‘ಹಿತ್ತಲಗಿಡ ಮದ್ದಲ್ಲ’ವೆಂಬೊಂದು ಸರ್ವಜನಶ್ರುತವೂ ಅರ್ಥಗರ್ಭಿತವೂ ಆದ ಗಾದೆ ಬಹಳ ಹಿಂದಿನಿಂದ ಬಳಕೆಯಲ್ಲಿದೆ. ಹಿಂದಿನ ಮತ್ತು ಇಂದಿನ ಮಾನವ ವರ್ಗದ ಸ್ವಭಾವಸಿದ್ಧವಾದ ಮನೋವ್ಯಾಪಾರಗಳಿಗೆ ಆ ಗಾದೆ ಕನ್ನಡಿ ಹಿಡಿದಂತಿದೆ. ನಾಲಗೆ ಕುಲವನ್ನರುಹುವಂತೆ ಆ ಗಾದೆ ಮಾನವನ ಸಹಜ ದೌರ್ಬಲ್ಯವೊಂದನ್ನು ಎತ್ತಿ ತೋರಿಸುತ್ತದೆ. ಅತಿ ನಿಕಟವೂ, ಅತ್ಯಂತ ಪರಿಚಿತವೂ, ಸರಳವೂ, ಅವರ್ಣವೂ ಆದ ಸುತ್ತಮುತ್ತಣ ವಸ್ತುಸಂಗತಿಗಳು ಅವನ ಕುತೂಹಲವನ್ನು ಕೆರಳಿಸಿ, ವಿಸ್ಮಯವನ್ನು ಬಡಿದೆಬ್ಬಿಸಿ, ರಕ್ತಸಂಚಾರವನ್ನು ತೀವ್ರಗೊಳಿಸಿ, ‘ತೃಪ್ತಿ’ಯನ್ನು ನೀಡಲಾರವು, ‘ಆನಂದ’ವನ್ನು ತರಲಾರವು. ದೂರಗತವೂ, ಅಪರಿಚಿತವೂ, ಬಹುವರ್ಣರಂಜಿತವೂ, ಜಟಿಲವೂ, ಕುಟಿಲವೂ ಆದ ಘಟನಾಪರಂಪರೆಗಳು, ವಸ್ತುವಿಶೇಷಗಳು, ಒಟ್ಟಿನಲ್ಲಿ ರಾಗಗಳನ್ನು ಸುಲಭವಾಗಿ ಉದ್ರೇಕಿಸಬಲ್ಲ ಸಂಗತಿಗಳು ಮಾತ್ರ ಅವನಿಗೆ ಪ್ರಿಯ. ತಿವಳಿ ಅಥವಾ ಕೂಡುಮೆಯ್ಯ ಮಕ್ಕಳ ಜನನ, ಎರಡು ತಲೆ ಕರುವಿನ ಹುಟ್ಟು, ಎವರೆಸ್ಟ್ ಶಿಖರದ ಆರೋಹಣ, ಹೈಡ್ರೊಜನ್ ಬಾಂಬಿನ ಪ್ರಯೋಗ, ೩೬ ಕೋಳಿ ಮೊಟ್ಟೆ ನುಂಗುವ ದೈತ್ಯವ್ಯಕ್ತಿಯ ಆಗಮನ, ದೊಂಬನ ಮೋಡಿ, ಸುಬ್ಬರಾಯನಕೆರೆ ಭಾಷಣ – ಇಂಥವೇ ಮೊದಲಾದ ಹೊರಗಣ್ಣನ್ನು ತಟ್ಟಿ ಮುಟ್ಟಿ ಬೆರಗುಗೊಳಿಸುವ ಸಂಗತಿಗಳಲ್ಲಿ ಅವನಿಗೆ ವಿಶೇಷ ಆಸಕ್ತಿ; ಸೂರ್ಯೋದಯ ಸೂರ್ಯಾಸ್ತ, ಉದ್ಯಾನದ ಸುಂದರ ಕುಸುಮ, ಯೋಗಿಗಳ ಯೋಗಸಿದ್ದಿ ಮೊದಲಾದ, ಒಳಗಣ್ಣಿಗೆ ಮಾತ್ರ ಕಾಣುವ ಗಹನಸಂಗತಿಗಳಲ್ಲಿ ಸದಾ ನಿರಾಸಕ್ತಿ. ಕೈತೋಟದಲ್ಲಿ ನಳನಳಿಸುವ ಚೆಲುವಿನ ಕಡೆಗೆ ಲಕ್ಷ್ಯವಿಲ್ಲ; ‘ಸೌಂದರ್ಯೋಪಾಸನೆ’ಗೆಂದು ಕಾಲವ್ಯಯ ಧನವ್ಯಯಗಳನ್ನು ಲಕ್ಷಿಸದೆ ನೂರಾರು ಮೈಲಿ ದೂರ ಹೋಗುವುದುಂಟು. ಹಾಗೆ ಹೋಗುವುದರಿಂದ ಲಾಭವಿಲ್ಲವೆಂದಲ್ಲ, ಲಾಭ ಇದೆ. ಆದರೆ ಕೈಯಲ್ಲಿ ಲಾಂದ್ರ ಹಿಡಿದುಕೊಂಡು ಬೆಂಕಿಯನ್ನರಸಿದಂತಾಗುತ್ತದೆ. ಅಂತು ಮನುಷ್ಯನ ಕುತೂಹಲತೃಷ್ಣೆಗೆ ಪರಿಹಾರವನ್ನು ಅನ್ಯ ಕ್ಷೇತ್ರಗಳಿಂದ ಒದಗಿಸಿಕೊಳ್ಳಬೇಕಾಗಿದೆ.

ಕೈತೋಟದ ಗುಲಾಬಿ ಹೂವಿನಲ್ಲಿ, ಅರುಣಕಿರಣದಿಂದ ದೀಪ್ತವಾದ ಹಿಮದ ಕಣದಲ್ಲಿ, ಬೆಳದಿಂಗಳಲ್ಲಿ ಮಿಂದ ಆಸ್ಟರ್ ಹೂಗಳಲ್ಲಿ ಸೃಷ್ಟಿ ಸೌಂದರ್ಯವನ್ನು ಕಾಣಲಾರದವನು, ತನ್ನ ಮಗುವಿನ ಹೂಗೆನ್ನೆ ಮಿಂಚುಗಣ್ಣುಗಳಲ್ಲಿ ಶಶಿಕಲಾಂಶವನ್ನು ದರ್ಶಿಸದವನು, ಹಗಲಿರುಳು ದುಡಿಯುವ ಇರುವೆ ನೊಣ ಗೊಬ್ಬರದ ಹುಳು ಮೊದಲಾದ ಕ್ರಿಮಿಕೀಟಾದಿ ಗಳಿಂದ ಪಾಠವನ್ನು ಕಲಿಯಲಾರದವನು, ಕೊನೆಗೆ ಹರಳುಗಲ್ಲಿನಲ್ಲಿ ಸೃಷ್ಟಿಯ ರಹಸ್ಯವನ್ನು ದರ್ಶಿಸಲು ತೊಡಗದವನು, ಥೇಮ್ಸ್ ನದಿಯಲ್ಲಿ ಮಿಂದು ಬರಲಿ, ಅಮೆರಿಕೆಯ ಕೆರೆಯ ನೀರು ಕುಡಿದು ಬರಲಿ, ಮೊದಲಿದ್ದಂತೆಯೆ ಇರುತ್ತಾನೆ. ತಾನಿದ್ದಲ್ಲಿಯೆ, ತನ್ನ ಸುತ್ತಮುತ್ತಣ ವಸ್ತುಸಮೂಹ, ಪ್ರಾಣಿ ಸಮುದಾಯಗಳಲ್ಲಿಯೆ ವಿರಾಟಶಕ್ತಿಯ ನಿಜಸ್ವರೂಪವನ್ನು ಕಾಣಲವಕಾಶವಿದೆ. ಆದರೆ ನೋಡುವ ಕಣ್ಣು ಬೇಕು. ಅಂಥ ಕಣ್ಣಿಲ್ಲದವನಿಗೆ ಚೈತನ್ಯಾತ್ಮಕ ವಾದ ವಸ್ತುವೂ ಜಡವಸ್ತುವಿನಂತೆ ಅನುಭವವಾಗುತ್ತದೆ.

