ವಿಶಾಲ ವಿಶ್ವದ ಸಾಹಿತ್ಯದಾಗಸದತ್ತ ದೃಷ್ಟಿಯನ್ನು ಹಾಯಿಸಿದಾಗ, ಅಲ್ಲಿ ಸಾಹಿತ್ಯದ ಪ್ರಕಾರಗಳಾದ ಕಾವ್ಯದಲ್ಲೋ, ಕಥಾಕ್ಷೇತ್ರದಲ್ಲೋ, ಕಾದಂಬರಿ ಪ್ರಬಂಧ ಕ್ಷೇತ್ರಗಳಲ್ಲೋ ನೈಪುಣ್ಯ ಪಡೆದ ಹಲವಾರು ಪ್ರತಿಭಾವಂತ ಸಾಹಿತಿಗಳು ಕಾಣಸಿಗುತ್ತಾರೆ. ವಿಶ್ವದ ವಿವಿಧ ಭಾಷೆಗಳ ಸಾಹಿತ್ಯೇತಿಹಾಸವನ್ನೊಂದು ಸಲ ಅವಲೋಕಿಸಿದಾಗ, ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸಮಾನ ನೈಪುಣ್ಯತೆಯನ್ನು ಪಡೆದ ಸಾಹಿತಿಗಳು ಕಾಣಸಿಗುವುದು ತೀರ ದುರ್ಲಭ. ಆಧುನಿಕ ಮಹಾಯುದ್ಧಗಳ ಮೂಲಕವಾಗಿ ವಿಶ್ವದ ಅಸ್ತಿತ್ವವೇ ಗಂಡಾಂತರ ದಲ್ಲಿದ್ದ ಕಾಲದಲ್ಲಿಯಂತೂ ಮಹಾಕಾವ್ಯಗಳ ಜನನ ಅಸಾಧ್ಯವಾದ ಸಂಗತಿಯಾಗಿದೆ. ಆದರೆ, ಕನ್ನಡವು ಈ ವಿಷಯದಲ್ಲಿ ಹೆಮ್ಮೆಪಟ್ಟುಕೊಳ್ಳಬೇಕಾಗಿದೆ. ವಿಶ್ವದಲ್ಲಿಯ ಯಾವುದೇ ಸಾಹಿತ್ಯಕ್ಕೆ ಸರಿತೂಗುವ ಸಾಹಿತ್ಯವನ್ನು ನೀಡುವಲ್ಲಿ ಕನ್ನಡವು ಸಮರ್ಥವಾಗಿದೆ. ಕನ್ನಡದ ಮಹಾಕಾವ್ಯದಲ್ಲಿ ಪ್ರಾಮಾಣಿಕವಾಗಿ ಕನ್ನಡಿಗರ ಆದರ್ಶ, ತತ್ತ್ವಜ್ಞಾನಗಳು ಪ್ರತಿಬಿಂಬಿತ ವಾಗಿವೆ. ಈ ಶತಮಾನದ ಆಧುನಿಕ ಯುಗದ ಕನ್ನಡ ಸಾಹಿತ್ಯದ ಕೆಲವೇ ಕೆಲವು ಹೆಸರುಗಳಲ್ಲಿ ಒಡೆದು ಕಾಣುವ ಹೆಸರೆಂದರೆ, ಪದ್ಮಭೂಷಣ ಡಾಕ್ಟರ್ ಕೆ.ವಿ. ಪುಟ್ಟಪ್ಪನವರು, ಅಥವಾ ಜನಪ್ರಿಯ ಹೆಸರಾದ “ಕುವೆಂಪು” ಅವರು. “ಕುವೆಂಪು” ಕನ್ನಡದ ಮನೆ ಮನೆಯಲ್ಲಿ ಚಿರಪರಿಚಿತವಾದ ಶಬ್ದವಾಗಿದೆ. ಅವರು ಬೆರಳಾಡಿಸದ ವಾಙ್ಮಯದ ವಿಷಯವೇ ಇಲ್ಲ. ನಾಲ್ಕು ದಶಕಗಳಿಂದ ಹೊರಹೊಮ್ಮಿದ ಅವರ ಭಾವನಾತ್ಮಕ, ಬೌದ್ದಿಕ ಶಕ್ತಿಯು ಸುಂದರ ಕಾವ್ಯರೂಪದಲ್ಲಿ ಹೊಳೆಯಾಗಿ ಹರಿದುಬಂದಿದೆ. ಈ ವ್ಯಕ್ತಿ ರಚಿಸಿದ ಅಮೌಲ್ಯ-ಅಗಣಿತ ಸಾಹಿತ್ಯರಾಶಿಯನ್ನು ಕಂಡು, ಜನತೆ ಆಶ್ಚರ್ಯದಿಂದ ಬೆರಳು ಕಚ್ಚದೇ ಇರಲಾರದು.

ಮಲೆನಾಡಿನ ಮಧ್ಯದಲ್ಲಿ ಕುಪ್ಪಳಿ ಎಂಬುದೊಂದು ಚಿಕ್ಕ ಕುಗ್ರಾಮ. ಕೊಪ್ಪ ಮತ್ತು ತೀರ್ಥಹಳ್ಳಿಯ ಹಾದಿಯ ಮೇಲೆ ತೀರ್ಥಹಳ್ಳಿಯಿಂದ ೬ ಮೈಲಿ ದೂರದಲ್ಲಿ ಈ ಊರು ನೆಲಸಿದೆ. ಮೈಸೂರು ಪ್ರಾಂತ್ಯದ ಪಶ್ಚಿಮ ದಿಕ್ಕಿನಲ್ಲಿ ಮಲೆನಾಡು ಗುಡ್ಡಗಾಡುಗಳಿಂದ ತುಂಬಿಕೊಂಡು ಪವಡಿಸಿದೆ. ದಕ್ಷಿಣೋತ್ತರವಾಗಿ ಸಹ್ಯಾದ್ರಿಯು ಚಾಚಿಕೊಂಡಿದೆ. ನಿಸರ್ಗವು ತನ್ನೆಲ್ಲ ಸೌಂದರ್ಯವನ್ನು ಏಕೀಕೃತಗೊಳಿಸಿ ಈ ಭಾಗದಲ್ಲಿ ಅದನ್ನು ಸೂರೆಗೊಂಡಂತಿದೆ. ಸುಂದರವಾದ ಗಿರಿಕಂದರಗಳು, ಮೋಹಕ ಶಿಖರಗಳು, ಸ್ಫೂರ್ತಿ ನೀಡುವಂತಿರುವ ಗಗನ ಚುಂಬಿತ ವೃಕ್ಷರಾಜಿಗಳು, ಭೋರ್ಗರೆವ ನೀರ ಝರಿಗಳು, ಪಕ್ಷಿಗಳ ಕಿಲಕಿಲಾಟ, ಮನದುಂಬುವ ಸೂರ್ಯೋದಯ ಸೂರ್ಯಾಸ್ತಗಳು, ಕಣ್ಮನ ತಣಿಸುವ ಅಡಿಕೆ ತೋಟಗಳು, ಮೈಲು ಮೈಲಗಲದ ಹಸಿರು ಹುಲ್ಲುಗಾವಲು, ಇಡೀ ಭೂಭಾಗವೇ ಸೌಂದರ್ಯದ ನೀರಲ್ಲಿ ಮಿಂದಂತೆ ಈ ಮಲೆನಾಡು ಸೌಂದರ್ಯದ ತವರೂರಾಗಿ ನಿಂತುಕೊಂಡಿದೆ. ಕುಪ್ಪಳಿ ಕುಗ್ರಾಮ, ಈ ಸೌಂದರ್ಯರಾಶಿಯ ತೊಡೆಯ ಮೇಲೆ ಮಲಗಿದಂತೆ ನೆಲೆಸಿದೆ.

