ಕುವೆಂಪು ಅವರ ಶ್ರೀಮಂತ ಪ್ರತಿಭೆಯ ವಿಶಿಷ್ಟ ಲಕ್ಷಣಗಳಾದ ಸಂಕೀರ್ಣತೆ ವೈವಿಧ್ಯತೆಗಳು ಅವರ ಶೈಲಿಯಲ್ಲಿ ಪ್ರತಿಬಿಂಬಿತವಾಗಿವೆ. ಕತೆ ಕವಿತೆ ಕಥನಕವನ ಪ್ರಬಂಧ ನಾಟಕ ಜೀವನಚರಿತ್ರೆ ಕಾದಂಬರಿ ಮಹಾಕಾವ್ಯ ಮೊದಲಾದ ಹಲವು ಮಟ್ಟಗಳಲ್ಲಿ ಆ ಶೈಲಿಯ ವಿವಿಧ ರೀತಿಯ ಬೆಡಗುಗಳನ್ನು ಗುರುತಿಸಬಹುದು. ಸಪ್ತವರ್ಣಗಳ ಸಮ್ಮಿಶ್ರಣ ದಿಂದ ಶ್ವೇತವರ್ಣ ಸಂಭವಿಸುವಂತೆ, ಹಲವು ಗುಣಗಳ ಕೂಡಲಿಯಿಂದ ಕುವೆಂಪು ಅವರ ಶೈಲಿ ಸಂಸಿದ್ಧವಾಗುತ್ತದೆ. ಭಾವಾಲೋಚನೆ ಕಲ್ಪನೆಗಳ ಮೈದೋರಿಕೆಯೆ ಶೈಲಿ; ಅವುಗಳ ಮಹತ್ತು ಬೃಹತ್ತುಗಳಿಗೆ ತಕ್ಕಂತೆ ಅದೂ ಹಿಗ್ಗಲಿಸುತ್ತದೆ, ವಾಮನನಂತೆ ವ್ಯಾಪಕವಾಗಿ ಬೆಳೆಯುತ್ತದೆ. ಕವಿ ಪ್ರತಿಭೆ ಮಹತ್ತರವಾದದ್ದಾದರೆ ಅದು ಕಾಮರೂಪಿಯಾಗುತ್ತದೆ. ಸಾಹಿತ್ಯದ ಸರ್ವಪ್ರಕಾರಗಳಲ್ಲಿಯೂ ಏಕಪ್ರಕಾರವಾಗಿ ವಿಹರಿಸುವ ಶಕ್ತಿ ಸಾಮರ್ಥ್ಯಗಳುಳ್ಳ ಕವಿಗಳು ಅತ್ಯಂತ ವಿರಳ. ಕತೆ ಕಾದಂಬರಿ ಪ್ರಬಂಧಗಳಲ್ಲಿ ಗದ್ಯ ವೈಭವವನ್ನೂ ನಾಟಕಗಳಲ್ಲಿ ಸಂವಾದ ಚಾತುರ್ಯವನ್ನೂ ಭಾವಗೀತೆ ಕಥನಕವನ ಖಂಡಕಾವ್ಯಗಳಲ್ಲಿ ಛಂದೋವೈವಿಧ್ಯ ವನ್ನೂ ಲಯಮಾಧುರ್ಯವನ್ನೂ ಸಾಧಿಸಿಕೊಂಡು ವಶ್ಯವಾಕ್ಸಂಪನ್ನರಾಗಿರುವ ಕುವೆಂಪು ಅವರ ಶಬ್ದಶಕ್ತಿ ಸೂಕ್ಷ್ಮಾತಿ ಸೂಕ್ಷ್ಮಭಾವಗಳನ್ನಾಗಲೀ, ಅದ್ಭುತ ಕಲ್ಪನೆಗಳನ್ನಾಗಲಿ, ಗಹನಾಲೋಚನೆ ಗಳನ್ನಾಗಲೀ ಸರ್ವಸಮರ್ಪಕವಾಗಿ ನಿರೂಪಿಸಬಲ್ಲುದು. ಅದು ಗೂಡಾರದ ಶೈಲಿಯಲ್ಲ, ಸ್ಪಷ್ಟ ಶೈಲಿ; ಧೂಮ ಶೈಲಿಯಲ್ಲ, ಸಚಿತ್ರಶೈಲಿ; ಮೂರ್ತವನ್ನು ಮುಷ್ಟಿಗ್ರಾಹ್ಯವೆಂಬಂತೆ ಕಂಡರಿಸುವ, ಅಮೂರ್ತವನ್ನು ಭಾಗಮ್ಯವಾಗುವಂತೆ ಧ್ವನಿಸುವ ಪ್ರತಿಮಾಶೈಲಿ ಅದು. ಅದು ಸಾಲಂಕೃತವಾಗಬಲ್ಲುದು. ನಿರಲಂಕೃತ ಸುಂದರವಾಗಬಲ್ಲುದು. ಅದು ರಣಚಂಡೆಯಾಗಬಲ್ಲುದು, ಘೋಷವತೀ ವೀಣೆಯಾಗಬಲ್ಲುದು, ತಾಂಡವನಾಟ್ಯವಾಗಿಯೂ ರಾಸಲೀಲವಾಗ ಬಲ್ಲುದು.

