣದಲ್ಲಿ ಶಿವಾಲಯಗಳು ನಿರ್ಮಾಣಗೊಂಡವು. ಕುರುಗೋಡು ರಾಜಧಾನಿಯೊಂದಿಗೆ ಸಾಂಸ್ಕೃತಿಕವಾಗಿಯೂ ಯಶಸ್ಸನ್ನು ಸಾಧಿಸಿತು. ಇಲ್ಲಿನ ಭಗ್ನ ಅವಶೇಷಗಳು ಚರಿತ್ರೆಯನ್ನು ಕಟ್ಟಿಕೊಡುತ್ತವೆ. ಕುರುಗೋಡಿನ ಪ್ರಾಕೃತಿಕ ಲಕ್ಷಣವೇ ಅದರ ಮಹತ್ವವನ್ನು ಎಲ್ಲ ಕಾಲಕ್ಕೂ ಎತ್ತಿ ಹಿಡಿದಿವೆ. ಗಿರಿದುರ್ಗವಿರುವ ಕುರುಗೋಡು ಮುಂದಿನ ಶತಮಾನಗಳಲ್ಲಿ ತಲೆ ಎತ್ತಿದ ಕುಮ್ಮಟ ಹಾಗೂ ವಿಜಯನಗರ ರಾಜಧಾನಿ ಪಟ್ಟಣಗಳ ನೆಲೆಯ ಆಯ್ಕೆಗೆ ಸ್ಫೂರ್ತಿಯನ್ನು ನೀಡಿತು.

ಕಳಚುರ್ಯರು ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಹೊಯ್ಸಳರು ಸ್ವತಂತ್ರರಾಗಲು ಉತ್ಸುಕರಾದರು. ಆದರೂ ಈ ಪ್ರದೇಶ ಕಳಚುರ್ಯರ ವಶದಲ್ಲಿಯೇ ಇತ್ತು. ಕ್ರಿ.ಶ. ೧೧೮೯ರ ಶಾಸನವೊಂದು, ಉಚ್ಚಂಗಿ ಪಾಂಡ್ಯರು ಹೊಯ್ಸಳರು ಸಾಮಂತರಾಗಿದ್ದರೆಂದು ತಿಳಿಸುವುದು.[58] ಈ ವೇಳೆಗೆ ಬಳ್ಳಾರಿ ಪ್ರದೇಶ ಹೊಯ್ಸಳರ ವಶಕ್ಕೆ ಬಂದಿತ್ತು. ಏಕೆಂದರೆ ಕ್ರಿ.ಶ. ೧೧೮೩ರ ನಂತರ ಕಲ್ಯಾಣದಲ್ಲಿ ಚಾಲುಕ್ಯರು ಪುನಃ ಅಧಿಕಾರಕ್ಕೆ ಬಂದರೂ ತುಂಗಭದ್ರೆಯ ದಕ್ಷಿಣ ಭಾಗದ ಮೇಲೆ ಅಧಿಕಾರವನ್ನು ಸ್ಥಾಪಿಸಲಾಗಲಿಲ್ಲ. ಕ್ರಿ.ಶ. ೧೨೦೬ರಲ್ಲಿ ಕುಮಾರ ಸ್ವಾಮಿ ದೇವಾಲಯದ ದಾನವನ್ನು (ಸೊಂಡೂರು)ಹೊಯ್ಸಳರ ಮಹದೇವ ದಂಡನಾಯಕನು ನವೀಕರಿಸುತ್ತಾನೆ. ಕ್ರಿ.ಶ. ೧೨೦೯ರ ವೇಳೆಗೆ ಹೊಯ್ಸಳ ರಾಜ್ಯವು ಗಂಗವಾಡಿ, ನೊಳಂಬವಾಡಿ ಸೇರಿದಂತೆ ಹೆದ್ದೊರೆಯವರೆಗೆ (ಕೃಷ್ಣಾನದಿ) ವ್ಯಾಪಿಸಿತು.[59] ಆದರೂ ಬಳ್ಳಾರಿ ಪ್ರದೇಶದ ಮೇಲಿನ ಹಿಡಿತಕ್ಕಾಗಿ ಹೊಯ್ಸಳರಿಗೂ ಮತ್ತು ದೇವಗಿರಿ ಸೇವುಣರಿಗೂ ಆಗಾಗ್ಗೆ ಯುದ್ದಗಳು ನಡೆಯುತ್ತಿದ್ದವು. ಇಮ್ಮಡಿ ಬಲ್ಲಾಳನು ಗೆದ್ದ ಮಾರ್ಗದಲ್ಲಿ ಕುರುಗೋಡು ಸಹ ಒಂದಾಗಿತ್ತು.[60] ಕ್ರಿ.ಶ. ೧೨೨೪ರ ನೀಲಗುಂದ ಶಾಸನದಲ್ಲಿ, ಬಲ್ಲಾಳನು ಸೇವುಣ ಸೇನೆಯನ್ನು ಬೆನ್ನಟ್ಟಿದ ಉಲ್ಲೇಖವಿದೆ.[61]

ಕ್ರಿ.ಶ. ೧೨೦೦ರ ಈಚೆಗೆ ಸೇವುಣರ ಶಾಸನಗಳು ಈ ಭಾಗದಲ್ಲಿ ದೊರೆಯುತ್ತವೆ. ಈ ಶಾಸನಗಳು ಹೆಚ್ಚಾಗಿ ದಾನದತ್ತಿಗಳನ್ನು ಒಳಗೊಂಡಿವೆ. ಸೇವುಣರು ಈ ಭಾಗದಲ್ಲಿ ಯಾವುದೇ ಅಧಿಕಾರವನ್ನು ಸ್ಥಾಪಿಸಿದಂತೆ ಕಂಡುಬರುವುದಿಲ್ಲ. ಈ ನಡುವೆ ಕ್ರಿ.ಶ. ೧೨೮೦ರ ಸುಮಾರಿಗೆ ಈ ಭಾಗದಲ್ಲಿ ಮುಮ್ಮಡಿ ಸಿಂಗೇಯ ನಾಯಕನು ಪ್ರಾಬಲ್ಯಗಳಿಸಿ ಕುಮ್ಮಟದುರ್ಗದಿಂದ ಆಳ್ವಿಕೆ ನಡೆಸುತ್ತಾನೆ. ಇವನು ಕ್ರಿ.ಶ. ೧೨೮೦ರ ಕುರುಗೋಡಿನ ಕದನದಲ್ಲಿ ಹೊಯ್ಸಳರ ಪರವಾಗಿ ಹೋರಾಡಿ ಸೇವುಣ ಸೇನಾನಿಯನ್ನು ಕೊಂದನು.[62] ಹೊಸಮಲೆದುರ್ಗ (ರಾಮನ ಮಲೆ, ಸೊಂಡೂರು ತಾ.) ಮತ್ತು ಕುಮ್ಮಟದುರ್ಗ ರಾಜಧಾನಿಗಳಾಗಿದ್ದವು. ಕುಮ್ಮಟರಾಜ್ಯದಲ್ಲಿ ಬಳ್ಳಾರಿ, ರಾಯಚೂರು, ಅನಂತಪುರ, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಗದಗ ಜಿಲ್ಲೆಯ ಭಾಗಗಳು ಸೇರಿದ್ದವು.[63] ಈ ಮನೆತನದ ಕಂಪಿಲದೇವ ಮತ್ತು ಅವನ ಮಗ ಕುಮಾರರಾಮನಾಥ ಮೂರುಬಾರಿ ದೆಹಲಿ ಸುಲ್ತಾನರ ಸೈನ್ಯವನ್ನು ಸೋಲಿಸಿದರು. ಕ್ರಿ.ಶ. ೧೩೨೦ರಲ್ಲಿ ಮೂರನೆ ಬಲ್ಲಾಳನು ದೊರವಡಿಯಲ್ಲಿ (ದರೋಜಿ) ಕಂಪಿಲದೇವನನ್ನು ಸೋಲಿಸಿ, ದೊರವಡಿ ಮತ್ತು ಕಂಪಿಲಿಗಳನ್ನು ವಶಪಡಿಸಿಕೊಂಡನು.[64] ಕ್ರಿ.ಶ. ೧೩೨೭ರಲ್ಲಿ ದೆಹಲಿ ಸುಲ್ತಾನರ ನಾಲ್ಕನೆಯ ದಾಳಿಯಲ್ಲಿ ಕುಮ್ಮಟ ರಾಜ್ಯ ನಾಶವಾಯಿತು. ಇದು ಮುಂದೆ ವಿಜಯನಗರ ಸ್ಥಾಪನೆಗೆ ಬುನಾದಿಯಾಯಿತು.