ಅವಿಭಕ್ತ ಕುಟುಂಬದ ಮನೆತನಕ್ಕೆ ಸೇರಿದ ಕುವೆಂಪುರವರ ತಂದೆ ತಾಯಿಗಳಾದ ವೆಂಕಟಪ್ಪಗೌಡ ಹಾಗೂ ಸೀತಮ್ಮನವರು ತುಂಬಾ ಸುಸಂಸ್ಕೃತರು. ಮನೆತನದ ಇನ್ನುಳಿದ ಮಕ್ಕಳೊಂದಿಗೆ, ಕುವೆಂಪು ಕೂಲಿಮಠದ  ಶಾಲೆಯಲ್ಲಿ ಮರಳಿನಲ್ಲಿ ಅಕ್ಷರಾಭ್ಯಾಸವನ್ನು ಪ್ರಾರಂಭಿಸಿದರು. ಇಂಥ ಶಾಲೆಗಳಲ್ಲಿ ಸಾಮಾನ್ಯವಾಗಿ, ದಕ್ಷಿಣ ಕನ್ನಡ ಜಿಲ್ಲೆಯ ಜನರೇ ಶಿಕ್ಷಕರಾಗಿರುತ್ತಿದ್ದರು. ಈ ಶಿಕ್ಷಕರಿಗೆ ಬರವಣಿಗೆಯ ಜ್ಞಾನವಿಲ್ಲದಿರುವದೊಂದು ಆಶ್ಚರ್ಯದ ಸಂಗತಿಯಾಗಿದೆ. ಸುದೈವದಿಂದ, ಕುವೆಂಪು ಮನೆತನದಲ್ಲಿ ತಾಡವೋಲೆ ಗ್ರಂಥಗಳನೇಕವಿದ್ದವು. ಹಬ್ಬ ಹುಣ್ಣಿಮೆಗಳ ಕಾಲದಲ್ಲಿ ಮನೆಯಲ್ಲಿ ಹಲವಾರು ಬಂಧು ಬಳಗದವರು ಕೂಡಿದ ಸಂದರ್ಭದಲ್ಲಿ ಈ ತಾಡವೋಲೆ ಗ್ರಂಥಗಳಲ್ಲಿರುವ ಜೈಮಿನಿ ಭಾರತದ ಭಾಗವನ್ನೋ, ಗದುಗಿನ ಭಾರತದ ಭಾಗವನ್ನೋ ತೊರವೆ ರಾಮಾಯಣದ ಭಾಗವನ್ನೋ ಓದಲಾಗುತ್ತಿದ್ದಿತು. ಮನೆಯಲ್ಲಿ ಮಕ್ಕಳು ಈಗೀತೆಗಳನ್ನು ಶ್ರದ್ಧೆ ಭಕ್ತಿಗಳಿಂದ ಕಿವಿಗೊಟ್ಟು ಕೇಳುತ್ತಿದ್ದರು. ಮಠದಲ್ಲಿಯ ಕ್ರೈಸ್ತ ಶಿಕ್ಷಕರೊಬ್ಬರು ಬೈಬಲ್ಲಿನ ಕತೆಗಳನ್ನು ಆಗಾಗ ಹೇಳುತ್ತಿದ್ದುದರಿಂದ, ಈ ಕವಿಯ ಬಾಲ ಮನಸ್ಸಿನ ಮೇಲೆ ಬೈಬಲ್ಲೂ ತನ್ನ ಪ್ರಭಾವವನ್ನು ಬೀರಿತು.

ಸಮರ್ಥ ಶಿಕ್ಷಕರ ಅಭಾವದಿಂದಾಗಿ ಕುವೆಂಪು ಈ ಕೂಲಿಮಠದ ನಾಲ್ಕು ಗೋಡೆಗಳ ನಡುವೆ ಯಾವುದೇ ಪ್ರಗತಿಯನ್ನು ಸಾಧಿಸಲಾರದೇ ಹೋದರು. ಆದರೂ ಸ್ವಭಾವ ಜನ್ಯವಾಗಿ ವಿಲಕ್ಷಣ ಬುದ್ದಿ ಸಾಮರ್ಥ್ಯವನ್ನು ಪಡೆದ ಕುವೆಂಪು ಮಲೆನಾಡಿನ ನಿಸರ್ಗದಲ್ಲಿಯೆ ತನ್ನ ತಾಯಿ, ಶಿಕ್ಷಕ, ಮತ್ತು ಮಾರ್ಗದರ್ಶಕನನ್ನು ಕಂಡುಕೊಂಡರು. ತನ್ನ ನಿಜವಾದ ಉಪಾಸಕನನ್ನು ಕಾಯುತ್ತಿದ್ದಳೆಂಬಂತೆ, ನಿಸರ್ಗದೇವತೆಯೂ ತತ್ಪರಳಾಗಿ ಈ ಬಾಲಕನ ಮನಸ್ಸಿನ ಮೇಲೆ ಪರಿಣಾಮ ಬೀರಿ ಜ್ಞಾನಾರ್ಜನೆಯ ಪ್ರಚೋದನೆಯನ್ನು ನೀಡಿದಳು. ತನ್ನ ಹೃದಯಾಂತರಾಳದಲ್ಲಿ ಹುದುಗಿದ ಅಗಾಧ ಶಕ್ತಿ ಸಾಮರ್ಥ್ಯದ, ಪ್ರೀತಿ ವಾತ್ಸಲ್ಯಗಳ ಅರಿವನ್ನು ಮೂಡಿಸಿ, ಈ ಉಪಾಸಕನ ಮೇಲೆ ತನ್ನ ಆಶೀರ್ವಾದ ನೀಡಿದಳು. ಕೊನೆ ಮೊದಲಿಲ್ಲದ ಜಗತ್ತೇ ಇವರ ಪಾಲಿಗೆ ಶಾಲೆಯಾಯಿತು. ವಿವಿಧ ವರ್ಣಗಳ ಸಸ್ಯಗಳಿಂದಲೂ ವನ್ಯಮೃಗಗಳಿಂದಲೂ ತುಂಬಿಕೊಂಡ ಉಜ್ವಲ ವನರಾಶಿ, ರಮಣೀಯವಾದ ಪರ್ವತಾವಳಿ, ಸದಾಕಾಲವೂ ಧ್ವನಿಗೈಯುತ್ತ ಹರಿವ ಹೊಳೆಗಳು, ಅಸಂಖ್ಯ ಪಕ್ಷಿಸಮೂಹ, ಕಾಂತಿ ತುಂಬಿದ ಸೂರ್ಯ, ತಂಬೆಳಕು ನೀಡುವ ಚಂದ್ರನಿಂದೊಡಗೂಡಿದ ಬಾನು – ಇವೇ ಈ ಬಾಲಕವಿಯ ಗೆಳೆಯರೂ ಗುರುಗಳೂ ಕೈದೀವಿಗೆಗಳೂ ಆಗಿದ್ದವು. ತೀರ ಚಿಕ್ಕ ವಯಸ್ಸಿನಲ್ಲಿಯೆ ಈ ಬಾಲಕನು ಕವಿ ಶೈಲದಲ್ಲೂ, ನವಿಲುಕಲ್ಲಿನಲ್ಲೂ, ಸಿಬ್ಬಲಗುಡ್ಡದಲ್ಲಿಯೂ ಗಂಟೆಗಟ್ಟಲೆ ದಿನವಿಡೀ ಕುಳಿತುಕೊಂಡು ಕ್ಷಿತಿಜದತ್ತ ನೋಡುತ್ತ, ಬಾಹ್ಯಜಗತ್ತನ್ನು ಮರೆತುಬಿಡುತ್ತಿದ್ದನು.

ಕುವೆಂಪು ತಮ್ಮ ಪ್ರಾಥಮಿಕ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಮುಂದುವರೆಸಿದರು. ಅಲ್ಲಿಯೇ ಅವರಲ್ಲಿ ಓದಿನ ಅಭಿರುಚಿ ಬೆಳೆಯತೊಡಗಿತು. ಕೈಗೆ ದೊರಕಿದ ಪುಸ್ತಕಗಳನ್ನು ಓದಿ ಮುಗಿಸುವದಲ್ಲದೆ ಜ್ಞಾನಾರ್ಜುನೆಯ ಉತ್ಕಟ ಇಚ್ಛೆಯಿದ ಆ ಸಣ್ಣ ಊರಿನ ವಾಚನಾಲಯದ ಪುಸ್ತಕಗಳನ್ನೆಲ್ಲವನ್ನೂ ತಿರುವಿ ಹಾಕಿದರು.

