ರಾಮಾಯಣವನ್ನು ಬರೆದ ಕವಿಗಳ ಭಾರದಿಂದ ಭೂಮಿಯನ್ನು ಹೊತ್ತಿರುವ ಫಣಿರಾಯ ತಿಣಿಕಿದನೆಂದೂ, ಕಾಲಿಡಲು ತೆರಪೇ ಇಲ್ಲದಂತೆ ರಾಮಾಯಣ ಸಂಬಂಧವಾದ ಕತೆಗಳು ಹುಟ್ಟಿರುವುವೆಂದೂ ಸುಮಾರು ಐನೂರು ವರ್ಷಗಳ ಹಿಂದೆ ಕನ್ನಡದಲ್ಲಿ ಭಾರತವನ್ನು ಬರೆದ ಗದುಗಿನ ನಾರಣಪ್ಪ ಬಿಂಕದಿಂದ ನುಡಿದನು. ಸಂಸ್ಕೃತದಲ್ಲಿ ರಾಮಾಯಣ ಹುಟ್ಟಿದಾಗಿ ನಿಂದ ಇತರ ಭಾಷೆಗಳಳ್ಲಿಯೂ ಅದರ ಭಾಷಾಂತರ ರೂಪಾಂತರಗಳು, ವ್ಯಾಖ್ಯಾನಗಳು ಬೇಕಾದಷ್ಟು ಬಂದಿವೆ; ಆ ಗ್ರಂಥದಿಂದ ವಸ್ತುವನ್ನು ಎರವಲಾಗಿ ಪಡೆದು ಕಾವ್ಯಗಳನ್ನು ರಚಿಸಿದ ಹಲವರು ಶ್ರೇಷ್ಠಕವಿಗಳೆಂದು ಜನರ ಗೌರವಾದರಗಳಿಗೆ ಪಾತ್ರರಾಗಿದ್ದಾರೆ. ರಾಮಾಯಣವನ್ನು ತಮಿಳಿನಲ್ಲಿ ಬರೆದ ಕಂಬ, ಹಿಂದಿಯಲ್ಲಿ ಬರೆದ ತುಲಸೀದಾಸ, ಬಂಗಾಳಿಯಲ್ಲಿ ಬರೆದ ಕೃತ್ತಿವಾಸ ಇವರ ಹೆಸರುಗಳು ಆ ಆ ಭಾಷೆಯನ್ನು ಬಳಸುವ ಜನರ ತುದಿನಾಲಗೆಯಲ್ಲಿ ನರ್ತಿಸುತ್ತಿವೆ. ಸಾವಿರ ವರ್ಷಗಳ ಹಿಂದೆಯೇ ಕನ್ನಡದಲ್ಲಿಯೂ ರಾಮಾಯಣಗಳು ಇದ್ದುವೆಂಬುದಕ್ಕೆ ಆಧಾರಗಳಿವೆ. ಅಂದಿನಿಂದ ಇಂದಿನವರೆಗೆ ಎಷ್ಟೋ ರಚಿತವಾಗಿವೆ. ಹೀಗಿರುವಾಗ ಮತ್ತೊಂದು ಜನಪ್ರಿಯ ರಾಮಯಾಣದ ಅವಶ್ಯಕತೆಯಿದೆಯೇ ಎಂಬ ಸಂದೇಹ ಮೂಡಬಹುದಲ್ಲವೆ?

ಸಂಸ್ಕೃತ ರಾಮಾಯಣ ರಚಿತವಾಗಿ ಎರಡು ಸಾವಿರ ವರ್ಷಗಳ ಮೇಲಾಗಿರಬೇಕು; ಬಹುಶಃ ಮಹಾಭಾರತಕ್ಕಿಂತಲೂ ಹಿಂದಿನದು. ಇದು ಭರತಖಂಡದ ಆದಿಕಾವ್ಯವೆಂದು ಹೆಸರು ಪಡೆದಿದೆ. ಈ ಕಾವ್ಯದಲ್ಲಿ ಬಳಸಿರುವ ಪದ್ಯಜಾತಿ ಶ್ಲೋಕ. ಅದನ್ನು ಹಾಡಿದಾಗ ಅದಕ್ಕೆ ಮನಸೋಲದವರಿಲ್ಲ. ಕನ್ನಡದಲ್ಲಿರುವ ರಾಮಾಯಣಗಳು ಪ್ರಾಯಿಕವಾಗಿ ಪದ್ಯ ರೂಪದಲ್ಲಿವೆ; ಗದ್ಯದಲ್ಲಿ ಕಡಿಮೆ. ಇದ್ದ ಒಂದೆರಡು ಪ್ರತಿಗಳು ಜನಸಾಮಾನ್ಯಕ್ಕೆ ಈಗ ಸಿಗುವಂತಿಲ್ಲ.

ಸಂಸ್ಕೃತ ರಾಮಾಯಣವನ್ನು ಬರೆದವನು ವಾಲ್ಮೀಕಿ ಮಹರ್ಷಿ. ಅವನ ಬದುಕಿನ ವಿಷಯ ಹೆಚ್ಚಾಗಿ ಗೊತ್ತಿಲ್ಲ. ಪ್ರಾಚೇತಸನ ಮಗನೆಂದು ಉತ್ತರಕಾಂಡದಲ್ಲಿ ಹೇಳಿದೆ. ಚಿಕ್ಕಂದಿನಲ್ಲಿಯೇ ತಾಯಿತಂದೆಯರಿಂದ ಅಗಲಿ, ದರೋಡೆಕಾರನೂ ಕೊಲೆ ಪಾತಕನೂ ಆಗಿರಲು, ಒಂದು ದಿನ ನಾರದ ಮಹರ್ಷಿಯಿಂದ ರಾಮಮಂತ್ರವನ್ನು ಕಲಿತು ರಾಮಧ್ಯಾನ ದಲ್ಲಿ ಕುಳಿತಿರಲು ಅವನ ಮೇಲೆ ಹುತ್ತ ಬೆಳೆಯಿತೆಂದೂ, ಮತ್ತೊಂದು ದಿನ ಅದೇ ದಾರಿಯಲ್ಲಿ ಬಂದ ದೇವರ್ಷಿ ಅವನನ್ನು ಹೊರಗಡೆ ಕರೆದನೆಂದೂ, ವಲ್ಮೀಕ ಎಂದರೆ ಹುತ್ತದಿಂದ ಬಂದವನಾದುದರಿಂದ ಅವನಿಗೆ ವಾಲ್ಮೀಕಿ ಎಂದು ಹೆಸರಾಯಿತೆಂದೂ ಮತ್ತೊಂದು ಕತೆಯಿದೆ. ಹೀಗೆಯೇ ಇನ್ನೆಷ್ಟಿವೆಯೋ. ಈ ಕತೆಗಳಲ್ಲಿ ತಿರುಳಿರಲಿ ಇಲ್ಲದಿರಲಿ ಅವನು ಮಹರ್ಷಿಯೆಂಬುದು ಮಾತ್ರ ಪೂರ್ಣ ಸತ್ಯ.

