ಅವೈಚಾರಿಕತೆ ಮತ್ತು ಅವೈಜ್ಞಾನಿಕತೆ ಅಜ್ಞಾನತಿಮಿರಾವೃತವಾದ ದರಿದ್ರ ರಾಷ್ಟ್ರಗಳಲ್ಲಿ ಕಂಡುಬರುವ ಭಯಂಕರ ಪಿಡುಗುಗಳೆಂಬುದೂ, ಶೋಷಕ ವರ್ಗದ ದುರಾಚಾರಗಳಿಗೆ ಅವು ಮೆಟ್ಟಿಗೆಗಳೆಂಬುದೂ ಸರ್ವವೇದ್ಯ ಸಂಗತಿಯಾಗಿದೆ. ಮೂಢನಂಬಿಕೆಗಳಿಗಂತು ಅವೇ ತವರು. ಮೂಢನಂಬಿಕೆಗಳನ್ನು ಬಿತ್ತುವ ಮೂಲಕ ಬುದ್ದಿವಂತ ಜನ ಶ್ರೀ ಸಾಮಾನ್ಯರನ್ನು ಕೊಳ್ಳೆ ಹೊಡೆದು, ತಮ್ಮ ಡೊಳ್ಳು ಬೆಳೆಸಿಕೊಳ್ಳುತ್ತಾರೆ. ಮಧ್ಯಪ್ರದೇಶದ ಡಕಾಯಿತನೊಬ್ಬ ತಿರುಪತಿಯಲ್ಲಿ ಸತ್ತದ್ದರಿಂದ ವಿಷ್ಣುದೂತರು ಅವನನ್ನು ಸ್ವರ್ಗಕ್ಕೆ ಕರೆದೊಯ್ದರಂತೆ. ಭ್ರಷ್ಟಾ ಚಾರಿಯೂ, ಶಿಷ್ಟಜನಕಂಟಕನೂ, ಸ್ತ್ರೀಲಂಪಟನೂ ಆದ ಶ್ರೀಮಂತನೊಬ್ಪ ವಾರಣಾಶಿಗೆ ಹೋಗಿ, ಪುರೋಹಿತರಿಗೆ ದಕ್ಷಿಣೆ ನೀಡಿ, ಗಂಗಾಜಲವನ್ನು ಕುಡಿದದ್ದರಿಂದ, ಅವನ ಪಾಪಕರ್ಮಗಳೆಲ್ಲ ಭಸ್ಮವಾಗಿ ಸತ್ತನಂತರ ಶಿವಸಾನ್ನಿಧ್ಯವನ್ನು ಸೇರಿದನಂತೆ. ಸ್ಥಳ ಮಹಿಮೆಯನ್ನು ಕುರಿತ ಇಂಥ ಕತೆಗಳು ಪುರಾಣಗಳ ಒಡಲಿನಲ್ಲಿ ಸೇರಿಕೊಂಡು ಮೌಢ್ಯ ಪ್ರಚಾರ ಸಾಧನಗಳಾಗಿ ಪರಿಣಮಿಸಿವೆ. ನಿತ್ಯ ವ್ಯವಹಾರದಲ್ಲಿ ಕಾಣಲಾಗದ, ಸಾಕ್ಷಿ ಪುರಾವೆಗಳಿಂದ ಸಾಧಿಸಲಾಗದ, ವೈಚಾರಿಕತೆಗೆ ಎಟುಕದೆ, ವೈಜ್ಞಾನಿಕ ಪ್ರಯೋಗಗಳಿಗೆ ನಿಲುಕದ, ತರ್ಕಕ್ಕೆ ಸಗ್ಗದ, ಕಾರ್ಯಕಾರಣ ಸಂಬಂಧವಿಲ್ಲದ, ಅನುಭವ ವೇದ್ಯವಾಗದ, ಪ್ರಕೃತಿನಿಯಮ ವಿರುದ್ಧವಾದ ಘಟನೆ ಕ್ರಿಯೆ ಸಂಪ್ರದಾಯಗಳು ಮೂಢನಂಬಿಕೆಗಳ ಕಕ್ಷೆಯೊಳಗೆ ಬರುತ್ತವೆ. ಮಂಗಳವಾರ ಅಶುಭವೆಂದು ಆ ದಿನ ದೂರ ಪ್ರವಾಸ ಕೈಗೊಳ್ಳಕೂಡದೆಂದು, ಶುಭಕಾರ್ಯಗಳನ್ನೆಸಲಾಗದೆಂದು ಅನೇಕ ಜನ ನಂಬಿಕೊಂಡಿದ್ದಾರೆ. ಒಂದೊಂದು ದೇಶದಲ್ಲಿ ಒಂದೊಂದು ವಾರ ಅಶುಭ. ಎಲ್ಲ ಮನುಷ್ಯರೂ ಒಂದೇ, ದೇವನೊಬ್ಬ ಎನ್ನುವ ಪಕ್ಷಕ್ಕೆ ಯವುದೋ ಒಂದು ಸೂತ್ರ ಸರ್ವರಿಗೂ ಏಕ ಪ್ರಕಾರವಾಗಿ ಅನ್ವಯವಾಗಬೇಕಿತ್ತು. ಒಂದು ಗುಂಪಿನ ಯಜಮಾನನ ಮನೆಯಲ್ಲಿ ಮಂಗಳವಾರ ಅನೇಕ ವಿಪತ್ತುಗಳು ಸಂಭವಿಸಿದ್ದಾದರೆ, ಉಳಿದೆಲ್ಲರೂ ಅದನ್ನು ಅಶುಭದಿನವೆಂದು ಪರಿಗಣಿಸುತ್ತಾರೆ. ಅದನ್ನು ಸಾಮೂಹಿಕವಾಗಿ ಒಪ್ಪಿಕೊಂಡಾಗ ಸಂಪ್ರದಾಯವಾಗಿ ಪರಿಣಮಿಸುತ್ತದೆ.

ಮಾನವ ವ್ಯವಹಾರ ಕ್ಷೇತ್ರದಲ್ಲಿ ಅನುಸರಿಸಬಹುದಾದ ಮಾರ್ಗಗಳು ಎರಡು; ಒಂದು, ವೀಕ್ಷಣೆ, ಪ್ರಯೋಗ, ಆಲೋಚನೆ ಮತ್ತು ಶೋಧನೆಯ ಮೂಲಕ ಮತಿಯ ಬೆಳಕಿನಲ್ಲಿ ಸತ್ಯವನ್ನು ಕಂಡುಕೊಂಡು ಅರ್ಥಪೂರ್ಣವಾದ ಜೀವನವನ್ನು ರೂಪಿಸಿಕೊಳ್ಳುವದು; ಎರಡು, ವೈಚಾರಿಕ ಜ್ಯೋತಿಯನ್ನು ಮರೆಮಾಡಿ ಸೇಂದ್ರಿಯಾನುಭವ ಲಬ್ಧವಾದ ಸತ್ಯವನ್ನು ನಿರ್ಲಕ್ಷಿಸಿ, ಸಂಪ್ರದಾಯವನ್ನಪ್ಪಿಕೊಂಡು, ಕುರುಡುನಂಬಿಕೆಯನ್ನು ನೆಮ್ಮಿ ಪಶುಜೀವನವನ್ನು ನಡಸುವುದು. ಮೊದಲನೆಯದು ಅಸಿಧಾರಾವ್ರತದಂತೆ ಕಠಿನವಾದದ್ದು; ಇಡೀ ಬದುಕು ಪ್ರಯೋಗ ಶಾಲೆಯಾಗಬೇಕು! ಮರಹು ಆಲಸ್ಯ ಅಜಾಗರೂಕತೆಗಳಿಗೆ ವಶವಾದದ್ದಾರೆ ಆಲೋಚನೆ ಹೆಳವಾಗುತ್ತದೆ. ಶೋಧನೆ ಕುರುಡಾಗುತ್ತದೆ. ಧೃತಿಮತಿಗಳು ಜತೆಗೂಡಿದರೆ ಮಾತ್ರ ಸತ್ಯ ಸಾಕ್ಷಾತ್ಕಾರ ಸುಲಭವಾಗುತ್ತದೆ. ಎರಡನೆಯ ಮಾರ್ಗವನ್ನನುಸರಿಸುವ ಜನ ಶೋಷಕರಿಗೆ ಬಲಿಪಶುಗಳಾಗುತ್ತಾರೆ. ಸುಳ್ಳೆ ಶೋಷಕರ ಆರಾಧ್ಯ ದೇವತೆ; ವಂಚನೆಯೇ ಅವರು ನಡೆಸುವ ಪೂಜೆ.

