ವಿಶ್ವವಿದ್ಯಾನಿಲಯ ಕವಿಗೆ ಎಚ್ಚರಿಕೆಯ ನೋಟೀಸು ಕೊಟ್ಟ ಸಂದರ್ಭದಲ್ಲಿ ಮೂಡಿದ ವಿಡಂಬನೆಯಿದು. ಶ್ರೀ ಕುವೆಂಪು ಅವರು ಪ್ರಾಧ್ಯಾಪಕರಾಗಿದ್ದಾಗ ಅಧಿಕಾರ ನಿಮಿತ್ತ ಪ್ರಬುದ್ಧ ಕರ್ನಾಟಕದ ಪ್ರಧಾನ ಸಂಪಾದಕರೂ ಆಗಿದ್ದರು, ಸಂಪಾದಕರನ್ನು ನೇಮಿಸಿಕೊಳ್ಳ ಬೇಕಾದ ಸಂದರ್ಭವೊದಗಿದಾಗ ಅವರು ವಿಶ್ವವಿದ್ಯಾನಿಲಯಕ್ಕೆ ಎರಡು ಹೆಸರುಗಳನ್ನು ಶಿಫಾರಸು ಮಾಡಿದರು. ವಿಶ್ವವಿದ್ಯಾನಿಲಯದ ಕೌನ್ಸಿಲ್ಲಿನ ಕೆಲವು ಸದಸ್ಯರಿಗೆ ಆ ಹೆಸರು ಸರಿಬೀಳಲಿಲ್ಲ. ತಮಗೆ ಬೇಕಾದವರ ಹೆಸರು ಆ ಪಟ್ಟಿಯಲ್ಲಿರಲಿಲ್ಲ. ಬೇರೆ ಹೆಸರುಗಳನ್ನು ಕಳಿಸುವಂತೆ ಕೌನ್ಸಿಲ್ಲು ಆ ವಿಷಯವನ್ನು ಪ್ರಾಧ್ಯಾಪಕರಿಗೆ ವಾಪಸು ಕಳಿಸಿತು. ತಾವು ಮೊದಲು ಕಳಿಸಿದ ಹೆಸರುಗಳೇ ಸರಿಯೆಂದು ಪ್ರಾಧ್ಯಾಪಕರು ತಮ್ಮ ನಿಲವನ್ನು ಬದಲಾಯಿಸಲಿಲ್ಲ. ಅಧಿಕಾರ ಪ್ರಮತ್ತರಾದ ಕೌನ್ಸಿಲ್ ಸದಸ್ಯರು ತಮ್ಮ ಪ್ರತಿಷ್ಠೆಗೆ ಆಘಾತವೊದಗಿತೆಂದು ಭಾವಿಸಿ, ಹುಬ್ಬೇರಿಸಿ, ಪ್ರಾಧ್ಯಾಪಕರಿಗೆ ನೋಟೀಸು ಕೊಡುವುದೆಂಬ ನಿರ್ಣಯವನ್ನಂಗೀಕರಿಸು ವಂತೆ ಸಭೆಯನ್ನು ಪ್ರಚೋದಿಸಿದರು.

[1] ಆ ನೋಟೀಸಿನ ಸವಾಲಿಗೆ ಈ ಕವಿತೆಯೇ ಜವಾಬಾಗುತ್ತದೆ. ಸಾಮಾನ್ಯವಾಗಿ ವಿಡಂಬನೆಯ ಉದಯಕ್ಕೆ ಪರಿಸರ, ಸನ್ನಿವೇಶ ಅಥವಾ ಪ್ರಚೋದನೆ ನಿಮಿತ್ತವಾಗುತ್ತದೆನ್ನುವುದಕ್ಕೆ ಈ ಕವಿತೆಯೇ ಜ್ವಲಂತ ನಿದರ್ಶನವಾಗಿದೆ.[2]

ಈ ಕವಿತೆಯ ಶಿರೋನಾಮೆಗಳು ಎರಡು ‘ವಾಲ್ಮೀಕಿಗೊಂದು ಎಚ್ಚರಿಕೆ’ ಎಂಬ ಹೆಸರು ಸಾಮಾನ್ಯರಿಗೂ ಸರಾಗವಾಗಿ ಅರ್ಥವಾಗುವಂಥದು ‘The Poet’ ಎಂದರೆ ಶೇಕ್ಸ್‌ಪಿಯರ್ ಎಂಬ ಭಾವನೆ ಇರುವುದುಂಟಷ್ಟೆ. ಅಂತೆಯೇ ವಾಲ್ಮೀಕಿ ಎಂದರೆ ಶ್ರೀ ಮದ್ರಾಮಾಯಣದ ಕರ್ತೃವೂ ಅಹುದು, ಕವಿ ಸಮುದಾಯಕ್ಕೆ ಅನ್ವಯವಾಗುವ ಪದವೂ ಅಹುದು. ಕವಿ ಕ್ರಾಂತದರ್ಶಿ, ಸುಧಾರಕ, ನಾಡಿನ ಪ್ರವಾದಿ, ಮೇಲಾಗಿ ಬುದ್ದಿ ಜೀವಿ; ಸಮಾಜದ ರೋಗರುಜಿನಗಳಿಗೆಲ್ಲ ಅವನೇ ಧನ್ವಂತರಿ. ಅನ್ಯಾಯಕ್ಕೆ ವಿರುದ್ಧವಾಗಿ ಅವನು ಸಿಡಿದೆದ್ದಾಗ ಅಧಿಕಾರದಲ್ಲಿರುವ ದುಷ್ಟ ಜನ ತಲೆ ತಿರುಕರಂತೆ ಅವನನ್ನು ನಾನಾ ವಿಧವಾಗಿ ಕಾಡಬಹುದು. ‘ಕವಿಗರಸುಗಿರಸುಗಳ ಋಣವಿಲ್ಲ’ ಎಂಬ ಸುಭಾಷಿತ ಉದ್ಭವವಾದದ್ದು ಅಂಥದೊಂದು ಪರಿಸರದಲ್ಲೆಂದೇ ತೋರುತ್ತದೆ! ಆಸುರೀ ಶಕ್ತಿಗಳು ಅಧಿಕಾರದಲ್ಲಿರುವಾಗ ಇಂಥ ಎಚ್ಚರಿಕೆಯನ್ನು ಸಾಹಿತಿಗಳು ಮೇಲಿಂದ ಮೇಲೆ ಎದುರಿಸಬೇಕಾಗುತ್ತದೆ. ಒಮ್ಮೆ ಕುವೆಂಪು ಅವರನ್ನು ಬೆನ್ನಟ್ಟಿಕೊಂಡು ಬಂದ ನೋಟೀಸು ಮತ್ತೊಮ್ಮೆ ಕಾರಂತರ ಮೇಲೆ ಹಾಯಬಹುದು. ಆದ್ದರಿಂದ ಈ ತಲೆಹೆಸರು ಅತ್ಯುಚಿತವಾಗಿ ಕಾಣುತ್ತದೆ. ಜತೆಗೆ ಕುವೆಂಪು ಅವರು ‘ಶ್ರೀರಾಮಾಯಣ ದರ್ಶನಂ ಮಹಾಕಾವ್ಯ’ವನ್ನು ರಚಿಸಿದ ಅಭಿನವ ವಾಲ್ಮೀಕಿ ಎಂಬ ಸಂಗತಿಯನ್ನು ನೆನೆದಾಗ ಆ ಹೆಸರಿನ ಸಾರ್ಥಕತೆ ಸ್ಪಷ್ಟವಾಗುತ್ತದೆ.

ಈ ಎರಡು ಹೆಸರುಗಳಲ್ಲಿ ಆನುಪೂರ್ವಿಯಿಂದ ‘ಅದ್ಭುತ ರಾಮಾಯಣ’ಕ್ಕೆ ಪ್ರಥಮ ಸ್ಥಾನವಿದೆ. ದಶಕಂಠ ರಾವಣನನ್ನು ಕೊಂದ ಶ್ರೀರಾಮ ಸಹಸ್ರಕಂಠ ರಾವಣನನ್ನು ಸೋಲಿಸಲಾಗಲಿಲ್ಲ; ಆಗ ಸೀತೆ ಮಹಾಕಾಳಿಯಾಗಿ ಅವತರಿಸಿ, ಅದ್ಭುತರೂಪವನ್ನು ಧರಿಸಿ, ಆ ರಾಕ್ಷಸನನ್ನು ಕೊಂದು ಲೋಕ ಕಲ್ಯಾಣ ಸಾಧಿಸಿದಳೆಂಬ ಅದ್ಭುತ ಕಥೆಯೇ ಮೂಲ ಸಂಸ್ಕೃತ ಪುರಾಣದ ವಿಷಯ. ಸೀತಾ ಮಹಿಮೆಯ ವರ್ಣನೆ ಈ ಗ್ರಂಥದ ಪ್ರಧಾನೋದ್ದೇಶ ವಾದರೂ, ರಾಮನಿಲ್ಲದ ಸೀತೆಯ ಕಲ್ಪನೆ ಅಸಂಗತವಾದ್ದರಿಂದ ಇದಕ್ಕೆ ‘ಅದ್ಭುತ ರಾಮಯಣ’ವೆಂದು ಹೆಸರು ಬಂದಿರಬೇಕು. ತುಂಬುರ ಗಂಧರ್ವನಗಾನ ಮಹಿಮೆಗೆ ಕರುಬಿದ ನಾರದ ಘೂಕ ರಾಜನಿಂದ ಸಂಗೀತ ಕಲಿತ ಪ್ರಕರಣವೊಂದು ಈ ರಾಮಾಯಣದಲ್ಲಿ ಅಂತರ್ಗತವಾಗಿರುವುದರಿಂದಲೂ, ಪ್ರಕೃತ ಕವಿತೆಯಲ್ಲಿ ಗೂಬೆಗಳ ಪ್ರಸಂಗ ಬಂದಿರುವುದ ರಿಂದಲೂ ಇದಕ್ಕೆ ಈ ಹೆಸರು ಕೊಟ್ಟಿರುವಂತೆ ತೋರುತ್ತದೆ. ನಾರದ ಗೂಬೆಯಿಂದ ಸಂಗೀತ ಕಲಿತದ್ದೇ ಒಂದು ಅದ್ಭುತ. ಜತೆಗೆ ಎಚ್ಚರಿಕೆಯ ಹಗರಣವೂ ಒಂದು ‘ರಾಮಾಣ್ಯ’ವಾಗಿ ಪರಿಣಮಿಸಿತೆನ್ನುವುದನ್ನು ಈ ಸಂದರ್ಭದಲ್ಲಿ ನೆನೆಯಬೇಕಾಗುತ್ತದೆ.

