ನಾಡಿನ ಇತಿಹಾಸವನ್ನು ನಿರ್ಮಿಸುವಲ್ಲಿ ಶಾಸನಗಳ ಪಾತ್ರ ಮಹತ್ವದ್ದು. ಈ ಶಾಸನಗಳನ್ನು ಶಿಲೆ, ಲೋಹ, ಕಟ್ಟಿಗೆ, ಮಡಿಕೆ ಮೊದಲಾದ ವಸ್ತುಗಳ ಮೇಲೆ ರಚಿಸಲಾಗಿದೆ. ಸಾಮಾನ್ಯವಾಗಿ ಶಾಸನವೆಂದರೆ ರಾಜಾಜ್ಞೆ. ಅದನ್ನು ಎಲ್ಲಾ ಪ್ರಜೆಗಳು ಪಾಲಿಸಬೇಕಾಗುತ್ತಿತ್ತು. ಇವುಗಳನ್ನು ರಾಜ ಇಲ್ಲವೆ ಅವನ ಹೆಸರಿನಲ್ಲಿ ಮಾಂಡಳಿಕ, ಪ್ರಧಾನಿ, ಗೌಡ, ಮುಖಂಡ ಮುಂತಾದ ವ್ಯಕ್ತಿಗಳು ಹಾಕಿಸುತ್ತಿದ್ದರು. ಇವುಗಳಲ್ಲಿ ದಾನ-ದತ್ತಿಗೆ ಸಂಬಂಧಿಸಿದ ಶಾಸನಗಳೇ ಹೆಚ್ಚಾಗಿ ಕಂಡುಬಂದರೂ ರಾಜ್ಯವಾಳುತ್ತಿದ್ದ ಅರಸ, ಮಾಂಡಳಿಕ, ಪ್ರಧಾನ, ಗೌಡ ಹೀಗೆ ಕೇಂದ್ರದಿಂದ ಮೊದಲ್ಗೊಂಡು ಚಿಕ್ಕ ಘಟಕ-ಹಳ್ಳಿಯವರೆಗೂ ಮಾಹಿತಿ ದೊರೆಯುತ್ತವೆ.

ಶಾಸನಗಳಲ್ಲಿ ಬರುವ ವಿಷಯವನ್ನು ರಾಜಕೀಯ, ಸಾಮಾಜಿಕ, ಆರ್ಥಿಕ, ಧಾರ್ಮಿಕ, ಕಲೆ ಮತ್ತು ವಾಸ್ತುಶಿಲ್ಪ, ಸಾಹಿತ್ಯ ಮೊದಲಾದ ಭಾಗಗಳಲ್ಲಿ ವಿಂಗಡಿಸಬಹುದು. ಚರಿತ್ರೆಗೆ ಶಾಸನಗಳ ಮುಖ್ಯ ಆಕರಗಳೆಂದು ಪರಿಗಣಿಸಿ ವಿಸ್ತೃತವಾದ ಅಧ್ಯಯನಗಳು ನಡೆದವು. ಆರಂಭದಲ್ಲಿ ಇಂಥ ಅಧ್ಯಯನಗಳು ಇಡೀ ರಾಜ್ಯ ಇಲ್ಲವೇ ಆಳ್ವಿಕೆಯ ಭೌಗೋಳಿಕ ಪ್ರದೇಶಕ್ಕೆ ಸಂಬಂಧಿಸಿದ್ದಾಗಿತ್ತು. ಕ್ರಮೇಣ ಇದು ಒಂದು ಸಂಕೀರ್ಣ ಪ್ರದೇಶ, ಘಟಕ ಹಳ್ಳಿಗಳಿಗೂ ಸೀಮಿತವಾಗಿ ಇವುಗಳೊಂದಿಗೆ ಅಲ್ಲಿ ಕಂಡುಬರುವ ವಿವಿಧ ಆಕರಗಳನ್ನು ಬಳಸಿ ಪರಿಪೂರ್ಣ ಚರಿತ್ರೆ ನಿರ್ಮಿಸಲು ಸಾಧ್ಯವಾಯಿತು. ಇಂಥ ಅಧ್ಯಯನ ಹೆಚ್ಚು ಮಾನ್ಯತೆ ಪಡೆದುಕೊಂಡಿತು.

ಕುರುಗೋಡು ಚರಿತ್ರೆಯನ್ನು ಬಿಂಬಿಸುವ ಹಲವು ಶಾಸನಗಳು ಸ್ಥಳೀಯವಾಗಿ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಲಭ್ಯ ಇವೆ. ಗ್ರಾಮದ ನೆರೆಹೊರೆಯಲ್ಲಿ ಕಂಡುಬರುವ ಬೆಟ್ಟ ಹಾಗೂ ನಿಸರ್ಗನಿರ್ಮಿತ ಗುಹೆಗಳು ಪ್ರಾಚೀನ ಮಾನವನಿಗೆ ವಾಸಸ್ಥಾನಗಳಾಗಿದ್ದವು. ಅವರು ಕಲ್ಲಾಶ್ರಯಗಳಲ್ಲಿ ಬಿಡಿಸಿದ ಚಿತ್ರಗಳಿಗೆ ಬಳಸಿದ ಬಣ್ಣದಿಂದಲೆ ಮುಂದಿನ ಜನಾಂಗ ಶಾಸನ ಬರೆಯುವ ಶಕ್ತಿ ಪಡೆದು ಕೊಂಡರೆಂದು ಅಲ್ಲಿ ಲಭ್ಯ ಇರುವ ಶಾಸನದಿಂದ ತಿಳಿಯುತ್ತದೆ. ಮುದ್ದುಗನ ಮೂಲೆ ಎಂದು ಕರೆಯಲ್ಪಡುವ ಕಲ್ಲಾಶ್ರಯದಲ್ಲಿ ಚಿತ್ರಿತ ಶಾಸನಗಳು ಕಂಡು ಬಂದಿವೆ. ಇವುಗಳ ಬಗ್ಗೆ ೧೯೭೬ರಲ್ಲಿ ಡಾ.ಎಸ್. ರಾಜಶೇಖರ ಮತ್ತು ಇತರರು “ಇಂಡಿಯನ್ ಓರಿಯಂಟಲ್ ಕಾನ್ಫರನ್ಸ”ದಲ್ಲಿ ಮಂಡಿಸಿದ್ದಾರೆ. ಕಪ್ಪು-ಕೆಂಪು ಬಣ್ಣಗಳಲ್ಲಿರುವ ಇವುಗಳು ‘ಮಾ’ ಎಂಬ ಅಕ್ಷರ ಶಾತವಾಹನರ, ‘ನಮದೆವಸ್ಯ’ ಕದಂಬರ ಮತ್ತು ‘ಗುಣಹಿತರ್ಯ’ ಎಂಬುವುದು ಬಾದಾಮಿ ಚಾಲುಕ್ಯರ ಕಾಲದ್ದೆಂದು ಸಂಶೋಧಕರ ಅಭಿಮತವಾಗಿತ್ತು. ಇತ್ತೀಚೆಗೆ ಇವುಗಳ ಕುರಿತ ಅಧ್ಯಯನ ಮಾಡಿದ ರಾಜಾಶೇಖರ ಅವರು ‘ಮಾ’ ಎಂಬುವುದು ಮೌರ್ಯರ ಕಾಳಕ್ಕೆ ಸೇರಿದ್ದೆಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಇದರ ನಂತರ ಈ ಪ್ರದೇಶದಲ್ಲಿ ಕಂಡುಬಂದಿರುವ ಮೌರ್ಯ ಅಶೋಕನ ಬಂಡೆಗಲ್ಲು ಜಟ್ಟಿಂಗರಾಮೇಶ್ವರ, ಬ್ರಹ್ಮಗಿರಿಗಳಲ್ಲಿರುವ ಈ ಶಾಸನಗಳನ್ನು ಗಮನಿಸಿದರೆ ಮಧ್ಯದಲ್ಲಿರುವ ಕುರುಗೋಡು ಅದರ ಭೌಗೋಳಿಕ ಲಕ್ಷಣದಿಂದ ಇಲ್ಲಿಯೂ ಅಶೋಕನ ಶಾಸನ ನಿರ್ಮಾಣವಾಗಿರುವುದಕ್ಕೆ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಸಂಶೋಧನೆಯಾಗಬೇಕಾಗಿದೆ.

ಕುರುಗೋಡು ಗ್ರಾಮದ ಕತ್ತೆಬಂಡೆ ಶಿಲಾಶಾಸನ ಬಾದಾಮಿ ಚಾಳುಕ್ಯ ಅರಸ ಸತ್ಯಾಶ್ರಯನ ಕಾಲಕ್ಕೆ ಸೇರಿದುದು. ಇದರಲ್ಲಿ ಸತ್ಯಾಶ್ರಯ ಪಡೆದು ಕುರುಗೋಡು ವ್ಯವಸ್ತೆ ಎನ್ತೆನ್ದೊಡೆ “ಪದಿನೆಣ್ಟುಗೇಣ ೧೮ ಕೋಲು ಪೊನ್ನು ನವಿಲ ಪೊನ್ನು” ಎಂದಿದೆ.

[1] ಹದಿನೆಂಟು ಗೇಣ ಕೋಲನ್ನು ಹೊಲ ಅಳೆಯಲು ಉಪಯೋಗಿಸಲಾಗುತ್ತಿತ್ತು. ಆಗಿನ ಕಾಲದಲ್ಲಿ ಎಂಟು ಮೊಳ, ಹದಿನೆಂಟುಗೇಣ ಹಿರೆಕೋಲ, ನವಿಲಕೋಲುಗಳ ಬಳಕೆ ಈ ಪ್ರದೇಶದಲ್ಲಿ ಸಾಮಾನ್ಯವಾಗಿತ್ತು.

