“ಪೂಜೆ ತಾಂ ಶಕ್ತಿ”
“……..ಆವುದಾಗಲಿ ನೆಪಂ,
ಫಲದಾಯಕಂ ತಪಂ…….”

ಕವಿ ರವೀಂದ್ರರ ‘ಪ್ರಾಚೀನ ಸಾಹಿತ್ಯ’ವನ್ನು ಕುರಿತ ವಿಮರ್ಶಾತ್ಮಕ ಲೇಖನಗಳ ಕಲ್ಪನಾಗಾರುಡಿಗೆ ಭಾವವ್ಯಂಜನೆಯ ಮೋಡಿಗೆ ಮೋಹಕಶಕ್ತಿಯ ಶೈಲಿಗೆ ಓದುಗರು ಮುಗ್ಧರಾಗದಿರುವುದಿಲ್ಲ. ವಾಲ್ಮೀಕಿ ಕಾಳಿದಾಸ ಬಾಣಾದಿಗಳ ನಾಯಕ ನಾಯಿಕೆಯರು ಇವರ ವಿಮರ್ಶೆಯ ರೂಪಧಾರಣೆ ಮಾಡಿದ ರಸಪ್ರತಿಭೆಯಲ್ಲಿ ಪುನಸ್ಸೃಷ್ಟಿಗೊಂಡು ನವ್ಯೋಜ್ಜ್ವಲರಾಗಿ ವಿರಾಜಿಸುತ್ತಾರೆ. ‘ಕಾವ್ಯದ ಅನಾದರ’ ಎಂಬ ಶೀರ್ಷಿಕೆಯ ಲೇಖನದಲ್ಲಿ ಪ್ರಾಚೀನ ಮಹಾಕಾವ್ಯಗಳ ನಾಲ್ವರು ಸ್ತ್ರೀಯರ ವಿಚಾರದಲ್ಲಿ ಹೊಸ ಬೆಳಕನ್ನೆ ಚೆಲ್ಲಿದ್ದಾರೆ. ಈ ಪ್ರಬಂಧವೂ ಇತರ ಪ್ರಬಂಧಗಳಂತೆ ಭಾವಗೀತೆಯನ್ನು ಹೋಲುತ್ತ ಓದುಗರ ಕರುಣೆ ಅನುಕಂಪೆಗಳನ್ನು ಹೆಜ್ಜೆಹೆಜ್ಜೆಗೂ ಉಕ್ಕಿಸುತ್ತದೆ. ಆದರೆ ಆ ನಾಲ್ವರು ಸ್ತ್ರೀಯರು ‘ಕವಿಗಳಿಂದ ಸಂಪೂರ್ಣವಾಗಿ ಉಪೇಕ್ಷಿತರಾಗಿ’ದ್ದಾರೆಂಬ ಅಭಿಪ್ರಾಯವನ್ನು ಪೂರ್ಣವಾಗಿ ಒಪ್ಪುವುದು ಕಷ್ಟವಾಗುತ್ತದೆ. ಆ ಅಭಿಪ್ರಾಯ ‘ಕಾದಂಬರಿ’ಯ ಪತ್ರಲೇಖೆಯ ಬಗೆಗೆ ಬಹುಮಟ್ಟಿಗೆ ಸರಿಯೆಂದು ತೋರುತ್ತದೆ.

[1] ಊರ್ಮಿಳೆಯ ವಿಷಯದಲ್ಲಿ ಕವಿ ಇನ್ನು ಒಂದೆರಡು ಮಾತನ್ನು ಹೇಳಬಹುದಾಗಿತ್ತೆಂದು ಭಾವಿಸಲು ಅವಕಾಶವಿರುವುದಾದರೂ ಅನಸೂಯಾ ಪ್ರಿಯಂವದೆಯರ ವಿಷಯದಲ್ಲಿ ಕವಿ ‘ತಾನು’ ಎಷ್ಟು ಹೇಳಬಹುದೋ ಅಷ್ಟನ್ನೂ ಹೇಳಿ ಉಳಿದುದನ್ನು ಓದುಗರ ಕಲ್ಪನೆಗೆ ಬಿಟ್ಟಿದ್ದಾನೆಂದು ಊಹಿಸುವುದೆ ಸರಿಯೆಂದು ತೋರದಿರದು. ಕಾವ್ಯದಲ್ಲಿ ‘ಉಕ್ತ’ವಾದುದರ ಜೊತೆಗೆ ‘ಅನುಕ್ತ’ವಾದುದು ಎಷ್ಟೋ ಇರುತ್ತದೆ. ಎಷ್ಟೋ ಪಾತ್ರಗಳು ಕಾವ್ಯದಲ್ಲಿ ಅಪೂರ್ಣ ಚಿತ್ರಗಳಾಗಿ ಉಳಿಯುತ್ತವೆ. ಅವುಗಳನ್ನು ತಮ್ಮ ಕಲ್ಪನಾ ಶಕ್ತಿಯಿಂದ ಪ್ರತಿಭಾ ಸಾಮರ್ಥ್ಯದಿಂದ ಪೂರ್ಣಗೊಳಿಸುವುದು ಓದುಗರ ಕರ್ತವ್ಯ. ಅದನ್ನೇ ರವೀಂದ್ರರೂ ಹೇಳುತ್ತಾರೆ : “ಕಾವ್ಯದಲ್ಲಿ ಎಲ್ಲ ಪಾತ್ರಗಳಿಗೂ ಸಮಾನವಾದ ಪ್ರಾಶಸ್ತ್ಯವು ದೊರೆಯಲಾರದೆಂಬುದೇನೋ ನಿಜ. ಕಠಿಣ ಹೃದಯನಾದ ಕವಿಯು ತನ್ನ ಕಾವ್ಯದ ನಾಯಕ ನಾಯಿಕೆಯರಿಗಾಗಿ ಎಷ್ಟು ಅಕ್ಷಯ ಪ್ರತಿಮೆಗಳನ್ನು ತಯಾರುಮಾಡಿ ಮಾಡಿ ನಿರ್ಮಮತೆಯಿಂದ ಬಿಸಾಟುಬಿಡುತ್ತಾನೆ! ಆದರೆ ಆತನು ಎಲ್ಲಿ ಯಾರನ್ನು ಕಾವ್ಯದ ಅವಶ್ಯಕತೆಗಾಗಿ ನಿಶ್ಶೇಷಮಾಡಿಬಿಡುತ್ತಾನೆಯೋ ಅಲ್ಲಿಗೆ ಅವರು ಸಂಪೂರ್ಣವಾಗಿ ಮುಗಿದು ಹೋಗುತ್ತಾರೇನು?” ಅವರು ಓದುಗರ ಹೃದಯದ ಆಶ್ರಯವನ್ನು ಪಡೆಯಬೇಕಾಗುತ್ತದೆ.

ಶಾಕುಂತಲ ನಾಟಕದಲ್ಲಿ ಅನಸೂಯಾ ಪ್ರಿಯಂವದೆಯರಿಗೆ ಸಂದಿರುವಷ್ಟು ಸ್ಥಾನ ಶ್ರೀಮದ್ರಾಮಾಯಣದಲ್ಲಿ ಊರ್ಮಿಳಾದೇವಿಗೆ ಲಭ್ಯವಾಗಿಲ್ಲ, ನಿಜ. ಊರ್ಮಿಳಾ ಪಾತ್ರದಂತೆ ಮಿಂಚಿ ಹಿಂಚುವ ಇನ್ನೆಷ್ಟೋ ಪಾತ್ರಗಳನ್ನು ಆ ಮಹಾಕಾವ್ಯದಲ್ಲಿ ಸಂಧಿಸುತ್ತೇವೆ. ಅವಳ ಒತ್ತಿನ ತಂಗಿಯರಾದ ಮಾಂಡವಿ ಶ್ರುತಕೀರ್ತಿ ಇದ್ದಾರೆ. ಇನ್ನು ಕೆಲವು ಪಾತ್ರಗಳು ಮಿಂಚಿ ಹಿಂಚಿದರೂ ಅವು ಅಷ್ಟಷ್ಟಕ್ಕೆ ಪರಿಪೂರ್ಣ; ‘ಅನಂತತೆ’ಗೆ ಪ್ರತಿಮೆಗಳಾಗಿ ಹೋಗಿದ್ದಾರೆ. ಅಹಲ್ಯೆ, ಶಬರಿಯೇ ಮೊದಲಾದ ಋಷಿಪತ್ನಿಯರು, ಋಷಿಗಳು ಮತ್ತು ಸಾಧಕವರೇಣ್ಯರು ಈ ಗುಂಪಿಗೆ ಸೇರಿದವರು. ಇವರ ವಿಷಯದಲ್ಲಿ ಯಾವ ರೀತಿಯೂ ಕೊರತೆ ಕಾಣುವುದಿಲ್ಲ. ಹಾಗೆಯೆ ಆ ನಿರ್ಭಾಗ್ಯೆ ಮೂಕಶೋಕಾರ್ತೆ ಲೋಕಪರಿತ್ಯಕ್ತೆ ಸದಾ ಅವನತಮುಖೀ ಕೈಕೆಯನ್ನು ಚಿತ್ರಕೂಟದಲ್ಲಿ ಭರತನ ಪರಿವಾರದೊಡನೆ ನೋಡಿದ ಮೇಲೆ ಮತ್ತೆ ನೋಡೆವು. ಕಾವ್ಯದ ಆ ಮಹಾಮೌನವೆ ಅವಳನ್ನು ಪಾತಿತ್ಯದಿಂದ ಉದ್ಧರಿಸಿದೆ. ಆದರೆ ಊರ್ಮಿಳೆಯ ಬಗ್ಗೆ ಕಾವ್ಯ ತಾಳಿರುವ ಮೌನ ಓದುಗರಲ್ಲಿ ವೇದನೆಯನ್ನು ಮೂಡಿಸುವಂಥಾದ್ದು. ಏಕೆಂದರೆ “ಲಕ್ಷ್ಮಣನು ರಾಮಚಂದ್ರನಿಗಾಗಿ ಸರ್ವವಿಧಗಳಲ್ಲಿಯೂ ಸ್ವಾರ್ಥತ್ಯಾಗ ಮಾಡಿದನು. ಆ ಕೀರ್ತಿಯು ಈಗಲೂ ಭರತಖಂಡದಲ್ಲಿ ಮನೆ ಮನೆಯಲ್ಲಿಯೂ ಕೇಳಬರುತ್ತದೆ. ಆದರೆ ಸೀತಾದೇವಿಗಾಗಿ ಊರ್ಮಿಳಾದೇವಿಯು ಮಾಡಿದ ಸ್ವಾರ್ಥತ್ಯಾಗವು ಜಗತ್ತಿನಲ್ಲಿ ಮಾತ್ರವೇ ಅಲ್ಲ, ಕಾವ್ಯದಲ್ಲಿಯೂ ಕೂಡ ಕಂಡುಬರುವುದಿಲ್ಲ. ಲಕ್ಷ್ಮಣನು ದೇವತಾಸ್ವರೂಪರಾದ ಸೀತಾರಾಮರಿಗಾಗಿ ಸ್ವಾರ್ಥ ಮಾತ್ರ ತ್ಯಾಗ ಮಾಡಿದನು. ಊರ್ಮಿಳಾದೇವಿಯಾದರೊ ಸ್ವಾರ್ಥಕ್ಕಿಂತಲೂ ಹೆಚ್ಚಾದ ತನ್ನ ಸ್ವಾಮಿಯನ್ನೇ ದಾನ ಮಾಡಿದಳು.” ಇಷ್ಟಾದರೂ ಕವಿ ಅವಳ ವಿಷಯವನ್ನೇ ಎತ್ತುವುದಿಲ್ಲ. ಆದುದರಿಂದಲೆ ರವೀಂದ್ರರು ಈ ಅರಕೆಯನ್ನು ‘ಕಾವ್ಯದ ಅನಾದರ[2]’ ಅಥವಾ ಕವಿಯ ಉಪೇಕ್ಷೆ’ ಎಂದು ಕರೆದಿದ್ದಾರೆ. ಆ ಅನಾದರ ಉಪೇಕ್ಷೆಗಳೇ ಸಹೃದಯರ ಆದರ ಅಪೇಕ್ಷೆಗಳಿಗೆ ಬಹುಮಟ್ಟಿಗೆ ಕಾರಣವೆಂದೂ ಊಹಿಸಬಹುದು. ಅತ್ಯಾದರ, ಅತ್ಯಾಶೆ, ಅತಿ ವಾತ್ಸಲ್ಯ – ಒಟ್ಟಿನಲ್ಲಿ ‘ಅತಿಶಯತೆ’ ಉಪೇಕ್ಷೆಗೆ ಪಕ್ಕಾಗುವ ಸಂಭವವುಂಟು. ಆದಿಕವಿ ಊರ್ಮಿಳೆಗೆ ವಿಸ್ತಾರವಾದ ಸ್ಥಳಾವಕಾಶವನ್ನು ಕಲ್ಪಿಸಿಲ್ಲವೆಂಬ ಏಕೈಕ ಕಾರಣದಿಂದ ‘ಉಪೇಕ್ಷೆ’ ಎಂದು ಕರೆಯಲಾಗಿದೆ. ಆದರೆ ಅವಳ ‘ಮಾನ’ಕ್ಕೆ ಅವಳ ಘನತೆಗೆ ಕುಂದು ತರುವಂಥ ಪ್ರಸಂಗಗಳನ್ನು ಎಲ್ಲಿಯೂ ತಂದಿಲ್ಲವೆಂಬು ದನ್ನು ಇಲ್ಲಿ ನೆನಸಿಕೊಳ್ಳಬಹುದು. ಈ ಅಂಶವನ್ನು ಮನಗಂಡೇ ರವೀಂದ್ರರು ಪ್ರಶ್ನೆ ರೀತಿಯಲ್ಲಿ ಮತ್ತೊಂದು ಮಾತನ್ನು ಹೇಳಿದ್ದಾರೆ : “ಯಾರಾದರೂ ಸೀತಾದೇವಿಯ ದುಃಖದೊಂದಿಗೆ ಊರ್ಮಿಳಾದೇವಿಯ ಅತ್ಯಧಿಕವಾದ ದುಃಖವನ್ನು ತುಲನೆಮಾಡಿಯಾರೆಂಬ ಶಂಕೆಯಿಂದಲೇ ಕವಿಯು ಸೀತಾದೇವಿಯ ಸ್ವರ್ಣಮಂದಿರದಿಂದ ಈ ಮಹಾದುಃಖಿನಿಯನ್ನು ಸಂಪೂರ್ಣವಾಗಿ ಹೊರಗಿಟ್ಟಿರಬಹುದೇ?” ಬಹುಶಃ ಆದಿಕವಿಯ ಉಪೇಕ್ಷೆಗೆ ಕಾರಣ ಈ ಪ್ರಶ್ನೆಯಲ್ಲಿ ಅಡಕವಾಗಿದೆಯೆಂದು ಕಾಣುತ್ತದೆ.

