ತಾಯಿ, ನಿನಗಲ್ಲದಿನ್ನಾರ್ಗೆ, ಪೇಳ್
ಸಂಮಥಿತ ದಶರಥತನೂಜ ಜೀವಿತ ಕಥಾ
ಸಾಗರೋತ್ಥಿತ ಘೋರ ಗರಳಮಂ ಧರಿಸುವ
ಶಿವಾಶಿವ ಶ್ರೀಕಂಠ ಶಕ್ತಿ?

ಶ್ರೀಮದ್ರಾಮಾಯಣದಲ್ಲಿ ವಾಚಕರ ನಿರ್ದಾಕ್ಷಿಣ್ಯಕ್ಕೂ ಅವಜ್ಞೆಗೂ ಅವಹೇಳನಕ್ಕೂ ಅಪವಾದಕ್ಕೂ ಪಾತ್ರರಾದ ಒಬ್ಬಿಬ್ಬರು ವ್ಯಕ್ತಿಗಳಲ್ಲಿ ಭರತಜನನಿಯಾದ ಕೈಕೆಯೂ ಒಬ್ಬಳು. ಧರ್ಮಜ್ಞನಾದ ಶ್ರೀರಾಮಚಂದ್ರನನ್ನು ಸೀತೆ ಲಕ್ಷ್ಮಣರೊಡನೆ ಕಾಡಿಗೋಡಿಸಿ ಪತಿಯನ್ನು ಸುರನಗರಿಗಟ್ಟಿ ಅರಮನೆಯ ಸುಖಶಾಂತಿಗಳನ್ನು ಕದಡಿ, ಊರುಕೇರಿ ನಾಡುಗಳನ್ನು                              ದುಃಖದಲ್ಲಿ ಮುಳುಗಿಸಿ ಲೋಕ ಭಯಾನಕವೂ ಅತ್ಯದ್ಭುತವೂ ರೋಮಾಂಚಕಾರಿಯೂ ಆದ ಘಟನಾಪರಂಪರೆಗಳಿಗೆ ಕಾರಣವಾದ ಕೈಕೆಯ ನೃಶಂಸತ್ವ, ಲೋಕದಲ್ಲಿ ಪ್ರಶಂಸೆಗೂ ಸಹಾನುಭೂತಿಗೂ ಅನುಕಂಪೆಗೂ ಪಾತ್ರವಾಗದೆ, ನಿಂದಾಸ್ಪದವಾಗಿದೆ, ತಿರಸ್ಕಾರ ಭಾಜನವಾಗಿದೆ. ರಾಮ ಸೀತೆಯರನ್ನು ಭರತ ಲಕ್ಷ್ಮಣರನ್ನು ಕೌಸಲ್ಯಾ ಸುಮಿತ್ರೆಯರನ್ನು ತೀರ ಹತ್ತಿರದಿಂದ ಕಂಡಿದ್ದ, ಅವರ ಮಹಿಮೋನ್ನತಿಯಿಂದ ಆದರ್ಶ ವರ್ತನೆಯಿಂದ ಸಂತೃಪ್ತರಾಗಿದ್ದ, ಅವರ ವಚನ ಪೀಯೂಷದಿಂದ ಪ್ರಮತ್ತರಾಗಿದ್ದ ಆಗಿನ ಜನ ಅರಮನೆಯ ಗೋಳಾಟ ಚೀರಾಟಗಳನ್ನು ರಾಮಸೀತೆಯರ ಸಂಕಟ ಪರಂಪರೆಗಳನ್ನು ಕಣ್ಣಾರೆ ಕಂಡು, ಕಿವಿಯಾರೆ ಕೇಳಿ, ಶೋಕಸಂತಪ್ತರಾಗಿ ಭಯಗ್ರಸ್ತರಾಗಿ, ಅಷ್ಟಕ್ಕೆಲ್ಲ ನೆರವಾದ ಕಾರಣವೆನಿಸಿದ ಶ್ರೀರಾಮನ ಮಲತಾಯಿ ಕೈಕೆಯನ್ನು ದಾಸಿಮಂಥರೆಯ ಒಡತಿಯನ್ನು ನೃಶಂಸೆಯೆಂದು ಕರೆದುದು ಅಸಹಜವೇನಲ್ಲ. ತ್ರೇತ ದ್ವಾಪರಗಳು ಸಂದು ಕಲಿಯುಗ ಬಂದ ಬಹುದೂರ ಸಾಗಿದ್ದರೂ, ರಾಮ ರಾಮಾಯಣ ರಾಮನಾಮಗಳಲ್ಲಿ ಶ್ರದ್ಧಾಭಕ್ತಿಗಳು ಕಾಲಕ್ರಮೇಣ ವರ್ಧಿಸುತ್ತಿದ್ದರೂ, ಈಗಿನ ಜನ, ಯಾವುದೋ ವಿಷನಿಮಿಷದಲ್ಲಿ ಪುತ್ರಾಭಿಮಾನದ ಅನನ್ಯ ಪ್ರೇಮದ ಹುಚ್ಚು ಹೊನಲಿನಲ್ಲಿ ಮುಳುಗಿ ಕಣ್ಗೆಟ್ಟು ಬಗೆಗೆಟ್ಟು ಬೆಪ್ಪಳಾಗಿ ಕೆಪ್ಪಳಾಗಿ ಹಿಂದು ಮುಂದುಗಳನ್ನು ವಾಸ್ತವ ಪರಿಸ್ಥಿತಿಯನ್ನು ಗಮನಿಸದೆ ದುಡುಕಿ ಮುಗ್ಗರಿಸಿ, ಅನಿರೀಕ್ಷಿತವೂ ಹೃದಯ ವಿದ್ರಾವಕಾರಿಯೂ ನಾರಕೀಯವೂ ಆದ ಘಟನಾಪರಂಪರೆಗಳ ಜಟಿಲ ಜಾಲದಲ್ಲಿ ಸಿಕ್ಕಿ ನೊಂದು ಬೆಂದು, ಕೌಸಲ್ಯಾತ್ಮಜನ ಜನಕನಂದಿನಿಯ ಊರ್ಮಿಳಾ ಧವನ, ಜೊತೆಗೆ ರಘುಕುಲಖಮಣಿ ದಶರಥನ ಪ್ರಜಾಕೋಟಿಯ ಸಮಸ್ತಲೋಕದ ದುಃಖಹಾಲಾಹಲವನ್ನೆಲ್ಲ ತಾನೊಬ್ಬಳೆ ನೀರವವಾಗಿ ನುಂಗಿಕೊಂಡು ಸದಾವಕುಂಠನವತಿಯಾಗಿ ಮೂಲೆ ಹಿಡಿದು, ರಾಮ ಸೀತೆಯರ ಕ್ಷೇಮಕ್ಕೋಸ್ಕರವೆ ತಪೋನಿರತೆಯಾಗಿದ್ದ ಭರತಮಾತೆಯನ್ನು – ವಿರಾಧಕ ಬಂಧಾದಿ ರಾಕ್ಷಸರ ಶಾಪವಿಮೋಚನೆಗೆ ಶಬರಿ ತ್ರಿಜಟೆಯರ ಇಷ್ಟಾರ್ಥಸಿದ್ದಿಗೆ ಮೂಲ ಕಾರಣಳಾಗಿ, ದಶರಥರಾಮ ಲೋಕಾಭಿರಾಮನಾಗಲು ನೆಪವಾದ ದಶರಥ ಪ್ರಿಯರಾಣಿಯನ್ನು, ನಿಂದಿಸುವುದಾಗಲಿ, ಅವಳ ಹೆಸರನ್ನು ಬಯ್ಗುಳದ ಗಾದೆನುಡಿಯಾಗಿ ಗ್ರಹಿಸುವುದಾಗಲಿ ಸಹಜವಾಗಿ ಕಾಣುವುದಿಲ್ಲ. ಇಕ್ಷ್ವಾಕು ವಂಶವನ್ನು ಸಂಪೂರ್ಣವಾಗಿ ಬಲ್ಲ, ದಶರಥನ ಜನನಾಭಿವೃದ್ದಿಗಳನ್ನು ಮಾತ್ರವಲ್ಲದೆ ಸೀತಾರಾಮರ ಜೀವನವನ್ನು ಆದ್ಯಂತವಾಗಿ ಕಣ್ಣಾರೆ ಕಂಡಿದ್ದ, ಜೊತೆಗೆ ಕೈಕೆಯ ಕುಲಗೋತ್ರಗಳನ್ನು ಸ್ವರೂಪ ಸ್ವಭಾವಗಳನ್ನು ಕಂಡೂ ಕೇಳಿಯೂ ಇದ್ದ ಆದಿಕವಿಯೂ ಕವಿಕುಲ ಗುರುವೂ ಆದ ವಾಲ್ಮೀಕಿ ಮಹರ್ಷಿಯೇ ಅವಳನ್ನು ಕೊನೆಕೊನೆಗೆ ನಿಂದಿಸುವ ಗೋಜಿಗೆ ಹೋಗುವು ದಿಲ್ಲ. ಎಂದೋ ಒಮ್ಮೆ ಅವಳ ಹೆಸರು ಎತ್ತಿ ಅಲ್ಲಿಗೇ ಕೈಬಿಡುತ್ತಾನೆ. ಊರ್ಮಿಳೆಯ ಬಗ್ಗೆ ಆದಿ ಕವಿ ತಾಳಿದ ಸಹಾನುಭೂತಿಯ ಮೌನ ಅರ್ಥ ಗರ್ಭಿತವಾಗಿಯೂ ಅನುಚಿತದೂರ ವಾಗಿಯೂ ಅಪಾರ್ಥಭಾಜನವಾಗದೆಯೂ ಇದ್ದರೆ, ಕೈಕೆಯ ಬಗ್ಗೆ ತಾಳಿದ ನಿಷ್ಠುರ ಮೌನ ಸಂದೇಹಕ್ಕೂ ಅಪಾರ್ಥಕ್ಕೂ ಎಡೆಕೊಡುವಂತೆ ಕಾಣುತ್ತದೆ. ಆದರೆ ಒಳಹೊಕ್ಕು ನೋಡಿದಾಗ ಈ ನಿಷ್ಠುರ ಶಿಲಾಮೌನದ ಗರ್ಭಾಂತರಾಳದಲ್ಲಿ ಸಹಾನುಭೂತಿ ಗುಪ್ತವಾಗಿ ದ್ರವಿಸುತ್ತಿದೆ ಯೆಂಬುದು ಗೋಚರವಾಗುತ್ತದೆ.

ರಾಮಾಯಣದ ಆ ರುದ್ರರಮಣೀಯ ನಾಟಕಕ್ಕೆ ಅಂಕುರಾರ್ಪಣೆ ಮಾಡಿದವರು ಯಾರು? ಅಲ್ಲಿಯ ಘನ ಘೋರ ಘಟನಾವಳಿಗಳಿಗೆ ಕೈಕೆಯೊಬ್ಬಳೆ ಹೊಣೆಗಾರ್ತಿಯೆ? ತನ್ನ ಅಪರಾಧದ ಭಾರವನ್ನು ಅವಳೊಬ್ಬಳೆ ಹೊರಬೇಕೆ? ಮಳೆಗೆ ಪ್ರತ್ಯಕ್ಷ ಮತ್ತು ಅತ್ಯಾಸನ್ನ ಕಾರಣ ಮೋಡ; ಸೂರ್ಯನ ಬಿಸಿಲು, ಆವಿ, ಭೂಮಿಯ ಆಕರ್ಷಣೆ ಮೊದಲಾದುವು ಪರೋಕ್ಷ ಮತ್ತು ದೂರಗತ ಕಾರಣ. ಹೀಗೆ ಪ್ರತಿಯೊಂದು ಕಾರ್ಯದ ಬೆನ್ನ ಹಿಂದೆ ಪ್ರತ್ಯಕ್ಷವೂ ಇಂದ್ರಿಯಗ್ರಾಹ್ಯವೂ ಆದ ಕಾರಣಗಳ ಜೊತೆಗೆ ಅಗೋಚರವೂ ಇಂದ್ರಿಯಾತೀತವೂ ಆದ ಕಾರಣ ಪರಂಪರೆಗಳಿರುತ್ತವೆ. ಅನೇಕ ವೇಳೆ ಅಗೋಚರ ಕಾರಣಗಳೇ ಗೋಚರ ಕಾರಣ ಗಳಿಗಿಂತ ಪ್ರಮುಖವೂ ಸಹಜವೂ ಸತ್ಯವೂ ಆಗಿರಬಹುದು. ಶುಭಕಾರ್ಯಗಳಿಗೆಲ್ಲ ಶುಭ ಕಾರಣಗಳನ್ನೆ ಅರಸುವುದೂ ಅಶುಭ ಕಾರಣಗಳನ್ನು ತ್ಯಜಿಸುವುದೂ, ಕಷ್ಟ ಸಂಕಷ್ಟಗಳನ್ನೆಲ್ಲ ಅಶುಭವೆಂದು ಹೆಸರಿಡುವುದೂ, ಭಗವತ್ಕೃಪೆ ಎಂದೂ ಕ್ಲೇಶರೂಪಿಯಲ್ಲ, ಸದಾ ಮಧುರ ರೂಪಿಯೆಂದು ಭಾವಿಸುವುದೂ ಮಾನವನ ಸಹಜ ದೌರ್ಬಲ್ಯ. ಇಂಥ ದೌರ್ಬಲ್ಯ ಪಕ್ಷಪಾತ ಮನೋಭಾವಕ್ಕೂ, ವಿವೇಕರಾಹಿತ್ಯಕ್ಕೂ, ಅಸಂಯಮಕ್ಕೂ, ಅನೌದಾರ್ಯಕ್ಕೂ ಎಡೆಗೊಡುತ್ತದೆ. ಕಷ್ಟ ಸುಖಗಳು ಒಂದೇ ನಾಣ್ಯದ ಎರಡು ಮುಖಗಳು, ಏಕಮಾತ್ರ ಘಟನೆಯಿಂದ ಶುಭಾ ಶುಭ ಫಲಗಳು ಅನಿವಾರ್ಯ, ಶಾಪವೆ ವರವಾಗಿ ವರವೆ ಶಾಪವಾಗುವ ರೋಮಾಂಚಕಾರಿ ಘಟನೆಗಳು ಅಪರೂಪವಲ್ಲ, ಒಬ್ಬನಿಗೆ ಅನುಕೂಲವಾದುದು ಮತ್ತೊಬ್ಬನಿಗೆ ಪ್ರತಿಕೂಲ ವೆಂಬ ವಿಷಯ ಎಲ್ಲರಿಗೂ ಅನುಭವದ  ಸಂಗತಿಯಾಗಿದೆ.

ಈ ತತ್ತ್ವದ ಹಿನ್ನೆಲೆಯಲ್ಲಿ ರಾಮಾಯಣದ ಘಟನೆಗಳನ್ನು ಪರಿಶೀಲಿಸಿದಾಗ ಹಲವಾರು ಪ್ರಶ್ನೆಗಳು ಉದ್ಭವಿಸುತ್ತವೆ. ರಾಮಾಯಣದ ಮುಂದಿನ ಮಹದ್ಘಟನೆಗಳಿಗೆ ಕೈಕೆಯ ಕುಲಗೋತ್ರ ಕಾರಣವೆ? ಅವಳ ಸೌಂದರ್ಯವೆ? ದಶರಥನ ಅಸಂಯಮ ವರ್ತನೆಯೆ? ಕೌಸಲ್ಯೆಯ ಮಾತ್ಸರ್ಯವೆ? ಕೈಕೆಯ ಪುತ್ರವಾತ್ಸಲ್ಯವೆ? ದಾಸಿಮಂಥರೆಯ ನೀಚತನವೆ? ಶ್ರೀರಾಮನ ಔದಾರ್ಯವೆ? ಸೀತೆಯ ಸೌಂದರ್ಯವೆ? ಲಕ್ಷ್ಮಣನ ಸೌಕುಮಾರ್ಯವೆ? ಶೂರ್ಪನಖಿಯ ಪ್ರಲೋಭನೆಯೆ? ರಾವಣನ ಪತಿತ ಬುದ್ದಿಯೆ? ಇವಿಷ್ಟೆ ಅಲ್ಲದೆ ಅನ್ಯಕಾರಣ ಗಳೂ ಉಂಟೆ? ದೇವತೆಗಳ ಅಭೀಪ್ಸೆಯೊ? ಅಂಥಕಮುನಿಯ ಶಾಪವೊ? ವಿರಾಧ ಕಬಂಧರ ಮೊರೆಯೊ? ಆಂಜನೇಯನ ಇಚ್ಛೆಯೊ? ವಾಲಿ ರಾವಣರ ಸುಪ್ತಚೇತನದ ಬಯಕೆಯೊ? ಹೀಗೆ ಲೌಕಿಕ ಬುದ್ದಿ ಜೋಡಿಸುವ ಪ್ರಶ್ನೆಗಳ ಉದ್ದೇಶ ಪಾಪಿಯ ಪಾಪವನ್ನು ಪೋಷಿಸುವು ದಲ್ಲ; ಅಪರಾಧಿಯನ್ನು ಅನ್ಯಾಯವಾಗಿ ಅಪರಾಧದಿಂದ ಮುಕ್ತಗೊಳಿಸುವುದಲ್ಲ; ವಸ್ತುವಿನ ನಿಜಸ್ಥಿತಿಯ ಅನ್ವೇಷಣೆ ಮತ್ತು ಪಾಪಿಯ ಉದ್ಧಾರ.