ನವಿಲಪೊನ್ನ

ಈ ಪ್ರದೇಶದಲ್ಲಿ ಬಾದಾಮಿ ಚಾಲುಕ್ಯರ ಕಾಲದಲ್ಲಿಯೇ ನವಿಲಪೊನ್ನಿನ ಬಳಕೆ ಇದ್ದುದು ಮತ್ತು ಇದು ಕಾರ್ತಿಕೇಯನ ವಾಹನ ನವಿಲಿನ ಸಂಬಂಧವನ್ನು ಸೂಚಿಸುತ್ತದೆ. ಕುಡುತಿನಿ, ಕೊಳಗಲ್ಲು, ಸಂಡೂರು ಕುಮಾರಸ್ವಾಮಿ ಬೆಟ್ಟದಲ್ಲಿ ಪ್ರಾಚೀನ ಕಾಲದಿಂದಲೂ ಕಾರ್ತಿಕೇಯನ ಆರಾಧನೆ ನಡೆದುಬಂದಿತ್ತು. ಕುಡುತಿನಿಗೆ ಹತ್ತಿರವಿರುವ ಕುರುಗೋಡು ಕೂಡಾ ನಿಕಟ ಸಂಬಂಧ ಪಡೆದಿತ್ತು. ಕುಡುತಿನಿಯ ಕ್ರಿ.ಶ. ೯೪೭ರ ರಾಷ್ಟ್ರಕೂಟ ಅರಸ ಕೊಟ್ಟಿಗನಕಾಲದ ಶಾಸನ ಸಿಂದವಂಶದ ಅರಿಬಲ್ಲದಾಗ್ರನೆಂಬುವನು ಮಹಾದಂಡನಾಯಕನಾಗಿದ್ದುದನ್ನು ಉಲ್ಲೇಖಿಸುತ್ತದೆ.[2] ಕುರುಗೋಡಿನ ಮುನ್ನೂರ್ವಮಹಾಜನರು ಕುಡುತಿನಿಯ ದೇಕಮ್ಮನ ದೇಗುಲಕ್ಕೆ ಭೂದಾನ ಕೊಟ್ಟಿದ್ದರು. ಬಹುಶ ಇದನ್ನು ಬಾದಾಮಿ ಚಾಲುಕ್ಯರ ಕಾಲದಲ್ಲಿಯೇ ನೀಡಿರಬೇಕು. ರಾಷ್ಟ್ರಕೂಟರು ಅಧಿಕಾರಕ್ಕೆ ಬರುವ ವೇಳೆಗಾಗಲೇ ಇದನ್ನು ಅಧ್ಯನಯ್ಯನ ಮಗ ಅಪಹರಿಸಿದ್ದರಿಂದ ರುದ್ರರಾಶಿಭಟಾರರು ಅರಸನಲ್ಲಿಗೆ ಬಂದು ಈ ವಿಷಯವನ್ನು ತಿಳಿಸಿದಾಗ, ಅರಸನು ಮೊದಲಿನಂತೆ ನಡೆದುಬರುವಂತೆ ಆಜ್ಞೆ ಹೊರಡಿಸುತ್ತಾನೆ.

ಕುರುಗೋಡು ರಾಜಧಾನಿಯಾಗುವ ಪೂರ್ವದಲ್ಲಿ ಕುಡುತಿನಿಯ ಆಡಳಿತ ವಿಭಾಗಕ್ಕೆ ಸೇರಿದಂತೆ ಕಾಣುತ್ತದೆ. ಕುಡತಿನಿಯ ಶಾಸನದಲ್ಲಿ ಬರುವ ಸಬಾಲ ಎಳ್ಪತ್ತರ ಉಲ್ಲೇಖವನ್ನು ಗಮನಿಸಿದರೆ,[3] ಇದು ೭೦ ಹಳ್ಳಿಗಳ ಆಡಳೀತ ಕೇಂದ್ರವಾಗಿರಬಹುದು. ಆರನೆಯ ವಿಕ್ರಮಾದಿತ್ಯನ ಕಾಲದಲ್ಲಿ (ಕ್ರಿ.ಶ. ೧೦೯೮)ಏರಣಿಗೆ ಮಾದೋಜನ ಮಗ ಸಾವಿಮೋಜ ಮತ್ತು ಬೇಚೋಜನ ಮಗ ಚಿಕ್ಕ ಮಾದೋಜರು ಲೊಕ್ಕಿ ಪೊನ್ನದ ಬದಲಾಗಿ ನವಿಲಚ್ಚಿನ ಪೊನ್ನ ಎಂಬ ಬಂಗಾರದ ನಾಣ್ಯಗಳನ್ನು ಅಚ್ಚು ಹಾಕಿ ಕಾರ್ತಿಕೇಯ ದೇವಾಲಯಕ್ಕೆ ವರ್ಷಕ್ಕೆ ೧೨ ನಾಣ್ಯಗಳನ್ನು ಕೊಡುತ್ತಿದ್ದರು.[4] ಆದರೆ ಇದಕ್ಕಿಂತ ಪೂರ್ವದಲ್ಲಿಯೇ ಈ ನವಿಲ ಪೊನ್ನು ನಾಣ್ಯ ಬಳಕೆಯಲ್ಲಿದ್ದ ಬಗ್ಗೆ ಕುರುಗೋಡು ಶಾಸನ ಸ್ಪಷ್ಟಪಡಿಸುತ್ತದೆ. ಈಗ ಈ ನಾಣ್ಯದ ತೂಕದಲ್ಲಿ ವ್ಯತ್ಯಾಸವಾಗಿರಬಹುದು. ಸಿಂದರ ಪ್ರಾಚೀನ ವ್ಯಕ್ತಿ ಅರಿಬಲ್ಲದಾಗ್ರ ಕುಡತಿನಿಯಲ್ಲಿ ಮಹಾಮಂಡಳೇಶ್ವರನಾಗಿದ್ದುದು, ಮುಂದೆ ಕುರುಗೋಡು ಸಿಂದರ ರಾಜಧಾನಿಯಾಗಿ ಅಂದರೆ ಕ್ರಿ.ಶ. ೧೧೦೩ರ ವೇಳೆಯಲ್ಲಿ ಭೀಮದೇವ ಮಾಕನಾಂಬಿಕೆಯರ ಮಗ ಸೋವಿದೇವ “ಕಾರ್ತಿಕೇಯ ಲಬ್ದವರ ಪ್ರಸಾದಕ”ನೆಂದು ಕರೆದುಕೊಂಡಿರುವುದನ್ನು ಗಮನಿಸಿದರೆ ಸುತ್ತ ಮುತ್ತಲಿನ ಪ್ರದೇಶದಲ್ಲಿ ಕಾರ್ತಿಕೇಯನ ಪ್ರಭಾವವಿದ್ದುದಲ್ಲದೆ, ಸಿಂದರೂ ಕೂಡಾ ಕಾರ್ತೀಕೇಯನ ಭಕ್ತರಾಗಿದ್ದರು.

ಬಾದಾಮಿ ಚಾಲುಕ್ಯ, ರಾಷ್ಟ್ರಕೂಟರ ನಂತರದಲ್ಲಿ ಕಲ್ಯಾಣದ ಚಾಲುಕ್ಯ ಮತ್ತು ಕಲಚುರಿಗಳ ಕಾಲದಲ್ಲಿ ಈ ಗ್ರಾಮದಲ್ಲಿ ಹೆಚ್ಚಿನ ಶಾಸನಗಳು ಲಭ್ಯವಿರುವುದರಿಂದ ಅವುಗಳಲ್ಲಿರುವ ವಿಷಯಗಳನ್ನು ದೇವತಾಸ್ತುತಿ, ಸ್ಥಳ ಪರಿಸರ, ರಾಜಕೀಯ, ಆಡಳಿತ, ಸಾಮಾಜಿಕ, ಆರ್ಥಿಕ, ದಾನ-ದತ್ತಿ, ಕಲೆ ಮತ್ತು ವಾಸ್ತುಶಿಲ್ಪ, ಸಾಹಿತ್ಯವೆಂಬ ವಿಭಾಗಗಳಲ್ಲಿ ವಿಂಗಡಿಸಬಹುದು.

ದೇವತಾಸ್ತುತಿ

ಕ್ರಿ.ಶ. ೧೧೭೩ರ ಶಾಸನದಲ್ಲಿ ಮೊದಲಿಗೆ “ಶ್ರೀ ಸ್ವಯಂಭುನಾಥಾಯ ನಮಃ” ಎಂದು ಆರಂಭವಾಗುತ್ತದೆ.[5] ಇದರಲ್ಲಿರುವ ಸಂಸ್ಕೃತ ಶ್ಲೋಕದಲ್ಲಿ ಶಿವನನ್ನು ಗೌರೀ ಪಿನಸ್ತರಸ್ಥ ಸ್ಥಗಿತ ಘಷ್ಯಿಣದತ್ತೈಕವರ್ಣೋದ್ಭಕವಕ್ಷಾಃ ಕಂದರ್ಪೋವರ್ಪ ವಿಷ್ಟಾಲನ ನಿಜ ನಿಪುಣೋವಿಚ್ಛುರತ್ಯ್ರಕ್ಷೋ | ಗೀರ್ವಾಣೋತ್ಕಾರ್ಯರಕ್ಷ ಸ್ತ್ರೀ ಭುವನಭವನಾರಂಭ ಸಂಬ್ರಾನ್ತಸ್ಕಂಭೋ ಲಕ್ಷ್ಮೀ ನಾಥಪ್ರಿಯಃ ಸಜಯತಿ ಸತಿಜಯೆನರ್ಮ ಶಂಭುಃ ಸ್ವಯಂಭೂ” ಎಂದು ವರ್ಣಿಸಲಾಗಿದೆ. ರಾಚಮಲ್ಲ ಶಿವಸನ್ನಿಧಿಯನ್ನು ಪಡೆದ ಮೇಲೆ ಆತನು ಲಿಂಗರೂಪದಲ್ಲಿ ಉದ್ಭವಿಸಿದನೆಂದು ಹೇಳುವ ಶಾಸನ “ಶ್ರೀಮದುಧ್ಬವ ರಾಚಮಲ್ಲೇಶ್ವರಾಯನಮಃ” ಎಂದು ಪ್ರಾರಂಭವಾಗುತ್ತದೆ.[6] ಕಲ್ಲೇಶ್ವರ ದೇವಾಲಯದಲ್ಲಿರುವ ಶಾಸನ ‘ಶ್ರೀ ಕಲಿದೇವ’, “ಶ್ರೀ ರಾಮಾರಮಣಪ್ರಣುತಮಹಿಮಂ ಬೃಂದಾರ ಕೋದಾರಬೃನ್ಧಾರಾಧ್ಯಂ ತ್ರಿದಶಾಧಿನಾಥನ ಗಜಾಚಂಚತ್ಕುಚಾಲೋಲ ಕಾಶ್ಮೀರೋರ ಸ್ಥಳನಬ್ಜಸಂಭವನತಂ ತ್ರೈಳೋಕ್ಯ ನಿಸ್ತಾರವಿಸ್ತಾರಂ ಶ್ರೀ ಕಲಿದೇವನೊಲ್ದು ನಮಗೀಗಿಷ್ಟಾರ್ತ್ಥಸಂಸಿದ್ಧಿಯಂ” ಎಂದೂ[7] ಕ್ರಿ.ಶ. ೧೧೭೭ರ ಶಾಸನ “ಓಂ ನಮಶ್ಯಿವಾಯ” ಎಂದು ಆರಂಭವಾಗುತ್ತವೆ.[8]

