ಕನ್ನಡ ಕರ್ಣಾಟಕ ಮತ್ತು ಕುವೆಂಪು ಈ ಮೂರೂ ಈಗ ಅವಿಭಾಜ್ಯವಾದ ಮತ್ತು ಅಭಿನ್ನವಾದ ವಸ್ತುಗಳಾಗಿವೆ, ತತ್ತ್ವಗಳಾಗಿವೆ, ಶಕ್ತಿಗಳಾಗಿವೆ. ಕನ್ನಡ ಮತ್ತು ಕರ್ಣಾಟಕ ಕುವೆಂಪು ಅವರನ್ನು ಪಡೆದಂತೆ ಕಡೆದಂತೆ, ಕುವೆಂಪು ಕನ್ನಡ ಮತ್ತು ಕರ್ಣಾಟಕಗಳ ಕೀರ್ತಿ ಮಹಿಮೆಗಳನ್ನು ಮುಗಿಲೆತ್ತರಕ್ಕೇರಿಸಿದ್ದಾರೆ, ಜಗದಗಲಕ್ಕೂ ಹರಡಿದ್ದಾರೆ. ಯಾವ ಪುಣ್ಯಮಯ ಸುಮುಹೂರ್ತದಲ್ಲಿ ಕುವೆಂಪು ಅವರ ಸಾಹಿತ್ಯ ಕೃಷಿ ಆಂಗ್ಲಭಾಷೆಯಿಂದ ಕನ್ನಡದ ಕಡೆಗೆ ತಿರುಗಿತೋ ಅಂದಿನಿಂದ ಕನ್ನಡ ಸಾಹಿತ್ಯದ ಬೊಕ್ಕಸ ಶ್ರೀಮಂತವಾಗುತ್ತಿದೆ, ಕನ್ನಡ ಜನತೆಯ ಜೀವನದಲ್ಲಿ ನವೀನೋತ್ಸಾಹ ನವಚೈತನ್ಯಗಳು ಚಿಮ್ಮಲಾರಂಭಿಸಿವೆ; ಪರಾತ್ಪರ ಶಕ್ತಿಯ ಜೊತೆಗೆ ಕನ್ನಡ ನುಡಿ ಮತ್ತು ನಾಡುಗಳು ಈ ಮಹಾಕವಿಯ ಅರಾಧ್ಯ ವಸ್ತುಗಳಾಗಿ ಪರಿಣಮಿಸಿವೆ. ಸುಮಾರು ಶತಮಾನಾರ್ಧ ದೀರ್ಘಾವಧಿಯ ತಪಶ್ಶಕ್ತಿಯನ್ನು ನಾಡುನುಡಿಗಳ ಶ್ರೇಯೋತ್ಕರ್ಷಕ್ಕಾಗಿ ಧಾರೆಯೆರೆದಿದ್ದಾರೆ. ಅವರು ತಮ್ಮ ಅನೇಕ ಕವನಗಳಲ್ಲಿ ಕನ್ನಡನಾಡಿನ ಹಿರಿಮೆಯನ್ನೂ ಕನ್ನಡನುಡಿಯ ಮಹಿಮೆಯನ್ನೂ ಮುಕ್ತಕಂಠದಿಂದ ಹಾಡಿದ್ದಾರೆ; ಭಾಷಣ ಸಂಭಾಷಣೆಗಳ ಮೂಲಕ ಕನ್ನಡದ ಅಪಾರ ಶಕ್ತಿಸಾಮರ್ಥ್ಯಗಳನ್ನು ಘಂಟಾಘೋಷವಾಗಿ ಸಾರಿರುವರಲ್ಲದೆ, ಕನ್ನಡದ ಬಗೆಗೆ ಯಾರಿಂದಾಗಲೀ ಅಪಾಯ ಸಂಭವಿಸಿದ್ದಾದರೆ, ಅಗೌರವದ ಅವಲಕ್ಷಣ ತೋರಿದ್ದರೆ, ಅಂಥ ಸಂದರ್ಭದಲ್ಲಿ ರುದ್ರಶಕ್ತಿಯಾಗಿ ಗುಡುಗಿದ್ದಾರೆ. ತಮ್ಮ ಅಧಿಕಾರಾವಧಿಯಲ್ಲಿ ಯಾರ ಬೆದರಿಕೆಗೂ ಸೊಪ್ಪು ಹಾಕದೆ ಕನ್ನಡನುಡಿಯ ಸ್ಥಾನಮಾನಗಳ ರಕ್ಷಣೆಗಾಗಿ, ಒಮ್ಮೊಮ್ಮೆ ಏಕಾಂಗ ವೀರರಾಗಿ ಹೋರಾಟ ನಡೆಸಿದ್ದಾರೆ. ನಿವೃತ್ತಿಯ ನಂತರ ಸ್ಥಾನಮಾನಗಳ ಉಪಾಧಿ, ಅಧಿಕಾರ ಅವಮಾನಗಳ ಉಪಾಧಿ, ಕೀರ್ತಿವಿದ್ಯೆಗಳ ಉಪಾಧಿ ಯಾವುದೂ ಬೇಡವೆಂದ ಕವಿವರರು ಕನ್ನಡದ ಉಪಾಧಿಯಿಂದ ಪಾರಾಗಿಲ್ಲ.

