ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಪ್ರಾರಂಭೋತ್ಸವವನ್ನು ನೆರವೇರಿಸುವ ಮೂಲಕ ರಾಷ್ಟ್ರೀಯ ಸಾಂಸ್ಕೃತಿಕ ಕ್ಷೇತ್ರಕ್ಕೆ ಗುದ್ದಲಿಪೂಜೆ ಪೂರೈಸಲು ಬರಬೇಕಾಗಿದ್ದ ಸನ್ಮಾನ್ಯ ಮುಖ್ಯಮಂತ್ರಿಗಳೂ ಸ್ವಯಂ ಸಾಹಿತಿಗಳೂ ಆದ ಶ್ರೀ ವೀರಪ್ಪ ಮೊಯಿಲಿಯವರನ್ನು ಸ್ಮರಿಸಿ, ಬಂದಿರುವ ಸನ್ಮಾನ್ಯ ಮಾಜಿ ಮುಖ್ಯಮಂತ್ರಿಗಳೂ ಸಾಹಿತ್ಯಪ್ರಿಯರೂ ಕಲಾವಿದರೂ ಆದ ಶ್ರೀ ಎಸ್. ಬಂಗಾರಪ್ಪನವರನ್ನು, ಶ್ರೀ ಗುರುವಿನ ನೆಲೆಯೂ ರನ್ನ, ಪಂಪ, ಮಿಲ್ಟನ್, ಷೆಲ್ಲಿ, ವಾಲ್ಮೀಕಿ, ಕಾಳಿದಾಸರ ನಿತ್ಯತೀರ್ಥಯಾತ್ರಾಕ್ಷೇತ್ರವೂ ಆದ ಹೇಮಂತ ಮಂಜು ಕಲೆಯ ಎಳ ಹೊಂಬಿಸಲ ಈ ಮೋಹನ ಭೀಷಣ ಮಲೆನಾಡಿಗೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ.

ಜಾತಿಗೀತಿಯ ಮತಗಿತದ ಮೌಢ್ಯ ಸಂಪ್ರದಾಯಗಳ ಕಟ್ಟುಕಟ್ಟಳೆಗಳಿಲ್ಲದ, ನಗರ ನಾಗರಿಕತೆ ಅನಾಗರಿಕತೆಗಳ ಗಲಿಬಿಲಿಯಿಲ್ಲದ ‘ಶಿವಮಂದಿರ ಸಮವನ ಸುಂದರ ಸುಮ ಶೃಂಗಾರದ ಗಿರಿಶೃಂಗಕೆ’, ಕವಿ ವಿಭೂತಿ ಕೃತಿ ವಿಭೂತಿಗಳನ್ನು ಸೃಷ್ಟಿಸಿದ, ಕಲೆಗೆ ಸದಾ ಸ್ಫೂರ್ತಿೂಯುವ ಸಿರಿಯ ಚೆಲುವಿನ ಬೀಡಿಗೆ ಮಾನ್ಯ ಮುಖ್ಯ ಅತಿಥಿಗಳಾದ ಕುಲಪತಿ ಶ್ರೀ ಎಂ.ಆರ್.ಗಜೇಂದರಗಡ್, ಶಾಸಕ ಶ್ರೀ ಕಾಗೋಡು ತಿಮ್ಮಪ್ಪ, ಶಾಸಕ ಶ್ರೀ ಡಿ.ಬಿ. ಚಂದ್ರೇಗೌಡರಿಗೆ ಸಂತೋಷದಿಂದ ಆಹ್ವಾನ ನೀಡುತ್ತೇನೆ.

ರಾಷ್ಟ್ರಕವಿ ಋಷಿಕವಿ ವಿಶ್ವಕವಿಯನ್ನು ಸದಾ ಹರಸುತ್ತಿರುವ, ಚಿರಂತನ ಸಮಾಧಿಯಲ್ಲಿ ಮುಳುಗಿರುವ ಸಹ್ಯರಸಋಷಿಯ ಕೃಪಾಶ್ರಯಕ್ಕೆ; ಅಜ್ಜಯ್ಯ, ರಂಗು, ತಿಮ್ಮು, ಗೌರಿ, ಗಿರಿಜೆ, ರಾಜಿ, ವಾಸು, ಓಬು, ಮಾನು, ದಾನಿ, ಕತೆಗಾರ ಮಂಜಣ್ಣ. ಪುಟ್ಟಣ್ಣ, ಹಿರಗ, ಪುಟ್ಟಾಚಾರಿ, ಕರಿಸಿದ್ದ, ಗಿಡ್ಡಿ, ಚಂದ್ರಯ್ಯಗೌಡ, ಶ್ಯಾಮಯ್ಯಗೌಡ, ಹೂವಯ್ಯ, ರಾಮಯ್ಯ, ಚಿನ್ನಯ್ಯ, ನಾಗಮ್ಮ, ಸೀತೆ, ಮುಕುಂದಯ್ಯ, ಚಿನ್ನಮ್ಮ, ಪುಡಿಸಾಬಿ, ಜೀವರತ್ನಯ್ಯ, ಐತಪೀಂಚಲು ಮೊದಲಾದವರನ್ನು ಲೋಕಕ್ಕೆ ನೀಡಿದ ಪ್ರಾಣಿಕಾಶಿ ವೃಕ್ಷಕಾಶಿಯಂತಿರುವ ದಿವ್ಯಧಾಮಕ್ಕೆ ಪ್ರತಿಷ್ಠಾನದ ಸದಸ್ಯ ಬಂಧುಗಳನ್ನು, ಜಿಲ್ಲಾಧಿಕಾರಿಗಳು, ಸೂಪರಿಂಟೆಂಡಿಂಗ್ ಇಂಜಿನಿಯರ್, ಜಿಲ್ಲಾ ಪರಿಷತ್ತಿನ ಅರಣ್ಯ ಇಲಾಖೆಯ ಮತ್ತಿತರ ಅಧಿಕಾರಿಗಳನ್ನು, ಇಲ್ಲಿಯ ಮತ್ತು ಬೇರೆ ಕಡೆಗಳಿಂದ ಬಂದಿರುವ ಸಹೃದಯ ಸಂಸ್ಕೃತಿಪ್ರಿಯರನ್ನು ಸೋದರ ಸೋದರಿಯರನ್ನು ಆದರದಿಂದ ಬರಮಾಡಿಕೊಳ್ಳುತ್ತೇನೆ. ಎಲ್ಲರೂ ರಸದ ಮಡುವಿನಲ್ಲಿ ಮಿಂದು, ಭಾವದ ಬೆಂಕಿಹಕ್ಕಿಯ ಮಿಂಚು ರೆಕ್ಕೆಯನ್ನೇರಿ, ಲಕ್ಷೋಪಲಕ್ಷ ನಕ್ಷತ್ರಭೂಷಿತ ಕಲ್ಪನೆಯ ವಿಮಾನದಲ್ಲಿ ಈ ಪವಿತ್ರ ಕ್ಷೇತ್ರಕ್ಕೆ ಬಂದಿದ್ದೀರೆಂದು ನಾನು ಭಾವಿಸಿದ್ದೇನೆ.

