ಸಿದ್ದೇಶ್ವರ (ಘನ ಲಿಂಗೇಶ್ವರ) ದೇವಾಲಯ

ತ್ರಿಕೂಟ ದೇವಾಲಯವೆಂದು ಗುರುತಿಸಲ್ಪಟ್ಟಿರುವ ಇಂದಿನ ಈಶ್ವರ ದೇವಾಲಯದ ಸಮೀಪದಲ್ಲಿಯೇ ಸಿದ್ದೇಶ್ವರ ದೇವಾಲಯ ನಿರ್ಮಾಣವಾಗಿದೆ. ಪ್ರಾರಂಭದಲ್ಲಿ ಇದು ಜೈನ ದೇವಾಲಯವಾಗಿದ್ದು, ಕಾಲಾನಂತರ ಅನೇಕ ಬದಲಾವಣೆಗೆ ಒಳಗಾಗಿದೆ. ವಿಜಯನಗರಅರಸ ಸದಾಶಿವರಾಯನ ಕಾಲನ (ಕ್ರಿ.ಶ. ೧೫೪೫)ಶಾಸನವೊಂದು ಈ ದೇವಾಲಯದ ಮುಖ್ಯಮಂಟಪದ ಗೋಡೆಯಲ್ಲಿದೆ.[1] ದೇವಾಲಯದ ಜಿನದೇವರ ಅಮೃತಪಡಿ ನೈವೇದ್ಯಕ್ಕೆ ಭೂಮಿಯನ್ನು ದಾನಕೊಟ್ಟಿರುವ ಉಲ್ಲೇಖವನ್ನು ಈ ಶಾಸನ ನೀಡುತ್ತದೆ. ಇದೇ ದೇವಾಲಯದಲ್ಲಿರುವ ಕ್ರಿ.ಶ. ೧೫೪೬ರ ತೇದಿಯುಳ್ಳ ಇನ್ನೊಂದು ಶಾಸನದಲ್ಲಿ ಮೂಲಸಂಘ ಬಲತ್ಕಾರಗಣಕ್ಕೆ ಸೇರಿದ ಸೂರ್ಯಪ್ಪಶೆಟ್ಟಿಯ ಮಗ ಗೋಮಿಸೆಟ್ಟಿಯು ಈ ದೇವಾಲಯ ಜೀರ್ಣೋದ್ಧಾರ ಮಾಡಿದ್ದ ಬಗೆಗೂ ವಿವರಣೆಯಿದೆ.[2] ಹಾಗಾದರೆ ಈ ಜೈನ ದೇವಾಲಯ ೧೬ನೆಯ ಶತಮಾನ ಕಾಲಾವಧಿಯ ನಂತರವೇ ಕೆಲವು ಮಾರ್ಪಾಡುಗಳಿಗೆ ಒಳಪಟ್ಟಿರಬಹುದು. ಶೈವ ಮತಾವಲಂಬಿಗಳೇ ಹೆಚ್ಚಾಗಿರುವ ಕುರುಗೋಡು ಪಟ್ಟಣದಲ್ಲಿ ಇಂಥ ಅದಲು-ಬದಲು ಘಟನೆಗಳು ಸಹಜವಾಗಿಯೇ ನಡೆದಿರಬಹುದು. ದೇವಾಲಯದ ಗರ್ಭಗೃಹದ ಹಾಗೂ ಅಂತರಾಳದ ಸಹಜವಾಗಿಯೇ ನಡೆದಿರಬಹುದು. ದೇವಾಲಯದ ಗರ್ಭಗೃಹದ ಹಾಗೂ ಅಂತರಾಳದ ಬಾಗಿಲವಾಡದ ಲಲಾಟದಲ್ಲಿರುವ ಜಿನ ಉಬ್ಬುಶಿಲ್ಪ ಲಿಂಗವಾಗಿ ಪರಿವರ್ತನೆಯಾಗಿದ್ದು ಅಲ್ಲದೇ ಗರ್ಭಗೃಹದಲ್ಲಿಯ ಸಿಂಹಪೀಠದಲ್ಲಿನ ಜಿನಶಿಲ್ಪದ ಬದಲಾಗಿ ಲಿಂಗ (ರುದ್ರಭಾಗ)ವನ್ನು ಪ್ರತಿಷ್ಠಾಪಿಸಿರುವುದು ಮಾರ್ಪಾಡಾಗಿರುವ ಸಂಗತಿಗಳಿಗೆ ಸಾಕ್ಷಿಗಳಾಗಿವೆ. ಉಳಿದಂತೆ ದೇವಾಲಯದ ಯಾವ ಭಾಗಗಳು ಅಂಥ ಬದಲಾವಣೆಗೆ ಒಳಗಾಗಿಲ್ಲವೆಂದೇ ಹೇಳಬಹುದು. ದೇವಾಲಯದ ಯಾವ ಭಾಗಗಳು ಅಂಥ ಬಂದಲಾವಣೆಗೆ ಒಳಗಾಗಿಲ್ಲವೆಂದೇ ಹೇಳಬಹುದು. ದೇವಾಲಯದ ಮೂಲ ದೇವರು ಬದಲಾಗುವುದರೊಂದಿಗೆ ಹಿಂದಿನ ಜಿನಾಲಯ, ಘನಲಿಂಗೇಶ್ವರನಾಗಿಯೂ ನಂತರ ಸಿದ್ದೇಶ್ವರನಾಗಿ ಮರುನಾಮಕರಣ ಹೊಂದಿದೆ. ಇಂಥ ಬದಲಾವಣೆಗಳು ಯಾವ ಕಾಲಘಟ್ಟದಲ್ಲಿ ಹಾಗೂ ಯಾವ ಕಾರಣಕ್ಕಾಗಿ ಆದವು ಎಂದು ನಿರ್ದಿಷ್ಟವಾಗಿ ಅರ್ಥೈಸುವುದು ಇತಿಹಾಸಕಾರನಿಗೆ ಬಿಡಿಸಲಾಗದ ಪ್ರಶ್ನೆಯಾಗಿ ಉಳಿದುಕೊಂಡಿದೆ. ಇದೇ ದೇವಾಲಯದ ವಿವರಣೆಯ ಸಂದರ್ಭದಲ್ಲಿ ಇನ್ನೊಂದು ವಿಷಯ ಉಳಿದುಕೊಂಡಿದೆ. ಇದೇ ದೇವಾಲಯದ ವಿವರಣೆಯ ಸಂದರ್ಭದಲ್ಲಿ ಇನ್ನೊಂದು ವಿಷಯ ಪ್ರಸ್ತಾಪಿಸುವುದು ಸೂಕ್ತ. ಪಟ್ಟಣದಲ್ಲಿರುವ ನೀಲಮ್ಮನ ಮಠದ ಮಹಾದ್ವಾರ ಹಾಗೂ ಅಲ್ಲಿ ಅಳವಡಿಸಲಾಗಿರುವ ಕೆಲವು ಬಿಡಿ ಶಿಲ್ಪಿಗಳು ಕುತೂಹಲ ಕೆರಳಿಸುತ್ತವೆ. ಕಾರಣ ಶೈವ ಪಂಥೀಯರ ಪೂಜಾ ಕೇಂದ್ರವಾದ ಇಲ್ಲಿ ಜೈನ ಶಿಲ್ಪಾವಶೇಷಗಳು ಇರುವುದು. ಪ್ರಾಚೀನ ಜಿನಾಲಯದ ಮಹಾದ್ವಾರ ನಾಶವಾದ ನಂತರ ಅಲ್ಲಿರುವ ಅವಶೇಷಗಳನ್ನು ನೀಲಮ್ಮನ ಮಠಕ್ಕೆ ಒಯ್ದು ಜೋಡಿಸಿರಬಹುದೇ? ಎಂಬ ಸಂಗತಿ ಚರ್ಚಾರ್ಹವಾದದು. ಈ ತರಹದ ಸಹಜವಾದ ಕ್ರಿಯೆಗಳೂ ಚರಿತ್ರೆಯುದ್ದಕ್ಕೂ ನಡೆದಿವೆ. ಹಾಗೂ ಇಂದಿಗೂ ಇಂಥ ಪ್ರಕ್ರಿಯೆಗಳು ನಡೆಯುತ್ತಲಿವೆ.

