೧೮೫೭ನೇ ಜನೆವರಿಯಲ್ಲಿ ಒಂದು ದಿನ. ಬ್ರಿಟಿಷರು ಭಾರತವನ್ನು ಆಳುತ್ತಿದ್ದ ಕಾಲ. ಒಬ್ಬ ಹಿಂದೂ ಸಿಪಾಯಿ. ಡಮ್ ಡಮ್ ಕಂಟೋನ್ಮೆಂಟಿನಿಂದ ತನ್ನ ಚೌಕಿ (ಅಡಿಗೆ ಮನೆ)ಗೆ ಹಿಂತಿರುಗುತ್ತಿದ್ದ. ದಾರಿಯಲ್ಲಿ ಒಬ್ಬ ಖಲಾಸಿ ಹೇಳಿದ: “ಇನ್ನು ಕೆಲವೇ ದಿನಗಳಲ್ಲಿ ನಿಮಗೆ ತೋಟಾ ಕೊಡುತ್ತಾರೆ ನೋಡ್ತಿರಿ. ಅದಕ್ಕೆ ಹಂದಿ ಮತ್ತು ಹಸುವಿನ ಕೊಬ್ಬು ಹಚ್ಚಿರುತ್ತಾರೆ.” ಆ ಖಲಾಸಿ ಇಂಥ ತೋಟಗಳನ್ನು ತಯಾರಿಸುವ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಅದು ಆ ಸಿಪಾಯಿಗೆ ಗೊತ್ತಿದ್ದಿತು. ಅವನು ಬೇರೆ ಬೇರೆ ಜನರನ್ನು ವಿಚಾರಿಸಿದ. ಖಲಾಸಿ ಹೇಳಿದಂತೆಯೇ ಅನೇಕರು ಹೇಳಿದರು.

ಸುದ್ಧಿ ಹಬ್ಬಿತು. ಹಿಂದೂ ಮತ್ತು ಮುಸಲ್ಮಾನ ಸಿಪಾಯಿಗಳಿಬ್ಬರಿಗೂ ಸ್ವಧರ್ಮ ರಕ್ಷಣೆ ಸಮಸ್ಯೆಯಾಯಿತು.

ಹೀಗೆ ಸಿಪಾಯಿಗಳು ಯೋಚಿಸುತ್ತಿರುವಾಗ ಹೊರಗಡೆ ಸ್ವಧರ್ಮ ಸ್ವರಾಜ್ಯದ ಕೂಗು ಕೇಳಿಬರುತ್ತಿತ್ತು. ಸ್ವಧರ್ಮದ ರಕ್ಷಣೆಗಾಗಿ ಸ್ವರಾಜ್ಯವನ್ನು ಕಾಪಾಡಿಕೊಳ್ಳಬೇಕು. ನಾವು ನಮ್ಮ ರಾಜ್ಯಕೋಶಗಳನ್ನು ಪರಂಗಿಯವರಿಂದ ಪಡೆಯಲು ಪ್ರಾಣವನ್ನು ಪಣ ಒಡ್ಡಿ ಹೋರಾಡಬೇಕು ಎಂದು ಪ್ರಚಾರ ಮಾಡಲಾಗುತ್ತಿತ್ತು. ಬ್ರಿಟಿಷರ ವಿರುದ್ಧ ನಿಲ್ಲಲು ಧಾರ್ಮಿಕ ಭಾವನೆಯನ್ನು ಜನರಲ್ಲಿ ಜಾಗ್ರತಗೊಳಿಸಲಾಗುತ್ತಿತ್ತು.

ಸಾಮ್ರಾಜ್ಯದಾಹಕ್ಕೆ ವಿರೋಧ

ಇಷ್ಟಕ್ಕೆಲ್ಲ ಕಾರಣವೆಂದರೆ ಬ್ರಿಟಿಷರ ಸಾಮ್ರಾಜ್ಯದಾಹ. ಇದರಿಂದಾಗಿಯೇ ಭಾರತೀಯರ ದೌರ್ಬಲ್ಯವನ್ನರಿತ ಬ್ರಿಟಿಷರು ತಾವು ವ್ಯಾಪಾರಕ್ಕೆ ಬಂದವರಾದರೂ ಇಲ್ಲಿನ ರಾಜಕೀಯದಲ್ಲಿ ಕೈಹಾಕಿ ಸ್ವಾರ್ಥಸಾಧನೆಯಲ್ಲಿ ನ್ಯಾಯ-ಅನ್ಯಾಯ ಯೋಚನೆ ಇಲ್ಲದೆ ಮುನ್ನುಗ್ಗಿದ್ದು.

ದಿಲ್ಲಿಯಲ್ಲಿ ಬಾಬರನ ಸಂತತಿಯವರನ್ನು ಹತ್ತಿಕ್ಕಿ ಹೆಸರಿಗೆ ಮಾತ್ರ ಬಾದಷಹ ಎಂದು ಹೇಳುತ್ತಾ, ಆಂಗ್ಲರು ತಮ್ಮಿಷ್ಟ ಬಂದಂತೆ ಅಧಿಕಾರ ಚಲಾಯಿಸುತ್ತಿದ್ದರು. ಸಾಲದುದಕ್ಕೆ ಬಾದಶಹನ ಈ ಹೆಸರನ್ನೂ ಅಳಿಸಿಹಾಕಲು ಯತ್ನಿಸಿದರು. ಯಜಮಾನ ತೀರಿಕೊಂಡಾಗ ಯಾರಿಗೆ ಆಸ್ತಿ ಹೋಗಬೇಕೆಂಬುದಕ್ಕೆ ತಮ್ಮ ಇಷ್ಟ ಬಂದಂತೆ ಕಾಯಿದೆಯನ್ನು ಮಾಡಿ ಅನೇಕ ರಾಜ್ಯಗಳನ್ನು ಜಮೀನ್ದಾರಿಗಳನ್ನೂ ವಶಪಡಿಸಿಕೊಂಡಿದ್ದರು. ಇದರ ಕಹಿ ಅನುಭವ ಭಾರತೀಯರಿಗಾಗಲೇ ಆಗಿತ್ತು. ಅದರಿಂದಾಗಿ ದಿಲ್ಲಿಯಲ್ಲಿ ಬೇಗಮ್ ಜೀನತ್ ಮಹಲ್ ಎಂಬವಳು ಹೀಗೆ ಅವಮಾನಿತರಾಗಿ ಬಾಳುವುದಕ್ಕಿಂತ ಸಾಯುವುದು ಲೇಸಲ್ಲವೆ? ಸಾಯುವುದಕ್ಕೆ ಮುಂಚೆ, ಕಳೆದುಕೊಂಡ ಅಧಿಕಾರವನ್ನು ಮತ್ತೆ ಪಡೆಯಲು ಯತ್ನಿಸಬೇಕು. ಗೆದ್ದರೆ ರಾಜ್ಯವಾಳಬಹುದು. ಸಾಯುವವರೆಗೂ ಹೋರಾಡಬೇಕೇ ಹೊರತು ಗುಲಾಮರಾಗಿ ಬಾಳಬಾರದು ಎಂದು ಬಾದಶಹನನ್ನು ಹುರಿದುಂಬಿಸಿದ್ದಳು.

ಇನ್ನೊಂದೆಡೆ ಭಾರತವನ್ನು ಪರಂಗಿಗಳ ತೆಕ್ಕೆಯಿಂದ ಬಿಡಿಸಬೇಕೆಂಬ ಒಳಸಂಚು ನಡೆಯುತ್ತಿತ್ತು. ಆರ್ಯಾವರ್ತದಲ್ಲಿ ಒಂದು ಕೇಂದ್ರವಿತ್ತು. ಇದನ್ನು ಅಜಿಮುಲ್ಲಾಖಾನ್ ನೋಡಿಕೊಳ್ಳುತ್ತಿದ್ದ. ದಕ್ಷಿಣದಲ್ಲಿ ಮಹಾರಾಷ್ಟ್ರದಲ್ಲಿ ಒಂದು ಕೇಂದ್ರವಿತ್ತು. ಮಹಾರಾಷ್ಟ್ರದ ಮುತ್ಸದ್ದಿ ನಾನಾಸಾಹೇಬ ಈ ಕೇಂದ್ರದ ಸಂಚಾಲಕಾನಾಗಿದ್ದ. ಅವನು ವಿಶ್ವಸನೀಯರಾದ ತನ್ನ ಸ್ನೇಹಿತರನ್ನು ರಾಜಮಹಾರಾಜರ ಆಸ್ಥಾನಕ್ಕೆ ಕಳಿಸಿಕೊಟ್ಟ ಅವರ ಬೆಂಬಲವನ್ನು ಗಳಿಸಲು ಯತ್ನಿಸಿದ್ದ.

ಆದರೆ ಯಾರಿಂದಲೂ ಅನುಕೂಲವಾದ ಪ್ರತಿಕ್ರಿಯೆ ಕಂಡು ಬಂದಿರಲಿಲ್ಲ. ಬ್ರೀಟಿಷರು ಇದನ್ನು ನಂಬಿರಲಿಲ್ಲ. ಆದರೆ ಬ್ರಿಟಿಷರು ಔಧ್ ಪ್ರದೇಶವನ್ನು ಅನ್ಯಾಯವಾಗಿ ವಶಪಡಿಸಿಕೊಂಡರು. ವಶಪಡಿಸಿಕೊಂಡ ಮೇಲೆ ಅಲ್ಲಿನ ನವಾಬನದು ದುಃಸ್ಥಿತಿಯಾಯಿತು. ಅಲ್ಲಿನ ಬೇಗಂಳನ್ನು ಬ್ರಿಟಿಷರು ಅವಮಾನವಾಗುವಂತೆ ನಡೆಸಿಕೊಂಡರು. ಇದರಿಂದ ಎಲ್ಲರೂ ನಾನಾ ಸಾಹೇಬನ ಮುತ್ಸದ್ದಿತನವನ್ನು ಒಪ್ಪಿಕೊಂಡರು.

ಯಾರಿಗೋಸ್ಕರ? ಯೋಚಿಸಿ

ಆರ್ಯಾವರ್ತದಲ್ಲೂ ಹೀಗೆ ಗುಪ್ತವಾಹಿನಿಯೊಂದು ಕೆಲಸ ಮಾಡುತ್ತಿತ್ತು. ಜನರನ್ನೂ ಸಿಪಾಯಿಗಳನ್ನೂ ಹೊಡೆದೆಬ್ಬಿಸುವುದರಲ್ಲಿ ನಿರತವಾಗಿತ್ತು. ನೋಡಿ! ನೀವು ಯಾರಿಗೋಸ್ಕರ ಕಾದು ಸಾಯುತ್ತಿರುವಿರಿ? ಅದೇ ಇಂಗ್ಲೀಷರು ನಿಮ್ಮನ್ನು ರಣಚಂಡಿಗೆ ಕುರಿಯಂತೆ ಬಲಿ ಕೊಟ್ಟು ತಮ್ಮ ಶಕ್ತಿಯನ್ನು ಬೆಳಸಿಕೊಳ್ಳುತ್ತಿದ್ದಾರೆ. ನಿಮಗೆ ಹೆಚ್ಚೆಂದರೆ ಸೈನ್ಯದಲ್ಲಿ ಹವಾಲ್ದಾರಿಕೆ ಸಿಕ್ಕೀತು. ಅದೇ ಪರಂಗಿಯವನಿಗೆ? ಹೋರಾಟ ಬಂದಾಗ ನೀವು ಮುಂದು; ಸೌಲಭ್ಯವನ್ನು ಪಡೆಯವಾಗ ಅವರು ಮುಂದು!”

“ನೀವು ಪರಕೀಯರ ಗುಲಾಮರಾಗಿ ದೇಶದ್ರೋಹ ಹಾಗೂ ಧರ್ಮದ್ರೋಹ ಮಾಡುವುದರಿಂದ ನರಕ ತಪ್ಪದು.”

ಇಂತಹ ಪ್ರಚಾರ ಸಾಹಿತ್ಯ ಅದೆಲ್ಲಿ ಸಿದ್ಧವಾಗುತ್ತಿತ್ತೊ? ಅದನ್ನು ಯಾರು ಹಂಚುತ್ತಿದ್ದರೊ? ಬ್ರಿಟಿಷರಿಗೆ ಅದರ ಸುಳಿವೂ ಸಿಗುತ್ತಿರಲಿಲ್ಲ. ಆದರೆ ಸೈನ್ಯದ ಒಳಗೂ, ಶಿಬಿರದ ಹೊರಗೂ ಜನ ಇದನ್ನು ಬಹು ಕುತೂಹಲದಿಂದ ಓದುತ್ತಿದ್ದರು.