ನಿರಸೂಯರೂ, ಕವಿಪರಮೇಷ್ಠಿಗಳೂ, ಶಬ್ದಗಾರುಡಿಗರೂ ಆದ ಬೇಂದ್ರೆಯವರು ಮಹಾಕವಿ ಕುವೆಂಪು ಅವರನ್ನು ಕುರಿತು ಹಾಡಿದ ಮಂತ್ರಗೀತೆ ಅರ್ಥವತ್ತಾಗಿದೆ, ಧ್ವನಿಯುಕ್ತ ವಾಗಿದೆ, ಅವರ ಭವ್ಯ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ.

ಯುಗದ ಕವಿಗೆ
ಜಗದ ಕವಿಗೆ
ಶ್ರೀರಾಮಾಯಣದರ್ಶನದಿಂದಲೆ ಕೈ
ಮುಗಿದ ಕವಿಗೆ ಮಣಿಯದವರು ಯಾರು?

ಎಲ್ಲ ಸಾಹಿತ್ಯ ಪ್ರಕಾರಗಳಲ್ಲಿಯೂ ಏಕಪ್ರಕಾರವಾಗಿ ಸಿದ್ದಿಯನ್ನು ಗಳಿಸಿ, ನವ್ಯ ದಲಿತ ಬಂಡಾಯ ಪ್ರಸ್ಥಾನಗಳಿಗೂ ನಾಂದಿಯನ್ನು ಹಾಡಿ, ನವೋದಯ ಸಾಹಿತ್ಯ ಪರಂಪರೆಗೆ ಘನತೆ ಗಾಂಭೀರ್ಯ ಔನ್ನತ್ಯಗಳನ್ನು ವೈವಿಧ್ಯತೆ ಊರ್ಜೆ ಶ್ರೀಮಂತಿಕೆಗಳನ್ನು ಒದಗಿಸಿದ ಕಾರಣದಿಂದಾಗಿ ಕುವೆಂಪು ಯುಗಪ್ರವರ್ತಕ ಕವಿಯಾಗಿದ್ದಾರೆ. ಪ್ರಾಚೀನ ಅರ್ವಾಚೀನ ಭಾರತೀಯ ಸಂಸ್ಕೃತಿ ದರ್ಶನಗಳನ್ನು ಗರ್ಭೀಕರಿಸಿಕೊಂಡು, ಪಾಶ್ಚಾತ್ಯ ತತ್ತ್ವದರ್ಶನ ಸಾಹಿತ್ಯಗಳ ಹಿನ್ನೆಲೆಯಲ್ಲಿ ಸ್ವಪ್ರತಿಭೆ ಮತ್ತು ಸ್ವೋಪಜ್ಞತೆಗಳನ್ನೊಳಗೊಂಡು ವಿಶ್ವದ ಮಹಾ ಕಾದಂಬರಿ ಮಹಾಕಾವ್ಯಗಳಿಗೆ ಹೆಗಲೆಣೆಯಾಗಿ ಮೂಡಿದ ಕೃತಿರತ್ನಗಳಿಂದಾಗಿ ಅವರು ವಿಶ್ವಕವಿಯಾಗಿದ್ದಾರೆ. ‘ಅಲೌಕಿಕ ನಿತ್ಯಸತ್ಯಂಗಳಂ ಪ್ರತಿಮಿಸುವ ಸತ್ಯಸ್ಯ ಸತ್ಯಕಥನಂ’ ಶ್ರೀರಾಮಾಯಣದರ್ಶನಂ ಮಹಾಕಾವ್ಯವನ್ನು ಸೃಜಿಸಿದವರಾಗಿ ಅವರು ಕವಿ ಬ್ರಹ್ಮರೂ ಮಹರ್ಷಿಗಳೂ ಆಗಿದ್ದಾರೆ. ಇದು ಅಮರಕವಿ ಬೇಂದ್ರೆಯವರ ಅಧಿಕಾರ ವಾಣಿಯ ಅಂತರಾರ್ಥ.