ದೊಡ್ಡ-ಸಣ್ಣ, ಹಿರಿಯ-ಕಿರಿಯ, ಹಳತು-ಹೊಳತು, ಕಪ್ಪು-ಬಿಳುಪು, ಉದ್ದ-ತುಂಡ, ಮೇಲು-ಕೀಳು – ಇವೇ ಮೊದಲಾದ ಭಿನ್ನಭಾವನೆಗಳನ್ನು ತ್ಯಜಿಸಿ, ಸೃಷ್ಟಿಯ ಸಮಸ್ತ ವಸ್ತುಗಳಲ್ಲಿಯೂ ವಿರಾಟಶಕ್ತಿಯ ಪ್ರತಿಮೆಯನ್ನೇ ಕಾಣುವ ಸರ್ವಸಮನ್ವಯ ದೃಷ್ಟಿಯನ್ನು ಪಡೆದಿರುವ ಪುಣ್ಯಶಾಲಿ ಮಾತ್ರ ಮಹಾಕವಿಯ ಬಿರುದಿಗೆ ಪಾತ್ರನಾಗುತ್ತಾನೆ. ಆಚಾರ್ಯ ವಿನೋಬಾರವರು ಮಹಾಕವಿಯ ಸ್ವರೂಪ ಲಕ್ಷಣಗಳನ್ನು ಕುರಿತು ಹೇಳಿರುವ ಅಮೂಲ್ಯ ವಾದ ಮಾತುಗಳನ್ನು ಮತ್ತೆ ಮತ್ತೆ ಮನನಮಾಡುವುದೊಳ್ಳೆಯದು: “ಸಮುದ್ರ ತನ್ನ ಗರ್ಭದಲ್ಲಿ ಸಮಸ್ತ ನದಿಗಳಿಗೂ ಆಶ್ರಯ ಕೊಡುವಂತೆ ಸಮಗ್ರ ಬ್ರಹ್ಮಾಂಡವನ್ನೂ ತನ್ನ ಪ್ರೇಮದಿಂದ ಆವರಿಸುವ ಶಕ್ತಿ ಕವಿಗಿರಬೇಕು. ಪಾಷಾಣದಲ್ಲಿ ಪರಮಾತ್ಮ ದರ್ಶನ ಮಾಡುವ ಕೆಲಸ ಕವಿಯದು. ಇದಕ್ಕೆ ಸರ್ವವ್ಯಾಪಕ ಪ್ರೇಮ ಅಗತ್ಯ. ಜ್ಞಾನೇಶ್ವರ ಮಹಾರಾಜರು ಎಮ್ಮೆಯ ಕೂಗಿನಲ್ಲಿ ಸಹ ವೇದಶ್ರವಣದ ಅನುಭವ ಪಡೆಯುತ್ತಿದ್ದರು….. ತಾಯ ಹೃದಯ ಪುತ್ರವಾತ್ಸಲ್ಯದಿಂದ ತುಂಬಿರುತ್ತದೆ. ಆದ್ದರಿಂದಲೇ ಮಗುವನ್ನು ಕಂಡ ಕೂಡಲೇ ಆಕೆಯ ಸ್ತನಗಳಲ್ಲಿ ಹಾಲುಕ್ಕಿ ಬರುತ್ತದೆ. ಇದೇ ರೀತಿ ಸಕಲ ಚರಚಾರ ಸೃಷ್ಟಿಯ ಸಂಬಂಧವಾಗಿ ಕವಿ ಹೃದಯದಲ್ಲಿ ಪ್ರೇಮ ತುಂಬಿರುವುದರಿಂದ ಸೃಷ್ಟಿ ದರ್ಶನವಾಗುತ್ತಲೇ ಅವನಿಗೆ ಹುಚ್ಚು ಹಿಡಿದಂತಾಗುತ್ತದೆ…ಅವನು ಮರಗಿಡಗಳಲ್ಲಿ ಆತ್ಮದರ್ಶನ ಮಾಡಬೇಕು. ಜೊತೆಗೆ ತನ್ನ ಆತ್ಮದಲ್ಲಿ ಮರ ಗಿಡ ಬಳ್ಳಿಗಳನ್ನು ನೋಡುವ ಶಕ್ತಿ ಇರಬೇಕು….ಹುಣ್ಣಿಮೆಯ ಚಂದ್ರದರ್ಶನದಿಂದ ಅವನ ಹೃದಯ ಸಮುದ್ರ ಉಕ್ಕಬೇಕು; ಆದರೆ ಪೂರ್ಣಿಮಾ ಚಂದ್ರನ ಅಭಾವದಿಂದ ಅದು ತಗ್ಗಲಾರದು….ವಿನೋಬಾರವರ ಈ ಸೂತ್ರವನ್ನು ಕಾಳಿದಾಸ ಭವಭೂತಿ ವರ್ಡ್ಸ್ವರ್ಥ್ ಟೆನಿಸನ್ ಮೊದಲಾದ ಕವಿಗಳಿಗೆ ಬಹುಮಟ್ಟಿಗೆ ಅನ್ವಯಿಸಬಹುದು.

ಸಾಮಾನ್ಯ ವಸ್ತುಸಂಗತಿಯನ್ನು ಕುರಿತು ಭಾವಗೀತೆಗಳನ್ನು ಕಟ್ಟಬಹುದು. ಆದರೆ ಶ್ರೀರಾಮಾಯಣದರ್ಶನದಂಥ ಮಹಾಕಾವ್ಯದಲ್ಲಿ, ಶ್ರೀರಾಮನಂಥ ಮಹಾಪುರುಷನ ಕಥೆಯ ನಡುವೆ, ಕಥಾಪ್ರವಾಹಕ್ಕೆ ಅಡ್ಡಿಯಾಗದಂತೆ, ಮುಖ್ಯ ಪಾತ್ರಗಳ ಸ್ವರೂಪ ಸ್ವಭಾವ ಕ್ರಿಯೆಗಳಿಗೆ ಹೊಂದಿಕೊಳ್ಳುವಂತೆ ಪೋಷಕವಾಗುವಂತೆ ಸಾಮಾನ್ಯ ಸಂಗತಿಗಳನ್ನು ನಿರೂಪಿಸುವುದು, ಅವುಗಳನ್ನು ನಿರ್ಲಕ್ಷಿಸದಿರುವುದು ಕಾವ್ಯದ ಹಿರಿಮೆಗೆ ಸಾಕ್ಷೀಭೂತವಾಗಿದೆ. ಇಲ್ಲಿ ಕವಿ ಶ್ರೀರಾಮ ಸೀತೆ ರಾವಣ ಮಂಡೋದರಿಯರ ಕಥಾ ನಿರೂಪಣೆಯ ಗಡಿಬಿಡಿಯ ನಡುವೆ ಅತಿ ಸಾಮಾನ್ಯರೂ ನಾಡಾಡಿಗಳೂ ಆದ ವಹ್ನಿರಂಹ ತ್ರಿಜಟೆ ಶಶಿಮೌಳಿ ಹೊಲ ಉಳುವ ಒಕ್ಕಲಿಗರ ವಿಷಯವನ್ನು ಮರೆತಿಲ್ಲ; ರಾಮಸೀತೆಯರ ಅತಿಮಾನವತೆಯನ್ನು ತೋರಿಸುವ ಕುತೂಹಲದಲ್ಲಿ ಅವರ ಜೀವನದ ಕ್ಷುದ್ರ ಸಂಗತಿಗಳನ್ನು ನಿರ್ಲಕ್ಷಿಸಿಲ್ಲ; ವಾಲಿ ಸುಗ್ರೀವರ ಸಂಗ್ರಾಮಕ್ಕಿಂತ, ಆಂಜನೇಯನ ಸಮುದ್ರಲಂಘನಕ್ಕಿಂತ, ಕುಂಭಕರ್ಣನ ಘೋರ ಯುದ್ಧ ಕ್ಕಿಂತ ವಾಲಿಯ ಉಪ್ಪಾಟ, ಕುಂಭಕರ್ಣನ ಕೂಸಾಟ ಕಿರಿಯವೆಂದು ಭಾವಿಸಿಲ್ಲ; ಚಿತ್ರಕೂಟ ಕಾನನದ ವರ್ಣನೆಯ ಭರದಲ್ಲಿ ಇಬ್ಬನಿಯ ಸೌಂದರ್ಯೋಪಾಸನೆಯನ್ನು ಮರೆತಿಲ್ಲ; ಮಂಥರೆಯ ಕನ್ನಡಿ, ಚಿತ್ರಕೂಟದ ಕಲ್ದವಸಿ ಕವಿಯ ಕಣ್ಣಿಗೆ ಕೇವಲ ಜಡವಸ್ತುಗಳಲ್ಲ; ಗುಬ್ಬಚ್ಚಿಮರಿಗೆ ಗುಟುಕು ಕೊಡುವ ಸಂಗತಿ, ಹಾಲಿವಾಣದ ಎಲೆ ರಾವಣನ ತಲೆಯ ಮೇಲೆ ಬಿದ್ದ ಸಂಗತಿ ಕ್ಷುದ್ರ ಮಾತ್ರವೆಂದು ಪರಿಗಣಿಸಿಲ್ಲ. ರಾಮಾಯಣದ ಮಹಾಘಟನೆಗಳಿಗೆ ಇವೆ ತಾನೆ ಮೂಲ. ಆದುದರಿಂದ ಕವಿವಾಣಿ ಮೊದಲೇ ನಾಂದಿಯನ್ನು ಹಾಡಿದೆ :