‘ಸ್ವಭಾವತಃ ಸೋಮಾರಿ’

ನಾನಾ ಸಾಹೇಬ ಮತ್ತು ಅಜಿಮುಲ್ಲಾಖಾನ ಇವರು ತೆರೆಯ ಮರೆಯಲ್ಲಿದ್ದು ಕೆಲಸ ಮಾಡಿದ ಪಟುಗಳು. ಇದು ನಾನಾ ಸಾಹೇಬನ ಬಗ್ಗೆ ಬ್ರಿಟಿಷರು ಇಟ್ಟುಕೊಂಡಿದ್ದ ಅಭಿಪ್ರಾಯದಿಂದ ಸ್ಪಷ್ಟವಾಗುತ್ತದೆ. ಸ್ವಭಾವತಃ ಸೋಮಾರಿ ಉದಾರಿ ದುಂದುಗಾರ ನಂಬಿಕಸ್ಥ. ಹೀಗೆಂದು ಭಾವಿಸಿದ್ದ ಕಾರಣ ಅವನನ್ನು ಕಾನ್ಪುರಕ್ಕೆ ಬರ ಮಾಡಿಕೊಂಡು ಕಾನ್ಪುರದ ಸರ್ಕಾರೀ ಖಜಾನೆಯ ರಕ್ಷಣೆಗೆ ೧೮೫೬ನೇ ಮೇ ತಿಂಗಳಲ್ಲಿ ನೇಮಿಸಿದ್ದರು.

ಇವನಂತೆ ಅಜಿಮುಲ್ಲಾಖಾನನೂ ಆಗಿದ್ದ. ಅವನು ಸಾಮಾನ್ಯ ಮನೆಯಾಳು. ಒಬ್ಬ ಇಂಗ್ಲಿಷ ಅಧಿಕಾರಿಯ ಮನೆಯಲ್ಲಿ ಕೆಲಸಕ್ಕಿದ್ದವನು. ಅಲ್ಲಿರುವ ಇಂಗ್ಲಿಷ್ ಮತ್ತು ಫ್ರೆಂಚ್ ಭಾಷೆಯನ್ನು ಕಲಿತ. ಜೊತೆಯಲ್ಲಿ ಇಂಗ್ಲೀಷರ ಸಾಮರ್ಥ್ಯವನ್ನು, ದೌರ್ಬಲ್ಯವನ್ನು ಅರಿತ ಬಹುಜಾಣನಾದ್ದರಿಂದ ಅವನಲ್ಲಿ ನಾನಾಸಾಹೇಬನು ಪೂರ್ಣ ವಿಶ್ವಾಸವನ್ನಿಟ್ಟಿದ್ದ. ತುರ್ಕಿಸ್ಥಾನ ಮತ್ತು ಅರೇಬಿಯಾಗಳಿಗೆ ಭೇಟಿಯನ್ನಿತ್ತು ಅವರ ಸಹಾಯವನ್ನು ದೊರಕಿಸಿಕೊಳ್ಳಲು ಒಳಸಂಚು ನಡೆಸಿದ. ಮೊದಲು ಬ್ರಿಟಿಷರನ್ನು ಭಾರತದಿಂದ ಓಡಿಸಿ ಅನಂತರ ಇಲ್ಲಿ ಸಂಘಟಿತ ಗಣರಾಜ್ಯ ವ್ಯವಸ್ಥೆಯನ್ನು ಕೇಂದ್ರದಲ್ಲಿ ತರೋಣ ಎಂದು ಘೋಷಿಸಿದ ಮುತ್ಸದ್ದಿ ಆತ.

ಏರುತ್ತಿದ್ದ ಬಿರುಗಾಳಿ

ಹೀಗೆ ೧೮೫೭ರವರೆಗೆ ಭಾರತದ ಗಗನದಲ್ಲಿ ಸ್ವಧರ್ಮ ಸ್ವರಾಜ್ಯದ ಮಿಂಚು ಮಿಂಚಿತು. ಆಗೊಮ್ಮೆ ಈಗೊಮ್ಮೆ ಬಿರುಗಾಳಿಯು ರಭಸದಿಂದ ಬೀಸುತ್ತಿತ್ತು. ಇಂತಹ ಸನ್ನಿವೇಶದಲ್ಲಿ ಸ್ವಾತಂತ್ರ್ಯವೇ ಪರಮ ಗುರಿ ಯಾಗಿಟ್ಟುಕೊಂಡು ವೀರರು, ಸ್ವರಾಜ್ಯ-ಸ್ವಧರ್ಮಕ್ಕಾಗಿ ಜನತೆಯ ನೇತಾರರಾಗಿ ಬ್ರಿಟಿಷರೊಡನೆ ಸೆಣೆಸಿದರು. ಅಂಥವರಲ್ಲಿ ಕುವರಸಿಂಹನು ಪ್ರಮುಖನಾದನವರು. ಜಗದೀಶಪುರದ ಸಾಮಾನ್ಯ ಜಮೀನ್ದಾರನಾದ ಈ ಕುವರಸಿಂಹನ ಸಾಹಸಕಾರ್ಯವನ್ನು ಜನ ಇಂದಿಗೂ ಮರೆತಿಲ್ಲ. ಅದನ್ನು ಮರೆಯಲೂ ಸಾಧ್ಯವಿಲ್ಲ. ಭೋಜಪುರೀ ಎಂಬ ಹಿಂದೀ ಜನಪದ ನುಡಿಯಲ್ಲಿ ಅವನ ಬಗ್ಗೆ ಪ್ರಚಾರದಲ್ಲಿರುವ ಜಾನಪದ ಗೀತೆಗಳು ಇಂದಿಗೂ ಬಳಲಿ ಬೆಂಡಾದ ಜನತೆಗೆ ಮನರಂಜನೆಯನ್ನೊದಗಿಸುತ್ತವೆ. ಮತ್ತು ಅನ್ಯಾಯ ಅತ್ಯಾಚಾರಗಳ ವಿರುದ್ಧ ಹೋರಾಡಲು ಹುರಿದುಂಬಿಸುತ್ತಿವೆ.

ಸಿಂಹ ಎಂದೂ ಸಿಂಹವೇ!

ಕುವರಸಿಂಹ ಹುಟ್ಟಿದ್ದು ೧೭೮೨ರಲ್ಲಿ. ಆತನ ತಂದೆ ಸಾಹಬ್ ಜಾದಾಸಿಂಹ. ದಯಾಲಸಿಂಹ, ರಾಜಪತಿಸಿಂಹ ಮತ್ತು ಅಮರಸಿಂಹ ಎಂಬ ಮೂರು ಜನ ಸಹೋದರರಿದ್ದರು. ಇವರಲ್ಲಿ ಅಮರಸಿಂಹನು ಬ್ರಿಟಿಷರೊಡನೆ ಹೋರಾಟ ನಡೆಸಿ ಜನಾನುರಾಗಿಯಾಗಿದ್ದ. ಕುವರಸಿಂಹ ಉತ್ತರಾಧಿಕಾರಿಯಾದ. ಕುವರಸಿಂಹ ಅಲ್ಪಾಯುಷಿ. ಅವನಿಗೂ ಒಬ್ಬ ಮಗನಿದ್ದ ವೀರಭಂಜನಸಿಂಹ. ಇವನನ್ನು ಕುವರಸಿಂಹ ಸಾಕಿ ಸಲಹಿದ.

ತಂದೆಯನಂತರ ಜಮೀನ್ದಾರಿ ಕುವರಸಿಂಹನ ಕೈಗೆ ಬಂದಿತು. ಅವನು ಜಗದೀಶಪುರ ಕೋಟೆಯನ್ನು ಹೊಸದಾಗಿ ಕಟ್ಟಿಸಿದ. ಪೇಟೆಯನ್ನು ಹೊಸ ರೀತಿಯಲ್ಲಿ ವ್ಯವಸ್ಥೆಗೊಳಿಸಿದ. ವನ ಉಪವನಗಳನ್ನು ಬೆಳೆಸಿದ. ಜನಾನುರಾಗಿಯಾಗಿದ್ದ. ಔದಾರ್ಯವು ಅವನ ವಿಶೇಷ ಗುಣವಾಗಿತ್ತು.

ಜನಪದ ಸಾಹಿತ್ಯದಲ್ಲಿ ಕುವರಸಿಂಹನ ಬಗ್ಗೆ ಒಂದು ಮಾತು ಬಂದಿದೆ. ಸಿಂಹ ಮುದಿಯಾಗಿದೆ. ಹಸಿವು ಬಾಯಾರಿಕೆಯಿಂದ ಬಳಲಿ ಬೆಂಡಾಗಿದೆ. ಸಾವಿನ ದವಡೆಯಲ್ಲಿದೆ. ಆದರೇನು! ಅದು ಸಿಂಹ. ಒಣ ಹುಲ್ಲನ್ನು ತಿಂದೀತೆ? ಇಲ್ಲ ಇಲ್ಲ. ಅರಿ, ಮದಕರಿಗಳ ಮುಂಡವನ್ನು ಸೀಳಿ ಬಿಸಿನೆತ್ತರನ್ನು ಕುಡಿಯುವುದು.ದಾಸ್ಯವೆಂಬ ಒಣ ಹುಲ್ಲು ಈ ಕುವರಸಿಂಹನಿಗೆ ಹಿಡಿಸದು. ಸ್ವತಂತ್ರವಾಗಿರಲು ತಮ್ಮ ಧರ್ಮವನ್ನು ರಕ್ಷಿಸಲು ಪರಂಗಿಗಳೆಂಬ ಮದ್ದಾನೆಗಳನ್ನು ಸೀಳಿ ಬಿಸುಡುವುದು.

ಈ ಗೀತೆಯಲ್ಲಿ ಆ ಜಾನಪದ ಕವಿ ಕುವರಸಿಂಹನ ಬಗ್ಗೆ ಆಡಿರುವ ಮಾತು ಅಕ್ಷರಶಃ ಸತ್ಯ.

ಬ್ರಿಟಿಷರ ಕಣ್ಣಿನಲ್ಲಿ

ಕುವರಸಿಂಹನ ವ್ಯಕ್ತಿತ್ವ ಬಹು ವಿವಾದಾಸ್ಪದವಾದುದು. ಅವನು ಸಾಯುವುದಕ್ಕೆ ಮುಂಚೆ ಸುಮಾರು ಎಂಟು ತಿಂಗಳ ಕಾಲ ಬ್ರಿಟಿಷರೊಡನೆ ಪ್ರತ್ಯಕ್ಷವಾಗಿ ಯುದ್ಧ ಘೋಷಿಸಿದ ಆದರೆ ಅದಕ್ಕೆ ಮುಂಚೆ ಅವನ ಜೀವನದ ಎಪ್ಪತ್ತೈದು ವರ್ಷಗಳು ಉರುಳಿದ್ದವು. ಇವನೊಬ್ಬ ಒರಟ. ಓದು ಬರಹ ಬಾರದ ಗಮಾರ. ದುಂದುಗಾರ. ಹೇಗಾದರೂ ಸರಿ ಸುಖವಾಗಿರಬೇಕೆಂದು ಬಯಸುವ ಆತ್ಮ ಸಮ್ಮಾನವಿಲ್ಲದ ಹೇಡಿ. ಆದರೆ ತನ್ನ ಜಮೀನ್ದಾರಿಯಲ್ಲಿ ಎಲ್ಲರ ಪ್ರೀತಿ ವಿಶ್ವಾಸವನ್ನು ಗಳಿಸಿರುವ ವ್ಯಕ್ತಿ. ಅವನು ನಮ್ಮ ನೆಚ್ಚಿನ ಗೆಳೆಯ ಮುಂತಾಗಿ ಬ್ರಿಟಿಷ್ ಅಧಿಕಾರಿಗಳು ಭಾವಿಸಿದ್ದರು. ಇವನು ಜಮೀನ್ದಾರಿಯಿಂದ ಬಹಳ ಸಾಲವಾಗಿದೆ ಎಂದೂ ಅದಕ್ಕಾಗಿ ಕಂಪೆನಿಗೆ ಅದನ್ನು ವಹಿಸಿಕೊಡಬೇಕೆಂದಿರುವುದಾಗಿಯೂ ಅಭಿಪ್ರಾಯಪಟ್ಟಾಗ ಅವನ ಆಂಗ್ಲ ಮಿತ್ರರು ಸಹಾನುಭೂತಿಯನ್ನು ತೋರಿಸಿ ಅವನಿಗೆ ಒಂದು ಮದ್ದುಗುಂಡಿನ ಕಾರ್ಖಾನೆಯನ್ನು ನಡೆಸಲು ನೆರವಾದರು.

ವರದಿಗಳು

ಆದರೆ ಅವನ ವ್ಯಕ್ತಿತ್ವ ಸಾಗರದಂತೆ ಗಂಭೀರವಾಗಿತ್ತು. ಅವನು ಒಳಒಳಗೇ ಒಂದು ಸೈನ್ಯವನ್ನು ಕಟ್ಟುತ್ತಿದ್ದ. ಅವನು ದೇಶದ ಹಾಗೂ ಧರ್ಮದ ಪರ ಹೋರಾಡುವವರಿಗಾಗಿ ಮದ್ದುಗುಂಡುಗಳನ್ನು ಸರಬರಾಜು ಮಾಡುತ್ತಿದ್ದ. ತನ್ನ ವಶದಲ್ಲಿ ಸುಮಾರು ಇಪ್ಪತ್ತು ಸಾವಿರ ಜನಕ್ಕೆ ಆರು ತಿಂಗಳಿಗೆ ಸಾಕಾಗುವಷ್ಟು ಆಹಾರ ಧಾನ್ಯವನ್ನೂ, ಮದ್ದುಗುಂಡುಗಳನ್ನೂ ಶೇಖರಿಸಿ ಇಟ್ಟಿದ್ದ.

