ಕುವೆಂಪು ಅವರ ವೈಚಾರಿಕತೆಗೆ ಇರುವ ಇನ್ನೊಂದು ಮುಖ್ಯಲಕ್ಷಣ ವೈಜ್ಞಾನಿಕ ದೃಷ್ಟಿ. ಕುವೆಂಪು ಅವರಂತೆ ಆಧುನಿಕ ವಿಜ್ಞಾನದ ತಿಳಿವಳಿಕೆಯನ್ನು ತಮ್ಮ ಕಾವ್ಯದ ವಸ್ತುವನ್ನಾಗಿ ಮಾಡಿಕೊಂಡವರು ತೀರಾ ವಿರಳ. ಖಗೋಳವಿಜ್ಞಾನ, ಯಂತ್ರವಿಜ್ಞಾನ, ಜೀವವಿಜ್ಞಾನ, ಮನೋವಿಜ್ಞಾನ, ಯೋಗವಿಜ್ಞಾನ–ಇತ್ಯಾದಿಗಳಿಂದ ಬಂದ ತಿಳಿವಳಿಕೆ ಅವರ ಅನೇಕ ಕವನಗಳ ಮೂಲದ್ರವ್ಯವಾಗಿದೆ. ಅವರ ‘ಕೂಸಿನ ಕನಸು’ ಈ ಪರಿಣತಿಯ ಅತ್ಯುತ್ತಮ ಅಭಿವ್ಯಕ್ತಿಯಾಗಿದೆ. ಅವರ ಕಾವ್ಯದ ಉದ್ದಕ್ಕೂ ರೂಪಕಗಳಾಗಿ, ಪ್ರತೀಕಗಳಾಗಿ, ಪ್ರತಿಮೆಗಳಾಗಿ ರೂಪುಗೊಂಡಿರುವ ವೈಜ್ಞಾನಿಕ ಸಂಗತಿಗಳೂ, ವಿಚಾರಗಳೂ ಬೇರೆ ಯಾರಲ್ಲೂ ಈ ಪ್ರಮಾಣದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಈ ದೃಷ್ಟಿಯಿಂದ ಅವರ ಮಹಾಕಾವ್ಯವಾದ ‘ಶ್ರೀ ರಾಮಾಯಣದರ್ಶನಂ’, ಇಪ್ಪತ್ತನೆ ಶತಮಾನದ ವೈಜ್ಞಾನಿಕ ಹಾಗೂ ವೈಚಾರಿಕ ಯುಗದ ಪ್ರತಿನಿಧಿಯಾಗಿದೆ ಎಂದು ಹೇಳಬಹುದು. ಆಧುನಿಕ ಯುಗದ ಎಲ್ಲ ಸಾಮಾಜಿಕ ಅನಿಷ್ಟಗಳ ಚಿಕಿತ್ಸೆಗೆ ಅಗತ್ಯವಾದ ವೈಜ್ಞಾನಿಕ ಮನೋಧರ್ಮವೊಂದನ್ನು ಅತ್ಯಂತ ಏರುದನಿಯಲ್ಲಿ ಸಾರಿ ಹೇಳಿದವರು ಕುವೆಂಪು. ಅಷ್ಟೆ ಅಲ್ಲ, ಗಾಂಧಿಯವರು ಯಂತ್ರವಿಜ್ಞಾನವನ್ನು ವಿರೋಧಿಸುತ್ತಿದ್ದ ಕಾಲದಲ್ಲಿ, ಕುವೆಂಪು ಮನುಷ್ಯನ ಲೌಕಿಕ ಪ್ರಗತಿಗೆ ಅಗತ್ಯವಾದ ಯಂತ್ರ ವಿಜ್ಞಾನವನ್ನು ಸ್ವಾಗತಿಸುತ್ತಾರೆ. ನಿಸರ್ಗದ ಶಕ್ತಿಯನ್ನು ಪಳಗಿಸಿ, ಅದನ್ನು ಸಾಮಾನ್ಯ ಮನುಷ್ಯನ ಯೋಗಕ್ಷೇಮಕ್ಕೆ ವಿನಿಯೋಗಿಸುವ ಯಂತ್ರ ವಿಜ್ಞಾನವನ್ನು ಉತ್ಸಾಹದಿಂದ ಕುವೆಂಪು ಬರಮಾಡಿಕೊಳ್ಳುತ್ತಾರೆ. ಅವರ ದೃಷ್ಟಿಗೆ ಯಂತ್ರ ವಿಜ್ಞಾನಿಯಾದ ಎಂಜಿನಿಯರ್ ‘ಯಂತ್ರರ್ಷಿ’ ಯಾಗುತ್ತಾನೆ. ‘ಯಂತ್ರರ್ಷಿ ಮಾನವರೆ ಮಂತ್ರರ್ಷಿಗಳು ನಮಗೆ’ ಎನ್ನುವುದು ಕುವೆಂಪು ಈ ಕಾಲಮಾನಕ್ಕೆ ಸ್ಪಂದಿಸಿದ ಪರಿಯನ್ನು ಸೂಚಿಸುತ್ತದೆ. ರಾಷ್ಟ್ರೀಯತೆಯ ಆಂದೋಲನದ ಸಮಯದಲ್ಲಿ, ಸಾಂಪ್ರದಾಯಿಕ ಮೌಲ್ಯಗಳು ಪುನರುತ್ಥಾನಗೊಂಡು, ನಿಜವಾದ ಸಾಮಾಜಿಕ ವಾಸ್ತವಗಳು ನಿಚ್ಚಳವಾಗಿ ಕಾಣದೆಹೋಗುವಂಥ ಪರಿಸ್ಥಿತಿಯಲ್ಲಿ, ಕುವೆಂಪು ಅವರ ಮನಸ್ಸು ಉಳಿದೆಲ್ಲರಿಗಿಂತ ಹೆಚ್ಚು ನಿಖರವಾಗಿ ಸಮಕಾಲೀನ ವಾಸ್ತವಗಳನ್ನು ಗುರುತಿಸಿ, ವೈಚಾರಿಕ ಚಿಕಿತ್ಸೆಗೆ ಗುರಿಪಡಿಸಲು ಸಾಧ್ಯವಾದದ್ದು ಅವರಿಗೆ ಇದ್ದ ವೈಜ್ಞಾನಿಕ ಪ್ರಗತಿಪರ ಮನೋಧರ್ಮ ದಿಂದಲೇ. ಈ ಮನೋಧರ್ಮ ಕೇವಲ ಭಾರತೀಯವಾದದ್ದರ ಪರವಾಗಿ ಮಾತ್ರವಲ್ಲ, ಜಾಗತಿಕವಾದ ಸಮಾಜವಾದಿ ಚಿಂತನೆಗಳಿಗೂ ಸ್ಪಂದಿಸಿದ್ದು ಅದರ ವಿಶೇಷತೆಯಾಗಿದೆ. ಲೆನಿನ್, ಟಾಲ್‌ಸ್ಟಾಯ್ ಕುರಿತು ಅವರು ಬರೆದ ಕವಿತೆಗಳು, ‘ಕಲ್ಕಿ’ ‘ಕೋಗಿಲೆ ಮತ್ತು ಸೋವಿಯಟ್ ರಷ್ಯಾ’ದಂಥ ಕವಿತೆಗಳೂ ಮತ್ತು ಇದೇ ಬಗೆಯ ಸಮಾಜವಾದೀ ನಿಲುವುಗಳನ್ನು ಒಂದು ಬಗೆಯ ಪ್ರವಾದಿಯ ಧಾಟಿಯಲ್ಲಿ ಅಭಿವ್ಯಕ್ತಿಸುವ ಕವನಗಳೂ ಈ ಮಾತಿಗೆ ನಿದರ್ಶನವಾಗಿವೆ. ಸಮಕಾಲೀನ ಜಗತ್ತಿನಲ್ಲಿ ಸಂಭವಿಸುತ್ತಿರುವ ಯುಗಪರಿವರ್ತನಕಾರಿ ಯಾದ ಅನೇಕ ಬದಲಾವಣೆಗಳ ಹಿನ್ನೆಲೆಯಲ್ಲಿ ಭಾರತದ ತರುಣರು ತಮ್ಮ ಹಳೆಯ ಜಡತೆಯಿಂದ ಮೇಲೆದ್ದು ‘ನವ ಕ್ರಾಂತಿಗೆ, ಶಾಂತಿಗೆ’ ಕಣ್ ತೆರೆಯಬೇಕೆಂಬ ಸಂದೇಶವನ್ನು ಘೋಷಿಸುವ ಅವರ ಎಷ್ಟೋ ಕವನಗಳು ಈ ಕವಿಯ ಸಾಂಸ್ಕೃತಿಕ ಜವಾಬ್ದಾರಿಯನ್ನು, ನವ ಮಾನವತಾವಾದದ ಕಾಳಜಿಗಳನ್ನೂ ಪ್ರತಿನಿಧಿಸುತ್ತವೆ. ಅಷ್ಟೇ ಅಲ್ಲ, ಅವರ ನಲವತ್ತರ ದಶಕದ ಅನೇಕ ಸಮಾಜವಾದೀ ಕವಿತೆಗಳಲ್ಲಿ ಕಾಣಿಸಿಕೊಳ್ಳುವ ಕ್ರಾಂತಿಕಾರೀ ವೈಚಾರಿಕತೆಯಲ್ಲಿ, ಎಪ್ಪತ್ತರ ದಶಕದ ಕನ್ನಡದ ಸಂದರ್ಭದಲ್ಲಿ ಸ್ಫೋಟಗೊಂಡ ದಲಿತ-ಬಂಡಾಯ ಸಾಹಿತ್ಯ ಚಳುವಳಿಯ ಮೂಲ ಪ್ರೇರಣೆಗಳಿವೆ ಎಂದರೆ ಅದೇನೂ ಅತಿಶಯೋಕ್ತಿಯಲ್ಲ. ಅಷ್ಟೇ ಅಲ್ಲ ದಲಿತ ಕಾವ್ಯದ ರೂಪಾಂಶಗಳು ಕುವೆಂಪು ಕವಿತೆಗಳದ್ದೆ ಆಗಿದೆ ಎನ್ನುವುದು ಆಶ್ಚರ್ಯವೇನಲ್ಲ.

