ವಿಕಾಸ ಸೃಷ್ಟಿಯ ರಹಸ್ಯ. ಸೃಷ್ಟಿಯ ಆದಿಯಲ್ಲಿ ಏಕಾಣುಜೀವಿಯಾಗಿದ್ದ ಅವಿೂಬವೆ ‘ಹಾರೈಸಿ ಹಾರೈಸಿ’ ಅನೇಕ ಜೀವರಾಶಿಗಳ ಶ್ರೇಣಿಯನ್ನು ಹಾಯ್ದು ಇಂದು ಮಾನವತ್ವಕ್ಕೇರಿದೆ ಎಂದು ವಿಜ್ಞಾನ ತಿಳಿಸುತ್ತದೆ. ಈ ಜೀವರಾಶಿಯಲ್ಲಿ ನಿಯಮಬದ್ಧವೂ ಸ್ವಭಾವಸಿದ್ಧವೂ ಅನಿವಾರ್ಯವೂ ಆದ ವಿಕಾಸಕ್ರಮವನ್ನು ಕಾಣುವಂತೆ, ರಾಮಾಯಣಾದಿ ಮಹಾಕಾವ್ಯವಾಹಿನಿಗಳಲ್ಲಿಯೂ ವಿಕಾಸಕ್ರಮವನ್ನು ಸುಲಭವಾಗಿ ಗುರುತಿಸಬಹುದು. ಶ್ರೀಮದ್ರಾಮಾಯಣವೊಂದನ್ನು ತೆಗೆದುಕೊಂಡರೇನೆ, ಅದು ವಾಲ್ಮೀಕಿಯಿಂದ ಭಾಸ, ಭಾಸನಿಂದ ಭವಭೂತಿ, ಭವಭೂತಿಯಿಂದ ಕಂಬ, ಕಂಬನಿಂದ ನಾಗಚಂದ್ರ, ನಾಗಚಂದ್ರನಿಂದ ತುಲಸೀದಾಸ, ತುಲಸೀದಾಸನಿಂದ ಕುವೆಂಪು – ಅಂದಿನಿಂದ ಇಂದಿನವರೆಗೆ ವಿರಾಡ್ರೂಪಿಯಾಗಿ ಜಗದ್ಭವ್ಯವಾಗಿ ಲೋಕ ಲೋಕಾಂತರಗಳ ಸತ್ಯಸ್ಯ ಸತ್ಯ ಕಥೆಯಾಗಿ ಬೆಳೆದು ಸೃಷ್ಟಿ ನಿಯತಿಗೊಂದು ನಿತ್ಯಸಾಕ್ಷಿಯಾಗಿ ನಿಂತಿದೆ. ಶ್ರೀರಾಮಾಯಣದರ್ಶನಂ ‘ಪಿಂತೆ ವಾಲ್ಮೀಕಿಯುಲಿದ ಕಥೆಯಾದೊಡಂ’ ಕನ್ನಡದಿ ಬೇರೆ ಕಥೆಯೆಂಬಂತೆ, ಬೇರೆ ಮೈಯಾಂತಂತೆ, ಮರುವುಟ್ಟುವಡೆದಂತೆ ಮೂಡಿದೆ. ಅಂದು ಆ ರಾಮಾಯಣದ ಅವತಾರಕ್ಕೆ ಅಂದಿನ ‘ಜನಮನದ ಶಕ್ತಿ ಮೇಣವರಭೀಪ್ಸೆಯೆ’ ಕಾರಣವಾದರೆ ಇಂದು ಈ ಶ್ರೀರಾಮಾಯಣ ದರ್ಶನದ ಅವತಾರಕ್ಕೆ ಇಂದಿನ ‘ಜನಮನದ ಶಕ್ತಿ ಮೇಣವರಭೀಪ್ಸೆ’ ಕಾರಣವಾಗಿ, ವಿಕಾಸಕ್ರಮದಲ್ಲೊಂದು ಮೈಲಿಗಲ್ಲಾಗಿ ಈ ಮಹಾಕಾವ್ಯದ ಉದಯವಾಗಿದೆ.  ಪಾತ್ರ ಘಟನೆ ಸನ್ನಿವೇಶಗಳಲ್ಲಿ, ಅವುಗಳನ್ನು ನುಡಿಸುವ, ನಡಸುವ, ರೂಹಿಸುವ ರೀತಿ ವಿಧಾನ ಗಳಲ್ಲಿ, ಅವುಗಳ ಹಿನ್ನೆಲೆಯಲ್ಲಿ ಪ್ರೇರಕಶಕ್ತಿಯಾಗಿ ಸಂಜೀವಿನೀ ಮಂತ್ರವಾಗಿ ಪ್ರವಹಿಸುತ್ತಿ ರುವ ದರ್ಶನದಲ್ಲಿ ಆ ವಿಕಾಸಕ್ರಮದ ಔನ್ನತ್ಯವನ್ನೂ ವಿಶದತೆಯನ್ನೂ ಕಾಣಬಹುದು. ರಾಮ ರಾವಣ, ಸೀತಾ ಮಂಡೋದರಿ, ಆಂಜನೇಯ ಕುಂಭಕರ್ಣ ಮೊದಲಾದ ಮರ್ತ್ಯಾ ಮರ್ತ್ಯ ಚೇತನಗಳ ಸಮಾಲೋಚನೆಯ ಅಸಮಸಾಹಸಕ್ಕೆ ಕೈಹಾಕದೆ, ಓದುಗರ ಅವಜ್ಞೆಗೂ ಅವಹೇಳನಕ್ಕೂ ಗುರಿಯಾದ ವಾಲ್ಮೀಕಿ ರಾಮಾಯಣದ ಕುಬ್ಜೆಮಂಥರೆ ಶ್ರೀರಾಮಾಯಣ ದರ್ಶನದಲ್ಲಿ ಹೇಗೆ ಅಮರ್ತ್ಯ ಸುಂದರಿಯಾಗಿ ವಿಕಾಸಗೊಂಡು ಓದುಗರ ಅನುಕಂಪೆಗೆ, ಗೌರವಕ್ಕೆ, ಕೃತಜ್ಞತೆಗೆ, ಆರಾಧನೆಗೆ ಪಾತ್ರಳಾಗಿದ್ದಾಳೆಂಬುದನ್ನು ನೋಡಬಹುದು.

ಹುಟ್ಟಿನಿಂದ ವ್ಯಾಧನಾಗಿ, ತಪಸ್ಸಿನಿಂದ ಮಹರ್ಷಿಯಾಗಿ ತ್ರಿಕಾಲಜ್ಞಾನಿಯಾಗಿ  ಕಾರುಣ್ಯವೆ ಕರುವಿಟ್ಟಂತೆ ಖ್ಯಾತಿವೆತ್ತ ಆದಿಕವಿ ಕಡೆದಿರುವ ಮಂಥರೆ ಖಂಡದೃಷ್ಟಿಗೆ ವಿರೂಪೆಯಾಗಿ ಅವಂದ್ಯಳಾಗಿ ಕಾಣುತ್ತಾಳೆ. ಆದರೆ ‘ಕ್ರೌಂಚಋಣಿ’ಯೂ ಪಾರದರ್ಶಿಯೂ ಆದ ಆ ಕವಿಪುಂಗವನ ಪೂರ್ಣದೃಷ್ಟಿಗೆ ಅವಳು ಕೇವಲ ನಾಡಾಡಿ ಹೆಂಗಸಲ್ಲ, ವಿಧಿಯ ಕೈಯ ಕೂರಸಿ, ಸ್ತ್ರೀಜನ್ಮವನ್ನೆತ್ತಿದ ದೈವಶಕ್ತಿ. ಹೊರಗಣ್ಣಿಗೆ ವಿಕಾರವಾಗಿ ಕ್ರೂರವಾಗಿ ಅಸಹ್ಯವಾಗಿ ಕಾಣುವ ಆ ದೈವಶಕ್ತಿಯ ಗರ್ಭಾಂತರಾಳವೊಂದು ಅನಂತರ ಕೃಪಾಸಿಂಧು. ಏಕೆಂದರೆ ಪರಬ್ರಹ್ಮ ತತ್ತ್ವದ ಪ್ರಕಟಣೆ ಅದರಿಂದ ಮಾತ್ರ ಸಾಧ್ಯ. ವಿಘ್ನ ಮತ್ತು ಸಂಘರ್ಷಣೆಗಳಿಂದ ಮಾತ್ರ ಪಾರಿಣಾಮಕ ರೂಪದ ನಿತ್ಯ ಪ್ರಗತಿ ಸಾಧ್ಯವೆಂಬುದು ನಿತ್ಯಾನುಭವದ ಸಂಗತಿಯಾಗಿದೆ. ಮಂಥರೆ ಈ ವಿಘ್ನ-ಸಂಘರ್ಷಣೆಗಳಿಗೆ ನಿತ್ಯ ಪ್ರತಿಮೆಯಾಗಿ ನಿತ್ಯ ಸತ್ಯ ಪ್ರಕಾಶನ ವಿಕಾಸಗಳಿಗೆ ನಿಮಿತ್ತವಾಗುತ್ತಾಳೆ. ಶ್ರೀರಾಮನ ಅರಣ್ಯವಾಸಕ್ಕೆ ಅವನ ಚಿಕ್ಕಮ್ಮನ ತ್ರೈಲೋಕ್ಯ ಸೌಂದರ್ಯ ಪ್ರಧಾನ ಕಾರಣವಲ್ಲ, ಮಂಥರೆಯ ವಿಕಾರ ರೂಪದ ಕೃಪಾಕೇತುವೇ ಕಾರಣ. ಆ ಕೃಪಾಕೇತುವಿಗೆ ಅವಳೊಂದು ದಿವ್ಯ ಪ್ರತಿಮೆ. ಕಾವ್ಯವ್ರೋಆಕಸ್ಮಿಕವಾಗಿ  ಸಂಭವಿಸಿದ ಧೂಮಕೇತುವಲ್ಲ ಅವಳು; ಲಕ್ಷೋಪಲಕ್ಷ ಗ್ರಹನಕ್ಷತ್ರಗಳ ಚಲನವಲನಗಳ ಹಿಂದೆ ಗುಪ್ತಗಾಮಿನಿಯೂ ಶಾಶ್ವತವೂ ಆದ ಚಾಲಕ ಶಕ್ತಿ ಅವಳು. ಕೇವಲ ಬುದ್ದಿಗಮ್ಯವೂ ಇಂದ್ರಿಯ ಗೋಚರವೂ ಆದ ವ್ಯಾವಹಾರಿಕ ಸತ್ಯವನ್ನು ಮಾತ್ರ ಒಪ್ಪುವ ಖಂಡದೃಷ್ಟಿಗೆ ತರ್ಕಾತೀತವೂ, ಇಂದ್ರಿಯಾಗೋಚರವೂ, ಕೇವಲ ಭಾವಗಮ್ಯವೂ ಆದ ಪಾರಮಾರ್ಥಿಕ ಸತ್ಯ ಅಸಂಬದ್ಧವಾಗಿ ಅರ್ಥಶೂನ್ಯವಾಗಿ ವ್ಯರ್ಥಪ್ರಲಾಪವಾಗಿ ಕಾಣುತ್ತದೆ. ಅಂತಹ ದೃಷ್ಟಿ ಪುರುಷ ಬಲವನ್ನು ಮಾತ್ರ ನೆಮ್ಮಿ, ಅದಕ್ಕೆ ಏಕೈಕ ಆಕರವೂ ಆಧಾರಭೂತವೂ ಆದ ದೈವಬಲವನ್ನು ಖಂಡನಗೈಯುತ್ತದೆ. ಆದರೆ ಮಾನವ ಜೀವನದ ಸರ್ವಾಂಗೀಣವಾದ ಪ್ರಗತಿಗೆ ಪುರುಷ ಬಲವೆಂತೊ ದೈವಬಲವೂ ಅಂತೆಯೇ ಅತ್ಯವಶ್ಯಕ, ಅನಿವಾರ್ಯ. ಆದುದರಿಂದ ಕಾವ್ಯಲೋಕದಲ್ಲಿ ಪಾತ್ರನಿಮಿತ್ತದಿಂದ ಘಟನಾನಿಮಿತ್ತದಿಂದ ಆಗಾಗ್ಗೆ ಗೋಚರಿಸುವ ವಿಧಿಶಕ್ತಿಯನ್ನು ಅನ್ಯವೆಂದಾಗಲೀ ಅಸಹಜವೆಂದಾಗಲೀ ಭಾವಿಸುವುದು ಗಾಂಪತನವಾಗುತ್ತದೆ. ‘ವೈಣಿಕ ವಿಧಿಯ ಕೈಗೆ’ ಮಂಥರೆ ಉಗುರಾಗದಿದ್ದರೆ ರಾಮಾಯಣ ಬೃಹದ್‌ಗೀತೆ ಮಿಡಿಯುತ್ತಿತ್ತೆ? ಭಗವತ್ಕೃಪೆ ನಾರದನ ಮೂಲಕ ಮೈದೋರದಿದ್ದರೆ ವ್ಯಾಧ ವಾಲ್ಮೀಕಿಯಾಗುತ್ತಿದ್ದನೆ?

