ಮಾನವ ನಡೆಯುವ ಎರಡು ಕಾಲಿನ ರಾಜಕೀಯ ಪ್ರಾಣಿಯೆಂದು ಪ್ರಾಚೀನ ಮಹಾ ಮೇಧಾವಿ ಅರಿಸ್ಟಾಟಲ್ ಎರಡು ಸಾವಿರ ವರ್ಷಗಳ ಹಿಂದೆಯೇ ಘೋಷಿಸಿದನು. ಈ ಘೋಷಣೆಯ ಪ್ರಕಾರ ಪ್ರಾಣಿವರ್ಗದಿಂದ ಮನುಷ್ಯನನ್ನು ಪ್ರತ್ಯೇಕಿಸುವ ವಿಶಿಷ್ಟ ಲಕ್ಷಣವೆಂದರೆ ರಾಜಕೀಯ ಪ್ರತಿಭೆ. ಈ ಪ್ರತಿಭೆ ಪ್ರಮಾಣಭೇದದಿಂದ ಆನುವಂಶಿಕವಾಗಿ ಜನ್ಮಾರಭ್ಯ ಪ್ರತಿಯೊಬ್ಬ ಮನುಷ್ಯನಲ್ಲಿಯೂ ರಕ್ತಗತವಾಗಿ ಕೂಡಿ ಬಂದಿರುತ್ತದೆಂಬ ಅಭಿಪ್ರಾಯವೂ ಮೇಲಣ ಸೂಕ್ತಿಯಲ್ಲಿ ಅಡಕಗೊಂಡಿದೆ. ಅವನು ಕುಟುಂಬಿಯಾದೊಡನೆಯೆ ಜಾಗೃತವಾದ ರಾಜಕೀಯ ಪ್ರಜ್ಞೆ, ಅವನು ಕುಲಪತಿಯಾದಂತೆ, ಸಮಾಜ ಜೀವಿಯಾದಂತೆ, ರಾಷ್ಟ್ರಾಭಿಮಾನಿಯಾದಂತೆ, ಅವನ ಜೀವನದಲ್ಲಿ ಸರ್ವವ್ಯಾಪಿಯಾಯಿತು. ಸರ್ವಸಂಗ ಪರಿತ್ಯಾಗಿಯಾದ ಸನ್ಯಾಸಿ ಹೊರತು ರಾಜಕೀಯ ವಿಚಾರಕ್ಕೆ ಮಾರುಹೋಗದ ಮನುಷ್ಯನಿಲ್ಲ. ಅವನು ಬೇಡವೆಂದರೂ ತನ್ನನ್ನಟ್ಟಿಕೊಂಡು ಬರುತ್ತದೆ. ಕುಟುಂಬ ಕಲ್ಯಾಣ, ಸಾಮಾಜಿಕ ಭದ್ರತೆ ಮತ್ತು ದೇಶ ಕ್ಷೇಮಗಳು ರಾಜಕೀಯ ಚಲನವಲನಗಳನ್ನವಲಂಬಿಸುತ್ತವೆ. ಅಷ್ಟೇ ಅಲ್ಲ, ಜಗತ್ತಿನ ಆಗುಹೋಗುಗಳು, ರಾಷ್ಟ್ರಗಳ ಪರಸ್ಪರ ಬಾಂಧವ್ಯ, ಸಮರ ಶಾಂತಿಗಳು, ಆರ್ಥಿಕ ವ್ಯವಹಾರಗಳು, ಕೊನೆಗೆ ಮಾನವನ ಮಾನಸಿಕ ಕ್ಷೋಭೆ ಸಮಾಧಾನಗಳು ಸಮಕಾಲೀನ ರಾಜಕೀಯ ವಿಚಾರಗಳನ್ನವಲಂಬಿಸುತ್ತವೆ. ವಿಜ್ಞಾನವೂ ರಾಜಕೀಯಕ್ಕೆ ಶರಣಾಗಿರುವಾಗ, ಲೌಕಿಕ ಜೀವನದಲ್ಲಿ ಅದರ ಪ್ರಾಮುಖ್ಯತೆ ಪ್ರಾಬಲ್ಯಗಳೆಷ್ಟೆಂಬುದನ್ನು ಒತ್ತಿ ಹೇಳಬೇಕಾಗಿಲ್ಲ. ಅದು ಮಾನವ ಜೀವನದ ಅನಿವಾರ್ಯಾಂಶವಾದುದರಿಂದ ಅವನ ಸಕಲ ವ್ಯವಹಾರಗಳಲ್ಲಿಯೂ ಪ್ರಕಾರಾಂತರವಾಗಿಯೋ ಗುಪ್ತಗಾಮಿಯಾಗಿಯೋ ಸ್ಪಷ್ಟಗೋಚರವಾಗಿಯೋ ಅಷ್ಟೋ ಇಷ್ಟೋ ಕಾಣಿಸಿಕೊಳ್ಳುತ್ತದೆ.

ರಾಜಕೀಯ ಜೀವನ ದಿಕ್ಕಾಪಾಲಾಗಿ ಹರಿಯದಂತೆ ಕಡಿವಾಣ ಹಾಕುವ, ದುರಾಚಾರದಿಂದ ಹೊಲಸಾಗಿ ನಾರದಂತೆ ಲೇಸುಗೆಯ್ಯುವ, ಕಳಂಕಕ್ಕೆ ಗುರಿಯಾಗದಂತೆ ತಿದ್ದುವ ರೂಪಿಸುವ ಉದಾತ್ತಗೊಳಿಸುವ ಮೂವರು ಸಮರ್ಥ ವ್ಯಕ್ತಿಗಳೆಂದರೆ ಪ್ರಜಾಭಿಪ್ರಾಯವನ್ನು ಪ್ರತಿನಿಧಿಸುವ  ನಾಯಕ, ಪಕ್ಷಪಾತ ದೂರವಾದ ಶೀಲಸ್ವಭಾವದ ಪತ್ರಿಕಾಕರ್ತ ಮತ್ತು ಪ್ರತಿಭಾಸಂಪನ್ನವಾದ ಮಹಾಸಾಹಿತಿ. ಈ ಮೂವರು ವ್ಯಕ್ತಿಗಳು ಯುಗಧರ್ಮಕ್ಕನುಗುಣವಾಗಿ, ನಾಡಿನ ಕ್ಷೇಮಾಭ್ಯುದಯ ದೃಷ್ಟಿಯಿಂದ ರಾಜಕೀಯ ವಿಚಾರಗಳನ್ನು ಪರಿಷ್ಕರಿಸಿ,  ನೂತನ ತತ್ವಗಳನ್ನು ಪ್ರತಿಪಾದಿಸಿ, ಜನಜೀವನದಲ್ಲಿ ಸ್ಫೂರ್ತಿ ಉತ್ಸಾಹಗಳನ್ನು ತುಂಬುತ್ತಾರೆ.

ಸಾಹಿತ್ಯವೊಂದು ಕಿರುಬ್ರಹ್ಮಾಂಡ; ಅದಕ್ಕೆ ಹೊರತಾದ ವಸ್ತುವಿಲ್ಲ. ಇದು ಮೇಲು ಅದು ಕೀಳು ಎನ್ನುವ ತಾರತಮ್ಯ ಮೂಲವಾದ ಆಡಂಬರಾಹಂಕಾರಗಳಿಗೂ ಅಲ್ಲಿ ತಾವಿಲ್ಲ. ಸಾಹಿತಿ ಪ್ರಥಮತಃ ಮಾನವ. ಮಾನವ ಕಲ್ಯಾಣ ಸಾಧನೆಯೇ ಅವನ ಚರಮಗಂತವ್ಯ; ಅದನ್ನು ಮರೆತ ಕವಿ ಆತ್ಮಹಂತಕನಾಗುತ್ತಾನೆ. ಮಾನವನ ಪುರುಷಾರ್ಥ ಸಾಧನೆಗೆ ನೆರವಾಗುವಂತಹ ಸಕಲ ವ್ಯವಹಾರಗಳಲ್ಲಿಯೂ ಅವನು ಆಸಕ್ತಿ ವಹಿಸುತ್ತಾನೆ. ಅಂಥ ಪ್ರಮುಖ ವ್ಯವಹಾರಗಳಲ್ಲಿ ರಾಜಕೀಯವೂ ಒಂದು; ಅಷ್ಟೇ ಅಲ್ಲ, ಅದು ಎಲ್ಲ ವ್ಯವಹಾರಗಳ ಮೇಲೆಯೂ ಆಧಿಪತ್ಯ ನಡೆಸುವಂಥ ಶಿಖರ ವ್ಯವಹಾರವೆಂದೇ ಹೇಳಬಹುದು. ಸಮಾಜದ ಏರುಬೀಳುಗಳು, ನಾಡಿನ ಗೌರವ ಪ್ರತಿಷ್ಠೆಗಳು, ಮಾನವನ ಐಹಿಕಾಭ್ಯುದಯಗಳು ರಾಜನೀತಿಯನ್ನವಲಂಬಿಸಿರುವಾಗ, ಮಾನವತಾವಾದದಲ್ಲಿ ಆಸಕ್ತಿಯಿರುವ ಸಾಹಿತಿ ಅದನ್ನು ನಿರ್ಲಕ್ಷಿಸುವಂತಿಲ್ಲ. ಅರ್ಹಾನರ್ಹರೆಲ್ಲ ಪಾಲುಗೊಳ್ಳಬಹುದಾದ ರಾಜಕೀಯ ನಾಟಕದಲ್ಲಿ ಆಸುರೀಶಕ್ತಿಗಳು ಲಂಗುಲಗಾಮಿಲ್ಲದೆ ಕೈರಾತ ರೀತಿಯಿಂದ ಅಟ್ಟಹಾಸದಿಂದ ವರ್ತಿಸಿ, ಸಾತ್ತ್ವಿಕಶಕ್ತಿಗಳನ್ನು ವಿಹ್ವಲಗೊಳಿಸುವ ಸಂಭವವೇ ಹೆಚ್ಚು. ಆಗ ಒಬ್ಬ ಗಾಂಧಿಯೋ ಒಬ್ಬ ಸಾಹಿತಿಯೋ ಕೇವಲ ಸಾಕ್ಷೀ ಪ್ರಜ್ಞೆಯ ಕ್ರಿಯಾಶಕ್ತಿಯಾಗಿ ಕಪಟ ಕುಹಕ ದ್ವೇಷ ಮಾತ್ಸರ್ಯಾದಿ ಪೈಶಾಚಿಕ ಪ್ರವೃತ್ತಿಗಳಿಂದ ಮಲಿನವಾಗಿರುವ ರಾಜಕೀಯ ಕ್ಷೇತ್ರವನ್ನು ಶುದ್ದಿಗೊಳಿಸದಿದ್ದರೆ ಮಾನವಕೋಟಿಗೆ ಸುಖವಿಲ್ಲ, ಜಗತ್ತಿನ ಭವಿಷ್ಯಕ್ಕೆ ಗತ್ಯಂತರವಿಲ್ಲ. ಕಾಲಕಾಲಕ್ಕೆ ಇಂಥ ಗಾಂಧಿ ಮತ್ತು ಸಾಹಿತಿಗಳು ಭೀಷ್ಮನಾಗಿಯೋ ವ್ಯಾಸನಾಗಿಯೋ ಹುಟ್ಟಿ ಜಗತ್ತಿನ ಕ್ಷೇಮ ಶಾಂತಿ ಸಾಧನೆಯಲ್ಲಿ ನಿರತರಾಗುತ್ತಾರೆ. ಸಾಹಿತಿಯ ಮಾತು ಮಂತ್ರವಾಗಿ, ಲೇಖನಿ ಖಡ್ಗವಾಗಿ, ಬುದ್ದಿ ಸಿದ್ಧೌಷಧವಾಗಿ, ತಪಸ್ಸು ದೈವೀಮಾಯೆಯಾಗಿ, ಅವನ ಹಾರೈಕೆಯೇ ಕಾಮಧೇನುವಾಗಿ ರಾಜಕೀಯ ಕ್ಷೇತ್ರವನ್ನು ಪಾವನಗೊಳಿಸುತ್ತದೆ.

ಸಾಮಾನ್ಯವಾಗಿ ಅಂತರ್ಮುಖಿಯಾಗಿ, ದೈವೀಪ್ರಜ್ಞೆಯ ಅಧ್ಯಾತ್ಮ ಭೂಮಿಕೆಯಲ್ಲಿ ನಿವಾಸಿಯಾಗಿರುವ ಕವಿಚೇತನವೂ ಒಮ್ಮೊಮ್ಮೆ ಮರ್ತ್ಯ ಪ್ರಜ್ಞೆಯ ರಾಜಕೀಯ ಭೂಮಿಕೆ ಯತ್ತ ಪ್ರವಾಸಿಯಾಗಿ ವಿಹರಿಸಬೇಕಾಗುತ್ತದೆ. ಏಕೆಂದರೆ ಕವಿಯೂ ಸಮಾಜ ಜೀವಿ. ಅವನು ಕಾವ್ಯಲೋಕದಲ್ಲಿ ಸರ್ವಸ್ವತಂತ್ರನಾದರೂ ಜೀವನರಂಗದಲ್ಲಿ ಸಮಾಜದ ಕಟ್ಟುಪಾಡುಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವಂತಿಲ್ಲ. ರಾಜಕೀಯದ ಕಾವುನೋವುಗಳು ಮತ್ತು ಸಿದ್ದಿ ಸಾಧನೆಗಳು ಅವನ ಮನಸ್ಸಿನ ಮೇಲೆ ಪರಿಣಾಮಕಾರಿಯಾದ ಪ್ರಭಾವವನ್ನು ಬೀರದಿರುವು ದಿಲ್ಲ. ಪ್ರತಿಕ್ರಿಯೆಯ ಅಥವಾ ಸಂಸ್ತುತಿಯ ರೂಪದಲ್ಲಿ ಈ ಪ್ರಭಾವ ಮುದ್ರೆ ಅದರ ಕೃತಿಗಳ ಮೂಲಕ ಹೊರಬೀಳುತ್ತದೆ.

ಕುವೆಂಪು ಶೈಶವ ಬಾಲ್ಯಾವಸ್ಥೆಗಳನ್ನು ದಾಟಿ ಪ್ರೌಢಾವಸ್ಥೆಯಲ್ಲಿ ಕಾಲಿರಿಸಿ ಕವಿಯಾಗಿ ಬೆಳೆಯುತ್ತಿದ್ದಾಗ ಭರತಖಂಡದ ರಾಜಕೀಯಾಕಾಶದಲ್ಲಿ ಮೋಡ ಗುಡುಗು ಸಿಡಿಲು ಮಿಂಚುಗಳು ಭಯಂಕರಾಕಾರವಾಗಿ ವಿಜೃಂಭಿಸುತ್ತಿದ್ದುವು. ಒಂದು ಕಡೆ ಬ್ರಿಟಿಷ್ ಸರ್ಕಾರದ ಶೋಷಣೆ, ಮತ್ತೊಂದು ಕಡೆ ರಾಜ ಮಹಾರಾಜರೆಂಬ ಒಣ ಬಿರುದನ್ನು ಹೊತ್ತು ದೇಶಾಭಿಮಾನ ಆತ್ಮಾಭಿಮಾನಗಳಿಂದ ವಂಚಿತರಾಗಿ ಸ್ವಾರ್ಥ ಮೂಲವಾದ ಲಂಪಟತ್ವವೇ ಮೂರ್ತಿವೆತ್ತಂತಿದ್ದ ಘೋರ ಕರ್ಮಿಗಳ ದಬ್ಬಾಳಿಕೆ, ಮಗುದೊಂದು ಕಡೆ ಮಾನವೀಯ ಗುಣಗಳಿಗೆ ಬರಗಾಲದಂತಿದ್ದ ಪೈಶಾಚಿಕ ಸ್ವಭಾವದ ಶ್ರೀಮಂತರ ಸುಲಿಗೆ ಕೊಲೆಗಳು – ಈ ಮೊದಲಾದ ಭ್ರಷ್ಟಾಚಾರಗಳಿಂದ ರಾಷ್ಟ್ರ ಕುಟ್ಟೆ ಹಿಡಿದ ಮರದಂತೆ ತತ್ತರಿಸುತ್ತಿತ್ತು. ಜನ ನಿರ್ವೀರ್ಯರಾಗಿ, ನಿತ್ರಾಣವಾದ ಪಶುಗಳಂತೆ ತರಹರಿಸುತ್ತಿದ್ದರು. ಅಂಥ ಸಮಯದಲ್ಲಿ ಪೌರಾಣಿಕ ವ್ಯಕ್ತಿಗಳನ್ನು ಸಹ ಮೀರಿಸುವಂಥ ವಿಭೂತಿ ಪುರುಷರು ಜನ್ಮಧಾರಣೆಮಾಡಿದ ಕೂಡಲೆ ಕೊರಡು ಕೊನರಿತು; ಜಡತೆ ಉಸಿರಾಡಿತು, ಭೂಮಿ ಸ್ವರ್ಗವಾಯಿತು, ಮರ್ತ್ಯರು ಅಮರ್ತ್ಯರಾದರು. ಗಾಂಧಿ, ನೆಹ್ರೂ, ಬೋಸ್, ಸಿಂಗ್ – ಒಬ್ಬರೇ ಇಬ್ಬರೇ? ಹಲವಾರು ಮಂದಿ. ಭರತಖಂಡದ ಇತಿಹಾಸ ಹಿಂದೆಂದೂ ಕಂಡರಿಯದಂಥ ರೋಮಾಂಚನಕಾರಿಯಾದ ಘಟನೆಗಳು ವಿದ್ಯುದ್ವೇಗದಲ್ಲಿ ಹಾದು ಹೋದುವು; ಸತ್ಯಾಗ್ರಹ, ಜಲಿಯನ್ ವಾಲಾಬಾಗ್, ಭಗತ್‌ಸಿಂಗ್, ಕಾರಾಗೃಹವಾಸ ಒಂದೊಂದು ಹೆಸರು ಕೇಳಿದಾಗ ರಕ್ತ ಕುದಿಯುತ್ತದೆ, ನರ ಉಕ್ಕಾಗುತ್ತದೆ, ಧಮನಿ ಧಮನಿಗಳಲ್ಲಿ ಚೈತನ್ಯ ಸಂಚಾರವಾಗುತ್ತದೆ. ಇಂಥ ಘಟನಾ ಪರಂಪರೆಯ ನಡುವೆ ಯಾವ ಕವಿಯೂ ತಾಟಸ್ಥ್ಯ ಮನೋಭಾವದಿಂದ ಕೇವಲ ಸಾಕ್ಷಿಯಾಗಿ ಕುಳಿತಿರಲಾರ. ಈ ಕಾಲದಲ್ಲಿ ಕುವೆಂಪು ಅವರು ರಚಿಸಿದ ಅನೇಕ ಕವನಗಳಲ್ಲಿ ರಾಷ್ಟ್ರಪ್ರೇಮ ಹೊನಲಾಗಿ ಹರಿಯುತ್ತದೆ.

ನೂರಾರು ವರ್ಷಗಳಿಂದ ಅನ್ಯಾಕ್ರಾಂತವಾಗಿ, ನಿರಂತರ ಶೋಷಣೆಗೆ ಬಲಿಯಾಗಿ, ಗೌರವ ಪ್ರತಿಷ್ಠೆಗಳಿಂದ ವಂಚಿತವಾಗಿ, ರಿಕ್ತತೆಯನ್ನೇ ಪುಣ್ಯವೆಂದು ನಂಬಿ, ದಾಸ್ಯದಿಂದ ನರಳು ತ್ತಿದ್ದಾಗಲೂ ಭರತಖಂಡ ಕವಿಗೆ ಪುಣ್ಯಕ್ಷೇತ್ರವಾಗಿ, ಕಾಮಧೇನುವಾಗಿ ಮೋಕ್ಷದಾಯಿಯಾಗಿ ಕಾಣುತ್ತದೆ.

ಭಾರತಾಂಬೆಯೆ ಜನಿಸಿ ನಿನ್ನೊಳು ಧನ್ಯನಾದೆನು ದೇವಿಯೆ
ನಿನ್ನ ಪ್ರೇಮದಿ ಬೆಳೆದು ಜೀವವು ಮಾನ್ಯವಾದುದು ತಾಯಿಯೆ

ಎಂದು ಕವಿ ಭಾವಾವೇಶದಿಂದ ಹಾಡುವಾಗ ಅವನ ನಿಷ್ಕಳಂಕವಾದ ದೇಶಪ್ರೇಮವನ್ನು ಕಾಣಬಹುದು; ‘ಕುಂದುಕೊರತೆಗಳಿರಲಿ ಮಹಿಮಳು ನೀನೆಯನ್ಯರನೊಲ್ಲೆನು’ ಎಂದು ಹೇಳುವಲ್ಲಿ ಆ ದೇಶಪ್ರೇಮ ಪರಾಕಾಷ್ಠೆಗೇರಿದುದನ್ನು ಗಮನಿಸಬಹುದು. ಭಾರತಿಗೆ ಪರಕೀಯರೆಸಗಿದನ್ಯಾಯಕ್ಕೆ, ಆಕೆಯ ಆಭರಣವನ್ನು ಮೋಸದಿಂದ ಸುಲಿದುದಕ್ಕೆ ಬಲಗೈಯಲ್ಲಿ ಖಡ್ಗವನ್ನೂ ಎಡಗೈಯಲ್ಲಿ ಕೊರಾನನ್ನೂ ಹಿಡಿದು ಭಾರತೀಯರನ್ನು ಪೀಡಿಸಿದುದಕ್ಕೆ, ಹೇಮಾಭಿಲಾಷೆಯಿಂದ ಕ್ರಿಸ್ತನ ಹೆಸರಿನಲ್ಲಿ ನಡೆಸಿದ ಅಮಾನುಷ ಕೃತ್ಯಗಳಿಗೆ ಶ್ರವಣಬೆಳುಗೊಳದ ಬಾಹುಬಲಿಯನ್ನು ಸಾಕ್ಷಿಗೆ ಕರೆಯುವಾಗ (‘ಗೋಮಟೇಶ್ವರ’ ಕವನ) ಎಂಥ ಹೆಂಬೇಡಿಯ ಹೃದಯದಲ್ಲಿಯೂ ಪಾರ್ಥಶಕ್ತಿ ಸಂಚಾರವಾಗದಿರಲಾರದು. ಎಂಥ ವಿಪನ್ನಾವಸ್ಥೆಯಲ್ಲಿದ್ದರೂ ತಾಯಿ ತಾಯಿಯೆ; ಅವಳು ಬಡವಿಯೆಂದೆಣಿಸಿ ಬೇರೊಬ್ಬ ಹೆಂಗಸನ್ನಪ್ಪುವುದು ಸ್ವಾರ್ಥತಾ ಮೂಲವಾದ ಕ್ರೂರ ಕರ್ಮವಾಗುತ್ತದೆ. ಆದ್ದರಿಂದಲೇ ಕವಿ ಭಾರತಿಗೆ ಸ್ವಾತಂತ್ರ್ಯ ಲಭಿಸುವತನಕ ಅನೇಕ ಜನ್ಮಗಳನ್ನಾದರೂ ಎತ್ತಿ ತನ್ನ ಅಳಿಲು ಸೇವೆಯನ್ನು ಸಲ್ಲಿಸುವುದಾಗಿ ತಮ್ಮ ಬಯಕೆಯನ್ನು ತೋಡಿಕೊಳ್ಳುತ್ತಾರೆ (‘ದೇಶಭಕ್ತನ ಬಯಕೆ’). ತ್ಯಾಗವಿಲ್ಲದ ದೇಶಭಕ್ತಿ ಕ್ಲೈಬ್ಯಕೆ ಯಷ್ಟಿಯೆಂದು ಬೇರೊಂದೆಡೆ ಘೋಷಿಸಿದ್ದಾರೆ.

ಶಾಂತಿ ಸಮಯದಲ್ಲಾಗಲೀ ಯುದ್ಧಕಾಲದಲ್ಲಾಗಲೀ ನಾಡಿನ ಪ್ರತಿಯೊಬ್ಬ ವ್ಯಕ್ತಿಯೂ ಸ್ವಧರ್ಮನಿರತನಾಗಿ ಕರ್ತವ್ಯನಿಷ್ಠನಾಗಿ ಶ್ರದ್ಧೆಯಿಂದ ದುಡಿಯುವುದಕ್ಕಿಂತ ಮಿಗಿಲಾದ ಪವಿತ್ರ ಕರ್ಮವಿಲ್ಲ; ಅದನ್ನು ಮೀರಿದ ಯಜ್ಞವಿಲ್ಲ. ಪ್ರತಿಯೊಂದು ಅಂಗಾಂಗವೂ ಸ್ವಭಾವಾನುಗುಣವಾದ ಕಾರ್ಯವನ್ನು ನಿರ್ವಹಿಸುವುದಾದರೆ ದೇಹ ನಿರೋಗಿಯಾಗಿ ಸುಭದ್ರವಾಗಿರುತ್ತದೆ. ಹಾಗೆಯೇ ರೈತ, ಕಾರ್ಮಿಕ, ಉಪಾಧ್ಯಾಯ, ಅಧಿಕಾರಿ, ಸೈನಿಕ, ವಿದ್ಯಾರ್ಥಿ ಮೊದಲಾದವರು ತಂತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಪರಿಪಾಲಿಸುವುದಾದರೆ, ಎಲ್ಲೆಲ್ಲೂ ಭಾವೈಕ್ಯ ಕುದುರಿ, ರಾಷ್ಟ್ರ ಶಕ್ತಿಯುತವಾಗಿ ಪ್ರಗತಿಮುಖವಾಗುತ್ತದೆ. ಅಂಥ ರಾಷ್ಟ್ರವನ್ನು ಎಂಥ ಪ್ರಬಲ ಶತ್ರು ರಾಷ್ಟ್ರವೂ ಜಗ್ಗಿಸಲಾರದು. ಕವಿ ರಣರಂಗಕ್ಕೆ ಹೋಗಬೇಕಾಗಿಲ್ಲ; ಸೆರೆಮನೆಯಲ್ಲಿ ಕೊಳೆಯಬೇಕಾಗಿಲ್ಲ; ತಾನು ಕುಳಿತೆಡೆಯಿಂದಲೇ ತಪಶ್ಶಕ್ತಿ ಸಂಪನ್ನವಾದ ವೀರವಾಣಿಯಿಂದ ನಾಡಿನ ಸಮಗ್ರ ಸಾಮರ್ಥ್ಯವನ್ನು ಸಂಗ್ರಹಿಸಿ, ಏಕಮುಖವಾಗಿ ಪ್ರವಹಿಸುವಂತೆ ಪ್ರಚೋದಿಸಿ, ನಿರೀಕ್ಷಿತ ಧ್ಯೇಯ ಸಿದ್ದಿಸುವಂತೆ ಹಾರೈಸಬಹುದು. ‘ತಾನಾಜಿ’ಯನ್ನೋದಿ ಕಾವೇರಿ ಪುಳಕಿತನಾಗಿ ಸರ್ವತ್ಯಾಗಕ್ಕೂ ಸಿದ್ಧನಾಗದ ತರುಣ ದುರ್ಲಭ. ‘ಪ್ರತಾಪ ಸಿಂಹ’ ನೀಳ್ಗವನದ ಪ್ರಾರಂಭ ಭಾಗವನ್ನೋದಿದಾಗ ಉತ್ತರಕುಮಾರನ ರಕ್ತದ ಕಣ ಕಣದಲ್ಲಿಯೂ ದೇಶಾಭಿಮಾನ ಮಿಡಿಯದಿರಲಾರದು :

ದೇಶ ನನ್ನದು, ನನ್ನದು ನಾಡು
ಎನ್ನದ ಮಾನವನೆದೆ ಸುಡುಗಾಡು!
ದೂರದೇಶಕೆ ಹೋದಾ ಸಮಯದಿ
ತನ್ನ ನಾಡನು ನೆನೆನೆನೆದುಬ್ಬದ
ಮಾನವನಿದ್ದರೆ ಲೋಕದಲಿ,
ತಾವಿಲ್ಲವನಿಗೆ ನಾಕದಲಿ! – ವೀರನಾಕದಲಿ!

ಅಂಥ ದೇಶದ್ರೋಹಿಗೆ ಸುಡುಗಾಡಿಲ್ಲ; ಸೂಡು ಮಾಡಲು ಕಟ್ಟಿಗೆಯಿಲ್ಲ; ಅವನಿಗೆ ಇಹಪರಗಳಿಲ್ಲ; ಅವನ ಹೆಣವನ್ನು ನಾಯಿ ನರಿ ಮೂಸುವುದಿಲ್ಲ, ಬೆಂಕಿ ಮುಟ್ಟುವುದಿಲ್ಲ- ಎಂಬ ಘೋಷಾರವವನ್ನು ಕೇಳಿದಾಗ ಅವನಿಗಿಂತ ನಿಕೃಷ್ಟನಾದ ವ್ಯಕ್ತಿ ಈ ತಿರೆಯ ಮೇಲೆ ಸಿಗಲಾರನೆಂಬ ಭಾವನೆ ಓದುಗರ ಮನಸ್ಸಿನಲ್ಲಿ ಮೂಡುತ್ತದೆ.

