ಮಹಾಕವಿ ಪಟ್ಟವು ಎಲ್ಲರಿಗೂ ಪುಕ್ಕಟೆಯಾಗಿ ದೊರೆಯುವಂಥದಲ್ಲ. ಯಾರ ಜೀವನ ನಿರಂತರವಾದ ಶ್ರದ್ಧೆ ಧ್ಯಾನ ತಪಸ್ಸುಗಳ ಮಹಿಮೆಯಿಂದ ಮಹಾಕಾವ್ಯವಾಗ ಬಲ್ಲುದೋ, ಯಾರ ಪ್ರಜ್ಞೆ ಸದಾ ಜಾಗ್ರತವಾಗಿರುತ್ತದೊ, ಯಾರ ದೃಷ್ಟಿಗೆ ಸಚರಾಚರ ಜಗತ್ತೆಲ್ಲ ಭಗವಂತನ ಲೀಲಾಕ್ಷೇತ್ರವಾಗಿ ಕಾಣುತ್ತದೊ, ಯಾರ ಬದುಕು ಕಾಮಕ್ರೋಧ ಮದ ಮಾತ್ಸರ್ಯಾದಿ ವಿಕಾರಗಳಿಂದ ದೂರವಾಗಿ ದೂರದರ್ಶಿತ್ವ ಹಾಗೂ ಸಮದರ್ಶಿತ್ವದಿಂದ ಉಜ್ವಲಗೊಂಡು ಮಾನವಕಲ್ಯಾಣಾಪೇಕ್ಷಿಯಾಗಿ ಸದಾ ಕಾರ್ಯನಿರತವಾಗಿರುತ್ತದೊ, ಅಂಥವರು ಮಾತ್ರ ಮಹಾಕವಿಯ ಪಟ್ಟಕ್ಕೇರಬಲ್ಲರು. ಮಹಾಕವಿ ನಿಜವಾಗಿಯೂ ಒಬ್ಬ ದ್ರಷ್ಟಾರ. ವಿರಾಟ್ ಶಕ್ತಿಯ ವಿಕಸನ ಪ್ರಕಾಶನಗಳಿಗೆ ಅವನೊಂದು ನಿಮಿತ್ತವಾಗುತ್ತಾನೆ, ಪ್ರಣಾಳಿಕೆಯಾಗುತ್ತಾನೆ. ಅವನು ಹತ್ತಾರು ರಾಮಾಯಣ ಭಾರತಗಳನ್ನು ಬರೆದರೂ ಅಪ್ರಕಟಿತ ಕಾವ್ಯ ಭಾಂಡಾಗಾರ ಅವನ ಅಂತರಂಗದಲ್ಲಿ ದಿನೇ ದಿನೇ ವಿಕಾಸಗೊಳ್ಳುತ್ತಿರುತ್ತದೆ. ಮಹಾ ಕವಿಯ ಕೃತಿಗಳು ಯುಗ ಧರ್ಮದ ಪ್ರತಿಬಿಂಬವಾಗಿ, ನವೋದಯಕ್ಕೆ ಉಷಶ್ಯಕ್ತಿಯಾಗಿ, ನಿತ್ಯ ಸತ್ಯಗಳ ವಾಗ್ರೂಪದ ಮಹಾಪ್ರತಿಮೆಗಳಾಗಿ, ತ್ರಿಕಾಲಾಬಾಧಿತವಾಗಿ, ಸರ್ವಲೋಕಾ ದರಣೀಯವಾಗಿ, ಸದಾ ತುಷ್ಟಿ ಪುಷ್ಟಿದಾಯಕವಾಗಿ ಹೈಮಾಚಲ ಸ್ಪರ್ಧಿಯಾಗಿ ನಿಲ್ಲುತ್ತವೆ. ಅವನ ಪ್ರತಿಭಾಶಕ್ತಿಗೆ, ಅವನ ವೈನತೇಯ ದೃಷ್ಟಿಗೆ ನಿಲುಕದ ವಸ್ತುವಿಲ್ಲ, ಎಟುಕದ ಭಾವ ವಿಲ್ಲ, ಗೋಚರಿಸದ ಅನುಭವವಿಲ್ಲ. ಅವನ ಕೃತಿಗಳು ಸದಾ ದಾರ್ಶನಿಕರ ಪಂಡಿತ ಪಾಮರರ ಆರಾಧನೆಗೆ ಪಾತ್ರವಾಗುತ್ತವೆ.

‘ಕುವೆಂಪು’ ಕಾವ್ಯನಾಮದಿಂದ ಪ್ರಖ್ಯಾತವಾಗಿರುವ ಪದ್ಮಭೂಷಣ ಡಾಕ್ಟರ್ ಕೆ.ವಿ. ಪುಟ್ಟಪ್ಪನವರು ಮಹಾಕವಿ ಪರಂಪರೆಗೆ ಸೇರಿದವರಾಗಿ, ಕನ್ನಡ ಸಾರಸ್ವತ ಪ್ರಪಂಚಕ್ಕೆ ಕಣ್ಮಣಿಯಂತಿದ್ದಾರೆ.

ಕವಿ-ಕಾವ್ಯ ಸಂಬಂಧದ ದೃಷ್ಟಿಯಿಂದ ಕವಿಗಳನ್ನು ಸ್ಥೂಲವಾಗಿ ಎರಡು ಪಂಗಡಗಳಾಗಿ ವಿಂಗಡಿಸಬಹುದು. ಕಾವ್ಯ ಕವಿ ಜೀವನದಿಂದ ಹೊರಹೊಮ್ಮುವ ಹೂವು. ಎಂದ ಮೇಲೆ ಕವಿಗೂ ಕಾವ್ಯಕ್ಕೂ ನಿಕಟವಾದ ಸಂಬಂಧವಿದ್ದೇ ಇರುತ್ತದೆ. ಆದರೆ ವ್ಯಾಪ್ತಿ ಪ್ರಮಾಣಗಳಲ್ಲಿ, ರೂಪ ಸ್ವರೂಪಗಳಲ್ಲಿ, ರೀತಿ ನೀತಿಗಳಲ್ಲಿ ಈ ಸಂಬಂಧ ಕವಿಯಿಂದ ಕವಿಗೆ ವ್ಯತ್ಯಾಸ ಹೊಂದುತ್ತದೆ. ಸಾಧಾರಣವಾಗಿ ಕವಿಯೂ ಸಾಮಾನ್ಯರಲ್ಲಿ ಸಾಮಾನ್ಯ. ಅವನೂ ಎಲ್ಲರಂತೆ ನಗುತ್ತಾನೆ, ಅಳುತ್ತಾನೆ; ಅರಿಷಡ್ವರ್ಗಗಳ ಉಪಾಧಿಗಳಿಂದ ಕಟ್ಟುಗೊಂಡಿರುತ್ತಾನೆ. ಈ ಎಲ್ಲ ಸರ್ವ ಸಾಧಾರಣ ಗುಣಗಳ ಜೊತೆಗೆ ಅವನು ಕೆಲವು ವಿಶಿಷ್ಟ ಗುಣಗಳನ್ನು ಹೊಂದಿರು ತ್ತಾನೆ. ಆ ಗುಣ ಅವನಗೆ ವಾಸನಾ ರೂಪವಾಗಿ ಅಥವಾ ಸಂಸ್ಕಾರ ರೂಪವಾಗಿ ಬಂದಿರ ಬಹುದು. ಜಡಾತ್ಮಕವೂ ಭ್ರಾಂತಿ ಜನಕವೂ ಆದ ಜಗತ್ತಿನ ಉಪಾಧಿ ಮತ್ತು ಉಪಸರ್ಗ ಗಳಿಂದ ಮುಕ್ತಗೊಳಿಸಿ, ಮಾನವ ಸಹಜವಾದ ದೋಷ ದೌರ್ಬಲ್ಯಗಳಿಂದ ವಿಕಾರ ಮಮಕಾರಗಳಿಂದ ವಿಚ್ಛಿತ್ತಿಗೊಳಿಸಿ, ಸಚರಾಚರ ವಸ್ತುಗಳ ಸ್ವರೂಪವನ್ನು ಯಥಾವತ್ತಾಗಿ ಗ್ರಹಿಸಬಲ್ಲ ಸಾಕ್ಷೀ ಪ್ರಜ್ಞೆಯನ್ನು ಜಾಗ್ರತಗೊಳಿಸುವಂಥ ‘ಸಮಾಧಿ’ ಗುಣ ಅವುಗಳಲ್ಲೊಂದು. ಈ ಗುಣ ಎಲ್ಲ ಕವಿಗಳಲ್ಲಿಯೂ ಎಲ್ಲ ಕಾಲ ದೇಶ ಸ್ಥಿತಿಗಳಲ್ಲಿಯೂ ಸಮಪ್ರಮಾಣದಲ್ಲಿ ಏಕಪ್ರಕಾರವಾಗಿ ಕಾಣಲಾರದು. ಕವಿಗಳ ತಾರತಮ್ಯತೆಗೆ ಈ ಗುಣವೂ ಪ್ರಧಾನ ಕಾರಣ ವಾಗುತ್ತದೆ. ಈ ಗುಣ ಉದ್ಭೋಧವಾದಾಗ ಕಾವ್ಯ ಹೊರಹೊಮ್ಮುತ್ತದೆ. ಈ ಗುಣ ಕೆಲವರಲ್ಲಿ ಸ್ಥಾಯಿಯಾಗಿ, ಕೆಲವರಲ್ಲಿ ಸಂಚಾರಿಯಾಗಿರುವುದುಂಟು. ಆದ್ದರಿಂದಲೇ ಕೆಲವು ಕವಿಗಳ ವ್ಯವಹಾರ ಜೀವನಕ್ಕೂ ಕಾವ್ಯ ತತ್ವಗಳಿಗೂ ಆಶ್ಚರ್ಯಕರವಾದ ವಿರೋಧಭಾವ ವಿರುತ್ತದೆ; ದಕ್ಷಿಣೋತ್ತರ ಧ್ರುವಗಳ ಅಂತರವಿರುತ್ತದೆ. ಅವರ ಕಾವ್ಯಗಳಲ್ಲಿ ಕಾಣುವ ಬಂಧುಪ್ರೇಮ, ಪರೋಪಕಾರ ಬುದ್ದಿ, ಲೋಕ ಕಲ್ಯಾಣಾಸಕ್ತಿ, ಸ್ವಾರ್ಥ ದೂರವಾದ ದೀನ ದಲಿತೋದ್ಧಾರ ನಿಷ್ಠೆ, ಸರ್ವಸಮತಾ ದೃಷ್ಟಿ ಮೊದಲಾದ ದೈವೀ ಗುಣಗಳು ಅವರ ವ್ಯವಹಾರ ಜೀವನದಲ್ಲಿ ಸಂಪೂರ್ಣ ಶೂನ್ಯ. ಯಾರಲ್ಲಿ ಈ ಗುಣ ಸ್ಥಾಯಿ ಭಾವವಾಗಿರುತ್ತದೆಯೋ ಅಂಥ ಕವಿಯ ಲೀಲಾ ಜೀವನ ಮತ್ತು ಕಾವ್ಯ ಜೀವನಗಳೆರಡೂ ಅಭೇದಾತ್ಮಕವಾಗಿರುತ್ತವೆ; ಅಷ್ಟೆ ಅಲ್ಲ, ಕಾವ್ಯಕ್ಕಿಂತ ಆ ಕವಿ ದೊಡ್ಡವನಾಗಿರುತ್ತಾನೆ. ಕುವೆಂಪು ಈ ಗುಂಪಿಗೆ ಸೇರಿದವ ರೆಂಬ ಸಂಗತಿ ಅವರ ಜೀವನದ ಜಾಡನ್ನು ಬಲ್ಲವರಿಗೆಲ್ಲ ವೇದ್ಯವಾಗದಿರದು. ಅವರ ವ್ಯವಹಾರ ಜೀವನ ಮತ್ತು ಕಾವ್ಯಜೀವನಗಳೆರಡೂ ಪರಸ್ಪರ ಪೋಷಕವಾಗಿ, ಅಭಿನ್ನಾತ್ಮಕವಾಗಿ ವಿಕಾಸಗೊಂಡಿವೆಯೆಂಬ ವಿಷಯ ಅವರ ಜೀವನ ಚರಿತ್ರೆಯನ್ನೂ ಅವರ ಕೃತಿಗಳನ್ನೂ ಅಕ್ಕ ಪಕ್ಕದಲ್ಲಿಟ್ಟುಕೊಂಡು ಕಣ್ಣಾಡಿಸಿದವರಿಗೆ ಅರ್ಥವಾಗದಿರದು.

ಮಲೆನಾಡಿನ ಹೃದಯವಾದ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿ ಅವರ ಜನ್ಮಸ್ಥಳ. ತಂದೆ ವೆಂಕಟಪ್ಪನವರು, ತಾಯಿ ಸೀತಮ್ಮನವರು. ಅವಿಭಕ್ತ ಕುಟುಂಬದಲ್ಲಿ ಹುಟ್ಟಿದ್ದರಿಂದ ಅವರು, ಆ ಪದ್ಧತಿಯ ಅನುಕೂಲ ಪ್ರತಿಕೂಲಗಳಿಗೆ, ಸುಖ ದುಃಖಗಳಿಗೆ ವಾರಸುದಾರರಾಗಬೇಕಾಯಿತು. ಅವರ ಪ್ರಾಥಮಿಕ ವಿದ್ಯಾಭ್ಯಾಸ ಪ್ರಾರಂಭವಾದದ್ದು ಕೂಲಿ ಮಠದಲ್ಲಿ, ಅವರ ಮನೆಯ ಉಪ್ಪರಿಗೆಯಲ್ಲಿ. ‘ಕಾಗದ ಬರೆಯುವುದಕ್ಕೆ ಕೂಡ ಬರುತ್ತಿದ್ದ’ ದಕ್ಷಿಣ ಕನ್ನಡ ಜಿಲ್ಲೆಯ ಐಗಳು ಅವರಿಗೆ ಓನಾಮ ಕಲಿಸಿದ ಆಚಾರ್ಯ ಪುರುಷರು. ಅವರ ಅಕ್ಷರಾಭ್ಯಾಸ ನಡೆದದ್ದು ಮರಳ ಸ್ಲೇಟಿನ ಮೇಲೆ! ಆ ಐಗಳು ಅ, ಆ, ಇ, ಈ, ಉ, ಊ ಬರೆದುಕೊಟ್ಟು ತಿದ್ದುವಾಗ ಕೈಬೆರಳುಗಳನ್ನು ಜೋಡಿಸುವ ರೀತಿಯನ್ನು ಕಾರ್ಯತಃ ತೋರಿಸಿಕೊಟ್ಟು, ಮರಳ ಮೇಲಿಟ್ಟು, ಅದುಮಿ, ತಿಕ್ಕಿ, ಕಣ್ಣೀರು ಬರಿಸಿ, ಎರಡು ಪೆಟ್ಟು ಕೊಟ್ಟು, ಚೆನ್ನಾಗಿ ಕೈತಿದ್ದಲು ಅಪ್ಪಣೆ ಕೊಟ್ಟು, ಮಳಿಗೆಗೆ ಹೋಗಿ ಬಾಗಿಲು ಹಾಕಿಕೊಂಡು ಮಲಗುತ್ತಿದ್ದರು! ಇಂಥ ಐಗಳಾದರೂ ಅಲ್ಲಿ ಶಾಶ್ವತವಾಗಿ ಇದ್ದವರಲ್ಲ; ಐದಾರು ತಿಂಗಳಿದ್ದು ಮತ್ತೆಲ್ಲಿಗೋ ವಲಸೆ ಹೋಗುತ್ತಿದ್ದರು. ಹೀಗೆ ಬಂದ ಐಗಳ ಮಾಲೆಯಲ್ಲಿ ಕ್ರಿಶ್ಚಿಯನ್ ಪಂಗಡಕ್ಕೆ ಸೇರಿದವರೂ ಒಬ್ಬರು. ಅವರಿಂದ ಕುವೆಂಪು ಅವರ ಮೇಲೆ ಬೈಬಲ್‌ನ ಪ್ರಭಾವ ಆದದ್ದೂ ಉಂಟು. ಆಗಾಗ್ಗೆ ಅವರ ಮನೆಯಲ್ಲಿ ನಡೆಯುತ್ತಿದ್ದ ಭಾರತ ಜೈಮಿನಿ ಭಾರತ  ರಾಮಾಯಣಗಳ ಪಠನ ಪಾರಾಯಣಗಳು ಶಿಶು ಹೃದಯದ ಮೇಲೆ ಪರಿಣಾಮಕಾರಿಯಾದ ಪ್ರಭಾವ ಬೀರಿದವು.

ಆದರೆ ಕುವೆಂಪು ಅವರು ಶಾಲೆಯಲ್ಲಿ ಕಲಿತದ್ದು ಅಲ್ಪ; ಹೊರಗೆ ಕಲಿತದ್ದು ಅಪಾರ. ಗಿಡ, ಮರ ಬಳ್ಳಿ; ಗಿರಿ ನದಿ, ನಿರ್ಝರಿಣಿ, ಕಣಿವೆ, ಕಂದರ, ಕವಿಶೈಲ, ನವಿಲು ಕಲ್ಲು, ಸಿಬ್ಬಲುಗುಡ್ಡೆ; ರವಿ ಶಶಿ ತಾರೆ; ಕಾಜಾಣ, ಕೋಗಿಲೆ, ತೇನೆ, ಗಿಳಿ, ಕಾಮಳ್ಳಿ. ಮಡಿವಾಳ; ಹುಲಿ, ಹಂದಿ, ದೊಡ್ಡು, ಕಡ, ಮಿಗ, ಮುಸಿಯ, ಕೋಡಗ, ಎರಳೆ, ಸಾರಗ, ಬರ್ಕ, ಉಡ; ಸೀತಾಳಿ, ಕೇದಗೆ, ಬಕುಳ, ಮಲ್ಲಿಗೆ, ಅಡಕೆ, ಕಾಫಿ; ಉದಯಾಸ್ತ, ಋತು ಪರಿವರ್ತನೆ ಮತ್ತು ವಿವಿಧ ವರ್ಣರಂಜಿತ ಮೇಘಮಾಲೆ; ಭೂಮ್ಯಂತರಿಕ್ಷಗಳಲ್ಲಿ ಸದಾ ಜರುಗುತ್ತಿರುವ ಮನಮೋಹಕವೂ ರುದ್ರರಮಣೀಯವೂ ಆದ ಪ್ರಕೃತಿ ವ್ಯಾಪಾರ; ಕರಿಸಿದ್ದ ಗಿಡ್ಡಿಯರು, ತಿಮ್ಮು ಓಬು ವಾಸು ಗಿರಿಜೆಯರು, ಮಲೆನಾಡಿನ ಗೋಪಾಲಕರು – ಇವು ಮತ್ತು ಇವರು ಒಂದೊಂದೂ ಒಬ್ಬೊಬ್ಬರೂ ಅವರಿಗೆ ಗುರುವಾಗಿ, ಅವರನ್ನು ನಡೆಸಿ ನುಡಿಸಿ ಸೃಷ್ಟಿಸಿದುವು. ಪೂರ್ವಜನ್ಮದ ಸಂಸ್ಕಾರದಿಂದಲೋ ಪ್ರಕೃತಿ ದೇವಿಯ ನಿತ್ಯ ನಿಕಟ ಸಂರ್ಪಕದಿಂದಲೋ ಅವರ ಗಮನ ಬಾಲ್ಯದಲ್ಲಿಯೇ ಆತ್ಮಾನುಭೂತಿಯ ಕಡೆಗೆ ತಿರುಗಿತು.

