……ಭಗವದಾಗಮನಮೇಂ
ಭಕ್ತನ ನಿರೀಕ್ಷಿಸಿದ ರೂಪದಿಂ ಬಂದಪುದೆ?
ಸುಖದವೋಲಾಶಿಸಲ್ ದುಃಖದೊಲ್ ಮೈದೋರಿ,
ಭಕ್ತನನಿತಂ ಸುಲಿದು ನೈವೇದ್ಯಮಂ ಕೊಳದೆ
ಪೇಳಹಂಕಾರಮಂ ದಿವ್ಯಶೂನ್ಯತೆಗದ್ದುವೊರ್
ಸಂಪೂರ್ಣತಾ ಸಿದ್ದಿಯೋಲ್…….

“ವಿಶ್ವದ ಪ್ರತಿಯೊಂದು ಜೀವಿಯೂ ಇಂದ್ರಿಯಾತೀತವಾದ ಅನುಭವವನ್ನು ಪಡೆಯುವ ಶಕ್ತಿಯನ್ನು ಹೊಂದಿದೆ. ಅಣುಗಾತ್ರದ ಕ್ರಿಮಿಯೂ ಒಂದಲ್ಲ ಒಂದು ದಿನ ಸೇಂದ್ರಿಯಾನುಭವವನ್ನು ಮೀರಿ ಭಗವಂತನನ್ನು ದರ್ಶಿಸುತ್ತದೆ. ಜೀವನ ಖಂಡಿತ ವ್ಯರ್ಥವಲ್ಲ; ಈ ವಿಶ್ವದಲ್ಲಿ ವ್ಯರ್ಥವೆಂಬ ಮಾತೇ ಇಲ್ಲ, ನೂರಾರು ಸಾರಿ ಮನುಷ್ಯ ಆತ್ಮವಿಘಾತಿಯನ್ನು ತಂದುಕೊಳ್ಳಬಹುದು, ಸಾವಿರಾರು ಸಾರಿ ಎಡವಬಹುದು. ಆದರೆ ಕೊಟ್ಟಕೊನೆಯಲ್ಲಿ ತಾನೇ ಪರವಸ್ತುವೆಂದು ಅರಿಯುವನು…. ನಾವೆಲ್ಲರೂ ಪರಾತ್ಪರವಸ್ತು ವೆಂಬ ಏಕಮಾತ್ರ ಕೇಂದ್ರದಿಂದ ಹೊರಸಿಡಿದು ಬಂದಿದ್ದೇವೆ. ಹಾಗೆ ಬಂದ ಜೀವಾತ್ಮ ಅಣೋರಣೀಯವಾಗಿರಲಿ ಮಹತೋಮಹೀಯವಾಗಿರಲಿ ಕೊನೆಗೆ ಪರಮಾತ್ಮನಲ್ಲಿ ವಿಲೀನ ವಾಗಲೇಬೇಕು”…..ಶ್ರೀ ಸ್ವಾಮಿ ವಿವೇಕಾನಂದರ ಈ ಋಷಿವಾಣಿಯಲ್ಲಿ ಜೀವಯಾತ್ರೆಯ ಮೂಲ ಮತ್ತು ಚರಮೋದ್ದೇಶಗಳು ಸುಸಂವೇದ್ಯವಾಗುತ್ತವೆ. ಈ ಆಧ್ಯಾತ್ಮಿಕ ವಾದವನ್ನು ಬಹುಮಟ್ಟಿಗೆ ಆಧುನಿಕ ಪರಿಣಾಮವಾದವೂ ಪುಷ್ಟೀಕರಿಸುತ್ತದೆ.

ಪ್ರಪಂಚದಲ್ಲಿ ಜನ್ಮಧಾರಣೆ ಮಾಡಿದ ಪ್ರತಿಯೊಂದು ಜೀವಿಯ ಜೀವನವೂ ಸದಾ ಊರ್ಧ್ವಗಾಮಿಯಾಗಿರುತ್ತದೆ, ಸಾಗರದಿಂದ ಹೊರಡಿಸಿದ ಮೀನು ಮತ್ತೆ ಸಾಗರವನ್ನು ಸೇರಲು ತರಹರಿಸುವಂತೆ. ತಾಯಿಯಿಂದ ಬೇರ್ಪಟ್ಟು ದೆಸೆಗೆಟ್ಟ ಕರು ತಾಯಿಗಾಗಿ ಹಲವರಿದು ಹಂಬಲಿಸಿ ಹಳ್ಳಕೊಳ್ಳಗಳಲ್ಲಿ ಬಿದ್ದೆದ್ದು, ಬೇಲಿ ಇಡುಕುರುಗಳಲ್ಲಿ ನುಗ್ಗಿ ಮೈಪರಚಿಕೊಳ್ಳು ವಂತೆ ಆ ಜೀವಿ ಲೌಕಿಕ ವ್ಯಾಪಾರಿಗಳ ಜಂಜಡದಲ್ಲಿ ಕ್ರಿಯೆ ಪ್ರತಿಕ್ರೆಯೆಗಳ  ಘರ್ಷಣೆಯಲ್ಲಿ ಸಿಕ್ಕಿ ಪೇಚಾಡಬಹುದು. ಆದರೆ ಆ ಅನಂತಾನಂತ ಬಾಹ್ಯವ್ಯಾಪಾರಗಳ ಮತ್ತು ಘರ್ಷಣೆಗಳ ಹಿಂದೆ ಭಗವದ್ದರ್ಶನದ ಕಾತರತೆ ಅಥವಾ ಆಂತರಿಕಶಕ್ತಿಗಳ ಉದ್ಬೋಧನೇಚ್ಛೆ ಇದ್ದೇ ಇರುತ್ತದೆ. ಅತ್ಯಂತ ಸಾಮಾನ್ಯ ಭೂಮಿಕೆಯಲ್ಲಿ ನೋಡಿದರೂ ಪ್ರತಿಯೊಂದು ಜೀವಿಯೂ ತನಗಿಂತ ಉತ್ತಮವಾದ ಜೀವಿಯನ್ನನುಕರಿಸಲು ಮತ್ತು ಅನುಸರಿಸಲು ಅಹರ್ನಿಶಿಯೂ ಹವಣಿಸುತ್ತಿರುತ್ತದೆ. ನಿರ್ಧನನಾದ ಕುಚೇಲನಿಗೆ ಧನದನಂತಾಗುವ ಬಯಕೆ, ಉತ್ತರನಿಗೆ ಅರ್ಜುನನಂತಾಗುವ ಹಂಬಲ, ಕುಳ್ಳನಾದ ರಂಹನಿಗೆ ವಹ್ನಿಯಂತೆ ಬೆಳೆಯುವ ಚಾಪಲ್ಯ, ಕರಿಯನಿಗೆ ಬಿಳಿಯನಾಗುವ ಆಸೆ, ಅಧಮನಿಗೆ ಉತ್ತಮನಾಗುವ ಹಾರೈಕೆ, – ಹೀಗೆ ಒಬ್ಬೊಬ್ಬರಿಗೂ ಒಂದೊಂದು ತರಹ ಹಾರೈಕೆ ಇದ್ದೇ ಇರುತ್ತದೆ. ಶ್ರದ್ಧಾನಿಷ್ಠೆ ವಿಶ್ವಾಸ ಸಾಧನಾತತ್ಪರತೆಗಳಿಂದ ಕೂಡಿದ ಹಾರೈಕೆ ಹರಕೆಯಾಗಿ, ಹರಕೆ ಸಿದ್ದಿಯ ರೂಪದಲ್ಲಿ ಫಲಿಸಬಹುದು. ವೈಜ್ಞಾನಿಕ ಐತಿಹಾಸಿಕ ಆರ್ಥಿಕ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಮಾನವನು ಸಾಧಿಸಿರುವ ವಿಸ್ಮಯಕಾರಿಯಾದ ಸಿದ್ದಿಗಳೇ ಇದಕ್ಕೆ ನಿದರ್ಶನ.