ಗಾಂಧಿ ನೆಹರೂ ಪಟೇಲ್ ಬೋಸ್ ಮೊದಲಾದ ವಿಭೂತಿಪುರುಷರ ನೇತೃತ್ವದಲ್ಲಿ ಸ್ವಾತಂತ್ರ್ಯ ಚಳುವಳಿ ಉಗ್ರಸ್ವರೂಪವನ್ನು ತಾಳಿ, ಲಕ್ಷ ಲಕ್ಷ ಸತ್ಯಾಗ್ರಹಿಗಳ ಕಂಠದಿಂದ ಹೊರಹೊಮ್ಮಿ ಹಿಮಾಲಯದಲ್ಲಿ ಪ್ರತಿಧ್ವನಿಗೈದು ದಿಗ್ದಿಗಂತಗಳಲ್ಲಿ ಅನುರಣಿತವಾಗುತ್ತಿದ್ದ ‘ಮಹಾತ್ಮಗಾಂಧಿ ಕೀ ಜೈ’, ‘ಇಂಕಿಲಾಬ್ ಜಿಂದಾಬಾದ್’ ಎಂಬ ಪವಿನಿರ್ಘೋಷಕ್ಕೆ ದೇಶಕ್ಕೆ ದೇಶವೇ ಆಂದೋಲಿತವಾಗಿ, ಬ್ರಿಟಿಷ್ ಸಾಮ್ರಾಜ್ಯ ತರಹರಿಸುತ್ತಿದ್ದ ಆ ರುದ್ರ ಭಯಂಕರ ಸಮಯದಲ್ಲಿ ಕವಿ ಲೇಖನಿಯಿಂದ ಮೂಡಿದ ಗಂಭೀರ ಕವನಗಳು ‘ಪಾಂಜನ್ಯ’ದಲ್ಲಿ ಬಣಬೆಗೊಂಡಿವೆ. ಆ ಪಾಂಚಜನ್ಯದ ಮೊಳಗು ದಿಗ್ದಿಗಂತಗಳನ್ನು ಮೀಟಿ, ಗಗನಾಂತರಾಳವನ್ನು ಭೇದಿಸಿ, ತರುಣ ಹೃದಯದಲ್ಲಿ ಚೈತನ್ಯೋತ್ಸಾಹವನ್ನು ತುಂಬಿತು. ಎಲುಬುಗೂಡುಗಳ ಬೆಟ್ಟ ಬೆಳೆದ ಹೊರತು, ಮಣ್ಣು ಕೆನ್ನೆತ್ತರಿಂದ ಕೆಸರಾಗದ ಹೊರತು ವಿಧವೆಯರ ಮತ್ತು ತಬ್ಬಲಿಗಳ ಕಣ್ಣೀರ ಕಡಲು ದಡಮೀರಿ ನೆರೆಯೇರದ ಹೊರತು, ಜನನ ಮರಣಗಳ ಪರ್ಯಾಯ ಕ್ರಮದಲ್ಲಿ ಆತ್ಮ ಮಾತ್ರ ಅಚ್ಯುತವೆಂಬ ಧರ್ಮಶ್ರದ್ಧೆ ಮೂಡದ ಹೊರತು ಭಾರತಾಂಬೆಯ ಮುಕ್ತಿ ಸಾಧ್ಯವಾಗದೆಂದು ಕವಿವಾಣಿ ನುಡಿಯಿತು; ಬಿಡುಗಡೆಯ ಸಿರಿಗುಡಿಯನ್ನು ಮಸಣದಲ್ಲಿ ಕಟ್ಟಬೇಕೆಂದು ಆ ವಾಣಿ ಜನತೆಗೆ ಕರೆಗೊಟ್ಟಿತು. ಸ್ವಾತಂತ್ರ್ಯ ದೇವಿ ಚಂಡಿ ಚಾಮುಂಡಿಯಾಗಿ ರುದ್ರ ಭದ್ರ ಕಾಳಿಯಾಗಿ ರಕ್ತರುಂಡ ಮಾಲಿನಿ ಯಾಗಿ ವಿಜಯರಣೋನ್ಮತ್ತೆಯಾಗಿ ಕುಣಿಕುಣಿದು ಧೀಂಕಿಡುತ್ತಾಳೆಂಬ ಭಾವನೆ ‘ಕಾಳಿ ಬರುವಳು’ ಕವನದಲ್ಲಿ ಹೆಪ್ಪುಗಟ್ಟಿದೆ; ಅವಳೇ ಭೈರವ ನಾರಿಯಾಗಿ ವಿಪ್ಲವ ಮೂರ್ತಿಯಾಗಿ ರಾಕ್ಷಸ ವೃಂದವನ್ನು ಎಕ್ಕ ಹುಟ್ಟಿಸುತ್ತದೆ. ಶ್ರಾವಣ ಸಂಧ್ಯಾ ಸವಿೂರಣನೂ ಕವಿಯ ದೃಷ್ಟಿಯಲ್ಲಿ ಸ್ವಾತಂತ್ರ್ಯ ಸಂದೇಶವಾಹಕನಾಗಿ, ಸತ್ಯಾಗ್ರಹಿಯಾಗಿ, ದಳಪತಿಯಾಗಿ, ಆಂಜನೇಯ ಭೀಮರ ತಂದೆಯಾಗಿ ಮೈದೋರುತ್ತಾನೆ. ದಾಸ್ಯದ ಬೇಗೆ ಜಡವಾದಿಯನ್ನೂ ತಟ್ಟದಿರದು :

ಬಂದು ರಾಜ್ಯವ ಗೆದ್ದು,
ಸಿರಿಯನೆಲ್ಲವ ಕದ್ದು,
ಬಲವಂತರಾದವರು
ಬಲವಿಲ್ಲದವರುಗಳ
ತುಳಿಯುತಿರಲು
ಜನರ ಮೊರೆ ಬಾನೆಡೆಗೆ
ಮುಟ್ಟುತಿರಲು
ಉರುಳುರುಳು ಹಗಲಿರುಳು
ಎಲೆ ಧರಣಿ! ನಿಷ್ಕರುಣಿ.

ಸ್ವಾತಂತ್ರ್ಯದ ನೆನಪು ಕಣ್ಣೊಡೆದಾಗ ಅವನ ಹುಬ್ಬು ಗಂಟಿಕ್ಕುತ್ತದೆ; ಕಣ್ಣು ಕೆಂಪಾಗುತ್ತದೆ, ಮಾತು ಕೆಂಡವಾಗುತ್ತದೆ, ಮೈ ಗರಿಗಟ್ಟುತ್ತದೆ.

ಕಣ್ಣೀರಲ್ಲದ್ದಿದ ಕವಿ ಲೇಖನಿ ಭಾರತ ಮಾತೆಯ ಗೋಳನ್ನೂ ಅವಳ ವಿಪನ್ನಾವಸ್ಥೆಯನ್ನೂ ಹೃದಯವಿದ್ರಾವಕವಾಗಿ ಆಲಾಪನೆಗೈದಿದೆ; ಅವಳ ಸುಲಿಗೆಯ ಕತೆಯನ್ನೋದಿ ಕವಿ ಕಲ್ಕಿಯಾದದ್ದುಂಟು, ಭೈರವನಾದದ್ದುಂಟು; ಧ್ರಾಂ ಧ್ರೀಂ ಧ್ರೂಂ ಮಂತ್ರೋಚ್ಚಾರಣೆ ಯಿಂದ ಶತ್ರುಜಯ ದುಸ್ಸಾಧ್ಯವೆಂದೂ ದಾಸ್ಯ ವಿಮೋಚನೆ ಸಂಭವಿಸದೆಂದೂ ಕವಿ ಗುಡುಗಿದುದುಂಟು. ‘ಇಂದಿನ ದೇವರು’ ಭಾರತಿಯೆ ಹೊರತು ಜಡಶಿಲೆಯಲ್ಲವೆಂದೂ ನಾಡಾಡಿ ದೇವರುಗಳ ಪೂಜೆಯಿಂದ ದಾಸ್ಯ ದೊರೆಕೊಂಡಿತೆಂದೂ ಭಕ್ತ ರಕ್ತವ ಹೀರಿ ಗುಡಿಯೊಳಗೆ ಕಣ್ಣು ಮುಚ್ಚಿಕೊಂಡು ಬೆಚ್ಚಗೆ ಮಲಗಿರುವವರನ್ನೆಲ್ಲ ಕುತ್ತಿಗೆ ಹಿಡಿದು ಕಡಲಡಿಗೆ ತಳ್ಳಬೇಕೆಂದೂ ಕವಿ ಕಾಲರುದ್ರನಾಗಿ ಮೊಳಗುತ್ತಾನೆ :

ಸತ್ತ ಕಲ್ಗಳ ಮುಂದೆ ಅತ್ತು ಕರೆದುದು ಸಾಕು,
ಜೀವದಾತೆಯನಿಂದು ಕೂಗಬೇಕು
ನಾವೆ ದೇವತೆಗಳೈ! ಭಾರತವೆ ಸ್ವರ್ಗವೈ!

ಈ ಮೊಳಗಿನಲ್ಲಿ ಸಂಜೀವನ ಶಕ್ತಿಯಿದೆ, ಆಶಾಭಾವನೆಯ ಕೆಚ್ಚು ನೆಚ್ಚುಗಳಿವೆ. ಸಾವು ಬದುಕಿನ ಕಟ್ಟಕಡೆಯ ಹೋರಾಟದಲ್ಲಿ ಸಂಧಿಸಿರುವ “ಭಾರತ ತಪಸ್ವಿನಿ” ಮತ್ತೊಮ್ಮೆ ಚಕ್ರವರ್ತಿನಿಯಾಗಿ ಜಗದ ಬೆಳಕಾಗಿ ಮೆರೆಯುವಳೆಂಬ ಅಂದಿನ ಭವಿಷ್ಯ ವಾಣಿ ಇಂದು ಅಕ್ಷರಶಃ ನಿಜವಾಗಿದೆ. ‘ಮಲ್ಲಗೀತೆ’ಯಲ್ಲಿ ಕವಿ ನೀಡುವ ಅಮರ ಸಂದೇಶವಿದು :

ಒಳ್ಳಿತಾಗುವುದೆಲ್ಲ!
ಬೇವು ತುದಿಯಲಿ ಬೆಲ್ಲ!

ಮಾನವ ಜೀವನದಲ್ಲಿ ಕ್ಷಣಕ್ಷಣಕ್ಕೂ ಈ ಮಾತಿನ ಸತ್ಯತೆಯನ್ನು ಕಾಣಬಹುದು; ಭಾರತದ ಬಿಡುಗಡೆಯೇ ಇದಕ್ಕೆ ಪ್ರತ್ಯಕ್ಷ ನಿದರ್ಶನ. ಇದೇ ಅರ್ಥ ಬರುವ ಸಂದೇಶ “ಕಾಳರಾತ್ರಿ”ಯ “ಮೂಡುವುದು ಮುಂದೆ ಸೊದೆ” ಎಂಬ ಮಂತ್ರದಲ್ಲಿ ಅಭಿವ್ಯಕ್ತಗೊಂಡಿದೆ.

ಕುವೆಂಪು ಅವರ ನಾಡುನುಡಿಗಳ ಪ್ರೇಮ ಅತ್ಯಮೋಘವಾದದ್ದು, ಅಪ್ರತಿಹತವಾದದ್ದು, ನಾಡು ನುಡಿಗಳ ಪ್ರಗತಿಯಲ್ಲಿ ಸಾಮಾನ್ಯ ಮಾನವನ ಶ್ರೇಯಸ್ಸನ್ನು ಕಂಡಿರುವ ಹಿಡಿಮಂದಿ ಯಲ್ಲಿ ಇವರೊಬ್ಬರು. ಕನ್ನಡ ನಾಡುನುಡಿಗಳ ಗೌರವ ಪ್ರತಿಷ್ಠೆಗಳಿಗೆ ತಿಲಮಾತ್ರವಾದರೂ ಭಂಗವುಂಟಾದಾಗ ತಮ್ಮ ಸಮಸ್ತ ಶಕ್ತಿಯನ್ನು ಸಂಗ್ರಹಿಸಿ ನಿರ್ಭಯವಾಗಿ ಹೋರಾಡುವ ಬೆರಳೆಣಿಕೆಯ ಕವಿಗಳಲ್ಲಿ ಇವರು ಅಗ್ರಗಣ್ಯರು. ‘ಕನ್ನಡ’ ಎನೆ ಅವರ ಎದೆ ಕುಣಿದಾಡುತ್ತದೆ; ‘ಕನ್ನಡ’ ಎನೆ ಅವರ ಕಿವಿ ನಿಮಿರುತ್ತದೆ. ಕನ್ನಡಕ್ಕಾಗಿ ಕೈಯೆತ್ತಿದರೆ ಅದು ಕಲ್ಪವೃಕ್ಷವಾಗುತ್ತ ದೆಂದು ತ್ರಿಕರಣಶುದ್ದಿಯಾಗಿ ನಂಬಿಕೊಂಡಿದ್ದಾರೆ; ಕನ್ನಡದಿಂದ ಪುರುಷಾರ್ಥ ಸಿದ್ದಿ ಸಾಧ್ಯವೆಂದು ಸಮರ್ಪಣ ಮನೋಭಾವದಿಂದ ನಿರಂತರವಾಗಿ ಶ್ರಮಿಸಿದ್ದಾರೆ. “ಎಲ್ಲಾದರು ಇರು; ಎಂತಾದರು ಇರು; ಎಂದೆಂದಿಗು ನೀ ಕನ್ನಡವಾಗಿರು….ನೀ ಮೆಟ್ಟುವ ನೆಲ ಅದೆ ಕರ್ಣಾಟಕ” ಎಂದು ಕಳಕಳಿಯಿಂದ ನುಡಿದಿದ್ದಾರೆ.

ಕನ್ನಡವೇ ಸತ್ಯ!
ಕನ್ನಡವೇ ನಿತ್ಯ!
ಅನ್ಯವೆನಲದೆ ಮಿಥ್ಯಾ!

ಎಂದು ವೀರಾಭಿಮಾನದ ಆವೇಶದಿಂದ ಘೋಷಿಸಿದ್ದಾರೆ. ‘ಕನ್ನಡಕೆ ಹೋರಾಡು, ಕನ್ನಡದ ಕಂದಾ….ಕನ್ನಡಮ್ಮನ ಹರಕೆ, ಮರೆಯದಿರು ಚಿನ್ನಾ! ಮರೆತೆಯಾದರೆ ಅಯ್ಯೋ, ಮರೆತಂತೆ ನನ್ನ’ ಎಂದು ಆರ್ತವಾಣಿಯಿಂದ ಬೇಡಿಕೊಂಡಿದ್ದಾರೆ. ಪರಭಾಷೆಯ ಭಾರದಿಂದ ಕನ್ನಡ ನುಗ್ಗುನುಗ್ಗಾಗುತ್ತಿದ್ದಾಗ ‘ಸಾಯುತಿದೆ ನಿಮ್ಮ ನುಡಿ, ಓ ಕನ್ನಡದ ಕಂದರಿರ’ ಎಂದು ಮಲಗಿದ್ದ ಕನ್ನಡಿಗರನ್ನು ಎಚ್ಚರಿಸಿದ್ದಾರೆ.

ಹರಿದು ಹಂಚಿಹೋಗಿದ್ದ ಕನ್ನಡನಾಡು ಒಂದಾಗುವ ತನಕ ಕನ್ನಡಿಗರ ಸರ್ವಾಂಗೀಣ ಪ್ರಗತಿ ಗಗನ ಕುಸುಮವಾಗಿಯೆ ಉಳಿದಿರುತ್ತದೆಂಬ ಸತ್ಯ ಕವಿಯ ದಾರ್ಶನಿಕ ದೃಷ್ಟಿಗೆಂದೋ ವೇದ್ಯವಾಗಿತ್ತು. ಏಕೈಕ ಕರ್ಣಾಟಕದ ಕನಸು ನನಸಾಗುವ ತನಕ ಕವಿಯ ಮನಸ್ಸಿಗೆ ಶಾಂತಿಯಿಲ್ಲ. ಅದಕ್ಕಾಗಿ ಅವರು ಹಲುಬಿ ಹಂಬಲಿಸಿದ್ದುಂಟು, ದೇವರಲ್ಲಿ ಪ್ರಾರ್ಥಿಸಿದ್ದುಂಟು; ಸಭೆಗಳಲ್ಲಿ ಭಾಷಣ ಮಾಡಿದ್ದುಂಟು, ಬೇಸರವಿಲ್ಲದೆ ಕಂಡಕಂಡವರಿಗೆಲ್ಲ ದೀಕ್ಷೆ ಕೊಟ್ಟದ್ದುಂಟು :

ದೀಕ್ಷೆಯ ತೊಡು ಇಂದೇ!
ಕಂಕಣ ಕಟ್ಟಂದೇ!
ಕನ್ನಡ ನಾಡೊಂದೇ!
ಇನ್ನೆಂದೂ ತಾನೊಂದೆ!

ಸತಿಸುತರ ಮೇಲೆ ಆಣೆಯಿಟ್ಟು ದೀಕ್ಷೆಯನ್ನು ತೊಟ್ಟರು, ತೊಡಿಸಿದರು. ಕರ್ನಾಟಕದ ವಿಸ್ತೀರ್ಣವನ್ನು ಚದರ ಮೈಲಿಗಳಿಂದ ಮಾತ್ರ ಅಳೆದು ತೃಪ್ತಿಗೊಂಡರೆ ಸಾಲದು, ಅದರ ವಿಸ್ತೀರ್ಣವನ್ನು ಚದರ ವರ್ಷಗಳಿಂದ ಅಳೆದು, ಸಂಸ್ಕೃತಿಯ ಮಹಾವೈಭವನ್ನು ಭಾವಿಸಿ, ಪರಿಭಾವಿಸಿ ಹೆಮ್ಮೆ ಪಡಬೇಕೆಂದು ಕನ್ನಡಿಗರಿಗೆ ಆಹ್ವಾನ ನೀಡಿದ್ದಾರೆ. ಅಂಥ ಮಹಿಮಾನ್ವಿತ ಸಂಸ್ಕೃತಿಯನ್ನು ಪೋಷಿಸಿ ಬೆಳೆಸಿದ ದೊರೆ ಕವಿ ಸೇನಾನಿ ಗಾಯಕ ಶಿಲ್ಪಿ ಗುರುಸಂತ ಆಚಾರ್ಯ ದ್ರಷ್ಟಾರ ದಾಸ ವಿಜ್ಞಾನಿ ರೈತ ಕಾರ್ಮಿಕ ನದಿಗಿರಿ ಮೊದಲಾದ ಸಮಸ್ತ ಚರಾಚರ ಶಕ್ತಿಗಳಲ್ಲಿ ಅವರಿಗೆ ಸುಸ್ಥಿರವಾದ ಭಕ್ತಿಗೌರವಗಳಿವೆ.

ಕೆಲವು ವರ್ಷಗಳ ಹಿಂದೆ ನಾಡುನುಡಿಗಳ ವಿಷಯವಾಗಿ ಮಾತಾಡುವುದೇ ರಾಜಕೀಯಾ ಪರಾಧವಾಗಿ ಪರಿಗಣಿತವಾಗುತ್ತಿತ್ತು. ಸರ್ಕಾರದ ಅಧಿಕಾರಿಯೊಬ್ಬರು ಸಾರ್ವಜನಿಕ ವೇದಿಕೆಗಳಿಂದ ಆ ವಿಷಯ ಕುರಿತು ಭಾಷಣ ಮಾಡಿದಾಗ ಮೇಲಿಂದ ಎಚ್ಚರಿಕೆಯ ಪತ್ರ ಬರೆಯುತ್ತಿತ್ತು. ಕುವೆಂಪು ಅವರ ಮೇಲೆ ಅಂಥದೊಂದು ನೋಟೀಸು ಜಾರಿಯಾಯಿತು. ಮತ್ತೊಂದು ಸಂದರ್ಭದಲ್ಲಿ ‘ಕವಿಗರಸುಗಿರಸುಗಳ ಋಣವಿಲ್ಲ’ ಎಂದು ಲೋಕಕ್ಕೆ ಸಾರಿದ ಧೀರವ್ಯಕ್ತಿ ರಾಜಕೀಯ ನಾಟಕದಲ್ಲಿ ಮಂತ್ರಿಗಳೆಂಬ ಹುಸಿ ಬಿರುದನ್ನು ಹೊತ್ತು ಬೂಟಾಟಿಕೆ ಯಿಂದ ಜನರನ್ನು ವಂಚಿಸುವ ಮೆಳ್ಳೆಗಣ್ಣರ ಬುದ್ದಿ ಬರಡಾದವರ ಗೊಡ್ಡು ಬೆದರಿಕೆಗೆ ಸೊಪ್ಪು ಹಾಕುತ್ತಾರೆಯೆ? ನೋಟೀಸಿನ ಹಿಂದೆಯೇ ‘ಅಖಂಡ ಕರ್ಣಾಟಕ’ ಕವನ ರಚನೆಯಾಗಿ ವಿರೋಧಿಗಳ ಬಾಯಿ ಮುಚ್ಚಿತು. ಅಖಂಡ ಕರ್ಣಾಟಕ ಹೊಸದಾಗಿ ಸೃಷ್ಟಿಯಾಗಬೇಕಿರಲಿಲ್ಲ. ಅದು ಮೊದಲೇ ಮಾನಸಿಕವಾಗಿ ಅಸ್ತಿತ್ವದಲ್ಲಿತ್ತು. ಅದಕ್ಕೊಂದು ಬಾಹ್ಯರೂಪ ವನ್ನೊದಗಿಸುವ ಪ್ರಯತ್ನದಲ್ಲಿ ಕವಿಗಳು ಅಗ್ರಗಾಮಿಗಳಾದರು. ರಾಜಕೀಯದ ಜನರಿಗೆ ಅಖಂಡ ಕರ್ಣಾಟಕ ಬೇಕಾದದ್ದು ಹೊಟ್ಟೆಪಾಡಿಗಾಗಿ; ಕವಿಗಳಿಗೆ ಬೇಕಾದದ್ದು ಜನಕೋಟಿಯ ಹಿತಕ್ಕಾಗಿ, ಅವರ ಮಾನಸಿಕ ವಿಕಾಸಕ್ಕಾಗಿ. ತಮ್ಮ ಜಾತಿಯ ಜನರಿಗೆ ಕರ್ಣಾಟಕ ರಚನೆಯಿಂದ ರಾಜಕೀಯಾಧಿಕಾರ ದೊರೆಯುತ್ತದೆಂದು ಕೆಲವರು ಪರವಾಗಿ ಹೋರಾಡಿದರೆ, ಅದರಿಂದ ತಮ್ಮ ಜಾತಿಯ ಜನರಿಗೆ ಹಾನಿಯೊದಗುತ್ತದೆಂದು ಕೆಲವರು ವಿರೋಧವಾಗಿ ಗೊಣಗುಟ್ಟಿದರು. ಈ ದೃಷ್ಟಿಯಿಂದ ಕೆಲವರು ಕುವೆಂಪು ಅವರನ್ನು ಹೊಗಳಿದರೆ, ಬೇರೆ ಕೆಲವರು ಅವರನ್ನು ಬೈದರು. ಆದರೆ ಕೊನೆಗೂ ಕವಿಯ ಹಾರೈಕೆ ಫಲಿಸಿತು. ರಾಜಕೀಯದ ಚದುರಂಗದಾಟಿ ಪ್ರಾರಂಭವಾಯಿತು. ಸುಲಿಗೆ ಲಪಟಾವಣೆ ದಬಾವಣೆ ರಾಜಕೀಯ ಜನರ ಸರ್ವ ವ್ಯವಹಾರವಾಯಿತು. ಅವರಿಗೆ ಬೇಕಾದದ್ದು ದರ್ಪ, ಅಧಿಕಾರ, ಶ್ರೀಮಂತಿಕೆ. ಹಸಿದ ನಾಯಿಗೆ ಬೇಕಾದ್ದು ಮೂಳೆಯ ತುಂಡು; ಹಸಿದ ಹಂದಿಗೆ ಬೇಕಾದ್ದು ಕಲಗಚ್ಚಿನ ಮಡ್ಡಿ. ಸಂಸ್ಕೃತಿ ಅವರಿಗೆ ಬೇಡವಾಯಿತು; ಭಾಷೆ ಬೇಡವಾಯಿತು, ಭಾಷೆಯಿಂದ ದೇಶವೆಂಬುದನ್ನು ಅವರು ಮರೆತರು. ಭಾಷೆ ಸಂಸ್ಕೃತಿಗಳ ಬಗೆಗೆ ಚಾಚೂ ಗೊತ್ತಿಲ್ಲದ ಮಡ್ಡಜನ ಕನ್ನಡದಲ್ಲಿ ಏನೂ ಇಲ್ಲವೆಂದು ಅರಚಿದರು. ರಾಜ್ಯದ ಹೆಸರು ಬದಲಾವಣೆಯಾಗಬೇಕೆಂದವರು ಭಾಷೆಯ ಸ್ಥಾನಮಾನವನ್ನು ಮರೆತರು. ಯಾವುದೋ ಸಂಕುಚಿತ ಮನೋಭಾವನೆಯಿಂದ ಸ್ವಾರ್ಥತೆ ಯಿಂದ ಪ್ರತ್ಯೇಕ ಪ್ರಾಂತ್ಯಕ್ಕಾಗಿ ಹೊಡೆದಾಡಿದರೆಂಬುದು ಈಗ ನಿಜವಾಗಿ ಪರಿಣಮಿಸಿದೆ. ಈ ಭಾವನೆಗಳು ಆ ಕವನದಲ್ಲಿ ಸೂಕ್ಷ್ಮವಾಗಿ ಪಡಿಮೂಡಿವೆ.

ಇಷ್ಟಾದರೂ ಕುವೆಂಪು ಅವರ ನಾಡುನುಡಿಗಳ ವ್ಯಾಮೋಹ ಭರತಖಂಡದ ಸಮಗ್ರತೆ ಗಾಗಲೀ ಕ್ಷೇಮಾಭ್ಯುದಯಗಳಿಗಾಗಲೀ ಮಾರಕವಾಗುವಂಥ ಅಂಧಾಭಿಮಾನವಾಗಿ, ಸಂಕುಚಿತ ಮನೋಭಾವವಾಗಿ, ದ್ವೇಷಾಸೂಯೆಯಾಗಿ ಎಂದಿಗೂ ತಿರುಗುವುದಿಲ್ಲ. ಮಗ ತಾಯಿಯನ್ನು ಪ್ರೀತಿಸಿದರೆ ತಾಯಿಯ ತಾಯಿಗೆ ಸಂಕಟವಾಗುತ್ತದೆಯೆ? ಕನ್ನಡ ನಾಡು ಭಾರತಾಂಬೆಯ ಒಂದು ಅಂಗ. ಒಂದು ಅಂಗಕ್ಕೆ ಬಾಧೆಯಾದರೂ ಇಡೀ ದೇಹ ಯಾತನೆ ಅನುಭವಿಸ ಬೇಕಾಗುತ್ತದೆ. ಆದ್ದರಿಂದ ದೇಹದ ಕ್ಷೇಮಕ್ಕಾಗಿ ಅಂಗದ ಕ್ಷೇಮವನ್ನು ಎಚ್ಚರಿಕೆಯಿಂದ ಕಾಪಾಡಬೇಕು. ಈ ದೃಷ್ಟಿಯಿಂದ ಕವಿಚೇತನ ಕನ್ನಡ ನಾಡುನುಡಿಗಳ ಕಲ್ಯಾಣಕ್ಕಾಗಿ ಸದಾ ಹಾತೊರೆಯುತ್ತದೆ. ಅವರು ಕರ್ಣಾಟಕ ಮಾತೆಯನ್ನು ಕುರಿತು ಪ್ರಾರ್ಥಿಸುವಾಗಲೂ

ಜೈ ಭಾರತ ಜನನಿಯ ತನುಜಾತೆ!
ಜಯ ಹೇ ಕರ್ಣಾಟಕ ಮಾತೆ!

ಎಂದು ಅನನ್ಯ ಭಕ್ತಿಯಿಂದ ಭಾರತಮಾತೆಗೆ ವಿಶೇಷ ಗೌರವ ಸಲ್ಲಿಸುತ್ತಾರೆ. ಭಾರತ ಜನನಿಯ ತನುಜಾತೆಯಾದ್ದರಿಂದಲೇ ಕರ್ಣಾಟಕ ಮಾತೆ ಕವಿಯ ಸಂಸ್ತುತಿಗೆ ಪಾತ್ರಳಾಗುತ್ತಾಳೆ.

ಆರ್ಥಿಕ ಸಂಬಂಧವಾದ ರಾಜಕೀಯ ವಿಚಾರಗಳ ಮೇಲೆಯೂ ಕವಿ ಪ್ರತಿಭೆ ಕಿರಣ ಹಾಯಿಸಿದೆ. ಹಳ್ಳಿಯ ರೈತರ ಮನೆಯಲ್ಲಿ ಜನ್ಮಧಾರಣೆ ಮಾಡಿದ ಕುವೆಂಪು ಅವರು ಸಹಜವಾಗಿ ಸದಾ ದೀನದಲಿತ ಸಾಮಾನ್ಯ ವರ್ಗದ ಕ್ಷೇಮಾಭ್ಯುದಯವನ್ನು ಕುರಿತ ಚಿಂತನೆಯಲ್ಲಿ ತೊಡಗಿರುತ್ತಾರೆ. ಶ್ರೀಸಾಮಾನ್ಯನ ಸ್ಥಿತಿ ಸುಧಾರಣೆಯಾಗುವ ತನಕ ಭರತಖಂಡ ಬಲಿಷ್ಠ ರಾಷ್ಟ್ರವಾಗಲಾರದೆಂದು ಖಚಿತವಾಗಿ ಹೇಳಿದ್ದಾರೆ. ರಾಜ ಪುರೋಹಿತ ಮತ್ತು ಶ್ರೀಮಂತ ಪಾಳೆಯಗಾರರು ಸುಲಿಗೆಗಾರರೆಂದೂ ದರೋಡೆ ಕೋರರೆಂದೂ ರೈತನ ರಕ್ತವನ್ನು ಶೋಷಿಸುವ ಜಿಗಣೆಗಳೆಂದೂ ಅವರು ಸಾರಿ ಹೇಳಿದ್ದಾರೆ. ಅವರು ಸ್ವಾರ್ಥಕ್ಕೆ ಲಂಪಟತ್ವಕ್ಕೆ ಮೈಗಳ್ಳತನಕ್ಕೆ ಶೋಷಣೆಗೆ ಹೆಸರಾದ ಆಸುರೀಪ್ರವೃತ್ತಿಯ ಕ್ರೂರಕರ್ಮಿಗಳು. ಕೊನೆಯ ರಾಜನ ಕರುಳು ಕೊನೆಯ ಪುರೋಹಿತನ ಕೊರಳಿಗೆ ಉರುಳಾದಾಗ ನಾಡಿಗೆ ಶುಭೋದಯ ವಾಗುತ್ತದೆಂಬ, ಸ್ವಾತಂತ್ರ್ಯದ ಸ್ವರ್ಗ ಲಭಿಸುತ್ತದೆಂಬ ವಾಲ್ಟೈರನ ಮಾತುಗಳನ್ನವರು ಆಗಾಗ್ಗೆ ನೆನೆದುಕೊಳ್ಳುತ್ತಾರೆ. ದೀನ ದಲಿತೋದ್ಧಾರಕ್ಕೆ ನೆರವಾಗದೆ ಅವರ ಶೋಷಣೆ ಯಲ್ಲಿಯೇ ಆಸಕ್ತವಾಗುವ ಧೀಶಕ್ತಿಯೂ ಅವರ ದೃಷ್ಟಿಯಲ್ಲಿ ಹೊಲ್ಲವಾಗುತ್ತದೆ. ಈ ಶೋಷಕ ಪ್ರವೃತ್ತಿ ಯಾವುದೊ ಕುಲಗೋತ್ರ ಮತವರ್ಣಗಳಿಗೆ ಮಾತ್ರ ಮೀಸಲಾಗಿಲ್ಲ. ದೀನ ದಲಿತರಿದ್ದ ಕಡೆ ಈ ಶೋಷಕರ ತಂಡ ತಲೆಯೆತ್ತುತ್ತದೆ. ರಕ್ತದ ರುಚಿ ಬಿದ್ದ ಹುಲಿಗೆ ತನ್ನ ಕಾಡಾದರೇನು? ಪರರ ಕಾಡಾದರೇನು?

ಕರಿಯರದೊ ಬಿಳಿಯರದೊ ಯಾರದಾದರೆ ಏನು?
ಸಾಮ್ರಾಜ್ಯವಾವಗಂ ಸುಲಿಗೆ ರೈತರಿಗೆ!
ವಿಜಯನಗರವೊ? ಮೊಗಲರಾಳ್ವಿಕೆಯೊ ಇಂಗ್ಲಿಷರೊ?
ಎಲ್ಲರೂ ಜಿಗಣೆಗಳೆ ನನ್ನ ನೆತ್ತರಿಗೆ!

