‘ಕವಿಕ್ರತುದರ್ಶನಂ’ ಎಂದರೇನು? ಎಂದು ನಾನೊಮ್ಮೆ ಶ್ರೀ ಕುವೆಂಪು ಅವರನ್ನು ಕೇಳಿದೆ. ಅದಕ್ಕೆ ಅವರು :

“ಇದನ್ನು ವಿವರಿಸುವುದು ಕಷ್ಟ. ಅದರ ಭಾವವನ್ನು, ಅದರ ಧ್ವನಿಯನ್ನು ಧ್ಯಾನದ ಮೂಲಕ ಅರಿಯುವುದು ಸಾಧ್ಯ. ಆದರೆ ಮಾತಿನ ಪರಿಧಿಯಲ್ಲಿ ಅದರ ಧ್ವನಿಯೆಲ್ಲವನ್ನೂ ತರುವುದು ಕಷ್ಟ. ನಾನು ಹೇಳಿದುದನ್ನು ಅರಿತುಕೊಳ್ಳಬೇಕಾದರೂ ಶಕ್ತಿಬೇಕು. ಸಾಧಕ ರಾದವರು ಮಾತ್ರ ಅರಿತುಕೊಳ್ಳಬಲ್ಲರು. ಏಕೆಂದರೆ ಸಾಧಕರಿಗೆ ನಾನು ಹೇಳುವ ಮಾತಿನ ಅರ್ಥಪೂರ್ಣವಾಗಿ ಹೊಳೆಯುತ್ತದೆ”.

“ಅಗ್ನಿಸೂಕ್ತದಲ್ಲಿ ‘ಕವಿಕ್ರತು’ವಿನ ಪ್ರಸ್ತಾಪ ಬರುತ್ತದೆ. ಕವಿಕ್ರತು ಎಂದರೆ ಅಗ್ನಿ ಎಂದೂ ಅರ್ಥವುಂಟು. ಅಗ್ನಿಯ ವಿಷಯವನ್ನು ಅರಿತುಕೊಂಡರೆ ‘ಕವಿಕ್ರತು’ವಿನ ಅರ್ಥವನ್ನು ಗ್ರಹಿಸಲು ಸುಲಭವಾಗುತ್ತದೆ. ಈ ಅಗ್ನಿಯ ವಿಷಯ ವೇದೋಪನಿಷತ್ತುಗಳಲ್ಲಿ ವಿಸ್ತಾರವಾಗಿ ಸಿಗುತ್ತದೆ. ವೇದಗಳ ಕಾಲದಲ್ಲಿ ಅಗ್ನಿಗೆ ಪರಮಪೂಜ್ಯವಾದ ಸ್ಥಾನವಿತ್ತು. ಇಂದ್ರನನ್ನು ಬಿಟ್ಟರೆ ಅವನನ್ನು ಸ್ತುತಿಸಿರುವಷ್ಟು ಬೇರೆ ಯಾವ ದೇವತೆಯನ್ನೂ ಸ್ತುತಿಸಿಲ್ಲ. ವಿರಾಟ್‌ಶಕ್ತಿಯ ಪ್ರಪ್ರಥಮ ವ್ಯಕ್ತ ಸ್ವರೂಪವೇ ಅಗ್ನಿ.

[1] ಅವನು ಪ್ರತ್ಯೇಕವಾದ ದೇವತೆ ಯಾದರೂ ಎಲ್ಲ ದೇವತೆಗಳನ್ನೂ ಒಳಗೊಂಡಿದ್ದಾನೆ. ಅದನ್ನೇ ಋಷಿಗಳು ನಾನಾ ಹೆಸರು ಗಳಿಂದ ಕರೆಯುತ್ತಾರೆ.[2] ಅವನು ದ್ಯೌಃಪುತ್ರ. ದ್ಯಾವಾಪೃಥಿವಿಯ ಮಗನೆಂದೂ ಹೇಳುವು ದುಂಟು. ಪ್ರಜಾಪತಿ ಅವನನ್ನು ಮಾನವರ ಕಲ್ಯಾಣಕ್ಕಾಗಿ ಭೂಮಿಗೆ ಕಳುಹಿಸಿದನು. ಅವನು ನಿತ್ಯನವೀನ. ಸೂರ್ಯನು ಅವನ ಅಂಶವೆಂದು ಪರಿಗಣಿತನಾಗಿದ್ದಾನೆ. ಅವನು ಅಮರ, ಅಜರ; ಆದರೆ ಮಾನವ ಸಹ ವಾಸಿ, ಮಾನವಸಂಬಂಧಿ. ಮನುಷ್ಯನು ಯಜ್ಞದಲ್ಲಿ ಅರ್ಪಿಸುವ ಹವಿಸ್ಸನ್ನು ದೇವತೆಗಳಿಗೆ ಕೊಂಡೊಯ್ಯುತ್ತಾನೆ. ಮರ್ತ್ಯವನ್ನೂ ಅಮರ್ತ್ಯವನ್ನೂ ಕೂಡಿಸುವ, ಅವುಗಳಿಗೆ ಸಂಪರ್ಕವನ್ನುಂಟುಮಾಡುವ ಪ್ರಯತ್ನವೇ ಯಜ್ಞ. ಅಗ್ನಿಯೇ ಸಂಪರ್ಕಾಧಿಕಾರಿ; ಅವನೇ ಯಜ್ಞಾಧಿದೇವತೆ. ಮಾನವರು ಅರ್ಪಿಸುವ ಹವಿಸ್ಸನ್ನು ದೇವತೆಗಳಿಗೆ ಕೊಂಡೊ ಯ್ಯುವುದೇ ಅಲ್ಲದೆ ಅಲ್ಲಿಂದ ದೇವತೆಗಳನ್ನು ಇಲ್ಲಿಗೆ ಕರೆತರುತ್ತಾನೆ. ಆದುದರಿಂದಲೇ ಅವನಿಗೆ ಗೃಹಪತಿ, ಅತಿಥಿ, ಹವ್ಯವಾಹನ, ದಿವೋದಾಸ, ವಿಪ್ರ, ಪುರೋಹಿತ, ಹೋತೃ, ಅಧ್ವರ್ಯು, ರತ್ನಧಾತ, ಮೊದಲಾದ ಹೆಸರುಗಳಿವೆ.[3] ಅವನಿಗೆ ‘ಮಾತರಿಶ್ವಾ’[4] ಎಂದು ಇನ್ನೊಂದು ಹೆಸರಿದೆ. ಸತ್ತವರನ್ನು ಸ್ವರ್ಗಕ್ಕೆ ಕೊಂಡೊಯ್ಯುವುದರಿಂದ ಕ್ರವ್ಯಾದ ಎಂಬ ಹೆಸರೂ ಉಂಟು.

ವೇದಗಳಲ್ಲಿ ಅನೇಕ ದೇವತೆಗಳಿಗೆ ಸಂಬಂಧಿಸಿದ ಮಂತ್ರಗಳು ಇವೆಯಷ್ಟೆ, ಸ್ಥೂಲ ದೃಷ್ಟಿಗೆ ಆ ದೇವತೆಗಳು ಪ್ರಕೃತಿಯ ಶಕ್ತಿಗಳಾಗಿಯೋ ಅಥವಾ ಜಡವಸ್ತುಗಳಾಗಿಯೋ ಕಾಣುತ್ತವೆ. ಆದರೆ ಅವುಗಳನ್ನು ಹೀಗೆ ವ್ಯಾವಹಾರಿಕ ಮಾನದಂಡದಿಂದ ಅಳೆಯಬಾರದು. ಆ ಹೆಸರುಗಳ ಹಿಂದೆ ವಿಶೇಷವಾದ ರಹಸ್ಯಾರ್ಥ ಅಡಗಿದೆ. ಇದನ್ನು ದರ್ಶನ ಧ್ವನಿ ಯೆಂದಾದರೂ ಕರೆಯಬಹುದು. ವೇದಗಳ ಋಷಿಗಳನ್ನು ಕವಿಗಳೆಂದು ಕರೆಯುವುದುಂಟು. ‘ಕವಿ’ ಎನ್ನುವ ಪದದ ಅರ್ಥ ಈಗ ಸಂಕುಚಿತವಾಗಿದೆ. ಭೂತ ಭವಿಷ್ಯತ್ತುಗಳನ್ನು ಕಾಣಬಲ್ಲ ದ್ರಷ್ಟಾರನಿಗೆ ಹಿಂದೆ ಆ ಹೆಸರಿತ್ತು. ಆದುದರಿಂದಲೇ ಅವನನ್ನು ಮಂತ್ರದ್ರಷ್ಟಾರ ಎಂದೂ ಕರೆಯುತ್ತಿದ್ದರು. ಹಾಗೆಯೇ ‘ಮಂತ್ರ’ ಎನ್ನುವ ಪದದ ಅರ್ಥವೂ ಈಗ ಸಂಕುಚಿತವಾಗಿದೆ. ದೈವೀಪ್ರಜ್ಞಾಪ್ರದೀಪ್ತವಾದ ಸೂಕ್ತಗಳಿಗೆ ಹಿಂದೆ ಆ ಹೆಸರಿತ್ತು. ವೇದಗಳ ಋಷಿಗಳೆಲ್ಲರೂ ಇಂಥ ಮಂತ್ರದ್ರಷ್ಟಾರರು. ಪ್ರಕೃತಿಯ ಬಾಹ್ಯಸೌಂದರ್ಯವನ್ನು ವರ್ಣಿಸುವುದು ಅವರ ಉದ್ದೇಶವಾಗಿರಲಿಲ್ಲ. ನಶ್ವರವಾದ ವ್ಯಾವಹಾರಿಕ ಪ್ರಪಂಚದ ಹಿಂದೆ ಗುಪ್ತವಾಗಿ ಪ್ರವಹಿಸುತ್ತಿರುವ ಅವಿನಶ್ವರವಾದ ಋತಧರ್ಮವನ್ನು ಕಾಣುವುದೇ ಅವರ ನಿರಂತರ ತಪಸ್ಸಿನ ಗುರಿಯಾಗಿತ್ತು. ಅವರು ಕಂಡ ದರ್ಶನವೇ, ಅನುಭವ ಪ್ರತ್ಯಕ್ಷವಾದ ಆ ಸತ್ಯವೇ ಮಂತ್ರ ರೂಪದಲ್ಲಿ ವ್ಯಕ್ತಗೊಂಡಿತು. ಅತಿಮಾನಸ ಭೂಮಿಕೆಗಳಿಂದ ಇಳಿದು ಬಂದ ಅತೀಂದ್ರಿಯಸತ್ಯ ಪ್ರತಿಮಾರೂಪದಲ್ಲಿ ಕಾಣಿಸಿಕೊಳ್ಳುತ್ತದೆ.[5] ಅದು ಕೇವಲ ಆಲೋಚನೆಗೆ ನಿಲಕುವಂಥದಲ್ಲ. ಅದು ಅಂತರ್ದೃಷ್ಟಿಗೋಚರವಾದ ದೈವವಾಣಿ. ಆದುದರಿಂದಲೆ ವೇದಗಳನ್ನು ‘ಶ್ರುತಿ’ಗಳೆಂದು ಕರೆಯುವುದುಂಟು.

“ಈ ದೃಷ್ಟಿಯಿಂದ ಅಗ್ನಿ ನಾವು ಹೊರಗೆ ಕಾಣುವ ವಸ್ತು ವಿಶೇಷ ಮಾತ್ರವಲ್ಲ; ಯಜ್ಞದಲ್ಲಿ ತುಪ್ಪ ಮೊದಲಾದುವನ್ನು ಹೊಯ್ದು ಎಲ್ಲರೆದುರಿಗೆ ನಡೆಸುವ ಒಂದು ಕಾರ್ಯವಲ್ಲ, ಕರ್ಮ ಮಾತ್ರವಲ್ಲ. ಇಲ್ಲಿ ಯಜ್ಞವೆಂದರೆ ಆತ್ಮಯಜ್ಞ. ಈಶ ಸಂಕಲ್ಪವೆಂಬ ಅಗ್ನಿ ಈ ಯಜ್ಞಕ್ಕೆ ಸಹಕಾರಿ. ನಮ್ಮ ಬಾಹ್ಯ ಜೀವನದಲ್ಲಿ ಎಂತು ಸದಸತ್ತುಗಳ ಹೋರಾಟ ನಡೆಯುತ್ತಿದೆಯೋ ಅಂತೆಯೇ ನಮ್ಮ ಅಂತರಂಗ ಜೀವನದಲ್ಲಿಯೂ ನಡೆಯುತ್ತಿರುತ್ತದೆ. ಈ ಜೀವನವೇ ಒಂದು ಯಜ್ಞ. ಅನಂತತೆಯ ಕಡೆಗೆ, ಆನಂದದ ಕಡೆಗೆ, ಋತಲೋಕದ ಕಡೆಗೆ ಈ ಜೀವ ಪ್ರಯಾಣ ಮಾಡುತ್ತಿರುತ್ತದೆ. ಆಧ್ಯಾತ್ಮಿಕ ಸತ್ಯದ ಅತಿ ಮಾನಸ ದಿವ್ಯಜ್ಯೋತಿಯ ಅನ್ವೇಷಣೆಯೇ ಆ ಜೀವದ ಗುರಿ. ಋತದ ಪಂಥ, ಸರ್ವಾಂತರ್ಗತವಾದ ಸತ್ಯ ಅಂತರ್ವಾಣಿಗೆ ಮಾತ್ರ ಗೋಚರವಾಗುತ್ತದೆ. ಆದರೆ ಈ ಅನ್ವೇಷಣೆಯ ದಾರಿಯಲ್ಲಿ ಅಚಡಣೆಗಳು ಹಲವಾರು ಇವೆ. ಸತ್ಯದ ದಿವ್ಯಜ್ಯೋತಿಯನ್ನು ನಮ್ಮಿಂದ ಮರೆಮಾಡಲು ಆಸುರೀಶಕ್ತಿಗಳು ಕಾಯ್ದುಕೊಂಡಿರುತ್ತವೆ. ಅವುಗಳಿಂದ ನಮಗೆ ಭಂಗ ಬರದಂತೆ ನೋಡಿಕೊಳ್ಳಲು ದ್ವೆವೀಶಕ್ತಿಯನ್ನು ಆಹ್ವಾನಿಸಬೇಕು. ಅದಕ್ಕೆ ಆತ್ಮಯಜ್ಞ ಎಂದರೆ ಸ್ವಾರ್ಪಣ ಅವಶ್ಯಕ.[6] ಈ ಯಜ್ಞಕ್ಕೆ ಸಂಕಲ್ಪವೆಂಬ ಅಗ್ನಿಬೆಕು. ಈ ಈಶಸಂಕಲ್ಪದ ಅಗ್ನಿಯೇ ನಮ್ಮ ಪುರೋಹಿತನಾಗಿ, ದೇವದೂತನಾಗಿ ನಮ್ಮ ಪ್ರಯಾಣದಲ್ಲಿ ಸಹಾಯ ಮಾಡುತ್ತಾನೆ. ಆ ಸಂಕಲ್ಪ ನಮ್ಮನ್ನು ಅಮೃತತ್ವಕ್ಕೆ[7] ಏರಿಸುತ್ತದೆ. ನಮ್ಮಲ್ಲಿ ದೈವೀಶಕ್ತಿಯ ಅವತಾರವಾಗುತ್ತದೆ. ಜೀವದೇವನಾಗಬೇಕೆಂದು ಹಾರೈಸುವುದೂ[8], ಈ ಜೀವದ ಹಾರೈಕೆಯೇ ಭಗವಂತನ ಅವತಾರವಾಗಿ ಪರಿಣಮಿಸುವುದೂ ಋತನಿಯಮ. ಈ ಋತನಿಯಮಕ್ಕೆ ಅಗ್ನಿ ಅಧಿಪತಿ.[9] ಅವನನ್ನು ‘ಋತದ ಗೋಪಾ’ ಎಂದೂ ಕರೆಯುವುದುಂಟು. ಆದುದರಿಂದಲೇ ಎಲ್ಲ ಪವಿತ್ರ ಕಾರ್ಯಗಳನ್ನೂ ಅಗ್ನಿಸಾಕ್ಷಿಯಾಗಿ ಮಾಡುವುದುಂಟು.

“ಮೇಲೆ ತಿಳಿಸಿದಂತೆ ಅಗ್ನಿ ವಿಶ್ವರೂಪದಿಂದ ವ್ಯಕ್ತವಾದವನು; ವಿಶ್ವತತ್ತ್ವಗಳನ್ನು ತಿಳಿದಿರುವವನು; ವಿಶ್ವಕ್ಕೆ ಮಾರ್ಗದರ್ಶಕನಾದ ಸಾಕಾರ ಪರಮಾತ್ಮ ಅವನು. ಸ್ವಭಾವದಿಂದಲೇ ಅವನು ಜ್ಞಾನಸ್ವರೂಪಿಯಾದುದರಿಂದ, ಜಾತವೇದ[10]ನಾದುದರಿಂದ ಈ ಕಾರ್ಯಗಳನ್ನು ನಿರ್ವಹಿಸಬಲ್ಲವನಾಗಿದ್ದಾನೆ. ಅವನು ಕ್ರಾಂತದರ್ಶಿಯಾದುದರಿಂದ ಅವನಿಗೆ ‘ಕವಿ’[11] ಎಂಬ ಮತ್ತೊಂದು ಹೆಸರೂ ಉಂಟು. ಕ್ರಾಂತದರ್ಶಿ ಎಂದರೆ ಪಾರದರ್ಶಿ; ದೂರದಲ್ಲಿರುವುದನ್ನು ನೋಡಲು ಶಕ್ತನಾದವನು. ಇಂದ್ರಿಯಗಳನ್ನು ಮೀರಿ ಅತಿಮಾನಸ ಭೂಮಿಕೆಯನ್ನು ಪ್ರವೇಶಿಸಿ ಭೂತ ಭವಿಷ್ಯತ್ ಕಾಲಗಳಲ್ಲಿ ನೋಡಬಲ್ಲವನನ್ನು ಕವಿ ಅಥವಾ ದ್ರಷ್ಟಾರ ಎಂದು ಕರೆಯುತ್ತೇವೆ. ‘ಕವಿ’ ಪದ ಬುದ್ಧ್ಯತೀತವಾದ ಜ್ಞಾನವನ್ನು ಸೂಚಿಸುತ್ತದೆ. ಈ ಜ್ಞಾನವೇ ಪ್ರತಿಭಾನ. ಈ ಪ್ರತಿಭಾನದ ಮೂಲಕ ಈ ಲೋಕದ ವಸ್ತುಗಳ ಸ್ವಸ್ವರೂಪ, ಈ ಸ್ವರೂಪದ ಹಿಂದೆ ಅಡಗಿರುವ ಸರ್ವವ್ಯಾಪಕವಾದ ಲೋಕ ಲೋಕಾಂತರಗಳ ತತ್ತ್ವ ಕಾಣುತ್ತದೆ. ಈ ಕಾರಣದಿಂದ ಕವಿಯನ್ನು ಆತ್ಮವಿದನೆಂದೂ ಕರೆಯುವುದುಂಟು. ಋಷಿ[12] ಎಂದರೂ ಇಷ್ಟೇ ಅರ್ಥ. ಋಷಿ ಎಂದರೆ ನಿರೀಕ್ಷಣೆ ಮಾಡುವವನು. ‘ನಾನೃಷಿಃ ಕುರುತೇ ಕಾವ್ಯಂ’ ಎಂಬ ವಚನದ ಅರ್ಥ ಈ ಮೇಲಣ ವಿವರಣೆಯಿಂದ ಸ್ಪಷ್ಟವಾಗುತ್ತದೆ.

“ಅಗ್ನಿಗೆ ‘ಕವಿ’ ಎಂಬ ಹೆಸರಿನ ಜೊತೆಗೆ ‘ಕವಿಕ್ರತು’[13] ಎಂಬ ಹೆಸರೂ ಉಂಟು. ‘ಕೃ’ ಎಂಬ ಧಾತುವಿನಿಂದ ‘ಕ್ರತು’ ಬಂದಿದೆ. ‘ಕೃ’ ಎಂದರೆ ಮಾಡುವ ಎಂದರ್ಥ. ‘ಕ್ರತು’ ಎಂದರೆ ಸಾಮಾನ್ಯವಾದ ಅರ್ಥದಲ್ಲಿ ಕರ್ಮ ಅಥವಾ ಯಜ್ಞ ಎಂದರ್ಥ. ಆದರೆ ವೇದದಲ್ಲಿ ಇದಕ್ಕೆ ಸಂಕಲ್ಪ[14] ಎಂಬ ವಿಶೇಷಾರ್ಥವಿದೆ. ವೇದದಲ್ಲಿ ಈ ಮಾತು ಅನೇಕ ಸಾರಿ ಬರುತ್ತದೆ. ಪರಮೇಶ್ವರನ ಅಥವಾ ಸೃಷ್ಟಿ ಶಕ್ತಿಯ ಸಗುಣ ಸಾಕಾರ ಸ್ವರೂಪನಾದ ಈ ಅಗ್ನಿಯಲ್ಲಿ ಆ ಸೃಷ್ಟಿಶಕ್ತಿಯ ಇಚ್ಛಾಶಕ್ತಿ ಪ್ರಕಟವಾಗುತ್ತದೆ. ಈ ಇಚ್ಛಾಶಕ್ತಿ ಅಥವಾ ಸಂಕಲ್ಪ ಮಾನವನ ಸಂಕಲ್ಪವಾಗಿ ಪರಿಣಮಿಸಿ ಆತನ ಕರ್ಮದ ಹಿಂದಿನ ಪರಿಣಾಮಕಾರಿಯಾದ ಶಕ್ತಿ[15]ಯಾಗುತ್ತದೆ. ಒಟ್ಟಿನಲ್ಲಿ ಕವಿಕ್ರತು ಎಂದರೆ ದ್ರಷ್ಟಾರನ ಇಚ್ಛಾಶಕ್ತಿ ಎಂದರ್ಥ. ಈ ಶಕ್ತಿಯೇ ಅಗ್ನಿ.

“ಈ ಅಗ್ನಿ, ಮಾನವನು ಕೊಡುವುದನ್ನೆಲ್ಲ ದೇವತೆಗಳಿಗೆ ಕೊಂಡೊಯ್ದು ಅವರಿಂದ ಐಶ್ವರ್ಯವನ್ನು ತಂದು ಇವನ ಅಭೀಪ್ಸೆಯನ್ನು ನೆರವೇರಿಸುತ್ತಾನೆಂದು ಮೇಲೆ ಹೇಳಿತಷ್ಟೆ. ಆದರೆ ಈ ಐಶ್ವರ್ಯ ಎಂಥದೆಂಬುದನ್ನು ವಿಚಾರಿಸಬೇಕಾಗಿದೆ. ಆ ಐಶ್ವರ್ಯ ರತ್ನವಲ್ಲ, ವಸ್ತ್ರವಲ್ಲ, ಧಾನ್ಯವಲ್ಲ, ಭೌತಿಕ ವಸ್ತುಗಳಲ್ಲಿ ಒಂದೂ ಅಲ್ಲ. ಇಲ್ಲಿ ಆನಂದವೇ ಐಶ್ವರ್ಯ. ಈ ಭಾವವನ್ನು ಈಶಾವಾಸ್ಯೋಪನಿಷತ್ತಿನ ಈ ಮಂತ್ರದಲ್ಲಿ ಕಾಣಬಹುದು :

ಅಗ್ನೇ ನಯ ಸುಪಥಾ ರಾಯೇ ಅಸ್ಮಾನ್ ವಿಶ್ವಾನಿದೇವ ವಯುನಾನಿ ವಿದ್ವಾನ್
ಯುಯೋದ್ಯಸ್ಮಜ್ಜುಹುರಾಣಮೇನೊ ಭೂಯಿಷ್ಠಾಂ ತೇ ನಮ ಉಕ್ತಿಂ ವಿಧೇಮ(೧೮).