ಈ ಕವಿತೆಯಲ್ಲಿ ನಾಲ್ಕು ಮುಖ್ಯ ಸಂಗತಿ ಅಥವಾ ಘಟ್ಟಗಳಿವೆ. ಹಿರಿಯ ಗೂಬೆಯ ಅಧ್ಯಕ್ಷತೆಯಲ್ಲಿ ಸಭೆ ನಡೆದದ್ದು, ಸೀತೆಯ ಕರೆಗೆ ಓಗೊಟ್ಟು ಲವಕುಶರು ವ್ಯಾಸಪೀಠವನ್ನು ಬಿಟ್ಟು ಸ್ನಾನಕ್ಕೆ ಹೋದದ್ದು, ಗೂಬೆಗಳು ಅದೇ ಸಮಯದಲ್ಲಿ ವಾಲ್ಮೀಕಿಯ ಪರ್ಣಶಾಲೆಯನ್ನು ಹೊಕ್ಕು, ಬೀಣೆಯ ಮೇಲೆ ಅಸಹ್ಯ ಮಾಡಿದ್ದು, ಲವಕುಶರೊಡನೆ ವಾಲ್ಮೀಕಿ ಮರಳಿದಾಗ ಅವು ಓಡಿ ಹೋದದ್ದು. ಒಂದೊಂದು ಸಂಗತಿಗೂ ಪೂರಕವಾಗಿ ವರ್ಣನೆಗಳು ಮಾಲೆ ಮಾಲೆಯಾಗಿ ಬರುತ್ತವೆ. ಅವು ದೃಶ್ಯಗಳನ್ನು ನೇಯುತ್ತವೆ, ಚಿತ್ರಗಳನ್ನು ಹೆಣೆಯುತ್ತವೆ, ಪಾತ್ರಗಳ ಸ್ವರೂಪ ಸ್ವಭಾವಗಳನ್ನು ಅರಳಿಸುತ್ತವೆ, ಕವಿಯ ಉದ್ದೇಶವನ್ನು ಈಡೇರಿಸುತ್ತವೆ. ಇಲ್ಲಿಯ ಕ್ರಿಯೆಗೆ ವರ್ಣನೆಗಳೆ ವಾಹಕವಾಗುತ್ತವೆ.

ಪ್ರಾರಂಭದ ಎರಡು ಪಂಕ್ತಿಗಳು ಇಡೀ ಕವಿತೆಗೆ ನಾಂದಿಯಂತಿದ್ದು ಮುಂಬರುವ ಅನಿಷ್ಟ ಘಟನೆಗಳ ತೀಕ್ಷ್ಣತೆಯನ್ನೂ ಗಾಂಭೀರ್ಯವನ್ನೂ ಸೂಚಿಸುತ್ತವೆ. ಸರಸ್ವತಿ ಸಕಲ ವಿದ್ಯಾ ಬುದ್ದಿ ಕಲೆಗಳಿಗೆ ಅಧಿದೇವತೆ. ಮಾನವರಲ್ಲಿ ವಿವೇಕವನ್ನು ಮೂಡಿಸುವ ಮೂಲಕ, ಲೋಕದ ದೌಷ್ಟ್ಯ ದೌರ್ಜನ್ಯಗಳನ್ನು ನಿವಾರಿಸುವ ತಾರಕ ಶಕ್ತಿ ಅವಳು. ಸಕಲ ಸತ್ಕಾರ್ಯಗಳಿಗೂ ಅವಳು ಶ್ರೀರಕ್ಷೆ. ಆದ್ದರಿಂದ ಪ್ರಪಂಚದ ಎಲ್ಲ ಕವಿಗಳೂ ತಮ್ಮ ಮಹಾಕಾವ್ಯಗಳಲ್ಲಿ[3] ಮೇಲಿಂದ ಮೇಲೆ ಅವಳನ್ನು ನೆನೆಯುತ್ತಾರೆ, ತಮ್ಮ ಕೃತಿಶರೀರದಲ್ಲಿ ನೆಲಸುವಂತೆ ಆವಾಹಿಸುತ್ತಾರೆ; ವಿಡಂಬನೆಗಳ ಪ್ರಾರಂಭದಲ್ಲಿಯೂ ಕೆಲವೊಮ್ಮೆ ಈ ದೇವತೆಯನ್ನು ಸಂಬೋಧಿಸುವುದುಂಟೆಂಬುದಕ್ಕೆ ಅಲೆಕ್ಸಾಂಡರ್ ಪೋಪನ The Rape of the Lock ಕಾವ್ಯವೇ ಸಾಕ್ಷಿಯಾಗಿದೆ :

What dire offence from amorous springs,
what mighty contests rise from trivial things
I Sing This Verse to Cary!, Muse! is due :

ಇಲ್ಲಿ ಕವಿ ‘ಮ್ಯೂಸ್’ ಎಂಬ ಕಾವ್ಯ ದೇವತೆಯನ್ನು ಶರಣುಹೊಗುತ್ತಾನೆ. ಈ ಮ್ಯೂಸ್ ಮತ್ತು ಸರಸ್ವತಿಯರು ಸ್ಫೂರ್ತಿಪ್ರತಿಭೆಗಳಿಗೆ ಮೂಲ ಮಾತ್ರವಲ್ಲ, ಅವುಗಳ ಪ್ರತೀಕವೂ ಆಗಿದ್ದಾರೆ.

ಸರಸ್ವತಿಯ ಸಂಕೇತ ಬೀಣೆ. ಬೀಣೆಯೆಂದ ಕೂಡಲೇ ಸಂಗೀತದ ನೆನಪಾಗುತ್ತದೆ. ಬೀಣೆಯಿಂದ ಗಾನಲಹರಿ ಹೊರಹೊಮ್ಮುತ್ತದೆ. ಸಂಗೀತಕ್ಕೂ ಕಾವ್ಯಕ್ಕೂ ನಿಕಟ ಸಂಬಂಧವಿದೆಯೆಂಬುದನ್ನೂ ಬೀಣೆ ಸೂಚಿಸುತ್ತದೆ. ಗ್ರೀಕ್ ಕವಿಗಳು ತಮ್ಮ ಕಾವ್ಯಗಳನ್ನು ಜನರ ಮುಂದೆ ಹಾಡುವಾಗ ಕೆಲವು ತಂತ್ರೀವಾದ್ಯಗಳನ್ನು ಬಳಸುತ್ತಿದ್ದುದುಂಟು. ಲವಕುಶರು ಶ್ರೀಮದ್ರಾಮಾಯಣವನ್ನು ತಂತ್ರೀವಾದ್ಯದೊಡನೆ ಹಾಡಿದರೆಂದು ಪ್ರತೀತಿಯಿದೆ. ಲೈರ್ ಎಂಬ ವಾದ್ಯದ ಜೊತೆ ಹಾಡಬಹುದಾದ ಗೀತೆಯಾದ್ದರಿಂದ ಭಾವಗೀತೆಗೆ Lyric ಎಂಬ ಹೆಸರು ಬಂತೆಂದು ಹೇಳುತ್ತಾರೆ. ನಾರದನ ಸಂಗೀತಕ್ಕೂ ಅವನ ವೀಣೆಗೂ ಅವಿನಾಭಾವ ಸಂಬಂಧವುಂಟು. ಸಂಗೀತದಂತೆಯೇ ಕಾವ್ಯವೂ ಹೃದಯದಿಂದ ಹೊರಹೊಮ್ಮುವ ಗಾನವೆಂಬುದು ಈ ವಿವರಣೆಯಿಂದ ಸ್ಪಷ್ಟವಾಗುತ್ತದೆ.[4] ಕುವೆಂಪು ಅವರು ‘ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯವನ್ನು ಮಹಾಗಾನವೆಂದೇ ಕರೆದಿದ್ದಾರೆ.

ಇದೊ ಮುಗಿಸಿ ತಂದಿಹೆನ್ ಈ ಬೃಹದ್‌ಗಾನಮಂ

ಎನ್ನುವಲ್ಲಿ ‘ಗಾನ’ಕ್ಕೆ ಕಾವ್ಯವೆಂಬ ಅರ್ಥವನ್ನು ಕಲ್ಪಿಸಲಾಗಿದೆ. ಆದ್ದರಿಂದ ಬೀಣೆ ಎಂಬ ಪದ ಕಾವ್ಯಸಂಗೀತಗಳು ಅವಳಿ ಜವಳಿಗಳೆಂಬುದನ್ನು ಸಂಕೇತಿಸುತ್ತದೆ.

ಗೂಬೆ ಸಾಮಾನ್ಯವಾಗಿ ಅನಿಷ್ಟದ ಮತ್ತು ಅಪಶಕುನದ ಸಂಕೇತ. ಅದು ಯಾವಾಗಲೂ ಊರಹೊರಗೆ ಮರದ ಪೊಟರೆಯಲ್ಲಿ ವಾಸಿಸುವಂಥದು. ಅದಕ್ಕೆ ಕತ್ತಲೆ ಇಷ್ಟ. ಬೆಳಕು ಅನಿಷ್ಟ. ಅದರ ಬಾಳೆಲ್ಲ ಕತ್ತಲೆಯಲ್ಲಿಯೇ ಸಾಗುತ್ತದೆ. ಕತ್ತಲೆ ಅಜ್ಞಾನ ದೌಷ್ಟ್ಯಗಳ ಸಂಕೇತ. ಅಂತೆಯೇ ತಮಿಸ್ರ ಸಂಬಂಧಿಯಾದ ಕೇಡಿನ ಪ್ರತೀಕವಾಗುತ್ತದೆ. ಆದ್ದರಿಂದಲೇ ಅದರ ಸುತ್ತಮುತ್ತ ಅನೆಕ ನಂಬಿಕೆಗಳು ಹುಟ್ಟಿಕೊಂಡಿವೆ. ಅದು ಹಗಲು ಕಣ್ಣಿಗೆ ಕಾಣಿಸಿಕೊಂಡದ್ದಾದರೆ ವಿಪತ್ತು ಕಟ್ಟಿಟ್ಟ ಬುತ್ತಿಯಂತೆ; ರಾತ್ರಿ ಹಿತ್ತಲಲ್ಲಿ ಗೂಗರೆದರೆ ಹತ್ತಿರದವರು ಸಾಯುತ್ತಾರಂತೆ; ಮನೆಯ ಮೇಲೆ ಕೂತರೆ ನಷ್ಟ ಸಂಭವಿಸುತ್ತದೆ. ಅಂತೆಯೇ ಗೂಬೆಗಣ್ಣು, ಗೂಬೆ ಮೋರೆ, ಗೂಬೆ ಬಾಯಿಗಳು ಅನಿಷ್ಟವನ್ನು ಸೂಚಿಸುತ್ತವೆ.

ಇಂಥ ಗೂಬೆಗಳು ಒಂದಲ್ಲ, ಹಲವಾರು ಹಗಲಲ್ಲಿ ಸರಸ್ವತಿಯ ಪವಿತ್ರ ಸಂಕೇತವಾದ ಬೀಣೆಯ ಮೇಲೆ ಕುಳಿತದ್ದಾದರೆ ಏನಾಗಬಹುದೆಂಬುದು ಈ ಸಾಲುಗಳಲ್ಲಿ ಧ್ವನಿತವಾಗುತ್ತವೆ.

