‘ಶ್ರೀಸಾಮಾನ್ಯ’ವೆ ಭಗವನ್ ಮಾನ್ಯಂ;
‘ಶ್ರೀಸಾಮಾನ್ಯ’ನೆ ಭಗವದ್ ಧನ್ಯಂ!
ಸಾಮಾನ್ಯವೆ ಭಗವಂತನ ರೀತಿ;
ಸಾಮಾನ್ಯನೆ ದಿಟ ಭಗವತ್‌ಪ್ರೀತಿ!

* * *

ಅಖ್ಯಾತಿಯೆ ಸಾಮಾನ್ಯರ ಶ್ರೀಮಾನ್ ಮಾರ್ಗಂ.
–  ‘ಶ್ರೀಸಾಮಾನ್ಯರ ದೀಕ್ಷಾ ಗೀತೆ’ಯಿಂದ.

ಗತಕಾಲದ ಇತಿಹಾಸದ ಕಡೆಗೆ ಕ್ಷಣಕಾಲ ಸ್ಮೃತಿನೇತ್ರವನ್ನು ಹೊರಳಿಸಿದರೆ ಅವತಾರ ಪುರುಷರ, ಪ್ರವಾದಿಗಳ, ತತ್ತ್ವಜ್ಞಾನಿಗಳ, ಧರ್ಮಶಾಸ್ತ್ರ ನಿರ್ಮಾತೃಗಳ, ಚಕ್ರವರ್ತಿಗಳ, ಅತಿರಥಮಹಾರಥರ, ಇನ್ನು ಎಷ್ಟೆಷ್ಟೊ ಮಹಾತ್ಮರ ಮೆರೆವಣಿಗೆ ನಮ್ಮ ಕಣ್ಣುಂದೆ ಹಾದುಹೋಗುತ್ತದೆ. ಅವರನ್ನೂ ಅವರ ಮಹಿಮಾಮಯ ಜೀವನವನ್ನೂ ನೆನೆಸಿಕೊಂಡಾಗ ನಮ್ಮ ಪ್ರಾಣಪಕ್ಷಿ ಬಡಕಲಾದರೆ ರೆಕ್ಕೆ ಮುದುಡಿ ತತ್ತರಿಸಿ ಬೀಳುತ್ತದೆ; ಅದು ಶಕ್ತಿಯುತ ವಾದುದಾದರೆ ಅವರ ಔನ್ನತ್ಯಕ್ಕೆ ಏರುವ ಸಾಧನೆಯಲ್ಲಿ ಪುನೀತವಾಗುತ್ತದೆ. ಇತಿಹಾಸದ ತೇಲುನೋಟಕ್ಕೆ ಜಾಜ್ಜ್ವಲ್ಯಮಾನರಾದ ವ್ಯಕ್ತಿಗಳು ಬೀಳುತ್ತಾರೆಯೆ ಹೊರತು, ಎಲೆಯ ಮರೆಯ ಕಾಯಿಯಂತೆ ಶುದ್ಧವಾದ ಬಾಳನ್ನು ಬಾಳಿ ಲೋಕಕಲ್ಯಾಣಕ್ಕಾಗಿ ಮೌನತಪಸ್ಸನ್ನು ಆಚರಿಸುತ್ತಿರುವ ಮಹಾತ್ಮರು ಬೀಳುವುದಿಲ್ಲ. ಒಬ್ಬ ತನ್ನ ಸಾಧನೆಯಿಂದ ಸಿದ್ದಿಯಿಂದ ಲೋಕವನ್ನು ಆಕರ್ಷಿಸಿ, ಸುಪ್ತಚೇತನವನ್ನು ಬಡಿದೆಬ್ಬಿಸಿ, ಬಿರುಗಾಳಿಯಂತೆ ತಿರ್ರನೆ ತಿರುಗಿ ಸಿಡಿಲಿನಂತೆ ಆರ್ಭಟಿಸಿ, ಭೂಕಂಪದಂತೆ ನಡುಗಿಸಿ ಅನೇಕ ಸಾಧಕರನ್ನು ಉದ್ಧರಿಸಿ ಮುಕ್ತಾತ್ಮರನ್ನಾಗಿ ಮಾಡಬಹುದು; ಮತ್ತೊಬ್ಬ ಮಂದಾನಿಲನಂತೆ, ತನ್ನ ಮೌನತಪಸ್ಸಿನಿಂದ ಲೋಕದ ಅರಿವಿಲ್ಲದೆಯೆ ಲೋಕವನ್ನು ಉದ್ಧರಿಸಬಹುದು. ಒಬ್ಬ ‘ಅಸಾಮಾನ್ಯ’ನಾದರೆ ಮತ್ತೊಬ್ಬ ‘ಸಾಮಾನ್ಯ’; ಒಬ್ಬ ನಿರ್ಝರಿಣಿಯಾದರೆ ಮತ್ತೊಬ್ಬ ಗುಪ್ತಗಾಮಿನಿ. ಆದರೆ ಇಬ್ಬರ ಲಕ್ಷ್ಯವೂ ಒಂದೆ. ಖಂಡದೃಷ್ಟಿಗೆ ಅವರಲ್ಲಿ ತಾರತಮ್ಯಭಾವ ಉದಿಸಿದರೂ ಪೂರ್ಣದೃಷ್ಟಿಗೆ ಇಬ್ಬರೂ ಒಂದೆಯೆ. ಭಗವದ್ದೃಷ್ಟಿಗೆ ಹಿರಿಯ ಕಿರಿಯ ಎಂಬ ಭೇದಭಾವನೆಯೆ ಇಲ್ಲ. ಸೈನ್ಯದಲ್ಲಿ ಮಹಾಯೋಧನ ಪಾತ್ರ ಎಷ್ಟು ಮುಖ್ಯವೊ ಸಾಮಾನ್ಯ ಯೋಧನ ಪಾತ್ರವೂ ಅಷ್ಟೇ ಮುಖ್ಯ. ಭಗವತ್ಸಂಕಲ್ಪಸಿದ್ದಿಗೆ ಅಸಾಮಾನ್ಯನ ಜೀವನ ಹೇಗೆ ನಿಮಿತ್ತ ಸಾಧನವಾಗುತ್ತದೆಯೊ, ಹಾಗೆಯೆ ಸಾಮಾನ್ಯನ ಜೀವನವೂ ನಿಮಿತ್ತ ಸಾಧನ ವಾಗುತ್ತದೆ. ಭಗವಂತನಿಗೆ ಅಸಾಮಾನ್ಯತೆಗಿಂತ ಸಾಮಾನ್ಯತೆಯಲ್ಲಿಯೆ ಹೆಚ್ಚು ಒಲವರ. ‘ಎನಗಿಂತ ಕಿರಿಯನಿಲ್ಲ’ವೆಂಬ ಮಹಾತ್ಮರ ವಾಣಿಯೂ ಈ ತತ್ತ್ವವನ್ನೆ ಸಾರುತ್ತಿದೆ.

ಈ ತತ್ತ್ವ ಶ್ರೀ ರಾಮಾಯಣದರ್ಶನದಲ್ಲಿ ಮೊದಲಿಂದ ಕೊನೆಯತನಕ ಪ್ರತಿಪಾದಿತ ವಾಗಿದೆ. ಶ್ರೀ ರಾಮಾಯಣದರ್ಶನ ಕತೆಗೆ ಕತೆ, ಕಾವ್ಯಕ್ಕೆ ಕಾವ್ಯ, ದರ್ಶನಕ್ಕೆ ದರ್ಶನ. ಶ್ರೀರಾಮ ಸೀತಾ ಆಂಜನೇಯ ರಾವಣ ಮಂಡೋದರಿ ಶಬರಿ ಮೊದಲಾದವರು ಕವಿ ಕಂಡ ದರ್ಶನದಿಂದ ಮೂಡಿದ ಪ್ರತಿಮೆಗಳು, ಕವಿಯ ಭಾವಾನುಭವಗಳು ಆಕಾರ ತಾಳಿದ ಮೂರ್ತಿಗಳು. ಒಬ್ಬೊಬ್ಬನೂ ಬರಿಯ ವ್ಯಕ್ತಿಯಲ್ಲ, ಶಕ್ತಿ. ಒಬ್ಬೊಬ್ಬರೂ ಸತ್ಯಧರ್ಮ ಅಹಿಂಸೆ ಭ್ರಾತೃಪ್ರೇಮ ಪತಿವ್ರತಾಶೀಲ ಸ್ನೇಹ ಔದಾರ್ಯ ಸಾಹಸ ಮುಂತಾದ ಹಿರಿಯ ತತ್ತ್ವಗಳಿಗೆ ಪ್ರತಿಮೆಗಳಾಗಿದ್ದಾರೆ. ಕವಿಯ ಬಹುಮುಖ ಪ್ರತಿಭೆ ಮತ್ತು ಪಾರದರ್ಶಿತ್ವ ಆ ಹಿರಿಯ ವ್ಯಕ್ತಿಗಳಲ್ಲಿ ಎಂತೊ ವಹ್ನಿರಂಹರಂತಹ ‘ಸಾಮಾನ್ಯ’ರಲ್ಲಿಯೂ ಭಗವತ್‌ಶ್ರೀಯನ್ನು ದರ್ಶಿಸುತ್ತದೆ.

