ಅಲ್ಲಿಯ ಇನ್ನೊಬ್ಬ ವರ್ತಕ ಮಲ್ಲಿಸೆಟ್ಟಿಯನ್ನು ಮಹಾವಡ್ಡ ವ್ಯವಹಾರಿಯೆಂದು ಕರೆಯಲಾಗಿದೆ. ಇಲ್ಲಿ ಬರುವ ವಡ್ಡವ್ಯವಹಾರಿ, ಮಹಾವಡ್ಡವ್ಯವಹಾರಿ ಅವರ ಸ್ಥಾನಮಾನವನ್ನು ನಿರ್ಧರಿಸುತ್ತಿರಬಹುದು. ಇವನು ವಿಭೂತ ಕುಲಜಾತ, ಉದಾರಿ ಭಾಸುರ ಮಣಿಯೆನಿಸಿದ್ದ. ಬಾಗಿಸೆಟ್ಟಿಯ ಹಿರಿಯಮಗ ಮಣಿಸೆಟ್ಟಿ ಕುರುಗೋಡು ಪಟ್ಟಣದಲ್ಲಿ ತನ್ನ ಹೆಸರಿನ ಶಿವದೇವಾಲಯವನ್ನು ಕಟ್ಟಿಸಿ ಭೂದಾನ ಮಾಡಿದ್ದಾನೆ.

ಕುರುಗೋಡಿಗೆ ಹತ್ತಿರವಿರುವ ಓರವಾಯಿಯಲ್ಲಿ ಅಂಬಲಿಯೈಚ ಎಂಬ ವ್ಯಾಪಾರಸ್ತನಿದ್ದ.

[1] ಅವನು ಕುಂತುನಿಭ ರೂಪಗುಣವಂತನೆನಿಸಿದ್ದ ಈತನ ಮಗ ಏಚನು ಓರವಾಯಿಯಲ್ಲಿ “ಕನಕಾದ್ರಿಯನಲ್ಲಿಗಡದು ಕಂಡರಿಸಿದವೊಲ್ ವಿಘ್ನೇಶ್ವರ”ನ ಪ್ರತಿಷ್ಠೆ ಮಾಡಿ ಅದಕ್ಕೆ ಸಮಸ್ತ ಧನವನ್ನು ನೀಡಿದ್ದಾನೆ. ದೇವಬ್ರಾಹ್ಮಣರ ಪಾದಾರಾಧಕರೆಂದು ಕರೆದುಕೊಂಡಿರುವ ಇವರ ವಂಶಾವಳಿ ಇಂತಿದೆ.

27_290_KRGD-KUH

ಹೇಗೆ ಇವರು ವ್ಯಾಪಾರಸ್ತರಾಗಿ ವಿಭಾಗದ ಆಡಳಿತಾಧಿಕಾರಿಗಳಾಗಿ ದಾನ ಧರ್ಮ ಮಾಡುವ ಮೂಲಕ ಸಮಾಜದಲ್ಲಿ ಪ್ರಭಾವ ಬೀರಿದ್ದರು.

ಧಾರ್ಮಿಕವಾಗಿ

ಕುರುಗೋಡು ಪಟ್ಟಣದಲ್ಲಿ ಕಂಡುಬಂದಿರುವ ಅವಶೇಷಗಳನ್ನು ಗಮನಿಸಿದರೆ ಶೈವ ಧರ್ಮ ಮುಂಚೂಣಿಯಲ್ಲಿತ್ತು. ೧೨ನೆಯ ಶತಮಾನದಲ್ಲಿ ಉಗಮಗೊಂಡ ಶರಣುಧರ್ಮ ಇಲ್ಲಿ ಹೆಚ್ಚು ಪ್ರಚಾರ ಪಡೆದುಕೊಂಡಿತ್ತು. ಅನೇಕ ವರ್ಷಗಳವರೆಗೆ ಆಳ್ವಿಕೆಮಾಡಿದ ಸಿಂದರು, ಅವರ ಅಧಿಕಾರಿಗಳು, ವ್ಯಾಪಾರಸ್ತರು ಇದನ್ನು ಬೆಳೆಸಿ ಪೋಷಿಸುವುದಕ್ಕೆ ಕಾರಣಕರ್ತರಾಗಿದ್ದಾರೆ. ಬಳ್ಳಾರಿ ಪ್ರದೇಶದಲ್ಲಿ ಮಹಾಮಂಡಳೇಶ್ವರರಾಗಿದ್ದ ನೊಳಂಬರ ನಂತರ ಪಾಂಡ್ಯರು ಆಳ್ವಿಕೆ ಮಾಡಿದರು. ಮಹಾಮಂಡಳೇಶ್ವರರಾಗಿದ್ದ ನೊಳಂಬರ ನಂತರ ಪಾಂಡ್ಯರು ಆಳ್ವಿಕೆ ಮಾಡಿದರು. ಚಾಲುಕ್ಯರ ಸಾಮ್ರಾಜ್ಯವನ್ನು ಕಲಚುರಿಗಳು ಹಿಡಿದುಕೊಂಡಾಗ ಪಾಂಡ್ಯರು ತಮ್ಮ ಅಧಿಕಾರವನ್ನು ಕಳೆದಕೊಳ್ಳಬೇಕಾಯಿತು. ಆದರೆ ಇದೇ ಸಾಲಿಗೆ ಸೇರಿದ ಸಿಂದರು ಮಹಾಮಂಡಳೇಶ್ವರರಾಗಿ ಮುಂದುವರೆದರು. ಇದಕ್ಕೆ ಕಲಚುರಿಗಳಿಗೆ ನಿಷ್ಟರಾಗಿದ್ದುದು ಒಂದು ಕಾರಣವಾದರೆ, ಇನ್ನೊಂದು ಕಾಯಕ ಜೀವಿಗಳ ಪರವಾಗಿ ಸ್ಥಾಪನೆಗೊಂಡ ಶರಣಧರ್ಮದ ಕಡೆಗೆ ವಾಲಿ ಸಾಮಾನ್ಯ ಪ್ರಜೆಗಳ ವಿಶ್ವಾಸಕ್ಕೆ ಪಾತ್ರರಾದರು. ಇದೂ ಕೂಡಾ ಬಹಳ ದಿವಸ ನಿಲ್ಲಲಿಲ್ಲ. ಕಳಚುರಿಗಳ ಆಡಳಿತ ಕೊನೆಗೊಂಡು ಹೊಯ್ಸಳರು ಅಧಿಕಾರವನ್ನು ಸ್ಥಾಪಿಸಿದಾಗ ಸಿಂದರು ತಮ್ಮ ಸ್ಥಾನ ಕಳೆದುಕೊಳ್ಳಬೇಕಾಯಿತು.

