ಆಧುನಿಕ ಕನ್ನಡ ಸಾಹಿತ್ಯವಾಹಿನಿಯ ಶ್ರೇಷ್ಠತೆ ಚಿರಂತನತೆ ವಿಶಾಲತೆಗಳ ವಿಷಯ ವಾಗಿ ಇನ್ನೂ ಅಲ್ಲಿ ಇಲ್ಲಿ ಹಲವಾರು ಸಂದೇಹವಾದಿಗಳಿದ್ದಾರೆ. ಪಂಪ ರನ್ನ ಜನ್ನರ ಅಸಾಧಾರಣ ಪ್ರತಿಭೆಯಾಗಲೀ ಹರಿಹರ ರಾಘವರ ಕನ್ನಡತನವಾಗಲೀ ನಾರಣಪ್ಪ ಲಕ್ಷ್ಮೀಶರ ಕಲ್ಪನಾವೇಶಗಳಾಗಲೀ ಷಡಕ್ಷರಿಯ ಪಾಂಡಿತ್ಯವಾಗಲೀ ನೂತನ ಕಾವ್ಯಗಳಲ್ಲಿ ದುರ್ಲಭ ವೆಂದೂ, ಮೊದಲು ಗೀರ್ವಾಣ ಭಾಷಾಸಾಹಿತ್ಯಗಳ ಅಂಧಾನುಕರಣ, ಅಂತ್ಯದಲ್ಲಿ ಆಂಗ್ಲ ಸಾಹಿತ್ಯ ಪ್ರಚೋದನ ಪರಿಪೋಷಣ – ಹೀಗೆ ಅಭಿವೃದ್ದಿಗೊಂಡಿರುವ ಕನ್ನಡ ಸಾಹಿತ್ಯಕ್ಕೆಲ್ಲಿಯ ವ್ಯಕ್ತಿತ್ವ ವೈಶಿಷ್ಟ್ಯಗಳು ಎಂದೂ ಹೇಳುವವರಿದ್ದಾರೆ. ನಿನ್ನೆ ನಟ್ಟಿರುಳಿನವರೆಗೆ ರಾಜಭಾಷೆ ಯಾಗಿದ್ದು ಅಂತರರಾಷ್ಟ್ರೀಯ ಗಣ್ಯತೆಯನ್ನು ಪಡೆದಿರುವ ಆಂಗ್ಲ ಭಾಷೆಯ ವಿಶ್ವ ವಿಶಾಲತೆಯಾಗಲೀ ದೇವಭಾಷೆಯ ಪಾವನತೆಯಾಗಲೀ ರಾಷ್ಟ್ರಭಾಷೆಯ ತೇಜೋ ಸಂಪತ್ತಾಗಲೀ ಕನ್ನಡ ಸಾಹಿತ್ಯಕ್ಕೆ ಹೊರಗೆನ್ನುವ ಮೌಢ್ಯಸಂಪನ್ನರು ಈಗಲೂ ಇಲ್ಲದೆ ಇಲ್ಲ. ಕನ್ನಡದಲ್ಲಿ ಗ್ರಂಥರಾಶಿಯೆಷ್ಟಿದೆ, ಇದ್ದರೂ ಪ್ರಪಂಚದ ಅತ್ಯುತ್ತಮ ಕೃತಿಗಳಿಗೆ ಸರಿಸಾಟಿಯಾಗಿ ನಿಲ್ಲತಕ್ಕ ಉದ್ದಾಮ ಕೃತಿಗಳಿವೆಯೇ, ಆಧುನಿಕ ನಾಗರಿಕ ಮಾನವನ ಆಶೆ ಆಕಾಂಕ್ಷೆಗಳನ್ನೂ ಸರ್ವವ್ಯವಹಾರಗಳನ್ನೂ ವ್ಯಕ್ತಪಡಿಸಿ, ಪ್ರತಿನಿತ್ಯ ಉದ್ಭವಿಸುತ್ತಿರುವ ನೂತನ ಸಮಸ್ಯೆಗಳನ್ನು ಬಿಡಿಸುವ ಶಕ್ತಿ ಕನ್ನಡಕ್ಕಿದೆಯೇ, ಅದು ವಿಜ್ಞಾನದ ಭಾಷೆಯಾಗ ಬಲ್ಲುದೇ ಎನ್ನುವ ಜನ ಇನ್ನೂ ಇದ್ದಾರೆ. ಭಾಷಾಸಾಹಿತ್ಯಗಳು ನಿರಾಕಾರವಾದುವು; ಅವುಗಳಿಗೆ ಸಾಕಾರತೆ ಜನತೆಯಿಂದ ಲಭಿಸುತ್ತದೆ. ಆದುದರಿಂದ ಭಾಷಾಸಾಹಿತ್ಯಗಳ ಪ್ರಗತಿ ದುರ್ಗತಿಗಳು ಅಬಲತೆ ಸಬಲತೆಗಳು ಜನತೆಯನ್ನವಲಂಬಿಸಿವೆ. ಪ್ರತಿಭಾಸಂಪನ್ನನಾದ ಶಿಲ್ಪಿಯ ಅನುಗ್ರಹಕ್ಕೆ ಪಾತ್ರವಾದ ಮೊರಡುಗಲ್ಲು ಶಿಲಾಬಾಲಿಕೆಯಾಗಬಹುದು, ಗೊಮ್ಮಟನಾಗಬಹುದು, ಒಡ್ಡನ ಒರಟುತನಕ್ಕೆ ಪಕ್ಕಾದ ಬೆಣ್ಣೆಗಲ್ಲು ಮೆಟ್ಟಲುಗಲ್ಲಿಗೂ ಅನರ್ಹವಾಗಬಹುದು. ಹಾಗೆಯೇ ಜನತೆ ನಿರ್ವೀರ್ಯವಾಗಿದ್ದರೆ ಭಾಷೆ ನಿರ್ಜೀವವಾಗಿರುತ್ತದೆ, ಜನತೆ ತೇಜೋಮಯವಾಗಿದ್ದರೆ ಸಾಹಿತ್ಯ ತೇಜೋಮಯ ವಾಗಿರುತ್ತದೆ. ಕವಿ ವಾತಾವರಣ ಸನ್ನಿವೇಶಗಳ ಶಿಶು. ಆದುದರಿಂದ ವಸ್ತು ಪರಿಜ್ಞಾನವಿಲ್ಲದ ಸ್ವಾವಹೇಳನ ಆತ್ಮಹಾನಿಗೂ ಸಂಸ್ಕೃತಿ ವಿನಾಶಕ್ಕೂ ಮೂಲ. ಭಾಷಾ ಸಾಹಿತ್ಯ ಕ್ಷೇತ್ರದಲ್ಲಿ ಸ್ವದೇಶೀ ಪಂಥ ಸಲ್ಲದು, ಅಸ್ಪೃಶ್ಯತೆ ನಿಲ್ಲದು. ಕನ್ನಡ ಸಾಹಿತ್ಯ ಸಂಸ್ಕೃತಾಂಗ್ಲ ಸಾಹಿತ್ಯವಾಹಿನಿಗಳಿಂದ ಪರಿಪೋಷಿತವಾಗಿರುವುದು ನಿಜ, ಆದರೂ ಕನ್ನಡದ ಕನ್ನಡತನ ಮರೆಯಾಗಿಲ್ಲ. ಆಧುನಿಕ ಕನ್ನಡ ಸಾಹಿತ್ಯ ನಾನಾ ಮುಖವಾಗಿಯೂ ವಿಶಾಲವಾಗಿಯೂ ಬೃಹತ್ತಾಗಿಯೂ ಬೆಳೆಯುತ್ತಿದೆ. ಅಲ್ಲಿ ಮೂಡುತ್ತಿರುವ ಕಾವ್ಯ ಮಹಾಕಾವ್ಯ, ಕಥೆ ಕಾದಂಬರಿ,  ಲಕ್ಷ್ಮಣಗ್ರಂಥ ಶಾಸ್ತ್ರಗ್ರಂಥಗಳನ್ನು ನೋಡಿದಲ್ಲಿ ಆಧುನಿಕ ಕನ್ನಡ ಸಾಹಿತ್ಯದ ಚಿರಸ್ಥಾಯಿತ್ವದಲ್ಲಿ ನಂಬಿಕೆ ಕೆಡಬೇಕಾಗಿಲ್ಲ.