ಕನ್ನಡನಾಡು ಒಂದಾಗಬೇಕು, ಕನ್ನಡ ಜನ ಒಂದಾಗಿ ಬಾಳಬೇಕು ಎಂದು ಹಂಬಲಿಸಿ, ಲೇಖನ ಭಾಷಣಗಳ ಮೂಲಕ ಆ ಹಂಬಲವನ್ನು ತೋಡಿಕೊಳ್ಳುತ್ತ, ರಾಜಕಾರಣಿಗಳಿಗೂ ಯುವಕರಿಗೂ ಪ್ರಚೋದಕ ಶಕ್ತಿಯಾಗಿ ಪ್ರವಾದಿಯಾಗಿ ಕಾಣಿಸಿಕೊಳ್ಳುತ್ತಾರೆ. ಕನ್ನಡನಾಡಿನ ಕವಿ ಗುರುರಾಜ ಸಮೂಹದ ಸಾಕ್ಷಿತ್ವದಲ್ಲಿ, ಕನ್ನಡನಾಡಿನ ಪಶುಪಕ್ಷಿಗಳಿಗೆಲ್ಲ ಕೇಳಿಸುವಂತೆ, ಕನ್ನಡನಾಡಿನ ಪ್ರಾಕೃತಿಕ ಶಕ್ತಿಗಳ ಮೇಲಾಣೆಯಿಟ್ಟು, ಸತಿಪತಿಸುತರ ಮೇಲೆ ಗುರುದೇವರ ಮೇಲೆ ಕನ್ನಡ ಜನರೆಲ್ಲರ ಮೇಲೆ ಆಣೆಯಿಟ್ಟು

ದೀಕ್ಷೆಯ ತೊಡು ಇಂದೇ;
ಕಂಕಣ ಕಟ್ಟಿಂದೇ;
ಕನ್ನಡ ನಾಡೊಂದೇ;
ಇನ್ನೆಂದೂ ತಾನೊಂದೇ!

ಎಂದು ಉದ್ಘೋಷಿಸುತ್ತಾರೆ. ಮೈಮನಗಳಲ್ಲಿ, ಕನ್ನಡತನ ಹರಿದಾಡುವುದಾದರೆ ಮೆಟ್ಟುವ  ನೆಲ ಕರ್ಣಾಟಕವಾಗುತ್ತದೆ, ಭೂಭಾಗದ ಯಾವ ಪರ್ವತವನ್ನೇರಿದರೂ ಸಹ್ಯಾದ್ರಿ ಯಾಗುತ್ತದೆ, ಯಾವ ಮರ ಮುಟ್ಟಿದರೂ ಶ್ರೀಗಂಧವಾಗುತ್ತದೆ, ಯಾವ ನದಿಯ ನೀರನ್ನು ಕುಡಿದರೂ ಕಾವೇರಿ ತೀರ್ಥವಾಗುತ್ತದೆ. ಗಿಳಿಕೋಗಿಲೆ ಕಾಜಾಣಗಳ ಹಾಡಿಗೆ, ಮಲ್ಲಿಗೆ ಸಂಪಿಗೆ ಕೇದಿಗೆಗಳ ಕಂಪಿಗೆ, ಮಾವು ಹೊಂಗೆಗಳ ತಳಿರಿನ ಕಂಪಿಗೆ ರೋಮಾಂಚಗೊಳ್ಳುವ ಮನಸ್ಸುಳ್ಳ ಮನುಷ್ಯ ಎಲ್ಲಿಯೇ ಇರಲಿ, ಎಂತಾದರಿರಲಿ ಅವನ ಕನ್ನಡತನ ಸ್ಥಿರವಾಗಿರುತ್ತದೆ.