ಮೂಲ ರಾಮಾಯಣದಲ್ಲಿ ಇಂಗಿತಮಾತ್ರವಾಗಿ ಸೂಚ್ಯವಾಗಿ ಮಿಂಚಿ ಅಂದಿನಿಂದ ಇಂದಿನವರೆಗೆ ‘ಲೋಕಕ್ರೋಧ ಮದಹಸ್ತಿ ಪದದಲನ ರೋಷದಾವಾಗ್ನಿಗಾಹುತಿಯಾಗಿ’ ಭಂಗ ಹೊಂದಿದ ಆ ಪತಿತೆ ಮಂಥರೆ ಈಗಿನ ಮಹಾಕವಿಯ ಕವಿ ಸಹಜ ಕರುಣೆಯಿಂದ ಲೋಕೋತ್ತರ ಮಹಾಗಾನವಾಗಿ ಪರಿಣಮಿಸಿದ್ದಾಳೆ. ಅವಳು ವಿಧಿಯ ಹಸ್ತದ ಸೂತ್ರದ ಬೊಂಬೆ ನಿಜ. ಆದರೆ ಅವಳು ಮಾನವಿ ಎಂಬುದನ್ನು ಎಲ್ಲಿಯೂ ಮರೆಯುವಂತಿಲ್ಲ. ಅವಳ ಮಾನವೀಯ ಗುಣಗಳು ಓದುಗರಲ್ಲಿ ಅನುಕಂಪೆಯನ್ನೂ ಸಹಾನುಭೂತಿಯನ್ನೂ ಹುಟ್ಟಿಸುತ್ತವೆ. ಅವಳು ತನ್ನ ‘ಕುಬ್ಜ’ತನಕ್ಕೆ ಹೇಗೆ ಕಾರಣಳಲ್ಲವೊ ಹಾಗೆಯೆ ಅವಳ ಹೃದಯದಲ್ಲಿ ಕಿಡಿಯಾಗಿ ಕಾಣಿಸಿಕೊಂಡು ದಳ್ಳುರಿಯಾಗಿ ಪರಿಣಮಿಸಿ ಇಡೀ ರಾಮಾಯಣ ವನ್ನೆಲ್ಲ ವ್ಯಾಪಿಸಿದ ದ್ವೇಷಾಸೂಯೆಗಳಿಗೆ ಅವಳು ಸರ್ವಥಾ ಕಾರಣಳಲ್ಲ, ಸಮಾಜವೇ ಕಾರಣ, ಮುಂದೆ ರಾಮಾಯಣದಲ್ಲಿ ಸಂಭವಿಸುವ ದುರ್ಘಟನೆಗಳಿಗೆ ಆ ಸಮಾಜ ತಕ್ಕಮಟ್ಟಿಗಾದರೂ ಹೊಣೆಯಾಗಬೇಕಾಗಿದೆ ಎಂಬುದು ಮಂಥರೆಯ ಜೀವನದಲ್ಲಿ ಎದ್ದು ಕಾಣುತ್ತದೆ. ಮನಶ್ಯಾಸ್ತ್ರದ ಮೂಲತತ್ತ್ವಗಳನ್ನರಿತವರಿಗೆ ಈ ಅಂಶ ಸುಸ್ಪಷ್ಟವಾಗಿ ನಿಸ್ಸಂದಿಗ್ಧವಾಗಿ ಮನವರಿಕೆಯಾಗದಿರದು.

ಕೈಕೆಯ ತಾತನೊಂದು ದಿನ ಬೈಗಿನಲ್ಲಿ ಬೇಟೆಯನ್ನು ಮುಗಿಸಿ ಹಿಂದಿರುಗುತ್ತಿದ್ದಾಗ ‘ಪಳುವೆ ತಾನಳುವಂತೆ’ ಗೋಳಿಡುತ್ತಿದ್ದ ಶಿಶುರೋದನ ಕೇಳಿಸುತ್ತದೆ. ಹೋಗಿ ನೋಡಲು ಅದೊಂದು ತಬ್ಬಲಿಯಾದ ದಸ್ಯು ಶಿಶು. ಮುಳ್ ಮಣ್ಣು ತರಗೆಲೆಯಿಡಿದ ನೆಲದ ಮೇಲಿರುವೆ’ ಮುತ್ತಿ ‘ವಿಕೃತಿ ವಕ್ರತೆ ರೂಹುಗೊಂಡಂತೆ’ ಕಾಣಿಸುತ್ತದೆ. ದಯಾಮಯಿಯಾದ ಈ ದೊರೆ ‘ಗೂಬೆಯಪಶಕುನದ ವಿಕಾರದುಲಿ’ಯನ್ನು ಕಡೆಗಣಿಸಿ ‘ದಾರಿಯ ನಡೆವ ಮಾರಿಯಂ ಮನೆಗೆ ತರುವಂತೆ’ ಆ ಮಗುವನ್ನು ಊರಿಗೆ ಕರೆದು ತರುತ್ತಾನೆ. ಆ ದಸ್ಯು ಶಿಶುವಿಗೆ ತಂದೆ ತಾಯಿಯರಿಲ್ಲ; ಜೊತೆಗೆ ದುರದೃಷ್ಟವಶಾತ್ ಕುಳ್ಳಾಗಿ ಗೂನಾಗಿ ಕರ್ರಗೆ ಬೆಳೆಯುತ್ತದೆ. ಕರುಣಾಮಯಿಯಾದ ದೊರೆಯ ಆಜ್ಞೆಯನ್ನು ಮೀರಿ ಕಂಡಕಂಡವರೆಲ್ಲ ಆ ಮಗುವನ್ನು ‘ನಾಯ್ಮರಿಗೆ ಕಡೆಯಾಗಿ’ ಭಾವಿಸಿ ಹೇಸುತ್ತಾರೆ. ‘ಮನುಜರೊಲ್ಮೆಯ ಸವಿಯನೊಂದಿ ನಿತುಮಂ ಕಾಣದೆ’ ಬೆಪ್ಪು ಬೆಪ್ಪಾಗಿ ಬೆಳೆಯುತ್ತದೆ. ತಿಳಿವಳಿಕೆಯುಳ್ಳವರನ್ನು ಮರುಳುಮಾಡಲು ನಾಲ್ಕಾರು ಮಂದಿಯ ತಿರಸ್ಕಾರವೆ ಸಾಕು. ಸಹಾನುಭೂತಿಯುಳ್ಳ ಸಮಾಜದ ಮಧ್ಯೆ, ನಂಟರಿಷ್ಟರ ಪ್ರೀತಿ ವಿಶ್ವಾಸ ಕನಿಕರಗಳ ಸ್ನಿಗ್ಧ ವಾತಾವರಣದಲ್ಲಿ ಬೆಳೆದ ಎಳೆಯ ಎದೆಯಲ್ಲಿ ಸ್ನೇಹ ಸೌಹಾರ್ದ ಔದಾರ್ಯ ಮೊದಲಾದ ಗುಣಗಳು ತಾವಾಗಿಯೇ ಅಂಕುರಿಸಿ, ಅರಳಿ, ಅವನ ಮುಂದಿನ ಬಾಳನ್ನು ಪರಿಮಳಿಸುವುದಲ್ಲದೆ, ಅವನ ಸುತ್ತಮುತ್ತಲ ಸಮಾಜವನ್ನೂ ಪರಿಮಳಿಸುತ್ತವೆ. ಆದರೆ ಆ ಭಾಗ್ಯ ಮಂಥರೆಗೆ ಇಲ್ಲವಾಗುತ್ತದೆ. ಕನಿಕರವಿಲ್ಲದ ಸಮಾಜ ಕಾರಿದ ದ್ವೇಷಾಸೂಯೆಗಳ ವಿಷವನ್ನುಂಡ ಆ ಕುಬ್ಜೆ ಮತ್ತಷ್ಟು ವಿಕಾರವಾಗಿ ಬೆಳೆಯುತ್ತಾಳೆ. ‘ಮೊಗಕೆ ಕೆಸರನಿಡುವಂತೆ’ ಅವಳಿಗೆ ಮಂಥರೆಯೆಂದು ಹೆಸರಿಟ್ಟುದೂ ಆ ಸಮಾಜವೆ.