ಶ್ರೀರಾಮಸತಿಯ ಅನ್ವೇಷಣೆಗಾಗಿ ಸತ್ಯವಾಕ್ಯನಾದ ಸುಗ್ರೀವನ ಡಿಂಡಿಮಾಜ್ಞೆಯ ಮೇರೆಗೆ ಮಾಲ್ಯವತ್ ಪರ್ವತದ ಪ್ರಸ್ರವಣಶಿಖರದಲ್ಲಿ ಒಡ್ಡುಗೂಡಿದ ಸಾಗರ ಸ್ಪರ್ಧಿವಾನರ ಸೈನ್ಯವನ್ನು ಲಕ್ಷ್ಮಣಸಮೇತನಾದ ಶ್ರೀರಾಮನು ನೋಡಲು ಬಂದಾಗ ವಹ್ನಿರಂಹರು ನಮ್ಮ ಕಣ್ಣಿಗೆ ಬೀಳುತ್ತಾರೆ. ಶ್ರೀರಾಮನ ‘ಕಣ್ಣಿ’ಗಲ್ಲ. ಸೀತಾವಿಯೋಗ ಕಾತರನಾದ ಶ್ರೀರಾಮನಿಗೆ ಆ ಅನೀಕಿನಿಯನ್ನು ವಿವರವಿವರವಾಗಿ ನೋಡಲು ಸಮಯವಾದರು ಇದೆಯೆ? ಆದರೂ ಬೆಟ್ಟದಲ್ಲಿ ಕಾಡಿನಲ್ಲಿ ಗಿರಿತಟದಲ್ಲಿ ನದಿತಟದಲ್ಲಿ ಕಣಿವೆಯಲ್ಲಿ ಕೋಡಿನಲ್ಲಿ ಬೀಡುಬಿಟ್ಟಿದ್ದ ಪಡೆಗಳನ್ನು ನೋಡಲು ‘ಪಗಲೈದುಮಿರುಳೈದು’ ಹಿಡಿಯಿತಂತೆ! ಸಮದರ್ಶಿಯೂ ಪಾರದರ್ಶಿಯೂ ಆದ ಕವಿಪ್ರತಿಭೆ ಶತಬಲಿ ಸುಷೇಣ ಜಾಂಬವಂತ ಮೊದಲಾದ ವೀರಾಧಿವೀರರನ್ನು ಶ್ರೀರಾಮಚಂದ್ರನಿಗೆ ಪರಿಚಯಮಾಡಿ ಕೊಡುವ ಮುನ್ನವೆ ಶ್ರೀರಾಮ ಸೇವಾಕಾತರರಾದ ವಹ್ನಿರಂಹರನ್ನು ಪರಿಚಯ ಮಾಡಿಕೊಡುತ್ತದೆ. ದಶಕೋಟಿ ವಾನರಚಮೂ ನಾಯಕನೂ ಸುಗ್ರೀವಸುಪ್ರಿಯನೂ ಆದ ದಧಿಮುಖನ ದಳದಲ್ಲಿ ವಹ್ನಿನಾಮಕಂ,

………ಸಾಮಾನ್ಯ
ಸೈನಿಕಂ, ಪುಲಿದೊವಲಿನಂಗಿಯಿಂ ಗುಲಗುಂಜಿ
ಹಾರದಿಂದ ಕಣ್ಣುಕಣ್ಣಿನ ಹೀಲಿಮುಡಿಯಿಂದ,
ದಿಗ್ಗಜಸ್ಮರಣೆಯಂ ತರ್ಪ ಬೃಹದಾಕೃತಿಯ
ಧೀರತನುವಿಂದೆ ಮೆರೆವೊಂ……….

ತನ್ನ ಬಳಿಯಿದಿದ್ದ ಕುಳ್ಳೊಡಲ ಕೆಳೆಯ ರಂಹನಿಗೆ ಶ್ರೀರಾಮನ ಬರವನ್ನು ತಿಳಿಸುತ್ತಾನೆ. ರಂಹ ಕುಳ್ಳ. ಶ್ರೀರಾಮನನ್ನು ನೋಡುವ ಕಾತರತೆಯಿಂದ ತನ್ನ ಮಿತ್ರ ವಹ್ನಿಯ ಭುಜಕ್ಕೆ ಆತುಕೊಂಡು ಕಾಲತುದಿಬೆರಳ ಮೇಲೆ ನಿಲ್ಲುತ್ತಾನೆ. ಆದರೂ ಶ್ರೀರಾಮನ ಆಕೃತಿ ಅವನ ಕಣ್ಣಿಗೆ ಬೀಳುವುದಿಲ್ಲ. ಭಗ್ನಮನೋರಥನಾದ ಅವನು ಅಧಿಕತರ ಕಾತರತೆಯಿಂದ ತನ್ನ ಗಾತ್ರಕ್ಕೆ ತಾನೆ ‘ಕಿನಿಸಿಯುಂ ಪೇಸಿಯುಂ ಕುಪ್ಪಳಿಸಿ ನೆಗೆದಡಂ ಬಿಳಿಯ ಬಂಡೆಯ ನೆತ್ತಿಗೇರಿ’ ಹೃದಯಕ್ಕೆ ತೃಪ್ತಿಯನ್ನು ಕಣ್ಣಿಗೆ ಸಾರ್ಥಕತೆಯನ್ನು ತಂದುಕೊಳ್ಳುತ್ತಾನೆ. “ಕಾಡಿಡಿದು ಪಳುಮುಚ್ಚಿದರಮನೆಯ ಸಿರಿಯಂತೆ” ಆ ‘ಸಾಮಾನ್ಯ’ ಸೈನಿಕರಿಗೆ ಶ್ರೀರಾಮ ಕಾಣುತ್ತಾನೆ. ಅವನನ್ನು ನೋಡಿದ ಕೂಡಲೆ ಅವರು ಭಾವಾವೇಗದಿಂದ ರೋಮಾಂಚಗೊಳ್ಳುತ್ತಾರೆ. ಶ್ರೀರಾಮ ಔತ್ತರೇಯ, ದೂರದವನು, ಅವನಿಗಾಗಿ ತಮ್ಮ ಬಾಳ್ದಲೆಯನ್ನು ಅರ್ಪಿಸುವುದೇತಕ್ಕೆ ಎಂಬ ಅಶ್ರದ್ಧೆ ಅವರಲ್ಲಿ ಮೂಡಲಿಲ್ಲ. ಅವರು ಸೈನ್ಯದಲ್ಲಿ ಸಾಮನ್ಯರಾದರೂ ಶ್ರದ್ಧೆಯಲ್ಲಿ ಯಾರಿಗೂ ಕಡಿಮೆಯಲ್ಲ. ಆ ಶ್ರದ್ಧೆಯಿಲ್ಲದಿದ್ದರೆ

ಸಾರ್ಥಕಂ ನಾಂ ಬಂದುದೀತಂಗೆ
ನಮ್ಮ ಬಾಳಂ ಬೀಳ್ವುದೊಂದೈಸೆ ಸಯ್ಪುಜ್ಜುಗಮ್!
…………………………………
ಪೂರ್ವಜನ್ಮದ ಪುಣ್ಯಮೈಸೆ ನಾಮಿನ್ನರಂ
ಬೆರಸಿ ರಕ್ಕಸರೊಡನೆ ಕಾದುವೆಮ್ ! ಧನ್ಯರಾಮ್!

ಎಂಬ ಮಾತುಗಳು ಅವರ ಬಾಯಿಂದ ಹೊರಬರುತ್ತಿದ್ದುವೆ?

ವಹ್ನಿರಂಹರು ಶ್ರೀರಾಮಚಂದ್ರಮೂರ್ತಿಯನ್ನು ಕಂಡು ತೃಪ್ತಿಗೊಂಡರು. ಆದರೆ ಈ ಅಜ್ಞಾತಸಾಮಾನ್ಯರ ಅಸಾಮಾನ್ಯಶ್ರದ್ಧೆ ಶ್ರೀರಾಮನಿಗೆ ಅರಿವಾದುದು ಕಡಲ ದಡದಲ್ಲಿ ಸೈನ್ಯ ಬೀಡುಬಿಟ್ಟಿದ್ದಾಗ. ಈ ಸಾಮಾನ್ಯತಾ ಅಸಾಮಾನ್ಯತೆಗಳ ಪವಿತ್ರ ಸಮಾಗಮಕ್ಕೆ ಕವಿ ಸೃಷ್ಟಿಸಿರುವ ಸಂದರ್ಭ ಎಂಥದು! ಆಗ ತಾನೆ ಸಂಜೆ ಹರಿದು ಕತ್ತಲು ಮುತ್ತುತ್ತಿದೆ. ಸಾಗರ ಸೈನ್ಯಸಾಗರಗಳೆರಡೂ ಮೌನವನ್ನಾಲಿಂಗಿಸಿವೆ. ಗಿರಿ ಧರಿತ್ರಿ ಮಸಿಮುದ್ದೆಯಾಗಿದೆ. ಲಂಕಾ ದ್ವೀಪದ ಕಡೆಗೆ ಅಟ್ಟಿದ ದೃಷ್ಟಿಯುಳ್ಳವನಾಗಿ, ಅಪಾರ ಪಾರಾವಾರವನ್ನು ಈಕ್ಷಿಸುತ್ತ ಚಿಂತಾಬ್ಧಿ ಯಲ್ಲಿ ಮುಳುಗಿದ್ದ ಶ್ರೀರಾಮ ಅಗ್ನಿಪುತ್ರ ನೀಲನನ್ನು ಏಕಾಂತ ಸಂಭಾಷಣೆಗೆ ಕರೆಯುತ್ತಾನೆ. ನೂರು ಯೋಜನ ವಿಸ್ತಾರದ ಸಾಗರವನ್ನು ದಾಟುವ ಬಗೆ ಹೇಗೆಂದು ಅವನನ್ನು ಪ್ರಶ್ನಿಸುತ್ತಾನೆ. ಸಹಜ ಮೌನಿಯಾದ ನೀಲ ಉಚಿತ ಉತ್ತರವನ್ನು ನೀಡುತ್ತಾನೆ. ಶರಧಿತರಣಕಾತರತೆಗಿಂತ ಸೀತಾ ಸಮಾಗಮ ಕಾತರತೆಗಿಂತ ರಾಮನಿಗೆ ಕಪಿಸೈನ್ಯಕ್ಷೇಮಕಾತರತೆ ಅಧಿಕವಾಗಿದೆ. ತನ್ನದೊಂದು ಸುಖಕ್ಕಾಗಿ ಬಹುಜನರ ಬಾಳನ್ನು ಬೇಳ್ವೆ ಮಾಡುವುದು ಸರಿಯೆಯೆಂದು ಶಂಕಿಸುತ್ತಾನೆ :

………. ಬಹು ಜನರ
ಸತಿಸುತರ ಸಂಸಾರ ಸುಖವನೇತಕೆ ನನ್ನ
ಮೇಣೆನ್ನ ಸತಿಯ ಮುಂದಣ ಅನಿಶ್ಚಿತ ಸುಖಕೆ
ಬೇಳ್ವುದೆಂದೆದೆ ಚುಚ್ಚುತಿಹುದೆನಗೆ, ಅಗ್ನಿಭವ.