ಶೈವಧರ್ಮ

ಈ ಗ್ರಾಮದಲ್ಲಿ ಶೈವ ಧರ್ಮಕ್ಕೆ ಸಂಬಂಧಿಸಿದ ದೇವಾಲಯಗಳು ಹೆಚ್ಚಿನ ಪ್ರಮಾಣದಲ್ಲಿವೆ. ಇವುಗಳ ಶೈಲಿ ಒಂದೇ ರೀತಿಯಾಗಿರುವುದನ್ನು ಗಮನಿಸಿದರೆ ಇವೆಲ್ಲವೂ ಸಿಂದರ ಆಳ್ವಿಕೆಯ ಕಾಲದಲ್ಲಿಯೇ ರಚನೆಯಾಗಿರಬೇಕು. ದೇವಾಲಯಗಳನ್ನು ಕಟ್ಟಿಸಿ ಅವುಗಳ ವ್ಯವಸ್ಥೆಯನ್ನು ನೋಡಿಕೊಳ್ಳಲು ಕಾಳಾಮುಖ ಯತಿಗಳನ್ನು ನೇಮಕ ಮಾಡಲಾಗುತ್ತಿತ್ತು. ಬಳ್ಳಾರಿ ಪ್ರದೇಶದಲ್ಲಿ ಈ ಕಾಳಾಮುಖರನ್ನು ಉಲ್ಲೇಖಿಸುವ ಕ್ರಿ.ಶ. ೧೦೩೩ರ ದಮ್ಮೂರು. ಕಗ್ಗಲ್ಲು ಶಾಸನ ಪ್ರಾಚೀನವಾದುದು. ಇದರಲ್ಲಿ ಮಹಾದೇವ ದೇವರ ಸ್ಥಾನಾಚಾರ್ಯ ಉತ್ತಮರಾಶಿ ಪಂಡಿತರಿಗೆ ದಾನ ಕೊಡಲಾಗಿದೆ. ಇದರ ನಂತರ ಕುರುಗೋಡು ಪಕ್ಕದಲ್ಲಿರುವ ಓರವಾಯಿಯ ಕ್ರಿ.ಶ. ೧೦೩೬ರ ಶಾಸನದಲ್ಲಿ ತ್ರಿಲೋಕ ಪಂಡಿತರ ಸಿದ್ಧಯ್ಯನ ಉಲ್ಲೇಖವಿದೆ.[2] ಕ್ರಿ.ಶ. ೧೧೪೯ರ ವೇಳೆಯಲ್ಲಿ ಓರವಾಯಿಯ ಕಲಿದೇವ ದೇವಾಲಯದ ಸ್ಥಾನಚಾರ್ಯನಾಗಿ ಭೀವರಾಶಿ ಪಂಡಿತನಿದ್ದ.[3] ಇವನು ಚಳೇಶ್ವರ ಪಂಡಿತರ ಮಕ್ಕಳೆಂದು ಹೇಳಿಕೊಂಡಿದ್ದಾನೆ. ಶಾಸನ ಇವನನ್ನು ಕುರಿತು “ಯಮನಿಯಮಧ್ಯಾನಧಾರಣ ಮೋನಾನುಷ್ಠಾಣ ಜಪಸಮಾಧಿಶೀಲ ಸಂಪನರುಂ ಗುರದೇವದ್ವಿಜಪೂಜಾಗುಣೋತ್ಪಂನರುಂ ಲಾಕುಳಾಗಮಸಮಯ ಸಮುದ್ಧರಣರುಂ ಯಂತ್ರಮಂತ್ರೋದ್ಧರಣ ಪ್ರವೀಣರುಂ ಸಕಲದರುಶನಾಗಮಾನಗಮಾರ್ತ್ಥಕೋವಿದರುಂ ಶ್ರೀಯೋರುವಾಯ ಕಲಿದೇವ ಲಬ್ಧವರ ಪ್ರಸಾದರಪ್ಪ” ಎಂದು ಹೇಳಿದೆ. ಓರವಾಯಿಯ ಕಲಿದೇವ ದೇವಾಲಯದೊಂದಿಗೆ ಕುತನೂರ ವಿರೂಪಾಕ್ಷ ದೇವರ (ದೋ) ನೂರxx ಳ ದೇವರ ಮತ್ತು ಕುರುಗೋಡು ಭೋಗೇಶ್ವರ ದೇವರ ಸ್ಥಾನವನ್ನೂ ನೋಡಿಕೊಳ್ಳುತ್ತಿದ್ದ.

ಕುರುಗೋಡು ಶ್ರೀ ಸ್ವಯಂಭುದೇವರ ಸ್ಥಾನಾಚಾರ್ಯನಾಗಿ ಬಾಲಶಿವಾಚಾರ್ಯನಿದ್ದ.[4] ಅವನನ್ನು ಕುರಿತು ಶಾಸನ ಶಿವಪೂಜಾ ತತ್ಪರನಾದ ಇವನು “ಆ ಲಕುಳೀಶ್ವರಾಗಮ ಕಾಳಾ (ಲಾ) ಮುಖ ದರ್ಶನಂಗಳನ್ತಾಳ್ದಿ ತಪೋಲೀಲೆಗೆ ಮೈವಾಂತಿತರ್ಪ್ಪಂ ಬಾಲಶಿವಾಚಾರ್ಯ ವರ್ಯ್ಯನಗಣಿತ ಧೈರ್ಯನ್” ಎಂದಿದೆ. ಕ್ರಿ.ಶ. ೧೧೭೬ರಲ್ಲಿ ಕಲ್ಲಿಸೆಟ್ಟಿ ಎಂಬುವನು ಕುರುಗೋಡಿನಲ್ಲಿ ಪ್ರತಿಷ್ಠಾಪಿಸಿದ ಕಲ್ಲೇಶ್ವರ ದೇವಾಲಯಕ್ಕೆ ಅಮೃತರಾಶಿ ದೇವರು ಸ್ಥಾನಾಚಾರ್ಯನಾಗಿದ್ದ.[5] ಅವನನ್ನು “ಶಿವಶಕ್ತಿಸುತಂ ಕಲಿದೇವರಾಂಘ್ರಿಸರೋಜ ಪೂಜಕಂ ಸಕಲಗುಣೋದ್ಭವ ಕಾಳಾಮುಖತಿಳಕಂ ಭುವನಸ್ತುತನೆನಿಪನಮೃತರಾಶಿ ಮುನಿಂದ್ರಂ ಅಮೃತಗುಣನಮೃತಮಾನಸ ಮೃತೋತ್ತಮವಾಣಿಯ ಮೃತಹಸ್ತಾಂಬು ಜನನ್ತಮ್ರಿತಮತಿಯ ಮೃತಹಿಮಾಪ್ರಮಿತ ನೆನಿಪ್ಪಮೃತರಾಶಿಮುನಿಕ್ರಿತಕೃತ್ಯಂ” ಎಂದು ವರ್ಣಿಸಲಾಗಿದೆ.

ಕುರುಗೋಡು ಸಿಂದ ಅರಸರಲ್ಲಿ ಮೊದಲನೆಯ ರಾಜಮಲ್ಲ ಮತ್ತು ಎರಡನೆಯ ರಾಜಮಲ್ಲರು ಮಹಾಶಿವಭಕ್ತರು. ಮೊದಲನೆಯ ರಾಚಮಲ್ಲನನ್ನು ಶಾಸನಗಳು ಶಿವಪಾದ ಶಿಖಾಮಣಿ, ಶಿವೈಕ್ಯ ಚೂಡಾಮಣಿ, ಅರ್ಚಿತ ಶಿವಪಾದನೆಂದಿವೆ. ವಚನಕಾರ ಉಳಿಯಮೇಶ್ವರ ಚಿಕ್ಕಯ್ಯನಿಗೆ ದಾನ ಬಿಡುವಾಗ ಶಿವಪಾದ ಶೇಖರ ಮಹೇಶ್ವರಂ ಎಂದು ವರ್ಣಿತನಾಗಿದ್ದಾನೆ. ಬಕ್ತರ ಪಿರಿದು ಮನ್ನಿಸುತ್ತ ಅನೇಕ ದಾನದತ್ತಿಗಳನ್ನು ಬಿಡುವ ಮೂಲಕ ಅವರನ್ನು ಸಂತೃಪ್ತಿ ಪಡಿಸುತ್ತಿದ್ದನು. ಈ ರಾಚಮಲ್ಲನನ್ನು ಮೆಚ್ಚಿಕೊಂಡ ಶಿವನ್ನು ತನ್ನ ಪರಿವಾರದೊಂದಿಗೆ ಬಂದು ಪ್ರತ್ಯಕ್ಷನಾದನಂತೆ. ಆಗ ರಾಚಮಲ್ಲನು ಮಹಾವಿಭೂತಿಯಿಂದ ಗಣಾಡಂಬರವಂ ಮಾಡಿ ಶಿವಾರ್ಚನೆಯನಾಡಿ ಶಿವನಲ್ಲಿ ತನ್ನ ಶರೀರವನ್ನು ಬೆರಸಿ ಕುರುಗೋಡು ಪಟ್ಟಣದ ಸ್ವಯಂಭುದೇವರ ಪಶ್ಚಿಮಾಭಿಮುಖದೊಳ್ ಬಂದುನಿಂದು ಸಕಳ ಲೋಕಕ್ಕೆ ಕೌತುಕಮಾಗಿ ಲಿಂಗಮೂರ್ತಿಯಿಂದುದ್ಭವಿಸಲು ಶ್ರೀಮದುದ್ಭವರಾಚಮಲ್ಲೇಶ್ವರನೆಂದು ಪೆಸರಂ ಪಡೆದನಂತೆ.[6] ಇಂದಿಗೂ ಈ ದೇವಾಲಯವು ರಾಚಮಲ್ಲ ದೇವಾಲಯವೆಂದು ಪ್ರಸಿದ್ಧಿ ಪಡೆದಿದೆ.