ಇಂಥ ಅವಸ್ಥೆಯಲ್ಲಿಯೇ ಅವಳಿಗೆ ಬಾಲ್ಯ ಕಳೆದು ಕೌಮಾರ್ಯವೂ ಸಾರಿ ಬರುತ್ತದೆ. ಅವಳ ಭೀಷಣ ಏಕಾಂತತೆಯನ್ನು ಕಂಡು ಬಗೆಗರಗಿದ ದೊರೆ ಹಸುಳೆ ಕೈಕೆಯನ್ನು ಆಡಿಸುವ ಕೆಲಸಕ್ಕೆ ಅವಳನ್ನು ನೇಮಿಸುತ್ತಾನೆ. ಯಾರೂ ತಮ್ಮ ಮಕ್ಕಳನ್ನು ಅವಳ ಹತ್ತಿರ ಹೋಗಲು ಬಿಡದಿದ್ದಾಗ, ಅವಳ ಕೈ ಮೈ ಸೋಂಕಿದರೆ ಹೊಲೆ ತಟ್ಟುತ್ತದೆಂದು ಭಾವಿಸಿದ್ದಾಗ, ರಾಜಕುವರಿಯನ್ನು ಮುಟ್ಟುವ, ನುಡಿಸುವ, ಎತ್ತಿಕೊಳ್ಳುವ, ಆಡಿಸುವ ಅವಕಾಶ ದೊರೆತುದಕ್ಕೆ ಅವಳ ಸಂತೋಷವನ್ನು ಕೇಳಬೇಕೆ? ಭುವನದ ಭಾಗ್ಯ ಸಮಸ್ತವೂ ಕಾಲ್ತೊಡರಿ ಲಭಿಸಿದಂತಾಗುತ್ತದೆ.

ಮಳೆ ಹೊಯ್ದ ತೆರನಾಯ್ತು ಮಂಥರೆಯ ಮರುಧರೆಗೆ,
ಚೈತ್ರನಾಗಮವಾಯ್ತು ಮಂಥರೆಯ ಶಿಶಿರಕ್ಕೆ,
ಮಂಥರೆಯ ಮೃತ್ಯುವಿಗೆ ತಾನಮೃತ ಸೇಚನೆಯಾಯ್ತು,
ಶುಷ್ಕತಾ ಶೂನ್ಯತೆಯೊಳೊಲ್ಮೆ ಸಂಚರವಾಯ್ತು,
ಬದುಕು ಸಾರ್ಥಕ ಮಧುರಮಾಯ್ತು ಶಿಶು ಸನ್ನಿಧಿಯ
ಪ್ರೇಮ ಸೌಂದರ್ಯ ಮಹಿಮೆಯಲಿ…………..

ಕುರೂಪಿಯಾದ ತಾಯಿ ತನ್ನ ಮಗಳ ಚೆಲುವಿನಲ್ಲಿ ತನ್ನ ಚೆಲುವನ್ನೂ ಭುವನದ ಚೆಲುವನ್ನೂ ಕಾಣುವಂತೆ, ಲೋಕತಿರಸ್ಕೃತೆಯಾದ ಮಂಥರೆ ಆ ಮಗುವಿನಲ್ಲಿ ತನ್ನ ಚೆಲುವನ್ನು ಕಾಣುತ್ತಾಳೆ; ಸಂಪೂರ್ಣ ಸಂತೃಪ್ತಿಯನ್ನು ಪಡೆಯುತ್ತಾಳೆ. ಆ ಮಗುವಿಗಾದರೂ ಮಂಥರೆಯ ಹೃದಯರತಿಯ ಅರಿವಾಯಿತೇ ಹೊರತು, ಅವಳ ಬಾಹ್ಯ ವಿಕಾರತೆಯ ಅರಿವೇ ಆಗುವುದಿಲ್ಲ. ಸೇಡಿಗೆ ಸೇಡು ಹೆಡೆಯೆತ್ತುವಂತೆ, ಕೋಪಕ್ಕೆ ಕೋಪ ಕೆರಳುವಂತೆ, ಪ್ರೇಮಸ್ಪರ್ಶದಿಂದ ಪ್ರೇಮದ ಚಿಲುಮೆ ಚಿಮ್ಮುತ್ತದೆ. ಪ್ರೇಮದಿಂದ ಪ್ರೇಮ ಸಂಜನಿಸುತ್ತದೆಯೆ ಹೊರತು, ಅದು ದ್ವೇಷದಿಂದ ಜನಿಸದು. ಮಾನವ ತಾನಿತ್ತುದನ್ನೆ ಮರಳಿ ಪಡೆಯುತ್ತಾನೆ. ಸಮಾಜದ ಕಿರುಕುಳದಿಂದ ಕಲ್ಲಾಗಿದ್ದ ಮಂಥರೆಯ ಹೃದಯ ಕೈಕೆಯ ಪ್ರೇಮ ಸ್ಪರ್ಶದಿಂದ ಕರಗುತ್ತದೆ. ಅಂದಿನವರೆಗೆ ಅವಳ ಹೃದಯದಲ್ಲಿ ಸುಪ್ತವಾಗಿದ್ದ ಸ್ನೇಹ ಸೌಹಾರ್ದವೇ ಮೊದಲಾದ ದೈವೀಗುಣಗಳು ಎಚ್ಚರವಾಗುತ್ತವೆ. ಹಿಂದೆ ಅನುಭವಿಸಿದ ಘೋರಸಂಕಟವನ್ನೂ ಅಪಮಾನವನ್ನೂ ಕೈಕೆಯ ಮರೆಯಲ್ಲಿ ಮರೆತು, ತಾನೇ ಕೈಕೆ, ಕೈಕೆಯೇ ತಾನು ಎಂಬ ಅವಿನಾಭಾವವನ್ನೂ ಅನನ್ಯತಾಭಾವವನ್ನೂ ತಾಳಿ, ತನ್ನ ವ್ಯಕ್ತಿತ್ವವನ್ನು ಸಹ ಮರೆಯುತ್ತಾಳೆ.