ಈ ನಿಸರ್ಗದ ಪ್ರೀತಿಯ ಮಗುವಿಗೆ ಹಾಲುಣಿಸಿ ಜೀವ ತುಂಬಿದಂತಹ ಹುಟ್ಟೂರಿನಿಂದ ತಪ್ಪಿಸಿ, ಅಷ್ಟೇ ಪವಿತ್ರತಮವಾದ, ಹೊಸ ಬಗೆಯ ವಾತಾವರಣದ ಪಟ್ಟಣದ ಜೀವನದ ಮಧ್ಯದಲ್ಲಿ ಈ ಬಾಲಕನನ್ನು ದೈವವು ತಂದಿರಿಸಿತು. ವೆಸ್ಲಿಯನ್ ಮಿಶನ್ ಹೈಸ್ಕೂಲಿನಿಂದ ಕುವೆಂಪು ಉತ್ತಮ ರೀತಿಯಲ್ಲಿ ಮಾಧ್ಯಮಿಕ ಶಿಕ್ಷಣವನ್ನು ಮುಗಿಸಿ, ಅಲ್ಲಿಯ ಶಿಕ್ಷಕವೃಂದಕ್ಕೆ ತಮ್ಮಲ್ಲಿ ಹುದುಗಿದ ಅಪ್ರತಿಮಶಕ್ತಿಯ ಪರಿಚಯ ಮಾಡಿಸಿದರು. ಈ ಶಿಕ್ಷಕವೃಂದವು ಈ ಬಾಲಕನು ಮುಂದೆ ಮಹಾವ್ಯಕ್ತಿಯಾಗುವನೆಂದು ಮೊದಲೇ ಮನಗಂಡಿದ್ದರು. ಮೈಸೂರಿನ ಚಾಮುಂಡಿಬೆಟ್ಟ, ಲಲಿತಾದ್ರಿ, ಥಂಡೀಸಡಕ, ಕುಕ್ಕನಹಳ್ಳಿಕೆರೆ ಮುಂತಾದುವುಗಳು ಈ ಬಾಲಕವಿಗೆ ಸ್ಫೂರ್ತಿಯ ಸೆಲೆಗಳಾಗಿ ಪರಿಣಮಿಸಿದವು. ಇವು ಈ ಬಾಲಕವಿಗೆ ದೈನಂದಿನ ಓಡಾಟದ ಸ್ಥಳಗಳಾದವು. ಇವೇ ಸ್ಥಳಗಳಲ್ಲಿ ಕುವೆಂಪುವಿನಲ್ಲಿ ಕವಿತ್ವ ಹೊರಹೊಮ್ಮ ತೊಡಗಿತು. ಮೈಸೂರಿನ ಸಾರ್ವಜನಿಕ ವಾಚನಾಲಯವು ಕುವೆಂಪುವಿಗೆ ದೇವಮಂದಿರವಾಗಿ ಗೋಚರಿಸಿತು. ಎಡೆಬಿಡದೆ ದಿನವೂ ಅಲ್ಲಿಗೆ ಹೋಗಿ ಬರುವುದು ಒಂದು ಧಾರ್ಮಿಕ ಕಾರ್ಯದಷ್ಟು ಪವಿತ್ರ ಎನ್ನುವ ಭಾವನೆ ಅವರಲ್ಲಿ ಮನೆಮಾಡಿಕೊಂಡಿತು. ಆಂಗ್ಲ ಸಾಹಿತ್ಯದ ಪ್ರತಿಭಾವಂತ ಸಾಹಿತಿಗಳಾದ ಷೇಕ್ಸ್‌ಪಿಯರ್, ಮಿಲ್ಟನ್, ವಡರ್ಸ್‌ವರ್ಥ್, ಶೆಲ್ಲಿ ಮುಂತಾದ ಅನೇಕರನ್ನು ಜ್ಞಾನಾರ್ಜನೆಯ ದೃಷ್ಟಿಯಿಂದಲೂ ಆಂತರಿಕ ಸ್ಫೂರ್ತಿಯಿಂದಲೂ ಕುವೆಂಪು ಇಲ್ಲಿಯೇ ಅಭ್ಯಸಿಸಿದರು. ಶ್ರೀರಾಮಕೃಷ್ಣ ಪರಮಹಂಸರು ಮತ್ತು ವಿವೇಕಾನಂದರ ಜೀವನ ಚರಿತ್ರೆ-ಉಪದೇಶಗಳನ್ನು ಅಭ್ಯಸಿಸಿದಾಗಲಂತೂ ಕುವೆಂಪುವಿಗೆ ತಮ್ಮ ಆತ್ಮವೇ ಸಂಪೂರ್ಣ ವಾಗಿ ಪರಿವರ್ತನಗೊಂಡು, ಕಣ್ಣೆದುರಿನಲ್ಲಿ ಅಸಂಖ್ಯಾತ ಜ್ಞಾನದೇಗುಲಗಳ ಬಾಗಿಲೇ ತೆರೆದಂತೆ ಭಾಸವಾಯಿತು; ಈಗಲೇ ಅವರ ಜ್ಞಾನಾರ್ಜುನೆಯ ಹಸಿವು ಹಿಂಗತೊಡಗಿತು. ಅವರಲ್ಲಿದ್ದ ಕ್ರಿಯಾಶಕ್ತಿ ಕಾರ್ಯರೂಪಕ್ಕಿಳಿಯತೊಡಗಿತು. ತಮ್ಮಲ್ಲಡಗಿದ್ದ ಪ್ರಚಂಡಶಕ್ತಿಯ ಅರಿವು ಅವರಿಗಾಗತೊಡಗಿತು. ಮಾಧ್ಯಮಿಕ ಶಾಲೆಯಲ್ಲಿದ್ದಾಗಲೇ ಕುವೆಂಪು, “ಕಿಶೋರ ಚಂದ್ರವಾಣಿ” ಮತ್ತು “ಕವೀಂದ್ರ” ಎಂಬ ನಾಮಾಂಕಿತದಿಂದ ಕೆಲವು ಆಂಗ್ಲ ಪದ್ಯಗಳನ್ನು ಬರೆಯತೊಡಗಿದರು. ಈ ಪದ್ಯಗಳ ಮೇಲೆ, ಆಂಗ್ಲ ಕವಿಗಳಾದ ಮಿಲ್ಟನ್ ಮತ್ತು ವರ್ಡ್ಸ್‌ವರ್ಥರ ಛಾಯೆ ತುಂಬಾ ಪಸರಿಸಿತ್ತು. ಉದಾಹರಣೆಗಾಗಿ Beginner’s Muse (೧೯೨೧ರಲ್ಲಿ ಪ್ರಕಾಶಿತ)ದಲ್ಲಿಯ ಕೆಲಸಾಲುಗಳನ್ನು ಅವಗಾಹನೆಗಾಗಿ ಕೊಡುತ್ತಿದ್ದೇನೆ :

Dishearten not my frineds this bard unknown.
Who holds an alien harp and not his own.
And tries to string its many chords before
A crowd immense…..

ಮುಂದಿನ ಎರಡು ಪಲ್ಲವಿಗಳು (Ode to the Cuckoo) ಈ ಬಾಲಕವಿಯ ವಿಶಿಷ್ಟ ಪ್ರಕಾರದ ಕಾವ್ಯಶಕ್ತಿಯ ಸದೃಢತೆಯನ್ನು ತೋರಿಸುತ್ತವೆ :

O bird of spring, demure, divine.
Descended from the heaven.
Upon this earth for ever remain.
Thou art to mortals given.
The winters turn to blithesome springs.
By those alluring notes.
And years Shall glide upon thy wings.
And woe, with Sorrow floats.

ಇದೇ ಸಮಯದಲ್ಲಿ ದೈವವಶಾತ್ ಮೈಸೂರಿಗೆ ಬಂದ ಐರ್ಲೆಂಡಿನ ಕವಿ ಜೆ.ಎಚ್. ಕಸಿನ್ಸ್‌ರವರನ್ನು ಸಂಧಿಸುವ ಸುಯೋಗ ಕುವೆಂಪುವಿಗೆ ಒದಗಿ ಬಂದಿತು. ಆಗ ತಾವು ಅದುವರೆಗೂ ಬರೆದ ಆಂಗ್ಲ ಕವನಗಳನ್ನು ಅವರೆದುರಿನಲ್ಲಿ ತೋರಿಸಿದರು. ಕುತೂಹಲ ಪೂರ್ಣರಾಗಿ, ಮೆಚ್ಚುಗೆಯ ವಿಶ್ವಾಸದೊಂದಿಗೆ ಕಸಿನ್ಸರು ಕವನಗಳನ್ನು ತಿರುವಿ ಹಾಕಿ “ನೀ ನು ಕನ್ನಡದಲ್ಲೇಕೆ ಬರೆಯಬಾರದು?” ಎಂದು ಸವಾಲು ಹಾಕಿದರು. ಅದಕ್ಕೆ ಕುವೆಂಪು ತತ್‌ಕ್ಷಣವೇ “ಪ್ರಚೋದನಾತ್ಮಕ ವಿಚಾರಸರಣಿಯನ್ನೂ ಅರ್ಥಪೂರ್ಣವಾದ ಕಲ್ಪನೆಗಳನ್ನೂ ಸೂಕ್ಷ್ಮ ಭಾವನೆಗಳನ್ನೂ ಸರಿಯಾದ ರೀತಿಯಲ್ಲಿ ಪ್ರಕಟಪಡಿಸಲು ಕನ್ನಡದ ಭಾಷೆ ಪರಿಪಕ್ವಗೊಂಡಿಲ್ಲ”ವೆಂದುತ್ತರಿಸಿದರು. ಅದಕ್ಕೆ ಪ್ರತಿಯಾಗಿ ಕಸಿನ್ಸರು “ಯಾವ ಭಾಷೆಯ ವಿಕಾಸವು ಸಂಕುಚಿತವಾಗಿಲ್ಲವೆಂದೂ, ಅದನ್ನು ಬಳಸುವ ವ್ಯಕ್ತಿಗಳ ಶಕ್ತಿಯನ್ನು ಆ ಭಾಷೆಯೂ ಅವಲಂಬಿಸಿರುತ್ತದೆ” ಎಂದೂ ತಮ್ಮ ವಾದವನ್ನು ವಿವರಿಸಿದರು. ಆ ವಿದ್ವಾಂಸ ಕವಿಯ ವಿಚಾರಸರಣಿಯನ್ನು ಮನನಮಾಡಿಕೊಂಡು, ಅವರ ವಾದವನ್ನು ಒಪ್ಪಿ, ತಮ್ಮ ರೂಮಿಗೆ ತೆರಳಿ, ತಾವು ಬರೆದ “Spring” ಕವಿತೆಯನ್ನು ಕನ್ನಡಕ್ಕೆ ಭಾಷಾಂತರಿಸಿ, ತಾವೇ ಅದನ್ನು ಹಾಡಿಕೊಂಡು ನೋಡಿದರು. ಅವರು ತಮ್ಮ ಕೋಣೆಯನ್ನು ಪ್ರವೇಶಿಸಿದಾಗ, ಅಲ್ಲಿಯ ವಾತಾವರಣವು ಅವರಲ್ಲಿ ಸಂಚಯಗೊಂಡ ರಚನಾತ್ಮಕ ಶಕ್ತಿಯನ್ನು ಹೊರಗೆಡಹಲು ಸಹಾಯಕವಾಗಿ ನಿಂತಂತೆ ಭಾಸವಾಯಿತು.

