ಆದಿಕವಿ ವಾಲ್ಮೀಕಿಯ ಶ್ರೀಮದ್ರಾಮಾಯಣ ಪ್ರಚಾರಕ್ಕೆ ಬಂದಂದಿನಿಂದ ಅನಿಂದ ನೀಯನಾದ ಶ್ರೀರಾಮಚಂದ್ರನ ವರ್ತನೆಯ ಮೇಲೆ ತುಂಬ ಪ್ರಭಾವ ಬೀರಿರುವ ಒಂದೆರಡು ಅಥವಾ ಮೂರು ಸಂದರ್ಭಗಳನ್ನು ಕುರಿತು ಚರ್ಚೆ ವಿಪುಲವಾಗಿ ನಡೆದಿದೆ. ವಾಲಿ ವಧೆಯ ಸಂದರ್ಭ ಅವುಗಳಲ್ಲೊಂದು. ಈ ಸಂದರ್ಭದಲ್ಲಿ ವ್ಯಕ್ತವಾಗುವ ಶ್ರೀರಾಮನ ವರ್ತನೆಯನ್ನು ಸರಿತಪ್ಪುಗಳ ತಕ್ಕಡಿಯಲ್ಲಿ ತೂಗಿ ನೋಡುವ ಲೌಕಿಕ ಪ್ರಯತ್ನ ನಡೆದಿರುವಂತೆಯೆ ಅವನು ದೇವಕಲ್ಪನೆಂಬ ಭಾವನೆಯಿಂದ ಅವನ ತಪ್ಪನ್ನು ಮರೆಯುವ ಅಥವಾ ಅದಕ್ಕೆ ತಾತ್ತ್ವಿಕವಾದ ವ್ಯಾಖ್ಯಾನವನ್ನು ಕಲ್ಪಿಸುವ ಭಗವದ್ದೃಷ್ಟಿಯ ಬೇರೆ ಬೇರೆ ಪ್ರಯತ್ನಗಳೂ ನಡೆದಿವೆ. ಒಟ್ಟಿನಲ್ಲಿ ಶ್ರೀರಾಮಚಂದ್ರನ ದೇವತಾವ್ಯಕ್ತಿತ್ವಕ್ಕೂ ಅವನ ಆಗಿನ ಕಾರ್ಯಕ್ಷೇತ್ರಕ್ಕೂ ಸಮನ್ವಯತೆ ಸಾಮಂಜಸ್ಯ ಸಾಮರಸ್ಯಗಳನ್ನು ಕಲ್ಪಿಸುವ ಮತ್ತು ಆ ಪ್ರಸಂಗವನ್ನು ಪೂರ್ಣದೃಷ್ಟಿಯಿಂದ ನೋಡುವ ಪ್ರಯತ್ನ ಇಂದಿಗೂ ಕಂಡುಬರುತ್ತದೆ.

ವಾಲ್ಮೀಕಿ ರಾಮಾಯಣದ ಈ ಸಂದರ್ಭದಲ್ಲಿ ಉದ್ಭವಿಸುವ ಸಮಸ್ಯೆಯನ್ನು ಪ್ರಶ್ನೆ ರೂಪದಲ್ಲಿ ಈ ರೀತಿ ವಿವರಿಸಬಹುದು. ಸುಗ್ರೀವ, ವಾಲಿ, ಶ್ರೀರಾಮ-ಇವರಲ್ಲಿ ಯಾರ ತಪ್ಪು ಮೊದಲದು? ಯಾರ ತಪ್ಪು ಉಗ್ರವಾದುದು ಮತ್ತು ಅಕ್ಷಮ್ಯವಾದುದು? ಆ ತಪ್ಪು  ಅವರವರ ಸ್ವರೂಪ ಸ್ವಭಾವಗಳಿಗನುಗುಣವಾಗಿದ್ದು ಆಯಾಯ ಸನ್ನಿವೇಶಕ್ಕೆ ಹೊಂದುತ್ತದೆಯೆ? ಅವರವರ ತಪ್ಪಿಗೆ ತಕ್ಕ ಶಿಕ್ಷೆ ದೊರಕಿದೆಯೆ? ಹೀಗೆ ಪ್ರಶ್ನಮಾಲೆಯನ್ನು ಬೆಳೆಸಬಹುದು. ಈ ಪ್ರಶ್ನಮಾಲೆಯ ಹಿನ್ನೆಲೆಯಲ್ಲಿ ಆದಿಕವಿ ಚಿತ್ರಿಸಿರುವ ಈ ಸನ್ನಿವೇಶ ವನ್ನಾಗಲೀ, ಭಾಸ ಅಭಿಷೇಕ ನಾಟಕದಲ್ಲಿ ವರ್ಣಿಸಿರುವ ಇದೇ ಸಂದರ್ಭವನ್ನಾಗಲೀ ಓದಿ ಅಲ್ಲಿ ಪ್ರತಿಪಾದನೆಗೊಂಡಿರುವ ನೀತಿ ಧರ್ಮಗಳ ಸ್ವರೂಪವನ್ನರಿತಾಗ ವಾಸ್ತವತಾನಿಷ್ಠವಾದ ಅತ್ಯಾಧುನಿಕ ದೃಷ್ಟಿಯ ಸಾಮಾನ್ಯಮತಿ ತತ್ತರಿಸದಿರಲಾರದು.

ವಾಲಿಸುಗ್ರೀವರ ಸ್ವರೂಪ ಸ್ವಭಾವಗಳನ್ನು ಅವರ ಪರಸ್ಪರ ಸಂಬಂಧವನ್ನು ಸ್ಪಷ್ಟವಾಗಿ ಪರಿಚಯಿಸಿಕೊಡುವ ಅವರ ಪೂರ್ವ ಜೀವನ ವೃತ್ತಾಂತದ ಪೂರ್ಣ ವಿವರಗಳು ಅಲಭ್ಯ ವಾದರೂ ಅವರು ಪರಸ್ಪರ ಮರ್ಮಜ್ಞರಾಗಿ ಇಂಗಿತಜ್ಞರಾಗಿ ಮೈತ್ರಿಯಿಂದ ವಾತ್ಸಲ್ಯದಿಂದ ವರ್ತಿಸುತ್ತಿದ್ದಿರಬೇಕೆಂದು ಕಾಣುತ್ತದೆ. ವಾಲಿ ರಾವಣನಂಥ ಖಲಪಾತ್ರವಲ್ಲದಿದ್ದರೂ ಬ್ರಹ್ಮವರಬಲಮದೋದ್ದೃಪ್ತನೂ ಮಹೇಂದ್ರಾರಿ ವಿಜಯೋನ್ಮತ್ತನೂ ಶೀಘ್ರಕೋಪಿಯೂ ಸುಲಭನಿಷ್ಠುರನೂ ಆದ ಭಟವರಿಷ್ಠನೆಂದೂ, ಸುಗ್ರೀವ ಪ್ರಾಜ್ಞನೂ ಪ್ರಿಯದರ್ಶಿಯೂ ವಿನಯಸಂಪನ್ನನೂ ಭ್ರಾತೃವತ್ಸಲನೂ ಆದ ಧರ್ಮಭೀರುವೆಂದೂ ತೋರುತ್ತದೆ. ಜ್ಯೇಷ್ಠಪುತ್ರನೂ ಅಮಿತವಿಕ್ರಮನೂ ಶತ್ರುನಿಷೂದನನೂ ಆದ ವಾಲಿ ತಂದೆಯ ಪ್ರೀತ್ಯಾದರ ಗಳಿಗೆ ಭಾಜನನಾಗಿದ್ದುದರಿಂದ ಅವನ ಅವಸಾನಾನಂತರ ಮಂತ್ರಿಗಳು ವಾಲಿಯನ್ನು ಸಿಂಹಾಸನದಲ್ಲಿ ಪ್ರತಿಷ್ಠಿಸಿದರು.

[1] ಸುಗ್ರೀವನೂ ಅವನಲ್ಲಿ ‘ಸರ್ವೇಷು ಕಾಲೇಷು ಪ್ರಣತಃ ಪ್ರೇಷ್ಯವತ್’ ಇದ್ದಂತೆ ಕಾಣುತ್ತದೆ. ಒಂದು ರಾತ್ರಿ ವಿಧಿಯಟ್ಟಿದ ದೂತನೋ ಎಂಬಂತೆ ಮಾಯಾವಿ ವಾಲಿಯನ್ನು ಯುದ್ಧಕ್ಕೆ ಕರೆದಾಗ ಅವನು ಕೋಪಾವಿಷ್ಟನಾಗಿ ಆ ರಾಕ್ಷಸನನ್ನು ಕೊಲ್ಲಲು ಹೊರಡಲನುವಾಗುತ್ತಾನೆ. ದೈವದ ಮುನ್ನೆಚ್ಚರಿಕೆಯೋ ಎಂಬಂತೆ ಹೆಂಗಸರೂ ಸುಗ್ರೀವನೂ ವಿನಮ್ರರಾಗಿ ತಡೆಯಲು ಅವರ ಮಾತನ್ನು ಲೆಕ್ಕಿಸದೆ ಅವನು ಮುನ್ನುಗ್ಗಿದನು. ಉಪಾಯಾಂತರವನ್ನು ಕಾಣದೆ ಭ್ರಾತೃವತ್ಸಲನಾದ ಸುಗ್ರೀವ ಅಣ್ಣನನ್ನು ಹಿಂಬಾಲಿಸಿದನು. ಮಾಯಾವಿ ದೂರ ಓಡಿ ಹೋಗಿ ಮಹಾಬಿಲದ್ವಾರವನ್ನು ಪ್ರವೇಶಿಸಲು ವಾಲಿ ತನ್ನನ್ನೆ ಹಿಂಬಾಲಿಸುತ್ತಿದ್ದ ತಮ್ಮನನ್ನು ದ್ವಾರಪ್ರದೇಶದಲ್ಲಿಯೆ ತಡೆದು ಅವನೆಷ್ಟು ಯಾಚಿಸಿದರೂ ಕೇಳದೆ ಆಣೆಯಿಟ್ಟು[2] ನಿಲ್ಲಿಸಿ ಮುಂದುವರಿದನು. ಅನಂತರ ಒಂದು ವರ್ಷದ ತನಕ ಸುಗ್ರೀವ ಆಸರುಬೇಸರನ್ನುಳಿದು ಅಣ್ಣನ ಆಜ್ಞೆಯನ್ನೇ ವ್ರತವೆಂದು ನಂಬಿ ಭ್ರಾತೃಕ್ಷೇಮಾಕಾಂಕ್ಷಿಯಾಗಿ ಸಂದಿಗ್ಧಚಿತ್ತನಾಗಿ ಕಾದನು. ಕೆಲವು ದಿನಗಳ ಮೇಲೆ ಆ ಬಿಲದಿಂದ ಸಫೇನರುಧಿರವೂ ಹೊರಹೊಮ್ಮಿತು. ಅದರ ಜೊತೆಗೆ ರಾಕ್ಷಸರ ಗರ್ಜನೆಯೂ ವಾಲಿಯ ಆರ್ತಧ್ವನಿಯೂ ಕೇಳಬಂದುವು. ಸುಗ್ರೀವ ಬಹುಶಃ ರಾಕ್ಷಸರಿಗೆ ಹೆದರಿ ಆತ್ಮಸಂರಕ್ಷಣಾರ್ಥವಾಗಿ ಬಿಲದ್ವಾರಕ್ಕೆ ಶೈಲಗಾತ್ರದ ಶಿಲೆಯನ್ನಡೆದು, ಶೋಕಾರ್ತನಾಗಿ ತಿಲೋದಕವನ್ನರ್ಪಿಸಿ ನಗರಕ್ಕೆ ಹಿಂದಿರುಗಿ ದನು. ಮಂತ್ರಿಗಳು ಬಲಾತ್ಕಾರದಿಂದ ನಿಜಸ್ಥಿತಿಯನ್ನರಿತು ಅವನಿಗೆ ಪಟ್ಟಗಟ್ಟಿದರು.

ಸುಗ್ರೀವನು ನ್ಯಾಯಧರ್ಮಾನುವರ್ತಿಯಾಗಿ ರಾಜ್ಯಪರಿಪಾಲನೆ ಮಾಡುತ್ತಿರುವಷ್ಟರಲ್ಲಿ ವಾಲಿ ರಾಕ್ಷಸನನ್ನು ಕೊಂದು, ಶಿಲೆಯಿಂದ ಮುಚ್ಚಿದ್ದ ಬಿಲಮುಖವನ್ನು ಕಂಡು ರಾಜ್ಯಾ ಪಹರಣ ಸಂಕಲ್ಪದಿಂದ ಭ್ರಾತೃಘಾತಕನಾದ ತಮ್ಮನೇ ಮಾಡಿದ ದ್ರೋಹವೆಂದು ನಿರ್ಣಯಿಸಿ, ಬಹು ಪ್ರಯಾಸದಿಂದ ಬಂಡೆಯನ್ನೊದ್ದು ನೂಕಿ ಹೊರಗೆ ಬಂದು, ನೇರವಾಗಿ ನಗರಕ್ಕೆ ಧಾವಿಸಿ, ರಕ್ತಾಲಿಪ್ತನೇತ್ರನಾಗಿ ಸುಗ್ರೀವನನ್ನು ಬೈದು, ಅವನ ಮಂತ್ರಿಗಳನ್ನು ಬಂಧನ ದಲ್ಲಿಟ್ಟನು. ವಾಲಿಯನ್ನು ನಿಗ್ರಹಿಸುವ ಸಾಮರ್ಥ್ಯವಿದ್ದರೂ[3] ಸುಗ್ರೀವ ಅಣ್ಣನೆಂಬ ಗೌರವ ದಿಂದ ಅವನ ಪಾದಮೂಲದಲ್ಲಿ ನಮಸ್ಕರಿಸಿದರೂ ವಾಲಿ ಶಾಂತನಾಗಲಿಲ್ಲ. ಬಹು ಪ್ರಕಾರ ವಾಗಿ ಬೇಡಿಕೊಂಡರೂ,[4] ತನ್ನಲ್ಲಿ ನ್ಯಾಸಭೂತವಾಗಿದ್ದ ರಾಜ್ಯವನ್ನು ಮರಳಿ ಸಮರ್ಪಿಸುವು ದಾಗಿ ಪ್ರಾರ್ಥಿಸಿಕೊಂಡರೂ ಅವನ ಕೋಪ ಮಂದವಾಗಲಿಲ್ಲ. ಕೊನೆಗೆ ಪುರಪ್ರಮುಖರ ಮತ್ತು ಮಂತ್ರಿಗಳ ಸಮ್ಮುಖದಲ್ಲಿ ಅವನನ್ನು ನಿಂದಿಸಿ, ‘ವಸ್ತ್ರೇಣೈಕೇನ’ ಅಟ್ಟಿಬಿಟ್ಟನು. ವಾಲಿಸುಗ್ರೀವರ ವೈರಕಾರಣವೂ, ಅವರ ಗುಣಾವಗುಣಗಳೂ ಸುಗ್ರೀವ ರಾಮನಿಗೆ ಹೇಳಿದ ಈ ಕತೆಯಿಂದ ತಕ್ಕಮಟ್ಟಿಗೆ ವ್ಯಕ್ತವಾಗುತ್ತವೆ. ಈ ಕಥೆ ಏಕಪಕ್ಷೀಯತೆಯ, ಸ್ವಪ್ರಶಂಸೆಯ ಮತ್ತು ಪರಪಕ್ಷಖಂಡನೆಯ ದೋಷಗಳಿಂದ ವಿಮುಕ್ತವಾಗಿರಲಾರದು.                 ದುಃಖಪೀಡಿತನಾದ ವ್ಯಕ್ತಿ ಎಂಥ ಪ್ರಾಜ್ಞನಾದರೂ ಸ್ವಾರ್ಥಾಭಿಲಾಷೆ ಮತ್ತು ಆತ್ಮೋತ್ಕರ್ಷೇಚ್ಛೆ ಗಳಿಂದ ಪಾರಾಗುವುದು ಕಷ್ಟ. ಸಂದೇಹಾತ್ಮಕವಾದ ಈ ಊಹೆಗೆ ಮೊದಲೇ ರಾಮನೊಡನೆ ರಾವಣನ ನೆಲೆ ಗೊತ್ತಿಲ್ಲವೆಂಬುದಾಗಿ ಹೇಳುವ ಅವನ ಮಾತೇ[5] ಪುಷ್ಟಿಯನ್ನು ನೀಡುತ್ತದೆ. ಆದರೂ ಅನ್ಯ ಪ್ರಮಾಣಗಳ ಅಭಾವವಿರುವಾಗ ಸುಗ್ರೀವನ ಪ್ರಾಮಾಣಿಕತೆಯನ್ನು ಒಪ್ಪಿಕೊಂಡು ಇತ್ಯರ್ಥಕ್ಕೆ ಬರಬೇಕಾಗಬಹುದು. ಆ ಮಹದ್ವ್ಯಕ್ತಿಗಳ ಸರಿತಪ್ಪುಗಳನ್ನು ತೂಗುವುದು ಸಾಹಸದ ಕಾರ್ಯವಾದರೂ ಭ್ರಾತೃವತ್ಸಲನೂ ಪಶ್ಚಾತ್ತಾಪದಗ್ಧನೂ ಆದ ಸುಗ್ರೀವನ ತಪ್ಪಿಗಿಂತ ಸಹನಾತಿದೂರನೂ ಕ್ಷಮಾಗುಣವಿವರ್ಜಿತನೂ ಆದ ವಾಲಿಯ ತಪ್ಪೇ ಗುರುತರವಾದುದೆಂಬ ಭಾವನೆ ಮೂಡಲು ಅವಕಾಶವಿದೆ.