ವಿಜಯನಗರ ಸಾಮ್ರಾಜ್ಯದ ಸ್ಥಾಪಕರಾದ ಹರಿಹರ ಮತ್ತು ಬುಕ್ಕರು ಹೊಯ್ಸಳರ ಸಾಮಂತರಾಗಿ ಆನೆಗೊಂದಿಯಿಂದ ಈ ಪ್ರದೇಶವನ್ನಾಳಿದರು. ಉತ್ತರ ಮುಸ್ಲಿಂ ದಾಳಿಗಳನ್ನು ತಡೆಯಲೆಂಬ ಉದ್ದೇಶದಿಂದ ಮೂರನೆಯ ಬಲ್ಲಾಳನು ಹರಿಹರ ಸಹೋದರರಿಗೆ ಹೆಚ್ಚಿನ ಸ್ವಾತಂತ್ರ ಮತ್ತು ಪ್ರೋತ್ಸಾಹ ನೀಡಿದನು. ದಕ್ಷಿಣದ ಎಲ್ಲ ರಾಜ್ಯಗಳು ನಾಶಗೊಂಡಿದ್ದರಿಂದ ವಿಜಯನಗರವು ಹೆಚ್ಚಿನ ಮಹತ್ವ ಪಡೆದುಕೊಂಡಿತು. ಪ್ರಸ್ತುತ ಕುರುಗೋಡು ಹಂಪೆಯ ಪರಿಸರದಲ್ಲಿದ್ದು, ವಿಜಯನಗರವನ್ನಾಳಿದ ಸಂಗಮ ಮನೆತನದ ಮೂಲನೆಲೆ ಎಂದು ಇದೇ ಲೇಖಕ ಗುರುತಿಸುವ ಪ್ರಯತ್ನ ಮಾಡಿದ್ದಾನೆ.[65] ಸಂಗಮನು ಕಂಪಿಲನ ಅಳಿಯನಾಗಿದ್ದು, ಭಾವಸಂಗಮ ಎಂದು ಕುಮಾರರಾಮನ ಸಾಂಗತ್ಯಗಳಲ್ಲಿ ಉಲ್ಲೇಖಿತನಾಗಿದ್ದಾನೆ.[66] ಎಡತೊರೆಯ ಶಾಸನವೊಂದು “ಪಂಪಾಪುರೀ ಪರಿಸರೇ ಭವಸಂಗಮಾಖ್ಯಃ” ಎಂದಿದೆ.[67] ಅಂದರೆ ಭಾವಸಂಗಮ ಹಂಪೆಯ ಪ್ರದೇಶದವನು ಎಂದರ್ಥವಾಗುವುದು, ಹೀಗೆ ಸಾಂಗತ್ಯಗಳಲ್ಲಿ ಮತ್ತು ಶಾಸನಗಳಲ್ಲಿ ಉಲ್ಲೇಖಗೊಂಡಿರುವ ಭಾವಸಂಗಮ ಒಬ್ಬನೇ ಆಗಿದ್ದಾನೆ. ಇದನ್ನು ಬೆಂಬಲಿಸುವಂತೆ ಕೈಫಿಯತ್ತೊಂದರಲ್ಲಿ ಕುಮಾರರಾಮನಿಗೆ ಕಪ್ಪಕಾಣಿಕೆ ಸಲ್ಲಿಸುತ್ತಿದ್ದವರ ಪಟ್ಟಿಯಲ್ಲಿ ಕುರುಗೋಡು ಸಂಗಮನ ಪ್ರಸ್ತಾಪವಿದೆ.[68] ಇದರಿಂದ ಮೇಲೆ ಹೇಳಿದ ಭಾವಸಂಗಮ ಮತ್ತು ಕುರುಗೋಡು ಸಂಗಮ ಒಬ್ಬನೇ ಆಗಿರಬಹುದು. ಅಲ್ಲದೆ ಕುರುಗೋಡಿನಲ್ಲಿ ವಿಜಯನಗರ ಆರಂಭಕಾಲದ ಸಂಗಮೇಶ್ವರ ದೇವಾಲಯವಿದ್ದು, ಬಹುಶಃ ಇದನ್ನು ಸಂಗಮನು ನಿರ್ಮಿಸಿರಬೇಕು? ಈ ಕುರಿತು ಹೆಚ್ಚಿನ ಶೋಧನೆ ನಡೆಯಬೇಕಿದೆ.

ಕುರುಗೋಡಿನ ಸಂಗಮೇಶ್ವರ ದೇವಾಲಯಕ್ಕೆ ಕೃಷ್ಣದೇವರಾಯನು ಗ್ರಾಮವನ್ನು ದತ್ತಿ ನೀಡಿರುವುದು ಈ ನಿಟ್ಟಿನಲ್ಲಿ ಗಮನಾರ್ಹ ಸಂಗತಿ.[69] ಕ್ರಿ.ಶ. ೧೫೨೮ರಲ್ಲಿ ಬಾಗಿಲ ಕೃಷ್ಣರಾಯ ಎಂಬುವನು, ಕುರುಗೋಡಿನ ದೊಡ್ಡಬಸವಣ್ಣದೇವರ ಅಮೃತಪಡಿಗೆ ಭೂಮಿಯನ್ನು ದಾನ ನೀಡಿದ್ದಾನೆ.[70] ಅಖಂಡ ಬಂಡೆಗಳಲ್ಲಿ ಶಿಲ್ಪ ಬಿಡಿಸುವ ಕಲಾ ಸಂಪ್ರದಾಯ ಹಂಪೆಯಿಂದ ಸಮೀಪದ ಕುರುಗೋಡಿಗೂ ವ್ಯಾಪಿಸಿತು. ತತ್ಫಲವಾಗಿ ಅಲ್ಲಿನ ದೊಡ್ಡಬಸವೇಶ್ವರ ಶಿಲ್ಪ ರೂಪುಗೊಂಡಿತು. ಹಂಪೆಗೆ ಅಭಿಮುಖವಾಗಿರುವ ದೊಡ್ಡ ಬಸವೇಶ್ವರ ಶಿಲ್ಪದಿಂದಾಗಿ ಕುರುಗೋಡಿನವರೆಗೂ ಹಂಪೆಯ ವ್ಯಾಪ್ತಿ ವಿಸ್ತರಿಸಿತ್ತೆಂದು ಸ್ಥಳೀಯ ಜನಪದರ ನಂಬಿಕೆ. ಅಂದರೆ ಕುರುಗೋಡಿನಿಂದಲೇ ಪಂಪಾಕ್ಷೇತ್ರವು ಆರಂಭಗೊಳ್ಳುವುದೆಂದು ಹಾಗೂ ಈ ಬೃಹತ್ ನಂದಿ ಹಂಪೆಯ ವಿರೂಪಾಕ್ಷದೇವರಿಗೆ ಸಂಬಂಧಿಸಿದ್ದು, ಅಭಿಮುಖವಾಗಿದೆ ಎಂದು ಜನರು ನಂಬಿದ್ದಾರೆ. ಕ್ರಿ.ಶ. ೧೫೪೩ರ ಹಲುಗೋಡು ಶಾಸನದಲ್ಲಿ, ಕುರುಗೋಡಿನ ಸಂಗಮೇಶ್ವರ ದೇವರಿಗೆ ಹಿಂದೆ ಕೃಷ್ಣದೇವ ರಾಯನು ದಾನವಾಗಿ ನೀಡಿದ್ದ ಚೆನಕುಂಟೆ ಗ್ರಾಮದಾನವು ಖಿಲವಾಗಿದ್ದಾಗ ಸದಾಶಿವ ದೇವರಾಯರಿಗೆ ಪುಣ್ಯವಾಗಲೆಂದು ಅದನ್ನು ಪುನರ್‌ದತ್ತಿ ನೀಡಿದ ಉಲ್ಲೇಖವಿದೆ.[71] ವಿಜಯನಗರ ಕಾಲದಲ್ಲಿ ಕುರುಗೋಡನ್ನು ಸೀಮೆಯನ್ನಾಗಿ ಪರಿಗಣಿಸಲಾಗಿತ್ತು.