ಮಾನವನ ಅಭೀಷ್ಟ ಹಾರೈಕೆಗಳು ಕೇವಲ ಲೌಕಿಕ ಸಿದ್ದಿಗಳಲ್ಲಿಯೇ ತಟಸ್ಥವಾಗುವುದಿಲ್ಲ. ಪ್ರತಿಯೊಬ್ಬನಿಗೂ ತಾನು ಅಮರತ್ವವನ್ನು ಪಡೆಯಬೇಕೆಂಬ ಇಚ್ಛೆ ಇದ್ದೇ ಇರುತ್ತದೆ. ಆದರೆ ಈ ಇಚ್ಛೆ ಹಲವರಲ್ಲಿ ಸುಪ್ತಸ್ಥಿತಿಯಲ್ಲಿದ್ದು ಕೆಲವರಲ್ಲಿ ಮಾತ್ರ ಸದಾ ಜಾಗ್ರತವಾಗಿದ್ದು ಪ್ರಕಟಗೊಳ್ಳುತ್ತದೆ. ಸರ್ವಮಾನವರ ಅಭೀಷ್ಟ ಅಥವಾ ಇಚ್ಛೆ ಕೆಲವರಲ್ಲಿ ಮಾತ್ರ ಸಾಧನಾ ರೂಪವನ್ನು ತಾಳಿ ಸಿದ್ದಿಯಾಗಿ ಪರಿಣಮಿಸುತ್ತದೆಂದೂ ಹೇಳಬಹುದು. ಸಿದ್ದಿ ಒಂದೆಯಾದರೂ ಒಬ್ಬೊಬ್ಬರ ಸಾಧನಾವಿಧಾನ ಅವರವರ ಅಭಿರುಚಿ ಸಂಸ್ಕಾರಗಳಿಗೆ ತಕ್ಕಂತೆ ಕಾಲದೇಶಗಳಿಗನು ಗುಣವಾಗಿ ವ್ಯತ್ಯಸ್ತವಾಗುತ್ತವೆ. ದ್ವೈತವೊ ಅದ್ವೈತವೊ ವಿಶಿಷ್ಟಾದ್ವೈತವೊ, ಕಾಳಾಮುಖವೊ ಪಾಶುಪತವೊ ಸಾಂಖ್ಯವೊ ವೇದಾಂತವೊ, ಭಕ್ತಿಯೊ ಕರ್ಮವೊ ಜ್ಞಾನವೊ- ಪಥ ಪಂಥಗಳು ಯಾವುವಾದರೂ ಗುರಿ ಮಾತ್ರ ಒಂದೆ. ಭಗವದ್ದರ್ಶನವೇ ಆ ಗುರಿ. ಭಗವದ್ದರ್ಶನವಾದರೂ ಇಂಥದೇ ರೂಪದಲ್ಲಿ ಲಭಿಸುತ್ತದೆಂದು ನಿರೀಕ್ಷಿಸಲಾಗದು. ಆ ಭಗವದ್ವಿಭೂತಿ ಮತ್ಸ್ಯ ಕೂರ್ಮ ವರಾಹ ನರಸಿಂಹ ರೂಪದಲ್ಲಿಯೋ, ವಾಮನ ಗಾತ್ರದಲ್ಲಿಯೋ, ಗೋಚರಿಸ ಬಹುದು. ಶಂಖ ಚಕ್ರ ಗದಾಧಾರಿಯಾಗಿಯೆ ಶ್ರೀಯುಕ್ತನಾಗಿಯೇ ಕಂದರ್ಪಪಿತನಾಗಿಯೆ ಗೋಚರಿಸದೆ ನರಪೇತಲ ನಾರಾಯಣನಾಗಿ, ಕೋ ಎನ್ನುವ ಬದಲು ‘ಕೊಡು’ ಎಂದು ಯಾಚಿಸುವ ಬೀದಿಯ ಭಿಕಾರಿಯಾಗಿ, ಸಾಕ್ರಟೀಸನಂಥ ಕುರೂಪಿಯಾಗಿ, ಅಷ್ಟಾವಕ್ರಾಂಗನಾಗಿ ವ್ರಣದೇಹಿಯಾಗಿ ಗೋಚರಿಸಬಹುದು. ಒಮ್ಮೆ ಶಿವನಾಗಿ, ಒಮ್ಮೆ ಶಂಕರನಾಗಿ, ಒಮ್ಮೆ ರುದ್ರನಾಗಿ, ಒಮ್ಮೆ ಕಪರ್ದಿಯಾಗಿ, ಒಮ್ಮೆ ಭೈರವನಾಗಿ ಮತ್ತೊಮ್ಮೆ ಪ್ರೇತವಾಗಿ ಗೋಚರಿಸ ಬಹುದು. ಭಕ್ತನ ನಿರೀಕ್ಷೆಯ ರೂಪವೊಂದಾದರೆ ಪ್ರತ್ಯಕ್ಷ ಮೂರ್ತಿಯ ರೂಪವೇ ಬೇರೊಂದಾಗುತ್ತದೆ. ದುರ್ವಾರ‌್ತಾ ಪ್ರತಿಮೆಯಾದ ಭೂತವೊಂದು ಪತಿಕ್ಷೇಮ ಕಾತರಳಾಗಿ ಈಶ್ವರಾರಾಧನೆಯಲ್ಲಿ ಮಗ್ನಳಾಗಿದ್ದ ದೇವಿ ಮಂಡೋದರಿಗೆ ಕಾಣಿಸಿಕೊಂಡು ನುಡಿಯುವ ಆಶೀರ್ವಾಣಿಯಲ್ಲಿ ಈ ನಿತ್ಯಸತ್ಯ ವ್ಯಕ್ತವಾಗುತ್ತದೆ :

…….ಬೆಚ್ಚದಿರಂಬೆ, ನನ್ನ ಈ
ವಿಕೃತಾಂಗಮಂ ನೋಡಿ. ಹಿತಮೆನಿತೊ ಸೂಳ್ ಇಂತೆ
ನನ್ನವೊಲ್ ಬರ್ಪುದಪ್ರಿಯತೆಯಾಕೃತಿವೆತ್ತು,
ಈಶಕೃಪೆಗಿಹುದು ನಾನಾಮುಖಂ ಸುಖದಂತೆ
ದುಃಖಮುಂ ಋತಚಿತ್ ಕೃಪಾನೃಕೇಸರಿನಖಂ

ಪರಬ್ರಹ್ಮ ಸಾಕ್ಷಾತ್ಕಾರ ವಿಧಾನವನ್ನು ಹೇಳುವಾಗ ಭಗವದ್ಗೀತೆಯಲ್ಲಿ ನಾಲ್ಕು ಯೋಗಮಾರ್ಗಗಳು ಉಕ್ತವಾಗಿವೆ. ಅವುಗಳಲ್ಲಿ ಭಕ್ತಿಯೋಗವೆ ಸರ್ವಶ್ರೇಷ್ಠವಾದುದೆಂದು ನಾರದ ಶಾಂಡಿಲ್ಯ ಮೊದಲಾದವರ ಮತ. ‘ಸಾ ತು ಕರ್ಮಜ್ಞಾನಯೋಗೇಭ್ಯೋಪ್ಯಧಿಕತರಾ’- ಏಕೆಂದರೆ ಅದು ಸ್ವಯಂ ಫಲರೂಪವಾಗಿದೆ. ಸ್ವಯಂಪ್ರಮಾಣವುಳ್ಳುದು. ಬೇರೆ ಪ್ರಮಾಣಗಳ ಅವಶ್ಯಕತೆ ಇಲ್ಲ. ‘ಪ್ರಮಾಣಾಂತರಸ್ಯಾನಪೇಕ್ಷಿತತ್ವಾತ್ ಸ್ವಯಂ ಪ್ರಮಾಣತ್ವಾತ್’ – ಪರಮ ಪ್ರೇಮವೆ ಅಥವಾ ಕೇವಲಾನುರಕ್ತಿಯೆ ಭಕ್ತಿ. ವಾದದಿಂದ ಅನುಮಾನದಿಂದ ಅದು ಸಿದ್ದಿಸದು. ಭಕ್ತ ತನ್ನ ಸಾಧನೆಗೆ ಮೊದಮೊದಲು ಇಷ್ಟದೇವತಾಪ್ರತಿಮೆಯನ್ನು ಪೂಜಿಸುತ್ತಾನೆ.

[1] ಆ ಇಷ್ಟದೇವತೆ ಇಂಥದೇ ಇರಬೇಕೆಂಬ ನಿಯಮವೂ ಇಲ್ಲ. ಅದರಲ್ಲಿ ಪರಬ್ರಹ್ಮ ಸ್ವರೂಪವನ್ನೆ ಕಾಣುತ್ತಾನೆ; ಅದರಲ್ಲಿ ಅನುರಕ್ತನಾಗುತ್ತಾನೆ, ತಲ್ಲೀನನಾಗುತ್ತಾನೆ. ಅವನ ಅನುರಕ್ತಿ ಸರ್ವದಾ ದ್ವೇಷ ದೂರವಾದುದು. ಅನ್ಯದೇವತಾ ಮೂರ್ತಿಗಳನ್ನು ದ್ವೇಷಿಸುವ ಅಂಧಪ್ರೇಮ ಪ್ರೇಮವಲ್ಲ, ಪ್ರಣಿಧಾನವಲ್ಲ. ಇಷ್ಟದೇವತೆಯಲ್ಲಿ ಪರಬಹ್ಮನನ್ನು ಕಾಣುವಂತೆ ವಿಶ್ವದ ಸಕಲ ಸಚರಾಚರ ವಸ್ತುಗಳಲ್ಲಿ ಪರಬ್ರಹ್ಮನನ್ನೇ ಕಾಣುತ್ತಾನೆ. ಅವನು ಕೇಳುವುದೆಲ್ಲ ಭಗವಂತನ ವಿಷಯ, ಮಾತಾಡುವುದೆಲ್ಲ ಭಗವಂತನ ವಿಷಯ, ಅವನ ಚಿಂತನೆಯೆಲ್ಲ ಭಗವಂತನ ವಿಷಯ, ಅವನ ಕ್ರಿಯೆಯೆಲ್ಲ ಭಗವಂತನ ಸೇವೆ.

ತತ್ಪ್ರಾಪ್ಯ ತದೇವಾವಲೋಕಯತಿ ತದೇವ ಶೃಣೋತಿ
ತದೇವ ಭಾಷಯತಿ ತದೇವ ಚಿಂತಯತಿ

ಅವನು ಎಲ್ಲರಂತೆ ಉಡುತ್ತಾನೆ, ಉಣ್ಣುತ್ತಾನೆ, ಗೆಯ್ಯುತ್ತಾನೆ; ಆದರೆ ಅವನ ಉಡಿಗೆ, ಊಟ, ಗೆಯ್ಮೆ – ಅವನ ಉಸಿರಾಟ ಮೊದಲುಗೊಂಡು – ಸಕಲ ವ್ಯವಹಾರಗಳು ಆ ದೇವತೆಗೆ ಸಮರ್ಪಿತ. ನಿಷ್ಕಾಮದಿಂದ ಅನನ್ಯಭಾವದಿಂದ ನಿರಹಂಕಾರದಿಂದ ನಿರಭಿಮಾನ ದಿಂದ ಅರ್ಪಿಸುತ್ತಾನೆ.[2] ಅವನು ಅರ್ಪಿಸುವ ನೈವೇದ್ಯ ಪತ್ರವಾಗಬಹುದು, ಫಲವಾಗ ಬಹುದು, ಪುಷ್ಪವಾಗಬಹುದು, ತೀರ್ಥವಾಗಬಹುದು. ಶಾಸ್ತ್ರ ಸಂಪ್ರದಾಯಗಳ ವಜ್ರಶೃಂಖಲೆ ಯಿರದ ಅವನು ವಿಮುಕ್ತ. ಆದರೆ ಪ್ರೇಮವೊಂದರಿಂದ ಅವಿಮುಕ್ತ. ಅದೊಂದರಿಂದ ಸದಾ ಉನ್ಮತ್ತ. ಆ ಉನ್ಮತ್ತತೆಯೆ ಆತ್ಮಾನಂದ. ‘ಯಜ್ಞಾತ್ವಾಮತ್ತೋ ಭವತಿ ಸ್ತಬ್ಧೋ ಭವತಿ ಆತ್ಮಾರಾಮೋ ಭವತಿ’. ಇಂಥ ಆತ್ಮರತನಾದ ಭಕ್ತನ ಮತ್ತು ಭಗವಂತನ ನಡುವಣ ಅಂತರ ತಾನಾಗಿಯೆ ಮಾಯವಾಗಿ ಅಭೇದತ್ವ ಉಂಟಾಗುತ್ತದೆ. ‘ತಸ್ಮಿಂಸ್ತಜ್ಜನೇ ಭೇದಾಭಾವಾತ್’.