ವಾಲಿ ಅಪರಾಧಿಯೆಂದು ಅಂಗೀಕರಿಸಿದರೂ ಆ ಅಪರಾಧಕ್ಕೆ ಅವನು ತೆರಬೇಕಾದ ದಂಡದ ವರಿಷ್ಠ ಪ್ರಮಾಣವೇನು? ನಡೆಯುವ ಕಾಲು ಎಡಹದಿರುತ್ತದೆಯೆ? ಮಾನವನ ಮನಸ್ಸು ಸದಾ ಒಂದೇ ತೆರನಾಗಿರುವುದಿಲ್ಲ. ಇಂದು ಕ್ರೌರ್ಯದಿಂದ ಕಲ್ಲಾದದ್ದು ಮುಂದೆ ಕನಿಕರವಾಗಿ ಕರಗಿ ನೀರಾಗಬಹುದು. ಕಾಲಮಹಿಮೆಯಿಂದ ಕಲ್ಲೂ ಕರಗುತ್ತದಲ್ಲವೆ? ವಾಲಿಯ ಕಣ್ಮುಂದೆ ಕಿಷ್ಕಿಂಧೆಯ ಅಕ್ಕತಂಗಿಯರು ಅಣ್ಣ ತಮ್ಮಂದಿರು ಸೌಹಾರ್ದದಿಂದ ವಾತ್ಸಲ್ಯದಿಂದ ಬಾಳುತ್ತಿರಲಿಲ್ಲವೆ? ಒಂದು ಕಾಲಕ್ಕಾದರೂ ಅಂಥ ಅಕ್ಕರೆಯ ಬಾಳು ಅವನ ಹೃದಯವನ್ನು ಕರಗಿಸುತ್ತಿರಲಿಲ್ಲವೆ? ಬಹುಶಃ ವಾಲಿ ತಮ್ಮನನ್ನು ಮತ್ತೆ ಕರೆಸಿಕೊಳ್ಳು ತ್ತಿದ್ದನೋ ಏನೋ! ಆದರೆ ವಿಧಿಯ ವಜ್ರೇಚ್ಛೆ ಗುಹ್ಯವಾದುದು, ಅದಮ್ಯವಾದುದು. ವಾಲಿಯ ಮನಸ್ಸು ಪರಿವರ್ತನೆಗೊಳ್ಳುವ ಮೊದಲೇ ಅದರ ಗುಪ್ತಹಸ್ತ ಕಬಂಧನ ಮೂಲಕವೊ ಶಬರಿಯ ಮೂಲಕವೊ ರುದ್ರನಾಟಕದ ಮಹಾಘಟನೆಗಳನ್ನು ರಚಿಸುತ್ತಿತ್ತು.

ಇಲ್ಲಿಂದ ಮುಂದೆ ಸರ್ವಲೋಕ ಶರಣ್ಯನೂ ಆರ್ತಜನಪರಿಪಾಲಕನೂ ಆತ್ಮ ಸಂಯಮಿಯೂ ಆದ ಶ್ರೀರಾಮನನ್ನು ಪರೀಕ್ಷಿಸುವ ಸನ್ನಿವೇಶಗಳು ಒಂದರ ಮೇಲೊಂದು ಬರುತ್ತವೆ. ಶ್ರೀರಾಮ ಅವತಾರ ಪುರುಷನೆಂದೂ ಧರ್ಮೋದ್ಧಾರಕನೆಂದೂ ಋತಾಧಿಕಾರಿ ಯೆಂದೂ ಪರಿಗಣಿತನಾಗಿದ್ದರೂ ಅವನು ಈ ಲೋಕ ಭೂಮಿಕೆಗಿಳಿದ ಮೇಲೆ ಇಲ್ಲಿಯ ನಿಯಮಗಳನ್ನು ಉಲ್ಲಂಘಿಸಲಾರನೆಂಬುದನ್ನು ಮರೆಯಲಾಗದು. ಅವನು ತನ್ನಂತೆಯೇ ದುಃಖಿಯಾಗಿದ್ದ ಸುಗ್ರೀವನಿಗೆ ವಾಲಿಯನ್ನು ಕೊಲ್ಲುವುದಾಗಿ ಮಾತುಕೊಟ್ಟುದರಲ್ಲಿ ಅಸ್ವಾಭಾವಿಕತೆಯಾಗಲೀ ಅಕ್ರಮವಾಗಲೀ ಕಾಣದು. ಪ್ರಾಣಾಧಿಕಳಾದ ಭಾರ್ಯೆಯನ್ನು ಕಳೆದುಕೊಂಡು ಅಪಾರವಾದ ವಿಯೋಗ ದುಃಖದಿಂದ ಉನ್ಮತ್ತಪ್ರಾಯನಾಗಿ ವಸಂತ ಸಂಚಾರದಿಂದ ಪುಲಕಗೊಂಡ ಪ್ರಕೃತಿಯ ನಾನಾ ಸೌಂದರ್ಯ ವಿಲಾಸಗಳ ದರ್ಶನದಿಂದ ಮದನೋದ್ರಿಕ್ತನಾಗಿ[6] ನಿರಾಶನಾಗಿರುತ್ತಾನೆ. ನಿರಾಶೆಯೇ ಮೂರ್ತಿವೆತ್ತಂತಿದ್ದ ಕಬಂಧನ ರಾಕ್ಷಸ ಮುಷ್ಟಿಯಿಂದ ಪೀಡಿತನಾಗಿ, ಅವನ ರಾಕ್ಷಸತ್ವವನ್ನು ಪರಿಹರಿಸಿ ಬೃಂದಾರಕತ್ವವನ್ನು ಅನುಗ್ರಹಿಸಿ, ಅವನಿಂದ ಸುಗ್ರೀವನ ಗುಣವರ್ಣನೆಯನ್ನು ಕೇಳಿ ಮುಂದಿನ ಆಶಾಮಾರ್ಗ ವನ್ನರಿತು, ಶಬರಿಯ ಸೇವೆಯೇ ಆಶೀರ್ವಾದವಾಗಲು ಋಷ್ಯಮೂಕ ಪರ್ವತವನ್ನು ಸೇರುತ್ತಾನೆ. ಅಲ್ಲಿ ಸಂಧಿಸಿದ ಭಿಕ್ಷುರೂಪದ ಹನುಮಂತನ ವಾಕ್ಯಜ್ಞತೆಗೂ ಶಬ್ದಸೌಷ್ಠವಕ್ಕೂ ನಯನದ್ಯುತಿಗೂ ಲಲಾಟಲಾವಣ್ಯಕ್ಕೂ ಅನಿಂದಿತ ಸೌಂದರ್ಯಕ್ಕೂ ಮಾರು ಹೋಗುತ್ತಾನೆ. ಪಿತೃವಾಕ್ಯ ಪರಿಪಾಲನಾರ್ಥವಾಗಿಯೂ ಭ್ರಾತೃವಾತ್ಸಲ್ಯದ ಸ್ವರ್ಗ ಸುಖಕ್ಕಾಗಿಯೂ ರಾಜ್ಯ ಭೋಗವನ್ನು ತೊರೆದು ವನವಾಸದ ಕ್ಲೇಶಕಾರ್ಪಣ್ಯಗಳನ್ನುಂಡ ಶ್ರೀರಾಮನಿಗೆ ವಾಲಿಯ ಪ್ರತೀಕಾರ ಬುದ್ದಿಗೂ ಕ್ರೌರ್ಯಕ್ಕೂ ದೌರ್ಜನ್ಯಕ್ಕೂ ಭ್ರಾತೃದ್ರೋಹಕ್ಕೂ ತುತ್ತಾಗಿ ದುಃಖವನ್ನನುಭವಿಸುತ್ತಿದ್ದ ಸುಗ್ರೀವನ ವಿಷಯದಲ್ಲಿ ಕನಿಕರ ಮೂಡುವುದು ಆಶ್ಚರ್ಯವೇನಲ್ಲ ಹಾಗೂ ಏಕಪತ್ನೀವ್ರತಸ್ಥನಾಗಿ ಭಾರ್ಯಾಪಹರಣ ಸಂಕಟದ ಬೇಗೆಯಲ್ಲಿ ಬೆಂದವನು ನಿರಾಶಾಗ್ನಿ ಯಲ್ಲಿ ದಗ್ಧನಾದವನು ಸಮದುಃಖಿಯಾಗಿ ಕಾಡುಮೇಡುಗಳನ್ನಲೆದು ಗೋಳ್ಗರೆಯುತ್ತಿದ್ದ ಸುಗ್ರೀವನಲ್ಲಿ, ತನ್ನ ಕಷ್ಟಕ್ಕೊದಗುವುದಾಗಿ ಆಣೆಯಿಟ್ಟ ವ್ಯಕ್ತಿಯಲ್ಲಿ ಪಕ್ಷಪಾತವನ್ನು, ವಿಶೇಷ ಪ್ರೀತಿಯನ್ನು ತೋರುವುದು ಸಹಜವೇ ಸರಿ. ಅಷ್ಟೇ ಅಲ್ಲ, ಶ್ರೀರಾಮ ಆಗಿನ ಉತ್ಕಟ ಪರಿಸ್ಥಿತಿಯಲ್ಲಿ ತಾನು ಕೈಗೊಳ್ಳಬೇಕಾದ ಕಾರ್ಯದ ಸಾಧಕಬಾಧಕಗಳನ್ನು ಪೂರ್ವಾ ಪರಗಳನ್ನು ರೀತಿನೀತಿಗಳು ಎಷ್ಟರಮಟ್ಟಿಗೆ ವಿಚಾರಿಸಬಹುದೋ ಅಷ್ಟು ವಿಚಾರಿಸಲು ಪ್ರಯತ್ನಿಸಿದನು.[7] ಅವನು ಸಂಗ್ರಹಿಸಿದ ಸಾಕ್ಷಿಯೇನೂ ಏಕಪಕ್ಷೀಯವಾದುದು ನಿಜ. ಆದರೆ ಅವನು ಪ್ರತಿಕಕ್ಷಿಗಳ ಅಭಿಪ್ರಾಯವನ್ನು ಸಂಗ್ರಹಿಸುವ ವಿಧಾನವಾದರೂ ಹೇಗೆ? ಅವನ ಆಗಿನ ಉನ್ಮತ್ತಾವಸ್ಥೆಯಲ್ಲಿ, ಪ್ರತಿಯೊಂದು ಕ್ಷಣವೂ ಅವನಿಗೆ ಯುಗವಾಗಿರುವಾಗ, ಅವನ ಹೃದಯ ಉಬ್ಬೆಗದ ಸೂಜಿಮೊನೆಯ ಮೇಲೆ ಚಡಪಡಿಸುತ್ತಿರುವಾಗ, ಅಂಥ ಸಹನೆ ಸಾಧ್ಯವೆ? ನ್ಯಾಯಾಸ್ಥಾನದಲ್ಲಿ ಕುಳಿತ ನ್ಯಾಯಾಧೀಶನಂತೆ ವಕೀಲರ ಸಮ್ಮುಖದಲ್ಲಿ ವಾದಿ ಪ್ರತಿವಾದಿಗಳನ್ನು ವಿಚಾರಿಸಿ ಇತ್ಯರ್ಥಕ್ಕೆ ಬರಲು ಅವನಿಗೆ ಅವಕಾಶವಿದೆಯೆ? ಅಥವಾ ಅವನ ತೀರ್ಪನ್ನು ವಾಲಿ ಒಪ್ಪಿಕೊಳ್ಳುವ ಭರವಸೆಯಾದರೂ ಇದೆಯೆ? ಅಂಥ ಸನ್ನಿವೇಶದಲ್ಲಿ ಮನಬಂದಂತೆ ಅಂತಃಸ್ಫೂರ್ತಿ ನಡೆಸಿದಂತೆ ನಡೆಯುವುದೇ ನೀತಿ.

ಇಲ್ಲಿಯತನಕ ರಾಮ ಇಟ್ಟ ಹೆಜ್ಜೆ ತಪ್ಪಲ್ಲವೆಂದು ಸಮಾಧಾನ ಹೇಳಬಹುದಾದರೂ, ಮುಂದಿನ ಅವನ ವರ್ತನೆಗೆ ಸಮಾಧಾನ ಹೇಳುವುದು ಕಷ್ಟವಾಗುತ್ತದೆ. ಮರದ ಮರೆಯಲ್ಲಿ ನಿಂತು ಇಬ್ಬರು ಯೋಧರು ಯುದ್ಧ ಮಾಡುತ್ತಿರುವಾಗ ವೀರ ಸಂಗ್ರಾಮ ನೀತಿಯನ್ನು  ಮರೆತು, ಅದರಲ್ಲಿಯೂ ಬೆನ್ನಿಗೆ ಬಾಣ ಪ್ರಯೋಗ ಮಾಡುವುದು ರಾಮನ ದೈವತ್ವಕ್ಕಾಗಲೀ ಆದರ್ಶಕ್ಕಾಗಲೀ ಶೌರ್ಯಕ್ಕಾಗಲೀ ಹೆಸರು ತರುವುದಲ್ಲ. ಮಿತ್ರನಿಗೆ ವಾಗ್ದಾನ ಮಾಡಿದ್ದರೆ ಖಾಡಾಖಾಡಿಯಾಗಿ ನಿಂತು ಯುದ್ಧ ಮಾಡಬಹುದಾಗಿತ್ತು. ಕೂಟ ಯುದ್ಧ ಆಧುನಿಕ ನಾಗರಿಕ ಜನಾಂಗಗಳ ರಣನೀತಿಯಾದರೂ ಆಗಿನ ಕಾಲಕ್ಕೆ ಧರ್ಮ ವಿರುದ್ಧವೆಂದು ಅವಹೇಳಿತವಾಗಿತ್ತು. ಎರಡನೆಯ ಸಾರಿ ವಾಲಿ ಯುದ್ಧ ಸನ್ನದ್ಧನಾಗಿ ಹೊರಟ ಸಂದರ್ಭದಲ್ಲಿ ತಾರೆ ರಾಮನ ಗುಣಗಾನಮಾಡಿ ಅವನನ್ನು ತಡೆದಾಗ ಅವನು ಅವಳಿಗೆ ಇತ್ತ ಸಂದೇಶವನ್ನು ನೆನೆದುಕೊಂಡರೆ, ರಾಮನ ಬಗೆಗಿದ್ದ ಉತ್ಸಾಹ ಮತ್ತಷ್ಟು ಕುಸಿಯದಿರಲಾರದು.