ವಿಜಯನಗರದ ಪತನಾನಂತರ ಈ ಪ್ರದೇಶ ಬಿಜಾಪುರದ ಅದಿಲ್‌ಶಾಹಿಗಳ ವಶವಾಯಿತು. ಅನೇಕ ಪಾಳೆಯಪಟ್ಟುಗಳಲ್ಲಿ ಈ ಪ್ರದೇಶ ಹಂಚಿಹೋದರೂ ಅರವೀಡು ಸಂತತಿಯವರು ಕೆಲಕಾಲ ಹಿಡಿತ ಹೊಂದಿದ್ದರು. ಇದನ್ನು ಅವರು ನೀಡಿದ ದಾನಶಾಸನಗಳಿಂದ ಗ್ರಹಿಸಬಹುದು. ಮುಖ್ಯವಾಗಿ ಬಳ್ಳಾರಿ-ಕುರುಗೋಡು ಪ್ರದೇಶವು ಹಂಡೆ ಪಾಳೆಯಗಾರರ ಆಳ್ವಿಕೆಗೆ ಒಳಗಾಯಿತು. ಈ ವಂಶದ ಬಾಲದ ಹನುಮಪ್ಪ ನಾಯಕ ಮೊದಲಿಗೆ ಬಿಜಾಪುರದ ಸುಲ್ತಾನನ ಬಳಿ ಸರದಾರನಾಗಿದ್ದನೆಂದು, ನಂತರ ಕ್ರಿ.ಶ. ೧೫೮೮ರ ಸುಮಾರಿಗೆ ಬಂಕಾಪುರದ ಜಹಗೀರನ್ನು ನೀಡಿ ದಕ್ಷಿಣದ ರಾಜ್ಯವಿಸ್ತರಣೆಗೆ ಕಳುಹಿಸಿಲಾಯಿತೆಂದು ಕೈಫಿಯತ್ತು ಉಲ್ಲೇಖಿಸಿದೆ.[72] ಹಂಡೆ ಪಾಳೆಯಗಾರರು ಅನಂತಪುರದಿಂದ ಆಳ್ವಿಕೆ ಆರಂಭಿಸಿ, ಬಳ್ಳಾರಿ ಪ್ರದೇಶಕ್ಕೆ ವಿಸ್ತರಿಸಿದರು ಎನ್ನಲಾಗಿದೆ.[73] ಸಿರಗುಪ್ಪ ತಾಲ್ಲೂಕಿನ ಎಸ್.ಮಣೂರು ಶಾಸನದಲ್ಲಿ ಹಂಡೆ ಹನುಮಿನಾಯಕ ಅಂಕುಸರಾಯನು ಪೆನುಗೊಂಡೆಯ ವೆಂಕಟಪತಿ ದೇವರಾಯನ ಸಾಮಂತನಾಗಿದ್ದು, ಈತನಿಗೆ ರಾಮಪ್ಪ ಎಂಬ ಮಗನಿದ್ದನೆಂದು ತಿಳಿಸುವುದು.[74] ಹೀಗೆ ಇವರ ಮೂಲವನ್ನು ಕುರಿತಂತೆ, ವಿವಿಧ ಅಭಿಪ್ರಾಯಗಳಿವೆ.

