ಕಲೆಯ ಬಾಳು ಎಂದೂ ಭವ್ಯವಿಲ್ಲ. ಬಣ್ಣ-ಬೆಳಕುಗಳ ನಡುವಿನ ವೈಭವದ ಮೊರೆತದ ಹಿಂದೆ ನೋವು ನಲಿವುಗಳನ್ನು ಅದು ಒಂದರೊಳಗೊಂದು ಬೆಸೆದುಕೊಂಡಿರುತ್ತವೆ. ಯಾವುದೇ ಕಲಾವಿದರ ಬಾಳನ್ನು ನೋಡುವಾಗ ಇದು ವ್ಯಕ್ತವಾಗುತ್ತದೆ. ಇದೇ ರೀತಿ ನಾಟ್ಯಾಚಾರ್ಯ ಕುಲಕರ್ಣಿ ಶ್ರೀನಿವಾಸರ ಕಲಾ ಜೀವನದ ರೂಪರೇಷೆ ನೋಡುವಾಗಲೂ ಈ ನೋವು ನಲಿವುಗಳು ಕೂಡಿದ್ದವೇ! ನೋವಿನ ಪ್ರಮಾಣ ಕಂಡಾಗ ನಲಿವಿನ ಪ್ರಮಾಣ ಅದರ ಮುಂದೆ ತೀರ ಅಲ್ಲ, ಆದರೂ ತಾನು ಒಲಿದ ಕಲೆಗೆ ಇಡೀ ಬಾಳನ್ನು ಮೀಸಲು ಮಾಡಿ ಕಲೆಯೆಂದರೆ ಒಂದು ಯಾಗವೆಂದೂ, ಯಜ್ಞವೆಂದೂ ಬಗೆದು ಅದಕ್ಕಾಗಿಯೇ ತಮ್ಮ ಜೀವನವನ್ನು ತೇದವರು. ಕಲೆ ಯೋಗವಷ್ಟೇ ಅಲ್ಲ, ತ್ಯಾಗವೂ ಹೌದು ಎಂದು ತಿಳಿದು ಕಲಾಸಾಹಿತ್ಯಗಳ ಬೆನ್ನು ಹತ್ತಿದರು ಶ್ರೀನಿವಾಸ ಕುಲಕರ್ಣಿಯವರು. ಇವರು ಭಾರತದ ಶಾಸ್ತ್ರೀಯ ಕಲೆಯಾದ ನಾಟ್ಯದ ವಿಕಾಸಕ್ಕೆ ನೀಡಿದ ಕಾಣಿಕೆ ಅಪಾರ. ಅರವತ್ತ ಮೂರು ವಸಂತಗಳನ್ನು ದಾಟಿ ವಿದಾಯ ಹೇಳಿದ ಶ್ರೀನಿವಾಸರ ಸ್ಥೂಲ ಪರಿಚಯ ಮಾಡಿಕೊಡುವುದು ಈ ಲೇಖನದ ಉದ್ದೇಶ.

ಹಾವೇರಿ ಜಿಲ್ಲೆಯ ಹಂಸಭಾವಿಯ ಶ್ರೀ ಕೋನ್ಹೇರ ರಾಮಚಂದ್ರ ಕುಲಕರ್ಣಿಯವರ ಧರ್ಮಪತ್ನಿ ಶ್ರೀಮತಿ ಲಕ್ಷ್ಮೀಬಾಯಿ ಕೋನ್ಹೇರ ಇವರು ಶಾಲಿವಾಹನಶಕ ೧೮೩೨ಕ್ಕೆ ಸಲ್ಲುವ ಶ್ರೀಮತ್ಸಾಧಾರಣ ನಾಮ ಸಂವತ್ಸರದ ಮಾಘ ಬಹುಳ ಷಷ್ಠಿ ಆದಿತ್ಯವಾರದಂದು ಶ್ರೀನಿವಾಸರಿಗೆ ಜನ್ಮವಿತ್ತರು. ಅಂದು ಕುಲಕರ್ಣಿ ಅವರ ಮನೆಯಲ್ಲಿ ಪುತ್ರೋತ್ಸವವಾಯಿತೆಂದು ಊರೆಲ್ಲ ಹಿಗ್ಗಿತು. ಆದರೆ ಆ ಹೊಸ ಜೀವ ನಾಟ್ಯಾಚಾರ್ಯನಾಗಿ ಜಗತ್ತಿನಲ್ಲಿ ಬೆಳಗುತ್ತದೆ ಎಂದು ಯಾರೂ ಊಹಿಸಿರಲು ಸಾಧ್ಯವಿಲ್ಲ. ಗಜಕೇಸರಿ ಯೋಗದಿಂದ ಧರೆಗಿಳಿದ ಶ್ರೀನಿವಾಸರು ಸುಖಸಮೃದ್ಧಿಯಿಂದ ಬಾಳುತ್ತಾನೆ, ಆಯುಷ್ಯವಂತನಾಗುತ್ತಾನೆ ಎಂದಷ್ಟೇ ಭಾವಿಸಿರಬೇಕು. ಅಂತೆಯೇ ಎಲ್ಲರ ಮನೆಯಲ್ಲಿ ಮಕ್ಕಳು ಬೆಳೆಯುವಂತೆಯೇ ಶ್ರೀನಿವಾಸರ ಬೆಳವಣಿಗೆಯೂ ಆಯಿತು. ವಿದ್ಯಾಭ್ಯಾಸವೂ  ಸಾಗಿತು. ಇಂದು ಹಂಸಭಾವಿಯಲ್ಲಿಯೇ ಡಿಗ್ರಿ ಹಾಗೂ ಡಿಪ್ಲೋಮಾಗಳನ್ನು ಪಡೆಯಬಹುದು. ಆದರೆ ಆ ಕಾಲದಲ್ಲಿ ಪ್ರೌಢಶಾಲೆ ಇರುತ್ತಿದ್ದುದು ಜಿಲ್ಲೆಗೆ ಒಂದೋ ಎರಡೋ ಕಡೆ. ಆದ್ದರಿಂದ ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಪ್ರೌಢಶಾಲೆಯ ಓದಿಗಾಗಿ ಧಾರವಾಡ ಸೇರಬೇಕಾಯಿತು. ಭಾರತದ ಕನ್ನಡ ನಾಡಿನಲ್ಲಿ ಸ್ವಾಭಿಮಾನ ಜಾಗೃತವಾಗುತ್ತಿದ್ದ ಕಾಲವದು. ಆಗ ಖಾಸಗಿ ಶಿಕ್ಷಣ ಸಂಸ್ಥೆಗಳು ಆ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಿದ್ದವು. ಈ ನಿಟ್ಟಿನಲ್ಲೇ ಕೆಲಸ ಮಾಡುತ್ತಿದ್ದ ವಿದ್ಯಾರಣ್ಯ ಹೈಸ್ಕೂಲಿನಲ್ಲಿ ಶ್ರೀನಿವಾಸರ ಮೆಟ್ರಿಕ್ಯುಲೇಷನ್‌ ಪರೀಕ್ಷೆ ಮುಗಿಯಿತು. ಕನ್ನಡ ಕುವರಿಗೆ ವಿದ್ಯಾರಣ್ಯರ ಹೆಸರು ಎಷ್ಟು ಸ್ಪೂರ್ತಿದಾಯಕ ಎಂದು ಹೇಳಬೇಕಾಗಿಲ್ಲ. ಅಲ್ಲಿ ದೊರೆತ ಸ್ಪೂರ್ತಿ ಶ್ರೀನಿವಾಸರಲ್ಲಿ ಕನ್ನಡ ಭಾಷೆ ಹಾಗೂ ಕನ್ನಡ ಸಾಹಿತ್ಯದಲ್ಲಿ ಅಭಿಮಾನವನ್ನು ಎರಕಹುಯ್ಯಿತು. ಕಲೆಯಲ್ಲಿ ಒಲವು ಮೂಡಿಸಿತು. ಮುಂದೆ ಇವರು ಕೊಲ್ಲಾಪುರದ ರಾಜಾರಾಮ ಕಾಲೇಜಿನಲ್ಲಿ ಇಂಟರ್ ಮಾಡಿದರು. ಇವರ ಜೊತೆ ಮಾಜಿ ಉಪರಾಷ್ಟ್ರಪತಿ ದಿ.ಬಿ.ಡಿ. ಜತ್ತಿಯವರು ಸಹಪಾಠಿಗಳಾಗಿದ್ದರು. ಅನಂತರ ಬಿ.ಎ. ಸಲುವಾಗಿ ಮತ್ತೆ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ವ್ಯಾಸಂಗ ಆರಂಭವಾಯಿತು. ಕುಲಕರ್ಣಿ ಶ್ರೀನಿವಾಸರು ಕಾಲೇಜು ಕಟ್ಟೆ ಹತ್ತಲೆಂದು ಬಂದಾಗ ಚತುರ್ಭುಜರಾಗಿಯೇ ಬಂದರು. ಸಪತ್ನೀಕರಾಗಿ ಸಂಸಾರ ರಥ ಏರಿ ಬಂದ ಶ್ರೀನಿವಾಸರು ಧಾರವಾಡದಲ್ಲಿ Earning & Learning ವಿಧಾನವನ್ನು ಅನುಸರಿಸಿದರು. ದಿನಪತ್ರಿಕೆ ಹಂಚುವುದು. ಅದೇ ಪತ್ರಿಕೆಗೆ ಸ್ಥಳೀಯ ವರದಿ ಕಳಿಸುವುದು, ಒಂದು ಅಂಗಡಿಯಲ್ಲಿ ಲೆಕ್ಕಪತ್ರ ಬರೆಯುವುದು, ಹೀಗೆ ಸಂಸಾರ ನೌಕೆ ತೇಲುವಂತೆ ನೋಡಿಕೊಂಡರು.