ತನ್ನ ನಾಡಿನ ಸಮಗ್ರ ಸಂಸ್ಕೃತಿಯ ಪರಂಪರೆಯನ್ನು ಯಾವ ಶಕ್ತಕವಿ ಮೈಗೂಡಿಸಿ ಕೊಳ್ಳುತ್ತಾನೆಯೋ ಅವನು ಮಹಾಕವಿಯಾಗುತ್ತಾನೆ. ಆ ಮಹಾಕವಿ ತನ್ನ ಹಿಂದಿನ ಮಹಾಕಾವ್ಯಗಳ ಸಮಸ್ತ ಸತ್ವವನ್ನು ತನ್ನಲ್ಲಿ ಸೇರಿಸಿಕೊಂಡು ನವ್ಯಸಂಸ್ಕಾರ ನೀಡಿ, ಸವಿೂಚೀನ ರೂಪದಲ್ಲಿ ಚಿರಂಜೀವಿತ್ವವನ್ನು ದಯಪಾಲಿಸುತ್ತಾನೆ. ಹೀಗೆ ಮಾಡುವಾಗ ಅವನು ತನ್ನ ಹಿಂದಿನ ಮಹಾಕಾವ್ಯಗಳ ಛಂದೋಬದ್ಧವಾದ ರೂಪಾಂಶವನ್ನು ಪರಿಷ್ಕರಿಸಿ ಅದರ ಸಾರಪರಂಪರೆಯನ್ನು ಮುಂದುವರಿಸುತ್ತಾನೆ. ಪ್ರಾಚೀನತೆಯ ಮೇಲೆ ಪಾಶ್ಚಾತ್ಯವನ್ನು ಕಸಿಕಟ್ಟಿದಾಗ ಅಥವಾ ಅವೆರಡೂ ಮಹಾಕವಿಯ ಪ್ರತಿಭಾ ಮೂಷೆಯಲ್ಲಿ ಕರಗಿದಾಗ ಮೂಡುವ ವಸ್ತು ನವ್ಯವಾಗುತ್ತದೆ. ಈ ದೃಷ್ಟಿಯಿಂದ ನೋಡಿದಾಗ ಶ್ರೀರಾಮಾಯಣದರ್ಶನಂ ಮಹಾಕೃತಿಯಲ್ಲಿ ಕನ್ನಡದ ಪ್ರಾಚೀನ ಛಂದೋರೂಪಗಳ ಜೊತೆಗೆ ಪಾಶ್ಚಾತ್ಯ ರೂಪಾಂಶಗಳೂ ಅಂತರ್ಗತಗೊಂಡು ಮಹಾಛಂದಸ್ಸಿನ ಉದಯವಾಗಿದೆಯೆನ್ನಬಹುದು. ಪಂಪರನ್ನರ ವೃತ್ತಗಳ ಬೀಸು ಭೋರ್ಗರೆತಗಳು, ಹರಿಹರನ ರಗಳೆಯ ನಿರರ್ಗಳ ಪ್ರವಾಹಕತೆ, ಜನ್ನನ ಕಂದಗಳ ಲಾಲಿತ್ಯ, ನಾರಣಪ್ಪನ ಷಟ್ಪದಿಗಳ ಸರ್ವಂಭರತ್ವ, ರಾಘವಾಂಕನ ನಾಟಕೀಯತೆ, ಲಕ್ಷ್ಮೀಶನ ನಾದಮಯತೆ, ಮಿಲ್ಟನ್ನನ ಮಹೋನ್ನತಿ – ಇವೆಲ್ಲವೂ ಈ ಮಹಾಛಂದಸ್ಸಿನಲ್ಲಿ ಪಡಿಮೂಡಿ, ಸಮಗ್ರ ಕನ್ನಡ ಕಾವ್ಯಶೈಲಿಯ ನೈರಂತರ್ಯವನ್ನು ಪ್ರತಿಬಿಂಬಿಸುವುದರ ಜೊತೆಗೆ ನೂತನ ಪರಂಪರೆಯ ನಿರ್ಮಾಣಕ್ಕೆ ಕಾರಣಭೂತವಾಗಿವೆ. ಮೇಲುನೋಟಕ್ಕೆ ಆ ಛಂದಸ್ಸಿನಲ್ಲಿ ಐದು ಮಾತ್ರೆಯ ಗಣಗಳ ಲಯವಿನ್ಯಾಸ ಕಂಡುಬಂದರೂ ವಾಸ್ತವಿಕವಾಗಿ ಅದರಲ್ಲಿ ಕಂದ ಭೋಗ ಭಾಮಿನಿಗಳ ಲಯ ನಡುನಡುವೆ ಬಂದು ಏಕತಾನತೆಯ ಬೇಸರ ಲಯವಾಗುತ್ತದೆ. ಆದರೆ ಇದರಲ್ಲಿ ಪಂಕ್ತಿ ಮೂಲಘಟಕವೆಂಬುದನ್ನು ಮರೆಯಬೇಕಾಗುತ್ತದೆ. ಪಂಕ್ತಿಖಂಡ, ಪಂಕ್ತಿ, ಪಂಕ್ತಿದ್ವಯ, ಪಂಕ್ತಿತ್ರಯ ಒಂದೊಂದು ಘಟಕವಾಗಿ ಪರಿಣಮಿಸುತ್ತದೆ.

ಉದಾಹರಣೆಗಾಗಿ,

೩     ೫
೧.         ………………      ಗುಡಿಯ           ಬಾಗಿಲಂ                   ೨-೩-೧೦೭/೧೦೮
೩          ೪         ೩          ೪                     ೩

೨.         ಘಾಸ ಸೀಮಾರ್ಣವದ ವಿಸ್ತೀರ್ಣದೊಳ್ ಮನಂ                   ೨-೩-೧೧೪
೩  ೪     ೩          ೩          ೪            ೩

೩.         ದೀರ್ಘ ದಶದಶ     ದಿನಂ ದೀರ್ಘ ದಶದಶ  ರಾತ್ರಿ               ೨-೪-೫೨

೪.                                            ಪೊಲಮೊ
೨                      ೩                      ೩
ಮೇಣ್ ಪೊಲೆಯ ಕೊಲೆಯೊ                                      ೩-೧೦-೯೬/೯೭

ಶ್ರೀ ರಾಮಾಯಣದರ್ಶನಂ ಮಹಾಕಾವ್ಯದ ವಸ್ತು ಹಳೆಯದಾದರೂ ವೈಜ್ಞಾನಿಕ ಯುಗದ ಪ್ರತಿಭೆಯ ಮೂಷೆಯಲ್ಲಿ ಕರಗಿ ಹೊರಬರುವಾಗ ಹೊಸ ರೂಪವಿನ್ಯಾಸ ಸೌಂದರ್ಯಗಳಿಂದ ಪ್ರಕಾಶಿಸುತ್ತದೆ. ಇಪ್ಪತ್ತನೆಯ ಶತಮಾನದ ಕವಿ ಕನ್ನಡಿಗನಾಗಿಯೂ ಭಾರತೀಯ, ಭಾರತೀಯನಾಗಿಯೂ ಅವನು ವಿಶ್ವಮಾನವ. ಅವನು ವ್ಯಾಸವಾಲ್ಮೀಕಿಯರಿಗೆಷ್ಟು ಋಣಿಯೊ, ಹೋಮರ್ ಮಿಲ್ಟನ್‌ರಿಗೂ ಅಷ್ಟೇ ಋಣಿ. ಪರಮಹಂಸ ಅರವಿಂದಾದಿಗಳಿಗೆಷ್ಟು ಋಣಿಯೋ, ಡಾರ್ವಿನ್ ಫ್ರಾಯ್ಡಾ ಮಾರ್ಕ್ಸ್‌ರಿಗೂ ಅಷ್ಟೇ ಋಣಿ; ಜಗತ್ತಿನ ಜ್ಞಾನಭಂಡಾರಕ್ಕೆ ಅವನು ಹಕ್ಕುದಾರ. ಕಾಲವಶರಾದ ಪಂಪ ನಾರಣಪ್ಪಾದಿಗಳಿಗೆ ಅಲಭ್ಯವಾಗಿದ್ದ ವಿಜ್ಞಾನಯುಗದ ಅನುಭವಾಲೋಚನೆಗಳು ಈ ಯುಗದ ಕವಿಗೆ ಲಭ್ಯವಾಗಿವೆ. ಇವುಗಳ ಅಭಿವ್ಯಕ್ತಿಗಾಗಿ ಭಾಷೆಯ ಗತ್ತುಗತಿಗಳು ತಿರುವು ಮುರಿವುಗಳು ಮಾರ್ಪಾಡಾಗಬೇಕಾಗುತ್ತವೆ.  ಪ್ರತಿಭಾವಂತ ಕವಿಯ ಲೇಖನಿಯಲ್ಲಿ ಅದು ಹೊಸ ಅವತಾರ ಪಡೆಯುತ್ತದೆ. ತನ್ನ ಪರಿಚಯದ ಭಾಷಾದ್ರವ್ಯವನ್ನೆಲ್ಲ ಹೊಸ ಎರಕಕ್ಕೆ ಹೊಯ್ದು ಹೊಸ ನಾಣ್ಯಗಳನ್ನು ಸೃಷ್ಟಿಸುತ್ತಾನೆ. ಹೊಸಗನ್ನಡವೊ ಹಳಗನ್ನಡವೊ, ಸಂಸ್ಕೃತವೊ ಇಂಗ್ಲಿಷೊ ಯಾವುದಾದರೇನು, ಈ ಎಲ್ಲವನ್ನು ಕರಗಿಸಿ ಕನ್ನಡದ ಎರಕಕ್ಕೆ ಹೊಯ್ದಗ ಹೊರಬರುವ ನಾಣ್ಯಗಳು ಕನ್ನಡವಲ್ಲದೆ ಬೇರೆಯವಾಗಲಾರವು. ಜ್ಯೋತಿಮಟ್ಟದ ವಸ್ತುವೆಲ್ಲಾ ಜ್ಯೋತಿಯಾಗುವಂತೆ, ಕನ್ನಡ ಮುಟ್ಟಿದ ಆಂಗ್ಲವೂ ಕನ್ನಡವಾಗುತ್ತದೆ. ಶತಶತಮಾನಗಳಿಂದ ಕನ್ನಡಿಗರ ಬಾಯಲ್ಲಿ ಬಳಕೆಯಾಗುತ್ತಿರುವ ಸಂಸ್ಕೃತ ಕನ್ನಡತನವನ್ನು ಪಡೆದು, ಕನ್ನಡದೊಡನೆ ಅಭಿನ್ನವೆಂಬಂತೆ ಸೇರಿಕೊಂಡಿದೆ. ಗತಿ, ಸಹಿಸು, ಕಾತರ, ಪೀಡಿಸು, ಮನ, ವರ್ಣನೆ ಮೊದಲಾದ ಪದಗಳು ಕನ್ನಡಕೋಶದ ಅವಿಭಾಜ್ಯವೂ ಅಮೂಲ್ಯವೂ ಆದ ಸ್ವತ್ತಾಗಿವೆ. ಸಮಾಸ ವಿರಹಿತವಾದ ಕನ್ನಡ ಪ್ರತ್ಯಯಗಳನ್ನಂಟಿಸಿದ ಸಂಸ್ಕೃತ ಪದಗಳೆಲ್ಲ ಕನ್ನಡ ಪದಗಳಾಗುತ್ತವೆ, ಕನ್ನಡವಾಗಿ ಬಾಳುತ್ತವೆ; ಇದು ಕುವೆಂಪು ಅವರ ಶೈಲಿಯ ಮರ್ಜಿ.