ಅಂದು ಕುವೆಂಪು ಜೀವನದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಟ್ಟ ದಿನ. ಕುವೆಂಪು ಸಾಹಿತ್ಯ ಜೀವನದಲ್ಲಿ ಕ್ರಾಂತಿಕಾರಕವಾದ ದಿನ. ಅಂದೇ ಅವರಿಗೆ ತಮ್ಮಲ್ಲಡಗಿದ್ದ “ದೈವದ ಕೊಡುಗೆ”ಯ ಅರಿವು ಉಂಟಾಯಿತು. ತಮ್ಮಲ್ಲಿದ್ದ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಶಕ್ತಿಯನ್ನು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿ, ಆ ಕೃಷಿಯ ಮುಖಾಂತರ ಸತ್ಯದ ಸಾಕ್ಷಾತ್ಕಾರ ವನ್ನು ಪಡೆಯಲೆತ್ನಿಸಿದರು. ಮಮ್ಮಟನು ‘ಕಾವ್ಯ ಪ್ರಕಾಶ’ದಲ್ಲಿ ಕಾವ್ಯದ ಬಳಕೆಯನ್ನು ಹಲವಾರು ರೀತಿಯಲ್ಲಿ ವಿವರಿಸಿದಂತೆ, ದುಷ್ಕರ್ಮಗಳನ್ನು ತೊಳೆದು ಹಾಕಲು ಕಾವ್ಯವೇ ಸಾಧನ ಎಂದಿದ್ದಾನೆ.

ಆದರೆ ಕುವೆಂಪುರವರ ವಿಚಾರಸರಣಿಯಲ್ಲಿ, ಕಾವ್ಯವು ಮೋಕ್ಷವಲ್ಲ-ಕಾವ್ಯದ ಮೂಲ ಉದ್ದೇಶ ‘ಸತ್ಯಂ ಶಿವಂ ಸುಂದರಂ’ ಆಗಿದೆ. ಅಂದರೆ ಕಾವ್ಯವು ನೈತಿಕ ಉಪದೇಶಗಳನ್ನು ನೀಡುವ ಹೊತ್ತಿಗೆಯಲ್ಲ, ಕಾವ್ಯವು ಕಲೆಯ ಆವಿಷ್ಕಾರವನ್ನು ಪಡೆದ ಭಾಷೆ-ಭಾವಗಳ ಸುಂದರ ಸಮ್ಮಿಲನವಾಗಿದೆ. ಓದುಗನು ಅವುಗಳ ಮೂಲಕವಾಗಿ ಸೌಂದರ್ಯವನ್ನು ಸವಿಯುತ್ತಾನೆ. ಆಗ ನೈತಿಕ ಮೌಲ್ಯ ತಾನೇ ತಾನಾಗಿ ಓದುಗನ ಮನವನ್ನು ಆವರಿಸುತ್ತದೆ, ಆದುದರಿಂದ ಅವರ ಪ್ರತಿಯೊಂದು ಕೃತಿಯಲ್ಲಿ-ಅದು ಕಾವ್ಯವೇ ಆಗಿರಲಿ, ನಾಟಕವೇ ಇರಲಿ, ಕತೆ ಅಥವಾ ಪ್ರಣಯಗೀತೆಯೇ ಆಗಲಿ, ಭಾವನಾತ್ಮಕ ಮತ್ತು ರಹಸ್ಯಾತ್ಮಕ ವಾತಾವರಣವೇ ಉಸಿರು ತುಂಬಿ ನಿಂತುಕೊಂಡಿರುತ್ತದೆ. ಬಾಲ್ಯದಿಂದಲೂ, ನಿಸರ್ಗದ ಬಗೆಗೆ ಒಡಮೂಡಿದ ಒಲವು, ಪೌರ್ವಾತ್ಯ. ಪಾಶ್ಚಿಮಾತ್ಯ ತತ್ತ್ವಶಾಸ್ತ್ರಗಳ ಆಳವಾದ ಅಭ್ಯಾಸ ಮತ್ತು ದೇವರಲ್ಲಿಯ ಅಪಾರ ನಂಬಿಕೆಗಳ ಮೂಲಕವಾಗಿ ಅವರಲ್ಲಿ ಈ ಬಗೆಯ ದೃಷ್ಟಿಕೋನ ಮೂಡಿತೆಂದು ಧಾರಾಳವಾಗಿ ಹೇಳಬಹುದು. ಸ್ವಲ್ಪದರಲ್ಲಿಯೇ ಹೇಳಬೇಕೆಂದರೆ, ಕುವೆಂಪು ಕೇವಲ “ಸತ್ಯ”ದ ಅನ್ವೇಷಣೆಯಲ್ಲಿ ತೊಡಗಿದ್ದ ಒಬ್ಬ ವ್ಯಕ್ತಿ.

ಕಾವ್ಯ ಮತ್ತು ತತ್ವಗಳು ಅವರ ಬಾಳ ಬೆಳಕಿನ ಉಜ್ವಲ ಶಕ್ತಿಗಳಾಗಿ ನಿಂತುಕೊಂಡಿವೆ. ಆದರೆ ಇವೆರಡು ಶಕ್ತಿಗಳು ಅವರ ತಲೆಯಮೇಲೆ ಆಗಸದಿಂದ ಆಕಸ್ಮಿಕವಾಗಿ ಉದುರಿ ಬಿದ್ದಿಲ್ಲ. ತೀರ ಶೈಶವಾವಸ್ಥೆಯಲ್ಲಿಯೇ ಅವರ ನರನಾಡಿಗಳಲ್ಲಿ ಈ ಶಕ್ತಿಗಳು ರಕ್ತದ ಜತೆಯಲ್ಲಿ ಒಂದಾಗಿ ಹರಿದಾಡಿವೆ. ಬಾಲ್ಯಾವಸ್ಥೆಯಲ್ಲಿ, ‘ರಾಮಾಯಣ’ ಮಹಾಭಾರತ, ಗೀತೆ ಮತ್ತು ಉಪನಿಷತ್ತುಗಳೂ, ಮುಂದೆ ತಾರುಣ್ಯಾವಸ್ಥೆಯಲ್ಲಿ ವರ್ಡ್ಸ್‌ವರ್ಥ್, ಷೆಲ್ಲಿ, ಟಾಲ್ ಸ್ಟಾಯ್, ಕಾಂಟ್, ಸ್ಪಿನೋಝಾ, ನೀಷೆ ಅವರಲ್ಲದೆ, ಇನ್ನೂ ಹಲವಾರು ಹಿರಿಯ ಕವಿಗಳೂ, ತತ್ತ್ವವೇತ್ತರೂ, ಶ್ರೀ ರಾಮಕೃಷ್ಣ ಪರಮಹಂಸರು, ವಿವೇಕಾನಂದರು, ಗಾಂಧೀಜಿ ಯವರೂ, ಗ್ರಹಸ್ಥಾಶ್ರಮದ ಪೂರ್ವ ಭಾಗದಲ್ಲಿಯೇ ಶ್ರೀ ಅರವಿಂದರೂ ಪ್ರಭಾವವನ್ನು ಬೀರಿ ಅವರ ಜೀವನದ ದಿಕ್ಕನ್ನೇ ಬದಲಿಸಿ, ಅದಕ್ಕೊಂದು ಕ್ರಮಬದ್ಧತೆಯನ್ನು ರೂಪಿಸಿ, ಕುವೆಂಪುರವರನ್ನು “ತತ್ವವೇತ್ತ ಕವಿ”ಯನ್ನಾಗಿ ಮಾಡಿದರು. ಅವರು ಇಂಟರ್‌ಮೀಡಿಯೇಟ್ ಕ್ಲಾಸಿನಲ್ಲಿ ಸಸ್ಯಶಾಸ್ತ್ರವನ್ನು ಕಲಿತರೂ, ಬಿ.ಎ. ಪರೀಕ್ಷೆಗೆ ತತ್ವಶಾಸ್ತ್ರವನ್ನೇ ಆಯ್ದುಕೊಂಡರು. ಮುಂದೆ ಕನ್ನಡ ವಿಷಯವನ್ನು ತೆಗೆದುಕೊಂಡು ಎಂ.ಎ. ಪದವಿಯನ್ನು ಪಡೆದರು.

