ಪ್ರಾಚೀನ ಮತ್ತು ಮಧ್ಯಕಾಲೀನ ಸಾಂಸ್ಕೃತಿಕ ಇತಿಹಾಸ ರಚನೆಯಲ್ಲಿ ದೇವಾಲಯಗಳು ಪರಿಣಾಮಕಾರಿ ಮಾಧ್ಯಮಗಳಾಗಿ ಕಾರ್ಯನಿರ್ವಹಿಸಿದೆ. ದೇವಾಲಯ ಸಂಸ್ಕೃತಿಗೆ ತುಂಬಾ ಪ್ರಾಚೀನ ಇತಿಹಾಸವಿದ್ದರೂ ಕ್ರಿ.ಶ. ೮-೯ನೇ ಶತಮಾನಗಳ ನಂತರವೇ ಸಾರ್ವತ್ರಿಕರಣಗೊಂಡಿತು. ಮಾನವನ ಬದುಕಿನ ಅವಿಭಾಜ್ಯ ಅಂಗವಾಗಿ ಪರಿವರ್ತನೆಯಾದ ದೇವಾಲಯದ ನಿರ್ಮಾಣ ಸಹಜ ಪ್ರಕ್ರಿಯೆಯಾಗಿ ಮಾರ್ಪಟ್ಟಿತ್ತು. ಇವುಗಳ ನಿರ್ಮಾಣಕ್ಕೆ ಸೀಮಾತೀತ ವ್ಯಾಪ್ತಿಯಿದೆ. ರಾಜ್ಯಾಧಿಕಾರವನ್ನು ವಿಸ್ತರಿಸುವ ಹಾಗೂ ಗಟ್ಟಿಗೊಳಿಸುವಲ್ಲಿ ಸಹಾಯಕವಾದ ದೇವಾಲಯಗಳು ಪ್ರಭುತ್ವ ರೂಪಿಸುವ ಪ್ರಮುಖ ಕೇಂದ್ರಗಳಾಗಿದ್ದವು ಎಂದು ಅಭಿಪ್ರಾಯಪಡಬಹುದು. ರಾಜನ ಅಧಿಕಾರವನ್ನು ನಿರ್ಣಯಿಸುವ ಹಾಗೂ ಸಮಾಜದಲ್ಲಿನ ವರ್ಣಶ್ರೇಣಿಕರಣವನ್ನು ಕಾಯ್ದುಕೊಳ್ಳುವ ಪ್ರಬಲಶಕ್ತಿಗಳಾಗಿ ನಿರೂಪಿತವಾಗಿದ್ದವು. ಅಧಿಕಾರವನ್ನು ಬಲಾಢ್ಯಗೊಳಿಸುವಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ವಹಿಸಿರುವ ದೇವಾಲಯಗಳ ತೀವ್ರ ಬೆಳವಣಿಗೆಯಲ್ಲಿ ರಾಜರು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಅರಸರನ್ನು ಅನುಸರಿಸಿದ ಅಧಿಕಾರಿಗಳು ಹಾಗೂ ಪ್ರತಿಷ್ಠಿತ ವರ್ಗ ಸಮುದಾಯಗಳು ದೇವಾಲಯ ಸಂಸ್ಕೃತಿಯ ವಿಸ್ತಾರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದರು.

ಚರಿತ್ರೆಯ ರಚನೆಯಲ್ಲಿ ದೇವಾಲಯಗಳು ಪ್ರಮಾಣಯೋಗ್ಯವಾದ ಆಕರಗಳಾಗಿ ಬಳಕೆಯಾಗಲ್ಪಡುತ್ತವೆ. ಯಾವುದೇ ರಚನಾಕೃತಿಗಳು ಕಲೆಯ ಪ್ರಮುಖ ಭಾಗವೇ ಆಗಿವೆ. ಕಲೆಯೆಂಬುದು ಮಾನವನ ಹುಟ್ಟಿನೊಂದಿಗೆ ಬಂದಿರುವಂತದ್ದು. ಇದು ವಿಕಸನಗೊಳ್ಳುತ್ತಾ ನಾನಾ ರೂಪಗಳನ್ನು ಪಡೆಯಿತು. ಸಾಮಾನ್ಯವಾಗಿ ಕಲೆಯನ್ನು ದೃಶ್ಯ ಹಾಗೂ ಶ್ರವಣ ಮಾಧ್ಯಮಗಳೆಂದು ವಿಭಾಗಿಸುತ್ತಾರೆ. ಇವುಗಳ ಅಂತಿಮ ಫಲಿತಾಂಶವೆಂದರೆ ಮಾನವನ ಸುಖದೇಚ್ಛೆಯನ್ನು ದ್ವಿಗುಣಗೊಳಿಸುವುದು. ದೃಶ್ಯಮಾಧ್ಯಮದಲ್ಲಿ ಬರುವ ದೇವಾಲಯ ಹಾಗೂ ಮೂರ್ತಿಶಿಲ್ಪಗಳು ಒಂದು ಪ್ರದೇಶದ ಸಾಂಸ್ಕೃತಿಕ ಚರಿತ್ರೆಯ ಬರವಣಿಗೆಯಲ್ಲಿ ಪ್ರಧಾನ ಪಾತ್ರವಹಿಸುತ್ತವೆ. ಆದ್ದರಿಂದಲೇ ದೇವಾಲಯಗಳನ್ನು ಆಯಾಕಾಲದ ವರ್ತಮಾನವನ್ನು ಸಾದರಪಡಿಸುವ ಮಾಧ್ಯಮಗಳೆಂದು ಪರಿಗಣಿಸುತ್ತಾರೆ. ‘ವಾಸ್ತುಶಿಲ್ಪ’ ಎಂಬ ಪರಿಭಾಷೆಗೆ ವಿಶಾಲವಾದ ಅರ್ಥವ್ಯಾಪ್ತಿ ಇದ್ದರೂ ಸಾಮಾನ್ಯವಾಗಿ ದೇವಾಲಯಗಳು ಮಾತ್ರ ವಾಸ್ತುಶಿಲ್ಪಗಳಾಗಿ ಕಣ್ಮುಂದೆ ನಿಲ್ಲುತ್ತವೆ. ಸ್ತೂಪ, ಚೈತ್ಯ ವಿಹಾರ, ಬಸದಿ, ಮಸೀದಿ, ಚರ್ಚು, ಕೆರೆ-ಕಟ್ಟೆ, ಬುರುಜು, ಕೋಟೆ ಹಾಗೂ ಮನೆಗಳಂಥ ಎಲ್ಲ ರಚನೆಗಳು ವಾಸ್ತುಶಿಲ್ಪಿಗಳೇ ಆಗಿವೆ. ಆದರೆ ಅಧ್ಯಯನದ ಅನುಕೂಲಕ್ಕಾಗಿ ‘ವಾಸ್ತು’ ಶಿಲ್ಪವನ್ನು ದೇವಾಲಯಕ್ಕೂ ಹಾಗೂ ‘ಶಿಲ್ಪ’ ಎಂಬುದನ್ನು ಮೂರ್ತಿಗಳಿಗೆ ಅನ್ವಯವಾಗುವಂತೆ ಅನುಕ್ರಮದಲ್ಲಿ ಬಳಸುತ್ತಾರೆ. ಇಂಥ ಸಂವಾದಿ ಕ್ರಮವನ್ನು ಪ್ರಸ್ತುತ ಪ್ರಬಂಧ ರಚನೆಯಲ್ಲಿಯೂ ಸಹ ಬಳಸಿಕೊಳ್ಳಲಾಗಿದೆ.

ಸಾಮಾನ್ಯವಾಗಿ ದೇವಾಲಯಗಳನ್ನು ಗುಹಾಂತರ ದೇವಾಲಯಗಳು ಹಾಗೂ ದೇವಾಲಯಗಳೆಂದು ವಿಭಾಗಿಸುತ್ತಾರೆ. ಗುಹೆಗಳು, ಗುಹಾಂತರಾಲಯಗಳಾಗಿ ಮೊದಲು ನಿರ್ಮಾಣವಾದರೆ ನಂತರ ಪ್ರತ್ಯೇಕವಾಗಿ ದೇವಾಲಯಗಳು ನಿರ್ಮಾಣವಾದವು. ಧರ್ಮ ಹಾಗೂ ದೇವಾಲಯ ಒಂದಕ್ಕೊಂದು ಮೇಳೈಸಿಕೊಂಡಿದ್ದರಿಂದ ಆಯಾ ಧರ್ಮ ಹಾಗೂ ಮತ ಪಂಥಗಳಿಗೆ ಸಂಬಂಧಿಸಿದಂತೆ ಬೇರೆ ಬೇರೆ ದೇವಾಲಯಗಳು ಸಹ ರಚನೆಯಾದವು. ಉದಾಹರಣೆ ಜೈನ, ಶೈವ, ವೈಷ್ಣವ ಹಾಗೂ ಶ್ರೀವೈಷ್ಣವ ಆಚರಣೆಗಳಿಗೆ ಸಂಬಂಧಪಟ್ಟ ದೇವಾಲಯಗಳನ್ನು ಹೆಸರಿಸಬಹುದು. ದೇವಾಲಯಗಳಲ್ಲಿ ಮೂರ್ತಿಶಿಲ್ಪ ಹಾಗೂ ಇತರ ಶಿಲ್ಪಗಳನ್ನು ಕಂಡರಿಸುವುದರಿಂದ ಅಥವಾ ಜೋಡಣೆ ಮಾಡುವುದರ ಮೂಲಕ ಅವುಗಳನ್ನು ಮತ್ತಷ್ಟು ಕಲಾತ್ಮಕವಾಗಿ ಮಾರ್ಪಡಿಸಿದರು.

ದೇವಾಲಯಗಳನ್ನು ಸಾಮಾನ್ಯವಾಗಿ ಶಿಲೆ, ಇಟ್ಟಿಗೆ, ಗಾರೆ, ಗಚ್ಚು, ಕಟ್ಟಿಗೆ ಹಾಗೂ ಲೋಹಗಳಂಥ ಪ್ರಮುಖ ಸಾಧನಗಳಿಂದ ನಿರ್ಮಿಸುತ್ತಾರೆ. (ಇಂಥ ವಸ್ತುಗಳಿಂದ ಕುರುಗೋಡಿನ ದೇವಾಲಯಗಳು ಸಹ ನಿರ್ಮಾಣವಾಗಿವೆ.) ದೇವಾಲಯವು ಪರಿಪೂರ್ಣಗೊಳ್ಳಬೇಕಾದರೆ ಅಧಿಷ್ಠಾನ, ಪಾದ, (ಭಿತ್ತಿ) ಪ್ರಸ್ತರ, ಗ್ರೀವ, ಶಿಖರ ಮತ್ತು ಸ್ಥೂಪಿ ಎಂಬ ಪ್ರಮುಖ ಆರು ಭಾಗಗಳನ್ನು ಹೊಂದಿರಬೇಕು. ಇವುಗಳನ್ನು ಷಡಂಗಗಳೆಂತಲೂ ಕರೆಯುತ್ತಾರೆ. ದೇವಾಲಯದ ಭಿತ್ತಿಯ ಮೇಲ್ಛಾವಣಿಯ ಮೇಲಿನ (ಪ್ರಸ್ತರ) ಭಾಗದಲ್ಲಿನ ಮಜಲುಗಳನ್ನು ತಲಗಳಾಗಿ ಗುರುತಿಸುತ್ತಾರೆ, ಉದಾ : ಏಕತಲ, ದ್ವಿತಲ, ತ್ರಿತಲ ಮತ್ತು ಬಹುತಲ ರಚನೆಗಳು. ಶಿಖರ ರಚನಾ ವಿಧಾನಗಳಿಂದ ಅವುಗಳ ಮಾದರಿ ಅಥವಾ ಶೈಲಿಯನ್ನು ಗುರುತಿಸಲಾಗುತ್ತದೆ. ಉದಾಹರಣೆಗೆ ದ್ರಾವಿಡ, ನಾಗರ, ವೇಸರ, ಕದಂಬನಾಗರ, ರೇಖಾನಾಗರ, ಲತೀನ ಹಾಗೂ ಭೂಮಿಜ ಶೈಲಿಗಳು. ಮಾದರಿಗಳ ಗುರುತಿಸುವಿಕೆಯು ಅಧ್ಯಯನ ದೃಷ್ಟಿಯಿಂದ ಅವಶ್ಯಕ ಹಾಗೂ ಔಚಿತ್ಯಪೂರ್ಣವಾಗಿದೆ. ಗುಡಿಗಳ ಪ್ರದೇಶದ ಇಕ್ಕೆಲಗಳಲ್ಲಿ ಆನೆ, ಸಿಂಹ ಮತ್ತು ಯಾಳಿ ಶಿಲ್ಪಗಳನ್ನು ಅಳವಡಿಸಿರುತ್ತಾರೆ. ಕೆಲವೊಮ್ಮೆ ಮೂರ್ತಿ ಶಿಲ್ಪಗಳನ್ನು ಸಹ ದ್ವಾರಶಿಲ್ಪಗಳನ್ನಾಗಿಟ್ಟಿರುತ್ತಾರೆ. ಈ ಶಿಲ್ಪಗಳು ಗುಡಿಕಾಯುವ ಸಂಕೇತಗಳಾಗಿ ಪರಿಗಣಿಸಲ್ಪಡುತ್ತವೆ. ದೇವಾಲಯದಲ್ಲಿ ಮುಖ್ಯವಾದ ಭಾಗವೆಂದರೆ ಗರ್ಭಗೃಹ. ಅಲ್ಲಿನ ಮೂಲದೇವರಿಗೆ ಸಂಬಂಧಿಸಿದಂತೆ ಇಡೀ ದೇವಾಲಯ ನಿರ್ಧರಿತವಾಗಿರುತ್ತದೆ. ಕಲಾವೈಶಿಷ್ಟ್ಯತೆಯನ್ನು ಪಡೆದಿರುವ ದೇವಾಲಯ ಸಂಸ್ಕೃತಿಯನ್ನು ವಿದ್ವಾಂಸರು ಅನೇಕ ಬಗೆಯ ಅಧ್ಯಯನ ಶಿಸ್ತುಗಳಿಗೆ ಅಳವಡಿಸಿದ್ದಾರೆ. ಈ ಹೊತ್ತಿನ ಚರ್ಚೆಯಲ್ಲಿ ದೇವಾಲಯಗಳು ಕೇವಲ ‘ಧಾರ್ಮಿಕ ಸಂಕೇತ’ (ಸಿಂಬಲ್)ಗಳಾಗಿ ಮಾತ್ರ ಪರಿಗಣಿತವಾಗಿಲ್ಲ. ದೇವಾಲಯಗಳ ರಚನೆಯಲ್ಲಿ ಬಿಂಬಿತವಾಗಿರುವ ಕಲಾಸೌಂದರ್ಯ ಹಾಗೂ ಬಳಕೆಯಾಗಿರುವ ತಂತ್ರಜ್ಞಾನಗಳು ಇಂದು ಹೆಚ್ಚಿನ ಮಹತ್ವ ಪಡೆದಿವೆ. ಅಲ್ಲದೆ ಸ್ಮಾರಕಗಳಿಗೆ ಸಂಬಂಧಿಸಿದ ಪ್ರತಿ ಆಯಾಮಗಳನ್ನು ಚರ್ಚಿಸಿ ವಿಸ್ತರಿಸುವುದು ಇತಿಹಾಸ-ಪುರಾತತ್ವ ಅಧ್ಯಯನಗಳ ಪ್ರಮುಖ ಕಾರ್ಯವಾಗಿದೆ.