ನಿಸರ್ಗಶಿಶು ಕುವೆಂಪುವಿಗೆ ನಿಸರ್ಗಾರಾಧನೆ ಮತ್ತು ಉಪಾಸನೆಗಳು ಆತ್ಮ ಸಾಕ್ಷಾತ್ಕಾರದ ಮಾರ್ಗಗಳಾಗಿವೆ. ಸತ್ಯಂ ಶಿವವಂ ಸುಂದರಂ ಮಂತ್ರ ಅವರ ಆಧ್ಯಾತ್ಮಾನುಭವದ ಭಾಗವೇ ಆಗಿದೆ. ಪ್ರತಿಯೊಂದು ವಸ್ತುವನ್ನೂ ಬ್ರಾಹ್ಮೀದೃಷ್ಟಿಯಿಂದ ನೋಡುವ ಅನುಭವಿಸುವ ಚಿತ್ತಪಶ್ಯಕ್ತಿ ಶ್ರೀ ರಾಮಕೃಷ್ಣ ಪರಮಹಂಸ,ಸ್ವಾಮಿ ವಿವೇಕಾನಂದರ ಅನುಗ್ರಹದಿಂದ ಹಾಗೂ ನಿರಂತರ ಸಾಧನೆಯಿಂದ ಅವರಿಗೆ ಸಂಲಭ್ಯವಾಗಿದೆ. ‘ಚೇತನ ಮೂರ್ತಿಯು ಆ ಕಲ್ಲು! ತೆಗೆ ಜಡವೆಂಬುದೆ ಬರಿ ಸುಳ್ಳು!’ ‘ರಸಾನುಭೂತಿಯ ರಸಪಥವಲ್ಲದೆ ಸತ್ಯಕೆ ಗತಿಯಿಲ್ಲ!’ ‘ಕಲೆಯ ಮಿಂಚುಣದವಗೆ ಇಹ ಶೂನ್ಯ, ಪರ ಶೂನ್ಯ!’ ‘ರಸರೂಪಿ ಸರ್ವೇಶನಾಶೀರ್ವಚನ ಶೂನ್ಯ!’ ಇವು ಅವರ ಅನುಭವದಿಂದ ಹೊರಹೊಮ್ಮಿದ ದಿವ್ಯಮಂತ್ರಗಳು. ಅವರ ಪಾಲಿಗೆ ಸೂರ್ಯೋದಯ ಚಂದ್ರೋದಯ ದೇವರ ದಯೆ! ಹೂ ತಳಿರು ಹೊಳೆ ಕೆರೆ ಹಣ್ಣು ಪ್ರತಿಯೊಂದು ವಸ್ತವೂ ಭಗವಂತ ಧರಿಸುವ ವೇಷ. ಒಂದು ಕೃತಿಯಾಗಲಿ ಇಬ್ಬನಿಯಾಗಲಿ ಭಗವಂತನ ಅವತಾರ. ನಿಸರ್ಗದ ಸೂಕ್ಷ್ಮಾತಿಸೂಕ್ಷ್ಮ ರಹಸ್ಯಗಳನ್ನು ಸೌಂದರ್ಯ ಹಾಗೂ ಆಧ್ಯಾತ್ಮ ದೃಷ್ಟಿಯಿಂದ ಇವರಂತೆ ಭೇದಿಸಿದ, ಅನುಭವಿಸಿದ ಮತ್ತೊಬ್ಬ ಕವಿ ಜಗತ್ತಿ ನಲ್ಲಿಯೇ ವಿರಳ. ಇಲ್ಲವೆಂದರೂ ಅತಿಶಯೋಕ್ತಿಯಾಗದು.

ಕುವೆಂಪು ಅವರು ಅಧ್ಯಾತ್ಮ ಭೂಮಿಕೆಯಲ್ಲೆಷ್ಟು ಸಲೀಸಾಗಿ ವಿಹರಿಸಬಲ್ಲರೋ ಅಷ್ಟೇ ಸಲೀಸಾಗಿ ಸಾಮಾಜಿಕ ಸ್ತರದಲ್ಲಿಯೂ ಸಾಕ್ಷೀಭೂತರಾಗಿ ನಿಂತು, ಅಲ್ಲಿಯ ಏರು ಬೀಳುಗಳ ಮತ್ತು ಅರೆಕೊರೆಗಳ ಮೇಲೆ ಕ್ಷಕಿರಣ ಹಾಯಿಸಬಲ್ಲರು; ಬಿರುಗಾಳಿಯಾಗಿ ಅಪ್ಪಳಿಸಬಲ್ಲರು, ದಾವಾನಲವಾಗಿ ದಹಿಸಬಲ್ಲರು. ಅವರ ಕಾದಂಬರಿಗಳಲ್ಲಾಗಲಿ, ಮಹಾಕಾವ್ಯದಲ್ಲಾಗಲಿ, ಕತೆಗಳಲ್ಲಾಗಲಿ ಮೊಗದೋರುವ ಅವರ ಸಾಮಾಜಿಕ ಪ್ರಜ್ಞೆ ಯಾರನ್ನಾದರೂ ಚಕಿತಗೊಳಿಸು ವಂಥದು. ಅವರೆಂತು ಅಧ್ಯಾತ್ಮ ಕವಿಯೋ ಅಂತೆಯೇ ಕ್ರಾಂತಿ ಕವಿಯೂ ಹೌದು. ಪ್ರಾಚೀನ ಪ್ರಪಂಚ ಪ್ರಶ್ನಿಸದೆ ಒಪ್ಪಿಕೊಂಡು ಬಂದಿದ್ದ ನಂಬಿಕೆ ಹುಸಿಮೌಲ್ಯ ಹಾಗೂ ಗೊಡ್ಡು ಸಂಪ್ರದಾಯಗಳ ಮೇಲೆ ಖಂಡನೆಯ ಖಡ್ಗವನ್ನು ಬೀಸುತ್ತಾರೆ. ಮಾನವ ಮತಿದಾಸ್ಯದಿಂದ ಪಾರಾಗದ ಹೊರತು ಆತ್ಮಕಲ್ಯಾಣ ದೇಶ ಕಲ್ಯಾಣ ಎರಡೂ ಸಾಧ್ಯವಿಲ್ಲವೆಂದು ಘೋಷಿಸುತ್ತಾರೆ. ಅವರು ಯಾವುದೇ ಮತಪಂಥ  ಮಠಗಳಿಂದ ದೂರ ನಿಂತು, ಜಾತೀಯತೆ ಮತೀಯತೆ ಅಸ್ಪೃಶ್ಯತೆ ಮತ್ತು ಶೋಷಣೆಗಳನ್ನು ನಿರ್ದಾಕ್ಷಿಣ್ಯವಾಗಿ ತುಂಡರಿಸಿ, ಸೆಕ್ಯೂಲರಿಸಂ ಧೋರಣೆಯ ಜೀವಂತ ಮುಖವಾಣಿಯಾಗುತ್ತಾರೆ. ‘ನೂರು ದೇವರನೆಲ್ಲ ನೂಕಾಚೆ ದೂರ’, ‘ಗೊಬ್ಬರದ ಮೇಲೆ ಬರೆವುದೆ ಕಬ್ಬಮಂ?’ ‘ಎಂದೊ ಮನು ಬರೆದಿಟ್ಟುದಿಂದೆಮಗೆ ಕಟ್ಟೇನು?’ ‘ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರಬನ್ನಿ’, ‘ಆ ಮತದ ಈ ಮತದ ಹಳೆಮತದ ಸಹವಾಸ ಸಾಕಿನ್ನು, ಸೇರಿರೈ ಮನುಜಮತಕೆ’, ‘ಸರ್ವರಿಗೆ ಸಮಬಾಳು’, ‘ಸರ್ವರಿಗೆ ಸಮಪಾಲು’, ‘ಕವಿಗರಸು ಗಿರಸುಗಳ ಋಣವಿಲ್ಲ’ – ಇಂಥ ಕ್ರಾಂತಿಕಾರಕ ಕಿಡಿನುಡಿಗಳನ್ನು ಕುವೆಂಪು ಸಾಹಿತ್ಯದಲ್ಲಿ ಹೊರತಾಗಿ, ಸಾಂಪ್ರದಾಯಕ ಮಡುವಿನಲ್ಲಿ ಮುಳುಗೇಳುವ, ಮತದ ಮರಕ್ಕೆ ನೇತುಹಾಕಿಕೊಂಡಿರುವ, ಮತಿದಾಸ್ಯದಿಂದ ಪಾರಾಗಲಾರದ ಕವಿಗಳಲ್ಲಿ ಕಣ್ಣಲ್ಲಿ ಕಣ್ಣಿಟ್ಟು ಅರಸಿದರೂ ಕಾಣಲಾಗದು. ಕನ್ನಡದ ಬೇರಾವ ಸಾಹಿತಿಯೂ ಇವರಂತೆ ತನ್ನ ಜಾತಿಯ ಜನರ ದೋಷ ದೌರ್ಬಲ್ಯಗಳನ್ನು ನಿರ್ಮಮತೆಯಿಂದ ಹರಾಜು ಹಾಕಿದ್ದಿಲ್ಲ. ಅವರಿಗೆ ಜಾತಿಯೊಂದಿದ್ದರೆ ತಾನೆ? ಅವರದು ಮನುಷ್ಯಜಾತಿ, ಮತ ಮನುಜಮತ.