ಇದಕ್ಕೆ ಪ್ರತಿಯಾಗಿ ಪ್ರಾಜ್ಞನಾದ ನೀಲನ ಮಾತು ಬಾಣದಂತೆ ಹೊರಬರುತ್ತದೆ :

ಸ್ವಾರ್ಥಮಲ್ತೀ ಸಾಹಸಂ. ಪುರುಷಾರ್ಥವೊಂದು
ಗಂತವ್ಯಮೀ ತ್ಯಾಗಯಜ್ಞಕ್ಕೆ ನೀನುಮಾ
ದೇವಿಯುಂ ಪ್ರತಿಮೋಪಮರ್ ಮಾತ್ರರೈ, ಪ್ರಾಜ್ಞ

ಕಪಿವೀರರ ಸಾಹಸೇಚ್ಛೆ ಸ್ವಾರ್ಥ ಮೂಲವಾದುದಲ್ಲ. ಭಕ್ತನಿಲ್ಲದ ಗುಡಿಯಂತೆ ಕ್ರಿಯಾತ್ಮಕ ವಲ್ಲದ ಲೋಕಕಲ್ಯಾಣಕರವಲ್ಲದ ಸಾಹಸ ವ್ಯರ್ಥವಾಗುತ್ತದೆ. ಜಗತ್ಕಲ್ಯಾಣಕ್ಕಾಗಿ ಎಸಗಿದ ಸಾಹಸದಿಂದ ಪುರುಷಾರ್ಥಗಳು ಲಭಿಸುತ್ತವೆ. ಆ ಸಾಹಸಕ್ಕೆ ರಾಮಸೀತೆಯರು ಪ್ರತಿಮೆಗಳು. ಇದು ಮಹಾತ್ಮರಾದ ನೀಲಾಂಜನೇಯರ ಮತವಷ್ಟೇ ಅಲ್ಲ, ಸಾಮಾನ್ಯರಾದ ವಹ್ನಿರಂಹರ ಮತವೂ ಅಹುದು.

ಶ್ರೀರಾಮನೀಲರ ಸಂಭಾಷಣೆ ಹೀಗೆ ಹರಿಯುತ್ತಿರುವಾಗ ವಹ್ನಿರಂಹರ ಸುಳಿವು ಶ್ರೀರಾಮನ ಕಣ್ಣಿಗೆ ಬೀಳುತ್ತದೆ. ರಾಮನ ಆಣತಿಯಂತೆ ನೀಲ ಅವರನ್ನು ಸನಿಹಕ್ಕೆ ಕರೆಯುತ್ತಾನೆ. ಬಂದವರು ಶ್ರಿರಾಮನೀಲರಿಗೆ ನಮಸ್ಕರಿಸುತ್ತಾರೆ. ಸ್ನೇಹಶೀಲನಾದ ರಾಮ ಅವರ ವೃತ್ತಾಂತ ವನ್ನು ತಿಳಿಯುವ ಸಲುವಾಗಿ ಪ್ರಶ್ನೆ ಹಾಕುತ್ತಾನೆ. ವಹ್ನಿ ಉತ್ತರ ಕೊಡುತ್ತಾನೆ. “ನೀಮಾವ ಯುದ್ಧದೊಳ್ ನುರಿತವರ್?” ಎಂಬುದಕ್ಕೆ ವಹ್ನಿ

……….ವಜ್ರಮುಷ್ಟಿಯ ಮಲ್ಲಯುದ್ಧದಿ
ಪೆಸರ್ವೆತ್ತ ಕಲಿಯೀತನೆನ್ನ ಮಿತ್ರನ್. ಕಾಡಾನೆಯನ್
ಕೋಡುಡಿದು, ನೆತ್ತಿಯೆ ಪಿಸುಳ್ವಂತೆ, ನಾವೆಲ್ಲ
ನೋಡೆ, ಮೋದಿದನೊರ್ಮೆ, ನಾಂ ಬಂದ ಬಟ್ಟೆಯೊಳ್
ಮೊನ್ನೆ!

ದೀರ್ಘದೇಹಿಯೂ ಅಸಮಸಾಹಸಿಯೂ ಆದ ವಹ್ನಿ ಮೊದಲು ತನ್ನ ಸಾಹಸ ಪರಂಪರೆಯನ್ನು ವರ್ಣಿಸಲಿಲ್ಲ. ಸ್ವಗುಣಕಥನ ನಿರಾಸಕ್ತಿಯಲ್ಲಿ ಅವನ ವಿನಯ, ಮಿತ್ರನ ಗುಣಕಥನದಲ್ಲಿ ಅವನ ಔದಾರ್ಯ ಎದ್ದು ಕಾಣುತ್ತವೆ. ಪೃಥುಲ ಕುಬ್ಜರಂಹನೇ ಹೀಗಿರ ಬೇಕಾದರೆ ವಹ್ನಿಯ ಸಾಹಸವೆಂಥದಿರಬೇಕು! ಶ್ರೀರಾಮನೆ ಆ ವಿಷಯವನ್ನು ಪ್ರಸ್ತಾಪಿಸುತ್ತಾನೆ. ರಂಹನ ಗುಣಕಥನವನ್ನು ಎಡೆತಡೆಯಿಲ್ಲದೆ ಮಾಡಿದ ವಹ್ನಿಯ ನಾಲಗೆಯ ವೇಗ ಕುಗ್ಗಿ ವಿರಮಿಸುತ್ತದೆ. ಅಷ್ಟರಲ್ಲಿ ರಂಹನ ರೂಕ್ಷಜಿಹ್ವೆ ಉತ್ತರ ಕೊಡುತ್ತದೆ :

………ಗಗನಗಮನದೊಳ್ ನಿರುಪಮನ್
ವೈರಿಗಜ ಸಿಂಹನೀ ವಹ್ನಿದೇವಂ! ಮಹಾ
ಮಾಯಾವಿ, ಮೇಣ್, ಕಾಮರೂಪಿ! ಬಂಡೆಯ ನೆಗಹಿ
ಕವಣೆಕಲ್ ಬೀರಿದನೆನಲ್, ಬಲಿದ ಕೋಂಟೆಗಳ್
ಬಿರಿವುವೀತಂಗೆ ! ಬಿಲ್ ಬಿಜ್ಜೆಯೀತಂಗೊಂದು
ಮಕ್ಕಳಾಟಂ………

ವಹ್ನಿ ಅವನನ್ನು ಮುಂದೆ ಮಾತಾಡಗೊಡದೆ “ರಾಜೇಂದ್ರ, ಮನ್ನಿಸೀ ಮಿತ್ರನತ್ಯುತ್ಸಾಹ ಜಲ್ಪಮಂ” ಎನ್ನುತ್ತಾನೆ. ರಂಹ ಮಾಡಿದ ಸಾಹಸ ವರ್ಣನೆಗೆ ಸಾಕ್ಷಾತ್ ಪ್ರತಿಮೆಯಾಗಿ ವಹ್ನಿಯೆ ಮುಂದೆ ನಿಂತಿರುವಾಗ ರಾಮನಿಗೆ ಸಂದೇಹ ಮೂಡುವುದೇ? “ನಿನ್ನ ನೋಡಿದರಾತ ನೊರೆದನತ್ಯಲ್ಪಮಂ, ವಹ್ನಿ!” ಎಂದು ಹೇಳುತ್ತಾನೆ. ಸಹಜ ವಿನಯಶೀಲವಾದ ವಹ್ನಿ ತಟಕ್ಕನೆ “ದಧಿಮುಖೇಂದ್ರನ ದಳದಿ ನಾನೊರ್ವನತ್ಯಲ್ಪನೆಯೆ ದಿಟಂ, ದೇವ” ಎಂದು ನುಡಿಯುತ್ತಾನೆ.

ವಹ್ನಿಯ ಈ ವಿನಯಶೀಲ ಶ್ರೀರಾಮನ ಕಾತರತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ತನ್ನೊಬ್ಬನ ಸುಖಕ್ಕಾಗಿ ಇಂಥ ಸೈನಿಕರ ಮತ್ತು ಅವರ ಮಡದಿಮಕ್ಕಳ ಸುಖವನ್ನು ಬಲಿಗೊಡುವುದು ತರವೆಯೆಂದು ಚಿಂತಿಸುತ್ತಾನೆ. “ನಿನಗೆ ಸಹಧರ್ಮಿಣಿಯ ಸುಖ ಸಂಗಮಿರ್ಪುದೇನಯ್?” ಎಂದು ಅವನನ್ನು ಪ್ರಶ್ನಿಸುತ್ತಾನೆ. ಆ ಪ್ರಶ್ನೆಯಲ್ಲಿ ಪರೀಕ್ಷಣ ಮನೋಭಾವದ ಅಭಾವವೇನೂ ಇಲ್ಲ. ವಾನರ ಸಿಂಹಾಸನದಲ್ಲಿ ಶ್ರೀರಾಮನಿಂದ ಸುಪ್ರತಿಷ್ಠಿತ ನಾದ ಸುಗ್ರೀವ ಶ್ರೀರಾಮನ ಯುದ್ಧೋದ್ಯಮದಲ್ಲಿ ನೆರವಾಗುವುದೇನೊ ಸಹಜವೆ. ಆದರೆ ವಹ್ನಿರಂಹಾದಿ ಸೈನಿಕರೊ? ತಮ್ಮ ಒಡೆಯನಿಗಾಗಿ ಕೊನೆಯುಸಿರಿರುವತನಕ ಹೋರಾಡುವುದು ಸರಿ. ಈಗಲಾದರೊ ಹಿಂದೆಂದು ಪರಿಚಯವಿರದ ವ್ಯಕ್ತಿಗಾಗಿ ಪ್ರಾಣವನ್ನು ಅರ್ಪಿಸಬೇಕಾಗಿದೆ.