ಪ್ರೇಮರೂಪದ ಭಕ್ತಿ, ವಾತ್ಸಲ್ಯ, ಸ್ಮರಣ, ದಾಸ್ಯ, ಸಖ್ಯ, ಕಾಂತ, ವಿರಹ ಮೊದಲಾದ ಹನ್ನೊಂದು ವಿಧಗಳಲ್ಲಿ ವ್ಯಕ್ತವಾಗುತ್ತದೆಂದು ಹೇಳುತ್ತಾರೆ.

ಶ್ರೀರಾಮಾಯಣದರ್ಶನದಲ್ಲಿ ಪೂರ್ವೋಕ್ತ ಯೋಗಚತುಷ್ಟಯಗಳೂ ಪ್ರತಿಮಾ ವಿಧಾನದಿಂದ ಪ್ರತಿಪಾದಿತವಾಗಿವೆ. ಅವುಗಳಲ್ಲಿ ಭಕ್ತಿಮಾರ್ಗದ ಪ್ರತಿಪಾದನೆಯನ್ನು ಶಬರಿಯ ಜೀವನದಲ್ಲಿ ಕಾಣುತ್ತೇವೆ.

ಶಬರಿ ಒಬ್ಬ ಬೇಡಿತಿ; ಮತಂಗಮುನಿಯ ಶಿಷ್ಯೆ. ಎಷ್ಟೋ ವರ್ಷಗಳಿಂದ ಶಿಷ್ಯವೃತ್ತಿಯನ್ನು ಕೈಕೊಂಡು, ವೈರಾಗ್ಯಪರಳಾಗಿ, ಸಾಧನಾನಿರತಳಾಗಿದ್ದಾಳೆ. ಭಗವತ್ ಸಾಕ್ಷಾತ್ಕಾರವನ್ನು ಪಡೆಯಲು ಹೆಣ್ಣಿನ ಬಾಳಿಗೆ ಇತರ ಮಾರ್ಗಗಳಿಗಿಂತ ಭಕ್ತಿ ಮಾರ್ಗ ಸುಲಭ. ದೇವರ್ಷಿ ಆದಿಕವಿಯಾಗಲಿದ್ದ ವ್ಯಾಧನಿಗೆ ರಾಮಮಂತ್ರವನ್ನು ಉಪದೇಶಿಸಿದಂತೆ ಮತಂಗ ಋಷಿ ಆ ಮಾತಂಗಿಗೆ ರಾಮಮಹಿಮೆಯನ್ನು ಬೋಧಿಸಿದನು, ರಾಮಮಂತ್ರವನ್ನು ಉಪದೇಶಿಸಿದನು. ಆ ರಸಮಂತ್ರವೆ ಅವಳ ಬಾಳಿನ ಮಂತ್ರವಾಯಿತು; ಬಾಳಿಕೆ ಊರುಗೋಲಾಯಿತು; ಕಣ್ಣಾಯಿತು, ಮತಿಯಾಯಿತು, ಉಸಿರಾಯಿತು, ಗತಿಯಾಯಿತು; ಕೇಳಿದುದೆಲ್ಲ ರಾಮಮಂತ್ರ ವಾಯಿತು. ನುಡಿದುದೆಲ್ಲ ರಾಮಕಥೆಯಾಯಿತು; ಗುರು ವರ್ಣಿಸಿದ, ತಾನು ಊಹಿಸಿಕೊಂಡ ರಾಮ ಮಾತ್ರ ಬರಲಿಲ್ಲ. ಗುರುವನ್ನು ಕೇಳಿದಳು ದರ್ಶನೋತ್ಕಂಠೆಯಾಗಿ, ದರ್ಶನೋನ್ಮತ್ತ ಳಾಗಿ ‘ರಾಮ ಎಂದು ಬರುವ’ನೆಂದು. ಆ ಋಷಿ ‘ತಾಳ್ಮೆ ತಾಯಿ, ತಾಳ್ಮೆ’ ಎಂದ. ಎಷ್ಟು ದಿನ ತಾಳುವುದು? ತಾಳಿ ಆಯಿತು, ನಿರೀಕ್ಷಿಸಿ ಆಯಿತು, ಬೇಡಿ ಆಯಿತು ಹಾಗೂ ಬರಲಿಲ್ಲ. ಭಕ್ತೆಯ ಮೊರೆ ಅವನಿಗೆ ಕೇಳಿಸಲಿಲ್ಲವೆ? ಕೇಳಿಸಲೊಲ್ಲದೇಕೆ? ಕೇಳಿಸದಿರುತ್ತದೆಯೆ? ಎಷ್ಟು ಜನ ‘ಸಾಮೀಲು’ ಅವಳಿಗೆ ರಾಮನನ್ನು ಕರೆತರುವುದಕ್ಕೆ? ಮಂಥರೆ, ಕೈಕೆ, ರಾವಣ; ಭರದ್ವಾಜ, ಅತ್ರಿ, ಅನಸೂಯೆ, ಅಗಸ್ತ್ಯ; ವಿರಾಧ, ಕಬಂಧ – ಎಲ್ಲರೂ ಅವಳಿಗೆ ಬೆಂಬಲ; ಅಥವಾ ಅವರೆಲ್ಲ ಶಬರಿಗೆ ಕೃತಜ್ಞರೊ!

ಬಾ ಎಂದಾಗ ಬಂದು, ಹೋಗೆಂದಾಗ ಹೋಗುವ ಸುಲಭನಲ್ಲ ಭಗವಂತ; ತಿಂಡಿ ತೋರಿಸಿದೊಡನೆ ಬಿದ್ದೆದ್ದು ಓಡಿಬರುವ ಕಂದನೂ ಅಲ್ಲ ಅವನು. ಭಕ್ತನು ನಿರೀಕ್ಷೆಯಲ್ಲಿ ಬೆಂದು ಹಸನಾಗಬೇಕು, ಕಾದು ಕಾದು ಹಣ್ಣಾಗಬೇಕು. ತಪಸ್ಸು ಎಂದಿಗೂ ನಿಷ್ಫಲವಲ್ಲ. ಇಂದು ಬಂದಾನೇನೊ, ನಾಳೆ ಬಂದಾನೇನೊ ಎಂದು ನಿತ್ಯವೂ ಹೊಸ ಹೊಸ ಹಣ್ಣು ಜೇನು ಮಣಿಹೆಂಬೆ ಗೆಣಸುಗಳನ್ನು ಅಣಿಗೊಳಿಸುವಳು. ಅದೆಲ್ಲ ಅವನಿಗಾಗಿಯೇ ಮುಡಿಪು. ಮುಡಿಪು ಸ್ವೀಕರಿಸಲು ರಾಮನಂತು ಬರಲಿಲ್ಲ. ಅದು ಉಳಿಯುವಂತೆಯೂ ಇಲ್ಲ. ಹಾದಿ ಬಳಿಯ ಗುಡಿಸಲು. ನೆಂಟರೊ ಇಷ್ಟರೊ ದಾರಿಹೋಕರೊ ಬಂದು ತಂಗುತ್ತಾರೆ. ಎಷ್ಟಾದರೂ ಅವಳು ಗೃಹಪತ್ನಿಯಲ್ಲವೆ? ಅತಿಥಿ ಸತ್ಕಾರ ಗೃಹಸ್ಥರ ಪ್ರಥಮ ಕರ್ತವ್ಯ; ಅತಿಥಿಧಿಕ್ಕಾರವೆ ಆತ್ಮತಿರಸ್ಕಾರ. ಇಷ್ಟದೇವತೆಯೆ ಅತಿಥಿ ವೇಷದಲ್ಲಿ ಬರಬಹುದು. ಆದುದರಿಂದ ಆ ಮೀಸಲಿಗೆ ಅವರೇ ಅಧಿಕಾರಿಗಳು.

ಅಂತು ಹೀಗೆ ದಿನಗಳುರುಳಿದುವು, ತಿಂಗಳುಗಳುರುಳಿದುವು, ಸಂವತ್ಸರಗಳುರುಳಿದುವು. ಕಾದು ಕಾದು ಚರ್ಮ ಸುಕ್ಕಾಯಿತು; ರಾಮಮಂತ್ರದ ಮಹಿಮೆಯಿಂದ ತಲೆಕೂದಲು ಪುಂಡಿನಾರಿನಂತೆ ಬಿಳುಪಾಯಿತು, ವೈರಾಗ್ಯದ ಮಹಿಮೆಯಿಂದ ಹಲ್ಲುದುರಿ ಬಾಯಿ ಬೋಡಾಯಿತು; ಚಿಂತೆಯ ಭಾರದಿಂದ ಬೆನ್ನು ಬಾಗಿತು; ಆತ್ಮಾನಂದದಿಂದ ಮೈಯಲ್ಲಿ ಭಾವವಿದ್ಯುತ್ ಪ್ರವಹಿಸಿದಂತಾಗಿ ನಡುಕು ಹುಟ್ಟಿತು; ಎವೆಯಿಕ್ಕದೆ ನೋಡಿ ನೋಡಿ ಕಣ್ಣು ಮಬ್ಬಾದುವು. ಆದರೂ ರಾಮ ಬರಲಿಲ್ಲ. ಆಸೆ ನಿರಾಶೆಗಳ ನಡುವೆ ಅವಳ ಮನಸ್ಸು ತೂಗುಯ್ಯಲೆಯಾಯಿತು.