ಶ್ರೀಮದ್ರಾಮಾಯಣದಲ್ಲಿ ಕೇವಲ ನಾಮಶಕ್ತಿಯಾಗಿ ಉಳಿದಿದ್ದ ಊರ್ಮಿಳೆ ‘ಶ್ರೀ ರಾಮಾಯಣದರ್ಶನಂ’ ಮಹಾಕಾವ್ಯದಲ್ಲಿ ಕಾವ್ಯಶಕ್ತಿಯಾಗಿ ತ್ಯಾಗಶಕ್ತಿಯಾಗಿ ಚಿತ್ತಪಶ್ಶಕ್ತಿ ಯಾಗಿ ಚಿತ್ರಿತಳಾಗಿದ್ದಾಳೆ. ಚಿತ್ರಿತಳಾಗಿದ್ದಾಳೆನ್ನುವುದಕ್ಕಿಂತ ಕವಿಯ ಜ್ಯೋತಿರ್ದರ್ಶನದಿಂದ ಮೂಡಿದ್ದಾಳೆನ್ನುವುದು ಉಚಿತ ಮತ್ತು ಸಹಜ. ಈ ಮಹಾಕಾವ್ಯದ ಸುವಿಸ್ತಾರಕ್ಷೇತ್ರದಲ್ಲಿ ಅವಳು ಆಕ್ರಮಿಸಿಕೊಂಡಿರುವ ಸ್ಥಾನ ಕಿರಿದಾದರೂ, ಅವಳ ಬಾಹ್ಯ ವ್ಯಾಪಾರಗಳ ರೂಪರೇಷೆಗಳು ಅಗೋಚರವಾಗಿದ್ದರೂ ಅವಳ ತಪಃಪ್ರಭಾವ ಮಾತ್ರ ಇಡೀ ‘ರಾಮಾಯಣ’ ವನ್ನೆಲ್ಲ ವ್ಯಾಪಿಸಿದೆ. ಅವಳು ಎಲೆಯ ಮರೆಯ ಹೂವು. ಬಾಹ್ಯಚಕ್ಷುವಿಗೆ ಅವಳ ವ್ಯಕ್ತಿತ್ವ ಅವ್ಯಕ್ತ; ಅಂತಶ್ಚಕ್ಷುವಿಗೆ ಸದಾ ವ್ಯಕ್ತ. ಅವಳು ಕೇವಲ ವ್ಯಕ್ತಿಯಲ್ಲ, ಶಕ್ತಿಯೆಂದರೂ ಮೇಲು.

ಶ್ರೀರಾಮಾಯಣದರ್ಶನವೊಂದು ಶಕ್ತಿಕೇಂದ್ರ, ವಿದ್ಯುದಾಗರ. ಅಲ್ಲಿ ಬಾಹ್ಯ ಜೀವನ ಎಷ್ಟರಮಟ್ಟಿಗೆ ವಿಕಾಸಗೊಂಡಿದೆಯೊ ಅದಕ್ಕಿಂತಲೂ ಮಿಗಿಲಾಗಿ ಮತ್ತು ಮುಖ್ಯವಾಗಿ ಆಂತರಿಕಜೀವನ ವಿಕಾಸಗೊಂಡಿದೆ. ಮಾನವಜೀವನದಲ್ಲಿ ಬಾಹ್ಯ ವ್ಯಾಪಾರಗಳು ಎಷ್ಟು ಗಣ್ಯವೊ, ಅವುಗಳಿಗಿಂತ ಮಿಗಿಲಾಗಿ ಅಂತರಂಗ ವ್ಯಾಪಾರಗಳು ಗಣ್ಯ; ಗಣ್ಯವಷ್ಟೇ ಅಲ್ಲ, ಬಾಹ್ಯ ವ್ಯಾಪಾರಗಳಿಗೆ ಅಂತರಂಗ ವ್ಯಾಪಾರಗಳೇ ಮೂಲ ಎಂಬ ತತ್ತ್ವದರ್ಶನ ಅಭಿವ್ಯಕ್ತಿ ಗೊಂಡಿದೆ. ಧರ್ಮಪಕ್ಷಕ್ಕೂ ಅಧರ್ಮ ಪಕ್ಷಕ್ಕೂ ಕೈಗೂಡಿದ ಯುದ್ಧದಲ್ಲಿ, ಅಧರ್ಮ ಪಕ್ಷದ ಸೋಲಿಗೆ ವೀರಭಟಾಗ್ರಣಿಗಳ ಬಿಲ್ಲು ಬಾಣ ಖಡ್ಗ ಪರಶು ತೋಮರ ಗದೆ ಮೊದಲಾದ ಶಕ್ತ್ಯಾಯುಧಗಳು ಮಾತ್ರವೇ ಕಾರಣವಲ್ಲ, ಸಂತರ ಸಾಧುಗಳ ತಪಸ್ವಿಗಳ ಸಂಕಲ್ಪರೂಪದ ತಪಶ್ಶಕ್ತಿಯೂ ಕಾರಣವೆಂಬ ತತ್ತ್ವ ಇಲ್ಲಿ ಪ್ರತಿಪಾದಿತವಾಗಿದೆ.

ಸಾಮಾನ್ಯವಾಗಿ ಖಂಡದೃಷ್ಟಿಯ ಸ್ಥೂಲಮತಿ ಬಾಹ್ಯೇಂದ್ರಿಯಗಮ್ಯವಾದ ಸ್ಥೂಲ ವಿಷಯಗಳನ್ನು ಗ್ರಹಿಸುವಂತೆ ಅತೀಂದ್ರಿಯ ವ್ಯಾಪಾರಗಳ ಸೂಕ್ಷ್ಮಾತಿ ಸೂಕ್ಷ್ಮಗಳನ್ನು ಗ್ರಹಿಸಲಾರದು. ಅಲ್ವಸ್ವಲ್ಪ ಗ್ರಹಿಸಿದರೂ ಸಂದೇಹಕ್ಕೆ ಸೆರೆಯಾಗುತ್ತದೆ. ಅಂಥ ಸಂದೇಹಮತಿ ಪ್ರಾರ್ಥನೆ, ಪ್ರಾರ್ಥನಾಶಕ್ತಿ, ತಪಸ್ಸು, ತಪಶ್ಶಕ್ತಿ, ತಪಃಪ್ರಭಾವ ಮೊದಲಾದುವನ್ನು ಕಲ್ಪನಾರಾಜ್ಯದ ಕನಸೆಂದು ಭ್ರಮಿಸುತ್ತದೆ, ಅವಾಸ್ತವವೆಂದು ನಿರ್ಣಯಿಸುತ್ತದೆ. ಈ ತಪಃಶಕ್ತಿ ವಿಶ್ವದ ಸಕಲ ವ್ಯಾಪಾರಗಳ ಪ್ರೇರಕಶಕ್ತಿ ಚಾಲಕಶಕ್ತಿ ಎಂಬ ಚಿರಸತ್ಯ ಸೂಕ್ಷ್ಮಮತಿಗೆ ಗೋಚರಿಸದಿರದು.

ತಪಸ್ಸೆಂದರೆ ಧ್ಯಾನ, ಸಾಧನೆ, ಆತ್ಮಾನುಸಂಧಾನ. “ಉದ್ದೀಪನಗೊಳಿಸು” ಎಂದೂ ಅದರ ವಾಚ್ಯಾರ್ಥವುಂಟು. ಆತ್ಮಶಕ್ತಿಯನ್ನು ಉದ್ದೀಪನಗೊಳಿಸಲು ಕೈಗೊಳ್ಳುವ ಸಾಧನೆಯೆ ತಪಸ್ಸು…..ಆ ಆತ್ಮಶಕ್ತಿಯನ್ನು ಆಧ್ಯಾತ್ಮಿಕ ಶ್ರೇಯೋಭಿವೃದ್ದಿಗಾದರೂ ಬಳಸಿಕೊಳ್ಳಬಹುದು ಅಥವಾ ಭೌತಿಕ ಕ್ಷೇಮಸಾಧನೆಗಾದರೂ ಬಳಸಿಕೊಳ್ಳಬಹುದು. ತಪಸ್ಸಿನ ಭಾವನೆ ಹಿಂದೂ ಧರ್ಮದಲ್ಲಿ ಸರ್ವವ್ಯಾಪಿಯಾಗಿದೆ. ಈಶ್ವರ ತಪಸ್ಸಿನಿಂದಲೇ ವಿಶ್ವವನ್ನು ಸೃಷ್ಟಿಸಿದನೆಂಬ ಪ್ರತೀತಿ ಇದೆ. ಅದೊಂದು ಮಾನಸಿಕ ಶಕ್ತಿ. ಅದರಿಂದ ಏನನ್ನಾದರೂ ಸಾಧಿಸಬಹುದು….[3] ಅದರ ಶಕ್ತಿ ಮಹಿಮೆ ಅಪ್ರತಿಹತವಾದುದು, ಅದಮ್ಯವಾದುದು, ಅಗೋಚರವಾದುದು. ಭರತ ಖಂಡದ ಸ್ವಾತಂತ್ರ್ಯ ಚಳುವಳಿಯ ಸಫಲತೆಯಲ್ಲಿ ಇದರ ನಿದರ್ಶನವನ್ನು ಕಾಣಬಹುದು. ಕೇವಲ ಬಾಹ್ಯಶಕ್ತಿಪ್ರಯೋಗದಿಂದಲೆ ಸ್ವಾತಂತ್ರ್ಯವನ್ನು ಸಾಧಿಸಲು ಪ್ರಯತ್ನಿಸಿದ್ದರೆ ಇಷ್ಟು ಸುಲಭವಾಗಿ ಇಷ್ಟು ಶೀಘ್ರವಾಗಿ ಅದು ಸಾಧ್ಯವಾಗುತ್ತಿರಲಿಲ್ಲವೇನೊ? ಈ ಮಹಾಯಾಗ ಕಾರ್ಯದಲ್ಲಿ ನಾಯಕರ ರಾಜಕೀಯ ನಿಪುಣತೆಯ ಜೊತೆಗೆ ಗಾಂಧೀಜಿ ರಮಣಮಹರ್ಷಿ ಮತ್ತು ಶ್ರೀ ಅರವಿಂದರ ತಪಃಪ್ರಭಾವವೂ ಬಹುಮಟ್ಟಿಗೆ ನೆರವಾಗಿದೆಯಲ್ಲವೆ? ಜನತೆಯ ಮತ್ತು ಚರಿತ್ರೆಯ ತೇಲುನೋಟಕ್ಕೆ ಇದೆಲ್ಲ ಕಾಣೆಯಾಗುತ್ತದೆ.

ಮಾನವ ಜೀವನದ ಮಹಾಯಾತ್ರೆಯಲ್ಲಿ ಇಡೀ ವಿಶ್ವದ ಅನಂತಯಾತ್ರೆಯಲ್ಲಿ ತಪೋಮಹಿಮೆ ಸರ್ವವ್ಯಾಪಿಯಾದುದೆಂಬ ಋತಸತ್ಯ ಶ್ರೀರಾಮಾಯಣದರ್ಶನದಲ್ಲಿ ಹೆಜ್ಜೆಹೆಜ್ಜೆಗೂ ವ್ಯಕ್ತವಾಗುತ್ತದೆ. ಪ್ರಾರ್ಥನಾಶಕ್ತಿ ಮಹಿಮೆಯ ಅಭಿವ್ಯಕ್ತಿಗಾಗಿಯೆ ಈ ಮಹಾಕಾವ್ಯ ರಚಿತವಾಗಿರುವಂತೆಯೂ ಕಾಣುತ್ತದೆ. ಶ್ರೀರಾಮನ ಅವತಾರದಿಂದ ತೊಟ್ಟು ರಾವಣೋದ್ಧಾರದವರೆಗಿನ ಅನೇಕಾನೇಕ ಸಾಮಾನ್ಯ ಮತ್ತು ಅಸಾಮಾನ್ಯ ಘಟನೆಗಳಿಗೆ ತಪಸ್ಯೆಯೆ ಪ್ರೇರಕಶಕ್ತಿಯಾಗಿದೆ, ಪ್ರಾರ್ಥನೆಯೆ ಚಾಲಕ ಶಕ್ತಿಯಾಗಿದೆ. ಸಾಗರವನ್ನು ಸೇರುವ ನದಿಗಳೆಲ್ಲ ಸಾಗರವೆ ಆಗುವಂತೆ ತಪೋಮಹಿಮರ ಪ್ರಭಾವಕ್ಕೊಳಗಾದ ತ್ರಿಜಟೆಯಂಥ ಕಿರುಕುಳರೂ ಸಾಧನಾತಪಸ್ವಿನಿಯರಾಗುತ್ತಾರೆ; ಪಾಪವೂ ಪುಣ್ಯಮುಖಿಯಾಗುತ್ತದೆ. ಅಹಲ್ಯೆ ಮೊದಲುಗೊಂಡು ವಿರಾಧ, ಕಬಂಧ, ರಾವಣರೆ ಕೊನೆಯಾಗಿ ಎಲ್ಲರೂ ತಪೋಮಹಿಮೆ ಯಿಂದಲೆ ಉದ್ಧಾರವಾಗುತ್ತಾರೆ. “ಐಹಿಕದ ವೈರಿ ಆಧ್ಯಾತ್ಮಿಕಕೆ ಕೆಳೆಯಹನ್, ಗುರುವಹನ್” ಎಂಬ ತತ್ತ್ವಸೀತೆಗೆ ಅರಿವಾಗಿ “ಪೂಜೆ ತಾಂ ಶಕ್ತಿ”, “ಆವುದಾಗಲಿ ನೆಪಂ, ಫಲದಾಯಕಂ ತಪಂ” ಎನ್ನುತ್ತಾಳೆ. ತಪೋಮಹಿಮೆಗೆ ಪ್ರತ್ಯಕ್ಷ ಸಾಕ್ಷಿಯಾದ ಆಂಜನೇಯ ಸಾಗರೋ ಲ್ಲಂಘನಕ್ಕೆ ಮುಂಚೆ ತನ್ನ ಸಾಹಸ ಸಹೋದ್ಯೋಗಿಗಳನ್ನು ಕುರಿತು “ಪ್ರಾರ್ಥನಾ ಸೃಷ್ಟನೆಂ ಸ್ತೋತ್ರ ಸಂಪುಷ್ಟನೆಂ ಪೊರೆಯುತಿರಿಮಾ ಮಾನಸಾನ್ನದಿಂ” ಎಂದು ಹೇಳುವ ಋಷಿವಾಣಿ ಯಲ್ಲಿ ತಪಸ್ಯೆ ತಪಸ್ವಿಯಲ್ಲಿಯೇ ಪರ್ಯವಸಾಯಿಯಲ್ಲ, ಅದು ಇಡೀ ಸೃಷ್ಟಿಯನ್ನೆ ಚೋದಿಸ ಬಲ್ಲದೆಂಬ ಅರ್ಥ ಧ್ವನಿತವಾಗುತ್ತದೆ. ಪತಿಯ ಆತ್ಮೋದ್ಧಾರಕ್ಕಾಗಿ ಪ್ರಾರ್ಥನಾನಿರತಳಾದ ಸತೀಶಿರೋಮಣಿ ಮಂಡೋದರಿ

ಪ್ರಾರ್ಥನಾ ತೀವ್ರತೆಯ ಸಾತ್ವಿಕ ತಪಶ್ಶಕ್ತಿ, ಪೇಳ್,
ತಾಂ ಸ್ವಯಂಕ್ರಿಯೆಯಾಗಿ ಚೋದಿಸದೆ ಸೃಷ್ಟಿಯಂ?