ಸಹ್ಯಾದ್ರಿಯ ನಿಮ್ನೋನ್ನತ ಕಂದರ ಶೈಲಗಳಲ್ಲಿ ವಿವಿಧ ತರುಗುಲ್ಮ ಲತಾನಿಬಿಡವೂ, ನಾನಾ ಮೃಗಪಕ್ಷಿಭರಿತವೂ ಆದ ಆ ಹೆಗ್ಗಾಡಿನಲ್ಲಿ ಸ್ವರ್ಗ ಸೌಂದರ್ಯದ ತಾಣತಾಣಗಳಲ್ಲಿ ನಲಿಯುವ ‘ನವಿಲಾ’ಗಿ ಆಬಾಲವೃದ್ಧರ ಮನಸ್ಸನ್ನು ಸೂರೆಗೊಳ್ಳುವ ‘ಕೊಳಲಾ’ಗಿ, ದಿವ್ಯಪ್ರೇಮವನ್ನು ಚಿಮ್ಮಿದ ‘ಪ್ರೇಮಕಾಶ್ಮೀರ’ವಾಗಿ, ಆತ್ಮೋನ್ನತಿ ಪಥವನ್ನು ಸಮೆದ ‘ಅಗ್ನಿಹಂಸ’ವಾಗಿ ನಾನಾ ರೂಪರೇಖೆಗಳಿಂದ ಮೈವೆತ್ತು ವಿವಿಧ ಸಂಸ್ಕಾರಾಭಿರುಚಿಯುಳ್ಳ ರಸಿಕರಿಗೆ ಮೆಚ್ಚಾಗಿ ನರ್ತಿಸಿದ ಶ್ರೀ ಪುಟ್ಟಪ್ಪನವರ ಕವಿತಾ ಶ್ರೀ ‘ಕೋಗಿಲೆ ಮತ್ತು ಸೋವಿಯಟ್ ರಷ್ಯಾ’ದಲ್ಲಿ ಸಾಮಾಜಿಕ ಮಾಲಿನ್ಯ ದೌರ್ಬಲ್ಯಗಳನ್ನು ತೊಳೆಯುವ ಪತಿತಪಾವನೆ ಭಾಗೀರಥಿಯಾಗಿದ್ದಾಳೆ. ಅಲ್ಲಿಯ ಕಲ್ಪನಾ ಸುಂದರಿ ಇಲ್ಲಿ ಸತ್ಯದೇವತೆ ಯಾಗಿದ್ದಾಳೆ. ಅಲ್ಲಿ ಗೌರಿಯಾಗಿದ್ದವಳು ಇಲ್ಲಿ ದುರ್ಗಿಯಾಗಿದ್ದಾಳೆ. ಮಲೆನಾಡಿನ ಕವಿಶೈಲ ನವಿಲುಕಲ್ಲುಗಳ ಸಾನ್ನಿಧ್ಯದಲ್ಲಿ ಕಾವ್ರೋಪ್ರತಿಭೆ ಆವೇಶವಾಜಿಯ ಬೆನ್ನಡರಿದಾಗ ರಸರ್ಷಿ ವಿಶ್ವದಲ್ಲಿ ಐಕ್ಯವಾಗುತ್ತಾನೆ; ಸೃಷ್ಟಿ ಸ್ಥಿತಿಲಯಗಳಿಂದ ದೂರನಾಗುತ್ತಾನೆ; “ನಿಯತಿಕೃತ ನಿಯಮರಹಿತ”ನಾಗುತ್ತಾನೆ. ಕವಿಯ ದೇಹ ವೇಣುಮಾತ್ರವಾಗಿ, ವಿಶ್ವವಾಣಿ ತನ್ಮೂಲಕ ಧ್ವನಿಗೈಯುತ್ತದೆ. ವಸಂತಕಾಲದ ಕೋಗಿಲೆ, ಉದ್ಯಾನದ ಗಿಳಿವಿಂಡು, ಅಂತಃಪುರದ ವಿಲಾಸಿನಿಯರ ವರ್ಣನೆಯಲ್ಲಿಯೇ ಆತ ತೃಪ್ತನಾಗುವುದಿಲ್ಲ. ಸಮಕಾಲೀನ ಜನತೆಯ ಹೃದಯಾಂತರಾಳವನ್ನು ಹೊಕ್ಕು ಅಲ್ಲಿ ಗುಪ್ತವಾಗಿರುವ ಅನಂತ ಭಾವನೆಗಳನ್ನು ಹೊರಗೆಡಹಿ, ಮಾನವನ ದೈನಂದಿನ ಸಕಲ ವ್ಯವಹಾರಗಳನ್ನು ಸೂಕ್ಷ್ಮದೃಷ್ಟಿಯಿಂದ ಈಕ್ಷಿಸಿ, ಮಾನವಕುಲದ ಕಲ್ಯಾಣಕ್ಕೆ ನಂಜುಬಡಿಯದಂತೆ ತಡೆಯುವ ರಕ್ಷಾಯಂತ್ರ ವರಕವಿಯ ಹಸ್ತಸಿದ್ಧವಾಗಿದೆ.