ಒಂದು ದಿನ ಅವನು ಪರ್ಣಕುಟಿಯಲ್ಲಿ ಆಲೋಚನಾಮಗ್ನನಾಗಿ ಕುಳಿತಿದ್ದಾಗ ನಾರದ ಬರುತ್ತಾನೆ. ಅವನನ್ನು ಕುರಿತು ಈ ಲೋಕದಲ್ಲಿ ಧರ್ಮಜ್ಞನೂ, ಸತ್ಯವಾಕ್ಯನೂ, ಸರ್ವಭೂತಹಿತನೂ, ಆತ್ಮವಂತನೂ, ಶ್ರೇಷ್ಠನೂ ಆದವನು ಯಾರೆಂದು ವಾಲ್ಮೀಕಿ ಕೇಳುತ್ತಾನೆ. ಆಗ ತ್ರಿಲೋಕಜ್ಞನಾದ ನಾರದ ಇಕ್ಷ್ವಾಕುವಂಶದವನೂ, ದ್ಯುತಿವಂತನೂ, ಧೃತಿವಂತನೂ, ಧರ್ಮರಕ್ಷಕನೂ, ಸಮುದ್ರದಂತೆ ಗಂಭೀರನೂ, ಹಿಮವಂತನಂತೆ ಸುಸ್ಥಿರನೂ ಆದ ಶ್ರೀರಾಮನ ಕತೆಯನ್ನು ಹೇಳುತ್ತಾನೆ.

ಶ್ರೀರಾಮನ ಕತೆಯನ್ನು ಕೇಳಿದ ಮಹರ್ಷಿ ಆನಂದದಲ್ಲಿ ತನ್ನನ್ನೇ ಮರೆಯುತ್ತಾನೆ.  ಆಶ್ರಮವನ್ನು ಬಿಟ್ಟು ತಮಸಾನದಿಯೆಡೆಗೆ ಹೋಗುತ್ತಾನೆ. ಆ ನದಿಯ ತಿಳಿಯಾದ ನೀರನ್ನು ನೋಡಿ ಅವನಿಗೆ ಸ್ನಾನ ಮಾಡಬೇಕೆನ್ನಿಸುತ್ತದೆ. ಶಿಷ್ಯನ ಕೈಯಿಂದ ಬಟ್ಟೆಯನ್ನು ತೆಗೆದುಕೊಂಡು ಸುತ್ತಮುತ್ತಣ ರಮ್ಯದೃಶ್ಯವನ್ನು ಒಮ್ಮೆ ನೋಡುತ್ತಾನೆ. ಅಲ್ಲೆರಡು ಕ್ರೌಂಚಪಕ್ಷಿಗಳು ಇಂಚರಗೈಯುತ್ತಾ ಆಡುತ್ತಿರುತ್ತವೆ. ಬೇಡನೊಬ್ಬನು ಗಂಡು ಕೊಂಚೆಯನ್ನು ಕೊಲ್ಲುತ್ತಾನೆ. ಪತಿಯ ಆಗಲಿಕೆಯಿಂದ ನೊಂದ ಹೆಣ್ಣು ರೋದಿಸುತ್ತದೆ. ಆ ಹಕ್ಕಿಯ ಕರುಣಾಜನಕ       ಸ್ಥಿತಿಯನ್ನು ಕಂಡ ಮಹರ್ಷಿ ಬೇಡನನ್ನು ಕುರಿತು ‘ನೀನು ಈ ಕ್ರೌಂಚಪಕ್ಷಿಗಳಲ್ಲಿ ಒಂದನ್ನು ಕೊಂದು ಮತ್ತೊಂದನ್ನು ದುಃಖಕ್ಕಿಡುಮಾಡಿದುದರಿಂದ ನಿನಗೆ ಶ್ರೇಯಶ್ಸು ಬಾರದಿರಲಿ’ ಎನ್ನುತ್ತಾನೆ. ಅನಂತರ ಸ್ವಲ್ಪಹೊತ್ತು ಆಲೋಚಿಸಿ ತಾನು ಅಂದುದು ಶಾಪದ ನುಡಿಯಾಗ ದಿರಲಿ; ಪಾದಬದ್ಧವೂ, ಅಕ್ಷರಸಮವೂ, ತಂತ್ರೀಲಯಸಮನ್ವಿತವೂ ಆದ ಆ ವಚನ ಶ್ಲೋಕವಾಗಲಿ ಎಂದುಕೊಳ್ಳುತ್ತ ಮುನಿ ತನ್ನ ಆಶ್ರಮಕ್ಕೆ ಮರಳಿದನು. ಅವನು ಧ್ಯಾನಮಗ್ನ ನಾಗಿದ್ದಾಗ ಸೃಷ್ಟಿಕರ್ತನಾದ ಬ್ರಹ್ಮ ಬರುತ್ತಾನೆ. ಬಂದವನು ವಾಲ್ಮೀಕಿಯ ಶೋಕವನ್ನು ನಿವಾರಿಸಿ ಅವನು ಆಡಿದುದು ಶ್ಲೋಕವೇ ಸರಿ ಎಂದೂ, ನಾರದನಿಂದ ಕೇಳಿದ ಶ್ರೀರಾಮನ ಕತೆಯನ್ನು ಅದೇ ಛಂದಸ್ಸಿನಲ್ಲಿ ರಚಿಸೆಂದೂ ಹೇಳುತ್ತಾನೆ. ಆ ಕಾವ್ಯ ಎಂದೂ ಸುಳ್ಳಾಗುವುದಿಲ್ಲ ವೆಂತಲೂ, ಭೂಲೋಕದ ಮೇಲೆ ಗಿರಿಗಳು ನಿಂತಿರುವ ತನಕ, ನದಿಗಳು ಹರಿಯುವ ತನಕ ಅದು ಶಾಶ್ವತವಾಗಿರುವುದೆಂದೂ ಹೇಳಿ ಹೋಗುತ್ತಾನೆ. ಆಗ ವಾಲ್ಮೀಕಿ ತಾನು ದೇವರ್ಷಿ ಯಿಂದ ಕೇಳಿದ ಶ್ರೀರಾಮನ ಕತೆಯನ್ನು ಬರೆಯುತ್ತಾನೆ. ಆಶ್ರಮದಲ್ಲಿ ಬೆಳೆಯುತ್ತಿದ್ದ ಸೀತಾನಂದನರಾದ ಕುಶಲವರು ಇದನ್ನು ಕಲಿತು ಗಾಂಧರ್ವಗಾನವನ್ನು ಮೀರಿಸಿ ಹಾಡುತ್ತಾರೆ.