ಮೊದಲೆ ಇಬ್ಬರು ಪ್ರಮುಖ ಪತ್ನಿಯರಿರುವಾಗ ದಶರಥ ಮೂರನೆಯೊಬ್ಬಳನ್ನು ತರುವುದು – ಅದೂ ಇಳಿವಯಸ್ಸಿನಲ್ಲಿ – ಬಹುಶಃ ಇಂದಿನ ನಾಗರಿಕ ರುಚಿಗೆ ಹಿಡಿಸದಿರ ಬಹುದು. ಇಬ್ಬರು ಹೆಂಡತಿಯರಲ್ಲೂ ಮಕ್ಕಳಿಲ್ಲದೆ ಇಕ್ಷ್ವಾಕುವಂಶದ ಲತೆ ಮುರುಟಿ ಹೋಗುವ, ಪುನ್ನರಕ ಪ್ರಾಪ್ತವಾಗುವ ಭೀತಿ ಪಿಶಾಚಿ ದಶದಿಕ್ಕುಗಳಿಗೂ ಬಾಯಿ ತೆರೆದು ಅಬ್ಬರಿಸುತ್ತಿರುವಾಗ ಆಶಾವಾದಿಯಾದ ಪ್ರೀತಿಯ ದೊರೆ ಎಳೆಯ ಚೆಲುವೆಯೊಬ್ಬಳನ್ನು ತಂದುದು ಯಾವ ವಿಧದಿಂದಲಾದರೂ ಆಗಿನ ನಾಗರಿಕ ರುಚಿಯ ಶೌಚಕ್ಕೆ ಕಳಂಕವಾಗಿ ಕಂಡಿರಲಾರದು; ಇದ್ದರೂ ಕೆಲಸವಿಲ್ಲದ ಲಂಗುಲಗಾಮಿಲ್ಲದ ಹಿಡಿಮಂದಿಬಾಯಿ ಹರಿಬಿಟ್ಟಿರ ಬಹುದು. ಅದರಿಂದ ದಶರಥನನ್ನು ಮಹಾಪರಾಧಿಯೆಂದು ನಿರ್ಣಯಿಲಾಗದು.

ಇಳಿವಯಸ್ಸಿನಲ್ಲಿ ಹೊಸ ಹರೆಯದ ಹೆಣ್ಣು ಮನೆಗೆ ಬಂದಾಗ ಸಂಭವಿಸಬಹುದಾದ ಅನರ್ಥಪರಂಪರೆಯನ್ನು ಮಾನವ ಸ್ವಭಾವವನ್ನು ಸ್ವಲ್ಪವಾದರೂ ಬಲ್ಲ ಬುದ್ದಿ ಸುಲಭವಾಗಿ ಗ್ರಹಿಸಬಲ್ಲುದು. ಎಲ್ಲೆಡೆಯೂ ಸ್ವಾರ್ಥತಾಮೂಲವಾದ ಈರ್ಷ್ಯಾಫಣಿ ಹೆಡೆ ಬಿಚ್ಚುತ್ತದೆ. ಪತಿಯ ಪ್ರೇಮ ಕಾಮಕ್ಕೆ ತಿರುಗಿ, ಕಾಮ ಕಡೆಗೆ ಕರಗಿ ಚಪಲ ಮಾತ್ರವಾಗುಳಿಯುತ್ತದೆ. ಹಿರಿಯ ಹೆಂಡತಿಯರಿಂದ ಗಂಡ ದೂರವಾಗುತ್ತಾನೆ. ಅಧಿಕಾರಕ್ಕಾಗಿ ಹೋರಾಟ ಮೊದಲಾಗು ತ್ತದೆ. ಕೌಸಲ್ಯಾ ಸುಮಿತ್ರೆಯರು ತುಂಬ ಅತೃಪ್ತಿಯಿಂದ ವ್ಯಸನದಿಂದ ದಿನಗಳನ್ನು ಎಣಿಸುತ್ತ ಬಾಯಿಯಲ್ಲಿ ಅಕ್ಕಿಕಾಳು ಹಾಕಿಕೊಂಡು ಕಾಲ ಕಳೆದಿರಬೇಕು. ವನವಾಸೋದ್ಯುಕ್ತನಾದ ಶ್ರೀರಾಮನನ್ನು ಕುರಿತು ಶೋಕಗದ್ಗದೆಯಾದ ತಾಯಿ ಹೇಳುವ  ಮಾತುಗಳಲ್ಲಿ ಇದು ಎದ್ದು ಕಾಣುತ್ತದೆ.

[1] ಪಟ್ಟದ ರಾಣಿಯನ್ನು ನಿರ್ಲಕ್ಷ್ಯದಿಂದ ನೋಡಿದ್ದಕ್ಕಾಗಿ ದಶರಥನೂ ಆಮೇಲೆ ಪಶ್ಚಾತ್ತಾಪ ಪಡುತ್ತಾನೆ.[2]

ಮನೆಯಲ್ಲಿ ‘ಸಂಪು’ ನಡೆಯುತ್ತದೆ; ಗುಂಪುಗಳು ಬೆಳೆಯುತ್ತವೆ. ಈ ಅನುಭವ ಎಷ್ಟು ಪುರಾತನವೊ ಅಷ್ಟೇ ನೂತನ. ಯಾವಾಗಲೂ ತನ್ನ ಸನ್ನಿಧಾನದಲ್ಲಿಯೆ ಇದ್ದು ‘ದೇವಿ’ ‘ಪ್ರಾಣಾಧಿಕೆ’ ಎಂದು ಮುಂತಾಗಿ ಲಲ್ಲೈಸುವ, ಸೇವಿಸುವ, ತನ್ನ ಮನಸ್ಸಿನಲ್ಲಿ ಬಯಕೆ ಅಂಕುರಿಸುವುದೆ ತಡ ಅದನ್ನು ಸಿದ್ದಿಗೂಡಿಸುವ ರಮಣನಿರುವಾಗ ಕೊಬ್ಬಿ ಬೆಳೆದ ಯಾವ ಹೆಣ್ಣು ತಾನೆ ಬಿಮ್ಮನೆ ಬೀಗದಿರುತ್ತಾಳೆ? ಕೈಕೆ ಇದಕ್ಕೆ ಹೊರತಲ್ಲ. ಅವಳನ್ನು ಜನನಿಗಿಂತ ಮಿಗಿಲಾಗಿ ಕಾಣುತ್ತಿದ್ದವನೂ ನಿರಸೂಯನೂ ಸಂಯಮಿಯೂ ಆದ ಶ್ರೀರಾಮ ಅರಣ್ಯವಾಸದ ಪ್ರಥಮ ದಿನದಂದು ಲಕ್ಷ್ಮಣನನ್ನು ಕುರಿತು ಹೇಳುವ ಮಾತಿನಲ್ಲಿ ಕೈಕೆಯ ನಿಜಸ್ವಭಾವ ಪ್ರತಿಬಿಂಬಿತವಾಗಿದೆ.[3] ಸೌಂದರ್ಯಗರ್ವಿಯೂ ಕ್ಷುದ್ರಕರ್ಮಾಸಕ್ತೆಯೂ ಆದ  ಕೈಕೆ ಕೌಸಲ್ಯಾ ಸುಮಿತ್ರೆಯರಿಗೆ ತುಂಬ ಕಷ್ಟ ಕೊಡದಿರಲಾರಳು; ಅವರ ಮೇಲೆ ದ್ವೇಷ ಸಾಧಿಸದಿರಲಾರಳು ಎಂದು ಹೇಳುವ ಶ್ರೀರಾಮನ ಮಾತಿನಲ್ಲಿ ಸತ್ಯವಿಲ್ಲದಿಲ್ಲ. ಅವಳ ಹೊರಗೊಳಗುಗಳನ್ನೆಲ್ಲ ಬಲ್ಲ ದಶರಥ ಅವಳನ್ನು ‘ಚನ್ನಾಗ್ನಿ ಕಲ್ಪಯಾ’ ಎಂದು ದೂಷಿಸು ತ್ತಾನೆ. ಅವಳ ಕುಲಗೋತ್ರವೂ ಅಷ್ಟು ಒಳ್ಳೆಯದಲ್ಲವೆಂದು ಕಾಣುತ್ತದೆ. ‘ಬೇವಿನ ಮರವನ್ನು ಹಾಲು ಹಾಕಿ ಬೆಳೆಸಿದರೆ ಕಹಿ ಹೋದೀತೆ; ಹಾಗೆಯೆ ನೀಚ ವರ್ತನೆಯ ತಾಯಿಯ  ಹೊಟ್ಟೆ ಯಲ್ಲಿ ಸದ್ಗುಣಿಯನ್ನು ಹೇಗೆ ನಿರೀಕ್ಷಿಸುವುದು’[4] ಎಂದು ವೃದ್ಧ ಶ್ರೇಷ್ಠ ಸುಮಂತ್ರನ ಬಾಯಿಂದ ಕೇಳುವಾಗ ಅವಳ ಬಗ್ಗೆ ಕ್ರೋಧ ಮೂಡುತ್ತದೆ. ಪುತ್ರ ಶೋಕಾರ್ತಳಾದ ಕೌಸಲ್ಯಾದೇವಿ ಸುಭಗಳೂ ಲಬ್ಧಕಾಮಿಯೂ ಆದ ಅವಳಿಗೆ ದುಷ್ಟಾಹಿ ಕಂಡಂತೆ ಹೆದರುತ್ತಾಳೆ. ಪಿತೃ ಮರಣ ದುಃಖದಗ್ಧನೂ ಅಗ್ರಜವಿರಹ ವಿಹ್ವಲನೂ ಆದ ಭರತ ‘ಐಶ್ವರ್ಯಕಾಮಿ’, ‘ನೃಶಂಸೆ’, ‘ಪಾಪನಿಶ್ಚಯೆ’, ‘ಅಕೃತ ಪ್ರಜ್ಞೆ’, ‘ಕೋಪಿಷ್ಠೆ’, ‘ಅನಾರ್ಯೆ’, ‘ದೃಪ್ತಾಂ ಸುಭಗಮಾನಿನೀಂ’ ಎಂದು ಹಳಿಯುತ್ತಾನೆ. ಈ ನಿಂದೋಕ್ತಿಗಳು ಕೋಪೋದ್ರೇಕದ ಫಲವಾದರೂ, ಸತ್ಯದೂರವಲ್ಲ. ತಕ್ಕಮಟ್ಟಿಗೆ ತಥ್ಯಾಂಶವಿದ್ದೇ ಇದೆ.

ಅವಳ ತಾಯಿ ಎಂಥವಳೇ ಆಗಿರಲಿ, ಕುಲಗೋತ್ರ ಎಂಥವೇ ಆಗಿರಲಿ, ಕೈಹಿಡಿದ ಗಂಡನ ಮತ್ತು ಅವನ ವಂಶದ ಮಹಿಮೆ ಗರಿಮೆಗಳು, ಅವಿಚ್ಛಿನ್ನವಾದ ಸಂಸ್ಕೃತಿ ಪರಂಪರೆಗೆ ನೆಲೆವೀಡಾದ ರಘುಕುಲದ ರಾಜಶ್ರೇಷ್ಠರ ಅರಮನೆಯ ಪವಿತ್ರ ವಾತಾವರಣ, ಹಳೆಯ ಪಳೆಯ ನೆನಕೆಗಳು ಕೈಕೆಯ ಜೀವನವನ್ನು ತಿದ್ದುತ್ತಿದ್ದುವು, ಅವಳ ವ್ಯಕ್ತಿತ್ವವನ್ನು ರೂಪಿಸುತ್ತಿದ್ದುವು. ಕ್ರಮೇಣ ರಘುಕುಲದ ಸೊಸೆಯಾಗುವ ಯೋಗ್ಯತೆಯನ್ನೂ ಪಡೆದಳು. ಆದರೂ ಸೌಂದರ್ಯಮದ ಮತ್ತು ಸ್ವಾಭಿಮಾನ ಮರೆಯಾಗಿರಲಿಲ್ಲ. ಆಗಾಗ್ಗೆ ಕೌಸಲ್ಯೆ ಸುಮಿತ್ರೆಯರ ಚುಚ್ಚುನುಡಿ ಅಣಕ ನುಡಿಗಳು ಆ ಹೊಸಬಿಯನ್ನು ರೇಗಿಸುತ್ತಿದ್ದಿರಬೇಕು. ಎರಡು ಕಡೆಯ ಕುಬ್ಜೆಯರ ತಂದುಹಾಕುತನ ದಿನೇ ದಿನೇ ಅಮಂಗಳದ ಕಡೆಗೆ ಒಯ್ದಿರಬೇಕು. ಆದರೂ ದಶರಥನ ಸೌಜನ್ಯದಿಂದ ಮತ್ತು ನಿರ್ಲಕ್ಷ್ಯ ಮನೋಭಾವದಿಂದ ಪರಿಸ್ಥಿತಿ ಎಂದೂ  ಹದಗೆಟ್ಟಿರಲಿಲ್ಲ. ಪುತ್ರ ಜನನವಾದ ಮೇಲಂತೂ ಎಲ್ಲರ ದ್ವೇಷಾಸೂಯೆಗಳು ಮಕ್ಕಳ ನಲಿದಾಟ ಮುದ್ದಾಟಗಳಲ್ಲಿ ಲಾಲನೆ ಪಾಲನೆಗಳಲ್ಲಿ ಮರೆತುಹೋಗಿರಬೇಕು. ಪ್ರತಿಯೊಬ್ಬರೂ ಎಲ್ಲ ಮಕ್ಕಳನ್ನೂ ಒಂದೇ ರೀತಿಯಾಗಿ ಕಾಣುತ್ತಿದ್ದಿರಬೇಕು. ದಶರಥನ ಕಾಮಚಾಪಲ್ಯ ಪುತ್ರವಾತ್ಸಲ್ಯವಾಗಿ ಪರಿಣಮಿಸಿರಬೇಕು. ಶ್ರೀರಾಮನ ಚೆಲವು ಒಲವುಗಳು ನಡೆನುಡಿಗಳು ಕೈಕೆ ಮೊದಲಾಗಿ ಎಲ್ಲರನ್ನೂ ಮುಗ್ಧಗೊಳಿಸಿರಬೇಕು. ಅದನ್ನು ನೋಡಿ ದಾಸಿಯರಿಗೆ ಸ್ವಲ್ಪ ಖೇದವೂ ಆಗಿರಬೇಕು!