ಇತ್ತೀಚಿನ ಇತಿಹಾಸ ಸಂಶೋಧಕರು ಹೇಳುವಂತೆ ೧೮೪೫-೪೬ ರಲ್ಲಿ ಬ್ರಿಟಿಷರ ವಿರುದ್ಧ ಬಿಹಾರಿನಲ್ಲಿ ನಡೆದ ಹೋರಾಟದಲ್ಲಿ ಕುವರಸಿಂಹನದೂ ಕೈವಾಡವಿದ್ದಿತಂತೆ. ಇವನು ಬ್ರಿಟಿಷರ ಶತ್ರುಗಳೊಡನೆ ಸಂಪರ್ಕವನ್ನಿಟ್ಟು ಕೊಂಡಿರುವುದಾಗಿಯೂ ಬ್ರಿಟಿಷರಿಗೆ ವರದಿಯಾಗಿತ್ತು. ಪಾಟ್ನಾದ ಮ್ಯಾಜಿಸ್ಟ್ರೇಟನು ಈ ವಿಷಯವನ್ನು ೧೮೫೭ನೇ ಡಿಸೆಂಬರ್ ೨೭ರಂದು ಬರೆದ. ಮ್ಯಾಜಿಸ್ಟ್ರೇಟ್ ಜಾಕ್ ಸನ್ ಎಂಬುವನು ಕುವರಸಿಂಹನು ದಂಗೆಕೋರರೊಡನೆ ಸಂಪರ್ಕ ಇಟ್ಟುಕೊಂಡಿರುವುದು ಮಾತ್ರವಲ್ಲ ಅವನ ಹಸ್ತಾಕ್ಷರ ಹಾಗೂ ಅಂಕಿತವಿರುವ ಪತ್ರಗಳೂ ದೊರೆತಿರುವುದಾಗಿ ಹೇಳಿದ್ದ. ಇಷ್ಟಾದರೂ ಬ್ರಿಟಿಷ್ ಸರ್ಕಾರ ಈತನ ಬಗ್ಗೆ ಯಾವುದೊಂದು ಕ್ರಮವನ್ನೂ ಕೈಗೊಂಡಿರಲಿಲ್ಲ. ಕಾರಣ ಅವನು ಆಂಗ್ಲ ಅಧಿಕಾರಿಗಳ ಮನದಲ್ಲಿ ಮೂಡಿಸಿದ್ದ ಅಭಿಪ್ರಾಯ.

ಟೇಲರ್ ಎಂಬುವನು “ಜಗದೀಶಪುರದ ಜಮೀನ್ದಾರ ಬಾಬು ಕುವರಸಿಂಹ ಬ್ರಿಟಿಷರ ಅಚ್ಚುಮೆಚ್ಚಿನ ಸ್ನೇಹಿತ” ಎಂಬುದಾಗಿ ವರದಿ ಮಾಡಿದ್ದ.

ಒಮ್ಮೆ ಕುವರಸಿಂಹನ ಬಗ್ಗೆ ಒಂದು ಬೇನಾಮಿ ಪತ್ರ ಪಾಟ್ನಾದ ಕಮೀಷನರ ಕಛೇರಿಗೆ ಬಂದಿತ್ತು. ಅದರಲ್ಲಿ ಕುವರಸಿಂಹನು ಬ್ರಿಟಿಷರ ವಿರುದ್ಧ ದಂಗೆ ಏಳುವ ಸಿದ್ಧತೆಗಳನ್ನು ಮಾಡಿಕೊಂಡಿರುವುದಾಗಿಯೂ ೧೮೫೭ ಏಪ್ರಿಲ್ ೨೫ರಂದು ದೀನಾಪುರದ ಸೈನಿಕರು ದಂಗೆ ಏಳಲಿರುವರೆಂದೂ, ಆ ದಿನ ಕುವರಸಿಂಹನು ರಾಜ ಅನ್ನಿಸಿಕೊಂಡು ದಂಗೆಕೋರರ ದಂಡನಾಯಕನಾಗುವನೆಂದೂ ತಿಳಿಸಲಾಗಿತ್ತು. ಅದರಂತೆ ರೈತರೇ ಸೂಚನೆಕೊಟ್ಟ ಕೂಡಲೇ ಪರಂಗಿಗಳನ್ನು ಸದೆಬಡಿಯಲು ಸಿದ್ಧರಾಗಿ ಎಂದೂ ಪ್ರಚೋದಿಸುತ್ತಿರುವನೆಂದೂ, ಇದೇ ಬಗೆಯ ಪ್ರಚೋದನೆಯನ್ನು ಜಮೀನ್ ದಾರರಿಗೂ ನೀಡಿರುವನೆಂದೂ ಸೈನ್ಯವನ್ನೂ ಧನ್ಯಧಾನ್ಯವನ್ನೂ ಅಪಾರವಾಗಿ ಸಂಗ್ರಹಿಸಿಟ್ಟಿರುವನೆಂದೂ ವರದಿಗಳು ಬಂದಿದ್ದವು. ಆದರೆ ಅಂದಿನ ಕಮೀಷನರ್ ಟೇಲರಿಗೆ ಇದರಲ್ಲಿ ಎಳ್ಳಷ್ಟೂ ನಂಬಿಕೆ ಇರಲಿಲ್ಲ. ವೇಕ್ ಎಂಬುವನು ೧೮೫೭ರ ಜುಲೈ ೧೯ ರಂದು ಸರ್ಕಾರಕ್ಕೆ ಕಳಿಸಿದ ವರದಿಯಲ್ಲಿ “ಕುವರ ಸಿಂಹನು ದೊಡ್ಡ ಜಮೀನ್ದಾರನಾದರೂ ಸಾಲಗಾರ. ತನ್ನ ಸಾಲದ ಮೇಲಿನ ಬಡ್ಡಿಯನ್ನೂ ಕೊಡಲು ಚೈತನ್ಯವಿಲ್ಲ. ಕಾನೂನು ಮತ್ತು ಶಿಸ್ತಿನ ಭದ್ರತೆಯು ಇರುವವರೆಗೂ ನಮ್ಮ ವಿರುದ್ಧ ದಂಗೆ ಏಳುವ ಸಾಹಸವನ್ನೂ ಅವನು ಮಾಡಲಾರ. ಒಂದು ಪಕ್ಷ ಈ ಜಿಲ್ಲೆಗಳೇನಾದರೂ ದಂಗೆ ನಡೆದು ನಮ್ಮ ಸರ್ಕಾರ ಉಳಿಯಲಾರದೆಂದು ತೋರಿ ಬಂದರೆ ಈತನೂ ಬಂಡುಕೋರರೊಡನೆ ಸೇರಿ ಅವರ ಸರ್ದಾರನಾಗಿ ಬಿಡಬಹುದು” ಎಂದು ಬರೆದಿದ್ದ.

ಹುಸೇನನ ವರದಿ

ಹೀಗೆ ಪರಸ್ಪರ ವಿರುದ್ಧವಾದ ವರದಿಯನ್ನು ಪರೀಕ್ಷಿಸಬೇಕೆಂಬ ಉದ್ದೇಶದಿಂದ ಟೇಲರನು ಕುವರಸಿಂಹನನ್ನು ಪಾಟ್ನಾಕ್ಕೆ ಕರೆಸಿಕೊಳ್ಳಲು ಯತ್ನಿಸಿದ. ತನಗೆ ವಯಸ್ಸಾಗಿರುವ ಕಾರಣ ಬರುವುದು ಅಸಾಧ್ಯವೆಂದು ನೆಪ ಹೇಳಿ ಕುವರಸಿಂಹ ತಪ್ಪಿಸಿಕೊಂಡಿದ್ದ.

ಯಥಾರ್ಥವನ್ನರಿಯಲು ಕಂಪನಿ ಸರ್ಕಾರವು ಆರಾದ ಡೆಪ್ಯುಟಿ ಕಲೆಕ್ಟರ್ ಅಜೀಮುದ್ದೀನ್ ಹುಸೇನನ್ನು ೧೮೫೭ರ ಜುಲೈ ೧೯ ರಂದು ತನಿಖೆ ನಡೆಸಿ ನಿಜಸ್ಥಿತಿಯನ್ನು ಗೋಪ್ಯವಾಗಿ ತಿಳಿಸಲು ಕಳುಹಿಸಿಕೊಟ್ಟಿತು. ಹುಸೇನನು ಕುವರಸಿಂಹನನ್ನು ಆ ದಿನವೇ ಸಂದರ್ಶಿಸಿದ. ಆಗ ಕುವರಸಿಂಹ ಹಾಸಿಗೆಯ ಮೇಲೆ ಮಲಗಿದ್ದ. ಅನಂತರ ಕಳಿಸಿದ ವರದಿಯು ಕುವರಸಿಂಹನು ಸಂದೇಹಾಸ್ಪದ ವ್ಯಕ್ತಿಯಲ್ಲ ಎಂಬುದನ್ನು ತಿಳಿಸಿತು. ಹುಸೇನನು ತನ್ನ ವರದಿಯಲ್ಲಿ ಕುವರಸಿಂಹನೇನಾದರೂ ಯುದ್ಧಕ್ಕೆ ಕರೆಕೊಟ್ಟರೆ ಅವನ ಹತೋಟಿಯಲ್ಲಿರುವ ಪ್ರಜೆಗಳು ಅವನನ್ನು ಬೆಂಬಲಿಸಬಹುದು; ಹಿಂಬಾಲಿಸಬಹುದು. ಆದರೆ ದಿವಾಳಿತನದ ಅಂಚಿನಲ್ಲಿರುವ ವ್ಯಕ್ತಿ ಯುದ್ಧವನ್ನು ಘೋಷಿಸುವ ದುಸ್ಸಾಹಸವನ್ನು ಮಾಡಲಾರ ಎಂತಲೂ ಬರೆದಿದ್ದನು.

ಒಳಸಂಚು

ನಿಜಕ್ಕೂ ಕುವರಸಿಂಹ ಒಳಸಂಚಿನಲ್ಲಿ ಸೇರಿದ್ದ. ಪ್ರತಿಯೊಂದು ಸೈನ್ಯ ಶಿಬಿರದಲ್ಲೂ “ಸ್ವಧರ್ಮ ಸ್ವರಾಜ್ಯ”ದ ಸಂದೇಶ ಬಿತ್ತರಿಸಲಾಗಿತ್ತು. ಒಂದು ದಳ ಮಾಡಿದಂತೆ ಇನ್ನೊಂದು ದಳವೂ ಮಾಡಬೇಕೆಂದು ತಿಳಿಸಲಾಗಿತ್ತು. ಪ್ರತಿ ಶಿಬಿರದಲ್ಲೂ ಮೂರು ಜನ ಮುಖಂಡರ ಸಮಿತಿ ರಚಿಸಲಾಗಿತ್ತು. ಮೇ ೩೧ ರಂದು ಭಾನುವಾರವಾದುದರಿಂದ ದಂಗೆ ಏಳಲು ನಿಶ್ಚಯಿಸಿ ಸೂಚನೆಯನ್ನು ಕೊಟ್ಟಿದ್ದರು. ಭಾನುವಾರದ ದಿನ ಚರ್ಚಿನಲ್ಲಿ ಕ್ರೈಸ್ತರಾದ ಬ್ರಿಟಿಷರೆಲ್ಲರೂ ಒಟ್ಟಿಗೆ ಸೇರಿರುವುದರಿಂದ ಕೈಗೆ ಸಿಕ್ಕಷ್ಟು ಬ್ರಿಟಿಷ್ ಅಧಿಕಾರಿಗಳನ್ನು ಕೊಲೆ ಮಾಡುವುದು ಸುಲಭವಾಗುವುದೆಂದು ಭಾವಿಸಲಾಗಿತ್ತು.