(ಹೇ ಅಗ್ನಿದೇವನೆ, ಅಭಿವ್ಯಕ್ತವಾದ ಎಲ್ಲ ವಸ್ತುಗಳನ್ನು ಬಲ್ಲ ನೀನು ಒಳ್ಳೆಯ ದಾರಿಯಿಂದ ನಮ್ಮನ್ನು ಆನಂದದತ್ತ ಕರೆದೊಯ್ಯು; ಪಾಪದ ವಕ್ರವಿಲೋಭನವನ್ನು ನಮ್ಮಿಂದ ದೂರವಾಗಿಸು. ನಾವು ನಿನಗೆ ಸಂಪೂರ್ಣವಾಗಿ ವಿನತಿಯ ವಚನವನ್ನು ಸಲ್ಲಿಸುತ್ತೇವೆ -ಸಮರ್ಪಣ, ೧-ಪುಟ, ೭೦).

ಈ ‘ರೈ’ ಎಂಬ ಪದವೂ ವೇದೋಪನಿಷತ್ತುಗಳಲ್ಲಿ ಬಹುವಾಗಿ ಬರುತ್ತದೆ. ಇಲ್ಲಿ ಈ ಪದಕ್ಕೆ ಸಾಮಾನ್ಯವಾಗಿ ‘ಸಮೃದ್ದಿ’ ಎಂಬ ಅರ್ಥವಿದ್ದರೂ ‘ಪರಮಾನಂದ’ ‘ಪರಮಶ್ರೀ’ ಎಂಬ ಅರ್ಥವೇ ಮುಖ್ಯವಾದುದು.

ಈ ದರ್ಶನದ ಹಿನ್ನೆಲೆಯಲ್ಲಿ ‘ಶ್ರೀ ರಾಮಾಯಣದರ್ಶನಂ’ ಮಹಾಕಾವ್ಯದ ಮೊದಲನೆಯ ಸಂಚಿಕೆಯನ್ನು ಅಧ್ಯಯನ ಮಾಡಿದರೆ ‘ಕವಿಕ್ರತುದರ್ಶನ’ದ ಭಾವ ಹೊಳೆಯುತ್ತದೆ. ಇಲ್ಲಿಯೂ ಅಗ್ನಿ ಮತ್ತು ಯಜ್ಞಗಳು ಸಂಕಲ್ಪಕ್ಕೆ ಮತ್ತು ಸಂಕಲ್ಪ ಸಾಧನೆಗೆ ಪ್ರತಿಮೆಗಳು ಮಾತ್ರ. ಮೊದಲೇ ಜಾಬಾಲಿ ಋಷಿ ದಶರಥನೊಡನೆ ಹೇಳುತ್ತಾನೆ :

……..ರಘುಕುಲ ವಾರ್ಧಿಚಂದ್ರ ಮನೆ,
ಕುಲಪುರೋಹಿತರೊರೆದ ಜನ್ನಮಂ ಕೈಕೊಂಡು
ಪಸುಳೆರನ್ನವ ಪಡೆವೆಯದು ದಿಟಂ. ಕೇಳಾದೊಡಂ
ನನ್ನೊಂದು ಕಾಣ್ಕೆಯಂ. ಪೂರ್ವಪದ್ಧತಿವಿಡಿದು
ಮಾಳ್ಪ ದಿಗ್ವಿಜಯ ಹಯಮೇಧ ಮೊದಲಾದುವಂ
ತೊರೆದು, ಹಿಂಸಾಕ್ರೌರ್ಯಮಿಲ್ಲದಿಹ ಪ್ರೇಮಕ್ಕೆ
ನೋಂತು, ದೇವರ್ಕಳಂ ಪೂಜಿಸಲ್ ಮೆಚ್ಚುವುದು
ಜಗವನಾಳುವ ಋತಂ……………………..
…………………………………………..
…………………………ಜನಮನದ ಶಕ್ತಿ
ಮೇಣವರಭೀಪ್ಸೆಯೆ ಮಹಾತ್ಮರಂ ನಮ್ಮಿಳೆಗೆ
ತಪ್ಪದೆಳೆತರ್ಪುದು ಕಣಾ[16]

ಮೇಲಣ ಸಾಲಿನಲ್ಲಿ ಬಂದಿರುವ ‘ಕಾಣ್ಕೆ’ ಎಂಬ ಪದವನ್ನು ಗಮನಿಸಿ. ಜಾಬಾಲಿ ದೊಡ್ಡ ಋಷಿ. ‘ಋಷಿ’ ಪದದ ಅರ್ಥವನ್ನು ಹಿಂದೆಯೆ ನೋಡಿದ್ದೇವೆ…. ಹಿಂದೆ ನಡೆದದ್ದು ಮಾತ್ರವಲ್ಲದೆ ಮುಂದೆ ನಡೆಯುವುದು ಅವನ ಪ್ರತಿಭೆಗೆ ಗೋಚರವಾಗುತ್ತದೆ; ಈಶಸಂಕಲ್ಪದ ಸುಳುಹು ಅವನ ದಿವ್ಯಪ್ರಜ್ಞೆಗೆ ಹೊಳೆಯುತ್ತದೆ. ದೈವೀಶಕ್ತಿಯೆ ರಾಮ ಲಕ್ಷ್ಮಣರ ಆಕಾರವನ್ನು ಪಡೆದು ಅವತರಿಸುತ್ತದೆಂಬುದು ಅವನಿಗೆ ಗೊತ್ತು. ಆದುದರಿಂದಲೆ ಹಿಂಸೆಯನ್ನು ಬಿಟ್ಟು ಸಾತ್ತ್ವಿಕ ವಿಧಾನದಿಂದ ಯಜ್ಞವನ್ನು ನೆರವೇರಿಸುವಂತೆ ದೊರೆಗೆ ಹೇಳುತ್ತಾನೆ. ‘ಪ್ರೇಮಸಾಕ್ಷಾತ್ತಾರಮಾಗಿರ್ಪ’ ಋಷ್ಯಶೃಂಗಾದಿ ಮುನಿಗಳಿಂದ ಯಜ್ಞವನ್ನು ಮಾಡಿಸುವಂತೆ ಸೂಚಿಸುತ್ತಾನೆ. ಹಾಗೆ ಮಾಡುವ ಯಜ್ಞವನ್ನು ‘ಜಗವನಾಳುವ ಋತಂ’ ಮೆಚ್ಚುತ್ತದೆ. ಅದಕ್ಕಾಗಿ ‘ವಿಶ್ವಶಕ್ತಿ ಸ್ವರೂಪಿಯನಗ್ನಿಯಂ ಭಜಿಸು’ ಎಂದು ಉಪದೇಶಿಸುತ್ತಾನೆ. ‘ಕಾಣ್ಕೆ’, ‘ಋತ’, ‘ವಿಶ್ವಶಕ್ತಿಸ್ವರೂಪಿ’, ‘ಜನಮನದ ಶಕ್ತಿ’ – ಈ ಪದಪುಂಜಗಳಲ್ಲಿ ಅಗ್ನಿಸೂಕ್ತಗಳ ತಿರುಳು ಅಡಕವಾಗಿದೆ.

ಋಷ್ಯಶೃಂಗ ಮಹರ್ಷಿ ಯಜ್ಞವನ್ನು ಮುಗಿಸಿದನಂತರ ಅಗ್ನಿದೇವತೆ[17] ಪ್ರತ್ಯಕ್ಷವಾಗಿ ಪಾಯಸವನ್ನು ಕೊಡುತ್ತಾನೆ; ಕೊಡುವಾಗ ಈ ರೀತಿ ಆಶೀರ್ವದಿಸುತ್ತಾನೆ :

ಸೃಷ್ಟಿಯ ಶಕ್ತಿದೂತನೆಂ, ರಾಜೇಂದ್ರ
ಋತಚಿನ್ನೂ ಲೀಲೆಗಾಂ ಕವಿಕ್ರತು ಕಣಾ.
ಕೊಳ್ಳಿದಂ, ಕಾಮಧೇನುವಿನ ಕೊಡಗೆಚ್ಚಲಂ
ಪಾಲ್ಗರೆದು ಗೆಯ್ದ ಪಾಯಸಮಿದಂ. ಮರುಭೂಮಿ
ನಗುವ ನಂದನವಪ್ಪುದಿದನೀಂಟೆ. ಮೆಚ್ಚಿತಯ್
ನಿನ್ನೀ ವ್ರತಕ್ಕೆ ಋತಂ. ಪಸುಗೆ ನೀಡಂಶಂಗಳಂ
ಸತಿಯರ್ಗೆ. ಗೆಲ್ವುದಾ ವಿಧಿಲೀಲೆಯುಂ.[18]

ಇಲ್ಲಿ ಒಂದೊಂದು ಪದವನ್ನೂ ಎಚ್ಚರಿಕೆಯಿಂದ ಗ್ರಹಿಸಬೇಕು. ಮೆಲಕು ಹಾಕಬೇಕು; ಅದರಲ್ಲಿ ಮನ ಮುಳುಗಬೇಕು. ಅಗ್ನಿ ಸೃಷ್ಟಿಶಕ್ತಿಯ ದೂತ, ವಿಧಿಯ ಅಥವಾ ಬ್ರಹ್ಮನ ಕೆಲಸ ಅವನ ಮೂಲಕ ನಡೆಯುತ್ತದೆ. ಭೂಮಿಗೆ ದೈವೀಶಕ್ತಿಯನ್ನು ತರುವವನು ಅವನು. ಅವನು ಮಾತ್ರ ತನ್ನ ಕೆಲಸವನ್ನು ತಾನು ಮಾಡುತ್ತಿರುತ್ತಾನೆ. ನಾನಾ ರೂಪಗಳ ಮೂಲಕ ನಾನಾ ಅವಸ್ಥೆಗಳ ಮೂಲಕ ಅವನು ಗೋಚರಿಸುತ್ತಾನೆ. ಮಾನವನಿಗೆ ಅದು ಗೋಚರವಾಗ ಬಹುದು, ಇಲ್ಲದಿರಬಹುದು. ಸೂರ್ಯಚಂದ್ರರು ತಮ್ಮ ಕೆಲಸವನ್ನು ಮಾಡುತ್ತಿರುವಂತೆ ಮಾಡುತ್ತಿರುತ್ತಾನೆ. ಇಲ್ಲಿಯೂ ಶ್ರೀರಾಮಚಂದ್ರನೆಂಬ ದೈವೀಶಕ್ತಿಯನ್ನು ದಶರಥನಿಗೆ ತಂದುಕೊಡುತ್ತಾನೆ; ದಶರಥನಿಗೆ ಮಾತ್ರವಲ್ಲ, ಈ ಮರ್ತ್ಯಕ್ಕೆ ತಂದುಕೊಡುತ್ತಾನೆ. ಈ ದೈವೀಶಕ್ತಿ ಮುಂದೆ ಈ ಮರ್ತ್ಯವನ್ನು ಬೆಳಗುತ್ತದೆ. ಇದೇ ಋತಚಿನ್ಮೂ ಲೀಲೆ. ಇಲ್ಲಿ ಅಗ್ನಿದೇವತೆ ತಂದುಕೊಟ್ಟ ಪಾಯಸವೇ ದೈವೀಶಕ್ತಿ. ಆ ಪಾಯಸದ ವರ್ಣನೆಯಲ್ಲಿಯೆ ಈ ಅರ್ತ ಹುದುಗಿದೆ. ‘ಕಾಮಧೇನುವಿನ’[19] ಕೊಡಗೆಚ್ಚಲಂ ಪಾಲ್ಗರೆದು ಗೆಯ್ದ ಪಾಯಸ’ ಅದು. ಪ್ರಾರ್ಥನೆಯ ಸಂಕಲ್ಪಗಳನ್ನು ಕೃಪೆಯಿಂದ ಈಡೇರಿಸುವ ದೈವೀಶಕ್ತಿಯ ಪ್ರತಿಮೆಯೇ ಕಾಮಧೇನು. ಆ ದೈವೀಶಕ್ತಿ ಮುಟ್ಟಿದ ನೆಲ ಪುಣ್ಯಕ್ಷೇತ್ರವಾಗುವುದರಲ್ಲಿ, ಕಲ್ಲು ಬೆಣ್ಣೆಯಾಗುವುದರಲ್ಲಿ, ಕೊರಡು ಕೊನರುವುದರಲ್ಲಿ ಆಶ್ಚರ್ಯವೇನು?

“ಆದರೆ ದಶರಥ ಎಲ್ಲರಂತೆ ಮಾನವ. ದೈವೀಶಕ್ತಿಯ ಸಂಪೂರ್ಣ ದರ್ಶನ ಅವನಿಗೆ ಎಂತಾದೀತು? ವಿಧಿಯ ಲೀಲೆಗೆ ಒಂದು ಕ್ಷೇತ್ರಬೇಕಾಗಿತ್ತು. ಅದರ ವಿಕಾಸಕ್ಕೆ ಒಂದು ನೆಪ ಅವಶ್ಯಕವಾಗಿತ್ತು. ಆ ನೆಪ ದಶರಥನ ಪುತ್ರಾಭಿವಾಂಛೆಯ ರೂಪದಲ್ಲಿ ವ್ಯಕ್ತವಾಯಿತು. ಅವನಿಗೆ ಬೇಕಾದ್ದು ಮಕ್ಕಳು ಮಾತ್ರ. ಮಕ್ಕಳು ಬೇಕೆನ್ನುವ ಆಸೆಯನ್ನು ಕೊನರಿಸಿದ ಸಂಗತಿಯಾದರೂ ಎಷ್ಟು ‘ಕ್ಷುದ್ರ’ವಾದುದು?

………ಸಿರಿಯನಿತುಮಿರ್ದೊಡಂ,
ಅರಮುಡಿಗೆ ನರೆನವಿರ ಬೆಳ್ಳಿಗೆರೆಯೇರ್ದೊಡಂ,
ದೇವಿ ಕೌಸಲ್ಯೆಯಂ ಸಾಧ್ವೀ ಸುಮಿತ್ರೆಯಂ
ಚೆಲ್ವು ಮೈವೆತ್ತಿರ್ದುದೆನೆ ಮೆರೆವ ಕೈಕೆಯಂ
ಮೂವರಂ ನಲ್ವೆಂಡಿರಂ ಕಾಮದಿಂ ಪ್ರೇಮದಿಂ
ಮದುವೆ ನಿಂದಿರ್ದೊಡಂ, ನಿಡಿದು ಪಾರ್ದಿರ್ದೊಡಂ,
ವಂಶಕರ ಸಂತಾನಮಂ ಕಾಣದಾ ನೃಪತಿ
ತಾನೊರ್ಮೆ ತಿರುಗುತಿರಲರಮನೆಯ ಸಿರಿದೋಂಟದೊಳ್;
ಮರಿಯ ತೆರೆವಾಯ್ಗಿಡುತೆ ತನ್ನ ಕೊಕ್ಕಂ, ಕುಟುಕು
ಕೊಡುತಿರ್ದ ತಾಯ್ವಕ್ಕಿಯಂ ಕಂಡು, ಕಣ್‌ನಟ್ಟು,
ಕಾಲ್‌ನಟ್ಟು ನಿಂದನು ಮರಂಬಟ್ಟು. ಮಕ್ಕಳಂ
ಪಡೆದ ಪಕ್ಕಿಯ ಸಿರಿತನಂ ಚಕ್ರವರ್ತಿಗೆ ತನ್ನ
ಬಡತನವನಾಡಿ ಮೂದಲಿಸಿತೆನೆ, ಕರುಬಿ ಕುದಿದನ್
ಕೋಸಲೇಶ್ವರನಾ ವಿಹಂಗಮಸುಖಕೆ ಕಾತರಿಸಿ.[20]

‘ಅರಮುಡಿಗೆ ನರೆನವಿರ ಬೆಳ್ಳಿಗೆರೆಯೇರ್ದ’ ವಯಸ್ಸಾಗಿದೆ ಅವನಿಗೆ. ಒಬ್ಬಳಲ್ಲ, ಮೂವರು ಹೆಂಡತಿಯರನ್ನು ಪಡೆದಿದ್ದಾನೆ; ರಾಜ್ಯವಿದೆ, ಕೋಶವಿದೆ; ಧನಧಾನ್ಯ ಎಲ್ಲ ಸಮೃದ್ದಿಯಾಗಿದೆ, ಮೇಲಾಗಿ ಪ್ರಜೆಗಳ ಗೌರವಕ್ಕೆ ಪಾತ್ರನಾಗಿದ್ದಾನೆ. ಆದರೆ ಒಂದೇ ಒಂದು ಕೊರತೆ, ಮಕ್ಕಳಿಲ್ಲವೆಂಬುದು. ಆ ಯೋಚನೆಯೂ ಗುಬ್ಬಚ್ಚಿ ತಾಯ್ವಕ್ಕಿಯನ್ನು ನೋಡುವ ತನಕ ಹೊಳೆದಿಲ್ಲ. ಎಷ್ಟು ದಿನ ಆ ಅರಮನೆಯ ಸಿರಿದೋಂಟದಲ್ಲಿ ಗುಬ್ಬಚ್ಚಿ ಪ್ರಣಯ ಯಾತ್ರೆಯನ್ನು ನಡೆಸಿಲ್ಲ! ಇಂಥ ಹಲವು ಪ್ರಣಯ ಸಂದರ್ಭಗಳನ್ನು ಅವನು ಇತರ ಪ್ರಾಣಿಗಳ ಜೀವನದಲ್ಲಿ ಕಂಡಿರಲಿಲ್ಲವೆ? ತನ್ನ ಸುತ್ತಮುತ್ತ ಓಡಾಟ ಕುಣಿದಾಟ ನಲಿದಾಟಗಳನ್ನು ಅವನು ಕಂಡಿರಲಿಲ್ಲವೆ? ಅವುಗಳಲ್ಲಿ ಒಂದು ಸಂದರ್ಭವಾದರೂ ಅವನ ಸುಪ್ತ ಬಯಕೆಯನ್ನು ಏಕೆ ಎಚ್ಚರಿಸಲಿಲ್ಲ! ಆದರೆ ಅದೆಲ್ಲ ವಿಧಿಯ ಲೀಲೆ! ಯಾವುದಕ್ಕೂ ಅನುಕೂಲ ಕಾಲ ಬೇಕು, ಯೋಗ್ಯ ಪಾತ್ರ ಬೇಕು, ಅದು ಅಭಿವ್ಯಕ್ತಗೊಳ್ಳಲು. ದಶರಥನು ಕೋಸಲೇಶ್ವರ. ಆದರೆ ‘ಮಕ್ಕಳಂ ಪಡೆದ ಪಕ್ಕಿಯ ಸಿರಿತನ’ ಅವನನ್ನು ಮೂದಲಿಸಿದಂತಿದೆ.  ಭಗವಂತನ ಇಚ್ಛೆ ಈ ರೂಪದಲ್ಲಿ ಪ್ರಕಟವಾಗುವುದಿತ್ತು.

ದೇವತೆಗಳಾಶಿತಮೊ? ಋತಚಿದಿಚ್ಛೆಯೊ? ವಿಧಿಯೊ?
ಪಕ್ಕಿ ಗುಬ್ಬಚ್ಚಿಯಾದೊಡಮೇಂ? ವಿಭೂತಿಯಂ
ತಿರೆಗೆ ಕರೆವಾಸೆಯಂ ಕೆರಳಿಸಿದುದಾ ದೊರೆಯ
ಹೃದಯದಲಿ! ಊರ್ಧ್ವಲೋಕದ ದೇವಶಕ್ತಿಗಳ್
ಸಂಚು ಹೂಡಿದರೆನಲ್, ಚರಿಸಿದತ್ತವರಿಚ್ಛೆ
ಮುದುಕನೆರ್ದೆಯಲಿ ಮಕ್ಕಳಾಸೆವೋಲ್…..

ಕೇವಲ ಪ್ರಾಕೃತ ರೀತಿಯಲ್ಲಿ ದಶರಥನ ಆಸೆ ಮೂಡಿತು. ವಿಧಿಲೀಲೆಯ ಸುಳುಹು ಅವನಿಗೆ ಹೇಗೆ ಗೊತ್ತಾಗಬೇಕು! ಅವನಿಗೆ ಬೇಕಾದುದು ಮಕ್ಕಳು; ಎಲ್ಲರಂಥ ಮಕ್ಕಳು. ಆದರೆ ಅವನ ಆಸೆಯಲ್ಲಿ ದೇವತೆಗಳ ಆಶಿತ ಋತಚಿದಿಚ್ಛೆ ಎರಡೂ ಕೂಡಿಕೊಂಡಿವೆ. ದೈವೀಶಕ್ತಿ ಪ್ರಕಟವಾಗುವ ಚಿಹ್ನೆ ಅಲೌಕಿಕಾನುಭವವುಳ್ಳ ಪುಣ್ಯವಂತರಿಗೆ ಮಾತ್ರ ಹೊಳೆ ಯುತ್ತದೆ. ಯಜ್ಞವನ್ನು ನಡೆಸುವ ಋಷ್ಯಶೃಂಗಮುನಿಗೆ ಇದು ಗೊತ್ತು, ಜಾಬಾಲಿಗೆ ಗೊತ್ತು. ಆದುದರಿಂದಲೇ ಅವನು ಹೇಳುತ್ತಾನೆ, ‘ಕೇಳಾದೊಡಂ ನನ್ನೊಂದು ಕಾಣ್ಕೆಯಂ’ ಎಂದು. ಯಾವುದು ದಶರಥನ ಪ್ರಾಕೃತದೃಷ್ಟಿಗೆ ‘ಕಾಣೆ’ಯಾಗಿದೆಯೋ ಅದು ಜಾಬಾಲಿಯ ಅಪ್ರಾಕೃತದೃಷ್ಟಿಗೆ ‘ಕಾಣ್ಕೆ’ಯಾಗಿವೆ. ಆದರೂ ದಶರಥನು

ಓಂಕಾರ ಸ್ವಾಹಾದಿ ಮಂತ್ರಘೋಷಂ ಬೆರಸಿ
ಬೇಳ್ವ ಬೇಳಂಬದಿಂ ಜನ್ನಕೊಂಡಂ ಬಳಸಿ
ಕವಿದಿರ್ದ ಋತ್ವಿಜರ ಗೋಷ್ಠಿಯಲಿ, ದೇವರಿಗೆ
ಹವಿಯನರ್ಪಿಸುತಿರ್ದನಾತ್ಮಭಕ್ತಿಯ ತಪಸ್
ಶಕ್ತಿಯಿಂ ಬಯಸಿ.

