ಬೆಳಗ್ಗೆ ಐದು ಗಂಟೆಗಾಗಲೇ ಎದ್ದು, ಲ್ಯಾಪ್ ಟಾಪ್ ತೆರೆದು ಲೇಖನವೊಂದನ್ನು ಟೈಪ್ ಮಾಡುತ್ತಾ ಕುಳಿತಿದ್ದೆ. ಐದು ಮೂವತ್ತರ ಹೊತ್ತಿಗೆ ಜುರ್ರರ್ರಾ… ಎನ್ನುವ ಸದ್ದು ಕೇಳತೊಡಗಿತು. ಆಗ ಎದ್ದವನೇ ಸದ್ದು ಬಂದ ಕಡೆಗೆ ನಡೆದೆ. ಅಲ್ಲಿ ಕಮ್ಮಾರ ಚಂದ್ರಪ್ಪ ಆಗಲೇ ಕುಲುಮೆ ಪೂಜೆ ಮಾಡಿ, ಕುಲುಮೆಯಲ್ಲಿ ಒಂದಷ್ಟು ಒಣ ಕಸ, ಚೂರುಪಾರು ಹಾಳೆ ಮುಂತಾದವನ್ನು ತುರುಕಿ ಬೆಂಕಿ ಕಡ್ಡಿ ಗೀರಿ, ಸುತ್ತಲೂ ಇದ್ದಿಲು ತುಂಬಿ.. ಮೆಲ್ಲಗೆ ಪಂಕವನ್ನು ತಿರುಗಿಸತೊಡಗಿದ್ದ. ಆಗ ಜುರ್ರರ್ರಾ.. ಎನ್ನುವ ಸದ್ದು ಮಲ್ಲಗೆ ನೀರವ ಮೌನವನ್ನು ಸೀಳಿ ಎಳೆ- ಎಳೆಯಾಗಿ ಬರತೊಡಗಿತ್ತು. ಚಂದ್ರಪ್ಪನ ದಿನದ ಕಾಯಕ ಈ ಸದ್ದು ಸುಪ್ರಭಾತದೊಂದಿಗೆ ಆರಂಭವಾಗಿತ್ತು.

ನಾನು ಹೋದುದನ್ನು ನೋಡಿದ ಆತ ‘ಓ ಬಾರಪ್ಪ, ನೀ ಯಾವಾಗ ಬಂದಿದ್ದೆ, ತಂಗಿ ಅರಾಮಿದಾಳ’ ಎಂದು ಕುಶಲೋಪರಿಯನ್ನು ವಿಚಾರಿಸಿದರು. ನಾನು ಹೂಂ.. ಎಂದು ಕುಲುಮೆಯ ಪಕ್ಕ ಆತ ಬೆಂಕಿ ಹೊತ್ತಿಸುತ್ತಿದ್ದನ್ನು ನೋಡುತ್ತಾ ಕೂತೆ. ಸ್ವಲ್ಪ ಹೊತ್ತು ಆಗುತ್ತಿದ್ದಂತೆ ಭರಮಪ್ಪ ಒಂದೆರಡು ಕುಳ ತಂದ, ಪೂಜಾರ ಪಕ್ಕೀರಪ್ಪ ಕೊಡಲಿಯನ್ನು ಹಿಡಿದು ಅಣಿಯಲೆಂದು ತಂದ. ಹೀಗೆ ಒಬ್ಬೊಬ್ಬರು ನಿಧಾನಕ್ಕೆ ಸೇರುತ್ತಾ ಊರಿನ ಕುಶಲೋಪರಿಯ ಜತೆ ಕುಲುಮೆಗೆ ಜೀವಂತಿಕೆ ಬರತೊಡಗಿತು. ಕೆಲವರು ಕುಲುಮೆಯ ಬೆಂಕಿಯಲ್ಲಿ ಬೀಡಿ ಹಚ್ಚಿಕೊಂಡು ಹೊಗೆ ಬಿಡತೊಡಗಿದರು.