ಕೈಕೆ ಶ್ರೀರಾಮನನ್ನು ತನ್ನ ಮಗನಿಗಿಂತ ಮಿಗಿಲಾಗಿ ಕಾಣುತ್ತಿದ್ದಳು. ತಾಟಕೀ ಮರ್ದನ ಶಿವಧನುರ್ಭಂಗ ಘಟನೆಗಳಿಂದ ಅವನು ಮತ್ತಷ್ಟು ಆಪ್ಯಾಯಮಾನವಾದನು. ಅಂಥವನಿಗೆ ಯೌವರಾಜ್ಯಾಭಿಷೇಕ ಮಾಡುವಾಗ ಯಾರಿಗೆ ತಾನೆ ಸಂತೋಷವಾಗುವುದಿಲ್ಲ? ಮಂಥರೆಯ ಬಾಯಿಂದ ಸುದ್ದಿ ತಿಳಿದಾಗ ಸಂಹೃಷ್ಟೆಯೂ ವಿಸ್ಮಯಾನ್ವಿತೆಯೂ ಆಗಿ ಅಮೂಲ್ಯ ಆಭರಣವನ್ನು ಬಹುಮಾನ ನೀಡುತ್ತಾಳೆ. “ಶ್ರೀರಾಮನಿಗೂ ಭರತನಿಗೂ ನಾನೆಂದೂ ಪಕ್ಷಪಾತ ಮಾಡಿದವಳಲ್ಲ; ನನಗೆ ಇದಕ್ಕಿಂತಲೂ ಹೆಚ್ಚಿನ ಪ್ರಿಯ ವಾರ್ತೆಯಿಲ್ಲ. ಇದಕ್ಕಾಗಿ ಇನ್ನೇ ನಾದರೂ ವರ ಕೇಳು” ಎಂದು ಹರ್ಷೋನ್ಮತ್ತಳಾಗಿ ನುಡಿಯುತ್ತಾಳೆ.[5] ಇದು ಬರಿಯ ಓಷ್ಠ ಚಾಪಲ್ಯದ ಮಾತಲ್ಲ. ಇದಕ್ಕೆ ರಾಮ ದಶರಥರೇ ಸಾಕ್ಷಿ. ಕ್ರೋಧಾಂಧನಾದ ಲಕ್ಷ್ಮಣ ನನ್ನು ಸಮಾಧಾನಪಡಿಸಲು ರಾಮ ಹೇಳುವ ಮಾತುಗಳಲ್ಲಿ ಇದರ ಯಥಾರ್ಥತೆಯನ್ನು ಕಾಣಬಹುದು.[6]

ಇಂಥ ಕೈಕೆ ರಾಮನನ್ನು ಅರಣ್ಯಕ್ಕಟ್ಟುವಳೆಂದರೆ ನಂಬಲು ಕಷ್ಟವಾದ ವಿಷಯ. ರಾಮನೆ ಹೇಳುವಂತೆ ಅದೆಲ್ಲ ವಿಧಿಮಾಯೆ![7] ಅದಿಲ್ಲದಿದ್ದರೆ ಕೈಕೆಗೆ ಆ ವಿಧವಾದ ಬುದ್ದಿ ತಲೆದೋರುತ್ತಿತ್ತೆ ಎಂದು ಅವನಿಗೆ ಆಶ್ಚರ್ಯವಾಗುತ್ತದೆ. ಮಂಥರೆ ವಿಧಿಯ ಕೈಯ ವೀಣೆಯಾಗುತ್ತಾಳೆ. ಹೊಟ್ಟೆಕಿಚ್ಚಿನ ತತ್ತಿಯಾದ ಅವಳಿಗೆ ಕೌಸಲ್ಯೆಯ ದಾಸಿಯರ ಏಳ್ಗೆ ಸಹಿಸಲಿಲ್ಲ. ಎಷ್ಟಾದರೂ ಹೀನ ಕುಲಜೆ! ಅವಳು ರಾಮನಿಗಿಂತ ಮೊದಲು, ಕೌಸಲ್ಯೆಗಿಂತ ಮೊದಲು, ದಶರಥನಿಗಿಂತ ಮೊದಲು ಕೈಕೆಯನ್ನು ನೋಡಿದ್ದವಳು; ಹೆತ್ತಲ್ಲದಿದ್ದರೂ ಹೊತ್ತು ಅತ್ತು ಸಾಕಿದವಳು; ಅವಳೆ ಗತಿ ಮತಿ ಪತಿ ಆಯು ಎಂದು ಪೊರೆದವಳು; ಕೈಕೆಯ ಅಬಲ ಸಬಲ ನಾಡಿಗಳನ್ನೆಲ್ಲ ಹಿಡಿದು ನೋಡಿದ್ದವಳು. ಕೈಕೆಯನ್ನು ಬುಟ್ಟಿಗೆ ಹಾಕಿಕೊಳ್ಳುವ ಮೋಡಿ ಅವಳೊಬ್ಬಳಿಗೇ ಗೊತ್ತು. ಯಾವುದೋ ಅನಿಷ್ಟ ನಕ್ಷತ್ರದಲ್ಲಿ ಪೀಠಿಕೆ ಹಾಕಿ ತನ್ನ ವಶಮಾಡಿಕೊಂಡು, ತನ್ನಿಚ್ಛೆಗೆ ತಕ್ಕಂತೆ ಕುಣಿಸಿಕೊಳ್ಳುತ್ತಾಳೆ. ಕೈಕೆ ಇಳಿಜಾರಿನ ಕೆಸರಿನಲ್ಲಿ ಕಾಲಿಟ್ಟ ಮೇಲೆ ಅವಳಿಗೆ ಗುಂಡಿಯೆ ಗುರಿಯಾಗುತ್ತದೆ. ಕಷ್ಟವನ್ನೆ ಕಾಣದ ಸಂಯಮವನ್ನೆ ಅರಿಯದ ಆ ಚಪಲೆ ಮೊದಲಬಾರಿಗೆ ಕಳ್ಕುಡಿದವಳಂತೆ ವರ್ತಿಸುತ್ತಾಳೆ. ವಿಧಿಯ ಗುರಿ ಮುಟ್ಟುವವರೆಗೆ ಅಮಲಿಳಿಯಲೇ ಇಲ್ಲ.

ಕೈಕೆಯ ಕೈತವಕ್ಕೆ ಸಿಕ್ಕಿ ದಶರಥ ನುಗ್ಗಾಗುತ್ತಾನೆ. ಆ ವಿಷಮ ಪರಿಸ್ಥಿತಿಯಿಂದ ಅವರನ್ನು ಯಾರೂ ಉದ್ಧರಿಸುವಂತಿಲ್ಲ. ಒಂದು ಕಡೆ ಸತ್ಯಸಂಧನಾದ ದೊರೆ; ಮತ್ತೊಂದು ಕಡೆ ಹಠಮಾರಿಯಾದ ರಾಣಿ. ಈ ಇಕ್ಕಟ್ಟಿನಲ್ಲಿ ಮಂತ್ರಿಗಳ ಮಂತ್ರ ತಂತ್ರಗಳೆಲ್ಲ ಅತಂತ್ರವಾಗು ತ್ತವೆ. ಅಪರ ವಯಸ್ಸಿನಲ್ಲಿ ಕಾಡಿ ಬೇಡಿ ಮಕ್ಕಳನ್ನು ಪಡೆದ ಮುಪ್ಪು ದೊರೆಯ ಎದುಗುದಿ ಯಾರಿಗೆ ತಾನೆ ಅರಿವಾಗುತ್ತದೆ? ಅದೂರ ದೃಷ್ಟಿಯ ಪುತ್ರವ್ಯಾಮೋಹಭರಿತಳಾದ ಕೈಕೆಯನ್ನು ಅದು ಕರಗಿಸಲಿಲ್ಲ. ಇಬ್ಬರನ್ನೂ ಹುಚ್ಚು ಆವರಿಸುತ್ತದೆ. ಅವನ ಮಾತು ಇವಳೆದೆಗೆ ಇವಳ ಮಾತು ಅವನೆದೆಗೆ ಶಲ್ಯವಾಗುತ್ತದೆ. ಮದುವೆಯಾಗುವಾಗಲೆ ಕಾಮಾಸಕ್ತನಾದ ದೊರೆ ಕೇಕಯರಾಜನಿಗೆ ಮಾತುಕೊಟ್ಟಿದ್ದ, “ನಿನ್ನ ಮಗಳ ಮಗನಿಗೇ ಪಟ್ಟ ಕಟ್ಟುತ್ತೇನೆ” ಎಂದು.[8] ಜೊತೆಗೆ ದೇವಾಸುರ ಯುದ್ಧದಲ್ಲಿ ಅವಳು ತೋರಿದ ಅಪೂರ್ವ  ಸಾಹಸಕ್ಕೂ ಮಾಡಿದ ಅಮೂಲ್ಯ ಸಹಾಯಕ್ಕೂ ಮೆಚ್ಚಿ ವರಗಳನ್ನು ಕರುಣಿಸಿದ್ದ. ಯಾವುದಕ್ಕೂ ಕೊರತೆಯಿಲ್ಲದಿರು ವಾಗ ವರಗಳಿಂದ ಏನು ಪ್ರಯೋಜನ? ಸಮಯ ಬಂದಾಗ ಉಪಯೋಗಿಸಿಕೊಳ್ಳುವುದಾಗಿ ಹೇಳಿದ್ದಳು. ವರವೆ ಶಾಪವಾಗಿ ಪರಿಣಮಿಸುತ್ತದೆಂದು ಅವನು ಆಗ ಊಹಿಸಿರಲಿಲ್ಲ. ಈಗ ಕಡಕಲಿನ ಪ್ರಸಂಗದಲ್ಲಿ ಸಿಕ್ಕು ಪೇಚಾಡುತ್ತಿದ್ದಾನೆ. ಸ್ವಾಭಿಮಾನಿಯೂ ದರ್ಪಿಷ್ಠೆಯೂ ಆದ ಕೈಕೆ ದಶರಥನ ನಿಂದೆಯಿಂದ ಮತ್ತಷ್ಟು ಉದ್ವಿಗ್ನಗೊಂಡು ಹಠಮಾರಿಯಾಗುವಳೆ ಹೊರತು ಕುಲನಾರಿಯಾಗುವುದಿಲ್ಲ. ಅವನನ್ನು ವಾಗ್ ಭ್ರಷ್ಟನೆಂದೂ ಕರೆಯುವ ಸಾಹಸ ಗೈಯುತ್ತಾಳೆ. ಆಗ ಸಕಲ ಗುಣಾಭರಣನಾದ ಶ್ರೀರಾಮನೆ ಮುಂದಿನ ಗತಿಯನ್ನು ನಿರ್ಣಯಿಸ ಬೇಕಾಗುತ್ತದೆ. ತಂದೆಯ ವಾಕ್ಯಪರಿಪಾಲನೆಗಾಗಿ ಅರಣ್ಯಯಾತ್ರೆಯನ್ನು ಕೈಕೊಳ್ಳಬೇಕಾ ಗುತ್ತದೆ. ಕೈಕೆಯ ಪ್ರೇರಣೆ ಘಟನಾವಳಿಗಳನ್ನು ತೀವ್ರಗೊಳಿಸುತ್ತದೆ. ದಶರಥ ಮನಸ್ಸಿಲ್ಲದ ಮನಸ್ಸಿನಿಂದ “ರಾಮನೊಡನೆ ಅರಣ್ಯಕ್ಕೆ ಸಕಲ ಪರಿವಾರವೂ ತೆರಳಿ; ಆನೆ ಕುದುರೆಗಳು ಸಾಕಾದಷ್ಟು ಸಂಪತ್ಸಾಮಗ್ರಿಗಳನ್ನು ಹೊತ್ತುಕೊಂಡು ನಡೆಯಲಿ” ಎಂದು ಉಸುರಿದಾಗ ಕೈಕೆ ಸಂಕೋಚವಿಲ್ಲದೆ ಮರ್ಯಾದೆಯ ಹದ್ದು ಮೀರಿ “ಪಾಳು ಅಯೋಧ್ಯೆಯನ್ನು ನನ್ನ ಮಗ ಆಳಬೇಕೆ” ಎನ್ನುತ್ತಾಳೆ. ಮತ್ತೆ ನಯವಿದನಾದ ಶ್ರೀರಾಮ ನಡುವೆ ಬಾಯಿಹಾಕಿ “ಗುದ್ದಲಿ, ಮಂಕರಿ, ನಾರುಡೆ ಇಷ್ಟೇ ನಮಗೆ ಸಾಕು” ಎನ್ನಲು ಲಜ್ಜಾಹೀನೆಯಾದ ಕೈಕೆ ತಟಕ್ಕನೆ ಅವುಗಳನ್ನು ತಂದು ಮುಂದಿಡುತ್ತಾಳೆ. ಇಲ್ಲಿಗೆ ಅವಳ ದೌಷ್ಟ್ಯ ಮುಗಿಲು ಮುಟ್ಟುತ್ತದೆ.

ಕೋಪದರ್ಪಗಳ ಪರ್ವತಾಗ್ರವನ್ನೇರಿದ ಕೈಕೆ ಅಪ್ರತಿಹತವಾದ ಪ್ರಚಂಡ ಝಂಝಾ ವಾತಕ್ಕೆ ಸಿಕ್ಕಿ ತರತರನೆ ನಡುಗುತ್ತ ದುಃಖದ ಪ್ರಪಾತಕ್ಕುರುಳುತ್ತಾಳೆ. ಇಷ್ಟೆಲ್ಲ ಘಟನೆಗಳು ಚಿಟಿಕೆವೇಳೆಯಲ್ಲಿ, ಮಾಯೆಯ ಮಬ್ಬು ಕವಿದ ವಿಷಘಳಿಗೆಯಲ್ಲಿ ಸಾಗಿ ಹೋಗಿವೆ. ಮಾಯೆಯ ಛಾಯೆ ಸರಿದಾಗ ಕೈಮೀರಿಹೋಗಿದೆ. ಇದರಲ್ಲಿ ಕೈಕೆಯ ಜವಾಬ್ದಾರಿ ಎಷ್ಟಿದೆ? ಪ್ರಪಂಚದಲ್ಲಿ ನಡೆಯುವ ಪ್ರತಿಯೊಂದು ಘಟನೆಯೂ ಸರ್ವತಂತ್ರ ಸ್ವತಂತ್ರವಾದುದಲ್ಲ; ಅದು ಕಾಲದೇಶಗಳಿಂದ ಬದ್ಧವಾಗಿರುವಂತೆ ಕಂಡರೂ, ಕಾಲದೇಶಾತೀತವಾದುದು. ಇಲ್ಲಿ ಕೈಕೆ ವಿಧಿಯ ಕೈಗೂಸು. ಅಂದರೆ ಅವಳಲ್ಲಿ ತಪ್ಪಿಲ್ಲವೆಂದಲ್ಲ. ತಾನು ಈ ಮಟ್ಟಕ್ಕಿಳಿಯುತ್ತೇ ನೆಂದು ಅವಳು ಹಿಂದಿನ ದಿನ ಯೋಚಿಸಿಯೇ ಇರಲಿಲ್ಲ. ಅವಳು ಅಂಥ ದುರಾಚಾರಿಣಿಯೂ ಅಲ್ಲ; ಅದರಲ್ಲಿಯೂ ತನ್ನ ಪ್ರಾಣಕ್ಕಿಂತ ಮಿಗಿಲಾಗಿ ಪ್ರೀತಿಸುತ್ತಿದ್ದ ಪತಿಗೆ ಅಪಚಾರವೆಣಿಸುವ ಮನಸ್ಸೂ ಇರಲಿಲ್ಲ. ವಿನಾಶಕಾಲಕ್ಕೆ ವಿಪರೀತ ಬುದ್ದಿ ಮೊಳೆಯುತ್ತದೆ.[9] ಅಂಧಕಮುನಿಯ ಶಾಪ, ದಶರಥನ ಸತ್ಯಸಂಧತೆ, ವಿರಾಧ ಕಬಂಧ ಶಬರಿಯರ ಮೊರೆ, ರಾವಣನ ಕಾತರತೆ – ಇವೆಲ್ಲ ಸಂಚುಹೂಡಿ ಕೈಕೆಗೆ ಮಂಕುಬೂದಿ ಎರಚಿರಬೇಕೆಂದು ಕಾಣುತ್ತದೆ. ಯಾವುದು ಮೊದಲು ಅಹಿತವೆಂದು ಕಂಡಿತೊ, ಯಾರು ಮೊದಲು ವಧಾರ್ಹ ಎಂದು ಕಂಡರೊ ಕೊನೆಗೆ ಅದೇ ಹಿತಕರವಾಗಿ ಅವರೇ ಪೂಜಾರ್ಹರಾಗಿ ಕಾಣುತ್ತಾರೆ.

ದಶರಥನ ಪ್ರಾಣಪಕ್ಷಿ ಹಾರಿಹೋದಾಗ ಕೌಸಲ್ಯಾದಿ ರಾಣಿಯರೊಡನೆ ಕೈಕೆಯೂ ಮೂರ್ಛೆ ಹೊಂದುತ್ತಾಳೆ. ಮೂರ್ಛೆ ತಿಳಿದೆದ್ದಾಗ ಅವಳ ಸ್ವಾಭಿಮಾನ ದರ್ಪಗಳ ಕಿಲ್ಬಿಷ ಕಣ್ಣೀರಿನ ಗಂಗಾಸ್ನಾನದಿಂದ ಪ್ಲಾವಿತವಾಗಿ, ನಾರಾಯಣಾಂಶ ಸಂಭೂತನಾದ ಭರತನ ಜನನಿಯೆ ಆಗುತ್ತಾಳೆ. ಯಾರ ಶ್ರೇಯಸ್ಸಿಗಾಗಿ ತನ್ನೆಲ್ಲ ಪೂಣ್ಯವನ್ನೂ ತೊರೆದು ಪತಿತಳಾಗಲು ಸಿದ್ಧವಾಗಿದ್ದಳೊ ಆ ಭರತನ ಕರ್ಕಶವೂ ಅನುದಾರವೂ ಆದ ನಿಂದೋಕ್ತಿಯ ವಜ್ರಪಾತದಿಂದ ಇದ್ದ ಅಲ್ಪಸ್ವಲ್ವ ಸ್ವಾಭಿಮಾನವೂ ಜರ್ಜರಿತವಾಗುತ್ತದೆ. ಅನಂತರ ಅವಳು ದೇಹಧಾರಣೆ ಮಾಡಿಕೊಂಡು ಉಳಿದದ್ದೇ ಅವಳ ಮಹತ್ತಿಗೆ ಸಾಕ್ಷಿ ಧ್ವಜವಾಗಿದೆ. ಪತಿ ತೀರಿಕೊಂಡಾಗ ಸವತಿಯರು ಕಾರಿದ ನಂಜೆಷ್ಟು? ದೊರೆಯನ್ನು ಕಳೆದುಕೊಂಡು ಅನಾಥರಾದ ಊರಿನ ಜನ ಹಾಕಿದ ಶಾಪವೆಷ್ಟು? ಕೋಸಲದ ಯಾವ ಮೂಲೆಗೆ ಹೋದರೂ ನಿಂದೆಯ ಸುರಿಮಳೆಯೇ! ಗೋಳು ಸುರಿಯುತ್ತಿದ್ದ ಅರಮನೆಯ ಪ್ರತಿಯೊಂದು ವಸ್ತುವೂ ಅವಳನ್ನು ನಿಂದಿಸುವಂತಿದೆ! ಸಾಕಿದ ಹಕ್ಕಿ ಆಗಸದ ಹಕ್ಕಿ ಎಲ್ಲವೂ ಅವಳನ್ನು ನಿಂದಿಸುವಂತೆ ಸಾರುತ್ತಿದ್ದುವು. ಎಲ್ಲ ನಿಂದೆಯನ್ನೂ ಕಣ್ಮುಚ್ಚಿ ನುಂಗಿಕೊಂಡಳು. ಭರತ ರಾಮನನ್ನು ಹಿಂದಿರುಗಿಸಲು ಹೊರಟಾಗ ಅವನ ಇಷ್ಟಾರ್ಥ ಫಲಿಸಲೆಂದು ಅವಳು ಎಷ್ಟು ದೇವತೆಗಳಿಗೆ ಕೈಮುಗಿದಳೊ! ಚಿತ್ರಕೂಟದಲ್ಲಿ ರಾಮಸೀತೆ ಲಕ್ಷ್ಮಣರನ್ನು ತಲೆಯೆತ್ತಿ ನೋಡುವ ಸಾಹಸ ಮಾಡಿದಳೆ? ಅದೂ ಇರಲಿ-ಮುಂದೇನಾಯಿತು?…. ಕವಿ ಕುಲಗುರು ಸೀತಾರಾಮರ ದುಃಖದಲ್ಲಿ ಕೈಕೆಯನ್ನು ಸಂಪೂರ್ಣ ವಾಗಿ ಮರೆತುಬಿಟ್ಟಿದ್ದಾನೆ!