ಕುವೆಂಪು ಅವರು ಇಡೀ ಜೀವನದುದ್ದಕ್ಕೂ ಸಾಹಿತ್ಯದ ಮೂಲಕ, ಆಚಾರ ವಿಚಾರಗಳ ಮೂಲಕ, ಭಾಷಣ ಬೋಧನೆಗಳ ಮೂಲಕ ಜನತೆಯಲ್ಲಿ ವೈಜ್ಞಾನಿಕ ದೃಷ್ಟಿಯನ್ನು ಕುದುರಿಸಲು, ವೈಚಾರಿಕ ಮನೋಧರ್ಮವನ್ನು ಜಾಗ್ರತಗೊಳಿಸಲು ಪ್ರಯತ್ನಿಸಿದ್ದಾರೆ. ಮುಂದೆ ಅವರು ಜಗತ್ತಿಗೆ ನೀಡಿದ ವಿಶ್ವಮಾನವ ಸಂದೇಶ ಅವರ ಈ ಪ್ರಯತ್ನದ ಮುಂದುವರಿಕೆ ಯಾಗಿದೆ. ಅವನತಿಮುಖವಾಗಿರುವ ಜಗತ್ತಿನ ಕಲ್ಯಾಣಕ್ಕೆ ಆ ಸಂದೇಶದ ಅನುಷ್ಠಾನ ಅತ್ಯಗತ್ಯ.

ಲೋಕಗುರುಗಳಿಗೆ ವಿಶ್ವದೇವತೆಗಳಿಗೆ ಎಲ್ಲ ಕಾಲದ ಎಲ್ಲ ದೇಶಗಳ ಋಷಿಸಂತರಿಗೆ ಇಷ್ಟವಾಗುವಂಥ ಮಡಿಬಾಳ್ವೆಯನ್ನು ಬಾಳಿ, ವಿಶ್ವವಾಣಿಯ ಮಕುಟಮಣಿಯಂತಿರುವ ಜಗದ್ಭವ್ಯ ಮೇರುಕೃತಿಯನ್ನು ರಚಿಸಿ, ವಿಶ್ವಸಂಸ್ಕೃತಿಗೆ ಹಾಗೂ ಭಾರತೀಯ ಸಂಸ್ಕೃತಿಗೆ ಅತ್ಯಮೂಲ್ಯ ಕೊಡುಗೆಯನ್ನು ನೀಡಿ, ಕನ್ನಡಕ್ಕೆ ವಿಶ್ವಮಾನ್ಯ ಸ್ಥಾನವನ್ನು ತಂದುಕೊಟ್ಟ ಪದ್ಮವಿಭೂಷಣ, ರಾಷ್ಟ್ರಕವಿ, ಕರ್ನಾಟಕದ ರತ್ನ ಕುವೆಂಪು ಅವರ, ಅವರಿಗೆ ಎಷ್ಟು ಪ್ರಶಸ್ತಿಗಳು ಬಂದರೂ ಸದಾ ನಿರ್ಲಿಪ್ತರಾಗಿರುವ, ಆ ವಿಶ್ವಮಾನವರ ಹೆಸರಿನಲ್ಲಿ ಪ್ರತಿಷ್ಠಾನವನ್ನು ಸ್ಥಾಪಿಸಲು ಮುಂದೆ ಬಂದ ಕರ್ನಾಟಕ ಸರ್ಕಾರ ಇಡೀ ರಾಷ್ಟ್ರಕ್ಕೆ ಮಾದರಿ ಯಾಗಬಹುದಾದ ಸ್ತುತ್ಯಕಾರ್ಯವನ್ನು ಮಾಡಿದೆ ಎಂದು ಹೆಮ್ಮೆಯಿಂದ ಹೇಳಬಯಸುತ್ತೇನೆ. ಈ ಸಂಸ್ಥೆಗೆ ಬಂಗಾರಪ್ಪನವರು ಬಂಗಾರವೇ ಆಗಿದ್ದಾರೆ; ಅವರ ಔದಾರ್ಯ ಅವರ್ಣನೀಯ; ನಿಜಕ್ಕೂ ಅವರೇ ಈ ಸಂಸ್ಥೆಯ ಸಂಸ್ಥಾಪಕರೆಂದರೂ ತಪ್ಪಾಗಲಾರದು. ಶ್ರೀ ಡಿ.ಬಿ. ಚಂದ್ರೇಗೌಡ ಮತ್ತು ಕಾಗೋಡು ತಿಮ್ಮಪ್ಪನವರೂ ಇಲ್ಲಿದ್ದಾರೆ. ಶ್ರೀ ಕುವೆಂಪು ಅವರ ಮೇಲಿರುವ ಈ ಮಿತ್ರರ ಗೌರವಕ್ಕೆ ಅವರ ಹಾಜರಿಯೇ ಸಾಕ್ಷಿ. ಇವರೆಲ್ಲರಿಗೂ ನನ್ನ ನಮನಗಳು.

ಈ ಸಂಸ್ಥೆಯ ಉದ್ದೇಶಗಳು ಸಂಕ್ಷೇಪವಾಗಿ ಇಂತಿವೆ :

೧. ಕುವೆಂಪು ಸಾಹಿತ್ಯಾಧ್ಯಯನ, ಸಂಶೋಧನೆ, ವ್ಯಾಖ್ಯಾನ, ಬೋಧನೆ, ಅನುವಾದ, ನಾನಾ ಮಾಧ್ಯಮಗಳ ಮೂಲದ ಪ್ರಸಾರ.

೨. ಜಗತ್ತಿನ ಸಾಹಿತ್ಯ ಕೃತಿಗಳ ಹಿನ್ನೆಲೆಯಲ್ಲಿ ಕುವೆಂಪು ಸಾಹಿತ್ಯದ ತೌಲನಿಕ ಅಧ್ಯಯನ.

೩. ಕುವೆಂಪು ನಾಟಕಗಳ ಪ್ರದರ್ಶನ.

೪. ಕುವೆಂಪು ಸಾಹಿತ್ಯದಲ್ಲಿ ಅಭಿವ್ಯಕ್ತಗೊಂಡಿರುವ ವೈಜ್ಞಾನಿಕ ವೈಚಾರಿಕ ವಿಚಾರಗಳ ಹಾಗೂ ವಿಶ್ವಮಾನವ ಸಂದೇಶದ ಪ್ರಸಾರ.

೫. ಕುವೆಂಪು ಜೀವನ ಸಾಹಿತ್ಯವನ್ನು ಚಿತ್ರಿಸುವ ಸುಸಜ್ಜಿತ ಮ್ಯೂಸಿಯಂ ಸ್ಥಾಪನೆ.

೬. ಸಾಹಿತ್ಯ, ಕಲಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋ

೭. ಈ ಉದ್ದೇಶಗಳ ಈಡೇರಿಕೆಗಾಗಿ ಬೇಕಾಗುವ ಗ್ರಂಥಾಲಯ, ಅತಿಥಿಗೃಹ, ರಂಗಮಂದಿರ, ಬೋಧನಾಲಯ ಮೊದಲಾದ ಅಗತ್ಯ ಕಟ್ಟಡಗಳ ನಿರ್ಮಾಣ; ತಜ್ಞರ ಹಾಗೂ ಸಂಶೋಧಕರ ನೇಮಕ; ಸೂಕ್ತ ಆಡಳಿತಯಂತ್ರದ ಏರ್ಪಾಡು, ಆಧುನಿಕ ತಾಂತ್ರಿಕ ಸೌಲಭ್ಯಗಳ ಸುವ್ಯವಸ್ಥೆ.

೮. ಪರಿಸರ ಸಂರಕ್ಷಣೆ.

ಯಾರೊ ವಿದೇಶೀ ಪತ್ರಕರ್ತನೊಮ್ಮೆ ಬ್ರಿಟಿಷ್ ಪ್ರಧಾನಿಯನ್ನು ಪ್ರಶ್ನಿಸಿದನಂತೆ, ‘ಸಾಮ್ರಾಜ್ಯ ಮತ್ತು ಷೇಕ್ಸ್‌ಪಿಯರರಲ್ಲಿ ನಿಮಗೆ ಯಾರು ಹೆಚ್ಚು ಮೆಚ್ಚು’ ಎಂದು. ಪ್ರಧಾನಿ ತಟಕ್ಕನೆ ನುಡಿದನಂತೆ. ಸಾಮ್ರಾಜ್ಯವನ್ನು ಬಿಟ್ಟುಕೊಟ್ಟೇವು, ಷೇಕ್ಸ್‌ಪಿಯರ್‌ನನ್ನು ಬಿಟ್ಟುಕೊಡಲು ಸಾಧ್ಯವಿಲ್ಲ’ ಎಂದು. ಇದರರ್ಥವೇನೆಂದರೆ, ಒಂದು ದೇಶದ ಕೀರ್ತಿ ಸಾಮ್ರಾಜ್ಯದ ಮೇಲೆ ನಿಂತಿಲ್ಲ, ಭೌತಿಕ ಸಂಪತ್ತನ್ನವಲಂಬಿಸುವುದಿಲ್ಲ; ಅದು ಅಲ್ಲಿಯ ಸಂಸ್ಕೃತಿ ಶ್ರೀಮಂತಿಕೆಯನ್ನವಲಂಬಿಸುತ್ತದೆ; ಸಾಹಿತ್ಯ ಕಲೆಗಳು ಆ ಸಂಸ್ಕೃತಿಯ ಜೀವನಾಡಿಗಳು; ಒಂದು ಜನಾಂಗದ ಜೀವಾಳ ಮತ್ತು ಜೀವಾತು ಸಾಹಿತ್ಯ; ಸಾಮ್ರಾಜ್ಯ ಹೋಗುತ್ತದೆ, ಸಾಹಿತ್ಯ ಸಂಸ್ಕೃತಿಗಳು ಉಳಿಯುತ್ತವೆ. ಈ ದೃಷ್ಟಿಯಿಂದ ನಾವು ನಮ್ಮ ಸಾಹಿತ್ಯಾದಿ ಕಲೆಗಳನ್ನು ಸಂರಕ್ಷಿಸಿಕೊಳ್ಳಬೇಕಾಗಿದೆ. ಸಂಸ್ಕೃತಿ ಸಾಹಿತ್ಯಗಳುಳಿದರೆ ದೇಶ ಉಳಿದೀತು; ಅವು ಅಳಿದರೆ ದೇಶವೂ ನಿರ್ನಾಮವಾದೀತೆಂಬುದನ್ನು ನಾವು ಅರಿಯಬೇಕಾಗಿದೆ.

