ಸರ್ವತಃ ಪಾಣಿಪಾದಂ ತತ್ಸರ್ವತೋಕ್ಷಿಶಿರೋಮುಖಮ್!
ಸರ್ವತಃ ಶ್ರುತಿಮಲ್ಲೋಕೇ ಸರ್ವಮಾವೃತ್ಯ ತಿಷ್ಠತಿ ||                (ಗೀತಾ, ೧೩-೧೩)

 

ಮಯಾ ತತಮಿದಂ ಸರ್ವಂ ಜಗದವ್ಯಕ್ತಮೂರ್ತಿನಾಂ |
ಮತ್ಥ್ಸಾನಿ ಸರ್ವಭೂತಾನಿ ನ ಚಾಹಂ ತೇಷ್ವವಸ್ಥಿತಃ  (ಗೀತಾ, ೯-೪)

ಅಹಂ ಸರ್ವಸ್ಯ ಪ್ರಭವೋ ಮತ್ತಃ ಸರ್ವಂ ಪ್ರವರ್ತತೇ |
ಇತಿ ಮತ್ವಾ ಭಜಂತೇ ಮಾಂ ಬುಧಾ ಭಾವಸಮನ್ವಿತಾಃ ||  (ಗೀತಾ, ೧೦-೮)

ಯದ್ಯದ್ ವಿಭೂತಿಮತ್ಸತ್ತ್ವಂ ಶ್ರೀಮದೂರ್ಜಿತಮೇವವಾ |
ತತ್ತದೇವಾಗಚ್ಛ ತ್ವಂ ಮಮ ತೇಜೋಂಶ ಸಂಭವಮ್ || (ಗೀತಾ, ೧೦-೪೧)

ಪರಬ್ರಹ್ಮ ವಸ್ತುವು ಸರ್ವತ್ರ ಪಾಣಿಪಾದಗಳುಳ್ಳುದಾಗಿಯೂ, ಸರ್ವದಿಕ್ಕುಗಳಲ್ಲಿಯೂ ಶಿರೋಮುಖಗಳುಳ್ಳುದಾಗಿಯೂ, ಸರ್ವತ್ರ ಶ್ರೋತ್ರಗಳುಳ್ಳುದಾಗಿಯೂ ಇರುವುದಲ್ಲದೆ ಸರ್ವವ್ಯಾಪಿಯಾಗಿಯೂ ಇದೆ. ಅದರ ಅತಿ ಸೂಕ್ಷ್ಮವಾದ ಸ್ವರೂಪದಿಂದ ಇಡೀ ವಿಶ್ವವೆ ವ್ಯಾಪ್ತವಾಗಿದೆ. ಸಮಸ್ತಭೂತಗಳು ಅದರಲ್ಲಿಯೆ ಅಂತರ್ಭೂತವಾಗಿವೆ. ಸಮಸ್ತವಸ್ತುಗಳ ಆವಿರ್ಭಾವಕ್ಕೂ ಅದೇ ಮೂಲಕಾರಣ. ವಿಜ್ಞಾನಿಗಳಿಗೆ ಮಾತ್ರ ಅದರ ಸ್ವರೂಪ ಸ್ವಭಾವ ಸಂವೇದ್ಯ. ಜಗತ್ತಿನಲ್ಲಿ ಯಾವ ಯಾವ ವಸ್ತುಗಳು ಸಾರವತ್ತಾಗಿ ಶ್ರೀಮದ್ಯುಕ್ತವಾಗಿ ಶಕ್ತಿಪೂರ್ಣವಾಗಿ ಇವೆಯೋ ಅವೆಲ್ಲವೂ ಆ ಪರಬ್ರಹ್ಮ ವಸ್ತುವಿನ ಅಂಶಗಳೇ ಆಗಿವೆ.