ಕೈಕೆಯ ಶರೀರದಲ್ಲಿ ಯೌವನ ಸಂಚಾರವಾಗುವ ವೇಳೆಗೆ ಮಂಥರೆಯ ದೇಹಕ್ಕೆ ಮುಪ್ಪಿನ ಒರಲೆ ಹಿಡಿದು ಅವಳ ವಿಕಾರ ನೂರ್ಮಡಿಸುತ್ತದೆ. ಅವಳ ವಿಕಾರ ಹೆಚ್ಚಿದಂತೆಲ್ಲ, ಕೈಕೆಯ ದೃಷ್ಟಿಯಿಂದ ಮಮತೆಯ ಮುದ್ದೆಯಾಗುತ್ತಾಳೆ. ಕೈಕೆಯಾದರೂ ಅವಳ ಬಾಹ್ಯವಿಕೃತಿಯನ್ನು ಮನಸ್ಸಿಗೆ ತಾರದೆ ‘ಶೈಶವ ಕೃತಜ್ಞತಾ ಪ್ರೇಮ’ದಿಂದ ಪ್ರೀತಿಸುತ್ತಾಳೆ. ಅಷ್ಟರಲ್ಲಿ ಕೈಕೆ ದಶರಥ ಮಹಾರಾಜನ ಕಿರಿಯ ರಾಣಿಯಾಗಿ ಅಯೋಧ್ಯೆಯನ್ನು ಸೇರುತ್ತಾಳೆ. ಹುಟ್ಟಿದಂದಿನಿಂದ ತಾಯಿಗೆ ಮಿಗಿಲಾಗಿ ಸಾಕಿದ ದಾಸಿ ಮಂಥರೆ ಒಡತಿಯನ್ನು ನೆರಳಂತೆ ಹಿಂಬಾಲಿಸುತ್ತಾಳೆ. ಆದರೆ ಹೊಸ ವಾತಾವರಣದಲ್ಲಿ ಅವಳ ಬಾಳು ಹೊಸದನ್ನು ಕಾಣುವುದಿಲ್ಲ. ಇಲ್ಲಿಯೂ ಅಲ್ಲಿಯ ಜನರೇ. ಕಾಲದೇಶಗಳ ಪರಿವೆಯಿಲ್ಲದೆಯೆ ಮಾನವನ ಹೃದಯ ಸಾಗರದಲ್ಲಿ ಪರಸ್ಪರಾಭಿನ್ನವಾದ ಭಾವವೀಚಿಗಳು ಏಳುತ್ತಿರುತ್ತವೆ. “ರವಿವಂಶದರಸರೂರಾದೊಡೇಂ ಮನ್ನಣೆ ಕುರೂಪತೆಗೆ ತಾನೆಲ್ಲಿ?” ಸತ್ಯ ಧರ್ಮ ನ್ಯಾಯ ಶೌಚ ಮೊದಲಾದ ದೈವೀಗುಣಗಳಿಂದ ರಾಜ್ಯವನ್ನು ಪಾಲಿಸಿ ದಿಗ್ದಿಗಂತವಿಶ್ರಾಂತವಾದ ಕೀರ್ತಿಗೆ ಭಾಜನರಾಗಿ ಅಮರರಿಂದ ಸನ್ಮಾನ್ಯರಾಗಿ ಬಾಳಿದ ದಿಲೀಪ ರಘು ಅಜರ ಅಯೋಧ್ಯಾನಗರದ ಜನರಾದರೂ ಅವಳ ಹೃದಯೈಶ್ವರ್ಯವನ್ನು ಕಡೆಗಣಿಸಿ ಬಾಹ್ಯ ವಿಕಾರವನ್ನೆ ಮುಂದಿಟ್ಟುಕೊಂಡು ಶನಿಯೆಂದು ಶಪಿಸುತ್ತಾರೆ. ಅವಳ ಮೈಯನ್ನು ಮುಟ್ಟಿ ಬಂದ ಗಾಳಿ ತಮ್ಮ ಮೈಯನ್ನು ಮುಟ್ಟಿ ಮೈಲಿಗೆ ಮಾಡಬಾರದೆನ್ನುವಷ್ಟು ಎಚ್ಚರ ಅವರಿಗೆ.

…….. ಸನಿಹಕ್ಕೆ
ಬರಗೊಡರ್, ಗಾಳಿ ಸೋಂಕುವುದೆಂಬ ಮೈಲಿಗೆಗೆ
ಪೇಸಿ. ಬಳಿಗೀಶ್ವರಾರಾಧನೆಗೆ ಸೇರಿಸರ್.
ಉಣಲಿಡುವ ಪೊಳ್ತು ಪೊರನೂಂಕುವರ್ ತೊಳ್ತುಗಳ್,
ಕಿರಿರಾಣಿಯಾಜ್ಞೆಗೆ ಕಿವುಳ್ಗೇಳ್ದು…….

ಎಲ್ಲಿ ಹೋದರೂ ಆರ್ಯವೇಷದ ಅನಾರ್ಯರ ಅಸಭ್ಯರ ತಂಡವೇ ಅವಳನ್ನು ಎದುರು ಗೊಳ್ಳುತ್ತದೆ. ಪಾಪ, ತನ್ನಂಥ ತೊತ್ತುಗಳ ಕೃಪೆಗೂ ಹೊರಗಾಗುತ್ತಾಳೆ; ನಾಡಾಡಿಗಳ ಮಾತು ಹಾಗಿರಲಿ, ಶ್ರೀರಾಮನ ತಾಯಿ

……..ಕೌಸಲ್ಯೆಯುಂ
ಲಕ್ಷ್ಮಣನ ತಾಯಿ ಮೊದಲಪ್ಪ ಸಿರಿವೆಂಡಿರುಂ
ಮಂಥರೆ ಅನಿಷ್ಟೆಯೆನುತಾ ಸವತಿ ಕೈಕೆಯಂ
ಬಳಿ ಸೇರಿಸದೆ ಹೆದರಿ ಹೇಸಿ ಹಿಂಜರಿದರಾ
ಗೂನಿಯಿರಲೊಡನೆ…….

ಅವಳ ಬಾಳು ‘ಕಮ್ಮಾರನಡಿಗಲ್ಲಾ’ಗುತ್ತದೆ. ಸುತ್ತಮುತ್ತ ಬರಿಯ ಪೆಟ್ಟುಗಳೇ. ಯಾವ ಅಪರಾಧವೂ ಇಲ್ಲದೆ ಅವಳಂತೆ ಕಹಿ ಅನುಭವಗಳನ್ನುಂಡವಳು ರಾಮಾಯಣದಲ್ಲಿ ಮತ್ತೊಬ್ಬಳಿಲ್ಲ. ಎಲ್ಲವನ್ನು ಮೌನದಿಂದ ಸಹಿಸಿದಳು. ಆದರೆ ಆ ಸುದೀರ್ಘಕಾಲದ ಸಂಯಮದ ಸಹನೆಯ ಮತ್ತು ಮೌನದಕಟ್ಟೆ ಒಡೆದು ಹೋದಾಗ ಇಡೀ ಅಯೋಧ್ಯಾನಗರಿ ಮುಳುಗಿ ಹೋದುದರಲ್ಲಿ ಆಶ್ಚರ್ಯವೇನಿದೆ? ಅಂತು ಆ ನೊಂದ ಜೀವಕ್ಕೆ ಭರತ ಕೈಕೆಯರೆ ಗತಿಮತಿಯಾಗುತ್ತಾರೆ. ತನ್ನ ಬಾಳನ್ನು ಅವರಿಗಾಗಿ ಸಮೆಸಿದ, ತನ್ನ ಹೃದಯವನ್ನು ಅವರಿಗಾಗಿ ಮೀಸಲಿರಿಸಿದ ಮಹಾತ್ಯಾಗಿನಿ ಮಂಥರೆ! ಈ ಲೋಕ ಅವಳನ್ನು ಹೊರಗೆ ದೂಡಿದುದರಿಂದ ಅವಳು ತನ್ನದೇ ಆದ ಒಂದು ಲೋಕವನ್ನು ಸೃಷ್ಟಿಸಿಕೊಳ್ಳುತ್ತಾಳೆ. ಆ ಲೋಕದಲ್ಲಿ ಕೈಕೆ ಭರತರು ವಿನಾ ತನ್ನೊಬ್ಬಳು ವಿನಾ ಬೇರೆ ಮನುಷ್ಯ ಸಂಚಾರದ ಗುರುತೂ ಇಲ್ಲ.

……….ನರರನ್ಯರಿಲ್ಲಾಯಿತ್ತು ಮಂಥರೆಯ
ಲೋಕಕ್ಕೆ, ಕೈಕೆ ಭರತರ್ ವಿನಾ. ದಶರಥಂ
ಕೈಕೆ ಭರತರಿಗಾಗಿ; ಕೈಕೆ ಭರತರಿಗಾಗಿ
ಕೋಸಲಮಯೋಧ್ಯೆಗಳ್ ಶಶಿ ಸೂರ್ಯತಾರಾಳಿಗಳ್
ಕೈಕೆ ಭರತರಿಗಾಗಿ; ಭರತನಾಳ್ವಿಕೆಗಾಗಿ ಈ ಪೃಥಿವಿ….