ಇದು ‘ರೈತನ ದೃಷ್ಟಿ’. ಗೊಬ್ಬರವನ್ನು ಹೀರಿ ಸಾಮ್ರಾಜ್ಯ ಸಿರಿಯ ಕಸ್ತೂರಿ ಅಟ್ಟಹಾಸ ದಿಂದ ಮೆರೆಯುತ್ತದೆ. ‘ಗೊಬ್ಬರ’ ಕವನದಲ್ಲಿಯೂ ಇದೇ ಭಾವ ಹರಿದಿದೆ. ಸಮಾಜದ ಅಧೋಗತಿಗೆ ಅದರಲ್ಲಿರುವ ಬುದ್ದಿವಂತರೇ ಕಾರಣವೆಂಬ ಅರಿವು ‘ಮೊದಲನೆ ದೇವರು ಈ ಹಣ್ಮುದುಕಿ, ಎಂಬ ಕವನದಲ್ಲಿ ಹೊರಮೂಡಿದೆ. ‘ಸರ್ವರಿಗೆ ಸಮಬಾಳು! ಸರ್ವರಿಗೆ ಸಮಪಾಲು’ ಎಂಬುದಾಗಿ ‘ಹೊಸಬಾಳಿನ ಗೀತೆ’ಯನ್ನು ಹಾಡಿ, ಶ್ರೀಮಂತರ ಕಿರುಕುಳದಿಂದ ಪಾರಾಗಲು ನೆತ್ತರು ಹರಿಸಲು ಸಿದ್ಧರಾಗಿರೆಂದು ತರುಣರಿಗೆ ಕುವೆಂಪು ಕರೆಯಿತ್ತಿದ್ದಾರೆ. ಮೌಢ್ಯತೆಯ ಮಾರಿಯನ್ನು ಹೊರದೂಡಿ ವಿಜ್ಞಾನ ದೀವಿಗೆಯನ್ನು ಹಿಡಿದು ನಾಗಾಲೋಟ ದಿಂದ ಮುಂದುವರಿಯುತ್ತಿರುವ ರಷ್ಯಾ ಜಪಾನುಗಳ ಆದರ್ಶವನ್ನು ಎತ್ತಿ ಹಿಡಿದಿದ್ದಾರೆ. ಮೊನ್ನೆ ಮೊನ್ನೆಯತನಕ ಪಶ್ಚಿಮದ ಹೊಲೆಗೇರಿಯಾಗಿದ್ದ ರಷ್ಯಾ ಹೇಗೆ ಪ್ರಬುದ್ಧ ಪ್ರಬಲ ರಾಷ್ಟ್ರಗಳಲ್ಲೊಂದಾಗಿ ಮೆರೆಯುತ್ತಿದೆಯೆನ್ನುವುದನ್ನು ಉದಾಹರಿಸಿ, ಹಳೆಮತದ ಕೊಳೆಯೆಲ್ಲ ಹೊಸಮತಿಯ ಹೊಳೆಯಲ್ಲಿ ಕೊಚ್ಚಿ ಹೋಗಿ ವಿಜ್ಞಾನ ಬುದ್ದಿ ಬಳ್ಳಿವರಿದಾಗ ಮಾತ್ರ ಭರತಖಂಡದ ಭವಿಷ್ಯ ಆಶಾದಾಯಕವಾಗುತ್ತದೆಂದು ಬಹು ಹಿಂದೆಯೇ ಅವರು ಸೂಚಿಸಿದರು.

ಅವರ ಮನಸ್ಸಿನ ಸೆಳೆತವೆಲ್ಲ ಸಾಮಾನ್ಯವಾಗಿ ಸಮತಾವಾದದ ಕಡೆಗೆ. ರಷ್ಯಾ ದೇಶದ ಸಾಹಿತಿಗಳನ್ನು ಮನವಾರೆ ಮೆಚ್ಚಿಕೊಂಡಿರುವಂತೆಯೇ ಅವರು ಅಲ್ಲಿಯ ಆರ್ಥಿಕ ಪ್ರಗತಿಯನ್ನು ಪ್ರಶಂಸಿಸಿದ್ದಾರೆ. ‘ಕೋಗಿಲೆ ಮತ್ತು ಸೋವಿಯಟ್ ರಷ್ಯಾ’ ಎಂಬ ಕವನದಲ್ಲಿ ವಿಡಂಬನೆಯ ಮೊನೆ ಚೂಪಾಗಿ ಕಂಡರೂ ಕವಿಯ ಒಲವರ ಸೂಕ್ಷ್ಮ ದೃಷ್ಟಿಗೆ ಪತ್ತೆ ಯಾಗದಿಲ್ಲ. ಪರಸ್ಪರ ವಿರೋಧ ಮೂಲವಾದ ಸಂಗತಿಗಳ ಪರ್ಯಾಯ ಕ್ರಮದ ಜೋಡಣೆ ಯಿಂದ ವಿಡಂಬನೆಯ ಚುರುಕು ಕಣ್ಣು ನಾಲಗೆಗಳಲ್ಲಿ ನೀರು ಸುರಿಸುತ್ತದೆ, ನಿಜ.

ಸರ್ವ ಮನುಜರಿಗಾಗಿ ಸೃಷ್ಟಿ-
ಎಂಬ ಸಮದೃಷ್ಟಿ!-

ಎನ್ನುವ ಸತ್ಯವಚನದ ಹಿಂದೆಯೇ

ಎಲ್ಲವರ ಸುಖಕಾಗಿ ಗೆಯ್ಯಬೇಕೆಲ್ಲ!
ಆದರೂ ಸುಖಿಗಳೆನಗೊಬ್ಬರೂ ಕಾಣಲಿಲ್ಲ!

ಎಂಬ ಖಾರದ ಕಟುನುಡಿ ಮೈಯಲ್ಲಿ ಮುಳ್ಳೆಬ್ಬಿಸುತ್ತದೆ. ಮನುಷ್ಯತ್ವಕ್ಕೆ ಸಾಕಷ್ಟು ಬೆಲೆ ಸಲ್ಲಿಸುವುದಾದರೆ ಸಾಮ್ಯವಾದ ಸ್ವೀಕಾರ ಯೋಗ್ಯವೇ. ಆದರೆ ‘ದೇಶವೆಲ್ಲವು ದೊಡ್ಡದೊಂದು ಕಾರ್ಖಾನೆ’ಯಾಗಿ, ‘ಪ್ರತಿಯೊಬ್ಬ ಮಾನವನು ಯಂತ್ರದಂತಿದ್ದಾನೆ’ ಎನ್ನುವುದಾದರೆ, ‘ಬಾಳೆಂಬುದೊಂದು ನಿಷ್ಕರುಣ ಮಿಲ್ಲು’ ಎಂಬ ಭಾವನೆ ಸಾಮ್ಯವಾದದಿಂದ ತೋರು ವುದಾದರೆ, ‘ಕೋಗಿಲೆಯ ಮೊಟ್ಟೆಯೊಳಗೂ ಕೂಡ ಸಾಮ್ಯವಾದ ಪ್ರಚಾರ’ ಸಾಗುವುದಾದರೆ, ಕಲಾ ಪ್ರತಿಭೆ ಚಿನ್ನದ ಪಂಜರದಲ್ಲಿ ಸೆರೆಗೊಳ್ಳುವುದಾದರೆ, ಅದನ್ನು ಸಂದೇಹ ದೃಷ್ಟಿಯಿಂದ ನಿರುಕಿಸಬೇಕಾಗುತ್ತದೆ.

ಕುವೆಂಪು ಅವರಿಗೆ ಸಾಮ್ರಾಜ್ಯವೆಂದರಾಗದು. ‘ಸೋಮಾರಿಗಳಿಗೆ ಸುಖಿಗಳಿಗೆ ರಸಿಕರಿಗೆ…. ಅದು ಕಾಮಧೇನುವೆಂಬುದೇ ಅವರ ನಿಶ್ಚಿತಾಭಿಪ್ರಾಯ’. ರೈತರು ಕಾರ್ಮಿಕರು ಸಾಮಾನ್ಯರು ಮೇಲ್ಮೆ ಹೊಂದುವತನಕ ನಾಡಿನ ಪ್ರಗತಿ ಸಾಧ್ಯವಿಲ್ಲವೆಂದು ಅವರು ಮೇಲಿಂದ ಮೇಲೆ ಘೋಷಿಸಿದ್ದಾರೆ. ಸರ‌್ವೋದಯಕ್ಕಾಗಿ, ಶ್ರೀಸಾಮಾನ್ಯನ ಅಭ್ಯುದಯಕ್ಕಾಗಿ ಸ್ವಾತಂತ್ರ್ಯ ಸಂಪಾದನೆ ಅತ್ಯವಶ್ಯಕವೆಂದು ಅವರು ಸಾರಿದ್ದಾರೆ.

ಕೊನೆಗಂಡಿತೊ ಓರೊರ್ವರ ಗರ್ವದ ಕಾಲ,
ಇದು ಸರ್ವರ ಕಾಲ!
“ಸರ್ವೋದಯ!” “ಸರ್ವೋದಯ!”
ಸರ್ವೋದಯ ಯುಗಮಂತ್ರ!
ಸರ್ವೋದಯವೇ ಸ್ವಾತಂತ್ರ್ಯದ ಶ್ರೀತಂತ್ರ!
ಮೇಲಿಲ್ಲವೊ ಕೀಳಿಲ್ಲವೊ
ಸರ್ವ ಸಮಾನದ ರಾಜ್ಯ!                      (ಶ್ರೀಸಾಮಾನ್ಯರ ದೀಕ್ಷಾಗೀತೆ)

ಅಂಥ ರಾಜ್ಯದಲ್ಲಿ ಅಧ್ಯಕ್ಷನಾಗಲಿ ಸೇನಾನಿಯಾಗಲಿ, ರೈತನಾಗಲಿ ಮುಖ್ಯಮಂತ್ರಿ ಯಾಗಲಿ, ಕವಿಯಾಗಲಿ, ಸರ್ವರೂ ಸಮಾನರೆ. ಮನೆಯವರನ್ನು ಪ್ರೀತಿಸಿದರೆ ನೆರೆಮನೆ ಯವರನ್ನು ದ್ವೇಷಿಸಬೇಕಾಗಿಲ್ಲ. ಹಾಗೆಯೇ ಸರ್ವೋದಯವನ್ನು ಜಗತ್ಕಲ್ಯಾಣವನ್ನು ಸಾಧಿಸದ ದೇಶಪ್ರೇಮ ದೋಷಯುಕ್ತವಾದದ್ದೆಂದೇ ಅವರ ಭಾವನೆ. ರಕ್ತ ಪಿಪಾಸೆಯಿಂದ ಅಧಿಕಾರ ಪ್ರಮತ್ತತೆಯಿಂದ ದಲಿತರಾಷ್ಟ್ರಗಳನ್ನು ಸದೆ ಬಡಿಯುವ ಸಾಮ್ರಾಜ್ಯ ಮನೋಭಾವ ಶ್ರೇಯಸ್ಕರವಾದದ್ದಲ್ಲ. ಅಂಥ ಮನೋಭಾವದ ಬಗೆಗೆ ಅವರ ಸಾತ್ವಿಕ ಕ್ರೋಧ ಹೆಡೆಯೆತ್ತುತ್ತದೆ :

ನರನೀಚತೆ ಮಾರೀಚತೆ
ದೇಶಪ್ರೇಮದ ನೆವದಿ
ದಂಷ್ಟ್ರಾಶ್ರಿತ ರಾಷ್ಟ್ರಂಗಳ
ಆಸು ಹಿಂಡುತ್ತಿದೆ ಜವದಿ    (ಶತಮಾನ ಸಂಧ್ಯೆ)

ಆದ್ದರಿಂದಲೇ ಭಾರತೀಯ ಸ್ವಾತಂತ್ರ್ಯ ಸರ್ವೋದ್ಧಾರವನ್ನು ಬಯಸುತ್ತದೆ. ಜಗತ್ತಿನ ದಲಿತ ರಾಷ್ಟ್ರಗಳಿಗೆಲ್ಲ ಸ್ವಾತಂತ್ರ್ಯ ಲಭಿಸಿ ಲೋಕದಲ್ಲಿ ಶಾಂತಿ ಸಮಾಧಾನಗಳು ನೆಲಸಲೆಂಬುದೇ ಕವಿಯ ಆಶಯ :

ಸಾರಿ ಬಾ ಸರ್ವರ್ಗೆ ಸ್ವಾತಂತ್ರ್ಯಮಂ;
ಸಾರಿ ಬಾ ಸರ್ವರ್ಗೆ ಸಾಮ್ಯತ್ವಮಂ;
ಸರ್ವರ್ಗೆ ಸಾರಿ ಬಾ ಸೌಹಾರ್ದಮಂ;
ಸರ್ವಲೋಕದ ಸರ್ವ ಸಂತೋಷಮಂ,
ಸರ್ವರಿಂ ಸರ್ವರಾ ಉದ್ಧಾರಮಂ!

ಇಡೀ ಲೋಕವನ್ನಿಂದು ರಾಜಕೀಯ ಶಕ್ತಿ ಆಳುತ್ತಿದೆ; ಮಾನವನ ಸಕಲ ವ್ಯವಹಾರಗಳು ಮೂಲತಃ ರಾಜಕೀಯೋದ್ದೇಶಗಳಿಂದ ಉದ್ದೀಪನಗೊಂಡಿರುತ್ತವೆ; ಸಾಹಿತ್ಯ ವಿಜ್ಞಾನಗಳು ಕೂಡ ರಾಜಕೀಯಾಧೀನವಾಗಿಯೇ ವಿಕಾಸಗೊಳ್ಳಬೇಕಾದ ಸಂದರ್ಭವೊದಗಿದೆ. ಆದರೆ ಸಾಹಿತ್ಯ ರಾಜಕೀಯವನ್ನು ಸರ್ವೋಪಯುಕ್ತವಾದ ರೀತಿಯಲ್ಲಿ ರೂಪಿಸಬೇಕಾಗಿದೆ. ಸರ್ವಸ್ವತಂತ್ರತೆ, ಸರ್ವಸಮಾನತೆ, ಸರ್ವಸೋದರತೆ ಹಾಗೂ ಸರ್ವೋದಯ ತತ್ವದ ಆಧಾರದ ಮೇಲೆ ರಾಜಕೀಯ ವಿಚಾರಗಳು ರೂಪಗೊಳ್ಳುವಂತೆ ಸಾಹಿತ್ಯ ನೆರವಾಗಬೇಕೆಂಬುದು ಕವಿಯ ಆಶಯ. ಅವರ ಮೊದಮೊದಲ ಕವನಗಳಲ್ಲಿಯೇ ಸಾಮಾನ್ಯ ಜನಪರವಾದ ಕನಿಕರ ಸಹಾನುಭೂತಿಗಳನ್ನು ಕಾಣಬಹುದು; ಬಡತನದ ಬವಣೆಯನ್ನು ಸಿರಿತನದ ಅಟ್ಟಹಾಸವನ್ನು ಗಮನಿಸಬಹುದು; ‘ಹಾಳೂರು’ ಕವನದಲ್ಲಿ ರಾಜತಂತ್ರಜ್ಞರನ್ನುದ್ದೇಶಿಸಿ ಹೇಳಿರುವ ಮಾತುಗಳ ಸರಣಿಯನ್ನು ನೋಡಿ :

ಬಡಜನರು ಸಾಯುತಿರಲರಮನೆಗಳೇಕೆ?
ಹಳ್ಳಿ ಹಾಳಾಗುತಿದೆ ಪುರವೊಂದೆ ಸಾಕೆ?
ಹಳ್ಳಿಗಳ ಲೆಕ್ಕಿಸದ ಹಾಳು ಸರಕಾರ
ತನ್ನಾತ್ಮಹತ್ಯಕ್ಕೆ ತಾನೆಯಾಧಾರ