……………………….ರಾವನ ಕಿರೀಟದಾ
ರನ್ನವಣಿಯೋಲೆ ರಮ್ಯಂ, ಪಂಚವಟಿಯೊಳ್
ದಿನೇಶೋದಯದ ಶಾದ್ವಲದ ಪಸುರ್ ಗರುಕೆಯೊಳ್
ತೃಣಸುಂದರಿಯ ಮೂಗುತಿಯ ಮುತ್ತುಪನಿಯಂತೆ
ಮಿರುಮಿರುಗಿ ಮೆರೆವ ಹಿಮಬಿಂದುವುಂ……

ಎಂದು. ಈ ಸಮನ್ವಯದೃಷ್ಟಿಯೆ ಈ ಮಹಾಕಾವ್ಯದ ಉದ್ದಕ್ಕೂ ಕಂಡು ಬರುತ್ತದೆ. ದಿಕ್ಪ್ರದರ್ಶನಾರ್ಥವಾಗಿ ಒಂದೆರಡು ಸಂಗತಿಗಳನ್ನು ಮಾತ್ರ ಇಲ್ಲಿ ವಿವರಿಸಿದೆ.

ಕೆಲವು ಪ್ರಾಣಿಗಳ ಕಣ್ಣಿಗೆ ವಸ್ತುಗಳು ತಲೆಕೆಳಗಾಗಿ ಕಾಣಿಸುತ್ತವಂತೆ. ಹಾಗೆಯೇ ಪೂರ್ಣದೃಷ್ಟಿಗೆ ಬಹುಮುಖ್ಯವೆಂದು ತೋರುವ ಘಟನೆಗಳು ಖಂಡದೃಷ್ಟಿಗೆ ಅತಿಗೌಣವೆಂದು ತೋರಬಹುದು. ಬಹಿರಂಗದಲ್ಲಿ ಅತಿ ಕ್ಷುದ್ರವೂ ಅತಿ ದುರ್ಬಲವೂ ಆಗಿ ಕಾಣುವ ಸಂಗತಿಗಳ ಅಂತರಾಳದಲ್ಲಿ ಮಹಾಪ್ರಪಂಚಡ ಶಕ್ತಿ ಗರ್ಭೀಕೃತವಾಗಿರಬಹುದು. ತಾಯಿ ಗುಬ್ಬಚ್ಚಿ ದಶರಥನ ಸುಪ್ತ ಬಯಕೆಯನ್ನು ಕೆರಳಿಸಿದ ಪ್ರಸಂಗ ಅಂಥದೊಂದು. ರಾಮಾಯಣ ಕಾವ್ಯದಲ್ಲೆ, ನಿಸರ್ಗದ ಮಹಾಕಾವ್ಯದಲ್ಲಿ ಆ ಘಟನೆ ಎಂಥ ಯಃಕಶ್ಚಿತವಾದುದು? ಅದೂ ಇರಲಿ. ದಶರಥನ ಪುತ್ರಾಭಿವಾಂಛೆಯನ್ನು ಕೆರಳಿಸುವ ಸಂಗತಿಗಳು ಈ ಪ್ರಪಂಚದಲ್ಲಿ ಸಂಭವಿಸುತ್ತಿರಲಿಲ್ಲವೆ? ಜೊಲ್ಲು ಸುರಿಸಿ ಲಲ್ಲೆಗರೆಯುವ ಅದೆಷ್ಟು ಹಸುಗೂಸುಗಳನ್ನೂ, ಅವರನ್ನು ಎತ್ತಿ ಮುತ್ತಿಟ್ಟು ಬಿಗಿಯಪ್ಪಿಕೊಂಡು ಮುದ್ದಾಡುವ ಅದೆಷ್ಟು ಮಂದಿ ತಾಯಂದಿರನ್ನೂ ಅವನು ನೋಡಿರಬಹುದು! ಬಾಲವನ್ನು ಕುಣಿಸುತ್ತ ಕೆಚ್ಚಲುಣುವ ಅದೆಷ್ಟು ಕರುಗಳನ್ನೂ, ಅವುಗಳನ್ನು ಮೂಸಿ ಮೂಸಿ ನೆಕ್ಕಿ ನೆಕ್ಕಿ ಅಕ್ಕರೆಯಿಂದ ‘ಸೊರೆ’ ಬಿಡುವ ಅದೆಷ್ಟು ಹಸುಗಳನ್ನೂ ಅವನು ನೋಡಿರಬಹುದು? ನೋಡಿದ್ದಾನು. ಆದರೆ ಅವೊಂದೂ ಅವನ ಹೃದಯದ ಮೇಲೆ ಯಾವ ವಿಧವಾದ ಪ್ರಭಾವವನ್ನೂ ಬೀರಿದಂತೆ ಕಾಣುವುದಿಲ್ಲ. ಕಾಲವೂ ಕೂಡಿ ಬರಬೇಕು. ಆಗ ವಿಭೂತಿಯ ಆಹ್ವಾನಕ್ಕೆ ವಿಹಂಗಮವೆ ನೆಪವಾಗುತ್ತದೆ. ಅದೇ ವಿಧಿಯ ಸಂದೇಶ ವಾಹಕವಾಗುತ್ತದೆ.

ಹೀಗೆಯೆ ಕನ್ನಡಿಯ ಪ್ರಸಂಗ – ಅದೂ ಮಂಥರೆಯ ಕನ್ನಡಿ. ಶಿಶು ರಾಮಚಂದ್ರ ಆಕಾಶದ ಚಂದ್ರನೇ ಬೇಕೆಂದು ಹಟಹಿಡಿದು, ಯಾರು ಸಂತೈಸಿದರೂ ಸಮಾಧಾನಗೊಳ್ಳದೆ, ಚಕ್ರವರ್ತಿ ದಶರಥನ ದಾರಿದ್ರ್ಯವನ್ನು ಸಾರುವಂತೆ ರೋಧಿಸುತ್ತಿರಲು, ಮಂಥರೆಯ ಉಪಾಯದಿಂದ ಅವನು ಕಿಲಕಿಲನೆ ನಗಬೇಕೆ? ಅಲ್ಲಿ ಎಷ್ಟು ಜನರಿದ್ದರು­-ಕೌಸಲ್ಯೆ, ಸುಮಿತ್ರೆ, ಕೈಕೆ, ದಶರಥ ಇವರಾರಿಗೂ ಸಮಯ ಸ್ಫೂರ್ತಿಯಾಗಲೀ ತೀಕ್ಷ್ಣಮತಿಯಾಗಲೀ ಇರಲಿಲ್ಲವೆ? ಆ ಉಪಾಯ ಕುಬ್ಜೆಯ ಸಾಮಾನ್ಯಮತಿಯಲ್ಲಿ ಮಾತ್ರ ಹೊಳೆಯಬೇಕೆ? ಶ್ರೀರಾಮನ ವಿಭೂತಿತ್ವ ಪ್ರಕಟನೆಗೆ ಅವನ ಅವತಾರಸಿದ್ದಿಗೆ ಮಂಥರೆ ಮುಂದೆ ಹೇಗೆ ಕಾರಣಳಾದಳೆಂಬ, ಹೇಗೆ ನೆರವಾದಳೆಂಬ ದರ್ಶನಧ್ವನಿ ಈ ಪ್ರಕರಣದಿಂದ ಹೊರಹೊಮ್ಮುತ್ತದೆ.

