ಎಂಡೈವ್ ಉತ್ತಮ ಸೊಪ್ಪು ತರಕಾರಿಗಳಲ್ಲಿ ಒಂದು. ಇದರ ಬಿಳಿಚಿಕೊಂಡ ಎಲೆಗಳೇ ತರಕಾರಿಯಾಗಿ ಉಪಯುಕ್ತವಿರುವ ಭಾಗ.

ಪೌಷ್ಟಿಕ ಗುಣಗಳು : ಎಂಡೈವ್ ಪೌಷ್ಟಿಕ ಸೊಪ್ಪು ತರಕಾರಿ. ಎಲೆಗಳಲ್ಲಿ ಅಧಿಕ ಪ್ರಮಾಣದ ಶರ್ಕರಪಿಷ್ಟ, ಪ್ರೊಟೀನ್, ಖನಿಜ, ಪದಾರ್ಥ ಹಾಗೂ ಜೀವಸತ್ವಗಳಿರುತ್ತವೆ.

೧೦೦ ಗ್ರಾಂ ಸೊಪ್ಪಿನಲ್ಲಿರುವ ವಿವಿಧ ಪೋಷಕಾಂಶಗಳು

ತೇವಾಂಶ – ೯೫.೫ ಗ್ರಾಂ
ಶರ್ಕರಪಿಷ್ಟ – ೪.೧ ಗ್ರಾಂ
ಪ್ರೊಟೀನ್ – ೧.೭ ಗ್ರಾಂ
ಕೊಬ್ಬು – ೦.೧ ಗ್ರಾಂ
ಒಟ್ಟು ಖನಿಜ ಪದಾರ್ಥ – ೩೮೧ ಮಿ.ಗ್ರಾಂ
ರಂಜಕ – ೫೪ ಮಿ.ಗ್ರಾಂ
ಸುಣ್ಣ – ೮.೧ ಮಿ.ಗ್ರಾಂ
ಕಬ್ಬಿಣ – ೧.೭ ಮಿ.ಗ್ರಾಂ
ಪೊಟ್ಯಾಷಿಯಂ – ೩೫೦೦ ಐಯೂ
ಸೋಡಿಯಂ – ೧೪ ಮಿ.ಗ್ರಾಂ
’ಎ’ ಜೀವಸತ್ವ – ೩೫೦೦ ಐಯೂ
ರೈಬೋಫ್ಲೇವಿನ್ – ೦.೧೪ ಮಿ.ಗ್ರಾಂ
ಥಯಮಿನ್ – ೦.೦೭ ಮಿ.ಗ್ರಾಂ
’ಸಿ’ ಜೀವಸತ್ವ – ೧೦ ಮಿ.ಗ್ರಾಂ
ನಯಾಸಿನ್ – ೦.೫೦ ಮಿ.ಗ್ರಾಂ
ಕ್ಯಾಲೊರಿಗಳು – ೨೦

ಔಷಧೀಯ ಗುಣಗಳು : ಇದರ ಸೊಪ್ಪಿನಲ್ಲಿ ಹಲವಾರು ಔಷಧೀಯ ಗುಣಗಳಿವೆ. ಇದನ್ನು ತಿನ್ನುವುದರಿಂದ ಜೀರ್ಣ ಶಕ್ತಿ ಹೆಚ್ಚುತ್ತದೆ. ಇದರಲ್ಲಿ ಬೆವರನ್ನು ಉತ್ಪಾದಿಸುವ ಹಾಗೂ ಮೂತ್ರೋತ್ಪಾದಕ ಗುಣಗಳಿವೆ. ಇದರ ಸೇವನೆಯಿಂದ ಕರುಳುಗಳು ಚೈತನ್ಯಗೊಳ್ಳುತ್ತವೆ. ಲಘು ವಿರೇಚಕ. ಗುಲ್ಮ ಮತ್ತು ಯಕೃತ್ತು ದೊಡ್ಡವಾಗಿದ್ದಲ್ಲಿ ಸರಿಪಡಿಸುವ ಗುಣ ಇದಕ್ಕಿದೆ. ಅಗ್ನಿ ಮಾಂದ್ಯ ಮತ್ತು ಜ್ವರ ಪೀಡಿತ ಸಂದರ್ಭಗಳಲ್ಲಿ ಇದರ ಬೇರನ್ನು ನಿರ್ದೇಶಿಸುವುದುಂಟು. ಇದರ ಹೂಗಳಿಂದ ತಯಾರಿಸಿದ ಶರಬತ್ತನ್ನು ಸೇವಿಸುತ್ತಿದ್ದಲ್ಲಿ ಯಕೃತ್ತಿನ ಅವ್ಯವಸ್ಥೆಗಳು ಸರಿಹೊಂದುತ್ತವೆ.

ಉಗಮ ಮತ್ತು ಹಂಚಿಕೆ : ಇದು ನಮ್ಮ ದೇಶದ ಸೊಪ್ಪು ತರಕಾರಿಯೇ ಆದಾಗ್ಯೂ ನಮ್ಮಲ್ಲಿ ಇದರ ಬೇಸಾಯ ಮತ್ತು ಬಳಕೆಗಳು ಅಷ್ಟಾಗಿ ಇಲ್ಲ. ಇದರ ಮೂಲಸ್ಥಾನ ಭಾರತ ಪೂರ್ವಭಾಗಗಳು. ಇದು ಬಹುಶಃ ಮಿಶ್ರ ಬಗೆಯಾಗಿ ಉದ್ಭವಿಸಿರಬಹುದು ಎಂದು ಅಂದಾಜು. ಇದನ್ನು ಹೆಚ್ಚಾಗಿ ಅಮೆರಿಕಾ ಮತ್ತು ಯೂರೋಪ್‌ಗಳಲ್ಲಿ ಬೆಳೆಯುತ್ತಾರೆ. ಪಶ್ಚಿಮ ಜರ್ಮನಿ, ಫ್ರಾನ್ಸ್, ಇಟಲಿ, ಹಾಲೆಂಡ್ ಹಾಗೂ ಬೆಲ್ಜಿಯಂ ದೇಶಗಳಲ್ಲಿ ಇದರ ಬೇಸಾಯ ವ್ಯಾಪಕ.

