ತನ್ನ ವ್ಯಕ್ತಿವಿಶಿಷ್ಟವಾದ ಧ್ವನಿಯಿಂದ, ಉಜ್ವಲವಾದ ತೇಜಸ್ಸಿನಿಂದ, ವೈವಿಧ್ಯ ಹಾಗೂ ವಿಸ್ತಾರಗಳಿಂದ ಮತ್ತು ಲೋಕಾಕರ್ಷಕವಾದ ಲಕ್ಷಣಗಳಿಂದ ಕುವೆಂಪು ಅವರ ಕವಿತೆ, ಇಪ್ಪತ್ತನೆಯ ಶತಮಾನದ ಕನ್ನಡ ಕಾವ್ಯದ ಒಂದು ಮಹತ್ವದ ಭಾಗವಾಗಿದೆ. ಮಲೆನಾಡಿನ ಅಪ್ರತಿಷ್ಠಿತ ಸಾಮಾಜಿಕ ನೆಲೆಯಿಂದ ಹುಟ್ಟಿಬಂದ, ಆ ಮಲೆನಾಡಿನ ಪರ್ವತಾರಣ್ಯ ಚೈತನ್ಯದ ಮೊದಲ ಪ್ರತಿನಿಧಿ ಎಂಬಂತೆ ತೋರುವ ಈ ಕವಿ, ತನ್ನ ಅಭಿವ್ಯಕ್ತಿಯನ್ನು ಮೊಟ್ಟಮೊದಲಿಗೆ ಕಂಡುಕೊಂಡದ್ದು ಕನ್ನಡದಲ್ಲಿ ಅಲ್ಲ–ಇಂಗ್ಲಿಷಿನಲ್ಲಿ ಎನ್ನುವುದು ಸ್ವಾರಸ್ಯದ ಸಂಗತಿಯಾಗಿದೆ. ಈ ದಿನ ಕನ್ನಡ ಸಾಹಿತ್ಯವಿಮರ್ಶೆ ಕುವೆಂಪು ಅವರನ್ನು ನವೋದಯ ಸಾಹಿತ್ಯ ಸಂದರ್ಭದ ಪ್ರಮುಖ ಸಾಹಿತಿ ಎಂದು ವರ್ಣಿಸುವುದಾದರೂ, ಅವರ ಕಾವ್ಯಾಭಿವ್ಯಕ್ತಿಯ ಮೊದಲ ದಿನಗಳಲ್ಲಿ ಅವರ ಜೀವನ ವಾಹಿನಿ, ನವೋದಯದ ಮುಖ್ಯ ಪ್ರವಾಹಕ್ಕೆ ಸಮಾನಾಂತರವಾದ ದೂರದಲ್ಲಿಯೆ ಹರಿಯುತ್ತ ತನ್ನ ಪಾಡಿಗೆ ತಾನು ತನ್ನದಲ್ಲದ ಭಾಷೆಯೊಂದರಲ್ಲಿ ತನ್ನ ಅಭಿವ್ಯಕ್ತಿಯನ್ನು ಕಂಡುಕೊಳ್ಳುತ್ತಿತ್ತು. ಈ ಪ್ರಯತ್ನದ ಪರಿಣಾಮವಾಗಿ, ಅವರಿನ್ನೂ ಮೈಸೂರಿನ ವೆಸ್ಲಿಯನ್ ಮಿಷನ್ ಹೈಸ್ಕೂಲಿನ ಎಸ್.ಎಸ್.ಎಲ್.ಸಿ. ತರಗತಿಯ ವಿದ್ಯಾರ್ಥಿಯಾಗಿರುವಾಗಲೆ, ಅಂದರೆ ತಮ್ಮ ಹದಿನೆಂಟನೆಯ ವಯಸ್ಸಿನಲ್ಲಿ  The Beginner’s Muse ಎಂಬ ಹದಿನಾರು ಪುಟಗಳ ಇಂಗ್ಲಿಷ್ ಭಾಷೆಯ ಕಿರುಕವನ  ಸಂಗ್ರಹವನ್ನು ಪ್ರಕಟಿಸಿ, ತಮ್ಮ ಸಹಪಾಠಿಗಳನ್ನೂ ಅಧ್ಯಾಪಕರನ್ನೂ ಚಕಿತಗೊಳಿಸಿದರೆಂಬುದನ್ನು ನೆನೆದರೆ, ಅವರ ಅದಮ್ಯವಾದ ಕಾವ್ಯಪ್ರತಿಭೆ, ತಾನು ಯಾವ ನೆರವು ನಿರ್ದೇಶನಗಳೂ ಇಲ್ಲದೆ ಇಂಗ್ಲಿಷ್ ಸಾಹಿತ್ಯದೊಡನೆ ಹೋರಾಡಿ ನಿರಂತರ ಅಧ್ಯಯನದ ಮೂಲಕ ಕಷ್ಟಪಟ್ಟು  ಕರಗತಮಾಡಿಕೊಂಡ ಇಂಗ್ಲಿಷ್ ಭಾಷಾಮಾಧ್ಯಮದಲ್ಲಿ ತನ್ನನ್ನು ತಾನು ಅಭಿವ್ಯಕ್ತಪಡಿಸಿಕೊಳ್ಳಲು  ಹವಣಿಸುತ್ತಿತ್ತು ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ. ಮಲೆನಾಡಿನ ಕಾಡಿನ ಹಳ್ಳಿಯ ಹುಡುಗನೊಬ್ಬ ಮೈಸೂರಿನ ಇಂಗ್ಲಿಷ್ ಭಾಷಾಮಾಧ್ಯಮದ ಪ್ರೌಢಶಾಲೆಯ ದಿನಗಳಲ್ಲಿ ತನ್ನದಲ್ಲದ ಭಾಷೆಯಾದ ಇಂಗ್ಲಿಷಿನಲ್ಲಿ ಪದ್ಯ ಬರೆಯುವಷ್ಟು ಹಿಡಿತವನ್ನು ಸಾಧಿಸಿಕೊಂಡದ್ದು ನಿಜಕ್ಕೂ ಸೋಜಿಗದ ಸಂಗತಿಯಾಗಿದೆ. ಆಗ ಪ್ರಕಟವಾದ ಇಂಗ್ಲಿಷ್ ಕವನ ಸಂಕಲನದ ಮೊದಲ ಕವಿತೆಯೆ ಈ ‘ಸೋಜಿಗ’ವನ್ನು ಧೃಡಪಡಿಸುವುದರ ಜತೆಗೆ, ತನ್ನದಲ್ಲದ ಭಾಷೆಯಲ್ಲಿ ಕವನವನ್ನು ಬರೆಯಲಾಶಿಸುವ ಸೂಕ್ಷ  ಸಂವೇದನಾಶೀಲನಾದ ಕವಿಯೊಬ್ಬ ಎದುರಿಸಬೇಕಾಗಿ ಬಂದ ಸಾಂಸ್ಕೃತಿಕ ಬಿಕಟ್ಟುಗಳನ್ನು ಪ್ರಕಟಿಸುತ್ತದೆ. ಕವಿತೆಯ ಪ್ರಾರಂಭ ಹೀಗಿದೆ:

Dishearten not my friends this bard unknown
Holds an alien harp and not his own!