ಕುವೆಂಪು ಅವರು ಎಂದೂ ಪದಗಳಿಗಾಗಿ ತಿಣುಕಿದವರಲ್ಲ; ಭಾವವೋ ಆಲೋಚನೆಯೋ ಸ್ಫುರಿಸಿತೆಂದರೆ ಮಾತುಗಳು ಪುಂಖಾನುಪುಂಖವಾಗಿ ಅಪ್ರಯತ್ನವಾಗಿ ಹೊರಹೊಮ್ಮುತ್ತವೆ. ಇದು ಸಂಸ್ಕೃತ ಇದು ಕನ್ನಡವೆಂಬ ಅಳುಕಾಗಲೀ ಕೊಕ್ಕರಿಕೆಯಾಗಲೀ ಜಿಹಾಸೆಯಾಗಲೀ ಅವರ ಬಳಿ ಸುಳಿಯುವುದಿಲ್ಲ. ಕರ್ಣಾಹ್ಲಾದಕಾರಿಯಾದ ಲಯದ ಹೊಂದಾಣಿಕೆಯ, ಹಳ್ಳದಿಡುಕಿಲ್ಲದ ಶಯ್ಯೆಯ ಪದಸಂಘಟನೆ ಅವರಿಗೆ ನೈಜವಾದದ್ದು. ಕನ್ನಡವೊ ಸಂಸ್ಕೃತವೊ ಯಾವುದಾದರಾಗಲಿ, ಭಾವರಸಪ್ರಕಟನೆಗೆ ಹಾಗೂ ಆಲೋಚನಾಭಿವ್ಯಕ್ತಿಗೆ ಸಮುಚಿತವಾಗಿ ಜುಕ್ಕನೊದಗಿದರೆ ಸಾಕು. ಶಬ್ದ ಸಂಪನ್ನತೆ ಈ ಕವಿತೆಯ ಹೆಗ್ಗಳಿಕೆ.