ಹೀಗೆ ಶೋಕವೇ ಶ್ಲೋಕವಾಗಿ ಪರಿಣಮಿಸಿ ರಾಮಾಯಣ ಒಂದು ರಸವತ್ತಾದ ಕಾವ್ಯವಾಯಿತು. ವಾಲ್ಮೀಕಿಯ ಆ ಕಾವ್ಯಕ್ಕೆ ಅಯೋಧ್ಯಾಧಿಪತಿ ದಶರಥಮಹಾರಾಜನ ಮಗ ರಾಮನ ಕತೆ ಆಧಾರವಾಗಿರಬಹುದು; ಆರ್ಯವಂಶಜನಾದ ರಾಮ ದಂಡಕಾರಣ್ಯವನ್ನು ಹೊಕ್ಕು ಅಲ್ಲಿಯ ಆರ್ಯರಲ್ಲದ ವಾನರರ ಗೆಳೆತನವನ್ನು ಗಳಿಸಿ, ಲಂಕೆಯನ್ನು ವಶಪಡಿಸಿಕೊಂಡ, ಅಥವಾ ಔತ್ತರೇಯ ದಾಕ್ಷಿಣಾತ್ಯ ಸಂಸ್ಕೃತಿಗಳ ಸಂಘರ್ಷಣದ ಕತೆಯಿದ್ದಿರಬಹುದು ಅದು. ಆದರೆ ಶ್ರೀರಾಮ ಭಾರತೀಯರ ದೃಷ್ಟಿಯಲ್ಲಿ ಶೌರ‌್ಯೌದಾರ್ಯ ಗಳಿಂದ ಕೂಡಿದ ಕ್ಷತ್ರಿಯನಲ್ಲ. ಅವನೊಬ್ಬ ಅವತಾರಪುರುಷ, ದುಷ್ಟಶಿಕ್ಷಣ ಶಿಷ್ಟರಕ್ಷಣ ಕ್ಕಾಗಿ ಭೂಮಿಯಲ್ಲಿ ಅವತರಿಸಿದ ಜಗನ್ನಿಯಾಮಕ. ದಶಾವತಾರಗಳಲ್ಲಿ ಏಳನೆಯ ಅವತಾರವದು. ಇಂದಿನ ಮಾತು ಹಾಗಿರಲಿ, ಶ್ರೀರಾಮ ಬದುಕಿದ್ದಾಗಲೇ ಆಗಿನ ಜನರು ಅವನನ್ನು ಮಾನವದೇವನೆಂದು ಆರಾಧಿಸುತ್ತಿದ್ದರು. ಇದಕ್ಕೆ ವಾಲ್ಮೀಕಿಯೇ ಕೈಮರ. ಎರಡು ಸಾವಿರ ವರ್ಷಗಳಿಂದ ಆ ಶ್ರೀರಾಮನ ಕತೆ ಭಾರತೀಯರ ಜೀವನವನ್ನು ರೂಪಿಸುತ್ತಿದೆ, ಅವರ ಸಂಸ್ಕೃತಿಯನ್ನು ಪೋಷಿಸುತ್ತಿದೆ. ಅದು ಕಗ್ಗದ ಕಂತೆಯಾಗಿದ್ದರೆ, ಅಗ್ಗದ ಕಟ್ಟುಕತೆಯಾಗಿದ್ದರೆ, ಮುಗ್ಗಿದ ಚಾರಿತ್ರಿಕ ಪ್ರಸಂಗವಾಗಿದ್ದರೆ ಜನರು ಒಂದು ಕಿವಿಯಿಂದ ಕೇಳಿ ಮತ್ತೊಂದರಿಂದ ಹೊರಗೆ ನೂಕುತ್ತಿದ್ದರು. ಅದು ನಿತ್ಯಸತ್ಯವಾದ ಕತೆಯಾದುದರಿಂದಲೇ ಸೂರ್ಯಚಂದ್ರತಾರೆಗಳಂತೆ ಅದಿನ್ನೂ ಬೆಳಗುತ್ತಿದೆ. ಅಷ್ಟೇ ಅಲ್ಲ ‘ರಾಮ’ ಪದದಂತಹ ಪದವನ್ನು ಪ್ರಪಂಚದಲ್ಲಿ ಯಾವ ಜನಾಂಗವೂ ಯಾವ ಭಾಷೆಯೂ ಹೊಂದಿಲ್ಲವೆಂದೇ ಹೇಳಬಹುದು. ರಾಮನಿಗಿಂತ ಮಿಗಿಲಾದುದು ಆ ರಾಮನಾಮ; ಅಣುಶಕ್ತಿಗಿಂತಲೂ ಮಿಗಿಲಾದುದು ರಾಮ ಮಂತ್ರಶಕ್ತಿ. ಅನುಭವವಿಲ್ಲದ ಗಾಂಪನಿಗೆ ಇದು ಕಾಲ್ಪನಿಕವೆಂಬಂತೆ ಕಾಣಬಹುದು; ಮಹಾತ್ಮಗಾಂಧೀಜಿಯಂತಹ ಸಾಧಕನಿಗೆ ಅದು ಸತ್ಯಕ್ಕಿಂತಲೂ ಸತ್ಯ.

