ಶಿಶು ಸಾಹಿತ್ಯಕ್ಕೆ ಕುವೆಂಪು ಅವರ ಕಾಣಿಕೆ ಗುಣಗಾತ್ರಗಳ ದೃಷ್ಟಿಯಿಂದ ಸಾಮಾನ್ಯವಾದದ್ದಲ್ಲ. ಅವರು ಕತೆ ನಾಟಕ ಭಾವಗೀತೆಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಒಂದೊಂದೂ ಸಹಜ ಸೃಷ್ಟಿಯಲ್ಲದೆ, ದಿಡೀರ್ ಸೃಷ್ಟಿಯಲ್ಲ. ಕತೆ ವರ್ಣನೆ ಪ್ರಾರ್ಥನೆಗಳಿಂದ ಸಮೃದ್ಧವಾದ ‘ಅಮಲನ ಕಥೆ’ ಅವರ ಮೊಟ್ಟ ಮೊದಲ (೧೯೨೪) ಶಿಶು ಸಾಹಿತ್ಯ ಕೃತಿ. ೧೯೦ ಚೌಪದಿಗಳನ್ನೊಳಗೊಂಡಿದ್ದು, ಗೋವಿನ ಕಥೆಯ ಮಟ್ಟಿನಲ್ಲಿ ಸುಲಲಿತವಾಗಿ ಹರಿಯುವ ಈ ಕಥನ ಕವನದಲ್ಲಿ ಭಕ್ತಿಯೇ ಸ್ಥಾೂ ಭಾವ. ಇಲ್ಲಿ ಕತೆಯ ಹಂದರ ತುಂಬ ತೆಳುವಾದದ್ದು. ಚಿಕ್ಕ ಮಕ್ಕಳಲ್ಲಿ ಭಕ್ತಿ, ಕರುಣೆ, ಶ್ರದ್ಧೆ, ಸತ್ಯ, ಧರ್ಮ ಮೊದಲಾದ ಸಾತ್ವಿಕ ಗುಣಗಳನ್ನು ಬೆಳೆಸುವುದೇ ಇದರ ಮುಖ್ಯೋದ್ದೇಶ. ಅಡವಿಯ ತರುಗಳನ್ನು ಕಡಿದು, ಮಾರಿ, ಬಂದ ಹಣದಿಂದ ಜೀವನಯಾಪನೆ ಮಾಡುತ್ತ, ಗಂಜಿಯುಂಡರೂ ಸುಖ ದಿಂದಿರುತ್ತ, ಹರಿಭಜನೆಯ ಮೂಲಕ ಅಚ್ಯುತ ಪದವಿಯನ್ನು ಪಡೆದವನು ಇಲ್ಲಿಯ ಕಥಾನಾಯಕ ಅಮಲ. ಎಂದಿನಂತೆ ಮುಂಜಾನೆಯಲ್ಲಿ ಗಂಜಿಯುಂಡು, ಹರಿಯನ್ನು ಧ್ಯಾನಿಸುತ್ತ, ಹೆಗಲ ಮೇಲೆ ಕೊಡಲಿಯೇರಿಸಿಕೊಂಡು ಅವನು ಕಾಡಿಗೆ ಹೋಗುತ್ತಾನೆ. ಶಬರನ ಕ್ರೂರಹಿಂಸೆಗೊಳಗಾಗಿದ್ದ ಹರಿಣವೊಂದು ಆಶ್ರಯ ಬೇಡಿ ಅವನ ಬಳಿ ಬರುತ್ತದೆ. ಶಬರನಿಗೂ ಅಮಲನಿಗೂ ಹೋರಾಟ ನಡೆಯುವ ಕಾಲದಲ್ಲಿ, ಅಮಲನ ಪ್ರಾರ್ಥನೆಗೆ ಓಗೊಟ್ಟು ಹರಿ ಪ್ರತ್ಯಕ್ಷನಾಗುತ್ತಾನೆ. ಕತ್ತಲಾದರೂ ತಂದೆ ಬಾರದಿರಲು ಮಗ ಮಧುರ ಅವನನ್ನು ಹುಡುಕಿಕೊಂಡು ಕಾಡಲ್ಲಿ ಅಲೆಯುತ್ತಿರುವಾಗ, ಭಯಂಕರ ಮೋಡ ಮಳೆ ಗಾಳಿಗಳು ಅವನನ್ನು ತತ್ತರ ಗೊಳಿಸುತ್ತವೆ. ಆಗವನು ಹರಿಯನ್ನು ಪ್ರಾರ್ಥಿಸಿ, ಅವನ ಕೃಪಾ ಸಾಗರದಲ್ಲಿ ಈಜಾಡುತ್ತಾನೆ. ‘ಕರುಣೆಯೆಂಬುದು ದೇವ ದೇವನ ಪರಮ ಸನ್ನಿಧಿಯಿಂದ ಬರುವುದು’ ‘ಹರಿಯು ಹರನೂ ಬೇರೆ ಎನ್ನುತ ಬರಿದೆ ಭೇದವ ಮಾಡಲೊಲ್ಲದ’ ನರನಿಗೆ ಹರಿಯ ಆಸರೆ ತಪ್ಪದು ಎನ್ನುವ ತತ್ವ ನಿರೂಪಣೆಗೆ ಈ ಕತೆ ಮಾಧ್ಯಮವಾಗಿದೆ.

