ಭರತಖಂಡದ ಆದಿಕವಿ ವಾಲ್ಮೀಕಿಮಹರ್ಷಿ ಎಂದು ಶ್ರೀರಾಮಾವತಾರದ ಕತೆಯನ್ನು ಹಾಡಿ ಭಾರತೀಯರ ಮನೋಮಂದಿರದಲ್ಲಿ ಶ್ರೀರಾಮ ಪ್ರತಿಮೆಯನ್ನು ಪ್ರತಿಷ್ಠಾಪನೆ ಗೈದನೊ ಅಂದಿನಿಂದ ಆ ಜನ ಆ ಪ್ರತಿಮೆಯಲ್ಲಿ ಇಡೀ ಬ್ರಹ್ಮಾಂಡವನ್ನೆ ಕಾಣುತ್ತಿದ್ದಾರೆ; ಸೇಂದ್ರಿ ಯಾತೀತವೂ, ಅತೀಂದ್ರಿಯ ಗಮ್ಯವೂ ಆದ ಸೃಷ್ಟಿರಹಸ್ಯವನ್ನು ದರ್ಶಿಸುತ್ತಿದ್ದಾರೆ; ‘ರಾಮ’ ಎಂಬೆರಡು ಶಬ್ದಗಳಲ್ಲಿ ಓಂಕಾರ ಸ್ವರೂಪನಾದ ಪರಬ್ರಹ್ಮನನ್ನೇ ಕಾಣುತ್ತಿದ್ದಾರೆ; ಮಾನವನ ಕೊಟ್ಟ ಕೊನೆಯ ಆದರ್ಶ ಆಕಾಂಕ್ಷೆಗಳಿಗೆ ಅದೊಂದು ಪ್ರತಿಮೆಯಾಗಿದೆ.

ಪರಿಪೂರ್ಣಸಿದ್ದಿಯೆ ವಿಕಾಸತತ್ತ್ವದ ಪರಮ ಧ್ಯೇಯ. ಈ ಸಿದ್ದಿಗಾಗಿಯೆ ಪ್ರತಿಯೊಂದು ಚೇತನಾಚೇತನ ವಸ್ತುವಿನ ಅಂತರಾಳದಲ್ಲಿ ನಿರಂತರ ಹೋರಾಟ ನಡೆಯುತ್ತಿದೆ. ಈ ಹೋರಾಟ ಸಾಮಾನ್ಯ ಮಾನವನ ಹೊರಗಣ್ಣಿಗೆ ಕಾಣಿಸದು; ಯೋಗಿಯ ಮನೋನೇತ್ರಕ್ಕೆ ಮಾತ್ರ ಅದೆಲ್ಲ ಸುವೇದ್ಯ. ಅಂತೆಯೆ ಮಾನವ ಸಾಮಾನ್ಯನಾಗಲಿ ಮಹಿಮಾವಂತನಾಗಲಿ, ಅವನ ಅಂತರಂಗದಲ್ಲಿಯೂ ಅವನಿಗೆ ಗೋಚರವಾಗಿಯೋ ಅಗೋಚರವಾಗಿಯೋ ಈ ಹೋರಾಟ ನಡೆಯುತ್ತಿರುತ್ತದೆ. ಅವನ ಸಾಧನೆ ಸಂಸ್ಕಾರಗಳಿಗೆ ತಕ್ಕಂತೆ ಅನಾದಿಯೂ ಅನಂತವೂ ಲೋಕಲೋಕಾಂತರ ವ್ಯಾಪಿಯೂ ಆದ ಋತಶಕ್ತಿ ಸುರುಳಿ ಬಿಚ್ಚಿ ವ್ಯಕ್ತಗೊಳ್ಳು ತ್ತದೆ. ವಾಲ್ಮೀಕಿ ಮಹರ್ಷಿಯ ಸುದೀರ್ಘ ತಪಸ್ಸೆಲ್ಲ ಆ ಶಕ್ತಿ ಸಾಕ್ಷಾತ್ಕಾರಕ್ಕಾಗಿಯೇ ಮುಡಿಪಾಗಿತ್ತು. ಅವನು ತಪಸ್ಸಿನಲ್ಲಿ ಕಂಡ ಕಾಣ್ಕೆಯ ಫಲವೇ ರಾಮಾಯಣ; ಅತೀಂದ್ರಿಯ ಗಮ್ಯವಾದ ಅಲೌಕಿಕಾನುಭವಗಳಿಗೆ ಸಾಕಾರತೆಯನ್ನು ಒದಗಿಸುವ ಪ್ರಯತ್ನವೇ ಆ ದಿವ್ಯಗ್ರಂಥ. ಅದಕ್ಕಾಗಿಯೇ ಅವನು ನಾರದನನ್ನು ಪ್ರಶ್ನಿಸುತ್ತಾನೆ, ಈ ಲೋಕದಲ್ಲಿ ಗುಣವಂತನೂ ವೀರ್ಯವಂತನೂ ಧರ್ಮಾತ್ಮನೂ ದೃಢವ್ರತನೂ ಸರ್ವಭೂತಹಿತನೂ ಏಕಪ್ರಿಯದರ್ಶನನೂ ಆತ್ಮವಂತನೂ ದ್ಯುತಿಮಂತನೂ, ಹೀಗೆಯೆ ಇನ್ನೂ ಅನೇಕ ಗುಣಗಳಿಗೆ ನಿಧಿಯಾದ ಮಹಾಪುರುಷ ಯಾರೆಂದು. ಅಂತಹ ವ್ಯಕ್ತಿ ಶ್ರೀರಾಮನನ್ನು ಬಿಟ್ಟು ಬೇರೊಬ್ಬರಿಲ್ಲ ವೆಂದು ನಾರದ ಹೇಳುತ್ತಾನೆ. ಅತೀಂದ್ರಿಯ ಲೋಕದ ನಿತ್ಯಕಥೆ ಲೋಕವೃತ್ತದ ಮೂಲಕ ರಾಮಾಯಣವಾಗಿ ಅವತಾರವಾಗುತ್ತದೆ.

ಈ ಕಥೆ ಅಂದು ನಡೆದು ಅಂದೇ ಮುಗಿದುಹೋದುದಲ್ಲ. ನಮ್ಮ ಸುತ್ತಮುತ್ತ, ನಮ್ಮ ಹೊರಗೆ ಮತ್ತು ಒಳಗೆ ಅದು ಪ್ರತಿನಿತ್ಯ ನಡೆಯುತ್ತಿದೆ. ಕ್ಷಣಕ್ಷಣವೂ ಸತ್‌ಶಕ್ತಿಗಳಿಗೂ ದುಶ್ಶಕ್ತಿಗಳಿಗೂ ನಮ್ಮ ಅಂತರಂಗದಲ್ಲಿ ಹೋರಾಟ ನಡೆಯುವುದನ್ನು ನೋಡುತ್ತಿದ್ದೇವೆ. ಆ ಅಂತರಂಗದ ಇತಿಹಾಸವೇ ಶ್ರೀ ಕುವೆಂಪುರವರ ‘ಶ್ರೀರಾಮಾಯಣದರ್ಶನಂ’. ‘ಪಿಂತೆ ವಾಲ್ಮೀಯುಲಿದ ಕಥೆಯಾದೊಡಂ, ಕನ್ನಡದಿ ಬೇರೆ ಕಥೆಯೆಂಬಂತೆ, ಬೇರೆ ಮೈಯಾಂತಂತೆ, ಮರುವುಟ್ಟುವಡೆದಂತೆ’ ಈ ಕಾವ್ಯ ಮೂಡಿದೆ. ಬಹಿರಂಗ ವಿನ್ಯಾಸದಲ್ಲಿ ಸಾಮ್ಯ ಕಂಡು ಬಂದರೂ ಅಂತರಂಗವಿನ್ಯಾಸದ ದೃಷ್ಟಿಯಿಂದ ಅದಕ್ಕೂ ಇದಕ್ಕೂ ಬಹು ಅಂತರ. ವಿನ್ಯಾಸಕ್ಕನುಗುಣವಾಗಿ ಅಲ್ಲಲ್ಲೆ ಪಾತ್ರಸೃಷ್ಟಿ ಮತ್ತು ಸನ್ನಿವೇಶ ಕಲ್ಪನೆ ವ್ಯತ್ಯಾಸ ಹೊಂದುತ್ತವೆ. ಅಷ್ಟೇ ಅಲ್ಲ; ಹೆಸರುಗಳಲ್ಲಿ ಸಾದೃಶ್ಯ ಕಾಣುತ್ತದೆಯೇ ಹೊರತು ಉಳಿದುದರಲ್ಲಿ ಅದರ ಬಗೆಯೇ ಬೇರೆ, ಇದರ ಬಗೆಯೇ ಬೆರೆ. ಇದೊಂದು ಜಗದ್ಭವ್ಯವಾದ ಸ್ವತಂತ್ರ ಕೃತಿಯೆಂದೇ ಹೇಳಬಹುದು. ಈ ಕೃತಿಯಿಂದ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೊಸ  ಶಕೆಯೇ ಆರಂಭವಾಗುವುದರಲ್ಲಿ ಸಂದೇಹವಿಲ್ಲ.

ನಾಂದಿ ಶಕ್ತಿಸಂಸ್ಥಾಪನೆ ಪೂರ್ವಕವಿ ಸಂಸ್ಮರಣೆಯಾದನಂತರ ಕವಿ ನೇರವಾಗಿ ಕಥೆಗೆ ಧುಮುಕುತ್ತಾರೆ. ಕಥಾಪ್ರವಾಹ ತ್ವರೆಯಾಗಿ ಹರಿಯುತ್ತದೆ. ಒಂದೊಂದು ವಾಕ್ಯ, ಒದೊಂದು ಪದಗುಚ್ಛ; ಒಂದೊಂದು ಪದ್ಯವೂ ಒಂದೊಂದು ಗುರುಭಾವನೆಯನ್ನು, ಒಂದೊಂದು ಚಿತ್ರವನ್ನು ನಮ್ಮ ಕಣ್ಮುಂದೆ ನಿಲ್ಲಿಸುತ್ತದೆ. ತುಸು ತೂಕಡಿಸಿದರೆ ಕಾಲ ಮಿಂಚುವಂತೆ ರಸಘಟ್ಟಗಳು ಮಿಂಚುತ್ತವೆ. ಒಂದೊಂದು ಪದವನ್ನು ಸವಿದು ಸವಿದು ಮುಂದೆ ಸಾಗಬೇಕು. ಸವಿ ದೊರೆಯಬೇಕಾದರೂ ವಾಚಕನಿಗೆ ವ್ಯತ್ಪತ್ತಿ ಇರಬೇಕು, ನಾನಾ ಶಾಸ್ತ್ರಗಳ ಪರಿಚಯ ವಿರಬೇಕು, ತೀವ್ರಶ್ರದ್ಧೆ ಸತತಾಭ್ಯಾಸಗಳಂತು ಅತ್ಯಗತ್ಯ. ಒಂದೊಂದು ಪದವೂ ವಿರಾಟ್ ದರ್ಶನದ ಬಾಗಿಲನ್ನು ತೆರೆಯುವ ಕೀಲಿಕೈ. ಕೇವಲ ಇಪ್ಪತ್ತೇ ಪಂಕ್ತಿಗಳಲ್ಲಿ ಸಾಕೇತನಗರಿ ಯನ್ನೂ ಅದರ ಶ್ರೇಷ್ಠತೆ ವೈಭವಗಳನ್ನೂ ವರ್ಣಿಸಿ ಮುಗಿಸುತ್ತಾರೆ. “ಮೆರೆದುದು ವಿಷಯ ಮಧ್ಯೆ ರಾಜಧಾನಿ ಅಯೋಧ್ಯೆ, ರಮಿಸುವಿಂದ್ರಿಯ ಸುಖದ  ನಡುವಣಾತ್ಮಾನಂದದಂತೆ” ಎಂದು ಒಂದು ಉಪಮಾನವನ್ನು ಎಸೆದು ಶ್ರೀರಾಮಚಂದ್ರನ ಜನ್ಮಸ್ಥಾನದ ಪಾವಿತ್ರ್ಯವನ್ನು ಧ್ವನಿಗೊಳಿಸುತ್ತಾರೆ.

ಆ ನಗರದ ದೊರೆ ರಾಜರ್ಷಿಯೂ ದೀರ್ಘದರ್ಶಿಯೂ ಸಮದರ್ಶಿಯೂ ಆದ ದಶರಥ. ಸಿರಿಯಿದ್ದರೂ ನವಿರು ನರೆಗೂಡಿದ್ದರೂ ಅವನಿಗೆ ವಂಶಕರ ಸಂತಾನವಿಲ್ಲ. ಒಮ್ಮೆ ಹೂದೋಂಟದಲ್ಲಿ ತಿರುಗುತ್ತಿರುವಾಗ ಮರಿಗೆ ಗುಟುಕು ಕೊಡುತ್ತಿದ್ದ ತಾಯ್ವಕ್ಕಿಯ ನೋಟವನ್ನು ಕಂಡು ಚಕ್ರವರ್ತಿಯು ಮಕ್ಕಳಿಲ್ಲದ ಬಡತನವನ್ನು ಮೂದಲಿಸಿದ ಹಕ್ಕಿಯ ಸಿರಿತನವನ್ನು ಕರುಬುವನು. ಋತ ಸಂಕಲ್ಪಸಿದ್ದಿಗೆ ದಾರಿ ಹಲವು. ಭಗವಂತನ ಸಾಮ್ರಾಜ್ಯದಲ್ಲಿ ಕೀಳುಮೇಲುಗಳೇ ಇಲ್ಲ. ಗುಬ್ಬಚ್ಚಿಯ ವಾತ್ಸಲ್ಯವೆ ದೊರೆಯ ಹೃದಯದಲ್ಲಿ ತಿರೆಗೆ ವಿಭೂತಿಯನ್ನು ಕರೆಯುವ ಆಸೆಯನ್ನು ಕೆರಳಿಸುವುದು. “ಊರ್ಧ್ವಲೋಕದ ದೇವಶಕ್ತಿಗಳ್ ಸಂಚುಹೂಡಿದರೆನಲ್ ಚರಿಸಿದತ್ತವರಿಚ್ಛೆ ಮುದುಕ ನೆರ್ದೆಯಲ್ಲಿ ಮಕ್ಕಳಾಸೆವೊಲ್.” ಆಗ ಜಾಬಾಲಿ “ಹಿಂಸಾಕ್ರೌರ್ಯಮಿಲ್ಲದಿಹ ಪ್ರೇಮಕ್ಕೆ ನೋಂತು, ದೇವರ್ಕಳಂ ಪೂಜಿಸಲ್ ಮೆಚ್ಚುವುದು ಜಗವನಾಳುವ ಋತಂ….. ವಿಶ್ವಮಂ ಸರ್ವತ್ರ ತುಂಬಿದಂತರ್ಯಾಮಿ ಚೇತನಂ ತಾಂ ಪ್ರೇಮಾತ್ಮವಾಗಿರ್ಪುದದರಿಂದೆ ಹಿಂಸೆಯಿಂ ಪ್ರೇಮಮೂರ್ತಿಗಳಾದ ಸಂತಾನ ಮುದಿಸದಯ್” ಎಂದು ನುಡಿಯಲು ದಶರಥ ಋಷ್ಯಶೃಂಗಾದಿ ಮುನಿಗಳನ್ನು ಕರೆಸಿಕೊಂಡು ಸಾತ್ತ್ವಿಕ ವಿಧಾನದಿಂದ ವಿಶ್ವಶಕ್ತಿ ಸ್ವರೂಪಿ ಅಗ್ನಿಯನ್ನು ಪೂಜಿಸುವನು. “ಜನ ಮನಸ್ಸು ಯುಗಶಕ್ತಿಯಲ್ತೆ?” ಅವರ ಅಭೀಪ್ಸೆಯೆ ಮಹಾತ್ಮರನ್ನು ಈ ಭೂಮಿಗೆ ಎಳೆತರುವುದರಲ್ಲಿ ಸೋಜಿಗವಿಲ್ಲ. “ಮನದೊಲೆ ತನುಜರೆಂದೆಂಬ ಜಾಣ್ಣುಡಿಯನರಿತು ಅಲ್ಪತೆಯ ಭಾವಂಗಳಂ ನೆರೆ ತೊರೆದು ಗಗನಮಂ ಪೃಥ್ವಿಯಂ ವಾರ್ಧಿಯಂ ಪರ್ವತಾರಣ್ಯ ವಿಸ್ತಾರ ಧೀರೋದಾತ್ತ ಗಾಂಭೀರ್ಯಮಂ ಭದ್ರವೀರ ಸೌಂದರ್ಯಮಂ ಧ್ಯಾನಿಸುತೆ ಭಾವಿಸುತೆ ರೂಪಿಸುತೆ ಕಾಮಿಸಿದನಾ ಭೂಮಿಪಂ ತದ್ರೂಪಗುಣ ಹೃದಯರಂ.” ಮುಂದೆ ಅವತರಿಸಲಿರುವ ಮಕ್ಕಳು ಅಪ್ರಾಕೃತರು, ಪ್ರೇಮಾತ್ಮರು, ಗಗನಸದೃಶರು, ವಾರ್ಧಿ ಗಂಭೀರರು ಎಂಬುದನ್ನು ಮೊದಲಿಂದಲೂ ಕವಿ ಸೂಚಿಸುತ್ತಾರೆ. ಮಖಮೂರ್ತಿ ಇತ್ತ ಪಾಯಸವನ್ನು ಸೇವಿಸಿ ಗರ್ಭಿಣಿಯರಾದ ಕೌಸಲ್ಯೆ ಸುಮಿತ್ರೆ ಕೈಕೆಯರನ್ನು ಕ್ರಮವಾಗಿ ಪೂರ್ಣಿಮಾ ರಜನಿಗೂ, ಯಮಳ ತಾರೆಗಳಿಗೂ, ಜೆಂಬೊನ್ನಿನೊರೆಗೂ ಹೋಲಿಸಿ ಮುಂಬರುವ ಸಂಸಾರ ನಾಟಕಕ್ಕೆ ಧ್ವನಿಗರ್ಭಿತವಾಗಿ ಮುನ್ನುಡಿ ನುಡಿಯುತ್ತಾರೆ.