ಸಂಶೋಧನಾತ್ಮಕ ವಿಮರ್ಶದೃಷ್ಟಿಯಿಂದ ಪರಿಶೀಲಿಸುವ ಲೋಕನಿಷ್ಠವಾದ ಸಾಮಾನ್ಯಮತಿಗೆ ಮೇಲಣ ಚರ್ಚೆ ಸರಿಯೆಂದು ತೋರಬಹುದು. ಸಾಮಾನ್ಯವಾಗಿ ಜೀವನದ ವ್ಯವಹಾರಗಳನ್ನೆಲ್ಲ ಕೇವಲ ವ್ಯಷ್ಟಿದೃಷ್ಟಿಯಿಂದ ನೋಡುವುದು ಮಾನವನ ಜನ್ಮಗುಣ. ವ್ಯಷ್ಟಿದೃಷ್ಟಿಯನ್ನು ಮೀರಿದ, ಅದಕ್ಕಿಂತಲೂ ಹಿರಿದಾದ ಸಮಷ್ಟಿದೃಷ್ಟಿಯಿಂದ ನೋಡುವುದು ಮಾನವನ ಹಿರಿಯ ಗುಣ. ಆದರೆ ಸಮಷ್ಟಿದೃಷ್ಟಿಗಿಂತಲೂ ಶ್ರೇಷ್ಠವಾದ, ಸರ್ವವ್ಯಾಪಕವಾದ ಮತ್ತು ಲೋಕೋತ್ತರವಾದ ಭಗವದ್ದೃಷ್ಟಿಯಿಂದ ಅಥವಾ ಸಮ್ಯಕ್ ದೃಷ್ಟಿಯಿಂದ ನೋಡುವುದು ಆದರ್ಶಮಾನವನ ಸರ್ವೋಚ್ಚ ಲಕ್ಷಣ. ಕೇವಲ ರಾಮ, ಸುಗ್ರೀವ ಅಥವಾ ವಾಲಿ ಒಬ್ಬೊಬ್ಬರನ್ನೇ ಆಗಲೀ ಕೇವಲ ವಾನರ ಸಮಾಜವನ್ನೇ ಆಗಲೀ ಸರ್ವಪ್ರಧಾನವೆಂದು ಬಗೆಯದೆ, ತತ್ಕಾಲೀನತೆಯ ಸಂಕುಚಿತ ದೃಷ್ಟಿಯಿಂದ ಪಾರಾಗಿ ಶಾಶ್ವತದೃಷ್ಟಿಯಿಂದ ಭೂತ ಭವಿಷ್ಯತ್ತುಗಳನ್ನೂ ಸಮಗ್ರ ಮಾನವ ಜೀವನವನ್ನೂ ವಿಶ್ವರಚನೆಯ ರಹಸ್ಯವನ್ನೂ ದರ್ಶಿಸಿ ದಾಗ ಮಾತ್ರ ಪೂರ್ಣ ಸತ್ಯ ಗೋಚರವಾಗುತ್ತದೆ. ಅದರ ಮುಂದೆ ರಾಮ ವಾಲಿಯರಿಗೂ ಕೃಷ್ಣ ವ್ಯಾಧರಿಗೂ ನಂಟು ಗಂಟುಹಾಕುವ ಕರ್ಮಸಿದ್ದಾಂತ ಸದ್ಯಃಸ್ಥಿತಿಯಲ್ಲಿ ಆಂಶಿಕ ಸತ್ಯವಾಗಿ ಕಾಣಬಹುದು; ಅಥವಾ ಅದನ್ನು ಮರೆತರೂ ತಪ್ಪಲ್ಲ. ಸುಗ್ರೀವನ ಸಖ್ಯವನ್ನು ಪುರಸ್ಕರಿಸಿ ಆ ಮೂಲಕ ಸೀತೆಯನ್ನು ಪಡೆದಿದ್ದರೆ ರಾವಣ ಕುಂಭಕರ್ಣರಿಗೆ ಮುಕ್ತಿ ದೊರೆತು ರಾಮಾವತಾರ ಸಾರ್ಥಕವಾಗುತ್ತಿತ್ತೆ ಎಂಬ ಸಂದೇಹ ಹಾಗೆಯೇ ಉಳಿಯುತ್ತದೆ.[8]

ಹೀಗೆ ವಾಲಿವಧವಿಧಾನವನ್ನು ಪೂರ್ಣದೃಷ್ಟಿಯಿಂದ ಗ್ರಹಿಸಿ ಮೂಲ ರಾಮಾಯಣದ ಪ್ರಕೃತ ಭಾಗದಲ್ಲಿ ಒಂದಾದ ಮೇಲೊಂದು ಮೂಡುವ ಸಮಸ್ಯೆಗಳಿಗೆ ಸಮಾಧಾನ ಹೇಳುತ್ತ ಹೋದಂತೆಲ್ಲ ಕೊಟ್ಟ ಕೊನೆಯ ಆಕ್ಷೇಪಣೆ ಹಾಗೆಯೇ ನಿಲ್ಲುತ್ತದೆ. ಬಾಣಾಘಾತದಿಂದ ನೆಲಕ್ಕುರುಳಿದ ವಾಲಿ ಶ್ರೀರಾಮನ ವರ್ತನೆಯನ್ನು ಕುರಿತು ಬಗೆ ಬಗೆಯಾಗಿ ಅಲ್ಲಗಳೆಯು ತ್ತಾನೆ. ಹೇಡಿಯೆಂದು, ಧರ್ಮಚ್ಯುತನೆಂದು, ವಂಚಕನೆಂದು, ತಿಳಿಗೇಡಿಯೆಂದು, ಕಪಟಾಚಾರ ನಿರತನೆಂದು, ಅಸಭ್ಯನೆಂದು, ನೀತಿಬಾಹಿರನೆಂದು, ಸ್ವಾರ್ಥಿಯೆಂದು, ಕ್ರೂರಿಯೆಂದು, ಪಾಪಿಯೆಂದು ರಾಮನನ್ನು ತೆಗಳಿ, ಅವನ ಮೇಲೆ ಅಪರಾಧವನ್ನು ಹೊರಿಸುತ್ತಾನೆ. ಅಂದು ವಾಲಿ ಎತ್ತಿದ ಆಕ್ಷೇಪವೇ ಇಂದು ಲೋಕ ಎತ್ತುವ ಆಕ್ಷೇಪ. ಆ ಆಕ್ಷೇಪಗಳಿಗೆ ರಾಮ ಏನೆಂದು ಉತ್ತರ ಕೊಟ್ಟಾನು? ಅಂದು ಅವನು ಆಕ್ಷೇಪಗಳಿಗೆ ಸರಿಯಾಗಿ ಸಮಾಧಾನ ಹೇಳಿ ಅಪರಾಧದಿಂದ ವಿಮುಕ್ತನಾಗಿದ್ದರೆ ಇಂದು ಲೋಕ ಅವನ ಕಡೆಗೆ ಕಿರುಬೆರಳನ್ನೂ ಎತ್ತುತ್ತಿರಲಿಲ್ಲ. ಮೂಲ ರಾಮಾಯಣದ ರಾಮ ಇಲ್ಲಿಯೂ ಎಡವಿದ್ದಾನೆ! ವಾಲಿಗೆ ಅವನು ನೀಡಿರುವ ಪ್ರತ್ಯುತ್ತರ[9] ಇಂದಿನ ತರ್ಕ ಚಮತ್ಕಾರಕ್ಕಾಗಲೀ ಧರ್ಮಾಭಿರುಚಿಗಾಗಲೀ ಒಗ್ಗುವಂಥದಲ್ಲ. ‘ಧರ್ಮಾರ್ಥಕಾಮಗಳನ್ನು ಸಮಯಾಚಾರಗಳನ್ನು ಅರಿಯದೆ ಹೀಗೆ ನಿಂದಿಸುತ್ತಿದ್ದೀಯೆ. ಇಕ್ಷ್ವಾಕುಕುಲದರಸನಾದ ಧರ್ಮಜ್ಞ ಭರತನ ಅಪ್ಪಣೆಯ ಮೇರೆಗೆ ನಾನೀಗ ಪ್ರವೃತ್ತನಾಗಿದ್ದೇನೆ. ನೀನು ತಮ್ಮನ ಹೆಂಡತಿಯನ್ನು ಅವನು ಬದುಕಿದ್ದಾಗಲೇ ಅಪಹರಿಸಿದ್ದೀಯೆ.[10] ಧರ್ಮಬಾಹಿರನೂ ಶಾಖಾಮೃಗವೂ ಆದ ನಿನ್ನನ್ನು ಕೊಲ್ಲಲು ಅನುಸರಿಸುವ ನೀತಿ ಎಂಥಾದ್ದಾದರೇನು?’ ರಾಮನ ಈ ವಾದ ಬುದ್ದಿಗೆ ಸಗ್ಗದು, ಹೃದಯಕ್ಕೆ ಒಗ್ಗದು. ಸಹೋದರಭಾರ್ಯೆಯನ್ನು ಸಹೋದರನ ಮರಣಾನಂತರ ಇಟ್ಟುಕೊಳ್ಳುವ ಪದ್ಧತಿ, ಈಗಿನ ರುಚಿಗೆ ಹಿಡಿಸದಿದ್ದರೂ, ಹಿಂದೆ ಯಾವುದೋ ಜನಾಂಗದಲ್ಲಿ ರೂಢಿಯಲ್ಲಿದ್ದುದರಿಂದ ಆಗಿನ ಕಾಲಕ್ಕೆ ಸರಿಯೆಂದು ಒಪ್ಪಬಹುದಾದರೂ, ವಾಲಿಯ ಶಿಕ್ಷಣ ವಿಧಾನವನ್ನು ಒಂದು ವೇಳೆ ಕೈಬಿಟ್ಟರೂ, ಶ್ರೀರಾಮನ ವಾದವನ್ನು ಮಾತ್ರ ಒಪ್ಪುವುದು ಕಷ್ಟವಾಗುತ್ತದೆ. ಸಾಂಪ್ರತದೃಷ್ಟಿಗಿರಲಿ, ಪುರಾತನದೃಷ್ಟಿಗೂ ಅದು ಒಪ್ಪುತ್ತಿರಲಿಲ್ಲವೇನೂ?[11]

ವಾಲ್ಮೀಕಿ ವ್ಯಾಸರಿಗೆ ಸಗ್ಗದ ಕೆಲವು ಖಲಪಾತ್ರಗಳು ಭಾಸನ ಪ್ರತಿಭಾಗಾರುಡಿಗೆ ಮಣಿದು ಸ್ವರೂಪಾಂತರವನ್ನು ಪಡೆದಿದ್ದರೂ, ನೂತನ ಸನ್ನಿವೇಶ ರಚನೆಯಲ್ಲಿ ಅವನ ಅದ್ಭುತ ಕೌಶಲ ಅನೇಕ ಕಡೆ ಸ್ಪಷ್ಟಗೋಚರವಾಗಿದ್ದರೂ, ‘ಅಭಿಷೇಕ ನಾಟಕ’ದ ವಾಲಿ ವಧೆಯ ಸಂದರ್ಭದಲ್ಲಿ ಅವನ ಪ್ರತಿಭೆ ಮುಗ್ಗುರಿಸಿದಂತೆ, ದರ್ಶನಮಾಂದ್ಯತೆ ತಲೆದೋರಿದಂತೆ, ಕಲ್ಪನಾ ಖಗ ಗರಿಸೀದು ತಿರೆಗುರುಳಿದಂತೆ ಕಾಣುತ್ತದೆ. ವಾಲಿಯ ಪಾತ್ರವನ್ನು ಉತ್ತಮ ಗೊಳಿಸದಿದ್ದರೂ ಸರಿಯೆ; ರಾಮನ ಪಾತ್ರಕ್ಕೆ ಅಪಚಾರವೆಸಗಿದ್ದಾನೆನ್ನುವ ಭಾವನೆ ಓದುಗರಲ್ಲಿ ಮೂಡುವಂತಿರದಿದ್ದರೆ ಚೆನ್ನಾಗಿತ್ತು. “ಮರೆಯಿಂದ ಕೊಲ್ಲುವುದು ಅಧರ್ಮವಲ್ಲವೆ?” ಎಂದು ಕೇಳಿದ ವಾಲಿಗೆ ರಾಮ ಕೊಡುವ ಉತ್ತರವಿದು :

ಬಲೆಯಂ ಸೇರಿದ ಮೃಗ ಸಂ
ಕುಲಮಂ ಸಂಹರಿಪುದುಚಿತಮಾದಪುದಲ್ತೇ
ಕೊಲೆಗಾಂತಂ ಮೃಗಿಯುಂ ನೀ
ನಲೆಯದರಿಂ ಗುಪ್ತ ರೀತಿಯಿಂ ಶಿಕ್ಷಿಸಿದೆಂ

ವಾಲಿ – ‘ನೀನು ನನ್ನನ್ನು ದಂಡ್ಯನೆಂದು ತಿಳಿದಿರುವೆಯಾ?’

ರಾಮ – ‘ಸಂಶಯವೇನು?’

ವಾಲಿ – ‘ಯಾವ ಕಾರಣದಿಂದ?’

ರಾಮ – ‘ಅಗಮ್ಯಗಮನದಿಂದ?’

ವಾಲಿ – ‘ಸೋದರನ ಸತಿಯನ್ನು ಸೋಂಕಿದುದರಲ್ಲಿ ಸಮಾನದೋಷಿಗಳಾದೆಮ್ಮಿರ್ವರಲ್ಲಿ ನಾನು ಮಾತ್ರ ಶಿಕ್ಷಾರ್ಹನು, ಸುಗ್ರೀವನಲ್ಲ!’

ರಾಮ – ‘ಹಿರಿಯವನು ಕಿರಿಯವನ ಮಡದಿಯನ್ನು ತಾಗುವುದು ಯಾವಾಗಲೂ ಇಲ್ಲವಲ್ಲವೆ?’

ರಣರಂಗದಲ್ಲಿ ಅತುಲ ಪರಾಕ್ರಮದಿಂದ ಹೋರಾಡಿದ ವಾಲಿ ಇಲ್ಲಿ ವಿಚಾರ ಶೂನ್ಯನಂತೆ, ಹೇಡಿಯಂತೆ ವರ್ತಿಸಿರುವುದು ಅವನ ಸ್ವಭಾವಕ್ಕೇ ಅವನ ಸ್ವಧರ್ಮಕ್ಕೇ ವಿರುದ್ಧವಲ್ಲವೆ?

ಲೋಕಾತಿಕ್ರಾಂತವಾದ ಸಮ್ಯಕ್‌ದೃಷ್ಟಿಗೆ ಧರ್ಮಬಾಹಿರವಲ್ಲವೆಂದು ಗೋಚರವಾಗುವ ಮೂಲ ರಾಮಾಯಣದ ವಾಲಿವಧಪ್ರಸಂಗ ಲೋಕನಿಷ್ಠವಾದ ಸಾಮಾನ್ಯಮತಿಯ ಖಂಡದೃಷ್ಟಿಗೆ ಹೇಗೆ ನೀತಿದೂರವಾಗಿ ನ್ಯಾಯವಿರುದ್ಧವಾಗಿ ಕಾಣುತ್ತದೆಂಬುದನ್ನೂ, ಇದೇ ಪ್ರಸಂಗ ‘ಅಭಿಷೇಕ ನಾಟಕ’ದಲ್ಲಿ ಹೇಗೆ ಅಪಹಾಸ್ಯಭಾಜನವಾಗುವಂತೆ ಚಿತ್ರಿತವಾಗಿದೆ ಯೆಂಬುದನ್ನೂ ಮೇಲೆ ನೋಡಿತು. ಮೂಲ ರಾಮಾಯಣದ ದರ್ಶನೋದ್ದೇಶಕ್ಕೆ ಭಂಗ ಸಂಭವಿಸದಂತೆ, ರಾಮವಾಲಿಯರ ಪಾತ್ರಗಳ ವ್ಯಕ್ತಿತ್ವದ ಘನತೆ ಲೋಕೋತ್ತರವಾಗಿ ಬೆಳಗುವಂತೆ, ವಾನರತ್ವವಳಿದು ನರತ್ವ ಅಮರತ್ವಗಳು ಪ್ರತಿಷ್ಠೆಗೊಳ್ಳುವಂತೆ ಈ ಸನ್ನಿವೇಶ ಶ್ರೀರಾಮಾಯಣದರ್ಶನದಲ್ಲಿ ದರ್ಶನಾತ್ಮಕವಾಗಿ ಚಿತ್ರಿತವಾಗಿದೆ. ಇಲ್ಲಿ ದೇವಕಲ್ಪನಾದ ಶ್ರೀರಾಮ ತನ್ನ ಅಪರಾಧವನ್ನು ತಾನೇ ಒಪ್ಪಿಕೊಳ್ಳುವುದರ ಮೂಲಕ ನರತ್ವವನ್ನುಳಿದು ಅಮರತ್ವವನ್ನು ತಾನೂ ಸಂಪಾದಿಸಿಕೊಂಡು, ವಾಲಿಯನ್ನು ವಾನರತ್ವದಿಂದುದ್ಧರಿಸಿ ಅಮರತ್ವವನ್ನು ಕೃಪೆಗೈಯುವ ಅಮೃತಸಂದರ್ಭವನ್ನೆದುರುಗೊಳ್ಳುತ್ತೇವೆ. ವೈರದ್ವೇಷ ಮಾತ್ಸರ್ಯಗಳನ್ನುಕ್ಕಿಸಿ ಕಠೋರ ದುರಂತವಾಗಿ ಪರಿಣಮಿಸಿ ಓದುಗರ ಹೃದಯದಲ್ಲಿ ಅಶಾಂತಿ ಅತೃಪ್ತಿಗಳನ್ನು ಕೆರಳಿಸುವಂತಿದ್ದ ಹೃದಯ ವಿದ್ರಾವಕಾರಿಯಾದ ಈ ಮಹಾಸನ್ನಿವೇಶ ಕವಿಪ್ರತಿಭೆಯ ಮಹಾಮಾಯೆಯಿಂದ ಕ್ಷಮಾಪ್ರೇಮಶಾಂತಿದಾಂತಿಯೇ ಮೊದಲಾದ ದೈವೀಗುಣಗಳ ಕಲ್ಯಾಣಕಾರಿಯಾದ ವಿಜಯಯಾತ್ರೆಯಾಗಿ ಓದುಗರ ಹೃದಯದಲ್ಲಿ ಅನುಕಂಪೆ ಸಹಾನುಭೂತಿ ಶಾಂತಿ ತೃಪ್ತಿಗಳು ವಿಕಾಸಗೊಳ್ಳುವಂತೆ ಸೃಷ್ಟಿಯಾಗಿದೆ.

