ಐಸಡೋರಾ ಡಂಕನ್ ಎಂಬ ಸುಪ್ರಸಿದ್ಧ ನಟರಾಣಿಯ ಆತ್ಮಕಥೆಯನ್ನು ಓದಿದ ಮೇಲೆ ಈ ಕವಿತೆಯನ್ನು ರಚಿಸಿದುದಾಗಿ ಕುವೆಂಪು ಆ ಕವಿತೆಯ ಅಡಿಟಿಪ್ಪಣಿಯಲ್ಲಿ ತಿಳಿಸಿದ್ದಾರೆ. ಅದು ‘ಪ್ರೇತಕ್ಯೂ’ ಸಂಕಲನದಲ್ಲಿದೆ. ಅವಳ ಆತ್ಮಕಥೆಯ ಹೆಸರು ‘ಐಸಡೋರಾ ಡಂಕನ್, ನನ್ನ ಜೀವನ’. ಅವಳನ್ನು ಕುರಿತ ಮತ್ತೆರಡು ಜೀವನ ಚರಿತ್ರೆಗಳನ್ನು ಹೆಸರಿಸ ಬಹುದಾಗಿದೆ. ೧. ದಿ. ರಿಯಲ್ ಐಸಡೋರಾ-ವಿಕ್ಟರ್ ಸೆರಾಫ್. ೨. ಐಸಡೋರಾ! ಎ ರೆವಲ್ಯೂಷನರಿ ಇನ್ ಆರ್ಟ್‌ ಅಂಡ್ ಲೌವ್-ಅಲನ್ ರಾಸ್ ಮ್ಯಾಕ್‌ಡಂಗಲ್. ಅವಳ ಬಗೆಗಿನ ಕೆಲವು ವಿಷಯಗಳನ್ನು ಮಾತ್ರ ಇಲ್ಲಿ ಸಂಗ್ರಹಿಸಲಾಗಿದೆ. ಕವಿತೆ ರಚನೆಗೊಂಡದ್ದು ೨೧.೯.೧೯೩೮ರಲ್ಲಿ.

ಐಸಡೋರಾಳ ಹುಟ್ಟು ಹೆಸರು ಆಂಜೆಲ ಡಂಕನ್. ೨೬.೫.೧೮೭೭ರಂದು ಸ್ಯಾನ್ ಫ್ರಾನ್‌ಸಿಸ್‌ಕ್ಕೋನಲ್ಲಿ ಹುಟ್ಟಿ ಫ್ರಾನ್ಸ್‌ನ ನೈಸ್ ಪಟ್ಟಣದಲ್ಲಿ ೧೪.೯.೧೯೨೭ರಲ್ಲಿ ನಿಧನ ಹೊಂದುತ್ತಾಳೆ. ವಿವರಣಾತ್ಮಕ (interpretative) ನೃತ್ಯವನ್ನು ಮೊತ್ತಮೊದಲು ಸೃಜನಾತ್ಮಕ ಕಲೆಯ ಎತ್ತರಕ್ಕೇರಿಸಿದ ಅಮೆರಿಕೆಯ ನರ್ತಕಿಯವಳು. ಅವಳ ಮುಖ ಮುದ್ರೆ ಮೊದಲು ಇಂಗ್ಲೆಂಡನ್ನು, ಅನಂತರ ರಷ್ಯಾ ಸೇರಿದಂತೆ ಯುರೋಪಿನ ಇತರ ಭಾಗಗಳ ಜನರನ್ನು