ಕನ್ನಡ ನೆಲದ ಪ್ರತಿಯೊಂದು ಕಣವೂ ಕವಿಯ ಕಣ್ಣಿಗೆ ಪವಿತ್ರವಾಗಿ ಕಂಡು ಅವನ ಮನಸ್ಸಿಗೆ ಹಬ್ಬವನ್ನು ತರುತ್ತದೆ. ಏಕೀಕೃತ ಕರ್ಣಾಟಕದ ವಿಸ್ತಾರ, ಅಲ್ಲಿಯ ವರ್ಣಶಿಲ್ಪ ಶಿಲಾಶಿಲ್ಪಗಳ ಸೌಂದರ್ಯ ವೈಭವಕ್ಕೆ ಕವಿಯ ಮನಸ್ಸು ಮಾರುಹೋಗಿದೆ.

ಕನ್ನಡ ನೆಲದ ಪ್ರತಿಯೊಂದು ಕಣವೂ ಕವಿಯ ಕಣ್ಣಿಗೆ ಪವಿತ್ರವಾಗಿ ಕಂಡು ಅವನ ಮನಸ್ಸಿಗೆ ಹಬ್ಬವನ್ನು ತರುತ್ತದೆ. ಏಕೀಕೃತ ಕರ್ಣಾಟಕದ ವಿಸ್ತಾರ, ಅಲ್ಲಿಯ ವರ್ಣಶಿಲ್ಪ ಶಿಲಾಶಿಲ್ಪಗಳ ಸೌಂದರ್ಯ ವೈಭವಕ್ಕೆ ಕವಿಯ ಮನಸ್ಸು ಮಾರುಹೋಗಿದೆ.

ಕನ್ನಡನಾಡಿನ ಮೇಲಣ ಕಟ್ಟಭಿಮಾನ ಅವರ ಭಾರತೀಯತ್ವಕ್ಕೆ ಧಕ್ಕೆ ತಂದಿಲ್ಲ. ಕನ್ನಡನಾಡಿನ ಮಹಿಮೆ ಹಿರಿಮೆಗಳನ್ನು ಕುರಿತು ಹಾಡುವಾಗಲೂ

ಜಯ್ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ಣಾಟಕ ಮಾತೆ

ಎಂದು ಸಂಬೋಧಿಸುತ್ತಾರೆ. ಭಾರತಾಂಬೆಯ ಕನ್ಯೆಯಾದ್ದರಿಂದಲೇ ಕನ್ನಡಾಂಬೆ ಧನ್ಯೆಯೆಂದು ಕವಿವರರು ಅನೇಕ ಸಾರಿ ಘೋಷಿಸಿದ್ದಾರೆ. ಅವರ ಪ್ರಾದೇಶಿಕ ಪ್ರೇಮ ಪ್ರತ್ಯೇಕವಾಗಿ ನಿಲ್ಲದೆ ದೇಶ ಪ್ರೇಮದ ಅಂಗವಾಗಿ ವಿಕಾಸಗೊಳ್ಳುತ್ತದೆ.

ರಾಜಕೀಯ ಮೂಲವಾದ ದುರುದ್ದೇಶಗಳ ಈಡೇರಿಕೆ ಕುವೆಂಪು ಅವರ ಅಖಂಡ ಕರ್ಣಾಟಕದ ಕಲ್ಪನೆಯ ಗುರಿಯಲ್ಲ. ಅಖಂಡ ಕರ್ಣಾಟಕದ ರಚನೆಯ ಉದ್ದೇಶ ಹೊಟ್ಟೆ ಬಟ್ಟೆಗಳ ಗಳಿಕೆಯಲ್ಲ, ಪಕ್ಷಜಾತಿಗಳ ಕಲಹವಲ್ಲ, ಅಹಂಕಾರ ಮೂಲವಾದ ಸ್ವಾರ್ಥ ಸಾಧನೆಯಲ್ಲ, ಪರಮಾತ್ಮ ಸಾಕ್ಷಾತ್ಕಾರ ಮತ್ತು ಆತ್ಮಸಂಸ್ಕೃತಿಯ ಉದ್ಧಾರ – ಇವೇ ಏಕೀಕೃತ ಕರ್ಣಾಟಕದ ಪರಮಗಂತವ್ಯ.