ಗೀತಾಚಾರ್ಯನ ಈ ಉಪದೇಶಾಮೃತವನ್ನೆ ಈಶಾವಾಸ್ಯೋಪನಿಷತ್ತಿನ ‘ಈಶಾವಾಸ್ಯ ಮಿದಂ ಸರ್ವಂ’ ಎಂಬ ಮಂತ್ರವೂ ಬೋಧಿಸುತ್ತದೆ. ಸರ್ವವ್ಯಾಪಕವೂ ಸರ್ವಾಂತ ರ್ಯಾಮಿಯೂ ಆದ ಆ ಪರಬ್ರಹ್ಮ ವಸ್ತುವಿನ ದರ್ಶನ ಆತ್ಮಜ್ಞನೂ ಅಹಂಕಾರ ರಹಿತನೂ ಪಾರದರ್ಶಿಯೂ ಆದ ಕವಿಶ್ರೇಷ್ಠನಿಗೆ ಮಾತ್ರ ಸಾಧ್ಯ. ಅಹಂಕಾರದ ಪಾಚಿಯನ್ನು ತೆಗೆಯದ ಹೊರತು ಹೃದಯದ ಸಲಿಲದರ್ಪಣದಲ್ಲಿ ಆತ್ಮಸೂರ್ಯನ ಪ್ರತಿಬಿಂಬ ಕಾಣುವುದಿಲ್ಲ. ನಿರ್ಮಲವಾದ ಹೃದಯದ ದರ್ಪಣದಲ್ಲಿ ಇಡೀ ಜಗತ್ತಿನ ಅಂತರಾತ್ಮವೇ ಗೋಚರ ವಾಗುತ್ತದೆ. ಆಗ ತಾನು ಬೇರೆ, ತನ್ನ ಸುತ್ತುಮುತ್ತಣ ಗಿಡಗಂಟಿ ಪಶುಪಕ್ಷಿ ತೃಣಕಾಷ್ಠ ಬೇರೆ ಎಂಬ ಭಾವನೆ ತಾನಾಗಿಯೆ ಲುಪ್ತವಾಗುತ್ತದೆ. ಅಜ್ಞಾನದ ಅಂಧಕಾರ ತುಂಬಿದ ನೇತ್ರಕ್ಕೆ ಅಗೋಚರವಾದ ಸೂಕ್ಷ್ಮತಮ ಸೂತ್ರವೊಂದು ಇಡೀ ಸೃಷ್ಟಿಯನ್ನೆಲ್ಲ ಓತಪ್ರೋವ್ಯಾಪಿಸಿರುವಂತೆ ಆ ದ್ರಷ್ಟಾರನಿಗೆ ಸುಸಂವೇದ್ಯವಾಗುತ್ತದೆ. ಸಕಲ ಚೇತನಾಚೇತನವಸ್ತುಗಳ ಬಹಿರಂಗ ವ್ಯಾಪಾರಗಳೆಂತೋ ಅಂತೆಯೇ ಅವುಗಳ ಅನಂತಾನಂತ ಅಂತರಂಗ ವ್ಯಾಪಾರಗಳೂ ಅವನ ವಿಜ್ಞಾನಾನುಭವಕ್ಕೆ ಮತ್ತು ಅವನ ದಿವ್ಯಪ್ರಜ್ಞೆಗೆ ಗೋಚರವಾಗುತ್ತವೆ. ಅಷ್ಟೇ ಅಲ್ಲ, ಆ ವ್ಯಾಪಾರಗಳಲ್ಲಿ ತಾನೂ ತನ್ನತನವನ್ನುಳಿದು ಲಯವಾಗುತ್ತಾನೆ. ಅವನಿಗೆ ಇದಕ್ಕಿಂತ ಬೇರೆ ಆನಂದವಿಲ್ಲ.