ಸುಮಾರು ಎಂಟು ವರ್ಷದವರಾಗಿದ್ದಾಗ ಕುವೆಂಪು ಅವರ ವಿದ್ಯಾಭ್ಯಾಸ ತೀರ್ಥಹಳ್ಳಿ ಯಲ್ಲಿ ಮುಂದುವರಿಯಿತು. ಅಲ್ಲಿ ಅವರ ಹಿರಿಯರು ತಮ್ಮ ಮನೆಯ ಹುಡುಗರಿಗೆಂದೇ ಒಂದು ಹುಲ್ಲು ಜೋಪಡಿ ಹಾಕಿಕೊಟ್ಟು, ವಸತಿಯನ್ನೇರ್ಪಡಿಸಿ ಕೊಟ್ಟಿದ್ದರು. ಜೋಪಡಿ ಯೆಂದರೆ ಗಾಳಿ ಬೆಳಕುಗಳಿಲ್ಲದ ಕತ್ತಲ ಗುಡಿಸಲಾಗಿತ್ತು. ಬೇಟೆಯ ಗೀಳು ಅವರಿಗೆ ರಕ್ತಗತವಾಗಿ ಬಂದ ಗುಣವಷ್ಟೆ. ಪ್ರಕೃತಿ ಸೌಂದರ್ಯೋಪಾಸನೆ ಮೃಗಯಾಸಕ್ತಿಗಳು ಅವರ ಹುಟ್ಟು ಗುಣಗಳೆಂದೇ ಹೇಳಬಹುದು. ಹಳ್ಳಿಯಲ್ಲಿದ್ದಾಗ ತಮ್ಮ ಮನೆಯವರ ಜೊತೆಯಲ್ಲಿ ಆಗಾಗ್ಗೆ ಕಾಡಿಗೆ ಹೋಗುತ್ತಿದ್ದುದಲ್ಲದೆ, ಕೋವಿಯನ್ನೂ ಹಿಡಿದಿದ್ದರು. ತೀರ್ಥಹಳ್ಳಿಗೆ ಬಂದ ಮೇಲೆ ಕ್ಯಾಟ್‌ಬಿಲ್ ತೆಗೆದುಕೊಂಡು ದಟ್ಟವಾಗಿ ಬೆಳೆದಿದ್ದ ತೋಪುಗಳ ಕಡೆಗೆ ಪ್ರತಿನಿತ್ಯ ಹೋಗುತ್ತಿದ್ದರು. ಕಂಕುಳ ಚೀಲದಲ್ಲಿ ಕಲ್ಲು ತುಂಡುಗಳೂ, ಆಕಡೆ ಈಕಡೆ ಜೇಬುಗಳಲ್ಲಿ ಪುರಿ ಬಾಳೆಹಣ್ಣು ಮೊದಲಾದ ತಿಂಡಿಗಳೂ ತುಂಬಿರುತ್ತಿದ್ದವು. ಅವರು ಎರಡನೇ ತರಗತಿಯಲ್ಲಿದ್ದಾಗ ಒಂದು ದಿನ ಸಂಜೆ ಸಂಗತಿಯೊಂದು ಜರುಗಿತು. ಎಂದಿನಂತೆ ತೋಪು ತಲುಪಿದ ನಂತರ ಜೇಬಿನಲ್ಲಿದ್ದ ಬಾಳೆಯಹಣ್ಣನ್ನು ಸುಲಿದು, ಸಿಪ್ಪೆಯನ್ನು ಬಿಸಾಡಿ, ತೊಳೆಯನ್ನು ಬಾಯಿಗೆಸೆದುಕೊಂಡರು. ಹಣ್ಣು ಚಪ್ಪರಿಸುತ್ತ ಮುಂದೆ ಹೋಗುತ್ತಿದ್ದಾಗ ಅವರ ಮನಸ್ಸಿನಲ್ಲಿ ಅನೇಕ ಭಾವನಾ ತರಂಗಗಳೆದ್ದುವು. “ಈ ಹಣ್ಣು ಯಾವ ಗಿಡದ್ದು, ಆ ಗಿಡ ಎಲ್ಲಿ ಬೆಳೆದದ್ದು! ಅದು ನನ್ನ ಹೊಟ್ಟೆಗೆ ಸೇರಿತು. ಹೋಗಲಿ ಆ ಸಿಪ್ಪೆಯನ್ನೇಕೆ ಇಲ್ಲಿ ಬಿಸಾಡಿದೆ? ಇದೆಲ್ಲ ದೈವ ಸಂಕಲ್ಪವಿರಬಹುದಲ್ಲವೆ? ಹಾಗಾದರೆ ನಾನೇಕೆ ದೈವೇಚ್ಛೆಯಂತೆ ವರ್ತಿಸಬೇಕು? ಆ ಸಿಪ್ಪೆ ಬೇರೊಂದೆಡೆ ಏಕೆ ಬೀಳಬಾರದು? ಈ ಮರ ಇಲ್ಲೇಕೆ ಬೆಳೆಯಬೇಕು? ಈ ಪ್ರಾಣಿ ಇಲ್ಲೇಕೆ ಹರಿದಾಡಬೇಕು? ಇದೆಲ್ಲ ನಿಯಮಬದ್ಧವಾಗಿ ನಡೆಯುತ್ತಿರಬಹು ದಲ್ಲವೆ? ಹೀಗೇಕೆ ನಾನು ಅಸ್ವತಂತ್ರನಾಗಿರಬೇಕು? ನನಗೇನು ಸ್ವಾತಂತ್ರ್ಯವಿಲ್ಲವೆ?” ಎಂದು ಯೋಚಿಸಿ ಅವರು ಆ ಬಾಳೆಯ ಹಣ್ಣಿನ ಸಿಪ್ಪೆಯನ್ನೆತ್ತಿಕೊಂಡು ದೂರ ಬಿಸಾಡಿದರು. ಮತ್ತೆ ಮನಸ್ಸಿನಲ್ಲಿ ಹೊಯ್ದಟ ಪ್ರಾರಂಭವಾಯಿತು. “ಇದೂ ಭಗವಂತನ ಮಾಯೆಯಿರಬಹುದು. ಅಲ್ಲಿಂದಿಲ್ಲಿಗೆ ಒಯ್ದು ಬಿಸಾಡುವಂತೆ ಭಗವಂತ ಪ್ರೇರಿಸಿರಬೇಕು. ಎಲ್ಲಿ ನೋಡಿದರೂ ಬರಿಯ ದಾಸ್ಯ” ಎಂದು ಸಿಡುಕಿ, ಮತ್ತೆ ಆ ಸಿಪ್ಪೆಯನ್ನು ಹಿಂದಿನ ಸ್ಥಾನಕ್ಕೆ ಕೊಂಡೊಯ್ದು ಬಿಸಾಡಿದರು. ಇಷ್ಟಾದರೂ ಅವರ ಮನಸ್ಸಿಗೆ ಶಾಂತಿ ಒದಗಲಿಲ್ಲ. “ಅಂತು ಮನುಷ್ಯ ಭಗವದಿಚ್ಛೆಯಂತೆಯೇ ನಡೆಯಬೇಕು. ಯಾರೂ ಅದನ್ನು ಮೀರಲು ಸಾಧ್ಯವಿಲ್ಲ” ಎಂದವರು ಕೊನೆಗೆ ನಿರ್ಧರಿಸಿದರು.

ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದಾಗಲೇ ಅವರ ಜ್ಞಾನದಾಹ ಅತೀವವಾಗಿತ್ತು. ಕೈಗೆ ಸಿಕ್ಕಿದ ಪುಸ್ತಕ ಯಾವುದೇ ಆಗಲಿ-ಜೈಮಿನಿ ಭಾರತವಾದರೂ ಸರಿಯೆ, ಭಟ್ಟಿ ವಿಕ್ರಮಾದಿತ್ಯನ ಕತೆಯಾದರೂ ಸರಿಯೆ, ಅದನ್ನೋದಿ ಮುಗಿಸುವತನಕ ಮೇಲೇಳುತ್ತಿರಲಿಲ್ಲ. ಆ ಊರಿನಲ್ಲಿದ್ದ ಸಣ್ಣದೊಂದು ಪುಸ್ತಕ ಭಂಡಾರಕ್ಕೆ ಪ್ರತಿನಿತ್ಯ ತಪ್ಪದೆ ಭೇಟಿ ಕೊಡುತ್ತಿದ್ದರು. ಅವರ ಗೆಳೆಯನೊಬ್ಬ ಮ್ಯಾನೇಜರ್ ಆಗಿದ್ದುದರಿಂದ ಅವರಿಗೆ ಬೇಕಾದ ಪುಸ್ತಕ ದೊರೆಯುತ್ತಿದ್ದುವು. ಅವರು ಬಿ. ವೆಂಕಟಾಚಾರ್ಯರ ಕಾದಂಬರಿಗಳನ್ನು ಓದಿದ್ದು ಆವಾಗಲೇ. ತಮ್ಮ ಬಂಧುವೊಬ್ಬರ ಬಾಯಿಂದ ಲಾಂಗ್ ಫೆಲೋವಿನ Psalms of Life ಎಂಬ ಕವನವನ್ನು ಕೇಳಿದಾಗ ಅವರ ಮನಸ್ಸಿನಲ್ಲಿ ಜ್ಯೋತಿ ಸಂಚಾರವಾದಂತೆ ಅನುಭವವಾಯಿತಂತೆ. ಕೂಡಲೆ ಆ ಕವನವನ್ನು ಬರೆದುಕೊಂಡು, ಉರು ಹೊಡೆದರಂತೆ.

ಪ್ರೌಢ ವ್ಯಾಸಂಗಕ್ಕಾಗಿ ಅವರು ಮೈಸೂರಿಗೆ ಬಂದು ಹಾರ್ಡ್‌ವಿಕ್ ಹೈಸ್ಕೂಲು ಸೇರಿದ ನಂತರ, ಅವರ ಸುಪ್ತ ಚಿತ್ತದಲ್ಲಿ ಗುಪ್ತವಾಗಿ ನೆಲಸಿದ್ದ ಪ್ರತಿಭಾಶಕ್ತಿ ಬೀಜ ಮೊಳೆಯಲು, ಬೆಳೆಯಲು, ಪಸರಿಸಲು ತಕ್ಕ ಸನ್ನಿವೇಶ ವಾತಾವರಣಗಳೊದಗಿದುವು. ಚಾಮುಂಡಿಬೆಟ್ಟ, ಲಲಿತಾದ್ರಿ, ತಂಡಿಸಡಕ್, ಕುಕ್ಕನಹಳ್ಳಿ ಕೆರೆ – ಇವು ಅವರ ನಿತ್ಯ ಯಾತ್ರಾ ಸ್ಥಳಗಳಾದುವು. ಬೇಸರ ಹುಟ್ಟಿಸುವ ಬಯಲು ಸೀಮೆಯ ಬೋಳು ಬಯಲಿನಲ್ಲಿ ಆಗಾಗ ನೆನಹು ಬುತ್ತಿಯನ್ನು ಬಿಚ್ಚಿ ರಸಗವಳನ್ನುಂಡು ಮೆಲುಕು ಹಾಕಿ ತಣಿಯುತ್ತಿದ್ದರು. ಸಾರ್ವಜನಿಕ ಪುಸ್ತಕ ಭಂಡಾರ  ಅವರ ತೀರ್ಥಕ್ಷೇತ್ರವಾಯಿತು. ಅವರು ತಮ್ಮ ವಿದ್ಯಾರ್ಥಿ ಜೀವನದ ಬಹುಭಾಗವನ್ನು ಅಲ್ಲಿಯೇ ಕಳೆದರು. ಆಂಗ್ಲ ಸಾಹಿತ್ಯದ ಶ್ರೀಮಂತತೆಗೆ ಮಾರುಹೋಗಿ, ಅದರ ಬಹುಭಾಗ ವನ್ನು ಹೀರಿ ಜೀರ್ಣಿಸಿಕೊಂಡರು, ಪಾಶ್ಚಾತ್ಯ ಪೌರ್ವಾತ್ಯ ತತ್ವಶಾಸ್ತ್ರಗಳನ್ನು ಅಧ್ಯಯನ ಮಾಡಿದರು. ಶ್ರೀರಾಮಕೃಷ್ಣ ಪರಮಹಂಸ, ಶ್ರೀ ಸ್ವಾಮಿ ವಿವೇಕಾನಂದರ ಉಪದೇಶಾಮೃತ ವನ್ನು ಪಾನ ಮಾಡಿ ಪುಷ್ಟಿ ಪಡೆದು ಆತ್ಮಾನುಭೂತಿಗಾಗಿ ಸಾಧನಾ ನಿರತರಾದರು.

ಕುವೆಂಪು ಅವರು ಹೈಸ್ಕೂಲಿನ ಮೊದಲನೆಯ ತರಗತಿಯಲ್ಲಿ ಓದುತ್ತಿದ್ದಾಗಲೇ ಓರಗೆಯ ವಿದ್ಯಾರ್ಥಿಗಳನ್ನು ಅಧ್ಯಾಪಕ ವೃಂದವನ್ನು ತಮ್ಮ ಪ್ರತಿಭಾಪೂರ್ಣವಾದ ಬರೆಹಗಳಿಂದ ಬೆರಗುಗೊಳಿಸಿದ್ದರು. ಒಮ್ಮೆ ತರಗತಿಯಲ್ಲಿ ಇಂಗ್ಲಿಷ್ ಅಧ್ಯಾಪಕರು ‘Dawn’ ವಿಷಯ ಕುರಿತು ಪ್ರಬಂಧ ಬರೆಯುವಂತೆ ಹೇಳಿದರು. ಉಳಿದ ವಿದ್ಯಾರ್ಥಿಗಳು ಪ್ರಬಂಧ ರಚನೆಯಲ್ಲಿ ತಲ್ಲೀನರಾಗಿದ್ದಾಗ ಇವರು ವ್ಯಂಗ್ಯ ಚಿತ್ರ ರಚನೆಯಲ್ಲಿ ತಲ್ಲೀನರಾಗಿದ್ದರು. ಬಳಿಯಲ್ಲಿದ್ದ ವಿದ್ಯಾರ್ಥಿಗಳು ಅವರ ಕಡೆ ನೋಡಿಕೊಂಡು ನಗುತ್ತಿದ್ದರು. ಸಂಶಯಗ್ರಸ್ತರಾದ ಅಧ್ಯಾಪಕರು ಪ್ರಬಂಧ ಓದುವಂತೆ ಕುವೆಂಪು ಅವರಿಗೆ ಆಜ್ಞೆ ಮಾಡಿದರು. ಸುಮಾರು ನಾಲ್ಕೈದು ನಿಮಿಷಗಳ ತನಕ ಬರಿಯ ಹಾಳೆಯ ಪುಸ್ತಕ ಹಿಡಿದುಕೊಂಡು ನಿರರ್ಗಳವಾಗಿ ಓದಿ, ಅಧ್ಯಾಪಕರ ಶ್ಲಾಘನೆಯಿಂದ ತೃಪ್ತರಾಗಿ ಕುಳಿತುಕೊಂಡರು. ಅಕ್ಕಪಕ್ಕದ ಹುಡುಗರು ಮತ್ತೆ ಕಿಲಕಿಲನೆ ನಗಲಾರಂಭಿಸಿದರು. ಅಧ್ಯಾಪಕರು ನೋಟ್‌ಬುಕ್ ತರಿಸಿ ನೋಡಿದರು. ಅಲ್ಲೇನಿದೆ? ತುಟಿ ಯೆಡೆಯಲ್ಲಿ ಸಿಗರೇಟ್ ಸಿಕ್ಕಿಸಿಕೊಂಡು ಸೈಕಲ್ ಮೇಲೆ ಕುಳಿತ ಆಂಗ್ಲ ತರುಣಿ! ಶಿಷ್ಯನ ಶಕ್ತಿ ಸಾಮರ್ಥ್ಯಗಳನ್ನು ಕಂಡ ಅನಸೂಯಾಶೀಲನಾದ ಉಪಾಧ್ಯಾಯನಿಗೆ ಆನಂದವಾಗದಿರುತ್ತದೆಯೆ?

ಸುಮಾರು ಇದೇ ಸಮಯದಲ್ಲಿಯೇ (೧೯೨೦) ಕುವೆಂಪು ಅವರು ಪದ್ಯ ರಚನೆಗೆ ಕೈಹಾಕಿದ್ದು. ಆದರೆ ಆಗ ಪದ್ಯರಚನೆ ನಡೆದದ್ದು ಕನ್ನಡದಲ್ಲಲ್ಲ, ಆಂಗ್ಲ ಭಾಷೆಯಲ್ಲಿ. ಕನ್ನಡ ಗ್ರಂಥಗಳನ್ನವರು ಸಾಕಷ್ಟು ಓದಿದ್ದರೂ, ಇಂಗ್ಲಿಷಿನ ಓಜಸ್ಸು ಕನ್ನಡಕ್ಕಿಲ್ಲವೆಂದು ಮೊದಮೊದಲು ನಂಬಿಕೊಂಡಿದ್ದರು. ಸಾವಿರಾರು ಪದ್ಯಗಳನ್ನು ನಾನಾ ಧಾಟಿಗಳಲ್ಲಿ ಬರೆದು ಬಿಸಾಡಿದರು; ಅವುಗಳಲ್ಲಿ ಕೆಲವನ್ನು ಮಾತ್ರ ೧೯೨೨ರ ತರುಣದಲ್ಲಿಯೇ ಅಚ್ಚು ಹಾಕಿಸಿ,  Beginner’s Muse ಎಂಬ ಹೆಸರಿಟ್ಟು ಪ್ರಕಟಿಸಿದರು. ವಿದೇಶೀಯ ವಿಪಂಚಿಯನ್ನೂ ದುತ್ತಿರುವ ಅಜ್ಞಾತ ಕವಿಯ ಧೈರ್ಯಕ್ಕೆ ತಣ್ಣೀರೆರಚಬೇಡಿರೆಂದು ಅವರು ನಾಂದೀ ಪದ್ಯದಲ್ಲಿ ಹೇಳಿಕೊಳ್ಳುತ್ತಾರೆ :

Dishearten not my friends this bard unkown,
who holds an alien harp and not his own;
And tries to string its many chords before
A crowd immense….

ಇಂಗ್ಲಿಷ್ ಭಾಷೆಯಲ್ಲಿ ಅವರ ಕಾವ್ಯಧಾರೆ ಹೇಗೆ ಅನಿರ್ಬಂಧಿತವಾಗಿ ಸಾಗುತ್ತಿತ್ತೆಂಬು ದನ್ನು ತೋರಿಸುವ ಸಲುವಾಗಿ ‘Ode to the Cuckoo’ ಎಂಬ ಕವನದ ಎರಡು ಪದ್ಯಗಳನ್ನು ಮಾತ್ರ ಉದ್ಧರಿಸಿದೆ :

O Bird of spring, demure, divine,
Descended from the heaven,
UPon this earth fore’er remain:
Thou art to mortals given
The winters turn to blighesome springs.
By those alluring notes;
And Years shall glide upon thy wings,
And woe, with sorrow floats.

