ತ ಶತಮಾನದ ಕೊನೆಯ ಪಾದದ ಮಲೆನಾಡಿನ ಜನಜೀವನದ ಮೇಲೆ ಕ್ಷಕಿರಣ ಹಾಯಿಸಿ, ನಾಗರಿಕ ಸಂಪರ್ಕದಿಂದ ದೂರವಾದ ಭಿನ್ನಭಿನ್ನ ಸ್ತರಗಳ ವಿವಿಕ್ತ ಸಮಾಜದ ಹೊರಗೊಳಗುಗಳನ್ನು ವಿವರ ವಿವರವಾಗಿ ಪ್ರತಿಬಿಂಬಿಸುವ ಮಹಾಕಾದಂಬರಿ ‘ಮಲೆಗಳಲ್ಲಿ ಮದುಮಗಳು.’ ಕಥಾ ಸಂವಿಧಾನದಲ್ಲಿ, ವಸ್ತುನಿರೂಪಣೆಯಲ್ಲಿ, ಪಾತ್ರರಚನೆಯಲ್ಲಿ, ಶೈಲಿಯಲ್ಲಿ ಹಳೆಯ ಜಾಡನ್ನುಳಿದು ಹೊಸ ದಾರಿಯನ್ನು ತುಳಿದು ವಿಶಿಷ್ಟ ಲಕ್ಷಣಗಳನ್ನೊಳ ಗೊಂಡ ಸಂಕೀರ್ಣ ಕಾದಂಬರಿಯಿದು. ಏಕಕಾಲದಲ್ಲಿ ಹತ್ತು ದಿಕ್ಕುಗಳಿಗೂ ಪ್ರತಾಪ ಬೀರಬಲ್ಲ ದಶರಥನಂತೆ ಕಾದಂಬರಿಕಾರರ ಪ್ರತಿಭೆ ಏಕ್‌ದಮ್ ಸಮಾಜದ ಬಹುಮುಖ ಗಳನ್ನು ಗ್ರಹಿಸಿ ಏಕಾಖಂಡವಾಗಿ ಚಿತ್ರೀಕರಿಸುತ್ತದೆ. ಲೌಕಿಕದೃಷ್ಟಿಗೆ ಬಿಡಿಬಿಡಿಯಾಗಿ ಬೇರೆಬೇರೆಯಾಗಿ ಸಂಬಂಧ ದೂರವಾಗಿ ನಡೆಯುತ್ತವೆಂದು ತೋರುವ ಘಟನೆಗಳೆಲ್ಲ ಅಲೌಕಿಕ ದೃಷ್ಟಿಗೆ ಅಪ್ರತ್ಯೇಕವಾಗಿ ನಿಕಟ ಸಂಬಂಧಿಗಳಾಗಿ ಪರಸ್ಪರ ಪ್ರಭಾವಾತ್ಮಕವಾಗಿ ಗೋಚರಿಸುತ್ತವೆನ್ನುವ ಭಾವನೆ ಇಲ್ಲಿಯ ಕ್ರಿಯೆಗೆ ಪೋಷಕವಾಗಿದ್ದು, ಸನ್ನಿವೇಶ ಸಂದರ್ಭಗಳನ್ನು ರೂಪಿಸುತ್ತದೆ. ನೂರಾರು ವರ್ಷಗಳ ಹಿಂದೆ ಸಾವಿರಾರು ಮೈಲಿಗಳಾಚೆಯ ನಗರವೊಂದರಲ್ಲಿ ನಡೆದ ಘಟನೆಯೊಂದು ಮಲೆನಾಡಿನ ಕ್ಷುದ್ರಗ್ರಾಮವೊಂದರ ಜನಜೀವನ ವನ್ನು ನಿಯಂತ್ರಿಸಬಲ್ಲದೆಂಬುದೇ ಕಾದಂಬರಿಕಾರರ ಮತ. ಯಾವುದೋ ದೇಶದಲ್ಲಿ ತಯಾರಾಗಿ ಮಲೆನಾಡವರ ಬಾಯಲ್ಲಿ ಬೀಸೆಕಲ್ಲಾಗಿ ಪರಿವರ್ತನೆಗೊಂಡ ಬೈಸಿಕಲ್ಲು ಬೆಟ್ಟಳ್ಳಿಯ ದೊಡ್ಡಬೀರನ ಅಪಘಾತಕ್ಕೆ ಕಾರಣವಾಗಬಹುದೆ? ಪ್ರತಿನಿತ್ಯ ನಮ್ಮ ಕಣ್ಮುದೆ ನಡೆಯುತ್ತಿರುವ ಘಟನೆಗಳಿಗೆ ಕಾರಣವನ್ನೆಲ್ಲಿಯೊ ಅರಸಬೇಕಾಗಿದೆ. ಕೇರಳದ ಇಂದಿನ ಭೀಕರ ಘಟನೆಗಳಿಗೆ ಚೀನಾ ದೇಶದ ಮಾವೋ ಕಾರಣವಾಗಿರುವಂತೆಯೆ, ನಾಗಾಲ್ಯಾಂಡ್ ಸಮಸ್ಯೆಗೆ ಎರಡು ಸಾವಿರ ವರ್ಷಗಳ ಹಿಂದೆ ಉದ್ಭವವಾದ ಕ್ರಿಶ್ಚಿಯನ್ ಮತವು, ಕಾಶ್ಮೀರ ಸಮಸ್ಯೆಗೆ ಸಾವಿರದ ಮುನ್ನೂರು ವರ್ಷಗಳ ಹಿಂದೆ ಅರೇಬಿಯಾದಲ್ಲಿ ಹುಟ್ಟಿದ ಪ್ರವಾದಿ ಯೊಬ್ಬನು ಕಾರಣವೆಂದು ಹೇಳಬಹುದಾದರೆ ಅಚ್ಚರಿಗೊಳ್ಳಬೇಕಾಗಿಲ್ಲ. ಈ ರಹಸ್ಯ ವನ್ನರಿಯಲು ಬ್ರಾಹ್ಮೀಪ್ರಜ್ಞೆಯನ್ನಾಗಲಿ ಅಲೌಕಿಕ ದೃಷ್ಟಿಯನ್ನಾಗಲಿ ಆವಾಹನೆ ಮಾಡ ಬೇಕಾಗಿಲ್ಲ. ಲೌಕಿಕಪ್ರಜ್ಞೆ ಎಚ್ಚತ್ತಿದ್ದರೂ ಸಾಕು, ಅದು ಗ್ರಾಹ್ಯವಾಗುತ್ತದೆ.