ದೇವಾಲಯವು ಗರ್ಭಗೃಹ, ಅಂತರಾಳ, ನವರಂಗ ಅಥವಾ ಸಭಾಮಂಪಟ ಹಾಗೂ ಮುಖಮಂಟಪಗಳಿಂದ ಕೂಡಿದೆ. ತಕ್ಕಮಟ್ಟಿಗೆ ವಿಶಾಲವಾದ ಈ ದೇವಾಲಯಕ್ಕೆ ಇಂದು ಶಿಖರವಿಲ್ಲ. ಗರ್ಭಗೃಹವು ಆಯಾತಾಕಾರದ ಸಿಂಹಪೀಠವುಳ್ಳ ಲಿಂಗವನ್ನು ಹೊಂದಿದೆ. ಈ ಪೀಠದ ಕೆಳಭಾಗದಲ್ಲಿರುವ ಸಿಂಹ ಉಬ್ಬುಶಿಲ್ಪಗಳನ್ನು ಗಮನಿಸಿದಾಗ ಈ ದೇವಾಲಯ ವರ್ಧಮಾನನಿಗೆ ಸಂಬಂಧಿಸಿದ ಜಿನಾಲಯವಾಗಿರಬೇಕು. ಗರ್ಭಗೃಹದಲ್ಲಿ ಭುವನೇಶ್ವರಿ ಕೆತ್ತನೆಯಿದೆ. ಇದರ ಪ್ರವೇಶ ದ್ವಾರವನ್ನು ಹೂವಿನ ಎಸಳು ಹಾಗೂ ಅರ್ಧಕಂಬಗಳಿಂದ ಕಂಡರಿಸಲಾಗಿದೆ. ಅಲ್ಲದೇ ದ್ವಾರಶಾಖೆ ಇಕ್ಕೆಲಗಳಲ್ಲಿ ಕುಂಬಗಳ ರಚನೆ ಇದೆ. ಇವುಗಳನ್ನು ಅರ್ಧಕಂಬ, ಮಕರ ಹಾಗೂ ಕೀರ್ತಿಮುಖಗಳಿಂದ ಅಲಂಕರಣೆ ಮಾಡಲಾಗಿದೆ. ಬಾಗಿಲವಾಡದ ಮೇಲ್ಭಾಗದಲ್ಲಿ ಔತ್ತರೆಯ ಮಾದರಿಯ ಶಿಖರ ಪಟ್ಟಿಕೆಗಳಿವೆ. ಮೇಲೆ ವಿವರಿಸಿದ ಇಂಥ ಲಕ್ಷಣಗಳು ಅಂತರಾಳ ಹಾಗೂ ಸಭಾಮಂಟಪ ಬಾಗಿಲವಾಡಗಳಲ್ಲಿ ಪುನರಾವರ್ತನೆಯಾಗಿವೆ. ಅಂತರಾಳ ಹಾಗೂ ನವರಂಗದಲ್ಲಿನ ಚೌಕಾಕಾರದ ಕಂಬಗಳು ಹದಿನಾರು ಪಟ್ಟಿಕೆಗಳನ್ನು, ಫಲಕ ಹಾಗೂ ಬೋಧಿಗೆಯ ರಚನೆಗಳನ್ನು ಹೊಂದಿವೆ. ದೇವಾಲಯ ಅಧಿಷ್ಠಾನವು ಉಪಾನ, ಜಗತಿ, ಕಂಠ, ಗಳ, ತ್ರಿಪಟ್ಟ ಕುಮದ ಹಾಗೂ ಪುಷ್ಪ ಪಟ್ಟಿಕೆಗಳಿಂದ ಕೂಡಿದೆ.

ಚನ್ನಕೇಶವ ದೇವಾಲಯ

ಹಿಂಡುಲಿ ಸಂಗಮೇಶ್ವರ ದೇವಾಲಯದ ಸಮೀಪದಲ್ಲಿ ಚೆನ್ನಕೇಶವ ದೇವಾಲಯ ನಿರ್ಮಾಣವಾಗಿದೆ. ಗಾರೆ-ಇಟ್ಟಿಗೆಗಳಿಂದ ದೇವಾಲಯದ ಶಿಖರವನ್ನು ನಿರ್ಮಿಸಿದ್ದಾರೆ. ಕುರುಗೋಡಿನಲ್ಲಿ ಇಂಥ ಮಾದರಿ ಶಿಖರವುಳ್ಳ ಏಕಮಾತ್ರ ಸ್ಮಾರಕ ಇದಾಗಿದೆ. ಇದರ ರಚನಾ ಶೈಲಿಯನ್ನು ಗಮನಿಸಿದಾಗ ಇದೊಂದು ವಿಜಯನಗರ ಕಾಲಾವಧಿಯಲ್ಲಿನ ನಿರ್ಮಾಣವೆಂದು ಊಹಿಸಬಹುದು. ನಾಶದ ಅಂಚಿನಲ್ಲಿರುವ ಗರ್ಭಗೃಹವೊಂದನ್ನು ಬಿಟ್ಟರೆ ದೇವಾಲಯದ ಉಳಿದ ಯಾವ ಭಾಗಗಳು ಇಲ್ಲ. ಇದರ ಅಧಿಷ್ಠಾನವು ವಿಜಯನಗರ ಕಾಲದ ರಚನೆಯನ್ನು ಹೋಲುತ್ತದೆ. ಹೊರಗೋಡೆಯಲ್ಲಿ ಮತ್ಸ್ಯ ಹಾಗೂ ಕೂರ್ಮ (ಆಮೆ)ಗಳ ಉಬ್ಬುಶಿಲ್ಪವನ್ನು ಕೆತ್ತಲಾಗಿದೆ. ವೈಷ್ಣವ ಪಂಥಕ್ಕೆ ಸೇರಿದ ಈ ದೇವಾಲಯ ಸಂಪೂರ್ಣ ಶಿಥಿಲವಾಗಿದೆ.

ನಗರೇಶ್ವರ ದೇವಾಲಯ

ಈ ದೇವಾಲಯವನ್ನು ಈಶ್ವರ ದೇವಾಲಯವೆಂತಲೂ ಕರೆಯುತ್ತಾರೆ. ಇದರ ಕರ್ತೃ ಹಾಗೂ ಕಾಲದ ಬಗೆಗೆ ಸ್ಪಷ್ಟವಾದ ಮಾಹಿತಿಗಳು ಲಭ್ಯವಾಗಿಲ್ಲ. ಆದರೂ ಕಟ್ಟಡದ ಲಕ್ಷಣಗಳನ್ನು ಗಮನಿಸಿ ಹೇಳುವುದಾದರೆ ಇದು ಹನ್ನೆರಡನೆಯ ಶತಮಾನದ ಉತ್ತರಾರ್ಧ ಕಾಲಾವಧಿಯಲ್ಲಿ ನಿರ್ಮಾಣವಾಗಿರಬಹುದು. ಚನ್ನಕೇಶವ ದೇವಾಲಯದ ಮುಂಭಾಗದಲ್ಲಿ ರಚನೆಯಾಗಿರುವ ನಗರೇಶ್ವರ ದೇವಾಲಯ ಬಿದ್ದುಹೋದ ಗರ್ಭಗೃಹ ಹಾಗೂ ಅಂತರಾಳದ ಭಾಗವನ್ನು ಮಾತ್ರ ಹೊಂದಿದೆ. ಗರ್ಭಗೃಹದಲ್ಲಿ ಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ದೇವಾಲಯದ ಮೇಲ್ಛಾವಣಿಯಲ್ಲಿ ತೊಲೆಯೊಂದಿದ್ದು ಅದು ಬಹುಶಃ ಇನ್ನೊಂದು ಗರ್ಭಗೃಹದ ಜೋಡಣೆಯಾಗಿದ್ದಿರಬಹುದೆ? ಆದರೆ ತೊಲೆ ಉಳಿದು ಗರ್ಭಗೃಹಗಳು ಬಿದ್ದು ನಾಶವಾಗಿದೆ. ಹೀಗಾಗಿ ಸ್ಪಷ್ಟವಾಗಿ ಏನನ್ನು ಹೇಳಲಿಕ್ಕಾಗದು. ಮುಂದುವರೆದ ತೊಲೆಯಿಂದ ಊಹಿಸಬಹುದಾದ ಸಂಗತಿಗಳೇನೆಂದರೆ ಇದು ಸಹ ತ್ರಿಕೂಟ ದೇವಾಲಯ ಆಗಿತ್ತೆ? ಸಭಾಮಂಟಪದ ಅವಶೇಷಗಳು ದೇವಾಲಯದ ಸುತ್ತಲೂ ಬಿದ್ದಿವೆ. ದೇವಾಲಯದ ಸುತ್ತಲೂ ಉತ್ಖನನ ಕಾರ್ಯಕೈಗೊಂಡರೆ ಹಲವು ಮಹತ್ವದ ವಿಷಯಗಳು ತಿಳಿಯುವ ಸಾಧ್ಯತೆ ಇದೆ.