ದಾಸ್ಯದ ಶಿಶು ಮೌಢ್ಯ; ಬುದ್ದಿ ವಿವೇಕಗಳ ಶಿಶು ಸತ್ಯ. ಮತಿ ಮಾನವನಿಗೆ ಲಭಿಸಿರುವ ಮಹಾಶಕ್ತಿ. ಅದಕ್ಕೆ ಸಮನಾದದ್ದು ಪ್ರಪಂಚದಲ್ಲಿ ಮತ್ತಾವುದೂ ಇಲ್ಲ. ಮನುಕುಲ ಅದನ್ನು ಮನಗಂಡದ್ದಾದರೆ ಜಗತ್ತು ಬೌದ್ದಿಕ ಸಂಪತ್ತಿನ ತವನಿಧಿಯಾಗುತ್ತದೆಂದು ಅಮೆರಿಕೆಯ ಸುಪ್ರಸಿದ್ಧ ವಿಚಾರವಾದಿ ಆರ್.ಜಿ. ಇಂಗರ್ ಸಾಲ್ ಸಾರುತ್ತಾನೆ. ಎಲ್ಲಿಯತನಕ ಸ್ತ್ರೀಪುರುಷರು ಮಠಗಳಿಗೆ ಅಂಜುತ್ತಾರೆಯೋ, ಎಲ್ಲಿಯತನಕ ಪುರೋಹಿತ ಜನರಲ್ಲಿ ಭಯವನ್ನು ಉತ್ಪಾದಿಸುತ್ತಾನೆಯೋ, ಎಲ್ಲಿಯತನಕ ಜನ ತಮಗರ್ಥವಾಗದ ವಸ್ತುವನ್ನು ಪೂಜಿಸುತ್ತಾರೆಯೋ, ಎಲ್ಲಿಯ ತನಕ ಆತ್ಮಗೌರವವನ್ನು ಕಳೆದುಕೊಳ್ಳುವುದೇ ಗೌರವವೆಂದು ಅವರು ತಿಳಿಯುತ್ತಾರೆಯೋ, ಎಲ್ಲಿಯ ತನಕ ಮಠಗಳಿಗೆ ಅನಿಯಂತ್ರಿತ ಅಧಿಕಾರವಿದೆಯೋ, ಎಲ್ಲಿಯ ತನಕ ಮನುಕುಲ ಪುಸ್ತಕವನ್ನು ಆರಾಧಿಸುತ್ತದೆಯೋ ಅಲ್ಲಿಯತನಕ ಪ್ರಪಂಚ ಮೌಢ್ಯದ ಕೊಳಕು ಚಿಂದಿಯನ್ನು ಹೊದೆದ ಬೌದ್ದಿಕ ದರಿದ್ರರಿಂದ ಮತ್ತು ಅಲೆಮಾರಿಗಳಿಂದ ತುಂಬಿರುತ್ತದೆ,

[1] ಎಂದು ಅವನು ಎಚ್ಚರಿಕೆ ನೀಡುತ್ತಾನೆ.

ವಿಜ್ಞಾನಯುಗದ ಕೊಡುಗೆ ವೈಚಾರಿಕತೆ, ವೈಚಾರಿಕತೆಯ ತಂದೆ ತಾಯಿ ಮತ್ತು ಗುರು ಮತಿ, ಮತಿ ಮಾನವನ ಸರ್ವೋತ್ಕೃಷ್ಟವಾದ ಆಯುಧ. ಮತಿಯೇ ಕತ್ತಲಲ್ಲಿ ದಾರಿ ತೋರುವ ರನ್ನದ ಕೈದೀವಿಗೆ, ಮತಿಯ ದೆಸೆಯಿಂದಲೇ ಪ್ರಾಣಿ ಮಾತ್ರವಾಗುತ್ತಿದ್ದ ನರಜೀವಿ ಮನುಷ್ಯತ್ವಕ್ಕೆ ಏರಿದ್ದಾನೆ. ಮತಿಯ ಕೃಪಾಮಹಿಮೆಯಿಂದಲೇ ನಾವು ಮನುಷ್ಯತ್ವದಿಂದ ದೇವತ್ವಕ್ಕೆ ಏರಬೇಕಾಗಿದೆ.[2] ಮನೋವಿಕಾರದಿಂದ ಲಿಪ್ತವಾಗದ ವಿಶೇಷ ಜ್ಞಾನ ಹಾಗೂ ಸ್ವಾನುಭವಗಳ ಹಿನ್ನೆಲೆಯಲ್ಲಿ ನಡಸುವ ಆಲೋಚನೆ, ತರ್ಕ ಮತ್ತು ವಿಶ್ಲೇಷಣೆ ವೈಚಾರಿಕತೆಯೆನಿಸಿಕೊಳ್ಳುತ್ತದೆ. ವೀಕ್ಷಣೆ, ವಿಶ್ಲೇಷಣೆ ಮತ್ತು ಪ್ರಯೋಗಗಳ ಮೂಲಕ ಹರಿದು ಬಂದ ಕ್ರಿಯೆಯೇ ವೈಜ್ಞಾನಿಕ ದೃಷ್ಟಿಯಾಗುತ್ತದೆ. ಇವೆರಡಕ್ಕೂ ಮತಿಯೇ ಮೂಲ; ಪ್ರಶ್ನೆ ಪರಿಪ್ರಶ್ನೆಗಳೇ ಶೋಧನಾ ಮಾರ್ಗ; ಸತ್ಯ ಸಾಕ್ಷಾತ್ಕಾರವೇ ಅದರ ಫಲ. ವೈಚಾರಿಕ ಬುದ್ದಿ ಮತ್ತು ವೈಜ್ಞಾನಿಕ ದೃಷ್ಟಿಗಳೆರಡೂ ಯಮಳಗಳು ಹಾಗೂ ಪರಸ್ಪರ ಪೂರಕಗಳು.

ಈ ಎರಡೂ ಪ್ರಕಾರದ ಜ್ಞಾನಮಾರ್ಗಗಳಿಗೆ ಕುವೆಂಪು ನೆಹರೂ ಅವರಲ್ಲಿ ಮಾದರಿಯ ನಿದರ್ಶನವನ್ನು ಗುರುತಿಸುತ್ತಾರೆ. ಅವರು ಅವುಗಳ ಸರ್ವೋಚ್ಚ ಪ್ರತಿನಿಧಿಯೆಂದು ಹೆಸರಿಸುತ್ತಾರೆ. ‘ವೈಜ್ಞಾನಿಕ ವಿದ್ಯೆಯನ್ನು ಲೌಕಿಕ ಅಭ್ಯುದಯಗಳಿಗೆ ಪ್ರಯೋಗಿಸಿದ ಮಾತ್ರದಿಂದಲೆ ನಾವು ಹೇಳುತ್ತಿರುವ ವೈಜ್ಞಾನಿಕ ದೃಷ್ಟಿ ಸಂಪನ್ನತೆ ಸಿದ್ಧವಾಗಿ ಬಿಡುವುದಿಲ್ಲ. ಎಷ್ಟೋ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದ ಪ್ರೊಫೆಸರುಗಳೂ ವಿಜ್ಞಾನದ ಪಾಠಗಳನ್ನು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಬೋಧಿಸಿದರೂ ಮನೆಯಿಂದ ಹೊರಡುವಾಗ ರಾಹುಕಾಲ ಗುಳಿಕ ಕಾಲಗಳಿಗಾಗಿ ಕ್ಯಾಲೆಂಡರನ್ನೂ ಪಂಚಾಂಗವನ್ನೂ ನೋಡುವುದನ್ನು ನಾವು ಕಂಡಿಲ್ಲವೆ? ಅವರು ಭೌತಶಾಸ್ತ್ರ ರಸಾಯನಶಾಸ್ತ್ರಗಳ ಭಾರಿ ಸರಕನ್ನು ಸಮರ್ಥವಾಗಿ ಹೊರುವ ಹೇಸರಗತ್ತೆಗಳಾಗುತ್ತಾರೆಯೆ ಹೊರತು ವೈಜ್ಞಾನಿಕ ದೃಷ್ಟಿ ಸಂಪನ್ನರಾದ ವಿಚಾರಮತಿಗಳಾಗುವುದಿಲ್ಲ,[3] ಎಂದು ವಿವರಿಸಿ, ನೆಹರೂ ವೈಜ್ಞಾನಿಕ ದೃಷ್ಟಿಯ ಧೀಮಂತರಾಗಿದ್ದರೆಂದು ಘೋಷಿಸುತ್ತಾರೆ.

