ಮುನ್ನುಡಿ

ಶ್ರೀ ಕುವೆಂಪು ಅವರಿಗೆ ಬರುವ ಡಿಸೆಂಬರ್ ೨೯ನೆಯ ತೇದಿಗೆ ಅರವತ್ತೇಳು ವರ್ಷ ತುಂಬಿ, ಅರವತ್ತೆಂಟನೆಯ ವರ್ಷ ಪ್ರಾರಂಭವಾಗುತ್ತದೆ. ಅವರು ರಾಷ್ಟ್ರಕವಿಯಾಗಿ, ಮಹಾಸಾಹಿತಿಯಾಗಿ, ಶ್ರೇಷ್ಠ ವಿದ್ಯಾತಜ್ಞರಾಗಿ, ಮೈಸೂರು ವಿಶ್ವವಿದ್ಯಾನಿಲಯದ ಮಹಾಶಿಲ್ಪಿಗಳಾಗಿ ಕನ್ನಡನಾಡಿಗೆ ಮಾತ್ರವಲ್ಲ ಇಡೀ ರಾಷ್ಟ್ರಕ್ಕೆ ಸಲ್ಲಿಸಿರುವ ಸೇವೆ ಅಪ್ರತಿಮವಾದದ್ದು, ಅದ್ವಿತೀಯವಾದದ್ದು. ಕನ್ನಡ ಜನ ಅವರನ್ನು ನೋಡುವುದರಿಂದ ತೃಪ್ತರಾಗುವಂತೆ ಕಾಣುತ್ತಿ ದೆಯೇ ಹೊರತು, ಅವರ ಬಗ್ಗೆ ಊರೂರುಗಳಲ್ಲಲ್ಲದಿದ್ದರೂ ಅಲ್ಲಲ್ಲೇ ನಾನಾ ರೀತಿಯ ಸ್ಮಾರಕಗಳನ್ನು ನಿರ್ಮಾಣ ಮಾಡಿಕೊಳ್ಳುವ ಮೂಲಕ ಅವರಿಗೆ ಕೃತಜ್ಞತೆಯನ್ನ ರ್ಪಿಸಬಹುದೆಂಬ ನಿಲವನ್ನು ತಳೆದಂತಿಲ್ಲ; ಆ ಕಡೆಗೆ ಅವರ ಗಮನಹರಿದಂತಿಲ್ಲ. ಅಂತರ್ಮುಖಿಗಳೂ ತಪೋನಿರತರೂ ಆದ ಮಹಾವ್ಯಕ್ತಿ ಯಾವ ಸ್ಮಾರಕವನ್ನೂ ಅಪೇಕ್ಷಿಸು ವುದಿಲ್ಲ; ಆ ದಿಕ್ಕಿಗೆ ಅವರು ದಿವ್ಯನಿರ್ಲಕ್ಷ್ಯದಿಂದಿರುತ್ತಾರೆ. ಕೃತಜ್ಞ ಜನಾಂಗ ಮುಂದಿನ ಪೀಳಿಗೆಯ ಅಭ್ಯುದಯದ ದೃಷ್ಟಿಯಿಂದ ಅವರ ಹೆಸರಿನಲ್ಲಿ ಏನಾದರೊಂದು ಕಾರ್ಯವನ್ನು ಮಾಡಬೇಕಿತ್ತು. ಈ ಸಲಹೆ ಕನ್ನಡದ ಎಲ್ಲ ದೊಡ್ಡ ಕವಿಗಳಿಗೂ ಅನ್ವಯಿಸುವಂಥದು.