ಎಂದು ಹೇಳುವ ಸತ್ಯಾನುಭೂತಿಯ ನುಡಿಯ ರಹಸ್ಯವಾದರೂ ಏನು? ರಾವಣನೂ ತಪಸ್ವಿಯೆ. ಆದುದರಿಂದಲೆ ಅವನ ಆತ್ಮೋದ್ಧಾರ ಸಾಧ್ಯವಾಯಿತು. ಆ ಮಹಾಕಾರ್ಯಕ್ಕೆ ಪರೋಕ್ಷವಾಗಿ ಅಪರೋಕ್ಷವಾಗಿ ಆಂತರಂಗಿಕವಾಗಿ ನೆರವಾದ ಶಕ್ತಿಗಳೆಷ್ಟು? ಅವನ ಹೃದಯ ದೌರ್ಬಲ್ಯವನ್ನು ಗೆಲ್ಲಲು ಕಪಿಸೈನ್ಯದಿಂದ ಸಾಧ್ಯವಾಗುತ್ತಿತ್ತೆ? ಕಪಿಸೈನ್ಯವಲ್ಲ, ತ್ರೈಭುವನ ಸೈನ್ಯ ತಾನೆ ಆ ಮಹಾ ಸಾಧಕನಿಗೆ ಲಕ್ಷ್ಯವೆ? ಅದನ್ನರಿತೇ ದ್ವಿವಿದ ಹೇಳುತ್ತಾನೆ : “ಸೈನ್ಯಶಕ್ತಿಗೆ ಮಿಗಿಲ್ ದಲ್ ಸಂತರಾಶೀರ್ವಾದಮಪ್ರತಿಹತಂ” ಎಂದು. ಸಾಗರತೀರದ ಕಪಿಸೈನ್ಯವನ್ನು ಕುರಿತು ಜಾಂಬವನು ಹೇಳಿದ

…….ಸಮರ್ಥರ ಬುದ್ದಿ, ಸಜ್ಜನರ
ಪುಣ್ಯಹೃದಯದ ಸಿದ್ದಿ ನೆರವೀಯದಿರೆ, ವೃಥಾ
ಸಾಹಸಂ ನಮ್ಮುಲ್ಲಸಂ…..

ಎಂಬ ಮಾತೂ ಮೇಲಣ ಅಭಿಪ್ರಾಯವನ್ನೇ ಪುಷ್ಟೀಕರಿಸುತ್ತದೆ.

ಆದರೆ ತಪಸ್ಸು[4] ಸದಾ ಗೋಚರಾತೀತವಾದುದು; ಅವ್ಯಕ್ತ ಕ್ರಿಯಾಶೀಲವಾದುದು; ಸಂಯಮಪೂರ್ಣವಾದುದು; ನಿಗೂಢ ಗುಹ್ಯತೆಯೆ ಅದರ ರಹಸ್ಯ. ಆಡಂಬರಪೂರ್ಣವಾದ ಪ್ರದರ್ಶನಕ್ಕೆ ಅದು ಸಂಪೂರ್ಣವಾಗಿ ಹೊರಗು. ನಾಚಿಕೆ ಶಾಂತತೆ ನೀರವತೆ ಅಕ್ಷುಬ್ಧತೆ ಏಕಾಂತತೆ ಅದರ ಜೀವಲಕ್ಷಣಗಳು. ಅದು ‘ಸಂಸ್ಕೃತಿಗೆ ಮಾತ್ರ ಗೋಚರಂ.’ ಅದರ ಮಹಿಮೆ ಮಹಿಮೆಗೆ ಮಾತ್ರ ಗೋಚರಂ. ಆದುದರಿಂದ ಆ ‘ಪೂರ್ಣಸತಿ’ ‘ಚಿರತಪಶ್ಶೀಲೆ’ ರಾಜರ್ಷಿಸುತೆ ಸಾಧ್ವಿ ಊರ್ಮಿಳಾದೇವಿ[5], ‘ಸಂತೆಗಣ್ಗಳಿಗೆ’ ಕಾಣಳು. ಆ ಗೋಚರಾತೀತೆಯ ಮಹಾಜೀವನಯಾತ್ರೆ ರಸಋಷಿಗೆ ಮಾತ್ರ ಗುಪ್ತವೇದ್ಯ; ಇತರರಿಗೆ ಅದರ ಅರುಂಧತೀದರ್ಶನ ಮಾತ್ರ ಸಾಧ್ಯ.

ರಾಜರ್ಷಿ ಜನಕನ ಮಹಾಕ್ರತು ಸುಕೃತವಾರ್ತೆಯನ್ನು ಕೇಳಿ ರಾಮಲಕ್ಷ್ಮಣ ಸಮೇತನಾದ ವಿಶ್ವಾಮಿತ್ರ ಮಿಥಿಲಾನಗರಿಗೆ ಬರುತ್ತಾನೆ. ಮುನಿಯೊಡವೆರಸಿ ಬಂದ ತರುಣರ ರೂಪಲಾವಣ್ಯವನ್ನು ನೋಡಿ, ಅವರು ದಾಶರಥಿಯರೆಂದು ಕೇಳಿ, ಜನಕ  ಸಂತೋಷದಿಂದ ಹಿಗ್ಗುತ್ತಾನೆ. ಅವನ ಇಂಗಿತವನ್ನರಿತ ಮಹರ್ಷಿ ಪಕ್ಕದ ಹೂತೋಟಕ್ಕೆ ಹೋಗುವಂತೆ ರಾಮಲಕ್ಷ್ಮಣರಿಗೆ ಸಂಜ್ಞೆ ಮಾಡುತ್ತಾನೆ. ಆ ಹೊತ್ತಿಗೆ ಅದೇ ತೋಟಕ್ಕೆ ಊರ್ಮಿಳಾ ಮಾಂಡವಿ ಶ್ರುತಕೀರ್ತಿಯರೊಡಗೂಡಿ ಸೀತೆ ಬರುತ್ತಾಳೆ. ವಿಕಾರ ವಿಕಲತೆಗಳಿಂದ ಕಲುಷಿತವಾಗದ ಆ ಅಕರ್ದಮ ಪ್ರಣಯ ಸನ್ನಿವೇಶದ ಔಚಿತ್ಯವನ್ನೂ ಸಾಂಗತ್ಯವನ್ನೂ ಗಮನಿಸಬಹುದು. ಸೀತೆ ಮಲ್ಲಿಗೆಯ ಹೊದರ ಮರೆಯಲ್ಲಿ ನಿಂತು ಕೊಳದ ತಡಿಯಲ್ಲಿ ಕಲ್ಲಾಟವಾಡುತ್ತಿದ್ದ ನೀಲದೇಹಿಯನ್ನು ಕಂಡು ಚಕಿತಳಾಗುತ್ತಾಳೆ. ಪ್ರತಿನಿತ್ಯವೂ ತಾನು ಸ್ವಪ್ನದಲ್ಲಿ ಕಾಣುತ್ತಿದ್ದ ಮಂಗಳ ಮಹಾಮೂರ್ತಿಯನ್ನು ಅವನಲ್ಲಿ ಗುರುತಿಸಿ, ನಿಡುಸುಯ್ದು, ಅಲ್ಲಿ ನಿಲ್ಲಲಾರದೆ ಹಿಂದಿರುಗುತ್ತಾಳೆ.

ಊರ್ಮಿಳೆಯೊ?

ಜನಕರಾಜರ್ಷಿಯ ಔರಸಪುತ್ರಿ ಊರ್ಮಿಳೆ ಲಕ್ಷ್ಮಣನನ್ನು ನೋಡಿದಳೆ? ನೋಡಿ ಗುರುತಿಸಿದಳೆ? ನೋಡಿದ್ದರೆ ಅವಳ ಹೃದಯ ಸಭೆಯಲ್ಲಿ ಭಾವಾನುಭಾವಗಳು ನಡೆಸಿದ ಸಂಧಾನವೇನು? ಅಥವಾ ಲಕ್ಷ್ಮಣನ ಕಡೆಗೆ ಅವಳ ಕಟಾಕ್ಷ ಹರಿಯಲಿಲ್ಲವೆ? ಈ ಪ್ರಶ್ನೆಮಾಲೆ ಕವಿಗೆ ಅಪ್ರಕೃತ, ಕಾವ್ಯಕ್ಕೆ ಅನವಶ್ಯ. ಅಷ್ಟೇ ಅಲ್ಲ; ಅವಳ ಬಾಹ್ಯ ಸೌಂದರ್ಯ ವರ್ಣನೆಗೂ ಕವಿಯ ಲೇಖನಿಗೆ ಪುರಸತ್ತಿಲ್ಲ. ಬಹುಶಃ ಅದು ಬೇಕೂ ಇಲ್ಲವೇನೊ? ಮೊದಲಿಂದ ಕೊನೆಯತನಕ ಅವಳ ಅಂತಸ್ಸೌಂದರ್ಯದ ವಿಕಾಸನ ಕ್ರಮವನ್ನು ಸೂಚಿಸದೆ ಇಲ್ಲ. ಸೀತಾ ಊರ್ಮಿಳೆಯರ ಆತ್ಮೀಯ ಸಂಬಂಧವೂ, ಅಕೃತ್ರಿಮಪ್ರೇಮವೂ, ಅಕ್ಕನ ಕ್ಷೇಮ ವಿಷಯದಲ್ಲಿ ಊರ್ಮಿಳೆ ಸದಾ ಕಾತರಳೆಂಬುದೂ ಈ ಸಂದರ್ಭದಲ್ಲಿ ವ್ಯಕ್ತಗೊಳ್ಳುತ್ತವೆ. ಅಸ್ಪಷ್ಟ ಮನೋವೇದನೆಯಿಂದ ಕಣ್ಣೀರು ಸುರಿಸುತ್ತಿದ್ದ ಅಕ್ಕನನ್ನು ತಬ್ಬಿಕೊಂಡು, ಕಣ್ಣೊರಸಿ, ಉಪಚರಿಸಿ, ದುಗುಡಕ್ಕೆ ಕಾರಣವೇನೆಂದು ಊರ್ಮಿಳೆ ಪ್ರಶ್ನಿಸುತ್ತಾಳೆ. ಸೀತೆ ಹಿಂದೆಂದೂ ಯಾರಿಗೂ ಹೇಳದ ಆತ್ಮ ವಿಷಯವನ್ನು ಹೇಳುತ್ತಾಳೆ. ಸೀತೆಯ ಹಿರಿಮೆಯ ಜೊತೆಗೆ ಅವರಿಬ್ಬರ ಬಾಲ್ಯದ ಆತ್ಮೀಯ ಸಂಬಂಧ ಮುಂದೆ ಊರ್ಮಿಳೆಯ ಮಹಾತ್ಯಾಗಕ್ಕೆ ಸಹಜ ಕಾರಣವಾಯಿತೆಂಬುದು ಈ ಸಂದರ್ಭದಿಂದ ಗೊತ್ತಾಗುತ್ತದೆ.

ರೆಪ್ಪೆ ಹೊಯ್ಯುವಷ್ಟರಲ್ಲಿ ಊರ್ಮಿಳೆಯ ಪರಿಚಯ ಆಗಿ ಹೋದರೂ, ಸಹೃದಯರು ಮರೆಯಲಾರದಂಥ ಪ್ರಭಾವವನ್ನು ಅವರ ಮನಸ್ಸಿನ ಮೇಲೆ ಬೀರುತ್ತಾಳೆ. ಅವಳ ಪ್ರಣಯಯಾತ್ರೆಯಂತು ಇನ್ನೂ ಕ್ಷಿಪ್ರದಲ್ಲಿಯೆ ಮುಗಿದು ಹೋಗುತ್ತದೆ : “ಜನಕ ರಾಜನ ಹೃದಯದಿಂಗಿತಕೆ ಮನಮೊಪ್ಪಿ ಸೌಮಿತ್ರಿಯೂರ್ಮಿಳೆಯನೊಪ್ಪಿದನ್, ಹೂಗೆಲಸಿ ಸುಗ್ಗಿಮೊಗ್ಗನ್ನಪ್ಪುವಂತೆ.” ಈ ಒಂದು ಉಪಮೆಯಲ್ಲಿ ಲಕ್ಷ್ಮಣನ ಪ್ರಣಯಾನುರಾಗವೂ ಊರ್ಮಿಳೆಯ ಸೌಂದರ್ಯ ಸೌಕುಮಾರ್ಯವೂ ಅಡಕವಾಗಿವೆ.

ಲಕ್ಷ್ಮಣ ಊರ್ಮಿಳೆಯರ ಪ್ರಣಯಜೀವನ ಹೇಗೆ ಕಾಮನ ಕಿಚ್ಚಿನ ಬೊಬ್ಬೆಯೆಬ್ಬಿಸದೆ ವಿವಿಧ ರಂಗುಗಳ ಆಡಂಬರದ ಪ್ರದರ್ಶನವಿಲ್ಲದೆ ಸಾಗಿತೊ ಹಾಗೆಯೆ ಅವರ ವಿಯೋಗ ಜೀವನ ಗೋಳಾಟ ಬಯ್ದಟ ಬಡಿದಾಟಗಳ ರಾದ್ಧಾಂತವಿಲ್ಲದೆ ಸಂಯಮಪೂರ್ಣವಾಗಿ ಶಾಂತಿಯುತವಾಗಿ ಸಾಗುತ್ತದೆ. ಮಾತಿಗೆ ನಿಲುಕದ ಅಂಥ ಸಂಯಮಜೀವನ ಮೌನಶ್ರೀಗೆ ಸುಸಂವೇದ್ಯವಾಗುತ್ತದೆ. ಇಡೀ ಅಯೋಧ್ಯೆಯೆ ದುಃಖದ ಕಡಲಿನಲ್ಲಿ ಮುಳುಗಿರುವಾಗ, ಅರಮನೆಯ ಗೋಡೆಗೋಡೆಗಳಲ್ಲಿ, ಕಂಬಕಂಬಗಳಲ್ಲಿ, ಮೂಲೆ ಮೊಡಕುಗಳಲ್ಲಿ, ಎಲ್ಲಿ ಕಿವಿ ಇಟ್ಟರಲ್ಲಿ ಗೋಳ್ದನಿ ನೀಳ್ದನಿ ಸುಯ್ದನಿಗಳೆ ಕರ್ಣಕಠೋರವಾಗಿ ಕೇಳಿಸುವಾಗ, ಎಂಥ ಸಂಯಮಿಗಾದರೂ ಎದೆ ಬೇಯದೆ ಕಣ್ಣು ಹರಿಯದಿರುತ್ತದೆಯೆ? ಊರ್ಮಿಳೆಯೂ ಅಗೋಚರ ವಾಗಿ ಅತ್ತುಕರೆದಿರಬೇಕು. ಅವಳ ಎದೆಬೇಗೆ ಲಕ್ಷ್ಮಣನ ಎದೆಯನ್ನು ಸುಡದಿರುತ್ತದೆಯೆ? ಆದರೆ ಅಂತಹ ವಿಷಮಸನ್ನಿವೇಶದಲ್ಲಿ ಅವನು ಮಾಡಬಹುದಾದರೂ ಏನು?