ತಮ್ಮ ಘೋಷಣೆಗೆ ಉಪಷ್ಟಂಭಕವಾಗಿ ಕುವೆಂಪು ನೆಹರೂ ಜೀವನದ ಒಂದು ಪ್ರಕರಣವನ್ನು ಉದಾಹರಿಸುತ್ತಾರೆ : ‘ಭಾರತ ದೇಶದ ಮತೀಯ ಮೂರ್ಖ ಸಮುದಾಯವೆಲ್ಲ ಅವಿದ್ಯಾವಂತರಾದ ಸಾಮಾನ್ಯರೂ ವಿಶ್ವವಿದ್ಯಾನಿಲಯಗಳಲ್ಲಿ ಮಹೋನ್ನತ ಪದವಿಗಳನ್ನು ಪಡೆದು ವಿದ್ಯಾಪೀಠಗಳಲ್ಲಿ ಮತ್ತು ಸರಕಾರದ ಸ್ಥಾನಗಳಲ್ಲಿ ರಂಜಿತವಾಗಿರುವವರೂ ಅಷ್ಟಗ್ರಹ ಕೂಟದ ಅಮಂಗಳ ಪರಿಹಾರಾರ್ಥವಾಗಿ, ಅದರಿಂದೊದಗುವ ದುಷ್ಪರಿಣಾಮ ವನ್ನು ತಡೆಗಟ್ಟಲೆಂದು ಹಾಸ್ಯಾಸ್ಪದವಾದ ಮತ್ತು ಮಹಾನಷ್ಟಕರವಾದ ಯಾಗ, ಮಂತ್ರ, ತಂತ್ರ, ಪೂಜೆ ಮೊದಲಾದ ಮೌಢ್ಯಗಳಲ್ಲಿ ನಿರತರಾಗಿದ್ದಾಗ, ಪ್ರವರ್ಧಮಾನತೆಯ ದಾರಿಯಲ್ಲಿ ಇನ್ನೂ ಕುಂಟುತ್ತಾ ಏಳುತ್ತಾ ಬೀಳುತ್ತಾ ಸಾಗುತ್ತಿರುವ ನಮ್ಮ ಬಡದೇಶದಲ್ಲಿ ಮಾಡಲೇಬೇಕಾದ ಸಹಸ್ರಾರು ಅಭ್ಯುದಯದ ಕಾರ್ಯಗಳು ನಮ್ಮ ಉದ್ಯಮಶೀಲತೆಯನ್ನು ಬಾಯಿಬಿಟ್ಟು ಹಾರೈಸುತ್ತಿರುವಾಗ, ಮಾಡುವ ಅವಶ್ಯಕರ್ತವ್ಯಗಳನ್ನೆಲ್ಲ ಮೂಲೆಗೊತ್ತಿ ನಿಲ್ಲಿಸಿ, ಜಗದ್ಗುರುಗಳಿಂದಲೂ ರಾಜ್ಯಪಾಲರುಗಳಿಂದಲೂ ಬೆಂಕಿಗೆ ತುಪ್ಪ ಹೊಯ್ಯಿಸುವ ಅಥವಾ ಜರತಾರಿ ಸೀರೆಗಳಿಗೆ ಘೃತ ಸ್ನಾನ ಮಾಡಿಸಿ ಅವನ್ನು ಹವ್ಯವಾಹನನಿಗೆ ಅರ್ಪಿಸುವ ಮಂಕಿನ ಮಹತ್ಕಾರ್ಯದಲ್ಲಿ ತೊಡಗಿದ್ದಾಗ, ಸಮಗ್ರ ರಾಷ್ಟ್ರದ ಸಾರ್ವಜನಿಕ ಮತ್ತು ರಾಜಕೀಯ ಮುಂದಾಳುಗಳಲ್ಲಿ ಶ್ರೀ ನೆಹರೂ ಒಬ್ಬರೇ, ಒಂಟಿಯಾಗಿ ನಿಂತು, ಪ್ರತಿಭಟನೆಯ ತಮ್ಮ ವಿವೇಕವಾಣಿಯಿಂದ ತಮ್ಮ ವೈಜ್ಞಾನಿಕ ದೃಷ್ಟಿಯನ್ನು ಘೋಷಿಸಲಿಲ್ಲವೆ? ಇತರ ಮತ ಮೂಢ ಮುಂದಾಳುಗಳ ಮತ್ತು ವೈಜ್ಞಾನಿಕ ವೇಷದ ಪ್ರಚ್ಛನ್ನ ಮೂಢ ಜ್ಯೋತಿಷ್ಕರ ನಿಂದನೆ, ಮೂದಲೆ, ಎಚ್ಚರಿಕೆ, ಶಾಪಗಳಿಗೆ ಸೊಪ್ಪುಹಾಕದೆ ತಮ್ಮ ವೈಮಾನಿಕ ಪ್ರಯಾಣಕರ್ತವ್ಯವನ್ನು ಸಹ್ಯಾದ್ರಿ ಪರ್ವತಗಳ ಅಪಾಯಕರ ರಂಗದ ಮೇಲೆಯೂ ನಿಷ್ಠೆಯಿಂದ ಕೈಕೊಂಡು ಪಾಲಿಸಲಿಲ್ಲವೆ?[4] ಈ ಉದಾಹರಣೆಯೇ ಸಾಕು, ವೈಜ್ಞಾನಿಕ ದೃಷ್ಟಿಯ ಹಾಗೂ ವಿಚಾರ ಮತಿಯ ಸ್ವರೂಪಲಕ್ಷಣ ಇತಿಮಿತಿ ವ್ಯಾಪಕತೆಗಳ ನಿರ್ಣಯಕ್ಕೆ, ನೆಹರೂ ಅವರ ಮರಣ ಶಾಸನವೂ ವಿಚಾರ ಬುದ್ದಿಗೆ ಅತ್ಯುತ್ತಮ ನಿದರ್ಶನವೆಂದು ಕುವೆಂಪು ತಿಳಿಸುತ್ತಾರೆ.