ವಿಜ್ಞಾನ ಯುಗದ ಎಂಜಿನಿಯರ್ ‘ಯಂತ್ರರ್ಷಿ’ ಎಂಬ ಗೌರವಕ್ಕೆ ಪಾತ್ರನಾದರೆ, ಯಾರ ಕಣ್ಣಿಗೂ ಕಾಣಿಸದೆ ತನ್ನ ಪಾಡಿಗೆ ತಾನು ಹೊಲವನ್ನುಳುವ ರೈತನು ‘ನೇಗಿಲ ಯೋಗಿ’ಯಾಗುತ್ತಾನೆ. ರಾಜ್ಯ ಸಾಮ್ರಾಜ್ಯಗಳ ಏಳು ಬೀಳಿನ ನಡುವೆ ಸದ್ದಿಲ್ಲದ ತನ್ನ ದುಡಿಮೆಯಿಂದ ಲೋಕಕ್ಕೆ ಅನ್ನವನ್ನು ಬೆಳೆಯುವ ರೈತನ ಕಾಯಕ, ಯಾವ ರೀತಿಯಲ್ಲೂ ಯೋಗಿಯಾದವನು ಕೈಕೊಳ್ಳುವ ಲೋಕ ಕಲ್ಯಾಣಕರವಾದ ತಪಸ್ಸಿಗೆ ಕಡಿಮೆಯಾದುದೇನಲ್ಲ ಎನ್ನುವುದು ಕುವೆಂಪು ಅವರ ನಿಲುವು. ಕುವೆಂಪು ಅವರ ಸಾಮಾಜಿಕ ವೈಚಾರಿಕತೆ, ಈ ಬಗೆಯ ಸಾಮಾನ್ಯತೆಯನ್ನು ಕುರಿತ ಗೌರವದಿಂದ ಪ್ರಾರಂಭವಾಗುತ್ತದೆ. ರೈತನನ್ನು ‘ನೇಗಿಲಯೋಗಿ’ ಎಂದು ಕರೆದು ಗೌರವಿಸಿದ ಮೊದಲ ಕವಿ ಕುವೆಂಪು. ಹಾಗೆಯೇ ಸ್ವಾತಂತ್ರೊ ತ್ತರ ಭಾರತದ ಸಾಮಾನ್ಯ ಜನಸಮುದಾಯವನ್ನು ‘ಶ್ರೀಸಾಮಾನ್ಯ’ರೆಂದು ಹೊಸ ಹೆಸರಿನಿಂದ ಕರೆದು, ಅವರೊಂದಿಗೆ ತಮ್ಮನ್ನೂ ಸಮೀಕರಿಸಿಕೊಂಡವರು ಕುವೆಂಪು. ಈ ‘ನೇಗಿಲಯೋಗಿ’ಯಾದ ರೈತ ಮತ್ತು ಈ ದೇಶದ ಅಸಂಖ್ಯಾತ ಶ್ರೀಸಾಮಾನ್ಯರು ಮೇಲುವರ್ಗದವರಿಂದ ಶತಶತಮಾನಗಳ ಕಾಲ ಶೋಷಣೆಗೆ ಗುರಿಯಾದ ಪರಿಯನ್ನು, ಶೂದ್ರವರ್ಗದ ರೈತನ ಮನೆತನದಿಂದ ಬಂದ ಕುವೆಂಪು ತಮ್ಮ ಅನೇಕ ಕವಿತೆಗಳಲ್ಲಿ ಗ್ರಹಿಸಿ ಅಭಿವ್ಯಕ್ತಿಸಿದ್ದಾರೆಂಬುದು ಗಮನಿಸಬೇಕಾದ ಸಂಗತಿಯಾಗಿದೆ. ಆ ಶೋಷಕ ಶಕ್ತಿಗಳನ್ನು ಹಿಂದೂ ಧರ್ಮದ ಪುರೋಹಿತಶಾಹಿ ಮತ್ತು ರಾಜಶಾಹಿ ಎಂದು ಖಚಿತವಾಗಿ ಗುರುತಿಸಿ, ಆ ಎರಡನ್ನೂ ಅತ್ಯಂತ ತೀಕ್ಷ ವಾದ ವಿಮರ್ಶೆಗೆ, ಕುವೆಂಪು ಅವರಂತೆ ಗುರಿಪಡಿಸಿದ ಬೇರೊಬ್ಬ ಕವಿ ಇಲ್ಲ ಎಂದರೂ-ಸಲ್ಲುತ್ತದೆ. ಹಾಗೆ ನೋಡಿದರೆ ಕನ್ನಡ ಸಾಹಿತ್ಯ ಚರಿತ್ರೆಯ ಉದ್ದಕ್ಕೂ ಕ್ರಿಯಾಶೀಲವಾಗಿರುವ ಮುಖ್ಯಪ್ರವೃತ್ತಿಗಳೆಂದರೆ ವೈದಿಕ ವಿರೋಧೀ ನಿಲುವು ಮತ್ತು ಪ್ರಭುತ್ವವಿರೋಧೀ ಧೋರಣೆಗಳೇ. ಪಂಪನಿಂದ ಹಿಡಿದು, ವಚನಕಾರರನ್ನೂ ಒಳಗೊಂಡು  ಉದ್ದಕ್ಕೂ ಹರಿದು ಬಂದಿರುವ, ವೈದಿಕ ವಿರೋಧೀ ನಿಲುವು ಮತ್ತು ಪ್ರಭುತ್ವ ವಿರೋಧೀ  ಧೋರಣೆಗಳು ಕುವೆಂಪು ಅವರಲ್ಲಿ ಪುನಃ ಪ್ರಕಾಶನಗೊಂಡು, ಅತ್ಯಂತ ದಿಟ್ಟವಾಗಿ ಮತ್ತು ಸ್ಪಷ್ಟವಾಗಿ ಕೇಳಿಸುವ ಧ್ವನಿಗಳಾಗಿವೆ. ಪಂಪ-ರನ್ನರಂಥ ಮಾರ್ಗ ಕವಿಗಳ ಜತೆಗೆ ತಮ್ಮನ್ನು ಉತ್ಸಾಹದಿಂದ ಗುರುತಿಸಿಕೊಳ್ಳುವ ಕುವೆಂಪು ಅವರು, ಈ ದೇಶದ ದೇಶೀ ಕವಿಗಳ ಜತೆಗೆ,  ಅದರಲ್ಲೂ ವಚನಕಾರರು ಮತ್ತು ಹರಿಹರಾದಿಗಳ ವಿಚಾರದಲ್ಲಿ ಅಂಥ ಆಸಕ್ತಿಯನ್ನು ತಾಳದಿರುವುದು ಆಶ್ಚರ್ಯದ ಸಂಗತಿಯಾಗಿದೆ. ಸ್ವಾರಸ್ಯದ ಸಂಗತಿ ಎಂದರೆ ಕಿಂಕಿಣಿ (೧೯೪೬) ಎಂಬ ಹೆಸರಿನ ಅವರ ಕೃತಿ ‘ವಚನ ಕವನ’ಗಳ ಒಂದು ಸಂಕಲನವಾದರೂ, ಈ ವಚನಗಳ ಮೂಲ ಪ್ರೇರಣೆ, ರವೀಂದ್ರನಾಥ ಟ್ಯಾಗೂರರ ಬರೆಹಗಳೆ ಹೊರತು, ಕನ್ನಡದ ವಚನಕಾರರಲ್ಲ! ಆದರೂ ಕುವೆಂಪು ಅವರು ವೈಚಾರಿಕತೆಯಲ್ಲಿ- ದೇಸೀಯತೆಯ ಪ್ರೇರಣೆಯಿಂದ ಹೊಸಗನ್ನಡದಲ್ಲಿ ಬರೆದ ಇತರ ಕವಿಗಳಿಗಿಂತ – ವಚನಕಾರರಿಗೆ ತೀರಾ ಹತ್ತಿರವಾಗುತ್ತಾರೆ! ವರ್ಣಾಶ್ರಮ ವಿರೋಧ, ಪುರೋಹಿತಶಾಹೀ ದೌರ್ಜನ್ಯಗಳ ಖಂಡನೆ, ದೇವಸ್ಥಾನದ ನಿರಾಕರಣೆ, ಮನುಷ್ಯರ ಸಮಾನತೆಯ ಪರವಾದ ನಿಲುವು ಇವುಗಳನ್ನು ಹನ್ನೆರಡನೆಯ ಶತಮಾನದಷ್ಟು ಹಿಂದೆ ವಚನಕಾರರು ಎತ್ತಿ ಹಿಡಿದಿದ್ದರೆಂಬ ಸಂಗತಿಗಳಿಗಿಂತ, ಶ್ರೀ ರಾಮಕೃಷ್ಣ, ವಿವೇಕಾನಂದ ಮತ್ತು ಗಾಂಧಿಯವರ ಮೂಲಕ ಪ್ರತಿಪಾದಿತವಾದ ಇದೇ ವಿಚಾರಗಳು ಕುವೆಂಪು ಅವರಿಗೆ ಹೆಚ್ಚು ಆಕರ್ಷಕವಾದಂತೆ ತೋರುತ್ತದೆ. ಇದಕ್ಕೆ ಕಾರಣ ಅವರು ಈ ತಿಳಿವಿನ ಲೋಕಕ್ಕೆ ಕನ್ನಡದ ದಿಕ್ಕಿನಿಂದ ಪ್ರವೇಶಿಸದೆ ಇಂಗ್ಲಿಷಿನ ಮುಖಾಂತರ ಪ್ರವೇಶಿಸಿದ್ದೇ-ಎಂದು ತೋರುತ್ತದೆ. ಇಂಗ್ಲಿಷಿನ ಸಾಹಿತ್ಯ ಪ್ರಪಂಚವೂ, ಶ್ರೀರಾಮಕೃಷ್ಣ- ವಿವೇಕಾನಂದ- ಗಾಂಧಿ-ಅರವಿಂದರ ವಿಚಾರಗಳೂ ಅವರ ಮನಃಕೋಶವನ್ನು ಮೊಟ್ಟಮೊದಲು ಪ್ರವೇಶಿಸಿದ್ದು ಇಂಗ್ಲಿಷಿನ ಮೂಲಕವೇ. ಹಾಗೆಯೆ ಪ್ರಾಚ್ಯ ಪಾಶ್ಚಾತ್ಯ ತತ್ವಜ್ಞಾನವೂ ಅವರ ಬುದ್ಧಿಯ ಒಂದು ಭಾಗವಾದದ್ದು ಇಂಗ್ಲಿಷಿನ ಮೂಲಕವೇ. ಈ ಎಲ್ಲ ತಿಳಿವಿನ ಹಿನ್ನೆಲೆಯಿಂದ ಮತ್ತು ತಾವು ಹುಟ್ಟಿಬಂದ ಶೂದ್ರ ಸಮುದಾಯದ ಒಂದು ಭಾಗವಾಗಿ ಪಡೆದ ಸ್ವಾನುಭವಗಳಿಂದ ಕುವೆಂಪು ಹಿಂದೂಧರ್ಮದ ಶೋಷಕ ಶಕ್ತಿಗಳನ್ನು ಗುರುತಿಸಿ ವೈಚಾರಿಕ ಚಿಕಿತ್ಸೆಗೆ ಗುರಿಪಡಿಸಲು ಸಾಧ್ಯವಾಯಿತು. ಈ ಚಿಕಿತ್ಸೆಯಲ್ಲಿ ಮುಖ್ಯವಾಗಿ ಅವರು ತಾಳಿದ ನಿಲುವು ಬಹುತೇಕ ಸುಧಾರಣಾವಾದಿಯದು. ಹಿಂದೂ ಸಂಸ್ಕೃತಿಯನ್ನು ಕೆಲವು ಉಗ್ರವಿಚಾರವಾದಿಗಳಂತೆ, ಸಂಪೂರ್ಣವಾಗಿ ನಿರಾಕರಿಸಿ, ಅದರ ಸ್ಥಾನದಲ್ಲಿ ಪರ‍್ಯಾಯ ಸಂಸ್ಕೃತಿಯೊಂದನ್ನು ಸ್ಥಾಪಿಸಬೇಕೆಂಬುದಾಗಿರಲಿಲ್ಲ. ಅದರ ಬದಲು ಅದರೊಳಗಿರುವ ಜೀವವಿರೋಧೀ ಸಮಾನತಾವಿರೋಧೀ ಸಂಗತಿಗಳನ್ನು ನಿರಾಕರಿಸುತ್ತ ಮನುಷ್ಯನ ಚೈತನ್ಯೋತ್ಕರ್ಷಕ್ಕೆ ಅಗತ್ಯವಾದ ಮೌಲ್ಯಗಳನ್ನು ಸ್ವೀಕರಿಸುವುದು ಅವರ ಉದ್ದೇಶವಾಗಿದೆ. ವ್ಯಕ್ತಿ ವ್ಯಕ್ತಿಗಳನ್ನು ವಿಭಜಿಸುವ ‘ಮತ’ ತೊಲಗಿ ಅದರ ಸ್ಥಾನದಲ್ಲಿ ‘ಅಧ್ಯಾತ್ಮ’ವನ್ನು ನೆಲೆಗೊಳಿಸುವುದು, ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂಬ ಕವಿ ಪಂಪನ ಉಕ್ತಿಯನ್ನು ನಿರುಪಾಧಿಕವಾಗಿ ಸ್ವೀಕರಿಸಿ, ಅನಿಕೇತನ ಪ್ರಜ್ಞೆಯ ಮೂಲಕ ಮನುಷ್ಯನನ್ನು ವಿಶ್ವಮಾನವನನ್ನಾಗಿ ಮಾಡುವುದು ಕುವೆಂಪು ಅವರ ತಾತ್ವಿಕ ನಿಲುವಾಗಿದೆ.