ಸಸ್ಯ ವರ್ಣನೆ : ಇದು ಆಸ್ಟರೇಸೀ ಕುಟುಂಬಕ್ಕೆ ಸೇರಿದ ಸಸ್ಯ. ಇದು ಗಡುತರ ಮೂಲಿಕೆ. ಸ್ವಲ್ಪಮಟ್ಟಿಗೆ ಲೆಟ್ಯೂಸ್ ಅನ್ನು ಹೋಲುತ್ತದೆ. ಕಾಂಡ ಮೋಟು; ಎಲೆಗಳು ಸುಳಿಯಲ್ಲಿ, ಗುಂಪು ಕೂಡಿ ಕೋಸಿನ ಎಲೆಗಳಂತೆ ಕಾಣುತ್ತವೆ ಎಲೆಗಳು ಉದ್ದನಾಗಿ, ದುಂಡಗಿರುತ್ತವೆ. ಅವುಗಳ ಬಣ್ಣ ಹಸುರು. ಹೂಗಳ ಬಣ್ಣ ಧೂಮ್ರವರ್ಣ. ರಕ್ಷಾದಳಗಳು ಒತ್ತಾಗಿ ಪೇರಿಸಲ್ಪಟ್ಟಿರುತ್ತವೆ. ಅವು ದ್ವಿಲಿಂಗಿಗಳಿದ್ದು ಸ್ವ ಹಾಗೂ ಪರಕೀಯ ಪರಾಗಸ್ಪರ್ಶಗಳೆರಡರಿಂದಲೂ ಬೀಜ ಕಚ್ಚುತ್ತವೆ. ಬೀಜಗಳು ನಗ್ನವಿರುತ್ತವೆ. ಸಸ್ಯಭಾಗಗಳಲ್ಲಿ ಹಾಲಿನಂತಹ ದ್ರವ ಪದಾರ್ಥವಿರುತ್ತದೆ. ಎಲೆಗಳ ಬೆಳಕು ಬೀಲದಂತೆ ಮಾಡಿದರೆ ಅವು ಬಿಳಿಚಿಕೊಂಡು ತಿನ್ನಲು ರುಚಿಯಾಗಿರುತ್ತವೆ. ಹಾಗಲ್ಲದೆ ಅವು ಸಂಪೂರ್ಣವಾಗಿ ಬೆಳಕು ಬಿಸಿಲುಗಳಿಗೆ ಸಿಕ್ಕಿದರೆ ಅವುಗಳಲ್ಲಿ ಕಹಿ ಉಂಟಾಗುತ್ತದೆ. ಸೀಳುಸೀಳಾದ ಎಲೆಗಳು ನೋಡಲು ಚೆಂದ. ಇದರ ವರ್ಣ ತಂತುಗಳ ಸಂಖ್ಯೆ ೨n=೧೮

ಹವಾಗುಣ : ಇದರ ಬೇಸಾಯಕ್ಕೆ ತಂಪು ಹವಾಮಾನ ಅಗತ್ಯ. ಸೌಮ್ಯ ಹವಾಮಾನವಿದ್ದಲ್ಲಿ  ಉತ್ತಮ. ತೀವ್ರ ಬಿಸಿಲಿದ್ದಲ್ಲಿ ತಡೆದುಕೊಳ್ಳಲಾರದು. ಚಳಿಗಾಲದಲ್ಲಿ ಬಹುಚೆನ್ನಾಗಿ ಫಲಿಸುತ್ತದೆ. ಹಿಮ ಸುರಿದರೆ ಇದು ಸಹಿಸಬಲ್ಲದು. ಉಷ್ಣತೆ ೮.೫ ರಿಂದ ೨೫.೫ ಸೆ. ಇದ್ದರೆ ಇದರ ಬೇಸಾಯಕ್ಕೆ ಅನುಕೂಲ. ಸರಾಸರಿ ಉಷ್ಣತೆ ೧೬ ರಿಂದ ೨೧ ಸೆ. ಇದ್ದಲ್ಲಿ ಬಲು ಸೂಕ್ತ. ಬಿಸಿ ಹವಾಮಾನವಿದ್ದಲ್ಲಿ ಹೂವು ಬಹುಬೇಗ ಕಾಣಿಸಿಕೊಳ್ಳುತ್ತವೆ.