ಹಂಡೆ ಮನೆತನದ ಆಳ್ವಿಕೆ ಕುರಿತಂತೆ ಕುರುಗೋಡು ಕೈಫಿಯತ್ತು ಹೆಚ್ಚಿನ ಮಾಹಿತಿ ನೀಡುತ್ತದೆ. ಬಾಲದ ಹನುಮಪ್ಪನಾಯಕನಿಗೆ ಐದುಜನ ಮಕ್ಕಳಿದ್ದು, ಅವರಲ್ಲಿ ಎರಡನೆಯ ಮಗ ದ್ಯಾಮಣ್ಣ ಎಂಬುವನು ಬಳ್ಳಾರಿ, ಕುರುಗೋಡು ಸೀಮೆಯನ್ನು ಆಳಿದನು.[75] ದ್ಯಾಮಣ್ಣನ ನಂತರ ಮಗನಾದ ರಾಮಪ್ಪನಾಯಕ ಕುರುಗೋಡಿನಲ್ಲಿ ಆಳ್ವಿಕೆ ನಡೆಸಿದನೆಂದಿದೆ. ಈ ನಡುವೆ ಕುರುಗೋಡು ಇವರ ಕೈತಪ್ಪಿ ದೊಡ್ಡಯಲ್ಲಪ್ಪನಾಯಕ ಎಂಬುವವನ ಕೈಸೇರುತ್ತದೆ. ಕ್ರಿ.ಶ. ೧೬೭೭-೭೮ರಲ್ಲಿ ಈ ಪ್ರದೇಶ ಮರಾಠರ ವಶವಾಯಿತು. ಪಾಳೆಯಗಾರರು ಚೌತ ಎಂಬ ಕಪ್ಪಕಾಣಿಕೆಯನ್ನು ಸಲ್ಲಿಸುತ್ತಿದ್ದರು. ಕುರುಗೋಡು ಆದವಾನಿ ಸುಭಾಕ್ಕೆ ಸೇರಿತ್ತು. ಕ್ರಿ.ಶ. ೧೬೯೮ರ ಸುಮಾರಿಗೆ ಕುರುಗೋಡು ಪುನಃ ಹಂಡೆ ವಂಶದವರ ಆಳ್ವಿಕೆ ಒಳಗಾಯಿತು. ಈ ವಂಶದ ಚಿಕ್ಕನಾಯಕನ ಮಗ ದ್ಯಾವಪ್ಪನಾಯಕ ಎಂಬುವನು ಬಳ್ಳಾರಿ, ಕುರುಗೋಡು ಮತ್ತು ತೆಕ್ಕಲಕೋಟೆಗಳನ್ನು ಆಳುತ್ತಾನೆ. ಇವನು ಕುರುಗೋಡಿನ ಯರ್ರ‍ಗುಡ್ಡದ (ಹನುಮಂತನ ಗುಡ್ಡ) ಮೇಲೆ ಕ್ರಿ.ಶ. ೧೭೦೨ರಲ್ಲಿ ಕೋಟೆ ಕಟ್ಟಿಸುತ್ತಾನೆ. ಈ ನಡುವೆ ನಾಡಕುಲಕರ್ಣಿ ತಿಮ್ಮಪ್ಪ ಎಂಬುವನು ಗುಡೇಕೋಟೆಯವರೊಡನೆ ಷಾಮೀಲಾಗಿ ಕುರುಗೋಡನ್ನು ಲೂಟಿ ಮಾಡಿಸಿದ. ಅನಂತರ ದೇಸಾಯಿ ವೆಂಕಪ್ಪ ಎಂಬುವನು ಸಹ ಗುಡೇಕೋಟೆಯವರ ಸಹಾಯದಿಂದ ಕುರುಗೋಡನ್ನು ಹಿಡಿಯುತ್ತಾನೆ. ಹೀಗೆ ಈ ಪ್ರದೇಶದಲ್ಲಿ ನಾಡಕುಲಕರ್ಣಿ, ಸರದೇಸಾಯಿ ಮತ್ತು ಸರನಾಡಗೌಡರು ಕ್ಷೋಭೆಯನ್ನು ಉಂಟುಮಾಡಿ ಅರಾಜಕತೆಯನ್ನು ಸೃಷ್ಟಿಸುತ್ತಿದ್ದರೆಂದು ತಿಳಿದುಬರುತ್ತದೆ. ಇಂತಹ ಸಂಗತಿಗಳು ಕೈಫಿಯತ್ತಿನಲ್ಲಿ ಹೇರಳವಾಗಿವೆ. ಈ ಒಳಶತ್ರುಗಳಿಂದಾಗಿ ಹಮಡೆ ಪಾಳೆಯಗಾರರು ಗುಡೇಕೋಟೆ ಮತ್ತು ಆನೆಗೊಂದಿ ಸಂಸ್ಥಾನಿಕರೊಂದಿಗೆ ಆಗಾಗ್ಗೆ ಯುದ್ಧ ಮಾಡಬೇಕಾಗಿತ್ತು. ಬಳ್ಳಾರಿಯಿಂದ ಸೈನ್ಯಸಮೇತನಾಗಿ ಬಂದ ದ್ಯಾವಪ್ಪನಾಯಕ ಕುರುಗೋಡನ್ನು ತನ್ನ ವಶಕ್ಕೆ ತೆಗೆದುಕೊಳ್ಳುತ್ತಾನೆ. ಯರ್ರ‍ಗುಡ್ಡದ ಕೆಳಗಿರುವ ಈಗಿನ ಕುರುಗೋಡು ಪಟ್ಟಣವನ್ನು ಮತ್ತು ಪೇಟೆಯನ್ನು ನಿರ್ಮಿಸುತ್ತಾನೆ.[76] ಇವನು ಕ್ರಿ.ಶ. ೧೭೦೩ರಲ್ಲಿ ತೀರಿಕೊಂಡನು. ಈತನ ಮೊದಲ ಹೆಂಡತಿ ಪದ್ಮಮ್ಮನಿಗೆ ಹಿರೇರಾಮಪ್ಪನಾಯಕ, ಹನುಮಪ್ಪನಾಯಕ ಮತ್ತು ಚಿಕ್ಕರಾಮಪ್ಪನಾಯಕ ಎಂಬ ಮೂರು ಮಕ್ಕಳಿದ್ದರು. ಎರಡನೆಯ ಹೆಂಡತಿ ನೀಲಮ್ಮನಿಗೆ ಮಕ್ಕಳಿರಲಿಲ್ಲ. ಇವರಲ್ಲಿ ಹನುಮಪ್ಪ ನಾಯಕ ಕುರುಗೋಡು ಸೀಮೆಯನ್ನು ಆಳಿದನು. ಇವರು ಮೊಗಲರಿಗೆ ಮತ್ತು ಮರಾಠರಿಗೆ ಕಪ್ಪಕಾಣಿಕೆ ಸಲ್ಲಿಸಿದರು. ಇವರಿಗೆ ಮಕ್ಕಳಿರಲಿಲ್ಲ. ಹಾಗಾಗಿ ದ್ಯಾವಪ್ಪನಾಯಕನ ಚಿಕ್ಕಹೆಂಡತಿ ನೀಲಮ್ಮ ನಂದ್ಯಾಲ ಹಂಡೆ ವಂಶದ ರಾಮಪ್ಪನಾಯಕನನ್ನು ಅಧಿಕಾರಕ್ಕೆ ತಂದಳು. ಇವಳು, ತನ್ನ ಹಿಡಿತಕ್ಕಾಗಿ ರಾಮಪ್ಪನಾಯಕನ ತಂದೆ ಸಿದ್ದಪ್ಪನಾಯಕ ಮತ್ತು ಚಿಕ್ಕಪ್ಪ ಪ್ರಸನ್ನನಾಯಕರ ಶಿರಚ್ಛೇದ ಮಾಡಿಸಿದಳು. ನೀಲಮ್ಮನ ದುರ್ವರ್ತನೆಯಿಂದ ಬೇಸತ್ತ ಸಂಬಂಧಿಕರು ಬಳ್ಳಾರಿಯಲ್ಲಿ ಅವಳ ಶಿರಚ್ಛೇದ ಮಾಡಿದರು. ಇವೆಲ್ಲ ಮಾಹಿತಿಗಳು ಕೈಫಿಯತ್ತಿನ ಹೇಳಿಕೆಗಳಾದರೂ, ಘಟನೆ ನಡೆದ ಕಾಲ ಸಮೀಪವಾಗಿರುವುದರಿಂದ ನಂಗಲರ್ಹವಾಗಿವೆ. ಹಂಡೆ ವಂಶದವರು ಈ ಭಾಗದ ಮಠ ಮಾನ್ಯಗಳಿಗೆ ದಾನದತ್ತಿಗಳನ್ನು ನೀಡಿದ್ದಾರೆ.[77] ಇವು ಅವರ ಔದಾರ್ಯವನ್ನು ಪ್ರಕಟ ಮಾಡುತ್ತವೆ.

ಕ್ರಿ.ಶ. ೧೭೬೮ರಲ್ಲಿ ಈ ಪ್ರದೇಶ ಹೈದರಾಲಿಯ ವಶವಾಯಿತು.[78] ಇವನ ಕಾಲದಲ್ಲಿ ಕುರುಗೋಡಿನ ಗುಡ್ಡದ ಮೇಲೆ ಹನುಮಂತನ ದೇವಾಲಯ ನಿರ್ಮಾಣಗೊಂಡಿತು.[79] ಭಕ್ಷಿ ಎಂಬುವನು ಬಳ್ಳಾರಿಯ ಸುಭೇದಾರನಾಗಿ ನೇಮಕಗೊಂಡನು. ಟಿಪ್ಪುವಿನ ಕಾಲದಲ್ಲಿ ಈ ಭಾಗಕ್ಕೆ ಸಿದ್ದಿಮೊಹಿದಿನ್‌ಖಾನ್ ಎಂಬುವನು ಸುಭೇದಾರನಾದನು. ಕ್ರಿ.ಶ. ೧೭೯೯ರಲ್ಲಿ ಶ್ರೀರಂಗಪಟ್ಟಣದ ಪತನವಾದ ನಂತರ ಈ ಭಾಗ ಹೈದರಾಬಾದಿನ ನಿಜಾಮನಿಗೆ ಸೇರಿತು. ಆದರೆ ನಿಜಾಮನು ಸ್ವಹಿತದೃಷ್ಟಿಯಿಂದ ಕ್ರಿ.ಶ. ೧೮೦೦ರಲ್ಲಿ ಬಳ್ಳಾರಿ ಪ್ರದೇಶವನ್ನು ದತ್ತ ಜಿಲ್ಲೆಯಾಗಿ ಬ್ರಿಟಿಷರಿಗೆ ನೀಡಿದನು. ಆಗ ಬಳ್ಳಾರಿ, ಮದ್ರಾಸ್ ಸಂಸ್ಥಾನದಲ್ಲಿ ಸೇರಿತು.