ಕನ್ನಡ ನಾಡಿನ ಮಕ್ಕಳಿಗೆಲ್ಲ ಏಕಪ್ರಕಾರವಾಗಿ ಪ್ರಿಯವಾಗಿರುವ, ಅದು ಪ್ರಕಟವಾದಂದಿ ನಿಂದ ಶಿಶು ವಯಸ್ಕರೆನ್ನದೆ ಸರ್ವರಿಗೂ ಆಕರ್ಷಕ ಕೃತಿಯಾಗಿರುವ ‘ಬೊಮ್ಮನ ಹಳ್ಳಿಯ ಕಿಂದರಿ ಜೋಗಿ’ಯನ್ನು ಮಕ್ಕಳ ಮಹಾಕಾವ್ಯವೆಂದೇ ಕರೆಯಬಹುದಾಗಿದೆ. ಅದು ಓದಿದಷ್ಟೂ ನವೋನವವಾಗಿ ತೋರುತ್ತದೆ. ಮನಸ್ಸಿನಲ್ಲಿ ಚಪ್ಪರಿಸಿದಷ್ಟು ನಲವೇರುತ್ತದೆ. ಅದರಲ್ಲಿ ಸಾಂದ್ರವಾದ ಹಾಗೂ ಮನಮೋಹಕವಾದ ಕತೆಯಿದೆ, ಮನಸ್ಸಿಗೆ ಕಚಗುಳಿಯಿಟ್ಟು ಜುಮ್ಮಾದಟ್ಟಿಸುವ ಹಾಸ್ಯರಸದ ಹೊನಲಿದೆ; ಗೌಡನ ವಾಗ್ದಾನ ಭಂಗದಲ್ಲಿ ಲೋಕಾನುಭವದ ಕಠೋರ ಸತ್ಯವಿದೆ. ಭಾಷೆಯ ಕೊಟ್ಟರೆ ಮೋಸವಮಾಡದೆ ಸಲ್ಲಿಸಬೇಕು ಎಂಬ ನೀತಿಯ ಪ್ರತಿಪಾದನೆಯಿದೆ. ದಿವಿಜರೂ ಸಹ ಗಗನದಲ್ಲಿ ನೆರೆದು ಈ ನಾಟಕವನ್ನು ಅವಲೋಕಿಸು ತ್ತಾರೆ. ಇದು ಕತೆಗೆ ಕತೆ, ನಾಟಕಕ್ಕೆ ನಾಟಕ, ಕಾವ್ಯಕ್ಕೆ, ಕಾವ್ಯ. ವರ್ಣನೆಗಳು ಸಮೃದ್ಧವಾಗಿ ದ್ದರೂ, ಚಿಟ್ಟು ಬರಿಸುವುದಿಲ್ಲ. ಅಷ್ಟೆ ಅಲ್ಲ, ಅವ ಮತ್ತಷ್ಟು ಬೆಳೆದಿದ್ದರೂ ಓದುಗರಿಗೆ ಬೇಸರವಾಗುತ್ತಿರಲಿಲ್ಲ. ನಾಟಕೀಯ ಸನ್ನಿವೇಶಗಳು ಹಾಗೂ ಕಣ್ಣಿಗೆ ಕಟ್ಟುವ ಚಿತ್ರಗಳು ಕಿಶೋರರನ್ನು ಕುಣಿಸುತ್ತವೆ, ನಗಿಸುತ್ತವೆ, ಮೈಮರೆಸುತ್ತವೆ.