ದೇವಾಲಯಗಳ ಹುಟ್ಟಿನ ನಿರ್ದಿಷ್ಟ ಕಾಲಾವಧಿಯ ಬಗೆಗೆ ಅನೇಕ ಜಿಜ್ಞಾಸೆಗಳಿದ್ದರೂ ಕರ್ನಾಟಕದಲ್ಲಿ ದೇವಾಲಯ ಸಂಸ್ಕೃತಿ ಹುಟ್ಟು ಹಾಗೂ ಬೆಳವಣಿಗೆ ಕದಂಬ – ಶಾತವಾಹನರ ಆಡಳಿತಾವಧಿಯ ಕಾಲದಲ್ಲಿಯೇ ಎಂದು ಗುರುತಿಸಲಾಗುತ್ತದೆ. ತಾಳಗುಂದದ (ಶಿಕಾರಿಪುರ ತಾಲೂಕು) ಪ್ರಣವೇಶ್ವರ ದೇವಾಲಯವೇ ಅಸ್ತಿತ್ವದಲ್ಲಿರುವ ಕರ್ನಾಟಕದ ಅತೀ ಪ್ರಾಚೀನ ದೇವಾಲಯವಾಗಿದೆ. ಆದರೆ ದೇವಾಲಯಗಳ ನಿರ್ಮಾಣ ಸಂಸ್ಕೃತಿ ನೈಜವಾಗಿ ಪ್ರಾರಂಭವಾದುದು ಬಾದಾಮಿ ಚಾಲುಕ್ಯರ ಆಡಳಿತಾವಧಿಯಲ್ಲಿ. ಕ್ರಿ.ಶ. ೬-೭ನೇ ಶತಮಾನದಲ್ಲಿ ರಚಿಸಲಾದ ಅನೇಕ ದೇವಾಲಯಗಳನ್ನು ಐಹೊಳೆ, ಬಾದಾಮಿ ಹಾಗೂ ಮಹಾಕೂಟಗಳಲ್ಲಿ ಕಾಣುತ್ತೇವೆ. ಇಂದಿನ ಕರ್ನಾಟಕದ ಭೌಗೋಳಿಕ ಸೀಮೆಯ ಆಚೆಗೂ ಹಲವು ದೇವಾಲಯಗಳನ್ನು ಬಾದಾಮಿ ಚಾಲುಕ್ಯರು ನಿರ್ಮಿಸಿದ್ದಾರೆ. ಆದರೆ ಇವರು ದೇವಾಲಯಗಳನ್ನು ಕೆಲವು ಕೇಂದ್ರಸ್ಥಾನಗಳಲ್ಲಿ ಮಾತ್ರ ಕಟ್ಟಿದರು. ಇವರ ನಿರ್ಮಿತಿಗಳು ಪ್ರಾರಂಭ ಕಾಲದವುಗಳಾಗಿದ್ದರೂ ಹೆಚ್ಚಿನ ಕಲಾನೈಪುಣ್ಯತೆಯಿಂದ ಕೂಡಿವೆ. ಕೆಲವೇ ಕೇಂದ್ರಸ್ಥಾನಗಳಲ್ಲಿ ಮಾತ್ರ ರಚನೆಯಾಗುತ್ತಿದ್ದ ದೇವಾಲಯಗಳನ್ನು ರಾಷ್ಟ್ರಕೂಟರು ನಗರ ಹಾಗೂ ಗ್ರಾಮಗಳಲ್ಲಿ ವಿಸ್ತರಿಸಿದರು. ಆದರೆ ವ್ಯವಸ್ಥಿತವಾಗಿ ಹಾಗೂ ವ್ಯಾಪಕವಾಗಿ ಪ್ರತಿ ಗ್ರಾಮದಲ್ಲಿಯೂ ದೇವಾಲಯಗಳು ನಿರ್ಮಾಣವಾದದ್ದು ಕಲ್ಯಾಣದ ಚಾಲುಕ್ಯರ ಕಾಲದಲ್ಲಿ. ಇದೇ ಕಾಲದಲ್ಲಿದ್ದ, ಧಾರ್ಮಿಕವಾಗಿ ಬಲಿಷ್ಠರಾದ ಪಾಶುಪತ ಹಾಗೂ ಕಾಳಾಮುಖರು ಕರ್ನಾಟಕದಲ್ಲಿನ “ಗುಡಿ ಸಂಪ್ರದಾಯಕ್ಕೆ” ಹೆಚ್ಚಿನ ಪ್ರೋತ್ಸಾಹ ನೀಡಿ ಬೆಳೆಸಿದರು. ಕಾಪಾಲಿಕರ ವಾಮಾಚಾರವನ್ನು ತಿರಸ್ಕರಿಸಿದ ಕಾಳಮುಖರು ತಂತ್ರ ಹಾಗೂ ಮಂತ್ರಶಕ್ತಿಗಳಂಥ ನಂಬಿಕೆಗಳನ್ನು ಪ್ರತಿಪಾದಿಸಿದರು. ಹಾಗೂ ಇಂಥ ನಂಬಿಕೆಗಳ ಜಾರಿಗೆ ದೇವಾಲಯಗಳನ್ನು ಬಳಸಿಕೊಂಡರು. ಉತ್ತರ ಕರ್ನಾಟಕ ಭಾಗದಲ್ಲಿ ಕಲಚೂರಿ ಹಾಗೂ ಸೇವುಣ ಅರಸರು ಹಲವು ದೇವಾಲಯಗಳನ್ನು ನಿರ್ಮಿಸಿದ್ದಾರೆ. ಕರ್ನಾಟಕದ ದಕ್ಷಿಣ ಪ್ರದೇಶದಲ್ಲಿ ಹೊಯ್ಸಳ ಹಾಗೂ ಗಂಗರು ತಮ್ಮ ಕಲಾವೈಶಿಷ್ಟ್ಯತೆಯನ್ನು ಮೆರೆದಿದ್ದಾರೆ. ಸಾಮ್ರಾಜ್ಯಗಳ ಆಳ್ವಿಕೆಯ ಕೊನೆಯ ಘಟ್ಟದಲ್ಲಿ ಆಳಿಹೋದ ವಿಜಯನಗರದ ಅರಸರು ಬೃಹದಾಕಾರದ ಗೋಪುರ ಹಾಗೂ ವಿಸ್ತಾರವಾದ ದೇವಾಲಯಗಳಿಗೆ ಹೆಚ್ಚಿನ ಮಹತ್ವ ನೀಡಿದರು. ವಿಜಯನಗರದ ನಂತರ ವೈಶಿಷ್ಟ್ಯಪೂರ್ಣವಾದ ಯಾವುದೇ ದೇವಾಲಯದ ನಿರ್ಮಾಣವು ಕನ್ನಡ ಸೀಮೆಯಲ್ಲಿ ಜರುಗಲಿಲ್ಲ. ಸಾಮ್ರಾಜ್ಯಶಾಹಿಗಳ ಕಾಲದಲ್ಲಿದ್ದ ದೇವಾಲಯಗಳ ಬಗೆಗಿರುವ ನಂಬಿಕೆ, ಆಚರಣೆಗಳು ಹಾಗೂ ಅವುಗಳನ್ನು ನಿರ್ಮಿಸುವ ಅವಶ್ಯಕತೆಗಳು ಅನೇಕ ಬಗೆಯ ಪ್ರಶ್ನೆಗೆ ಒಳಗಾದವು. ಹಾಗೂ ಹೆಚ್ಚಿನಂಶ ವಿದೇಶಿಯರ ಸಂಪರ್ಕವು ದೇವಾಲಯಗಳ ನಿರ್ಮಾಣದ ಮಾದರಿ ಕ್ರಮಗಳನ್ನೇ ಬದಲಾಯಿಸಿದವು. ಕ್ರಿ.ಶ. ೧೭ನೇ ಶತಮಾನದ ನಂತರ ಪ್ರಾಚೀನ ದೇಗುಲ ಸಂಸ್ಕೃತಿಗೆ ಶಾಶ್ವತವಾದ ತೆರೆಯೊಂದು ಬಿದ್ದಂತಾಯಿತೆಂದು ಅಭಿಪ್ರಾಯಿಸಿದರು.