ಸ್ಥೂಲದೃಷ್ಟಿಗೆ ನಿಲುಕುವ, ಇಂದ್ರಿಯ ಜನ್ಯ ಅನುಭವಗಳೇ ಸತ್ಯ. ವೈಜ್ಞಾನಿಕ ದೃಷ್ಟಿಯಾಗಲೀ ವಿಚಾರಬುದ್ದಿಯಾಗಲೀ, ಆ ಅನುಭವಗಳ ದೋಣಿಯೊಳಗೆ ಹರಿಯಬೇಕು. ಇಂದ್ರಿಯಗ್ರಾಹ್ಯವಲ್ಲದ ಪ್ರಯೋಗಾರ್ಹವಲ್ಲದ ಅನುಭವಗಳೆಲ್ಲ ಸುಳ್ಳು ಎಂದು ಅಬ್ಬರಿಸುವ ವಿಚಾರವಾದಿಗಳು ಬಹುಸಂಖ್ಯೆಯಲ್ಲಿದ್ದಾರೆ. ಅತೀಂದ್ರಿಯಾನುಭವಗಳಾಗಲೀ, ಅಧ್ಯಾತ್ಮ ಸಾಧನೆಯ ಸಿದ್ದಿಗಳಾಗಲೀ ಅವರ ದೃಷ್ಟಿಯಿಂದ ವಿಚಾರವಾದದ ಕಕ್ಷೆಯಲ್ಲಿ  ಬರುವುದಿಲ್ಲ. ಆತ್ಮ, ಪರಮಾತ್ಮ, ದೇವರು, ಪುನರ್ಜನ್ಮ, ಕರ್ಮ ಮೊದಲಾದ ಭಾವನೆಗಳಿಗೂ, ಆ ಸಂಬಂಧಿಸಿದ ವಾದ ವಿವಾದ ಸಂಶೋಧನೆಗಳಿಗೂ ವಿಚಾರವಾದದಲ್ಲಿ ತಾವಿಲ್ಲ. ಆದ್ದರಿಂದಲೇ ವೈಚಾರಿಕತೆಯನ್ನು ಬೋಧಿಸುವಾಗ ಎಚ್ಚರಿಕೆಯಿಂದ ಇರಬೇಕಾಗುತ್ತದೆಂದು ಕುವೆಂಪು ಸ್ಪಷ್ಟಪಡಿಸುತ್ತಾರೆ. ‘ಅನೇಕರ ಮನಸ್ಸಿನಲ್ಲಿ, ಅದರಲ್ಲಿಯೂ ಯುವಕರ ಮನಸ್ಸಿನಲ್ಲಿ, ವಿಚಾರವಾದ ಅಂದರೆ ನಾಸ್ತಿಕವಾದ ಎಂಬ ಭಾವನೆ ಇದೆ. ಅನೇಕ ಹಿರಿಯರೂ ಕೂಡ ಆ ಭಾವನೆ ಬರುವ ಹಾಗೆಯೇ ಮಾತನಾಡುತ್ತಾರೆ…. ವಿಚಾರವಾದಿಯಾದವನು ಎಂದಿಗೂ ನಾಸ್ತಿಕವಾದಿಯಾಗುವುದಕ್ಕೆ ಸಾಧ್ಯವಿಲ್ಲ. ಏತಕ್ಕೆಂದರೆ ನಾಸ್ತಿಕವಾದ ದೇವರು ಇಲ್ಲ ಎನ್ನುತ್ತದೆ, ಇಲ್ಲ ಎನ್ನುವುದನ್ನು ತಾನು ಕಂಡಿದ್ದೇನೆ ಎಂಬಂತೆ; ಆದರೆ ಇಲ್ಲ ಎನ್ನುವುದು ಒಂದು ಸತ್ಯದ ಕಾಣುವಿಕೆಯಲ್ಲ. ಬರಿಯ ಕಾಣದಿರುವಿಕೆ ಒಂದು ಜ್ಞಾನವಾಗು ವುದಿಲ್ಲ. ನಾಸ್ತಿಕವಾದಿಯ ಪ್ರಕಾರ ದೇವರು ಇಲ್ಲ ಎನ್ನುವುದು ಒಂದು ವಸ್ತುನಿಷ್ಠ ಜ್ಞಾನವಾಗದೆ, ಬರಿಯ ಅಜ್ಞಾನ ಮಾತ್ರ ಆಗುತ್ತದೆ. ಅವನು ಇಲ್ಲ ಎನ್ನುವುದನ್ನು ಇವನು ಹೋಗಿ ನೋಡಿಕೊಂಡು ಬಂದಿದ್ದಾನೆ ಎಂದು ಅರ್ಥವಾಗುತ್ತದೆ. ಅಂತಹ ಹೋಗಿ ನೋಡಿಕೊಂಡು ಬರುವ ಕೆಲಸವೇನನ್ನೂ ಇವನು ಮಾಡಿಲ್ಲ. ಈಶ್ವರ ಸಾಕ್ಷಾತ್ಕಾರ ಮಾಡಿದವ ನಾದರೂ ದೇವರು ಇದ್ದಾನೆ ಅನ್ನುವುದನ್ನು ತಾನು ನೋಡಿದ್ದೇನೆ ಎಂದೇ ಹೇಳುತ್ತಾನೆ. ಆದ್ದರಿಂದ ವಿಚಾರವಾದಿಯಾದವನು ಅಜ್ಞೇಯತಾವಾದಿಯಾಗಬಹುದೇ ಹೊರತು, ನಾಸ್ತಿಕ ಆಗುವುದಕ್ಕೆ ಸಾಧ್ಯವಿಲ್ಲ’.[5]

ಅಂಥ ವಿಚಾರವಾದದಲ್ಲಿ ಸತ್ವವಿಲ್ಲವೆಂದೂ, ಅದು ಸಾಮಾನ್ಯರಿರಲಿ, ತಿಳಿದವರ ಮನಸ್ಸನ್ನು ಸಹ ಒಲಿಸಿಕೊಳ್ಳಲಾರದೆಂದೂ ಕುವೆಂಪು ವಾದಿಸುತ್ತಾರೆ. ವಿಚಾರವಾದ ಬೋಧಿಸುವಾಗ ದೇವರ ಕಲ್ಪನೆಗಾಗಲಿ, ಧರ್ಮದ ಕಲ್ಪನೆಗಾಗಲಿ ವಿರುದ್ಧವಾಗಿ ಹೋದರೆ, ನಮ್ಮ ವಿಚಾರವಾದ ಸೋತು ಹೋಗುತ್ತದೆ. ಯಾವುದು ವೈಜ್ಞಾನಿಕ ಅಲ್ಲವೊ ಅದನ್ನು ವಿಚಾರಿಸಬೇಕು; ವಿಚಾರಿಸಿ ವೈಜ್ಞಾನಿಕವಾದುದನ್ನು ಮಾತ್ರ ಒಪ್ಪಿಕೊಳ್ಳಬೇಕು. ಉಳಿದುದನ್ನು ಮೂಢಾಚಾರವೆಂದು ತಿರಸ್ಕರಿಸಬೇಕು ಎಂಬುದಾಗಿ ಜನರಿಗೆ ವಿವೇಕ ಹೇಳಬೇಕೆಂದು ಅವರು ಅಭಿಪ್ರಾಯ ಪಡುತ್ತಾರೆ. ಕೈಚಳಕ ಕಣ್ಣುಕಟ್ಟುಗಳು ನಿಜವಾದ ಪವಾಡಗಳಲ್ಲವೆಂದೂ, ಭೌತ ಶಕ್ತಿಯಲ್ಲದ ಮಾನಸಿಕ ಶಕ್ತಿಯಿಂದಲೇ ಪದಾರ್ಥಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ಚಲಿಸುವ ಶಕ್ತಿ ಪಡೆಯುತ್ತವೆಂದೂ, ಪಾಶ್ಚಾತ್ಯ ದೇಶಗಳ ಸೈಕಿಕ್ ಸೊಸೈಟಿಗಳಲ್ಲಿ ಅವುಗಳನ್ನು ಕುರಿತ ಸಂಶೋಧನೆ ಲಾಭದಾಯಕವಾಗಿ ಸಾಗುತ್ತಿದೆಯೆಂದೂ ಅವರು ವಿವರಿಸಿ, ‘ನೀವು ಭೌತಶಕ್ತಿ ಅಲ್ಲದ ಬೇರೆ ಶಕ್ತಿಗಳೇ ಇಲ್ಲ ಎಂದು ವಾದ ಮಾಡುವುದಕ್ಕೆ ಹೊರಟರೆ ಈ ಭೌತಶಕ್ತಿಗಳಲ್ಲದ ಬೇರೆ ಶಕ್ತಿಗಳನ್ನು ಪ್ರತ್ಯಕ್ಷವಾಗಿ ನೋಡಿದವರು ನಿಮ್ಮ ವಾದಕ್ಕೆ ಬೆಲೆ ಕೊಡುವುದಿಲ್ಲ’[6] ಎಂದು ಅವರು ಸಂದೇಹಕ್ಕೆಡೆಯಿಲ್ಲ ದಂತೆ ನುಡಿದಿದ್ದಾರೆ.