ಒಂದು ಕಡೆ ಭ್ರಾತೃವತ್ಸಲತೆ, ಮತ್ತೊಂದು ಕಡೆ ಸತೀಪ್ರೇಮ; ಒಂದು ಕಡೆ ಭ್ರಾತೃಧರ್ಮ, ಮತ್ತೊಂದು ಕಡೆ ಪತಿಧರ್ಮ, ಇವೆರಡರಲ್ಲಿ ಯಾವುದು ಹೆಚ್ಚು; ಯಾವುದು ಅಗ್ರಮಾನ್ಯ? ಆ ಅಣ್ಣತಮ್ಮಂದಿರ ಸಂಬಂಧ ಹೂವು ಮತ್ತು ಪರಿಮಳಗಳ ಸಂಬಂಧವಿದ್ದಂತೆ. ಹಸುಳೆತನದಿಂದ ಅಣ್ಣನನ್ನು ಎಡೆಬಿಡದೆ ನೆರಳಿನಂತೆ ಸೂರ್ಯನ ಬೆಳಕಿನಂತೆ ಹಿಂಬಾಲಿಸಿ, ಸುಖದುಃಖಗಳಲ್ಲಿ ಸಮಭಾಗಿಯಾಗಿದ್ದು, ಈಗ ಕಷ್ಟ ಸಂಕಷ್ಟಗಳ ಬೀಡಾದ ಭೀಕರಾರಣ್ಯವನ್ನು ಪ್ರವೇಶಿಸಲಿರುವ ಅಣ್ಣನನ್ನು ಹಿಂಬಾಲಿಸುವುದು ಸರಿಯೊ? ಕೆಲವು ದಿನಗಳ ಹಿಂದೆ ಕೈಹಿಡಿದ ಹೆಂಡತಿಯೊಡನೆ ರಾಮನಿಲ್ಲದ ಅಯೋಧ್ಯೆಯಲ್ಲಿ ಇರುವುದು ಸರಿಯೊ? ಸರಿತಪ್ಪುಗಳ ಸಮಸ್ಯೆ ಹಾಗಿರಲಿ! ಹಾಗೆ ಅಣ್ಣನಿಂದ ಬೇರ್ಪಟ್ಟಿರುವುದು ಲಕ್ಷ್ಮಣನಿಗೆ ಸಾಧ್ಯವೆ? ಸಾಧ್ಯವಲ್ಲ, ನಿಜ. ಆದರೆ ಒಲಿದ ಧರ್ಮಪತ್ನಿಯನ್ನು ಕಣ್ಣೀರಿನ ಕಡಲಿಗೆ ನೂಕಿ ಹೋಗುವುದು ಧರ್ಮವೆ?

ಈ ಪ್ರಶ್ನೆಗೆ ಊರ್ಮಿಳೆಯ ಮೌನವೆ (ಕವಿಯ ಮಹಾಮೌನವೆಂದರೂ ಸರಿಯೆ!) ಉಚಿತ ವಾದ ಉತ್ತರವಾಗಿದೆ. ಜನಕರಾಜ ಋಷಿಯೂ ಅಹುದು. ಅವನ ಮಗಳು-ಔರಸಪುತ್ರಿ-ಊರ್ಮಿಳೆ. ಜೊತೆಗೆ ಅಕ್ಕನ ಕ್ಷೇಮದಲ್ಲಿ ಸದಾ ಕಾತರೆ. ಸ್ವಧರ್ಮಕ್ಕಿಂತಲೂ ಪತಿಧರ್ಮ ಶ್ರೇಷ್ಠವೆಂದು ತಿಳಿದ ಧರ್ಮಜ್ಞೆ, ಸಂಯಮಶೀಲೆ. ತನ್ನ ಸತಿಯ ಮನೋಧರ್ಮವನ್ನು ಅರಿಯದವನೆ ಲಕ್ಷ್ಮಣ! ಅರಿತಿದ್ದುದರಿಂದಲೆ, ಸತಿ ತಿಳಿಸುವುದಕ್ಕೆ ಮುಂಚೆಯ ತಾನೂ ರಾಮನನ್ನು ಹಿಂಬಾಲಿಸುವುದಾಗಿ ಹೇಳುತ್ತಾನೆ. ಆದರೆ ನಗರವನ್ನು ಬಿಡುವುದಕ್ಕೆ ಮುಂಚೆ ಅವಳ ಒಪ್ಪಿಗೆಯನ್ನು ಪಡೆಯದೆ ಹೋಗುವಂಥ ನೃಶಂಸನಲ್ಲ ಅವನು.

ಆ ದಂಪತಿಗಳ ಮಧುರ-ಕಠೋರವಾದ ಆ ಕೊನೆಯ ಭೇಟಿ ಅತಿ ಕ್ಷಿಪ್ರದಲ್ಲಿಯೆ ನಡೆದು ಹೋಗಿರಬೇಕು. ಗುರುಶಿಷ್ಯರ ಭೇಟಿಯಂತೆ ಪವಿತ್ರವಾದ ರಹಸ್ಯವಾದ ಭೇಟಿಯದು. ಆ ರಹಸ್ಯ ಇತರರಿಗೆ ಹೇಗೆ ತಿಳಿದೀತು? ಗುರು ಕೊಟ್ಟ ಪೂರ್ಣಪ್ರೇಮ ಪವಿತ್ರಮಂತ್ರವನ್ನು ಶಿಷ್ಯ ಹೇಗೆ ಹೊರಗೆಡಹಲಾರನೊ ಹಾಗೆ ಪತಿದೇವ ಹೇಳಿಕೊಟ್ಟ ಮಂತ್ರವನ್ನು ‘ಗುರುತಪಕೆ ದೀಕ್ಷೆಯಿತ್ತುದ’ನ್ನು ಆ ಸಾಧ್ವೀ ಶಿರೋಮಣಿ ಹೇಗೆ ತಾನೆ ಬಯಲು ಮಾಡಿಯಾಳು? ಅಂಥ ಸಂದರ್ಭದಲ್ಲಿ ಹೆಚ್ಚು ಮಾತಿಗೆ ಸಮಯವೆಲ್ಲಿ? ಮಾತು ಹೊರಡುವುದಾದರೂ ಹೇಗೆ? ಮಾತು ಉಚಿತವೆ? ಸಂಜ್ಞೆ, ಮೌನಗಳಿಂದಲೆ ಭಾವವಿಚಾರಗಳ ವಿನಿಮಯ ನಡೆದಿರಬೇಕು. ಆ ಸನ್ನಿವೇಶವನ್ನು ವರ್ಣಿಸುವುದು ಬೆಪ್ಪುತನವೆ ಸರಿ! ಆದರೆ ಅದರ ಸೂಚನೆ ಅತ್ಯಗತ್ಯ. ವರ್ಣನೆ ಪರಿಣಾಮಕಾರಿಯಾಗದೆಡೆ ಸೂಚನೆ ಹೇಗೆ ಪರಿಣಾಮಕಾರಿ ಯಾಗುತ್ತದೆನ್ನುವುದಕ್ಕೆ ಶ್ರೀರಾಮಾಯಣದರ್ಶನದ ಈ ಸನ್ನಿವೇಶವೆ ಸಾಕ್ಷಿಯಾಗಿದೆ. ಆ ಸಂಚಿಕೆಗೆ ‘ಊರ್ಮಿಳಾ’ ಎಂದು ಹೆಸರಿಟ್ಟು ಓದುಗರ ಗಮನ ಊರ್ಮಿಳೆಯಲ್ಲಿ ಸ್ಥಾಯಿಯಾಗುವಂತೆ ಅವಕಾಶವನ್ನು ಕಲ್ಪಿಸಿರುವುದು ಗಮನಾರ್ಹವಾಗಿದೆ. ಸಂಚಿಕೆಯ ಕೊನೆಯಲ್ಲಿ ಬರುವ ಊರ್ಮಿಳೆಯನ್ನು ಕುರಿತ ‘ಭಾವಗೀತೆ’ಯಲ್ಲಿ ಅವಳ ಬಾಳಿನ ಹಿರಿಮೆ ಭಾವಪರಿಪೂರ್ಣವಾಗಿ ರಸಾತ್ಮಕವಾಗಿ ಅಭಿವ್ಯಕ್ತಿಗೊಂಡಿದೆ. ಕವಿ ಊರ್ಮಿಳೆಯ ಮೂಲಕ ಪೆಣ್ತನಕ್ಕೆ ಸಲ್ಲಿಸಿರುವ ಗೌರವ ಅನ್ಯಾದೃಶವಾದುದು :

ಪೆಣ್ತನಂ ತಾನೆ ನೀನಲ್ಲದೂರ್ಮಿಳೆಯಲ್ತು
ಪೆಣ್ಣೆಂಬ ತಪಕೆ ನೀಂ ನಿರುಪಮಪ್ರತಿಮೆಯೌ

ಸ್ವಧರ್ಮಕ್ಕಿಂತ ಪತಿಧರ್ಮ, ಇವೆರಡಕ್ಕಿಂತ ಭಗವದ್ಧರ್ಮ ಸರ್ವೋತ್ಕೃಷ್ಟವೆಂದು ಭಾವಿಸಿ, ಪತಿಯಿಂದ ಗುರುತಪಕೆ ದೀಕ್ಷೆಯನ್ನು ಪಡೆದು, ಸರಯೂನದಿಯ ತೀರದಲ್ಲಿ ಪರ್ಣಕುಟಿಯನ್ನು ರಚಿಸಿ, ಚಿರತಪಸ್ವಿನಿಯಾಗಿ ನೆಲಸಿ, ಸೀತಾರಾಮಲಕ್ಷ್ಮಣರಿಗೆ ಚಿತ್ತಪಸ್ಸಿನ ರಕ್ಷೆಯನ್ನು ಕಟ್ಟಿದಳು.

*

ಮೂರು ಹೊತ್ತೂ ಊರ್ಮಿಳೆಯ ತಪಸ್ಸು ಆ ಮೂವರನ್ನು ಕುರಿತು, ಅವರ ಕ್ಷೇಮಕ್ಕಾಗಿ ಸಾಗುತ್ತಿತ್ತು. ಅಂದಮೇಲೆ ಅವಳ ಜೀವನ ಅಂತರ್ಮುಖವಾಗಿ ಬಾಹ್ಯ ವ್ಯಾಪಾರಗಳು ಸ್ತಂಭಿತವಾಗುತ್ತವೆ. ಅವಳ ಬಾಳೊಂದು ಗುಪ್ತವಾಹಿನಿಯಾಗಿ, ಗೋಚರಾತೀತವಾಗಿ, ಅತೀಂದ್ರಿಯ ಗಮ್ಯವಾಗುತ್ತದೆ. ಆ ಜೀವನ ಅನುಭವೈಕ ವೇದ್ಯವೆ ಹೊರತು ವರ್ಣನಾಸಾಧ್ಯ. ಊರ್ಮಿಳೆಯ ವಿಷಯ ಅಂತಿರಲಿ. ಆದರೆ ಯಾರ ಕ್ಷೇಮಕ್ಕಾಗಿ ಅವಳು ನೋಂತಳೊ, ತನ್ನ ಪ್ರೇಮವನ್ನೆ ತ್ಯಾಗ ಮಾಡಿದಳೊ, ಆ ಸೀತಾರಾಮರು ಆ ಹದಿನಾಲ್ಕು ವರ್ಷಗಳ ಸುದೀರ್ಘಾವಧಿಯಲ್ಲಿ ಒಮ್ಮೆಯಾದರೂ ಅವಳನ್ನು ನೆನೆಯಲಿಲ್ಲವೆಂದರೆ ಅವರ ಹಿರಿಮೆಗೆ ಕಳಶವಿಟ್ಟಂತಾಗು ವುದಿಲ್ಲ. ತನ್ನ ಪತಿ ಸಂಯಮಶೀಲನಾದರೂ ಯೌವನವತಿಯಾದ ಮಡದಿಯನ್ನು ಕುರಿತು ಆಗಾಗ್ಗೆ ಧ್ಯಾನಿಸುತ್ತಿರಲಿಲ್ಲವೆಂದು ಭಾವಿಸುವುದೂ ಅಸಹಜವಾಗುತ್ತದೆ. ಆದುದರಿಂದಲೆ ಈ ಕಾವ್ಯದಲ್ಲಿ ಊರ್ಮಿಳೆಯ ಹೆಸರನ್ನು ನೆನಪುಮಾಡಿಕೊಡುವ ಸನ್ನಿವೇಶಗಳು ಅಲ್ಲಲ್ಲಿ ಬರುತ್ತವೆ. ರಾಮಸೀತೆಯರು ಲಕ್ಷ್ಮಣನನ್ನು ‘ಊರ್ಮಿಳೇಶ’, ‘ಊರ್ಮಿಳಾಧವ’ ಎಂದು ಮುಂತಾಗಿ ಆಗಾಗ್ಗೆ ಸಂಬೋಧಿಸುತ್ತಾರೆ; ಸತಿಯನ್ನು ಆಗಲಿ ಬಂದ ಅವನನ್ನು ನೋಡಿ ಸುಯ್ಯುತ್ತಾರೆ.

ಅಯೋಧ್ಯೆಯನ್ನು ಬಿಟ್ಟ ಎರಡನೆಯ ರಾತ್ರಿ ಕಾಡಿನಲ್ಲಿ ಅವರು ಮೂವರೂ ಪವಡಿಸಿದ್ದರು. ಆಗಾಗ್ಗೆ ಗೂಬೆಗಳ ಮತ್ತು ಕೋಳ್ಮಿಗಗಳ ಸದ್ದು ರಾತ್ರಿಯ ನಿಶ್ಶಬ್ದತೆಯನ್ನು ಕದಡುತ್ತಿತ್ತು. ನಟ್ಟಿರುಳಿನಲ್ಲಿ ರಾಮ ಲಕ್ಷ್ಮಣನನ್ನು ಕರೆದು

………ತಮ್ಮ, ಪಿಂತಿರುಗಯೋಧ್ಯೆಗೀ
ರಾತ್ರಿಯಂ ಕಳೆದು, ಊರ್ಮಿಳೆ ನಿನ್ನನೆಯೆ ಕರೆದು
ಗೋಳಾಡುತಿರ್ಪಂತೆ ಕಂಡೆ ಕನಸಂ…..