ಈತನ ಮೊಮ್ಮಗ ರಾಚಮಲ್ಲನಂತೆ ಶಿವಭಕ್ತನಾಗಿದ್ದ ಶಾಂತಲಿಂಗ ದೇಶಿಕ ತನ್ನ ಭೈರವೇಶ್ವರ ಕಾವ್ಯದ ಕಥಾಮಣಿಸೂತ್ರದ ರತ್ನಾಕರದಲ್ಲಿ ಗಂಡಗತ್ತರಿ ನಾಕಯ್ಯ ಚಿಕ್ಕರಾಚಮಲ್ಲ ಆ ರಾಚಮಲ್ಲಯ್ಯಗಳು ಕೂಡಿಕೊಂಡು ಪ್ರಚುರಾನಂದಾಬ್ದಿ ವೀಚೆಯಿಂದ ಗಂಡಗತ್ತರಿ ಕಾರ್ಯಕ್ಕೆ ಹೋಗುತ್ತಿದ್ದುನ್ನು ಪ್ರಸ್ತಾಪಿಸಿದ್ದಾನೆ.[7] ಇಮ್ಮಡಿ ರಾಮಮಲ್ಲನನ್ನು ಶಾಸನ “ಪೊಡವಿಯ ಸಮಸ್ತ ಭಕ್ತರ ನಡುವೆ ಮೃಡಂ ಮೆಚ್ಚಿ ನಿಚ್ಚವರವಂ ಕುಡಲಿರ್ಮ್ಮಡಿ ರಾಚಮಲ್ಲದೇವಂ ಪಡೆದ ನಿತ್ಯ ಪ್ರಸಾದ ರಾಜ್ಯಶ್ರೀಯಂ” ಎಂದಿದೆ.[8]

ಇಮ್ಮಡಿ ರಾಚಮಲ್ಲನ ಪಾದಪದ್ಮೋಪಜೀವಿಯಾದ ಮಹಾಪ್ರಧಾನ ಬೇಚಿರಾಜನು ಅಚ್ಚರಸನ ಪುತ್ರ. ಶಿವೈಕ್ಯಭಾವಿ ಕಾಶ್ಯಪಗೋತ್ರದವನಾದ ಇವನ ಮಹಿಮೆಯನ್ನು ಶಾಸನ “ಒಡೆಯನೋಡಲಂ ದೇವರ್ಗ್ಗೋಡನೆಡನೆ ನಿವೇದಿಸು(ತ್ತು) ಶಿವಸನ್ನಿಧಿಯಂ ಪಡೆದಂ ಲೋಕದೊಳೂರ್ವ್ವನೆ ಹಡಪವಳ ದಂಡನಾಯಕಂ ಬೇಚರಸಂ” ಎಂದಿದೆ.[9] ಈ ರೀತಿಯಾಗಿ ಶೈವಧರ್ಮವನ್ನು ಪೊಷಿಸುವಲ್ಲಿ ಸಿಂದ ಅರಸರು, ಪ್ರಧಾನರು, ವ್ಯಾಪಾರಸ್ತರು ಪ್ರಮುಖರಾಗಿ ಕಾಣಿಸುತ್ತಾರೆ.

೧೨ನೇಯ ಶತಮಾನದಲ್ಲಿ ನಿರ್ಮಾಣವಾದ ಏಕೈಕ ಜೈನ ಬಸದಿ ಗ್ರಾಮದಲ್ಲಿದೆ. ಶೈವಧರ್ಮ ಉಚ್ಛ್ರಾಯ ಸ್ಥಿತಿಯಲ್ಲಿದ್ದುದರಿಂದ ಇದರ ಉಲ್ಲೇಖ ಸಮಕಾಲೀನ ಶಾಸನಗಳಲ್ಲಿಲ್ಲ. ಮುಂದೆ ವಿಜಯನಗರ ಅರಸರ ಕಾಲದಲ್ಲಿ ಈ ಬಸದಿಯನ್ನು ಜೀರ್ಣೋದ್ಧಾರ ಮಾಡಿ ದಾನ ಬಿಟ್ಟ ಮಾಹಿತಿ ಲಭ್ಯವಾಗುತ್ತದೆ.

ದಾನ-ದತ್ತಿ

ದೇವಾಲಯ, ಮಠ, ಛತ್ರ, ಕೆರೆ, ಕಟ್ಟೆ, ಬಾವಿಗಳನ್ನು ಕಟ್ಟಿಸಿ ಅವುಗಳಿಗೆ ದಾನ ದತ್ತಿ ಬಿಡುವುದಕ್ಕೆ ಧಾರ್ಮಿಕ ಹಿನ್ನೆಲೆ ಕಾರಣ. ಇವುಗಳ ಮೂಲಕ ಪುಣ್ಯಗಿಟ್ಟಿಸಿ ಕೊಳ್ಳುವುದು, ಮೋಕ್ಷಸಂಪಾದಿಸುವುದು ಮಾನವನ ಮುಖ್ಯ ಗುರಿಯಾಗಿತ್ತು. ರಾಜ್ಯದ ಆರ್ಥಿಕ ಭದ್ರತೆಗೆ ತೆರಿಗೆ ಪ್ರಮುಖ ಆದಾಯವಾಗಿತ್ತು. ತೆರಿಗೆ ಸಂಗ್ರಹಕ್ಕಾಗಿ ಅನೇಕ ಅಧಿಕಾರಿಗಳನ್ನು ನೇಮಕ ಮಾಡಲಾಗುತ್ತಿತ್ತು. ಇವರು ಜನರಿಂದ ತೆರಿಗೆ ಸಂಗ್ರಹಿಸುವಾಗ ಅಲ್ಲಿಯ ದೇವಾಲಯಕ್ಕೂ ವಿದ್ಯೆಗೂ ದತ್ತಿಗಳನ್ನು ಕೊಡುತ್ತಿದ್ದರು. ಇತರರು ತಮ್ಮ ಆದಾಯದಲ್ಲಿ ಕೆಲವು ಪಾಲು ದತ್ತಿಕೊಡುವ ಮೂಲಕ ತೆರಿಗೆಯಿಂದ ವಿನಾಯತಿ ಪಡೆಯುತ್ತಿದ್ದರೆಂದು ತೋರುತ್ತದೆ.