ಮಹತ್‌ಕಾರ್ಯಕ್ಕೆ ಮಹತ್ ಕಾರಣವಿರಲೇಬೇಕು. ನರಿಯ ಹೊಟ್ಟೆಯಲ್ಲಿ ಸಿಂಹ ಹುಟ್ಟಲಾರದು. ಪ್ರಪಂಚದ ಕಲ್ಯಾಣಕ್ಕಾಗಿ ಭಗವಂತ ಯಾವ ಆಕಾರರೂಪವನ್ನಾದರೂ ತಳೆದು ಆವತರಿಸಬಹುದು. ಆದರೆ ಅವನು ಅವತರಿಸುವ ಕ್ಷೇತ್ರ ಪವಿತ್ರವಾಗಿರಬೇಕು. ‘ಅತ್ಮಭಕ್ತಿಯ ತಪಶ್ಯಕ್ತಿ’ಯಿರುವೆಡೆ ಮಾತ್ರ ಅವನ ಅವತಾರ. ದಶರಥನ ಆತ್ಮಗುರುಭಕ್ತಿ ಯಿಂದ ಪ್ರದೀಪ್ತವಾಗಿ ಪವಿತ್ರವಾಗಿದೆ. ಜೊತೆಗೆ ತ್ರಿಕಾಲಜ್ಞಾನಿಯಾದ ಋಷ್ಯಶೃಂಗ ಮುನಿವರೇಣ್ಯ ಆ ಯಜ್ಞವನ್ನು ನಡೆಸುತ್ತಿರುವಾಗ ದಶರಥನ ಮನಸ್ಸಿನಲ್ಲಿ ಕಾಳಿಕೆ ಉಳಿಯುತ್ತದೆಯೇ? ಜ್ಯೋತಿ ಮುಟ್ಟಿದ ಬತ್ತಿ ಜ್ಯೋತಿಯಾಗುವಂತೆ ಆ ಮುನಿಯ ಸಂಪರ್ಕದಿಂದ ದಶರಥನೂ ಮಹಿಮಾನ್ವಿತನಾಗುವನು. ಆದುದರಿಂದಲೇ

……………….ಮನದೊಲೆ ತನುಜರೆಂದೆಂಬ
ಜಾಣ್ಣುಡಿಯನರಿತು, ಅಲ್ಪತೆಯ ಭಾವಂಗಳಂ
ನೆರೆ ತೊರೆದು, ಗಗನುಮಂ ಪೃಥ್ವಿಯಂ ವಾರ್ಧಿಯಂ
ಪರ್ವತಾರಣ್ಯ ವಿಸ್ತಾರ ಧೀರೋದಾತ್ತ
ಗಾಂಭೀರ್ಯಮಂ ಭದ್ರವೀರ ಸೌಂದರ್ಯಮಂ,
ಧ್ಯಾನಿಸುತೆ ಭಾವಿಸುತೆ ರೂಪಿಸುತೆ ಕಾಮಿಸಿದನಾ
ಭೂಮಿಪಂ ತದ್ರೂಪಗುಣ ಹೃದಯರಂ.

ಇದು ಅತ್ಯುಕ್ತಿಯಲ್ಲ; ಸ್ವಭಾವೋಕ್ತಿ. ದಶರಥನ ಈ ಭಾವನೆಯಲ್ಲಿ ಸಂಪೂರ್ಣ ಸಹಜತೆ ಇದೆ. ವಿಶ್ವಶಕ್ತಿ ಅವತರಿಸಬೇಕೆಂದು ಇಚ್ಛಿಸಿದಾಗಲೆ ಇಷ್ಟೆಲ್ಲ ಅನೈಚ್ಛಿಕವಾಗಿ ನಡೆದುಹೋಗುತ್ತದೆ. ವಿಶ್ವಶಕ್ತಿಯ ಇಚ್ಛೆ, ದಶರಥನ ಈ ಭಾವನೆ-ಇವೆರಡೂ ಬೇರೆ ಬೇರೆ ಪ್ರಕಾರದ ಕ್ರಿಯೆಗಳಲ್ಲ. ಆ ಇಚ್ಛೆ ಪರಿಪೂರ್ಣಗೊಳ್ಳುವೊಂದು ಅವಸ್ಥೆ ಈ ಭಾವನೆ. ಅಂದರೆ ಆ ಇಚ್ಛೆಯ ಒಂದು ತುದಿ ಈ ಭಾವನೆ.

ಕವಿಕ್ರತುದರ್ಶನದ ಅರ್ಥ ಈಗ ಸ್ಪಷ್ಟವಾಗುತ್ತದೆ. ‘ಕವಿಕ್ರತು’ ಎಂದರೆ ಮುಂಗಾಣುವ ಮತ್ತು ಕಂಡುದನಾಗಿಸುವ ಇಚ್ಛಾಶಕ್ತಿ ಎಂದು ಮೇಲೆ ನೋಡಿದೆವು. ಅದು ಅಲ್ಲಿ ಯಾರ ‘ಇಚ್ಛಾಶಕ್ತಿ’ಯಾದರೂ ಆಗಬಹುದು. ಅದು ಅವರವರ ಅಭಿರುಚಿ ಸಂಸ್ಕಾರ ಸಾಧನೆ ಯನ್ನವಲಂಬಿಸಿರುತ್ತದೆ. ದಶರಥನಿಗೆ ಬೇಕಾದ್ದು ಮಕ್ಕಳು. ಮಕ್ಕಳ ರೂಪದಲ್ಲಿ ಅವನಿಗೆ ಇಚ್ಛಾಶಕ್ತಿಯ ದರ್ಶನವಾಗುತ್ತದೆ. ಋಷ್ಯಶೃಂಗ, ಜಾಬಾಲಿ, ವಸಿಷ್ಠ ಮೊದಲಾದ ಮುನಿಗಳಿಗೂ ಅದರ ದರ್ಶನವಾಗುತ್ತದೆ. ಶ್ರೀರಾಮನೇ ಅವರ ಇಚ್ಛಾಶಕ್ತಿ. ವಸಿಷ್ಠ ಶ್ರೀರಾಮನಲ್ಲಿ ಮೊದಲಿಂದಲೂ ಅಲೌಕಿಕಶಕ್ತಿಯನ್ನು ಕಂಡಿದ್ದನೆಂಬುದೇ ಇದಕ್ಕೆ ನಿದರ್ಶನ. ಒಮ್ಮೆ ತಾಯಿ ಕೌಸಲ್ಯೆ ತೊಟ್ಟಿಲಲ್ಲಿ ಮಲಗಿದ್ದ ಮಗನ ಬಿಂಬದಲ್ಲಿ ‘ಮಹಾಮೂರ್ತಿ’ಯನ್ನು ಕಂಡು, ‘ಅದು ದುಷ್ಟಕುಗ್ರಹ ಚೇಷ್ಟೆಯೆಂದಳ್ಕಿ’ ವಸಿಷ್ಠನೊಡನೆ ಹೇಳಲು ಅವನು ಕೊಡುವ ಉತ್ತರವಿದು :

…………………ಬಿಡು, ಮಗಳೆ,
ಭೀತಿಯಂ. ನಿನ್ನ ಮಗನಪ್ರಾಕೃತಂ. ನಿನ್ನೆ ನಾಂ
ಜಾನದೊಳಿರ್ದು ಕಂಡುದಂ ಪೇಳ್ವೆನಾಲಿಸು. ಮೇಲೆ
ಸಂಭ್ರಮಂ ತುಂಬಿರ್ದುದಮರ ಲೋಕಂಗಳೊಳ್.
ಮಿಂಚಿನಂಚಿನ ದೇವತಾ ಚರಣ ಸಂಚಾರದಾ
ಪದಚಿಹ್ನೆಗಳ್ ಪೊಳೆದುವಮಿತ ನಕ್ಷತ್ರಗಳವೋಲ್.
ಕಂಡೆನೀ ಪೃಥಿವಿಯೆಡೆಗಾ ಶಕ್ತಿರಾಶಿಗಳ್
ಧಾವಿಸುತ್ತಿರ್ದುದಂ. ನನ್ನಾತ್ಮವವರ ನೆನೆಯೆ
ಹಿಂಬಾಲಿಸೈತರಲ್ ಪೊಕ್ಕುದು ಅಯೋಧ್ಯೆಯಂ.
ಜ್ಯೋತಿಶ್ಯರೀರಿ ನಿನ್ನಂಕದಲಿ ಮಲಗಿರ್ದ
ಜ್ಯೋತಿಶ್ಶರೀರನಂ ಕಂಡೆನೀ ಶಿಶುರೂಪನಂ

ಭರತ ಅಣ್ಣನನ್ನು ವನವಾಸದಿಂದ ಮರಳಿಸಬೇಕೆಂದು ಸ್ವಜನ ಪುರಜನ ಗುರುಜನರೊಡನೆ ಚಿತ್ರಕೂಟಕ್ಕೆ ಹೋಗಿ ಶ್ರೀರಾಮನ ಸನ್ನಿಧಿಯಲ್ಲಿ ನಾನಾ ವಿಧವಾಗಿ ಬೇಡಿಕೊಳ್ಳುತ್ತಾನಷ್ಟೆ. ಪಿತೃವಾಕ್ಯ ಪರಿಪಾಲನೆ ಭರತನ ಪ್ರೇಮ ಇವೆರಡರ ನಡುವೆ ರಾಮನ ‘ಧೈರ್ಯದೈರಾವತಂ’ ಹೋರಾಡುತ್ತಿರುತ್ತದೆ. ಆಗ ವಸಿಷ್ಠ ಹೇಳುತ್ತಾನೆ :

………..ನೆನೆ ನೈಜ ಧರ್ಮಮಂ
ಜನ್ಮದುದ್ದೇಶಮಂ, ತಪನಕುಲ ನೃಪಸೂನು.
ಕೆಡಿಸುವೆಯೊ ಕಾಡೊಳಲೆದಾಯುಃಪ್ರಮಾಣಮಂ?
ಲೋಕದುದ್ಧಾರಕ್ಕೆ ಮೇಣಾತ್ಮ ಸಂಸ್ಕೃತಿಗೆ
ನೈವೇದ್ಯವಾಗುವೆಯೋ ನೆನೆ! ………………….

ಗುರುಶಿಷ್ಯನನ್ನು ಮಾರ್ಮಿಕವಾಗಿ ಎಚ್ಚರಿಸುತ್ತಾನೆ. ಅವನ ವಾಗಿಂಗಿತ ಶಿಷ್ಯನ ಮನಸ್ಸನ್ನು ಪ್ರವೇಶಿಸುವುದು. ಶ್ರೀರಾಮನ ನೈಜ ಧರ್ಮವೇನೆಂಬುದು ಅವನ ಜನ್ಮದುದ್ದೇಶವೇನೆಂಬುದು ಅವನಿಗೆ ಗೊತ್ತು; ಅವನಂಥ ಋಷಿಗಳಿಗೆ ಗೊತ್ತು. ಇತರರಿಗೆ ಹೇಗೆ ಗೊತ್ತಾಗಬೇಕು?

…………ವಿಶ್ವಶಕ್ತಿಸ್ಫೂರ್ತನೀತನುಂ
ತಿಳಿಯೆ ವಿಶ್ವವ್ಯಕ್ತಿ. ಶುಕ್ತಿಕೆ ಸಮುದ್ರಮಂ
ಒಳಕೊಳ್ವುದೇನ್? ಕೋಸಲಾಕಾಶವಿಸ್ತಾರವಿೂ
ರಾಮನಾತ್ಮದ ವಿರಾಟ್ ಪಕ್ಷವಿಸ್ಫಾಲನೆಗೆ
ಸಾಲದಲ್ಪಂ. ಅನಂತಾಕಾಶಯಾತ್ರಿ, ಕೇಳ್,
ರಾಮನಿಚ್ಛಾವೈನತೇಯಂ…………………

ಈ ಮಾತುಗಳಿಂದ ವಸಿಷ್ಠ ಭರತನನ್ನು ಎಚ್ಚರಿಸುತ್ತಾನೆ. ದೈವೀಶಕ್ತಿ ಶ್ರೀರಾಮನ ರೂಪದಲ್ಲಿ ಮರ್ತ್ಯಕ್ಕಿಳಿಯುವುದೆಂಬುದು ಅವನಿಗೆ ಮೊದಲೇ ಗೊತ್ತಿತ್ತು.

ಈ ಋಷಿಗಳ ‘ಇಚ್ಛಾಶಕ್ತಿ’ ದರ್ಶನದಂತೆಯೇ ಜನರ ಇಚ್ಛಾಶಕ್ತಿ ದರ್ಶನವೂ ಒದಗುವ ಪುಣ್ಯಕಾಲ ಸಾರಿಬಂದಿತ್ತು.

………..ಜನಮನದ ಶಕ್ತಿ
ಮೇಣವರಭೀಪ್ಸೆಯೆ ಮಹಾತ್ಮರಂ ನಮ್ಮಿಳೆಗೆ
ತಪ್ಪದೆಳೆತರ್ಪುದು ಕಣಾ!

ಜಾಬಾಲಿಯ ಈ ಮಾತುಗಳಲ್ಲಿ ಮೇಲೆ ಹೇಳಿದುದೆಲ್ಲ ಸೂಚಿತವಾಗುತ್ತದೆ.

ಇಷ್ಟೇ ಅಲ್ಲ; ಇದು ಕವಿಯ ಕ್ರತುದರ್ಶನವೂ-ಅಂದರೆ ಕವಿಯ ಮುಂಗಾಣುವ ಮತ್ತು ಕಂಡುದನ್ನಾಗಿಸುವ ಇಚ್ಛಾಶಕ್ತಿಯದರ್ಶನವೂ-ಅಹುದು. ಕವಿಯ ಸಂಕಲ್ಪ ಇಲ್ಲಿ ಮೊಳೆಯುತ್ತದೆ. ಇಚ್ಛಾಶಕ್ತಿಯ-ಮುಂದೆ ತನ್ನ ಕಾವ್ಯವನ್ನು ನಡೆಸುವ ಇಚ್ಛಾಶಕ್ತಿಯ-ದರ್ಶನವೂ ಇಲ್ಲಿ, ಈ ಪ್ರಥಮ ಸಂಚಿಕೆಯಲ್ಲಿ ಆಗುತ್ತದೆ. ದೈವೀಶಕ್ತಿಯ ಆವಾಹನೆಯೇ ಇದು. ಆ ಇಚ್ಛಾಶಕ್ತಿಯೇ ರಾಮಾಯಣದರ್ಶನವಾಗಿ ಬೆಳೆಯುತ್ತದೆ. ಈ ಸಮಯದಲ್ಲಿ ‘ಶ್ರೀ ಕುವೆಂಪುವ ಸೃಜಿಸಿದೀ ಮಹಾಛಂದಸ್ಸಿನ ಮೇರುಕೃತಿ’ ಎಂಬ ನುಡಿಯನ್ನು ಸ್ಮರಿಸಿಕೊಂಡರೆ ಇದರ ಭಾವ ಸಂಪೂರ್ಣವಾಗಿ ಹೊಳೆಯುತ್ತದೆ. ಆದಿಕವಿ ವಾಲ್ಮೀಕಿಗೆ ಇಚ್ಛಾಶಕ್ತಿಯ ದರ್ಶನ ಕ್ರೌಂಚಪಕ್ಷಿಯ ವಿರಹವೇದನೆಯ ನಿಮಿತ್ತದ ಮೂಲಕ ಆಯಿತು. ಆ ವೇದನೆಯಲ್ಲಿ ಆ ಕವಿ ಲೋಕದ ಮೂಕಶೋಕವನ್ನು ದರ್ಶಿಸಿದನು. ಆ ಮೂಲಕ ಶ್ರೀರಾಮನ ದೈವೀಶಕ್ತಿ ಅವನ ರಕ್ತದಲ್ಲಿ ಹರಿದು ಹೃದಯವನ್ನು ಸೇರಿ ಗಾನವಾಗಿ ಹೊರಹೊಮ್ಮಿತು. ಇಲ್ಲಿ ಈ ಕವಿಗೆ ಇಚ್ಛಾಶಕ್ತಿ (ಕವಿಕ್ರತು) ನಾನಾ ರೂಪದಲ್ಲಿ ನಾನಾ ನಿಮಿತ್ತಗಳ ಮೂಲಕ ಗೋಚರವಾಗುತ್ತದೆ.

ಕವಿ ಎಂದರೆ ಬ್ರಹ್ಮ ಎಂಬ ಮತ್ತೊಂದು ಅರ್ಥವೂ ಉಂಟು, ಇಲ್ಲಿ ಆ ಬ್ರಹ್ಮನ ಇಚ್ಛಾಶಕ್ತಿಯ ದರ್ಶನವೆಂದೂ ಇಟ್ಟುಕೊಳ್ಳಬೇಕಾಗುತ್ತದೆ. ಇಲ್ಲಿ ಕವಿಗೆ, ಋಷಿಗಳಿಗೆ ಮತ್ತು ಜನಪದಕ್ಕೆ ಆ ದರ್ಶನ ಲಭಿಸುತ್ತದೆ. ಅಲ್ಲದೆ ಕವಿ ಮತ್ತು ಬ್ರಹ್ಮ ಇವೆರಡೂ ಸಮಾನಾರ್ಥಕ ಪದಗಳು. ಅವರು ಬೇರೆ ಬೇರೆ ಅಲ್ಲ. ವಾಲ್ಮೀಕಿಗೆ ಬ್ರಹ್ಮ ಪ್ರತ್ಯಕ್ಷವಾಗಿ ಹೇಳುವ ಈ ಕೆಳಗಣ ಮಾತುಗಳಲ್ಲಿ ಇದು ಧ್ವನಿತವಾಗುತ್ತದೆ :

ಶ್ಲೋಕ ಏವ ತ್ವಯಾ ಬದ್ಧೋ ನಾತ್ರ ವಿಚಾರಣಾ
ಮಚ್ಚಂದಾದೇವ ತೇ ಬ್ರಹ್ಮನ್ ಪ್ರವೃತ್ತೇಯಂ ಸರಸ್ವತೀ.
…………………………………………………
ನತೇ ವಾಗನೃತಾ ಕಾವ್ಯೇ ಕಾಚಿದತ್ರ ಭವಿಷ್ಯತಿ
ಕುರು ರಾಮಕಥಾಂ ಪುಣ್ಯಾಂ ಶ್ಲೋಕಬದ್ಧಾಂ ಮನೋರಮಾಮ್
ಯಾವತ್ ಸ್ಥಾಸ್ಯಂತಿ ಗಿರಯಃ ಸರಿತಶ್ಚ ಮಹೀತಲೇ
ತಾವತ್ ರಾಮಾಯಣ ಕಥಾ ಲೋಕೇಷು ಪ್ರಚರಿಷ್ಯತಿ
ಯಾವತ್ ರಾಮಾಯಣ ಕಥಾ ತ್ವತ್ ಕೃತಾ ಪ್ರಚರಿಷ್ಯತಿ
ತಾವದೂರ್ಧ್ವಮಧಶ್ಚ ತ್ವಂ ಮಲ್ಲೋಕೇಷು ನಿವತ್ಸ್ಯತಿ

“ಕವಿಕೃತಿ ಬ್ರಹ್ಮಕೃತಿ ಅಲ್ಲದಿದ್ದರೂ ಬ್ರಹ್ಮನು ಸಂಪೂರ್ಣವಾಗಿ ತನ್ನದನ್ನಾಗಿ ಒಪ್ಪಿ ಕೊಂಡದ್ದು ಎಂಬುದನ್ನು ಗ್ರಹಿಸಬೇಕು. ಅದಕ್ಕೆ, ಎಂದರೆ ಕವಿಕೃತಿಗೆ, ಕನಿಷ್ಠವೆಂದರೆ ಬ್ರಹ್ಮಕೃತಿಗೆ ಸಮನಾದ ಗೌರವ ಸಲ್ಲುತ್ತದೆ.”[21]

“ಒಟ್ಟಿನಲ್ಲಿ ಇಲ್ಲಿ ಐದು ಅರ್ಥಗಳು ಧ್ವನಿತವಾಗುತ್ತವೆ. ಒಂದು, ಅಗ್ನಿದರ್ಶನ; ಎರಡು, ಇಚ್ಛಾಶಕ್ತಿಯ ಅಥವಾ ಬ್ರಹ್ಮನ ಇಚ್ಛಾಶಕ್ತಿಯ ದರ್ಶನ; ಮೂರು, ಕವಿಯ ಇಚ್ಛಾಶಕ್ತಿಯ ದರ್ಶನ;[22] ನಾಲ್ಕು, ಋಷಿಗಳ ಮತ್ತು ಜನರ ಇಚ್ಛಾಶಕ್ತಿಯ ದರ್ಶನ;[23] ಐದನೆಯದಾಗಿ ದಶರಥನ ಇಚ್ಛಾಶಕ್ತಿಯ ದರ್ಶನಂ.

“ಈ ನನ್ನ ಕಾವ್ಯವನ್ನು ಎರಡು ಮೂರು ದೃಷ್ಟಿಗಳಿಂದ ನೋಡಬೇಕಾಗುತ್ತದೆ. ಕಾವ್ಯಬೇಕಾದವರಿಗೆ ಇಲ್ಲಿ ಕಾವ್ಯ ಸಿಗುತ್ತದೆ; ಕತೆ ಬೇಕಾದವರಿಗೆ ಕತೆ ಸಿಗುತ್ತದೆ; ದರ್ಶನ ಬೇಕಾದವರಿಗೆ ದರ್ಶನ ಸಿಗುತ್ತದೆ. ಆದಿಕವಿಯೇ ಬ್ರಹ್ಮ, ಅವನೇ ವಿಶ್ವಶಕ್ತಿ. ಆ ವಿಶ್ವಶಕ್ತಿ ನಾನಾ ರೂಪದಲ್ಲಿ ವಿಕಾಸಗೊಳ್ಳುತ್ತ ಹೋಗುತ್ತದೆ. ಈ ರಾಮಾಯಣವೂ[24] ಆ ವಿಕಾಸಕ್ರಮದಲ್ಲೊಂದು ಮೆಟ್ಟಲು, ಶಕ್ತಿಬಾಹು; ಆ ಶಕ್ತಿ ಹರಿಯುವ ಒಂದು ಪ್ರಣಾಳಿಕೆ. ರಾಮಾಯಣದಲ್ಲಿ ಆ ವಿಶ್ವಶಕ್ತಿಯ ದರ್ಶನ ಇಲ್ಲದಿದ್ದರೆ ಅದು ಇಂದಿಗೂ ಪೂಜ್ಯ ಸ್ಥಾನದಲ್ಲಿ ಇರುತ್ತಿರಲಿಲ್ಲ. ಅಂದು ಅದು (ವಾಲ್ಮೀಕಿ ರಾಮಾಯಣ) ಹುಟ್ಟಿ ಅಂದಿನ ಜನರ ಅಭೀಪ್ಸೆಯನ್ನು ಈಡೇರಿಸಿತು. ಇಂದು ಇದು (ಶ್ರೀ ರಾಮಾಯಣ ದರ್ಶನಂ) ಹುಟ್ಟಿ ಇಂದಿನ ಮತ್ತು ಮುಂದಿನ ಜನತೆಯ ಅಭೀಪ್ಸೆಯನ್ನು ಈಡೇರಿಸುತ್ತದೆ.[25] ಇದು ದೈವೀ ಶಕ್ತಿಯನ್ನು ಮತ್ತೆ ಈ ಮರ್ತ್ಸ್ಯಕ್ಕೆ ತಂದಿದೆ; ಮರ್ತ್ಯಕ್ಕೂ ಅಮರ್ತ್ಯಕ್ಕೂ ಸಂಪರ್ಕವನ್ನುಂಟು ಮಾಡಿದೆ.[26] ಪೂರ್ಣದೃಷ್ಟಿಯ ಪೂರ್ಣದರ್ಶನಕ್ಕೆ ಪೂರ್ಣಪ್ರತಿಮೆ, ಈ ಶ್ರೀ ರಾಮಾಯಣ ದರ್ಶನಂ.”