ಎಂದನು. ಇದು ರಾಮ ಕೇವಲ ಪರೀಕ್ಷೆಗಾಗಿ ಆಡಿದ ಮಾತಲ್ಲ. ಆ ಎರಡು ದಿನ ಅವನಿಗೆ ಲಕ್ಷ್ಮಣ ಊರ್ಮಿಳೆಯರ ಚಿಂತೆಯೇ ಚಿಂತೆಯಾಗಿರಬೇಕು; ಅವರ ವಿರಹ ವ್ಯಥೆಯನ್ನು ಮನಸ್ಸಿನಲ್ಲಿಯೆ ನೆನೆನೆನೆದು ಕೊರಗಿರಬೇಕು. ಆ ಚಿಂತೆ ಕೊರಗುಗಳೆ ಸ್ವಪ್ನರೂಪದಲ್ಲಿ ಗೋಚರಿಸಿರಬೇಕು. ಅಣ್ಣನ ಮಾತಿಗೆ ತಮ್ಮ ಕೊಡುವ ಉತ್ತರದಲ್ಲಿ ಲಕ್ಷ್ಮಣ ಊರ್ಮಿಳೆಯರ ಸ್ವರೂಪ ಸ್ವಭಾವಗಳೂ ಮನೋನಿಶ್ಚಯತೆಯೂ ಸಂಪೂರ್ಣವಾಗಿ ವ್ಯಕ್ತವಾಗುತ್ತವೆ. ಅವರಿಬ್ಬರ ಕೊನೆಯ ಸಮಾಗಮದ ರಹಸ್ಯವನ್ನು ಹೊರಗೆಡಹಲು ಕವಿ ಸೃಷ್ಟಿಸಿರುವ ಸನ್ನಿವೇಶದ ಔಚಿತ್ಯವನ್ನೂ ಧ್ವನಿಯನ್ನೂ ಗಮನಿಸಬಹುದು. ಲಕ್ಷ್ಮಣನ ಉತ್ತರವಿದು :

…………..ಅಣ್ಣ,
ಕಾಂತೆ ಊರ್ಮಿಳೆ ತಪಸ್ವಿನಿ. ನಿನ್ನೊಡನೆ ಬರುವ
ಮುನ್ನಮಾಕೆಯ ಕೃಪೆಯನಾಂತೆ ಬಂದೆನ್. ನಿನಗೆ
ಚಿಂತೆಯಿನಿತಾ ದೆಸೆಗೆ ಬೇಡಯ್.

ಊರ್ಮಿಳೆಯ ಮಹಾಮಹಿಮೆಗೆ ಬೇರೆ ಸಾಕ್ಷಿ ಏಕೆ? ಆಕೆಯ ‘ಕೃಪೆ’ಯನ್ನು ಪಡೆದು ಬಂದ ಊರ್ಮಿಳಾಧವನಿಗೆ ವಿರಹವ್ಯಥೆಯೆ? ಆ ಎರಡು ಜೀವಿಗಳನ್ನು ವಿಯೋಗಗೊಳಿಸಿ, ವ್ಯಥೆಗೀಡು ಮಾಡಿ, ಒಂದನ್ನು ತನ್ನ ಜೊತೆಯಲ್ಲಿ ಎಳೆದುಕೊಂಡು ಹೋಗುವುದು ತರವೆ ರಾಮನಿಗೆ? ಲಕ್ಷ್ಮಣ ಅಣ್ಣನ ಇಂಗಿತವನ್ನರಿತು ಅವನನ್ನು ಮಾತಾಡಗೊಡದೆ ಹೀಗೆ ನುಡಿದನು:

……..ನೀನಿಲ್ಲದೆಂತತ್ತಿಗೆಗೆ
ಬಾಳಿಲ್ಲವೋ ಅಂತೆ ನನ್ನ ಬಾಳಾದೊಡಂ
ನಿನ್ನನುಳಿದಂದು ನೀರಂ ಪಳಿದ ವಿೂನಂತೆವೊಲ್
ಗಳಿಗೆಗಳಿದಪುದಣ್ಣ! ತಂದೆತಾಯಂದಿರಂ
ನೋಳ್ಪ ಮಾತಿರಲಿ, ಪುಗಲೊಲ್ಲೆನಾಂ ಸಗ್ಗಮಂ,
ನೀನಿರದೆ ಮುಂದೆ!

ಈ ಮಾತುಗಳಿಂದ ಲಕ್ಷ್ಮಣನ ಧ್ಯೇಯಾದರ್ಶಗಳು ಹೊರಹೊಮ್ಮುತ್ತವಲ್ಲದೆ ರಾಮನ ಚಿಂತೆ ತುಸು ಕಡಿಮೆಯಾಗುತ್ತದೆ.

ಆದರೆ ಕರುಣಾಳು ರಾಘವನ ಚಿಂತೆ ಕೊನೆಗೊಳ್ಳುತ್ತದೆಯೆ? ತಮ್ಮನನ್ನು ನೋಡಿ ದಾಗಲೆಲ್ಲ ಅದು ಮರುಕೊಳಿಸುತ್ತಿತ್ತು. ಚಿತ್ರಕೂಟದಲ್ಲಿ ನಡೆದ ಮತ್ತೊಂದು ಅದ್ಭುತ ಘಟನೆ ಇದಕ್ಕೆ ನಿದರ್ಶನ. ಅಲ್ಲಿಯ ಒಂದೊಂದು ಅಪ್ರಮುಖವಸ್ತುವೂ ‘ಅನುಭವದ ಘನಮಹಿಮೆ’ಯಿಂದ ‘ಅಚಿದ್ಭಾವ’ವನ್ನು ತೊರೆದು ಅಲ್ಪತ್ವವನ್ನು ನೀಗಿ, ‘ಪ್ರಾಣಮಯಮಾಗಿ ಮೇಣರ್ಥಮಯಮಾಗಿ ಸ್ಮೃತಿಕೋಶ[6]ವಾಗಿದ್ದುವು. ಅಲ್ಲೊಂದು ಕಲ್ಲು ಯುಗಯುಗಗಳಿಂದ ಬರಿಯ ಕಲ್ಲಾಗಿ ಬಿದ್ದಿತ್ತು. ಸೀತೆ ಮೊದಲು ಕಂಡಾಗಲೂ ಅದು ಕಲ್ಲೇ ಆಗಿತ್ತು. ಒಂದು ದಿನ ಪರ್ಣಶಾಲೆಯ ಮುಂದೆ ಪತಿಯೊಡನೆ ಮಾತಾಡುತ್ತ ಆ ಕಡೆಗೆ ಕಣ್ಣಾಗಿ ನೋಡುತ್ತಿರಲು ಆ ಕಲ್ಲಿಗೆ ಏನೊ ಆಕಾರ ಬಂದಂತೆ ತೋರಿತು. ಇಬ್ಬರೂ ಬೆರಗಾಗಿ ನೋಡಿ ಅದಕ್ಕೆ ‘ಕಲ್ದವಸಿ’ ಎಂದು ಹೆಸರಿಟ್ಟು, ಅಂದಿನಿಂದ ಅಂತೆಯೇ ಕರೆಯತೊಡಗಿದರು. ಮತ್ತೊಂದು ದಿನ ಸೀತೆ ಬೈಗು ಮಬ್ಬಿನಲ್ಲಿ ಆ ಕಲ್ಲನೆತ್ತಿಯಲ್ಲಿ ಯಾರನ್ನೊ ಕಂಡಂತಾಗಿ ಹೆದರಿ ಒಳಗೆ ಸೊಡರಬೆಳಕಿನಲ್ಲಿ ಓದುತ್ತಿದ್ದ ಗಂಡನನ್ನು ಕರೆದಳು. ರಾಮ ತುಸುಹೊತ್ತು ನೋಡಿ ಗುರುತಿಸಿ ನಿಟ್ಟುಸಿರುಬಿಟ್ಟನು. ಸೀತೆಗೆ ಅರ್ಥವಾಯಿತು. ಸೌದೆಯನ್ನು ಹೊತ್ತು ತಂದು ವಿಶ್ರಾಂತಿಗಾಗಿ ಕುಳಿತಿದ್ದ ಊರ್ಮಿಳಾವಲ್ಲಭನೆ ಆ ಮೂರ್ತಿ. ಅವನು ತನ್ನ ಹೆಂಡತಿಯನ್ನು ಕುರಿತು ಚಿಂತಿಸುತ್ತಿರುವನೆ ಎಂದು ಆ ದಂಪತಿಗಳಿಬ್ಬರೂ ನೆನೆದು ‘ಕೃತಜ್ಞತಾಭಾರ’ದಿಂದ ಸುಯ್ದರು. ಸೀತೆ ಮಾತು ನಿಲ್ಲಿಸಿದಳು. ರಾಮ ತಮ್ಮನ ಕಡೆಗೆ ನಡೆದನು. ಅಂದಿನಿಂದ ಆ ಬಂಡೆ ‘ಕಲ್ದವಸಿ’ ಊರ್ಮಿಳೆಯ ಸಂಯಮಕ್ಕೆ ಪ್ರತಿಮೆಯಾಯಿತು. ರಾಮ ಸೀತೆಯರಿಗೆ ‘ಗುರು’ವಾಯಿತು, ‘ಎಚ್ಚರಿಕೆ’ಯಾಯಿತು. ಊರ್ಮಿಳೆಯ ತಪಶ್ಶಕ್ತಿ ಈ ಜಡವಸ್ತುವಿನಲ್ಲಿ ಚಿದ್ಭಾವವಾಗಿ ಗೋಚರಿಸಿದುದು ಆಶ್ಚರ್ಯವೇನಲ್ಲ.

ಹೀಗೆಯೆ ರಾಮ ಎಷ್ಟೊ ಸಾರಿ ತನ್ನ ಸುಖ ತನ್ನ ತಮ್ಮನಿಗಿಲ್ಲದುದನ್ನು ಕುರಿತು ಚಿಂತಿಸುತ್ತಿದ್ದನು. ಒಂದು ದಿನ ಸಂಜೆ ಬೇಟೆಯನ್ನು ಮುಗಿಸಿ ಎಲೆವನೆಗೆ ಹಿಂದಿರುಗುತ್ತಿದ್ದಾಗ ಊರ್ಮಿಳಾಧವನ ಮುಖವನ್ನು ನೋಡಿದನು. ಮುಖದ ತುಂಬ ಬೆವರು ಸುರಿಯುತ್ತಿತ್ತು, ಅದೇ ಸಮಯದಲ್ಲಿ ಎಲೆಮನೆಯ ಬಾಗಿಲಲ್ಲಿ ತನಗಾಗಿ ತನ್ನ ಹೆಂಡತಿ ಬಿಸಿನೀರು ಹಿಡಿದು ಕಾಯುತ್ತಿದ್ದ ಚಿತ್ರ ನೆನಪಿಗೆ ಬಂದಿತು. ಕೂಡಲೆ ರಾಮ ಕನಿಕರಗೊಂಡು ಸುಯ್ದನು.

ಮತ್ತೊಮ್ಮೆ ಹೇಮಂತ ಋತುವಿನೊಂದು ದಿನ ಬೆಳಗ್ಗೆ ಗೋದಾವರಿಯಲ್ಲಿ ಮಿಂದು ನಾರುಮಡಿಯುಟ್ಟು ಹಿಂದಿರುಗುವಾಗ ದಾರಿಯೆಡೆ ಹೊಂಬಿಸಿಲಲ್ಲಿ ಮಿಂದಿದ್ದ ಬಿದಿರ್ಮೆಳೆಯ ತುದಿಯಿಂದ ಕಾಮಳ್ಳಿ ಹಿಂಡು ಇನಿದನಿಗೈಯುತ್ತ ಹಾರಿಹೋಯಿತು. ಆ ದನಿಯ ಇಂಪೆ ಹನಿಹನಿಯಾದಂತೆ ಸೀತೆಯ ತಲೆಯ ಮೇಲೆ ಹಿಮಮಣಿಗಳುದುರಿದುವು. “ದೇವಿಯರನಭಿ ನಂದಿಸುತ್ತಿಹಳರಣ್ಯಸಖಿ!” ಎಂದು ಲಕ್ಷ್ಮಣ ಹಾಸ್ಯಗೈದನು. “ಅಲ್ತಲ್ತು ತಂಗಿ ಊರ್ಮಿಳೆಯ ಕಣ್ಣೀರುಗಳ್ ಮುನ್‌ಬರ್ಪ ಸೊಗಕುರ್ಕಿ ಮುಂಗಾಣ್ಕೆ ಗಳನರ್ಪಿಸಿಹವೈ ಪ್ರಾಣೇಶ್ವರನ ಚರಣತಲಕೆ!” ಎಂದು ಸೀತೆ ಲಕ್ಷ್ಮಣ ನಾಚಿಕೊಳ್ಳುವಂತೆ ಮಾರುತ್ತರವಿತ್ತಳು. ಆ ಮಾತು ಗಳಿಂದ ಲಕ್ಷ್ಮಣನ ಮನಸ್ಸು ಸುಪ್ರಸನ್ನವಾಯಿತು. ಒಮ್ಮೆ ಹಸಿಸೌದೆ ಉರಿಯದೆ ಬೆಂಕಿ ಯೊಡನೆ ಹೋರಾಡಿ ಸಂಕಟಪಡುತ್ತಿದ್ದ ಸೀತೆಯನ್ನು ಕಂಡು ಕನಿಕರಗೊಂಡು ಲಕ್ಷ್ಮಣ ತಾನೆ ಒಲೆಯ ಮುಂದೆ ಕುಳಿತು ತನ್ನ ಹೆಂಡತಿಯನ್ನು ನೆನೆದು ಊದುತ್ತಾನೆ. ಅಗ್ನಿ ಧಗ್ಗನೆ ಹತ್ತಿಕೊಳ್ಳುತ್ತದೆ. ಹೀಗೆ ಸಮಯ ಬಂದಾಗಲೆಲ್ಲ – ಕೊನೆಗೆ ದಿನಕ್ಕೊಮ್ಮೆಯಾದರೂ ಊರ್ಮಿಳೆಯನ್ನು ಅವರೆಲ್ಲರೂ ಸ್ಮರಿಸುತ್ತಿದ್ದಿರಬೇಕು. ಇಲ್ಲವೆಂದು ಭಾವಿಸುವುದು ಗಾಂಪತನ, ಅರಸಿಕತನ.