ರಾಮಸುಗ್ರೀವರ ಭೇಟಿಯಾಗುವ ಮುಂಚೆಯೇ ವಾಲಿಸುಗ್ರೀವರ ವೈರಕಾರಣವನ್ನೂ ಸುಗ್ರೀವನ ರಾಜ್ಯಚ್ಯುತಿಯ ಮತ್ತು ಭಾರ್ಯಾಪಹರಣದ ದುಃಖ ಕಥೆಯನ್ನೂ ಸುಗ್ರೀವನ ಮತ್ತು ಅವನ ಅನುಯಾಯಿಗಳ ಅಲೌಕಿಕ ಸಿದ್ದಿ ಸಂಪತ್ತನ್ನೂ ಚಿತ್ರಿಸಿ, ಮುಂದಣ ಕಾವ್ಯರಸಾಸ್ವಾದನೆಗೆ ಅನುಕೂಲವಾಗುವಂತೆ ಓದುಗರ ಮನಸ್ಸನ್ನು ಹದಗೊಳಿಸುವುದರಿಂದಲೆ ಕವಿಪ್ರತಿಭೆಯ ಮಹಿಮೆ ವ್ಯಕ್ತವಾಗುತ್ತದೆ. ಮೂಲ ರಾಮಾಯಣದಲ್ಲಿ ಇದೇ ಕತೆಯನ್ನು ಸುಗ್ರೀವನ ಬಾಯಿಂದ ರಾಮನಿಗೆ ಹೇಳಿಸಿರುವುದರಿಂದ ಓದುಗರ ಮನಸ್ಸು ಸಹಜವಾಗಿಯೇ ಸುಗ್ರೀವನಲ್ಲಿ ಪಕ್ಷಪಾತ ಮನೋಭಾವವನ್ನು ಆರೋಪಿಸಿದರೆ ತಪ್ಪಾಗಲಾರದು. ವಾಲಿಯ ಮರಣವನ್ನೂಹಿಸಿ ರಾಜ್ಯಾಭಿಷಿಕ್ತನಾದ ಸುಗ್ರೀವ ಅಗ್ರಜಭಾರ್ಯೆಯನ್ನು ಪತ್ನಿಯಾಗಿ ಸ್ವೀಕರಿಸುವುದು ಆಧುನಿಕಾಭಿರುಚಿಗೆ ಒಗ್ಗುವುದಂತಿರಲಿ, ಕಾವ್ಯದೃಷ್ಟಿಯಿಂದಲೂ ಎಂಥ ಮಹತ್ತರವಾದ ಉಚಿತವಾದ ಮತ್ತು ಪರಿಣಾಮಕಾರಿಯಾದ ಮಾರ್ಪಾಡೆನ್ನುವುದನ್ನು ಮರೆಯಲಾಗದು. ಈ ಸಂದರ್ಭ ಸುಗ್ರೀವನ ಹಿರಿಮೆಯನ್ನು ಸ್ಪಷ್ಟಪಡಿಸುವುದಲ್ಲದೆ ಮುಂದೆ ತಾರೆ ಸುಗ್ರೀವನ ಪರವಾಗಿ ವಾಲಿಯೊಡನೆ ವಾದಿಸುವ ಸಂದರ್ಭಕ್ಕೆ ಹೇಗೆ ಪೋಷಕ ವಾಗುತ್ತದೆನ್ನುವುದನ್ನು ಗಮನಿಸಬೇಕಾಗಿದೆ.

ಶ್ರೀ ರಾಮಾಯಣದರ್ಶನದ ಪಾತ್ರಗಳು ಕವಿನಿರ್ಮಿತವೆನ್ನುವುದಕ್ಕಿಂತ ಕವಿಯ ದರ್ಶನಾತ್ಮಕವಾದ ಪ್ರತಿಭಾಶ್ರೀಯಿಂದ ಮೂಡಿವೆಯೆಂದು ಧಾರಾಳವಾಗಿ ಹೇಳಬಹುದು. ಕವಿಯೇ ಕರ್ತೃವಾಗಿ, ಸೂತ್ರಧಾರನಾಗಿ ಪಾತ್ರಗಳನ್ನಾಡಿಸುತ್ತಾನೆನ್ನುವುದಕ್ಕಿಂತ ಅವನ ‘ಕಾಣ್ಕೆ’ಯೇ ಇಲ್ಲಿ ಸಾಕಾರತೆ ಪಡೆದಿದೆಯೆನ್ನಬಹುದು. ಇಲ್ಲಿಯ ಪ್ರತಿಯೊಂದು ಕ್ರಿಯೆಯೂ ಸನ್ನಿವೇಶ ರಚನೆಯೂ ಆಯಾಯ ಪಾತ್ರಗಳ ಸ್ವರೂಪ ಸ್ವಭಾವಗಳನ್ನವಲಂಬಿಸಿವೆ. ಹಿಂದಿನ ಸನ್ನಿವೇಶವನ್ನು ಗ್ರಹಿಸಿದವರು ಮುಂದೆ ನಡೆಯಬಹುದಾದುದನ್ನು ಬಹುಮಟ್ಟಿಗೆ ಸರಿಯಾಗಿ ಊಹಿಸಬಹುದು. ನಿದರ್ಶನಾರ್ಥವಾಗಿ, ಮಾಯಾವಿಯನ್ನು ಕೊಂದು ಬಿಲದ್ವಾರ ಕಾಣದೆ, ಮುಚ್ಚಿದ್ದ ಬಂಡೆಯನ್ನು ಪದಗದೆಯಿಂದ ತಳ್ಳಿ ನೂಕಿ ಕುಟ್ಟಿ ಗುದ್ದಿ, ಆಗದೆ, ಬೈದು ತಪಿಸಿ ಶಪಿಸಿ ಉರಿದೆದ್ದ ಸನ್ನವೇಶವನ್ನು ಅವಗಾಹನೆಗೆ ತಂದುಕೊಳ್ಳಬಹುದು. ಮುಂದಾದುದನ್ನು ಕವಿಯ ಕುಂಚಿಕೆಯೆ ಚಿತ್ರಿಸಲಿ!

….ಕಂಬನಿಗರೆದನೈ…. ಕಡೆಗೆ,
ತಾರೆಯಂ, ತನ್ನೊಲಿದ ಹದಿಬದೆಯ ನೀರೆಯಂ,
ನೆನೆದು. ನೆನೆದುದೆ ತಡಂ, ಸಂಚರಿಸಿದುದು ಮಿಂಚು
ಧಮನಿಧಮನಿಯೊಳುಜ್ವಲಂ ಪರಿದು! ಕಪಿಕುಲಂ
ಚಿಮ್ಮೆಳ್ದನತಿಬಲಂ! ರುದ್ರಾಟ್ಟಹಾಸದಿಂ
ಕೂಗಿ ಗರ್ಜಿಸಿ ನುಗ್ಗಿದನ್ ತಳ್ಳಿ! ಶೀಶೆಯಂ
ಕಾಯಿಸೆ ತಟಿಲ್ಲೆಂದು ಮುಚ್ಚಳಂ ಸಿಡಿವವೋಲ್
ಚಂಡವಾನರ ಗಂಡುಗಂಡಕೆ ಸಿಡಿಲ್ದುದಾ
ಬಂಡೆ!….

ಇಲ್ಲಿಯ ಉಪಮಾನಪ್ರಯೋಗದ ಸ್ವಾರಸ್ಯವನ್ನೂ ಅರ್ಥವ್ಯಾಪ್ತಿಯನ್ನೂ ಗ್ರಹಿಸಿದರೆ ಮುಂದಿನ ಸನ್ನಿವೇಶ ಚೆನ್ನಾಗಿ ಮನದಟ್ಟಾಗುತ್ತದೆ. ಕಾದ ಶೀಶೆಯ ಮುಚ್ಚಳ ಸಿಡಿಯುವಂತೆ ಬಂಡೆ ಸಿಡಿಯಿತು! ಅದರಂತೆ ಅವನೂ ಸಿಡಿದನು! ರಕ್ತ ಸೋರುವಂತೆ ತುಟಿ ಗಚ್ಚಿದನು. ಅವನ ಆಗಿನ ಭೀಕರ ಸ್ವರೂಪ ಮುಂದಾಗುವುದನ್ನು ಸಾರುತ್ತಿತ್ತು. ಕೂಡಲೆ ಕಿಷ್ಕಿಂಧೆಗೆ ಧಾವಿಸಿ, ತಪೋನಿರತಳಾದ ಸತಿಯಿಂದ ನಡೆದುದನ್ನು ಕೇಳಿ, ‘ರೋಷ ಪ್ರತೀಕಾರ ಛಲ ಬಲಾನ್ವಿತನಾಗಿ’ ಸುಗ್ರೀವನೆಡೆಗೆ ನಡೆದನು. ಅಣ್ಣನ ದರ್ಶನ ಭಾಗ್ಯದಿಂದ ಪ್ರಹೃಷ್ಟಚಿತ್ತನಾದ ಸುಗ್ರೀವ “ಸಿಂಹಾಸನವನೊದ್ದು ಬಿಸುಟೆದ್ದು ಬಂದಪ್ಪಿದನ್ ‘ಬಂದೆಯಾ’ ಎನುತೆ ಪ್ರೀತಿಯಂ ತೊದಲುತೊದಲಾಡಿ.” ಮಾತಾಡಲೂ ಎಡೆಗೊಡದೆ ವಾಲಿ ರಾಜದ್ರೋಹಿಯೆಂದು ತಮ್ಮ ನನ್ನು ಬೈದು, ದೇಶಚ್ಯುತಿಯ ಶಿಕ್ಷೆಯನ್ನು ವಿಧಿಸಿದನು. ಸಾತ್ತ್ವಿಕ ಶಿರೋಮಣಿ ಸುಗ್ರೀವ ಆಂಜನೇಯನ ಬಲ ಪ್ರಯೋಗದ ಸಲಹೆಯನ್ನು ನಿರಾಕರಿಸಿದನು. ಕೊನೆಗೆ ಭಾರ್ಯಾಪಹೃತನಾದ ಸುಗ್ರೀವ ಗೆಳೆಯರೊಡನೆ ಕಿಷ್ಕಿಂಧೆಯನ್ನುಳಿದು ಮತಂಗಋಷ್ಯಾಶ್ರಮದ ರಕ್ಷೆಯಲ್ಲಿ ತಪೋನಿರತನಾದನು.

ಇಲ್ಲಿಯ ರಾಮಸುಗ್ರೀವರ ಮಿತ್ರತ್ವ ಸ್ವಾರ್ಥದ ಕಿಲ್ಬಿಷದಿಂದ ಕಲುಷಿತವಾಗಿಲ್ಲ ವೆಂಬುದಕ್ಕೆ, ಸ್ವಾರ್ಥವಿದೆಯೆಂದು ಹೇಳುವುದಾದರೂ ಅದರಲ್ಲಿ ಪರಾರ್ಥವೂ ಲೋಕ ಹಿತಾರ್ಥವೂ ಅಡಕವಾಗಿದೆಯೆನ್ನುವುದಕ್ಕೆ ಕಬಂಧನ ಆದೇಶವೂ, ಶಬರಿಯ ಸಂದೇಶವೂ, ಆಂಜನೇಯನ ಪ್ರಥಮ ಸಂದರ್ಶನದ ಅಲೌಕಿಕ ಸಂದರ್ಭವೂ ಸಾಕ್ಷಿಯಾಗಿವೆ. ಧೈರ್ಯ ಚ್ಯುತನೂ ದುಃಖಾರ್ತನೂ ಆದ ರಾಮ ಯಾರನ್ನೋ ಕಂಡಂತಾಗಿ ತಮ್ಮನನ್ನು ಕುರಿತು

……………………….ಇಲ್ಲಿಯೋ
ಮೇಣೆಲ್ಲಿಯೋ ಅರಿಯೆನಾಂ, ವತ್ಸ! ಕಾಣದು ಕಣ್ಗೆ;
ಬಗೆಗೆ ಸುಳಿದಿದೆ ಬರವು ಬಾಳ್ಗೆಳೆಯನೊರ್ವನಾ!

ಎಂದು ಹೇಳುತ್ತಾನೆ. ಆಂಜನೇಯನ ಕೊರಳ ಸಂಸ್ಕೃತಿಗೆ ದಿವ್ಯಾಕಾರಕ್ಕೆ ಶಿತಮತಿಗೆ ನಯನದ್ಯುತಿಗೆ ಧನುರ್ಧ್ವನಿಯ ಗಾಂಭೀರ್ಯಕ್ಕೆ ರಾಮ ಮಾರುಹೋಗುತ್ತಾನೆ. ಹೀಗಿದ್ದೂ ಸುಗ್ರೀವನ ಸಾತ್ತ್ವಿಕ ತೇಜಸ್ಸನ್ನು ನೋಡಿಯೂ ಶ್ರೀರಾಮ “ಪೂಣ್ದೆನಗ್ನಿಯೆ ಸಾಕ್ಷಿ!” ಎಂದುದರಲ್ಲಿ ಅಸಹಜತೆ ಕಾಣುವುದಿಲ್ಲ. ದುಃಖಿಗೆ ದುಃಖಿ ನೆರವಾಗುವನಲ್ಲದೆ ಸುಖಿ ನೆರವಾಗುತ್ತಾನೆಯೆ? ಒಮ್ಮೆ ಮಾತುಕೊಟ್ಟ ಮೇಲೆ ಎಂಥ ವಿಷಮ ಸಂದರ್ಭವೊದಗಿದರೂ ಅದನ್ನು ನಡೆಯಿಸಿಕೊಡುವುದು ಮಾನವನ ಹಿರಿಯ ಗುಣ. ಅದನ್ನರಿತೇ ಸುಗ್ರೀವನ ವಿಷಯದಲ್ಲಿ ಸಂದೇಹ ತಾಳಿದ ಲಕ್ಷ್ಮಣನನ್ನು ಕುರಿತು “ಕೆಳೆಯರೊಲ್ಮೆಯಂ ಬಿಟ್ಟು ಕಳೆವುದು ಬರಿಯ ಬೆಳ್ತನಂ” ಎಂದು ರಾಮ ಹೇಳುತ್ತಾನೆ.

ಈ ಹಿನ್ನೆಲೆಯಲ್ಲಿ ಮುಂದಿನ ವಾಲಿ ವಧೆಯ ಪ್ರಸಂಗವನ್ನು ಪರಿಶೀಲಿಸಿ ನ್ಯಾಯಾ ನ್ಯಾಯಗಳನ್ನೂ ಧರ್ಮಾಧರ್ಮಗಳನ್ನೂ ತೂಗಬೇಕಾಗಿದೆ. ಮೂಲದಂತೆಯೆ ಇಲ್ಲಿಯೂ ವಾಲಿಸುಗ್ರೀವರ ಪ್ರಥಮ ಯುದ್ಧ ಕ್ಷಿಪ್ರದಲ್ಲಿಯೆ ಮುಕ್ತಾಯವಾಗುತ್ತದೆ. ಆದರೆ ಇಲ್ಲಿಯ ವಾಲಿ ಸುಗ್ರೀವನನ್ನು ಕುರಿತು ಆಡುವ ಮಾತುಗಳಲ್ಲಿ ತೋರುವ ವಾಲಿಯ ಅಂತರಂಗ ಪರಿಶುದ್ಧತೆಯನ್ನೂ ಸ್ವರೂಪಾಂತರತೆಯನ್ನೂ ಭ್ರಾತೃವಾತ್ಸಲ್ಯವನ್ನೂ ಸಾತ್ತ್ವಿಕ ತೆಜಸ್ಸನ್ನೂ ಗಮನಿಸಬೇಕು.೧೧ ಅವನ ಭ್ರಾತೃವಾತ್ಸಲ್ಯವೇ ತಮ್ಮನ ಪ್ರಾಣಕ್ಕೆ ರಕ್ಷೆಯಾಗಿ, ಕೊನೆಗೆ ಆತ್ಮಭಿಕ್ಷೆಯನ್ನೇ ಬೇಡುತ್ತದೆ.