ಅಂದಿನಿಂದ ಇಂದಿನತನಕ ಯುದ್ಧದ ಬಗೆಯೆ ಇಂಥದಾಗಿದೆ. ಪ್ರಥಮ ಮಹಾಯುದ್ಧವೊ, ದ್ವಿತೀಯ ಮಹಾಯುದ್ಧವೊ, ಟ್ರೋಜನರ ಸಂಗ್ರಾಮವೊ, ಕುರುಕ್ಷೇತ್ರ ಸಂಗರವೊ, ಯಾವುದಾದರೇನು? – ಎಲ್ಲದರ ಹಿಂದುಗಡೆ ಯಾವುದೊ ಒಬ್ಬ ವ್ಯಕ್ತಿಯ ಅಥವಾ ಕೆಲವು ವ್ಯಕ್ತಿಗಳ ಕೈವಾಡವಿದ್ದೇ ಇರುತ್ತದೆ; ಅವರ ಆಶೆ ಆಕಾಂಕ್ಷೆ, ಅವರ ಅಧಿಕಾರಲಾಲಸೆ ಸ್ಥಾನಮಾನದ ಪಿಪಾಸೆ, ಅಹಂಕಾರಮೂಲವಾದ ಇನ್ನೆಷ್ಟೊ ಭ್ರಾಂತಿಗಳು ಗುಪ್ತವಾಗಿ ಕೆಲಸ ಮಾಡುತ್ತಿರುತ್ತವೆ. ರಾಮರಾವಣರ ಯುದ್ಧವನ್ನು ಕೊರಿಯ ಕದನಕ್ಕೆ ಸಮನಾಗೆಣಿಸಿ ಕೇವಲ ಲೌಕಿಕ ವ್ಯವಹಾರದ ಮಟ್ಟದಿಂದ ಯುದ್ಧವನ್ನು ಕೊರಿಯ ಕದನಕ್ಕೆ ಸಮನಾಗೆಣಿಸಿ ಕೇವಲ ಲೌಕಿಕ ವ್ಯವಹಾರದ ಮಟ್ಟದಿಂದ ಪರ್ಯಾಲೋಚಿಸಿದರೆ ರಾಮಾಯಣದ ಹಿರಿಯ ವ್ಯಕ್ತಿಗಳೂ ಮಹಾಪರಾಧಿಗಳಾಗುತ್ತಾರೆ. ಇಲ್ಲಿ ಬರುವ ಪ್ರತಿಯೊಂದು ಘಟನೆ, ಪ್ರತಿಯೊಂದು ಕ್ರಿಯೆ,  ಪ್ರತಿಯೊಬ್ಬ ವ್ಯಕ್ತಿಯ ನಡೆನುಡಿಗಳು ಈಶ್ವರೇಚ್ಛಾಸೂತ್ರನಿಬದ್ಧವಾದುವು ಎಂಬುದನ್ನು ಗಮನಿಸಬೇಕು. ರಾಮರಾವಣರ ಯುದ್ಧ ಸೃಷ್ಟಿ ವಿಕಾಸಕ್ರಮದಲ್ಲಿ ಅನಿವಾರ್ಯವಾಗಿ ಸಂಭವಿಸ ಬೇಕಾದ ಘರ್ಷಣೆಗೆ ಪ್ರತಿಮಾ ರೂಪದಂತಿದೆ. ಕೊರಿಯಾ ಕದನದಿಂದ ದ್ವೇಷಾಸೂಯೆಗಳು ಮಾಯವಾಗುವುದರ ಬದಲು ಉಲ್ಬಣವಾಗುತ್ತವೆಂಬುದು ಐತಿಹಾಸಿಕ ಸತ್ಯಸಂಗತಿಯಾಗಿದೆ. ಆದರೆ ರಾಮರಾವಣರ ಯುದ್ಧದಲ್ಲಿ ಕೊನೆಗೆ ಕಾಮದ ದ್ವೇಷದ ಮಾತ್ಸರ್ಯದ ಅಹಂಕಾರದ ಕಿಲುಬು ಸಂಪೂರ್ಣವಾಗಿ ನಶಿಸಿ, ಆ ಕಾಮವೆ ಆ ದ್ವೇಷವೆ ಆ ಮಾತ್ಸರ್ಯವೆ ಸ್ವರ್ಗೀಯ ಪ್ರೇಮವಾಗಿ, ಆನಂದವಾಗಿ ಪರಿಣಮಿಸುವುದನ್ನು ಕಾಣುತ್ತೇವೆ. ಭೂಮದ ಸಂಪರ್ಕ ಮಹಿಮೆ ಯಿಂದ ಅಲ್ಪತ್ವ ತಾನಾಗಿಯೆ ಅಳಿದುಹೋಗುತ್ತದೆ. ಇಡೀ ವಾನರ ಸೈನ್ಯಕ್ಕೆ ಪ್ರತಿನಿಧಿ ಸ್ವರೂಪರಂತಿರುವ ವಹ್ನಿರಂಹರು ಶ್ರೀರಾಮನ ಸಾನ್ನಿಧ್ಯ ಮಹಿಮೆಯಿಂದ ಆತ್ಮಸಂಸ್ಕೃತ ರಾಗಿದ್ದಾರೆ, ಸಾಧನಾನಿಷ್ಠರಾಗಿದ್ದಾರೆ. ಆದುದರಿಂದಲೆ ತಾವು ಕೈಗೊಂಡಿರುವ ಸಾಹಸೋದ್ಯಮ ಆತ್ಮಕಲ್ಯಾಣಕಾರಿಯೆಂದು ದೃಢವಾಗಿ ನಂಬಿಕೊಂಡಿದ್ದಾರೆ. ಒಮ್ಮೊಮ್ಮೆ ಅವರ ಮಾತುಗಳಲ್ಲಿ ಎದೆಗುದಿ ಗೋಚರವಾಗುತ್ತದೆ, ನಿಜ. ಆ ಎದೆಗುದಿಗೆ ಮಿತ್ರವಾತ್ಸಲ್ಯ ಬಂಧುಪ್ರೇಮ ಕಾರಣವೆ ಹೊರತು ಅಶ್ರದ್ಧೆಯಲ್ಲ, ಅವಿಶ್ವಾಸವಲ್ಲ. ಶ್ರೀರಾಮನ “ನಿನಗೆ ಸಹಧರ್ಮಿಣಿ ಇರುವಳೆ” ಎಂದು ಕೇಳಿದಾಗ ವಹ್ನಿ “ಇರ್ದುದೆನ್ನೂರೊಳಗೆ” ಎನ್ನುತ್ತಾನೆ. ಈ ಮಾತಿನಲ್ಲಿ ಅವನ ಎದೆನೋವಿನ ಮೊರೆತ ಕೇಳಿಸಬಹುದು. ಆದರೆ ಪತ್ನೀಪುತ್ರವತ್ಸಲರಾದ ಜನರಾಗಲೀ, ಪತ್ನೀವಿರಹಾನಲದಗ್ಧನಾದ ಶ್ರೀರಾಮಚಂದ್ರನಾಗಲೀ ಅವನ ವಿಷಯದಲ್ಲಿ ಅನುಕಂಪೆಯನ್ನು ತೋರದಿರಲಾರರು. ಶ್ರೀರಾಮ ನಗುತ್ತ ವಹ್ನಿಯನ್ನು ಕುರಿತು

……….ಇರ್ದುದೇನ್?
ಅಯ್ಯ ಇರ್ಪುದನುಳಿದು ಬಂದು ಸಂಕಟಕೇಕೆ
ಸಿಲ್ಕಿದಯ್? ನಿನ್ನವೊಲೆ ನಿನ್ನಾಕೆಯುಂ ದುಃಖಿ!

ಎಂದನು. ಮತ್ತೆ ಸುಯ್ದು ಕೇಳಿದನು “ನನ್ನ ಕತದಿಂದಾದುದಲ್ತೆ ನಿಮಗೆ ಬನ್ನಮ್ ವಹ್ನಿ?”

ರಾಮನ ದುಃಖವಹ್ನಿಗೆ ಸಿಕ್ಕಿ ತತ್ತರಿಸಿದ ರಣವ್ರತ ವಹ್ನಿಗೆ ತನ್ನ ದೌರ್ಬಲ್ಯ ಅರ್ಥ ವಾಗುತ್ತದೆ. ಹೃದಯಕುಹರದಲ್ಲಿ ಅವಿತಿದ್ದ ಮೋಹವನ್ನು ಭಸ್ಮ ಮಾಡುತ್ತಾನೆ. ಕೈಮುಗಿದು ಮೊಳಕಾಲೂರಿ ಬೇಡಿಕೊಳ್ಳುತ್ತಾನೆ. ರಾಮ ಮತ್ತೆ ಕೇಳುತ್ತಾನೆ,

“ಮಕ್ಕಳಹರೇ ನಿನಗೆ?”
“ಇರ್ಪನೊರ್ವನ್, ದೇವ.”
“ಚಿಕ್ಕವನೆ?”
“ಅಲ್ಲದಿರೆ ನನ್ನ ಪಕ್ಕದೊಳಿರನೆ ನಿನ್ನ ಸೇವೆಯ ದೇವಕಾರ್ಯಕ್ಕೆ?”
“ಅವರ್ಗಾರ್ ರಕ್ಷಕರ್?”
“ನಾನೆ!”

ಹೃದಯಕಂಪನಕಾರಿಯಾದ ಈ ಸಂಭಾಷಣೆಯಲ್ಲಿ ವಹ್ನಿಯ ಪರಿವರ್ತಿತ ಮನೋ ಧರ್ಮವೂ, ಶ್ರೀರಾಮನ ಸಂಕಟವೂ ಸ್ಪಷ್ಟವಾಗಿ ವ್ಯಕ್ತಗೊಂಡಿವೆ. ಅವು ಅನುಭವೈಕ ವೇದ್ಯ. ವಹ್ನಿ “ನಾನೆ” ಎಂದು ಹೇಳುವುದೂ, ರಾಮ “ನೀನೆ” ಎಂದು ಮತ್ತೆ ಮತ್ತೆ ನೆನೆಯುವುದೂ ಭಾವಗರ್ಭಿತವಾಗಿದೆ. ಪುತ್ರವ್ಯಾಮೋಹದಿಂದ ಮರಣಹೊಂದಿದ ದಶರಥನ ಮಗ ಶ್ರೀರಾಮ ವಹ್ನಿಯ ಕಣ್ಣುಗಳನ್ನೆ ಕರುಣೆಯಿಂದ ನೋಡಿ “ಮರಣದೊಳ್ ರಣಮಿಹುದು ವಹ್ನಿ; ಹಣೆಬರೆಹ ಮೊರೆಯುವುದಿರ್ಕೆ ಸಾರುತಿದೆ ಕೈಬರೆಹಮುಂ” ಎಂದು ಹೇಳುತ್ತಾನೆ: “ನಾವು ಯಾವ ಧರ್ಮಕ್ಕಾಗಿ ಪ್ರಾಣಾರ್ಪಣೆ ಮಾಡಲು ಸಿದ್ಧರಾಗಿದ್ದೇವೆಯೊ ಆ ಧರ್ಮವೆ ಈ ಲೋಕವನ್ನು ರಕ್ಷಿಸುತ್ತದೆ; ನನ್ನ ಸತಿತನವನ್ನು ರಕ್ಷಿಸಲಾರದ ಪುರುಷನ ಬಾಳು ವ್ಯರ್ಥ. (ಲಂಕಾ ಸಂಪುಟಂ, ಸಂಚಿಕೆ ೬, ಸಾಲು ೨೭೬ ರಿಂದ ೨೮೭). ಜೀವನದ ಧರ್ಮಸೂಕ್ಷ್ಮತೆ ಮತ್ತು ರಾಮರಾವಣರ ಯುದ್ಧದ ತತ್ವಾರ್ಥ ಈ ಮಾತಿನಲ್ಲಿ ಅಡಕವಾಗಿವೆ. ವಹ್ನಿ ಮಾತನ್ನು ಮುಂದುವರಿಸಿ “ರಘುವರ, ಸುರಕ್ಷಿತರ್ ನನ್ನವರ್ ನಿನ್ನ ಈ ಕೇಳ್ದ ಕುಶಳಪ್ರಶ್ನೆ ಕೃಪೆಯಿಂದಮುಂ!” ಎಂದು ಹೇಳುತ್ತಾನೆ. ಭಗವಂತ ಕೇಳುವ ಪ್ರಶ್ನೆಯೆ ಭಕ್ತರಿಗೆ ವರವಾಗಿ ಪರಿಣಮಿಸುತ್ತದೆಯಲ್ಲವೆ?