ಕುವೆಂಪು ಅವರ ಸ್ವಭಾಷಾಭಿಮಾನ ಒಮ್ಮೊಮ್ಮೆ ವ್ಯಾಮೋಹದ ಗಡಿಯನ್ನು ಮುಟ್ಟಿದರೂ ಅದು ಪರಭಾಷೆಯ ದ್ವೇಷಕ್ಕೆ ಎಡೆಗೊಡುವುದಿಲ್ಲ. ಮಾತೃ ಸ್ತನ್ಯಪಾನದೊಡನೆ ಮೈಗೂಡಿಕೊಂಡು, ತೊಟ್ಟಿಲಿನಿಂದ ಹಿಡಿದು ಶೈಶವ ಬಾಲ್ಯ ಸಮಯಗಳಲ್ಲೆಲ್ಲ ಬುದ್ದಿ ಭಾವಗಳನ್ನು ಬಲಿಯಿಸಿ, ಶ್ರೇಯಸ್ಸು ಪ್ರೇಯಸ್ಸುಗಳಿಗೆಲ್ಲ ಕಾರಣಭೂತವಾದ ಭಾಷೆಯನ್ನು ತಿರಸ್ಕಾರ ಮನೋಭಾವದಿಂದ ಕಡೆಗಣಿಸಿದಾಗಲೇ ಮನುಷ್ಯನ ಪತನ ಪ್ರಾರಂಭವಾಗುತ್ತದೆ. ಕನ್ನಡದ ಮೇಲಣ ವೈಷ್ಣವ ವ್ಯಾಮೋಹ ಇದ್ದಕ್ಕಿದ್ದಂತೆ ಜೆ.ಎಚ್. ಕಸಿನ್ಸ್ ಎಂಬ ಐರಿಷ್ ಕವಿಯ ಪ್ರಭಾವದಿಂದ ಬುಗ್ಗೆಯಾಗಿ ಚಿಮ್ಮಿ, ಅವರ ಬೌದ್ದಿಕ ಮತ್ತು ಮಾನಸಿಕ ವ್ಯಾಪಾರ ಗಳನ್ನೆಲ್ಲ ಆವರಿಸುತ್ತದೆ; ಕನ್ನಡ ಅವರ ಉಸಿರಾಗುತ್ತದೆ, ಸಂಜೀವನ ಮಂತ್ರವಾಗುತ್ತದೆ, ಜ್ಯೋತಿರ್ಪಥವಾಗುತ್ತದೆ. ‘ಕನ್ನಡ’ ಶಬ್ದೋಚ್ಚಾರಣ ಮಾತ್ರದಿಂದಲೇ ಅವರ ಎದೆ ಕುಣಿದಾಡುತ್ತದೆ, ಕಿವಿ ನಿಮಿರುತ್ತದೆ, ಕಾಮನಬಿಲ್ಲನ್ನು ಕಾಣುವ ಕವಿಯಂತೆ ಮನ ಮೈಮರೆಯುತ್ತದೆ. ಕನ್ನಡ ನುಡಿಯಲ್ಲಿ ಪ್ರಾರ್ಥನೆ ಸಲ್ಲಿಸಿದಾಗಲೇ ಹರಿಹರರು ಸುಪ್ರೀತರಾಗಿ ವರವರ್ಷವನ್ನು ಕರೆಯುತ್ತಾರೆ. ತಾಯ್ನುಡಿಗೆ ದುಡಿದು ಮಡಿದಾಗಲೇ ಇಹಪರಗಳೇಳ್ಗೆ ಸಿದ್ಧವಾಗುತ್ತದೆ.

