ಇತಿಹಾಸ ಸಂಶೋಧಕರು ಹಸ್ತಪ್ರತಿ, ಶಾಸನ ಮತ್ತು ಸ್ಮಾರಕಗಳನ್ನು ಆಧರಿಸಿ ಹೇಳುವ ಅಥವಾ ಬರೆದಿರುವ ಚರಿತ್ರೆ ಇತಿಹಾಸದ ಒಂದು ಭಾಗ. ಅದರ ಇನ್ನೊಂದು ಭಾಗ ಜನಪದರಲ್ಲಿದೆ. ‘ಜನಪದರಲ್ಲಿ ನಿರ್ದಿಷ್ಟ ಕಾಲಮಿತಿಯ ಆಕರಗಳನ್ನೊಳಗೊಂಡ ಇತಿಹಾಸ ಅಥವಾ ಚರಿತ್ರೆ ಎಂಬುದಿಲ್ಲ. ಅವರಲ್ಲಿ ಪುರಾಣ, ಕಥೆ, ಕಾವ್ಯ ಮತ್ತು ಐತಿಹ್ಯಗಳಿವೆ. ಅದನ್ನೇ ಅವರು ಇತಿಹಾಸ ಎಂದು ತಿಳಿದುಕೊಂಡಿದ್ದಾರೆ ಮತ್ತು ಅದನ್ನೇ ಅವರು ನಿರೂಪಿಸುತ್ತಾರೆ’. ಇತಿಹಾಸ ಸಂಶೋಧಕರಂತೆ ಜಾನಪದ ನಿರೂಪಕರಿಗೆ ದಾಖಲೆಗಳು ಬೇಕಾಗಿಲ್ಲ. ಅದರ ಅವಶ್ಯಕತೆಯೂ ಅವರಿಗೆ ಇಲ್ಲ. ಅವರು ನಿರೂಪಿಸುವುದನ್ನೇ ಸತ್ಯ ಎಂದು ನಂಬಿ ಅದನ್ನೇ ಪ್ರತಿಪಾದಿಸುತ್ತಾರೆ. ಪ್ರತಿಯೊಂದು ಪ್ರದೇಶದ ಮೌಖಿಕ ಪರಂಪರೆಯಲ್ಲಿರುವ ಪುರಾಣ, ಕಥೆ, ಕಾವ್ಯ ಅಧ್ಯಯನಕ್ಕೆ ತೊಡಗಿಕೊಂಡಾಗ ಆ ಪ್ರದೇಶದ ಚರಿತ್ರೆಯ ಇನ್ನೊಂದು ಮುಖದ ಪರಿಚಯವಾಗುತ್ತದೆ.

ಒಂದು ಪ್ರದೇಶದ ಸಮಗ್ರ ಅಧ್ಯಯನವೆಂದರೆ ಅಲ್ಲಿಯ ಚರಿತ್ರೆ, ಹಸ್ತಪ್ರತಿ, ಶಾಸನ ಮತ್ತು ಸ್ಮಾರಕಗಳಿಂದ ಮಾತ್ರ ಪರಿಪೂರ್ಣವಾಗಲಾರದು. ಅದರ ಜೊತೆಗೆ ತಲೆತಲಾಂತರಗಳಿಂದ ಮೌಖಿಕ ಪರಂಪರೆಯಲ್ಲಿ ಉಳಿದಿರುವ ಸಾಹಿತ್ಯದ ಅಧ್ಯಯನವೂ ಅಷ್ಟೆ ಮುಖ್ಯ. ಇತಿಹಾಸ ರಚನೆಕಾರರ ಕಣ್ಣಿಗೆ ಗೋಚರಿಸದೇ ಉಳಿದಿರುವ ಅದೆಷ್ಟೋ ನಗ್ನ ಸತ್ಯಗಳು ಜಾನಪದ ಸಾಹಿತ್ಯದಲ್ಲಿ ಹುದುಗಿಕೊಂಡಿರುತ್ತವೆ. ಒಂದು ಘಟ್ಟದಲ್ಲಿ ಇತಿಹಾಸ ತಜ್ಞರು ಚರಿತ್ರೆ ಬರೆಯುವಾಗ ಅಲ್ಲಿಯ ಲಿಖಿತ ಆಕರಗಳೇ ಮೂಲ ಆಕರಗಳು ಮೌಖಿಕ ಪರಂಪರೆಯಲ್ಲಿರುವ ಯಾವುದೇ ಆಕರಗಳಿಗೆ ಸಾಕ್ಷಿಗಳಿರುವುದಿಲ್ಲ ಎಂದು ನಿರಾಕರಿಸುತ್ತಿದ್ದರು. ಈ ಮನೋಧರ್ಮ ಬದಲಾಗಬೇಕಾಗಿದೆ. ಜಾನ್‌ಫ್ಲೀಟ್ ಅವರು ಸಂಗ್ರಹಿಸಿದ ಲಾವಣಿಗಳ ಮತ್ತು ಆ ಪ್ರದೇಶದ ಚರಿತ್ರೆಯ ಅಧ್ಯಯನ ಮಾಡಿದಾಗ ಚರಿತ್ರೆಕಾರರಿಗೆ ಗೊತ್ತಾಗದೇ ಇರುವ ಅನೇಕ ಸಂಗತಿಗಳನ್ನು ಅರಿತುಕೊಳ್ಳಬಹುದು. ಹೀಗಾಗಿ ಚರಿತ್ರೆಯನ್ನು ಪುನರ್ ರಚಿಸುವಾಗ ಮೌಖಿಕ ಆಕರಗಳನ್ನು ಗಮನಿಸಬೇಕಾದುದು ಅತ್ಯವಶ್ಯವಾಗಿ ನಡೆಯಬೇಕಾಗಿದೆ.

ಬಳ್ಳಾರಿ ಜಿಲ್ಲೆ ಪ್ರಾಗಿತಿಹಾಸ ಮತ್ತು ಇತಿಹಾಸಕಾಲದ ಅನೇಕ ಅವಶೇಷಗಳನ್ನೊಳಗೊಂಡ ಸ್ಥಳವಾಗಿದೆ. ಇದಕ್ಕೆ ಕುರುಗೋಡು ಹೊರತಾಗಿಲ್ಲ. ಪ್ರಾಗಿತಿಹಾಸಕಾಲದ ಮಾನವ ಇಲ್ಲಿ ಬಾಳಿ ಬದುಕಿದ್ದ ಎಂಬುದಕ್ಕೆ ಈ ಪರಿಸರದಲ್ಲಿರುವ ಬೆಟ್ಟಗಳು, ಗುಹೆಗಳು, ಬಂಡೆ ಚಿತ್ರಗಳು, ಅವನು ಬಳಸುತ್ತಿದ್ದ ಕೈಕೊಡಲಿಗಳು ಸಾಕ್ಷಿಗಳಾಗಿವೆ. ಕುರುಗೋಡು ಪ್ರದೇಶ ಪ್ರಾಗಿತಿಹಾಸಕಾಲದಿಂದ ಇತಿಹಾಸ ಕಾಲದವರೆಗೆ ಆದಿಮಾನವನ ಪರಿವರ್ತನಾಶೀಲವಾದ ಬದುಕನ್ನು ಕಂಡಿದೆ ಎಂಬುದು ಹೆಮ್ಮೆಯ ವಿಷಯ. ಆದಿಮ ಸಂಸ್ಕೃತಿಯ ಅನೇಕ ಮೌಲಿಕ ಬುಡಕಟ್ಟು, ಸಾಂಸ್ಕೃತಿಕ, ಮಾನವಶಾಸ್ತ್ರ, ಪ್ರಾಗಿತಿಹಾಸ, ಚರಿತ್ರೆ, ಶಾಸನ, ಸಮಾಜಶಾಸ್ತ್ರ, ಜಾನಪದ, ರಾಜಕೀಯ ಮುಂತಾದ ಹಲವಾರು ಕ್ಷೇತ್ರಗಳಲ್ಲಿ ಅಧ್ಯಯನ ಕೈಕೊಳ್ಳಲು ಕುರುಗೋಡು ಪ್ರಶಸ್ತ ಸ್ಥಳವಾಗಿದೆ.

ಆದಿಮಾನವನ ತನ್ನ ಬದುಕಿನ ಅನೇಕ ಸ್ಥಿತ್ಯಂತರಗಳನ್ನು ಈ ಪ್ರದೇಶದಲ್ಲಿ ಕಂಡುಕೊಂಡಿದ್ದಾನೆಂದು ಹೇಳುವುದು ನಿರ್ವಿವಾದ. ಕುರುಗೋಡು ಆದಿಮಾನವನಿಂದ ಬೇಟೆ, ಪಶುಪಾಲನೆ, ಕೃಷಿ ನಂತರ ರಾಜ್ಯ, ಸಾಮ್ರಾಜ್ಯದವರೆಗೆ ಮಾನವ ತನ್ನ ಸಮಗ್ರ ಸಾಂಸ್ಕೃತಿಕ ಬದುಕನ್ನು ಕಟ್ಟಿಕೊಂಡ ಪ್ರದೇಶವಾಗಿದೆ. ಕುರುಗೋಡು ಐತಿಹಾಸಿಕವಾಗಿ, ಧಾರ್ಮಿಕವಾಗಿ ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಸಮೃದ್ಧ ನಾಡು. ಇಲ್ಲಿಯವರೆಗೆ ಇಲ್ಲಿಯ ಚರಿತ್ರೆ, ಪ್ರಾಗಿತಿಹಾಸ, ಸ್ಮಾರಕ, ಶಾಸನ ಇವುಗಳ ಮೇಲೆ ಬೆಳಕು ಚೆಲ್ಲುವ ಅಧ್ಯಯನಗಳು ನಡೆದಿವೆ ಆದರೆ ಮೌಖಿಕ ಚರಿತ್ರೆ, ಸಾಹಿತ್ಯಕ್ಕೆ ಸಂಬಂಧಿಸಿದಂತೆ ಅಧ್ಯಯನ ಅತ್ಯಲ್ಪ. ಈ ಪ್ರದೇಶದ ಪಾರಂಪರಿಕ ಜ್ಞಾನ, ಮೌಖಿಕ ಸಂಸ್ಕೃತಿ, ಸಾಹಿತ್ಯದ ಮೂಲಕ ಸಂವಹನಗೊಳ್ಳುತ್ತ ಬಂದಿರುವ ನಮ್ಮ ಅನೇಕ ಅನುಭವದ, ವಾಸ್ತವದ ತಿಳುವಳಿಕೆಗಳು ಮಾನವನಷ್ಟೇ ಪ್ರಾಚೀನವಾದವು. ಮನುಕುಲದ ಅಧ್ಯಯನವನ್ನು ಈ ಪ್ರದೇಶದಲ್ಲಿ ಕೈಕೊಳ್ಳಬೇಕಾಗಿದೆ.