“ನೀವು ‘ಶ್ರೀ ರಾಮಾಯಣ ದರ್ಶನ’ವನ್ನು ಬರೆಯಲು ಪ್ರಾರಂಭಿಸಿದ್ದು ಯಾವಾಗ?” ಎಂದು ನಾನು ಮತ್ತೊಮ್ಮೆ ಕಂಡಾಗ ಹೇಳಿದೆ.

“ಅದನ್ನು ಹೇಳಲು ಸಾಧ್ಯವಿಲ್ಲ. ಏಕೆಂದರೆ ಅದು ಬೀಜರೂಪವಾಗಿ ನನ್ನ ಮನಸ್ಸಿನಲ್ಲಿ ಬಹು ದಿನಗಳಿಂದ ಇತ್ತು. ಎಂದೋ ಒಮ್ಮೆ ನಾನು ಮಹಾಕಾವ್ಯವೊಂದನ್ನು ಬರೆಯುವಂತೆ ಕನಸಿನಲ್ಲಿ ಅನುಭವವಾಯಿತು. ಕೂಡಲೆ ಎದ್ದು ಕನಸನ್ನು ನೆನೆಸಿಕೊಳ್ಳಲು ಯತ್ನಿಸಿದೆ. ಏನಾದರೂ ಸ್ವಲ್ಪ ಕುರುಹು ಅಥವಾ ಜಾಡು ದೊರೆತರೆ ಸಾಕೆಂದು ಪ್ರಯಾಸಪಟ್ಟೆ. ಏನೂ ಹೊಳೆಯಲಿಲ್ಲ. ಸುಮ್ಮನಾದೆ. ಆದರೆ ಆ ಹಂಬಲ ಮಾತ್ರ ಮರೆಯಾಗಲಿಲ್ಲ. ‘ಚಿತ್ರಾಂಗದಾ’ ಮುಗಿದ ಮೇಲೆ ಹೆಚ್ಚು ಕಡಿಮೆ ಅಷ್ಟೇ ಚೌಕಟ್ಟಿನಲ್ಲಿ ರಾಮಾಯಣವನ್ನು ಬರೆಯಬೇಕೆಂದು ಉದ್ದೇಶಿಸಿ ಆರಂಭಿಸಿದೆ.”

ಆಗ “ಮಹಾಕಾವ್ಯವನ್ನು ಬರೆಯಬೇಕೆಂಬ ಹಂಬಲ ಇತ್ತು, ಆದರೆ ಅದಕ್ಕೆ ರಾಮನ ಕತೆಯನ್ನೇ ವಸ್ತುವನ್ನಾಗಿ ಆರಿಸಿಕೊಳ್ಳಲು ಕಾರಣವೇನು? ಇನ್ನಾವುದಾದರೂ ಕತೆಯನ್ನು ತೆಗೆದುಕೊಳ್ಳಬಹುದಾಗಿತ್ತಲ್ಲ? ಏಸುಕ್ರಿಸ್ತನ ಕತೆಯಿರಲಿಲ್ಲವೆ, ಬುದ್ಧನ ಕತೆಯಿರಲಿಲ್ಲವೆ, ಮಹಾತ್ಮ ಗಾಂಧೀಜಿ ಕತೆ ಇರಲಿಲ್ಲವೆ?” ಎಂದು ಕೇಳಿದೆ.

“ಈ ಪ್ರಶ್ನೆಗೆ ಉತ್ತರ ಹೇಳುವುದು ಮತ್ತೂ ಕಷ್ಟ. ಭಾವಗಮ್ಯವಾದುದನ್ನು ಬುದ್ದಿಯ ಹಿಡಿತಕ್ಕೆ ಅಳವಡಿಸಿ ಹೇಳುವುದು ಅಸಾಧ್ಯ. ನನ್ನ ಆಲೋಚನೆ ಅನುಭವ ದರ್ಶನಗಳಿಗೆ ರೂಪುಕೊಡಲು ಒಂದು ಸಾಧನ (ನಿದರ್ಶನ ಸಾಮಗ್ರಿ) ಬೇಕಾಗಿತ್ತು. ಆ ಸಾಧನವೂ ಆ ದರ್ಶನದಷ್ಟೇ ಮಹತ್ತ್ವಪೂರಿತವಾದುದಾಗಿರಬೇಕಾಗಿತ್ತು. ಅದಕ್ಕೆ ರಾಮಾಯಣವೇ ಸರಿಯೆಂದು ನನಗೆ ತೋರಿತು. ಏಕೆಂದರೆ ರಾಮಾಯಣ ಇಂದಿನದಲ್ಲ, ಹಿಂದಿನದಲ್ಲ; ಅದು ಅನಾದಿಯಾದುದು, ಅನಂತವಾದುದು. ಸಾವಿರಾರು ವರ್ಷಗಳಿಂದ ಅದು ಭಾರತೀಯರನ್ನು ಉದ್ಧರಿಸುತ್ತಿದೆ.[27] ಸಾವಿರಾರು ವರ್ಷಗಳ ಭಾರತೀಯ ಸಂಸ್ಕೃತಿಯ ಸಂಸ್ಕಾರರಾಮ, ಸೀತ, ಆಂಜನೇಯ, ಊರ್ಮಿಳೆ, ರಾವಣ, ಮಂಡೋದರಿ, ವಿಭೀಷಣ ಮೊದಲಾದ ಪದಗಳಲ್ಲಿ ಪ್ರವಹಿಸುತ್ತಿದೆ. ಆಂಜನೇಯನ ಪಾತ್ರವನ್ನೇ ನೋಡಿ. ಅವನೆಂತಹ ಅತಿಮಾನವ! ಭೂಲೋಕವನ್ನೂ ಸ್ವರ್ಗಲೋಕವನ್ನೂ ಸಂಧಿಸುವ ಶಾಶ್ವತ ಶಕ್ತಿ ಅವನು, ಪ್ರಾಣದೇವನವನು. ಅತಿಮಾನಸಲೋಕದ ಅನುಭವಗಳನ್ನು ವ್ಯಕ್ತಪಡಿಸಲು ಆ ಕತೆಯೇ ಸರಿಯಾದ ಸಾಧನ.”

“ಅಹುದಹುದು. ಕಾವ್ಯದ ಪೀಠಿಕೆಯಲ್ಲಿಯೇ ಈ ಭಾವನೆ ಅಡಕವಾಗಿರುವ ಸಾಲುಗಳು ಬರುತ್ತವೆ.[28]

“ಕಾವ್ಯರಚನೆಗೆ ಪ್ರಚೋದಕಶಕ್ತಿ ಆಧ್ಯಾತ್ಮಿಕ ಸಾಧನೆ ನಿಜ. ಆದರೆ ಮೊದಮೊದಲು ಕಾವ್ಯ ಬರೆಯಬೇಕೆಂದು ನನ್ನ ಬುದ್ದಿಗೆ ತೋಚಿದ ಗುರಿಯಾಗಿತ್ತೇ ಹೊರತು ದಾರ್ಶನಿಕ ಕಾವ್ಯರಚನೆ ನನ್ನ ಗುರಿಯಲ್ಲಿರಲಿಲ್ಲ. ನಾನು ಕಾವ್ಯರಚನೆಗೆ ಮೊಟ್ಟಮೊದಲು ಕೈಹಾಕಿದ ಸನ್ನಿವೇಶಗಳನ್ನು ನೆನೆಸಿಕೊಂಡರೆ ಹಿನ್ನೆಲೆ ಅರ್ಥವಾಗುತ್ತದೆ. ನಾನು ಹೈಸ್ಕೂಲಿನಲ್ಲಿದ್ದಾಗಲೆ ಪದ್ಯಗಳನ್ನು ಬರೆಯುತ್ತಿದ್ದೆ. ಆದರೆ ಕನ್ನಡದಲ್ಲಲ್ಲ, ಇಂಗ್ಲೀಷಿನಲ್ಲಿ. ಮಿಲ್ಟನ್ ಕವಿಯ ‘ಪ್ಯಾರಡೈಸ್‌ಲಾಸ್ಟ್’ ಓದಿದ ಮೇಲಂತು ಆ ಬಿರುಸು ಬೀಸುಗಳನ್ನು ಕನ್ನಡದಲ್ಲಿ ತರಲು ಸಾಧ್ಯವೇ ಎಂದು ಯೋಚಿಸುತ್ತಿದ್ದೆ. ಇಲ್ಲವೆಂದೇ ನನ್ನ ಭಾವನೆಯಾಗಿತ್ತು.”

ನಾನು ಮಧ್ಯೆ ಬಾಯಿ ಹಾಕಿ ‘ಹಾಗಾದರೆ ಈಗ ಇಂಗ್ಲಿಷ್ ಕಲಿತ ನಮ್ಮವರು ಇಂಗ್ಲಿಷಿನ ವಿಷಯದಲ್ಲಿ ತೋರಿಸುತ್ತಿರುವ ಅಂಧಾಭಿಮಾನಕ್ಕಾಗಿ ವ್ಯಥೆಪಡಬೇಕೋ ಸಹಾನುಭೂತಿ ತೋರಿಸಬೇಕೋ ಗೊತ್ತಿಲ್ಲ’ ಎಂದೆ.

ಶ್ರೀ ಕುವೆಂಪು ಅವರು ಗೊಳ್ಳೆಂದು ನಕ್ಕರು. ಮತ್ತೆ ಅವರು ಅದೇ ಮಾತನ್ನು ಮುಂದುವರಿಸುತ್ತ “ಅರಿಯುವತನಕ ಎಲ್ಲರ ಪಾಡೂ ಅಷ್ಟೇಯೆ. ಕನ್ನಡದಲ್ಲಿ ಇಂಗ್ಲಿಷಿನಲ್ಲಿ ರುವ ಹಾಗೆ ಛಂದೋವೈವಿಧ್ಯಗಳನ್ನು ತರಲು ಸಾಧ್ಯವಿಲ್ಲ, ಹೊಸ ಹೊಸ ಭಾವಗಳನ್ನು ವ್ಯಕ್ತಪಡಿಸಲು ಪದಸಂಪತ್ತಿಲ್ಲ ಎಂದು ನಾನೇ ಜೆ. ಎಚ್. ಕಸಿನ್ಸರ ಹತ್ತಿರ ವಾದಿಸಿದ್ದೆ. ಅವರು ಸಲಹೆ ನಾನು ಕನ್ನಡದಲ್ಲಿ ಬರೆಯುವಂತೆ ಪ್ರಚೋದಿಸುವ ನಿಮಿತ್ತವಾಯಿತು.”

“ಇಂಗ್ಲೀಷಿನಲ್ಲಿಯೆ ಬರೆಯುವುದನ್ನು[29] ಮುಂದುವರಿಸಿದ್ದರೆ ಇಂಥ ಮಹಾಕಾವ್ಯ ಬರುತ್ತಿತ್ತೆ?”

“ಖಂಡಿತ ಬರುತ್ತಿರಲಿಲ್ಲ. ಎಷ್ಟಾದರೂ ಅದು ನಮಗೆ ಪರಭಾಷೆ. ನಮ್ಮ ಅನುಭವವನ್ನು ನಮ್ಮ ದರ್ಶನವನ್ನು ವ್ಯಕ್ತಪಡಿಸಲು ನಮ್ಮ ನುಡಿಗಿರುವ ಶಕ್ತಿ – ಸಂಸ್ಕೃತದ ಸಾರದಿಂದ ಬೆಳೆದಿರುವ ಈ ನಮ್ಮ ನುಡಿಯ ಶಕ್ತಿ-ಆ ಭಾಷೆಗಿಲ್ಲವೆಂದು ನನಗೀಗ ಚೆನ್ನಾಗಿ ಮನದಟ್ಟಾಗಿದೆ. ಅಂತು ಭಾವಗೀತೆಗಳನ್ನು ಬರೆದೆ, ಕಾವ್ಯವನ್ನು ಬರೆದೆ, ನಾಟಕಗಳನ್ನು ಬರೆದೆ. ಆದರೆ ಕಲೆಗಾಗಿ ಅಲ್ಲ, ಮುಖ್ಯತಃ ದರ್ಶನಕ್ಕಾಗಿ”.

“ನಿಜ. ಮೊಟ್ಟ ಮೊದಲು ಅಚ್ಚಾದ ನಿಮ್ಮ ‘ಅಮಲನಕತೆ’ಯಲ್ಲಿಯೆ ಇದು ವ್ಯಕ್ತವಾಗುತ್ತದೆ”.

“ಅಹುದು. ಜೊತೆಯಲ್ಲಿಯೇ ಇಂಗ್ಲೀಷ್ ಛಂದಸ್ಸಿನ ಮಾದರಿಯಲ್ಲಿ ಪ್ರಯೋಗಗಳನ್ನು ನಡೆಸುತ್ತಿದ್ದೆ. ‘ಪ್ಯಾರಡೈಸ್ ಲಾಸ್ಟ್’ ಕೃತಿಯ ಛಂದಸ್ಸನ್ನು ಮಾತ್ರ ಕನ್ನಡದಲ್ಲಿ ಬಳಸಲು ಕಷ್ಟವಾಯಿತು. ಯಾವಾಗಲೂ ನನಗೆ ಅದೇ ಗೀಳು. ‘ಚಿತ್ರಾಂಗದಾ’ ಕಾವ್ಯವನ್ನು ಬರೆದಾಗಲೂ ನನಗೆ ಅದರ ಗುಟ್ಟು ಅಷ್ಟಾಗಿ ಹೊಳೆಯಲಿಲ್ಲ. ಅಲ್ಲಿ ಮಹೋಪಮೆಗಳನ್ನು ಬಳಸಿಕೊಂಡೆ. ಆದರೆ ಮಹಾಛಂದಸ್ಸನ್ನು ಸಂಪೂರ್ಣವಾಗಿ ಬಳಸಲಾಗಲಿಲ್ಲ”.

“ಅದು ಸರಳರಗಳೆಯ ಜಾತಿಗೆ ಸೇರಿದುದು ತಾನೆ?”

“ಅಲ್ಲ, ಅಲ್ಲ; ಖಂಡಿತ ಅಲ್ಲ. ಇದರ ತಂತ್ರವೇ ಬೇರೆ ಇದರ ಓಟವೇ ಬೇರೆ, ಇದರ ಜಾಯಮಾನವೇ ಬೇರೆ. ಇದರಲ್ಲಿ ಐದೈದು ಮಾತ್ರೆಗಳ ಯಾಂತ್ರಿಕ ಗಣನೆ ಕಾಣುವುದಿಲ್ಲ. ದರ್ಶನವನ್ನು ಬರೆಯಲು ಪ್ರಾರಂಭಿಸಿದಾಗಲೂ ಆ ಛಂದಸ್ಸು ನನ್ನ ಹಿಡಿತಕ್ಕೆ ಸಿಗಲಿಲ್ಲ. ಸುಮಾರು ೫೦೦೦ ಪಂಕ್ತಿಗಳನ್ನು ಬರೆದ ನಂತರ ನಾನು ಕಾವ್ಯಕ್ಕೆ ಅಧೀನನಾದೆ; ಅದರಲ್ಲಿ ಲಯವಾದೆ. ಛಂದಸ್ಸು ತಾನಾಗಿಯೇ ಬದಲಾವಣೆ ಹೊಂದಿತು; ಗುರಿ ಬದಲಾಯಿಸಿತು. ಐದು ಮಾತ್ರೆಯ ಲೆಕ್ಕಾಚಾರದ ಗಣಗಳನ್ನು ಮುರಿದು ಮುರಿದು ತುಂಡುಮಾಡಿದೆ. ಮುರಿದಷ್ಟೂ ಸಂತೋಷವಾಯಿತು. ಅದನ್ನು ಪ್ರಯತ್ನ ಪೂರ್ವಕವಾಗಿ ಮಾಡಿದೆನೆಂದು ಭಾವಿಸಬಾರದು. ನನಗೆ ಅರಿವಿಲ್ಲದೆಯೇ ಭಾವ ನನ್ನನ್ನು ಆ ಕಡೆಗೆ ಎಳೆಯಿತು.[30] ಇದು ತಪ್ಪಿರಬಹುದೆಂದು ನನ್ನ ಪಂಡಿತತನ ನನಗೆ ಬೋಧಿಸಿತು. ತಿದ್ದಿದೆ. ಒಡೆದೆ. ಮತ್ತೆ ತನ್ನದೇ ದಾರಿ. ಹೋಗಲೆಂದು ಕಡಿವಾಣವನ್ನು ಸಡಲಿಸಿದೆ. ಓಡಿತು. ಅದರ ರಹಸ್ಯ ಮೊದಲು ಮೊದಲು ನನಗೆ ಗೊತ್ತಾಗಲಿಲ್ಲ. ಎಲ್ಲೆಲ್ಲಿ ಸಂಪ್ರದಾಯವನ್ನು ಮೀರಿ, ತುಳಿದ ದಾರಿಯನ್ನು ಬಿಟ್ಟು ಹೋಗಿತ್ತೋ ಅಲ್ಲೆಲ್ಲ ‘M’ (Mark) ಎಂದು ಗುರುತು ಹಾಕಿಕೊಂಡೆ. ಕೊನೆಗೆ ಅದೇ ಸರಿಯೆಂದು ಅರಿವಾಯಿತು. ಮಹಾ ಛಂದಸ್ಸೆಂಬ ಹೆಸರು ಹೊಳೆದದ್ದೂ ಆಗಲೇ!”

“ನಿಮ್ಮ ಸಾನೆಟ್ಟುಗಳಲ್ಲಿ ಮಹಾಛಂದಸ್ಸಿನ ಕುರುಹುಗಳನ್ನು ಕಾಣಬಹುದಲ್ಲವೆ?”

“ಅಹುದು. ನನಗೆ ಅರಿವಿಲ್ಲದೆಯೇ ಈ ಮಹಾಛಂದಸ್ಸು ಅಲ್ಲಿ ಮತ್ತು ಚಿತ್ರಾಂಗದಾ ಕಾವ್ಯದಲ್ಲಿ ರೂಪುಗೊಳ್ಳುತ್ತಿದ್ದುದು ಈಗ ನನಗೂ ಅರಿವಾಗುತ್ತಿದೆ. ಈಗ ನೋಡಿ, ಈ ಛಂದಸ್ಸಿನಲ್ಲಿ ಷಟ್ಪದಿ ವೃತ್ತಗಳ ಲಯ ಮತ್ತು ವೈವಿಧ್ಯವನ್ನು ಕಾಣಬಹುದು. ಇಲ್ಲಿ ಗಣನಿಯಮಕ್ಕೆ ಒಂದೊಂದು ಸಾಲ ಮೂಲಮಾನ(Unit)ವಲ್ಲ. ಇಡೀ ವಾಕ್ಯಗಳೊ, ಖಂಡವಾಕ್ಯಗಳೊ ಅಥವಾ ಒಂದು ಪದವೋ ಮೂಲಮಾನವಾಗಬಹುದು. ಹಾಗೆಯೆ ಯತಿಯನ್ನು ಎಚ್ಚರಿಕೆಯಿಂದ ಗುರುತಿಸಬೇಕಾಗುತ್ತದೆ. ಅಂತೂ ರಾಮಾಯಣ ಬೆಳೆಯಿತು. ನನ್ನ ಸಾಧನೆ ಸಾಗಿತು. ಅದು ಬೆಳೆದಂತೆಲ್ಲ ನಾನೂ ಬೆಳೆದೆ. The Epic Possessed me.[31] ನಾನು ಬರೆದೆನೆಂದು ಹೇಳುವುದೇ ತಪ್ಪು.

“ನೀವು ನಿಮಿತ್ತವಾದರೂ ಆದಿರಲ್ಲ. ಅಂಥ ಕೃತಿ ಹಲವರಿಂದ ಸಾಧ್ಯವಿಲ್ಲ. ಅದಕ್ಕೂ ಸಂಸ್ಕಾರ ಬೇಕು”.

“ಅಹುದು ಸಂಸ್ಕಾರ ಬೇಕು. ಈ ಸಂಸ್ಕಾರ ಹಲವಾರು ರೀತಿಯಲ್ಲಿ ಒದಗುತ್ತದೆ, ಹಲವಾರು ರೂಪದಲ್ಲಿ ಗೋಚರವಾಗುತ್ತದೆ. ನಮಗೆ ಗೊತ್ತಾಗದಂತೆಯೆ ನಮ್ಮಲ್ಲಿ ಮೈಗೂಡಬಹುದು. ಇದರಲ್ಲಿ ನನ್ನದೆನ್ನುವುದು ಅತ್ಯಲ್ಪ. ‘ನನ್ನದೆ’ನ್ನುವುದೂ ಅನ್ಯಪಾತ್ರ ಗಳಿಂದ ಒದಗಿದ್ದು. ವಿಶ್ವಶಕ್ತಿಗಳೆಲ್ಲ ಸೇರಿ ಈ ಕಾವ್ಯ ಆಗಿದೆ ಎನ್ನುವುದೇ ಸರಿ. ಇದು ನನ್ನೊಬ್ಬನದಲ್ಲ. ನಾನೊಬ್ಬ ಲಿಪಿಕಾರ. ಇಡೀ ಜನಾಂಗದ ಉಸಿರೇ ಅಲ್ಲಿದೆ. ನೀವು ಹೇಳಿದ ಹಾಗೆ ನಾನೊಂದು ನಿಮಿತ್ತ ಮಾತ್ರ.[32] ಅಲ್ಲಿ ಬರುವ ವರ್ಣನೆ ಚಿತ್ರ ಘಟನೆ ಪ್ರತಿಯೊಂದಕ್ಕೂ ಪ್ರಕೃತಿಯಿಂದ ಲೋಕದಿಂದ ಅಪಾರ ಸಹಾಯ ಒದಗಿದೆ. ‘ಪಂಚವಟಿಯ ಪರ್ಣಕುಟಿ’ ಎಂಬ ಸಂಚಿಕೆ (ಅಯೋಧ್ಯಾ ಸಂಪುಟ-ಸಂಚಿಕೆ೧೧)ಯಲ್ಲಿ ಮಂಜಿನ ವರ್ಣನೆ ಬರುತ್ತದೆ. ಆ ಭಾಗವನ್ನು ಬರೆಯುವ ಕಾಲದಲ್ಲಿ ನಾನು ಊರಿ[33]ನಲ್ಲಿದ್ದೆ. ಒಂದು ದಿನ  ಬೆಟ್ಟಗಳಲ್ಲಿ ಮಂಜು ಭೂಮ್ಯಾಕಾಶಗಳನ್ನು ಒಂದು ಮಾಡುವಷ್ಟು ದಟ್ಟವಾಗಿ ಹರಡಿತ್ತು. ಅದನ್ನು ನೋಡಿದಾಗ ಆ ವರ್ಣನೆ ಮೂಡಿತು. ಇಂಥ ಸನ್ನಿವೇಶದಲ್ಲಿಯೇ ಕಿಷ್ಕಿಂಧಾ ಸಂಪುಟದ ೯ನೆಯ ಸಂಚಿಕೆಯಲ್ಲಿ ಬರುವ ಗ್ರೀಷ್ಮ ಮತ್ತು ವರ್ಷರ್ತುಗಳ ವರ್ಣನೆ ಮೂಡಿತು. ಯುದ್ಧದ ವರ್ಣನೆಯೂ ಅಷ್ಟೆ. ಆಗತಾನೆ ಎರಡನೆಯ ಮಹಾಯುದ್ಧ ನಡೆಯುತ್ತಿತ್ತು. ಇಂದ್ರಜಿತುವಿನ ಯುದ್ಧ ವರ್ಣನೆಯಲ್ಲಿ ಆಧುನಿಕ ವಿಜ್ಞಾನ ಸೃಷ್ಟಿಸಬಲ್ಲ ಶಸ್ತ್ರಾಗಾರವನ್ನೆ ಕಾಣಬಹುದು.