ಅದೊಂದು ನಟ್ಟಿರುಳು. ಹಾಲ್ದಿಂಗಳು ತಿರೆಯ ಮೇಲೆ ಹರಡಿದೆ. ಮುದುಕಿ ಏನೊ ಕನಸು ಕಂಡಂತಾಗಿ ಮುಗುಳು ನಗುತ್ತ ಹಾಸುಗೆಯ ಮೇಲೆ ಎದ್ದು ಕುಳಿತಳು. ಸ್ವಪ್ನದರ್ಶನದ ವಿಯದ್ವರ್ಣಿ ರಾಮಚಂದ್ರನನ್ನು ಚಿತ್ರಿಸಿಕೊಂಡಳು; ಹಿರಿ ಹಿರಿ ಹಿಗ್ಗಿದಳು. ಗುಡಿಯ ಬಾಗಿಲನ್ನು ತೆರೆದು ಹೊರಗೆ ನೋಡಿದಳು. ಆ ರಾತ್ರಿಗೂ ಮುದುಕಿಯನ್ನು ಕಂಡರೆ ಕನಿಕರ; ಕನಿಕರದಿಂದ ಕರಗಿ ತಿಂಗಳು ಬೆಳಕಾಯಿತಂತೆ.[3] ಇದು ಕೇವಲ ಅಲಂಕಾರಕ್ಕಾಗಿ ಪಾಂಡಿತ್ಯ ಪ್ರದರ್ಶನಕ್ಕಾಗಿ ಕವಿ ಹೇಳಿದ ಮಾತಲ್ಲ. ನಿತ್ಯಸತ್ಯವನ್ನು ಪ್ರಕಟಗೊಳಿಸುವ ದರ್ಶನಧ್ವನಿ  ಆ ಮಾತುಗಳಲ್ಲಿ ಅಂತರ್ನಿಹಿತವಾಗಿದೆ. ಶಬರಿ ಸುತ್ತಲೂ ತೃಷಿತ ದೃಷ್ಟಿಯನ್ನಟ್ಟಿದಳು: ಮೇಲೆ ಚಂದ್ರಿಕಾಸಂಪದ್ಯುಕ್ತವಾದ ನೀಲಾಕಾಶ, ಕೆಳಗೆ ದಿಟ್ಟಿ ಸೋಲುವ ತನಕ ಹಬ್ಬಿದ್ದ ಹಸುರಿನ ಕಡಲು : ಒಂದು ರಾಮಶಕ್ತಿ, ಮತ್ತೊಂದು ಸೀತಾಶಕ್ತಿ. ಅವಳ ಮನಸ್ಸು ಅವುಗಳಲ್ಲಿ ಲಯವಾಯಿತು. ತನ್ನೊಳಗೆ ತಾನು ‘ರಾಮಚಂದ್ರಯ್ಯ, ನೀನೆಂದು ಬರುವೆ? ಗುರುವಿನ ಮಾತು ಸುಳ್ಳೆ? ಹತ್ತು ವರ್ಷಗಳಿಂದ ಕಾಯುತ್ತಿದ್ದೇನೆ. ದೇಹ ಹಣ್ಣಾಯಿತು. ಎಷ್ಟು ದಿನ ಇದು ಉಳಿದೀತು. ಇದು ಉಳಿದರೂ ದಿಟ್ಟಿ ಉಳಿಯುತ್ತದೆಯೆ? ಕೈಯಿಂದ ಮೈಸವರಿ ಸಂತೋಷಪಡಬಹುದಾದರೂ ಕಣ್ಣನ್ನು ತಣಿಸುವುದು ಹೇಗೆ? ಬಾ, ಬೇಗ ಬಾ’ ಎಂದು ಪ್ರಲಾಪಿಸಿದಳು, ನಟ್ಟಿರುಳಿನ ಶಾಂತಿಗೆ ಭಂಗ ಬರದಂತೆ.

ನಿರಾಶೆಯ ಮತ್ತೊಂದಿರುಳು ಕಳೆಯಿತು. ಶಬರಿಯ ಆಸೆಯೆಂಬಂತೆ, ಅವಳ ತಪಃಫಲವೆಂಬ ರಘುಕುಲದ ದೇವತೆ ಮೂಡಿತು. ಪರ್ಣಕುಟಿಯ ಸುತ್ತ ಬಿಲ್ಲೆತ್ತರ ಬೆಳೆದಿದ್ದ ಹುಲ್ಲೂ ಮಾತಂಗಿಯಂತೆ ನಿಟ್ಟುಸಿರುಬಿಡುತ್ತಿತ್ತು. ಇಬ್ಬರೂ ಸಮಾನ ಧರ್ಮಿಗಳು. ತನ್ನ ಪರ್ಣಕುಟಿಯ ಸುತ್ತಮುತ್ತಣ ಸಚರಾಚರ ವಸ್ತುಗಳೆಲ್ಲ ತನ್ನಂತೆಯೆ ಸಾಧನಾ ನಿರತವಾಗಿವೆ ಯೆಂದು ಅವಳ ಭಾವನೆ. ಅವೂ ನಿರೀಕ್ಷೆಯ ತಪಸ್ಸನ್ನಾಚರಿಸುತ್ತಿವೆ ಎಂದು ಅವಳ ಅಚಲ ನಂಬಿಕೆ. ಪರಾಭಕ್ತಿಯ ಸ್ಥಿತಿಯಿದು. ಮುದುಕಿಯ ಮನಸ್ಸಿನಲ್ಲಿ ಏನೊ ಕಳವಳ. ಒಂದೆಡೆ ನಿಲ್ಲಳು, ಕೂರಳು, ಹಾದಿಯನ್ನೆ ನಿಟ್ಟಿಸಿ ನೋಡುತ್ತಾಳೆ. ಯಾರೂ ಕಾಣಿಸರು. ತನ್ನೊಳಗೆ ಗೊಣಗಿಕೊಳ್ಳುತ್ತಾಳೆ. ಒಳಗೆ ಹೋಗಿ ತೆಂಗಿನ ಪೊರಕೆಯನ್ನು ತಂದು ಗುಡಿಸಲ ಮುಂದೆ ಗುಡಿಸಿ, ಸೊಂಟದ ಮೇಲೆ ಕೈಯಿಟ್ಟು ನಿಲ್ಲುತ್ತಾಳೆ. ಈ ಕಳವಳದ ಗೊಂದಲದಲ್ಲಿ ಮಧ್ಯಾಹ್ನವೂ ಸಾರಿತು. ದೂರದಲ್ಲಿ ಯಾರೊ ಬರುತ್ತಿರುವಂತೆ ಕಂಡಿತು.  ನೋಡುತ್ತ ನಿಂತಳು. ಆ ನಿಂತ ಮುದುಕಿಯ ಚಿತ್ರ ಅನ್ಯಾದೃಶವಾದುದು! ಕಾವ್ಯಮಯವಾದುದು!

……ನಿಂತಳ್ ಶಬರಿ ಡೊಂಕಾಗಿ;
ಕಟಿಗೊಂದು ಕೈಯಾಗೆ, ಪಣೆಗೊಂದು ಕೈಯೆತ್ತಿ,
ಸುರ್ಕ್ಕು ತಾಂ ಪುರ್ಬಿನ ತೋಲ್ಗೆ ತೆರೆಗಳನೊಡರ್ಚಲ್ಕೆ
ನೋಡಿದಳ್…..ನೋಡಿದಳ್……ಕಣ್ಮೊಳೆಯ ಕೀಲ್ಮಾಡಿ
ದೇಶದೇಹವನಂತೆ ತನ್ನ ಸಂದೇಹಮಂ
ಕೊರೆದಳ್, ತಿರುಪ್ಪಿ ಕೊರೆದಳ್, ಮರಳಿ ಮರಳಿ!……

‘ಕೊರೆದಳ್’ ಶಬ್ದ ದ್ವಿರುಕ್ತಿಯೂ, ‘ತಿರುಪ್ಪಿ’ ಪದದಿಂದ ಹೊಮ್ಮುವ ಶಬ್ದಾರ್ಥ ರಸದರ್ಶನ ಧ್ವನಿಗಳೂ ಆಸ್ವಾದನೀಯ!

ನಿರಾಶೆಯ ತಾಪದ ನಿರೀಕ್ಷೆ ಉತ್ಕಟಸ್ಥಿತಿಗೇರಿದಾಗಳೆ ಸಿದ್ದಿ ಕೈಸಾರುವುದು.

ಬಂದವರು ಯಾರು? ತನ್ನ ಆರಾಧ್ಯದೇವತೆಗಳೆ? – ಪೊದೆಯಂತೆ ಕೆದರಿದ ತಲೆಯ ಕೊಳೆ ಬೆವರಿಡಿದ ಉಡುಗೆಯ, ಕಾಂತಿಹೀನವಾದ ಮುಖದ, ವಿರಹದಗ್ಧವಾದ ದೇಹದ ರೂಕ್ಷರೂಪದ ರಾಮನನ್ನು ಕಂಡು ಶಬರಿ ಬೇಡನೆಂದು ಬಗೆದಳು – ಬಂದವರು ನೆಂಟರಿರ ಬಹುದೆಂದು ಭಾವಿಸಿ, ಉಡುಗಿದ ಸಂತೋಷದಿಂದ ಅವರನ್ನೆ ನೋಡುತ್ತಿರಲು ಲಕ್ಷ್ಮಣ.

………ದಣಿದು ಬಂದಿಹೆವಜ್ಜೆ!
ಬಿಸಿಲಳುರುತಿದೆ ಗುಡಿಸಲೊಳಗಿನಿತು ತಾವಿತ್ತು,
ತಿನಲಿತ್ತು, ಕರುಣಿಸೈ ನಿನ್ನ ಈ ಪರದೇಶಿ
ಕಂದರಂ ಚಿರಋಣಿಗಳಂ!

ದಶರಥ ಚಕ್ರವರ್ತಿಯ ಮಕ್ಕಳೀಗ ‘ಪರದೇಶಿಕಂದ’ರು! ಶಬರಿಯ ‘ಕಂದ’ರು ನಿಜ. ಅವಳು ರಾಮನನ್ನು ಉಪಾಸಿಸುತ್ತಿದ್ದುದು ವಾತ್ಸಲ್ಯಭಾವದಿಂದ.

ಲಕ್ಷ್ಮಣನ ಮಾತುಗಳನ್ನು ಕೇಳಿದ ಸದ್ಗೃಹಿಣಿ ಶಬರಜ್ಜಿಯ ಮನಸ್ಸು ತುಸು ಕೆರಳಿತು. ನಿರಾಶಾಗ್ನಿ ರಾಮನನ್ನೆಂತು ದಹಿಸುತ್ತಿದೆಯೊ ಶಬರಿಯನ್ನೂ ದಹಿಸುತ್ತಿದೆ. ಸೀತೆಯ ಮೇಲಣ ಪ್ರೇಮೋನ್ಮತ್ತತೆ ಶಬರಿಯ ನಿರಾಶೆಗೆ ಮೂಲವಾಗಿದೆ.