ನಲವತ್ತುಮೂರು ಕವನಗಳಿರುವ ಈ ಸಂಗ್ರಹದಲ್ಲಿ ಐದಾರನ್ನು ಬಿಟ್ಟುಳಿದುವೆಲ್ಲ ಪ್ರಚಲಿತ ರಾಜಕೀಯ ಸಾಮಾಜಿಕ ಧಾರ್ಮಿಕ ಮತ್ತು ಆರ್ಥಿಕ ಪರಿಸ್ಥಿತಿಗೆ ಸಂಬಂಧಪಟ್ಟುವು. ಸೋವಿಯಟ್ ಸಮತಾವಾದದ ಲಕ್ಷಣವಿಲಕ್ಷಣಗಳು ಅನುಕೂಲ ಪ್ರತಿಕೂಲಗಳು ಈ ಸ್ವಪ್ನದರ್ಶನದಲ್ಲಿ ನಿರೂಪಿತವಾಗಿವೆ. ಸಮತಾವಾದದ ರಷ್ಯಾದಲ್ಲಿ ‘ಮೇಲು ಕೀಳು’ಗಳಿಲ್ಲ; “ಎಲ್ಲವರ ಸುಖಕಾಗಿ ಗೆಯ್ಯಬೇಕೆಲ್ಲ”; ಆದರೇನು, “ಸುಖಿಗಳೆನಗೊಬ್ಬರೂ ಕಾಣಲಿಲ್ಲ ಅಲ್ಲಿ.” “ಯಂತ್ರನಾಗರಿಕತೆಯ ವಿಜ್ಞಾನಬುದ್ದಿ, ತಾನಲ್ಲಿ ಪಡೆದಿತ್ತು ಪರಮಸಿದ್ದಿ;” ಆದರೂ ಪ್ರತಿಯೊಬ್ಬ ಮಾನವನು ಯಂತ್ರದಂತಿದ್ದಾನೆ. ಪ್ರಕೃತಿದತ್ತವಾಗಿರುವ ಸಕಲ ಸಂಪತ್ತುಗಳ ಸರ್ವಸ್ವಾಮ್ಯ ಸರ್ಕಾರಕ್ಕೆ ಸಂಬಂಧಪಟ್ಟುದು; ಮಾನವನ ಅತ್ಯಮೂಲ್ಯ ವ್ಯಕ್ತಿತ್ವ ವೈಶಿಷ್ಟ್ಯ ವಿಕಾಸಕ್ಕೆ ಅವಕಾಶವಿಲ್ಲ. “ಬಾಳೆಂಬುದೊಂದು ನಿಷ್ಕರುಣಮಿಲ್ಲು; ಸರ್ವಪ್ರಾಣಿಗಳದಕ್ಕೆ ಬೀಸುವಾನೆಲ್ಲು.” ಜಾರ್ ಯುಗದ ಶ್ರೀಮಂತರನ್ನು ಕೋಗಿಲೆಗೂ, ರೈತರನ್ನು ಕಾಗೆಗೂ ಹೋಲಿಸಿರುವ ರೀತಿ ಮನೋಜ್ಞವಾಗಿದೆ.

ಸಮತಾವಾದದಲ್ಲಿ ಹಲ ಕೆಲವು ನ್ಯೂನಾತಿರೇಕಗಳಿದ್ದರೂ ಅದು ಸಾಮ್ರಾಜ್ಯಶಾಹಿಗಿಂತ ಸಾವಿರ ಪಾಲು ಮೇಲು. “ಸೋಮಾರಿಗಳಿಗೆ ಸುಖಿಗಳಿಗೆ ರಸಕರಿಗಲ್ತೆ ಸಾಮ್ರಾಜ್ಯವೆಂಬುದದು ಕಾಮಧೇನು?” ಹಗಲಿರುಳು ದುಡಿದು ನೆತ್ತರು ಬಸಿದರೂ ಹಿಡಿಗೂಳು ಸಿಗದ ರೈತರಿಗೆ ಮತ್ತು ಕೂಲಿಕಾರರಿಗೆ ಜಿಗಣೆಗಳೇ ಬಂಡವಾಳಗಾರರೆಲ್ಲ; ಕರಿಯರಾಗಲಿ ಬಿಳಿಯರಾಗಲಿ, ಮೊಗಲರಾಗಲಿ, ಆಂಗ್ಲೇಯರಾಗಲಿ ಸಿಡಿಮದ್ದು ಗುಂಡುಗಳ ಬಲದಿಂದ, ದರ್ಪಾಹಂಕಾರ ಗಳಿಂದ ಕೊಬ್ಬಿ ಮೆರೆಯುತ್ತಿರುವವರೆಲ್ಲ ರೈತನ ದೃಷ್ಟಿಯಿಂದ ತ್ಯಾಜ್ಯರೇ ಸರಿ.