ಈ ಭಾಗದ ಮೊದಲ ಕಲೆಕ್ಟರ್ ಆಗಿ ಸರ್ ಥಾಮಸ್‌ ಮನ್ರೊ ಎಂಬುವನು ನೇಮಕಗೊಂಡನು. ಇವನು ಪರಿಣಾಮಕಾರಿಯಾದ ಕ್ರಮಗಳನ್ನು ಕೈಗೊಂಡು, ಆಡಳಿತದಲ್ಲಿ ಅನೇಕ ಸುಧಾರಣೆಗಳನ್ನು ಮಾಡಿದನು. ಈ ಪ್ರದೇಶದಲ್ಲಿ ಬೇರೂರಿದ್ದ ಪುಂಡಾಟಿಕೆಯನ್ನು ಬಗ್ಗು ಬಡಿದನು. ಇದರಿಂದ ಈಸ್ಟ್ ಇಂಡಿಯ ಕಂಪನಿಯ ಟೀಕೆಗೂ ಒಳಗಾದನು. ಇದಕ್ಕೆ ೧೮೦೫ರಲ್ಲಿ ದೀರ್ಘವಾದ ಉತ್ತರವನ್ನು ನೀಡಿ, ತನ್ನ ಕ್ರಮಗಳನ್ನು ಸಮರ್ಥಿಸಿಕೊಂಡನು. ಅದೇನೆಂದರೆ, ಪಾಳೆಯಗಾರನ ಪ್ರಾಚೀನ ಹಕ್ಕುಗಳಾಗಲಿ ಅಥವಾ ಅವರು ತೋರಿದ ನಡತೆಯಾಗಲಿ ಮೃದು ಕ್ರಮಕೈಗೊಳ್ಳಲು ಅರ್ಹತೆ ಹೊಂದಿರಲಿಲ್ಲವೆಂದು, ಅವರ ಚರಿತ್ರೆ ಮತ್ತು ನಡತೆಗಳು ಹಿಂಸೆ, ಅಪರಾದ ಮತ್ತು ದಬ್ಬಾಳಿಕೆಗಳಿಂದ ಕೂಡಿದ್ದು, ನ್ಯಾಯವಾದ ಸರ್ಕಾರವನ್ನು ದಿಕ್ಕರಿಸುವಂತೆ ಇದ್ದವೆಂದು ಬರೆದಿದ್ದಾನೆ.[80] ಈ ವೇಳೆಗೆ ಬಳ್ಳಾರಿ ಜಿಲ್ಲೆಯಲ್ಲಿ ೨೩ ಪಾಳೆಯಗಾರ ಮನೆತನಗಳಿದ್ದವು. ಸ್ವಾತಂತ್ಯ್ರದವರೆಗೆ ಒಟ್ಟು ೧೧೨ ಕಲೆಕ್ಟರ್‌ಗಳು ಆಡಳಿತ ನಡೆಸಿದ್ದಾರೆ. ಇವರಲ್ಲಿ ಮನ್ರೋ, ಹ್ಯಾಥ್‌ವೇ, ಸಿವೆಲ್ ಮತ್ತು ಮೆಕಾರ್ಡಿ ಪ್ರಮುಖರಾಗಿದ್ದಾರೆ. ಕಂದಾಯ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಯಿತು. ರೈತರಿಗೆ ಪಟ್ಟಾವನ್ನು ನೀಡಿ, ಕಂದಾಯವನ್ನು ನಿಗದಿಗೊಳಿಸಿದರು, ವ್ಯವಸ್ಥಿತವಾದ ಭೂಮಾಪನ ಕಾರೃಗಳು ನಡೆದವು.

ಸ್ವಾತಂತ್ರ ಹೋರಾಟಕ್ಕೆ ಕುರುಗೋಡು ತನ್ನದೇ ಆದ ಕಾಣಿಕೆ ನೀಡಿದೆ. ಬಾದನಹಟ್ಟಿ ವೆಂಕೋಬರಾವ್ ಎಂಬುವರು ಈ ಭಾಗದಲ್ಲಿ ಸ್ವಾತಂತ್ರ ಹೋರಾಟದ ಮುಂಚೂಣಿಯಲ್ಲಿದ್ದರು. ಇವರು ರಾಜಾಜಿಯವರ ಜೊತೆ ಬಳ್ಳಾರಿ ಜೈಲಿನಲ್ಲಿದ್ದರು. ಇವರ ಮಗ ಬಿ.ವಿ. ಶೇಷಗಿರಿರಾವ್, ಮಗಳು ತುಂಗಮ್ಮ ಅವರುಗಳ ಸಹ ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಿದರು. ಇಡೀ ಕುಟುಂಬವೇ ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡಿತು. ಇವರಲ್ಲದೆ ಸರನಾಡಗೌಡ ದೊಡ್ಡನಗೌಡ, ಕೆ.ರಾಮಚಂದ್ರಗುಪ್ತ, ಅಕ್ಕಸಾಲಿ ಚಂದ್ರ ಶೇಖರಪ್ಪ ಮುಂತಾದವರು ಈ ಭಾಗದ ಪ್ರಮುಖ ಸ್ವಾತಂತ್ರ ಹೋರಾಟಗಾರರಾಗಿದ್ದರು. ಈ ಸಂದರ್ಭದಲ್ಲಿ ಜೆ.ಬಿ.ಕೃಪಲಾನಿಯವರು ಕುರುಗೋಡಿಗೆ ಭೇಟಿ ನೀಡಿದ್ದರು. ಸ್ವಾತಂತ್ರ ನಂತರ ಬಳ್ಳಾರಿ ಪ್ರದೇಶವು ಮದ್ರಾಸ್ ಸಂಸ್ಥಾನದಲ್ಲೆ ಮುಂದುವರೆಯಿತು. ಆಗ ಕಂದಾಯ ಕಟ್ಟುವವರಿಗೆ ಮಾತ್ರ ಮತದಾನ ಮಾಡುವ ಹಕ್ಕಿದ್ದು, ಅದರ ಪ್ರಕಾರ ಕುರುಗೋಡಿನ ತಂಗಿ ಮಲ್ಲೇಶಪ್ಪನವರು ಮದ್ರಾಸ್ ಸಂಸ್ಥಾನಕ್ಕೆ ಎಂ.ಎಲ್.ಸಿ ಆಗಿ ನಾಮನಿರ್ದೇಶನಗೊಂಡರು. ಕರ್ನಾಟಕ ಏಕೀಕರಣ ಚಳುವಳಿಯಲ್ಲೂ ಕುರುಗೋಡಿನ ಜನರು ಅಪಾರವಾಗಿ ಶ್ರಮಿಸಿದ್ದಾರೆ. ಕುರುಗೋಡು, ಬಾದನಹಟ್ಟಿ, ಗೆಣಕಿಹಾಳ ಗ್ರಾಮಗಳ ೬೬ ಜನರು, ಅಳವಂಡಿ ಶಿವಮೂರ್ತಿ ಸ್ವಾಮಿಯವರ ನೇತೃತ್ವದಲ್ಲಿ ಅಖಂಡ ಕರ್ನಾಟಕ ನಿರ್ಮಾಣದ ಪರಿಷತ್ತಿನ ಆಶ್ರಯದಲ್ಲಿ ಸತ್ಯಾಗ್ರಹ ನಡೆಸಿದರು. ಈ ಸಂಬಂಧವಾಗಿ ದಿನಾಂಕ ೨೧.೧೧.೧೯೫೫ರಲ್ಲಿ ಸತ್ಯಾಗ್ರಹಿಗಳನ್ನು ಬಂಧಿಸಿ ಬಳ್ಳಾರಿ ಜೈಲಿಗೆ ಕಳುಹಿಸಲಾಯಿತು. ಅಮರಗೌಡರು ಮತ್ತು ತಂಗಿ ಸೋಮಶೇಖರಪ್ಪನವರು ಕುರುಗೋಡಿನ ತಂಡದ ಮುಖ್ಯಸ್ಥರಾಗಿದ್ದರು.[81]