ಕನ್ನಡದ ಸಾಹಚರ್ಯದಿಂದ ಸಂಸ್ಕೃತವೂ ಕನ್ನಡದಂತೆ ವರ್ತಿಸುತ್ತದೆಂದು ಮೇಲೆ ಹೇಳಿತು. ಈ ಹೇಳಿಕೆಗೆ ಅನೇಕ ನಿದರ್ಶನಗಳನ್ನೊದಗಿಸಬಹುದು; ‘ಮಹಿಮೆ ಮಹಿಮೆಯ ಕಣ್ಗೆ ಮರೆಯಹುದೆ?’ ‘ಪುಣ್ಯರೂಪದಿಂ ಪಾಪಮೇನುದಿಸುವುದೆ?’ ‘ಕೊಲೆಗೈಯದಿರ್, ತಾಯೆ, ‘ಹಾಲೂಡಿದದೆಯೊಳೆಯೆ ಹಾಲಾಹಲವನು ಗುಳಿ’ ‘ಜಲಮಂ ತಿರಸ್ಕರಿಸಿ ಪೊರಮಟ್ಟ ತಾವರೆಯೆರ್ದೆಗೆ ರವಿಯೆ ಗುರುವೈರಿ ತಾನೆಂತುಟಂತೆ’, ‘ನಾಯ್ಗೆಬಡಿದರದು ಕಚ್ಚಿದಾ ಗಾಯ ಗುಣಮಪ್ಪುದೇಂ’, ‘ವಯಸ್ಸಿಗೇಂ ಪಿರಿತನಮೆ?’ ‘ರಸಿಕಂಗಡವಿ ಸಗ್ಗಕಿಂ ಮಿಗಿಲ್ ಸೊಗಸಲ್ತೆ’, ‘ಮಹತ್ತಿಗೇಂ ಬೆಲೆಯೆ ಪೇಳ್ ಕೊಲೆ?’ ‘ಪ್ರಿಯವಿಯೋಗದ ನೋವಿಗೆಣೆಯುಂಟೆ?’ ‘ವೈರದಿಂ ಧರ್ಮಸಾಧನೆಯಾಗದೈ’, ‘ದುಷ್ಟಂಗೆ ದುಷ್ಟನೆ ಭಯಂ’, ‘ಆವ ಧರ್ಮಕೆ ಸಾವನಪ್ಪುವೆವೂ ಪೊರೆವುದಾ ಧರ್ಮಮೀ ಲೋಕಂ’ – ಇವುಗಳಲ್ಲಿ ಮೊದಲನೆಯ ಉದಾಹರಣೆ ಯನ್ನೇ ಪರಿಶೀಲಿಸಬಹುದು. ಅಲ್ಲಿರುವ ಪದಗಳು ಮುಖ್ಯವಾಗಿ ನಾಲ್ಕು: ಮಹಿಮೆ, ಕಣ್ಣೆ, ಮರೆಯಹುದೆ. ಅವುಗಳಲ್ಲಿ ‘ಮಹಿಮೆ’ ಮಾತ್ರ ಸಂಸ್ಕೃತ. ಅದು ಸಂಸ್ಕೃತವೆಂದು ಗೊತ್ತಾಗುವುದು ಪಂಡಿತರಿಗೆ ಮಾತ್ರ. ಆ ‘ಮಹಿಮೆ’ ಪದದಲ್ಲಿಯೂ ಕನ್ನಡದ ಧ್ವನಿಶಾಸ್ತ್ರಕ್ಕೆ ವಿದೇಶೀಯವಾದ ವರ್ಣ ಯಾವುದೂ ಇಲ್ಲ. ಅದರಲ್ಲಿಯೂ ಆ ಪರಿಸರಣದಲ್ಲಿ ಕೊನೆಯ ಮೂರು ಕನ್ನಡ ಪದಗಳೊಡನೆ ಆ ಸಂಸ್ಕೃತ ಪದ ಓರಣವಾಗಿ ಸೇರಿಕೊಳ್ಳುತ್ತದೆ. ‘ದುಷ್ಟಂಗೆ ದುಷ್ಟನೆ ಭಯಂ’ ಎಂಬ ಮತ್ತೊಂದು ಉದಾಹರಣೆಯನ್ನು ತೆಗೆದುಕೊಳ್ಳಬಹುದು. ಪ್ರತ್ಯಯ ವಿನಾ, ಇಲ್ಲಿಯ ಪದಗಳೆಲ್ಲ ಸಂಸ್ಕೃತವೆ! ಆದರೆ ಎಂಥ ನಿರಕ್ಷರಕುಕ್ಷಿಗೂ ಆ ಹೇಳಿಕೆ ಸ್ಪಷ್ಟವಾಗಿ ಗ್ರಹಿಕೆಯಾಗುತ್ತದೆ. ‘ದುಷ್ಟ’ ‘ಭಯ’ ಈ ಎರಡು ಪದಗಳು ಅವನ ದಿನಬಳಕೆಯಲ್ಲಿ ಬೆರೆತುಹೋಗಿದೆ. ಆದ್ದರಿಂದ ಇವು ಕೇಶಿರಾಜನ ಅರ್ಥದಲ್ಲಿ ತತ್ಸಮ ಗಳಾಗಿವೆ. ಹೀಗೆಯೇ ಕೆಳಗಣ ವಾಕ್ಯವೃಂದ ಬಿಡಿ ಪದಗಳಿಂದ ಸಮನಾದ ಶಯ್ಯೆಯಿಂದ ಕನ್ನಡತನವನ್ನು ಮೆರೆದಿದೆ.

ದೇಶ ಕೋಸಲಮಿಹುದು ಧನ ಧಾನ್ಯ ಜನ ತುಂಬಿ
ಸರಯೂ ನದಿಯ ಮೇಲೆ. ಮೆರೆದುದು ವಿಷಯಮಧ್ಯೆ
ರಾಜಧಾನಿ ಅಯೋಧ್ಯೆ, ರಮಿಸುವಿಂದ್ರಿಯ ಸುಖದ
ನಡುವಣಾತ್ಮಾನಂದದಂತೆ.

ಕುವೆಂಪು ಅವರ ಶೈಲಿ ಇದ್ದಕ್ಕಿದ್ದಂತೆಯೇ ಸಂಸ್ಕೃತಮಯವಾಗುತ್ತದೆ; ಆಗ ಓದುಗನನ್ನು ಅಪರಿಚಯ ಪ್ರಪಂಚಕ್ಕೆ ಕೊಂಡೊಯ್ದಂತಾಗುತ್ತದೆ. ಆದರೂ ಓದುಗ ಲಯದ ಬೆಡಗಿಗೆ ನಾದಮಾಧುರ್ಯಕ್ಕೆ ಪ್ರಾಸದ ಕುಣಿತಕ್ಕೆ ಲಲಿತವರ್ಣಗಳ ಲಾಲಿತ್ಯಕ್ಕೆ ಬೆರಗಾಗುತ್ತಾನೆ; ಇಲ್ಲಿ ಸಂಸ್ಕೃತವೂ ಅಪೇಕ್ಷಣೀಯವಾಗುತ್ತದೆ :

ರಮಣೀಯ
ವೃಕ್ಷಸಂಕುಲ ವಸನ ಶೋಭೆಯಿಂ, ಕಮನೀಯ
ಕುಸುಮ ಕಿಸಲಯರಾಜಿ ರಾರಾಜಿಸುವ ದಿವ್ಯ
ಸೌಂದರ್ಯದಿಂದ, ಕೋಟಿ ಪಕ್ಷಿ ಕಲಕಲ ತುಮುಲ
ಮಾಧುರ್ಯದಿಂದ, ಪುಣ್ಯಗಣ್ಯ ಮಂದಾಕಿನಿಯ
ವಾಹಿನಿಯ ಕಂದರ ಕ್ರೀಡಾ ವಿಲೋಲತೆಯ
ನೀಲ ಲೀಲಾಶೀಲ ಸಲಿಲ ಕಲ್ಲೋಲದಿಂದ                        ೧-೭-೨೯/೩೫

ಆದರೆ ಭಾವತೀವ್ರತೆ ಮತ್ತು ಭಾವಮಾಂದ್ಯಗಳನ್ನು ಒಂದೇ ವಾಕ್ಯದಲ್ಲಿ ಪ್ರಕಟಿಸುವಾಗ ಪೂರ್ವಾರ್ಧ ಸಂಸ್ಕೃತಮಯವಾಗಿಯೂ ಉತ್ತರಾರ್ಧ ಕನ್ನಡವಾಗಿಯೂ ಹರಿಯುತ್ತದೆ :

ಚಿತ್ರಭಾನುಗ್ರಸ್ತ ಚೈತ್ರಸುಂದರ ಮಹಾ
ಚಂದನ ಶ್ರೀಗಂಧ ಕಾನನೋಜ್ವಲನನಾ
ದೈತ್ಯೇಂದ್ರನಂ ನೋಡಿ ಕಂಡಿದಿರೇಳ್ದುಪೋಗಿ
ಬಯಸಿದನು ಸೊಗಬರವನಾ ತಾಟಕಾಸುತಂ

ಎರಡು ಭಾಷೆಗಳನ್ನೂ ಕವಿ ನಿರ್ಭಯವಾಗಿ ನಿರಾಯಾಸವಾಗಿ ಒಂದೇ ಭಾವದ ಅಭಿವ್ಯಕ್ತಿಗಾಗಿ ಬಳಸಬಲ್ಲರು. ಮಹಾದ್ರುತಗತಿಯಲ್ಲಿ ಸಾಗಬಲ್ಲವರು ಹಠಾತ್ತನೆ ಮಂದ್ರಗತಿ ಯಲ್ಲಿ ಚಲಿಸಬಲ್ಲರು. ಈ ಇಚ್ಛಾಗಮನ ಆತ್ಮಪ್ರತ್ಯಯವುಳ್ಳ ಮಹಾಸಾಹಸಿಗೆ ಮಾತ್ರ ಸಾಧ್ಯ.