“ಹೀಗೆಯೇ ಕನಸಿನ ಮೂಲಕ ವಿಶ್ವಶಕ್ತಿಯ ಸಂಚಾರವಾಗಿ ಕಾವ್ಯರಚನೆಗೆ ಪ್ರಚೋದನೆ ದೊರೆತ ಸನ್ನಿವೇಶಗಳಿವೆ. ಇವುಗಳಲ್ಲಿ ದಶಾನನನ ಸ್ವಪ್ನವೊಂದು.[34] ನಿಜವಾಗಿಯೂ ಅದು ನಾನು ಅನುಭವಿಸಿದ ಸ್ವಪ್ನ, ಅದು ನಾನು ಸ್ವಪ್ನದಲ್ಲಿ ಕಂಡ ದೃಶ್ಯ. ದಶಗ್ರೀವನ ಜೀವನದಲ್ಲಿ ಅದೊಂದು ರುದ್ರರಮಣೀಯ ಸನ್ನಿವೇಶ. ಅವನ ಕಣ್ಣಿಗೊಂದು ದೇವಾಲಯ ಕಾಣಿಸುತ್ತದೆ. ಪೀಠದಲ್ಲಿ ದೇವವಿಗ್ರಹಕ್ಕೆ ಪ್ರತಿಯಾಗಿ ಹಿಂಗಾಲುಗಳನ್ನೂರಿ ಮುಂಗಾಲುಗಳನ್ನು ಎತ್ತಿ ಕೊಂಡಿದ್ದ ಕುದುರೆ ಕಾಣಿಸಿಕೊಳ್ಳುತ್ತದೆ. ಅದರ ಖುರಪುಟದ ಧ್ವನಿಗೆ ಹೇಷಾರವಕ್ಕೆ ದಶಗ್ರೀವ ತತ್ತರಿಸುತ್ತಾನೆ. ಅಷ್ಟರಲ್ಲಿಯೆ ನಭದಲ್ಲಿ ಮೂಡಿದ ಬೃಹನ್ಮುಷ್ಟಿ ಕುದುರೆಯ ಕೊರಳನ್ನು ಕತ್ತರಿಸುತ್ತದೆ. ನೆತ್ತರು ಹೊನಲಾಗಿ ಹರಿಯುತ್ತದೆ. ದಶಶಿರ ಹೊಳೆಯ ದಡದಲ್ಲಿದ್ದ ದೋಣಿಯನ್ನು ಏರುತ್ತಾನೆ. ಕುದುರೆಯ ಮುಂಡ ನೆಗೆನೆಗೆದು ರಾವಣನೆಡೆಗೆ ಬಂದು ನದಿಯಲ್ಲಿ ದುಮ್ಮಿಕ್ಕುತ್ತದೆ. ದೋಣಿ ಮಗುಚಿಕೊಳ್ಳುತ್ತದೆ. ರಾವಣ ನೀರಿನಲ್ಲಿ ಮುಳುಗುತ್ತಾನೆ. ಅಲ್ಲಿಯೆ ಕುಂಭಕರ್ಣನೂ ಕಾಣಿಸಿಕೊಳ್ಳುತ್ತಾನೆ. ಇಬ್ಬರೂ ಹೋರಾಡಿ ಶಿಶುಗಳಂತೆ ದಡವನ್ನು ತಲಪುತ್ತಾರೆ. ಆ ದಡದಲ್ಲಿಯೇ ಒಂದು ಆಶ್ರಮ. ಅಲ್ಲಿಗೆ ಬಂದ ಸೀತೆ ಅಳುತ್ತಿದ್ದ ಆ ಅವಳಿ ಮಕ್ಕಳನ್ನು[35] ಎತ್ತಿ ಮುದ್ದಾಡುತ್ತಾಳೆ. ಇದೇ ಆ ಸ್ವಪ್ನ. ಆಧ್ಯಾತ್ಮಿಕ ಪ್ರಾಣಮಯದ ಶಕ್ತಿಗೆ ‘ಅಶ್ವ’ ಪ್ರತಿಮೆಯೆಂಬುದು ವೇದಗಳಿಂದ ಗೊತ್ತಾ ಗುತ್ತದೆ.[36] ಆ ದೈವೀಶಕ್ತಿ ರಾವಣನನ್ನು ಅಟ್ಟಿಕೊಂಡು ಹೋಗಿ ಅನುಗ್ರಹಿಸುತ್ತದೆ. ಈ ಕನಸಿನ ಕಾಣ್ಕೆಯೆ ಮುಂದೆ ನನಸಾಗುವುದನ್ನು ಕಾಣುತ್ತೇವೆ; ರಾವಣತ್ವ ಹರಿದು ರಾಮತ್ವ ನೆಲೆಗೊಳ್ಳುವುದನ್ನು ನೋಡುತ್ತೇವೆ.

“ಮತ್ತೊಂದು ಸನ್ನಿವೇಶ. ಅದು ‘ಕ್ಷುದ್ರ’ವಾದುದಾದರೂ ಅದರ ಪ್ರಚೋದನೆ ಬಹಳ ಪರಿಣಾಮಕಾರಿಯಾದುದು. ಒಮ್ಮೆ ನಾಲ್ಕಾರು ತಿಂಗಳು ಬರವಣಿಗೆಯನ್ನು ಮುಂದು ವರಿಸಲಾಗಲಿಲ್ಲ. ಕಾದುಕಾದು ಬೇಸತ್ತೆ, ಹಲವರಿದೆ, ಖೇದಗೊಂಡೆ. ಒಂದು ದಿನ ಬೆಳಿಗ್ಗೆ ಚಿಂತಾಮಗ್ನನಾಗಿ ಕುಳಿತಿರುವಾಗ ನನ್ನ ಮಗ ತೇಜಸ್ವಿ ಏನೋ ಕಾರಣದಿಂದ ಆಳುವುದಕ್ಕೆ ಆರಂಭಿಸಿದ. ‘ಏಕೋ ಅಳುತ್ತೀಯೆ’ ಎಂದವನೇ ನನ್ನ ಕೊಠಡಿಗೆ ನಡೆದೆ. ಸರಿ, ‘ಏಕಳುವೆ, ತೇಜಸ್ವೀ?’ಯಿಂದ ‘ಅತ್ತಲಾ ಕಿಷ್ಕಿಂಧೆಯೊಳ್’ ಎಂಬ ಸಂಚಿಕೆ ಆರಂಭವಾಗಿ ಕೊನೆಗೊಂಡಿತು. ನಮ್ಮ ಮನೆಯ ಮುಂದಣ ಮರದಲ್ಲಿ ಹಕ್ಕಿಯೊಂದು ‘ಟುವ್ವಿಟುವ್ವಿ’ ಎಂದು ಕರೆದುದೇ ಕಾರಣವಾಗಿ ‘ಓ ಲಕ್ಷ್ಮಣಾ’ ಸಂಚಿಕೆ ಆರಂಭವಾಯಿತು”.

“ಮಹತ್ತಾದ ಕಾರ್ಯಗಳಿಗೆಲ್ಲ ವಿಶ್ವಶಕ್ತಿಯ ಪ್ರಚೋದನೆಯೆ ಕಾರಣ ಎಂಬುದನ್ನು ಆಗ ನಾನು ಅರಿತೆ. ಗಾಂಧೀಜಿ ಆಗಾಗ್ಗೆ ಹೇಳುತ್ತಿದ್ದ ‘ಅಂತರ್ವಾಣಿ’ಯ ನಿಜತ್ವ ನನಗೆ ಸ್ಪಷ್ಟವಾಯಿತು”.

ಮತ್ತೆ ಶ್ರೀ ಕುವೆಂಪು ಮುಂದುವರಿಯುತ್ತ “ಒಂದೊಂದು ಹೆಜ್ಜೆಯಲ್ಲಿಯೂ ವಿಶ್ವಶಕ್ತಿ ನನಗೆ ನೆರವಾಗಿ ಕೆಲಸ ಮಾಡಿದೆ. ಇಷ್ಟು ಮಾತ್ರ ನಿಜ; ಅಷ್ಟು ಹೊತ್ತಿಗೆ ನನಗೆ ಶಾಸ್ತ್ರ ಪರಿಚಯ, ಕಾವ್ಯಪರಿಚಯ, ವೇದಾಂತಪರಿಚಯ ಚೆನ್ನಾಗಿ ಆಗಿತ್ತು. ಖಗೋಳಶಾಸ್ತ್ರ, ಮನಶ್ಶಾಸ್ತ್ರ, ಸೌಂದರ್ಯಶಾಸ್ತ್ರ, ಭೌತಶಾಸ್ತ್ರ, ಕಾವ್ಯರಾಶಿ-ಇವೇ ಮೊದಲಾದುವುಗಳ ಜ್ಞಾನ ನನಗೆ ಸಾಕಷ್ಟು ಲಭಿಸಿತ್ತು. ಕಾವ್ಯವನ್ನು ಬರೆಯುವಾಗಲಂತು ‘ನನ್ನತನ’ ಉಳಿದಿರಲಿಲ್ಲವೆಂದೇ ಹೇಳಬೇಕು. ಆಗ ನಾನು ಹುತ್ತದಲ್ಲಿ ಅಡಗಿದ್ದೆ ಎಂದು ಹೇಳಿದರೂ ತಪ್ಪಲ್ಲ. ಕಾಲೇಜಾಯಿತು, ನಾನಾಯಿತು, ನನ್ನ ಮನೆಯಾಯಿತು. ಊರಿಗೂ ವಿಶೇಷವಾಗಿ ಹೋಗುತ್ತಿರಲಿಲ್ಲ. ಒಮ್ಮೆ ಬೇಸಗೆ ರಜದಲ್ಲಿ ನಾನೊಬ್ಬನೆ ಮನೆಯಲ್ಲಿದ್ದೆನು. ಆಗ ಒಮ್ಮೆಯೂ ಹೊರಗಡೆ ಹೋದದ್ದು ನೆನಪಿಲ್ಲ”.

“ತಪಸ್ಸಿಲ್ಲದೆ ಮಹಾಕೃತಿ ಅವತರಿಸುವುದೇ ಇಲ್ಲ; ಋಷ್ಯಶೃಂಗನ ತಪಶ್ಯಕ್ತಿ, ದಶರಥನ ‘ಖಡ್ಗಧಾರಾವ್ರತ’ – ರಾಮಾವತಾರ ಇವುಗಳ ಪರಿಣಾಮ ತಾನೆ. ಅದಿರಲಿ, ಆಂಗ್ಲ ಸಾಹಿತ್ಯಕ್ಕೆ ನಿಮ್ಮ ಕಾವ್ಯ ಎಷ್ಟರಮಟ್ಟಿಗೆ ಋಣಿ?”

“ಆಂಗ್ಲ ಕವಿಗಳಲ್ಲಿ ನನ್ನನ್ನು ಮಿಲ್ಟನ್ ಮರುಳುಗೊಳಿಸಿದಂತೆ ಇನ್ನಾರೂ ಮರುಳು ಗೊಳಿಸಿಲ್ಲ. ಅವನು ದೊಡ್ಡ ಕವಿಯೆಂದು ಆಂಗ್ಲ ವಿಮರ್ಶಕರು ಒಪ್ಪಿಕೊಂಡಿದ್ದಾರೆ. ನಾನು ಆ ವಿಮರ್ಶಕರಿಗಿಂತ ಮುಂದೆ ಸಾಗಿದ್ದೇನೆ. ಅವನ ಕಾವ್ಯದ ಹಿಂದೆ ಹುದುಗಿರುವ ಭವ್ಯತೆ ನನಗೆ ವೇದ್ಯವಾಗಿದೆ. ದೈವೀಶಕ್ತಿಯ ವಿಷಯ ಅವನಿಗೆ ಗೊತ್ತಿತ್ತು. ಆದರೆ ಅವನು ಸಾಧಕನಲ್ಲ, ಸಿದ್ದಿಪಡೆದವನಲ್ಲ. ಭರತಖಂಡದಲ್ಲಿ ನಮಗಿರುವ ವಾತಾವರಣ ನಮಗಾಗಿ ಹಿಂದಿನಿಂದ ಬೆಳೆದು ಬಂದಿರುವ ಈ ಆಧ್ಯಾತ್ಮಿಕ ಸಂಪತ್ತು – ಇವುಗಳ ಸಂಪರ್ಕ ಅವರಿಗಿಲ್ಲ. ನಮ್ಮ ಸುತ್ತಮುತ್ತ ಅಂದು ಇಂದು ಎಂದೆಂದೂ ಅದೆಷ್ಟು ಜನ ಆಧ್ಯಾತ್ಮಿಕ ವ್ಯಕ್ತಿಗಳು ಆಗಿ ಹೋಗಿದ್ದಾರೆ, ಬರುತ್ತಿದ್ದಾರೆ! ಆಧ್ಯಾತ್ಮಿಕ ಸಾಧನೆ ಕ್ಯಾಥೊಲಿಕ ಪಂಗಡದಲ್ಲಿ ಸ್ವಲ್ಪ ಉಳಿದುಬಂದಿದೆ. ವೈಜ್ಞಾನಿಕ ಪ್ರವೃತ್ತಿಯ ಕಡೆಗೆ ವಾಲಿರುವ ಪ್ರಾಟೆಸ್ಟಾಂಟರಿಗೆ ಆಧ್ಯಾತ್ಮಿಕತೆಯ ಅರಿವು ಸಂಪೂರ್ಣವಾಗಿ ಆಗಲಾರದು. ತಾವು ಕಾಣದಿದ್ದ ಮಾತ್ರಕ್ಕೆ ಅದು ಇಲ್ಲವೆಂದು ಅಲ್ಲಗಳೆಯುತ್ತಾರೆ. ವೊರ್ಡ್ಸ್‌ವರ್ತ್‌ನಲ್ಲಿ ಈ ಆಧ್ಯಾತ್ಮಿಕಾಂಶ ಸ್ವಲ್ಪಮಟ್ಟಿಗೆ ಕಾಣುತ್ತದೆ. ಆದರೆ ಅದು ಅವನಿಗೂ ಅಸ್ಪಷ್ಟ; ಆಸ್ಪಷ್ಟತೆಯನ್ನು ತಿಳಿದುಕೊಳ್ಳಲು ಅವನು ಯತ್ನಿಸುತ್ತಾನೆ, ಆಗದು. ಷೆಲ್ಲಿಯೇನೋ ಇನ್ನೂ ಮುಂದುವರಿದಿದ್ದಾನೆ. ಆದರೆ ಅವನು ಇನ್ನಷ್ಟು ದಿನ ಬದುಕಿದ್ದರೆ ಎಷ್ಟರಮಟ್ಟಿಗೆ ಸಿದ್ದಿಪಡೆಯುತ್ತಿದ್ದನೆಂಬುದನ್ನು ಕಾಣ ಬಹುದಾಗಿತ್ತು. ಟೆನಿಸನ್ ಮತ್ತು ಬ್ರೌನಿಂಗ್ ಕವಿಗಳು ತಕ್ಕಮಟ್ಟಿಗೆ ದಾರ್ಶನಿಕ ಕವಿಗಳೆಂದು ಹೇಳಬಹುದು. ಅವರು ಜರ್ಮನಿಯ ದಾರ್ಶನಿಕರ ಪ್ರಭಾವಕ್ಕೆ ಒಳಗಾದವರು. ಪಾಲ್ ಡ್ಯೂಸೆನ್, ಷೋಪನ್‌ಹಾರ್ ಮೊದಲಾದವರ ಕೃತಿಗಳು ಇಂಗ್ಲಿಷಿಗೆ ಭಾಷಾಂತರವಾಗಿದ್ದುವು. ಜರ್ಮನಿಯ ದರ್ಶನದ ಬೆಳೆವಣಿಗೆಗೆ ಭರತಖಂಡದ ದರ್ಶನದ ಸಂಪರ್ಕ ಎಷ್ಟೋ ಸಹಾಯ ಮಾಡಿತು. ವೈಶ್ಯವೃತ್ತಿಯ ಆ ಆಂಗ್ಲರಲ್ಲಿ ಟೆನಿಸನ್ ಬ್ರೌನಿಂಗ್‌ರಂಥ ದಾರ್ಶನಿಕ ಕವಿಗಳು ಹುಟ್ಟಿದ್ದು ಆಶ್ಚರ್ಯವೇ ಸರಿ. ಇತ್ತೀಚಿನವನಾದ ರಾಬರ್ಟ್ ಬ್ರಿಡ್ಜೆಸ್‌ನ Testament of Beauty ಎಂಬ ಕಾವ್ಯವನ್ನು ನಾನಿನ್ನೂ ಓದಿಲ್ಲ.

“ಏನೇ ಆಗಲಿ, ಅವರು ನಮ್ಮವರ ಎತ್ತರಕ್ಕೆ ಏರಲಾರರು. ನಮ್ಮಲ್ಲಿ ದೈವೀಶಕ್ತಿ ಆಸುರೀಶಕ್ತಿಗಳ ಮೂಲ ಒಂದೆ; ಕೊನೆಯಲ್ಲಿ ಎರಡೂ ಒಂದೆ. ಮಿಲ್ಟನಿನ ಸೇಟನ್ನಿನಲ್ಲಿ ಇದು ಕಾಣುತ್ತದೆ ನಿಜ. ಅದು ಅಸ್ಪಷ್ಟ. ಸೈತಾನ ದೇವರ ಮಗ, ದೇವರ ಪಕ್ಕದಲ್ಲಿ ನಿಲ್ಲಲು ಯೋಗ್ಯನಾದವನು ಎಂಬುದನ್ನು ಅವನು ತಿಳಿಸುತ್ತಾನೆ. ಒಟ್ಟಿನಲ್ಲಿ ಇಂಗ್ಲಿಷ್ ಸಾಹಿತ್ಯ ಸಂಪರ್ಕದಿಂದ ನನಗೆ ತುಂಬ ಪ್ರಯೋಜನ ಆಗಿದೆ. ಅವರಲ್ಲಿರುವ ವಿವಿಧ ರೀತಿಗಳು ನಮಗೆ ಬೇಕು, ಅವಶ್ಯವಾಗಿ ಬೇಕು. ಅಲ್ಲಿರುವ ವೈವಿಧ್ಯ ಯಾವ ಸಾಹಿತ್ಯದಲ್ಲಿಯೂ ಇಲ್ಲ. ವೈವಿಧ್ಯವೆಂದರೆ ರೀತಿಯಲ್ಲಿ ಮಾತ್ರ. ಷೇಕ್ಸ್‌ಪಿಯರನ ನಾಟಕವಿಧಾನ ರೀತಿಗಳು ನನಗೆ ತುಂಬ ಮೆಚ್ಚಿಕೆಯಾಗಿವೆ. ನಮ್ಮಲ್ಲಿಯೂ ಅದೇ ತರಹ ನಾಟಕಗಳು ಬಂದರೆ ಮೇಲು. ಅವರ ತಂತ್ರ ನಮ್ಮ ಮಂತ್ರ ಎರಡರ ಸಮ್ಮಿಲನದಿಂದ ಉತ್ತಮ ಕಾವ್ಯ ಸಂಭವಿಸಲು ಅವಕಾಶವಾಗುತ್ತದೆ”.

“ಆಯಾ ಜನಾಂಗದ ಸಂಸ್ಕಾರಕ್ಕೆ ತಕ್ಕಂತೆ ಕಾವ್ಯಗಳು ಹುಟ್ಟುತ್ತವೆ. ಅಲ್ಲವೆ? ನಮಗೆ ಪ್ರಾಚೀನಕಾಲದಿಂದ ಒಂದು ಸಂಸ್ಕಾರ ಬೆಳೆದುಬಂದಿದೆ. ನಮ್ಮಲ್ಲಿ ಜನ ಇಂದಿಗೂ ತಪಸ್ಸು ಮಾಡುವಂತೆ, ಉಪವಾಸವ್ರತ ಕೈಗೊಳ್ಳುವಂತೆ ಅವರಲ್ಲಿ ಕೈಗೊಳ್ಳುವುದಿಲ್ಲ. ಅವರ ಈಗಿನ ವಾತಾವರಣದಲ್ಲಿ ಅದು ಸಾಧ್ಯವೂ ಇಲ್ಲವೆಂದು ತೋರುತ್ತದೆ. ಮಿಲ್ಟನ್ ಕುರುಡನಾದುದೇ ಅವನ ಭಾಗ್ಯವೆಂದು ಕಾಣುತ್ತದೆ. ಅವನ ಕಾಲದ ಹೊತ್ತಿಗೆ ಅಲ್ಲಿಯ ಮತೀಯರಂಗದಲ್ಲಿ ಹೊಸ ಕ್ರಾಂತಿ ಮೈದೋರಿತ್ತು. ಕುರುಡನಾದುದರಿಂದ ಅವನು ಅಂತರ್ಮುಖಿಯಾಗುವುದು ಸಾಧ್ಯವಾಯಿತು. ಆದರೆ ತತ್ತ್ವಬೋಧನೆ ಅಥವಾ ದರ್ಶನ ಇದ್ದಷ್ಟು ಕಾವ್ಯ ಉತ್ತಮ ವಾಗುತ್ತದೆಂದು ಭಾವಿಸಬಹುದೇ? ತತ್ತ್ವಬೋಧನೆ ಹೆಚ್ಚಿದಷ್ಟು ಕಾವ್ಯ ಶುಷ್ಕವಾಗುತ್ತ ದೆಂಬುದಕ್ಕೆ ನಮ್ಮ ಹಿಂದಿನ ಗ್ರಂಥಗಳಿಂದ ಸಾಕಷ್ಟು ನಿದರ್ಶನಗಳು ದೊರೆಯುತ್ತವಲ್ಲವೆ?”

