ಮಾನವನಷ್ಟೇ ಪಾರಂಪರಿಕ ಹಳಮೆ ಮಾನವ ಸಂಸ್ಕೃತಿಯದು. ಮಾನವನ ಜೀವನದ ಅತ್ಯಂತ ಪ್ರಾಚೀನವಾದ ಅವಸ್ಥೆಯಿಂದ ಇಂದಿನವರೆಗೆ ಸಮಷ್ಟಿರೂಪದ ಜೀವನಾನುಭವಗಳು ಆತನ ಬದುಕಿನಲ್ಲಿ ಹರಳುಗೊಂಡಿವೆ. ಇದನ್ನೇ ಮಾನವಶಾಸ್ತ್ರಜ್ಞರು ‘ಸಂಸ್ಕೃತಿ’ (Culture) ಎಂಬುದಾಗಿ ಪ್ರತಿಪಾದಿಸುತ್ತಾರೆ. ಇದು ಕಾಲ, ದೇಶ, ಜಾತಿ, ಜನಾಂಗ, ಭಾಷೆ ಮುಂತಾದ ಪರಿಮಿತಿಗಳನ್ನು ದಾಟಿ ಸಮುದಾಯದಿಂದ ಸಮುದಾಯಗಳನ್ನು ಒಳಗುಮಾಡಿಕೊಳ್ಳುವ ಮೂಲಕ ವೈವಿಧ್ಯಮಯ ಸಾಂಸ್ಕೃತಿಕ ಸಂಬಂಧ, ಸಾಮಿಪ್ಯ ಮತ್ತು ಸಮಾಂತರತೆಗಳನ್ನು ಬೆಳೆಸಿರುವುದನ್ನು ಕಾಣಬಹುದು. ಇಂತಹ ಸಂಕೀರ್ಣ ಸಾಂಸ್ಕೃತಿಕ ಸಂಬಂಧಗಳು ಹಲವು ಅಧ್ಯಯನಕಾರರ ಹಾಗೂ ಸಂಶೋಧಕರ ಕೌತುಕದ ನೆಲೆಗಳಾಗಿ ಕಂಡುಬಂದು ಅವುಗಳನ್ನು ಬಿಡಿಸುವ ಅದರ ಆಂತರ್ಯದ ಸತ್ಯಾಸತ್ಯತೆಯನ್ನು ಹುಡುಕುವ ಕಡೆಗೆ ವಿದ್ವಾಂಸರನ್ನು ತೊಡಗಿಸುವ ನೆಲೆಯಲ್ಲಿ ಪ್ರೇರೇಪಿಸಿದವು. ಹೀಗಾಗಿ ಸಂಸ್ಕೃತಿಯ ಹುಡುಕಾಟದ ಅಧ್ಯಯನಗಳು ಆರಂಭಗೊಂಡವು ಎನ್ನಬಹುದು. ಈ ನೆಲೆಯಲ್ಲಿ ಹಲವಾರು ಕ್ಷೇತ್ರದ ವಿದ್ವಾಂಸರು ಶೋಧನೆ ಹಾಗೂ ಅಧ್ಯಯನ ಕಾರ್ಯದಲ್ಲಿ ತೊಡಗುವ ಮೂಲಕ ಮಾನವ ಸಂಸ್ಕೃತಿಯ ವಿವಿಧ ಸ್ಥರವಿನ್ಯಾಸಗಳ ಬಗೆಗೆ ಮಹತ್ವದ ವಿಚಾರಗಳನ್ನು ಕಟ್ಟಿ ಕೊಟ್ಟಿದ್ದಾರೆ. ಮಾನವಶಾಸ್ತ್ರಜ್ಞರು, ಜಾನಪದ ವಿದ್ವಾಂಸರು, ಭಾಷಾಶಾಸ್ತ್ರಜ್ಞರು, ಸಮಾಜಶಾಸ್ತ್ರಜ್ಞರು, ಇತಿಹಾಸ ಹಾಗೂ ಪುರಾತತ್ವ ಶಾಸ್ತ್ರಜ್ಞರು ಇಲ್ಲಿ ಮುಖ್ಯರಾಗುತ್ತಾರೆ.

ಮಾನವ ಸಂಸ್ಕೃತಿಯ ನೈಜ ಬೇರು ಹುದುಗಿರುವುದು ಆತನ ಮೌಖಿಕ ಪರಂಪರೆಯ ಜಾನಪದರಲ್ಲಿ ಎಂದರೆ ತಪ್ಪಾಗಲಾರದು. ಇದು ಮಾನವನ ಜೀವನದ ಉಗಮದ ಕಾಲದಿಂದ ಪ್ರಸ್ತುತ ನಾಗರಿಕ ಬದುಕಿನ ತನಕ ಆತನ ಸಮಗ್ರ ಸಾಂಸ್ಕೃತಿಕ ವಿಚಾರಗಳೂ ಜಾನಪದದಲ್ಲಿ ಅಮೂರ್ತಗೊಂಡಿದೆ. ಇದನ್ನೆ ಡಾ.ಬಿ.ಎಂ.ಶ್ರೀ ಅವರ ‘ಜನವಾಣಿ ಬೇರು ಕವಿವಾಣಿ ಹೂ’ ಎಂಬ ಮಾತು ಪುಷ್ಟಿನೀಡುತ್ತದೆ. ಜಾನಪದಶಾಸ್ತ್ರ ಎಲ್ಲಾ ಶಾಸ್ತ್ರ ಅಧ್ಯಯನಗಳ ಮಾತೃಸ್ಥಾನವನ್ನು ಹೊಂದಿದೆ ಎಂದು ಹೇಳಬಹುದು. ‘ಜಾನಪದ’ ಒಂದು ಶಾಸ್ತ್ರ ಅಧ್ಯಯನವಾಗಿ ರೂಪಗೊಂಡದ್ದು ಇತರೆ ಅಧ್ಯಯನಗಳನ್ನು ಮತ್ತಷ್ಟು ಪುಷ್ಟೀಕರಿಸುವ ಹಿನ್ನೆಲೆಯಲ್ಲಿ, ಆಯಾ ಶಾಸ್ತ್ರಗಳು ಹೊಂದಲೇಬೇಕಾದ ಹಲವಾರು ಮೂಲಾಂಶಗಳನ್ನು ನೀಡುವ ಮೂಲಕ ಅವುಗಳನ್ನು ಇನ್ನಷ್ಟು ಗಟ್ಟಿಗೊಳಿಸುವ ಮೂಲಕ ಆಯಾಶಾಸ್ತ್ರಗಳ ಅರ್ಥ ಹಾಗೂ ಸ್ವರೂಪದ ವೈಶ್ಯಾಲತೆಗೆ ಕಾರಣವಾಗಿದೆ ಎನ್ನಬಹುದು. ಪ್ರಸ್ತುತ ಸಂದರ್ಭದಲ್ಲಿ ಜಗತ್ತಿನಾದ್ಯಂತ ಅಂತರ್ ಶಿಸ್ತೀನ ಅಧ್ಯಯನ ಹಾಗೂ ಅನ್ವಯಿಕ ಅಧ್ಯಯನಗಳ ಮೂಲಕ ಪ್ರತಿಯೊಂದು ಶಾಸ್ತ್ರವೂ ಮತ್ತಷ್ಟು ವಿಸ್ತಾರಗೊಳ್ಳುತ್ತ ಹಾಗೂ ಒಂದು ನಿರ್ದಿಷ್ಟ ಗುರಿಯ ಕಡೆಗೆ ಸಾಗಿರುವುದನ್ನು ಕಾಣಬಹುದು. ಅನ್ವಯಿಕ ಅಧ್ಯಯನದ ನೆಲೆಯಲ್ಲಿ ಯಾವುದೇ ವಿಷಯಾಧ್ಯಯನದ ಸಂದರ್ಭದಲ್ಲೂ ಆಯಾ ಶಾಸ್ತ್ರ ವಿಷಯಗಳ ನೆರೆಯ ಸಂಬಂಧಾತ್ಮಕ ಶಾಸ್ತ್ರಗಳ ಅವಲೋಕನ ಅಧ್ಯಯನವೊಂದನ್ನು ಪುಷ್ಟೀಕರಿಸುವ ಹಿನ್ನೆಲೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಯಾವುದೇ ವಿಷಯದ ಅಧ್ಯಯನಕಾರ ಅಥವಾ ಸಂಶೋಧಕನ ಆಲೋಚನೆ, ಅವಲೋಕನ, ಶೋಧದ ಮನಸ್ಸು ಅನ್ವಯಿಕ ವಸ್ತು ವಿಷಯಗಳ ಹಿನ್ನೆಲೆಯಲ್ಲಿ ಕೆಲಸ ನಿರ್ವಹಿಸುವ ಮೂಲಕ ಅಧ್ಯಯನದ ಹರವನ್ನು ಹೆಚ್ಚಿಸಿ ಅದಕ್ಕೆ ಮತ್ತಷ್ಟು ಗಟ್ಟಿತನ ಹಾಗೂ ವಾಸ್ತವತೆಯ ನೆಲೆಯನ್ನು ಕಟ್ಟಿಕೊಡುತ್ತದೆ ಎಂದು ಹೇಳಬಹುದು. ಈ ಹಿನ್ನೆಲೆಯಲ್ಲಿ ಪ್ರಾಚ್ಯವಸ್ತುಶಾಸ್ತ್ರ, ಇತಿಹಾಸ, ಸಮಾಜಶಾಸ್ತ್ರ, ಮಾನವಶಾಸ್ತ್ರ, ಜಾನಪದ ಇತ್ಯಾದಿ ವಿಷಯಗಳು ತುಂಬ ಅವಶ್ಯವಾಗಿ ಅನ್ವಯಿಕ ಹಾಗೂ ತೌಲನಿಕವಾದ ಅಧ್ಯಯನಕ್ಕೆ ಒಳಗಾಗಬೇಕಾದ ಅವಶ್ಯಕತೆ ಇದೆ. ಇವು ಒಂದಕ್ಕೊಂದು ಪೂರಕವಾದ ಶಾಸ್ತ್ರ ಅಧ್ಯಯನಗಳೆಂಬುದನ್ನು ಮರೆಯುವಂತಿಲ್ಲ.

ಜಾನಪದ ಮತ್ತು ಪೂರಕ ಶಾಸ್ತ್ರಗಳು

ಇದುವರೆಗೆ ಸಂಸ್ಕೃತಿ ಹಾಗೂ ಚರಿತ್ರೆಯ ಹುಡುಕಾಟದಲ್ಲಿ ಕೇವಲ ಲಿಖಿತ ಆಕರಗಳಷ್ಟೇ ಮುಖ್ಯ ಎಂಬುದಾಗಿ ಪರಿಗಣಿಸಿ ಸಂಸ್ಕೃತಿ ಹಾಗೂ ಚರಿತ್ರೆಯ ವಿಚಾರಗಳನ್ನೂ ಕಟ್ಟಿಕೊಡುವ ಮೂಲಕ ಆದಿಮ ಬದುಕಿನ ಅಮೂರ್ತರೂಪಗಳಾಗಿ ಉಳಿದುಬಂದಿರುವ ಪಾರಂಪರಿಕವಾದ, ಜನಪದ ನಂಬಿಕೆ, ಆಚರಣೆ, ಸಂಪ್ರದಾಯ, ಮೌಖಿಕ ಸಾಹಿತ್ಯ ಇತ್ಯಾದಿ ವಿಷಯಗಳನ್ನು ಕಡೆಗಣಿಸಲಾಗಿತ್ತು. ಇಂತಹ ಮಹತ್ವದ ಆಕರಗಳೂ ಸಹ ಸಂಸ್ಕೃತಿ ಹಾಗೂ ಚರಿತ್ರೆಯನ್ನು ಕಟ್ಟಿಕೊಡುವ ವಿಷಯ ವಿಚಾರಗಳ ನೆಲೆಯಲ್ಲಿ ಮಹತ್ವದ ಪಾತ್ರವಹಿಸುತ್ತವೆ. ಈ ಅರಿವು ಮೂಡಿದುದು ಇತ್ತೀಚಿನ ದಿನಗಳಲ್ಲಿ ಎಂದರೆ ತಪ್ಪಾಗಲಾರದು. ಈ ಹಿನ್ನೆಲೆಯಲ್ಲಿ ಜಾನಪದ ಒಂದು ಸ್ವತಂತ್ರ ಅಧ್ಯಯನದ ಶಿಸ್ತಾಗಿ ಜಗತ್ತಿನಾದ್ಯಂತ ವಿವಿಧ ವಿದ್ವಾಂಸರಿಂದ ಅನೇಕ ರೀತಿಯಲ್ಲಿ ಬೆಳೆದು ಇಂದು ಅಧ್ಯಯನ ಶಾಸ್ತ್ರಗಳ ಕ್ಷೇತ್ರದಲ್ಲಿ ಹೆಬ್ಬಾಲವಾಗಿ ಬೆಳದಿದೆ. ಕೇವಲ ಬರಹ ಸಂಸ್ಕೃತಿಯ ಆಕರಗಳನ್ನಷ್ಟೇ ಅಧ್ಯಯನ ಕ್ಷೇತ್ರದಲ್ಲಿ ಪೂರಕ ಆಕರಗಳಾಗಿ ಬಳಸುತ್ತಿದ್ದ ಸಂದರ್ಭದಲ್ಲಿ ಪಾರಂಪರಿಕವಾಗಿ, ತಲೆಮಾರಿನಿಂದ ತಲೆಮಾರಿಗೆ ಮೌಖಿಕ ಜ್ಞಾನ ಪರಂಪರೆಯ ಮೂಲಕ ಬದುಕಿ ಬಾಳಿಬಂದ ಹಲವಾರು ಸಮುದಾಯಗಳಲ್ಲಿನ ಜ್ಞಾನ ಪರಂಪರೆಯನ್ನು ಅವಲೋಕಿಸಿ ಅಧ್ಯಯನ ಮಾಡುವ ಮೂಲಕ ಅನಕ್ಷರಸ್ಥ ಸಮುದಾಯಗಳಲ್ಲಿನ ಜ್ಞಾನಪರಂಪರೆಗೆ ಮನ್ನಣೆ ದೊರಕಿಸಿಕೊಡುವ ನಿಟ್ಟಿನಲ್ಲಿ ಜಾನಪದ ವಿದ್ವಾಂಸರು ಮಹತ್ವದ ಪಾತ್ರವಹಿಸಿದ್ದಾರೆ. ಒಂದು ಕಾಲಕ್ಕೆ ನಿರ್ಲಕ್ಷಕ್ಕೆ ಒಳಗಾಗಿದ್ದ ಜನಸಾಮಾನ್ಯರ ಜ್ಞಾನದ ನೆಲೆಗಳನ್ನು ಶೋಧಿಸಿ, ಪ್ರಸ್ತುತ ಸಂದರ್ಭದಲ್ಲಿ ಅದರ ಮಹತ್ವವನ್ನು ತಿಳಿಸಿದ ಕೀರ್ತಿ ಜಾನಪದ ಅಧ್ಯಯನಕಾರರಿಗೆ ಸಲ್ಲುತ್ತದೆ.

ಸಂಸ್ಕೃತಿಯ ಮೂಲಭೂತ ಅಂಶಗಳನ್ನು ಜಾನಪದದಲ್ಲಿ ಹೇಗೆ ಅಮೂರ್ತಗೊಂಡಿರುತ್ತದೆ ಎಂಬುದರ ಬಗೆಗೆ ಶ್ರೇಷ್ಠ ಜಾನಪದ ವಿದ್ವಾಂಸರಾದ ಥಿಯೋಡರ್ ಹೆಚ್.ಗ್ಯಾಸ್ಟರ್ ಹೀಗೆ ಅಭಿಪ್ರಾಯಪಡುತ್ತಾರೆ. ಜಾನಪದವೆಂಬುದು ಜನತೆಯು ಪ್ರಜ್ಞಾಪೂರ್ವಕವಾಗಿಯೋ ಅಥವಾ ತನಗರಿವಿಲ್ಲದೆಯೋ ಕಾಪಾಡಿಕೊಂಡು ಬಂದಿರುವ ಸಾಂಸ್ಕೃತಿಕ ಭಾಗ. ಸಾರ್ವತ್ರಿಕವಾಗಿ ಚಲಾವಣೆಯಲ್ಲಿರುವ ಈಗಿನ ಹಿಂಡುಲಿ ಸಂಗಮೇಶ್ವರ ದೇವಾಲಯದ ಪ್ರದೇಶವೇ ಹಳೆಯ ಕುರುಗೋಡು ಎಂಬುದಾಗಿ ಹೇಳಲಾಗುತ್ತದೆ. ಮೂಲದಲ್ಲಿ ಸುಂಕಲಮ್ಮನಿಗೆ ಪ್ರತ್ಯೇಕವಾದ ಗುಡಿ ಇರಲಿಲ್ಲ. ತೆರೆದ ಬಯಲಿನಲ್ಲಿ ಬೇವಿನ ಮರದ ಬುಡದಲ್ಲಿ ಈ ದೇವರನ್ನು ಪ್ರತಿಷ್ಠಾಪಿಸಲಾಗಿತ್ತು. ಅಲ್ಲದೆ, ಅಲ್ಲಿಗೆ ದನಕರುಗಳು ಹೋಗದಂತೆ ಸುಮಾರು ಎದೆಮಟ್ಟದ ಮಣ್ಣಿನ ತುಂಡುಗೋಡೆ ನಿರ್ಮಿಸಿ ಹಬ್ಬದ ಸಂದರ್ಭದಲ್ಲಿ ಸುಣ್ಣ ಕೆಮ್ಮಣ್ಣಿನಿಂದ ಅದನ್ನು ಅಲಂಕಾರಗೊಳಿಸಲಾಗುತ್ತಿತ್ತು. ಇಂದಿಗೂ ಇಲ್ಲಿನ ದೈವದ ಶಿಲ್ಪವು ಸಹಜ ಸ್ಥಿತಿಯಲ್ಲೇ ಉಳಿದುಬಂದಿದೆ. ೧೯೬೯ರಲ್ಲಿ ಈ ದೇವಿಗೆ ಊರಿನ ಜನರೆಲ್ಲ ಸೇರಿ ದೇವಾಲಯದ ಕಟ್ಟಿದುದಾಗಿ ತಿಳಿದುಬರುತ್ತದೆ. ಇದು ತುಂಬ ಸ್ವಾರಸ್ಯಕರವಾಗಿದೆ. ನಾಡಿನಾದ್ಯಂತ ಕಂಡುಬರುವ ದೇವಾಲಯದ ಬಗೆಗೆ ಹಾಗೂ ತಮ್ಮ ಊರಿನ ಹಳೆಯ ದೇವಾಲಯಗಳ ಬಗೆಗೆ ಜನಪದರು ಒಂದಲ್ಲ ಒಂದು ಘಟನೆಯನ್ನು ಆಧರಿಸಿ ಹಲವಾರು ಕಥೆ, ಐತಿಹ್ಯ, ಪುರಾಣಗಳನ್ನು ಹೇಳುತ್ತಾರೆ. ಅಂತಹದರಲ್ಲಿ ತಮ್ಮ ಊರಿನ ದೇವಾಲಯವನ್ನು ಸೂರ್ಯ ಮುಳುಗಿ ಸೂರ್ಯ ಮೂಡುವುದರೊಳಗೆ ಅಂದರೆ ಒಂದೇ ರಾತ್ರಿಯಲ್ಲಿ ಕಟ್ಟಿ ಮುಗಿಸಿ ದೇವರನ್ನು ಪ್ರತಿಷ್ಠಾಪಿಸಿ ಎಳ್ಳುಬಿತ್ತಿ, ಎಳ್ಳುಬೆಳೆದು ಕಟಾವು ಮಾಡಿ ಎಳ್ಳಿನಿಂದ ಎಣ್ಣೆ ತೆಗೆದು ಆ ಎಣ್ಣೆಯಿಂದ ದೀಪ ಹೊತ್ತಿ, ಬೆಳಗಾಗುವುದರೊಳಗೆ ಯಾರಿಗೂ ತಿಳಿಯದಂತೆ ಮುಂದಿನ ಊರಿಗೆ ಹೊರಟುಹೋದರು. ಅವರು ಚೋಳರು. ಯಾರ ಕಣ್ಣಿಗೂ ಕಾಣಿಸಿಕೊಳ್ಳುವುದಿಲ್ಲ. ಅವರನ್ನು ನೋಡಿದವರು ಯಾರೂ ಇಲ್ಲ. ಅವರನ್ನು ನೋಡಿದವರು ರಕ್ತಕಾರಿ ಸಾಯುತ್ತಾರೆ.

ನಂಬುಗೆ (ನಂಬಿಕೆ), ರೂಢಿ, ಪದ್ಧತಿ ಮತ್ತು ಆಚರಣೆಗಳನ್ನೂ, ಪುರಾಣ, ಐತಿಹ್ಯ ಮತ್ತು ಆಯಾ ಜನತೆ ಸಾಮುದಾಯಿಕವಾಗಿ ಒಪ್ಪಿಕೊಂಡಿರುವ ಕಥೆಗಳಲ್ಲಿಯೂ, ಆ ಜನರ ಸಮಷ್ಟಿಯಾದ ಮನೋಧರ್ಮ ಹಾಗೂ ಪ್ರತಿಭೆಯನ್ನು ಅಭಿವ್ಯಕ್ತಿಪಡಿಸುವ ಕಲೆ, ಕುಲಕಸುಬುಗಳಲ್ಲಿಯೂ ಅದು ಜೀವಂತವಾಗಿ ಉಳಿದುಕೊಂಡಿರುತ್ತದೆ. ಜಾನಪದವು ಹೀಗೆ ಜನಸಾಮಾನ್ಯರ ಜ್ಞಾನಭಂಡಾರವಾಗಿರುವುದರಿಂದ ಮತ್ತು ಅವರ ಮನೋಧರ್ಮದ ಸಮಗ್ರಗೊಂಡ ಘಟಕವಾಗಿರುವುದರಿಂದ, ಲಕ್ಷಣಬದ್ಧ ಸಾಹಿತ್ಯ ಹಾಗೂ ಕಲೆಗಳಿಗೆ ಅದು ನಿರಂತರ ಆಕರವೂ, ಆಧಾರವೂ ಆಗಿ ಕಾರ್ಯಮಾಡುತ್ತದೆ. ಆದರೆ ಜಾನಪದವು ಈ ಲಕ್ಷಣ ಬದ್ಧ ಸಾಹಿತ್ಯ ಹಾಗೂ ಕಲೆಗಳಿಂದ ಭಿನ್ನವಾದುದು. ಏಕೆಂದರೆ “ಜಾನಪದವು ಮೂಲತಃ ಜನತೆಯ ಒಡೆತನಕ್ಕೆ ಅಧೀನವಾದ, ಜನತೆಯಿಂದ ಹುಟ್ಟಿದ ಮತ್ತು ಜನತೆಗಾಗಿ ಇರುವ ಸೊತ್ತು.” ಹೀಗಿದ್ದುದರಿಂದ ನಮ್ಮ ಪರಂಪರೆ ಸಂಸ್ಕೃತಿ ಎಂದು ನಾವು ಈ ವರೆಗೆ ಕಟ್ಟಿಕೊಂಡು ಬಂದಿರುವ ಚಿತ್ರವನ್ನು ಮತ್ತೊಮ್ಮೆ ಪುನರಾವಲೋಕನ ಮಾಡುವ ಸಂದರ್ಭವೀಗ ಒದಗಿ ಬಂದಿದೆ. ಇದುವರೆಗೂ ನಾವು ಅವಲೋಕಿಸುತ್ತಾ ಕಟ್ಟಿಕೊಂಡ ಸಂಸ್ಕೃತಿ, ಚರಿತ್ರೆ ಎಂಬ ವಿಚಾರಗಳು ಕೇವಲ ಶಿಷ್ಟವರ್ಗ, ಶಿಷ್ಟಪರಂಪರೆ ಹಾಗೂ ಶಿಷ್ಟ ಸಮಾಜ ನಿರ್ಮಿಸಿ ನಯಗೊಳಿಸಿದ ಅಭಿಜಾತ ರೂಪವೆಂದೇ ಹೇಳಬೇಕು. ಸಂಸ್ಕೃತಿ ಹಾಗೂ ಚರಿತ್ರೆಯ ನೈಜ ದರ್ಶನವಾಗಬೇಕಾದರೆ ನಾವು ಜಾನಪದ ಅಂತಸತ್ವವನ್ನು ಅರ್ಥಮಾಡಿಕೊಳ್ಳಬೇಕು. ಪ್ರಸ್ತುತ ಸಂದರ್ಭದ ನವನಾಗರಿಕ ನೆಲೆಯಲ್ಲಿ ಬೆಳೆದು ನಿಂತಿರುವ ರಾಜಕೀಯ, ಸಾಮಾಜಿಕ, ಧಾರ್ಮಿಕ ವಿಚಾರಗಳು, ದೇವರು, ಅರ್ಚನಾವಿಧಾನ, ಶಾಸ್ತ್ರ, ಪುರಾಣ, ಕಾವ್ಯ, ಕಲೆ ಮುಂತಾದ ವಿಚಾರಗಳೆಲ್ಲವೂ ಬೆಳೆದು ಬಾಳುತ್ತಿರುವುದು ಜಾನಪದ ನೆಲೆಯಿಂದಲೇ. ಆದಿಮಾನವ ಹಲವಾರು ವಿಷಯ ವಿಚಾರಗಳು ಇಂದಿಗೂ ನಮ್ಮ ಸಂಪ್ರದಾಯ, ಹಬ್ಬ, ಆಚರಣೆ, ಕಲೆ, ನಂಬಿಕೆ, ಪದ್ಧತಿ, ರೂಢಿಗಳಲ್ಲಿ ಉಳಿದುಬಂದಿರುವುದನ್ನು ಕಾಣಬಹುದು. ಹೀಗೆ ಜಾನಪದ ಇತರೆ ಪೂರಕ ಅಧ್ಯಯನ ವಿಷಯಗಳನ್ನು ಕಟ್ಟಿಬೆಳೆಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ.