ಈ ಪಂಕ್ತಿಗಳು ಮೊಟ್ಟಮೊದಲು ರಂಗಪ್ರವೇಶ ಮಾಡಿದ ಸೂತ್ರಧಾರನ ನಾಂದೀ ಪದ್ಯದಂತಿವೆ. ಈ ಕವಿತೆಯ ಹಾಡುಗಾರನ ಪ್ರತೀಕ, ಅವನ ಉಕ್ತಿ ಕ್ರಮ, ಅಸ್ಖಲಿತವಾದ ಕಾವ್ಯಪ್ರತಿಭೆಯ ಸಹಜಾಭಿವ್ಯಕ್ತಿಗೆ ಸಾಕ್ಷಿಯಾದರೂ, ಈ ತರುಣ ಕವಿಗೆ ಗೊತ್ತಿತ್ತು ಹಾಡಲೆಳಸುವ ತಾನು ತನ್ನ ಕೈಯ್ಯಲ್ಲಿ ಹಿಡಿದಿರುವುದು, ತನ್ನದಲ್ಲದ–ಪರಕೀಯವಾದ (Alien) ತಂತೀವಾದ್ಯ (harp) ಎಂಬ ಸತ್ಯ. ಆದ್ದರಿಂದಲೇ ಸಹೃದಯನಾದ ಗೆಳೆಯನೊಬ್ಬನಿಗೆ ಸಮಾಧಾನವನ್ನು ಹೇಳುವ ಧಾಟಿಯಲ್ಲಿ ಈ ಅಜ್ಞಾತ ಕವಿ (this bard unknown) ತನ್ನ ಅಧೈರ್ಯವನ್ನು ತಾನೇ ಕಂಡುಕೊಂಡು, ತನ್ನನ್ನೂ ಸಮಾಧಾನಪಡಿಸಿಕೊಳ್ಳುವ ಒಂದು ಬಗೆಯ ಅಳುಕಿನ ದನಿಯಲ್ಲಿ ಮಾತನಾಡುತ್ತಾನೆ. ಹಾಗಾದರೆ ತನ್ನದೆ ಆದ ಅಭಿವ್ಯಕ್ತಿಯನ್ನು ಯಾಕೆ ಕಂಡುಕೊಳ್ಳಲಾಗದೆ, ಪರಕೀಯವಾದ ವಾದ್ಯವೊಂದನ್ನು ಹಿಡಿದು ನಿಲ್ಲುವಂತಾಯಿತು? ಕಾರಣ, ಕುವೆಂಪು ಅವರೆ ತಮ್ಮ ಆತ್ಮಕಥನವಾದ ‘ನೆನಪಿನ ದೋಣಿ’ಯಲ್ಲಿ ಈ ಕುರಿತು ಪ್ರಸ್ತಾಪಿಸುವಂತೆ, ಅವರು ಬಿ.ಎ. ಪರೀಕ್ಷೆಯಲ್ಲಿ ತೇರ್ಗಡೆಯಾಗಿ ತಮ್ಮ ಇಪ್ಪತ್ತೆರಡನೆಯ ವಯಸ್ಸಿನಲ್ಲಿ ಮಹಾರಾಜಾ ಕಾಲೇಜಿನ ಎಂ.ಎ. ತರಗತಿಯನ್ನು ಸೇರುವವರೆಗೂ, ಅವರಿಗೆ ಅಂದಿನ ಯಾವೊಬ್ಬ ಸಾಹಿತಿಯ ಸಂಪರ್ಕವಾಗಲೀ, ಕನ್ನಡದಲ್ಲಿ ಹೊಸ ಸಾಹಿತ್ಯ ಚಳುವಳಿಯೊಂದು ಪ್ರಾರಂಭವಾಗಿದೆ ಎಂಬುದಾಗಲಿ ಗೊತ್ತೇ ಇರಲಿಲ್ಲ. ಜತೆಗೆ ಪ್ರೌಢಶಾಲೆ ಹಾಗೂ ಕಾಲೇಜಿನ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಸಂದರ್ಭದಲ್ಲಿ ಅವರಿಗೆ ಪರಿಚಿತವಾದ ಹಾಗೂ ಮನಸ್ಸನ್ನು ಸೂರೆಗೊಂಡ ಪಶ್ಚಿಮದ ಕಾವ್ಯಾಭಿವ್ಯಕ್ತಿಯ ಮಾದರಿಗಳಿಗೆ ಹೋಲಿಸಿದರೆ, ತಮ್ಮ ಮಲೆನಾಡಿನ ಪರಿಸರದಲ್ಲಿ ತಮ್ಮ ಎಳೆಯಂದಿನಿಂದ ಕಿವಿಯ ಮೇಲೆ ಆಗಾಗ ಬೀಳುತ್ತಿದ್ದ ಷಟ್ಪದಿ, ಕಂದವೃತ್ತಾದಿ ಬಂಧಗಳು, ತಾವು ಹೇಳಲಾಶಿಸುವ ಅನುಭವಗಳಿಗೆ ತಕ್ಕ ಮಾಧ್ಯಮವಾಗಲಾರವು ಎಂಬ ಅರಿವಿನಿಂದ ಅವರು ಇಂಗ್ಲಿಷ್ ಭಾಷೆಯನ್ನು ಮೊದಲಿಗೆ ತಮ್ಮ ಕಾವ್ಯಾಭಿವ್ಯಕ್ತಿಯ ಮಾಧ್ಯಮವನ್ನಾಗಿ ಮಾಡಿಕೊಂಡು ಬಹುಸಂಖ್ಯೆಯ ಪ್ರಯೋಗಗಳನ್ನು ಮಾಡಿದ್ದಾರೆ. ‘ನೆನಪಿನ ದೋಣಿಯಲ್ಲಿ’ ಎಂಬ ಅವರ ಸ್ವಾನುಭವ ಕಥನದ ಬೃಹತ್ ಸಂಪುಟದಲ್ಲಿ ಅವರು ಬರೆದ ಬಹುಸಂಖ್ಯೆಯ ಇಂಗ್ಲಿಷ್ ಕವನಗಳನ್ನು ಕಾಣಬಹುದು. ಈ ಕವಿತೆಗಳು ಅವರು ಅನಂತರ ಬರೆದ ಕನ್ನಡದ ಶ್ರೇಷ್ಠ ಕವಿತೆಗಳ ಮುಂದೆ ನಿಲ್ಲಲಾರವೆಂಬುದು ನಿಜವಾದರೂ, ಅವರು ಬರೆದ ಇಂಗ್ಲಿಷ್ ಭಾಷೆಯ ಬಹು ಸಂಖ್ಯೆಯ ಕವಿತೆಗಳೊಳಗಿನ ಭಾಷಾಪ್ರಭುತ್ವ ಹಾಗೂ ಬಂಧ ಯಾರನ್ನೂ ಬೆರಗುಗೊಳಿಸು ವಂಥದಾಗಿದೆ. ಅಷ್ಟೆ ಅಲ್ಲ, ಅವರು ಕನ್ನಡದಲ್ಲಿ ಆವಿಷ್ಕಾರಗೊಳಿಸಿದ ವಿವಿಧ ಕಾವ್ಯಪ್ರಕಾರಗಳಿಗೆ ಪ್ರೇರಣೆ-ಮಾದರಿ ಹಾಗೂ ಸ್ಫೂರ್ತಿಯನ್ನೊದಗಿಸಿದ ಮೊದಲ ಕಾವ್ಯ ಪ್ರಯೋಗಶಾಲೆಯಂತೆ ತೋರುತ್ತದೆ, ಅವರು ಕನ್ನಡಕ್ಕೆ ತಿರುಗುವ ಮುನ್ನಿನ ಈ ಕಾವ್ಯ ಸಂದರ್ಭ. ಅಂತೂ ಕುವೆಂಪು ಕನ್ನಡದಲ್ಲಿ ಬರೆಯುವ ಮೊದಲೇ–ಇಂಗ್ಲಿಷಿನಲ್ಲಿ ಬರೆದು ‘ಕವಿ’ಯಾಗಿ ಹೆಸರು ಮಾಡಿದ್ದರು. ಅವರನ್ನು ಸಂಪೂರ್ಣವಾಗಿ ಕನ್ನಡದ ಕಡೆ ತಿರುಗಿಸಿದ್ದು, ಐರಿಷ್ ಕವಿ ಜೆ.ಎಚ್. ಕಸಿನ್ಸ್  ಅವರೊಡನೆ ನಡೆದ ಮುಖಾಮುಖಿಯ ಸಂದರ್ಭ. ಅದು ಸಂಭವಿಸಿದ್ದು ೧೯೨೪ನೆ ಜುಲೈ ಎರಡನೆ ದಿನಾಂಕ.