ಹಿಂದೂ ಧರ್ಮದ ವೈದಿಕ ಪುರೋಹಿತಶಾಹಿಯನ್ನು ಪ್ರತಿಭಟಿಸಿದಂತೆ, ಅವರು ರಾಜಶಾಹಿಯನ್ನೂ ವಿರೋಧಿಸಿದರು. ಸ್ವಭಾವತಃ ಸ್ವತಂತ್ರವೂ, ನಿರಂಕುಶಮತಿಯೂ ಆದ ಅವರ ವ್ಯಕ್ತಿತ್ವ ತನ್ನನ್ನು ನಿಯಂತ್ರಿಸುವ ಎಲ್ಲ ಬಗೆಯ ಪ್ರಭುತ್ವಗಳನ್ನೂ ಧೈರ್ಯದಿಂದ ನಿರಾಕರಿಸುವ ಸ್ವರೂಪದ್ದಾಗಿದೆ. ‘ಹುಟ್ಟಿನಿಂದಲೂ ನನಗೆ ಪುರೋಹಿತರು ಮತ್ತೆ ರಾಜರು ಎಂದರೆ ಆಗದು’ ಎಂದು ತಮ್ಮ ಆತ್ಮಕಥನದಲ್ಲೊಂದು ಕಡೆ (ನೆನಪಿನ ದೋಣಿಯಲ್ಲಿ, ಪು. ೧೦೬೮) ಬರೆದುಕೊಂಡಿದ್ದಾರೆ. ‘ಚಕ್ರವರ್ತಿಯ ವಿಪುಲ ಸಂಪತ್ತು ಕವಿಯ ಕಾಲ್ಗಳಡಿ’ ‘ಕವಿಗರಸುಗಿರಸುಗಳ ಋಣವಿಲ್ಲ, ಅವನಗ್ನಿಮುಖಿ, ಪ್ರಳಯ ಶಿಖಿ’–ಎಂಬ ದಿಟ್ಟತನ ಅವರ ಕವಿತೆಗಳಲ್ಲಿ ಅಭಿವ್ಯಕ್ತವಾಗಿದೆ. ಇದು ಎಲ್ಲ ದೊಡ್ಡ ಕವಿಗಳ ನಿಲುವೂ ಹೌದು. ಕುವೆಂಪು ಪ್ರತಿಭಟಿಸಿದ, ಮತ್ತು ಹಿಂದಿನಿಂದಲೂ ಬಂದ ಈ ‘ರಾಜತ್ವ’, ಕುವೆಂಪು ಸಾಹಿತ್ಯ ನಿರ್ಮಿತಿಯಲ್ಲಿ ತೊಡಗಿಕೊಂಡ ಕಾಲಕ್ಕೆ ‘ಸಾಮ್ರಾಜ್ಯಶಾಹಿ’ಯಾಗಿ ರೂಪಾಂತರಗೊಂಡಿತ್ತು. ಈಗ ಇದನ್ನು ಚಾರಿತ್ರಿಕವಾಗಿ ವಸಾಹತುಶಾಹಿ ಸಂದರ್ಭ ಎಂದು ವರ್ಣಿಸಲಾಗುತ್ತಿದೆ. ಈ ವಸಾಹತುಶಾಹೀ ಸಂದರ್ಭಕ್ಕೆ ಭಾರತವು ಒಳಗಾಗಿದ್ದರ ಪರಿಣಾಮಗಳನ್ನು ಕುರಿತು ಸಾಕಷ್ಟು ಚರ್ಚೆಗಳು ನಡೆದಿವೆ. ಕುವೆಂಪು ಅವರ ದೃಷ್ಟಿಯಲ್ಲಿ ಇದು ಏಕಕಾಲಕ್ಕೆ ವರವೂ ಹೌದು, ಶಾಪವೂ ಹೌದು. ‘ವರ’, ಈ ವಶಾಹತುಶಾಹಿಯ ಪರಿಣಾಮವಾದ ಇಂಗ್ಲಿಷ್ ಶಿಕ್ಷಣ, ಮತ್ತು ಆಗಿನ ಆಳುವವರು ತಂದ ಸುಧಾರಣಾ ಕ್ರಮಗಳು ಈ ದೇಶದ ಶೂದ್ರ ಸಮುದಾಯದ ಎಚ್ಚರಕ್ಕೆ ಮತ್ತು ಬಿಡುಗಡೆಗೆ ಸಾಧನವಾಯಿತೆಂಬ ಕಾರಣಕ್ಕೆ. ಶಾಪ, ಈ ದೇಶದ ವ್ಯಕ್ತಿ ಸ್ವಾತಂತ್ರ ವನ್ನು ಅಪಹರಿಸಿ, ಗುಲಾಮಗಿರಿಗೆ ತಳ್ಳಿ ಈ ದೇಶದ ಸಂಪತ್ತನ್ನು ಪರಕೀಯರು ಲೂಟಿಮಾಡಲು ಅವಕಾಶವಾಯಿತೆಂಬ ಕಾರಣಕ್ಕೆ. ಈ ಕುರಿತು “ನನ್ನ ಅಭಿವ್ಯಕ್ತಿ ಮೊದಲು ಮೈದೋರಿದ್ದು ಇಂಗ್ಲಿಷಿನಲ್ಲಿ, ಯಾವ ಬ್ರಿಟಿಷರನ್ನು ಹೊಡೆದೋಡಿಸಲು ಭರತಖಂಡ ಪ್ರಚಂಡ ಚಳುವಳಿ ಹೂಡಿತ್ತೊ ಆ ಬ್ರಿಟಿಷರ ಭಾಷೆಯಲ್ಲಿ”….. “ಇಂಡಿಯಾವನ್ನು ಶೋಷಣೆ ಮಾಡಿ ದಬ್ಬಾಳಿಕೆ ನಡೆಯಿಸುತ್ತಿದ್ದ ಇಂಗ್ಲಿಷರ ಮೇಲೆ ನನಗೆ ಎಷ್ಟು ದ್ವೇಷವಿತ್ತೊ ಅದಕ್ಕೆ ದ್ವಿಗುಣಿತ, ತ್ರಿಗುಣಿತವಾಗಿ ಇಂಗ್ಲಿಷ್ ಭಾಷೆಯ ಮೇಲೆ ನನಗೆ ಗೌರವ ಮಮತೆ ಗಳಿದ್ದವು” (ನೆನಪಿನ ದೋಣಿಯಲ್ಲಿ ಪು. ೧೬೮)–ಎಂದು ಕುವೆಂಪು ವಸಾಹತುಶಾಹಿಯ ರಾಜಕೀಯ ಮುಖವನ್ನು ಸಾಂಸ್ಕೃತಿಕ ಮುಖವನ್ನೂ ವಿಶ್ಲೇಷಿಸುತ್ತಾರೆ. ಹಿಂದಿನ ‘ರಾಜಶಾಹಿ’ ಈ ಹೊತ್ತಿಗೆ ‘ಸಾಮ್ರಾಜ್ಯಶಾಹಿ’ಯಾಗಿದ್ದು, ಅದನ್ನೆದುರಿಸಲು ಹಾಗೂ ಕಿತ್ತೆಸೆಯಲು ಗಾಂಧಿಯವರ ಮುಂದಾಳುತನದಲ್ಲಿ ರಾಷ್ಟ್ರೀಯ ಸ್ವಾತಂತ್ರ  ಚಳುವಳಿ ದೇಶಾದ್ಯಂತ ಕ್ರಿಯಾಶೀಲವಾಗಿತ್ತು. ಹುಟ್ಟಿನಿಂದಲೆ ಪ್ರಭುತ್ವ ವಿರೋಧಿಯಾದ ಕುವೆಂಪು ಈ ರಾಷ್ಟ್ರೀಯ ಚಳುವಳಿಯಲ್ಲಿ ನೇರವಾಗಿ ಭಾಗವಹಿಸದಿದ್ದರೂ, ಅವರು ಅಂದಿನ ರಾಷ್ಟ್ರೀಯ ಚಳುವಳಿಗೆ ಧ್ವನಿಯಾದುದಲ್ಲದೆ, ಅಂದಿನ ಹೋರಾಟಕ್ಕೆ ಸ್ಫೂರ್ತಿಯನ್ನು ನೀಡುವ ಅನೇಕ ಕವಿತೆಗಳನ್ನು ಬರೆದಿದ್ದಾರೆ. ಕುವೆಂಪು ಅವರ ಮಾತಿನಲ್ಲೇ ಹೇಳುವುದಾದರೆ : “ಸುಮಾರು ೧೯೨೫-೨೬ ರಿಂದ ನಡೆದ ಭಾರತದ ಜಗನ್ಮಹಾಸಂಗ್ರಾಮದ ಆ ಕಾಲದಲ್ಲಿ ನಡೆದ ಯಾವ ಮಹಾ ಘಟನೆಯೂ ಬಹುಶಃ ನನ್ನ ಲೇಖನಿಯಿಂದ ವಂಚಿತವಾಗಿಲ್ಲ. ವಿಭೂತಿ ಪ್ರಮಾಣದ ಯಾವ ಮಹದ್ ವ್ಯಕ್ತಿಯಾಗಲಿ, ಯಾವ ಮಹತ್  ಸಂಗತಿಯಾಗಲಿ, ಈ ಕವಿ ಚೇತನದಲ್ಲಿ ಸ್ಪಂದಿತವಾಗದೆ ಹೋಗಿಲ್ಲ” (ಸಮಗ್ರ ಗದ್ಯ ಸಂ. ೨. ಪು. ೩೫೨). ಪಾಂಚಜನ್ಯ (೧೯೩೩) ಕವನ ಸಂಗ್ರಹದೊಳಗಿನ ಎಷ್ಟೋ ಪದ್ಯಗಳು ಅಂದಿನ ಸ್ವಾತಂತ್ರ ಯೋಧರಿಗೆ ಕ್ರಾಂತಿ ಮಂತ್ರಗಳಂತೆ ವರ್ತಿಸಿದವೆಂದು ಹೇಳಲಾಗಿದೆ. ಅಷ್ಟೆ ಅಲ್ಲ , ನಿಜವಾದ ರಾಷ್ಟ್ರೀಯ ಪ್ರಜ್ಞೆಯ ಎಚ್ಚರಕ್ಕೆ ಅಗತ್ಯವಾದ ಪರಂಪರೆಯ ಹಿನ್ನೆಲೆಯನ್ನೂ, ಸಮಾಜ ಸುಧಾರಣ ನಿಲುವುಗಳನ್ನೂ, ಸಾಂಸ್ಕೃತಿಕ ಸ್ಮರಣೆಗಳನ್ನೂ ಮತ್ತು ವೈಚಾರಿಕತೆಯನ್ನೂ ತಮ್ಮ ಕವನಗಳ ಮೂಲಕ ಅಭಿವ್ಯಕ್ತಿಸುತ್ತ, ಅಂದಿನ ತರುಣ ಜನಾಂಗವನ್ನು ಯುಗ ಪರಿವರ್ತನೆಗೆ ಸ್ಪಂದಿಸುವಂತೆ ಮಾಡಿದವರು ಕುವೆಂಪು. ಅಷ್ಟೆ ಅಲ್ಲ, ಸ್ವಾತಂತ್ರೊ ತ್ತರ ಭಾರತದ ಹೊಸ್ತಿಲಿನಲ್ಲಿ, ‘ಸ್ವಾತಂತ್ರೊ ದಯ ಮಹಾ ಪ್ರಗಾಥ’ದ ಮೂಲಕ ಸ್ವಾತಂತ್ರೊ ದಯದ ಸಂಭ್ರಮವನ್ನು ಹಾಡಿದ ಕವಿ, ಅನಂತರ ಉದ್ದಕ್ಕೂ ಈ ದೇಶದ ವಿವಿಧ ಸಂದರ್ಭಗಳಿಗೆ ಸ್ಪಂದಿಸಿರುವ ಕ್ರಮ ವಿಶೇಷ ರೀತಿಯದಾಗಿದೆ. ಸ್ವಾತಂತ್ರೊ ತ್ತರ ಕಾಲದ ಗಾಂಧಿಯವರ ಹತ್ಯೆ, ದೇಶ ವಿಭಜನೆಯ ದುರಂತಗಳು ಮತ್ತು ತಲ್ಲಣಗಳು, ೧೯೫೦ನೇ ಜನವರಿ ೨೬ರಂದು ಭಾರತವು ಸರ್ವಪ್ರಜಾಧಿಪತ್ಯ (ರಿಪಬ್ಲಿಕ್) ಎಂದು ಘೋಷಿತವಾದ ಸಂದರ್ಭ, ಚೀನಾದ ಆಕ್ರಮಣ, ಪಾಕಿಸ್ತಾನದೊಂದಿಗೆ ನಡೆದ ಸಂಘರ್ಷ, ಇಂದಿರಾಗಾಂಧಿ ತುರ್ತುಪರಿಸ್ಥಿತಿಯನ್ನು ಘೋಷಿಸಿದಾಗ–ಇಂತಹ ಇನ್ನೂ ಅನೇಕ ಸಮಕಾಲೀನ ವಿದ್ಯಮಾನ ಗಳಿಗೆ ಕುವೆಂಪು ಒಬ್ಬ ಪ್ರಜ್ಞಾವಂತ ಕವಿಯಾಗಿ ಸ್ಪಂದಿಸಿದ ಪರಿಯನ್ನು ‘ಇಕ್ಷುಗಂಗೋತ್ರಿ’ (೧೯೫೭) ಮತ್ತು ಪ್ರೇತಕ್ಯೊ (೧೯೬೭) ಕವನ ಸಂಗ್ರಹಗಳ ಎಷ್ಟೋ ಕವನಗಳಲ್ಲಿ ಸಹೃದಯರು ಗುರುತಿಸಬಹುದು. ಈ ದೃಷ್ಟಿಯಿಂದ ಹೇಳುವುದಾದರೆ ಕುವೆಂಪು ಅವರ ಇಡೀ ಸಾಹಿತ್ಯ ಈ ದೇಶದ ಸ್ವಾತಂತ್ರ ಪೂರ್ವದ ಆಶೋತ್ತರಗಳ ಪ್ರತಿನಿಧಿಯೂ, ಸ್ವಾತಂತ್ರೊ ತ್ತರ ಭಾರತದ ವಿಮರ್ಶೆಯೂ ಆಗಿದೆ.

ಈ ದೇಶದ ಸ್ವಾತಂತ್ರ  ಚಳುವಳಿಯ ಜತೆಗೇ ಅದರದೊಂದು ಭಾಗವಾಗಿ ಹುಟ್ಟಿಕೊಂಡಿದ್ದು, ಕರ್ನಾಟಕದ ಏಕೀಕರಣದ ಕಲ್ಪನೆ. ಸ್ವಾತಂತ್ರ  ಚಳುವಳಿಯ ಮೂಲಕ ಈ ದೇಶ ಪರಕೀಯ ಪ್ರಭುತ್ವದಿಂದ ಬಿಡುಗಡೆ ಪಡೆಯುವುದು ಎಷ್ಟು ಮುಖ್ಯವಾಗಿತ್ತೋ, ಅಷ್ಟೇ ಮುಖ್ಯವಾಗಿತ್ತು ವಸಾಹತುಶಾಹೀ ಕಾರಣದಿಂದ ಹರಿದು ಹಂಚಿಹೋದ ಕರ್ನಾಟಕ ಮತ್ತೆ ಏಕೀಕೃತ ಕರ್ನಾಟಕವಾಗುವುದು. ಇದು ಕೇವಲ ರಾಜಕೀಯವಾದುದಲ್ಲ; ಮೂಲತಃ ಸಾಂಸ್ಕೃತಿಕವಾದದ್ದು. ‘ಕರ್ನಾಟಕ ಮಾತೆ’ಯನ್ನು ‘ಭಾರತ ಜನನಿಯ ತನುಜಾತೆ’ಯಂತೆ ಪರಿಭಾವಿಸುತ್ತ, ಕನ್ನಡ ಭಾಷೆಯ ಮೇಲಣ ಉತ್ಕಟವಾದ ಪ್ರೀತಿಯನ್ನು ಕುರಿತು, ಆ ಕಾಲದ ಉಳಿದೆಲ್ಲರಿಗಿಂತ ಹೆಚ್ಚು ಸಂಖ್ಯೆಯ ಕವಿತೆಗಳನ್ನು ಬರೆದ, ಕುವೆಂಪು, ‘ಸಾಯುತಿದೆ ನಿಮ್ಮ ನುಡಿ ಓ ಕನ್ನಡದ ಕಂದರಿರಾ ಹೊರನುಡಿಯ ಹೊರೆಯಿಂದ ಕುಸಿದು ಕುಗ್ಗಿ’ ಎಂದು ಕನ್ನಡಿಗರನ್ನು ಎಚ್ಚರಿಸುತ್ತಾ, ಅಖಂಡ ಕರ್ನಾಟಕದ ಕನಸು ಕಾಣುತ್ತಾ, ಕನ್ನಡದ ಸ್ಥಾನಮಾನಗಳ ಪರವಾಗಿ, ದನಿಯೆತ್ತುತ್ತಾ, ಕನ್ನಡಪರ ಹೋರಾಟಗಳಿಗೆ ಸ್ಫೂರ್ತಿಯಾಗುತ್ತಾ, ಪ್ರೋತ್ಸಾಹಿಸುತ್ತಾ ನಿಂತ ನಿಲುವು ಕೇವಲ ಕನ್ನಡ  ಭಾಷೆಯ ಮೇಲಣ ಅಭಿಮಾನದಿಂದ ಹುಟ್ಟಿಕೊಂಡದ್ದಲ್ಲ; ಈ ದೇಶದ ಶ್ರೀಸಾಮಾನ್ಯನ ಅಭ್ಯುದಯದ ಪರವಾದ ಕಾಳಜಿಗಳಿಂದ ಹುಟ್ಟಿಕೊಂಡದ್ದು. ಯಾಕೆಂದರೆ ಇಂಗ್ಲಿಷ್ ಭಾಷೆ ಹಾಗೂ ಶಿಕ್ಷಣದ ಹಿಡಿತ ನಮ್ಮ ಸಾಮಾಜಿಕ ಸಂದರ್ಭದಲ್ಲಿ ಉಂಟುಮಾಡುವ ತರತಮಗಳು ಪ್ರಜಾಪ್ರಭುತ್ವಕ್ಕೆ ವಿರೋಧಿಯಾದ ಅಸಮಾನತೆಯನ್ನು ಸುಭದ್ರಗೊಳಿಸುವ ತಂತ್ರಗಳೇ ಆಗುತ್ತವೆ ಎಂಬ ಸತ್ಯವನ್ನು ಕುವೆಂಪು ಬಲ್ಲವರಾಗಿದ್ದರು.