ರಾಮಾಗಮನ ನಿರೀಕ್ಷೆಯಿಂದ ಪೃಥ್ವಿ ಪುಲಕಿತವಾಗುವುದು; ತಾಯಿ ಕೌಸಲ್ಯೆಯ ಎದೆಯಲ್ಲಿ ಹಾಲುಕ್ಕುವುದು. ಕನಸಿನಲ್ಲಿ ದುಗ್ಧಾಬ್ಧಿಯನ್ನೂ, ಹಾಲ್ದೆರೆಯೆ ತೇರಿನಲ್ಲಿ ಚಂದ್ರ ಶಿಶು ತೇಲಿ ತನ್ನೆಡೆಗೆ ಬಂದು ತನ್ನ ತೊಡೆಗಳ ಮೇಲೆ ಕುಳಿತುಕೊಂಡುದನ್ನೂ ಕೌಸಲ್ಯೆ ಕಾಣುವಳು. ಚೈತ್ರನವಮಿಯ ಶುಭಮೂಹೂರ್ತದಲ್ಲಿ ಅವಳು ಶ್ರೀರಾಮಚಂದ್ರನನ್ನು ಹಡೆಯುವಳು. ಅನಂತರ ಭರತಲಕ್ಷ್ಮಣ ಶತ್ರುಘ್ನರು ಉದಯಿಸುವರು. ಕೌಸಲ್ಯೆ ಮಗನ ಕಣ್ಣುಗಳನ್ನು ನೋಡಿದಾಗ ನೀಲಗಗನವನ್ನು ಕಂಡಂತೆ, ಮಗನ ತೊದಲನ್ನು ಕೇಳಿದಾಗ ಕಡಲ ಮೊರೆತವನ್ನು ಆಲಿಸಿದಂತೆ ಬೆಚ್ಚಿ ಬೆದರುವಳು. ಗುರು ವಸಿಷ್ಠನು ಬಂದು ತಾನು ಹಿಂದಿನ ರಾತ್ರಿ ಕಂಡ ಸ್ವಪ್ನವನ್ನು ವಿವರಿಸಿ ರಾಮಚಂದ್ರ ಅಪ್ರಾಕೃತನೆಂದು ತಿಳಿಸಿ ಅವಳ ಬೆಚ್ಚನ್ನು ಬಿಡಿಸುವನು.

ಹೀಗಿರುವಾಗ ಒಂದು ಹುಣ್ಣಿಮೆಯಿರುಳಿನಲ್ಲಿ ರಾಣಿಯರು ತಮ್ಮ ಮಕ್ಕಳೊಡನೆ ಆಟಪಾಟಗಳಳ್ಲಿ ತಲ್ಲೀನರಾಗಿದ್ದಾಗ ಶ್ರೀರಾಮಚಂದ್ರ ಆಕಾಶದ ಚಂದ್ರನನ್ನು ತಂದು ಕೊಡುವಂತೆ ತಾಯಿಯನ್ನು ಕಾಡುವನು. ‘ಗಗನ ಚಂದ್ರಂ ನರರ ಧರಣಿಗೈತರನೆಂದು’ ಎಷ್ಟು ವಿಧವಾಗಿ ಸಂತೈಸಿದರೂ ಸುಮ್ಮನಿರನು. ಒಡವೆ ಭಕ್ಷ್ಯ ಭೋಜ್ಯಗಳನ್ನು ಒಲ್ಲನು. ತನ್ನ ಸಿರಿತನಕ್ಕೆ ಮೀರಿದ ಕೂಸಿನ ಬಯಕೆಯಿಂದ ತಾನು ಕಡುಬಡವನಾದೆನಲ್ಲ ಎಂದು ರಾಜ ದುಗುಡಗೊಳ್ಳುವನು. ಅಷ್ಟರಲ್ಲಿ ಮುದಿಗೂನಿ ಮಂಥರೆ ತನ್ನ ಮಡಲಿನಲ್ಲಿದ್ದ ಕನ್ನಡಿಯೊಂದನ್ನು ಕೈಕೆಗೆ ನೀಡುವಳು. ಕೈಕೆ ಆ ಕನ್ನಡಿಯಲ್ಲಿ ಪ್ರತಿಬಿಂಬಿಸುತ್ತಿದ್ದ ಚಂದ್ರನನ್ನು ರಾಮಚಂದ್ರನಿಗೆ ತೋರಿಸಲು ಚಂದ್ರನನ್ನು ಪಡೆದೆನೆಂದು ಅವನು ಉಬ್ಬಿ ಕುಣಿದಾಡುವನು. ಈ ಒಂದು ಸನ್ನಿವೇಶ ಎಷ್ಟು ಸಹಜವಾಗಿ ಚಿತ್ರಿತವಾಗಿದೆ, ಇದರಲ್ಲಿ ‘ದರ್ಶನ ಧ್ವನಿ’ ಹೇಗೆ ಹೊರಹೊಮ್ಮುತ್ತದೆಂಬುದು ಸುಸ್ಪಷ್ಟವಾಗಿ ಗೋಚರವಾಗುತ್ತದೆ. ಚಂದ್ರ ಬೇಕೆಂದು ಆ ಮಗು ಬಯಸಿದುದರಿಂದ ಅವನು ಗಗನ ಸದೃಶ, ಅವನ ದೃಷ್ಟಿ ಸದಾ ಗಗನಗಾಮಿ ಎಂದೂ, ಮಗುವಿನ ಬಯಕೆಯನ್ನು ಈಡೇರಿಸುವ ಯೋಚನೆ ಯಾರಿಗೂ ಹೊಳೆಯದಿದ್ದಾಗ ಮಂಥರೆ ಕನ್ನಡಿಯನ್ನು ತಂದು ಕೊಟ್ಟುದರಿಂದ ಮುಂದೆ ಆ ಮಗುವಿನ ರಾಮತ್ವ ವಿಕಾಸ ಪ್ರಕಾಶನಗಳಿಗೆ ಅವಳೇ ನೆರವಾಗುತ್ತಾಳೆಂದೂ – ಇಷ್ಟೆಲ್ಲ ಆ ಒಂದು ಸನ್ನಿವೇಶದಲ್ಲಿಯೆ ಧ್ವನಿತವಾಗುತ್ತವೆ.