Alien harpನ್ನು (ಪರಕೀಯ ತಂತೀವಾದ್ಯವನ್ನು) ಹಿಡಿದು, ಆ ಕಿರಿಯ ವಯಸ್ಸಿಗೆ ‘ಕವಿ’ ಎಂದು ಹೆಸರು ಮಾಡಿದ ಪುಟ್ಟಪ್ಪನವರಿಗೆ, ತಾವು ಹಿಡಿದ ಅಭಿವ್ಯಕ್ತಿಯ ದಾರಿ ನಿಜವಾಗಿಯೂ ತನ್ನದಲ್ಲದ್ದು ಮಾತ್ರವಲ್ಲ, ತನಗೆ ಸಲ್ಲದ್ದು ಕೂಡ ಎಂಬ ಸಂಗತಿಯನ್ನು ಖಚಿತಗೊಳಿಸಿದವರು, ಜೆ.ಎಚ್. ಕಸಿನ್ಸ್ ಅವರು. ಪುಟ್ಟಪ್ಪನವರು ಬರೆದ ಬಹು ಸಂಖ್ಯೆಯ ಇಂಗ್ಲಿಷ್ ಕವನಗಳ ಮೇಲೆ ಕಣ್ಣಾಡಿಸಿ, ‘ಏನಿದೆಲ್ಲ ಕಗ್ಗ’ (What is all this stuff?) ಎಂದು ಪ್ರತಿಕ್ರಿಯಿಸುವುದರ ಮೂಲಕ, ಅವರು ಇಂಗ್ಲಿಷ್ ಕವಿತಾ ರಚನೆಯ ಹೆಮ್ಮೆಯಿಂದ ಕಟ್ಟಿಕೊಂಡ ಭ್ರಮೆಗೆ ಬಲವಾದ ಆಘಾತವನ್ನುಂಟುಮಾಡಿದ್ದಲ್ಲದೆ, ‘ನೀವು ಏನು ಮಾಡಿದರೂ ನಿಮ್ಮದಲ್ಲದ ಭಾಷೆಯಲ್ಲಿ ನಿಮ್ಮ ಅಭಿವ್ಯಕ್ತಿಯನ್ನು ಕಂಡುಕೊಳ್ಳಲಾರಿರಿ; ಅದರಲ್ಲೂ ಕವಿತೆಯಂಥ ಸೃಜನಾತ್ಮಕ ಅಭಿವ್ಯಕ್ತಿಯಂತೂ ನಿಮ್ಮದಲ್ಲದ ಪರಕೀಯ ಭಾಷೆಯಲ್ಲಿ ನಿಮಗೆ ಸಾಧ್ಯವೇ ಇಲ್ಲ’– ಎಂಬ ವಿವೇಕದ ಮಾತುಗಳನ್ನಾಡಿ ಪುಟ್ಟಪ್ಪನವರನ್ನು ಅಂದಿನ ನವೋದಯದ ಮುಖ್ಯ ಪ್ರವಾಹದತ್ತ ತಿರುಗಿಸಿದವರು ಕಸಿನ್ಸ್. ಕಸಿನ್ಸ್ ಅವರನ್ನು ಭೇಟಿಯಾಗುವ ಮುನ್ನ ಈ ತರುಣ ಕವಿ ಕನ್ನಡದಲ್ಲಿ ಏನನ್ನೂ ಬರೆಯಲು ಪ್ರಯತ್ನಿಸಿರಲಿಲ್ಲ ಎಂಬುದು ನಿಜವಲ್ಲವಾದರೂ, ಕನ್ನಡದಲ್ಲೂ ಇಂಗ್ಲಿಷಿನಲ್ಲೂ ಏಕಕಾಲಕ್ಕೆ ಬರೆದು ತಾನು ಸವ್ಯಸಾಚಿಯಾಗಬಹುದೇನೋ ಎಂಬ ಭ್ರಮೆಯನ್ನು ನಿರಸನಗೊಳಿಸಿದ್ದು ಈ ಮುಖಾಮುಖಿಯ ಪರಿಣಾಮವಾಗಿದೆ. ಈ ಒಂದು ಘಟನೆಯ ಅನಂತರ, ಕುವೆಂಪು ಅವರ ದಾಖಲೆಯಂತೆ ಜುಲೈ (೧೯೨೪) ಹತ್ತರ ನಂತರ “ಕನ್ನಡದಲ್ಲಿ ಬರೆಯುವ ಸ್ಫೂರ್ತಿಯ ಜೋರಿಗೆ ಸಿಕ್ಕಿ ಒಂದೆ ತಿಂಗಳಲ್ಲಿ ಅರವತ್ತೇಳು ಕವನಗಳು” (ನೆನಪಿನ ದೋಣಿಯಲ್ಲಿ ಪು. ೩೭೧. ೧೯೮೦) ರಚಿತವಾದುವೆಂದು ತಿಳಿದುಬರುತ್ತದೆ. ಕುವೆಂಪು ಕನ್ನಡದ ಕಡೆ ತಿರುಗಿದ ಈ ಸ್ಫೂರ್ತಿಯ ಪ್ರವಾಹದಲ್ಲಿ, ಅವರು ಅದುವರೆಗೂ ಹಿಡಿದುಕೊಂಡಿದ್ದ Alien harp ಕೊಚ್ಚಿಕೊಂಡು ಹೋದದ್ದಂತೂ ನಿಜ. ಅನಂತರ ಅವರ ಕೈಗೆ ಬಂದದ್ದು ಕೊಳಲು; ಮಲೆನಾಡಿನ ಕಾಡಿನ ಕೊಳಲು.

ಚಾರಿತ್ರಿಕವಾಗಿ ಗುರುತಿಸುವುದಾದರೆ ಕುವೆಂಪು ಅವರ ಮೊದಲ ಕನ್ನಡ ಕವನ ಸಂಗ್ರಹ ‘ಕೊಳಲು’. ಕನ್ನಡ ನವೋದಯದ ಆಚಾರ್ಯರೆಂದು ಹೇಳಲಾದ ಬಿ.ಎಂ. ಶ್ರೀಕಂಠಯ್ಯ ನವರ ಮುನ್ನುಡಿಯೊಂದಿಗೆ ೧೯೩೦ರಲ್ಲಿ ಪ್ರಕಟವಾದ ಈ ಸಂಗ್ರಹದಲ್ಲಿ, ಕುವೆಂಪು ೧೯೨೬ ರಿಂದ ೧೯೨೯ರವರೆಗೆ ಬರೆದ ಸಾಕಷ್ಟು ಸಂಖ್ಯೆಯ ಪದ್ಯಗಳಿವೆ. ಅಷ್ಟೆ ಅಲ್ಲ, ಮುಂದೆ ಅವರ ಕಾವ್ಯದ ಉದ್ದಕ್ಕೂ ಸ್ಥಾಯಿಯಾಗಿ ಕಾಣಿಸುವ ಅನೇಕ ಆಶಯಗಳನ್ನು   ಬೀಜರೂಪವನ್ನಾಗಿ ಉಳ್ಳ ಕವನ ಸಂಕಲನ ಇದಾಗಿದೆ. ಇವುಗಳಲ್ಲಿ ಮುಖ್ಯವಾದದ್ದು ಕುವೆಂಪು ತಮ್ಮನ್ನು ‘ಕಾಡ ಕವಿ’ (ಕಾಡಿನ ಕವಿ) ಎಂದು ಘೋಷಿಸಿಕೊಂಡಿದ್ದೂ ಒಂದು. ಈ ಸಂಕಲನದ ಮೊದಲ ಕವಿತೆಯಾದ ‘ಗೊಲ್ಲನ ಬಿನ್ನಹ’

ಕಾಡಿನ ಕೊಳಲಿದು ಕಾಡ ಕವಿಯು ನಾ
ನಾಡಿನ ಜನರೊಲಿದಾಲಿಪುದು
ಬೃಂದೆಯನಂದನ ಕಂದನೆ ಬಂದು
ಗೊಲ್ಲನ ಕೊಳಲಲಿ ನಿಂದಿಹನೆಂದು
ಭಾವಿಸಿ ಮನ್ನಿಸಿ ಲಾಲಿಪುದು

ಎಂದು ಪ್ರಾರಂಭವಾಗುತ್ತದೆ. ಈ ಪ್ರಸ್ತಾವನೆಯಲ್ಲಿ, ತನ್ನದಲ್ಲದ ಹಾಗೂ ಅನ್ಯದೇಶೀಯವಾದ ತಂತೀವಾದ್ಯವನ್ನು ಹಿಡಿದು ಕಾವ್ಯವೇದಿಕೆಯ ಮೇಲೆ ನಿಂತಂದಿನ ಅಳುಕಾಗಲೀ, ಅಧೈರ್ಯವಾಗಲೀ ಇಲ್ಲ. ಯಾಕೆಂದರೆ ಆ Alien harp ಅನ್ನು ವಿಸರ್ಜಿಸಿ, ಕಾಡಿನ ಕೊಳಲನ್ನು ಹಿಡಿದು ತನ್ನ ನಾಡಿನ ಜನರ ಮುಂದೆ ನಿಂತ ಈ ಕವಿ, ತನ್ನನ್ನು ‘ಕಾಡಿನ ಕವಿ’ ಎಂದು ಘೋಷಿಸಿಕೊಳ್ಳುವ ದನಿಯಲ್ಲಿ, ತನ್ನ ನಿಜವಾದ ನೆಲೆಯನ್ನು ಕಂಡುಕೊಂಡ ಆತ್ಮವಿಶ್ವಾಸವೂ, ತನ್ನದೇ ಆದ ಭಾಷೆಯಲ್ಲಿ ಸಹಜಾಭಿವ್ಯಕ್ತಿಯನ್ನು ಕಂಡುಕೊಂಡ ಸಂಭ್ರಮವೂ ಏಕಕಾಲಕ್ಕೆ ಕಾಣಿಸಿಕೊಂಡಿವೆ. ಹಾಗೆಯೆ ತನ್ನ ಈ ಕೊಳಲಿನಲ್ಲಿ ‘ಬೃಂದೆಯ ನಂದನ ಕಂದ’ನಾದ ಸಾಕ್ಷಾತ್ ಶ್ರೀ ಕೃಷ್ಣನೇ ನಿಂದು ವಿವಿಧ ರಾಗಗಳನ್ನು ನುಡಿಸುತ್ತಾನೆ ಎಂದು ಭಾವಿಸಿ, ಮನ್ನಿಸಿ ತನ್ನ ಕವಿತೆಯನ್ನು ಕೇಳಬೇಕೆಂದು ಕವಿ ಸಹೃದಯರಲ್ಲಿ ಬಿನ್ನವಿಸಿಕೊಳ್ಳುವ ಹಂಬಲವಿದೆ. ಈ ಒಂದು ನಿವೇದನೆಯ ಮೂಲಕ ಕವಿ ಕುವೆಂಪು ಈ ದೇಶದ ಭಕ್ತಿ ಹಾಗೂ ಅನುಭಾವಿ ಕವಿಗಳ ಅಹಂನಿರಸನದ ಕಾವ್ಯಶ್ರದ್ಧೆಯ ವ್ಯಕ್ತಿತ್ವದೊಂದಿಗೆ ತಮ್ಮನ್ನು ಸಮೀಕರಿಸಿಕೊಳ್ಳುತ್ತಾರೆ. ಕನ್ನಡ ಕಾವ್ಯರಂಗಪ್ರವೇಶದ ಧಾಟಿಯಲ್ಲಿರುವ ಈ ಪ್ರಸ್ತಾವನೆಯಲ್ಲಿ ಮುಖ್ಯವಾಗಿ ಗಮನಿಸಬೇಕಾದ ಮಾತೆಂದರೆ ‘ಕಾಡಿನ ಕವಿ’ ಎನ್ನುವುದು.