ಕನ್ನಡದಲ್ಲಿಯ ಇವರ ಮೊಟ್ಟಮೊದಲಿನ ಕಥನ ಕವನವೆಂದರೆ, “ಅಮಲನ ಕಥೆ” ಯಾಗಿದೆ. ಕನ್ನಡದಲ್ಲಿಯ ಸುಪ್ರಸಿದ್ಧ “ಗೋವಿನ ಕಥೆ”ಯ ಧಾಟಿಯ ಮೇಲೆಯೇ ಇದನ್ನು ರಚಿಸಲಾಯಿತು. ಈ ಕವನದಲ್ಲಿ ನೀತಿಯ ನುಡಿ ಇದೆ. ತಮ್ಮ ಆಂಗ್ಲ ಕವಿತೆಯಾದ “ಸ್ಪ್ರಿಂಗ್”ದ ಕನ್ನಡ ಭಾಷಾಂತರಕ್ಕಾಗಿ ಅಂದು ಎತ್ತಿದ ತಮ್ಮ ಲೆಕ್ಕಣಿಕೆಯನ್ನು ಇಂದಿಗೂ ಅವಿಶ್ರಾಂತವಾಗಿ ದಣಿವು ಇಲ್ಲದೆ ನಡೆಸುತ್ತಿದ್ದಾರೆ. ಇಷ್ಟಾದರೂ ಅವರ ಕಾವ್ಯಸ್ಫೂರ್ತಿಯ ಸೆಲೆ ಬತ್ತಿಲ್ಲ. ಆ ಸೆಲೆ ದಿನ, ಮಾಸ, ವರುಷಗಳು ಕಳೆದಂತೆ ದ್ವಿಗುಣಿತವಾಗುತ್ತಿದೆ. ಸಮೃದ್ಧ ಲೇಖಕ ಕುವೆಂಪು ಅವರಿಗೆ ಕನ್ನಡ ಸಾಹಿತ್ಯೇತಿಹಾಸದಲ್ಲಿ ಒಂದು ಪ್ರತ್ಯೇಕ ಸ್ಥಾನ ಮೀಸಲಿರಿಸುವುದು ಖಂಡಿತ. ಇನ್ನುಳಿದವರಿಗಿಂತಲೂ, ಒಂದು ವಿಶಿಷ್ಟ ಸ್ಥಾನವನ್ನು ಸಾಹಿತ್ಯಕ ಮೌಲ್ಯ, ವಿವಿಧ ವಾಙ್ಮಯ ರಚನೆ, ಅಸಂಖ್ಯ ಕೃತಿಗಳ ಮೂಲಕವಾಗಿ ಗಳಿಸಿಕೊಂಡಿದ್ದಾರೆ. ಅವರು ಕೈಮುಟ್ಟದ ಸಾಹಿತ್ಯದ ಭಾಗವೇ ಇಲ್ಲ. ಅವರು ಬೆರಳಾಡಿಸಿದ ರಚನೆಗಳು ಸುಂದರವಾಗಿ, ಸಜೀವವಾಗಿ ನಿಂತುಕೊಂಡಿವೆ. ಹಳೆಯದನ್ನು ಹೀಯಾಳಿಸದೆ-ಅದೇ ಸಮಯಕ್ಕೆ ಸಂಪ್ರದಾಯಶೀಲತೆಗೆ ತಲೆಬಾಗದೆ, ವಿಚಾರದಲ್ಲಿ ಕ್ರಾಂತಿಕಾರರಾಗಿ, ದೂರದೃಷ್ಟಿಯನ್ನೂ ವಿಲಕ್ಷಣವಾದ ನೈತಿಕ ಸಾಮರ್ಥ್ಯವನ್ನೂ ಪಡೆದುಕೊಂಡು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಒಂದು “ಹೊಸ ಹಾದಿ”ಯನ್ನು ಸಿದ್ಧಗೊಳಿಸಿದರು. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅವರನ್ನು ಮೀರಿಸುವ ಸಾಮರ್ಥ್ಯವನ್ನು ಪಡೆದವರು ಇಲ್ಲಿಯವರೆಗೆ ಯಾರೂ ಇಲ್ಲವೆಂದು ಧಾರಾಳವಾಗಿ ಹೇಳಬಹುದು.

ತಮ್ಮವೇ ಆದ ಪ್ರತಿಭಾನ್ವಿತ ವಿಷಯ ವಸ್ತುಗಳಿಂದಲೂ, ಜೀವನದ ವಿವಿಧ ಅನುಭವ ಗಳಿಂದಲೂ, ಕ್ರಾಂತಿಕಾರಕ ಸೂತ್ರಗಳಿಂದಲೂ, ಸಮರ್ಥ ಕಲ್ಪಕತೆಯಿಂದಲೂ, ಸ್ವತಂತ್ರ ಮತ್ತು ಗಾಢವಾದ ವಿಚಾರಸರಣಿಯಿಂದಲೂ, ವಿವಿಧ ಬಗೆಯ ಛಂದಸ್ಸಿನಿಂದಲೂ ಮತ್ತು ಇನ್ನುಳಿದ ಸುಂದರ ಸಾಹಿತ್ಯ ಪ್ರಕಾರಗಳಿಂದಲೂ ಕುವೆಂಪು ಕನ್ನಡ ಸಾಹಿತ್ಯ ಭಂಡಾರದ ಸಂಖ್ಯೆ, ಸತ್ವ ಮತ್ತು ಸೊಬಗನ್ನು ಹೆಚ್ಚಿಸಿದ್ದಾರೆ. ಅವರು ಹೊಸಬಗೆಯ ಶಬ್ದಗಳನ್ನೂ, ವಾಕ್ಯಸರಣಿಗಳನ್ನೂ ಸೃಷ್ಟಿಸಿ, ಕನ್ನಡ ಭಾಷೆಯಲ್ಲಿ ಕ್ರಾಂತಿಯನ್ನು ಗೈದು, ಅದರ ಸತ್ವವನ್ನು ಹೆಚ್ಚಿಸಿ, ಪರಿಪೂರ್ಣಗೊಳಿಸಿ, ಭಾವನೆಗಳನ್ನೂ ಸಂಕೀರ್ಣವಾದ ವಿಜ್ಞಾನ ವಿಚಾರಗಳನ್ನೂ ಸುಲಭವಾಗಿ ಈ ಭಾಷೆಯ ಮೂಲಕ ಪ್ರಚಾರಪಡಿಸಲು ಸಾಧ್ಯವಾಗುವಷ್ಟು ಸಾಮರ್ಥ್ಯವನ್ನು ಕನ್ನಡ ಭಾಷೆಗೆ ತಂದಿರಿಸಿದರು.