ಪುರಾಕೃತಪಾಪವೆಲ್ಲ ಕಾಲಕ್ರಮೇಣ ಪಶ್ಚಾತ್ತಾಪದ ಬೆಂಕಿಯಲ್ಲಿ ಬೆಂದು, ನಿರ್ಮಲ ಸ್ನೇಹ ಚಂದ್ರಿಕೆಯಲ್ಲಿ ವಾನರತ್ವದ ತಮಸ್ಸಳಿದು ದೇವತ್ವ ಗೋಚರಿಸಲು, ಭ್ರಾತೃವಾತ್ಸಲ್ಯಕ್ಕೆ ತನ್ನೆಲ್ಲವನ್ನು ನಿವೇದಿಸಿ, ವೈರದಲ್ಲಿಯೆ ಪ್ರೇಮವನ್ನೂ ಪತನದಲ್ಲಿಯೆ ಉದ್ಧಾರವನ್ನೂ ಮರಣದಲ್ಲಿಯೆ ಅಮೃತತ್ವವನ್ನೂ ಕಂಡ ವಾಲಿಯ ಅವಸಾನ ಸನ್ನಿವೇಶ ಸೃಷ್ಟಿಯಲ್ಲಿ ಮಾನವತ್ವದ ಹಿರಿಮೆ ವೆಗ್ಗಳಿಸುತ್ತಿದೆ. ತಮ್ಮನನ್ನು ಗೆದ್ದ ಸಂತೋಷದಿಂದ ವಾಲಿ ಊರನ್ನು ಪ್ರವೇಶಿಸುತ್ತಾನೆ. “ತಾರೆ, ಕೊಡಗಿನುಡುಗೆಯ ಸೀರೆ ಸಿಂಗರಿಸಿದಾ ನೀರೆ” ಗಾಯಗಳಿಗೆ ಮದ್ದಿಕ್ಕುತ್ತ ಬೀಸಣಿಗೆ ಬೀಸುತ್ತ ಕೈಸೋಂಕಿನಿಂದ ಬಳಲಿಕೆಯನ್ನಾರಿಸುತ್ತ ಸಂಗ್ರಾಮದ ಆಗುಹೋಗುಗಳನ್ನು ಕೇಳುತ್ತಾಳೆ. ಇಲ್ಲಿ ಆ ಒಂದೇ ಒಂದು ಪಂಕ್ತಿಯಲ್ಲಿ ಶೃಂಗಾರ ರಸದ ಊಟೆಯನ್ನುಕ್ಕಿಸಿರುವುದರ ಔಚಿತ್ಯವನ್ನೂ ಅನುಪ್ರಾಸಾಲಂಕಾರದ ನಾದಮೋಹಕತೆಯನ್ನೂ ಅರ್ಥಾಭಿವ್ಯಕ್ತಿಯನ್ನೂ ಧ್ವನಿಶಕ್ತಿಯನ್ನೂ ಈ ಮೂರೂ ಸೇರಿ ಸೃಷ್ಟಿಸುವ ಸೌಂದರ್ಯ ಪರಿವೇಷವನ್ನೂ ಗಮನಿಸಬೇಕು. ಪ್ರಿಯಸತಿಗೆ ನೀಡುವ ಉತ್ತರದಲ್ಲಿ[12] ಅವನ  ಹೃದಯ ಪರಿವರ್ತನೆ ಎದ್ದು ಕಾಣುತ್ತದೆ. ಆಗ ತಮ್ಮನ ವಿನಯಶ್ರೀ ಮತ್ತು ಸೌಜನ್ಯಸಂಪನ್ನತೆಗಳು ಅವನಿಗೆ ಅರಿವಾಗುತ್ತವೆ; ತಮ್ಮನ ಅನಾಥಪರಿಸ್ಥಿತಿ, ದಂಪತಿಗಳ ವಿಯೋಗ ದುಃಖ, ರುಮಾದೇವಿಯ ಗೋಳು ಅವನ ಗಂಡೆದೆಯನ್ನು ಕಲಕಿ, ಹಿಸುಕಿ, ಹಿಂಡುತ್ತವೆ. ಸತಿಯ ಹಿಂದಿನ ಹಿತವಾಕ್ಯ ಸ್ಮರಣೆಗೆ ಬರುತ್ತದೆ. ಆದರೂ ‘ಪುಸಿಬೀರದ ಪುಸಿಲಜ್ಜೆ’ ತಮ್ಮನನ್ನು ಮರಳಿಸುವ ಹಂಬಲದ ಔದಾರ್ಯಕ್ಕೆ ಅಡ್ಡಿಯೊಡ್ಡುತ್ತದೆ.

ಹೀಗೆ ಸತಿಯೊಡನೆ ಸಂಕಟವನ್ನು ಸುರಿದಳೆಯುತ್ತಿರುವಾಗಲೇ ಸುಗ್ರೀವನ ಆರ್ಭಟ ಕೇಳಬರುತ್ತದೆ. ರಕ್ತೇಕ್ಷಣನಾಗಿ ಬದ್ಧಭ್ರಕುಟಿಯಾಗಿ ನೆಗೆದೆದ್ದು, ತಡೆದ ತಾರೆಯ ಕೈಯನ್ನು ನೂಕಲು ಅವಳು ಕೆಳಗುರುಳುತ್ತಾಳೆ. ಪತಿಯ ಪಾದವನ್ನು ಹಿಡಿದು ಆ ಕಣ್ಣೀರ ಚೆಲುವೆ ಪತಿಯ ಮನಕರಗುವಂತೆ ಪ್ರಾರ್ಥಿಸುತ್ತಾಳೆ :

……..ಮಾಣ್, ಮನದನ್ನ, ಮಾಣ್, ಮಾರದಿರ್ ಚಲಕೆ
ಜೀವನಶ್ರೇಯಮಂ. ನೀನೀಗಳೆನ್ನೊಡನೆ
ನುಡಿಯುತಿರ್ದುದನೆ ಪಿಡಿ: ವೀರರೌದಾರ್ಯಮಂ!
ಪತಿವ್ರತಾ ರಮಣಿಯಂ ಆ ರುಮಾದೇವಿಯಂ
ನೆನೆ. ಪಡೆದ ತಾಯನಂತೆಯೆ ತಂದೆಯಂ ನೆನೆ;
ಅಂತೆವೋಲ್ ನಿಮ್ಮಿರ್ವರೆಳೆತನದ ಲೀಲೆಯಂ,
ತಾರುಣ್ಯದೋಲದುಯ್ಯಲೆಯಂ ನೆನೆ. ಪಿಂತೆ
ನಿಮ್ಮೊಳಿರ್ದಕ್ಕರೆಯ ಸಗ್ಗಮಂ ನೆನೆ….

ಸತಿಯ ಜೇನ್ನುಡಿಯನ್ನು ಕೇಳುತ್ತ ಕೇಳುತ್ತ ವಾಲಿ ರೋಷವಿವರ್ಜಿತನಾಗಿ “ಅಣ್ಣ ಬಾ, ಬಾರೆಂದು ಜೊಲ್ಲ ತೊದಳಿಂ ಚೀರ್ವ ಕಂದ ಸುಗ್ರೀವ”ನನ್ನು ಬೆನ್ನಿನ ಮೇಲೆ ಹೊತ್ತು “ಉಪ್ಪುಬೇಕೇ ಉಪ್ಪು?” ಎಂದು ಓಡಾಡಿ ಸುತ್ತಣವರನ್ನೆಲ್ಲ ನಗಿಸಿದ ವೈರೋಪಶಮನ ಕಾರಿಯೂ ಆಹ್ಲಾದದಾಯಕವೂ ಆದ ಹಿಂದಿನ ರಮ್ಯಚಿತ್ರವನ್ನು ನೆನೆಸಿಕೊಳ್ಳುತ್ತಾನೆ. ಇದು ಜೀವನ! ಇದರ ಮುಂದೆ ಸ್ವರ್ಗ ಸುಖವೂ ಬರಡಾಗುತ್ತದೆ! ಶತ್ರು ವಿಧ್ವಂಸಕನ, ಕಠೋರ ಹಠಸಾಧಕನ ಚಿತ್ತದಲ್ಲಿ ಮೈತ್ರಿ ಸಂಚರಿಸುತ್ತದೆ.

ನೆರಪುವೆನ್, ತಾರೆ, ಸುಗ್ರೀವನಂ ತಂದಿಂದು
ರುಮೆಗೊಸಗೆಯಂ. ಸಿಂಗರಿಸು ನಡೆ ನಿನ್ನ ತಂಗಿಯಂ
ಚಿಕ್ಕಂದು ನಾವಾಡಿದುಪ್ಪಾಟಮಂ ಮತ್ತಿಂದು
ತೋರಿದಪೆನೆನ್ನ ತಮ್ಮಂಗೆ. ನೀನನ್ಯಮಂ
ಚಿಂತಿಸದಿರಾಂ ಪೋಗಿ ಕಾಳೆಗದ ನೆವದಿಂದೆ
ಪೊತ್ತು ತಹೆ ರವಿಸೂನುವಂ!

ಎಂದು ಸತಿಗೆ ಹೇಳಿ ವಾಲಿ ನಿಲ್ಲದೆ ಹರ್ಷೋನ್ಮಾದದಿಂದ ಓಡುತ್ತಾನೆ.

ಪಾಪ! ಅಣ್ಣನ ಹೃದಯ ಪರಿವರ್ತನೆ ತಮ್ಮನಿಗೇನು ಗೊತ್ತು! ರಾಮನಿಂದ ಪ್ರೇರಿತನಾಗಿ ಧೈರ್ಯೋತ್ಸಾಹದಿಂದ ಸುಗ್ರೀವ ಬಂದಿದ್ದಾನೆ. ಕರುಣಸಾಗರನಾದ ವಾಲಿ ತಮ್ಮನನ್ನಪ್ಪಿಕೊಳ್ಳುವ ಭರದಿಂದ ಮುನ್ನುಗ್ಗಿದರೆ ಸುಗ್ರೀವ ಅರೆಬಂಡೆಗಳನ್ನೆ ಎಸೆಯುತ್ತಾನೆ. ವಾಲಿ ಅವುಗಳನ್ನು ನುಚ್ಚುನುರಿಗೈದು ಮುಂಬರಿದು ತಮ್ಮನನ್ನು ಹೊತ್ತುಕೊಂಡು ತಾಯೂರ ಕಡೆಗೆ ಧಾವಿಸುತ್ತಾನೆ.

ಮಿತ್ರಾಪಹರಣವನ್ನು ಕಂಡು ಕೈಮೀರಿತೆಂದು ಬೇರೆ ದಾರಿ ಕಾಣದೆ ದಿಙ್ಮೂಢನಾಗಿ ಸ್ನೇಹನಿಧಿ ರಘುರಾಮ ‘ವಾನರನ ಬೆನ್ಗೆ’ ಬಾಣಪ್ರಯೋಗ ಮಾಡುತ್ತಾನೆ. ಮಿತ್ರಕ್ಷೇಮ ಕಾತರನಾದವನು ಯಾರೇ ಆಗಲಿ ಅಂಥ ವಿಷಮ ವಿಪತ್ಸಮಯದಲ್ಲಿ ಮತ್ತೇನು ಮಾಡಲಾದೀತು? ವಾಕ್ಪರಿಪಾಲನಾಕಾತರತೆ ಮತ್ತು ಮಿತ್ರಕ್ಷೇಮ ಚಿಂತೆ ಅವನ ವಿವೇಚನೆಯನ್ನೆ ಮುಂದುಗೆಡಿಸುತ್ತವೆ. ದೈವೇಚ್ಛೆಯೇ! ಏಕೆಂದರೆ ಯಾವಾಗಲೂ ಭಗವಂತನ ಕೃಪೆ ಪಾಪದ ಉದ್ಧಾರಾರ್ಥವಾಗಿ ಪಾಪಿಯನ್ನು ಬೆನ್ನಟ್ಟುತ್ತಿರುತ್ತದೆ. ಆಸುರೀಶಕ್ತಿ ಲೌಕಿಕ ಪರಾಕ್ರಮವನ್ನೇ ನೆಚ್ಚಿ ಅಹಂಕಾರದಿಂದ ಸ್ವಾರ್ಥತೆಯಿಂದ ಸ್ವಬಲದಿಂದ ದೈವೀಶಕ್ತಿಯನ್ನೂ ದೈವೀಪರಶಕ್ತಿಯನ್ನೂ ಪ್ರತಿಭಟಿಸಲು ಯತ್ನಿಸುತ್ತದೆ. ವಕ್ರಪಥಗಾಮಿಯಾಗಲೀ ಋಜುಮಾರ್ಗಾನುಯಾಯಿಯಾಗಲೀ ಆಸುರೀಶಕ್ತಿಯ ದೃಷ್ಟಿ ಸದಾ ವಕ್ರ. ಆತ್ಮೋತ್ಕರ್ಷ, ಆತ್ಮಸಂಭಾವನೆ, ವಿಷಯೋಪಭೋಗ, ಕೀರ್ತಿಲಾಭ ಅದರ ಗುರಿ.[13] ಪುಣ್ಯಪರವಾದ ಕಾರ್ಯ ಸಾಧನೆಯೂ ಸ್ವಾರ್ಥ ನಿಷ್ಠವಾಗಿರುತ್ತದೆ, ಅಸೂಯಾತ್ಮಕವಾಗಿರುತ್ತದೆ, ದರ್ಪಯುತ ವಾಗಿರುತ್ತದೆ. ಅದು ಎಂದಿಗೂ ದೈವೀಶಕ್ತಿಗೆ ಮುಖವಾಗಿ ನಿಂತು ವಿರೋಧಿಸಲಾರದು. ಯಾವಾಗಲೂ, ಮುಖ ತೋರಿಸದೆ ಬೆನ್ನಿನಲ್ಲಿಯೇ ಪ್ರತಿಭಟಿಸುತ್ತದೆ. ಏಕೆಂದರೆ ಅದರ ಕಡೆಗೆ ಮುಖ ತಿರುಗಿಸಿದಾಗಲೇ ಅದಕ್ಕೆ ಮುಕ್ತಿ ಸಿದ್ಧ. ಅದು ಆಸುರೀಶಕ್ತಿಯಾಗಿ ಉಳಿಯುವುದೇ ಇಲ್ಲ.[14] ಆಸುರೀಶಕ್ತಿಯ ಸಂಹಾರ ಅಥವಾ ಪರಿವರ್ತನೆ ಋತನಿಯಮ. ಆದುದರಿಂದ ಭಗವಂತನ ಕೃಪಾಬಾಣಕ್ಕೆ ಬೆನ್ನೇ ಗುರಿ. ರಾಮ ವಾಲಿಯ ಸಮ್ಮುಖದಲ್ಲಿ ನಿಂತು ಹೋರಾಡಕೂಡದೆಂಬುದಕ್ಕೆ ವಾಲಿ ಪಡೆದಿದ್ದ ಬ್ರಹ್ಮವರವೂ ಒಂದು ಕಾರಣ.

ಇಲ್ಲಿಯವರೆಗಿನ ದರ್ಶನಾತ್ಮಕವಾದ ವಿವರಣೆಯಿಂದ ರಾಮನ ಕಾರ್ಯವನ್ನು ಸಮರ್ಥಿಸಿದಂತಾಯಿತೇ ಹೊರತು ಅವನ ಹಿರಿಮೆಯನ್ನು ಪ್ರಕಾಶಪಡಿಸಿದಂತಾಗಲಿಲ್ಲ. ಆ ಸನ್ನಿವೇಶ ಮುಂದೆ ಬರುತ್ತದೆ. ರಾಮಾಂಜನೇಯ ಲಕ್ಷ್ಮಣರು ಬಿದ್ದ ವಾಲಿಯೆಡೆಗೆ ಓಡುತ್ತಾರೆ. ಎಲ್ಲರ ಮುಖಗಳ ಮೇಲೆ ಖಿನ್ನತೆ ಹರಿದಾಡುತ್ತದೆ. “ಹಿರಿದಾದುದಳಿಯೆ, ಹಗೆಯಾದರೇಂ, ಹಿರಿತನಕೆ ನೋವಾಗದುಂಟೆ?” ಹಿಂದೆ ತಾನು ಯಾರನ್ನು ದೂರದಲ್ಲಿಯೆ ನಿಂತು ನೋಡಿದ್ದನೊ, ಯಾರ ಮಹಿಮೆಯನ್ನು ದೂರದಿಂದ ಕೇಳಿದ್ದನೊ ಆ ವೀರನ ಬಳಿ ನಿಂತು ಸೀತಾಸ್ವಾಮಿ ಬಿಸುಸುಯ್ದು ತನ್ನನ್ನು ತಾನೆ ಬಯ್ದುಕೊಳ್ಳುತ್ತಾನೆ, ತನ್ನ ಬಿಲ್ಜಾಣ್ಮೆಗೆ ತಾನೆ ಹೇಸುತ್ತಾನೆ.