ಕುವೆಂಪು ಅವರ ಕಾವ್ಯದಲ್ಲಿ ಅಧ್ಯಾತ್ಮವೇ ಸರ್ವವ್ಯಾಪಿಯಾದರೂ, ಈ ಆಧ್ಯಾತ್ಮಿಕತೆ ಯನ್ನು ರೂಪಿಸಿದ ಭಕ್ತಿ ಮತ್ತು ಅನುಭಾವ ಪರವಾದ ನಿಲುವುಗಳನ್ನು ಪ್ರಕಟಿಸುವ ಕವಿತೆಗಳು ಪ್ರತ್ಯೇಕವಾಗಿ ಪರಿಗಣಿಸುವಷ್ಟು ಸಂಖ್ಯೆಯಲ್ಲಿವೆ. ತಮ್ಮ ಸಮಕಾಲೀನರಾದ ಇತರ ಕೆಲವು ಪ್ರಮುಖ ಬರೆಹಗಾರರಂತೆ, ಈ ದೇಶದ ಯಾವುದೇ ಸಿದ್ಧಮತ- ಧರ್ಮ ಸಂಪ್ರದಾಯಕ್ಕೆ ಸೇರದ, ಮತ್ತು ಮಲೆನಾಡಿನ ಶೂದ್ರ ಸಮುದಾಯದಿಂದ ಬಂದ ಕುವೆಂಪು, ಮೂಲತಃ ವಿಚಾರವಾದಿಯಾದರೂ ಅತೀತದಲ್ಲಿ ಗಾಢವಾದ ನಂಬಿಕೆಯುಳ್ಳ ಕುವೆಂಪು, ತಮ್ಮದೇ ಆದೊಂದು ಧಾರ್ಮಿಕ ಪ್ರಣಾಲಿಯನ್ನು ಕಟ್ಟಿಕೊಳ್ಳುವ ಪ್ರಯತ್ನದಲ್ಲಿ, ಪ್ರಾಚ್ಯ- ಪಾಶ್ಚಾತ್ಯ ತತ್ವಜ್ಞಾನ ಪಥಗಳಲ್ಲಿ ತೊಳಲುತ್ತಾ ಅದೃಷ್ಟವಶಾತ್ ತಮಗೆ ಆಶ್ರಯವಾಗಿ ದೊರೆತ ಶ್ರೀರಾಮಕೃಷ್ಣ ಪರಮಹಂಸ – ವಿವೇಕಾನಂದರ ವಿಚಾರಗಳ ಸಾನಿಧ್ಯದಲ್ಲಿ ತಮ್ಮ ಹೃದಯಕ್ಕೆ ತೃಪ್ತಿಯನ್ನು ತಂದ ಸರ್ವಧರ್ಮ ಸಮನ್ವಯದ ನಿಲುವನ್ನು ತಮ್ಮ ‘ಧರ್ಮ’ವನ್ನಾಗಿ ಸ್ವೀಕರಿಸಿದರು. ‘ಅಗಣಿತ ತಾರಾಗಣಗಳ ನಡುವೆ ನಿನ್ನನೆ ನೆಚ್ಚಿಹ ನಾನು, ನನ್ನೀ ಜೀವನ ಸಮುದ್ರಯಾನಕೆ ಚಿರಧ್ರುವ ತಾರೆಯು ನೀನು’–ಎಂದು ಶ್ರೀರಾಮಕೃಷ್ಣ ಪರಮಹಂಸರನ್ನು ‘ಅಂತರತಮಗುರು’ವನ್ನಾಗಿ ಒಪ್ಪಿಕೊಂಡ ಕುವೆಂಪು ಅವರ ಆಧ್ಯಾತ್ಮಿಕ ನಿಲುವು, ಅವರ ಬಹುಸಂಖ್ಯೆಯ ಭಕ್ತಿ ಮತ್ತು ಅನುಭಾವಿಕ ಕವಿತೆಗಳಲ್ಲಿ ಅಭಿವ್ಯಕ್ತಗೊಳ್ಳುತ್ತ, ‘ಓ ನನ್ನ ಚೇತನ, ಆಗು ನೀ ಅನಿಕೇತನ’ ಎಂಬ ನೆಲೆಯನ್ನು ತಲುಪಿದೆ. ಈ ಹಿನ್ನೆಲೆಯಿಂದ, ಅವರ ‘ಅಗ್ನಿಹಂಸ’ (೧೯೪೬), ಮೊದಲ ಪ್ರಾತಿನಿಧಿಕ ಕವನ ಸಂಕಲನವಾದರೂ, ಅವರ ಇನ್ನಿತರ ಸಂಕಲನಗಳಲ್ಲಿ ಚದುರಿರುವ, ಈ ವರ್ಗಕ್ಕೆ ಸೇರುವ ಸಾಕಷ್ಟು ಸಂಖ್ಯೆಯ ಕವಿತೆಗಳಿವೆ. ನಮ್ಮ ಗಮನಕ್ಕೆ ಬಂದಂತೆ ಅವರ ಮೊದಲ ಕವನ ಸಂಗ್ರಹ – ‘ಕೊಳಲು’ (೧೯೩೦)ದಲ್ಲೇ ೨೫ಕ್ಕೂ ಹೆಚ್ಚು ಸಂಖ್ಯೆಯ ಕವಿತೆಗಳಿವೆ. ಕುವೆಂಪು ಅವರ ಭಕ್ತಿ ಮತ್ತು ಅನುಭಾವ ಪರವಾದ ಬಹುಸಂಖ್ಯೆಯ ಕವಿತೆಗಳು, ಅಧ್ಯಾತ್ಮ ಸಾಧಕನೊಬ್ಬನ ಹೃದಯದ ಆರ್ತತೆ, ಹಂಬಲ, ಕೋರಿಕೆ, ನಿವೇದನೆಗಳನ್ನು ಆ ಪರಾತ್ಪರವು ನಿಸರ್ಗ ಮತ್ತು ಬದುಕಿನಲ್ಲಿ ಪ್ರಕಾಶನಗೊಳ್ಳುವ ವಿವಿಧ ವಿನ್ಯಾಸಗಳನ್ನು ಹಾಗೂ ಅದರ ಸಕೃದ್ದರ್ಶನದ ವಿಸ್ಮಯಾದ್ಭುತಗಳನ್ನು ವಿವಿಧ ರೂಪಕಗಳಲ್ಲಿ ಅಭಿವ್ಯಕ್ತಪಡಿಸುತ್ತವೆ. ಅದರಲ್ಲಿಯೂ ‘ಅಗ್ನಿಹಂಸ’ ಕವನ ಸಂಕಲನ ದೊಳಗಿರುವ ‘ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ, ನಿತ್ಯವೂ ಅವತರಿಪ ಸತ್ಯಾವತಾರ’ (ಜನ್ಮೋತ್ಸವ: ಸಮಗ್ರ ಕಾವ್ಯ ಸಂ. ೧. ಪು. ೬೨೧)–ಎಂಬ ಕವಿತೆ, ವಿಜ್ಞಾನ ಮತ್ತು ವೇದಾಂತದ ಪರಿಭಾಷೆಯಲ್ಲಿ, ಅವತಾರತತ್ವವನ್ನು ವ್ಯಾಖ್ಯಾನಿಸುವ ಮತ್ತು ಆವಾಹಿಸುವ ಒಂದು ಅನನ್ಯ ಪ್ರಾರ್ಥನಾ ಗೀತವಾಗಿದೆ.

ಹೊಸಗನ್ನಡ ಕಾವ್ಯ ಸಂದರ್ಭದಲ್ಲಿ ಕವಿಯ ಸಾಂಸಾರಿಕ ಜೀವನ ಕೇಂದ್ರಿತವಾದ ‘ಪ್ರೇಮಕವನ’ಗಳದ್ದೇ ಒಂದು ವಿಶೇಷತೆಯಾಗಿದೆ. ಅದರಲ್ಲೂ ಕೆ.ಎಸ್.ನ. ಮತ್ತು ಬೇಂದ್ರೆಯವರ ಕೊಡುಗೆ ಈ ಪ್ರಕಾರದಲ್ಲಿ ದೊಡ್ಡದು. ಕುವೆಂಪು ಅವರೂ ಪ್ರೇಮವನ್ನು ವಸ್ತುವನ್ನಾಗಿಸಿಕೊಂಡು ಸಾಕಷ್ಟು ಕವಿತೆಗಳನ್ನು ಬರೆದಿದ್ದಾರೆ. ‘ಷೋಡಶಿ’ ‘ಪ್ರೇಮ ಕಾಶ್ಮೀರ’ ‘ಚಂದ್ರ ಮಂಚಕೆ ಬಾ ಚಕೋರಿ’ ‘ಅನುತ್ತರಾ’–ಈ ಸಂಕಲನಗಳು ಈ ಬಗೆಯ ಕವಿತೆಗಳನ್ನು ಒಳಗೊಂಡಿವೆ. ಆದರೆ, ಅವರ ನಿಸರ್ಗಪರ ಹಾಗೂ ಸಮಾಜಪರ ಕವಿತೆಗಳಲ್ಲಿನ ಉತ್ಕಟತೆಗೆ ಹೋಲಿಸಿದರೆ, ಕುವೆಂಪು ಅವರ ಪ್ರೇಮಕವನಗಳು ಅಂತಹ ಉತ್ಸಾಹವನ್ನೇನೂ ಹುಟ್ಟಿಸುವುದಿಲ್ಲ. ಕುವೆಂಪು ಅವರು ಮೊದಮೊದಲು ಸನ್ಯಾಸ ಜೀವನಕ್ಕೆ ಹಂಬಲಿಸಿ, ಅನಂತರ ದಾಂಪತ್ಯ ಜೀವನವನ್ನು ಒಪ್ಪಿಕೊಂಡ ಕಾರಣದಿಂದಲೋ ಏನೋ, ಅವರ ಸಾಂಸಾರಿಕ ಜೀವನ ಕೇಂದ್ರಿತ ಪ್ರೇಮಕವನಗಳು ಸಾಕಷ್ಟು ಸಹಜವೂ ತೀವ್ರವೂ ಆಗದೆ, ಗಂಡು ಹೆಣ್ಣಿನ ಸಂಬಂಧವನ್ನು ಆದರ್ಶೀಕರಿಸುವ, ಮನುಷ್ಯ ಸಹಜವಾದ ಭೋಗವನ್ನು ಆ ದೈವೀಲೀಲೆಯ ಒಂದು ವಿನ್ಯಾಸವೆಂದು ಸಂತೈಸಿಕೊಳ್ಳುವ ಆಧ್ಯಾತ್ಮಿಕತೆಯ ಪರಿವೇಷದಲ್ಲಿ ಆಶ್ರಯವನ್ನು ಪಡೆಯುತ್ತವೆ. ಹೀಗಾಗಿ ಅವರ ಎಷ್ಟೋ ಕವನಗಳಲ್ಲಿಯಂತೆ ಅವರ ಪ್ರೇಮಕವನಗಳೂ ಆಧ್ಯಾತ್ಮಿಕ ಹಾಗೂ ಆದರ್ಶಪರ ನಿಲುವುಗಳನ್ನು ಮಂಡಿಸುವ ಮಾಧ್ಯಮವಾಗುತ್ತವೆಯೇ ಹೊರತು, ನಿಸ್ಸಂಕೋಚವಾದ ಹಾಗೂ ಸಹಜವಾದ ಮಾನವ ಭಾವಗಳ ತೀವ್ರಾಭಿವ್ಯಕ್ತಿಯಾಗುವುದಿಲ್ಲ. ‘ಕವಿಗೀ ಸಂಸಾರವೆ ಪೂಜೆ’, ಸಹಧರ್ಮಿಣಿಯು ಜಗನ್ಮಾತೆಯ ಒಂದು ಅಂಶ, ಸಂಸಾರ ಒಂದು ತಪೋವನ, ಭೋಗವೇನಿದ್ದರೂ ಆ ಶಿವ-ಶಿವಾಣಿಯರ ಲೀಲೆ-ಎಂದು ಅನಗತ್ಯವಾದ ಆದರ್ಶದ ನಿಲುವಿಗೇರುವುದರ ಮೂಲಕ ಅವರ ಪ್ರೇಮಕವಿತೆಗಳು ತೀರಾ ವೈಯಕ್ತಿಕವೂ, ಪರಿಮಿತವೂ ಆಗಿ, ಹೆಚ್ಚೆಂದರೆ ವಿಸ್ಮಯಕ್ಕೆ ಪಾತ್ರವಾಗುತ್ತವೆ.