ಹೂಬಳ್ಳಿ ಗಿಡಗೆಂಡೆ ತೊರೆ ಕಡಲು ಪೈರುಪಚ್ಚೆ ಮೊದಲಾದುವುಗಳಲ್ಲಿ ಸೌಂದರ್ಯ ಶಕ್ತಿ ಪ್ರಕಟರೂಪದಲ್ಲಿ ಹೊರಹೊಮ್ಮುವಂತೆ ಜಡಕ್ಕಿಂತ ಜಡವಾದ ಕಲ್ಲು ಮಣ್ಣು ಒಣಮರ ಮೊದಲಾದ ವಸ್ತುಗಳಲ್ಲಿ ಛದ್ಮವಾಗಿ ಅಪ್ರಕಟರೂಪದಲ್ಲಿ ಅದ್ಭುತಶಕ್ತಿ ನೆಲೆಗೊಂಡಿರುತ್ತದೆ. ಈ ಶಕ್ತಿ ವೈಜ್ಞಾನಿಕ ಅಥವಾ ದಾರ್ಶನಿಕ ಮತಿಗೆ ಸ್ಪಷ್ಟಗೋಚರವಾಗುವಂತೆ ಸಾಮಾನ್ಯಮತಿಗೆ ವೇದ್ಯವಾಗದು. “ಪಚ್ಚೆಯಾಗಿ ಮೆರೆಯುತಿತ್ತು ಬುವಿಯ ಮಣ್ಣು”, “ಲೋಕಸ್ವಪ್ನವ ಕಾಣು ತೊರಗಿದ್ದ ಸಹ್ಯಾದ್ರಿ”, “ನನ್ನ ಕೈಯಲ್ಲಿರುವ ಕಲ್ಲಿಗೆ ಬಗೆಗೆ ಸಿಲುಕದ ಮನಸಿದೆ”, “ಹಾರೈಸಿ, ಹಾರೈಸಿ, ಹಾರೈಸಿ ಕುರುಡುಜಡಕುದಿಸಿತಯ್ ಕಣ್ಣು” ಎಂದಾಗ ಸಾಮಾನ್ಯಮತಿ ಅದರ ಅರ್ಥವನ್ನು ಗ್ರಹಿಸಲಾರದೆ ತುಸುವಾದರೂ ತರಹರಿಸಬಹುದು. ಕಲ್ಲಿನಲ್ಲಿರುವ ಲೋಹಶಕ್ತಿ, ಮಣ್ಣಿನಲ್ಲಿರುವ ಜೀವಶಕ್ತಿ, ಒಣಮರದಲ್ಲಿರುವ ಅಗ್ನಿಶಕ್ತಿಯನ್ನು ಅರಿಯುವ ಸಾಮರ್ಥ್ಯ ವೊದಗಿದಾಗ “ಚೈತನ್ಯವೆ ನಿದ್ರಿಸುತಿದೆ ಜಡದ್ವಾರದಿ”, “ಜಡವೆಂಬುದೆಲ್ಲ ಚೇತನದ ನಟನೆಯ ಲೀಲೆ”, “ಜಡವೆಲ್ಲ ಚೈತನ್ಯದಗ್ನಿ ನದಿ” ಎಂಬ ಸತ್ಯದ ದರ್ಶನ ಲಭಿಸುತ್ತದೆ; ಸತ್ಯ ಸಾಕ್ಷಾತ್ಕಾರವಾಗುತ್ತದೆ.

ಹೀಗೆ ಜಡದಲ್ಲಿ ಚೈತನ್ಯವನ್ನು ದರ್ಶಿಸುವ ‘ಕಬ್ಬಗಣ್’ ಉಳ್ಳವನಿಗೆ ‘ಎಲೆವನೆಯೆ ಕಲೆಯ ಮನೆ’ಯಾಗುತ್ತದೆ; ಕಲ್ಲು ನೆನಹಿಗೆ ನಿಕೇತನವಾಗುತ್ತದೆ; ಮರ ಬಾಳಿಗೊಂದು ಸಂಕೇತವಾಗುತ್ತದೆ; ಬರಿ ಬಳ್ಳಿ ಎದೆಯ ಬಾಳಿಗೆ ಕೇತನವಾಗುತ್ತದೆ. ರಾಮ ಸೀತಾ ಲಕ್ಷ್ಮಣರಿಗೆ ಚಿತ್ರಕೂಟ ಪರ್ವತದ ವಿಪಿನಾಂಗಣ ರಸ ತಪೋರಂಗಕ್ಕೆಣೆಯಾಗುತ್ತದೆ :

ಅಪ್ರಮುಖ ವಸ್ತುಗಳ್ಗಲ್ಪತ್ವಮಳಿದುದಯ್
ಅನುಭವದ ಘನಮಹಿಮೆಯಿಂ, ಭಾವ ಪರಿವೇಷಮಂ
ಪಡೆದು ಜಡವೇಷಮಂ ಪಿಂಗದಾವೇಶದಿಂ
ಪ್ರಾಣಮಯವಾಗಿ ಮೇಣರ್ಥಮಯವಾಗಿ ಕೇಳ್
ಸ್ಮೃತಿಕೋಶವಾದುವಯ್ ಆ ಒಂದೊಂದು ವಸ್ತುವುಂ
ತೊರೆದಚಿದ್ಭಾವಮಂ

ಅಗೋ ಮತ್ತೊಂದು ಕಲ್ಲು. ಅದು ಬರಿಯ ಕಲ್ಲೆ. ಆ ಕಲ್ಲು ಬರಿಯ ಕಲ್ಲಾಗಿ ಯುಗಯುಗಗಳಿಂದ ಅಲ್ಲಿ ಕೆಡೆದಿತ್ತು ನಿಜ. ಮೊದಮೊದಲು ಸೀತೆಯ ಕಣ್ಣಿಗೆ ಅದೂ ಒಂದು ಬರಿಯ ಕಲ್ಲೆ, ಜಡವಸ್ತುವೆ. ಒಂದು ದಿನ ಪತಿಯೊಡನೆ ಮಾತಾಡುತ್ತ ಆ ಕಡೆ ತಿರುಗುತ್ತಾಳೆ. ತಿರುಗಿದರೆ ಅಲ್ಲೊಂದು ಸೋಜಿಗ ಕಾಣುತ್ತದೆ. ಆ ಕಲ್ಲಿಗೆ ಆಕೃತಿ ಬಂದಂತೆ ತೋರುತ್ತದೆ. ಇಬ್ಬರೂ ಅಂದಿನಿಂದ ಅದಕ್ಕೆ ‘ಕಲ್ದವಸಿ’ ಎಂದು ಹೆಸರಿಟ್ಟು ಕರೆಯುತ್ತಾರೆ. ಮತ್ತೊಂದು ದಿನ ಬೈಗುಗಪ್ಪಿನಲ್ಲಿ ಆ ಕಲ್ಲ ನೆತ್ತಿಯ ಮೇಲೆ ಯಾರನ್ನೊ ಕಂಡಂತಾಗಿ ಸೀತೆ ಪತಿಯನ್ನು ಕರೆದು ತೋರಿಸುತ್ತಾಳೆ. ರಾಮ ನೋಡಿ, ಗುರುತಿಸಿ, ಅಶ್ರುಲೋಚನನಾಗಿ ನಿಡುಸುಯ್ಯುತ್ತಾನೆ. ಸೀತೆಗೂ ಆ ಸನ್ನಿವೇಶ ಅರಿವಾಗುತ್ತದೆ. ಹೊತ್ತು ತಂದ ಸೌದೆಯನ್ನಿಳುಹಿ ಊರ್ಮಿಳಾರಮಣ ಅಲ್ಲಿ ವಿಶ್ರಮಿಸಿಕೊಳ್ಳುತ್ತಿರುತ್ತಾನೆ. ಅವನು ಆಗ ಪತ್ನಿಯನ್ನು ನೆನೆದು ಯೋಚಿಸುತ್ತಿರಬಹುದೆ, ಅವಳಿಗಾಗಿ ಬೇಯುತ್ತಿರಬಹುದೆ ಎಂದು ಸತಿಪತಿಯರಿಬ್ಬರೂ ಪರಿತಪಿಸುತ್ತಾರೆ. ಅಂದಿನಿಂದ ಆ

ಸಂಜೆಯಿಂದಾ ಬಂಡೆ, ಕಲ್ದವಸಿ, ಊರ್ಮಿಳೆಗೆ
ಮೇಣವಳ ಸಯಮಕೆ ಪಡಿಮೆಯಾದುದು ಮತ್ತೆ
ಗುರುವಾದುದೆಚ್ಚರಿಕೆಯಾದುದೈ ಸತಿಗೆ ಮೇಣ್
ಪತಿಗೆ.

ಹೀಗೆಯೆ ಪರ್ಣಶಾಲೆಯ ಪೂರ್ವದ ಗವಾಕ್ಷದಿಂದ ಕಾಣುತ್ತಿದ್ದ ಶಿಖರೇಶ್ವರ ಆ ಮೂವರ ಮನಸ್ಸಿಗೆ ಎನಿತೆನಿತೊ ಗುಹ್ಯಭಾವಲೋಕಗಳನ್ನು ಸೃಷ್ಟಿಸಿತ್ತು. ಬೆಣ್ಣೆ ಬಣ್ಣದ ನುಣ್ಣ ಮುಗಿಲು ಬೆಟ್ಟನೆತ್ತಿಯನ್ನಪ್ಪಿದಾಗ ಸೀತೆ ಆ ಶಿಖರೇಶ್ವರನನ್ನೆ ರಾಜರ್ಷಿ ಜನಕರಾಜ ನೆಂದು ಬಗೆದು, ತಂದೆಯನ್ನೆ ಇದಿರುಗೊಂಡಂತೆ ರಜತಾದ್ರಿಗೆ ಮಣಿಯುತ್ತಿದ್ದಳು.