……….ಕಂಡವರ್ಗೆಲ್ಲ,
ಬರ್ಪ ಬೇಡರ್ಗೆಲ್ಲಮುಣಿಸಿತ್ತು, ಬೀಡಿತ್ತು,
ಮೆಲ್ವಾಸನೀಯೆ ನಾನೇನು ಅಡುಗೂಳಜ್ಜಿ
ಅಲ್ಲ ಕಾಣಯ್ಯ!……

ಎಂದು ನಿಷ್ಠುರವಾಗಿ ನುಡಿಯುತ್ತಾಳೆ. ಈ ನೈಷ್ಠುರ್ಯ ಆ ಸಾತ್ವಿಕ ಪ್ರೇಮದ ಮತ್ತೊಂದು ರೂಪತಾನೆ! ಆದುದರಿಂದ ಅದು ಎಷ್ಟು ಹೊತ್ತು ಸ್ಥಾಯಿಯಾಗಿದ್ದೀತು? ಒಡನೆಯೆ “ಬಡವಳಿದ್ದುದನೀವೆ; ಬನ್ನಿಂ!” ಎಂದು ಒಳಗೆ ನಡೆದಳು. ಲಕ್ಷ್ಮಣ ಅಣ್ಣನ ಕಡೆ ನೋಡಿ ನಕ್ಕನು. ಒಳಗೆ ಬಂದ ಮೇಲೆ ಶಬರಿ ಮತ್ತೆ ಅವರನ್ನು ನೋಡಿದಳು – ಶಂಕೆಯಿಂದ. “ನೀವಾರು, ಎಲ್ಲಿಯವರು” ಎಂದು ಕೇಳಿದಳು. ಬಾಯಿ ತುಂಬ ‘ಕಂದರಿರ’ ಎಂದು ಸಂಬೋಧಿಸಿದಳು. ದಶರಥ ಕುಮಾರ, ಊರ್ಮಿಳಾ ಪ್ರಿಯ ಮತ್ತೆ “ಮನೆಯಿಲ್ಲ ಮಾರಿಲ್ಲ; ಮನೆಗೆಟ್ಟವರು ನೆಲೆಗೆಟ್ಟವರೆಂ”ದು ಉತ್ತರ ಹೇಳಿ “ಸ್ನಾನ ಮಾಡಲು ಕೊಳವೆಲ್ಲಿದೆ?” ಎಂದು ಕೇಳಿದನು. ‘ಬೇಡರಿಗೆ ಸ್ನಾನವೇಕೆಂದು’ ಅವಳು ವಿಸ್ಮಯಪಟ್ಟಳು. ಕೊಳವಿದ್ದ ಜಾಗವನ್ನು ತೋರಿಸುತ್ತ.

ನಿಮ್ಮಂತೆ ಮನೆಗೆಟ್ಟು ನೆಲೆಗೆಟ್ಟು ತೊಳಲುವರ್
ಈ ನಾಡೊಳೆನಿಬರೋ? ಏಂ ಕೇಡುಗಾಲಮೋ?
ಅರಗುಲಿಗಳೊರ್ವನ ಸತಿಗೆ ಮತ್ತೋರ್ವನಳುಪುವಂ!

ಎಂದಳು. ರಾಮ ಬೆಚ್ಚಿ ಕೇಳಿದನು: “ಆರ ಸತಿಗಾರಳುಪಿದರು, ಅಜ್ಜಿ?” ಎಂದು. “ಊಟವಾದ ಮೇಲೆ ಆ ಹೊಲಸು ಕತೆಯನ್ನು ಹೇಳುತ್ತೇನೆ. ಮಿಂದು ಬಾ” ಎಂದು ಹೇಳಿ ಕಳುಹಿಸಿದಳು.

ಈ ಸಂದರ್ಭದಲ್ಲಿ ಶಬರಿಯ ಆರಾಧ್ಯಶಕ್ತಿ ಶ್ರೀರಾಮನ ಪಾತ್ರದ ವಿಷಯವಾಗಿ ಒಂದೆರಡು ಮಾತು ಅವಶ್ಯವೆಂದು ಕಾಣುತ್ತದೆ. ಶ್ರೀರಾಮ ಅವತಾರಪುರುಷ, ನಿಜ; ‘ಆ ಲೋಕದಿಂದ ವತರಿಸಿ ಬಂದು ಈ ಲೋಕಸಂಭವೆಯನೆಮ್ಮ ಭೂಜಾತೆಯಂ ಸೀತೆಯಂ’ವರಿಸಿದವನು. ‘ಆಕೆಯ ನೆವದಿ ಮೃಚ್ಛಕ್ತಿಯಂ ಮರ್ದಿಸುತೆ, ಸಂವರ್ಧಿ ಸಿರ್ಪವೋಲ್ ಚಿಚ್ಛಕ್ತಿಯಂ’, ನಿತ್ಯಸತ್ಯಕ್ಕೆ ಪ್ರತಿಮಾರೂಪನಾದವನು. ಅನ್ನಮಯ ಕೋಶದ ಬದ್ಧಜೀವಿಗಳನ್ನುದ್ಧರಿಸಲು ಪರಮಾತ್ಮನು ಅನ್ನಮಯಕೋಶಕ್ಕೆ ಇಳಿಯಬೇಕಾಗುತ್ತದೆ. ಕಡಿದಾದ ಬೆಟ್ಟತುದಿ ಯನ್ನೇರಿರುವ ತಂದೆ ಹತ್ತಲಾರದೆ ಬೆಟ್ಟದ ತಪ್ಪಲಿನಲ್ಲಿರುವ ಮಗುವನ್ನು ಕರೆತರಲು ಕೆಳಿಗಿಳಿಯುವಂತೆ, ಪರಮಾತ್ಮನಾದರೂ ಅನ್ನಮಯಕೋಶದ ಇತಿಮಿತಿಗಳನ್ನು ಸಂತೋಷ ದಿಂದ ಒಪ್ಪಿಕೊಂಡು, ಅನಂತರ ಮೆಟ್ಟಿಲು ಮೆಟ್ಟಲಾಗಿ ಪ್ರಾಣಮಯ ಮನೋಮಯ ವಿಜ್ಞಾನಮಯ ಕೋಶಗಳನ್ನು ದಾಟಿ ಕೊನೆಗೆ ಆನಂದಮಯ ಕೋಶವನ್ನು ಸೇರುವುದರ ಮೂಲಕ ಎಲ್ಲ ಜೀವಾತ್ಮಗಳೂ ತನ್ನ ಅಂಶ ಮಾತ್ರ, ಸಾಧನೆಯಿಂದ ಎಲ್ಲರೂ ಪರಮಸಿದ್ದಿ ಯನ್ನು ಪಡೆಯಬಹುದೆಂಬ ಸತ್ಯ ಪ್ರಕಟವಾಗುತ್ತದೆ. ಅವನು ಅನ್ನಮಯ ಕೋಶದಲ್ಲಿದ್ದರೂ ಅವನ ದೃಷ್ಟಿ ಮಾತ್ರ ಸರ್ವದಾ ಊರ್ಧ್ವಗಾಮಿ; ಸಾಮಾನ್ಯರ ಖಂಡದೃಷ್ಟಿಗೆ ಸಾಮಾನ್ಯನಂತೆ ಕಂಡುಬಂದರೂ ದ್ರಷ್ಟಾರರ ಪೂರ್ಣದೃಷ್ಟಿಗೆ ಅವನ ವಿರಾಟ್ ಮಹಿಮೆಯ ದರ್ಶನ ವಾಗುತ್ತದೆ.

ಶ್ರೀರಾಮನ ಜೀವನದಲ್ಲಿಯೂ ನಿಯತಿಬದ್ಧವಾದ ವಿಕಾಸನ ಕ್ರಮವನ್ನು ಕಾಣಬಹು ದಾಗಿದೆ. ಜನಮನಸ್ಸಿನ ನಿರಂತರ ನಿರೀಕ್ಷೆ ಅಭೀಪ್ಸೆಗಳೂ ದಶರಥ ಮಹಾರಾಜನ ತಪೋಮೂಲವಾದ ಬಯಕೆಯೂ ಜೊತೆಗೂಡಿ ವಿಶ್ವಶಕ್ತಿಯನ್ನು ಶ್ರೀರಾಮನ ರೂಪದಲ್ಲಿ ಎಳೆದು ತರುತ್ತವೆ. ಅವನ ಹುಟ್ಟು ಬೆಳವಣಿಗೆಗಳು ಸಾಮಾನ್ಯರ ಕಣ್ಣಿಗೆ – ಕೈಕೆ ಭರತ ಲಕ್ಷ್ಮಣ, ಕಡೆಗೆ ಸೀತೆ ಮೊದಲಾದವರ ಕಣ್ಣಿಗೆ – ಮೊದಮೊದಲು ಸಾಮಾನ್ಯವಾಗಿಯೆ ತೋರುತ್ತವೆ; ಆದರೆ ಅವುಗಳ ಮೂಲ ರಹಸ್ಯ ವಸಿಷ್ಠ ಜಾಬಾಲಿಗಳಿಗೆ, ಮಿಶ್ರಾಮಿತ್ರ ಭರದ್ವಾಜಾದಿ ಋಷಿಗಳಿಗೆ ಶಬರಿಯಂಥ ಭಕ್ತಶಿರೋಮಣಿಗೆ ಸುಸಂವೇದ್ಯ. ಹಸುಳೆ ರಾಮಚಂದ್ರನು ಗಗನದ ಚಂದ್ರನನ್ನು ಬಯಸುವ ರಹಸ್ಯ ದಶರಥನಿಗೆ ಗೊತ್ತೆ, ಕೌಸಲ್ಯೆಗೆ ಗೊತ್ತೆ? ಅಹಲ್ಯೋದ್ಧರಣದ ಮೂಲ ರಹಸ್ಯ ಕೈಕೆಗೆ ಅರಿವಾಗಿದ್ದರೆ ರಾಮನನ್ನು ಕಾಡಿಗಟ್ಟುತ್ತಿದ್ದಳೆ? ಲೋಕಕಲ್ಯಾಣಕ್ಕಾಗಿ, ಮೃಚ್ಛಕ್ತಿಯ ಮರ್ದನಕ್ಕಾಗಿ ಶಾಪಗ್ರಸ್ತರ ಶಾಪವಿಮೋಚನೆಗಾಗಿ ಶ್ರೀರಾಮನ ವನವಾಸ ಅನಿವಾರ್ಯ ನಿಜ. ಶ್ರೀರಾಮಶಕ್ತಿಯ ಸ್ವಯಂವಿಕಾಸನಕ್ಕೂ ಆತ್ಮಾನುಸಂಧಾನಕ್ಕೂ ತಪಸ್ಸು ಅವಶ್ಯಕವಾಗಿತ್ತು; ಏಕೆಂದರೆ ಅದು ಈ ಲೋಕನಿಯತಿಯ ವಿಕಾಸನ ವಿಧಾನ. ಸಹೃದಯನ ರಸಗ್ರಹಣ ಶಕ್ತಿಯಿಂದ ಕವಿಯ ಆತ್ಮ ಪ್ರಕಟವಾಗುವಂತೆ, ಭಕ್ತನ ಭಕ್ತಮಹಿಮೆಯಿಂದ ಆರಾಧ್ಯದೇವತೆಯ ಮಹಿಮೆ ಸುಪ್ರಕಟವಾಗುವಂತೆ, ಅಹಲ್ಯೋದ್ಧರಣ, ಅತ್ರಿ ಅಗಸ್ತ್ಯಾದಿ ಋಷಿಗಳ ದರ್ಶನದಿಂದ ವನವಾಸದ ತಪಸ್ಸಿನಿಂದ ಶ್ರೀರಾಮ ಸ್ವಯಂಪ್ರಜ್ಞನಾಗುತ್ತಾನೆ. ಆದರೆ ಶಬರಿಯ ಮತ್ತು ಪ್ರಾಣಪುತ್ರನ ದರ್ಶನ ದೊರೆಯುವ ತನಕ ಅವನು ಸಂಪೂರ್ಣವಾಗಿ ಸ್ವಯಂಪ್ರಜ್ಞ ನಾಗಿರುವುದಿಲ್ಲ. ತನ್ನ ನೈರಾಶ್ಯವೇ ಮೂರ್ತಿವೆತ್ತಂತಿದ್ದ ಕಬಂಧನ ಸಂಹಾರಾನಂತರ ಲಕ್ಷ್ಮಣನಿಗೆ ಶ್ರೀರಾಮ ಕೊಡುವ ‘ತಿಳಿದವಂ! ತಿಳಿದಮೇಲಲ್ತೆ?’ ಎಂಬ ಉತ್ತರದಿಂದ ಈ ಅಂಶ ವ್ಯಕ್ತವಾಗುತ್ತದೆ. ಶಬರಿ ತನ್ನ ದೀರ್ಘ ತಪಸ್ಸಿನ ಫಲವನ್ನೆಲ್ಲ ನಿವೇದಿಸಿದನಂತರ ಶ್ರೀರಾಮನ ನಿರಾಶೆ ಹರಿಯುತ್ತದೆ, ಸ್ವಯಂಪ್ರಜ್ಞೆ ಲಭಿಸಿ ಸಂತುಷ್ಟನಾಗುತ್ತಾನೆ.