ಭೂಗುಣ : ಎಂಡೈವ್ ಬೆಳೆಯ ಬೇಸಾಯಕ್ಕೆ ಎಂತಹ ಮಣ್ಣಿನ ಭೂಮಿಯಾದರೂ ಸರಿಯೇ. ತೇವ ಹಿಡಿದಿಡುವ ಸಾರವತ್ತಾದ ಮಣ್ಣಾದಲ್ಲಿ ಸಸ್ಯಬೆಳವಣಿಗೆ ತೀವ್ರವಿದ್ದು ಎಲೆಗಲು ರಸವತ್ತಾಗಿರುತ್ತವೆ. ನೀರು ಬಸಿಯುವ ಹಾಗೂ ಮರಳು ಮಿಶ್ರಿತ ಗೋಡು ಮಣ್ಣು ಇದಕ್ಕೆ ಬಹುವಾಗಿ ಒಪ್ಪುತ್ತದೆ. ಮರಳು ಮಣ್ಣಿನ ಭೂಮಿಯಾದಲ್ಲಿ ಸಾಕಷ್ಟು ಸಾವಯವ ಪದಾರ್ಥವನ್ನು ಸೇರಿಸಬೇಕು ಮಣ್ಣು ಸ್ವಲ್ಪ ಹುಳಿ ಇದ್ದರೆ ಉತ್ತಮ. ಮಣ್ಣಿನ ರಸಸಾರ ೫ ರಿಂದ ೬.೮ ಇದ್ದಲ್ಲಿ ಸೂಕ್ತ.

ಬಗೆಗಳು ಮತ್ತು ತಳಿಗಳು : ಇದು ಬಹುಮಟ್ಟಿಗೆ ಸ್ವಪರಾಗಸ್ಪರ್ಶದಿಂದ ಕೂಡಿದ ತರಕಾರಿ ಬೆಳೆ. ಇದರಲ್ಲಿ ಹಲವಾರು ಉತ್ತಮ ತಳಿಗಳಿವೆಯಾದರೂ ರೋಗನಿರೋಧಕವಿರುವ ಹಾಗೂ ತಡವಾಗಿ ಹೂವು ಬಿಡುವ ಬಗೆಗಳು ಅಗತ್ಯ. ಎಂಡೈವ್ ಮತ್ತು ಚಿಕೋರಿಗಳನ್ನು ಸಂಕರಣಗೊಳಿಸಿದಲ್ಲಿ ಲಾಭದಾಯಕವಾಗಬಹುದು. ಇದರಲ್ಲಿ ತಳಿಗಳನ್ನು ಮೂರು ಗುಂಪುಗಳಾಗಿ ವರ್ಗೀಕರಿಸಬಹುದು: ಕರ‍್ಲ್ಡ್‌ಬಗೆ, ಅಗಲ ಎಲೆಗಳ ಬಗೆ ಮತ್ತು ಗುಂಡು ಎಲೆ  ಅಥವಾ ಬಟಾವಿಯನ್ ಬಗೆ. ಕಡೆಯದನ್ನು ಎಸ್ಕರೋಲ್ ಎನ್ನುತ್ತಾರೆ.

ಕರ‍್ಲ್ಡ್‌ಬಗೆಯಲ್ಲಿ ಎಲೆಗಳು ಉದ್ದವಿದ್ದು ಹಸುರು ಬಣ್ಣದ್ದಿರುತ್ತವೆ. ಎಲೆಗಳು ದೊಡ್ಡವಿದ್ದು ನೆರಿಗೆ ಹಿಡಿದಂತಿರುತ್ತವೆ. ಎಲೆಗಳು ಬೆಳ್ಳಗಿದ್ದು ನೆರಿಗೆಯಿಂದ ಕೂಡಿರಬಹುದು ಇಲ್ಲವೇ ಒತ್ತಾಗಿದ್ದು ನೆರಿಗೆಯಿಂದ ಕೂಡಿರಬಹುದು.

ಅಗಲ ಎಲೆಗಳ ವಿವಿಧ ಬಗೆಗಳನ್ನು ಎಸ್ಕರೋಲ್ ಎಂಬ ಹೆಸರಿನಲ್ಲಿ ಮಾರಾಟ ಮಾಡುತ್ತಿರುತ್ತಾರೆ.

ಗುಂಡು ಎಲೆಗಳ ಬಗೆಯಲ್ಲಿ ಎಲೆಗಳು ಒರಟಾಗಿರುತ್ತವೆ. ಸುಳಿ ಮೊಗ್ಗು ತೀರಾ ಒಳಕ್ಕಿರುತ್ತದೆ. ಒಳಭಾಗದ ಎಲೆಗಳು ಚೆನ್ನಾಗಿ ಬಿಳಿಚಿಕೊಂಡಿರುತ್ತವೆ. ಇದರಲ್ಲಿನ ತಳಿಗಳ ಗಿಡಗಳು ಗಡುತರವಿದ್ದು ಶೈತ್ಯ ಹವಾಮಾನವನ್ನು ಸಮರ್ತವಾಗಿ ತಡೆದುಕೊಳ್ಳಬಲ್ಲವು.

ಕರ್ಲ್ಡ್ ಬಗೆಯಲ್ಲಿ ಗ್ರೀನ್‌ಕರ್ಲ್ಡ್ ರಫ್ಫಿಕ್, ಲಾರ್ಜ್‌ಗ್ರೀನ್ ರಿಬ್ಡ್, ಗ್ರೀನ್‌ಕರ್ಲ್ಡ್ ಪಾನ್ವೇಲಿಯರ್, ಲಾರ್ಜ್‌ಪಿಂಕ್‌ರಿಬ್ಡ್, ವೈಟ್‌ಕರ್ಲ್ಡ್, ರೋಸ್‌ರಿಬ್ಡ್, ಡೀಪ್ ಹಾರ್ಟ್‌ಫಿಂಜ್ಡ್, ಸಲಾಡ್‌ಕಿಂಗ್ ಸ್ಟ್ಯಾಗ್‌ಹಾರ್ನ್ ಮುಂತಾಗಿ ಹಲವಾರು ತಳಿಗಳಿವೆ.