ಇಂಡಿಯಾ ದೇಶದ ಮಾತಂತಿರಲಿ, ಪ್ರಪಂಚದ ಕೆಲವೇ ಕೆಲವು ಪ್ರಾಚೀನ ಭಾಷೆಗಳಲ್ಲಿ ಕನ್ನಡವೊಂದೆಂದು ನೆನೆದರೆ ಯಾವ ಆತ್ಮಗೌರವದ ಕನ್ನಡಿಗನಿಗಾದರೂ ಮೈಮನ ಜುಮ್ಮೆನ್ನದಿರಲಾರದು. ವಾಲ್ಮೀಕಿ, ವ್ಯಾಸ, ಭಾಸ, ಕಾಳಿದಾಸಾದಿ ಮಹಾಕವಿಗಳ ಆಶೀರ್ವಾದ ರಕ್ಷೆಯಲ್ಲಿ, ಪಂಪ ರನ್ನ ಹರಿಹರ ರಾಘವಾಂಕ ಕುಮಾರವ್ಯಾಸಾದಿಗಳ ಪ್ರತಿಭಾಶಕ್ತಿಯಿಂದ ಪೋಷಿತವಾಗಿ, ಬಸವ ಮಾಧ್ವ ವಿದ್ಯಾರಣ್ಯರ ತಪಶ್ಶಕ್ತಿಯಿಂದ ಪರಿಪುಷ್ಟವಾಗಿ, ಎರಡು ಸಾವಿರ ವರ್ಷಗಳ ಸಂಸ್ಕೃತಿ ಪರಂಪರೆಯಿಂದ ಉಜ್ಜೀವಿತವಾಗಿ, ಮಹಾವಟವೃಕ್ಷದಂತೆ ಕನ್ನಡ ಬೆಳೆದು ನಿಂತಿದೆ. ಒಮ್ಮೊಮ್ಮೆ ಈ ಮಹಾವಟವೃಕ್ಷಕ್ಕೂ ಅನ್ಯಭಾಷೆಯ ಮೂಲಕವಾಗಿ ಪೀಡೆಗಳು ಒದಗಿದ್ದುಂಟು. ಒಮ್ಮೆ ಪ್ರಾಕೃತ ಸಂಸ್ಕೃತಗಳಿಂದ, ಮತ್ತೊಮ್ಮೆ ಉರ್ದು ಪಾರ್ಸಿ ಭಾಷೆಗಳಿಂದ, ಮಗುದೊಮ್ಮೆ ಆಂಗ್ಲಭಾಷೆಯಿಂದ, ಇತ್ತೀಚೆಗೆ ಹಿಂದಿ ಭಾಷೆಯಿಂದ- ಹೀಗೆ ಕಾಲಕಾಲಕ್ಕೆ ಒಂದೊಂದು ಭಾಷೆಯಿಂದ ಕನ್ನಡದ ಬುಡಕ್ಕೆ ಕೊಡಲಿಪೆಟ್ಟು ತಗಲಿದ್ದುಂಟು. ಹೊರನುಡಿಯ ಹೊರೆಯಿಂದ ತಾಯಿನುಡಿ ಕುಸಿದು ಕುಗ್ಗಿ ಸಾಯುತ್ತಿದೆ ಯೆಂದೂ, ತಾಯ್ನುಡಿಯ ಸಾವಿನಿಂದ ಜನತೆ ಮತ್ತು ಜನಪದಗಳ ವಿನಾಶ ಖಂಡಿತವೆಂದೂ ಕುವೆಂಪು ಅವರು ಪ್ರವಾದಿಯಂತೆ ಸಾರಿ ಹೇಳಿದ್ದಾರೆ :

ರಾಜನುಡಿಯೆಂದೊಂದು, ರಾಷ್ಟ್ರನುಡಿಯೆಂದೊಂದು
ದೇವನುಡಿಯೆಂದೊಂದು ಹತ್ತಿ ಜಗ್ಗಿ
ನಿರಿನಿಟಿಲು ನಿಟಿಲೆಂದು ಮುದಿಮೂಳೆ ಮುರಿಯುತಿದೆ
ಕನ್ನಡಮ್ಮನ ಬೆನ್ನು ಬಳುಕಿ ಬಗ್ಗಿ!

“ಇರುವಲ್ಪ ಶಕ್ತಿಯನು ಇರುವಲ್ಪ ದ್ರವ್ಯವನು ಪರಭಾಷೆ ಮೋಹಕ್ಕೆ ಚೆಲ್ಲಬೇಡಿ”ರೆಂದು ಕನ್ನಡ ಜನಕ್ಕೆ ಎಚ್ಚರಿಕೆ ನೀಡಿದ್ದಾರೆ. ಉತ್ತರದ ಕಾಶಿಯಲ್ಲಿ ಕತ್ತೆ ಮಿಂದೈತಂದರೆ ದಕ್ಷಿಣ ದೇಶದಲ್ಲಿ ಕುದುರೆಯಂತೆ ಮಾನ್ಯವಾಗದೆಂದು ಘೋಷಿಸಿದ್ದಾರೆ. ಪಂಪ ರನ್ನರ ಬಸವ ಹರಿಹರರ ನಾರಣಪ್ಪ ಲಕ್ಷ್ಮೀಶರ ಕನ್ನಡ ಅಳುಕದೆ ಅಳಿಯದೆ ಎಂದೆಂದಿಗೂ ಉಳಿಯುತ್ತ ದೆಂದು ಈ ಕವಿಋಷಿ ಅಸ್ಖಲಿತವಾಣಿಯಿಂದ ಭರವಸೆ ನೀಡಿದ್ದಾರೆ.