ಇವರ ಪ್ರಾರಂಭದ ಪದ್ಯಶೈಲಿಗಳ ಬಗೆಗೆ ವಿಮರ್ಶಕರ ವಿಮರ್ಶೆಯನ್ನು ಕೆಲವೊಂದು ಸಲ ಒಪ್ಪಬಹುದು. “ಇವರ ಪ್ರಾರಂಭಿಕ ಕವಿತೆಗಳು, ಹಿರಿಯ ಕವಿಗಳ ಪ್ರಾರಂಭ ಶೈಲಿಗಳಲ್ಲಿ ಕಾಣಬರುವ ಅಶಕ್ತತೆಗೆ ಈಡಾಗಿವೆ ಎಂಬುದು ಸತ್ಯವಾದುದು. ನುಡಿ ಮತ್ತು ನಿರರ್ಗಳತೆಯ ಆಧಿಕ್ಯದಿಂದ, ಇವರು ತಮ್ಮ ವಿಚಾರಸರಣಿಗಳಿಗೆ ಜೀವ ತುಂಬಲು, ಹೆಚ್ಚಾಗಿ ಕಲ್ಪಕತೆಯ  ಸೌಂದರ್ಯಕ್ಕೂ ಅದರ ಸಂಗೀತಮಯ ಲಯ ಬದ್ಧತೆಗೂ ಮಹತಿಯನ್ನು ನೀಡಿ, ತಮ್ಮ ಮೂಲವಿಚಾರ, ಭಾವನೆಗಳನ್ನು ಉಪೇಕ್ಷಿಸಿದರು. ತಮ್ಮ ಹೃದಯವನ್ನು ಕಲಕಿದ ವಸ್ತು ಅಥವಾ ಘಟನೆಯ ಮೇಲೆ ಬರೆಯುವಾಗ ಇವರು ಅತಿ ಭಾವನಾಮಯರಾಗಿ, ಸ್ವಯಂಪ್ರಜ್ಞರಾಗಿ, ಕೆಲವೊಂದು ಸಲ ಒಡೆಯದ ಒಗಟದಂತಾಗುತ್ತಾರೆ” (ಎಸ್.ಎಸ್. ಹೊಸಕೋಟರ ವಿಮರ್ಶೆ – ‘ಟೈಮ್ಸ್ ಆಫ್ ಇಂಡಿಯಾ’ದಲ್ಲಿ (Trends in Kannada Literature-೬ ಎಂಬ ಶೀರ್ಷಕದಡಿಯಲ್ಲಿ ಪ್ರಕಟವಾಗಿದೆ.). ಇದೇ ವಿಮರ್ಶಕರು ಮುಂದುವರಿದು ಹೇಳುವುದೇನೆಂದರೆ “ಈ ಕವಿ ಬರಬರುತ್ತ ಈ ಕೊರತೆಗಳನ್ನು ತೊಡೆದುಹಾಕಿ ಸ್ವತಂತ್ರ, ಮಧುರ, ಸುಂದರವಾದ ಶೈಲಿಯನ್ನು ಪಡೆಯುವುದರಲ್ಲಿ ವಿಜಯಿಗಳಾದರು. ಈ ಸುಂದರ ಶೈಲಿಯೇ ಮುಂದಿನ ಅವರ ಕೃತಿಗಳಿಗೆ ಅಮರತ್ವವನ್ನು ತಂದುಕೊಟ್ಟಿತು. ಈ ಶೈಲಿ ಸಾಹಿತ್ಯದ ವಿವಿಧ ಭಾಗಗಳಲ್ಲಿ ಬದಲಾಗುತ್ತ ಹೋದಂತೆ, ಅವರಲ್ಲಿರುವ ಅಕ್ಷಯ ರಚನಾತ್ಮಕಶಕ್ತಿಯ ನಿದರ್ಶನವನ್ನು ಮಾಡಿಕೊಟ್ಟಿದೆ”. ಅಮಲನ ಕಥೆಯಿಂದ ಶ್ರೀರಾಮಾಯಣದರ್ಶನದವರೆಗೂ, “ನನ್ನ ಗೋಪಾಲ”ದಿಂದ “ಬೆರಳ್ಗೆಕೊರಳ್”ದವರೆಗೂ, “ಸನ್ಯಾಸಿ ಮತ್ತು ಇತರ ಕಥೆ”ಗಳಿಂದ “ಕಾನೂರು ಹೆಗ್ಗಡಿತಿ”ವರೆಗೂ, “ಕಾವ್ಯ ವಿಹಾರ”ದಿಂದ “ರಸೋ ವೈ ಸಃ”ದವರೆಗೂ, “ಅರವಿಂದರ ಜೀವನಚರಿತ್ರೆ”ಯಿಂದ “ರಾಮಕೃಷ್ಣ ಪರಮಹಂಸ” ರವರೆಗೂ ಬೆಳೆದು ಬಂದಿರುವ ಇವರ ಅಸಂಖ್ಯ ಸಾಹಿತ್ಯ ಕೃತಿಗಳ ಮೆರವಣಿಗೆಯಿಂದ ಕನ್ನಡ ಭಾಷೆಯ ಸಂಪನ್ಮೂಲಗಳು, ಉತ್ತಮ ವಿದ್ವಾಂಸರನ್ನು ಮರುಳುಗೊಳಿಸುವಷ್ಟು ಕಾಂತಿಯುಕ್ತವಾಗಿ ಪರಿಣಮಿಸಿದವು.

ಹಲವಾರು ಭಾವಗಳನ್ನು ನಿರೂಪಿಸುವ, ಧಾರ್ಮಿಕ ಮತ್ತು ಭಾವನಾತ್ಮಕ ಉದ್ದೇಶಗಳನ್ನು ಪಡೆದ ಕಾವ್ಯಗಳು, ವಿವರಣಾತ್ಮಕ ಮತ್ತು ವರ್ಣನಾತ್ಮಕ ಕವನಗಳು, ವ್ಯಂಗ್ಯ ಲೇಖನಗಳು, ಚತುಷ್ಪದಿಗಳು, ಗದ್ಯ ಪದ್ಯ, ಸಣ್ಣ ಕತೆಗಳು, ವ್ಯಕ್ತಿ ಚಿತ್ರಗಳು, ಕಾದಂಬರಿಗಳು, ಜೀವನಚಿತ್ರಗಳು, ಆತ್ಮಚರಿತ್ರೆಗಳು, ಹಲವಾರು ಬಗೆಯ ಪ್ರಬಂಧಗಳು, ಭಾಷಣಗಳು, ಏಕಾಂಕಗಳು, ಗಂಭೀರ ನಾಟಕಗಳು ಮತ್ತು ವಿವಿಧೋದ್ದೇಶಿತ ಮಹಾಕಾವ್ಯಗಳು, ಸಾಹಿತ್ಯದ ಇನ್ನುಳಿದ ಭಾಗಗಳು ಈ ಒಂದೇ ವ್ಯಕ್ತಿಯ ಲೆಕ್ಕಣಿಕೆಯ ಮುಖಾಂತರ ಇಂದಿನ ಜನಜೀವನದ ಪಡಿನೆಳಲಾಗಿ ಮೂಡಿಬಂದಿವೆ. ಕುವೆಂಪು ಕೇವಲ ಉನ್ನತಮಟ್ಟದ ರಚನಾತ್ಮಕ ವಿಮರ್ಶಕ ರಾಗಿರದೆ, ಭಾಮಹ, ದಂಡಿ, ಆನಂದವರ್ಧನರಂತೆ ನಿಯಮ ಸೂತ್ರಗಳ ದ್ರಷ್ಟಾರರಾಗಿದ್ದಾರೆ. ಕುವೆಂಪು ನೀಡಿದ ಪ್ರತಿಮೆ, ಪ್ರತಿಕೃತಿಗಳ ವ್ಯಾಖ್ಯೆ ಮತ್ತು ರಸಧ್ವನಿಗಳ ವಿವರಣೆಗಳು ಅವರದೇ ವಿಶಿಷ್ಟ ಮಾದರಿಯ ವ್ಯಾಖ್ಯೆಗಳಾಗಿವೆ.

ಎಪ್ಪತ್ತಕ್ಕಿಂತಲೂ ಹೆಚ್ಚಾಗಿ ಪ್ರಕಟಿತವಾದ ಅವರ ಕೃತಿಗಳ ಸಂಕ್ಷಿಪ್ತ ವಿಮರ್ಶೆಗಾಗಿ ಹಲವಾರು ಪುಟಗಳು ಬೇಕಾಗಬಹುದು. ಅದಕ್ಕಾಗಿ ನಾನು ಕೇವಲ ಅವರ ಎರಡು ಕೃತಿಗಳಾದ, ‘ಕಾನೂರು ಹೆಗ್ಗಡಿತಿ’ ಮತ್ತು ‘ಶ್ರೀರಾಮಾಯಣದರ್ಶನ’ಗಳತ್ತ ಗಮನವನ್ನು ಸೆಳೆಯ ಬಯಸುತ್ತೇನೆ. ಮೇಲ್ಕಾಣಿಸಿದ ವಿದ್ವಾಂಸ ವಿಮರ್ಶಕ ಶಬ್ದದಲ್ಲಿಯೇ ಹೇಳಬೇಕೆಂದರೆ, ‘ಕಾನೂನು ಹೆಗ್ಗಡಿತಿ’ ಕೃತಿಯು ಮಹಾಕಾದಂಬರಿಯಾಗಿದೆ. ಇಲ್ಲಿ ಮಲೆನಾಡಿನ ಜನಜೀವನದ ಜೀವಂತ ಚಿತ್ರವು ಒಡಮೂಡಿ ನಿಂತಿದೆ…. ಲೇಖಕರು ನಿರ್ದಯರಾಗಿ, ಮಲೆನಾಡಿನ ಹಳ್ಳಿಗರ ಕುಡುಕತನವನ್ನೂ ತುಚ್ಛ ಜೀವನವನ್ನೂ, ಕಂಗಾಲತನವನ್ನೂ, ಹೆಚ್ಚಾಗಿ ಅವರ ಅಜ್ಞಾನವನ್ನೂ ಚಿತ್ರಿಸಿದ್ದಾರೆ. ಅಲ್ಲಿಯ ಕವಿಯಿಂದ ಚಿತ್ರಿತವಾದ ಈ ಮಲೆನಾಡಿನ ಮಹಾಕಾವ್ಯ ಕನ್ನಡ ಸಾಹಿತ್ಯ ಭಂಡಾರಕ್ಕೊಂದು ಅಮೂಲ್ಯ ಕಾಣಿಕೆಯಾಗಿದೆ’.