ಓ ತಾಯೆ ಸರಸತಿಯೆ, ನಿನ್ನ ಬೀಣೆಯ ಮೇಲೆ
ಕುಳಿತೇನ ಮಾಡುತಿವೆ. ಈ ಗೂಬೆಗಳ ಮಾಲೆ

ಬೀಣೆ ಸಿಕ್ಕ ಸಿಕ್ಕವರಿಗೆಲ್ಲ ನಿಲುಕುವಂಥ ವಾದ್ಯವಲ್ಲ. ಧ್ಯಾನಯೋಗಿಯ ಕೈ ಮಿಡಿದಾಗ ಅನಾದಿಗಾನ ಹೊರಹೊಮ್ಮುತ್ತದೆ; ಯೋಗ್ಯತೆಯಿಲ್ಲದ ಅರಸಿಕ ಅದರ ಮೆಲೆ ಕೈಯಿಟ್ಟಾಗ ಕರ್ಕಶ ಧ್ವನಿ ಹೊರಡುತ್ತದೆ. ಗೂಬೆಯಂಥ ಕ್ಷುದ್ರ ಜಂತುವಿನ ಸಂಪರ‌್ಕದಿಂದ ಅದು ಅಪವಿತ್ರವಾಗುತ್ತದೆ. ದೈವೀಶಕ್ತಿ ಪ್ರಕಟವಾಗುವ ಮಾಧ್ಯಮಗಳೇ ಕಾವ್ಯ ಸಂಗೀತಗಳು. ಅವುಗಳಿಗೆ ಸ್ಫೂರ್ತಿನೀಡುವ, ಹಾಗೆಯೇ ಆಧಾರವಾಗಿರುವ ಶಕ್ತಿ ವೀಣೆ. ಅಂದಮೇಲೆ ಅದು ದೇವಾಲಯದಷ್ಟೇ ಪವಿತ್ರ. ಬ್ರಹ್ಮನ ರಾಣಿಯಷ್ಟೇ ಅನವದ್ಯ. ಕಾವ್ಯ ಸಂಗೀತಗಳಿಲ್ಲದ ಲೋಕ ಶೂನ್ಯವಾಗುತ್ತದೆ. ಅವುಗಳಿಲ್ಲದ ಸಮಾಜ ಪಾಪಮುಖಿಯಾಗುತ್ತದೆ. ಅವು ಮಾನವನನ್ನು ತಾಯಿ ತಂದೆಯರಂತೆ ಪೋಷಿಸುತ್ತವೆ, ಗುರುವಿನಂತೆ ಶಿಕ್ಷಿಸುತ್ತವೆ. ಕಾವ್ಯವಿಲ್ಲದ ಸಮಾಜ ಕಣ್ಣಿಲ್ಲದ ದೇಹವಾಗುತ್ತದೆ’ ವಿಗ್ರಹವಿಲ್ಲದ ದೇವಾಲಯವಾಗುತ್ತದೆ, ಭೀಷ್ಮನಿಲ್ಲದ ಹಸ್ತಿನಾವತಿಯಾಗುತ್ತದೆ, ಶಾಸನವಿಲ್ಲದ ರಾಜ್ಯವಾಗುತ್ತದೆ. ಗೂಬೆಯಂಥ ಜನರಿಗೆ ಶಾಸನ ಬೇಕಿಲ್ಲ, ನ್ಯಾಯಾಲಯ ಬೇಕಿಲ್ಲ, ಸಜ್ಜನರು ಬೇಕಿಲ್ಲ, ನ್ಯಾಯಧರ್ಮಗಳು ಬೇಕಿಲ್ಲ, ಭ್ರಷ್ಟಾಚಾರಗಳನ್ನು ಬಯಲಿಗೆಳೆಯುವ, ದೌರ್ಜನ್ಯವನ್ನು ಅನ್ಯಾಯವನ್ನು, ಪಾಪವನ್ನು ಗುರುತಿಸುವ ಕವಿ ಬೇಕಿಲ್ಲ; ದುಷ್ಟತನವನ್ನೇ ಶಿಷ್ಟತನವೆಂದು ಹೊಗಳುವ ಭಟ್ಟಂಗಿಗಳು ಬೇಕು. ಗೂಬೆಗಳಿಗೆಂತು ಬೆಳಕು ಬೇಡವೊ ಗೂಬೆ ಜನಗಳಿಗೆ ಸಾಧುಸಂತರು ಬೇಡ. ಅವರಿಲ್ಲವೆಂದರೆ ರಾವಣದುರ್ಯೋಧನನಂತೆ ಹೇಳುವವರು ಕೇಳುವವರಿಲ್ಲದೆ ನಿರಾತಂಕವಾಗಿ ಮೆರೆಯಬಹುದೆಂಬುದು ಅವರ ಬಯಕೆ. ಆದ್ದರಿಂದ ವೀಣೆಯನ್ನು ಹಸಗೆಡಿಸುವ ಮೂಲಕ ಕವಿಯನ್ನು ನಿರಸ್ತ್ರನನ್ನಾಗಿ ಮಾಡುತ್ತೇವೆನ್ನುವ ಘೂಕ ಸದೃಶವಾದ ಕೌನ್ಸಿಲ್ ಸದಸ್ಯರ ಹಂಚಿಕೆ ಎಂದೆಂದಿಗೂ ಕೇವಲ ಭ್ರಮೆಯಾಗುಳಿಯುತ್ತದೆಂಬ ಭಾವವೂ ಈ ವಾಕ್ಯದಲ್ಲಿ ಸೂಚಿತವಾಗುತ್ತದೆ.

ಮುಂದಿನ ಏಳೆಂಟು ಸಾಲುಗಳಲ್ಲಿ ಘೂಕ ಸದಸ್ಯರ ವರ್ಣನೆ ಬರುತ್ತದೆ. ತಂತಮ್ಮ ವರ್ತನೆಯಿಂದ ಅವರ ಬಣ್ಣ ಬಯಲಾಗುತ್ತದೆ. ಗೂಬೆಗಳ ದೈಹಿಕ ಧ್ವನಿ ವಿಕಾರಗಳೆಂತು ಅನಿಷ್ಟ ಸೂಚಿಯೋ, ಈ ಜನರ ನುಡಿನಡೆ ನೋಟಗಳೂ ಅಂತೆಯೇ ಅವರ ಶನಿತನಕ್ಕೆ ಸಂಕೇತಗಳಾಗಿವೆ. ಅವರ ಮನೋವಿಕಾರಕ್ಕೆ ಮೆಳ್ಳೆಗಣ್ಣು ಸಾಕ್ಷಿಯಾಗಿವೆ. ಸಾಮಾನ್ಯವಾಗಿ  ಮೆಳ್ಳೆಗಣ್ಣು ಸಲ್ಲಕ್ಷಣವೂ ಅಲ್ಲ, ಶುಭ ಸೂಚಕವೂ ಅಲ್ಲ. ಅದು ಕೆಲವರಲ್ಲಿ ಸಹಜ ಶಾರೀರಕ ದೋಷವಾದರೆ, ಇವರಲ್ಲಿ ಮಾನಸಿಕ ದೋಷದ ಪರಿಣಾಮವಾಗಿದೆ. ಒಬ್ಬ ಸಿಗರೇಟು ಸೇದುತ್ತ ಉನ್ಮತ್ತನಂತೆ ವರ್ತಿಸಿದರೆ, ಮತ್ತೊಬ್ಬ ಪಿತ್ತವೇರಿದವನಂತೆ ಹಾರಾಡುತ್ತಿ ದ್ದಾನೆ. ಆ ಸದಸ್ಯರಿಗೆ ಅಧ್ಯಕ್ಷನೂ ಸಾಮೀಲು. ಆದ್ದರಿಂದಲೇ ಅವನ ಚಿಂತೆ ನೊಣದಂತೆ ಹಾರಾಡುತ್ತ, ಕವಿಯನ್ನು ಬಲೆಗೊಳಿಸುವ ಉಪಾಯ ಶೋಧನೆಯಲ್ಲಿ ನಿರತನಾಗಿದ್ದಾನೆ; ಚಿಂತೆಯ ತಾರಾಟದಿಂದ ಅವನ ತಲೆ ಕುತ್ತುತ್ತಿದೆ. ನೊಣದಂಥ ಮಲಿನ ಕ್ಷುದ್ರಕೀಟ ಮತ್ತೊಂದಿಲ್ಲವೆಂಬುದನ್ನಿಲ್ಲಿ ಗಮನಿಸಬೇಕು.

ಮುಂದಿನ ಕಂಡಿಕೆಯಲ್ಲಿ ದೃಶ್ಯ ಬದಲಾಯಿಸುತ್ತದೆ; ಅದು ಗೂಬೆಗಳ ಗೊಟ್ಟಿಯಿಂದ, ಅರ್ಥಾತ್ ವಿಶ್ವವಿದ್ಯಾನಿಲಯದ ಕೌನ್ಸಿಲ್ ಸಭೆಯಿಂದ ‘ದೇವಕವಿ ವಾಲ್ಮೀಕಿಯಾ ದಿವ್ಯಪರ್ಣಶಾಲೆ’ಗೆ ಸ್ಥಾನಾಂತರಗೊಳ್ಳುತ್ತದೆ. ನಾಟಕದ ದೃಶ್ಯದಂತೆ ಇದು ಹಿಂದಿನದಕ್ಕಿಂತ ಧೃವಾಂತರವುಳ್ಳದ್ದಾಗುತ್ತದೆ. ಅಂತೆಯೇ ಸಹೃದಯನ ಮನಸ್ಸು ಸಹ ಒಂದು ಭಾವಕೋಶ ದಿಂದ ಮತ್ತೊಂದು ಭಾವ ಕೋಶಕ್ಕೆ ಜಿಗಿಯಬೇಕಾಗುತ್ತದೆ; ಶುದ್ಧ ಸಾತ್ತ್ವಿಕ ವಾತಾವರಣವನ್ನು ಪ್ರವೇಶಿಸುತ್ತದೆ. ಹಿಂದಿನ ದೃಶ್ಯದಿಂದ ಪ್ರಕ್ಷುಬ್ದಗೊಂಡ ಅವನ ಮನಸ್ಸು ಈ ದೃಶ್ಯ ಕಾಣಿಸಿದೊಡನೆಯೇ ಶಾಂತವಾಗುತ್ತದೆ.