ಕಾಲೇಜು ಫೀ ತುಂಬುವ ದುರ್ಧರ ಪ್ರಸಂಗ ಬಂದಾಗಲೆಲ್ಲಾ ತಮ್ಮ ಏಕಪಾತ್ರದ ಸಂಚಾರಿ ರಂಗಭೂಮಿಯ ಹಸಿಬೆಯನ್ನು ಹೆಗಲಿಗೆ ಹಾಕುತ್ತಿದ್ದರು. ಊರಿನಲ್ಲಿ ಸಾಭಿನಯ, ಏಕಪಾತ್ರಾಭಿನಯ ಪ್ರಯೋಗ, “ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು” ಎಂಬ ಅಂಬಿಕಾತನಯದರ ಸಾಲನ್ನು ನೆನಪಿಗೆ ತರುವಂತಹ ಸಂಸಾರ. ೧೯೩೩ರಲ್ಲಿ ಕಾಲೇಜಿನ ಕರ್ನಾಟಕ ಸಂಘದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಶ್ರೀನಿವಾಸರ ಮೊಟ್ಟಮೊದಲನೆಯ ನೃತ್ಯಪ್ರದರ್ಶನ ಹಾಗೂ ಮೂಕಾಭಿನಯ ಜರುಗಿತು. ಯಾವ ಗುರುವಿನ ಬಳಿಯೂ ಶಿಷ್ಯ ವೃತ್ತಿ ಮಾಡದೆ, ನೋಡಿ ತನಗೆ ತಾಣೆ ಕಲಿತ ವಿದ್ಯೆ ಅದು. ಜನ ಮೆಚ್ಚುಗೆ ಪಡೆಯಿತು. ಮುಂದೆ ಇವರು ನೃತ್ಯ ಪ್ರದರ್ಶನ ನೀಡಿದ ಖ್ಯಾತ ದುರಂಧರಿ ರಾಗಿಣಿದೇವಿ (ಇಂದ್ರಾಣಿ ರೆಹಮಾನ ಇವರ ತಾಯಿ) ಅವರ ನೃತ್ಯ ಮೋಡಿಯಿಂದ ಪ್ರೇರಿತರಾಗಿ “ಸರ್ಪಸರಸ” ನೃತ್ಯವನ್ನು ಅಭಿನಯಿಸಿದರು. ಎರಡು ಕೈಗಳು ಎರಡು ಹಾವುಗಳಂತೆ ಭುಜದಿಂದ ಬೆರಳು ತುದಿಯವರೆಗೂ ತೆರತೆರೆಯಾಗಿ ಬಿಸಾಡಿ, ಕಲೆಯನ್ನು ಪ್ರದರ್ಶಿಸಿದಾಗ ಪ್ರೇಕ್ಷಕರು ಚಪ್ಪಾಳೆ ಮಳೆಗರೆದಿದ್ದರು. ಇದು ಸ್ವಯಂ ಪ್ರೇರಿತ ನೃತ್ಯ ಪ್ರದರ್ಶನವಾಗಿತ್ತು. ಅದೇ ಕಲಾವಿದನ ನಿಜವಾದ ನಲಿವಿನ ಸಂದರ್ಭ. ಅಂದಿನ ಆ ಪ್ರಥಮ ನಲಿವೇ ಅವರ ಇಡೀ ಬಾಳು ಕಲೆಗೆ ಮುಡುಪಾಗಲು ಸಾಧಕವಾದ ಬೀಜಾಂಕುರ. ನೃತ್ಯ, ನಾಟಕ ಒಂದೇ ಬುಡಕಟ್ಟಿನ ಲಲಿತ ಕಲೆ ಅಲ್ಲವೇ? ಶ್ರೀನಿವಾಸರಿಗೆ ದೊರಕಿದ್ದ ಸಹವಾಸವೂ ಅದಕ್ಕೆ ಪೂರಕವಾಗಿತ್ತು. ಶ್ರೀ ಎನ್ಕೆ, ಶ್ರೀರಂಗ ಇವರ ಸಹವಾಸದ ಫಲವಾಗಿ ಏಕಪಾತ್ರಭಿನಯ, ನಾಟಕಭಿನಯಗಳೂ ನೃತ್ಯದ ಜೊತೆಗೆ ಸಾಗಿದ್ದವು. ಓದಿಗೆ ಈ ಚಟುವಟಿಕೆ ಅಡ್ಡಿ ಆಗಿರಲಿಲ್ಲ. ೧೯೩೫ರಲ್ಲಿ ಅವರು ಬಿ.ಎ. ಪದವಿ ಪಡೆದರು.

ಬೇಂದ್ರೆ ಮಾಸ್ತರು, ರಾಷ್ಟ್ರೀಯ ಶಾಲಾಗುರುಗಳು ಶ್ರೀನಿವಾಸರನ್ನು ಸಾಹಿತ್ಯದಲ್ಲೂ ಮುನ್ನಡೆಸಿದರು. ಮಿತ್ರರೊಂದಿಗೆ ಸಾಧನಕೇರಿಗೆ ಆಗಾಗ ಸಾಹಿತ್ಯ ಯಾತ್ರೆ ಮಾಡುತ್ತಿದ್ದರು. ದ.ಬಾ. ಮಲ್ಲಾರಿ. ಎನ್ಕೆ, ಮಳಗಿ ಮೊದಲಾದ ಗೆಳೆಯರೊಂದಿಗೆ ಭೇಟಿ ಹಾಕಿ ಬಂದ ವಿಷಯದ ಮೇಲೆ ಕವಿತೆ ಬರೆಯುವುದು. ನಂತರ ಬೇಂದ್ರೆ ಮಾಸ್ತರರೊಂದಿಗೆ ಚರ್ಚೆ, ವಿಮರ್ಶೆ ಅನಂತರ ಸ್ವತಃ, ವರಕವಿ ಬೇಂದ್ರೆಯವರಿಂದ ಕಾವ್ಯವಾಚನ ಶ್ರವಣ ಮಾಡಿ ಕಿವಿ ತುಂಬಿ ಶೃತಿವಂತರಾಗಿ, ಹೊಟ್ಟೆ ತುಂಬಿ ಹೃದಯವಂತರಾಗಿ ಬೆಳೆದಿಂಗಳಿನಲ್ಲಿ ರಾತ್ರಿರಾಣ ಇಯ ಹೂವಾಸನೆ ಕುಡಿಯುತ್ತ ಹಿಂದಿರುಗುತ್ತಿದ್ದರು.

ಬಿ.ಎ. ಪದವಿ ಪಡೆದ ನಂತರ ಕನ್ನಡ ಎಂ.ಎ ಮಾಡಲು ಆಗಿದ್ದ ಪದ್ದತಿಯಂತೆ ಧಾರವಾಡ, ಸಾಂಗಲಿ ಮತ್ತು ಕೊಲ್ಲಾಪುರಗಳಲ್ಲಿ ಟರ್ಮನ್ನು ಸಹ ತುಂಬಿದರೂ ಪರೀಕ್ಷೆಗೆ ಕೊಡಲಿಲ್ಲ. ಎಂ.ಎ. ಮಾಡಿದ್ದರೆ ಕಾಲೇಜು ಅಧ್ಯಾಪಕರಾಗುತ್ತಿದ್ದರೇನೋ! ಅವರ ತೀರ್ಥರೂಪರಿಗೆ ತಮ್ಮ ಕುಮಾರ ಕಾಲೇಜಿನಲ್ಲಿ ಅಧ್ಯಾಪಕನಾಗಬೇಕು ಅಥವಾ ವಕೀಲನಾಗಬೇಕು ಎಂದಿತ್ತಂತೆ. ಆದರೆ ಶ್ರೀನಿವಾಸರು ಅವೆರಡೂ ಆಗದೆ ನಾಟ್ರಯಾಚಾರ್ಯರಾದರು.