ವಿಚಾರವಾದವನ್ನು ಕುರಿತ ಹಲವಾರು ಅಭಿಪ್ರಾಯಗಳನ್ನು ತೂಗಿ ನೋಡಿದಾಗ ಅದಕ್ಕೂ ಹಲವು ಬಣ್ಣಗಳಿವೆಯೆಂಬುದು ಸ್ಪಷ್ಟವಾಗುತ್ತದೆ. ನಾಸ್ತಿಕವಾದ ವಿಚಾರವಾದವಲ್ಲವೆಂಬಲ್ಲಿ ಭಿನ್ನಾಭಿಪ್ರಾಯವಿರಲಾರದು. ಚಂದ್ರಮಂಡಲಕ್ಕೆ ಹೋಗಿ ಬಂದ ಗಗಾರಿನ್ ತಾನು ಕಂಡ ದೃಶ್ಯಾನುಭವಗಳನ್ನು ವಿವರಿಸಿದಾಗ, ನಾವು ನೋಡಿಲ್ಲದ ಕಾರಣಕ್ಕಾಗಿ, ಅವು ಸುಳ್ಳೆಂದು ಹೇಳುವುದು ತಪ್ಪಾಗುತ್ತದೆ, ಶಠತನವಾಗುತ್ತದೆ. ಇತಿಹಾಸದ ಪ್ರಾಧ್ಯಾಪಕನೊಬ್ಬ ಐನ್‌ಸ್ಟೀನ್‌ನ ಸಿದ್ಧಾಂತ ತನಗರ್ಥವಾಗಿಲ್ಲವೆಂಬ ಕಾರಣಕ್ಕಾಗಿ ತಿರಸ್ಕರಿಸುವುದಾದರೆ ಬೆಪ್ಪುತನವಾಗುತ್ತದೆ. ಅಂತೇ ಅಧ್ಯಾತ್ಮ ಎಂದರೇನೆಂದು ತಿಳಿಯದ, ಅದರ ಸಾಧನೆಯಲ್ಲಿ ಪ್ರವೇಶವಿಲ್ಲದ, ಅದರ ಓನಾಮವರಿಯದ ಶುದ್ಧ ಲೌಕಿಕ ವ್ಯಕ್ತಿ ಶ್ರೀ ರಾಮಕೃಷ್ಣ ಪರಮಹಂಸರ ಅಥವಾ ಶ್ರೀ ಅರವಿಂದರ ಅತೀಂದ್ರಿಯಾನುಭವಗಳನ್ನು ಅಲ್ಲಗಳೆಯುವಲ್ಲಿ ತನ್ನ ಮೂರ್ಖತನವನ್ನು ಪ್ರದರ್ಶಿಸಿದಂತಾಗುತ್ತದೆ. ಆರನೆಯ ಇಂದ್ರಿಯವೊಂದಿದೆ, ಪಂಚೇಂದ್ರಿಯಗಳಿಗೆ ನಿಲುಕದ ಸತ್ಯ ಅದಕ್ಕೆಟಕುತ್ತದೆ, ಅನೇಕ ವೈಜ್ಞಾನಿಕ ಸತ್ಯಗಳ ಉಗಮಕ್ಕೂ ಅದೇ ಮೂಲಕಾರಣವೆಂಬ ಸಂಗತಿ ಅನೇಕರಿಗೆ ತಿಳಿಯದಾಗಿದೆ. ಗಾಂಧೀಜಿಯ ಅಂತರ್ವಾಣಿಗೆ ಅದೇ ಮೂಲ, ತಾವು ಪ್ರಸ್ತುತಪಡಿಸಿದ ಅನೇಕ ಸತ್ಯಗಳು ದೇವರಿಂದ ಬಂದುವು, ತಾವು ಬರಿಯ ನಿಮಿತ್ತ ಮಾತ್ರ ಎನ್ನುವ ಮಹರ್ಷಿ ಐನ್‌ಸ್ಟೀನ್‌ನ ಮಾತಿನಲ್ಲಿಯೂ ಆರನೆಯ ಇಂದ್ರಿಯದ ಸೂಚನೆಯಿದೆ, ಅದನ್ನೇ ಅವರು ದೇವರು ಎಂಬುದಾಗಿ ಕರೆಯುವಂತಿದೆ. ಈ ದೃಷ್ಟಿಯಿಂದ ಅನೇಕ ತತ್ತ್ವಜ್ಞರು, ಅಧ್ಯಾತ್ಮಸಾಧಕರು ಹಾಗೂ ದಾರ್ಶನಿಕರು ವಿಚಾರವಾದದ ತೆಕ್ಕೆಯಲ್ಲಿ ಸೇರುತ್ತಾರೆ.

ಬುದ್ಧನಂತೆಯೇ ನೆಹರೂ ಸಹ ನಾಸ್ತಿಕನೆಂದು ಬಣ್ಣಿಸುವ ಜನ ಎಲ್ಲೆಲ್ಲೂ ತುಂಬಿಕೊಂಡಿ ದ್ದಾರೆ. ವಿಗ್ರಹ ಪೂಜಕ ನಿರಾಕಾರವಾದಿಯನ್ನು ನಾಸ್ತಿಕನೆಂದು ನಿಂದಿಸುವಲ್ಲಿ ಮೂರ್ಖತನ ವನ್ನೇ ಗುರುತಿಸಬಹುದು. ‘ಜನಿವಾರ ಹಾಕಿಕೊಳ್ಳಳಿಲ್ಲ, ನಾವು ಹಚ್ಚಿಕೊಳ್ಳಲಿಲ್ಲ, ವಿಭೂತಿ ಬಳಿದುಕೊಳ್ಳಲಿಲ್ಲ, ದೇವಾಲಯಗಳಿಗೆ ಆರಾಧನೆಗಾಗಿ ಹೋಗಲಿಲ್ಲ, ತೀರ್ಥಗಳಿಗೆ ಯಾತ್ರೆ ಹೋಗಿ ಮೀಯಲಿಲ್ಲ, ಪುರೋಹಿತರ ಪಾದ ತೊಳೆದು ನೀರು ಕುಡಿಯಲಿಲ್ಲ, ಪೂಜಾರಿಗಳಿಗೆ ಅಡ್ಡಬೀಳಲಿಲ್ಲ, ಅಡ್ಡಪಲ್ಲಕ್ಕಿಯ ಜಗದ್ಗುರುಗಳಿಗೆ ಕೈಮುಗಿದು ಮಾಲೆ ಹಾಕಲಿಲ್ಲ, ರಾಹುಕಾಲ ಗುಳಿಕಕಾಲ ನೋಡಲಿಲ್ಲ, ನಿಮಿತ್ತ ನೋಡಲಿಲ್ಲ, ಪಂಚಾಂಗ ತೆರೆಯಲಿಲ್ಲ ಜ್ಯೋತಿಷ್ಯ ನಂಬಲಿಲ್ಲ, ಗ್ರಹಣಕಾಲದಲ್ಲಿ ತಂಬಟೆ ಬಡಿದು ಸೂರ್ಯನನ್ನು ರಾಹುವಿನಿಂದ ಪಾರು ಮಾಡುವ ಭಾರತೀಯ ಡಾನ್‌ಕ್ವಿಕ್ಸೋಟು ಆಗಲಿಲ್ಲ ಇತ್ಯಾದಿಗಳಿಗಾಗಿ ಅವರನ್ನು ನಾಸ್ತಿಕ ಎಂದರೆ ಅವರಂತಹ ನಾಸ್ತಿಕರೊಡನೆ ನರಕವೂ ಲೇಸು; ಮೂಢ ಮತಾಚಾರದ ಯಾವಾತನೊ ಒಬ್ಬ ಪೂರ್ಣಾನಂದ, ಭ್ರಾಂತ ಜೋತಿಷಿ ಯಾವಾತನೊ ಒಬ್ಬ ಕಾಮಣ್ಣ, ಮತ್ತಾರೊ ಒಬ್ಬ ಮಠಾಧಿಪತಿ ಸೀನಣ್ಣ ಮುಂತಾದವರು ಇರುವ ಸ್ವರ್ಗವೂ ಲೇಸು!