ಈ ಗ್ರಂಥದಲ್ಲಿ ಹೆಜ್ಜೆಹೆಜ್ಜೆಗೂ ಇಂಥ ಸನ್ನಿವೇಶಗಳು ಮಾಲೆಮಾಲೆಯಾಗಿ ಬರುತ್ತವೆ. ಆದರೆ ಈ ಪುಟ್ಟಲೇಖನದಲ್ಲಿ ಅವೆಲ್ಲವನ್ನು ನಿರೂಪಿಸಲಾಗುವುದಿಲ್ಲ ರುಚಿ ನೋಡುವುದಕ್ಕಾಗಿ ಮಾತ್ರ ಒಂದು ತುಣಕನ್ನು ಇಲ್ಲಿ ತೋರಿಸಿದೆ. ಸನ್ನಿವೇಶ ರಚನೆಯಂತೆಯೆ ವ್ಯಕ್ತಿಚಿತ್ರಗಳನ್ನು ಸಹೃದಯರು ಸಾವಧಾನವಾಗಿ ಸವಿಯ ಬೇಕಾಗುತ್ತದೆ. ಹಿರಿಯರಾಗಲಿ, ಕಿರಿಯರಾಗಲಿ, ಪ್ರಮುಖರಾಗಲಿ, ಅಪ್ರಮುಖರಾಗಲಿ, ಪ್ರತಿಯೊಬ್ಬರೂ ಮೂಲ ರಾಮಾಯಣದ ವ್ಯಕ್ತಿಗಳಿಂದ ತೀರ ಭಿನ್ನರು. ಅವರ ಸ್ವರೂಪ ಸೌಂದರ್ಯವೇ ಬೇರೆ, ಇವರ ಸ್ವರೂಪ ಸೌಂದರ್ಯವೇ ಬೇರೆ. ಮತ್ತೆ ಮಾದರಿಗಾಗಿ ಅನಲೆಯ ಚಿತ್ರವನ್ನು ಇಲ್ಲಿ ಉದಾಹರಿಸ ಬಹುದು. ವಾಲ್ಮೀಕಿ ರಾಮಾಯಣದಲ್ಲಿ ಕೇವಲ ನಾಮಮಾತ್ರವಾಗಿ ಗೋಚರಿಸುವ ಅನಲೆ ಇಲ್ಲಿ ಅದ್ಭುತ ಪ್ರೇಮಮೂರ್ತಿಯಾಗಿ, ಧರ್ಮದೇವತೆಯಾಗಿ ವಿರಾಜಿಸುತ್ತಾಳೆ. ಮೊದಲು ಇಂದ್ರಜಿತುವಿನ ಬಾಯಿಂದ ಅವಳ ಹೆಸರಿನ ಮಾಧುರ್ಯವನ್ನು ಸವಿಯುತ್ತೇವೆ. ಅನಂತರ ಸೀತಾನ್ವೇಷಣನಿರತನಾದ ಆಂಜನೇಯನೊಡನೆ ವಿಭೀಷಣನ ಗೃಹದಲ್ಲಿ ಅವಳನ್ನು ದರ್ಶಿಸುತ್ತೇವೆ. ಸುತ್ತಮುತ್ತ ಹರಡಿದ್ದ ಸಾತ್ವಿಕ ಸುಗಂಧ ಮತ್ತು ವೀಣಾಮೃದುಲವಾಣಿ ನಮ್ಮನ್ನು ‘ಶೋಕಮಂ ವಿೂಂಟಿ ಬಾಳಿನ ಗೋಳನೊರೆವವೋಲಿರ್ದ’ ಶ್ರೀಮಂತ ಮಂದಿರಕ್ಕೆ ಸ್ವಾಗತಿಸುತ್ತದೆ. ಆ ಕಂಪು ಹನುಮ ಹೃದಯದ ವಜ್ರವನ್ನು ಕದಲಿಸುತ್ತದೆ. ಆ ತಂತಿಯಿಂಪಿಗೆ ಅವನ ಅಂತಃಸ್ಮೃತಿಯಲಂಪು ಕರಗುತ್ತದೆ. ಪಶುಪಕ್ಷಿ ಮೊದಲಾದ ನಾನಾ ಅಮಂಗಳಾಕೃತಿ ಗಳನ್ನು ತಳೆದು ಕೃಂಭಕರ್ಣ ಪ್ರಹಸ್ತಾದಿ ರಾಕ್ಷಸರ ಮನೆಗಳನ್ನು ಹೊಕ್ಕ ಕಾಮರೂಪಿ ವಾಯುಪುತ್ರ ಇಲ್ಲಿ ಆ ರೂಪಗಳನ್ನು ತಳೆದು ಒಳಗೆ ಪ್ರವೇಶಿಸಲು ಸಮರ್ಥನಾಗದೆ ಓಂಕಾರ ಶುಭರೂಪವನ್ನು ತಾಳಿ ವೀಣಾ ಧ್ವನಿಯೊಡನೆ ಬೆರೆತು ಪ್ರವೇಶಿಸುತ್ತಾನೆ. ಯಾರೋ ಬಂದಂತಾಯಿತೆಂದು ಅನಲೆ ಬೆಚ್ಚುತ್ತಾಳೆ, ಪುಳಕಿಸುತ್ತಾಳೆ; ತಂದೆಗೆ ಹೇಳುತ್ತಾಳೆ. ಅವಳ ಮಾತನ್ನು ತಾಯಿ ಸರಮೆ ಸಮರ್ಥಿಸುತ್ತಾಳೆ. “ಸೋಜಿಗಮೇಕೆ? ದಿವ್ಯ ಕಲೆಯೆಲ್ಲಿರ್ದೊಡಲ್ಲಿ ಗೈತಹರಲ್ತೆ ದಲ್ ಪಗಲಿರುಳ್ ವಿಶ್ವಮಂ ಸಂಚರಿಸಿ ರಕ್ಷಿಸುವ ಸತ್‌ಶಕ್ತಿಗಳ್ ದೇವತಾತ್ಮಗಳ್” ಎಂದು ವಿಭೀಷಣ ಮಗಳಿಗೆ ಧೈರ್ಯ ಹೇಳುತ್ತಾನೆ. ನಿಭಾಗ್ಯೆಯಾದ ಸೀತಾಮಾತೆಯನ್ನು ಪತಿಯೆಡೆಗೆ ಕಳುಹಿಸದಿದ್ದರೆ ಲಂಕೆಗೆ ಸಂಕಟ ಪ್ರಾಪ್ತವಾಗದಿರದೆಂದು ಅನಲೆ ತಂದೆಗೆ ನಿವೇದಿಸಿಕೊಳ್ಳುವಾಗ ಹನುಮಂತ ರೋಮಾಂಚಗೊಂಡು “ಇನ್ನನ್ನರಿಂ ಕ್ಷೇಮಿಯೀ ಲಂಕಾಕನಕಲಕ್ಷ್ಮಿ” ಎಂದು ಮುಂದೆ ನಡೆಯುತ್ತಾನೆ.