ಸ್ಥಳ ಪರಿಸರದ ವರ್ಣನೆ

ಶಾಸನಗಳಲ್ಲಿ ಊರು ಮತ್ತು ಸುತ್ತಮುತ್ತಲಿನ ಪ್ರದೇಶದ ವರ್ಣನೆ ಸಾಮಾನ್ಯವಾಗಿರುತ್ತದೆ. ಒಂದು ಗ್ರಾಮದ ಹೆಸರನ್ನು ಪರಿಶೀಲಿಸಿದರೆ ಸುತ್ತಮುತ್ತಲಿನ ನಿಸರ್ಗ, ಪೌರಾಣಿಕ ಹಿನ್ನೆಲೆ, ಐತಿಹಾಸಿಕ, ಪ್ರಮುಖ ದೇವತೆ ಮೊದಲಾದವು ಗ್ರಾಮ ನಾಮವಾಗಲು ಕಾರಣಗಳಾಗಿರುತ್ತವೆ. ಈ ಗ್ರಾಮಕ್ಕೆ ಕುರುಗೋಡು ಎಂದು ಹೆಸರು ಬರಲು ಅನೇಕ ಕುರುಹುಗಳು ಪುಷ್ಠಿ ನೀಡುತ್ತವೆ. ಜನಪದರ ನಂಬಿಕೆಯಲ್ಲಿ ಕುರುಗೋಡು ಎಂಬ ಹೆಸರು ಗ್ರಾಮನಾಮವಾಗಲು ದೊಡ್ಡಬಸಪ್ಪನ ಶಿಲ್ಪ ಕಾರಣವಾಗುತ್ತದೆ. ಇಲ್ಲಿಯ ಪ್ರಸಿದ್ಧ ದೇವತೆಯಾದ ದೊಡ್ಡಬಸಪ್ಪನ ಶಿ‌ಲ್ಪ ಏಕಶಿಲಾನಂದಿ ಮೂರ್ತಿ. ಸುಮಾರು ೧೫ ಅಡಿ ಎತ್ತರದ ಈ ನಂದಿಗೆ ಸಣ್ಣ ಕೊಡುಗಳಿವೆ. ಆದ್ದರಿಂದ ಕಿರಿಕೋಡು, ಕಿರಿಗೋಡು ಎಂದು ಕರೆಯುತ್ತಿದ್ದ ಗ್ರಾಮಕ್ಕೆ ಕ್ರಮೇಣ ಕುರುಗೋಡು ಎಂಬ ಹೆಸರು ಪ್ರಾಪ್ತವಾಯಿತೆಂಬ ನಂಬಿಕೆಯಿದೆ.

ಶಾಸನಗಳ ಆಧಾರಗಳನ್ನು ಗಮನಿಸಿದರೆ ಇದು ಸಮಂಜಸವೆನಿಸುವುದಿಲ್ಲ. ಈ ನಂದಿಶಿಲ್ಪದ ಲಕ್ಷಣಗಳು ವಿಜಯನಗರ ಕಾಲಕ್ಕೆ ಸೇರಿದವು. ಇಲ್ಲಿ ಕಂಡು ಬಂದಿರುವ ಕಲ್ಯಾಣದ ಚಾಲುಕ್ಯರ ಆದಿಯಾಗಿ ಗ್ರಾಮಕ್ಕೆ ‘ಕುಱುಂಗೋಡು'[9], ‘ಕುಱುಗೋಡು'[10]’ಕುರುಗೋಡು'[11] ಎಂದು ಕರೆಯಲಾಗುತ್ತಿತ್ತು. ಇಲ್ಲಿಯ ಸೀಮೆ, ದೇವಾಲಯ, ಕೋಟೆಯನ್ನು ಉಲ್ಲೇಖಿಸುವಾಗ ‘ಕುಱುಗೋಡು ಸೀಮೆ’, ‘ಕುಱುಗೋಡು ಬಸ್ತಿ’, ‘ಕುಱುಗೋಡು ಕೋಟೆ’, ‘ಕುಱುಗೋಡದ ಗಿರಿದುರ್ಗ’, ‘ಕುಱುಗೋಡು ಪಟ್ಟಸ್ವಾಮಿ’ ಮುಂತಾಗಿ ಕರೆಯಲಾಗಿದೆ.

ಈ ನಾಮ ಪ್ರಾಪ್ತವಾಗಲು ಭೌಗೋಳಿಕ ಹಿನ್ನೆಲೆ ಕಾರಣವಾಗಿರಬೇಕು. ಕುರು=ಚಿಕ್ಕದು, ಕುರು=ಬೆಟ್ಟ (DEP pp. 1548), ಕುಱಂ, ಕುರಮ್, ಕುರಸ್ಸಿ=ಬೆಟ್ಟದ ಬುಡದಲ್ಲಿರುವ ಗ್ರಾಮ ಎಂದಾಗುತ್ತದೆ. ಉದಾ : ಕುರುಭತ್ತೂರು ಹಾಸನ ಜಿಲ್ಲೆಯಲ್ಲಿರುವ ಈ ಗ್ರಾಮ ಸಣ್ಣಕ್ಕಿಗೆ ಹೆಸರು ವಾಸಿಯಾಗಿದೆ. ಕೋಡು=ಬೆಟ್ಟ, ಕೋಡೆಂಬ ವಾರ್ಗಿಕ ಬೆಟ್ಟ, ಗುಡ್ಡವೆಂಬ ಅರ್ಥ ಕೊಡುತ್ತದೆ. ಉದಾ : ಬೆಳಗೋಡು-ಬೆಳ್(ಜಲ)+ಕೋಡು (ಬೆಟ್ಟ)= ಜಲವೇ ಅಧಿಕವಾಗಿರುವ ಬೆಟ್ಟ ಪ್ರದೇಶದ ಗ್ರಾಮ.[12] ಕುರು+ಗೋಡು=ಎರಡರ ಅರ್ಥವೂ ಬೆಟ್ಟವಾಗುತ್ತದೆ. (ಉನ್ನತ ಶಿಖರಗಳನ್ನು ಹೊಂದಿದ ಬೆಟ್ಟಗಳು). ಕುಱುಂಗೋಡು ಎನ್ನುವುದು ಇಲ್ಲಿಯ ಪ್ರಾಚೀನ ಗ್ರಾಮದ ಸುತ್ತಲೂ ಇರುವ ಎತ್ತರದ ಶಿಖರಗಳನ್ನು ಹೊಂದಿದ ಬೆಟ್ಟಗಳಿಂದ ಬಂದಿರಬೇಕು.