ಇಂಥ ಒಂದೊಂದು ಸಾಮಾನ್ಯ ಸನ್ನಿವೇಶವೂ ದರ್ಶನದ ರಸತೀರ್ಥದಲ್ಲಿ ಮಿಂದು ಮಹತ್ತರ ಸನ್ನಿವೇಶವಾಗಿ ಪರಿಣಮಿಸಿದೆ. ಹೀಗೆಯೇ ಹಿಮಮಣಿಗಳ ವರ್ಣನೆಯಲ್ಲಿ ಭಾವರಸ  ದರ್ಶನಗಳ ತ್ರಿವೇಣೀ ಸಂಗಮವನ್ನು ಕಾಣಬಹುದು. ಹೇಮಂತ ಋತುವಿನಲ್ಲೊಂದು ದಿನ ಬೆಳಿಗ್ಗೆ ರಾಮ ಸೀತೆಯೊಡನೆ ಹೊಳೆಯ ಕಡೆಗೆ ಹೊರಡುತ್ತಾನೆ. ಲಕ್ಷ್ಮಣ ಅವರನ್ನು ಹಿಂಬಾಲಿಸುತ್ತಾನೆ. ದಪ್ಪ ಮಳೆಹನಿಗಳಂತೆ ಹಿಮಬಿಂದುಗಳು ಎಲೆಗಳಿಂದ ಪಟಪಟ ಎಂದು ಬೀಳುತ್ತಿವೆ. ಎಳೆಬಿಸಿಲು ಕೋಲುಕೋಲಾಗಿ ಕಾಡಿನ ನಡುವೆ ಚೆಲುವಿನ ಬಲೆಯನ್ನು ನೆಯ್ದಿದೆ. ಅಲ್ಲಲ್ಲಿ ಕಾಮನಬಿಲ್ಲು ಮೂಡಿವೆ. ಇಲ್ಲಿ ಕವಿ ರಾಮನಾಗಿ, ಹಿಮಮಣಿಯಾಗಿ ಹಿಮಮಣಿಯ ಸೊಬಗನ್ನು ವರ್ಣಿಸುತ್ತಾನೆ; ಈ ಮಹಾಕಾವ್ಯದ ನಡುವೆ ಒಂದು ಸಮುಜ್ವಲ ಭಾವಗೀತೆ ಯನ್ನು ಹಾಡುತ್ತಾನೆ :

ನೋಡು, ಮೈಥಿಲಿ ಅಲ್ಲಿ!
ಪನಿ ತಳ್ತ ಶಾದ್ವಲ ಶ್ಯಾಮವೇದಿಕೆಯಲ್ಲಿ
ತೃಣಸುಂದರಿಯ ಮೂಗುತಿಯ ಮುತ್ತು ಪನಿಯಂತೆ
ಮಿರುಮಿರುಗಿ ಮೆರೆವಾ ಹಿಮದ ಬಿಂದು. ಜ್ವಲಿಸುತಿದೆ
ನೋಡೆಂತು ಬಣ್ಣ ದೆಣ್ಣೆಯ ಹಣತೆ ಸೊಡರಂತೆ
ಸಪ್ತರಾಗೋಜ್ವಲಂ. ಸರ್ವಸೃಷ್ಟಿಯ ದೃಷ್ಟಿ ತಾಂ
ಸೆರೆಯಾಗಲೊಪ್ಪಿರುವುದಾ ಹನಿಯ ಹೃದಯದಾ
ಪುಟ್ಟ ಜೋತಿಯಲಿ. ದೇವರ ಮುಖದ ದರ್ಶನಕೆ
ಸಾಲದೇನಾ ಹನಿಯ ಕಿರುದರ್ಪಣಂ? ನಿಲ್ಲಿಮ್; ಆ
ಇರ್ಬನಿಯ ಕಿಡಿಗುಡಿಯೊಳಾರಾಧನೆಯನೆಸಗಿ
ಮುಂಬರಿಯುವಂ.

ಸರ್ವಸೃಷ್ಟಿಯ ದೃಷ್ಟಿಯೆ ಆ ಹನಿಯ ಹೃದಯದಲ್ಲಿ ಸೆರೆಯಾಗಿದೆಯಂತೆ. ದೇವರ ಮುಖದ ದರ್ಶನಕ್ಕೆ ಹನಿಯ ಆ ಕಿರುದರ್ಪಣವೆ ಸಾಕಂತೆ. ಇದು ಬರಿಯ ಕವಿಕಲ್ಪನಾ ವಿಲಾಸವಲ್ಲ: ಕವಿಯ ಕಾಣ್ಕೆ, ಕವಿಯ ಸತ್ಯದರ್ಶನ. ಅದಲ್ಲ ಎನ್ನುವವನು ಎಗ್ಗ. ಯಾರಿಗೆ ಈ ಸತ್ಯದರ್ಶನ ಲಭಿಸುತ್ತದೆಯೋ ಅವನೇ ‘ರಾಮ’. ಹನ್ನೆರಡು ವರ್ಷ ದೀರ್ಘಾವಧಿಯ ವಿಪಿನ ವಾಸದ ರಸತಪಸ್ಸಿನಿಂದ ಮಾತ್ರ ರಾಮನಿಗೆ ರಾಮತ್ವ ಲಭಿಸಲು ಸಾಧ್ಯವಾಯಿತು.

ವರ್ಷಾಕಾಲದ ಮತ್ತೊಂದು ದಿನ. ಶ್ರೀರಾಮ ಅಗ್ನಿಸಾಕ್ಷಿಯಾಗಿ ಸುಗ್ರೀವಸಖ್ಯವನ್ನು ಗಳಿಸಿ ವಾಲಿಯನ್ನು ಕೊಂದು, ವನವಾಸದ ನೋಂಪಿಯನ್ನು ಬಿಡದೆ, ಮಾಲ್ಯವತ್ ಪರ್ವತ ಗುಹೆಯಲ್ಲಿ ಮಳೆಗಾಲದ ಕೊನೆಗೆ ತಮ್ಮನೊಡನೆ ಕಾಯುತ್ತಿದ್ದಾನೆ. ಆಶ್ವಯುಜದ ವರ್ಷ ಭೈರವನ ರುದ್ರಾಟ್ಟಹಾಸ. ವರ್ಷಘೋಷವನ್ನು ಕೇಳಿದ ಧ್ಯಾನ ಮಗ್ನ ಶ್ರೀರಾಮ ಕಣ್ಣರಳಿಸುತ್ತಾನೆ. ಕಗ್ಗತ್ತಲೆಯ ಗವಿಯನ್ನು ಮಿಂಚುಹುಳಗಳ ತಂಡ ಪ್ರವೇಶಿಸುತ್ತದೆ. ಮಿಂಚಿನ ಹನಿಯನ್ನು ಚೆಲ್ಲಿ ಹಾರಾಡುತ್ತಿದ್ದ ಆ ಮಿಂಚು ಹುಳುಗಳನ್ನು ನೋಡುತ್ತ ನೋಡುತ್ತ ರಾಮನ ಕಣ್ಣುಗಳಲ್ಲಿ ಹನಿಮೂಡಿ, ಕೆನ್ನೆ ನೆನೆಯುತ್ತದೆ. ಅವನ ಕದಡಿದ ಬಗೆಗೆ ಶಾಂತಿ ಲಭಿಸುತ್ತದೆ. ಇಂಥ ರಮ್ಯದೃಶ್ಯವನ್ನು ಯಾರು ತಾನೆ ನೋಡಿಲ್ಲ. ಅದರಿಂದ ಎಷ್ಟು ಮಂದಿಗೆ ಶಾಂತಿ ಲಭಿಸಿದೆ?