ಪ್ರಸ್ತುತ ಕುರುಗೋಡು ವಿಧಾನಸಭಾ ಕ್ಷೇತ್ರವಾಗಿದ್ದು, ಪ್ರತ್ಯೇಕ ತಾಲ್ಲೂಕು ಕೇಂದ್ರವಾಗುವ ಎಲ್ಲಾ ಅರ್ಹತೆಗಳನ್ನು ಪಡೆದುಕೊಂಡಿದೆ. ಈ ಸಂಬಂಧವಾಗಿ ಸಾರ್ವಜನಿಕರು ಮೊದಲುಗೊಂಡು ವಿವಿಧ ಸಂಘಟನೆಗಳು ಹೋರಾಟ ನಡೆಸಿವೆ. ತಾಲ್ಲೂಕು ರಚನೆಗೆ ಸರ್ಕಾರ ಒಪ್ಪಿದೆ. ಕುರುಗೋಡು ಪಟ್ಟಣ ಕೈಮಗ್ಗದ ಬಟ್ಟೆಗಳಿಗೆ ಪ್ರಸಿದ್ಧಿ. ಪ್ರಮುಖ ವ್ಯಾಪಾರ ಕೇಂದ್ರವಾಗಿದ್ದು, ದೂರದ ಊರುಗಳೊಂದಿಗೆ ಸಂಪರ್ಕವನ್ನು ಹೊಂದಿದೆ. ಈ ಪ್ರದೇಶದಲ್ಲಿ ಕಡಲೆ, ತೊಗರಿ, ಹೆಸರು, ಉದ್ದು, ಅಲಸಂದಿ. ಮೇಣಸಿನಕಾಯಿ, ಧನಿಯ, ನವಣೆ, ಸಜ್ಜೆ, ಜೋಳ, ರಾಗಿ, ಭತ್ತ. ಕಬ್ಬು, ಕುಸುಬಿ, ಗುರೆಳ್ಳು, ಎಳ್ಳು, ಹರಳು, ಶೆಂಗಾ ಮುಂತಾದ ಬೆಳೆಗಳನ್ನು ಬೆಳೆಯುತ್ತಾರೆ. ಇತ್ತೀಚೆಗೆ ತರಕಾರಿ, ಹಣ್ಣು ಮತ್ತಿತರ ತೋಟದ ಬೆಳೆಗಳನ್ನು ಸಹ ವಿಪುಲವಾಗಿ ಬೆಳೆಯಲಾಗುತ್ತಿದೆ. ಕುರುಗೋಡು ಪಟ್ಟಣ ಧಾರ್ಮಿಕ ಸಾಮರಸ್ಯಕ್ಕೆ ಹೆಸರಾಗಿದ್ದು. ಹಿಂದು-ಮುಸ್ಲಿಮರು ಸೋದರರಂತೆ ಸಹಬಾಳ್ವೆ ನಡೆಸುತ್ತಿದ್ದಾರೆ. ಅದೇ ರೀತಿ ಕನ್ನಡ -ತೆಲುಗು ಭಾಷಿಕರು ಭಾಷಾಸೌಹಾರ್ದತೆಗೆ ಹೆಸರಾಗಿದ್ದಾರೆ. ಈ ಎಲ್ಲ ಗುಣಗಳು ಕುರುಗೋಡಿನ ಜನಸಂಸ್ಕೃತಿಯ ಅಳತೆಗೋಲುಗಳಾಗಿವೆ. ಹೀಗೆ ಕುರುಗೋಡು ಶತಮಾನಗಳುದ್ದಕ್ಕೂ ಚರಿತ್ರೆಯಲ್ಲಿ ತನ್ನ ಗುರುತನ್ನು ಮೂಡಿಸಿಕೊಂಡು ಬಂದಿದೆ. ಇಂತಹ ಸಾಂಸ್ಕೃತಿಕ ನೆಲೆಗಳು ವಿರಳ. ಇಲ್ಲಿನ ಸ್ಮಾರಕಗಳನ್ನು ಸಂರಕ್ಷಿಸಿ, ಪ್ರವಾಸಿ ತಾಣವನ್ನಾಗಿ ಮಾಡಬೇಕು. ದೊಡ್ಡ ದೊಡ್ಡ ಪ್ರವಾಸಿ ಕೇಂದ್ರಗಳ ಅಬ್ಬರದಿಂದಾಗಿ ಕುರುಗೋಡಿನಂತಹ ಪ್ರಾಚೀನ ನೆಲೆಗಳು ಅಜ್ಞಾತ ಸ್ಥಿತಿಯಲ್ಲಿವೆ. ಅವು ಬೆಳಕಿಗೆ ಬರಲೆಂಬುದೇ ಪ್ರಸ್ತುತ ಲೇಖನದ ಆಶಯ.

ಸಿಂದರ ವಂಶಾವಳಿ[82]

24_290_KRGD-KUH

 

[1] ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ-೧, ಬಳ್ಳಾರಿ ಜಿಲ್ಲೆ, ಬಳ್ಳಾರಿ ೩

[2] ಬೆನಗಲ್ ರಾಮರಾವ್ ಮತ್ತು ವಾನ್ಯಂ ಸುಂದರಶಾಸ್ತ್ರಿ (ಸಂ) ೧೯೪೧, ಪುರಾಣನಾಮ ಚೂಡಾಮಣಿ, ಮೈಸೂರು ವಿಶ್ವವಿದ್ಯಾನಿಲಯ, ಪು.೧೧೬. ಈ ಮಾಹಿತಿಯನ್ನು ಕುರುಗೋಡಿನ ಶ್ರೀ ತಿಪ್ಪೆರುದ್ರಗೌಡ ಅವರು ಒದಗಿಸಿದ್ದಾರೆ.