ಯಂತ್ರನಾಗರಿಕತೆಯಲ್ಲಿ ಕವಿಗೆ ತಿರಸ್ಕಾರವಿಲ್ಲ. ಮಾನವನ ಧೀಶಕ್ತಿ ಆಧುನಿಕ ವಿಜ್ಞಾನದಲ್ಲಿ, ಅದರಿಂದ ಲಬ್ಧವಾಗಿರುವ ಯಂತ್ರೋಪಕರಣಗಳ ಬಳಕೆಯಲ್ಲಿ ಪರಮಾವಧಿಯನ್ನು ಮುಟ್ಟಿದೆ. ತನ್ನ ಮೇಧಾಶಕ್ತಿಯಿಂದ ನಿಯಮಬದ್ಧವಾದ ಪ್ರಕೃತಿಯನ್ನೇ ಗೆದ್ದು ದಾಸ್ಯವನ್ನು ನೀಗಿ ಅನಾಗರಿಕ ಮಾನವ ಲೋಕೇಶನಾದನು. ಸಿಡಿಲು ಮಿಂಚು, ಬೆಟ್ಟ ಹೊಳೆ, ಗಾಳಿ ಮಳೆಗಳಿಗೆ ಹೆದರಿ ದೈನ್ಯದಿಂದ ಕೈಯೆತ್ತಿ ಮುಗಿದು ಬಾಗಿದ ಆ ಮನುಜನ ಮಹಾಮಂತ್ರಕ್ಕೆ ಭೋರ್ಗರೆವ ವಾಹಿನಿ ತಾಟಸ್ಥ್ಯ ಭಾವವನ್ನು ತಾಳಿ, ಆತನ ಅಪ್ಪಣೆಗಾಗಿ ಕಾದು ನಿಂತಿದೆ; ಸಹ್ಯಾದ್ರಿ ನಿದ್ದೆಯೆಂದೆದ್ದು ಸೇವಾವೃತ್ತಿಯನ್ನು ತಬ್ಬಿದೆ.

ನಿಷ್ಕಳಂಕ ಸ್ವದೇಶಾಭಿಮಾನಿಯೂ, ಸ್ವಾತಂತ್ರ್ಯಾಕಾಂಕ್ಷಿಯೂ ಆದ ಕವಿಯ ದೃಷ್ಟಿಯಲ್ಲಿ ಸನಾತನ ಭರತಖಂಡದ ಅವನತಿಗೆ ಭಾರತೀಯರ ಕ್ಲೈಬ್ಯ ಮೌಢ್ಯಗಳೇ ಕಾರಣ. ಭಾರತೀಯರ ಆತ್ಮಪ್ರತ್ಯಯ ಆತ್ಮಗೌರವಗಳ ವಿನಾಶಕ್ಕೆ ಜಾತಿಮತಗಳ ಗೊಂದಲವೇ ಮೂಲ. ಮತದ ಹೆಸರಿನಲ್ಲಿ ದೇವರ ಹೆಸರಿನಲ್ಲಿ ಅಸಂಖ್ಯಾತ ಮೂಢ ಸಂಪ್ರದಾಯಗಳೂ ಅರ್ಥಶೂನ್ಯವೂ ವಿಚಾರ ರಹಿತವೂ ಆದ ಹಲವಾರು ಶಾಸ್ತ್ರ ಪರಂಪರೆಗಳೂ ಬೆಳೆದು ದೇಶದ ಬಹುಭಾಗದ ಜನರನ್ನು ಅಜ್ಞಾನಕೂಪಕ್ಕೆ ದಾಸ್ಯದ ಪಂಕಕ್ಕೆ ಅಸ್ಪೃಶ್ಯತೆಯ ಕಗ್ಗತ್ತಲೆಗೆ ನೂಕಿದುವು. ಜಾತಿ ಗರ್ವಾಂಧರ ಶಾಸ್ತ್ರ ಸಂಮೂಢರ ಹೇಯವರ್ತನೆ ನೀಚಕರ್ಮಗಳು ಕವಿಯ ನಿರ್ಮಲಾಂತಃಕರಣವನ್ನು ಕಲಕಿ, ಆತನು ನಿಷ್ಠುರ ಸತ್ಯವನ್ನು ಹೊರಗೆಡಹಿ, ಶುಷ್ಕವೇದಾಂತಿಗಳ ಮೇಲೆ ಅಪಹಾಸ್ಯದ ಖಡ್ಗವನ್ನೆಸೆಯುವಂತೆ ಮಾಡಿವೆ. ಹೊಲಸು ಯಾವಾಗಲೂ ತನ್ನ ತೋರದ ಹೊಲಸನ್ನೇ ಸೃಷ್ಟಿಸುತ್ತದೆ. ಆದುದರಿಂದ ಈ ಸಾಮಾಜಿಕ ರೋಗರುಜಿನಗಳಿಗೆ ತಕ್ಕ ಚಿಕಿತ್ಸೆ ನಡೆಯಿಸದ ಹೊರತು ದೇಶದ ಸೌಭಾಗ್ಯ ನೆಲೆಯಾಗಿ ನಿಲ್ಲುವಂತಿಲ್ಲ. ಅವೈಜ್ಞಾನಿಕ ಅಪೌರುಷೇಯ ವಾದವನ್ನು ಖಂಡಿಸಿ, ಜನತೆಯಲ್ಲಿ ಹುರುಪು ಹುಮ್ಮಸ್ಸು ಕೆಚ್ಚುನೆಚ್ಚುಗಳನ್ನು ತುಂಬಿ ಮಾನವನ ಕಲ್ಯಾಣವನ್ನು ಸಾಧಿಸುವುದು ವರಕವಿಯ ಪಂಥ. ಘಜನಿ ಮಹಮ್ಮದನ ದಂಡಯಾತ್ರೆಯ ಕಾಲದಲ್ಲಿ ಸೋಮನಾಥ ದೇವಾಲಯದ ಅರ್ಚಕಗೋಷ್ಠಿ ಸಮರ ಶಸ್ತ್ರಾಸ್ತ್ರಗಳನ್ನು ಸಮೆಯದೆ, ವೀರೋಚಿತ ಕರ್ಮವನ್ನೆಸಗದೆ, ಕರ್ತವ್ಯವಿಮುಖರಾಗಿ, ಸಕಲಶಾಸ್ತ್ರಗಳನ್ನು ಹಿಂಡಿ ಬಸಿದು ಸಿದ್ಧಗೊಳಿಸಿದ ‘ಧ್ರಾಂಧ್ರೀಂ’ ಮಂತ್ರವೂ ಪುರೋಹಿತರ ಅವಿಚಾರ ಮೌಢ್ಯತೆಯೂ ಕವಿಯ ಖಂಡನೆಯ ಖಡ್ಗಕ್ಕೆ ಪಕ್ಕಾಗಿವೆ.