ಮುಂಮುರಿದಂಡರಲ್ಲಿ ಒಬ್ಬನಾದ ಕಲ್ಲಿಸೆಟ್ಟಿ ಕಲಿದೇವರಿಗೆ ದೇವಾಲಯಕಟ್ಟಿಸಿ, ಅಂಗಭೋಗ-ರಂಗಭೋಗ, ಜೀರ್ಣೊದ್ಧಾರಕ್ಕೆ ಮತ್ತು ದೇವರ ಹಾಡುವಾತಂಗೆ ಭೂದಾನ ಮಾಡುತ್ತಾನೆ. ಬಳ್ಳಾರೆಯ ಅಜ್ಜರಸ ದೇವಾಲಯಕ್ಕೆ, ಅರವಟ್ಟಿಗೆಗೆ ಮತ್ತು ಪ್ರಾಣಿಗಳಿಗೆ ದಾನ ಕೊಟ್ಟಿದ್ದಾನೆ. ಇದೇ ದೇವಾಲಯಕ್ಕೆ ನಖರಂಗಳು ಹೊಂಗಳದಲ್ಲಿ ಕೊಟ್ಟಲ್ಲಿ ಭತ್ತ ಸೊಳಸೆ-೨ ಕೊಂಡಲ್ಲಿ ಸೊಳಸೆ -೨, ಮುಂಮುರಿದಂಡಗಳು ಹೊಂಗೆ ಕೊಟ್ಟಲ್ಲಿ ಕಾಣಿ-೧, ಕೊಂಡಲ್ಲಿ, ಕಾಣಿ-೧ನ್ನೂ, ತಂಬುಲಿಗೆ ಸಾಸಿರ್ವರು ಹೇರುಂಗೆಲೆ-೧೦೦, ಹೊರಗೆಲೆ-೫೦ ಕೊಟ್ಟಿದ್ದಾರೆ. ನಾಲ್ಕು ನಾಡುಗಳುಂ ನೆರೆದಾವನಾಡಲು ಹೇಱುದಡಂ ಕೋಣ-೧೦, ಎತ್ತು-೧೦, ಕತ್ತೆ-೧೦ ಅನ್ತು-೩೦ಕ್ಕೆ ಹಾರಿಕಾಯ ಸುಂಕವನ್ನು ಶ್ರೀಕಲಿದೇವರಿಗೆ ಕೊಡಲಾಗಿದೆ.

ಕುರುಗೋಡು ಪಟ್ಟಣ ಸ್ವಾಮಿಗಳೆಲ್ಲರೂ ಕೂಡಿ ತ್ರಿಕೂಟಾಲಯ ಕಟ್ಟಿಸಿ ಗವರೇಶ್ವರನನ್ನು ಪ್ರತಿಷ್ಠೆ ಮಾಡುತ್ತಾರೆ. ಇದಕ್ಕೆ ಗವರೆಗೆಳೆಲ್ಲರೂ ಕೂಡಿ ರಾಚಮಲ್ಲ ಮೊದಲಾದವರು ನಿತ್ಯ ನೈವೇದ್ಯ, ನಂದಾದೀಪಕ್ಕೆ ಭೂದಾನ ಬಿಟ್ಟಿದ್ದಾರೆ. ಇವರಲ್ಲಿ ಪರದೇಶಿಗಳು ಅಳವ ತೂಗುವಯಂಬರಂಗಳಲುಂ ಎಣಿಸುವ ದವಸಂ ಮಾರಿದಲ್ಲಿ ಕೊಟ್ಟ ಹೊಂಗೆ-೧, ಮುಂಮುರಿದಂಡಗಳು ಭಂಡ ತೂಗಿಸಿ ಕೊಟ್ಟಬೇಳೆ ಹೊಂಗೆ-೧, ನಾನಾದೇಶಿಗಳು ಸಮಸ್ತ ದಿವಸ ಮಾರಿದಲ್ಲಿ ಹೊಂಗೆ ಕೊಟ್ಟ ಕಾಣಿ-೨, ಮಾರಿದ ದವಸದಲು ಕೊಟ್ಟಲ್ಲಿ ಹೊಂಗೆ ಕೊಟ್ಟ ಕಾಣಿ-೨ ಪಟ್ಟಣದ ನಖರಂಗಳು ಕೊಂಡಲ್ಲಿ ವ-೨೧, ಅಂಗಡಿಯಲು ಹಾಸಿಯಲುಂ ಸಟ್ಟುಗ ಭತ್ತ, ಸಾಸಿರ್ವರು ಹೇರಿಂಗೆಲೆ-೧೦೦, ಹೊರಗೆ-ಲೆ-೫೦, ಲಾಡ, ಚೋಳ, ಮಳೆಯಾಳ, ತೆಲಂಗು, ಕ(೦)ನ್ನಡ ಸಮಸ್ತ ನಾನಾ ದೇಶಿಗಳು ಪೇಳಾವಿಗಸೆಟ್ಟಿ ಕೊಟ್ಟಾಯ ಕುದುರೆ ಹಾಗ-೧, ದೇವರಪುರದೊಳಗೆ ನಂದಾದೀವಿಗೆಗೆ ನಾಡುಗಳು ಕೊಟ್ಟ ಗಾಣ-೨, ಭೈರವದೇವರ ದೀವಿಗೆಗೆ ಗಾಣ-೧, ಕಮ್ಮಟದಲು ಹೊವ ಹೊಂಗೆದಳಕ್ಕೆ ಪೆ-೨, ಕಾ xxx ಕೊಂಬುಬೆಲ್ಲಕೆ ನೂರು ಕೊಂಡು ಬಿಟ್ಟರು. ಈ ತ್ರಿಕೂಟದಲ್ಲಿ ಮಲ್ಲಿಕಾರ್ಜುನ ದೇವರ ಪ್ರತಿಷ್ಠೆ ಮಾಡಿದ ಮಹಾವಡ್ಡ ವ್ಯವಹಾರಿ ಮಲ್ಲಿಸೆಟ್ಟಿ ಕೆಲವು ಭೂಮಿಗಳನ್ನು ದಾನ ಕೊಟ್ಟನು. ಅಲ್ಲದೆ ದೇವರ ನಂದಾದೀವಿಗೆಗೆ ಗಾಣ-೧, ಸಮಸ್ತ ನಾನಾದೇಶಿಗಳು ಕಟ್ಟಾಯ ಕುದುರೆಗೆ ವೀಸ-೨, ಕಾಣಿ-೨ನ್ನು ಮತ್ತು ಕೊಟ್ಟಲ್ಲಿ ಹೊಂಗ ಸೊಳಸ-೨, ಕೊಂಡಲ್ಲಿ ಸೊಳಸೆ-೨ನ್ನು ಕೊಟ್ಟರು. ಈ ದೇವಾಲಯದಲ್ಲಿ ಶ್ರೀಮತ್ಕೌಂಡಿನ್ಯ ಗೋತ್ರದ ಮುದ್ದರಾಜನು ಮುದ್ದೇಶ್ವರ ದೇವರ ಪ್ರತಿಷ್ಠೆಮಾಡಿ ಒಂದು ಹೂದೋಟವೂ ಸೇರಿ ಕೆಲವು ಭೂಮಿ ದಾನಕೊಟ್ಟನು. ೨ ಗಾಣ ಮತ್ತು ಕೊಟ್ಟಲ್ಲಿ ಹೊಂಗೆ ಸೊಳಸ-೨, ಕೊಟ್ಟಲ್ಲಿ ಸೊಳಸ-೨ನ್ನು ದಾನ ಮಾಡುತ್ತಾರೆ. ಈ ಮೂರು ದೇವರ ಪಾತ್ರ ಪಾವುಳಕ್ಕಾಗಿ ಪ್ರತ್ಯೇಕ ಭೂದಾನ ಮಾಡಿದ್ದಾರೆ.

ಕುರುಗೋಡು ಗ್ರಾಮದಲ್ಲಿ ಇನ್ನೊಂದು ಪ್ರಮುಖವಾದ ಸ್ವಯಂಭುದೇವರ ದೇವಾಲಯ. ಇದನ್ನು ಎರಡನೆಯ ರಾಚಮಲ್ಲನ ಪ್ರಧಾನ ಹಡಪವಳ ಬೇಚಿರಾಜ ಕಟ್ಟಿಸಿದನು. ಮೊದಲನೆಯ ರಾಚಮಲ್ಲನ ಕಾಲದಲ್ಲಿಯೇ ಕಟ್ಟಿದ ಈ ದೇವಾಲಯಕ್ಕೆ ಮೊಮ್ಮಗ ಎರಡನೆಯ ರಾಚಮಲ್ಲ ರಂಗಭೋಗ ನೈವೇದ್ಯ ಜೀರ್ಣೋದ್ಧಾರ ಚೈತ್ರ ಪವಿತ್ರ ಸ್ವಾಧ್ಯಾಯ ವೈಶೇಷಿಕ ವ್ಯಾಖ್ಯಾನ ಖಣ್ಡಿಕ ಶಿವಧರ್ಮಪುರಾಣ ಪಠಣಕ್ಕೆ ಕೆಲವು ಭೂಮಿಗಳನ್ನು ಮತ್ತು ಹೂದೋಟ, ೨-ಗಾಣಗಳನ್ನು ದಾನ ಕೊಟ್ಟಿದ್ದಾನೆ. ಶ್ರೀಪುರವನ್ನು ಅಗ್ರಹಾರವನ್ನಾಗಿ ಪರಿವರ್ತಿಸುತ್ತಾನೆ. ಈ ಅವಧಿಯಲ್ಲಿ ಸ್ವಯಂಭುದೇವರ ಸ್ಥಾನಚಾರ್ಯ ಬಾಲಶಿವಾ ಚಾರ್ಯನಿಗೆ ಕೊಟ್ಟಲಜಿನ್ತೆ ಗ್ರಾಮ ದಾನಕೊಟ್ಟನು.