ಸುಂದರ ಶೈಲಿಯಲ್ಲಿ ರಚಿತವಾದ ‘ಶ್ರೀರಾಮಾಯಣದರ್ಶನ’ವು ಅವರ ಪ್ರಧಾನ ಕೃತಿಯಾಗಿದೆ – ಉನ್ನತಮಟ್ಟದ ಮಹಾಕಾವ್ಯವಾಗಿದೆ. ಹಿಂದಿನ ಜನ್ಮದ ಸತ್ ಕೃತಿಯ ಶಕ್ತಿ ಒಂದುಗೂಡಿ ಒಂದು ಮುಖ್ಯ ಉದ್ದೇಶಕ್ಕಾಗಿ, ರಕ್ತರೂಪವಾಗಿ ಮುಂಬರುವ ಜನ್ಮಗಳ ದೇಹದಲ್ಲಿ ಹರಿದು ಬಂದು, ಮಹಾಕಾವ್ಯದ ಜನನಕ್ಕೆ ಕಾರಣೀಭೂತವಾಗುತ್ತದೆ. ಭಾವನಾತ್ಮಕ ಜೀವನ, ಮಗ್ನ ಮನಸ್ಸುಗಳ ಮಂಥನದಲ್ಲಿ ಕಡೆದು ನಿಂತ ಅಮೃತತುಲ್ಯ ಕೃತಿ, ‘ರಾಮಾಯಣ ದರ್ಶನ’ವಾಗಿದೆ. ಕುವೆಂಪು ಒಂಬತ್ತು ವರ್ಷಗಳವರೆಗೆ, ಬಾಹ್ಯಜಗತ್ತನ್ನು ಮರೆತು, ಐಹಿಕ ಸುಖ ಸಾಧನಗಳನ್ನು ತೊರೆದು, ವ್ರತಜೀವಿಯಾಗಿ, ತಮ್ಮ ಭಾವನಾತ್ಮಕ, ಮಾನಸಿಕ ಶಕ್ತಿಯನ್ನು ಏಕೀಕೃತಗೊಳಿಸಿ, ಈ ಮಹಾಕೃತಿಯನ್ನು ರಚಿಸಿದರು.

ವಾಲ್ಮೀಕಿಯಂತೆ, ಕುವೆಂಪುರವರೂ ತಮ್ಮ ಸುತ್ತ ರಚಿಸಿಕೊಂಡ ಏಕಾಂತದ ಹುತ್ತದಿಂದ ಒಂಬತ್ತು ವರ್ಷಗಳನಂತರ ಹೊರಬಂದರು. ಈ ಕವಿಯು ಪುರಾಣಕಾಲೀನ ಕತೆಯನ್ನು ತನ್ನದೇ ಆದ ರಕ್ತ-ಭಾವನೆಗಳನ್ನು ಸುರಿದು ಪುನರುಜ್ಜೀವನಗೊಳಿಸಿದ್ದಾನೆ. ಇದೊಂದು ಪರಿಪೂರ್ಣತೆಯನ್ನು ಪಡೆದ ಹೊಸ ರಚನೆಯಾಗಿದೆ. ರಾಮಾಯಣದ ಕತೆಯು ಐತಿಹಾಸಿಕ ಘಟನೆಗಳಿಂದ ಕೂಡಿದ ವಿವರಣೆಯಲ್ಲ. ಅದು ಏನಾಗಿರಬೇಕಾಗಿತ್ತೋ ಅದೇ ಆಗಿದೆ. ಹಲವಾರು ಆಕ್ರಮಕ ಸಂಸ್ಕೃತಿಯ ಸುಳಿವಿನಲ್ಲಿ, ಸಂಘರ್ಷಣೆಯಲ್ಲಿ ಮೂಡಿಬಂದ, ಭಾವನಾತ್ಮಕ, ಮಾನಸಿಕ ಅಳಿವು ಉಳಿವುಗಳನ್ನು ಪಡೆದ ಜಾಗತಿಕ ಸಮಾಜದ ಚಿತ್ರವಾಗಿದೆ. ಕವಿಯು, ತನ್ನ ಸದೈವ ಕಲ್ಪನಾ ಸಾಮರ್ಥ್ಯದಿಂದ, ಸಾವಿರಾರು ವರುಷಗಳಿಂದ ನಡೆದುಬಂದ ಕತೆಯ ಅನುಭವದಿಂದ ಏಕೀಕೃತ ಪ್ರಜ್ಞೆಯಿಂದ ಈ ಮಹಾಕಾವ್ಯವನ್ನು ರಚಿಸಿದ್ದಾನೆ. ಟಿ.ಎಸ್. ಇಲಿಯೆಟ್‌ರವರ ವ್ಯಾಖ್ಯೆಯಂತೆ, ‘ಕುವೆಂಪು’ ಮಹಾಕಾವ್ಯ ಬರೆದ ‘ಮಹಾಕವಿ’ ಎಂದು ಶ್ರೀ ಹೊಸ ಕೋಟರವರು ಸರಿಯಾಗಿಯೇ ನುಡಿದಿದ್ದಾರೆ. ಅವರು ಹೇಳಿದಂತೆ, ‘ಇಂದಿನ ಕನ್ನಡ ಸಾಹಿತ್ಯದಲ್ಲಿ ಆಳವಾದ, ದೃಢ ಮನಸ್ಸಿನ ಸಾಹಿತ್ಯ ನಿರ್ಮಾಣವನ್ನು ಇವರು ರಚಿಸಿದಂತೆ, ಇನ್ನಾವ ಸಾಹಿತಿಗಳೂ ಆ ಸಾಮರ್ಥ್ಯವನ್ನು ತೋರುವ ಸಾಹಸ ಮಾಡಿಲ್ಲ. ಅವರಂತೆ ಸಮಪ್ರಮಾಣದ ಪ್ರತಿಭೆಯನ್ನು ಧಾರ್ಮಿಕ, ವೈಜ್ಞಾನಿಕ, ರಚನಾತ್ಮಕ ಕೃತಿಗಳಲ್ಲಿ ತೋರಿಸಲು ಸಾಧ್ಯವಾಗಿಲ್ಲ. ಭಾಷೆಯ ಪ್ರಗಲ್ಭತೆಯಿಂದ  ಅದನ್ನು ತಮಗೆ ಬೇಕಾದ ರೀತಿಯಲ್ಲಿ ಬಳಸುವ ಅವರ ಪರಿಪೂರ್ಣಗೊಂಡ ವಿಚಾರ ಭಾವನೆಗಳು, ಅವರು ಪಡೆದ ಉದ್ದೇಶಗಳ ಗಾಂಭೀರ್ಯಗಳು, ಮತ್ತಾರಲ್ಲೂ ಸಿಗುವುದು ಸಂದೇಹಾಸ್ಪದ’ ಎಂದು ವಿಮರ್ಶಕರು ಹೇಳಿದುದು ತೀರ ಸತ್ಯವಾದುದೆಂದು ಹೇಳಿದರೆ ತಪ್ಪಾಗಲಾರದು.