ಕುವರಸಿಂಹನಿಗೆ ಬ್ರಿಟಿಷ್ ಅಧಿಕಾರಿಗಳ ಸ್ವಭಾವಗೊತ್ತಿತ್ತು. ಅವರು ತಮ್ಮ ಅಧಿಕಾರ ರಕ್ಷಣೆಗಾಗಿ ಎಷ್ಟೇ ಆತ್ಮೀಯ ಮಿತ್ರರಾಗಿದ್ದರೂ ಭಾರತೀಯರನ್ನು ಸೆರೆ ಹಿಡಿಯಲು ಅಥವಾ ಕೊಲ್ಲಲೂ ಹಿಂಜರಿಯರು ಎಂದು ತಿಳಿದಿದ್ದ. ಆದ್ದರಿಂದ ಮನಸ್ಸು ಬಿಚ್ಚಿ ಯಾರೊಡನೆಯೂ ಈ ವಿಷಯಗಳನ್ನು ಮಾತನಾಡುತ್ತಿರಲಿಲ್ಲ. ಅವನ ಲೆಕ್ಕಾಚಾರದಂತೆ ಭಾರತದಲ್ಲಿದ್ದ ಒಟ್ಟು ಬ್ರಿಟಿಷ್ ಸೈನ್ಯ ೪೫,೫೨೨ ಮಾತ್ರ. ಇವರಲ್ಲಿ ೬,೧೭೦ ಆಫೀಸರುಗಳೂ ಸೇರಿದ್ದರು. ಬ್ರಿಟಿಷರ ಅಧೀನದಲ್ಲಿದ್ದ ಸೈನ್ಯದಲ್ಲಿ ಭಾರತೀಯರು ೨,೩೨,೨೨೪ ಭಾರತೀಯ ಸಂಜಾತರು ಸ್ವಧರ್ಮ ಸ್ವದೇಶಕ್ಕಾಗಿ ಒಮ್ಮೆ ದಂಗೆ ಎದ್ದಿದ್ದರೆ?

ಹುಸೇನನು ಬಂದಾಗ ಕುವರಸಿಂಹನು ಕಾಯಿಲೆ ಬಂದವನಂತೆ ಮಲಗಿದ.

೭೫ ವರ್ಷದ ಸ್ವಾತಂತ್ರ್ಯ ಯೋಧ

 

೧೮೫೭ ಜುಲೈ ೨೫ ರಂದು ದೀನಾಪುರದಲ್ಲಿದ್ದ ಸಿಪಾಯಿಗಳು ದಂಗೆ ಎದ್ದರು. ಮಾರನೆಯ ದಿನ ಅವರು ಶಾಹಬಾದ್ ಜಿಲ್ಲೆಗೆ ಬಂದರು. ಆಗ ಕುವರಸಿಂಹನಿಗೆ ೭೫ ವರ್ಷ ವಯಸ್ಸು. ತನ್ನ ವಯಸ್ಸನ್ನು ಧಿಕ್ಕರಿಸಿ ಸೆಟೆದುನಿಂತ. ಈ ಸಿಪಾಯಿಗಳ ನೇತೃತ್ವವನ್ನು ವಹಿಸಿದ. ಆರಾದಲ್ಲಿದ್ದ ಬ್ರಿಟಿಷರನ್ನು ೨೭ರಂದು ಮುತ್ತಿಗೆ ಹಾಕಿದ. ಸ್ವಾತಂತ್ರ್ಯವನ್ನು ಘೋಷಿಸಿ ತನ್ನದೇ ಆದ ಸರ್ಕಾರವನ್ನು ರಚಿಸಿದ. ಜನರು ಬ್ರಿಟಿಷರಿಗೆ ತೆರಿಗೆಯನ್ನು ಕೊಡಬಾರದೆಂದೂ ಅವರ ಆಜ್ಞೆಯನ್ನು ಪಾಲಿಸಬಾರದೆಂದೂ ಸಾರಿದ.

ಆರಾದ ಮುತ್ತಿಗೆಯನ್ನು ವಿಫಲಗೊಳಿಸಲು ದೀನಾಪುರದಿಂದ ಕ್ಯಾಪ್ಟನ್ ಡನ್ ಬಾರ್ ನ ನೇತೃತ್ವದಲ್ಲಿ ಒಂದು ಸೈನ್ಯವನ್ನು ಕಳಿಸಿದ್ದರು.

ಇತ್ತ ಆರಾದಲ್ಲಿ ಒಂದು ರೈಲ್ವೆ ಕೋಠಿಯಲ್ಲಿ ಆತ್ಮ ರಕ್ಷಣೆಗಾಗಿ ಸೇರಿಕೊಂಡಿದ್ದ ಆಂಗ್ಲ ಆಫೀಸರುಗಳು ಮತ್ತು ಕುವರಸಿಂಹನ ಸೈನಿಕರು – ಇವರ ಮಧ್ಯೆ ಕಾಳಗ ನಡೆಯುತ್ತಿತ್ತು. ಆಂಗ್ಲರು ಕಿಟಕಿಗಳಿಂದ ಇಣುಕಿ ನೋಡಿ ಮುತ್ತಿಗೆ ಹಾಕಿದ ಸಿಪಾಯಿಗಳ ಮೇಲೆ ಗುಂಡಿನ ಮಳೆಗರೆಯುತ್ತಿದ್ದರು. ಅತ್ತ ಸಿಪಾಯಿಗಳು ಮರವನ್ನೇರಿ ಕುಳಿತು ಪರಂಗಿಯವರನ್ನು ಕಂಡೊಡನೆ ಗುಂಡು ಹಾರಿಸಿ ಧರಾಶಾಯಿಯನ್ನಾಗಿ ಮಾಡುತ್ತಿದ್ದರು. ಕುವರಸಿಂಹನ ಪಿತೂರಿಯಿಂದಾಗಿ ಆರಾದ ಖಜಾನೆಯ ರಕ್ಷಣೆಯ ಹೊಣೆ ಹೊತ್ತಿದ್ದ ಕಾವಲುಪಡೆಯ ಭಾರತೀಯ ಅಧಿಕಾರಿ ಈ ಕೋಠಿಯ ರಕ್ಷಣೆಗೆ ತಾನೇ ಬಂದ. ಜಿಲ್ಲಾಧಿಕಾರಿಯ ಅನುಮತಿಯನ್ನು ಪಡೆದು ಕಾವಲು ನೇಮಿಸಿದ. ಕುವರ ಸಿಂಹನ ಸೈನ್ಯ ಆರಾವನ್ನು ಮುತ್ತಿದೊಡನೆ, ಕಾವಲು ಪಡೆಯೊಂದಿಗೆ ಹೋಗಿ ಕುವರಸಿಂಹನನ್ನು ಸ್ವಾಗತಿಸಿದ. ಖಜಾನೆಯ ಬೀಗದ ಕೈಗಳನ್ನು ಒಪ್ಪಿಸಿದ. ಜೈಲನ್ನು ತೆರವು ಮಾಡಲು ನೆರವಾದ. ಈ ಎಲ್ಲವನ್ನು ಕಣ್ಣಾರೆ ಕಂಡ ಜಿಲ್ಲಾಧಿಕಾರಿಯು ಯಾರನ್ನು ನಂಬಬೇಕು ಯಾರನ್ನು ಬಿಡಬೇಕು ಎಂದು ತಿಳಿಯದೆ ಕಂಗೆಟ್ಟು ಹೋದ.

ಈ ಸಂದರ್ಭದಲ್ಲಿ ಕುವರಸಿಂಹನಿಗೆ ದೀನಾಪುರದಿಂದ ಬ್ರಿಟಿಷ್ ಸೈನ್ಯ ಬರುತ್ತಿರುವುದರ ಸಮಾಚಾರ ಬಂದಿತು. ಆಗ ಅವನು ಕೋಠಿಯಲ್ಲಡಗಿರುವ ಆಂಗ್ಲ ಅಧಿಕಾರಿಗಳಿಗೆ ಇದರ ಸುಳಿವು ಸಿಕ್ಕದಂತೆ ಎಚ್ಚರವಹಿಸಿ, ತನ್ನದೇ ಆದ ಯುದ್ಧ ತಂತ್ರವನ್ನು ಬಳಸಿಕೊಂಡು ಆ ಸೈನ್ಯವನ್ನು ತಡೆಗಟ್ಟಲು ಹೊರಟ.

 

‘ಗಂಗಾಮಯಿ! ಇದೋ ನಿನ್ನ ಮಗನ ಕಾಣಿಕೆ!’

ಡನ್ ಬಾರನ ಕಥೆ ಮುಗಿಯಿತು

 

ಬ್ರಿಟಿಷರ ಪಡೆ ಗಾಂಗೀ ಎಂಬಲ್ಲಿಗೆ ಬಂದಿತ್ತು. ಆಗ ಇದ್ದಕ್ಕಿದ್ದಂತೆ ಕುವರಸಿಂಹನ ಪಡೆಯ ಇನ್ನೂರು ಸಿಪಾಯಿಗಳು ಕೋಲಾಹಲವನ್ನು ಮಾಡುತ್ತಾ ಬ್ರಿಟಿಷರ ಪಡೆಯ ಮೇಲೆ ದಾಳಿ ಇಟ್ಟರು. ಸೈನಿಕರು ಬಂದೂಕನ್ನು ಕೈಗೆತ್ತಿಕೊಳ್ಳುವುದರೊಳಗಾಗಿ ಇನ್ನೊಂದು ದಿಕ್ಕಿನಿಂದಲೂ ಆಕ್ರಮಣ ನಡೆಯಿತು. ನಾಲ್ಕು ನಾಲ್ಕು ಸಿಪಾಯಿಗಳನ್ನು ಒಬ್ಬರ ಹಿಂದೊಬ್ಬರಂತೆ ನಡೆಸಿಕೊಂಡು ಬರುತ್ತಿದ್ದ ಸೈನ್ಯ ಇಬ್ಭಾಗವಾಯಿತು. ಮುಂದೆ ಸಾಗಿದವರನ್ನು ಕುವರಸಿಂಹ ಸದೆ ಬಡಿದ. ಹಿಂದೆ ಓಡಿದವರನ್ನು ರಣದಲನಸಿಂಹನು ನೋಡಿಕೊಂಡ.

ಒಟ್ಟಿನಲ್ಲಿ ಬ್ರಿಟಿಷ್ ಪಡೆಯು ಬಹುಬೇಗ ಸೋತು ಹೋಯಿತು. ಎಲ್ಲೋ ಹಲಕೆಲವರು ಓಡಿಹೋಗಿ ಪ್ರಾಣ ಉಳಿಸಿಕೊಂಡರು. ಸತ್ತವರೇ ಹೆಚ್ಚು ಹಲ ಕೆಲವರು ಗಾಯಗೊಂಡು ನರಳುತ್ತಿದ್ದರು. ಸತ್ತವರಲ್ಲಿ ಕ್ಯಾಪ್ಟನ್ ಡನ್ ಬಾರನೂ ಒಬ್ಬ.

ಮೇಜರ್ ಐರ್

ಮೇಜರ್ ಐರ್ ಎಂಬುವನು ಅಲಹಾಬಾದಿಗೆ ಹೊರಟಿದ್ದ. ಆರಾದಲ್ಲಿ ಬ್ರಿಟಿಷರು ಕಷ್ಟದಲ್ಲಿರುವರೆಂದೂ ಅವರಿಗೆ ಸಹಾಯ ಮಾಡಲು ಹೊರಟಿದ್ದ ಡನ್ ಬಾರನ ಸೈನ್ಯವು ನಿರ್ನಾಮವಾಗಿದೆ ಎಂದೂ ಓಡಿ ಬಂದಿದ್ದ ಆಂಗ್ಲ ಸಿಪಾಯಿ ಒಬ್ಬನಿಂದ ಅವನಿಗೆ ತಿಳಿಯಿತು. ತಕ್ಷಣವೇ ಅವನು ಆರಾದ ಕಡೆ ಹೊರಟ. ಬೀಬಿಗಂಜ್ ಎಂಬಲ್ಲಿ ಆಗಸ್ಟ್ ೩ ರಂದು ಕುವರಸಿಂಹನ ಮೇಲೆ ದಾಳಿ ಮಾಡಿ ವಿಜಯಶಾಲಿಯಾದ. ಆದರೆ ಸುಲಭವಾಗಿ ಜಯ ಲಭಿಸಿರಲಿಲ್ಲ. ಕುವರಸಿಂಹನ ಕಡೆಯವರು ಅವನ ತುಪಾಕಿಗಳನ್ನು ಲೂಟಿ ಮಾಡಿದ್ದರು. ಅವನಿಗೆ ಸಾಕಷ್ಟು ಕಿರುಕುಳವನ್ನು ಕೊಟ್ಟಿದ್ದರು. ಅಂತೂ ಮೇಜರ್ ಐರ್ ಆರಾದಲ್ಲಿದ್ದ ಬ್ರಿಟಿಷರನ್ನು ಪಾರುಮಾಡಿದ. ತನ್ನ ಬಲವನ್ನು ಹೆಚ್ಚಿಸಿಕೊಂಡು ಕುವರಸಿಂಹನ ಜಮೀನ್ದಾರಿಯ ಮೇಲೆ ದಾಳಿ ಮಾಡಿದ. ಜಗದೀಶಪುರದಲ್ಲಿದ್ದ ಕುವರಸಿಂಹನ ಅರಮನೆಯನ್ನು ನೆಲಸಮ ಮಾಡಿದ. ಶಸ್ತ್ರಾಗಾರವನ್ನು ಧ್ವಂಸ ಮಾಡಿದ. ಕುವರಸಿಂಹನು ಹೊಸದಾಗಿ ಕಟ್ಟಿಸಿದ್ದ ದೇವಸ್ಥಾನವನ್ನೂ ಸಹ ಬಿಡಲಿಲ್ಲ. ಅದನ್ನು ನೆಲಸಮ ಮಾಡಿದ. ಕುವರಸಿಂಹನ ಕಡೆಯವರು ಕೈಗೆ ಸಿಕ್ಕಾಗ, ಅವರು ಸೈನಿಕರಾಗಿರಲಿ, ಸಾಮಾನ್ಯ ಪ್ರಜೆಗಳೇ ಆಗಿರಲಿ, ಗಾಯಗೊಂಡು ನರಳುತ್ತಿರುವವರೇ ಆಗಲಿ ಭಯಗೊಂಡು ಓಡಿ ಹೋಗುತ್ತಿರುವವರೇ ಆಗಲಿ ಏನೊಂದನ್ನೂ ಲೆಕ್ಕಿಸದೆ ಗಲ್ಲಿಗೆ ಹಾಕಿದ.