“ಕಾವ್ಯವೆಂದರೆ ಕೇವಲ ದರ್ಶನ ಮಾತ್ರ ಎಂದು ಅರಿಯಬಾರದು. ಕಾವ್ಯವೆನಿಸಿಕೊಳ್ಳಲು ಕೆಲವು ಮುಖ್ಯ ಲಕ್ಷಣಗಳಿವೆ. ಅವಿಲ್ಲದಿದ್ದರೆ ಎಂತಹ ಮಹದ್ದರ್ಶನವಾದರೂ ಸರಿಯೆ, ಕಾವ್ಯದ ಪ್ರಾಕಾರದೊಳಗೆ ಪ್ರವೇಶಿಸಲಾರದು. ಆ ಪ್ರಾಕಾರದೊಳಗೆ ಕಕ್ಕಸಿದೆ, ದೇವರ ಮಂದಿರವಿದೆ, ಊಟದ ಮನೆಯಿದೆ, ಮಲಗುವ ಕೋಣೆಯಿದೆ, ಬಚ್ಚಲಿದೆ. ಆದರೆ ಒಂದೊಂದಕ್ಕೂ ಅದರದರ ಸ್ಥಾನ ನಿಷ್ಕರ್ಷೆಯಾಗಿದೆ. ಹಾಗೆಯೇ ಕಾವ್ಯಗಳನ್ನು ವಿಂಗಡಿಸ ಬೇಕಾಗುತ್ತದೆ. ಬುದ್ದಿಪೂರ್ವಕವಾಗಿ ತತ್ತ್ವವನ್ನು ವಿವರಿಸಲು ಯತ್ನಿಸಿದರೆ ಅದು ಕಾವ್ಯ ವಾಗುವುದಿಲ್ಲ, ಶಾಸ್ತ್ರವಾಗುತ್ತದೆ. ಆ ತತ್ತ್ವ ಅನುಭವದ ಮೂಲಕ ವ್ಯಕ್ತಗೊಂಡರೆ ಮಾತ್ರ ಕಾವ್ಯವಾಗುತ್ತದೆ. ತತ್ತ್ವಶಾಸ್ತ್ರಜ್ಞನ ಬೋಧೆಗೂ ತತ್ತ್ವಾನುಭಾವಿಯ ಬೋಧೆಗೂ ಅಂತರ ವಿರುತ್ತದೆ. ದರ್ಶನವನ್ನು ಬರೆಯುವಾಗ ನನಗೆ ಎಷ್ಟೋ ವಿಷಯಗಳು ಗೋಚರ ವಿರಲಿಲ್ಲವೆಂದೇ ಹೇಳಬೇಕು. ಅಲ್ಲಿಯ ಮಾತುಗಳು ಸಹ ಪ್ರಜ್ಞಾಪೂರ್ವಕವಾಗಿ ಆಲೋಚಿಸಿ ತಿಣಿಕಿ ಬರೆದುವಲ್ಲ. ಬರೆದಾದ ಮೇಲೆ ಒಂದೊಂದು ಮಾತನ್ನು ಧ್ಯಾನಿಸಿದರೆ ಎಷ್ಟೆಲ್ಲ ವಿಷಯಗಳು ಧ್ವನಿತವಾಗುತ್ತವೆ! ಇಂದ್ರಿಯ ಅಗೋಚರವಾದುದೆಲ್ಲ ಅತೀಂದ್ರಿಯ ಗೋಚರ. ಅತೀಂದ್ರಿಯದಲ್ಲಿ ಇಷ್ಟೆಲ್ಲ ಕಾರ್ಯಗಳು ನಡೆಯುತ್ತಿರುತ್ತವೆ. ಒಮ್ಮೊಮ್ಮೆ ಪ್ರಜ್ಞೆ ತಿಳಿದ ಮೇಲೆಯೂ ಆ ಭಾವಗಳು ಸ್ಫುಟವಾಗಿ ಅರ್ಥವಾಗದಿರಬಹುದು. ನೀವು ಹೇಳುವ ಕೆಲವು ಕೃತಿಗಳಲ್ಲಿ ದರ್ಶನ ಕಾವ್ಯವಾಗಿ ಹೊರಹೊಮ್ಮಿಲ್ಲ, ತತ್ತ್ವವಾಗಿ ವ್ಯಕ್ತವಾಗಿದೆ. (It is thought of, not felt) ನನಗಂತು ನಾನು ಬರೆದಿರುವುದು ಸ್ವಾನುಭವ ಸತ್ಯ. ನನಗೆ ಗೊತ್ತು, ಇಲ್ಲಿ ಬಿದ್ದಿರುವ ಕಲ್ಲಿನಲ್ಲಿ (ಒಂಟಿಕೊಪ್ಪಲಿನ ಪಶ್ಚಿಮಕ್ಕಿರುವ ಬೋರೆಯ ಮೇಲೆ ನಿಂತು ಹೇಳಿದ ಮಾತು) ಆ ಗಿಡದಲ್ಲಿರುವ ಚೇತನದಷ್ಟೇ ಅದ್ಭುತವಾದ ಶಕ್ತಿ ಹುದುಗಿದೆ ಯೆಂದು. ಈ ಭಾವನೆಯಂತು ನನಗೆ ಚಿಕ್ಕಂದಿನಿಂದಲೂ ಅವರಿವರ ಉಪದೇಶವಿಲ್ಲದೆಯೇ, ವೇದೋಪನಿಷತ್ತು ಗ್ರಂಥಗಳನ್ನು ಓದುವುದಕ್ಕೆ ಮುಂಚಿನಿಂದಲೂ ಬೆಳೆದುಬಂದಿದೆ. ಆ ಭಾವನೆ ನನ್ನ ರಕ್ತದಲ್ಲಿ ರಕ್ತವಾಗಿದೆ. ಯಾರು ಏನೇ ಹೇಳಲಿ, ಈ ಮಾತು ಮಾತ್ರ ಸತ್ಯ”.

“ಈ ಕಾವ್ಯವನ್ನು ‘ಶ್ರೀರಾಮಾಯಣದರ್ಶನ’ವೆಂದು ಕರೆಯಲು ಇದೇ ಕಾರಣವಿರ ಬಹುದು ಅಲ್ಲವೆ?”

“ಅಹುದು. ಈ ಹೆಸರು ನಿಲ್ಲುವುದಕ್ಕೆ ಮುಂಚೆ ಎಷ್ಟೆಷ್ಟೋ ಆಲೋಚನೆಗಳ ಹೊಯ್ದಟ ಆಗಿ ಮುಗಿದಿತ್ತು. ಯಾವ ಹೆಸರನ್ನು ನೆನೆದರೂ ನನ್ನ ಮನಸ್ಸು ಒಪ್ಪುತ್ತಿರಲಿಲ್ಲ. ಪ್ರತಿಯೊಂದರಲ್ಲಿಯೂ ಏನೋ ಅರಕೆ ಕಾಣುತ್ತಿತ್ತು. ಈ ಪದಗುಚ್ಛ ಹೊಳೆದಾಗ ಮಾತ್ರ ಸಮಾಧಾನವಾಯಿತು.”

“ಅದರೆ ‘ದರ್ಶನ’ ಎಂಬ ಹೆಸರನ್ನು ನೋಡಿದ ಕ್ಷಣವೇ ಜನರಿಗೆ ಹೆದರಿಕೆಯಾಗುತ್ತದೆ. ಒಳಹೊಕ್ಕು ನೋಡುವ ತನಕ ಹೆದರಿಕೆ ಇದ್ದೇ ಇರುತ್ತದೆ. ನಾನು ಕೆಲವರಿಗೆ ಇದನ್ನು ಓದಿ ಅರ್ಥವನ್ನು ವಿವರಿಸಿದಾಗ ಅವರು ‘ಇದು ಬಹಳ ಕಷ್ಟ ಅನ್ನುತ್ತಿದ್ದೆವು, ಇಷ್ಟು ಸುಲಭವಾಗಿ ಅರ್ಥವಾಗುತ್ತದಲ್ಲ ಎಂದರು” ಎಂದೆ.

“ಆ ಹೆದರಿಕೆಗೆ ಆಧಾರವಿಲ್ಲ. ಇದೇನೂ ತತ್ತ್ವಶಾಸ್ತ್ರವಲ್ಲ. ಎಲ್ಲರಿಗೂ ಇದರಲ್ಲಿ ಧ್ವನಿತವಾಗುವ ದರ್ಶನವನ್ನು ವಿವರಿಸಿ ಫಲವಿಲ್ಲ. ಯಾರಿಗೆ ದರ್ಶನ ಬೇಕೋ ಅಂತಹವರಿಗೆ ಅಭ್ಯಾಸದಿಂದ ಅದು ಹೊಳೆದೇ ಹೊಳೆಯುತ್ತದೆ. ಈ ಕಾವ್ಯದ ರಚನೆಗೆ ಪ್ರಚೋದಕ ಶಕ್ತಿ ಆಧ್ಯಾತ್ಮ ಸಾಧನೆ ನಿಜ. ನನಗಂತು ಕಾವ್ಯರಚನೆ ಗೌಣ, ಆತ್ಮಸಾಧನೆ ಪ್ರಧಾನ. ಆದುದರಿಂದ ಇಲ್ಲಿಯ ಪ್ರತಿಯೊಂದು ಮಾತಿನಲ್ಲಿಯೂ ದರ್ಶನ ಧ್ವನಿಯನ್ನು ಕಾಣಬೇಕಾಗುತ್ತದೆ. ಶಬ್ದಾರ್ಥ ವಾಚ್ಯ ಲಕ್ಷಣ ವ್ಯಂಗ್ಯ ಮಾತ್ರವಲ್ಲ. ದರ್ಶನಧ್ವನಿ ಕೊಟ್ಟ ಕೊನೆಯದು. ದರ್ಶನ ಧ್ವನಿಯಲ್ಲಿ ರಸಧ್ವನಿ ಐಕ್ಯವಾಗಿಯೇ ಇರುತ್ತದೆ. ಆದರೆ ರಸಧ್ವನಿಯಲ್ಲಿ ದರ್ಶನಧ್ವನಿ ವಿಕಲ್ಪವಾಗಿರಬಹುದು”.

“ಅಂದರೆ ಇಲ್ಲಿ ದರ್ಶನಧ್ವನಿಯ ಮೂಲಕ ಮಾತ್ರ ವ್ಯಕ್ತವಾಗುತ್ತದೆ. ಹಾಗಲ್ಲದಿದ್ದರೆ ಅದು ಶಾಸ್ತ್ರವಾಗುತ್ತಿತ್ತು ಅಲ್ಲವೆ?”

“ಆದುದರಿಂದಲೇ ನಾನು ದರ್ಶನಧ್ವನಿ ಎಂದೆನೇ ಹೊರತು ದರ್ಶನ ಎನ್ನಲಿಲ್ಲ. ಧ್ವನಿ ಎಂಬುದು ಕಾವ್ಯಪ್ರಪಂಚಕ್ಕೆ ಸೇರಿದ ಮಾತು; ಕಾವ್ಯದ ಆತ್ಮ ಅದು. ಕೇವಲ ತತ್ತ್ವವನ್ನು ಬೋಧಿಸಿದರೆ ನೀವು ಹೇಳಿದ ಹಾಗೆ ಶುಷ್ಕಗ್ರಂಥವಾಗುತ್ತದೆ. ಇಲ್ಲಿ ರಸಾನುಭವದ ಮೂಲಕ ದರ್ಶನ ಧ್ವನಿತವಾಗುತ್ತದೆ. ‘ರಸಾನುಭವ’ ಎಂಬುದನ್ನು ಮಾತ್ರ ಮರೆಯಬಾರದು”.

“ದರ್ಶನವಿರದ ಕಾವ್ಯ ಕಾವ್ಯವಲ್ಲವೆ?”

“ಅಲ್ಲದೆ ಏನು? ಆದರೆ ಮೊದಲೆ ಹೇಳಿದ ಹಾಗೆ ಅದೊಂದು ಜಾತಿಯ ಕಾವ್ಯ ವಾಗುತ್ತದೆ”.

“ಕಲೆಗಾಗಿ ಕಲೆ’ ಎಂಬ ಪಾಶ್ಚಾತ್ಯ ವಿಮರ್ಶಕರ ತತ್ತ್ವಕ್ಕೆ ನಿಮ್ಮ ಕಾವ್ಯ ವಿರುದ್ಧ ವಾಗಿದೆಯಲ್ಲವೆ?”

“ಕಾವ್ಯದಲ್ಲಿ ಕಲೆ ಮತ್ತು ದರ್ಶನ ಎರಡೂ ಜೊತೆ ಜೊತೆಯಾಗಿ ಹೋಗಬೇಕು. ‘ಕಾವ್ಯಸೌಂದರ್ಯ’ ಎಂಬ ಮಾತಿನಲ್ಲಿ ಈ ಎರಡು ಭಾವನೆಗಳೂ ಅಡಗಿವೆ. ಆದರೆ ದರ್ಶನವಿಲ್ಲದ ಕಾವ್ಯ ಮಹಾಕಾವ್ಯ ಅಲ್ಲ, ಚಿರಕಾವ್ಯ ಅಲ್ಲವೆಂದೇ ನನ್ನ ಭಾವನೆ. ನಮ್ಮ ಹಿಂದಿನವರೂ ಕಾವ್ಯ ಪುರುಷಾರ್ಥ ಸಾಧನೆಗೆ ಒಂದು ಮಾರ್ಗ ಎಂದು ನಂಬಿದ್ದರು. ಪಾಶ್ಚಾತ್ಯ ವಿಮರ್ಶಕರು ರಸಾನುಭವದ ಅಲೌಕಿಕತೆಯ ವಿಷಯವಾಗಿ ನಂಬುವುದೆ  ಇಲ್ಲ. ಈ ಲೋಕ ಈ ಜೀವನ ಇವುಗಳಿಗೆ ಸಂಬಂಧಿಸಿದ ರಸಾನುಭವ ಇಲ್ಲವೆಂದೇ ಅವರ ನಂಬಿಕೆ. ರಸಾನಂದ ಬ್ರಹ್ಮಾನಂದವಾಗಬಹುದು. ಕಾವ್ಯದ ಶಾಶ್ವತ ಪ್ರಯೋಜನ ಮೋಕ್ಷಸಾಧನೆ ಎಂಬುದನ್ನು ಅವರಲ್ಲಿ ಹಲವರು ನಂಬರು. ವೊರ್ಡ್ಸ್‌ವರ್ತ್‌, ಷೆಲ್ಲಿ ಮೊದಲಾದ ಕವಿಗಳಿಗೆ ಕಾವ್ಯದ ಶಾಶ್ವತತೆಯ ವಿಷಯವಾಗಿ ನಂಬಿಕೆ ಇತ್ತು. ಕೋಲ ರಿಜ್ಜನಂತು ಅದನ್ನು ಬಹಿರಂಗವಾಗಿಯೇ ವಿಶದೀಕರಿಸಿದ್ದಾನೆ. ಇತರ ಕವಿಗಳು ಅವರಂಥ ಅನುಭಾವಿಗಳಲ್ಲ. ಆದರೆ ನಮ್ಮವರಂತು ಕಾವ್ಯದ ಪರಮಗುರಿಯನ್ನು ಚೆನ್ನಾಗಿ ಅರಿತಿದ್ದರು. ಕಾವ್ಯಲೋಕಾತೀತವಾದದ್ದು, ಲೋಕಾತಿಶಯವಾದದ್ದು ಎಂಬುದು ನಮ್ಮ ರಕ್ತದಲ್ಲಿ ಸೇರಿ ಬಂದಿದೆ. ಮಿಲ್ಟನ್ ಸಹ ಕಾವ್ಯಗಳ ವಿಷಯವಾಗಿ ಪ್ರಸ್ತಾಪಿಸುತ್ತ ‘A good book is the life blood of a Master spirit embalmed and treasured  up to a life beyond life’ ಎಂದಿದ್ದಾನೆ. ಮತ್ತೊಂದು ಲೋಕದಲ್ಲಿಯೂ ಅವು ಪ್ರಯೋಜನಕಾರಿಯಾಗುತ್ತವೆ ಎಂಬುದೇ ಅವನ ಅಭಿಪ್ರಾಯ.”[37]

“ನಿಮ್ಮ ಈ ಮಹಾಕಾವ್ಯದ ಮೇಲೆ ಅರವಿಂದರ ದರ್ಶನದ ಪ್ರಭಾವ ಇದೆಯೋ?”

“ಅವರ ಪ್ರಭಾವ ಇಲ್ಲವೆಂದು ಹೇಳುವಂತಿಲ್ಲವಾದರೂ ಇದೆಯೆಂದೂ ಹೇಳುವಂತಿಲ್ಲ. ನಾನು ಮೊದಲೇ ಶ್ರೀರಾಮಕೃಷ್ಣಪರಮಹಂಸ ವಿವೇಕಾನಂದರ ಗ್ರಂಥಗಳನ್ನೂ ಪಾಶ್ಚಾತ್ಯ ದರ್ಶನ ಗ್ರಂಥಗಳನ್ನೂ ಓದಿದ್ದರಿಂದ ‘ದರ್ಶನ’ವೇನೆಂಬುದು ಸಂಪೂರ್ಣವಾಗಿ ಗೊತ್ತಿತ್ತು. ನಾನು ಎಂದೋ ಬರೆದ ‘ಶಿಲಾತಪಸ್ವಿ’ಯೆ ಇದಕ್ಕೆ ಸಾಕ್ಷಿ. ಅರವಿಂದರ ಗ್ರಂಥಗಳ ಪರಿಚಯವಾದದ್ದು ಇತ್ತೀಚೆಗೆ. ಮೊದಮೊದಲು ಅವರ ವಿಷಯದಲ್ಲಿ ಏನೇನೂ ಆಸಕ್ತಿ ಇರಲಿಲ್ಲ. ೧೯೪೨ನೆಯ ಇಸವಿಯಲ್ಲಿ ಅವರ ‘Life-Divine’ ಗ್ರಂಥದ ವಿಮರ್ಶೆಯನ್ನು ನೋಡಿದಾಗ ಆಕರ್ಷಿತನಾದೆನು. ಅಂದಿನಿಂದ ಅರವಿಂದರ ಗ್ರಂಥಗಳನ್ನೆಲ್ಲ ಓದಿದ್ದೇನೆ. ನನಗೊಂದು ಆಶ್ಚರ್ಯ. ನಾನು ಅರವಿಂದರ ಗ್ರಂಥಗಳನ್ನು ನೋಡುವುದಕ್ಕೆ ಮುಂಚೆಯೇ ಶ್ರೀರಾಮಾಯಣದರ್ಶನವನ್ನು[38] ಬರೆಯಲು ಆರಂಭಿಸಿದ್ದೆನಷ್ಟೆ. ಆ ಹೊತ್ತಿಗೆ ಅರ್ಧಕ್ಕಿಂತ ಹೆಚ್ಚಾಗಿಯೇ ಕೆಲಸ ಸಾಗಿತ್ತು. ರಾಮಾಯಣದ ಸಂಪುಟ ವಿಭಾಗವನ್ನೂ ಸಂಪುಟ ನಾಮಕರಣವನ್ನೂ ಈಗ ಆಲೋಚಿಸಿ ನೋಡಿದರೆ, ಇದೇನು ಅರವಿಂದರ ದರ್ಶನಕ್ಕೂ ಈ ದರ್ಶನಕ್ಕೂ ಎಷ್ಟು ಸಾಮ್ಯವಿದೆಯೆಂಬ ಅಂಶ ಗೊತ್ತಾಗದಿರದು. ನಾನು ಮರ್ತ್ಯ ರೀತಿಯಲ್ಲಿಯೇ ರಾಮಾಯಣವನ್ನು ಬರೆಯಲು ಹೊರಟಿದ್ದು. ಆದರೆ ಕೊನೆಕೊನೆಗೆ ಅತೀಂದ್ರಿಯ ಪ್ರಪಂಚದ ಅನುಭವವೆಲ್ಲ ಅಲ್ಲಿ ವ್ಯಕ್ತವಾಗತೊಡಗಿತು. ನನ್ನ ಮನಸ್ಸಿನಲ್ಲಿದ್ದ ಅನೇಕ ಅತೀಂದ್ರಿಯ ಕಲ್ಪನೆಗಳಿಗೆ ಅರವಿಂದರಿಂದ ಪ್ರಾಯೋಗಿಕ ನಿದರ್ಶನ ಮತ್ತು ಬೆಂಬಲ ದೊರೆತುದೊಂದು ಹೆಚ್ಚಿನ ಸಂಗತಿ.”

“ಶ್ರೀರಾಮ ಪ್ರಾಕೃತನಂತೆ ಹುಟ್ಟ ಅಪ್ರಾಕೃತನಾದನಲ್ಲವೆ? ಅಂದರೆ ಶ್ರೀರಾಮನ ಜೀವನದಲ್ಲಿ ಆ ಒಂದು ವಿಕಾಸಕ್ರಮವನ್ನು ಕಾಣುತ್ತೇವಲ್ಲವೆ? ಎಂದು ಅವನು ಭರದ್ವಾಜನ ಆಶ್ರಮವನ್ನು ಪ್ರವೇಶಿಸುತ್ತಾನೆಯೋ ಅಂದಿನಿಂದ ಮಾತ್ರ ಅವನು ವ್ಯಕ್ತವಾಗಿ ಅಪ್ರಾಕೃತನಂತೆ ಕಾಣುತ್ತಾನೆ. ಅವನಿಗೆ ಆಗಾಗ್ಗೆ ಅಲೌಕಿಕಾನುಭವ ಆಗುವಂತೆಯೂ ಗೊತ್ತಾಗುತ್ತದೆ.”