ತ್ಯಾಗದಲ್ಲಿ, ದೇಶಪ್ರೇಮದಲ್ಲಿ, ತತ್ತ್ವ ನಿಷ್ಠೆಯಲ್ಲಿ, ಪರಾನುಕಂಪೆಯಲ್ಲಿ, ಕೆಚ್ಚಿನಲ್ಲಿ, ದೃಢತೆಯಲ್ಲಿ, ಮೇಧಾಶಕ್ತಿಯಲ್ಲಿ, ವಾಗ್ಮಿತೆಯಲ್ಲಿ, ಲೇಖನ ಪ್ರತಿಭೆಯಲ್ಲಿ, ಸಮನ್ವಯ ದೃಷ್ಟಿಯಲ್ಲಿ, ಅಕುಟಿಲ ಭಾವ ಮತ್ತು ಋಜುವರ್ತನೆಗಳಲ್ಲಿ ಶ್ರೀ ನೆಹರೂ ಅಸಾಧಾರಣ ವ್ಯಕ್ತಿಯಾಗಿದ್ದರು. ಆ ಒಂದೊಂದು ಗುಣ ಪ್ರಕಾಶನದ ಹಿಂದೆಯೂ ಅದಕ್ಕೆ ಪೀಠ ಭಿತ್ತಿಯಾಗಿ ಯಾವುದೋ ಒಂದು ಮಹತ್ತಾದ ಆಧ್ಯಾತ್ಮಿಕತೆ ಅದು ಛದ್ಮವೇಷಿಯಾಗಿರಬಹುದು, ಅಥವಾ ಪ್ರಚ್ಛನ್ನವಾಗಿರಲೂಬಹುದು-ಬೆಂಬಲವಾಗಿರದಿದ್ದರೆ ಅವರ ಬದುಕಿನ ಬೆನ್ನು ಮೂಳೆ ಅವರು ಹೊತ್ತಿದ್ದ ಭಾರಕ್ಕೆ ಎಂದೋ ಕುಸಿದು ಬೀಳುತ್ತಿತ್ತು.[7]

‘ಶ್ರೀ ನೆಹರೂ ಮೂಢ ಮತಾಚಾರದ ಮಂಕು ದಿಣ್ಣೆಯಲ್ಲ, ಆಧ್ಯಾತ್ಮ ಮತ್ತು ವಿಜ್ಞಾನಗಳ ಸರ್ವಶ್ರೇಷ್ಠ ನಿಧಿ ಮತ್ತು ಪ್ರತಿನಿಧಿ’ ಎಂದು ನೆಹರೂ ಅವರ ಆಸಾಧಾರಣ ವ್ಯಕ್ತಿತ್ವವನ್ನು ವರ್ಣಿಸುವಲ್ಲಿ ಕುವೆಂಪು ನಾಸ್ತಿಕತೆ, ವೈಚಾರಿಕತೆ, ಅಧ್ಯಾತ್ಮಿಕತೆ ಮತ್ತು ವೈಜ್ಞಾನಿಕ ದೃಷ್ಟಿಗಳ ಸ್ವರೂಪ ಲಕ್ಷಣಗಳನ್ನು ಸಂದೇಹ ದೂರವಾಗಿ ಸ್ಪಷ್ಟಪಡಿಸಿದ್ದಾರೆ.

ವೈಚಾರಿಕತೆ ವ್ಯಕ್ತಿಗಳ ವೇಷ ಭೂಷಣಗಳನ್ನಾಗಲೀ ಗತ್ತು ಗೈರತ್ತುಗಳನ್ನಾಗಲೀ ಅವಲಂಬಿಸಿಲ್ಲ. ವ್ಯವಸ್ಥಿತವಾದ ಆಲೋಚನೆಗೆ ಅದು ಇನ್ನೊಂದು ಹೆಸರು. ಆಲೋಚನೆಯ ಮೂಷೆಯನ್ನು ಪ್ರವೇಶಿಸಿ, ಪರೀಕ್ಷಿತವಾಗದ ಸಂಗತಿಗಳು ಎಷ್ಟೇ ಪ್ರಾಚೀನವಾದುವಾಗಲೀ ಶಿವಮುಖದಿಂದ ಬಂದುವೆಂದು ಆಚಾರ್ಯರು ಘೋಷಿಸಲಿ, ಅವನ್ನು ನಂಬಬಾರದು. ಭಾವಾವೇಶಕ್ಕೊಳಗಾಗದೆ, ಕಲ್ಪನೆಗಳಿಗೆ ಮಾರು ಹೋಗದೆ, ನಂಬಿಕೆಗಳಿಂದ ಕೋಳು ಹೋಗದೆ, ಯಾವುದಾದರೂ ವಸ್ತುವನ್ನೊ, ಸಂಗತಿಯನ್ನೊ ತತ್ತ್ವವನ್ನೊ ತಲಸೃರ್ಶಿಯಾಗಿ ವಸ್ತುನಿಷ್ಠವಾಗಿ ಕುರಿತು ಚಿಂತಿಸುವುದೇ ವೈಚಾರಿಕತೆ. ಒಂದು ಮನೆಗೆ ಅನೇಕ ಮುಖಗಳಿರುವಂತೆ ಪ್ರತಿಯೊಂದು ವಸ್ತು ಅಥವಾ ತತ್ತ್ವಕ್ಕೂ ಅನೇಕ ಮುಖಗಳಿವೆ. ತಾನು ಕಂಡ ಮುಖವೇ ಸರಿ, ತನಗೆ ಕಾಣಿಸದುವೆಲ್ಲ ಸತ್ಯವಲ್ಲ ಎನ್ನುವುದೂ ಭ್ರಮೆಯೇ. ತನ್ನ ಮುಖಕ್ಕೆ ನೇರವಾಗಿರುವುದೊಂದೇ ಸತ್ಯ, ಉಳಿದದ್ದೆಲ್ಲ ಮಿಥ್ಯವೆನ್ನುವುದು ವೈಚಾರಿಕತೆಯ ಲಕ್ಷಣವಲ್ಲ. ಸೇಂದ್ರಿಯಾನುಭವಗಳು ಸಹ ವ್ಯಕ್ತಿಯಿಂದ ವ್ಯಕ್ತಿಗೆ ವ್ಯತ್ಯಾಸವಾಗುತ್ತವೆ. ತನ್ನ ಅನುಭವ ಮಾತ್ರ ಸರಿ; ಉಳಿದವರದು ಸರಿಯಲ್ಲವೆನ್ನುವುದು ತರವಲ್ಲ. ಅಂತೆಯೇ ಸೇಂದ್ರಿಯಾನುಭವಗಳಿಂದ ಭಿನ್ನವಾದ ಅತೀಂದ್ರಿಯಾನುಭವಗಳಿಗೂ ಮಾನ್ಯತೆ ನೀಡಬೇಕಾಗುತ್ತದ. ಅದೇನೇ ಇರಲಿ, ನಿರ್ದುಷ್ಟವಾದ ಚಿಂತನ ಮಂಥನವೇ ಗಹನವಾದ ವಿಶ್ಲೇಷಣೆಯೇ ವೈಚಾರಿಕತೆಯೆಂದು ಸದ್ಯಕ್ಕೆ ಒಪ್ಪಬಹುದಾಗಿದೆ.