ತಳವಾರ ಈಶ್ವರ ದೇವಾಲಯ

ಕುರುಗೋಡು ಪಟ್ಟಣದಲ್ಲಿರುವ ಅನೇಕ ದೇವಾಲಯಗಳ ಬಗೆಗೆ ಸ್ಪಷ್ಟವಾದ ಮಾಹಿತಿಗಳ ಕೊರತೆ ಇದೆ. ಹೀಗಾಗಿ ಸ್ಥಳೀಯರು ಹಾಗೂ ವಿದ್ವಾಂಸರು ತಮಗೆ ಅನುಕೂಲವಾದ ರೀತಿಯಲ್ಲಿ ದೇವಾಲಯಗಳ ಹೆಸರನ್ನು ಗುರುತಿಸಿಕೊಂಡಿದ್ದಾರೆ. ಇದು ಸಹಜವು ಹಾಗೂ ಅನಿವಾರ್ಯವಾಗಿದೆ. ಈಶ್ವರ ದೇವಾಲಯದ ಸುತ್ತಲೂ ಬೇಡ ಅಥವಾ ನಾಯಕ ಜನಾಂಗವು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವುದರಿಂದ ಸಹಜವಾಗಿ ಜಾತಿಸೂಚಕದಿಂದಲೇ ಈ ದೇವಾಲಯವನ್ನು ಹೆಸರಿಸುತ್ತಾರೆ. ತಳವಾರ ಎಂಬುದು ನಾಯಕ ಅಥವಾ ಬೇಡ ಹೆಸರಿನ ಪರ್ಯಾಯ ಪದವೇ ಆಗಿದೆ. ಆದರೆ ಇದೇ ದೇವಾಲಯಕ್ಕೆ ಸ್ಥಳೀಯರೊ‌ಬ್ಬರು ಶ್ರೀ ಮಲ್ಲಿಕಾರ್ಜುನ ದೇವಾಲಯವೆಂದು ಮರುನಾಮಕರಣ ಮಾಡಿ ನಾಮಫಲಕವನ್ನು ಹಾಕಿದ್ದಾರೆ.

ಈ ದೇವಾಲಯ ಕುರುಗೋಡು-ಮುಷ್ಠಗಟ್ಟಿ ಮಾರ್ಗದಲ್ಲಿದೆ. ಗರ್ಭಗೃಹ ಅಂತರಾಳ, ತೆರೆದ ನವರಂಗ ಅಥವಾ ಸಭಾಮಂಟಪ ಹಾಗೂ ಮುಖಮಂಟಪವನ್ನು ಹೊಂದಿದೆ. ಈ ಸ್ಮಾರಕವನ್ನು ಮೆಟ್ಟಿಲುಗಳ ಮೂಲಕ ಪ್ರವೇಶಿಸಬೇಕಾಗುತ್ತದೆ. ಗರ್ಭಗೃಹದಲ್ಲಿ ಲಿಂಗವಿದ್ದು, ಮೇಲ್ಛಾವಣಿಯ ಒಳಭಾಗದಲ್ಲಿ ಭುವನೇಶ್ವರಿಯ ಕೆತ್ತನೆಯಿದೆ. ಬಾಗಿಲವಾಡದ ಶಾಖೆಗಳಲ್ಲಿ ಪುಷ್ಪಸಾಲು ಹಾಗೂ ಅರ್ಧಕಂಬಗಳು ರಚಿಸಿದ್ದಾರೆ. ಲಲಾಟದಲ್ಲಿ ಗಜಲಕ್ಷ್ಮೀ ಉಬ್ಬು ಶಿಲ್ಪವಿದೆ. ಇಕ್ಕೆಲಗಳಲ್ಲಿ ತ್ರಿಶೂಲ, ಡಮರು, ಗದೆ ಹಿಡಿದು ನಿಂತ ದ್ವಾರಪಾಲಕ ವಿಗ್ರಹಗಳಿವೆ.

ಅಂತರಾಳದ ಬಾಗಿಲವಾಡವು ಗರ್ಭಗೃಹದ ಬಾಗಿಲವಾಡವು ಗರ್ಭಗೃಹದ ಬಾಗಿಲವಾಡದ ರಚನಾ ಮಾದರಿಯನ್ನು ಹೊಂದಿದೆ. ಆದರೆ ಅಂತರಾಳದ ಲಲಾಟದ ಮೇಲ್ಭಾಗದಲ್ಲಿ ಔತ್ತರೇಯ ಮಾದರಿಯ ಶಿಖರ ಹಾಗೂ ಸಿಂಹಗಳನ್ನು ರಚಿಸಿದ್ದಾರೆ. ಸಭಾಮಂಟಪದಲ್ಲಿ ನಂದಿ ಶಿಲ್ಪವಿದೆ. ಸಭಾಮಂಟಪವು ಗೂಡು (ಕೋಷ್ಠಕ)ಗಳನ್ನು ಹೊಂದಿದ್ದು ಅವುಗಳನ್ನು ಅರ್ಧಕಂಬ ಹಾಗೂ ಮಂಜೂರಿನ ಭಾಗಗಳಿಂದ ಅಲಂಕರಣಗೊಳಿಸಿದ್ದಾರೆ. ಇದರಲ್ಲಿಯ ನಾಲ್ಕು ಕಂಬಗಳು ಚೌಕಾಕಾರವಾಗಿದೆ. ಕಂಬಗಳಲ್ಲಿ ತಟ್ಟೆಯಾಕಾರದ ಮುಚ್ಚಳ, ಫಲಕ ಹಾಗೂ ಬೋಧಿಗೆಗಳನ್ನು ಅಳವಡಿಸಿದ್ದಾರೆ. ಅಧಿಷ್ಠಾನ ಭಾಗಗಳು ಮಣ್ಣಲ್ಲಿ ಹೂತುಹೋಗಿರುವುದರಿಂದ ಅದರ ಭಾಗಗಳನ್ನು ತಿಳಿಯುವುದು ಕಷ್ಟಸಾಧ್ಯ. ಕಣಶಿಲೆಯಲ್ಲಿ ನಿರ್ಮಾಣವಾಗಿರುವ ಈ ದೇವಾಲಯ ಕದಂಬನಾಗರ ಶಿಖರ ಹೊಂದಿದೆ. ಹೊರಗೋಡೆಯು ಕೆಲವು ಕಡೆ ಕುಸಿದಿದೆ.

ಕಣವಿ ಈಶ್ವರ

ಕುರುಗೋಡು ಕೈಫಿಯತ್ತಿನಲ್ಲಿ ಉಲ್ಲೇಖವಾಗಿರುವ ತಳಕಾಲದ ಈಶ್ವರನ ಗುಡಿಯಲ್ಲಿ ಇಂದು ಕಣಿವೆ ಈಶ್ವರ ದೇವಾಲಯವೆಂದು ಕರೆಯಲಾಗುತ್ತಿದೆ. ಕುರುಗೋಡ-ಮುಷ್ಟಗಟ್ಟಿ ರಸ್ತೆಯಲ್ಲಿರುವ ಈ ದೇವಾಲಯ ಗರ್ಭಗೃಹ, ಅಂತರಾಳ ಹಾಗೂ ತೆರದ ನವರಂಗ ಅಥವಾ ಸಭಾಮಂಪಟವನ್ನು ಹೊಂದಿದೆ. ಸುಂದರವಾದ ಈ ದೇವಾಲಯಕ್ಕೆ ಕದಂಬನಾಗರ ಮಾದರಿ ಶಿಖರವಿದೆ. ಇತ್ತೀಚೆಗೆ ಈ ದೇವಾಲಯದಲ್ಲಿನ ಲಿಂಗವನ್ನು ನಿಧಿಕಳ್ಳರು ಅಗೆದಿದ್ದಾರೆ. ಗರ್ಭಗೃಹದ ಬಾಗಿಲವಾಡದಲ್ಲಿ ಪುಷ್ಪಪಟ್ಟಿಕೆ, ಹೂಬಳ್ಳಿ ಹಾಗೂ ಅರ್ಧಕಂಬಗಳ ರಚನೆಯಿದೆ. ಲಲಾಟದಲ್ಲಿ ಗಜಲಕ್ಷ್ಮೀ ಶಿಲ್ಪವಿದ್ದು ಅದರ ಮೇಲ್ಭಾಗದಲ್ಲಿ ಮುಂಚಾಚಿದ ಪಟ್ಟಿಕೆಗಳನ್ನು ಕೆತ್ತಿದ್ದಾರೆ. ಗರ್ಭಗೃಹದ ಬಾಗಿಲವಾಡದ ಎರಡು ಕಡೆಗೆ ದ್ವಾರಪಾಲಕ ವಿಗ್ರಹಗಳಿವೆ. ಗರ್ಭಗೃಹದ ಬಾಗಿಲವಾಡದಲ್ಲಿಯ ಕೆತ್ತನೆಗಳನ್ನೇ ಅಂತರಾಳದ ಬಾಗಿಲವಾಡದಲ್ಲಿಯೂ ಕೆತ್ತಲಾಗಿದೆ. ಆದರೆ ದ್ವಾರಪಾಲಕ ವಿಗ್ರಹಗಳ ಬದಲಾಗಿ ಕೈಯಲ್ಲಿ ಚಾಮರ ಹಿಡಿದಿರುವ ಸ್ತ್ರೀ ಶಿಲ್ಪಗಳಿವೆ. ನವರಂಗವು ಕಲ್ಯಾಣ ಚಾಲುಕ್ಯ ಮಾದರಿಯ ಕಂಬಗಳನ್ನು ಹೊಂದಿದ್ದು ಅವುಗಳಲ್ಲಿ ಹದಿನಾರು ಎಂಬ ಪಟ್ಟಿಕೆಗಳನ್ನು ಕೆತ್ತಲಾಗಿದೆ. ಈ ಕಂಬಗಳು ಫಲಕ ಬೋಧಿಗೆಗಳನ್ನು ಹೊಂದಿವೆ. ದೇವಾಲಯ ಕಣಶಿಲೆಯಲ್ಲಿ ನಿರ್ಮಿತವಾಗಿದೆ.