ದೇವಾಲಯಗಳ ನಿರ್ಮಾಣದ ಹಿಂದಿರುವ ಮನೋಭಾವನೆ

ಲಕ್ಷಾನು ಸಂಖ್ಯೆಯಲ್ಲಿ ರಚನೆಯಾಗಿರುವ ಭಾರತದಲ್ಲಿಯ ದೇವಾಲಯಗಳ ನಿರ್ಮಾಣಕ್ಕೆ ಅನೇಕ ಕಾರಣೀಭೂತ ಅಂಶಗಳಿವೆ. ಅವುಗಳಲ್ಲಿ ಪ್ರಮುಖವಾಗಿ ಪರಿಗಣಿಸುವುದಾದರೆ ಇಲ್ಲಿರುವ ಸಂಪ್ರದಾಯದಲ್ಲಿ ಬಲವಾಗಿ ನಂಬಿಕೊಂಡು ಬಂದಿರುವ ಪುಣ್ಯ-ಪಾಪಗಳ ಪರಿಕಲ್ಪನೆ. ಐಶ್ವರ್ಯವಂತ ಜನರು ತಮ್ಮನ್ನು ತಾವು ಸಾಕಾರಗೊಳಿಸಿಕೊಳ್ಳಲು (ಪುಣ್ಯದ ಮೂಲಕ ಸ್ವರ್ಗ ಪಡೆಯುವುದು) ದೇವಾಲಯಗಳನ್ನು ಕಟ್ಟುತ್ತಿದ್ದರು. ಇಂಥ ಕಾರ್ಯಗಳು ಕೇವಲ ದೇವಾಲಯಕ್ಕೆ ಸೀಮಿತವಾಗಿರದೇ ಕೆರೆ-ಕಟ್ಟೆ, ಬಾವಿ, ಹಾಗೂ ಛತ್ರಗಳಂಥ ಲೌಕಿಕ ಕಟ್ಟಡಗಳನ್ನು ಕಟ್ಟುವುದರ ಮೂಲಕ ಬದುಕನ್ನು ಸಾರ್ಥಕಗೊಳಿಸಿಕೊಳ್ಳುತ್ತಿದ್ದರು. ಇವುಗಳನ್ನು ನಿರ್ಮಿಸಿ ಬಹುಜನರನ್ನು ಮೆಚ್ಚಿಸುವುದು ಅಧಿಕಾರವರ್ಗದ ಅಂತಿಮ ಕಾರ್ಯಸಾಧನೆಗಳಾಗಿದ್ದವು. ರಾಜನು ತನ್ನ ಇಷ್ಟದೇವತೆಯನ್ನು ಸಂತೃಪ್ತಗೊಳಿಸಲು ದೇವಾಲಯಗಳನ್ನು ನಿರ್ಮಿಸಿದರೆ, ಅವನ ಅಧಿಕಾರವರ್ಗವು ರಾಜನನ್ನು ಮೆಚ್ಚಿಸಲು ದೇವಾಲಯಗಳನ್ನು ಕಟ್ಟಿರುವ ನಿದರ್ಶನಗಳಿವೆ. ಸಾಮಾನ್ಯವಾಗಿ ಕಟ್ಟಿಸಿದವರ ಹೆಸರು ದೇವಾಲಯದ ಜೊತೆಗೂ ಸಹ ಸೇರುತ್ತಿತ್ತು. ಆದರೆ ಎಲ್ಲ ಸಂದರ್ಭಗಳಲ್ಲಿ ಇದು ಮಾನ್ಯವಾದುದಲ್ಲ. ಜನರನ್ನು ನಿಯಂತ್ರಿಸುವ ನೀತಿ ನಿಯಮಗಳ ನಿರೂಪಕಗಳಾದ ದೇವಾಲಯಗಳು ಸಮಾಜೋ-ಧಾರ್ಮಿಕ ಸಂಸ್ಥೆಗಳಾಗಿಯೂ ಕಾರ್ಯ ನಿರ್ವಹಿಸಿದವು. ಒಟ್ಟಾರೆ ದೇವಾಲಯಗಳನ್ನು ನಿರ್ಮಿಸಿ ಪೋಷಿಸುವುದು ಎಲ್ಲ ಜನವರ್ಗದ ಸ್ವಪ್ರತಿಷ್ಠೆಯಾಗಿತ್ತು. ದೇವಾಲಯಗಳೆಂದರೆ ಕೇವಲ ಅಲೌಕಿಕ ಕಾರ್ಯವಿಧಾನಗಳನ್ನು ಮಾತ್ರ ನಿರ್ವಹಿಸುತ್ತಿರಲಿಲ್ಲ. ಲೌಕಿಕ ಚಟುವಟಿಕೆಗಳಾದ ಅಂಗಭೋಗ-ರಂಗಭೋಗಗಳಿಗೂ ಸರಿಸಮಾನವಾದ ಪ್ರೋತ್ಸಾಹ ನೀಡಿದ್ದರು. ಸಾಮಾನ್ಯವಾಗಿ ದೇವಾಲಯಗಳಲ್ಲಿನ ನೃತ್ಯ, ಗೀತಗಾಯನ ಹಾಗೂ ಇತರ ಸೇವಾಕಾರ್ಯಗಳಿಗೆ ಹೆಣ್ಣುಗಳನ್ನು ನೇಮಿಸುತ್ತಿದ್ದರು. ಇವು ಇಂಥ ಕಾರ್ಯಗಳನ್ನು ಪೂರೈಸಲೆಂದೇ “ದೇವಾಲಯದ ಹೆಣ್ಣು ಅಥವಾ ದೇವಾಲಯದ ಸೂಳೆಯರು” ಎಂಬ ವರ್ಗವೇ ಸೃಷ್ಠಿಯಾಗಿರುವ ಉಲ್ಲೇಖಗಳಿವೆ. ಈ ತರಹದ ಅನೇಕ ಚಟುವಟಿಕೆಗಳು ಕುರುಗೋಡಿನ[1] ದೇವಾಲಯಗಳಿಗೆ ಸಂಬಂಧಪಟ್ಟಂತೆ ಶಾಸನಗಳಲ್ಲಿ ವ್ಯಕ್ತವಾಗಿವೆ.

ದೇವಾಲಯಗಳ ನಿರ್ವಹಣೆ ಹಾಗೂ ದಾನದತ್ತಿಗಳು

ದೇವಾಲಯಗಳನ್ನು ನಿರ್ಮಿಸುವುದೊಂದೆ ಪ್ರಮುಖ ಕಾರ್ಯವಾಗಿರಲಿಲ್ಲ. ಅವುಗಳ ಕೀರ್ತಿ ಹಾಗೂ ಮಹತ್ವ ಸೂರ್ಯ-ಚಂದ್ರರಿರುವವರೆಗೂ ನಿತ್ಯನೂತನ ಚಿರಂತನವಾಗಿರಬೇಕೆಂಬ ಬಹುದೊಡ್ಡ ಅಭಿಲಾಷೆ ದೇವಾಲಯ ಕಟ್ಟಿಸಿದವನಿಗಿರುತ್ತಿತ್ತು. ಆದ್ದರಿಂದ ಖಾಯಂ ಆದ ದಾನದತ್ತಿಗಳನ್ನು ದೇವಾಲಯ ನಿರ್ವಹಣೆಗಾಗಿಯೇ ಸ್ಥಾಪಿಸುತ್ತಿದ್ದರು. ದೇವರ ನಿತ್ಯಪೂಜೆಯ ನಿರ್ವಹಣೆಗಾಗಿ ಗ್ರಾಮದಾನ, ಭೂದಾನ, ಧನದಾನ ಮತ್ತು ತೆರಿಗೆಯಿಂದ ಬಂದ ಆದಾಯದಾನವನ್ನು ನೀಡುತ್ತಿದ್ದರು. ಇವುಗಳ ಮಾಹಿತಿಗಾಗಿ ಶಾಸನಗಳನ್ನು ಕಂಡರಿಸುತ್ತಿದ್ದರು.

ಪ್ರಮುಖವಾಗಿ ರಾಜ, ರಾಜನ ಪತ್ನಿಯರು, ಆಡಳಿತ ವ್ಯವಸ್ಥೆಯ ಅಧಿಕಾರವರ್ಗ, ವ್ಯಾಪಾರಿಗಳು (ಬಣಜಿಗರು) ಮುಂತಾದ ಗವರೆ, ಗಾತ್ರಿಗ ಹಾಗೂ ತೆಲ್ಲಿಗ, ಶೆಟ್ಟಿಗಳು ಸಮುದಾಯವು ಯಾವಾಗಲೂ ದೇವರು ಹಾಗೂ ದೇವಾಲಯಗಳಲ್ಲಿನ ಚಟುವಟಿಕೆಗಳಿಗೆ ದಾನ-ದತ್ತಿಗಳನ್ನು ನೀಡಲು ಕಾರ್ಯನಿರತವಾಗಿರುತ್ತಿತ್ತು. ಇವು ನಿರಾಂತಕವಾಗಿ ನಿರ್ವಹಣೆಯಾಗಲು ಅವುಗಳ ಉಸ್ತುವಾರಿಗಾಗಿ ಅನೇಕ ಮೇಲ್ವಿಚಾರಕರನ್ನು ಅಥವಾ ಅಧಿಕಾರಿಗಳನ್ನು ನೇಮಿಸುತ್ತಿದ್ದರು. ರಾಜಕೀಯ ವಿಪ್ಲವಗಳು ಹಾಗೂ ಬದಲಾವಣೆಗಳು ಏನೇ ಸಂಭವಿಸಿದರು, ಅಧಿಕಾರದ ಗದ್ದುಗೆಯನ್ನೇರಿದ ರಾಜ ಅಥವಾ ಅಧಿಕಾರಿವರ್ಗ ಜನಮನಗಳನ್ನು ಮೆಚ್ಚಿಸಲು ದೇವಾಲಯಗಳಿಗೆ ಕೊಟ್ಟಿರುವ ದಾನದತ್ತಿಗಳ ಯಥಾಸ್ಥಿತಿ ಕಾಯ್ದುಕೊಂಡು ಹೋಗುವುದು ಅಥವಾ ಹೆಚ್ಚಿಸುವುದು ತುಂಬಾ ಅವಶ್ಯಕವಾಗಿತ್ತು. ಅಲ್ಲದೇ ಆಡಳಿತಗಾರ ತನ್ನ ಆಡಳಿತದ ಸುಸೂತ್ರ ನಿರ್ವಹಣೆಗಾಗಿ ಬಹುಮುಖ್ಯವಾದ ಈ ತಂತ್ರ ರೂಪಿಸಲೇಬೇಕಾಗಿತ್ತು. ಒಮ್ಮೊಮ್ಮೆ ರಾಜನು ತನ್ನ ಧರ್ಮಾಚರಣೆಗಳನ್ನು ಬದಲಾಯಿಸಿದಾಗ ಅಥವಾ ತಾನು ಅನುಸರಿಸುವ ಧರ್ಮವನ್ನೇ ರಾಜ್ಯದ ಪ್ರಜೆಗಳು ಅನುಸರಿಸಬೇಕೆಂಬ ಒತ್ತಾಯವಿದ್ದಾಗ ದೇವಾಲಯ ಹಾಗೂ ದೇವರು ಸಹಜವಾಗಿ ಮಾರ್ಪಾಡಿಗೆ ಒಳಗಾಗುತ್ತಿತ್ತು.

ದೇವಾಲಯಗಳಿಗೆ ಸಂಬಂಧಿಸಿದಂತೆ ಇನ್ನೊಂದು ಬಹುಮುಖ್ಯ ವಿಚಾರವೆಂದರೆ ‘ಸ್ಥಾನಪತಿಗಳದ್ದು’. ಇವರು ಸ್ಥಾನಾಚಾರ್ಯ, ತಪೋಧನ, ಸ್ಥಾನಯ್ದರು ಎಂಬ ನಾನಾ ಹೆಸರುಗಳಿಂದ ಉಲ್ಲೇಖಿತರಾಗಿರುವುದನ್ನು ಶಾಸನಗಳಿಂದ ತಿಳಿಯುತ್ತೇವೆ. ದೇವಾಲಯಗಳ ಕೆಲಸಕಾರ್ಯಗಳು ಸಾಂಗವಾಗಿ ನಡೆದುಕೊಂಡು ಹೋಗಲು ನೈಷ್ಠಿಕ ಬ್ರಹ್ಮಚಾರಿಗಳಾದ ಸ್ಥಾನಾಚಾರ್ಯ ಗುರುಗಳು ಬಹುದೊಡ್ಡ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದರು. ಶೀಲಸಂಪನ್ನರಾದ ಈ ಬ್ರಹ್ಮಚಾರಿಗಳು ವಿದ್ವತ್ತು ಹಾಗೂ ನೈತಿಕತೆಗೆ ಹೆಚ್ಚಿನ ಮಹತ್ವ ಕೊಟ್ಟಿದ್ದರು. ಇವರಿಗಿರುವ ಗೌರವಗಳಿಂದಾಗಿಯೇ ದೇವಾಲಯಗಳಿಗೆ ಸಂಬಂಧಿಸಿದ ಯಾವುದೇ ವಿಧಿವಿಧಾನ (ದಾನ-ದತ್ತಿ ಹಾಗೂ ಧರ್ಮಕಾರ್ಯ)ಗಳು ಇವರ ಪಾದಪೂಜೆಯಿಂದಲೇ ನೆರವೇರಿಸಲ್ಪಡುತ್ತಿತ್ತು. ಇಂಥ ಸಂಗತಿಗಳು ಶಾಸನಗಳಲ್ಲಿ ‘ಕಾಲಂಕರ್ಚ್ಚಿ'[2] ಎಂದು ಉಲ್ಲೇಖಿತವಾಗಿದೆ. ದೇವಾಲಯದ ಎಲ್ಲ ರೀತಿಯ ಆಗುಹೋಗುಗಳಿಗೆ ಇವರು ಸಂಪೂರ್ಣ ಜವಾಬ್ದಾರರಾಗಿದ್ದು, ಪ್ರಾಚೀನ ದೇವಾಲಯಗಳು ಸಾಂಸ್ಕೃತಿಕ ಸಂಸ್ಥೆಯಾಗಿ ಕಾರ್ಯನಿರ್ವಹಿಸುವಲ್ಲಿ ಇವರ ಪಾತ್ರ ತುಂಬಾ ಅವಶ್ಯಕವಾಗಿತ್ತು. ಕೊಡಮಾಡುವ ಎಲ್ಲ ದಾನಗಳು ಇವರ ಸುಪರ್ದಿಯಲ್ಲಿಯೇ ಇರುತ್ತಿದ್ದವು. ಸ್ಥಾನಪತಿಗಳು ನ್ಯಾಯಪತಿಗಳಾಗಿ, ದೇವಾಲಯ ನ್ಯಾಯಾಲಯವಾಗಿ ಗ್ರಾಮ ಅಥವಾ ಪಟ್ಟಣಗಳನ್ನು ನಿಯಂತ್ರಿಸುತ್ತಿದ್ದವು. ನಿರ್ಮಾಣವಾದ ಬೃಹತ್ ದೇವಾಲಯಗಳಿಗೆ ಸಣ್ಣ-ಪುಟ್ಟ ದೇವಾಲಯಗಳು ಎಲ್ಲ ತರಹದ ‘ಬದ್ಧತೆ’ಗಳಿಗೆ ಒಳಗಾಗಬೇಕಿತ್ತು. ದೇವಾಲಯಗಳನ್ನು ನಿರ್ವಹಿಸುವ ಆಡಳಿತವರ್ಗ ಗ್ರಾಮ ಆಡಳಿತವನ್ನು ಸಹ ನೋಡಿಕೊಳ್ಳುತ್ತಿತ್ತು. ಪ್ರಾಚೀನ ನಿರ್ಮಿತಿಗಳ ಹಿಂದಿರುವ ಎಲ್ಲ ಬಗೆಯ ಪ್ರಮುಖ ಅಂಶಗಳನ್ನು ಗಮನಿಸಿಯೇ ಕುರುಗೋಡಿನ ದೇವಾಲಯಗಳನ್ನು ವಿವರಿಸುವ ಪ್ರಯತ್ನ ಮಾಡಲಾಗಿದೆ.