ಈ ಕವನಗಳ ಕಟ್ಟನ್ನೊಯ್ದು ಆಗತಾನೆ ಶ್ರೀರಂಗಪಟ್ಟಣಕ್ಕೆ ಬಂದಿದ್ದ ಜೆ.ಎಚ್. ಕಸಿನ್ಸ್ ಅವರಿಗೆ ಕುವೆಂಪು ತೋರಿಸಿದರು. ಕಸಿನ್ಸ್ ಅವರು ಕಟ್ಟವನ್ನು ತಿರುವಿಹಾಕಿ, ಒಂದೆರಡು ಪ್ರಶಂಸೆಯ ಮಾತಾಡಿ, ಕನ್ನಡದಲ್ಲೇಕೆ ಪದ್ಯ ರಚಿಸಬಾರದೆಂದು ಸೂಚಿಸಿದರು. ಕುವೆಂಪು ಸ್ವಲ್ಪ ಅತೃಪ್ತಿಯಿಂದಲೇ ‘ಇಂಗ್ಲೀಷಿನಂತೆ ಕನ್ನಡ ಸಂಪದ್ಭರಿತವಾಗಿಲ್ಲ, ಭಾವಾಲೋಚನೆ ಗಳನ್ನು ಹೊರಬಲ್ಲ ಮೈಕಟ್ಟು ಕನ್ನಡಕ್ಕಿಲ್ಲ’ ಎಂದು ಹೇಳಿಬಿಟ್ಟರು. ಒಂದು ಭಾಷೆ ಮತ್ತೊಂದು ಭಾಷೆಗಿಂತ ಕೀಳೆಂದು ಗಣಿಸಲಾಗದು, ಪ್ರತಿಭಾವಂತ ಜನ ಬಳಸುವುದಾದರೆ ಯಾವ ಭಾಷೆಯೂ ಸಂಪದ್ಯುಕ್ತವಾಗುತ್ತದೆ – ಎಂದು ಕಸಿನ್ಸ್ ಉತ್ತರಿಸಿದರು. ಕಸಿನ್ಸ್ ಅವರ ಸಲಹೆಯನ್ನು ಮೆಲುಕು ಹಾಕುತ್ತ, ತಾವೆ ಇಂಗ್ಲೀಷಿನಲ್ಲಿ ಬರೆದಿದ್ದ ‘Spring’ ಪದ್ಯವನ್ನು ಕನ್ನಡಕ್ಕೆ ತರ್ಜುಮೆ ಮಾಡುತ್ತ ತಮ್ಮ ಕೊಠಡಿ ಸೇರಿದರು. ಆ ಪದ್ಯಕ್ಕೆ ‘ಚೈತ್ರ-ವೈಶಾಖ’ ಎಂದು ಹೆಸರಿಟ್ಟು ಅದನ್ನು ಮತ್ತೆ ಮತ್ತೆ ಓದಿಕೊಂಡರು. ಇಂಗ್ಲೀಷ್‌ನಲ್ಲಿ ಕಾಣದ ಯಾವುದೊ ಸತ್ವ ಯಾವುದೊ ನಾದ ಕನ್ನಡದಲ್ಲಿ ಕಂಡಿತು. ಅಲ್ಲಿಂದ ಕನ್ನಡ ಕಾವ್ಯರಚನೆ ಪ್ರಾರಂಭವಾಯಿತು. ಈ ಪ್ರಯೋಗ ಕಾಲದಲ್ಲಿ ಗೋವಿನ ಕತೆಯ ಮಟ್ಟಿನಲ್ಲಿ ಮೊಟ್ಟಮೊದಲು ಪ್ರಕಟಿಸಿದ ಪುಸ್ತಿಕೆಯೇ ಅಮಲನ ಕತೆ. ಕಥಾಸರಣಿಯನ್ನೂ ಭಾವ ಭಾಷೆಗಳ ಪ್ರಾಥಮಿಕ ಪ್ರಯೋಗವನ್ನೂ ತಿಳಿಯಲನುಕೂಲವಾಗುವಂತೆ ನಿದರ್ಶನಾರ್ಥವಾಗಿ ಎರಡು ಪದ್ಯಗಳನ್ನಿಲ್ಲಿ ಉದ್ಧರಿಸಿದೆ :

ಬಡವನೊಬ್ಬನು ಇರುತ ಸುಖದಲಿ
ಮಡದಿಮಕ್ಕಳ ಕೂಡೆ ನಲಿಯುತ
ನುಡಿದ ಭಾಷೆಗೆ ಎರಡು ಬಗೆಯದೆ
ಪಡೆದನಚ್ಯುತ ಪದವಿಯ.
ಕಡಿದು ಕಷ್ಟದಿ ತರುಗಳೆಲ್ಲವ
ಒಡೆದು ಬುಡಗಳ ಚದುರ ಕೈಯಲಿ
ಬಡವನಾದರು ಪಡುತ ಸುಖವನು
ಪಡೆದನಚ್ಯುತ ಪದವಿಯ.

ಅಮಲನ ಕಥೆ ಪ್ರಕಟವಾದಂದಿನಿಂದ ಅವರ ಕಾವ್ಯಧಾರೆ ಬರಬರುತ್ತ ಪಾತ್ರ ವಿಸ್ತರಿಸಿ ಕೊಳ್ಳುತ್ತ ನಿರಂತರವಾಗಿ ಹರಿದಿದೆ; ಅವರ ಲೇಖಣಿ ಎಲ್ಲಿಯೂ ನಿಲ್ಲದೆ ತಡವರಿಸದೆ ಮುಂದುವರಿದಿದೆ; ಅದರ ಮಸಿ ಮಾಸದೆ ಅಕ್ಷಯವಾಗಿದೆ; ಅವರ ‘ಹೃದಯವೊಂದು ವೀಣೆ’ಯಾಗಿ ಲೋಕವದನು ನುಡಿಸಿದೆ; ವಿದ್ಯಾರ್ಥಿದಶೆಯಲ್ಲಿಯೇ ಅವರ ಕೀರ್ತಿಲತೆ ಕನ್ನಡ ನಾಡಿನಲ್ಲೆಲ್ಲ ಕುಡಿವರಿದು ಹರಡಿತು. ಅವರ ಕಾವ್ಯದ ಬಳ್ಳಿ ಕುಡಿಹೊಮ್ಮಿ ಹೂವಾದದ್ದು, ಬಲಿಯುತ್ತ ಉತ್ಕೃಷ್ಟವಾದ ಫಲಗಳನ್ನು ಬಿಟ್ಟಿತು. ವಿದ್ಯಾರ್ಥಿದಶೆದಲ್ಲಿಯೇ ಅವರು ವಿದ್ಯಾರ್ಥಿ ಕವಿ ಸಮ್ಮೇಲನದ ಅಧ್ಯಕ್ಷರಾದರು. ಬಿ.ಎ. ತರಗತಿಯಲ್ಲಿದ್ದಾಗಲೇ ‘ಬೆಳ್ಳಿಯ ಹಬ್ಬದ ಕಬ್ಬದ ಬಳ್ಳಿ’, ‘ಬೊಮ್ಮನಹಳ್ಳಿಯ ಕಿಂದರಿ ಜೋಗಿ’, ‘ಯಮನ ಸೋಲು’, ‘ಜಲಗಾರ’, ‘ಚಂದ್ರಹಾಸ’, ‘ಬಿರುಗಾಳಿ’, ‘ಸ್ವಾಮಿ ವಿವೇಕಾನಂದ’ ಮೊದಲಾದ ಗ್ರಂಥಗಳ ಜೊತೆಗೆ  ನೂರಾರು ಕವನಗಳನ್ನು ರಚಿಸಿದರು.

ಮೊಟ್ಟಮೊದಲು ಕೃತಿರೂಪಧಾರಣೆ ಮಾಡಿದ ಅವರ ಕವನ ಸಂಗ್ರಹ ‘ಕೊಳಲು’. ಪ್ರಕೃತಿ, ದೇವರು ಜೀವಾತ್ಮ­-ಪರಮಾತ್ಮ ಸಂಬಂಧ, ಸುತ್ತಮುತ್ತಣ ಜಗತ್ತಿನ ವಸ್ತು ವಿಶೇಷಗಳು-ಇವೇ ಮೊದಲಾದ ವಿವಿಧ ವಿಷಯಗಳ ಮೇಲೆ ಹೃದಯಂಗಮವಾದ ಮತ್ತು ಪ್ರಸನ್ನವಾದ ಶೈಲಿಯಲ್ಲಿ ರಚಿತವಾದ ಕವನಗಳು ಆವಾಗಲೇ ಕವಿಯ ಭವ್ಯ ಭವಿಷ್ಯಕ್ಕೆ ನಾಂದಿಯಂತಿದ್ದುವು. “ಪುಟ್ಟಪ್ಪನವರ ಕವಿತ್ವಗಳೆಲ್ಲಾ ಹೃದಯದಿಂದ ಬಂದುವೇ; ನೇರವಾಗಿ ಹೃದಯಕ್ಕೆ ಹೊಗತಕ್ಕುವೇ… ಜೀವಾನಂದ, ಬ್ರಹ್ಮಾನಂದ, ಕಾವ್ಯಾನಂದಗಳನ್ನು ತಮ್ಮ ಶಕ್ತಿಗನುಗುಣವಾಗಿ ಅಂತಃಕರಣದಲ್ಲಿ ತುಂಬಿಕೊಳ್ಳುತ್ತಾ ಹಕ್ಕಿ ಹಾಡಿದಂತೆ ಸುಖವಾಗಿ ಹಾಡುವವರು ಪುಟ್ಟಪ್ಪನವರು. ಇವರ ತಿರುಳು ಕನ್ನಡ ನುಡಿಗಳು, ಇಂಪಾದ ಹೊಸ ಹೊಸ ಮುದ್ದು ಪದ್ಯಗಳು, ಸರಳಶೈಲಿ, ಭಾವೋದ್ರೇಕ, ಗೀತಪ್ರವಾಹ, ಇವುಗಳ ಹೊಡೆತದಲ್ಲಿ ಏನಾದರೂ ತಪ್ಪುಗಳು ಒಂದು ವೇಳೆ ಬಿದ್ದಿದ್ದರೂ ಅವು ಕಾಣದಂತೆ ಮುಚ್ಚಿ ಹೋಗು ವುವು….” ಎಂಬುದಾಗಿ ಅವರ ಮೊಟ್ಟ ಮೊದಲ ಕವನಗಳನ್ನು ಕುರಿತ ಶ್ರೀಯವರ ಅಭಿಪ್ರಾಯ ಸರ್ವೋಚಿತವಾಗಿದೆ.

ಸರಳ ರಗಳೆಯನ್ನು ಮೊಟ್ಟಮೊದಲು ಅತ್ಯಂತ ಯಶಸ್ವಿಯಾಗಿ ನಾಟಕಕ್ಕೆ ಬಳಸಿ ಅದರ ಉಪಯುಕ್ತತೆಯನ್ನು, ಮಹತ್ವವನ್ನು ಎತ್ತಿತೋರಿಸಿದ ಕೀರ್ತಿ ಕುವೆಂಪು ಅವರಿಗೆ ಸಲ್ಲುತ್ತದೆ. ಈ ಛಂದಸ್ಸಿನಲ್ಲಿ ಅವರು ಮೊಟ್ಟಮೊದಲು ರಚಿಸಿದ ನಾಟಕ ‘ಜಲಗಾರ’. ಅನಂತರ ಬರೆದದ್ದು ‘ಯಮನ ಸೋಲು’, ಸುಮಾರು ೧೦-೧೧ ಗಂಟೆಗಳ ಅವಧಿಯಲ್ಲಿ ಆ ನಾಟಕವನ್ನು ಬರೆದು ಮುಗಿಸಿದರಂತೆ. ಅದನ್ನು ಬರೆದದ್ದು ಶ್ರೀರಾಮಕೃಷ್ಣಾಶ್ರಮವನ್ನು ಸೇರಿದ ಮೇಲೆ. ಬೆಳಿಗ್ಗೆ ೭ ಗಂಟೆಯ ಹೊತ್ತಿಗೆ ಕಾಫಿ-ತಿಂಡಿ ಮುಗಿಸಿ, ತಮ್ಮ ಕೋಣೆಯನ್ನು ಸೇರಿ, ತಾಳ ಹಾಕಿಕೊಂಡು ಲೇಖನಿ ಹಿಡಿದವರು ಮಧ್ಯಾಹ್ನ ಊಟಕ್ಕೂ ಏಳಲಿಲ್ಲ. ಊಟದ ಸಮಯ ಮೀರಿದ್ದರೂ ಅವರು ಹೊರಗೆ ಬರದಿರಲು, ಕಾದುಕಾದು ಬೇಸತ್ತಿದ್ದ ಸ್ವಾಮಿ ಸಿದ್ದೇಶ್ವರಾ ನಂದಜೀಯವರು ಬಾಗಿಲು ಕುಟ್ಟಿದರು. ದಡಾರನೆ ಕದ ತೆಗೆದು, ಮೈಮೇಲೆ ಅರಿವಿಲ್ಲದವರಂತೆ ಕುವೆಂಪು ಅವರು ಸ್ವಾಮಿಯವರನ್ನು ಕಟುವಾಗಿ ಟೀಕಿಸಿ, ಮತ್ತೆ ಕದ ಮುಚ್ಚಿ ತಾಳ ಹಾಕಿಕೊಂಡರು. ಇದೆಲ್ಲ ಕ್ಷಣಾರ್ಧದಲ್ಲಿ ನಡೆದುಹೋಗಿತ್ತು. ಸ್ವಾಮಿಜಿಯವರು ಮರು ಮಾತಾಡದೆ, ಊಟ ಮುಗಿಸಿ, ತಮ್ಮ ಕೋಣೆಗೆ ಹೊರಟುಹೋದರು. ಸುಮಾರು ಸಂಜೆ ಐದುವರೆ ಗಂಟೆ ಸಮಯದಲ್ಲಿ ಕುವೆಂಪು ಅವರು ಹೊರಗೆ ಬಂದು, ನೇರವಾಗಿ ಸ್ವಾಮಿಜಿಯವರ ಕೋಣೆಗೆ ಹೋಗಿ, ಕಟುಟೀಕೆಯ ಅಪರಾಧಕ್ಕಾಗಿ ಕ್ಷಮೆ ಯಾಚಿಸಿದರು. ಪೂರ್ವೋತ್ತರಗಳನ್ನು ವಿಚಾರಿಸದೆ ಕಾವ್ಯತಪಸ್ಸಿಗೆ ಭಂಗವುಂಟುಮಾಡಿದ್ದಕ್ಕಾಗಿ ತಮ್ಮ ತಪ್ಪನ್ನು ಕ್ಷಮಿಸುವಂತೆ ಸ್ವಾಮೀಜಿ ಕುವೆಂಪು ಅವರನ್ನು ಕೇಳಿಕೊಂಡರು.

ಕುವೆಂಪು ಅವರು ಶ್ರೀರಾಮಕೃಷ್ಣಾಶ್ರಮ ಸೇರಿದ ಪ್ರಸಂಗವೂ ಸ್ವಾರಸ್ಯಕರವಾಗಿದೆ. ಅವರು ಶ್ರೀರಾಮಕೃಷ್ಣ­-ವಿವೇಕಾನಂದ ಸಾಹಿತ್ಯವನ್ನು ವ್ಯಾಸಂಗಮಾಡಿ ಜೀರ್ಣಿಸಿಕೊಂಡಿ ದ್ದರೂ, ಆಶ್ರಮಕ್ಕೆ ಹೋಗಿರಲಿಲ್ಲ. ಅವರು ಕಾರ್ಯದರ್ಶಿಯಾಗಿದ್ದ ‘ಪದ್ಮಪತ್ರ ಸಂಘ’ದ ಆಶ್ರಯದಲ್ಲಿ ಚರ್ಚಾಕೂಟವೊಂದನ್ನೊಮ್ಮೆ ಏರ್ಪಡಿಸಲಾಗಿತ್ತು. ‘Caste System is a menace to India’ ಎಂಬುದು  ಚರ್ಚಾ ವಿಷಯ. ಆ ದಿನ ಸ್ವಾಮಿ ಸಿದ್ಧೇಶ್ವರಾನಂದರು ಸಭಾಧ್ಯಕ್ಷತೆ ವಹಿಸಿದ್ದರು. ಆಗವರು ಕುವೆಂಪು ಅವರ ವಾದ ಸರಣಿಯನ್ನು ಪಾಂಡಿತ್ಯ ಪ್ರತಿಭೆಗಳನ್ನು ಮೆಚ್ಚಿ ಆಶ್ರಮಕ್ಕೆ ಬಂದು ಹೋಗುತ್ತಿರುವಂತೆ ಸೂಚಿಸಿದರು. ಆದರೂ ಅವರು ಆಗೊಮ್ಮೆ ಈಗೊಮ್ಮೆ ಹೋಗುತ್ತಿದ್ದರು. ಹೋದಾಗಲೆಲ್ಲ ಸ್ವಾಮೀಜಿಯವರ ಜೊತೆಯಲ್ಲಿ ವೇದಾಂತದ ಮೇಲೆ ಚರ್ಚೆ ನಡೆಸುತ್ತಿದ್ದರು. ಆಶ್ರಮದಲ್ಲಿಯೇ ಇದ್ದು ಬಿಡುವಂತೆ ಸ್ವಾಮೀಜಿ ಅವರನ್ನು ಕಾಡುತ್ತಿದ್ದರು. ಕುವೆಂಪು ಅವರು ಏಕೊ ಏನೋ ಸಮ್ಮ ತಿಸಲಿಲ್ಲ. ಆದರೆ ಅವರೆಷ್ಟು ದಿನ ತಾನೆ ದೈವೇಚ್ಛೆಯನ್ನೆದುರಿಸುವಂತಿದ್ದರು? ಅವರೊಮ್ಮೆ ಖಾಯಿಲೆಯಿಂದ ಕೃಷ್ಣರಾಜೇಂದ್ರ ಆಸ್ಪತ್ರೆಯಲ್ಲಿ ಮಲಗಿದರು. ಕೈಕಾಲು ಕಡ್ಡಿಯಾಗಿ, ಕಣ್ಣಿನ ಬಳೆ ಕಾಣಿಸಿಕೊಂಡು, ದೇಹ ದುರ್ಬಲವಾಯಿತು. ಜ್ವರ ಆರಿ, ತುಸು ಸುದರಾಯಿಸಿಕೊಂಡ ನಂತರ, ಸ್ವಾಮೀಜಿಯವರ ಬಲಾತ್ಕಾರಕ್ಕೆ ಮಣಿದು ಕುವೆಂಪು ಅವರು ಆಶ್ರಮ ಸೇರಿದರು. ಸ್ವಾಮೀಜಿ ತಾವೇ ಅವರ ಬಟ್ಟೆಯೊಗೆದು, ಹಾಸುಗೆ ಹಾಸಿ, ಅನುಪಾನ ಮಾಡಿ, ಔಷಧಿ ಕುಡಿಸಿ, ಪುಷ್ಟಿಕರವಾದ ಊಟ ತಿಂಡಿಗಳನ್ನೊದಗಿಸಿ, ಗತಜನ್ಮದ ಬಂಧುವೆಂಬಂತೆ ಅತ್ಯಾದರ ದಿಂದ ಉಪಚರಿಸಿ, ಅವರನ್ನು ಪುಟಗೊಳಿಸಿದರು. ಅಂದಿನಿಂದ ಸ್ವಾಮೀಜಿ ಧನ್ವಂತರಿಯಾಗಿ, ದೀಪಧಾರಿಯಾಗಿ, ಅಧ್ಯಾತ್ಮಸಾಧನೆಯ ಕರ್ಣಧಾರರಾಗಿ ಕುವೆಂಪು ಅವರನ್ನು ನಡೆಸಿದರು. ಅಷ್ಟೇ ಅಲ್ಲ, ಅವರನ್ನು ದಕ್ಷಿಣೇಶ್ವರಕ್ಕೆ ಕರೆದೊಯ್ದು, ಶ್ರೀರಾಮಕೃಷ್ಣರ ಜನ್ಮ ಭೂಮಿ ತಪೋಭೂಮಿಗಳನ್ನು ತೋರಿಸಿಕೊಟ್ಚು, ಪರಮಹಂಸರ ಅಂತರಂಗ ಶಿಷ್ಯರಲ್ಲೊಬ್ಬರಾದ ಸ್ವಾಮಿ ಶಿವಾನಂದರಿಂದ ದೀಕ್ಷೆ ಕೊಡಿಸಿದರು. ಅಲ್ಲಿಂದೀಚೆಗೆ ಅವರ ಆಧ್ಯಾತ್ಮಸಾಧನೆ ಮತ್ತು ಕಾವ್ಯಸಾಧನೆಗಳೆರಡೂ ಪರಸ್ಪರ ಪೋಷಕವಾಗಿ ಪೂರಕವಾಗಿ ಸ್ಫೂರ್ತಿ ದಾಯಿಯಾಗಿ ಅವಿಚ್ಛಿನ್ನವಾಗಿ ಸಾಗಿವೆ. ಅವರ ಆಧ್ಯಾತ್ಮಿಕ ಸಾಧನೆ ಬೆಳೆದಂತೆಲ್ಲ ಪಕ್ವವಾದಂತೆಲ್ಲ, ಅವರ ಕಾವ್ಯರಾಶಿಯೂ ಬೃಹತ್ತಾಗಿ ಉನ್ನತವಾಗಿ ವೈವಿಧ್ಯಪೂರ್ಣವಾಗಿ ಸಂಪದ್ಭರಿತವಾಗಿ ಸರ್ವಂಕಷವಾಗಿ ಭೂಮವಾಗಿ ಬೆಳೆದಿದೆ.