ಇಷ್ಟಾದರೂ ಕುವರಸಿಂಹನು ಎದೆ ಗುಂದಲಿಲ್ಲ. ಶರಣಾಗತನಾಗಲಿಲ್ಲ. ಸೇಡುತೀರಿಸಿಕೊಳ್ಳಲು ಹಾತೊರೆಯ ತೊಡಗಿದ.

ಕಷ್ಟಗಳ ಕತ್ತಲು

ಆದರೆ ಆ ಕಾರ್ಯ ಅಷ್ಟು ಸುಲಭವಾಗಿರಲಿಲ್ಲ. ಅವನ ಸೈನ್ಯದಲ್ಲಿ ಮುಖ್ಯವಾಗಿ ಮುಖಂಡರಲ್ಲಿ ಸೋಲನ್ನು ಕುರಿತು ವಿವಾದವೆದ್ದಿತು. ಮಾತಿನ ಚಕಮಕಿಯು ಕೈಕೈ ಮಿಲಾಯಿಸುವ ಹಂತವನ್ನು ಮುಟ್ಟಿದಾಗ ಕುವರಸಿಂಹನು ಮಧ್ಯೆ ಪ್ರವೇಶಿಸಿದ. ಸೋಲು ಗೆಲುವು ಯುದ್ಧದಲ್ಲಿರುವುದೇ! ಆದರೆ ನಾವು ಒಗ್ಗಟ್ಟನ್ನು ಕಳೆದುಕೊಳ್ಳಬಾರದು. ಶಿಸ್ತನ್ನು ಪಾಲಿಸದಿದ್ದರೆ ನಾವು ಎಂದಿಗೂ ಗುರಿಯನ್ನು ಮುಟ್ಟಲಾರೆವು ಎಂದು ಬುದ್ಧಿ ಹೇಳಿದ. ಅದು ಅಮರ ಸಿಂಹನಿಗೆ ಹಿಡಿಸಲಿಲ್ಲ. ತನ್ನ ಅನುಯಾಯಿಗಳೊಂದಿಗೆ ಹೊರಟುಹೋದ. ಕುವರಸಿಂಹ ಅವಾಕ್ಕಾಗಿ ನೋಡುತ್ತಾ ನಿಂತಿದ್ದ.

ಅದೇ ಸಂದರ್ಭದಲ್ಲಿ ರಿಫುಭಂಜನ ಸಿಂಹನು ಬ್ರಿಟಿಷರೊಡನೆ ಸೇರಿರುವನೆಂಬ ದಾರುಣ ಸಮಾಚಾರವು ತಲುಪಿತು. ಸುತ್ತಲೂ ಕತ್ತಲು. ಮೇಲಾಗಿ ಕಾರ್ಮೊಡ. ದಾರಿ ಕಾಣದೆ ಪೇಚಾಡುವ ಸಂದರ್ಭ. ಆ ರಾತ್ರಿ ಚಿಂತಾ ಕಾತರತೆಯಲ್ಲಿ ಕಳೆಯಿತು.

ಬೆಳಗಾಯಿತು, ಬೆಳಕಾಯಿತು

ಬೆಳಗಾಯಿತು, ಕುವರಸಿಂಹನಿಗೂ ಬೆಳಕು ಕಾಣಿಸಿತು. ಬರೌನಿಯ ಜಮೀನ್ದಾರನು ಬಂದು ನಮಸ್ಕರಿಸಿ “ಮಹಾರಾಜ, ನಿಮ್ಮಲ್ಲಿ ನಮಗೆ ಅಖಂಡ ವಿಶ್ವಾಸವಿದೆ. ನಾವು-ಜಮೀನ್ದಾರರು-ನಿಮ್ಮೊಡನೆ ಇದ್ದೇವೆ. ತನು-ಮನು-ಧನ ಎಲ್ಲವನ್ನೂ ದೇಶಕ್ಕಾಗಿ ನಿಮ್ಮ ಕೈಗೆ ಒಪ್ಪಿಸುತ್ತಿದ್ದೆವೆ. ಇಂದಿನಿಂದ ನೀವೇ ನಮಗೆ ರಾಜರು” ಎಂದು ನಿವೇದಿಸಿದ.

ಕುವರಸಿಂಹನಿಗೆ ಈ ಮಾತುಗಳಿಂದ ಆಶಾಕಿರಣ ಮೂಡಿತು. ಆ ಜಮೀನ್ದಾರನು ಮಾತನ್ನು ಮುಂದುವರಿಸಿ “ಹಜಾರೀಬಾಗನಲ್ಲಿರುವ ಸೈನ್ಯವು ದಂಗೆ ಎದ್ದಿದೆ. ಆ ಎರಡು ಕಂಪನಿಗಳೂ ತಮ್ಮನ್ನು ಹುಡುಕಿಕೊಂಡು ಶಾಹಾಬಾದಿಗೆ ಹೊರಟಿವೆ. ಅವರಿಗೆ ತಮ್ಮನ್ನು ಸಂದರ್ಶಿಸಲು ಇಲ್ಲಿಗೆ ಬರುವಂತೆ ಕರೆಕಳಿಸಲಾಗಿದೆ. ದೀನಾಪುರದ ಉಳಿದ ಸೈನ್ಯವೂ ದಂಗೆ ಎದ್ದಿದೆ. ಬಾಗಲಪುರದಲ್ಲೂ ಪ್ರತಿಭಟನೆ ಪ್ರಾರಂಭವಾಗಿದೆ. ಅವರು ನಿಮ್ಮನ್ನು ಸಂದರ್ಶಿಸಲು ಬರುತ್ತಿದ್ದಾರೆ” ಎಂದು ತಿಳಿಸಿದನು.

ಕುವರಸಿಂಹನು ಇವರನ್ನೆಲ್ಲಾ ಒಟ್ಟುಗೂಡಿಸಲು ಯೋಜನೆಯನ್ನು ಹಾಕಿದ. ಆತನಲ್ಲಿ ಆತ್ಮ ವಿಶ್ವಾಸ ಮೂಡಿ ಬಂದಿತ್ತು. ಬಿಹಾರಿನಲ್ಲೆಲ್ಲ ಕುವರಸಿಂಹನ ಪ್ರಭಾವ ಹೆಚ್ಚಿತು.

ಅವನ ಶಕ್ತಿ ಸಾಮರ್ಥ್ಯದಲ್ಲಿಯೂ, ಯುದ್ಧ ಕೌಶಲ್ಯದಲ್ಲಿಯೂ ಅಖಂಡ ವಿಶ್ವಾಸವನ್ನಿಟ್ಟಿದ್ದರು. ಛೋಟಾ ನಾಗಪುರ, ಸಂತಾಲಪರ್ಗಣಾ, ಮುಂತಾದೆಡೆ ಬಿಹಾರಿನಲ್ಲಿದ್ದ ಜಮೀನ್ದಾರರು ಮತ್ತು ಸಿಪಾಯಿಗಳು ಅಂತೆಯೇ, ಶಾಹಬಾದ್, ಪಾಟ್ನಾ, ತಿರಹುತ್, ಭಾಗಲ್ಪುರ ಮುಂತಾದೆಡೆ ಇದ್ದವರು ಕುವರಸಿಂಹನಿಗೆ ಬೆಂಬಲವನ್ನು ಘೋಷಿಸಿ ಬ್ರಿಟಿಷರ ವಿರುದ್ಧ ದಂಗೆ ಎದ್ದರು.

ಕುವರಸಿಂಹನು ಬಿಹಾರ ಪ್ರಾಂತದ ಹೊರಗೂ ಸಂಪರ್ಕವನ್ನಿಟ್ಟುಕೊಂಡಿದ್ದ. ಅವನು ಹೋದೆಡೆಯಲ್ಲೆಲ್ಲಾ ಜನರು ಸಹಕಾರವನ್ನು ನೀಡುತ್ತಿದ್ದರು.

ಕುವರಸಿಂಹನಿಗೆ ಕೆಲವೊಂದು ತೊಡಕುಗಳಿದ್ದವು. ಅವನ ಸೈನಿಕರು ಅರಿತು ನುರಿತವರಾಗಿರಲಿಲ್ಲ. ಅವರ ಬಳಿ ಸಾಕಷ್ಟು ಮದ್ದುಗುಂಡುಗಳಿರಲಿಲ್ಲ. ಬ್ರಿಟಿಷರು ಈ ದಂಗೆಕೋರರು ಒಗ್ಗೂಡದಂತೆ ತಡೆ ಹಿಡಿಯಲು ಶತ ಪ್ರಯತ್ನ ಮಾಡುತ್ತಿದ್ದರು. ಇಷ್ಟಾದರೂ ಆ ಮುದುಕನ ಸಾಹಸ ಮೆಚ್ಚತಕ್ಕದ್ದು. ಯುದ್ಧಕೌಶಲ ಅಸದೃಶವಾದುದು.

ಎಂತಹ ಉಪಾಹಾರ ಕೂಟ!

ಕುವರಸಿಂಹನಿಗಾಗಿ ಜಗದೀಶಪುರದ ಒಳಹೊರಗೆ ಬಲವಾದ ಕಾವಲು ಪಡೆಯನ್ನು ಹಾಕಿ ಬ್ರಿಟಿಷರು ಕಾದಿದ್ದರು. ಆದರೆ ಕಿರುಕುಳ ಯುದ್ಧ ತಂತ್ರಜ್ಞಾನದ ಕುವರಸಿಂಹನು ಪೂರ್ವ ಔಧ್ ಕಡೆ ನುಸುಳಿ ಹೊರಟುಬಿಟ್ಟ.

೧೮೫೮ರ ಮಾರ್ಚ್ ೧೩ ರಂದು ಬೂವಾ ಕ್ರಾಂತಿಕಾರರು ಕುವರಸಿಂಹನನ್ನು ಸೇರಿ ಅವನನ್ನು ತಮ್ಮ ಮುಖಂಡನೆಂದು ಘೋಷಿಸಿದರು. ಅಟ್ರೋಲಿಯಾ ಎಂಬಲ್ಲಿ ನಡೆದ ಈ ಘಟನೆ ಬ್ರಿಟಿಷ್ ಸೇನಾಧಿಕಾರಿ ಮಿಲ್ ಮನ್ ಗೆ ತಿಳಿದು ಬಂದಿತು. ಕೇವಲ ಅಜಂಗಢದಿಂದ ಇಪ್ಪತ್ತೈದು ಮೈಲು ದೂರದಲ್ಲಿರುವ ಈ ಕ್ರಾಂತಿಕಾರರನ್ನು ಸದೆಬಡಿಯಲು ಅದೇ ಮಾರ್ಚ್ ೧೮ ರ ಪ್ರಾತಃ ಕಾಲ ಸೂರ್ಯೋದಯದ ಹೊತ್ತಿಗೆ ಆಟ್ರೋಲಿಯಾಕ್ಕೆ ಬಂದ. ನೇರವಾಗಿ ಕ್ರಾಂತಿಪಡೆಯ ಮೇಲೆ ದಾಳಿ ಮಾಡಿ ಅವರನ್ನು ಸುಲಭವಾಗಿ ಚದುರಿಸಿದ!

ವಿಜಯದ ಅಮಲಿನಲ್ಲಿ ತನ್ನ ಸೈನಿಕರನ್ನು ಕುರಿತು ಹೇಳಿದ “ವೀರರೇ ಬೆಳಗಿನ ಉಪಾಹಾರಕ್ಕೆ ನಿಮ್ಮನ್ನು ಸ್ವಾಗತಿಸಲು ಹರ್ಷಿಸುತ್ತೇನೆ. ನಿಮ್ಮ ಬೆವರನ್ನು ಅಲ್ಲ ರಕ್ತವನ್ನು ಬಸಿದು ಈ ಉಪಹಾರವನ್ನು ಗಿಟ್ಟಿಸಿ ಕೊಂಡಿರುವಿರಿ.”