ಇದು ಬ್ರೌನಿಂಗ್ ಕವಿಯ ‘The pied piper of Hamelin’ ಎಂಬ ಕೃತಿಯ ಛಾಯಾನುವಾದವೆಂದು ಹೇಳಲಾಗಿದೆ. ಇಂಗ್ಲಿಷ್ ಬಲ್ಲವರು ಮಾತ್ರ ಇದಕ್ಕೆ ಆಂಗ್ಲಕೃತಿ ಮೂಲವೆಂದು ಹೇಳಿಯಾರು; ಆಂಗ್ಲ ವಿದ್ವಾಂಸರಲ್ಲದವರಿಗೆ ಇದು ಸ್ವತಂತ್ರ ಕೃತಿಯೆಂದೇ ಬಳಕೆಯಾದೀತು. ಕುವೆಂಪು ಅವರು ಬ್ರೌನಿಂಗ್ ಕವಿಯಿಂದ ಸ್ಫೂರ್ತಿ ಪಡೆದಿದ್ದಾರೆ ಯೆಂದೆನ್ನುವುದು ನಿಜ. ಆದರೆ ಮೂಲ ಛಾಯಾನುವಾದಗಳಿಗಿರುವ ಸಂಬಂಧ ಕಬ್ಬು ಸಕ್ಕರೆಗಳ; ಬೇಳೆ ಹೋಳಿಗೆಗಳ ಸಂಬಂಧವನ್ನು ಹೋಲುವಂಥದ್ದು. ಮೂಲ ರಾಮಾಯಣ ಮತ್ತು ಅದನ್ನಾಧರಿಸಿದ ಅರ್ವಾಚೀನ ಮಹಾಕೃತಿಗಳ ಸಂಬಂಧವನ್ನು ನೆನಪಿಗೆ ತರುವಂಥ. ಘಟನೆಗಳು ಮತ್ತು ಪಾತ್ರಗಳು ಮೂಲವನ್ನು ನೆನಪಿಗೆ ತರಬಹುದಾದರೂ ಅವುಗಳ ಸ್ವರೂಪ ಸ್ವಭಾವಗಳೇ ಬೇರೆ, ರಕ್ತ ಮಾಂಸಗಳ ಮೂಲದ್ರವ್ಯಗಳೆ ಬೇರೆ ಎಂಬ ಸಂಗತಿ ಎಂಥವನಿ ಗಾದರೂ ಮನಗಾಣದಿರಲಾರದು. ಇಲ್ಲಿಯ ಕಿಂದರಿಜೋಗಿ ಅಲ್ಲಿ Piper ಅಲ್ಲ. ಇಲ್ಲಿಯ ಗೌಡನೇ ಬೇರೆ, ಅಲ್ಲಿಯ Mayor ಬೇರೆ. ಬೊಮ್ಮನಹಳ್ಳಿ, ತುಂಗಾತೀರ, ಕಿಂದರಿ ಜೋಗಿ, ಚೌಡಿಯಬೆಟ್ಟ, ರಂಗೇಗೌಡ ಎಲ್ಲವೂ ಎಲ್ಲರೂ ಕನ್ನಡನಾಡಿನ ಮಕ್ಕಳಿಗೆ ಪರಿಚಯ ವಾಗಿರುವ ಭೌಗೋಳಿಕ ಸನ್ನಿವೇಶಗಳು ಹಾಗೂ ವ್ಯಕ್ತಿಗಳು. ತಿಮ್ಮ, ಅಚ್ಚಮ, ಶೇಷಕ್ಕ, ಸಿದ್ಧೋಜಯ್ಯ, ಜಟ್ಟಕ್ಕ, ತಿಪ್ಪಾಂಭಟ್ಟ ಇವರೆಲ್ಲರೂ ಅವರ ರಕ್ತ ಸಂಬಂಧಿಗಳೇ. ಹಿಮಗಿರಿ, ಭೈರವ, ಕೈಲಾಸ, ವಿಷ್ಣು ಈ ಹೆಸರು ಸಹ ಅವರಿಗೆ ವಿದೇಶೀಯವಲ್ಲ. ಕಿಂದರಿಜೋಗಿ ಮತ್ತು ಚೌಡಿಯ ಬೆಟ್ಟದ ಕಲ್ಪನೆಯಂತು ಮಾನುಷಾಮಾನುಷವಾತಾವರಣ ಸೃಷ್ಟಿಗೆ ನೆರವಾಗಿ ಕತೆಯ ಸಮ್ಮೋಹನತೆ ಸಂಭವನೀಯತೆಗಳಿಗೆ ಕಾರಣವಾಗಿದೆ. ಅದರಲ್ಲಿ ನೆಲದ ವಾಸ್ತವತೆ ಯಿದೆ, ನಾಕದ ಕಮನೀಯ ಭ್ರಾಂತಿಯಿದೆ. ಓದುಗರು ಮಾನುಷ ವಾತಾವರಣದ ಭ್ರಮೆಯಲ್ಲಿ ಮುಳುಗಿರುತ್ತಾರೆ. ಅದು ಕೇವಲ ಭ್ರಮೆಯಾಗಿರದೆ, ಕಠೋರ ವಾಸ್ತವದಂತೆ ತೋರುತ್ತದೆ.