ಸಾಹಿತಿಗಳ ನಾಟಕಕಾರರ ನಡುವೆ ಬೆಳೆದ ಶ್ರೀನಿವಾಸರ ರುಚಿ ಒಲವುಗಳು ಸಾಹಿತ್ಯದ ಕಡೆಗೆ ಮೊದಲು ಮನಸೋತಿತು. ಹಾಗೆಂದಾಗ ನೃತ್ಯದತ್ತ ಗಮನ ಕೊಡಲಿಲ್ಲ ಎಂದಲ್ಲ. ಸಂಪಿಗೆ ಮೊದಲಾದ ಕಥೆಗಳೂ, ದೀಪದ ಕೆಳಗೆ, ಎಡವಿದ ತಂಬಿಗೆ ಎಂಬ ಕಾದಂಬರಿಯನ್ನು, ಏಕಾಂಕ ನಾಟಕಗಳನ್ನು ಬರೆದ ಶ್ರೀನಿವಾಸರು ಬರವಣಿಗೆಯನ್ನು ಮುಂದುವರೆಸಿದ್ದರೆ ಚೆನ್ನಾಗಿತ್ತು ಎಂಬ ಭಾವನೆ ಅನೇಕ ಸಾಹಿತ್ಯಾಸಕ್ತರಲ್ಲಿದೆ. ಪಂಡಿತ ತಾರಾನಾಥರಿಂದ ಕೊಂಡುಕೊಂಡ ಪ್ರೇಮ ಪತ್ರಿಕೆಯನ್ನು ಕೆಲವು ದಿವಸ ನಡೆಸಿದರು. ಇದರಲ್ಲಿ ನಷ್ಟವಾಗಿ ಹೆಂಡತಿಯ ಆಭರಣಗಳನ್ನು ಆಡವಿಟ್ಟದ್ದಾಯಿತು. ಅನಂತರ ಅದನ್ನು ಬಿಡಿಸಲಾಗದೆ ಮಾರಿದರು. ಆದರೆ “ಪ್ರೇಮ” ಪತ್ರಿಕೆಯಿಂದ ಜನರ ಪ್ರೇಮವನ್ನು ಗಳಿಸಿದರು. ಮುಂದೆ ಪ್ರೇಮವನ್ನು ಗ್ರಂಥಮಾಲೆಯನ್ನಾಗಿ ಪರಿವರ್ತಿಸಿದರು. ನೃತ್ಯ ಭಾರತಿ ಎಂಬ ತ್ರೈಮಾಸಿಕ ಪತ್ರಿಕೆಯನ್ನು ಹೊರತಂದರು. ಇಂದು ಸಂಗೀತ-ನೃತ್ಯಕ್ಕೆ ಮೀಸಲಾಗಿತ್ತು. ಇದರಲ್ಲಿ ಕೈಸುಟ್ಟುಕೊಂಡ ಶ್ರೀನಿವಾಸರು ಅಲ್ಲಿಯೂ ಗಟ್ಟಿಯಾಗಿ ನಿಲ್ಲಲಿಲ್ಲ. ಏಕೆಂದರೆ ಅವರ ಧಮನಿಯಲ್ಲಿನ ರಕ್ತದ ಕಣಕಣವೂ ನೃತ್ಯ ನೃತ್ಯ ಎಂದು ಸದಾಕಾಲ ಸ್ಪಂದಿಸುತ್ತಿತ್ತು.

ಬಯಕೆ ಎಷ್ಟೇ ಪ್ರಖರವಾಗಿದ್ದರೂ, ಒತ್ತಡಪೂರಕವಾಗಿದ್ದರೂ ಅದನ್ನು ಪ್ರೋತ್ಸಾಹಿಸುವ, ಪೋಷಿಸುವ ಅಭಯ ಹಸ್ತವಿಲ್ಲದೆ ಅದಕ್ಕೆ ದಾರಿಯಿಲ್ಲ. ಶ್ರೀಯುತ ಗುಬ್ಬಿ ವೀರಣ್ಣನವರು ಶ್ರೀನಿವಾಸರ ಪ್ರತಿಭೆಗೆ ಮಾರುಹೋಗಿ ಅವರ ಕಂಪನಿಯ ನೃತ್ಯ ನಿರ್ದೇಶಕರನ್ನಾಗಿ ನೇಮಿಸಿಕೊಂಡು ಪ್ರೋತ್ಸಾಹಿಸಿದರು. ಅವರು ಆಗತಾನೆ ಹೊಸದಾಗಿ ರಂಗಕ್ಕೆ ತಂದ “ಅಕ್ಕಮಹಾದೇವಿ’ ನಾಟಕದ ನೃತ್ಯ ಸಂಯೋಜನೆ ಶ್ರೀನಿವಾಸರದೇ. ಅದು ಜನರ ಅಪಾಯ ಮೆಚ್ಚುಗೆಯನ್ನು ಪಡೆಯಿತು. ಈ ಕೆಲಸ ೧೯೩೭ರಲ್ಲಿ ಆಯಿತು. ಆ ಸಂದರ್ಭದಲ್ಲಿ ಕಂಪನಿಯ ಜೊತೆಗೆ ದಕ್ಷಿಣ ಕನ್ನಡ ಜಿಲ್ಲೆಗೆ ಹೋಗಿದ್ದ ಶ್ರೀನಿವಾಸರಿಗೆ, ನೃತ್ಯದಲ್ಲಿ ನವ್ಯ ಪ್ರಯೋಗ ಮಾಡುತತಿದ್ದ ಶ್ರೀ ಶಿವರಾಂ ಕಾರಂತರ ಸಂಪರ್ಕ ದೊರೆತು ಪ್ರಯೋಗಶೀಲದತ್ತ ಮೈ ಗೊಡಿತು. ಗುಬ್ಬಿ ವೀರಣ್ಣನವರು ಕೊಟ್ಟಮಾತಿನಂತೆ “ಅಕ್ಕಮಹಾದೇವಿ” ನಾಟಕಕ್ಕೆ ಶಿವಲಾಸ್ಯ ನೃತ್ಯ ಸಂಯೋಜನೆಯನ್ನು ಮಾಡಿ ಪೂರೈಸಿದರು.

ವಿಶ್ವವಿಖ್ಯಾತಿ ಪಡೆದ ಉದಯಶಂಕರರ ನೃತ್ಯ ಮೇಳಗಳಿಂದ ಪ್ರಭಾವಿತರಾಗಿದ್ದ ಕುಲಕರ್ಣಿ ಶ್ರೀನಿವಾಸರು ತಾವು ಸಹ ಅವರಂತೆ ಕಲೆಯಲ್ಲಿ ಮಹತ್ವವನ್ನು ಸಾಧಿಸಬೇಕು ಎಂದು ದೃಢ ಸಂಕಲ್ಪ ಮಾಡಿದರು. ಅದಕ್ಕೆ ಬೇಕಾದ ಶಕ್ತಿ ಸಾಮರ್ಥ್ಯಗಳನ್ನು  ವಿದ್ಯಾಪ್ರೌಢಿಮೆಗಳನ್ನು ಸಂಪಾದಿಸಿದಲ್ಲದೆ ಅದು ಸಾಧ್ಯವಿಲ್ಲವೆಂಬ ಅರಿವಾಗಿ ಕಥಕ್ಕಳಿಯನ್ನು ಕಲಿಯಲು ಕೇರಳದ ಕಲಾ ಮಂಡಳಕ್ಕೆ ಹೋದರು. ಅಲ್ಲಿ ಅಖಿಲ ಭಾರತದ ಖ್ಯಾತಿಯ ಶ್ರೀ ರಮಣಿ ಮೆನನ್‌ ಮತ್ತು ಶ್ರೀ ಕುಂಜು ಕುರುಪ್‌ರ ಪದತಲದಲ್ಲಿ ಕುಳಿತು ಕಥಕ್ಕಳಿ ಅಭ್ಯಾಸ ಮಾಡಿದರು. ಭರತ ನಾಟ್ಯವನ್ನು ಮದರಾಸಿನ ಶ್ರೀಮತಿ ಗೌರಿಯಮ್ಮ ಮತ್ತು ಶ್ರೀ ತಿರುವೆಂಗಡಂರವರಲ್ಲಿ ಕಲಿತರು.

