ಭರತಖಂಡದ ಆದಿಕವಿ ವ್ಯಾಧಮಹರ್ಷಿ ವಾಲ್ಮೀಕಿಯಿಂದ ರಚಿತವಾಗಿರುವ ಲೋಕ ಪೂಜ್ಯ ಗ್ರಂಥವಾದ ರಾಮಾಯಣ ಮಹಾಕಾವ್ಯದ ಉತ್ತರಕಾಂಡದಲ್ಲಿ ಬರುವ ಶೂದ್ರ ಶಂಬೂಕ ಮಹರ್ಷಿಯ ಪ್ರಸಂಗವೇ ‘ಶೂದ್ರತಪಸ್ವಿ’ ನಾಟಕದ ವಸ್ತು. ವೃದ್ಧ ಬ್ರಾಹ್ಮಣ ನೊಬ್ಬನ ಮಗನ ಅಕಾಲಮರಣಕ್ಕೆ ‘ಧರ್ಮವಿರುದ್ಧ’ವಾದ ಶೂದ್ರನ ತಪಸ್ಸೇ ಕಾರಣವೆಂದು ಶ್ರೀರಾಮನ ಅಧ್ಯಕ್ಷತೆಯಲ್ಲಿ ನಡೆದ ಮಂತ್ರಿ ಸಭೆ ತೀರ್ಮಾನಿಸುತ್ತದೆ. ಸೀತಾಪರಿತ್ಯಾಗದಿಂದ ಸಂತಪ್ತನಾದ ಧರ್ಮಾವತಾರ ಶ್ರೀರಾಮಚಂದ್ರನು ಧರ್ಮ ಸಂಸ್ಥಾಪನಾ ದೃಷ್ಟಿಯಿಂದ ತಾನು ಶೂದ್ರನೆಂದು ನಿಷ್ಠುರ ಸತ್ಯವನ್ನು ನುಡಿದ ಸಂಭೂಕ ಮಹರ್ಷಿಯ ತಲೆಯನ್ನು ಇಕ್ಕಡಿ ಗೈಯುತ್ತಾನೆ. ಇಂದ್ರನೇ ಮೊದಲಾದ ನಾಕದ ದೇವತೆಗಳು ಶ್ರೀರಾಮಚಂದ್ರನ ಸತ್ಕಾರ್ಯ ದಿಂದ ಸಂತುಷ್ಟವಾಗಿ ಹೂ ಮಳೆಗರೆಯುತ್ತಾರೆ. ಮೂಲಕಥೆಯ ಸಾರಾಂಶವಿದು.

ಶೂದ್ರನಾದವನು ತಪೋಶ್ರೀಯ ಕೈಹಿಡಿಯಲು ಅರ್ಹನಲ್ಲವೆಂಬ ತತ್ತ್ವ ನಿರೂಪಣೇಚ್ಛೆಯೇ ಕಥೆಯ ಹಿನ್ನೆಲೆಯೆಂಬುದು ಸುಸ್ಪಷ್ಟ. ಶ್ರೀರಾಮಪ್ರಿಯನೂ, ಶೂದ್ರಮಹರ್ಷಿಯೂ ಆದ ವಾಲ್ಮೀಕಿಯ ಘನತೆಗೆ ಇಂತಹ ತತ್ತ್ವಪ್ರತಿಪಾದನೆ ಎಂದೂ ಮಾಸದ ಕಳಂಕವೆಂಬುದು ನಿಷ್ಪಕ್ಷಪಾತ ದೃಷ್ಟಿಯ ವಿಮರ್ಶೆಗೆ ಹೊಳೆಯದಿರಲಾರದು. ಪತಿತರನ್ನೂ ದೀನರನ್ನೂ ಶಿಷ್ಟರನ್ನೂ ಉದ್ಧರಿಸುವುದೇ ಭಗವಂತನ ಅವತಾರದ ಉದ್ದೇಶ. ತನ್ನ ಮಹಾಕಾವ್ಯದ ಶ್ರೇಷ್ಠನಾಯಕನೂ, ತನ್ನ ಆರಾಧ್ಯದೇವತೆಯೂ ಆದ ಶ್ರೀರಾಮಚಂದ್ರನ ಯಶಶ್ಚಂದ್ರಿಕೆಗೆ ಕಳಂಕವನ್ನು ಹತ್ತಿಸಲು ವಾಲ್ಮೀಕಿ ಮಹರ್ಷಿಯ ದಿವ್ಯದರ್ಶನ ಎಡೆಗೊಡಲಾರದಲ್ಲವೇ? ತಾನು ಶೂದ್ರನೆಂದು ನಿಷ್ಠುರ ಸತ್ಯವನ್ನು ನುಡಿದ ಶಂಬೂಕ ಮಹರ್ಷಿಯನ್ನು ಅವಿವೇಕಿಯಂತೆ, ವಿಧರ್ಮಿಯಂತೆ ರಾವಣಾರಿ ಕೊಲ್ಲುವುದು ಸರಿಯೇ? ಆತನ ಮಾಹಾತ್ಮ್ಯಕ್ಕೂ ದುಡುಕುತನಕ್ಕೂ ಸಾಮಂಜಸ್ಯವುಂಟೇ? ಮುಂದೆ ಭವಭೂತಿಗೆ ಈ ನ್ಯೂನತೆ ಅಸಹ್ಯವಾಗಿ ತೋಚಿ, ತನ್ನ ಉತ್ತರಾಮಚರಿತದಲ್ಲಿ ಅದನ್ನು ಸರಿಪಡಿಸಲು ಯತ್ನಿಸುತ್ತಾನೆ. ಆದರೆ ಆತನ ಲೇಖಣಿಯೂ ಕೊಂಚ ನಡುಗುತ್ತದೆ. ತಾನು ಎಸಗುತ್ತಿರುವ ಕಾರ್ಯ ‘ಅಕಾರ್ಯ’ವೆಂಬುದು ತನಗೆ ಗೊತ್ತಾಗಿ ಶ್ರೀರಾಮನು ಶೂದ್ರಮುನಿಗೆ ಮೋಕ್ಷವನ್ನು ಕರುಣಿಸುವ ಸಾಧುವಾದ ಮಾರ್ಪಾಟನ್ನು ಆ ನಾಟಕಕಾರ ತರುತ್ತಾನೆ.

ರಾಮಾಯಣ ಮಹಾಭಾರತಗಳಿಗೆ ಸರಿಗಟ್ಟುವ ಮಹಾಕಾವ್ಯಗಳು ಪ್ರಪಂಚದಲ್ಲಿ ಬೇರೆ ಇಲ್ಲವೆಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಅವು ಯುಗಯುಗಗಳನ್ನು ಕುಲಮತ ಗಳನ್ನು ಜನಾಂಗಗಳನ್ನು ಮೆಟ್ಟಿ ನಿಂತಿವೆ. ಅವು ಕೇವಲ ಒಂದು ನಾಡಿಗೆ ಅಥವಾ ಒಂದು ಜನಾಂಗಕ್ಕೆ ಸೇರಬೇಕಾದ ಸ್ವತ್ತಲ್ಲ; ಇಡೀ ಪ್ರಪಂಚದ ಅಮೂಲ್ಯ ನಿಧಿಗಳವು. ಮೂರು ಸಾವಿರ ವರ್ಷಗಳ ಮೇಲ್ಪಟ್ಟು ಅವು ಭಾರತೀಯರನ್ನು ಕೈಹಿಡಿದು ನಡೆಸಿಕೊಂಡು ಬಂದಿವೆ. ಅವರಿಗೆ ಅಮೃತತ್ವವನ್ನು ದಯೆಗೆಯ್ದಿವೆ. ಆದರೆ ಭರತಖಂಡದ ಪ್ರತಿಯೊಂದು ಮೂಲೆ ಯವರೂ ತಮ್ಮ ಕುಲದ ಕಥೆ, ತಮ್ಮ ಮತದ ವಿಷಯ, ತಮ್ಮ ಜನದ ಅನುಭವರಾಶಿ ಆ ಮಹಾಕಾವ್ಯದಲ್ಲಿ ನೆಲಸಿರಲಿ ಎಂಬ ದೃಷ್ಟಿಯಿಂದ ಕವಿ ಅಲ್ಪಕವಿ ವಿರಚಿತವಾದ ಶ್ಲೋಕಗಳನ್ನು ಪೇರಿಸಿ ಅವುಗಳ ಹೊಟ್ಟೆಯನ್ನು ಹಿಗ್ಗಲಿಸಿದರು. ಇದರಿಂದ ವ್ಯಾಸವಾಲ್ಮೀಕಿಯರ ಮೂಲದರ್ಶನಕ್ಕೆ ಅಲ್ಪಸ್ವಲ್ಪವಾದರೂ ಕುಂದುಂಟಾಯಿತೇ ಹೊರತು ಅವರ ಹಿರಿಮೆ ಅರಳಲಿಲ್ಲ. ಆಧುನಿಕ ವಿಜ್ಞಾನಯುಗದ ನೂತನದೃಷ್ಟಿಯ ವಿಚಾರದ ಕುಲುಮೆಯಲ್ಲಿ ಆ ಕಾವ್ಯಾಭರಣಗಳನ್ನು ಪುಟವಿಟ್ಟು ಮಾಸಲನ್ನು ನೀಗಿ ಕಾಂತಿಯನ್ನು ಹೆಚ್ಚಿಸಿ ಸರ್ವಮಾನ್ಯ ವಾಗುವಂತೆ ಮಾಡಬೇಕಾದುದು ಪ್ರತಿಭಾಸಂಪನ್ನರಾದ ಪಂಡಿತರ ಮತ್ತು ರಸರ್ಷಿಗಳ ಕರ್ತವ್ಯವಾಗಿದೆ.