ಶ್ರೀ ಕುವೆಂಪುರವರು ಪ್ರಥಮತಃ ದಾರ್ಶನಿಕರು, ಅನಂತರ ಕವಿಗಳು. ನಿಸರ್ಗದ ನಡುವೆ ‘ನಿಸರ್ಗ’ವಾಗಿ ಹುಟ್ಟಿ, ‘ನಿಸರ್ಗ’ವಾಗಿ ಬೆಳೆದವರಿಗೆ ನಿಸರ್ಗದ ಒಳಗುಟ್ಟೆಲ್ಲ ರಟ್ಟೆ! ಅವರು ನಿಸರ್ಗದ ಬಾಹ್ಯಶ್ರೀಯನ್ನು ಕಂಡು ಕಂಡು ನಲಿದಾಡುವಂತೆಯೇ ಅವಿನಾಶಿಯೂ ಅನಂತವೂ ಆದ ಅದರ ಅಂತಃಶ್ರೀಯನ್ನು ಅನುಭವಿಸಿ ಸಂತೃಪ್ತರಾಗಿದ್ದಾರೆ. ಕೇವಲ ಆತ್ಮಸಂತೃಪ್ತಿಯಿಂದ ಸಂಪ್ರೀತರಾಗದೆ ತಮ್ಮ ದರ್ಶನದ ಸೌಭಾಗ್ಯವನ್ನು ಇತರರಿಗೂ ಹಂಚಿ ತೃಪ್ತಿಪಡಿಸಿದ್ದಾರೆ. ‘ನೀನೇ ರಮೆಯೆಂದುಲಿಯುವೆ, ಹೂವೇ’ ಎಂದು ಹೂವನ್ನು ಆತ್ಮೀಯತೆಯಿಂದ ಮಾತಾಡಿಸುವಂತೆ. ‘ನನ್ನ ಕೈಯಲ್ಲಿರುವ ಕಲ್ಲಿಗೆ ಬಗೆಗೆ ಸಿಲುಕದ ಮನಸಿದೆ’ ಎಂದು ಹೇಳುತ್ತಾರೆ. ಇವು ಕೇವಲ ಮಾತುಗಳಲ್ಲ, ರಸಾನುಭೂತಿಯಿಂದ ಹೊರಹೊಮ್ಮಿದ, ಭಾವದ ಕಿಡಿಗಳಿವು. ನಿಸರ್ಗ ಸೌಂದರ್ಯವನ್ನು ನೋಡುವಾಗ ಅವರು ‘ತಮ್ಮತನ’ವನ್ನುಳಿದು ಆ ಸೌಂದರ್ಯ ವ್ಯಾಪಾರದಲ್ಲಿಯೆ ಲೀನವಾಗುತ್ತಾರೆ. ಮೈನೀಲಿಗಟ್ಟುವ ತನಕ ಗಗನವನ್ನು ನೋಡಿದ್ದಾರೆ; ಧಮನಿ ಧಮನಿಗಳಲ್ಲಿ ವಾರಿರಾಶಿ ಧುಮುಕಿ ಮೊರೆಯುವ ತನಕ ಕಡಲನ್ನು ನೋಡಿದ್ದಾರೆ; ಕಟ್ಟಿರುಳಿನಲ್ಲಿ ಕತ್ತಲೆಯಾಗಿ, ಹೃದಯ ನಭದಲ್ಲಿ ಕೋಟಿ ಕೋಟಿ ತಾರೆಗಳು ಮಿರುಗುವತನಕ ಧ್ಯಾನಗೈದಿದ್ದಾರೆ; ಸುಗ್ಗಿಯ ಹಕ್ಕಿ ಸಗ್ಗವನ್ನು ಕೂಗಿ ಕರೆಯಲು ಅವರ ಮೆಯ್ಯ ನೆತ್ತರೆಲ್ಲ ಇಂಚರದ ಹೊನಲಾಗಿ ಹರಿದಿದೆ. ಸರ್ವಸೃಷ್ಟಿಯನ್ನು ಒಂದೇ ಒಂದು ಮುಕ್ಕುಳಲ್ಲಿ ಪಾನಗೈಯಬಲ್ಲ ಕವಿಯಗಸ್ತ್ಯರವರು.