ಕುರುಗೋಡು ಪಟ್ಟಣ ಬಲ್ಲಕುಂದೆ-೩೦೦ ಅಥವಾ ಬಲ್ಲಕುಂದೆ ನಾಡಿನ ರಾಜಧಾನಿಯಾಗಿತ್ತು. ಇಲ್ಲಿಯ ಹೆಚ್ಚಿನ ಶಾಸನಗಳಲ್ಲಿ ಜಂಬುದ್ವೀಪದಲ್ಲಿ ಭರತಕಾಂತೆ, ಅದರಲ್ಲಿ ಕುಂತಳದೇಶ, ಅದರಲ್ಲಿ ತುಂಗಭದ್ರಾ ನದಿ ದಕ್ಷಿಣಕ್ಕೆ ಬಲ್ಲಕುಂದೆ ಮಧ್ಯ ಕುರುಗೋಡು ಪಟ್ಟಣದ ವರ್ಣನೆ ಬರುತ್ತದೆ. “ಭಾರತಮಹೀಮಹಿಳಾ ಮಹನೀಯ ಭಾಳದೊಳು ಕುಂತಳ (ದನ್ತೆ) ಶೋಭಿಸುವ ಕಂಣಡಿಯನ್ನೆಮೆ ಚೆನ್ನನಾಗಿವೋರನ್ತಿರೆ ಬಲ್ಲಕುಂದೆ ನಾಡುನ್ನಾಳ್ಕರವೊಪ್ಪುಗುಮೆತ್ತ ನೋಳ್ವಡಂ | ಅನ್ತಾನಾಡ ನಡುವೆ ರಾಜದ್ರಾಜ ನಗರ ರಮಣೀ ರಮಗಿಣೀಯ ಮಣಿದರ್ಪಣಾಯಮಾನಮೆನಿಸೆಭರ್ಗ್ಗಾದ್ರಿಯಂತಾರ್ಗ್ಗ ವರೀದುರ್ಗ್ಗಮವಾದ ಕುಱುಗೋಡ ಗಿರಿದುರ್ಗ್ಗದ ಪೊಱವೊಳಲ ವಿಳಾಸಮೆಂತೆಂದಡೆ ನಾರದನ ತೋಱಿದೆ ಸರದಿಂತಾರಾಪಥದಂತೆ ರಾಜಹಂಸಾನ್ವಿತದಿಂ ಕ್ಷೀರಾಬ್ಧಿಶಯನನುರದ ವೊಲಾರಮೆಯಿನ್ತು ಱುಗಿ ಪೊಱಮೊಳಲು ಸಾ(ಸೊ)ಗಯಿಸುಂ” ಎಂಬ ವರ್ಣನೆಗಳು, ಬಲ್ಲಕುಂದೆ ವಿಷಯದಲ್ಲಿ ಬರುವ ಈ ಕುರುಗೋಡು ರಾಜದ್ರಾಜನಗರವಾಗಿ ಸುತ್ತಲೂ ಗಿರಿದುರ್ಗಗಳಿಂದ ಕಂಗೋಳಿಸುತ್ತಿತ್ತು.[13] ಪಟ್ಟಣದ ಸುತ್ತಮುತ್ತ ಫಲವತ್ತಾದ ಭೂಮಿಯಲ್ಲಿ ಬೆಳೆಯುತ್ತಿದ್ದ ದವಸಧಾನ್ಯಗಳ ಪರಿಚಯ ಶಾಸನಗಳಿಂದ ಸಿಗುತ್ತದೆ. ಮಡುವಿನಲ್ಲಿ ಬೆಳೆದು ನಿಂತ ಭತ್ತದ ಬೆಳೆ, ಬೆಳೆದು ನಿಂತ ಹೊಲಗಳಲ್ಲಿ ಗಿಳಿಹಿಂಡುಗಳು, ಮುಗಿಲುದ್ದವಾಗಿ ಮೂವಳಿಸಿದ ಕೋಟೆ ಇಲ್ಲಿಯ ಒಕ್ಕಲು ಮಕ್ಕಳು ಧನದ ಧಾನ್ಯದ ಸೊಮ್ಮಿನ ಸೊಕ್ಕಿನಿಂದ ನಮಗಾರು ಸರಿ ಎಂದು ಉರ್ಜಿತ ಸ್ಥಿತಿಯಲ್ಲಿದ್ದರು. ಇದಕ್ಕೆ ಹತ್ತಿರದಲ್ಲಿರುವ ಕೋಳೂರು ಶಾಸನದಲ್ಲಿ ಪರಿಸರದ ಮಾಹಿತಿ ಬರುತ್ತದೆ. ಬೆಳೆಯುವ ಹೊಲ-ಗದ್ದೆ ಬಂಗಾರದ ಕಣಿ, ಹಗರೆ (ನದಿ) ಕಾಲುವೆ ಇತ್ಯಾದಿಗಳಿಂದ ಬಲ್ಲಕುಂದೆ ನಾಡಿನ ಸಿರಿ ಎಂದೂ ಕುಂದುತ್ತಿರಲಿಲ್ಲ. ಈ ನಾಡೆಂಬ ಕಲ್ಪವೃಕ್ಷಕ್ಕೆ ಕೋಳೂರು ಹಣ್ಣು ಬಿಟ್ಟು ಟೊಂಗೆಯಾಗಿತ್ತು. ಜೋಳದ ಹೊಲದಲ್ಲಿ ಪೈರಿಗೆ ಎರಗುವ ಗಿಳಿಗಳನ್ನು ಓಡಿಸುವ ಸುಂದರ ಹೆಣ್ಣು ಮಕ್ಕಳ ಮೈಗಪ್ಪಿನಲ್ಲಿ ಕಣ್ಣು ಬಿಳುಪು ಎದ್ದು ತೋರುತ್ತಿದ್ದ ಇವರನ್ನು ‘ಧವಳೇಕ್ಷಣೆಯ’ರೆಂದು ವರ್ಣಿಸಲಾಗಿದೆ.[14] ಶಾಸನಗಳಲ್ಲಿ ಬರುವ ಉಲ್ಲೇಖಗಳಿಂದ ಇಲ್ಲಿಯ ಗಿಡಮರಗಳ ಪರಿಚಯವಾಗುತ್ತದೆ. “ಬಾಳೆಸುನಿಂಬೆ ಮಾದುಫಲಮೀಳೆ ಬೆಡಂಗೆನಿಸರ್ದ್ದ ಮಾವು ಕಂಚೀಳೆ ಕವುಂಗ ತೆಂಗು ಪಲಸುರ್ಬ್ಬಿದ ಕರ್ಬ್ಬಿನ ತೋಂಟಮಂಗ ಜಂಗಾಳಯಮಪ್ಪ ತಾವರೆಗೊಳಂ ಕೆಱಿ ಬಾವಿಗಳಿಂ ಬಹಿರ್ವ್ವನಂ ಲೀಲೆಯನ್ನುಂಟು ಮಾಡುವುದು ನೋಳ್ಪರ ಚಿತ್ತದೊಳಾವ ಕಾಲಮುಂ” ಎಂದೂ “ತಿಳಿಕ ತಮಾಳ ತಾಳ ಕದಳೀ ವಕುಳಾವಳಿ ಪಾಟಳಾಳಿ ಪಿಪ್ಪಳದಶಮತುಳುಂಗ ಘನಸಾರಕ ಕೇಸಂಕರ್ಣ್ಣಿಕಾರ ಶಾಲ್ಮಿಲಿ (ಳಿ) ಲವಳೀಲವಂಗ ಸಹಕಾರ ಕಕಿಂಶುಕನಾಳಿಕೇರ ಸಂಕುಲ ಸಕಳರ್ತ್ತು ನಂದನದಿನೊಪ್ಪುಗು ಮೀ ಕುಱುಗೋಡು ಸುತ್ತಲುಂ ಮತ್ತವ ಪಟ್ಟಣದೊಳ್”[15] “ಅಲ್ಲಲ್ಲಿಗೆ ತಿಳಿಗೊಳನುಂ ಮಲ್ಲಿಗೆಯುಂ ಮಾಧವೀಲತಾಮಣ್ಡಮುಂ ಪಲ್ಲವಿತಚೂ ತನಮುಂ ಸಲ್ಲಲಿತಂ ನೋಡಚಿತ್ತಲುಂ ಪೊಱವೊಳಲ್[16] ಎನ್ನುವುದರಿಂದ ಹೊಂಗೆ, ಕೇದಿಗೆ, ಬಾಳೆ ವಕುಳ, ಪಾಟಳಿ, ಪಿಪ್ಪಳ, ಶಾಲ್ಮಿಲಿ, ಲವಂಗ, ತೆಂಗ, ಕಬ್ಬು ಮತ್ತು ಅನೇಕ ಬಗೆಯ ಹೂವುಗಳಿಂದ ಕೂಡಿದ ವನಗಳು ಈ ಪರಿಸರದಲ್ಲಿದ್ದವು.

ಈ ಊರಿನಲ್ಲಿ ಅಮೂಲ್ಯ ತನ್ನ ಮತ್ತು ವಸ್ತ್ರಗಳನ್ನೊಳಗೊಂಡ ಅಂಗಡಿ ಸಾಲುಗಳಿಂದ ಕೂಡಿದ ವ್ಯಾಪಾರಿಗಳ ಪೇಟೆ, ತರ್ಕಶಾಸ್ತ್ರ, ಹೋಮ ಧೂಮಗಳಿಂದ ಕೂಡಿದ ಬ್ರಾಹ್ಮಣರ ಕೇರಿ, ಸೂಳೆಗೇರಿ ಮೊದಲಾದವುಗಳಿಂದ ಸ್ಮರರಾಜಧಾನಿಯೋ ಸುರವಣಿತಾ ಜನ್ಮಭೂಮಿಯೋ ಎಂಬಂತೆ ಚೆಲ್ವಾಗಿ ಕಾಣುತ್ತಿತ್ತು. ಗಂಗರಿಂದ, ಕುಡಿಯರಿಂದ, ಶ್ರೀಮಂತರಿಂದ ಕೂಡಿದ ಇಲ್ಲಿ ಭಕ್ತಿಯ ನೆಲೆ, ಭಕ್ತಿಯ ಮನೆ, ಭಕ್ತಿಯ ರಾಜ್ಯವಾಗಿ ಭಕ್ತಿಭಂಡಾರ ಶಿವಭಕ್ತ ಶಿರಿಬಂದು ನೆಲೆಸಿತು.

ಕುರುಗೋಡು ರಾಜಧಾನಿಯ ಸುತ್ತಮುತ್ತಲಿರುವ ಹಳ್ಳಿಗಳಿಗೆ ಮಾರ್ಗ ಕಲ್ಪಿಸಲಾಗಿತ್ತು. ಇಂಥ ಮಾರ್ಗಗಳನ್ನು ಭೂದಾನ ಬಿಡುವಾಗ ಉಲ್ಲೇಖಿಸಲಾಗಿದೆ. ಅಲ್ಲಿಯ ಕೆರೆ, ಹಳ್ಳ, ನದಿ, ತೋಟ-ಗದ್ದೆ, ತೀರ್ಥ, ದಾರಿ, ಮೊದಲಾದವುಗಳ ಹೆಸರು ಕಾಣಸಿಗುತ್ತದೆ. “ಕುರುಗೋಡು ಹೊಲದಲು ಸಿರಿಗೆರೆಯ ದಾರಿಯ ಪೂರ್ವದ ಮಲ್ಲಿಕಾರ್ಜುನ ದೇವರ ಕೆಯಿ ಪಶ್ಚಿಮಕ್ಕೆ ಪರಂಜೋತಿದೇವರ ಕೆಯಿ ದಕ್ಷಿಣಕ್ಕೆ ಅಭಿನವ ಸಿದ್ಧನಾಥದೇವರ ಕೆಯಿ ಪಶ್ಚಿಮಕ್ಕೆ ಕಟಿಕೂರದಾರಿ”[17] ಎಂದೂ ” ತೆಕ್ಕಕಲ ಹೊಲಮೇರಿಯಂ ಮೂಡಲ್ ಅರಳಿಹಾಳ ಸೀಮೆಯಿಂ ತೆಂಕ ಹಂಗವೆಯಿಂ ಪಡುವಲ್ ಗೋಱನಹಾಳ ಸೀಮೆಯಿಂ ಬಡಗಲ್ ಬಲ್ಲಕುಂದೆ ನಾಡ ಬಳಿಯ ಪೂರ್ವ್ವಸಿಮಾನ್ವಿತವಾಗಿ ಕೊಟ್ಟಲಜಿನ್ತೆಗ್ರಾಮ”[18] ಎಂದು ಕರೆಯಲಾಗಿದೆ. ಬಾಡನಹಟ್ಟಿ, ಬೀಯನಹಟ್ಟಿ, ಅರಕೆರೆಯ ದೊಂಡವಟ್ಟ, ಹುಜೆಹಾಳ, ಹಾವಿನಾಳ, ಕೊಂಚಗೆರೆ, ಕರಿವೂರ, ಕಟಹಳ್ಳಿ, ಚಿಯನಪಟ್ಟಿ, ಶ್ರೀಪುರ, ಶಿರಿಗೆರೆ, ಮಣಿವೂರ ಓರವಾಯಿ, ಕಂಪಿಲೆ, ಕುರುಗೋಡು ಕ್ಷೇತ್ರ, ಮೊದಲಾದ ಗ್ರಾಮಗಳ ಉಲ್ಲೇಖಗಳಿವೆ.