ಫಕ್ಕೀರಜ್ಜ ‘ನನ್ನ ನೋಡುತ್ತಾ.. ಅರುಣಪ್ಪಾ.. ನಿನ್ನೆ ನಮ್ಮ ದೇಶ ಗೆಲ್ತಂತೆ ಅಲಾ.. ಟೀವ್ಯಾಗ ರಾತ್ರಿ ಹನ್ನೊಂದು ಗಂಟ್ಯಾಗ ಹೇಳಕತ್ತಿದ್ರು’ ಎಂದು ಕೇಳಿದ. ನಾನು ಹೌದು ಎಂದು ತಲೆ ಅಲ್ಲಾಡಿಸಿದೆ (ಹಿಂದಿನ ದಿನ ರಾತ್ರಿ ವಿಶ್ವಕಪ್ ಕ್ರಿಕೆಟ್ ನಲ್ಲಿ ಭಾರತ ಆಷ್ಟ್ರೇಲಿಯಾದ ವಿರುದ್ಧ ಐದು ವಿಕೆಟ್ ಜಯ ಗಳಿಸಿತ್ತು). ಉಳಿದವರು ಏನೂ ಅರ್ಥವಾಗದಂತೆ, ಆ ವಿಷಯ ತಮಗೆ ಸಂಬಂಧಿಸಿದ್ದಲ್ಲ ಎನ್ನುವಂತೆ ನೋಡುತ್ತಿದ್ದರು. ತಕ್ಷಣ ಭರಮಪ್ಪ ‘ಅಲ್ಲಪ್ಪಾ ಏನೋ ಪ್ರಳಯ ಆಗತತಿ ಅಂತ ಟೀವ್ಯಾಗ ಹೇಳತಿದ್ರಲ್ಲ ನಿಜ ಏನು?’ ಎಂದು ಕೇಳಿದ. ಆಗ ಎಲ್ಲರ ಕಿವಿ ನನ್ನ ಬಳಿ ತಿರುಗಿದವು. ಎಲ್ಲರ ಆಸಕ್ತಿ ನಾನು ಏನು ಹೇಳುತ್ತಿದ್ದೇನೆ ಎನ್ನುವ ಕಡೆಗೇ ಇತ್ತು. ನಾನು ನಿಧಾನಕ್ಕೆ ಮಾತು ಆರಂಭಿಸಿ ‘ವಿಜ್ಞಾನಿಗಳ ಪ್ರಕಾರ ನಮ್ಮ ಕಡೆ ಏನೂ ಆಗೊಲ್ಲ. ಅಂತ ಹೇಳ್ಯಾರ, ಸಮುದ್ರದ ಹತ್ರ ಇದ್ದವರಿಗೆ ಸುನಾಮಿ ಲಕ್ಷಣಗಳು ಕಾಣಿಸಿಕೊಳ್ಬಹುದು’ ಅಂದೆ.

ಅದಕ್ಕೆ ಚಂದ್ರಪ್ಪ ತಕ್ಷಣ ಪ್ರತಿಕ್ರಿಯೆ ನೀಡಿ, ‘ನಮಿಗೆ ಕುಡಿಯಾಕ ನೀರಿಲ್ಲ, ಇನ್ನ ನಮ್ಮನ್ನ ಮುಳುಗ್ಸಿ ಸಾಯ್ಸೋ ನೀರೆಲ್ಲಿಂದ ಬರ್ತಾತಿ ಬಿಡು’ ಎಂದಾಗ ಎಲ್ಲರ ಮುಖದಲ್ಲಿ ಸಣ್ಣ ನಗು ಉಕ್ಕಿತು. ಆಗ ಚಂದ್ರಪ್ಪನ ಮಕ್ಕಳು ಮಲ್ಲೇಶ್, ಕಾಳಪ್ಪ ಬಂದರು. ಮಲ್ಲೇಶ್ ಬಂದವನೇ ಅಪ್ಪನ ಕೆಲಸಕ್ಕೆ ಸಹಾಯಕನಾಗಿ ಕೆಲಸ ಮಾಡತೊಡಗಿದ. ನಾನು ಮಲ್ಲೇಶನ ಹತ್ತಿರ ಮಾತಿಗೆ ಕೂತೆ. ಕಾರಣ ಚಂದ್ರಪ್ಪನ ಕಿವಿ ಕೇಳುತ್ತಿಲ್ಲವಾದ್ದರಿಂದ ಆತನ ಜತೆ ಮಾತನಾಡಿ ಆತನಿಂದ ಉತ್ತರ ಪಡೆಯುವುದು ಕಷ್ಟವಾಗಿತ್ತು.