ಮಂಥರೆ ವಿಧಿಶಕ್ತಿಯೆಂಬುದನ್ನಾಗಲೀ ಮಾನವಿಯೆಂಬುದನ್ನಾಗಲೀ ಕವಿ ಮೊದಲಿಂದ ಕೊನೆಯ ತನಕ ಮರೆತಿಲ್ಲ. ಮುಂದೆ ಶ್ರೀರಾಮ ಕಾಡಿಗೆ ಹೊರಟಾಗ, ದಶರಥ ಸಾವನ್ನಪ್ಪಿದಾಗ, ಆ ಅನಾಹುತಗಳಿಗೆ ಕಾರಣಳೆನ್ನಬಹುದಾದ ಮಂಥರೆಯ ಬಗೆಗೆ ರಸಜ್ಞರಲ್ಲಿ ಅನುಕಂಪೆ ಸಹಾನುಭೂತಿಗಳು ಮೂಡುವಂತೆ ಅವಳ ವ್ಯಕ್ತಿತ್ವವನ್ನು ಸಹಜ ಸುಂದರವಾಗಿ ಚಿತ್ರಿಸಿದ್ದಾರೆ. ಹಾಗೆಯೇ ಅವಳ ಮಾನವೀಯತೆಯನ್ನು ಸ್ವಲ್ಪವೂ ಮರೆಸದೆ ಅವಳು ವಿಧಿಶಕ್ತಿ ಎಂಬುದನ್ನು ಸಹ ಪ್ರತಿಮಾ ವಿಧಾನದಿಂದ ಕಲಾತ್ಮಕವಾಗಿ ಅಲ್ಲಲ್ಲೆ ಸೂಚಿಸಿದ್ದಾರೆ. ಹಾಲು ಹಸುಳೆಯಾದ ಶ್ರೀರಾಮಚಂದ್ರ ಗಗನದ ಚಂದ್ರನನ್ನು ತಂದುಕೊಡೆಂದು ಅಮ್ಮನನ್ನು ಕಾಡುವ ಘಟನಾ ಪ್ರತಿಮೆ ಕವಿಯ ಅಲೌಕಿಕ ಪ್ರತಿಭೆಗೆ ಸಾಕ್ಷಿಯಾಗಿದೆ. ಒಂದು ಹುಣ್ಣಿಮೆ ಇರುಳಿನಲ್ಲಿ ಶಿಶು ರಾಮಚಂದ್ರ ಆಕಾಶದ ಚಂದ್ರನನ್ನು ಪಡೆಯಬೇಕೆಂದು ಬಯಸಿ ಅಮ್ಮನನ್ನು ಕಾಡುತ್ತಾನೆ. ದಾದಿಯರು, ಹಿರಿಕಿರಿಯ ರಾಣಿಯರು ಎಷ್ಟು ಸಂತೈಸಿದರೂ ಲಕ್ಷಿಸದೆ ಗೋಳಿಡುತ್ತಾನೆ. ರವಿವಂಶದರಸುಗಳ ರಾಜಧಾನಿಯಾದ ಸಾಕೇತನಗರಿಯ ಶ್ರೀಮಂತತೆ ಅವನಿಗೆ ಬೇಡವಾಗುತ್ತದೆ. ದಶರಥ ಸಾರ್ವಭೌಮನು ಕೂಸೊಂದರ ಬಯಕೆಯನ್ನು ತೀರಿಸಲಾರದಷ್ಟು ಕಡುಬಡವನಾಗುತ್ತಾನೆ. ಎಷ್ಟು ಮುದ್ದಿಸಿದರೂ ರೋದನ ಮಾತ್ರ ನಿಲ್ಲುವುದಿಲ್ಲ. ಆಗ ಕುರೂಪತೆಯ ಅಸಹ್ಯವೆ ಮೈವೆತ್ತಂತೆ ಬಂದ ‘ಅಸ್ಥಿರಸ್ಥವಿರೆ’ ಮಂಥರೆ ತನ್ನ ಮಡಿಲಲ್ಲಿದ್ದ ಮುಕುರವನ್ನು ಹೊರತೆಗೆದು ಅಡ್ಡಬಂದ ಕೈಕೆಯ ಕೈಗೆ ನೀಡಿ ರಾಮನ ಗೋಳಿಗೆ ಪರಿಹಾರವನ್ನು ಸೂಚಿಸುತ್ತಾಳೆ. ಕೈಕೆ ರಾಮನ ಮುಂದೆ ಕನ್ನಡಿ ಹಿಡಿಯಲು ಅದರಲ್ಲಿ ಆಕಾಶಚಂದ್ರನ ಪ್ರತಿಬಿಂಬವನ್ನು ನೋಡಿ ಅವನು ಆನಂದತುಂದಿಲನಾಗುತ್ತಾನೆ. ಹೆಮ್ಮೆನಲ್ಮೆಗಳಿಂದ ಕೂಡಿದ ಮಂಥರೆ ರಾಮನನ್ನು ಮುದ್ದಿಸಲು ಬಯಸಿ ಕೌಸಲ್ಯೆಯ ಕಡೆಗೆ ಕೈಚಾಚುತ್ತಾಳೆ. ಆಗ ಕೌಸಲ್ಯೆ “ಕಂದಂಗಮಂಗಳಂ, ಮುಟ್ಟದಿರ್!” ಎಂದು ಸಿಡಿದು “ಮುದಿ ಮಂಥರೆಯ ಮೈತ್ರಿ ಜಜ್ಜರಿತಮಪ್ಪಂತೆ” ಅವಳನ್ನು ನಿವಾರಿಸುತ್ತಾಳೆ. ಮಂಥರೆ ಗದ್ಗದಕಂಠೆಯಾಗಿ ‘ಭರತನನ್ನು ಬಿಗಿದಪ್ಪಿ’ಕೊಂಡು ‘ತುಳಿದ ಸರ್ಪಿಣಿಯಂತೆ ಮುಳಿಸಿ ನುರಿಯಿಂ ಪೊಗೆದು, ಸುಯ್ದು, ಹೆಡೆಯೆತ್ತಿ’ ನಡೆಯುತ್ತಾಳೆ. ಈಗಂತು ಕೌಸಲ್ಯೆಯ ತಿರಸ್ಕಾರ, ಕೈಕೆಯ ಉಪಕಾರ, ಭರತನ ಮಮಕಾರ ಅವಳ ಹೃದಯದಲ್ಲಿ ಅಚ್ಚೊತ್ತಿದಂತೆ ನಿಲ್ಲುತ್ತವೆ. ಮುಂದಿನ ಘಟನಾ ಪರಂಪರೆಗಳಿಗೆ ಈ ಘಟನೆ ನಾಂದಿಯಂತಿದೆ ನಿಜ. ಆದರೆ ಶ್ರೀರಾಮಚಂದ್ರ ಅವತಾರ ಪುರುಷ, ಅವನು ಸದಾ ಊರ್ಧ್ವಮುಖಿ, ಅವನಿಗೆ ಆಕಾಶ ಪದವಿಯೆ ನಿತ್ಯವಾದುದು, ಅವನ ಲೀಲೆಗೆ ಅಯೋಧ್ಯೆ ಸಾಲದು, ವಿಶಾಲ ಜಗತ್ತೆ ಅವನ ಲೀಲಾಕ್ಷೇತ್ರವಾಗಬೇಕು; ಅವನ ಸಹಜ ಪ್ರವೃತ್ತಿ ಅವನ ಮಹಿಮೆಗಳು ವಿಧಿಶಕ್ತಿಯೆ ಮೈತಳೆದಂತಿದ್ದ ಮಂಥರೆಗೆ ಹೊಳೆಯುತ್ತವೆ; ಅವತಾರದ ಉದ್ದೇಶ ಸಾಧನೆಗೆ ಕೈಕೆ ಕಾರಣ, ಮಂಥರೆ ಕರಣ ಎಂಬೆಲ್ಲ ಭಾವನೆಗಳು ಈ ಒಂದು ಘಟನೆಯಿಂದ ಪ್ರತಿಮಿತವಾಗುತ್ತವೆಂಬುದನ್ನು ಎಚ್ಚರಿಕೆಯಿಂದ ಗಮನಿಸಬೇಕು.

ಅಯೋಧ್ಯಾನಗರವನ್ನು ಕ್ಷಣಿಕಕಾಲದ ಅಂಧಕಾರದಲ್ಲಿ ಮುಳುಗಿಸಿ ಇಡೀ ಲೋಕದಲ್ಲಿ ಜ್ಯೋತಿಯನ್ನು ಹರಡುವ ನವೋದಯ ದಿನವೂ ಸಾರಿ ಬರುತ್ತದೆ. ಆ ದಿನಕ್ಕೆ ನಾಂದಿ ಯೆಂಬಂತೆ ಹಿಂದಿನ ಇರುಳಿನಲ್ಲಿ ಮಂಥರೆಗೆ ಸ್ವಪ್ನಾನುಭವವಾಗುತ್ತದೆ. ಸಂದಿಗ್ಧ ಮನಸ್ಸಿನ ತರ್ಕಮತಿಗೆ ಸ್ವಪ್ನಗಳು ವಿರೂಪಾನುಭವಗಳ ಛಾಯೆಗಳೆಂದು ಕಾಣಬಹುದು. ಇಡೀ ಜಗತ್ತಿನ ಅನುಭವಾಭೀಪ್ಸೆಗಳು ಅಲೆಯಲೆಯಾಗಿ ತೇಲಿ ಬಂದು ವಿರಾಡ್‌ಶಕ್ತಿಯ ಅಂಶಮಾತ್ರವಾದ ಮಾನವನ ಚಿಚ್ಛಕ್ತಿಯ ಭಿತ್ತಿಯಲ್ಲಿ ಅನುರಣಿತವಾಗುತ್ತವೆಂಬುದು ಯೋಗಮತಿಗೆ ಮಾತ್ರ ಅರಿವಾಗುತ್ತದೆ. ವಿಧಿಯ ಮಾಯೆಯೇ ಮಂಥರೆಯ ಸ್ವಪ್ನವಾಗಿ ಪರಿಣಮಿಸುತ್ತದೆ.

ನೆಯ್ದಳುತಿದೆ ಜಗವನೊಂದತಿ ವಿರಾಣ್ಮನಂ
ಸೂಕ್ಷ್ಮಾತಿ ಸೂಕ್ಷ್ಮತಂತ್ರದಿ ಬಿಗಿದು ಕಟ್ಟಯುಂ
ಜೀವಿಗಳ್ಗಿಚ್ಛೆಯಾ ಸ್ವಾತಂತ್ರ್ಯಭಾವಮಂ
ನೀಡಿ……………………
ಮಥಿಸಿದುದು ದಶಶಿರನ ವಿಧಿ ಮಂಥರೆಯ ಮನದಿ
ತನ್ನ ತಂತ್ರದ ಕೃತಿಯನಾ ಇರುಳ್ ಕನಸಿನಲಿ

ದುಃಸ್ವಪ್ನಾನುಭವದಿಂದ ಭಯವಿಹ್ವಲಳಾದ ಮಂಥರೆ ಮನೆಯನ್ನು ಬಿಟ್ಟು ರಾಜಬೀದಿಯಲ್ಲಿ ಸುತ್ತಿ ಶ್ರೀರಾಮಪಟ್ಟಾಭಿಷೇಕೋತ್ಸವದ ವಿಶೇಷ ಸಂಭ್ರಮವನ್ನು ಕಂಡು ತತ್ತರಿಸಿ ಸೋದ್ವಿಗ್ನಮನಳಾಗಿ ಏದುತ್ತ ಏದುತ್ತ ಕೈಕೆಯ ಮಲಗುಮಂಚದೆಡೆಗೆ ಓಡಿ ಬಂದು ಕೂಗಿಕೊಳ್ಳುತ್ತಾಳೆ. ಭರತನ ಹೆಸರು ಹಿಡಿದು ಕರೆದು ಮೂರ್ಛಿತಳಾಗುತ್ತಾಳೆ. ರಾಣಿಯ ಉಪಚಾರದಿಂದ ಎಚ್ಚತ್ತು, ಅವಳನ್ನು ಬಿಗಿದಪ್ಪಿಕೊಂಡು, ಬಿಕ್ಕಳುತ್ತ, ರಾಮನ ಪಟ್ಟಾಭಿಷೇಕ ದಿಂದ ಭರತನಿಗೆ ಕಷ್ಟತಪ್ಪದೆಂದು ನಾನಾ ವಿಧವಾಗಿ ವಿವರಿಸುತ್ತಾಳೆ. ಅದನ್ನು ವಿವರಿಸಿದಂತೆಲ್ಲ ಅವಳ ಹೃದಯದ ಭಾವ ತೀವ್ರವಾಗುತ್ತದೆ, ಮತಿಮಸೆದ ಕತ್ತಿಯಂತೆ ನಿಶಿತವಾಗುತ್ತದೆ, ಸಾಹಸ ಸಹಸ್ರಮುಖಿಯಾಗುತ್ತದೆ, ವಾಕ್‌ಶಕ್ತಿ ತೀಕ್ಷ್ಣವಾಗುತ್ತದೆ. ಕೌಸಲ್ಯೆಯ ಕರುಬನ್ನು ದಶರಥನ ಕುಟಿಲತನವನ್ನು ಮನಸ್ಸಿಗೆ ನಾಟುವಂತೆ ಬೆಸೆಯುತ್ತಾಳೆ. ಶ್ರೀರಾಮನನ್ನು ತನ್ನ ಮಗನಿಗಿಂತ ಮಿಗಿಲಾಗಿ ಪ್ರೀತಿಸುತ್ತಿದ್ದ ಕೈಕೆ ಆ ಗೂನಿಯ ಮಾತಿನ ಬಲೆಗೆ ಸಿಕ್ಕುಬಿದ್ದು

……..ಕಂಗೆಟ್ಟನಗೆ ದಾರಿ ತೋರ್ದೆಯೌ,
ಓ ನನ್ನ ಭಾಗ್ಯದೇವತೆ; ಮರಳಿ ಹಡೆದೆಯೌ,
ನೀನೆನ್ನ ತಾಯಿ; ನೀಂ ತೊರೆಯಲಿನ್ನಾರೆ ಗತಿ
ಪರದೇಶಿಯೆನಗೆ? ಕಣ್ಣಿರ್ದುಮಾನಿನ್ನೆಗಂ
ಕುರುಡಿಯಾಗಿರ್ದೆನೌ ನೋಡಿತ್ತ ನೋಡೆನ್ನನಃ
ಇಂದೆನಿತು ಚಾರುರೂಪಿಣಿಯಾಗಿ ತೋರುತಿಹೆ
ನೀನೆನಗೆ………………………………

ಎನ್ನುತ್ತ ಅವಳನ್ನು ತಬ್ಬುತ್ತಾಳೆ. ಮುಂದಣ ಕಾರ್ಯವನ್ನು ಆಲೋಚಿಸಿ ನಿಶ್ಚಯಿಸಬೇಕು.

 

ನಿನ್ನ ಭರತನ ಮೇಲಣಳ್ಕರೆಯ ಮಮತೆಯಿಂ,
ರಾಮವಿದ್ವೇಷದಿಂದಲ್ತು, ರಾಮಂ ಬಾಳ್ಗೆ!
ಪೇಳ್ದೆನಿನಿತೆಲ್ಲಮಂ ನಿನಗೆ……..

ಎಂದು ಮಂಥರೆ ಕೈಕೆಯನ್ನು ಎಚ್ಚರಿಸುತ್ತಾಳೆ. ಮದುವೆಯಾಗೆಂದವನೆ ಹೆಣ್ಣನ್ನು ಒದಗಿಸುವಂತೆ ಕಾರ್ಯಸಾಧನೆಗೆ ಉಪಾಯವನ್ನು ಅವಳೆ ಸೂಚಿಸುತ್ತಾಳೆ. ಮುಂದಿನ ಕೆಲಸವನ್ನು ಅವಳು ನಡುಕಟ್ಟಿಕೊಂಡು ವಿದ್ಯುದ್ವೇಗದಿಂದ ಜರುಗಿಸುತ್ತಾಳೆ. ರಾಮನಿಗೆ ದಶರಥನ ವಿಪನ್ನಾವಸ್ಥೆಯನ್ನು ತಿಳುಹಿ ಅವನನ್ನು ಕೈಕೆಯರಮನೆಗೆ ಕರೆದುತರುವವಳೂ ಅವಳೆ; ರಾಮನಿಗೆ ನಾರುಡೆಯನ್ನು ನೀಡುವವಳೂ ಅವಳೆ; ದಶರಥನ ಪ್ರಾಣಪಕ್ಷಿ ಹಾರಿ ಹೋದಾಗ ಸಾಕ್ಷಿ ನಿಲ್ಲುವವಳೂ ಅವಳೆ.

ವಾಲ್ಮೀಕಿ ರಾಮಾಯಣದಲ್ಲಿ ಮಂಥರೆಯ ಜನ್ಮಮೂಲವೂ ಸಂಗಮಸ್ಥಾನವೂ ಗುಪ್ತವಾಗಿವೆ; ಶ್ರೀರಾಮನು ಕಾಡಿಗೆ ಹೋದ ನಂತರ ಎಲ್ಲಿಯೂ ಅವಳ ಸುಳಿವಿಲ್ಲ. ಶ್ರೀರಾಮಾಯಣದರ್ಶನದಲ್ಲಾದರೊ ಹೃದಯ ವಿದ್ರಾವಕವಾದ ಜನನ ಸ್ಥಿತಿಯನ್ನೂ ಮುಂದಿನ ಜೀವನವನ್ನೂ ಕಂಡಂತೆ ಮಹಿಮಾನ್ವಿತವೂ ತ್ಯಾಗಪೂರ್ಣವೂ ಆದ ಅವಳ ಅಂತಿಮ ಭವ್ಯ ಚಿತ್ರವನ್ನೂ ದರ್ಶಿಸಿ ಬೆರಗಾಗುತ್ತೇವೆ. ಭರತನಾಗಮನದ ಸುವಾರ್ತೆಯಿಂದ ಮಂಥರೆಯ ಮನಂ ಹೀಲಿಗರಿಗೆದರಿ ಕೇಗಿ ಕುಣಿಯುತ್ತದೆ. ತನ್ನವನಿಗೆ ದೊರೆತನ ದೊರೆಯುತ್ತ ದೆಂದು ಸಂಭ್ರಮದಿಂದ ನಾಲಿಗೆ ಚಪ್ಪರಿಸುತ್ತಿರುವಾಗಲೆ ಶತ್ರುಘ್ನ ಕಾಳಹಸ್ತದ ಬಿರುವೊಯ್ಲಿ ಗೊಳಗಾದ ಅವಳ ಗೂನು ಬಿರಿಯುತ್ತದೆ. ಹೆತ್ತ ತಾಯಿಗಿಂತ ಮಿಗಿಲಾಗಿ ಸಾಕಿದ ಆ ಮಂಥರೆಯ ಗೋಳ್ದನಿ ಪ್ರಾಜ್ಞಮತಿ ಭರತನ ಕರುಳನ್ನು ಇರಿದು, ಎದೆಯನ್ನು ಕೊರೆದು ಅವನನ್ನು ಹತ್ತಿರಕ್ಕೆ ಸೆಳೆಯುತ್ತದೆ. ಮಂಥರೆಯನ್ನು ನೋಡಿದ ಕೂಡಲೆ ಕನಿಕರ ಕನಲಿಕೆಯಾಗಿ ಪರಿಣಮಿಸುತ್ತದೆ. ಆದರೂ ತಾಳ್ಮೆಯನ್ನು ತಂದುಕೊಂಡು

………ಜಲಮಂ ತಿರಸ್ಕರಿಸಿ
ಪೊರಮಟ್ಟ ತಾವರೆಯೆರ್ದೆಗೆ ರವಿಯೆ ಗುರುವೈರಿ
ತಾನೆಂತುಟಂತೆ, ಕೇಳ್, ರಾಮನಂ ಬಿಸುಟೆರ್ದೆಗೆ
ಭರತನಹಿತಂ………
ಪೆಣ್ಗೊಲೆಗೆ ಪೇಸುವಂ ಪಿರಿಯಣ್ಣನ್……

ಎಂದು ಶತ್ರುಘ್ನನನ್ನು ಸಂತೈಸುತ್ತಾನೆ. ಅನಂತರ ಭರತ ಕೈಕೆಯರ್ ಮೊದಲುಗೊಂಡು ಅಯೋಧ್ಯಾನಗರವೆಲ್ಲ ದಶರಥ ಮಹಾರಾಜನ ಅಂತಿಮಯಾತ್ರೆಯ ದುಃಖೋದ್ವೇಗದಲ್ಲಿ ಪ್ರಪಂಚವನ್ನೇ ಮರೆತಿದ್ದಾಗ, ಸದಾ ಭರತನ ಸುಖದಲ್ಲಿ ತನ್ನ ಸುಖವನ್ನು ಕಂಡಿದ್ದ ಮಂಥರೆ ಶ್ರೀರಾಮಚಂದ್ರನನ್ನು ಮತ್ತೆ ಕರೆತಂದು ಅವನ ಮನಸ್ಸಿಗೆ ಉತ್ಸವವನ್ನುಂಟು ಮಾಡುವುದಾಗಿ ಸಂಕಲ್ಪಿಸಿ ಇರುಳಿನಲ್ಲಿ ಊರು ಬಿಟ್ಟು ಅಡವಿಯ ಕಡೆ ಬಿದ್ದೆದ್ದು ಓಡುತ್ತಾಳೆ. ಬೆಳಗಿನಿಂದ ಅನ್ನಪಾನಾದಿಗಳಿಲ್ಲ; ಮೈಯೆಲ್ಲ ನೆತ್ತರು ಕೋಡಿಯಾಗಿ ಬಸಿಯುತ್ತಿದೆ; ಕೈಕಾಲುಗಳಲ್ಲಿ ಶಕ್ತಿ ಇನಿತೂ ಉಳಿದಿಲ್ಲ. ಆದರೂ ತನ್ನ ಸಂಕಲ್ಪದ ಊರೆಗೋಲನ್ನು ನೆಮ್ಮಿರಾಮನಾಮವೆಂಬ ತಾರಕ ಮಂತ್ರವನ್ನು ಸಾರುತ್ತ ಮುಂದುವರಿಯುತ್ತಾಳೆ. ಕ್ರತುಪುರುಷನ ಪಾಯಸದ ರೂಪದಲ್ಲಿ ಭೂಮಿಗೆ ಅವತರಿಸಿದ ಪರಬ್ರಹ್ಮ ಸ್ವರೂಪಿಯಾದ ಶ್ರೀರಾಮನನ್ನು ‘ಓ ರಾಮಯ್ಯ! ದಮ್ಮಯ್ಯ!’ ಎಂದು ವಿಶ್ವವೇ ಕಂಪಿಸುವಂತೆ ಎದೆಯಾಳದಿಂದ ಕೂಗುತ್ತಾಳೆ. ಅನಂತರ  ದಶದಿಕ್ಕುಗಳನ್ನು ನುಂಗಿ ನೊಣೆಯುತ್ತಿದ್ದ ದಾವಾನಲಕ್ಕೆ ಸಿಕ್ಕಿ ಅಗ್ನಿತನುವಾಗಿ ಪ್ರಕಾಶಿಸುತ್ತಾಳೆ.