ರಾಜಕೀಯ

ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರು, ಕಲಚುರಿಗಳು ಹೊಯ್ಸಳರು, ವಿಜಯನಗರ ಅರಸರು ಮತ್ತು ಪಾಳೆಯಗಾರರ ಆಳ್ವಿಕೆಗೆ ಈ ಗ್ರಾಮ ಒಳಪಟ್ಟಿತ್ತು. ರಾಷ್ಟ್ರಕೂಟರ ನಂತರ ಅಧಿಕಾರಕ್ಕೆ ಬಂದ ಕಲ್ಯಾಣದ ಚಾಲು‌ಕ್ಯರ ಆಳ್ವಿಕೆಯ ಕಾಲದಲ್ಲಿ ಬಲ್ಲಕುಂದೆ-೩೦೦ರ ರಾಜಧಾನಿಯಾಗಿ ಅಭಿವೃದ್ಧಿ ಪಡೆಯಿತು. ಇಲ್ಲಿಯ ಹೆಚ್ಚಿನ ಶಾಸನಗಳು ಸಿಂದರ ಆಡಳಿತಕ್ಕೆ ಸೇರಿದವು. ಸಿಂದವಂಶದ ಪ್ರಾಚೀನ ಅರಸನಾದ ಅರಿಬಲ್ಲದಾಗ್ರನನ್ನು ಕುಡತಿನಿ ಶಾಸನ ಉಲ್ಲೇಖಿಸುತ್ತದೆ. ಕ್ರಿ.ಶ. ೧೧೪೯ರ ಕಲ್ಯಾಣ ಚಾಲುಕ್ಯ ಅರಸ ಜಗದೇಕಮಲ್ಲನ ಕಾಲದಲ್ಲಿ ರಾಚಮಲ್ಲ ಮಹಾಮಂಡಳೇಶ್ವರನಾಗಿದ್ದ. ಇಂದಿನ ದರೋಜಿ ಆಗಿನ ದೊರವದಿ-೭೦ನ್ನು ಕಾಚರಸ, ಲೋಕರಸ, ಗಂಗರಸರು ನೋಡಿಕೊಳ್ಳುತ್ತಿದ್ದರು. ಈ ಶಾಸನದಲ್ಲಿ ಇಮ್ಮಡಿ ರಾಚಮಲ್ಲನನ್ನು “ಕೃತಯುಗದ ಚರಿತ್ರೋದ್ಧರಣಂ ಕಪ್ಪೆಯರಾಹಾರದಾನ ವಿನೋದಕೃತ” ಎಂದು ಕರೆಯಲಾಗಿದೆ. [19]

ಕಪ್ಪೆಯರನ್ನು ಕುರಿತು ಕೆಲವರು ಕಾಳಾಮುಖರೆಂದರೆ, ಇನ್ನೂ ಕೆಲವರು ಈ ಪರಂಪರೆಯನ್ನು ಕಪ್ಪಡಿ ಸಂಗಮ (ಕೂಡಲ ಸಂಗಮ)ಕ್ಕೆ ತೆಗೆದುಕೊಂಡು ಹೋಗುತ್ತಾರೆ. ಕ್ರಿ.ಶ. ೧೧೪೮ರ ಕುಡತಿನಿ ಶಾಸನ ಕಾರ್ತಿಕೇಯನ ಉತ್ಸವ ಹೇಳುವಾಗ ಅಲ್ಲಿಗೆ ಬರುತ್ತಿದ್ದ ಕಪ್ಪಡಿಗಳ ಸತ್ರಕ್ಕೆ ದಾನ ಬಿಟ್ಟಿರುವುದನ್ನು ಉಲ್ಲೇಖಿಸಲಾಗಿದೆ. ಇಂದಿಗೂ ತಮಿಳು ನಾಡಿನಲ್ಲಿ ಶೈವ ಭಕ್ತರಾದ ಕೆಲವರು ಕೌಪಿನ, ಕವಡೆಗಳನ್ನು ಧರಿಸಿ, ಮುಖಕ್ಕೆ ಮಸಿ ಬಳಿದುಕೊಂಡು ಸಿಂಗರಿಸಿದ ಕೋಲನ್ನು ಕೈಯಲ್ಲಿ ಹಿಡಿದು ‘ಹರಹರ’ ಎಂದು ಕುಣಿಯುತ್ತ ಮುರುಗನ ಗುಡಿಗೆ ಬರುತ್ತಾರೆ. ಅವರಿಗೆ ದಾನ ನೀಡುವ ಮೂಲಕ ಮಹಾಶಿವಭಕ್ತನಾದ ರಾಚಮಲ್ಲ ಕಪ್ಪೆಯರಾಹಾರದಾನ ವಿನೋದಕೃತನೆಂದು ಕರೆದುಕೊಂಡಂತೆ ಕಾಣುತ್ತದೆ.

ಅರಸನೊಂದಿಗೆ ಅವರ ರಾಣಿಯರು ಕೆಲವು ಅಗ್ರಹಾರ ಭತ್ತಗ್ರಾಮಗಳಲ್ಲಿ ಆಳ್ವಿಕೆ ಮಾಡುತ್ತ ದೇವಾಲಯಗಳನ್ನು ಕಟ್ಟಿಸಿ ದಾನ-ದತ್ತಿ ಬಿಡುತ್ತಿದ್ದರು. ಕುರುಗೋಡು ಬೆಟ್ಟದ ಆಚೆಗಿರುವ ಉಜ್ಜಾಳೇಶ್ವರ ದೇವಾಲಯದ ಪ್ರವೇಶದ್ವಾರದ ಇಕ್ಕೆಲಗಳಲ್ಲಿ ಚಾಮರ ಧಾರೆಯರ ಶಿಲ್ಪಗಳಿವೆ. ಒಂದರ ಕೆಳಗೆ ಲೋಕಾಹುರದ ಜೊ-ಲದೇವಿ ಎಂದು ಇನ್ನೊಂದರ ಕೆಳಗೆ ಲೋಕಾಹುರದ ದೇವಲದೇವಿ ಎಂಬ ಬರಹಗಳಿವೆ.[20] ಒಂದನೆಯ ರಾಚಮಲ್ಲನ ಪತ್ನಿ ಸೋಮಲದೇವಿ ಮತ್ತು ಆತನ ಸೊಸೆ ಏಚಲದೇವಿಯರ ಶಿಲ್ಪಗಳಿರಬಹುದೆಂದು ವಿದ್ವಾಂಸರ ಅಭಿಮತ. ಈ ಗ್ರಾಮದ ದೊಡ್ಡಬಸಪ್ಪ ದೇವಾಲಯದಲ್ಲಿರುವ ಕ್ರಿ.ಶ. ೧೫೧೨ರ ಶಾಸನದಲ್ಲಿ ಕುರುಗೋಡು ಬಸವಣ್ಣನಾಯಕರ ಮಕ್ಕಳು ಮಲ್ಲಪ್ಪನಾಯಕರ ಧರ್ಮಪತ್ನಿಯರಾದ ಮಲ್ಲಮ್ಮ ಎಂಬುವಳು ಕುರುಗೋಡು ಸೀಮೆಕ್ಕೆ ಯಿಶಾನ್ಯ ದಿಕ್ಕಿನ ಹೂಜೆಹಾಳ ಶಾಂತಮಲ್ಲಿಕಾರ್ಜುನ ದೇವರ ದೇವಾಲಯ ಬಾವಿನು ಜೀರ್ಣೋದ್ಧಾರ ಮಾಡಿ ಎಂಬ ಉಲ್ಲೇಖ ಬರುತ್ತದೆ. ಈ ದೇವಾಲಯದ ಸುತ್ತ ಮುತ್ತ ಹಾಳುಗ್ರಾಮದ ಅವಶೇಷಗಳು ಹರಡಿರುವುದರಿಂದ ಹೂಜೆಹಾಳ ಗ್ರಾಮ ಇದೆಯಾಗಿರಬೇಕು. ಗ್ರಾಮ ಹಾಳಾದಾಗ ಅದರ ನೆನಪು ಈ ದೇವಾಲಯದ ಮುಖಾಂತರ ಮುಂದುವರೆದಿದೆ.

ಸಾಮಾಜಿಕವಾಗಿ

ಶಾಸನಗಳು ಅಂದಿನ ಸಮಾಜದ ಚಿತ್ರಣ ನೀಡುತ್ತವೆ. ಗ್ರಾಮದಲ್ಲಿ ಮಹಾಜನರು, ಸ್ಥಾನಾಚಾರ್ಯರು, ಮಹಾಪ್ರಧಾನ, ಸೇನಾಪತಿ, ಕುಶಲ ಕರ್ಮಿಗಳು, ಕೃಷಿಕರು, ವ್ಯಾಪಾರಸ್ಥರು ಮೊದಲಾದವರು ಪ್ರತ್ಯೇಕ ಕೇರಿಗಳಲ್ಲಿ ವಾಸಿಸುತ್ತಿದ್ದರು. ಇಲ್ಲಿಯ ಶಾಸನಗಳು ಬ್ರಾಹ್ಮಣರ ಓಣಿ, ಸೊಳೆಗೇರಿಗಳನ್ನು ಹೆಸರಿಸುತ್ತವೆ.

ಜಾತಿ-ಪಂಥವನ್ನು ಮರೆತು ಹಬ್ಬಹರಿದಿನಗಳನ್ನು ಒಟ್ಟಾಗಿ ಆಚರಿಸುತ್ತಿದ್ದರು. ಆ ವೇಳೆಯಲ್ಲಿ ಅನೇಕ ದಾನದತ್ತಿಗಳನ್ನು ಬಿಡುವ ಪದ್ಧತಿ ರೂಢಿಯಲ್ಲಿತ್ತು. ಶಾಸನಗಳು ಉಲ್ಲೇಖಿಸುವಂತೆ ಉತ್ತರಾಯಣ ಸಂಕ್ರಮಣ, ಕೃಷ್ಣಂಗಾರ ಚತುರ್ದಶಿ, ಸೋಮಪರಾಗ ಪುಣ್ಯಕಾಲ, ದ್ವಿತಿಯ ಶ್ರವಣ ಮಾರ್ಗಶಿರ, ಅಮವಾಸ್ಯೆ, ಸೂರ್ಯಗ್ರಹಣ, ದೀಪಾವಳಿ, ಯುಗಾದಿ, ಮಕರಸಂಕ್ರಾಂತಿ ಮೊದಲಾದ ಹಬ್ಬಗಳನ್ನು ಆಚರಿಸಲಾಗುತ್ತಿತ್ತು.