ಇಂಥದೇ ಮತ್ತೊಂದು ಸನ್ನಿವೇಶವನ್ನು ನೆನೆದು ಅದು ಲಕ್ಷ್ಮಣ ಉರ್ಮಿಳೆಯರ ಶೀಲದ ಮೇಲೆ ಎಂಥ ಪ್ರಭಾವವನ್ನು ಬೀರುತ್ತದೆನ್ನುವುದನ್ನು ಅವಲೋಕಿಸಬಹುದು. ಶ್ರೀರಾಮ ಅಯೋಧ್ಯೆಯ ಕಡೆಗೆ ಹಿಂದಿರುಗುವ ದಿನ. ಸೀತೆ ಬುತ್ತಿಯನ್ನು ಕಟ್ಟಿಟ್ಟು, ಮುಡಿಯನ್ನು ಸಂವರಿಸಿಕೊಂಡು ಹೂ ತಿರಿಯಲು ಹೊರಗೆ ಹೋಗುತ್ತಾಳೆ. ಬೇಲಿಯ ಮೇಲೆ ಹರಡಿದ್ದ ಒದ್ದೆಮಡಿಯನ್ನು ನೋಡಿ ಸೌಮಿತ್ರಿಯನ್ನು ಕೂಗಿಕೊಳ್ಳುತ್ತಾಳೆ : “ನಾರುಡೆಯಿದಾರದಯ್? ಹೋಹ ಹೊಂಗಿಂದಿದಂ ಮರೆದಿರೇಂ?” ಎಂದು. ಆಗ ಊರ್ಮಿಳೇಶ ಹೊರಗೆ ಇಣುಕಿ ಕೊಟ್ಟ ಅರ್ಥಗರ್ಭಿತವಾದ ಹೃದಯಸ್ಪರ್ಶಿಯಾದ ಉತ್ತರವಿದು :

…….ಅಯ್ಯ ಮರೆವೆನೇಂ?
ಛಿದ್ರಮಾದೊಡಮದಂ ಕೊಟ್ಟವಂ ಮುನಿಯಲ್ತೆ?
ಖರನ ಕೊಲುವಂದದನೆ ಮೈ ಜೋಡನೆಸಗಿರ್ದೆ ನಾಂ
ಶೂರ್ಪಣಖಿಯಿಂ ಪೊರೆದ ಬನದ ಬಾಳ್ಕೆಯ ಶುಚಿಯ
ಕಾಣ್ಕೆಯೆಂದದನೀವೆನೆನ್ನಾ ತಪಸ್ವಿನಿಗೆ !

ಊರ್ಮಿಳೆಗೆ ತಕ್ಕ ಪತಿ ಲಕ್ಷ್ಮಣ! ಅವಳ ಪಾವಿತ್ರ್ಯವನ್ನು ಅವನು ಚೆನ್ನಾಗಿ ಬಲ್ಲ. ಅವಳ ನೆನಪೇ ಇವನ ಪಾವಿತ್ರ್ಯವನ್ನೂ ಪೋಷಿಸುತ್ತಿದೆ. ಅದಕ್ಕಾಗಿ ಈ ವಲ್ಕಲವನ್ನು ತನ್ನ ಸತಿಗೆ ಕಾಣಿಕೊಯುವುದಾಗಿ ಹೇಳುತ್ತಾನೆ.

ಮೇಲಣ ಸನ್ನಿವೇಶಗಳಿಂದ ಊರ್ಮಿಳೆಯ ಘನತೆಯೂ, ಲಕ್ಷ್ಮಣನ ನಿಶ್ಚಲತೆಯೂ, ಸೀತಾರಾಮರ ಹಿರಿಮೆಯೂ ವ್ಯಕ್ತವಾಗುತ್ತವೆ, ನಿಜ. ಆದರೆ ಭರತ ಅಯೋಧ್ಯೆಯ ಪುರಜನ ಪರಿಜನ ಗುರುಜನರೊಡಗೂಡಿ ಶ್ರೀರಾಮನನ್ನು ಹಿಂದಿರುಗಿಸುವ ಹಂಬಲದಿಂದ ಚಿತ್ರಕೂಟಕ್ಕೆ ಹೊರಟಾಗ ಊರ್ಮಿಳೆ ಎಲ್ಲಿದ್ದಳು? ಆ ಗುಂಪಿನಲ್ಲಿ ಕೌಸಲ್ಯೆ ಸುಮಿತ್ರೆಯರ ನಡುವೆ ಚಿಂತಾಭಾರದಿಂದ ಕುಸಿದ ಅವಕುಂಠನವತಿ ಕೈಕೆ ಕಂಡರೂ ಊರ್ಮಿಳೆ ಕಾಣಳು. ಸರಯೂ ನದೀತೀರದ ಪರ್ಣಕುಟಿಯಲ್ಲಿ ತಪೋಮಗ್ನಳಾಗಿದ್ದ ಅವಳು ಹೇಗೆ ಕಾಣುತ್ತಾಳೆ? ಅವಳ ಸ್ಥಿತಪ್ರಜ್ಞತೆಯೂ ಪಾರದರ್ಶಿತ್ವವೂ ‘ಕಾವ್ಯಮೌನ’ದಿಂದ ಹೇಗೆ ವೇದ್ಯವಾಗುತ್ತವೆನ್ನುವುದಕ್ಕೆ ಈ ಸನ್ನಿವೇಶವೇ ಸಾಕ್ಷಿಯಾಗಿದೆ.

ಶ್ರೀ ರಾಮಾಯಣದರ್ಶನದಲ್ಲಿ ಬರುವ ರಾಮರಾವಣರ ಯುದ್ಧ ವ್ಯಕ್ತಿವ್ಯಕ್ತಿಗಳ ಸಂಗ್ರಾಮವಲ್ಲ; ಶಕ್ತಿಶಕ್ತಿಗಳ ಸಂಗ್ರಾಮ; ಸದಸದ್ ಶಕ್ತಿಗಳ ಸಂಗ್ರಾಮ; ರಾಮತ್ವ ರಾವಣತ್ವಗಳ ಹೋರಾಟ. ಆ ಯುದ್ಧದಲ್ಲಿ ರಾಮನ ಕಡೆ ನಿಂತು ಸಹಾಯವೊದಗಿಸಿದವರು ಕಪಿಸೈನ್ಯ ಮಾತ್ರವಲ್ಲ, ಸೀತೆ ಊರ್ಮಿಳಾ ಭರತ ಕೌಸಲ್ಯೆ ಸುಮಿತ್ರೆ ಕೈಕೆ ರುಮೆ ಪಂಚವಟಿಯ ಋಷಿಗಳು – ಪ್ರತಿಯೊಬ್ಬರೂ ತಮ್ಮ ತಮ್ಮ ತಪಶ್ಶಕ್ತಿಯ ನೆರವನ್ನೊದಗಿಸಿದರು. ಅಷ್ಟೇ ಅಲ್ಲ; ಮಂಡೋದರಿ, ಅನಲೆ, ಚಂದ್ರನಖಿ, ವಿಭೀಷಣ, ಮಹಾಪಾರ್ಶ್ವ, ಕುಂಭಕರ್ಣ, ಕಬಂಧ, ವಿರಾಧ, ತ್ರಿಜಟೆ ಮೊದಲಾದವರೆಲ್ಲ ರಾವಣೋದ್ಧಾರಕಾರ್ಯದಲ್ಲಿ ನೆರವಾಗಿ ಸರ್ವತ್ರ ರಾಮತ್ವದ ವಿಜಯಕ್ಕೆ ಕಾರಣರಾದರು.

ಊರ್ಮಿಳೆಯ ತಪಸ್ಸಾಧನಾಕ್ರಮ ಗೋಚರಾತೀತವಾದರೂ ಅವಳ ತಪಸ್ಸಿದ್ದಿಯ ಮಹಿಮೆ ಸಂಗ್ರಾಮ ಪ್ರಕರಣದಲ್ಲಿ ಅನುಭವವೇದ್ಯವಾಗುತ್ತದೆ. ಯುದ್ಧಾರಂಭಕ್ಕೆ ಹಿಂದಿನ ಮಧ್ಯರಾತ್ರಿ ನಭೋಲಕ್ಷ್ಮಿಗೂ ತಪೋಲಕ್ಷ್ಮಿಗೂ ನಡೆಯುವ ಅಲೌಕಿಕ ಸಂಭಾಷಣೆಯಲ್ಲಿ ಊರ್ಮಿಳೆಯ ಮಹಾಮಹಿಮೆ ಗೋಚರವಾಗುತ್ತದೆ. ತಪೋಲಕ್ಷ್ಮಿಯ ಮಾತುಗಳಿವು;

………….ಊರ್ಮಿಳಾಪ್ರಾಣಂಗೆ
ತಾಯ್ವರಕೆಯಂ ತಮ್ಮನರಕೆಯಂ ಮೇಣ್ ಸತಿಯ
ಮೇರುಕಂಪನಕಾರಿ ಸುವ್ರತದ ಋತಶಕ್ತಿಯಂ
ಪೊತ್ತು ಪೋದಪೆನಕ್ಕ, ರಕ್ಕಸರ ಕೊಂದಕ್ಕನಂ
ಪೊರೆದು ಬೇಗನೆ ಮನೆಗೆ ಬಪ್ಪ ಶುಭಮಪ್ಪವೋಲ್ !

ತಪಸ್ಯೆಯೆ ಋತಶಕ್ತಿ ಎಂದ ಮೇಲೆ ಅದಕ್ಕೆ ಮಣಿಯದ ಹಿರಿಯ ಶಕ್ತಿ ಯಾವುದಿದೆ? ಅವಳ ತಪಸ್ಸನ್ನು ಮೆಚ್ಚಿದ ಭವಾನಿ ಸರ್ವಲೋಕ ಭಯಂಕರನಾದ ಕುಂಭಕರ್ಣನ ಯುದ್ಧಾರಂಭದಲ್ಲಿ ಬೆದರಿ

…………ಮಗಳೂರ್ಮಿಳೆಗೆ,
ನೋಡಲ್ಲಿ ಸರಯೂ ನದಿಯ ತಟದಿ ನನ್ನನೆ
ನಿರಂತರಂ ಪೂಜಿಸಿ ತಪಂಗೆಯ್ವಳಿಗೆ, ಮುಡಿದ
ಹೂ ಬಾಡದಿರಲಿ……

ಎಂದು ಈಶ್ವರನನ್ನು ಪ್ರಾರ್ಥಿಸಿ ಅವನಿಂದ ಅಭಯವನ್ನು ಪಡೆಯುತ್ತಾಳೆ. ಇಂದ್ರಜಿತುವಿನ ಇಂದ್ರಜಾಲ ವಿದ್ಯೆಯನ್ನು ಭೇದಿಸಲು ಊರ್ಮಿಳೆಯ ತಪಸ್‌ಶಕ್ತಿಯಿಂದ ಪರಿಪುಷ್ಟನಾದ ಲಕ್ಷ್ಮಣ ಮಾತ್ರ ಸಮರ್ಥನಾಗುತ್ತಾನೆ. ಅಗ್ನಿಚಕ್ರದಲ್ಲಿ ಕಾಲಿಟ್ಟೊಡನೆಯೆ ಶವದಂತೆ ಕೆಡೆದ ಲಕ್ಷ್ಮಣ ಸುಷೇಣನ ಔಷಧಿ ಪ್ರಯೋಗದಿಂದ ಚೇತರಿಸಿಕೊಂಡಾಗ ‘ಊರ್ಮಿಳಾ! ಊರ್ಮಿಳಾ!’ ಎಂದು ಕರೆಯುತ್ತ ಸುತ್ತಲೂ ಹುಡುಕುನೋಟವನ್ನಟ್ಟುತ್ತಾನೆ. ತಾನು ತಪಸ್ವಿನಿ ಊರ್ಮಿಳೆಯನ್ನು ಕಂಡುದಾಗಿಯೂ ಮೇಘನಾದನ ಕೂಟಯಾಗಕ್ಕೆ ತಾನು ಬಲಿಯಾಗದಂತೆ ಅವಳು ತಪಃಕವಚನವನ್ನು ತೊಡಿಸಿದುದಾಗಿಯೂ ತಾನು ಕಂಡ ಅನುಭವವೊಂದನ್ನು ತಿಳಿಸುತ್ತಾನೆ. ಇಂದ್ರಜಿತು ಲಕ್ಷ್ಮಣನಿಂದ ಮೃತಿ ಹೊಂದಿದ ಮೇಲೆ ಊರ್ಮಿಳೆಯ ಹೃದಯ ಹಗುರವಾಯಿತಂತೆ! ತಪಸ್ಸಿಗೆ ಸೃಷ್ಟಿಶಕ್ತಿಯೇ ಮಣಿಯುತ್ತದೆ ಎಂದ ಮೇಲೆ ಲೋಕದಲ್ಲಿ ಅದಕ್ಕೆ ಅಸಾಧ್ಯವಾದುದು ಯಾವುದೂ ಇರುವುದಿಲ್ಲ.

ಶ್ರೀರಾಮಾಯಣದರ್ಶನದಲ್ಲಿ ಊರ್ಮಿಳೆ ಓದುಗರ ಕಣ್ಮುಂದೆ ಪ್ರತ್ಯಕ್ಷವಾಗಿ ಸುಳಿ ಯುವುದು ಎರಡು ಅಥವಾ ಮೂರು ಬಾರಿ ಮಾತ್ರ. ಬಾಲೆಯಾದರೂ ಅವಳ ನಡೆಯಲ್ಲಿ ಚಂಚಲತೆ ಕಾಣುವುದಿಲ್ಲ. ನುಡಿಯಲ್ಲಿ ಚಪಲತೆ ತಲೆದೋರುವುದಿಲ್ಲ. ಮಾತೆ ಬರುವುದಿಲ್ಲ ವೆಂಬ ಭ್ರಾಂತಿಯನ್ನು ಹುಟ್ಟಿಸುವಂಥ ಅಲ್ಪಭಾಷಿಣಿ ಅವಳು. ಮೊದಲೆರಡು ಬಾರಿಯಂತು ಮಾತೇ ಆಡುವುದಿಲ್ಲ. ಮಿಂಚಿನಂತೆ ಸುಳಿದು ಮರೆಯಾದರೂ ಎಂದೆಂದಿಗೂ ಅಚ್ಚಳಿಯದ ಅಕ್ಷತಪ್ರಭಾವ ಅವಳದು. ಕತ್ತುರಿಯನ್ನು ಮುಚ್ಚಿಟ್ಟರೂ ಅದರ ಸೌರಭವನ್ನು ತಡೆಯಲು ಎಂತು ಸಾಧ್ಯವಾಗದೊ ಅಂತೆಯೆ ಅವಳನ್ನು ಸ್ಮೃತಿವಲಯದಿಂದ ಹೊರದೂಡಲು ಸಾಧ್ಯವಿಲ್ಲ. ಕೊನೆಯ ಬಾರಿ ಅವಳನ್ನು ಸಂದರ್ಶಿಸಿದಾಗ ಅವಳ ಒಂದೊಂದು ನಡೆನುಡಿಯೂ ಆತ್ಮಸಿದ್ದಿಯನ್ನು ಪಡೆದ ಸ್ಥಿತಪ್ರಜ್ಞೆಯ, ಮಾನವತ್ವದ ತುತ್ತತುದಿಯನ್ನೇರಿದ ಸಾಧಕ ಶ್ರೀಮಂತತೆಯ ನಡೆನುಡಿಗಳಂತಿದ್ದು, ಓದುಗನ ಅಹಂಕಾರ ಮೂಲವಾದ ದೌರ್ಬಲ್ಯಗಳನ್ನು ತೊಳೆದು, ಅಲ್ಪತ್ವವನ್ನು ಮೂಲೋತ್ಪಾಟನಗೊಳಿಸಿ, ಅವನನ್ನು ಭೂಮದ ಕಡೆಗೆ ಒಯ್ಯುತ್ತವೆ. ಮಾನವ ಸಾಧಿಸಬೇಕಾದ ಆದರ್ಶ ಅವುಗಳಲ್ಲಿ ಅಡಕವಾಗಿದೆ. ಈ ಮಹಾ ಕಾವ್ಯದ ಮೇರುಭವ್ಯವಾದ ಘಟನೆಗಳಲ್ಲಿ ಇದೊಂದು.