ಮಂಥರೆಯ ವಿಕಾರ ರೂಪದ ಪಾರ್ಥಿವ ದೇಹ ಭಸ್ಮೀಕೃತವಾಯಿತು. ಆದರೆ ಅವಳ ಆತ್ಮಸೌಂದರ್ಯದ ಧವಳ ಕಾಂತಿ ರಾಮಾಯಣವನ್ನೆಲ್ಲ ತುಂಬಿ ತುಳುಕುತ್ತದೆ. ಸದಾ ಭರತಕ್ಷೇಮಕಾತರಳಾಗಿ, ಭರತರಾಮ ಪುನಸ್ಸಮಾಗಮ ವೀಕ್ಷಣ ಕುತೂಹಲಿತೆಯಾಗಿ ಅವರಿಗೊಂದು ಆಶೀರ್ವಾದರಕ್ಷೆಯಾಗಿ ಲೋಕಲೋಕಂಗಳಲ್ಲಿ ಯಾತ್ರೆಗೈಯುತ್ತಾಳೆ. ಅವಳ ನಿರೀಕ್ಷಣೆ ಊರ್ಮಿಳೆಯ ನಿರೀಕ್ಷಣೆಗೆ ಎಂದಿಗೂ ಕಡಿಮೆಯಾದುದಲ್ಲ. ರಾಮಾಯಣದ ಮುಂದಿನ ರೋಮಾಂಚಕರವಾದ ಘಟನಾವಳಿಗಳ ಸುಳಿಯಲ್ಲಿ ಕವಿಯ ಗಮನದೊಡನೆ ಓದುಗರ ಗಮನವೂ ಸೆರೆಯಾಗುತ್ತದೆಯಾದರೂ ಅಯೋಧ್ಯಾನಗರದ ಮೌನವನ್ನಂತೂ ಮರೆಯುವಂತಿಲ್ಲ – ಭರತ ಕೌಸಲ್ಯೆ ಊರ್ಮಿಳೆ ಮೊದಲುಗೊಂಡು ಎಲ್ಲರೂ ರಾಮಕ್ಷೇಮ ಕಾತರರಾಗಿ, ರಾಮಸಾಕ್ಷಾತ್ಕಾರಕಾತರರಾಗಿ ತಪೋನಿರತರಾಗುತ್ತಾರೆ. ಸದಾವಕುಂಠನವತಿಯೂ ಅವನತಮುಖಿಯೂ ಪಶ್ಚಾತ್ತಾಪದಗ್ಧಳೂ ಆದ ಕೈಕೆಯ ಭೀಕರಮೌನವಂತು ರಕ್ಷಾಮಂತ್ರವಾಗುತ್ತದೆ – ಒಮ್ಮೆ ಇಷ್ಟನ್ನೆಲ್ಲ ಮರೆತರೂ ಮಂಥರೆಯನ್ನಂತು ಮರೆಯು ವಂತಿಲ್ಲ. ರಾವಣಕುಂಭಕರ್ಣಾದಿ ದೈತ್ಯರ – ಕೊನೆಗೆ ಸೀತೆಯ-ಆತ್ಮೋತ್ಥಾನಕ್ಕೆ ಅವಳು ನೆರವಾಗುತ್ತಾಳೆಂಬುದನ್ನೂ ನೆನಪಿನಲ್ಲಿಡಬೇಕಾಗುತ್ತದೆ. ಹದಿನಾಲ್ಕು ವರ್ಷಗಳು ಸಂದ ಮರುದಿನ ಶ್ರೀರಾಮ ಬರದಿರಲು ಭರತ ಅಗ್ನಿಪ್ರವೇಶೋದ್ಯುಕ್ತನಾಗುತ್ತಾನೆ. ಆಗ ಆ ಅಗ್ನಿಕುಂಡದಿಂದಲೆ ಅಗ್ನಿತನುವಾಗಿದ್ದ ಮಂಥರೆ ಸುರಾಂಗನಾಮೂರ್ತಿಯಾಗಿ ಮೈದೋರಿ ರಾಮಾಗಮನವಾರ್ತೆಯನ್ನು ತಿಳಿಸುತ್ತಾಳೆ. ಅವಳ ಹೆಸರನ್ನು ಕೇಳಿ ಅವನು ಬೇಸರಗೊಳ್ಳುತ್ತಾನೆ. ಆಗ ಅವಳು

ವತ್ಸ, ಕಾರಣಳಲ್ತು; ಬರಿ ಕರಣಮಾ ಕುಬ್ಜೆ,
ಮಂಥರಾ ಪ್ರೇಮದಂತಃಕರಣಮಂ ಕಾಣೆ
ನೀಂ………………..
………..ಬಹಿರಂಗದೊಳ್
ಆ ಕುಬ್ಜೆ ವಿಕೃತಿಯೆಂತಂತೆ ಹೊರನೋಟಕಾ
ಗೂನಿ ಗೆಯ್ದುದು ಪಾಪವೇಷಿ : ನಾನೆಯೆ, ನೋಡು
ನಿನ್ನ ಮಂಥರೆಯಂತರಾತ್ಮದ ಪುಣ್ಯಲಕ್ಷ್ಮಿ

ಎಂದು ಅವನನ್ನು ಸಂತೈಸುತ್ತಾಳೆ. ಅಲ್ಲಿಗೆ ಮಂಥರೆಯ ಆತ್ಮಾಭಿಲಾಷೆಯ ರೂಪದ ವಿಧಿಯ ವಜ್ರೇಚ್ಛೆ ಪರಿಪೂರ್ಣಗೊಳ್ಳುತ್ತದೆ; ಅವಳ ಆತ್ಮಕ್ಕೆ ಶಾಂತಿ ದೊರೆತು ವಿಶ್ವಶಕ್ತಿಯಲ್ಲಿ ವಿಲೀನವಾಗುತ್ತಾಳೆ.

ಶ್ರೀ ಕುವೆಂಪು ಸೃಜಿಸಿರುವ ಅಪೂರ್ವಭವ್ಯವೂ ಅಲೌಕಿಕ ಸುಂದರವೂ ಆದ ಕಲಾಪ್ರತಿಮೆಗಳಲ್ಲಿ ಮಂಥರಾ ಪ್ರತಿಮೆಯೂ ಒಂದು. ಮನೋವಿಜ್ಞಾನದೃಷ್ಟಿ, ಕಲಾದೃಷ್ಟಿ, ದರ್ಶನದೃಷ್ಟಿ ಈ ಯಾವ ದೃಷ್ಟಿಯಿಂದ ಬೆದಕಿ ನೋಡಿದರೂ ಅದು ಸಂಪೂರ್ಣ ಸಮಗ್ರ ಪ್ರತಿಮೆಯಾಗಿ ಕಾಣುತ್ತದೆ. ಸಾಮಾನ್ಯ ವಿಮರ್ಶಕನ ವಿಚಿಕಿತ್ಸಾತ್ಮಕವಾದ ವಿಶ್ಲೇಷಣಶೀಲದ ಮತಿಗೆ ಆ ದೃಷ್ಟಿತ್ರಯಗಳು ಬೇರೆ ಬೇರೆಯಾಗಿ ಕಂಡು ಬಂದರೂ ಸಮ್ಯಕ್ ದೃಷ್ಟಿಯ ರಸಜ್ಞನಿಗೆ ಅವು ಅಪೃಥಕ್ ಸ್ಥಿತಿಯಲ್ಲಿ ಅವಿಭಾಜ್ಯಾವಸ್ಥೆಯಲ್ಲಿ ಅಭಿವ್ಯಕ್ತಗೊಳ್ಳುತ್ತವೆ. ಮಂಥರೆ ವಿಧಿಯ ಕೈಕೂಸೆಂಬುದನ್ನು ಮರೆಯಲಾಗದಿದ್ದರೂ, ವಿಧಿಯ ಮಾಯಾಶಕ್ತಿ ಅವಳ ಬಾಹ್ಯಾಂತರಿಕ ವ್ಯಾಪಾರಗಳ ಹಿನ್ನೆಲೆಯಲ್ಲಿ ಪ್ರವಹಿಸುತ್ತಿದ್ದರೂ, ಅವಳು ಪ್ರಥಮತಃ ಮಾನವಿಯೆಂಬುದನ್ನು ಮಾತ್ರ ನಿರ್ಲಕ್ಷಿಸಲಾಗದು. ಆದರೆ ಎಂಥ ಮಾನವಿ! ಸ್ವಾರ್ಪಣ ಮೂಲವಾದ ತ್ಯಾಗ, ನಿಷ್ಕಳಂಕ ನಿರ್ವ್ಯಾಜಪ್ರೇಮ