[3] ಎಪಿಗ್ರಾಫಿಯಾ ಕರ್ನಾಟಿಕ, ಸಂಪುಟ ೭-೮, ಶಿವಮೊಗ್ಗ ಜಿಲ್ಲೆ, ಶಿಕಾರಿಪುರ ೨೨೫

[4] ರಾಜಶೇಖರ ಎಸ್., ೧೯೭೬ : ಪೆಯಿಂಟೆಡ್ ಇನ್‌ಸ್ಕ್ರಿಪ್ಷನ್ಸ್ ಅಟ್ ಕುರುಗೋಡು, ಸಮ್ಮರಿಸ್ ಆಫ್ ಪೇಪರ್ಸ್‌, ಆಲ್ ಇಂಡಿಯಾ ಓರಿಯಂಟಲ್ ಕಾನ್ಫೆರೆನ್ಸ್, 28 ಸೆಷನ್, ಕರ್ನಾಟಕ ಯುನಿವರ್ಸಿಟಿ, ಧಾರವಾಡ, xvi-೧೦, ಪು. ೨೨೨.

ಇದೇ ಲೇಖಕರು, ೧೭.೩.೦೩ರಂದು ನಡೆದ ಕುರುಗೋಡು ವಿಚಾರ ಸಂಕಿರಣದ ಅಧ್ಯಕ್ಷೀಯ ಭಾಷಣದಲ್ಲಿ ಈ ಶಾಸನದ ಕಾಲವನ್ನು ಕ್ರಿ.ಪೂ. ೩ನೆಯ ಶತಮಾನ ಎಂದಿದ್ದಾರೆ.

[5] ಸುಂದರ ಅ., ೧೯೯೭ : ಕರ್ನಾಟಕ ಚರಿತ್ರೆ ಸಂಪುಟ-೧, ಕನ್ನಡ ವಿಶ್ವವಿದ್ಯಾಲಯ, ಹಂಪಿ ಪು.೪೭೩

[6] ಮಹದೇವ ಸಿ., ಮತ್ತು ಇತರರು, ೨೦೦೨; ಹೊಸಪೇಟೆ ತಾಲ್ಲೂಕು ದರ್ಶನ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಪು. ೧೪

[7] ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ-೧, ಬಳ್ಳಾರಿ ಜಿಲ್ಲೆ, ಹಡಗಲಿ ೩೭.

[8] ಅದೇ ಪು. xviii

[9] ಬಳ್ಳಾಇ ಡಿಸ್ಪ್ರಿಕ್ಟ್ ಗ್ಯಾಸೆಟಿಯರ್, ಪು.೫೧ : ಗ್ಯಾಸೆಟಿಯರ್ ಆಫ್ ಇಂಡಿಯಾ ೧೯೭೨ : ಮೈಸೂರು ಸ್ಟೇಟ್, ಬಳ್ಳಾರಿ ಡಿಸ್ಪ್ರಿಕ್ಟ್, ಪು.೬೯೬

[10] ರಾಜಶೇಖರ್ ಎಸ್., ೧೯೭೬ : ಪೂರ್ವೋಕ್ತ

[11] ಕನ್ನಡ ವಿಶ್ವವಿದ್ಯಾಲಯ ಶಾಸನ ಸಂ-೧, ಬಳ್ಳಾರಿ ಜಿಲ್ಲೆ, ಬಳ್ಳಾರಿ ೧೨

[12] ಅದೇ ಪು. xviii

[13] ರಾಜಶೇಖರ್ ಎಸ್., ೧೯೭೬ : ಪೂರ್ವೋಕ್ತ

[14] ಕನ್ನಡ ವಿಶ್ವವಿದ್ಯಾಲಯ ಶಾಸನ ಸಂ-೧, ಬಳ್ಳಾರಿ ಜಿಲ್ಲೆ, ಬಳ್ಳಾರಿ ೧೨.

[15] ಅದೇ.ಬಳ್ಳಾರಿ ೩೯

[16] ಅದೇ, ಬಳ್ಳಾರಿ ೫೪; ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಡಾ.ವಾಸುದೇವ ಬಡಿಗೇರ ಅವರ “ಸೊಂಡೂರು ಪರಿಸರದ ಕಾರ್ತಿಕೇಯ ತಪೋವನ” ಕೃತಿಯನ್ನು ನೋಡಿ

[17] ಅದೇ, ಬಳ್ಳಾರಿ ೩೨

[18] ಅದೇ, ಸಿರಗುಪ್ಪ ೫೯

[19] ಅದೇ, ಹರಪನಹಳ್ಳಿ ೫೨

[20] ಅದೇ, ಪುಟ xx-xxi

[21] ಅದೇ, ಪುಟ xxii

[22] ಅದೇ, ಸಿರಗುಪ್ಪ ೧

[23] ಅದೇ, ಹರಪನಹಳ್ಳಿ ೫೦

[24] ಮಹದೇವ ಸಿ. ಮತ್ತು ಇತರರು, ೨೦೦೨ ; ಪೂರ್ವೋಕ್ತ, ಪು ೧೯

[25] ಕನ್ನಡ ವಿಶ್ವವಿದ್ಯಾಲಯ ಶಾಸನ ಸಂ-೧, ಬಳ್ಳಾರಿ ಜಿಲ್ಲೆ, ಸಿರಗುಪ್ಪ ೫೬

[26] ಅದೇ, ಬಳ್ಳಾರಿ ೭

[27] ಅದೇ, ಬಳ್ಳಾರಿ ೮

[28] ಅದೇ, ಬಳ್ಳಾರಿ ೧೮

[29] ಅದೇ, ಪು. xxv

[30] ಅದೇ. ಸಿರಗುಪ್ಪ ೨೯

[31] ಅದೇ, ಪು. xxv; ಸಿರಗುಪ್ಪ ೩೦

[32] ಅದೇ, ಬಳ್ಳಾರಿ ೪೫

[33] ಅದೇ, ಪು. xxvi

[34] ಗೋಪಾಲ ಬಾ.ರಾ., ಮೈನರ್ ಡೈನಾಸ್ಟೀಸ್ ಆಫ್ ಕರ್ನಾಟಕ, ಪು ೯೧

[35] ಮಜುಂದಾರ್ ಆರ್.ಸಿ (ಸಂ) : ದಿ ಸ್ಟ್ರಗಲ್ ಫಾರ್ ಎಂಪೈರ್, ಭಾರತೀಯ ವಿದ್ಯಾಭವನ

[36] ಚನ್ನಬಸಯ್ಯ ಹಿರೇಮಠ, ೧೯೯೫ : ಕುರುಗೋಡು ಸಿಂದರು – ಒಂದು ಅಧ್ಯಯನ, ಅಗಡಿ ಸಂಸ್ಕೃತಿ ಪ್ರತಿಷ್ಠಾನ, ಕೊಪ್ಪಳ, ಪು. ೧೩-೧೪

[37] ಅದೇ, ಪು.೧೬

[38] ಅದೇ, ಪು. ೭೦

[39] ಕನ್ನಡ ವಿಶ್ವವಿದ್ಯಾಲಯ ಶಾಸನ ಸಂ೧, ಬಳ್ಳಾರಿ ಜಿಲ್ಲೆ, ಪು xxviii

[40] ಅದೇ ಬಳ್ಳಾರಿ ೩೯

[41] ಚನ್ನಬಸಯ್ಯ ಹಿರೇಮಠ, ಪೂರ್ವೋಕ್ತ ಪು. ೭೧

[42] ಕನ್ನಡ ವಿಶ್ವವಿದ್ಯಾಲಯ ಶಾಸನ ಸಂ-೧, ಬಳ್ಳಾರಿ ಜಿಲ್ಲೆ, ಬಳ್ಳಾರಿ ೪೫

[43] ಅದೇ ಹಗರಿಬೊಮ್ಮನಹಳ್ಳಿ ೪೧

[44] ಅದೇ ಸಿರಗುಪ್ಪ ೧

[45] ಅದೇ ಸಿರಗುಪ್ಪ ೪೧

[46] ಅದೇ ಸಿರಗುಪ್ಪ ೪೨

[47] ಅದೇ, ಬಳ್ಳಾರಿ ೬೧, ಸಿರಗುಪ್ಪ ೪೦

[48] ಅದೇ, ಬಳ್ಳಾರಿ ೪೦

[49] ಚನ್ನಬಸಯ್ಯ ಹಿರೇಮಠ, ಪೂರ್ವೋಕ್ತ, ಪು. ೭೪

[50] ಅದೇ

[51] ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ – ೧, ಬಳ್ಳಾರಿ ಜಿಲ್ಲೆ, ಬಳ್ಳಾರಿ ೧೮