೧೯೩೯ರಲ್ಲಿ ಮದರಾಸನ್ನು ಕೇಂದ್ರವನ್ನಾಗಿ ಮಾಡಿಕೊಂಡು ತಮ್ದೇ ನೃತ್ಯ ಮಂಡಳಿಯನ್ನು ನೆಲೆಗೊಳಿಸಿ ಅದನ್ನು ವಿಸ್ತರಿಸದರು. ಅದಕ್ಕೆ “ನೃತ್ಯ ಭಾರತಿ” ಎಂದು ನಾಮಕರಣ ಮಾಡಿದರು, ಅದರಲ್ಲಿ ಸುಪ್ರಸಿದ್ಧ ಕಥಕ್ಕಳಿ ಪ್ರವೀಣ ಶ್ರೀ ಆನಂದ ಶಿವರಾಂ‌, ರಷ್ಯನ್‌ ಬ್ಯಾಲೆಗಳಲ್ಲಿ ನಿಷ್ಣಾತರಾದ ಮಿಸ್‌ ಲೂಯಿ ಲೈಟ್‌ಪುಟ್‌, ಪ್ರಸಿದ್ಧ ಮಣಿಪುರಿ ನೃತ್ಯ ಪಟು ಶ್ರೀ ಕಾಮಿನಿಕುಮಾರ್ ಸಿನ್ಹ ಮತ್ತು ಪ್ರಸಿದ್ಧ ಮಣಿಪುರಿ ನೃತ್ಯ ಪಟು ಶ್ರೀ ಹೀರಾಲಾಲ್‌ ಅವರುಗಳೆಲ್ಲ ಇದ್ದರು. ಶ್ರೀ ಕಾಮಿನಿಕುಮಾರ್ ಸಿನ್ಹರಿಂದ ಮಣಿಪುರಿ ನೃತ್ಯವನ್ನು ಶ್ರೀನಿವಾಸರು ಮೈಗೂಡಿಸಿಕೊಂಡರು. ಭಾರತೀಯ ನೃತ್ಯ ಪರಂಪರೆಯ ಈ ನಾಲ್ಕು ಮುಖಗಳ ಮೈಗೂಡಿಸಿಕೊಂಡರು. ಭಾರತೀಯ ನೃತ್ಯ ಪರಂಪರೆಯ ಈ ನಾಲ್ಕು ಮುಖಗಳ ಮೈಗೂಡಿಕೆಯಿಂದ ಅವರ ಕಲಾ ಪ್ರತಿಭೆಗೆ ಹೊಸ ಹೊಳಪುಗಳ ಚಿಗುರೊಡೆಯಿತು. ಹೀಗಾಗಿ ಶ್ರೀನಿವಾಸರ ತಂಡದವರ ನೃತ್ಯ ಕಾರ್ಯಕ್ರಮಗಳು ಜನಾನುರಾಗಿಯಾದವು. ಅನೇಕ ಕಲಾವಿದರು ಶ್ರೀನಿವಾಸರಲ್ಲಿ ನೃತ್ಯ ಶಿಕ್ಷಣವನ್ನು ಪಡೆದರು. ತೆಲಗು ತಾರೆ ಕಾಂಚನಮಾಲಾ, ಕನ್ನಡ ತಾರೆ ಕಲ್ಪನಾ ಈ ಎರಡು ಹೆಸರುಗಳು ಆ ದಿಶೆಯಲ್ಲಿ ಮೊದಲು ಹೊಳೆಯುತ್ತವೆ. ಕನ್ನಡ ನಾಡಿನಲ್ಲಿಯೇ ನೆಲೆಸಿ ಇಂತಹ ಒಂದು ತಂಡವನ್ನು ರೂಪಿಸಿ ರಸಿಕ ಜನರ ಮನೋವಿಕಾಸಕ್ಕೆ ಕಾರಣರಾಗಬೇಕೆಂಬುದು ಅವರ ನಿಜಬಯಕೆಯಾಗಿದ್ದರೂ ಕೂಡ ಅವರು ತಮ್ಮ ಗುರಿಸಾಧನೆಗೆ ತಮಿಳುನಾಡಿನಲ್ಲಿ ನೆಲೆಸಬೇಕಾಯಿತು. ಶ್ರೀನಿವಾಸರು ಕಟ್ಟು ನಿಟ್ಟಾದ ನೃತ್ಯ ಸಂಪ್ರದಾಯಗಳನ್ನು ಬಲ್ಲವರಾದರೂ ಕಾಲಕ್ಕೆ ತಕ್ಕಂತೆ ಜನರ ಅಭಿರುಚಿಗೆ ತೃಪ್ತಿ ನೀಡುವ ಆದರೂ ಸುರುಚಿ ಬಿಡದ ಹೊಸ ಪ್ರಕಾರಗಳನ್ನು ರೂಪಿಸಿದರು. ಅವರ ವಿದ್ವತ್ತು, ನಿಷ್ಠೆ ಮತ್ತು ಹೊಸ ರೂಪ ನೀಡುವ ಅವರ ಪ್ರತಿಭೆ ಚಲನ ಚಿತ್ರರಂಗದ ಪ್ರವೇಶಕ್ಕೆ ಕಾರಣವಾಯಿತು. ಇಂದಿಗೂ ಪ್ರಸಿದ್ಧವಾಗಿರುವ ಮದರಾಸಿನ ಜೆಮಿನಿ, ವಾಹಿನಿ, ಪ್ರಗತಿ ಮತ್ತು ಇನ್ನಿತರ ಸ್ಟುಡಿಯೋಗಳಲ್ಲಿ ತಯಾರಾದ ಚಲನಚಿತ್ರಗಳಿಗೆ ನೃತ್ಯ ನಿರ್ದೇಶಕರಾಗಿ ಹಾಗೂ ನರ್ತಕರಾಗಿ ಶ್ರೀನಿವಾಸರು ತಮ್ಮ ಪ್ರತಿಭೆಯನ್ನು ಆ ಕ್ಷೇತ್ರದಲ್ಲಿಯೂ ಬೆಳಗಿಸಿದರು. ಚಲನಚಿತ್ರದಲ್ಲಿ ದಾಖಲೆಗಳನ್ನು ಸ್ಥಾಪಿಸಿದ ಚಂದ್ರಲೇಖ, ಭಕ್ತ ಪೋತನ, ಮಂಗಮ್ಮ ಶಪಥಂ, ಕನ್ನಡದ ವಸಂತಸೇನ ತಿಲೋತ್ತಮಾ, ಪಾರ್ವತಿ ಕಲ್ಯಾಣ, ದಾನಶೂರ ಕರ್ಣ, ಭೂಕೈಲಾಸ, ಪ್ರಭುಲಿಂಗಲೀಲೆ, ಮೊದಲಾದ ಚಿತ್ರಗಳ ನೃತ್ಯ ನಿರ್ದೇಶನ ಶ್ರೀನಿವಾಸರದು. ಎಲ್ಲ ಹೆಸರುಗಳನ್ನು ಇಲ್ಲಿ ಹೆಸರಿಸಲು ಸಾಧ್ಯವಿಲ್ಲ. ವಸುಂಧರಾದೇವಿ (ನಟಿ ವೈಜಯಂತಿಮಾಲಾ ಅವರ ತಾಯಿ), ಭಾನುಮತಿ, ಕಾಂಚನಾಮಲಾ, ಪುಷ್ಪವಲ್ಲಿ, ಕನ್ನಾಂಬ, ಅಂಜಲಿದೇವಿ, ಕನ್ನಡದ ಅಭಿನೇತ್ರಿ ಕಲ್ಪನಾ, ರಮಾ, ಪಂಡರಿಭಾಯಿ, ಬಿ.ಸರೋಜದೇವಿ, ಹರಿಣಿ, ಚಿಂದೋಡಿ ಲೀಲಾ ಮುಂತಾದ ಉನ್ನತ ಮಟ್ಟದ ಕಲಾವಿದರೆಲ್ಲಾ ಇವರ ನೃತ್ಯ ನಿರ್ದೇಶನದ ಚಿತ್ರದಲ್ಲಿ ಪಾಲ್ಗೊಂಡಿದ್ದಾರೆ. ಅವರಲ್ಲಿದ್ದ ನಾಟಕದ ಅಭಿರುಚಿಯ ಉಪಯೋಗವನ್ನು ಸಹ ಅವರು ನೃತ್ಯಕ್ಕೆ ಹೊಂದಿಸಿ ಅನೇಕ ನೃತ್ಯ ನಾಟಕಗಳನ್ನು ಅವರು ಕೂಡಿಸಿದರು. ಮೋಹಿನಿ ಭಸ್ಮಾಸುರ, ಕಿರಾತಾರ್ಜುನೀಯಗಳ ಜೊತೆಗೆ ಚಂದ್ರಕಿನ್ನರ, ಗ್ರಾಮ ಜೀವನ, ಗಿರಿಜಾ ಕಲ್ಯಾಣ, ಸರ್ಪಸರಸ, ರಾಸಲೀಲೆ ಹಲವಾರು ದೃಶ್ಯಗಳನ್ನೊಳಗೊಂಡ ಮೇನಕ, ಸಂದ-ಕಿಂದರರು, ಅರುಣಗಿರಿ ನೃತ್ಯ ನಾಟಕಗಳಲು ಇವು ಅಪಾರ ಜನಪ್ರಿಯತೆಯನ್ನು ಪಡೆದವು. ಅವರ ಅರುಣಗಿರಿ ನೃತ್ಯ ನಾಟಕವನ್ನು ನೋಡಿ ಚಿತ್ರೋದ್ಯಮಿ ಒಬ್ಬರು ಅದನ್ನು ಚಲನಚಿತ್ರವಾಗಿ ತಯಾರಿಸಬೇಕೆಂಬ ಯೋಜನೆಯನ್ನು ಹಾಕಿಕೊಂಡು ಚಿತ್ರ ಕಥೆಯು ಸಹ ಸಿದ್ಧವಾಯಿತು. ಅದು ತಯಾರಾಗಿದ್ದಿದ್ದರೆ ಚಲನಚಿತ್ರದಲ್ಲಿ ಸಹ ಒಂದು ನೂತನ ದಾಖಲೆ ಸ್ಥಾಪಿತವಾಗುತ್ತಿತ್ತು.