ಗುಡಿ ಹಾಳಾದರೆ ಏನಂತೆ?
ವೈದಿಕ ಧರ್ಮಕೆ ಅದೆ ಚಿಂತೆ?
ನಶ್ವರ ಕಾಂಚನ ಹೋದರೆ ಹೋಯಿತು!
ಮಂತ್ರದ ಸಾಮರ್ಥ್ಯವು ಸ್ಥಿರವಾಯಿತು!
ಎಂತೆನೆ…..ಮಂತ್ರಕೆ ಕುಂದೆಲ್ಲಿ?
ಅ ಖಲ ಮ್ಲೇಚ್ಛರು ಸತ್ತೇ ಸತ್ತರು!
ಬಹುಕಾಲಾನಂತರದಲ್ಲಿ!

ಈ ಕೊನೆಯ ಸಾಲುಗಳು ಎಷ್ಟು ಧ್ವನಿಪೂರ್ಣವಾಗಿವೆ!

ನೀರಡಸಿ ಬಂದ ಸೋದರ ಮಾನವನಿಗೆ ನೀರನ್ನು ಕೊಡುವಾಗ, ನಿರಾಶ್ರಿತರ ದುಃಖಾಶ್ರುವನ್ನು ಮಿಡಿಯುವ ಮುನ್ನ, ಕೆರೆಯಲ್ಲಿ ಮುಳುಗಿದ ಪಂಚಮರ ಶಿಶುವನ್ನು ಎತ್ತುವ ಮುಂಚೆ, ಮನುಧರ್ಮಶಾಸ್ತ್ರವನ್ನು ಕೆದಕಿ ಸೋಸಿ, ಈ ಕಾರ್ಯಗಳು ಶಾಸ್ತ್ರ ಪ್ರಮಾಣವಲ್ಲ ವೆಂದೂ, ಹಾಗೆ ಮಾಡುವುದರಿಂದ ಬ್ರಹ್ಮತ್ವ ಕೆಟ್ಟು ಹೋಗುವುದೆಂದೂ ತರ್ಕಿಸುವ ಮಾನವನೇ ದಾನವ!

ಸ್ವರ್ಗ ನರಕಗಳೇನು ಶಾಸ್ತ್ರಸ್ಥವಲ್ಲ!
ಎದೆಯ ದನಿ ಧರ್ಮನಿಧಿ! ಕರ್ತವ್ಯವದುವೆ ವಿಧಿ!
ನಂಬದನು; ಅದನುಳಿದು ಋಷಿಯು ಬೇರಿಲ್ಲ!

ನಮ್ಮ ಹೃದಯವೆ ನಮಗೆ ಶ್ರೀಧರ್ಮಸೂತ್ರ. ಈ ಮಹಾಮಂತ್ರ ಭಾರತೀಯರ ಹೃದ್ಗತವಾದಾಗ ಭರತಖಂಡಕ್ಕೆ ನಿಜವಾದ ಸ್ವಾತಂತ್ರ್ಯಶ್ರೀ ದಕ್ಕಿದ ಹಾಗಾಗುತ್ತದೆ; ಇಲ್ಲದಿದ್ದರೆ ಇನ್ನಾವುದೋ ರಾಷ್ಟ್ರದ ಡೊಳ್ಳುಹೊಟ್ಟೆಗೆ ತುತ್ತಾಗಬೇಕಾಗುತ್ತದೆ. ನಮ್ಮ ಬಳಿಗೆ ಬಂದ ಪರ ಸಂಸ್ಕೃತಿಯನ್ನು ಅಸ್ಪೃಶ್ಯವೆಂದು ತಿರಸ್ಕರಿಸದೆ, ನಮ್ಮ ಆರ್ಷೇಯ ಸಂಸ್ಕೃತಿ ನಿತ್ಯವೆಂದು ವಿಪರೀತಾಭಿಮಾನವನ್ನಿಡದೆ, ಸನಾತನ ನೂತನ ಪರಕೀಯ ಸಂಸ್ಕೃತಿಗಳ ಸಂಮಿಲನದಿಂದ  ನಿತ್ಯನೂತನ ಸಂಸ್ಕೃತಿಯನ್ನು ಬೆಳೆಸಬೇಕೆಂಬುದೇ ಕವಿಯ ಹಂಬಲ. ‘ಇಂದು ರಕ್ತದ ಬಿಂದು, ಮುಂದೆ ಸೌಖ್ಯದ ಸಿಂಧು’ ಎಂಬುದೇ ತರುಣರ ‘ಹೊಸಬಾಳಿ’ನ ಗೀತೆಯಾಗಬೇಕು.