ದಿನ ಬೆಳಗಾದರೆ ಸಕಲ ಜನರ ನಾಲಗೆಯಲ್ಲಿ ತಾಂಡವವಾಡುತ್ತಿರುವ, ಅರ್ಥವರಿಯದೆ ಬಳಸುತ್ತಿರುವ ‘ಸಂಸ್ಕೃತಿ’ ಪದದ ನಿಜವಾದ ಅರ್ಥ ವಹ್ನಿಯ ಮಾತುಗಳಲ್ಲಿ ಅಡಕವಾಗಿದೆ. ಶ್ರೀರಾಮನೆ ಅವನನ್ನು ಮೆಚ್ಚಿಕೊಂಡು ಗೌರವದಿಂದ ಹೇಳಿರುವ ಮಾತುಗಳು ಅವನ ಹಿರಿಮೆಗೆ ಸಾಕ್ಷಿಯಾಗಿವೆ :

ನಿಮ್ಮ ಸಂಸ್ಕೃತಿ ಮಿಗಿಲ್ ನಿಮ್ಮ ನಾಗರಿಕತೆಗೆ ಪಿರಿದು, ಸೇನಾನಿ
ಪಿರಿದು, ಸೇನಾನಿ!……

ಅಂದು ಶ್ರೀರಾಮರಾವಣರ ಯುದ್ಧದ ಕೊನೆಯ ಹಂತ. ರಾವಣನ ಮೂಲ ಬಲವೆಲ್ಲ ರಾವಣರೂಪಿಯಾಗಿ ವಾನರಧ್ವಜಿನಿಯನ್ನು ತೊತ್ತಳ ತುಳಿಯುತ್ತಿತ್ತು. ದಧಿಮುಖನ ವೀರದಳ ರಾವಣನ ಮೂಲಬಲಕಿದಿರಾಗಿ ಯುದ್ಧ ಮಾಡಿ ಬಹುಮಂದಿ ಕಡಿದಡವಿಯಂತೆ ಕೆಡೆದಿತ್ತು. ವಹ್ನಿರಂಹರೂ ಅಸಾಮಾನ್ಯ ತೇಜದಿಂದ ಕಾದಿದರು :

…….ನುರ್ಗಿ ಬಂದಶ್ವಮಂ ಹೊಡೆ ಬಿರಿಯೆ
ಬಡಿದು ಕೊಂದರು. ಹಸ್ತಿ ಮೇಲ್ವಾಯೆ ಗುಂಡಿಟ್ಟು
ಜರ್ಜಿದರದರ ಮಂಡೆಯಂ. ರಥಂ ಮುಂಬರಿಯೆ
ಮುರಿದರು ರಥಾಂಗಮಂ ಬಲ್ಗದಾಮುಷ್ಟಿಯಿಂ.

ಶ್ರೀರಾಮನ ಸೈನ್ಯದ ಯೋಧರೆಲ್ಲ ತಮ್ಮ ಹರಣದ ಹಂಗನ್ನು ಮರೆತು ಹೋರಾಡಿದರೂ ಅವರ ಕಯ್ಯೆ ಇಳಿಮುಖವಾಗುತ್ತಿತ್ತು. ಪ್ರಳಯಕಾಲದ ಮೃತ್ಯು ನರ್ತನವೆಂಬಂತೆ ದೈತ್ಯ ಸೈನ್ಯ ಶ್ರೀರಾಮನ ಸೈನ್ಯದ ಮೇಲೆ ಶತಾಧಿಕ ಬಲ್ಮೆಯಿಂದ ಬಿದ್ದಿತು. ವಿಶ್ವಕರ್ಮನ ಸುತ ನಳನ ರಕ್ಷಣೆಯ ಸೈನ್ಯವೆಲ್ಲ ಓಟಕೀಳಲಾರಂಭಿಸಿತು. ಪ್ರಾಣಮಿತ್ರ ಕ್ಷೇಮಕಾತರ ನಾದ ವಹ್ನಿ ಮುಂದೆ ಮುಂದೆ ನುಗ್ಗುತ್ತಿದ್ದ ರಂಹನನ್ನು ಕೂಗಿ ಕರೆಯುತ್ತಿದ್ದನು. “ಜಗುಳ್ವಚಲಮಂ ಹಿನ್ನೂಂಕಲೆಳಸುವ ವನವರಾಹನೋಲಂತೆ”, ರಾವಣನ ಸೈನ್ಯದ ಬಿರುಬಿಗೆ ಎದೆಗೊಟ್ಟು, ಅಳವು ಕುಸಿಯುತ್ತಿದ್ದರೂ ಹಿಮ್ಮೆಟ್ಟದೆ ರಂಹ ಹೋರಾಡುತ್ತಿದ್ದನು. ಅತಿರಥ ಮಹಾರಥರು ಧೈರ್ಯಗುಂದಿ ಪಲಾಯನ ಮಾಡುವಾಗ ರಂಹನ ಸಾಮರ್ಥ್ಯ ಸಾಹಸ ಎಷ್ಟು ಹೊತ್ತು ತಾನೆ ಅಪ್ರತಿಹತವಾಗಿ ಮೆರೆದಾವು? ಕೊನೆಗೆ ಗಾಯವಡೆದು ಭೂತಲಶಾಯಿಯಾದನು. ಮೆಲ್ಲಮೆಲ್ಲನೆ ಹಿಂಜರಿಯುತ್ತಿದ್ದ ವಹ್ನಿ ಮುನ್ನುಗ್ಗಿ ಬಂದು ರಂಹನನ್ನು ಕೌಂಕುಳಲ್ಲಿ ಇರುಕಿಕೊಂಡು ಓಡಿ ಹೋಗುವಾಗ ಆಂಜನೇಯನ ದೃಷ್ಟಿ ಅವರಿಬ್ಬರ ಕಡೆ ಹರಿಯಿತು. ಮರಣೋನ್ಮುಖನಾಗಿದ್ದ ರಂಹನ ಚಿತ್ತಪಲ್ಲವಿಸಿ ಅರಿವು ಮರುಕೊಳಿಸಿ ಹಿಂದೆ ಕಡಲೆಡೆಯಲ್ಲಿ ಶ್ರೀರಾಮಚಂದ್ರನೊಡನೆ ನಡೆಸಿದ ಸಂಭಾಷಣೆ ನೆನಪಿಗೆ ಬರುವುದು. ಹರಣದ ಹಂಗನ್ನು ತೊರೆದು, ಮಡದಿ ಮಕ್ಕಳ ಚಿಂತೆಯನ್ನು ಬಿಸುಟು ತನ್ನ ಕರ್ತವ್ಯವನ್ನು ನೆನೆಯುವನು. ದೇಹ ಅಶಾಶ್ವತವಾದದ್ದು, ಅದು ಸತ್ಕಾರ್ಯಕ್ಕೆ ನೈವೇದ್ಯವಾದಾಗ ಮಾತ್ರ ಸಾರ್ಥಕತೆ ಪಡೆಯುತ್ತದೆಂಬ ಋತಸತ್ಯ ಅವನ ಬಗೆಗಣ್ಣಿಗೆ ಮಿಂಚುವುದು. ಆಗ ವಹ್ನಿಯನ್ನು ಕುರಿತು

ಇಂದೊ ನಾಳೆಯೊ ಸಾವೆನಾಂ. ಓಡಿ ಬರ್ದುಕುವುದೆ?
ಸುಡಲಿ ಆ ಬಾಳ್ಕೆಯಂ. ಬಿಸುಡು, ಬಿಸುಡೆನ್ನೊಡಲ
ಭಾರಮಂ. ತಾರದಿರ್ ಸ್ವಾಮಿಕಾರ್ಯಕೆ ವಿಘ್ನಮಂ.
ಕೊಳೆತೊಡೇಂ ನನ್ನೊಡಲ್? ರಾಮಕಾರ್ಯಂ ಗೆಲ್ಗೆ!
ಅಂದು ನಾಮಿರ್ವರುಂ ಕಡಲ ತೀರದೊಳವನ
ಕಂಡು ಸಂಭಾಷಿಸಿದೆವದೆ ನಮಗೆ ಸಾರ್ಥಕಂ
ಈ ಜನ್ಮ ಸಫಲತೆಗೆ! ತೊರೆ ಈ ಕಳೇಬರದ
ಭಾರಮಂ. ಕೈದುಗೊಳ್! ತಿರುಗು! ತಿವಿ! ಕೂಗಿ ಕರೆ
ಓಡುವವರಂ……

