ಕುರುಗೋಡು ಬಳ್ಳಾರಿ ತಾಲೂಕಿಗೆ ಸೇರಿದ ಪಟ್ಟಣ ಪ್ರದೇಶ. ಇದು ಜಿಲ್ಲಾ ಕೇಂದ್ರದಿಂದ ವಾಯುವ್ಯ ದಿಕ್ಕಿಗೆ ೨೮ ಕಿ.ಮೀ. ದೂರದಲ್ಲಿದೆ. ಈ ಪಟ್ಟಣವು ಐತಿಹಾಸಿಕವಾಗಿ ಬಹಳ ಮಹತ್ವದ್ದಾಗಿದೆ. ಪ್ರಾಗಿತಿಹಾಸ ಕಾಲದ ರೇಖಾಚಿತ್ರಗಳು ಇಲ್ಲಿವೆ. ಕುರುಗೋಡು ತಾಮ್ರಶಿಲಾಯುಗ ಕಾಲಕ್ಕೆ ಸೇರಿದೆ ಎಂದು ಅ. ಸುಂದರರವರು[1] ಅಭಿಪ್ರಾಯ ಪಟ್ಟಿರುವರು. ಇತಿಹಾಸಯುಗದಲ್ಲಿ ಕ್ರಿ.ಶ. ೨-೩ನೇ ಶತಮಾನಕ್ಕೆ ಸೇರಬಹುದಾದ ಕುರುಗೋಡು ಮತ್ತು ಹಂಪೆ ಶಾಸನಗಳು ಹೆಚ್ಚು ತ್ರುಟಿತಗೊಂಡಿರುವುದರಿಂದ ಹೆಚ್ಚಿನ ಅಂಶಗಳು ತಿಳಿಯದಿದ್ದರೂ ಈ ಪ್ರದೇಶ ಶಾತವಾಹನರ ಆಳ್ವಿಕೆಗೆ ಒಳಪಟ್ಟು ಶಾತವಾನಿಹಾರ[2] ಎಂದು ಕರೆಸಿಕೊಂಡಿದ್ದು, ಶಾಸನಗಳಿಂದ ವೇದ್ಯವಾಗುತ್ತದೆ. ಅಲ್ಲದೆ ಬಾದಾಮಿ ಚಾಲುಕ್ಯರ ಆಡಳಿತ ವ್ಯಾಪ್ತಿಯಲ್ಲಿದ್ದು[3] ನಂತರ ಕಲ್ಯಾಣ ಚಾಳುಕ್ಯರ ಸಾಮಂತರಾದ ಕುರುಗೋಡು ಸಿಂದರು ಇದನ್ನೆ ರಾಜಧಾನಿ ಮಾಡಿಕೊಂಡು ಆಡಳಿತ ನಡೆಸಿದರು.[4] ಆಗ ನೊಳಂಬವಾಡಿ-೩೨೦೦೦, ಕದಂಬಳಿಗೆ-೧೦೦೦, ಕೋಗಳಿ-೫೦೦, ಬಲ್ಲಕುಂದೆ-೩೦೦ ಇವು ಆಡಳಿತ ಕೇಂದ್ರ ಭಾಗಗಳು.[5] ಇವುಗಳಲ್ಲಿ ಬಲ್ಲಕುಂದೆ-೩೦೦ಕ್ಕೆ ಕುರುಗೋಡು ರಾಜಧಾನಿಯಾಗಿದ್ದಿತು. ಈ ರಾಜಧಾನಿ ಪಟ್ಟಣವು ವಿಸ್ತೃತವಾಗಿ ಬೆಳೆಯಿತು. ಬೆಳೆದ ಪಟ್ಟಣ ಹಾಗೂ ರಾಜಧಾನಿಯ ರಕ್ಷಣೆಗಾಗಿ ಸಿಂದರು ಕೋಟೆ ಕಟ್ಟಿಕೊಂಡರು. ವಿಜನಯಗರದ ಅವಧಿಯಲ್ಲಿ ಕುರುಗೋಡು ಸೀಮೆಯಾಗಿ[6] ಮಾರ್ಪಟ್ಟಿತು. ಕುರುಗೋಡು ಸೀಮೆಯ ಕೋಟೆಯನ್ನು ವಿಜಯನಗರದವರು ಭದ್ರ ಪಡಿಸಿದಂತೆ ಶಾಸನಗಳು ಹೇಳುತ್ತವೆ. ಹಂಡೆಯ ಪಾಳೆಯಗಾರರು ಈ ಆಯಾಕಟ್ಟಿನ ಕುರುಗೋಡು ಕೋಟೆಯಲ್ಲಿಯೇ ಆಶ್ರಯಪಡೆದು ಕೆಲವು ಕಾಲ ಆಡಳಿತ ನಡೆಸಿದರು. ಹೈದರಾಲಿ ಮತ್ತು ಟಿಪ್ಪುಸುಲ್ತಾನರು ಕ್ರಮವಾಗಿ ಇದನ್ನು ವಶಕ್ಕೆ ತೆಗೆದುಕೊಂಡರು. ಹೈದರಾಲಿ ಕುರುಗೋಡು ಬೆಟ್ಟದ ಮೇಲಿನ ಕೋಟೆಯನ್ನು ದುರಸ್ಥಿ ಮಾಡಿಸಿ ಆಂಜನೇಯ ದೇವಾಲಯವನ್ನು ನಿರ್ಮಿಸಿದಂತೆ[7]ಕಂಡುಬರುತ್ತದೆ.

ಕುರುಗೋಡಿನ ಸ್ಥಳನಾಮದ ಅಧ್ಯಯನದ ಮೂಲಕ ಆಯಾ ಕಾಲದ ಜನರ ಮನೋಧರ್ಮ, ಜನಜೀವನದ ಸಾಂಸ್ಕೃತಿಕ ವಿಕಾಸ, ಈ ಪ್ರದೇಶದ ಭಾಷಾ ಇತಿಮಿತಿಯನ್ನು ಸಾದರಪಡಿಸಬಹುದಾಗಿದೆ. ಆದ್ದರಿಂದ ಮುಂದುವರಿದ ರಾಷ್ಟ್ರಗಳಲ್ಲಿ ಚರಿತ್ರೆ ಹಾಗೂ ಕೋಶವನ್ನು ಅತ್ಯಂತ ವೈಜ್ಞಾನಿಕವಾಗಿ ಪುನರ್ ನಿರ್ಮಿಸುವಾಗ ಸ್ಥಳನಾಮಗಳನ್ನು ಮುಖ್ಯ ಆಧಾರವನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕುರುಗೋಡು ಸ್ಥಳನಾಮವನ್ನು ಚರ್ಚಿಸಲಾಗಿದೆ. ಕು ಱು- ಇದು ದ್ರಾವಿಡ ಮೂಲದಿಂದ ಬಂದ ಪದವಾಗಿದೆ. ‘ಕುರು’ ಎಂದರೆ ಚಿಕ್ಕ, ಹುಣ್ಣು, ವಂಶ, ಪ್ರದೇಶ ಎಂಬಿತ್ಯಾದಿ ಅರ್ಥಗಳಿವೆ. ಇದಕ್ಕೆ ಸಂಸ್ಕೃತದಲ್ಲಿ ಆರಂಭವೆಂತಲೂ ಹೇಳಿದೆ. ಕೋಡ : ದ್ರಾವಿಡ ಭಾಷೆಗಳಿಗೆಲ್ಲ ಸಮಾನವಾದ ಈ ಸ್ಥಳನಾಮ ವಾಚಕವು ಶಿಖರ, ಬೆಟ್ಟದ ತುದಿ ಎಂಬ ಅರ್ಥವನ್ನು ಸೂಚಿಸುತ್ತದೆ. ತಮಿಳಿನಲ್ಲಿ ಕೋಟೆ, ತುಳುವಿನಲ್ಲಿ ಕೋಡಿ ಜ್ಞಾತಿ ಪದಗಳು ಈ ಅರ್ಥದಲ್ಲಿವೆ. ತಮಿಳಿನ ಕೋಟಿ ಕನ್ನಡ ಕೋಡು ಎಂಬ ಪದಗಳು ತೊರೆ, ಹೊಳಿ, ಶಾಖೆ, ಕೋಡು ಎಂಬ ಅರ್ಥವನ್ನು ನೀಡುತ್ತದೆ.