ಆ ಪರ್ಣಶಾಲೆ ಸಾಮಾನ್ಯವಾದದ್ದಲ್ಲ. ಮಂದಾಕಿನಿಯ ದಿವ್ಯ ಸಾನ್ನಿಧ್ಯದಿಂದ ಪುಳಕ ಗೊಂಡಿದ್ದ, ಲೋಕಕ್ಕೆ ಜಗದ್ಭವ್ಯ ಮೇರು ಕೃತಿಯನ್ನು ಕರುಣಿಸಿದ ಹೆಮ್ಮೆಯಿಂದ ಮೆರೆಯುತ್ತಿದ್ದ ಶ್ರೀರಾಮ ಪತ್ನಿ ಜಗನ್ಮಾತೆಗೆ ಆಸರೆ ನೀಡಿದ ತೃಪ್ತಿಯಿಂದ ಬೀಗುತ್ತಿದ್ದ ಪುಣ್ಯ ಪರ್ಣಶಾಲೆಯದು. ಯಾರೂ ಇಲ್ಲದ ವೇಳೆಯಲ್ಲಿ ಆ ಗೂಬೆಗಳು ಆಶ್ರಮದ ಪರ್ಣಶಾಲೆಯನ್ನು ಪ್ರವೇಶಿಸುತ್ತವೆ. ಸೀತೆ ವಾಲ್ಮೀಕಿಯರು ಬೇಡ, ಲವಕುಶರ ಪೈಕಿ ಒಬ್ಬನಿದ್ದರೂ ಅವು ಒಳಗೆ ಕಾಲಿಡುತ್ತಿರಲಿಲ್ಲ. ಚೋರರ, ದುಷ್ಟರ, ಅನಾಚಾರಿಗಳ ರೀತಿಯೇ ಹೀಗೆ. ಅವರ ಆರ್ಭಟವೆಲ್ಲ ಗಾಢಾಂಧಕಾರದಲ್ಲಿ, ನಿರ್ಜನ ಪ್ರದೇಶದಲ್ಲಿ; ಅವರು ಸತ್ಯಕ್ತಿಗಳನ್ನು ಮುಖಾಮುಖಿಯಾಗಿ ಎದುರಿಸಲಾರರು. ವಾಲಿ ರಾಮನ ಕಡೆಗೆ ಬೆನ್ನು ತಿರುಗಿಸಿದನೇ ಹೊರತು, ಮುಖ ತಿರುಗಿಸಲಿಲ್ಲ. ರಾಮಲಕ್ಷ್ಮಣರನ್ನು ಕಣ್ತಪ್ಪಿಸಿ, ರಾವಣ ಸೀತೆಯನ್ನೊಯ್ದದ್ದುಂಟು. ಅವರು ಕುಟಿಲೋಪಾಯಗಳಿಂದಲಾದರೂ ಸಜ್ಜನರನ್ನು ಉಚ್ಚಾಟಿಸಿ, ಅಥವಾ ಅವರನ್ನು ಕಷ್ಟದಿಂದ ಸಿಕ್ಕಿಸಿಕೊಂಡು ತಮ್ಮ ದಾರ್ಷ್ಟ್ಯವನ್ನು ಮೆರೆಯುತ್ತಾರೆ; ಅಧಿಕಾರವನ್ನು ದುರುಪಯೋಗಿಸಿಕೊಂಡು ಕ್ರೂರಹಿಂಸಾಕಾರ್ಯಗಳಲ್ಲಿ ತೊಡಗುತ್ತಾರೆ. ನ್ಯಾಯನಿರ್ಣಯಕ್ಕಾಗಿ ಕುಳಿತ ನ್ಯಾಯ ಮೂರ್ತಿಗಳೇ ಭ್ರಷ್ಟರಾದರೆ ನಾಡಿಗಾಗಲೀ ಸಮಾಜಕ್ಕಾಗಲೀ ಪ್ರಳಯ ತಪ್ಪದು. ಈ ಮಾತು ಜೀವನದ ಎಲ್ಲ ರಂಗಗಳಿಗೂ ಅನ್ವಯಿಸುತ್ತದೆ; ಅದರಲ್ಲಿಯೂ ಶಿಕ್ಷಣರಂಗದಲ್ಲಿ ಅನ್ಯಾಯ ಅಧರ್ಮ ಅನಾಚಾರಗಳು ತಲೆಹಾಕಿದ್ದಾದರೆ ನೈತಿಕ ಪತನ ಅನಿವಾರ್ಯವಾಗುತ್ತದೆ. ಕ್ಷುಲ್ಲಕ ವಿಚಾರದಲ್ಲಿ ತಲೆಹಾಕಿ, ಕವಿಗೆ ನೋಟೀಸು ಕೊಟ್ಟ ಕೌನ್ಸಿಲು ತನ್ನ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿ ತೆಂದೇ ಹೇಳಬೇಕು.

ಕವಿ ಕುವೆಂಪು ಅವರು ವಿಶ್ವವಿದ್ಯಾನಿಲಯದ ನೌಕರಿಯಲ್ಲಿದ್ದಾಗ ಬಡ್ತಿಗಾಗಿ ಮೇಲಧಿಕಾರಿಗಳ ಮುಂದೆ ಡೊಗ್ಗುಸಲಾಮು ಮಾಡಲಿಲ್ಲ; ಕೌನ್ಸಿಲ್ ಸದಸ್ಯರ ಮನೆಯ ಮುಂದೆ ಪರದಾಡಲಿಲ್ಲ; ಸರ್ಕಾರದ ಕಾರ್ಯಸೌಧದ ಕಂಬಗಳನ್ನು ಸುತ್ತಲಿಲ್ಲ; ಆ ಈ ಸಮಿತಿಗಳ ಸದಸ್ಯತ್ವಕ್ಕಾಗಿ ಕುಯುಕ್ತಿಯ ಸನ್ನಾಹಗಳನ್ನು ನಡೆಸಲಿಲ್ಲ. ರಾಜಕೀಯ ಬೈಠಕ್ಕುಗಳನ್ನು ಹಾಕಲಿಲ್ಲ. ಅವು ತಾವಾಗಿಯೇ ಅವರಿಗೆ ದುಂಬಾಲು ಬಿದ್ದುವು; ದುಂಬಾಲು ಬಿದ್ದುವನ್ನು ಅವರು ತಿರಸ್ಕರಿಸಿದ್ದೂ ಉಂಟು. ಯಾವ ಅಥವಾ ಯಾರ ವಿಷಯದಲ್ಲಿಯೇ ಆಗಲೀ ವಿಶ್ವವಿದ್ಯಾನಿಲಯಕ್ಕೆ ಶಿಫಾರಸು ಪತ್ರ ಕಳಿಸಿ, ಅದರ ಹಿಂದೆಯೇ ಸದಸ್ಯರ ಬಳಿ ಹಲ್ಲು ಗಿಂಜಿದವರಲ್ಲ. ಅವರ ದೃಷ್ಟಿಯಲ್ಲಿ ರಾಜಮಹಾರಾಜರಾಗಲೀ ದಿವಾನರಾಗಲೀ ಕುಲಪತಿಯಾಗಲೀ ಎಲ್ಲರೂ ಒಂದೇ. ಕ್ಷುದ್ರ ಪ್ರಾಪಂಚಿಕ ಸುಖಕ್ಕಾಗಿ ಸ್ವಾಭಿಮಾನ, ವ್ಯಕ್ತಿ ಸ್ವಾತಂತ್ರ್ಯಗಳನ್ನು ಕಳೆದುಕೊಳ್ಳುವ ಸ್ವಾರ್ಥ ನಿಷ್ಠರೂ ಅಲ್ಲ, ಸಮಯವರ್ತಿಗಳೂ ಅಲ್ಲ. ಅಧಿಕಾರ ನಿಮಿತ್ತದಿಂದ ಮೇಲಧಿಕಾರಿಗಳನ್ನು ಭೇಟಿಮಾಡಬೇಕಾದ ಈ ಸಂದರ್ಭವೊದಗಿ ದಾಗಲೂ ಅವರು ಆತ್ಮಾವಹೇಳನ ರೀತಿಯಲ್ಲಿ ವರ್ತಿಸಿದವರಲ್ಲ. ಅವರ ಮಾನುಷಮ ರ್ಯಾದೆಯ ವರ್ತನೆ ದರ್ಪಾಹಂಕಾರದಿಂದ ಮೆರೆಯುತ್ತಿದ್ದ ಅಧಿಕಾರಿಗಳಿಗೆ ಅಸಹನೀಯ ವಾಗಿತ್ತು.

ಏನು ಅನ್ಯಾಯ!  ಏನಿದೀ ಧೂರ್ತತನ! ಏನಹಂಕಾರ;
ಕವಿಯೆಂಬ ಹೆಮ್ಮೆಯಾ ಪಿತ್ತಕಿಕ್ಕಲೆ ಬೇಕು ಮದ್ದು ಖಾರ!
ಈ ಬೀಣೆಯಾ ಬುರುಡೆ ನಮ್ಮ ಹಕ್ಕೆಗೆ ತಕ್ಕಗುಹೆಯಲ್ತೆ?
ಅದನಿವನು ತಂದು, ಮಕ್ಕಳಾಟಕೆ ತಂತಿಯಿಕ್ಕಿ,
ಕರ್ಕಶದ ಸದ್ದು ಮೂಡಿಸುತಿಹನು ಕವಿಯೆಂದು ಸೊಕ್ಕಿ!
ಇನಿತೊಂದು ದೊಡ್ಡ ಹೊತ್ತಗೆಯನೆಬರೆದಿರುವನಾದರೂ
ನಮ್ಮೊಂದು ಪೆಸರ ನುತಿಗೆಯ್ಯದಿವನ ಬಿಮ್ಮು
ಬಿರಿಯುವಂತೆಸಗವೇಳ್ಕುಂ ವೇ….ಳ್ಕು__ಮ್ಮೂ!

ಮಾನಮರ್ಯಾದೆಗಳ ಔಚಿತ್ಯಾನೌಚಿತ್ಯವನ್ನರಿಯದ, ಪಾತ್ರಾಪಾತ್ರತೆಯನ್ನು ಲೆಕ್ಕಿಸದ ಹೊಟ್ಟೆಕಿಚ್ಚಿನ ತತ್ತಿಯಂತಿದ್ದ ಅಧಿಕಾರಿಗಳು ಹೀಗಂದುಕೊಂಡದ್ದರಲ್ಲಿ ಆಶ್ಚರ್ಯವಿಲ್ಲ. ಈ ಕವಿತೆಯ ಮೂಲೋದ್ದೇಶ ತತ್ವಗಳು ಅಡಕಗೊಂಡಿರುವ ಈ ಸಾಲುಗಳೇ ಇಲ್ಲಿಯ ಕೇಂದ್ರವೆನ್ನಬಹುದು.