ಮತ್ತೆ ನಾವು ಅನಲೆಯನ್ನು ನೋಡುವುದು ರಾವಣನ ಅರಮನೆಯಲ್ಲಿ. ಅಷ್ಟು ಹೊತ್ತಿಗಾಗಲೆ ರಾವಣ ತನ್ನ ಆಪ್ತರನ್ನು ಕರೆದು ಯುದ್ಧಸನ್ನಾಹದ ವಿಷಯವನ್ನು ಪ್ರಸ್ತಾಪಿಸುತ್ತಾನೆ. ಒಡೆಯನ ಆತ್ಮಕ್ಷೇಮಾಭಿಲಾಷಿಗಳಾದ ಮಹಾಪಾರ್ಶ್ವ ವಿಭೀಷಣರು ಶ್ರೀರಾಮನ ದಿವ್ಯತ್ವವನ್ನು ಕುರಿತು ಪ್ರಶಂಸಿಸಿ, ಸೀತೆಯನ್ನು ಅವನಿಗೆ ಒಪ್ಪಿಸುವಂತೆ ಸಲಹೆ ನೀಡುತ್ತಾರೆ. ಆಪ್ತಗೋಷ್ಠಿಯಲ್ಲಿ ಒಡಕು; ತನ್ನ ಎದೆಯಲ್ಲಿ ಬಿರುಕು. ರಾವಣ ಈ ಸಂಕಟದ ಅಸ್ವಸ್ಥತೆಯಿಂದ ಮಲಗಿರುವಾಗ ಅನಲೆ ಇರುಳೆಲ್ಲ ಶುಶ್ರೂಷೆಯಲ್ಲಿ ನಿರತಳಾಗುತ್ತಾಳೆ. ವಿಭೀಷಣ ‘ಕಾಣ್ಬುದೆ ತಡಂ ಬೆಳ್ಳಿ, ಕೇಳ್ವುದೆ ತಡಂ ಮೊದಲ ಪಕ್ಕಿ’ ಅಣ್ಣನ ಮನೆಗೆ ಬರುತ್ತಾನೆ. ಸರ್ವಲೋಕಭಯಂಕರನೂ ಮಹೇಂದ್ರಾರಿಯೂ ದೈತ್ಯೇಶ್ವರನೂ ಆದ ರಾವಣ ನಿದ್ರೆಯಲ್ಲಿ ಪಸುಳೆಯಂತೆ ಅಳುವುದನ್ನು ಕಂಡು ವಿಭೀಷಣ ಕರುಣೆಯಿಂದ ಕರಗುತ್ತಾನೆ. ಪೆಣ್ಮಕ್ಕಳಿಲ್ಲದ ಆ ಸುರವೈರಿ ಭೋಂಕನೆಚ್ಚತ್ತು ‘ಅನಲಾ’ ಎಂದು ಮೆಲ್ಲಗೆ ಕರೆಯುತ್ತಾನೆ. ಮುಂದಿನ ಕತೆಯನ್ನೂ ಆ ನಾಟಕೀಯ ರಮಣೀಯ ಸನ್ನಿವೇಶವನ್ನೂ ಕವಿಯ ಅಮೃತವಾಣಿ ಯಿಂದಲೆ ಕೇಳಿ ತಣಿಯಬೇಕು.

‘ದೊಡ್ಡಯ್ಯ’ ರಾವಣನ ಇಂಗಿತ ಅರ್ಥವಾಗದೆ ಕೇಳಿದಳು.

‘ಏನಿಲ್ಲ; ನೀನೆನ್ನನಗಲಿದೋಲೆನಗೊಂದು ಕನಸಾದುದಕ್ಕ’ ಎಂದು ನಕ್ಕು ನುಡಿದು ದುಃಖದ ಆನಂದವೆನ್ನುವಂತೆ ಕಣ್ಣೀರ್ಗರೆಯುವನು.

‘ನಿದ್ದೆಗೆಯ್, ದೊಡ್ಡಯ್ಯ, ನಾನೆಲ್ಲಿಗೂ ತೆರಳ್ದೆನಿಲ್ಲೀಯೆಡೆಯೆ ಇರ್ದಪೆನ್.’

‘ದಿಟವೊರೆದೆ ಅಕ್ಕ, ಆರ್ ತೊರೆದೊಡಂ ನೀನೆನ್ನನುಳಿವಳಲ್ತು’ ಎಂದು ತುಸು ಎವೆ ಮುಚ್ಚಿ ಮತ್ತೆ ತೆರೆದು

“ಅಕ್ಕ, ನಿನ್ನಯ್ಯನೆಮ್ಮಂ ಬಿಡಲ್?”

“ಬಿಡುವನೇ ನಿನ್ನನ್ ಒಡಹುಟ್ಟಿದಪನೆನ್ನ ಪಡೆದಯ್ಯನ್”

“ನೀನೆ ನೋಡುವೆ ಅಕ್ಕ, ತೊರೆದಪನ್”

“ದೊಡ್ಡಯ್ಯ, ತೆಗೆ ಈ ತೊದಲ್ ನುಡಿಗಳನ್! ಬಿಡುವನೆಂದೇಕೆ”

“ಕೆಮ್ಮನೆಯೆ ಶಂಕಿಪ್ಪೆ? ಕಾಣ್ ನಟ್ಟು ಕುಳ್ತಿಹನ್,

“ಈ ಬಳಿಯೆ ನಿನ್ನೆಡೆಯೆ, ಇಂದು ಪೊಳ್ತರೆಯಿಂದೆ”

ತಮ್ಮನೆಡೆಗೆ ಕಣ್ಣು ಹೊರಳಿಸಿದ ರಾವಣನ ಭಾವಭಂಗಿಯನ್ನು ನೋಡಿ ಅನಲೆ ಮಂಡೋದರಿಯರು ಭಯಚಕಿತರಾಗುವರು.

……..ಬಿಟ್ಟರಾರೆನ್ನ
ಬಳಿಗೀ ಕುಲದ್ರೋಹಿಯಂ, ಶತ್ರುಮಿತ್ರನಂ
ಗೃಹವೈರಿಯಂ, ಗರುಂಕೆ ಮುಸುಕ ಕಣ್ಗೊಳಿಪ
ವಂಚನೆಯ ಶಿಥಿಲ ಮಲಕೂಪಮಂ?……

ಎಂದು ರಾವಣ ಕೋಪದಿಂದ ಕುದಿಯುವನು; ಕೂಡಲೆ ತನ್ನ ಪ್ರೀತಿಪುತ್ಥಳಿ ಅನಲೆಯನ್ನು ಬರಸೆಳೆದು ಅಪ್ಪಿಕೊಳ್ಳುವನು. ‘ಅಳದಿರಳದಿರೌ, ಅಕ್ಕ! ಸಾವಪ್ಪೊಡಂ ನನಗೆ ನಿನಗೆಸಗೆ ನಾಂ ನೋವಪ್ಪುದಂ’ ಎಂದು ತನ್ನ ಹತ್ತಿರ ಕುಳ್ಳಿರಿಸಿಕೊಳ್ಳುವನು. ಅನುಜನ ಕಡೆಗೆ ನೋಡಿ ‘ಅನಲೆ ನಿನ್ನ ಮಗಳಲ್ತೆನ್ನವಳ್; ಇವಳಿನ್ನು ಕಾಪಿಡುವ ದೇವಿ!’ ಎನ್ನುವನು. ‘ಆ ಪುಣ್ಯಮೆನಗಕ್ಕೆ’ ಎಂದು ವಿಭೀಷಣ ಮಾರ್ನುಡಿಯುವನು. ಎಲ್ಲರ ಮೋರೆಯ ದುಗುಡದ ಮುಗಿಲಿನಂಚಿನಲ್ಲಿ ಮೈತ್ರಿಯ ಮಿಂಚು ಚಿಮ್ಮುವುದು. ದಶಾನನನಿಗಾದರೊ ಪೀಕಲಾಟ. ಒಂದು ಕಡೆ ಗೃಹವೈರಿ, ಮತ್ತೊಂದು ಕಡೆ ತನ್ನ ಪ್ರಾಣಸರ್ವಸ್ವಕ್ಕೆ ಆಪ್ಯಾಯಮಾನಳಾಗಿರುವ ಅನಲೆ.

…….ಪುಣ್ಯ ಪ್ರಚೋದಿಯೆನಗಿದೊಂದೆ
ಸೌಂದರ್ಯಮನಲೊ ಮುದ್ದು ಚೆಲ್ವು!

ಎಂದು ಅವನು ಚಿಂತೆಗೆ ಸೆರೆಯಾಗುವನು.