ವಿಜ್ಞಾನವನ್ನು ಐಚ್ಛಿಕ ವಿಷಯವನ್ನಾಗಿ ಆರಿಸಿಕೊಂಡು ಕುವೆಂಪು ಅವರು ೧೯೨೪ರಲ್ಲಿ ಎಂಟ್ರೆನ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಬಿ.ಎ. ಪರೀಕ್ಷೆಗೆ ತತ್ವಶಾಸ್ತ್ರ ಪ್ರಧಾನ ಐಚ್ಛಿಕ ವಿಷಯವಾಗಿತ್ತು. ಬಿ.ಎ. ಮುಗಿದ ನಂತರ ವ್ಯಾಸಂಗ ಮುಂದುವರಿಸಬೇಕೆಂಬ ಆಲೋಚನೆ ಅವರಿಗಿರಲಿಲ್ಲ. ಅವರ ತತ್ವಶಾಸ್ತ್ರ ಪರಿಣತಿ ಮತ್ತು ಪ್ರಿಯತೆಗಳನ್ನರಿತಿದ್ದ ತತ್ವಶಾಸ್ತ್ರ ಪ್ರಾಧ್ಯಾಪಕರು ಆ ವಿಷಯವನ್ನಾರಿಸಿಕೊಂಡು ಎಂ.ಎ. ಓದುವಂತೆ ಹೇಳಿ ಕಳುಹಿಸಿದರು. ಆದರೆ ಅವರ ಕಾವ್ಯಪ್ರತಿಭೆಯನ್ನು ಮನಸಾರೆ ಮೆಚ್ಚಿಕೊಂಡು, ಅವರ ಭವ್ಯ ಭವಿಷ್ಯವನ್ನು ಮೊದಲೇ ಕಂಡುಕೊಂಡಿದ್ದ ಶ್ರೀಮಾನ್ ತಳುಕಿನ ವೆಂಕಣ್ಣಯ್ಯನವರ ಕಟ್ಟೊಲ್ಮೆಯ ಬಲಾತ್ಕಾರಕ್ಕೆ ಬಾಗಿ, ಕುವೆಂಪು ಅವರು ಕನ್ನಡ ಎಂ.ಎ. ತರಗತಿಯನ್ನು ಸೇರಿದರು. ವೆಂಕಣ್ಮಯ್ಯನವರ ನಿಷ್ಕಪಟ ವರ್ತನೆ, ನಿರ್ಮಲ ಹೃದಯ, ನಿರಾಡಂಬರ ನಿಷ್ಕಳಂಕ ಜೀವನ, ನಿರ್ಮಾತ್ಸರ್ಯ, ಉದಾತ್ತ ವ್ಯಕ್ತಿತ್ವ ಕುವೆಂಪು ಅವರ ಆಕರ್ಷಣೆಗೆ ಇವು ಕಾರಣವಾಗಿದ್ದುವು. ವೆಂಕಣ್ಣಯ್ಯನವರಿಗೆ ಕುವೆಂಪು ಅವರೆಂದರೆ ಎಲ್ಲಿಲ್ಲದ ಅಭಿಮಾನ. ಪ್ರಾಯಶಃ ಕುವೆಂಪು ಅವರ ಅಗ್ರಪೂಜೆಗೆ ಪಾತ್ರರಾದ ಇಬ್ಬರು ಹಿರಿಯರಲ್ಲಿ ಇವರೊಬ್ಬರೆಂದು ತೋರುತ್ತದೆ. ವೆಂಕಟಣ್ಣಯ್ಯನವರು ಕುವೆಂಪು ಅವರಲ್ಲಿ ಹೊಸಗನ್ನಡ ಸಾಹಿತ್ಯದ ಅಧ್ವರ್ಯುವನ್ನು, ಕನ್ನಡ ಭಾಷೆಯ ರಕ್ಷಾಮಣಿಯನ್ನು ಗುರುತಿಸಿ, ವಾತ್ಸಲ್ಯದಿಂದ ಕೈಹಿಡಿದು ಮುನ್ನಡೆಸಿದರು, ಪ್ರೋಹುರುಪು ತುಂಬಿದರು, ನಿರಸೂಯೆಯಿಂದ ಮೆಚ್ಚಿದರು.

ಆಡುಮುಟ್ಟದ ಸೊಪ್ಪಿಲ್ಲವೆಂಬಂತೆ ಕುವೆಂಪು ಅವರ ಪ್ರತಿಭಾಜ್ಯೋತಿ ಸ್ಪರ್ಶಿಸದ ಕಾವ್ಯ ಪ್ರಕಾರವಿಲ್ಲ. ಕಥೆ, ಚಿತ್ರ, ಕವನ, ಕಾವ್ಯ, ಮಹಾಕಾವ್ಯ, ಮಹಾಕಾದಂಬರಿ, ವಿಮರ್ಶೆ, ಪ್ರಬಂಧ, ಕಾವ್ಯಮೀಮಾಂಸೆ, ನಾಟಕ, ಜೀವನಚರಿತ್ರೆ, ಉಪನ್ಯಾಸ, ಸಾನೆಟ್, ಮಹಾಪ್ರಗಾಥ, ಕಥನಕವನ, ಶಿಶುಸಾಹಿತ್ಯ – ಮೊದಲಾದ ಸಾಹಿತ್ಯದ ಸರ್ವಪ್ರಕಾರಗಳಲ್ಲಿಯೂ ಯಶಸ್ವಿಯಾಗಿ ಕೈಯಾಡಿಸಿ, ಕನ್ನಡ ಸಾರಸ್ವತ ಪ್ರಪಂಚದಲ್ಲಿ ಅಮರವಾದ ಸ್ಥಾನ ಸಂಪಾದಿಸಿದ್ದಾರೆ. ಶ್ರೀ ಶ್ರೀನಿವಾಸರು ಹೇಳುವಂತೆ “ಪುಟ್ಟಪ್ಪನವರು ಪುಣ್ಯವಂತರು. ಚಿಕ್ಕಂದಿನಲ್ಲಿಯೇ ಇವರಿಗೆ ಸಿದ್ದಿಯ ದಾರಿ ಸಿಕ್ಕಿದೆ. ನಮ್ಮ ಪುಣ್ಯವಾಗಿ ಇವರು ಮಾಡುವ ಉಪಾಸನೆಯೆಲ್ಲ ಫಲಿಸುತ್ತದೆ”; ಇವರು ಮುಟ್ಟಿದ್ದೆಲ್ಲ ಹೊನ್ನಾಗಿದೆ, ನಡೆದದ್ದೆಲ್ಲಾ ಯಾತ್ರೆಯಾಗಿದೆ, ನುಡಿದದ್ದೆಲ್ಲ ಕಾವ್ಯವಾಗಿದೆ. ಮಾಡಿದ್ದೆಲ್ಲ ಮಡಿಯಾಗಿದೆ.

ಕುವೆಂಪು ಅವರ ‘ಬೊಮ್ಮನ ಹಳ್ಳಿಯ ಕಿಂದರಿಜೋಗಿ’ ಕನ್ನಡನಾಡಿನ ಮನೆ ಮನೆಯ ಮಕ್ಕಳನ್ನು ನಗಿಸಿ ಕುಣಿಸಿ ತೃಪ್ತಿಪಡಿಸಿದೆ : ಆ ಕಿಂದರಿಜೋಗಿಯ ನಾದ ಮಾಧುರ್ಯಕ್ಕೆ ಮರುಳಾಗಿ ಅವನ ಹಿಂದೆ ಹೋದ ಮಕ್ಕಳು ಎಂಥ ಆಕರ್ಷಣೆಯನ್ನೊಡ್ಡಿದರೂ ಮತ್ತೆ ಹಿಂದಕ್ಕೆ ಬರಲಾರರು. ಅವರ ‘ಮರಿ ವಿಜ್ಞಾನಿ’ ಮತ್ತು ‘ಮೇಘಪುರ’ಗಳು ಮಕ್ಕಳ ಕುತೂಹಲಾಸಕ್ತಿಗಳನ್ನು ಕೆರಳಿಸಿ, ಆಶ್ಚರ್ಯವನ್ನು ಕೆಣಕಿ, ಸೃಷ್ಟಿಯ ರಹಸ್ಯದತ್ತ ಅವರ ಮನಶ್ಯಕ್ತಿಯನ್ನು ತಿರುಗಿಸಿವೆ. ‘ನನ್ನ ಗೋಪಾಲ’ವಂತು ಸರಳವಾದ ಮುದ್ದಾದ ಚೊಕ್ಕವಾದ ಚಿತ್ತಾಕರ್ಷಕವಾದ ನಾಟಕ : ಮಕ್ಕಳ ಕಲ್ಪನಾ ಸಾಮರ್ಥ್ಯವನ್ನು ಕೆರಳಿಸಿ, ಅವರ ಹೃದಯವನ್ನು ಸಾತ್ವಿಕಪ್ರೇಮದಿಂದ ತುಂಬಿ, ಕೃಷ್ಣಭಕ್ತಿಯಲ್ಲದ್ದಿ ತೇಲಿಸುವ ಮಧುರ ಮಧುರಕೃತಿ. ನವಿಲು, ಕಲಾಸುಂದರಿ ಮೊದಲಾದ ಕವನ ಸಂಗ್ರಹಗಳಲ್ಲಿ ಚಿಲುಮಿಸುತ್ತಿರುವ ಮಲೆನಾಡಿನ ದಿವ್ಯಭವ್ಯ ಸೌಂದರ್ಯಕ್ಕೂ ರುದ್ರರಮಣೀಯತೆಗೂ ರಸಸ್ಯಂದಿಯಾಗಿ ಮಿಡಿಯುತ್ತಿರುವ ಆತ್ಮಸೌಂದರ್ಯಾವಿಷ್ಕಾರಕ್ಕೂ ಮಾರುಹೋಗದ ಸಹೃದಯರಿಲ್ಲ. ‘ತಾನಾಜಿ’ ಮೊದಲಾದ ಕಥನ ಕವನಗಳಲ್ಲಿ ಹೊರಹೊಮ್ಮುವ ವೀರರಸಕ್ಕೆ ಹುರುಪೇರದ ಎಳೆಯರಿಲ್ಲ; ‘ಕರಿಸಿದ್ದ’ ಮೊದಲಾದ ಕವನಗಳಲ್ಲಿ ಒಸರುವ ಕರುಣರಸಕ್ಕೆ ಕರಗದ ಹಿರಿಯರಿಲ್ಲ. ಲಾಲಿತ್ಯಕ್ಕಿಂತಲೂ ರೌದ್ರ ಪ್ರಧಾನವಾದ ಮತ್ತು ರಾಷ್ಟ್ರಪ್ರೇಮ ಸಂಬಂಧವಾದ ಕವನಗಳು ‘ಪಾಂಚಜನ್ಯ’ ದಲ್ಲಿಯೂ ಆಧುನಿಕಯುಗದ ಸಾಮಾಜಿಕ ಸ್ವರೂಪವನ್ನು ಯಥಾವತ್ತಾಗಿ ಪ್ರತಿಬಿಂಬಿಸುವ ಕವನಗಳು ‘ಕೋಗಿಲೆ ಮತ್ತು ಸೋವಿಯೆಟ್ ರಷ್ಯಾ’ದಲ್ಲಿಯೂ ‘ಚಂದ್ರಮಂಚಕೆ ಬಾ, ಚಕೋರಿ’ ಮತ್ತು ‘ಜೇನಾಗುವಾ’ ಕವನ ಸಂಗ್ರಹಗಳಲ್ಲಿ ಆತ್ಮ ಸಾಕ್ಷಾತ್ಕಾರ ನಿಷ್ಠೆಯ ಹಿನ್ನೆಲೆಯಲ್ಲಿ ವಿಕಾಸಗೊಂಡ ಪ್ರೇಮಗೀತೆಗಳಿವೆ. ಮಲೆನಾಡಿನ ಸೌಂದರ್ಯ ಸ್ಥಾನಗಳಾದ ಗಿರಿಪಂಕ್ತಿ ವನರಾಜಿಗಳು, ನದಿ ನಿರ್ಝರಿಣಿಗಳು, ಸಂಜೆ ಗಿರಿ ಕವಿಶೈಲ ನವಿಲು ಕಲ್ಲು ಏಳು ಸೀಳು ಸಿಬ್ಬಲುಗಡ್ಡೆಗಳು, ಶೃಂಗಾರ ಭಕ್ತಿ ವೈರಾಗ್ಯಗಳು, ಜನಜೀವನ ವಿಮರ್ಶೆ ಮತ್ತು ಮೌಢ್ಯ ಸಂಪ್ರದಾಯಗಳನ್ನು ಕುರಿತ ಸಾನೆಟ್ಟುಗಳ ಸಂಗ್ರಹ ‘ಕೃತ್ತಿಕೆ’. ‘ನಿರಂಕುಶಮತಿ ಗಳಾಗಿರಿ’ ಮೊದಲಾದ ಉಪನ್ಯಾಸಗಳಲ್ಲಿ ಸಾಮಾಜಿಕ ಮೌಢ್ಯ ಸಂಪ್ರದಾಯಗಳನ್ನೂ ಜನರ ಅಜ್ಞಾನವನ್ನೂ ಕುರಿತ ಖಂಡನೆಯಿದೆ. ಕನ್ನಡನಾಡು, ಕನ್ನಡ ಭಾಷೆ ಮತ್ತು ಕನ್ನಡ ಸಾಹಿತಿಗಳ ಪುರೋಭಿವೃದ್ದಿಯನ್ನೂ ಕುರಿತ ಕಟ್ಟೆರಕದ ನಿರೂಪಣೆಯಿದೆ. ವಸ್ತು ರೀತಿ ದರ್ಶನ ಛಂದೋಲಂಕಾರಗಳಲ್ಲಿ ನೂತನ ದೃಷ್ಟಿ ಸಮಾವೇಶಗೊಂಡು ಮೂಡಿದ ‘ಚಿತ್ರಾಂಗದಾ’ ಮುಂದಿನ ಮಹಾಕಾವ್ಯಕ್ಕೆ ಮುನ್ನುಡಿಯಂತಿದೆ.

ಮೃತ್ಯುವನ್ನು ಜಯಿಸಿದ ಪ್ರೇಮದ ಕತೆ ‘ಯಮನಸೋಲು’ ನಾಟಕ. ಕನ್ನಡ ನಾಡಿನ ಖ್ಯಾತಿವೆತ್ತ ಅರಸುಮನೆತನವೊಂದರ ಇತಿಹಾಸವನ್ನು ಆಧಾರವಾಗಿಟ್ಟುಕೊಂಡು ರಚಿಸಿದ ರುದ್ರನಾಟಕ ‘ರಕ್ತಾಕ್ಷಿ’. ‘ಇದು ಕನ್ನಡಕ್ಕೆ ‘ಹ್ಯಾಂಲೆಟ್’ ಕಾವ್ಯ. ಇಂಗ್ಲೀಷಿನಲ್ಲಿ ‘ಹ್ಯಾಂಲೆಟ್’ ಹುಟ್ಟಿದಾಗ ಅದರ ಸಾಹಿತ್ಯವು ಅತ್ಯುನ್ನತ ಶಿಖರವನ್ನೇರಿತು. ‘ರಕ್ಷಾಕ್ಷಿ’ಯಂಥ ಶ್ಲಾಘ್ಯ ಸ್ವತಂತ್ರ ಐತಿಹಾಸಿಕ ನಾಟಕವು ಆಧುನಿಕ ಕನ್ನಡ ಸಾಹಿತ್ಯದಲ್ಲಿ ಹುಟ್ಟಿದಾಗ ಅದರ ಮಟ್ಟವು ಬಹು ಎತ್ತರಕ್ಕೆ ಏರಿರುವುದೆನ್ನುವುದರಲ್ಲಿ ಸಂದೇಹವಿಲ್ಲ’ ಎಂದು ಡಾ. ಕೃಷ್ಣಶಾಸ್ತ್ರಿಗಳು ಆ ಕೃತಿ ಪ್ರಕಟಗೊಂಡಾಗ ಘೋಷಿಸಿದರು. ಮೌಢ್ಯ ಪ್ರಚೋದಿಯೂ ವಿವೇಕಶೂನ್ಯವೂ ವೈಜ್ಞಾನಿಕ ಮನೋಧರ್ಮ ವಿರೋಧಿಯೂ ಆದ ಉತ್ತರ ರಾಮಾಯಣದ ಶಂಬೂಕ ಪ್ರಸಂಗವನ್ನು ಧರ್ಮಸಮ್ಮತವಾಗುವಂತೆ ಬುದ್ದಿ ಗಮ್ಯವಾಗುವಂತೆ ಆಧುನಿಕ ದೃಷ್ಟಿಗನುಗುಣ ವಾಗಿ ರಚಿಸಿದ ಕಲಾ ಕೃತಿ ‘ಶೂದ್ರ ತಪಸ್ವಿ’. ಮಲ್ಲಿಗೆಯ ಪರಿಮಳದಂತೆ ದರ್ಶನ ಕಲೆಗಳೆರಡೂ ಸಮರಸವಾಗಿ ಸಮಾವೇಶಗೊಂಡು, ತದನುಗುಣವಾದ ಧೀರಶೈಲಿಯ ಸಹಜ ಕವಚನವನ್ನು ಧರಿಸಿ ಅವೆಲ್ಲದರ ಪರಿಪಾಕವೆಂಬಂತೆ ಕುವೆಂಪು ನಾಟಕ ಶ್ರೇಣಿಯ ಧವಳ ಗೌರೀಶಂಕರ ವೆಂಬಂತೆ ಮೂಡಿದ ಭವ್ರೋ‘ಬೆರಳ್‌ಗೆ ಕೊರಳ್’ ನಾಟಕ.