‘ತೆರೆ ತೆರೆಯೆದ್ದರಣ್ಯಶ್ರೇಣಿ’ಯ ಸಹ್ಯಾದ್ರಿಯ ಮಲೆನಾಡು ಕುವೆಂಪು ಅವರ ಜನ್ಮಭೂಮಿ; ಅವರ ಕರ್ಮಭೂಮಿ; ಅವರ ತಪೋಭೂಮಿ. ಕುವೆಂಪು ಬರುವ ಮುನ್ನ ಕೇವಲ ಕಾಡು-ಬೆಟ್ಟಗಳೆಂಬ ಭೌಗೋಲಿಕ ವಾಸ್ತವ ಮಾತ್ರವಾಗಿ ‘ಮಳೆ, ಸೊಳ್ಳೆ, ಮಲೇರಿಯಾ, ಹುಲಿ, ಹಾವು, ರೋಗ, ಸಾವು, ಭೂತ ಬೆಂತರಗಳ ಬೀಡಾಗಿ’, ‘ಭೂಮಿಯಲ್ಲಿ ಹುಟ್ಟಿದ್ದಕ್ಕೆ ಹೇಗಾದರೂ ಮಾಡಿ ನಿವಾರಿಸಿಕೊಳ್ಳಬೇಕಾದ ಒಂದು ದುರ್ಗಮ ದುರಂತ ಭೂಭಾಗ’ವಾಗಿದ್ದ ಮಲೆನಾಡು, ಕುವೆಂಪು ಅದರೊಳಗಿನ ಸಂಕಲ್ಪ ಶಕ್ತಿಯಂತೆ ಸಂಭವಿಸಿದ ಮೇಲೆ, ಹಠಾತ್ತನೆ ಅವರ ಕವಿಪ್ರತಿಭೆಯ ಮೂಲಕ ತನ್ನ ಅಸಂಖ್ಯ ವೈಭವಗಳ ಸಹಿತ ಪ್ರತ್ಯಕ್ಷವಾದ ಪರಿ ಆಶ್ಚರ್ಯಕರವಾಗಿದೆ. ಬೇರೆ ಮಾತಿನಲ್ಲಿ ಹೇಳುವುದಾದರೆ, ಸಹ್ಯಾದ್ರಿಯ ಪರ್ವತಾರಣ್ಯಪ್ರಪಂಚವೇ ತನ್ನ ಅಭಿವ್ಯಕ್ತಿಗಾಗಿ ಕುವೆಂಪು ಅವರಂಥ ಕವಿಯನ್ನು ಸೃಷ್ಟಿಸಿತೋ ಏನೋ! ಈ ಅರ್ಥದಲ್ಲಿ ಕುವೆಂಪು ‘ಕಾಡಿನ ಕವಿ’. ಅವರು ಮೂಲತಃ ‘ಕಾಡಿನ ಕವಿ’ ಎನ್ನುವುದೇ ಕನ್ನಡ ಸಾಹಿತ್ಯ ಸಂದರ್ಭದ ಇತರ ಪ್ರಮುಖ ಬರೆಹಗಾರರಿಂದ, ಅವರನ್ನು ಬೇರ್ಪಡಿಸುವ ಲಕ್ಷಣವಾಗಿದೆ. ಕನ್ನಡದಲ್ಲಿ ನಿಸರ್ಗವನ್ನು ಗಾಢವಾಗಿ ಒಲಿದ ಹಾಗೂ ಅದರ ಚೆಲುವನ್ನು ಕುರಿತು ಬರೆದ ಕವಿಗಳು ಹಲವರಿದ್ದಾರೆ. ಆದರೆ ಅವರ‍್ಯಾರೂ ಬಹುಶಃ ಕುವೆಂಪು ಅವರಂತೆ ಇಂಥ ದುರ್ಗಮ ಅರಣ್ಯಶ್ರೇಣಿಯ ದಟ್ಟವಾದ ಅನುಭವಗಳಲ್ಲಿ ಬೇರೂರಿ ಬೆಳೆದವರಲ್ಲ; ಮತ್ತು–ಕನ್ನಡದ ಮೊದಲ ಕವಿ ಪಂಪನನ್ನು ಹೊರತುಪಡಿಸಿದರೆ– ಯಾರೂ ಕುವೆಂಪು ಅವರಂತೆ ರಮ್ಯತೆಯಿಂದ ಮೊದಲುಗೊಂಡು ಭವ್ಯತೆಯವರೆಗಿನ, ಅರಣ್ಯ ನಿಸರ್ಗಾನುಭವಗಳನ್ನು ಗ್ರಹಿಸಿ ಅಭಿವ್ಯಕ್ತಿಸಿದವರಲ್ಲ. ಈ ಪರ್ವತಾರಾಣ್ಯ ಪ್ರಪಂಚದ ರುದ್ರ-ರಮಣೀಯ ಅದ್ಭುತ ಸೌಂದರ್ಯದ ಅನೇಕ ಪರಿಗಳನ್ನೂ, ಋತು ಋತುವಿಗೂ ಬದಲಾಗುವ ಅದರ ವರ್ಣ ವಿಲಾಸ ಹಾಗೂ ವೈಶಿಷ್ಟ ಗಳನ್ನೂ, ಅದರೊಳಗಿನ ಪ್ರಾಣಿ-ಪಕ್ಷಿ-ಕ್ರಿಮಿ-ಕೀಟಾದಿಗಳ ಚಹರೆ ಮತ್ತು ಚಲನವಲನ ಗಳನ್ನೂ, ಒಟ್ಟಾರೆಯಾಗಿ ಸಹ್ಯಾದ್ರಿಯ ಸಮಸ್ತ ಪರಿಸರವನ್ನೂ, ಬಯಲುನಾಡಿನವರೆಂದೂ ಕಾಣದ ಹಾಗೂ ಕೇಳದ ಮೃಗಯಾವಿನೋದದ ಸಾಹಸ ಕಥನಗಳನ್ನೂ, ನಗರ ನಾಗರೀಕತೆಗೆ ಅರಣ್ಯಸಂಸ್ಕೃತಿ ಮುಖಾಮುಖಿಯಾಗುವ ಸಂದರ್ಭಗಳನ್ನೂ, ಈ ನಿಬಿಡಾರಣ್ಯಗಳ ನಡುವೆ ಅದುವರೆಗೂ ಅನಾವರಣಗೊಳ್ಳದಿದ್ದ ಮಲೆನಾಡಿನ ಬದುಕಿನ ವೈವಿಧ್ಯ ಹಾಗೂ ಸಂಘರ್ಷಗಳನ್ನೂ ಮೊತ್ತ ಮೊದಲಬಾರಿಗೆ ತೆರೆದು ತೋರಿದವರು ಕುವೆಂಪು ಅವರೊಬ್ಬರೇ. ಆದರೆ ಅವರ ಕವಿತೆಯೊಳಗೆ ಪ್ರಕಟವಾಗುವ ನಿಸರ್ಗಾನುಭವವು, ಅವರ ಕತೆ ಕಾದಂಬರಿಗಳಲ್ಲಿ ವ್ಯಕ್ತವಾಗುವ ನಿಸರ್ಗಾನುಭವದಷ್ಟು ವಾಸ್ತವ ಬದುಕಿನ ಸ್ಪರ್ಶವನ್ನೂ, ವಿವರಗಳನ್ನೂ, ಸಮಗ್ರತೆಯನ್ನೂ ಪಡೆದುಕೊಂಡಿಲ್ಲವೆಂಬ ಮಾತನ್ನು ಒಪ್ಪಿಕೊಂಡರೂ, ಅವರ ಕಾವ್ಯದಲ್ಲಿ ಕವಿ ಕುವೆಂಪು ಏಕಾಂಗಿಯಾಗಿ ನಿಸರ್ಗದೊಂದಿಗೆ ನಡೆಯಿಸುವ ಅನುಸಂಧಾನವು ಅತ್ಯಂತ ಉತ್ಕಟವಾದದ್ದೂ, ಅನುರಕ್ತಿಯ ರೂಪದ್ದೂ, ಆರಾಧನೆಯ ಸ್ವರೂಪದ್ದೂ ಆಗಿದೆ. ನಿಸರ್ಗದೊಂದಿಗಿನ ಈ ಅನುರಕ್ತಿ ಅವರಿಗೆ ಜನ್ಮಜಾತವಾಗಿ ಬಂದದ್ದು. ‘ಮಲೆಯ ನಾಡೆನಗೆ ತಾಯಿಮನೆ, ಕಾಡು ದೇವರಬೀಡು’ ಎಂಬ ಶ್ರದ್ಧೆಯನ್ನುಳ್ಳ ಈ ಕವಿ ‘ಪ್ರಕೃತಿಯ ಉಪಾಸಕ’ನಾದದ್ದು ತೀರಾ ಸಹಜವಾಗಿದೆ. ತಮ್ಮ ನಿಸರ್ಗ ಕವಿತೆಗಳ ಮೂಲಕ ಪಶ್ಚಿಮದ ರೊಮ್ಯಾಂಟಿಕ್ ಕವಿಗಳನ್ನು ಕುವೆಂಪು ನೆನಪಿಗೆ ತರುವಂತೆ ತೋರಿದರೂ, ಮತ್ತು ಅವರಿಂದ ನಿಸರ್ಗ ಸೌಂದರ್ಯಾನುಭವಕ್ಕೆ ಕಾವ್ಯರೂಪದಲ್ಲಿ ಆಕಾರವನ್ನು ನೀಡುವ ವಿಧಾನವನ್ನು ಕಲಿತುಕೊಂಡರೂ, ಪಶ್ಚಿಮದ ರೊಮ್ಯಾಂಟಿಕ್ ಕವಿಗಳಂತೆ ಬದುಕಿನ ಬವಣೆಗೆ ಬೇಸತ್ತು ಅಥವಾ ಕೈಗಾರೀಕರಣ, ಯಾಂತ್ರೀಕರಣ, ನಗರೀಕರಣ ಇತ್ಯಾದಿ ಆಧುನಿಕ ಯುಗ ನಿರ್ಮಿತ ರೇಜಿಗೆ ಹಾಗೂ ಭ್ರಮೆಗಳಿಂದ ಪಾರಾಗಿ ಸಮಾಧಾನವನ್ನು ಕಂಡುಕೊಳ್ಳಲು ನಿಸರ್ಗದ ಕಡೆ ತಿರುಗಿದವರಲ್ಲ. ಹಾಗೆ ನೋಡಿದರೆ ಕುವೆಂಪು ಬರೆಯುವ ಕಾಲಕ್ಕೆ ಪಶ್ಚಿಮದ ರೊಮ್ಯಾಂಟಿಕ್ ಕವಿಗಳಿಗೆ ಅಂದು ಇದ್ದಂಥ ಪರಿಸ್ಥಿತಿ ನಮ್ಮಲ್ಲಿನ್ನೂ ಉಂಟಾಗಿರಲಿಲ್ಲ. ನಿಸರ್ಗದ ಬಗೆಗಿದ್ದ ಅವರ ಅನುರಕ್ತಿ, ಸದಾ ಅವರ ಸ್ಮ ತಿಯ ಒಂದು ಭಾಗವಾಗಿ, ನಿರಂತರ ಕಾಡುವ ಹಸಿವಾಗಿ, ದಾಹವಾಗಿ, ತನ್ನ ವ್ಯಕ್ತಿತ್ವದ ಒಂದು ವಿಸ್ತರಣೆಯಂತೆ ಕಣ್ಣೆದುರು ಚಾಚಿಕೊಂಡ ನಿಸರ್ಗದಲ್ಲಿ ಅವರನ್ನು ಏಕಾಂಗಿಯಾದ ರಸಯಾತ್ರಿಕನನ್ನಾಗಿ ಪರಿವರ್ತಿಸಿತು. ‘ಭೂಮಿಯ ಕವಿ ವ್ಯೋಮದ ರವಿ, ಪ್ರೇಕ್ಷಕರಿನ್ನೊಬ್ಬರ ಕಾಣೆ’ ಎಂಬಂಥ ನೆಲೆಯಲ್ಲಿ ನಿಂತು, ನಿಸರ್ಗದ ಚೆಲುವಿನ ವೈಭವದ ಮುಖಗಳನ್ನು ಕುರಿತು ಬರೆಯುತ್ತಲೆ, ಅವರು ಪಡೆದುಕೊಳ್ಳುವ ಅನುಭವಗಳು ಕೇವಲ ಸೌಂದರ್ಯಾನುಭವ ಮಾತ್ರವಾಗದೆ ಅದನ್ನೂ ಮೀರಿದ ಆಧ್ಯಾತ್ಮಿಕವಾದ ನೆಲೆಯನ್ನು ತಲುಪುತ್ತವೆ. ಧಾರ್ಮಿಕವಾಗಿ ನೋಡುವುದಾದರೆ ಅದು ಧ್ಯಾನ-ಪೂಜೆ- ಜಪತಪಾದಿಗಳ ಮೂಲಕ ಸಾಧಕನಾದವನು ತಲುಪಬಹುದಾದ ಪರಮಪ್ರಯೋಜನದ ಒಂದು ನೆಲೆ. ಕುವೆಂಪು ಈ ನಿಸರ್ಗ ಪ್ರೀತಿಯಿಂದ ಮನುಷ್ಯ, ಈ ಒಂದು ನೆಲೆಯನ್ನು ತಲಪಬಹುದೆಂಬುದನ್ನು ಒಂದು ಸಾಕ್ಷಾತ್ಕಾರವೆಂಬಂತೆ ಎತ್ತಿ ಹೇಳುತ್ತಾರೆ. ಈ ನಿಸರ್ಗದಲ್ಲಿ ‘ಸಕಲಾರಾಧನ ಸಾಧನ ಬೋಧನದನುಭವ ರಸ’ವನ್ನು ಪಡೆಯುವ ಕುವೆಂಪು, ಮನುಷ್ಯ ನಿರ್ಮಿತವಾದ ಗುಡಿ-ಚರ್ಚು-ಮಸೀದಿಗಳನ್ನು ನಿರಾಕರಿಸಿ ‘ಆವ ಗುಡಿ ಮಿಗಿಲು ಈ ಭುವನ ದೇವಾಲಯಕೆ?’ ಎಂಬ ನಿಲುವನ್ನು ಎತ್ತಿಹಿಡಿಯುತ್ತಾರೆ. ತೀರ ಗಮನಿಸಬೇಕಾದ ಸಂಗತಿಯೆಂದರೆ, ನಿಸರ್ಗದ ಚೆಲುವಿನ ನಡುವೆ, ಅವರು ಧ್ಯಾನಸ್ಥಿತಿಯ ಮೂಲಕ ಏರ್ಪಡಿಸಿಕೊಳ್ಳುವ ಸಂವಾದ ಹಾಗೂ ತಲ್ಲೀನತೆಯ ಸ್ಥಿತಿಯನ್ನು ‘ರಸಾನುಭೂತಿ’ ಎಂಬ ಪಾರಿಭಾಷಿಕದ ಮೂಲಕ ಸೂಚಿಸುತ್ತಾರೆ. ಇದನ್ನು ವೇದಾಂತದ ಮಾತಿನಲ್ಲಿ ಹೇಳುವುದಾದರೆ ‘ಅದ್ವೆ ತ’ ಎಂದು ಕರೆಯಬಹುದು. ಎಂದರೆ ವಸ್ತುವೊಂದನ್ನು ನೋಡುತ್ತ ಪರಿಭಾವಿಸುತ್ತ ತಾನೇ ಅದಾಗುವುದು, ಅಷ್ಟೆ ಅಲ್ಲ, ಎಲ್ಲವನ್ನೂ ಅಖಂಡ ಚೈತನ್ಯದ ಅಭಿವ್ಯಕ್ತಿ ಎಂಬಂತೆ ಕಾಣುವುದು; ಜಡಕ್ಕೂ ಚೇತನಕ್ಕೂ ಯಾವುದೇ ವ್ಯತ್ಯಾಸವಿಲ್ಲವೆಂಬಂಥ ನೆಲೆಯಲ್ಲಿ ನಿಲ್ಲುವುದು; ಸರ್ವವನ್ನೂ ಸಮದರ್ಶನದಲ್ಲಿ ಪರಿಭಾವಿಸುವುದು–ಇತ್ಯಾದಿಗಳು ಕುವೆಂಪು ತಲುಪುವ ‘ಅದ್ವೆ ತ’ ಸ್ಥಿತಿಯ ಅನುಭವಗಳು. ಕುವೆಂಪು ಅವರ ಅನೇಕ ನಿಸರ್ಗಪರ ಕವಿತೆಗಳಲ್ಲಿ ಮುಖ್ಯವಾಗಿ ‘ಪಕ್ಷಿಕಾಶಿ’ ‘ಕೃತ್ತಿಕೆ’ ಈ ಸಂಕಲದ ಕವಿತೆಗಳಲ್ಲಿ–ಮತ್ತು ಈ ಜಗತ್ತಿನ ಸೃಷ್ಟಿಯನ್ನು ಕುರಿತು ಖಗೋಳವಿಜ್ಞಾನ, ವಿಕಾಸವಿಜ್ಞಾನಗಳ ತಿಳುವಳಿಕೆಯಿಂದ ಬರೆದ ‘ಶಿಲಾತಪಸ್ವಿ’, ‘ನಟರಾಜ’, ‘ನಾನು’ ಇಂಥ ಕವಿತೆಗಳಲ್ಲಿ ಅದ್ವೆ ತಾನುಭವದ ಹಾಗೂ ಜಡವು ಚೈತನ್ಯವಾಗಿ ಪರಿಣಾಮಗೊಳ್ಳುವ ಚಿಂತನೆಗಳನ್ನು ಗುರುತಿಸಬಹುದು. ಇದು ಉಪನಿಷತ್ತಿನ ದರ್ಶನವೂ ಹೌದು, ವಿಜ್ಞಾನವು ಕಂಡುಕೊಂಡ ಸತ್ಯವೂ ಹೌದು. ಕುವೆಂಪು ಅವರ ಸಾಮಾಜಿಕ ಹಾಗೂ ತಾತ್ವಿಕ ವೈಚಾರಿಕತೆಯು ರೂಪುಗೊಂಡಿರುವುದು ವಿಜ್ಞಾನ ಹಾಗೂ ವೇದಾಂತದ ಗಾಢವಾದ ತಿಳಿವಳಿಕೆಯಿಂದಲೇ.