[1]ಗಳೇ ಮೊದಲಾದ ದೈವೀಗುಣಗಳಿಂದ ಶಾಶ್ವತ ಪುಣ್ಯಲಕ್ಷ್ಮಿಯಾಗಿ, ದಯಾಲಕ್ಷ್ಮಿಯಾಗಿ, ಲೋಕಕಲ್ಯಾಣಕರೆಯಾಗಿ ಮೆರೆದ ತೇಜಸ್ವಿನಿ ಅವಳು. ರಾಮನ ವನವಾಸಪ್ರಾಪ್ತಿಗೆ ಅವನ ಮೇಲಣ ವಿದ್ವೇಷ ಕಾರಣವಲ್ಲ, ಭರತನ ಮೇಲಣ ಮಮತೆಯೆ ಕಾರಣ. ಒಬ್ಬನ ದುಃಖಾಶ್ರುಧಾರೆಯಿಂದ ಮತ್ತೊಬ್ಬನ ಸುಖದ ಹಸಿರು ಮೊಳೆಯುತ್ತಿರುವುದು ನಿತ್ಯಾನುಭವದ ಸಂಗತಿಯಾಗಿದೆ. ರಾಮಾಯಣದ ಹಗರಣಕ್ಕೆ ಅವಳು ಪೂರ್ತಿ ಹೊಣೆಗಾರಳಲ್ಲ; ಅವಳ ಹೃದಯ ಸಂಸ್ಕಾರಕ್ಕೆ ನಿಮಿತ್ತವಾದ ಸಮಾಜ ಬಹುಮಟ್ಟಿಗೆ ಹೊಣೆಯಾಗಬೇಕಾಗುತ್ತದೆ. ರಾಮ ಸೀತಾ ಲಕ್ಷ್ಮಣ ಸಮೇತನಾಗಿ ನಾರುಡೆಯುಟ್ಟು ಊರು ಬಿಡುವಾಗ, ಸಾಕೇತನಗರಿಯ ಸ್ತ್ರೀಪುರುಷರ, ದಶರಥನ, ಕೌಸಲ್ಯಾ ಸುಮಿತ್ರೆಯರ ಆಕ್ರಂದನಧ್ವನಿಯೊಡನೆ ನಮ್ಮ ಆಕ್ರಂದನಧ್ವನಿಯನ್ನು ಕೂಡಿಸಬಹುದು; ಅವರ ಅಶ್ರುಗಂಗಾವಾಹಿನಿಗೆ ನಮ್ಮ ಅಶ್ರುಗಂಗೆಯನ್ನೂ ಸೇರಿಸಿ ಆ ನಗರವನ್ನು ಕೊಚ್ಚಬಹುದು; ಆದರೆ ಆ ತಬ್ಬಲಿ ಮಂಥರೆಯನ್ನು ನಿಂದಿಸಲು ಮನಸ್ಸು ಬರುವುದಿಲ್ಲ. ನಾವೂ ಅಶರೀರಿಗಳಾಗಿ ಅವಳನ್ನು ಹಿಂಬಾಲಿಸಿ ಶ್ರೀರಾಮ ಸೀತಾ ಭರತರ ಕ್ಷೇಮ ಕಾತರತೆ ಯೊಂದೆ ತಪಸ್ಸಾಗಿ, ಅವಿಶ್ರಾಂತವಾಗಿ ಲೋಕಲೋಕಗಳನ್ನು ಸಂಚರಿಸಿ, ಕೊನೆಗೆ ಅವಳಂತೆಯೆ ಶ್ರೀರಾಮ ಭರತರ ಪುನಸ್ಸಮಾಗಮದಿಂದ ಸಂತೃಪ್ತರಾಗಿ ಕೃತಾರ್ಥರಾಗುತ್ತೇವೆ. ರಾಮಾಂಘ್ರಿಯ ಸೋಂಕಿಗೆ ಕಲ್ಲು ಕಡುಚೆಲ್ವು ಪೆಣ್ಣಾಗಿ ಸಂಭವಿಸಿದಂತೆ ಶ್ರೀರಾಮಾಯಣ ದರ್ಶನದ ಮಹಾಕವಿಯ ಪ್ರತಿಭಾಸಂಸ್ಪರ್ಶದಿಂದ ಮಂಥರೆ ಕೀಳ್ವರಿಜಳಿದು ಪುಣ್ಯಲಕ್ಷ್ಮಿ ಯಾಗುತ್ತಾಳೆ; ಆ ಕವಿ ಕಾವ್ಯ ಕರುಣಾರಸದ ಲಹರಿಯಲ್ಲಿ ಮಿಂದೆದ್ದ ಮಂಥರೆ ತೇಜೋಲಕ್ಷ್ಮಿ ಯಾಗಿ ಕಳಕಳಿಸುವಂತೆ, ನಮ್ಮ ಹೃದಯವೂ ಮಿಂದು ಶುಚಿರ್ಭೂತವಾಗಿ ಅವಳ ಆತ್ಮಶಕ್ತಿಯ ಆವಾಹನೆಗಾಗಿ ಸಿದ್ಧವಾಗುತ್ತದೆ. ಆ ಪವಿತ್ರ ಕಾರ್ಯಕ್ಕೆ ಭಾವಗೀತೆಯಂತಿರುವ ಕವಿಯ ವಾಙ್ಮಂತ್ರವೇ ನಾಂದಿಯಾಗಲಿ :

……….ಓ ಪತಿತೆ,
ಕುಬ್ಜಿ, ಓ ಮಂಥರೆಯೆ ಮರುಗುವೆನ್ ನಿನಗೆ
ಕವಿಸಹಜಕರುಣೆಯಿಂ ಲೋಕಕ್ರೋಧ ಮದಹಸ್ತಿ
ಪದದಲನ ರೋಷದಾವಾಗ್ನಿಗಾಹುತಿಯಾಗಿ
ಬಿಳ್ದ ನಿನ್ನಾ ಭಸ್ಮರಾಶಿಯಂ ತೊಳೆವುದಿದೊ
ಕಣ್ಗಂಗೆ ಕಾವ್ಯಮಹಿಮಾ ಸಿಂಧುತೀರ್ಥಕ್ಕೆ!
ಕಂಸನರಮನೆಗಾಗಿ ಪರಿಮಳದ್ರವ್ಯಮಂ
ಪೊತ್ತು ಪೊರಮಟ್ಟಿರ್ದ ಕುಬ್ಜಿಕೆಗೆ ದೇವಕಿಯ
ಮಗನ ಸೋಂಕಿಂದೆ ಸಿರಿಚೆಲ್ವು ದೊರೆಕೊಂಡಂತೆ
ಕಾವ್ಯ ಕರುಣಾರಸದ ಲಹರಿಯ ಹರಿಯ ಸಿರಿಯ
ಕರಪದ್ಮ ಚುಂಬನಕೆ ನಿನ್ನ ಕೀಳ್ವರಿಜಳಿದು
ಮತ್ತೆ ಹೃದಯದ ಲಸದ್ರೂಪಂ ಮೆರೆಯದಿಹುದೆ?
ತನ್ನಾವ ಪುರುಷಾರ್ಥಕಿನ್ನಾವ ಸಂಪದಕೆ
ಮೇಣ್ ಸುಖಕೆ ಆ ಗೂನಿ ಪೇಳ್ದಳುಪದೇಶಮಂ
ಕೈಕೆಗೆ ಜನಿಸಿದಂದಿನಿಂ ಪೆರರ ಚೆಲ್ವಿನೊಳೆ
ತನ್ನ ಚೆಲ್ವಂ ಕಂಡೊಲಿದು, ಪೆರರ ಸೊಗದೊಳೆಯೆ
ತನ್ನ ಸೊಬಗಂ ಕಂಡುಮುಂಡುಮಿರ್ದಾ ದಾಸಿ
ನೆಚ್ಚಿನೊಡತಿಗೆ ಮತ್ತೆ ಮೆಚ್ಚಿನಾಕೆಯ ಶಿಶುಗೆ
ತೊಳ್ತುಗೆಯ್ಮೆಯ ಪೆರ್ಮೆಗೊಳ್ಪನೆಸಗುವೆನೆಂದು
ಕಜ್ಜಮಂ ಕೈಕೊಂಡೊಡೇಂ ಸ್ವಾರ್ಥ ದೋಷಮಂ
ಕಾಣ್ಬರಾರಾಕೆಯ ಪರಾರ್ಥತೆಯ ಶುದ್ದಿಯಲಿ?

* * *[1]     ಸೃಷ್ಟಿಶಕ್ತಿಯೆ ವಿಲಯಶಕ್ತಿಯಾಗಿ ಪರಿವರ್ತನೆಗೊಳ್ಳುವಂತೆ ಅವಳ ಪ್ರೇಣ ಶಕ್ತಿಯೆ ದ್ವೇಷಶಕ್ತಿಯಾಗಿ ಪರಿವರ್ತನೆಗೊಳ್ಳುತ್ತದೆ ನಿಜ. ಆದರೆ ಅದು ಅನಿವಾರ್ಯ

……..ಹಾ ಜೀವನದೊಳೆನಿತೆನಿತು
ದ್ವೇಷನಿಷ್ಠುರ ವೈರ ಕಷ್ಟಗಳಿಗೆಲ್ಲಮಾ
ಪ್ರೇಮವೆ ಪಿತಾಮಹನ್…….