ಕನ್ನಡ ವಿಶ್ವವಿದ್ಯಾಲಯ ಕನ್ನಡ ಸಂಸ್ಕೃತಿಯ ಬಹುತ್ವದ ನೆಲೆಗಳನ್ನು ಹುಡುಕುವ, ಗಟ್ಟಿಗೊಳಿಸುವ, ಹರಡುವ ಕಾಯಕವನ್ನು ನೋಂಪಿಯಂತೆ ನಡೆಸಿಕೊಂಡು ಬಂದಿದೆ. ಕನ್ನಡ ಸಂಸ್ಕೃತಿಯನ್ನು ಮತ್ತೆ ಮತ್ತೆ ನಿರ್ವಚನ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಕನ್ನಡ ವಿಶ್ವವಿದ್ಯಾಲಯವು ಒಂದು ಆಡುಂಬೊಲವಾಗಿ ಕಾರ್ಯನಿರ್ವಹಿಸುತ್ತಿದೆ. ನಮಗೆ ಗೊತ್ತಿರುವ ಸಂಸ್ಕೃತಿಯ ಅರ್ಥಗಳ ಆಚೆಗೆ ಅನೂಹ್ಯ ಲೋಕಗಳ ಕಡೆಗೆ ತನ್ನನ್ನು ಮತ್ತು ಕನ್ನಡಿಗರನ್ನು ಒಯ್ಯುವ ಪಯಣದ ದಾರಿಗಳನ್ನು ರೂಪಿಸುವ ಮಹತ್ವದ ಸಾಹಸದ ಹೆಜ್ಜೆಗಳು ಮೂಡಿ ಬಂದಿವೆ. ಇದು ನಿರಂತರ ನಡೆಯಬೇಕಾದ ಬಹುದಾರಿಗಳ ಮಹಾಯಾನ.

ಇಪ್ಪತ್ತೊಂದನೆಯ ಶತಮಾನದ ಆರಂಭದಲ್ಲಿ ಜಾಗತೀಕರಣದ ಈ ಸಂಕ್ರಮಣ ಸ್ಥಿತಿಯಲ್ಲಿ ಕನ್ನಡ ವಿಶ್ವವಿದ್ಯಾಲಯದ ರಚನೆ ಮತ್ತು ಕಾರ್ಯಗಳು ಸವಾಲಿನವು ಮತ್ತು ಜವಾಬ್ದಾರಿಯವೂ ಆಗಿವೆ. ‘ಕನ್ನಡ’ ಎನ್ನುವ ಪರಿಕಲ್ಪನೆಯನ್ನು ಭಾಷೆ, ಸಾಹಿತ್ಯ, ಬದುಕು ಮತ್ತು ಅದರ ಆಧುನಿಕ ಸನ್ನಿವೇಶಗಳಲ್ಲಿ ಅರ್ಥೈಸುವ ಮತ್ತೆ ಕಟ್ಟುವ ಕೆಲಸವನ್ನು ಕನ್ನಡ ವಿಶ್ವವಿದ್ಯಾಲಯ ಒಂದು ಕಾಯಕದಂತೆ ಕೈಗೆತ್ತಿಕೊಂಡಿದೆ. ಕನ್ನಡ ಮತ್ತು ಅಭಿವೃದ್ದಿ ಎನ್ನುವ ಎರಡು ಪರಿಕಲ್ಪನೆಗಳು ಎದುರುಬದುರಾಗುವ ಆತಂಕ ಒಂದು ಕಡೆಯಾದರೆ, ಅವು ಒಂದನ್ನೊಂದು ಪ್ರಭಾವಿಸಿ ನೆರವಾಗುವ ಆವರಣವನ್ನು ನಿರ್ಮಾಣ ಮಾಡುವುದು ಇನ್ನೊಂದೆಡೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯವು ಈ ಸಂಬಂಧಿಯಾದ ಹೊಸ ಆಲೋಚನೆಗಳ ಸಂವಾದ ಮತ್ತು ಅದರ ಆನ್ವಯಿಕ ಸಾಧನೆಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳಲು ಬಯಸಿದೆ.