ಅಷ್ಟರಲ್ಲಿ ಮಲೆಯ ತಣ್ಣೆಲರಿಗೆಚ್ಚತ್ತ ವಾಲಿ ಸುತ್ತಲೂ ಕಣ್ಣರಳಿಸಿ ಯಾರನ್ನೊ ಗುರುತಿಸುವವನಂತೆ ನೋಡಿ “ಏಂ ಗೈದೆ, ಸುಗ್ರೀವ! ಮುದ್ದಾಡಲೆಂದು ಬಂದಳ್ಕರೆಯ ತೋಳ್ಗಳಂ ಛಿದ್ರಿಸಿದೆಯಲ್ತೆ!…. ಆಃ, ತೋರೆನಗೆ ಆ ವೀರನಂ, ಬೆನ್ಗೆ ಬಾಣವನೆಚ್ಚ ಆ ನಿನ್ನ ಕಲಿ ರಾಮನಂ….” ಎಂದು ರಾಮನ ಕಡೆಗೆ ತಿರುಗಿ, “ತಮ್ಮನನ್ನು ಕೊಂಡೊಯ್ಯುತ್ತಿದ್ದ ಅಣ್ಣನನ್ನು ಹೇಡಿತನದಿಂದ ಮೋಸದಿಂದ ಕೊಂದೆ, ನಿನ್ನನ್ನು ಹೊಗಳುತ್ತಿದ್ದ ತಾರೆಯ ಬಾಳನ್ನು ಹಾಳುಮಾಡಿದೆ, ಅವಸರದ ಸ್ವಾರ್ಥಕ್ಕಾಗಿ ಧರ್ಮವನ್ನು ಬಲಿಗೊಟ್ಟೆ, ನಿನ್ನ ಹೊಲೆಗೆಸಲಕ್ಕೆ ಧಿಕ್ಕಾರ” ಎಂದು ನಿಂದಿಸುತ್ತಾನೆ. ಆ ಘೋರ ದೃಶ್ಯವನ್ನು ನೋಡುತ್ತ ರಾಮ ಸಗದ್ಗದನಾಗಿ “ವಿಧಿಯ ವಿನ್ಯಾಸಮಂ ನಿಂದಿಸಿದೊಡೇಂ ಫಲಂ, ಸುಗ್ರೀವನಗ್ರಜಾ” ಎನ್ನುತ್ತಾನೆ. “ನಿನ್ನ ಮಡದಿಯನಸುರನುಯ್ದುದುಂ ವಿಧಿಲೀಲೆ! ನೀನೇಕೆ ಪರಿತಪಿಸುತಿಹೆ ಮತ್ತೆ?” ಎಂದು ವಾಲಿ ಅಣಕವಾಡುತ್ತಾನೆ. “ನಿನ್ನ ವಿಧಿ ನಿನಗೆ, ರಾಕ್ಷಸನ ವಿಧಿ ರಾಕ್ಷಸಗೆ. ನಿನ್ನಂತೆ, ಕೇಳ್, ಹದಿಬದೆಗಳುಪಿದ ಸುರನುಂ ಕಡೆಯನೆಯ್ದುವಂ” ಎಂದ ರಾಮನಿಗೆ “ಪುಸಿ, ಪುಸಿ, ಮಗಳೆನಗೆ ರುಮೆ! ತಾರೆ ತಾಂ ಸಾಕ್ಷಿ!” ಎಂದು ವಾಲಿ ಕಿವಿ ಮುಚ್ಚಿಕೊಳ್ಳುತ್ತಾನೆ. ರಾಮನೊಡ್ಡಿದ ಮೊದಲ ನೆಪ ಭಗ್ನವಾಗುತ್ತದೆ. ಸರಿ, ಮತ್ತೊಂದು ವಾದವೊಡ್ಡುತ್ತಾನೆ: ನಿರ್ದೋಷಿಯಾದ ತಮ್ಮನನ್ನು ಅವನ ಕೆಳೆಯರೊಡನೆ ಹೊರಗಟ್ಟಿದ ಕೇಡಿಗೆ ಈ ಶಿಕ್ಷೆ ಎಂದು. “ದುಷ್ಟ ಶಿಕ್ಷೆಗೆ ಬಂದುದು ತಡವಾಯಿತು. ನಾನೀಗ ಹಿಂದಿನ ಕೋಪಿಯಲ್ಲ, ಪಾಪಿಯಲ್ಲ. ಈಗ ನಾನು ಪರಿಶುದ್ಧ. ಹೇಡಿತನದಿಂದ ಕೊಂದೆಯೆಂದು ಹೇಳಿದೆನೇ ಹೊರತು ನನಗೆ ಬೇರೆ ಹಗೆತನವಿಲ್ಲ” ಎಂದ ವಾಲಿಯ ಮಾತಿನಲ್ಲಿ ಅವನ ಹೃದಯದ ಸ್ಫಟಿಕ ನಿರ್ಮಲತೆ ಪ್ರತಿಫಲಿತವಾಗಿದೆ. ವಾಲಿ ಎಂದೂ ಸುಳ್ಳು ಹೇಳಿದವನಲ್ಲವೆಂದು ಜಾಂಬವ ನುಡಿಯಲು ಅಲ್ಲಿದ್ದವರೆಲ್ಲರ ದುಃಖ ಹಲವು ಮಡಿಯಾಗುತ್ತದೆ.

ಅನಂತರ ವಾಲಿಯ ದೇಹವನ್ನು ಸಮತಟ್ಟಾದ ನೆಲದಲ್ಲಿ ಮಲಗಿಸುತ್ತಾರೆ. ಸೌಮಿತ್ರಿ ತನ್ನ ತೋಳುಗಳನ್ನು ಅವನ ತಲೆಗೆ ಇಂಬು ಮಾಡುತ್ತಾನೆ. ಅಶ್ರುಗದ್ಗದನಾದ ಶ್ರೀರಾಮ ಬಾಣವನ್ನು ಬಿಸಾಡಿ ವಾಲಿಯ ಮೆಯ್‌ಮುಟ್ಟ ಕುಳಿತು

ಮನ್ನಿಸೆನ್ನಂ, ಮಹಾ
ವೀರ! ತಪ್ಪಿದೆನಯ್ಯಿ, ಬ್ರಹ್ಮವರದಾ ಬಲೆಗೆ
ಸಿಲ್ಕಿ. ನಿನಗಾ ವರವೆ ಶಾಪಮಾದುದೊ! ಕೀರ್ತಿ
ಮಸುಳಿಸುವವೋಲೆನ್ನನಡಗಿಸಿತೊ! ಮರೆವೊಕ್ಕೆನಾ
ಮರಕೆ! ಮಾಡಿದ ತಪ್ಪನೊಪ್ಪಿಕೊಳ್ವುದೆ ಲೌಕಿಕದ
ಬೀರಕ್ಕೆ ಸಲ್ಲಕ್ಷಣಂ : ಅಯ್ಯ ಸೀತೆಯನಗಲ್ದು
ಪಗಲಿರುಳ್ ಪೊಗೆಯುತಿರ್ಪೀ ಬಗೆಯ ಕನ್ನಡಿಗೆ
ಮರ್ಬುಕರೆ ಮಂಕಡಸಿತಯ್. ಶೀಘ್ರಸೂತ್ರಕ್ಕೆ
ಬೇಳ್ದೆನಯ್ ಐಹಿಕದ ಕೀರ್ತಿಯನಂತೆ ಧರ್ಮಮಂ
ಮೇಣ್, ಕಪಿಕುಲಲಲಾಮ, ನಿನ್ನುಮಂ!

ಎಂದು ಹಸುಳೆಯಂತೆ ರೋದಿಸುತ್ತಾನೆ. ಅವನ ಅಪರಾಧ ಸಮಸ್ತವೂ ಕಣ್ಣೀರಿನ ಮೂಲಕ ಹೊರಗೆ ಹರಿದು ಅವನು ದಿವ್ಯಾತ್ಮನಾಗುತ್ತಾನೆ. ತನ್ನ ತಪ್ಪನ್ನು ತಾನರಿತುಕೊಳ್ಳುವುದು ಮಾನವನ ಹಿರಿಯ ಗುಣ; ಅರಿತ ತಪ್ಪನ್ನು ಇತರರ ಮುಂದೆ, ಅದರಲ್ಲಿಯೂ ತನ್ನ ಶತ್ರುವಿನ ಮುಂದೆ ಒಪ್ಪಿಕೊಳ್ಳುವುದು ಆದರ್ಶಮಾನವನ ಆದರ್ಶ ಲಕ್ಷಣ. ಹಾಗೆ ಒಪ್ಪಿಕೊಂಡು, ಆ ಅಪರಾಧ ಪಶ್ಚಾತ್ತಾಪ ವಹ್ನಿಯಲ್ಲಿ ದಗ್ಧವಾದಾಗಲೆ ದೇವತ್ವ ಮಾನವತ್ವದ ಸ್ಥಾನವನ್ನಾಕ್ರಮಿಸುತ್ತದೆ. ರಾಮನ ದೇವತ್ವ ವಾಲಿಗೆ ಅರಿವಾಗುತ್ತದೆ. ಇಲ್ಲಿ ವೈರ ತತ್ತಿಯಿಕ್ಕುವುದಿಲ್ಲ, ಕೊಲೆಗೆ ಕೊಲೆ ಮುಯ್ಯಗುವುದಿಲ್ಲ. ಮಹಾತ್ಮರ ವೈರ ವೈರವಲ್ಲ; ಅದು ಸದಾ ಸ್ನೇಹಮುಖಿ. ವಾಲಿಯ ಮಾತುಗಳಿಂದಲೇ ಅವನ ಮಹಿಮೆ ವ್ಯಕ್ತವಾಗುತ್ತದೆ:

ಕೇಳ್ದಿರ್ದೆ ನಿನ್ನಾ ಮಹಾತ್ಯಾಗಮಂ, ಮತ್ತೆ
ಧೈರ್ಯಮಂ. ಕಣ್ಣಾರೆ ಕಾಣ್ಬ ಸಯ್ಪೆನಗೊದಗಿತಯ್
ಇಂದು. ನೀಂ ಸತ್ಯವ್ರತನೆ ದಿಟಂ. ಇಲ್ಲದಿರೆ
ಸೋಲ್ದುರುಳ್ದರಿಗೆ ತಪ್ಪೊಪ್ಪಿಕೊಳ್ಳುವರಿಹರೆ?
ನನ್ನೆರ್ದೆಯೊಳಾದ ಪರಿವರ್ತನೆಯನರಿಯದೆಯೆ
ಇಂತಾದುದಯ್. ತಪ್ಪು ನಿನತೊರ್ವನದೆ ಅಲ್ತು…

ಈ ಕೊನೆಯ ಮಾತು ಕವಿ ಹೇಳುವುದಲ್ಲ; ವಾಲಿ ಹೇಳುವ ಮಾತು. ಶ್ರೀರಾಮನ ಈ ಸಂದರ್ಭದ ವರ್ತನೆಯಲ್ಲಿ ನ್ಯೂನತೆಯನ್ನು ಕಾಣುವ ಖಂಡದೃಷ್ಟಿಯ ಸಾಮಾನ್ಯಮತಿಗೆ ಈ ಮಾತು ಎಚ್ಚರಿಕೆ ಸನ್ನೆಯಾಗಿದೆ. ಈ ತಪ್ಪಿನಲ್ಲಿ ಎಲ್ಲರೂ ಭಾಗಿಗಳು. ಕೇವಲ ತಾತ್ಕಾಲಿಕವಾದ ಸಮೀಪಗತವಾದ ಸ್ಥೂಲಕಾರಣವನ್ನು ಮಾತ್ರ ಗಣನೆಗೆ ತೆಗೆದುಕೊಂಡು ಶಾಶ್ವತವಾದ ದೂರಗತವಾದ ಗೋಚರಾತೀತವಾದ ಸೂಕ್ಷ್ಮಾತಿಸೂಕ್ಷ್ಮ ಕಾರಣವನ್ನು ನಿರ್ಲಕ್ಷಿಸುವುದು ಮಾನವನ ದೌರ್ಬಲ್ಯಗಳಲ್ಲೊಂದು. ಈ ತಪ್ಪಿಗೆ ಯಾರು ಕಾರಣರು, ಯಾರದು ಮೊದಲ ತಪ್ಪು ಎಂಬೀ ಪ್ರಶ್ನೆಗಳಿಗೆ ಉತ್ತರ ನೀಡುವುದೂ ಧಾರ್ಷ್ಟ್ಯವಾಗುತ್ತದೆ. ಏಕೆಂದರೆ ಅದೊಂದು ವಿಷವರ್ತುಲ. ವರ್ತುಲದಲ್ಲಿ ಪ್ರಾರಂಭ ಬಿಂದು ಯಾವುದೆಂದು ಊಹಿಸುವುದೆಂತು? ಅಷ್ಟೇ ಅಲ್ಲ, ಅಪರಾಧ ಸಂಬಂಧದ ಐತಿಹಾಸಿಕ ಕಾರಣ ಶೀಘ್ರವಾಗಿ ಗೋಚರಿಸಿದರೆ ಅದರ ಶಾಶ್ವತ ಕಾರಣ ಅಂತ್ಯದಲ್ಲಿ ಗೋಚರವಾಗುತ್ತದೆ. ಅಹಂಕಾರ ವಶವಾದ ಮೇಧಾವಿತನ ಐತಿಹಾಸಿಕ ಕಾರಣದಿಂದಲೇ ತೃಪ್ತಿ ಪಡೆಯುತ್ತದೆ. ಅಹಂಕಾರದ ಪೊರೆಯನ್ನು ಕಳಚಿ ಲೋಕಾತಿಕ್ರಾಂತವಾದ ದೃಷ್ಟಿಯನ್ನು ಪಡೆದ ಚೇತನ ಮಾತ್ರ “ತಪ್ಪು ನಿನತೊರ್ವನದೆ ಅಲ್ತು…” ಎಂದು ಹೇಳಬಲ್ಲುದು.

ಅದೂ ಇರಲಿ; ಯಾವುದು ತಪ್ಪು ಯಾವುದು ಸರಿ ಎಂದು ಅಹಂಕಾರವಶವಾದ ಮತಿ ನಿರ್ಣಯಿಸಲಾರದು. ಅದಕ್ಕೆ ಯಾವುದು ಸರಿಯೆಂದು ತೋರುತ್ತದೆಯೋ ಅದು ಲೋಕಾತಿ ಕ್ರಾಂತದೃಷ್ಟಿಗೆ ತಪ್ಪೆಂದು ಕಾಣಬಹುದು, ಬಹುಶಃ ನಿರನುಭವಿಯಾದ ಮಗನಿಗೆ ಯಾವುದು ಸರಿಯೆಂದು ಕಾಣುತ್ತದೆಯೋ ಅದು ಪಕ್ವಾನುಭವದ ತಂದೆಗೆ ತಪ್ಪೆಂದು ಕಾಣುವಂತೆ. ಇಡೀ ವಿಶ್ವವನ್ನೇ ಆಳುತ್ತಿರುವ ವಿರಾಟ್‌ಶಕ್ತಿ ಮಾತ್ರ ಆ ಸರಿತಪ್ಪುಗಳನ್ನು ನಿರ್ಣಯಿಸ ಬಲ್ಲುದು. ಫಲನಿರೀಕ್ಷಣೆಯಿಂದ ಮಾಡಿದ ಪ್ರಯತ್ನ ವಿಪತ್ಕಾರಕವಾಗಿಯೂ, ಅನುಮಾನ ಪರಿಸ್ಥಿತಿಯಲ್ಲಿ ಎಸಗಿದ ಪ್ರಯತ್ನ ಪೂರ್ಣ ಫಲ ಪ್ರದವಾಗಿಯೂ ಪರಿಣಮಿಸಿರುವ ನಿತ್ಯಾನುಭವದ ಸಂಗತಿಗಳು ಮೇಲಣ ವಾದಕ್ಕೆ ನಿಸ್ಸಂದೇಹವಾಗಿ ಪುಷ್ಟಿಯನ್ನು ನೀಡುತ್ತವೆ. ಬಹುಶಃ ಕೊನೆಯಲ್ಲಿ “ನೀನೆಂದವೊಲೆ ವಿಧಿಯ ವಿನ್ಯಾಸಮೇಂ ಬೇರೆ ಪಾಂಗಿಹುದೊ?” ಎಂದು ಹೇಳುವ ವಾಲಿಯ ನುಡಿ ಭಗವತ್ಪ್ರೇರಿತವೊ ಎಂದು ಭಾಸವಾಗುತ್ತದೆ.