ತಂದೆ ಗಳಿಸಿಟ್ಟ ಆಸ್ತಿಯನ್ನು ಜೋಪಾನವಾಗಿ ಸದುಪಯೋಗಪಡಿಸಿಕೊಳ್ಳುವ, ಅಭಿವೃದ್ದಿಪಡಿಸುವ ವಿವೇಕಿ ಪುತ್ರನಂತೆ ಭಾಸ ರಾಮಾಯಣದಲ್ಲಿ ಗೌರವ ಭಾಜನರಾದರೂ ಉಪೇಕ್ಷಿತರಾದಂತಿರುವ ಕೈಕೆ ಭರತರ ಪಾತ್ರಗಳನ್ನು ಸಮುಜ್ವಲವಾಗಿ ಚಿತ್ರಿಸಿದ್ದಾನೆ. ತಂದೆ ಸಲ್ಲಿಸಬೇಕಾಗಿದ್ದ ಕೈಂಕರ್ಯವನ್ನು ಮಗ ನೆರವೇರಿಸುವಂತೆ ಭಾಸ ಅವರಿಗೆ ಸಲ್ಲಬೇಕಾಗಿದ್ದ ಗೌರವವನ್ನು ಸಲ್ಲಿಸಿದ್ದಾನೆ. ರಾಮಾಯಣದಲ್ಲಿ ಕಾಣುವ ಅಸ್ಪಷ್ಟತೆ ವಿಪರೀತಾರ್ಥಕ್ಕೆಡೆ ಗೊಡದಂತೆ ಕೈಕೆಯ ನಿಜ ಸ್ವರೂಪವನ್ನು ಪರಿಚಯಿಸಿಕೊಟ್ಟು ವಾಲ್ಮೀಕಿಗೆ ಉಚಿತ ಮರ್ಯಾದೆಯನ್ನು ಸಲ್ಲಿಸಿದ್ದಾನೆ. ಕೈಕೆ ಭರತರಿಗಾಗಿಯೆ ಅವನು ರಾಮಾಯಣದ ಕಥೆಯನ್ನು ಆರಿಸಿಕೊಂಡಂತಿದೆ. ಲೋಕದ ದುರುದ್ದೇಶಪೂರಿತವಾದ ಅನೌದಾರ್ಯದ ಟೀಕೆಗಳನ್ನು ಪರಿಹರಿಸಲೋಸುಗವೆ ಕೈಕೆಯ ಮೇಲಣ ಸಾನುಕ್ರೋಶದಿಂದ ಯಜ್ಞಫಲ, ಪ್ರತಿಮಾನಾಟಕ ಗಳನ್ನು ಬರೆದಂತಿದೆ. ಭಾಸನ ಕಲ್ಪನೆಯ ದಶರಥನ ಸಂಸಾರ ಸ್ನೇಹ ಸೌಜನ್ಯಗಳಿಂದ ರಂಜಿತವಾಗಿದ್ದ ಪ್ರೇಮಾಗಾರ. ರಾಮನ ಅಭ್ಯುದಯ ವಿನಾ ಅನ್ಯವನ್ನು ಬಗೆಯದೆ, ವಿವಾಹಕಾಲದ ರಾಜ್ಯಶುಲ್ಕದ ವಾಗ್ದಾನವನ್ನು ನೆನಪಿಗೆ ತಂದುಕೊಂಡು ಪರಿತಪಿಸುತ್ತಿರುವ ಪತಿಯನ್ನು ವಚನಭ್ರಷ್ಟತ್ವದಿಂದ ಪಾರುಮಾಡಿದ ಮಹಾನುಭಾವೆ ಕೈಕೆ.[10] ಆದರೆ ಮಂಥರೆಯ ದುರ್ಬೋಧನೆಯಿಂದ ಪಾರಾಗಲಾರದೆ, ಅವಳ ಮನಸ್ಸನ್ನೂ ನೋಯಿಸದಂತೆ, ಇತರರಿಗೂ ಹೆಚ್ಚು ಅನ್ಯಾಯವಾಗದಂತೆ ಗಂಟುನಂಟು ಎರಡೂ ಉಳಿಯುವಂತೆ ರಾಮನಿಗೆ ಕೇವಲ ಹದಿನಾಲ್ಕು ದಿನಗಳ ವನವಾಸವನ್ನು ಅಪೇಕ್ಷಿಸಿದ ಧರ್ಮಭೀರು. ಆದರೆ ದುರ್ದೈವದಿಂದ ಬಾಯಿತಪ್ಪಿ ‘ದಿನ’ ‘ವರ್ಷ’ವಾಯಿತೆಂದು ಮಗನ ಮುಂದೆ ಗುರುಜನ ಸಾಕ್ಷಿಯಾಗಿ ತಪ್ಪೊಪ್ಪಿ ಕೊಂಡ ಮಹಾಮಾತೆ. ಶ್ರೀರಾಮನಿಗೂ ಕೈಕೆಯ ನಿರ್ವ್ಯಾಜ ಪ್ರೇಮದಲ್ಲಿ ನಿಷ್ಕಪಟ ಸ್ನೇಹದಲ್ಲಿ ಅನುಮಾನ ಲವಲೇಶವಿಲ್ಲ. ತನ್ನ ಮಗನಿಗಾಗಿ ರಾಜ್ಯವನ್ನು ಕೇಳುವ ಚಿಕ್ಕಮ್ಮನಲ್ಲಿ ಅವನಿಗೆ ತಪ್ಪು ಕಾಣಿಸದು.[11] ಛನ್ನಾಗ್ನಿ ಕಲ್ಪಯಾ’ ಎಂಬ ಗಂಡನ ದೂಷಣೆಗೊಳಗಾದ ಕುಲಘಾತಿನಿಯಲ್ಲ ಇವಳು. ಗಂಡನನ್ನು ಮತ್ತೆ ಮತ್ತೆ ಭರ್ತ್ಸನೆಗೈಯುವ ಕುತ್ಸಿತ ಬುದ್ದಿಯ ಹಠಮಾರಿತನದ ಗಯ್ಯಳಿಯಲ್ಲ. ರಾಮನನ್ನು ಬಾಯಿಬಿಟ್ಟು ಅರಣ್ಯಕ್ಕೆ ಹೋಗೆಂದ ಕಠೋರೆಯೂ ಅಲ್ಲ; ರಾಮ ಸೀತೆಯರಿಗೆ ವಲ್ಕಲವನ್ನೊದಗಿಸಿದ ನೃಶಂಸೆಯೂ ಅಲ್ಲ. ಅಪರಾಧಿನಿಯಲ್ಲದಿದ್ದರೂ ಮಗನ ನಿಂದೆಯ ನಂಜನ್ನು ತುಟಿಪಿಟಕ್ಕೆನ್ನದೆ ನುಂಗಿಕೊಂಡ ವಿಷಾಪಹಾರಿಣಿ. ಸೀತೆಯು ಪಟ್ಟ ಸಂಕಟವನ್ನು ಕೇಳಿ ನೊಂದು ಬೆಂದು ಗೋಳ್ಗರೆದ ಕರುಣಾಮಯಿ. ಕೊನೆಗೆ ಶ್ರೀರಾಮನ ಪಟ್ಟೋತ್ಸವದಲ್ಲಿ ಸಡಗರದಿಂದ ಓಡಾಡಿ ನಲಿದಾಡಿದ ಮಹಾಮಾತೆ. ಅವಳು ಸವತಿಯರಿಗೆ ಅಚ್ಚುಮೆಚ್ಚಾದವಳು, ಗುರುಜನರಿಗೆ ಇಷ್ಟವಾದವಳು, ಪ್ರಜೆಗಳಿಗೆ ಬೇಕಾದವಳು. ಭಾಸನ ಇತರ ಸ್ತ್ರೀಯರಂತೆ ಇವಳೂ ಮಿತಭಾಷಿಣಿ.

ಪಾಪಿಗುದ್ಧಾರವಿಹುದೌ
ಸೃಷ್ಟಿಯ ಮಹದ್‌ವ್ಯೆಹ ರಚನೆಯಲಿ…….

ಮೂಲ ರಾಮಾಯಣದ ಕೈಕೆಯ ಪಾತ್ರ ಸಮಗ್ರವಾಗಿ ವಿಕಾಸಗೊಂಡಿಲ್ಲ. ಅವಳ ಪೂರ್ವವಯಸ್ಸಿನ ಅಪರಿಪಕ್ವ ಜೀವನದ ರೂಪಸ್ವರೂಪಗಳು ರೇಖೆಗೊಂಡಿರುವಂತೆ ಅವಳ ಪರಿಣತ ವಯಸ್ಸಿನ ಉದಾತ್ತ ಜೀವನ ಚಿತ್ರಿತವಾಗಿಲ್ಲ. ಕೇವಲ ಊಹೆಯಿಂದಲೆ ಅವಳ ಜೀವನದ ಪರಿವರ್ತನೆಯನ್ನು ಚಿತ್ರಿಸಿಕೊಳ್ಳಬೇಕಾಗಿದೆ. ಭಾಸಕವಿ ಕೈಕೆಯ ಉದಾತ್ತತೆಯನ್ನು ಮನಗಂಡು ಬಗೆ ತಣಿಯುವಂತೆ ಚಿತ್ರಿಸಿದ್ದರೂ ಅವಳ ಮನಸ್ಸಿನ ವಿಶ್ಲೇಷಣೆಗಾಗಲಿ ಸಾಧನೆಯ ಸೂಕ್ಷ್ಮ ವಿವರಗಳಿಗಾಗಲಿ ಕೈಹಾಕಿಲ್ಲ. ಶ್ರೀರಾಮನ ವಿಪಿನವಾಸಕ್ಕೆ ದಶರಥನ ಮರಣಕ್ಕೆ ಕರ್ಮರೂಪಿಯಾದ ವಿಧಿಶಕ್ತಿ ಕಾರಣ, ನಿಜ. ಆದರೆ ಜೀವಿಗೆ ಇಚ್ಛೆಯ ಸ್ವಾತಂತ್ರ್ಯವೂ ಇದೆಯೆಂಬುದನ್ನು ಮರೆಯಲಾಗದು. ಅದರ ಉದ್ಧಾರ ಅದರ ಕೈಲಿದೆ. ಅದು ಸ್ಥಾಣುವಲ್ಲ. ಪ್ರತಿಕ್ಷಣವೂ ಅದು ಮುಂದುವರಿಯುತ್ತದೆ. ಉದ್ಧಾರಾಕಾಂಕ್ಷೆಯೇ ಜೀವನಕ್ಕೆ ಸ್ಫೂರ್ತಿದಾಯಕ. ಈ ತತ್ತ್ವ ಶ್ರೀರಾಮಾಯಣದರ್ಶನದ ಕೈಕೆಯಲ್ಲಿ ಪ್ರತಿಫಲಿತವಾಗಿದೆ. ಮೂಲರಾಮಾಯಣದ ಮತ್ತು ಭಾಸನ ಕೈಕೆಯರು ಇಲ್ಲಿ ಸಮಾವೇಶಗೊಂಡಿದ್ದರೂ, ಈ ಕೈಕೆ ಅವರಿಂದ ತೀರ ಭಿನ್ನಳು. ಎರಡು ಮೂಲವಸ್ತುಗಳ ಸಂಯೋಗದಿಂದ ಜನಿಸುವ ವಸ್ತು ತದ್ವಿರುದ್ಧವಲ್ಲದಿದ್ದರೂ ತೀರ ಹೊಸದಲ್ಲವೆ?

ದಶರಥನಿಗೆ ಮೂವರು ಪತ್ನಿಯರಿದ್ದರೂ, ‘ಚೆಲ್ವು ಮೈವೆತ್ತಿರ್ದುದೆನೆ ಮೆರೆವ ಕೈಕೆ’ಯಲ್ಲಿ ಅವನಿಗೆ ವಿಶೇಷ ಅನುರಾಗವಿದ್ದರೂ, ಸಂಸಾರದಲ್ಲಿ ಸ್ನೇಹ ತುಂಬಿ ತುಳುಕುತ್ತಿದ್ದಂತೆ ಕಾಣುತ್ತದೆ. ಕೈಕೆ ಶಿಶು ರಾಮನಲ್ಲಿಟ್ಟಿದ್ದ ಪ್ರೇಮದಿಂದ ಇದು ಸೂಚ್ಯವಾಗುತ್ತದೆ. ಒಮ್ಮೆ ಶಿಶು ಗಗನದ ಚಂದ್ರನ ಕಡೆ ಕೈತೋರಿ ಅದು ಬೇಕೆಂದು ಹಠ ಹಿಡಿದು ಗೋಳಾಡುತ್ತದೆ. ಎಷ್ಟು ಅಂಗಲಾಚಿ ಬೇಡಿದರೂ, ಏನುಕೊಟ್ಟರೂ, ಬೇಡವಾಗುತ್ತದೆ. ಕೈಕೆಯೂ ತನ್ನ ಸಾಮರ್ಥ್ಯವನ್ನೆಲ್ಲ ವ್ಯಯಮಾಡಿ ಗೋಳ್ಗರೆದು ಸುಮ್ಮನಿರಿಸಲು ಮಾಡಿದ ಪ್ರಯತ್ನ ಸಾಲದಾಗುತ್ತದೆ. ದಶರಥ ಬರಲು ಕಂಬನಿ ಮಿಡಿದು ನಡೆದುದನ್ನು ನಿವೇದಿಸುತ್ತಾಳೆ. ಚಕ್ರವರ್ತಿಗೂ ಸಾಕೊ ಸಾಗುತ್ತದೆ; ಎಷ್ಟು ಸಂಪತ್ತಿದ್ದರೂ ಮಗನ ಬಯಕೆಯನ್ನು ಈಡೇರಿಸ ಲಾಗಲಿಲ್ಲ. ನೆರೆದ ಜನ ಚಕಿತರಾಗಿ ನೋಡುತ್ತಿದ್ದಂತೆ, ವಿರೂಪದ ವೃದ್ಧೆ ಮಂಥರೆ ಮಡಿಲಿಂದ  ಮುಕುರವನ್ನು ತೆಗೆದು ಕೈಕೆಯ ಕೈಗೆಕೊಟ್ಟು ಕಿವಿಯಲ್ಲಿ ಏನನ್ನೋ ಉಸುರುತ್ತಾಳೆ. ಕೈಕೆ ಕನ್ನಡಿಯನ್ನು ರೋದಿಸುತ್ತಿದ್ದ ರಾಮನ ಮುಂದೆ ಹಿಡಿಯುತ್ತಾಳೆ. ಕನ್ನಡಿಯಲ್ಲಿ ಚಂದ್ರನ ಪ್ರತಿಬಿಂಬವನ್ನು ಕಂಡ ರಾಮ ಚಂದ್ರನೆ ಕೈಗೆ ಸಿಕ್ಕಿದಂತೆ ಕುಣಿಕುಣಿದು ನಲಿನಲಿದು, ಮಂಥರೆ ಕೈಕೆಯರೆ ತನ್ನ ಮುಂದಿನ ಅಭ್ಯುದಯಕ್ಕೆ ಕಾರಣರೆಂಬ ಕಟುಸತ್ಯವನ್ನು ಪ್ರಕಟಪಡಿಸುತ್ತಾನೆ.