ಕುವೆಂಪು ಅವರ ಶಿಶುಸಾಹಿತ್ಯ ಕೃತಿಗಳು ಒಂಬತ್ತು. ಮಕ್ಕಳ ಚಟುವಟಿಕೆ, ಜ್ಞಾನ, ಅನುಭವ, ಕಲ್ಪನಾ ಸಾಮರ್ಥ್ಯ ಮತ್ತು ಅವರ ಗುಣ ಸ್ವಭಾವಗಳನ್ನು ದೃಷ್ಟಿಯಲ್ಲಿಟ್ಟು ಕೊಂಡು ಅವನ್ನು ಮೂರು ಭಾಗಗಳಾಗಿ ವಿಂಗಡಿಸುವುದುಂಟು: ಶೈಶವ ಬಾಲ್ಯ, ಕೌಮಾರ ಅಥವಾ ಕೈಶೋರ. ಈ ಮೂರು ಅವಸ್ಥೆಗಳು ಒಟ್ಟಾಗಿ ಹದಿನಾರು ವರ್ಷಗಳ ತನಕ ಚಾಚುತ್ತ ವೆಂದು ಹೇಳಬಹುದಾಗಿದೆ. ಅಂದರೆ ಪ್ರೌಢಶಾಲೆಯ ವಿದ್ಯಾರ್ಥಿಗಳೂ ಈ ಪರಿಧಿಯೊಳಗೆ ಸೇರುತ್ತಾರೆಂದಾಗುತ್ತದೆ. ರೇಡಿಯೋ ಟೆಲಿವಿಷನ್ ಸಿನಿಮಾ ನಾಟಕ ಮೊದಲಾದ ಸಂಪರ್ಕ ಮಾಧ್ಯಮಗಳ ಸೌಲಭ್ಯಗಳು ದಿನೇ ದಿನೇ ಹಲವು ಮಡಿಯಾಗುತ್ತಿರುವ ಮತ್ತು ಶೈಕ್ಷಣಿಕ ಸವಲತ್ತುಗಳು ಇಡೀ ಜನತೆಯನ್ನು ಆಲಿಂಗಿಸಿಕೊಳ್ಳುತ್ತಿರುವ ಈ ಕಾಲದಲ್ಲಿ ಮಕ್ಕಳ ಬೌದ್ದಿಕ ಶಕ್ತಿಯಾಗಲೀ ಕಲ್ಪನಾ ಪ್ರತಿಭೆಯಾಗಲೀ ಬಹುಮೇಲ್ಮಟ್ಟದಲ್ಲಿರುತ್ತವೆಂಬುದನ್ನು ಶಿಶು ಸಾಹಿತ್ಯ ವಿಮರ್ಶಕರು ಮರೆಯಲಾಗದು. ಮಕ್ಕಳಿಗಾಗಿ ಮಕ್ಕಳೇ ರಚಿಸಿದ ಸಾಹಿತ್ಯ ಯಾವ ಭಾಷೆಯಲ್ಲಾದರೂ ಅತ್ಯಲ್ಪ, ದೊಡ್ಡವರು ಬರೆದದ್ದೇ ಅಪಾರ. ಕುವೆಂಪು ಅವರು ನುಡಿಯುವಂತೆ

ದೊಡ್ಡವರೆಲ್ಲರ ಹೃದಯದಿ ಕಟ್ಟಿಹ
ತೊಟ್ಟಿಲ ಲೋಕದಲಿ
ನಿತ್ಯ ಕಿಶೋರತೆ ನಿದ್ರಿಸುತಿರುವುದು
ವಿಸ್ಮೃತ ನಾಕಲಿ!