ಪರಿಪೂರ್ಣತಾಸಾಧನೆ ಸೃಷ್ಟಿನಿಯಮ. ಪ್ರತಿಯೊಬ್ಬ ಮಾನವನಿಗೂ ತಾನು ದೊರೆಯಾಗಬೇಕು, ಹಣವಂತನಾಗಬೇಕು, ಗುಣವಂತನಾಗಬೇಕು, ಉತ್ತಮನಾಗಬೇಕು ಎಂಬ ಆಸೆ ಇದ್ದೇ ಇರುತ್ತದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋದರೆ ಮಾನವ ಮಾನವ ನಾಗಿಯೇ ಉಳಿಯಲು ಇಷ್ಟವಿಲ್ಲ. ಸರ್ವಗುಣಸಂಪನ್ನನಾದ ವ್ಯಕ್ತಿ ಪ್ರತಿಮೆಯೊಂದನ್ನು ಕಲ್ಪಿಸಿಕೊಂಡು ಅದನ್ನು ದೇವರೆಂದು ಕರೆದು ಅದರಂತಾಗಲು ಹಾತೊರೆಯುತ್ತಾನೆ; ಅದನ್ನೇ ಉಪಾಸಿಸುತ್ತಾನೆ. ತನ್ನ ಕಲ್ಪನೆಗೆ ಸಾಧ್ಯವಾದ ಶಕ್ತಿಗಳನ್ನೆಲ್ಲ ಆ ದೇವರಿಗೆ ಆರೋಪಿಸುತ್ತಾನೆ. ಕಡೆಗೆ ಅದರಲ್ಲಿಯೂ ತೃಪ್ತಿಯಿರುವುದಿಲ್ಲ. ಆ ದೇವರನ್ನು ನಿರಾಕಾರ, ನಿರ್ಗುಣನೆನ್ನುತ್ತಾನೆ; ಅಂದರೆ ಸಾಕಾರದಲ್ಲಿ ನಿರಾಕಾರವನ್ನು ಕಾಣುತ್ತಾನೆ. ಈ ಪರಿಪೂರ್ಣತಾಸಾಧನೆಯ ಬಯಕೆ ತ್ರೇತಾಯುಗದ ಮಾನವ ಪ್ರತಿನಿಧಿಯಾದ ವಾಲ್ಮೀಕಿಯಲ್ಲಿ ಕಂಡುಬಂದಿತು. ಅವನು ಸರ್ವ ಗುಣಸಂಪನ್ನನಾದ ಶ್ರೀರಾಮನಲ್ಲಿ ವಿಭೂತಿತ್ವವನ್ನು ಕಂಡನು. ಮುಂದಿನ ಪೀಳಿಗೆಯ ಜನಕ್ಕೆ ಆ ಶ್ರೀರಾಮ ಅವತಾರ ಪುರುಷನಾದುದು ಸಹಜವೇ ಸರಿ.

ರಾಮಾಯಣ ಮುಖ್ಯವಾಗಿ ಕಾವ್ಯವಾಗಿರಬೇಕಾಗಿತ್ತು; ಆಗ ಅದು ಲೋಕದಲ್ಲಿ ಬಹುಜನರ ಮೆಚ್ಚುಗೆಗೆ ಪಾತ್ರವಾಗುತ್ತಿತ್ತು. ಅದು ಅವತಾರದ ಚರಿತ್ರೆಯಾಗಿ ಮತಗ್ರಂಥವಾಗಿ ಪರಿಣಮಿಸಿದುದರಿಂದ ಕಾವ್ಯಕ್ಕೂ ಅನ್ಯಾಯವಾಗಿದೆ, ಧರ್ಮಕ್ಕೂ ಅನ್ಯಾಯವಾಗಿದೆ ಎಂದು  ಹೇಳುವವರುಂಟು. ಕಾವ್ಯರಮಣಿಯಲ್ಲಿ ಧರ್ಮದೇವತೆಯ ಪ್ರತಿಬಿಂಬವನ್ನು ಕಾಣಕೂಡ ದೇನು? ಭೋಜನಮಂದಿರದಲ್ಲಿ ಹಲವಾರು ವಿಧವಾದ ರುಚಿಭಕ್ಷ್ಯಗಳಿವೆ. ಒಬ್ಬೊಬ್ಬನಿಗೆ ಒಂದೊಂದು ಇಷ್ಟ. ಯಾರು ಯಾವುದನ್ನು ಬೇಕಾದರೂ ಆರಿಸಿಕೊಂಡು ತಿಂದು ತಣಿಯ ಬಹುದು. ಆದರೆ ಯಾವನೋ ಒಬ್ಬ ತನಗೆ ಬೇಡವಾದ ತಿಂಡಿ ಅಲ್ಲಿರಬಾರದಾಗಿತ್ತೆಂದು ಹಟದಿಂದ ತನಗೆ ಬೇಕಾದುದನ್ನೂ ತಿನ್ನದಿರುವುದು ತಿಳಿಗೇಡಿತನವೇ ಸರಿ. ಕಾಶಿರಾಮೇಶ್ವರ ಗಳು ಭಾರತೀಯರಿಗೆ ಯಾತ್ರಾಸ್ಥಳಗಳೆಂಬುದು ಸುಳ್ಳಲ್ಲ; ರಾಮೇಶ್ವರದ ಬಳಿ ಸಾಗರದ ಸೌಂದರ್ಯವನ್ನು ತಣಿಯಬೇಕೆನ್ನುವ ಪಾಶ್ಚಾತ್ಯರು ಅಲ್ಲಿಗೆ ಹೋಗಲಡ್ಡಿಯಿಲ್ಲ.

ವಾಲ್ಮೀಕಿಯ ಗುರಿಯಾದರೂ ಕೇವಲ ಕಾವ್ಯಾನಂದದಲ್ಲಿಯೇ ಕೊನೆಗೊಳ್ಳುವುದಿಲ್ಲ. ಮನೋರಂಜನೆಗಾಗಿ ಮಾತ್ರ ಬರೆದ ಕತೆಯಲ್ಲವದು. ಅದು ಅವನಿಗೆ ಗುರಿಯಲ್ಲ ವೆಂದಾದರೂ ಹೇಳಬಹುದು. ತನ್ನ ಗುರಿಗೆ ಅದೊಂದು ಸಾಧನ. ಬ್ರಹ್ಮಾನಂದ ಅವನ ಗುರಿ. ರಾಮನಾಮ ಸಂಸ್ಮರಣೆಯಿಂದ ತಾನೇ ಅವನು ಮಹರ್ಷಿಯಾದುದು; ಆದುದರಿಂದ ದಾಶರಥಿಯ ಚಾರಿತ್ರಿಕ ಕಥೆಯ ಗರ್ಭಗುಡಿಯಲ್ಲಿ ಅವನು ಶ್ರೀರಾಮದರ್ಶನವನ್ನು ಕಂಡನು.