ಮಹಾಮಂಡಳೇಶ್ವರ ಎರಡನೆಯ ರಾಚಮಲ್ಲನು ಮಾರ್ಗ್ಗಶಿರದಮವಾಸ್ಯೆ ಸೂರ್ಯ ಗ್ರಹಣದಂದು ಕುರುಗೋಡಿನ ಶ್ರೀಸ್ವಯಂಭುದೇವರಿಗೆ ದಾನಕೊಟ್ಟಿದ್ದಾನೆ. ಇದೆ ಅರಸ ಕಾರ್ತ್ತಿಕ ಪುಣ್ಯಮಿ ಸೋಮವಾರ ಸೋಮಗ್ರಹಣದ ದಿನ ಶ್ರಿಪುರವನ್ನು ಅಗ್ರಹಾರವನ್ನಾಗಿ ಮಾಡುವ ಕಾಲದಲ್ಲಿ ಬಾಲಶಿವದೇವರ ಕಾಲುತೊಳೆದು ಸ್ವಯಂಭುದೇವರಿಗೆ ಮತ್ತೆ ಭೂದಾನ ಬಿಡುತ್ತಾನೆ.[21] ಬಸವರಾಜಯ್ಯ ಮಠದ ಅವರು ಇದನ್ನು ತಪ್ಪಾಗಿ ಅರ್ಥೈಯಿಸಿಕೊಂಡಂತೆ ಕಾಣುತ್ತದೆ. ಅವರು ಹೇಳುವಂತೆ ಅಗ್ರಹಾರಗಳನ್ನು ಕೇವಲ ಬ್ರಾಹ್ಮಣರಿಗಷ್ಟೆ ದಾನ ಕೊಟ್ಟಿಲ್ಲ. ಎರಡನೆಯ ರಾಚಮಲ್ಲ ಕೊಟ್ಟಲಜಿಂತೆ ಗ್ರಾಮವನ್ನು ಅಗ್ರಹಾರವನ್ನಾಗಿ ಮಾಡಿ ಬಾಲಶಿವಾಚಾರ್ಯನಿಗೆ ಕೊಟ್ಟಿದ್ದನೆಂದು ಹೇಳಿದ್ದಾರೆ.[22] ಇಲ್ಲಿ ಅಗ್ರಹಾರವನ್ನಾಗಿ ಮಾಡಿದ್ದು ಶ್ರೀಪುರವನ್ನು. ಆ ವೇಳೆಯಲ್ಲಿ ಕೊಟ್ಟಲಜಿನ್ತೆ ಗ್ರಾಮವನ್ನು ಸ್ವಯಂಭುದೇವರಿಗೆ ಕೊಡಲಾಗಿದೆ.

ಸಮಾಜದಲ್ಲಿ ಸಂಪ್ರದಾಯ ನಂಬಿಕೆಗಳು ಗಾಢವಾಗಿ ಬೇರೂರಿದ್ದವು. ರಾಚಮಲ್ಲನ ಮಹಾಪ್ರಧಾನನಾದ ಹಡಪವಳ ಬೇಚೆಯನು ಶಿವಸನ್ನಿಧಿ ಪಡೆದಾಗ, ಅವನ ಪತ್ನಿಯರಾದ ಬೈಳಿಯಕ್ಕ ಮೇಳ್ಪಾಣಿಯಕ್ಕರು ಅಗ್ನಿ ಪ್ರವೇಶ ಮಾಡಿದರು. ಆ ವೇಳೆಯಲ್ಲಿ ಮಣಿಯಾರು ಸ್ಥಳದಲ್ಲಿ ತುಂಗಭದ್ರೆ ಸ್ಥಳದಲ್ಲಿ ಸೂಗುರು ಮೇರೆಯಲ್ಲಿ ಅರಸನಲ್ಲಿ ವಿನಂತಿ ಮಾಡಿಕೊಂಡು ಭೂದಾನ ಕೊಟ್ಟರು. ಕುರುಗೋಡಕ್ಕೆ ಹತ್ತಿರವಿರುವ ಮಣ್ಣೂರು ಗ್ರಾಮ ತುಂಗಭದ್ರ ನದಿದಂಡೆಯಮೇಲಿದೆ. ಇವರಿಬ್ಬರು ತುಂಗಭದ್ರನ ನದಿ ದಂಡೆಗೆ ಬಂದು ಅಗ್ನಿ ಪ್ರವೇಶಮಾಡಿ ಅದೇ ಸ್ಥಳದಲ್ಲಿ ಭೂದಾನ ಬಿಟ್ಟಿದ್ದಾರೆ.[23]

ಅಂದಿನ ಜನರು ವಿವಿಧ ಸಾರ್ವಜನಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು. ಇದರಿಂದಾಗಿಯೇ ಸಾಮಾಜಿಕವಾಗಿ ಅನೇಕ ಕ್ರಾಂತಿಕಾರಿ ಬದಲಾವಣೇಗಳಾಗುತ್ತ ಬಂದಿವೆ. ಇದಕ್ಕೆ ಧರ್ಮವೂ ಕೂಡ ಪ್ರೇರಣೆ ನೀಡಿದೆ. ದೇವಾಲಯ ಮಠ, ಕೆರೆ-ಬಾವಿ, ಸತ್ರಗಳನ್ನು ನಿರ್ಮಿಸಿ ಅವುಗಳಿಗೆ ದಾನದತ್ತಿಗಳನ್ನು ಬಿಡುವ ಮೂಲಕ ತಮ್ಮ ಔದಾರ್ಯವನ್ನು ಮೆರೆದಿದ್ದಾರೆ. ದೇವಾಲಯ, ಮಠ, ಸತ್ರ, ಛತ್ರಗಳ ಮೂಲಕ ವಿದ್ಯಾದಾನಕ್ಕೆ ಪ್ರಚೋದನೆ ನೀಡಿದರೆ, ಕೆರೆ-ಬಾವಿಗಳ ಮೂಲಕ ನಾಡಿನ ಸಾಮಾಜಿಕ, ಆರ್ಥಿಕ ಪ್ರಗತಿಯುಂಟಾಗಿದೆ. ಕೋಳೂರಿನ ಚೌಡಯ್ಯನ ಕೆರೆ, ಕುರುಗೋಡಿನ ಪುಂಡರಿಕನ ಕೆರೆ, ಮಂಚಿಮರಸನಕೆರೆ, ಬಡಗಣರಳಿಯ ಕೆರೆ, ಕುಡತಿನಿಯ ಸೆಟ್ಟಿಯಕೆರೆ, ಗಂಜಿಗೆರೆ ಮೊದಲಾದವುಗಳನ್ನು ಶಾಸನಗಳು ಉಲ್ಲೇಖಿಸುತ್ತವೆ. ಕೋಳೂರಿನಲ್ಲಿ ರೇವಗಾವುಂಡನು ಚಾರು ಶಿವಗೃಹವಿರುವ ಸ್ಥಳದ ಕೆಲದಲ್ಲಿ ತಣ್ನೇಳಲ್ಗಳಿಂ ತಿಳಿನೀರಿಂದೊಡವಿದ ತಟಾಕವೊಂದಂ ಮುದದಿಂದ ಕಟ್ಟಿಸಿದನು.[24] ಅವನು ಒಂದು ಬಾವಿ, ನಾಲ್ಕು ಶಿವಗೃಹಗಳನ್ನು ಕಟ್ಟಿಸಿದ್ದಾನೆ. ಕುರುಗೋಡು ಪಟ್ಟದಲ್ಲಿ ಕಲ್ಲಿಸೇಟ್ಟಿ ಶೀತಳಬಾವಿಯನ್ನು ಅಗೆಸಿದ್ದ.[25] ಇವನು ನಿರ್ಮಿಸಿದ ಅರವಟ್ಟಿಗೆಗೆ ಬಳ್ಳಾರೆಯ ಅಜ್ಜರಸ ದತ್ತಿಬಿಟ್ಟಿದ್ದಾನೆ. ಈ ರೀತಿಯಾಗಿ ಸಾರ್ವಜನಿಕರಿಗೆ ಉಪಯುಕ್ತವಾಗಿ ಕೈಗೊಂಡ ಅನೇಕ ಕಾರ್ಯಗಳನ್ನು ಶಾಸನಗಳು ಹೊಗುಳುತ್ತವೆ.

ಆರ್ಥಿಕವಾಗಿ

ಸಮಾಜದ ಪ್ರಮುಖ ಅಂಗವಾದ ಆರ್ಥಿಕ ವ್ಯವಸ್ಥೆ ಪ್ರಾಚೀನ ಕಾಲದಲ್ಲಿ ಸೈನ್ಯದಷ್ಟೆ ಪ್ರಮುಖವಾಗಿತ್ತು. ಉಳಿದ ಕ್ಷೇತ್ರಗಳ ಸ್ಥಿತಿಗತಿ ಆರ್ಥಿಕತೆಯನ್ನು ಅವಲಂಭಿಸಿ ವ್ಯವಸ್ಥೆಗೊಂಡಿದ್ದವು. ಇದರಲ್ಲಿ ನೈಸರ್ಗಿಕ ಸಂಪನ್ಮೂಲಗಳಲ್ಲದೆ, ಅದರಿಂದ ಸದುಪಯೋಗ ಪಡಿಸಿಕೊಳ್ಳುವ ಕೃಷಿ ಮೊದಲ್ಗೊಂಡು ಅನೇಕ ವೃತ್ತಿಗಳ ಉತ್ಪಾದನೆಯನ್ನು ಒಳಗೊಂಡಿದೆ.