ದಕ್ಷಿಣ ಭಾರತದಲ್ಲಿ ಅವರ ಪ್ರವಾಸ ಸಾಕಷ್ಟು ವ್ಯಾಪಕವಾಗಿತ್ತು. ಉತ್ತರ ಭಾರತದಲ್ಲಿ ಸಹ ಪ್ರವಾಸ ಮಾಡಿ ಮನ್ನಣೆ ಪಡೆದರು. ಅವುಗಳ ಜೊತೆಗೆ ಬರ್ಮಾ, ಸಿಲೋನ್‌, ದಕ್ಷಿಣ ಆಫ್ರಿಕಾಗಳಿಗೆ ಹೋಗಿ ಅಲ್ಲಿನ ಜನಮೆಚ್ಚುಗೆಯನ್ನು  ಸಂಪಾದಿಸಿಕೊಂಡು ಬಂದರು.

ಮದ್ರಾಸ್‌ ಸಾಹಿತ್ಯ ಸಮ್ಮೇಳನಕ್ಕೆ ಬಂದಿದ್ದ ಖ್ಯಾತ ಕವಿಗಳಾದ ಕೈಲಾಸಂ, ಬೇಂದ್ರೆ, ಗೋಕಾಕ್‌, ಎನ್ಕೆ, ಮಾಸ್ತಿ, ವಿ. ಸೀತಾರಾಮಯ್ಯ ಆದಿಯಾಗಿ ಅನೇಕ ಹಿರಿಯ ಸಾಹಿತಿಗಳನ್ನು ಆಮಂತ್ರಿಸಿ ಭವ್ಯ ನೃತ್ಯ ಪ್ರದರ್ಶನ ನೀಡಿದರು. ಅದೊಂದು ಹಬ್ಬದೂಟ. ೧೯೩೮ರಿಂದ ೧೯೪೪ರ ವರೆಗೆ ಶ್ರೀನಿವಾಸರು ೧೫ ಮಂದಿ ಕಲಾವಿದರನ್ನು ಸಂಬಳಕೊಟ್ಟು ಇಟ್ಟುಕೊಂಡರು. ಸಿನಿಮಾ ತಾರೆಯರು ಶ್ರೀನಿವಾಸರ ನಾಟ್ಯ ಪ್ರದರ್ಶನದಲ್ಲಿ ಭಾಗವಹಿಸುವುದೆಂದರೆ ಒಂದು ಭಾಗ್ಯವೆಂದು ತಿಳಿಯುತ್ತಿದ್ದರು.

ಉದಯಶಂಕರ ಮದ್ರಾಸಿಗೆ ಬಂದಾಗ ತಮ್ಮ ಹಿರಿಯ ಗುರುವಿಗೆ ಶಿಷ್ಯರಾಗಿ ಗೌರವ ಸಲ್ಲಿಸಿದರು. ಆಗ ತಯಾರಿಸುತ್ತಿದ್ದ “ಕಲ್ಪನಾ” ಚಿತ್ರದಲ್ಲಿ ಭಾಗವಹಿಸಲು ಈ ಶಿಷ್ಯ ಶ್ರೀನಿವಾಸರಿಗೆ ಆಮಂತ್ರಣವೇನೋ ಬಂತು. ಆದರೆ ಅವರಿಗದು ಸಾಧ್ಯವಾಗಲಿಲ್ಲ.

ಕರ್ನಾಟಕದ ಉದಯಶಂಕರರು ಕುಲಕರ್ಣಿ ಶ್ರೀನಿವಾಸ ಎಂದು ಅನ್ವರ್ಥವಾದ ಖ್ಯಾತಿಯನ್ನು ಪಡೆದರು.

ಯುದ್ಧಕಾಲದಲ್ಲಂತೂ ನಿಧಿ ಸಂಗ್ರಹಿಸಲಿಕ್ಕೆ ಕುಲಕರ್ಣಿ ಶ್ರೀನಿವಾಸರ ನೃತ್ಯ ಕಾರ್ಯಕ್ರಮಗಳಿಗಿಂತ ಹೆಚ್ಚಿನ ಸುಲಭೋಪಾಯ ಬೇರೆ ಇರಲಿಲ್ಲ. ಮಹಾಯುದ್ಧದ ಕಾಲಕ್ಕೆ ರಕ್ಷಣಾ ನಿಧಿಗಾಗಿ ಮದ್ರಾಸ್‌ ಪ್ರಾಂತ್ಯದಲ್ಲಿ ಅನೇಕ ನೃತ್ಯ ಕಾರ್ಯಕ್ರಮಗಳನ್ನು ಪ್ರದರ್ಶಿಸಿ ಲಕ್ಷಾಂತರ ರೂಪಾಯಿಗಳ ನಿಧಿಯನ್ನು ಅವರು ಸಂಗ್ರಹಿಸಿಕೊಟ್ಟಿದ್ದಾರೆ. ಅಷ್ಟೆಲ್ಲ ಪರಿಣತಿ, ಅನುಭವ ಮತ್ತು ಲೋಕಪ್ರಿಯತೆಗಳಿಂದ ಮುಪ್ಪರಿಗೊಂಡ ಕುಲಕರ್ಣಿ ಶ್ರೀನಿವಾಸರ ಜೀವ ಇನ್ನೂ ಹೆಚ್ಚಿನ ಎತ್ತರಕ್ಕೆ ಹಾರಲು ಹವಣಿಸುತ್ತಿತ್ತು. ಅವರ ಗರುಡಾತ್ಮ ಕಾಣುತ್ತಿದ್ದ ಕ್ಷಿತಿಜ ಇಲ್ಲೂ ವಿಶಾಲವಾಗಿತ್ತು. ದೇಶ ಸ್ವತಂತ್ರವಾಗಿ ಈ ಒಂದು ಮಹಾನೆಗೆತಕ್ಕೆ ಸಿದ್ಧತೆಗಳೆಲ್ಲ ಸಜ್ಜಾದಂತಿತ್ತು.

೧೯೪೮ನೇ ವರ್ಷದ ಉದಯದೊಂದಿಗೆ ಕುಲಕರ್ಣಿ ಶ್ರೀನಿವಾಸರು ಇಂದಿನ ಮಹಾರಾಷ್ಟ್ರದ ಪ್ರಮುಖ ನಗರಗಳಲ್ಲಿ ತಮ್ಮ ನೃತ್ಯ ತಂಡದ ಒಂದು ಮಹಾ ಸಂಚಾರವನ್ನೇರ್ಪಡಿಸಿದರು. ದೇಶದ ಇತರೆ ಭಾಗಗಳಿಗೂ ಈ ಪ್ರವಾಸ ಹರಡಿಕೊಂಡಿತ್ತು. ಈ ಒಂದು ಮಹಾಪ್ರಯತ್ನದಿಂದ ಕುಲಕರ್ಣಿ ಶ್ರೀನಿವಾಸರು ಭಾರತದ ನೃತ್ಯ ಕ್ಷೇತ್ರದಲ್ಲಿಯೇ ಒಂದು ನೂತನ ಅಧ್ಯಾಯವನ್ನು ಬರೆಯುವ ಹಂಬಲವನ್ನಿಟ್ಟು ಕೊಂಡಿದ್ದರು. ಅಮೆರಿಕದ ಪ್ರವಾಸಕ್ಕೆ ಸಹ ಸಿದ್ಧತೆಯಾಗಲಿತ್ತು.