ಮೇಲೆ ಹೇಳಿದ ಕಾರಣಗಳಿಂದ ರಾಮಾಯಣ ಒಬ್ಬೊಬ್ಬ ಗ್ರಾಹಕನಿಗೆ ಒಂದೊಂದು ವಿಧವಾಗಿ ಅವರವರ ಸಾಧನೆಗನುಗುಣವಾಗಿ ವ್ಯಕ್ತಗೊಳ್ಳುತ್ತದೆ. ಇತಿಹಾಸಕಾರ ಅದರಲ್ಲಿ ಚಾರಿತ್ರಿಕಾಂಶವನ್ನು ಕಾಣುತ್ತಾನೆ; ಗೃಹಸ್ಥನಿಗೆ ಅದು ಗೃಹಸ್ಥಧರ್ಮದ ಕೈಗನ್ನಡಿಯತಿದೆ; ಸಾಧಕನಿಗೆ ಉಪಾಸನಾಶಕ್ತಿಯಾಗಿದೆ. ಭಾರತೀಯರ ದೃಷ್ಟಿಗೆ ಈ ಕಾವ್ಯ ಪರಬ್ರಹ್ಮವನ್ನು ತೋರಿಸಿಕೊಡುವ ಪಂಜು; ಅದು ಅವತಾರದ ಕತೆಯೆನ್ನುವುದೇ ಅವರಿಗೆ ಸತ್ಯ. ಈ ಮಾತಿನ ನಿಜಕ್ಕೆ ಪಾಮರರೇ ನಿಜವಾದ ಒರೆಗಲ್ಲು. ಗಾಳಿ, ನೀರು, ಬೆಳಕುಗಳು ಬಾಳಿಗೆ ಎಷ್ಟು ಅವಶ್ಯಕವೋ ರಾಮಾಯಣವೂ ಅವರ ಬಾಳಿಗೆ ಅಷ್ಟೇ ಅವಶ್ಯಕವಾಗಿದೆ.

ಈ ಕಾವ್ಯದಲ್ಲಿ ಕಾಣುವ ನೀತಿಧರ್ಮಗಳು ಸುಳ್ಳಲ್ಲ. ಅನೇಕ ಹೆಂಡಿರನ್ನು ಮದುವೆಯಾಗಿ ಪಾಡುಪಡುವ ಗಂಡನನ್ನು ನೋಡಿ ಕನಿಕರಿಸುತ್ತೇವೆ. ಅಣ್ಣ ರಾಜ್ಯವನ್ನು ಒಲ್ಲ; ತಮ್ಮನೂ ಒಲ್ಲ. ಹೀಗೆ ಲೋಭವನ್ನು ಬಿಟ್ಟು ತ್ಯಾಗವನ್ನೇ ಸಾಧಿಸುವ ಹಿರಿತನ, ಧರ್ಮಕ್ಕಾಗಿ ಬಂಧುಬಳಗವನ್ನೇ ತ್ಯಜಿಸಿ ಊರು ಬಿಡುವ ಹಿರಿಮೆ – ಇವು ಮಾನವನ ಬಾಳಿನ ಕೊಳೆಯನ್ನು ತೊಳೆಯುವಂಥವು. ತಪಶ್ಶಕ್ತಿಗೆ ಧರ್ಮವೂ ತಲೆಬಾಗುತ್ತದೆಂಬ ಅಂಶ ರಾವಣನ ಜೀವನದಿಂದ ವ್ಯಕ್ತವಾಗುತ್ತದೆ. ಇಷ್ಟೇ ಅಲ್ಲ. ಪುತ್ರವಾತ್ಸಲ್ಯದಿಂದ ಲಕ್ಷ್ಮಣ, ಪತಿಪರಾಯಣತೆಯಿಂದ ಸೀತೆ, ದಾಸ್ಯಭಾವದಿಂದ ಆಂಜನೇಯ, ಸಖ್ಯಭಾವದಿಂದ ಸುಗ್ರೀವ ವಿಭೀಷಣರು – ಹೀಗೆ ಪ್ರತಿಯೊಬ್ಬರೂ ಒಂದೊಂದು ಬಗೆಯ ಸಾಧಕರಾಗಿ ಮುಕ್ತಿಪಡೆದುದನ್ನು ನಾವು ನೋಡುತ್ತೇವೆ.

ಇದು ಮಹಾಕಾವ್ಯವಲ್ಲದೆ ಮತ್ತಾವುದು?

ಈಗ ನಮಗೆ ದೊರಕುವ ರಾಮಾಯಣದಲ್ಲಿ ಏಳು ಕಾಂಡಗಳಿವೆ. ಆದರೆ ಕೊನೆಯದಾದ ಉತ್ತರಕಾಂಡವನ್ನು ವಾಲ್ಮೀಕಿ ಬರೆಯಲಿಲ್ಲವೆಂದು ಪಂಡಿತರು ತೀರ್ಮಾನಿಸಿದ್ದಾರೆ. ಅದು ನಿಜವಿರಬಹುದು. ಏಕೆಂದರೆ ಆರನೆಯ ಕಾಂಡದ ಕೊನೆಯಲ್ಲಿ ಶ್ರೀರಾಮನ ಪಟ್ಟಾಭಿಷೇಕವಾದ ಮೇಲೆ ಬರುವ ಮಂಗಳ ಶ್ಲೋಕಗಳು ರಾಮಾಯಣ ಪಾರಾಯಣದ ಫಲಪ್ರಾಪ್ತಿಯ ವಿಷಯ ವನ್ನು ಹೇಳುತ್ತವೆ. ಇವು ಇತರ ಕಾಂಡಗಳ ಕೊನೆಯಲ್ಲಿ ಬರುವುದಿಲ್ಲ. ಇದರಿಂದ ವಾಲ್ಮೀಕಿ ತನ್ನ ಕತೆಯನ್ನು ಆರನೆಯ ಕಾಂಡಕ್ಕೆ ನಿಲ್ಲಿಸಿರಬಹುದೆಂಬುದು ವ್ಯಕ್ತವಾಗುತ್ತದೆ. ಜೊತೆಗೆ ರಾಮಾಯಣದ ಪಾರಾಯಣವೆಂದರೆ ಆರು ಕಾಂಡಗಳ ಪಾರಾಯಣ ಮಾತ್ರ. ಇಷ್ಟೇ ಅಲ್ಲ; ಸಗರನ ಕತೆ, ಪರಶುರಾಮನ ಕತೆ ಮೊದಲಾದ ಕೆಲವು ಉಪಕತೆಗಳು ವಾಲ್ಮೀಕಿ ಬರೆದುವಲ್ಲ ವೆಂದು ಹೇಳುವುದುಂಟು.