ಕೆಲವು ದಿನಗಳ ಹಿಂದೆ ಇದ್ದಕ್ಕಿದ್ದಂತೆ ಒಂದು ಸಂಗತಿ ನನ್ನ ತಲೆಯಲ್ಲಿ ಹೊಳೆಯಿತು. ಪ್ರತಿವರ್ಷವೂ ಅವರ ಹುಟ್ಟುಹಬ್ಬದ ಹೊತ್ತಿಗೆ ಅವರನ್ನೊ ಅವರ ಸಾಹಿತ್ಯ ರಾಶಿಯನ್ನೊ ಕುರಿತ ಒಂದು ಗ್ರಂಥವನ್ನು ಪ್ರಕಟಿಸಬೇಕೆಂಬ ಆಸೆ ಮೊಳೆಯಿತು; ದಿನ ಕಳೆದಂತೆಲ್ಲ ಅದು ದೊಡ್ಡದಾಗಿ ಬೆಳೆಯಿತು. ಅವರು ಕುಲಪತಿಯಾಗಿ ಪ್ರವಾಸ ಮಾಡುತ್ತಿದ್ದಾಗ ಅವರೊಡನಿದ್ದು ಅವರ ಭಾಷಣಗಳನ್ನು ನಾನು ಟಿಪ್ಪಣಿ ಮಾಡಿಕೊಂಡಿದ್ದೆ. ಅವುಗಳನ್ನು ಸಂಪಾದಿಸಿ, ಅವರ ಅರವತ್ತೇಳನೆಯ ಹುಟ್ಟು ಹಬ್ಬದ ಹೊತ್ತಿಗೆ ಪ್ರಕಟಿಸಬೇಕೆಂದು ನಿಶ್ಚಯಿಸಿಕೊಂಡಿದ್ದೆ. ಕಾರ್ಯಗೌರವದಿಂದ ಬಿಡುವು ದೊರೆಯದೆ ಆ ಆಸೆಯನ್ನು  ತೊರೆಯಬೇಕಾಯಿತು. ಕುವೆಂಪು ಸಾಹಿತ್ಯವನ್ನು ಕುರಿತು ಇಪ್ಪತ್ತು-ಇಪ್ಪತ್ತು ಮೂರು ವರ್ಷಗಳಿಂದ ನಾನು ಬರೆದಿದ್ದ ಲೇಖನ ಗಳನ್ನು ಒಂದು ಕಡೆ ಪೋಣಿಸಿ ಸರ ಮಾಡಿ ಪ್ರಕಟಿಸುವುದೆಂದು ನಿಶ್ಚಯಿಸಿದೆ. ಅವೆಲ್ಲವನ್ನು ಒತ್ತಟ್ಟಿಗೆ ಕಲೆ ಹಾಕಿದಾಗ ನನ್ನ ಬಡತನ ಬಯಲಾಯಿತು; ನಾನು ಬರೆದದ್ದು ಬಹಳ ಸ್ವಲ್ಪ ಎನಿಸಿತು. ಇದ್ದಷ್ಟನ್ನಾದರೂ ಕೂಡಿಸಿ ಅಚ್ಚು ಹಾಕಿಸುವುದೆಂದು ಮನಸ್ಸು ಮಾಡಿದೆ.