ಊರ ಹೊರಗಿನ ಮಾವಿನ ತೋಪಿನಲ್ಲಿ ಹರ್ಷಚಿತ್ತರಾದ ಸೈನಿಕರು ಶಸ್ತ್ರಾಸ್ತ್ರವನ್ನು ಬದಿಗಿಟ್ಟು ತಿಂಡಿಯ ತಟ್ಟೆಯನ್ನು ಕೈಗೆತ್ತಿಕೊಂಡು ಒಂದು ತುತ್ತನ್ನು ಬಾಯಲ್ಲಿ ಹಾಕಿಕೊಂಡಿದ್ದರು. ಅಷ್ಟರಲ್ಲಿ ಢಂ ಢಂ ಢಮ ಎಂಬ ಶಬ್ಧ ಕೇಳತೊಡಗಿತು. ನರಳಾಟ ಪ್ರಾರಂಭವಾಯಿತು. ಬಾಯಿಯ ತುತ್ತು ಹೊರಬಿತ್ತು. ತಟ್ಟೆ ನೆಲಕ್ಕುರುಳಿತು. ಸೈನಿಕರು ಕಕ್ಕಾಬಿಕ್ಕಿಯಾಗಿ ಧಾವಿಸತೊಡಗಿದರು. ಪಾನೀಯದ ಬಟ್ಟಲು ಚೆಲ್ಲಾಪಿಲ್ಲಿಯಾಗಿ ಬಿದ್ದಿತು. ಮಾವಿನ ಮರದ ಮೇಲಿನಿಂದ ಮರದ ಹಿಂದಿನಿಂದ, ಸುತ್ತಲೂ ಇದ್ದ ಕಬ್ಬಿನ ಗದ್ದೆಯಿಂದ ಗುಂಡು ನುಸುಳಿ ಬಂದು ಶತ್ರುವನ್ನು ತೂರಿಸಿಕೊಂಡು ಹೋಗಲಾರಂಭಿಸಿದವು. ಕುವರಸಿಂಹನ ಅಟ್ಟಹಾಸದ ಧ್ವನಿಯನ್ನು ಕೇಳಿದಾಗಲೇ ತಾವು ಎಂತಹ ಬಲೆಯಲ್ಲಿ ಸಿಕ್ಕಿ ಬಿದ್ದಿರುವುದೆಂದು ಬ್ರಿಟಿಷ್ ಸೈನಿಕರು ಅರಿತರು.

ಬ್ರಿಟಿಷ್ ಸೈನ್ಯ ಸೋತು ಆಟ್ರೋಲಿಯಾದಿಂದ ಕಾಲ್ತೆಗೆದು ಕೋಸಿಲ ಕಡೆ ಓಡಿತು. ಅಲ್ಲಿ ಅದು ತಲುಪಿದಾಗ ಕಂಡದ್ದು ಆಶ್ರಯವನ್ನಲ್ಲ; ವಿಪತ್ತನ್ನು. ಅಲ್ಲಿ ಕುವರಸಿಂಹನ ಸೈನಿಕರು ಮೊದಲೇ ಎಲ್ಲವನ್ನೂ ಧ್ವಂಸಗೊಳಿಸಿದ್ದರು. ಮಿಲ್ ಮನ್ನನು ಪ್ರಾಣ ಉಳಿಸಿಕೊಳ್ಳಲು ಅಜಂಗಢದ ಕಡೆ ಧಾವಿಸಿದ. ಪ್ರತಿ ಹೆಜ್ಜೆಗೂ ಕುವರಸಿಂಹನ ದಾಳಿಯನ್ನೆದುರಿಸದೆ ಗತ್ಯಂತರವಿರಲಿಲ್ಲ. ಅಷ್ಟರಲ್ಲಿ ವಾರಣಾಸಿ ಮತ್ತು ಗಾಜೀಪುರದ ಕಡೆಯಿಂದ ಬ್ರಿಟಿಷರಿಗೆ ನೆರವು ಬಂದಿತು. ಕರ್ನಲ್ ಡೆಮ್ಸ್ ಕೈ ಮೇಲಾಯಿತು. ಕುವರಸಿಂಹನ ಹಿಮ್ಮೆಟ್ಟಿದ. ಆದರೆ ಹಿಂದಿನ ಯುದ್ಧದಲ್ಲಾದ ಗತಿಯೇ ಬ್ರಿಟಿಷ್ ಸೈನ್ಯಕ್ಕೆ ಮತ್ತೆ ಬಂದೊದಗಿತು.

ಈ ಹಿಂದೂಸ್ಥಾನವನ್ನು ಗೆಲ್ಲುವುದು ಹೇಗೆ?

ಡೇಮ್ಸ್ ನೂ ಓಡಿಹೋಗಿ, ಅಜಂಗಢಕ್ಕೆ ಓಡಿ ಹೋದ ಅಲ್ಲಿನ ಜೈಲಿನಲ್ಲಿ ಮೊದಲೇ ಬೀಡುಬಿಟ್ಟಿದ್ದ ಮಿಲ್ ಮನ್ ನನ್ನು ಸಂದರ್ಶಿಸಿದ. ಅಲ್ಲಿಯೇ ಇಬ್ಬರೂ ಕುಳಿತು ದೇಶದ ಸ್ಥಿತಿಗತಿಯನ್ನು ಕುರಿತು ವಿಚಾರ ಮಗ್ನರಾದರು.

“ಲಖನೌನಿಂದ ಸಹಾಯ ಬರಲು ಸಾಧ್ಯವಿಲ್ಲ. ಅಲ್ಲಿ ಮೂರು ಬಾರಿ ದಂಗೆಯನ್ನು ಹತ್ತಿಕ್ಕಿ, ರಕ್ತದ ಕೋಡಿಯನ್ನು ಹರಿಸಿದ್ದಾಯಿತು. ಆದರೂ ಅಲ್ಲಿ ಅಶಾಂತಿ ಇದ್ದೇ ಇದೆ. ಅಲ್ಲಿನ ಬೇಗಂಗಳು ಅಂತಃಪುರವನ್ನು ಬಿಟ್ಟು ಗಂಡಸರಂತೆ ಉಡಿಗೆ ತೊಟ್ಟು ಖಡ್ಗವನ್ನು ಝಳಪಿಸುತ್ತಿದ್ದಾರೆ. ಬೇಗಂ ಹಜರತ್ ಮಹಲ್ ಅವರ ನೇತೃತ್ವವನ್ನು ವಹಿಸಿದ್ದಾಳೆ.” ಎಂದು ಡೇಮ್ಸನು ಹೇಳಿದ.

“ಓ ದೇವರೇ! ಹಿಂದೂಸ್ಥಾನವನ್ನು ನಾವು ಗೆಲ್ಲುವುದು ಹೇಗೆ? ಅತ್ತ ಝಾನ್ಸಿಯಲ್ಲಿ ಲಕ್ಷ್ಮೀಬಾಯಿ ಯುದ್ಧ ಮಾಡುತ್ತಿರುವಳಂತೆ. ಹೆಂಗಸರು ಬಂದೂಕನ್ನು ಎತ್ತಿಕೊಂಡ ಮೇಲೆ ನಮಗೆಲ್ಲಿ ಉಳಿವು? ಇಲ್ಲಿಂದ ಕಾಲ್ತೆಗೆಯಬೇಕಾದ ಪ್ರಸಂಗ ಒದಗಿ ಬಂದಿತೋ ಎನೋ!” ಎಂದು ಮಿಲ್ ಮನ್ ಹೇಳಿದ. ಆದರೂ ಅಲಹಾಬಾದಿನಿಂದ ಸಹಾಯ ಬಂದಲ್ಲಿ ಒಂದು ಕೈ ನೋಡಬಹುದೆಂದುಕೊಂಡು ಸಹಾಯಕ್ಕಾಗಿ ಕಾದು ಕುಳಿತರು.

ಮತ್ತೊಬ್ಬ ಸೇನಾನಿ

ಕುವರಸಿಂಹನ ಈ ಸಾಹಸದ ವಾರ್ತೆಯನ್ನು ಅಲಹಾಬಾದಿನಲ್ಲಿ ಶಿಬಿರ ಹೂಡಿದ್ದ ಗೌರ‍್ನರ್ ಜನರಲ್ ಲಾರ್ಡ್ ಕ್ಯಾನಿಂಗ್ ಕೇಳಿದ. ಅವನಿಗೆ ವಿಪತ್ತಿನ ಸ್ವರೂಪದ ಅರಿವಾಯಿತು. ಕುವರಸಿಂಹನನ್ನು ವಾರಣಾಸಿಗೆ ಹೋಗಲು ಬಿಡಬಾರದೆಂದು ಬಯಸಿ ಲಾರ್ಡ್ ಕೆರ್ ನ ನೇತೃತ್ವದಲ್ಲಿ ದೊಡ್ಡ ಸೈನ್ಯವನ್ನು ರವಾನಿಸಿದ.

ಲಾರ್ಡ್ ಮಾರ್ಕ್ ಕೆರ್ ಹೆಸರಾಂತ ಕ್ರಿಮಿಯಾ ಯುದ್ಧವೀರ. ಎಂಟು ತೋಪುಗಳನ್ನು ಅಪಾರ ಪಡೆಯನ್ನೂ ಮುನ್ನಡೆಸಿಕೊಂಡು ಹೋಗುತ್ತಿದ್ದ ಅವನಿಗೆ ಕುವರಸಿಂಹನ ಕಡೆಯವರು ಅಜಂಗಢದಿಂದ ಎಂಟುಮೈಲಿ ದೂರದಲ್ಲಿರುವರೆಂದು ತಿಳಿದರೂ ತಿಳಿಯದವನಂತೆ ಅವರನ್ನು ಎಡಬದಿಗೆ ಒತ್ತರಿಸಲು ಹೊರಟ. ಕುವರಸಿಂಹನ ಸೈನ್ಯ ಹಠಾತ್ತನೇ ದಾಳಿ ಮಾಡಿಬಿಟ್ಟಿತು. ಆ ದಿನ ಕುವರಸಿಂಹನು ಬಿಳಿಯ ಕುದುರೆಯನ್ನೇರಿ ಹೋರಾಡುತ್ತಾ ತನ್ನ ಸಿಪಾಯಿಗಳಿಗೆ ಹುರಿದುಂಬಿಸುತ್ತಿದ್ದ ದೃಶ್ಯವನ್ನು ಕಂಡವರು ಮರೆಯಲಾಗದ್ದು.

ಕುವರಸಿಂಹನು ಹರೇಕೃಷ್ಣನ ಜೊತೆ ಮರಸಾನಾ ಎಂಬಲ್ಲಿಗೆ ಬಂದ. ಅಲ್ಲೊಂದು ಹಳೆಯ ಮನೆಯಿತ್ತು. ಅದನ್ನೇ ದುರ‍್ಗವಾಗಿ ಮಾಡಿಕೊಂಡು ಹೋರಾಡಲು ಕೆಲವರನ್ನು ಒಳಗೆ ಕಳಿಸಿದ. ಹರೇಕೃಷ್ಣನ ಸಂಗಡಿಗರು ಅಲ್ಲಲ್ಲೇ ಅವಿತಿದ್ದು ಹಿಂದಿನಿಂದ ದಾಳಿ ಮಾಡಲು ಸಜ್ಜಾದರು. ಎತ್ತರದ ದಿಬ್ಬದ ಮೇಲೆ ನಿಂತು ಕುವರಸಿಂಹ ಯುದ್ಧ ಸಂಚಾಲನೆ ಮಾಡತೊಡಗಿದ. ಕೆರ‍್ರನ ದೊಡ್ಡ ಸೈನ್ಯ ಮನೆಯ ಹತ್ತಿರ ಬಂದಿತು. ಸೈನಿಕರೇ ಒಳಗೆ ನುಗ್ಗಿ! ಕೆರ್ ಕಿರುಚಿದ. ಒಳಗೆ ಹೋದವರೊಬ್ಬರೂ ಬದುಕಿ ಬರಲಿಲ್ಲ. “ಸೈನಿಕರೇ! ಮನೆಯನ್ನು ಮುತ್ತಿಗೆ ಹಾಕಿ ಬೆಂಕಿ ಹಚ್ಚಿ” ಕೆರ್ ಆಜ್ಞಾಪಿಸಿದ. ಮನೆ ಉರಿಯತೊಡಗಿತು. ಒಳಗಿದ್ದ ಕುವರಸಿಂಹನ ಸಿಪಾಯಿಗಳು ಹೊರಗೆ ಬಂದರು. ಯುದ್ಧದಲ್ಲಿ ಕೈ ಕೈ ಮಿಲಾಯಿಸಿದರು. ಹಿಂದಿನ ಹರೇಕೃಷ್ಣ ಆಕ್ರಮಣ ಮಾಡಿದ. ಬ್ರಿಟಿಷ್ ಪಡೆ ಸೋತಿತು.