‘ಕಳೆದುದಕೇಕೆ ಕೊರಗು?’ ಎನ್ನುತ್ತ ಎನ್ನುತ್ತ ವಾಲಿಯ ಉಸಿರು ಏದುತ್ತದೆ. ಸುಗ್ರೀವ ರೋದಿಸುತ್ತಾನೆ. ನೀಲ ನೀರು ತಂದು ಬಾಯಿಗೆರೆಯುತ್ತಾನೆ. ನಳ ಗಾಳಿ ಬೀಸುತ್ತಾನೆ. ರಾಮ ಬೆವರಿಡಿದ ಹಣೆಯ ಅಂಟುಗೂದಲನ್ನು ಓಸರಿಸಿ ಸಂತೈಸುತ್ತಾನೆ. ಅರಿವು ತುಸು ತಿಳಿಯಲು ವಾಲಿ ತಾರೆ ಅಂಗದರನ್ನು ನೋಡಬೇಕೆನ್ನುತ್ತಾನೆ. ಅಷ್ಟರಲ್ಲಿ ಕಿಷ್ಕಿಂಧೆಯೆ ರೋದಿಸುತ್ತ ಬರುತ್ತದೆ. ಎಲ್ಲಿ ಸಾಮಾನ್ಯ ಕವಿಪ್ರತಿಭೆ ವಿರಾಮ ಪಡೆಯಬಹುದಾಗಿತ್ತೊ ಅಲ್ಲಿ ಮಹಾಕವಿ ಪ್ರತಿಭೆ ಭವ್ರೋಹೀಲಿಗರಿಗೆದರಿ ಕುಣಿಯುತ್ತದೆ. ವಿಶ್ವೋನ್ನತಿ ಗೇರಿದ ಮಹಾಕಾವ್ಯಗಳಲ್ಲಿ ಮಾತ್ರ ದರ್ಶಿಸಬಹುದಾದ ಅಲೋಕ ಸಾಮಾನ್ಯವಾದ ಶಾಶ್ವತ ಚಿತ್ರಗಳನ್ನು ನಾವಿಲ್ಲಿ ಎದುರುಗೊಳ್ಳುತ್ತೇವೆ – ವಾಲಿಯ ಊರ್ಧ್ವಯಾತ್ರಾರಂಭದ ಮಹಾಮುಹೂರ್ತದಲ್ಲಿ. ಅವನ ಲೌಕಿಕದೃಷ್ಟಿ ಮಂದವಾಗಿ ದಿವ್ಯದೃಷ್ಟಿ ಪ್ರಾಪ್ತವಾಗಿದೆ. ಅವನಿಗೀಗ ಜೀವನದ ಯಥಾರ್ಥ ಸತ್ಯ ಗೋಚರವಾಗುತ್ತದೆ. ಆ ಸತ್ಯ ಮುಂದಿನ ಅವನ ಮಾತುಗಳಲ್ಲಿ ರೂಪಧಾರಣೆ ಮಾಡಿದೆ, ತನ್ನ ತಾಯ್ನೆಲವನ್ನೂ ತಾಯ್ನೆಲದ ಸುಖಸಂತೋಷ ಗಳನ್ನೂ ಸ್ಮರಿಸಿಕೊಳ್ಳುವ ಸನ್ನಿವೇಶದಲ್ಲಿ.[15]

ಈ ಚಿತ್ರವೂ ಮುಂದಿನ ಚಿತ್ರದ ಮುಂದೆ ಪೇಲವವಾಗುತ್ತದೆ. ಅಲ್ಪದಲ್ಲಿ ಭೂಮವನ್ನೂ ಸಾಮಾನ್ಯದಲ್ಲಿ ಅಸಾಮಾನ್ಯತೆಯನ್ನೂ ಕಾಣುವ ಸಾಮರ್ಥ್ಯವುಳ್ಳವನು ಮಾತ್ರ ಮಹಾಕವಿಪಟ್ಟಕ್ಕೆ ಯೋಗ್ಯನಾಗುತ್ತಾನೆ. ಮುಂದಿನ ವಾಕ್ಯಗಳಲ್ಲಿ ಆ ಸಾಮರ್ಥ್ಯಶ್ರೀಯನ್ನು ಕಾಣಬಹುದು :

………………….ಸುಗ್ರೀವ,
ನಿನಗೀಜು ಕಲಿಪಂದು ನೀಂ ಪಂಪೆಯೊಳ್ ಮುಳುಗೆ,
ನಾಂ ಮುಳುಗಿ ಮೇಲೆತ್ತಿದಾ ಸೈಪಿನಾ ಸೊಗಂ
ನನಗೀಗಳರಿವಾಗುತಿದೆ! ಆಂಜನೇಯ, ಆ
ಮರಕೋತಿಯಾಟಮಂ ಚಿಣ್ಣಿಕೋಲಾಟಮಂ
ಮರೆತೆಯೇನ್? ಮರೆಯದಿರ್ : ಬಾಳಂಚಿನೊಳ್ ನಿಂತು
ಪೇಳ್ವೆನೀ ನನ್ನಿಯಂ : ಆ ಜಳ್ಳೆ ಗಟ್ಟಿ; ನಾಮ್
ಗಟ್ಟಿಯೆಂದರಿತುದೆಲ್ಲಂ ಜಳ್ಳು, ಬರಿಜಳ್ಳು! ….
ಸಾವ್‌ಗಾಳಿ ತೂರಲರಿವಪ್ಪುದಯ್!

ನಾವು ಯಾವುದನ್ನು ಜಳ್ಳೆಂದು ತಿಳಿದಿದ್ದೇವೆಯೋ ಅದೇ ಗಟ್ಟಿಯೆಂದೂ ಯಾವುದನ್ನು ಗಟ್ಟಿಯೆಂದು ತಿಳಿದಿದ್ದೇವೆಯೋ ಅದು ಜಳ್ಳೆಂದೂ ಅಂತ್ಯದಲ್ಲಿ ಮಾತ್ರ ಗೋಚರವಾಗುತ್ತದೆ. ಇದು ವಾಲಿಯ ಮಹಾಜೀವನದಿಂದ ಕಂಡುಬರುವ ದರ್ಶನ.

ವಾಲಿ ಕಣ್ಣು ಮುಚ್ಚುತ್ತಿದ್ದಂತೆ ತಾರೆ ಅಂಗದಾದಿಗಳು ಬಳಿ ಸಾರುತ್ತಾರೆ. ಅವರ ಗೋಳನ್ನು ಕೇಳಬೇಕೆ? ಭಾವ ತೀವ್ರವಾದಾಗ ಮಾತು ಕಟ್ಟುತ್ತದೆ; ಕೊನೆಗೆ ಅಳುವೂ ಮೂಕವಾಗುತ್ತದೆ. ಆಗ ಕವಿಯ ವರ್ಣನೆ ಸಪ್ಪೆಯಾಗುತ್ತದೆ, ಕೃತಕವಾಗುತ್ತದೆ, ಮಹಾದುಃಖಕ್ಕೆ ಮೌನವೆ ಪರಮ ಸಂಕೇತವಾಗುತ್ತದೆ.

…….ಸಾವರಿತ ಲೋಕಕ್ಕೆ ಪೊಸತಹುದೆ ಪೇಳ್
ಪತಿಯಳಿದ ಸತಿರೋದನಂ? ತಂದೆಯಳಿದಿರ್ಪ
ಸುತನ ಶೋಕಂ? ಸ್ವಾಮಿಯಳಿದಿರ್ಪ ಪರಿಜನದ
ಹೃದಯ ವಿದ್ರಾವಕಂ? ಪ್ರಾಣಮಿತ್ರಂ ತೀರ್ದ
ಸ್ನೇಹದತಿದಾರುಣದ ಸಂಕಟಂ? ಜಸವೆತ್ತ
ಪಿರಿದಾದುದಾವುದಾದೊಡಮಳಿಯೆ-ದುಃಖಿಸುವ
ದೇಶ ಸಾಮಾನ್ಯ ಜನಮನ್ಯು?…….

ನೂರಾರು ಸಾವಿರಾರು ಪಂಕ್ತಿಗಳಲ್ಲಿ ಪರಿಣಾಮಕಾರಿಯಾಗಿ ಸಾಧಿಸಲಾಗದ ತೀವ್ರತೆಯನ್ನು ಕೇವಲ ಏಳೇ ಪಂಕ್ತಿಗಳಲ್ಲಿ ಸಾಧಿಸಿದೆ. ಇಲ್ಲಿ ಮೌನವೆ ಮಹಾಶಕ್ತಿ; ಅದೇ ಪರಮಶ್ರೀ! ಅದೇ ಧ್ವನಿಯ ಪರಮರಹಸ್ಯ!

ಈ ಮಹಾಕಾವ್ಯ ವಾಲಿಯನ್ನು ವಾನರತ್ವದಿಂದುದ್ಧರಿಸಿರುವುದಿರಲಿ, ತಾರೆಯನ್ನು ಸಹ ಉದ್ಧರಿಸಿದೆ. ಮೂಲರಾಮಾಯಣ ವಾಲಿಯ ಮರಣಾನಂತರ ತಾರೆ ಸುಗ್ರೀವರಿಗೆ ದಾಂಪತ್ಯ ಸಂಬಂಧವನ್ನು ಕಲ್ಪಿಸಿದೆ. ವಾನರ ಸಂಸ್ಕೃತಿಗೆ ಸಹಜವಾದ, ಆಧುನಿಕತೆಗೆ ಹೇಯವೆಂದು ತೋರುವ, ಪ್ರಣಯ ವಾತಾವರಣವನ್ನು ಸೃಜಿಸಿದೆ. ವಾನರ ರೀತಿನೀತಿ ಸಮಯಾಚಾರಗಳು ಎಂಥವೇ ಇರಲಿ, ಮಹಾಪತಿವ್ರತೆಯೆಂದು ಪುರಾಣ ಪ್ರಸಿದ್ಧಳಾದ ತಾರೆಯ ಆ ಪಾತ್ರರಚನೆ ಆಧುನಿಕ ರುಚಿ ಅಭಿರುಚಿಗಳಿಗೆ ಹಿಡಿಸದು. ಇಲ್ಲಿಯ ತಾರೆ ಪತಿ ಮೃತಿಹೊಂದಿದೊಡನೆ ನಿಷ್ಕಲ್ಮಷಳಾಗಿ ಸುಗ್ರೀವನನ್ನು ಹರಸಿ, ರಾಮ ಮಹಿಮೆಯನ್ನು ಕೊಂಡಾಡಿ, ರಾಮದಯಿತೆಗಾಗಿ ಮರುಗಿ, ಅವಳ ಬಿಡುಗಡೆಗಾಗಿ ಸರ್ವರೂ ನೆರವಾಗಬೇಕೆಂದು ಆದೇಶವಿತ್ತು, ಮಗನನ್ನು ರಾಮಸೇವೆಗೆ ಮೀಸಲಿರಿಸಿ, ಚಿತೆಯನ್ನೇರುತ್ತಾಳೆ – ಮಹಾಸತಿಯಾಗಿ ಮಹಾಪತಿವ್ರತೆಯಾಗಿ ಲೋಕಸಂಪೂಜ್ಯೆಯಾಗಿ ವಿರಾಜಿಸುತ್ತಾಳೆ.

ರಾಮಾಯಣದಲ್ಲಿ ವಾಲಿಯ ಪ್ರಸಂಗ ಬಂದಳಿಕೆಯಂತೆ ಜೋಲಾಡುತ್ತಿಲ್ಲ. ರಾಮತ್ವ ನರತ್ವಕ್ಕಿಳಿದು ನರನನ್ನು ವಾನರತ್ವ ರಾಕ್ಷಸತ್ವಗಳಿಂದ ಉದ್ಧರಿಸಿದ ಕತೆಯೇ ರಾಮಾಯಣ. ರಾಮತ್ವ ವಿಕಾಸಕ್ರಮದಲ್ಲಿ ಸಂಘರ್ಷರೂಪದ ವಾಲಿವಧ ಪ್ರಸಂಗವೊಂದು ಅನಿವಾರ್ಯದ ಅತ್ಯವಶ್ಯವಾದ ಪ್ರಾಮುಖ್ಯದ ಘಟನೆ. ವಿಷವನ್ನುಂಡು ನಂಜುಂಡನಾದಂತೆ ನರನ ವಾನರತ್ವ ದಾನವತ್ವಗಳನ್ನು ಹೀರಿ, ಅರಗಿಸಿಕೊಂಡಾಗ ಮಾತ್ರ ದೇವತ್ವ ಲಭಿಸುತ್ತದೆ. ರೋಗವಿಜಯಿ ಹೆಚ್ಚು ಆರೋಗ ದೃಢಕಾಯನಾಗುವಂತೆ, ಕ್ಲೇಶಕಾರ್ಪಣ್ಯಗಳನ್ನನುಭವಿಸಿದವನು ಆತ್ಮಸಂಯಮಿಯಾಗುವಂತೆ, ವಾನರತೆ ದಾನವತೆಗಳನ್ನು ಗೆದ್ದಾಗ ಮಾತ್ರ ನರನಲ್ಲಿ ರಾಮತ್ವ ಊರ್ಜಿತಗೊಳ್ಳುತ್ತದೆ. ಈ ಪ್ರಕರಣವನ್ನು ಈ ದೃಷ್ಟಿಯಿಂದ ದರ್ಶಿಸಿದರೇನೇ ಅದರ ಪೂರ್ಣ ಪ್ರಯೋಜನ ಲಭಿಸುತ್ತದೆ. ಹೀಗೆ ನೋಡಿದ ಮಾತ್ರಕ್ಕೆ ಆ ಘಟನೆಯ ಐತಿಹಾಸಿಕ ಸತ್ಯಕ್ಕೂ ಲೋಪವೊದಗುವುದಿಲ್ಲ. ಏಕೆಂದರೆ ಲೀಲಾಸತ್ಯ ಸರ್ವಸತ್ಯವಲ್ಲದಿದ್ದರೂ ನಿತ್ಯಸತ್ಯದ ಛಾಯೆ ತಾನೆ! ಮಾಯಾಶಕ್ತಿ ಈಶ್ವರಶಕ್ತಿಯ ಪ್ರಕಾರಾಂತರವಲ್ಲವೆ? ಆದರೆ ಅದರ ಬೆಲೆ ಅದಕ್ಕೆ! ಇದರ ಬೆಲೆ ಇದಕ್ಕೆ![1]    ಪಿತರ್ಯುಪರತೇs ಸ್ಮಾಕಂ ಜ್ಯೇಷ್ಠೋsಯಮಿತಿ ಮಂತ್ರಿ ಭಿಃ |
ಕಪೀನಾವಿೂಶ್ವರೋ ರಾಜ್ಯೇ ಕೃತಃ ಪರಮಸಂಮತಃ || ರಾಮಾ, ಕಿಷ್ಕಿಂ. ೯-೨.

[2]     ಮಯಾತ್ವೇತದ್ವಚಶ್ಯ್ರುತ್ವಾ ಯಾಚಿತಸ್ಸಪರಂತಪಃ |
ಶಾಪಯಿತ್ವಾತು ಮಾಂ ಪದ್ಭ್ಯಾಂ ಪ್ರವಿವೇಶ ಬಿಲಂ ಮಹತ್ || – ರಾಮಾ. ಕಿಷ್ಕಿಂ. ೯-೧೪.

[3]     ನಿಗ್ರಹೇಪಿs ಸಮರ್ಥಸ್ಯ ತಂ ಪಾಪಂ ಪ್ರತಿ ರಾಘವ
ನ ಪ್ರಾವರ್ತತ ಮೇ ಬುದ್ದಿರ್ಭ್ರಾತುರ್ಗೌರವ ಯಂತ್ರಿತಾ – ಅದೇ ೯-೨೧.

