ಇಲ್ಲ.
ಕುಲುಮೆಯ ಒಳಗೆ ಕಿಡಿಯೇ ಇಲ್ಲ.
ತಿದಿಯೊತ್ತಿದರೆ ಮುಖಕ್ಕೆ ರಾಚುವುದು ಸತ್ತಬೂದಿ !

ತುಕ್ಕು ಹಿಡಿದಡಿಗಲ್ಲು, ಹಿಡಿಮುರಿದ ಸುತ್ತಿಗೆ,
ಸತ್ತ ಕಪ್ಪೆಯ ಹಾಗೆ ಬಿದ್ದಿರುವ ಇಕ್ಕಳ
ಗೆದ್ದಲಡರುತ್ತಿರುವ ಜೋಪಡಿಯ ಕಂಬ ;
ಮೂಲೆಯ ತುಂಬ ಯದ್ವಾತದ್ವ ಎಂತೆಂಥದೋ ಸರಕು,
ಒಂದು ಮತ್ತೊಂದಕ್ಕೆ ಸಂಬಂಧವಿದ್ದೂ ಇಲ್ಲ,
ಕುಲುಮೆಯ ಒಳಗೆ ಕಿಡಿಯೇ ಇಲ್ಲ.

ಗಾಡಿಯ ಹೂಡಿ ಎಷ್ಟೊ ದಿವಸಗಳಾಯ್ತು ;
ಅಚ್ಚು ಮುರಿದಿದೆ, ರಿಪೇರಿಗೆಂದು ಬಂದರೆ ಇಲ್ಲಿ
ಕುಲುಮೆಯ ಒಳಗೆ ಕಿಡಿಯೇ ಇಲ್ಲ !

ಹೊಟ್ಟೆಗಿಲ್ಲದ ಕುದುರೆ ಬಟ್ಟಬಯಲಲ್ಲಿ
ಕಸ-ಕಡ್ಡಿ-ಕಾಗದದ ಚೂರನೂ ಮೇದು
ತನ್ನ ಪಕ್ಕೆಲುಬುಗಳ ಪ್ರದರ್ಶನಕೆ ಇಟ್ಟಿದೆ !
ಚಾಟಿಯನೆತ್ತಿ ಒಂದು ಬಿಟ್ಟನೋ. ನಾಲ್ಕೇ ಹೆಜ್ಜೆ
ಇದರ ಚಟುವಟಿಕೆ.
ಇದನು ನಾ ಹೂಡಬಹುದೇ ಮತ್ತೊಂದು ಗಾಡಿಗೆ ?
ಅಥವಾ ನನ್ನ ಬಿರುದನು ಬಿಗಿದು ಬಿಡಬಹುದೆ
ದೇಶಾದ್ಯಂತ ಸಂಚಾರಕೆ !

ಈ ಕುಲುಮೆ, ಈ ಗಾಡಿ, ಈ ಕುದುರೆ-
ಒಂದು ಮತ್ತೊಂದಕ್ಕೆ ಸಂಬಂಧವೇ ಇಲ್ಲ,
ಕುಲುಮೆಯ ಒಳಗೆ ಕಿಡಿಯೇ ಇಲ್ಲ !

ಸುತ್ತ ಹಬ್ಬಿರುವ ಬೋಳು ಬಯಲೊಳಗೊಂದೆ ಬಂಡೆಬೆಟ್ಟ.
ಬಂಡೆ, ಅದರ ಮೇಲೊಂದು, ಅದರ ಮೇಲಿನ್ನೊಂದು.
ಬಂಡೆಗಳ ಸರ್ಕಸ್ಸು ;
ಸದಾ ಒಂದೇ ನಿಲುವು, ಮೇಲೆ ರಣರಣ ಬಿಸಿಲು.
ಬಂಡೆಗಳ ಬಿರುಕಿಂದ ಮೇಲೆದ್ದ
ಪಾಪಾಸುಕಳ್ಳಿಗಳ ಮುಳ್ಳುಹೆಡೆ,
ಅದರಡಿಗೆ ಸೀದ ಪಾರಿವಾಳದ ರೆಕ್ಕೆ ;
ಅಲ್ಲಿಷ್ಟು ಇಲ್ಲಿಷ್ಟು ಬಂಡೆಯ ಮೇಲೆ ಎಂದೋ ಹರಿದ
ನೀರಿನ ಕಲೆ ;
(ಅತ್ತ ಕೆನ್ನೆಯ ಮೇಲೆ ಬತ್ತಿರುವ ಕಣ್ಣೀರೆ?)
ಕೆಳಗೆ ಗುಡ್ಡದ ಬದಿಗೆ, ಬಡಿವ ಸುತ್ತಿಗೆ ಬಿಸಿಲ
ಹೊಡೆತಕ್ಕೆ ಸತ್ತಹಾವಿನ ದಾರಿ,
ಆಗಾಗ ಹದ್ದಿನ ರೆಕ್ಕೆ ಚೆಲ್ಲುವ ನೆರಳು ;
ಸ್ಯಾಂಪಲ್ಲಿಗೆಂದು ನಿಂತ ಒಂದೇ ಒಂದು ಜಾಲಿಯ ಮರದ
ಕೊಂಬೆಯ ಮೇಲೆ, ಹಗಲೆಲ್ಲ ಜೀರೆಂಬ
ಜೀರುಂಡೆಗಳ ಸೋಬಾನೆ !
ಬಿಳಿ ತಗಡಿನಾಕಾಶ, ಮೇಲೆ ಸೂರ್ಯನ ಬಿಲ್ಲೆ
ದಿನಾ ಬಂದು ಹಾಜರಿ ಹಾಕಿ ಹೋಗುವ ಸುಂಟರಗಾಳಿ ;
ಯಾರೋ ಎಂದೊ ಕೀ ಕೊಟ್ಟು ಇರಿಸಿದ ಹಾಗೆ
ಒಂದೇ ಸಮನೆ ಬಡಿದುಕೊಳ್ಳುತ್ತಿದೆ ಕರ್ರನೆಯ ಕಾಗೆ.
ಕಾಗೆ ಕೂಗಿದರೇನು, ಎಲ್ಲ ಸರಿಹೋಗುವುದೆ ?
ಇಲ್ಲಿ ಯಾವುದಕ್ಕೂ ಒಂದು ಮತ್ತೊಂದಕ್ಕು
ಸಂಬಂಧವಿದ್ದೂ ಇಲ್ಲ ;
ಕುಲುಮೆಯ ಒಳಗೆ ಕಿಡಿಯೇ ಇಲ್ಲ !