ಪ್ರಬುದ್ಧೆಯೂ ಅಮರಸುಂದರಿಯೂ ದಶರಥನ ಪ್ರಾಣಪ್ರಿಯೆಯೂ ಆದ ಕೈಕೆ ವಿರೂಪೆ ಕುಬ್ಜೆಯ ಕೈತವಕ್ಕೆ ಪಕ್ಕಾಗಿ ಶ್ರೀರಾಮನನ್ನು ಕಾಡಿಗಟ್ಟಿದ ಅಪ್ರಿಯವಾದ ಸಂಗತಿ ಮೂಲ ರಾಮಾಯಣದಲ್ಲಿ ಸಕಾರಣವಾಗಿ ಕಾಣುವುದಿಲ್ಲ. ಅರಮನೆಯಲ್ಲಿ ಎಷ್ಟೆ ಛಿದ್ರವಿರಲಿ, ಸವತಿ ಸವತಿಯರ ಸಂಬಂಧ ಎಷ್ಟೆ ಕಲುಷಿತವಾಗಿರಲಿ ಕೈಕೆ ದಾಸಿಯೊಬ್ಬಳ ಕೃತ್ರಿಮಕ್ಕೆ ಮಾರುವೋದುದು ಸೋಜಿಗದ ಸಂಗತಿ. ಆದರೆ ಶ್ರೀ ರಾಮಾಯಣದರ್ಶನದಲ್ಲಿ ನಿರೂಪಣೆ ಗೊಂಡಿರುವ ಕೈಕೆ ಮಂಥರೆಯರ ಪೂರ್ವ ಸಂಬಂಧದ ಕಥೆಯನ್ನು ನೆನೆದಾಗ ಕೈಕೆಯ ಬುದ್ದಿಭ್ರಮಣೆ ಸೋಜಿಗವಾಗುವುದಿಲ್ಲ. ಮಂಥರೆಯ ಜೀವನ ಪ್ರವಾಹದ ತಲಕಾವೇರಿಯನ್ನು ನೋಡಿದವರಿಗೆ, ಕಠೋರತೆ ವಿನಾ ಒಲ್ಮೆಯ ಸವಿಯನ್ನೇ ಮಾನವ ಸ್ನೇಹವನ್ನೇ ಕಾಣದೆ ‘ಮಿಗದ ತೆರದಿ ಮಿದುಳಿಲ್ಲದೆಯೆ’ ಹೇಸಿಕೆಗೆ ಹೆಸರಾಗಿ ಬೆಳೆದ ಆ ದುರದೃಷ್ಟೆಯ ಬಾಳನ್ನು ನೆನೆದವರಿಗೆ ಸಹಾನುಭೂತಿ ಮೂಡದಿರದು. ಅವಳನ್ನು ಸಾವಿನಿಂದ ತಪ್ಪಿಸಿದ ಕೇಕಯರಾಜನೆ ಕಹಿ ಬಾಳಿನ ನೋವಿನಿಂದಲೂ ತಪ್ಪಿಸಬೇಕಾಗುತ್ತದೆ. ಅವಳ ‘ಭೀಷಣೈಕಾಂತತೆಗೆ ಬಗೆಗರಗಿ’ ಶಿಶು ಕೈಕೆಯನ್ನು ಆಡಿಸುವ ಕೆಲಸಕ್ಕೆ ಅವಳನ್ನೇ ನೇಮಿಸುತ್ತಾನೆ. ‘ಮಂಥರೆಯ…. ಶುಷ್ಕತೆಯ ಶೂನ್ಯತೆಯೊಳೊಲ್ಮೆ ಸಂಚರ’ವಾಗುತ್ತದೆ. ‘ಶಿಶುಸನ್ನಿಧಿಯ ಪ್ರೇಮ ಸೌಂದರ್ಯ ಮಹಿಮೆಯಲಿ ಬದುಕು ಸಾರ್ಥಕ ಮಧುರ’ವಾಗುತ್ತದೆ. ತನ್ನ ಕುರೂಪತೆಯನ್ನು ಅವಳ ಸುರೂಪತೆಯಲ್ಲಿ ಮರೆಯುತ್ತಾಳೆ; ತನ್ನ ನ್ಯೂನತೆಯನ್ನು ಅವಳ ಪೂರ್ಣತೆಯಲ್ಲಿ ಅದ್ದುತ್ತಾಳೆ; ಅವಳಲ್ಲಿ ‘ಸಾಯುಜ್ಯವೊಂದಿ’ ಅಭಿನ್ನಳಾಗಿ ತನ್ನ ಬಾಳಿನ ಕಹಿಯನ್ನೆಲ್ಲ ಮರೆಯುತ್ತಾಳೆ. ಕೈಕೆ ದಶರಥರ ಮದುವೆಯಾದಾಗ ಅವಳ ಆಶೆಗೆ ರೆಕ್ಕೆ ಮೂಡುತ್ತದೆ; ಆದರೆ ಸಾಕೇತನಗರಿಯನ್ನು ಹೊಕ್ಕ ಮೊದಲಲ್ಲಿಯೆ ಅಲ್ಲಿಯವರ ಕಟುತಿರಸ್ಕಾರದ ಬೆಂಕಿಯಲ್ಲಿ ರೆಕ್ಕೆ ಸೀದು ಮೂಲೆಪಾಲಾ ಗುತ್ತದೆ. ಭರತನ ಜನನದಿಂದ ಅವಳಿಗೆ ‘ಮೂರನೆಯ ಕಣ್ ಮೂಡಿದಂತಾ’ಗುತ್ತದೆ. ‘ಹಡೆದ ತಾಯಿಯೆ ನಾಣ್ಚುವೋಲಂತೆ’ ಅವನನ್ನು ಸಾಕುತ್ತಾಳೆ. ‘ದಶರಥಂ ಕೈಕೆ ಭರತರಿಗಾಗಿ; ಕೈಕೆ ಭರತರಿಗಾಗಿ ಕೋಸಲಮಯೋಧ್ಯೆಗಳ್’ ಎಂದು ಕನಸು ಕಾಣುತ್ತ ನೂಕುತ್ತಾಳೆ.

ಕೈಕೆ ಮಂಥರೆಯರ ಈ ಜೀವನದ ಹಿನ್ನೆಲೆಯಲ್ಲಿ, ಅವರ ಅಲೌಕಿಕ ಪ್ರೇಮದ ಚಂದ್ರಿಕೆಯಲ್ಲಿ ಮುಂಬರುವ ಘಟನೆಗಳನ್ನು ಪರಾಮರ್ಶಿಸಬೇಕಾಗುತ್ತದೆ. ರಾಮ ಪಟ್ಟಾಭಿಷೇಕದ ಕಹಿನನ್ನಿ ಕಿವಿದೆರೆಯನ್ನು ತಾಕಿದಾಗ ಅವಳಿಗಾದ ದುಃಖ ಹೇಳತೀರದು; ಅದು ಬರಿಯ ಸೋಗಲ್ಲ; ಅವಳ ದುಃಖಕ್ಕೆ ಈರ್ಷ್ಯೆಯಲ್ಲ ಮೂಲ, ಮಮತೆ[12]; ಕ್ರೋಧವಲ್ಲ ಕಾರಣ, ಪ್ರೇಮ; ಸ್ವಾರ್ಥವಲ್ಲ ಸ್ಫೂರ್ತಿದಾಯಿ, ನಿಸ್ವಾರ್ಥ; ವೈರವಲ್ಲ ಕಾರಣ, ಸ್ನೇಹ. ಮಂಥರೆಯ ಬಗೆಗೆ ಏನು ನಿಜವೊ ಕೈಕೆಯ ಬಗೆಗೂ ಅದೇ ನಿಜ. ಹೃದಯದ ನಿಜತ್ವ ಜಾಗ್ರದವಸ್ಥೆಗಿಂತ ಸ್ವಪ್ನಸ್ಥಿತಿಯಲ್ಲಿ ಸುಪ್ರಕಟವಾಗುತ್ತದೆ. ಬುದ್ದಿ ಸುಪ್ತಸ್ಥಿತಿಯಲ್ಲಿದ್ದಾಗ ಅದು ಸ್ವಯಂಪ್ರಚೋದಿತವಾಗಿ ಅಪ್ರಯತ್ನವಾಗಿ ಗೋಚರವಾಗತಕ್ಕದ್ದು. ಮಂಥರೆಯ ಗೋಳು ನಿದ್ದೆಯಿಂದ ಬಡಿದೆಬ್ಬಿಸಿ, ಶ್ರೀರಾಮ ಪಟ್ಟಾಭಿಷೇಕ ಪ್ರಯತ್ನವನ್ನು ವಂಚಕರ ಸಂಚೆಂದು[13] ಸಾರಿದೊಡನೆಯೆ ಕೈಕೆಯ ಮುಖ ಅರಳುತ್ತದೆ; “ಕೊರಳ ಸರಮಂ ತೆಗೆದು ಮಂಥರೆಗೆ ನೀಡಿ” ನುಡಿಯುತ್ತಾಳೆ :

ನಿನಗಿದೊ ಕೊಡುಗೆ, ಶುಭದ ವಾರ್ತೆಯಂ ತಂದುದಕೆ
ರಾಮನೇಂ? ಭರತನೇಂ? ಮಕ್ಕಳಿರ್ವರುಮೆನ್ನವರ್;

ಕೈಕೆಯ ನಿಜ ಸ್ವರೂಪ ವ್ಯಕ್ತವಾಗುವುದು ಮುಂದಲ್ಲ, ಇಲ್ಲಿ. ಯಾರ ಶ್ರೇಯಸ್ಸಿಗಾಗಿ ತನ್ನ ಬಾಳನ್ನೆಲ್ಲ ಬೇಳಿದ್ದಳೊ ಅವರ ಕ್ಷೇಮಕ್ಕೆ ಧಕ್ಕೆಯುಂಟಾದಾಗ ಮಂಥರೆಗಾದ ಎದೆಗುದಿಯನ್ನು ಮರೆಯಲಾದೀತೆ? ‘ಜಗವನೊಂದತಿ ವಿರಾಣ್ಮನಂ’ನೆಯ್ದಳುತ್ತಿರುವುದೂ, ‘ಆ ವಿಧಿಯ ಹಸ್ತದಲ್ಲಿ ಮಂಥರೆ ಸೀತೆ ರಾಮರಾವಣರೆಲ್ಲರುಂ ಸೂತ್ರ ಗೊಂಬೆ’ಗಳಾಗಿ ರುವುದೂ ಸತ್ಯ; ಇಂದ್ರಿಯಾತೀತವಾದ ಪರೋಕ್ಷ ಸತ್ಯ! ಅದಲ್ಲದೆ ಅತ್ಯಂತ ಕಟುವೂ ಪ್ರತ್ಯಕ್ಷವೂ ಆದ ಮತ್ತೊಂದು ಸತ್ಯವೂ ಇದೆ ಅಥವಾ ಪ್ರತ್ಯಕ್ಷ ಪರೋಕ್ಷ ಎರಡು ಒಂದೇ ಸತ್ಯದ ಎರಡು ತುದಿ ಎಂದಾದರೂ ಕರೆಯಬಹುದು. ಪ್ರೇಮ ಭೈರವಿ ಮಂಥರೆಯ ಎದೆಗುದಿ ಸತ್ಯಕ್ಕಿಂತಲೂ ಸತ್ಯ. ಆದರೆ ಒಬ್ಬನಿಗೆ ಮಾರಕವಾದುದು ಮತ್ತೊಬ್ಬನಿಗೆ ಸಂಜೀವನ ವಾಗುತ್ತದೆ; ಒಬ್ಬನಿಗೆ ಸಿಹಿಯಾದುದು ಮತ್ತೊಬ್ಬನಿಗೆ ಕಹಿಯಾಗುತ್ತದೆ; ಒಬ್ಬನ ನೋವು ಮತ್ತೊಬ್ಬನಿಗೆ ನಲಿವು; ಒಬ್ಬನ ಸೋಲು ಮತ್ತೊಬ್ಬನ ಗೆಲುವು. ಈ ದ್ವಂದ್ವಗಳ ಜಟಿಲ ಜಾಲದಲ್ಲಿ ಸಿಕ್ಕ ಮಾನವನ ಬುದ್ದಿ ತತ್ತರಿಸುತ್ತದೆ. ರಾಮನ ಪಕ್ಷಕ್ಕೆ ಯಾವುದು ನ್ಯಾಯವೆಂದು ತೋರುತ್ತದೆಯೊ ಅದು ಭರತನ ಪಕ್ಷಕ್ಕೆ ಅನ್ಯಾಯವೆಂದು ತೋರಿದುದು ಅಸಹಜವೇನಲ್ಲ! ಭರತನ ಮೇಲಣ ಮಮತೆಯಿಂದ ತನ್ನೆಲ್ಲ ಬುದ್ದಿಶಕ್ತಿಯನ್ನೂ ವಾದ ಸಾಮರ್ಥ್ಯವನ್ನೂ ಸೂರೆ ಗೈಯುತ್ತಾಳೆ ಮಂಥರೆ. “ರಾಮವಿದ್ವೇಷದಿಂದಲ್ತು, ರಾಮಂ ಬಾಳ್ಗೆ! ಪೇಳ್ದೆನಿನಿತೆಲ್ಲಮಂ ನಿನಗೆ” ಎಂಬ ಅವಳ ಮಾತಿನಲ್ಲಿ ಆಂಟೋನಿಯ ವಾದ ಚತುರತೆಯ ಕಾಪಟ್ಯವನ್ನು ಊಹಿಸುವುದು ಸರಿಯಲ್ಲ. ಅವಳ ಪ್ರತಿಯೊಂದು ಮಾತಿಗೂ ನಿಷ್ಕಪಟ ಪ್ರೇಮವೇ ಸ್ಫೂರ್ತಿದಾಯಿ.[14]

ಮಂಥರೆ-ಕೈಕೆಯರು ಅಭಿನ್ನರು; ರೂಪ ಭಿನ್ನವಾದರೂ ಸ್ವರೂಪ ಅಭಿನ್ನ; ಆಕಾರ ಪ್ರತ್ಯೇಕವಾದರೂ, ಆತ್ಮ ಅಪ್ರತ್ಯೇಕ. ಆದುದರಿಂದಲೆ ಮಂಥರೆಯ ಎದೆಯಲ್ಲಾದ ಕಂಪನ ಕೈಕೆಯ ಎದೆಯನ್ನೂ ಕಂಪಿಸುತ್ತದೆ; ಒಂದರ ಅನುಭೂತಿ ಮತ್ತೊಂದರ ಅನುಭೂತಿಯಾಗು ತ್ತದೆ; ಒಬ್ಬಳ ಬಯಕೆ ಮತ್ತೊಬ್ಬಳ ಬಯಕೆಯಾಗುತ್ತದೆ. ಕೈಕೆ ಮಂಥರೆಯ ಮಾತುಗಳನ್ನೂ ಅವನ ಕನಸಿನ ವರ್ಣನೆಯನ್ನೂ ಮೌನವಾಗಿ ಆಲಿಸುತ್ತಾಳೆ.

ಕೇಳುತ್ತೆ ಕೆಲವೊತ್ತು ಮೌನಮಿರ್ದಳ್ ಕೈಕೆ,
ಕೆನ್ನೆಗೈಯಾಗಿ, ಕಂಬನಿಯ ಕಣ್ಮುಚ್ಚದೆಯೆ,
ಹಾಲ್ಗಲ್ಲ ಗೋಡೆಯನೆ ನೋಡಿ, ಮೂಡಿತು ಮನಕೆ
ಮಾವನ ಮನೆಯ ದೂರದೊಳಿರ್ದ ತನುಜನ ಮೂರ್ತಿ.
ನೆನೆದು ಮೆಲುಕಾಡಿದಳ್, ನೆರಕೆ ಗರಗಸವಾಗೆ,
ಮಂಥರೆಯ ಮಾತೆಲ್ಲಮಂ, ಹೃದಯ ಮುರಿದಂತಾಯ್ತು.
ದುಃಖಮಿರ್ಮಡಿಸಿದುದು, ಕೊರಳು ಗದ್ಗದವಾಗಿ

ಮಾತು ಕಟ್ಟುತ್ತದೆ. ಮತ್ತೆ ಮಂಥರೆ ಮಾತು ಮುಂದುವರಿಸಿ, ಕೈಕೆಯನ್ನು ಅಪ್ಪಿಕೊಳ್ಳುತ್ತಾಳೆ. ಆ ಅಪ್ಪುಗೆಯಲ್ಲಿ ಪ್ರೇಮವೆ ಮುಕ್ಕುಳಿಸುತ್ತದೆ. ಗೂನಿಯ ವಕ್ರಗಾತ್ರವನ್ನು ಆ ಚೆಲುವೆಯೂ ತಬ್ಬಿಕೊಳ್ಳುತ್ತಾಳೆ.