ಜಾನಪದ-ಪುರಾತತ್ವ-ಇತಿಹಾಸ

ಈಗಾಗಲೇ ಸ್ಪಷ್ಟಪಡಿಸಿಕೊಂಡಿರುವಂತೆ ಜಾನಪದ ತಲೆಮಾರಿನಿಂದ ತಲೆಮಾರಿಗೆ ಮೌಖಿಕವಾಗಿ ಹಾಗೂ ಕ್ರಿಯಾತ್ಮಕ ರೂಪಗಳಲ್ಲಿ ಪಾರಂಪರಿಕವಾಗಿ ಸಾಗಿಬಂದಿರುವಂತಹದ್ದು. ಆದರೆ ಇತಿಹಾಸ ಎಂದು ಕರೆಯಲ್ಪಡುವ ವಿಷಯವು ಮಾನವನ ಜೀವಿತಕಾಲದ ಹೋರಾಟದ ಕತೆ. ಅದರ ನಿರೂಪಣೆ ಎಂದು ವಿವರಿಸಿ ಹೇಳಬಹುದು. ಈ ಕತೆಯನ್ನು ಅರ್ಥೈಸಿಕೊಳ್ಳಲು ನಾವು ಹೆಚ್ಚಾಗಿ ಲಿಖಿತ ಆಧಾರಗಳನ್ನೇ ಅವಲಂಬಿಸುತ್ತಿದ್ದೇವೆ. ಇದನ್ನು ವಸಾಹತು ಸಂದರ್ಭದಲ್ಲಿ ಆರಂಭಗೊಂಡ ಭಾರತದ ಇತಿಹಾಸ ರಚನೆಯಲ್ಲೂ ಇಂತಹದ್ದೇ ಧೋರಣೆಗಳನ್ನು ಅನುಸರಿಸಲಾಗಿದೆ. ಬರೆವಣಿಗೆಯ ಮೊಟ್ಟಮೊದಲ ಉಪಯೋಗ ಅಂದರೆ ಬರವಣಿಗೆಯ ಬಳಕೆಗೂ ಮೊದಲ ಇದ್ದ ಮಾಹಿತಿಗಳಿಗೂ ಸಹ ಸಂಸ್ಕೃತಿ ಹಾಗೂ ಚರಿತ್ರೆ ಎರಡನ್ನೂ ಕಟ್ಟಿಕೊಡುವ ಗುಣವನ್ನು ಹೊಂದಿರುತ್ತವೆ. ಹಾಗೂ ಈ ನಿಟ್ಟಿನಲ್ಲಿ ಮಹತ್ವದ ಪಾತ್ರವಹಿಸುತ್ತವೆ. ಲಿಖಿತ ಆಧಾರಗಳು ಮಾತ್ರ ಚರಿತ್ರೆಯನ್ನು ಕಟ್ಟಿಕೊಡಬಲ್ಲವು ಎಂಬ ಭ್ರಮೆ ಆಚರಿಸಿದೆ. ಬರೆವಣಿಗೆಯ ಮೊಟ್ಟಮೊದಲ ಉಪಯೋಗವಾದುದು ೬೦೦೦ ವರ್ಷಗಳ ಹಿಂದೆ. ಇದನ್ನು ಮಾನವನ ಇತಿಹಾಸದ ಕಾಲಕ್ಕೆ ಹೋಲಿಸಿದರೆ ತುಂಬ ಅತ್ಯಲ್ಪಕಾಲವೆಂದೇ ಹೇಳಬೇಕಾಗುತ್ತದೆ. ಜಗತ್ತಿನಾದ್ಯಂತ ಮನುಕುಲದ ಚರಿತ್ರಾಕಾರರು ಮಾನವ ಹಲವಾರು ದಶಲಕ್ಷ ವರ್ಷಗಳ ಹಿಂದಿನಿಂದಲೇ ನಾಗರಿಕ ಪ್ರಜ್ಞೆಯನ್ನು ಹೊಂದಿದ್ದ ಎಂಬುದಾಗಿ ಅಭಿಪ್ರಾಯ ಪಡುತ್ತಾರೆ. ಹೀಗಾಗಿ ಮನುಕುಲದ ಬರೆವಣಿಗೆಯ ಹುಟ್ಟಿನ ವರೆಗಿನ ಕಾಲಾವಧಿಯನ್ನು “ಚರಿತ್ರಪೂರ್ವಯುಗ” ಅಥವಾ “ಪಾಕ್ಚಾರಿತ್ರಿಕಯುಗ” ಎಂಬುದಾಗಿ ಗುರುತಿಸುತ್ತಾರೆ. ಚರಿತ್ರೆ ಪೂರ್ವಯುಗ ಲಕ್ಷಾಂತರ ವರ್ಷಗಳದು ಎಂಬುದು ಸ್ಪಷ್ಟ. ಹಾಗಾಗಿ ನಾವು ಚರಿತ್ರೆ ಪೂರ್ವಯುಗದ ಪ್ರಾಕ್ಚಾರಿತ್ರಿಕ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಹೆಚ್ಚಾಗಿ ಅಲಿಖಿತ ಆಕರಗಳನ್ನು ಅವಲಂಬಿಸಬೇಕಾಗುತ್ತದೆ. ಪುರಾತನ ವಸ್ತುಗಳ ವೈಜ್ಞಾನಿಕ ವಿಮರ್ಶೆ ಪುರಾತತ್ವಶಾಸ್ತ್ರ ಎನಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಪುರಾತನ ವಸ್ತುಗಳು ಎಂದಾಗ ಅವುಗಳಲ್ಲಿ ಕಲೆ, ವಾಸ್ತುಶಿಲ್ಪ, ಜೀವನ ಬಳಕೆಯ ವಸ್ತು ವಿಷಯಗಳು ಒಳಗೊಳ್ಳುತ್ತದೆ. ಇದನ್ನು ಚಾರಿತ್ರಿಕ ಪುರಾತತ್ವ ಶೋಧನೆ ಎಂದು ಕರೆಯಬಹುದಾಗಿದೆ. ಆದರೆ ಪ್ರಾಕ್ಚಾರಿತ್ರಿಕ ಯುಗದ ಅಧ್ಯಯನಕ್ಕೆ ಅಂದು ಮಾನವ ಬಳಸುತ್ತಿದ್ದ, ಉಪಕರಣಗಳು, ಅವಶೇಷಗಳು, ಮಾನವ ದೇಹಶಾಸ್ತ್ರ, ಸಮಾಜದ ಆಚರಣೆಗಳು, ಜೀವನ ವಿಧಿವಿಧಾನಗಳು ಮುಂತಾದ ಹಲವಾರು ವಿವರಗಳು ತುಂಬ ಅವಶ್ಯ. ಪ್ರಾಕ್ಚಾರಿತ್ರಿಕ ಕಾಲದಿಂದಲೂ ಜನಸಾಮಾನ್ಯರು ತಾವು ಬಳಸುವ ವಸ್ತುವಿಷಯಗಳಿಗೆ ನೀಡುತ್ತ ಬಂದಿರುವ ಮಹತ್ವವನ್ನು ಗಮನದಲ್ಲಿರಿಸಿಕೊಂಡು ಅವುಗಳ ಬಳಕೆಯ ವಿಧಾನ, ಪ್ರಾಮುಖ್ಯತೆ, ಉದ್ದೇಶ ಇತ್ಯಾದಿ ಅಂಶಗಳನ್ನು ಗಮನದಲ್ಲಿರಿಸಿ ಅಧ್ಯಯನ ಕೈಗೊಳ್ಳುವ ಮೂಲಕ ಅದರ ವಾಸ್ತವತೆಯನ್ನು ಕಂಡುಕೊಂಡಂತಾಗುತ್ತದೆ. ಸಾಂಪ್ರದಾಯಿಕ ಇತಿಹಾಸ ಕಾರರು ಬರೆವಣಿಗೆಯ ಆಕರ ಹಾಗೂ ಆಧಾರಗಳನ್ನು ಹೊಂದಿಸಿ ಹೇಗೆ ಇತಿಹಾಸವನ್ನು ನಿರ್ವಚಿಸುತ್ತಾರೋ ಹಾಗೆಯೇ ಜನಪದರೂ ಸಹ ತಮ್ಮ ವಸ್ತು ಪರಿಕರ, ಸಮುದಾಯಗಳ ಹಿನ್ನೆಲೆ, ಹಲವಾರು ಕಾಲಘಟ್ಟಗಳಲ್ಲಿ ಘಟಿಸಿದ ಘಟನೆಗಳನ್ನು ತಮ್ಮದೇ ರೀತಿಯಲ್ಲಿ ನಿರ್ವಚಿಸುತ್ತಾರೆ. ನಾನು ಕಳೆದ ಕೆಲದಿನಗಳ ಹಿಂದೆ ಕಮಲಾಪುರದ ಕೆರೆ ತಾಂಡಕ್ಕೆ ನನ್ನ ವಿದ್ಯಾರ್ಥಿಗಳೊಡನೆ ಕ್ಷೇತ್ರಕಾರ್ಯಕ್ಕೆ ಹೋಗಿದ್ದೆ. ತಾಂಡದ ಸೇವಾಲಾಲ್‌ನ ಗುಡಿಯ ಸಮೀಪ ಒಂದು ಚಿಕ್ಕ ದೇವರ ಗುಡಿ ನಿರ್ಮಿಸಿದ್ದಾರೆ. ಅದು ಬನ್ನಿಮರಕ್ಕೆ ಹೊಂದಿ ಕೊಂಡಂತಿದೆ. ಆ ಗುಡಿಯಲ್ಲಿ ಹಳೆಯ ಶಿಲಾಯುಗದ ಕಲ್ಲಿನ ಕೈಗೊಡಲಿಯನ್ನು ಇಟ್ಟು ಇದಕ್ಕೆ ವಿಭೂತಿ, ಕುಂಕುಮ ಹಚ್ಚಿ ಪೂಜೆಸಲ್ಲಿಸುತ್ತಿದ್ದಾರೆ. ಅಲ್ಲಿನ ಜನರಿಗೆ ಇದು ಏನು ಯಾವ ದೇವರು ಎಂದಿನಿಂದ ಈ ಗುಡಿಯನ್ನು ಪೂಜಿಸುತ್ತಿದ್ದೀರಿ ಎಂಬ ಪ್ರಶ್ನೆಗೆ ಅವರು “ಇದು ತುಂಬ ಹಿಂದಿನಿಂದಲೂ ಪೂಜೆ ಮಾಡ್ಕಂತ ಬಂದೀವ್ರಿ ಇದು ದುರ್ಗಮ್ಮನ ಗುಡಿರಿ” ಎಂಬುದಾಗಿ ಹೇಳುತ್ತಾರೆ. ಹೀಗೆ ಪ್ರಾಕ್ಚಾರಿತ್ರಿಕ ವಸ್ತುಗಳು ಜನಸಾಮಾನ್ಯರಲ್ಲಿ ವಿವಿಧ ಬಗೆಯಲ್ಲಿ ನಿರ್ವಚನಕ್ಕೆ ಒಳಗಾಗಿ ಬಳಕೆಗೊಳ್ಳುತ್ತಿರುವುದು ಕಂಡು ಬರುತ್ತದೆ. ಆದರೆ ಆದಿ ಮಾನವನಿಂದ ಇಂದಿನವರೆಗೂ ಆಯುಧ ಸಲಕರಣೆಗಳು ಜನಪದರಲ್ಲಿ ಪೂಜ್ಯಸ್ಥಾನ ಹೊಂದಿವೆ ಎಂಬುದನ್ನು ಮರೆಯುವಂತಿಲ್ಲ. ಪ್ರಾಕ್ಚಾರಿತ್ರಿಕ ಹಾಗೂ ಚರಿತ್ರೆಯ ವಿಷಯಗಳ ಶೋಧನೆಯ ಸಂದರ್ಭದಲ್ಲಿ ಮೌಖಿಕ ಸಾಮಗ್ರಿಗಳು ಲಿಖಿತ ಸಾಮಗ್ರಿಗಳಿಗಿಂತ ಭಿನ್ನವಾದ ಸತ್ಯವನ್ನು ಪ್ರಕಟಿಸುತ್ತವೆ. ಉತ್ಖನನ ಸಂದರ್ಭದಲ್ಲಿ ದೊರಕುವ ಜೀವನ ಬಳಕೆಯ ವಸ್ತುಗಳು ಉದಾಹರಣೆಗೆ ಧೂಪಾರತಿ, ಪ್ರಣತಿ, ಮಡಿಕೆ, ಕುಡಿಕೆ ಇತ್ಯಾದಿ ವಸ್ತುಗಳು ಅವುಗಳ ಬಳಕೆಗೊಳ್ಳುವ ಸಂದರ್ಭ ಬಳಸುವ ಸಮುದಾಯ ರಚನೆಯ ವಿನ್ಯಾಸ, ಬಳಕೆಗೊಂಡಿರುವ ಕ್ರಮ ಇತ್ಯಾದಿ ವಿವರಗಳನ್ನು ಪಡೆಯಲು ಹಾಗೂ ತಿಳಿದುಕೊಳ್ಳಲು ನಾವು ಇಂದಿಗೂ ಜನರ ಆಚರಣೆ, ನಂಬಿಕೆ, ಹಬ್ಬ, ಉತ್ಸವ, ಸಂಪ್ರದಾಯದಂತಹ ವಿಷಯಗಳನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಕೆಲವು ಸಮುದಾಯಗಳಲ್ಲಿ ಹುಟ್ಟಿದ ಮಕ್ಕಳ ಮಾಸವನ್ನು ತಮ್ಮ ಮನೆ ಬಾಗಿಲಿನಲ್ಲಿ ಕುಣಿ ತೆಗೆದು ಹೂಳುವುದನ್ನು ಕಾಣಬಹುದು. ಹುಟ್ಟಿದ ಮಗು ಹೊಟ್ಟೆಯಲ್ಲೇ ಸತ್ತು ಹೊರಬಂದಾಗ ಅದನ್ನು ಮಡಕೆಯಲ್ಲಿ ಇಟ್ಟು ಗೊಬ್ಬರದ ತಿಪ್ಪೆಯಲ್ಲಿ ಹೂಳುತ್ತಾರೆ. ಮಗು ಹುಟ್ಟಿ ಕೆಲ ದಿನ ಅಥವಾ ಗಂಟೆಗಳ ಕಾಲ ಇದ್ದು ಸತ್ತರೆ ಅದನ್ನು ಹುತ್ತದಲ್ಲಿ ಹೂಳುವ ಸಂಪ್ರದಾಯವನ್ನು ಕಾಣಬಹುದು. ದಕ್ಷಿಣ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಶವಸಂಸ್ಕಾರದ ಸಂದರ್ಭದಲ್ಲಿ ಅಕಾಲಿಕ ಮರಣಕ್ಕೆ ತುತ್ತಾದ ವ್ಯಕ್ತಿಗಳನ್ನು ಹೂಳುವಾಗ ಶವದ ಕಾಲಿನ ಹಿಮ್ಮಡಿಯ ಚಿಣ್ಣೀನರವನ್ನು ಕತ್ತರಿಸಿ ಹೂಳಲಾಗುತ್ತದೆ. ಈ ರೀತಿ ಮಾಡುವುದರಿಂದ ಅಕಾಲಿಕ ಮರಣಕ್ಕೆ ತುತ್ತಾದ ವ್ಯಕ್ತಿ ಓಡಾಡಲು ಸಾಧ್ಯವಾಗುವುದಿಲ್ಲ ಅಲ್ಲದೆ ಇತರರಿಗೆ ಯಾವುದೇ ತೊಂದರೆ ಕೊಡಲು ಸಾಧ್ಯವಾಗುವುದಿಲ್ಲ ಎಂಬ ನಂಬಿಕೆ ಈ ತೆರನಾದ ಶವಸಂಸ್ಕಾರ ಪದ್ಧತಿಯಿಂದ ತಿಳಿದು ಬರುತ್ತದೆ. ಪುರಾತತ್ವ ಶೋಧನಾ ಕಾರ್ಯದಲ್ಲಿ ನಡೆಯುವ ಹಲವಾರು ಉತ್ಖನನ ಸಂದರ್ಭದಲ್ಲಿ ದೊರಕುವ ವಸ್ತುವಿಷಯಗಳ ಬಗೆಗೆ ವೈಜ್ಞಾನಿಕ ವಾಸ್ತವ ಹಾಗೂ ಸತ್ಯಾಸತ್ಯತೆಯ ವಿಚಾರಗಳ ಹುಡುಕಾಟದ ಸಂದರ್ಭದಲ್ಲಿ ಪುರಾತತ್ವ ಅಥವಾ ಪ್ರಾಕ್ಚಾರಿಕ ಸಂಶೋಧಕರು ಹಾಗೂ ಅಧ್ಯಯನಯಕಾರರು ಇಂತಹ ವಿಷಯಗಳಿಗೆ ಸಂಬಂಧಪಟ್ಟಂತೆ ಜಾನಪದದ ನೆಲೆಯನ್ನು ಚೆನ್ನಾಗಿ ಗ್ರಹಿಸುವ ಮೂಲಕ ಸಮುದಾಯಗಳ ಆಚರಣೆ, ಸಂಪ್ರದಾಯ, ವಿಧಿವಿಧಾನ ಜೀವನಕ್ರಮಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವ ಮೂಲಕ ತಮ್ಮ ಅಧ್ಯಯನ ಹಾಗೂ ಶೋಧನಾ ಸಂದರ್ಭಗಳಲ್ಲಿ ಲಿಖಿತ ಆಕರಗಳು ನೀಡಲಾರದ ವಾಸ್ತವ ಸತ್ಯದ ನೆಲೆಗಳನ್ನು ಕಂಡುಕೊಳ್ಳಬಹುದಾಗಿದೆ. ಇಲ್ಲಿ ಕಂಠಸ್ಥ ಪರಂಪರೆಯ ವಿಷಯ ಸಾಮಾಗ್ರಿಗಳಲ್ಲಿ ಕಾಲ್ಪನಿಕತೆ ಸೇರಿಕೊಂಡಿರಬಹುದು. ಘಟನೆಗಳು ಕಾಲದ ಅಂತರವನ್ನು ಮರೆತು ಒಂದಾಗಿರಬಹುದು. ವ್ಯಕ್ತಿ, ಸ್ಥಳಗಳ ಹೆಸರುಗಳು ವ್ಯತ್ಯಾಸಗೊಂಡಿರಬಹುದು. ಆ ಕಾಲದ ಬೆಳೆವಣಿಗೆಯು ಮೂಲ ತಿರುಳಿನ ಸುತ್ತ ಕವಚಗಳ ಪದರುಗಳನ್ನು ಸೇರಿಸಿರಬಹುದು. ಆದರೆ ಬಹುಜನರ ನೋವು- ನಲಿವುಗಳು-ಆಸೆ-ಆಕಾಂಕ್ಷೆಗಳು ಬೇರೆ ಬೇರೆ ರೂಪಗಳಲ್ಲಿ ದಾಖಲವಾಗಿ ಪ್ರಸರಿಸುತ್ತಾ ಇಂತಹ ಕಂಠಸ್ಥ ಪರಂಪರೆಯಾಗಿದೆ. ಎನ್ನುವುದನ್ನು ಮರೆಯುವಂತಿಲ್ಲ.