“ಶ್ರೀರಾಮ ಅಪ್ರಾಕೃತನೆಂಬುದಕ್ಕೆ ಸೂಚನೆಗಳು ಮೊದಲಿನಿಂದಲೂ ಸಿಗುತ್ತವೆ. ತನ್ನ ಮರಿಗೆ ಗುಟುಕುಕೊಡುತ್ತಿದ್ದ ಗುಬ್ಬಚ್ಚಿಯನ್ನು ನೋಡಿದುದೆ ತಡ ‘ವಿಭೂತಿಯಂ ತಿರೆಗೆ ಕರೆವಾಸೆಯಂ ಕೆರಳಿಸಿದುದಾ ದೊರೆಯ ಹೃದಯದಲಿ!’ ‘ಗೆಲ್ವುದಾ ವಿಧಿಲೀಲೆಯುಂ’ ಎಂದು ಅಗ್ನಿದೇವ ಹೇಳು ಮಾತು. ಹಾಗೆಯೇ ಹಸುಮಗು ಆಕಾಶದ ಚಂದ್ರನನ್ನು ತಂದು ಕೊಡುವಂತೆ ಅಮ್ಮನನ್ನು ಕಾಡಿಸಿದ್ದು. ಮಗು ಒಮ್ಮೆ ‘ಗಿರಿಭಾರಮಾಗಿ’, ಒಮ್ಮೆ ‘ಹೂ ಹಗುರಾಗಿ’, ಮತ್ತೊಮ್ಮೆ ತೊಟ್ಟಿಲಲ್ಲಿ ಕಂದನ ಬದಲು ಮಹಾಮೂರ್ತಿ ಕಾಣಿಸಲು ಕೌಸಲ್ಯೆ ವಸಿಷ್ಠ ಗುರುವನ್ನು ಕರೆಸಿ ತನ್ನ ಅಂತರಂಗದ ಕಾತರತೆಯನ್ನು ತೋಡಿಕೊಂಡಾಗ ಆ ಗುರುಗಳು ಹೇಳಿದ ಸಮಾಧಾನದ ಮಾತು. ಅಹಲ್ಯೆಯ ಪ್ರಕರಣವಂತು ಒಂದು ಅಪ್ರಾಕೃತ ಘಟನೆಯೇ ಸರಿ. ಮದುವೆಗೆ ಮುಂಚೆ ಸೀತೆ ಕಂಡ ಕನಸಿನ ಸಂಗತಿ ಮತ್ತೊಂದು ನಿದರ್ಶನ. ತಂದೆಯ ಮೇಲೆ ಕೋಪಗೊಂಡಿದ್ದ ಲಕ್ಷ್ಮಣನನ್ನು ಸಮಾಧಾನಪಡಿಸುವಾಗ ಶ್ರೀರಾಮನೇ ಹೇಳುತ್ತಾನೆ:

……………….ದಿನಂ ದಿನಂ
ಗಿರಿ ಸದೃಶ ಭವ್ಯನೊರ್ವಂ ಮಹಾವಾನರಂ
ಬೆಳೆಬೆಳೆಯುತಾಕಾಶ ಚುಂಬಿ ಶೈಲಾಗ್ರದೊಳ್
ವಿಸ್ತೃತವ್ರೋಪಟಕೆದುರಾಗಿ ನಿಂದೆನಗೆ
ಕೈವೀಸಿ ಕರೆಯುತಿರ್ಪನ್ ದಕ್ಷಿಣಾಪಥಕೆ
ಮನಮರಿಯದದರರ್ಥಮಂ ತುಡಿವುದಾತ್ಮವಾ
ದೆಸೆಗೆ………………………………….

ಈ ಸೂಚನೆಗಳು ಮೊದಲಿಂದ ಶ್ರೀರಾಮ ಅಪ್ರಾಕೃತನೆಂಬ ಅಂಶವನ್ನು ಸೂಚಿಸುತ್ತವೆ ಯಾದರೂ ತಾನು ಅಪ್ರಾಕೃತನೆಂಬ ಅಂಶ ಶ್ರೀರಾಮನಿಗೆ ಎಲ್ಲಿಯೂ ಹೊಳೆದಿಲ್ಲ. ದೈವೀಶಕ್ತಿಯಾದರೂ ಈ ಭೂಮಿಕೆಗಿಳಿದ ಮೇಲೆ ಇಲ್ಲಿಯ ರೂಪ ಇಲ್ಲಿಯ ವಿಧಾನವನ್ನು ಅನುಸರಿಸಲೇಬೇಕಾಗುತ್ತದೆ. ಮೊದಮೊದಲು ಅವನನ್ನು ಅನ್ನಮಯಕೋಶದಲ್ಲಿಯೇ ಎದುರುಗೊಳ್ಳುತ್ತೇವೆ.”

ಭರದ್ವಾಜಾಶ್ರಮದಿಂದ ಚಿತ್ರಕೂಟಕ್ಕೆ ಬರುವಾಗ ಮತ್ತು ಅಲ್ಲಿಗೆ ಬಂದ ಮೇಲೆ ಅವನಿಗೆ ಅಲೌಕಿಕಾನುಭವವಾಗುವುದನ್ನು ಹೆಜ್ಜೆಹೆಜ್ಜೆಗೂ ನೋಡಬಹುದು :

……..ನೋಡುತಿರೆ, ತಾನೆ ಹೊಳೆಯಾದಂತೆ,
ತಾನಡವಿಯಾದಂತೆ, ತಾನೆ ಗಿರಿಯಾದಂತೆ
ತಾನೆ ಬಾನಾದಂತೆ, ತಾನೆಲ್ಲಮಾದಂತೆ
………………….ಇತ್ಯಾದಿ

ಮುಂದೆ ಇಂತಹ ಸನ್ನಿವೇಶಗಳು ಹೆಜ್ಜೆ ಹೆಜ್ಜೆಗೂ ಸಿಗುತ್ತವೆ.

“ಒಮ್ಮೆ ಅಲ್ಲಿ ಬರುವ ಹಾಸ್ಯದ ಸನ್ನಿವೇಶಗಳೂ ಸಹ ಹಾಸ್ಯವಾಗಿಯೇ ಉಳಿಯು ವುದಿಲ್ಲ. ಅವುಗಳ ಹಿಂದೆಯೂ ತುಂಬ ಅರ್ಥ ಮಿಡಿಯುತ್ತಿರುತ್ತದೆ. ರಾವಣನನ್ನು ಕೊಂದದ್ದಕ್ಕಾಗಿ ರಾಮನ ಹಿರಿಮೆ ಲೋಕದಲ್ಲಿ ಬೆಳಗಲಿಲ್ಲ, ಅವನಲ್ಲಿದ್ದ ಪ್ರೇಮಶೀಲಕ್ಕಾಗಿ. ರಾವಣನ ಕೊಲೆಯೂ ಪ್ರೇಮದಿಂದಲೇ ಆದದ್ದು. ಅದು ಕೊನೆಯೂ ಅಲ್ಲ; ರಾವಣ ರಾಮನಾಗುತ್ತಾನೆ. ಸೀತೆ ಒಲೆಯನ್ನು ಊದಿ ಊದಿ ಹತ್ತಿಸಲಾರದೆ ಇದ್ದಾಗ ರಾಮ ‘ವಾನರಿ’ ಎಂದು ಅವಳನ್ನು ಹಾಸ್ಯಗೈಯುವ ಪ್ರಕರಣವನ್ನೆ ನೋಡಿ. ಮುಂದೆ ಬರುವ

…….ಕೊಂದ ಕತದಿಂದೇಂ
ಪೆರ್ಮನಾದನೆ ರಾಮನಾ ಮಾತನುಳಿ; ಪಗೆಯೆ
ತೆಗೆ ತೆಗೆ! ಪೆರ್ಮೆಗೊಲ್ಮೆಯೆ ಚಿಹ್ನೆ………

ಎಂಬ ಮಾತುಗಳನ್ನು ತುಸು ಧ್ಯಾನಿಸಿಕೊಳ್ಳಿ. ರಾಮಾಯಣದ ಮಹತ್ತ್ವ ಗೊತ್ತಾಗುತ್ತದೆ.”

ಸಾಮಾನ್ಯ ದೃಷ್ಟಿಗೆ ‘ಅತಿಶಯೋಕ್ತಿ’ ಎಂದು ಕಾಣುವ ವರ್ಣನೆಗಳು ಸನ್ನಿವೇಶಗಳು ಕುವೆಂಪು ಅವರ ದೃಷ್ಟಿಯಲ್ಲಿ ಸ್ವಭಾವೋಕ್ತಿಗಳೇ ಆಗಿವೆ. ಅವರ ದೃಷ್ಟಿಯಲ್ಲಿ ಯಾವುದೂ ಅತಿಶಯೋಕ್ತಿಯಲ್ಲ. ಏಕೆಂದರೆ ಅದು ಅವರಿಗೆ ಅನುಭವ ಸತ್ಯ. ಯಾವುದೂ ಸತ್ಯದಿಂದ ದೂರವಾಗಿಲ್ಲ. ಒಮ್ಮೆ ಈ ಅನುಭವ ಸತ್ಯದ ವಿಷಯವಾಗಿ ಮಾತನಾಡುತ್ತ ಹಾಲಿವಾಣದ ಹೂವಿನ ಪ್ರಸ್ತಾಪ ಬಂತು. ರಾವಣ ಎರಡನೆಯ ಸಾರಿ ಚಂದ್ರನಖಿಯೊಡನೆ ಸೀತೆಯನ್ನು ನೋಡಲು ಅಶೋಕವನಕ್ಕೆ ಹೋಗಿ ಕೂಗಾಡುವಾಗ ಹಕ್ಕಿ ಕೆಡಹಿದ ಹಾಲಿವಾಣದ ಕೆಂಪು ಹೂವೊಂದು ಅವನ ತಲೆಯ ಮೇಲೆ ಬೀಳುತ್ತದೆ. ರಾವಣ :

ಕಿನಿಸಿ ತಲೆಕೊಡಹಿ, ಮೇಗಂ ನೋಡಿ,
ಕೊರಳ್ ಉರುಳ್ದಪುದೆಂದು ಪೂರೈಸಿದನ್ ತನ್ನ
ದುರ್ವಾಕ್ಯಮಂ!……………………..

ಈ ಸನ್ನಿವೇಶವನ್ನು ಕುರಿತು ಅವರು ಹೇಳಿದರು : “ಇಲ್ಲಿ ಹಾಲಿವಾಣದ ಮರ ನನಗೊಂದು ವಸ್ತುವಲ್ಲ, ಅರ್ಥವಲ್ಲ, ಅದು ನನ್ನ ಅನುಭವ. ಅದನ್ನು ನೆನೆದ ಕೂಡಲೇ ಆ ಇಡೀ ಮರವೆ ನನ್ನ ಕಣ್ಮುಂದೆ ನಿಲ್ಲುತ್ತದೆ. ಅದರ ಆ ಅನುಭವ ಈ ಮಾತುಗಳಾಗಿ ಹೊರಹೊಮ್ಮಿದೆ. ಈ ಮರವಲ್ಲದೆ ಈ ಜಾಗದಲ್ಲಿ ಇನ್ನಾವ ಮರದ ದೃಶ್ಯವೂ ಯುಕ್ತವಾಗಿ ಕಾಣುವುದಿಲ್ಲ. ಕುಪ್ಪಳಿಯಲ್ಲಿ ನಮ್ಮ ಮನೆಯ ಮುಂದೆ ಹಾಲಿವಾಣದ ಮರಗಳಿವೆ. ಇವುಗಳನ್ನು ಎಷ್ಟೋ ಸಾರಿ ನೋಡಿದ್ದೇನೆ. ಅದರಲ್ಲಿಯೂ ಅವು ಹೂವುಗಳಿಂದ ತುಂಬಿರುವಾಗಲಂತು ನೋಡಲು ಆನಂದ. ಆ ಹೂವು ಕೆಂಪಗಿರುತ್ತದೆ. ಅದು ಉದುರುವ ಸಮಯವೂ ಚಳಿಗಾಲವೇ. ಜೊತೆಗೆ ಕೆಂಪು ಹೂ ತಲೆಯ ಮೇಲೆ ಬಿತ್ತೆಂದರೆ ಅದು ದುಶ್ಯಕುನ ಸೂಚಿಯಾದದ್ದೇ. ಮಾರಿಗೆ ಬಲಿಕೊಡುವಾಗ ತಲೆಯ ಮೇಲೆ ಕೆಂಪು ಹೂ ಹಾಕುತ್ತಾರಲ್ಲವೆ? ರಾವಣನ ಬಾಯಿಂದ ಅದೇ ಸಮಯದಲ್ಲಿ ಹೊರಡುವ ಮಾತು ನೋಡಿ: ‘ಕೊರಳ್ ಉರುಳ್ದಪುದು’. ಹೇಗೆ ಭವಿಷ್ಯತ್ ಸೂಚಕವಾಗಿದೆ! ಅಂಥ ಶಕುನಗಳನ್ನು ರಾವಣ ಎಂದೂ ಲೆಕ್ಕಿಸಿದವನಲ್ಲ. ಆದರೆ ಅಂದು ಮಾತ್ರ ಅವನ ಬಗೆ ಕದಡುತ್ತದೆ.

……….ತಿತ್ತಿರಿರಿಯೆಂದುಲಿಯುತಾ ಪಕ್ಷಿ
ಹಾರಿದುದು ಬೇರೊಂದು ಹರೆಗೆ! ರಾವಣನೇಕೊ
ಮೌನಮಿರ್ದಾಲಿಸಿದನಾ ಪಕ್ಕಿಯುಲಿಹಮಂ!

ಯಾರಿಗೆ ಗೊತ್ತು ಮುಂದೆ ಏನಾಗುತ್ತದೆಂದು? ವಿಶ್ವಶಕ್ತಿ ರೂಪಗಳಲ್ಲಿ ತನ್ನ ಇಚ್ಛೆಯನ್ನು ವ್ಯಕ್ತಪಡಿಸುತ್ತದೆ; ನಾನಾ ರೀತಿಗಳಲ್ಲಿ ಅದನ್ನು ತಿಳಿಸುತ್ತದೆ. ಹಿಂದಿನ ಸಂಚಿಕೆಯಲ್ಲಿ ಹನುಮಂತನ ಬಾಯಿಂದ ಹೊರಡುವ ಮಾತುಗಳನ್ನು ನೋಡಿ:

……………………ನಿಮ್ಮಿಚ್ಛೆ
ನೆರಮಾದೊಡೊಂದೆಲೆಯ ಬೀಳುವಿಕೆಯೊಂದುಲಿಯ
ಕೇಳುವಿಕೆ ದಶಶಿರನ ಮನ ವಿಮಾನದ ಗತಿಯ
ಬದಲಿಸದೆ?

ಎಷ್ಟು ಧ್ವನಿಪೂರ್ಣವಾಗಿವೆ ಈ ಮಾತು! ಹಾಲಿವಾಣದ ಹೂವಿನ ಮೂಲಕ ಇದೆಲ್ಲ ವ್ಯಕ್ತವಾಗುತ್ತದೆ.”

ಈ ಕಾವ್ಯವನ್ನು ಒಂದು ಸಾರಿಗೆ ಓದಿ ಎಲ್ಲವನ್ನು ಅರ್ಥಮಾಡಿಕೊಂಡೆನೆನ್ನುವುದು ಬೆಪ್ಪುತನ. ಅವಸರದಲ್ಲಿ ಮುಗಿಸುವ ಕೃತಿಯೂ ಅಲ್ಲ. ಇಂಥ ಸನ್ನಿವೇಶಗಳಲ್ಲಂತು ನಿಂತು ನಿಂತು ಮುನ್ನಡೆಯಬೇಕು. ‘ಹಾಲಿವಾಣದ ಹೂ’, ಇಲ್ಲೇನಿದೆ ವಿಶೇಷಾರ್ಥ ಎಂದು ಓದುಗರು ಮುಂದುವರಿದರೆ ಬೇಸ್ತು ಬೀಳಬೇಕಾಗುತ್ತದೆ.

“ಅಹುದು, ಮತ್ತೊಂದು ವರ್ಣನೆಯನ್ನು ನೋಡಿ :

ಚಿತ್ರಭಾನುಗ್ರಸ್ತ ಚೈತ್ರ ಸುಂದರ ಮಹಾ
ಚಂದನ ಶ್ರೀಗಂಧ ಕಾನನೋಜ್ವಲನನಾ
ದೈತ್ಯೇಂದ್ರನಂ ನೋಡಿ………

ರಾವಣ ಸೀತಾಪಹರಣದ ಉದ್ದೇಶದಿಂದ ಮಾರೀಚನ ಆಶ್ರಮಕ್ಕೆ ಬಂದ ಸಂದರ್ಭ ಇದು. ಬೆಂಕಿ ಹತ್ತಿದ ಚೈತ್ರಮಾಸದ ಶ್ರೀಗಂಧದ ಕಾಡು ಉಜ್ವಲವಾಗಿ ಉರಿಯುವಂತೆ ರಾವಣನ ಬಾಹ್ಯಾಕಾರ ಥಳಥಳಿಸುತ್ತಿತ್ತು. ನೋಡಿದವರ ಕಣ್ಣನ್ನು ಕುಕ್ಕುತ್ತಿತ್ತು. ಅವನು ಚೈತ್ರ ಸುಂದರ ಚಿತ್ರವಿಚಿತ್ರವಾದ ರಂಗುರಂಗಿನ ಹೊಳೆಯುವ ಉಡಿಗೆ ತೊಡಿಗೆಗಳನ್ನು ತೊಟ್ಟುಕೊಂಡು ಬಂದಿದ್ದನು. ‘ಚಿತ್ರಭಾನು’ ಪದ ಸೂಚಿಸುವ ಅರ್ಥವೇ ಇದು. ಆದುದರಿಂದಲೇ ಆ ಪದಕ್ಕೆ ಬದಲಾಗಿ ಅಷ್ಟೇ ಮಾತ್ರೆಯ ಪದಗಳಿದ್ದರೂ ಹಾಕಿಲ್ಲ. ಅವನ ಮೈಯಿಂದ ಪರಿಮಳ ದ್ರವ್ಯಗಳ ವಾಸನೆ ಎರಚುತ್ತಿದೆ. ಚಂದನ ಶ್ರೀಗಂಧ ಈ ಅರ್ಥವನ್ನು ಸೂಚಿಸುತ್ತದೆ. ಮದನತಾಪದಿಂದ ರಾವಣ ಪರಿತಪಿಸುತ್ತಿದ್ದನೆಂದೂ ಈ ತಾಪಕ್ಕನುಗುಣವಾಗಿ ಅವನು ವೇಷಭೂಷಣಗಳನ್ನು ತೊಟ್ಟುಕೊಂಡಿದ್ದನೆಂದೂ ಈ ವಾಕ್ಯಸಮೂಹದ ಭಾವ.

“ಈ ಭಾವ ಆಲೋಚನಾಪೂರ್ವಕವಾಗಿ ನನಗೆ ಪ್ರತ್ಯಕ್ಷವಾಯಿತು ಎಂದು ತಿಳಿಯಬೇಡಿ, ನಾನು ಬರೆದಾಗಲಂತು ಈ ಅರ್ಥವನ್ನು ಬುದ್ದಿಪೂರ್ವಕವಾಗಿ ಕಲ್ಪಿಸಿಕೊಂಡೇ ಇರಲಿಲ್ಲ. ಇಲ್ಲಿಯ ಪಂಕ್ತಿಗಳಲ್ಲಿ ಒಂದಾದರೂ ಯೋಚಿಸಿ ಬರೆದುದಲ್ಲ; ಅನುಭವದ ಪರಿಣಾಮವಾಗಿ ಮೂಡಿದ್ದು. ಮಾರೀಚನ ಬಾಯಿಯ ಮಾತುಗಳನ್ನು ಬರೆಯುವಾಗ ನಾನು ಮಾರೀಚನಾಗಿ ಬರೆದಿದ್ದೇನೆ. ರಾವಣನ ಮಾತುಗಳನ್ನು ರಾವಣನಾಗಿ ಬರೆದಿದ್ದೇನೆ.”

“ಇಷ್ಟೆಲ್ಲ ಅರ್ಥ ಈ ಕಾವ್ಯವನ್ನು ಓದಿದವರಿಗೆಲ್ಲ ಹೇಗೆ ಆಗಬೇಕು! ಷೇಕ್ಸ್‌ಪಿಯರ್ ನಾಟಕಗಳನ್ನು ಬರೆದು ಸುಮಾರು ನಾನೂರು ವರ್ಷಗಳಾಗಿದ್ದರೂ ಅವನ ಗ್ರಂಥಗಳ ಮೇಲಣ ವಿಮರ್ಶೆಯ ಸಾಹಿತ್ಯ ಬೆಳೆಯುತ್ತಲೇ ಇದೆ. ಕಾರಣ, ಆ ಕವಿಯ ಮಾತಿನ ಧ್ವನಿಯೆಲ್ಲ ತಟಕ್ಕನೆ ಯಾರಿಗೂ ಹೊಳೆಯುವುದಿಲ್ಲ, ಬಹುಶಃ ಬರೆದಾಗ ಷೇಕ್ಸ್‌ಪಿಯರನಿಗೂ ಹೊಳೆದಿರಲಾರದು. ಆದುದರಿಂದ ರಾಮಾಯಣ ದರ್ಶನವೂ ಸಂಪೂರ್ಣವಾಗಿ ಅರ್ಥವಾಗಲು ಶತಮಾನಗಳು ಬೇಕು. ಇದರ ದರ್ಶನ ಧ್ವನಿಯನ್ನು ಅರ್ಥ ಮಾಡಿಕೊಳ್ಳಲು ಆಧುನಿಕ ದೃಷ್ಟಿಯ ಕಾವ್ಯ ಮೀಮಾಂಸೆಯ ನೆರವು ಅತ್ಯಗತ್ಯ” ಎಂದೆನು. ಆಗ ‘ವನಮಂ ಪೊಕ್ಕನಶೋಕಮಂ’ (ಲಂಕಾ ಸಂಪುಟಂ, ಸಂಚಿಕೆ ೨) ಎಂಬ ಸಂಚಿಕೆಯಿಂದ

………ತನ್ನನರಸುತಿರ್ದವರಿಂದೆ
ತಾನರಸುತಿರ್ದರಸಿಯಿರ್ದರಸ ತೃಣಕುಟಿಯ
ಕುಟ್ಟಿಮಸ್ಥಾನಮಂ ತಿಳಿಯುತನಿಲಾತ್ಮಜಂ,
ಪತ್ತಿರಿರ್ದೆತ್ತರದ ಮರದ ನೆತ್ತಿಗೆ ಪತ್ತಿ,
ತನ್ನ ಹೊತ್ತಂ ಹೊಂಚಿ ಕಾದುಕುಳಿತನೊ ಹೊನ್ನ
ಹೊತ್ತರೆಗೆ

ಈ ಸಾಲುಗಳನ್ನು ಓದಿದರು. ‘ಹೊನ್ನ ಹೊತ್ತರೆ’ ಎಂಬ ಪದಪುಂಜವನ್ನು ತೆಗೆದುಕೊಂಡು ಅಲ್ಲಿ ಹೇಗೆ ದರ್ಶನಧ್ವನಿ ಹೊರಹೊಮ್ಮುತ್ತದೆಂಬುದನ್ನು ವಿವರಿಸಿದರು. “ಅದೇ ತಾನೆ ಸೂರ್ಯ ಮೂಡುತ್ತಿದ್ದಾನೆ ಎಂಬುದನ್ನು ಸೂಚಿಸುತ್ತದೆ. ಕಾವ್ಯಾರ್ಥ. ಇನ್ನೂ ಮುಂದೆ ಯೋಚಿಸಿ ನೋಡೋಣ. ಅಂದು ಹನುಮಂತನ ಜೀವನದಲ್ಲಿ ಮಹಾಪವಿತ್ರವಾದ ದಿನ. ಕಾರಣ, ಸೀತಾದೇವಿಯನ್ನು ಕಂಡ ದಿನ. ರಾಮಸತಿಯನ್ನು ಕಂಡದ್ದರಿಂದಲೇ ಅವನು ಜಗದ್ವಂದ್ಯನಾಗುತ್ತಾನೆ; ವಿಶ್ವಶಕ್ತಿ ಸ್ವರೂಪಿ ಶ್ರೀರಾಮನ ಗೌರವಕ್ಕೆ ಪಾತ್ರನಾಗುತ್ತಾನೆ. ಆದುದರಿಂದ ಅಂದು ಹನುಮಂತನಿಗೆ ಮರುಹುಟ್ಟು ಸಂಭವಿಸಿತೆಂದೇ ಹೇಳಬಹುದು. ಸೀತಾಮಾತೆ ರಾವಣನ ಸೆರೆಯಲ್ಲಿ ಸಿಕ್ಕಿ ಸಂತ್ರಾಸ ಪಡುತ್ತಿದ್ದ ಕಾಲದಲ್ಲಿ, ಮತ್ತೆ ತಾನು ತನ್ನ ಪತಿಯ ಚರಣಾರವಿಂದವನ್ನು ಸೇರುತ್ತೇನೆಯೇ ಎಂದು ಶಂಕಿಸುತ್ತಿದ್ದ ಕಾಲದಲ್ಲಿ ಆಂಜನೇಯ ಅವಳಿಗೆ ವರವಾಗಿ ಬಂದ ದಿನವದು. ಆದುದರಿಂದ ಅಂದು ಅವಳಿಗೂ ಮರುಹುಟ್ಟು. ಅವಳಿಗೂ ‘ಹೊನ್ನ ಹೊತ್ತರೆ.’ ಇದೇ ರೀತಿಯಲ್ಲಿ ನಿರಾಶೆ ಕಳವಳಗಳಿಂದ ತುಂಬಿ ಬೇಗುದಿಗೊಳ್ಳುತ್ತಿದ್ದ ಶ್ರೀರಾಮನ ಜೀವನದಲ್ಲಿಯೂ ‘ಹೊನ್ನ ಹೊತ್ತರೆ’ ಎಂಬುದನ್ನು ಮರೆಯಬಾರದು” ಎಂದರು.