ಕುವೆಂಪು ಅವರು ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ವಿಶ್ವವಿದ್ಯಾನಿಲಯದ ಅತ್ಯುಚ್ಚ ಅಧಿಕಾರಿಯಾಗಿ, ವಿದ್ಯಾತಜ್ಞರಾಗಿ, ಇಡೀ ಕನ್ನಡನಾಡಿನ ಜನರ ಪ್ರತಿನಿಧಿಯಾಗಿ, ವಿದ್ಯಾರ್ಥಿ ವೃಂದದ ಮಾನಸಿಕ ಬೌದ್ದಿಕಶಕ್ತಿ ಸಾಮರ್ಥ್ಯಗಳನ್ನರಿಯಬಲ್ಲ ಚಾಣಾಕ್ಷರಾಗಿ ಪ್ರಾದೇಶಿಕ ಭಾಷೆಯೇ ಶಿಕ್ಷಣ ಮಾಧ್ಯಮವಾಗಬೇಕೆಂದು ಅಧಿಕಾರ ಸ್ಥಾನದಿಂದ ಘೋಷಿಸಿದ್ದಾರೆ, ಸಭೆಗೋಷ್ಠಿಗಳಲ್ಲಿ ವಾದಿಸಿದ್ದಾರೆ, ಶಿಕ್ಷಣ ತಜ್ಞರ ಆಯೋಗ ನಿಯೋಗಗಳ ಮುಂದೆ ಹೇಳಿಕೆಗಳನ್ನು ನೀಡಿದ್ದಾರೆ; ಅವರ ಈ ನಿಲುವಿಗೆ ಕೇವಲ ಅಂಧ ಭಾಷಾಭಿಮಾನ ಕಾರಣವಲ್ಲ, ದೇಶಕಲ್ಯಾಣಾಕಾಂಕ್ಷಿಯಾದ ಶ್ರೀಸಾಮಾನ್ಯ ಕ್ಷೇಮಕಾತರವಾದ ಕವಿಚೇತನದ ಆಂತರಿಕ ಪ್ರೇರಣೆಯೇ ಕಾರಣ. ಇಂಗ್ಲಿಷಿನ ಮರುಭೂಮಿಯಲ್ಲಿ ಭಾರತೀಯರ ಬುದ್ದಿ ಪ್ರತಿಭಾಶಕ್ತಿಗಳು ಇಂಗಿ ಹೋಗುತ್ತಿವೆಯೆಂದು, ಚೀಣೀಯರನೆ ಮೀರಿ ಇಂಗ್ಲಿಷಿನ ಮಾರಿ ಕಂದರನು ಹಿಂಡುತ್ತಿದೆಯೆಂದು, ಕನ್ನಡದ ಕ್ರಿಸ್ತ ಇಂಗ್ಲಿಷಿನ ಶಿಲುಬೆಯಲ್ಲಿ ಸಿಲುಕಿ ಬಾಯ್ ಬಿಡುತ್ತಿರುವನೆಂದು, ಇಂಗ್ಲಿಷಿನ ಕಲ್ಗಾಣಕ್ಕೆ ಸಿಕ್ಕಿದ ಕನ್ನಡದ ಚೇತನ ಹಿಪ್ಪೆಯಾಗುತ್ತಿದೆ ಯೆಂದು, ಇಂಗ್ಲಿಷಿನ ಚಪ್ಪಡಿಯಡಿಯ ಹಸುಳೆ ಚೀತ್ಕಾರಕ್ಕೆ ಕನಿಕರಿಸದ ಮಾನವ ದಾನವನೆಂದು ತೆಗೆದಿರುವ ಅವರ ಉದ್ಗಾರದಲ್ಲಿ ಅನುಕಂಪೆಯಿದೆ, ಮರುಕವಿದೆ, ಸಂಕಟವಿದೆ, ರೋಷವಿದೆ, ಲೋಕಕಲ್ಯಾಣಾಕಾಂಕ್ಷೆಯಿದೆ. ಇಂಗ್ಲಿಷ್ ಭಾಷೆಯ ಪೂತನಿಯಿಂದ ಭಾರತಿಯ ಮಕ್ಕಳನ್ನು ಸಂರಕ್ಷಿಸುವಂತೆ ಗೋವಿಂದನಿಗೆ ಸಲ್ಲಿಸಿರುವ ಪ್ರಾರ್ಥನೆಯಲ್ಲಿ ಕನ್ನಡನಾಡಿನ ಹಸುಳೆಗಳ ಆರ್ತನಾದ ಪ್ರತಿಧ್ವನಿತವಾಗಿದೆ. ಕುವೆಂಪು ಅವರಿಗೆ ಯಾವ ಭಾಷೆಯ ಮೇಲೆಯೂ ದ್ವೇಷವಿಲ್ಲ, ರೋಷವಿಲ್ಲ. “ಬಲಾತ್ಕಾರಕ್ಕಾಗಿ ಮಾತ್ರವೇ ಹೊರತು  ಈ ರೋಷ ಭಾಷೆಗಾಗಿಯೇ ನಮ್ಮ ದ್ವೇಷವೇನಿಲ್ಲ” ಎಂದು ಹೇಳುತ್ತಾರೆ.