[52] ಅದೇ, ಬಳ್ಳಾರಿ ೭-೮

[53] ಅದೇ, ಬಳ್ಳಾರಿ ೧೮

[54] ಸುರೇಂದ್ರರಾವ್ ಬಿ. (ಸಂ). ೧೯೯೭ : ಕರ್ನಾಟಕ ಚರಿತ್ರೆ ಸಂ-೨, ಕನ್ನಡ ವಿಶ್ವವಿದ್ಯಾಲಯ ಪು. ೮ ೩

[55] ಮಹದೇವ ಸಿ ಮತ್ತು ಇತರರು, ೨೦೦೨ : ಪೂರ್ವೋಕ್ತ, ಪು.೨೦

[56] ಕನ್ನಡ ವಿಶ್ವವಿದ್ಯಾಲಯ ಶಾಸನ ಸಂ-೧, ಬಳ್ಳಾರಿ ಜಿಲ್ಲೆ, ಬಳ್ಳಾರಿ ಪು. xxix

[57] ಅದೇ, ಬಳ್ಳಾರಿ ೧೯

[58] ಅದೇ, ಪು xxxi

[59] ಅದೇ, ಹಡಗಲಿ ೬೭

[60] ವೆಲ್‌ಕಮ್ ಬಳ್ಳಾರಿ; ೧೯೫೧-೫೨, ಸ್ಮರಣಸಂಚಿಕೆ ೧೯೫೩, ಪೂರ್ಣಿಮ ಅಡ್ವರ್ಟೈಸಿಂಗ್, ಅವೆನ್ಯೂರಸ್ತೆ, ಬೆಂಗಳೂರು, ಪು.೨೩೩

[61] ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ-೧, ಬಳ್ಳಾರಿ ಜಿಲ್ಲೆ, ಹರಪನಹಳ್ಳಿ ೮೦

[62] ಎಸಿಗ್ರಾಫಿಯಾ ಕರ್ನಾಟಿಕ VII, ಚನ್ನಗಿರಿ ೨೪

[63] ದೇಸಾಯಿ ಪಿ.ಬಿ. ಮತ್ತು ಇತರರು ೧೯೭೦ : ಎ ಹಿಸ್ಟರಿ ಆಫ್ ಕರ್ನಾಟಕ, ಕರ್ನಾಟಕ ವಿಶ್ವವಿದ್ಯಾನಿಲಯ, ಧಾರವಾಡ ಪು.೨೮೬

[64] ವಸುಂಧರಾ ಫಿಲಿಯೋಜಾ, ೧೯೮೦ : ವಿಜಯನಗರ ಸಾಮ್ರಾಜ್ಯ ಸ್ಥಾಪನೆ, ಕಸಾಪ, ಬೆಂಗಳೂರು ಪು. ೪೬

[65] ಮಹದೇವ ಸಿ., ೨೦೦೧ : ಕರ್ನಾಟಕ ಪುರಾತತ್ವ ಶೋಧ, ಶ್ರೀಲಕ್ಷ್ಮಿ ಪ್ರಕಾಶನ, ಶ್ರೀರಂಗಪಟ್ಟಣ, ಪು.೮೬

[66] ವರದರಾಜರಾವ್ ಜಿ., ೧೯೬೩ : ಕುಮ್ಮಟ ಕೇಸರಿ, ಉಷಾ ಸಾಹಿತ್ಯಮಾಲೆ, ಮೈಸೂರು ಪು.೮೭

[67] ಎಫಿಗ್ರಾಫಿಯಾ ಕರ್ನಾಟಿಕ ಸಂಪುಟ-೫, ಕೃಷ್ಣರಾಜನಗರ ೭೭

[68] ಕಲಬುರ್ಗಿ ಎಂ.ಎಂ. (ಸಂ). ೧೯೯೪ : ಕರ್ನಾಟಕದ ಕೈಫಿಯತ್ತುಗಳು, ಕನ್ನಡ ವಿಶ್ವವಿದ್ಯಾಲಯ ಹಂಪಿ ಪು. ೪೬೬

[69] ಕನ್ನಡ ವಿಶ್ವವಿದ್ಯಾಲಯ ಶಾಸನ ಸಂ-೧, ಬಳ್ಳಾರಿ ಜಿಲ್ಲೆ, ಬಳ್ಳಾರಿ ೧೬

[70] ಅದೇ, ಬಳ್ಳಾರಿ ೯

[71] ಅದೇ, ಬಳ್ಳಾರಿ ೧೬

[72] ಕಲಬುರ್ಗಿ ಎಂ.ಎಂ., ಪೂರ್ವೋಕ್ತ, ಪು. ೪೫೦

[73] ಕನ್ನಡ ವಿಶ್ವವಿದ್ಯಾಲಯ ಶಾಸನ ಸಂ-೧, ಬಳ್ಳಾರಿ ಜಿಲ್ಲೆ, ಪು.xxxvi

[74] ಅದೇ, ಸಿರಗುಪ್ಪ ೬೩

[75] ಕಲಬುರ್ಗಿ ಎಂ.ಎಂ., ಪೂರ್ವೋಕ್ತ, ಪು.೪೫೨

[76] ಅದೇ, ಪು. ೪೫೫

[77] ಕನ್ನಡ ವಿಶ್ವವಿದ್ಯಾಲಯ ಶಾಸನ ಸಂ-೧, ಬಳ್ಳಾರಿ ಜಿಲ್ಲೆ, ಸಿರಗುಪ್ಪ ೬೩, ಹೊಸಪೇಟೆ ೫-೭ ಕಲೆಕ್ಟರುಗಳ ಆಳ್ವಿಕೆ (೧೮೦೦-೧೯೪೭) : ಒಂದು ಸಮೀಕ್ಷೆ, ಎಂ.ಫಿಲ್ ಪ್ರಬಂಧ, ಚರಿತ್ರೆ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಪು.೮

[78] [79] ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ-೧, ಬಳ್ಳಾರಿ ಜಿಲ್ಲೆ, ಬಳ್ಳಾರಿ ೧೧

[80] ಬಳ್ಳಾರಿ ಡಿಸ್ಟ್ರಿಕ್ಟ್ ಗ್ಯಾಸೆಟಿಯರ್, ೧೯೦೪ : ಪು. ೪೯

[81] ಕುರುಗೋಡಿನ ಶ್ರೀ ಕುನಾಸಿದ್ದಪ್ಪ ಎಂಬುವರು ಮಾಹಿತಿ ನೀಡಿದ್ದಾರೆ.

[82] ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ-೧, ಬಳ್ಳಾರಿ ಜಿಲ್ಲೆ, ಪು.XXIX.