ಬಳ್ಳಾರಿ ತಾಲೂಕಿಗೆ ಸೇರಿದ ಕುರುಗೋಡು ಸಾಂಸ್ಕೃತಿಕ, ಐತಿಹಾಸಿಕ ಹಾಗೂ ಧಾರ್ಮಿಕ ಕ್ಷೇತ್ರವಾಗಿದ್ದು ಬಳ್ಳಾರಿಯಿಂದ ಸುಮಾರು ೨೮ ಕಿ.ಮೀ. ದೂರದಲ್ಲಿದೆ. ಹೆಬ್ಬಂಡೆಗಳ ರಾಶಿ ಹಾಗೂ ಬೆಟ್ಟ ಸಾಲುಗಳಿಂದ ನಿಸರ್ಗ ನಿರ್ಮಿತವಾದ ಸುಂದರ ತಾಣ ಇದಾಗಿದೆ. ಇಂತಹ ಸುಂದರ ಹಾಗೂ ಸಂರಕ್ಷಿತ ತಾಣ ಆದಿಮಾನವನ ವಸತಿಯ ನೆಲೆಯಾಗಿ ಕಂಡುಬರುತ್ತದೆ. ಬೃಹತ್ ಶಿಲಾಯುಗ ಹಾಗೂ ತಾಮ್ರಯುಗಗಳಿಗೆ ಸಂಬಂಧಪಟ್ಟ ಹಲವಾರು ಕುರುಹುಗಳು ಈ ಪ್ರದೇಶದಲ್ಲಿ ದೊರಕಿವೆ. ಇಂದಿಗೂ ಆದಿಮಾನವನ ಗವಿವರ್ಣ ಚಿತ್ರಗಳು, ಬಯಲು ಬಂಡೆಯ ರೇಖಾಚಿತ್ರಗಳು, ಕಲ್ಲಿನ ಆಯುಧಗಳು ಈ ಪ್ರದೇಶದಲ್ಲಿ ಕಂಡುಬರುತ್ತವೆ. ಅಷ್ಟೇ ಅಲ್ಲದೆ ಕ್ರಿ.ಶ. ೧೦ನೆಯ ಶತಮಾನದಿಂದ ೧೨ನೇ ಶತಮಾನದ ವರೆವಿಗೂ ಬಲ್ಲಕುಂದೆ ೩೦೦ ನಾಡಿನ ರಾಜಧಾನಿಯಾಗಿ ಈ ಪಟ್ಟಣವು ಬಳ್ಳಾರಿ ಜಿಲ್ಲಾ ಪ್ರದೇಶ ಸಿಂದವಾಡಿ ೧೦೦೦ ವಿಭಾಗಕ್ಕೆ ಒಳಪಟ್ಟಿತ್ತು. ಈ ಪ್ರದೇಶದಲ್ಲಿ ಸಿಂದವಂಶದ ಅರಸರು ಪರಂಪರಾಗತವಾಗಿ ಆಳುತ್ತಿದ್ದುದರಿಂದ ಈ ಪ್ರದೇಶಕ್ಕೆ ಸಿಂದವಾಡಿನಾಡು ಸಿಂದವಾಡಿಸಾಸಿರ ಎಂಬ ಹೆಸರುಗಳಿಂದ ಕರೆಯಲಾಗುತ್ತಿತ್ತು. ಸಿಂದವಾಡಿ ನಾಡಿನ ಉಪವಿಭಾಗವಾದ ಬಲ್ಲಕುಂದೆ ೩೦೦ ಪ್ರದೇಶವು ಬಳ್ಳಾರಿ, ಸಿರುಗುಪ್ಪ, ಸಂಡೂರು, ಹೊಸಪೇಟೆ ತಾಲ್ಲೂಕುಗಳ ಕೆಲವು ಗ್ರಾಮಗಳನ್ನು ಒಳಗೊಂಡಿತ್ತು ಎಂಬುದನ್ನು ಸಿರುಗುಪ್ಪ ಶಾಸನವೊಂದರಲ್ಲಿ ಉಲ್ಲೇಖಿಸುತ್ತದೆ. ಈ ಬಲ್ಲಕುಂದೆ ನಾಡಿಗೆ ಕುರುಗೋಡು ರಾಜಧಾನಿಯಾಗಿತ್ತು. ಇದರ ಉಪವಿಭಾಗಗಳು ದೊರವಡಿ ೭೦, ತೆಕ್ಕೆಕಲ್ಲು ೧೨, ಎಂಬುದಾಗಿ ಹೇಳಲಾಗುತ್ತದೆ. ಬಹಳ ಹಿಂದಿನಿಂದಲೂ ಆಂಧ್ರ ಕರ್ನಾಟಕ ಪ್ರದೇಶವನ್ನು ಒಗ್ಗೂಡಿಸಿ ಎರಡು ಸಂಸ್ಕೃತಿಗಳನ್ನೂ ಮೇಳೈಸಿಕೊಂಡು ಮೆರೆದ ಕೀರ್ತಿ ಸಿಂದವಂಶದ ಅರಸರಿಗೆ ಸಲ್ಲುತ್ತದೆ. ಒಂದನೇ ರಾಚಮಲ್ಲ ಹಾಗೂ ಇಮ್ಮಡಿ ರಾಚಮಲ್ಲ ಈ ವಂಶದ ಪ್ರಮುಖ ಅರಸರಾಗಿ ಕಂಡುಬರುತ್ತಾರೆ. ಇವರು ಶೈವ ಧರ್ಮವಲಂಬಿಗಳಾಗಿದ್ದರೆಂದು ತಿಳಿದುಬರುತ್ತದೆ. ಆ ಕಾಲಕ್ಕೆ ಈ ಪಟ್ಟಣದಲ್ಲಿ ನಿರ್ಮಾಣಗೊಂಡ ಹಲವಾರು ಶೈವ, ಜೈನ ದೇವಾಲಯಗಳು ಹಾಗೂ ಜೈನಮಂದಿರಗಳು ಕೋಟೆ ಕೊತ್ತಲಗಳು, ಅರವಟಿಗೆ, ಕೆರೆ, ಬಾವಿಗಳು ಇಂದಿಗೂ ಅಂದಿನ ಸಾಂಸ್ಕೃತಿಕ ಹಾಗೂ ಸಾಮಾಜಿಕ ಜೀವನದ ಪ್ರತೀಕವಾಗಿ ಕಂಡುಬರುತ್ತದೆ. ಈ ಪ್ರದೇಶದಲ್ಲಿ ಹೆಚ್ಚಾಗಿ ದೊರಕುವ ದಾನ ಶಾಸನಗಳು ಅಂದಿನ ರಾಜನ ಸಾಮಾಜಿಕ ಕಳಕಳಿಯ ಗುಣಕ್ಕೆ ಸಾಕ್ಷಿಯಾಗಿವೆ. ಕ್ರಿ.ಶ. ೧೨ನೆಯ ಶತಮಾನದ ಕೊನೆಯಲ್ಲಿ ಈ ಪ್ರದೇಶವು ಹೊಯ್ಸಳ ದೊರೆಗಳ ಆಡಳಿತಕ್ಕೆ ಒಳಪಟ್ಟಿತ್ತು. ಅನಂತರ ವಿಜಯಗರ ಸಾಮ್ರಾಜ್ಯಕ್ಕೆ ಒಳಪಟ್ಟು ವಿಜಯನಗರ ಸಾಮ್ರಾಜ್ಯದ ಅವನತಿಯ ನಂತರ ಹಂಡೆವಂಶದ ಬಾಲದ ಹನುಮಪ್ಪನಾಯಕ ಮತ್ತು ಆತನ ವಂಶಸ್ಥರು ಕುರುಗೋಡು ಪಟ್ಟಣವನ್ನು ಆಳಿದರು. ಕುರುಗೋಡು ಪಟ್ಟಣದ ಸ್ಥಳೀಯ ಚರಿತ್ರೆಯ ಬಗೆಗೆ ಹಲವಾರು ವೈಶಿಷ್ಟ್ಯಪೂರ್ಣವಾದ ಅಂಶಗಳು ಕಂಡು ಬರುತ್ತವೆ. ಈ ಊರಿಗೆ ‘ಕುರುಗೋಡು’ ಎಂಬ ಹೆಸರು ಬರಲು ಕಾರಣವೇನು? ಎಂಬ ಪ್ರಶ್ನೆಗೆ ಇಲ್ಲಿಯ ಸ್ಥಳೀಯರು ತಮ್ಮದೇ ಅರಿವಿನ ಹಿನ್ನೆಲೆಯಲ್ಲಿ ಹಲವು ಬಗೆಯಲ್ಲಿ ವಿವರಣೆ ನೀಡುತ್ತಾರೆ.