ಅನುಗಾಲವೂ ಕುವೆಂಪು ಅವರಿಗಿರುವ ಒಂದೇ ಒಂದು ಚಿಂತೆಯೆಂದರೆ ಕನ್ನಡದ ಚಿಂತೆ.  ಯಾವ ವೇದಿಕೆಯಿಂದ ಭಾಷಣ ಮಾಡಿದರೂ ಕನ್ನಡದ ಪ್ರಸ್ತಾಪ ಬಂದೇ ಬರುತ್ತದೆ. ಯಾರು ಅವರನ್ನು ಭೇಟಿ ಮಾಡಿದರೂ, ಬೇಸರವಿಲ್ಲದೆ ಶಿಕ್ಷಣ ಮಾಧ್ಯಮದ ಬಗ್ಗೆ ಭಾಷಣ ಮಾಡಿ, ವಾದಮಾಡಿ, ಎಂಥಾ ವಿರೋಧಿಯನ್ನಾದರೂ ಪರಿವರ್ತನಗೊಳಿಸಿ ಬಂದ ಬಂದವರಿಗೆಲ್ಲ ಕನ್ನಡದ ಮಂತ್ರವನ್ನುಪದೇಶಿಸಿ, ಕನ್ನಡದ ದೀಕ್ಷೆಯನ್ನು ಕೊಟ್ಟು ಕಳಿಸುತ್ತಾರೆ. ಕನ್ನಡದ ಬಗ್ಗೆ ಇಷ್ಟು ಚಿಂತೆ ಅಂಟಿಸಿಕೊಂಡ ಬೇರೊಬ್ಬ ವ್ಯಕ್ತಿ ಹಿಂದೆ ಇದ್ದಿರಲಾರರು, ಈಗಂತೂ ಇಲ್ಲ. ಈ ಚಿಂತೆಯ ಹಿಂದೆ ಲೋಕಕಲ್ಯಾಣಾಸಕ್ತವಾದ ದೃಷ್ಟಿಯಿದೆಯೆಂಬುದನ್ನು ಯಾರೂ ಮರೆಯಲಾಗದು.