ಸಾಮಾನ್ಯ ಮತಿಯ ಸ್ಥೂಲದೃಷ್ಟಿಗೆ ತನ್ನ ಸುತ್ತಮುತ್ತಣ ಸಮಾಜದ ಒಂದೆರಡು ಮುಖಗಳು ಕಾಣುತ್ತವೆಯೇ ಹೊರತು ಅದರ ಸಮಗ್ರ ಚಿತ್ರ ಗೋಚರವಾಗುವುದಿಲ್ಲ. ಗೋಚರಿಸಿದರೂ ತಾರತಮ್ಯ ಭೇದಭಾವನೆಯಿಂದ ಅಮುಖ್ಯವೆಂದು ತೋರಿದ್ದೆಲ್ಲ ತಿರಸ್ಕೃತವಾಗುತ್ತದೆ: ಮಹಾಪ್ರತಿಭೆಯ ಸಮಗ್ರ ದೃಷ್ಟಿಗೆ ಅದರೆಲ್ಲ ಮುಖಗಳು ಕಾಣು ವಂತೆಯೇ ಮುಖ್ಯಾಮುಖ್ಯತೆಯ ಭೇದ ವಿಭೇದ ಅಳಿದು ಹೋಗಿ, ನೀಚೋಚ್ಚ ಸಂಗತಿಗಳು ಸಮಸಮನಾಗಿ ಪುರಸ್ಕಾರ ಯೋಗ್ಯವಾಗುತ್ತವೆ. ತನ್ನ ಕೃತಿ ವಸ್ತುವಾಗಿರುವ ಸಮಾಜದ ಸರ್ವವ್ಯಾಪಾರಗಳೂ ಪ್ರತ್ಯಕ್ಷ ಸಂಬಂಧವಿರಲಿ ಇಲ್ಲದಿರಲಿ ಕಾದಂಬರಿಕಾರನ ಮನ್ನಣೆಗೆ ಪಾತ್ರವಾಗುತ್ತವೆ. ಇದರಿಂದಾಗಿ ಈ ಕಾದಂಬರಿಯಲ್ಲಿ ನಾಯಕ ನಾಯಿಕೆಯರೆಂದು ಹೆಸರಿಸಬಹುದಾದ ಪಾತ್ರಗಳಿಗೂ ಪ್ರಾಧಾನ್ಯವಿಲ್ಲ. ಅಲ್ಲಿಯ ಘಟನೆಗಳಿಗೆ ಏಕಸೂತ್ರ ಪ್ರಾಯವಾದ ಪಾತ್ರವಿಲ್ಲ. ಏಕಸೂತ್ರತೆ ಇರುವಂತಿದ್ದರೂ ಅದು ತುಂಬಾ ಸಪುರವಾಗಿದೆ. ಕಾದಂಬರಿಕಾರರ ಅನುಭವ ವೈಪುಲ್ಯಕ್ಕೆ ತಕ್ಕಂತೆ ಕೃತಿಯ ಭಿತ್ತಿಯೂ ಬಹು ವಿಶಾಲವಾಗಿದೆ. ನಾಲ್ಕಾರು ಮೈಲಿ ಫಾಸಲೆಯೊಳಗಿರುವ ಆರೇಳು ಹಳ್ಳಿಗಳ ವೈವಿಧ್ಯಮಯವಾದ ಜನಜೀವನ ಇಲ್ಲಿ ಹಾಸುಹೊಕ್ಕಾಗಿ ನೇಯ್ಗೆಗೊಂಡಿದೆ. ಅಲ್ಲಿ ಬರುವ ಆರು ಪ್ರಮುಖ ಸಂಸಾರಗಳಳ್ಲಿ ಒಂದೊಂದೂ ಒಂದೊಂದು ಸ್ವತಂತ್ರ ಬೃಹತ್ ಕಾದಂಬರಿಗೆ  ಸಾಮಗ್ರಿಯಾಗಬಲ್ಲ ಬಂಡವನ್ನು ಗರ್ಭೀಕರಿಸಿಕೊಂಡಿವೆ. ಇಷ್ಟೆಲ್ಲ ಕಥೆಗಳ ಒಗ್ಗೂಡುವಿಕೆಯಿಂದ ಕಾದಂಬರಿಯ ಒಟ್ಟಂದ ಕೆಡದೆ ಸಾಮುದಾಯಕ ಶೋಭೆ ಪ್ರತಿಫಲನಗೊಂಡಿರುವುದೇ ನೂತನ ತಂತ್ರದ ಯಶಸ್ಸಿಗೆ ಸಾಕ್ಷಿಯಾಗಿದೆ. ಇಲ್ಲಿಯ ಪಾತ್ರಗಳ ಸಂಖ್ಯೆ ಹಾಗೂ ಪ್ರತಿಯೊಬ್ಬರ ತನ್ನತನಗಳು ಎಂಥ ಕಲ್ಪನಾ ಶ್ರೀಮಂತನನ್ನಾದರೂ ದಂಗು ಬಡಿಸುವಂಥವು. ಪ್ರಮುಖ ಪಾತ್ರಗಳೆಲ್ಲ ಮಲೆನಾಡಿನ ಒಕ್ಕಲು ಮನೆತನಗಳಿಗೆ ಸೇರಿದವರಾದರೂ ಒಬ್ಬರು ಮತ್ತೊಬ್ಬರ ನಕಲಲ್ಲ. ಪ್ರತಿಯೊಬ್ಬರೂ ವಿಶಿಷ್ಟ ವ್ಯಕ್ತಿತ್ವವುಳ್ಳ ಚೇತನಗಳು; ಆ ಹಳ್ಳಿಯ ಸಮಾಜದ ಜೀವನಾಡಿಗಳು. ಮೊದಲನೆಯ ಹೆಂಡತಿಯಲ್ಲಿ ಮಕ್ಕಳಿಲ್ಲದ್ದರಿಂದ ತನಗೆ ವಯಸ್ಸಾಗಿದ್ದರೂ ತನ್ನ ಸಾಲಗಾರನ ಎಳೆಹರೆಯದ ಮಗಳನ್ನು ಮದುವೆಯಾಗುವ ಹೇರಾಸೆಯಿಂದ ತವಕಿಸುವ ಸಿಂಬಾವಿ ಭರಮೈ ಹೆಗ್ಗಡೆ; ಕಿಲುಬುಕಾಸು ಸಹ ಬಿಡದೆ ದುಡ್ಡಿಗೆ ದುಡ್ಡು ಗಂಟು ಹಾಕುವ ಜಿಪುಣತನದ, ತಿರುಪತಿಯಾತ್ರೆಗೆ ಹೋಗಿ ಹಿಂದಿರುಗಿ ಮುಖ ತೋರಿಸದ ದೊಡ್ಡ ಮಗನ ಕೊರಗಿನಲ್ಲಿಯೇ ಹಣ್ಣಾದ ಸುಬ್ಬಣ್ಣ ಹೆಗ್ಡೆ; ತನ್ನ ಶ್ವಾನಬುದ್ದಿಯನ್ನೂ ವಿಕಾರರೂಪವನ್ನೂ ಕಂಡು ಯಾವ ಹೆಣ್ಣೂ ಮದುವೆಯಾಗದಿದ್ದಾಗ ಭರಮೈ ಹೆಗ್ಡೆಯನ್ನು ಕುಯುಕ್ತಿಯ ಬಗಲಿಗೆ ಹಾಕಿಕೊಂಡು ತನ್ನ ತಂಗಿಯನ್ನು ಮದುವೆ ಮಾಡಿಸಿ, ಪರಸ್ಪರ ವಿನಿಮಯ ಯೋಜನೆಯಿಂದಲೆಂಬಂತೆ ಅವನ ತಂಗಿಯನ್ನು ತಾನು ಮದುವೆಯಾದ ತಿಮ್ಮಪ್ಪಹೆಗ್ಡೆ; ಮೈತುಂಬಾ ಸಾಲವಿದ್ದರೂ ‘ಕುಂಟನ ಹುಣ್ಣು’ ದೇಹವನ್ನು ಬೆಂಡುಮಾಡಿ ಸ್ವಾರ್ಥಲೋಲುಪತೆಯಿಂದ ಚಿನ್ನದಂಥ ಮಗಳ ಭವಿಷ್ಯವನ್ನೂ ಕಡೆಗಣಿಸಿ ನಾಗಕ್ಕನ ಇಚ್ಛೆಗೆ ವಿರುದ್ಧವಾಗಿಯೆ ಮೋಸದಿಂದ ಅವಳನ್ನು ಸೀರುಡಿಕೆ ಮಾಡಿಕೊಂಡು ದುರಂತವನ್ನಪ್ಪಿದ ಸೈಂಧವ ಗಾತ್ರದ ವೆಂಕಟಣ್ಣ; ವಾಸ್ತವಾದರ್ಶಗಳ ಎಲ್ಲೆಗಟ್ಟಿನಲ್ಲಿ ನಿಂತಿರುವ ಸರಳ ಶುದ್ಧ ಹೃದಯದ ಪ್ರಣಯ ಸಾಹಸಿ ಮುಕುಂದಯ್ಯ; ಚಿನ್ನದಂಥ ಮಡದಿ ಮುಗ್ಧೆ ದೇವಮ್ಮನ ಕೊರಗನ್ನು ಕಡೆಗಣಿಸಿ, ಹಿಂದೂಧರ್ಮ ಅನಾಚಾರದ ಅನಾಗರಿಕತೆಯ ಕೊಂಪೆಯೆಂದು ದೂರುತ್ತಿದ್ದ ಕ್ರೈಸ್ತಪಾದ್ರಿಗಳು ಬೀಸಿದ ಮೋಹದ ಬಲೆಯಲ್ಲಿ ಸಿಕ್ಕಿಕೊಂಡು ಎಣ್ಣೆಯಲ್ಲಿ ಬಿದ್ದ ನೊಣದಂತೆ ಒದ್ದಾಡುವ ಬೀಸೆಕಲ್ಲಿನ ದೇವಯ್ಯಗೌಡ; ಮುಕಂದಯ್ಯನನ್ನೇ ಪರದೈವವೆಂದು ನಂಬಿ, ಮುಪ್ಪಿನ ಭರಮೈಹೆಗ್ಡೆ ಯಿಂದೊದಗಿದ್ದ ಅಪಾಯದಿಂದ, ಪಾರಾಗಲು ಎಂಥ ಕಷ್ಟ ಪರಂಪರೆಯನ್ನಾದರೂ ಸಹಿಸಲು ಸಿದ್ಧವಾಗಿದ್ದ ಮದುಮಗಳು ಮುಗ್ಧೆ ಚಿನ್ನಮ್ಮ; ಪ್ರಾಣಾಪಾಯವನ್ನು ಲೆಕ್ಕಿಸದ ಪ್ರಣಯ ಸಾಹಸದಿಂದ, ‘ಹುಲಿಯ’ ನಾಯಿಗೂ ತನಗೂ ಇದ್ದ ಅವಿನಾಭಾವ ಸಂಬಂಧದಿಂದ, ಧೈರ್ಯ ಶೌರ್ಯಗಳಿಂದ ನಾಯಕ ಪಾತ್ರದಂತೆ ಹಳ್ಳಿಯ ಬದುಕನ್ನು ಮಾತ್ರವಲ್ಲ ಇಡೀ ಕಾದಂಬರಿಯನ್ನು ವ್ಯಾಪಿಸಿರುವ ಗುತ್ತಿ; ನೋಡಿದವರ ಬಯಕೆಯಾಗಿ ಒಡೆಯನ ಪ್ರಾಣವಾಗಿ, ತನ್ನವರಲ್ಲದವರಿಗೆ ಹುಲಿಯಾಗಿ, ವನ್ಯಜಂತುಗಳಿಗೆ ಯಮಕಂಟಕವಾಗಿ, ತನ್ನ ಮಹಾಗಾತ್ರ ಪರಾಕ್ರಮಗಳಿಂದ ಮನುಷ್ಯ ಪಾತ್ರವೆಂಬಂತೆ ಇಡೀ ಪಾತ್ರವರ್ಗದ ಮೇಲೆ ಅಚ್ಚಳಿಯದ ಪ್ರಭಾವ ಬೀರಿ ದುರಂತ ಮರಣವನ್ನೈದಿದ ಹುಲಿಯ; ಸ್ವಾಮಿನಿಷ್ಠೆ ಪರೋಪಕಾರಬುದ್ದಿ, ಮುಗ್ಧ ಪ್ರೇಮಗಳೇ ಮೈವೆತ್ತಂತಿದ್ದು, ತಮ್ಮ ಬದುಕೇ ಪ್ರೇಮಸಂಹಿತೆಯಾಗಿ, ಏಕದೇಹ ನ್ಯಾಯದಿಂದ ಸಂಸಾರ ಜೀವನದ ಸಫಲತೆಗೂ ಮಾಧುರ್ಯಕ್ಕೂ ಜೀವಂತ ಸಾಕ್ಷಿಯಂತಿರುವ ಎಣೆವಕ್ಕಿಗಳಾದ ಐತ-ಪೀಂಚಲು; ಗಂಡನ ವಿಯೋಗದಿಂದ ಬಾಳೆಲ್ಲ ಗೋಳಾಗಿ ಸಂಕಟಪಡುತ್ತಿದ್ದ ತಾಯಿಯ ಸಂತಾಪದಲ್ಲಿ ಪಾಲ್ಗೊಂಡು ಆಗಾಗ್ಗೆ ಅವಳ ಕಣ್ಣೆದೆಗಳಿಗೆ ತಂಪೆರೆಯುತ್ತಾ ಓಡಾಡಿಕೊಡಿದ್ದ ಹಸುಳೆ ಧರ್ಮು; ಹಲವು ಕೂಟೋಪಾಯಗಳಿಂದ ಮೋಹ ವಸ್ತುಗಳ ಸಲಕರಣೆಯಿಂದ ಮತಾಂತರಗೊಳಿಸುವ ಪಾದ್ರಿ ಜೀವರತ್ನಯ್ಯ; ದಕ್ಷಿಣ ಕನ್ನಡ ಜಿಲ್ಲೆಯಿಂದ ಪಾಣಿಪಂಚೆ ಸಟ್ಟುಗ ವಿನಾ ರಿಕ್ತನಗ್ನನಾಗಿ ಬಂದು ಥಳುಕು ಮೋಸ ಚಿತಾವಣೆ ತಂದುಹಾಕುತನ ಲಪಟಾವಣೆಗಳ ಮೂಲಕ ಅಪಾರ ಶ್ರೀಮಂತರಾದ ಕಲ್ಲೂರು ಮಂಜಭಟ್ಟರು; ತನ್ನ ಕಣ್ಮುಂದೆಯೇ ಮಡದಿ ಪರಭಾರೆಯಾಗುತ್ತಿದ್ದುದನ್ನು ಕಂಡು ನಿಟ್ಟುಸಿರು ಬಿಡುತ್ತ ನಿಸ್ಸಹಾಯಕನಾಗಿ ಪರಿತಪಿಸುತ್ತಿದ್ದ ಪಿಜಣ; ಮೋಸ ತಗಲೂಫಿಗಳಿಗೆ ಹೆಸರಾಗಿದ್ದ ಶ್ವಾನಬುದ್ದಿಯ ಚೀಂಕ್ರ ಸೇರೆಗಾರ; ತಲೆಹಿಡುಕುತನವನ್ನು ವರಿಸಿದ್ದ ನಾಗತ್ತೆ ಅಂತಕ್ಕ ಸೆಟ್ಟಿಯರು; ಹೆತ್ತತಾಯಿಯ ಪಾಪಕರ್ಮಕ್ಕೆ ಬಲಿಯಾದ ಕಾವೇರಿ; ಆಗಾಗ್ಗೆ ಇಣುಕಿಣುಕಿ ತಲೆಮರೆಸಿಕೊಳ್ಳುವ ಶಂಕರಹೆಗ್ಡೆ, ಕಣ್ಣಾಪಂಡಿತ, ರಂಗಪ್ಪಗೌಡ, ಅನಂತಯ್ಯ, ಕಲ್ಲಯ್ಯ ಗೌಡ, ಸೇಸನಾಯ್ಕ, ದೊಡ್ಡಬೀರ, ಜಟ್ಟಮ್ಮ, ಸೇಸಿ ಮೊದಲಾದ ಇನ್ನೂ ಹಲವು ಪಾತ್ರಗಳು ಕಾದಂಬರೀ ದೇಹದ ಕೀಲುಗಳಾಗಿ ಕೂಟಿಗಳಾಗಿ ಬಂಧನಿಗಳಾಗಿ ತಂತಮ್ಮ ಕರ್ತವ್ಯ ನಿರ್ವಹಿಸುತ್ತಾರೆ. ಹಸಲವರು, ಹೊಲೆಯರು, ಹಳೆಪೈಕದವರು, ಸಾಬರು, ಕಮ್ಮಾರರು, ಪೋಲೀಸರು – ಹೀಗೆ ಆ ಸಂಕೀರ್ಣ ಸಮಾಜದ ನಾನಾ ಜಾತಿಯ ನಾನಾ ವರ್ಗದ ಹಲವಾರು ಕಸಬುಗಳ ಜನಜೀವನ ಯಥಾವತ್ತಾಗಿ ಈ ಕಾದಂಬರಿಯಲ್ಲಿ ನಿರೂಪಣೆಗೊಂಡಿದೆ.

ಮಲೆನಾಡಿನ ಮತ್ತು ಅಲ್ಲಿಯ ಸಾಮಾಜಿಕ ಜೀವನದ ಹಿನ್ನೆಲೆಯಲ್ಲಿ ಈ ಕಾದಂಬರಿ ರೂಪುಗೊಂಡಿದೆ. ಪ್ರಕೃತಿಯ ಚೆಲುವು ಅಲ್ಲಿಯ ಜನರನ್ನರಳಿಸದಿದ್ದರೂ, ಅದರ ಭೀಕರತೆ ಮಾತ್ರ ಅವರ ಬದುಕಿನ ಮೇಲೆ ಅಪಾರ ಪರಿಣಾಮಕಾರಿಯಾಗಿದೆ. ಯಾವ ಜಾತಿಯವನಾಗಲಿ, ಯಾವ ಕಸುಬಿನವನಾಗಲಿ ಎಲ್ಲರೂ ತಾರತಮ್ಯ ಭಾವವಿದ್ದರೂ ಪ್ರಕೃತಿಯ ದೃಷ್ಟಿಯಿಂದ ಅವರೆಲ್ಲರೂ ಸರಿಸಮಾನರೇ. ಮಳೆರಾಯ ಹುಬ್ಬುಗಂಟಿಕ್ಕಿ ಅಬ್ಬರಿಸಿ ಕುಣಿಯುವಾಗ ಜನರು ಪಡಬೇಕಾದ ಕಷ್ಟನಿಷ್ಠುರಗಳಿಗೆ ಮಿತಿಯಿಲ್ಲ. ಆ ಮಳೆಯಲ್ಲಿಯೆ ಬದುಕಿನ ವ್ಯಾಪಾರಗಳೆಲ್ಲ ಜರುಗಬೇಕು. ವನ್ಯಜಂತುಗಳ ಜೊತೆಯಲ್ಲಿ ಇಂಬಳಗಳ ಸ್ನೇಹದಲ್ಲಿ, ಗುಡುಗು ಸಿಡಿಲುಗಳ ಒಡಲಲ್ಲಿ, ನೆರೆಯ ಸಹವಾಸದಲ್ಲಿ, ಜಿರಿತ, ಹಂದಿ ದನಗಳ ಕೊಟ್ಟಿಗೆಯ ಆಸರೆಯಲ್ಲಿ; ಅಪಾಯದ ನೆರೆಯಲ್ಲಿ, ರೋಗರುಜಿನಗಳ ಅಪ್ಪುಗೆಯಲ್ಲಿ ಅವರ ಬದುಕು ಸಾಗಬೇಕಾಗಿದೆ. ನಿರಂತರ ಕಷ್ಟಕ್ಲೇಶಗಳ ಸರಣಿಯಲ್ಲಿ ಅವರಿಗೆ ತಾತ್ಕಾಲಿಕವಾಗಿಯಾದರೂ ತೃಪ್ತಿ ಸಮಾಧಾನ ಗಳನ್ನು ನೀಡುವ ವಸ್ತುಗಳೆಂದರೆ ಕಳ್ಳು ಮಾಂಸಗಳು. ನಾಲ್ಕಾರು ಮನೆಗಳುಳ್ಳ ಮೇಗರವಳ್ಳಿಯೇ ಅವರ ಮಹಾನಗರ. ನಾಗರಿಕತೆಯ ಸೋಂಕೇ ಸೇರದ ಆ ಜನಕ್ಕೆ ತಟಮಟ ತಿಳಿಯದು; ಹುಸಿ ಕಪಟ ಸೇರವು; ಕೃತ್ರಿಮತೆ ಕೂಡದು. ಅವರ ನುಡಿ ನೇರ, ನಡೆ ಸಸಿನ, ಪಾಪದ ಹೆದರಿಕೆ ದೈವದ ನಂಬಿಕೆಗಳಿಂದ ಅವರ ಧರ್ಮಾಸಕ್ತಿ ಚಿಗುರೊಡೆಯುತ್ತದೆ. ಅವರ ಆಸೆ ಆಮಿಷಗಳಿಗೆ ಮಿತಿಯುಂಟು; ಅವರ ನೀತಿ ಸಂಹಿತೆಗೆ ಗಡಿಯುಂಟು. ಇಳಿವಯಸ್ಸಿನ ಹಣವಂತ ಲೋಕಾನುಭವವಿಲ್ಲದ ಎಳೆಹರೆಯದ ಹೆಣ್ಣನ್ನು ಇಬ್ಬರು ಮೂವರು ಹೆಂಡಿರ ಮೇಲೆ ಮದುವೆ ಮಾಡಿಕೊಳ್ಳಬಹುದು; ಲೈಂಗಿಕ ಜೀವನದ ಪೂರ್ವಾನುಭವವುಳ್ಳ ಹೆಣ್ಣನ್ನು ಕಂಡು ಕಂಡೂ ಗುತ್ತಿಯಂಥ ಹೊಲೆಯ ಮದುವೆಯಾಗಬಹುದು. ಇಲ್ಲೆಲ್ಲಾ ನೀತಿಯ ಪ್ರಶ್ನೆ ಏಳುವುದಿಲ್ಲ. ಆತ್ಮಗೌರವಕ್ಕೆ ಧಕ್ಕೆಯೊದಗುವುದಿಲ್ಲ. ಹಾರುವ ಮೊದಲ್ಗೊಂಡು ಹೊಲೆಯ ಕಡೆಯಾಗಿ ಆಯಾಯ ಜಾತಿಯವರು ತಂತಮ್ಮ ಕುಲನೀತಿಯನ್ನು ಬಿಡಬಾರದು; ಕಟ್ಟುಕಟ್ಟಳೆಗಳನ್ನು ಮೀರಬಾರದು. ಹಾರುವ ಹಾರುವನಾಗಿಯೇ ಶೂದ್ರ ಶೂದ್ರನಾಗಿಯೇ ಉಳಿಯಬೇಕೆಂಬುದು ಆ ಸಮಾಜದ ಇರಾದೆ. ಇದು ಆ ಜನರ ಬಾಳನ್ನು ರೂಪಿಸುವ ಶಕ್ತಿಯಾಗಿದೆ.

ಆ ಜನರ ಚಿತ್ತವನ್ನು ಕಲಕುವ, ಕ್ರಿಯಾಶಕ್ತಿಯನ್ನು ಪ್ರಚೋದಿಸುವ, ಭಾವನೆಗಳನ್ನು ಪ್ರೇರಿಸುವ, ಕೊನೆಗೆ ಅವರ ಬದುಕನ್ನು ರೂಪಿಸುವ ಮಹಾಶಕ್ತಿಯೆಂದರೆ ಹೆಣ್ಣಾಸೆ. ಸದ್ದು ಗದ್ದಲಗಳಿಲ್ಲದ ಪ್ರಶಾಂತ ಜೀವನವನ್ನು ಕದಡುವ ಸಂಗತಿಯೆಂದರೆ ಹೆಣ್ಣ ಮೇಲಿನ ಮೋಹ. ಅದು ಅವರ ಕೈಯಿಂದ ಎಂಥ ಸಾಹಸ ಕಾರ್ಯವನ್ನಾದರೂ ಮಾಡಿಸುತ್ತದೆ. ತಿಮ್ಮಿಗಾಗಿ ಗುತ್ತಿ ಮಳೆಗಾಲದ ಭಯಂಕರ ರಾತ್ರಿಯಲ್ಲಿ ಕಾಡುಮೇಡುಗಳಲ್ಲಿ ಅಲೆದಲೆದು ಸುಸ್ತಾಗುತ್ತಾನೆ. ಕೊನೆಗೆ ಊರುಕೇರಿಯನ್ನುಳಿದು ಬೇರೊಂದು ಸೀಮೆಗೆ ತಲೆತಪ್ಪಿಸಿಕೊಂಡು ಓಡಿ ಹೋಗುತ್ತಾನೆ. ಕುಂಟನ ಹುಣ್ಣಿನಿಂದ ನರಳುತ್ತಿರುವ ವೆಂಕಟಣ್ಣ ಸಾಲಸೋಲವನ್ನಾದರೂ ಮಾಡಿ ಚಿನ್ನದಂಥ ಮಗಳ ಸುಖಕ್ಕೂ ತಿಲಾಂಜಲಿಯಿತ್ತು ಸಿಗ್ಗಿಲ್ಲದೆ ಸೀರುಡಿಕೆ ಮಾಡಿ ಕೊಳ್ಳುತ್ತಾನೆ; ತಾನು ಅಪುತ್ರನೆಂಬ ನೆಪದಿಂದ ಕಿರುಹರೆಯದ ಹೆಣ್ಣಿನ ಮೈಯ್ಯಸೆಗೆ ಜೋತು ಬೀಳುತ್ತಾನೆ; ರೂಕ್ಷ ರೂಪದ ತಿಮ್ಮಪ್ಪ ಹೆಗ್ಡೆಯಂತೂ ತನಗೊಂದು ಹೆಣ್ಣು