ಆದರೆ ವಿಧಿಯ ಎಣಿಕೆ ಬೇರೆಯಾಗಿತ್ತು. ೧೯೪೮ರ ಜನವರಿ ೩೦ ರಂದು ಮಹಾತ್ಮ ಗಾಂಧಿಯವರ ಆಕಸ್ಮಿಕ ಕೊಲೆಯ ವಾರ್ತೆ ಅವರು ತಮ್ಮ ಕಾರ್ಯಕ್ರಮಕ್ಕಗಿ ಗ್ರೀನ್‌ ರೂಮಿನಲ್ಲಿ ಸಿದ್ಧರಾಗುತ್ತಿರುವಾಗಲೇ ಸಿಡಿಲಿನಂತೆ ಬಂದೆರಗಿತು. ಅವರ ಕಾರ್ಯಕ್ರಮಕ್ಕೆ ಮತ್ತೆ ಚೇತರಿಸಿಕೊಳ್ಳಲಾರದಂಥ ಪೆಟ್ಟು ಬಿತ್ತು. ಭಾರತಾದ್ಯಂತ ೬೦ ಪಟ್ಟಣಗಳಲ್ಲಿ ಥಿಯೇಟರೇ ಕಾಯ್ದಿರಿಸಿ ಪ್ರಚಾರ ನಡೆಸಿದ್ದರು. ಈ ಪ್ರವಾಸಕ್ಕಾಗಿಯೇ ವಿಶೇಷ ಕಲಾವಿದರನ್ನೊಳಗೊಂಡ ದೊಡ್ಡ ಮಂಡಳಿಯನ್ನು ಕಟ್ಟಿಕೊಂಡಿದ್ದರು. ಈ ಕಾರ್ಯಕ್ರಮಗಳನ್ನು ಪೂರೈಸಿದನಂತರ ಅಮೆರಿಕಕ್ಕೆ ಹೊರಡುವ ಸಾಹಸದ ಯೋಜನೆಯನ್ನು ಸಂಕಲ್ಪಸಿದ್ದರು. ಆದರೆ ಸಾಂಗಲಿಯಲ್ಲಿಯೇ ಅವರ ಸಕಲ ಯೋಜನೆಗಳ ಸಮಾಧಿಯಾಯಿತು. ಕರ್ಪ್ಯೂಜಾರಿಯಾಗಿ ಲೈಸೆನ್ಸ್ ರದ್ದಾಗಿ ಎಲ್ಲೆಡೆ ಉಂಟಾದ ಪ್ರಕ್ಷುಬ್ಧ ವಾತಾವರಣದಲ್ಲಿ ಕಾರ್ಯಕ್ರಮ ಮುಂದುವರಿಸಲು ಅವರಿಗೆ ಸಾಧ್ಯವಾಗಲಿಲ್ಲ. ಮುಂಬೈಯಲ್ಲಿ ತಾನು ಪ್ರಕಟಿಸಿದಂತೆ ಎಕ್ಸೆಲ್‌ಸಿಯರ್ ಚಿತ್ರಮಂದಿರದಲ್ಲಿ ಒಂದು ವಾರ ಕಾರ್ಯಕ್ರಮಗಳನ್ನಾದರೂ ಮಾಡಬೇಕೆಂಬ ಅವರ ಹುಚ್ಚು ಸಾಹಸವು ಅವರನ್ನು ಇನ್ನಿಷ್ಟು ತೊಂದರೆಗೆ ಈಡುಮಾಡಿ ಅಪಾರ ನಷ್ಟಕ್ಕೆ ಗುರಿಮಾಡಿತು. ಅವರು ಕಟ್ಟಿದ ನೃತ್ಯ ಮಂಡಳಿಯು ಒಡೆದು ಹೋಯಿತಲ್ಲದೆ, ಈವರೆಗೆ ಅವರು ಮದ್ರಾಸಿನಲ್ಲಿ ಗಳಿಸಿದ ಹಣವೆಲ್ಲವೂ ಸೂರೆಯಾಗಿ ಮನೆ ಮಠಗಳೆಲ್ಲವನ್ನು ಕಳೆದು ಕೊಂಡುದಲ್ಲದೆ, ಸಾಲದ ಹೊರೆಯನ್ನು ಹೊತ್ತುಕೊಂಡರು. ಹಂಸ ಭಾವಿಯಲ್ಲಿರುವ ಪಿತ್ರಾರ್ಜಿತ ಆಸ್ತಿಯ ಮೇಲೆ ಕೂಡ ಆ ಸಾಲದ ಹೊರೆ ಬಿದ್ದುದರಿಂದ ಅವು ಬ್ಯಾಂಕಿನ ಸಾಲಕ್ಕೆ ಹರಾಜಾದವು.

ಐಶ್ವರ್ಯವು ಎಂದಿಗೂ ನಶ್ವರವಾದುದು. ಆ ಮಾಯಾ ಮರೀಚಿಕೆಯ ಬೆನ್ನು ಹತ್ತದೆ ಸೇವಾಬುದ್ಧಿಯಿಂದ ನೃತ್ಯ ಕಲೋಪಾಸನೆಯಲ್ಲಿಯೇ ಜೀವನವನ್ನು ಸವೆಯಿಸಬೇಕೆಂಬ ತೀರ್ಮಾನವನ್ನು ಅವರು ಮಾಡಿದರು.

ಇವರ ನಾಟ್ಯ ಪ್ರತಿಭೆಯನ್ನು ಶ್ರೀಮತಿ  ಸರೋಜಿನಿ ನಾಯ್ಡು, ಕನ್ನಡ ಕುಲ ಪುರೋಹಿತ ಆಲೂರು ವೆಂಕಟರಾಯರು ಮೆಚ್ಚಿದರು. ಖ್ಯಾತ ನಟರಾದ ಪೃಥ್ವಿರಾಜ ಕಪೂರ್, ಡಾ. ರಾಜಕುಮಾರ್ ಶ್ರೀನಿವಾಸರ ನೃತ್ಯ ಪ್ರತಿಭೆಗೆ ತಲೆದೂಗಿರುವ ಸಂದರ್ಭಗಳು ಅದೆಷ್ಟೋ ಇವೆ. ಇವರ ಕಾರ್ಯಕ್ರಮವನ್ನು ವೀಕ್ಷಿಸಿ ಸಿಲೋನ್‌ ಅಬ್‌ಸರ್ವರ್, ಮದರಾಸು ಸೈನ್ಸ್‌ ಸಂಪರ್ಕ ಶಾಖೆ, ಅಂತರ ರಾಷ್ಟ್ರೀಯ ಮಹಿಳಾ ಸಂಸ್ಥೆ, ಕೊಲಂಬೊ ರಸಿಕ ರಂಜಿನಿ ಸಭಾ, ಸಿಲೋನ್‌ ಕಮ್ಯಾಂಡ್‌, ವೈ.ಯು.ಸಿ.ಎ. ಭಾರತೀಯ ಸೈನ್ಯ ಕೇಂದ್ರ, ಟೈಮ್ಸ್‌ ಆಫ್‌ ಸಿಲೋನ್‌, ಇನ್ನೂ ಅನೇಕ ಪ್ರತಿಷ್ಠಿತ ಸಂಘ ಸಂಸ್ಥೆಗಳು ಮೆಚ್ಚುಗೆ ವ್ಯಕ್ತಪಡಿಸಿವೆ.

೧೯೪೮ರಲ್ಲಿಯೇ ಧಾರವಾಡಕ್ಕೆ ಬಂದು ಭಾರತೀಯ ನೃತ್ಯ ಕಲಾ ಕೇಂದ್ರ ಎಂಬ ಸಂಸ್ಥೆಯನ್ನು ಪ್ರಿನ್ಸಿಪಾಲ ಜಿ.ಬಿ. ಜಠಾರ ಅವರ ಅಧ್ಯಕ್ಷತೆಯಲ್ಲಿ ಪ್ರಾರಂಭಿಸಿದರು. ಬಾಲಕ ಬಾಲಕಿಯರಿಗೆ ನೃತ್ಯ ಪ್ರದರ್ಶನಗಳನ್ನು ಮಾಡಿಸಿ ಕರ್ನಾಟಕದಲ್ಲಿ ಕಲಾ ಪ್ರಚಾರವನ್ನು ಮಾಡಿದರು. ಕರ್ನಾಟಕಕ್ಕೆ ಒಂದು ಕಲಾ ಕೇಂದ್ರವನ್ನು ನಿರ್ಮಿಸಬೇಕೆಂಬ ಅವರ ಮಹತ್ವಾಕಾಂಕ್ಷೆಗೆ ಆಗ ಕಾಲವಿನ್ನೂ ಪಕ್ವವಾಗಿರಲಿಲ್ಲ. ಸಮಾಜದಲ್ಲಿ ನೃತ್ಯ ಕಲೆಯ ಬಗ್ಗೆ ಇದ್ದ ಜಿಗುಪ್ಸೆ ಹಾಗೂ ತಾತ್ಸಾರ ಭಾವಗಳಿಂದ ಅವರ ಆಸೆ ಆಕಾಂಕ್ಷೆಗಳಿಗೆ ಪ್ರೋತ್ಸಾಹವೂ ಸಮಾಜದಿಂದ ಸಿಗಲಿಲ್ಲ.