ವಜ್ರಬಂಡಿ ಬಸಪ್ಪ

ಕುರುಗೋಡು-ಮುಷ್ಟಗಟ್ಟಿ ರಸ್ತೆಯಲ್ಲಿರುವ ಈ ದೇವಾಲಯ ಅಂದಿನ ಹಾಗೂ ಇಂದಿನ ಕುರುಗೋಡು ಪಟ್ಟಣದ ಉತ್ತರ ದಿಕ್ಕಿನಲ್ಲಿರುವ ಕೊನೆಯ ದೇವಾಲಯವಾಗಿದೆ. ಕಲಾ ನೈಪುಣ್ಯತೆಯಿಂದ ಅತ್ಯಂತ ಸರಳ ರಚನೆಯಾದ ಈ ಸ್ಮಾರಕವು ವಿಜಯನಗರ ಆಳ್ವಿಕೆಯ ಕೊನೆಗಾಲದಲ್ಲಿ ರಚನೆಯಾಗಿರಬಹುದು. ಇದು ಬೃಹತ್ತಾದ ಬೆಟ್ಟಗಳ ಕೆಳಭಾಗದಲ್ಲಿದೆ. ಹಾಗೂ ಈ ಬೆಟ್ಟದ ಶಿಲೆಯು ಕಪ್ಪುಬಣ್ಣದಾಗಿದೆ. ವಜ್ರದ ಹೋಲಿಕೆಯುಳ್ಳ ಇಲ್ಲಿನ ಬಂಡೆಗಳಿಂದ ಈ ದೇವಾಲಯಕ್ಕೆ ಈ ಹೆಸರು ಬಂದಿರಬಹುದೆಂದು ಅಭಿಪ್ರಾಯವಿದೆ.[3] ಇದು ಕ್ರಮೇಣ ವಜ್ರದುಂಡಿ>ವಜ್ರದಂಡಿ>ವಜ್ರಬಂಡಿ ಎಂಬ ನಾನಾ ಹೆಸರುಗಳನ್ನು ಪಡೆಯುತ್ತಾ ಬಂದಿದೆ. ಆದರೆ ಈ ದೇವಾಲಯದ ಸುತ್ತಲಿರುವ ಕಪ್ಪು ಬಣ್ಣದ ಶಿಲೆಗಳಿಂದಲೇ ಈ ದೇವಾಲಯಕ್ಕೆ ಈ ಹೆಸರು ಬಂದಿರಬಹುದೆಂಬ ಅಭಿಪ್ರಾಯಕ್ಕಿಂತ ಈ ದೇವಾಲಯವೇ ಕಣಶಿಲೆಯಿಂದಾಗಿರುವ ಹಾಸುಕಲ್ಲಿನ (ಚಪ್ಪಡಿ) ಮೇಲೆ ನಿರ್ಮಾಣವಾಗಿದೆ. ಎಂಬುದನ್ನು ಗಮನಿಸುವುದು ಸೂಕ್ತ. ಈ ಹಾಸು ಬಂಡೆಯಲ್ಲಿರುವ ಕಣಶಿಲೆಗಳು ವಜ್ರದ ಹಾಗೇ ಹೊಳಪುಳ್ಳವು. ಈ ಹೊಳಪುಳ್ಳ ಬಂಡೆಯ ಮೇಲೆ ನಿರ್ಮಾಣವಾದ ಈ ಬಸವನ ದೇವಾಲಯವನ್ನು ಗ್ರಾಮ್ಯವಾಗಿ ವಜ್ರಬಂಡಿ ಬಸಪ್ಪ ಎಂದು ಕರೆದಿರುವುದು ಸಹಜವಾಗಿದೆ ಎಂದು ಅಭಿಪ್ರಾಯಿಸಬಹುದು. ವಜ್ರದುಂಡಿ ಶಿಲಾಸಮೂಹದ ನಡುವೆ ಈ ದೇವಾಲಯ ನಿರ್ಮಾಣವಾಗಿರುವುದರಿಂದ ಇದನ್ನು ಸಹಜವಾಗಿ ‘ವಜ್ರದುಂಡಿ’ ಬಸಪ್ಪನ ದೇವಾಲಯ ಎಂದು ಕರೆದಿರುವ ಸಾಧ್ಯತೆ ಇದೆಯೆಂದು ಬಾಲಸುಬ್ರಹ್ಮಣ್ಯ ಅವರ ಅನಿಸಿಕೆಯಾಗಿದೆ.

ದೇವಾಲಯವು ಗರ್ಭಗೃಹ ಮತ್ತು ಮುಖಮಂಟಪವನ್ನು ಹೊಂದಿದೆ. ಗರ್ಭಗೃಹದಲ್ಲಿ ಬೃಹತ್ತಾದ ನಂದಿ ವಿಗ್ರಹವಿದೆ. ಗರ್ಭಗೃಹದ ಬಾಗಿಲಿನಲ್ಲಿ ಅರ್ಧಕಂಬ ಪಂಚಪಟ್ಟಿಕೆಗಳನ್ನು ರಚನೆ ಮಾಡಿದ್ದಾರೆ. ಮುಂಭಾಗದಲ್ಲಿ ತ್ರಿಶೂಲ, ಡಮರು, ಗದೆ ಹಿಡಿದಿರುವ ದ್ವಾರಪಾಲಕ ವಿಗ್ರಹಗಳು ಎರಡು ಕೆಡೆಗೆ ಇವೆ. ಫಲಕ ಬೋಧಿಗೆ ಹಾಗೂ ಚೌಕಾಕಾರದ ರಚನೆಯುಳ್ಳ ನಾಲ್ಕು ಕಂಬಗಳು ಮುಖಮಂಟಪದಲ್ಲಿವೆ. ಬೆಟ್ಟದ ಕೆಳಭಾಗದಲ್ಲಿ ನಿರ್ಮಾಣವಾದ ಈ ದೇವಾಲಯದ ಅಧಿಷ್ಠಾನ ಭಾಗ, ಬೆಟ್ಟದ ಮೇಲಿನಿಂದ ಬರುವ ಮಳೆನೀರು, ಮಣ್ಣನ್ನು ಸಾಗಿಸಿಕೊಂಡು ಬರುವುದರಿಂದ ಈ ಮಣ್ಣು ದೇವಾಲಯದ ಸುತ್ತಲೂ ಆವರಿಸಿದೆ. ಆದರೂ ಅಧಿಷ್ಠಾನದಲ್ಲಿರುವ ತ್ರಿಪಟ್ಟ ಕುಮುದ, ಪದ್ಮಭಾಗಗಳು ಕಾಣುತ್ತವೆ. ದೇವಾಲಯದ ಗೋಡೆಯ ಅರ್ಧಕಂಬ ಹಾಗೂ ಪಟ್ಟಿಕೆಗಳಿಂದ ಅಲಂಕೃತವಾಗಿದೆ. ದೇವಾಲಯದ ಮುಂಭಾಗದ ಬಂಡೆಯ ಮೇಲೆ ಎರಡು ಸಾಲಿನ ಶಾಸನ ಕೆತ್ತಲಾಗಿದೆ. ಆದರೆ ಈ ಅಸ್ಪಷ್ಟ ಶಾಸನದಿಂದ ಏನು ಅರ್ಥೈಸಲಿಕ್ಕಾಗದು. ದೇವಾಲಯದ ಸುತ್ತಲಿನ ಪ್ರದೇಶದಲ್ಲಿ ಸೂಕ್ಷ್ಮಶಿಲಾಯುಧಗಳನ್ನು ಹೋಲುವಂಥ ಅನೇಕ ಕುರುಹುಗಳು ವಿಸ್ತರಿಸಿಕೊಂಡಿವೆ. ದೇವಾಲಯಕ್ಕೆ ಸುಣ್ಣಬಣ್ಣವನ್ನು ಬಳಸಿದ್ದಾರೆ.