ಶ್ರೀರಾಮ ದೇವಕಲ್ಪನಾದರೂ, ಈ ಲೋಕಕ್ಕಿಳಿದು ಬಂದ ಮೇಲೆ ಇಲ್ಲಿಯ ನಿಯಮಗಳಿಗನುಗುಣವಾಗಿ ವರ್ತಿಸುವುದೇ ಪರಮಧರ್ಮ. ಕಾನೂನು ರಚನೆಗೆ ಕಾರಣನಾದ ಶಾಸನಸಭಾಸದಸ್ಯ ಹೇಗೆ ಕಾನೂನು ಭಂಗಮಾಡಲಾರನೋ (ಆದರೆ ಈ ತತ್ತ್ವ ಇಂದಿನ ರಾಜಕಾರಣಿಗಳಿಗೆ ಅನ್ವಯಿಸುವುದಿಲ್ಲ) ಹಾಗೆಯೆ ಭಗವಂತ ಸ್ವಯಂ ನಿರ್ಮಿತವಾದ ನಿಯಮಗಳನ್ನು ಉಲ್ಲಂಘಿಸಲಾರನು. ಒಮ್ಮೊಮ್ಮೆ ನಿಯಮೋಲ್ಲಂಘನೆ ಅನಿವಾರ್ಯವಾಗ ಬಹುದು-ಅದೂ ಲೋಕಕಲ್ಯಾಣದ ದೃಷ್ಟಿಯಿಂದ. ಹೀಗಿರುವಾಗ ರಾಮ ಸೀತೆಯರು ಸಾಮಾನ್ಯರಂತೆ ನೋವುನಲಿವುಗಳಿಗೊಳಗಾಗುವುದು ಅಸಹಜವಲ್ಲ. ಬಹುಶಃ ರಾಮತ್ವ ವಿಕಾಸಕ್ಕೆ ಅವು ಅನಿವಾರ್ಯವೆಂದರೂ ತಪ್ಪಲ್ಲ. ನೋವುನಲಿವುಗಳನ್ನು ಪ್ರಕಾಶಪಡಿಸುವ ಗೃಹಜೀವನದ ಸಾಮಾನ್ಯ ಚಿತ್ರಗಳು ಈ ಕಾವ್ಯದಲ್ಲಿ ಸಾಕಷ್ಟು ಬರುತ್ತವೆ. ಮಹದ್ಭಟನೆಗಳ ಕೋಲಾಹಲದಲ್ಲಿ ಕವಿ ಅವುಗಳನ್ನು ಮರೆತಿಲ್ಲ. ಒಮ್ಮೆ ಹತ್ತು ವರ್ಷದ ವಿನೋದಶೀಲನಾದ ಶಶಿಮೌಳಿಯೆಂಬ ಋಷಿ ಕುಮಾರ ಆಶ್ರಮದ ಗೋವನ್ನಟ್ಟಲು ಬಂದು ಸೀತೆಯೊಡನೆ ಹರಟುತ್ತಾನೆ. ಸೀತೆ ಕೊಟ್ಟ ಉಣಿಸನ್ನು ತಿಂದು ನಲಿಯುತ್ತಾನೆ. ಕೊನೆಗೆ ಸೀತೆ ಎಷ್ಟು ಬೇಡವೆಂದರೂ ಬಿಡದೆ ಅವಳೊಡನೆ ಮುಸುರೆತಿಕ್ಕಿ, ಕೈ ಮೈ ಮೋರೆಗಳಿಗೆ ಮಸಿತುಂಬಿಕೊಂಡು ಹೋಗುತ್ತಾನೆ. ಆ ಸಂಗತಿಯನ್ನು ಸೀತೆ ಭಾವವಶೆಯಾಗಿ ಹೇಳುತ್ತಿರಲು ರಾಮ ಲಕ್ಷ್ಮಣರು ಅಳ್ಳೆ ಬಿರಿಯುವಂತೆ ನಗುತ್ತಾರೆ. ಮತ್ತೊಂದು ದಿನ ಸೀತೆ ಮಾಲ್ಯವತಿಯಲ್ಲಿ ಮಿಂದು, ಬೆಳ್ಳಿ ಬಣ್ಣದ ತೆಳ್ಳನೆಯ ನಾರುಮಡಿಯುಟ್ಟು, ಎಲೆಮನೆಗೆ ಬಂದು, ಅಡುಗೆಗೆ  ತೊಡಗುತ್ತಾಳೆ. ಹಸಿ ಸೌದೆ ಉರಿಯದೆ ಕುಟಿತುಂಬ ಹೊಗೆ ತುಂಬಿಕೊಳ್ಳುತ್ತದೆ. ಸೀತೆ ಮುಳಿದು ಒಲೆಯ ಮೋರೆಯನ್ನು ಕಟ್ಟಿಗೆಯಿಂದ ತಿವಿದು, ಕಣ್ಣು ಮೂಗೊರಸಿಕೊಂಡು, ಮೊಗಮಡಿ ಮಸಿಯಾಗಲು ಸಿಡುಗುಟ್ಟುತ್ತಿರುತ್ತಾಳೆ. ಅಷ್ಟರಲ್ಲಿ ವಜ್ರರೋಮಾಶ್ರಮದಿಂದ ಅಧ್ಯಯನವನ್ನು ಮುಗಿಸಿಕೊಂಡು ಬಂದ ರಾಮ ಹೆಂಡತಿಯನ್ನು ಕರೆಯುತ್ತಾನೆ. ಹೊಗೆಯ ಹೊಟ್ಟೆಯಿಂದ ‘ಓ’ ಕೇಳಿಸುತ್ತದೆ. ಹೊರಗಿನಿಂದಲೇ ರಾಮ ವಿನೋದಕ್ಕಾಗಿ ‘ಹಸಿವು, ಹಸಿವು, ಊಟಬಡಿಸು’ ಎನ್ನುತ್ತಾನೆ. “ಹಸಿ ಸೌದೆ. ಅಡುಗೆ ಅಣಿಮಾಡುವುದೆಂತು? ಹೊಗೆಯನ್ನು ಉಣ್ಣಿ” ಎಂದು ಉತ್ತರ ಬರುತ್ತದೆ. ರಾಮ ಮಾತಾಡುತ್ತ ಅವಳ ಬಳಿಸಾರಿ, ಮಸಿಹಿಡಿದ ಮುಸುಡಿಯನ್ನು ಕಂಡು, ನಗು ತಡೆಯಲಾರದೆ ಹೊರಗೆ ಬಂದು ಅಳ್ಳೆ ಬಿರಿಯುವ ತನಕ ನಗುತ್ತಾನೆ. ಅದೆ ತಾನೆ ಬಂದ ಲಕ್ಷ್ಮಣನನ್ನು ಕುರಿತು ‘ಒಳಗೆ ಹೋಗಿ ನೋಡು, ಅತ್ತಿಗೆಗೆ ಬದಲಿರುವ ವಾನರಿಯನ್ನು’ ಎನ್ನುತ್ತ ಗಹಗಹಿಸಿ ನಗುತ್ತಿರುತ್ತಾನೆ. ಲಕ್ಷ್ಮಣ ನಗದೆ ಒಳಗೆ ಹೋಗಿ ನೋಡುತ್ತಾನೆ. ‘ಕ್ಷಮಿಸಿ, ತಪ್ಪು ನನ್ನದು. ಹಸಿ ಸೌದೆಯನ್ನು ತಂದೆ’ ಎನ್ನುತ್ತ ಒಣಪುಳ್ಳಿಯನ್ನು ತಂದು, ಸತಿಯನ್ನು ನೆನೆಯುತ್ತ ಒಲೆಯೂದುತ್ತಾನೆ. ಬೆಂಕಿ ಧಗಧಗನೆ ಹೊತ್ತಿಕೊಳ್ಳುತ್ತದೆ. ಇದೇ ಸಂದರ್ಭದಲ್ಲಿ ಸೀತೆ ಆಂಜನೇಯನಿಗೆ ಪ್ರತ್ಯಭಿಜ್ಞಾನ ರೂಪವಾಗಿ ಚೂಡಾಮಣಿಯನ್ನು ನೀಡುವಾಗ ಕಣ್ಮುಚ್ಚಿ ಸ್ಮೃತ್ಯಭಿಜ್ಞಾನರೂಪವಾಗಿ ರಾಮ ಹಿಂದೊಮ್ಮೆ ಮಂದಾಕಿನೀ ತಟದನುಣ್ಮಳಲ ರಾಶಿಯ ಮೇಲೆ ಬರೆಸಿದ ಪ್ರಣಯ ಮಂತ್ರದ ಕತೆಗಳನ್ನು ಹೇಳಿದುದು ನೆನಪಿಗೆ ಬರುತ್ತದೆ. ಇಂಥ ಸಾಮಾನ್ಯ ಚಿತ್ರಗಳನ್ನು ಅವುಗಳ ಮುಗ್ಧ ಸರಳ ಸೌಂದರ್ಯಕ್ಕಾಗಿ ಓದಬಹುದಲ್ಲದೆ, ಅವುಗಳಿಂದ ವ್ಯಕ್ತವಾಗುವ ಅವರ ಶುಚಿರುಚಿ ಜೀವನವನ್ನೂ ಅದರ ಸೌಂದರ್ಯವನ್ನೂ ಗ್ರಹಿಸಬಹುದು.