ರಾಮಾಯಣದ ಕತೆಯ ತಿಳಿವು ಒಂದಲ್ಲ ಒಂದು ರೀತಿಯಲ್ಲಿ ಹಳ್ಳಿಗರಿಗೆ ಒದಗುತ್ತಿತ್ತು-ಬಯಲಾಟ, ಹಳ್ಳಿಯ ಪದಗಳು, ಹರಿಕಥೆ ಮತ್ತು ಪಾರಾಯಣಗಳ ಮೂಲಕ. ಇಂದಿನ ವಿಜ್ಞಾನಯುಗದಲ್ಲಿ ಪಟ್ಟಣದವರ ಮಾತು ಅಂತಿರಲಿ ಹಳ್ಳಿಗನಿಗೂ ಬಯಲಾಟ ಬೇಡ ವೆನಿಸುತ್ತದೆ; ಸಿನಿಮಾ ಹಾಡುಗಳಿಗೆ ಹೆದರಿ ಹಳ್ಳಿಯ ಪದಗಳು ಮರೆಯಾಗುತ್ತಿವೆ. ಹರಿಕಥೆಯ ದಾಸಯ್ಯರನ್ನು ಕೇಳುವವರಿಲ್ಲ; ಪಾರಾಯಣಕ್ಕೆ ವಿರಾಮವಿಲ್ಲ. ಇದೆಲ್ಲವೂ ನಮ್ಮ ನಾಗರಿಕತೆಯ ಫಲ; ಅದಂತಿರಲಿ; ಹಳ್ಳಿಗರು ತಾವೇ ಓದಿಕೊಳ್ಳಬಹುದಾದಂತಹ ರಾಮಾಯಣ ಗಳೂ ಇರಲಿಲ್ಲ. ಈಗ ದೊರೆಯುವುವೆಲ್ಲ ಪ್ರಾಯಿಕವಾಗಿ ಪದ್ಯರೂಪದಲ್ಲಿವೆ. ಅವು ಅವರಿಗೆ ತಿಳಿಯಬೇಕಾದರೆ ವ್ಯಾಖ್ಯಾನಕಾರನ ನೆರವು ಬೇಕಾಗುತ್ತದೆ. ಆದುದರಿಂದ ಸರಳವಾದ ಗದ್ಯದಲ್ಲಿ ರಚಿತವಾದ ರಾಮಾಯಣ ಅತ್ಯಾವಶ್ಯಕವಾಗಿತ್ತು. ಜನಪ್ರಿಯ ವಾಲ್ಮೀಕಿ ರಾಮಾಯಣ ಈ ಕೊರತೆಯನ್ನು ಹೋಗಲಾಡಿಸುತ್ತದೆ. ಆರು ಕಾಂಡಗಳ ಕತೆ ಹೀಗಿದೆ :

ಬಾಲಕಾಂಡದಲ್ಲಿ ಹೆಸರೇ ಸೂಚಿಸುವಂತೆ ಶ್ರೀರಾಮನ ಬಾಲ್ಯಜೀವನ ಬರುತ್ತದೆ. ಮಕ್ಕಳಿಲ್ಲದ ದಶರಥ ಮಹಾರಾಜ ಋಷ್ಯಶೃಂಗ ಮುನಿಯಿಂದ ಪುತ್ರಕಾಮೇಷ್ಟಿಯಾಗವನ್ನು ಮಾಡಿಸಿ ಮಕ್ಕಳನ್ನು ಪಡೆದು ಸಂತೋಷದಿಂದಿರುತ್ತಾನೆ. ಹನ್ನೆರಡು ವರ್ಷದ ಶ್ರೀರಾಮ ತಮ್ಮನೊಡನೆ ವಿಶ್ವಾಮಿತ್ರ ಋಷಿಯ ಯಜ್ಞರಕ್ಷಣೆಗಾಗಿ ಹೋಗಿ ತಾಟಕಿಯೆಂಬ ರಾಕ್ಷಸಿ ಯನ್ನು ಸಂಹರಿಸುತ್ತಾನೆ. ಜನಕ ಮಹಾರಾಜನ ಯಾಗಕ್ಕೆಂದು ಹೋಗುವಾಗ ದಾರಿಯಲ್ಲಿ ಅಹಲ್ಯೆಯ ಉದ್ಧಾರವಾಗುತ್ತದೆ. ಮಿಥಿಲೆಯಲ್ಲಿ ಶ್ರೀರಾಮ ಶಿವಧನುಸ್ಸನ್ನು ಮುರಿದು ಸೀತೆಯನ್ನು ಮದುವೆಯಾಗುತ್ತಾನೆ.

ಅಯೋಧ್ಯಾಕಾಂಡ : ವಾಸ್ತವವಾಗಿ ರಾಮಾಯಣದ ಕತೆ ಇಲ್ಲಿಂದ ಆರಂಭವಾಗುತ್ತದೆ. ರಾಮಾಯಣದ ಸೌಧಕ್ಕೆ ಇದು ತಳಹದಿ. ಯುದ್ಧಕಾಂಡವನ್ನು ಬಿಟ್ಟರೆ ವಿಸ್ತಾರದಲ್ಲಿ ಇದು ಎರಡನೆಯದು; ಆದರೆ ಮಹಿಮೆಯಲ್ಲಿ ಇದೇ ಮೊದಲನೆಯದು. ದಶರಥನ ಸಂಸಾರದ ಚಿತ್ರ, ಸವತಿಯರ ವೈಮನಸ್ಯ ಕಣ್ಣಿಗೆ ಕಟ್ಟಿದಂತೆ ವರ್ಣಿತವಾಗಿವೆ. ಮುಪ್ಪಿನ ದಶರಥ ಹಿರಿಯ ಮಗನಾದ ರಾಮನಿಗೆ ಪಟ್ಟಾಭಿಷೇಕದ ಏರ್ಪಾಡು ಮಾಡುತ್ತಾನೆ. ಮಂಥರೆಯ ದುರ್ಬೋಧನೆಯಿಂದ ಕೈಕೇಯಿಯ ಹಟದಿಂದ ಆ ಏರ್ಪಾಡು ಮುರಿದು ಬೀಳುತ್ತದೆ. ಕೈಕೇಯಿ ದಶರಥ ಎಂದೋಕೊಟ್ಟಿದ್ದ ಎರಡು ವರಗಳನ್ನು ನೆನೆಸಿಕೊಂಡು, ಒಂದಕ್ಕೆ ರಾಮನ ವನವಾಸವನ್ನೂ, ಮತ್ತೊಂದಕ್ಕೆ ಭರತನ ಪಟ್ಟಾಭಿಷೇಕ ವ್ಯವಸ್ಥೆಯನ್ನೂ ಬೇಡುತ್ತಾಳೆ. ದಶರಥನಿಗೆ ಅದು ಸ್ವಲ್ಪವೂ ಇಷ್ಟವಿಲ್ಲ. ತಂದೆಯ ಸತ್ಯವನ್ನು ಕಾಪಾಡಲು ಮಗನೇ ತಾಯಿಯನ್ನು ಒಪ್ಪಿಸಿ ಕಾಡಿಗೆ ಹೊರಡುತ್ತಾನೆ. ಪ್ರೀತಿಯ ತಮ್ಮ ಮತ್ತು ಹೆಂಡತಿ ಅವನನ್ನು ಹಿಂಬಾಲಿಸುತ್ತಾರೆ. ಪುತ್ರ ವಿಯೋಗ ದುಃಖದಿಂದ ದಶರಥ ಸಾಯುತ್ತಾನೆ. ತಾಯಿಯ ದುರಾಚಾರಕ್ಕೆ ಕಿಡಿಕಿಡಿಯಾದ ಭರತ ಗದ್ದುಗೆಯನ್ನು ಏರಲೊಲ್ಲದೆ ಅಣ್ಣನನ್ನು ಕರೆತರಲು ಕಾಡಿಗೆ ಹೋಗುತ್ತಾನೆ. ಆದರೆ ಅಣ್ಣ ಬರಲೊಲ್ಲ. ತಮ್ಮ ಅವನ ಪಾದುಕೆಗಳನ್ನು ತಂದು ಅವುಗಳ ಹೆಸರಿನಲ್ಲಿ ರಾಜ್ಯಭಾರ ಮಾಡುತ್ತಾನೆ. ಇಲ್ಲಿ ಅನೇಕ ಋಷ್ಯಾಶ್ರಮಗಳ ಪ್ರಸ್ತಾಪ ಬರುತ್ತದೆ.