ಅಗಲ ಎಲೆಗಳ ಬಗೆಯಲ್ಲಿ ಫುಲ್‌ಹಾರ್ಟ್ ಬಟಾವಿಯನ್, ಫ್ಲೋರಿಡಾ ಡೀಪ್‌ಹಾರ್ಟ್‌ಡ್, ಬ್ರಾಡ್ ಲೀಫ್‌ಫುಲ್ ಹಾರ್ಟ್‌‌ವಿಂಟರ್ ಮುಂತಾದುವು ಮುಖ್ಯ ತಳಿಗಳು.

ಬಟಾವಿಯನ್ ಬಗೆಯಲ್ಲಿ ರೌಂಡ್‌ಲೀವ್ಡ್ ಬಟಾವಿಯನ್, ಕಾರ್ಟರ್ಸ್ ಓವಲ್, ಬಟಾವಿಯನ್ ಫುಲ್‌ಹಾರ್ಟ್ ಮುಂತಾದುವು ಮುಖ್ಯವಾದುವು.

. ಗ್ರೀನ್ಕರ್ಲ್ಡ್ : ಇದರಲ್ಲಿ ಎಲೆಗಳು ಆಳವಾಗಿ ಸೀಳಿರುತ್ತವೆ. ಎಲೆಗಳು ನೆರಿಗೆ ಹಿಡಿದಂತಿದ್ದು ಅಂಚಿನ ಕಡೆಗೆ ಹಸುರು ಛಾಯೆ ಹೊಂದಿರುತ್ತವೆ. ಇದು ಜನಪ್ರಿಯ ತಳಿ; ಹೆಚ್ಚಾಗಿ ಪಚ್ಚಡಿ ರೂಪದಲ್ಲಿ ಬಳಸುತ್ತಾರೆ. ಗಿಡಗಳು ಅಗಲಕ್ಕೆ ಹರಡಿದ್ದು, ಒಳ ಎಲೆಗಳು ಕೆನೆಬಿಳುಪು ಬಣ್ಣದ್ದಿರುತ್ತವೆ. ಎಲೆಗಳ ಮಧ್ಯನರ ಬೆಳ್ಳಗಿರುತ್ತದೆ. ಇದರಲ್ಲಿನ ಲಾರ್ಜ್‌ಗ್ರೀನ್‌ಕರ‍್ಲ್ಡ್ ಬಗೆಯ ಎಲೆಗಳಲ್ಲಿ ನರಗಳು ಕೆನ್ನೀಲಿ ಬಣ್ಣದ್ದಿರುತ್ತವೆ.

. ವೈಟ್ಕರ್ಲ್ಡ್ : ಇದರ ಎಲೆಗಳು ಹಳದಿ ಹಸುರು ಇಲ್ಲವೇ ಬಿಳುಪು ಬಣ್ಣದ್ದಿರುತ್ತವೆ. ಅಂಚು ಬಹಳಷ್ಟು ನೆರಿಗೆಗಳಿಂದ ಕೂಡಿದ್ದು ಗುಂಗುರು ಗುಂಗುರಾಗಿರುತ್ತದೆ. ನೋಡಲು ಬಲು ಆಕರ್ಷಕ.

. ಮಾಸ್ಕರ್ಲ್ಡ್: ಇದು ಗಾತ್ರದಲ್ಲಿ ಬಲು ಸಣ್ಣದು. ಎಲೆಗಳೂ ಸಹ ಸಣ್ಣವಿರುತ್ತವೆ. ಎಲೆಗಳು ಸೂಕ್ಷ್ಮವಾಗಿ ಸೀಳಿರುತ್ತವೆ. ನೆರಿಗೆಗಳು ಅಸಂಖ್ಯಾತ. ಹಾಗಾಗಿ ನೋಡಲು ಬಲು ಆಕರ್ಷಕವಾಗಿರುತ್ತವೆ.

. ಸಲಾಡ್ಕಿಂಗ್ : ದೊಡ್ಡ ಗಾತ್ರದ ತಳಿ. ಹೆಚ್ಚು ಚಳಿ ಅಥವಾ ಮಳೆ ಇದ್ದಲ್ಲಿ ತಡೆದುಕೊಳ್ಳಬಲ್ಲದು.

. ಸ್ಟ್ಯಾಗ್ ಹಾರ್ನ್ : ಇದು ದೃಢವಾಗಿದ್ದು, ನೆರಿಗೆಗಳಿಂದ ಕೂಡಿರುತ್ತದೆ. ಎಲೆಗಳು ಮಂದ; ಅಷ್ಟಾಗಿ ಒಡೆದಿರುವುದಿಲ್ಲ, ಬೇಯಿಸಿ ಬಳಸಲು ಸೂಕ್ತ.

. ಗೋಲ್ಡ್ : ಇದು ಟಿಪ್‌ಬರ್ನ್ ರೋಗಕ್ಕೆ ಸುಲಭವಾಗಿ ತುತ್ತಾಗುತ್ತದೆ. ಬೆಳವಣಿಗೆ ತೀವ್ರ; ಶಿರೋಭಾಗ ಹೆಚ್ಚು ಭಾರದಿಂದ ಕೂಡಿರುತ್ತದೆ. ಇದಕ್ಕೆ ಬಾಟ್ರೈಟಿಸ್ ಪ್ರಭೇದದ ರೋಗಾಣುಗಳನ್ನು ನಿರೋಧಿಸುವ ಸಾಮರ್ಥ್ಯವಿದೆ.