ಆದರೆ ಶ್ರೀನಿವಾಸರಲ್ಲಿದ್ದ ಕಲಾಪ್ರತಿಭೆಯು ಅಖಂಡವಾಗಿ ಬೆಳಗುತ್ತಲೇ ಇತ್ತು. ಅವರ ಉತ್ಸಾಹ, ಹುಮ್ಮಸ್ಸುಗಳಿಗೆ ಆ ಕ್ಷೇತ್ರ ಸಾಲದಾಯಿತು. ಶಾಂತಿ ನಿಕೇತನದಂತೆ ಶಾಂತ ವಾತಾವರಣದಲ್ಲಿ ಕಲಾ ವ್ಯಾಸಂಗವನ್ನು ಮಾಡಿಕೊಂಡು ಇರಬೇಕೆಂಬ ಉದ್ದೇಶದಿಂದ ತಮ್ಮ ಹುಟ್ಟೂರಾದ ಹಂಸಭಾವಿಯಲ್ಲಿ ತಮ್ಮ ಸ್ವಂತ ಜಾಗದಲ್ಲಿ ಗುರುಕುಲ ಎಂಬ ಆಶ್ರಮವನ್ನು ಸ್ಥಾಪಿಸಿದರು. ನೃತ್ಯ ಕಲೆಯನ್ನು ಅರಸಿಕೊಂಡು ಬಂದ ವಿದ್ಯಾರ್ಥಿಗಳಿಂಗೆ ಆಶ್ರಯಕೊಟ್ಟು ಅವರಿಗೆ ಸಕಲ ಅನುಕೂಲತೆಗಳನ್ನು ಮಾಡಿ ಅವರಿಗೆ ವಿದ್ಯಾದಾನ ಮಾಡುವುದೇ ಅವರ ಉದ್ದೇಶವಾಯಿತು. ಗುರುಕುಲಕ್ಕೆ ಅಧಿಷ್ಠಾನ ದೇವತೆಯಾಗಿ ನೃತ್ಯ ಕಲೆಗೆ ಆದಿಗುರುವಾದ ಶ್ರೀ ನಟರಾಜ ಸ್ವಾಮಿಯ ದೇವಸ್ಥಾನದ ಯೋಜನೆಯನ್ನು ಮಾಡಿದರು. ಆದರೆ ಶ್ರೀನಿವಾಸರ ಯೋಜನೆಯ ಬಹುಭಾಗವು ಕನಸಾಗಿಯೇ ಉಳಿಯಿತೇ ವಿನಹ ನನಸಾಗಲಿಲ್ಲ. ಗುರುವನ್ನು ಆರಿಸಿಕೊಂಡು ಹೋಗುವ ಬದಲು ವಿದ್ಯಾರ್ಥಿಗಳ ಆಭಾವದಿಂದಾಗಿ ಗುರುವೇ ಶಿಷ್ಯರನ್ನು ಹುಡುಕಿಕೊಂಡು ಹೋಗುವಂತಾಯಿತು.

ಶ್ರೀನಿವಾಸರು ಹಂಸಭಾವಿ “ಗುರುಕುಲ”ವನ್ನು ಕೇಂದ್ರವಾಗಿ ಇಟ್ಟುಕೊಂಡು ದಾವಣಗೆರೆ (ನಾಟ್ಯಭಾರತಿ, ಶಾಸ್ತ್ರೀಯ ನೃತ್ಯ ಸಂಗೀತ ಕಲಾಕೇಂದ್ರ), ಹರಿಹರ, ಹಾವೇರಿ. ಲಕ್ಷ್ಮೇಶ್ವರ, ಶಿರ್ಸಿ ಮತ್ತು ಹಾನಗಲ್‌ಗಳಲ್ಲಿ ನೃತ್ಯ ಶಾಲೆಗಳನ್ನು ಪ್ರಾರಂಭಿಸಿದರು. ವಾರಕ್ಕೆ ಒಂದು ಸಾರಿ ಈ ಎಲ್ಲ ಸ್ಥಳಗಳಿಗೆ ಹೋಗಿ ಅಲ್ಲಿಯ ವಿದ್ಯಾರ್ಥಿಗಳಿಗೆ ಸ್ವತಃ ನೃತ್ಯ ಶಿಕ್ಷಣವನ್ನು ಕೊಡುತ್ತಿದ್ದರು.

ಕೀರ್ತಿ ಹಣ ಬಂದಾಗ ಅತಿ ಹಿಗ್ಗದೆ, ಎಲ್ಲ ಕಳೆದುಕೊಂಡು ಕಂಗಾಲಾದಾಗ ಕುಗ್ಗದೆ, ಹಿಡಿದ ಕಾರ್ಯವನ್ನು ಕಡೆಯುಸಿರು ಇರುವ ತನಕ ಬಿಡುವುದಿಲ್ಲ ಎಂಬ ದೃಡ ಸಂಕಲ್ಪದಿಂದ ಮುಂದೆ ಸಾಗಿದರು ಶ್ರೀನಿವಾಸರು.

ಅವರು ಪ್ರಾರಂಭಿಸಿರುವ ಗುರುಕುಲದ ಆವರಣದಲ್ಲಿ ಬಯಲು ರಂಗಮಂದಿರ ಮತ್ತು ನೃತ್ಯ ಕಲೆಯ ಉಗಮಕ್ಕೆ ಕಾರಣನಾದ ನಟರಾಜ ಮಂದರಿವನ್ನು ಸ್ಥಾಪಿಸಲು ನಿರ್ಣಯಿಸಿ ಆ ದಿಶೆಯಲ್ಲಿ ಕೆಲಸ ಸಾಗಿಸಿದರು. ಅವರ ಜೀವಿತ ಕಾಲದಲ್ಲಿ ಕೆಲಸ ನನಸಾಗಲಿಲ್ಲ. ಅವರ ನಂತರ ಅವರ ಮಗ ಡಾ. ಡಿ.ಎಸ್‌. ಕುಲಕರ್ಣಿ ಮತ್ತು ಶಿಷ್ಯ ವರ್ಗ ನಟರಾಜ ದೇವಾಲಯವನ್ನು ಸಂಪೂ ರ್ಣವಾಗಿ ನಿರ್ಮಿಸಿದರು.