ಮಕ್ಕಳ ಆಟಪಾಟಗಳನ್ನು ನೋಡುವಾಗ ಸುಪ್ತಚಿತ್ರದಲ್ಲಿ ಹುದುಗಿರುವ ಕಿಶೋರಪ್ರಜ್ಞೆ ಎಚ್ಚರಗೊಂಡು. ಮಕ್ಕಳ ಆಕಾಂಕ್ಷೆ ಅಭೀಷ್ಟಗಳನ್ನು, ಅವರ ಶಕ್ತಿ ಸಾಮರ್ಥ್ಯಗಳನ್ನು, ಅವರ ಒಲವು ನಿಲವುಗಳನ್ನು ಪ್ರತಿಬಿಂಬಿಸುವ ಸಾಹಿತ್ಯ ಉದಯವಾಗುತ್ತದೆ. ಅಂದಮೇಲೆ ಅದು ಎರಡು ಟಿಸಿಲುಗಳಾಗಿ ಅವತರಿಸುತ್ತದೆ. ಒಂದು ಮಕ್ಕಳಿಗಾಗಿ ಬರೆದದ್ದು, ಮತ್ತೊಂದು ಮಕ್ಕಳನ್ನು ಕುರಿತು ಬರೆದದ್ದು. ಈ ಎರಡು ಪ್ರಕಾರದ ಸಾಹಿತ್ಯ ಪ್ರತ್ಯೇಕವಾಗಿರಬಹುದು, ಅಥವಾ ಒಂದೇ ಕಡೆ ಸಮಾವೇಶಗೊಳ್ಳಬಹುದು. ‘ಅಮಲನಕಥೆ’ಯಾಗಲೀ, ‘ನನ್ನ ಗೋಪಾಲ’ವಾಗಲಿ ಎರಡನೆಯ ಗುಂಪಿಗೆ ಮಾದರಿಯಾಗಿ ನಿಲ್ಲುತ್ತವೆ. ಅಂದ ಮೇಲೆ ಅವುಗಳಲ್ಲಿ ನಿರೂಪಣೆಗೊಂಡಿರುವ ತತ್ತ್ವಗಳಾಗಲೀ ಆಲೋಚನೆಗಳಾಗಲೀ ಮಕ್ಕಳ ಮಟ್ಟವನ್ನು ಮೀರಿದುವೆಂದು ಹೇಳಲಾಗದು. ಅಷ್ಟೇ ಅಲ್ಲ, ಮಕ್ಕಳ ಬೌದ್ದಿಕ ಮಟ್ಟ ದಲ್ಲಿಯೂ ಅನೇಕ ಸ್ತರಗಳಿವೆಯೆಂಬುದನ್ನು ಮರೆಯಲಾಗದು. ಈ ತತ್ತ್ವಗಳ ಹಿನ್ನೆಲೆಯಲ್ಲಿ ಕುವೆಂಪು ಶಿಶು ಸಾಹಿತ್ಯದ ಅಧ್ಯಯನ ನಡಸುವುದಾದರೆ ಸಾರ್ಥಕತೆ ಸಮನಿಸುತ್ತದೆ.