ಅವರು ಸಂಸ್ಕೃತೀಕರಣಗೊಂಡ ಕನ್ನಡದಲ್ಲಿ ಎಷ್ಟು ಲೀಲಾಜಾಲವಾಗಿ ಬರೆಯಬಲ್ಲರೋ ಅಚ್ಚಗನ್ನಡದ ಕಡೆಗೆ ಅವರ ಮನಸ್ಸು ವಾಲಿದಾಗ ಸಂಸ್ಕೃತ ಶಬ್ದಗಳು ತಾವಾಗಿಯೇ ಮರೆಯಾಗುತ್ತವೆ; ಅಥವಾ ಮಿಂಚಿ ಮಾಯವಾಗುತ್ತವೆ. ಕನ್ನಡ ಎಂಥ ಎತ್ತರಕ್ಕಾದರೂ ಏರಬಲ್ಲುದು ಭಾವಸೂಕ್ಷ್ಮತೆಗಾಗಲಿ ವರ್ಣನೆಗಾಗಲಿ ಕಥನ ಕಲೆಗಾಗಲಿ ಅದು ಸಶಕ್ತವಾಹನವಾಗಬಲ್ಲುದೆಂಬುದನ್ನು ಕಾವ್ಯದುದ್ದಕ್ಕೂ ತೋರಿಸಿಕೊಟ್ಟಿದ್ದಾರೆ.

ಕಯ್ ಕಾಲ್ ಮೊಗಂ ತೊಳೆದರುಂಡರ್ ಗುಹನ
ಕೊಟ್ಟ ಬುತ್ತಿಯನಾಸರಂಗಳೆಯೆ ಮಲಗಿದರ್
ತೀರದೆಳಗರುಕೆ ಹಾಸಿನೊಳಲ್ಲಿ, ಕರಿನೆಳಲ
ಹಿರಿಕೊಡೆವಿಡಿದ ಹೆಮ್ಮರದ ಬುಡದಲ್ಲಿ ತಿರೆತಾಯ
ತಣ್ಪು ಮಡಿಲಲ್ಲಿ.                                        ೧೭-೧೦೦/೧೦೪

*

ಹಿಂಡು ಹಿಂಡಾಗಿ ಬಂಡುಣಲೆಂದು
ತೇರುಗೊಂಡಲರ ಸಂತೆಗೆ ನೆರೆದು, ಮೊರೆದುಲಿವ
ನಸರಿ ಮೇಣ್ ತುಡುವೆ ಮೇಣ್ ಹೆಜ್ಜೇನ್ನೊಣಂ ಮೇಣ್
ಅಲರ್ವಕ್ಕಿಗಳ್ ಮತ್ತೆ ಕೊಂಚೆಯಂಚೆಗಳಿಮ್ಪು
ಜೋಗುಳವನುಲಿದಾಡಿದಳ್                            ೧-೭-೧೦೮/೧೧೨

ಎಂಥ ಗಹನ ತತ್ವವನ್ನಾಗಲೀ ಮಹದಾಲೋಚನೆಯನ್ನಾಗಲೀ ಒಂದೆರಡು ಅಡಕನುಡಿ ಗಳಲ್ಲಿ ಭಟ್ಟಿಯಿಳಿಸಬಲ್ಲರು: ‘ಹಣ್ಣಿಗೆಳಸಿದ ಕಣ್ಗೆ ಹುಳಿ ಸಿಡಿದವೋಲಾಯ್ತು’; ‘ಹೊಲೆಗೆ ಹೊಲೆ ಮಡಿಯಲ್ತು; ಕೊಲೆಗೆ ಕೊಲೆ ಪಡಿಯಲ್ತು’; ‘ನೆಳಲಿಗೇನ್ ನಡೆವವನ ತೊಂದರೆಯೆ?’ ‘ಕಯ್ಯೆ ಸಾಲ್ವುದಕೆ ಕಯ್ದು ಹಂಗೇಕೆ?’ ‘ತಮ್ಮೊಳಗೆ ತಮಗೆ ನೆಚ್ಚಿಲ್ಲದವರಿಗೆ ಹೆರರ ಮೆಚ್ಚುಗೆಯ ಕೆಚ್ಚಿರಲೆವೇಳ್ಕುಂ.’

ವಿಕಾರವಿಕಟತೆಗಳು ತಲೆದೋರದಂತೆ, ನಾದಮಾಧುರ್ಯಕ್ಕೆ ಭಂಗಬರದಂತೆ, ಅಸಮತೆ ಕ್ಲಿಷ್ಟತೆಗೆಡೆಗೆಡದಂತೆ, ಎರಡರ ಸಮ್ಮಿಲನದಿಂದ ಹೊಸ ರಸಾಯನ ಸಂಘಟಿಸುವಂತೆ ಹಳಗನ್ನಡ ಹೊಸಗನ್ನಡಗಳನ್ನು ಸಂಲಗ್ನಗೊಳಿಸುವುದರಲ್ಲಿ ಕವಿ ವಿಶೇಷ ಕಲಾಕೌಶಲವನ್ನು ತೋರಿಸಿ, ಹೊಸ ವಿಕ್ರಮವನ್ನು ಸಾಧಿಸಿದ್ದಾರೆ. ಹಳಗನ್ನಡದ ಹಾಳತವಾದ ಬೆರಕೆಯಿಂದ ಶೈಲಿಗೆ ಬಿಗಿ ಬನಿಗಳು ಸಮನಿಸುವುದಲ್ಲದೆ, ಅಲೌಕಿಕವಾದ ವಾತಾವರಣ ನಿರ್ಮಾಣಗೊಳ್ಳು ತ್ತದೆ. ಆ ಸಮ್ಮಿಶ್ರಭಾಷೆ ಓದುಗರನ್ನು ಮಾನಸಿಕವಾಗಿ ಇದ್ದಕ್ಕಿದ್ದಂತೆ ಕಲಿಯುಗದಿಂದ ತ್ರೇತಾಯುಗಕ್ಕೆ ವರ್ಗಾಯಿಸುತ್ತದೆ; ಅದನ್ನು ಬಳಸುವ ಜನ ಅವರ ದೃಷ್ಟಿಯಲ್ಲಿ ಅಪ್ರಾಕೃತರಾಗುತ್ತಾರೆ; ಆ ಕಾವ್ಯ ಪ್ರಪಂಚದಲ್ಲಿ ನಡೆಯುವ ಘಟನೆಗಳು ಸತ್ಯವಾಗುತ್ತವೆ. ಅಮೂರ್ತತ್ವಕ್ಕೆ ಮೂರ್ತತ್ವವನ್ನು ಕೊಡುವಾಗ ಕವಿ ಹಳಗನ್ನಡ ಹೊಸಗನ್ನಡಗಳ ನಡುವೆ ಗೆರೆಯೆಳೆಯುವುದಿಲ್ಲ. ಭಾಷೆ ಯಾವುದಾದರೇನು, ಅನುಭವಾಭಿ ವ್ಯಕ್ತಿಯೇ ಅವನ ಪರಮಗಂತವ್ಯ. ತೋಂಟದೊಳ್, ನೆಲಸಿರ್ದ, ಇತ್ತಣ್ಗೆ, ಪರ್ವತಂ ಬೋಲ್ ನಿಲ್, ಅವಮಾನಮಾದತ್ತು, ನೆಗಳುವಯ್, ಪೆರ್ಮೆ, ಇದಿರೆಳ್ದುವೋಗಿ, ಪೆಣಂ, ಪುಡುಕಿದರ್, ಬರ್ದಿಕ್ಕುವೆನ್, ಪರ್ದು, ಪುಲ್ಲೆ, ಪಲ್ – ಇಂಥ ಹಳಗನ್ನಡ ಪ್ರಯೋಗಗಳು ಹೆಜ್ಜೆ ಹೆಜ್ಜೆಗೂ ಗೋಚರವಾಗುತ್ತವೆ. ಅನುಭವ ಅಲೌಕಿಕವಾಗಿದ್ದು, ಭಾವ ತೀವ್ರವಾಗಿದ್ದಾಗ ಕವಿ ಪ್ರತಿಭೆ ತನಗುಚಿತವಾದ ಭಾಷೆಯನ್ನು ಹುಡುಕಿಕೊಳ್ಳುತ್ತದೆ, ಸೃಷ್ಟಿಸಿಕೊಳ್ಳುತ್ತದೆ. ಭಗವಂತ ತನ್ನ ಆವಿರ್ಭಾವಕ್ಕೆ ಒಂದೊಂದು ಯುಗದಲ್ಲಿ ಒಂದೊಂದು ರೂಪ ತಳೆದಂತೆ ಭಾವಾಲೋಚನೆಗಳು ಯಥೋಚಿತವಾದ ಗಾತ್ರವನ್ನು ಪಡೆಯುತ್ತವೆ. ಅನೇಕ ಕಡೆ ಹೊಸಗನ್ನಡವೂ ಹಳಗನ್ನಡದಂತೆ ವರ್ತಿಸುತ್ತದೆ. ಹೀಗೆ ಎರಡರ ಸಮ್ಮಿಲನದಿಂದ ಹೊಸದೊಂದು ಮಹಾಕಾವ್ಯ ಭಾಷೆಯನ್ನು ಸೃಷ್ಟಿಸಿದ ಕೆಚ್ಚು ಕುವೆಂಪು ಅವರ ವೈಶಿಷ್ಟ್ಯ.