….. ಕಂಗೆಟ್ಟೆನಗೆ ದಾರಿ ತೋರ್ದೆಯೌ,
ಓ ನನ್ನ ಭಾಗ್ಯದೇವತೆ, ಮರಳಿ ಹಡೆದೆಯೌ,
ನೀನೆನ್ನ ತಾಯಿ! ನೀಂ ತೊರೆಯಲಿನ್ನಾರೆ ಗತಿ
ಪರದೇಶಿಯೆನಗೆ? ಕಣ್ಣಿರ್ದುಮಾನಿನ್ನೆಗಂ
ಕುರುಡಿಯಾಗಿರ್ದೇನೌ, ನೋಡಿತ್ತ ನೋಡೆನ್ನಃ
ಇಂದೆನಿತು ಚಾರುರೂಪಿಣಿಯಾಗಿ ತೋರುತಿಹೆ
ನೀನೆನಗೆ…..

ಎನ್ನುತ್ತ ಆ ಕುರೂಪತಾಮುದ್ರೆಯನ್ನು ಸರ್ವಸೌಂದರ್ಯ ನಿಧಿ ದಶರಥೇಂದ್ರನ ರಾಣಿ ಮುದ್ದಾಡುತ್ತಾಳೆ. ಭರತಮಾತೆ ತನ್ನನ್ನು ತಾಯಿಯಂತೆ ಚಿಕ್ಕಂದಿನಿಂದ ಸಾಕಿ ಸಲಹಿದ ಮಂಥರೆಯ ಪ್ರಚೋದನೆಗೆ ಬಲಿಯಾದುದೇನು ಸೋಜಿಗವಲ್ಲ.

ಭರತನ ಮೇಲಣ ಕೈಕೆಯ ಪ್ರೇಮ ದಶರಥನ ಮೇಲೆ ಹಠವಾಗಿ ಮಾರ್ಪಡುತ್ತದೆ. ವಿವಾಹ ಕಾಲದ ವಾಗ್ದಾನದ ನೆನಪು ಅದಕ್ಕೆ ಪೋಷಕವಾಗುತ್ತದೆ. ಕೋಪಾಗಾರವನ್ನು ಪ್ರವೇಶಿಸಿ, ಒಡವೆ ಬಿಚ್ಚೆಸೆದು ಮುಡಿಗೆದರಿ “ಕರ್ಮಠ ರಜೋಗುಣದ ಹಠ ಯೋಗಿ ಯೋಲಂತೆ”ದಿಂಡುರುಳುತ್ತಾಳೆ. ದಶರಥನೂ ಕೈಕೆಗೆ ಹಿಂದೆ ಕೊಟ್ಟ ಮಾತನ್ನು ಮರೆತಿಲ್ಲ. ರಾಮನಿಗೆ ಯುವರಾಜ್ಯಾಭಿಷೇಕ ಮಾಡುವ ಮಾತೆತ್ತಿದಾಗ ಅದರ ಚಿಂತೆ. ಈ ಧರ್ಮ ಸಂಕಟದಲ್ಲಿಯೇ ಕೊರಗುತ್ತ, ಆದರೂ “ಮೀನಾಕ್ಷಿಯಂ ಶೃಂಗಾರ ಜಾಲದೊಳ್ ಪಿಡಿವ ಬುದ್ದಿಯ ರಸದ ಹರಿಗೋಲಿನೊಳ್ ತೇಲಿ” ಬರುತ್ತಾನೆ. ಅವನ ಮನದ ಶಂಕೆಯೆ ಕೈಕೆಯ ಭೀಕರ ರೂಪವಾಗಿ ವಿಕಟಾಟ್ಟಹಾಸದಿಂದ ತನ್ನನ್ನೆ ಮೂದಲಿಸುತ್ತ ನಿಂತಿದೆ. ತನ್ನ ಪ್ರೇಮ ಪಕ್ಷಿಯನ್ನು ಅಪ್ಪಿ, ಮುಂಡಾಡಿ, ಮುದ್ದಿಸಿ, ದುಃಖಕಾರಣವನ್ನು ಕೇಳುತ್ತಾನೆ :

ನ್ಯಾಯಮನ್ಯಾಯ ಧರ್ಮಾಧರ್ಮಮೊಂದುಮಂ, ಕೇಳ್
ಪರಿಗಣಿಸದೆಯೆ ನಡೆವೆ ನಿನ್ನಿಷ್ಟಮಂ, ದೇವಿ,
ಬಗೆಯನುಸಿರೆನಗೆ……

ಸೋದ್ವಿಗ್ನನಾಗಿ, ಪ್ರಾಣವನ್ನು ಪಣವೊಡ್ಡಿ, ಕೇಳುತ್ತಾನೆ. ಈ ಮಾತುಗಳನ್ನು ವಿಧಿಯೆ ನುಡಿಸಿದಂತಿದೆ. “ರುಜೆಯಲ್ತು, ಜೀವೇಶ, ಏಕೆನಗೆ, ನೀನೆಯಿರೆ, ಬೇರೆ ಐಸಿರಿ, ನೃಪತಿ?” ಎಂದು ಪೀಠಿಕೆ ಹಾಕಿಕೊಂಡು ಆಣೆಯಿಟ್ಟುಕೊಡೆಂದು ಕೈಕೆ ಕೇಳುತ್ತಾಳೆ. ಮುಂದರಿಯದ ದೊರೆ ರಾಮನ ಆಣೆಯಿಟ್ಟು,

………ಪೇಳ್ ಬಯಕೆಯಂ
ನಿನ್ನಾಶೆ ಸೇರ್ದುದೆಂದರಿ ಕಲ್ಪತರುಮೂಲಮಂ

ಎಂದು ನುಡಿಯುತ್ತಾನೆ. ಈ ಮಾತನ್ನು ಪ್ರೇರಿಸಿದ ವಿಧಿಯೆ ಕೈಕೆಯ ಬಾಯಲ್ಲಿ

ಧನ್ಯೆ ದಲ್, ಪ್ರಾಣೇಶ, ನಾನಿಂದು! ಕೇಳ್ದು ನಿನ್ನೀ
ಲೋಕ ಕಲ್ಯಾಣಕರ ವಚನಮಂ ನಲಿಯುತಿಹರಾ
ನಿರ್ಜರರ್ ಪೋದ ಸಗ್ಗಂ ಮರಳಿ ಕೈಸಾರ್ದವೋಲ್!

ಎಂದು ನುಡಿಸುತ್ತದೆ. ಇದು ನಿಜ. ವಿಧಿಯ ವಜ್ರೇಚ್ಛೆ ನಡೆಯಲೇ ಬೇಕಲ್ಲವೇ? ಒಡನೆಯೆ  ಕೈಕೆಯ ಸುಂದರವದನದಲ್ಲಿ ಮಂಥರೆಯ ವಿಕೃತರೂಪ ಸಂಚಾರವಾದಂತೆ ಕಂಡಿತು ದಶರಥನ ದೃಷ್ಟಿಗೆ. ಕೂಡಲೆ ಮೈಮರೆತು, ಕೈಕೆಯ ಶಿಶಿರೋಪಚಾರದಿಂದ ತತ್ತರಿಸುತೆದ್ದು, ಕೋಪಾಗಾರದಿಂದ ಹೊರಗೆ ಬಂದು, ನಿಲ್ಲಲಾರದೆ ಕುಸಿದು ಕುಳಿತು, “ರಾಮನನ್ನಲ್ತು, ಕೇಳ್, ಕೈಕೆ ನೀನಡವಿಗಟ್ಟುತಿಹೆ ನಿನ್ನ ಮಾಂಗಲ್ಯಮಂ” ಎಂದು ಬಗೆಬಗೆಯಾಗಿ ಸನ್ನಿಹಿಡಿದವ ನಂತೆ ಕೂಗಾಡುತ್ತಾನೆ. ಪತಿಯ ದುಃಸ್ಥಿತಿಯನ್ನು ನೋಡಿ ಕೈಕೆ ಎದೆಗರಗುತ್ತಾಳೆ. ಏಕೆ ಹಾಗೆ ಕೇಳಿದೆನೆಂದು ಬೆದರುತ್ತಾಳೆ. “ನಿನ್ನ ವಾಗ್ದಾನ ಬೇಡ, ನಿನಗೆ ನೋವುಂಟುಮಾಡಿ ನಾನೂ ನನ್ನ ಮಗನೂ ಸುಖವಾಗಿರುತ್ತೇವೆಯೆ? ಕೇಳೆಂದುದರಿಂದ ಕೇಳಿದೆ” ಎಂದು ಹೇಳುವಾಗ ಕೈಕೆಯ ಸಾತ್ತ್ವಿಕ ಪ್ರವೃತ್ತಿ ಎಚ್ಚರಗೊಳ್ಳುತ್ತದೆ.

ತನ್ನನ್ನು ವಚನಭ್ರಷ್ಟನನ್ನಾಗಿ ಮಾಡಿ ಪಾಪ ಕೂಪಕ್ಕೆ ನೂಕಲು ಅವಳು ಪ್ರಯತ್ನಿಸುತ್ತಿರುವು ದಾಗಿ ರಾಮಜನಕ ಯೋಚಿಸಿ ಮೂದಲಿಸುತ್ತಾನೆ. ಆ ಮೂದಲಿಕೆ ಕೈಕೆಗೆ ಸಹಿಸದಾಗುತ್ತದೆ. ಸಹನೆಮೀರಿ ಒಂದೆರಡು ಬಿರುನುಡಿ ಆಡುತ್ತಾಳೆ. “ತಪ್ಪು ನಿನ್ನದಾಗಿರುವಾಗ ನನ್ನನ್ನೇಕೆ ವನ್ಯನಂತೆ ಬಯ್ಯುತ್ತೀಯೆ, ಭರತನಿಲ್ಲದ ವೇಳೆ ಕಿತವರ ಉಪದೇಶದಿಂದ ಪಟ್ಟಮಹಿಷಿಯ ಮಗನಿಗೆ ಗುಟ್ಟಾಗಿ ಪಟ್ಟವನ್ನು ಕಟ್ಟುವ ಕುಹಕ ವಿದ್ಯಾಪ್ರವೀಣ ನೀನೆ” ಎಂದು ಮುಂತಾಗಿ ಮೂದಲಿಸುತ್ತಾಳೆ.[15] ಇದೊಂದು ಸಮಯದಲ್ಲಲ್ಲದೆ ಕೈಕೆ ಇಷ್ಟು ಕೀಳಾಗಿ ವರ್ತಿಸುವ ಮತ್ತೊಂದು ಸನ್ನಿವೇಶ ಶ್ರೀರಾಮಾಯಣದರ್ಶನದಲ್ಲಿ ಎಲ್ಲೂ ಇಲ್ಲ. ಕ್ಷಣಕಾಲ ಮಾತ್ರ ಮಂಕು ಕವಿದಾಗ, ಕೈಕೆಗೆ ಅರಿವಿಲ್ಲದೆಯೆ ಮುಂದಿನ ಘಟನೆಗಳು ವಿದ್ಯುದ್ವೇಗದಲ್ಲಿ ಜರುಗಿಹೋಗುತ್ತವೆ. ದೊರೆಯ ದುಃಸ್ಥಿತಿಯ ಸುದ್ದಿಯನ್ನು ಮಾತೃ ಸನ್ನಿಧಿಯ ರಾಮನಿಗೆ ಮುಟ್ಟಿಸಿದವಳೂ ಕುಬ್ಜೆಯೆ, ದುಃಸ್ಥಿತಿಯ ಕಾರಣವನ್ನು ರಾಮನಿಗೆ ವಿವರಿಸಿದವಳೂ ಆ ಕುರೂಪಿಯೆ; ಹೆತ್ತವನು ಮಗನಿಗೆ ಅರಣ್ಯವಾಸವನ್ನೆಂದಾದರೂ ವಿಧಿಸುವುದುಂಟೆ ಎಂದು ರಾಮ ಅರಣ್ಯವಾಸೋದ್ಯುಕ್ತನಾಗುವಂತೆ ಮಾರ್ಮಿಕವಾಗಿ ಪ್ರಚೋದಿಸಿದವಳೂ ಆ ಪ್ರೇಮ ಭೈರವಿಯೆ! ರಾಮನ ಹಿಂದೆ ಅರಣ್ಯಕ್ಕೆ ಸೈನ್ಯ ಪರಿವಾರ ಭೋಗ ಸಾಮಗ್ರಿಗಳನ್ನು ಕಳುಹಿಸುವೆ ನೆಂದು ದಶರಥ ಆಜ್ಞೆ ಮಾಡಿದಾಗ ಕೈಕೆಯ ಮುಖವನ್ನು ಇಂಗಿತದಿಂದ ನೋಡಿದವಳು ಆ ತಿರಸ್ಕಾರ್ಯೆಯೆ! ರಾಮ ನಾರುಮಡಿಯನ್ನು ಕೇಳಿದೊಡನೆಯೆ ತಂದು ಮುಂದಿಟ್ಟವಳೂ ಆ ಗೂನಿಯೇ! ಕೈಕೆ ಇದನ್ನೆಲ್ಲ ಬೆಪ್ಪಳಂತೆ ನೋಡುತ್ತ ನಿಂತಿರುತ್ತಾಳೆ.

ಕೈಕೆಯ ಲೌಕಿಕಾಪರಾಧಕ್ಕೆ ಅವಳು ಅನುಭವಿಸಿದ ಶಿಕ್ಷೆ ತಾರತಮ್ಯವಿಲ್ಲದ್ದು. ದಶರಥ ಇನ್ನೂ ಜೀವಂತವಾಗಿದ್ದಾಗಲೆ ಅವಳು ಅನುಭವಿಸಿದ ಮಾನಸಿಕ ಯಾತನೆ ಹೃದಯ ವಿದ್ರಾವಕಾರಿಯಾದುದು. ಅರಣ್ಯಮುಖಿಯಾದ ಶ್ರೀರಾಮನನ್ನೇ ಕಾಣುವತನಕ ನೋಡುತ್ತಿದ್ದು ಹಿಂದಿರುಗುವಾಗ ನಡುಬೀದಿಯಲ್ಲಿ ಕೈಕೆ ಕಣ್ಣಿಗೆ ಬೀಳಲು

……….ಬಳಿ ಸಾರದಿರ್, ಪಾಪಿ !
ಕಣ್ಬೊಲದೊಳಿರದೆ ಸಾಯ್ ! ತೊಲಗು ! ನೀನಿನ್ನೆನಗೆ
ಸತಿಯಲ್ಲ. ನಿನಗಾಂ ಪತಿಯುಮಲ್ಲ. ತರ್ಪಣಂ
ಕೊಟ್ಟೆನಿದೊ ನೀರೆಳ್ಳು ಕೊಳ್ !

ಎಂದು ನೆಲದ ದೂಳನ್ನು ಗೋರಿ ಅವಳ ಮೇಲೆಸೆಯುತ್ತಾನೆ. ನಟ್ಟಿರುಳು ಕೈಕೆಯನ್ನು ಹತ್ತಿರಕ್ಕೆ ಕರೆದು ಹರಿವಾಣವನ್ನು ಅವಳ ಮೇಲೆಸೆಯುತ್ತಾನೆ. ತನ್ನ ಕಣ್ಣನ್ನು ತಾನೆ ಕಿತ್ತುಕೊಂಡು, ಕೈಕೆಯನ್ನು ಕರೆದು ತೋರಿಸಿ “ದೇಶಕೋಸಲವಿದೆಕೊ ಕರತಲಾಮಲಕಮೆನೆ ಕಣ್ಗೊಳಿಸುತಿದೆ” ಎಂದು ಕೋಪೋನ್ಮತ್ತನಾಗಿ ಬಯ್ಯುವ, ಕೈಕೆ ಅದೆಲ್ಲವನ್ನು ಮೂಕಳಂತೆ ಕೇಳುವ ಸನ್ನಿವೇಶ ತುಂಬ ಭಯಂಕರವಾದುದು.