ಈ ಮಾತುಗಳು ಕೇವಲ ವಿಶ್ವವಿದ್ಯಾನಿಲಯದ ಅಧಿಕಾರಿಗಳಿಗೆ ಮಾತ್ರವೇ ಅನ್ವಯವಾಗು ವಂಥವಲ್ಲ. ಈ ಭಾವನೆಗಳ ನಿಕಟ ಪ್ರಚೋದನೆಗೆ ಆ ಅಧಿಕಾರಿಗಳು ನೆಪವಾಗಿರಬಹು ದಾದರೂ, ದುಷ್ಟ ಪ್ರತಿಷ್ಠೆಯ ಜನ ಇರುವೆಡೆಯಲ್ಲೆಲ್ಲ ಇವು ಹಾಜರಿರುತ್ತವೆನ್ನುವುದಂತು ವಾಸ್ತವ ಸತ್ಯ. ಏಕವ್ಯಕ್ತಿಯಲ್ಲಿ ಪರ್ಯಾಪ್ತವಾಗದೆ, ತತ್ಸದೃಶವರ್ತನೆಯ ಸಮಸ್ತ ಸಮುದಾಯಕ್ಕನ್ವಯವಾದಾಗ ಮಾತ್ರ ವಿಡಂಬನೆ ಯಶಸ್ವಿಯಾಗುತ್ತದೆ, ಪರಿಣಾಮಕಾರಿ ಯಾಗುತ್ತದೆ, ಕೇವಲ ಸಕಾಲಿಕವಾಗಿರದೆ ಸಾರ್ವಕಾಲಿಕವಾಗುತ್ತದೆ. ಕುಂಬಳ ಕಾಯಿಯ ಕಳ್ಳ ಎಂದರೆ ಎಲ್ಲರೂ ಹೆಗಲು ಮುಟ್ಟಿ ನೋಡಿಕೊಳ್ಳಬೇಕಾಗಿಲ್ಲ. ಕೋಳಿ ಕಳೆದುಕೊಂಡ ಹೆಂಗಸು ಸಂಕಟದಿಂದ ಧೂಳೆರಚಿದರೆ, ನೆರೆಹೊರೆಯವರೆಲ್ಲ ಉಳುಕಿದಂತೆ ಸಿಟ್ಟಾಗ ಬೇಕಾಗಿಲ್ಲ. ನ್ಯಾಯ ನಿಷ್ಠರೂ ಸತ್ಯವಂತರೂ ಈ ಮಾತುಗಳಿಂದ ಉದ್ರೇಕಗೊಳ್ಳಬೇಕಾಗಿಲ್ಲ. ಅಹಂಕಾರದ ಜನ ಈ ಕವಿತೆಯಿಂದ ಸರಿಯಾಗಿ ಪಾಠ ಕಲಿತುಕೊಂಡದ್ದಾದರೆ ಅವರಿಗೂ ಕ್ಷೇಮ, ಸಮಾಜಕ್ಕೂ ಕ್ಷೇಮ; ಇತರರಿಗೂ ಇದು ಎಚ್ಚರಿಕೆವೆರಳಾಗುವುದಾದರೆ ಸರ್ವೀಕ್ಷೇಮ.

ಇವು ಕವಿಯ ಮಾತಂತೂ ಅಲ್ಲ. ಅವರಿವರ ಆಡಿಕೆಯ ಮಾತುಗಳನ್ನಿಲ್ಲಿ ಕವಿ ಪ್ರತಿಮಾಡಿದ್ದಾರೆ. ಆ ‘ಅವರಿವರು’ ತಂತಮ್ಮ ಸಂಸ್ಕಾರ ವಾಸನೆ ಮನೋಧರ್ಮಗಳಿಗನು ಗುಣವಾಗಿ ತಮ್ಮ ಅಭಿಪ್ರಾಯವನ್ನು ತೇಗುತ್ತಾರೆ; ಇತರರ ಭಾವನೆ ವರ್ತನೆಗಳನ್ನು ಗ್ರಹಿಸುತ್ತಾರೆ. ಕವಿಯ ದಿವ್ಯ ನಿರ್ಲಕ್ಷತೆಯನ್ನು, ಅವನ ಅಂತರ್ಮುಖತೆಯನ್ನು, ಅವನ ನಿಸ್ಸಂಗ ಪ್ರಿಯತೆಯನ್ನು, ಅವನ ಕಾವ್ಯವಿಹಾರ ತನ್ಮಯತೆಯನ್ನು ಧೂರ್ತತೆಯೆಂದು, ಅಹಂಕಾರವೆಂದು ಹೆಸರಿಸಿದರೆ ತಪ್ಪು ಅವರದಾಗುತ್ತದೆಯೇ ಹೊರತು, ಅದರಿಂದ ಅವರಿಗೆ ನಷ್ಟವೇ ಹೊರತು ಕವಿಗಲ್ಲ. ಸತ್ಕವಿ ರಾಜಗೀಜರನ್ನು ಬರಿದೆ ಇಂದ್ರ ಚಂದ್ರ ದೇವೇಂದ್ರನೆಂದು ನುತಿಸುವವನೂ ಅಲ್ಲ, ಅವರ ಕಟ್ಟಾಜ್ಞೆಗೊಳಪಡುವವನೂ ಅಲ್ಲ. ‘ನಮ್ಮೊಂದು ಪೆಸರನುತಿಗೆಯ್ಯದಿವನ ಬಿಮ್ಮು’ ಎನ್ನುವ ಮಾತು ಯಾವ ನಿರ್ದಿಷ್ಟ ಅಧಿಕಾರಿಗೂ ಅನ್ವಯವಾಗುವಂಥದಲ್ಲವೆಂಬುದಂತೂ ಸ್ಪಷ್ಟ. ‘ಕವಿ’ ‘ಕಾವ್ಯ’ ಎಂಬ ಶಬ್ದಗಳು ಸಹ ನಿರಕ್ಷರಿಗಳಿಗಿರಲಿ ಅನೇಕ ವಿದ್ಯಾವಂತರಿಗೂ ಅರ್ಥವಾಗುವುದಿಲ್ಲ. ಈ ದೃಷ್ಟಿಯಿಂದ ಕವಿಯ ಸುತ್ತಮುತ್ತಣ ಸಾಕ್ಷರರು ನಿರಕ್ಷರಿಗಳೇ ಸರಿ! ಸಾಹಿತಿಗಳೆಂದು ತಲೆಹೆಸರು ಹಚ್ಚಿಕೊಂಡ, ಪೂರ್ವಗ್ರಹ ಪೀಡಿತರಾದ ಜನರಿಗೂ ಒಬ್ಬ ಕವಿಯ ಕೃತಿ ಅರ್ಥವಾಗದಿರಬಹುದು. ಅವರ ಕೈಗೆ ಸತ್ಕೃತಿಯನ್ನು ಕೊಟ್ಟದ್ದಾದರೆ, ಮಂಗನ ಕೈಗೆ ಮಾಣಿಕ್ಯವನ್ನೂ ಅರಸಿಕನಿಗೆ ಚೆಲುವೆಯನ್ನೂ, ಕರಡಿಗೆ ಸುಂದರ ವರ್ಣಚಿತ್ರವನ್ನೂ ಒಪ್ಪಿಸಿದಂತಾಗುತ್ತದೆ. ಇದನ್ನರಿತೇ ಭಾರತಕಾರ ನುಡಿದದ್ದು

ಅರಸಿಕೇಷು ಕವಿತ್ವನಿವೇದನಂ
ಶಿರಸಿ ಮಾಲಿಖ ಮಾಲಿಖ ಮಾಲಿಖ

ಎಂದು. ಕುವೆಂಪು ಅವರೇ ಒಂದು ಕಡೆ ಹೇಳುತ್ತಾರೆ, ‘ನಾನೇರುವೆತ್ತರಕೆ ನೀನೇರಬಲ್ಲೆಯಾ?’ ಎಂದು. ಗೂಬೆಗಳ ದೃಷ್ಟಿಯಲ್ಲಿ ವೀಣೆಯ ಬುರುಡೆ ತಮ್ಮ ಹಕ್ಕಿಗೆ ಮಾತ್ರ ಯೋಗ್ಯ ವಾದದ್ದು. ಕವಿ ಅದನ್ನು ಮಕ್ಕಳ ಆಟಿಕೆಗೆಂದು ಬಳಸಿಕೊಂಡು, ಕರ್ಕಶ ಧ್ವನಿ  ಬರಿಸುತ್ತಿ ರುವುದಾಗಿ ಅವು ಲೇವಡಿಮಾಡುತ್ತವೆ. ದುರ್ಜನರ, ಅರಸಿಕರ ಮತ್ತು ಮಂದ ಮತಿಗಳ ದೃಷ್ಟಿಯಲ್ಲಿ ಕಾವ್ಯಾಲಾಪ ಅಲಸ ಜೀವಿಗಳ ಅಪಲಾಪ, ಅದೊಂದು ಬಾಲಿಶ ಕ್ರೀಡೆ, ಪರೋಪಜೀವಿಗಳ ಲಘುಪ್ರವೃತ್ತಿಯ ಮಮತೆಯ ಹವ್ಯಾಸ. ಸುಬ್ಬುಲಕ್ಷ್ಮಿಯ ಅಥವಾ ಬಾಲಕೃಷ್ಣಮುರಳಿಯ ಸ್ವರ್ಗೀಯ ಮಧು ಮಧುರಗಾನ ಕತ್ತೆ ಕರಡಿಗಳಿಗೆ ಹಿಡಿಸುತ್ತದೆಯೇ? ಅಂತೆಯೇ ಕವಿ ರಚಿಸಿದ ಬೃಹದ್‌ಗಾನ ಮೂರ್ಖಶಿಖಾಮಣಿಗಳ ಕವಿಗೆ ಕರ್ಕಶವಾಗಿ ಕೇಳಿಸುತ್ತದೆ.

ಅಂಥ ಜನರಿಗೆ ಅಧಿಕಾರವಿದ್ದದ್ದಾರೆ ಅದನ್ನು ಕವಿಯ ಮೇಲೆ ಬಳಸುವುದೊಂದೇ ಅವರಿಗೆ ಗೊತ್ತಿರುವ ಉಪಾಯ

ಬರೆ, ಸಚಿವ; ಒಂದೆಚ್ಚರಿಕೆಯೋಲೆಯಂ!
ಎಲವೊ ಕವಿ ವಾಲ್ಮೀಕಿ, ತಮ್ಮೊಂದಸಂತೋಷಮಂ
ನಿನಗೆ ತಿಳಿಸಲ್ಕಾಟಿಪುದು ಈ ಮಹಾಧ್ವಾಂಕ್ಷಾರಾತಿ ವಿದ್ವನ್ಮಂಡಲಂ
ಎಳ್ಚರಿಕೆ! ಇನ್ನು ಮುಂದಾದೊಡಂ ನೀನಿಂತು
ನಮ್ಮನವ ಹೇಳನಂಗೈದೆಯಾದೊಡೆ ನಿನಗೆ…..