ಸಕಲ ಕಾವ್ಯಪ್ರಕಾರಗಳ ಬಹುಮುಖ ಶೈಲಿ ಈ ಮಹಾಕಾವ್ಯದಲ್ಲಿ ಸಂಗಮಗೊಂಡು ಏಕಪ್ರವಾಹವಾಗಿ ಹರಿದಿರುವುದನ್ನಿಲ್ಲಿ ಗಮನಿಸಬಹುದು. ಇದರಲ್ಲಿ ಭಾವಗೀತೆ, ಕಥನಕವನ, ವರ್ಣನ ಕಾವ್ಯ, ನಾಟಕ ಹಾಗೂ ಭಾಷಣ ಕಲೆಗಳು ಸಮಾವೇಶಗೊಂಡಿವೆ. ಹಾಸ್ಯದ ಸರಸಿಯಲ್ಲಿ ಈಜಾಡಿ ಮನಃಕ್ಲೇಶವನ್ನು ಪರಿಹರಿಸಿಕೊಳ್ಳಬಹುದು; ಕರುಣರಸದ ಗಂಗೆಯಲ್ಲಿ ಮಿಂದು ಪರಿಶುಭ್ರವಾಗಬಹುದು; ವೀರಾದಿ ವೀರರ ಶೌರ್ಯ ಪೌರುಷಗಳ ಸ್ಫೂರ್ತಿಯಿಂದ ಕಲಿತನದ ಪಡಿಮೆಯಾಗಬಹುದು; ಅಧ್ಯಾತ್ಮ ಶಿಖರಗಳನ್ನೇರಿ ದರ್ಶನರಸಪಾನದಿಂದ ಅಮೃತತ್ವದ ಕಡೆಗೆ ಮುಖವಾಗಬಹುದು; ಕುಳಿತೆಡೆಯಿಂದಲೇ ನಿಸರ್ಗದ ಚೆಲುವುದಾಣಗಳಲ್ಲಿ ವಿಹರಿಸಬಹುದು; ಜಗಜ್ಜೀವನವನ್ನು ನಿಯಂತ್ರಿಸುತ್ತಿರುವ ಮಹದನುಭವಗಳ ಮತ್ತು ಮಹದಾಲೋಚನೆಗಳ ಸಂಗ್ರಹಾಲಯದಲ್ಲಿ ನಿರಂತರವಾಗಿ ಉಪಾಸನಾನಿರತರಾಗಬಹುದು. ಈ ಎಡೆಗಳಲ್ಲೆಲ್ಲ ಶೈಲಿ ಕಾಮರೂಪಿಯಾಗಿ ವಿಹರಿಸುತ್ತದೆ. ಪರಿಸರಣ ಸನ್ನಿವೇಶಗಳಿಗನು ಗುಣವಾದ ಹಿಗ್ಗುಕುಗ್ಗುಗಳಿಂದ ಬೆಡಗುಬಿನ್ನಾಣಗಳಿಂದ, ಗತ್ತುಗಮ್ಮತ್ತುಗಳಿಂದ ವಾಕ್ಯರಚನೆ ನೂರಾರು ರೂಪ ಪರಿಜುಗಳನ್ನು ಪಡೆಯುತ್ತದೆ. “ಪನಿ ಕಡಲ್ ಕಿಡಿ ಸಿಡಿಲ್” ಎಂಬ ಕಿರುನುಡಿಗಳ ಮಾಲೆಯಿಂದ ಹಿಡಿದು ಒಂದೇ ಸಮನೆ ಉಸಿರುಕಟ್ಟಿ ಅದೇತಾನೆ ಮಹದ್ಭಾವನೆ ಗಳನ್ನು ಪಡಿಮೂಡಿಸುವ ಮಹೋಪಮೆಗಳನ್ನೊಳ ಗೊಂಡ ಹತ್ತಾರು ಸಾಲುಗಳ ಮಹಾವಾಕ್ಯದ ತನಕ ಇಲ್ಲಿಯ ವಾಕ್ಯರಚನೆ ಬೆಳೆದಿದೆ. ಹಾಗೆಯೇ ಭಾವತೀವ್ರತೆಗೆ ತಕ್ಕಂತೆ ಆಲೋಚನಾಸರಣಿಗನುಗುಣವಾಗಿ ಅವುಗಳ ಪ್ರಾಮುಖ್ಯತೆಯನ್ನನುಸರಿಸಿ ವಾಕ್ಯಾವಯವ ಜೋಡಣೆ ಸಂಪ್ರದಾಯ ವಿರುದ್ಧವಾದ ಹೊಸ ನಿಯಮವನ್ನು ಸೃಷ್ಟಿಸಿಕೊಳ್ಳುತ್ತದೆ.