ಕುರುಗೋಡು ಸ್ಥಳನಾಮವನ್ನು ಚರ್ಚಿಸುತ್ತಾ ಚನ್ನಬಸವಯ್ಯ ಹಿರೇಮಠರು ಚಿಕ್ಕ ಶಿಖರವೆಂದು ಅರ್ಥೈಸಿದ್ದಾರೆ.[8]

ಕ್ರಿ.ಶ. ೧೨ನೇ ಶತಮಾನದ ಶಾಸನದಲ್ಲಿ ಕುಱುಗೋಡು[9] ಕುರುಗೋಡು ಎಂದು ಕರೆಯಿಸಿಕೊಂಡಿರುವುದರಿಂದ ಸಿಂದರು ಆಳ್ವಿಕೆ ಮಾಡುವಾಗ ಈ ಪ್ರದೇಶದಲ್ಲಿ ಸಿಂದರ ಒಂದು ಶಾಖೆ ಇದ್ದಿರಬೇಕು. ಹಾಗಾಗಿಯೇ ಇವರನ್ನು ಕುರುಗೋಡು ಸಿಂದರು ಎಂದಿರುವರು. ಕ್ರಿ.ಶ. ೧೨ನೇ ಶತಮಾನಕ್ಕಿಂತ ಮೊದಲಿನ ಶಾಸನಗಳು ಕುರುಗೋಡನ್ನು ‘ಕುಱುಂಗೋಡು’ ಎಂದಿವೆ.[10]

ಕೋಟೆ ಅಥವಾ ರಕ್ಷಾವರಣ ಎಂದರೆ ಆವರಣವುಳ್ಳ ಪ್ರದೇಶ ಎಂದರ್ಥ. ಕೋಟೆಗೆ ಸಂಸ್ಕೃತದಲ್ಲಿ ದುರ್ಗ ಎಂದು ಅರ್ಥವಿದೆ. ಕೋಟೆಗೆ ಪುರ, ಪ್ರಾಕಾರ, ಕಿಲ್ಲೆ ಎಂಬ ಅನ್ವರ್ಥಗಳು ಇವೆ. ಸೈನಿಕರುಗಳಿಂದ ಆವರಿಸಲ್ಪಟ್ಟ ಅಥವಾ ರಕ್ಷಿತವಾದ ಮತ್ತು ರಕ್ಷಣೆಗೆ ಮುಡುಪಾಗಿರುವ ಗಟ್ಟಿಯಾದ ಸ್ಥಳವೇ ಕೋಟೆ ಎನಿಸಿಕೊಳ್ಳುತ್ತದೆ. ಪ್ರಾಚೀನ ಗ್ರಂಥ : ಋಗ್ವೇದದಲ್ಲಿ ‘ಪುರ’ಗಳ ಉಲ್ಲೇಖ, ಪಾಂಡವರ ಇಂದ್ರಪ್ರಸ್ಥನಗರದ ಕೋಟೆ ಇವು ಕೋಟೆಯ ಪ್ರಾಚೀನತೆಯನ್ನು ತಿಳಿಸುತ್ತವೆ.

ಪ್ರಾಗಿತಿಹಾಸಕಾಲದ ಜನಸಂಸ್ಕೃತಿಯನ್ನು ಗಮನಿಸಿದರೆ ಹಲವು ಪ್ರಮುಖ ಅಂಶಗಳು ಕಂಡುಬರುತ್ತವೆ. ಈ ಅವಧಿಯಲ್ಲಿ ಮಾನವನು ಬೇಟೆಯಾಡುತ್ತಾ ಆಹಾರ ಸಂಗ್ರಹಿಸುತ್ತ ಜೀವನ ನಡೆಸುತ್ತಿದ್ದನು. ಆತನು ನಿರಂತರವಾಗಿ ಪ್ರಕೃತಿಯೊಡನೆ ಸೆಣಸಬೇಕಾಗಿತ್ತು. ಮಳೆ, ಗುಡುಗು, ಸಿಡಿಲು, ಕಾಳ್ಗಿಚ್ಚು ನಿಸರ್ಗದಲ್ಲಿ ನಡೆಯುವ ಇಂಥಹ ಘಟನೆಗಳು ಆತನಲ್ಲಿ ಭಯ ಹುಟ್ಟಿಸಿದವು. ಇವುಗಳಿಂದ ರಕ್ಷಣೆ ಪಡೆಯುವುದಕ್ಕಾಗಿ ದೊಡ್ಡ ದೊಡ್ಡ ಬಂಡೆಗಳ ಆಶ್ರಯದಲ್ಲಿ ವಾಸಿಸಿದನು. ತಾನು ಸುಭದ್ರವಾಗಿ ಇರಬೇಕೆಂದರೆ ಬೃಹತ್ ಬಂಡೆಗಳ ಸಮೂಹಗಳ ಮಧ್ಯದಲ್ಲಿ ಎಂದು ಅರಿತನು. ಇಂಥಹ ಬೃಹತ್ ಬಂಡೆಗಳ ಸಮೂಹಗಳು ಗುಡೇಕೋಟೆ, ಜರಿಮಲೆ, ಕುರುಗೋಡು, ಹಂಪಿ ಮುಂತಾದ ಸ್ಥಳದಲ್ಲಿ ಕಾಣಸಿಗುತ್ತವೆ. ಹೀಗೆ ಕೋಟೆಯ ಪರಿಕಲ್ಪನೆಯನ್ನು ನಾವಿಲ್ಲಿ ಕಾಣಬಹುದು.

ಮಾನವನು ನಾಗರೀಕತೆಯ ಪ್ರಗತಿಯ ಪಥದಲ್ಲಿ ನಡೆದಂತೆ ಅನೇಕ ಸಮುದಾಯಗಳು ಉದಯಿಸಿದವು. ಇಂತಹ ಹಲವು ಕಿರುಸಮುದಾಯಗಳು ಒಂದೆಡೆ ನೆಲೆಗೊಂಡಾಗ ವಿವಿಧ ವಿಶಿಷ್ಟ ಹಿತಾಶಕ್ತಿಯ ಸಮಾಜಗಳು ನಿರ್ಮಾಣಗೊಂಡವು. ರಾಜ್ಯಗಳ ಸಾಮ್ರಾಜ್ಯಗಳ ಉದಯಪೂರ್ವದಲ್ಲಿ ಸಮುದಾಯಗಳಲ್ಲಿ ಜನಸಂಖ್ಯೆ ಹೆಚ್ಚಾಗಿ ಅಥವಾ ಬೇರೆ ಗುಂಪುಗಳ ಜೊತೆಗೂಡಿ ಊರುಗಳಾದವು. ಈ ಪ್ರಕ್ರಿಯೆಗೆ ಮೂಲಕಾರಣ ಮನುಷ್ಯನ ಸಮಾಜ ಜೀವಿತ ಪ್ರಜ್ಞೆ. ಈ ಕಾರಣವಾಗಿ ತನ್ನ ಸುತ್ತಮುತ್ತಲಿನ ಪರಿಸರದ ಅಭದ್ರತೆ ಬಗ್ಗೆ ಯೋಚಿಸಿದ. ಅಂತೆಯೇ ನೆಲೆ ನಿಂತಿದ್ದ ಊರಿನ ರಕ್ಷಣೆಗಾಗಿ ಕೋಟೆ, ಕಟ್ಟಿಕೊಳ್ಳುವ ಅವಶ್ಯಕತೆ ಕಂಡುಬಂದಿತು. ಊರುಗಳು ಬೆಳೆದು, ಹಲವಾರು ಊರುಗಳು ಒಟ್ಟುಗೂಡಿ ರಾಜ್ಯಗಳು ಸ್ಥಾಪನೆಯಾದ ಮೇಲೆ ಆಳುವ ಅರಸರು ತಮ್ಮ ರಾಜ್ಯಗಳನ್ನು ಸಂರಕ್ಷಿಸಿಕೊಳ್ಳಲು ರಾಜಧಾನಿ ಹಾಗೂ ಗಡಿ ಪ್ರದೇಶಗಳಲ್ಲಿ ಬೃಹತ್ ಆಕಾರದ ಕೋಟೆಗಳನ್ನು ಕಟ್ಟಿಸಿದರು. ಹೀಗಾಗಿ ಪ್ರಾಚೀನ ಕಾಲದ ಮಾನವನ ರಕ್ಷಣೆಯ ಕಾರ್ಯದಲ್ಲಿ ರಕ್ಷಣಾವಾಸ್ತು ಮಹತ್ತರ ಪಾತ್ರವಹಿಸಿದೆ. ಅಲ್ಲದೆ ಕುರುಗೋಡು ಕೋಟೆಯು ರಾಜಧಾನಿಯ ರಕ್ಷಣೆಗೆ ಇರುವಂತದ್ದು. ಜೆ.ಟಿ.ಡಾಂಟೆ ಪ್ರಕಾರ ಪ್ರಾಚೀನ ಕಾಲದ ಈ ಕೋಟೆಗಳು ರಾಜಧಾನಿ ರಕ್ಷಣೆಯ ಸಲುವಾಗಿ ಇರುವಂತಹವು.[11]

ರಾಜರ ಮತ್ತು ಚಿಕ್ಕ ಸಂಸ್ಥಾನದ ಮುಖ್ಯಸ್ಥರ ಅತಿಹೆಚ್ಚಿನ ಬಲ ಈ ರಕ್ಷಣಾ ವಾಸ್ತುಗಳ ಮೇಲೆ ಅವಲಂಬಿತವಾಗಿವೆ. ಶತ್ರುಗಳು ಕೋಟೆಯಿಂದ ರಕ್ಷಿತವಾಗಿಲ್ಲದ ಪಟ್ಟಣಗಳನ್ನು ಬಹು ಸುಲಭವಾಗಿ ಸ್ವಾಧೀನ ಪಡಿಸಿಕೊಳ್ಳಬಲ್ಲರು. ಆದ್ದರಿಂದ ಆಳುವವರು ಅತ್ಯವಶ್ಯಕವಾಗಿ ಕೋಟೆಯನ್ನು ಕಟ್ಟಬೇಕೆಂದು ಸಾಮ್ರಾಜ್ಯಲಕ್ಷ್ಮಿ ಪೀಠಿಕಾದಲ್ಲಿ ಪ್ರಸ್ತಾಪವಾಗಿದೆ.[12] ಕೌಟಿಲ್ಯನು ಏಳು ಪ್ರಕಾರದ ಕೋಟೆಗಳನ್ನು ಹೆಸರಿಸಿರುವನು[13] ಅದರಲ್ಲಿ ಗಿರಿದುರ್ಗವೂ ಒಂದು.