ಮಕ್ಕಳ ಸಾಹಿತ್ಯ ಮುಖ್ಯವಾಗಿ ಅವರ ಕುತೂಹಲಾಸಕ್ತಿಗಳನ್ನು ಕೆರಳಿಸುವಂತಿರಬೇಕು. ಅವರ ಜ್ಞಾನದಾಹವನ್ನು ತಣಿಸುವಂತಿರಬೇಕು ಮಾತ್ರವಲ್ಲ, ಅದು ಹೆಚ್ಚುವಂತೆಯೂ ಅವಕಾಶ ಕಲ್ಪಿಸಬೇಕು. ಹದಿನಾರು ವರ್ಷದ ತನಕ ಮಗುವಿನ ಅಂಗಾಂಗಗಳು ಮಾತ್ರವಲ್ಲ, ಮಾನಸಿಕ ಹಾಗೂ ಬೌದ್ದಿಕ ಶಕ್ತಿಗಳು ಏಕಪ್ರಕಾರವಾಗಿ, ಅತ್ಯಂತ ತೀವ್ರವಾಗಿ ವಿಕಾಸ ಗೊಳ್ಳುತ್ತಿರುತ್ತವೆ. ಅನಂತರದ ಜೀವನದಲ್ಲಿ ಅಷ್ಟೇ ತೀವ್ರವಾಗಿ ವಿಕಾಸ ಸಾಧ್ಯವಿಲ್ಲ. ಆದ್ದರಿಂದ ವಿಕಾಸ ಸಮಯದಲ್ಲಿ ನೀಡುವ ಪೋಷಕದ್ರವ್ಯಗಳೆಲ್ಲ ಸಾರ್ಥಕವಾಗುತ್ತವೆ. ಶೈಶವದಲ್ಲಿ ಸರ್ವಾಂಗೀಣವಾದ ವಿಕಾಸಕ್ಕೆ ತಕ್ಕ ತಳಹದಿಯನ್ನು ನಿರ್ಮಿಸದಿದ್ದಲ್ಲಿ ಮಗುವಿನ ಭವಿಷ್ಯ ಭವ್ಯವಾಗುವುದಿಲ್ಲ, ಅವನ ವ್ಯಕ್ತಿತ್ವ ಪ್ರಜ್ವಲಿಸುವುದಿಲ್ಲ. ಬೌದ್ದಿಕ ವಿಕಾಸದಂತೆಯೇ ಹೃದಯ ಸಂಸ್ಕಾರ ಹಾಗೂ ಶೀಲ ಸಂವರ್ಧನೆಗೂ ಎಳವೆಯಲ್ಲಿಯೇ ಪೌಷ್ಟಿಕ ಶಕ್ತಿಯನ್ನೊ ದಗಿಸಬೇಕಾಗುತ್ತದೆ. ಅಂದ ಮೇಲೆ ಮಕ್ಕಳ ಸಾಹಿತ್ಯ ರಚನೆಗೆ ಸಮಾಜ ಪೂರ್ಣ ಒತ್ತು ಕೊಡಬೇಕಾಗುತ್ತದೆ, ಕುವೆಂಪು ಶಿಶು ಸಾಹಿತ್ಯ ಈ ನಿಟ್ಟಿನಲ್ಲಿ ದೊಡ್ಡ ಪಿಗ್ಗವನ್ನು ತುಂಬುತ್ತ ದೆನ್ನುವುದರಲ್ಲಿ ಸಂದೇಹವಿಲ್ಲ.

ಪ್ರಕೃತ ವಿಮರ್ಶಾ ಕೃತಿಯಲ್ಲಿ ಐದು ಪ್ರಬಂಧಗಳಿವೆ. ಬಿ.ನಂ. ಚಂದ್ರಯ್ಯನವರು ‘ಮಕ್ಕಳ ಸಾಹಿತ್ಯ’ ಎಂಬ ತಮ್ಮ ಲೇಖನದಲ್ಲಿ ಸಾಧಾರಣ ತತ್ತ್ವ ಲಕ್ಷಣಗಳನ್ನೂ, ಶಿಶು ಸಾಹಿತ್ಯದ ಉಗಮವಿಕಾಸವನ್ನೂ ಸಂಕ್ಷೇಪವಾಗಿ ಉಲ್ಲೇಖಿಸಿದ್ದಾರೆ. ಅಂತರ ರಾಷ್ಟ್ರೀಯ ಮಕ್ಕಳ ವರ್ಷದಲ್ಲಿ ಇಂಥದೊಂದು ಸಿಂಹಾವಲೋಕನದ ಅಗತ್ಯತೆಯನ್ನು ಒತ್ತಿ ಹೇಳಬೇಕಾಗಿಲ್ಲ. ಎರಡನೆಯದು ಕುವೆಂಪು ಅವರ ಮಕ್ಕಳ ನಾಟಕಗಳನ್ನು ಕುರಿತದ್ದು, ನಂಜೇಗೌಡರು ಈ ತಮ್ಮ ಲೇಖನದಲ್ಲಿ, ಮೋಡಣ್ಣನ ತಮ್ಮ ಮತ್ತು ನನ್ನಗೋಪಾಲ ನಾಟಕಗಳ ಕತೆಯನ್ನು ಸಂಗ್ರಹಿಸಿ, ಅವುಗಳ ಹಿಂದಿರುವ ತತ್ತ್ವ ಮತ್ತು ಸಾಂಕೇತಿಕತೆಗಳನ್ನು ವಿವರಿಸಿದ್ದಾರೆ. ಸಚ್ಚಿದಾನಂದಯ್ಯನವರು ಕುವೆಂಪು ಅವರ ಕೆಲವು ಮಕ್ಕಳ ಕವನಗಳನ್ನಾಯ್ದುಕೊಂಡು ವಿವೇಚನೆ ನಡೆಸಿದ್ದಾರೆ. ಸಹಜವಾಗಿಯೇ ಬೊಮ್ಮನಹಳ್ಳಿ ಕಿಂದರಜೋಗಿಯನ್ನು ಕುರಿತು ವಿಮರ್ಶೆ ತುಸು ದೀರ್ಘವಾಗಿದೆ. ಇದು ಪ್ರಧಾನವಾಗಿ ವರ್ಣನಾತ್ಮಕ ವಿಮರ್ಶೆ. ‘ಪೊದೆಯ ಹಕ್ಕಿ ಎದೆಯ ಹಕ್ಕಿ’ ಕವಿತೆಯನ್ನು ಕುರಿತು ಬರೆಯುವಾಗ “ಇದರಲ್ಲಿರುವ ಟುವ್ವಿ, ಟುವ್ವಿ ನಾದ ಮಾಧುರ್ಯ ಮಗುವಿನ ಮನಕ್ಕೆ ತಾಗಬಹುದಾದರೂ ಅದರ ಅಂತರಾಳಕ್ಕೆ ಮಗು ಇಳಿಯಲಾರದು” ಎಂದಿದ್ದಾರೆ. ಈ ಮಾತು ಪಾರ್ಶ್ವಿಕವಾಗಿ ನಿಜ. ಇದನ್ನು ಎಲ್ಲ ಮಕ್ಕಳಿಗೂ ಅನ್ವಯಿಸಲಾಗದು. ಒಂದು ಪಕ್ಷ ಇದು ಯಾರಿಗೂ ಅರ್ಥವಾಗಲಿಲ್ಲವೆಂದೇ ಇಟ್ಟು ಕೊಳ್ಳೊಣ. ಇದು ಅವರ ಸುಪ್ತ ಪ್ರಜ್ಞೆಯಲ್ಲಿ ಹುದುಗಿದ್ದು ಎಂದಾದರೊಂದು ದಿನ ಜಾಗ್ರತ್ ಪ್ರಜ್ಞೆಯಲ್ಲಿ ಮೂಡಬಹುದು. ಶಿಶು ಸಾಹಿತ್ಯದಲ್ಲಿ ಶ್ರದ್ಧೆ ಕಲ್ಪನೆಗಳೆರಡಕ್ಕೂ ಸ್ಥಾನವುಂಟು. ಚಂದ್ರನನ್ನು ದೇವರ ಪೆಪ್ಪರಮೆಂಟೆಂದೇ ಮಗು ನಂಬುತ್ತದೆ. ಅದು ಅವನಿಗೆ ವಾಸ್ತವಾನುಭವ. ಪ್ರಾಣಿ ಪಕ್ಷಿಗಳ ಸಂಭಾಷಣೆಯಲ್ಲಿ ಮಗುವಿಗೆ ಅವಿಶ್ವಾಸವಿಲ್ಲ. ‘ಮೇಘಪುರ’ ಸಂಕಲನದ “ಎಲ್ಲ ಕವನಗಳೂ ಭಾವನೆಯ ದೃಷ್ಟಿಯಿಂದ ಹಾಗೂ ಭಾಷೆಯ ದೃಷ್ಟಿಯಿಂದ ಪ್ರೌಢ ವಾಗಿಯೇ ಇವೆಯೆಂಬುದು ಸ್ಪಷ್ಟ” ಎಂಬ ಈ ವಿಮರ್ಶೆಯನ್ನು ಇಲ್ಲಿಯ ಎಲ್ಲ ಕವಿತೆಗಳಿಗೂ ಅನ್ವಯಿಸುವುದು ಕಷ್ಟವಾಗುತ್ತದೆ. ‘ಮೇಘಪುರ’ ಭಾಷೆಯಲ್ಲಿ ಮಾತ್ರವಲ್ಲ, ಭಾವನೆ ಯಲ್ಲಿಯೂ ಸರಳವಾಗಿದೆ. ಮಕ್ಕಳ ಕಲ್ಪನಾ ಸಾಮರ್ಥ್ಯದ ವಿಕಾಸಕ್ಕೆ ಅದು ಸ್ಫೂರ್ತಿಯ ಸೆಲೆಯಾಗುತ್ತದೆ.