ಜನಮನ ಸೂರೆಗೊಂಡ ಶ್ರೀನಿವಾಸರು ಪಡೆದ ಸನ್ಮಾನ ಗೌರವಗಳು ಅಪಾರ. ೧೯೬೭ರಲ್ಲಿ ಮೈಸೂರು ಸರಕಾರದ ಶ್ರೇಷ್ಠ ಕಲಾವಿದ ಎಂಬ ಗೌರವ. ೧೯೭೦-೭೧ರಲ್ಲಿ ಕರ್ನಾಟಕ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ, ೧೯೭೧ರಲ್ಲಿ ಬೆಂಗಳೂರಿನಲ್ಲಿ ಗುಬ್ಬಿ ವೀರಣ್ಣ ಅವರ ನೇತೃತ್ವದಲ್ಲಿ ಅದ್ದೂರಿ ಸನ್ಮಾನ ಅಲ್ಲದೇ ಇನ್ನೂ ಅನೇಕ ಕಡೆ ಪ್ರಶಸ್ತಿ ಸನ್ಮಾನಗಳು ಲಭಿಸಿವೆ. ರಾಜ್ಯದ ಸಂಗೀತ ನಾಟಕ ಅಕಾಡೆಮಿಯ ಸದಸ್ಯರಾಗಿ ಕೆಲವು ವರ್ಷ ಸೇವೆ ಸಲ್ಲಿಸಿದ್ದಾರೆ. ಅವರು ಆರ್ಥಿಕವಾಗಿ ಸಶಕ್ತರಾಗಿರಲಿಲ್ಲ ನಿಜ ಆದರೆ ಅವರಲ್ಲಿ ಅನುಭವ ಹಂಚಿಕೊಂಡಾಗ ಎಲ್ಲರ ಬಗ್ಗೆಯೂ ಸಮದೃಷ್ಟಿ ಇದ್ದುದು ವೇದ್ಯವಾಗುತ್ತಿತ್ತು. ಕಲಿಯುವ ಆಸಕ್ತಿ ತೋರಿದವರಿಗೆ ಇವರೇ ಊಟ ಹಾಕಿ ತರಬೇತಿ ನೀಡಿರುವ ನಿದರ್ಶನಗಳು ಸಾಕಷ್ಟಿವೆ. ಹಾಗೆಯೇ ನೃತ್ಯ ಕಲಿಕೆಗೆ ನಿರ್ದಿಷ್ಟ ಜಾಗದ ಕಟ್ಟು ಪಾಡನ್ನು ಅವರು ಹಾಕಿಕೊಂಡವರಲ್ಲ. ಒಮ್ಮೆ ದೂರದ ಜಾಗ ತಲುಪಲು ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಕರ್ನಾಟಕ ನೃತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದ ದಿ. ಚಂದ್ರಭಾಗಾದೇವಿ ಅವರಿಗೆ ಮೂರು ನೃತ್ಯಗಳನ್ನು ರೈಲು ಬೋಗಿಯಲ್ಲೇ ಅಭ್ಯಾಸ ಮಾಡಿಸಿದರೆಂದು ಸ್ವತಃ ಚಂದ್ರಭಾಗದೇವಿಯವರು ಸ್ಮರಿಸಿರುವುದುಂಟು. ನೃತ್ಯಗಳಿಗೆ ಪರೀಕ್ಷೆಗಳನ್ನು ರೂಪಿಸಿ, ಪರೀಕ್ಷಾ ಮಂಡಳಿಯಿಂದ ಪರೀಕ್ಷೆಗಳನ್ನು ವ್ಯವಸ್ಥಿತವಾಗಿ ನಡೆಸಿದ್ದಾರೆ. ವಿದ್ವತ್‌ ಬೋರ್ಡಿಗೆ ಪರೀಕ್ಷಕರಾಗಿ ಹೋಗಿ ಎಲ್ಲರೂ ಮೆಚ್ಚುವಂತೆ ಕಾರ್ಯನಿರ್ವಹಿಸಿದ್ದಾರೆ.

ಶ್ರೀನಿವಾಸರು ೧೯೭೪ರ ಡಿಸೆಂಬರ್ ತಿಂಗಳಿನಲ್ಲಿ ಅಪಾರ ಶಿಷ್ಯವರ್ಗವನ್ನು ತ್ಯಜಿಸಿ ಈ ಜಗತ್ತಿಗೆ ವಿದಾಯ ಹೇಳಿದರು. ಅವರು ಕಲಿಸಿದ್ದ ಗೆಜ್ಜೆಗಳ ನಿನಾದ ಈಗಲೂ ಕೇಳಿಸುತ್ತಲೇ ಇದೆ. ಹಂಸಭಾವಿಯಲ್ಲಿ ಶ್ರೀನಿವಾಸ ಕುಲಕರ್ಣಿಯವರ ಸಹೋದರ ಪುತ್ರ ಶ್ರೀ ಕೆ.ಜಿ. ಕುಲಕರ್ಣಿ ನೃತ್ಯ ತರಗತಿಗಳನ್ನು ಉನ್ನತ ಮಟ್ಟದಲ್ಲಿ ನಡೆಸುತ್ತಿದ್ದಾರೆ. ಇದರ ಶಾಖೆಗಳು ರಾಣೀಬೆನ್ನೂರು, ಹಾವೇರಿ, ಬ್ಯಾಡಗಿ, ಹಾಗೂ ಹುಬ್ಬಳ್ಳಿಗಳಲ್ಲಿವೆ.

ಶ್ರೀನಿವಾಸ ಕುಲಕರ್ಣಿಯವರು ದಾವಣಗೆರೆಯಲ್ಲಿ ಸ್ಥಾಪಿಸಿದ ನಾಟ್ಯ ಭಾರತಿ ಶಾಸ್ತ್ರೀಯ ನೃತ್ಯ ಸಂಗೀತ ಕಲಾ ಕೇಂದ್ರವನ್ನು ಅವರ ನಂತರ ಅವರ ಶಿಷ್ಯೆ ಶ್ರೀಮತಿ ಎಸ್‌. ಲಕ್ಷ್ಮೀದೇವಿ ಮುನ್ನಡೆಸಿದರು. ಇವರು ಕುಲಕರ್ಣಿಯವರ ನೃತ್ಯ ತಂಡಕ್ಕೆ ಹಿನ್ನೆಲೆ ಗಾಯನವನ್ನು  ನೀಡುತ್ತಿದ್ದರು. ಶ್ರೀನಿವಾಸರಿಗೆ ನಿರಪೇಕ್ಷೆಯಿಂದ ಸಹಾಯ ನೀಡಿದರು.

ದಾವಣಗೆರೆಯ ನಾಟ್ಯ ಭಾರತಿ ಶಾಸ್ತ್ರೀಯ ನೃತ್ಯ ಸಂಗೀತ ಕಲಾ ಕೇಂದ್ರದ ಸಂಚಾಲಕತ್ವವನ್ನು ಈಗ ಶ್ರೀನಿವಾಸ ಕುಲಕರ್ಣಿಯವರ ಸಹೋದರ‍ರ ಇನ್ನೊಬ್ಬ ಪುತ್ರ ಹಾಗೂ ಸೊಸೆಯರಾದ ಶ್ರೀ ರಘುನಾಥ ಕುಲಕರ್ಣಿ ಮತ್ತು ರಜನಿ ರಘುನಾಥ ಕುಲಕರ್ಣಿಯವರು ಉನ್ನತ ಮಟ್ಟದಲ್ಲಿ ನಡೆಸಿಕೊಂಡು ಬರುತ್ತಿದ್ದಾರೆ.

ದಾವಣಗೆರೆ ನಗರಸಭೆಯವರು ಒಂದು ಬಡಾವಣೆಯ ಬಯಲು ರಂಗಮಂದಿರಕ್ಕೆ ಕುಲಕರ್ಣಿ ಶ್ರೀನಿವಾಸರ ಹೆಸರನ್ನಿಟ್ಟು ಗೌರವ ತೋರಿಸಿದ್ದಾರೆ.

ಕುಲಕರ್ಣಿ ಶ್ರೀನಿವಾಸರು ಹಾಕಿಕೊಟ್ಟ ಮಾರ್ಗದಲ್ಲಿ ಇವರ ಸಹೋದರ ಪುತ್ರರಾದ ಶ್ರೀ.ಕೆ.ಜಿ. ಕುಲಕರ್ಣಿ ಹಾಗೂ ರಘುನಾಥ ಕುಲಕರ್ಣಿ ಎಲ್ಲಾ ನೃತ್ಯ ಕೇಂದ್ರಗಳ ಉಸ್ತುವಾರಿಯನ್ನು ಮಾಡುತ್ತಿದ್ದಾರೆ. ಶ್ರೀನಿವಾಸ ಕುಲಕರ್ಣಿಯವರ ನೃತ್ಯ ಶೈಲಿಯನ್ನು ಚಿರಸ್ಥಾಯಿಯಾಗಿ ಉಳಿಸಿ ಬೆಳೆಸಿಕೊಂಡು ಬರುತ್ತಿದ್ದಾರೆ.

ನೃತ್ಯ ಕಲೆಯು ನಗರಗಳಲ್ಲಿ ಸೀಮಿತವಾಗಬಾರದು  ಹಾಗೂ ಈ ಕಲೆಯು ಶ್ರೀಮಂತರ ಸೊತ್ತಾಗಬಾರದೆಂಬ ಉದ್ದೇಶದಿಂದ ಗ್ರಾಮಾಂತರ ಪ್ರದೇಶದಲ್ಲಿ ಸಂಚರಿಸಿ ಈ ನೃತ್ಯ ಕಲೆಯನ್ನು ಎಲ್ಲಾ ವರ್ಗದವರು ಕಲಿಯುವಂತೆ ಮಾಡಿ ಸಮಾಜದಲ್ಲಿ ಈ ಕಲೆಗೆ ಉನ್ನತ ಸ್ಥಾನವನ್ನು ಗಳಿಸಿಕೊಟ್ಟು ಧೀಮಂತ ವ್ಯಕ್ತಿಯಾಗಿ, ಕಲಾತಪಸ್ವಿಯಾಗಿ ಶ್ರೀ ಕುಲಕರ್ಣಿಶ್ರೀನಿವಾಸರು ಅಮರರಾಗಿದ್ದಾರೆ.