ಹೌದು, ಹತಾಶರಾದ ಜನ ಏನು ಬೇಕಾದರೂ ಮಾಡಿಯಾರು? ಕೆಲವು ವರ್ಷಗಳ ಹಿಂದೆ ಕುವೆಂಪು ಅವರು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಮಾಡಿದ ‘ವಿಚಾರ ಕ್ರಾಂತಿಗೆ ಅಹ್ವಾನ’ ಎಂಬ ಘಟಿಕೋತ್ಸವ ಭಾಷಣದಿಂದ ಕ್ರುದ್ಧರಾದ ಸರ್ಕಾರೀ ಜನರ ಪ್ರತಿಕ್ರಿಯೆ ನೆನಪಿದ್ದವರಿಗೆ ಈ ಸಾಲುಗಳ ಪೂರ್ಣಾರ್ಥ ಸ್ಪಷ್ಟವಾಗುತ್ತದೆ. ‘ಸಂಸ್ಕೃತಿ ಕ್ರಾಂತಿಗೆ ಕಹಳೆ ನಾಂದಿ’ ಎಂಬ ಅವರ ಮತ್ತೊಂದು ಭಾಷಣದಿಂದಾಗಿ ಮತೀಯ ಜಗತ್ತಿನಲ್ಲುದ್ಭವಿಸಿದ ಕೋಲಾಹಲ ಸರ್ವವೇದ್ಯ ಸಂಗತಿಯಾಗಿದೆ. ಮಂತ್ರಿಗಳನ್ನೂ ಆಚಾರ್ಯರನ್ನೂ ಹೊಗಳಿ, ಹೊಗಳಿ, ಅವರ ತಾಳಕ್ಕೆ ಹೆಜ್ಜೆಹಾಕುವ ಸಾಹಿತಿ ಮಾತ್ರ ಅವರ ದೃಷ್ಟಿಯಿಂದ ಮಾನ್ಯ, ಉಳಿದವರೆಲ್ಲ ಬಹಿಷ್ಕಾರ ಯೋಗ್ಯರು, ಶಿಕ್ಷಾರ್ಹರು!

ಮೊದಲೇ ತಿಳಿಸಿದಂತೆ ಆಸುರೀ ಶಕ್ತಿಗಳು ಸಚ್ಛಕ್ತಿಗಳಿಗೆದುರಾಗಿ ಮುಖಕೊಟ್ಟು ನಿಲ್ಲಲಾರವು. ಬಾಗಿಲಲ್ಲದ ಬಾಗಿಲಲ್ಲಿ, ಇಲ್ಲವೇ ಹಿಂಬಾಗಿಲಲ್ಲಿಯೆ ಅವುಗಳ ಸಂಚಾರ. ಲವಕುಶರ ನಗೆ ಕೇಳಿದ ಕೂಡಲೇ ಗೂಬೆಗಳು ಬೆಳಕಂಡಿಯಿಂದ ಹಾರಿಹೋಗುತ್ತವೆ. ಹೋಗುವ ಮುನ್ನ ತಮ್ಮ ಸ್ವಭಾವಕ್ಕೆ ತಕ್ಕಂತೆ ‘ಅಸಹ್ಯ’ ಮಾಡುತ್ತವೆ. ಲವ ವಾಲ್ಮೀಕಿಯನ್ನು ಕುರಿತು

ಗುರುದೇವ ಈ ಗೂಬೆಗಳಿಗೇನು ಮಾಳ್ಪುದೊ ಕಾಣೆ!
ಹಾಳಾಗುವುದು ಇವರ ದೆಸೆಯಿಂದೆಮ್ಮ ವೀಣೆ.
ನಾವಿಲ್ಲದಾಗಳೆ ಬಂದು ಮಾಳ್ಪುವು ಅಸಹ್ಯಮಂ,
ಕುಳಿತು ತಂತಿಯ ಮೇಲೆ

ಎಂದು ನುಡಿಯುವಲ್ಲಿ ಆಸುರೀ ಶಕ್ತಿಗಳ ದೌಷ್ಟ್ಯ ಎಷ್ಟುದೂರ ಹೋಗುತ್ತದೆಂಬುದು ಸ್ಪಷ್ಟವಾಗುತ್ತದೆ. ಲವನ ಮನಸ್ಸಿಗೆ ಬೇಸರವಾದರೂ, ಆತನ ಮಾತಿನಲ್ಲಿ ಕ್ರೌರ್ಯವಿಲ್ಲ, ಮಾತ್ಸರ್ಯವಿಲ್ಲ, ಬಿನುಗುತನವಿಲ್ಲ, ಈ ಸಂದರ್ಭದಲ್ಲಿ ಶ್ರೀರಾಮಾಯಣದರ್ಶನಂ ಪ್ರಕಟವಾದಾಗ ಬೇಲಿಯಡಿ ಹಳ್ಳ ಕೊಳ್ಳಗಳಲ್ಲಿ ಹುಟ್ಟಿಕೊಂಡ ಟೀಕೆ ಟಿಪ್ಪಣಿಗಳನ್ನಿಲ್ಲಿ ನೆನೆಸಿಕೊಳ್ಳಬಹುದು. ‘ಬಿಡು, ವತ್ಸ, ಬಾಗಿಲಿಗೆ ತಡಿಕೆಯಂ ಬಿಗಿದರಾಯ್ತು’ ಎಂದು ಹೇಳುವ ವಾಲ್ಮೀಕಿಯ ಮಾತಿನಲ್ಲಿ ಉಬ್ಬೆಗವಿಲ್ಲ, ಕದಡಿಲ್ಲ, ಕಳಂಕವಿಲ್ಲ, ದುರ್ಜನರ ದೌರ್ಜನ್ಯ ವನ್ನು ಸಜ್ಜನರು ಸಾಕ್ಷೀಭೂತರಾಗಿ, ಸ್ಥಿತಪ್ರಜ್ಞರಂತೆ ವೀಕ್ಷಿಸುತ್ತಾರೆಯೇ ಹೊರತು, ಬಚ್ಚಲಿಗೆ ಕಲ್ಲೆಸೆಯುವ ಗೋಜಿಗೆ ಹೋಗುವುದಿಲ್ಲ. ವಾಲ್ಮೀಕಿಯ ಸಂಯಮವೇ ತಡಿಕೆಯಾಗುತ್ತದೆ. ಅವರ ಹೃದಯದಲ್ಲಿ ಕನಿಕರ ಹೊರತಾಗಿ ಸೇಡಿಗೆ ಜಾಗವೇ ಇಲ್ಲ. ಅಷ್ಟೇ ಅಲ್ಲ, ಅಂಥವರ ಬಗ್ಗೆ ಅವರು ಔದಾರ್ಯದಿಂದ ವರ್ತಿಸುತ್ತಾರೆ.

ಪ್ರೇಮದಿಂದ, ಅಹಿಂಸೆಯಿಂದ, ಔದಾರ್ಯದಿಂದ ದಾನವ ಶಕ್ತಿಯನ್ನು ಪರಾಭವಗೊಳಿಸಲು ಅಥವಾ ಅದನ್ನು ದೈವೀಶಕ್ತಿಯ ರೂಪಕ್ಕೆ ಪರಿವರ್ತಿಸಲು ದೇವಮಾನವರು ಪ್ರಯತ್ನಿಸುತ್ತಾರೆ. ಹಿಂದೆ ಘೂಕ ಯೋಗಿಯಿಂದ ನಾರದ ಸಂಗೀತ ಕಲಿತ ಪ್ರಸಂಗವನ್ನುಲ್ಲೇಖಿಸಿ, ಆ ಯೋಗಿಯ ವಂಶಸ್ಥರಾದ ಈ ಗೂಬೆಗಳನ್ನು ಕ್ಷಮಿಸುವಂತೆ ವಾಲ್ಮೀಕಿ ಮಹರ್ಷಿ ಲವನಿಗೆ ಬುದ್ದಿ ಹೇಳುತ್ತಾನೆ. ಕಲ್ಲಿದ್ದಲು ಕಾಲಾನಂತರದಲ್ಲಿ ವಜ್ರವಾಗುವಂತೆ, ಮಾನವ ವಂಶದಲ್ಲಿ ಜನಿಸಿದ ದುರ್ಜನರಿಗೂ ಒಂದಲ್ಲ ಒಂದು ದಿನ ಸದ್ಬುದ್ದಿ ಬರುತ್ತದೆಂಬ ಉದಾರ ಭರವಸೆ ಋಷಿ ಜೀವನಕ್ಕೆ ಸಹಜವಾದದ್ದೇ. ದುರ್ಜನರ ಮಧ್ಯೆಯೇ ಸಜ್ಜನರು ಬದುಕು ಸಾಗಿಸಬೇಕಾಗಿದೆ. ತಮ್ಮ ಸತ್ಸಂಕಲ್ಪವನ್ನು ಈಡೇರಿಸಿಕೊಳ್ಳಬೇಕಾಗಿದೆ. ಹಲವು ತೆರನ ಜನರ ಮಧ್ಯೆ, ಸಂತೆಯ ಬಸಿರಲ್ಲಿಯೇ ಇದ್ದುಕೊಂಡು ಸಮತೋಲನ ಕಳೆದುಕೊಳ್ಳದೆಯೇ, ಪೈಶಾಚಿಕ ಶಕ್ತಿಗಳು ಬೀಸುವ ಮೋಹ ಜಾಲಕ್ಕೆ ಬಲಿಯಾಗದೆ ಅವರೊಡ್ಡುವ ಪರೀಕ್ಷೆಗಳಲ್ಲಿ ಸೋಲದೆ ಮಹತ್ಸಿದ್ದಿಯನ್ನು ಪಡೆದಾಗ ಮಾತ್ರ ಸಾತ್ವಿಕ ಶಕ್ತಿಗಳ ಮಹಿಮೆ ಲೋಕವಿಖ್ಯಾತವಾಗುತ್ತದೆ.

ಕವಿಯ ಈ ಸಂದೇಶ ವಿಡಂಬನೆಯ ಮೂಲಕ ಘನೀಭೂತವಾಗಿ ಮೈದೋರುತ್ತದೆ. ಇಲ್ಲಿಯ ವಿಡಂಬನೆಯಲ್ಲಿ ವೈಯಕ್ತಿಕ ದ್ವೇಷವಿಲ್ಲ, ಅವಹೇಳನವಿಲ್ಲ, ಪ್ರತೀಕಾರ ಮನೋಭಾವವಿಲ್ಲ; ಇದರಲ್ಲಿ ಔಷಧೀಯ ಗುಣವಿದ್ದರೂ ಕಟುತ್ವವಿಲ್ಲ, ಹಾಸ್ಯವಿದ್ದರೂ ಜಿಹಾಸೆಯಿಲ್ಲ, ಕೊಂಕಿದ್ದರೂ ಬಿಂಕವಿಲ್ಲ. ವೈಯಕ್ತಿಕತೆ ಸಕಾಲಿಕತೆಯನ್ನು ಮೀರಿ, ಸಾಮುದಾಯಕತೆ ಮತ್ತು ಸಾರ್ವಕಾಲಿಕತೆಯನ್ನೊಳಗೊಳ್ಳುವುದರಿಂದ, ಯಾವುದೋ ಒಂದು ಪ್ರಸಂಗದಲ್ಲಿ ಹತ್ತು ಹಲವಾರು ಪ್ರಸಂಗಗಳು ಪ್ರತಿಬಿಂಬಿಸುವುದರಿಂದ ಇದೊಂದು ಶ್ರೇಷ್ಠ ಸಂಕೀರ್ಣ ವಿಡಂಬನೆಯಾಗುತ್ತದೆ.