ಕುವೆಂಪು ತಾವು ಸಾಹಿತ್ಯಕ್ಷೇತ್ರಕ್ಕೆ ಕನ್ನಡದ ದಿಕ್ಕಿನಿಂದ ಪ್ರವೇಶಿಸದೆ ಇಂಗ್ಲಿಷಿನ ದಿಕ್ಕಿನಿಂದ ಪ್ರವೇಶಿಸಿದವರೆಂದು ಹೇಳಿಕೊಂಡರೂ, ಸಮಗ್ರ ಕನ್ನಡ ಸಾಹಿತ್ಯ ಪರಂಪರೆಯೊಂದಿಗೆ ಅವರು ಗಾಢವಾಗಿ ಬೆಸೆದುಕೊಳ್ಳುವಂತೆ ಮಾಡಿದ್ದು ಅವರ ‘ಕಥನ ಪ್ರತಿಭೆ’ಯೇ. ಅವರ ‘ಕವಿತಾ ಪ್ರತಿಭೆ’ ಅವರನ್ನು ನವೋದಯದ ಪ್ರಮುಖ ಕವಿಗಳಲ್ಲಿ ಒಬ್ಬರನ್ನಾಗಿ ಮಾಡಿದರೆ, ಅವರ ಕಥನ ಪ್ರತಿಭೆ–ಸಾಂಪ್ರದಾಯಿಕ ಅರ್ಥದಲ್ಲಿ–ಅವರನ್ನು ಆಧುನಿಕ ಕನ್ನಡ ಸಾಹಿತ್ಯದ ಏಕೈಕ ‘ಮಹಾಕವಿ’ಯನ್ನಾಗಿ ಮಾಡಿದೆ. ಅವರನ್ನು ‘ಮಹಾಕವಿ’ ಎಂದು ನಿರ್ದೇಶಿಸಲು ಕಾರಣವಾದ ಅವರ ‘ಶ್ರೀರಾಮಾಯಣದರ್ಶನಂ’ ಒಂದರ್ಥದಲ್ಲಿ ಅವರ ಸಮಸ್ತ ‘ಕವಿತಾ ಪ್ರತಿಭೆ’ಯ ಶಿಖರ ಎನ್ನಬಹುದು. ಇಂಥದೊಂದು ಮಹತ್ ಕೃತಿಯ ನಿರ್ಮಿತಿಗಾಗಿ ಅವರು ತಮ್ಮ ಪೂರ್ವ ಹಾಗೂ ಪಶ್ಚಿಮದ ಕಾವ್ಯ ಸಂಸ್ಕಾರದ ಹಿನ್ನೆಲೆಯಲ್ಲಿ ಮೊದಲಿನಿಂದಲೂ ವಿವಿಧ ಕಥನ ಕವಿತೆಗಳ ಮೂಲಮಾನದಲ್ಲಿ ನಿರಂತರವಾಗಿ ಪ್ರಯೋಗದಲ್ಲಿ ತೊಡಗಿದ್ದರೆಂಬ ಸಂಗತಿಯನ್ನು ಅವರು ತಮ್ಮ ಆತ್ಮಕಥನವಾದ ‘ನೆನಪಿನ ದೋಣಿಯಲ್ಲಿ’ ಸಾಕಷ್ಟು ಕಡೆ ಪ್ರಸ್ತಾಪಿಸಿದ್ದಾರೆ. ಕುವೆಂಪು ಅವರ ಕಥನ ಪ್ರತಿಭೆ ಒಂದೆಡೆ ಅವರ ‘ಶ್ರೀರಾಮಾಯಣದರ್ಶನಂ’ದಂಥ ಮಹಾಕಾವ್ಯದಲ್ಲಿ, ಮತ್ತು ಅವರು ಬರೆದ ಎರಡು ಕಾದಂಬರಿಗಳಲ್ಲಿ ತಮ್ಮ ಸಮೃದ್ಧವಾದ ಅಭಿವ್ಯಕ್ತಿಯನ್ನು ಕಂಡುಕೊಂಡರೆ, ಅವರ ಇನ್ನಿತರ ಕಾವ್ಯ ನಿರ್ಮಿತಿಯ ಒಂದು ಭಾಗವಾಗಿಯೂ–ಅನೇಕ ಕಥನ ಕವನಗಳಲ್ಲಿ–ಅಭಿವ್ಯಕ್ತವಾಗಿದೆ. ಈ ಕಥನ ಕವನಗಳನ್ನು ವಸ್ತುವಿನ ದೃಷ್ಟಿಯಿಂದ ಎರಡು ಭಾಗಗಳನ್ನಾಗಿ ವಿಂಗಡಿಸಿಕೊಂಡು ನೋಡಬಹುದು. ಒಂದು ಅಭಿಜಾತ ಕಾವ್ಯಪರಂಪರೆಯ ಲಕ್ಷಣಗಳನ್ನುಳ್ಳ ಕಥನ ಕವನಗಳು; ಮತ್ತೊಂದು, ನೇರವಾಗಿ ನವೋದಯ ಸಂದರ್ಭದ ‘ಭಾವಗೀತೆ’ಯೆಂಬ ಕವಿತೆಯ ‘ಕಾವ್ಯಕಲ್ಪನೆ’ಗೆ ಹೊಂದುವ ಕಥನಗಳು. ‘ಮಹಾದರ್ಶನ’ ‘ಸಮುದ್ರಲಂಘನ’ ‘ತಾನಾಜಿ’ ‘ರಕ್ತರಜನಿ’ ‘ಚಿತ್ರಾಂಗದಾ’–ಇಂಥ ಕವನಗಳು ಮೊದಲನೆಯ ವರ್ಗಕ್ಕೆ ಸೇರುವ ಕಥನ ಕವನಗಳು ಎನ್ನುವುದಾದರೆ, ‘ಅಮಲನ ಕಥೆ’ ‘ಪ್ರಾಯಶ್ಚಿತ್ತ’ ‘ಹಾಳೂರು’ ಮತ್ತು ಅವರ ‘ಕಥನ ಕವನಗಳು’ ಎಂಬ ಸಂಗ್ರಹದೊಳಗಿನ ಇನ್ನೆಷ್ಟೊ ಕವನಗಳು ಈ ಎರಡನೆಯ ವರ್ಗದ ಕಥನ ಕವನಗಳು ಎನ್ನಬಹುದು. ಇಷ್ಟಲ್ಲದೆ ಮಕ್ಕಳಿಗಾಗಿ ಅವರು ಬರೆದ ಸಾಕಷ್ಟು ಸಂಖ್ಯೆಯ ಕವನಗಳೂ ಮೂಲತಃ ಕಥನದ ಲಕ್ಷಣಗಳನ್ನು ಒಳಗೊಂಡರೂ, ಬ್ರೌನಿಂಗ್ ಕವಿಯ ಪ್ರೇರಣೆಯಿಂದ ಅವರು ಬರೆದ ‘ಬೊಮ್ಮನ ಹಳ್ಳಿಯ ಕಿಂದರಿ ಜೋಗಿ’ ಅವರೇ ಹೇಳುವಂತೆ ‘ಏಕ್‌ದಂ ಕರ್ನಾಟಕವನ್ನೆಲ್ಲ ಬೆರಗುಗೊಳಿಸಿದ’ ಕವಿತೆ. ಇವತ್ತಿಗೂ ಅಷ್ಟರಮಟ್ಟಿಗೆ ಮಕ್ಕಳನ್ನು ಬೆರಗುಗೊಳಿಸುವ ಕವಿತೆ ಮತ್ತೊಂದಿಲ್ಲ.

ಕನ್ನಡಕ್ಕೆ ಸಮಾನಾಂತರವಾದ ದೂರದಲ್ಲಿ ನಿಂತು, ತಮ್ಮ ಪಾಡಿಗೆ ತಾವು ಏಕಾಂಗಿಯಾಗಿ ಇಂಗ್ಲಿಷ್ ಸಾಹಿತ್ಯದೊಂದಿಗೆ ಹೋರಾಡುತ್ತ ಇಂಗ್ಲಿಷಿನಲ್ಲಿಯೆ ಪದ್ಯರಚನೆ  ಮಾಡುತ್ತಿದ್ದ ಸಂದರ್ಭದಲ್ಲಿ ಅವರು ಕನ್ನಡದಲ್ಲಿ ಬರೆಯಲು ಪ್ರಯತ್ನಪಟ್ಟ ‘ಅಮಲನ ಕಥೆ’  ಚಾರಿತ್ರಿಕವಾಗಿ ಕುವೆಂಪು ಅವರ ಮೊಟ್ಟ ಮೊದಲ ಕಥನ ಕವನವಾಗಿದೆ. ಇದು ಪ್ರಕಟವಾದದ್ದು ೧೯೨೪ರಲ್ಲಿ ಎಂದು ಕಾಣಿಸಲಾಗಿದೆ. ಇದರ ವಸ್ತು ಕಾಡಿಗೆ ಹೋಗಿ ಕಟ್ಟಿಗೆ ಕಡಿದು ತಂದು ಮಾರಿ ಬದುಕುವ ಬಡವನೊಬ್ಬನನ್ನು ಕುರಿತದ್ದು. ಶಾಲಾ ಪುಸ್ತಕದಲ್ಲಿ ಪರಿಚಿತವಾದ ‘ಗೋವಿನ ಕತೆ’ಯ ಧಾಟಿಯ ಈ ಪದ್ಯ ಐನೂರು ಅರವತ್ತು ಪಂಕ್ತಿಗಳಷ್ಟು ಸುದೀರ್ಘವಾಗಿದೆ. ಕುಮಾರವ್ಯಾಸ, ಲಕ್ಷಿ ಶರ ಪ್ರೇರಣೆಗಳನ್ನು ಗುರುತಿಸಬಹುದಾದ ಈ ಕವಿತೆ ತೀರಾ ಸಾಮಾನ್ಯವಾಗಿದ್ದರೂ, ಕುವೆಂಪು ಅವರ ಕಾವ್ಯದ ಮುಖ್ಯಲಕ್ಷಣಗಳಾದ ನಿಸರ್ಗಪ್ರೀತಿ ಮತ್ತು ದೈವಶ್ರದ್ಧೆಗಳನ್ನು ಸ್ಪಷ್ಟವಾಗಿ ಪ್ರಕಟಿಸುತ್ತದೆ. ತದನಂತರ ೧೯೨೬ರಲ್ಲಿ ಅವರು ಬರೆದ ಹಾಳೂರು, ೫೮೩ ಪಂಕ್ತಿಗಳಷ್ಟು ಸುದೀರ್ಘವಾಗಿ ಲಲಿತ ರಗಳೆಯ ನಿರರ್ಗಳ ನಡೆಯಲ್ಲಿ, ಬದಲಾಗುತ್ತಿದ್ದ ಭಾರತದಲ್ಲಿ ನಗರೀಕರಣದ ಕಾರಣದಿಂದ ಹಳ್ಳಿಯ ಜೀವನಕ್ರಮವು, ತನ್ನ ಮೊದಲಿನ ಮುಗ್ಧತೆಯನ್ನೂ ಚೆಲುವನ್ನೂ ಕಳೆದುಕೊಂಡು ಹಾಳಾಗುತ್ತಿದೆ ಎಂಬುದನ್ನು ನಿರೂಪಿಸುವ ಕವಿತೆಯಾಗಿದೆ. ಬಹುಶಃ ಆಲಿವರ್ ಗೋಲ್ಡ್‌ಸ್ಮಿತ್ ಬರೆದ ‘ದಿ ಡೆಸರ್ಟೆಡ್ ವಿಲೇಜ್’ ಎಂಬ ಕವಿತೆ ಇದಕ್ಕೆ ಪ್ರೇರಣೆಯಾಗಿರುವಂತೆ ತೋರುತ್ತದೆ. ೧೯೨೭ರಲ್ಲಿ ಬರೆದ ೨೨೫ ಪಂಕ್ತಿಗಳ ಇನ್ನೊಂದು ಕವಿತೆ ‘ಪ್ರಾಯಶ್ಚಿತ್ತ’ ಎನ್ನುವುದು ತಮ್ಮಣ್ಣನೆಂಬ ಬೇಟೆಗಾರನೊಬ್ಬ ‘ಮರಸುಕೂತು’, ಕತ್ತಲೆಯ ರಾತ್ರಿಯಲ್ಲಿ ಹಳುವಿನಲ್ಲಿ ಏನೋ ಚಲಿಸಿದಂತಾಗಲು, ಕಡವೆ ಇರಬಹುದೆಂದು ತಿಳಿದು ಕೋವಿಯಿಂದ ಗುಂಡು ಹಾರಿಸಿದಾಗ, ಹಾಗೆ ಆತ ಗುಂಡು ಹೊಡೆದು ಸಾಯಿಸಿದ್ದು ತನ್ನ ದಣಿ ರಂಗನಾಯ್ಕರ ಎರಡು ಗಾಡಿ ಎತ್ತುಗಳಿಗೆ ಎಂಬ ಸತ್ಯಾಂಶ ತಿಳಿದು ತಾನು ಗೋಹತ್ಯೆ ಮಾಡಿದೆನಲ್ಲಾ ಎಂಬ ಪಶ್ಚಾತ್ತಾಪದಿಂದ ಕೊರಗಿ ಸತ್ತುಹೋದ ಸಂಗತಿಯನ್ನು ಸಾವಧಾನ ಗತಿಯಲ್ಲಿ ವರ್ಣಿಸುತ್ತದೆ. ಇದೇ ಕಾಲದಲ್ಲಿ ರಚಿತವಾದ (೧೯೨೮) ಇನ್ನೂ ಒಂದು ಸುದೀರ್ಘ ಕಥನ ಕವನ ‘ಮಹಾದರ್ಶನ’.