ಎಂದು ಹೇಳಿ ತನ್ನ ಕರ್ತವ್ಯ ಪರಿಪಾಲನೆಯ ಅವಸರದಲ್ಲಿ ವಹ್ನಿಯ ಮತ್ತು ಅವನ ಮೂಲಕ ಇಡೀ ಸೈನ್ಯದ ಕರ್ತವ್ಯಪ್ರಜ್ಞೆಯನ್ನು ಪ್ರಚೋದಿಸುತ್ತಾನೆ. “ಇದೊ ನನ್ನದುಂಗುರಂ, ನೀಂ ಬರ್ದುಕಿ ಪಿಂತಿರುಗಿದರೆ……” ಎಂದು ತನ್ನ ಕೊನೆಯ ಬಯಕೆಯನ್ನು ವಹ್ನಿಗೆ ಬಿನ್ನವಿಸಿಕೊಳ್ಳುತ್ತಾನೆ. ಗೆಳೆಯನ ದೇಹವನ್ನು ಕಾಪಾಡುವುದಕ್ಕಿಂತ ಗೆಳೆಯನ ಆಶೆಯನ್ನೂ ಅವನ ತ್ಯಾಗೋದ್ದೇಶವನ್ನು ನೆರವೇರಿಸುವುದು ಗೆಳೆಯನ ಪರಮ ಕರ್ತವ್ಯ. ಆ ಕರ್ತವ್ಯಚ್ಯುತಿಯೆ ಆತ್ಮಚ್ಯುತಿ; ಕರ್ತವ್ಯ ಸ್ಮರಣೆಯೆ ಆತ್ಮಸಂರಕ್ಷಣೆ. ಈ ಸತ್ಯರಹಸ್ಯವನ್ನರಿತ ವಹ್ನಿರಂಹನ ದೇಹವನ್ನು ನೆಲಕ್ಕಿಳುಹಿ, ಪುನಃಪ್ರಚೋದಿತ ಪ್ರತಿಜ್ಞಾಬದ್ಧನಾಗಿ ಸಾಹಸೋದ್ಯುಕ್ತ ನಾಗುತ್ತಾನೆ. ಅಷ್ಟರಲ್ಲಿ ಶ್ರೀರಾಮನ ಸಂಕಲ್ಪದಂತೆ ರಾಮಮಯವಾದ ಕಪಿಧ್ವಜಿನಿ ಮತ್ತೆ ಒಟ್ಟು ಗೂಡಿ ರಾವಣಮಯವಾದ ರಾಕ್ಷಸಾನೀಕಿನಿಯ ಮೇಲೆ ಬೀಳುತ್ತದೆ. ಸಂಗ್ರಾಮ ಘೋರತಮವಾಗುತ್ತದೆ. ಕೊಟ್ಟ ಕೊನೆಗೆ ಸಂಪೂರ್ಣ ಪರಿವರ್ತಿತ ಮನಸ್ಸಿನ ರಾವಣ ದೇವಿಮಂಡೋದರಿಗೆ ರಾಮ ಭಿಕ್ಷೆಯ ಆಶ್ವಾಸನವಿತ್ತು, ರಾಮನನ್ನು ಹಿಡಿದು ತರಲು ತಾನೆ ರಣರಂಗವನ್ನು ಪ್ರವೇಶಿಸುತ್ತಾನೆ. ಮಹೇಂದ್ರಾರಿ ರಾವಣ ತಾನೇ ಯುದ್ಧಕ್ಕಿಳಿದನೆಂದರೆ ಮುಂದಿನ ಪ್ರಲಯ ಪರಿಸ್ಥಿತಿ ಕಲ್ಪನಾನುಭವ ಸಾಧ್ಯವೇ ವಿನಾ ಅನ್ಯಥಾ ಸಾಧ್ಯವಿಲ್ಲ! ಕೊನೆಗೆ ಕ್ರುದ್ಧನಾದ ರಾವಣ ಶೂಲವನ್ನು ರಾಮನ ವಕ್ಷಕ್ಕೆ ಎಸೆದಾಗ ಶ್ರೀರಾಮಚಂದ್ರ ಬ್ರಹ್ಮಾಸ್ತ್ರವನ್ನೇ ತೊಟ್ಟು ರಾವಣನಿಂದ ರಾವಣತ್ವದ ಕಳಂಕವನ್ನು ನೀಗಬೇಕಾಯಿತು.

ರಾವಣನ ರಾವಣತ್ವ ಸಂಪೂರ್ಣವಾಗಿ ವಿನಾಶಗೊಂಡು ರಾಮತ್ವ ಅವತರಿಸಿದ ಮೇಲೆ ಅವನ ಐಹಿಕ ಸಾಧನೆ ಕೊನೆ ಮುಟ್ಟುತ್ತದೆ. ಅಲ್ಪಸ್ವಲ್ಪವಾದರೂ ಕಾಮದ ದರ್ಪದ ಅಹಂಕಾರದ ಕಿಲುಬು ಅಂಟಿಕೊಂಡಿದ್ದ ಆ ದೇಹದ ಇಕ್ಕಟ್ಟಿನಲ್ಲಿ ಆತ್ಮಪಕ್ಷಿರಾಜ ಇರುವುದಾದರೂ ಎಂತು? ಅದು ರೆಕ್ಕೆಗೆದರಿ ಊರ್ಧ್ವಮುಖಿಯಾಗಿ ವಿಯದ್ವಿಹಾರಿ ಯಾಗುತ್ತದೆ. ರಾವಣತ್ವ-ರಾಮತ್ವ ಈ ಎರಡು ಆಂತರಿಕ ಶಕ್ತಿಗಳ ತಿಕ್ಕಾಟ ನಿಂತು, ರಾಮತ್ವ ವಿಜಯಿಯಾದಾಗ ಬಾಹ್ಯಶಕ್ತಿಗಳ ಹೋರಾಟ ಪರಿಸಮಾಪ್ತಿಗೊಳ್ಳುತ್ತದೆ. ಕ್ಷಮಾಪುತ್ರೀ ವಲ್ಲಭನೂ ಸರ್ವಭೂತಹಿತರತನೂ ಆದ ಶ್ರೀರಾಮಚಂದ್ರನು ರಾವಣತ್ವದಿಂದ ವಿಮುಕ್ತ ವಾದ ರಾವಣನ ದೇಹಕ್ಕೆ ರಾಜ ಗೌರವಸಹಿತ ಅಪರಸಂಸ್ಕಾರವನ್ನೆಸಗುವಂತೆ ವಿಭೀಷಣನಿಗೆ ತಿಳಿಸಿ, ರಣದಲ್ಲಿ ಮಡಿದವರಿಗೆ ಅವರವರ ಯೋಗ್ಯತೆಗೆ ತಗುವಂತೆ ಅಂತ್ಯಕರ್ಮಗಳನ್ನು ನೆರವೇರಿಸಬೇಕೆಂದು ಸಾರಿಸಿ, ತಾನೂ ‘ಲೌಕಿಕಕೃತಜ್ಞತಾ ಸಂಕೇತವಾಗಿ’ ಮಡಿದ ವೀರರ ಆತ್ಮಕಲ್ಯಾಣಾರ್ಥವಾಗಿ ಪ್ರಾರ್ಥಿಸುವುದಾಗಿ ತಿಳಿಸಿ, ತಾನೊಬ್ಬನೆ ಸಮುದ್ರಾಭಿಮುಖಿಯಾಗಿ ತೆರಳುವನು, ಬೇರೊಂದು ‘ಸಾಕಾರ ಮನುಷ್ಯತಾ ಪಯೋಧಿ’ಯಂತೆ.