ತಾಯ್ ಸರಮೆ ಗಂಧರ್ವ ಕನ್ಯೆ, ತಂದೆಯುಮಂತೆ
ಸತ್ತ್ವನಿಧಿ; ಕುವರಿಯಿಂತಿರ್ಪುದೇಂ ಸೋಜಿಗಮೆ?

ಎಂದು ಪಕ್ಕದಲ್ಲಿದ್ದ ಅವಿಂದ್ಯ ಮನಸ್ಸಿನಲ್ಲಿಯೆ ನೆನೆಯುವನು. ‘ಪೆಣ್ಗಳಂ ಪೊತ್ತು ಪಡೆಯದ ರುಜೆಗೆ ಪೊತ್ತಾದೊಡಂ ಪಡೆವ ಭೇಷಜಮೆ ರೋಗಕಾರಣಮಾಗಿ’ ರಾವಣನ ‘ಪುರುಷಕಾರದ ತೇಜಮಂ’ ಹುರಿದು ಮುಕ್ಕುತ್ತದೆ. ವಿಭೀಷಣ ಮೆಲ್ಲಗೆ ಹಿಂದಿನ ದಿನ ತಾನಾಡಿದುದನ್ನು ನೆನೆಸುತ್ತಾನೆ. ‘ಒಯ್ಯನೆ ಅನೈಚ್ಛಿಕಮೆನಲ್ಕೆ ಸಿಡಿಲ್ದುದು ತಳ್ಕೆ ಸಹೋದರ ಸುತೆಯ ತನುವಿಂ’ ಅಣ್ಣತಮ್ಮಂದಿರ ನಡುವೆ ಕನಲ್ನುಡಿ, ಉರಿನುಡಿ, ಕಿಡಿನುಡಿಗಳ ಅಸ್ತ್ರಪ್ರತ್ಯಸ್ತ್ರಗಳ ಮಳೆ ಸುರಿದು, ಕಡೆಗೆ ವಿಭೀಷಣ ‘ನಮಸ್ಕಾರ’ ಎಂದೆದ್ದು ನಡೆಯುವನು. ಅನಲೆಯೂ ಮೇಲೇಳು ವಳು. ಕೂಡಲೇ ತಿಳಿವು ಮರುಕೊಳಿಸಿದಂತೆ ರಾವಣ ‘ಆಜ್ಞೆಯಿಂ ಸಾಧ್ಯಮಪ್ಪೊಡಮಿದನ್ ಬೇಡುವೆನ್. ಅನಲೆಯಂ ಕೊಂಡೊಯ್ದು ಸುಕುಮಾರಿಯಂ ಕಠಿನಕೊಡ್ಡದಿರ್’ ಎಂದು ತಮ್ಮನನ್ನು ಪ್ರಾರ್ಥಿಸುವನು. ಧರ್ಮಪಕ್ಷಪಾತೆಯಾದ ಅನಲೆಯೆ ದೊಡ್ಡಯ್ಯನಿಗೆ ಉತ್ತರ ಕೊಡುತ್ತಾಳೆ: ‘ಮನ್ನಿಸೆನ್ನನ್; ತಂದೆಯೊಡವೋಗಿ ಧರ್ಮಮನ್ ಸೇವಿಪೆನ್.’ ರಾವಣ ಕುಪಿತನಾಗುವನೆ? ‘ಇಲ್ಲಿರ್ದೆ ಧರ್ಮಕ್ಕೆ ಸೇವೆಗೆಯ್’ ಎನ್ನುವನು. ‘ಧರ್ಮಮಂ ಪೊರಗಟ್ಟಿ ಸೇವಿಪ್ಪುದೆಂತು’ ಎಂದ ಅನಲೆಯ ಕೈಹಿಡಿದು ರಾವಣ ‘ನನ್ನನ್ನರಂ ನಿನ್ನನ್ನರುಳಿಯೆ ಧರ್ಮ ಮುದ್ಧಾರಮಾದಪುದೆ? ನಿನ್ನಯ್ಯಗಿಂ  ಮಿಗಿಲ್ ನೀನ್ ವೇಳ್ಕುಮೆನಗಲ್ತೆ?’ ಪಾಪ ಪುಣ್ಯಗಳನ್ನು ಸಂಧಿಸುವ ಸೇತುವೆಯವಳು; ಹಿರಿಯಯ್ಯನ ಪಾಪದ ಕಾಳಿಕೆಯನ್ನು ಸುಡುವ ಅನಲೆಯವಳು. ವಿಭೀಷಣ ಮಗಳನ್ನು ಅಲ್ಲಿಯೇ ಇರೆನ್ನುವನು. ‘ತೊರೆವೆನೆ ನಿನ್ನ ಸಾನ್ನಿಧ್ಯಮಂ’ ಎಂದ ಮಗಳ ಮಾತಿಗೆ ‘ನಿನಗೆ ತಡೆಯುಂಟೆ ಪೇಳಕ್ಕ;  ಅಯ್ಯ ನೆಲ್ಲಿರ್ದೊಡಲ್ಲಿಗೆ, ಏಗಳಾದೊಡಂ ಪೋಗಿಬರಲನುಮತಿಯನಂತೆಯೆ ವಿಮಾನಮನ್ ಪುಷ್ಪಕವನೀವೆನ್’ ಎಂದು ರಾವಣ ಪ್ರೇಮದ ತ್ಯಾಗದ ಪರಾಕಾಷ್ಠೆಯನ್ನು ವ್ಯಕ್ತಪಡಿಸುವನು. ಮಂಡೋದರೀಶಕ್ತಿ ವಿಭೀಷಣಶಕ್ತಿ ಯಂತೆಯೆ ಅನಲಾಶಕ್ತಿಯೂ ರಾವಣನ ರಾವಣತ್ವದ ವಿಷವನ್ನು ಹೀರಿ ರಾಮತ್ವವನ್ನು ತುಂಬುವುದು.

ಈಗ ಅನಲೆಗಿರುವ ಸ್ವಾತಂತ್ರ್ಯ ಲಂಕೆಯಲ್ಲಿ ಇನ್ನಾರಿಗೂ ಇಲ್ಲ. ರಾಮನ ಬೀಡಿನಲ್ಲಿದ್ದ ತಂದೆಗೆ ನಗರದ ರಾಜಕೀಯವನ್ನು ತಿಳಿಸುವಳು. ಆಗಾಗ್ಗೆ ಅಶೋಕವನಕ್ಕೆ ಹೋಗಿ ಸೀತೆಯ ಪತಿವ್ರತಾಧರ್ಮಕ್ಕೆ ಸಾಕ್ಷಿಯಾಗಿರುವಳು. ಯುದ್ಧದಲ್ಲಿ ಬಂಧುಗಳು ಸತ್ತಾಗ ಗೋಳನ್ನು  ತಡೆಯಲಾರದೆ ಸೀತಾದೇವಿಯ ದಿವ್ಯಸಾನ್ನಿಧ್ಯದಲ್ಲಿ ಮನಶ್ಶಾಂತಿಯನ್ನು ಪಡೆಯುವಳು. ಕುಂಭಕರ್ಣ ತೀರಿಕೊಂಡಾಗಲಂತು ತಾನು ಅವನೊಡನೆ ಚಿಕ್ಕಂದಿನಲ್ಲಿ ಆಡಿದ ಆಟಗಳನ್ನು ನೆನೆಸಿಕೊಂಡು, ಸೀತೆಯ ಮುಂದೆ ತೋಡಿಕೊಂಡು ರೋದಿಸುವಳು. ಇಂದ್ರಜಿತುವು ಮಾಡುತ್ತಿದ್ದ ನಿಕುಂಭಿಲೆಯಾಗದ ವಿಷಯವನ್ನು ತನ್ನ ತಂದೆಗೆ ಹೇಳಿಕಳುಹಿಸುವಳು. ರಾವಣನ ಹೃದಯ ಕ್ಷಣಕ್ಷಣವೂ ಪಕ್ವವಾಗುತ್ತಿದ್ದ ವಿಷಯ ಅವಳಿಗೆ ಗೊತ್ತು. ದೊಡ್ಡಯ್ಯ ಅಭಿಮಾನಿ, ಹಿಡಿದ ಹಠವನ್ನು ಬಿಡ, ಅವನು ಇಲ್ಲಿಗೆ ಬಂದಾಗ ತಾಯಿಯಂತೆ ಹಿತವಚನವನ್ನು ಹೇಳುವಂತೆ ಸೀತೆಯನ್ನು ಕೇಳಿಕೊಳ್ಳುವಳು. ‘ಪದಿನಾರ್ ಬಸಂತಗಳ ಮುದ್ರೆಯಂ ತಳೆದಿರ್ಪ ನಿನ್ನ ಮೈಯ್ ಪಿರಿಯುಸಿರ್ ಬೀಡು, ಪೆರ್ಬಗೆಯ ಪೆರ್ಮೆಗೆ ತವರ್ ನಾಡು’ ಎಂದು ಸೀತೆ ಅವಳನ್ನು ಮನಸಾರೆ ಹರಸುವಳು.