ವಿಜಯನಗರ ಅರಸರ ಆಳ್ವಿಕೆಯ ಕಾಲದಲ್ಲಿ ನಿರ್ಮಾಣವಾದ ಮತ್ತು ಈ ಮೊದಲೇ ಕಟ್ಟಲ್ಪಟ್ಟ ಕೆಲವು ದೇವಾಲಯಗಳಿಗೆ ದಾನ-ದತ್ತಿ ಬಿಡಲಾಗಿದೆ. ಕ್ರಿ.ಶ. ೧೫೧೨ರಲ್ಲಿ ಕುರುಗೋಡಿನ ಮಲ್ಲಪನಾಯಕರ ಹೆಂಡತಿ ಬಲ್ಲಕುಂದೆ ಮಲ್ಲಮ್ಮಳು ೧೨ನೆಯ ಶತಮಾನದಲ್ಲಿ ನಿರ್ಮಾನವಾದ ಹೂಜೆವಾಳ ಶಾಂತಮಲ್ಲಿಕಾರ್ಜುನ ದೇವಾಲಯ ಮತ್ತು ಬಾವಿಯನ್ನು ಜೀರ್ಣೋದ್ಧಾರ ಮಾಡಿಸಿ ಅದಕ್ಕೆ ತೋಟ ದಾನ ಮಾಡುತ್ತಾಳೆ.

ಕ್ರಿ.ಶ. ೧೫೨೮ರಲ್ಲಿ ಬಾಗಿಲು ಕೃಷ್ಣನಾಯಕನೆಂಬುವನು ಕೃಷ್ಣದೇವಮಹಾರಾಯರಿಗೆ ಪೂಣ್ಯವಾಗಬೇಕೆಂದು ದೊಡ್ಡ ಬಸವಣ್ಣನ ಅಮೃತಪಡಿಗೆ ಭೂದಾನ ಕೊಡುತ್ತಾನೆ. ಇಲ್ಲಿಯ ಸಂಗಮೇಶ್ವರ ದೇವರಿಗೆ ಕೃಷ್ಣದೇವರಾಯನು ಚಿನಕುಂಟಿ ಗ್ರಾಮವನ್ನು ದಾನ ಕೊಟ್ಟಿದ್ದನು. ಇದು ಮುಂದೆ ಅಚ್ಚುತರಾಯನ ಕಾಲದಲ್ಲಿ ಹಾಳಾಗುತ್ತದೆ. ಸದಾಶಿವಮಹಾರಾಯರ ಕಾಲದಲ್ಲಿ ಅರಸನಿಗೆ ಪುಣ್ಯವಾಗಲೆಂದು ಗುಂಡಯಮಹಾರಾಯನ ಅಳಿಯನಾದ ಲಿಂಗರಾಜನು ಈ ಗ್ರಾಮವನ್ನು ಪುನರ್ ದತ್ತಿಯಾಗಿ ಬಿಟ್ಟಿದುದಲ್ಲದೆ ಅಲ್ಲಿಯ ತೋಟವನ್ನು ಮಾನ್ಯ ಮಾಡುತ್ತಾನೆ. ಸಂಗಮೇಶ್ವರ ದೇವರಿಗೆ ಜೂಜಾಡುವವರೂ ಕೂಡಾ ಹಣ ದಾನಕೊಟ್ಟಿದ್ದಾರೆ.

ಈ ಗ್ರಾಮದಲ್ಲಿರುವ ಜೈನ ಬಸದಿಗೆ (ಈಗ ಈಶ್ವರ ದೇವಾಲಯವಾಗಿ ಪರಿವರ್ತನೆಗೊಂಡಿದೆ) ರಾಮರಾಜಯ್ಯ ಎಂಬುವವನು ತನ್ನ ತಂದೆ ಮಲ್ಲಿರಾಜ ಒಡೆಯರಿಗೆ ಪುಣ್ಯವಾಗಬೇಕೆಂದು ಜಿನದೇವರ ಅಮೃತಪಡಿ ನೈವೇದ್ಯಕ್ಕೆ ಗೌಡ, ಸೇನಭೋನ ಹಾಗೂ ಪಟ್ಟಣಸ್ವಾಮಿಯರು ಸೇರಿಕೊಂಡು ಭೂ ದಾನ ಕೊಟ್ಟಿದ್ದಾರೆ. ಇದೆ ಬಸದಿಗೆ ಮೂಲಸಂಘ ಬಲತ್ಕಾರಗಣಕ್ಕೆ ಸೇರಿದ ಸೂರಿಯಪ್ಪ ಸೆಟ್ಟಿಯ ಮಗ ಹಾಗೂ ಪದ್ಮರಸ ಪಂಡಿತರು ಸೇರಿ ಭೂದಾನ ಬಿಟ್ಟಿದ್ದಾರೆ. ಅರಸರಾದಿಯಾಗಿ ಜನಸಾಮಾನ್ಯರವರೆಗೂ ಹಣ, ದವಸ, ಧಾನ್ಯ, ಎಣ್ಣೆ, ಭೂಮಿ ಮೊದಲಾದವುಗಳನ್ನು ದಾನ ಕೊಡುತ್ತಿದ್ದುದರಿಂದ ದೇವಾಲಯಗಳು ಶ್ರೀಮಂತಿಕೆಯಿಂದ ಕೂಡಿದ್ದುದು ಸ್ಪಷ್ಟವಾಗುತ್ತದೆ.

ಸಾಹಿತ್ಯ

ಪ್ರಾಚೀನ ಕಾಲದಿಂದಲೂ ಆಯಾ ಪ್ರದೇಶದಲ್ಲಿ ಆಳ್ವಿಕೆ ಮಾಡುತ್ತಿದ್ದ ಅರಸರು, ಮಾಂಡಳಿಕರು ರಾಜಕೀಯ, ಸಾಮಾಜಿಕ, ಆರ್ಥಿಕ, ಧಾರ್ಮಿಕ ಅಭಿವೃದ್ಧಿಗಾಗಿ ಶ್ರಮವಹಿಸಿದಂತೆ ಸಾಹಿತ್ಯ ಕ್ಷೇತ್ರದಲ್ಲೂ ಗಮನಾರ್ಹ ಬೆಳವಣಿಗೆಯನ್ನು ಕಾಣಬಹುದು. ಶಾಸನಗಳಲ್ಲಿಯ ಸಾಹಿತ್ಯವನ್ನು ಗಮನಿಸಿದರೆ ನಾಡಿನಾದ್ಯಂತೆ ಅನೇಕ ಕವಿಶ್ರೇಷ್ಠರು ವಾಸವಾಗಿದ್ದುದು ತಿಳಿಯುತ್ತದೆ. ಈ ಶಾಸನಗಳಲ್ಲಿ ಅಡಕವಾಗಿರುವ ದೇಶ-ನಾಡು, ಪ್ರದೇಶ ಪ್ರೇಮ, ವೀರರ ಪ್ರತಾಪ, ಮಹಾಜನರ ವಿದ್ವತ್ತು, ಸ್ಥಾನಾಚಾರ್ಯರ ಪ್ರಭಾವ ದೇವಾಲಯಗಳ ಘನತೆ ಮೊದಲಾದವುಗಳ ವರ್ಣಿತವಾಗಿದ್ದರೂ ಒಂದೊಂದರಲ್ಲಿ ವಿಭಿನ್ನ ವಿಶೇಷಣಗಳನ್ನು ಕಾಣುತ್ತೇವೆ.