ದೊರಕಿಸಿ ಕೊಳ್ಳಲು ಬಹುಬುದ್ದಿಯನ್ನು ಖರ್ಚುಮಾಡಿ ಅನೇಕ ಹುನಾರುಗಳನ್ನು ನೆನೆಯುತ್ತಾನೆ; ದೇವಮ್ಮನಂಥ ಸಾಧ್ವಿಯಲ್ಲಿ ಸವಿಗಾಣದೆ ದೇವಯ್ಯಗೌಡ ಕುಲಗೆಟ್ಟ ಹೆಣ್ಣುಗಳ ಹಿಂದೆ ಓಡಾಡುವುದಲ್ಲದೆ ಜಾತಿ ಬಿಡಲೂ ಸಿದ್ಧನಾಗಿದ್ದಾನೆ. ಚೀಂಕ್ರ ಸೇರೆಗಾರನ ಹಾಗೂ ಕಾವೇರಿಯ ವಿಷಯಲಂಪಟತನವಂತೂ ಹೇಳತೀರದು; ಸೇಸೆನಾಯ್ಕನ ಕತೆ ಬೇರೆಯಲ್ಲ. ಕೊನೆಗೆ ಕಾದಂಬರಿಯ ಮೇಟಿ ಪಾತ್ರದಂತಿರುವ ಸುಸಂಸ್ಕೃತ ವ್ಯಕ್ತಿ ಮುಕುಂದಯ್ಯ ಮಲೆಯ ಮದುಮ ಗಳಿಗಾಗಿ ಅನೂಹ್ಯವಾದ ಕಷ್ಟ ಪರಂಪರೆಯನ್ನೆದುರಿಸಬೇಕಾಗುತ್ತದೆ; ಐತ-ಪೀಂಚಲರ ಕಾಮವಿಹಾರ ಯಾರೂ ಮರೆಯುವಂತಹುದಲ್ಲ. ಒಟ್ಟಿನಲ್ಲಿ ಪ್ರಣಯ ಸಾಹಸ ವ್ಯಾಪಾರಗಳು ಕಾದಂಬರಿಯ ಘಟನಾಪರಂಪರೆಗೆ ಪ್ರೇರಕಶಕ್ತಿಯಾಗಿ ಚಾಲಕಶಕ್ತಿಯಾಗಿ ಕಾರಣಭೂತ ವಾಗಿವೆಯೆಂದು ಹೇಳಲಡ್ಡಿಯಿಲ್ಲ. ಆದರೆ ಚೀಂಕ್ರ ಕಾವೇರಿಯರ ಪ್ರಣಯ ಪ್ರಸಂಗಗಳನ್ನು ಬಿಟ್ಟರೆ ಉಳಿದುವೆಲ್ಲ ಆಯಾಯ ಸಮಾಜದ ಕಟ್ಟುನಿಟ್ಟುಗಳಿಗನುಗುಣವಾಗಿ ಜರುಗುತ್ತವೆ.

ಗಡ್ಡದಯ್ಯನ ಭವಿಷ್ಯ ಸೂಚನೆ ಹೊರತಾಗಿ ಕಾದಂಬರಿ ಸಂಪೂರ್ಣವಾಗಿ ವಾಸ್ತವತೆಯ ತಳಹದಿಯ ಮೇಲೆ ನಿಂತಿದೆ; ಉದ್ದಕ್ಕೂ ಮಣ್ಣಿನ ವಾಸನೆ ಮುಖಕ್ಕೆರಚುತ್ತದೆ. ಜಟ್ಟಮ್ಮ ಲಕ್ಕಮ್ಮರ ಲಟಾಪಟಿಯ ವಿವರಣೆಯಲ್ಲಿ, ಸುಬ್ಬಣ್ಣ ಹೆಗ್ಗಡೆಯವರ ದಿನಚರಿಯ ವರ್ಣನೆ ಯಲ್ಲಿ, ಕಣ್ಣಾಪಂಡಿತನ ಮದ್ದುತಾಯಿತಗಳ ಸಾಮರ್ಥ್ಯ ನಿರೂಪಣೆಯಲ್ಲಿ, ಐತ-ಪೀಂಚಲರ ನಗ್ನ ರತಿಕ್ರೀಡೆಯ ಪ್ರದರ್ಶನದಲ್ಲಿ, ಐವರು ತುರುಕರ ವ್ಯವಹಾರ ಪ್ರಸಂಗದಲ್ಲಿ, ನಾಗಕ್ಕನ ಸೀರುಡಿಕೆಯ ಚಿತ್ರಣದಲ್ಲಿ, ಹಾರುವರ ರೀತಿನೀತಿಗಳ ಲೆಕ್ಕಣಿಕೆಯಲ್ಲಿ, ಇನ್ನೂ ನಾನಾ ವಿಚಾರಗಳಲ್ಲಿ ಸಹಜತೆ ಎದ್ದು ಕಾಣುತ್ತದೆ. ಶೂದ್ರರ ಮೌಢ್ಯ ಸಂಪ್ರದಾಯಗಳಿಂದ ನಾಡಿನ ಪ್ರಗತಿ ಕುಂಠಿತವಾದಂತೆಯೇ, ಕೆಲವು ಹಾರುವರ ಲಪಟಾವಣೆ ಸ್ವಾರ್ಥಪರತೆಗಳಿಂದಾಗಿ ರಾಷ್ಟ್ರಕ್ಷೇಮ ಅಪಾಯದ ತಡಿಯಲ್ಲಿರುವ ಸಂಗತಿಯನ್ನು ಮರೆಮಾಚಬೇಕಾಗಿಲ್ಲ. ಇದು ಐತಿಹಾಸಿಕ ಸತ್ಯ. ಉತ್ತಮರೆನಿಸಿಕೊಂಡವರು ಹಿಂದುಳಿದವರನ್ನು ಔದಾರ್ಯದಿಂದ ನಡೆಸಿಕೊಂಡಿದ್ದರೆ ಇಂದು ಪಾಕೀಸ್ಥಾನ ಉದ್ಭವಿಸುತ್ತಿರಲಿಲ್ಲ; ನಾಗಾಲ್ಯಾಂಡ್ ಸಮಸ್ಯೆ ಜ್ವಲಿಸುತ್ತಿರಲಿಲ್ಲ. ಭರತಖಂಡ ಛಿದ್ರವಿಚ್ಛಿದ್ರವಾಗುತ್ತಿರಲಿಲ್ಲ. ಸಮಾಜವನ್ನು ಹಸನುಗೈಯ್ಯ ಬೇಕಾದ ಸಾಹಿತಿ ಈ ಕಟುಸತ್ಯವನ್ನು ಅಪ್ರಿಯವಾದರೂ ಸರಿಯೆ ಹೊರಗೆಡಹಲೇಬೇಕು. ಒಕ್ಕಲಿಗರ ಹೊಲೆಯರ ಹಳೆಪೈಕದವರ ದೋಷ ದೌರ್ಬಲ್ಯಗಳನ್ನು ಬಯಲಿಸಿದಂತೆಯೇ ಹಾರುವರ ರೀತಿನೀತಿಗಳನ್ನು ಅತ್ಯಂತ ಸಹಜವಾಗಿ ವಿವರಿಸಿದೆ. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಳ್ಳುವ ಜನಕ್ಕೆ ಇದು ಪಥ್ಯವಾಗುವುದಿಲ್ಲ.

ಕುವೆಂಪು ಅವರ ಅನುಭವ ಸಂಪತ್ತು ಅಪೂರ್ವವಾದದ್ದು; ಅವರ ನೆನಹಿನ ಬುತ್ತಿ ಅಕ್ಷಯವಾದದ್ದು. ಪಾತ್ರನಿರ್ಮಾಣ ಕೌಶಲದಿಂದ, ಅನುಭವ ಸಾಂದ್ರತೆಯಿಂದ, ನಿರೂಪಣೆಯ ವೈಖರಿಯಿಂದ, ನೂತನ ತಂತ್ರದಿಂದ ವಿಪುಲವಾದ ಪದಸಂಪತ್ತಿಯಿಂದ ಕನ್ನಡಕ್ಕೆ ಇದೊಂದು ವಿಶಿಷ್ಟ ಕಾದಂಬರಿಯಾಗಿದೆ. ಕನ್ನಡವಾಗಲಿ, ಉರ್ದುವಾಗಲಿ, ಸಂಸ್ಕೃತವಾಗಲಿ ಆಡುಮಾತಿನಲ್ಲಿ ಜೀವಂತವಾಗಿರುವ ಪದಗಳ ಬಳಕೆಯಿಂದ, ಪ್ರಾದೇಶಿಕ ನುಡಿ ಮತ್ತು ನುಡಿಗಟ್ಟುಗಳ ಸಮುಚಿತವಾದ ಜೋಡಣೆಯಿಂದ ಕಾದಂಬರಿಯಲ್ಲಿ ನೆಲದ ಸೊಗಡು ಮೂಗಿಗೆ ಬಡಿಯುತ್ತದೆ. ಇಷ್ಟು ಸಶಕ್ತವಾಗಿ, ಧ್ವನಿಪೂರ್ಣವಾಗಿ, ಕಾಂತಿಯುತವಾಗಿ ಭಾಷೆಯನ್ನು ಬಳಸಬಲ್ಲ ಕಾದಂಬರಿಕಾರರು ಕನ್ನಡದಲ್ಲಿ ಕಡಿಮೆ; ಪೇಟೆಯ ನಾಗರಿಕರ ಕೃತ್ರಿಮ ಭಾಷೆಯನ್ನೊಳಗೊಂಡ ಕಾದಂಬರಿಗಳೇ ದಟ್ಟವಾಗಿವೆ. ಒಂದು ಮಿತಪರಿಸರಣದಲ್ಲಿ ನಾಲ್ಕಾರು ತಿಂಗಳ ಅವಧಿಯಲ್ಲಿ ನಡೆದ ನಾನಾ ಪ್ರಸಂಗಗಳನ್ನು ಮಹಾಕಾದಂಬರಿಯ ಮಗ್ಗದಲ್ಲಿ ಸಾಲಂಕಾರವಾಗಿ ಅತ್ಯಂತ ಪರಿಣಾಮಕಾರಿಯಾಗಿ ನೆಯ್ದ ಕಾದಂಬರಿಕಾರರ ಪ್ರತಿಭೆ ಅನ್ಯಾದೃಶವಾದುದು.