ಕೋಟೆಯ ಲಕ್ಷಣಗಳು

ಕುರುಗೋಡು ಬಳ್ಳಾರಿ ಜಿಲ್ಲೆಯ ಪ್ರಾಚೀನ ಗಿರಿದುರ್ಗಗಳಲ್ಲಿ ಕೋಟೆಯು ಎರಡನೆಯದು. ಪ್ರಕೃತಿದತ್ತವಾದ ಬೆಟ್ಟ ಗುಡ್ಡಗಳಿಂದ ಸುತ್ತುವರೆದಿದ್ದ ಈ ಪಟ್ಟಣದಲ್ಲಿ ಗುಡ್ಡದ ಮೇಲೆ ತುಂಬ ಎತ್ತರದ ಕೋಟೆ ಇತ್ತು. ಇದನ್ನು ಕುರುಗೋಡಿನ ಶಾಸನವು[14] ಮುಗಿಲುದ್ದವಾಗಿ ಮೂವಳಿಸಿದ ಕೋಟೆ ಎಂದು ಕರೆದಿದೆ. ಆದರೆ ಶಾಸನದಲ್ಲಿ ಈ ಕೋಟೆಯಲ್ಲಿ ಎಷ್ಟು ಸುತ್ತುಗಳಿವೆ, ಅದರ ವ್ಯಾಪ್ತಿ ಎಷ್ಟು ಎಂಬ ಬಗ್ಗೆ ಮಾಹಿತಿಗಳಿಲ್ಲ. ನಾಲ್ಕು ಸುತ್ತಿನ ಕೋಟೆ ಯೊಳಗೆ ಕಂಗೊಳಿಸುತ್ತಿದ್ದ ಪ್ರಾಚೀನ ಕುರುಗೋಡು ಎಂದು ಕೈಫಿಯತ್ತಿನಲ್ಲಿ[15] ವರ್ಣಿಸಲಾಗಿರುವುದರಿಂದ ಇದು ನಾಲ್ಕು ಸುತ್ತಿನ ಕೋಟೆ ಎಂಬುದು ಸ್ಪಷ್ಟ. ಕಂಪ್ಲಿ ಕಡೆಯಿಂದ ಕುರುಗೋಡನ್ನು ಪ್ರವೇಶಿಸುವಾಗ ಸಿಗುವ ಮೊದಲನೇ ಕೋಟೆ ಅಥವಾ ಹೊರಕೋಟೆ ಬಹಳ ವಿಶಾಲವಾದದ್ದು. ಇದು ಇಡೀ ಊರನ್ನಲ್ಲದೆ ಕಿಲ್ಲೆದುರ್ಗ, ಬೂದಿಕೊಳ್ಳದ ಗುಡ್ಡ, ಬಾಳೆಕೊಳ್ಳದ ಗುಡ್ಡ, ಬಾಲೆ ಕಿಲ್ಲೆ, ಜಿಂಕಲ ಹರವಿನಗುಡ್ಡ, ಕೋಳಿಗುಡ್ಡ, ರಾಮಲಿಂಗನ ಗುಡ್ಡ. ದಿಡ್ಡಿ ಹನುಮಂತನ ಕಣಿವೆ ಮತ್ತು ಹಾಲಭಾವಿ ಕಣಿವೆಯನ್ನು ಸುತ್ತುವರೆದಿರುವುದು ತಿಳಿದುಬರುವ ಅಂಶ.[16]

ಬಳ್ಳಾರಿಯಿಂದ ಕುರುಗೋಡಿಗೆ ಬರುವಾಗ ಕೋಟೆಯ ಎರಡನೆ ಸುತ್ತಿನ ಅವಶೇಷಗಳು ಕಂಡುಬರುವವು. ಇದನ್ನು ಪ್ರಾಯಶಃ ಹನುಮಂತನ ಗುಡ್ಡದ ದಕ್ಷಿಣ ತುದಿಯಿಂದ ಗೋಡಿನಿಂದ ದೊಡ್ಡ ಬಸವೇಶ್ವರ ಗುಡಿಯನ್ನು ಬಳಸಿಕೊಂಡು ಕಟ್ಟಿರಬೇಕು. ಕುರು ಗೋಡಿನಿಂದ ಸಿರಿಗೇರಿಗೆ ಹೋಗುವ ರಸ್ತೆಯ ಬಲಭಾಗಕ್ಕೆ ಕೋಟೆಯ ಮೂರನೆಯ ಸುತ್ತಿನ ಬಾಗಿಲಿದೆ. ಇದು ಪಶ್ಚಿಮ ಬೆಟ್ಟವನ್ನು ಸುತ್ತುವರೆದು ಹಿಂಡುಲಿ ಸಂಗಮೇಶ್ವರ ದೇವಾಲಯದ ಪಶ್ಚಿಮಕ್ಕೆ ಸಂಪೂರ್ಣ ಹಾಳಾಗಿ ಹೋದ ಗೋಡೆಯೇ ಶಾಸನೋಕ್ತ ಕೋಟೆಯ ಮೂರನೆಯ ಸುತ್ತು. ಇದನ್ನು ಜಿಂಕಲ ಹರವಿನಗುಡ್ಡಕ್ಕೆ ಹೊಂದಿಕೊಂಡಿರುವ ಪ್ರಾಚೀನ ಕೋಟೆಯೆಂದು ಕೈಫಿಯತ್ತು ಕರೆದಿದೆ. ಹನುಮಂತನಗುಡ್ಡದ ತುದಿಯಲ್ಲಿರುವುದೇ ಕೋಟೆಯ ನಾಲ್ಕನೇ ಸುತ್ತು. ಇದನ್ನು ಹಂಡೆ ಪಾಳಯಗಾರರು ಕಟ್ಟಿಸಿರುವರೆಂದು ಕುರುಗೋಡು ಕೈಫಿಯತ್ತು ಹೇಳುತ್ತದೆ.[17] ಇದರೊಳಗೆ ವಸತಿಯ ಅವಶೇಷಗಳು, ಆಂಜನೇಯ ಗುಡಿ, ಬಾವಿ ಹಾಗೂ ಖಾಲಿ ಮಂಟಪಗಳಿವೆ. ಇದು ಸುರಕ್ಷಿತ ಹಾಗೂ ಭದ್ರವಾಗಿರುವುದರಿಂದ ಇಲ್ಲಿಯೇ ಹಂಡೆ ಪಾಳೆಯಗಾರರು ನೆಲೆಸಿರಬಹುದು.