ಮರುಳು ಮಾಡುತ್ತದೆ. ಅವಳ ತಾಯಿಯೇ ಮೊದಲ ಗುರು. ಬಾಲ್ಯದಲ್ಲವಳು ಸಾಂಪ್ರ ದಾಯಿಕ ಬ್ಯಾಲೆಯ ಬಿಗುವನ್ನು ತಿರಸ್ಕರಿಸುತ್ತಾಳೆ. ಸಹಜ ಲಯ ಮತ್ತು ಚಲನೆಗಳೇ ಅವಳ ನೃತ್ಯಕಲೆಗೆ ಆಧಾರವಾಗುತ್ತವೆ. ಬೀಥೋವನ್ ಮೊದಲಾದ ವಾಗ್ಗೇಯಕಾರರ ಕೃತಿಗಳನ್ನು ನೃತ್ಯಕ್ಕಳವಡಿಸುವಲ್ಲಿ ಈ ತತ್ವವನ್ನು ಪ್ರಜ್ಞಾಪೂರ್ವಕವಾಗಿ ಲಕ್ಷದಲ್ಲಿರಿಸಿ ಕೊಳ್ಳುತ್ತಾಳೆ. ಹೆಸರು ಗಳಿಸುವ ಸಲುವಾಗಿ ಅವಳು ತನ್ನ ಇಪ್ಪತ್ತೊಂದನೆಯ ವಯಸ್ಸಿನಲ್ಲಿ ವಿದೇಶಕ್ಕೆ ಹೋಗುತ್ತಾಳೆ. ಶ್ರೀಮತಿ ಪ್ಯಾಟ್ರಿಕ್ ಕ್ಯಾಂಪ್‌ಬೆಲ್ ಎಂಬ ಸುಪ್ರಸಿದ್ಧ ನಟಿಯ ಸಹಾಯ ಪ್ರೋಅವಳು ಲಂಡನ್ನಿನ ಪ್ರಮುಖ ಶ್ರೀಮಂತೆಯರ ಖಾಸಗಿ ಸಮಾರಂಭಗಳಲ್ಲಿ ಪ್ರದರ್ಶನಗಳನ್ನೇರ್ಪಡಿಸಲಾಗುತ್ತದೆ. ೧೯೦೫ರಲ್ಲಿ ರಷ್ಯಾಕ್ಕೆ ಭೇಟಿ ನೀಡುತ್ತಾಳೆ. ಅಲ್ಲಿ ಅವಳಿಗೆ ಕಲಾವಿಮರ್ಶಕ ಸರ್ಜೆಡಯಾಗಿಲೆನ್‌ನ ಡಯಾಗಿಲೆನ್‌ನ ಪರಿಚಯವಾಗುತ್ತದೆ.

ಅವಳು ಜೀವನದಲ್ಲಾಗಲಿ ಕಲಾಕ್ಷೇತ್ರದಲ್ಲಾಗಲಿ ಹಳಸಲು ಸಂಪ್ರದಾಯಗಳನ್ನು ವಿರೋಧಿಸುತ್ತಾಳೆ. ವಿವಾಹವೆಂದರೆ ಅವಳಿಗೆ ದ್ವೇಷ. ಇಬ್ಬರು ಪುರುಷರಿಂದ ಅವಳಿಗೆ ಇಬ್ಬರು ಮಕ್ಕಳಾಗುತ್ತಾರೆ. ೧೯೧೩ರಲ್ಲಿ ಆ ಮಕ್ಕಳು ಮತ್ತು ಅವರ ದಾದಿ ಪಯಣಿಸುತ್ತಿದ್ದ ಕಾರು ಸೀನ್‌ನದಿಯಲ್ಲಿ ಮುಳುಗಿ ಸತ್ತುಹೋಗುತ್ತಾರೆ. ಆ ದುರಂತದಿಂದವಳು ಮತ್ತೆ ಚೇತರಿಸಿಕೊಳ್ಳಲಿಲ್ಲ. ದುಃಖವನ್ನು ಮರೆಯುವ ಸಲುವಾಗಿ ಅವಳು ದಕ್ಷಿಣ ಅಮೆರಿಕ ಮತ್ತು ಜರ್ಮನಿ ಫ್ರಾನ್ಸ್‌ದೇಶಗಳಲ್ಲಿ ಪ್ರವಾಸ ಮಾಡುತ್ತಾಳೆ. ಮಾಸ್ಕೋದಲ್ಲಿ ಕಲಾ ಶಾಲೆಯನ್ನು ತೆರೆಯುವಂತೆ ೧೯೨೦ರಲ್ಲಿ ಅವಳಿಗೆ ಆಹ್ವಾನ ದೊರಕುತ್ತದೆ. ತನ್ನ ಕ್ರಾಂತಿ ಕಾರಕ ಮನೋಧರ್ಮದಿಂದಾಗಿ ಸೋವಿಯಟ್ ರಾಷ್ಟ್ರ ಅವಳ ಪಾಲಿಗೆ ಭರವಸೆಯ ಭೂಮಿಯಾಗಿ ತೋರುತ್ತದೆ. ವಿವಾಹ ವಿರುದ್ಧವಾದ ತನ್ನ ಸಿದ್ಧಾಂತಗಳನ್ನು ಗಾಳಿಗೆ ತೂರಿ, ಅವಳು ೧೯೨೨ರಲ್ಲಿ ತನಗಿಂತಲೂ ಹದಿನೇಳು ವರ್ಷ ಚಿಕ್ಕವನಾದ ಕವಿ ಸರ‌್ಜಯ್ ಅಲೆಕ್ಸಾಂದ್ರೊವಿಚ್‌ಯಸೆನಿನ್ ನನ್ನು ಮದುವೆಯಾಗುತ್ತಾಳೆ. ಅವನೊಡನೆ ಅಮೆರಿಕಾ ಪ್ರವಾಸಕ್ಕೆ ಹೊರಡುತ್ತಾಳೆ. ಬಾಲ್ಷೆವಿಕ್ ಪಂಥದ ಏಜೆಂಟರೆಂದು ಅಲ್ಲಿಯ ಜನ ಅವರಿಗೆ ಹಣೆಪಟ್ಟಿ ಕಟ್ಟುತ್ತಾರೆ. ಹಾಗೂ ಹಂಗಿಸುತ್ತಾರೆ; ಹೋದೆಡೆಯಲ್ಲೆಲ್ಲ ಅವರನ್ನು ಸಂಶಯ ದೃಷ್ಟಿಯಿಂದ ಕಾಣುತ್ತಾರೆ. ‘ಅಮೆರಿಕಾ ತಾಯಿ, ನಿನಗಿದೊ ನಮಸ್ಕಾರ. ನಾನು ನಿನ್ನನ್ನು ಮತ್ತೆ ನೋಡಲಾರೆ’ ಎಂದು ಉದ್ಗರಿಸುತ್ತ ನೋವನ್ನದುಮಿಕೊಂಡು ಅಮೆರಿಕೆಯಿಂದ ತೆರಳುತ್ತಾಳೆ.