ಹರಿದು ಹಂಚಿಹೋಗಿರುವ ಕನ್ನಡನಾಡು, ‘ಹೊರನುಡಿಯ ಹೊರೆಯಿಂದ ಕುಸಿದು ಕುಗ್ಗಿರುವ ಕನ್ನಡನುಡಿ’, ದಾಸ್ಯದ ಪರೆಯನ್ನು ಕಳಚಲು ಹವಣಿಸದ ಕನ್ನಡ ಜನ – ಇವುಗಳನ್ನು ಕಂಡ ಕವಿಯ ಮನ ನೊಂದು ಬೆಂದಿದೆ; ಹೃದಯ ಕರಗಿ, ‘ಕನ್ನಡಮ್ಮನ ಹರಕೆ’ಯಲ್ಲಿ ಕಣ್ಣೀರಾಗಿ ಹರಿದಿದೆ; ಕೋಪ ಹೆಡೆಯೆತ್ತಿ ಬಿರುನುಡಿಯಾಗಿ ಪರಿಣಮಿಸಿದೆ. ಕವಿಯ ಸ್ವಭಾಷಾಭಿಮಾನ ವಾಗತೀತವಾದುದು, ಪರಿಶುದ್ಧವಾದುದು. ಪಂಪ ನಾರಣಪ್ಪ ಹರಿಹರ ರಾಘವರ ಕನ್ನಡವೆಂದರೆ ಕವಿಯ ಹಿಗ್ಗು ಅಷ್ಟಿಷ್ಟಲ್ಲ; ಮೈನವಿರು ತೆರೆತೆರೆಯಾಗಿ ಏಳುತ್ತದೆ; ಕನ್ನಡ ಮೆಟ್ಟಿದ ನೆಲವೇ ಪಾವನ ಭೂಮಿ, ಮುಟ್ಟಿದ ನೀರೇ ಕಾವೇರಿ; ಈ ಪುಣ್ಯಭೂಮಿಯಲ್ಲಿ ಎಲ್ಲಿ ನೋಡಿದರೂ ಶ್ರೀಗಂಧದ ಕಂಪು, ಸಂಗೀತ ಶಿಲ್ಪಗಳ ಪೆಂಪು, ಗಿಳಿಕೋಗಿಲೆಗಳಿಂಚರದಿಂಪು, ಸ್ವರ್ಗ ಸೌಂದರ್ಯದ ಸೊಂಪು.

ಕನ್ನಡವೇ ಸತ್ಯ
ಕನ್ನಡವೇ ನಿತ್ಯ
ಅನ್ಯವೆನಲದೆ ಮಿಥ್ಯಾ.

ಕನ್ನಡವನ್ನು ನೆನೆದರೆ ಸಾಕು, ಭಾವಾವೇಶದ ನಿರ್ಝರಿಣಿಯಲ್ಲಿ ಕವಿ ತೇಲಿ ಹೋಗುತ್ತಾನೆ. ಕನ್ನಡದ ಆಪತ್ತೇ ದೇಶದ ವಿಪತ್ತು. ಆದುದರಿಂದಲೇ

ಕನ್ನಡವ ಕೊಲುವ ಮುನ್
ಓ ನನ್ನ ಕೊಲ್

ಎಂಬ ಬೇಡಿಕೆ.

ಕನ್ನಡನಾಡಿನ ಗತವೈಭವವನ್ನು, ಕನ್ನಡನಾಡಿನ ವೀರರ, ವೀರರಮಣಿಯರ, ಪತಿವ್ರತೆಯರ, ಧರ್ಮನಿಷ್ಠರ, ದಾನಶೂರರ, ಸಾಹಸ ಧೈರ್ಯೋತ್ಸಾಹ ಸ್ವದೇಶಾಭಿಮಾನ ರಾಜಭಕ್ತಿ ತ್ಯಾಗಶೀಲಗಳನ್ನು ನೋಡಬನ್ನಿರೆಂದು ಮುಳ್ಳಿಡಿದ ಪೊದೆಗಳ ಮರೆಯಿಂದ, ಗಿಡಗೆಂಡೆಗಳ ಬುಡದಿಂದ, ಹಾಳು ಗುಡಿಗಳ ಗರ್ಭದಿಂದ ಕೂಗಿ ಕರೆಯುತ್ತಿರುವ ಶಿಲಾಶಾಸನ ಗಳನ್ನು ಕುರಿತ ಅತ್ಯುತ್ತಮ ಭಾವಗೀತೆ ‘ಶಿಲಾಭೇರಿ’. ವೀರ ಕರುಣರಸಗಳ ಒರತೆಯಾಗಿ, ಹೆಂಬೇಡಿಗಳ ಎದೆಯಲ್ಲಿ ನವಚೈತನ್ಯವನ್ನುಕ್ಕಿಸಿ, ನರಗಳನ್ನು ಉಕ್ಕಿನ ತಂತಿಗಳನ್ನಾಗಿ ಮಾಡುವ ಶಕ್ತಿಗೀತೆಯದು.

ಪ್ರಪಂಚದ ದುಃಖ ದಾರಿದ್ರ್ಯಗಳಿಗೆ ಕವಿಯ ಮಾನವ ಹೃದಯ ಮಿಡಿಯದಿಲ್ಲ. ಮಲೆನಾಡಿನ ಸೌಂದರ್ಯ ಸಂಪತ್ತಿನಲ್ಲಿ ತೇಲಾಡುತ್ತಿರುವಂತೆ, ಮೈಸೂರಿನ ಪ್ರಶಾಂತ ವಾತಾವರಣದ ಶ್ರೀಮಂತಿಕೆಯ ನಡುವೆ ಸುಖನಿದ್ರೆಗೈಯುತ್ತಿರುವಂತೆ ಕಾಣುತ್ತಿದ್ದರೂ, ಬಿಹಾರದ ಭೂಕಂಪ ಕವಿಯ ಎದೆಯನ್ನು ಜರ್ಜರಗೊಳಿಸಿದೆ. ಆತನ ಹೃದಯಾಂತರಾಳದಲ್ಲಿ ತಪ್ತಲೌಹರಸ ಮಡುಗಟ್ಟಿದೆ.