. ಎಸ್ಕೇರಿಯಲ್ ಜೆಲೆನಿ : ಹಂಗೇರಿಯಾದ ಗ್ರೂನರ್‌ತಳಿಯಿಂದ ಆರಿಸಿ ವೃದ್ಧಿಪಡಿಸಿದಂತಹ ಬಗೆ.

. ಫುಲ್ಹಾರ್ಟ್ ಬಟಾವಿಯನ್ : ಇದರ ಎಲೆಗಳು ಅಗಲ ಹಾಗೂ ಒರಟು. ಎಲೆಗಳು ಸುಕ್ಕುಗಟ್ಟಿದಂತಿರುತ್ತವೆ. ಸಾವು ಒತ್ತಾಗಿದ್ದು ಸುಳಿ ತೀರಾ ಒಳಭಾಗದಲ್ಲಿರುತ್ತದೆ. ಮಧ್ಯ ಎಲೆಗಳು ಅಚ್ಚಬಿಳುಪು ಬಣ್ಣವಿದ್ದು, ತಿನ್ನಲು ಬಲು ರುಚಿಯಾಗಿರುತ್ತವೆ. ಅತ್ಯುತ್ತಮ ತಳಿಗಳ ಪೈಕಿ ಇದೂ ಒಂದು. ಮಣ್ಣಿನಲ್ಲಿ ಸುಣ್ಣಾಂಶವಿದ್ದರೂ ಇದು ತಡೆದುಕೊಳ್ಳಬಲ್ಲದು.

. ಫ್ಲೋರಿಡಾಡೀಪ್ಹಾರ್ಟ್ : ಇದು ಬಹುಮಟ್ಟಿಗೆ ಫುಲ್‌ಹಾರ್ಟ್ ಬಟಾವಿಯನ್ ತಳಿಯಂತಿರುತ್ತದೆ; ಚಳಿಗಾಲದಲ್ಲಿ ಬೆಳೆಯಲು ಸೂಕ್ತವಿದ್ದು ಬೇಗ ಕೊಯ್ಲಿಗೆ ಬರುತ್ತದೆ. ಗುಣಮಟ್ಟ ಉತ್ತಮ.

೧೦. ರೌಂಡ್ಲೀವ್ಡ್ ಬಟಾವಿಯನ್ : ಇದು ಹೆಚ್ಚು ಬಳಕೆಯಲ್ಲಿರುವ ತಳಿ. ಸುಮಾರು ೩೦ ಸೆಂ.ಮೀ. ಅಡ್ಡಗಲವಿದ್ದು ದೊಡ್ಡ ಎಲೆಗಳಿಂದ ಕೂಡಿರುತ್ತದೆ. ಎಲೆಗಳು ಗುಂಡಗಿದ್ದು ಅಗಲವಾಗಿರುತ್ತವೆ. ಅವುಗಳ ಅಂಚು ಒಡೆದಿರುವುದಿಲ್ಲ ಆದರೆ ಅಲೆಯಾಕಾರವಿರುತ್ತದೆ.

೧೧. ಕಾರ್ಟರ್ಸ್ಲೀವ್ಡ್ : ಇದು ಸುಧಾರಿತ ತಳಿ; ಎಲೆಗಳು ಗುಂಡಗಿರುತ್ತವೆ.

೧೨. ಎಸ್ಕರೋಲ್ : ಎಲೆಗಳು ದೊಡ್ಡವು, ಮಂದವಾಗಿರುತ್ತವೆ. ಅವುಗಳ ಬಣ್ಣ ಮಾಸಲು ಹಸುರು. ಇದು ಬೇಯಿಸಿ ತಿನ್ನಲು ಸೂಕ್ತ.

೧೩. ಬಟಾವಿಯನ್ : ಎಲೆಗಳು ಅಗಲ ಹಾಗೂ ಮಂದ. ಅವುಗಳ ಮೇಲ್ಮೈ ನುಣ್ಣಗಿರುತ್ತದೆ. ಮಧ್ಯನರ ಬೆಳ್ಳಗಿರುತ್ತದೆ. ಎಲೆಗಳು ಸಡಿಲ. ಒಳ ಎಲೆಗಳು ಭಾಗಶಃ ಬಿಳಿಚಿಕೊಂಡಿರುತ್ತವೆ.

ಕರ್ಲ್ಡ್ ಅಥವಾ ಗುಂಗುರು ಎಲೆಗಳಿಂದ ಕೂಡಿದ ತಳಿಗಳು ಆಕರ್ಷಕವಾಗಿರುವುದರ ಜೊತೆಗೆ ಅಲಂಕಾರಕವಾಗಿ ಸಹ ಇರುತ್ತವೆ. ಎಲೆಗಳು ರುಚಿಯಾಗಿದ್ದು ಕಾಯಿ ವಾಸನೆ ಹೊಂದಿರುತ್ತವೆ. ಅಗಲ ಎಲೆಗಳ ಬಗೆಗಳನ್ನು ಚೆಲುವೆ ಮಾಡದೆ ಬೇಯಿಸಿ ಬಳಸಬಹುದು. ಅವುಗಳನ್ನು ಇತರ ತರಕಾರಿಗಳೊಂದಿಗೆ ಬೇಯಿಸಿ ಬಳಸಿದಲ್ಲಿ ರುಚಿ ಹೆಚ್ಚುತ್ತದೆ. ಬಟಾವಿಯನ್ ಬಗೆಗಳು ಕರ್ಲ್ಡ್ ಬಗೆಗಳಿಗಿಂತಲೂ ಗಡುತರ. ತೋಟದಲ್ಲಿ ಹೆಚ್ಚು ಕಾಲ ಉಳಿಸಿಕೊಳ್ಳಬಹುದು. ಚಳಿಗಾಲದಲ್ಲಿ ತೇವದ ವಾತಾವರಣ ಇದ್ದರೂ ಇವುಗಳಿಗೆ ಹಾನಿಯಾಗದು. ಎಲೆಗಳು ಅಷ್ಟೊಂದು ಸೂಕ್ಷ್ಮವಾಗಿ ಸೀಳಿರುವುದಿಲ್ಲ ಹಾಗಾಗಿ ಅವು ಕೊಳೆಯುವುದಿಲ್ಲ.