ಈ ಮೇಲೆ ಉಲ್ಲೇಖಿಸಿದ ಕೋಟೆಯ ನಾಲ್ಕು ಸುತ್ತುಗಳಲ್ಲಿ ಮೊದಲ ಹಾಗೂ ಎರಡನೆಯ ಸುತ್ತಿನ ಕೋಟೆಗಳು ನಾಮಾವಶೇಷವಾಗಿವೆ. ಈಗ ಉಳಿದಿರುವುದು ಕೋಟೆಯ ಮೂರು ಮತ್ತು ನಾಲ್ಕನೆ ಸುತ್ತುಗಳು ಮಾತ್ರ. ಈ ಗೋಡೆಗಳ ಪೂರ್ವಭಾಗಕ್ಕೆ ಪ್ರವೇಶ ದ್ವಾರಗಳಿವೆ, ಮೂರನೆಯ ಸುತ್ತಿನ ಗೋಡೆಯಲ್ಲಿರುವ ಬಾಗಿಲು ಸುಮಾರು ೨೦ ಅಡಿ ಎತ್ತರ ಮತ್ತು ೮ ಅಡಿ ಅಗಲವಾಗಿದೆ. ಮೇಲಿನ ಛತ್ತು ಹಾಳಾಗಿದೆ. ಇದರ ಬಲಭಾಗದ ಕೋಟೆಗೋಡೆಯಲ್ಲಿ ನಂದಿಯ ಉಬ್ಬುಶಿಲ್ಪವಿದೆ. ಮುಂಭಾಗದಲ್ಲಿ ಆಂಜನೇಯನ ದೇವಾಲಯವಿದೆ. ಇದನ್ನು ಕೋಟೆ ಆಂಜನೇಯನೆಂದು ಕರೆಯುವರು. ನಾಲ್ಕನೇ ಸುತ್ತಿನ ಬಾಗಿಲು ಕೋಟೆಯೊಳಕ್ಕೆ ನೇರವಾದ ಪ್ರವೇಶವನ್ನು ನೀಡುವುದಿಲ್ಲ. ದೂರದಿಂದ ನೋಡಿದಾಗ ಈ ಬಾಗಿಲು ಕಾಣುವುದಿಲ್ಲ. ಬಾಗಿಲ ಎರಡು ಪಾರ್ಶ್ವಗಳಲ್ಲಿ ಮತ್ತು ಮುಂಭಾಗದಲ್ಲಿ ಅದೇ ರೀತಿಯ ಗೋಡೆಗಳನ್ನು ಕಟ್ಟಿ ಅದನ್ನು ಮರೆಮಾಡಿ ಗೋಡೆಯಲ್ಲಿ ಪ್ರವೇಶ ಕಲ್ಪಿಸಲಾಗಿದೆ. ಹೀಗಾಗಿ ಒಳಗೆ ಬರುವ ದಾರಿಯು ಅಂಕು-ಡೊಂಕಾಗಿದೆ. ಇದರ ಎರಡೂ ಬದಿಗೆ ಕೊತ್ತಳಗಳಿವೆ. ಬಾಗಿಲಿನ ಮೂಲಕ ಅಂಕು-ಡೊಂಕಾದ ದಾರಿಯಲ್ಲಿ ಒಳ ಪ್ರವೇಶಿಸಲು ಪ್ರಯತ್ನಿಸುವ ವೈರಿಸೈನ್ಯವನ್ನು ಕೋಟೆಗೋಡೆಯ ಮತ್ತು ಕೊತ್ತಳಗಳ ಮೇಲೆ ಸಂರಕ್ಷಣೆಗಾಗಿ ನಿಂತ ಸೈನಿಕರು ಸುಲಭವಾಗಿ ಸದೆಬಡಿಯಲು ಅನುಕೂಲವಾಗುತ್ತಿತ್ತು.

ಕೋಟೆಯ ಆಯಾಕಟ್ಟಿನ ಸ್ಥಳಗಳಲ್ಲಿ ಕೊತ್ತಳಗಳನ್ನು ನಿರ್ಮಿಸಲಾಗಿದೆ. ಇವು ವೃತ್ತಾಕಾರವಾಗಿದ್ದು, ಕೋಟೆ ಗೋಡೆಗಿಂತ ಎತ್ತರವಾಗಿವೆ. ಬೆಟ್ಟದ ಮೇಲಿನ ಕೋಟೆಯಲ್ಲಿ ಕೆಲವು ಕೊತ್ತಳಗಳನ್ನು ಹಾಸುಬಂಡೆಗಳ ಮೇಲೆ ನಿರ್ಮಿಸಲಾಗಿದೆ. ಈಗ ಸುಮಾರು ೧೫ ಕೊತ್ತಳಗಳು ಮಾತ್ರ ಗೋಚರಿಸುತ್ತವೆ.

ಈ ಕೋಟೆಯನ್ನು ಕೆತ್ತಿ ನಯಮಾಡಿದ ಮಧ್ಯಮಗಾತ್ರದ ಕಲ್ಲುಗಳಿಂದ ಕಟ್ಟಿದೆ. ಕಲ್ಲುಗಳ ಮಧ್ಯದಲ್ಲಿ ಸಂಧಿ ಇಲ್ಲದಂತೆ ಒಂದು ಕಲ್ಲು ಮತ್ತೊಂದಕ್ಕೆ ಹೊಂದಿಕೊಳ್ಳುವಂತೆ ಅಂಚುಗಳನ್ನು ಕೆತ್ತಿ ಜೋಡಿಸಲಾಗಿದೆ. ಕಲ್ಲುಗಳ ಮಧ್ಯದಲ್ಲಿ ಯಾವುದೇ ಗಾರೆ ಇಲ್ಲ. ಸುಮಾರು ೧೫ ಅಡಿ ಎತ್ತರವಿರುವ ಕೋಟೆಯ ಮೇಲಿನ ಕಲ್ಲಿನ ಸಾಲು ಸ್ವಲ್ಪ ಮುಂದೆ ಚಾಚಿಗೊಂಡಿದೆ. ಕೋಟೆಯ ಅಗಲ ಸುಮಾರು ೩ ಅಡಿ. ಮೇಲಿದ್ದ ಮಣ್ಣಿನ ಕುಂಬೆಯ ಅವಶೇಷಗಳು ಕಾಣುತ್ತವೆ. ಕೋಟೆಯ ಹೊರಮೈಯನ್ನು ಮಧ್ಯಗಾತ್ರದ ಕಲ್ಲುಗಳಿಂದ ಮತ್ತು ಒಳಮೈಯನ್ನು ಚಿಕ್ಕ ಕಲ್ಲುಗಳಿಂದ ಇವುಗಳ ಮಧ್ಯದಲ್ಲಿ ಮಣ್ಣುತುಂಬಿ ಕಟ್ಟಲಾಗಿದೆ. ಬೆಟ್ಟದ ಮೇಲಿರುವ ಕೋಟೆಗೋಡೆಗಳು ಮಾತ್ರ ಉಳಿದುಕೊಂಡಿವೆ. ಕೆಲವೆಡೆ ಕಲ್ಲಿನ ಭಾಗ ಬಿದ್ದು ಹೋಗಿ ಮಧ್ಯದಲ್ಲಿನ ಮಣ್ಣಿನ ಭಾಗ ಮಾತ್ರ ಉಳಿದಿದೆ.

ಕೋಟೆಯ ನಿರ್ಮಾಣ

ಕುರುಗೋಡು ಕೋಟೆಯ ನಿರ್ಮಾಪಕರ ಮತ್ತು ನಿರ್ಮಾಣ ಕಾಲವನ್ನು ನಿಖರವಾಗಿ ಹೇಳುವುದು ಕಷ್ಟವಾದರೂ ಶಾಸನಾಧಾರಗಳಿಂದ ಈ ಕೆಳಗಿನಂತೆ ಚರ್ಚಿಸಿದೆ. ಇಲ್ಲಿ ದೊರೆತಿರುವ ಬಾದಾಮಿ ಚಾಳುಕ್ಯ ಸತ್ಯಾಶ್ರಯದ ಶಾಸನದಲ್ಲಾಗಲಿ[18] ಅಥವಾ ಈ ಮುಂಚಿನ ಯಾವುದೇ ದಾಖಲೆಗಳಲ್ಲಿ ಕುರುಗೋಡು ಕೋಟೆಯ ಪ್ರಸ್ತಾಪಗಳಿಲ್ಲ. ಕಲಚೂರಿಗಳ ಕ್ರಿ.ಶ. ೧೧೭೩[19] ರ ಶಾಸನವನ್ನು ಸೇರಿದಂತೆ ಇತ್ತೀಚಿನ ಶಾಸನಗಳಲ್ಲಿ ಕುರುಗೋಡು ಕೋಟೆಯ ಉಲ್ಲೇಖಗಳಿವೆ. ಕುಮಾರರಾಮನಿಗಿಂತ ಮೊದಲು ಮಲ್ಲರಾಯರ ವಂಶದವರು ಕೋಟೆ ಕಟ್ಟಿಸಿದರೆಂದು ಕೈಫಿಯತ್ತಿನಲ್ಲಿ ಹೇಳಿದೆ.[20] ಕ್ರಿ.ಶ. ೧೧೭೪ರಲ್ಲಿ[21]ಹೊಯ್ಸಳ ವಿಷ್ಣುವರ್ಧನನು ಸಿಂದರ ಆಳ್ವಿಕೆಗೊಳಪಟ್ಟ ಕುರುಗೋಡು ಕೋಟೆಯ ಮೇಲೆ ದಾಳಿ ಮಾಡಿರಬೇಕೆಂದು ಚನ್ನಬಸವಯ್ಯ ಹಿರೇಮಠದ ಅಭಿಪ್ರಾಯ.[22]