ಕುರುಗೋಡ ಸಿಂದರು ಮತ್ತು ದೇವಾಲಯಗಳು

ಕಲ್ಯಾಣ ಚಾಲುಕ್ಯರ ಆರನೆಯ ವಿಕ್ರಮಾದಿತ್ಯನ ಅವಸಾನದ ನಂತರ ಕನ್ನಡ ನಾಡಿನ ರಾಜಕೀಯ ರಂಗನಾಟಕದಲ್ಲಿ ಪರಿಣಾಮಕಾರಿಯಾದ ಅನೇಕ ಬದಲಾವಣೆಗಳಾದವು. ಕಲ್ಯಾಣ ಚಾಲುಕ್ಯರ ವಿಘಟನೆಗೊಂಡ ನಂತರ ಕಲಚುರಿ, ಹೊಯ್ಸಳ ಹಾಗೂ ಸೇವುಣರು ಆಯಾ ನಿರ್ದಿಷ್ಟ ಪ್ರದೇಶದಲ್ಲಿ ಚಿಗಿತುಕೊಂಡು ವಿಸ್ತರಣೆಗೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡರು. ಅದೇ ಸಂದರ್ಭದಲ್ಲಿ ಆಂಧ್ರಪ್ರದೇಶದ ‘ತುಂಬಳ’ದಿಂದ ಆಳುತ್ತಿದ್ದ ಸಿಂದವಾಡಿಯ ಸಾಸಿರದ ಅರಸರಾದ ಸಿಂದರು ತಮ್ಮ ರಾಜಧಾನಿ ಪಟ್ಟಣವನ್ನು ಕುರುಗೋಡು ಸೀಮೆಗೆ ಸ್ಥಳಾಂತರಿಸಿದರು. ಹಾಗೂ ತಮ್ಮ ಆಡಳಿತವನ್ನು ಬಲ್ಲುಕುಂದೆ-೩೦೦ರ ಆಡಳಿತ ವಿಭಾಗಕ್ಕೆ ಮಾತ್ರ ಕೇಂದ್ರೀಕರಿಸಿದರು. ಪ್ರಕೃತಿದತ್ತವಾದ ಕಣಶಿಲೆಯ ಬೆಟ್ಟಗಳು ಹೊಸದಾಗಿ ನಿರ್ಮಿತ ರಾಜಧಾನಿ ಪಟ್ಟಣಕ್ಕೆ ಅಭೇದ್ಯಕೋಟೆಯಂತಾದವು. ಉತ್ತರದಲ್ಲಿ ವಜ್ರಬಂಡಿ ಬಸಪ್ಪನ ದೇವಾಲಯದಿಂದ ದಕ್ಷಿಣದ ರಾಚಮಲ್ಲ ದೇವಾಲಯದವರೆಗೂ ಈ ಪಟ್ಟಣ ಹಬ್ಬಿಕೊಂಡಿತು. ಶತ್ರುಭಾದೆಯನ್ನು ಪ್ರಾರಂಭ ಹಂತದಲ್ಲಿ ತೊಡೆದುಹಾಕುವಂತೆ ಇಕ್ಕೆಲಗಳಲ್ಲಿ ವಿಸ್ತರಿಸಿಕೊಂಡಿರುವ ಬೆಟ್ಟಶ್ರೇಣಿಗಳನ್ನು ಸದುಪಯೋಗಪಡಿಸಿಕೊಂಡರು. ಉಜಾಳೇಶ್ವರ ದೇವಾಲಯವೊಂದನ್ನು ಬಿಟ್ಟು ಉಳಿದ ದೇವಾಲಯಗಳು ಎರಡು ಬೆಟ್ಟಶ್ರೇಣಿಗಳು ಮಧ್ಯಭಾಗದಲ್ಲಿ ನಿರ್ಮಾಣವಾಗಿವೆ. ಅಂದರೆ ಈಗ ಅಸ್ತಿತ್ವದಲ್ಲಲಿರುವ ಪಟ್ಟಣವು ನಂತರಕಾಲದಲ್ಲಿ ಬೆಳೆದುಬಂದಿರಬಹುದು. ಕುರುಗೋಡು ಸೀಮೆಯು ಅತ್ಯಂತ ಫಲವತ್ತಾದ ಕಪ್ಪುಮಣ್ಣಿನ ಭೂಮಿಯಿಂದ ವಿಸ್ತರಿಸಿಕೊಂಡಿದೆ. ಇಂಥ ಅಂಶವು ರಾಜ್ಯ (ಬಲ್ಲಕುಂದೆ-೩೦೦) ಹಾಗೂ ರಾಜಧಾನಿಯನ್ನು ಸಂಪತ್ಭರಿತವಾಗಿಡಲು ತುಂಬಾ ಸಹಾಯಕವಾಗಿದೆ. ಅನೇಕ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲು ಹೇರಳವಾದ ಸಂಪನ್ಮೂಲಗಳಿರುವುದರಿಂದ ಸಿಂದರು ಕುರುಗೋಡು ಪಟ್ಟಣದಿಂದ ಒಂದು ಶತಮಾನಗಳ ಕಾಲ ರಾಜ್ಯಭಾರ ಮಾಡಿದರು. ಕಲ್ಯಾಣ ಚಾಲುಕ್ಯರ ಕಾರಭಾರದಲ್ಲಿ ಮಹಾ ಸಾಮಂತರಾದ ಕುರುಗೋಡಿನ ಸಿಂದರು ಕಲಚುರಿಗಳ ಕಾಲದಲ್ಲಿ ಮಹಾಮಂಡಳೇಶ್ವರರಾಗಿ ನಿರ್ಣಾಯಕ ಪಾತ್ರವಹಿಸಿದರು. ಶರಣ ಚಳುವಳಿಯಲ್ಲಿ ಗುರುತಿಸಿಕೊಂಡ ಸಿಂದ ಅರಸರು ಅನೇಕ ಪವಾಡಗಳನ್ನು ಮೆರೆದು ತಮ್ಮನ್ನು ಉಗ್ರ ಶಿವಭಕ್ತರೆಂದು ಸಾಬೀತುಪಡಿಸಿಕೊಂಡಿದ್ದಾರೆ. ಚರಿತ್ರೆಯಲ್ಲಿ ಕುರುಗೋಡಿನ ಸಿಂದರನ್ನು ಕೇವಲ ಅವರ ಹೋರಾಟದ ಬದುಕಿನಿಂದ (ಯುದ್ಧಗಳಿಂದ) ಮಾತ್ರ ಗುರುತಿಸಲಾಗದು. ಆಡಳಿತ ಜೊತೆ ಜೊತೆಗೆ ಅವರು ನಿರ್ಮಿಸಿದ ಕಲಾರಚನೆ (ದೇಗುಲ)ಗಳು ಅತೀ ಮುಖ್ಯವಾಗುತ್ತವೆ. ಚರಿತ್ರೆಯಲ್ಲಿ ಕೇವಲ ಸಾಮಂತರಾಗಿ ಪರಿಗಣಿಸಲ್ಪಡುವ ಕುರುಗೋಡ ಸಿಂದರು ಬಲ್ಲಕುಂದೆ ನಾಡಿನಲ್ಲಿ ಅವರ ರಾಜರನ್ನು ಮೀರಿಸುವಷ್ಟು ಅದ್ಭುತವಾದ ರಚನೆಗಳನ್ನು ನಿರ್ಮಿಸಿದ್ದಾರೆ. ಸಿಂದರು ಕುರುಗೋಡಿನಲ್ಲಿ ದೇವಾಲಯಗಳನ್ನು ನಿರ್ಮಿಸುವ ಮೊದಲೇ ದೇವಾಲಯ ಕಾರ್ಯ ವಿಧಾನಗಳಿಗೆ ಸಂಬಂಧಿಸಿದಂತೆ ಅನೇಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಮಾಹಿತಿಗಳಿವೆ. ಇಂಥ ವಿವರಗಳನ್ನು ಕುರುಗೋಡಿನಲ್ಲಿನ ದೇವಾಲಯಗಳನ್ನು ಚರ್ಚಿಸುವಾಗ ಹಿನ್ನೆಲೆಯಾಗಿ ಬಳಸಿಕೊಳ್ಳಲಾಗಿದೆ.