ಅಂದು ರಾಮಾಗಮನವಾರ್ತೆ ಆಂಜನೇಯನ ಮೂಲಕ ಅಯೋಧ್ಯೆಯಲ್ಲಿ ಹರಡಿದೆ. ನಗರವೆಲ್ಲ ಸಿಂಗರಗೊಂಡು, ಸಂತೋಷಭೇರಿಗಳು ಮೊಳಗುತ್ತಿವೆ. ಪೂರ್ವಪರಿಚಿತದ ಸಂಭ್ರಮನಿನಾದವನ್ನು ಕೇಳಿ ಊರ್ಮಿಳೆ ಹರ್ಷಪುಳಕಿತಳಾಗುತ್ತಾಳೆ. ತಂಗಿ ಮಾಂಡವಿ ಓಡೋಡಿ ಬಂದು “ಏಳ್ ಏಳ್, ಅಕ್ಕ! ಕೇಳ್, ಭೇರಿ ಚೀರುತಿವೆ ವಾರ್ತೆಯಂ!” ಎಂದು ಸಂಭ್ರಮಾಧಿಕ್ಯದಿಂದ ಉಸುರುತ್ತಾಳೆ. ಊರ್ಮಿಳೆಯ ಸಡಗರವನ್ನು ಕೇಳಬೇಕೆ? ಆದರೆ ಆ ಸಡಗರದಲ್ಲಿ ಸ್ವಧರ್ಮಪರಿಪಾಲನೆಯನ್ನು ಮರೆಯುವುದಿಲ್ಲ. “ಮೀಯದುಡದೆಯೆ ತೊಡದೆ ಪೋಪುದೇನವರೆಡೆಗೆ, ತಂಗೆ? ಮಂಗಳಮಲ್ತು!” ಎಂದು ನುಡಿಯುತ್ತಾಳೆ. ಪರರ ಮೆಚ್ಚಿಕೆಯೆ ಸರ್ವೋದ್ಯಮಗಳ ಸರ್ವೋದ್ದೇಶವೆಂದು ತಿಳಿದಿರುವ ಆಡಂಬರಪ್ರಿಯರಾಗಿದ್ದರೆ ಇಂಥ ಸಂದರ್ಭದಲ್ಲಿ ಮಲಿನಗಾತ್ರರಾಗಿಯೆ ಪ್ರದರ್ಶನಕ್ಕೆ ಸಿದ್ಧರಾಗುತ್ತಿದ್ದರು. ಪಾಪ! ಮುಗ್ಧೆ ಮಾಂಡವಿಯ ಮಾತಿನಲ್ಲಿ ಈ ಪ್ರದರ್ಶನಪ್ರಿಯತೆ ಕಾಣುತ್ತದೆ: “ನೋಡಬಾರದೆ ಅವರ್ ನಿನ್ನ ನಿಡುಕಡುನೋಂಪಿಯಂ?” ಅಕ್ಕನ ಮೇಲಣ ಕನಿಕರದಿಂದ ಗೌರವದಿಂದ ಆಡಿದ ಮಾತಿದು. ಅವಳ ಮನಸ್ಸಿನಲ್ಲಿ ಕಪಟಲೇಶವೂ ಇಲ್ಲ. ತಂಗಿಯ ಪ್ರಶ್ನೆಗೆ ಊರ್ಮಿಳೆ ಕೊಡುವ ಉತ್ತರದಲ್ಲಿ ವೇದೋಪನಿಷತ್ತುಗಳ ತತ್ತ್ವಸಾರವೆ ಅಡಕವಾಗಿದೆ :

………ಚಿಃ ಕಡಲ್ಗಿದಿರ್
ಪನಿಗೇಂ ಪ್ರದರ್ಶನಂ? ದೇವರ ತಪಕ್ಕಿದಿರ್
ನಮ್ಮದೊರ್ ತೃಣಮಲ್ತೆ! ಸಂತೋಷ ಸಮಯದೊಳ್
ತೋರ್ಪುದನುಚಿತವೆಮ್ಮ ಕಷ್ಟಮಂ! ತನ್ನತಾನ್
ಇಲ್ಲಗೈವುದೆ ಎಲ್ಲ ಸಾಧನೆಗೆ ಕೊನೆಯ ಗುರಿ;
ಮೇಣ್ ತಪಕೆ ಕೇಳ್, ತಂಗೆ, ಪರಮಪ್ರಯೋಜನಂ!

‘ತಾನು’ ಎಂಬ ಅಹಂಕಾರ ಮಮಕಾರಗಳಳಿಯುವ ತನಕ ಸಿದ್ದಿ ಹೇಗೆ ಲಭಿಸೀತು? ‘ತಾನು’ ಇಲ್ಲವಾದಾಗಲೆ ಪರಮಸಿದ್ದಿ ಲಭಿಸುತ್ತದೆ. ಆದುದರಿಂದಲೆ ಇಂಥವರ ತಪಸ್ಸು ರಹಸ್ಯವಾಗಿ ಸಾಗಿ ‘ಅಖ್ಯಾತ’ವಾಗಿ ಅಗೋಚರವಾಗಿ ಉಳಿಯುತ್ತದೆ. ಶ್ರೀ ಸ್ವಾಮಿ ವಿವೇಕಾನಂದರು ಹೇಳಿರುವ “ಎಷ್ಟೋ ಜನ ಬುದ್ಧರು ಅಖ್ಯಾತರಾಗಿ ಆಗಿ ಹೋಗಿದ್ದಾರೆ. ನಾವು ಕಂಡಿರುವುದು ಒಬ್ಬ ಬುದ್ಧನನ್ನು ಮಾತ್ರ” ಎಂಬ ಮಾತಿನ ಅಂತರಾರ್ಥವಾದರೂ ಇದೇಯೆ. ಈ ಆಧ್ಯಾತ್ಮಿಕ ಧರ್ಮದ ಜೊತೆಗೆ ಲೌಕಿಕ ಧರ್ಮವೂ ಊರ್ಮಿಳೆಯ ಮಾತುಗಳಲ್ಲಿ ಅಡಕವಾಗಿದೆ. ಸರ್ವ ಲೌಕಿಕ ಧರ್ಮಗಳನ್ನು ಒಳಗೊಂಡ ಪರಮಧರ್ಮ ತಾನೆ ಆಧ್ಯಾತ್ಮಿಕ ಧರ್ಮ! ಸಂತೋಷ ಸಮಯದಲ್ಲಿ, ಅದರಲ್ಲಿಯೂ ನಗರಕ್ಕೆ ನಗರವೆ, ಅರಮನೆಗೆ ಅರಮನೆಯೆ ಸಂತೋಷಾಬ್ಧಿಯಲ್ಲಿ ಮುಳುಗಿರುವಾಗ – ತನ್ನೊಂದು ಕಷ್ಟವನ್ನು, ಅದು ಎಷ್ಟೇ ದಾರುಣವಾದುದಾಗಿರಲಿ, ತೋರ್ಪಡಿಸುವುದು ಯಾರಿಗೂ ತರವಲ್ಲ. ಕಡಲಹಾಲಿಗೆ ತೊಟ್ಟು ಹುಳಿ ಹಿಂಡಿದಂತಾಗುತ್ತದೆ. ಮತ್ತೊಬ್ಬರ ಸಂತೋಷಕ್ಕೆ ಭಂಗತರುವ ಪ್ರಯತ್ನ ಪಾಪಕಾರ್ಯವಾಗುತ್ತದೆ.

ಸರಿ; ಊರ್ಮಿಳೆ ಸರಯೂನದಿಯಲ್ಲಿ ಮಿಂದು, ‘ಮಡಿಗೆ ನೂರ್ಮಡಿ ಮೆರೆಯೆ ಕಡು ನೋಂಪಿ’ ಬಿಳಿ ದಳಿಂಬವನ್ನುಟ್ಟಳು. ತನ್ನ ಪತಿಯನ್ನು ನೆನೆದಳು. ತಪಸ್ಸಿದ್ದಿಗೆ ನೆರವಾದ ವಿಶ್ವಶಕ್ತಿಗಳಿಗೆ ನಮಿಸಿದಳು. ಹಕ್ಕಿಗಳಿಗೆ ಅಕ್ಕಿಯನ್ನೂ ಮಿಗಗಳಿಗೆ ಎಳೆ ಗರುಕೆಯನ್ನೂ ತಿನ್ನಿಸಿದಳು. ಸ್ಥಲದೇವತೆಗೆ ನಮಸ್ಕರಿಸಿ, ಧೂಳಿಯನ್ನು ತಲೆಗೆ ಒತ್ತಿಕೊಂಡು, ‘ತವರಿ[7]ನತ್ತೆಯ ಮನೆಗೆ ವೋಪಂತೆ’ ಎಲೆಮನೆಯಿಂದ ಬೀಳ್ಕೊಂಡಳು. ಅಲ್ಲಿಂದ ನೇರವಾಗಿ ಸುಮಿತ್ರಾದೇವಿಯ ಅರಮನೆಗೆ ಬಂದಳು. ಅಂಥ ಸೊಸೆಯನ್ನು ಪಡೆದ ಅತ್ತೆಯ ಪುಣ್ಯಕ್ಕೆಣೆಯುಂಟೆ! “ನಿನ್ನ ತಾಳಿಯ ಪುಣ್ಯಮೈಸಲೆ, ಮಗಳೆ, ಮರಳ್ದುದು ಕಾಡುಪಾಲಾದೆಮ್ಮ ಕುಲದೇಳ್ಗೆ!” ಎಂಬ ಅತ್ತೆಯ ಹರಕೆಯಲ್ಲಿ ಸಂಪೂರ್ಣ ಸತ್ಯ ಹುದುಗಿದೆ; ಕೇವಲ ಔಪಚಾರಿಕವಾಗಿ ಆಡಿದ ಮಾತುಗಳಲ್ಲ ಅವು.

ಅಷ್ಟು ಹೊತ್ತಿಗೆ ಹಿರಿಯ ರಾಣಿ ಕೌಸಲ್ಯೆ ಕೈಕೆಯನ್ನು ಕಂಡು, ಅವಳನ್ನು ನಂದಿ ಗ್ರಾಮಕ್ಕೆ ಕರೆದೊಯ್ವ ‘ಕರ್ತವ್ಯ’ದಲ್ಲಿ ತೊಡಗಿದ್ದಳು. ರಾಮಾಯಣದಲ್ಲಿ ಕೈಕೆಯಷ್ಟು ದುಃಖದ ನಂಜನ್ನುಂಡ ವ್ಯಕ್ತಿ ಬೇರೊಂದಿಲ್ಲ. ರಾಮನನ್ನು ವನವಾಸಕ್ಕೆ ಕಳುಹಿಸಿ, ಪತಿಯ ಮರಣಕ್ಕೆ ಕಾರಣಳಾಗಿ, ತಾನು ಅರಮನೆಯಲ್ಲುಳಿದರೂ ನಿರಂತರ ಕಾಡು ಪಾಲಾಗಿ, ಮಗ ಮೊದಲುಗೊಂಡು ಅರಮನೆಯ ಮತ್ತು ನಗರದ ಪರಿಜನ ಪುರಜನ ಮತ್ತು ಬಂಧುಮಿತ್ರರ ಕಟುತಿರಸ್ಕಾರಕ್ಕೆ ಅವಹೇಳನೆಗೆ ಗುರಿಯಾದ ಹತಭಾಗ್ಯೆ ಅವಳು. ಮಂಥರೆಯ ಕಡೆತದಿಂದ ಉದ್ಭವಿಸಿದ ಹಾಲಾಹಲವನ್ನುಂಡ ‘ಶಿವಾ-ಶಿವ ಶ್ರೀಕಂಠಶಕ್ತಿ’ ಅವಳು. ಕೊನೆಗೇನೊ ಅಮೃತೋದಯವಾಯಿತು. ಆದರೆ ಅವಳಿಗೆ ಹಾಲಾಹಲವೆ ಸಾಕಾಯಿತು. ಅವಳಿಗೆ ಮತ್ತೆಲ್ಲಿಯ ಶಾಂತಿ! “ಊರ್ಮಿಳೆ, ನಮ್ಮ ಸಂಕಟಕ್ಕಿಂದು ಬಂದುದು ವಿರಾಮಮಾ ಕೈಕೆಯ ಮನೋವ್ಯಥೆಗೆ ಪೇಳೆಂದು ಬರ್ಪುದೋ ಪರಿಸಮಾಪ್ತಿ?” ಎಂಬ ಸುಮಿತ್ರೆಯ ಮಾತುಗಳಲ್ಲಿ ಈ ಅರ್ಥವೆ ಧ್ವನಿತವಾಗುತ್ತದೆ. ‘ಕಡಲ್ಗಿದಿರ್ ಪನಿಗೇಂ ಪ್ರದರ್ಶನಂ’ ಎಂಬ ಊರ್ಮಿಳೆಯ ಮಾತು ಇಲ್ಲಿಗೂ ಸಲ್ಲುತ್ತದೆ.

ಕೈಕೆಯನ್ನು ನಂದಿಗ್ರಾಮಕ್ಕೆ ಕರೆದೊಯ್ವ ಸನ್ನಿವೇಶ ಕರುಣರಸಪರಿಪ್ಲಾವಿತವಾಗಿದೆ. ಕೌಸಲ್ಯೆಯ ಹಿರಿಮೆಯೆಂತೊ ಅಂತೆ ಕೈಕೆಯ ಅನಂತ ದುಃಖವೂ ಅಪಾರ ದೈನ್ಯವೂ ಇಲ್ಲಿ ವ್ಯಕ್ತಗೊಂಡಿದೆ. ರಾಮಜನನಿಯ ತೋಳ್ತೆಕ್ಕೆಯಲ್ಲಿ ಅಳುತ್ತಿದ್ದ ಕೈಕೆಗೆ ಊರ್ಮಿಳೆ ನಮಸ್ಕರಿಸಿದಳು. ಕೈಕೆ ಅವಳಿಗೆ ಮುತ್ತಿಟ್ಟು ಕಂಬನಿಗರೆದಳು. ಈ ಸನ್ನಿವೇಶ ಕವಿಯ ಪ್ರತಿಭಾಶಕ್ತಿಗೆ ಕನ್ನಡಿ ಹಿಡಿದಂತಿದೆ. ಯಾರ ಬಾಯಲ್ಲಿಯೂ ಮಾತಾಡಿಸದೆ ವಾಚಕರನ್ನೂ ಶ್ರೋತೃಗಳನ್ನೂ ಕರುಣರಸದ ಮಡುವಿನಲ್ಲಿ ಮುಳುಗಿಸಿದ್ದಾರೆ. ಕೌಸಲ್ಯೆಗೆ ಮಾತು ಬರುತ್ತದೆಯೆ? ಎಲ್ಲರಿಗೂ ಮಾತು ಕಟ್ಟುತ್ತದೆ. ಮಹಾಮೌನಿ, ಮಿತಭಾಷಿಣಿ ಊರ್ಮಿಳೆ ಅತ್ತೆಯನ್ನು ಮಾತಾಡಿಸುತ್ತಾಳೆ :

…………..ಅಮ್ಮ,
ನಿಮ್ಮ ದುಃಖದ ಮೇರೆಯಂ ನಾನಳೆಯಲಾರೆ;
ಚಿಕ್ಕವಳ್, ನಮಗಾಗಿ, ನಿಮ್ಮ ಮಕ್ಕಳಿಗಾಗಿ,
ಓಕರಿಸದೀಂಟವೇಳ್ಕಾ ಕಾಳಕೂಟೋಪಮದ
ಹೃತ್ತಾಪಮಂ. ತಾಯಿ, ನಿನಗಲ್ಲದಿನ್ನಾರ್ಗೆ, ಪೇಳ್,
ಸಂಮಥಿತ ದಶರಥ ತನೂಜ ಜೀವಿತ ಕಥಾ
ಸಾಗರೋತ್ಥಿತ ಘೋರ ಗರಳಮಂ ಧರಿಸುವ
ಶಿವಾಶಿವ ಶ್ರೀಕಂಠಶಕ್ತಿ? ಆಶೀರ್ವದಿಸು
ಏಳು, ಬಾರಮ್ಮ; ನೇಸರ್ ಬಳಿಯ ಬಾಳ್ ತುಂಬಿ
ಪರಿವುದಾನಂದ ಭಾಗೀರಥಿಯವೋಲ್!