ಒಟ್ಲು ಎಬ್ಬಿಸುವುದು: ಎಂಡೈವ್ ಬೀಜ ಸಣ್ಣವು. ಒಟ್ಲು ಪಾತಿಗಳಲ್ಲಿ ಬಿತ್ತಿ ಸಸಿಗಳನ್ನು ಎಬ್ಬಿಸಬೇಕು. ಒಟ್ಲು ಎಬ್ಬಿಸುವ ಜಾಗವನ್ನು ಆಳವಾಗಿ ಅಗೆತ ಮಾಡಿ, ಹೆಂಟೆಗಳನ್ನು ಒಡೆದು ಪುಡಿ ಮಾಡಿ, ಕಳೆ ಕಸ ತೆಗೆದು ಸಮ ಮಾಡಬೇಕು. ಈ ಸಸಿಗಳನ್ನು ಅನಂತರ ಕಿತ್ತು ನಾಟಿ ಮಾಡಬೇಕು. ಎತ್ತರದ ಸಸಿ ಮಡಿಗಳಾದಲ್ಲಿ ಉತ್ತಮ. ಸಾಮಾನ್ಯವಾಗಿ ಅನುಕೂಲಕ್ಕೆ ತಕ್ಕಂತೆ ಉದ್ದ, ೧.೨ ಮೀಟರ್ ಅಗಲ ಹಾಗೂ ೧೦ ಸೆಂ.ಮೀ. ಎತ್ತರ ಇರುವಂತೆ ಸಸಿ ಮಡಿಗಳನ್ನು ತಯಾರಿಸಿ ತಲಾ ೨೦ ಕಿ.ಗ್ರಾಂ ತಿಪ್ಪೆಗೊಬ್ಬರ ಮತ್ತು ಅರ್ಧ ಕಿ.ಗ್ರಾಂ ಸುಫಲಾ ಹರಡಿ ಚೆನ್ನಾಗಿ ಮಿಶ್ರ ಮಾಡಿ, ಸಣ್ಣ ಗೀರು ಸಾಲುಗಳಲ್ಲಿ ಬೀಜ ಬಿತ್ತುವುದು ವಾಡಿಕೆ. ಅವುಗಳ ಮೇಲೆ ತೆಳ್ಳಗೆ ಪುಡಿಗೊಬ್ಬರ ಉದುರಿಸಿ ನೀರು ಹನಿಸುವ ಡಬ್ಬಿಯ ನೆರವಿನಿಂದ ನೀರು ಕೊಡಬೇಕು. ಪ್ರತಿ ದಿನ ನೀರು ಹಾಕುತ್ತಿರಬೇಕು. ಬಿತ್ತನೆಗೆ ಮೈದಾನ ಪ್ರದೇಶಗಳಲ್ಲಿ ಸೆಪ್ಟೆಂಬರ್-ಡಿಸೆಂಬರ್ ಮತ್ತು ಎತ್ತರದ ಬೆಟ್ಟ ಪ್ರದೇಶಗಳಲ್ಲಿ ಮಾರ್ಚ್-ಜೂನ್ ಸೂಕ್ತವಿರುತ್ತವೆ. ಬೀಜ ಸುಮಾರು ಐದು ವರ್ಷಗಳವರೆಗೆ ಮೊಳೆಯುವ ಸಾಮರ್ಥ್ಯ ಹೊಂದಿರುತ್ತವೆಯಾದರೂ ಆದಷ್ಟು ಮಟ್ಟಿಗೆ ಹೊಸ ಬೀಜವನ್ನೇ ಬಳಸುವುದು ಲಾಭದಾಯಕ. ಬಿತ್ತುವ ಮುಂಚೆ ಅವುಗಳನ್ನು ನೀರಿನಲ್ಲಿ ಇಲ್ಲವೇ ಥೈಯೂರಿಯಾ ದ್ರಾವಣದಲ್ಲಿ ನೆನೆಸಿದರೆ ಬೇಗ ಮೊಳಕೆಯೊಡೆಯುತ್ತವೆ ಹಾಗೂ ಒಂದೇ ತೆರನಾದ ಸಸಿಗಳು ಸಾಧ್ಯ. ಎರಡರಿಂದ ನಾಲ್ಕು ಕಿ.ಗ್ರಾಂ. ಬೀಜವಾದರೆ ಒಂದು ಹೆಕ್ಟೇರಿಗಾಗುವಷ್ಟು ಸಸಿಗಳು ಲಭ್ಯ.