ಅರಿಬಲ್ಲದಾಗ್ರನ ಕಾಲದಿಂದಲೇ ಕುರುಗೋಡು ಸಿಂದರು ದೇವಾಲಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದನ್ನು ಶಾಸನಾಧರಗಳಿಂದ ತಿಳಿಯುತ್ತೇವೆ. ರಾಷ್ಟ್ರಕೂಟ ಮೂರನೆಯ ಕೃಷ್ಣನ ಕಾಲದಲ್ಲಿ ಮಹಾಸಾಮಂತನಾದ ಸಿಂದವಂಶದ ಮೂಲಪುರುಷ ಅರಿಬಲ್ಲದಾಗ್ರ ಹಾಗೂ ಕುರುಗೋಡಿನ ಮುನ್ನೂರು ಮಹಾಜನರು ಕುಡುತಿನಿಯ (ಕ್ರಿ.ಶ. ೯೪೭) ದೇಕಮ್ಮನ ದೇಗುಲಕೆ ಕುರುಗೋಡಿನ ಹೊಲದಲ್ಲಿ ೬೨ ಮತ್ತರ ಭೂಮಿಯನ್ನು ಬಿಟ್ಟಿರುತ್ತಾರೆ. ದೇವಾಲಯದ ಈ ಭೂಮಿಯನ್ನು ಅಯ್ಯಣಯ್ಯನ ಮಗನಾದ ಪುಟೆಗಳ್ಳನು ಉಪಭೋಗಿಸುತ್ತಿರುತ್ತಾನೆ. ಈ ವಿಷಯವನ್ನು ಗಡ್ಡದ ರುದ್ರರಾಸಿ ಭಟಾರರು ಸಾಮ್ರಾಟ್ ಅಕಾಳವರ್ಷದೇವ ಶ್ರೀಮತ್ ಛಲಕೆನಲ್ಲಾತ (ಕೃಷ್ಣ III)ನನ್ನು ಆಳಂಪುರದಲ್ಲಿ ಖುದ್ದಾಗಿ ಕಂಡು ನಿವೇದಿಸಿಕೊಳ್ಳುತ್ತಾರೆ. ಉಪಭೋಗಿಸಲ್ಪಡುವ ೬೨ ಮತ್ತರು ಭೂಮಿಯನ್ನು ದೇವಾಲಯದ ನಿರ್ವಹಣೆಗಾಗಿ ಶಾಸನ ಸಮೇತನಾಗಿ ಪಡೆದುಕೊಂಡು ಬರುತ್ತಾರೆ.[3] ಈಗ ಲಭ್ಯವಿರುವ ಮಾಹಿತಿಗಳ ಪ್ರಕಾರ ಕುರುಗೋಡು ಸಿಂದರು ದೇವಾಲಯ ಸಂಬಂಧಿ ಚಟುವಟಿಕೆಗಳಲ್ಲಿ ಭಾಗವಹಿಸಿದ ಮೊದಲ ಉಲ್ಲೇಖ ಇದಾಗಿದೆ. ಅನಂತರ ಸುಮಾರು ಒಂದು ಶತಮಾನಗಳ ಕಾಲ ಕುರುಗೋಡು ಸಿಂದರು ದಾನಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಉಲ್ಲೇಖಗಳು ಕಾಣವುದಿಲ್ಲ. ಕ್ರಿ.ಶ. ೧೦೪೫ರಲ್ಲಿ ಸಿಂದರಸ ಉದಯಾದಿತ್ಯನು ಅನೇಕ ದಾನ-ದತ್ತಿ ಕಾರ್ಯಗಳನ್ನು ಮಾಡಿರುವ ಮಾಹಿತಿಗಳಿವೆ.[4] ಆದರೆ ಉಲ್ಲೇಖಿತ ದಾನಗಳನ್ನು ಈತನು ನೇರವಾಗಿ ದೇವಾಲಯಗಳ ಚಟುಟಿಕೆಗಳಿಗಾಗಿಯೇ ನೀಡಿರುವ ಸ್ಪಷ್ಟ ಮಾಹಿತಿಗಳಿಲ್ಲ. ಆದರು ಸಾಮಾನ್ಯವಾಗಿ ಅರಸರು ಕೊಡಮಾಡುವ ಹೆಚ್ಚಿನ ದಾನಗಳು ಪರೋಕ್ಷವಾಗಿಯಾದರೂ ದೇವಾಲಯಗಳಿಗೆ ಸಂಬಂಧಿಸಿದವುಗಳಾಗಿರುತ್ತವೆ ಎಂಬುದನ್ನು ಪರಿಭಾವಿಸಬೇಕು. ಉದಯಾದಿತ್ಯನ ನಂತರ ಅಧಿಕಾರಕ್ಕೆ ಬಂದ ಮಹಾಸಾಮಂತ ಚೋಕರಸ (ಕ್ರಿ.ಶ. ೧೦೯೧-೯೨) ಆರನೆಯ ವಿಕ್ರಮಾದಿತ್ಯನ ರಾಣಿಯನ್ನು ಅನುಸರಿಸಿ, ೫೦ ಕೊಳಗ ಧಾನ್ಯವನ್ನು ಸಿರಗುಪ್ಪೆಯ ಕೇತಲೇಶ್ವರ ದೇವರಿಗೆ ಹಾಗು ಅಲ್ಲಿನ ಬ್ರಾಹ್ಮಣರ ಭೋಜನಕ್ಕಾಗಿ ಧಾನ್ಯವನ್ನು ನೀಡುತ್ತಾನೆ.[5] ಚೋಕರಸನ ತರುವಾಯ ಅಧಿಕಾರಕ್ಕೆ ಬಂದ ಸೋವಿದೇವನು (ಭೀಮದೇವ ಹಾಗೂ ಮಾಕಣಾಂಬೆಯವರ ಮಗ) ಸಿಂದರ ಆಡಳಿತಕ್ಕೆ ನಿಜವಾದ ಬುನಾದಿಯನ್ನು ನಿರ್ಮಿಸಿದವನೆಂಬ ಅಭಿಪ್ರಾಯವಿದೆ. ಸಮರ್ಥ ಆಡಳಿತಗಾರನಾದ ಸೋವಿದೇವನು ಕೊಂಚಗೆರೆ (ಸಿರುಗುಪ್ಪ ತಾಲೂಕು)ಯಲ್ಲಿನ ಸ್ವಯಂಭು ಕಲಿದೇವರ ಅಂಗಭೋಗ ನೈವೇದ್ಯಕ್ಕಾಗಿ ನಂದಾದೀವಿಗೆ ಚೈತ್ರಪವಿತ್ರಕ್ಕೆಂದು ಆಸ್ಥಾನದ ಆಚಾರ್ಯರಾದ ದೇವರಾಶಿ ಪಂಡಿತರ ಕೈಯಲ್ಲಿ ದಾನಕಾರ್ಯ ಮಾಡಿಸುತ್ತಾನೆ. ಇದೇ ಶಾಸನದಲ್ಲಿ ಕುರುಗೋಡು ಸಿಂದರ ವಂಶಾವಳಿಯ ವಿವರಣೆಯು ಸಹ ಇದೆ. ಹಾಗೂ ಸೋವಿದೇವನನ್ನು ಸ್ವಾಮಿಕಾರ್ತಿಕದೇವಲಬ್ದ ವರಪ್ರಸಾದ ಎಂದು ಸಂಬೋಧಿಸಲಾಗಿದೆ.[6] ಈತನ ನಂತರ ಆಳ್ವಿಕೆಗೆ ಬಂದ ಇಮ್ಮಡಿ ಭೀಮನು (ಭೀಮರಸ) ಫಣಿವಂಶದವನೇ ಆದ ರೇವುಗಾವುಂಡ ಮಾಡಿಸಿದ ದೇವಾಲಯಗಳ ಸೇವೆಗಾಗಿ ತನ್ನ ತಮ್ಮ ಒಂದನೆಯ ರಾಚಮಲ್ಲನ ಜೊತೆಗೂಡಿ ಭೂಮಿದಾನ ಮಾಡಿದ್ದಾನೆ. ಕ್ರಿ.ಶ. ೧೧೩೧ರ ಬೈಲೂರು (ಬಳ್ಳಾರಿ ತಾಲೂಕು) ಶಾಸನದಲ್ಲಿ[7] ಉಲ್ಲೇಖವಾದಂತೆ ಸೋವಿದೇವನ ಮಗನಾದ ಇಮ್ಮಡಿ ಭೀಮನು ಪಟ್ಟಣದ ಬೀರಗವುಡ ದೇವರಾಸಿ ಪಂಡಿತರ ಕಾಲುತೊಳೆದು ಕಾಲುತೊಳೆದು ಧಾರಾಪೂರ್ವಕವಾಗಿ ಮಲ್ಲಿಕಾರ್ಜುನ ದೇವರ ಕಾರ್ಯಕ್ಕೆ ಏಳುಮತ್ತರು ಭೂಮಿಯನ್ನು ನೀಡುತ್ತಾನೆ.