ದೊಡ್ಡ ಬಸವೇಶ್ವರ ದೇವಾಲಯ

ಕಲಾವೈಭವ ದೃಷ್ಟಿಯಿಂದ ಇದೊಂದು ಅತ್ಯಂತ ಸರಳ ರಚನೆಗಳಿಂದ ಕೂಡಿದೆ ಸ್ಮಾರಕವಾಗಿದೆ. ಆದರೆ ಕುರುಗೋಡು ಪಟ್ಟಣ ಹಾಗೂ ಸುತ್ತಲಿನ ಪ್ರದೇಶದ ಬಹುಸಂಖ್ಯಾತ ಜನರ ಆರಾಧ್ಯದೈವವಾಗಿ ಪ್ರಸಿದ್ಧಿ ಪಡೆದಿದೆ. ಕುರುಗೋಡಿನಲ್ಲಿರುವ ಬಹುಜನರ ನಿತ್ಯದ ಕಾರ್ಯಗಳು ದೊಡ್ಡ ಬಸವೇಶ್ವರನ ಸ್ಮರಣೆಯಿಂದಲೇ ಪ್ರಾರಂಭವಾಗುತ್ತವೆಯೆಂದರೆ ಅತಿಶಯೋಕ್ತಿ ಆಗಲಾರದು. ಕುರುಗೋಡು ಪಟ್ಟಣ ಪರಿಸರದಲ್ಲಿ ನಿರ್ಮಾಣವಾದ ಪ್ರಾಚೀನ ದೇವಾಲಯಗಳನ್ನು ಗಮನಿಸಿದಾಗ ದೊಡ್ಡ ಬಸವೇಶ್ವರ ದೇವಾಲಯ ತುಂಬಾ ಅರ್ವಾಚೀನವಾದುದು. ಆದರೂ ಇದೇ ಪಟ್ಟಣದಲ್ಲಿ ವಿಜಯನಗರೋತ್ತರ ಕಾಲದ ನಿರ್ಮಿತಿಗಳು ಸಹ ಕಾಣುತ್ತೇವೆ. ಉದಾ : ಕಲ್ಗುಡೇಶ್ವರ, ನೀಲಮ್ಮನಮಠ ಹಾಗೂ ಮೌನೇಶ್ವರ ದೇವಾಲಯಗಳನ್ನು ಹೆಸರಿಸಬಹುದು. ಆದರೆ ಇವು ಯಾವುವೂ ಅಧ್ಯಯನ ದೃಷ್ಟಿಯಿಂದ ಅಂತ ಮಹತ್ವವನ್ನು ಸ್ಮಾರಕಗಳೇನಲ್ಲ.

ಎತ್ತರದ ಜಗತಿಯ ಮೇಲೆ ನಿರ್ಮಾಣವಾಗಿರುವ ಈ ದೇವಾಲಯಕ್ಕೆ ವಿಶಾಲವಾದ ಪ್ರಾಕಾರವಿದೆ. ದೇವಾಲಯವು ಗರ್ಭಗೃಹ, ಅಂತರಾಳ ಹಾಗೂ ವಿಸ್ತಾರವಾದ ಸಭಾ ಮಂಟಪವನ್ನು ಹೊಂದಿದ್ದರೂ ದೇವಾಲಯದ ಅತ್ಯಂತ ಪ್ರಮುಖವಾದ ಆಕರ್ಷಣೆಯೆಂದರೆ ಗರ್ಭಗೃಹದಲ್ಲಿರುವ ಬೃಹದಾಕಾರದ ನಂದಿ ವಿಗ್ರಹ. ಸುಮಾರು ೧೫ ಅಡಿ ಎತ್ತರವಿರುವ ಈ ವಿಗ್ರಹವು ಏಕಶಿಲೆಯಲ್ಲಿ ನಿರ್ಮಿತವಾಗಿದೆ. ಇಲ್ಲಿಯ ದೊಡ್ಡ ವಿಗ್ರಹದಿಂದಲೇ ಈ ದೇವಾಲಯವನ್ನು ದೊಡ್ಡ ಬಸವೇಶ್ವರ ದೇವಾಲಯವೆಂದು ಕರೆದಿರಬಹುದು. ಅಲ್ಲದೇ ಈ ಬೃಹದಾಕಾರದ ನಂದಿ ವಿಗ್ರಹಕ್ಕೆ ಅತ್ಯಂತ ಕಿರಿದಾದ ಕೋಡುಗಳಿವೆ. ಈ ಕಿರಿದಾದ ಕೋಡುಗಳಿಂದಾಗಿ ಈ ಗ್ರಾಮಕ್ಕೆ ಕುರುಗೋಡು ಎಂಬ ಹೆಸರು ಬಂದಿತು ಎಂಬ ಐತಿಹ್ಯ ತುಂಬಾ ಪ್ರಚಲಿತದಲ್ಲಿದೆ. ಉಳಿದಂತೆ ಗರ್ಭಗೃಹದ ಬಾಗಿಲವಾಡವು ಅನೇಕ ಕೆತ್ತನೆಗಳಿಂದ ಕೂಡಿದ್ದು, ಲಲಾಟಬಿಂಬದಲ್ಲಿ ಗಜಲಕ್ಷ್ಮಿ ಶಿಲ್ಪವಿದೆ. ಅದರ ಮೇಲೆ ಕೀರ್ತಿಮುಖ ಹಾಗೂ ಶೈವ ದ್ವಾರಪಾಲಕ ಉಬ್ಬುಶಿ‌ಲ್ಪಗಳಿಂದ ಅಲಂಕರಣಗೊಳಿಸಿದ್ದಾರೆ. ಅಂತರಾಳದ ನಡುವೆ ಎರಡು ಕಂಬಗಳಿವೆ. ಸಭಾಮಂಟಪದಲ್ಲಿರುವ ಕಂಬಗಳು ಆನೆ, ಕಾಲೆತ್ತಿನಿಂತ ಸಿಂಹ (ಯಾಳಿ)ಗಳು ಹಾಗೂ ಇಳಿಬಿಟ್ಟ ಪುಷ್ಪ ಬೋಧಿಗೆಯ ರಚನೆಗಳಿಂದ ಮಾಡಲ್ಪಟ್ಟಿವೆ. ಇವು ಹಂಪೆಯ ವಿರೂಪಾಕ್ಷ ದೇವಾಲಯದ ರಂಗಮಂಟಪದಲ್ಲಿನ ಕಂಬಗಳನ್ನು ನೆನಪಿಸುವಂತಿವೆ. ಸಭಾಮಂಟಪದ ಮೇಲ್ಛಾವಣಿಯಲ್ಲಿ ಸಾಲಾಗಿ ಅನೇಕ ಗೂಡುಗಳನ್ನು (ಕೈಪಿಡಿಗೋಡೆ) ರಚಿಸಲಾಗಿದೆ. ಹಾಗೂ ಅವುಗಳಲ್ಲಿ ವಾಹನರೂಢರಾದ ಶಿವಪಾರ್ವತಿ, ತ್ರಿಮೂರ್ತಿ ಹಾಗೂ ಇನ್ನಿತರ ಶಿಲ್ಪಗಳಿವೆ. ಮುಂಬಾಗಿಲಿನ ಇಕ್ಕೆಲಗಳಲ್ಲಿ ಗಜಶಿಲ್ಪಗಳನ್ನು ಇಡಲಾಗಿದೆ. ಅನೇಕ ಹೊಸ ಮಾರ್ಪಟುಗಳಿಗೆ ಸಭಾಮಂಟಪ ಒಳಗಾಗಿದೆ.

ವಿಶಾಲವಾದ ಹಾಗೂ ಎತ್ತರವಾದ ಪ್ರಾಕಾರ ಗೋಡೆಯನ್ನು ಹೊಂದಿರುವ ಈ ದೇವಾಲಯ ಪಶ್ಚಿಮ, ದಕ್ಷಿಣ ಹಾಗೂ ಉತ್ತರಾಭಿಮುಖವಾಗಿರುವ ಮೂರು ಪ್ರವೇಶ ದ್ವಾರಗಳನ್ನು ಹೊಂದಿದೆ. ಉತ್ತರದ ಪ್ರವೇಶದ್ವಾರವನ್ನು ಸೋಮವಾರದ ಬಾಗಿಲೆಂದು ಕರೆಯುವ ರೂಢಿಯಿದೆ. ಪ್ರವೇಶದ್ವಾರವನ್ನು ಸೋಮವಾರದ ಬಾಗಿಲೆಂದು ಕರೆಯುವ ರೂಢಿಯಿದೆ. ಪ್ರವೇಶದ್ವಾರಗಳಿಗೆ ಗೋಪುರಗಳಿದ್ದು, ಉತ್ತರ-ದಕ್ಷಿಣದ ಪ್ರವೇಶದ್ವಾರ ಗೋಪುರಗಳ ಚಿಕ್ಕವುಗಳಾಗಿವೆ. ಆದರೆ ಪಶ್ಚಿಮಾಭಿಮುಖವಾದ ದ್ವಾರಗೋಪುರ ಎತ್ತರವಾಗಿದ್ದು ಐದು ತಲಗಳನ್ನು ಹೊಂದಿದೆ. ಗಾರೆ, ಇಟ್ಟಿಗೆಗಳಿಮದ ನಿರ್ಮಾಣವಾದ ಈ ಗೋಪುರವು ವಿಜಯನಗರ ಮಾದರಿಯನ್ನು ನೆನಪಿಸುವಂತಿದೆ. ಪ್ರಾಕಾರದಲ್ಲಿ ಅನೇಕ ಚಿಕ್ಕ ಮಂಟಪಗಳಲ್ಲಿ ರಚಿಸಲಾಗಿದೆ. ದೇವಾಲಯದ ಒಳಾಂಗಣದಲ್ಲಿ ಹಾಗೂ ಹೊರಾಂಗಣದಲ್ಲಿ ಅನೇಕ ಬಿಡಿಶಿಲ್ಪಿಗಳನ್ನು ಇಡಲಾಗಿದೆ. ಕುರುಗೋಡಿನ ಪಟ್ಟಣ ಪರಿಸರದಲ್ಲಿ ಸಿಗುವ ಶಿಲ್ಪಾವಶೇಷಗಳನ್ನು ಈ ಗುಡಿಯ ಆವರಣದಲ್ಲಿಡುವ ಸ್ತುತ್ಯರ್ಹ ಕಾರ್ಯವನ್ನು ಗ್ರಾಮದ ಜನತೆ ರೂಢಿಸಿಕೊಂಡಿದ್ದಾರೆ. ದೇವಾಲಯದ ಹೊರಭಿತ್ತಿಯಲ್ಲಿ ಅನೇಕ ಉಬ್ಬುಶಿಲ್ಪಗಳಿವೆ. ಉದಾ : ಗಣೇಶ, ವೀರಭದ್ರ, ಶೇಷಶಯನ, ಕಾಳಿಮರ್ದನ ಇಂತ ಉಬ್ಬುಶಿಲ್ಪಗಳು ಒಳಭಾಗದ ಗೋಡೆಯಲ್ಲಿಯೂ ಸಹ ಇವೆ. ಬಹುಜನರ ಆರಾಧ್ಯ ದೈವವಾದ ದೊಡ್ಡ ಬಸವೇಶ್ವರ ದೇವರ ರಥೋತ್ಸವ ಪ್ರತಿವರ್ಷ ಫಾಲ್ಗುಣ ಶುದ್ಧ ಹುಣ್ಣಿಮೆಯಂದು ಜರುಗುತ್ತದೆ.

ಕ್ರಿ.ಶ. ೧೫೨೮ರ ಕಾಲಾವಧಿಯ ಶಾಸನವು[4] ಉಲ್ಲೇಖಿಸುವಂತೆ ಶ್ರೀಕೃಷ್ಣದೇವರಾಯನಿಗೆ ಪುಣ್ಯವಾಗಲೆಂದು ಬಾಗಿಲಕೃಷ್ಣಪ್ಪ ನಾಯಕನೆಂಬುವ ದೊಡ್ಡ ಬಸವಣ್ಣನ ಅಮೃತಪಡಿಗೆ ಭೂಮಿಯನ್ನು ದಾನವಾಗಿ ಬಿಟ್ಟಿರುವ ವಿಷಯವಿದೆ. ಹಂಪೆಯ ಪಂಪಾಪತಿಯು (ವಿರೂಪಾಕ್ಷ) ವಿಜಯನಗರ ಪಟ್ಟಣದ ದೈವಮಾತ್ರವಾಗಿರದೇ ಇಡೀ ವಿಜಯನಗರ ಸಾಮ್ರಾಜ್ಯದ ಅಧೀದೈವವಾಗಿತ್ತು ಎಂಬುದು ಅನೇಕ ಮಾಹಿತಿಗಳಿಂದ ತಿಳಿದುಬರುವ ಸಂಗತಿ. ಆದುದರಿಂದಲೇ ಕುರುಗೋಡಿನ ದೊಡ್ಡ ಬಸವೇಶ್ವರನ ದೇವಾಲಯದಲ್ಲಿನ ಬೃಹದಾಕಾರದ ನಂದಿ ವಿಗ್ರಹವನ್ನು ಹಂಪೆಯ ವಿರೂಪಾಕ್ಷನ ಎದುರಾಗಿ ಅಂದರೆ ಪಶ್ಚಿಮಾಭಿಮುಖವಾಗಿ ಪ್ರತಿಷ್ಠಾಪಿಸಿದ್ದಾರೆ. ಈ ಕಾರಣಕ್ಕಾಗಿ ಇಲ್ಲಿಯ ಬಸವಣ್ಣನನ್ನು ಎದುರು ಬಸವನೆಂದು ಸಹ ಕರೆಯುವ ವಾಡಿಕೆಯಿದೆ. ಬಸವೇಶ್ವರ ದೇವಾಲಯದ ಹಿಂಭಾಗ ಹಾಗೂ ಪಶ್ಚಿಮ ದ್ವಾರದ ಮುಂಭಾಗದಲ್ಲಿ ಹೀಗೆ ಎರಡು ದೀಪಸ್ತಂಭಗಳನ್ನು ನಿಲ್ಲಿಸಿದ್ದಾರೆ. ದೊಡ್ಡ ಬಸವೇಶ್ವರ ದೇವಾಲಯದಲ್ಲಿನ ಲಿಂಗದ ಎದುರಾಗಿ (ಪಶ್ಚಿಮದ್ವಾರದ ಮುಂಭಾಗ) ಒಂದು ದೀಪಸ್ತಂಭವಾದರೆ, ಇದೇ ಗುಡಿಯ ಹಿಂಭಾಗದಲ್ಲಿರುವ ದೀಪಸ್ತಂಭವು ಹಂಪೆಯ ವಿರೂಪಾಕ್ಷ ದೇವಾಲಯದ ಎದುರಿನ ದೀಪಸ್ತಂಭವಾಗಿ ಪರಿಗಣಿತವಾಗುತ್ತದೆ.

ಈ ದೇವಾಲಯದ ನಿರ್ಮಾಣ ಕಲ್ಯಾಣದ ಚಾಲುಕ್ಯರ ಆಳ್ವಿಕೆಯ ಉತ್ತರಾರ್ಧ ಕಾಲಾವಧಿಯಲ್ಲಿ ಆರಂಭವಾಯಿತೆಂದುಸ ಅಭಿಪ್ರಾಯಿಸಿದ್ದಾರೆ.[5] ಆದರೆ ದೇವಾಲಯದ ರಚನಾಶೈಲಿಯನ್ನು ಗಮನಿಸಿದಾಗ ಇದೊಂದು ವಿಜಯನಗರದ (೧೫-೧೬ನೇ ಶತಮಾನ) ಕಾಲದ ರಚನೆಯೆಂದೇ ಸ್ಪಷ್ಟವಾಗಿ ತಿಳಿಯಬಹುದು. ಸಂಗಮರು ವಿಜಯನಗರ ರಾಜ್ಯ ಪ್ರಾರಂಭಿಸುವುದಕ್ಕಿಂತ ಮೊದಲಿಂದಲೂ ಕುರುಗೋಡಿನ ಅರಸರ ಅನ್ಯೋನ್ಯ ಸಂಬಂಧ ಹಂಪೆಯೊಂದಿಗೆ ಇರುವುದನ್ನು ಈ ಹಿಂದೆ ಚರ್ಚಿಸಲಾಗಿದೆ. ಕುರುಗೋಡಿನ ಅರಸರು ಹಂಪೆಯಲ್ಲಿ ದೇವಾಲಯ ಕಟ್ಟಿರುವ ನಿದರ್ಶನಗಳು ಹಾಗೂ ವಿಜಯನಗರದ ಅರಸರು ಕುರುಗೋಡಿನಲ್ಲಿ ಅನೇಕ ದಾನ-ದತ್ತಿಗಳನ್ನು ನೀಡಿರುವ ಉಲ್ಲೇಖಗಳಿವೆ. ಅಂಥ ನಿರಂತರ ಪ್ರಕ್ರಿಯೆಗಳು ವಿಜಯನಗರ ಸಾಮ್ರಾಜ್ಯ ಪತನದವರೆಗೂ ಮುಂದುವರೆದಿವೆ.