ಅರಣ್ಯಕಾಂಡ : ಸೀತಾರಾಮಲಕ್ಷ್ಮಣರ ವನವಾಸದ ಕತೆ, ವಿರಾಧವಧೆ, ಶೂರ್ಪನಖಿಯ ವೃತ್ತಾಂತ, ರಾವಣನಿಂದ ಸೀತೆಯ ಅಪಹರಣ, ಶ್ರೀರಾಮನ ವಿಲಾಪ, ಕಬಂಧ ವಧೆ, ಶಬರಿಯ ಪ್ರಸಂಗಗಳು ಉಕ್ತವಾಗಿವೆ.

ಕಿಷ್ಕಿಂಧಾಕಾಂಡ : ಪತ್ನಿಯಿಂದ ಆಗಲಿ ಅಲೆಯುತ್ತಿದ್ದ ಶ್ರೀರಾಮ ತನ್ನಂತೆಯೇ ದುಃಖಿಯಾದ ಸುಗ್ರೀವನ ಸಖ್ಯವನ್ನು ಸಂಪಾದಿಸುತ್ತಾನೆ. ಶ್ರೀರಾಮ ವಾಲಿಯನ್ನು ಕೊಂದು ಕಿಷ್ಕಿಂಧೆಯ ರಾಜ್ಯವನ್ನು ಸುಗ್ರೀವನಿಗೆ ಸಂಪಾದಿಸಿಕೊಡುವುದೆಂತಲೂ, ಆ ಉಪಕಾರಕ್ಕೆ ಪ್ರತಿಯಾಗಿ ಸುಗ್ರೀವ ಸೀತಾನ್ವೇಷಣೆಯಲ್ಲಿ ಶ್ರೀರಾಮನಿಗೆ ನೆರವು ನೀಡುವುದೆಂತಲೂ ಅವರಿಬ್ಬರಿಗೂ ಮಾತಾಗುತ್ತದೆ.

ಸುಂದರಕಾಂಡ : ವರ್ಣನೆಗಳು ಅತಿ ಸುಂದರವಾಗಿ ಬಂದಿರುವುದರಿಂದ ಈ ಕಾಂಡಕ್ಕೆ ಈ ಹೆಸರು ಬಂದಿರುವಂತೆ ಕಾಣುತ್ತದೆ. ಹನುಮಂತ ಸಮುದ್ರವನ್ನು ಲಂಘಿಸಿ, ಲಂಕೆಯನ್ನು ಪ್ರವೇಶಿಸಿ, ಅಶೋಕವನದಲ್ಲಿ ಸೀತಾದೇವಿಯನ್ನು ಕಂಡು ಮುದ್ರೆಯುಂಗುರವನ್ನು ಅರ್ಪಿಸಿ ಚೂಡಾಮಣಿಯನ್ನು ಪಡೆದು, ಲಂಕೆಯನ್ನು ದಹಿಸಿದ ವಿಷಯ, ಮತ್ತು ಸೀತಾವೃತ್ತಾಂತವನ್ನು ತಿಳಿದ ಶ್ರೀರಾಮನು ಸಂತೋಷಗೊಂಡ ಸಂಗತಿಗಳು ಉಕ್ತವಾಗಿವೆ.

ಯುದ್ಧಕಾಂಡ : ವಾಲ್ಮೀಕಿ ರಾಮಾಯಣದಲ್ಲಿ ಇದೇ ಅತಿ ವಿಸ್ತಾರವಾದ ಭಾಗ. ಯುದ್ಧದ ವರ್ಣನೆ ಅನೇಕ ಸರ್ಗಗಳನ್ನು ವ್ಯಾಪಿಸುತ್ತದೆ. ಯುದ್ಧದ ವಿವರಗಳನ್ನು ಬೆಳಸುವುದೇ ಆ ಕಾಲದ ಅಭಿರುಚಿಯಿರಬಹುದೇನೋ-ಅಥವಾ ಕ್ಷತ್ರಿಯರ ಕತೆಯಾದುದ ರಿಂದಲೋ ಏನೋ ವ್ಯಾಸಭಾರತದಲ್ಲಿಯೂ ಯುದ್ಧದ ವರ್ಣನೆ ವಿಸ್ತಾರವಾಗಿ ಬರುತ್ತದೆ. ಈ ಕಾಂಡದಲ್ಲಿ ಸೇತುಬಂಧನ, ವಿಭೀಷಣನ ಸಖ್ಯ, ಇಂದ್ರಜಿತ್ ರಾವಣರ ವಧೆ ಇವು ಪ್ರಮುಖ ಘಟನೆಗಳು. ರಾವಣನ ಮರಣಾನಂತರ ಶ್ರೀರಾಮ ವಿಭೀಷಣನಿಗೆ ಪಟ್ಟ ಕಟ್ಟುತ್ತಾನೆ. ಸೀತೆಯ ನಿರ್ಮಲ ಚರಿತ್ರೆಯನ್ನು ಪ್ರಪಂಚಕ್ಕೆ ಎತ್ತಿ ತೋರಿಸಲೆಂಬಂತೆ ಆಗ್ನಿಪರೀಕ್ಷೆಯ ಪ್ರಕರಣ ನಡೆಯುತ್ತದೆ. ಅನಂತರ ಶ್ರೀರಾಮ ಸೀತಾ ಲಕ್ಷ್ಮಣರೊಡನೆ ಅಯೋಧ್ಯೆಗೆ ತೆರಳಿ ಪಟ್ಟಾಭಿಷಿಕ್ತನಾಗಿ ರಾಜ್ಯಭಾರ ಮಾಡುತ್ತಿರುತ್ತಾನೆ.