  • ಈ ಪಟ್ಟಣದಲ್ಲಿರುವ ಬೃಹದಾಕಾರದ ಏಕ ಶಿಲಾಬಸವ ಅಥವಾ ನಂದಿಯ ಮೂರ್ತಿಯ ಕೋಡುಗಳು ಮೂಡುತ್ತಿರುವ ಅಥವಾ ಬೆಳೆಯುತ್ತಿರುವ ಎಳೆಯ ಕೋಡುಗಳು ಅಂದರೆ ಜನಪದರಲ್ಲಿ ‘ಕುರು’ ಎಂದರೆ ಮೂಡುತ್ತಿರುವ, ಮೊಳಕೆಯಾಗಿರುವ ಅಥವಾ ಬೆಳೆಯುತ್ತಿರುವ ಎಂಬ ಅರ್ಥವನ್ನು ನೀಡುತ್ತದೆ. ಗೋಡು ಎಂಬ ಪದವು ಕುರು ಪದದ ಜೊತೆಗೆ ಬಂದಾಗ ಕೋಡು ಅಥವಾ ಕೊಂಬುಗಳು ಎಂಬುದಾಗಿ ಅರ್ಥೈಸುವ ಮೂಲಕ ಈ ಬಸವನ ಎಳೆಯ ಬೆಳೆಯುತ್ತಿರುವ ಕೋಡುಗಳಿಂದಾಗಿ ಈ ಊರಿಗೆ ಕುರುಗೋಡು ಎಂಬ ಹೆಸರು ಬಂದಿದೆ ಎಂಬುದಾಗಿ ಹೇಳುತ್ತಾರೆ.
  • ಈ ಕುರುಗೋಡು ಪಟ್ಟಣವು ಸುತ್ತಲೂ ರಾಶಿ ರಾಶಿ ಕಲ್ಲುಗಳ ಬೆಟ್ಟಗಳಿಂದ ಆವೃತ್ತವಾಗಿದ್ದು, ಕೆಲವು ಬೆಟ್ಟಗಳು ಎತ್ತರವಾಗಿ ಚೂಪಾಗಿ ಬಸವನ ಕೋಡುಗಳಂತೆ ನೈಸರ್ಗಿಕ ರಚನೆ ಹೊಂದಿರುವುದರಿಂದ ಈ ಊರಿಗೆ ಈ ಹೆಸರು ಬಂದಿದೆ ಎಂಬುದಾಗಿ ಹೇಳಲಾಗುತ್ತದೆ.
  • ಇಲ್ಲಿನ ಬಸವ ಅಥವಾ ನಂದಿಯಮೂರ್ತಿ ಸ್ವಯಂಭು ಅಂದರೆ ಉದ್ಭವವಾದುದೆಂಬುದು ಜನಪದರ ಪ್ರಾಚೀನ ನಂಬಿಕೆ. ಆದ್ದರಿಂದ ಅದು ಈ ಪ್ರದೇಶಕ್ಕೆ ಒಂದು ಕುರುಹು ಆಗಿ ಅಂದರೆ ಮರೆಯಲಾಗದ ಎಂದೂ ನೆನಪಿನಲ್ಲಿ ಉಳಿಯುವಂತಹ ಗುರುತಾಗಿ ಪರಿಣಮಿಸಿದೆ ಎಂಬ ನಂಬಿಕೆಯಿಂದಾಗಿ ಕುರುಹಿನ ಕೂಡು ಕುರುಗೋಡು ಎಂಬುದಾಗಿ ಈ ಪಟ್ಟಣಕ್ಕೆ ಈ ಹೆಸರು ಬಂದಿದೆ ಎಂಬುದು ಜನಪದರ ಮತ್ತೊಂದು ಹೇಳಿಕೆ.

ಒಂದು ಸಮುದಾಯ ತುಂಬ ಹಿಂದಿನಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ವಾಸಮಾಡುತ್ತಾ ಬಂದು, ಆನಂತರ ಕೆಲ ಸಮುದಾಯಗಳು ಆ ಸ್ಥಳದಲ್ಲಿ ನೆಲೆಗೊಳುತ್ತವೆ. ಮೂಲದಿಂದಲೂ ನೆಲೆಗೊಂಡು ಬಂದ ಸಮುದಾಯಗಳ ಹೆಸರೇ ಆ ಪ್ರದೇಶಕ್ಕೆ ಅನ್ವಯವಾಗುವಂತೆ ಗುರುತಿಸಲಾಗುತ್ತದೆ. ಉದಾಹರಣೆಗೆ ಗೊಲ್ಲರ ಹಟ್ಟಿ, ಗೊಂಡೇನಹಳ್ಳಿ, ಉಪ್ಪಾರಹಳ್ಳಿ ಇತ್ಯಾದಿ ಈ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ತುಂಬ ಹಿಂದಿನಿಂದಲೂ ಪಾರಂಪರಿಕವಾಗಿ ನೆಲೆಗೊಂಡು ಬಂದ ಕುರುಬ ಹಾಗೂ ಕುರುಹಿನ ಶೆಟ್ಟಿ ಸಮುದಾಯಗಳಿಂದ ಈ ಪಟ್ಟಣಕ್ಕೆ ಕುರುಗೋಡು ಎಂಬ ಹೆಸರು ಬಂದಿರಬಹುದೆ ಎಂದು ಚರ್ಚೆಯಾಗಬೇಕಿದೆ. ಏಕೆಂದರೆ ಇಲ್ಲಿ ಗೋಡು, ಗೂಡು, ಪೋಡು, ವಾಡೆ ಇತ್ಯಾದಿ ಪದಗಳು ವಾಸಿಸುವ ಸ್ಥಳ ಅಥವಾ ನೆಲೆನಿಂತಿರುವ ಸ್ಥಳ ಎಂಬ ಹೆಸರನ್ನು ಸೂಚಿಸುತ್ತವೆ. ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುವ ಕುರುಬ ಹಾಗೂ ಕುರುಹಿನ ಶೆಟ್ಟಿ ಸಮುದಾಯಗಳ ಹಿನ್ನೆಲೆಯಿಂದ ಕುರುಹಿನ ಕೋಡು ಕುರುಗೋಡು ಎಂಬ ಹೆಸರು ಬಂದಿರಬಹುದಾಗಿ ಊಹಿಸಬಹುದಾಗಿದೆ.