ಕುವೆಂಪು ಕೃತಿಗಳೊಡನೆ ಕಳೆಯುವ ಕಾಲ ಎಂತು ಸಾರ್ಥಕವೋ ಆ ಕವಿವರ್ಯರೊಡನೆ ಕಳೆಯುವ ಕಾಲವೂ ಅಂತೇ ಸಾರ್ಥಕ![1]     ಕಠೋಪನಿಷತ್, ೧.೧.೧೫.

[2]     ಅಗ್ನಿಸೂಕ್ತ-ಮಂಡಲ ii. ೧ ರಿಂದ ೧೧ರವರೆಗಿನ ಸೂಕ್ತಗಳನ್ನು ನೋಡಿ. ಹಾಗೆಯೇ ‘ಇಂದ್ರಂ ಮಿತ್ರಂ ವರುಣಮಗ್ನಿಮಾಹುರಥೋ ದಿವ್ಯಃ ಸಸುಪರ್ಣೋ ಗರುತ್ಮಾನ್ |

ಏಕಂ ಸದ್ವಿಪ್ರಾ ಬಹುಧಾ ವದಂತ್ಯಗ್ನಿಂ ಯಮಂ ಮಾತರಿಶ್ವಾನಮಾಹುಃ | – ಅಗ್ನಿಸೂಕ್ತ

ಈ ಸೂಕ್ತವೂ ಈ ಅಭಿಪ್ರಾಯಕ್ಕೆ ಪುಷ್ಟಿ ಕೊಡುತ್ತದೆ.

[3]     ಋಗ್ವೇದ, ಮಂ ೧.೧.೧ (ಈ ಸಂಖ್ಯೆಗಳು ಸಾಮಾನ್ಯವಾಗಿ ಶ್ರೀ ಅರವಿಂದ Hymns to Mystic Fire ಎಂಬ ಗ್ರಂಥದ ಶ್ಲೋಕಗಳನ್ನು ಸೂಚಿಸುತ್ತವೆ)

ಋಗ್ವೇದ, ಮಂ ೧.೧.೫.

ಋಗ್ವೇದ, ಮಂ ೬.೧೫.೪.

ಋಗ್ವೇದ, ಮಂ ೬.೧೫.೧೩.

ಋಗ್ವೇದ, ಮಂ ೧.೩.೩.

[4]     ‘ವಿಶ್ವವ್ಯಾಪಾರದ ಎಲ್ಲ ರೂಪಗಳಿಗೆ ಅಧಿಷ್ಠಾನವಾದ ದಿವ್ಯಪ್ರಾಣಶಕ್ತಿಯೆಂಬ ಭಾವವನ್ನು ‘ಮಾತರಿಶ್ವಾ’ ಪದವು ಇಲ್ಲಿ ಸೂಚಿಸುತ್ತದೆ’ (ಸಮರ್ಪಣ, ಪು. ೫೯).

[5]     The Rishis, it must be remembered, were seers as well as sages, they wre men of vision who say things in their meditation in images, often symbolic images which might precede or accompany an experience and put it in a concrete form, might predict or give an occult body to it; So it would be quite possible for him to see at once the inner experience and in image its symbolic happening, the flow of clarifying light and the priest god pouring this clarified butter on the inner self-offering which brought the experiences… The mystics were and normally are sysmbolists, they can even see all physical things and happenings as symbols of inner truths and realities, even their outer selves, the outer happenings of their life and all around them. (Page ೨೧. Foreword to Hymns of the Mystic Fire by Sri Aurobindo)

[6]     ಸಹಯಜ್ಞಾಃ ಪ್ರಜಾಃ ಸೃಷ್ಟ್ವಾ ಪುರೋವಾಚ ಪ್ರಜಾಪತಿಃ
ಅನೇನ ಪ್ರಸವಿಷ್ಯಧ್ವಮೇಷ ವೋsಸ್ತ್ವಿಷ್ಟಕಾಮಧುಕ್ (ಗೀತಾ, ೩-೧೦)
ದೈವಮೇವಾಪರೇ ಯಜ್ಞಂ ಯೋಗಿನಃ ಪರ್ಯುಪಾಸತೇ |
ಬ್ರಹ್ಮಾಗ್ನಾವಪರೇ ಯಜ್ಞಂ ಯಜ್ಞೇನೈವೋಪಜುಹ್ವತಿ (ಗೀತಾ, ೪-೨೫)

[7]     ಕಠೋಪನಿಷತ್, ೧.೧.೧೪.

[8]     ಶ್ರೀ ಕುವೆಂಪು ಅವರ ‘ಅಗ್ನಿಹಂಸ’ದ “ಹಾರೈಸು” ಎಂಬ ಗೀತೆಯನ್ನು ನೋಡಿ.

[9]     ಋತಸ್ಯ ಪ್ರೇಷಾ ಋತಸ್ಯ ಧೀತಿರ್ವಿಶ್ವಾಯುರ್ವಿಶ್ವೇ ಅಪಾಂಸಿ ಚಕ್ರುಃ

      ಯಸ್ತುಭ್ಯಂ ದಾಶಾದ್ಯೋವಾತೇ ಶಿಕ್ಷಾತ್ತಸ್ಮೈ ಚಿಕಿತ್ವಾತ್ರಯಿಂ ದಯಸ್ವ
(ಋಗ್ವೇದ, ೧.೩.೩)

      ರಾಜಂತ ಮಧ್ವರಾಣಂ ಗೋಪಾಮೃತಸ್ಯ ದೀದಿವಿಮ್ | ವರ್ಧಮಾನಂ ಸ್ವೇದಮೇ
(ಋಗ್ವೇದ, ೧.೧.೮)

[10]    ಋಗ್ವೇದ, ೬.೧೫.೦೩.

[11]    ಈಶಾವಾಸ್ಯೋಪನಿಷತ್ತಿನ ಈ ಮಂತ್ರ ಭಾಗವನ್ನು ನೋಡಿ :
ಕವಿರ್ಮನೀಷೀ ಪರಿಭೂಃ ಸ್ವಯಂಭೂರ್
ಯಾಥಾತಥ್ಯತೋsರ್ಥಾನ್ ವ್ಯದಧಾಚ್ ಛಾಶ್ವತೀಭ್ಯಃ ಸಮಾಭ್ಯಃ (೮)

[12]    ಆಚಾರ್ಯ ವಿನೋಬಾ ಕೃತ ಈಶಾವಾಸ್ಯ ವೃತ್ತಿ (ಕನ್ನಡ)ಯ ೧೫೮ನೆಯ ಟಿಪ್ಪಣಿಯನ್ನು ನೋಡಿ.

[13]    ಅಗ್ನಿರ್ಹೋತಾ ಕವಿಕ್ರತುಃ ಸತ್ಯಶ್ಚಿತ್ರಶ್ರವಸ್ತುಮಃ
ದೇವೋದೇವೇಭಿರಾಗಮತ್                                          (ಋಗ್ವೇದ, ೧.೧.೫)
ಇಂದ್ರನನ್ನು ಸ್ತುತಿಸುವಾಗಲೂ ‘ಕ್ರತು’ ಶಬ್ದವನ್ನು ಉಪಯೋಗಿಸಿದೆ. (ಅದೇ. ೨.೧೨.೨)

[14]    The word ‘Krtu’ means ordinarily work or Sacrifice but it also means  intelligence, Power or resolution and especially the power of the intelligence that determines the work, the will…..Agni is a Seer-will Kavikrathu, he is the ‘will in the heart’. Kratu hrdi, (page ೨೭-೨೮. Fore word to Hymns of the Mystic Fire, Sri Aurobindo)

‘ಕ್ರತು ಎಂಬ ವೈದಿಕ ಪದಕ್ಕೆ ಒಮ್ಮೊಮ್ಮೆ ಕರ್ಮವೆಂದೂ, ಒಮ್ಮೊಮ್ಮೆ ಮನಃಪ್ರಜ್ಞೆಯಲ್ಲಿ ಸಂಕಲ್ಪವೆಂದು ತಿಳಿಯಲಾಗಿದ್ದ ಕರ್ಮದ ಹಿಂದಿನ ಪರಿಣಾಮಕಾರಿಯಾದ ಶಕ್ತಿಯೆಂದೂ ಅರ್ಥವಿವೆ. ಅಗ್ನಿಯೇ ಈ ಶಕ್ತಿ. ಮೊದಲು ಜಡದಲ್ಲಿ ಬೆಂಕಿ-ಬೆಳಕು, ಭೌತಿಕಶಕ್ತಿಯಾಗಿ ವ್ಯಕ್ತವಾಗುವ ದೈವಿಕ ಶಕ್ತಿಯದು. ಅದು ಆಮೇಲೆ ಮನುಷ್ಯಪ್ರಜ್ಞೆಯ ಇತರ ತತ್ತ್ವಗಳಲ್ಲಿ  ಭಿನ್ನ ರೂಪಗಳನ್ನು ತಾಳುತ್ತದೆ. ಸತ್ಯ ಮತ್ತು ಆನಂದಗಳತ್ತ ಕ್ರಮಬದ್ಧವಾದ ಅಭಿವ್ಯಕ್ತಿಯಿಂದ ಮೇಲೆ ಮೇಲಕ್ಕೆ ಕರೆದೊಯ್ಯುತ್ತದೆ’ (ಸಮರ್ಪಣ, ೧, ಪುಟ ೬೯). ಆಚಾರ್ಯ ವಿನೋಬಾಕೃತ ಈಶಾವಾಸ್ಯವೃತ್ತಿಯ ೧೭ನೆಯ ಮಂತ್ರದ ಟಿಪ್ಪಣಿಗಳನ್ನು ನೋಡಿ.

[15] ಅಗ್ನಿಗೆ ‘ಸಾಹಸದ ಸೂನು’ ಎಂಬ ಮತ್ತೊಂದು ಹೆಸರಿರುವುದನ್ನು ಇಲ್ಲಿ ಗಮನಿಸಬಹುದು
(ಋಗ್ವೇದ, ೬.೧೨.೧).

[16] ಶ್ರೀ ರಾ. ದಾ., ಸಂಪುಟ ೧, ಕವಿಕ್ರತುದರ್ಶನಂ, ಸಾಲು ೨೩೯-೨೬೩.

[17] ‘ಶ್ರೀ ರಾಮಾಯಣದರ್ಶನಂ’ ಮಹಾಕಾವ್ಯದ ೧ನೆಯ ಸಂಚಿಕೆಯಲ್ಲಿ ಬರುವ ೩೨೮ ರಿಂದ ೩೫೨ನೆಯ ಸಾಲಿನವರೆಗಿನ ಅಗ್ನಿದೇವತೆಯ ವರ್ಣನೆಯನ್ನು ‘ಅಗ್ನಿಸೂಕ್ತ’ಗಳ ವರ್ಣನೆಯೊಡನೆ ಹೋಲಿಸಿ.

[18] ibid, ಸಾ. ೩೫೩ ರಿಂದ ೩೫೯ರವರೆಗೆ.

[19] ‘The Vedic “Cow” is the symbol of light.’

ಕಾಮಧೇನುವನ್ನು ದಿವ್ಯಜ್ಯೋತಿಯ ಪ್ರತಿಮೆಯನ್ನಾಗಿ ಸ್ವೀಕರಿಸಿದರೆ ಮೇಲಣ ‘ಪಾಲ್’ ‘ಪಾಯಸ’ ಮೊದಲಾದ ಪದಗಳ ಧ್ವನಿ ಸ್ಪಷ್ಟವಾಗುತ್ತದೆ.

[20] ಶ್ರೀ ರಾ.ದಾ., ಸಂಪುಟ ೧, ಕವಿಕ್ರತುದರ್ಶನಂ, ಸಾ. ೧೮೭-೨೦೦.

[21] ‘ಜನಪ್ರಿಯ ವಾಲ್ಮೀಕಿ ರಾಮಾಯಣ’ದ ‘ಶ್ರೀರಾಮಾಯಣ ದಿವ್ಯ ಶಿಲ್ಪಿ’ ಎಂಬ ಮುನ್ನುಡಿಯನ್ನು ಓದಿ. ಜೊತೆಗೆ ಶ್ರೀರಾಮಾಯಣ ದರ್ಶನದ ಒಂದನೆಯ ಸಂಚಿಕೆಯ ೫೬ರಿಂದ ೮೬ನೆಯ ಸಾಲುಗಳನ್ನು ಗಮನಿಸಿ.

[22] ‘ಶ್ರೀ ರಾಮಾಯಣ ದರ್ಶನ’ವನ್ನು ಬರೆದ ಕವಿಯ ಇಚ್ಛಾಶಕ್ತಿಯ ದರ್ಶನ ಮಾತ್ರವೇ ಅಲ್ಲ, ಆದಿಕವಿ ವಾಲ್ಮೀಕಿಯ ಇಚ್ಛಾಶಕ್ತಿ ದರ್ಶನ ಸಹ, ‘ರಾಮಾಯಣದ ಇಂದಿನ ಪ್ರಕಟನೆ ಬರಿಯ ಒಂದು ಗ್ರಂಥ ಪ್ರಕಟನೆ ಎಂಬ ಭಾವನೆ ಬೇಡ. ಇದು ಒಂದು ಶಕ್ತಿ ಸಂಸ್ಥಾಪನೆ, ಇದು ಒಂದು ವಿದ್ಯುದಾಗಾರ, ಇದು ಒಂದು ಶಾಂತಿಯ ಪರಮಾಶ್ರಯ” (ರಾಮಾಯಣದ ಮಹತ್ವ – ಕುವೆಂಪು, ಪುಸ್ತಕ ಪ್ರಪಂಚ ಸಂಪುಟ ೫-ಸಂಚಿಕೆ-೪) ಈ ವಾಕ್ಯಗಳನ್ನು ಗಮನಿಸಿ.

[23]    ಲೋಕ ಗುರುಕೃಪೆಯಿರಲಿ; ಲೋಕ ಕವಿಕೃಪೆ ಬರಲಿ;
ಲೋಕ ಹೃದಯದ ಬಯಕೆಯಾಶೀರ್ವಾದವೈತರಲಿ.
ಶ್ರೀ ರಾಮಾಯಣ ದರ್ಶನ, ಅಯೋಧ್ಯಾ ಸಂಪುಟ ಸಂಚಿಕೆ ೧, ಸಾಲು ೧೫೧-೧೫೨.
ಅಂದಿನ ಜನತೆಯ ಇಚ್ಛೆ ರಾಮಾಯಣವಾಗಿ ಪರಿಣಮಿಸಿದರೆ, ಇಂದಿನ ಜನತೆಯ ಇಚ್ಛೆ ‘ಶ್ರೀರಾಮಾಯಣ ದರ್ಶನ’ವಾಗಿ ಪರಿಣಮಿಸಿದೆ.

[24]    ಶ್ರೀ ರಾಮಾಯಣ ದರ್ಶನವೂ ಈ ವಿಕಾಸಕ್ರಮದಲ್ಲಿ ಮತ್ತೊಂದು ಮೆಟ್ಟಲೆಂಬುದು ಈ ಕೆಳಗಣ ವಾಕ್ಯಗಳಲ್ಲಿ ಧ್ವನಿತವಾಗುತ್ತದೆ :
ಓಂ ನಮೋ, ರಾಮಾವತಾರಕಿರ್ಮಡಿಯೆನಲ್,
ಮೂಲ ವಿಗ್ರಹಕೆತ್ತಿದುತ್ಸವದ ಪಡಿಯೆನಲ್,
ನನ್ನೊಳೀ ರಾಮಾಯಣಾವತಾರವನೆತ್ತಿ ಮೇಣ್
ಸರ್ವಭಾಷಾಮೂ ಭಗವತಿಯ ಪೂವಡಿಯ
ಕನ್ನಡದ ಸಿರಿಗುಡಿಯ ನುಡಿಯ ಕಣ್ಪಡಿಮೆಯೊಳ್
ಕಡೆದು ಮೂಡಿಹ ನಿತ್ಯರಾಮಂಗೆ, ಓಂ ನಮೋ.
ಶ್ರೀ ರಾ.ದ., ಶ್ರೀ ಸಂಪುಟಂ, ಸಂಚಿಕೆ ೧೩, ಸಾಲುಗಳು ೨೩೨-೨೩೭.
ಶ್ರೀ ಕುವೆಂಪು ವಿರಚಿತ ‘ತಪೋನಂದನ’ದ ‘ಋಷಿ ವಾಲ್ಮೀಕಿಯ ಕಾವ್ಯ ಜಾಹ್ನವಿ’ ಎಂಬ ಪ್ರಬಂಧವನ್ನು ನೋಡಿ.

[25]    ……..ಪಿಡಿವವೊಲ್ತಾದುದಕೆ
ಕನ್ನಡಿಯನಪ್ಪುದಕೆ ಮುನ್ನಡಿಯನುಲಿವಂತೆಯುಂ
– ರಾ. ದ., ಅಯೋಧ್ಯಾ ಸಂಪುಟಂ, ಸಂಚಿಕೆ ೧, ಸಾಲುಗಳು ೫೨-೫೩ .

[26] ಶ್ರೀ ರಾ.ದ., ‘ಶ್ರೀ ವೆಂಕಣ್ಣಯ್ಯನವರಿಗೆ’ ಎಂಬ ಭಾಗದ ೩೮ ರಿಂದ ೪೬ರವರೆಗಿನ ಸಾಲುಗಳನ್ನು ಓದಿ.

[27] ಮಹಾತ್ಮ ಗಾಂಧೀಜಿಗೆ ರಾಮ, ರಾಮನಾಮ, ರಾಮಾಯಣ ಎಷ್ಟು ಪ್ರಿಯವಾದ ವಸ್ತುಗಳು ಎಂಬುದನ್ನು ನೆನೆದರೆ ಇದರ ಸತ್ಯ ವ್ಯಕ್ತವಾಗುತ್ತದೆ. ಈ ಸಂದರ್ಭದಲ್ಲಿ ಜನಪ್ರಿಯ ವಾಲ್ಮೀಕಿ ರಾಮಾಯಣದ ‘ಶ್ರೀ ರಾಮಾಯಣ ದಿವ್ಯಶಿಲ್ಪಿ’ ಎಂಬ ಮುನ್ನುಡಿಯನ್ನು, ಪುಸ್ತಕ ಪ್ರಪಂಚದ ೫ನೆಯ ಸಂಪುಟದ ೪ನೆಯ ಸಂಚಿಕೆಯಲ್ಲಿ ಪ್ರಕಟವಾಗಿರುವ ‘ರಾಮಾಯಣದ ಮಹತ್ತ್ವ’ ಎಂಬ ಲೇಖನವನ್ನು ಓದಿ.

[28]    ಬಹಿರ್ಘಟನೆಯಂ ಪ್ರತಿಕೃತಿಸುವಾ ಲೌಕಿಕ
ಚರಿತ್ರೆಯಲ್ತಿದು, ಅಲೌಕಿಕ ನಿತ್ಯ ಸತ್ಯಂಗಳಂ
ಪ್ರತಿಮಿಸುವ ಸತ್ಯಸ್ಯ ಸತ್ಯಕಥನಂ ಕಣಾ.
ಶ್ರೀ ರಾ. ದ., ‘ಶ್ರೀ ವೆಂಕಣ್ಣಯ್ಯನವರಿಗೆ’ ಎಂಬ ಭಾಗದಿಂದ.

[29] ಮೊದಲು ಕುವೆಂಪು ಅವರು Beginner’s Muse ಎಂಬ ಇಂಗ್ಲಿಷ್ ಕವನ ಸಂಗ್ರಹವನ್ನು ಅಚ್ಚು ಹಾಕಿಸಿದ್ದರು. ಅಚ್ಚಿನ ಮನೆಯನ್ನೇ ಕಾಣದ ಕವನಗಳು ಇನ್ನೂ ಬೇಕಾದಷ್ಟಿವೆ.

[30] “The value of versification, When it is indissolubly fused with meaning, can hardly be exggerated. The gift for feeling it, even more perhaps than the gift for feeling the value of style, is the specific gift for poetry, as distinguished from other arts.”  – A.C. Bradley

[31] Pure Poetry is not the decoration of a preconceived and clearly defined matter; it springs from the creative impulse of a vague imaginative mass pressing for development and definition. When the poet began and while he was at work, he did not posses his meaning; It possessed him. Such poetry meant itself. – A.C. Bradley.

[32] “This little flute of a reed thou hast carried over hills and dales and hast breathed through it melodies eternally new.” – Tagore

[33] ಶ್ರೀ ಕುವೆಂಪು ಅವರು ಹುಟ್ಟಿದ ಊರು ಮಲೆನಾಡಿನ ಕುಪ್ಪಳಿ.

[34] ಶ್ರೀ ಸಂಪುಟಂ, ದಶಾನನ ಸ್ವಪ್ನಸಿದ್ದಿ (ಸಂಚಿಕೆ ೭). ೧೭೩ರವರೆಗಿನ ಸಾಲುಗಳನ್ನು ಓದಿ.

[35] ರಾವಣ ಕುಂಭಕರ್ಣರೇ ಮುಂದೆ ಲವಕುಶರಾಗಿ ಹುಟ್ಟುತ್ತಾರೆಂಬ ಅಂಶ ಇದರಿಂದ ಧ್ವನಿತವಾಗುತ್ತದೆ.

[36] Foreword to the Hymns to the Mystic Fire by Sri Aurobindo ನೋಡಿ.

[37] “The only teller or news is the poet. When he sings, the world listens with the assurance that now a secret of God is to spoken.”  – Emerson

[38] ಪ್ರಾರಂಭ ೧೯೩೬ರ ಜನವರಿ; ಮುಕ್ತಾಯ ೧೯೪೫ರ ಜನವರಿ.