ಸ್ವಾಮಿ ವಿವೇಕಾನಂದರು, ಕನ್ಯಾಕುಮಾರಿಯ ನಡುಗಡ್ಡೆಯ ಬಂಡೆಯ ಮೇಲೆ ಧ್ಯಾನಸ್ಥರಾಗಿ ಕೂತು ಈ ಭಾರತದ ಪ್ರಾಚೀನ ಪರಂಪರೆ ಹಾಗೂ ಚರಿತ್ರೆಯ ವಿವಿಧ ಘಟನಾವಳಿಗಳ ಹಿನ್ನೆಲೆಯಲ್ಲಿ ಅವರ ಸಮಕಾಲೀನ ಭಾರತವು ಶ್ರೀರಾಮಕೃಷ್ಣಪರಮಹಂಸರ ಕೃಪೆಯಿಂದ ಮತ್ತೆ ಹೊಸ ಹುಟ್ಟನ್ನು ಪಡೆದುಕೊಳ್ಳುತ್ತದೆ ಎನ್ನುವ ‘ದರ್ಶನ’ವನ್ನು ಕಂಡ ಪರಿಯನ್ನು ವರ್ಣಿಸುವ ಎಂಟುನೂರಾ ಐದು ಪಂಕ್ತಿಗಳ ‘ಮಹಾದರ್ಶನ’, ಛಂದಸ್ಸಿನ ದೃಷ್ಟಿಯಿಂದ ಒಂದು ಹೊಸ ಪ್ರಯೋಗ. ಇದರ ಜತೆಗೆ ಆಂಜನೇಯನ ಸಾಗರೋಲ್ಲಂಘನದ ಸಾಹಸವನ್ನು ವರ್ಣಿಸುವ ‘ಸಮುದ್ರಲಂಘನ’ವೆಂಬ ನೀಳ್ಗವಿತೆಯೊಂದು ೧೯೩೦ರ ಕಾಲದಲ್ಲಿ ರಚಿತವಾಗಿ, ೧೯೩೧ರಂದು ಮೈಸೂರಿನಿಂದ ಹೊರಡುತ್ತಿದ್ದ ‘ಅರ್ಥಸಾಧಕ’ ಎಂಬ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಐನೂರಾ ಹನ್ನೆರಡು ಪಂಕ್ತಿಗಳಷ್ಟು ದೀರ್ಘವಾಗಿರುವ- ಷಟ್ಪದಿಯನ್ನು ಮುರಿದು ಕಟ್ಟುವ ಪ್ರಯೋಗದ ಈ ಕವಿತೆ, ಅವರ ಶ್ರೀರಾಮಾಯಣ ದರ್ಶನಂ ಕವಿತೆಯ ಮೊದಲ ಕನಸಿನಂತೆ ತೋರುತ್ತದೆ. ೧೯೨೪ ರಿಂದ ೧೯೩೦ರವರೆಗಿನ ಈ ಐದಾರು ವರ್ಷಗಳಲ್ಲಿ ಕುವೆಂಪು ಬರೆದ ಕಥನ ಕವನಗಳನ್ನು ನೋಡಿದರೆ, ಕುವೆಂಪು ಅವರು,  ತಾವು ಮುಂದೆ ಬರೆಯಲಾಶಿಸಿದ ‘ಶ್ರೀರಾಮಾಯಣದರ್ಶನಂ’ದಂಥ ಮಹಾಕಾವ್ಯಕ್ಕೆ ಅಗತ್ಯವಾದ ವಿವಿಧ ಛಂದೋರೂಪಗಳನ್ನು ಆವಿಷ್ಕಾರ ಮಾಡಿಕೊಳ್ಳುತ್ತ ಕಾವ್ಯಪ್ರಯೋಗಗಳಲ್ಲಿ, ತಮ್ಮ ಕಾವ್ಯೋದ್ಯೋಗದ ಪ್ರಾರಂಭದ ದಿನಗಳಿಂದಲೇ ತೊಡಗಿಕೊಂಡರೆಂಬುದು ಸ್ಪಷ್ಟವಾಗುತ್ತದೆ. ಅದರಲ್ಲಿಯೂ ‘ಸಮುದ್ರಲಂಘನ’ವೆಂಬ ಕಥನ ಕಾವ್ಯ–ದ್ವಿತೀಯಾಕ್ಷರ ಪ್ರಾಸವನ್ನು ಕೈಬಿಟ್ಟು ಭಾಮಿನೀಷಟ್ಪದಿಯ ಹೊಸನಡೆಯಲ್ಲಿ ಲಿಖಿತವಾದ ಕಾವ್ಯ–ಅವರ ಶ್ರೀರಾಮಾಯಣದರ್ಶನಂ ಮಹಾಕಾವ್ಯದ ಮೊದಲ ಸಂಪುಟದಲ್ಲಿ ಬರುವ ‘ಸಾಗರೋಲ್ಲಂಘನ’ ಸಂಚಿಕೆಯ ಪೂರ್ವಾವಸ್ಥೆಯಂತಿದೆ.

ನವೋದಯ ಸಂದರ್ಭದ ‘ಭಾವಗೀತೆ’ ಎಂದು ಕರೆಯಿಸಿಕೊಳ್ಳಲಾದ ಕವಿತೆಯ ‘ಕಾವ್ಯಕಲ್ಪನೆ’ಗೆ ಅನುಸಾರವಾದ ಕಥನಕವನಗಳ ಮಾದರಿ ಸಿದ್ಧವಾದದ್ದು ಆಚಾರ್ಯ ಬಿ.ಎಂ.ಶ್ರೀ. ಅವರ ‘ಇಂಗ್ಲಿಷ್ ಗೀತೆಗಳು’ ಸಂಕಲನದಲ್ಲಿರುವ ‘ಕಾರಿ ಹೆಗ್ಗಡೆಯ ಮಗಳು’, ‘ಮುದಿಯ ರಾಮಗೌಡ’, ‘ಚೋಳಕನ್ನೆಯರು’–ಇಂಥ ಕವಿತೆಗಳಿಂದ. ದೈನಂದಿನ ಸರಳ ಸಾಧಾರಣ ಸಂಗತಿಗಳನ್ನು ಕೀರ್ತಿಸುವ ಇಂಥ ಸಾಕಷ್ಟು ಕವಿತೆಗಳನ್ನು ಕುವೆಂಪು ಬರೆಯಲು ಶ್ರೀಯವರ ಮಾದರಿಗಳು ಪ್ರೇರಕವಾಗಿರಬಹುದು. ಅವರಿಗೆ ಪ್ರಿಯವಾದ ಇಂಗ್ಲಿಷ್ ಕವಿಗಳಾದ ವಡ್ಸ್‌ವರ್ತ್, ಟೆನಿಸನ್ ಮೊದಲಾದವರ ದಿಗ್ದರ್ಶನದಿಂದ ಇದೇ ಸಂದರ್ಭದಲ್ಲಿ ಕುವೆಂಪು ಬರೆದ ನಿಸರ್ಗಪರ ಕವಿತೆಗಳಿಗೂ ಮತ್ತು ಕಥನ ಕವನಗಳಿಗೂ ಇರುವ ಮುಖ್ಯವಾದ ವ್ಯತ್ಯಾಸವೇನೆಂದರೆ, ಅವರ ನಿಸರ್ಗಪರ ಕವಿತೆಗಳಲ್ಲಿ ಕವಿಯೊಬ್ಬನಲ್ಲದೆ ಮತ್ತೆ ಬೇರೆ ಯಾವ ಮನುಷ್ಯ ವ್ಯಕ್ತಿಗಳೂ ಇಲ್ಲದ ಏಕಾಕಿತನವಿದ್ದರೆ, ಅವರ ಕಥನ ಕವನಗಳಲ್ಲಿ ಕವಿಯ ಜತೆಗೆ, ಮಲೆನಾಡಿನ ಸರಳ ಸಾಧಾರಣ ಜೀವಂತ ವ್ಯಕ್ತಿಗಳೂ, ಘಟನೆಗಳೂ ಒಂದು ಬಗೆಯ ಆತ್ಮೀಯ ಬಾಂಧವ್ಯದಲ್ಲಿ ಬೆಸೆದುಕೊಂಡಿರುವುದನ್ನು ಕಾಣಬಹುದು. ‘ಮರಸು ಬೇಟೆ’ ‘ಡೂಲಿ’ ‘ನಾಗಿ’ ‘ಮಂಜಣ್ಣ ಹೇಳಿದ ಸ್ಥಳಗತೆ’- ಹೀಗೆ ಮಲೆನಾಡಿನ ಜೀವಂತಿಕೆಯನ್ನೂ ವ್ಯಥೆಗಳನ್ನೂ ತೆರೆದಿಡುವ ಇಂಥ ಪದ್ಯಗಳನ್ನು ಓದಿದ ಮೇಲೆ, ಯಾಕೆ ಕುವೆಂಪು ಈ ಅನುಭವ ಪ್ರಪಂಚವನ್ನು ವಿಸ್ತರಿಸುವ ಇನ್ನಷ್ಟು ಕಥನ ಕವನಗಳನ್ನು ಬರೆಯಲಿಲ್ಲ ಎಂಬುದು ಒಂದು ಸೋಜಿಗವಾಗಿ ನಮ್ಮನ್ನು ಕಾಡುತ್ತದೆ.