ಭೌಗೋಳಿಕ ಹಿನ್ನೆಲೆಯಲ್ಲಿ ಬೆಟ್ಟ, ಖನಿಜ, ಕಾಡು ಮತ್ತು ವಿವಿಧ ಮಣ್ಣಿನ ಸ್ವರೂಪಗಳನ್ನೊಳಗೊಂಡ ಭೂಮಿಯನ್ನು ಅನೇಕ ಬಗೆಯಾಗಿ ವಿಂಗಡಿಸಲಾಗಿದೆ. ಪ್ರಾಚೀನ ಶಾಸನಗಳು ಭೂಮಿಯನ್ನು ಸಾಮಾನ್ವಯಾಗಿ ಕೆಯಿ ಎಂದು ಕರೆದಿವೆ. ಮಣ್ಣಿನ ಸ್ವರೂಪವನ್ನು ಗಮನಿಸಿ ಇಲ್ಲಿಯ ಶಾಸನಗಳಲ್ಲಿ ತಕ್ಕಿಲ ಮತ್ತರು, ಸೌಳ್‌ಭೂಮಿ, ಏರಿಯಹೊಲ, ಕರಿಯಭೂಮಿ, ಕೆಂಗಾಡು, ಹರಳು ಮತ್ತರು. ಮುಂತಾಗಿ ಕರೆಯಲಾಗಿದೆ. ಭೂಮಿ ಊಳುವ ರೈತಾಪಿ ವರ್ಗವನ್ನು ಒಕ್ಕಲು ಮಕ್ಕಳೆಂದು ಹೆಸರಿಸಿದ್ದು, ಅವರನ್ನು ಧನದ ಧಾನ್ಯದ ಸೊಮ್ಮಿನ ಸೊಕ್ಕಿನಿಂದ ಮಾರ್ಗ್ಗಳದೊರೆ ನಮ್ಮೊಳೆಂಬ ಕುಡಿಯೊಕ್ಕಲ ಮಕ್ಕಳಿನೂರ್ಗ್ಗಳೊಪ್ಪುಗಂ ಎಂದು ವರ್ಣಿಸಲಾಗಿದೆ.[26]

ಭೂ ಒಡೆತನ ಸರಕಾರ, ಸಂಘಸಂಸ್ಥೆ, ದೇವಸ್ಥಾನ, ವ್ಯಕ್ತಿಗಳಿಗೆ ಸೇರಿತ್ತು. ಶಾಸನಗಳಲ್ಲಿ ಬರುವ ದೇವರ ಕೆಯ್, ಮುದ್ದೇಶ್ವರ ದೇವರ ತೋಟ, ಮಂಜೇಶ್ವರ ಕೆಯಿ, ಪರಂಜೋತಿ ದೇವರ ಕೆಯಿ-ತೋಟ, ಬೆಣಕನ ತೋಟ, ಮಲ್ಲಿಕಾರ್ಜುನ ದೇವರ ಕೆಯಿ-ಹೂದೋಟ, ಶಾಂತಮಲ್ಲಿಕಾರ್ಜುನ ದೇವರ ಬಾವಿ-ಹೂವಿನ ತೋಟ, ಸೂರ್ಯದೇವರ ಕೆಯ್, ತ್ರೈಪುರುಷದೇವರ ತೊಂಟ ಮುಂತಾಗಿ ಉಲ್ಲೇಖಗಳು ಬರುತ್ತವೆ.

ಕುಶಲಕರ್ಮಿಗಳಲ್ಲಿ ಬಡಗಿ, ಕಮ್ಮಾರ, ಶಿಲ್ಪಿ, ಕಂಚುಗಾರ, ಅರ್ಕಸಾಲಿ, ತೆಲ್ಲಿಗ, ನೇಕಾರ, ಚಮ್ಮಾರ ವಿವಿಧ ವರ್ಗಗಳು ಉತ್ಪಾದನೆಯಲ್ಲಿ ತೊಡಗಿಕೊಂಡಿದ್ದವು. ಉತ್ಪಾದನಾ ವಸ್ತುಗಳನ್ನು ವ್ಯಾಪಾರ ವೃತ್ತಿಯಾಗಿಸಿಕೊಂಡವರನ್ನು ಸೆಟ್ಟಿಗಳೆಂದುದ ಕರೆಯಲಾಗಿದೆ. ಇವರಲ್ಲಿ ಬಣಜಿಗ, ನಕರ, ಮುಮ್ಮರಿದಂಡ, ವಡ್ಡವ್ಯವಹಾರಿ, ನಾನಾದೇಶಿ, ಉಭಯನಾನಾದೇಶಿ, ಗವರೆ, ಗಾತ್ರಿಗ ಮೊದಲಾದ ಹೆಸರಿನಿಂದ ಗುರುತಸಿಕೊಂಡಿದ್ದಾರೆ. ಈ ವರ್ತಕರು ತಮ್ಮದೆ ಆದ ಸಂಘಗಳನ್ನು ಕಟ್ಟಿಕೊಂಡಿದ್ದರು. ಇದರಲ್ಲಿ ಅಯ್ಯಾವಳೆಯಯ್ನೂರ್ವರ ಸಂಘ ಪ್ರಮುಖವಾದದು. ಕುರುಗೋಡು ಪಟ್ಟಣ ಪ್ರಮುಖ ವ್ಯಾಪಾರ ಕೇಂದ್ರವಾಗಿತ್ತು. ಶ್ರೀಮಂತ ವರ್ಗಕ್ಕೆ ಸೇರಿದ ಇಲ್ಲಿಯ ಸೆಟ್ಟಿಗಳು ಶೈವ ಭಕ್ತರಾಗಿದ್ದರು. ಯಾರೊಬ್ಬರ ಪಂಗೆಗಂಜುತ್ತಿರಲಿಲ್ಲವಂತೆ ತೋಟಿಯಂದಡೆ ಕೋಟಿ ಲಾಭವೆಂದುಲಿಯುತ್ತಿದ್ದ ಇವರು ಭುವನದೊಳು ಕುಷ್ಟರಿಪು ಕುಳ ಸೈನ್ಯಸಾಧಕರಾಗಿದ್ದರು. ಗವರೇಶ್ವರನ ಆರಾಧಕರು, ವ್ಯವಹಾರ ಪ್ರವೀಣರು, ಪರಾಕ್ರಮಿಗಳು, ಪರೋಪಕಾರಶೀಲರು, ಸರ್ವಧರ್ಮ ಸಮಾನಬುದ್ಧಿಯುಳ್ಳವರು ಆಗಿದ್ದರು. ಇವರನ್ನು ಕುರಿತು ಶಾಸನ “ತತ್ಪುರವಾಸಿಗಳಪ್ಪ ಮುಂಮುರಿದಂಡಗಳು ಗವಱೇಶ್ವರ ಪದ ಪದ್ಮಷಟ್ಟರಣರುಂ ವಿಸ್ತೀರ್ಣ ವಸ್ತುಗುಣ ವಿನಿಹಿತಾ ಪಂಚಶತ ವೀರಶಾಸನಗುಣೋದ್ಧರಣರುಂ ನವರತ್ನವಾಹನಪರೀಕ್ಷಾನವದ್ಯರುಂ ಶರಣೆಂದು ಕಂಡರಂ ಕರುಣದಿಂ ಕಾವರಂ ಬಿರುದಿಂಗೆ ಬೀಗುವರ ಹರಣವಂ ಸೋವರಂ ತೋಟಿಯೆಂದೆಡೆ ಕೋಟಿ ಲಾಭವೆಂದುಲಿವರುಂ ಆಟಂದಬವರಕ್ಕೆ ನಾಟಕಂ ನಲಿವರುಂ ಅಯ್ಯಾವೊಳೆಯ ತಳದಿನಿದುವೆನೆರ್ಗ್ಗಿೞುದೆನಿಪರಯ್ಯ ಮಾದ್ವಾರಾವತೀಪುರಕೆ ಕುಱುವೆನಿಪ ಕುಱುಗೋಡು ತಳದೊಳಗೆ ತಳರದಯ್ನೂರ್ವ್ವರುಂ ಎಂದು ವರ್ಣಿಸಿದೆ.[27]

ಹಾವಿನಾಳ ಕಲ್ಲಿಸೆಟ್ಟಿ ಅಥವಾ ಕಲಿದೇವ ಸೆಟ್ಟಿ ಪರಮ ಶಿವಭಕ್ತನಾಗಿದ್ದ ಇವನ ಪೂರ್ವಿಕ ಕೇತಿಸಿಟ್ಟಿ ಸಿಂದವಾಡಿ ನಾಡಿನ ಮುದಿನೂರಿನವನಾಗಿದ್ದು “ಮುಗುಳ ಬುದ್ದಿ” ಎಂಬ ಅಡ್ಡ ಹೆಸರನ್ನು ಪಡೆದಿದ್ದ. ಇಂದಿನ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಮುದನೂರು ಆಗಿರಬೇಕು. ಕಲ್ಲಿಸೆಟ್ಟಿಯ ಅನುಪಮ ವ್ಯಕ್ತಿತ್ವ ವ್ಯವಹಾರ ಧರ್ಮವನ್ನು ಶಾಸನ “ಸತ್ಯದ ಬಿತ್ತು ಸಾಹಸದ ಸಾಗರವೊಳ್ಗುಣದಾಗರಂ ಜನಸ್ತುತ್ಯತೆಯೊಳ್ಪು ಧರ್ಮದ ತವರ್ಮ್ಮನೆ ಮಾಂತನದಿರ್ಕ್ಕೆದಾಣವೌಚಿತ್ಯದ xxxಜನದ ಸಯ್ಪುನೆಗಳ್ತೆಯ ಲೋಕದೇಳ್ಗೆ ಯೌನ್ನತ್ಯದ ಗೊತ್ತೆನ್ನುತ್ತೆಧರೆ ಬಣ್ನಪುದೀ ಕಲಿದೇವಸೆಟ್ಟಿಯಂ ಭಕ್ತಿಯ ಬಂಡ ಮೊದಲ್ ನಿಜ ಭಕ್ತಿಯೆ ಕೋಟಾನುಕೋಟಿಲಾಭಂ ಶಿವಸದ್ಭಕ್ತಿಯ ಬೆಳಸಿ ಭಕ್ತ ಕಲಿದೇವ ಸೆಟ್ಟಿ ನೆಗಳ್ದಂ ಧರೆಯೊಳ್ ಚಿನ್ತಾಮಣಿಲಿಂಗುಂ ಹೃದಯಾನ್ತರದೊಳ್ನಿನ್ದು ಕಲ್ಲಿಸೆಟ್ಟಿಗೆ ದಯೆಯಿಂದಿನ್ತು ನಡೆಯಿನ್ತು ನುಡಿಯೆಂದಿತು ಸದಾ ಶಿಕ್ಷಿಸುತ್ತೆ ರಕ್ಷಿಸುತ್ತಿರ್ಪ್ಪಂ”.[28]