ಕುವೆಂಪು ಅವರ ಸಾಹಿತ್ಯ ಸೇವೆಯನ್ನು ಗಮನಿಸಿ, ಅವರಿಗೆ ಅರವತ್ತು ವರ್ಷ ತುಂಬಿದ ಸಂದರ್ಭದಲ್ಲಿ, ಮೈಸೂರು ಸರ್ಕಾರ ಅವರಿಗೆ ರಾಷ್ಟ್ರಕವಿ ಪ್ರಶಸ್ತಿಯನ್ನು ನೀಡಿ ಗೌರವಿಸುವು ದೆಂದು ನಿರ್ಧರಿಸಿತು. ಮಾನ್ಯ ಮುಖ್ಯಮಂತ್ರಿಗಳಾದ ಶ್ರೀಮಾನ್ ನಿಜಲಿಂಗಪ್ಪನವರು ಸರ್ಕಾರದ ನಿರ್ಧಾರವನ್ನು ಪತ್ರಮುಖೇನ ತಿಳಿಸಿದ ಸಂದರ್ಭದಲ್ಲಿ, ಕವಿವರರು ಕೃತಜ್ಞತಾ ಪೂರ್ವಕವಾಗಿ ಪ್ರಶಸ್ತಿಯನ್ನಂಗೀಕರಿಸುವುದಾಗಿ ಪ್ರತ್ಯುತ್ತರ ನೀಡುತ್ತ ಈ ರೀತಿ ಬರೆದರು : “ಇಷ್ಟಾದರೂ ಪ್ರೌಢ ಮತ್ತು ವಿಶ್ವವಿದ್ಯಾನಿಲಯಗಳ ಶಿಕ್ಷಣ ಕ್ರಮದಲ್ಲಿ ಕನ್ನಡಕ್ಕೆ ದೊರೆಯಬೇಕಾದ ಮನ್ನಣೆ ದೊರೆತಿಲ್ಲವೆಂದು ತಿಳಿಸಲು ತುಂಬ ವಿಷಾದವಾಗುತ್ತದೆ. ಕನ್ನಡ ಮಾಧ್ಯಮ ತೃಪ್ತಿಕರವಾದ ರೀತಿಯಲ್ಲಿ ಕಾರ್ಯರೂಪಕ್ಕೆ ಬಂದಿಲ್ಲ. ಕನ್ನಡ ಭಾಷಾ ಸಾಹಿತ್ಯಗಳ ವ್ಯಾಸಂಗಕ್ಕೆ ಸಾಕಷ್ಟು ಪ್ರೋದೊರೆತಿಲ್ಲ. ಶಿಕ್ಷಣ ಕ್ರಮದಲ್ಲಿ ಕನ್ನಡದ ಸ್ಥಾನಮಾನಗಳಿಗೆ ಸಾಕಷ್ಟು ರಕ್ಷಣೆ ದೊರೆತಾಗ, ರಾಷ್ಟ್ರಕವಿ ಪ್ರಶಸ್ತಿ ದೊರೆತಾಗ ಉಂಟಾದ ಸಂತೋಷಕ್ಕಿಂತ ನೂರ್ಮಡಿಯಾದ ಸಂತೋಷ ನನಗಾಗುತ್ತದೆಂದು ಹೇಳಿದರೆ ನೀವು ಖಂಡಿತ ನಂಬುವಿರೆಂದು ತಿಳಿದಿದ್ದೇನೆ. ಕವಿಯ ಹಂಬಲವನ್ನು ಪೂರೈಸಿದರೆ ಕವಿಗೆ ನಿಜವಾದ ಮನ್ನಣೆ ದೊರೆತಂತಾ ಗುತ್ತದೆ. ಕವಿಗೆ ಅದಕ್ಕಿಂತ ಬೇರೆ ಭಾಗ್ಯ ಬೇಕಿಲ್ಲ.” ಕುವೆಂಪು ಅವರಲ್ಲಿ ಗೌರವವಿಟ್ಟಿರುವ ಜನರೆಲ್ಲ ಅವರ ಈ ವಾಕ್ಯಗಳನ್ನು ಗಮನಿಸಬೇಕು. ಅವರಿಗೆ ಯಾವ ರೀತಿ ಗೌರವ ತೋರಿಸಬೇಕೆನ್ನುವುದನ್ನರಿಯಬೇಕು. ಹೂವಿನ ಹಾರಗಳ ಹೊರೆಯಿಂದ ಅವರಿಗೆ ತೃಪ್ತಿಯಾಗುವುದಿಲ್ಲ, ಧನಕನಕಾದಿಗಳ ಅಭಿಷೇಕದಿಂದ ಅವರಿಗೆ ಸಂತುಷ್ಟಿಯೊದಗುವುದಿಲ್ಲ. ಕನ್ನಡ ವಿದ್ಯಾಭ್ಯಾಸದ ಎಲ್ಲ ಹಂತಗಳಲ್ಲಿಯೂ ಮಾಧ್ಯಮವಾದಂದು ಅವರಿಗೆ ಸಂತೋಷ ವಾಗುತ್ತದೆ. ಕನ್ನಡದ ಉಪಾಧಿಯಿಂದ ಅವರು ಪಾರಾದಂದು, ಅವರ ಸಾಹಿತ್ಯ ಸೃಷ್ಟಿ ಅವಿಚ್ಛಿನ್ನವಾಗಿ ಅನಿರ್ಬಾಧಿತವಾಗಿ ಸಾಗುತ್ತದೆ. ಕವಿಯ ಹಂಬಲವನ್ನು ಪೂರೈಸಿ, ಕನ್ನಡದ ಚಿಂತೆಯಿಂದ ಅವರನ್ನು ಬಿಡುಗಡೆ ಮಾಡಿ, ಅವರ ಕಾವ್ಯ ತಪಸ್ಸಿಗೆ ಭಂಗವುಂಟಾಗದಂತೆ ವಾತಾವರಣವನ್ನು ನಿರ್ಮಿಸಿ, ಅವರ ತಪಸ್ಸಿನ ಫಲಕ್ಕೆ ಉತ್ತರಾಧಿಕಾರಿಗಳಾಗುವ ಪುಣ್ಯ ಕನ್ನಡ ಜನತೆಗಿದೆಯೆ?

ಕನ್ನಡಕೆ ಹೋರಾಡು
ಕನ್ನಡದ ಕಂದಾ;
ಕನ್ನಡವ ಕಾಪಾಡು
ನನ್ನ ಆನಂದಾ!
ಜೋಗುಳದ ಹರಕೆಯಿದು
ಮರೆಯದಿರು, ಚಿನ್ನಾ
ಮರೆತೆಯಾದರೆ, ಅಯ್ಯ
ಮರೆತಂತೆ ನನ್ನ!

* * *