ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿ ೧೫-೧೨-೧೯೨೮ ರಂದು ಜನಿಸಿದ ವೆಂಕಣ್ಣಾಚಾರ್ ಅವರ ಪ್ರಥಮ ಸಂಗೀತಾಭ್ಯಾಸ ಅವರ ತಂದೆ ವಿದ್ವಾನ್‌ ವಿ. ಅಡಿವಾಚಾರ್ ಅವರಿಂದಲೇ ಆರಂಭವಾಯಿತು. ನಂತರ ಆಸ್ಥಾನ ವಿದ್ವಾನ್‌ ಚಿಂತನಪಲ್ಲಿ ವೆಂಕಟರಾಯರಲ್ಲಿ ಉನ್ನತ ಶಿಕ್ಷಣ ಪಡೆದು, ಹದಿಮೂರನೇ ವಯಸ್ಸಿನಿಂದ ಆರಂಭಿಸಿ ಅವಿಚ್ಛಿನ್ನವಾಗಿ ಸಾವಿರಾರು ಕಛೇರಿಗಳನ್ನು ನೀಡಿರುವ ಹಿರಿಮೆಗೆ ಪಾತ್ರರಾಗಿರುತ್ತಾರೆ. ಕ್ಷೇತ್ರದಲ್ಲಿ ಹೆಸರು ವಾಸಿಯಾಗಿರುವ ಎಲ್ಲ ವಿದ್ವಾಂಸರ ಪಕ್ಕ ವಾದ್ಯಗಳೊಡನೆ ದೇಶದ ಹಲವೆಡೆ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಆಕಾಶವಾಣಿಯಿಂದಲೂ ಇವರ ಗಾಯನ ಪ್ರಸಾರವಾಗುತ್ತಿದೆ.

ಸಾಹಿತ್ಯೋಚ್ಚಾರಣೆಯಲ್ಲಿ ಶುದ್ಧತೆ, ಸ್ಫುಟತೆ, ಉತ್ತಮ ಮನೋಧರ್ಮ ಇವರ ಗಾಯನದ ವಿಶಿಷ್ಟತೆಗಳು. ಹಲವು ಬಾರಿ ವಿದೇಶ ಪ್ರವಾಸ ಮಾಡಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಸೌರಭವನ್ನು ಹರಡಿದ್ದಾರೆ. ಸಂಸ್ಕೃತ, ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ವರ್ಣಗಳು, ಕೃತಿಗಳು, ತಿಲ್ಲಾನಗಳು ಇವರಿಂದ ರಚಿತವಾಗಿವೆ. ಹೊಸ ರಾಗಗಳಿಗೆ ಲಕ್ಷ್ಯವನ್ನು ನೀಡಿ ಆ ರಾಗಗಳು ರೂಢಿಗೆ ಬರಲು ಕಾರಣರಾಗಿದ್ದಾರೆ.

ಪುರಂದರ ಸೇವಾ ಸಮಿತಿಯಲ್ಲಿ ಆ ಸಂಸ್ಥೆಯ ಆರಂಭದಿಂದಲೂ ಎಲ್ಲಾ ಕಾರ್ಯಗಳಲ್ಲೂ, ಜವಾಬ್ದಾರಿಗಳಲ್ಲೂ ಭಾಗಿಗಳಾಗಿ ಸನ್ಮಾನ್ಯರಾಗಿದ್ದಾರೆ. ಕರ್ನಾಟಕ ಗಾನಕಲಾ ಪರಿಷತ್ತಿನ ಕಾರ್ಯಕಾರಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರ ಸಾಧನೆಗೆ ಅನೇಕ ಪ್ರಶಸ್ತಿಗಳು ಸಂದಿವೆ. ‘ನಾದ ಬ್ರಹ್ಮ’, ‘ಸಂಗೀತ ಸ್ವರ ಸಾಮ್ರಾಟ್‌‘ಸಂಗೀತ ಕಲಾ ಭೂಷಣ’, ‘ನಾದ ಚಿಂತಾಮಣಿ’, ರಾಜ್ಯ ಸಂಗೀತ-ನೃತ್ಯ ಅಕಾಡೆಮಿಯಿಂದ ‘ಕರ್ನಾಟಕ ಕಲಾಶ್ರೀ’ – ಮುಂತಾದುವು ಉಲ್ಲೇಖಾರ್ಹವಾದುವು. ಶ್ರೀಯುತರ ಗಾಯನದ ಧ್ವನಿಸುರುಳಿಗಳೂ ಬಿಡುಗಡೆಯಾಗಿವೆ. ಇಂದು ಶಿಷ್ಯರಿಗೆ ತಮ್ಮ ವಿದ್ಯೆಯನ್ನು ಧಾರೆಯೆರೆಯುತ್ತ ಸಾರ್ಥಕ ಜೀವನ ನಡೆಸುತ್ತಿದ್ದಾರೆ.