ಚಂದ್ರಪ್ಪ ಕಮ್ಮಾರಿಕೆ ಮತ್ತು ಬಡಿಗಿತನ ಎರಡನ್ನು ಮೂವತ್ತು ವರ್ಷಗಳಿಂದ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಜೋಳದಕೂಡ್ಲಿಗಿಯಲ್ಲಿ ಮಾಡುತ್ತಾ ಬಂದಿದ್ದಾನೆ. ಈಗ ಆತನೊಂದಿಗೆ ಆತನ ಇಬ್ಬರು ಮಕ್ಕಳೂ ಅದೇ ವೃತ್ತಿಯನ್ನು ಮುಂದುವರಿಸುತ್ತಿದ್ದಾರೆ. ಕಮ್ಮಾರಿಕೆ ಒಂದೇ ಜಾತಿಗೆ ಸೀಮಿತವಾದ ಉದ್ಯೋಗವಲ್ಲ. ಅದು ಹಲವಾರು ಜಾತಿ- ಧರ್ಮದವರನ್ನು ಒಳಗೊಂಡಿದೆ. ಹಾಗಾಗಿ ಒಂದೊಂದು ಊರಲ್ಲಿ ಬೇರೆ- ಬೇರೆಯ ಜಾತಿಯವರು ಕಮ್ಮಾರಿಕೆಯನ್ನು ಮಾಡುತ್ತಾ ಬರುತ್ತಿದ್ದಾರೆ. ಕಮ್ಮಾರಿಕೆಯನ್ನು ಆಧರಿಸಿದ ರೈತಾಪಿ ಕೆಲಸಗಳಲ್ಲಿ ಕಮ್ಮಾರಿಕೆಯನ್ನು ನಿಲ್ಲಿಸುವಂತಹ ತೀವ್ರ ಬದಲಾವಣೆಗಳೇನು ಸಂಭವಿಸಿಲ್ಲ. ಹಾಗಾಗಿ ಜಾನಪದ ವಿದ್ವಾಂಸರ ವೃತ್ತಿ ಕಸಬುಗಳು ಅವನತಿಯ ಹಾದಿ ತಲುಪಿವೆ ಎನ್ನುವ ಮಾತು ಸ್ವಲ್ಪ ಮಟ್ಟಿಗೆ ಹುಸಿ ಎನ್ನಿಸಿತು.