ಮೇಲಿನ ಮಾತುಗಳಿಂದ ೧೨ನೆಯ ಶತಮಾನದಲ್ಲಿ ಪ್ರಭಾವ ಪ್ರಚಾರ ಬೀರುತ್ತಿದ್ದ ಶರಣಧರ್ಮ ಕಲ್ಲಿಸೆಟ್ಟಿಯ ಮೇಲೆ ಆದದ್ದು ತಿಳಿಯುತ್ತದೆ. ಈ ವರ್ಣನೆಯನ್ನು ಗಮನಿಸಿದ ಡಾ. ಎಂ.ಎಂ.ಕಲಬುರ್ಗಿಯವರು ಈ ವ್ಯಕ್ತಿ ಹಾವಿನಾಳ ಕಲ್ಲಯ್ಯನಾಗಿರಬಹುದೆಂಬ ಭಾವನೆ ಮೂಡುತ್ತದೆಂದು ಹೇಳಿದ್ದಾರೆ.[29] ಆದರೂ ಸೊಲ್ಲಾಪುರದ ಹಾವಿನಾಳ ಕಲ್ಲಯ್ಯ ಕುರುಗೋಡದ ಹಾವಿನಾಳ ಕಲ್ಲಿಯ್ಯಗಳಲ್ಲಿ ಸಂಬಂಧ ಕಲ್ಪಿಸಲು ಆಧಾರಗಳಿಲ್ಲವೆಂದು ಹೇಳಿದ್ದಾರೆ. ಮಹಾಶಿವಶರಣ ಕಲ್ಲಯ್ಯ ಸೊಲ್ಲಾಪುರದ ನೆರೆಯಲ್ಲಿರುವ ಹಾವಿನಾಳದವನೆಂದು ಆ ಪ್ರದೇಶದಲ್ಲಿ ಪ್ರಬಲವಾಗಿ ಬೇರೂರಿದೆ. ವಿಪ್ಲವದ ಮೂಲಕ ಕಲ್ಯಾಣವನ್ನು ತ್ಯಜಿಸಿ ಕುರುಗೋಡು ಅರಸರ ಆಶ್ರಮಕ್ಕೆ ಬಂದಿರಬಹುದೆಂದು ಊಹಿಸಲು ಅವಕಾಶಗಳಿಲ್ಲ. ಕಾರಣ ಇವನ ಪೂರ್ವಿಕರು ಮುದಿನೂರಿನವರೆಂದು ಹೇಳಿಕೊಂಡಿದ್ದಾನೆ. ಇಲ್ಲಿ ಕರೆಯಲಾದ ಹಾವಿನಾಳವೂ ಕೂಡ ಹಾವಿನಾಳ-ವೀರಾಪುರ ಎಂಬ ಗ್ರಾಮ ಕುರುಗೋಡು ಪಕ್ಕದಲ್ಲಿಯೇ ಇದೆ. ಹೀಗಾಗಿ ಅಂದಿನ ಕಾಲದಲ್ಲಿ ಪ್ರಮುಖ ಪಟ್ಟಣವಾದ ಕುರುಗೋಡ ಹತ್ತಿರದ ಹಾವಿನಾಳಕ್ಕೆ ಆಂಧ್ರದಿಂದ ಬಂದು ನೆಲಸಿದಂತೆ ಕಾಣುತ್ತದೆ. ಇದರಿಂದ ಹಾವಿನಾಳ ಕಲ್ಲಯ್ಯ ಮತ್ತು ಕಲ್ಲಿಸೆಟ್ಟಿಯರು ಬೇರೆ ಬೇರೆಯಾಗಿದ್ದರೆಂದು ಸ್ಪಷ್ಟವಾಗುತ್ತದೆ. ಕುರುಗೋಡು ಕಲ್ಲಿಸೆಟ್ಟಿಯ ವಂಶಾವಳಿ ಈ ರೀತಿಯಾಗಿದೆ.

25_290_KRGD-KUH

ಕುರುಗೋಡಿನ ಮುದ್ದರಸ ಗೌಡಸ್ವಾಮಿಯೂ, ವಡ್ಡಾಚಾರ ಗುಡ್ಡಶಾಸ್ತ್ರನ್ವೀತನಾದ ವಡ್ಡ ವ್ಯವಹಾರಿಯಾಗಿದ್ದ. ಕೌಂಡಿಲ್ಯ ಗೋತ್ರಕ್ಕೆ ಸೇರಿದ ಮುದ್ದರಾಜನು ಪರಮ ಶಿವಭಕ್ತ ಹಿರಿಯ ಅಣ್ಣ ಸಾಯಿದೇವನಿಗೆ ವಿಧೇಯನಾಗಿದ್ದ. ಕುರುಗೋಡಿನಲ್ಲಿ ತನ್ನ ಹೆಸರಿನ ಶಿವ ದೇವಾಲಯವನ್ನು ಕಟ್ಟಿಸಿದ. ಅವನನ್ನು ಕುರಿತು “ಹರಶರಣೆಂಬಂ ಭಕ್ತರ ಕರುಣವೆ ಶರಣೆಂಬ ಶಿವನಡಿಂಗರನೆಂಬಂ ಹಿರಿಯಣ್ಣ ಸಾಯಿದೇವನ ಪರಮಾಜ್ಞೆಯನೆ ತಾಳ್ದಿದನಂ ಮುದ್ದರಸ” ಎಂದಿದೆ.[30] ಮುದ್ದರಸನ ವಂಶಾವಳಿ ಇಂತಿದೆ.

26_290_KRGD-KUH

 

[1] ಸೌ.ಇ.ಇ., IX-i, ೫೩, ೯ನೇ, ಶ. ಕುರುಗೋಡು (ಬಳ್ಳಾರಿ ತಾ.)

[2] ಅದೆ, ೬೭, ೯೪೭, ಕುಡುತಿನಿ (ಬಳ್ಳಾರಿ ತಾ.)

[3] ಅದೆ, ೧೫೯, ಕುಡುತಿನಿ (ಬಳ್ಳಾರಿ ತಾ.)

[4] ಅದೆ, ೧೬೪, ೧೦೯೮, ಕುಡುತಿನಿ (ಬಳ್ಳಾರಿ ತಾ.)

[5] ಎ.ಇ., XIV, ಪು. ೨೬೫

[6] ಅದೆ, ಪು. ೨೭೦

[7] ಸೌ.ಇ.ಇ., IX-i, ೨೯೬, ೧೧೭೬, ಕುರುಗೋಡು (ಬಳ್ಳಾರಿ ತಾ.)

[8] ಅದೆ, ೨೯೭, ೧೧೭೭, ಕುರುಗೋಡು (ಬಳ್ಳಾರಿ ತಾ.)

[9] ಅದೆ

[10] ಅದೆ, ೨೯೬, ೧೧೭೬, ಕುರುಗೋಡು (ಬಳ್ಳಾರಿ ತಾ.)

[11] ಅದೆ

[12] ವಿಶ್ವನಾಥ್, ೧೯೯೬, ಸಕಲೇಶಪುರ ಪರಿಸರದ ಸ್ಥಳನಾಮಗಳು, ಪು.೧೧೫, ಮೈಸೂರು

[13] ಎ.ಇ., XIV, ಪು. ೨೭೯

[14] ಸೌ.ಇ.ಇ., IX-i, ೨೪೯, ೧೧೪೭, ಕೋಳೂರು (ಬಳ್ಳಾರಿ ತಾ.)

[15] ಎ.ಇ., XIV, ಪು. ೨೬೫

[16] ಸೌ.ಇ.ಇ., IX-i, ೨೯೭, ೧೧೭೭, ಕುರುಗೋಡು (ಬಳ್ಳಾರಿ ತಾ.)

[17] ಅದೇ

[18] ಎ.ಇ., XIV, ಪು. ೨೬೫

[19] ಸೌ.ಇ.ಇ., IX-i, ೨೫೩, ೧೧೪೯, ಓರವಾಯಿ (ಬಳ್ಳಾರಿ ತಾ.)

[20] ಕ.ವಿ.ವಿ.ಶಾ.ಸಂ.೧, ಶಾ.ಸಂ. ೧೩, ೧೪, ಕುರುಗೋಡು (ಬಳ್ಳಾರಿ ತಾ.)

[21] ಎ.ಇ., XIV, ಪು.೨೬೫

[22] ಚನ್ನಬಸವಯ್ಯ ಹಿರೇಮಠ, ೧೯೯೫, ಕುರುಗೋಡು ಸಿಂದರು ಒಂದು ಅಧ್ಯಯನ ಪು.೧೫೩, ಕೊಪ್ಪಳ

[23] ಎ.ಇ., XIV, ಪು.೨೬೫

[24] ಸೌ.ಇ.ಇ., IX-i, ೨೪೯, ೧೧೪೭, ಕೋಳೂರು (ಬಳ್ಳಾರಿ ತಾ.)

[25] ಅದೇ, ೨೯೬, ೧೧೭೬, ಕುರುಗೋಡು (ಬಳ್ಳಾರಿ ತಾ.)

[26] ಅದೇ, ೨೯೭, ೧೧೭೭, ಕುರುಗೋಡು (ಬಳ್ಳಾರಿ ತಾ.)

[27] ಅದೆ, ೨೯೬, ೧೧೭೬, ಕುರುಗೋಡು (ಬಳ್ಳಾರಿ ತಾ.)

[28] ಅದೆ

[29] ಕಲಬುರ್ಗಿ ಎಂ.ಎಂ., ೧೯೭೦, ಶಾಸನಗಳಲ್ಲಿ ಶಿವಶರಣರು ಪು. ೮೯-೯೦, ಧಾರವಾಡ

[30] ಸೌ.ಇ.ಇ., IX-i, ೨೯೭, ೧೧೭೭, ಕುರುಗೋಡು (ಬಳ್ಳಾರಿ ತಾ.)