ಇತಿಹಾಸದ ಪುಟಗಳನ್ನು ತಿರುವಿದಾಗ ರಾಜ, ಮಹಾರಾಜ, ಮಂತ್ರಿ, ಪುರೋಹಿತ, ಆಡಳಿತಾಧಿಕಾರ ಅವರ ಪತ್ನಿಯರ, ಮಕ್ಕಳ ಮತ್ತು ಯುದ್ಧ ಅಥವಾ ರಾಜ್ಯವಿಸ್ತಾರದ ವಿಷಯ ತಿಳಿಯುತ್ತದೆ. ಆದರೆ ಈ ರಾಜ್ಯವನ್ನು ಕಟ್ಟಿದ, ಹೋರಾಟದಲ್ಲಿ ಸತ್ತ, ರಾಜನಿಗಾಗಿ ಪ್ರಾಣತ್ಯಾಗ ಮಾಡಿದವರ ಹೆಸರಿನಲ್ಲಿ ಹೆಚ್ಚೆಂದರೆ ಒಂದು ವೀರಗಲ್ಲು ಇರುತ್ತದೆ. ಅದು ಯಾವ ವೀರನಿಗೆ ಸಂಬಂಧಿಸಿದ ವೀರಗಲ್ಲು ಎಂಬುದನ್ನು ಅಲ್ಲಿ ನಮೂದಿಸಿರುವುದಿಲ್ಲ. ಅವನಿಗೆ ಸಂಬಂಧಿಸಿದ ಯಾವ ಚರಿತ್ರೆಯೂ ಇತಿಹಾಸದಲ್ಲಿರುವುದಿಲ್ಲ. ಇಂತಹ ಅನೇಕ ಮರೆಮಾಚಿದ, ರಾಜ್ಯಕ್ಕಾಗಿ, ರಾಜನಿಗಾಗಿ, ಈ ಸಂಸ್ಕೃತಿಗಾಗಿ, ಹೋರಾಡಿದ ಸಾಂಸ್ಕೃತಿಕ ವೀರರ, ಚಾರಿತ್ರಿಕ ವೀರರ ಚರಿತ್ರೆ ಮೌಖಿಕ ಸಾಹಿತ್ಯ ಪರಂಪರೆಯಲ್ಲಿ ಉಳಿದುಕೊಂಡಿರುತ್ತದೆ. ಹೀಗಾಗಿ ಮನುಕುಲದ ಸಂಸ್ಕೃತಿಯನ್ನು ಅರ್ಥೈಸಿಕೊಳ್ಳಲು ಅಕ್ಷರ ಸಂಸ್ಕೃತಿಯ ಸೊಂಕಿಲ್ಲದೇ ಇರುವ ಮೌಖಿಕ ಸಾಹಿತ್ಯದಲ್ಲಿ ತಲೆತಲಾಂತರ ವರ್ಷಗಳಿಂದ ಜನರು ಬದುಕಿದ, ಬದುಕುತ್ತಿದ್ದ, ಅವರ ಸಂಸ್ಕೃತಿ, ಆಚಾರ, ವಿಚಾರ, ಕಾವ್ಯ, ಕಥೆ, ಪುರಾಣ, ಧರ್ಮ, ನಂಬಿಕೆ ಸಂಪ್ರದಾಯ, ಇವುಗಳ ಅಧ್ಯಯನದಿಂದ ಈ ಪ್ರದೇಶದ ಸಂಸ್ಕೃತಿಯ ಹತ್ತಾರು ಮುಖಗಳ ದರ್ಶನವಾಗುತ್ತದೆ.

ಮೌಖಿಕ ಸಾಹಿತ್ಯ ಉಳಿದೆಲ್ಲ ಸಾಹಿತ್ಯ ಪ್ರಕಾರಗಳಿಗೆ ಅದು ತಾಯಿಬೇರು. ಈ ಮೌಖಿಕ ಸಾಹಿತ್ಯ ಎರಡು ಪ್ರಮುಖ ಮಾಧ್ಯಮಗಳ ಮೂಲಕ ಪ್ರಸಾರವಾಗುತ್ತಿರುತ್ತದೆ. ೧. ಮಾತು ೨. ಕೃತಿ

ಕೇಳುವುದು ಅದನ್ನು ಜ್ಞಾಪಕದಲ್ಲಿಟ್ಟು ಇನ್ನೊಬ್ಬರಿಗೆ ಹೇಳುವುದು. ನೋಡುವುದು ಅದನ್ನು ನೆನಪಿನಲ್ಲಿಟ್ಟುಕೊಂಡು ಅದರಂತೆ ಅಭಿವ್ಯಕ್ತಪಡಿಸುವುದು. ಇವೆರಡು ಮೌಖಿಕ ಸಾಹಿತ್ಯದ ಪ್ರಮುಖ ಲಕ್ಷಣಗಳು. ಜನಪದ ಪುರಾಣ, ಐತಿಹ್ಯ, ಕಥೆ, ಗೀತೆ, ಗಾದೆ, ಒಗಟು, ಕಾವ್ಯಗಳು ಇವೇ ಮೊದಲಾದವುಗಳು ಮಾತಿಗೆ ಸಂಬಂಧಿಸಿದ ಮಾಧ್ಯಮಗಳಾಗಿವೆ.

ನಂಬಿಕೆ, ಆಚಾರ-ವಿಚಾರ, ಸಂಪ್ರದಾಯ, ಶಿಲ್ಪ, ವಾಸ್ತುಶಿಲ್ಪ, ಚಿತ್ರ, ನರ್ತನ, ಆಟಗಳು, ಬಯಲಾಟ ಮುಂತಾದವು ಕೃತಿ ಮಾಧ್ಯಮವಾಗಿವೆ.

ಕುರುಗೋಡಿನ ಸುತ್ತಲಿನ ಪ್ರದೇಶ ಆದಿಮಾನವನ ನೆಲೆಯಾಗಿತ್ತು ಎಂಬುದನ್ನು ಈಗಾಗಲೇ ಇತಿಹಾಸ ತಜ್ಞರು ಗುರುತಿಸಿದ್ದಾರೆ. ಆದಿಮಾನವನಿಂದ ಅರ್ವಾಚೀನ ಮಾನವನವರೆಗೆ ಮೌಖಿಕ ಪರಂಪರೆ ಹೇಗೆ ರೂಪಗೊಂಡು ಸ್ಥಿತ್ಯಂತರಗಳನ್ನು ಹೊಂದುತ್ತ ವಿವಿಧ ಶಾಖೆಗಳಲ್ಲಿ ಬೆಳೆದು ಬಂದಿತು ಎಂಬುದನ್ನು ಗಮನಿಸುವುದು ಸೂಕ್ತವೆನಿಸುತ್ತದೆ.

ಧರ್ಮ-ಜನಪದ ಪದ್ಯ ಸಾಹಿತ್ಯ

ಕುರುಗೋಡು ಪರಿಸರ ಹನ್ನೆರಡನೆಯ ಶತಮಾನಕ್ಕಾಗಲೇ ಭಕ್ತಿ ಪಂಥದ ಕೇಂದ್ರವಾಗಿತ್ತು. ಇಲ್ಲಿಯ ಪ್ರಮುಖ ಆರಾಧ್ಯ ದೈವಗಳಲ್ಲೊಂದಾದ ವಜ್ರಬಂಡಿ ಬಸಪ್ಪನನ್ನು ಕುರಿತಾದ ಅನೇಕ ಹಾಡುಗಳಲ್ಲಿ, ಭಜನೆ, ಡೊಳ್ಳಿನ ಹಾಡುಗಳಲ್ಲಿ ಪ್ರಸ್ತಾಪಿಸುತ್ತಿದ್ದರು. ಜಗತ್ತಿನಲ್ಲಿಯ ಯಾವುದೇ ಧರ್ಮವಿರಲಿ ಅದಕ್ಕೂ ಸಂಗೀತಕ್ಕೂ ಇರುವ ಅವಿನಾಭಾವ ಸಂಬಂಧ ಮಾತ್ರ ಅತ್ಯಂತ ಪ್ರಾಚೀನವಾದದು. ಜನಪದ ಸಂಗೀತ ಆದಿಮಾನವನ ಜೊತೆಗೆ ಬೆಳೆದು ಬಂದಿರುವಂತಹದ್ದು. ಮಾತು ಬಾರದ ಆದಿಮಾನವನ ತನ್ನ ಸುತ್ತಲಿದ್ದ ಪರಿಸರದಲ್ಲಿನ ಪಶುಪಕ್ಷಿಗಳ, ಪ್ರಾಣಿಗಳ ಕೂಗುಗಳನ್ನು ಅನುಕರಣೆ ಮಾಡುತ್ತ ತನ್ನಲ್ಲಿಯ ಭಾವನೆಗಳನ್ನು ಅಭಿವ್ಯಕ್ತಗೊಳಿಸಲು ಪ್ರಾಣಿಗಳಂತೆ ಲಯಬದ್ಧವಾಗಿ ಕೂಗತೊಡಗಿದ. ಇಲ್ಲಿಂದಲೇ ಜನಪದ ಸಾಹಿತ್ಯದ ಸಂಗೀತದ ಬೇರುಗಳು ಪ್ರಾರಂಭವಾದವು. ಆದಿಮಾನವನ ಬೆಳೆದಂತೆ ಸಂಗೀತವೂ ಅವನ ಜೊತೆ ಜೊತೆಗೆ ಬೆಳೆಯಿತು. ಅಲೆಮಾರಿಯಾಗಿದ್ದ ಮೂಲ ಮಾನವ ಕೃಷಿ ವೃತ್ತಿಯನ್ನು ಕೈಕೊಂಡು, ಒಂಟಿತನದಿಂದ ಸಂಘ ಜೀವನಕ್ಕೆ ಕಾಲಿಟ್ಟು, ಕಾಲಾನಂತರದ ಧರ್ಮದ ಚೌಕಟ್ಟಿಗೊಳಪಟ್ಟಂತೆ ಅವನ ಜೊತೆಗಿದ್ದ ಸಂಗೀತವು ಹೊಸ ಹೊಸ ಆಯಾಮಗಳನ್ನು ಪಡೆದುಕೊಳ್ಳುತ್ತ, ಮಾನವನಿಗೆ ಸಂತೋಷ ನೀಡುತ್ತ ಬೆಳೆಯಿತು. ಮಾನವನ ಬದುಕಿಗೆ ಗಾಳಿ, ನೀರು, ಆಹಾರ ಎಷ್ಟು ಮುಖ್ಯವೋ, ಅಷ್ಟೇ ಜನಪದ ಹಾಡುಗಾರಿಕೆ ಮುಖ್ಯವಾಯಿತು. ಆದಿಮಾನವನ ಕ್ರಿಯೆಯಲ್ಲಿಯೇ ಸಂಗೀತ ಅಂಟಿಕೊಂಡಿತು. ಹೀಗಾಗಿ ಮಾನವನ ಅನೇಕ ವೃತ್ತಿಗಳಲ್ಲಿ ಹಾಡುಗಳಿರುವುದನ್ನು ಕಾಣುತ್ತೇವೆ. ಬೀಸುವಾಗ, ಕುಟ್ಟುವಾಗ, ರೈತ ಹೊಲಗದ್ದೆಗಳನ್ನು ಊಳುವಾಗ, ಕಳೆಕೀಳುವಾಗ, ಹಂತಿ ಹೊಡೆಯುವಾಗ, ರಾಸಿ ಮಾಡುವಾಗ, ಭಕ್ತಿಯಿಂದ ದೈವವನ್ನು ಒಲಿಸಿಕೊಳ್ಳುವಾಗ ಹೀಗೆ ಹತ್ತು ಹಲವಾರು ಕ್ರಿಯೆಗಳಲ್ಲಿ ಹಾಡುಗಳು ಮೂಡಿ ಬಂದವು.

ಮೌಖಿಕ ಸಾಹಿತ್ಯ ಪರಂಪರಾನುಗತವಾಗಿ ಉಳಿದು ಬೆಳೆಯುತ್ತ ಬರಲು ಅದರಲ್ಲಿರುವ ಗೇಯ ಪ್ರಧಾನತೆಯೇ ಪ್ರಮುಖ ಕಾಣರವಾಗಿದೆ. ಈ ಪರಿಸರದಲ್ಲಿ ಇರುವ ಕಾಳಿಂಗರಾಯ ಸಾಸಿ ಚೆನ್ನಮ್ಮ, ಕುರುಗೋಡು ಬಸವಣ್ಣ ಮುಂತಾದವರನ್ನು ಕುರಿತಾದ ಹಾಡು, ಕಾವ್ಯಗಳೆಲ್ಲ ಉಳಿದು ಬರಲಿಕ್ಕೆ ಅದು ಗೇಯಪ್ರಧಾನವಾದ ಹಾಡುಗಬ್ಬವಾಗಿರುವುದೇ ಕಾರಣ. ಪ್ರಾಚೀನ ಜನಪದ ಕವಿಗಳು ಗದ್ಯಕ್ಕಿಂತ ಪದ್ಯ ಸಾಹಿತ್ಯಕ್ಕೆ ಹೆಚ್ಚು ಮನ್ನಣೆ ನೀಡಿದ್ದಾರೆ. ಈ ಕಾರಣಕ್ಕಾಗಿ ಅವು ಮೌಖಿಕ ಪರಂಪರೆಯಲ್ಲಿ ಉಳಿದು ಬರಲು ಸಾಧ್ಯವಾಗಿದೆ. ಕನ್ನಡ ಸಾಹಿತ್ಯ ಚರಿತ್ರೆಯನ್ನು ಅವಲೋಕಿಸಿದಾಗ ಚಂಪೂ, ವಚನ, ರಗಳೆ, ಷಟ್ಪದಿ ಈ ಕಾವ್ಯ ಪ್ರಕಾರಗಳೆಲ್ಲವೂ ಹಾಡುಗಬ್ಬಗಳು. ಕುಮಾರವ್ಯಾಸ ಭಾರತವನ್ನು ಹಾಡುವ ಅನೇಕ ಕಲಾವಿದರು ಇಂದೂ ಅಲ್ಲಲ್ಲಿ ಸಿಗುತ್ತಾರೆ. ಹೀಗಾಗಿ ಧಾರ್ಮಿಕ ಪವಿತ್ರ ಗ್ರಂಥಗಳನ್ನು ಬರೆದಿಟ್ಟು ಓದುವುದರ ಬದಲು, ಕಂಠ ಪರಂಪರೆಯಿಂದ ಹಾಡಿಕೊಳ್ಳುವುದು ಹೆಚ್ಚು ಕಡಿಮೆ ಎಲ್ಲ ಜನಾಂಗಗಳಲ್ಲಿಯೂ ಬಹಳ ಹಿಂದಿನಿಂದಲೂ ಬಂದಿದೆ. ಹೀಗಾಗಿ ಕುರುಗೋಡು ಪರಿಸರದಲ್ಲಿಯೂ, ಡೊಳ್ಳಿನ ಹಾಡುಗಳು, ಭಜನೆ ಹಾಡುಗಳು, ಶರಣರ ಸ್ವರವಚನಗಳು, ಬಯಲಾಟದ ಪದ್ಯಗಳು, ಕಾವ್ಯಗಳು ಪರಂಪರಾಗತವಾಗಿ ಉಳಿದು ಬೆಳೆದು ಬರಲಿಕ್ಕೆ ಅದು ಹಾಡಿನ ರೂಪದಲ್ಲಿರುವುದರಿಂದಲೇ ಸಾಧ್ಯವಾಗಿದೆ.

ಜಾನಪದ ಸಾಹಿತ್ಯದಲ್ಲಿ ಅನೇಕ ಕಲಾ ಪ್ರಕಾರಗಳಿವೆ. ಕೋಲಾಟ, ಡೊಳ್ಳಿನ ಕುಣಿತ, ದೊಡ್ಡಾಟ, ಸಣ್ಣಾಟ, ಪುರವಂತರ ಕುಣಿತ, ಸುಗ್ಗಿಕುಣಿತ, ನಂದಿಕೋಲು ಕುಣಿತ, ಲಾವಣಿ, ಗೀಗೀ ಮುಂತಾದವು ಪ್ರದರ್ಶಿಸಲ್ಪಡುತ್ತಿವೆ. ಈ ಕಲೆಗಳ ಪ್ರದರ್ಶನದಲ್ಲಿ ಹಾಡುಗಾರಿಕೆಗೆ ಮಹತ್ವದ ಸ್ಥಾನವಿದೆ. ಜನಪದ ಕಲೆಗಳಲ್ಲಿ ಹಾಡು ಮೊದಲು ಕುಣಿತ ನಂತರ. ಕನ್ನಡ ನಾಡಿನಾದ್ಯಂತ ಅನೇಕ ಬುಡಕಟ್ಟು ಮತ್ತು ಜನಪದ ಮಹಾಕಾವ್ಯಗಳುಂಟು. ಈ ಮಹಾಕಾವ್ಯಗಳು ಧರ್ಮ, ಚಾರಿತ್ರಿಕ ಘಟನೆ, ಸಮುದಾಯಗಳ ಸಂಸ್ಕೃತಿ, ಅವರ ಆಚಾರ ವಿಚಾರ, ಸಂಪ್ರದಾಯ ಮುಂತಾದ ಅನೇಕ ವಿಷಯಗಳನ್ನು ಬಿಂಬಿಸುವ ಸಾಂಸ್ಕೃತಿಕ ಮತ್ತು ಧಾರ್ಮಿಕ ಮಾಧ್ಯಮಗಳಾಗಿವೆ. ಈ ಪ್ರದೇಶದ ಡೊಳ್ಳಿನ ಹಾಡು, ಸಾಸಿ ಚೆನ್ನಮ್ಮನ ಕಾವ್ಯ, ಕುಮಾರ ರಾಮ ಮತ್ತು ಕೃಷ್ಣಗೊಲ್ಲರ ಕಥನ ಕಾವ್ಯ ಮುಂತಾದವು ಸುಮಾರು ಮೂರುನೂರು ಪುಟಗಳಿಂದ ನಾಲ್ಕುನೂರು ಪುಟಗಳಷ್ಟು ವಿಸ್ತಾರವಾದವುಗಳಾಗಿವೆ. ಇಂತಹ ಮಹಾಕಾವ್ಯಗಳನ್ನು ಕಲಾವಿದರು ತಮ್ಮ ಸ್ಮೃತಿ ಪಟಲದಲ್ಲಿಟ್ಟುಕೊಂಡು ಹಾಡುತ್ತ ಬಂದಿರುವ ಪರಂಪರೆಯನ್ನು ಇಂದೂ ಕಾಣುತ್ತೇವೆ.

ಜಾನಪದ ಕ್ಷೇತ್ರದಲ್ಲಿ ಪದ್ಯ ಸಾಹಿತ್ಯ ಅತ್ಯಂತ ವಿಸ್ತಾರವಾದದ್ದು. ಜನಪದ ಹಾಡು ಗಾರಿಕೆಯಲ್ಲಿ ಸಾವಿರಾರು ಲಯಗಳಿವೆ. ಆಯಾ ಪದ್ಯಗಳನ್ನು ಆಯಾ ಲಯದಲ್ಲಿ ಹಾಡಿದರೆ ಮಾತ್ರ ಸೊಗಸು. ಜನಪದ ಹಾಡುಗಾರಿಕೆಯಲ್ಲಿ ಹುಟ್ಟಿಕೊಂಡ ಲಯಗಳು ಕ್ರಿಯಾ ಪ್ರಧಾನವಾದವುಗಳು. ಕುಟ್ಟುವ, ಬೀಸುವ ಹಾಡಿನ ಲಯದಲ್ಲಿ ಹಂತಿ, ರಾಸಿ ಪದಗಳನ್ನು ಹಾಡಿದರೆ ಅಭಾಸವೆನಿಸುತ್ತದೆ. ಹಾಡುಗಾರಿಕೆಯಲ್ಲಿ ಅತೀ ದೊಡ್ಡ ಶಕ್ತಿ ಅಡಗಿದೆ. ಪ್ರೇಕ್ಷಕರನ್ನು ಸಮ್ಮೋಹನಕ್ಕೊಳಪಡಿಸುವ ಶಕ್ತಿ ಜನಪದ ಸಂಗೀತ ಮತ್ತು ಹಾಡುಗಾರಿಕೆಯಲ್ಲಿದೆ. ಇಂತಹ ಶಕ್ತಿಯುಳ್ಳ ಸಂಗೀತವನ್ನು ಜಗತ್ತಿನ ಎಲ್ಲ ಧಾರ್ಮಿಕ ಪಂಥಗಳು, ತಮ್ಮ ದೈವದ ಸ್ಮರಣೆಗಾಗಿ, ಧರ್ಮದ ಪ್ರಚಾರಕ್ಕಾಗಿ, ಸಮುದಾಯದ ಸಂಸ್ಕೃತಿ ಆಚರಣೆ ಸಂಪ್ರದಾಯಗಳನ್ನು ಅಭಿವ್ಯಕ್ತಪಡಿಸುವುದಕ್ಕಾಗಿ, ಮನರಂಜನೆಗಾಗಿ ಬಳಸಿಕೊಂಡಿದ್ದಾರೆ.

ಕುರುಗೋಡು ಶೈವ ಧರ್ಮದ ಪ್ರಮುಖ ಕೇಂದ್ರವಾಗಿತ್ತೆಂದು ಹೇಳಬಹುದು. ಹಂಪೆಯ ವಿರೂಪಾಕ್ಷದೇವರಿಗೆ ಕುರುಗೋಡಿನ ಬಸವೇಶ್ವರ ಎದುರು ದೇವರು ಎಂಬ ಪ್ರತೀತಿ ಇದೆ. ಯುಗಾದಿಯ ಪಾಡ್ಯದದಿನ ಹಂಪೆಯಲ್ಲಿರುವ ವಿರೂಪಾಕ್ಷದೇವನ ಲಿಂಗಕ್ಕೆ ಸೂರ್ಯೋದಯವಾದ ಕೂಡಲೇ ಸೂರ್ಯನ ಕಿರಣಗಳು ಈಶ್ವರ ಲಿಂಗದ ಮೇಲೆ ಬೀಳುತ್ತವೆ. ಅಂದೆ ಸಾಯಂಕಾಲ ಸೂರ್ಯನ ಕಿರಣಗಳು ಕುರುಗೋಡಿನ ಬಸವೇಶ್ವರ ಮೇಲೆ ಮೂಡುತ್ತವೆ. ಹೀಗಾಗಿ ಹಂಪೆಯ ವಿರೂಪಾಕ್ಷನಿಗೆ ಕುರುಗೋಡಿನ ಬಸವ ಎದುರು ಬಸವನಾಗಿದ್ದಾನೆ ಎಂಬ ಭಾವನೆ ಇದೆ. ಕುರುಗೋಡಿನ ಪರಿಸರದಲ್ಲಿ ಶೈವ ದೇವಾಲಯಗಳೇ ಹೆಚ್ಚು ಕಂಡು ಬರುತ್ತವೆ. ಅದರಲ್ಲೂ ವೀರಭದ್ರನ ಆರಾಧನೆ ಸಂಪ್ರದಾಯ ಈ ಪರಿಸರದಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಂತಿದೆ. ಈ ಪ್ರದೇಶದಲ್ಲಿ ಪಂಚಮುಖದ ವೀರಭದ್ರ, ಕೊಳವೆ ವೀರಭದ್ರ, ಗವಿ ವೀರಭದ್ರ ದೇವಸ್ಥಾನಗಳಿರುವುದು ಕಂಡು ಬರುತ್ತದೆ. ಶ್ರಾವಣ ಮಾಸದಲ್ಲಿ ಬಸವೇಶ್ವರ ದೇವಸ್ಥಾನದಲ್ಲಿ ನಡೆಯುವ ಆಚರಣೆಗಳನ್ನು ಗಮನಿಸಿದಾಗ ಪ್ರತಿ ಶ್ರಾವಣ ಸೋಮವಾರ ಬಸವೇಶ್ವರ ದೇವಸ್ಥಾನದಿಂದ ಪಾಲಕಿ ವೀರಭದ್ರನ ದೇವಸ್ಥಾನಕ್ಕೆ ಹೋಗಿ ಬರುವ ಪರಂಪರೆ ಇರುವುದು ಕಂಡು ಬರುತ್ತದೆ. ಹೀಗಾಗಿ ಈ ಪರಿಸರದಲ್ಲಿ ವೀರಭದ್ರನ ಕುಣಿತ, ತಾಸೆ ಕುಣಿತ, ಪುರವಂತಿಕೆ ಮೇಳ, ಗುಗ್ಗಳ ಸಂಪ್ರದಾಯ ಪ್ರಮುಖವಾಗಿ ಕಂಡುಬರುತ್ತದೆ.

ವೀರಭದ್ರ ಶಿವನ ಪರಿವಾರದಲ್ಲಿ ಪರಾಕ್ರಮಶಾಲಿಯಾದ ದೈವ. ವೀರಭದ್ರನ ಸೃಷ್ಟಿ ಕುರಿತು ಪುರಾಣದಲ್ಲಿ ಹೀಗೆ ಉಲ್ಲೇಖವಾಗಿದೆ. ದಕ್ಷಬ್ರಹ್ಮ ಮಹಾಯಜ್ಞವನ್ನು ಮಾಡುವಾಗ ಶಿವ ಮತ್ತು ಉಮಾದೇವಿಯನ್ನು ಹೊರತು ಪಡಿಸಿ ಎಲ್ಲ ದೇವಾನು ದೇವತೆಗಳಿಗೆ, ಋಷಿ ಮುನಿಗಳಿಗೆ ಆಹ್ವಾನವನ್ನು ನೀಡಿರುತ್ತಾನೆ. ದಕ್ಷಬ್ರಹ್ಮನ ಮಗಳು ಉಮೆ ಶಿವನನ್ನು ಒತ್ತಾಯಿಸಿ ಯಜ್ಞಕ್ಕೆ ಕರೆಯನ್ನಿಡದಿದ್ದರೂ ಹೋಗುತ್ತಾಳೆ. ಅಲ್ಲಿ ದಕ್ಷಬ್ರಹ್ಮ ಎಲ್ಲರ ನಡುವೆ ಶಿವನನ್ನು ಶಿವನನ್ನು ಅವಮಾನಗೊಳಿಸುತ್ತಾನೆ. ಗಂಡನಿಗಾದ ಅವಮಾನವನ್ನು ಸಹಿಸದ ಉಮೆ ಯಜ್ಞ ಕುಂಡದಲ್ಲಿ ಹಾರಿ ಸಾವನ್ನಪ್ಪುತ್ತಾಳೆ. ಇದನ್ನು ತಿಳಿದ ಶಿವ ತನ್ನ ಜಡೆಯನ್ನು ನೆಲಕ್ಕೆ ಅಪ್ಪಳಿಸಿದಾಗ ವೀರಭದ್ರ ಉದಯಿಸುತ್ತಾನೆ. ಶಿವನ ಆಜ್ಞೆಯ ಮೇರೆಗೆ ದಕ್ಷಬ್ರಹ್ಮ ನಡೆಸುವ ಯಜ್ಞ ಸ್ಥಳಕ್ಕೆ ಹೋಗಿ ದಕ್ಷಬ್ರಹ್ಮನನ್ನು ಕೊಲ್ಲುತ್ತಾನೆ ಎಂಬ ಪುರಾಣ ಕಥೆಯನ್ನು ಹೊರತು ಪಡಿಸಿ ನೋಡಿದರೆ ‘ಆರ್ಯ ಮತ್ತು ದ್ರಾವಿಡ ಸಂಘರ್ಷದ ಮಧ್ಯ ವೀರಭದ್ರ ಹುಟ್ಟಿದ ಎಂದು ತೋರುತ್ತದೆ. ಆರ್ಯ ಮೂಲದ ದಕ್ಷ ಮತ್ತು ದ್ರಾವಿಡ ಮೂಲದ ಶಿವ ಇವರಿಬ್ಬರ ಸಂಘರ್ಷಣೆಯೇ ವೀರಭದ್ರನ ಅವತಾರಕ್ಕೆ ಕಾರಣವಾಗಿರಬಹುದು’.[1] ಆರ್ಯರು ದ್ರಾವಿಡರ ಮೇಲೆ ಅನ್ಯಾಯ ದೌರ್ಜನ್ಯಗಳನ್ನು ಎಸಗುತ್ತಲೇ ಬಂದಿದ್ದರು. ಅವರ ಅಟ್ಟಹಾಸವನ್ನು ಅಡಗಿಸಲು ವೀರಭದ್ರನೆಂಬ ಸಾಂಸ್ಕೃತಿಕ ನಾಯಕ ಹುಟ್ಟಿಬಂದ. ಮುಂದೆ ವೀರಭದ್ರ ಒಬ್ಬ ಸಾಂಸ್ಕೃತಿಕ ನಾಯಕನಾಗಿ, ಶಿವನ ಪರಿವಾರದ ವೀರದೈವನಾಗಿ, ಕೊನೆಗೆ ಪುರಾಣ ದೈವವಾಗಿ ನಿಂತಿದ್ದಾನೆ. ಅಂದಿನಿಂದ ಇಂದಿನವರೆಗೂ ವೀರಭದ್ರ ಧಾರ್ಮಿಕವಲಯದ ದೈವವಾಗಿ ಆರಾಧನೆಗೊಳಪಡುತ್ತ ಬಂದಿದ್ದಾನೆ. ವೀರಭದ್ರನ ಶಕ್ತಿ, ಸಾಹಸ, ವೀರತ್ವಗಳನ್ನು ಗುಣಗಾನ ಮಾಡಲು ಸ್ಮರಿಸುವ ಆಚರಣೆ, ಮದುವೆ ಸಮಯದ ಗುಗ್ಗಳ ಕಾರ್ಯದಲ್ಲಿ ನಡೆಯುತ್ತದೆ. ವೀರಭದ್ರನ ಶೌರ್ಯ, ವೀರಭದ್ರನ ಕುಣಿತ, ತಾಸೆ ಕುಣಿತ, ಪುರವಂತರ ಕುಣಿತ, ವೀರಗಾಸೆ ಕುಣಿತ ಎಂಬುದಾಗಿ ಕರೆಯುತ್ತಾರೆ. ಈ ಪರಂಪರೆ ಕುರುಗೋಡು ಪರಿಸರದಲ್ಲಿ ದಟ್ಟವಾಗಿರುವುದನ್ನು ಕಾಣುತ್ತೇವೆ. ವೀರಶೈವರ ಮದುವೆ ಕಾರ್ಯದಲ್ಲಿ ಗುಗ್ಗಳ ಆಚರಣೆ ಇದ್ದೇ ಇರುತ್ತದೆ. ವೀರಭದ್ರ ವೀರಶೈವ ಸಮುದಾಯದ ಅನೇಕ ಕುಟುಂಬಗಳಲ್ಲಿ ಮನೆ ದೇವನಾಗಿ ಸ್ಥಾನ ಪಡೆದುಕೊಂಡಿದ್ದಾನೆ. ವೀರಭದ್ರನ ಕುಣಿತ ಆಚರಣೆಗಳನ್ನು ವಿಧಿವತ್ತಾಗಿ ನೆರವೇರಿಸುವ ಸಲುವಾಗಿ ಅನೇಕ ಕುಟುಂಬಗಳಲ್ಲಿಯ ಪುರುಷರು ‘ಕಾಸೆ’ ಕಟ್ಟಿಕೊಂಡು ತಮ್ಮ ಸೇವೆಯನ್ನು ವೀರಭದ್ರನಿಗಾಗಿಯೇ ಮುಡುಪಾಗಿಟ್ಟಿರುವುದನ್ನು ಕುರುಗೋಡು ಪರಿಸರದಲ್ಲಿ ಕಾಣುತ್ತೇವೆ. ಪುರವಂತಿಕೆ ಮೇಳದಲ್ಲಿ ವೀರಭದ್ರನ ಸ್ಮರಣೆಗಾಗಿ ಒಡಬುಗಳನ್ನು ಪುರವಂತರು ಹೇಳುತ್ತಾರೆ. ಇಲ್ಲಿ ಅಲ್ಲಮಪ್ರಭು, ಬಸವಣ್ಣನ ವಚನಗಳನ್ನು ಬಳಸಿಕೊಂಡಿರುತ್ತಾರೆ. ಕುರುಗೋಡಿನ ಪರಿಸರದ ಪುರವಂತರು ತಮ್ಮ ಪರಿಸರದಲ್ಲಿ ಸಂದು ಹೋದ ಶರಣ ಎಮ್ಮೆ ಬಸವನ ಕಾಲಜ್ಞಾನದ ವಚನಗಳನ್ನು ಹೆಚ್ಚಾಗಿ ಬಳಸಿಕೊಂಡಿದ್ದಾರೆ ಎಂಬುದು ತಿಳಿಯುತ್ತದೆ. ಇಂತಹ ಧಾರ್ಮಿಕ ಕಲೆಗಳೆಲ್ಲವೂ ಪರಂಪರಾನುಗತವಾಗಿ ಮೌಖಿಕ ಪರಂಪರೆಯಲ್ಲಿ ಉಳಿದು ಬಂದಿವೆ. ಪುರವಂತಿಕೆ ಕುಣಿತದಲ್ಲಿ ಬಳಸುವ ಸಮಾಳ ವಾದ್ಯ, ವೀರ ರೌದ್ರತೆಯಿಂದ ಕೂಡಿದ ವೀರಭದ್ರನ ರೂಪದ ಕುಣಿತಕ್ಕೆ ಮತ್ತಷ್ಟು ರೌದ್ರತೆಯನ್ನು ತಂದು ಕೊಡುತ್ತದೆ. ಕೃಷಿ ವೃತ್ತಿಯಾಗಿ ಬೆಳೆದು ಬಂದ ಮೇಲೆ ನಂದಿ ಆರಾಧ್ಯ ದೈವವಾದರೆ, ವೀರಭದ್ರ ನಂದಿಗಿಂತ ಮೊದಲು ಆರಾಧ್ಯ ದೈವವಾಗಿದ್ದರಿಂದ ಕುರುಗೋಡಿನಲ್ಲಿ ಬಸವೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದಲ್ಲಿ ಆಚರಿಸಲ್ಪಡುವ ಆಚರಣೆಯಲ್ಲಿ ವೀರಭದ್ರ ದೇವರಿಗೆ ಮೊದಲ ಪೂಜೆ ಕಲ್ಪಿಸಿರುವುದು ಕಂಡು ಬರುತ್ತದೆ.

ಕುರುಗೋಡಿನ ಸಿಂಧರು, ವಿಜಯನಗರ ಅರಸರು ಕುರುಗೋಡಿನ ಬಸವೇಶ್ವರನನ್ನು ಆರಾಧ್ಯ ದೈವವಾಗಿರಿಸಿಕೊಂಡಿದ್ದರು. ಕುರುಗೋಡು ಪರಿಸರದಲ್ಲಿ ಭಜನೆ, ಡೊಳ್ಳಿನ ಹಾಡುಗಳ ಪರಂಪರೆ ಬಹಳ ಹಿಂದಿನಿಂದ ಮೌಖಿಕವಾಗಿ ಬೆಳೆದು ಬಂದಿದೆ. ಭಜನೆ, ಭಕ್ತಿಗೀತೆಗಳ, ಡೊಳ್ಳಿನ ಹಾಡುಗಳ ಮೇಲೆ ಶೈವ ಭಕ್ತಿ ಪಂಥದ ಪ್ರಭಾವವಿದೆಯೆಂದು ತಿಳಿಯುತ್ತದೆ. ‘ಒಂಟಿಯಾಗಿ ಅಥವಾ ಗುಂಪಿನಲ್ಲಿ ದೇವರನ್ನು ಭಕ್ತಿಯಿಂದ ಸ್ತುತಿಸುವ ಕ್ರಮಕ್ಕೆ ‘ಭಜನೆ’ ಎನ್ನುವರು’, ಭಕ್ತನೊಬ್ಬ ದೈನ್ಯತೆಯಿಂದ ಪರಮಾತ್ಮನನ್ನು ಕುರಿತು ಪ್ರಾರ್ಥಿಸಿ, ವರ್ಣಿಸಿ, ಸ್ತುತಿಸಿ ಹಾಡುವಂತಹ ಭಕ್ತಿಗೀತೆಗಳನ್ನು ‘ಭಜನೆ’ಗಳೆಂದು ಕರೆಯಬಹುದು.[2] ಕುರುಗೋಡಿನಲ್ಲಿ ಡೊಳ್ಳಿನ ಮೂಲಕ, ಭಜನೆ ಮೂಲಕ ತಮ್ಮ ಆರಾಧ್ಯ ದೈವಗಳನ್ನು ಸ್ಮರಿಸುವ ಸಮುದಾಯಗಳನ್ನು ಕಾಣುತ್ತೇವೆ. ಭಜನೆ ಭಕ್ತಿ ಪಂಥದ ಪ್ರಮುಖ ಕೊಡುಗೆಯಾಗಿದೆ. ದುಃಖ, ಅಶಾಂತಿ, ದ್ವೇಷ, ಅಸೂಯೆ ತುಂಬಿದ ಮನಸ್ಸುಗಳಿಗೆ ‘ಭಜನೆ’ಯ ಮೂಲಕ ಶಾಂತಿ ನೆಮ್ಮದಿ ನೀಡಲು ಸಾಧ್ಯ ಎಂಬುದನ್ನು ಅರಿತುಕೊಂಡ ಜನ ಸಮುದಾಯಗಳು ದೇವರ ನಾಮಸ್ಮರಣೆಯುಳ್ಳ ಹಾಡುಗಳನ್ನು, ವಚನಗಳನ್ನು ಮೇಳಗಳಲ್ಲಿ ಹಾಡತೊಡಗಿದರು. ಶಿವರಾತ್ರಿಯ ದಿನ ಕುರುಗೋಡು ಪರಿಸರದ ಅನೇಕ ಭಜನೆಮೇಳಗಳು ಹಂಪೆಗೆ ಬಂದು ಬೆಳತನಕ ಭಜನೆ ಮಾಡುವುದನ್ನು ಕಾಣುತ್ತೇವೆ. ಕರ್ನಾಟಕದ ‘ಭಕ್ತಿ ಪಂಥಗಳು ಹುಟ್ಟಿ ಪ್ರಚಾರ ಪಡೆದ ಮೇಲೆ ಭಜನೆ ಪದ್ಧತಿಯು ಬಹುಬೇಗ ಜನಪ್ರಿಯವಾಯಿತು. ಪ್ರತಿ ಹಳ್ಳಿಗಳಲ್ಲಿಯೂ ಭಜನಾ ಮೇಳಗಳಿವೆ. ಭಜನಾ ಮೇಳಗಳ ಮೂಲ ಉದ್ದೇಶ ಭಗವದ್ಭಕ್ತಿಯನ್ನು ಸಾಮೂಹಿಕವಾಗಿ ಪ್ರಚೋದಿಸುವುದು ಆಗಿದೆ.'[3] ಈ ಭಜನೆಯೂ ಮೌಖಿಕ ಪರಂಪರೆಯಲ್ಲಿ ಸಾಗಿ ಬಂದಿರುವುದನ್ನು ಕಾಣುತ್ತೇವೆ. ಕುರುಗೋಡಿನ ಪರಿಸರದಲ್ಲಿ ಭಜನಾ ಮೇಳಗಳಲ್ಲದೇ ಡೊಳ್ಳಿನ ಮೇಳಗಳು ಅಲ್ಲಲ್ಲಿ ಕಂಡು ಬರುತ್ತವೆ. ಈ ಮೇಳಗಳಲ್ಲಿಯೂ ದೈವದ ನಾಮಸ್ಮರಣೆ ಕುರಿತಾದ ಹಾಡುಗಳನ್ನು, ಐತಿಹಾಸಿಕ, ಸಾಂಸ್ಕೃತಿ, ಚಾರಿತ್ರಿಕ, ಪೌರಾಣಿಕ ಕಥನ ಗೀತೆಗಳನ್ನು ಹಾಡುತ್ತಾರೆ.

ಚೌಡಕಿ ಮೇಳಗಳು ಕುರುಗೋಡ ಪರಿಸರದಲ್ಲಿ ಕಂಡು ಬರುತ್ತವೆ. ಮಾತೃ ದೇವತೆಯ ಆರಾಧನೆಗಾಗಿ ಹುಟ್ಟಿಕೊಂಡ ಈ ಆರಾಧನಾ ಪದ್ಧತಿ ಮೌಖಿಕ ಪರಂಪರೆಯಲ್ಲೇ ಸಾಗಿ ಬಂದಿದೆ. ಕುರುಗೋಡು ಪರಿಸರದಲ್ಲಿ ಆರಾಧಿಸಲ್ಪಡುವ ಶಕ್ತಿ ದೇವತೆಗಳನ್ನು ಕುರಿತು ಈ ಚೌಡಕಿ ಮೇಳಗಳಲ್ಲಿ ಕುಣಿಯುತ್ತ ಹಾಡುತ್ತಾರೆ. ಜೋಗಪ್ಪ, ಜೋಗವ್ವ, ಬಿಡುವ ಸಂಪ್ರದಾಯ ಈ ಪ್ರದೇಶದಲ್ಲಿರಬಹುದು. ಚೌಡಕಿ ಹಿಡಿದು ಹಾಡುವ ಈ ಕಲಾವಿದರಲ್ಲಿಯ ಕುಣಿತ ಹಾಡು ಮನಸ್ಸೆಳೆಯುವಂತಹದ್ದಾಗಿದೆ.

ಬಯಲಾಟ

ಕುರುಗೋಡು ಕುಡುತಿನಿ ಪ್ರದೇಶಗಳಲ್ಲಿ ಒಂದು ಕಾಲಕ್ಕೆ ಮೌಖಿಕವಾಗಿ ಸಾಗಿ ಬಂದ ಬಯಲಾಟಗಳ ಕೊಡುಗೆ ಅದ್ವಿತೀಯವಾದದ್ದು. ಈ ಪ್ರದೇಶದ ಬಯಲಾಟಗಳು ಸಿಂಧರ ಮತ್ತು ವಿಜಯನಗರ ಅರಸರ ಆಡಳಿತ ಕಾಲದಿಂದಲೇ ಹೆಚ್ಚು ಪ್ರಚಾರಕ್ಕೆ ಬಂದಂತೆ ತೋರುತ್ತದೆ. ಯಕ್ಷಗಾನ ಕೇವಲ ಕರಾವಳಿ ಪ್ರದೇಶಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಕುರುಗೋಡಿನಲ್ಲಿಯೂ ಯಕ್ಷಗಾನಗಳ ಪ್ರದರ್ಶನ ನಡೆಯುತ್ತಿತ್ತು ಎಂಬುದರ ಉಲ್ಲೇಖ ಕುರುಗೋಡಿನ ಸೀಮೆಯ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿರುವ ಶಾಸನದಿಂದ ತಿಳಿಯುತ್ತದೆ. ಈ ದೇವರಿಗೆ ಯಕ್ಷಗಾನದ ತಾಳಮದ್ದಲೆಯ ಸೇವೆ ನಡೆಸಿದವರಿಗೆ ದತ್ತಿ ಬಿಟ್ಟುದುದನ್ನು ಈ ಶಾಸನ ತಿಳಿಸುತ್ತದೆ. ಈ ಶಾಸನ ೧೫೫೬ರ ಕಾಲದ್ದು.

ಕುರುಗೋಡಿನ ಸುತ್ತಮುತ್ತ ಅನೇಕ ದೊಡ್ಡಾಟದ ಕಲಾವಿದರು ಇಂದೂ ಬಯಲಾಟಗಳನ್ನಾಡುವ ಪರಂಪರೆಯನ್ನು ಬೆಳೆಸಿಕೊಂಡು ಬಂದವರಾಗಿದ್ದಾರೆ. ಇವರು ಆಡುವ ಆಟಗಳೆಲ್ಲ ಹೆಚ್ಚಾಗಿ ವೀರ ರಸ ಪ್ರಧಾನವಾದವುಗಳೇ ಆಗಿವೆ. ಇದಕ್ಕೆ ಕಾರಣವನ್ನು ಹೀಗೆ ಊಹಿಸಬಹುದು. ಕುರುಗೋಡು, ಕಂಪ್ಲಿ, ಕುಡುತಿನಿ ಮುಂತಾದ ಈ ಪ್ರದೇಶ ದೊಡ್ಡಾಟಗಳ ತೌರುಮನೆಯೆಂದೇ ಹೇಳಬಹುದು. ಈ ಪ್ರದೇಶವನ್ನಾಳಿದ ಸಿಂದರು, ವಿಜಯನಗರ ಅರಸರು ಪರಾಕ್ರಮಶಾಲಿಗಳು. ಅವರ ಪ್ರಭಾವ ಈ ದೊಡ್ಡಾಟಗಳ ಮೇಲೆ ಆಗಿರಬಹುದು. ಹೀಗಾಗಿ ಈ ಪ್ರದೇಶಗಳಲ್ಲಿ ವೀರರಸ ಕಲ್ಲಕಂಬದ ಹೂವಣ್ಣ ವೃತ್ತಿಯಲ್ಲಿ ಪೋಲಿಸ ಕೆಲಸ ನಿರ್ವಹಿಸುತ್ತಿದ್ದರೂ ಇವರಿಗೆ ದೊಡ್ಡಾಟದ ಗೀಳು ಅಂಟಿಕೊಂಡಿದೆ ಎಂಬುದು ತಿಳಿಯುತ್ತದೆ.

ಕುಡುತಿನಿ ಮತ್ತು ಕಂಪಲಿಯಲ್ಲಿ ದೊಡ್ಡಾಟಗಳನ್ನು ರಚಿಸುತ್ತಿದ್ದರು ಎಂಬುದಕ್ಕೆ ಈ ಕೆಳಗಿನ ಪದ್ಯವನ್ನು ಗಮನಿಸಬಹುದು.

‘ಶ್ರೀ ಗೌರಿ ವರಪುತ್ರಾ, ಸತತಾಶುಭ ಚರಿತ್ರಾ
ಯೋಗಿ ಸಜ್ಜನ ಸ್ತೊತ್ರ ಜನನಿಭಾಗಾತ್ರಾ         ||೧||

ನಿಟಿಲನೇತ್ರನ ಸುತನೆ ನಿಗಮಗಮ ವಂದಿಪನೆ
ಸತಿತಾ ಸನ್ನಿತಕರ್ಣಾ ಕುಂಡಲಾಭರಣಾ           ||೨||

ಪೊಡವಿಯೊಳ್ ಕುಡುತಿನಿಯ ಒಡೆಯ ಭೀಮೇಶನ್
ಒಡೆಯ ಭೀಮೇಶನ ಬಿಡದೆ ಭಜಿಸುವೆ ನಾನು    ||೩||

ಶ್ರೀ ವಿಗ್ನರಾಜಾ ಪಾಹಿಮಾಂ
ಗಿರಿಜಾತೆನಂದನ ಮಾಡುವೆನು ವಂದನ
ನಿಮ್ಮ ಪಾದ ಸ್ಮರಣೆ ಮಾಳ್ಪೆ ಧನ್ಯ ಚರಿತನೆ
ಸನ್ನತಗುಣ ಶಾಂತವಿಟ್ಟು
ಪಾಲಿಸು ಮುದದಿ
ಕಲುಷರಹಿತ ಕಂಪಲಿಪುರ ನಿಲಯದಿ
ನೆಲೆಸಿ ಭಕ್ತಜನರಿಗೊಲಿದು ಸಲುಹೋ ನೀ ಮುದದಿ
ಕಾರಣ್ಯ ಶಶಧಿ ಭಕ್ತ ಜನರಿಗೊಲಿದು ಸಲಹೋ ನೀ ಮುದದಿ'[4]

ಕುರುಗೋಡಿನ ಅಕ್ಕ ಪಕ್ಕದ ಪ್ರದೇಶಗಳಾದ ಕುಡುತಿನಿ ಮತ್ತು ಕಂಪಲಿಯಲ್ಲಿ ರಚನೆಯಾದ ಬಯಲಾಟಗಳು ಕುರುಗೋಡಿನ ಕಲಾವಿದರ ಮೂಲಕ ಪ್ರದರ್ಶನಗೊಳ್ಳುತ್ತಿದ್ದವು ಎಂದು ತಿಳಿಯುತ್ತದೆ. ‘ಕುರುಗೋಡದ ದೊಡ್ಡ ಬಸವೇಶ್ವರನನ್ನು ಆರಾಧ್ಯ ದೈವವೆಂದು ನಂಬಿದ ಬಯಲಾಟ ಕವಿಗಳು ಮೊದಲಿಗೆ ಬಯಲಾಟ ಕೃತಿಗಳ ನೇರವಾದ ರಚನೆಗೆ ತೊಡಗದೆ, ಆ ದೇವತಾ ಪರವಾದ ಸ್ತುತಿ, ಮಂಗಳಾರತಿ, ತತ್ವದ ಹಾಡುಗಳನ್ನು ರಚಿಸಿದ್ದಾರೆ. ಇದರೊಟ್ಟಿಗೆ ಬಯಲಾಟದ ಕಥೆಗಳ ಜೋಡಣೆಯನ್ನು ಅವರೇ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಧಾರ್ಮಿಕ, ಸಾಂಸ್ಕೃತಿಕ ನೆಲವಾದ ಈ ಪ್ರದೇಶ ಬಯಲಾಟ ಸಾಹಿತ್ಯದ ಬೆಳವಣಿಗೆಯ ಕೇಂದ್ರ ಪ್ರದೇಶವಾಗಿ ಕಾಣುತ್ತದೆ’.[5]

ಕುರುಗೋಡಿನಲ್ಲಿ ಬಯಲಾಟಗಳ ಗೀಳೂ ಅಂಟಿಸಿಕೊಂಡವರ ಪರಂಪರೆ ಒಂದು ಕಾಲಕ್ಕಿತ್ತು ಎಂದು ಹೇಳಬಹುದು. ಕುರುಗೋಡದ ಕೆ.ದೊಡ್ಡಪ್ಪಾಚಾರಿ ಅವರು ೪೮ ಬಯಲಾಟ ಹಸ್ತ ಪ್ರತಿಗಳನ್ನು ಪ್ರತಿ ಮಾಡಿಕೊಂಡಿದ್ದರು. ಎಂಬುದನ್ನು ಗಮನಿಸಿದರೆ ಈ ಪ್ರದೇಶ ಬಯಲಾಟಗಳು ಪ್ರದರ್ಶಿಸಲಲ್ಪಡುವ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿತ್ತು ಎಂದು ಭಾವಿಸಬಹುದು.

‘ಕುರುಗೋಡಿನ ದೊಡ್ಡಪ್ಪಾಚಾರಿ ಅವರು ಬಯಲಾಟಗಳಲ್ಲಿ ನುರಿತ ಕಲಾವಿದರು. ಬಯಲಾಟಗಳಲ್ಲಿ ಚಿಕ್ಕಂದಿನಿಂದಲೇ ಸ್ತ್ರೀ ಪಾತ್ರ ನಿರ್ವಹಿಸುತ್ತ ಬಂದವರು. ಕುರುಗೋಡಿನ ಜೀರ್ ಗಾದೆಪ್ಪ ದೊಡ್ಡಪ್ಪಾಚಾರಿಯ ಗುರುಗಳು. ದೊಡ್ಡಪ್ಪಾಚಾರಿ ರಾಮಾಯಣದಲ್ಲಿ ಸೀತೆ, ದುಷ್ಯಾಸನ ಕಥೆಯಲ್ಲಿ ದ್ರೌಪದಿ, ದಕ್ಷಬ್ರಹ್ಮದಲ್ಲಿ ಪಾರ್ವತಿ, ಗಿರಿಜಾ ಕಲ್ಯಾಣದಲ್ಲಿ ರತಿ, ಲವಕುಶರ ಕಾಳಗದಲ್ಲಿ ಸೀತೆಯಾಗಿ ಪಾತ್ರವಹಿಸಿದ್ದಾರೆ. ಇವರು ಕಥೆ ಕಲಿಸುವ ಮಾಸ್ತರರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿಯುತ್ತದೆ. ಕುರುಗೋಡಿನವರೇ ಆದ ಈರಪ್ಪ ಬಯಲಾಟದ ಗೀಳು ಅಂಟಿಸಿಕೊಂಡು ಬಯಲಾಟ ಕಲಿಸುವ ವೃತ್ತಿಯನ್ನು ಹಿಡಿದಿದ್ದಾರೆ ಮತ್ತು ಸ್ವತಃ ಮುಮ್ಮೇಳದಲ್ಲಿ ಹಾಡುತ್ತಾರೆ. ಇವರ ಹತ್ತಿರವೂ ನಾಲ್ಕು ಬಯಲಾಟದ ಹಸ್ತಪ್ರತಿಗಲಿರುವದು ತಿಳಿದು ಬರುತ್ತದೆ.

ಕುರುಗೋಡಿನ ‘ಮೇಲುಮಠದ ದೊಡ್ಡಯ್ಯ (ಕ್ರಿ.ಶ. ೧೮೬೦-೧೯೫೦)ನವರು ‘ಲವಕುಶರ ಕಾಳಗ ಮತ್ತು ಷಣ್ಮುಖ ವಿಜಯ’ ಎಂಬ ಎರಡು ಬಯಲಾಟಗಳನ್ನು ರಚಿಸಿರುವುದು ತಿಳಿಯುತ್ತದೆ. ಶಿಕ್ಷಕ ವೃತ್ತಿಯವರಾದ ಇವರು ಕುರುಗೋಡಿನ ನೀಲಮ್ಮನ ಮಠಕ್ಕೆ ಮತ್ತು ಸೋಮಸಮುದ್ರಕ್ಕೆ ಪುರಾಣ ಪ್ರವಚನಗಳಿಗೆ ಹೋಗುತ್ತಿದ್ದರು. ಇವರು ಮಂಗಳಾರತಿ ಪದಗಳನ್ನು ರಚಿಸಿದ್ದರು ಎಂದು ತಿಳಿಯುತ್ತದೆ.[6] ಈ ಎಲ್ಲ ಹಿನ್ನೆಲೆಗಳನ್ನು ಗಮನಿಸಿದಾಗ ಕುರುಗೋಡಿನಲ್ಲಿ ಜನಪದ ರಂಗಭೂಮಿ ಜನಪ್ರಿಯತೆಗಳಿಸಿಕೊಂಡಿತ್ತು ಎಂಬುದನ್ನು ಗಮನಿಸಬಹುದಾಗಿದೆ.

ಐತಿಹ್ಯಗಳು

ಭಾರತೀಯ ಸಂಸ್ಕೃತಿಯಲ್ಲಿ ನಂಬಿಕೆ, ಸಂಪ್ರದಾಯ, ಆಚರಣೆಗಳು, ದೈವಿಕತೆ ಹಾಸು ಹೊಕ್ಕಾಗಿರುವುದನ್ನು ಕಾಣುತ್ತೇವೆ. ಪ್ರತಿಯೊಂದು ಪ್ರದೇಶದಲ್ಲಿ ಅನೇಕ ಐತಿಹ್ಯಗಳನ್ನೊಳಗೊಂಡ ಕಥೆಗಳು ಕಂಡು ಬರುವುದು ಸರ್ವೇಸಾಮಾನ್ಯ. ಜಾನಪದವು ಒಂದೊಂದು ಕಲ್ಲಿಗೂ ಒಂದೊಂದು ಕಥೆ ಹೆಣಿದಿದ್ದಾರೆ. ಹಂಪೆಯಲ್ಲಿರುವ ಅಕ್ಕತಂಗಿಯರ ಕಲ್ಲುಗಳನ್ನು ಗಮನಿಸಬಹುದು. ಅವುಗಳ ನೆಲೆ, ಹಿನ್ನೆಲೆ ಕುರಿತು ಅಧ್ಯಯನ ಮಾಡಿದಾಗ ಅದರಿಂದ ಗತಕಾಲದಲ್ಲಿ ನಡೆದ ಚರಿತ್ರೆ ಅಥವಾ ಸಂಸ್ಕೃತಿಯೊಂದರ ತುಣುಕು ಗೋಚರಿಸುತ್ತದೆ.

‘ಐತಿಹ್ಯಗಳು ಇತಿಹಾಸದ ವಿಕೃತಗೊಂಡ ಮುರಿದ ಚೂರುಗಳಾಗಿ ಚರಿತ್ರೆಯ ನಿರ್ಮಾಣಕ್ಕೆ ಸಹಾಯಕವಾಗುತ್ತವೆ. ಹೀಗಾಗಿ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಐತಿಹ್ಯಗಳು ಐತಿಹಾಸಿಕ ಮಹತ್ವವನ್ನು ಪಡೆಯುತ್ತವೆ. ಇತಿಹಾಸದ ಅಧ್ಯಯನದಲ್ಲಿ ಐತಿಹ್ಯಗಳು ಮೈಲುಗಲ್ಲುಗಳಾಗಿವೆ. ಒಬ್ಬ ಚರಿತ್ರೆಕಾರ ಸಂಧಿಗ್ಧ ಸ್ಥಿತಿಯಲ್ಲಿದ್ದಾಗ ಐತಿಹ್ಯಗಳು ಒಂದೊಂದು ಸಲ ಸ್ಪಷ್ಟವಲ್ಲದಿದ್ದರೂ ಅಸ್ಪಷ್ಟ ಬೆಳಕು ಚೆಲ್ಲಿ ಸಂಶೋಧನೆಗೆ ನೆರವಾಗುತ್ತದೆ’ ಎಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.

ಜನಪದ ಕಾವ್ಯದಂತೆ ಬಿತ್ತರಿಸುವ ಕುರುಗೋಡು ಶಾಸನದಲ್ಲಿ ಮಹಾಶಿವ ಭಕ್ತನಾದ ಸಿಂದ ಅರಸ ರಾಚಮಲ್ಲನ ವರ್ಣನೆಯಲ್ಲಿ, ಶಿವನು ನಂದಿ, ಮಹಾಕಾಳ, ಪಾರ್ವತಿಯೊಡನೆ ಬಂದು ರಾಚಮಲ್ಲನನ್ನು ಕೈಲಾಸಕ್ಕೆ ಕರೆದುಕೊಂಡು ಹೋಗುತ್ತಾರೆ. ಆಗ ಲೋಕಕ್ಕೆ ಕೌತುಕವಾಗಿ ಕಾಣುವಂತೆ ಕುರುಗೋಡು ಪಟ್ಟಣದ ಶ್ರೀ ಸ್ವಯಂಭೂದೇವರ ಪಶ್ಚಿಮ ಭಾಗದಲ್ಲಿ ಲಿಂಗ ರೂಪದಲ್ಲಿ ಉದ್ಭವಿಸಲು ಶ್ರೀ ಮದುದ್ಭವರಾಜಮಲ್ಲನೆಂದು ಹೆಸರು ಪಡೆಯುತ್ತಾನೆ.

ಕುರುಗೋಡಿನ ಹೊರವಲಯದಲ್ಲಿರುವ ಹೊರವಲಯದಲ್ಲಿರುವ ಮಾರ್ತಾಂಡ ದೇವಸ್ಥಾನ ಅಲ್ಲಿಯ ಜನರ ಬಾಯಿಯಲ್ಲಿ ಅದು ಮಾತಾಡೊ ಗುಡಿಯಾಗಿ ಪರಿಣಮಿಸಿದೆ. ಇದಕ್ಕೆ ಕಾರಣ ಇಷ್ಟೆ. ಗುಡಿಯಲ್ಲಿ ಮಾತನಾಡಿದರೆ ಅಲ್ಲಿ ಪ್ರತಿಧ್ವನಿಯಾಗುತ್ತದೆ. ಆ ಪ್ರತಿಧ್ವನಿಯನ್ನಿಟ್ಟುಕೊಂಡು ‘ಮಾತಾಡೊ ಗುಡಿ’ಎಂಬ ಹೆಸರನ್ನು ಹುಟ್ಟುಹಾಕಿದಂತಿದೆ. ಕುರುಗೋಡಿನ ಊರ ಹೊರಗಿರುವ ಸಂಗಮೇಶನ ದೇವಸ್ಥಾನವನ್ನು ‘ಹಿಂಡುಲಿ ಸಂಗಮೇಶನ ದೇವಸ್ಥಾನ’ ಎಂದೇ ಗುರುತಿಸುತ್ತಿದ್ದಾರೆ. ಕುರುಗೋಡು ಸುತ್ತಲಿನ ಪ್ರದೇಶ ಗುಡ್ಡ ಬೆಟ್ಟಗಳಿಂದ ಕೂಡಿರುವಂತಹದ್ದು. ಇಲ್ಲಿ ಹುಲಿಗಳ ಸಂಖ್ಯೆ ಒಂದು ಕಾಲಕ್ಕೆ ಅಧಿಕವಾಗಿದ್ದು, ನೀರು ಆಹಾರಕ್ಕಾಗಿ ಸಂಗಮೇಶ್ವರ ಗುಡಿಯ ಹತ್ತಿರ ಬಂದು ವಾಸಿಸುತ್ತಿರಬೇಕು. ಇದನ್ನು ಕಂಡ ಜನರು ಸಂಗಮೇಶ್ವರ ದೇವಸ್ಥಾನದಲ್ಲಿ ಹಿಂಡಿಂಡಾಗಿ ಹುಲಿಗಳು ಕಂಡು ಬರುತ್ತವೆಂದು ಹೇಳುತ್ತಿರುವುದೇ ಮುಂದೆ ‘ಹಿಂಡುಲಿ ಸಂಗಮೇಶ್ವರ ದೇವಸ್ಥಾನ’ ಆಗಿ ಪರಿಣಮಿಸಿರಬೇಕು.

ಕುರುಗೋಡಿನ ಜನಪದರ ಸೌಂದರ್ಯ ಪ್ರಜ್ಞೆಯನ್ನು ಕಲ್ಲು ಬೆಟ್ಟಗಳಲ್ಲಿಯೂ ಹೇಗೆ ಕಂಡು ಕೊಂಡಿದ್ದಾರೆಂಬುದನ್ನು ಗಮನಿಸಬಹುದು. ಕುರುಗೋಡಿನ ಭೌಗೋಳಿಕ ಪ್ರದೇಶವನ್ನು ಗಮನಿಸಿದಾಗ ಅದು ಸುತ್ತಲೂ ಬೆಟ್ಟಗುಡ್ಡಗಳಿಂದ ತುಂಬಿಕೊಂಡಿದೆ ಈ ಬೆಟ್ಟಗುಡ್ಡಗಳ ಸ್ವರೂಪವನ್ನು ಕಂಡು ಒಂದೊಂದಕ್ಕೆ ಒಂದೊಂದು ಹೆಸರು ಸೂಚಿಸಿದ್ದಾರೆ. ಅದರಲ್ಲಿ ಕೋಳಿಗುಡ್ಡವೂ ಒಂದು. ಈ ಬೆಟ್ಟ ಪ್ರದೇಶದ ಸ್ವರೂಪ ಕೋಳಿಯಾಕಾರದಲ್ಲಿ ಕಂಡು ಬಂದದ್ದರಿಂದ ಅದಕ್ಕೆ ಕೋಳಿಗುಡ್ಡ ಎಂದು ಹೆಸರಿಸಿದ್ದಾರೆ. ಈ ಹೆಸರುಗಳು ಮೌಖಿಕ ಪರಂಪರೆಯಲ್ಲೇ ಮುಂದುವರೆದು ಬಂದಿರುವುದನ್ನು ಕಾಣುತ್ತೇವೆ.

ಕುರುಗೋಡಿನಲ್ಲಿ ಕಂಡು ಬರುವ ಕತ್ತೆ ಬಂಡೆ ಶಾಸನ ಇದು ಅಂದು ಭೂಮಿಯನ್ನು ಅಳತೆ ಮಾಡುವುದರ ಬಗೆಗೆ ಸೂಚಿಸುತ್ತದೆ. ಎಂಟು ಗೇಣಿನ ಕಟ್ಟಿಗೆಯಿಂದ ಭೂಮಿ ಅಳತೆ ಮಾಡುತ್ತಿದ್ದದರ ಬಗ್ಗೆ ಈ ಶಾಸನ ಉಲ್ಲೇಖಿಸುತ್ತದೆ. ಈ ಪ್ರದೇಶದ ಜನರು ಪರಂಪರಾನುಗತವಾಗಿ ಭೂಮಿ ಅಳತೆ ಮಾಡುತ್ತ ಬಂದಿರುವುದನ್ನು ಈ ಶಾಸನದಲ್ಲಿ ಮಾತ್ರ ಕಾಣುತ್ತೇವೆ. ಈಗಲೂ ಜೋಕುಮಾರನ ಆಚರಣೆಯಲ್ಲಿ ಕೊನೆಯದಿನ ಅವನನ್ನು ಈ ಕತ್ತೆಬಂಡೆಗೆ ತಂದು ಒಂದು ಉದ್ದನೆಯ ಕೋಲಿನಿಂದ ತಲೆ ಒಡೆಯುತ್ತಾರೆ. ಅದೆ ಕೋಲಿನಿಂದ ಹೊಲ, ನಿವೇಶನ ಅಳೆಯುವ ಸಂಪ್ರದಾಯ ಮುಂದುವರೆದುಕೊಂಡು ಬಂದಿದೆ.

ಕುರುಗೋಡು ಈ ಶಬ್ದ ಹೇಗೆ ಬಂದಿದೆ ಎಂದು ಈ ಪರಿಸರದ ಜನರನ್ನು ವಿಚಾರಿಸಿದರೆ ಅವರ ದೃಷ್ಟಿ ಮೊದಲು ದೊಡ್ಡ ಬಸವೇಶ್ವರನ ಕಡೆಗೆ ಹೊರಳಿ, ಈ ಊರಿನ ಪ್ರಸಿದ್ಧ ದೈವವಾದ ದೊಡ್ಡ ಬಸವಣ್ಣನಿಗೆ ಕಿರಿದಾದ ಕೋಡುಗಳಿವೆ. ಈ ಕಿರುಗೋಡಿನಿಂದಲೇ ಕಿರುಗೋಡು ಕುರುಗೋಡು ಆಗಿದೆ ಎಂಬ ಅಭಿಪ್ರಾಯವನ್ನು ಮುಂದಿಡುತ್ತಾರೆ.

ದೊಡ್ಡ ಬಸವೇಶ್ವರನ್ನು ಕುರಿತಾದ ಐತಿಹ್ಯವೊಂದು ಜನರ ಬಾಯಿಯಲ್ಲಿದೆ. ಕುರುಗೋಡಿನ ಈ ಬಸವೇಶ್ವರ ಮೊದಲು ಬಹಳ ಚಿಕ್ಕವನಿದ್ದ. ಇವನು ವರ್ಷದಿಂದ ವರ್ಷಕ್ಕೆ ಬೆಳೆಯತೊಡಗಿದ. ಹೀಗೆ ಇವನು ಬೆಳೆಯುತ್ತಾ ಹೋದರೆ ಎಷ್ಟೆಷ್ಟು ದೊಡ್ಡ ದೊಡ್ಡದಾದ ಗುಡಿಗಳನ್ನು ಕಟ್ಟಬೇಕಾಗುತ್ತದೆ. ಎಂದು ವಿಚಾರಿಸಿದ ಜನ ಇವನು ಬೆಳೆಯದಂತೆ ತಡೆಯಲು ಬೆನ್ನಿಗೆ ಹಾರೆ ಹಾಕಿದ್ದಾರೆ ಎಂದು ಹೇಳುತ್ತಾರೆ.

ಕುರುಗೋಡಿನಲ್ಲಿರುವ ಕೊಟ್ಟೂರು ಸ್ವಾಮಿ ಮಠ ಸುಮಾರು ಎಂಟನೂರು ವರ್ಷಗಳ ಹಿಂದಿನದು ಎಂದು ಇಲ್ಲಿಯ ಜನ ಅಭಿಪ್ರಾಯ ಪಡುತ್ತಾರೆ. ಇಲ್ಲಿರುವ ಗದ್ದಿಗೆಗೆ ನಡೆದುಕೊಂಡರೆ ಮಾನವರ ರೋಗ, ರುಜಿನಗಳು ಕಡಿಮೆಯಾಗುತ್ತವೆ ಎಂಬ ಪ್ರತೀತಿ ಇದೆ. ಹೀಗೆ ಕುರುಗೋಡಿನ ಸುತ್ತಲೂ ಅನೇಕ ಐತಿಹ್ಯಗಳಿವೆ. ಅವು ಮೌಖಿಕ ಪರಂಪರೆಯಲ್ಲಿ ಮುಂದುವರೆದುಕೊಂಡು ಬಂದಿರುವುದನ್ನು ಇಂದೂ ಕಾಣುತ್ತೇವೆ.

ಜನಪದ ಪುರಾಣಗಳು

ಜನಪದ ಮಹಾಕಾವ್ಯಗಳಲ್ಲಿ ದೈವವಾಗಿ ನಿಂತಿರುವ ನಾಯಕರು ಒಂದು ಸಮುದಾಯದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಚಾರಿತ್ರಿಕ ವ್ಯಕ್ತಿಗಳು. ಒಂದು ಕಾಲಘಟ್ಟದಲ್ಲಿ ಈ ಸಾಂಸ್ಕೃತಿಕ ನಾಯಕ-ನಾಯಕಿಯರ ಚರಿತ್ರೆಯು ಆ ಸಮುದಾಯದ ಮೌಖಿಕ ಪರಂಪರೆಯಲ್ಲಿ ಮಾತ್ರ ಉಳಿದುಕೊಂಡಿತ್ತು. ಶಿಷ್ಟಪುರಾಣಗಳ ಪ್ರಭಾವ ಪ್ರೇರಣೆ ಈ ಸಮುದಾಯದ ಮೇಲಾದದ್ದರಿಂದ ಈ ಸಮುದಾಯಗಳು ತಮ್ಮ ಸಾಂಸ್ಕೃತಿಕ ನಾಯಕನ ಚರಿತ್ರೆಯನ್ನು ಪ್ರಕಟಪಡಿಸುವುದಕ್ಕಾಗಿ ಅವನಿಗೆ ದೈವತ್ವದ ಪಟ್ಟಿಕಟ್ಟಿ ಪುರಾಣ ವ್ಯಕ್ತಿಯನ್ನಾಗಿಸಿದರು. ಇದಕ್ಕೆ ವಿರುದ್ಧವಾಗಿ ಶಿಷ್ಟರು ತಮ್ಮ ಪೌರಾಣಿಕ ವ್ಯಕ್ತಿಗಳನ್ನು ಚಾರಿತ್ರಿಕ ವ್ಯಕ್ತಿಯನ್ನಾಗಿಸಲು ಬಯಸಿರುವುದು ಕಂಡು ಬರುತ್ತದೆ. ಜನಪದ ಸಮುದಾಯಗಳು ತಮ್ಮ ಸಾಂಸ್ಕೃತಿಕ ವ್ಯಕ್ತಿಯನ್ನು ಒಂದು ಸಲ ದೈವಕ್ಕೇರಿಸಿದರೆ ಸಾಕು. ಅವನ ಮೇಲೆ ಅನೇಕ ಕಥೆ ಪವಾಡ, ಐತಿಹ್ಯಗಳನ್ನು ಹೆಣೆದು, ಸಾಂಸ್ಕೃತಿಕ ವ್ಯಕ್ತಿಯ ವಾಸ್ತವಿಕ ಬದುಕನ್ನು ಮರೆಮಾಚಿ ಬಿಡುತ್ತಾರೆ. ಹೀಗಾಗಿ ಜನಪದ ಪುರಾಣಗಳಲ್ಲಿ ಕಂಡು ಬರುವ ದೈವಗಳೆಲ್ಲವೂ ಸಮುದಾಯಗಳ ಮಧ್ಯ ಬಾಳಿದ ಸಾಂಸ್ಕೃತಿಕ ನಾಯಕರೇ ಎಂದು ಅರ್ಥೈಸಿಕೊಳ್ಳಬೇಕಾಗುತ್ತದೆ.

ಕುರುಗೋಡಿನಲ್ಲಿ ಶಿವಶರಣೆ ಈರಮ್ಮನನ್ನು ಕುರಿತಾದ ಕಥೆಯೊಂದು ಪ್ರಚಲಿತದಲ್ಲಿದೆ. ಶಿವಶರಣೆ ಈರಮ್ಮನಿಗೆ ಐಕ್ಯವಾಗುವ ದಿನ ಬಂದಿತು. ಆ ದಿನದ ತಿಥಿ ನಕ್ಷತ್ರಗಳು ಈರಮ್ಮನಿಗೆ ದೇಹತ್ಯಾಗ ಮಾಡಲು ಅನುಕೂಲಕರವಾಗಿರಲಿಲ್ಲ. ಹೀಗಾಗಿ ಈರಮ್ಮ ಈಶ್ವರ ಗುಡ್ಡಕ್ಕೆ ಹೋಗಿ ಅಲ್ಲಿ ಲಿಂಗ ಪ್ರತಿಷ್ಠಾಪನೆ ಮಾಡಿ ಮಠಕ್ಕೆ ಹಿಂತಿರುಗುತ್ತಾಳೆ. ನಂತರ ಮಠದಲ್ಲಿರುವ ಬಚ್ಚಲ ಮನೆಗೆ ಹೋದ ಈರಮ್ಮ ಅಲ್ಲಿಯೇ ಅದೃಶ್ಯಳಾಗುತ್ತಾಳೆ. ಈರಮ್ಮ ಅದೃಶ್ಯಳಾದ ಸ್ಥಳದಲ್ಲಿ ಮಂಟಪವೊಂದಿತ್ತು. ಗಾಳಿ, ಮಳೆ, ಬಿಸಿಲಿನಿಂದ ಅದಕ್ಕೆ ಏನೂ ಆಗಿರಲಿಲ್ಲ. ಇದೇ ಊರಿನ ಕೋಮಟರ ರಾಧಮ್ಮ ಸುಮಾರು ೪೫ ವರ್ಷಗಳ ಹಿಂದೆ ಅದನ್ನು ಜೀರ್ಣೋದ್ಧಾರ ಮಾಡಿದ್ದಾಳೆ. ಶ್ರಾವಣಮಾಸದಲ್ಲಿ ದೊಡ್ಡ ಬಸವೇಶ್ವರನ ಪಲ್ಲಕ್ಕಿ ಈರಮ್ಮನ ಮಠಕ್ಕೆ ಬಂದು ಆ ನಂತರ ನೀಲಮ್ಮನ ಮಠಕ್ಕೆ ಹೋಗುತ್ತದೆ ಎಂದು ಹೇಳುತ್ತಾರೆ.

ಕುರುಗೋಡಿನ ಸುತ್ತಲಿನ ಪ್ರದೇಶದಲ್ಲಿ ಜಾನಪದ ಅಧ್ಯಯನಕಾರರಿಗೆ ಅತ್ಯಂತ ಮೌಲಿಕವಾದ ಸಾಮಗ್ರಿ ದೊರೆಯುತ್ತದೆ. ಈ ಲೇಖನ ಕುರುಗೋಡಿನ ಮೌಖಿಕ ಸಾಹಿತ್ಯದ ಅಧ್ಯಯನಕಾರರಿಗೆ ಒಂದು ಸ್ಫೂರ್ತಿಯಾಗಬಹುದೆಂದು ಭಾವಿಸಿದ್ದೇನೆ.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

 

[1] ಡಾ.ದೇವೇಂದ್ರಕುಮಾರ ಹಕಾರಿ, ‘ಜಾನಪದ ಭಂಡಾರ'(ಲೇ) ಆಚರಣೆ ಕುಣಿತ

[2] ಡಾ.ವೀರೇಶ ಬಡಿಗೇರ, ‘ಉತ್ತರ ಕರ್ನಾಟಕದ ಗೀತಮೇಳಗಳು’

[3] ಅದೇ. ಪು.೯

[4] ಡಾ.ಬಸವರಾಜ ಮಲಶೆಟ್ಟಿ, ‘ಉತ್ತರ ಕರ್ನಾಟಕದ ಬಯಲಾಟಗಳು’

[5] ಡಾ.ಕೆ.ಆರ್.ದುರ್ಗಾದಾಸ್, ‘ಬಳ್ಳಾರಿ ಜಿಲ್ಲೆಯ ಬಯಲಾಟಗಳು’

[6] ಅದೇ.