ಕ್ರಿ.ಶ. ೧೧೪೭-೭೭ರವರೆಗೆ ಆಡಳಿತ ನಿರ್ವಹಿಸಿದ ಒಂದನೆಯ ರಾಚಮಲ್ಲ ಕುರುಗೋಡು ಸಿಂದರ ಚರಿತ್ರೆಯಲ್ಲಿ ಅತ್ಯಂತ ಪ್ರತಿಷ್ಠಿತ ವ್ಯಕ್ತಿಯಾಗಿ ಬಿಂಬಿತನಾಗಿದ್ದಾನೆ. ಈತನ ಆಡಳಿತಾವಧಿಯಲ್ಲಿಯೇ ಕುರುಗೋಡು ಪಟ್ಟಣದಲ್ಲಿ ದೇವಾಲಯಗಳ ನಿರ್ಮಾಣ ಕಾರ್ಯ ಹೊಸ ವೇಗವನ್ನು ಪಡೆಯಿತು.[8] ಉಗ್ರಶಿವಭಕ್ತನಾದ ಈತನನ್ನು ಶಿವಪಾದ ಶಿಖಾಮಣಿ, ಶಿವಪಾದಶೇಖರಂ, ಮಾಹೇಶ್ವರಂ ವೀರಮಾಹೇಶ್ವರ ಎಂದು ಕರೆಯಲಾಗುತ್ತದೆ.[9] ರೇವಗೌಡ ಅಥವಾ ಗಾವುಂಡ ಕಟ್ಟಿಸಿದ ದೇವಾಲಯಕ್ಕೆ ಅಣ್ಣನಾದ ಇಮ್ಮಡಿ ಭೀಮದೇವನ ಜೊತೆಗೂಡಿ ದಾನ ನೀಡುವ ಮಾಹಿತಿಯನ್ನು ಈ ಹಿಂದೆ ವಿವರಿಸಲಾಗಿದೆ. ಕೊಂಚಗೆರೆ[10] ಶಾಸನದಲ್ಲಿ ಒಂದನೆಯ ರಾಚಮಲ್ಲನ ಪಿರಿಯರಿಸಿ ಮಾಕಲದೇವಿ ಆನೆವರಿಯ ರಾಮತೀರ್ಥದ ಭೈರವ ದೇವರಿಗೆ ದಾನ ಕೊಟ್ಟ ಉಲ್ಲೇಖವಿದೆ. ಇದೇ ಊರಿನ ಇನ್ನೊಂದು ಶಾಸನದಲ್ಲಿ ಒಂದನೆಯ ರಾಚಮಲ್ಲ ಅಲ್ಲಿನ ಸ್ವಯಂಭುಕಲಿದೇವರಿಗೆ ಎಲೆ ಅಡಿಕೆ ಹಾಗೂ ಕುದುರೆಗಾಡಿಗಳನ್ನು ಒದಗಿಸಿರುವ ಮಾಹಿತಿ ಇದೆ.[11] ಈತನ ಅಧಿಕಾರಿ ಕೇತಯ ಸಾಹಣಿಯು ಸಿದ್ಧನಾಥ, ನರಸಿಂಹ ಮತ್ತು ವಿನಾಯಕದೇವರಿಗೆ ದೇವಾಲಯಗಳನ್ನು ನಿರ್ಮಿಸಿ ಅವುಗಳ ಪೂಜೆ ಪುನಸ್ಕಾರಕ್ಕಾಗಿ ಭೂಮಿ ದಾನಮಾಡಿರುವ ಉಲ್ಲೇಖ ತೆಕ್ಕಲಕೋಟೆ (ಸಿರಗುಪ್ಪ ತಾಲೂಕು) ಶಾಸನದಲ್ಲಿದೆ.[12] ಕಟ್ಟಾ ಶಿವಭಕ್ತನಾದ ರಾಚಮಲ್ಲನ ಅನೇಕ ಪವಾಡ ಸಂಗತಿಗಳು ಕಾವ್ಯಗಳಲ್ಲಿ ಮಾತ್ರ ಉಲ್ಲೇಖವಾಗದೇ ಶಾಸನಗಳಲ್ಲಿಯೂ ಸಹ ಅವುಗಳ ವಿವರಣೆ ಇದೆ. ಶಿವನಲ್ಲಿ ಐಕ್ಯನಾದ ಈತನ ಬಗೆಗೆ ಕುರುಗೋಡು ಪಟ್ಟಣದ ಸ್ವಯಂಭುದೇವರ ಪಶ್ಚಿಮಾಭಿಮುಖದೊಳು ಬಂದುನಿಂದು ಸಕಳಲೋಕಕ್ಕೆ ಕೌತುಕಮವಾಗಿ ಲಿಂಗಮೂರ್ತಿಯಿಂದುದ್ಭವಿಸಲು ಶ್ರೀಮತ್ ಉದ್ಭವ ರಾಚಮಲ್ಲದೇವರೆಂಬ ಪೆಸರಂ ಪಡೆದ ಎಂಬ ಶಾಸನೋಕ್ತ ಉಲ್ಲೇಖ ಸಿಗುತ್ತದೆ.[13]ಈ ಉದ್ಭವ ಲಿಂಗಮೂರ್ತಿಗೆ ದೇವಾಲಯವನ್ನು ಎರಡನೆಯ ರಾಚಮಲ್ಲನ ಕಾಲಾವಧಿಯಲ್ಲಿ ಕಟ್ಟಿಸಲಾಗಿದೆ ಎಂಬ ಅಭಿಪ್ರಾಯವಿದೆ. ಕುರುಗೋಡು-ಕುಡುತಿನಿ ರಸ್ತೆಯಲ್ಲಿರುವ ದೇವಾಲಯವನ್ನು ರಾಚಮಲ್ಲೇಶ್ವರನೆಂದು ಗುರುತಿಸಲಾಗಿದೆ. ಒಂದನೆಯ ರಾಚಮಲ್ಲನ ಕಾಲಾವಧಿಯಲ್ಲಿ ಕುರುಗೋಡು ಪಟ್ಟಣದಲ್ಲಿ ಮುಮ್ಮರಿದಂಡಗಳು (ವೀರಬಣಜಿಗರು) ತ್ರಿಕೂಟಾಲಯವನ್ನು ನಿರ್ಮಿಸುತ್ತಾರೆ.[14] ಈ ದೇವಾಲಯದ ನಿತ್ಯಪೂಜೆಯ ನಿರ್ವಹಣೆಗಾಗಿ ಅರಸನು ದಾನ ನೀಡುತ್ತಾನೆ. ಒಂದನೆಯ ರಾಚಮಲ್ಲನ ಮಗ ಇರುಂಗೋಳದೇವ ತನ್ನ ತಂದೆ ಇನ್ನೂ ಅಧಿಕಾರದಲ್ಲಿದ್ದಾಗಲೇ ಮರಣ ಹೊಂದಿದೆ. ಇದಕ್ಕೆ ಪುಷ್ಟಿ ಎಂಬಂತೆ ಕ್ರಿ.ಶ. ೧೧೪೯ರ ಶಾಸನವೊಂದು ಎರಡನೆಯ ರಾಚಮಲ್ಲನ (ಇರುಂಗೋಳ ದೇವನ ಮಗ) ಆಡಳಿತವನ್ನು ಉಲ್ಲೇಖಿಸುತ್ತದೆ.[15] ಪಟ್ಟಣದ ಉತ್ತರ ಭಾಗದಲ್ಲಿ ನಿರ್ಮಾಣವಾಗಿರುವ ಉಜಾಳೇಶ್ವರ ದೇವಾಲಯದ ಅಂತರಾಳ ಬಾಗಿಲವಾಡದ ಎಡಭಾಗದಲ್ಲಿರುವ ದ್ವಾರಪಾಲಕ ಶಿಲ್ಪವನ್ನು ಇರುಂಗೋಳದ ಮಡದಿ (ಏಚಲದೇವಿ) ಯದೆಂದು ಹಾಗೂ ಈ ದೇವಾಲಯದ ನಿರ್ಮಾಣಕ್ಕೆ ಇವಳು ಕಾರಣೀಭೂತಳೆಂದು ಅಭಿಪ್ರಾಯಿಸಿದ್ದಾರೆ.[16] ಈತನ ಮಗ ಎರಡನೆಯ ರಾಚಮಲ್ಲ ತನ್ನ (ಯೌವನದಲ್ಲಿಯೇ) ಅಜ್ಜನಾದ ಒಂದನೆಯ ರಾಚಮಲ್ಲನ ಜೊತೆಗೂಡಿ ಅನೇಕ ಸಾಧನೆಗಳನ್ನು ಮಾಡಿದನು. ಕ್ರಿ.ಶ. ೧೧೪೯ರ ಹೊತ್ತಿಗೆ ತನ್ನನ್ನು ರಾಜ್ಯಾಧಿಕಾರದಲ್ಲಿ ತೊಡಗಿಸಿಕೊಂಡಿರುವ ಮಾಹಿತಿ ಸಿಗುತ್ತದೆ.[17] ಅಜ್ಜನ ನೆರಳಿನಲ್ಲಿ ಬೆಳೆದ ಈತನ ಸಹ ಒಬ್ಬ ಉಗ್ರ ಶಿವಭಕ್ತನಾಗಿ ರೂಪಿತನಾಗಿದ್ದು, ಶಿವನನ್ನು ಸಾಕ್ಷಾತ್ಕರಿಸಿಕೊಂಡಿರುವ ಅನೇಕ ಸಂಗತಿಗಳನ್ನು ಕಾವ್ಯಗಳು ಕಟ್ಟಿಕೊಡುತ್ತವೆ. ಅಪೂರ್ವ ವ್ಯಕ್ತಿತ್ವ ಹೊಂದಿರುವ ಎರಡನೆಯ ರಾಚಮಲ್ಲ ಧರ್ಮೋಪದೇಶ ಮಾಡುವ ಗುರುವಾಗಿ ಸಮಾಜಕ್ಕೆ ಆದರ್ಶ ಪುರುಷನಾಗಿ ಇದ್ದನು ಎಂಬ ಅಭಿಪ್ರಾಯವನ್ನು ಡಾ.ಎಂ.ಎಂ. ಕಲಬುರ್ಗಿಯವರು ವ್ಯಕ್ತಪಡಿಸಿದ್ದಾರೆ.[18]ಈತನು ಬಲ್ಲಕುಂದೆ ಆಡಳಿತ ವಿಭಾಗದ ವಿಸ್ತಾರ ಹಾಗೂ ಭದ್ರತೆಯನ್ನು ಅತ್ಯಂತ ವ್ಯವಸ್ಥಿತವಾಗಿ ಕಾರ್ಯಗತಗೊಳಿಸಿದನು. ಎರಡನೆಯ ರಾಚಮಲ್ಲನ ಅಧಿಕಾರಿ ಹೆಗ್ಗಡೆ ರೇಚಯ್ಯನು ಹಂಪಿಯ ಮನ್ಮಥತೀರ್ಥದ ಬಳಿ ರಾಚಮಲ್ಲನ ಸ್ಮರಣಾರ್ಥವಾಗಿ ರಾಚಮಲ್ಲೇಶ್ವರ ದೇವಾಲಯವನ್ನು ಕಟ್ಟಿಸುತ್ತಾನೆ.[19] ಇಮ್ಮಡಿ ರಾಚಮಲ್ಲನ ಮಗ ವೀರ ಕಲಿದೇವರಸನು ಕ್ರಿ.ಶ. ೧೧೯೯ರ ವೇಳೆಗೆ ಅಧಿಕಾರರೂಢನಾದ ಬಗೆಗೆ ವಿವರಣೆ ಸಿಗುತ್ತದೆ.[20] ಧಾರ್ಮಿಕವಾಗಿ ಅತ್ಯಂತ ಮಹತ್ವವುಳ್ಳ ಹಂಪೆಯ ರಕ್ಷಣೆಗಾಗಿ ವೀರಕಲಿದೇವರಸನು ತನ್ನ ಸಾಮಾಂತನನ್ನು ನೇಮಕ ಮಾಡಿಡುತ್ತಾನೆ. ವಿರೂಪಾಕ್ಷತೀರ್ಥ ರಕ್ಷಣಾರ್ಥವಾಗಿ ಸಾಮಂತ ಮಾದೆಯನಾಯಕನು ಮತಂಗಪರ್ವತವನ್ನು ಪರಿಪಾಲಿಸುತ್ತಿದ್ದ ಎಂಬ ಉಲ್ಲೇಖ ಶಾಸನದಲ್ಲಿದೆ.[21] ವೀರಕಲಿದೇವರಸನ ನಂತರ ಆಳ್ವಿಕೆ ಮಾಡಿದ ಕುರುಗೋಡು ಸಿಂದರಸರ ಬಗೆಗೆ ಯಾವ ಸ್ಪಷ್ಟ ಮಾಹಿತಿಗಳು ದೊರೆತಿಲ್ಲ. ಕಲ್ಯಾಣದ ಚಾಳುಕ್ಯರ ಪತನಾನಂತರ ಸಾಮ್ರಾಜ್ಯ ವಿಸ್ತರಣೆಯ ನಿರ್ಣಾಯಕ ಯುದ್ಧದಲ್ಲಿ ಮಹಾಮಂಡಳೇಶ್ವರರಾದ ಹೊಯ್ಸಳರು ಸೇವುಣರನ್ನು ಸೋಲಿಸಿ ಮೇಲುಗೈ ಸಾಧಿಸುತ್ತಾರೆ. ಇವರು ತುಂಗಭದ್ರಾನದಿಯ ಬಲಭಾಗದ ಎಲ್ಲ ಪ್ರದೇಶವನ್ನು ನಮ್ಮ ಅಂಕಿತಕ್ಕೆ ಒಳಪಡಿಸಿಕೊಂಡು ಕ್ರಿ.ಶ. ೧೨೦೬ರ ಹೊತ್ತಿಗೆ ಹಂಪೆಯಿಂದಲೇ ಆಡಳಿತ ನಡೆಸಿರುವ ವಿವರಣೆ ಇದೆ.[22] ಈ ಸಂದರ್ಭದಲ್ಲಿ ಬಲ್ಲಕುಂದೆ ನಾಡಿನ ಅರಸರಾದ ಕುರುಗೋಡು ಸಿಂದರು ಸಹಜವಾಗಿಯೇ ಹೊಯ್ಸಳರ ಅಧಿಪತ್ಯಕ್ಕೆ ಒಳಗಾಗಿರಬಹುದು ಡಾ.ಎಂ.ಚಿದಾನಂತಮೂರ್ತಿ ಅವರು ಕುರುಗೋಡು ಸಿಂದರನ್ನು ಹೊಯ್ಸಳರ ಸಾಮಂತರೆಂದೆ ಗುರುತಿಸಿದ್ದಾರೆ.[23] ಒಟ್ಟಿನಲ್ಲಿ ಅಭಿಪ್ರಾಯಪಡುವುದಾದರೆ ೧೩ನೇ ಶತಮಾನದ ನಂತರ ಕುರುಗೋಡ ಸಿಂದರ ಬಗೆಗಿರುವ ಮಾಹಿತಿಗಳ ಅಲಭ್ಯತೆಯಿಂದ ಅವರ ಸಾಂಸ್ಕೃತಿಕ ಸಮಗ್ರ ಇತಿಹಾಸ ರಚಿಸುವುದು ಕಷ್ಟಸಾಧ್ಯವಾಗಿದೆ.

ಕುರುಗೋಡು ಪಟ್ಟಣಕ್ಕೆ ಸಂಬಂಧಿಸಿದಂತೆ ಪ್ರಸ್ತಾಪಿಸಬಹುದಾದ ಪ್ರಮುಖ ಸಂಗತಿಯೆಂದರೆ, ಅಲ್ಲಿರುವ ಪ್ರಾಚೀನ ಗುಹಾಂತರ ದೇವಾಲಯಗಳು. ಆದಿಮಾನವನ ಚಟುವಟಿಕೆಗಳಿಂದ ನಿರ್ಮಿತವಾದ ಆಯುಧ, ಕಲ್ಲಾಸರೆಯ ರೇಖಾಚಿತ್ರಗಳ ಕುರುಹುಗಳು ಕುರುಗೋಡು ಪರಿಸರದಲ್ಲಿ ಹಬ್ಬಿರುವ ಬೆಟ್ಟಗಳಲ್ಲಿ ಹೇರಳವಾಗಿ ಸಿಗುತ್ತವೆ. ಆದರೆ ನಿರ್ದಿಷ್ಟವಾದ ಗುಹಾಂತರ ದೇವಾಲಯಗಳು ಕಂಡುಬಂದಿಲ್ಲ. ಪ್ರಕೃತಿದತ್ತವಾದ ಗುಹೆಗಳನ್ನು ಇತ್ತೀಚೆಗೆ ದೇವಾಲಯಗಳನ್ನಾಗಿ ಪರಿವರ್ತಿಸಿದ್ದಾರೆ. ಉದಾಹರಣೆಗೆ ಗುಂಡುಬ್ರಹ್ಮನ ದೇವಾಲಯ ಹಾಗೂ ಹಿಂಡುಲಿ ಸಂಗಮೇಶ್ವರ ದೇವಾಲಯದ ಮುಂಭಾಗದ ಬೆಟ್ಟದಲ್ಲಿರುವ ಗವಿ ವೀರಭದ್ರನ ದೇವಾಲಯವನ್ನು ಸೂಚಿಸಬಹುದು. ಇವುಗಳನ್ನೇ ಗುಹಾಂತರ ದೇವಾಲಯಗಳೆಂದು ಗುರುತಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಕ್ಷೇತ್ರಕಾರ್ಯಾವಧಿಯಲ್ಲಿ ಅಂಥ ಸ್ಪಷ್ಟ ಮಾಹಿತಿ ಸಿಗದೇ ಇರುವುದರಿಂದ ಅವುಗಳ ವಿವರಣೆ ಕೈಬಿಡಲಾಗಿದೆ.

ಒಂದು ಶತಮಾನಗಳ ಕಾಲ ಆಡಳಿತ ನಿರ್ವಹಿಸಿದ ಸಿಂದರು ಕುರುಗೋಡು ಪಟ್ಟಣ ಸೇರಿದಂತೆ ಬಲ್ಲಕುಂದೆ, ಓರುವಾಯಿ, ಹಂಪೆ, ಕುಡುತಿನಿ, ಕೊಳಗಲ್ಲು, ಹಾವಿನಾಳ, ಬಳ್ಳಾರಿ ಮುಂತಾದ ಸ್ಥಳಗಳಲ್ಲಿರುವ ದೇವಾಲಯಗಳ ಚಟುವಟಿಕೆಗಳಲ್ಲಿ ಪರೋಕ್ಷವಾಗಿ ಭಾಗವಹಿಸಿರುವ ನಿದರ್ಶನಗಳಿವೆ. ಕುರುಗೋಡಿನ ಕೈಫಿಯತ್ತಿನ ಉಲ್ಲೇಖದಂತೆ ಕುರುಗೋಡ ಪಟ್ಟಣದಲ್ಲಿಯೇ ಸುಮಾರು ೨೦ ದೇವಾಲಯಗಳಿರುವ ಮಾಹಿತಿ ಇದೆ.[24]ಎಲ್ಲ ದೇವಾಲಯಗಳನ್ನು ಸ್ಪಷ್ಟವಾಗಿ ಗುರುತಿಸುವುದು ತುಂಬಾ ಕಷ್ಟಕರವಾದುದು. ಕಾರಣ ಹೆಚ್ಚಿನ ದೇವಾಲಯಗಳು ನಾಶವಾಗಿದೆ. ಹಾಗೂ ವಿನಾಶದ ಅಂಚಿನಲ್ಲಿರುವ ಕೆಲವು ದೇವಾಲಯಗಳಿಗೆ ಸ್ಪಷ್ಟವಾದ ಹೆಸರುಗಳೇ ಇಲ್ಲ. ಹೀಗಾಗಿ ಕಲಾ ಇತಿಹಾಸ ದೃಷ್ಟಿಯಿಂದ ಪ್ರಮುಖವಾದ ದೇವಾಲಯಗಳನ್ನು ಮಾತ್ರ ವಿವರವಾದ ಚರ್ಚೆಗೆ ಒಳಪಡಿಸಲಾಗಿದೆ. ಹಾಗೂ ಪ್ರಬಂಧದ ವ್ಯಾಪ್ತಿಯನ್ನು ಕುರುಗೋಡಿನಲ್ಲಿರುವ ದೇವಾಲಯಗಳಿಗೆ ಮಾತ್ರ ಸೀಮಿತಗೊಳಿಸಿಕೊಳ್ಳಲಾಗಿದೆ. ದೇವಾಲಯಗಳ ಛಾಯಾಚಿತ್ರ, ನಕ್ಷೆಗಳನ್ನು ಗ್ರಂಥದ ಕೊನೆಯಲ್ಲಿ ನೀಡಲಾಗಿದೆ.