ಕನ್ನಡವು ಕಾಗದರಹಿತ ಮಾಧ್ಯಮದಲ್ಲಿ ಕಾಣಿಸಿಕೊಳ್ಳುತ್ತಿರುವಾಗಲೂ ಪುಸ್ತಕ ರೂಪದಲ್ಲಿ ಕನ್ನಡ ಕೃತಿಗಳ ಪ್ರಕಟಣೆ ಸಮಾನಾಂತರವಾಗಿ ಕ್ರಿಯಾಶೀಲವಾಗಿ ನಡೆಯುವುದು ಬಹಳ ಮುಖ್ಯವಾದದ್ದು. ತಾಂತ್ರಿಕ-ಮೌಖಿಕ ಮಾಧ್ಯಮದಲ್ಲಿ ಕನ್ನಡವು ಬಳಕೆಯಾಗುತ್ತಿರುವಾಗಲೇ ಕಾಗದದಲ್ಲಿ ಕನ್ನಡ ಅಕ್ಷರಗಳು ಮುದ್ರಣಗೊಂಡು ಕಣ್ಣಿಗೆ, ಕಿವಿಗೆ ಮತ್ತು ಮನಸ್ಸಿಗೆ ಕನ್ನಡವನ್ನು ಸಂವಹನಗೊಳಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯಬೇಕಿದೆ. ಇಲ್ಲಿ ಪ್ರಕಟಗೊಳ್ಳುವ ಮಾಧ್ಯಮದೊಂದಿಗೆ ಅಭಿವ್ಯಕ್ತಗೊಳ್ಳುವ ಚಿಂತನಾ ಶರೀರವೂ ಮುಖ್ಯ ವಾದದ್ದು. ಭಾಷೆ, ಸಾಹಿತ್ಯ, ಕಲೆಗಳು, ವಿಜ್ಞಾನ, ತಂತ್ರಜ್ಞಾನ, ಸಮಾಜವಿಜ್ಞಾನ ಎನ್ನುವ ಬೌದ್ದಿಕ ಗಡಿರೇಖೆಗಳನ್ನು ಕಳಚಿಕೊಂಡು ಕನ್ನಡ ಜ್ಞಾನವು ಕನ್ನಡ ವಿಶ್ವವಿದ್ಯಾಲಯದಲ್ಲಿ ರೂಪುಗೊಳ್ಳುವ ಮತ್ತು ಪ್ರಕಟಗೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ.

ಕನ್ನಡದ ಹಿರಿಯ ಪ್ರಾಧ್ಯಾಪಕ ವಿದ್ವಾಂಸರಾದ ಪ್ರೊ.ದೇ. ಜವರೇಗೌಡ ಅವರ ಹೆಸರು ಕನ್ನಡ ವಿದ್ವತ್, ಕನ್ನಡ ಮಾಧ್ಯಮ, ಕನ್ನಡ ಆಡಳಿತಗಳಲ್ಲಿ ಅವಿನಾಭಾವ ಹೊಂದಿದೆ. ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಯಾಗಿ ಕೋಶ ವಿಶ್ವಕೋಶ ಗ್ರಂಥಗಳ ನಿರ್ಮಾಣ, ನಿಘಂಟುಗಳ ರಚನೆ, ಸಾಹಿತ್ಯ ಚರಿತ್ರೆಗಳ ಪುನರುಜ್ಜೀವನಗಳನ್ನು ನಡೆಸಿದ್ದಾರೆ. ಅವರು ಪ್ರಾಚೀನ ಕನ್ನಡ ಸಾಹಿತ್ಯದ ನೇಮಿಚಂದ್ರ, ನಂಜುಂಡ, ಆಂಡಯ್ಯ, ಮುಂತಾದ ಕವಿಗಳ ಕಾವ್ಯಗಳನ್ನು ಶಾಸ್ತ್ರೀಯವಾಗಿ ಸಂಪಾದಿಸಿದ್ದಾರೆ. ಜಗತ್ತಿನ ಶ್ರೇಷ್ಠ ಕೃತಿಗಳನ್ನು ಕನ್ನಡಕ್ಕೆ ತಂದುಕೊಟ್ಟಿದ್ದಾರೆ.