ಈ ದೃಷ್ಟಿಯಿಂದ ಲೀಲಾಭೂಮಿಕೆಯಲ್ಲಿ ಭಗವಂತ – ಭಕ್ತ ಇಬ್ಬರೂ ಪರಸ್ಪರ ಪೂರಕಶಕ್ತಿಗಳು; ರಾಮಶಬರಿಯರೆ ಇದಕ್ಕೆ ನಿದರ್ಶನ.

………ಭಗವದಾಗಮನಮೇಂ
ಭಕ್ತನ ನಿರೀಕ್ಷಿಸಿದ ರೂಪದಿಂ ಬಂದಪುದೆ?
ಸುಖದವೋಲಾಶಿಸಲ್ ದುಃಖದೊಲ್ ಮೈದೋರಿ
ಭಕ್ತನನಿತಂ ಸುಲಿದು ನೈವೇದ್ಯಮಂ ಕೊಳದೆ
ಪೇಳಹಂಕಾರಮಂ ದಿವ್ಯಶೂನ್ಯತೆಗದ್ದುವೊರ್
ಸಂಪೂರ್ಣತಾ ಸಿದ್ದಿಯೊಲ್?…..

ಭಗವಂತ ಭಕ್ತನಿಗೆ ಮೈದೋರುವ ಆಕಾರ ಪ್ರಕಾರ ವಿಧಾನಗಳು ಇಂಥವೇ ಎಂದು ಹೇಳಲಾಗುವುದಿಲ್ಲ. ಭಕ್ತ ನಿರೀಕ್ಷಿಸುವುದೊಂದಾದರೆ ಆತ ಪ್ರತ್ಯಕ್ಷನಾಗುವುದು ತದ್ವಿರುದ್ಧ ವಾದೊಂದು ರೀತಿಯಲ್ಲಿ. ಭಕ್ತನ ಅಹಂಕಾರವನ್ನು ಸಂಪೂರ್ಣವಾಗಿ ವಿನಾಶಗೈಯಲು ಅದು ಅತ್ಯಾವಶ್ಯಕವಾಗಬಹುದು. ತನ್ನಿಚ್ಛೆಯಂತೆ ತಾನು ರೂಪತಾಳುತ್ತಾನಾದರೂ, ಇಲ್ಲಿ ಅವನು ಶಬರಿಗೆ ಪ್ರತ್ಯಕ್ಷವಾಗಿರುವ ರೀತಿ ಲೋಕಸಾಮಾನ್ಯದ ದೃಷ್ಟಿಯಿಂದಲೂ ಅನಿವಾರ್ಯವೆಂದೇ ತೋರುತ್ತದೆ, ಸಹಜವೆಂದೇ ಕಾಣುತ್ತದೆ – ಪಾಪ! ಅವಳು ತನ್ನ ಕಲ್ಪನೆಯ ಶ್ರೀರಾಮಚಂದ್ರನನ್ನು ಕಾಣದೆ ನಿರಾಶಳಾದಳು. ಆದರೆ ಕಣ್ಣರಿಯದಿದ್ದರೂ ಎದೆಯರಿಯದೆ? ಮನಸ್ಸಿನಲ್ಲಿ ಏನೋ ಶಂಕೆ. ಅವರು ಸ್ನಾನಕ್ಕೆ ಹೋಗಿದ್ದಾಗ ಅವರ ಗಂಟನ್ನು ಮುಟ್ಟಿ ನೋಡುತ್ತಾಳೆ. ಏನೂ ಗೊತ್ತಾಗದು. ಮಿಂದು ಬಂದ ರಾಮಲಕ್ಷ್ಮಣರ ತೇಜಸ್ಸನ್ನು ನೋಡಿ ಕುತೂಹಲ ಎವೆಯಿಕ್ಕಿತು. ಯಾರೊ ದೊರೆಮಕ್ಕಳಿರಬಹುದೆಂದು ಕೊಂಡಳು.

ಅನಂತರ ಆರೋಗಣೆ ಆರಂಭವಾಯಿತು. ಆ ಬಡವಿ ಊಟ ಬಡಿಸಿದಳು. ಅದು ಬಡವಿಯ ಊಟವೇ? ಕೆನೆಹಾಲು, ಜೇನ್ತುಪ್ಪ; ನೂಲೆಗೆಣಸು, ಬಾಳೆಯಹಣ್ಣು, ಕಂದಮೂಲ, ಹಣ್ಣುಹಂಪಲು, ಸೌತೆಪಚ್ಚಡಿ, ಮಣಿಹೆಂಬೆ, ಹಚ್ಚನಕ್ಕಿಯ ಬೆಚ್ಚನನ್ನ, ಮೊಸರು, ಬೆಲ್ಲ, ಬೆಣ್ಣೆ – ಇಷ್ಟೇ ಅಲ್ಲ, ಜೊತೆಗೆ ಸವಿನುಡಿ, ಮುಗುಳುನಗೆ – ಇನ್ನೇನು ಬೇಕು? ಇವೆಲ್ಲವೂ ಅವಳ ತಪಃಫಲದ ಪ್ರತೀಕಗಳು. ಊಟದ ಜೊತೆಯಲ್ಲಿ ಸಂಭಾಷಣೆಯೂ ಸಾಗಿತು. ಶಬರಿ ತನ್ನೆಲ್ಲ ಸಂಕಟವನ್ನು ತೋಡಿಕೊಂಡಳು : “ಹತ್ತು ವರ್ಷಗಳಿಂದ ರಾಮಸೀತೆಯರಿಗಾಗಿ ಕಾದಿದ್ದೇನೆ. ನಿತ್ಯವೂ ಈ ಉಣಿಸನ್ನೆ ಅಣಿ ಮಾಡುತ್ತಿದ್ದೇನೆ. ಗುರುವಾಣಿ ಸುಳ್ಳಾಗುವುದೆ? ನೀವು ಬಡಗರಂದದಿ ಕಾಣುತ್ತೀರಿ. ರಾಮನನ್ನು ಕಂಡಿದ್ದೀರ? ಕೇಳಿದ್ದೀರ? ಎಂದಿಗೆ ಬರುತ್ತಾನೆ?” ಮತ್ತೆ “ಶಾಂತಿನಿಧಿ ಯಾತನಂ ಕಾಣ್ಬುದೆ ಪರಮಶಾಂತಿ” ಎಂದಳು. ರಾಮ ಸಗದ್ಗದನಾಗಿ, “ಶಾಂತಿನಿಧಿ ಯಾತಂಗೆ ಶಾಂತಿಯಿಲ್ಲದೆ ತೊಳಲುತಿಹನಲ್ತೆ?……ಸಾಮಾನ್ಯನಂ ದೇವಮಾನ್ಯಂ ಗೆತ್ತುದಜ್ಜಿ ನಿನ್ನಳ್ಕರೂಹೆ” ಎಂದು ಉತ್ತರವಿತ್ತನು. “ತೆಗೆ ತೆಗೆ! ಮಹಾತ್ಮನಂ ತೆಗಳದಿರ್!” “ಬಲ್ಲೆನಾಂ ರಾಮನಂ!” “ನೀನರಿಯೆಯಾತನಂ” “ನಾನರಿಯೆನೇಂ? ನನ್ನನಾನರಿಯೆನೆಂದಾಡುತಿಹೆ!” ಈ ಸಂಭಾಷಣೆಯಿಂದ ಶಬರಿಯ ಇಷ್ಟದೇವತಾ ನಿಷ್ಠೆಯೂ, ಶ್ರೀರಾಮನ ಪ್ರಕ್ಷುಬ್ಧ ಚಿತ್ತಪರಿಸ್ಥಿತಿಯೂ ವ್ಯಕ್ತವಾಗುತ್ತವೆ. ಅವನಿನ್ನೂ ತಾನೆ ತಾನಾಗಿಲ್ಲವೆಂಬುದೂ ಗೊತ್ತಾಗುತ್ತದೆ. ಶ್ರೀರಾಮನ ಕೊನೆಯ ನುಡಿಯಿಂದ ಶಬರಿ ಬೆರಗು  ಹೊಡೆದಂತಾದಳು; ರಾಮನನ್ನು ಮತ್ತೆ ಮತ್ತೆ ನೋಡಿದಳು. ಪಾಪ! ಕಣ್ಣಿಗೆ ಕಾಣುವುದೇನು? ಅದೇ ರೂಕ್ಷರೂಪ! ಅವನ ಮಾತಾದರೂ ಅರ್ಥವಾಯಿತೆ? ತರ್ಕವಿತರ್ಕವಾಗಲೀ ತತ್ವದ ಗಹನತೆಯಾಗಲೀ ಅವಳಿಗೆ ಅರ್ಥವಾಗುವುದಿಲ್ಲ. ಅವಳಿಗೆ ಗೊತ್ತಿದ್ದುದು ಅನನ್ಯಪ್ರೇಮ ವೊಂದೇ – ಅದೇ ಅವಳ ಬಾಳು, ಅದೇ ಅವಳ ತಪಸ್ಸು.