ಕುವೆಂಪು ನಮ್ಮ ಕಾಲದ ಮಹತ್ವದ ಕವಿ ಮಾತ್ರವಲ್ಲ, ಶ್ರೇಷ್ಠ ವಿಚಾರವಂತರೂ ಹೌದು. ಅವರ ಕವಿತಾ ಪ್ರತಿಭೆಯಂತೆಯೆ, ಅವರ ವಿಚಾರಶಕ್ತಿಯೂ ಅವರಲ್ಲಿ ಮೊದಲಿ ನಿಂದಲೂ ಮೊಳಕೆಯೊಡೆದವುಗಳು. ಅವು ಕೇವಲ ಪುಸ್ತಕ ವಿದ್ಯೆಯ ಪರಿಣಾಮಗಳಲ್ಲ. ಅನಂತರ ಅವರು ಅಧ್ಯಯನದ ಮೂಲಕ ಮೈಗೂಡಿಸಿಕೊಂಡ ವಿವಿಧ ಜ್ಞಾನ ಶಾಖೆಗಳ ತಿಳಿವು ಅವರ ಸಮಗ್ರ ಸಾಹಿತ್ಯ ನಿರ್ಮಿತಿಯ ‘ವ್ಯುತ್ಪತ್ತಿ’ಯಂತೆ ಬಳಕೆಗೆ ಬಂದಿದೆ. ಅವರೇ ಒಂದೆಡೆ ಕನ್ನಡ ಸಾಹಿತ್ಯವಿಮರ್ಶೆ ಕೇವಲ ತಮ್ಮ ಕಾವ್ಯದ ಭಾವಮುಖವಷ್ಟನ್ನೆ ಗಮನಿಸುವುದರಲ್ಲಿ ತೋರಿದ ಉತ್ಸಾಹವನ್ನು, ತಮ್ಮ ಸಾಹಿತ್ಯದ ಹಿನ್ನೆಲೆಗಿರುವ ವೈಚಾರಿಕ ಮುಖವನ್ನು ಅರ್ಥಮಾಡಿಕೊಳ್ಳುವ ಕಡೆ ಅಷ್ಟಾಗಿ ತೋರಿಲ್ಲ ಎಂದು ಅರ್ಧ ಕೊರಗಿನ, ಅರ್ಧ ಆಕ್ಷೇಪಣೆಯ ದನಿಯಲ್ಲಿ ಮಾತನಾಡಿದ್ದಾರೆ: “ನನ್ನ ಕವಿಪ್ರತಿಭೆ ತನ್ನ ರಸಧರ್ಮಕ್ಕೆ  ಒಂದಿನಿತೂ ಭಂಗ ಬರದಂತೆ ವೈಚಾರಿಕ ಬುದ್ಧಿಯನ್ನೂ ವೈಜ್ಞಾನಿಕ ದೃಷ್ಟಿಯನ್ನೂ ಸಮಪ್ರಮಾಣದಲ್ಲಿ ಅಳವಡಿಸಿಕೊಂಡಿರುವುದನ್ನು ಸಹೃದಯರು ಗುರುತಿಸಲಾಗದಿದ್ದರೆ ನನ್ನನ್ನು ಆಂಶಿಕವಾಗಿ ಮಾತ್ರ ಪರಿಶೀಲಿಸಿದಂತಾಗುತ್ತದೆ: ನನ್ನ ಸಂಪೂರ್ಣತ್ವಕ್ಕೆ ಚ್ಯುತಿ ಬರುತ್ತದೆ” (ನೆನಪಿನ ದೋಣಿಯಲ್ಲಿ ಪು. ೬೮). ಕುವೆಂಪು ಅವರ ಸಾಹಿತ್ಯವನ್ನು ಅವರ ಈ ನಿರ್ದೇಶನದ ದೃಷ್ಟಿಯಿಂದ ನೋಡುವುದು ಅಗತ್ಯವಾಗಿದೆ ಎಂಬ ಮಾತನ್ನು ಒಪ್ಪುತ್ತಾ, ಇತ್ತೀಚಿನ ಸಾಹಿತ್ಯ ವಿಮರ್ಶೆಯಲ್ಲಿ ಕುವೆಂಪು ಅವರ ಸಾಹಿತ್ಯವನ್ನು ಈ ನಿಲುವಿನಿಂದ ಚರ್ಚಿಸಿದ ಪ್ರಯತ್ನ ಸ್ವಲ್ಪಮಟ್ಟಿಗೆ ನಡೆದಿದೆ ಎಂಬುದನ್ನು ಇಲ್ಲಿ ನೆನೆಯಬಹುದು. ಈ ಹಿನ್ನೆಲೆಯಿಂದ ಹೇಳುವುದಾದರೆ ಕುವೆಂಪು ಅವರ ಕವಿತೆಗಳು ಕೇವಲ ಸೌಂದರ್ಯನಿಷ್ಠೆಯ ಹಾಗೂ ಅವುಗಳ ರಚನಾ ಕೌಶಲದ ಬೆರಗಿನಲ್ಲಿ ಓದುಗರನ್ನು ನಿಲ್ಲಿಸುವ ಕವಿತೆಗಳಲ್ಲ. ಅವುಗಳ ಹಿಂದೆ ಗಟ್ಟಿಮುಟ್ಟಾದ ವೈಚಾರಿಕತೆಯೊಂದು ಕ್ರಿಯಾಶೀಲವಾಗಿದೆ. ಅದನ್ನು ಸ್ಥೂಲವಾಗಿ ತಾತ್ವಿಕ ವೈಚಾರಿಕತೆ ಮತ್ತು ಸಾಮಾಜಿಕ ವೈಚಾರಿಕತೆ ಎಂದು ಕರೆಯಬಹುದು. ಆದರೆ ಈ ಎರಡರ ನಡುವಣ ವ್ಯತ್ಯಾಸವೇನಿದ್ದರೂ ಪ್ರಾಸಂಗಿಕವಾದದ್ದು. ಯಾಕೆಂದರೆ ಈ ಎರಡರ ಉದ್ದೇಶವೂ ಮನುಷ್ಯನ ‘ಏಕತೆ’ಯ ಪರವಾಗಿ ತುಡಿಯುವ ಕಾಳಜಿಗಳಿಂದ ಕೂಡಿದ್ದಾಗಿದೆ. ಕುವೆಂಪು ಅವರ ಕವಿತೆಗಳಲ್ಲಿ ಸೌಂದರ್ಯನಿಷ್ಠೆ, ಆಧ್ಯಾತ್ಮಿಕ ನಿಲುವು ಮತ್ತು ವೈಚಾರಿಕತೆಗಳು ಒಂದರಿಂದ ಮತ್ತೊಂದನ್ನು ಬೇರ್ಪಡಿಸಲಾಗದಂತೆ ಹೆಣೆದುಕೊಂಡಿವೆ.