ಕುರುಗೋಡಿನ ಪ್ರಾಚೀನ ಕಲ್ಗುಡೇಶ್ವರ ದೇವಾಲಯವು ಸಂಪೂರ್ಣವಾಗಿ ಜೀರ್ಣೋದ್ಧಾರಕ್ಕೊಳಪಟ್ಟಿದೆ. ಕುರುಗೋಡು -ಮುಷ್ಟಗಟ್ಟಿ ರಸ್ತೆಯಲ್ಲಿರುವ ಈ ದೇವಾಲಯ ಕುರುಬ ಸಮುದಾಯದ ಉಸ್ತುವಾರಿಯಲ್ಲಿದೆ. ದೇವಾಲಯದ ಆವರಣದಲ್ಲಿ ತೃಟಿತವಾದ ಸಪ್ತಮಾತೃಕೆ ಶಿಲ್ಪ, ನಾಗಶಿಲ್ಪಗಳು ಹಾಗೂ ಕೈಮುಗಿದು ಕುಳಿತ ಅತ್ಯಂತ ಜೀರ್ಣವಾಗಿರುವ ಮೂರ್ತಿ ಶಿಲ್ಪವನ್ನು ಇಡಲಾಗಿದೆ. ಈ ಶಿಲ್ಪಗಳು ಪ್ರಾಚೀನ ಕಲ್ಗುಡೇಶ್ವರ ದೇವಾಲಯಕ್ಕೆ ಸಂಬಂಧಿಸಿದವುಗಳೋ ಅಥವಾ ಬೇರೆ ಕಡೆಯಿಂದ ತಂದಿಟ್ಟಿರುವವು ಎಂಬುದು ಅಸ್ಪಷ್ಟ. ಇದೇ ಗುಡಿಗೆ ಸಂಬಂಧಪಟ್ಟ ಇನ್ನೊಂದು ಸ್ಮಾರಕ ಗ್ರಾಮದಲ್ಲಿದೆ. ಇದು ಮನೆಯಂಥ ರಚನೆ ಈ ದೇವಾಲಯದ ಗರ್ಭಗೃಹದಲ್ಲಿ ಅಶ್ವಧಾರಿ ಎರಡು ಶಿಲ್ಪಗಳಿದ್ದು ಅವುಗಳನ್ನು ಕಂಪಿಲ ಹಾಗೂ ಕುಮಾರರಾಮನಿಗೆ ಸಂಬಂಧ ಕಲ್ಪಿಸಿ ಗ್ರಾಮಸ್ಥರು ಕಥೆಗಳನ್ನು ಹೇಳುತ್ತಾರೆ. ಪ್ರತಿ ಜಾತ್ರೆಯಲ್ಲಿ ಇಲ್ಲಿರುವ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿ ಕಂಪಲಿ ಪಟ್ಟಣಕ್ಕೆ ಒಯ್ದು ಮರಳಿ ತರುತ್ತಾರೆ ಎಂಬ ಮಾಹಿತಿ ಇದೆ. ಈ ವಿಷಯಗಳ ಬಗೆಗೆ ಹೆಚ್ಚಿನ ಸಂಶೋಧನೆ ಕೈಗೊಳ್ಳುವುದು ಸೂಕ್ತವಾಗಿದೆ.

ಕುರುಗೋಡು ಬಸವೇಶ್ವರನಷ್ಟೇ ಪ್ರಸಿದ್ಧಿ ಪಡೆದ ದೇವಾಲಯವೆಂದರೆ ನೀಲಮ್ಮನಮಠ. ಈ ದೇವತೆಯ ಬಗೆಗೆ ಅನೇಕ ಪವಾಡ ಕಥೆಗಳಿವೆ. ಈ ಮಠದ ವಾಸ್ತುಶಿಲ್ಪಕ್ಕೆ ಸಂಬಂಧಿಸಿದಂತೆ ತರ್ಕಿಸುವುದಾದರೆ ಇದು ಅನೇಕ ಮಾರ್ಪಾಡುಗಳಿಗೆ ಒಳಗಾಗಿದೆ. ಜೈನಪಂಥದ ಕುರುಹುಗಳು ಇಲ್ಲಿ ಕಾಣಬರುತ್ತವೆ. ಗರ್ಭಗೃಹದ ಇಕ್ಕೆಲುಗಳಲ್ಲಿ ಬೆಣಚುಕಲ್ಲಿನಲ್ಲಿ ಮಾಡಿದ ಗಜಶಿಲ್ಪಗಳನ್ನು ಇಡಲಾಗಿದೆ. ನವೀಕರಿಸಿದ ಬಾಗಿಲವಾಡದಲ್ಲಿ ವೃಷಭ,ಲಲಾಟದಲ್ಲಿ ಲಿಂಗ ಹಾಗೂ ಕೆಳಭಾಗದಲ್ಲಿ ದ್ವಾರಪಾಲಕರ ಶಿಲ್ಪಗಳಿವೆ. ಗರ್ಭಗೃಹದ ಮೇಲ್ಛಾವಣಿಯ ಕೈಪಿಡಿ ಗೋಡೆಯಲ್ಲಿ ವೀರಭದ್ರ, ಬ್ರಹ್ಮ, ನರಸಿಂಹ, ಉಮಾಶಂಕರ (ನಂದಿ, ಭೃಂಗಿ, ಸಮೇತ) ಗಣಪ, ವಿಷ್ಣು ಹಾಗೂ ಮೇಷತಲೆಯ (ದಕ್ಷಬ್ರಹ್ಮ) ಶಿಲ್ಪವನ್ನು ಅಳವಡಿಸಲಾಗಿದೆ. ಇವುಗಳನ್ನೆಲ್ಲ ಗಚ್ಚು, ಗಾರೆಗಳಿಂದ ರಚಿಸಲಾಗಿದೆ.

ಮೇಲೆ ವಿವರಿಸಿದ ದೇವಾಲಯಗಳಲ್ಲದೇ, ಪಂಚಮುಖಿ ವೀರಭದ್ರ, ನೀಲಕಂಠ ದೇವರಗುಡಿ, ಸುಂಕಲಮ್ಮನನ ಗುಡಿ, ಗುಹಾಂತರ ದೇವಾಲಯ, ಕೊಳದ ವೀರಭದ್ರ, ಚೌಕಿ ನೀಲಮ್ಮನಗುಡಿ, ಆಂಜನೇಯದ ಗುಡಿ, ಕಾಳಮ್ಮನ (ಮೌನೇಶ್ವರ)ಗುಡಿ ಹಾಗೂ ಗವಿ ವೀರಭದ್ರದೇವಾಲಯಗಳು ಕುರುಗೋಡು ಪಟ್ಟಣದಲ್ಲಿವೆ. ಇವು ನಿರಾಲಂಕರಣೆಯಿಂದ ಕೂಡಿದ ಹಾಗೂ ನವೀಕರಣಕ್ಕೆ ಒಳಗಾಗಿ ಇತ್ತೀಚೆಗೆ ನಿರ್ಮಿತವಾದ ಸ್ಮಾರಕಗಳು. ಈ ಎಲ್ಲ ದೇವಾಲಯಗಳನ್ನು ಹೊರತುಪಡಿಸಿದರೆ ಕುರುಗೋಡು ಶಾಸನಗಳಲ್ಲಿ ಉಲ್ಲೇಖಿತವಾಗಿರುವ ಸ್ವಯಂಭುದೇವರ ಹಾಗೂ ಭೋಗೇಶ್ವರ ದೇವಾಲಯಗಳು ಹೆಚ್ಚಿನ ಮಹತ್ವ ಪಡೆದಿದ್ದವು. ಆದರೆ ಅವುಗಳ ಅಸ್ತಿತ್ವದ ಬಗೆಗೆ ಸ್ಪಷ್ಟ ಮಾಹಿತಿ ಇಲ್ಲ. ಇವುಗಳನ್ನು ಶೋಧಿಸಿ ಬೆಳಕಿಗೆ ತರುವುದು ಅವಶ್ಯಕವಾಗಿದೆ. ಕ್ರಿ.ಶ. ೧೧೭೯ರ ಚಾಲುಕ್ಯ ಚಕ್ರವರ್ತಿ ಜಗದೇಕಮಲ್ಲನ (ಎರಡನೆಯ) ಕಾಲದ ಶಾಸನವು[25] ಅವನ ಮಹಾಮಂಡಲೇಶ್ವರ ಕಾಂಚರಸ, ಗಂಗರಸ, ದೊರವದಿನಾಡ (ದರೋಜಿ) ಲೋಕರಸ ಹಾಗೂ ಮಹಾಪ್ರಧಾನ ಲಖ್ಖೆಯನಾಯಕ ಅವನ ತಮ್ಮಂದಿರಾದ ಮಾದೆಯನಾಯಕ ವಿರುಪನಾಯಕ ಮತ್ತು ಆಚೆಯನಾಯಕ ಹಾಗೂ ದೊರವದಿ ಎಪ್ಪತ್ತರ ಪ್ರಭುಗಾವುಂಡರು ಸೇರಿ ಕುರುಗೋಡಿನ ಭೋಗೇಶ್ವರ ದೇವರ ದೇವಾಲಯಗಳನ್ನು ಕಟ್ಟಿಸಿ ಭೂದಾನ ನೀಡಿರುವ ಉಲ್ಲೇಖವಿದೆ. ಇದರ ಪ್ರಕಾರ ಕುರುಗೋಡಿನಲ್ಲಿ ಶಾಸನಕೃತ ಭೋಗೇಶ್ವರ ದೇವಾಲಯವು ಅತ್ಯಂತ ಪ್ರಾಚೀನವಾದುದು. (ಕ್ರಿ.ಶ. ೧೧೪೯)ಆದರೆ ಇಂದು ಭೋಗೇಶ್ವರ ದೇವಾಲಯವು ಕುರುಗೋಡು ಪಟ್ಟಣದಲ್ಲಿ ಕಾಣಸಿಗುತ್ತಿಲ್ಲ. ಅಥವಾ ಈಗಿರುವ ದೇವಾಲಯಗಳಲ್ಲಿ ಹಿಂದಿನ ದೇವಾಲಯದ ಹೆಸರು ಬದಲಾವಣೆಯೊಂದಿಗೆ ಇದೆ ಎಂಬುದು ಅತ್ಯಂತ ಜಿಜ್ಞಾಸೆಯ ವಿಷಯವಾಗಿದೆ. ಅದೇ ತರಹ ಕ್ರಿ.ಶ. ೧೧೭೩ರ ಶಾಸನ ಉಲ್ಲೇಖಿತ[26] ಸ್ವಯಂಭುದೇವರ ದೇವಾಲಯದ ಬಗೆಗೂ ಸ್ಪಷ್ಟ ಮಾಹಿತಿ ಇಲ್ಲ. ಎರಡನೆಯ ರಾಚಮಲ್ಲನ ಸಾಮಂತ ಹಡಪವಳ ದಂಡನಾಯಕ ಬೇಚಿರಾಜನು ಸ್ವಯಂಭುದೇವರ ದೇವಾಲಯವನ್ನು ಒಂದನೆಯ ರಾಚಮಲ್ಲನ ಕಾಲಾವಧಿಯಲ್ಲಿಯೇ ಕಟ್ಟಿಸಿರುತ್ತಾನೆ. ಇದೇ ದೇವಾಲಯಕ್ಕೆ ಅಲ್ಲಿನ ಮತ್ತೊಂದು ಶಾಸನದಲ್ಲಿ ಎರಡನೆಯ ರಾಚಮಲ್ಲನು ಶ್ರೀಪುರ ಸ್ವಯಂಭುದೇವರ ಸ್ಥಾನ ಬಾಲಶಿವಾ ಚಾರ್ಯರ ಕಾಲ್ತೊಳೆದು ದಾನ ನೀಡಿದ ವಿವರವಿದೆ. ಇದೇ ಶಾಸನ (ಕ್ರಿ.ಶ. ೧೧೭೩)ದಲ್ಲಿ ಬೇಚರಸನ ಮಡದಿ ಮಳ್ಪಾಣಿಯಕ್ಕ ಅಗ್ನಿಗೆ ಹೋದ ಸಂಗತಿ ಇದೆ. ಮೇಲೆ ವಿವರಿಸಿದ ಶಾಸನ ಉಲ್ಲೇಖಿತ ಈ ದೇವಾಲಯಗಳ ಬಗೆಗಿರುವ ಖಚಿತವಾದ ಕುರುಹುಗಳು ಈವರೆಗೂ ಸಿಕ್ಕಲ್ಲ. ಹೀಗಾಗಿ ಅಸ್ತಿತ್ವದಲ್ಲಿರುವ ಪ್ರಮುಖ ದೇವಾಲಯ ಹಾಗೂ ಮೂರ್ತಿಶಿಲ್ಪಗಳ ಲಕ್ಷಣ ಹಾಗೂ ಮಹತ್ವವನ್ನು ಮಾತ್ರ ಚರ್ಚಿಸಲಾಗಿದೆ.