ಸಾಮಾನ್ಯವಾಗಿ ಪ್ರಾಚೀನ ಪುರಾಣೇತಿಹಾಸಗಳಲ್ಲಿ ಬರುವ ಮಹಾಪುರುಷರ ಜೀವನದ ಎಲ್ಲ ಮುಖಗಳ, ಅದರಲ್ಲಿಯೂ ಸಾಮಾನ್ಯ ಮುಖದ ಚಿತ್ರ ವಾಚಕರಿಗೆ ಸಾಕಷ್ಟು ಸಿಗುವುದಿಲ್ಲ. ಆ ಕವಿಗಳ ದೃಷ್ಟಿ ಮುಖ್ಯವಾಗಿ ನಾಯಕರ ಮಹಾಸಾಹಸ ಸಿದ್ದಿಗಳ ಕಡೆಗೆ ವಾಲಿರುತ್ತದೆ. ಪ್ರತಿನಾಯಕರ ಜೀವನದ ಕಲ್ಯಾಣಮುಖ ಅಗೋಚರವಾಗಿಯೇ ಉಳಿದಿರುತ್ತದೆ. ಹೀಗಾಗಿ ಅವರ ಆದರ್ಶತೆ ಇಂದಿನ ಸಾಮಾನ್ಯರಿಗೆ ಭಯಂಕರವಾಗಿ ಕಾಣುತ್ತದೆ. ಏಕೆಂದರೆ ವಾಸ್ತವತೆ ಆದರ್ಶತೆಗಳು ಒಂದೇ ಶಕ್ತಿಯ ಬೇರೆ ಬೇರೆ ಮುಖಗಳು. ಸಾಮಾನ್ಯತೆ ಮಾಹಾತ್ಮ್ಯದ ರಹಸ್ಯ. ನಾಯಕ ಪ್ರತಿ ನಾಯಕರ ಜೀವನದ ಸಾಮಾನ್ಯಾಂಶ ಗಳನ್ನು ಮರೆತರೆ, ಅವರ ವ್ಯಕ್ತಿತ್ವಕ್ಕೆ ನಷ್ಟವೊದಗುವುದಿರಲಿ, ಸಾಮಾನ್ಯರಿಗೂ ಅವರಿಗೂ ಇರುವ ಸಾಧಾರಣ ಸಂಬಂಧ ಕಡಿದು ಹೋಗಿ ಅವರ ಆದರ್ಶತೆ ಅನನುಸರಣೀಯ ಎಂಬ ಭಾವನೆ ತಲೆದೋರಬಹುದು; ಅವರು ‘ನಮ್ಮ’ವರು ಎಂಬ ಆತ್ಮೀಯಭಾವನೆ ಮೂಡದಿರ ಬಹುದು. ಆಗ ಕಾವ್ಯದ ಉದ್ದೇಶಕ್ಕೆ ಭಂಗಬರದಿರಲಾರದು. ಇಲ್ಲಿ ಮಂಡೋದರಿ, ಚಂದ್ರನಖಿ, ತಾರಾಕ್ಷಿ, ಇವರಿಗಿಂತ ಮಿಗಿಲಾಗಿ ಅನಲೆ ಇವರಿಗೂ ರಾವಣನಿಗೂ ಇದ್ದ ಪರಸ್ಪರ ಸಂಬಂಧವನ್ನೂ, ಅವರ ಗೃಹಜೀವನದ ಸಾಮಾನ್ಯ, ಆದರೆ ಸುರಮೋಹಕವಾದ ಚಿತ್ರಗಳನ್ನೂ ಪರಂಪರೆಯಾಗಿ ಚಿತ್ರಿಸಿರುವುದರಿಂದ, ಆ ಮೂಲಕ ರಾವಣ ಹೃದಯವನ್ನು ಪದರ ಪದರವಾಗಿ ಬಿಡಿಸಿರುವುದರಿಂದ, ಆ ಪಾತ್ರ ಅದೆಷ್ಟು ಸಹಜವಾಗಿ ತೋರುತ್ತದೆ! ಸಹಜವಾಗಿ ತೋರುವುದರ ಜೊತೆಗೆ ಅದೆಷ್ಟು ಮಹೋನ್ನತವಾಗಿ ಪ್ರಜ್ವಲಿಸುತ್ತದೆ!

ವಾಲಿಯ ಮರಣ ಸಮಯದ ಹೃದಯವಿದ್ರಾವಕಾರಿಯಾದ ದುರಂತ ಸನ್ನಿವೇಶವನ್ನು ಗಮನಿಸಬಹುದು. ಒಮ್ಮೆ ಸುಗ್ರೀವ ವಾಲಿ ಮುಷ್ಟಿಯ ವಜ್ರಾಘಾತದಿಂದ ಬಳಲಿ ಓಡಿಹೋದನಷ್ಟೆ. ಮತ್ತೆ ಶ್ರೀರಾಮನಿಂದ ಅಭಯವನ್ನು ಪಡೆದು ಯುದ್ಧಸನ್ನದ್ಧನಾಗಿ ಬರುತ್ತಾನೆ. ಆ ಹೊತ್ತಿಗೆ ತಾರೆಯ ಕೈಸೋಂಕು, ಕರೆವ ಕಂಬನಿ, ಹನಿಯುವ ನುಡಿಜೇನು ಅವನ ಆಕ್ರೋಶಾಗ್ನಿಯನ್ನು ನಂದಿಸಿ, ದ್ವೇಷವಿಷವನ್ನು ಹೀರಿರುತ್ತದೆ. ಅಣ್ಣ ಬಾ ಬಾ ಎಂದು ಜೊಲ್ಲು ಹರಿಸುತ್ತ ತೊದಲುತ್ತಿದ್ದ ಮುದ್ದು ತಮ್ಮನನ್ನು ಬೆನ್ನಮೇಲೆ ಹೊತ್ತು ‘ಉಪ್ಪು ಬೇಕೆ ಉಪ್ಪು’ ಎಂದು ಓಡಾಡಿ ಸುತ್ತಣವರನ್ನು ನಗಿಸುತ್ತಿದ್ದ ಹಿಂದಿನ ನೆನಪು ವಾಲಿಗೆ ಮರುಕೊಳಿಸುತ್ತದೆ. ಕೂಡಲೆ ಸುಗ್ರೀವನನ್ನು ತಂದು ರುಮೆಗೊಪ್ಪಿಸುವುದಾಗಿ ತಿಳಿಸಿ, ತಂಗಿಯನ್ನು ಸಿಂಗರಿಸೆಂದು ಹೇಳಿ ಓಡುತ್ತಾನೆ. ಮುಂದಿನ ಕಥೆ ಗೊತ್ತೇ ಇದೆ. ಆದರೆ ಅವಸಾನ ಸಮಯದಲ್ಲಿ ಅವನು ನೆನೆಯುವ ಪಳಕೆಯ ಸಂಗತಿಗಳು ಅವನ ಹಿರಿಯ ಜೀವನಕ್ಕೆ ಸಾಕ್ಷಿಯಾಗಿವೆ. ‘ತಾಯ್ ನುಡಿಯ ಮಲೆ ಗುಡಿಯ ಬೆಟ್ಟದಡವಿಯ ಬೀಡ’ನ್ನು ‘ಚೆಲ್ವು ಚಿಪ್ಪೊಡೆಯೆ ಮುತ್ತು ನೀರ್ ಬೆಳ್ಳಂಗೆಡೆಯೆ ಧುಮುಕಿ’ ಮಿಂದ ಅರ್ಬಿಯನ್ನು, ಪಂಪಾ ಸರೋವರದಲ್ಲಿ ಈಜು ಕಲಿಯುವಾಗ ಮುಳುಗಿದ ತಮ್ಮನನ್ನು ಎತ್ತಿದ ‘ಸೈಪಿನಾ ಸೊಗ’ವನ್ನು, ಮರಕೋತಿಯಾಟ ಚಿಣ್ಣಿಕೋಲಾಟಗಳನ್ನು ನೆನೆನೆನೆದು ಸವಿಯುತ್ತಾನೆ. ‘ಸಾಮಾನ್ಯತೆ’ ‘ಅಸಾಮಾನ್ಯತೆ’ಗಳಲ್ಲಿ ಯಾವುದು ಗಟ್ಟಿ ಯಾವುದು ಜಳ್ಳು ಎಂಬುದಕ್ಕೆ ವಾಲಿಯೇ ಉತ್ತರ ಕೊಡುತ್ತಾನೆ :

………..ಬಾಳಂಚಿನೊಳ್ ನಿಂತು
ಪೇಳ್ವೆನೀ ನನ್ನಿಯಂ; ಆ ಜಳ್ಳೆ ಗಟ್ಟಿ; ನಾಮ್
ಗಟ್ಟಿಯೆಂದರಿತುದೆಲ್ಲಂ ಜಳ್ಳು, ಬರಿ ಜಳ್ಳು…..
ಸಾವ್ ಗಾಳಿ ತೂರಲರಿವಪ್ಪುದಯ್!