ಬಹುತೇಕ ವೃತ್ತಿ ಕಸಬಿನಿಂದ ಸಂಕಷ್ಟ ಅನುಭವಿಸಿದವರು ಸಹಜವಾಗಿ ತಮ್ಮ ಮಕ್ಕಳು ಅದೇ ವೃತ್ತಿಯಲ್ಲಿ ಮುಂದುವರಿಯಲು ಇಷ್ಟಪಡುವುದಿಲ್ಲ. ಆದರೆ, ಕಮ್ಮಾರ ಚಂದ್ರಪ್ಪ ಹೆಚ್ಚು ಓದದ ತನ್ನ ಮಕ್ಕಳನ್ನೂ ಕಮ್ಮಾರಿಕೆಯಲ್ಲಿಯೇ ಮುಂದುವರಿಯುವಂತೆ ತರಬೇತಿ ನೀಡುತ್ತಿದ್ದಾರೆ. ಚಂದ್ರಪ್ಪನದೇ ಮಾತಿನಲ್ಲಿ ಹೇಳುವುದಾದರೆ, ‘ಹಿಂದಿನ ಕಾಲ್ದಾಗ ಹಗ್ಲು- ರಾತ್ರಿ ಕತ್ತಿ ಮಾಡಿದಂಗ ಮಾಡಿದ್ರು.. ಹೊಟ್ಟಿಗೆ ಬಟ್ಟಿಗೆ ಸಾಕಾಗ್ತಿರ್ಲಿಲ್ಲ.. ಈಗ್ಲೇ ವಾಸಿ. ದಿನ ಪೂರ್ತಿ ದುಡಿದ್ರೆ ಕಡಿಮೆ ಅಂದ್ರೂ ಆರುನೂರಾದ್ರೂ ಆಗ್ತಾತಿ.. ಈಗಿನ ದುಬಾರಿ ಕಾಲ್ದಾಗೂ ನಾವು ಅರಾಮಾಗಿದಿವಿ’ ಎಂದರು. ಇದು ಹೇಗೆಂದು ಕೇಳುತ್ತಾ ಹೋದಂತೆ ಕಮ್ಮಾರಿಕೆಯ ಹೊಸ ಚಲನೆಗಳು ಕಾಣತೊಡಗಿದವು.

ಇಂದು ಗ್ರಾಮೀಣ ಭಾಗದಲ್ಲಿ ಕೃಷಿ ಕೆಲಸಕ್ಕೆ ಟ್ರ್ಯಾಕ್ಟರ್ ಮೇಲಿನ ಅವಲಂಬನೆ ಹೆಚ್ಚಾಗುತ್ತಿದೆ. ಟ್ರ್ಯಾಕ್ಟರ್ ಮಡಕೆ ಹೊಡೆಯಲು, ಹರಗಲು ಬಳಸುವ ಕುಳಗಳು ಮೊಂಡಾದಾಗ ಅವುಗಳನ್ನು ಹಣಿದು ಚೂಪು ಮಾಡಲು ಕಮ್ಮಾರರ ಹತ್ತಿರವೇ ಬರಬೇಕು. ಒಂದು ಟ್ರ್ಯಾಕ್ಟರ್ ಕುಳವನ್ನು ಹಣಿಯಲು ಕಮ್ಮಾರರು ಇನ್ನೂರ ಐವತ್ತು ರೂಪಾಯಿಯ ದರ ಮಾಡುತ್ತಾರೆ. ಅಂದರೆ ಹತ್ತಾರು ಎತ್ತಿನ ಮಡಕೆ ಕುಳ ಹಣಿಯುವುದರಿಂದ ಬರುವ ಹಣ ಒಂದು ಟ್ರ್ಯಾಕ್ಟರ್ ಮಡಕೆ ಅಣಿಯುವುದರಿಂದ ಬರುತ್ತದೆ. ಅಂದರೆ, ಅತ್ಯಾಧುನಿಕ ಯಂತ್ರವಾದ ಟ್ರ್ಯಾಕ್ಟರ್ ಕೂಡ ಕಮ್ಮಾರನ ಕುಲುಮೆಯನ್ನು ಆಶ್ರಯಿಸಿರುವುದು ಇದರಿಂದ ತಿಳಿಯುತ್ತದೆ. ಹೀಗೆ ಆಧುನಿಕ ಎನ್ನುವ ಪರಿಕರಗಳು ಕುಲುಮೆಗೆ ಬರತೊಡಗಿರುವುದರಿಂದ ಅದರ ಆದಾಯವೂ ಹೆಚ್ಚಿದೆ.