[4]     ದಿಷ್ಟ್ಯಾಸಿ ಕುಶಲೀ ಪ್ರಾಪ್ರೋನಿರಹತಶ್ಚ ತ್ವಯಾ ರಿಪುಃ
ಅನಾಥಸ್ಯ ಹಿ ಮೇ ನಾಥಸ್ತ್ವಮೇಕೋsನಾಥನಂದನಃ – ಅದೇ ೧೦-೨.
ಇದಂ ಬಹುಶಲಾಕಂ ತೇ ಪೂರ್ಣಚಂದ್ರಮಿವೋದಿತಂ
ಛತ್ರಂ ಸವಾಲವ್ಯಜನಂ ಪ್ರತೀಚ್ಛಸ್ವ ಮಯೋದ್ಯತಂ – ಅದೇ ೧೦-೩.
ತಸ್ಮಾದ್ದೇಶಾದಪಾಕ್ರಮ್ಯ ಕಿಷ್ಕಿಂಧಾಂ ಪ್ರಾವಿಶಂ ಪುನಃ
ವಿಷಾದಾತ್ತ್ವಿಹ ಮಾಂ ದೃಷ್ಟ್ವಾಪೌರೈರ್ಮಂತ್ರಿಭಿರೇವ ಚ – ಅದೇ. ೧೦-೬.
ಅಭಿಷಿಕ್ತೋ ನ ಕಾಮೇನ ತನ್ಮೇತ್ವಂ ಕ್ಷಂತುಮರ್ಹಸಿ
ತ್ವಮೇವ ರಾಜಾ ಮಾನಾರ್ಹಸ್ಸದಾ ಚಾsಹಂ ಯಥಾ ಪುರಂ – ಅದೇ ೧೦೭.
ರಾಜಭಾವ ನಿಯೋಗೋsಯಂ ಮಯಾ ತ್ವದ್ವಿರಹಾತ್ಕೃತಃ
ಸಾಮಾತ್ಯಪೌರನಗರಂ ಸ್ಥಿತಂ ನಿಹತಕಂಟಕಂ – ಅದೇ ೧೦-೮.
ನ್ಯಾಸಭೂತಮಿದಂ ರಾಜ್ಯಂ ತವ ನಿರ್ಯಾತಯಾಮ್ಯಹಂ
ಮಾ ಚ ರೋಷಂ ಕೃಥಾಃ ಸೌಮ್ಯ ಮಯಿ ಶತ್ರುನಿಬರ್ಹಣ – ಅದೆ ೧೦-೯
ಯಾಚೇ ತ್ವಾಂ ಶಿರಸಾ ರಾಜ‰ ಮಯಾ ಬದ್ಧೋsಯಮಂಜಲಿಃ
ಬಲಾದಸ್ಮಿ ಸಮಾಗಮ್ಯ ಮಂತ್ರಿಭಿಃ ಪುರವಾಸಿಭೀಃ – ಅದೇ ೧೦-೧೦.

[5]     ನ ಜಾನೇ ನಿಲಯಂ ತಸ್ಯ ಸರ್ವಥಾ ಪಾಪರಕ್ಷಸಃ
ಸಾಮರ್ಥ್ಯಂ ವಿಕ್ರಮಂ ವಾಪಿ ದೌಷ್ಕುಲೇಯಸ್ಯ ವಾ ಕುಲಂ – ರಾಮಾ. ಕಿಷ್ಕಿಂ. ೭-೨.

[6]     ಶ್ರೀರಾಮ ವಿರಹೌತ್ಕಂಠ್ಯದಿಂದ ರುಷ್ಟನಾಗಿ ಭ್ರಮರಾದಿಗಳನ್ನು ಶಪಿಸಿದುದಾಗಿ ಹೇಳುವ ಸ್ಕಾಂದಪುರಾಣದ ಕೆಳಗಣ ಶ್ಲೋಕಗಳನ್ನು ನೋಡಿ :

      ವೈಮುಖ್ಯಂ ಗಂಧಪಲ್ಯಾಸ್ತು ಭ್ರಮರಾನಶಪತ್ಪ್ರಭುಃ |
ಕೋಕಾನ್ನಿಶೀಥೇ ವಿಶ್ಲೇಷಂ ಪಿಕಮನ್ಯವಿವರ್ಧನಂ ||
ಚಂದನಂ ಸರ್ಪನಿಲಯಂ ವಾಯುಂ ಸರ್ಪಾಶನಂ ತಥಾ |
ಜ್ಯೋತ್ಸ್ನಾಂ ಕಳಂಕಸಂಛನ್ನಾಂ ಶಶಾಪ ರಘುನಂದನಃ ||

[7]     ಶ್ರುತ್ವೈತದ್ವಚನಂ ರಾಮಸ್ಸುಗ್ರೀವಮಿದಮಬ್ರವೀತ್ |
ಕಿಂ ನಿಮಿತ್ತಮಭೂದ್ವೈರಂ ಶ್ರೋತುಮಿಚ್ಛಾಮಿ ತತ್ತ್ವತಃ ||
ಸುಖಂ ಹಿ ಕಾರಣಂ ಶ್ರುತ್ವಾ ವೈರಸ್ಯ ತವ ವಾನರ |
ಆನಂತರ್ಯಂ ವಿಧಾಸ್ಯಾಮಿ ಸಂಪ್ರಧಾರ್ಯ ಬಲಾಬಲಂ ||
– ರಾಮಾ. ಕಿಷ್ಕಿಂ. ೮. ೪೧-೪೨.

[8]     ಸ್ಕಾಂದ ಪುರಾಣದ ಕೆಳಗಣ ಶ್ಲೋಕವನ್ನೂ ವಚನವನ್ನೂ ನೋಡಿ :
ಅಭಯಂ ವಾಲಿನೇ ದತ್ತೇ ಪ್ರತಿಜ್ಞಾನ ಪರಿಹೀಯತೇ |
ರಾವಣಸ್ಯ ಸಖಾ ವಾಲೀ ರಾವಣೋಪಿ ವ್ರಜೇತ್ತು ಮಾಂ ||
ರಾವಣಸ್ಯ ವಧಾಭಾವಾದವತಾರಫಲಂ ನಹಿ ||

[9]     ಧರ್ಮಮರ್ಥಂ ಚ ಕಾಮಂ ಚ ಸಮಯಂ ಚಾಪಿ ಲೌಕಿಕಂ |
ಅವಿಜ್ಞಾಯ ಕಥಂ ಬಾಲ್ಯಾನ್ಮಾಮಿಹಾsದ್ಯ ವಿಗರ್ಹಸೇ || ರಾಮಾ. ಕಿಷ್ಕಿಂ. ೧೮-೪
ಇಕ್ಷ್ವಾಕೂಣಾಮಿಯಂ ಭೂಮಿಸ್ಸ ಶೈಲವನಕಾನನಾ |
ಮೃಗಪಕ್ಷಿಮನುಷ್ಯಾಣಾಂ ನಿಗ್ರಹ ಪ್ರಗ್ರಹಾವಪಿ || ಅದೇ, ೧೮-೭
ತಾಂ ಪಾಲಯತಿ ಧರ್ಮಾತ್ಮಾ ಭರತಸ್ಸತ್ಯವಾನೃಜುಃ |
ಧರ್ಮ ಕಾಮಾರ್ಥ ತತ್ವಜ್ಞೋ ನಿಗ್ರಹಾನುಗ್ರಹೇ ರತಃ – ಅದೇ, ೧೮-೭
ತೇವಯಂ ಧರ್ಮ ವಿಭ್ರಷ್ಟಂ ಸ್ವಧರ್ಮೇ ಪರಮೇ ಸ್ಥಿತಾಃ |
ಭರತಾಜ್ಞಾಂ ಪುರಸ್ಕೃತ್ಯ ನಿಗೃಹ್ಣೀಮೋ ಯಥಾ ವಿಧಿ || – ಅದೇ, ೧೮-೧೧
ಅಸ್ಯ ತ್ವಂ ಧರಮಾಣಸ್ಯ ಸುಗ್ರೀವಸ್ಯ ಮಹಾತ್ಮನಃ |
ರುಮಾಯಾಂ ವರ್ತಸೇ ಕಾಮಾತ್ ಸ್ನುಷಾಯಾಂ ಪಾಪಕರ್ಮಕೃತ್ || – ಅದೇ, ೧೮-೧೯
ನ ಮೇ ತತ್ರ ಮನಸ್ತಾಪೋ ನ ಮನ್ಯುರ್ಹರಿಯೂಥಪ |
ವಾಗುರಾಭಿಶ್ಚ ಪಾಶೈಶ್ಚ ಕೂಟೈಶ್ಜ ವಿವಿಧೈರ್ನರಾಃ || ಅದೇ, ೧೮-೩೮
ತಸ್ಮಾತ್ತ್ವಂ ನಿಹತೋ ಯುದ್ಧೇ ಮಯಾ ಬಾಣೇನ ವಾನರ |
ಅಯುಧನ್ಯಸ್ಪ್ರತಿಯುಧ್ಯನ್ವಾ ಯಸ್ಮಾಚ್ಛಾಖಾಮೃಗೋಹ್ಯಸಿ || – ಅದೇ, ೧೮-೪೨.

[10]    ಇಲ್ಲಿ ‘ಧರಮಾಣಸ್ಯ’ ಎಂಬ ಪದದ ಬಳಕೆಯನ್ನು ಗಮನಿಸಿದರೆ ಸಹೋದರಭಾರ‌್ಯೆಯನ್ನು ಸಹೋದರ ಬದುಕಿದ್ದಾಗಲೇ ಅಪಹರಿಸುವುದು ಅಧರ್ಮವೆಂದೂ, ಅವನ ಮರಣಾನಂತರ ಅವಳನ್ನು ಕೂಡುವುದು ಧರ್ಮವಿರುದ್ಧವಲ್ಲವೆಂದೂ ಹಿಂದೆ ವಾನರ ಜನಾಂಗದ ಸಂಪ್ರದಾಯ ವಿದ್ದಿರಬಹುದು. ಇದರ ಆಧಾರದ ಮೇಲೆ ಸುಗ್ರೀವ ತಪ್ಪಿತಸ್ಥನಲ್ಲವೆಂದು ವಾದಿಸಲು ಅವಕಾಶವಿದೆಯಲ್ಲವೆ?

[11]    “ಶ್ರೀರಾಮನು ಕೊಟ್ಟಿರುವ ಉತ್ತರಗಳಲ್ಲಿ ಬಹುಪಾಲು ‘ಹಿಟ್ಲರ್ ಮುಸೊಲಿನಿ’ಗಳು ಕೊಡಬಹುದಾದ ಉತ್ತರಗಳಂತೆ ಸರ್ವಾಧಿಕಾರ ಮನೋಭಾವದಿಂದ ತುಂಬಿವೆ. ಯಾರೆ ಆಗಲಿ ಎಷ್ಟೆ ಪ್ರಯತ್ನಿಸಲಿ, ಲೋಕಸಾಮಾನ್ಯವಾದ ನೀತಿಯ ಮತ್ತು ಧರ್ಮದ ದೃಷ್ಟಿಗೆ ವಾಲ್ಮೀಕಿ ರಾಮಾಯಣದ ಶ್ರೀರಾಮನ ಈ ಸಂದರ್ಭದ ವರ್ತನೆಯನ್ನು ಆದರ್ಶಪ್ರಾಯವೆಂದು ಸಮರ್ಥಿಸಲು ಸಾಧ್ಯವಾಗುವುದಿಲ್ಲ” – ಕುವೆಂಪು, ವಿಭೂತಿಪೂಜೆ, ಪು. ೧೩೦-೩೧.

[12]    ಕಿಷ್ಕಿಂಧಾ ಸಂಪುಟಂ, ಸಂಚಿಕೆ ೬. ೧೪೦ ರಿಂದ ೧೫೦ರವರೆಗಿನ ಪಂಕ್ತಿಗಳನ್ನು ಓದಿ.

[13]    ಅದೇ. ೨೪೦ ರಿಂದ ೨೨೪ರವರೆಗಿನ ಪಂಕ್ತಿಗಳನ್ನು ಓದಿ.

[14]    ದಂಭೋ ದರ್ಪೋsಭಿಮಾನಶ್ಚ ಕ್ರೋಧಃ ಪಾರುಷ್ಯಮೇವ ಚ |
ಅಜ್ಞಾನಂ ಚಾಭಿಜಾತಸ್ಯ ಪಾರ್ಥ ಸಂಪದಮಾಸುರೀಮ್ || – ಗೀತಾ, ೧೬-೪
ಆತ್ಮಸಂಭಾವಿತಾಃ ಸ್ತಬ್ಧಾ ಧನಮಾನಮದಾನ್ವಿತಾಃ |
ಯಜಂತೇ ನಾಮಯಜ್ಞೈಸ್ತೇ ದಂಭೇನಾ ವಿಧಿಪೂರ್ವಕಮ್ || – ಗೀತಾ, ೧೬-೧೭
ಅಹಂಕಾರಂ ಬಲಂ ದರ್ಪಂ ಕಾಮಂ ಕ್ರೋಧಂ ಚ ಸಂಶ್ರಿತಾಃ |
ಮಾಮಾತ್ಮ ಪರದೇಹೇಷು ಪ್ರದ್ವಿಷಂತೋsಭ್ಯ ಸೂಯಕಾಂಃ || – ಗೀತಾ, ೧೬-೧೮

ಈ ಸಂದರ್ಭದಲ್ಲಿ ಎಲ್ಲರ ನಿತ್ಯಾನುಭವದ ಸಂಗತಿಯನ್ನಿಲ್ಲಿ ಉದಾಹರಿಸಬಹುದು. ತಮ್ಮ ಹೆಸರು ಪತ್ರಿಕೆಗಳಲ್ಲಿ ಪ್ರಕಟವಾಗಬೇಕು, ಶಿಲಾನಿಕ್ಷಿಪ್ತವಾಗಬೇಕು, ದೇಶ ವಿದೇಶಗಳಲ್ಲಿ ಡಂಗುರ ಹೊಡೆಯಬೇಕು, ಆ ಮೂಲಕ ಸಾಧ್ಯವಾದರೆ ಹೆಚ್ಚು ಹಣ ಗಳಿಸಬೇಕು ಅಥವಾ ಹಣ ಗಳಿಸಬಹುದಾದ ಸ್ಥಾನವನ್ನು ಪಡೆಯಬೇಕು ಎಂಬ ಕಪಟ ಮನೋಭಾವದಿಂದ ಕೆಲವು ಶ್ರೀಮಂತರು ದಾನ ಮಾಡುತ್ತಾರಲ್ಲವೆ? ಸ್ವಾರ್ಥನಿಷ್ಠವಾದ ಮತ್ತು ಅಹಂಕಾರವಶವಾದ ಅಂಥ ದಾನವೂ ಆಸುರೀಶಕ್ತಿಯ ಪ್ರಕಾರಾಂತರವೇ!

೨.   ನಿರ್ಲಕ್ಷಿಸುತೆ ದೈವಮಂ, ಪ್ರತಿಭಟಿಸಿ
ದೈವೀಪರಂಗಳಂ ಶಕ್ತಿಯಂ, ನೆಮ್ಮುತ್ತೆ
ತನ್ನಹಂಕಾರಮಂ ಸ್ವಬಲಮಂ ಸ್ವಾರ್ಥಮಂ,
ಚಲದಿಂ ವಿರೋಧಿಸಲ್ ವೈರಭಾವವನಾಂತ
ಆಸುರೀ ಸಾಧನೆಯ ದೈವೀವಿಮುಖಮಪ್ಪ
ಲೌಕಿಕ ಪರಾಕ್ರಮದ ಶಿಕ್ಷಾರಕ್ಷೆಗಿನ್ನಿಹುದೆ,
ಪೇಳ್, ಕೃಪಾ ಬಾಣಕ್ಕೆ ಬೆನ್ನಲ್ಲದನ್ಯಲಕ್ಷ್ಯಂ
ತುದಿಗೆ? – (ಕಿಷ್ಕಿಂಧಾ ಸಂಪುಟಂ, ಸಂಚಿಕೆ ೬)
ಕುವೆಂಪು ಅವರ ‘ಮುಕ್ತಿರಾಹು’ ಮತ್ತು ‘ದೇವಕೇತು’ ಕವನಗಳನ್ನು ಓದಿ.

[15]    ಕಿಷ್ಕಿಂಧಾ ಸಂಪುಟಂ, ಸಂಚಿಕೆ ೬-೪೦೫ ರಿಂದ ೪೨೩ನೆಯ ಪಂಕ್ತಿ ಪೂರ್ತ ನೋಡಿ.