ಪೂರ್ವೋಕ್ತ ಲಕ್ಷಣಗಳಿಗೆ ಕಣ್ಣಾಡಿಸಿದೆಡೆಗಳಲ್ಲೆಲ್ಲ ಲಕ್ಷ್ಯಗಳು ದಂಡೆದಂಡೆಯಾಗಿ ಸಿಗುತ್ತವೆ. ಕೇವಲ ನಿದರ್ಶನಾರ್ಥವಾಗಿ ಒಂದೆರಡು ಉದಾಹರಣೆಗಳನ್ನಾಯ್ದುಕೊಡು ಲಕ್ಷ್ಯಲಕ್ಷಣಗಳನ್ನು ಸಮನ್ವಯಗೊಳಿಸಬಹುದು. ಇತರ ಲಲಿತ ಕಲಾವಿದರ ಹಿರಿಯ ಗುಣಗಳನ್ನು ತನ್ನಲ್ಲಿ ಗರ್ಭೀಕರಿಸಿಕೊಂಡ ಕವಿ ಮಾತ್ರ ಅತ್ಯುಚ್ಚಕಲ್ಪನಾಗುತ್ತಾನೆ. ಚಿತ್ರಕಾರನ ಭಾವಾಲೋಚನೆಗಳು ವರ್ಣವರ್ಣಗಳಾಗಿ ರೇಖೆರೇಖೆಗಳಾಗಿ ಹೊರಹೊಮ್ಮುವಂತೆಯೇ, ಆ ವರ್ಣರೇಖೆಗಳು ಕಾವ್ಯದಲ್ಲಿ ಶಬ್ದರೂಪದಲ್ಲಿ ಅಭಿವ್ಯಕ್ತಗೊಳ್ಳಬೇಕು. ಕವಿಯ ಲೇಖನಿ ಚಿತ್ರಕಾರನ ಕುಂಚವಾಗಿ, ಅವನು ಚಿತ್ರಿಸುವ ಅಥವಾ ಶಿಲ್ಪಿಸುವ ವ್ಯಕ್ತಿ ಓದುಗನ ಕಣ್ಣಿಗೆ ಕಟ್ಟಿದಂತಿರಬೇಕು; ಅವನ ಕಣ್ಮುಂದೆ ನಿಂತಂತಿರಬೇಕು. ಮಂಥರೆಯ ಚಿತ್ರಣಾವಸರದಲ್ಲಿ ಶಿಲ್ಪಿ ಚಿತ್ರಕಾರರಿಬ್ಬರೂ ಕವಿಕರ್ಮದಲ್ಲಿ ಭಾಗಿಗಳಾದಂತೆ ತೋರುತ್ತದೆ :

ಕುಡುಬಿಲ್ಲು ಬಾಗಿದ ಮೈಯ
ತೊನ್ನ ಬೆಳ್ಗಲೆವಿಡಿದ ಕರ್ರನೆಯ ಕುಬ್ಜತೆಯ,
ಗೂಳಿ ಹಿಣಲಿನವೋಲು ಗೂನುವುಬ್ಬಿದ ಬೆನ್ನ
ಸುಕ್ಕು ನಿರಿನಿರಿಯಾಗಿ ಬತ್ತಿದ ತೊವಲ್‌ಪತ್ತಿ
ಬಿಗಿದೆಲ್ವುಗೂಡಿನಾ ಶಿಥಿಲ ಕಂಕಾಲತೆಯ
ಪಲ್ಲುದುರಿ ಬೋಡಾದ ಬಚ್ಚುಬಾಯಿಯ, ಕುಳಿಯ
ಕೆನ್ನೆಗಳ, ದಿಟ್ಟಿಮಾಸಿದ ಕಣ್ಣ ಕೋಟರದ,
ಕರ್ಬುನ ಮೊರಡುಮೊಗದ, ಕೂದಲುದುರಿದ ಬೋಳು
ಪುರ್ಬಿನ ವಿಕಾರದಾ, ಬೆಳ್ವಕ್ಕಿತಿಪ್ಪುಳೆನೆ
ಮಂಡೆಯಂ ಮುತ್ತಿ ಕೆದರಿದ ಬೆಳ್ಳನೆಯ ನವಿರ
ಅಸ್ಥಿಪಂಜರದಂತೆವೋಲಸ್ಥಿರ ಸ್ಥವಿರೆಯಂ
ಕಂಡೊಡನೆ ಕೈಕೆ ನಡೆದಳ್ ಬಳಿಗೆ………                        ೧-೧-೫೪೨/೫೫೪

ಇಲ್ಲಿ ಒಂದೊಂದು ಶಬ್ದವೂ ಚಿತ್ರವಾಗಿ ಮಂಥರೆಯ ವಿಕಾರತೆಯನ್ನು ಮನಮುಟ್ಟಿಸು ವಂತಿದೆ. ನೇರವಾಗಿ ಹೃದಯವನ್ನು ತಟ್ಟುವ ಈ ನುಡಿಮೋಡಿಗೆ ವ್ಯಾಖ್ಯಾನ ಅನಗತ್ಯ.

ನಾಟಕೀಯತೆ ಮಹಾಕಾವ್ಯದ ವಿಶಿಷ್ಟ ಲಕ್ಷಣಗಳಲ್ಲೊಂದು. ಅದು ಕ್ರಿಯೆಯಲ್ಲಿ ವ್ಯಕ್ತವಾಗುವಂತೆ ಸಂಭಾಷಣೆಯಲ್ಲಿಯೂ ಒಡಮೂಡುತ್ತದೆ. ಮಹದ್ಘಟನೆಗಳ ಹಿನ್ನೆಲೆಯಲ್ಲಿ ಅವುಗಳಿಗೆ ಪೋಷಕವಾಗುವಂತೆ ಪಾತ್ರಗಳ ಬಗೆಯನ್ನು ಬಯಲಿಸುವ ಸಾಧನ ಈ ಸಂಭಾಷಣೆ. ಒಮ್ಮೊಮೆ ಅದು ಮುಂದಿನ ಮಹಾಘಟನೆಗಳಿಗೆ  ಮುನ್ಸೂಚಿಯಾಗಿ, ಅದಕ್ಕೆ ಉಚಿತವಾದ ವಾತಾವರಣವನ್ನು ಸೃಷ್ಟಿಸುತ್ತದೆ. ವೇದಿಕೆಯನ್ನು ಸಿದ್ಧಗೊಳಿಸುತ್ತದೆ. ಜೊತೆಗೆ ಶೈಲಿಯ ತಿರುವಿನಿಂದ ಓದುಗರ ಮನಸ್ಸು ಬೇಸರಿಕೆಗೆಡೆಯಾಗದೆ ಸದಾ ಜಾಗೃತವಾಗಿರುವಂತಾಗುತ್ತದೆ. ರಾವಣನ ಅಂತಿಮ ಕಾಲದಲ್ಲಿ ಅವನಿಗೂ ಮಂಡೋದರಿಗೂ ನಡುವೆ ನಡೆಯುವ ಸಂಭಾಷಣೆ ಈ ದೃಷ್ಟಿಯಿಂದ ಅತ್ಯಂತ ಮನೋಜ್ಞವಾಗಿದೆ, ಧ್ವನಿಪೂರ್ಣವಾಗಿದೆ :