ಈ ಮೇಲಿನ ಶಾಸನಾಧಾರಗಳು ಕೈಫಿಯತ್ತಿನ ಆಧಾರಗಳೊಂದಿಗೆ ಸರಿಹೊಂದುವುದರಿಂದ ಕೈಫಿಯತ್ತಿನಲ್ಲಿ ಉಲ್ಲೇಖವಾಗುವ ಮಲ್ಲರಾಯರ ವಂಶದವರೆಂದರೆ ಸಿಂದವಂಶದ ರಾಚಮಲ್ಲನೇ ಇರಬೇಕು. ಒಟ್ಟಿನಲ್ಲಿ ಸಿಂದರ ಆಳ್ವಿಕೆಯ ಅವಧಿಯಲ್ಲಿಯೇ ಕುರುಗೋಡಿನಲ್ಲಿ ಕೋಟೆ ನಿರ್ಮಾಣವಾಗಿದೆ. ಮುಂದೆ ಈ ಕೋಟೆಯನ್ನು ವಿಜಯನಗರದ ಅರಸರು ಆಳಿದರು. ಹಂಡೆಯ ಪಾಳೆಯಗಾರರು ಈ ಕೋಟೆಯನ್ನು ಭದ್ರಪಡಿಸಿಕೊಂಡು ಕೋಟೆಯ ಕೆಲವು ಸುತ್ತುಗಳನ್ನು ಕಟ್ಟಿಸಿದರೆಂದು ತಿಳಿದುಬರುತ್ತದೆ.[23] ನಂತರ ಹೈದರಾಲಿ- ಟಿಪ್ಪು ಇವರು ಕುರುಗೋಡು ಕೋಟೆಯನ್ನು ಜೀರ್ಣೋದ್ಧಾರ ಮಾಡಿಕೊಂಡಿದ್ದಾರೆ. ಹೈದರಾಲಿ ಕೋಟೆಯ ಒಳಗೆ ಆಂಜನೇಯದ ದೇವಾಲಯವನ್ನು ಕಟ್ಟಿಸಿದ್ದಾನೆಂಬುದು ಶಾಸನದಿಂದ ತಿಳಿದು ಬರುತ್ತದೆ.[24]

ಕೋಟೆಯ ಮಹತ್ವ

ಬೆಟ್ಟ-ಗುಡ್ಡಗಳ ಮಧ್ಯದಲ್ಲಿ ನಾಲ್ಕು ಸುತ್ತಿನಲ್ಲಿ ನಿರ್ಮಾಣವಾದ ಕುರುಗೋಡು ಕೋಟೆ ಅಬೇಧ್ಯ ಗಿರಿದುರ್ಗವೆನಿಸಿತ್ತು. ಇದನ್ನೆ ಶಾಸನಗಳು ” ಕುಲಗಿರಿಗಳ್ಗೆ ಮೇರು ಗಿರಿಯಿರ್ಪ್ಪ ವೊಲಿರ್ದ್ದುದುತಾಂ ನದೀನದಾವಳಿಗೆ ಪಯಃ ಪಯೋಧಿನೆಗಳ್ದಿರ್ಪ ವೊಲಿರ್ದ್ದುದು ತಾರಕಾಸ ಮಾಕುಳತೆ ಹಿಮಾಂಶುಬಿಂಬ ಮೆಸೆದಿರ್ಪ್ಪ ವೊಲಿರ್ದ್ದುದಾ ವಸುನ್ದರಾಲಲನೆಗೆ ವಕ್ತ್ರ ಪಂಕರು ಹಮಿರ್ಪ್ಪವೊಲಿದಿತ್ತು[25] ಎಂದೂ, ರಾಜರಾಜನಗರ ರಮಣೀಯ ಮಣಿದರ್ಪಣಾಯನ ಮೆನಿಸೆ ಭರ್ಗ್ಗಾದ್ರಿ ಯಂತಾರ್ಗ್ರವರಿದ ದುರ್ಗಮವಾದ” [26]ಕೋಟೆಯಾಗಿತ್ತೆಂದು ಬಣ್ಣಿಸಿವೆ.

ಕೋಟೆಯ ಸುತ್ತಲೂ ಕಂದಕಗಳಿದ್ದು ಅದರಲ್ಲಿ ನೀರನ್ನು ತುಂಬಲಾಗಿತ್ತು. ಹೀಗೆ ಒಂದೆಡೆ ಗಿರಿದುರ್ಗ ಮತ್ತೊಂದೆಡೆ ಜಲದುರ್ಗಗಳಿಂದ ಕೂಡಿದ ಅದು[27]

||ಕಂ|| ಕೆಲಬಲದ ಜಲದ ದುರ್ಗಗಳ
ನೆಲೆವುದು ನೆರೆಯ ಹೊರೆಯ ತುರುಗಿರಿದುರ್ಗಂ
ಗಳ ನಿಳಿಸಿ ತನ್ನ ಮೆರೆವುದು
ಕುಲಗಿರಿ ಕುರುಗೋಡು ದುರ್ಗ್ಗವಾರ್ಗ್ಗುಂದುರ್ಗ್ಗಂಎನಿಸಿತು.
[28]

ಚೋಳ, ಗುರ್ಜರ, ಪಾಲ, ಪಾಂಡ್ಯ, ತೆಲುಗ ಭೂಪಾಲರು ಕುರುಗೋಡು ಕೋಟೆಯನ್ನು ಗೆಲ್ಲಲು ಆಗಾಗ ಪ್ರಯತ್ನಿಸುತ್ತಿದ್ದರು. ಚಾಳುಕ್ಯರ ಆಡಳಿತಾವಧಿಯಲ್ಲಿ ಈ ಕೋಟೆಯನ್ನು ಜಯಿಸಲು ನಡೆಸಿದ ಹೋರಾಟಗಳು ವಿಫಲವಾದ ಮೇಲೆ ಕಲಚೂರಿಗಳ ಕಾಲದಲ್ಲಿ ಇಂಥ ಪ್ರಯತ್ನವನ್ನು ಮುಂದುವರೆಸಿದರು. ಆದರೆ ಸಮರ್ಥ ಸಾಮಂತ ಅರಸರಾದ ಸಿಂದರಿಂದಾಗಿ ಬಲಿಷ್ಠವಾದ ಈ ಕೋಟೆಯನ್ನು ಪಡೆಯಲೇಬೇಕೆಂಬ ಇವರ ಕನಸು ನನಸಾಗಲಿಲ್ಲ.[29] ಬದಲಾಗಿ ಅದು.

“ಚೋಳನನಾಳು ಮಾಡುವುದು ಗೂರ್ಜರರಂಸೆಲೆ ತರ್ದ್ದಿಕುಂಕರಂ
ಲಾಳನ ನಾಳಿಮಾಡುವುದು ಪಾಂಡ್ಯನ ನಂಡಲೆಗುಂ ತೆಲುಂಗ ಭೂ
ಪಾಲನ ನೇಳಿ ದಿಕ್ಕೆಯನೆ ಮಾಡುವದೀ ಕುರುಗೋಡು ಕೋಟೆ ತಾಂ
ಕಾಳಗ ಮೆಂದಡೇಳುಮಡಿ ಪೆರ್ಚ್ಚುವುದಚ್ಚರಿ ಯಾರೊ ಕಾದುವರ್ ||

ಎನ್ನುವಂತೆ ಶಕ್ತಿಯುತವಾಗಿತ್ತು.[30] ಹೊಯ್ಸಳ ಬಲ್ಲಾಳನು ಕ್ರಿ.ಶ. ೧೧೯೯ರಲ್ಲಿ ಕುರುಗೋಡು ಕೋಟೆಯನ್ನು ವಶಪಡಿಸಿಕೊಳ್ಳಬೇಕೆಂದು ನಡೆಸಿದ ಯತ್ನವು ವಿಫಲವಾಯಿತು.[31] ಒಟ್ಟಿನಲ್ಲಿ ಬಲ್ಲಕುಂದೆನಾಡಿನ ರಾಜಧಾನಿಯಾಗಿದ್ದ ಕುರುಗೋಡು ಕೋಟೆಯು ವಿರೋಧಿ ಅರಸರಿಗೆ ಸುಲಭವಾಗಿ ದಕ್ಕಲಿಲ್ಲ. ಸಮರ್ಥ ನಾಯಕರಾಗಿದ್ದ ಸಿಂದರಸರು ಈ ಕೋಟೆಯನ್ನು ರಕ್ಷಿಸಿದರು. ಎರಡನೇ ಬಲ್ಲಾಳನು ಈ ಕೋಟೆಯನ್ನು ವಶಪಡಿಸಿಕೊಳ್ಳುವುದಕ್ಕಾಗಿ ಅಪಾರ ಸಂಖ್ಯೆಯ ಸೈನಿಕರನ್ನು ಕಳೆದುಕೊಳ್ಳಬೇಕಾಯಿತು.