ಗಹನವಾದ ವಿಷಯ, ಲಲಿತವಾದ ಶೈಲಿ, ಕವಿ ಸಹಜವಾದ ಭಾವಗೀತಾತ್ಮಕವಾದ ರಸನಿರೂಪಣೆ, ಜನಜೀವನದ ವಾಸ್ತವಿಕ ಚಿತ್ರಣ, ಇವುಗಳಿಗಿಂತ ಮಿಗಿಲಾಗಿ ಕವಿಯ ವಿಶಿಷ್ಟ ವ್ಯಕ್ತಿತ್ವವನ್ನೆತ್ತಿ ತೋರಿಸುವ ಗುಣ-ಇವು ಕುವೆಂಪು ಅವರ ಕೃತಿಗಳಲ್ಲಿ ಕಾಣಬರುವ ಸಾಮಾನ್ಯ ಲಕ್ಷಣಗಳು. ಕುವೆಂಪು ಅವರ ಲೋಕಾನುಭವಕ್ಕೆ ಸಾಕ್ಷಿಯಾಗಿ ಅವರ ಪರಕಾಯ ಪ್ರವೇಶ ಸಾಮರ್ಥ್ಯಕ್ಕೆ ನಿದರ್ಶನವಾಗಿ ಮಲೆನಾಡಿನ ಬೃಹಜ್ಜನಜೀವನದ ಯಥಾವತ್ ಪ್ರತಿಬಿಂಬವಾಗಿ ಆವಿರ್ಭವಿಸಿದ ‘ಕಾನೂರು ಹೆಗ್ಗಡಿತಿ’ ಸರ್ವಜನಾದರಣೀಯವಾದ ಮಹಾಕಾದಂಬರಿ ಯಾಗಿದೆ. ‘ಶ್ರೀರಾಮಕೃಷ್ಣ ಪರಮಹಂಸ’ ಮತ್ತು ‘ಶ್ರೀ ಸ್ವಾಮಿ ವಿವೇಕಾನಂದ’ ಜೀವನ ಚರಿತ್ರೆಗಳು ಶ್ರೀಮಂತ ಕಾವ್ಯಶೈಲಿಯ ಆದರ್ಶ ಕೃತಿಗಳಾಗಿವೆ. ‘ಅವರ ಭಾವಪ್ರಪಂಚದಲ್ಲಿಯ ಭಕ್ತಿ ಗೋಪುರಗಳೂ, ಅಲ್ಲಿಯ ಉತ್ಸಾಹ ಪ್ರವಾಹದ ತರಂಗಮಾಲೆಗಳೂ ಅಲ್ಲಿಯ ಸೂರ್ಯೋದಯದ ಸ್ವರ್ಣಾರುಣರಾಗಚ್ಛಾಯೆಗಳೂ ಈ ವಾಣಿಯಲ್ಲಿ ಮೂರ್ತೀಭವಿಸಿವೆ’ ಎಂಬ ಡಿ.ವಿ.ಜಿ.ಯವರ ಅಭಿಪ್ರಾಯ ಆ ಎರಡು ಉದ್ಗ್ರಂಥಗಳಿಗೂ ಏಕಪ್ರಕಾರವಾಗಿ ಅನ್ವಯಿಸುತ್ತದೆ. ಅವರ ‘ಕಾವ್ಯವಿಹಾರ’ದಲ್ಲಿ ಆಧುನಿಕ ದೃಷ್ಟಿಯ ಕ್ರಾಂತಿಕಾರಕವಾದ ವಿಮರ್ಶಾತ್ಮಕ ಪ್ರಬಂಧಗಳಿವೆ. ‘ತಪೋನಂದನ’ ಮತ್ತು ‘ರಸೋವೈಸಃ’ಗಳಲ್ಲಿರುವ ಪ್ರಬಂಧಗಳು ಕಾವ್ಯಮೀಮಾಂಸೆಯ ಮೇಲೆ ಹೊಸಬೆಳಕು ಚೆಲ್ಲಿ ನೂತನ ಮಾರ್ಗವನ್ನು ಪ್ರತಿಪಾದಿಸುತ್ತವೆ.

ಕುವೆಂಪು ಅವರ ಪರಿಣತ ತಪಶ್ಯಕ್ತಿಗೆ, ಆಧ್ಯಾತ್ಮ ಸಾಧನೆಗೆ, ಪಾರದರ್ಶಿತ್ವಕ್ಕೆ, ನವನವೋನ್ಮೇಷಶಾಲಿನಿಯಾದ ಪ್ರತಿಭಾಶಕ್ತಿಗೆ, ಸರ್ವಂಕಷವಾದ ಬಹುಶ್ರುತತ್ವಕ್ಕೆ ಶಾಶ್ವತ ಸಾಕ್ಷಿಯೆಂಬಂತೆ ತ್ರೇತಾಯುಗ ಮರಹುಟ್ಟು ಪಡೆದಂತೆ, ಸಾಂಪ್ರತ ಯುಗದ ಪ್ರತಿಬಿಂಬಿ ವೆಂಬಂತೆ ಮನುಕುಲದ ಅಭೀಪ್ಸೆ ಮೆಯ್ ಪಡೆದಂತೆ ‘ಶ್ರೀರಾಮಾಯಣದರ್ಶನಂ’ ಮಹಾಕಾವ್ಯದ ಅವತಾರವಾಗಿದೆ; ಈಗಾಗಲೇ ಆ ಮೇರುಕೃತಿ ಜನಮನದಲ್ಲಿ ಭದ್ರವಾಗಿ ಬೇರೂರಿದೆ.

ಕುವೆಂಪು ಅವರ ಕೃತಿಗಳನ್ನು ಓದಿದ ಮೇಲೆ ಸಹೃದಯರ ಹೃದಯದಲ್ಲಿ ಅಚ್ಚಳಿಯದೆ ಅಚ್ಚುಗೊಳ್ಳುವ, ಕುವೆಂಪು ಕಾವ್ಯಶ್ರೇಣಿಯ ಜೀವಾಳವೆಂಬಂತೆ ತೋರುವ ವಿಷಯಗಳಲ್ಲಿ ಎರಡಂತು ಪ್ರಧಾನವಾಗಿ ಕಾಣುತ್ತವೆ. ಅವುಗಳಲ್ಲೊಂದು ಪ್ರಕೃತಿ ಸೌಂದರ್ಯೋಪಾಸನೆ, ಮತ್ತೊಂದು ಅಧ್ಯಾತ್ಮದೃಷ್ಟಿ. ಅವರು ನಿಸರ್ಗದ ಅಭಿಜಾತ ಶಿಶು; ನಿಸರ್ಗವೇ ಅವರ ತಾಯ್ನೆಲೆ, ಕಣ್ನೆಲೆ, ಮುನ್ನೆಲೆ. ನಿಸರ್ಗಕ್ಕೂ ಅವರಿಗೂ ನೀರು ಮೀನಿನ ನಂಟು. ಅವರು ದೈಹಿಕವಾಗಿ ಮಲೆನಾಡಿನಿಂದ ದೂರ ಇದ್ದರೂ ನೆನಹಿನ ಬುತ್ತಿ ಸಂಪರ್ಕ ಸೇತುವೆಯಾಗುತ್ತದೆ. ವಯಸ್ಸು ವರ್ಧಿಸಿದಂತೆಲ್ಲ, ಮನಸ್ಸು ಮಾಗಿ ಮಾರ್ದವಗೊಂಡಂತೆಲ್ಲ, ಬುದ್ದಿ ಬಲಿತಂತೆಲ್ಲ ಕವಿಯ ಪ್ರಕೃತಿ ಪ್ರೇಮ ಹೇಗೆ ಕ್ರಮ ಕ್ರಮೇಣ ವಿಕಾಸವಾಯಿತೆಂಬುದನ್ನು ಅವರ ಕಾವ್ಯಗಳಿಂದ ಸುಲಭವಾಗಿ ಗುರುತಿಸಬಹುದು. ಬಾಲ್ಯದಲ್ಲಿ ಶಿಶು ಸಹಜವಾದ ನಿರ್ಮಲ ಪ್ರೇಮದಿಂದ ಮುಗ್ಧ ಮನಸ್ಸಿನ ಕುತೂಹಲದಿಂದ ಮತ್ತು ಮೈತ್ರಿಯಿಂದ ಅವರು ಪ್ರಕೃತಿಯನ್ನು ದರ್ಶಿಸುತ್ತಾರೆ, ಅದರೊಡನೆ ಆಟವಾಡುತ್ತಾರೆ. ಹೂ ಕೊಯ್ಯುವಲ್ಲಿ, ಹಣ್ಣು ತಿನ್ನುವಲ್ಲಿ, ಬಣ್ಣದ ಚಿಟ್ಟೆ ಹಿಡಿಯುವಲ್ಲಿ, ಕೋಗಿಲೆಯನ್ನಣಕಿಸುವಲ್ಲಿ, ಕಡಿದಾದರೆಗಳನ್ನೇರುವಲ್ಲಿ, ಹುತ್ತದ ಜೇನನ್ನು ಕೀಳುವಲ್ಲಿ, ಬಿರುಸಿನ ಬೇಟೆಯನ್ನಾಡುವಲ್ಲಿ ಅವರ ಕ್ರೀಡಾಸಕ್ತಿ ವ್ಯಕ್ತವಾಗುತ್ತದೆ.

ಹಕ್ಕಿ ಹಕ್ಕಿ ಹಾರುವ ಹಕ್ಕಿ
ಬಾರೆಲೆ ಹಕ್ಕಿ ಬಣ್ಣದ ಚುಕ್ಕಿ
ಗೆಳೆಯರು ಆಡುವರಾರೂ ಇಲ್ಲ
ಕಳೆಯುವುದೆಂತೀ ಕಾಲವನೆಲ್ಲ
ಬಾ ಬಾ ನನಗೂ ಹಾಡಲು ಕಲಿಸು
ಬಾ ಬಾ ನನಗೂ ಹಾರಲು ಕಲಿಸು
ಹೂವಿನ ರಸವನು ಕೊಡುವೆನು ನಿನಗೆ
ಸುಗ್ಗಿಯಕಾಳನು ಸುರಿವೆನು ನಿನಗೆ
ಬಾ ಬಾ ಆಡುವ ಹಗಲೆಲ್ಲ
ಬಾ ಬಾ ಆಡುವ ದಿನವೆಲ್ಲ

ಶಿಶು ಸಹಜವಾದ ಕುತೂಹಲ ಮನೋಭಾವ ಮತ್ತು ಕಲ್ಪನಾ ಸಾಮರ್ಥ್ಯ ‘ಮರಿ ವಿಜ್ಞಾನಿ’ ಮತ್ತು ‘ಮೇಘಪುರ’ಗಳಲ್ಲಿ ಹೃದಯಾನಂದಕರವಾಗಿ ಮೈದೋರುತ್ತವೆ. ನಿದರ್ಶ ನಾರ್ಥವಾಗಿ ಕೆಳಗಣ ಕವನವನ್ನು ನೋಡಬಹುದು.

ದೇವರ ಪೆಪ್ಪರಮೆಂಟೇನಮ್ಮಾ
ಗಗನದೊಳಲೆಯುವ ಚಂದಿರನು?
ಎಷ್ಟೇ ತಿಂದರು ಖರ್ಚೇ ಆಗದ
ಬೆಳೆಯುವ ಪೆಪ್ಪರಮೆಂಟೇನಮ್ಮಾ?

ಕವಿಯೊಡನೆ ನಾವೂ ಈ ಪೆಪ್ಪರಮೆಂಟನ್ನು ನಿಧಾನವಾಗಿ ಸವಿಯಬಹುದು.

 

ಈ ಶಿಶು ಪ್ರೇಮವೇ ಬರಬರುತ್ತಾ ಆತ್ಮಸಾಕ್ಷಾತ್ಕಾರವಾಗಿ ಮತ್ತು ಸೌಂದರ್ಯಾನು ಭೂತಿಯಾಗಿ ಪರಿಣಮಿಸುತ್ತದೆ; ಕವಿಯ ಸಮಸ್ತಭಾವಾಲೋಚನೆಗಳಿಗೆ ಅನುಭವ ಆವೇಶಗಳಿಗೆ ಸಾಧನೆ ಸಿದ್ದಿಗಳಿಗೆ ಪ್ರಕೃತಿ ಸೌಂದರ್ಯವೇ ಉಗಮಸ್ಥಾನವಾಗಿ, ಕೊನೆಗೆ ಅದೇ ನಿಲುಗಡೆಯ ಸ್ಥಾನವಾಗುತ್ತದೆ; ಕವನಗಳಿಗಾದರೂ ಅದೇ ಪ್ರೇರಕ ಶಕ್ತಿಯಾಗುತ್ತದೆ.

ಸಿರಿಬನದೇವಿಯ ಬೊಕ್ಕಸದಿಂದ
ಕದ್ದವು ಕೆಲವಿವು ಹಾಡುಗಳು;
ಸುಂದರ ಋತುಗಳ ಸಿರಿಗೈಯಿಂದ
ಸುಲಿದವು ಕೆಲವಿವು ಹಾಡುಗಳು
ನೇಸರು ಚಂದಿರ ತಾರೆಗಳಿಂದ
ಕೆಲವನು ಭಿಕ್ಷೆಯ ಬೇಡಿದೆನು;
ಬೈಗಿನ ಹೆಣ್ಣನು, ಬೆಳಗಿನ ಹೆಣ್ಣನು,
ಕಾಡಿಸಿ ಕೆಲವನು ಕೂಡಿದೆನು.

ಕೊನೆಗೆ ಚರಾಚರಾತ್ಮಕವಾದ ಈ ಪ್ರಕೃತಿ ಪರಮಾತ್ಮನ ಲೀಲಾರೂಪಿಯಾಗಿ, ಪರಾಶಕ್ತಿಯ ಶರೀರವಾಗಿ, ಋತಚಿನ್ಮಯಿ ಭಗವತಿಯ ಮಹತ್ವ ಪ್ರಕಾಶನದ ಪ್ರಣಾಳಿಕೆಯಾಗಿ ಅಭಿವ್ಯಕ್ತವಾಗುತ್ತದೆ. ಈ ದೃಷ್ಟಿಯಿಂದ ಪ್ರಕೃತಿಯನ್ನು ದರ್ಶಿಸಿದ ಕವಿ

ಆನಂದಮಯ ಈ ಜಗಹೃದಯ
ಏತಕೆ ಭಯ? ಮಾಣೊ!
ಸೂರ್ಯೋದಯ ಚಂದ್ರೋದಯ
ದೇವರ ದಯೆ ಕಾಣೊ!

ಎಂದು ಹಾಡುತ್ತಾನೆ. ಅವನ ದೃಷ್ಟಿಯಲ್ಲಿ ರಮಣೀಯತೆಯಂತೆಯೆ ರೌದ್ರವೂ ಸೌಂದರ್ಯದ ಬೀಡಾಗುತ್ತದೆ; ಕಲ್ಲು ಚೇತನಮೂರ್ತಿಯಾಗಿ ಜಡವೆಂಬುದೆ ಸುಳ್ಳಾಗುತ್ತದೆ; ಪ್ರಾತಃಕಾಲದಲ್ಲಿ ದಿನಮಣಿ ಮೂಡುವಾಗ ಹಿಮಮಣಿ ಮಿರುಗುವಾಗ ಸ್ವರ್ಗವೆ ನೆಲಕ್ಕೆ ಬಿದ್ದಂತೆ ಆನಂದ ವಾಗುತ್ತದೆ; ಫಾಲ್ಗುಣರವಿದರ್ಶನವೆ ಸರ್ವೇಂದ್ರಿಯದ ಸುಖನಿಧಿಯಾಗಿ ಸರ್ವಾತ್ಮನ ಸನ್ನಿಧಿಯಾಗಿ, ಕಲಾರಾಧನ ಸಾಧನ ಬೋಧನದ ಅನುಭವ ರಸವಾಗಿ ತೋರುತ್ತದೆ; ನವರಾತ್ರಿಯ ನವಧಾತ್ರಿಯನ್ನು ಕಂಡ ಕವಿಯ ಆತ್ಮ ಹಸುರುಗಟ್ಟುತ್ತದೆ, ಅವನ ಒಡಲಿನಲ್ಲಿ ಹಸುರು ನೆತ್ತರು ಚಿಮ್ಮುತ್ತದೆ.

ಕವಿಯ ಈ ಪ್ರಕೃತಿ ಸೌಂದರ್ಯೋಪಾಸನೆ ಕಾಲಕ್ರಮೇಣ ಅಧ್ಯಾತ್ಮ ಸಾಧನೆಯಾಗಿ ಪರಿಣಾಮ ಹೊಂದುತ್ತದೆ; ಸೌಂದರ್ಯಾರಾಧನೆ ಶಿವಾರಾಧನೆಯಾಗುತ್ತದೆ. ಕವಿತನ್ನ ಕಾವ್ಯ ಸಾಮರ್ಥ್ಯವನ್ನೆಲ್ಲ ಶಿವಾರಾಧನೆಗಾಗಿ ಸಮರ್ಪಿಸುತ್ತಾನೆ. ಕಾವ್ರೋಸೌಂದರ್ಯೋ ಪಾಸನೆ ಪ್ರೇರಕವಾದಂತೆ ಶಿವಸಾಕ್ಷಾತ್ಕಾರ ಅದರ ಸರ್ವೋದ್ದೇಶವಾಗುತ್ತದೆ. ಮನರಂಜನೆ ಕಲೆಯ ಏಕೈಕ ಗುರಿಯಾಗಿರದೆ, ಆತ್ಮಾನಂದವೇ ಅದರ ಪ್ರಧಾನೋದ್ದೇಶವಾಗುತ್ತದೆ. ರಸಯೋಗಿ ಕವಿಋಷಿಗೆ ಕವನಗಳೆ ಮಂತ್ರಗಳಾಗುತ್ತವೆ; ಕವನಗಳೆ ದೇವಾಲಯವಾಗುತ್ತವೆ. ಕುವೆಂಪು ಕೃತಿಗಳಲ್ಲಿ ಬೆರಳಿಟ್ಟ ಕಡೆ ರಸಧ್ವನಿ ದರ್ಶನ ಧ್ವನಿಗಳ ಸಮಾವೇಶ ಎದ್ದು ಕಾಣುತ್ತದೆ. ‘ಶ್ರೀರಾಮಾಯಣದರ್ಶನಂ’ ಮಹಾಕಾವ್ಯವೇ ಇದಕ್ಕೆ ಜೀವಂತ ಸಾಕ್ಷಿ. ದೈವೀಪ್ರಜ್ಞೆ ಮತ್ತು ಮರ್ತ್ಯ ಪ್ರಜ್ಞೆಗಳ ಪರಸ್ಪರ ಸಮ್ಮಿಲನವನ್ನಿಲ್ಲಿ ನೋಡಬಹುದು. ದೈವೀಶಕ್ತಿ ತಾನಾಗಿಯೇ ಆಸುರೀ ಶಕ್ತಿಯನ್ನು ಸಂಧಿಸಿ ರೂಪಾಂತರಗೊಳಿಸಿ ತನ್ನ ವಶಮಾಡಿಕೊಳ್ಳುತ್ತದೆ.

ಕುವೆಂಪು ಅವರ ಸಾಹಿತ್ಯ ಪ್ರಪಂಚಕ್ಕೆ ಒಳಗಾಗದ ವಸ್ತುವಿಲ್ಲ. ಕಾಜಾಣ, ಕಾಮಳ್ಳಿ, ಕೋಗಿಲೆ ತೇನೆ ಮಲ್ಲಿಗೆ ಬಕುಳಗಳಂತೆ ಗೊಬ್ಬರವೂ ಅವರ ಕಾವ್ಯವಸ್ತುವಾಗಿದೆ; ಶ್ರೀರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಶ್ರೀರಾಮ ಲಕ್ಷ್ಮಣ, ಹೂವಯ್ಯ ಚಿನ್ನಯ್ಯರು ಕಥಾನಾಯಕರಾಗಿರುವಂತೆ ಕಾವ್ಯದ ಪ್ರಧಾನ ಪಾತ್ರರಾಗಿರುವಂತೆ ಕರಿಸಿದ್ದ ಗಿಡ್ಡಿ ಕಿಟ್ಟಯ್ಯನಾಗಿ ಪುಟ್ಟಣ್ಣ ಮೊದಲಾದವರು ಅವರ ಸಾಹಿತ್ಯ ಪ್ರಪಂಚದ ಜೀವಂತ ಪಾತ್ರಗಳಾಗಿದ್ದಾರೆ.

ಇಂಥ ಮಹಾಕವಿಯನ್ನು ಮಹಾರಾಷ್ಟ್ರದ ಸುಪ್ರಸಿದ್ಧ ಸಾಹಿತಿ ಮಾಮಾ ವಾರೇರ‌್ಕರ್ ಗರುಡನಿಗೆ ಹೋಲಿಸಿದರು; ಶ್ರೀ ರಾಜರತ್ನಂ ಟೈಟಾನ್ ಎಂದು ಕರೆದರು; ಮತ್ತೊಬ್ಬರು ಟಾಗೋರ್ ತೀರಿಕೊಂಡಾಗ ಅವರ ಉತ್ತರಾಧಿಕಾರಿಯೆಂದು ವಿಶ್ವಭಾರತಿಯಲ್ಲಿ ಬರೆದರು.