ಅನಲೆ ಸೀತೆಯ ಬಿಡುಗಡೆಗಾಗಿ ಎಷ್ಟು ತವಕಿಸಿದಳೊ ದೊಡ್ಡಯ್ಯನ ಮರಣಕ್ಕಾಗಿ ಅಷ್ಟೇ ರೋದಿಸುವಳು; ಬಹುಶಃ ಅವಳ ನೀರವದುಃಖ ಪಕ್ಕದವರಿಗೂ ಕೇಳಿಸುವುದಿಲ್ಲ. ಆದರೆ ಕವಿ ಮಾತ್ರ ಅವಳನ್ನು ಎಲ್ಲಿಯೂ ಮರೆಯುವುದಿಲ್ಲ; ಅನಲೆಯ ತಂದೆ ರಾವಣನ ಚಿತೆಗೆ ಕಿಚ್ಚಿಟ್ಟನಂತೆ!

ಲಂಕೆ ಅರಾವಣವಾಯ್ತು. ಇನ್ನುಳಿದುದು ಸೀತಾರಾಮರ ಸಮಾಗಮ! ಅನಲೆಗಂತು ಎಷ್ಟು ಹೊತ್ತಿಗೆ ಎಷ್ಟು ಹೊತ್ತಿಗೆ ಎಂಬ ತವಕ. ಅವಳೂ ಸೀತೆಯೊಡನೆ ಸಿವಿಗೆಯಲ್ಲಿ ಕುಳಿತು ರಾಮನೆಡೆಗೆ ಬರುತ್ತಾಳೆ. ಅವನ ಕ್ರೂರಾಜ್ಞೆಯನ್ನು ಕೇಳಿ ಒಳಗೊಳಗೇ ಅವನನ್ನು ಶಪಿಸುತ್ತಾಳೆ. ಆದರೆ ಸೀತೆ ದಿವ್ಯತೇಜಸ್ಸಂಪನ್ನಳಾಗಿ ಅಗ್ನಿಯಿಂದ ಹೊರಹೊಮ್ಮಿದಾಗ ಅವಳು ರಾಮನ ಪಾದಮೂಲದಲ್ಲಿ ದಿಂಡುರುಳಿ ಕ್ಷಮೆಯನ್ನು ಯಾಚಿಸುತ್ತಾಳೆ. “ಪೂಜ್ಯೆಯಂ ಪಾಲಿಸುವ ನೆವದಿ, ನೀನುಂ ಪರೀಕ್ಷಿತನಲಾ!” ಎಂದು ಶ್ರೀರಾಮನ ಕಾರ್ಯ ತಕ್ಕುದಲ್ಲವೆಂದು ದುರದುರನೆ ನೋಡುತ್ತಿದ್ದ ಜನರಿಗೆಲ್ಲ ಅನಲೆಯ ನುಡಿಯಿಂದ ಸಮಾಧಾನವಾಗುವುದು.

ಹೀಗೆಯೆ ಋತಶಕ್ತಿ ಸ್ವರೂಪನಾದ ಶ್ರೀರಾಮನಿಂದ ಹಿಡಿದು ಸಾಮಾನ್ಯ ಸೈನಿಕರಾದ ಶುಕಸಾರಣರವರೆಗೆ, ಎಲ್ಲರ ಚಿತ್ರಗಳು ನವೀನ ಸ್ವರ್ಗ ಸೌಂದರ್ಯದಿಂದ ರಾರಾಜಿಸುತ್ತಿವೆ ಎಂಬುದಕ್ಕೆ ಅನಲೆಯ ಪಾತ್ರವೇ ಸಾಕ್ಷಿ. ಅವುಗಳ ನಿರೂಪಣೆ ಈ ಇಕ್ಕಟ್ಟಿನ ಜಾಗದಲ್ಲಿ ಸಾಧ್ಯವಿಲ್ಲ. ಈ ಮೇರುಕೃತಿಯನ್ನು ನಾನಾ ಕೋನಗಳಿಂದ ನೋಡುವ ಪ್ರಯತ್ನವೂ ಇಲ್ಲಿ ಸಾಧ್ಯವಿಲ್ಲ. ಇದರ ಬೃಹದ್ಗರ್ಭದಲ್ಲಿ ಅಡಗಿರುವ ಕಲ್ಪಾಂತರ ಸ್ಥಾಯಿಯೂ ಲೋಕಾತೀತವೂ ಅತೀಂದ್ರಿಯ ಗಮ್ಯವೂ ಆದ ರಹಸ್ಯಗಳನ್ನು ಕೆದಕಿ ಬೆದಕಿ ನೋಡಿ ಇದರ ಗುಟ್ಟು ಇಷ್ಟೇ ಎಂದು ಹೇಳಲು ಎಂಟೆರ್ದೆಯಲ್ಲ ಹದಿನಾರೆರ್ದೆಯಿದ್ದರೂ ಸಾಲದು. ಇಲ್ಲಿಯ ಬಹಿರ್ಘಟನೆಗಳು ಯಾರಿಗಾದರೂ ಅರ್ಥವಾಗುತ್ತವೆ. ಆದರೆ ಇಂದ್ರಿಯಾತೀತವಾದ ಅಲೌಕಿಕ ಘಟನೆಗಳು ರಸಋಷಿಯ ದಿವ್ಯಪ್ರತಿಭೆಗೆ ಮಾತ್ರ ಗೋಚರವಾಗುತ್ತವೆ. ಪೂರ್ಣದೃಷ್ಟಿ

[1]ಯಿಂದ ನೋಡುವವರಿಗೆ ಮಾತ್ರ ‘ತುಷ್ಟಿ ಪುಷ್ಟಿ’ಗಳೆರಡೂ ಲಭಿಸಿ ಅವರ ಚೇತನ ಬೆಳಗುತ್ತದೆ.