ಮೇಲಿನ ಅಂಶಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಲ್ಲಿ ಕುರುಗೋಡು ಕೋಟೆಯ ಬಲಿಷ್ಠತೆಯ ಅರಿವಾಗುತ್ತದೆ. ನಿಸರ್ಗದತ್ತ ಬೆಟ್ಟವು ನಗರವನ್ನು ಸುತ್ತುವರೆದಿರುವುದರಿಂದ ಇದರ ಮಧ್ಯದಲ್ಲಿ ಅಲ್ಲಲ್ಲಿ ಕಂಡುಬರುವ ಸಂದುಗಳಿಗೆ ಬೃಹದಾಕಾರದ ಕಲ್ಲು ಬಂಡೆಗಳನ್ನೊಟ್ಟಿ ಕೋಟೆ ಕಟ್ಟಲಾಗಿದೆ. ಇದರಿಂದ ಶತ್ರುಗಳು ಮೇಲೇರಿ ಒಳ ಬರಲು ಕಷ್ಟಸಾಧ್ಯ.

ಈ ಪ್ರದೇಶದಲ್ಲಿ ಬಳ್ಳಾರಿ, ಕೋಳೂರು, ನಡಿವಿ, ತೆಕ್ಕಲಕೋಟೆ, ದರೋಜಿ, ಕೆಂಚನ ಗುಡ್ಡ ಹಾಗೂ ಸಿರುಗುಪ್ಪಗಳಲ್ಲಿ ಕೋಟೆಗಳಿವೆ. ಈ ಎಲ್ಲಾ ಕೋಟೆಗಳಿಗಿಂತ ಕುರುಗೋಡಿನ ಕೋಟೆಗೆ ಮಹತ್ವ ಹೆಚ್ಚು ಏಕೆ ಕೋಳೂರಿನ ಕೋಟೆ ಕುರುಗೋಡು ಕೋಟೆಯಷ್ಟೇ ಹಳೆಯದು ಮತ್ತು ಸಮಕಾಲೀನ. ಆದರೆ ಕೋಳೂರಿನ ಕೋಟೆಯ ಉಲ್ಲೇಖ ಶಾಸನಗಳಲ್ಲಿ ಮಾತ್ರ ಬರುತ್ತದೆ.

ಮೇಲಿನ ಪ್ರಶ್ನೆಗೆ ಉತ್ತರ ನೀಡುವಲ್ಲಿ ಕೆಳಗಿನ ಚರ್ಚೆಯು ಉಪಯುಕ್ತವಾಗಬಹುದು. ಸಿಂದರು ಕುರುಗೋಡನ್ನು ಆಳುವಾಗ ದಕ್ಷಿಣದಿಂದ ಹೊಯ್ಸಳರು, ಯಾದವರು, ಪೂರ್ವದಿಂದ ತೆಲುಗು ಭೂಪಾಲರು ಗುರ್ಜರು ಇವರು ಚಾಳುಕ್ಯ ರಾಜ್ಯದ ಮೇಲೆ ದಂಡೆತ್ತಿ ಹೋಗಬೇಕಾದರೆ ಕುರುಗೋಡನ್ನು ಸಂಧಿಸಲೇಬೇಕಾಗುತ್ತಿತ್ತು. ಎರಡನೆಯದಾಗಿ ಕುರುಗೋಡು ಕೋಟೆ ಇದರ ಸುತ್ತಮುತ್ತಲಿನಲ್ಲಿ ಇರುವ ಕೋಟೆಗಳಿಗಿಂತ ಬಹು ಆಯ ಕಟ್ಟಿನ ಸ್ಥಳದಲ್ಲಿದ್ದು, ಶತ್ರುಗಳಿಗೆ ಸುಲಭವಾಗಿ ವಶವಾಗದಂತೆ ನಿಸರ್ಗದತ್ತ ಬೆಟ್ಟಗುಡ್ಡಗಳಿಂದ ಆವರಿಸಲ್ಪಟ್ಟಿತ್ತು. ಹಾಗಾಗಿಯೇ ಹೊಯ್ಸಳ ವಿಷ್ಣುವರ್ಧನನು ಈ ಕೋಟೆಯನ್ನು ಗೆಲ್ಲಲು ಪ್ರಯಾಸ ಪಡಬೇಕಾಯಿತು. ಹೈದರಾಲಿ ಮತ್ತು ಟಿಪ್ಪು ಅವರ ದಾಳಿಗೆ ತತ್ತರಿಸಿದ ಹಂಡೆ ಪಾಳೆಯಗಾರರು, ಬಳ್ಳಾರಿಯಿಂದ ಬಂದು ಕುರುಗೋಡು ಕೋಟೆಯಲ್ಲಿ ಆಶ್ರಯ ಪಡೆದರು.

ಕುರುಗೋಡು ಪರಿಸರದಲ್ಲಿ ಸ್ಥಳ, ಜಲ ಹಾಗೂ ಗಿರಿದುರ್ಗಗಳು ಮಾತ್ರ ಕಂಡುಬರುತ್ತವೆ. ಹಂಪಾಪಟ್ಟಣದ ಕೋಟೆಯು ಸ್ಥಳದುರ್ಗಕ್ಕೆ ಉತ್ತಮ ನಿದರ್ಶನವಾದರೆ, ನಡಿವಿ ಕೋಟೆಯು ನೈಸರ್ಗಿಕ ಜಲದುರ್ಗವಾಗಿದೆ. ಈ ಎರಡು ಲಕ್ಷಣಗಳನ್ನು ಮೈಗೂಡಿಸಿಕೊಂಡಿದ್ದ ಕೋಟೆ ಎಂದರೆ ಕುರುಗೋಡಿನದು. ಇದನ್ನು ಅರ್ಧಭಾಗ ನೆಲದ ಮೇಲೆ ಇನ್ನರ್ಧ ಭಾಗ ಬೆಟ್ಟದಮೇಲೆ ಕಟ್ಟಲಾಗಿದೆ. ಬಳ್ಳಾರಿ ಹಾಗೂ ಉಚ್ಚಂಗಿದುರ್ಗದ ಕೋಟೆಗಳು ಇದೇ ಸ್ವರೂಪದ್ದಾಗಿವೆ. ಇಲ್ಲಿ ಆಳ್ವಿಕೆ ಮಾಡಿದ ಬಹುಪಾಲು ಅರಸರು ಮತ್ತು ಪಾಳೆಯಗಾರರು ತಮ್ಮ ರಾಜಧಾನಿಯನ್ನು ದುರ್ಗಮವಾದ ಗುಡ್ಡ ಅಥವಾ ಬೆಟ್ಟದ ಮೇಲೆ ಕಟ್ಟಿಕೊಂಡಿರುತ್ತಿದ್ದರು. ಕಾರಣ ಶತ್ರುಗಳಿಂದ ರಕ್ಷಣೆ ಪಡೆಯಲು ಇವು ಸೂಕ್ತ ಸ್ಥಳಗಳಾಗಿದ್ದವು.

ಈ ಕೋಟೆಯನ್ನು ಸುಮಾರು ನಾಲ್ಕು ಸುತ್ತುಗಳಲ್ಲಿ ಕಟ್ಟಿಕೊಂಡಿದ್ದರು. ಕೋಟೆಯ ಒಂದೊಂದು ಸುತ್ತು ವೈರಿಯ ದಾಳಿಗೆ ತುತ್ತಾಗಿ ಅವರ ವಶವಾದಾಗ ಹಿಂದಕ್ಕೆ ಸರಿಯುತ್ತಾ ಒಳಕೋಟೆಗಳಲ್ಲಿ ರಕ್ಷಣೆ ಪಡೆಯುವ ಉದ್ದೇಶಕ್ಕಾಗಿ ಸುತ್ತುಗಳು ನಿರ್ಮಾಣಗೊಂಡಿವೆ. ವೈರಿಯು ಅಂತಿಮಸುತ್ತಿನ ಕೋಟೆಯು ವಶವಾಗುವವರೆಗೂ ಕಾದಾಡಬೇಕಾಗುತ್ತಿತ್ತು. ಇಂತಹ ಎರಡಕ್ಕಿಂತ ಅಧಿಕ ಸುತ್ತುಗಳನ್ನು ಬಳ್ಳಾರಿ, ಹಂಪಿ, ಉಚ್ಚಂಗಿದುರ್ಗಗಳಲ್ಲಿ ಕಾಣಬಹುದು. ಕುರುಗೋಡಿನ ಕೋಟೆಯ ಹೊರ ಸುತ್ತುಗಳು ಬೆಟ್ಟದ ಬದಿಯಲ್ಲಿರುವ ಊರನ್ನು ಸುತ್ತುವರೆದಿದೆ. ಉಳಿದ ಸುತ್ತುಗಳು ಬೆಟ್ಟದ ವಿವಿಧ ಎತ್ತರಗಳಲ್ಲಿದ್ದು ಕೊನೆಯ ಸುತ್ತು ಅತಿ ಎತ್ತರದ ಭಾಗಗಳಲ್ಲಿವೆ. ಬೆಟ್ಟದ ಮೇಲಿನ ಒಳಸುತ್ತಿನಲ್ಲಿ ರಾಜಪರಿವಾರದವರಿಗೆ ಸಂಬಂಧಿಸಿದ ಕಟ್ಟಡಗಳಿವೆ. ಹಾಗಾಗಿ ಈ ಸುತ್ತನ್ನು ಕಡೆಗಾಪು ಅಥವಾ ರಾಜವಾಡೆಗಳೆಂದು ಕರೆಯುವರು. ಯುದ್ಧದ ಸಂದರ್ಭದಲ್ಲಿ ಊರಜನರು ಈ ಸುತ್ತಿನಲ್ಲಿ ಆಶ್ರಯಪಡೆಯುವರು. ಹೈದರಾಲಿ ಕುರುಗೋಡು ಕೋಟೆಯನ್ನು ಮುತ್ತಿದಾಗ ಊರಜನರು ಇಲ್ಲಿ ಆಶ್ರಯ ಪಡೆದುದಕ್ಕೆ ಆಧಾರಗಳಿವೆ.

ನೀರು ಮತ್ತು ಆಹಾರ ಧಾನ್ಯಗಳ ಜೀವನಕ್ಕೆ ಅವಶ್ಯಕವಾದವು. ಇವುಗಳ ಸಂಗ್ರಹಣೆಗೆ ಈ ಕೋಟೆಯಲ್ಲಿ ವ್ಯವಸ್ಥೆ ಇದೆ. ಮಳೆಗಾಲದಲ್ಲಿ ಬಿದ್ದ ನೀರನ್ನು ಹರಿದುಹೋಗಲು ಬಿಡದೆ ಅಲ್ಲಲ್ಲೇ ತಡೆಗೋಡೆಗಳನ್ನು ನಿರ್ಮಿಸಿ ನೀರನ್ನು ಸಂಗ್ರಹಿಸುತ್ತಿದ್ದರು. ಕೆಳಗಿನ ಸುತ್ತಿನ ಕೋಟೆಯಲ್ಲಿ ನೀರಿಗಾಗಿ ಕೆರೆ ಬಾವಿಗಳನ್ನು ಕಟ್ಟಿಕೊಂಡಿದ್ದರು. ಕೋಟೆಯ ಸುತ್ತಲಿನ ಕಂದಕಕ್ಕೆ ಪಕ್ಕದ ಹಳ್ಳದಿಂದ ನೀರನ್ನು ತುಂಬಿಸುವ ವ್ಯವಸ್ಥೆ ಇತ್ತು. ಮುನ್ನೆಚ್ಚರಿಕೆಯ ಪ್ರತಿರೂಪವಾಗಿ ತಲೆ ಎತ್ತಿದ ಆಹಾರ ಧಾನ್ಯಗಳ ಕಣಜಗಳು ಕೋಟೆಯ ಮೇಲಿನ ಸುತ್ತಿನ ಒಳಗೆ ಕಂಡುಬರುತ್ತವೆ. ರಾಗಿ, ತುಪ್ಪ ಎಣ್ಣೆಯ ಶೇಖರಣೆಗಾಗಿ ಪ್ರತ್ಯೇಕ ಕಣಜಗಳೇ ಇದ್ದವು. ಈ ಕಣಜಗಳು ಅಂದಿನ ಆರ್ಥಿಕ ಸ್ಥಿತಿಗಳನ್ನು ಬಿಂಬಿಸುತ್ತವೆ.

ಇದೇ ರೀತಿ ಒಂದು ರಾಜ್ಯದ ಅಳಿವು ಉಳಿವು ಅವುಗಳ ಶಕ್ತಿಸಾಮರ್ಥ್ಯದ ಮೇಲೆ ನಿಂತಿತ್ತು ಎಂಬುದನ್ನು ನಾವು ಮರೆಯಬಾರದು. ಈ ಸಾಮರ್ಥ್ಯವಿರುವುದು ಯುದ್ಧ ಸಾಮಗ್ರಿಗಳ ಸಂಗ್ರಹದಲ್ಲಿ ಇಂದು ಜಗತ್ತಿನ ಬಹುತೇಕ ರಾಷ್ಟ್ರಗಳು ನವೀನ ತಂತ್ರಜ್ಞಾನದ ಯುದ್ಧ ಸಾಮಗ್ರಿಗಳನ್ನು ಕೂಡಿಹಾಕುವುದಕ್ಕಾಗಿ ಆದಾಯದ ಬಹುಭಾಗವನ್ನು ವೆಚ್ಚಮಾಡುತ್ತಿವೆ. ಹೈದರಾಲಿ ಮತ್ತು ಟಿಪ್ಪುಸುಲ್ತಾನರು ಬಳ್ಳಾರಿ ಹಾಗೂ ಕೃಷ್ಣನಗರದ ಕೋಟೆಯ ಭದ್ರವಾದ ಸ್ಥಳಗಳಲ್ಲಿ ಯುದ್ಧ ಸಾಮಗ್ರಿಗಳಾದ ಮದ್ದುಗುಂಡುಗಳನ್ನು ರಕ್ಷಿಸುವುದಕ್ಕಾಗಿ ಇಟ್ಟಿಗೆ ಗಾರೆಯನ್ನು ಬಳಸಿ ನಿರ್ಮಿಸಿರುವ ಕಣಜಗಳನ್ನು ನಾವು ಇಂದಿಗೂ ಕಾಣಬಹುದು.

ಕುರುಗೋಡಿನ ಕೋಟೆ ಕ್ರಿ.ಶ. ೧೦ನೆಯ ಶತಮಾನದ್ದು. ಇದು ರಾಜಕೀಯ ಏರಿಳಿತಗಳಿಂದಾಗಿ ಮೂಲರೂಪದಲ್ಲಿಲ್ಲ. ಕೋಟೆಯ ಒಳಸುತ್ತಿನ ಬಾಗಿಲುಗಳು ಸರಳವಾಗಿರದೆ ವೈರಿಗೆ ಗೊಂದಲವುಂಟು ಮಾಡುವ ರೀತಿಯಲ್ಲಿವೆ. ದೊಡ್ಡ ಕೊತ್ತಳದಂತೆ ಮುಂದೆ ಚಾಚಿರುವ ಭಾಗದ ಬದಿಯಲ್ಲಿರುವ ಬಾಗಿಲು ಶತ್ರು ದೃಷ್ಟಿಗೆ ಬೀಳುವುದಿಲ್ಲ. ಪ್ರವೇಶವು ಹಲವು ದಿಕ್ಕುಗಳನ್ನು ಬದಲಿಸುವುದರಿಂದ ಶತ್ರುವನ್ನು ತಡೆಹಿಡಿಯುವುದು ತೀರಾ ಸುಲಭ. ಈ ವ್ಯವಸ್ಥೆಯನ್ನು ಉಚ್ಚಂಗಿದುರ್ಗದ ಕೋಟೆಯಲ್ಲಿಯೂ ಅಳವಡಿಸಲಾಗಿದೆ. ಕೋಟೆಯು ಬಹು ವಿಶಾಲವಾಗಿರವುದಲ್ಲದೆ ಕಡಿದಾದ ಬೆಟ್ಟದ ಮೇಲೆಯು ಎತ್ತರವಾದ ಕೋಟೆ ಗೋಡೆಗಳಿದ್ದವು. ಹೀಗಾಗಿ ಕುರುಗೋಡಿನ ಶಾಸನಗಳು ಇದನ್ನು ಮುಗಿಲುದ್ದವಾಗಿ ಮುವಳಿಸಿದ ಕೋಟೆ ಎಂದಿವೆ.

ಪಾಳೆಯಗಾರರ ಕೋಟೆಗಳಲ್ಲಿ ಹಿಂದೂ-ಮುಸ್ಲಿಂ ಮಿಶ್ರ ಶೈಲಿಯನ್ನು ಗುರುತಿಸಬಹುದು. ಕಲ್ಲುಗಳ ಜೊತೆಗೆ ಇಟ್ಟಿಗೆ ಗಾರೆ ಬಳಕೆ ಹಾಗೂ ಕಮಾನಿನಾಕಾರದ ಬಾಗಿಲುಗಳು ರಚನೆಯಾದವು. ಈ ಮೊದಲಿದ್ದ ಆಳ್ವೇರಿಗಳ ಮೇಲಿನ ತೆನೆಗಳ ವಿನ್ಯಾಸದಲ್ಲಿ ಬದಲಾವಣೆಯಾಗಿದೆ. ಮುಂಚಿನ ಕೋಟೆ ತೆನೆಗಳು ಘನರೂಪದವುಗಳಾಗಿದ್ದವು. ಇವುಗಳ ಹಿಂದೆ ನಿಂತು ಬಿಲ್ಲುಗಾರರು ಎರಡು ತೆನೆಗಳ ಮಧ್ಯದ ಸಂಧಿಯ ಮೂಲಕ ಬಾಣಗಳನ್ನ ಬಿಡುತ್ತಿದ್ದರು. ಕ್ರಮೇಣ ಬಂದೂಕುಗಳ ಬಳಕೆ ಪ್ರಾರಂಭವಾದುದರಿಂದ ಅವುಗಳಿಗಾಗಿ ತೆನೆಗಳಲ್ಲಿ ಹಾಗೂ ಕೋಟೆ ಗೋಡೆಗಳಲ್ಲಿ ರಂಧ್ರಗಳನ್ನು ಬಿಟ್ಟಿರುವುದು ಗೋಚರಿಸುವುದರಿಂದ ಘನರೂಪ ಹಾಗೂ ರಂಧ್ರಗಳ ಈ ಎರಡು ಸ್ಥಿತ್ಯಂರಗಳನ್ನು ನಾವಿಲ್ಲಿ ಸೂಕ್ಷ್ಮವಾಗಿ ಗುರುತಿಸಬಹುದು.