ಯುರೋಪಿನಲ್ಲಿದ್ದಾಗ ಯಸೆನಿನ್ ಮನೋರೋಗಕ್ಕೆ ಗುರಿಯಾಗಿ ಅವಳ ವಿರುದ್ಧವಾಗಿ ತಿರುಗಿ ಬೀಳುತ್ತಾನೆ. ಅವನೊಬ್ಬನೇ ಸೋವಿಯತ್ ರಾಜ್ಯಕ್ಕೆ ಮರಳಿ, ಆತ್ಮಹತ್ಯೆ ಮಾಡಿ ಕೊಳ್ಳುತ್ತಾನೆ. ಐಸಡೋರಾ ಫ್ರಾನ್ಸ್ ದೇಶದ ನೈಸ್ ಊರಿನಲ್ಲಿ ನೆಲಸುತ್ತಾಳೆ. ಆದರೆ ಅವಳ ಬದುಕು ತುಂಬ ಕಷ್ಟವಾಗುತ್ತದೆ. ಅವಳೊಂದು ದಿನ ಕಾರಿನಲ್ಲಿ ಹೋಗುತ್ತಿದ್ದಾಗ ಕೊರಳಿಗೆ ಸುತ್ತಿಕೊಂಡಿದ್ದ ಪಟ್ಟೆಚೌಕ ಕಿಟಕಿಯ ಮೂಲಕ ಹೊರಗೆ ತೂರಿ ಹಿಂಭಾಗದ ಚಕ್ರಕ್ಕೆ ಸಿಕ್ಕಿಕೊಳ್ಳುತ್ತದೆ, ಉಸಿರುಕಟ್ಟಿ ಹರಣ ನೀಗುತ್ತಾಳೆ. ಅವಳ ಕ್ರಾಂತಿಕಾರಕ ಮನೋ ಧರ್ಮವನ್ನು ಕೆಲವು ಬುದ್ದಿಜೀವಿಗಳು ದ್ವೇಷಿಸಿದರೆ, ಮತ್ತೆ ಕೆಲವರು ಮೆಚ್ಚುತ್ತಾರೆ. ಆದರೆ ನೃತ್ಯಕಲೆಗೆ ನೀಡಿದ ಅಪೂರ್ವ ಕಾಣಿಕೆಗಳಿಂದಾಗಿ, ನಡೆಸಿದ ವಿನೂತನ ಪ್ರಯೋಗಗಳಿಂದಾಗಿ ಅವಳ ಹೆಸರು ಚಿರಸ್ಥಾಯಿಯಾಗಿ ಉಳಿಯುತ್ತದೆ. ಕೃತಕ ಕಠಿಣ ಶುಷ್ಕ ನಿಯಮಗಳನ್ನೂ ತಾಂತ್ರಿಕ ಕಸರತ್ತನ್ನೂ ತೊರೆದು, ಅವಳು ವಿಸ್‌ಮನ್ ಮಾರ್ಥಗ್ರಹಾಮ್ ಮೊದಲಾದವರು ರೂಪಿಸಿದ ಆಧುನಿಕ ನೃತ್ಯಕಲೆಯ ಬೆಳವಣಿಗೆಗೆ ದಾರಿಮಾಡಿಕೊಟ್ಟಂತಾಗುತ್ತದೆ.

ಕನ್ನಡ ಕವಿಯ ಈ ಕವಿತೆ ಅವಳ ಬದುಕಿನ ಕನ್ನಡಿಯಾಗಿದೆ. ಅವಳ ಬದುಕು ‘ಅಮರ ಅಸುರ’ಗಳ ಸಂಗಮವಾಗಿದೆ. ಅವಳ ಕಲೆಯ ಕಮಲ ಕಾಮದ ಕೆಸರಿನ ಕೊಳೆಯಲ್ಲಿ ಕಲುಷಿತಗೊಂಡಿದೆ. ಅದರಿಂದಾಗಿ ಕವಿಗೆ ಅವಳ ಬಗ್ಗೆ ಮರುಕ. ಅವಳ ಕೆಚ್ಚಿಗೆ ನೆಚ್ಚಿಗೆ ಮತ್ತು ಸತ್ಯದ ತತ್ಪರತೆಗೆ ಅವಳನ್ನು ವಂದಿಸುತ್ತಾರೆಯೆ ಹೊರತು ನಿಂದಿಸುವುದಿಲ್ಲ. ಈ ಚರಮಗೀತೆಯ ಕೊನೆಯ ಚರಣಗಳು ಕಲೆಗೆ ಹಾಗೂ ಕವಿಯ ಉದಾತ್ತತೆಗೆತ್ತಿದ ಸೊಡರು ಗಳಾಗಿವೆ :

ಐಸಡೋರಾ ಐಸಡೋರಾ
ಭವಿಸು ಭಾರತ ದೇಶಕೆ;
ಬಿಳಿಯ ಮಲ್ಲಿಗೆ ಮಡಿಯನುಡಿಸುವೆ
ಲಾಸ್ಯರಸದಾವೇಶಕೆ!