ಶಾಸನ ಕವಿಗಳು, ಆಳುವ ಅರಸ, ಅಧಿಕಾರಿಗಳೊಂದಿಗೆ ದೇಶ, ನಾಡು ಊರುಗಳ ಪ್ರೇಮವನ್ನು ಮೆರೆದಿದ್ದಾರೆ. ಕುರುಗೋಡಿಗೆ ಹತ್ತಿರವಿರುವ ಕೆಳೂರು ಶಾಸನ ಕುಂತಳ ದೇಶವನ್ನು ಕುರಿತು ಹೇಳುವಾಗ ಅದು ಏಳುವರೆ ಲಕ್ಷ ಹಳ್ಳಿಗಳುಳ್ಳದ್ದಾಗಿತ್ತೆಂದು ಅದನ್ನು ಮ.ವಿ|| ವಸುಧಾಕಾಂತೆಯ ಕುಂತಳಪ್ರತಿಮಮಾದೀ ಕುಂತಳಕ್ಷೋಣಿಯಂ ವಸುಧಾನಂದನನಂದುಪ್ತಕುಲ ಮೌರ್ಯ್ಯಕ್ಷ್ಮಾ ಪರಾಳ್ದರ್ಬ್ಬಳಿಕ್ಕೆಸೆಯಲ್ ರಾಷ್ಟ್ರ ನೃಪಾಳರಾಳ್ದರವರಿಂದ ಮತ್ತೆ ಚಾಳುಕ್ಯ ವಂಶಸಮುದ್ಭೂತರನೇಕರಾಳ್ದರ ವರೊಳ್ತಾಂ ಚಕ್ರಿ ಸೋಮೇಶ್ವರಂ

ವ|| ಚಾಳುಕ್ಯ ರಾಜ್ಯಾಂಭೋನಿಧಿಪ್ರವರ್ದ್ಧನಚಂದ್ರನಪ್ತ ಶ್ರೀಮಚ್ಚಾಳುಕ್ಯ ಚಕ್ರವರ್ತಿ ಜಗದೇಕಮಲ್ಲಂ ಕುಂತಳ ಸಪ್ತಾರ್ದ್ಧಲಕ್ಷಮಂ ದುಷ್ಟನಿಗ್ರಹ ಶಿಷ್ಟ ಪರಿಪಾಳನಾರ್ತ್ಥಂ ಪಾಳಿಸುತ್ತಂ ಸುಖಸಂಕಥಾವಿನೋದದಿಂ ಕಲ್ಯಾಣದೊಳು ನೆಲೆವೀಡಾಗಿ ರಾಜ್ಯಂಗೆಯ್ಯುತ್ತಮಿರೆ.

ಅದರ ಉಪವಿಭಾಗಗಳಾದ ಬಲ್ಲಕುಂದೆ ನಾಡು ಮತ್ತು ಕೋಳೂರು ಪ್ರದೇಶದ ಬೆಳೆಯುವ ಹೊಲ, ಬಂಗಾರದ ಕಣಿ, ಹಗರೆ ನದಿ ಕಾಲುವೆ ಮೊದಲಾದವುಗಳಿಂದ ಬಲ್ಲಕುಂದೆ ನಾಡಿನ ಸಿರಿ ಎಂದೂ ಕುಂದುತ್ತಿರಲಿಲ್ಲ. ಈ ನಾಡೆಂಬ ಕಲ್ಪವೃಕ್ಷದ ಕೋಳೂರು ಹಣ್ಣುಬಿಟ್ಟ ಟೊಂಗೆಯಾಗಿತ್ತು. ತೆನೆ ಮಾಗಿನಿಂದ ತುಂಬಿದ ಜೋಳದ ಹೊಲ, ಪೈರಿಗೆ ಎರಗುವ ಗಿಳಿಗಳು ಅವುಗಳನ್ನು ಓಡಿಸುವ ಹೆಣ್ಣು ಮಕ್ಕಳನ್ನು “ಧವಳೇಕ್ಷಣೆಯರೆಂದು” ಮುಂತಾಗಿ ಬಣ್ಣಿಸಿದ್ದು ಸುಂದರವಾಗಿದೆ.

ಕಂ|| ಬೆಳೆಗೆಯ್ಯಿಂ ಪೊಂಗಣಿಯಿಂ
ಫಲತರುವಿಂದೊಳ್ಪಯಂಗಳಿಂ ಕುಸುಮರ ಬಾ
ನಿಳನಿಂ ಪಗರೆಯ ಪರಿಯಿಂ
ತಳರದ ಸಿರಿ ಬಲ್ಲಕುಂದೆ ನಾಳ್ಕೆಸೆದಿರ್ಕ್ಕುಂ
ಭೀಮನೃಪ ರಾಚಮಲ್ಲ
ರ್ತ್ತಾ ಮುತ್ಸವದಿಂ ಧರಿತ್ರಿಯಿಂ ಪಾಳಿಸುತುಂ
ಕ್ಷೇಮದಿನಿರೆ ಜಗಮೆಲ್ಲಂ
ಶ್ರೀಮಹಿಮಾಸ್ಪದಕೆ ತಾಂಎ ನೆಲೆಯಾಗಿರ್ಪ್ಪರ್
ಸುರಕುಂಜದಂತಿರಲೊಪ್ಪು
ತ್ತಿರುಹುದು ತಾಂ ಬಲ್ಲಕುಂದೆ ನಾಡದರೊಳ್ವಿ
ಸ್ತರದಿಂ ಪಣ್ತೊಳುಗೊಂಬೆನೆ
ವರಸಸ್ಯಸಮೃದ್ಧಫಳದಿ ಕೋಳೂರೆಸೆಗುಂ
ಉ.ಮಾ|| ಬಾಳೆ ಸುನಿಂಬೆ ಮಾದುಫಳಮೀಳೆ ಬೆಡಂಗೆನಿಸಿರ್ದ್ದ ಮಾವು ಕಂ
ಚಿಳೆ ಕವುಂಗು ತೆಂಗು ಪಲಸುರ್ಬ್ಬಿದ ಕರ್ಬ್ಬಿನ ತೋಂಟಮಂಗಜಂ
ಗಾಳಯಮಪ್ಪ ತಾವರೆಗೊಳಂ ಕೆಱಿ ಬಾವಿಗಳಿಂ ಬಹಿರ್ವ್ವನಂ
ಲೀಲೆಯನುಂಟುಮಾಡುವುದು ನೋಳ್ಪರ ಚಿತ್ತದೊಳುವ ಕಾಲಮುಂ

ಕಂ|| ಬೆಳೆದು ಫಳಭರದಿನೆಱಗಿ
ರ್ದ್ದೆಳೆ ಜೋಳದ ಕೆಯ್ಗಳಂ ಮನೋಹರಿ ಕಾಂತಾ
ಕುಳಮೆಳಸುವ ಗಿಳಿ ಸೋವ
ರ್ಬಳಲುಮುಡಿ ಬೆನ್ನನಲೆಯೆ ಧವಳೇಕ್ಷಣೆಯರ್

ಕುರುಗೋಡು ಊರ ವರ್ಣನೆಯನ್ನು ಮಾಡುವ ಅಲ್ಲಿಯ ಶಾಸನ ಈ ಊರು ಹರದರ (ವ್ಯಾಪಾರಿಗಳು) ಪೇಟೆ, ಬ್ರಾಹ್ಮಣರ ಕೇರಿ, ಸೂಳೆಗೇರಿಗಳನ್ನು ಬಣ್ಣಿಸುತ್ತದೆ.

ಕಂ|| ಆ ನಾಳ್ಗೆ ರಾಜಧಾನಿ ಧ
ರಾನಾರೀ ಹಾರಲುಳಿತನಾಯಕಮಣಿವೋ
ಲ್ನಾನಾರತ್ನಾಕೀರ್ಣ್ನನ
ಗಾನಿಕದ ಬಳಸಿನಿಂದ ಕುಱುಗೋಡೆಸಗು
ಅಲ್ಲಲ್ಲಿಗೆ ತಿಳಿಗೊಳನುಂ
ಮಲ್ಲಿಗೆಯುಂ ಮಾಧವೀಲತಾಮಣ್ಣಪಮುಂ
ಪಲ್ಲ ವಿತಚೂತವನಮುಂ
ಸಲ್ಲಿಲಿತಂ ನೋಡಲೆತ್ತಲುಂ ಪೊಱವೊಳಲೊಳ್

ವ್ಯಾಪಾರಿಗಳ ಬೀದಿ

ಕಂ|| ಧನದಿಂ ಧನದನಿನಗ್ಗಳ
ಮೆನಿಸುವ ಪರದರಿನಮೂಲ್ಯ ರತ್ನಂಗಳಿನ
ತ್ಯನುಪಮ ವಿಚಿತ್ರವಸ್ತ್ರಾ
ದ್ಯನೇಕದಿಂದೊಪ್ಪುಗುಂ ವಣಿಗ್ವಾಟಂಗಳ್

ಬ್ರಾಹ್ಮಣರ ಕೇರಿ

ಮ.ವಿ|| ವಿವಿಧೋತ್ತುಂಗಲಸತ್ಸುಧಾವಳಸಂಕಾಶಾಚ್ಛಸುಚ್ಛಾಯೆಯಿಂ
ಭುವನಾಳಂಕೃತಮಪ್ಪ ದೇವಭವನಾನೀಕಂಗಳಿಂ ತರ್ಕ್ಕಶಾ
ಸ್ತ್ರವಿವಾದಂಗಳಿನುದ್ಘವೇದರವದಿಂದಂ ಹೋಮಧೂಮಂಗಳಿಂ
ದವನೀಶೋಭಿತಮಾಗಿ ಕಣ್ಗೊಳಿಸುಗುಂ ವಿಪ್ರೇಂದ್ರವಾಟಂಗಳು

ಸೂಳೆಗೇರಿ

ಕಂ || ಸ್ಮರರಾಜಧಾನಿಯೊ
ಸುರವನಿತಾಜನ್ಮಭೂಮಿಯೋ ಚೆಲ್ವಿಂಗಾ
ಗರಮೋ ಪೇಳೆಂಬಿನೆಗಂ
ಕರಮೆಸೆಗುಂ ಸೂಳೆಗೇರಿಗಳು ತತ್ಪುರದೊಳ್

ಅಲ್ಲಿಯ ಕೋಟೆ ನಾನಾ ಎನ್ನುವ ರಾಜರನ್ನು ಹಣ್ಣು ಮಾಡುವಷ್ಟು ಬಲಿಷ್ಟವಾಗಿತ್ತು ಕಾಳಗ ಎಂದರೆ ಏಳುಮಡಿ ಹೆಚ್ಚುತ್ತಿತ್ತಂತೆ

ಉ.ಮಾ || ಚೋಳನನಾಳುಮಾಡುವುದು ಗೂರ್ಜ್ಜರರಂ ಸೆಲೆ ತರ್ದ್ಧಿಕುಂ ಕರಂ
ಲಾಳನನಾಳಿಮಾಡುವುದು ಪಾಂಡ್ಯನನಂಡಲೆಗುಂ ತೆಲುಂಗ ಭೂ
ಕಾಳೆಗಮೆಂದಡೇಳು ಮಡಿ ಪೆಚ್ಚುವುದಚ್ಚರಿಯಾರೊ ಕಾದುವರ್
ಇಂಥ ಊರಿನಲ್ಲಿ ಕುಡಿಯೊಕ್ಕಲ ಮಕ್ಕಳು ಧನದ ಧಾನ್ಯದ ಸೋಮ್ಮಿನ
ಸೊಕ್ಕಿನಿಂದ ನಮಗಾರು ಸರಿ ಎನ್ನುವಂಥ ಊರ್ಚಿತ ಸ್ಥಿತಿಯಲ್ಲಿದ್ದರು.

ಚಂ || ತಿಳಿಗೊಳದಿಂ ಮಡಲ್ತು ತಳಿತಾರಮೆಯಿಂ ನೆಱಿಪೂತು ಕಾಯ್ತು ಪ
ಣ್ತೆಳೆಗೆ ವಿಳಾಸಮಪ್ಪ ವನದಿಂ ಪಥಿಕರ್ಗ್ಗೆ ತೃಷಾಶ್ರಮಕ್ಷುಧಾ
ವಳಿಯನದಾಗಲೀಯವನಾವಾರ್ಗ್ಗವೆನಲ್ಕುಡು ರಯ್ಯಮಾಗಿ ಕ
ಣ್ಗೊಳಿಸುವ ಬಲ್ಲಕುಂದೆವೆಸರಿನ್ದೆಸೆವಾ ವಿಷಯಾಂತರಾಳದೊಳ್
ಬಳೆದು ಮಡಲ್ತ ಶಾಳಿವನದಿಂ ಬೆಳದಾಗ ಸಮನ್ತುಡುಂಕುತುಂ
ಗಿಳಿಗಳ ವಿಣ್ಡಿಸಿನ್ದೆಸೆವ ಕೆಯ್ವೊಲದಿಂ ಮುಗಿಲುದ್ದವಾಗಿ ಮೂ
ವಳಿಸಿದ ಕೋಟೆಯಿಂ ಧನದ ಧಾನ್ಯದ ಸೊಮ್ಮಿನ ಸೊಕ್ಕಿನಿಂದಮಾ
ರ್ಗ್ಗಳ ದೊರೆ ನಮ್ಮೊಳೆಂಬ ಕುಡಿಯೊಕ್ಕಲ ಮಕ್ಕಳಿನೂರ್ಗ್ಗಳೊಪ್ಪುಗುಂ
ಇಲ್ಲಿಯ ಕಲಿದೇವಸೆಟ್ಟಿ ಮುಂಮ್ಮುರಿದಂಡರಲ್ಲೇ ಪರಮ

ಧಾರ್ಮಿಕನು. ಮಹಾಶಿವಭಕ್ತರಾದ ಇವನ ಹೃದಯದಲ್ಲಿ ಮಹಾದೇವನೇ ನೆಲೆಸಿ
ಮನು ಪ್ರೇಕರವಾಗಿ ಕಲಿದೇವಸೆಟ್ಟಿಯನ್ನು ನಡೆಸುತ್ತಿದ್ದನೆಂಬ ಪ್ರತೀತಿ ಇತ್ತು. ಈ ಭಕ್ತನು ತನ್ನ ವ್ಯವಹಾರವನ್ನು ನೋಡುವ ದೃಷ್ಟಿಯನ್ನು ಶಾಸನ ಈ ರೀತಿ ಹೇಳತುತದೆ.