ಆದಿಕವಿ ವಾಲ್ಮೀಕಿಯ ಪುನರವತಾರವಾದ ಕುವೆಂಪು ಇಲ್ಲಿ ಜನ್ಮಧಾರಣೆ ಮಾಡಿದ್ದು ಆಕಸ್ಮಿಕವಲ್ಲ; ಅದು ಋತಚಿದಿಚ್ಛೆ; ಅನಾದಿ ಕವಿಯ ಆಶಿತ; ಯುಗಶಕ್ತಿ ಸ್ವರೂಪದ ಜನಮನದ ಅಭೀಪ್ಸೆಯ ಫಲ; ಶ್ರೀಗುರುವಿನ ಕೃಪಾಶೀರ್ವಾದದ ಪರಿಣಾಮ.

ಶ್ರೀ ಗುರು ಕೃಪೆ ಮಾಡಿದ ವಾಗ್ದೇವಿಯ ಹೃದಯ ಶಿಶು;
ಯುಗಯುಗವೂ ದೇಶದೇಶದಲಿ ಸಂಭವಿಸುವ ಆವೇಶದ ಯಜ್ಞಪಶುವೇ

ಈ ಮಹಾಕವಿ, ಮೇರು ಕವಿ, ಈ ಮಗು ಹಿರಿಕೊಡಿಗೆಯಲ್ಲಿ ಹುಟ್ಟಿದಾಗ ಭವತಾರಿಣಿಯ ಆಶೀರ್ವಾದವನ್ನು ತಂದ ದಕ್ಷಿಣೇಶ್ವರ ಶ್ರೀ ಗುರುವಿನ ಕೃಪೆಯನ್ನು ಸಹ್ಯಾದ್ರಿಯ ಅಧಿದೇವಿ.

ಎಲ್ಲಿಂದೆಲ್ಲಿಗೆ ತಾಯಿ?
ಜನವಿಲ್ಲದ ಈ ಕಾಡಿನ ಕೊಂಪೆಯಳೇಕೊ
ಆ ಕವಿಯವತಾರ?

ಎಂದು ಕೇಳುತ್ತಾಳೆ. ಆಗ ಶ್ರೀ ಗುರುಕೃಪೆ ನೀಡುವ ಉತ್ತರವಿದು

ಓ! ಆ ಚೇತನಕೀ ಸಹ್ಯಾದ್ರಿಯೆ ಲಿಂಗಶರೀರ!
ಮುಂದವನಿಂದಾಗುವ ಕಜ್ಜಕೆ ಇಂದೀ
ಕಾಡೇ
ಹಾಡುತ್ತಿದೆ ನಾಂದಿ!
ಶಕ್ತಿಯ ವಿಕಸನಕಾವಶ್ಯಕವೀ ಸಂಸ್ಕಾರ
ಹುಲಿಯಾರ್ಭಟೆ, ಹಕ್ಕಿಯ ಇಂಚರ, ಮೋಡದ ಸಂಚಾರ,
ದುಮುದುಮುಕುವ ಹೊಳೆನೀರಾಟ
ಹಸುರಿನ ಹೂವಿನ ಹಣ್ಣಿನ ರಸದೂಟ!…
ನೀನವನೊಡನಾಡಿ!
ನೀ ದಾದಿ!
ಅವನರಳುವ ಸಿರಿನೋಟವೆ ನಿನಗೊದಗುವ ಔತಣವಾಗಿರೆ
ಅದನಿಂದೇ ಅರಿಯುವ ಅವಸರವೇಕಮ್ಮಾ?-
ಈ ಸಹ್ಯಾದ್ರಿಯ ಘೋರಾರಣ್ಯದ ಮರೆಯ ಬಾಹುರಕ್ಷೆಯಲಿ
ತನ್ನ ಮಾತೃವಕ್ಷದೊಳಿರ್ಪಾತನನು ನನಗೆ ತೋರಮ್ಮಾ,
ಬೇಗ ತೋರಮ್ಮಾ!
(ವರ್ಧಂತಿ-ಅನುತ್ತರಾ)

ನಿಜದ ಕಣ್ಣಿದ್ದವರಿಗೆ ಕಾಣುತ್ತದೆ, ಈ ನಗ್ನ ನಿಗೂಢ ಸತ್ಯ; ಶುದ್ಧ ಹೃದಯವಿದ್ದವರಿಗೆ ಮಾತ್ರ ಈ ಸತ್ಯದ ಅರಿವಾಗುತ್ತದೆ.