ಹೀಗೆ ಸಾಂಪ್ರದಾಯಿಕ ವೃತ್ತಿ ಕಸಬುಗಳ ಹೊಸ ಚಲನೆಯನ್ನು ನೋಡುತ್ತಾ ಹೋದರೆ, ಅದರ ಆದಾಯದ ಹೊಸ ಮೂಲಗಳು ಹುಟ್ಟಿಕೊಂಡಿರುವುದು ಕೂಡ ಗೋಚರಿಸುತ್ತದೆ.

ಚಂದ್ರಪ್ಪ ಹೇಳುವಂತೆ ನಗರದ ರೈತರೂ ಹಳ್ಳಿಗಳಿಗೆ ತಮ್ಮ ಸಾಮಾನುಗಳನ್ನು ಹಣಿಸಲು ಬರುತ್ತಾರಂತೆ. ಕಾರಣ ನಗರದ ಕುಲುಮೆಯವರು ಹೆಚ್ಚು ಹಣ ಪಡೆದು ಕಳಪೆ ಕೆಲಸ ಮಾಡುತ್ತಾರೆನ್ನುವುದು ಅವರ ನಿಲುವಂತೆ. ಹಳ್ಳಿಗಳ ಕುಲುಮೆಯವರು ಚೆನ್ನಾಗಿ ಹಣಿಯುತ್ತಾರೆ, ಚೆನ್ನಾಗಿ ನೀರು ಕುಡಿಸುತ್ತಾರೆ ಎನ್ನುವ ನಂಬಿಕೆ ಈಗಲೂ ಬಲವಾಗಿದೆ. ಇನ್ನು ನಗರದ ಕುಲುಮೆಯವರಿಗೆ ಹೋಲಿಸಿದರೆ ಹಳ್ಳಿಗರ ಬೆಲೆ ಕೂಡ ಕಡಿಮೆಯೆ. ಹಾಗಾಗಿ ನಗರಿಗರು ಸಹಜವಾಗಿ ಆಕರ್ಶಿತರಾಗುತ್ತಾರೆ. ನಗರದ ಕುಲಮೆಗೆ ಹೋಗುವ ಹಳ್ಳಿಗರ ಸಂಖ್ಯೆ ಕೂಡ ಕಡಿಮೆ.

ಚಂದ್ರಪ್ಪ  ಬದುಕಿನ ಆಸರೆಯಾದ ಕುಲುಮೆಯನ್ನು ದೇವರೆಂದೇ ನಂಬಿದ್ದಾರೆ. ತಮ್ಮ ಭಾವನೆಗಳನ್ನು ಕೆಲವು ನಂಬಿಕೆ ಆಚರಣೆಯ ಮೂಲಕ ವ್ಯಕ್ತಪಡಿಸುತ್ತಾರೆ. ನಿತ್ಯವೂ ಕುಲುಮೆಯಲ್ಲಿ ಬೆಂಕಿ ಹೊತ್ತಿಸುವ ಮೊದಲು ಸೂರ್ಯನಿಗೆ(ಪೂರ್ವದಿಕ್ಕಿಗೆ) ಪೂಜೆ ಮಾಡುತ್ತಾರೆ. ಅಮವಾಸ್ಯೆ, ಹುಣ್ಣಿಮೆಯ ದಿನ ವಿಶೇಷ ಪೂಜೆ ಮಾಡುತ್ತಾರೆ. ದಸರಾ ಹಬ್ಬದಲ್ಲಿ ಕಮ್ಮಾರಿಕೆಯ ಎಲ್ಲಾ ಪರಿಕರಗಳನ್ನು ಇಟ್ಟು ಆಯುಧ ಪೂಜೆ ಮಾಡುತ್ತಾರೆ. ಆಗ ಒಂದು ವಾರ ಕಾಲ ಕುಲುಮೆಯಲ್ಲಿ ಬೆಂಕಿ ಹೊತ್ತಿಸುವುದಿಲ್ಲ. ಇದೊಂದು ರೀತಿಯ ವಾರ್ಷಿಕ ರಜೆ. ಕುಲುಮೆಯಲ್ಲಿ ಚಾನು ಬಿದ್ದರೆ, ಕೈ ಕಾಲು ಸುಟ್ಟರೆ ಏನಾದರೂ ಅಪಶಕುನವಾಗಿದೆ ಎನ್ನುವ ನಂಬಿಕೆ ಇವರಿಗಿದೆ.