ಈ ಕಥನ ಕವನಗಳಲ್ಲಿ ಅವರು ೧೯೨೭ರಷ್ಟು ಹಿಂದೆಯೆ ಬರೆದ ‘ಕರಿಸಿದ್ಧ’ ಎಂಬ ಕವಿತೆ, ಕುವೆಂಪು ಅವರ ‘ದರ್ಶನ’ದ ದೃಷ್ಟಿಯಿಂದ ತುಂಬ ಮುಖ್ಯವಾದುದಾಗಿದೆ. ‘ತೀರ್ಥಹಳ್ಳಿಯ ಕಳೆದು, ತಾಯಿ ತುಂಗೆಯ ದಾಟಿ, ಒಂಬತ್ತು ಮೈಲಿಗಳ ದೂರದಲಿ ನಮ್ಮೂರು ಕುಪ್ಪಳಿ’ ಎಂಬ ಆತ್ಮೀಯತೆಯ ಮಾತು ಕತೆಯೊಂದಿಗೆ ಪ್ರಾರಂಭವಾಗುವ ‘ಸರಳ ರಗಳೆ’ಯ ಈ ಕಥನ, ಅದೇ ಕುಪ್ಪಳಿಯ ಪರಿಸರದ ಗುಡಿಸಲಿನಲ್ಲಿ ವಾಸಮಾಡುವ ಕರಿಸಿದ್ಧ, ಗಿಡ್ಡಿ ಮತ್ತು ಅವರಿಬ್ಬರ ಮಗ ಬೈರ ಹಾಗೂ ಹಂಡನಾಯಿಯ ವೃತ್ತಾಂತದೊಂದಿಗೆ ಮುಂದುವರಿದು, ಒಂದು ದಿನ ಆವಲು ಹೂವನ್ನು ಕೀಳಲು ಹೋಗಿ ಕಾಲುಜಾರಿ ಬೈರ ಹುಡುಗ ಕುಪ್ಪಳಿಯ ಕೆರೆಯಲ್ಲಿ ಬಿದ್ದು ಸತ್ತುಹೋದ ದುರಂತವನ್ನು ಚಿತ್ರಿಸುತ್ತದೆ. ಈ ಕವಿತೆಯ ಹೆಣಿಗೆಯೊಳಗೆ ಮಲೆನಾಡಿನ ಕೆಳವರ್ಗದ ಬದುಕು, ಅವರ ನಂಬಿಕೆ-ನಡವಳಿಕೆ ಹಾಗೂ ಆಚರಣೆಗಳ ಜತೆಗೆ, ಈ ದೇಶದ ಕಾವ್ಯ ಪರಂಪರೆಗೆ ಹಾಗೂ ಸಂಸ್ಕೃತಿಗೆ ಕವಿ ತೋರಿದ ಸೂಕ್ಷ ವಾದ ಪ್ರತಿಕ್ರಿಯೆಗಳೂ ದಾಖಲಾಗಿರುವ ಕ್ರಮ ವಿಶೇಷ ರೀತಿಯದಾಗಿದ್ದು, ಅಪ್ಪಟ ದೇಸೀಯತೆಯಲ್ಲಿ ಈ ಕವಿ ಬೇರೂರಿ ಬರೆದ ಒಂದು ಅಪರೂಪದ ಕವಿತೆ ಇದು ಎನ್ನಿಸುತ್ತದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಇಲ್ಲಿ ಹೇಳಬೇಕಾದ ಮಾತೆಂದರೆ, ಕುಪ್ಪಳಿಯ ಕೆರೆಯಲ್ಲಿ ಬೈರ ಹುಡುಗನು ಬಿದ್ದು ಸತ್ತುಹೋದ ಸಂದರ್ಭವನ್ನು, ಅದೇ ಹೊತ್ತಿನಲ್ಲಿ ಈ ಜಗತ್ತಿನಲ್ಲಿ ನಡೆದ ಇತರ ಅನೇಕ ಘಟನೆಗಳ ಜತೆಗೆ ಇರಿಸಿ ನೋಡಿರುವ ಕ್ರಮ. ಈ ಕವಿತೆಯ ಮುಕ್ತಾಯದ ಸಾಲುಗಳು ಹೀಗಿವೆ:

ಯಮನ ಕರಣಿಕನಾಗ ಕಾಲದೋಲೆಯಮೇಲೆ
ಚಿತ್ರಗುಪ್ತನು ಬರೆದು ಚಿತ್ರಿಸಿದನಿಂತೆಂದು:
ಪಾರ್ಲಿಮೆಂಟಿನಲ್ಲೊಬ್ಬ ಭಾಷಣವ ಮಾಡಿದನು
ವಂಗ ದೇಶದ ಕವಿಯು ನಾಟಕವನಾಡಿದನು.
ಹಿಮಗಿರಿಯ ಮೇಲೊಬ್ಬ ಸಾಧುವಾದನು ಸಿದ್ಧ
ಜರ್ಮನಿಯ ದೇಶದಲಿ ನಡೆದಿದೆ ಮಹಾಯುದ್ಧ
ಕುಪ್ಪಳಿಯ ಕೆರೆಯಲ್ಲಿ ಬೈರ ಹುಡುಗನು ಬಿದ್ದ
ಮಡಿದವಗೆ ಮರುಗುವರು ಗಿಡ್ಡಿ ಕರಿಸಿದ್ದ
ಹಂಡನಾಯಿಯು ಮರುಗಿ ಕಣ್ಣೀರ ಕರೆದಿತ್ತು
ಆಫ್ರಿಕದಿ ಕಂಬಿ ತಪ್ಪಿದ ರೈಲು ಬಿದ್ದಿತ್ತು
ಕಾಶಿಯಲಿ ಹಾರುವರು ಹೇಳುತಿರುವರು ವೇದ
ಚಿತ್ರಗುಪ್ತನಿಗಿದೆಯೆ ಮೇಲು ಕೀಳಿನ ಭೇದ?
(
ಸಮಗ್ರ ಕಾವ್ಯ. ಸಂ.. ಪು.೫೯೬)

‘ಕುಪ್ಪಳಿಯ ಕೆರೆಯಲ್ಲಿ ಬೈರ ಹುಡುಗನು ಬಿದ್ದ’ದ್ದು ಲೋಕದ ಕಣ್ಣಿಗೆ ತೀರಾ ಯಃಕಶ್ಚಿತ್ತಾದ ಸಂಗತಿಯಾಗಿರಬಹುದು. ಆದರೆ ಕವಿಯ ಕಣ್ಣಿಗೆ, ಅದು ಅದೇ ಹೊತ್ತಿನಲ್ಲಿ ಜರುಗಿದ ವಿವಿಧ ಜಾಗತಿಕ ಘಟನೆಗಳಲ್ಲಿ ಒಂದು ಎಂಬಂತೆ ಗ್ರಹೀತವಾಗಿದೆ. ಆ ಬಿಡಿಬಿಡಿ ಘಟನೆಗಳಿಗೆ ಕಾಲದೇಶ ಬದ್ಧವಾದ ತರ ತಮಗಳ ಪರಿಗಣನೆ ಇರಬಹುದು. ಆದರೆ ‘ಇಡಿ’ಯಾಗಿ ನೋಡಿದಾಗ ಈ ಜಗತ್ತಿನಲ್ಲಿ ಯಾವುದೂ ಒಂದು ಮತ್ತೊಂದಕ್ಕಿಂತ ಮೇಲಾದುದೂ ಅಲ್ಲ, ಕೀಳಾದುದೂ ಅಲ್ಲ. ಇದು ಕುವೆಂಪು ಜಗತ್ತಿನ ಅಖಂಡತೆಯನ್ನು ಗ್ರಹಿಸುವ ಕ್ರಮ. ಪ್ರತಿಯೊಂದೂ ಪ್ರತಿಯೊಂದರ ಜತೆಗೆ ಹೆಣೆದುಕೊಂಡಿರುವ ಸೃಷ್ಟಿಯ ವ್ಯೂಹದ ಹಿನ್ನೆಲೆಯೊಳಗೆ ‘ಬಿಡಿ’ಯನ್ನು ‘ಇಡಿ’ಯಾಗಿ ಪರಿಭಾವಿಸುವ ರೀತಿ. ಪ್ರತಿಯೊಂದನ್ನೂ ಸಮಗ್ರವಾಗಿ ಅಥವಾ ಸಮಗ್ರತೆಯ ಜತೆಗೆ ಗ್ರಹಿಸುವ ಕವಿಕಾಣ್ಕೆ. ಇದು ಕುವೆಂಪು ಅವರ ಕಾವ್ಯದ ಮುಖ್ಯ ಲಕ್ಷಣವಾದ ಅಧ್ಯಾತ್ಮವನ್ನು ರೂಪಿಸಿರುವ ನಿಲುವೂ ಹೌದು. ‘ರಾಮನ ಕಿರೀಟದಲ್ಲಿ ರಾರಾಜಿಸುವ ರತ್ನದ ಮಣಿ ಎಷ್ಟು ರಮ್ಯವಾದದ್ದೋ, ಅಷ್ಟೇ ರಮ್ಯವಾದದ್ದು ಪಂಚವಟಿಯಲ್ಲಿ ಸೂರ್ಯೋದಯದ ಸಮಯದಲ್ಲಿ ಹಸಿರು ಹುಲ್ಲಿನ ತುದಿಯಲ್ಲಿ ತೃಣಸುಂದರಿಯ ಮೂಗುತಿಯ ಮುತ್ತಿನಂತೆ ಮಿರುಮಿರುಗುವ ಇಬ್ಬನಿಯ ಬಿಂದುವೂ’ (ಕವಿಕ್ರತುದರ್ಶನಂ ೧೧೧-೧೧೫) ಎಂದು ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯವನ್ನು ಬರೆಯುವಾಗ ಕುವೆಂಪು ಘೋಷಿಸಿದ ನಿಲುವೂ ಇದೇ. ೧೯೬೭ರಲ್ಲಿ ಪ್ರಕಟವಾದ ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಮೊದಲಲ್ಲಿ ಓದುಗರನ್ನು ಉದ್ದೇಶಿಸಿ ‘ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ, ಯಾವುದೂ ಯಃಕಶ್ಚಿತವಲ್ಲ’ ಎಂದು ಹೇಳಿದ ಮಾತುಗಳ ಅರ್ಥವೂ ಇದೇ!

* * *