ಕಲೆಯ ಕಣ್ಣಿದ್ದವರಿಗೆ, ದಾರ್ಶನಿಕ ದೃಷ್ಟಿಯ ರಸಚೇತಸರಿಗೆ ಕುಪ್ಪಳ್ಳಿ ಬರಿಯ ಮಣ್ಣಲ್ಲ, ಮರಗಿಡಗಳ ಕಾಡಲ್ಲ; ಇಲ್ಲಿಯ ಮಣ್ಣಿನ ಕಣಕಣವೂ ಕವಿಚೈತನ್ಯದ ಸೆಲೆ; ಪ್ರತಿಯೊಂದು ಸಸ್ಯವೂ ಭಗವತ್ಕೃಪೆಯ ನೆಲೆ; ಚೆಲುವಿನ ಬೆಳೆ; ಒಂದೊಂದು ಮಿಗವೂ ಸಾಹಸದ ಕಿಡಿ; ಪ್ರತಿಯೊಂದು ವಸ್ತುವೂ ಭಾವದ ಜ್ವಾಲೆ, ಕಲ್ಪನೆಯ ಕಾರಂಜಿ. ಮಹಾಕವಿಯ ಕೃಪೆಯಿಂದಾಗಿ ಇಲ್ಲಿಯ ಒಂದೊಂದು ಸಚರಾಚರ ವಸ್ತುವಿಗೂ ಬೆಲೆಯಿದೆ. ನಿಸರ್ಗದೇವಿ ಸರಸ್ವತಿ ಯರಿಬ್ಬರೂ ಈ ಪ್ರದೇಶವನ್ನು ಕರ್ನಾಟಕದ ಈ ಕಾಶ್ಮೀರವನ್ನು ಭವ್ಯಗೊಳಿಸಿದ್ದಾರೆ, ದಿವ್ಯಗೊಳಿಸಿದ್ದಾರೆ.

ಕವಿಯ ಮನೆಯ ಅಂಗಳವಂತು ದಿವಿಜರಿಗೂ ಮಂಗಳ. ಆದ್ದರಿಂದಲೇ ಈ ಮನೆಯನ್ನು ಕವಿಗಳು ಬೆಳೆದ, ಹಾಡಿದ, ಕುಣಿದಾಡಿದ, ಅವರ ಪ್ರತಿಭೆಯನ್ನು ಕೆರಳಿಸಿದ ಪೋಷಿಸಿದ ಈ ಮಂದಿರವನ್ನು ಶಾಶ್ವತ ಸ್ಮಾರಕವನ್ನಾಗಿ ರೂಪಿಸಬೇಕೆಂಬುದು ಪ್ರತಿಷ್ಠಾನದ ಉದ್ದೇಶ. ಅದನ್ನು ಪ್ರತಿಷ್ಠಾನಕ್ಕೆ ಬಿಟ್ಟುಕೊಡಲು ಇಲ್ಲೀಗ ವಾಸಿಸುತ್ತಿರುವ ಶೇಷಪ್ಪಗೌಡರು ಮತ್ತು ಜಗದೀಶ ರಾಮಚಂದ್ರಮೂರ್ತಿ ಒಪ್ಪಿರುವುದು ಸಂತೋಷದ ಸಂಗತಿ. ಆದರೆ ಅವರಿಗೆ ಪುನರ್ವಸತಿ ಸೌಕರ್ಯ ಕಲ್ಪಿಸಬೇಕಾದ್ದು ಅತ್ಯಗತ್ಯ.

ಕರ್ನಾಟಕ ಸರ್ಕಾರದ ಕೃಪೆಯಿಂದ, ಕುವೆಂಪು ವಿಶ್ವವಿದ್ಯಾನಿಲಯದ ಸಹಕಾರದಿಂದ ಶಿವಮೊಗ್ಗ ಚಿಕ್ಕಮಗಳೂರು ಜಿಲ್ಲಾ ಪರಿಷತ್ತುಗಳ ಸಹಾಯದಿಂದ, ಮಲೆನಾಡು ಅಭಿವೃದ್ದಿ ಮಂಡಲಿಯ ಔದಾರ್ಯದಿಂದ ಹಾಗೂ ಇತರ ಸಂಘ ಸಂಸ್ಥೆಗಳ ಪ್ರೋಈ ಪ್ರದೇಶ ಕಾಲಾನಂತರದ ರಾಷ್ಟ್ರೀಯ ಅಂತರ್‌ರಾಷ್ಟ್ರೀಯ ಸಾಂಸ್ಕೃತಿಕ ಕ್ಷೇತ್ರವಾಗುತ್ತದೆಂಬ, ಸಾಹಿತ್ಯಕಾಶಿಯಾಗುತ್ತದೆಂಬ, ವಿದ್ವಾಂಸರ ಹಾಗೂ ವಿದ್ಯಾರ್ಥಿಗಳ ಸ್ವರ್ಗವಾಗುತ್ತದೆಂಬ ಆಶೆ ಭರವಸೆಗಳಿಂದ ಪ್ರತಿಷ್ಠಾನ ಕಾರ್ಯೋದ್ಯುಕ್ತವಾಗಿದೆ. ಶ್ರೀ ಗುರುವಿನ ಹರಕೆಯಿಂದ, ತಮ್ಮೆಲ್ಲರ ಹಾರೈಕೆಯಿಂದ, ಋತಚಿತ್‌ಶಕ್ತಿಯ ಅನುಗ್ರಹದಿಂದ ಈ ಆಶೆ ಭರವಸೆಗಳು ಈಡೇರುತ್ತವೆಂದು ನಂಬಿದ್ದೇನೆ.

ಕುವೆಂಪು ಅವರ ೮೯ನೆಯ ಜನ್ಮದಿನದಂದು ರಾಷ್ಟ್ರಕವಿ ಕುವೆಂಪು ಅವರ ಪ್ರತಿಷ್ಠಾನದ ಪ್ರಾರಂಭೋತ್ಸವ ನಡೆಯುತ್ತಿರುವುದು ಶುಭದ ಹಾಗೂ ಭಗವದಿಚ್ಛೆಯ ಸಂಕೇತವಾಗಿದೆ. ಕೇವಲ ನಾಲ್ಕು ದಿನಗಳ ಅಂತರದಲ್ಲಿ ಕ್ರಿಸ್ತ, ಕುವೆಂಪು ಅವರ ಜನ್ಮೋತ್ಸವ ಜರುಗುತ್ತಿರುವುದಂತು ಈಶ್ವರೇಚ್ಛೆಯಾಗಿದೆ. ಆ ಈಶ್ವರೇಚ್ಛೆಯೇ ಪ್ರತಿಷ್ಠಾನದ ಭವಿಷ್ಯವನ್ನು ರೂಪಿಸುತ್ತದೆಂಬ ಧೈರ್ಯ ನನಗಿದೆ.