ಸಾಮಾನ್ಯ ಜನರ ರಕ್ತ ಬಸಿದು ಸಂಪಾದಿಸಿದ ಹಣದಿಂದ ಕಟ್ಟಿದ ಅರಮನೆಗಳು ಬಡವರ ಗೋಳು ತಗುಲಿ ಪ್ರೇತನಿಲಯಗಳಾಗುವ ಸಮಯ ಸನ್ನಿಹಿತವಾಗಿದೆ. ಅರಮನೆಗಳು ಮಾತ್ರವಲ್ಲ, ಸಿರಿವಂತರ ಮನೆಗಳೂ ಬಡವರ ಕೋಪಾಗ್ನಿಗೆ ಆಹುತಿಯಾಗುತ್ತಿವೆ. ಬಡವರ ಬೆವರಿನಿಂದ ಹಿಡಿಮಂದಿಯ ಸಿರಿತನ ಕೊಬ್ಬಿ ಬೆಳೆದಿದೆ. ಬಡತನಕ್ಕೆ ಪ್ರಾರಬ್ಧ ಕರ್ಮವೆ ಕಾರಣವೆಂದು ಸಾರಿ, ಗುಲಾಮರಿಂದ ದುಡಿಸಿಕೊಳ್ಳುವ ಹಕ್ಕು ಪುಣ್ಯವಶದಿಂದ ತಮಗೆ ಲಬ್ಧವಾದದ್ದೆಂದು ಘೋಷಿಸಿ, ತಮ್ಮ ಮುಖನೇರಕ್ಕೆ ತಕ್ಕಂತೆ ಕಾನೂನು ರಚಿಸಿಕೊಳ್ಳುವ ಸಿರಿವಂತರ ನಡತೆಯನ್ನು ಟೀಕಿಸುತ್ತಾರೆ :

ಸಿರಿಸುತರು ಕಾನೂನುಗಳ ರಚಿಸುತಿಹರು
ಬಡವರದಕೊಳಗಾಗಿ ಗೋಳಾಡುತಿಹರು;
ಸಿರಿಸುತರ ಬೊಬ್ಬೆಯಲಿ ಬಡಜನರ ದನಿಯು
ಸಾಗರದ ನಡುವೆ ಇಹ ತುಂತುರಿನ ಹನಿಯು!
ರಾಜ್ಯದಾಡಳಿತಗಳು ಹಣಗಾರರಲ್ಲಿ
ರಾಜ್ಯದಲ್ಲಿಹ ದಾಸ್ಯವದು ಬಡವರಲ್ಲಿ!
ಹಣಗಾರರಾನಂದ ಬಡಜನರಗೋಳು!
ಕೂಲಿಕಾರರ ರಕುತ ಧನಿಕರಿಗೆ ಕೂಳು (ಹಾಳೂರು)

ಸುಮಾರು ನಾಲ್ಕು ದಶಕಗಳ ಹಿಂದಿದ್ದ ನಾಡಿನ ಈ ಪರಿಸ್ಥಿತಿ ಇನ್ನೂ ಉತ್ತಮಗೊಂಡಿಲ್ಲ. ಹೊಸ ಸನ್ನಿವೇಶ ಪ್ರಭಾವಗಳ ಪರಿಣಾಮವಾಗಿ ಬ್ರಾಹ್ಮಣೇತರರಲ್ಲಿ ನವ್ಯ ಬ್ರಾಹ್ಮಣವರ್ಗ ತಲೆಯೆತ್ತುತ್ತಿರುವಂತೆ, ದರಿದ್ರರಲ್ಲಿ ನವ್ಯ ಶ್ರೀಮಂತ ವರ್ಗವೊಂದು ಭೂಗಗನ ಸಂಸ್ಪರ್ಶಿಯಾಗಿ ಬಾಯ್ದೆರೆದಿದೆ. ಅವರು ಬಾಯಲ್ಲಿ ಸಮತಾವಾದದ ಮಂತ್ರವನ್ನು ಪಠಿಸುತ್ತ, ಕ್ರಿಯೆಯಲ್ಲಿ ಬಡವರನ್ನು ಶೋಷಿಸುತ್ತ ನವಾಬಗಿರಿ ನಡೆಸುತ್ತಿದ್ದಾರೆ. ಯಾರೋ ಕೆಲವರು ಸಮತಾವಾದದ ತೇರನ್ನು ಮುಂದಕ್ಕೆ ಜಗ್ಗಿ ಎಳೆಯುತ್ತಿದ್ದರೆ, ಹಲವರು ಅದರ ಚಕ್ರದಡಿಗೆ ತಡೆದಿಂಡನ್ನೊಡ್ಡಿ, ಅದನ್ನು ಹಿಮ್ಮೊಗವಾಗಿ ನೂಕುತ್ತಿದ್ದಾರೆ. ಆದ್ದರಿಂದಲೆ ಸ್ವಾತಂತ್ರ್ಯ ಬಂದು ಇಪ್ಪತ್ತು ವರ್ಷಗಳಾದರೂ

ಧನಿಕರ ಮನೆಗಳು ಒಂದೆಡೆ ನಿಂತಿವೆ,
ಬಡವರ ಗುಡಿಸಲು ಒಂದೆಡೆ ನಿಂತಿವೆ.
ಜ್ಯೋತಿಯ ಮಣಿದೀಪಗಳಲ್ಲಿ,
ಕತ್ತಲು ಕಗ್ಗತ್ತಲು ಇಲ್ಲಿ!
ಪೀತಾಂಬರಗಳ ಹೊದೆಯುವರಲ್ಲಿ,
ಕೌಪೀನಕೆ ಚಿಂದಿಯು ಸಿಗದಿಲ್ಲಿ!

‘ಕಲ್ಕಿ’ಯನ್ನು ಹಾಡಿದಾಗ ನಾಡಿನಲ್ಲಿ ನೆಲೆಸಿದ್ದ ಪರಿಸ್ಥಿತಿ ಇಂದೂ ಮುಂದುವರಿಯುತ್ತಿದೆ.

ಇದಕ್ಕೆ ಭೇಷಜವೇನು? ನಮ್ಮ ಕಣ್ಮುಂದಿರುವುದೊಂದೇ ಒಂದು. ಅದು ಕಮ್ಯೂನಿಸಮ್. ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದ ಕಮ್ಯೂನಿಸಮ್ ನಮ್ಮ ನಾಡಿನ ನಾನಾ ರೋಗಗಳಿಗೆ ಪಥ್ಯವಾದೀತೆಂದು ಕವಿಯ ನಂಬುಗೆ. ಅವರು ರಷ್ಯಾ ದೇಶದ ವಿಪ್ಲವದ ಚರಿತ್ರೆಯನ್ನು ವ್ಯಾಸಂಗ ಮಾಡಿದ್ದಾರೆ. ಮಾರ್ಕ್ಸ್‌ನ ತತ್ತ್ವಗಳನ್ನು ಕಾರ್ಯಗತಗೊಳಿಸಿ, ರಷ್ಯಾದಲ್ಲಿ ಕ್ರಾಂತಿಯನ್ನೆಬ್ಬಿಸಿದ ಲೆನಿನ್ ಮಹಾಶಯನಲ್ಲಿ ಅವರಿಗೆ ಅಪಾರ ಗೌರವ :

ಧಮನಿಯಲಿ ಬಿಸಿನೆತ್ತರುಕ್ಕದೆ ನೆನೆಯಲಾರೆ
ನಿನ್ನಂ, ಲೆನಿನ್! ನಿನ್ನ ಹೆಸರದು ಸಿಡಿಲ್ ಸದ್ದು
ದೊರೆಗಿವಿಗೆ ನಿನ್ನ ಸಮತಾಬೋಧೆ ಸಿಡಿಮದ್ದು
ನರನ ಸಂಗ್ರಹ ಬುದ್ದಿ ಸ್ವಾರ್ಥತೆಯನುರಿದೋರೆ
ದಹಿಸಿ, ನಿಃಸ್ವಾರ್ಥತೆಯ ಬೆಂಕಿಯಿಂ ಹೃತ್ಕುಂಡ
ಸರ್ವದಾ ಪ್ರಜ್ವಲಿಸುವಂತೆಸಗೆ….

ಸಮತಾವಾದದ ಪ್ರತಿಪಾದನೆಗೆಂಬಂತೆ ಅವರು ‘ಧನ್ವಂತರಿಯ ಚಿಕಿತ್ಸೆ’ ಎಂಬ ಕತೆಯನ್ನು ಅತ್ಯಂತ ಮನೋಹರವಾಗಿ ಓದುಗರಲ್ಲಿ ತಕಟಕ್ಕನೆ ಅನುಕಂಪೆ ಮೂಡುವಂತೆ ಕಟ್ಟಿದ್ದಾರೆ. ಮಿಶ್ವಾಮಿತ್ರ ಮುಖದಿಂದ ನಿರ್ಗತವಾದ ಉದ್ಗಾರ ಸಾಲದೆಂಬಂತೆ ಕತೆಗಾರರೇ ಬೆಂಕಿ ಕಿಡಿಯಾಗಿ ಸಿಡಿಯುತ್ತಾರೆ. “ರೈತನ ಎದೆಯ ಮೇಲೆ ಸಮಸ್ತ ಚಕ್ರಾಧಿಪತ್ಯವೂ ಮಹಾಪರ್ವತಾ ಕಾರವಾಗಿ ನಿಂತಿತ್ತು. ಋಷಿಗಳು ನೋಡಿಕೊಂಡು ಬಂದಿದ್ದ ಆ ಮುಖ್ಯ ಪಟ್ಟಣವು ಅದರ ನೆತ್ತಿಯಲ್ಲಿ ರಾರಾಜಿಸುತ್ತಿದೆ! ಅಲ್ಲಿಯ ದೇವಾಲಯಗಳೂ ವಿದ್ಯಾನಿಲಯಗಳೂ ಕ್ರೀಡಾಮಂದಿರಗಳೂ ಪ್ರಮೋದವನಗಳೂ ಕರ್ಮ ಸೌಧಗಳೂ ಕಾರ್ಖಾನೆಗಳೂ ರಾಜಪ್ರಸಾದಗಳೂ ತಮ್ಮ ಭಾರವನ್ನೆಲ್ಲಾ ರೈತನ ಎದೆಯ ಮೇಲೆ ಹಾಕಿ, ಸಂಸ್ಕೃತಿ ಮತ್ತು ನಾಗರಿಕತೆ ಎಂಬ ಕೀರ್ತಿಯಿಂದ ಮೆರೆಯುತ್ತಿವೆ!” ಹಣವಂತನ ಡೌಲು ದಬ್ಬಾಳಿಕೆಯೆಲ್ಲ ರೈತಕಾರ್ಮಿಕರ ದುಡಿಮೆಯಿಂದ ಮೆರೆಯಬೇಕಾಗಿದೆ. ರೈತ ಗೇದು ಬತ್ತ ಬೆಳೆಯುತ್ತಾನೆ, ಆದರೆ ಬಾಣಂತಿತನದ ಹೆಂಡತಿಗೆ ಅನ್ನವಿಲ್ಲ; ಹಸು ಎಮ್ಮೆಗಳನ್ನು ಸಾಕುತ್ತಾನೆ, ಮಕ್ಕಳಿಗೆ ಒಳಲೆ ಹಾಲಿಲ್ಲ; ಸೌಧಗಳನ್ನು ಕಟ್ಟುತ್ತಾನೆ, ಅವನು ಮಾತ್ರ ಗುಡಿಸಿಲಲ್ಲಿ ವಾಸಿಸುತ್ತಾನೆ. ಪರರ ಸುಖಕ್ಕಾಗಿ ದುಡಿಯುವುದೇ ಅವನ ಪಾಲಿಗೆ ಬಂದ ಪಂಚಾಮೃತವಾಗಿದೆ. ಈ ದುಃಸ್ಥಿತಿ ಸರಿಗೊಳ್ಳುವ ತನಕ ಕವಿಯ ಮನಸ್ಸಿಗೆ ಶಾಂತಿಯಿಲ್ಲ. ಆದ್ದರಿಂದಲೇ ಅವರು ತರುಣರನ್ನು ಉಬ್ಬು ಮಾತುಗಳಿಂದ ಪ್ರಚೋದಿಸುತ್ತಾರೆ :

ಮೊನ್ನೆ ಮೊನ್ನೆಯವರೆಗೆ ಪಶ್ಚಿಮದ ಹೊಲೆಗೇರಿ,
ಇಂದು ನಂದನವಾಗಿ ನಗುತಲಿದೆ ರಷ್ಯಾ.
ಗರ್ಜಿಸಲು ತೊಡಗಿಹುದು ಕೇಸರಂಗಳ ಕೆದರಿ
ಇದುವರೆಗೆ ಮಲಗಿ ನಿದ್ರಿಸುತ್ತಿದ್ದ ಏಷ್ಯಾ.
ತರುಣರಿರ, ಎದ್ದೇಳಿ! ಎಚ್ಚರಗೊಳ್ಳಿ ಕೇಳಿ.

ಮುಕ್ತಕಂಠದಿಂದ ‘ಸೋವಿಯತ್ತಿಗೆ ವಿಜೂಭವ’ (ಪ್ರೇತ-ಕ್ಯೂ, ೭೨) ಎಂದು ಸಾರುತ್ತಾರೆ. ಸುತ್ತು ಬಳಸಿಲ್ಲದೆ ಹಿಡಿತವಿಲ್ಲದೆ ಸ್ಪಷ್ಟವಾಗಿ ಸೋವಿಯಟ್ ದೇಶ ನಮಗೆ ಮಾದರಿಯಾಗಬೇಕೆಂದು ಸಾರಿದ್ದಾರೆ : “ಸ್ವತಂತ್ರವಾದ ದೇಶದಲ್ಲಿ ಯಾವ ವೃತ್ತಿಯೂ ಮೇಲಲ್ಲ, ಯಾವುದೂ ಕೀಳಲ್ಲ. ಈ ವಿಚಾರದಲ್ಲಿ ಸೋವಿಯಟ್ ಯೂನಿಯನ್ ನಮಗೆ ಮಾದರಿಯಾಗಬೇಕು. ಅಲ್ಲಿ ಮಹಾಕಾದಂಬರಿಕಾರನಿಗೆ, ಮಹಾಕವಿಗೆ, ಮಹಾ ಸಂಶೋಧಕನಿಗೆ, ಮಹಾವಿಜ್ಞಾನಿಗೆ ರಾಷ್ಟ್ರೀಯ ಬಹುಮಾನವನ್ನು ಕೊಡುವಂತೆಯೇ ಕೋಳಿ ಸಾಕುವವನಿಗೆ, ಜೋಳ ಬೆಳೆಯುವವನಿಗೆ, ಹಸು ಸಾಕುವವನಿಗೆ ಅದೇ ಬಹುಮಾನ ಕೊಡುತ್ತಾರೆ. ಯಾವ ಕೆಲಸದ ಬಗೆಗೂ ಕೀಳು ಭಾವನೆಯಿಲ್ಲ. ಕಾಯಕದಲ್ಲಿ ಸಮಾನತೆ ಮತ್ತು ಗೌರವಗಳನ್ನು ಅವರು ಕಂಡುಕೊಂಡಿದ್ದಾರೆ. ನಮ್ಮ ದೇಶದಲ್ಲಿ ಆ ದೃಷ್ಟಿ ಬೆಳೆಯಲು ಬಹಳ ಕಾಲ ಬೇಕಾಗುತ್ತದೇನೋ? ಅದು ಬೆಳೆಯದಿದ್ದರೆ ದೇಶದ ಕ್ಷೇಮ ಸಾಧ್ಯವಾಗದು” (ಷಷ್ಟಿ ನಮನ, ೨೦೧).