ಊಟವಾದ ಮೇಲೆ ಅವರಿಬ್ಬರೂ ವಿಶ್ರಾಂತಿಗಾಗಿ ಮಲಗಿದರು. ನಡುವೆ ಎಚ್ಚರವಾದಾಗ ಲಕ್ಷ್ಮಣ ಹೊರಗೆ ಹೋದನು. ರಾಮ “ಸೀತೆ, ಬಾ ಇಲ್ಲಿ; ಬಾ ಪ್ರಿಯೆ, ಜನಕಜಾತೆ!” ಎಂದು ಕನವರಿಸಿದನು. ಬಳಿಯಲ್ಲಿಯೆ ಅತಿಥಿಗಳಿಗಾಗಿ ಬೆಲ್ಲ ಬೇಲದ ಪಾನಕವನ್ನು ಅಣಿ ಮಾಡುತ್ತಿದ್ದ ಶಬರಜ್ಜಿ ಓಡಿಬಂದು ಅವನನ್ನೇ ಕಣ್ನಟ್ಟು ನೋಡಿದಳು. ಕ್ಷಣಕಾಲ-ಕ್ಷಣಕಾಲ ಮಾತ್ರ ಆ ದರಹಸಿತ ಮುಖದಲ್ಲಿ ತನ್ನ ಊಹೆಯ ಸೌಮ್ಯನನ್ನು ಕಂಡಳು. ಆದರೆ ಆ ಸೌಮ್ಯಸ್ಥಿತಿ ಬಹಳ ಕಾಲ ತಂಗಲಿಲ್ಲ. ಕೂಡಲೆ ಅದು ಮಾಯವಾಗಿ ಆ ಮುಖ ಮತ್ತೆ ರೌದ್ರಮುದ್ರಿತವಾಯಿತು. “ನಿಲ್, ರಾಕ್ಷಸಾಧಮ, ನಿಲ್! ಪೇಳೆಲ್ಲಿಗುಯ್ದಪಯ್ ನನ್ನ ಸೀತೆಯನೆಲವೊ ನೀಚ!” ಎಂದು ಕೂಗುತ್ತ, ನಿದ್ದೆಯಿಂದೆಚ್ಚತ್ತನು. ಪಕ್ಕದಲ್ಲಿ ಹೆದರಿ ನಿಂತಿದ್ದ ಶಬರಿಯನ್ನು ನೋಡಿ, “ತಪ್ಪಿದೆನಜ್ಜಿ. ಕಂಡ ಕನಸಂ ನನಸುಗೆತ್ತು, ಕೆಮ್ಮನೆ ನಿನ್ನನಂಜಿಸಿದೆ” ಎಂದನು. ತನ್ನ ಅತಿಥಿ ಯಾರೆಂಬುದರ ಬಗೆಗೆ ಆ ಮುದುಕಿಗೆ ಬೇರೆ ಸಾಕ್ಷಿಯೇಕೆ? ಒಡನೆಯೆ ಅವಳು ರಾಮನ ಮೇಲೆ ಬಿದ್ದು ಅಪ್ಪಿಕೊಂಡಳು. “ಓ ನನ್ನ ಕಂದಯ್ಯ, ರಾಮಚಂದ್ರಯ್ಯ, ದಮ್ಮಯ್ಯ, ನನ್ನ ಮಗಳಿಗೆ ಏನಾಯ್ತಯ್ಯ – ಅಯ್ಯೋ, ನಿನ್ನ ಗಂಟಿನಲ್ಲೊಂದು ಸೀರೆಯನ್ನು ಕಂಡೆ. ಆಗ ತಿಳಿಯದಾದೆ. ನನ್ನ ಮಗಳಿಗೆ ಏನಾಯ್ತು? ಸೀತೆಗೇನು ಕೇಡಾಯ್ತು” ಎಂದು ಹಲವರಿದಳು; ಬೇಡಿದಳು. “ನಾನು ನಿರ್ಭಾಗ್ಯ; ಸೀತೆಯನ್ನು ರಾಕ್ಷಸ ಕದ್ದೊಯ್ದ. ಅವಳನ್ನರಸಲು ಲಕ್ಷ್ಮಣನೊಡನೆ ಅಲೆಯುತ್ತಿದ್ದೇನೆ” ಎಂದು ದೈನ್ಯದಿಂದ ಬಿಕ್ಕಿ ಬಿಕ್ಕಿ ಅತ್ತನು. ಶಬರಿ ಮತ್ತೊಬ್ಬಳು ಕೌಸಲ್ಯೆಯಾದಳು; ಅವಳ ತೋಳ್ತೆಕ್ಕೆಯಲ್ಲಿ ರಾಮ ಮತ್ತೊಮ್ಮೆ ಶಿಶುವಾದನು; ವಾತ್ಸಲ್ಯದ ಕಂದನಾದನು.

ಪ್ರಪಂಚದಲ್ಲಿ ಮಾತೃವಾತ್ಸಲ್ಯದಂತಹ ನಿಷ್ಕಲ್ಮಷವಾದ, ಸ್ವಾರ್ಥರಹಿತವಾದ, ತ್ಯಾಗಪೂರ್ಣವಾದ ವಾತ್ಸಲ್ಯ ಬೇರೊಂದಿಲ್ಲ. ವಾತ್ಸಲ್ಯವೆಂದರೆ ಮಾತೃವಾತ್ಸಲ್ಯ. ಅದು ಭಗವಂತನ ವಾತ್ಸಲ್ಯಕ್ಕೆ ಹತ್ತಿರವಾದುದು. ಆತ್ಮಯಜ್ಞವೇ ಅದರ ಉಸಿರು. ಭಕ್ತ ವಾತ್ಸಲ್ಯದ ಚಂದ್ರಿಕೆಯಲ್ಲಿ ವಿರಾಡ್ರೂಪನಾದ ಭಗವಂತ ಚಂದ್ರೋಪಲದಂತೆ ಕರಗುತ್ತಾನೆ; ಕರಗಿ ಕಂದನಾಗುತ್ತಾನೆ. ಶ್ರೀರಾಮ ಶೋಕಭಾರದಿಂದ ದಿನೇ ದಿನೇ ಕೃಶನಾದನು. ಹಾಸುಗೆಯಿಂದ ಏಳಲಾರದಷ್ಟು ನಿಶ್ಶಕ್ತನಾದನು. ಶಬರಿ ಹಗಲಿರುಳೆನ್ನದೆ ನಿದ್ದೆಯುಳಿದು ಅವನಿಗೆ ಆರೈಕೆ ಮಾಡಿದಳು; ತನ್ನುಳಿದ ಆಯುವನ್ನು ‘ರಾಮಸೇವಾ ಸಾಧನೆಗೆ’ ಸಮೆಸಿದಳು.

ಆದರೂ ರಾಮನ ರುಜೆ ಇಳಿಮುಖವಾಗಿಲಿಲ್ಲ; ದಿನೇ ದಿನೇ ಅವನು ಕೃಶವಾಗ ತೊಡಗಿದನು. ಅಣ್ಣನ ದುಃಸ್ಥಿತಿಯನ್ನು ಕಂಡ ಲಕ್ಷ್ಮಣ ಚಿಂತಾಕ್ರಾಂತನಾದನು. ಒಂದಿರುಳು ಕತ್ತಲಲ್ಲಿ ಅರೆಬಂಡೆಯೊಂದರ ಮೇಲೆ ಕುಳಿತು ಸಪ್ತರ್ಷಿಮಂಡಲ ಮೇಲೇಳುವುದನ್ನೆ ನೋಡುತ್ತ ಬಿಕ್ಕಿ ಬಿಕ್ಕಿ ಅಳುತ್ತಿದ್ದನು. ಬೆಂಗಡೆಯಿಂದ ಶಬರಿ ಬಂದು, “ಇದೇನ್, ಕಂದ, ಲಕ್ಷ್ಮಣ, ನೀನುಮಿಂತೇಕೆ ಪೇಳೆರ್ದೆಗೆಟ್ಟು ಕೊರಗುತಿಹೆ?” ಎಂದಳು. “ಅಜ್ಜಿ, ಅತ್ತಿಗೆಗಂತು ಪಾಡಾಯ್ತು. ಅಣ್ಣಂಗೆ…..” ಎನ್ನುತ್ತ ಮುಂದೆ ಮಾತುಬಾರದೆ ಸುಮ್ಮನೆ ರೋದಿಸ ತೊಡಗಿದನು. ಶಬರಿ ಅವನ ಕಣ್ಣನ್ನೊರಸಿ,

…….ಬಾ ಒಳಗೆ, ಬಿಡು ದುಃಖಮಂ,
ಸೌಮಿತ್ರಿ, ನಿನ್ನಣ್ಣನುಸಿರಿಗಾಂ ಹೊಣೆಗಾರ್ತಿ,
ನನ್ನ ಗುರುಕೃಪೆಯಿಂದ ರಾಮನ ರುಜೆಯನೆಲ್ಲಮಂ
ಹೀರಿ ಬಿಸುಡುವೆ, ನೋಡು ಬಾ!…..