ಭೂಮಿ ಸಿದ್ಧತೆ ಮತ್ತು ನೆಡುವುದು : ಹೆಕ್ಟೇರಿಗೆ ೨೦-೩೦ ಟನ್‌ಗಳಷ್ಟು ತಿಪ್ಪೆಗೊಬ್ಬರ ಹರಡಿ ಮಿಶ್ರ ಮಾಡಿ ಮಡಿಗಳನ್ನು ಮಾಡಿ, ದಿಂಡು ಮತ್ತು ಕಾಲುವೆಗಳನ್ನು ಸಿದ್ಧಗೊಳಿಸಬೇಕು. ನಮ್ಮಲ್ಲಿ ಸಾಲುಗಳ ಹಾಗೂ ಸಸಿಗಳ ನಡುವೆ ೩೦ ಸೆಂ.ಮೀ. ಅಂತರ ಕೊಡುತ್ತಾರೆ. ಇತರ ದೇಶಗಳಲ್ಲಿ ಇನ್ನೂ ಹೆಚ್ಚಿನ ಅಂತರ ಕೊಡುವುದುಂಟು. ಮಣ್ಣು ಹಸಿಯಾಗಿರಬೇಕು. ಹಾಗಿಲ್ಲದಿದ್ದಲ್ಲಿ ತೆಳ್ಳಗೆ ನೀರು ಹಾಯಿಸಿ, ಅನಂತರ ಸಸಿಗಳನ್ನು ನೆಡಬೇಕು. ದಿಂಡುಗಳ ಉದ್ದಕ್ಕೆ ಒಂದು ಮಗ್ಗುಲಲ್ಲಿ ಅವುಗಳನ್ನು ನೆಟ್ಟರೆ ಸಾಕು.

ಗೊಬ್ಬರ : ತಿಪ್ಪೆಗೊಬ್ಬರದ ಜೊತೆಗೆ ಸೂಕ್ತ ಪ್ರಮಾಣದ ರಾಸಾಯನಿಕ ಗೊಬ್ಬರಗಳನ್ನು ಕೊಡಬೇಕು. ಈ ಬೆಳೆಗೆ ಹೆಚ್ಚಿನ ಸಾರಜನಕ ಬೇಕಾಗಿರುವುದಿಲ್ಲ. ರಂಜಕ ಮತ್ತು ಪೊಟ್ಯಾಷ್ ಸತ್ವಗಳು ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುತ್ತವೆ. ಇತರ ದೇಶಗಳಲ್ಲಿ ೬೦-೯೦ ಕಿ.ಗ್ರಾಂ. ಪೊಟ್ಯಾಷ್ ಸತ್ವವನ್ನು ಕೊಡುವುದುಂಟು.

ನೀರಾವರಿ : ಒಣ ಹವೆ ಇದ್ದಾಗ ಐದಾರು ದಿನಗಳಿಗೊಮ್ಮೆ ನೀರು ಕೊಟ್ಟರೆ ಸಾಕು. ಮಳೆಗಾಲದಲ್ಲಿ ನೀರು ಹಾಯಿಸುವ ಅಗತ್ಯವಿಲ್ಲ.

ಅಂತರ ಬೇಸಾಯ ಮತ್ತು ಕಳೆ ಹತೋಟಿ : ಕಳೆಗಳನ್ನು ಕಿತ್ತು ತೆಗೆಯಬೇಕು. ಸಾಲು ಎಳೆದು ಸಸಿಗಳ ಬುಡಕ್ಕೆ ಮಣ್ಣು ಏರಿಸಬೇಕು.

ಚೆಲುವು ಮಾಡುವುದು : ಎಲೆಗಳನ್ನು ಚೆಲುವು ಮಾಡಿದಲ್ಲಿ ಕಹಿಯ ಅಂಶ ಇರುವುದಿಲ್ಲ. ಅಲ್ಲದೆ ಅಂತಹ ಎಲೆಗಳು ಬೇಗ ಬೇಯುತ್ತವೆ. ತಂಪು ಹವಾಮಾನದಲ್ಲಿ ಸುಮಾರು ೧೦-೨೦ ದಿನಗಳವರೆಗೆ ಚೆಲುವು ಮಾಡಿದರೆ ಸಾಕು. ಅವುಗಳನ್ನು ಎರಡು ವಿಧದಲ್ಲಿ ಚೆಲುವು ಮಾಡಬಹುದು. ಮೊದಲನೆಯದರಲ್ಲಿ ಎಲೆಗಳನ್ನೆಲ್ಲಾ ಮೇಲಕ್ಕೆ ಎಳೆದು ಕಟ್ಟುವುದು ಮತ್ತು ಎರಡನೆಯದರಲ್ಲಿ ಸಸಿಗಳ ಮೇಲೆ ದೊಡ್ಡ ಗಾತ್ರದ ಮಣ್ಣಿನ ಕುಂಡಗಳನ್ನು ಬೋರಲಾಗಿ ಇಡುವುದು. ಹೀಗೆ ಮಾಡುವುದರ ಉದ್ದೇಶ ಆ ಭಾಗಗಳಿಗೆ ಬೆಳಕು ಬೀಳದಂತೆ ಮಾಡುವುದು. ಎರಡನೆಯ ವಿಧಾನದಲ್ಲಿ ಮೂರು ನಾಲ್ಕು ವಾರಗಳಷ್ಟು ಸಮಯ ಹಿಡಿಸುತ್ತದೆ. ಸಸಿಗಳನ್ನು ನೆಟ್ಟ ಎರಡು ತಿಂಗಳ ನಂತರ ಈ ಕೆಲಸ ಮಾಡಬೇಕಾಗುತ್ತದೆ.