ಕುವೆಂಪು ಮತ್ತು ಕನ್ನಡವನ್ನು ದಿವ್ಯಮಂತ್ರವನ್ನಾಗಿ ಸ್ವೀಕರಿಸಿಕೊಂಡು ಇಂದಿಗೂ ಕನ್ನಡಪರ ಆಂದೋಲನಗಳ  ಮುಂಚೂಣಿಯಲ್ಲಿರುವ  ಪ್ರೊ. ದೇಜಗೌ ಅವರು ಕುವೆಂಪು ಅವರ ಸಾಹಿತ್ಯವನ್ನು ತಲಸ್ಪರ್ಶಿಯವಾಗಿ ಅಧ್ಯಯನ ಮಾಡಿದವರು. ಆಧುನಿಕ ಸಾಹಿತ್ಯ ಚರಿತ್ರೆಯ ಸಂದರ್ಭದಲ್ಲಿ ಕುವೆಂಪು ಅಧ್ಯಯನಕ್ಕೆ ಒಂದು ವಿಶೇಷ ಸ್ಥಾನವಿದೆ. ಕನ್ನಡ ಸಾಹಿತ್ಯ ಮತ್ತು ಕುವೆಂಪು ಅವಿನಾಭಾವದ ರೂಪಕವಾಗಿದೆ. ಇಂಥ ರೂಪಕವನ್ನು ಪ್ರೊ. ದೇಜಗೌ ಅವರು ತಮ್ಮ ಕುವೆಂಪು ಕುರಿತ ಬರಹಗಳ ಮೂಲಕ ಅನಾವರಣ ಮಾಡಿದ್ದಾರೆ. ಕುವೆಂಪು ಸಾಹಿತ್ಯದ ಹಿರಿಮೆ-ಗರಿಮೆಗಳನ್ನು ತಮ್ಮ ಬರಹಗಳ ಮೂಲಕ ವ್ಯಾಖ್ಯಾನಿಸಿ ನಿರೂಪಿಸಿದ್ದಾರೆ. ಕುವೆಂಪು ದರ್ಶನ ಸಂ.ರಲ್ಲಿರುವ ಬರಹಗಳು ಕುವೆಂಪು ಸಾಹಿತ್ಯ-ಕೆಲವು ಅಧ್ಯಯನಗಳನ್ನು ಒಳಗೊಂಡಿವೆ. ಮೂರು ಭಾಗಗಳಲ್ಲಿ ನಿರ್ಮಾಣ ಗೊಂಡಿರುವ ಈ ಸಂಪುಟವು ಕುವೆಂಪು ಅವರ ವ್ಯಕ್ತಿತ್ವ, ರಾಮಾಯಣದರ್ಶನಂ ಮಹಾಕಾವ್ಯದ ಪಾತ್ರಗಳ ಚರ್ಚೆ, ವೈಚಾರಿಕತೆ, ಸಾಮಾಜಿಕತೆ ಮುಂತಾದ ವಿಷಯಗಳನ್ನೊಳಗೊಂಡಿರುವ ಎರಡು, ಮೂರು ಮತ್ತು ನಾಲ್ಕನೇ ಭಾಗಗಳು ವಿಷಯದ ಸಮಗ್ರತೆಗೆ ಕನ್ನಡಿಯನ್ನು ಹಿಡಿದಿವೆ. ಕುವೆಂಪು ಸಾಹಿತ್ಯದ ಅನನ್ಯತೆಯನ್ನು ಹಲವು ಬಗೆಗಳಲ್ಲಿ ವಿಶ್ಲೇಷಿಸಿ ವ್ಯಾಖ್ಯಾನಿ ಸಿರುವ ಕ್ರಮ ವಿಶಿಷ್ಟವಾಗಿದೆ. ಇಲ್ಲಿಯ ಬರಹಗಳಲ್ಲಿ ಕುವೆಂಪು ಅವರ ವೈಚಾರಿಕದೃಷ್ಟಿ, ಲೋಕಾನುಭವ, ವೈಜ್ಞಾನಿಕದೃಷ್ಟಿಕೋನ ಮತ್ತು ಸೃಜನಶೀಲ ಪ್ರತಿಭೆಗಳನ್ನು ಕನ್ನಡದ ಕನ್ನಡಿಯಾಗಿ ಹಿಡಿದು ನೋಡಿದ್ದಾರೆ. ಕುವೆಂಪು ದಿವ್ಯಮಂತ್ರವಾಗಿ ಈ ಗ್ರಂಥ ಶರೀರದ ಮೂಲಕ ಉಳಿದಿದ್ದಾರೆ. ನಾಡೋಜ ಪ್ರೊ. ದೇಜಗೌ ಅವರು ಕುವೆಂಪು ಕುರಿತ ಬರೆಹಗಳ ಮೂಲಕ ಗುರುಋಣವನ್ನು ತೀರಿಸಿದ್ದಾರೆ. ಇಂಥದೊಂದು ಮಹತ್ವದ ಕಾರ್ಯವನ್ನು ನಿರ್ವಹಿಸಿರುವ ಹಿರಿಯ ವಿದ್ವಾಂಸರಾದ ಪ್ರೊ. ದೇಜಗೌ ಅವರಿಗೆ ಕನ್ನಡ ವಿಶ್ವವಿದ್ಯಾಲಯವು ಋಣಿಯಾಗಿದೆ.

ಪ್ರೊ. ದೇಜಗೌ ಅವರ ‘ಕುವೆಂಪು ದರ್ಶನ ಸಂಪುಟ-೨’ ಈ ಗ್ರಂಥವನ್ನು ಅಚ್ಚುಕಟ್ಟಾಗಿ ಹೊರತರುತ್ತಿರುವ ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಮತ್ತು ಸಹಾಯಕ ನಿರ್ದೇಶಕರಾದ ಶ್ರೀ ಸುಜ್ಞಾನಮೂರ್ತಿ ಅವರಿಗೆ ಆಭಾರಿಯಾಗಿದ್ದೇನೆ.

ಬಿ.. ವಿವೇಕ ರೈ
ಕುಲಪತಿ