ಆ ದಿನ ಸಾಯಂಕಾಲದ ತನಕ ಅವನು ಯಾವುದೊ ಒಂದೆಡೆ ಮಾತ್ರ ಅರಸಿದವರಿಗೆ ಸಿಗಲಿಲ್ಲ. ಆದರೂ ಅಲ್ಲಲ್ಲಿ ಹೆಣದೆಡೆ ಚಿತೆಯೆಡೆ ಚಿಂತಾಕುಲರಾಗಿ ತಳಮಳಿಸುತ್ತಿದ್ದ ಜನರನ್ನು ಅವನು ಸಂತೈಸುತ್ತಿದ್ದುದಾಗಿ ಎಲ್ಲರೂ ಹೇಳಿಕೊಳ್ಳುತ್ತಿದ್ದರು. ‘ರಾಮನಂತ ರ್ಯಾಮಿ ರಾಮನಖಿಲವ್ಯಾಪಿ ರಾಮಮಯಮೀ ವಿಶ್ವಂ’ ಎಂಬ ತತ್ವವನ್ನು ಪ್ರತಿಯೊಬ್ಬರೂ ತಮ್ಮತಮ್ಮ ಪ್ರತಿಭಾರೂಪವಾದ ಪ್ರತಿಮೆಯಿಂದ ಅರಿತುಕೊಳ್ಳುತ್ತಿದ್ದರು. ಆ ಸಮಯದಲ್ಲಿ ಆತ್ಮಮಿತ್ರ ರಂಹನ ಅಪರಕ್ರಿಯೆಗಳನ್ನೆಸಗಿ, ಕಡಲಿನಲ್ಲಿ ಮಿಂದು ಶಿಬಿರಾಭಿಮುಖಿಯಾಗಿ ಬರುತ್ತಿದ್ದ ವಹ್ನಿ ಸಾಗರದ ಕಡೆಯಿಂದ ಬರುತ್ತಿದ್ದ ಸೀತಾನಾಥನನ್ನು ಸಂಧಿಸಿದನು. ವಾನರಭಟ ರಾವಣಾರಾತಿಗೆ ಕೈಮುಗಿದನು. ರಾಮ ಅವನ ಗುರುತುಹಿಡಿದು ರಂಹನನ್ನು ವಿಚಾರಿಸಿದನು. ಮಿತ್ರ ಮರಣದಿಂದ ದುಃಖದಗ್ಧನಾದ ವಹ್ನಿಯ ರೂಕ್ಷಜಿಹ್ವೆ ‘ಇದೆ ತಾನೆ ಬೂದಿಮಾಡಿ ಮಿಂದು ಬಂದೆ” ಎಂದು ಉತ್ತರಕೊಟ್ಟಿತು. ಸತೀವಿರಹಸಂತಾಪಚಿತ್ತನಾದ ಶ್ರೀರಾಮ ವಹ್ನಿಯ ದುಃಖವನ್ನು ಗ್ರಹಿಸಿ, ಹೃದಯದಲ್ಲಿಯೆ ಮರುಗಿ, “ಬೂದಿ ಮಾಡಿದುದು ಕಾಯವನ್ನೆ” ಎಂದನು. ಚಟುಲಮತಿಯೂ ಇಂಗಿತಜ್ಞನೂ ಆದ ವಹ್ನಿ ಶ್ರೀರಾಮನ ಮಾತಿನ ಧ್ವನಿಯನ್ನು ಅರ್ಥಮಾಡಿಕೊಂಡು “ಅಪ್ಪುದಪ್ಪುದು, ಒಡೆಯ, ಬಲ್ಲೆನಾತ್ಮವನಮೃತವೆಂದು. ಬಾಯ್ ತಪ್ಪಿದೆನ್” ಎಂದು ಉಸುರಿದನು. ದುಃಖೋ ದ್ವೇಗಸಮಯದಲ್ಲಿ ತನ್ನನ್ನು ತಾನು ಮರೆತು, ತನ್ನ ಮುಂದೆ ನಿಂತಿರುವವನು ಶ್ರೀರಾಮ ಚಂದ್ರನೆಂಬುದರ ಪರಿವೆಯಿಲ್ಲದೆ ವಿವೇಕಶೂನ್ಯನಾಗಿ ವರ್ತಿಸಿದುದಕ್ಕೆ ತಾನೆ ಪಶ್ಚಾತ್ತಾಪಪಟ್ಟನು. ಅವನ ಆ ಮಾತುಗಳಲ್ಲಿ ಪಶ್ಚಾತ್ತಾಪವೂ ಕ್ಷಮಾಯಾಚನೆಯೂ ಅಭಿವ್ಯಕ್ತವಾಗುತ್ತವೆ. ಗುಣಗ್ರಾಹಿಯೂ ಕಾರುಣ್ಯಮೂರ್ತಿಯೂ ಆದ ಶ್ರೀರಾಮ ಪ್ರತ್ಯುತ್ತರವಾಗಿ “ಲೋಕರೂಢಿಯನೊರೆದೆಯೈ, ತಪ್ಪದರೊಳೇನ್? ಅಲ್ಲದಾತ್ಮವನಮೃತಮೆಂದು ಕೇಳ್ದವರೆನಿತೊ, ಕಂಡರಲ್ಪಂ” ಎಂದೊರೆದು ಅವನನ್ನು ಸಂತೈಸಿದನು. ಸತ್ಯವಾಕ್ಯನಾದ ಶ್ರೀರಾಮನ ಈ ಮಾತಿನಲ್ಲಿ ವಿಶ್ವಸತ್ಯವೇ ಅಡಗಿದೆ. ವೇದವೇದಾಂತ ಷಡ್ದರ್ಶನಗಳನ್ನು ಉಗುರಿನ ಮೊನೆಯಲ್ಲುಳ್ಳ, ವಾದವಿವಾದಗಳಲ್ಲಿ ಅಜೇಯರಾದ ಪಂಡಿತರೆಷ್ಟೋ ಮಂದಿ ಇದ್ದಾರೆ. ಆದರೆ ಆ ತತ್ತ್ವವನ್ನು ಅನುಷ್ಠಾನದಲ್ಲಿ ತರುವ, ಬದುಕಿನಲ್ಲಿ ಕಾಣುವ ಮಂದಿ ಕಡಿಮೆ. ಈ ದೃಷ್ಟಿಯಿಂದ ಸಾಮಾನ್ಯತಾಶ್ರೀಗೆ ಪ್ರತಿಮಾರೂಪದಂತಿರುವ ವಹ್ನಿ ಅಸಾಮಾನ್ಯ ಪಂಡಿತರಿಗಿಂತ ಎಷ್ಟೋ ಪಾಲು ಮೇಲು! “ನನ್ನರಿವುಮದಕಿಂಮಿಗಿಲ್ ಮುಂಬರಿದುದಿಲ್ಲ. ನಂಬಿದೆನೆನ್ನ ಗುರುವೊರೆದುದಂ, ತಾಂ ಕಂಡ ನನ್ನಿಯಂ” ಎಂದು ವಿನಯವಿನಮ್ರನಾಗಿ ಹೇಳುತ್ತಾನೆ.

ವಹ್ನಿಯ ಈ ಮಾತಿನಲ್ಲಿ ಗುರುಶಿಷ್ಯಸಂಬಂಧದ ಪರಮತತ್ತ್ವವೆ ಧ್ವನಿತವಾಗುತ್ತದೆ. ಸಾಧಕನಾದವನಿಗೆ ಗುರುವಿನ ನೆರವು ಅತ್ಯಗತ್ಯ. ಯಾವುದೊ ವ್ಯಕ್ತಿ ಅಥವಾ ಶಕ್ತಿ ಅಥವಾ ತತ್ತ್ವವನ್ನು ಗುರುವೆಂದು ಸ್ವೀಕರಿಸಿದ ಮೇಲೆ ಶಿಷ್ಯ ಅದರಲ್ಲಿ ಅಚಲವಾದ ಭಕ್ತಿವಿಶ್ವಾಸ ಗಳನ್ನಿಡಬೇಕು, ಅದರಲ್ಲಿ ಸರ್ವಲೋಕಗುರವನ್ನೆ ಕಾಣಬೇಕು. ಆಗ ಅವನಿಗೆ ನಿಜವಾದ ವಿದ್ಯೆ ಲಭಿಸುತ್ತದೆ. ಸರ್ವಲೋಕಗುರುವಾದ ಶ್ರೀರಾಮ ಚಂದ್ರನೆ ವಹ್ನಿಗೆ ಹೇಳುತ್ತಾನೆ:

ಆ ಶ್ರದ್ಧೆ ದಲ್ ವಿದ್ಯೆ!
ಸಾಲ್ಗುಮದೆ ದಾಂಟಲ್ಕವಿದ್ಯೆಯಂ. ಆದೊಡಂ
ಕೇಳ್ ವಹ್ನಿ, ಕಾಣಲ್ಕುಮಪ್ಪುದಮೃತತ್ವಮಂ

“ಶ್ರದ್ಧಾವಾನ್ ಲಭತೇ ಜ್ಞಾನಂ.” ಅವರವರ ಶ್ರದ್ಧೆಗೆ ತಕ್ಕಂತೆ ಸಿದ್ದಿ ಲಭಿಸುತ್ತದೆ. “ಅವರಿವರಿಗವರವರೊಳ್ಪು.” ವಾನರ ಸೈನ್ಯದ ಭಟರಿಗೂ ಅಷ್ಟೆ. ಅವರು ಎಷ್ಟು ಜನ್ಮಗಳಿಂದ ಶ್ರೀರಾಮನ ಬರವಿಗಾಗಿ ಮೊರೆಯಿಟ್ಟು ಕಾದುಕೊಂಡಿದ್ದರೋ! ವಹ್ನಿಯ ಮಾತುಗಳಲ್ಲಿ ಈ ತತ್ತ್ವಾರ್ಥ ಸ್ಫುರಿಸುತ್ತದೆ :

………..ನಿನ್ನೊಡನೆ,
ನಿನ್ನಿದಿರ್ ನಿಂದು, ಸಂವಾದಿಸುವ ಸಯ್ಪದೇಂ
ಸಾಮಾನ್ಯಮಲ್ತು; ಬಹುಜನ್ಮಗಳ್ ದುಡಿದೊಂದು
ಪುಣ್ಯಫಲಮೈಸೆ!

ಶ್ರೀರಾಮನ ಅವತಾರ ದಶರಥನಿಗಾಗಿ ಮಾತ್ರವಲ್ಲ, ಕೌಸಲ್ಯೆಗಾಗಿ ಮಾತ್ರವಲ್ಲ, ಅಯೋಧ್ಯಾನಗರದ ಜನರಿಗಾಗಿ ಮಾತ್ರವಲ್ಲ. ಇವರ ಅಭೀಪ್ಸೆ ಮಾತ್ರವೇ ಅಲ್ಲ ಆ ಶಕ್ತಿಯನ್ನು ಭೂಮಿಗೆ ಎಳೆತಂದುದು; ವಾನರರ ಮೊರೆ, ಜೊತೆಗೆ ರಾವಣನ ಅಂತರಾತ್ಮದ ಆರ್ತನಾದ. ಕರು ಇದ್ದೆಡೆಗೆ ಹಸು ತಾನಾಗಿಯೆ ಅರಸಿಕೊಂಡು ಹೋಗಿ ಕೆಚ್ಚಲೂಡುವಂತೆ ಭಕ್ತರ ಸನ್ನಿಧಿಗೆ ಆರಾಧ್ಯದೇವತೆಯೆ ಹೊರಟಿತು. ತಾರೆ ವಾಲಿ ಸುಗ್ರೀವ ಸೀತೆಯರೊಂದು ನಿಮಿತ್ತ ಮಾತ್ರ. ಆ ವಾನರಭಟರನ್ನು ರಾಮಕಾರ್ಯಕ್ಕೆಳೆ ತಂದುದು ಸುಗ್ರೀವನ ಡಿಂಡಿಮಾಜ್ಞೆ ಮಾತ್ರವೆ ಅಲ್ಲ, ಅವರ ಅಂತಃಸ್ಫೂರ್ತಿ. ಹೆಂಡತಿ ಮಕ್ಕಳನ್ನೆಲ್ಲ ತ್ಯಜಿಸಿ ಮರಣಕ್ಕೆ ಸಿದ್ಧರಾಗಿ ಬರುತ್ತಾರೆ.