ಆದರೆ ನಮ್ಮ ದೇಶದಲ್ಲಿ ಕಮ್ಯೂನಿಸಂಗೂ ಜಾತೀಯತೆಯ ಬಣ್ಣ ಬಳಿಯುವ ಸಂಭವವುಂಟೆಂದು ಕವಿ ಶಂಕಿಸುತ್ತಾರೆ. ಈ ಶಂಕೆ ನಿರಾಧಾರವಾದದ್ದಲ್ಲ. ಈ ಜಾತೀಯತೆಯ ಕಪಿಮುಷ್ಟಿಯಿಂದ ಭಾರತೀಯರು ಪಾರಾಗಿಲ್ಲ. ಇದೂ ಒಂದು ಶೋಷಣೆಯ ಮಾಧ್ಯಮವಾಗಿ ಸಾಮಾನ್ಯ ಜನತೆಯನ್ನು ರಣಹದ್ದಿನಂತೆ ಕಿತ್ತು ತಿನ್ನುತ್ತಿದೆ. ಭರತಖಂಡದ ಅನೈಕ್ಯಕ್ಕೆ ಭಾ,ಎ ಕಾರಣವಲ್ಲ; ಜಾತೀಯತೆ ಅಪರಿಹಾರ್ಯವಾದ ಮೂಲಭೂತ ಕಾರಣವೆಂಬಂತೆ ಭೀಕರಾಕಾರವಾಗಿ ಕಾಣುತ್ತಿದೆ. ಎಲ್ಲೆಲ್ಲಿ ಮಠಲಾಂಛನಾದಿಗಳಿಗೆ ಪ್ರಾಮುಖ್ಯತೆಯುಂಟೋ ಅಲ್ಲೆಲ್ಲ ಜಾತೀಯತೆ ತಾಂಡವವಾಡುತ್ತದೆ. ಸುಲಿಗೆಗೆ ಅದೊಂದು ಸುಲಭ ಮಾರ್ಗ ವಾಗಿರುವುದರಿಂದಲೇ ಅದರಿಂದ ನಾಡು ಕೂಡಲೇ ವಿಮುಕ್ತಿ ಹೊಂದುವಂತಿಲ್ಲ. ಶ್ರೀಮಂತ ರಂತೆಯೇ ಲಾಂಛನವಾದಿಗಳೂ ಅವರ ಪ್ರತಿಷ್ಠೆಯನ್ನು ಕಾಪಾಡಲು ಪ್ರಯತ್ನಿಸುತ್ತಾರೆ. ಅದು ಸರ್ಕಾರಿ ಕ್ಷೇತ್ರದಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಪಿಡುಗಾಗಿ ಪರಿಣಮಿಸಿದೆ. ಕೆಳಗಡೆ ಬಡ್ತಿಗೆ ಸಿದ್ಧವಾಗಿ ತಮ್ಮ ಜನರಿದ್ದರೆ ಏನಾದರೂ ಆಪಾದನೆ ಹೊರಿಸಿ ಮೇಲಿರುವ ವರನ್ನು ನಿವೃತ್ತಿ ವಯಸ್ಸಿಗೆ ಮುಂಚೆಯೇ ಮನೆಗೆ ಕಳಿಸುತ್ತಾರೆ. ಮುಖನೋಡಿ ಮಣೆಹಾಕು ವಂತೆ, ಲಾಂಛನ ನೋಡಿ ಹುದ್ದೆಯನ್ನು ಸೃಷ್ಟಿಸುತ್ತಾರೆ. ರಾಜಕೀಯ ಕ್ಷೇತ್ರದಲ್ಲಂತು ಈ ಜಾತೀಯತೆಯ ದುಷ್ಟರಿಣಾಮ ಕಲ್ಪನೆಗೆ ಮೀರಿದ್ದು. ಮಂತ್ರಿಪದವಿಗೆ ಯೋಗ್ಯತೆ ಮುಖ್ಯವಲ್ಲ, ಜಾತಿ. ಯಾವುದೊ ಜಾತಿಯ ಜನ ಪ್ರಧಾನವಾಗಿರುವ ಕ್ಷೇತ್ರದಲ್ಲಿ ಬೇರೊಂದು ಜಾತಿಯ ವ್ಯಕ್ತಿ ಎಷ್ಟೆ ಪ್ರತಿಷ್ಠಿತನಾಗಿರಲಿ, ಚುನಾವಣೆಗೆ ನಿಂತು ಗೆಲ್ಲುವಂತಿಲ್ಲ. ಕೊನೆಗೆ ಸತ್ಯಕ್ಕೆ ನಿಷ್ಪಕ್ಷಪಾತಕ್ಕೆ ಪ್ರತೀಕವಾಗಿರಬೇಕಾದ ಪತ್ರಿಕೆಗಳಲ್ಲಿಯೂ ಜಾತೀಯತೆಯ ನಾತವನ್ನು ಕುಡಿಯಬೇಕಾದೀತು. ತನ್ನ ಜಾತಿಯ ಜನಕ್ಕೆ ಸನ್ಮಾನವೊದಗಿದರೆ ಅವರ ಕೀರ್ತಿ ದಪ್ಪಕ್ಷರದಲ್ಲಿ ಪ್ರಕಟವಾಗುತ್ತದೆ; ಅನ್ಯಜಾತಿಯ ಜನಕ್ಕೆ ಮಹಾಸನ್ಮಾನವೊದಗಿದರೂ ಅದು ಪ್ರಕಟನೆಗೆ ಯೋಗ್ಯವಾಗುವುದಿಲ್ಲ. ಸ್ವಜಾತೀಯ ಜನ ಕೆಮ್ಮಿದರೂ ಪತ್ರಿಕೆಯಲ್ಲಿ ಪ್ರಕಟವಾಗುತ್ತದೆ; ಅನ್ಯಜಾತಿಯ ಜನ ಹೊಸ ತತ್ತ್ವವನ್ನು ಬೋಧಿಸಿದರೂ ಅದಕ್ಕೆ ಮೂಲೆ ಜಾಗ ಸಿಗುವುದಿಲ್ಲ. ಆದ್ದರಿಂದ

ನಮ್ಮ ದೇಶಕೆ ಏನು ಬಂದರೇನಂತೆ?
ಕೊನೆಗೆ
ಕಮ್ಯುನಿಸಂ ಏ ಬಂದರೂ:
ಹಾಕುವೆವು ಅದಕ್ಕೂ ಮೂರು ನಾಮ!
ಅದರ ಹೆಗಲಿಗೂ ಬೀಳುವುದು ಜನಿವಾರ!
ಅದಕ್ಕೂ ಕಟ್ಟುವೆವು ಲಿಂಗ
ಕ್ರಾಸು ತಗುಲಿಸಿದರೂ ಆಶ್ಚರ್ಯವಿಲ್ಲ!
ಇಲ್ಲಿ ಕಮ್ಯೂನಿಸಂ ಊ ಕಿರಸ್ತಾನ!
ಕೊನೆಗೆ
ಹಿಂದೂಸ್ಥಾನದಲ್ಲಿಯೂ ಅದು ಮುಸಲ್ಮಾನ!            (ಪ್ರೇತ-ಕ್ಯೂ, ೩೯)

ಇದು ವಾಸ್ತವ ಸಂಗತಿ, ಕಟುಸತ್ಯ; ದಿನಬೆಳಗಾದರೆ ಮೈದೋರುವ ಅನುಭವ ಸಂಪತ್ತು. ಗಾಂಧಿಯನ್ನು ಕೊಂದ ಜನವೇ ಪವಿತ್ರ ರೂಪದ ರಾಜ್ಯಾಂಗವನ್ನು ಧಿಕ್ಕರಿಸಿ, ಅದನ್ನು ತಂತಮ್ಮ ಅನುಕೂಲಕ್ಕೆ ತಕ್ಕಂತೆ ಉಪಾಯ ವೇದಾಂತದ ರೀತಿಯಲ್ಲಿ ಮಾರ್ಪಡಿಸಿಕೊಂಡು ಮೂಲಭೂತ ಹಕ್ಕುಗಳ ಹೆಸರಿನಲ್ಲಿ ಯೋಗ್ಯತೆಯ ಹುಸಿನೆಪದಲ್ಲಿ ಹೊಟ್ಟೆ ತುಂಬಿಕೊಳ್ಳುತ್ತ ಆತ್ಮವಂಚಕರಾಗುತ್ತಿದ್ದಾರೆ. ‘ನಮ್ಮ ರಾಜ್ಯಾಂಗದಲ್ಲಿ ಮಾತ್ರ ನಾವು ಧರಿಸಿಹುದು ಸೆಕ್ಯೂಲರ್ ಯಜ್ಞಸೂತ್ರ!’ (ಅದೇ, ೪೦) ಎಂಬ ಮಾತು ದಿಟಕ್ಕು ದಿಟ.

ಈ ಜಾತೀಯತೆಯ ಹಿನ್ನೆಲೆಯಲ್ಲಿ ಸಾಮ್ರಾಜ್ಯ ಮನೋಭಾವದ ಕಟುಕ ಪ್ರವೃತ್ತಿ ಭೋರ್ಗರೆಯುತ್ತಿದೆಯೆನ್ನುವುದರಲ್ಲಿ ಸ್ವಲ್ಪವೂ ಸಂದೇಹವಿಲ್ಲ. ಜಾತೀಯತೆಯ ಬೆಳವಣಿಗೆಗೆ  ಮೌಢ್ಯವೇ ಹುಲುಸು ನೆಲ; ಪುರಾಣ ಪಂಚಾಂಗ ಮಂತ್ರತಂತ್ರಗಳೇ ಮೌಢ್ಯಪ್ರಸಾರದ ಪ್ರಬಲ ಸಾಧನಗಳು. ಆದ್ದರಿಂದಲೇ

ಅಷ್ಟಗ್ರಹ ದುಷ್ಟಗ್ರಹ ಭಯವ ತೋರಿ
ಅರಳ ಹೆಸರಿನಲ್ಲಿ ಮರಳ ಬೀರಿ
ಮಂಕು ಜನದ ಮನಕೆ ಮಾಡುತಿಹರು ಅರುಳು ಮರುಳು                    (ಅದೇ, ೪೭)

ರಾಜಪುರೋಹಿತರಿಬ್ಬರೂ ಸುಲಿಗೆಯ ಸಂಕೇತಗಳು; ಸ್ವಾತಂತ್ರ್ಯ ಸರ್ವೋದಯಗಳಿಗೆ ರಾಹುಕೇತುಗಳು. ಅವರ ಕೈ ನಡೆಯುವ ತನಕ ಪ್ರಜಾಸ್ವಾತಂತ್ರ್ಯ ಸಂಪೂರ್ಣವಾಗಿ ಸಿದ್ದಿಸುವುದಿಲ್ಲ. ಸ್ವಾರ್ಥ ಸಾಧನೆ ಅವರನ್ನು ಬಿಟ್ಟದ್ದಲ್ಲ. ಬ್ರಿಟಿಷರು ದೇಶದಿಂದ ಕಾಲ್ತೆಗೆದರೂ ಇವರ ಹಾವಳಿ ತಪ್ಪಿದ್ದಲ್ಲ, ಬ್ರಿಟಿಷರ ಆಸರೆಯಲ್ಲಿ ಜೋಹುಕುಂ ಭಕ್ತರಾಗಿ ಬೆವರು ಸುರಿಸದೆ ಸುಖ ಲೋಲುಪರಾಗಿ ವಿಷಯಲಂಪಟರಾಗಿ ಮಜಾ ಮಾಡುತ್ತಿದ್ದ ಆಸಾಮಿಗಳು ಇನ್ನೂ ದಾಸ್ಯಪ್ರವೃತ್ತಿಯಿಂದ ನಿವೃತ್ತಿಯಾಗದ, ಸ್ವಾರ್ಥಸಾಧಕರಾದ ಶಕುನಿಗಳೊಡನೆ ಕೂಡಿಕೊಂಡು ಅವರಿಗೆ ಏನೇನೊ ಆಸೆ ಹುಟ್ಟಿಸುತ್ತ, ಮತ್ತೆ ಪೂರ್ವಾಧಿಕಾರವನ್ನು ಕಸಿದುಕೊಳ್ಳುವ ಸಲುವಾಗಿ ಲಾಗ ಹಾಕುತ್ತಿದ್ದಾರೆ; ತಿಳಿಯದ ಜನರಿಗೆ ಮಂಕುಬೂದಿಯೆರಚಲು ನಾನಾ ಸನ್ನಾಹಗಳಲ್ಲಿ ತಲ್ಲೀನರಾಗಿದ್ದಾರೆ; ಪ್ರತಿಗಾಮಿಶಕ್ತಿಗಳೊಡನೆ ಸೇರಿಕೊಂಡು ಪ್ರಗತಿವಾದಿಗಳನ್ನು ಹತ್ತಿಕ್ಕಿ ರಾಜ್ಯಾಂಗಕ್ಕೆ ಅವಮಾನವಾಗುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಬೆನ್ನು ಮೂಳೆಯಿಲ್ಲದ ಕುಟಿಲ ಪ್ರವೃತ್ತಿಯ ರಾಜಕಾರಣಿಗಳು ಸ್ವಾರ್ಥ ಸಾಧನೆಗಾಗಿ ಅವರ ಅಯೋಗ್ಯ ವರ್ತನೆಗಳಿಗೆ ಸಾವಿೂಲಾಗಿದ್ದಾರೆ. ಪ್ರಜಾತಂತ್ರಕ್ಕೆ ಹಾಗೂ ಸ್ವಾತಂತ್ರ್ಯಕ್ಕೆ ಬದ್ಧವಿರೋಧವಾದ ದಸರಾ ದರ್ಬಾರು ಜಂಬೂ ಸವಾರಿಗಳ ಏರ್ಪಾಡಿಗೆ ನಾಚಿಕೆಯಿಲ್ಲದೆ ನೆರವಾಗುತ್ತಿದ್ದಾರೆ. ಅವರ ಗುಲಾವಿೂಯತೆಯ ವೈಖರಿಯನ್ನು ಕವಿ ಲೇಖನಿಯೇ ವರ್ಣಿಸಲಿ :

ಜರಿಯ ಪೇಟ, ಕರಿಯ ಕೋಟು!
ಬಿಳಿ ಷರಾಯಿ, ಉತ್ತರೀಯ!
ಬಗ್ಗು ಸೊಂಟ, ಡೊಗ್ಗು ಸಲಾಮು!
ಗುಲಾಮಿಗೂ ಚಿನ್ನದ ಮುಲಾಮು!
ಹಳೆಯ ಪಾಳೆಯಗಾರಿಕೆಗೆ ಹೊಸ ಪ್ರಹಸನ!
ಭಾರತದ ಪವಿತ್ರ ರಾಜ್ಯಾಂಗಕೂ ಅವಮಾನ!                             (ಅದೇ, ೩೯)

ಸ್ವಪ್ರತಿಷ್ಠೆ ಕ್ಷಾತ್ರಾಹಂಕಾರ ಪರಾಕ್ರಮಣ ಮನೋಭಾವ ರಕ್ತಗತವಾಗಿರುವ ರಾಜ ಮಹಾರಾಜರುಗಳ ಬಗೆಗೆ ಸದಾ ಜಾಗೃತವಾಗಿರಬೇಕೆಂದು ಪ್ರವಾದಿ ರೂಪದ ಕವಿಲೇಖನಿ ನಾಡಿಗೆ ಎಚ್ಚರಿಕೆ ನೀಡಿದೆ.

