ಮುನ್ನುಡಿ

ಐದಾರು ವರ್ಷಗಳಿಂದೀಚೆಗೆ ಕುವೆಂಪು ಅವರನ್ನೂ ಅವರ ಕೃತಿಗಳನ್ನೂ ಕುರಿತು ಬರೆದ ಲೇಖನಗಳನ್ನು ಇಲ್ಲಿ ಸಂಕಲಿಸಿ ಪ್ರಕಟಿಸಲಾಗುತ್ತಿದೆ, ಈ ಮಾಲಿಕೆಯಲ್ಲಿ (ಕುವೆಂಪು ಸಾಹಿತ್ಯ: ಕೆಲವು ಅಧ್ಯಯನಗಳು) ಇದು ನಾಲ್ಕನೆಯದು. ಇಲ್ಲಿಯ ಕೆಲವು ಲೇಖನಗಳು ಕುವೆಂಪು ಬದುಕಿದ್ದಾಗಲೇ ಬರೆದಂಥವು. ಇವುಗಳಲ್ಲಿ ಒಂದೆರಡು ಆಕಾಶವಾಣಿಯ ಮೂಲಕ ಪ್ರಸಾರವಾಗಿವೆ; ಕೆಲವು ಪತ್ರಿಕಾ ಮಿತ್ರರೊ ಇತರ ಸಂಪಾದಕರೊ ಕೇಳಿದಾಗ ಬರೆದುವು; ಒಂದೆರಡು ಮಾತ್ರ ಈಚೆಗೆ ಲಿಖಿತಗೊಂಡಂಥವು; ಬಹುಭಾಗ ಮಿತ್ರರ ಗ್ರಂಥಗಳಿಗೆ ಬರೆದ ಮುನ್ನುಡಿಗಳು. ಕುಪ್ಪಳಿಯಲ್ಲಿ ೧೯೯೨ರಲ್ಲಿ ಸಂಸ್ಥಾಪಿತವಾದ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಉದ್ಘಾಟನಾ ಸಮಾರಂಭದಲ್ಲಿ ಮಾಡಿದ ಸ್ವಾಗತ ಭಾಷಣ ಕೇವಲ ಐತಿಹಾಸಿಕ ದಾಖಲೆಯಾದ್ದರಿಂದ ಅದನ್ನು ಅನುಬಂಧದಲ್ಲಿ ಸೇರಿಸಿದೆ. ಡಾ. ಡಿ.ವಿ. ಗುಂಡಪ್ಪ ಮತ್ತು ಡಾ. ಅ.ನ.ಕೃ. ಅವರು ಕುವೆಂಪು ಅವರಿಗೆ ಬರೆದ ಪತ್ರಗಳು ಬೇರೆಲ್ಲಿಯೂ ಪ್ರಕಟವಾದಂತೆ ನೆನಪಿಲ್ಲ. ಆದ್ದರಿಂದ ಅವನ್ನೂ ಇಲ್ಲಿ ಸೇರಿಸಲಾಗಿದೆ. ಕುವೆಂಪು ಅವ ಮಹತ್ವವನ್ನು ಇವು ಸಾಬೀತುಪಡಿಸುತ್ತವೆ.

ಕುವೆಂಪು ಸಾಹಿತ್ಯಾಧ್ಯಯನ ನನ್ನ ಪಾಲಿಗೆ ನಿರಂತರ ಕ್ರಿಯೆ. ಅಧ್ಯಯನಾವಸರದಲ್ಲಿ ಮೂಡಿದ ಭಾವಾಲೋಚನೆಗಳನ್ನು ಗುರುತು ಹಾಕಿಕೊಳ್ಳುವುದು ನನ್ನ ಪರಿಪಾಠ. ಸ್ವಘೋಷಿಕ ಸರ್ವಜ್ಞರಿಗೆ, ಅಸೂಯಾಪರರಿಗೆ, ನಿಷ್ಕ್ರಿಯಾವಂತ ಕನಸುಣಿಗಳಿಗೆ ನನ್ನ ಈ ಪರಿಪಾಠವಾಗಲಿ, ನನ್ನ ಯೋಜನೆಗಳಾಗಲಿ ಹಿಡಿಸುವುದಿಲ್ಲ. ನಾನು ಸರ್ವಜ್ಞನಲ್ಲ; ನಾನು ಸಾಮಾನ್ಯನಲ್ಲಿ ಸಾಮಾನ್ಯ. ನಿರಂತರ ಕರ್ಮವೇ ನನ್ನ ಜೀವನಧರ್ಮ. ತಾವು ಶುದ್ಧ ಚರಿತರಲ್ಲದಿದ್ದರೂ ಮತ್ತೊಬ್ಬರನ್ನು ನಿಷ್ಕಾರಣವಾಗಿ ಬಯ್ಯುವುದೇ ಕೆಲರಿಗೆ ಆನಂದದಾಯಕವಾದ ಕರ್ಮವಾಗಿದೆ. ನನ್ನಿಂದಾಗಿ ಅವರಿಗೆ ಆನಂದವಾಗುವುದಾದರೆ ಸಂತೋಷ; ಸದಾ ಬಯ್ಯುತ್ತಿರಲಿ! ‘ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ’ ಬಸವಣ್ಣನವರ ಈ ಸಂದೇಶವನ್ನು ನಾನು ಆಚರಿಸುವುದಾದರೆ, ಅದೇ ನನ್ನ ಭಾಗ್ಯ.

ಕೇವಲ ಎಂಟು ಹತ್ತು ದಿನಗಳಲ್ಲಿ ಈ ಗ್ರಂಥವನ್ನು ಚೆನ್ನಾಗಿ ಮುದ್ರಿಸಿಕೊಟ್ಟ ಸಹೃದಯ ಮಿತ್ರರೂ, ಸ್ನೇಹ ಶ್ರೀಮಂತರೂ ಆದ ಶ್ರೀ ಜಿ.ಎಚ್. ಕೃಷ್ಣಮೂರ್ತಿಗಳಿಗೂ, ಅವರ ಸಿಬ್ಬಂದಿ ವರ್ಗಕ್ಕೂ ನನ್ನ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಆದಷ್ಟು ತಪ್ಪಿಲ್ಲದಂತೆ ಕರಡು ತಿದ್ದಿರುವ ಶ್ರೀಮತಿ ಸಾವಿತ್ರಮ್ಮ ಅವರಿಗೆ ನನ್ನ ವಂದನೆಗಳು.

ದೇಜಗೌ