ಇಲ್ಲಿ ಪ್ರಕೃತಿ ರೂಪಸಿ!
ಅಲ್ಲಿ ಪ್ರಕೃತಿ ರಾಕ್ಷಸಿ!

ಭಗವತ್ಸೃಷ್ಟಿಯಲ್ಲಿ ಈ ಭೇದ ವಿಭೇದಗಳ ಪರಂಪರೆಗೆ ಕಾರಣವೇನು? ಅಷ್ಟೇ ಅಲ್ಲ, ಧೀಶಕ್ತಿ ಸಂಪನ್ನನೂ, ಜೀವಕೋಟಿ ಶ್ರೇಷ್ಠನೂ ಆದ ಮಾನವನ ಎದೆಯಲ್ಲಿ ಕ್ರೌರ್ಯ ಪಕ್ಷಪಾತಗಳ ಹಾಲಾಹಲದ ಮಡುವೇಕೆ? ಕಲ್ಲುಬೊಂಬೆಗೆಂದು ಮೃಷ್ಟಾನ್ನವೆರೆಯಲು ಸಿದ್ಧನಾಗಿರುವ ಭಕ್ತಶಿರೋಮಣಿ ಗೇಣಂಚಿನಲ್ಲಿಯೇ ನಿಂತಿರುವ ಹಸಿವು ನೀಡರಡಿಕೆಗಳಿಂದ ಕಂಗೆಟ್ಟು ಕಂಗಾಲಾಗಿರುವ ಹಣ್ಮುದುಕಿಯ ಮುಂದೆ ಚೂರು ರೊಟ್ಟಿಯನ್ನು ಬಿಸಾಡನು. ಈ ದುಃಖ ದಾರಿದ್ರ್ಯ ಅಸಮತೆಗಳ ನಿರಂತರ ಸಮಸ್ಯೆಯ ಜಟಿಲತೆಗೆ ಕುಗ್ಗಿ ನಿರಾಶಾವಾದಿ ಯಾಗುವಂತಿಲ್ಲ ಕವಿ. ಒಂದಲ್ಲದೊಂದು ದಿನ ಶಾಂತಿದೇವಿಯ ಅವತಾರವಾಗಬಹುದು; ಮಾನವನಿಗೆ ನಿತ್ಯಸುಖ ಲಭಿಸಬಹುದೆನ್ನುವ ನಿಷ್ಠುರ ಆಶಾವಾದಿ ಅವನು.

ಮುಳಿಯಬೇಡ ಹಳಿಯಬೇಡ;
ಶಾಂತಿ ಬಂದೆ ಬರುವುದು.
ಕೇಡು ತುತ್ತ ತುದಿಯದಲ್ಲ;
ಬೇವಿನಾಚೆಗಿಹುದು ಬೆಲ್ಲ;
ಕೇಡು ಲೇಸುಗಳನ್ನು ಮೀರಿ
ಮಹಾನಂದವಿರುವುದು.

ಇಳೆಯ ಗೊಂದಲದಲ್ಲಿ ಸಿಕ್ಕಿ ನರಳುತ್ತಿರುವ ಜೀವಿಗೆ ಇದೊಂದು ಅಮೃತವಾಣಿ. ನಾಕನರಕಗಳು ಭೂಲೋಕದಾಚೆಯಿರುವ, ಮಾನವನಿಗೆ ಎಟುಕದ ಅದೃಶ್ಯ ಲೋಕಗಳಲ್ಲ; ದೇವತ್ವ ಮಾನವನ ಶಕ್ತಿಗೆ ನಿಲುಕದ ವಸ್ತುವಲ್ಲ. ಹೆರರು ಸುಖಪಡುವುದನ್ನು ನೋಡಿ ತಣಿದು, ಮುದುಕಿ ತಿರುಕಿಗೆ ತಿರುವೆ ಇತ್ತು, ಆನಂದಗೊಂಡು, ಸ್ವಾರ್ಥತೆಯನ್ನು ತೇಲಿಬಿಟ್ಟು, ಪರಹಿತ ಸಾಧನೆಯಲ್ಲಿ ತನ್ನನ್ನು ತಾನು ಮರೆತಾಗ ಸ್ವರ್ಗೋದಯವಾಗುವುದು. ಇದೇ ಕವಿಯ ಪರಮ ಧ್ಯೇಯ.