ವಿಚಾರವಾದ ಮತ್ತು ವೈಜ್ಞಾನಿಕ ಮನೋಧರ್ಮಗಳು ಕ್ರಿಸ್ತಪೂರ್ವ ಕಾಲದಿಂದಲೂ ಭಾರತೀಯ ಸಂಸ್ಕೃತಿಯನ್ನು ರೂಪಿಸಿಕೊಂಡು ಬಂದಿವೆಯೆಂಬುದರಲ್ಲಿ ಸಂದೇಹವಿಲ್ಲ. ಬುದ್ಧನೇ ಪ್ರಪ್ರಥಮ ವಿಚಾರವಾದಿಯೆಂದು ಸಂಸ್ಕೃತಿಯನ್ನು ಮತ್ತು ಸಮಾಜವನ್ನು ಅವನತಿಯ ಕಡೆಗೆ ನೂಕುತ್ತಿದ್ದ ಪೂರ್ವಾಚಾರ ಸಂಪ್ರದಾಯಗಳ ವಿರುದ್ಧವಾಗಿ ಸಿಡಿದೆದ್ದವ ನೆಂಬ ಸಂಗತಿ ಲೋಕ ವಿಶ್ರುತವಾಗಿದೆ. ಉಪನಿಷತ್ತಿನ ಋಷಿಗಳು, ಲೋಕಾಯತರು, ಚಾರ್ವಾಕರು, ಸಾಂಖ್ಯರು, ವೈಶೇಷಿಕರು, ನೈಯಾಯಿಕರು ಇವರೇ ಮೊದಲಾದ ವಿಚಾರಮತಿಗಳು ಅಲ್ಲಿಂದೀಚೆಗೆ ಆಗಿ ಹೋಗಿದ್ದಾರೆ. ಶಂಕರಾಚಾರ್ಯರು ಈ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಅಲ್ಲಗಳೆಯುವಂತಿಲ್ಲ. ವಿಚಾರವಾದಿಗಳ ಪೈಕಿ ಬುದ್ಧನ ನಂತರ ಬಸವೇಶ್ವರರಿಗೆ ಅಗ್ರಪೂಜೆ ಸಲ್ಲಬೇಕಾಗಿದೆಯೆಂದರೆ ಅತಿಶಯೋಕ್ತಿಯಾಗಲಾರದು. ಇತ್ತೀಚಿನವರಾದ ಸ್ವಾಮಿವಿವೇಕಾನಂದರಂತು ಸ್ವತಂತ್ರಾಲೋಚನೆಯಲ್ಲಿ, ವೈಜ್ಞಾನಿಕ ದೃಷ್ಟಿಯಲ್ಲಿ, ನಿರಂಕುಶ ಮತಿತ್ವದಲ್ಲಿ ಯಾವ ಪಾಶ್ಚಾತ್ಯ ವಿಚಾರವಾದಿಗೂ ನಿಕೃಷ್ಟರೆನ್ನು ವಂತಿಲ್ಲ.

ಹೀಗೆ ಮೇಲಿಂದ ಮೇಲೆ ಈ ನಾಡಿನಲ್ಲಿ ವಿಚಾರವಾದಿಗಳು ಜನ್ಮವೆತ್ತಿದರೂ ವಿಚಾರ ಕ್ರಾಂತಿ ಜನಜೀವನದಲ್ಲಿ ವ್ಯಾಪಕವಾಗಿ ಬೇರೂರುವುದಿಲ್ಲ. ಉಚ್ಚವರ್ಗದ ಸಂಪ್ರದಾಯ ವಾದಿಗಳ ಕುತಂತ್ರ ಕುಯುಕ್ತಿಗಳ ಬಿರುಹೊನಲಿನಲ್ಲಿ ಅದು ಕೊಚ್ಚಿ ಹೋಗುತ್ತದೆ. ಆಜ್ಞಾನ ದಾರಿದ್ರ್ಯಗಳ ಗೊಂಡಾರಣ್ಯದಲ್ಲಿ ತೊಳಲಾಡುತ್ತಿದ್ದ ಶ್ರೀಸಾಮಾನ್ಯರು ಅವರ ಕವಡು ವಿದ್ಯೆಗೆ ಯಜ್ಞಪಶುಗಳಾಗುತ್ತಾರೆ. ಚಾತುರ್ವರ್ಣ್ಯವ್ಯವಸ್ಥೆ ಅವರ ಕೊರಳಿಗೆ ಉರುಳಾಗುತ್ತದೆ. ಅದರಿಂದಾಗಿ ಅವರ ಜೀವನ ನಾರಕೀಯವಾಗುತ್ತದೆ. ಮೊದಲ ಮೂರು ವರ್ಣಗಳ ಜನ ಜತೆಗೂಡಿಕೊಂಡು ಕೆಳಗಿನವರನ್ನು ನಾನಾ ರೀತಿಗಳಿಂದ ಶೋಷಿಸುತ್ತಾರೆ. ಮೊಗಲದೊರೆಗಳು ಮತ್ತು ಆಂಗ್ಲರಾಜಪ್ರತಿನಿಧಿಗಳು ಸಹ ಸ್ವಾರ್ಥಲಾಭದ ದೃಷ್ಟಿಯಿಂದ ಸಾಮಾನ್ಯರ ದುರವಸ್ಥೆಯ ಕಡೆಗೆ ಗಮನ ಹರಿಸುವುದಿಲ್ಲ. ಸ್ವಾತಂತ್ರ್ಯ ಚಳುವಳಿಯ ಪರಿಣಾಮವಾಗಿ ಶೂದ್ರಾತಿ ಶೂದ್ರರ ಸಮಸ್ಯೆಗಳು ಕಣ್ದೆರೆಯುವಂತಾಗುತ್ತದೆ, ಅವರ ಸ್ವಾಭಿಮಾನ ಕೆರಳುವಂತಾಗುತ್ತದೆ. ಇಂಗ್ಲಿಷ್ ಭಾಷೆಯ ಅಧ್ಯಯನದಿಂದಾಗಿ ‘ಐರೋಪ್ಯನಾಗರಿಕತೆಯನ್ನೇ ಪರಿವರ್ತನೆಗೊಳಿಸಿದ ‘ವಿಚಾರವಾದ’ ಮತ್ತು ‘ವೈಜ್ಞಾನಿಕ ದೃಷ್ಟಿ’ ಇವುಗಳಿಂದ ಅಂಧಶ್ರದ್ಧೆ, ಅನುದಾರತ್ವ, ಸಂಕುಚಿತಮನೋಭಾವ, ಸ್ವಾರ್ಥತೆ, ಜಾತೀಯತಾದ್ವೇಷ ಇತ್ಯಾದಿ ರೋಗಗಳಿಂದ ಪೀಡಿತವಾಗಿ, ಸಾಮಾಜಿಕ ರುಜಿನಗಳಿಂದ ಕಲುಷಿತವಾಗಿದ್ದ ನಮ್ಮ ಮತೀಯ ಮನೋಮಂಡಲವನ್ನು ನಿರ್ಮಲಗೊಳಿಸುವ ಒಂದು ಮಹದಾಶೆ ಭಾರತೀಯ ಯುವಜನ ಹೃದಯಗಳಲ್ಲಿ ಬೆಳಗುತ್ತಿತ್ತು. ವಿಚಾರವಾದ ಮತ್ತು ವೈಜ್ಞಾನಿಕ ದೃಷ್ಟಿಯ ಅನುಯಾಯಿ ಗಳಾಗುವ ಹಂಬಲವಿದ್ದ ಭಾರತೀಯ ತರುಣರಲ್ಲಿ ಅನೇಕರಿಗೆ ಬರ್‌ಟ್ರಂಡ್ ರಸೆಲ್ ಮತ್ತು ಆಲ್ಡಸ್ ಹಕ್‌ಸ್ಲಿಯಂತಹರಿಂದ ಪ್ರಾತಿನಿಧ್ಯ ಪಡೆದ ಲೇಖಕರ ಗುಂಪು ಆದರ್ಶಪ್ರಾಯ ವಾದುದಾಗಿತ್ತು.[8] ಆರ್.ಜಿ. ಇಂಗರ್‌ಸಾಲನ ಭಾಷಣ ಲೇಖನಗಳೂ ಸಂಪ್ರದಾಯ ಬದ್ಧ ಭಾರತೀಯರ ಜಡಸ್ವಭಾವವನ್ನು ಅಣಕಿಸುತ್ತವೆ. ಶ್ರೀ ಸಾಮಾನ್ಯನ ಬೆಂಬಲ ಪಡೆಯದ ಸ್ವಾತಂತ್ರ್ಯಾಂದೋಲನ ಹುಸಿಯಾಗುತ್ತದೆಂದು ಮುಂದಾಳುಗಳು ಮನಗಂಡಿರಬೆಕು. ವರ್ಣಾಶ್ರಮ, ಜಾತಿಪದ್ಧತಿ, ಅಸ್ಪೃಶ್ಯತಾದಿ ಸಾಮಾಜಿಕ ದೋಷಗಳನ್ನು ತೊಡೆಯದ ಹೊರತು ನಾಡಿಗೆ ಭವಿಷ್ಯವಿಲ್ಲವೆಂಬ ಸತ್ಯ ಅವರಿಗರಿವಾಗಿರಬೇಕು. ಅವರ ಖಾಸಗಿ ವ್ಯವಹಾರಗಳು ಹೇಗೆಯೇ ಇರಲಿ, ಸಾರ್ವಜನಿಕವಾಗಿ ಸಾಮಾಜಿಕ ಅನ್ಯಾಯಗಳನ್ನು ಉಗ್ರವಾಗಿ ಖಂಡಿಸುತ್ತಾರೆ.

