ಕಲ್ಲೇಶ್ವರ ದೇವಾಲಯ

ಈ ದೇವಾಲಯದ ಮುಖಮಂಟಪದ ದಕ್ಷಿಣಭಾಗದಲ್ಲಿ ಕ್ರಿ.ಶ. ೧೧೭೬ರ ತೇದಿಯ ಶಾಸನವೊಂದಿದೆ. ಇದು ಕಲಚುರಿ ಅರಸ ರಾಯಮುರಾರಿ ಸೋವಿದೇವನ ಕಾಲದ್ದು. ಎರಡನೆಯ ರಾಚಮಲ್ಲನ ಮುಮ್ಮರಿದಂಡರಲ್ಲಿ ಒಬ್ಬನಾದ ಹಾವಿನಾಳ ಕಲ್ಲಿಶೆಟ್ಟಿಯು ಕುರುಗೋಡಿನಲ್ಲಿ ಕಲಿದೇವರನ್ನು ಪ್ರತಿಷ್ಠಾಪಿಸಿ ದಾನ ನೀಡಿದ್ದಾನೆ. ಹಾಗೂ ಇದೇ ಕಲಿ ದೇವರಿಗೆ ಮಹಾಮುಂಡಳೇಶ್ವರ ಸಿಂದವಂಶದ ಎರಡನೆಯ ರಾಚಮಲ್ಲ ಸಹ ದೇವಾಲಯದ ಸ್ಥಾನಾಚಾರ್ಯರಾದ ಅಮೃತರಾಶಿಮುನೀಂದ್ರ ಅಥವಾ ಅಮೃತಾರಾಶಿದೇವರ ಪಾದಪೂಜೆ ಮಾಡಿ (ಕಾಲಂಕರ್ಚಿ) ಅದರ ನಿರ್ವಹಣೆಗಾಗಿ ಭೂಮಿಯನ್ನು ದಾನ ನೀಡಿದ್ದಾನೆ. ದೇವಾ ಲಯದ ರಂಗಭೋಗ ಚಟುವಟಿಕೆಗಳಿಗೆ ದಾನ ನೀಡಿರುವ ಉಲ್ಲೇಖ ಈ ಶಾಸನದಲ್ಲಿದೆ.

[1]

ಕಲ್ಲೇಶ್ವರ ದೇವಾಲಯದ ತಲವಿನ್ಯಾಸ

ಕಲ್ಲೇಶ್ವರ ದೇವಾಲಯದ ತಲವಿನ್ಯಾಸ

ಕುರುಗೋಡು ಪಟ್ಟಣದ ನೈರುತ್ಯ ಭಾಗದಲ್ಲಿರುವ ಈ ಕಲ್ಲೇಶ್ವರ ದೇವಾಲಯ ಶಾಸನ ಉಲ್ಲೇಖಿತ ಕಲಿದೇವರ ದೇವಾಲಯವಾಗಿತ್ತು. ಕಲ್ಯಾಣ ಚಾಲುಕ್ಯ ಮಾದರಿಯ ಈ ರಚನೆ ಎತ್ತರದ ಕಟ್ಟೆಯ ಮೇಲೆ ನಿರ್ಮಾಣವಾಗಿದೆ. ಡಾ.ಎಸ್.ರಾಜಶೇಖರ ಅವರು ಇದನ್ನು ಸೇವುಣ ಮಾದರಿಯ ದೇವಾಲಯವೆಂದು ಅಭಿಪ್ರಾಯಪಟ್ಟಿದ್ದಾರೆ.[2] ಕಲ್ಲೇಶ್ವರ ದೇವಾಲಯದ ನಿರ್ಮಾಣ ಪೂರ್ವದಲ್ಲಿ ಕುರುಗೋಡಿನಲ್ಲಿ ಭೋಗೇಶ್ವರ ದೇವಾಲಯ (ಕ್ರಿ.ಶ. ೧೧೪೯) ನಿರ್ಮಾಣವಾಗಿರುವ ಮಾಹಿತಿ ಇದ್ದರೂ ದೇವಾಲಯದ ಯಾವೊಂದೂ ಕುರುಹುಗಳು ಸಿಕ್ಕಿಲ್ಲ. ಆದ್ದರಿಂದ ಕುರುಗೋಡಿನ ಶಾಸನದಲ್ಲಿ ಉಲ್ಲೇಖಿತ ಕಲ್ಲೇಶ್ವರ ದೇವಾಲಯ ಕುರುಗೋಡಿನಲ್ಲಿ ಮೊದಲ ದೇವಾಲಯ ಎಂದು ಅಭಿಪ್ರಾಯಿಸಬಹುದು.

ಕಲ್ಲೇಶ್ವರ ದೇವಾಲಯ ಆಯತಾಕಾರದ ತಲವಿನ್ಯಾಸ ಹೊಂದಿದ್ದು, ಇದೊಂದು ಏಕಕೂಟ ದೇವಾಲಯವಾಗಿದೆ. ಗರ್ಭಗೃಹ, ಅಂತರಾಳ (ಸುಖನಾಸಿ), ನವರಂಗ (ಸಭಾಪಂಟಪ) ಹಾಗೂ ಮುಖಮಂಟಪ ಭಾಗವನ್ನು ಈ ದೇವಾಲಯವು ಒಳಗೊಂಡಿದೆ. ಕದಂಬನಾಗರ ಶಿಖರ ಶೈಲಿಯ ಈ ದೇವಾಲಯ ಸಾದಾ ರಚನೆಯದ್ದಾಗಿದೆ. ದೇವಾಲಯದ ಸುತ್ತಲೂ ಇಂದು ಅನೇಕ ಹೊಸ ಕಟ್ಟಡಗಳನ್ನು ಕಟ್ಟಿದ್ದಾರೆ.

ಗರ್ಭಗೃಹದಲ್ಲಿ ಎರಡು ಅಡಿ ಎತ್ತರದ ಲಿಂಗ ಇದೆ. ಇದರ ಬಾಗಿಲವಾಡದಲ್ಲಿ ಸಾಮಾನ್ಯ ರಚನೆಗಳಾದ ಅರ್ಧಕಂಬ, ಪಟ್ಟಿಕೆ, ಹೂವಿನ ಎಸಳು ಹಾಗೂ ಪುಷ್ಪ ಅಲಂಕರಣೆಗಳು ಇವೆ. ಲಲಾಟದಲ್ಲಿ ಗಜಲಕ್ಷ್ಮಿ ಉಬ್ಬು ಶಿಲ್ಪವಿದೆ. ಮೇಲ್ಭಾಗದಲ್ಲಿ ಔತ್ತರೇಯ (ಉತ್ತರ) ಮಾದರಿಯ ಶಿಖರ ಪಟ್ಟಿಕೆಗಳನ್ನು ಕೆತ್ತಲಾಗಿದೆ. ಗರ್ಭಗೃಹದ ಇಕ್ಕೆಲಗಳಲ್ಲಿ ತ್ರಿಶೂಲ, ಢಮರು ಹಾಗೂ ಗದಾಧರ ದ್ವಾರಶಿಲ್ಪಗಳನ್ನು ಇಡಲಾಗಿದೆ. ಗರ್ಭಗೃಹದ ಬಾಗಿಲವಾಡದಲ್ಲಿರುವ ಲಕ್ಷಣಗಳನ್ನೇ ಅಂತರಾಳದ ಬಾಗಿಲವಾಡದಲ್ಲಿ ಪುನರಾವರ್ತಿಸಿದ್ದಾರೆ. ಹೆಚ್ಚಿನ ಜೋಡಣೆಯಾಗಿ ಅಂತರಾಳದ ದ್ವಾರಶಾಖೆಗಳ ಎರಡು ಕಡೆಗೆ ಜಾಲಂಧರ (ಕಿಟಕಿ)ವನ್ನು ಅಳವಡಿಸಿದ್ದಾರೆ. ಹಾಗೂ ಪುರುಷ ದ್ವಾರಶಿಲ್ಪಗಳ ಬದಲಾಗಿ ಸ್ತ್ರಿ ದ್ವಾರಶಿಲ್ಪಗಳು ಅಂತರಾಳದ ಇಕ್ಕೆಲಗಳಲ್ಲಿವೆ. ಇವು ಕಂಠಹಾರ, ಕಂಕಣ, ಕೇಯೂರ ಹಾಗೂ ನೂಪುರಗಳ ಅಲಂಕರಣೆಗಳಿಂದ ಕೂಡಿವೆ.

ನವರಂಗ ಅಥವಾ ಸಭಾಮಂಟಪದಲ್ಲಿ ಕಲ್ಯಾಣಚಾಲುಕ್ಯ ಮಾದರಿಯ ನಾಲ್ಕು ಕಂಬಗಳಿವೆ. ಈ ನಾಲ್ಕು ಕಂಬಗಳ ಕೆಳಭಾಗದಲ್ಲಿ ಚೌಕಾಕಾರದ ರಚನೆ ಮಧ್ಯಭಾಗದಲ್ಲಿ ಅಷ್ಟಾಕೃತಿ, ಮೇಲ್ಭಾಗದಲ್ಲಿ ತಟ್ಟೆಯಾಕಾರದ ಮುಚ್ಚಳ ಹಾಗೂ ಅದರ ಮೇಲೆ ಚೌಕಾಕಾರದ ಫಲಕವನ್ನು ಜೋಡಿಸಲಾಗಿದೆ. ಕಂಬ ಹಾಗೂ ಮೇಲ್ಛಾವಣಿಯ ಮಧ್ಯಭಾಗದಲ್ಲಿ ಬೋಧಿಗೆಗಳ ರಚನೆಯಿದೆ. ಸಭಾಮಂಟಪದಲ್ಲಿ ಎತ್ತರದ ಕಟ್ಟೆಯ ಮೇಲೆ ಗರ್ಭಗೃಹದ ಲಿಂಗಕ್ಕೆ ಎದುರಾಗಿ ನಂದಿ ಶಿಲ್ಪವನ್ನು ಇಡಲಾಗಿದೆ.

ಸಭಾಮಂಟಪದಲ್ಲಿರುವ ದೇವಕೋಷ್ಠ ಅಥವಾ ಗೂಡುಗಳಲ್ಲಿ ಗಣೇಶ ಹಾಗೂ ಸೂರ್ಯನ ಶಿಲ್ಪಗಳನ್ನು ಇಡಲಾಗಿದೆ. ಈ ಗೂಡುಗಳು ಅಲಂಕರಣೆಯಿಂದ ಕೂಡಿದ್ದು, ಇಕ್ಕೆಲುಗಳಲ್ಲಿ ಅರ್ಧಕಂಬ ಹಾಗೂ ಮೇಲ್ಭಾಗದಲ್ಲಿ ಉತ್ತರ ಮಾದರಿಯ ಶಿಖರ ರಚನೆಗಳಿಂದ ಆಕರ್ಷಕವಾಗಿವೆ. ಸಭಾಮಂಟಪದ ಒಳಗೋಡೆಯು ಹಂಸ ಹಾಗೂ ಪುಷ್ಪಗಳ ಉಬ್ಬುಶಿಲ್ಪ ಕೆತ್ತನೆಯನ್ನು ಹೊಂದಿವೆ. ಸಭಾಮಂಟಪದಲ್ಲಿ ಕುಳಿತುಕೊಳ್ಳಲು ಕಕ್ಷಾಸನ ಅಥವಾ ಕಟ್ಟೆಯಿದೆ.

ಈ ದೇವಾಲಯ ಮುಖಮಂಟಪ ಹೊಂದಿದು, ಇಲ್ಲಿಯೂ ಸಹ ಕಕ್ಷಾಸನ ವ್ಯವಸ್ಥೆ ಇದೆ. ಸಭಾಮಂಟಪದ ಕಂಬಗಳು ಮುಖಮಂಟಪಕ್ಕೂ ವಿಸ್ತರಿಸಿವೆ. ಮೆಟ್ಟಿಲುಗಳ ಮೂಲಕ ದೇವಾಲಯವನ್ನು ಪ್ರವೇಶಿಸಬೇಕಾಗುತ್ತದೆ. ಪ್ರವೇಶದ ಇಕ್ಕೆಲಗಳಲ್ಲಿ ಆನೆಯ ಶಿಲ್ಪಗಳಿವೆ. ಮುಖಮಂಟಪದ ಕಕ್ಷಾಸನದ ಹೊರಗೋಡೆಯಲ್ಲಿ ಪುಷ್ಪ ಹಾಗೂ ಆನೆಯ ಉಬ್ಬುಶಿಲ್ಪಗಳ ಕೆತ್ತನೆಯಿದೆ. ಸಭಾಮಂಟಪ ಹಾಗೂ ಮುಖಮಂಟಪವು ಮುಂಚಾಚಿದ ಮಂಜೂರಿನ ಭಾಗವನ್ನು ಹೊಂದಿದೆ. ಸರಳ ಅಧಿಷ್ಠಾನ ರಚನೆಯುಳ್ಳ ಈ ದೇವಾಲಯ ಉಪಾನ, ಜಗತಿ, ತ್ರಿಪಟ್ಟ ಕುಮುದ ಭಾಗಗಳನ್ನು ಒಳಗೊಂಡಿದೆ. ದೇವಾಲಯಕ್ಕೆ ಶಿಖರವಿದೆ. ಆದರೆ ಇದನ್ನು ಇತ್ತೀಚೆಗೆ ನಿರ್ಮಿಸಿದ್ದಾರೆ.

ರಾಚಮಲ್ಲೇಶ್ವರ ದೇವಾಲಯ

ಉಗ್ರಶಿವಭಕ್ತರಾದ ಕುರುಗೋಡು ಸಿಂದರಸರು ಅನೇಕ ಪವಾಡಗಳನ್ನು ಮೆರೆದಿದ್ದಾರೆ. ತಮ್ಮನ್ನು ಶಿವಭಕ್ತರೆಂದು ಸಾಬೀತುಪಡಿಸಿಕೊಳ್ಳಲು ತಾವೇ ಅನೇಕ ಪ್ರಯೋಗ ಪರೀಕ್ಷೆಗೆ ಒಳಗಾಗಿದ್ದಾರೆ. ಇಂಥ ಮಾಹಿತಿ ನೀಡುವ ಕಾವ್ಯ ಹಾಗೂ ಶಾಸನಗಳು ಪ್ರಕಟಗೊಂಡಿವೆ. ಪವಾಡವನ್ನು ಮೆರೆದು ಶಿವನನ್ನು ಸಾಕ್ಷತ್ಕರಿಸಿಕೊಂಡ ಒಂದನೆಯ ರಾಚಮಲ್ಲನ ಬಗೆಗೆ ವಿವರನೆ ನೀಡುವ ಶಾಸನ ಕುರುಗೋಡು ಪಟ್ಟಣದಲ್ಲಿದೆ. ಕ್ರಿ.ಶ. ೧೧೭೩ರ ಕಾಲದ ಶಾಸನವು ಉಲ್ಲೇಖಿಸುವಂತೆ ರಾಚಮಲ್ಲನ ಶಿವಭಕ್ತಿಗೆ ಮೆಚ್ಚಿ ಶಿವಪಾರ್ವತಿಯೊಡನೆ ದರ್ಶನವಿತ್ತು ಅವನನ್ನು ಕೈಲಾಸಕ್ಕೆ ಕರೆದುಕೊಂಡು ಹೋಗುತ್ತಾನೆ. ನಂತರ ರಾಚಮಲ್ಲ ಸ್ವಯಂಭುದೇವರ ಪಶ್ಚಿಮಭಾಗದಲ್ಲಿ ಲಿಂಗಮೂರ್ತಿಯಾಗಿ ಮರುಹುಟ್ಟು ಪಡೆಯುತ್ತಾನೆ.[3] ಇಲ್ಲಿರುವ ಲಿಂಗವನ್ನೇ ಜನರು ವಾಡಿಕೆಯಂತೆ ರಾಚಮಲ್ಲೇಶ್ವರನೆಂದು ಕರೆದಿದ್ದಾರೆ. ಭೈರವೇಶ್ವರ ಕಾವ್ಯದ ಉಲ್ಲೇಖದಂತೆ ಗಂಡಗತ್ತರೆಂದು ನಾಚಯ್ಯ, ರಾಚಮಲ್ಲಯ್ಯ, ಚಿಕ್ಕರಾಚಮಲ್ಲಯ್ಯ ಕೂಡಿ ಗಂಡಗತ್ತರಿ (ಭಿಕ್ಷೆ) ಕಾಯಕಕ್ಕೆ ಹೋಗುವಾಗ ವೈಷ್ಣವನು ಶಿವನಿಂದೆ ಮಾಡಿದಾಗ ನಾಚಯ್ಯಗಳು ಆತನನ್ನು ಸಂಹಾರ ಮಾಡಲು ಹೊರಟಾಗ ವೈಷ್ಣವ ಪಡೆ ಬಂದು ಇವರೊಂದಿಗೆ ವಾಗ್ವಾದಕ್ಕಿಳಿಯುತ್ತದೆ. ಗಂಡಗತ್ತರಿಯ ನಾಚಯ್ಯ ಮತ್ತು ರಾಚಮಲ್ಲಯ್ಯ ಶಿರವ ಕತ್ತರಿಸಿಕೊಂಡು ಪವಾಡ ಮೆರೆಯುತ್ತಾರೆ. ಚಿಕ್ಕ ರಾಚಮಲ್ಲಯ್ಯ ನರ್ತನ ಮಾಡುತ್ತಾನೆ. ಕಡೆಗೆ ಶಿವ-ಪಾರ್ವತಿಯರು ಪ್ರತ್ಯಕ್ಷರಾಗಿ ಇವರನ್ನು ಕೈಲಾಸಕ್ಕೆ ಕರೆದೊಯ್ದುದನ್ನು ಕಾವ್ಯವು ಉಲ್ಲೇಖಿಸುತ್ತದೆ.[4] ಬಹುಶಃ ಈ ಘಟನೆ ನಡೆದ ಸ್ಥಳದಲ್ಲಿ ಎರಡನೆಯ ರಾಚಮಲ್ಲನ (ಕ್ರಿ.ಶ. ೧೧೭೭ರ ನಂತರ) ಕಾಲದಲ್ಲಿ ದೇವಾಲಯ ಕಟ್ಟಿಸಿರುವ ಸಾಧ್ಯತೆ ಇದೆ. ಶಾಸನ ಹಾಗೂ ಕಾವ್ಯಗಳ ಮಾಹಿತಿಯನ್ನು ಆಧರಿಸಿ ವಿದ್ವಾಂಸರು ಕುರುಗೋಡು-ಕುಡುತಿನಿಯ ರಸ್ತೆಯಲ್ಲಿರುವ ಅನಾಮಧೇನು ಮೂರು ದೇವಾಲಯಗಳಲ್ಲಿ ವಿಸ್ತಾರವಾದ ದೊಡ್ಡ ದೇವಾಲಯವನ್ನು ರಾಚಮಲ್ಲೇಶ್ವರ ದೇವಾಲಯವೆಂದು ಗುರುತಿಸುವ ಪ್ರಯತ್ನ ಮಾಡಿದ್ದಾರೆ. ರಾಚಮಲ್ಲನ ದೇವಾಲಯವನ್ನು ಡಾ.ಎಸ್.ರಾಜಶೇಖರ ಅವರು ಕುರುಗೋಡು ಶಾಸನದಲ್ಲಿ ಉಲ್ಲೇಖಿತವಾಗಿರುವ ತ್ರಿಕೂಟ ದೇವಾಲಯ ಆಗಿದ್ದಿರಬಹುದೆಂದು ಅಭಿಪ್ರಾಯಿಸಿದ್ದರು. ಆದರೆ ತ್ರಿಕೂಟ ದೇವಾಲಯದ ಬಗೆಗಿರುವ ಮಾಹಿತಿಗಳು ಸ್ಪಷ್ಟವಾಗಿ ದೊರಕದ್ದರಿಂದ ವಿದ್ವಾಂಸರ ಮೇಲಿನ ಅಭಿಪ್ರಾಯವನ್ನು ಬಿಡುವುದು ಸೂಕ್ತವೆನಿಸುತ್ತದೆ.

ರಾಚಮಲ್ಲನ ದೇವಾಲಯವು ಗರ್ಭಗೃಹ ಅಂತರಾಳ ತೆರದ ನವರಂಗ ಅಥವಾ ಸಭಾಮಂಟಪ ಹಾಗೂ ಮುಖಮಂಪಟವನ್ನು ಒಳಗೊಂಡಿದೆ. ಗರ್ಭಗೃಹದಲ್ಲಿ ಲಿಂಗವಿದ್ದು, ಬಹುಶಃ ಇದನ್ನೇ ಉದ್ಭವಲಿಂಗವೆಂದು ಜನರು ಪರಿಭಾವಿಸಿದ್ದಾರೆ. ಕ್ಷೇತ್ರಕಾರ್ಯ ವಧಿಯಲ್ಲಿ ಇದನ್ನು ಗಮನಿಸಿದಾಗ ಉದ್ಭವಲಿಂಗಮೂರ್ತಿಯ ಸ್ಪಷ್ಟವಾದ ಯಾವ ಕುರುಹುಗಳು ಕಾಣುವುದಿಲ್ಲ. ಇಲ್ಲಿರುವ ಲಿಂಗವು ಕಲ್ಯಾಣ ಚಾಲುಕ್ಯರ ಕಾಲಾವಧಿಯ ರಚನೆಯಾಗಿದೆಯೆಂದು ಅಭಿಪ್ರಾಯಿಸಬಹುದು. ಗೌರವದ್ಯೋತಕವಾಗಿ ಇಂಥ ಅನೇಕ ಕಥೆಗಳು ಎಲ್ಲ ಪ್ರದೇಶಗಳಲ್ಲಿ ಪ್ರಚಲಿತದಲ್ಲಿವೆ. ಲಲಾಟಬಿಂದುವಿದಲ್ಲಿ ಗಜಲಕ್ಷ್ಮೀ ಉಬ್ಬುಶಿಲ್ಪವಿದೆ. ಮೇಲ್ಭಾಗದಲ್ಲಿ ಉತ್ತರ ಮಾದರಿಯ ಶಿಖರ ಪಟ್ಟಿಕೆ ಕೆತ್ತಲಾಗಿದೆ. ಉಬ್ಬುಶಿಲ್ಪವಿದೆ. ಮೇಲ್ಭಾಗದಲ್ಲಿ ಉತ್ತರ ಮಾದರಿಯ ಶಿಖರ ಪಟ್ಟಿಕೆ ಕೆತ್ತಲಾಗಿದೆ. ಗರ್ಭಗೃಹ ಬಾಗಿವಾಡದಲ್ಲಿ ಉತ್ತರ ಮಾದರಿಯ ಶಿಖರ ಪಟ್ಟಿಕೆ ಕೆತ್ತಲಾಗಿದೆ. ಗರ್ಭಗೃಹ ಬಾಗಿಲವಾಡದಲ್ಲಿ ಹೂಬಳ್ಳಿ, ಪುಷ್ಪಸಾಲು ಹಾಗೂ ಅರ್ಧಗಂಬಗಳ ಕಂಡರಣೆಯಿದ್ದು ಇಕ್ಕೆಲಗಳಲ್ಲಿ ದ್ವಾರಪಾಲಕ ಶಿಲ್ಪಗಳಿವೆ. ಅಂತರಾಳದ ಬಾಗಿಲವಾಡಿನ ಲಲಾಟದ ಮೇಲ್ಭಾಗದಲ್ಲಿ ಕೆತ್ತಲಾದ ಔತ್ತರೇಯ ಮಾದರಿಯ ಶಿಖರ ಪಟ್ಟಿಕೆಗಳ ಮಧ್ಯೆ ಸಿಂಹಗಳ ಉಬ್ಬುಶಿಲ್ಪಗಳನ್ನು ರಚಿಸಿದ್ದಾರೆ ಹಾಗೂ ಇಕ್ಕೆಲಗಳಲ್ಲಿ ಜಾಲಂಧರವನ್ನು ಅಳವಡಿಸಿದ್ದು, ದ್ವಾರಪಾಲಕ ಶಿಲ್ಪಗಳ ಬದಲಾಗಿ ಚಾಮರದಾಣೀಯರ ಶಿಲ್ಪಗಳನ್ನು ಇಡಲಾಗಿದೆ. ನವರಂಗ ಅಥವಾ ಸಭಾಮಂಟಪವು ವಿಶಾಲವಾಗಿದೆ. ಇದಕ್ಕೆ ಉತ್ತರದಲ್ಲಿ ಪ್ರವೇಶದ್ವಾರವಿದೆ. ಕಂಬಗಳು ಚೌಕಾಕಾರವಾಗಿದ್ದು ಅವುಗಳು ಫಲಕ, ಮುಚ್ಚಳಾಕೃತಿ ಹಾಗೂ ಬೋಧಿಗೆಗಳನ್ನು ಹೊಂದಿವೆ. ಈ ಸಭಾಮಂಟಪವು ಕಕ್ಷಾಸನ ವ್ಯವಸ್ಥೆ ಹೊಂದಿದೆ. ಕಕ್ಷಾಸನದಲ್ಲಿ ಕಂಬಗಳನ್ನು ಅಳವಡಿಸಲಾಗಿದೆ. ಸಭಾಮಂಟಪಕ್ಕೆ ಮಂಜೂರವಿದ್ದು, ದೇವಾಲಯದ ಹೊರಗೋಡೆಗಳು ನಿರಾಲಂಕರಣೆಯಿಂದ ಕೂಡಿವೆ. ಕದಂಬನಾಗರ ಮಾದರಿಯ ಶಿಖರವಿದೆ. ಸ್ಮಾರಕದ ಅಧಿಷ್ಠಾನ ಭಾಗವು ಮಣ್ಣಲ್ಲಿ ಹೂತುಹೋಗಿದೆ.

ರಾಚಮಲ್ಲೇಶ್ವರ ದೇವಾಲಯದ ದಕ್ಷಿಣಭಾಗದಲ್ಲಿ ಎರಡು ಗುಡಿಗಳಿವೆ. ಅವುಗಳ ಗರ್ಭಗೃಹದ ಭಾಗ ಮಾತ್ರ ಉಳಿದಿದ್ದು ಉಳಿದಂತೆ ಎಲ್ಲವೂ ನಾಶವಾಗಿದೆ. ರಾಮ ದೇವಯ್ಯಗುಡಿ ಹಾಗೂ ಆಚಾರದ ಭೀಮಯ್ಯನ ಗುಡಿಯೆಂದು ಕರೆಯಲ್ಪಡುವ ಈ ದೇವಾಲಯಗಳ ಬಗೆಗೆ ಯಾವ ಸ್ಪಷ್ಟವಾದ ಮಾಹಿತಿಗಳಿಲ್ಲ. ಕದಂಬನಗರ ಶಿಖರ ಶೈಲಿಯ ರಚನೆಯ ಗರ್ಭಗೃಹವು ಬಾಗಿಲವಾಡದಲ್ಲಿ ಹೂಬಳ್ಳಿ, ಪುಷ್ಪಸಾಲು ಹಾಗೂ ಅರ್ಧಗಂಬಗಳ ಕೆತ್ತನೆಯ ಹೊಂದಿದೆ. ಗರ್ಭಗೃಹದ ಹೊರಗೋಡೆಯು ನಿರಾಲಂಕರಣೆಯಿಂದ ಕೂಡಿದೆ. ರಾಚಮಲ್ಲೇಶ್ವರ ಗುಡಿಯ ಅಧಿಷ್ಠಾನ ಭಾಗವು ಮಣ್ಣಿನಲ್ಲಿ ಹೂತುಹೋಗಿದ್ದರೆ, ಇವುಗಳ ಅಧಿಷ್ಠಾನ ಭಾಗದಲ್ಲಿನ ಉಪಾನ, ಆಳವಾದ ಗಳ ಹಾಗೂ ಕಪೋತಭಾಗವು ಸ್ಪಷ್ಟವಾಗಿ ಕಾಣುತ್ತವೆ. ಈ ಎರಡು ಗುಡಿಗಳ ಅಧಿಷ್ಠಾನ ಭಾಗದಲ್ಲಿನ ರಚನೆಗಳೇ ಬಹುಶಃ ರಾಚಮಲ್ಲನ ದೇವಾಲಯಗಳ ನಿರ್ಮಾಣದ ಕಾಲಾವಧಿ ಒಂದೇ ಆಗಿದೆ. ಇವುಗಳ ರಚನೆಯಲ್ಲಿ ಬಳಸಿದ ವಿಧಾನಗಳು ೧೨ನೇ ಶತಮಾನಕ್ಕೆ ಸರಿಹೋಗುತ್ತವೆ.

ಬಜಾರ ಬಸಪ್ಪನ ಗುಡಿ (ತ್ರಿಕೂಟಾಲಯ)

ತ್ರಿಕೂಟ ದೇವಾಲಯ ರಚನೆ ಮೋಟ್ಟಮೊದಲಿಗೆ (ಜಂಭುಲಿಂಗ-ಬಾದಾಮಿ) ಬಾದಾಮಿ ಚಾಲುಕ್ಯರ ಕಾಲಾವಧಿಯಲ್ಲಿ ಪ್ರಾರಂಭವಾಯಿತು. ಕಾಲಕ್ರಮೇಣ ಇಂಥ ಮಾದರಿಯ ದೇವಾಲಯಗಳು ರಾಷ್ಟ್ರಕೂಟ ಹಾಗೂ ಕಲ್ಯಾಣದ ಚಾಲುಕ್ಯರ ಕಾಲದಲ್ಲಿಯೂ ಸಹ ರಚಿಸಲ್ಪಟ್ಟವು. ಕುರುಗೋಡು ಪಟ್ಟಣದಲ್ಲಿ ತ್ರಿಕೂಟ ದೇವಾಲಯ ರಚನೆಯಾಗಿರುವ ಉಲ್ಲೇಖವಿದೆ. ಆದರೆ ಖಚಿತವಾಗಿ ಗುರುತಿಸುವುದು ಕಷ್ಟಸಾಧ್ಯವಾಗಿದೆ. ನಾಶದ ಅಂಚಿನಲ್ಲಿರುವ ಬಜಾರ ಬಸಪ್ಪನ ದೇವಾಲಯವೇ ಶಾಸನ ಉಲ್ಲೇಖಿತ ತ್ರಿಕೂಟವಾಗಿದೆ. ಎಂಬುದು ಕೆಲವು ವಿದ್ವಾಂಸರ ಅಭಿಪ್ರಾಯ.[5]

ತ್ರಿಕೂಟ ದೇವಾಲಯದ ಉಲ್ಲೇಖಿವಿರುವ ಕ್ರಿ.ಶ. ೧೧೭೭ರ ಕಾಲಾವಧಿಯ ಶಾಸನವನ್ನು ದೊಡ್ಡ ಬಸವೇಶ್ವರ ದೇವಾಲಯದ ಆವರಣದಲ್ಲಿ ಇಟ್ಟಿದ್ದಾರೆ. ಕಲಚುರಿ ಅರಸ ಸಂಕಮದೇವ (ಸಂಖವರ್ಮ)ನ ಮಹಾಮಂಡಳೇಶ್ವರ ಸಿಂದವಂಶದ ಎರಡನೆಯ ರಾಚಮಲ್ಲನ ಕಾಲದಲ್ಲಿ ಈ ಸ್ಮಾರಕ ರಚನೆಯಾಗಿದೆ. ಕುರುಗೋಡು ಪಟ್ಟಣದ ಮುಮ್ಮರಿದಂಡುಗಳು (ವೀರಬಣಜಿಗರು) ತ್ರಿಕೂಟ ದೇವಾಲಯವನ್ನು ನಿರ್ಮಿಸಿ ಗೌರೇಶ್ವರನನ್ನು ಪ್ರತಿಷ್ಠಾಪಿಸುತ್ತಾರೆ. ಹಾಗೂ ಮುಮ್ಮರಿದಂಡಗಳಲ್ಲಿ ಇಬ್ಬರಾದ ಮಲ್ಲಿಶೆಟ್ಟಿ ಹಾಗೂ ಮುದ್ದರಸನು ಕ್ರಮವಾಗಿ ಮಲ್ಲಿಕಾರ್ಜುನ ಹಾಗೂ ಮುದ್ದೇಶ್ವರ ದೇವರನ್ನು ಇದೇ ದೇವಾಲಯದಲ್ಲಿ ಪ್ರತಿಷ್ಠಾಪಿಸುತ್ತಾರೆ. ಅಲ್ಲದೇ ತಮ್ಮ ವ್ಯಾಪಾರದಿಂದ ಬರುವ ಸುಂಕಲಾಭ ಹಾಗೂ ಭೂಮಿಯನ್ನು ದೇವಾಲಯದ ನಿರ್ವಹಣೆಗೆ ನೀಡುತ್ತಾರೆ.[6] ದಾನ ವಿವರಗಳ ಉಲ್ಲೇಖವಿರುವ ಈ ಶಾಸನವನ್ನು ಪರಿಗಣಿಸಿ ಶ್ರಿಯುತ ವೈ.ಹನುಮಂತ ರೆಡ್ಡಿಯವರು ಇಂದಿನ ಬಜಾರಬಸಪ್ಪನಗುಡಿಯು ಅಂದಿನ ತ್ರಿಕೂಟ ದೇವಾಲಯವಾಗಿತ್ತೆಂದು ಗುರುತಿಸುವ ಪ್ರಯತ್ನಮಾಡಿದ್ದರೆ. ದೇವಾಲಯದಲ್ಲಿರುವ ಪೀಠಗಳನ್ನು ಪರಿಗಣಿಸಿ ಇಲ್ಲಿ ತ್ರಿಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಹಾಗೂ ಈ ಕಾರಣಗಳಿಂದಲೇ ಇದನ್ನು ತ್ರಿಕೂಟಾಲಯವೆಂದು ಕರೆಯಲಾಗಿದೆ ಎಂದು ಹೇಳುತ್ತಾರೆ. ಅವರು ನೀಡುವ ಸಮರ್ಥನೆಗಳೆಂದರೆ, ನವರಂಗಕ್ಕೆ ಹೊಂದಿಕೊಂಡು ಮೂರು ಗರ್ಭಗೃಹಗಳಿದ್ದು, ಅವುಗಳಲ್ಲಿ ಮೂರು ದೇವರು (ತ್ರಿಮೂರ್ತಿಗಳು) ಇರುವುದಕ್ಕೆ ತ್ರಿಕೂಟವೆಂದು ಕರೆಯುವರು. ಆದರೆ ಇಲ್ಲಿ ನವರಂಗಕ್ಕೆ ಹೊಂದಿಕೊಂಡು ಕೇವಲ ಎರಡು ಗರ್ಭಗೃಹಗಳು ಮಾತ್ರ ಉಳಿದಿದ್ದು, ಮೂರನೇಯದು ಸಂಪೂರ್ಣ ಹಾಳಾಗಿದೆ. ನವರಂಗಕ್ಕೆ ಹೊಂದಿಕೊಂಡು ಪೂರ್ವಾಭಿ ಮುಖವಾಗಿ ಸುಕನಾಸಿ ಮತ್ತು ಗರ್ಭಗೃಹವಿದ್ದು, ಅದರಲ್ಲಿ ಪಾಣಿಪೀಠದ ಮೇಲೆ ಶಿವಲಿಂಗವಿದ್ದು, ಅದರ ಜಲಧಾರೆ ಮಾಮೂಲಿನಂತೆ ಅದರ ಎಡಭಾಗದಲ್ಲಿದೆ. ಆದರೆ ಅದರ ಪಕ್ಕದಲ್ಲಿ ಉತ್ತರಕ್ಕೆ ಮುಖಮಾಡಿ ಇರುವ ಸುಕನಾಸಿ ಮತ್ತು ಗರ್ಭಗೃಹದಲ್ಲಿರುವ ಲಿಂಗದ ಜಲಧಾರೆ ಅದರ ಬಲಭಾಗಕ್ಕಿದೆ. ಪೂರ್ವಾಭಿಮುಖವಾಗಿರುವ ಲಿಂಗವು ಶಿವನ ಪ್ರಾತಿನಿಧಿಕವಾಗಿಯೂ, ಉತ್ತರಾಭಿಮುಖವಾಗಿರುವ ಲಿಂಗವು ಬ್ರಹ್ಮನ ಪ್ರಾತಿನಿಧಿಕವಾಗಿರುವುದರಿಂದ, ಇವುಗಳ ಜಲಧಾರೆಯ ದಿಕ್ಕಿನಲ್ಲಿ ವ್ಯತ್ಯಾಸವಿದೆ. ಇದೇ ತರಹ ಇದರ ಎಡಭಾಗದಲ್ಲಿದ್ದ ಸುಕನಾಸಿ ಮತ್ತು ಗರ್ಭಗೃಹ ಹಾಳಾಗಿದ್ದು, ಅದು ವಿಷ್ಣುವಿನ ಪ್ರಾತಿನಿಧಿಕವಾಗಿರಬೇಕು. ಆದ್ದರಿಂದ ಮೇಲಿನ ಶಾಸನದಲ್ಲಿ ತಿಳಿಸಿರುವ ತ್ರಿಕೂಟ ದೇವಸ್ಥಾನ ಇದೇ ಆಗಿರಬೇಕು.[7] ಆದರೆ ಸದ್ಯದ ಮಟ್ಟಿಗೆ ಇದೊಂದು ತ್ರಿಕೂಟಾಲಯವೆಂದು ಪರಿಗಣಿಸಿದರೂ ಇದನ್ನು ತ್ರಿಮೂರ್ತಿಗಳಿಂದಾಗಿಯೇ ತ್ರಿಕೂಟಾಲಯವೆಂದು ಕರೆಯಲಾಗುತ್ತದೆ ಎಂಬ ಅವರ ಅಭಿಪ್ರಾಯ ಸರಿಯಾದುದಲ್ಲ. ಕಾರಣ ಶಾಸನದಲ್ಲಿ ಗೌರೇಶ್ವರ, ಮಲ್ಲಿಕಾರ್ಜುನ ಹಾಗೂ ಮುದ್ದೇಶ್ವರ ಎಂಬ ಸ್ಪಷ್ಟ ಉಲ್ಲೇಖಗಳಿವೆ. ಈ ಹೆಸರುಗಳು ಶಿವನಿಗೆ ಸಂಬಂಧಪಟ್ಟ ನಾನಾ ಹೆಸರುಗಳು ಹೊರತು ತ್ರಿಮೂರ್ತಿ ದೇವತೆಗಳಿಲ್ಲ. ಇದೇ ದೇವಾಲಯಗಳನ್ನು ತ್ರೈಪುರುಷ ದೇವಾಲಯಕ್ಕೂ ಹೋಲಿಸಿರುವುದರಿಂದ ಸಹ ಸೂಕ್ತವಾದುದಲ್ಲ.[8] ಸಾಮಾನ್ಯವಾಗಿ ತ್ರೈಪುರುಷ ರಚನೆಯಲ್ಲಿ ಆದಿತ್ಯ ಅಥವಾ ಸೂರ್ಯನನ್ನು ಪ್ರತಿಷ್ಠಾಪಿಸಿರುತ್ತಾರೆ. ಅಥವಾ ಬೇರೆ ಬೇರೆ ಹೆಸರಿನ ಮೂರು ದೇವತೆಗಳನ್ನು ಮೂರ ಗರ್ಭಗೃಹದಲ್ಲಿ ಸ್ಥಾಪಿಸಿರುತ್ತಾರೆ. ಅದಕ್ಕೆ ಪುಷ್ಠಿಕೊಡುವ ಯಾವ ಅವಶೇಷಗಳು ಸಿಕ್ಕಿಲ್ಲ. ಹಾಗೂ ಶಾಸನದಲ್ಲಿಯೂ ಶಿವನಿಗೆ ಸಂಬಂಧಪಟ್ಟ ಬೇರೆ ಬೇರೆ ಹೆಸರುಗಳನ್ನು ಮಾತ್ರ ಉಲ್ಲೇಖಿಸಲಾಗಿದೆ. ಆದ್ದರಿಂದ ಈ ದೇವಾಲಯವನ್ನು ತ್ರಿಕೂಟಾಲಯ ಮಾತ್ರವೆಂದು ಪರಿಗಣಿಸಿ ಉಳಿದ ಅಭಿಪ್ರಾಯಗಳನ್ನು ಬಿಡುವುದು ಸೂಕ್ತ.

ಬಜಾರ ಬಸಪ್ಪ (ತ್ರಿಕೂಟಾಲಯ)ದೇವಾಲಯದ ತಲವಿನ್ಯಾಸ

ಬಜಾರ ಬಸಪ್ಪ (ತ್ರಿಕೂಟಾಲಯ)ದೇವಾಲಯದ ತಲವಿನ್ಯಾಸ

ಗುರುತಿಸಲಾದ ತ್ರಿಕೂಟ ದೇವಾಲಯದ ಎರಡು ಗರ್ಭಗೃಹಗಳು ಮಾತ್ರವಿದ್ದು ಉಳಿದಂತೆ ದೇವಾಲಯದ ಸಭಾಮಂಟಪ ಸಂಪೂರ್ಣವಾಗಿ ಹಾಳಾಗಿದೆ. ಗರ್ಭಗೃಹದ ಬಾಗಿಲವಾಡದಲ್ಲಿ ಹೂಬಳ್ಳಿ, ಪುಷ್ಪಸಾಲು ಹಾಗೂ ಪಟ್ಟಿಕೆಗಳನ್ನು ರಚಿಸಲಾಗಿದೆ. ಲಲಾಟ ಬಿಂಬದಲ್ಲಿ ಗಜಲಕ್ಷ್ಮೀ ಉಬ್ಬು ಶಿಲ್ಪವಿದೆ. ಮೇಲ್ಭಾಗದಲ್ಲಿ ಔತ್ತರೇಯ ಮಾದರಿಯ ಶಿಖರಗಳನ್ನು ರಚಿಸಿದ್ದಾರೆ. ತ್ರಿಶೂಲ, ಡಮರು ಹಾಗೂ ಗದೆ ಹಿಡಿದು ನಿಂತಿರುವ ದ್ವಾರಪಾಲಕರ ವಿಗ್ರಹಗಳಿವೆ. ಒಂದು ಗರ್ಭಗೃಹವು ಶಿಖರವನ್ನು (ಕದಂಬ-ನಾಗರ) ಹೊಂದಿದೆ. ಹೊರಗೋಡೆಯಲ್ಲಿ ಅರ್ಧಕಂಬ, ಅರ್ಧ ಕೋಷ್ಠಕಗಳನ್ನು ಕೆತ್ತಲಾಗಿದೆ. ಶಿಖರಕ್ಕೆ ಸ್ಥೂಪಿ ಭಾಗವಿಲ್ಲ. ಬಿದ್ದಿರುವ ದೇವಾಲಯಗಳ ಅವಶೇಷಗಳು ಮಣ್ಣಿನಲ್ಲಿ ಹೊತುಹೋಗಿವೆ. ಉತ್ಖನನ ಮಾಡಿದರೆ ಹೊಸ ಮಾಹಿತಿಗಳು ಸಿಗುವ ಸಂಭವವಿದೆ.

ಉಜಾಳೇಶ್ವರ ದೇವಾಲಯ

ಕುರುಗೋಡು ಪಟ್ಟಣದ ಈಗೀನ ಉಜಾಳಪೇಟೆಯ ಸರಹದ್ದಿನಲ್ಲಿರುವ ಈ ಸ್ಮಾರಕ ಉಜಾಳೇಶ್ವರ ದೇವಾಲಯವೆಂದೇ ಪ್ರಸಿದ್ಧವಾಗಿದೆ. ದೇವಾಲಯದ ಬಗೆಗೆ ಮಾಹಿತಿ ನೀಡುವ ಸ್ಪಷ್ಟವಾದ ಯಾವ ಕುರುಹುಗಳು ಇರಲಿಲ್ಲ. ಆದರೆ ಒಂದು ದಶಕದ ಹಿಂದೆ ಗ್ರಾಮದ ಅಗಸೆಯ ಪಕ್ಕದ ಗುಂಡಿಯಲ್ಲಿ ಸಿಕ್ಕಿರುವ ಶಾಸನವೊಂದು ಉಜಾಳೇಶ್ವರ ದೇವಾಲಯದ ಬಗೆಗಿರುವ ಹಿಂದಿನ ವಿವರಗಳನ್ನು ಪುನರ್ ಅವಲೋಕಿಸುವಂತೆ ಮಾಡಿದೆ. ಕ್ರಿ.ಶ. ೧೫೧೨ರ ತೇದಿಯ ಈ ಶಾಸನವನ್ನು ಸದ್ಯ ಕುರುಗೋಡು ಪಟ್ಟಣದ ದೊಡ್ಡ ಬಸವೇಶ್ವರ ದೇವಾಲಯದ ಮುಂಭಾಗದಲ್ಲಿ (ಸೋಮವಾರದ ಬಾಗಿಲು) ನಿಲ್ಲಿಸಲಾಗಿದೆ.[9] ಈ ಶಾಸನ ವಿವರವನ್ನು ಚರ್ಚಿಸುವುದಕ್ಕಿಂದ ಮುಂಚೆ ಈ ದೇವಾಲಯದ ಬಗೆಗಿರುವ ಹಲವು ಮಾಹಿತಿಗಳನ್ನು ಗಮನಿಸುವುದು ಸೂಕ್ತವಾಗಿದೆ.

ಸಿಂದ ಅರಸ ಇರುಂಗೋಳ (ಒಂದನೆಯ ರಾಚಮಲ್ಲನ ಮಗ – ಕ್ರಿ.ಶ. ೧೧೭೩-೯೫)ನ ಕಾಲಾವಾಧಿಯಲ್ಲಿ ಈ ಉಜಾಳೇಶ್ವರ ದೇವಾಲಯ ನಿರ್ಮಾಣವಾಗಿದೆ ಎಂದು ಕೆಲವರು ಅಭಿಪ್ರಾಯಿಸಿದ್ದಾರೆ.[10] ಅವರು ಕೊಡುವ ಸಮರ್ಥನೆಗಳಿಗೆ ಆಧಾರಗಳೆಂದರೆ, ಇದೇ ದೇವಾಲಯದ ಅಂತರಾಳದ (ಸುಖನಾಸಿ) ಬಾಗಿಲವಾಡದ ಇಕ್ಕೆಲಗಳಲ್ಲಿರುವ ಸ್ತ್ರೀ ಶಿಲ್ಪಗಳ ಪ್ರತಿಮಾ ಲಕ್ಷಣ ಗಮನಿಸಿದಾಗ ಇವು ಸಾಮಾನ್ಯ ಸ್ತ್ರೀಯರನ್ನು ಅಂದರೆ ಚಾಮರ ಧಾರಣಿಯರನ್ನು ಪ್ರತಿನಿಧಿಸುವಂಥ ಲಕ್ಷಣವುಳ್ಳ ಶಿಲ್ಪಗಳಲ್ಲ. ಇವು ಅಧಿಕಾರಸ್ಥ ಕುಟುಂಬವರ್ಗಕ್ಕೆ ಸೇರಿದ ಪೋಷಾಕುಗಳಿಂದ ಅಲಂಕೃತವಾದ ಶಿಲ್ಪಗಳಾಗಿವೆ. ಬಲಭಾಗದ ಶಿಲ್ಪದ ಕೆಳಭಾಗದಲ್ಲಿ ಲೋಕಾಹುರ ‘ಜೊಲದೇವಿ’ ಎಂದು, ಎಡಭಾಗದಲ್ಲಿರುವ ಶಿಲ್ಪದ ಕೆಳಭಾಗದಲ್ಲಿ ಲೋಕಾಹುರದ ‘ದೇಚಲದೇವಿ’ ಎಂದು ಕೆತ್ತಲಾಗಿದೆ.[11] ಇವರನ್ನು ಸಿಂದವಂಶದ ದೊರೆಗಳಾದ ಒಂದನೆಯ ರಾಚಮಲ್ಲನ ಪತ್ನಿ ಸೋಮಲದೇವಿ ಹಾಗೂ ಆತನ ಸೊಸೆ ಏಚಲದೇವಿ (ಇರುಂಗೋಳನ ಹೆಂಡತಿ) ಎಂದು ಪರಿಭಾವಿಸಿಕೊಂಡು, ಇವರೇ ಉಜಾಳೇಶ್ವರ ದೇವಾಲಯದ ನಿರ್ಮಾಣಕ್ಕೆ ಕಾರಣಕರ್ತ ವ್ಯಕ್ತಿಗಳಾಗಿದ್ದಾರೆಂದು ಅಭಿಪ್ರಾಯ ಪಡುತ್ತಾರೆ. ಸಿಂದರ ರಾಣಿಯರಾದ ಇವರುಗಳು ಮಹಾಸಾಮ್ರಾಟನಾದ ಕಲಚುರಿ ಬಿಜ್ಜಳನ ಹೆಸರಿನಲ್ಲಿ ಈ ದೇವಾಲಯ ಕಟ್ಟಿಸಿದರು. ಬಿಜ್ಜಳನ ಹೆಸರಿನಲ್ಲಿ ನಿರ್ಮಾಣವಾದ ಈ ದೇವಾಲಯ ಹಾಗೂ ದೇವಾಲಯ ಪರಿಸರದ ವಸತಿ ಪ್ರದೇಶ ಕಾಲಾನಂತರ ‘ಬಿಜ್ಜಳ’ ಬದಲಾಗಿ ಉಜ್ಜಳ, ಉಜಾಳ ಎಂಬ ಪದ ರೂಪಾಂತರವು ದೇವಾಲಯ ಹಾಗೂ ವಸತಿ ಪ್ರದೇಶ (ಪೇಟೆ)ಎರಡಕ್ಕೂ ಸೇರಿಕೊಂಡವು ಎಂದು ವಿವರಿಸುತ್ತಾರೆ. ಹೀಗಾಗಿ ಪ್ರಾಚೀನ ಬಿಜ್ಜಳೇಶ್ವರ ದೇವಾಲಯ ಉಜಾಳೇಶ್ವರನಾಗಿಯೂ ‘ಬಿಜ್ಜಳಪೇಟೆ’ ಉಜಾಳಪೇಟೆಯಾಗಿ ಬದಲಾವಣೆ ಹೊಂದಿದವು.[12] ಆದರೆ ಇದೇ ದೇವಾಲಯದ ಸಂಬಂಧವಾಗಿ ರಚನೆಯಾದ ಕ್ರಿ.ಶ. ೧೫೧೨ರ ಶಾಸನವನ್ನು ಗಮನಿಸಿದಾಗ ಭಿನ್ನವಾದ ಮಾಹಿತಿಗಳು ದೊರಕುತ್ತವೆ. “ಕುರುಗೋಡು ಬಸವಣ್ಣ ನಾಯಕನ ಮಕ್ಕಳು ಹಾಗೂ ಮಲ್ಲಪ್ಪನಾಯಕರ ಧರ್ಮ ಪತ್ನಿಯಾದ ಮಲ್ಲಮ್ಮಳೂ ಕುರುಗೋಡು ಸೀಮಕ್ಕೆ ಈಶಾನ್ಯ ದಿಕ್ಕಿನ ಹೂಜೆಹಾಳ ಶಾಂತಮಲ್ಲಿಕಾರ್ಜುನ ದೇವರ ದೇವಾಲಯ ಬಾವಿನು ಜೀರ್ಣೋದ್ಧಾರ ಮಾಡಿದರು” ಎಂಬ ಸಂಗತಿ ತಿಳಿದುಬರುತ್ತದೆ.[13] ಈ ಶಾಸನದಲ್ಲಿಯೂ ಉಲ್ಲೇಖಿತ ಮಾಹಿತಿಯನ್ನು ಪರಿಗಣಿಸಿ ಇಂದಿನ ಉಜಾಳೇಶ್ವರ ದೇವಾಲಯವೇ ಪ್ರಾಚೀನ ‘ಹೂಜಿಹಾಳ’ ಗ್ರಾಮದಲ್ಲಿನ ಶಾಂತಮಲ್ಲಿಕಾರ್ಜುನ ದೇವಾಲಯವಾಗಿರುವುದು ಸ್ಪಷ್ಟವೆಂದು ಕೆಲವರು ಅಭಿಪ್ರಾಯಿಸಿದ್ದಾರೆ.[14] ಹಾಗಾದರೆ ಹಿಂದಿನ ‘ಹೂಜಿನಾಳ’ ಗ್ರಾಮ ಉಜಾಳಪೇಟೆಯಾಗಿ ಹಾಗೂ ಅಂದಿನ ಶಾಂತಮಲ್ಲಿಕಾರ್ಜುನ ಇಂದಿನ ಉಜಾಳೇಶ್ವರನಾಗಿ ರೂಪಾಂತರಗೊಂಡಿದೆಯೆಂದು ನಿರ್ಧರಿಸಬಹುದು. ಪ್ರಾಚೀನ ‘ಹೂಜಿಹಾಳ’ ಗ್ರಾಮ ಅನೇಕ ಕಾರಣಗಳಿಂದ ನಾಶವಾಗಿರಬಹುದು ಅಥವಾ ಸ್ಥಳಾಂತರಗೊಂಡಿರಬಹುದು. ಆದರೆ ಅಲ್ಲಿನ ದೇವಾಲಯ ಪ್ರಾಚೀನ ‘ಹೂಜಿಹಾಳ’ದ ನೆನಪಿಗಾಗಿ ‘ಉಜಾಳೇಶ್ವರ’ ಹೆಸರನ್ನು ಪಡೆದು ಹಾಗೆ ಉಳಿದುಕೊಂಡಿರಬಹುದು. (ಗ್ರಾಮೀಣರ ಬಾಯಲ್ಲಿ ‘ಹು’ಗಿಂತಲೂ ‘ಉ’ಹೆಚ್ಚು ಪ್ರಚಲಿತ.)ಅಥವಾ ಶಾಸನದಲ್ಲಿನ ಹೂಜಿಹಾಳ ಗ್ರಾಮ ಶಾಂತಮಲ್ಲಿಕಾರ್ಜುನ ದೇವಾಲಯ ಸಂಪೂರ್ಣ ನಾಶವಾಗಿರುವ ಸಾಧ್ಯತೆಗಳು ಇವೆ. ದೇವಾಲಯದ ಅಂತರಾಳದ ಬಾಗಿಲವಾಡದ ಇಕ್ಕೆಲಗಳಲ್ಲಿರುವ ಮೂರ್ತಿಶಿಲ್ಪಗಳನ್ನು ಸಿಂದವಂಶದ ರಾಣಿಯರಿಗೆ ಸಂಬಂಧಕಲ್ಪಿಸುವುದರ ಮೂಲಕ ಇಡೀ ದೇವಾಲಯದ ನಿರ್ಮಾಣ ಚರಿತ್ರೆಯನ್ನು ಕಟ್ಟುವುದು ಅಷ್ಟು ಸಮಂಜಸ ವಿಷಯವಾಗಲಾರದು. ಹಾಗೂ ದೇವಾಲಯಕ್ಕೆ ಸಂಬಂಧಿಸಿದ ಶಾಸನವು ಬೇರೆಯಾದ ಮಾಹಿತಿಗಳನ್ನೇ ನೀಡುತ್ತದೆ. ಅಂತರಾಳದ ಬಾಗಿಲವಾಡಿನ ಇಕ್ಕೆಲಗಳಲ್ಲಿರುವ ದ್ವಾರಶಿಲ್ಪಗಳ ಕೆಳಭಾಗದಲ್ಲಿ ಬರೆದಿರುವ ಲಿಪಿಯು ಹನ್ನೆರಡನೆಯ ಶತಮಾನದ್ದೆಂದು ಗುರುತಿಸಿದ್ದರೂ, ಲಿಪಿಯು ರಾಣಿಯರ ಹೆಸರಿನ ಸ್ಪಷ್ಟ ಉಲ್ಲೇಖವುಳ್ಳದ್ದೇ ಎಂದು ಹೇಳುವುದು ಕಷ್ಟಕರವಾದುದು. ಹೀಗಾಗಿ ಇಲ್ಲಿರುವ ದ್ವಾರಶಿಲ್ಪಗಳು ಚಾಮರಧಾರಣಿಯರ ಶಿಲ್ಪಗಳೆಂದು ಪರಿಗಣಿಸುವುದು ಸೂಕ್ತ.

ಉಜಾಳೇಶ್ವರ ದೇವಾಲಯದ ತಲವಿನ್ಯಾಸ

ಉಜಾಳೇಶ್ವರ ದೇವಾಲಯದ ತಲವಿನ್ಯಾಸ

ಈ ದೇವಾಲಯವು ಕ್ರಿ.ಶ. ೧೨ನೇ ಶತಮಾನದ ಕಾಲಾವಧಿಯಲ್ಲಿ ರಚನೆಯಾಗಿರುವ ಸಾಧ್ಯತೆಗಳಿವೆ. ಗರ್ಭಗೃಹ, ಅಂತರಾಳ, ನವರಂಗ ಹಾಗೂ ಮುಖಮಂಟಪಗಳನ್ನು ಹೊಂದಿರುವ ಉಜಾಳೇಶ್ವರ ದೇವಾಲಯ ಕದಂಬನಾಗರ ಅಥವಾ ಫಂಸಾನ ಮಾದರಿಯ ಶಿಖರವನ್ನು ಹೊಂದಿವೆ. ಸ್ಥಿತಿಯಲ್ಲಿರುವ ಈ ಸ್ಮಾರಕ ಕಲಾವೈಭವದ ದೃಷ್ಟಿಯಿಂದ ಹಿಂಡುಲಿ ಸಂಗಮೇಶ್ವರ ದೇವಾಲಯಕ್ಕೆ ಸರಿಸಮಾನವಾದುದು. ಗರ್ಭಗೃಹದ ಬಾಗಿಲವಾಡವು ಪುಷ್ಪ, ಹೂವಿನ ಎಸಳು ಹಾಗೂ ಅರ್ಧಕಂಬಗಳ ಕೆತ್ತನೆಯಿಂದ ಕೂಡಿದೆ. ಲಲಾಟಬಿಂಬದಲ್ಲಿ ಗಜಲಕ್ಷ್ಮಿಶಿಲ್ಪವಿದೆ. ಮೇಲ್ಭಾಗದಲ್ಲಿ ಉತ್ತರ ಮಾದರಿಯ ಶಿಖರ ಪಟ್ಟಿಕೆಗಳನ್ನು ಕೆತ್ತಲಾಗಿದೆ. ಬಾಗಿಲದ ಇಕ್ಕೆಲಗಳಲ್ಲಿ ಆಯುಧ ಸಮೇತರಿರುವ ದ್ವಾರಪಾಲಕ ವಿಗ್ರಹಗಳಿವೆ. ಗರ್ಭಗೃಹದಲ್ಲಿನ ಲಿಂಗವು ಕಲ್ಯಾಣ ಚಾಲುಕ್ಯ ಮಾದರಿಯದ್ದು. ಅಂತರಾಳ ಅಥವಾ ಸುಖನಾಸಿಯ ಬಾಗಿಲದ ಇಕ್ಕೆಲಗಳಲ್ಲಿ ಈ ಹಿಂದೆ ವಿವರಿಸಿದ ಸ್ತ್ರೀ ಶಿಲ್ಪಗಳಿವೆ. ವಿಶಾಲವಾದ ನವರಂಗದಲ್ಲಿ ಕೆತ್ತನೆಯಿಂದ ಕೂಡಿದ ತಿರುಗಣಿಯ ಕಂಬಗಳಿವೆ. ಇವು ಫಲಕ ಬೋಧಿಗೆಗಳಿಂದ ಅಲಂಕೃತವಾಗಿವೆ. ನವರಂಗದಲ್ಲಿ ನಾಲ್ಕು ದೇವಕೋಷ್ಠಕಗಳಿವೆ. ಈ ಗೂಡುಗಳನ್ನು ಪುಷ್ಪಕೆತ್ತನೆ ಹಾಗೂ ಮೇಲ್ಭಾಗದಲ್ಲಿ ಔತ್ತರೇಯ ಶಿಖರ ಪಟ್ಟಿಕೆಗಳಿಂದ ಅಲಂಕರಣಗೊಳಿಸಿದ್ದಾರೆ. ನವರಂಗವು ಕಕ್ಷಾಸನ ವ್ಯವಸ್ಥೆಯನ್ನು ಹೊಂದಿದೆ. ನವರಂಗದಲ್ಲಿ ನಂದಿಶಿಲ್ಪವಿದೆ. ದೇವಾಲಯಕ್ಕೆ ಮುಖಮಂಟಪವಿದ್ದು, ಈ ಮುಖಮಂಟಪ ಹಾಗೂ ನವರಂಗಕ್ಕೆ ಮಂಜೂರಿನ ರಚನೆಯಿದೆ. ಹೊರಗೋಡೆಗಳು ಅಲಂಕರಣೆಯಿಂದ ಕೂಡಿದೆ. ದೇವಾಲಯದ ಅಧಿಷ್ಠಾನಭಾಗ ಎತ್ತರವಾಗಿದ್ದು, ಇದು ಉಪಾನ, ಜಗತಿ, ಕಂಠ, ಗಳ, ತ್ರಿಪಟ್ಟಕುಮುದದಂತಹ ರಚನೆಗಳನ್ನು ಹೊಂದಿದೆ. ಉಜಾಳೇಶ್ವರ ದೇವಾಲಯದ ಮುಂಭಾಗದ ಸ್ವಲ್ಪ ದೂರದಲ್ಲಿ ಇತಿಹಾಸ ಪ್ರಸಿದ್ಧ “ಕತ್ತೆ ಬಂಡೆಯ” ಶಾಸನ ಇರುವುದನ್ನು ಕಾಣತ್ತೇವೆ. ೯ನೇ ಶತಮಾನಕ್ಕೆ ಸೇರಿದ ಈ ಶಾಸನವು ಪ್ರಾಚೀನ ಕಾಲದ ಅಳತೆ (ಮಾಪನ)ಯ ಬಗೆಗೆ ಮಾಹಿತಿ ನೀಡುತ್ತದೆ.

ಹಿಂಡುಲಿ ಸಂಗಮೇಶ್ವರ ದೇವಾಲಯ

ಕುರುಗೋಡು ಪಟ್ಟಣದ ಉತ್ತರ ಭಾಗದಲ್ಲಿರುವ ಸಂಗಮೇಶ್ವರ ದೇವಾಲಯ ಕುರುಗೋಡು ಮುಷ್ಟಗಟ್ಟಿ ರಸ್ತೆಯಲ್ಲಿದೆ. ಈ ದೇವಾಲಯವನ್ನು ಎಲ್ಲರು ಹಿಂಡುಲಿ ಸಂಗಮೇಶ್ವರನೆಂದು ಕರೆಯುತ್ತಾರೆ. ಸಂಗಮೇಶ್ವರ ದೇವಾಲಯಕ್ಕೆ ಯಾವ ಕಾರಣಕ್ಕಾಗಿ ಹಿಂಡುಲಿ ಎಂಬ ಹೆಸರು ಅಂಟಿಕೊಂಡಿತು ಎಂಬ ಸ್ವಲ್ಪ ಮಾಹಿತಿಗಳಿಲ್ಲ. ಆದರೆ ಹಿಂಡುಲಿ ಹೆಸರಿಗೆ ಸಂಬಂಧಿಸಿದ ಮೌಖಿಕ ಮಾಹಿತಿಗಳು ಹಲವಾರಿದೆ. ದೇವಾಲಯದ ಮುಂಭಾಗದಲ್ಲಿರುವ ಕಡಿದಾದ ಬೆಟ್ಟಗಳಲ್ಲಿ ಹುಲಿಗಳ ಹಿಂಡು ವಾಸಿಸುತ್ತಿದ್ದವು. ಅವುಗಳು ಕೆಲವೊಮ್ಮೆ ಹಿಂಡು (ಗುಂಪು)ಗಳಾಗಿ ದೇವಾಲಯದ ಅತ್ಯಂತ ಸಮೀಪಕ್ಕೆ ಬಂದು ಕೂರುತ್ತಿದ್ದವು. ಈ ಕಾರಣಕ್ಕಾಗಿ ಸಂಗಮೇಶ್ವರ ದೇವಾಲಯಕ್ಕೆ ಹಿಂಡುಲಿ ಸೇರಿಕೊಂಡಿತು ಎಂಬ ಪ್ರತೀತಿ ಇದೆ. ಸುಮಾರು ೬೦-೭೦ ವರ್ಷಗಳ ಹಿಂದೆಯೇ ಈ ಪಟ್ಟಣದ ಸುತ್ತಲಿರುವ ಬೆಟ್ಟಗಳಲ್ಲಿ ಹುಲಿಗಳ ವಾಸವಿತ್ತೆಂಬ ಮಾಹಿತಿಯನ್ನು ಸ್ಥಳೀಯರಾದ ಶ್ರೀಯುತ ರುದ್ರಗೌಡ ನಾಗನಗೌಡರು ಒದಗಿಸಿದ್ದಾರೆ. ಇಲ್ಲಿರುವ ಬೆಟ್ಟಗಳಲ್ಲಿ ನೈಸರ್ಗಿಕವಾಗಿ ನಿರ್ಮಿತವಾದ ಅನೇಕ ಗುಹೆಗಳು ಇರುವುದರಿಂದ ಹುಲಿ ಹಾಗೂ ಮತ್ತಿತರ ಕ್ರೂರ ಪ್ರಾಣಿಗಳ ವಾಸಕ್ಕೆ ಹೆಚ್ಚಿನ ಪ್ರಾಶಸ್ತ ಒದಗಿಸಿದಂತಿವೆ. ಆದರೆ ಇದನ್ನು ಶಾಸ್ತ್ರೀಯವಾಗಿ ವಿವೇಚಿಸಿರುವ ಪ್ರೊ.ಲಕ್ಷ್ಮಣ್ ತೆಲಗಾವಿ ಅವರು ಅಭಿಪ್ರಾಯಪಡುವಂತೆ ಕಡಿದಾದ ಎರಡು ಬೆಟ್ಟಗಳ ಮಧ್ಯಭಾಗದಲ್ಲಿರುವ ಪ್ರದೇಶವನ್ನುಯ ‘ಹೂಲಿ’ ಎಂದು ಸಂಭೋಧಿಸಲಾಗುತ್ತದೆ. ಇಂಥ ಪ್ರದೇಶದಲ್ಲಿ ನಿರ್ಮಾಣದ ಸಂಗಮೇಶ್ವರ ದೇವಾಲಯ ‘ಹೂಲಿಸಂಗಮೇಶ್ವರ’ನಾಗಿದ್ದು, ಕ್ರಮೇಣ ಹೂಲಿಯ ಜೊತೆಗೆ ಹಿಂಡು (ಗುಂಪು) ಬೆಟ್ಟಗಳನ್ನು ಮೇಳೈಸಿ ‘ಹಿಂಡುಲಿ’ ಆಗಿರುವ ಸಾಧ್ಯತೆ ಇದೆ. ಇಲ್ಲಿ ನಿರ್ಮಿತ ಸಂಗಮೇಶ್ವರ ದೇವಾಲಯದ ಜೊತೆಗೆ ಸಹಜವಾಗಿ ‘ಹಿಂಡುಲಿ’ ಎಂಬ ಈ ಪದವು ಸೇರಿಕೊಂಡಿದೆ ಎಂದು ಅಭಿಪ್ರಾಯಪಡುತ್ತಾರೆ.[15] ಆದರೂ ದೇವಾಲಯದ ಬಗೆಗೆ ಇದುವರೆಗೂ ಯಾವ ಖಚಿತ ಮಾಹಿತಿ ದೊರೆಯದೇ ಇರುವುದರಿಂದ ಊಹೆಗಳನ್ನೇ ಆಧಾರವಾಗಿ ಪರಿಗಣಿಸಬೇಕಾಗುತ್ತದೆ.

ಕ್ರಿ.ಶ. ೧೫೪೩ರ ತೇದಿ ಹೊಂದಿರುವ ಶಾಸನ ಈ ದೇವಾಲಯಲ್ಲಿದೆ.[16] ವಿಜಯನಗರದ ಅರಸ ಶ್ರೀಕೃಷ್ಣದೇವರಾಯನು ಸಂಗಮೇಶ್ವರ ದೇವಾಲಯದ ನಿರ್ವಹಣೆಗಾಗಿ ಜಾನಕುಂಟೆ (ಚಿನಕುಂಟೆ) ಗ್ರಾಮವನ್ನು ದಾನವಾಗಿ ನೀಡಿರುತ್ತಾನೆ. ಆದರೆ ಯಾವುದೋ ಕಾರಣಕ್ಕಾಗಿ ಈ ದತ್ತಿ ನಿಂತುಹೋಗಿರುತ್ತದೆ. ನಿಂತುಹೋದ ಈ ದತ್ತಿಯನ್ನು ಗುಂಡರಾಯನ ಅಳಿಯ ನಿಂಗರಾಜನು ತನ್ನ ಒಡೆಯ ಸದಾಶಿವಮಹಾರಾಯನಿಗೆ ಪುಣ್ಯ ಲಭಿಸಲೆಂದು ದತ್ತಿಯನ್ನು ಪುನಃ ಬಿಟ್ಟಿರುವ ಉಲ್ಲೇಖವಿದೆ. ವಿಜಯನಗರದ ಅರಸರ ಆಳ್ವಿಕೆಯಲ್ಲಿ ಕುರುಗೋಡು ಪರಿಸರದಲ್ಲಿ ಈ ದೇವಾಲಯ ಪ್ರಾಮುಖ್ಯತೆ ಹೊಂದಿತ್ತು ಎಂಬುದನ್ನು ಇಂಥ ದಾನ-ದತ್ತಿಗಳಿಂದ ಊಹಿಸಬಹುದು. ಇದೇ ದೇವಾಲಯದ ಇನ್ನೊಂದು ಶಾಸನದಲ್ಲಿ ಜೂಜಾಡುವವರು ಸಂಗಮೇಶ್ವರ ದೇವರಿಗೆ ಹಣ ಬಿಟ್ಟ ಉಲ್ಲೇಖವಿದೆ.[17]ಈ ಶಾಸನದಲ್ಲಿ ಕಾಲವನ್ನು ನಮೂದಿಸಿಲ್ಲ. ಒಟ್ಟಾರೆ ದೊರೆತ ಈ ಎರಡು ಶಾಸನಗಳಿಂದ ಸಂಗಮೇಶ್ವರ ದೇವಾಲಯದ ಕಾಲ ಮತ್ತು ಕರ್ತೃವಿನ ಬಗೆಗೆ ಯಾವ ಖಚಿತ ಮಾಹಿತಿ ದೊರೆಯುವುದಿಲ್ಲ. ಆದರೆ ಶ್ರೀಯುತ ಹನುಮಂತರೆಡ್ಡಿಯವರು ಕುರುಗೋಡು ಸಂಗಮೇಶ್ವರ ದೇವಾಲಯದ ನಿರ್ಮಾಣವನ್ನು ಕುರುಗೋಡು ಸಿಂದರ ಆಳ್ವಿಕೆಯಲ್ಲಿ ಆದ ರಚನೆಯೆಂದು ಅಭಿಪ್ರಾಯಿಸುತ್ತಾರೆ. ಈ ಅಭಿಪ್ರಾಯವು ಸಹ ಮರುಪರಿಶೀಲನೆಗೆ ಒಳಪಡಬೇಕಾಗಿರುವುದು ಅವಶ್ಯವಾಗಿದೆ.

ಹಿಂಡುಲಿ ಸಂಗಮೇಶ್ವರ ದೇವಾಲಯದ ತಲವಿನ್ಯಾಸ

ಹಿಂಡುಲಿ ಸಂಗಮೇಶ್ವರ ದೇವಾಲಯದ ತಲವಿನ್ಯಾಸ

ಪೂರ್ವಾಭಿಮುಖವಾದ ಸಂಗಮೇಶ್ವರನ ದೇವಾಲಯ ವಿಶಾಲವಾಗಿದೆ. ಇದು ಗರ್ಭಗೃಹ, ಅಂತರಾಳ, ನವರಂಗ ಅಥವಾ ಸಭಾಮಂಟಪ ಹಾಗೂ ಮುಖಮಂಟಪಗಳನ್ನು ಹೊಂದಿದೆ. ಗರ್ಭಗೃಹ ಹಾಗೂ ಅಂತರಾಳ, ಸುತ್ತಲೂ ಪ್ರದಕ್ಷಿಣಾಪಥವನ್ನು ಹೊಂದಿವೆ. ವಿಸ್ತಾರವಾದ ಈ ಪ್ರದಕ್ಷಿಣಾಪಥಕ್ಕೆ ಕಕ್ಷಾಸನದ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ಈ ಕಕ್ಷಾಸನವು ನವರಂಗ ಹಾಗೂ ಮುಖಮಂಪಟಗಳಿಗೂ ವಿಸ್ತರಿಸಿದೆ. ಸುತ್ತಲೂ ರಚನೆಯಾಗಿರುವ ಈ ಕಕ್ಷಾಸನದಲ್ಲಿ ಕಂಬಗಳನ್ನು ಮೇಲ್ಛಾವಣಿಗೆ ಹೊಂದಿಕೊಂಡಂತೆ ಜೋಡಿಸಲಾಗಿದೆ. ಇದರಲ್ಲಿರುವ ಕಂಬಗಳು ಕೆಳಭಾಗದಲ್ಲಿ ಚೌಕಾಕಾರವಾಗಿದ್ದು ಈ ಚೌಕಾಕಾರದ ಮೇಲ್ಭಾಗದಲ್ಲಿ ಚೌಕಾಕಾರದ ಪಟ್ಟಿಕೆಗಳನ್ನು ಕೆತ್ತಲಾಗಿದೆ. ಕಂಬಗಳಲ್ಲಿರುವ ತಟ್ಟೆ ಆಕಾರದ ರಚನೆ ದುಂಡಾಕೃತಿಯ ಫಲಕಗಳು ಕೆತ್ತನೆಯ ಪ್ರಾರಂಭದ ಹಂತದಲ್ಲಿಯೇ ಇದ್ದಂತಿವೆ. ಇವುಗಳ ಮೇಲ್ಭಾಗದ ಬೋಧಿಗೆಯು ನಾಲ್ಕು ದಳದ ಪುಷ್ಪದಂತಿದ್ದು ಆದರೆ ಚೌಕಾಕಾರವಾಗಿದೆ. ಈ ಕಂಬಗಳು ಮೇಲ್ಛಾವಣಿಯ ಭಾರವನ್ನು ಹೊತ್ತಿವೆ. ಕಕ್ಷಾಸನಕ್ಕೆ ಮಂಜೂರಿನ ಭಾಗವನ್ನು ರಚಿಸಲಾಗಿದೆ. ದೇವಾಲಯಕ್ಕೆ ಅರ್ಧಗೋಡೆಯಂತೆ ರಚನೆಯಾಗಿರುವ ಈ ಕಕ್ಷಾಸನದ ಒಳ-ಹೊರಗೋಡೆಯ ಭಾಗದಲ್ಲಿ ಅಲಂಕರಣೆ ಇದೆ. ಕಕ್ಷಾಸನದ ಅಧಿಷ್ಠಾನದಲ್ಲಿ ಉಪಾನ, ಜಗತಿ, ಕುಮದದಂಥ ಭಾಗಗಳನ್ನು ಪುನರಾವರ್ತಿಸಲಾಗಿದೆ.

ಗರ್ಭಗೃಹದಲ್ಲಿನ ಪ್ರಾಚೀನ ಲಿಂಗವು ನಾಶವಾಗಿದೆ. ಹೀಗಾಗಿ ಸ್ಥಳೀಯರು ಹೊಸದಾಗಿ ಇಲ್ಲಿಯ ಲಿಂಗವನ್ನು ಮರು ಪ್ರತಿಷ್ಠಾಪಿಸಿದ್ದಾರೆ. (ಕ್ರಿ.ಶ. ೧೯೭೬ರಲ್ಲಿ) ಗರ್ಭಗೃಹ ಬಾಗಿಲವಾಡದಲ್ಲಿ ಅರ್ಧಕಂಬಗಳ ಕೆತ್ತನೆ ಇದೆ. ಇಕ್ಕೆಲುಗಳಲ್ಲಿ ದ್ವಾರಪಾಲಕ ಶಿಲ್ಪಗಳಿವೆ. ಇವು ತ್ರಿಶೂಲ ಹಿಡಿದು ಸಮಭಂಗಿಯಲ್ಲಿವೆ. ಲಲಾಟಬಿಂಬದಲ್ಲಿ ಗಜಲಕ್ಷ್ಮಿ ಉಬ್ಬು ಶಿಲ್ಪವಿದ್ದು, ಮೇಲ್ಭಾಗದಲ್ಲಿ ಔತ್ತರೇಯ (ಉತ್ತರ ಅಥವಾ ನಾಗರ) ಮಾದರಿಯ ಶಿಖರಗಳನ್ನು ಕೆತ್ತಿದ್ದಾರೆ. ಗರ್ಭಗೃಹದ ಬಾಗಿಲವಾಡದಲ್ಲಿರುವ ಬಹುತೇಕ ಲಕ್ಷಣಗಳು ಅಂತರಾಳದ ಬಾಗಿಲವಾಡದಲ್ಲಿಯೂ ಪುನರಾವರ್ತನೆಯಾಗಿವೆ. ಅಂತರಾಳದ ಬಾಗಿಲಿನ ಇಕ್ಕೆಲಗಳಲ್ಲಿಯೂ ಸಹ ದ್ವಾರಪಾಲಕ ಶಿಲ್ಪಗಳಿವೆ. ಇವುಗಳು ನವರಂಗಕ್ಕಿಂತ ಕೆಳಮಟ್ಟದಲ್ಲಿವೆ. ಅಂದರೆ ನವರಂಗದಲ್ಲಿರುವ ಮೆಟ್ಟಿಲುಗಳ ಸಹಾಯದಿಂದ ಗರ್ಭಗೃಹ ಮತ್ತು ಅಂತರಾಳದ ಸುತ್ತಲಿರುವ ಪ್ರದಕ್ಷಿಣಾಪಥಕ್ಕೆ ಪ್ರವೇಶಿಸಬೇಕಾಗುತ್ತದೆ. ಇವುಗಳ ಅಧಿಷ್ಠಾನ ಭಾಗವು ಸದಾ ರಚನೆಯಾಗಿದ್ದು. ಉಪಾನ, ಜಗತಿ ಮತ್ತು ತ್ರಿಪಟ್ಟ ಕುಮದದಂತಹ ಭಾಗಗಳ ರಚನೆಯಿದೆ. ಆದರೆ ಅವುಗಳ ಹೊರಗೋಡೆ ಯಾವುದೇ ಅಲಂಕರಣೆಯನ್ನು ಒಳಗೊಂಡಿಲ್ಲ.

ವಿಶಾಲವಾದ ನವರಂಗವು ಮೂವತ್ತಾರು ಕಂಬಗಳನ್ನು ಹೊಂದಿದೆ. ಇವು ಮೂರು ರೀತಿಯ ರಚನಾಶೈಲಿಯಲ್ಲಿವೆ. ಉದಾಹರಣೆಗೆ ಮಧ್ಯದಲ್ಲಿರುವ ಕಪ್ಪನೆಯ ಹೊಳಪುಳ್ಳ ನಾಲ್ಕು ಕಂಬಗಳು ಸುಂದರವಾಗಿವೆ. ಇವು ಬುಡದಲ್ಲಿ ಚೌಕಾಕಾರವಾಗಿದ್ದು, ಮಧ್ಯಭಾಗದಲ್ಲಿ ಪಟ್ಟಿಕೆ ರಚನೆಯಿದೆ. ಇವುಗಳ ಮೇಲ್ಭಾಗದಲ್ಲಿ ದುಂಡಾದ ತಟ್ಟೆಯಾಕಾರದ ಮುಚ್ಚಳ, ಚೌಕಾಕಾರದ ಫಲಕ, ಬೋಧಿಗೆಗಳಿಂದ ಕಂಡರಿಸಲ್ಪಟ್ಟಿವೆ. ಉಳಿದ ಕಂಬಗಳು ಇವುಗಳಿಗಿಂತ ಭಿನ್ನ ಮಾದರಿಯವು. ನವರಂಗದಲ್ಲಿನ ಮಧ್ಯದ ನಾಲ್ಕು ಕಂಬಗಳನ್ನು ಯಾವ ಕಾರಣಕ್ಕಾಗಿ ಹಾಗೂ ಎಲ್ಲಿಂದ ತರಲಾಯಿತು ಎಂಬುದು ಅಸ್ಪಷ್ಟವಾಗಿದೆ. ಇಂಥದ್ದೆ ಲಕ್ಷಣವುಳ್ಳ ಕಂಬಗಳನ್ನು ಹಂಪೆಯಲ್ಲಿನ ಹಜಾರರಾಮನ ದೇವಾಲಯದಲ್ಲಿಯೂ ಕಾಣುತ್ತೇವೆ. ಕಕ್ಷಾಸನವು ನವರಂಗದ ಅರ್ಧಗೋಡೆಯಾಗಿ ಇಲ್ಲಿಯೂ ಮುಂದುವರೆದಿದೆ. ಇದರ ಹೊರ-ಒಳಗೋಡೆಯ ಭಾಗದಲ್ಲಿ ಪುಷ್ಪಪಟ್ಟಿಕೆ ಹಾಗೂ ಉಬ್ಬುಶಿಲ್ಪಗಳನ್ನು ಕೆತ್ತಲಾಗಿದೆ. ದೇವಾಲಯಕ್ಕೆ ಮುಖಮಂಪಟವಿದೆ. ಮುಖಮಂಟಪದಲ್ಲಿರುವ ಮೆಟ್ಟಿಲುಗಳ ಸಹಾಯದಿಂದಲೇ ದೇವಾಲಯ ಪ್ರವೇಶಿಸಬೇಕಾಗುತ್ತದೆ. ಇದಕ್ಕೂ ಕಕ್ಷಾಸನ ವ್ಯವಸ್ಥೆ ಇದೆ. ಪ್ರವೇಶದ್ವಾರದಲ್ಲಿ ತಕ್ಕಮಟ್ಟಿನ ಎತ್ತರದ ಎರಡು ಗಜಶಿಲ್ಪಗಳನ್ನು ಇಕ್ಕೆಲುಗಳಲ್ಲಿ ಇಡಲಾಗಿದೆ. ಪ್ರಾಚೀನ ಸಂಗಮೇಶ್ವರನ ದೇವಾಲಯಕ್ಕೆ ಅನೇಕ ಧಕ್ಕೆಗಳಾಗಿವೆ, ಅಲ್ಲದೆ ಸ್ಥಳೀಯರಿಂದ ಅನೇಕ ನವೀಕರಣ ಕ್ರಿಯೆಗೂ ಸಹ ಒಳಗಾಗಿದೆ. ಇತ್ತೀಚೆಗೆ ಶಿಖರವನ್ನು ನಿರ್ಮಿಸಲಾಗಿದ್ದು ದೇವಾಲಯಕ್ಕೆಲ್ಲ ಸುನ್ಣ ಬಳಿಯಲಾಗಿದೆ.

ಕುರುಗೋಡು ಪಟ್ಟಣದಲ್ಲಿ ಅತ್ಯಂತ ಪ್ರಾಮುಖ್ಯತೆ ಪಡೆದ ಈ ದೇವಾಲಯದ ರಚನಾಶೈಲಿಯನ್ನು ಗಮನಿಸಿದಾಗ, ಇದು ಹೊಯ್ಸಳರ ನಂತರ ಹಾಗೂ ವಿಜಯನಗರ ಅರಸರ ಆಡಳಿತ ಪ್ರಾರಂಭ ಘಟ್ಟದಲ್ಲಿ ನಿರ್ಮಾಣವಾಗಿರಬಹುದೆಂದು ಊಹಿಸಬಹುದಾಗಿದೆ. ಅಂದರೆ ೧೪ನೇ ಶತಮಾನದ ಪೂರ್ವಾರ್ಧದಲ್ಲಿ ಈ ದೇವಾಲಯ ರಚನೆಯಾಗಿರಬಹುದು. ಬಲ್ಲಕುಂದೆ ಮುನ್ನೂರು ಆಡಳಿತ ವಿಭಾಗದಲ್ಲಿನ ಈ ದೇವಾಲಯವು ಸಾಂಧರ (ಪ್ರದಕ್ಷಿಣಾ ಪಥ) ಲಕ್ಷಣದ ಬೆಳವಣಿಗೆಯ ಹಿನ್ನೆಲೆಯಲ್ಲಿ ಅತ್ಯಂತ ಪ್ರಾಮುಖ್ಯತೆ ಪಡೆದ ರಚನೆಯಾಗಿದೆ ಎಂದು ಡಾ.ಎಸ್.ರಾಜಶೇಖರ ಅಭಿಪ್ರಾಯಪಡುತ್ತಾರೆ. ಇಂಥ ಲಕ್ಷಣವುಳ್ಳ (ಪ್ರದಕ್ಷಿಣಾ ಪಥ) ದೇವಾಲಯಗಳು ವಿಜಯನಗರ ಕಾಲದಲ್ಲಿ ಸರ್ವೇಸಾಮಾನ್ಯವಾದವು ಹಾಗೂ ಈ ಲಕ್ಷಣವು ದೇವಾಲಯಕ್ಕೆ ಅವಶ್ಯಕವೆಂಬಷ್ಟು ಬಳಸಲಾಗಿದೆ. ಈ ಸಂಗತಿಯನ್ನು ಪ್ರಸ್ತಾಪಿಸುವ ಕಾರಣವೆಂದರೆ ಪ್ರದಕ್ಷಿಣಾಪಥ ಲಕ್ಷಣವು ಕನ್ನಡನಾಡಿನ ದೇವಾಲಯಗಳಲ್ಲಿ ಆಮದು (ತಮಿಳು ರಾಜ್ಯದಿಂದ) ರೂಪದಲ್ಲಿ ಬಂದಿದೆ ಎಂಬ ಮನೋಭಾವನೆಯಿಂದ ನೋಡಲಾಗುತ್ತದೆ. ಆದರೆ ಕುರುಗೋಡಿನ ಹಿಂಡುಲಿಸಂಗಮೇಶ್ವರ ದೇವಾಲಯದಲ್ಲಿನ ಈ ಲಕ್ಷಣವು ವಿಜಯನಗರ ಕಾಲದ ರಚನೆಗಳಿಗಿಂತ ಪೂರ್ವದ್ದು. ಅಲ್ಲದೇ ವಿಜಯನಗರದ ಅರಸರ ನೇರ ಸಂಬಂಧಗಳು ಈ ಪ್ರದೇಶದ ಜೊತೆಗೆ ಇದ್ದಿರುವ ಮಾಹಿತಿಗಳು ತುಂಬಾ ಇವೆ. ಇಂಥ ಸಂಗತಿಗಳನ್ನು ಗಮನಿಸಿದಾಗ ವಿಜಯನಗರ ಕಾಲದ ದೇವಾಲಯಗಳಲ್ಲಿ ಅಳವಡಿಸಲಾಗಿರುವ ಪ್ರದಕ್ಷಿಣಾಪಥ ಲಕ್ಷಣದ ಆಮದು ವಿಚಾರಗಳ ಬಗೆಗೆ ಪುನರ್ ಪರಿಶೀಲಿಸುವ ಅಗತ್ಯವಿದೆ. ಸಮೀಪದಲ್ಲಿರುವ ಬಲ್ಲಕುಂದೆನಾಡಿನ ದೇವಾಲಯಗಳಲ್ಲಿರುವ ಲಕ್ಷಣಗಳ ಪ್ರಭಾವ ಸಹಜವಾಗಿ ಹಂಪೆಯಲ್ಲಿನ ದೇವಾಲಯಗಳ ಮೇಲಾಗಿರುವ ಸಾಧ್ಯತೆಗಳಿವೆ. ಉದಾಹರಣೆಗಾಗಿ ಕುರುಗೋಡಿನಲ್ಲಿರುವ ಸಂಗಮೇಶ್ವರ ದೇವಾಲಯದ ಕೆಲವು ಲಕ್ಷಣಗಳು ಹಾಗೂ ಹಂಪೆಯಲ್ಲಿರುವ ಹಜಾರರಾಮ ದೇವಾಲಯದಲ್ಲಿನ ರಚನಾ ವಿಧಾನಗಳು ಹೆಚ್ಚಿನ ಸಾಮಿಪ್ಯ ಹೊಂದಿರುವುದನ್ನು ಗಮನಿಸುವುದು ಸೂಕ್ತ.

 

[1] ಅದೇ….ಶಾಸನ ಸಂಖ್ಯೆ – ೭

[2] ಈ ಮಾಹಿತಿಯನ್ನು ಡಾ.ಸಿ., ಮಹದೇವ ಕ.ವಿ.ವಿ. ಹಂಪಿ, ಅವರು ಒದಗಿಸಿದ್ದಾರೆ.

[3] ಕ.ವಿ.ವಿ.ಶಾಸನ ಸಂಪುಟ-೧, ಕುರುಗೋಡು, ಬಳ್ಳಾರಿ (ತಾ) ಶಾಸನ ಸಂಖ್ಯೆ-೧೮

[4] ನಾಗಯ್ಯ ಜೆ.ಎಂ., ಪೂರ್ವೋಕ್ತ ಪುಟ ೧೦೪, ೧೦೫

[5] ಹನುಮಂತರೆಡ್ಡಿ ವೈ., ಬಲ್ಲಕುಂದೆ ಮುನ್ನೂರು ನಾಡಿನ ರಾಜಧಾನಿ ಕುರುಗೋಡಿನ ಸಾಂಸ್ಕೃತಿಕ ಇತಿಹಾಸ, (ಬಮುನಾರಾಕುಸಾಇ) ಪುಟ ೬೦

ಮೇಲಿನ ಗ್ರಂಥಲೇಖಕರಾದ ಶ್ರೀ ಹನುಮಂತರೆಡ್ಡಿ ಅವರು ಈ ತ್ರಿಕೂಟಾಲಾಯ ಇರುಂಗೋಳನ ಕಾಲದಲ್ಲಿ ನಿರ್ಮಾಣವಾಗಿದ್ದು ಎಂಬ ಅಭಿಪ್ರಾಯ ಹೊಂದಿದ್ದಾರೆ. ಆದರೆ ಕ್ರಿ.ಶ. ೧೧೪೯ರ ನಂತರವೇ ನಿರ್ಮಾಣವಾಗಿದೆ. ಅಂದರೆ, ಎರಡನೆಯ ರಾಚಮಲ್ಲನ ಕಾಲದಲ್ಲಿ ದೇವಾಲಯ ರಚನೆಯಾಗಿದ್ದು ಇದರ ಮೊದಲ ಉಲ್ಲೇಖ ಕ್ರಿ.ಶ. ೧೧೭೭ರ ಶಾಸನದಲ್ಲಿ ಬರುವುದರಿಂದ ಶ್ರೀ ರೆಡ್ಡಿಯವರ ಅಭಿಪ್ರಾಯ ಸಮಂಜಸವಾಗಲಾರದು.

[6] ಕ.ವಿ.ವಿ. ಶಾಸನ ಸಂಪುಟ-೧, ಕುರುಗೋಡು, ಬಳ್ಳಾರಿ (ತಾ) ಶಾಸನ ಸಂಖ್ಯೆ -೮

[7] ಹನುಮಂತ ರೆಡ್ಡಿ ವೈ., ಪೂರ್ವೋಕ್ತ, ಪುಟ ೬೧

[8] ಬಡಿಗೇರ ವಾಸುದೇವ, ಕರ್ನಾಟಕ ದೇವಾಲಯ ಕೋಶ, ಬಳ್ಳಾರಿ ಜಿಲ್ಲೆ ಪುಟ ೧೮

[9] ಕ.ವಿ.ವಿ.ಶಾಸನ ಸಂಪುಟ-೧, ಕುರುಗೋಡು, ಬಳ್ಳಾರಿ (ತಾ) ಶಾಸನ ಸಂಖ್ಯೆ-೧೦

[10] ಹನುಮಂತರೆಡ್ಡಿ ವೈ., ಪೂರ್ವೋಕ್ತ, ಪುಟ ೩೭,೩೮

[11] ಕ.ವಿ.ವಿ.ಶಾಸನ ಸಂಪುಟ-೧, ಕುರುಗೋಡು, ಬಳ್ಳಾರಿ (ತಾ) ಶಾಸನ ಸಂಖ್ಯೆ-೧೩,೧೪

[12] ಹನುಮಂತ ರೆಡ್ಡಿ ವೈ., ಪೂರ್ವೋಕ್ತ, ಪುಟ ೭೫

[13] ಕ.ವಿ.ವಿ.ಶಾಸನ ಸಂಪುಟ-೧, ಕುರುಗೋಡು ಬಳ್ಳಾರಿ (ತಾ)ಶಾಸನ ಸಂಖ್ಯೆ-೧೦

[14] ವಾಸುದೇವ ಬಡಿಗೇರ, ಪೂರ್ವೋಕ್ತ, ಪುಟ ೨೫

[15] ಕುರುಗೋಡು ವಿಚಾರ ಸಂಕಿರಣದ ಗೋಷ್ಠಿಯ ಅಧ್ಯಕ್ಷೀಯ ಭಾಷಣದಲ್ಲಿ

[16] ಅದೇ…. ಕುರುಗೋಡು, ಬಳ್ಳಾರಿ (ತಾ) ಶಾಸನ ಸಂಖ್ಯೆ-೧೬

[17] ಅದೇ…. ಶಾಸನ ಸಂಖ್ಯೆ-೧೭