ಆದರೆ ಈ ಕೃತಿ ಕಾವ್ಯವಲ್ಲ, ತತ್ತ್ವಗಳ ಹೆಣಿಗೆ ಮತ್ತು ಕುಣಿಕೆ ಎಂದು ಅರಸಿಕರು, ಪ್ರತಿಭಾಶೂನ್ಯರು ಮತ್ತು ಪೂರ್ವಗ್ರಹ ದುಷ್ಟಗ್ರಹಗ್ರಸ್ತರು ಉದ್ಗಾರ ತೆಗೆಯಬಹುದು; ವಾಸ್ತವಲೋಕದ ಕಡಕಲಿನಲ್ಲಿ ಒದ್ದಾಡುವ ಸಾಮಾನ್ಯರಂತು ಈ ಕೃತಿ ಆದರ್ಶ ಪ್ರಪಂಚದ, ಕನಸಿನ ಲೋಕದ ಅವ್ಯಾವಹಾರಿಕವಾದ ಕಲ್ಪನೆ ಎಂದು ಟೀಕಿಸಬಹುದು. ಅವರವರ ಶಕ್ತಿ ಸಾಮರ್ಥ್ಯ ಎಷ್ಟಿದೆಯೋ ಅಷ್ಟು ಮಾತ್ರ ಹಾರಬಲ್ಲರು. ಪಂಜರದ ಹುಂಜ ಗಗನವಿಹಾರಿ ಯಾದ ಗರುತ್ಮಂತನಿಗೆ  ಸಮನಾಗಿ ಹಾರಬಲ್ಲುದೆ? ಕೂಪ ಮಂಡೂಕ ನ್ಯಾಯದಂತೆ ಅಜ್ಞಾನದ ಪಾಚಿ ಮುಸುಕಿದ ಇಂದ್ರಿಯಕ್ಕೆ ಅಗೋಚರವಾದ ಅನುಭವ ವಿಶೇಷಗಳು ಇಲ್ಲವೇ ಇಲ್ಲವೆಂದು ವಾದಿಸುವುದು ಗಾಂಪತನವಾಗುತ್ತದೆ. ಕಲೆಗಾಗಿ ಕಲೆ ಎಂಬ ಸೂತ್ರವಂತು ಈ ಕೃತಿಗೆ – ಕನ್ನಡ ಸಾಹಿತ್ಯದಲ್ಲಿ ಇನ್ನೂ ಕೆಲವು ಕೃತಿಗಳಿಗೆ – ಸಂಪೂರ್ಣವಾಗಿ ಒಪ್ಪುವುದಿಲ್ಲ. ಆದರೆ ಎಲ್ಲಿ ಆಲೋಚನಾ ವಿಧಾನದ ತಾತ್ತ್ವಿಕ ನಿರೂಪಣೆ ಎದ್ದು ಕಾಣುತ್ತದೆಯೋ ಅದು ಕಲಾಕೃತಿಯಾಗಲಾರದು. ತತ್ತ್ವಬಾಳಿನ ಅನುಭವವಾಗಿ, ಭಾವಗೋಚರವಾಗಿ, ಕಲಾತ್ಮಕವಾಗಿ, ಸ್ವಸ್ವರೂಪ ಕಲೆಯಲ್ಲಿ-ಹಾಲಿನಲ್ಲಿ ಸಕ್ಕರೆ ಕರಗುವಂತೆ-ಲೀನವಾಗಿ ಬಂದರೆ ಅಂತಹ ಕೃತಿ ದಿವ್ಯಾಮರ ಕಲೆಯಾಗುವುದರಲ್ಲಿ, ಲೋಕೋತ್ತರ ವಾಗುವುದರಲ್ಲಿ, ಬಹು ಜನ-ಪ್ರಿಯವಾಗುವುದರಲ್ಲಿ ಸಂದೇಹವೇ ಇಲ್ಲ. ಹಾಗೆಯೇ ‘ಆದರ್ಶ’ ಎನ್ನುವ ಮಾತು ಸಾಪೇಕ್ಷವಾಚಕ. ಒಡ್ಡರಬಂಡಿಯ ದೃಷ್ಟಿಯಿಂದ ಆದರ್ಶವೆಂದು ಕಾಣಬಹುದಾದ ದೂರ ವಿಮಾನದ ದೃಷ್ಟಿಯಿಂದ ವಾಸ್ತವವೇ. ಅಹಿಂಸಾತತ್ತ್ವ ಗಾಂಧೀಜಿಗೆ ಬಾಳಿನಷ್ಟೆ ಸತ್ಯವಾಗಿತ್ತು; ನಮ್ಮಂಥವರಿಗಂತು ಅದು ಕೇವಲ ಆದರ್ಶದ ಕನಸಿನ ಗಂಟಾಗಿದೆ.

ಇಂಥ ಜಗದ್ಭವ್ಯವಾದ ಮೇರುಕೃತಿ, ವಿಭೂತಿಪುರುಷನ ಅವತಾರದಂತೆ ಶತಮಾನಕ್ಕೊಮ್ಮೆ ನೂರು ಶತಮಾನಗಳಿಗೊಮ್ಮೆ ಅವತರಿಸಬಹುದು; ಇದು ಅವತಾರವೇ ನಿಜ! ಲೋಕಕಲ್ಯಾಣ ಅವತಾರದ ಉದ್ದೇಶ. ಶ್ರೇಷ್ಠ ಕಲಾಕೃತಿಗಳ ಅವತಾರದ ಉದ್ದೇಶವೂ ಅದೇಯೆ. ವಿಭೂತಿ ಪುರುಷ ಅವತಾರ ಮಾಡುವ ಕ್ಷೇತ್ರ ಹೇಗೆ ಪಾವನವಾಗಿರಬೇಕೋ, ತೀರ್ಥಂಕರರ ಜನನಕ್ಕೆ ಮುಂಚೆ ಹೇಗೆ ಗರ್ಭಶೋಧನೆ ನಡೆಯಬೇಕೋ ಹಾಗೆಯೇ ಕೃತಿವಿಭೂತಿಯ ಅವತಾರವಾಗ ಬೇಕಾದರೂ ಕ್ಷೇತ್ರ ಪರಿಶುದ್ಧವಾಗಿರಬೇಕು; ಅರ್ಹವಾಗಿರಬೇಕು. ಅರ್ಹತೆ ಲಭಿಸಿದ ಮೇಲಂತು ಕವಿ ನಿಮಿತ್ತಮಾತ್ರನಾಗುತ್ತಾನೆ. ಅತೀಂದ್ರಿಯ ಲೋಕದ ಮಹಾಗಾನ ಆ ನಿಮಿತ್ತದ ಮೂಲಕ ವಾಕ್ಯರೀರಿಯಾಗಿ ಅವತರಿಸುತ್ತದೆ. ಕೃತಿ ಬೆಳೆದಂತೆಲ್ಲ ಕೃತಿಕಾರನೂ ಬೆಳೆಯುತ್ತಾನೆ; ಅವನ ಬಾಳೇ ಕೃತಿಯಾಗುತ್ತದೆ, ಅವನ ಕೃತಿಯೇ ಬಾಳಾಗುತ್ತದೆ. ಶ್ರೀ ಕುವೆಂಪುರವರು ಶ್ರೀರಾಮಾಯಣದರ್ಶನವನ್ನು ಸೃಜಿಸಿದಂತೆ, ಶ್ರೀರಾಮಾಯಣದರ್ಶನ ಶ್ರೀ ಕುವೆಂಪುರವರನ್ನು ಸೃಜಿಸಿದೆ. ಈ ಕೃತಿ ಕಾಲಮಾನದ ದೃಷ್ಟಿಯಿಂದ ಕಿರಿದಾದರೂ ಗುಣ ಮಹಿಮೆಯ ದೃಷ್ಟಿಯಿಂದ ಪ್ರಪಂಚದ ನಾಲ್ಕಾರು ಶ್ರೇಷ್ಠ ಕೃತಿಗಳಲ್ಲೊಂದೆಂದು ಹೇಳಿದರೆ ಕೇವಲ ಅಭಿಮಾನದ ಮಾತಾಗಲಾರದು. ಶ್ರೀ ಕುವೆಂಪುರವರ ಗೀತೆಗಳಲ್ಲಿ – ಅದರಲ್ಲಿಯೂ ಶ್ರೀರಾಮಾಯಣ ದರ್ಶನದಲ್ಲಿ-ಕನ್ನಡ ಸಾಹಿತ್ಯ ಪ್ರಾದೇಶಿಕತೆಯಿಂದ ಉತ್ತೀರ್ಣವಾಗಿ ವಿಶ್ವತ್ವಕ್ಕೆ ಏರಿದೆ ಎಂಬುದಂತು ಸತ್ಯಸ್ಯ ಸತ್ಯವಾದುದು![1]     ಕುವೆಂಪುರವರ ‘ಶ್ರೀರಾಮಾಯಣದರ್ಶನ’ವನ್ನು ತಕ್ಕಮಟ್ಟಿಗಾದರೂ ಅರ್ಥಮಾಡಿಕೊಳ್ಳ ಬಯಸುವವರು ಅವರ ‘ತಪೋನಂದನ’ವನ್ನೂ ‘ಜನಪ್ರಿಯ ವಾಲ್ಮೀಕಿ ರಾಮಾಯಣ’ದಲ್ಲಿ ಬರುವ “ಶ್ರೀರಾಮಾಯಣ ದಿವ್ಯಶಿಲ್ಪಿ” ಎಂಬ ಭಾಗವನ್ನೂ ಓದಬೇಕು.