ಇಂಥ ಪರಿಸ್ಥಿತಿಯಲ್ಲಿ ಕುವೆಂಪು ಅವರು ಮಲೆನಾಡಿನ ಮೂಲೆಯ ಹಳ್ಳಿಯೊಂದರಲ್ಲಿ ಜನಿಸಿ, ಸಂಪ್ರದಾಯಸ್ಥರ ಮನೆಯಲ್ಲಿ ಬೆಳೆದರೂ, ಸ್ವಾತಂತ್ರ್ಯ ಸಂಗ್ರಾಮದ ಕಾವು ಅವರ  ಬುದ್ದಿಗಿಳಿಯುವ ಮುಂಚೆ, ರಸೆಲ್, ಇಂಗರ್ ಸಾಲರ ಪರಿಚಯವಾಗದಿದ್ದಾಗಲೆ, ಅವರ ವೈಚಾರಿಕಬುದ್ದಿ ಮೆಲ್ಲಮೆಲ್ಲನೆ ವಿಕಾಸಗೊಳ್ಳುತ್ತದೆ; ಸಂದೇಹ ಪ್ರಶ್ನೆಗಳು ಅವರ ತಾರ್ಕಿಕ ಪ್ರತಿಭೆಯನ್ನು ಕೆರಳಿಸುತ್ತವೆ. ತೀರ್ಥಹಳ್ಳಿಯಲ್ಲಿ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಯಾಗಿದ್ದಾಗಲೇ, ಶಾಲೆ ಮುಗಿದ ನಂತರ ನಿತ್ಯದ ವಾಡಿಕೆಯಂತೆ ಬಾಲಕ ಕುವೆಂಪು ಒಂದು ಜೇಬಿನಲ್ಲಿ ಮಂಡಕ್ಕಿ ಬಾಳೆಹಣ್ಣುಗಳನ್ನು, ಮತ್ತೊಂದು ಜೇಬಿನಲ್ಲಿ ಕಲ್ಲು ಹರಳುಗಳನ್ನು ತುಂಬಿಕೊಂಡು, ಕೈಯಲ್ಲಿ ಕ್ಯಾಟ್ ಬಿಲ್ಲನ್ನು ಹಿಡಿದುಕೊಂಡು, ಕಾಡೊಳಗೆ ಪ್ರವೇಶಿಸಿ, ಹಕ್ಕಿಗಳೊಡನೆ ಆಟವಾಡುತ್ತ, ಬಾಳೆಹಣ್ಣು ಸುಲಿದು, ತೊಳೆಯನ್ನು ಬಾಯಿಗೆಸೆದುಕೊಂಡು, ಸಿಪ್ಪೆಯನ್ನು ಬಿಸಾಡಿ, ಮುಂದೆ ಸಾಗಿ ‘ಎಲ, ಎಲಾ, ಆ ಸಿಪ್ಪೆ ಇಲ್ಲಿ ಬೀಳಬೇಕೆಂದು ದೈವೇಚ್ಛೆ ಇರಬೇಕು, ದೈವೇಚ್ಛೆಗೆ ಭಂಗಬರುವಂತೆ ಮತ್ತೊಂದೆಡೆಗೆ ಅದನ್ನೆಸೆಯುತ್ತೇನೆ’ ಎಂದು ಮನದಂದು, ಎರಡು ಮೂರು ಸಾರಿ ಹಿಂದೆ ಮುಂದೆ ಜಗ್ಗಾಡಿ, ಅಂತ್ಯದಲ್ಲಿ ದೈವೇಚ್ಛೆಗೆ ವಿಜಯವೆಂದು ತೀರ್ಮಾನಿಸಿಕೊಳ್ಳುತ್ತಾನೆ. ಪ್ರಶ್ನೆ ಪರಿಪ್ರಶ್ನೆಗಳ ಸಂಘರ್ಷದಿಂದಾಗಿ ಆ ಎಳೆವಯಸ್ಸಿನಲ್ಲಿಯೇ ಅವರ ವೈಚಾರಿಕ ಶಕ್ತಿ ಪ್ರಖರವಾಗುತ್ತದೆ. ಮುಂದೆ ಮೈಸೂರು ಸೇರಿ, ಗ್ರಂಥಾಲಯದ ಸಂಪತ್ತು ಅವರಿಗೆ ವಶವರ್ತಿಯಾದಾಗಿನಿಂದ, ಪಾಶ್ಚಾತ್ಯ ಹಾಗೂ ಶ್ರೀ ರಾಮಕೃಷ್ಣ ವಿವೇಕಾನಂದ ಸಾಹಿತ್ಯ ಗಂಗೆಯಲ್ಲಿ ಮಿಂದೆದ್ದನಂತರ, ಭಾರತೀಯ ಪಾಶ್ಚಾತ್ಯ ಪ್ರಾಚೀನ ಅರ್ವಾಚೀನ ತತ್ತ್ವಜ್ಞಾನ ಸಂಪತ್ತನ್ನು ವಶಪಡಿಸಿಕೊಂಡ ನಂತರ, ಅವರ ಲೋಕಾನುಭವ ವಿಸ್ತಾರವಾಗುತ್ತಿದ್ದಂತೆ ಶ್ರೀ ರಾಮಕೃಷ್ಣಾಶ್ರಮದ ಗಾಢ ಸಂಪರ್ಕವೊದಗಲಾಗಿ, ತಾತ್ವಿಕ ಪ್ರಜ್ಞೆ ವಿಚಾರಬುದ್ದಿ ಮತ್ತು ವೈಜ್ಞಾನಿಕ ದೃಷ್ಟಿಗಳು ತ್ರಿವೇಣೀ ಸಂಗಮವಾಗಿ ಸಮರಸವಾಗಿ ನಿರ್ದುಷ್ಟವಾಗಿ, ಸರ್ವಾತ್ಮಕವಾಗಿ, ