ಮುನ್ನುಡಿ

ಸುಮಾರು ೭ ವರ್ಷಗಳ ನಂತರ ‘ಕುವೆಂಪು ಸಾಹಿತ್ಯ : ಕೆಲವು ಅಧ್ಯಯನಗಳು’ ಎಂಬ ಶೀರ್ಷಿಕೆಯಲ್ಲಿ ಮೂರನೆಯ ಸಂಪುಟ ಹೊರಬರುತ್ತಿದೆ. ನಲವತ್ತು  ವರ್ಷಗಳಿಗೂ ಮೇಲ್ಪಟ್ಟು ಕುವೆಂಪು ಸಾಹಿತ್ಯವನ್ನು ನಾನು ಅಭ್ಯಾಸ ಮಾಡುತ್ತಿದ್ದೇನೆ. ಆತ್ಮತುಷ್ಟಿಪುಷ್ಟಿಗಳೇ ಈ ಅಭ್ಯಾಸದ ಮೂಲೋದ್ದೇಶ; ಅಭ್ಯಾಸ ಮಾಡುವಾಗ ನನ್ನ ಮನಸ್ಸಿನಲ್ಲಿ ಮೂಡಿದ ಭಾವನೆಗಳನ್ನು, ಆಲೋಚನೆಗಳನ್ನು, ಪ್ರತಿ ಕ್ರಿಯೆಯಗಳನ್ನು, ಮರೆತು ಹೋಗಬಾರದೆಂಬ ಕಾರಣಕ್ಕಾಗಿ, ಬರಹಗಳಲ್ಲಿ ಕಾಣಿಸಿದ್ದೇನೆ. ಸಾಗರೋಪಮವಾದ, ಹೈಮಾಚಲೋನ್ನತವಾದ ಕುವೆಂಪು ಸಾಹಿತ್ಯವನ್ನು ಸಂಪೂರ್ಣವಾಗಿ ಸರಿಯಾಗಿ ಅರ್ಥಮಾಡಿಕೊಂಡಿದ್ದೇನೆಂಬ ಗರ್ವ ನನಗಿಲ್ಲ. ಅಧ್ಯಯನ ಮಾಡಿದಷ್ಟೂ ಅದರ ವಿಸ್ತಾರ ಗಹನತೆ ಗಭೀರತೆಗಳು ತ್ರಿವಿಕ್ರಮನ ಹಾಗೆ ವಿಗುರ್ಬಿಸುವಂತೆ ತೋರುತ್ತದೆ. ಎಷ್ಟು ಜನ ಎಷ್ಟು ವರ್ಷ ಅಧ್ಯಯನ ಸಾಗಿಸಿದರೂ ಅದು ಅಕ್ಷಯವಾಗುತ್ತದೆ. ನಮ್ಮ ನಮ್ಮ ಬುದ್ದಿಯ ಪಾತ್ರೆಗಳಲ್ಲಿ  ಎಷ್ಟು ಸಾಧ್ಯವೋ ಅಷ್ಟನ್ನು ಮಾತ್ರ ತುಂಬಿಕೊಳ್ಳುತ್ತೇವೆ; ತುಂಬಿಕೊಂಡಷ್ಟೂ ಅದು ವರ್ಧಿಸುತ್ತದೆ.

ಒಂದು ಮಾತಂತು ನಿಜ. ಇಲ್ಲಿಯ ಹಲವು ಲೇಖನಗಳು ಅವಸರವಾಗಿ ವಿಚಾರ ಗೋಷ್ಠಿಗಳಿಗೂ ಪತ್ರಿಕೆಗಳಿಗೋ ಬರೆದಂಥವು. ಆದ್ದರಿಂದ ಪುನರಾವರ್ತನೆಗಳು, ನ್ಯೂನತೆಗಳು ಮತ್ತು ಲೋಪಗಳು ಇವುಗಳಲ್ಲಿ ನುಸುಳಿಕೊಂಡಿದ್ದರೆ ಆಶ್ಚರ್ಯವಾಗದು.

ದೇಜಗೌ
ವಿಶ್ವಚೇತನ-ಕಲಾನಿಲಯ
ಕಾಳಿದಾಸರೋಡ್, ಜಯಲಕ್ಷ್ಮೀಪುರಂ
ಮೈಸೂರು-೧೨
೧.೬.೧೯೮೯