ಈ ದೇಶಕಾಲಾತೀತತೆಯನ್ನು ಹಾಗೆಯೇ ನಿರ್ ವೈಯಕ್ತಿಕತೆಯನ್ನು ಸಾಧಿಸಲಿಕ್ಕಾಗಿಯೇ ಕವಿ ವಾಲ್ಮೀಕಿ ಅಥವಾ ಅದ್ಭುತ ರಾಮಾಯಣವನ್ನು ಬಳಸಿಕೊಂಡಿವುದು. ಸರಸ್ವತಿಯ ಬೀಣೆ, ವಾಲ್ಮೀಕಿಯ ಪರ್ಣಕುಟಿ, ಮಂದಾಕಿನಿಯ ಸಲಿಲಯಾತ್ರೆ, ಭೂರ್ಜ ಪತ್ರದ ಪುಸ್ತಕ, ಸೀತೆ ಲವಕುಶರು, ನಾರದ, ಘೂಕಯೋಗಿ ಇವೇ ಮೊದಲಾದ ಪುರಾಣೇತಿಹಾಸಗಳಲ್ಲಿ ಬರುವ ಪದಗುಚ್ಛಗಳು, ಘಟನೆಗಳು ಮತ್ತು ದೃಶ್ಯಗಳು ಓದುಗರನ್ನು ಸಮಕಾಲೀನ ಪರಿಸರ ಪರಿಸ್ಥಿತಿಗಳಿಂದ ತಟಕ್ಕನೆ ಬೇರ್ಪಡಿಸಿ, ತ್ರೇತಾಯುಗದ ವಾತಾವರಣಕ್ಕೆ ಕೊಂಡೊಯ್ಯುವು ದರಿಂದ, ಅವನ ಮನಸ್ಸು ಸಮಕಾಲೀನ ಕಲಿಲ ಸಮೂಹದಿಂದ ಸಂಪೂರ್ಣ ವಿಮುಕ್ತವಾಗಿ, ಸಂಘರ್ಷ ಸಂಕ್ಷೋಭೆಗಳಿಂದ ಪಾರಾಗಿ, ಪ್ರಶಾಂತತೆಯಲ್ಲಿ ನೆಲೆಗೊಂಡು, ನಿಜದ ಸ್ವರೂಪ ವನ್ನರಿಯಲು ಸಾಧ್ಯವಾಗುತ್ತದೆ. ಸಮಕಾಲೀನ ಪರಿಸರದಲ್ಲಿ ನಾಟಿದ ಮನಸ್ಸು ದ್ವೇಷ ಮಾತ್ಸರ್ಯಗಳ ಅಂಧಕಾರದಲ್ಲಿ ಸೆರೆಗೊಳ್ಳುವುದರಿಂದ ನಿಜದ ನೆಲೆ ಅದರ ಬಗೆಗೆ ನಿಲುಕುವುದಿಲ್ಲ. ಈ ದೃಷ್ಟಿಯಿಂದ ಪುರಾಣ ಯುಗದ ಪುನರ್ಸೃಷ್ಟಿ ಸಾರ್ಥಕವಾಗಿದೆಯೆಂದೂ ವಿಡಂಬನೆ ಸಫಲವಾಗಿದೆಯೆಂದೂ ಹೇಳಬಹುದಾಗಿದೆ.

ಪುರಾತನ ಯುಗದ ಪುನರ್ಸೃಷ್ಟಿಯಲ್ಲಿ ಸಂಸ್ಕೃತ ಹಾಗೂ ಹಳಗನ್ನಡಗಳ ವಿರಳ ಪದ ಪ್ರಯೋಗಗಳು ಬಹು ಯಶಸ್ವಿಯಾಗಿವೆ. ‘ವ್ಯೆಹ’ ಕುರುಕ್ಷೇತ್ರದ ಪದ್ಮವ್ಯೆಹವನ್ನು ನೆನಪಿಗೆ ತಂದುಕೊಡುತ್ತದೆ. ಕ್ಷುದ್ರ ಸಂಗತಿಗಳ ವಿವರ್ಣನೆಗೆ ಸಂಸ್ಕೃತ ಸಮಾನಸಗಳನ್ನು ಬಳಸಿದಾಗ ವಿಡಂಬನೆ ತೀಕ್ಷ್ಣವಾಗುತ್ತದೆ, ಪರಿಣಾಮಕಾರಿಯಾಗುತ್ತದೆನ್ನುವುದಕ್ಕೆ ‘ಘೂಕ ಗೋಷ್ಠಿ’ ‘ಈ ಮಹಾಧ್ವಾಂಕ್ಷಾರಾತಿ ವಿದ್ವನ್ಮಂಡಲಂ’ ಎಂಬ ಪದಗುಚ್ಛಗಳೇ ನಿದರ್ಶನ. ಸಾಮಾನ್ಯವಾಗಿ ಗೋಷ್ಠಿ ಎನ್ನುವ ಪದ ಮಹತ್ತ್ವಪೂರ್ಣವಾದ ಸಂಗತಿಗಳೊಡನೆ ಸಂಪರ್ಕ ಪಡೆಯುತ್ತದೆ. ಇದೂ ಇರಲಿ, ಆ ಮುಂದಿನ ಪದ ಗುಚ್ಛವಂತು ಕವಿ ದೃಷ್ಟಿಯನ್ನು ಪೂರ್ಣವಾಗಿ ಪ್ರತಿಬಿಂಬಿಸುವ ಮೂಲಕ ವಿಡಂಬನೆಗೆ ವಿಶೇಷ ಕಳೆಯನ್ನು ಅನುಗ್ರಹಿಸುತ್ತದೆ. ‘ಧ್ವಾಂಕ್ಷಾರಾತಿ’ ಎನ್ನುವ ಸಮಸ್ತಪದದ ಅಪರಿಚಯತೆ, ಕ್ಲಿಷ್ಟತೆ, ಶ್ರುತಿ ಕಷ್ಟ, ಹಾಗೂ ಅರ್ಥ ಕ್ಲೇಶಗಳು ಪ್ರಥಮತಃ ಅಸಾಧಾರಣತೆಯನ್ನು ಸೂಚಿಸುತ್ತವೆ, ನಿಜ. ರಾಜ ಮಹಾರಾಜರ ಮತ್ತು ಮಹಾಪಂಡಿತರ ಬಿರುದಾವಳಿಗೆ ಮೀಸಲಾಗಿರುವ ಈ ಪದ ಸಮೂಹವನ್ನು ಗೂಬೆಗಳ ಪ್ರಸಕ್ತಿಯಲ್ಲಿ ಬಳಸಿದಾಗ ಸಹಜವಾಗಿ ನಗೆಯರಳುತ್ತದೆ. ಕವಿ ‘ಧ್ವಾಂಕ್ಷಾರಾತಿಗೆ’ ಬದಲಾಗಿ ‘ಕಾಕಾರಾತಿ’ ಪದವನ್ನು ಉಪಯೋಗಿಸಬಹುದಿತ್ತು. ಅದರಿಂದ ಛಂದಸ್ಸಿಗೂ ಅಪೋಹವೊದಗುತ್ತಿರಲಿಲ್ಲ, ಉಚ್ಚಾರಣೆಗೂ ಕಷ್ಟವಾಗುತ್ತಿರಲಿಲ್ಲ. ಕಾಗೆಯಂಥ ಯಃಕಶ್ಚಿತ್ ಪಕ್ಷಿ ಕೋಗಿಲೆಯ ಪ್ರಸವಕ್ಕೆ ಕಾರಣವಾಗುತ್ತದೆ. ಅಂಥ ಕಾಗೆಯ ಹಗೆ ಗೂಬೆ. ಹೀಗೆಯೇ ‘ಮಹಾ’ ಮತ್ತು ‘ವಿದ್ವನ್ಮಂಡಲ’ಗಳ ಪ್ರಯೋಗದ ಔಚಿತ್ಯವನ್ನು ಇಡೀ ಕವನದ ಹಾಗೂ ಕವಿಯ ಪರಿಸರದ ಹಿನ್ನೆಲೆಯಲ್ಲಿ ಗಮನಿಸಬಹುದು. ‘ಅಧ್ಯಕ್ಷ ಗೂಬೆ’ಯೆಂಬ ಅರಿ ಸಮಾಸವೂ ವಿಡಂಬನೆಯ ದೃಷ್ಟಿಯಿಂದ ದೋಷಮುಕ್ತವಾಗುತ್ತದೆ. ಉಳಿದ ಸಂಸ್ಕೃತ ಪದಗಳು ವಾಚ್ಯಾರ್ಥಕ್ಕಾಗಿಯೇ ಸಹಜವಾಗಿ ಬಳಕೆಯಾಗಿವೆ. ಪೇರೊಡಲ, ಪೊಕ್ಕುದಾ, ಪೆಸರ, ಎಸಗವೇಳ್ಕುಂ, ಆಟಿಪುದು, ಎಳ್ಚರಿಕೆ, ಪೊರಗೆ, ಮಾಳ್ಪುದೊ, ಪಿಂತೆ, ಪೇಳ್ವೆನ್ ಈ ಮೊದಲಾದ ಪ್ರಯೋಗಗಳು ಮುಖ್ಯವಾಗಿ ವಾತಾವರಣ ನಿರ್ಮಾಣಕ್ಕೆ ಅನುಕೂಲವಾಗುತ್ತವೆಂದು ಬಗೆಯಬಹುದಾಗಿದೆ. ‘ನಿ…..ನಗೆ’ ಪದದ ಚಮತ್ಕಾರಿಕ ಪ್ರಯೋಗ ಸಹ ಗಮನಾರ್ಹವಾದುದು. ಗೈರು ಹಾಜರಿಯಂಥ ನಿತ್ಯ ಬಳಕೆಯ ಅನ್ಯ ದೇಶೀಯ ಪದ ಕನ್ನಡದೊಡನೆ ಸಮರಸವಾಗಿ ಹೊಂದಿಕೊಳ್ಳುತ್ತದೆ.

ಈ ಕವಿತೆಯಲ್ಲಿ ಬಳಕೆಯಾಗಿರುವ ಶಬ್ದಾರ್ಥಾಲಂಕಾರಗಳಿಗೂ ವಿಶೇಷಾರ್ಥವಿದೆ. ತಲೆಯ ಸುತ್ತ, ಅತ್ತ ಇತ್ತ; ಸೇದುತ್ತ, ಉನ್ಮತ್ತ, ಇವು ಶಬ್ದಾಲಂಕಾರಗಳಾದರೂ ಭಾವಾರ್ಥ ದ್ಯೋತಕವಾಗಿವೆ. ಕೇವಲ ಪ್ರಾಸವೇ ಆ ವ್ಯಕ್ತಿಗಳ ಇರುವಿಕೆಯನ್ನು ಭಾವಗೋಚರವಾಗುವಂತೆ ಮಾಡುತ್ತದೆ.