ಇಲ್ಲಿ ವ್ಯಾಖ್ಯಾನ ಅಸಂಗತವಾಗುತ್ತದೆ; ನೀರಸವಾಗುತ್ತದೆ. ಈ ಮಾತುಗಳ ಭಾವಾರ್ಥ  ರಸಗಳು ಅನುಭವವೇದ್ಯವೇ ಹೊರತು ವರ್ಣನಾಸಾಧ್ಯ. ಕವಿ ಊರ್ಮಿಳೆಯಿಂದ ಮಾತಾಡಿಸಿರುವ ಔಚಿತ್ಯ ಗಮನಾರ್ಹ. ಪಾಪ! ಕೈಕೆ ನಕ್ಕು ಹದಿನಾಲ್ಕು ವರ್ಷಗಳ ಮೇಲಾಗಿರಬೇಕು. ಆ ತಪಸ್ವಿನಿಯ ಮಾತಲ್ಲದೆ ಬೇರೆ ಯಾರ ಮಾತು ತಾನೆ ಅವಳ ಮುಖ ವನ್ನು ಅರಳಿಸಬಲ್ಲುದು? ಸೀತಾರಾಮರ ಮುಂದೆ ನಿಲ್ಲುವ ಧೈರ್ಯವಾದರೂ ಆಕೆಗಿದೆಯೆ? ಧೈರ್ಯವೇ ಇಲ್ಲದಿರುವಾಗ ಅವರ ಮುಂದೆ ಹೇಗೆ ನಕ್ಕಾಳು?

ಊರ್ಮಿಳೆಯ ‘ಅಪರಿಪೂರ್ಣ’ ಚಿತ್ರ[8]ದಲ್ಲಿ ಅವಳ ಪರಿಪೂರ್ಣ ವ್ಯಕ್ತಿತ್ವ ಅಭಿವ್ಯಕ್ತಿಗೊಂಡಿದೆ. ವಿವರವಿವರವಾದ ವಾಚ್ಯರೂಪದ ಬಣ್ಣನೆಯಿಂದ ಹದಗೆಡುತ್ತಿದ್ದ ಅವಳ ಚಿತ್ರ ಗೂಢೋಕ್ತಿಗಳಿಂದ ವ್ಯಂಗ್ಯೋಕ್ತಿಗಳಿಂದ ಅನುಕ್ತತೆಯಿಂದ ಉದ್ದಾಮವಾಗಿ ಕಂಗೊಳಿಸುತ್ತಿದೆ. ತಪಸ್ಸು ಯಾವಾಗಲೂ ಗಹನವಾದುದು, ಆಡಂಬರರಹಿತವಾದುದು. ಅದು ಹೊರಗಣ್ಣಿಗೆ ಕಾಣದು. ಜೊತೆಗೆ ‘ಅಖ್ಯಾತಿ’ಯೆ ಅದರ ಪರಮ ಲಕ್ಷಣ. ಆದುದರಿಂದ ಅದು ವರ್ಣನೆಗೆ ನಿಲುಕದು. ಅಂಥ ವ್ಯಕ್ತಿತ್ವದ ಚಿತ್ರಣ ಸಾಹಸ ಕೂರಲಗಿನ ಮೇಲೆ ನಡೆಯುವ ಸಾಹಸ, ಅದನ್ನರಿತ ಕವಿಯೆ ಮಹಾಕವಿ. ಈ ದೃಷ್ಟಿಯಿಂದ ಊರ್ಮಿಳೆಯ ವ್ಯಕ್ತಿತ್ವನ್ನು ಗ್ರಹಿಸಬೇಕು. ಅವಳು ಓದುಗರ ಕಣ್ಮುಂದೆ ಸುಳಿಯುವ ಸಂದರ್ಭಗಳೇ ಕಡಿಮೆ; ಅವಳ ಮಾತು ಇನ್ನೂ ಕಡಿಮೆ. ಜನಜಂಗುಳಿ ಅವಳಿಗೆ ಇಷ್ಟವಿಲ್ಲ. ಎಲ್ಲಿಯೂ ತಾನು ಮಾತ್ರ ಹಿಂದೆ. ಊರಿಗೆ ಊರೇ ಶ್ರೀರಾಮ ಸೀತಾ ಲಕ್ಷ್ಮಣರನ್ನು ಎದುರುಗೊಂಡಾಗ ಊರ್ಮಿಳೆ ಎಲ್ಲಿದ್ದಳು?….. ಗಂಡ ಹಿಂದಿರುಗಿದನೆಂಬ ಸಂಭ್ರಮಾಧಿಕ್ಯದಿಂದ ಅವಳು ಮಯ್ಮರೆತಳೆ? ಆಕೆ ತಾನು ಮುಂದು ತಾನು ಮುಂದು ಎಂದು ಗುಂಪಿನಲ್ಲಿ ಮುನ್ನುಗ್ಗಿದಳೆ? ಇಲ್ಲ. ಅವಳೆಲ್ಲಿದ್ದಳೋ ಯಾರಿಗೂ ಗೊತ್ತಿಲ್ಲ. ಶ್ರೀರಾಮಾಯಣದರ್ಶನದ ಕವಿ ಸದಾ ಜಾಗೃತ, ಎಂಥ ಕಠೋರ ಸಂಯಮಿ ಎಂಬುದಕ್ಕೆ ಈ ಸಂದರ್ಭವೇ ಸಾಕು – ನಿದರ್ಶನ. ಔಚಿತ್ಯ ಸಂಯಮಗಳೇ ಮಹಾಕಲೆಯ ಪ್ರಮುಖ ಲಕ್ಷಣಗಳು. ಊರ್ಮಿಳೆ ಮೊಟ್ಟಮೊದಲು ಯಾವ ಸನ್ನಿವೇಶದಲ್ಲಿ ಓದುಗರಿಗೆ ಪರಿಚಯವಾಗಿದ್ದಳೊ ಕೊನೆಗೂ ಅಂಥದೇ ಸನ್ನಿವೇಶ ದಲ್ಲಿ ಅವಳನ್ನು ಅವರು ಸಂದರ್ಶಿಸುತ್ತಾರೆ. ಅಂದು ಹೂತೋಟದಲ್ಲಿ ಶ್ರೀರಾಮನನ್ನು ಕಂಡು ಉದ್ವಿಗ್ನಳಾದ ಸೀತೆಯನ್ನು ಅಕ್ಕರೆಯಿಂದ ಉಪಚರಿಸುತ್ತಾಳೆ : “ಅಕ್ಕನುಪಚಾರದಲ್ಲಿ ಮರೆತುದೈ ತನ್ನತನ ಮೂರ್ಮಿಳೆಗೆ.” ಕವಿ ಆ ದಿನದ ಸಂಭ್ರಮ ಸಡಗರಗಳ ಮಧ್ಯೆ ಈ ‘ಅಲ್ಪ-ಅನಲ್ಪ’ ವಿಷಯವನ್ನು ಮರೆತಿಲ್ಲ.

ಮಹಿಮೆಯನ್ನು ಮಹಿಮೆಯೊಡನೆ ಹೋಲಿಸುವುದು ಬೆಪ್ಪುತನ. ಹಾಗೆಯೆ ಸೀತೆಯನ್ನು ಊರ್ಮಿಳೆಯೊಡನೆ ಹೋಲಿಸುವುದು ಸರಿಯಲ್ಲ. ಊರ್ಮಿಳೆ ಊರ್ಮಿಳೆಯೆ, ಸೀತೆ ಸೀತೆಯೇ! ಆದರೂ “ಊರ್ಮಿಳೆಯ ತಪಸ್ಸು ಎಲ್ಲರ (ಸೀತೆ, ಸಾವಿತ್ರಿ, ದಮಯಂತಿ, ಚಂದ್ರಮತಿ, ವಾಸವದತ್ತೆ, ಶಕುಂತಳೆ) ತಪಸ್ಸಿಗಿಂತಲೂ ಕಷ್ಟತರ”ವೆಂಬುದನ್ನು ಮರೆಯಲಾಗದು. “ಏಕೆಂದರೆ ಅದೊಂದು ಅನಂತ ನಿರೀಕ್ಷೆ. ಇತರರ ತಪಸ್ಸಿನಲ್ಲಿ ಕ್ರಿಯೆಯ ಮತ್ತು ಸಾಹಸದ ವಿರಾಮವಿದೆ. ಊರ್ಮಿಳೆಯ ತಪಸ್ಸಾದರೊ ನಿಶ್ಚಲತೆಯಿಂದಲೂ ನೀರವತೆಯಿಂದಲೂ ನಿರೀಕ್ಷೆಯ ದೀರ್ಘತೆಯಿಂದಲೂ ಅವಿರಾಮವಾಗಿದೆ. ……(ಅವಳ) ತಪಸ್ಸು ಅತ್ಯುಗ್ರವೂ ಅಸಹನೀಯವೂ ಆಗಿ ತೋರುತ್ತದೆ.”[9] ಆ ಮಹಾಸತಿಯ ಮಹಿಮೆಯನ್ನು ಕವಿಯೇ ಹಾಡಲಿ!-

ಮೂಕಸತಿ ಹೇ ಗೋಚರಾತೀತೆ!…..
……ನೀನುಸಿರೆಳೆದುಮರೆಬಂಡೆಯೋಲಂತೆ
ಪದಿನಾಲ್ಕು ಬರಿಸಮಾಶಂಕೆಯ ನಿರೀಕ್ಷಣೆಯ
ಭೀತಿ ಖಿನ್ನತೆ ಹತಾಶತೆಗಳೈವುರಿ ನಡುವೆ
ತಪಮಿರ್ದುಮೊಡೆಯದಿರ್ದುದ ನೆನೆಯಲದೆ ಮಹಾ
ವ್ರತಮಪ್ಪುದಿತರ ಜೀವರಿಗೆ……..

 [1]    ಪತ್ರಲೇಖೆಯ ಪೂರ್ವಜನ್ಮವೃತ್ತಾಂತವನ್ನು ನೆನೆದರಂತು ಕಾದಂಬರಿಯಲ್ಲಿ ಈಗ ವರ್ಣಿತವಾಗಿರುವ ರೀತಿ ತಪ್ಪಲ್ಲವೆಂದು ಅನ್ನಿಸುತ್ತದೆ.

[2]    ಬಹುಶಃ ಈ ಲೇಖನದಿಂದ ಸ್ಫೂರ್ತಿ ಪಡೆದು ಕೆಲವು ಕವಿಗಳು ‘ಊರ್ಮಿಳೆ’ಯನ್ನು ಕುರಿತ ದೃಶ್ಯಗೀತೆಗಳನ್ನು ಖಂಡಕಾವ್ಯಗಳನ್ನು ಬರೆದಿದ್ದಾರೆ. ಈಚೆಗೆ ಹಿಂದೀ ಸಾಹಿತ್ಯದಲ್ಲಿ ಹೆಸರು ಪಡೆದಿರುವ ಮೈಥಿಲೀ ಶರಣಗುಪ್ತರು ತಮ್ಮ ‘ಸಾಕೇತ’ ಎಂಬ ಕಾವ್ಯದಲ್ಲಿ ಊರ್ಮಿಳಾ ಪಾತ್ರಕ್ಕೆ ಪ್ರಾಧಾನ್ಯವನ್ನು ಕೊಟ್ಟಿದ್ದಾರಂತೆ. ಈ ಪಾತ್ರದ ಕಲಾಪರಿಪೂರ್ಣತೆಯ ಬಗ್ಗೆ ಭಿನ್ನಾಭಿಪ್ರಾಯವಿಲ್ಲದೆ ಇಲ್ಲ. ಅದು ಸಹಜವೆಂದೂ ಕಾಣುತ್ತದೆ.

[3]    Tapas means literally “to burn.” It is a kind of penance to “Heat” the higher nature. It is sometimes in the form of a sunrise to sunset vow, such as repeating Om all day incessantly. These actions will produce a certain power that you can convert into any form you wish, spiritural or material. This idea of tapas penetrates the whole or Hindu religion. The Hindus even say that God made tapas to create the world. It is a mental instrument with  which to do every thing……”  – Swami Vivekananda.

[4]    ತಪೋನಂದನದ ‘ಮಹಾಶ್ವೇತೆಯ ತಪಸ್ಸು’ ಎಂಬ ಪ್ರಬಂಧದಲ್ಲಿ ತಪಸ್ಸಿನ ಸ್ವರೂಪ ಪ್ರಭಾವಗಳ ನಿರೂಪಣೆಯಿದೆ. ಅವನ್ನೂ ಈ ಸಂದರ್ಭದಲ್ಲಿ ನೋಡಬಹುದು (ಪುಟ ೪).

[5]    ಈ ಸಂದರ್ಭದಲ್ಲಿ ಕುವೆಂಪು ಅವರ ಕೃತ್ತಿಕೆಯಲ್ಲಿನ ‘ಊರ್ಮಿಳಾದೇವಿ’ ಎಂಬ ಕವನವನ್ನು ನೋಡಿ.

[6]    ಈ ಸನ್ನಿವೇಶದ ದರ್ಶನಾತ್ಮಕ ಧ್ವನಿಯನ್ನು ರಸಮಾಧುರ್ಯವನ್ನು ಮೂಲವನ್ನು ಓದಿಯೆ ಸವಿಯಬೇಕು.

[7]    ಇಲ್ಲಿ ‘ತವರು’ ಎಂಬ ಪದದ ಔಚಿತ್ಯವನ್ನು ಗಮನಿಸಿ.

[8]    “ಮಹತ್ತಾದ ಕಲೆಗೆ ಅತಿಸ್ಪಷ್ಟತೆ ಒಂದು ನ್ಯೂನತೆ; ಅತಿ ಅಸ್ಪಷ್ಟತೆ ಒಂದು ದೋಷ.” – ‘ತಪೋನಂದನ’.

[9]    ತಪೋನಂದನ, ಪು. ೬.