ಕುವೆಂಪುರವರ ಅಷ್ಟ ಮುಖವಾದ ಶಕ್ತಿ ಕೇವಲ ಸಾಹಿತ್ಯ ಕ್ಷೇತ್ರಕ್ಕೆ ಸೀಮಿತಗೊಂಡಿಲ್ಲ. ಅವರ ಅಕ್ಷಯ ಚೈತನ್ಯದ ಸೆಲೆ, ನಿರುದ್ದೇಶವಾಗಿ ಹಾಳಾಗದ ಹಾಗೆ ತಪಸ್ಸನ್ನು ಮಾಡಿದ್ದಾರೆ. ಬಹುದಿನಗಳಿಂದ ಕೂಡಿಟ್ಟ ಚೈತನ್ಯಶಕ್ತಿಯನ್ನು ಕಾಲುವೆಯ ಮುಖಾಂತರ ಸರಿಯಾದ ದಿಕ್ಕಿನಲ್ಲಿ ಹರಿಹಾಯಿಸಿದರೆ, ಸಮಾಜ ಮತ್ತು ದೇಶದ ಕಲ್ಯಾಣ ಸುಲಭವಾಗಿ ಸಾಧ್ಯ ವಾಗುವುದು. ಅವರಿಗೆ ‘ಗುಂಪಿ’ನ ಮಧ್ಯ ನಿಲ್ಲಲು ಸೇರದು. ಕಾರಣವೆಂದರೆ, ‘ಗುಂಪಿನ ಕೂಡ ಗೋವಿಂದ’ ಎನ್ನುವ ಮನೋಭಾವಕ್ಕೆ ಸಿಲುಕಿಬಿದ್ದು ತಮ್ಮ ತಪಸ್ಸೇ ಹಾಳಾಗ ಬಹುದೆಂಬ ಹೆದರಿಕೆ ಅವರಿಗಿದೆ. ಆದರೆ ಯಾವುದೋ ಒಂದು ಕೆಲಸವನ್ನು ಮಾಡಲು ಒಪ್ಪಿಕೊಂಡರೆ, ತಮ್ಮ ‘ವ್ರತಜೀವನ’ವನ್ನು ಕೆಲದಿನ ಬದಿಗೆ ಸರಿಸಿ ಆ ಕೆಲಸವನ್ನು ಪೂರೈಸಿ ಕೊಡುವರು. ಅವರ ಪ್ರಪ್ರಥಮ ಪ್ರೀತಿಯ ಕೆಲಸವೆಂದರೆ, ‘ಶಿಕ್ಷಕ‘ತನವೇ. ಇವರು ಕನ್ನಡದ ‘ಲೆಕ್ಚರ’ರಾಗಿ ಮೈಸೂರು ಯೂನಿವರ್ಸಿಟಿ ಸರ್ವಿಸನ್ನು ಸೇರಿಕೊಂಡು ನಿಧಾನವಾಗಿ, ಕನ್ನಡದ ಪ್ರೊಫೆಸರರಾಗಿ, ಹಾಗೆಯೇ ಮಹಾರಾಜಾ ಕಾಲೇಜಿನ ಪ್ರಿನ್ಸಿಪಾಲರಾಗಿ ಕೊನೆಗೆ ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಾದರು. ವಿದ್ವತ್ತು-ಸಾಧನೆಗಳ ಸಮಪ್ರಮಾಣದ ಸಾಮರ್ಥ್ಯವನ್ನು ಪಡೆದ ಕುವೆಂಪು ಆದರ್ಶ ಶಿಕ್ಷಕರಾಗಿದ್ದಾರೆ. ಕುಲಪತಿಗಳಾಗಿ ಭಾರತದ ಒಂದು ದೊಡ್ಡ ವಿಶ್ವವಿದ್ಯಾಲಯದ ಚುಕ್ಕಾಣಿಯನ್ನು ಹಿಡಿದು ಅದನ್ನು ನಾಲ್ಕು ವರ್ಷಗಳವರೆಗೆ ಪ್ರಗತಿಪಥದತ್ತ ಸಾಗಿಸಿ, ಅಲ್ಪಾವಧಿಯಲ್ಲಿಯೇ ‘ಇತಿಹಾಸ’ವನ್ನು ನಿರ್ಮಿಸಿದರು. ಅವರ ಪ್ರತಿಭಾನ್ವಿತ ಸಾಧನೆಗಳು ಮೈಸೂರು ವಿಶ್ವವಿದ್ಯಾನಿಲಯದ ಉಜ್ವಲ ಇತಿಹಾಸದ ಪ್ರಕರಣಗಳನ್ನು ತುಂಬಿವೆ. ಆ ಸಾಧನೆಗಳು ಹಿಂದಿನವರ ಕನಸುಗಳಾಗಿದ್ದಂತೆ, ಮುಂದೆ ಬರಲಿರುವವರ ಅಸೂಯೆಯ ವಸ್ತುಗಳಾಗಿವೆ. ವಿರೋಧಕರ ಆಕ್ರಮಕ ವೃತ್ತಿಗೆ ಮಣಿಯದ ಧೈರ್ಯ, ದಾರಿತಪ್ಪದ ಮಹಿಮರ ದೃಷ್ಟಿಯನ್ನು ಪಡೆದ ಕುವೆಂಪು, ಸ್ನಾತಕೋತ್ತರ ಪದವಿ ಅಭ್ಯಾಸಕ್ಕಾಗಿ ಮಾನಸ ಗಂಗೋತ್ರಿಯನ್ನು ಕಟ್ಟಲು ಸಮರ್ಥರಾದರು. ವಿಶ್ವವಿದ್ಯಾಲಯದ ಒಂದು ಕಾಲದ ಅಶಕ್ತವಾದ ಪ್ರಕಾಶನ ಮತ್ತು ವಿಸ್ತರಣ ಉಪನ್ಯಾಸ ಇಲಾಖೆಯಲ್ಲಿ ಇವರು ಜೀವಕಳೆಯನ್ನುತುಂಬಿ, ಗುರುತಿಸಲೂ ಬಾರದಷ್ಟು ಅದನ್ನು ಸದೃಢಗೊಳಿಸಿ, ‘ಪ್ರಸಾರಾಂಗ’ ಎಂದು ನಾಮಕರಣ ಮಾಡಿದರು.

ಅವರ ಉನ್ನತ ವ್ಯಕ್ತಿತ್ವದ ಮೂಲಕವಾಗಿ ಕೆಲವರು ಅವರನ್ನು ‘ಬಿಗುಮಾನ’ದ ಸ್ವಭಾವದವರೆಂದು ತಪ್ಪಾಗಿ ತಿಳಿದುಕೊಂಡರೂ, ಅವರು ನಿಜವಾಗಿಯೂ ಸಾಮಾನ್ಯ ಜನತೆಯ ವ್ಯಕ್ತಿಯಾಗಿ ಬಾಳುತ್ತ ಬಂದಿದ್ದಾರೆ. ಅವರ ಸಂಸ್ಕೃತಿಯ ಆಸ್ತಿ ಜನಸಾಮಾನ್ಯರ ನೆಲದಲ್ಲಿ ಬೇರೂರಿದೆ. ಬಡವರ ಬಳಲಿಕೆ, ಗೋಳಾಟಗಳತ್ತ ಅವರೆಂದೂ ಬೆನ್ನು ತೋರಿಸಿಲ್ಲ. ಅವರ ದುಃಖ-ದಾರಿದ್ರ್ಯಗಳನ್ನು ಕಂಡ ಇವರ ಹೃದಯದ ಮಿಡಿತ ಹಲವಾರು ಕವನಗಳಲ್ಲಿ ಮೂಡಿಬಂದುದನ್ನು ಕಾಣುತ್ತೇವೆ. ಈ ಬಗೆಯ ಸಹಾನುಭೂತಿ ಅನುಕಂಪನಗಳ ಮೂಲಕ ವಾಗಿಯೆ ಕುವೆಂಪು ಪ್ರಾದೇಶಿಕ ಭಾಷೆಯ ಅಭಿವೃದ್ದಿಗಾಗಿ ಟೊಂಕ ಕಟ್ಟಿ ನಿಂತರು. ಜನಸಾಮಾನ್ಯರ ಮನ ಮುಟ್ಟುವುದಕ್ಕೆ ಪ್ರಾದೇಶಿಕ ಭಾಷೆಯೇ ತಕ್ಕ ಮಾಧ್ಯಮವೆಂದರು. ಆಜನ್ಮ ಶಿಕ್ಷಣತಜ್ಞರಾದ ಇವರು ಹಲವಾರು ಎಡರುತೊಡರುಗಳನ್ನು ಧೈರ್ಯವಾಗಿ ಎದುರಿಸಿ ಪದವಿ ಪರೀಕ್ಷೆಗಳವರೆಗೂ ಪ್ರಾದೇಶಿಕ ಭಾಷೆಯಾದ ಕನ್ನಡಕ್ಕೇ ಸ್ಥಾನವನ್ನು ಕಲ್ಪಿಸಿಕೊಟ್ಟರು. ಇದನ್ನು ಸರಿಯಾದ ರೀತಿಯಲ್ಲಿ ಕಾರ್ಯರೂಪಕ್ಕಿಳಿಸುವ ಉದ್ದೇಶದಿಂದ, ಕನ್ನಡದಲ್ಲಿ ವಿವಿಧ ವಿಷಯಗಳ ಪುಸ್ತಕ ಪ್ರಕಟನೆಗಳ ಯೋಜನೆಯೊಂದನ್ನು ಸಿದ್ಧಪಡಿಸಿದರು.

ಸಾಹಿತಿಗಳಾಗಿ ಕನ್ನಡ ಸಾಹಿತ್ಯ ಭಂಡಾರಕ್ಕೂ, ಶಿಕ್ಷಣತಜ್ಞರಾಗಿ ದೇಶದ ಶಿಕ್ಷಣ ಕ್ಷೇತ್ರಕ್ಕೂ ಸಲ್ಲಿಸಿದ ಅಮೋಘ ಸೇವೆಯನ್ನು ಮನ್ನಿಸಿ, ನ್ಯಾಶನಲ್ ಅಕಾಡೆಮಿ ಆಫ್ ಲೆಟರ್ಸ್‌ದವರು ಕುವೆಂಪುರವರನ್ನು ೧೯೫೫ರಲ್ಲಿ ಪ್ರಶಸ್ತಿ ಪಾರಿತೋಷಕವನ್ನಿತ್ತು ಗೌರವಿಸಿ ಸನ್ಮಾನಿಸಿದರು. ಭಾರತ ಸರಕಾರವು ೧೯೫೮ರಲ್ಲಿ ಅವರಿಗೆ ‘ಪದ್ಮಭೂಷಣ’ ಪದವಿಯನ್ನು ದಯಪಾಲಿಸಿತು. ಧಾರವಾಡದಲ್ಲಿ ೧೯೫೭ರಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನವನ್ನು ಕುವೆಂಪು ಅಲಂಕರಿಸಿದರು.

ಅವರ ಷಷ್ಟ್ಯಬ್ದಿಯ ಸಮಾರಂಭದಂದು, ಮೈಸೂರು ಸರಕಾರ ಅವರನ್ನು ‘ರಾಷ್ಟ್ರಕವಿ’ಯನ್ನಾಗಿ ಗೌರವಿಸಿದುದು ಅಭಿನಂದನೀಯ”.

[1][1]     ಮೂಲ ಇಂಗ್ಲಿಷ್ ಲೇಖನದ ಅನುವಾದ ಶ್ರೀ. ವೆಂ. ಮು. ಜೋಶಿ ಅವರಿಂದ.