ಕೋಟೆಗಳ ಜೊತೆಗೆ ಕೊತ್ತಳಗಳೆಂಬ ಪದವು ಸೇರಿಕೊಂಡಿದೆ. ಕೋಟೆಯಿಂದ ಕೊತ್ತಳವನ್ನು ಬೇರ್ಪಡಿಸುವುದೆಂದರೆ ಶರೀರದಿಂದ ಅಂಗಾಂಗಗಳನ್ನು ವಿಭಜಿಸಿದಂತೆ. ಕೋಟೆಗೆ ಭದ್ರತೆ ಇರುವುದೇ ಕೊತ್ತಳಗಳಿಂದ. ಹಾಗಾಗಿ ಕೋಟೆಯ ಆಯಾಕಟ್ಟಿನ ಸ್ಥಳಗಳಲ್ಲಿ ಕೊತ್ತಳಗಳನ್ನು ನಿರ್ಮಿಸುತ್ತಿದ್ದರು. ಕೊತ್ತಳವು ಎರಡು ಗೋಡೆಗಳನ್ನು ಜೋಡಿಸುವುದರ ಜೊತೆಗೆ ರಕ್ಷಣೆಯ ಜವಾಬ್ದಾರಿಯನ್ನು ಹೋರುತ್ತದೆ. ಹೀಗಾಗಿಯೇ ಕೌಟಿಲ್ಯನು ಕೊತ್ತಳಗಳು ಕೋಟೆಗೆ ಅಂಟಿ ಕೊಂಡಿರಬೇಕೆಂದಿದ್ದಾನೆ. ಕೊತ್ತಳವೆಂದರೆ ಬುರುಜು, ಹುಡೇವು ಎಂಬ ಅರ್ಥಗಳನ್ನು ಕಲ್ಪಿಸಲಾಗಿದೆ. ಇದಿನ್ನು ಚರ್ಚೆಯಾಗಬೇಕಾದ ವಿಷಯ. ಏಕೆಂದರೆ ಕೌಟಿಲ್ಯನ ಚಿಂತನೆಯಲ್ಲಿ ಕೊತ್ತಳವು ಭಿನ್ನ ಅರ್ಥವನ್ನು ಪಡೆದುಕೊಳ್ಳುತ್ತದೆ.

 

[1] ಸುಂದರ ಅ., ಕರ್ನಾಟಕ ಪ್ರಾಗಿತಿಹಾಸಕಾಲದ ಕಲೆ, ಪು.೬೭-೬೯, ಬೆಂಗಳೂರು ಐ.ಬಿ.ಎಚ್.ಪ್ರಕಾಶನ ೧೯೯೪.

[2] ದೇವರ ಕೊಂಡರೆಡ್ಡಿ ಮತ್ತು ಇತರರು, ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ-೧, (ಬಳ್ಳಾರಿ ಜಿಲ್ಲೆ) ಪು. ೩೭೨-೭೫, ೧೯೯೮, ಹಂಪಿ ಕನ್ನಡ ವಿಶ್ವವಿದ್ಯಾಲಯ

[3] ಅದೇ., ಪು.೧೯

[4] ಚೆನ್ನಬಸವಯ್ಯ ಹಿರೇಮಠ, ಕುರುಗೋಡು ಸಿಂದರು : ಒಂದು ಅಧ್ಯಯನ, ಪು. ೧೦೮, ೧೯೯೮, ಕೊಪ್ಪಳ ಸಂಗಣ್ಣನವರು ಅಗಡಿ ಸಂಸ್ಕೃತಿ ಪ್ರತಿಷ್ಠಾನ

[5] ದೇವರ ಕೊಂಡಾರೆಡ್ಡಿ ಮತ್ತು ಇತರರು, ಪೂರ್ವೋಕ್ತ ಪು. ೪೦, ೧೯೯೮

[6] ಅದೇ., ಪು.೩೯

[7] ಅದೇ., ಪು. ೧೯

[8] ಚೆನ್ನಬಸವಯ್ಯ ಹಿರೇಮಠ, ಪುರ್ವೋಕ್ತ, ಪು. ೧೦೮, ೧೯೯೫

[9] ಅದೇ., ಪು. ೧೦೯

[10] ಅದೇ., ಪು.೧೦೯

[11] ಕೊಟ್ರೇಶ್ ಎಂ. ಕೋಟೆ ಕೊತ್ತಳಗಳು ಒಂದು ಅಧ್ಯಯನ (ಬಳ್ಳಾರಿ ಜಿಲ್ಲೆ) ಪಿಎಚ್.ಡಿ. ಮಹಾಪ್ರಬಂಧ, ೨೦೦೨, ಹಂಪಿ ಕನ್ನಡ ವಿಶ್ವವಿದ್ಯಾಲಯ

[12] ಅದೇ., ಪು. ೩೭

[13] ಅದೇ., ಪು. ೩೬

[14] ಕುರುಗೋಡಿನ ಬಸವೇಶ್ವರ ದೇವಾಲಯದ ದಕ್ಷಿಣಕ್ಕೆ ಇರಿಸಿರುವ ಶಾಸನದಲ್ಲಿ

[15] ಕಲಬುರ್ಗಿ ಎಂ.ಎಂ., (ಸಂ) ಕರ್ನಾಟಕದ ಕೈಫಿಯುತ್ತುಗಳು, ಪು. ೪೫೫, ೧೯೯೪, ಹಂಪಿ ಕನ್ನಡ ವಿಶ್ವವಿದ್ಯಾಲಯ

[16] ಅದೇ., ಪು. ೪೫೫

[17] ಅದೇ., ಪು. ೪೫೫

[18] SII IX (I) pt I No. 53, ಕುರುಗೋಡು

[19] ದೇವರಕೊಂಡಾರೆಡ್ಡಿ ಮತ್ತು ಇತರರು, ಪುರ್ವೋಕ್ತ, ಪು. ೨೩, ೧೯೯೮

[20] ಕಲಬುರ್ಗಿ ಎಂ.ಎಂ., ಸಂ, ಪುರ್ವೋಕ್ತ. ಪು. ೪೫೬, ೧೯೯೪

[21] ಚೆನ್ನಬಸವಯ್ಯ ಹಿರೇಮಠ., ಪುರ್ವೋಕ್ತ, ಪು. ೭೩-೭೪, ೧೯೯೫

[22] ಚೆನ್ನಬಸವಯ್ಯ ಹಿರೇಮಠ., ಕುರುಗೋಡು ಕೋಟೆ ಮುತ್ತಿಗೆ, ಸೂರ್ಯಕೀರ್ತಿ (ಸಂ.) ಡಾ.ಕೃಷ್ಣಮೂರ್ತಿ ಮತ್ತು ಪಿ.ವಿ.ವಸಂತಲಕ್ಷ್ಮಿ ಪು. ೨೭೪, ೨೦೦೦, ಬೆಂಗಳೂರು ಸೂರ್ಯನಾಥ ಕಾಮತ್ ಅಭಿನಂದನಾ ಸಮಿತಿ

[23] ಕಲಬುರ್ಗಿ ಎಂ.ಎಂ., (ಸಂ), ಪುರ್ವೋಕ್ತ, ಪು. ೪೫೫, ೧೯೯೪

[24] ಕೊಟ್ರೇಶ್ ಎಂ., ಪುರ್ವೋಕ್ತ, ಪು. ೮೧, ೨೦೦೨

[25] E.I XIV p. 297 ಕುರುಗೋಡು

[26] E.I XIV p.279 ಕುರುಗೋಡು

[27] ಚೆನ್ನಬಸವಯ್ಯ ಹಿರೇಮಠ, ಪುರ್ವೋಕ್ತ, ಪು. ೧೦೪, ೧೯೯೫

[28] E.I. XIV p.265 ಕುರುಗೋಡು

[29] ಚೆನ್ನಬಸವಯ್ಯ ಹಿರೇಮಠ, ಪುರ್ವೋಕ್ತ, ಪು. ೧೦೪, ೧೯೯೫

[30] SII IX (I)p. 296, ಕುರುಗೋಡು

[31] ಚೆನ್ನಬಸವಯ್ಯ ಹಿರೇಮಠ., ಪುರ್ವೋಕ್ತ, ಪು. ೨೭೫, ೨೦೦೨