ಕುವೆಂಪು ಅವರಿಗೆ ಪ್ರಜಾಪ್ರಭುತ್ವದಲ್ಲಿ ಅಚಲವಾದ ವಿಶ್ವಾಸವಿದೆ. ಆದರೆ ಸಮತಾವಾದ ಅದರ ಉಸಿರಾಗಬೇಕು. ಇಂಥ ಪ್ರಜಾಪ್ರಭುತ್ವ ಕಾರ್ಯಗತಗೊಳ್ಳಬೇಕಾದರೆ, ಸಂಪೂರ್ಣ ವಾಗಿ ಯಶಸ್ವಿಯಾಗಬೇಕಾದರೆ ದೇಶಭಾಷೆಗಳು ಜೀವನದ ಸಕಲ ಕ್ಷೇತ್ರಗಳಲ್ಲಿಯೂ ವಿಜೃಂಭಿಸಬೇಕು. ಎಲ್ಲಿಯತನಕ ದೇಶಭಾಷೆಗಳಿಗೆ ಶ್ರೇಷ್ಠ ಸ್ಥಾನಮಾನಗಳು ದೊರೆಯು ವುದಿಲ್ಲವೋ ಅಲ್ಲಿಯತನಕ ಪ್ರಜಾತಂತ್ರ ಅತಂತ್ರವಾಗುತ್ತದೆ, ಪ್ರಜಾಪ್ರಭುತ್ವ ಬರಿಯ ನಟನೆಯಾಗುತ್ತದೆ. ರಾಜಕೀಯ ಕ್ಷೇತ್ರವಾಗಲಿ, ಸಾಮಾಜಿಕ ಕ್ಷೇತ್ರವಾಗಲಿ ಅವುಗಳ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕಾದ್ದು ಸಾಹಿತ್ಯದ ಧರ್ಮ; ಅವುಗಳಲ್ಲಿ ರೋಗರುಜಿನಗಳು ಹರಡದಂತೆ ಜಾಗರೂಕತೆ ವಹಿಸಿ, ಆರೋಗ್ಯ ರಕ್ಷಣಾ ವಿಧಾನವನ್ನು ಕೈಗೊಳ್ಳತಕ್ಕದ್ದು ಅದರ ಕರ್ತವ್ಯ. “ನಮ್ಮ ರಾಜಕೀಯ ಜೀವನ, ನಮ್ಮ ಪ್ರಜಾಪ್ರಭುತ್ವ ನಮ್ಮ ಮಹಾಚುನಾವಣೆಗಳು ನಮ್ಮನ್ನು ಹೇಗಾದರೂ ಸುಧಾರಿಸುತ್ತವೆ ಎಂಬ ನಂಬುಗೆಯೂ ನಡುಗುವಂತಾಗುತ್ತಿದೆ. ಐದು ವರ್ಷಕ್ಕೊಮ್ಮೆ ನಡೆಯುವ ಹಾಗೂ ಜನಹೃದಯ ಸಾಗರವನ್ನು ಕಡೆಯುವ ಮಹಾಚುನಾವಣೆ ನಮ್ಮಲ್ಲಿ ಪ್ರಜಾಪ್ರಭುತ್ವದ ತತ್ತ್ವವನ್ನು ಬಿತ್ತಿ, ನಮ್ಮ ಸಮನ್ವಯ ದೃಷ್ಟಿಯನ್ನು ವಿಸ್ತರಿಸುವುದಕ್ಕೆ ಬದಲಾಗಿ, ನಾಲ್ಕು ವರ್ಷದ ಅವಧಿಯಲ್ಲಿ ಕೊಂಚ ಸಮಾಧಾನ ಹೊಂದಿ ತಣ್ಣಗಾಗಿ ಕಡಲ ತಳಕ್ಕೆ ಇಳಿದು ಕುಳಿತ ಕ್ರೋಧ ಅಸೂಯೆ ಸ್ಪರ್ಧೆ ವೈರ ಜಾತಿ ಮಾತ್ಸರ್ಯ ದ್ವೇಷ ದುರ್ಬುದ್ದಿ ಸ್ವಾರ್ಥತೆ ಇತ್ಯಾದಿ ಭಾವೋನ್ಮಾದ ಬುದ್ದಿ ಭ್ರಾಂತಿಗಳನ್ನೆಲ್ಲ ಹೊಡೆದೆಬ್ಬಿಸಿ ಕಡೆದೆಬ್ಬಿಸಿ ಎಂತಹ ಅನಾಹುತವಾಗುತ್ತಿದೆ ಎನ್ನುವುದನ್ನು ತಿಳಿದವರೆಲ್ಲ ಬಲ್ಲರು. ಸಾಹಿತ್ಯ ಈ ವಿಷವನ್ನೆಲ್ಲ ಈಂಟುವ ನೀಲಕಂಠ ನಾಗಬೇಕು. ಅಮೃತವನ್ನು ಹಂಚುವ ದಿವ್ಯಮೋಹಿನಿಯಾಗಬೇಕು” (ಷಷ್ಟಿ ನಮನ, ೧೪) ಈಗಿನ ರಾಜಕೀಯ ಪರಿಸ್ಥಿತಿ ಎಷ್ಟು ಕೆಟ್ಟಿದೆ, ನಾರುತ್ತಿದೆಯೆನ್ನುವುದನ್ನು ಅವರು ಬಲ್ಲರು. ರಾಜಕೀಯ ಜ್ವರ ಸಾಂಕ್ರಾಮಿಕವಾಗಿ ಪರಿಣಮಿಸಿ ಇಡೀ ನಾಡನ್ನೆ ನುಂಗಿ ನೊಣೆಯುತ್ತಿದೆ. ಈ ಪರಿಸ್ಥಿತಿಯನ್ನು ವಿವರಿಸುವಾಗ ಕುವೆಂಪು ಅವರ ಧರ್ಮಕ್ರೋಧ ಹೆಡೆಯೆತ್ತುತ್ತದೆ; “ಇಂದು ರಾಜಕೀಯಕ್ಕೆ ಪ್ರವೇಶಿಸುವುದೆಂದರೆ ಸ್ವಾರ್ಥತೆ, ಸ್ವಪ್ರತಿಷ್ಠೆ, ಸ್ವಜಾತಿ ಸ್ವಪಕ್ಷಗಳ ಉದ್ಧಾರದ ನೆವದಲ್ಲಿ ಪಕ್ಷ ಪ್ರತಿಪಕ್ಷಗಳನ್ನು ಕಟ್ಟಿಯೋ ಸೇರಿಯೋ ಎದುರಾಳಿಯನ್ನು ಎದುರು ಪಕ್ಷವನ್ನು ಸದೆಬಡಿಯುವುದು, ಏನಕೇನ ಪ್ರಕಾರೇಣ ‘ಅಖಿಲಭಾರತ ಧುರೀಣ’ನಾಗುವುದು, ಅಧಿಕಾರ ಧನಮಾನ ಸಂಪಾದನೆ ಇತ್ಯಾದಿ ಇತ್ಯಾದಿ… ಹೀಗೆ ಒಂದಲ್ಲ ಹಲವು ತೆರಗಳಲ್ಲಿ ಕಲೆ ಸಂಸ್ಕೃತಿ ಧರ್ಮ ಅಧ್ಯಾತ್ಮ ಇವುಗಳ ಕಡೆಯಿಂದ ರಾಜಕೀಯದ ಕಡೆಗೆ ತಿರುಗುವ ಜನಮನಸ್ಸು ಅದನ್ನೇ ಬಹುಮುಖ್ಯವೆಂದೂ ಪರಮ ಪುರುಷಾರ್ಥವೆಂದೂ ಭಾವಿಸುತ್ತದೆ. ಪಾಶ್ಚಾತ್ಯದೇಶಗಳಲ್ಲಿ ಆಗಿರುವಂತೆ ರಾಜಕೀಯ ವೃಕ್ತಿಯೇ ಪರಮ ಗಣ್ಯನೂ ಪೂಜ್ಯನೂ ಆಗುತ್ತಾನೆ” (ಅದೇ, ೨೨೨).

ಕೊನೆಯ ವಾಕ್ಯವಂತೂ ಈ ಹೊತ್ತಿನ ನಾಡಿನ ವಸ್ತುಸ್ಥಿತಿಯನ್ನು ಮಾರ್ಮಿಕವಾಗಿ ಸೂಚಿಸುತ್ತದೆ. ಆ ವಾಕ್ಯದ ವ್ಯಾಖ್ಯಾನ ಒಂದು ಗ್ರಂಥದಷ್ಟಾಗಬಹುದು. ಒಬ್ಬ ವ್ಯಕ್ತಿ ಪ್ರತಿಷ್ಠಿತ ರಾಜಕೀಯ ಸಂಸ್ಥೆಯ ಸದಸ್ಯನಾದ ಕೂಡಲೇ, ಶಾಸನ ಸಭಾ ಸದಸ್ಯನಾದ ಕೂಡಲೆ ಧನಿಕನಾಗುತ್ತಾನೆ; ಸರ್ವಶಕ್ತನಾಗುತ್ತಾನೆ; ಮಂತ್ರಿಯಾದ ಕೂಡಲೇ ಸರ್ವಜ್ಞ ನಾಗುತ್ತಾನೆ, ದೇವೇಂದ್ರನಾಗುತ್ತಾನೆ. ಅವನಿಗೆ ಇಡೀ ಜಗತ್ತೇ ಕಾಲಕಸ. ಈ ಕೆಲವು ಪ್ರತಿಷ್ಠಿತ ಸ್ಥಾನಗಳು ದೊರಕಿದುವೆಂದರೆ ಬೆಳಕು ಹರಿಯುವ ಹೊತ್ತಿಗೆ ಬಡವ ಧನಿಕನಾಗುತ್ತಾನೆ. ನಿರಕ್ಷರಕುಕ್ಷಿ ಮಹಾಪಂಡಿತನಾಗುತ್ತಾನೆ, ಪೆದ್ದಭಟ್ಟ ಬುದ್ದಿವಂತನಾಗುತ್ತಾನೆ; ಜೊತೆ ಜೊತೆಗೆ ಅವನ ಅಂಗಾಂಗಗಳಿಗೆ ಬಿಗುರೋಗ ಹಿಡಿಯುತ್ತದೆ. ಹೋಗಲಿ, ಆ ಅವರ ಪ್ರತಿಷ್ಠೆ ಶಾಶ್ವತವಾಗುಳಿಯುತ್ತದೆಯೆ? ಅದು ಎಲ್ಲಿಯ ತನಕ? ಮತ್ತೊಂದು ಚುನಾವಣೆಯ ತನಕ. ಸ್ಥಾನಮಾನವನ್ನು ಕಳೆದುಕೊಂಡ ಮರುದಿನವೆ ಅವನು ಅಸ್ಪೃಶ್ಯನಾಗುತ್ತಾನೆ; ಬಹಿಷ್ಕೃತ ನಾಗುತ್ತಾನೆ; ರಸವಿಲ್ಲದ ಕಬ್ಬಿನ ಸಿಪ್ಪೆಯಾಗುತ್ತಾನೆ, ತಬ್ಬಲಿಯಾಗುತ್ತಾನೆ; ಅವನ ಸ್ಥಿತಿ ಕರುಣಾಜನಕವಾಗುತ್ತದೆ; ನೆಂಟರಿಷ್ಟರಿಗೂ ಅವನು ಬೇಡವಾಗುತ್ತಾನೆ; ಹೆಂಡತಿಯ ದೃಷ್ಟಿಯಲ್ಲಿಯೂ ಕನಿಷ್ಠನಾಗುತ್ತಾನೆ. ಚುನಾವಣೆಯ ಮಹಿಮೆ ಹೀಗಿದೆ :

ಅಂದು ಹೂವಿನ ಹಾರ,
ಇಂದು ಕಲ್ಲೇಟು
ಏನಿದೀ ಗ್ರಹಚಾರ
ಹಾಳು ಈ ಓಟು.

ಹೀಗೆಯೇ ಕುವೆಂಪು ಅವರ ಲೇಖನಿ ಪೂರ್ವಬಂಗಾಳದ ನೌಕಾಲಿಯಲ್ಲಿ ನಡೆದ ಕಗ್ಗೊಲೆ ಅತ್ಯಾಚಾರ ಬಲಾತ್ಕಾರ ಮತಾಂತರಗಳನ್ನು ಕುರಿತು ಚೀತ್ಕರಿಸಿದೆ (ಕವನ ಮಾತ್ರವೆ, ಕೇಳ್, ಶಕ್ತಿಮಂತ್ರ); ಭಾರತದ ವಿಭಜನೆಯ ನಂತರ ಪಶ್ಚಿಮ ಪಂಜಾಬಿನಲ್ಲಿ ನಡೆದ ದುರಂತ ನಾಟಕವನ್ನು ಹೃದಯ ವಿದ್ರಾವಕವಾಗಿ (ಪತ್ರಿಕಾಗವಾಕ್ಷ) ಚಿತ್ರಿಸಿದೆ; ಭರತಖಂಡದ ವಿಭಜನೆಗೆ ಕಾರಣನಾದ ರಾಜಕೀಯ ರಾವಣ ಗತಿಸಿದಾಗ ನಿಟ್ಟುಸಿರು ಹರಿಸಿದೆ; ಉತ್ತರದಿಂದ ಶತ್ರುಗಳು ಧಾಳಿ ನಡೆಸಿದಾಗ

ಚೀಣೀ ರಾಕ್ಷಸದಳವದು ಸೀಳಿ
ಓ ಬಾ ಬಾ ಬಾ, ಹೇ ಮಹಾಕಾಳಿ

ಎಂದು ಶ್ರದ್ಧೆಯಿಂದ ಪ್ರಾರ್ಥಿಸಿದೆ ;

ಕೊಡು ಹಣ, ತೊಡು ಪಣ;
ತೀರಿಸು ನಡೆ ನಾಡ ಋಣ!

ಎಂದು ನಾಡಿನ ಜನರಿಗೆ ಕರೆಯಿತ್ತಿದೆ;

ನಮ್ಮ ಮತ-ಭಾರತ!
ನಮ್ಮ ವ್ರತ-ಭಾರತ!

ಎಂಬ ಶಕ್ತಿಮಂತ್ರವನ್ನು ಜನರ ನಾಡಿನಾಡಿಯಲ್ಲಿ ಹರಿಯಿಸಿದೆ; ನಾಡಿಗಾಗಿ ಗಡಿಯನ್ನು ಕಾಯ್ದು, ಮೆಷಿನ್‌ಗನ್ನಿಗೆ ತನ್ನ ಎದೆಯೊಡ್ಡಿದ ಹೆಸರೊಲ್ಲದ ದಳಪತಿಗೆ ‘ಎತ್ತು ಆರತಿ, ಓ ಭಾರತಿ!’ ಎಂದು ಮೊರೆದಿದೆ.

ಕುವೆಂಪು ಅವರ ಕತೆ ಕಾದಂಬರಿ ನಾಟಕ ಕವಿತೆಗಳಲ್ಲಿ, ಶ್ರೀರಾಮಾಯಣದರ್ಶನಂ ಮಹಾಕಾವ್ಯದಲ್ಲಿ ಅಲ್ಲಲ್ಲೆ ಪ್ರಾಸಂಗಿಕವಾಗಿ ರಾಜಕೀಯ ವಿಚಾರಗಳು ಮಿಂಚಿ ಮರೆಯಾಗು ತ್ತವೆ. ಆದರೆ ಅವರ ವಿಡಂಬನೆ ಅನ್ಯೋಕ್ತಿ ಅಣಕ ವ್ಯಂಗ್ಯ ಮೊದಲಾದವುಗಳ ಉದ್ದೇಶ ರಾಜಕೀಯ ಮಾರ್ಗದ ದೇಶಕಲ್ಯಾಣ ಸಾಧನೆ. ಅವರಲ್ಲಿ ವ್ಯಂಗ್ಯಕ್ಕಿಂತ ನೇರನುಡಿಗೇ ಚಾಟಿಯೇಟಿಗೇ ಮುಖ್ಯಸ್ಥಾನ. ಸರ್ವಸಮಾನತೆಯಿಂದ ಕೂಡಿದ ಸರ‌್ವೋದಯ ಸಮಾಜ ಸ್ಥಾಪನೆಯೇ ಅವರ ರಾಜಕೀಯ ಪ್ರಸಂಗಗಳ ಗುರಿ. ಅಂಥ ಸಮಾಜ ಸ್ಥಾಪನೆ ಬಹುಬೇಗನೆ ಕೈಗೂಡಲೆಂದು ‘ಕರ್ನಾಟಕ ಹೃದಯ ಶಿವ’ನನ್ನು ಪ್ರಾರ್ಥಿಸುತ್ತಾರೆ :

ಸತ್ತಂತಿಹರನು ಬಡಿದೆಚ್ಚರಿಸು;
ಕಚ್ಚಾಡುವರನು ಕೂಡಿಸಿ ಒಲಿಸು.
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು;
ಒಟ್ಟಿಗೆ ಬಾಳುವ ತೆರದಲಿ ಹರಸು!