ಇನ್ನು ಮುಂದೆ ಮೂಲ ರಾಮಾಯಣದಲ್ಲಾಗಲಿ ಪ್ರತಿಮಾನಾಟಕದಲ್ಲಿಯಾಗಲಿ ಕಾಣದ ಕೈಕೆಯ ಅದ್ಭುತ ಚಿತ್ರವನ್ನು ಎದುರುಗೊಳ್ಳುತ್ತೇವೆ. ಇಲ್ಲಿಯ ಕೈಕೆಯ ಹಠ ಕೇವಲ ಕ್ಷಣಿಕವಾದುದು; ಸಾತ್ತ್ವಿಕ ಪ್ರೇಮವೆ ಅದಕ್ಕೆ ಮೂಲ. ರಾಹು ಮುಕ್ತವಾದ ಚಂದ್ರನಂತೆ ಹೆಜ್ಜೆ ಹೆಜ್ಜೆಗೂ ತೇಜೋನ್ವಿತಳಾಗಿ ಬೆಳಗುವುದನ್ನು ನೋಡುತ್ತೇವೆ. ಅವಳ ಸಂಕಟ ನಮ್ಮದಾಗುತ್ತದೆ; ಅವಳ ಪಶ್ಚಾತ್ತಾಪ ನಮ್ಮದಾಗುತ್ತದೆ ಅವಳ ಕಣ್ಣೀರು ನಮ್ಮದಾಗುತ್ತದೆ; ಅವಳ ಅವಮಾನ ನಮ್ಮದಾಗುತ್ತದೆ. ಇಷ್ಟು ಅನುಕಂಪೆಗೆ ಕರುಣೆಗೆ ಸಹಾನುಭೂತಿಗೆ ಪಾತ್ರವಾದ ಮತ್ತೊಂದು ವ್ಯಕ್ತಿ ಶ್ರೀರಾಮಾಯಣದರ್ಶನದಲ್ಲಿ ಸಿಗುವುದಿಲ್ಲ! ಕೌಸಲ್ಯೆಗೆ ಭರತನ ಪ್ರೇಮರಕ್ಷೆಯಿದೆ; ಅಶೋಕವನದ ಸೀತೆಗೆ ರಾಮನ ತಪೋರಕ್ಷೆಯಿದೆ; ಊರ್ಮಿಳೆಗೆ ಸೀತಾಲಕ್ಷ್ಮಣರ ಆಶೀರ್ವಾದ ರಕ್ಷೆಯಿದೆ! ಕೈಕೆಗೊ?

ಮಾವನ ಮನೆಯಿಂದ ಭರತ ಹಿಂದಿರುಗಿದಾಗ ಕೈಕೆ ಎಂತಿದ್ದಳು ?

……..ಪಾಳ್ಮನೆಯ ತೆರೆದಿನೆಸೆದಳ್ ಮಾತೆ,
ನಿರ್ಜನೆ, ನಿರಾಭರಣೆ, ನಿಶ್ಚಲೆ ರವವಿಹೀನೆ.

ಕಾಲ ಮೇಲುರುಳಿದ ಮಗನ ಉಬ್ಬೆಗವನ್ನು ಕಂಡು ಅಳುತ್ತಳುತ್ತ ಮುದ್ದಾಡಿ ಮುಂಡಾಡುತ್ತ, ಹುಚ್ಚಿಯಂತೆ ಬಿಟ್ಟಾಲಿಯಾಗಿ ನೋಡುತ್ತ ಗದ್ಗದಕಂಠೆಯಾಗಿ,

ಮನ್ನಿಸೆನ್ನನ್ ಮಗನೆ ಪಾಪಿಯೆನ್!…..

ಎಂದು ತನ್ನನ್ನೆ ತಾನು ನಿಂದಿಸಿಕೊಳ್ಳುತ್ತಾಳೆ. “ಹೆತ್ತವಳೆಂದು ಈ ನೀಚಳನ್ನು ಹೊಗಳ ಬೇಡ. ಬೇಡಿ ಕೇಡುತಂದೆ, ವರ ಶಾಪವಾಯಿತು”[16] ಎಂದು ಅಳುತ್ತಳುತ್ತ

ನಿನ್ನ ಬಾಳಿನ ಪಾಲ್ಗೆ ವಿಷವಾದೆ ! ರವಿಕುಲದ
ಚಂದನಶ್ರೀವನಕೆ ದಾವಾಗ್ನಿಯಾದೆ ! ಹಾ,
ಲೋಕನಿಂದೆಯ ತೋರುಬೆರಳಿಗೆ, ಕರುಣಿ ವತ್ಸ,
ಹೇಸುಗುರಿಯಾದೆ !

ಎಂದು ಪರಿತಪಿಸುತ್ತಾಳೆ. ತಂದೆಯ ಮರಣದ, ಅಣ್ಣನ ಅರಣ್ಯವಾಸದ ಸುದ್ದಿಯನ್ನು ಕೇಳಿ ಮೈಮರೆತ ಮಗನನ್ನು ಸಮಾಧಾನ ಮಾಡಿ,

…………ಮಗನೆ,
ಸಾತ್ವಿಕ ಸರಳಜೀವಿ, ನೀನೆಂತರಿವೆಯೆನ್ನ ಈ
ಹೃದಯಮಂ? ತಾಯಿಯೊಲ್ಮೆಗೆ ಮಗನ ಮೇಲ್ಮೆಗಿಂ
ಬಯಕೆ ಬೇರುಂಟೆ? ನಿಃಸ್ವಾರ್ಥದಾ ಬಯಕೆಗಿಂ
ಪೆರತು ಕಣ್ಣೀರೊಳದೆ ಧರ್ಮಕ್ಕೆ?……..

ನಡೆದ ವ್ಯಥೆಯ ಕಥೆಯನ್ನು ಕೇಳಿದವರಿಗೆ ಬಗೆಗರಗುವಂತೆ ಸಂಕ್ಷಿಪ್ತವಾಗೊರೆಯುತ್ತಾಳೆ.[17] ಕೇಳುತ್ತ ಕೇಳುತ್ತ ಭರತನ ಅನುತಾಪ, ಸಂತಾಪಕ್ಕೂ ಪ್ರಕೋಪಕ್ಕೂ ತಿರುಗುತ್ತದೆ. ‘ಹೆತ್ತಂದೆ ಕೊರಳು ಹಿಸುಕದೆ ಇಲ್ಲಿಯ ತನಕ ಏಕೆ ಕಾದೆ? ಮಗನನ್ನು ಪಡೆದೂ ನಿನಗೆ ಬಂಜೆತನ ಒದಗಿತೆ? ಅಣ್ಣನನ್ನುವಿಪಿನದಿಂದ ಮರಳಿಸುತ್ತೇನೆ ಇಲ್ಲವೆ ನಾನೂ ತಪೋನಿರತನಾಗುತ್ತೇನೆ’ ಎಂದು ಜುಗುಪ್ಸೆಯಿಂದ ಹೊರಡುತ್ತಾನೆ. ತಾಯಿ ಓಡಿಬಂದು ಕಾಲುಹಿಡಿದು ಬಾಚಿ ತಬ್ಬಿಕೊಂಡು ಮೊಳಕಾಲೂರಿ ಅಶ್ರುಮಲಿನಳಾಗಿ ಬಿನ್ನಕ್ಕೆ ಬಾಯಿಬಂದಂತೆ ಗೋಳಾಡುತ್ತಾಳೆ:

……ಕೈ ಬಿಡದಿರೆನ್ನಂ, ಮಗನೆ, ಕೆಟ್ಟಳೆನ್!
ಜಗವೆ ಕೈ ಬಿಟ್ಟಳೆನ್! ನೂಂಕು ನರಕಕೆ; ಸಹಿಸಿ
ಬಹೆನೊ ಕೇಡಂ ತವಿಸಿ; ನೂಂಕದಿರೊ ಶೂನ್ಯತೆಗೆ!
ಹೊಲೆಗೆ ಹೊಲೆ ಮಡಿಯಲ್ತು; ಕೊಲೆಗೆ ಪಡಿಯುಲ್ತು;
ನೋವು ನೋವಿಗೆ ಸಾವುಮಲ್ತು……
……………
ಬಂದಪೆನ್ ಕರೆದೊಯ್ಯ ನಿನ್ನ ಕೂಡೆನ್ನನುಂ
ಮಂಗಳದ ಮನೆಗೆ. ನಡೆದಪೆನೊ ನೀನೆಂದಂತೆವೋಲ್
ನೆಳಲಂತೆ, ಮೂಕವಿನಯದಲಿ ಕೇಳ್! ಕೈಕೆಗಿನ್
ಬಾಯಿಲ್ಲೊ! ಕಲ್ಲಾದಹಲ್ಯೆಯಂ ನುಡಿಸಿದಾ
ರಾಮನಡಿ ಸೋಂಕಿಗುಂ ಕಿಡದೆನ್ನ ಕಲ್‌ತನಂ!
ಕೈಬಿಡದೆ ಕಾಪಿಡೆನ್ನಂ!

ಆತ್ಮನಿಂದೆಯ ಕಟುಕಶಾಘಾತದಿಂದ ಶಿಕ್ಷೆಗೊಂಡು, ಪಶ್ಚಾತ್ತಾಪವಹ್ನಿಯಿಂದ ಹೃದಯದ ಕಾಳಿಕೆಯನ್ನು ನೀಗಿಗೊಂಡು, ಅಶ್ರುಧಾರೆಯಿಂದ ಮಾಲಿನ್ಯವನ್ನು ತೊಳೆದುಕೊಂಡು, ರಾಮಾನುಜನ ಕ್ಷಮೆಗೆ ಪಾತ್ರಳಾದ ಮೇಲೆ, ಜಗತ್ತು ಅವಳನ್ನು ಕೈಬಿಡುತ್ತದೆಯೆ? ಕಂಡೊ ಕಾಣದೆಯೊ ಇದ್ದ ಸ್ವಾಭಿಮಾನ ದರ್ಪಗಳಿಗೆ ಅಪಾರವಾದ ದುಃಖವನ್ನನುಭವಿಸಿ ಪರಿಶುದ್ಧ ಳಾಗುತ್ತಾಳೆ, ಜಗದ್ವಂದ್ಯಳಾಗುತ್ತಾಳೆ.

“ಶ್ರೀರಾಮನನ್ನು ಅರಣ್ಯಕ್ಕೆ ಕಳುಹಿ ಲೋಕಕ್ಕೆ ಕೈಕೆ ಮಹದುಪಕಾರಮಾಡಿದ್ದಾಳೆ. ಆದುದರಿಂದ ಅವಳು ದೋಷಾತೀತೆ” (ಭಾರದ್ವಾಜ ಭರತನಿಗೆ ಹೇಳುವ ಮಾತು) ಎಂಬ ಭಾವನೆ ಮೂಲ ರಾಮಾಯಣದಲ್ಲಿಯೂ ಇದೆ. ಆದರೂ ಅವಳು ಅಲ್ಲಿ ಗರ್ವಿಷ್ಠೆ, ಚಂಡಿ, ಸ್ವಕಾರ್ಯ ಧುರಂಧರೆ (ಭರತನೇ ಹೇಳುವ ಮಾತು) ಎಂದೂ ಗೊತ್ತಾಗುತ್ತದೆ. ಈ ಭಾವನೆ ಇಲ್ಲೆಲ್ಲಿಯೂ ಕಾಣಬರುವುದಿಲ್ಲ. ರಾಮನಂತು ಕೈಕೆಯಲ್ಲಿ ಅಪಾರ ಗೌರವವಿಟ್ಟಿದ್ದಾನೆ. ಅರಣ್ಯಾಭಿಮುಖಿಯಾದಾಗ “ನಿನ್ನಾಸೆ ಸಾರುತಿದೆ. ನನ್ನ ಕಲ್ಯಾಣಮಂ ನೀಂತಾಯ್‌ದಿಟಂ” ಎಂದ ಮಾತು ಅವನ ಶೀಲಕ್ಕೆ ತೋರುಬೆರಳಾಗಿರುವಂತೆ, ಕೈಕೆಯ ಹಿರಿಮೆಗೂ ಸಾಕ್ಷಿಯಾಗಿದೆ. ಚಿತ್ರಕೂಟದಲ್ಲಾದ ರಾಮ ಕೈಕೆಯರ ಸಮಾಗಮ ಲೋಕ ಲೋಕಗಳನ್ನೇ ರೋಮಾಂಚನ ಗೊಳಿಸುವಂಥ ಘಟನೆ. ರಾಮ ದೂರದಲ್ಲಿ ದುಃಖಭಾರದಿಂದ ಕುಸಿದು ನಿಂತಿದ್ದ ಚಿಕ್ಕಮ್ಮನನ್ನು ಹುಡುಕಿ ನೋಡಿ ಬಳಿಗೆಯ್ದುವುದೆ ತಡ ಕೈಕೆ ರಾಮಾಂಘ್ರಿಯ ಮೇಲೆ ಕೆಡೆಯುತ್ತಾಳೆ. ಭಗವತ್ ಪ್ರೀತಿ ಭಕ್ತನ ಆತ್ಮವನ್ನೆತ್ತುವಂತೆ ರಾಮ ಆಕೆಯನ್ನು ಮೇಲೆತ್ತು ತ್ತಾನೆ. ಮುಂದೆ ಅವಳ ಮೌನಕ್ಕೆ ಭರತ ನಾಲಿಗೆಯಾಗುತ್ತಾನೆ. ಅರಣ್ಯವಾಸ ಕಾಲದಲ್ಲಿ ಘೋರ ಸಂಕಟವೊದಗಿದಾಗ ನಿರಾಶೆ ಕವಿದಾಗ ಒಮ್ಮೊಮ್ಮೆ ಲಕ್ಷ್ಮಣ “ಅಗ್ರಜನೆ, ದೀರ್ಘ ದರ್ಶಿನಿ ದಿಟಂ ಆ ಕೈಕೆ” ಎಂದು, ರಾಮ “ಸಾಕು ಬಿಡು, ಸೌಮಿತ್ರಿ, ಜಗಮನಿತುಮಾ ಕೈಕೆ! ಕೈತವದ ಹೃದಯಂ!” ಎಂದು. ಉದ್ಗಾರವೆತ್ತಿದರೂ, ತಮ್ಮೆಲ್ಲರ ಆತ್ಮೋದ್ಧಾರಕ್ಕೆ ಅವಳೆಷ್ಟರಮಟ್ಟಿಗೆ ಸಹಾಯಕಳಾದಳೆನ್ನುವುದನ್ನು ಸೀತೆಯಂತೂ ಮರೆತಿಲ್ಲ.

ಸೀತಾಪಹರಣಾನಂತರ ನಡೆದ ಘೋರ ಘಟನಾವಳಿಗಳ ನಡುವೆ ಕೈಕೆಯನ್ನು ಮರೆತರೂ, ರಾಮ ಹಿಂದಿರುಗಿದಾಗ ಅವಳು ಎಲ್ಲಿದ್ದಳು, ಎಂತಿದ್ದಳು, ಎಂಬ ವಿಷಯವಾಗಿ ಕುತೂಹಲ ಕೆರಳುವುದು ಸಹಜ – ಯಾರಿಗಾದರೂ ಕುತೂಹಲವೆ! ರಾಮ ಲಕ್ಷ್ಮಣ ಸೀತೆಯರಿಗಂತು ಮೊದಲು ಆಕೆಯನ್ನು ನೋಡುವ ಕುತೂಹಲ! ಪತಿಯ ಮರಣಕ್ಕೆ, ರಾಮ ಸೀತಾ ಲಕ್ಷ್ಮಣರ ಆವರ್ಣನೀಯವಾದ ಕಷ್ಟಪರಂಪರೆಗಳಿಗೆ, ಭರತನ ವೈರಾಗ್ಯ ಜೀವನಕ್ಕೆ ಕೌಸಲ್ಯೆ ಸುಮಿತ್ರೆಯರ ದುಃಖಕ್ಕೆ ತಾನೇ ಕಾರಣಳೆಂದುಕೊಂಡು ಪರಿತಪಿಸುತ್ತಿರುವ ಕೈಕೆ, ತನ್ನ ಕಡೆಗೆ ನಟ್ಟ ದೃಷ್ಟಿಯುಳ್ಳ ಕೋಸಲರ ವಾನರರ ಮತ್ತು ಲಂಕಿಗರ ಗುಂಪಿನ ನಡುವೆ, ಯಾವ ಮುಖದಲ್ಲಿ ಸೀತಾರಾಮರನ್ನು ಸ್ವಾಗತಿಸಿಯಾಳು! ರಾಮಾಗಮನ ವಾರ್ತೆ ಮುಟ್ಟಿದಾಗ ಸುಖದುಃಖಗಳ ಸಮ್ಮಿಶ್ರ ಭಾವದಿಂದ ಪುಳಕಿತಳಾಗಿರಬೇಕು-ರಾಮ ಸೀತೆಯರನ್ನು ಮತ್ತೆ ನೋಡುವ ಸುಖ, ಹಿಂದಿನ ನೆನಪು ಅಳಿಸದ ದುಃಖ. ಕೌಸಲ್ಯೆ ಅಕ್ಕನಾಗಿ ಎದೆಯ ಅಕ್ಕರೆಯನ್ನೆಲ್ಲ ಬಸಿದು ಅವಳನ್ನು ಸಂತೈಸಿ ನಂದಿಗ್ರಾಮಕ್ಕೆ ಕರೆದೊಯ್ಯುವ ಕರ್ತವ್ಯದಲ್ಲಿ ತೊಡಗುತ್ತಾಳೆ. ತನ್ನ ಬಳಿಗೆ ಬಂದ ಸೊಸೆಯನ್ನು ಕುರಿತು ಸುಮಿತ್ರೆ ಹೇಳಿದ ಮಾತು ಅವಳ ಔದಾರ್ಯವನ್ನು ಪ್ರಕಟಗೊಳಿಸುವುದರ ಜೊತೆಗೆ ಕೈಕೆಯ ಅಮೇಯವಾದ ದುಃಖಕ್ಕೆ ಕನ್ನಡಿ ಹಿಡಿಯುತ್ತವೆ:

ಊರ್ಮಿಳೆ, ನಮ್ಮ ಸಂಕಟಕಿಂದು ಬಂದುದು
ವಿರಾಮಮಾ ಕೈಕೆಯ ಮನೋವ್ಯಥೆಗೆ ಪೇಳೆಂದು
ಬರ್ಪುದೊ ಪರಿಸಮಾಪ್ತಿ? ಬಾ, ನಡೆವಮಾಕೆಯಂ
ತಣಿಸಿ ಸಂತೈಸಿ ಕರೆದೊಯ್ವಮಾ ರಘುರಾಮ
ಮೇಣ್ ಭರತ ಸಂದರ್ಶನದ ಪುಣ್ಯದರ್ಶನಕೆ!