ಮೂರ್ತಿಶಿಲ್ಪ

ವಾಸ್ತುಶಿಲ್ಪ (ದೇವಾಲಯ)ಗಳಂತೆ ಮೂರ್ತಿಶಿಲ್ಪವು ಪ್ರತ್ಯೇಕ ಅಧ್ಯಯನದ ವಸ್ತುವೇ ಆಗಿದೆ. ಆದರೆ ಸಾಮಾನ್ಯವಾಗಿ ಮೂರ್ತಿಶಿಲ್ಪಗಳನ್ನು ದೇವಾಲಯಗಳ ಭಾಗವಾಗಿಯೇ ಕಾಣುತ್ತಾರೆ. ಐತಿಹಾಸಿಕವಾಗಿ ಹಾಗೂ ಕಲೆಯ ದೃಷ್ಟಿಯಿಂದ ಕುರುಗೋಡಿನ ದೇವಾಲಯಗಳು ಕರ್ನಾಟಕ ಕಲಾಪರಂಪರೆಗೆ ಹೊಸ ಹೊಳಹುಗಳನ್ನು ನೀಡುವ ಕಲಾಕೃತಿಗಳಾಗಿ, ಇಲ್ಲಿರುವ ಮೂರ್ತಿಶಿಲ್ಪಗಳನ್ನು ಅಧ್ಯಯನದ ಚೌಕಟ್ಟಿಗೆ ಒಳಪಡಿಸಿದಾಗ ಅಂಥ ಮಹತ್ವದ ರಚನಾಕೃತಿಗಳಲ್ಲೆಂಬ ಅಭಿಪ್ರಾಯಕ್ಕೆ ಬರಬಹುದು. ಸ್ಥಳೀಯವಾಗಿ ಸಿಗುವ ಕಣಶಿಲೆಯಲ್ಲಿ ಇಲ್ಲಿನ ಮೂರ್ತಿಶಿಲ್ಪಗಳು ಮೊದಲ ನೋಟದಲ್ಲಿ ಕಣ್ಮನ ಸೆಳೆಯುವಲ್ಲಿ ಸೋಲುತ್ತವೆ. ಕುರುಗೋಡು ಪಟ್ಟಣದಲ್ಲಿ ಪ್ರತ್ಯೇಕ ಬಿಡಿಶಿಲ್ಪಗಳು ತುಂಬಾ ವಿರಳ. ದೇವಾಲಯದಲ್ಲಿರುವ ಬಿಡಿಶಿಲ್ಪ ಹಾಗೂ ಉಬ್ಬುಶಿಲ್ಪಗಳನ್ನೇ, ಮೂರ್ತಿಶಿಲ್ಪ ಅಧ್ಯಯನದಲ್ಲಿ ಪರಿಗಣಿಸ ಬೇಕಾಗುತ್ತದೆ. ದೊಡ್ಡ ಬಸವೇಶ್ವರ, ಹಿಂಡುಲಿ ಸಂಗಮೇಶ್ವರ ದೇವಾಲಯದ ಮುಂಭಾಗದಲ್ಲಿರುವ ಶಿಲ್ಪಗಳು, ದೊಡ್ಡಬಸವೇಶ್ವರ ದೇವಾಲಯದ ಆವರಣದಲ್ಲಿರುವ ಬಿಡಿಶಿಲ್ಪಗಳು, ಇಲ್ಲಿನ ದೇವಾಲಯಗಳಲ್ಲಿರುವ ದ್ವಾರಶಿಲ್ಪಗಳು ಹಾಗೂ ನೀಲಮ್ಮನ ಮಠದ ಕೈಪಿಡಿ ಗೋಡೆಯಲ್ಲಿರುವ ಶಿಲ್ಪಗಳು ಕುರುಗೋಡು ಪಟ್ಟಣದಲ್ಲಿರುವ ಪ್ರಮುಖ ಶಿಲ್ಪಗಳಾಗಿವೆ.

ನಂದಿ

ಇಲ್ಲಿರುವ ದೊಡ್ಡಬಸವೇಶ್ವರ ದೇವಾಲಯದಲ್ಲಿರುವ ನಂದಿವಿಗ್ರಹವು ಬೃಹದಾಕಾರದ್ದಾಗಿದೆ. ಸಾಮಾನ್ಯವಾಗಿ ನಂದಿವಿಗ್ರಹವನ್ನು ಬಸವ, ಬಸವಣ್ಣ ಹಾಗೂ ಬಸವೇಶ್ವರನೆಂದು ಸಂಬೋಧಿಸಲಾಗುತ್ತದೆ. ಈ ಕಾರಣದಿಂದಲೇ ಏನೋ ಈ ದೇವಾಲಯವನ್ನು ‘ದೊಡ್ಡಬಸವೇಶ್ವರ’ ದೇವಾಲಯವೆಂದು ಕರೆದಿರಬಹುದು. ಈ ವಿಗ್ರಹವು ಪಶ್ಚಿಮಾಭಿಮುಖವಾಗಿದ್ದು ಇದನ್ನು ಹಂಪೆಯ ವಿರೂಪಾಕ್ಷ ದೇವಾಲಯದಲ್ಲಿರುವ ಲಿಂಗಕ್ಕೆ ಎದುರಾಗಿ ಪ್ರತಿಷ್ಠಾಪಿಸಲಾಗಿದೆ ಎಂಬ ಪ್ರತೀತಿ ಇದೆ. ಸೋಜಿಗವೆಂದರೆ ಬೃಹದಾಕಾರದ ಈ ವಿಗ್ರಹಕ್ಕೆ ಅತ್ಯಂತ ಕಿರಿದಾದ ಕೋಡುಗಳಿವೆ. ಈ ವಿಗ್ರಹಕ್ಕಿರುವ ಕಿರಿದಾದ ಕೋಡುಗಳಿಂದಲೇ ಪಟ್ಟಣಕ್ಕೆ ‘ಕುರುಗೋಡು’ ಎಂಬ ಹೆಸರು ಬಂದಿದೆ ಎಂಬ ವಿಚಾರ ಮೌಖಿಕ ಇತಿಹಾಸದಿಂದ ತಿಳಿದುಬರುತ್ತದೆ. ದೊಡ್ಡದಾದ ನಂದಿಶಿಲ್ಪವನ್ನು ಕಣಶಿಲೆಯಲ್ಲಿ ಕಂಡರಿಸಲಾಗಿದ್ದು ಇದು ನಿರಾಲಂಕರಣೆಯ ರಚನೆ.

ಉಮಾಮಹೇಶ್ವರ

ಕಲಾದೃಷ್ಟಿಯಿಂದ ಪರಿಗಣಿಸುವುದಾದರೆ ಉಮಾಮಹೇಶ್ವರ ಶಿಲ್ಪವು ಉತ್ಕ್ರಷ್ಟ ಕಲಾಕೃತಿ. ಇದನ್ನು ಕಪ್ಪು ಮಿಶ್ರಿತ ಬಳಪದ ಕಲ್ಲಿನಲ್ಲಿ ಕಂಡರಿಸಲಾಗಿದೆ. ಬಿಲ್ಲು ಬಾಣ ಆಯುಧ ಧಾರಿಯಾದ ಶಿವನು ಕಿರೀಟ ಧರಿಸಿದ್ದಾನೆ. ಕೊರಳಲ್ಲಿ ಹಾರ ಮತ್ತು ಸೊಂಟದಲ್ಲಿ ಕಟಿಬಂಧಗಳಿವೆ. ಮಹೇಶ್ವರನ ಜೊತೆಗಿರುವ ಉಮೆಯನ್ನು ಅಲಂಕರಣೆಗೊಳಿಸಿದ್ದಾರೆ. ಈ ಸುಂದರ ಮೂರ್ತಿಶಿಲ್ಪವು ಕುರುಗೋಡು -ಕಂಪ್ಲಿ ರಸ್ತೆಯಲ್ಲಿರುವ ಕೆರೆಯ ದಂಡೆಯ ಮೇಲಿದೆ.

ಇತರೆ ಶಿಲ್ಪಗಳು

ಹಿಂಡುಲಿ ಸಂಗಮೇಶ್ವರ ದೇವಾಲಯದ ಮುಂಭಾಗದಲ್ಲಿರುವ ಕಟಾಂಗಧಾರಿ ಶಿವನ ಶಿಲ್ಪವು ತೃಟಿತವಾಗಿದೆ. ಸುಂದರವಾದ ಶಿಲ್ಪವು ಕಿರೀಟ ಹೊಂದಿದ್ದು, ಹಾರ ಹಾಗೂ ಕಟಿಬಂಧಗಳಿಂದ ಅಲಂಕರಣೆಗೊಂಡಿದೆ. ಸುಮಾರು ನಾಲ್ಕುವರೆ ಅಡಿ ಎತ್ತರದ ಈ ಶಿಲ್ಪವು ಚಕ್ರ ಗಧೆಯನ್ನು ಹೊಂದಿದೆ. ಇದರ ಬಗೆಗೆ ಹೆಚ್ಚಿನ ಅಧ್ಯಯನಗಳಾಗಬೇಕಾಗಿರುವುದು ಅವಶ್ಯಕ. ಇದಕ್ಕೆ ಸುಣ್ಣ ಬಳಿಯಲಾಗಿದೆ. ಚನ್ನಕೇಶವ ಹಾಗೂ ದೊಡ್ಡಬಸವೇಶ್ವರ ದೇವಾಲಯದ ಹೊರಗೋಡೆಗಳಲ್ಲಿ ಕೆಲವು ಉಬ್ಬುಶಿಲ್ಪಗಳಿವೆ. ಕುರುಗೋಡು ಪಟ್ಟಣದಲ್ಲಿರುವ ಕೆಲವು ಬಿಡಿ ಶಿಲ್ಪಗಳನ್ನು ಹಂಪಿ, ಕನ್ನಡ ವಿಶ್ವವಿದ್ಯಾಲಯದ ವಸ್ತುಸಂಗ್ರಹಾಲಯದಲ್ಲಿಯೂ ಸಹ ಇಡಲಾಗಿದೆ. ಉಳಿದಂತೆ ಸಪ್ತಮಾತೃಕೆಯಿಂದ ಶಿಲ್ಪ, ಗಣೇಶ, ಮಹಿಷಮರ್ದಿನಿಯ ಶಿಲ್ಪಗಳಲ್ಲದೇ ಅನೇಕ ಉಬ್ಬುಶಿಲ್ಪಗಳನ್ನು ಇಲ್ಲಿನ ಹಲವು ದೇವಾಲಯಗಳಲ್ಲಿ ಅನೇಕ ಬಿಡಿ ಶಿಲ್ಪಗಳನ್ನು ಇಡಲಾಗಿದೆ. ಉದಾಹರಣೆಗೆ ವೀರಭದ್ರ, ಬ್ರಹ್ಮ, ನರಸಿಂಹ, ಉಮಾಮಹೇಶ್ವರ, ನಂದಿ, ಭೃಂಗಿ, ಮೇಷ ತಲೆಯ ಶಿಲ್ಪ (ದಕ್ಷ) ಕಾಳಿಮರ್ಧನ, ಶೇಷಶಯನ ಮುಂತಾದ ಶಿಲ್ಪಗಳನ್ನು ಕುರುಗೋಡು ಪಟ್ಟಣದಲ್ಲಿ ಕಾಣಬಹುದು.