 

[1] ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ : ೧ (ಕ.ವಿ.ವಿ.ಸಂ : ೧) ಕುರುಗೋಡು, ಬಳ್ಳಾರಿ (ತಾ) ಶಾಸನ ಸಂಖ್ಯೆ ೭ ಮತ್ತು ೮

[2] ಅದೇ….ಶಾಸನ ಸಂಖ್ಯೆ-೭

[3] ಅದೇ…. ಶಾಸನ ಸಂಖ್ಯೆ-೩೯

[4] ಅದೇ…. ಶಾಸನ ಸಂಖ್ಯೆ-೪೫

[5] ಕ.ವಿ.ವಿ.ಶಾ.ಸಂ : ೧, ಸಿರಗುಪ್ಪ, ಸಿರಗುಪ್ಪ ತಾ., ಶಾಸನ ಸಂಖ್ಯೆ-೧

[6] ಅದೇ….ಶಾಸನ ಸಂಖ್ಯೆ-೪೧

ಕ್ರಿ.ಶ. ೧೦೭೬ರಿಂದ ೧೧೨೬ರ ವರೆಗೆ ವಿಶಾಲವಾದ ಸಾಮ್ರಾಜ್ಯವನ್ನಾಳಿದ ಆರನೆಯ ವಿಕ್ರಮಾದಿತ್ಯನು ಅಣ್ಣನಾದ ಎರಡನೆಯ ಸೋಮೇಶ್ವರನಿಂದ ಪ್ರಾರಂಭದಲ್ಲಿ ಅನೇಕ ಕಿರುಕುಳಕ್ಕೆ ಒಳಗಾಗಿ ರಾಜಭ್ರಷ್ಟನಾಗಿ ಪಲಾಯನಗೈಯುತ್ತಾನೆ. ಈ ಸಂದರ್ಭದಲ್ಲಿ ಆರನೆಯ ವಿಕ್ರಮಾದಿತ್ಯನು. ತನ್ನ ತಮ್ಮ ಜಯಸಿಂಹನ ಜೊತೆಗೂಡಿ ಸಿಂದವಾಡಿಯ ಸಾಸಿರ ಆಡಳಿತ ವಿಭಾಗದಲ್ಲಿಯೇ ಆಶ್ರಯ ಪಡೆಯುತ್ತಾನೆ. ಇಂಥ ಋಣಭಾರದ ಘಟನೆಯು ಬಹುಶಃ ಆರನೆಯ ವಿಕ್ರಮಾದಿತ್ಯ ಹಾಗೂ ಕುರುಗೋಡು ಸಿಂದರ ನಡುವಿನ ಬಾಂಧವ್ಯದ ಬೆಸುಗೆಯಾಗಿ ಕಾರ್ಯನಿರ್ವಹಿಸಿದ್ದರಬಹುದು. ಈ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಂಡ ಕುರುಗೋಡು ಸಿಂದರಸ ಸೋವಿದೇವನು ಆರನೆಯ ವಿಕ್ರಮಾದಿತ್ಯನ ಆಡಳಿತಾವಧಿಯಲ್ಲಿಯೇ (ಕ್ರಿ.ಶ. ೧೧೨೧)ಮಹಾಸಾಮಂತ ನಿಂದ ಮಹಾಮಂಡಳೇಶ್ವರನ ಸ್ಥಾನಕ್ಕೇರುತ್ತಾನೆ. (ಕ್ರಿ.ಶ. ೧೧೨೦)ರ ಕೊಂಚಿಗೆರೆ ಸಿರುಗುಪ್ಪ ತಾ.ಶಾಸನವು (ಕ.ವಿ.ವಿ.ಶಾ.ಸಂ : ೧ ಶಾಸನ ಸಂಖ್ಯೆಯ-೪೧) ಸೋವಿದೇವನನ್ನು ಮಹಾಮಂಡಳೇಶ್ವರನೆಂದು ಉಲ್ಲೇಖಿಸುತ್ತದೆ.

[7] ಕ.ವಿ.ವಿ.ಶಾ.ಸಂ : ೧, ಬೈಲೂರು, ಬಳ್ಳಾರಿ (ತಾ)ಶಾಸನ ಸಂಖ್ಯೆ-೫೯

[8] ಒಂದನೆಯ ರಾಚಮಲ್ಲನಿಗಿಂತ ಮುಂಚಿನ ಅರಸರು ದೇವಾಲಯ ಕಾರ್ಯಗಳಿಗೆ ಅನೇಕ ಬಗೆಯ ದಾನದತ್ತಿಗಳನ್ನು ನೀಡಿದ್ದಾರೆ. ಈ ಅರಸರು ಕೊಟ್ಟ ದಾನಗಳು ಕುರುಗೋಡು ಪಟ್ಟಣದಲ್ಲಿರುವ ದೇವಾಲಯ ಸಂಬಂಧಿ ಚಟುವಟಿಕೆಗಳಲ್ಲಿ ಸಿಂದರು ತೊಡಗಿಸಿಕೊಂಡಿರುವ ಮೊದಲ ಸಂಬಂಧಪಟ್ಟ ಉಲ್ಲೇಖ ಸಿಗುವುದು ಒಂದನೆಯ ರಾಚಮಲ್ಲನ, ಆಡಳಿತಾವಧಿಯಲ್ಲಿಯೇ ಎಂಬುದು ಮುಖ್ಯವಾದುದು.

[9] ನಾಗಯ್ಯ ಜೆ.ಎಂ., ಬಳ್ಳಾರಿ ಜಿಲ್ಲೆಯ ಸಾಂಸ್ಕೃತಿಕ ಇತಿಹಾಸ; ಪುಟ-೧೦೩

[10] ಕ.ವಿ.ವಿ.ಶಾ.ಸಂ : ೧, ಕೊಂಚಗೆರೆ, ಸಿರುಗುಪ್ಪ ತಾ.ಶಾಸನ ಸಂಖ್ಯೆ – ೪೦

[11] ಅದೇ…..ಶಾಸನ ಸಂಖ್ಯೆ-೪೧

[12] ಅದೇ…..ತೆಕ್ಕಲಕೋಟೆ ಸಿರುಗುಪ್ಪ ತಾ.ಶಾಸನ ಸಂಖ್ಯೆ-೫೬

[13] ಕ.ವಿ.ವಿ.ಶಾ.ಸಂ : ೧, ಕುರುಗೋಡು, ಬಳ್ಳಾರಿ ತಾ. ಶಾಸನ ಸಂಖ್ಯೆ-೧೯

[14] ಅದೇ….ಶಾಸನ ಸಂಖ್ಯೆಯ-೮

ಬಲ್ಲಕುಂದೆ ಮುನ್ನೂರು ಆಡಳಿತ ವಿಭಾಗದಲ್ಲಿನ ಮುಮ್ಮರಿದಂಡರು ಕುರುಗೋಡು ಅರಸರಷ್ಟೇ ಪ್ರಖ್ಯಾತಿ ಪಡೆದಿದ್ದರಬಹುದು. ಈ ನಾಡಿನ ಪ್ರತಿ ದೇವಾಲಯಗಳ ನಿರ್ಮಾಣದಲ್ಲಿ ಕೈಗೊಂಡಿರುವ ಅವರ ಸಾಧನೆಗಳು ಶಾಸನಗಳಲ್ಲಿ ಉಲ್ಲೇಖವಾಗಿವೆ. ಇದಕ್ಕೆ ಕುರುಗೋಡು ಪಟ್ಟಣವು ಹೊರತಾಗಿರಲಿಲ್ಲವೆಂದು ಗಮನಿಸುವುದು ಸೂಕ್ತ. ಕಲ್ಲೇಶ್ವರ, ತ್ರಿಕೂಟಾಲಯ, ರಾಚಮಲ್ಲೇಶ್ವರದಂತೆ ಪ್ರಮುಖ್ಯ ದೇವಾಲಯಗಳ ನಿರ್ಮಾಣದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಮಾಹಿತಿಗಳಿವೆ.

[15] ಅದೇ…..ಓರುವಾಯಿ, ಬಳ್ಳಾರಿ (ತಾ)ಶಾಸನ ಸಂಖ್ಯೆ-೪೧

ಏಚಿಸೆಟ್ಟಿ ಎಂಬುವನು ವಿನಾಯಕ ದೇವರಿಗೆ ದೇವಾಲಯವನ್ನು ಕಟ್ಟಿಸಿದಾಗ ಒಂದನೆಯ ರಾಚಮಲ್ಲನ ಮೊಮ್ಮಗ ಇಮ್ಮಡಿ ರಾಚಮಲ್ಲ (ಇರುಂಗೋಳ ದೇವನ ಮಗ) ಈ ದೇವಾಲಯದ ನಿರ್ವಹಣೆಗೆ ಭೂಮಿದಾನ ನೀಡಿದ್ದಾನೆ. ಈ ಶಾಸನವು ಇಮ್ಮಡಿ ರಾಚಮಲ್ಲನನ್ನು ಉಲ್ಲೇಖಿಸುವ ಮೊದಲ ಶಾಸನವಾಗಿದೆ.

[16] ಹಿರೇಮಠ ಚನ್ನಬಸಯ್ಯ, ಕುರುಗೋಡು ಸಿಂದರು ಒಂದು ಅಧ್ಯಯನ, ಪುಟ ೨೬೭, ೨೮೬

[17] ಕ.ವಿ.ವಿ.ಶಾಸನ ಸಂಪುಟ-೧, ಓರುವಾಯಿ, ಬಳ್ಳಾರಿ (ತಾ)ಶಾಸನ ಸಂಖ್ಯೆ-೪೧

[18] ಕಲಬುರ್ಗಿ ಎಂ.ಎಂ., ಶಾಸನಗಳಲ್ಲಿ ಶಿವಶರಣರು, ಪುಟ ೧೦೭,೧೦೮

[19] ನಾಗಯ್ಯ ಜೆ.ಎಂ., ಪೂರ್ವೋಕ್ತ, ಪುಟ. ೧೦೮

[20] ಕ.ವಿ.ವಿ.ಶಾಸನ ಸಂಪುಟ-೨, ಹಂಪೆ, ಹೊಸಪೇಟೆ (ತಾ) ಶಾಸನ ಸಂಪುಟ-೫೫

[21] ಅದೇ….ಶಾಸನ ಸಂಖ್ಯೆ ೫೫

[22] ಕ.ವಿ.ವಿ.ಶಾಸನ ಸಂಪುಟ-೧, ಕುಮಾರಸ್ವಾಮಿ ಬೆಟ್ಟ, ಸೊಂಡುರು (ತಾ)ಶಾಸನ ಸಂಖ್ಯೆ ೭

[23] ಚಿದಾನಂದ ಮೂರ್ತಿ ಎಂ. ಹೊಸತು ಹೊಸತು, ಪುಟ ೪೩೭

[24] ಕಲ್ಬುರ್ಗಿ ಎಂ.ಎಂ., ಕರ್ನಾಟಕದ ಕೈಫಿಯುತ್ತುಗಳು, ಪುಟ ೪೪೮ ೪೯

[25] ಕ.ವಿ.ವಿ ಶಾಸನ ಸಂಪುಟ-೧, ಓರುವಾಯಿ, ಬಳ್ಳಾರಿ (ತಾ) ಶಾಸನ ಸಂಖ್ಯೆ ೪೦

[26] ಅದೇ…..ಕುರುಗೋಡು ಬಳ್ಳಾರಿ (ತಾ) ಶಾಸನ ಸಂಖ್ಯೆ ೧೮