‘ಶೂದ್ರತಪಸ್ವಿ’ಯಲ್ಲಿ ಅಂತಹ ಕಾರ್ಯ ನಡೆದಿದೆ. ಹಿರಿದಾದುದರಲ್ಲಿ ಹಿರಿತನವನ್ನು ಕಾಣುವುದೇ ಹಿರಿಯರ ಹಿರಿಮೆ. ಮೂಲ ರಾಮಾಯಣದ ‘ಶಾಸ್ತ್ರಸಂಮೂಢ’, ‘ಜಾತಿಗರ್ವಾಂಧ’ ವೃದ್ಧ ಬ್ರಾಹ್ಮಣನು ಮಹಾತ್ಮರ ಆರಾಧನೆಯಿಂದ ಪುನೀತನಾಗಿ ಸರ್ವ ಮಾನ್ಯನಾಗಿದ್ದಾನೆ. ರಾವಣಾರಿಯೂ ಸೀತಾನಾಥನೂ ಆದ ಶ್ರೀರಾಮಚಂದ್ರನ ಸಹನಶೀಲ, ಪ್ರಜಾವಾತ್ಸಲ್ಯ, ದೂರದರ್ಶಿತ್ವ, ವಿವೇಕ ಸಂಪನ್ನತೆಗಳು ಎದ್ದು ಕಾಣುತ್ತವೆ; ವಾಲ್ಮೀಕಿಯ ದರ್ಶನ ಮತ್ತೆ ಪರಿಪೂರ್ಣಗೊಳ್ಳುತ್ತದೆ. ಇಂತಹ ಗ್ರಂಥಗಳು ಪ್ರಕಟವಾದಾಗ ಜಾತಿ ಕುಲಗೋತ್ರಗಳಿಂದ ಬಗ್ಗಡವಾಗಿರುವ ಅಸಹ್ಯ ವಾತಾವರಣದಲ್ಲಿ ವಾಚಕರ ವಿವೇಕ ಮಸುಳದೆ, ಸಹನೆ ನಶಿಸದೆ, ದೃಷ್ಟಿ ಸಂಕುಚಿತವಾಗದೆ ಇದ್ದರೆ ಲೇಸು.

ನಾಟಕಕಾರರೇ ಹೇಳುವಂತೆ ‘ಈ ನಾಟಕ ಆಡುವ ದೃಷ್ಟಿಯಿಂದ ನಿಷ್ಪ್ರಯೋಜಕ  ಬಹುಮುಖೀ ತಂತ್ರಜ್ಞಾನದ ಇಂದಿನ ಯುಗದಲ್ಲಿ ಈ ನಾಟಕದ ರಂಗ ಪ್ರಯೋಗ ಕಷ್ಟವಾಗಬಾರದು. …..ಕಲ್ಪನಾ ತಪಸ್ಸಾಧ್ಯವಾದ ಮನೋರಂಗಭೂಮಿಯಲ್ಲಿಯೇ ಅದನ್ನು ದೃಷ್ಟಿಸಬೇಕು.’