ಕಾನ್ ಮಲೆ, ಬಾನ್ ಮುಗಿಲು, ಹೂತಳಿರು, ತೊರೆಕಡಲು, ಮಿಗಹಕ್ಕಿ, ಹಗಲು, ಹುಳು, ಸಂಜೆ ಹೊತ್ತಾರೆಗಳನ್ನು ನಾವು ದಿನದಿನವೂ ಕ್ಷಣಕ್ಷಣವೂ ನೋಡುತ್ತಿರುತ್ತೇವೆ. ಆದರೆ ಅವು ನಮ್ಮ ಪಾಲಿಗೆ ಕೇವಲ ಹೆಸರುಗಳು. ಕವಿಯ ಪಾಲಿಗೆ ಅವು ಒಂದೊಂದೂ ಅವನ ಭಾವಕೋಶವನ್ನು ಜುಮ್ಮುದಟ್ಟಿಸುವ, ಅವನ ಆತ್ಮವನ್ನು ವಿಕಾಸಗೊಳಿಸುವ ಸೌಂದರ್ಯಶಕ್ತಿಗಳು. ಶರತ್ಕಾಲದ ಸೂರ್ಯೋದಯದಲ್ಲಿ ಹುಲ್ಲಿನ ಮೇಗಡೆಯ ಇಬ್ಬನಿರಾಶಿಯನ್ನು ನೋಡಿ ಎಷ್ಟು ಜನ ಆನಂದಪಟ್ಟಿದ್ದಾರೆ? ಆದರೆ ಕವಿಯ ಹೃದಯದಲ್ಲಿ ಸಿಡಿಯುವ ಭಾವದ ಕಿಡಿಗಳು ಅನಂತ!

ಭಾವಾವೇಶದ ನೋಡುತ ನಿಂತೆ,
ಹೃದಯದೊಳುರಿಯಿತು ರಸಮಯ ಚಿಂತೆ
ಉರಿಕಿಡಿದೆನು ಹಿಮಮಣಿಯಂತೆ!
ಕಲ್ಲಿನ ಯುಗಯುಗದಿರವೂ ಶೂನ್ಯ,
ಹುಲ್ಲಿನ ಅರೆನಿಮಿಷದ ಹನಿ ಧನ್ಯ,
ತಳಿತಳಿಪುದೆ ಸಾರ್ಥಕ ಪುಣ್ಯ!
ಎಂದಾಲೋಚಿಸುತಿರೆ ಬಗೆ ಮರಳಿ
ಉರಿಯಿತು ಜ್ವಾಲಾರೂಪದಿ ಕೆರಳಿ:
ನೋಡಿದರೆಲ್ಲಿಯು ಚೈತನ್ಯ!
ಕಲ್ಲಲಿ, ಮಣ್ಣಲಿ, ಹುಲ್ಲಲಿ, ಹುಡಿಯಲಿ,
ನೀರಿನ ಹನಿಯಲಿ ಬೆಂಕಿಯ ಕಿಡಿಯಲಿ,
ನನ್ನಲಿ-ಎಲ್ಲಿಯು ಚೈತನ್ಯ!

ಹಿಮಮಣಿಯನ್ನು ನೋಡುತ್ತ ನೋಡುತ್ತ ಕವಿ ‘ಉರಿ-ಕಿಡಿ’ಯುತ್ತಾರೆ, ಚೇತನಾಚೇತನ ವಸ್ತುಗಳಲ್ಲೆಲ್ಲ ಜ್ವಾಲಾರೂಪದ ಚೈತನ್ಯವನ್ನು ಕಾಣುತ್ತಾರೆ. ಎಲ್ಲೆಲ್ಲಿಯೂ ಭಗವಂತನ ಜ್ಯೋತಿಯನ್ನೆ ಕಾಣುವ ಇಂಥ ಕವಿ ಮಾನವ ನಿರ್ಮಿತವಾದ ಮಠ ದೇವಾಲಯಗಳಿಗೆ ಹೋಗಬೇಕಾಗಿಲ್ಲ. ಅವರು ಕಣ್ಣರಳಿಸಿದೆಡೆಯಲ್ಲೆಲ್ಲ ವಿಶ್ವಶಕ್ತಿಯ ಚೈತನ್ಯವೆ ಗೋಚರ ವಾಗುತ್ತದೆ. ಸೃಷ್ಟಿಯ ಹೃದಯಕೆ ಪ್ರಾಣಾಗ್ನಿಯ ಹೊಳೆಹರಿಯಿಸಿ ಬರುವ ರವಿದರ್ಶನಕ್ಕಿಂತ ಬೇರೆ ದರ್ಶನವಿಲ್ಲ :

ತೆರೆತೆರೆಯಾಗಿಹ ನೊರೆನೊರೆ ಕಡಲೆನೆ ನೋಡುವ ಕಣ್ಣೋಡುವವರೆಗೆ
ಬನಸಿರಿ ತುಂಬಿದ ಕಣಿವೆಯ ಹಂಬಿರೆ ಧೂಳೀಸಮಹಿಮ ಬಾನ್‌ಕರೆಗೆ
ಪ್ರತಿಭೆಯ ಹೋಮಾಗ್ನಿಯ ಮೇಲೆ ಕವಿಮನ ತಾನುರಿದುರಿದೇಳೆ
ಮರಗಿಡದಲಿ ಜಡದೊಡಲಲಿ ಇದೆಕೋ ಸ್ಪಂದಿಸುತಿದೆ ಭಾವ ಜ್ವಾಲೆ!