‘ಜನಪ್ರಿಯ ವಾಲ್ಮೀಕಿ ರಾಮಾಯಣ’ದಲ್ಲಿ ಆರು ಕಾಂಡಗಳ ಕತೆ ಮಾತ್ರ ಬರುತ್ತದೆ. ಮುಖ್ಯವಾಗಿ ಈಗ ತಾನೆ ಓದು ಕಲಿತಿರುವ ವಯಸ್ಕರಿಗಾಗಿ ಇದನ್ನು ಬರೆದಿದೆ. ಅವರಿಗೆ ಸುಲಭವಾಗಿ ಹೆಚ್ಚು ಆಯಾಸವಿಲ್ಲದೆ ಅರ್ಥವಾಗಬೇಕು; ಬೇಸರವಿಲ್ಲದೆ ಓದಬೇಕು; ಆದರೆ ವಾಲ್ಮೀಕಿಯ ಪ್ರತಿಭೆಗೆ ಊನ ಬರಬಾರದು; ಈ ಅಂಶಗಳನ್ನು ಗ್ರಂಥಕರ್ತರು ಮೊದಲಿಂದ ಕೊನೆಯತನಕ ದೃಷ್ಟಿಯಲ್ಲಿಟ್ಟುಕೊಂಡಿದ್ದಾರೆ. ಅನಾವಶ್ಯಕವಾದ ಮತ್ತು ಪುನರುಕ್ತವಾಗುವ ವರ್ಣನೆಗಳನ್ನು ಕೈಬಿಟ್ಟಿದ್ದಾರೆ. ಅನೇಕ ಉಪಕಥೆಗಳನ್ನು ಚಿವುಟ ಅಥವಾ ಸೂಚಿಸಿ ಮುಂದುವರಿದಿದ್ದಾರೆ. ಮೂಲದ ಸೊಗಸು ಇಂಗದಿರಲೆಂದು ಅಲ್ಲಲ್ಲಿ ಮೂಲದ ಮಾತುಗಳನ್ನೇ ಬಳಸಿದ್ದಾರೆ. ಒಂದೊಂದು ಕಾಂಡವನ್ನೂ ಸಣ್ಣ ಸಣ್ಣ ಅನೇಕ ಅಧ್ಯಾಯ ಗಳನ್ನಾಗಿ ವಿಭಾಗಿಸಿ ಒಂದೊಂದಕ್ಕೂ ತಲೆಹೆಸರು ಕೊಟ್ಟಿದೆ. ಈ ಹೆಸರುಗಳಿಂದಲೇ ಆ ಅಧ್ಯಾಯದ ಕತೆಯನ್ನೆಲ್ಲ ಸುಲಭವಾಗಿ ಊಹಿಸಿಕೊಳ್ಳಬಹುದು. ಒಂದೊಂದು ಅಧ್ಯಾಯವೂ ಒಂದೊಂದು ಕತೆಯಂತಿದೆ. ಆದುದರಿಂದ ಈ ಗ್ರಂಥ ಸಾಮಾನ್ಯರಿಗೆ ಮೆಚ್ಚುಗೆಯಾಗು ವುದರಲ್ಲಿ ಸಂದೇಹವೇ ಇಲ್ಲ.

ನರಸಿಂಹ ಮತ್ಸ್ಯಕೂರ್ಮಾದಿಗಳ ಅವತಾರದಂತೆ ಭಗವಂತ ಕೃತಿರೂಪದಲ್ಲಿಯೂ ಅವತರಿಸಬಹುದೆಂಬ ಕುವೆಂಪುರವರ ಮತ ಅವರ ಶ್ರೀರಾಮಾಯಣದರ್ಶನದಲ್ಲಿ ವ್ಯಕ್ತಗೊಂಡಿದೆ :

ಯುಗ ಯುಗದಿ ಸಂಭವಿಪೆನೆಂಬ ಭಗವದ್ದಿವ್ಯ
ವಚನಮೇಂ ನರರೂಪ ಮಾತ್ರಕ್ಕೆ ಮುಡಿಪೆ ಪೇಳ್?
ನರಸಿಂಹ ಮತ್ಸ್ಯ ಕೂರ್ಮಾದಿ ಚರಮಾಲೀಲೆಗೇಂ
ಪೊರತೆ ಮೇಣ್ ಕೃತಿರೂಪಮಾ ಭಗವದಾವಿರ್ಭಾವ
ಬಹುರೂಪ ಸೂತ್ರತೆಗೆ…….

ಆಯಾ ಯುಗದ ಧರ್ಮಕ್ಕನುಗುಣವಾಗಿ ಭಗವಂತ ನರಸಿಂಹ ಕೂರ್ಮ ಮತ್ಸ್ಯಗಳ ರೂಪದಲ್ಲಿ ಅವತರಿಸಿದಂತೆ ರಾಮಾಯಣವೂ ಯುಗ ಧರ್ಮಕ್ಕನುಗುಣವಾಗಿ ಬೇರೆ ಬೇರೆ ರೂಪದಲ್ಲಿ ಅವತರಿಸಬಹುದು. ಕುವೆಂಪುರವರ ಶ್ರೀರಾಮಾಯಣದರ್ಶನವೂ ಅಂತಹ ದೊಂದು ಅವತಾರ. ಆ ದರ್ಶನಕ್ಕೆ ಈ ಜನಪ್ರಿಯ ರಾಮಾಯಣ ಮುನ್ನುಡಿಯಂತಿದೆಯೆಂದರೆ ತಪ್ಪಾಗಲಾರದು. ರಾಮಾಯಣಗಳ ಭಾರದಿಂದ ಫಣಿರಾಜ ತಿಣಿಕಿದರೂ, ನಮ್ಮ ಜನ ತಿಣಕುವಂತಿಲ್ಲ; ಅವರಿಗೆ ಬೇಸರವಾಗುವಂತಿಲ್ಲ.