ಕರ್ನಾಟಕ ಸರ್ಕಾರದ ಪ್ರೋಫಲವಾಗಿ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ನೋಂದಾವಣಿಯಾದಾಗಿನಿಂದ ಅನೇಕ ಸಾಹಿತಿಗಳು ಮತ್ತು ಸಾಹಿತ್ಯಾಭಿಮಾನಿಗಳು ನನಗೆ ಕಣ್ಣಾಗಿ, ಮತಿಯಾಗಿ, ಊರೆಯಾಗಿ ದುಡಿದಿದ್ದಾರೆ. ಮೊದಲು ನೆನಪಿಗೆ ಬರುವಂಥವರು ಪ್ರತಿಷ್ಠಾನದ ಪ್ರವರ್ತಕರು ಹಾಗೂ ಸದಸ್ಯರು. ಸರ್ಕಾರದ ಕಾರ್ಯದರ್ಶಿ ಶ್ರೀ ಫಿಲಿಪೋಸ್ ಮಥಾಯ್ ಅವರ, ಶ್ರೀ ವಾಸುದೇವಯ್ಯನವರ, ಶ್ರೀ ಕೆ.ಜಿ. ನಾಯಕರ, ಕುಲಪತಿ ಡಾ. ಗಜೇಂದ್ರಗಡ ಅವರ, ಆದರದ ಉತ್ಸುಕತೆಯನ್ನು ಮರೆಯಲಾರೆ; ಜಿಲ್ಲಾಧಿಕಾರಿ ಶ್ರೀ ಸದಾಶಿವಯ್ಯನವರ, ಎಸ್.ಇ. ಶ್ರೀ ಮಲ್ಲಿಕಾರ್ಜುನಯ್ಯನವರ, ಹಾಗೂ ಅವರ ಸಿಬ್ಬಂಧಿ ವರ್ಗದ, ಶ್ರೀ ಕೆ.ಟಿ. ನಾರಾಯಣಮೂರ್ತಿಗಳ ಮತ್ತು ಅವರ ಗೆಳೆಯರ, ತಹಸೀಲ್ದಾರ್ ಡಾ. ಅಪ್ಪಯ್ಯ ಅವರ, ಶ್ರೀ ಶೇಷಪ್ಪಗೌಡರ ಉತ್ಸಾಹದ ನೆರೆಯನ್ನು ಕಂಡು ಹರ್ಷಿಸಿದ್ದೇನೆ. ನನ್ನ ಶಿಷ್ಯಮಿತ್ರರೂ, ಸಾಹಿತಿಗಳೂ, ದಕ್ಷ ಕಾರ್ಯಕರ್ತರೂ ಆದ ಡಾ. ಹಂಪನಾ, ಡಾ. ಕಮಲಾಹಂಪನಾ ಮತ್ತು ಕುಲಸಚಿವ ಡಾ. ಲಕ್ಕಪ್ಪಗೌಡರ ಸಹಾಯ ಸಹಕಾರ ಕಾರ್ಯೋತ್ಸಾಹಗಳು ಪ್ರತಿಷ್ಠಾನವನ್ನು ಚಾಲನೆಗೊಳಿಸುವಲ್ಲಿ ನನಗೆ ನೆರವಾಗಿವೆ. ಈ ಎಲ್ಲ ಮಿತ್ರರನ್ನು ಮತ್ತು ನನ್ನ ದೌರ್ಬಲ್ಯ ಕಾರಣವಾಗಿ ಮರೆತಿರಬಹುದಾದ ಎಲ್ಲ ಬಂಧುಗಳನ್ನು ನಾನು ಗೌರವ ವಿನಮ್ರವಾಗಿ ವಂದಿಸುತ್ತೇನೆ. ಹಿಂದಿನ ಸನ್ಮಾನ್ಯ ಮುಖ್ಯಮಂತ್ರಿಗಳು ಮತ್ತು ಮುಖ್ಯ ಅತಿಥಿಗಳು ಇಷ್ಟರಲ್ಲಿಯೇ ವ್ಯಕ್ತಗೊಳಿಸಲಿರುವ ಶುಭ ಕಾಮನೆಗಳು ಪ್ರತಿಷ್ಠಾನಕ್ಕೆ ಸದಾ ಶ್ರೀರಕ್ಷೆಯಾಗಿರುತ್ತವೆಂಬ ಭರವಸೆ ನನಗಿದೆ.

ಭಾರತ ಜನನಿಯ ತನುಜಾತೆ ಕರ್ನಾಟಕ ಮಾತೆಗೆ ಜಯವಾಗಲಿ! ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನಕ್ಕೆ ಗೆಲುವಾಗಲಿ! ಕನ್ನಡ ಸಾಹಿತ್ಯ ಸಂಸ್ಕೃತಿಗಳ ಧ್ವಜ ಸದಾ ನಭಸ್ಪರ್ಶಿಯಾಗಿ ಹಾರಾಡಲಿ! ಜಗತ್ತಿನಲ್ಲಿ ಶಾಂತಿ ನೆಲಸಲಿ!.

 [1]     ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಉದ್ಘಾಟನೆಯನ್ನು ೨೯.೧೨.೧೯೯೨ರಂದು ಬೆಳಿಗ್ಗೆ ೯.೩೦ ಗಂಟೆಗೆ ಕುಪ್ಪಳ್ಳಿಯಲ್ಲಿ ನೆರವೇರಿಸಿದ ಸಂದರ್ಭದಲ್ಲಿ ಅಧ್ಯಕ್ಷರು ಮಾಡಿದ ಸ್ವಾಗತ ಭಾಷಣ.