ತಲೆಗಣ್ಣ ಹೊರಳಾಡಿಸುತ ಕುಳಿತಿಹುದು ಉನ್ಮತ್ತ!
ಮತ್ತೊಂದಕೇನೊ ಕೆದರಿದಂತಿದೆ ಪಿತ್ತ
ಅತ್ತೊಂದರಾ ಚಿತ್ತ ಸ್ಥಿತಿಯೋ ತತ್ತತ್ತತತ್ತಾ!

ಇಲ್ಲಿಯ ಪದಗಳು ಅರ್ಥವನ್ನು ಮರೆತರೂ ಧ್ವನಿಯಿಂದಲೇ ಸರ್ವಭಾವ ವೇದ್ಯವಾಗುತ್ತದೆ. ‘ತತ್ತ ತತ್ತ’ ಎನ್ನುವ ಉದ್ಗಾರದ ಬಸಿರಲ್ಲಿ ಹುದುಗಿರುವ ಅಸಹ್ಯ ತಿರಸ್ಕಾರ ವ್ಯಂಗ್ಯ ಭಾವಗಳು ಕನ್ನಡ ಬಲ್ಲ ನಿರಕ್ಷರಿಗೂ ಗೊತ್ತು. ಮೇಲಿಂದ ಮೇಲೆ ಬರುವ ‘ತ,ತತ್ತ’ಗಳು ಗೂಬೆಗಳು ಅರ್ಥಾತ್ ಅವು ಪ್ರತಿನಿಧಿಸುವ ಜನರ ಬಗ್ಗೆ ಕವಿ ಮನಸ್ಸಿನಲ್ಲಿರುವ ಜುಗುಪ್ಸೆಯನ್ನು ಕೆದರುತ್ತವೆ; ಅವರ ಸ್ವಭಾವವನ್ನು ಪ್ರತಿಫಲಿಸುತ್ತವೆ. ವಿಶೇಷ ಮಹತ್ವವಿಲ್ಲದಿದ್ದರೂ ಅಲ್ಲಲ್ಲಿ ಬರುವ ಅಂತ್ಯ ಪ್ರಾಸ ಒಳಪ್ರಾಸಗಳು, ವಾಕ್ಯ ವಿರಾಮ, ಭಾವಯತಿ ಅರ್ಥಯತಿಗಳನ್ನು ಗುರುತಿಸಿ, ಅವುಗಳ ಸ್ವಾರಸ್ಯವನ್ನು ಹೆಚ್ಚಿಸುತ್ತವೆ. ಬೀಣೆಯ ಮೆಲೆ, ಗೂಬೆಗಳ ಮಾಲೆ; ಐದಾರು ಎಳೆ, ಸಾಲು ಸಾಲೆ; ಪರ್ಣಶಾಲೆ, ಅರಣ್ಯ ಮಾಲೆ; ಶಾಂತಿಯೋಲೆ, ಮಧುರ ಲೀಲೆ, ಸಲಿಲಯಾತ್ರೆ, ಆ ತ್ರಿಣೇತ್ರೆ ಏನಹಂಕಾರ, ಮದ್ದು ಖಾರ; ತಂತಿಯಿಕ್ಕಿ, ಕವಿಯೆಂದು ಸೊಕ್ಕಿ; ಒಳಗೆ, ಪೊರಗೆ ಅಪ್ರಯಾಸವಾಗಿ ಸಹಜವಾಗಿ, ಸಂದರ್ಭೌಚಿತ್ಯವನ್ನು ಮೀರದೆ ಭಾರವಾಗದಂತೆ ಬರುತ್ತವೆ. ಅರ್ಥಾಲಂಕಾರಗಳ ಪೈಕಿ ಗಮನಾರ್ಹವಾದುದೆಂದರೆ ‘ಆವುದೊ ಹಿರಿಯ ಚಿಂತೆ ಅಧ್ಯಕ್ಷ ಗೂಬೆಯ ತಲೆಯ ಸುತ್ತ ನೊಣದಂತೆ ಹಾರಾಡಿ ವ್ಯೆಹವನು ರಚಿಸುತಿದೆ ಅತ್ತ ಇತ್ತ’ ಎಂಬ ಉಪಮಾಲಂಕಾರ. ಇದು ಬಚ್ಚಲಿನ ನೊಣವೇ ಹೊರತು ಜೇನ್ನೊಣವಿರಲಾರದು. ಆಗ ನೊಣ ಅಧ್ಯಕ್ಷ ಗೂಬೆಯ ಮನೋವಿಕಾರಕ್ಕೆ ಸಂಕೇತವಾಗುತ್ತದೆ.

ಕವಿ ಬಳಸಿರುವ ಛಂದಸ್ಸು ಸಹ ವಿಷಯಕ್ಕೆ ತಕ್ಕಂತಿದೆ. ಸರಳ ಅಥವಾ ಲಲಿತ ರಗಳೆಯ ಧಾಟಿಯ ಮುಕ್ತ ಛಂದಸ್ಸು ಭಾವಾಲೋಚನೆಗಳ ಸ್ಥಿತಿ ಗತಿ ಮಿತಿ ವ್ಯಾಪ್ತಿಗಳಿಗನುಗುಣವಾಗಿ ಹಿಗ್ಗುತ್ತದೆ, ಇಲ್ಲವೆ ಕುಗ್ಗುತ್ತದೆ. ಅತ್ಯಂತ ಹ್ರಸ್ವ ಪಾದದಲ್ಲಿ ಹದಿಮೂರು ಮಾತ್ರೆಗಳ ಮೂರು ಗಣಗಳಿದ್ದರೆ, ದೀರ್ಘ ಪಾದದಲ್ಲಿ ಮೂವತ್ತು ಮೂರು ಮಾತ್ರೆಯ ಆರು ಅಥವಾ ಏಳು ಗಣಗಳಿವೆ.


ಆ ವೀಣೆ. ಕುಶಲವರ. ವೀಣೆ
೪                                 ೬          ೩
ನಿನಗೆ ತಿಳಿ. ಸಲ್ಕಾಟಿ. ಪುದು ಈ ಮ. ಹಾ ಧ್ವಾಂ. ಕ್ಷಾರಾತಿ. ವಿದ್ವನ್ಮಂ. ಡಲಂ

ಈ ಎರಡನೆಯ ಸಾಲಿನ ಬೀಸು ಅದರಲ್ಲಿ ಅಡಕವಾಗಿರುವ ಭಾವ ಭಾವನೆಗಳಿಗೆ ತಕ್ಕಂತಿದೆ, ಆದರೆ ಧೈರ್ಘ್ಯವೇ ಸಹೃದಯರ ಮನಸ್ಸನ್ನು ಜಾಗೃತಗೊಳಿಸಿ ಕೇಂದ್ರೀಕರಿಸುವ ಉಪಾಯವಾಗಿದೆ; ಅಲ್ಲಿಯ ಲಘು ಗುರುಗಳ ವಿನ್ಯಾಸವೂ ಭಾವ ಪೋಷಕವಾಗಿದೆ. ಹೊಸದಾಗಿ ಕಲಿಯುವಾಗ ಸಂಪ್ರದಾಯವನ್ನು ಬಿಡದೆ, ಕಲಿತ ನಂತರ ಸಂಪೂರ್ಣ ಸ್ವಾತಂತ್ರ್ಯದಿಂದ ಕ್ರಮಭಂಗದ ಮೂಲಕವೇ ಕಲಾ ಪ್ರತಿಭೆಯನ್ನು ಮರೆಸುವ ಸಂಗೀತಗಾರ ನಂತೆ, ಓದುಗನ ಮನಸ್ಸನ್ನು ಅಣಿಗೊಳಿಸುವ ಸಲುವಾಗಿಯೆಂಬಂತೆ, ಕವಿ ಪ್ರಾರಂಭದ ಪಂಕ್ತಿಗಳನ್ನು ಲಲಿತರಗಳೆಯ ಶುದ್ಧ ಧಾಟಿಯಲ್ಲಿ ರಚಿಸುತ್ತಾನೆ.

ಓ ತಾಯೆ. ಸರಸತಿಯೆ. ನಿನ್ನ ಬೀಣೆ.ಯ ಮೇಲೆ
ಕುಳಿತೇನ. ಮಾಡುತಿವೆ. ಈ ಗೂಬೆ.ಗಳ ಮಾಲೆ

ಪ್ರಾಯಶಃ ಇನ್ನೆರಡು ಸಾಲುಗಳು ಮಾತ್ರ ಈ ಧಾಟಿಯಲ್ಲಿವೆ. ಉಳಿದವುಗಳಲ್ಲಿ ಸಾಮ್ಯಕ್ಕಿಂತ ವೈಷಮ್ಯವೇ ಹೆಚ್ಚು. ಈ ವೈವಿಧ್ಯದಿಂದಾಗಿ ಭಾವಾಲೋಚನಾ ಪ್ರವಾಹ ನಿರ್ವಿಘ್ನವಾಗಿ ಹರಿಯುತ್ತದೆ.

ಒಟ್ಟಿನಲ್ಲಿ ಕುವೆಂಪು ಅವರ ವಿಡಂಬನಾತ್ಮಕವಾದ ಕವಿತೆಗಳಲ್ಲಿ ಇದಕ್ಕೆ ಅಗ್ರಸ್ಥಾನವಿದೆ.

 

 


[1]     ಆಗಿನ್ನೂ ವಿಶ್ವವಿದ್ಯಾನಿಲಯ ಸರ್ಕಾರದ ಒಂದು ಶಾಖೆಯಾಗಿತ್ತು. ಕೌನ್ಸಿಲ್ ನಿರ್ಣಯ ಸರ್ಕಾರಕ್ಕೆ ತಲುಪಿದಾಗ, ಅಂಥ ನಿರ್ಣಯವನ್ನಂಗೀಕರಿಸಿದ್ದು ತಪ್ಪೆಂದು ಅದು ಕೌನ್ಸಿಲ್ಲಿಗೆ ಛೀಮಾರಿ ಹಾಕಿತು.

[2]     ಅಖಂಡ ಕರ್ನಾಟಕದ ಉಗಮಕ್ಕೂ ಸುಮಾರು ಇಂಥದೇ ಪ್ರಚೋದನೆ ಕಾರಣವಾಯಿತೆನ್ನುವುದನ್ನು ಈ ಸಂದರ್ಭದಲ್ಲಿ ನೆನೆಸಿಕೊಳ್ಳಬಹುದು.

[3]     ಮಿಲ್ಟನ್‌ನ Paradise Lost ಮತ್ತು ಕುವೆಂಪು ಅವರ ಶ್ರೀರಾಮಾಯಣದರ್ಶನಂ ಮಹಾಕಾವ್ಯಗಳನ್ನು ನೋಡಬಹುದು.

[4]     ಕವಿಯ ಹೃದಯವೊಂದು ವೀಣೆ ಲೋಕವದನು ಮಿಡಿವುದು.