ಆದರೆ ನನ್ನ ಲೇಖನಗಳ ಮಾಹಿತಿಯೇ ನನಗೆ ಗೊತ್ತಿರಲಿಲ್ಲ. ಮಿತ್ರರಾದ ಡಾ. ಹಾ.ಮಾ. ನಾಯಕರು ಎಲ್ಲವನ್ನು ಹುಡುಕಿಕೊಟ್ಟರು. ಅವರ ಸ್ಮರಣಶಕ್ತಿ ಅದ್ಭುತವಾದದ್ದು. ಈ ಪುಸ್ತಕದ ವಿಷಯವನ್ನು ಶ್ರೀ ನಿರಂಜನರಿಗೆ ತಿಳಿಸಿದಾಗ ಅವರು ಅತ್ಯಂತಾಸಕ್ತಿಯಿಂದ ಕರ್ನಾಟಕ ಸಹಕಾರೀ ಪ್ರಕಾಶನ ಮಂದಿರದ ಮೂಲಕವೇ ಪ್ರಕಟಿಸಬೇಕೆಂದು ಒತ್ತಾಯಪಡಿಸಿದರು. ಸಂಪಾದಕ ಮಂಡಲಿಯ ಅಧ್ಯಕ್ಷರು ಹಾಗೂ ಪ್ರಧಾನ ಸಂಪಾದಕರು ಒಪ್ಪಿಕೊಂಡ ಮೇಲೆ, ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಪ.ಸು. ಭಟ್ಟರು ಅಸ್ತು ಎಂದ ನಂತರ, ಕೇವಲ ಹತ್ತಿಪ್ಪತ್ತು ದಿನಗಳಲ್ಲಿ ಅದನ್ನು ಅಚ್ಚುಮಾಡಿಕೊಡುವವರು ಯಾರು ಎಂಬ ತೊಳಕೆ ಶುರುವಾಯಿತು. ಮತ್ತೆ ಮೈಸೂರು ಪ್ರಿಂಟಿಂಗ್ ಅಂಡ್ ಪಬ್ಲಿಷಿಂಗ್ ಹೌಸಿನ ಶ್ರೀ ಕೃಷ್ಣಮೂರ್ತಿಯವರನ್ನೆ ಆಶ್ರಯಿಸಬೇಕಾಯಿತು. ಅತ್ಯಂತ ದಕ್ಷರೂ ಸಜ್ಜನರೂ ದಾಕ್ಷಿಣ್ಯ ಸ್ವಭಾವದವರೂ ಆದ ಆ ಮಿತ್ರರು ಈ ತನಕ ನನ್ನ ಕೋರಿಕೆಯನ್ನೆಂದೂ ನಿರಾಕರಿಸಿದವರಲ್ಲ. ಎಷ್ಟೇ ಕೆಲಸವಿದ್ದರೂ ಈ ಕೆಲಸವನ್ನು ಆಗುಮಾಡಿಕೊಡುತ್ತೇನೆಂದರು. ಶ್ರೀ ಸಿಪಿಕೆಯವರು ತಮ್ಮ ಕೆಲಸವನ್ನೆಲ್ಲ ಬದಿಗಿರಿಸಿ, ಹಸ್ತಪ್ರತಿಯನ್ನು ಸಿದ್ಧಪಡಿಸಿ, ಕರಡನ್ನು ತಿದ್ದುವ ಭಾರವನ್ನೆಲ್ಲ ಹೊತ್ತು, ಶ್ರದ್ಧೆಯಿಂದ ಈ ಕಾರ್ಯವನ್ನು ಮುಗಿಸಿದ್ದಾರೆ. ನಾಯಕರೇ ರಕ್ಷಾಕವಚದ ನಿರಿಗೆಯನ್ನೂ ಅದರ ಚೆಂದಗಳನ್ನೂ ನೋಡಿಕೊಂಡಿದ್ದಾರೆ. ಈ ಎಲ್ಲ ಮಿತ್ರರಿಗೂ ನಾನು ಸಾಲಿಗನಾಗಿದ್ದೇನೆ. ನನಗೆ ಗೊತ್ತು, ಆ ಸಾಲವನ್ನವರು ಹಿಂದಕ್ಕೆ ಕೇಳುವಂತೆಯೂ ಇಲ್ಲ, ನಾನು ತೀರಿಸುವಂಥ ಸ್ಥಿತಿಯಲ್ಲಿಯೂ ಇಲ್ಲ.

ಪೂಜ್ಯ ಗುರುವರ್ಯರ ಹುಟ್ಟು ಹಬ್ಬದಂದು ಅಲ್ಪಕಾಣಿಕೆಯನ್ನು ಸಲ್ಲಿಸುವ ಪುಣ್ಯಾವಕಾಶ ದೊರೆತದ್ದು ನನ್ನ ಭಾಗ್ಯವೆಂದೇ ತಿಳಿದುಕೊಂಡಿದ್ದೇನೆ. ಇಂಥ ಭಾಗ್ಯ ಮೇಲಿಂದ ಮೇಲೆ ದೊರೆಯುವುದಾದರೆ ನನ್ನಂಥ ಪುಣ್ಯಶಾಲಿಯಿಲ್ಲವೆಂದೇ ಹೆಮ್ಮೆಪಡುತ್ತೇನೆ.

ದೇಜಗೌ
೧೮.೧೨.೧೯೭೧
ಕುಲಪತಿ ಭವನ