ಕ್ರಿ.ಶ. ೧೭೦೧-೧೦ರಲ್ಲಿ ಹಂಡೆವಂಶದ ದೇವಪ್ಪನಾಯಕ ಪಟ್ಟಣದ ಸುರಕ್ಷತೆಯ ದೃಷ್ಟಿಯಿಂದ ಕುರುಗೋಡು ಹಳೇ ಪಟ್ಟಣದ ಪೂರ್ವಕ್ಕೆ ಗುಡ್ಡದ ಕೆಳಗೆ ಕೋಟೆ ಕಟ್ಟಿಸಿ ಹೊಸ ಊರನ್ನು ಸ್ಥಾಪನೆ ಮಾಡಿದ್ದರಿಂದ ಪ್ರಸ್ತುತ ಕುರುಗೋಡು ಪಟ್ಟಣ ನಿರ್ಮಾಣವಾಯಿತು ಎಂದು ಅಭಿಪ್ರಾಯ ಪಡಲಾಗುತ್ತದೆ. ಅಲ್ಲದೆ ಹಳೆಯ ಊರಿಗೆ ಕಾಲರ ಹಾಗೂ ಪ್ಲೇಗ್‌ನಂತಹ ಮಾರಕ ರೋಗಗಳು ಬಂದೊದಗಿದ್ದರಿಂದ ಜನರು ಹಳೆಯ ಊರನ್ನು ತೊರೆದು ಇಂದಿನ ಕುರುಗೋಡು ಪಟ್ಟಣಕ್ಕೆ ಸ್ಥಳಾಂತರಗೊಂಡರು ಎಂಬುದಾಗಿ ಹೇಳಲಾಗುತ್ತದೆ. ಸುಮಾರು ಒಂದು ಶತಮಾನಗಳ ಕಾಲ (೧೧ನೇ ಶತಮಾನದಿಂದ ೧೨ನೇ ಶತಮಾನದ ಕೊನೆಯವರೆಗೆ) ಕುರುಗೋಡು ಪ್ರದೇಶವನ್ನು ಕೇಂದ್ರವಾಗಿರಿಸಿಕೊಂಡು ಆಳಿದ ರಾಜವಂಶದವರಲ್ಲಿ ಕುರುಗೋಡು ಸಿಂದರು ಪ್ರಮುಖರಾಗಿ ಕಂಡು ಬರುತ್ತಾರೆ. ಇವರನ್ನು ನಾಗಕುಲದವರು ಎಂದು ಕರೆಯುತ್ತಾರೆ. ಇವರಲ್ಲಿ ನಾಗಾರಾಧನೆ ಆಚರಣೆ ಹೆಚ್ಚು ರೂಢಿಯಲ್ಲಿದ್ದ ಬಗೆಗೆ ತಿಳಿದುಬರುತ್ತದೆ. ಈ ಪ್ರದೇಶದಲ್ಲಿ ಇಂದಿಗೂ ಈ ಆಚರಣೇ ರೂಢಿಯಲ್ಲಿದ್ದು, ಪ್ರಾಚೀನ ನಾಗಾರಾಧನೆಯ ಕುರುಹುಗಳು ಅಲ್ಲಲ್ಲಿ ಕಂಡು ಬರುತ್ತವೆ. ಹೀಗೆ ಆಚರಣೆ, ನಂಬಿಕೆ, ಸಂಪ್ರದಾಯ, ನಿಷೇಧ ಪದ್ಧತಿ, ವಿಧಿವಿಧಾನಗಳು ಮಾನವನ ಸಂಸ್ಕೃತಿಯೊಳಗೆ ಸಮ್ಮಿಳಿತಗೊಂಡ ಸಂಸ್ಕೃತಿಯ ರೂಪ ವೈವಿಧ್ಯಗಳು ಅದರಲ್ಲೂ ವಿಶೇಷವಾಗಿ ಮಾನವನ ಸಂಸ್ಕೃತಿ ಚರಿತ್ರೆಯ ಹಲವಾರು ದರ್ಶನಗಳನ್ನು ಆಚರಣೆಗಳಲ್ಲಿ ಕಾಣಬಹುದು.

ಕುರುಗೋಡಿನಲ್ಲಿ ವರ್ಷದಾದ್ಯಂತ ನಡೆಯುವ ಹಬ್ಬ, ಉತ್ಸವ, ಆಚರಣೆ, ಸಂಪ್ರದಾಯಗಳನ್ನು ಈ ಪ್ರದೇಶದ ಪಾರಂಪರಿಕ ಹಿನ್ನೆಲೆಯಲ್ಲಿ ಅರ್ಥೈಸಿಕೊಳ್ಳುವ ಮೂಲಕ ಸಮುದಾಯಗಳು, ಸಂಸ್ಥಾನಗಳ ಚಾರಿತ್ರಿಕ ಅಂಶಗಳನ್ನು ಕಂಡು ಕೊಳ್ಳಬಹುದು. ಕುರುಗೋಡಿನಲ್ಲಿ ಕಂಡುಬರುವ ದೈವಗಳು ಇಲ್ಲಿನ ಆಚರಣೆಗಳ ಪ್ರಮುಖ ಕೇಂದ್ರ ಬಿಂದುವಾಗಿ ಕಂಡುಬರುತ್ತವೆ. ಇಲ್ಲಿ ಪ್ರಮುಖವಾಗಿ ಕಂಡುಬರುವ ದೈವಗಳೆಂದರೆ :

ಕುರುಗೋಡು ದೊಡ್ಡಬಸವೇಶ್ವರ, ಗ್ರಾಮದೇವತೆ ಸುಂಕಲಮ್ಮ, ಹಂಡೆ ಹನುಮಪ್ಪ, ಪಂಚಮುಖದಯ್ಯ, ಗವಿ ವೀರಭದ್ರ, ಕೊಳ್ಳದ ವೀರಭದ್ರ, ವಜ್ರಬಂಡೆ ಬಸಪ್ಪ, ಕಲ್ಗುಡೆಪ್ಪ, ನೀಲಕಂಠೇಶ್ವರ, ಹಿಂಡುಲಿ ಸಂಗಮೇಶ್ವರ, ಬಾಳೆಕೊಳ್ಳದ ಎಲ್ಲಮ್ಮ, ಕೆಂಚಮ್ಮ, ಕಾಳಮ್ಮ, ಚೌಕಿ ನೀಲಮ್ಮ, ಮಲಯಮ್ಮ, ಕವಲೆಗಿಡದ ಮಾರಮ್ಮ, ಬುಡೆಕಲ್ಲಪ್ಪ, ಪೋಪ್ಪಪ್ಪ, ಜಂಗಳಿ ಬಸವಣ್ಣ, ಕೋಟೆ ಈಶ್ವರ, ಕೋಟೆ ಆಂಜನೇಯ, ಚೌಕಮ್ಮ, ತಾಯಮ್ಮ,

ದೊಡ್ಡಬಸವೇಶ್ವರ ಕುರುಗೋಡಿನ ಪ್ರಮುಖವಾದ ದೈವ. ಈ ದೇವರಿಂದಲೇ ಕುರುಗೋಡಿಗೆ ಹೆಸರು ಬಂದಿದೆ ಎಂಬುದು ಜನಪದರ ನಂಬಿಕೆ. ಈ ದೇವಾಲಯದ ಮಹಾದ್ವಾರವು ಪಶ್ಚಿಮಾಭಿಮುಖವಾಗಿದೆ. ಸುಮಾರು ೬೦ ಅಡಿ ಎತ್ತರದ ಇಟ್ಟಿಗೆ ಹಾಗೂ ಗಾರೆಗಳಿಂದ ನಿರ್ಮಿಸಿದ ೫ ಅಂತಸ್ತುಗಳ ಗೋಪರವಿದೆ. ದೇವಾಲಯದ ನವರಂಗವು ಹನ್ನೆರಡು ಕಂಬಗಳಿಂದ ಕೂಡಿದೆ. ಗರ್ಭಗುಡಿಯಲ್ಲಿ ಸುಮಾರು ೨೫x೨೦ ಅಡಿಗಳಷ್ಟು ವಿಸ್ತಾರವಾಗಿದೆ. ಗರ್ಭಗೃಹದ ಮಧ್ಯಭಾಗದಲ್ಲಿ ಪ್ರಾಕೃತಿಕವಾಗಿ ರಚನೆಗೊಂಡ ಬೃಹತ್ ಶಿಲೆಯಿಂದ ಕಂಡರಿಸಿ ಕೆತ್ತಿದ ಮಲಗಿದ ಭಂಗಿಯ ನಂದಿ ವಿಗ್ರಹ ಇದೆ. ಇದು ಸುಮಾರು ೧೪ ಅಡಿ ಎತ್ತರವಿದ್ದು, ದೊಡ್ಡ ವಿಗ್ರಹವಾಗಿರುವುದರಿಂದ ಇದನ್ನೆ ದೊಡ್ಡಬಸವೇಶ್ವರ ಎಂದು ಕರೆಯುತ್ತಾರೆ. ಈ ಪ್ರದೇಶವನ್ನು ‘ದಕ್ಷಿಣಕಾಶಿ’ ಎಂದೂ ಕರೆಯುತ್ತಾರೆ.

ಈ ದೇವಾಲಯ ಶಾಸನಾಧಾರದ ಪ್ರಕಾರ ೧೫೨೮ರಲ್ಲಿ ವಿಜಯನಗರದ ಅರಸ ಶ್ರೀಕೃಷ್ಣದೇವರಾಯನ ಸಮಕಾಲೀನ ಕೃಷ್ಣಪ್ಪನಾಯಕನ ಕಾಲದಲ್ಲಿ ಈ ದೇವರಿಗೆ ಭೂಮಿಯನ್ನು ದಾನಬಿಟ್ಟ ಬಗೆಗೆ ತಿಳಿದುಬರುತ್ತದೆ. ಈ ದೇವಾಲಯದ ನಿರ್ಮಾಣ, ಕಲ್ಯಾಣ ಚಾಲುಕ್ಯರ ಆಡಳಿತದ ಕೊನೆ ಹಾಗೂ ವಿಜಯನಗರದ ಅರಸರ ಆರಂಭದ ಕಾಲಾವಧಿಯಲ್ಲಿ ಹಂತಹಂತವಾಗಿ ನಿರ್ಮಾಣಗೊಂಡಿತು ಎಂಬುದಾಗಿ ಹೇಳಲಾಗುತ್ತದೆ. ಮಾರ್ಚ್‌ ತಿಂಗಳ ಹೋಳಿ ಹುಣ್ಣಿಮೆಯ ಸಂದರ್ಭದಲ್ಲಿ ಈ ದೇವರ ಜಾತ್ರೆ ನಡೆಯುತ್ತದೆ. ಇದು ಈ ಜಿಲ್ಲೆಯಲ್ಲಿ ಹಂಪಿ ಜಾತ್ರೆಯನ್ನು ಬಿಟ್ಟರೆ ಎರಡನೆಯ ದೊಡ್ಡ ಜಾತ್ರೆ ಎಂದು ಹೇಳಬಹುದು. ಮಾರ್ಚ್ ತಿಂಗಳ ಹೋಳಿ ಹುಣ್ಣಿಮೆಯ ಸಂದರ್ಭದಲ್ಲಿ ಕುರುಗೋಡಿನ ದೊಡ್ಡ ಬಸವೇಶ್ವರ ಜಾತ್ರೆ ನಡೆಯುತ್ತದೆ. ಇದು ಗ್ರಾಮ ದೈವದ ಜಾತ್ರೆಯಾದುದರಿಂದ ಈ ಸಂದರ್ಭದಲ್ಲಿ ಇತರೆಡೆಗಳಲ್ಲಿ ಹೋಳಿ ಹುಣ್ಣಿಮೆ ಆಚರಣೆಗೊಳಿಸುವುದರಿಂದ ಭಿನ್ನವಾದ ಇಲ್ಲಿನ ಆಚರಣೆಗಳು ಇಲ್ಲಿ ನಡೆಯುತ್ತಿರುತ್ತವೆ. ಹೋಳಿ ಹುಣ್ಣಿಮೆಯಂದು ನಡೆಯುವ ಓಕುಳಿ ಆಚರಣೆ ಇಲ್ಲಿ ಕಂಡುಬರುವುದಿಲ್ಲ. ಪ್ರತಿ ವರ್ಷ ಕುರುಗೋಡಿನ ಎಲ್ಲಾ ಸಮುದಾಯದ ಪ್ರಮುಖರು ಸೇರಿ ಜಾತ್ರೆಯ ದಿನದ ಕಾರ್ಯಕ್ರಮವನ್ನು ಕೈಯಿಂದಲೇ ಸಿದ್ಧಪಡಿಸುತ್ತಾರೆ. ಹೀಗೆ ಪ್ರತಿಯೊಂದು ಸಮುದಾಯಗಳೂ ಜಾತ್ರೆಯ ಆಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತವೆ. ಜಾತ್ರೆಗಿಂತ ಒಂಬತ್ತು ದಿನದ ಮುಂಚಿತವಾಗಿ ಎಲ್ಲರೂ ಕಂಕಣ ಕಟ್ಟಿಕೊಳ್ಳುವ ಪದ್ಧತಿ ಇದೆ. ಕಂಕಣ ಕಟ್ಟಿಕೊಂಡ ನಂತರ ಅವರಲ್ಲಿ ಮಾಂಸಹಾರ ಸೇವನೆ ಇತ್ಯಾದಿ ವಿಷಯಗಳ ನಿಷೇಧವಿರುತ್ತದೆ. ಜಾತ್ರೆಯಾದ ನಂತರ ಕಟ್ಟಿದ ಕಂಕಣವನ್ನು ಬಿಚ್ಚುತ್ತಾರೆ. ಆ ಸಂದರ್ಭದಲ್ಲಿ ಹಿಂದೆ ಓಕುಳಿ ಆಚರಣೆ ಇದೆ. ಈ ಹಿಂದೆ ದೇವದಾಸಿ ಹೆಣ್ಣುಮಕ್ಕಳು ಓಕುಳಿಯಾಡುವ ಪದ್ಧತಿ ಇತ್ತು. ಬೇರೆಯವರು ಈ ಹೆಣ್ಣುಮಕ್ಕಳಿಗೆ ಓಕುಳಿ ಹಾಕುತ್ತಾ ಅವರಿಂದ ಪೊರಕೆಯಿಂದ ಹೊಡೆಸಿಕೊಳ್ಳುತ್ತಿದ್ದರು. ಸಾಮಾನ್ಯವಾಗಿ ಓಕುಳಿ ಆಚರಣೆ ಶುದ್ಧಗೊಳ್ಳುವ ಪ್ರಕ್ರಿಯೆಯಾಗಿ ಜನಪದರಲ್ಲಿ ಕಂಡು ಬರುತ್ತದೆ. ಉದಾಹರಣೆಗೆ ಓಕುಳಿಯಲ್ಲಿ ಎರಡು ಬಗೆ, ಒಂದು ನೀರಿನ ಓಕುಳಿ ಮತ್ತೊಂದು ಸಗಣಿ ಓಕುಳಿ ಅಥವಾ ತೊಪ್ಪೆ ಓಕುಳಿ. ಸಗಣಿ ಓಕುಳಿ ದಕ್ಷಿಣ ಕರ್ನಾಟಕದ ಪ್ರದೇಶದಲ್ಲಿ ಇಂದಿಗೂ ಪ್ರಚುರದಲ್ಲಿದೆ. ಸಗಣಿ, ಗೋಮೂತ್ರ, ನೀರು ಇವು ಶುದ್ಧೀಕರಣಗೊಳ್ಳುವ ಬಗೆಯಲ್ಲಿ ಓಕುಳಿ ಆಚರಣೆಯಲ್ಲಿ ಬಳಕೆಯಾಗುತ್ತವೆ. ಸಾಮಾನ್ಯವಾಗಿ ಓಕುಳಿ ಆಚರಣೆ ಗ್ರಾಮ ದೈವಗಳನ್ನು ವರ್ಷಕ್ಕೊಮ್ಮೆ ಪೂಜಿಸಲು ಹೊರತೆಗೆಯುವ ಸಂದರ್ಭದಲ್ಲಿ ಹಾಗೂ ಜಾತ್ರೆಯ ಆಚರಣೆಯ ಮುಕ್ತಾಯದ ಸಂದರ್ಭದಲ್ಲಿ ನಡೆಯುವುದನ್ನು ಗಮನಿಸಬಹುದು. ಸೋಮಲಾಪುರ ಹಾಗೂ ಮುಷ್ಟಗಟ್ಟಿಯ ಬೇಡ ಸಮುದಾಯದವರು ಕೆರೆಕೆರೆ ಜಾತ್ರೆಯ ಸಂದರ್ಭದಲ್ಲಿ ಕುಂಬಗಳನ್ನು ಪೂಜಿಸಿ ತಂದು ಧೂಳುಗಾಯಿ ಓಡೆದು ಮೊದಲಿಗೆ ಈರಣ್ಣ ದೇವರಿಗೆ ಪೂಜೆ ಸಲ್ಲಿಸಿ ನೀಲಮ್ಮನ ಮಠಕ್ಕೆ ಹೋಗಿ ಅಲ್ಲಿಯೂ ಪೂಜೆ ಸಲ್ಲಿಸಿ, ದೊಡ್ಡಬಸವೇಶ್ವರ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸುತ್ತಾರೆ. ಅಲ್ಲಿನ ಮಡಿವಾಳೇಶ್ವರ ಗುಡಿಯ ಪಕ್ಕದ ಬೇವಿನಗಿಡದ ಕಟ್ಟೆಯ ಮೇಲೆ ಕುಂಬಗಳನ್ನು ಇಳಿಸಿ ಪೂಜೆ ಸಲ್ಲಿಸುತ್ತಾರೆ. ಇಂದಿಗೂ ಈ ಸ್ಥಳಕ್ಕೆ ಕುಂಬದಕಟ್ಟೆ ಎಂಬುದಾಗಿ ಕರೆಯುತ್ತಾರೆ. ಬಗೆಗೆ ಚರ್ಚಿಸಿ ತೀರ್ಮಾನಿಸುತ್ತಾರೆ. ಹೋಳಿ ಹುಣ್ಣಿಮೆಯ ಒಂಬತ್ತು ದಿನಗಳ ಮುಂಚಿತವಾಗಿ ಗ್ರಾಮದಲ್ಲಿ ತುಂಬಾ ಕಟ್ಟುನಿಟ್ಟಿನ ಕ್ರಮವನ್ನು ಅನುಸರಿಸಲಾಗುತ್ತದೆ. ಈ ಸಂದರ್ಭದಲ್ಲಿ ಬೇರಾವುದೇ ಆಚರಣೆ ಪದ್ಧತಿಗಳು ನಡೆಯುವುದಿಲ್ಲ. ಮಾಂಸದ ಅಡುಗೆ ಇತ್ಯಾದಿಗಳನ್ನು ಯಾವುದೇ ಸಮುದಾಯಗಳು ಅತಿ ಭಕ್ತಿಯಿಂದ ಗ್ರಾಮ ದೈವದ ಪೂಜೆ ಹಾಗೂ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತವೆ. ಇಲ್ಲಿನ ಪ್ರತಿಯೊಂದು ಸಮುದಾಯದವರೂ ಜಾತ್ರೆಯ ಆಚರಣೆಗೆ ಸಂಬಂಧಿಸಿದಂತೆ ತಮ್ಮ ತಮ್ಮ ಪಾಲಿನ ಕೆಲಸಗಳನ್ನು ಚಾಚುತಪ್ಪದೆ ನಿರ್ವಹಿಸುತ್ತವೆ. ಇದು ಸಮುದಾಯಗಳ ನಡುವಿನ ಸೌಹಾರ್ದತೆಯ ಸಂಕೇತವೂ ಹೌದು. ಜಾತ್ರೆಗೆ ಮುನ್ನ ವಡ್ಡರ ಸಮುದಾಯದವರು ರಥದ ಮನೆಯಿಂದ ರಥವನ್ನು ಹೊರಗೆ ತಂದು ಬಿಡುತ್ತಾನೆ. ಜಾತ್ರೆಯ ರಥೋತ್ಸವಕ್ಕೆ ಬೇಕಾದ ರೀತಿಯಲ್ಲಿ ಬಡಿಗೇರ ಸಮುದಾಯದವರು ರಥವನ್ನು ಸಿದ್ಧಪಡಿಸುತ್ತಾರೆ. ರಥಕ್ಕೆ ಬೇಕಾದ ಇರುಸು ಹಾಗೂ ಗಾಲಿಗಳನ್ನು ಕಮ್ಮಾರರು ಸಜ್ಜುಗೊಳಿ ಸುತ್ತಾರೆ. ಚಿಪ್ಪಿಗ ಸಮುದಾಯದವರು ರಥದ ಧ್ವಜವನ್ನು ಜಾತ್ರೆಯ ಮೊದಲ ದಿನ ಎಲ್ಲಾ ಸಮುದಾಯದ ಮುಖ್ಯಸ್ಥರ ಹಾಗೂ ಪ್ರಮುಖರು ಸೇರಿ ದೊಡ್ಡ ಬಸವೇಶ್ವರನಿಗೆ ಧ್ವಜವನ್ನು ಸಮರ್ಪಿಸುವ ಮೂಲಕ ಜಾತ್ರೆಗೆ ಚಾಲನೆ ನೀಡುತ್ತಾರೆ. ಇಲ್ಲಿನ ನೀಲಮ್ಮನ ಮಠ ಹಾಗೂ ದೊಡ್ಡಬಸವೇಶ್ವರ ದೇವಾಲಯ ಜಾತ್ರೆಯ ಪ್ರಮುಖ ಕೇಂದ್ರಬಿಂದುವಾಗಿ ಕಂಡು ಬರುತ್ತವೆ. ಮೊದಲು ದೊಡ್ಡ ಬಸವೇಶ್ವರನ ಗುಡಿಯ ಬಸವನನ್ನು ನೀಲಮ್ಮನ ಮಠಕ್ಕೆ ಪೂಜಾ ವಿಧಿವಿಧಾನಗಳ ಮೂಲಕ ಕರೆದೊಯ್ದು ಬಿಟ್ಟುಬರುತ್ತಾರೆ. ಅನಂತರ ನೀಲಮ್ಮನವರ ಮಠದಿಂದ ಕುಂಬ ಕಳಶದ ಸಮೇತವಾಗಿ ಮುತ್ತೈದೆಯರು ದೊಡ್ಡ ಬಸವೇಶ್ವರನ ಗುಡಿಗೆ ಬರುತ್ತಾರೆ. ಈ ಸಮಯದಲ್ಲಿ ಮಠದ ಗುರುಗಳೂ ಬರುತ್ತಾರೆ. ಕುಂಬ ಕಳಸ ಸಮೇತವಾಗಿ ತೇರನ್ನು ಬಳಸಿ ರಥೋತ್ಸವಕ್ಕೆ ಅಣಿಮಾಡುತ್ತಾರೆ. ಸಾಮಾನ್ಯವಾಗಿ ರಥದಲ್ಲಿ ಕೂರುವವರು ನೀಲಮ್ಮನ ಮಠದವರು. ನೀಲಮ್ಮ ಬಸವೇಶ್ವರರ, ಶಿಶುಮಗಳು ಎಂಬುದು ಇಲ್ಲಿನ ಜನಪದರ ನಂಬಿಕೆ. ಒಂಬತ್ತು ದಿನಗಳ ಜಾತ್ರೆಯ ಆಚರಣೆಯಲ್ಲಿ ಪ್ರತಿದಿನವೂ ಒಂದೊಂದು ಬಗೆಯ ಉತ್ಸವ ಆಚರಣೆಗಳು ನಡೆಯುತ್ತವೆ. ಒಂದು ದಿನ ನವಿಲು ವಾಹನ ಉತ್ಸವ, ನಂದಿವಾಹನ ಉತ್ಸವ ಇತ್ಯಾದಿ. ಹೋಳಿ ಹುಣ್ಣಿಮೆಯ ದಿನದಂದು ನಡೆಯುವ ರಥೋತ್ಸವ ದಲ್ಲಿ ದೊಡ್ಡಬಸವೇಶ್ವರ ಹಾಗೂ ನೀಲಮ್ಮ ಎರಡೂ ಮೂರ್ತಿಗಳನ್ನೂ ರಥದಲ್ಲಿ ಕುಳ್ಳಿರಿಸಿ ರಥೋತ್ಸವ ನಡೆಯುತ್ತದೆ. ರಥೋತ್ಸವದ ನಂತರ ಒಂಬತ್ತು ದಿನಗಳ ಹಿಂದೆ ಕಟ್ಟಿದ್ದ ಕಂಕಣವನ್ನು ಬಿಚ್ಚುವ ಆಚರಣೆ, ಕಂಕಣ ಬಿಚ್ಚಿದ ನಂತರ ಗ್ರಾಮದಲ್ಲಿ ಮಾಂಸಹಾರ ಊಟೋಪಚಾರದ ಕಾರ್ಯಗಳು ನಡೆಯುತ್ತದೆ.