ಕವಿಯ ವ್ಯಕ್ತಿತೆ ಸೌಂದರ್ಯ ಸಮಾಧಿಯಲ್ಲಿ ಆನಂದವನ್ನು ಹೀರಿ ಮೈಮರೆಯುತ್ತಿದೆ. ಹಾಗೆಯೆ ಮರದ ಮೈಸಿರಿಯೆ ಮೈವೆತ್ತು ಮೂಡಿದ ಕೆಂದಳಿರನ್ನು ನೋಡಿದಾಗ ಕವಿ ಮರವಾಗಿ ಮರವಟ್ಟು ನೋಡುತ್ತಾರೆ :

ಮೃಣ್ಮಯದ ಹೃದಯದಲಿ ಚಿನ್ಮಯನಿಹನು ಎಂದು
ಜಡವನೆಂದೆಂದಿಗೂ ಚೇತನ ಗೆಲುವುದೆಂದು
ಸಾರುತಿಹಳೀ ದಿವ್ಯ ತರುಕಲಾ ಸುಂದರಿ !
ಅಃ ! ನಿಂತು ನೋಡಿಲ್ಲಿ :
ನೂರು ಋಷಿಗಳ ಬೋಧನೆಯ ಸಾರವಿಹುದಿಲ್ಲಿ !
ನೂರು ವೈರಾಗಿಗಳ ಸಂಸಾರವಿಹುದಿಲ್ಲಿ !
ಬುದ್ದಿಯರಿಯದ ಸಿದ್ದಿ ಭಾವಗೋಚರವಿಲ್ಲಿ !
ವ್ಯಕ್ತಿತ್ವವೇ ಜ್ವಾಲೆಯಾಗುರಿಯುವುದು ಇಲ್ಲಿ!
ಕೋಟಿ ಮೈಲಿಗಳಾಚೆ ಕಾಶಿಯಾತ್ರೆಗಳೇಕೆ?
ಇಲ್ಲಿಗೈತರು ಯಾತ್ರಿಕನೆ, ಇದುವೆ ತರುಕಾಶಿ!

ನಿತ್ಯಯಾತ್ರಿಕನೂ ಕ್ರಾಂತದರ್ಶಿಯೂ ಆದ ಈ ಕವಿ ನಮ್ಮನ್ನು ರಸತೀರ್ಥದಲ್ಲಿ ಮೀಯಿಸಿ, ಪುನೀತರನ್ನಾಗಿ ಮಾಡುತ್ತಾರೆ.

ಕುವೆಂಪು ಅವರ ಕತೆ ಭಾವಗೀತೆ ನಾಟಕ ಮಹಾಕಾದಂಬರಿ ಮಹಾಕಾವ್ಯಗಳೆಲ್ಲ ಅವರು ಕಂಡ ಕಾಣ್ಕೆಗೆ ಮೀಸಲು. ನಿಸರ್ಗ ಸೌಂದರ್ಯದ ಹಿನ್ನೆಲೆಯಲ್ಲಿ ಅವರ ದರ್ಶನ ಪರಿಣತಿ ಗೊಂಡಿದೆ. “ಕವಿದರ್ಶನಕೆ ಜಡವಿಲ್ಲ; ಜಡವೆಂಬುದೆಲ್ಲ ಚೇತನದ ನಟನೆಯ ಲೀಲೆ; ಅದು ರಸದೃಷ್ಟಿ ಸಂವೇದ್ಯ; ರಸಋಷಿಯ ಪ್ರತಿಭಾ ಸಮಾಧಿಗದು ಪ್ರತ್ಯಕ್ಷ.” ಇದೇ ಅವರ ಸೌಂದರ್ಯ ಸಂಹಿತೆಯ ಗುಟ್ಟು.