ಇಂಥದೇ ಮತ್ತೊಂದು ಸಂದರ್ಭ ಯಮ ಭಯಂಕರವಾದ ಕುಂಭಕರ್ಣನ ಬಗೆಗೆ ಓದುಗರ ಕನಿಕರ ಸಹಾನುಭೂತಿಗಳನ್ನು ಸೆರೆಗೈಯುತ್ತದೆ; ಅವನ ಮಹೋನ್ನತಿಯನ್ನು ಬೆಳಗುತ್ತದೆ. ಅವನು ಶ್ರೀರಾಮನಿಂದ ಹತನಾದನಂತರ, ದುಃಖ ಸಂತಪ್ತೆಯಾದ ಅನಲೆ ಸೀತೆಯ ಸನ್ನಿಧಿಗೆ ಹೋಗುತ್ತಾಳಷ್ಟೆ. ಅವಳೊಡನೆ ತನ್ನ ದೊಡ್ಡಯ್ಯನ ಹಿರಿಮೆಯನ್ನು ಕುರಿತು ಹೊಗಳುತ್ತಾಳೆ : ಕಳ್ಳರಾಟದಲ್ಲಿ ಅವನು ಸಿಗದಿರಲು ನಗಿಸಿ, ನಗೆ ತಡೆಯಲಾರದೆ ಸೋತು ನಿಂತವನನ್ನು ಹಿಡಿಯಲು, ಅವನು ತನ್ನನ್ನೆತ್ತಿ ಮೇಲಕ್ಕೆಸೆದು ‘ನೀನೊಂದು ಹೂವಿನ ಚೆಂಡೆಂ’ದು ಬುತ್ತಿ ಹಿಡಿದು ಮುದ್ದಾಡುತ್ತಿದ್ದ ಹಿಂದಿನ ಚಿತ್ರವನ್ನು ವಿವರಿಸುತ್ತಾಳೆ. ಇವುಗಳಲ್ಲಿ ಯಾವುದು ಗಟ್ಟಿ – ಅವನು ಅನಲೆಗೆ ಸೋತುದೋ? ಶ್ರೀರಾಮನಿಗೆ ಸೋತುದೋ? ಬಹಿರಂಗ ಸಾಮಾನ್ಯವಾದ ಇಂಥ ಸನ್ನಿವೇಶಗಳು ಅಂತರಂಗದಲ್ಲಿ ದೇವಮಾನ್ಯವಾಗುತ್ತವೆ.

ಮಹದ್ಘಟನೆಗಳ ಕೋಲಾಹಲದ ನಡುವೆ ಸಾಮಾನ್ಯ ಘಟನೆಗಳನ್ನು ಕವಿ ಎಂತು ಮರೆತಿಲ್ಲವೊ ಅಂತೆಯೆ ರಾವಣನ ಸಾಧನಾಸಿದ್ದಿಗಳ ನಿರೂಪಣಾವಸರದಲ್ಲಿ ತ್ರಿಜಟೆ ಯಂಥವರ ಸಾಧನೆಯನ್ನು ಮರೆತಿಲ್ಲ; ರಣದ ಗಲಿಬಿಲಿಯಲ್ಲಿ ಅವಳ ತಪಸ್ಸಿಗೆ ಭಂಗ ತಂದಿಲ್ಲ. ಸಂಗ್ರಾಮದುರಿಗೆ ಸಿಕ್ಕಿದ ಸಾಮಾನ್ಯರ ಪಾಡೆಂತಹುದು, ಅವರ ಅಭಿಪ್ರಾಯ ಆಲೋಚನೆಗಳೇನು? ಎಂಬೀ ಪ್ರಶ್ನೆಗಳಿಗೆ ತ್ರಿಜಟೆ ಉತ್ತರ ಕೊಡುತ್ತಾಳೆ. ಉತ್ತರ ಕೊಡುತ್ತಾಳೆ, ನಿಜ. ದುಃಖವೇ ಉತ್ತರ. ಕಣ್ಣೀರೇ ಉತ್ತರ. ಆದರೆ ಆ ದುಃಖ ಎಷ್ಟು ಹೊತ್ತು? “ನನ್ನದು ನೋವೆ ನಿನ್ನದರಿದಿರ್? ಮಹಿಮೆ ಮೈದೋರಲೋಸುಗಂ ಮಡಿದರಾ ಸಾವೊಂದು ಸಾವೆ? ಬರ್ದುಕಿಗೆ ಮಿಗಿಲ್ ಅಮೃತಮಲ್ತೆ?” ಆ ಸಾಮಾನ್ಯಳ, ಆ ಯಃಕಶ್ಚಿತ್ತಳ ಬಾಯಲ್ಲಿ ವೇದದಂಥ ಮಾತು. ಅವಳು ಸಾಮಾನ್ಯಳೆ? ಅಗ್ನಿಸಂಸ್ಪರ್ಶದಿಂದ ಕಾಳಿಕೆ ತೊಲಗುವಂತೆ, ಪುಣ್ಯ ಸಹವಾಸದಿಂದ ಪಾಪ ಸರಿಯುವಂತೆ, ಸೀತೆಯ ಸಾನ್ನಿಧ್ಯಮಹಿಮೆಯಿಂದ ಅವಳಿಂದು ಸಾಮಾನ್ಯೆಯಲ್ಲ, ಸೀತಾಮಾತೆಯಿಂದ ‘ಪಿರಿಯಳ್ ನೀಂ ಸಖಿ’ ಎನ್ನಿಸಿಕೊಂಡ ಧನ್ಯೆ.

‘ಶ್ರೀರಾಮಾಯಣದರ್ಶನ’ದ ಅಂತಿಮ ಗುರಿ ಮರಣ ಸಾಧನೆಯಲ್ಲ, ಅಮೃತಸಿದ್ದಿ. ಮಾನವ ಸಹಜವಾದ, ದಾನವ ಸಹಜವಾದ, ವಾನರ ಸಹಜವಾದ ದ್ವೇಷಾಸೂಯೆಗಳ ಕೋಪತಾಪಗಳ ಕಾಮಕ್ರೋಧಗಳ ದೌಷ್ಟ್ಯ ದೌರ್ಜನ್ಯಗಳ ರೂಕ್ಷತಾರೂಪದ ವಿಕಾರಗಳು ಇಲ್ಲಿ ಇಲ್ಲದಿಲ್ಲ; ಆದರೆ ಆ ವಿಕಾರಗಳು ವಿಕಾರಗಳಾಗಿಯೇ ಕೊನೆಯತನಕ ಉಳಿಯು ವುದಿಲ್ಲ; ಹಾಗೆ ಉಳಿಯುವುದು ಋತಧರ್ಮಕ್ಕೆ ವಿರೋಧವೂ ಅಹುದು. ಈ ಮಹಾಕಾವ್ಯದಲ್ಲಿ ಆ ಋತದ ಗೆಲವನ್ನು ಸಾಧಿಸಿದೆ. ಆ ಗೆಲವಿಗೆ ಮೇಲೆ ನಿರೂಪಣೆಗೊಂಡ ಒಂದೊಂದು ಸಾಮಾನ್ಯ ಸನ್ನಿವೇಶವೂ ಕಾರಣವಾಗಿದೆ. ಈ ಭಾವವೇ ಕೆಳಗಿನ ಸಾಲುಗಳಲ್ಲಿ ಪ್ರತಿಬಿಂಬಿತವಾಗಿದೆ :

………ಕೊಂದ ಕತದಿಂದೇಂ
ಪೆರ್ಮನಾದನೆ ರಾಮನಾ ಮಾತನುಳಿ : ಪಗೆಯೆ?
ತೆಗೆತೆಗೆ. ಪೆರ್ಮೆಗೊಲ್ಮೆಯೆ ಚಿಹ್ನೆ. ಮಹತ್ತಿಗೇಂ
ಬೆಲೆಯೆ ಪೇಳ್ ಕೊಲೆ? ದೈತ್ಯನಂ ಗೆಲಿದ ಕಾರಣಕಲ್ತು
ತನ್ನ ದಯಿತೆಯನೊಲಿದ ಕಾರಣಕೆ, ಗುರು ಕಣಾ
ರಾಮಚಂದ್ರಂ, ಕೋಲಾಹಲದ ರುಚಿಯ ಮೋಹಕ್ಕೆ
ಮರುಳಾದ ಮಾನವರ್ ರಾವಣನ ಕೊಲೆಗಾಗಿ
ರಾಮನಂ ಕೊಂಡಾಡಿದೊಡೆ ಕವಿಗುಮಾ ಭ್ರಾಂತಿ
ತಾನೇಕೆ? ಮಣಿಯುವೆನು ರಾಮನಡಿದಾವರೆಗೆ
ದಶಶಿರನ ವಧೆಗಾಗಿಯಲ್ತು; ಮಂದಾಕಿನಿಯ
ತಿಳಿವೊನಲ ಮೀಯುತಿರಲೊರ್‌ದಿನಂ ತಾಂ ಕಂಡ
ದೃಶ್ಯ ಸೌಂದರ್ಯದಿಂದಾತ್ಮದರ್ಶನಕೇರ್ದ
ರಸಸಮಾಧಿಯ ಮಹಿಮೆಗಾಗಿ!