ಮೋಸ ಹೋದ ಲುಗಾರ್ಡ್

ಇತ್ತಲು ಗಾರ್ಡ್ ಎಂಬುವನ ನೇತೃತ್ವದಲ್ಲಿ ಬ್ರಿಟಿಷ್ ಪಡೆ ಅಜಂಗಢದ ಕಡೆ ಸಾಗಿ ಬರುತ್ತಿತ್ತು. ಅದು ತಮಸಾ ನದಿಯ ಮೇಲಿದ್ದ ಸೇತುವೆಯ ಮೂಲಕ ಹಾದು ಹೋಗ ಬೇಕಾಗಿತ್ತು. ಕುವರಸಿಂಹ ಆ ಸೇತುವೆಯ ರಕ್ಷಣೆಗೆ ಕೆಲವರನ್ನು ನೇಮಿಸಿದ. ಅಜಂಗಢವನ್ನು ಹಿಡಿಯಬೆಕಂದು ಗಟ್ಟಿ ಸಂಕಲ್ಪ ಮಾಡಿರುವ ಸುದ್ದಿಯನ್ನು ಬಲವಾಗಿ ಹರಡಿದ. ಉಳಿದ ತನ್ನ ಪಡೆಯನ್ನು ಸುಳಿವು ಸಿಕ್ಕದಂತೆ ಗಾಜೀಪುರದ ಕಡೆ ನಡೆಸಿಕೊಂಡು ಹೋಗಿ ಗಂಗೆಯನ್ನು ದಾಟಿ ತನ್ನ ಜಗದೀಶಪುರವನ್ನು ವಶಪಡಿಸಿಕೊಳ್ಳಲು ಹೊರಟು ಬಿಟ್ಟ. ಎಂಥ ತಂತ್ರ ಎಂಥ ಸಾಹಸ!!

ಲುಗಾರ್ಡನು ಸೇತುವೆಯ ಬಳಿ ಹೋರಾಡುತ್ತಾ ಪ್ರತಿ ಹೆಜ್ಜೆಗೂ ತಲೆ ದಂಡವನ್ನು ತೆರುತ್ತಾ ಕಾಲ ಕಳೆಯುತ್ತಿರಲು ಇದ್ದಕ್ಕಿದಂತೆ ಹೋರಾಟದ ಕಾವು ತಣ್ಣಗಾಯಿತು. ಕುವರಸಿಂಹನು ಸೈನ್ಯವು ಗಾಜೀಪುರವನ್ನು ತಲುಪಿಸಿದುದರ ಸೂಚನೆ ಬಂದಿತ್ತು. ಸೇತುವೆಯ ಕಾವಲು ಪಡೆಯವರೂ ಸಹ ಸುಳಿವು ಕೊಡದಂತೆ ನುಸುಳಿ ಕುವರಸಿಂಹನನ್ನು ಸೇರಲು ಹೊರಟಿದ್ದರು.

ಜಯಭೇರಿಯನ್ನು ಬಾರಿಸುತ್ತ ಅಜಂಗಢವನ್ನು ತಲುಪಿದರ ಲುಗಾರ್ಡ್‌ನಿಗೆ ಅಲ್ಲಿ ಶತ್ರುವಿನ ಸುಳಿವೇ ಸಿಕ್ಕಲಿಲ್ಲ. ಹಿಂದಿನ ಯುದ್ಧದ ವಾರ್ತೆಯನ್ನು ಕೇಳಿದ ಅವನಿಗೆ ನೆಮ್ಮದಿಯೂ ಬರಲಿಲ್ಲ. ಕ್ರಾಂತಿಕಾರರನ್ನು ಪತ್ತೆ ಹಚ್ಚಲು ಶತ ಪ್ರಯತ್ನ ಮಾಡಿದ. ಕುವರಸಿಂಹನನ್ನು ಸೆರೆಹಿಡಿದು ತಂದೊಪ್ಪಿಸಿದವರಿಗೆ ಇಪ್ಪತ್ತೈದು ಸಾವಿರ ರೂಪಾಯಿಗಳನ್ನು ಬಹುಮಾನವಾಗಿ ಕೊಡುವುದಾಗಿ ಘೋಷಿಸಿದ. ಅಂತೆಯೇ ಬ್ರಿಟಿಷರೊಡನೆ ಕಿರುಕುಳ ಯುದ್ಧದಲ್ಲಿ ತೊಡಗಿದ್ದ ಅಮರಸಿಂಹನನ್ನು ತಂದೊಪ್ಪಿಸಿದವರಿಗೆ ಐದು ಸಾವಿರ ರೂಪಾಯಿ ಕೊಡುವ ಘೋಷಣೆಯೂ ಆಗಿತ್ತು. ಹೀಗೆ ಕುವರಸಿಂಹನ ಅನುಯಾಯಿಗಳ ತಲೆಯ ಬೆಲೆ ಕಟ್ಟಲಾಗಿತ್ತು.

ಸಿಂಹ ಕೈಗೆ ಸಿಕ್ಕಲಿಲ್ಲ

ಕುವರಸಿಂಹನನ್ನು ಪತ್ತೆಹಚ್ಚುವಲ್ಲಿ ಲುಗಾರ್ಡನಿಗೆ ಬಹುಬೇಗ ಯಶಸ್ಸೇನೋ ದೊರೆಯಿತು. ಆದರೆ ಅಷ್ಟು ಹೊತ್ತಿಗಾಗಲೇ ಕುವರಸಿಂಹನು ಅಪಾಯದ ದವಡೆಯಿಂದ ಪಾರಾಗಿ ಸುರಕ್ಷಿತ ನೆಲೆಯನ್ನು ಪಡೆದಿದ್ದ. ವ್ಯೂಹವನ್ನು ರಚಿಸಿಕೊಂಡು ಬ್ರಿಟಿಷರ ಸೈನ್ಯವನ್ನು ಸದೆಬಡಿದು ಬಿಟ್ಟ. ವಾಘೈ ಎಂಬಲ್ಲಿ ಬ್ರಿಟಿಷರನ್ನು ಸೋಲಿಸಿ ಸಾಗಿಹೋದ.

ಅಂದು ಏಪ್ರಿಲ್ ೧೭ ಆ ರಾತ್ರಿಯಲ್ಲಿ ಪ್ರಯಾಣ ಮುಂದುವರಿಸುವುದು ಸಾಧ್ಯವಾಗಲಿಲ್ಲ. ಸಿಪಾಯಿಗಳು ಬಳಲಿ ಬೆಂಡಾಗಿದ್ದರು. ಆದ್ದರಿಂದ ವಿಶ್ರಮಿಸಿಕೊಳ್ಳಲು ಅವಕಾಶವನ್ನು ಕೊಟ್ಟು ಮೂರನೆಯ ಬೆಳಿಗ್ಗೆ ಡಾಗ್ಲಾಸನು ದಾಳಿಮಾಡಲು ಆಜ್ಞಾಪಿಸಿದ. ಅಲ್ಲಿ ಕ್ರಾಂತಿದಳದ ಸುಳಿವೇ ಇರಲಿಲ್ಲ! ಬೇಹುಗಾರರಿಂದ ಸುದ್ಧಿ ಬಂತು, ಕ್ರಾಂತಿದಳ ಹದಿಮೂರು ಮೈಲಿ ಮುಂದೆ ಸಾಗಿದೆ ಎಂದು.

ಇತ್ತ ಕುವರಸಿಂಹನು ಸಿಕಂದರಪುರವನ್ನು ಬಳಸಿಕೊಂಡು ಗೋಗ್ರ ನದಿಯನ್ನು ದಾಟಿ ಗಾಜಿಪುರ ಪ್ರಾಂತವನ್ನು ಪ್ರವೇಶಿಸಿ ಮುನ್ನಡೆಯಲಸಾಧ್ಯವಾದ್ದರಿಂದ ಮನಹರ್ ಗ್ರಾಮದಲ್ಲಿ ಸೈನಿಕರಿಗೆ ವಿಶ್ರಮಿಸಿಕೊಳ್ಳಲು ಅವಕಾಶವಿತ್ತು. ತಾನು ಮಾತ್ರ ಮೈಯೆಲ್ಲ ಕಣ್ಣು ಮಾಡಿಕೊಂಡು ಶತುವಿನ ದಾಳಿಯನ್ನು ಎದುರಿಸಲು ಸಿದ್ಧನಾಗಿ ಕಾದಿದ್ದ.

ಡಾಗ್ಲಾಸನಿಗೆ ಸಮಾಚಾರ ತಿಳಿದ ಕೂಡಲೇ ನಾಗಾಲೋಟದಿಂದ ಹಿಂಬಾಲಿಸಿದ್ದ. ಮನಹರಪುರದಲ್ಲಿ ವಿಶ್ರಮಿಸಿಕೊಳ್ಳುತ್ತಿದ್ದ ಕ್ರಾಂತಿದಳದವರ ಮೇಲೆ ಆಕ್ರಮಣ ನಡೆಸಿದ. ಅಗ್ನಿ ಪರೀಕ್ಷೆಯ ಕಾಲ, ಕುವರಸಿಂಹನ ಕಡೆಯವರು ಸೋತುಹೋದರು. ಆದರೆ ಕುವರ ಸಿಂಹನು ಧೃತಿಗೆಡಲಿಲ್ಲ. ಎಂದಿನಂತೆ ತನ್ನ ತಂತ್ರವನ್ನು ಪ್ರಯೋಗಿಸಿದ. ಕೆಲವರನ್ನು ಮಾತ್ರ ಹೋರಾಡಲು ಬಿಟ್ಟು ಗುಟ್ಟಾಗಿ ಉಳಿದವರನ್ನು ಸಂತಿವಾರ್ ಗ್ರಾಮಕ್ಕೆ ಸಾಗಿಸಿ ಬಿಟ್ಟಿದ್ದ. ಸೈನ್ಯಕ್ಕೆ ಸೇರಿದ ಆಹಾರ ಸಾಮಗ್ರಿಗಳನ್ನು ಬಿಟ್ಟರೆ ಡಾಗ್ಲಾಸನಿಗೆ ಮತ್ತೇನೂ ದೊರೆಯಲಿಲ್ಲ. ಸಿಂಹ ತಪ್ಪಿಸಿಕೊಂಡಿತ್ತು.

‘ಇದೋ ನಿನ್ನ ಮಗನ ಕಾಣಿಕೆ!’

ಡಾಗ್ಲಾಸನ ಗುಪ್ತದಳದವರು ಸುದ್ದಿ ತಂದರು. ‘ಕುವರಸಿಂಹನಿಗೆ ಸಾಕಷ್ಟು ದೋಣಿಗಳು ಸಿಕ್ಕಲಿಲ್ಲ. ಆನೆಯ ಮೇಲೆ ರಾತ್ರಿ ಸೈನ್ಯವನ್ನು ಸಾಗಿಸಲು ಮತ್ತು ಗಂಗೆಯನ್ನು ದಾಟಲು ನಿಶ್ಚಯಿಸಿದ್ದಾನೆ. ಬಲಿಯಾ ಎಂಬಲ್ಲಿ ನೀರು ಆಳವಿಲ್ಲವಾದ್ದರಿಂದ ಅಲ್ಲಿಂದಲೇ ಗಂಗೆಯನ್ನು ದಾಟುವನು’ ಎಂದು. ಇನ್ನೇನು ಹಿಂದಿನಿಂದ ಆಕ್ರಮಣ ವೆಸಗಿ ಕುವರಸಿಂಹನನ್ನು ಗಂಗೆಯಲ್ಲುರುಳಿಸಬಹುದೆಂದು ನಿಶ್ವಯಿಸಿ ಡಾಗ್ಲಾಸನು ತನ್ನ ವೀರ ಪಡೆಯನ್ನು ಬಲಿಯಾಕ್ಕೆ ಕೊಂಡೊಯ್ದು ಕಾದು ಕುಳಿತಿದ್ದ. ಕುವರಸಿಂಹನ ತಂತ್ರ ಇಲ್ಲೂ ಜಯ ಗಳಿಸಿತು.