ಕುವೆಂಪು ಅವರ ಕಾವ್ಯಕ್ಷೇತ್ರದಂತೆಯೆ ಅವರ ಕರ್ಮಕ್ಷೆತ್ರವೂ ನಾನಾ ಮುಖವಾಗಿ ಬಹುವ್ಯಾಪಿಯಾಗಿ ಸುದೀರ್ಘವಾಗಿ ಅತ್ಯಂತ ವಿಶಾಲವಾಗಿ ಸಂಪೂರ್ಣ ಸಾರ್ಥಕವಾಗಿ ಅನನುಕರಣೀಯವೆಂಬಂತೆ ಸಾಗಿ ನಿಂತಿದೆ. ಕುವೆಂಪು ಅವರು ಎಂ.ಎ. ಡಿಗ್ರಿ ಪಡೆದನಂತರ ಮನಸ್ಸು ಮಾಡಿದ್ದರೆ ರೆವಿನ್ಯೂ ಅಧಿಕಾರಿಯಾಗಿ ಅದ್ದೂರಿಯಿಂದ ಮೆರೆಯಬಹುದಿತ್ತು. ಆದರೆ ಅವರ ಅಂತರ್ಮುಖವಾದ ಜೀವನಕ್ಕೆ ನಿರ್ಮಲ ಚಿತ್ತ ವೃತ್ತಿಗೆ ನಿರಂತರ ಧ್ಯಾನ ತಪಸ್ಸುಗಳಲ್ಲಿ ಮಗ್ನವಾದ ಋಷಿ ಸಹಜವಾದ ಪ್ರವೃತ್ತಿಗೆ ನಿರಾಯಾಸವಾದ ಬಹಿರಾಡಂಬರದ ಶುಷ್ಕ ಜೀವನ ಬೇಡವಾಯಿತು. ೧೯೨೯ರಲ್ಲಿ ಅವರು ಕನ್ನಡ ಅಧ್ಯಾಪಕರಾಗಿ ಈಗಿನ ಯುವರಾಜ ಕಾಲೇಜಿನಲ್ಲಿ ಕೆಲಸಕ್ಕೆ ಸೇರಿದರು. ಕಾಲೇಜಿನಲ್ಲಿ ತಮ್ಮ ಕೆಲವೆಷ್ಟೋ ಅಷ್ಟೆ; ಕೆಲಸ ಮುಗಿದ ಕೂಡಲೆ ಅವರು ಮನೆಯ ದಾರಿ ಹಿಡಿಯುತ್ತಿದ್ದರು. ಕಾಡು ಹರಟೆಯಾಗಲೀ, ಗುಂಪು ರಾಜಕೀಯವಾಗಲೀ ವ್ಯರ್ಥಕಾಲಾಯಾಪನೆಯಾಗಲೀ ಅವರ ಜಾಯಮಾನಕ್ಕೆ ಒಗ್ಗುವಂತಿರಲಿಲ್ಲ. ವಾರ್ಷಿಕ ಬಡ್ತಿಗಾಗಲಿ, ಅಧಿಕಾರ ಸಂವರ್ಧನೆಗಾಗಲಿ, ಪರೀಕ್ಷಕರ ವೃತ್ತಿಯಾಚನೆಗಾಗಲಿ ಅವರು ಸಂಬಂಧಪಟ್ಟವರ ಮನೆ ಬಾಗಿಲಿಗೆ ಹೋಗಿ ಹಲ್ಲುಗಿಂಜು ತ್ತಿರಲಿಲ್ಲ, ಬಾಲ ಬಡಿಯುತ್ತಿರಲಿಲ್ಲ. ಬಡ್ತಿ ದೊರೆಯದಿದ್ದರೂ ಅವರು ಕೈಕಾಲಿಳಿಬಿಟ್ಟು, ಮೋರೆ ತಗ್ಗಿಸಿಕೊಂಡು ಕೆಲಸಕಾರ್ಯ ಬಿಟ್ಟು ಕುಳಿತವರಲ್ಲ. ಅಷ್ಟೇ ಅಲ್ಲ, ಅವರೆಂದೂ ಆ ಕಡೆ ಯೋಚನೆ ಮಾಡಿದವರಲ್ಲ. ಬಹುಶಃ ಅವರು ಯಾವಾಗಲೂ ಸಿವಿಲ್ ಲಿಸ್ಟ್ ಕಡೆಗೆ ಕಣ್ಣು ಹಾಯಿಸಿರಲಿಲ್ಲವೆಂದು ತೋರುತ್ತದೆ.

ಉಪ-ಪ್ರಾಧ್ಯಾಪಕ, ಪ್ರಾಧ್ಯಾಪಕ, ಪ್ರಿನ್ಸಿಪಾಲ್ ಮತ್ತು ವೈಸ್‌ಚಾನ್ಸಲರ್ ಹುದ್ದೆಗಳು ಅಪ್ರಯಾಸವಾಗಿ ಅಯಾಚಿತವಾಗಿ ಅವರಿಗೆ ದೊರೆತುವು. ಪ್ರಾಧ್ಯಾಪಕರಾಗಿ ಪಾಠ ಪ್ರವಚನಗಳ ಮೂಲಕ ಶಿಷ್ಯಕೋಟಿಗೆ ತಮ್ಮ ದೀರ್ಘಕಾಲದ ತಪಸ್ಸಿದ್ದಿಯ ಫಲವನ್ನೆರೆದರು. ಕಾವ್ಯ ಮೀಮಾಂಸೆಯ ಮತ್ತು ಸಾಹಿತ್ಯ ವಿಮರ್ಶೆಯ ಬೋಧನ ಕ್ರಮದಲ್ಲಿ ಹೊಸ ಪಂಥವನ್ನೆ ಸ್ಥಾಪಿಸಿದರು, ಸಾಹಿತ್ಯ ಚರಿತ್ರೆಯ ಪಠ್ಯ ಕ್ರಮದಲ್ಲಿ ರೂಢ ಮೂಲವಾಗಿದ್ದ ಮತೀಯ ವಿಭಜನೆಯನ್ನು ತೊಲಗಿಸಿದರು. ೧೯೫೫ ರಿಂದ ೧೯೫೬ರವರೆಗೆ ಮಹಾರಾಜರವರ ಕಾಲೇಜಿನ ಪ್ರಿನ್ಸಿಪಾಲರಾಗಿದ್ದು ಅನಂತರ ವೈಸ್‌ಚಾನ್ಸಲರ್ ಹುದ್ದೆಗೆ ನೇಮಕವಾದರು.

ಕುವೆಂಪು ಅವರು ವೈಸ್‌ಚಾನ್ಸಲರ್ ಹುದ್ದೆ ವಹಿಸಿಕೊಂಡಾಗ ಮೈಸೂರು  ವಿಶ್ವವಿದ್ಯಾನಿಲಯದಲ್ಲಿ ಅದೊಂದು ಸಂಧಿ ಸಮಯವಾಗಿತ್ತು. ಅಲ್ಲಿಯತನಕ ಸರ್ಕಾರದ ಇಲಾಖೆಯಾಗಿ ವ್ಯವಹಾರ ನಡೆಸುತ್ತಿದ್ದ ವಿಶ್ವವಿದ್ಯಾನಿಲಯ ಸ್ವಯಮಾಡಳಿತ ಸಂಸ್ಥೆಯಾಗಿ ರೂಪಾಂತರ ಹೊಂದಿತ್ತು, ಆದ್ದರಿಂದ ಅದು ಸಹಜವಾಗಿ ಪ್ರಸವ ಸಮಯದ ವೇದನೆಗೆ ಭಾಜನವಾಯಿತು, ಒಂದು ಕಡೆ ಸಿಂಡಿಕೇಟಿನ ಪ್ರಾಬಲ್ಯ, ಮತ್ತೊಂದು ಕಡೆ ಕಾನೂನಿನ ಲೋಪದೋಷಗಳು, ಮಗುದೊಂದು ಕಡೆ ಪ್ರಬಲ ಸ್ಥಾನಗಳಲ್ಲಿದ್ದ ಅಸೂಯಾಪರರಾದ ಅಧಿಕಾರ ಲಂಪಟರು ಕೊಡುತ್ತಿದ್ದ ಕ್ಲೇಶ ಪರಂಪರೆ – ಇವುಗಳ ಇಕ್ಕಟ್ಟಿನಲ್ಲಿ ಆಡಳಿತ ನಿರ್ವಹಣೆ ಕುಸುಮಶಯ್ಯೆಯಾಗಿರಲಿಲ್ಲ. ಹೊಸ ಕಾನೂನು ಜಾರಿಗೆ ಬಂದಾಗ ಹೊಸ ಹೊಸ ಪದ್ಧತಿಗಳು ಸ್ಥಾಪನೆಗೊಳ್ಳಬೇಕಾಗಿತ್ತು. ನೂತನ ಪದ್ಧತಿ ಯಶಸ್ವಿಯಾಗಿ ಕಾರ್ಯಗತವಾಗಬೇಕಾದರೆ ಸುತ್ತಮುತ್ತ ಸಹಾನುಭೂತಿಯುಳ್ಳ ಜನರಿರಬೆಕು, ಹಿತಕರವಾದ ವಾತಾವರಣ ಸನ್ನಿವೇಶಗಳಿರಬೇಕು. ಸ್ವಾರ್ಥ ಸಾಧಕರ ಗುಂಪುಗುಳಿತನ, ರಾಕ್ಷಸ ಸ್ವಭಾವದ  ಜನರ ಐಲುತನ, ಹುಲಿವೇಷ ತೊಟ್ಟ ಗ್ರಾಮ ಸಿಂಹಗಳ ಲಂಡತನ, ಗೋಮುಖ ವ್ಯಾಘ್ರಗಳ ಕಪಟತನ ಯಾವ ಸಂಸ್ಥೆಗಾದರೂ ಮಾರಕವಾಗುತ್ತವೆ. ಇಷ್ಟೆಲ್ಲ ಅಡಚಣೆ ವಿರೋಧ ಗಳನ್ನೆದುರಿಸಿ ಆ ಮಹಾಸಂಸ್ಥೆಯ ಪ್ರಗತಿಯನ್ನು ಸಾಧಿಸುವ ಕಾರ್ಯ ‘ಎಂಟೆರ್ದೆ’ ಇರುವ ಮಹಾ ಸಾಹಸಿಯಿಂದ ಮಾತ್ರ ಸಾಧ್ಯವಾಗುತ್ತದೆ.

ಕಾವ್ಯ ಗೌರೀಶಂಕರವನ್ನೇರಿದ ಕುವೆಂಪು ಅವರಂಥ ಮಹಾಸಾಹಸಿಯಿಂದ ಮಾತ್ರ ಅಂಥ ಕಾರ್ಯ ಸಾಧ್ಯವಾದೀತು! ಕುವೆಂಪು ಅವರು ಅಧಿಕಾರಾರೂಢರಾದ ಕೂಡಲೆ ದೃಢಹಠದಿಂದ ಸಾಧಿಸಿದ ಆದ್ಯಕಾರ್ಯವೆಂದರೆ ಉಪನ್ಯಾಸಕರ ವೇತನ ವಿಮರ್ಶೆ, ಯೂನಿವರ್ಸಿಟಿ ಗ್ರಾಂಟ್ಸ್ ಕಮೀಷನ್ ಅಧ್ಯಕ್ಷರಮತ್ತು ವಿದ್ಯಾಸಚಿವರ ಬಳಿ ಚರ್ಚೆ ನಡೆಸಿ, ಅವರ ಸಹಾನುಭೂತಿಯನ್ನು ಸಂಪಾದಿಸಿ ಉಪಾಧ್ಯಾಯರ ಕನಿಷ್ಠ ವೇತನವನ್ನು ನೂರರಿಂದ ಇನ್ನೂರಕ್ಕೇರಿಸಿದರು. ಮಚ್ಚರಗುಳಿಗಳ ಪ್ರಗತಿವಿರೋಧಿಗಳ ಸಮಾಜ ಶೋಷಕರ ಮತ್ತು ಕಿರುಕುಳಗಳ ತಂಟೆತಕರಾರು ಕೋಟಲೆಗಳನ್ನು ಲೆಕ್ಕಿಸದೆಯೇ, ಅವರ ಸದ್ದು ಗದ್ದಲಗಳಿಗೆ ಬಿಂಕಬೆದರಿಕೆಗಳಿಗೆ ಜಗ್ಗದೆ ವಿಶ್ವವಿದ್ಯಾನಿಲಯದ ಸಂಶೋಧನಾಂಗವನ್ನು ಪ್ರಾರಂಭಿಸಿದರು. ಅಧಿಕಾರವ್ಯಾಪ್ತಿ ಸಂಕೋಚಗೊಂಡು ಸೇವಕರ ಸಂಖ್ಯೆ ಕೃಶವಾಗಿ ತಮ್ಮ ಪ್ರಧಾನತೆ ಕ್ಷೀಣವಾಗುತ್ತದೆಂದು ಬಗೆದ ಅಧಿಕಾರ ಲಾಲಸರು, ಸಂಶೋಧನಾಂಗ ಸಂಸ್ಥಾಪನೆಯಿಂದ ಕುವೆಂಪು ಅವರ ಕೀರ್ತಿ ಚಿರಸ್ಥಾಯಿಯಾಗಿ ಅವರ ಅಧಿಕಾರ ಸ್ಥಾನ ಸುಭದ್ರವಾಗಬಹುದೆಂದು ಶಂಕಿಸಿದ ಹೊಟ್ಟೆಕಿಚ್ಚಿನ ತತ್ತಿಗಳು ಅಪಪ್ರಚಾರ ಅವಹೇಳನ ಮಿಥ್ಯಾರೋಪ ಮೊದಲಾದ ಕೌಟಿಲ್ಯ ತಂತ್ರಗಳ ಮತ್ತು ರಾಜಕೀಯ ಪಿತೂರಿಗಳ ಮೂಲಕ ಆ ಯೋಜನೆಗಳನ್ನು ಮುರಿಯಬೇಕೆಂದು ಪ್ರಯತ್ನಿಸಿ ವಿಫಲರಾದರು. ಕೊನೆಗೆ ಯಾವುದೂ ಕೈಸಾಗದಿದ್ದಾಗ ‘ಮಾನಸ ಗಂಗೋತ್ರಿ’ ಹೆಸರಿನ ಬಗ್ಗೆ ಗುಲ್ಲೆಬ್ಬಿಸಿ ತಮ್ಮ ಹೃದಯದ ಕಹಿಯನ್ನೆಲ್ಲ ಕಾರಿ ಕಾರಿ ಸುಸ್ತಾದರು. ಏನೇ ಆಗಲಿ ಲೋಕ ಕಲ್ಯಾಣ ದೃಷ್ಟಿಯಿಂದ ಪವಿತ್ರಾಂತಃಕರಣದಿಂದ ಪ್ರತಿಷ್ಠಾಪನೆಗೊಂಡ ‘ಮಾನಸ ಗಂಗೋತ್ರಿ’ ಸಂಶೋಧನಾಕ್ಷೇತ್ರ ಕವಿದೃಷ್ಟಿಯ ಅಮೋಘತ್ವಕ್ಕೆ ಶಾಶ್ವತ ಸಾಕ್ಷಿಯಾಗಿ ಮೈದಳೆದು ನಿಂತಿದೆ.

ಜಾತೀಯತೆಯ ವಿಷ ಸರ್ವವ್ಯಾಪಿಯಾಗಿರುವ, ಅಜಮರ್ಕಟನ್ಯಾಯಕ್ಕೆ ಮತ್ತು ಕೌಟಿಲ್ಯ ನೀತಿಗೆ ಹೆಸರಾಗಿರುವ ಈ ನಾಡಿನಲ್ಲಿ ಸತ್ಕಾರ್ಯಕ್ಕಾಗಲಿ, ಸತ್ಕಾವ್ಯಕ್ಕಾಗಲಿ ಸಾಕಷ್ಟು ಪುರಸ್ಕಾರ ದೊರೆಯುವುದಿಲ್ಲ; ಮನ್ನಣೆ ದೊರೆಯುವುದಿಲ್ಲ. ಸತ್ಕಾರ್ಯವನ್ನು ಅಕಾರ್ಯವೆಂದು ಹಳಿದು ಅಪಪ್ರಚಾರ ಮಾಡುತ್ತಾರೆ, ಸತ್ಕಾವ್ಯವನ್ನು ಈರ್ಷ್ಯಾಮೂಲವಾದ ಖಂಡನೆಯ ಖಡ್ಗದಿಂದ ಇರಿಯುತ್ತಾರೆ. ಕುವೆಂಪು ಅವರು ಅಧಿಕಾರ ಸ್ವೀಕರಿಸಿದ ದಿನದಿಂದಲೆ ಕೆಲವು ಜನ ಅವರ ಮೇಲೆ ಅದಕ್ಷತೆಯ ಆರೋಪ ಹೊರಿಸಿ ಅವರನ್ನು ಹೊರದೂಡಲು ಪ್ರಯತ್ನಿಸಿದರು. ಕುವೆಂಪು ಆಡಳಿತದ ಖಂಡನೆಗೆಂದೆ ವಿಶ್ವವಿದ್ಯಾನಿಲಯದ ಅಧಿಕಾರಿಯೊಬ್ಬರ ಧನ ಸಹಾಯ ಪ್ರೋಪತ್ರಿಕೆಯೊಂದು ಆರಂಭವಾಗಿ ಕೆಲವು ವಾರಗಳಲ್ಲಿಯೇ ಮಣ್ಣುಗೂಡಿತು. ತಮ್ಮ ಅನ್ಯಾಯದ ಶಿಫಾರಸ್ಸಿಗೆ ಸೊಪ್ಪು ಹಾಕಲಿಲ್ಲವೆಂಬ, ತಮ್ಮ ಬಳಿ ಬಂದು ಹಲ್ಲು ಕಿರಿಯಲಿಲ್ಲವೆಂಬ, ತಮ್ಮ ಸನ್ನಿಧಿಯಲ್ಲಿ ಸೊಂಟ ಕಟ್ಟಿ, ನಡುಬಗ್ಗಿಸಿ, ಕೈಜೋಡಿಸಿ ಹೊಟ್ಟೆ ಯಡಿಯಾಗಿ ಬೀಳಲಿಲ್ಲವೆಂಬ, ಸಭೆ ಸಂಸ್ಥೆಗಳಲ್ಲಿ ತಮ್ಮನ್ನು ಇಂದ್ರ ಚಂದ್ರ ದೇವೇಂದ್ರರೆಂದು ಹೊಗಳಲಿಲ್ಲವೆಂಬ ಜನ ಅವರ ಅಭ್ಯುದಯವನ್ನು ಸಹಿಸದೆ ನಾನಾ ಪ್ರಕಾರವಾದ ಪ್ರಚಾರಗಳ ಮೂಲಕ ಅವರ ದಕ್ಷತೆಯನ್ನು ಪ್ರಶ್ನಿಸಿದರು. ನಾಮದ ಬಲವಿದ್ದ ಹಾಗೆ ಜಾತಿಯ ಬಲವಿದ್ದರೆ ಅದಕ್ಷರೂ ದಕ್ಷರಾಗುತ್ತಾರೆ. ಗುಮಾಸ್ತ ಬರೆದ ಪತ್ರಕ್ಕೆ ಚೋಟ ಸಹಿ ಹಾಕಿ ಕಾಲಹರಣ ಮಾಡಿದರೂ ಆಡಳಿತ ನಡೆಯುತ್ತದೆ. ಕಚೇರಿಯ ವ್ಯವಸ್ಥೆಯನ್ನು ಕೆಳಗಣವರಿಗೆ ಬಿಟ್ಟುಕೊಟ್ಟು ರಾಜಕೀಯ ಜನರ ಬಾಲಬುಡಕರಾಗಿ ಪಟ್ಟಭದ್ರ ಸ್ಥಾನದಲ್ಲಿರುವ ಜನರಿಗೆ ವೈನ್ ಕುಡಿಸಿಕೊಂಡಿದ್ದರೂ ಆಡಳಿತ ನಡೆಯುತ್ತದೆ. ಪ್ರಚಾರ ಸಾಧನ ಸೌಕರ್ಯಗಳು ಲಭಿಸಿದರೆ ಅಂಥ ಅಧಿಕಾರಿಗಳು ಸರ್ವಶಕ್ತನ ಮಟ್ಟಕ್ಕೇರುವುದರಲ್ಲಿ ಸ್ವಲ್ಪವೂ ಸಂಶಯವಿಲ್ಲ. ನಿಸ್ವಾರ್ಥ ಪರರಾಗಿ ಸೇವಾದೃಷ್ಟಿಯಿಂದ, ಕರ್ತವ್ಯ ನಿಷ್ಠೆಯಿಂದ, ಅಲಸದೆ ಮೈಮರೆಯದೆ ದ್ವೇಷಾಸೂಯೆಗಳಿಲ್ಲದೆ, ಕುಯುಕ್ತಿ ಕುತಂತ್ರಗಳಿಗೆ ಬಲಿಯಾಗದೆ, ಅನ್ಯಾಯಕ್ಕೆ ಮಣಿಯದೆ, ಪರರ ಮರಳು ಮಾತುಗಳಿಗೆ ಹಿತ್ತಾಳೆ ಕಿವಿಯಾಗದೆ, ವಿವೇಕ ವಿಸರ್ಜಿಸದೆ, ಚಾಕಚಕ್ಯತೆಯಿಂದ ಹೊಸ ಹೊಸ ಸಮಸ್ಯೆಗಳನ್ನು ಬಿಡಿಸಿ, ನಾಡಿನ ಹಿತಕ್ಕಾಗಿ ಬಹುಜನರ ಕ್ಷೇಮಕ್ಕಾಗಿ ನೂತನ ಯೋಜನೆಗಳನ್ನು ಸರ್ವಸಮರ್ಪಕವಾಗಿ ಯಶಸ್ವಿಯಾಗಿ ಕಾರ್ಯಗತಗೊಳಿಸಿ, ಜನಮನಸ್ಸಿನ ಆಕಾಂಕ್ಷೆಗಳ ಪ್ರತಿನಿಧಿಯಾಗಿ ಸಂಸ್ಥೆಯ ಉನ್ನತಿಯನ್ನು ಸಾಧಿಸುವುದೇ ದಕ್ಷತೆಯ ಲಕ್ಷಣ. ಪರಿಶುದ್ಧ ಜೀವನ, ಪ್ರಸನ್ನ ಚಿತ್ತ, ದೂರ ದೃಷ್ಟಿತ್ವ, ನಿರ್ವಿಕಾರ ಮನೋಭಾವ, ನಿಷ್ಪಕ್ಷ ಪಾತದೃಷ್ಟಿ ಸತ್ಯಸಂಧತೆ, ಆತ್ಮಗೌರವ ಶ್ರದ್ಧೆ, ಭೀಷ್ಮನಿಷ್ಠೆ, ಭೀಮಧೈರ್ಯ, ಕಲ್ಪನಾಪ್ರತಿಭೆ, ಪ್ರತ್ಯುತ್ಪನ್ನ ಮತಿತ್ವ ಇವು ದಕ್ಷ ಅಧಿಕಾರಿಯ ಗುಣ. ಆ ನಾಲ್ಕು ವರ್ಷಗಳಿಂದ ಅಧಿಕಾರಾ ವಧಿಯಲ್ಲಿ ಕುವೆಂಪು ಅವರು ಸಾಧಿಸಿದ ಕಾರ್ಯಗಳಿಂದ ಯಾರು ಬೇಕಾದರೂ ಯಾವ ಮಾನಕವೇತ್ರದಿಂದಾದರೂ ಅವರ ದಕ್ಷತೆಯ ಮಟ್ಟವನ್ನಳೆಯಬಹುದು. ವ್ಯಕ್ತಿತ್ವದ ಶಿಶು ದಕ್ಷತೆಯೆಂಬುದನ್ನು ಯಾರೂ ಮರೆಯಬಾರದು.