ಕುವೆಂಪು ಕಾವ್ಯದ ಮೊದಲ ನೆಲೆಯಾದ ನಿಸರ್ಗಪರ ಕವಿತೆಗಳ ಸಂರ್ದಭದಲ್ಲಿ, ಅವರು ತಮ್ಮ ಧ್ಯಾನಸ್ಥಿತಿಯ ಮೂಲಕ ನಿಸರ್ಗದೊಂದಿಗೆ ಏರ್ಪಡಿಸಿಕೊಳ್ಳುವ ಸಂವಾದ ಹಾಗೂ ತಲ್ಲೀನತೆಯಲ್ಲಿ ಅವರು ಪಡೆಯುವ ಅದ್ವೆ ತಾನುಭವದಲ್ಲಿ ಸೌಂದರ್ಯ ನಿಷ್ಠೆ ಹಾಗೂ ವೈಚಾರಿಕತೆಯೂ ಸಮ್ಮಿಳಿತವಾಗಿರುವುದನ್ನು ಗುರುತಿಸಬಹುದು. ಅವರ ಬಹುತೇಕ ‘ಸೂರ್ಯೋದಯ ಕವಿತೆ’ಗಳಲ್ಲಿ ಈ ಅನುಭವದ ಹಲವು ಹಂತಗಳನ್ನು ಕಾಣಬಹುದು. ಹಾಗೆ ನೋಡಿದರೆ ಕುವೆಂಪು ಅವರಷ್ಟು ‘ಸೂರ್ಯೋದಯ’ವನ್ನು ಕುರಿತ ಕವಿತೆಗಳನ್ನು ಬರೆದ ಕವಿ ಮತ್ತೊಬ್ಬರಿಲ್ಲ. ಸೂರ್ಯೋದಯ ‘ನವೋದಯ’ದ ಬಹು ಮುಖ್ಯವಾದ ರೂಪಕವೂ ಹೌದು. ಅಷ್ಟೇ ಅಲ್ಲ, ಹೊಸಗನ್ನಡ ಕಾವ್ಯವನ್ನು, ‘ರಮ್ಯಕಾವ್ಯ’ ‘ರೊಮ್ಯಾಂಟಿಕ್ ಕಾವ್ಯ’ ಎಂದು ಸಾಹಿತ್ಯ ವಿಮರ್ಶಕರು ತಪ್ಪು ತಪ್ಪಾಗಿ ಕರೆಯುತ್ತಿದ್ದ ಕಾಲದಲ್ಲಿ ಇಡೀ ಭಾರತೀಯ ಪುನರುಜ್ಜೀವನಕ್ಕೆ ಅನ್ವಯವಾಗಬಹುದಾದ ‘ನವೋದಯ’ ಎಂಬ ಹೆಸರನ್ನು ಕೊಟ್ಟವರು ಕುವೆಂಪು. ‘ಸೂರ್ಯೋದಯ’ದಂಥ ಪ್ರಚಂಡ ಚೈತನ್ಯೋತ್ಕರ್ಷವನ್ನು ಕುರಿತ ಕವಿತೆಗಳ ಸಂದರ್ಭದಲ್ಲಿನ ಸೌಂದರ್ಯಾನುಭವದ ಹಂತದಲ್ಲಿ, ‘ಜಡ’ ಮತ್ತು ‘ಚೈತನ್ಯ’ಗಳ ವ್ಯತ್ಯಾಸವನ್ನೂ, ಏಕತೆಯನ್ನೂ ಕುರಿತು ಕುವೆಂಪು ಕಾವ್ಯದ ಚೌಕಟ್ಟಿನಲ್ಲಿಯೆ ನಡೆಯಿಸುವ ಚರ್ಚೆ ಅನೇಕ ದೃಷ್ಟಿಗಳಿಂದ ಅರ್ಥಪೂರ್ಣವಾದುದು. ಅವರ ಬಹುತೇಕ ಕವಿತೆಗಳ ಕಾಣ್ಕೆಯೆ ಇದು: ‘ತೆಗೆ ಜಡವೆಂಬುದೆ ಬರಿಸುಳ್ಳು’, ‘ಜಡವೆಂಬುದೆಲ್ಲ ಚೇತನದ ನಟನೆಯ ಲೀಲೆ’, ‘ಚೈತನ್ಯವಲ್ಲದಿನ್ನಿಲ್ಲ ವಿಶ್ವದಲಿ’ ‘ಎಲ್ಲ ಜಡತೆಯ ಬಯಕೆ ಚೈತನ್ಯ ಸಿದ್ಧಿಯೈ’. ಇದು ಅವರು ತಮ್ಮ ‘ರಸಾನುಭೂತಿ’ಯ ಸ್ಥಿತಿಯಲ್ಲಿ ಪಡೆದುಕೊಳ್ಳುವ ‘ಅದ್ವೆ ತ’ದ ಅನುಭವದ ವರ್ಣನೆಯೂ ಹೌದು. ಯಾವ ಒಂದು ಮನಃಸ್ಥಿತಿ ಮೂಲಭೂತವಾಗಿ ‘ಜಡ’- ‘ಚೇತನ’ಗಳೆಂಬ ತಾರತಮ್ಯವನ್ನು ಒಪ್ಪುವುದಿಲ್ಲವೋ ಅದು ಸಾಮಾಜಿಕ ನೆಲೆಯ ತರತಮಗಳನ್ನು ವಿರೋಧಿಸುವುದು ಸಹಜವಾಗಿದೆ. ಈ ದೃಷ್ಟಿಯಿಂದ ಕುವೆಂಪು ಅವರ ‘ಅದ್ವೆ ತ’ ಏಕ ಕಾಲಕ್ಕೆ ಆಧ್ಮಾತ್ಮಿಕವೂ ಹೌದು, ಸಾಮಾಜಿಕವೂ ಹೌದು. ಕನ್ನಡದ ಸಂದರ್ಭದ ಇತರ ಪ್ರಮುಖ ಬರಹಗಾರರಂತೆ, ಹುಟ್ಟಿನಿಂದಲೇ ಯಾವ ಸಿದ್ಧ ಸಂಪ್ರದಾಯಕ್ಕೂ ಸೇರದ ಕುವೆಂಪು, ‘ಯಾವ ಮತದವನಲ್ಲ, ಎಲ್ಲ ಮತದವನು’ ಎಂಬ ನಿಲುವಿನಿಂದ, ಉಪನಿಷತ್ತು ಹಾಗೂ ಆಧುನಿಕ ವಿಜ್ಞಾನದ ತಿಳಿವಳಿಕೆಯಿಂದ ರೂಪಿಸಿಕೊಂಡ ಆಧ್ಯಾತ್ಮವು, ಎಲ್ಲ ಜಾತಿ ಮತಗಳನ್ನೂ ನಿರಾಕರಿಸುತ್ತ, ಪ್ರತಿಯೊಂದು ಜೀವವೂ ತನ್ನ ಪಾರಿಣಾಮಕ ಪಥದಲ್ಲಿ ಮುನ್ನಡೆದು ತನ್ನ ಸ್ವರೂಪವನ್ನು ಅವಿಷ್ಕಾರ ಮಾಡಿಕೊಳ್ಳುವ ಹಕ್ಕು ಮತ್ತು ಸ್ವಾತಂತ್ರ ವನ್ನು ಹೊಂದಿದೆ ಎಂಬ ನಿಲುವನ್ನು ಪ್ರತಿಪಾದಿಸುತ್ತದೆ. ಅದು ಒಂದು ರೀತಿಯಲ್ಲಿ ಎಲ್ಲದರ ಹಿಂದಿರುವ ಏಕತೆಯ ದರ್ಶನ. ಆದುದರಿಂದಲೆ ಅದು ಮನುಷ್ಯನ ಚೈತನ್ಯದ ಚಲನಶೀಲತೆಯನ್ನು ಸ್ಥಗಿತಗೊಳಿಸುವ ಜಾತಿಪದ್ಧತಿ, ಚಾತುರ್ವರ್ಣ, ಪುರೋಹಿತ ಶಾಹೀ ಹಾಗೂ ಸಾಂಸ್ಥಿಕ ಧರ್ಮಗಳ ಪ್ರತಿನಿಧಿಗಳಾದ ಗುಡಿ-ಚರ್ಚು-ಮಸೀದಿ-ಮಠಗಳನ್ನು ನಿರ್ದಾಕ್ಷಿಣ್ಯವಾಗಿ ನಿರಾಕರಿಸಿ, ಜೀವ ಜೀವರುಗಳ ನಡುವೆ, ಆತ್ಮ ಆತ್ಮಗಳ ನಡುವೆ ಯಾವುದೇ ವ್ಯತ್ಯಾಸಗಳನ್ನು ಕಲ್ಪಿಸುವ ‘ದ್ವೆ ತವಾದ’ವನ್ನು ತಿರಸ್ಕರಿಸುತ್ತದೆ. ಕುವೆಂಪು ಪ್ರತಿಪಾದಿಸುವ ಈ ‘ಅದ್ವೆ ತ’ -ಏಕಕಾಲಕ್ಕೆ ಆಧ್ಯಾತ್ಮಿಕವೂ ಹೌದು ಸಾಮಾಜಿಕವೂ ಹೌದು ಎಂದು ಹೇಳಿದ್ದು ಈ ಅರ್ಥದಲ್ಲಿಯೇ. ಮನುಷ್ಯತ್ವದ ಏಕತೆಯನ್ನು ಎತ್ತಿ ಹಿಡಿಯುವ ಈ ವಿಚಾರಗಳು. ನವೋದಯ ಸಂದರ್ಭದ ಪ್ರಮುಖವಾದ ಉದಾರ ಧಾರ್ಮಿಕ ನಿಲುವುಗಳೂ ಹೌದು. ಶ್ರೀ ರಾಮಕೃಷ್ಣ ಪರಮಹಂಸ, ವಿವೇಕಾನಂದ, ಗಾಂಧಿ, ಅರವಿಂದರಂಥ ಮಹಾವಿಭೂತಿಗಳ ಪ್ರಭಾವ ವಲಯದಲ್ಲಿ ಸೃಜನಶೀಲರಾಗಿದ್ದ ಕುವೆಂಪು ಅವರ ಮೇಲೆ ಇವರೆಲ್ಲರ ಧಾರ್ಮಿಕ-ಸಾಮಾಜಿಕ ಚಿಂತನೆಗಳು ಪ್ರಭಾವ ಬೀರಿರುವುದು, ಕುವೆಂಪು ಅವುಗಳನ್ನು ತರ್ಕಬದ್ಧವಾಗಿ ಅರಗಿಸಿಕೊಂಡದ್ದು ಸಹಜವಾಗಿದೆ. ಶ್ರೀ ರಾಮಕೃಷ್ಣಪರಮಹಂಸ ಮತ್ತು ಅರವಿಂದರು ಕುವೆಂಪು ಅವರ ಅನುಭಾವ ಹಾಗೂ ಆಧ್ಯಾತ್ಮಿಕ ದೃಷ್ಟಿಯನ್ನು ರೂಪಿಸಿದಂತೆ, ವಿವೇಕಾನಂದ ಮತ್ತು ಗಾಂಧಿಯವರು ಕುವೆಂಪು ಅವರ ವೈಚಾರಿಕತೆ ಹಾಗೂ ರಾಷ್ಟ್ರೀತೆಯ ಕಲ್ಪನೆಗಳನ್ನು ರೂಪಿಸಿದವರೆಂದು ಹೇಳಬಹುದು. ಗಾಂಧಿಯವರಿಗಿಂತ ವಿವೇಕಾನಂದರ ವ್ಯಕ್ತಿತ್ವವು ಕುವೆಂಪು ಅವರನ್ನು ವಿಶೇಷವಾಗಿ ಆಕರ್ಷಿಸಿದ್ದು, ಅಲ್ಲ ಆಕ್ರಮಿಸಿದ್ದು, ಅದರ ಪ್ರಖರವಾದ ವೈಚಾರಿಕತೆಯಿಂದ. ವಿವೇಕಾನಂದರ ಕ್ರಾಂತಿಕಾರೀ ಚಿಂತನೆಗಳು, ಕುವೆಂಪು ಅವರ ವೈಚಾರಿಕತೆಗೆ ಸಮ್ಮತವಾದುದರಿಂದ ಕುವೆಂಪು ಅವರ ಕವಿತೆಯ ಹಾಗೂ ವೈಚಾರಿಕ ಬರಹಗಳ ಮೂಲಕ ಒಂದು ಬಗೆಯ ಧೀರೋದಾತ್ತತೆಯ ಧಾಟಿಯಲ್ಲಿ ಮಂಡಿತವಾಗಿವೆ. ಇದರ ಜತೆಗೆ, ಅಂದು ಕುವೆಂಪು ಪ್ರತಿಪಾದಿಸುತ್ತಿದ್ದ ‘ಮನುಷ್ಯತ್ವದ ಏಕತೆ’ಯ ಕಲ್ಪನೆಗೆ, ಗಾಂಧೀಜಿಯವರು ರಾಷ್ಟ್ರೀಯತೆಯ ಆಂದೋಲನದ ಸಂದರ್ಭದಲ್ಲಿ ಬಳಸುತ್ತಿದ್ದ ‘ಸರ್ವೋದಯ’ ಎಂಬ ಪದ ಅತ್ಯಂತ ಸೂಕ್ತವೂ ಪ್ರಿಯವೂ ಆಗಿ ಕಂಡುದರಿಂದ, ಕುವೆಂಪು ‘ಸರ್ವೋದಯ’ವನ್ನು ಒಂದು ಯುಗ ಮಂತ್ರ ಎಂದು ಸ್ವೀಕರಿಸುತ್ತಾರೆ. ‘ಹಿಂದಾಯಿತು ಓರೋರ್ವರ ಗರ್ವದ ಕಾಲ! ಇದು ಸರ್ವರ ಕಾಲ’– ಎಂದು ಘೋಷಿಸುತ್ತಾರೆ. ಸರ್ವೋದಯ ಸಮನ್ವಯ ಮತ್ತು ಪೂರ್ಣದೃಷ್ಟಿ ಇವು ಮುಂದಿನ ಸಾಹಿತ್ಯದ ಲಕ್ಷಣಗಳಾಗಬೇಕೆಂದು ಒಂದೆಡೆ ಹೇಳುತ್ತಾರೆ. ಈ ಮೂರೂ ಅನುಕ್ರಮವಾಗಿ ಗಾಂಧಿ, ಶ್ರೀರಾಮಕೃಷ್ಣ ಪರಮಹಂಸ ಮತ್ತು ಯೋಗಿ ಅರವಿಂದರ ವಿಚಾರಗಳನ್ನು ಸೂಚಿಸುತ್ತವೆ. ಅದೇನೆ ಇರಲಿ, ಕುವೆಂಪು ಅವರ ಅನೇಕ ಸಾಮಾಜಿಕ ಕವಿತೆಗಳ ಹಿಂದೆ ತುಡಿಯುತ್ತಿರುವುದು ಈ ‘ಸರ್ವೋದಯ’ದ ಕಾಳಜಿಗಳೇ. ಏಕಕಾಲಕ್ಕೆ ಆಧ್ಯಾತ್ಮಿಕವೂ ಸಾಮಾಜಿಕವೂ ಆದ ಈ ಕಾಳಜಿಗಳು ಅವರ ವೈಚಾರಿಕತೆಯ ಮೂಲಕ, ಸರ್ವೋದಯ ವಿರೋಧಿಯಾದ ವಿಕೃತಿಗಳನ್ನು ಖಂಡಿಸುತ್ತ, ಸವಾಲಿನ, ಪ್ರತಿಭಟನೆಯ ಕೆಲವೊಮ್ಮೆ ವ್ಯಂಗ್ಯದ ಧಾಟಿಯಲ್ಲಿ ಮಂಡಿತವಾಗಿರುವ ಕ್ರಮವು ವಿಶೇಷ ರೀತಿಯದಾಗಿದೆ. ಏಕೆಂದರೆ ಈ ದೇಶದ ಅಪ್ರತಿಷ್ಠಿತ ಸಾಮಾಜಿಕ ಸ್ತರದಿಂದ ಬಂದ ಕುವೆಂಪು ಅವರಿಗೆ ಕಂಡ ವಾಸ್ತವಗಳೂ, ಚರಿತ್ರೆಯೊಳಗಿನ ಸತ್ಯಗಳೂ, ಅವರ ಸಮಕಾಲೀನರಾದ, ಸಿದ್ಧಸಂಪ್ರದಾಯಕ್ಕೆ ಸೇರಿದ ಇತರ ಬರಹಗಾರರಿಗೆ ಆ ಪ್ರಮಾಣದಲ್ಲಿ ಆ ಸ್ವರೂಪದಲ್ಲಿ ಕಂಡವೆಂದು ಹೇಳಲು ಬರುವುದಿಲ್ಲ. ಆದ್ದರಿಂದಲೆ ಹುಟ್ಟಿನಿಂದ ಶೂದ್ರರೂ, ಹಿಂದಿನ ಅಥವಾ ಇಂದಿನ, ಅಂತರಂಗದ ಅಥವಾ ಬಹಿರಂಗದ, ಯಾವ ಸಾಂಪ್ರದಾಯಿಕ ಉಪಾಧಿಗಳಿಗೂ ಬದ್ಧವಾಗದ ಒಂದು ‘ನಿರಂಕುಶಮತಿ’ಯನ್ನು ಎತ್ತಿಹಿಡಿದವರೂ ಆದ ಕುವೆಂಪು, ಈ ದೇಶದ ಜಾತಿ ಪದ್ಧತಿ, ಮೂಢನಂಬಿಕೆ, ಸಾಮಾಜಿಕ ಅಸಮಾನತೆ ಹಾಗೂ ಪುರೋಹಿತಶಾಹೀ ಪ್ರವೃತ್ತಿಗಳನ್ನು ಅತ್ಯಂತ ದಿಟ್ಟತನದಿಂದ ಯಾವುದೇ ಒಡಂಬಡಿಕೆಗಳಿಲ್ಲದೆ ಪ್ರಶ್ನಿಸಿದಂತೆ, ವೈಚಾರಿಕ ಚಿಕಿತ್ಸೆಗೆ ಒಳಗುಪಡಿಸಿದಂತೆ ಇತರ ಅವರ ಸಮಕಾಲೀನ ಪ್ರಮುಖ ಬರೆಹಗಾರರಿಗೆ ಈ ಪ್ರಮಾಣ ದಲ್ಲಿ ಸಾಧ್ಯವಾಗಲಿಲ್ಲ ಎನ್ನುವುದು ಸ್ಪಷ್ಟವಾದ ಸಂಗತಿಯಾಗಿದೆ. ‘ದೇವರು-ಪೂಜಾರಿ’ ‘ಗೊಬ್ಬರ’ ‘ಕ್ರಾಂತಿಕಾಳಿ’ ‘ಯಾವ ಕಾಲದ ಶಾಸ್ತ್ರವೆಂದು ಹೇಳಿದರೇನು’ ಇಂಥ ಕವಿತೆಗಳೊಳಗಿನ ಮೂಲದ್ರವ್ಯವು ಈ ಸ್ವರೂಪದ್ದಾಗಿದೆ. ಈ ದೇಶದ ಚರಿತ್ರೆ ಮತ್ತು ಸಂಸ್ಕೃತಿಯನ್ನು ಆರೋಗ್ಯ ಪೂರ್ಣವಾದ ಚರ್ಚೆಗೆ ಗುರಿಪಡಿಸಿದ ಕೆಲವೇ ಲೇಖಕರಲ್ಲಿ ಕುವೆಂಪು ಮುಖ್ಯರಾಗುತ್ತಾರೆ.