ಇತ್ತ ಶಿವಪುರ ಎಂಬಲ್ಲಿ ತನಗೆ ಬೇಕಾದಷ್ಟು ದೋಣಿಗಳನ್ನು ಸಂಗ್ರಹಿಸಿಕೊಂಡು ಗಂಗೆಯನ್ನು ದಾಟುವುದರಲ್ಲಿ ಕುವರಸಿಂಹ ತೊಡಗಿದ್ದ. ಒಂದೆರಡು ಕ್ಷಣಗಳು ದೊರೆತಿದ್ದರೆ ಕುವರಸಿಂಹ ಗಂಗೆಯನ್ನು ದಾಟಿಯೂ ಬಿಡುತ್ತಿದ್ದ. ಅಷ್ಟರಲ್ಲಿ ಸುದ್ದಿ ತಿಳಿದ ಡಾಗ್ಲಾಸನು ಸಿಟ್ಟಿನಿಂದ ಸಿಡಿಮಿಡಿ ಗುಟ್ಟುತ್ತಾ ಅಲ್ಲಿಗೆ ಧಾವಿಸಿ ಬಂದ. ಕುವರ ಸಿಂಹನ ದೋಣಿ ಗಂಗೆಯ ಮಡಿಲಿನಲ್ಲಿ ತೇಲುತ್ತಿತ್ತು. ಅಷ್ಟರಲ್ಲಿ ಶತ್ರುವಿನ ಗುಂಡೊಂದು ಅವನ ಕೈಗೆ ತಗುಲಿತು. ತತ್ ಕ್ಷಣವೇ ಒರೆಯಿಂದ ಕತ್ತಿಯನ್ನು ಹಿರಿದು ಗುಂಡು ತಗುಲಿದ ಕೈಯನ್ನು ಕತ್ತರಿಸಿ ಗಂಗಾಮಾಯಿ! ಇದೋ ನಿನ್ನ ಮಗನ ಕಾಣಿಕೆ ಎಂದು ಎಸೆದು ದಡ ಸೇರಿದ. ಈ ದೃಶ್ಯವನ್ನು ನೋಡಿದ ಕುವರಸಿಂಹನ ಅನುಯಾಯಿಗಳು ಕಣ್ಣೀರು ಸುರಿಸತೊಡಗಿದರು. ಆಗ ಗಂಭೀರ ಧ್ವನಿಯಲ್ಲಿ ಕುವರಸಿಂಹ ಹೇಳಿದ “ಭಾರತಮಾತೆಯ ವೀರ ಪುತ್ರರೇ! ಯುದ್ಧದಲ್ಲಿ ಇದು ಸಾಮಾನ್ಯ. ತಲೆ ಕಳಚಿ ಬಿದ್ದರೂ ಧೃತಿಗೆಡಬಾರದು. ನನ್ನ ಧಮನಿಯಲ್ಲಿ ಒಂದು ಹನಿ ರಕ್ತವಿರುವವರೆಗೂ ಭಾರತಮಾತೆಯ ವಿಮೋಚನೆಗಾಗಿ ಹೋರಾಡುವೆನು. ನನ್ನ ಅನುಯಾಯಿಗಳಾದ ನೀವೂ ಸಹ ಹೋರಾಡುವಿರೆಂದು ನಂಬಿದ್ಧೇನೆ.

ಸ್ವಾತಂತ್ರ್ಯದ ಧ್ವಜ ಹಾರಿತು

ಡಾಗ್ಲಾಸನು ಕೈ ಕೈ ಹಿಸುಕಿಕೊಳ್ಳುತ್ತ ಈಚೆಯ ದಂಡೆಯ ಮೇಲೆ ನಿಂತಿದ್ದ. ಸಿಂಹ ತನ್ನ ಕಾಡಿಗೆ ಮರಳಿ ಬಂದಿತ್ತು! ಏಪ್ರಿಲ್ ೨೨ ರಂದು ಎಂಟು ತಿಂಗಳ ಬಳಿಕ ಬ್ರಿಟಿಷರಿಗೆ ಚಳ್ಳೆ ಹಣ್ಣು ತಿನ್ನಿಸಿ, ಅನೇಕ ಕಡೆ ಸೋಲಿಸಿ, ವೀರ ಕುವರ ಸಿಂಹ ಜಗದೀಶಪುರವನ್ನು ಪ್ರವೇಶಿಸಿ ಅರಮನೆಯ ಮೇಲೆ ಸ್ವತಂತ್ರ ಧ್ವಜವನ್ನು ಹಾರಿಸಿದ. ಇತ್ತ ಅವನ ತಮ್ಮ ಅಮರಸಿಂಹ ತನ್ನಪಡೆಯನ್ನು ತಂದು ನಗರದ ಕಾವಲನ್ನು ಬಲಪಡಿಸಿದ. ಮತ್ತೊಮ್ಮೆ ಸ್ವತಂತ್ರವೀರರು ೧೮೫೮ನೇ ಏಪ್ರಿಲ್ ೨೧ ರಂದು ಸೇರಿದ್ದರು – ಸ್ವತಂತ್ರ ವಾತಾವರಣದಲ್ಲಿ.

ಆಕಾಶದಲ್ಲಿ ಸ್ವತಂತ್ರ ಬಾವುಟವು ಹಾರುತ್ತಿರುವುದನ್ನು ನೋಡುತ್ತಾ ಡಾಗ್ಲಾಸನು ವಿಜಯದ ಮಂಡಿಗೆ ಕನಸಿನ ಮಂಡಿಗೆ ಆಯಿತು ಎಂದು ಕುಳಿತಿದ್ದ.

ಕಸಾಯಿ ಖಾನೆಯ ಕುರಿಮಂದೆಯದೆವೆ!

ಏಪ್ರಿಲ್ ೨೩ ರಂದು ಜನರಲ್ ಲೀಗ್ರಾಂಡ್ ಜಗದೀಶಪುರದ ಮೇಲೆ ದಾಳಿ ಮಾಡಿದ. ಕುವರ ಸಿಂಹನದ್ದು ಹರಕು ಮುರುಕು ಸೈನ್ಯ. ತುಪಾಕಿಗಳು ಇರಲೇ ಇಲ್ಲ. ಇದ್ದ ಸಿಪಾಯಿಗಳು ನಿರಂತರ ಹೋರಾಟದಿಂದ ಬಳಲಿ ಬೆಂಡಾಗಿದ್ದರು. ಸಂಖ್ಯೆಯಲ್ಲಿ ಶಕ್ತಿ ಸಾಮರ್ಥ್ಯದಲ್ಲಿ ಶಸ್ತ್ರಾಸ್ತ್ರಗಳ ಸಜ್ಜಿಕೆಯಲ್ಲಿ ಬ್ರಿಟಿಷರ ಕೈ ಅನಂತಪಟ್ಟು ಮೇಲಿತ್ತು. ಆದರೆ ಕುವರಸಿಂಹನ ಸೈನಿಕರು ದೇಶಭಕ್ತಿಯ ಕಿಡಿಗಳಾಗಿದ್ದರು, ಉರಿಕಾರುವ ತುಪಕಿಯನ್ನು ಲೆಕ್ಕಿಸದೇ ಮುನ್ನುಗ್ಗಿ ಕಾದಾಡಿದರು. ಹರೇಕೃಷ್ಣ ಮತ್ತು ಅಮರಸಿಂಹರೊಂದಿಗೆ ಬಲಗೈ ಇಲ್ಲದ ಕುವರಸಿಂಹ ರಣರಂಗದಲ್ಲಿ ತಾಂಡವವಾಡತೊಡಗಿದ. ಬ್ರಿಟಿಷ್ ಸೈನಿಕರು ರಣಚಂಡಿಗೆ ತಮ್ಮ ರುಂಡವನ್ನು ಬಲಿಕೊಟ್ಟರು. ಲೀಗ್ರಾಂಡನು ಈ ಅಮಾನುಷ ಹಾಗೂ ಊಹಾತೀತ ಸಾಹಸವನ್ನು ಬೆರಗಾಗಿ ನೋಡುತ್ತಿದ್ದ. ಅಮರಸಿಂಹನ ಕತ್ತಿ ಅವನ ಕಂಠವನ್ನಪ್ಪಿತ್ತು. ಧರಾಶಾಯಿಯಾದ ಲೀಗ್ರಾಂಡನ ಸೈನ್ಯ ಓಡಿ ಹೋಯಿತು! ಬ್ರಿಟಿಷ್ ಸೈನ್ಯ ಹಿಮ್ಮೆಟ್ಟಿತು. ಆಗ ಪ್ರಾಣವನ್ನುಳಿಸಿಕೊಂಡು ಓಡಿಹೋಗಿದ್ದ ಸೈನಿಕನೊಬ್ಬನು ಬರೆದಿಟ್ಟಿರುವ ವಿವರ ರೋಮಾಂಚಕಾರಿಯಾಗಿದೆ. ಅಂತಹ ಯುದ್ಧವನ್ನು ನಾನು ಕಂಡೇ ಇರಲಿಲ್ಲ. ಕಸಾಯಿಖಾನೆಗೆ ಕುರಿಯ ಮಂದೆಯನ್ನು ತಂದು ಬಿಟ್ಟಂತಾಗಿತ್ತು ನಮ್ಮ ಪಾಡು.

 

ಕುವರಸಿಂಹ ರಣರಂಗದಲ್ಲಿ

ಒಟ್ಟಿನಲ್ಲಿ ಮುಂದಿನಿಂದ ಕುವರಸಿಂಹ, ಹಿಂದಿನಿಂದ ಅಮರಸಿಂಹ ಇಬ್ಬರೂ ಬ್ರಿಟಿಷರನ್ನು ತದುಕಿ ಸದೆ ಬಡಿದಿದ್ದರು. ಜಗದೀಶಪುರದ ಸರಹದ್ದಿನಲ್ಲಿ ಪರಂಗಿಗಳು ಹೇಳ ಹೆಸರಿಲ್ಲದಂತಾಗಿದ್ದರು! ಆ ಯುದ್ಧದಲ್ಲಿ ಸತ್ತ ಶಿಖ್ಖರ ಸಂಖ್ಯೆ ಕೇವಲ ಒಂಬತ್ತು. ಸಾಯದೆ ಓಡಿಹೋಗಿ ಪ್ರಾಣ ಉಳಿಸಿಕೊಂಡ ಬ್ರಿಟಿಷ್ ಸೈನಿಕರ ಸಂಖ್ಯೆ ಎಂಬತ್ತು ಮಾತ್ರ.

ಮತ್ತೆ ವಿಜಯವಧು ವಯೋವೃದ್ಧ ಯುದ್ಧತಂತ್ರಜ್ಞ ಕುವರಸಿಂಹನ ಕೈ ಹಿಡಿದಳು. ಸ್ವಾತಂತ್ರ್ಯ ಪತಾಕೆಯೊಡನೆ ಕೀರ್ತಿಪತಾಕೆಯನ್ನು ಮುಗಿಲೆತ್ತರ ಹಾರಿಸುತ್ತಾ ಅರಮನೆಯಲ್ಲಿ ಕಾಲಿಟ್ಟ ರಜಾ ಕುವರಸಿಂಹನನ್ನು “ಸ್ವತಂತ್ರ ಸೇನಾನೀ ಕೀ ಜೈ” “ರಾಣಾ ಕುವರಸಿಂಹಕೀ ಜೈ” ಎಂದು ಘೋಷಣೆಗಳೊಡನೆ ಜಗದೀಶಪುರದ ಸ್ವತಂತ್ರ ನಾಗರಿಕರು ಸ್ವಾಗತಿಸಿದರು.

ಅಮರ ದೇಶಪ್ರೇಮಿ

ಸ್ವಧರ್ಮ, ಸ್ವರಾಜ್ಯಕ್ಕಾಗಿ ಹೋರಾಡಲು ರಣಕಹಳೆಯನ್ನು ಸಮಯವರಿತು ಮೊಳಗಿದ ಸ್ವಾತಂತ್ರ್ಯ ವೀರ, ಕಿರುಕುಳ ಯುದ್ಧಪ್ರವೀಣ, ಬ್ರಿಟಿಷರ ಜಂಬವನ್ನಡಗಿಸಿ, ಅವರಿಗೆ ಸಿಂಹ ಸ್ವಪ್ನದಂತಿದ್ದ ಕುವರಸಿಂಹ ಸ್ವತಂತ್ರ ಜನ್ಮಭೂಮಿಯಲ್ಲಿ, ತನ್ನರಮನೆಯಲ್ಲಿ, ಸ್ವಾತಂತ್ರ್ಯದ ಧ್ವಜದಡಿಯಲ್ಲಿ ೧೮೫೮ನೇ ಏಪ್ರಿಲ್ ೨೬ರಂದು ವೀರಸ್ವರ್ಗವನೈದಿದ. ಅದಕ್ಕೆ ಮುಂಚೆ ಅಮರ ಸಿಂಹನನ್ನು ತನ್ನ ಉತ್ತರಾಧಿಕಾರಿ ಎಂದೂ, ಹರೇಕೃಷ್ಣನನ್ನು ಸೇನಾಧಿಪತಿ ಎಂದೂ ಘೋಷಿಸಿದ್ದ.

ಅಕಲಂಕ ಚಾರಿತ್ರ್ಯ, ಗಂಭೀರ ಸ್ವಭಾವ, ಸಮಯ ಸ್ಪೂರ್ತಿ, ಕೆಚ್ಚೆದೆಯ ಸಾಹಸಿ. ಶತ್ರುವೂ ಕೂಡ ತಲೆ ಬಾಗಬೇಕು, ತಲೆ ತೂಗಬೇಕು ಅಂತಹ ವ್ಯಕ್ತಿತ್ವ ಕುವರ ಸಿಂಹನದು.

ಅವನ ಸ್ವಾತಂತ್ರ್ಯ ಪ್ರೇಮವನ್ನು ಮತ್ತು ದೇಶಭಕ್ತಿಯನ್ನು ಹಾಗೂ ಧರ್ಮರಕ್ಷಣೆಯಲ್ಲಿದ್ದ ದೀಕ್ಷೆಯನ್ನು ಜಾನಪದ ಕವಿವಾಣಿ ಜಗತ್ತಿಗೆ ಸಾರುತ್ತಿದೆ. ಭಾರತೀಯ ಜನಕೋಟಿ ಅಭಿಮಾನದಿಂದ ಅವನ ಕಥೆಯನ್ನು ಕೇಳಿ ಹೆಮ್ಮೆ ಪಡುತ್ತಿದೆ.