ಕೊಯ್ಲು ಮತ್ತು ಇಳುವರಿ : ಚೆಲುವು ಮಾಡಿದ ಸುಮಾರು ೨೦ ದಿನಗಳಿಂದಾಚೆಗೆ ಕೊಯ್ಲು ಮಾಡಬಹುದು. ಸಸಿಗಳನ್ನು ಬುಡಭಾಗಕ್ಕೆ ಕತ್ತರಿಸಿ ತೆಗೆದು ಬಲಿತ ಎಲೆಗಳನ್ನು ಕಿತ್ತು ಹಾಕಿ, ಒಪ್ಪಮಾಡಿ ಬಳಸಬೇಕು. ಕೊಯ್ಲು ಮಾಡಿದ ಸರಕನ್ನು ಸ್ವಲ್ಪ ಸಮಯ ತಂಪಾಗಿಸಿದರೆ ಅದರಲ್ಲಿನ ಬಿಸಿ ಹೋಗುತ್ತದೆ. ಅವುಗಳನ್ನು ಜೋಡಿಸಿ ಬುಟ್ಟಿಗಳಲ್ಲಿಟ್ಟು ಸಾಗಿಸಬೇಕು. ಹೆಕ್ಟೇರಿಗೆ ಸುಮಾರು ೪ ಟನ್ನುಗಳಷ್ಟು ಇಳುವರಿ ಸಾಧ್ಯ.

ಕೀಟ ಮತ್ತು ರೋಗಗಳು : ಈ ಬೆಳೆಗೆ ಹಾನಿಯನ್ನುಂಟು ಮಾಡುವ ಕೀಟಗಳು ಕಡಿಮೆ. ರೋಗಗಳಲ್ಲಿ ಮೆತು ಕೊಳೆ, ಆಸ್ಟರ್‌ಯಲ್ಲೊ ಮತ್ತು ಬಿಗ್‌ವೀನ್ ಮುಖ್ಯವಾದುವು.

ಮೆತುಕೊಳೆ : ಇದು ಅಣುಜೀವಿರೋಗ, ರೋಗಪೀಡಿತ ಎಲೆಗಳ ಅಂಚು ಕಂದು ಬಣ್ಣಕ್ಕೆ ಮಾರ್ಪಡುತ್ತದೆ. ಸುಣ್ಣಾಂಶ ಕಡಿಮೆ ಇದ್ದರೆ ಹೀಗಾಗುತ್ತದೆ. ಇದರಿಂದ ಸಂಗ್ರಹಣೆಯಲ್ಲಿನ ಸರಕು ಬಹಳಷ್ಟು ಹಾಳಾಗುತ್ತದೆ. ಕ್ಯಾಲ್ಷಿಯಂ ಕ್ಲೋರೈಡ್ ಅಥವಾ ಕ್ಯಾಲ್ಷಿಯಂ ನೈಟ್ರೇಟ್‌ಅನ್ನು ೨೦೦ ಪಿಪಿಎಂ ನಂತರ ಬೆಳೆಯ ಮೇಲೆ ಸಿಂಪಡಿಸಬೇಕು.

ಇದರಂತೆಯೇ ದ್ರವಸೋರುವ ಮೆತು ಕೊಳೆ ಕೆಲವೊಮ್ಮೆ ಬಾಧಿಸುವುದುಂಟು. ಕೊಯ್ಲು ಮಾಡಿದ ಕೂಡಲೇ ತಂಪಾಗಿಡುವುದು ಮತ್ತು ಸಾಗಾಣಿಕೆಯಲ್ಲಿ ಹೆಪ್ಪುಗಟ್ಟುವ ಉಷ್ಣತೆ ಇರುವಂತೆ ಮಾಡಿದರೆ ಸಾಕು.

ಆಸ್ಟರ್ಯಲ್ಲೊ : ಈ ರೋಗ ಕಾಣಿಸಿಕೊಂಡಾಗ ಮಧ್ಯ ಎಲೆಗಳು ಬೆಳ್ಳಗಾಗಿ ಆಕಾರ ಕಳೆದುಕೊಳ್ಳುತ್ತವೆ. ಅವು ಒತ್ತಾಗಿರುವುದಿಲ್ಲ. ಸಸಿಗಳು ಎಳೆಯವಿದ್ದಾಗ ಹಾನಿ ಹೆಚ್ಚು. ಅಂತಹ ಗಿಡಗಳು ಕಾಣಿಸಿಕೊಂಡ ಕೂಡಲೇ ಬೇರು ಸಹಿತ ಕಿತ್ತು ನಾಶಗೊಳಿಸಬೇಕು.

ಬಿಗ್ವೀನ್: ಎಲೆಗಳ ಮಧ್ಯನರ ಬಹಳಷ್ಟು ದೊಡ್ಡದಾಗುತ್ತದೆ. ಎಲೆಗಳ ಬೆಳವಣಿಗೆ ನಿಧಾನ. ಅಂತಹ ಗಿಡಗಳನ್ನು ಬೇರು ಸಹಿತ ಕಿತ್ತು ನಾಶಗೊಳಿಸಬೇಕು.

ಬೀಜೋತ್ಪಾದನೆ : ಇದು ಬಹುಮಟ್ಟಿಗೆ  ಸ್ವ-ಪರಾಗಸ್ಪರ್ಶದ ಬೆಳೆ. ಹೆಕ್ಟೇರಿಗೆ ೨೦೦-೨೫೦ ಕಿ.ಗ್ರಾಂ. ಬೀಜ ಸಿಗುತ್ತದೆ.

* * *