ಬಹಿರ್ಮುಖವಲ್ಲದ ವಿವಿಕ್ತ ಜೀವನಾಸಕ್ತಿ ಮತ್ತು ಅಂತರ್ಮುಖತೆಯೆ ಪ್ರಧಾನವಾದ ಸಂಘಾಪೇಕ್ಷಿಯಲ್ಲದ ವರ್ತನೆ ಮನೋಭಾವಗಳು ಮತ್ತು ಆಚಾರ ವಿಚಾರಗಳು ಅಧಿಕಾರ ನಿರ್ವಹಣೆಯ ದೃಷ್ಟಿಯಿಂದ ಅವರ ದೌರ್ಬಲ್ಯಗಳಾಗಿ ತೋರುತ್ತಿದ್ದುದಾಗಿ ಕೆಲವು ಜನರ-ಅದರಲ್ಲಿಯೂ ಅವರ ಅಭಿಮಾನಿಗಳ-ಅಭಿಪ್ರಾಯವಾಗಿದೆ. ಅದು ತಕ್ಕಮಟ್ಟಿಗೆ ನಿಜವೆಂದು ತೋರಬಹುದು. ಆದರೆ ಅದಕ್ಕೆ ತಕ್ಕ ಸಮಜಾಯಿಷಿಯೂ ಇಲ್ಲದಿಲ್ಲ. ವಿರೋಧಾಭಿಪ್ರಾಯದ ಜನ ತಮ್ಮ ಬಳಿಗೆ ಬಂದಾಗ ಅವರನ್ನು ಮತಾಂತರಗೊಳಿಸುವ ಶಕ್ತಿ ಕುವೆಂಪು ಅವರಿಗೆ ವಶವಾಗಿದ್ದುದು ನಿಜ. ಜ್ಞಾನಸಂಗ್ರಹದ ದೃಷ್ಟಿಯಿಂದ ಸಾರ್ಥಕವಾಗದ ವ್ಯರ್ಥಾಲಾಪವಾಗಲಿ ಜನತೆಯ ಅಥವಾ ಸಮಾಜದ ಅಥವಾ ಸಂಸ್ಥೆಯ ದೃಷ್ಟಿಯಿಂದ ಪ್ರಯೋಜನಕಾರಿಯಾಗದ ಶುಷ್ಕವಾದ ವಿವಾದಗಳಾಗಲಿ ಅವರಿಗೆ ಸ್ವಲ್ಪವೂ ಹಿಡಿಸುತ್ತಿರಲಿಲ್ಲ. ಕುತ್ಸಿತಮೂಲವಾದ ಚಾಡಿಕೋರತನ ಅವರಿಗಾಗದು. ಆದ್ದರಿಂದ ಅವರು ಹೆಚ್ಚು ಜನರನ್ನು ಹತ್ತಿರ ಸೇರಿಸು ತ್ತಿರಲಿಲ್ಲ. ಆವರೂ ಗುಂಪು ಕಟ್ಟಿಕೊಂಡು, ರಾಜಕೀಯ ಮಾಡಿ ಆತ್ಮಗೌರವಕ್ಕೆ ಆತ್ಮಾನು ಭೂತಿಗೆ ತಿಲತರ್ಪಣವೆರೆದು ಸಂಬಂಧಪಟ್ಟ ಅಧಿಕಾರಿಗಳ ಬಳಿ ಭಟ್ಟಿಂಗಿಗಳಂತೆ ಓಡಾಡಿದ್ದರೆ ೫೫ನೆಯ ವಯಸ್ಸಿಗೆ ವೈಸ್ ಚಾನ್ಸಲರ್ ಪದವಿಯಿಂದ ನಿವೃತ್ತರಾಗುತ್ತಿರಲಿಲ್ಲ. ಬೇರೆ ಕಡೆ ಎಪ್ಪತ್ತೈದು ಎಂಭತ್ತು ವರ್ಷದ ಹಣ್ಣು ಮುದುಕರು ಅಧಿಕಾರದಲ್ಲಿರುವಾಗ, ಕೇವಲ ಸರ್ವ ಸಾಮಾನ್ಯ ವ್ಯಕ್ತಿಗಳನ್ನು ವಿದ್ವತ್ತು ವ್ಯಕ್ತಿತ್ವಗಳನ್ನು ಗಣಿಸದೆಯೆ ಆ ಸ್ಥಾನಕ್ಕೇರಿಸುವಂತಹ ಪರಿಪಾಠ ಸರ್ವತ್ರ ರೂಢಿಯಲ್ಲಿರುವಾಗ ಕುವೆಂಪು ಅವರಂಥ ಕವಿಗಳು, ವಿದ್ವನ್ಮಣಿಗಳು ಬಹು ಜನ ಪ್ರಿಯವಾದ ದಾರ್ಶನಿಕ ವ್ಯಕ್ತಿಗಳು ಇನ್ನೂ ಬಹು ದಿನ ಅಧಿಕಾರ ಸ್ಥಾನದಲ್ಲಿರ ಬಹುದಿತ್ತೇನೋ ಎಂಬ ಭಾವನೆ ಬಹು ಜನರಲ್ಲಿ ಮೂಡದಿರದು.

ತಮ್ಮ ಅಧಿಕಾರಾವಧಿಯಲ್ಲಿ ಕುವೆಂಪು ಅವರು ಸಾಧಿಸಿದ ಮಹೋನ್ನತವೂ ಶ್ರೇಯಸ್ಕರವೂ ಬಹುಜನೋಪಯೋಗಿಯೂ ಆದ ಕಾರ್ಯಗಳಲ್ಲಿ ಶಿಕ್ಷಣ ಮಾಧ್ಯಮದ ವ್ಯವಸ್ಥೆ ಅತ್ಯಂತ ಪ್ರಾಮುಖ್ಯವಾದದ್ದು. ಪ್ರಪಂಚದ ಯಾವ ಸ್ವತಂತ್ರ ರಾಷ್ಟ್ರದಲ್ಲಿಯಾದರೂ ಪರಭಾಷೆಯ ಮೂಲಕ ವಿದ್ಯೆ ಕಲಿಸುವ ಗುಲಾಮ ಪದ್ಧತಿ ರೂಢಿಯಲ್ಲಿಲ್ಲವೆಂದೂ, ಪರಭಾಷೆಯ ಮೂಲಕ ವಿದ್ಯೆ ಕಲಿಸುವ ಕೆಲಸ ಸಹರಾ ಮರುಭೂಮಿಗೆ ನೀರು ಹೊತ್ತಂತೆ ನಿಷ್ಫಲವೆಂದೂ, ಸರ್ವ ಸಮರ್ಪಕವಾದ ಮತ್ತು ಸಾರ್ಥಕವಾದ ಜ್ಞಾನಾರ್ಜನೆ ದೇಶಭಾಷೆಯ ಮೂಲಕ ಸಾಧ್ಯವೆಂದೂ, ಇಂಗ್ಲಿಷ್ ಚಪ್ಪಡಿಯ ಭಾರದಿಂದ ವಿದ್ಯಾರ್ಥಿಗಳು ಭೂಮಿಗೆ ಕುಸಿದು ಹೋಗುತ್ತಾರೆಂದೂ ಇಂಗ್ಲಿಷ್ ಪೂತನಿಯಿಂದ ಬಿಡುಗಡೆಯಾಗುವತನಕ ಪ್ರತಿಭಾ ವಿಕಾಸಕ್ಕೆ ಅವಕಾಶವಿಲ್ಲವೆಂದೂ, ಚಿಕ್ಕಂದಿನಿಂದ ದನ ಕುರಿ ಮೇಕೆಗಳೊಂದಿಗೆ ಬೆಳೆದ ಹುಡುಗರಿಗೆ ಇಂಗ್ಲಿಷಿನ ಹೇರು ಮಾರಕವೆಂದೂ, ಈಗಾಗಲೇ ಅನೇಕ ವರ್ಗಗಳು ತಾಂಡವವಾಡುತ್ತಿರುವ ಈ ನಾಡಿನಲ್ಲಿ ಇಂಗ್ಲಿಷ್ ಕಲಿತವರ ಮತ್ತೊಂದು ವರ್ಗ ಸೃಷ್ಟಿಯಾಗುತ್ತಿರುವುದೆಂದೂ, ನಾಡಿನ ವಿದ್ಯಾ ಪದ್ಧತಿ ಮಕ್ಕಳ ಮನಶ್ಯಾಸ್ತ್ರಕ್ಕನುಗುಣವಾಗಿ ರೂಪಗೊಳ್ಳಬೇಕೇ ಹೊರತು ಪಟ್ಟಭದ್ರ ಹಿತಾಸಕ್ತರ ಸಮಾಜ ಶೋಷಕರ ಮತ್ತು ರಾಜಕೀಯ ದಳ್ಳಾಳಿಗಳ ಸ್ವಾರ್ಥ ಮೂಲವಾದ ನಿರ್ದೇಶನದಂತೆ ವ್ಯವಸ್ಥೆಗೊಳ್ಳಬಾರದೆಂದೂ ಅವರು ಸಭೆ ಸಂಸ್ಥೆಗಳಲ್ಲಿ ವಿವೇಕ ಸಮ್ಮತವಾಗುವಂತೆ ಸಾರಿ ಸಾರಿ ಘೋಷಿಸಿದರು; ನಿಂತೆಡೆ, ಕುಳಿತೆಡೆ, ಯಾರು ಸಿಕ್ಕಿದರೂ ಸರಿಯೆ ಶಿಕ್ಷಣ ಮಾಧ್ಯಮವನ್ನು ಕುರಿತು ಕೊರೆದದ್ದುಂಟು. ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ನಮ್ಮ ವಿದ್ಯಾರ್ಥಿಗಳು ಬುದ್ದಿಯ ಮಟ್ಟದಲ್ಲಿ ಪಾಶ್ಚಾತ್ಯ ವಿದ್ಯಾರ್ಥಿಗಳಿಗಿಂತ ಏನೇನೂ ಕಡಿಮೆಯಿಲ್ಲವೆಂದೂ, ಇಂಗ್ಲಿಷ್ ಮಾಧ್ಯಮದ ತಡೆಗಾಲಿಲ್ಲದಿದ್ದರೆ ಜಪಾನೀಯರಂತೆ, ಡೇನರಂತೆ, ರಷ್ಯನ್ನರಂತೆ ಪ್ರತಿಭಾನ್ವಿತ ಸಂಶೋಧಕರಾಗಿ ವಿದ್ವಾಂಸರಾಗಿ ಪ್ರಖ್ಯಾತಿ ಪಡೆಯಬಹುದಿತ್ತೆಂದೂ ಸಹಸ್ರ ಸಹಸ್ರ ಸಂಖ್ಯೆಯ ವಿದ್ಯಾರ್ಥಿಗಳ ಅನುತ್ತೀರ್ಣತೆಗೆ ಪರಭಾಷಾ ಮಾಧ್ಯಮ ಪ್ರಧಾನ ಕಾರಣವೆಂದೂ, ಈ ಅನುತ್ತೀರ್ಣತೆಯಿಂದಾಗುವ ಶಾರೀರಕ ಆಧ್ಯಾತ್ಮಿಕ ಮತ್ತು ಆರ್ಥಿಕ ನಷ್ಟವನ್ನು ಹೋಲಿಸಿ ನೋಡಿದರೆ ಮೊರಾರ್ಜಿದೇಸಾಯ್ ಅವರು ವಿಧಿಸಿರುವ ತೆರಿಗೆಯ ಭಾರ ಅದರ ಮುಂದೆ ತೃಣಪ್ರಾಯವೆಂದೂ, ಹೋದೆಡೆಯಲ್ಲೆಲ್ಲ ಆವೇಶದಿಂದ ಜನರಿಗೆ ಬೋಧಿಸಿದರು. ಇಂಗ್ಲಿಷ್ ಭಾಷೆಯ ಸ್ಥಾನಮಾನಗಳನ್ನು ಕುರಿತು ಕೂಲಂಕಷವಾಗಿ ಚರ್ಚಿಸಿ ಸರ್ವಸಮ್ಮತವಾಗುವಂತೆ ವಾದಿಸಿ ಲೇಖನಗಳನ್ನು ಬರೆದರು. ಕನ್ನಡ ಮಾಧ್ಯಮವನ್ನು ಕುರಿತಾದ ಅವರ ವೀರಾಭಿಮಾನ ಅವರ ಪರಿಚಯವಿಲ್ಲದವರಿಗೆ ದೌರ್ಬಲ್ಯವೆಂಬಂತೆ ತೋರಿದರೂ ಆಶ್ಚರ್ಯವಿಲ್ಲ, ‘ಕನ್ನಡ ಮಾಧ್ಯಮದ ವ್ಯಾಮೋಹ ಹೊರತಾಗಿ ಬೇರಾವುದೂ ಬಯಕೆ ನನಗಿಲ್ಲ’ ಎಂದು ನಿವೃತ್ತಿಯ ನಂತರವೂ ಅವರು ಹೇಳುತ್ತಿರುತ್ತಾರೆ. ನಿದ್ರಾ ಜಾಗ್ರದವಸ್ಥೆಗಳಲ್ಲಿ ಹಾಗೂ ಅವರ ಧಮನಿ ಧಮನಿಗಳಲ್ಲಿ ಕನ್ನಡ ನುಡಿಯ ಝೇಂಕಾರ ಗುಂಯ್ ಗುಡುಗುತ್ತಿರಬೇಕು.

ಗುಂಯ್ ಗುಡುತ್ತಿದೆ, ನಿಜ! ಕುವೆಂಪು ಅವರು ಬರಿಯ ಮಾತಿನ ಮಲ್ಲರಲ್ಲ. ತಮ್ಮ ಕನಸು ನನಸಾಗುವತನಕ ನಿದ್ರಾಹಾರಗಳು ಬೇಡ, ಒಮ್ಮೆ ಕೈಗೊಂಡ ಶಪಥ ಈಡೇರುವ ತನಕ ತೆಪ್ಪನೆ ಕುಳಿತವರಲ್ಲ. ‘ಅಡಿಯ ಮುಂದಿಡೆ ಸ್ವರ್ಗ, ಅಡಿಯ ಹಿಂದಿಡೆ ನರಕ’ – ಇದು ಅವರ ಬಾಳಿನ ಮಂತ್ರ. ಛಲ ಮೊಂಡತನವೆನ್ನುವಷ್ಟರಮಟ್ಟಿಗೆ ನಡೆದುಕೊಂಡಾರು; ತಮ್ಮ ಲೌಕಿಕಾಭ್ಯುದಯವನ್ನೆಲ್ಲ ಬಲಿಗೊಟ್ಟಾರು, ಆದರೆ ರಣರಂಗದಿಂದ ಹಿಮ್ಮೆಟ್ಟುವವರಲ್ಲ. ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರು ಅನುಮೋದಿಸಲಿಬಿಡಲಿ, ‘ತಜ್ಞರ’ ಮಂಡಲಿ ‘ಅಸ್ತು’ ಎನ್ನಲಿ ಬಿಡಲಿ, ಕನ್ನಡ ಮಾಧ್ಯಮವನ್ನು ಕಾರ್ಯಗತಗೊಳಿಸಿ ಯಾರು! ಯಾರಿಗೂ ಅಂಜದೆ ಬೆದರದೆ ಜಗ್ಗದೆ ಕುಗ್ಗದೆ ಕುನಿಯದೆ ಅಸಹಾಯಕರಾಗಿಯೆ ಪಟ್ಟುಹಿಡಿದು ಕನ್ನಡ ಮಾಧ್ಯಮವನ್ನು ಜಾರಿಗೆ ತಂದು, ಭರತಖಂಡದ ಇತರ ವಿಶ್ವವಿದ್ಯಾನಿಲಯಗಳಿಗೆ ಮಾರ್ಗದರ್ಶನ ಮಾಡಿದರು.