ಉ.ಮಾ. || ಸತ್ಯದ ಬಿತ್ತು ಸಾಹಸದ ಸಾಗರವೊಳ್ಗುದಗರಂ ಜನ
ಸ್ತುತ್ಯತೆಯೊಳ್ಪು ಧರ್ಮದ ತವರ್ಮ್ಮನೆ ಮಾಂತನದಿರ್ಕ್ಕೆದಾಣವೌ
ಚಿತ್ಯದ… ಜಸದ ಸಯ್ಪು ನೆಗಳ್ತೆಯ ಲೋಕದೇಳ್ಗೆಯೌ
ನ್ನತ್ಯದ ಗೊತ್ತೆನುತ್ತೆ ಧರೆ ಬಣ್ಣಿಪುದೀ ಕಲಿದೇವ ಸೆಟ್ಟಿಯಂ

ಕಂ|| ಭಕ್ತಿಯ ಭಂಡ ಮೊದಲ್ ನಿಜ
ಭಕ್ತಿಯೆ ಕೋಟಾನುಕೋಟಿ ಲಾಭಂ ಶಿವಸ
ದ್ಭಕ್ತಿಯ ಬೆಳೆಸಿ…
ಭಕ್ತಂ ಕಲದೇವಸೆಟ್ಟಿ ನೆಗಳ್ದಂ ಧರೆಯೊಳ್

ವ|| ಆತನ ಹೃದಯಕಮಲದೊಳ್ ಮನಃ ಪ್ರೇರಕ ಮಹಾದೇವಂ ಜೀವನಾಗಿರ್ಪ್ಪನೆನ್ತೆನೆ

ಚಿನ್ತಾಮಣಿಲಿಂಗಂ ಹೃದ
ಯಾನ್ತರದೊಳ್ನಿನ್ದು ಕಲ್ಲಿ ಸೆಟ್ಟಿಗೆ ದಯೆಂಯಿಂ
ದಿನ್ತು ನಡೆಯಿನ್ತು ನುಡಿಯೆಂ
ದಿನ್ತು ಸದಾಶಿಕ್ಷಿಸುತ್ತೆ ರಕ್ಷಿಸುತ್ತಿರ್ಪ್ಪಂ

ಕಂ|| ಕಟ್ಟಿಸಿದ ಕೆಱಿ ಮನೋಮುದ
ದಿಟ್ಟಾರವೆ ಪಸಿಯಲೀಯದಿಕ್ಕುವ ಸತ್ರ
ಬಿಟ್ಟ ಬೆಳೆಗೆಯ್ಗಳೆಱಿವಱ
ವಟ್ಟಿಗೆ ಕಲಿದೇವಸೆಟ್ಟಿ ಮಾಡಿದ ಧರ್ಮಂ

ಮುಂಮ್ಮರಿದಂಡಗಳು ಈ ಊರ ಹಿರಿಮೆಯನ್ನು ಅತ್ಯಂತ ಪ್ರಖ್ಯಾತರಾಗಿದ್ದರು. ಇದು ಅಯ್ಯಾವಳೆ (ಐಹೊಳೆ)ಯಿಂದ ಎರಡನೆಯದಾಗಿ ಎಣಿಸಲ್ಪಟ್ಟಿತ್ತು. ಇವರ ಗುಣ ಪಾಂಡಿತ್ಯಗಳಲ್ಲಿ ಶ್ರೇಷ್ಠರು ಮಾತ್ರವಲ್ಲದೆ ತೋಟಿ ಕದನ ಎಂದರೆ ಕೋಟೆ ಲಾಭ ಎಂದು ತಿಳಿದಿದ್ದರು. ಇವರನ್ನು ಕುರಿತು ಕವಿ ಈ ರೀತಿ ವರ್ಣಿಸಿದ್ದಾನೆ.

ರಗಳೆ|| ಸ್ವಸ್ತಿ ಗವರೇಶಪದಪದ್ಮ ಷಟ್ಟರಣರುಂ
ವಿಸ್ತೀರ್ಣ್ಣವಸ್ತುಗುಣ ವಿನಿಹಿತಾಚರಣರುಂ
ಪಂಚಶತವೀರಶಾಸನಗುಣೋದ್ಧಣರುಂ
ಸಂಚಿತಮಸ್ತಧರ್ಮ್ಮೈಕನಿಸ್ತಣರುಂ
ಬ್ಯವಹಾರನಯವಿನಯ ವಿಜ್ಞಾನವಿದ್ಯರುಂ
ನವರತ್ನವಾಹನಪರೀಕ್ಷಾನವದ್ಯರುಂ
ತೋಟೆಯೆಂದಡೆ ಕೋಟೆಲಾಭವೆಂದುಲಿವರುಂ
ಆಟಂದಬವರಕ್ಕೆ ನಾಟಕಂ ನಲಿವರುಂ
ಅಯ್ಯಾವೊಳೆಯ ತಳದಿನಿರುವೆ ನೇರ್ಗ್ಗೀಱಿದೆನಿಪ
ರಯ್ಯಾ ಮಾದ್ವಾರಾವತೀಪುರಕೆ ಕುಱುವೆನಿಪ
ಕುಱುಗೋಡು ತಳದೊಳಗೆ ತಳರದಯ್ನೂರ್ವ್ವರುಂ
ನೆಱೆನೋರ್ಷ್ಪಡವರೊಳಗೆ ಪಂಗೆಗಂಜರೊರ್ವ್ವರುಂ

ಮೇಲಿನ ಕೆಲವು ಶಾಸನಗಳ ವರ್ಣನೆಯಿಂದ ಇಲ್ಲಿಯ ಕವಿಗಳ ಪಾಂಡಿತ್ಯ ಸ್ಪಷ್ಟವಾಗುತ್ತದೆ. ಆದರೆ ಇಲ್ಲಿಯ ಶಾಸನಗಳು ಅವುಗಳನ್ನು ಬರೆದ ಮತ್ತು ಕಂಡರಿಸಿದ ವ್ಯಕ್ತಿಗಳ ಹೆಸರನ್ನೊಳಗೊಂಡಿಲ್ಲ. ಪಾಂಡಿತ್ಯ ಮತ್ತು ಕಲಾ ಚಾತುರ್ಯವನ್ನು ಹೊಂದಿದ ಇವರು ತಮ್ಮ ಹೆಸರು ಗೌಣಗೊಳಿಸಿ ಪಾಂಡಿತ್ಯ ಪ್ರಭಾವವನ್ನು ಮೆರೆದಿದ್ದು ಆಶ್ಚರ್ಯವನ್ನುಂಟು ಮಾಡುತ್ತದೆ.

ಕುರುಗೋಡು ಶಾಸನಗಳನ್ನು ಚಾರಿತ್ರಿಕ ಮತ್ತು ಸಾಂಸ್ಕೃತಿಕ ದೃಷ್ಟಿಕೋನದಿಂದ ಅಧ್ಯಯನಕ್ಕೊಳಪಡಿಸಿದಾಗ ಅನೇಕ ವಿಷಯಗಳಲ್ಲಿ ಪ್ರಾವಿಣ್ಯತೆ ಪಡೆದ ಈ ಗ್ರಾಮದ ಹಲವು ಮಗ್ಗುಲಗಳಲ್ಲಿ ತಿರುವು ಪಡೆದುಕೊಂಡಿದೆ. ಕರ್ನಾಟಕದ ಚಾರಿತ್ರಿಕ ಅಧ್ಯಯನದಲ್ಲಿ ವಿಭಿನ್ನ ಆಕರಗಳನ್ನೊಳಗೊಂಡ ಕುರುಗೋಡು ಒಂದು ಅಪರೂಪದ ಕ್ಷೇತ್ರವಾಗಿ ಕಂಡುಬರುತ್ತದೆ.

 

[1] ಅದೆ, IX-i, ೩೨೨, ೧೧೯೫, ಓರವಾಯಿ (ಬಳ್ಳಾರಿ ತಾ.)

[2] ಅದೆ, IX-i, ೯೧, ೧೦೩೬, ಓರವಾಯಿ (ಬಳ್ಳಾರಿ ತಾ.)

[3] [4] ಎ.ಇ., XIV, ಪು.೨೬೫

[5] ಎ.ಇ., XIV. ಪು. ೨೭೯

[6] ಭೈರವೇಶ್ವರ ಕಾವ್ಯದ ಕಥಾಮಣಿಸೂತ್ರ ರತ್ನಾಕರ, ಭಾಗ ೧, (ಸಂ) ಆರ್.ಸಿ.ಹಿರೇಮಠ ಪು. ೨೪೭. ೨೪೯

[7] ಎ.ಇ., XIV. ಪು. ೨೬೫

[8] ಅದೆ

[9]