ನಾವಿಂದು ವಿಜ್ಞಾನ ಯುಗದಲ್ಲಿದ್ದೇವೆ. ಪುರಾತನ ಶಾಸ್ತ್ರ ಸೂತ್ರಗಳೆಲ್ಲ ವಿಜ್ಞಾನದ ಒರೆಗಲ್ಲಿನಲ್ಲಿ ತೇರ್ಗಡೆ ಹೊಂದದ ಹೊರತು ಪುರಸ್ಕಾರಯೋಗ್ಯವಾಗಲಾರವು. ಪುರಾಣೇತಿಹಾಸಗಳಲ್ಲಿ ಸಾವಿರಾರು ವರ್ಷಗಳಿಂದ ಬೆಳೆದು ಬಂದಿರುವ ಬಂದಳಿಕೆಗಳನ್ನೆಲ್ಲಾ ಕತ್ತರಿಸಿ, ಏಕಪಕ್ಷೀಯವಾದ ವಿವಾದಗಳನ್ನು ವಿಸರ್ಜಿಸದಿದ್ದರೆ ವ್ಯಾಸ ವಾಲ್ಮೀಕಿ ಮನು ಮಹಾಮುನಿಗಳಿಗೆ ಅಕ್ಷಮ್ಯ ಅಪರಾಧವೆಸಗಿದಂತಾಗುವುದಲ್ಲದೆ, ಸನಾತನ ಭರತಖಂಡದ ಧವಲಕೀರ್ತಿ ನಿಸ್ಸಂದೇಹವಾಗಿ ಮಸುಳುವುದು. ಈ ಕಾರ್ಯ ಮಾನವಕುಲ ಹಿತಾಕಾಂಕ್ಷಿಯೂ, ರಸರ್ಷಿಯೂ, ಭೀಷ್ಮವ್ಯಕ್ತಿಯೂ ಆದ ವರಕವಿಯಿಂದಲೇ ಸಾಧ್ಯ. ಜಾತಿಮತ ಗೊಂದಲದ ಬಿರುಗಾಳಿಯಿಂದ ತತ್ತರಿಸುತ್ತಿರುವ ಸಮಾಜದ, ಆ ಈ ಶ್ರೀಮಂತಿಕೆಯಿಂದ ಮೆರೆಯುತ್ತಿರುವ ಅಲ್ಪಜರ ಅಂತರಂಗ ಬಹಿರಂಗ ನಿಂದೆಗೆ ಅಂತಹ ಕವಿ ಗುರಿಯಾದರೆ ಸೋಜಿಗವಲ್ಲ. ಅಂತಹ ಕಾಲದಲ್ಲಿ ‘ಗೊಬ್ಬರ’ದ ಅವತಾರ ಅನಿವಾರ್ಯವಾಗುತ್ತದೆ. ಕವಿ ಜನಾಂಗದ ಪ್ರತಿನಿಧಿ; ಕಾವ್ಯ ಜನಮನೋಧರ್ಮದ ಪ್ರತಿಬಿಂಬ. ಹಲವಾರು ತಲೆಮಾರುಗಳಿಂದ ನಾಡಿನ ಹೃದಯಾಂತರಾಳದಲ್ಲಿ ಗುಪ್ತಗಾಮಿನಿಯಾಗಿ ಪ್ರವಹಿಸುತ್ತಿದ್ದ ಲಾವಾರಸ ‘ಗೊಬ್ಬರ’ದಲ್ಲಿ ಜ್ವಾಲಾಮುಖಿಯಾಗಿ ಉಕ್ಕಿದೆ :

ಕವಿಯ ಹೃದಯವೊಂದು ವೀಣೆ
ಲೋಕವದನು ಮಿಡಿವುದು

*

ಎಂತೊ ನಾಡಿನೊಡಲನಾಡಿ,
ಎಂತುಟಾಸೆಯಿಹುದೊ ನೋಡಿ,
ಅಂತೆ ತಂತಿ ನುಡಿವುದು.

ಶ್ರೀ ಪುಟ್ಟಪ್ಪನವರ ಆದರ್ಶ ತಪೋಜೀವನ, ಪ್ರತಿಭೆ, ಪಾಂಡಿತ್ಯ, ಮೇಧಾಶಕ್ತಿ, ಲೌಕಿಕಾನುಭವಗಳ ವಿಷಯದಲ್ಲಿ ಗ್ರಂಥಗಳನ್ನೇ ಬರೆಯಬಹುದು. ಅವರದು ಹುಟ್ಟು ಬಣ್ಣ, ಕಟ್ಟುಬಣ್ಣವಲ್ಲ. ಅವರನ್ನು ಅನುಕರಿಸಲು ಯತ್ನಿಸುವುದು ನವಿಲನ್ನು ನೋಡಿ ಕೆಂಬೂತ ಪುಕ್ಕವನ್ನು ತರೆದುಕೊಂಡಂತೆ. ಅವರಿವರ ಸ್ತುತಿಪ್ರಚಾರಗಳ ಮೇಲೆ ಅವರ ಯಶಸ್ಸು ನಿಂತಿಲ್ಲ. ‘ಕೀರ್ತಿಶನಿ’ಯ ಮಾಯಾ ಮೋಹಕ್ಕೆ ಅವರು ಸಿಲುಕಿಯೂ ಇಲ್ಲ. ಅವರ ಕೃತಿಗಳು ಸ್ವಯಂ ಪ್ರಕಾಶಮಾನವಾದುವು. ಅವರ ‘ಚಿತ್ರಾಂಗದಾ’ ಮಹಾಕಾವ್ಯ ಪ್ರಪಂಚದ ಅತ್ಯುತ್ತಮ ಸಾಹಿತ್ಯರತ್ನಗಳಲ್ಲೊಂದು ಎಂದು ದಿ. ಪ್ರೊ. ವೆಂಕಟಣ್ಣಯ್ಯನವರು ಹಿಂದೊಮ್ಮೆ ಆಡಿದ ನುಡಿ ಇಂದು ನೆನಪಿಗೆ ಬರುತ್ತದೆ. ಅವರ ಕೆಲವು ಕೃತಿಗಳನ್ನಾದರೂ ಇಂಗ್ಲಿಷಿಗೆ ತರ್ಜುಮೆ ಮಾಡಿದರೆ ‘ಬರುವುದು ನೋಬೆಲ್ ಬಹುಮಾನ.’ ಬಂದೇ ಬರುತ್ತದೆ. ಹಿರಿಯ ಕವಿ ಹುಟ್ಟುವುದು ನಾಡಿನ ಸೌಭಾಗ್ಯ. ಆತನ ಕೃತಿರತ್ನಗಳನ್ನು ಸವಿದು ಮೆಚ್ಚುವುದು ಆ ಜನತೆಯ ಪರಮಪುಣ್ಯ; ಆತನ ಮಹತ್ತನ್ನು ಕಂಡರೂ ಕಾಣದ ಹಾಗೆ ವರ್ತಿಸುವುದೇ ನಾಡಿನ ಘೋರ ದೌರ್ಭಾಗ್ಯ. ವಂಗೀಯರ ಉಜ್ವಲ ದೇಶಾಭಿಮಾನ, ಸ್ವಭಾಷಾಭಿಮಾನ ಗಳಿಂದ ವಂಗಕವಿ ಲೋಕ ಪೂಜ್ಯನಾದನು. ಅಂತಹ ಕವಿಯೊಬ್ಬನನ್ನು ಪಡೆಯುವ ಸೌಭಾಗ್ಯ ಕನ್ನಡನಾಡಿಗೂ ಲಭಿಸುವುದೇ?