ಕನ್ನಡ ಮಾಧ್ಯಮದ ಯಶಸ್ಸಿಗೆ ಪಠ್ಯಪುಸ್ತಕಗಳ ಸಿದ್ಧತೆ ಅತ್ಯಗತ್ಯವಾಗಿತ್ತು. ಬೋಧಕರನ್ನು ಪ್ರಚೋದಿಸಿ, ಪ್ರೋಬೆನ್ನುತಟ್ಟಿ, ಐದಾರು ತಿಂಗಳಲ್ಲಿಯೇ ಪುಸ್ತಕಗಳನ್ನು ಬರೆಯಿಸಿದರು. ವಿಜ್ಞಾನ ಗ್ರಂಥಗಳ ಭಾಷೆ ಎಂಥದಿರಬೇಕೆಂದು ಸೂಚಿಸಿದರು. ಆಂಗ್ಲ ಭಾಷೆಯ ಪಾರಿಭಾಷಿಕ ಪದಗಳನ್ನು ಸ್ವಸ್ವರೂಪ ಬದಲಾಯಿಸದೆಯೆ ಉಳಿಸಿಕೊಳ್ಳಬೇಕೆಂದು ವಿಧಾಯಕ ಮಾಡಿದರು. ಪುಸ್ತಕ ಪ್ರಕಟನೆಗಳನ್ನು ತೀವ್ರಗೊಳಿಸುವ ಸಲುವಾಗಿ, ಅಜ್ಞಾತವಾಗಿ ಮತ್ತು ಮೂಲೆಗುಂಪಾಗಿ ನರಳುತ್ತಿದ್ದ ಪ್ರಕಟನ ಶಾಖೆಯನ್ನು ಚುರುಕುಗೊಳಿಸಿ ವಿರೋಧಿಗಳ ಕಣ್ಣು ಕುಕ್ಕುವಂತೆ ವಿಸ್ತರಿಸಿ ಪ್ರಸಾರಾಂಗವೆಂದು ಹೆಸರಿಟ್ಟು ವಿಶ್ವವಿದ್ಯಾನಿಲಯದ ಪ್ರಧಾನಾಂಗಗಳ ಮಟ್ಟಕ್ಕೇರಿಸಿದರು.

ಇತ್ತೀಚಿನವರೆಗೆ ವಿಶ್ವವಿದ್ಯಾನಿಲಯದಲ್ಲಿ ಕನ್ನಡದ ಪರಿಸ್ಥಿತಿ ತುಂಬ ಶೋಚನೀಯ ವಾಗಿತ್ತು. ಶ್ರೀಮಂತರ ಮನೆಯ ದಾಸಿಯಂತೆ ಅದು ತಿರಸ್ಕಾರಕ್ಕೂ ಅವಹೇಳನಕ್ಕೂ ಪಾತ್ರವಾಗಿತ್ತು. ಸ್ವಾತಂತ್ರ್ಯ ಬಂದ ನಂತರ ಕನ್ನಡ ರಾಷ್ಟ್ರಭಾಷೆಗಳಲ್ಲೊಂದೆಂದು ಪರಿಗಣಿತ ವಾಗಿದ್ದರೂ, ವಿಶ್ವವಿದ್ಯಾನಿಲಯದಲ್ಲಿ ಅದಕ್ಕೆ ಯೋಗ್ಯವಾದ ಮತ್ತು ನ್ಯಾಯವಾದ ಸ್ಥಾನಮಾನ ಲಭಿಸಿರಲಿಲ್ಲ. ಕುವೆಂಪುರವರು ಅದನ್ನು ಇಂಗ್ಲಿಷ್ ಭಾಷೆಯ ಮಟ್ಟಕ್ಕೇರಿಸಿ ಸರ್ವತ್ರ ಅದಕ್ಕೆ ಮನ್ನಣೆ ದೊರೆಯುವಂತೆ ಏರ್ಪಾಟು ಮಾಡಿದರು.

ಕನ್ನಡನಾಡು ನುಡಿಗಳೆಂದರೆ ಕುವೆಂಪುರವರಿಗೆ ಪ್ರಾಣ. ಅವುಗಳಲ್ಲಿ ನಿರ್ದಿಷ್ಟವಾದ ವೀರನಿಷ್ಠೆ ಶ್ರದ್ಧೆ ಮಮಕಾರಗಳಿಂದ ಕೂಡಿದ ವೀರಾಭಿಮಾನ. ಕನ್ನಡನಾಡು ಒಂದಾಗುವತನಕ, ಕನ್ನಡನಾಡಿನಲ್ಲಿ ಕನ್ನಡಕ್ಕೆ ಆದ್ಯತೆ ಮತ್ತು ಅಗ್ರಸ್ಥಾನಗಳು ಲಭಿಸುವ ತನಕ, ಕನ್ನಡಿಗರ ಏಳ್ಗೆ ಕನಸಿನ ಗಂಟೆಂದು ಅವರು ಪ್ರಾಧ್ಯಾಪಕರಾಗಿದ್ದಾಗಲೆ ಗುಡುಗಾಡಿದರು. ಹೀಗೆ ಗುಡುಗಾಡಿದ್ದರಿಂದ ಆಗಿನ ಸರ್ಕಾರ ಅವರ ಮೇಲೆ ಶಿಸ್ತಿನ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿತು. ಕನ್ನಡನಾಡು ನುಡಿಗಳ ಹಿತವನ್ನು ಮರೆತ ಸರ್ಕಾರದ ಎಚ್ಚರಿಕೆ ಗಣನೀಯ ವಾದದ್ದಲ್ಲವೆಂದು ಕೆಚ್ಚೆದೆಯಿಂದ ಪ್ರತಿಭಟಿಸಿದರು.

ಅಖಂಡ ಕರ್ನಾಟಕ
ಅಲ್ತೊ ನಮ್ಮ ಕೂಗಾಟಿದ ರಾಜಕೀಯ ನಾಟಕ!
*
ಇಂದು ಬಂದು ನಾಳೆ ಸಂದು
ಹೋಹ ಸಚಿವ ಮಂಡಲ
ರಚಿಸುವೊಂದು ಕೃತಕವಲ್ತೊ
ಸಿರಿಗನ್ನಡ ಸರಸ್ವತಿಯ
ವಜ್ರಕರ್ಣಕುಂಡಲ!

ಪ್ರಜಾಪ್ರತಿನಿಧಿ ಸಭೆಯಲ್ಲಿ ಮೈಸೂರು ಕರ್ಣಾಟಕದಲ್ಲಿ ಸೇರಲು ಸಕಾಲವಲ್ಲವೆಂದು ತೀರ್ಮಾನವಾದಾಗ

ದೀಕ್ಷೆಯ ತೊಡು ಇಂದೇ;
ಕಂಕಣ ಕಟ್ಟಿಂದೇ!
ಕನ್ನಡನಾಡೊಂದೆ;
ಇನ್ನೆಂದೂ ತಾನೊಂದೇ!

ಎಂದು ಜನರನ್ನು ಹುರಿದುಂಬಿಸಿದರು.

ಕನ್ನಡ ನುಡಿಯ ಬಗೆಗೂ ಕುವೆಂಪುರವರಿಗೆ ಅಪಾರವಾದ ಅವ್ಯಾಜಪ್ರೇಮವಿದೆ; ಈ ಪ್ರೇಮ ಅವರ ಪ್ರತಿಯೊಂದು ಕೃತಿಯಲ್ಲಿಯೂ ವ್ಯಕ್ತವಾಗುತ್ತದೆ, ಅವರ ಪ್ರತಿಯೊಂದು ವ್ಯವಹಾರದಲ್ಲಿಯೂ ಎದ್ದು ಕಾಣುತ್ತದೆ.

‘ಕನ್ನಡ’ ಎನೆ ಕುಣಿದಾಡುವುದೆನ್ನೆದೆ,
‘ಕನ್ನಡ’ ಎನೆ ಕಿವಿ ನಿಮಿರುವುದು!
ಕಾಮನಬಿಲ್ಲನು ಕಾಣುವ ಕವಿಯೊಲು
ತೆಕ್ಕನೆ ಮನ ಮೈ ಮರೆಯುವುದು.

‘ಕನ್ನಡಕ್ಕಾಗಿ ಕೈಯೆತ್ತು, ನಿನ್ನ ಕೈ ಕಲ್ಪವೃಕ್ಷವಾಗುತ್ತದೆ! ಕನ್ನಡಕ್ಕಾಗಿ ಕೊರಳೆತ್ತು; ಅಲ್ಲಿ ಪಾಂಚಜನ್ಯ ಮೂಡುತ್ತದೆ! ಕನ್ನಡಕ್ಕೆ ಕಿರುಬೆರಳೆತ್ತಿದರೂ ಸಾಕು. ಇಂದು ಅದೆ ಗೋವರ್ಧನಗಿರಿಧಾರಿಯಾಗುತ್ತದೆ!’

ನೀ ಮೆಟ್ಟುವ ನೆಲ-ಅದೆ ಕರ್ಣಾಟಕ;
ನೀನೇರುವ ಮಲೆ-ಸಹ್ಯಾದ್ರಿ
ನೀ ಮುಟ್ಟುವ ಮರ-ಶ್ರೀಗಂಧದ ಮರ
ನೀ ಕುಡಿಯುವ ನೀರ್-ಕಾವೇರಿ

ಈ ವಚನ-ಕವನ ಮಂತ್ರಗಳಲ್ಲಿ ಕುವೆಂಪು ಅವರ ದೋಷಾತೀತವಾದ ನಿಷ್ಕಲ್ಮಷವಾದ  ಭಾಷಾಪ್ರೇಮ ಶ್ರದ್ಧೆಗಳು ಅತ್ಯಂತ ಸಹಜವಾಗಿ ಮೈದೋರಿವೆ. ಎಲ್ಲಿದ್ದರೂ ಸರಿಯೆ, ಎಂತಿದ್ದರೂ ಸರಿಯೆ, ಎಂದೆಂದಿಗೂ ನೀ ಕನ್ನಡವಾಗಿರು ಎಂದು ಕನ್ನಡಿಗರನ್ನು ಅರ್ತತೆಯಿಂದ ಅರ್ತಿಯಿಂದ ಪ್ರಾರ್ಥಿಸುತ್ತಾರೆ.

ಕುವೆಂಪು ಅವರು ಕನ್ನಡದ ವೀರಾಭಿಮಾನಿಯಾದರೂ ಅನ್ಯಭಾಷಾದ್ವೇಷಿಗಳಲ್ಲ. ಸ್ವಮಾತೃವಾತ್ಸಲ್ಯ ಪರಸ್ತ್ರೀದ್ವೇಷವಾಗಕೂಡದಷ್ಟೆ. ಕನ್ನಡದ ಮನೆಯಲ್ಲಿ ಕನ್ನಡಕ್ಕೆ ಯಾಜಮಾನ್ಯ ಸಲ್ಲಬೇಕು; ಉಳಿದ ಭಾಷೆಗಳು ಕನ್ನಡದ ಏಳ್ಗೆಗೆ ಸಹಾಯಕವಾಗಿ ಪೋಷಕವಾಗಿ ನಿಲ್ಲಬೇಕು. ಶಿಕ್ಷಣ ವ್ಯವಸ್ಥೆಯಲ್ಲಿ ಪರಭಾಷೆ ದ್ವಿತೀಯ ಸ್ಥಾನದಲ್ಲಿರಬೇಕೇ ಹೊರತು, ಅಗ್ರಸ್ಥಾನವಾಗಲಿ ವಿಶೇಷಾದ್ಯತೆಯಾಗಲಿ ಅದಕ್ಕೆ ಸಲ್ಲಕೂಡದು; ಇದು ಅವರ ವಾದದ ತಿರುಳು. ಇನ್ನೂರು ವರ್ಷಗಳಿಂದ ನಮ್ಮ ಜನ ಇಂಗ್ಲಿಷ್ ಕಲಿಯುತ್ತಿದ್ದರೂ, ಸಾವಿರಕ್ಕೊಬ್ಬ ಆ ಭಾಷೆಯಲ್ಲಿ ಪರಿಣತಿ ಸಂಪಾದಿಸಲು ಸಾಧ್ಯವಾಗಿಲ್ಲ. ಪಾಂಚವಾರ್ಷಿಕ ಯೋಜನೆಗಳಿಗೆ ಖರ್ಚು ಮಾಡುತ್ತಿರುವ ಹಣವನ್ನೆಲ್ಲ ಇಂಗ್ಲಿಷ್ ಭಾಷಾಬೋಧೆಗಾಗಿ ವಿನಿಯೋಗಿಸಿದರೂ, ಇಂಗ್ಲಿಷ್ ಭಾಷೆ ನಮ್ಮ ಜನರಿಗೆ ವಶವಾಗಲಾರದು; ಇಂಗ್ಲಿಷ್ ಭಾಷೆಯನ್ನು ಭಾಷೆಗಾಗಿ ಕಲಿಯಬೇಕೇ ಹೊರತು ಸಾಹಿತ್ಯಕ್ಕಲ್ಲ. ಸಾಹಿತ್ಯಕ್ಕೆ ನಮ್ಮ ಭಾಷೆ ಇದ್ದೇ ಇದೆ; ನಮ್ಮ ಜನ ಇಂಗ್ಲಿಷ್ ಭಾಷೆ ಮಾತ್ರವಲ್ಲ, ರಷ್ಯನ್ ಮತ್ತು ಜಪಾನಿ ಭಾಷೆಗಳನ್ನೂ ಕಲಿಯಬೇಕು; ಇದು ಅವರ ವಿಚಾರಸರಣಿ, ಬಹುಶಃ ಯಾವ ವಿದ್ಯಾತಜ್ಞ ನಾದರೂ ಒಪ್ಪಬಹುದಾದ ಭಾಷಾ ಸಮನ್ವಯ ಸೂತ್ರವಿದು.

ಸುಮಾರು ನಾಲ್ಕು ದಶಕಗಳಲ್ಲಿ ಕುವೆಂಪು ರಚಿಸಿರುವ ವಿಪುಲ ಕಾವ್ಯರಾಶಿ ಮತ್ತು ಕೇವಲ ನಾಲ್ಕೇನಾಲ್ಕು ವರ್ಷಗಳ ಅಧಿಕಾರಾವಧಿಯಲ್ಲಿ ಅವರು ಸಾಧಿಸಿರುವ ಕಾರ್ಯಸಿದ್ದಿಗಳು ಅವರ ‘ದೈತ್ಯಶಕ್ತಿ’ಯ ಮಹತ್ತು ಬೃಹತ್ತುಗಳಿಗೆ ಕನ್ನಡಿ ಹಿಡಿದಂತಿವೆ.

ಕುವೆಂಪು ಅವರು ಮೂಲತಃ ದಾರ್ಶನಿಕರು, ಆದರೆ ಅವರ ದಾರ್ಶನಿಕತೆ ಪುಸ್ತಕದ ಬದನೆಕಾಯಲ್ಲ; ಅದು ಅವರ ಪ್ರತಿಯೊಂದು ವ್ಯವಹಾರದಲ್ಲಿಯೂ ಹಾಸುಹೊಕ್ಕಾಗಿ ಸಮಾವೇಶಗೊಂಡಿದೆ. ನಾಲ್ಕಾರು ಉದ್ಗ್ರಂಥಗಳನ್ನೋದಿ ಅವುಗಳ ಸಾರಸಂಗ್ರಹ ರೂಪವಾದ  ಪ್ರಬಂಧವನ್ನೊ, ನಾಲ್ಕಾರು ಪಂಡಿತರು ಬರೆದುಕೊಟ್ಟ ಲೇಖನಮಾಲೆಯನ್ನೊ ಪಂಡಿತ ಮಂಡಲಿಯಲ್ಲಿ ಪಠಿಸಿ ಶಹಭಾಸ್‌ಗಿರಿ ಪಡೆಯುವ, ತಮ್ಮ ತತ್ವಶಾಸ್ತ್ರ ಪಾಂಡಿತ್ಯವನ್ನೆಲ್ಲ ಕೇವಲ ಪಾಠಪ್ರವಚನಗಳಲ್ಲಿಯೇ ಮುಗಿಸಿ, ಒಳಗೆ ಅನಾಚಾರವಿದ್ದರೂ ಮನೆಮುಂದೆ ವೃಂದಾವನ ನಿರ್ಮಿಸಿ ಮಾರ್ಜಾಲ ಧ್ಯಾನದಿಂದ ಜನರ ಕಣ್ಣಿಗೆ ಮಣ್ಣೆರಚಿ, ಮೂರು ಹೊತ್ತೂ ಕಪಟಾಚಾರಣೆ ವಿಷಯಲಂಪಟಿತ್ವ ಮತ್ತು ಅಸಂಯಮ ವರ್ತನೆಯಿಂದ ಜೀವನ ನಡೆಸುವ ಕಪಟ ವೇದಾಂತಿಗಳೇ ನಮ್ಮ ಸಮಾಜದಲ್ಲಿ ವಿಪುಲ ಸಂಖ್ಯೆಯಲ್ಲಿದ್ದಾರೆ. ಆದರೆ ಕುವೆಂಪು ಅಂಥ ವೇದಾಂತಿಗಳಲ್ಲ; ಅವರ ನುಡಿಯಂತೆಯೇ ಅವರ ನಡೆಯೂ ಮಡಿ. ಅವರ ಸಾಹಿತ್ಯ ಕೃತಿಗಳಲ್ಲಿ ದೋಷ ಕಂಡರೂ ಕಾಣಬಹುದು; ಅವರ ಜೀವನದಲ್ಲಂತು ದೋಷ ಕಾಣುವುದಿಲ್ಲ; ಕೃತಿಗಿಂತ ಕೃತಿಕಾರ ದೊಡ್ಡವನೆಂಬ ಸೂತ್ರವನ್ನು ಕುವೆಂಪು ಅವರಿಗೆ ಉಚಿತವಾಗಿ ಅನ್ವಯಿಸಬಹುದು.

ಹೀಗೆ ಮಹಾಕವಿಯಾಗಿ, ದಾರ್ಶನಿಕರಾಗಿ ಶಿಕ್ಷಣವೇತ್ತರಾಗಿ ವಿವಿಧ ರಂಗಗಳಲ್ಲಿ ಅಮೂಲ್ಯ ಸೇವೆ ಸಲ್ಲಿಸಿರುವ ಕುವೆಂಪು ಅವರಿಗೆ ಕೇಂದ್ರ ಸರ್ಕಾರ, ಮೈಸೂರು ವಿಶ್ವವಿದ್ಯಾನಿಲಯ, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ಣಾಟಕದ ಜನ ಅನೇಕ ರೀತಿಯಲ್ಲಿ ಗೌರವಾದರ ಸಲ್ಲಿಸಿದ್ದಾರೆ; ಕೇಂದ್ರ ಸಾಹಿತ್ಯ ಅಕಾಡೆಮಿ ಅವರ ಮಹಾಕಾವ್ಯಕ್ಕೆ ಬಹುಮಾನ ನೀಡಿತು; ಕೇಂದ್ರ ಸರ್ಕಾರ ಅವರಿಗೆ ‘ಪದ್ಮಭೂಷಣ’ ಪ್ರಶಸ್ತಿ ನೀಡಿತು; ಮೈಸೂರು ವಿಶ್ವವಿದ್ಯಾನಿಲಯ ಅವರಿಗೆ ಡಾಕ್ಟರೇಟ್ ಪದವಿ ಸಲ್ಲಿಸಿತು. ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ಣಾಟಕದ ಜನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಗೇರಿಸಿ ಅವರನ್ನು ಗೌರವಿಸಿತು. ಈಚೆಗೆ ಜ್ಞಾನಪೀಠ ಪ್ರಶಸ್ತಿಯನ್ನೂ ಅವರು ಪಡೆದರು.

ಇಷ್ಟಾದರೂ ಕುವೆಂಪು ಅವರ ಅಂತರ್ಮುಖಜೀವನ ನೀರವತೆ ಏಕಾಂತತೆಗಳನ್ನ ಪೇಕ್ಷಿಸುತ್ತದೆ. ಆಧ್ಯಾತ್ಮಿಕ ಸಾಧನೆ ಮತ್ತು ಅದರ ಅಭಿವ್ಯಕ್ತಿಗೆ ನೆರವಾಗುವ ಕಾವ್ಯ ಜೀವನ ಈ ಮಹಾಕವಿಯ ಜೀವನದರ್ಶನ ಕಣ್ಣುಗಳಾಗಿವೆ.