ಕರ್ನಾಟಕದಾದ್ಯಂತ ನಗರ ಹಳ್ಳಿಗಳಲ್ಲಿ ಕುಲುಮೆ ಕಸುಬನ್ನು ನಂಬಿದವರ ಸಂಖ್ಯೆ ದೊಡ್ಡದಿದೆ. ಅವುಗಳೆಲ್ಲವನ್ನೂ ಸರ್ವೆ ಮಾಡಿ, ಅವರ ಸದ್ಯದ ಚಲನೆಯನ್ನು ಗುರುತಿಸಿ, ಸರ್ಕಾರ ಅವರು ಬದಲಾವಣೆಗೆ ತೆರೆದುಕೊಳ್ಳುವಂತೆ ಅನುವು ಮಾಡುವ ಅಗತ್ಯವಿದೆ. ಕಾರಣ ಬಹುಪಾಲು ಕುಲುಮೆಯವರು ಇನ್ನೂ  ಹಳೆಯ ವಿಧಾನಗಳನ್ನೇ ಅನುಸರಿಸುತ್ತಿದ್ದಾರೆ. ಹಾಗಾಗಿ ಸದ್ಯದ ಬದುಕು ಹೊಟ್ಟೆಗೂ ಬಟ್ಟೆಗೂ ಅನುಕೂಲವಾಗಿದೆಯಾದರೂ ಮಕ್ಕಳ ಶಿಕ್ಷಣ ಕೊಡಿಸಲು, ಕನಿಷ್ಟ ಸೌಲಭ್ಯಗಳನ್ನು ಹೊಂದಲು ಅವರನ್ನು ಆರ್ಥಿಕವಾಗಿ ಇನ್ನಷ್ಟು ಸಬಲರನ್ನಾಗಿಸುವ ಹೊಣೆ ಸರ್ಕಾರದ ಮೇಲಿದೆ.

ಒಂದೆಡೆ ಜನಸಾಮಾನ್ಯರ ಹೆಸರಲ್ಲಿ ಕೋಟಿ, ಕೋಟಿ ರೂಪಾಯಿ ಯೋಜನೆಗಳನ್ನು ಆರಂಭಿಸಿದರೂ ಆ ಹಣ ತಲುಪಬೇಕಾದವರಿಗೇ ತಲುಪದೆ ಪೋಲಾಗುವುದು ಸಾಮಾನ್ಯವಾಗುತ್ತಿದ್ದರೆ, ಇನ್ನೊಂದೆಡೆ ಚಂದ್ರಪ್ಪನಂತಹ ಕಮ್ಮಾರರು ಕುಲುಮೆ, ಪಂಕ, ಚಕ್ರ, ಅಡಿಗಲ್ಲು, ಸುತ್ತಿಗಿ, ಇಕ್ಕಳ, ನೀರಬಾನಿ, ಮಸಗಲ್ಲು, ಚಾನು ಮುಂತಾದ ಪರಿಕರಗಳೊಂದಿಗೆ ನಿತ್ಯವೂ ಒಡನಾಡುತ್ತಾ ಬದುಕಿಗೆ ಹೊಸ ಚೈತನ್ಯವನ್ನು ಪಡೆಯುತ್ತಿರುತ್ತಾರೆ.