‘ಮಕ್ಕಳ ಸಾಹಿತ್ಯ ಕುವೆಂಪು ಅವರ ದೃಷ್ಟಿಯಲ್ಲಿ’ ಎನ್ನುವುದು ಶಿವರಾಮು ಕಾಡನ ಕುಪ್ಪೆಯವರ ಲೇಖನ. ಕುವೆಂಪು “ಅವರ ಬಹುಪಾಲು ಕವನಗಳು ಹೇಳುವ ತುರ್ತಿನಿಂದಾಗಿ ತಮ್ಮ ಕಾವ್ಯಶಕ್ತಿಯ ಕಾವನ್ನು ಕಳೆದುಕೊಳ್ಳುವುದೂ ಉಂಟು” ಎಂಬ ಇವರ ಈ ವಿಮರ್ಶನ ವಾಕ್ಯ ಮಕ್ಕಳ ಕವಿತೆಗಳ ಲಕ್ಷಣಗಳನ್ನು ಅತ್ಯಂತ ಸರಳಗೊಳಿಸಿದಂತೆ ಕಾಣುತ್ತದೆ. ಈ ಅಭಿಪ್ರಾಯವನ್ನು ಸನಿದರ್ಶನವಾಗಿ ಸಮರ್ಥಿಸಿಕೊಂಡಿದ್ದರೆ ಆ ಮಾತಿನ ಬೆಲೆ ಹೆಚ್ಚುತ್ತಿತ್ತು. ಲೇಖಕರು ತಿಳಿಸುವಂತೆ ಜನ್ಮಾಂತರ ಕಲ್ಪನೆ ಮೂಲತಃ ವೈದಿಕ ಕಲ್ಪನೆಯಲ್ಲ. ಅದು ವೈದಿಕಪೂರ್ವಕಲ್ಪನೆ. ಇದು ಯಾರ ಕಲ್ಪನೆಯೇ ಆಗಿರಲಿ, ಅವೈಜ್ಞಾನಿಕವೆಂದು ಹೇಳುವುದಾದರೂ ಹೇಗೆ? ಪಾಶ್ಚಾತ್ಯ ವಿಜ್ಞಾನಿಗಳ, ಮುಖ್ಯವಾಗಿ ಪರಾ ಮನೋವಿಜ್ಞಾನಿಗಳ ಇತ್ತೀಚಿನ ಸಂಶೋಧನೆಗಳನ್ನು ಸುಳ್ಳೆಂದು ನಿರಾಕರಿಸಲಾದೀತೆ? ನಮಗೆ ಗೊತ್ತಿಲ್ಲದ ವಿಷಯವನ್ನು ಗೊತ್ತೆಂಬಂತೆ ಪ್ರತಿಪಾದಿಸುವುದಾಗಲೀ, ತಿರಸ್ಕರಿಸುವುದಾಗಲೀ ಅವೈಜ್ಞಾನಿಕ ವಾಗುವುದಿಲ್ಲವೇ? ‘ಮಕ್ಕಳ ಸಾಹಿತ್ಯ ಒಂದು ಚಿಂತನೆ’ಯೇ ಇಲ್ಲಿಯ ಕೊನೆಯ ಪ್ರಬಂಧ. ಇದರಲ್ಲಿ ಚಂದ್ರಶೇಖರ್ ಅವರು ಮಕ್ಕಳ ಸಾಹಿತ್ಯದ ಸ್ವರೂಪಲಕ್ಷಣಗಳನ್ನು ಕುರಿತು ಚರ್ಚಿಸಿದ್ದಾರೆ; ಒಂದು ರೀತಿಯಲ್ಲಿ ಇದು ಮೊದಲನೆಯ ಪ್ರಬಂಧಕ್ಕೆ ಪೂರಕವಾಗಿದೆಯೆಂದೇ ಹೇಳಬಹುದು.