ಎಂದು ಒಳಗೆ ಕರೆದೊಯ್ದಳು; ‘ತನ್ನ ಮೋಕ್ಷಕ್ಕೆ ತನ್ನ ದೇವತೆಯಂ ಪ್ರದಕ್ಷಿಣಾ ಪೂರ್ವಕಂ ಪ್ರಾರ್ಥಿಸುವಳೆಂಬಂತೆ’ ಮಲಗಿದ್ದ ಶ್ರೀರಾಮಮೂರ್ತಿಯನ್ನು ಬಲಗೊಂಡು, ಮಂತ್ರವನ್ನು ಪಠಿಸಿ ಕೈಮುಗಿದು ಕಾಲಿಗೆ ಅಡ್ಡಬಿದ್ದಳು. “ವತ್ಸ, ಇನ್ನು ದುಃಖ ಬೇಡ-ರಾಮ ಸುಕ್ಷೇಮಿ” ಎಂದು ಲಕ್ಷ್ಮಣನ ಕಡೆಗೆ ತಿರುಗಿ ಹೇಳಿದಳು. ಆ ಭಕ್ತೆ ತನ್ನನ್ನೂ ತನ್ನ ತಪಶ್ಶಕ್ತಿಯನ್ನೂ ನಿವೇದಿಸಿ ಶ್ರೀರಾಮನ ರುಜೆಯನ್ನು ಪರಿಹರಿಸಿದಳು. ಮಾರನೆಯ ದಿನ ರಾಮ ಸುದೃಢಕಾಯದ ಆರೋಗ್ಯದಿಂದ ಎದ್ದನು. ಶಬರಿ ಆ ದಿನವೆ ಹಾಸುಗೆ ಹಿಡಿದಳು. ಸೌಮಿತ್ರಿ ಕೃತಜ್ಞತಾಭಾರ ದಿಂದ ಅವಳ ಚರಣಲದಲ್ಲಿ ಕೆಡೆದನು.

ತನಗಾಗಿ ನಿದ್ದೆಗೆಟ್ಟು ದಣಿದು ಬೆಂಡಾದ ಶಬರಿಯನ್ನು ಶ್ರೀರಾಮ ಉಪಚರಿಸಲನು ವಾದನು. ಆ ಉಪಚಾರದ ಸಂಭ್ರಮದಲ್ಲಿ ಅವನ ದುಃಖವೂ ಮರೆಯಾಯಿತು. ಭಕ್ತನಿಗೆ ಇದಕ್ಕಿಂತ ಬೇರೆ ಪುಣ್ಯ ಮತ್ತೊಂದುಂಟೆ! ಆರಾಧ್ಯದೇವತೆಯ ಕೈಯಿಂದ ಸೇವಿಸಿಕೊಳ್ಳುವ ಆರಾಧಕನೇ ಧನ್ಯ! ಅಲ್ಲದೆ ಇಲ್ಲಿ ಆರಾಧ್ಯದೇವತೆ-ಆರಾಧಕರ ಭಿನ್ನತೆಯೂ ಮಾಯ ವಾಗುತ್ತದೆ. ಹಣ್ಣೆಲೆಗೆ ಉಪಚಾರವೇಕೆ, ಹಸುರೆಲೆಗೆ ಮಾತ್ರ ಬೇಕು ಎಂದು ಶಬರಿ ಶ್ರೀರಾಮನನ್ನು ಸಂತೈಸಿ

……..ಧನ್ಯೆಯಾಂ, ರಾಮಚಂದ್ರ, ನೀಂ
ಪ್ರೀತಿ ಪರಿಚರ್ಯೆಗೆಯ್ಯುತಿರಲಾಂ ಶಾಂತಿಯಿಂ
ಸೇರಿದಪೆನಧ್ಯಾತ್ಮಮಂ. ಮಿಗಿಲದಕೆ ಸಯ್ಪು ತಾಂ
ಬೇರೇನೊಳದೆ?….

ಎಂದು ತಾನು ಅಧ್ಯಾತ್ಮಾನಂದದಲ್ಲಿ ಮುಳುಗುತ್ತಾಳೆ. ರಾವಣನ ಉದ್ಯಾನದಲ್ಲಿ ಸೀತೆ ಸೊರಗುತ್ತಿರುವಂತೆ ಕನಸಾದುದಾಗಿ ತಿಳಿಸುತ್ತಾಳೆ – ಅದು ಕನಸಲ್ಲ, ನಿಜವಾಗಿ ‘ಕಣಸು’. ಭಕ್ತೆ ಭಗವಂತನಿಗೆ ಕಣ್ಣಾಗುತ್ತಾಳೆ, ಮುಂದಿನ ಮತಿಯಾಗುತ್ತಾಳೆ, ಗತಿಯಾಗುತ್ತಾಳೆ. ಸುಗ್ರೀವನ ಪರಿಚಯವನ್ನು ಹೇಳಿ, ಅವನ ಸಖ್ಯವನ್ನು ಪಡೆಯುವಂತೆ ಬೋಧಿಸಿ “ಗೆಲ್ಗೆ ದೈವೇಚ್ಛೆ; ನಿನ್ನಿಚ್ಛೆಯುಂ ಸಲ್ಗೆ!” ಎಂದು ಹರಸುತ್ತಾಳೆ.

ಶ್ರೀರಾಮಾಯಣ ದರ್ಶನದ ಶಬರಿಯ ಜೀವನಪರಾಭಕ್ತಿಗೊಂದು ಪ್ರತಿಮೆಯಾಗಿದೆ. ಆ ಭಕ್ತಿ ಇಲ್ಲಿ ವಾತ್ಸಲ್ಯದ ಸ್ವರೂಪವನ್ನು ತಾಳಿದೆ. ಇಲ್ಲಿಯ ಆರಾಧ್ಯದೇವತೆ ‘ವರವನ್ನು ಕೋ’ ಎಂದು ಬರುವುದಿಲ್ಲ. ‘ನಿನ್ನನ್ನೆ ಕೊಡು, ನಿನ್ನನ್ನೆ ಕೊಡು’ ಎಂದು ಬರುತ್ತಾನೆ. ಭಕ್ತೆಯು ಸಹ ತಾನು ಯಾರಿಗಾಗಿ ತಪಗೈದಿದ್ದಳೋ, ಯಾರ ನಾಮ ಬಲದಿಂದ ತಪಶ್ಶಕ್ತಿ ಯನ್ನಾರ್ಜಿಸಿದ್ದಳೋ ಆ ಮಹಾತ್ಮನಿಗೆ ತನ್ನೆಲ್ಲವನ್ನೂ-ತನ್ನ ಪ್ರಾಣಕ್ಕಿಂತ ಮಿಗಿಲಾದ ತಪಶ್ಯಕ್ತಿ ಯನ್ನೂ-ಸಮರ್ಪಿಸುತ್ತಾಳೆ. ಆ ಆತ್ಮಯಜ್ಞದಿಂದ ಭಕ್ತೆ ತಾನೂ ಸಂತುಷ್ಟಳಾಗಿ, ಲೋಕ ಲೀಲಾರ್ಥವಾಗಿ ಭಗವಂತನ ಸ್ವಪ್ರಜ್ಞೆಯನ್ನೂ ಕೆರಳಿಸಿ ಅವನನ್ನು ತೃಪ್ತಿಪಡಿಸುತ್ತಾಳೆ. ನಿರಾಶೆಯ ಅಂಧಕಾರದಲ್ಲಿ ತೊಳಲುತ್ತಿದ್ದ ತನ್ನ ಆರಾಧ್ಯಮೂರ್ತಿ ಶ್ರೀರಾಮಚಂದ್ರನನ್ನು ಆಸೆಯ ಬೆಳಕಿಗೊಯ್ದು ಉದ್ಧರಿಸುತ್ತಾಳೆ. ನಾರಾಯಣನನ್ನು ಕುರಿತ ನರನ ನಿರಂತರ ಅಭೀಪ್ಸೆ ಮತ್ತು ನಿರೀಕ್ಷೆಗಳಿಗೆ ಪ್ರತಿನಿಧಿ ಮತ್ತು ಪ್ರತಿಮೆ ಈ ಭಕ್ತಿಯೋಗಿನಿ ಶಬರಿ. ಆಕೆ ಶ್ರೀರಾಮನಿಗೆ ಸಮರ್ಪಿಸಲು ಕೂಡಿಡುವ ಹಣ್ಣುಹಂಪಲು ಬದುಕಿನ ಎಲ್ಲ ಸಾಧನೆಗೆ ಮತ್ತು ಕರ್ಮಫಲಕ್ಕೆ ಪ್ರತಿನಿಧಿಯಂತಿದೆ, ಪ್ರತಿಮೆಯಂತಿದೆ.[1]    ಯೋ ಯೋ ಯಾಂ ಯಾಂ ತನುಂ ಭಕ್ತಃ ಶ್ರದ್ಧಯಾರ್ಚಿತುಮಿಚ್ಛತಿ |
ತಸ್ಯ ತಸ್ಯಾಚಲಾಂ ಶ್ರದ್ಧಾಂ ತಾಮೇವ ವಿದಧಾಮ್ಯಹಮ್ || (ಗೀತಾ, ೭-೨೧)
ಯಾಂತಿ ದೇವವ್ರತಾ ದೇವಾನ್ ಪಿತ್ಯನ್ ಯಾಂತಿ ಪಿತೃವ್ರತಾಃ |
ಭೂತಾನಿ ಯಾಂತಿ ಭೂತೇಜ್ಯಾ ಯಾಂತಿ ಮದ್ಯಾಜಿನೋ ಪಿ ಮಾಮ್ || (ಗೀತಾ, ೯-೨೫)

[2]    ಪತ್ರಂ ಪುಷ್ಟಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ |
ತದಹಂ ಭಕ್ತ್ಯುಪಹೃತಮಶ್ನಾಮಿ ಪ್ರಯತಾತ್ಮನಃ || (ಗೀತಾ, ೯-೨೬)

[3]    ………….ಆ ಚಂದ್ರಸುಂದರ ರಾತ್ರಿ
ಮುದುಕಿಯಂ ಕಂಡು ಕನಿಕರದಿಂದ ಕರಗಿತೆನೆ
ಘಿಂಗಳ್ ಬೆಳಕು ಚೆಲ್ಲಿ…..