ಅವರ ದೃಷ್ಟಿಯಲ್ಲಿ ಮರಣ ಸೋಲಲ್ಲ; ಜಯ – ಆತ್ಮವಿಜಯ, “ಧನ್ಯರ್, ದಿಟಂ, ಪ್ರಭೂ, ಈ ಮಹಾಸಮರಯಜ್ಞಕಸು ತೆತ್ತವರ್” ಎಂಬ ವಹ್ನಿಯ ಮಾತಿನಲ್ಲಿ, ರಂಹನ ಚರಮಸಂದೇಶದಲ್ಲಿ ಮಾನವಜೀವನದ ಪರಮಾರ್ಥ ಅಭಿವ್ಯಕ್ತಗೊಂಡಿದೆ. ಜೀವನದಲ್ಲಿ ಇಂಥ ಮಹದ್ಘಟನೆಗಳು ಆಗಾಗ್ಗೆ ಒದಗುತ್ತಿರುತ್ತವೆ. ಎಷ್ಟೋ ಪ್ರಕಾರಗಳ ಮೂಲಕ ನಿಮಿತ್ತಗಳ ಮೂಲಕ ನಿತ್ಯವೂ ಮಹಾಶಕ್ತಿಗಳನ್ನು ಮಹಾತತ್ತ್ವಗಳನ್ನು ಎದುರು ಗೊಳ್ಳುತ್ತಿರುತ್ತೇವೆ. ಅವುಗಳನ್ನು ಗುರುತಿಸಿ ಅರಿಯುವುದೂ ಒಂದು ಪುಣ್ಯವೆ; ಅವುಗಳಲ್ಲಿ ಭಾಗಿಯಾಗಿ ಪ್ರಾಣಾರ್ಪಣೆ ಮಾಡುವುದಂತೂ ಪರಮಪುಣ್ಯ.

ವಹ್ನಿಗೆ ಆ ತತ್ತ್ವದರ್ಶನ ಬಹುಮಟ್ಟಿಗೆ ಲಭಿಸಿದೆ. ಆದರೂ ಅವನದು ‘ಮರ್ತ್ಯ ಪ್ರಜ್ಞೆ’. “ದುಃಖಮೆ, ವಹ್ನಿ, ಮಿತ್ರಮರಣಂ ನಿನಗೆ?” ಎಂದು ರಾಮ ಪ್ರಶ್ನಿಸಿದಾಗ “ಬರ್ದುಕಿರ್ದೊಡಾತನುಂ ಸುಖಮಿರ್ಮಡಿಸುತಿರ್ದುದೆಂಬೆನ್, ಮಹಾಪ್ರಭೂ” ಎಂದು ಮಿತ್ರಸ್ನೇಹ ನುಡಿಸುತ್ತದೆ. “ಪೇಳ್ ಅವಂ ಬರ್ದುಕಿ ಬರ್ಪುದು ನಿನಗೆ ಸಮ್ಮತಮೆ?” ಎಂದು ರಾಮ ಮತ್ತೆ ಕೇಳಿದಾಗ ವಹ್ನಿ ಎಚ್ಚರಗೊಂಡು ಬೆದರುತ್ತಾನೆ. ತಾನು ಯಾರ ಮುಂದೆ ನಿಂತಿರುವುದೆಂಬುದನ್ನು ನೆನೆಯುತ್ತಾನೆ. ಯಾರ ಭಯಕ್ಕೆ ಸಾಗರ ತನ್ನ ಸ್ಥಾಣುಮರ್ಯಾದೆಯನ್ನು ತ್ಯಜಿಸಿತೊ ಆ ಶಕ್ತಿಯೆ ತನ್ನ ಮುಂದೆ ನಿಂತಿದೆಯೆಂದು ಮನವರಿಕೆ ಯಾಯಿತು. ಕಾಡುಮರಗಳ ಕೆಳಗೆ ನೆನೆದಂತೆ ಕಲ್ಪವೃಕ್ಷದ ಕೆಳಗೆ ಬಯಕೆಯನ್ನು ನೆನೆದರೆ, ಬಯಕೆಯೆ ವರವಾಗಿ ನನಸಾಗಿ ಪರಿಣಮಿಸುತ್ತದೆಂಬ ಅರಿವು ಗೋಚರಿಸಿತು. ಅವನು ಮರ್ತ್ಯಪ್ರಜ್ಞನಾದರೂ ಪ್ರಾಜ್ಞ. ಅಲ್ಪಜ್ಞನಾಗಿದ್ದರೆ ಮೃತಮಿತ್ರನನ್ನು ಸುಲಭವಾಗಿ ಪಡೆಯುವ ಹೆಕ್ಕಳಿಕೆಯಿಂದ, ತಾನಾಗಿಯೆ ಒದಗಿದ ಅವಕಾಶವನ್ನು ಕಳೆದುಕೊಳ್ಳಲಾಗದ ಹುಮ್ಮಸ್ಸಿನಿಂದ ಒಡನೆಯೆ ‘ಆಗಲಿ, ಒಡೆಯ’ ಎನ್ನುತ್ತಿದ್ದನು. ಬೂದಿಯಿಂದ ರಂಹನನ್ನೆಬ್ಬಿಸುವ ಮತ್ತು ಪಡೆಯುವ ಆಶೆ ಅಪಾಯಕಾರಿಯಾದುದೆಂದೂ, ಋತನಿಯಮೋಲ್ಲಂಘನೆ ಶ್ರೇಯಸ್ಕರವಲ್ಲ ವೆಂದೂ ಬಗೆಯುವನು. ಆದುದರಿಂದಲೆ ಅವನು ಕೂಡಲೆ “ಮಾಣ್, ಮಾಣ್, ಮಹಾಪುರುಷ, ಮಾಣ್! ನೀನ್ ಕರೆಯೆ ಬರದಿರನ್” ಎಂದು ಅಂಗಲಾಚಿ ಬೇಡಿಕೊಳ್ಳುತ್ತಾನೆ. ಋತಪ್ರಜ್ಞನೂ ಋತಾಧಿಕಾರಿಯೂ ಆದ ಶ್ರೀರಾಮನಿಗೆ ವಹ್ನಿಯ ‘ಅನ್ವಯಾನನ್ವಯ’ಗಳ ಸಂಬಂಧದ ಮಾನಸಿಕ ಘರ್ಷಣೆ ಅರ್ಥವಾಯಿತು.

ಅನನ್ವಯಕ್ಕಳ್ಕುತಿದೆ ನಿನ್ನ ಮರ್ತ್ಯಪ್ರಜ್ಞೆ
ನಿನಗವಂ ಮಗನಾಗಿ ಪುಟ್ಟುವೊಡೆ ಬೆದರ್ವೆಯೇಂ

ಎಂದು ಅವನಿಗೆ ಸಮಾಧಾನ ಹೇಳಿ ಅವನ ಮರ್ತ್ಯಸಾಮಾನ್ಯವಾದ ಸಂಶಯವನ್ನು ನೀಗುತ್ತಾನೆ. ಶ್ರೀರಾಮನ ಮಾತಿನಲ್ಲಿ ಇಂದ್ರಿಯಾತೀತವಾದ ಅಲೌಕಿಕ ಸತ್ಯ ಮಾತ್ರವೇ ಅಲ್ಲ, ವೈಜ್ಞಾನಿಕವಾದ ಲೌಕಿಕ ಸತ್ಯವೂ ಇದೆ. ಧ್ಯಾನಮೂಲವೂ ತಪೋಮೂಲವೂ ಆದ ಬಯಕೆ ನನಸಾಗುವುದರಲ್ಲಿ ಸಂದೇಹವೇ ಇಲ್ಲ. ವಿಕಾಸಾತ್ಮಕವಾದ ಪ್ರಗತಿಸಮಸ್ತಕ್ಕೆ ಸಂಕಲ್ಪವೇ ಮೂಲ. ಬಯಕೆ ಇಚ್ಛೆಯಾಗಿ, ಇಚ್ಛೆ ಸಂಕಲ್ಪವಾಗಿ, ಸಂಕಲ್ಪ ಕ್ರಿಯೆಯಾಗಿ ಪರಿಣಮಿಸುತ್ತದೆ. ಋತಚಿದಿಚ್ಛೆಗೆ ವಿರುದ್ಧವಲ್ಲದ ಸಂಕಲ್ಪ ಅಚ್ಯುತವಾಗುತ್ತದೆ, ಅಪ್ರತಿಹತ ವಾಗುತ್ತದೆ. ವಹ್ನಿಯ ಸ್ನೇಹಮೂಲವಾದ ಸಂಕಲ್ಪ ಪ್ರಕೃತಿ ನಿಯಮಕ್ಕೆ ವಿರುದ್ಧವಾದುದಲ್ಲ; ಜೊತೆಗೆ ಅದು ಪವಿತ್ರತಮವಾದ ಸಂಕಲ್ಪ. ಆ ಪಾವಿತ್ರ್ಯಕ್ಕೆ ಶ್ರೀರಾಮನೇ ಸಾಕ್ಷಿ. ನಿಜವಾದ ಸ್ನೇಹ ಬಯಸುವ ಕಾಣಿಕೆ ಮತ್ತೇನಿದ್ದೀತು?

ಅಷ್ಟುಹೊತ್ತಿಗೆ ಸೂರ್ಯ ಮುಳುಗಿ, ಕೆಂಪು ಮಾಸಿ ಮಬ್ಬು ಕವಿದು, ಕಪ್ಪೇರುತ್ತಿತ್ತು. ಇಬ್ಬರೂ ಶಿಬಿರದ ಕಡೆಗೆ ನಡೆದರು.

ಅಹಂಕಾರವಶವಾದ ಮರ್ತ್ಯಪ್ರಜ್ಞೆಗೆ, ಖಂಡದೃಷ್ಟಿಗೆ ಅಸಾಮಾನ್ಯವಾದುದು, ಅದ್ಭುತವಾದುದು, ಆಡಂಬರಾತ್ಮಕವಾದುದು ಮಾತ್ರ ಸನ್ಮಾನ್ಯವಾಗುತ್ತದೆ, ಉಳಿದುದೆಲ್ಲ ಅತಿಸಾಮಾನ್ಯವಾದುದೂ ಅನದ್ಭುತವಾದುದೂ ಅತ್ಯಂತ ಸರಳವಾದುದೂ ‘ಅಸಾಮಾನ್ಯ’ ದಂತೆಯೆ ಸನ್ಮಾನ್ಯವಾಗುತ್ತದೆ, ಉಪಾಸನಾಯೋಗ್ಯವಾಗುತ್ತದೆ; ಅದರ ಮುಂದೆ ಕೀಳುಮೇಲೆಂಬ ಭಾವನೆಯೆ ಸುಳಿಯದು. ಈ ವಹ್ನಿರಂಹರ ಜೀವನದಲ್ಲಿ ಈ ದರ್ಶನ ಪ್ರತಿಮಾವಿಧಾನದಿಂದ ವ್ಯಕ್ತಗೊಂಡಿದೆ.

‘ಅಖ್ಯಾತಿಯೆ ಸಾಮಾನ್ಯರ ಶ್ರೀಮನ್ ಮಾರ್ಗಂ’