“ಬಿಡು, ಮಹಾರಾಣಿ ನೀಂ,
ಆರ ನಂಬಿಸಿ ನಿನಗೆ ಆಗಬೇಕಾದುದೇನ್,
ಲಂಕೇಶ್ವರಿಗೆ? …..”
“ಸಾರ್ಥಸಾಧನೆಗೆ! ರಕ್ಷಿಸಲ್,
ನನ್ನ ಮಾಂಗಲ್ಯಮಂ!…..”
“ಕೈಲಾಸ ಸುಸ್ಥಿರಂ
ಮಾಂಗಲ್ಯಮೇಗಳುಂ ನಿನಗೆ? …..”
“ಕೈಲಾಸಮುಂ
ನಿನ್ನ ಕೈಯಿಂದಲುಗಿತಲ್ತೆ?….”
“ಅಲುಗಿತು ವಲಂ!…..
ರಾಮನರ್ಧಾಂಗಿಯಂ ತಾನೆ ಕಪ್ಪಂಗೊಟ್ಟು
ತಪ್ಪೊಪ್ಪಿಕೊಳ್ವೆನ್ ಕ್ಷಮಾಭಿಕ್ಷೆಯಂ ಬೇಡಿ….್ಝ”

ರಾವಣನ ಹೃದಯ ಪರಿವರ್ತನೆಯೂ ಸೀತೆಯ ಮಹಾಮಹಿಮೆಯೂ ಮಂಡೋದರಿಯ ಪಾತಿವ್ರತ್ಯವೂ ವಿಧಿಯ ಅಣಕವೂ ಈ ನಾಲ್ಕು ಮಾತುಗಳಲ್ಲಿ ಸುವ್ಯಕ್ತವಾಗಿದೆ. ಒಂದೊಂದು ಪದವೂ ಕನಿಕರದಿಂದ ಮಿಡಿಯುತ್ತದೆ. ಸೀತಾರಾಮ ಕ್ಷೇಮಾಕಾಂಕ್ಷಿಯಾದ ಓದುಗನ ಮನಸ್ಸು ನಿಟ್ಟುಸಿರೆಳೆದು ಸಮಾಧಾನಗೊಳಿಸುತ್ತದೆ.

ಪ್ರಕೃತಿ ವ್ಯಾಪಾರ ವರ್ಣನೆಯ ಸಂದರ್ಭದಲ್ಲಿ ಕುವೆಂಪು ಅವರ ಕಲ್ಪನೆ ಶಬ್ದ ವಿಮಾನದಲ್ಲಿ ಗಗನವಿಹಾರಿಯಾಗುತ್ತದೆ. ಸಾಮಾನ್ಯಚಕ್ಷುವಿಗೆ ನಿಲುಕದ ನಿಸರ್ಗ ವ್ಯಾಪಾರಗಳು ಕವಿಯ ಪ್ರತಿಭಾಚಕ್ಷುವಿಗೆ ಅಂಗೈನೆಲ್ಲಿಯಂತೆ ಸ್ಪಷ್ಟ ಗೋಚರವಾಗುತ್ತವೆ. ಆ ಅಮೂರ್ತಾನುಭವದ ಅಭಿವ್ಯಕ್ತಿಗೆಂದೆ ಕುವೆಂಪು ಅವರ ಭಾಷೆ ಹದಗೊಂಡಿದೆ. ಕವಿಯ ಅನುಭವ ಚಿತ್ರಗಳನ್ನು ಸಹೃದಯರ ಮನಸ್ಸಿನಲ್ಲಿ ನಾಟಿಸುವ ಅಥವಾ ಮುದ್ರೆಯೊತ್ತುವ ಶಕ್ತಿ ಆ ಭಾಷೆಗಿದೆ. ಹೇಮಂತ ಋತುವಿನ ಪಂಚವಟಿಯ ವರ್ಣನೆಯಲ್ಲಿ ಕವಿಯ ಕಾಣ್ಕೆಯೇ ಶಬ್ದಶಕ್ತಿಯಾಗಿ ಪರಿವರ್ತನಗೊಂಡು ಅಭಿರಾಮವಾಗಿರುವುದನ್ನು ನೋಡಬಹುದು :

ಮೇಣ್ ಮಳಲೆ
ಹೊಗೆಯಾಯ್ತೆ, ನೊರೆಯೆ ಇಬ್ಬನಿಯಾಯ್ತ ತಾನೆಂಬ
ಕಡಲಾಗೆ ದಟ್ಟಿತ್ಯೆಕಿಲ್ ಸೋನೆ, ಬಳಿಯಿರ್ದುಮಾ
ಬಳಸಿರ್ದ ಮುಳ್ಳಿನೊಡ್ಡುಂ ಮಂಜಿನೊಳ್ ಮಸುಳೆ
ತೆಪ್ಪವಾದುದು ತೇಲ್ದುವವರಾಶ್ರಮಂ!                                      ೧-೧೧-೧೩೪-೧೩೮

ರೂಪಕ ಸಂಪತ್ತಿಯಿಂದ ಉಪಮಾವೈಭವದಿಂದ ಪ್ರತಿಮಾ ಶ್ರೀಮಂತತೆಯಿಂದ ಕುವೆಂಪು ಅವರ ಶೈಲಿ ಮಹೋನ್ನತವಾಗಿದೆ. ಎಲ್ಲಿಯೂ ಹಳ್ಳದಿಡುಕುಗಳಿಲ್ಲ, ಅಸಮತೆಯಿಲ್ಲ. ರಿಕ್ತತೆ, ಕುಬ್ಜತೆ ಮತ್ತು ಕೃಶತೆಗಳು ಅದಕ್ಕೆ ಹೊರಗು. ಅದರಲ್ಲಿ ತೇಜಿಯ ಚಟುಲತೆಯಿದೆ, ಐರಾವತದ ಗಾಂಭೀರ್ಯವಿದೆ, ಸಿಂಹದ ಪರಾಕ್ರಮವಿದೆ. ಎಲ್ಲಿಯೂ ಸಂಕೋಚಕ್ಕಾಗಲಿ ಕೃಪಣತೆಗಾಗಲಿ ಎಡೆಯಿಲ್ಲ. ಅದು ಸಾಲಂಕೃತವಾಗಬಲ್ಲುದು, ನಿರಲಂಕೃತವಾಗಿ ವ್ಯವಹರಿಸಬಲ್ಲುದು. ಅದು ಆಡಂಬರ ಮುಕ್ತವಾಗಿ ಉದಾತ್ತವಾಗಿದೆ. ಸ್ಪಷ್ಟತೆ ವಿಶದತೆಗಳು ಧ್ವನಿಭಂಗಕಾರಿಯಾಗಿಲ್ಲ. ಓಜಸ್ಸಿರುವಂತೆಯೇ ಲಾಲಿತ್ಯವಿದೆ. ಪ್ರೌಢವಾಗಿದ್ದರೂ ಪೆಡಸಾಗಿಲ್ಲ. ಲಯ, ನಾದಮಾಧುರ್ಯ ಮತ್ತು ಮೊತ್ತದ ಶೋಭೆಯಿಂದ ಈ ಶೈಲಿ ಈ ಮಹಾಕಾವ್ಯದ ಮಹೋನ್ನತಿಗೆ ಕಾರಣವಾಗಿದೆ.