ರಾಮಜನನಿಯ ತೋಳತಕ್ಕೆಯಲ್ಲಿ

ಕೃಶ ಮಲಿನ ಮೂಕ ಶೋಕದ ಶಿಲಾಪ್ರತಿಮಳಂ,
ಪಾಳ್‌ವಿಳ್ದ ಪೂಜಾರಹಿತ ದೇವಮಂದಿರದ
ವಿಗ್ರಹಂಬೋಲ್ ಮ್ಲಾನೆಯಂ, ಸಂಸ್ಕಾರ ಸಂಸ್ಕಾರ ಹೀನೆಯಂ
ಗುರುದುರಿತ ದುಃಖಭಾರದಿ ಕುಸಿದ ಕಡುದೀನೆಯಂ

ಅವರಿಬ್ಬರೂ ಸಂದರ್ಶಿಸುತ್ತಾರೆ. ಮಣಿದ ಊರ್ಮಿಳೆಯನ್ನೆತ್ತಿ ಮುತ್ತೊತ್ತಿ ಕೈಕೆ ತುಟಿ ಅಲುಗಿಸದೆ ಶಿಲಾಮೌನದಿಂದ ಕಣ್ಣೀರ್ಗರೆಯುತ್ತಾಳೆ. ಆಕೆಯನ್ನಾರು ಸಂತವಿಸಬಲ್ಲರು? ಕೌಸಲ್ಯೆ ಸುಮಿತ್ರೆಯರ ಪ್ರತಿನಿಧಿಯಾಗಿ, ರಾಮಲಕ್ಷ್ಮಣ ಸೀತೆಯರ ಪ್ರತಿನಿಧಿಯಾಗಿ, ಭರತ ಶತ್ರುಘ್ನರ ಪ್ರತಿನಿಧಿಯಾಗಿ – ಇಡೀ ಲೋಕದ ಪ್ರತಿನಿಧಿಯಾಗಿ ಅವರು ಹೇಳುವುದನ್ನೆಲ್ಲ ಆ ಚಿರತಪಸ್ವಿನಿ ಊರ್ಮಿಳೆಯೆ ಹೇಳಿ ಸಂತವಿಸುತ್ತಾಳೆ :

ಅಮ್ಮ,
ನಿಮ್ಮ ದುಃಖದ ಮೇರೆಯಂ ನಾನಳೆಯಲಾರೆ;
ಚಿಕ್ಕವಳ್ ನಮಗಾಗಿ, ನಿಮ್ಮ ಮಕ್ಕಳಿಗಾಗಿ,
ಓಕರಿಸದೀಂಟವೇಳ್ಕಾ ಕಾಳಕೂಟೋಪಮದ
ಹೃತ್ತಾಪಮಂ, ತಾಯಿ, ನಿನಗಲ್ಲದಿನ್ನಾರ್ಗೆ, ಪೇಳ್
ಸಂಮಥಿತ ದಶರಥ ತನೂಜ ಜೀವಿತ ಕಥಾ
ಸಾಗರೋತ್ಥಿತ ಘೋರ ಗರಳಮಂ ಧರಿಸುವ
ಶಿವಾಶಿವಶ್ರೀಕಂಠಶಕ್ತಿ? ಆಶೀರ್ವದಿಸು.

ಸಿದ್ದಿಪಡೆದ ಆ ಶಿಲಾಮೌನಿ ಊರ್ಮಿಳೆಗೆ, ಅವಳ ಮೂಲಕ ಲೋಕಕ್ಕೆ ಕೊಡುವ ಉತ್ತರವಾದರೂ ಏನು? ಬರಿಯ ನಿಟ್ಟುಸಿರು; ಮುತ್ತಿನ ಸುರಿಮಳೆ; ವಿಂಚಿನಂಥ ನಸುನಗೆ. ನಕ್ಕು ಹದಿನಾಲ್ಕು ವರ್ಷವಾಗಿದೆ; ಆ ನಗೆಗೂ ಈ ನಗೆಗೂ ಬಹು ಅಂತರ! ಒಳ್ಪು ನಕ್ಕಂತೆ ನಕ್ಕಳಂತೆ! ಹದಿನಾಲ್ಕು ವರ್ಷದ ಹಿಂದೆ ಮಾತಾಡಿದ್ದು! ಬಹುಶಃ ಮಾವನ ಮನೆಯಿಂದ ಹಿಂದಿರುಗಿದ ಮಗನೊಡನೆ ಆಡಿದುದೆ ಕೊನೆಯ ಮಾತು! ಈಗಲಾದರೂ ಮಾತಾಡು ತ್ತಾಳೆಯೆ? ತಪಶ್ಶಾಂತಿಯನ್ನು ಪಡೆದ ಆ ಧನ್ಯೆಗೆ ಮಾತು ತೋರುತ್ತದೆಯೆ? ತಾನೆ ಶ್ರೀರಾಮನೆಡೆಗೆ ನಡೆದು, ತನ್ನಡಿಗೆ ಮಣಿದಾತನನ್ನು ಚಿನ್ಮಯ ಮಹಾ ಮೌನದಿಂದ ಹರಸುತ್ತಾಳೆ. ಅವಳ ಪ್ರಥಮ ಸಂದರ್ಶನದಿಂದ ಶ್ರೀರಾಮ ಪುಳಕಗೊಂಡಿರಬೇಕು!

……ಪಾಪಿಗುದ್ಧಾರಮಿಹುದೌ
ಸೃಷ್ಟಿಯ ಮಹದ್‌ವ್ಯೆಹರಚನೆಯೊಳ್, ಕೇಳ್, ತಾಯಿ:
ಬೆರಳಿಚದ ಕೂರ್ಮೊನೆಯ ಮಿಡಿವ ಹಿಂಸೆಗೆ ತಂತಿ ತಾಂ
ಬೀಣೆಯಿಂಚರವೀಯುವಂತೆ, ನೀನುಗುರಾಗಲಾ
ವೈಣಿಕವಿಧಿಯ ಕೈಗೆ, ಪೊಣ್ಮಿದತ್ತಿಂಪಾಯ್ತು ಮೇಣ್
ಭಗವದ್ ರಸಧಿಯಾಯ್ತು ರಾಮಾಯಣ ಬೃಹದ್‌ಗೀತೆ![1]     ನ ದೃಷ್ಟಪೂರ್ವಂ ಕಲ್ಯಾಣಂ ಸುಖಂ ವಾ ಪತಿಪೌರುಷೇ
ಅಪಿ ಪುತ್ರೇಪಿ ಪಠ್ಯೇಯಮಿತಿ ರಾಮಾಸ್ಥಿತಂ ಮಯಾ
ಸಾ ಬಹೂನ್ಯಮನೋಜ್ಞಾನಿ ವಾಕ್ಯಾನಿ ಹೃದಯಚ್ಛಿದಾಂ
ಅಹಂ ಶ್ರೋಷ್ಯೇ ಸಪತ್ನೀನಾಮವರಾಣಾಂ ವರಾ ಸತಿ (ಅಯೋ., ೨೦, ೩೮-೩೯)

[2]     ನ ಮಯಾ ಸತ್ಕೃತಾ ದೇವೀ ಸತ್ಕಾರಾರ್ಹಾ ಕೃತೇ ತವ (ಅಯೋ., ೧೨-೬೦)

[3]     ಅಪೀದಾನೀಂನ ಕೈಕೇೂ ಸೌಭಾಗ್ಯ ಮದಮೋಹಿತಾ
ಕೌಸಲ್ಯಾಂಚ ಸುಮಿತ್ರಾಂಚ ಸಂಪ್ರಬಾಧೇತ ಮತ್ಕೃತೇ (ಅಯೋ., ೫೩-೧೫)
ಕ್ಷುದ್ರ ಕರ್ಮಾಹಿ ಕೈಕೇೂ ದ್ವೇಷ್ಯಮನ್ಯಾಯ್ಯಮಾಚರೇತ್
ಪರಿದದ್ಯಾಹಿ ಧರ್ಮಜ್ಞೇ ಭರತೇ ಮಮ ಮಾತರಂ (ಅಯೋ., ೫೩-೧೮)

[4]     ಆಮ್ರಂ ಧಿತ್ವಾಕುಠಾರೇಣ ನಿಂಬಂ ಪರಿಚರೇತ್ತು ಯಃ
ಯಶ್ಚೈನಂ ಪಯಸಾ ಸಿಂಚೇನ್ನೈವಾಸ್ಯ ಮಧುರೋ ಭವೇತ್
ಅಭಿಜಾತ್ಯಂ ಹಿ ತೇ ಮನ್ಯೇ ಯಥಾ ಮಾತುಸ್ತಥೈವಚ
ನಹಿ ನಿಂಬಾತ್ಸ್ರವೇತ್ ಕ್ಷೌದ್ರಂ ಲೋಕೇ ನಿಗದಿತಂ ವಚಃ (ಅಯೋ., ೩೫, ೧೪-೧೫)

[5]     ರಾಮೇ ವಾ ಭರತೇ ವಾಹಂ ವಿಶೇಷಂ ನೋಪಲಕ್ಷಯೇ
ತಸ್ಮಾತ್ತುಷ್ಟಾಸ್ಮಿ ಯದ್ರಾಜಾ ರಾಮಂ ರಾಜ್ಯೇಭಿಷೇಕ್ಷ್ಯಸಿ
ನ ಮೇಪರಂ ಕಿಂಚಿದಿತಸ್ತ್ವಯಾ ಪುನಃ
ಪ್ರಿಯಂ ಪ್ರಿಯಾರ್ಹೇ ಸುವಚಂ ವಚಃ ಪರಂ
ತಥಾಹ್ಯ ವೋಚಸ್ತ್ವಮತಃ ಪ್ರಿಯೋತ್ತರಂ
ಪರಂ ವರಂತೇ ಪ್ರದದಾಮಿತಂ ವೃಣು (ಅಯೋ., ೭, ೩೫-೩೬)

[6]     ಜಾನಾಸಿ ಹಿ ಯಥಾ ಸೌಮ್ಯ ನಮಾತೃಷು ಮಮಾಂತರಂ
ಭೂತಪೂರ್ವಂ ವಿಶೇಷೋವಾ ತಸ್ಯಾಮಯಿ ಸುತೇಪಿ ವಾ
ಸೋಭಿಷೇಕ ವಿವೃತ್ಯರ್ಧೈಃ ಪ್ರವಾಸಾರ್ಧೈಶ್ಚ ದುರ್ವಚೈಃ
ಉಗ್ರೈರ್ವಾಕ್ಯೈರಹಂ ತಸ್ಯಾ ನಾನ್ಯದ್ದ್ಯೈ ವಾತ್ಸಮರ್ಥಯೇ (ಅಯೋ., ೨೨, ೧೭-೧೮)

[7]     ಕೈಕೇಯ್ಯಃ ಪ್ರತಿಪತ್ತಿರ್ಹಿ ಕಥಂ ಸ್ಯಾನ್ಮಮ ಪೀಡನೇ
ಯದಿ ಭಾವೋ ನ ದೈವೋಯಂಕೃತಾಂತವಿಹಿತೋ ಭವೇತ್ (ಅಯೋ., ೨೨-೭೬)

[8]     ಪುರಾ ಭ್ರಾತಃ ಪಿತಾನಸ್ಸಮಾತರಂ ತೇಸ್ಸಮುದ್ವಹನ್
ಮಾತಾಮಹೇ ಸಮಾಶ್ರೌಷೀದ್ರಾಜ್ಯ ಶುಲ್ಕಮನುತ್ತಮಂ (ಅಯೋ., ೧೦೭-೩)

[9]     ನಹಿ ಕಿಂಚಿದಯುಕ್ತಂ ವಾಪ್ರಿಯಂ ವಾ ಪುರಾ ಮಮ
ಅಕರೋಸ್ತ್ವಂ ವಿಶಾಲಾಕ್ಷಿ ತೇನ ನಶ್ರದ್ಧಧಾಮ್ಯಹಂ (ಅಯೋ., ೧೨-೨೦)
ಭೂತೋಪಪತಹ ಚಿತ್ತೇನ ಬ್ರುವಂತೀ ಮಾಂ ನ ಲಜ್ಜಸೇ
ಶೀಲವ್ಯಸನಮೇತತ್ತೇ ನಾಭಿಜಾನಾಮ್ಯಹಂ ಪುರಾ (ಅಯೋ., ೧೨-೫೭)

[10]    ಶ್ರೀ ಎ.ಆರ್.ಕೃ. ಅವರ ‘ಭಾಸಕವಿ’ ಗ್ರಂಥದಲ್ಲಿ ಬರುವ ‘ಯಜ್ಞಫಲ’ ನಾಟಕದ ವಿಮರ್ಶೆಯನ್ನು ನೋಡಿ.

[11]    ಅವಳ ಪತಿಯಿಂದ್ರಂಗೆಣೆ
ಯಾವಳ ಸುತನೆನಿಸುತಾನೆ ಮೇಣಿರ್ದಪೆನೋ
ಆವಾಸೆಯವಳ್ಗಿರ್ಪುದು
ಭಾವಿಸುವೊಡೆ ತಾನಕಾರ್ಯಮಂ ನೆರೆಗೆಯ್ಯಲ್
ಅರಸಂ ಕನ್ಯಾಶುಲ್ಕಕೆ
ವರಪಣಮೆಂದಿತ್ತ ರಾಜ್ಯಮಂ ತನಯಂಗೆಂ
ದುರೆ ಬೇಳ್ಪುದವಳ ಲೋಭಮೆ
ಕರಮೆನ್ನದದಲ್ತೆ ಕೊಳ್ಳೆ ತಮ್ಮನ ಸೊತ್ತಂ                (ಕನ್ನಡ ಪ್ರತಿಮಾನಾಟಕ, ಡಾ. ಕೆ. ಕೃಷ್ಣಮೂರ್ತಿ)

[12]    ಆದ್ದರಿಂದಲೇ ಈ ಸಂಚಿಕೆಯ ಹೆಸರು ‘ಮಮತೆಯ ಸುಳಿ ಮಂಥರೆ.’

[13]    ಶ್ರೀ ರಾ.ದ., ಸಂಪುಟ ೧, ಸಂಚಿಕೆ ೩, ಪಂಕ್ತಿ ೧೯೫ ರಿಂದ ೨೧೭ರವರೆಗೆ ನೋಡಿ.

[14]    ಮತ್ತೆ ರಾಮನನ್ನು ಅರಣ್ಯದಿಂದ ಹಿಂದಿರುಗಿಸಿದರೆ ಭರತ ಕೈಕೆಯರಿಗೆ ಸಂತೋಷವಾಗುತ್ತದೆಂದು ಅವಳು ಊರುಬಿಟ್ಟು ಕಾಡುಸೇರಿ, ದಾವಾಗ್ನಿಗೀಡಾಗುವ ಘೋರ ಸನ್ನಿವೇಶವನ್ನು (ಶ್ರೀ ರಾ.ದ., ಸಂಪುಟ ೧, ಸಂಚಿಕೆ ೬, ೨೩೬-೩೪೨) ನೆನೆದರೆ ಈ ಮಾತಿನ ಅರ್ಥ ಅರಿವಾಗುತ್ತದೆ.

[15]    ಶ್ರೀ ರಾ.ದ., ಸಂಪುಟ ೧, ಸಂಚಿಕೆ ೩, ಪಂಕ್ತಿಗಳು ೫೧೨-೫ ೭೦.

[16]    ಶ್ರೀ ರಾ.ದ., ಸಂಪುಟ ೧, ಸಂಚಿಕೆ ೫, ಪಂಕ್ತಿ ೨೦೯-೨೨೬.

[17]    ಶ್ರೀ ರಾ.ದ., ಸಂಪುಟ ೧, ಸಂಚಿಕೆ ೫, ಪಂಕ್ತಿ ೨೩೪-೨೬೦.