ಶ್ರಾವಣ ಮಾಸದ ಆಚರಣೆಗಳು

ಶ್ರಾವಣ ಮಾಸ ಕೃಷಿಕ ಸಮುದಾಯ ಹಾಗೂ ಪಶುಪಾಲಕ ಸಮುದಾಯಗಳಿಗೆ ತುಂಬ ಮಹತ್ವದ ದಿನಗಳು. ಈ ಸಂದರ್ಭದಲ್ಲಿ ಜನಪದರಲ್ಲಿ ಹೆಚ್ಚಿನ ಆಚರಣೆಗಳನ್ನು ಕಾಣಬಹುದು. ಶೈವ ಹಾಗೂ ವೈಷ್ಣವನ ಸಂಪ್ರದಾಯಗಳ ದೈವಗಳಿಗೆ ಸಂಬಂಧಿಸಿದಂತೆ ಆಯಾ ವಾರಗಳಲ್ಲಿ ಪೂಜೆ ಆಚರಣೆಗಳು ನಡೆಯುತ್ತವೆ. ಸಾಮಾನ್ಯವಾಗಿ ಶ್ರಾವಣ ಸೋಮವಾರದ ದಿನಗಳಲ್ಲಿ ಇಲ್ಲಿನ ಶ್ರಾವಣ ಮಾಸದ ವಿಶೇಷ ಆಚರಣೆಗಳು ನಡೆಯುತ್ತವೆ. ಈ ಸಂದರ್ಭದಲ್ಲಿ ವಜ್ರಬಂಡೆ ಬಸಪ್ಪ, ಹಿಂಡುಲಿ ಸಂಗಮೇಶ್ವರ, ಪಂಚಮುಖದಯ್ಯ, ಗವಿವೀರಭದ್ರ ಹೀಗೆ ಶ್ರಾವಣ ಮಾಸದ ಪ್ರತಿ ಸೋಮವಾರದಂದು ಒಂದೊಂದು ದೇವರುಗಳಿಗೂ ಪೂಜೆ ಸಲ್ಲುತ್ತದೆ. ಸಾಮಾನ್ಯವಾಗಿ ಶ್ರಾವಣ ಮಾಸದ ಮೂರನೇ ಸೋಮವಾರವನ್ನು ವಜ್ರಬಂಡೆ ಸೋಮವಾರ ಎಂದೇ ಕರೆಯಲಾಗುತ್ತದೆ. ಅಂದು ವಜ್ರಬಂಡೆ ಬಸವೇಶ್ವರನಿಗೆ ಪೂಜೆ ನಡೆಯುತ್ತದೆ. ಇಲ್ಲಿ ಹಂಡೆ ಹನುಮಪ್ಪನ ದೇವಸ್ಥಾನವಿದ್ದು ಇದಕ್ಕೆ ಹಂಡೆ ವಂಶಸ್ಥರು ಪೂಜಾರಿಗಳಾಗಿರುತ್ತಾರೆ. ಇಂದಿಗೂ ಯಾದವ ಅಥವಾ ಗೊಲ್ಲದಾಸರು ಈ ದೇವರನ್ನು ಪೂಜಿಸುತ್ತಾರೆ. ಶ್ರಾವಣ ಮಾಸದ ಮೂರನೇ ಶನಿವಾರದಂದು ಇಲ್ಲಿ ಪರವು ಆಚರಣೆ ನಡೆಯುತ್ತದೆ. ಈ ದಿನದಂದು ಊರಿನ ಎಲ್ಲಾ ಸಮುದಾಯದವರೂ ಬುತ್ತಿಕಟ್ಟಿಕೊಂಡು ಗುಡಿಗೆ ಹೋಗಿ ಗಂಗೆಪೂಜೆ, ಭಜನೆ ಕಾರ್ಯಕ್ರಮನಡೆಸಿ ಬುತ್ತಿ ಊಟಮಾಡಿ ಬರುತ್ತಾರೆ.

ಶ್ರಾವಣಮಾಸದಲ್ಲಿ ದೊಡ್ಡ ಬಸವೇಶ್ವರ ದೇವಸ್ಥಾನದಲ್ಲಿ ದೇವಸ್ಥಾನದಲ್ಲಿ ಈ ದೇವರಿಗೆ ಸಂಬಂಧಪಟ್ಟಂತೆ ವಿಶೇಷ ಆಚರಣೆಯೊಂದು ನಡೆಯುತ್ತದೆ. ಇದು ಹಂಪಿಯಲ್ಲಿ ನಡೆಯುವ ಫಲಪೂಜೆ ಆಚರಣೆಯಂತೆ ಕಂಡುಬರುತ್ತದೆ. ಈ ಸಂದರ್ಭದಲ್ಲಿ ಬಸವೇಶ್ವರನ ಗುಡಿಯ ಹೊರಭಾಗದ ಅಂಗಳದಲ್ಲಿ ಈ ಕಾರ್ಯಕ್ರಮ ಜರುಗುತ್ತದೆ. ನೀಲಮ್ಮ ಹಾಗೂ ಬಸವೇಶ್ವರರ ಪಾಲಿಕೆಗಳನ್ನು ಎದುರುಬದುರಾಗಿ ನಿಲ್ಲಿಸಿಕೊಂಡು ಈ ಆಚರಣೆ ನಡೆಯುತ್ತದೆ. ನೀಲಮ್ಮನ ಪರವಾಗಿ ಲಿಂಗಾಯಿತ ಸ್ವಾಮಿಗಳು, ಎರಡುಗುಂಪುಗಳಾಗಿ ಹೆಣ್ಣು ಗಂಡುಗಳ ಮದುವೆ ಒಪ್ಪಂದದ ಕ್ರಮದಲ್ಲಿ ಈ ಆಚರಣೆ ನಡೆಯುತ್ತದೆ. ಈ ಸಂದರ್ಭದಲ್ಲಿ ಬಸವೇಶ್ವರ ದೇವಸ್ಥಾನದ ಕ್ರಮದಲ್ಲಿ ಈ ಆಚರಣೆ ನಡೆಯುತ್ತದೆ. ಈ ಸಂದರ್ಭದಲ್ಲಿ ಬಸವೇಶ್ವರ ದೇವಸ್ಥಾನದ ಗೂಳಿಯನ್ನು ಎದುರಿಗಿರಿಸಿಕೊಂಡು ಗಂಡಿನ ಕಡೆಯವರು ನೀಲಮ್ಮನಿಗೆ ಏನು ವಸ್ತು ಒಡವೆ ಬೇಕೆಂಬುದಾಗಿ ಕೇಳುತ್ತಾರೆ. ಅದಕ್ಕೆ ಪ್ರತಿಯಾಗಿ ನೀಲಮ್ಮನ ಕಡೆಯವರು ಇಂತಿಂಥಾ ವಸ್ತು ಒಡವೆ ಬೇಕೆಂಬುದಾಗಿ ತಿಳಿಸುತ್ತಾರೆ. ಈ ಸಂದರ್ಭದಲ್ಲಿ ಮಾನವ ಸಹಜವಾದ ವಾಗ್ವಾದಗಳು, ನಿರಾಕರಣೆ ಮತ್ತು ಮಾತಿಗೆ ಕೂಡುವ ಹಲವು ಬಗೆಯ ನಾಟಕೀಯ ಸನ್ನಿವೇಶಗಳು ಏರ್ಪಡುತ್ತವೆ. ಕೊನೆಗೆ ಎರಡೂ ಗುಂಪುಗಳು ಒಪ್ಪಿ ಮದುವೆಯ ನಿಶ್ಚಿತಾರ್ಥ ಏರ್ಪಡುತ್ತದೆ. ಇದು ಗಂಗೆತ್ತಿನವರ ಆಟದ ಸನ್ನಿವೇಶವನ್ನು ನೆನಪಿಗೆ ತರುತ್ತದೆ. ಜನಪದರು ದೈವಗಳನ್ನು ನಮ್ಮಂತೆಯೇ ಎಂದು ಭಾವಿಸಿರುವ ಕ್ರಮ ಈ ಆಚರಣೆಯಿಂದ ವ್ಯಕ್ತವಾಗುತ್ತದೆ. ಈ ಆಚರಣೆಯನ್ನು ಕುರುಗೋಡಿನ ದೊಡ್ಡ ಬಸವೇಶ್ವರ ಜಾತ್ರೆಯ ಮೊದಲ ಹಂತವೆಂದು ಹೇಳಬಹುದು.

ಪರಾಮರ್ಶನ ಗ್ರಂಥಗಳು

೧.ಬಳ್ಳಾರಿ ಜಿಲ್ಲೆಯ ಸಾಂಸ್ಕೃತಿಕ ಇತಿಹಾಸ : ಜೆ.ಎಂ.ನಾಗಯ್ಯ, ೨೦೦೨, ಲೋಹಿಯಾ ಪ್ರಕಾಶನ, ಬಳ್ಳಾರಿ

೨. ಅವಲೋಕನ ಕರ್ನಾಟಕ ಪರಂಪರೆ ಸಮೀಕ್ಷೆ : ಎಚ್ಚಸ್ಕೆ (ಸಂ), ೧೯೮೫, ವಿಶ್ವಕನ್ನಡ ಸಮ್ಮೇಳನ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು.

೩. ಸಂಡೂರು ಪರಿಸರದ ಕಾರ್ತಿಕೇಯ ತಪೋವನ ಚಾರಿತ್ರಿಕ ಅಧ್ಯಯನ : ವಾಸುದೇವ ಬಡಿಗೇರ, ೧೯೯೭, ಮಯ ಪ್ರಕಾಶನ, ಕಮಲಾಪುರ.

೪. ಹುಲ್ಲೂರು ಶ್ರೀನಿವಾಸ ಜೋಯಿಸರ ಐತಿಹಾಸಿಕ ಲೇಖನಗಳು : ಪ್ರೊ.ಲಕ್ಷ್ಮಣ ತೆಲಗಾವಿ, ೧೯೭೬, ಹುಲ್ಲೂರು ಶ್ರೀನಿವಾಸ ಜೋಯಿಸರ ಗ್ರಂಥ ಪ್ರಕಟಣಾ ಸಮಿತಿ, ಚಿತ್ರದುರ್ಗ

೫. ಕರ್ನಾಟಕದಲ್ಲಿ ಪುರಾತತ್ವ ಶೋಧನೆ : ಡಾ.ಎ.ವಿ. ನರಸಿಂಹಮೂರ್ತಿ, ೧೯೮೩, ಐಬಿಎಚ್‌ ಪ್ರಕಾಶನ, ಬೆಂಗಳೂರು.

೬. ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ-೧ ಬಳ್ಳಾರಿ ಜಿಲ್ಲೆ : ಡಾ.ದೇವರಕೊಂಡಾರೆಡ್ಡಿ ಸಂ, ೧೯೯೮, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ.

೭. ಕುರುಗೋಡು ದರ್ಶನ :

೮. ಕರ್ನಾಟಕದ ಪುರಾತತ್ವ ಶೋಧ : ಡಾ.ಸಿ.ಮಹಾದೇವ, ೨೦೦೧, ಶ್ರೀ ಲಕ್ಷ್ಮಿ ಪ್ರಕಾಶನ, ಹೊಸಪೇಟೆ

೯. ಕರ್ನಾಟಕ ಪುರತ್ವಾತ ನೆಲೆಗಳು : ಡಾ.ಕೆ.ಬಿ.ಶಿವತಾರಕ್, ೨೦೦೧, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

೧೦. ಪುರಾತತ್ವ ಶೋಧನೆ : ಡಾ.ಎಸ್.ಶ್ರೀಕಂಠಶಾಸ್ತ್ರೀ, ೧೯೬೦, ಮೈಸೂರು ವಿಶ್ವವಿದ್ಯಾಲಯ, ಮೈಸೂರು.