ಉಪಸಂಹಾರ

ನಿರ್ಣಾಯಕ ಯುದ್ಧಗಳಿಂದ ಕುರುಗೋಡು ಸಿಂದರನ್ನು ಚರಿತ್ರೆಯಲ್ಲಿ ಗುರುತಿಸದಿದ್ದರೂ ಅವರು ಮಾಡಿರುವ ಸಾಂಸ್ಕೃತಿಕ ಸಾಧನೆಗಳಿಂದ ಎಂದೂ ಮರೆಯದ ಸಾಧಕರಾಗಿ ಪ್ರತಿಬಿಂಬಿತವಾಗಿದ್ದಾರೆ. ಆಯಕಟ್ಟಿನ ಸ್ಥಳವಾದ ಕುರುಗೋಡನ್ನು ಬಲ್ಲಕುಂದೆಯ ಆಡಳಿತ ವಿಭಾಗದ ರಾಜಧಾನಿ ಪಟ್ಟಣವನ್ನಾಗಿ ನಿರ್ಮಿಸಿ ಬೆಳೆಸಿದರು. ೧೨ನೇ ಶತಮಾನದ ಕನ್ನಡ ನಾಡಿನ ರಾಜಕೀಯ ಪರಿಸ್ಥಿತಿಯಲ್ಲಿ ಎಲ್ಲ ಅರಸರ ಸ್ಥಿತಿ ಚರುರಂಗಾಟದಲ್ಲಿನ ಕಾಯಿಗಳಂತೆ ಸದಾ ಬದಲಾವಣೆಗೊಳಗಾಗುತ್ತಿತ್ತು. ಇಂಥ ಸಂದಿಗ್ದತೆಯಲ್ಲಿ ತಮ್ಮ ಚಾಣಾಕ್ಷ ರಾಜನೀತಿಗಳಿಂದಾಗಿ ಸ್ಥಿರತೆಯನ್ನು ಕಾಪಾಡಿಕೊಂಡು ಒಂದು ಶತಮಾನಗಳ ಕಾಲ ಸುಭದ್ರ ರಾಜ್ಯಭಾರ ಮಾಡಿದರು. ಬಲಾಢ್ಯ ಸಾಮ್ರಾಟರಿಗೆ ನಿಷ್ಠೆಯನ್ನು ಬದಲಾಯಿಸುತ್ತ ತಮ್ಮ ಅಸ್ತಿತ್ವವನ್ನು ಯಾವಾಗಲೂ ಕಾಯ್ದುಕೊಂಡರು. ಆದ್ದರಿಂದಲೇ ಕುರುಗೋಡು ಪಟ್ಟಣ ಒಂದರಲ್ಲಿಯೇ ಇಪ್ಪತ್ತಕ್ಕಿಂತ ಹೆಚ್ಚಿನ ದೇವಾಲಯಗಳನ್ನು ಕಟ್ಟಲು ಸಾಧ್ಯವಾಯಿತು. ಇಲ್ಲಿರುವ ಕಲ್ಲೇಶ್ವರ, ತ್ರಿಕೂಟಾಲಯ, ಹಿಂಡುಲಿಸಂಗಮೇಶ್ವರ, ಉಜಾಳೇಶ್ವರ, ರಾಚಮಲ್ಲೇಶ್ವರ ಹಾಗೂ ದೊಡ್ಡಬಸವೇಶ್ವರ ದೇವಾಲಯಗಳು ಕಲಾತ್ಮಕ ಪ್ರಯೋಗಗಳಿಗೆ ಕೈಗನ್ನಡಿ ಆಗಿವೆ. ಮುಖ್ಯವಾಗಿ ಇಲ್ಲಿನ ದೇವಾಲಯಗಳು ಕನ್ನಡ ನಾಡಿನ ಪ್ರಾಚೀನ ಕಲಾ ಇತಿಹಾಸದಲ್ಲಿ ಅಲ್ಲಲ್ಲಿ ಕಳಚಿಹೋಗಿರುವ ಕೊಂಡಿಗಳನ್ನು ಮತ್ತೆ ಮರುಜೋಡಿಸುವಲ್ಲಿ ಸಹಾಯಕಾರಿಯಾಗಿವೆ. ಉದಾಹರಣೆಗೆ ಕಲ್ಯಾನದ ಚಾಲುಕ್ಯರ ಹಾಗೂ ವಿಜಯನಗರದ ಕಲಾಶೈಲಿಗಳ ಮಧ್ಯವರ್ತಿಗಳಾಗಿ ಇಲ್ಲಿನ ಕಲಾರಚನೆಗಳು ನಿಶ್ಚಿತವಾದ ಪಾತ್ರವಹಿಸುತ್ತವೆ ಎಂಬುದರಲ್ಲಿ ಸಂಶಯವಿಲ್ಲ. ಕುರುಗೋಡಿನಲ್ಲಿರುವ ದೇವಾಲಯಗಳ ಅಧ್ಯಯನದ ಸಂದರ್ಭದಲ್ಲಿ ಎದುರಾಗುವ ಪ್ರಮುಖ ಸಮಸ್ಯೆಳೆಂದರೆ, ಅವುಗಳ ನಿರ್ಮಾಣದ ಕಾಲ ಹಾಗೂ ಕರ್ತೃವಿನ ಬಗೆಗೆ. ಇಲ್ಲಿರುವ ಬಹುತೇಕ ದೇವಾಲಯಗಳ ಬಗ್ಗೆ ಅಸ್ಪಷ್ಟವಾದ ಮಾಹಿತಿಗಳಿರುವುದರಿಂದ ನಿರ್ದಿಷ್ಟವಾದ ಅಭಿಪ್ರಾಯಗಳು ರೂಪಿತವಾಗುವಲ್ಲಿ ಹೆಚ್ಚಿನ ತೊಡಕಾಗಿದೆ. ೧೩ನೇ ಶತಮಾನದ ನಂತರ ಕುರುಗೋಡು ಸಿಂದರ ಆಡಳಿತದ ಬಗೆಗೆ ಸ್ಪಷ್ಟ ಮಾಹಿತಿಗಳಿಲ್ಲ. ಲಭ್ಯವಿರುವ ಮಾಹಿತಿಗಳ ಮರುಶೋಧದಿಂದ ಮಾತ್ರ ಕುರುಗೋಡು ಸಿಂದರ ಬಗೆಗೆ ಕಳಚಿಹೋದ ಕೊಂಡಿಯನ್ನು ಇತಿಹಾಸದಲ್ಲಿ ಮತ್ತೆ ಜೋಡಿಸಬಹುದಾಗಿದೆ.

 

[1] ಅದೇ… ಶಾಸನ ಸಂಖ್ಯೆ-೧೫

[2] ಅದೇ…. ಶಾಸನ ಸಂಖ್ಯೆ

[3] ಹನುಮಂತರೆಡ್ಡಿ ವೈ., ಪೂರ್ವೋಕ್ತ, ಪುಟ ೬೬

[4] ಅದೇ ಪುಟ ೬೯

[5] ಕ.ವಿ.ವಿ. ಶಾಸನ ಸಂಪುಟ-೧, ಕುರುಗೋಡು, ಬಳ್ಳಾರಿ (ತಾ) ಶಾಸನ ಸಂಖ್ಯೆ-೯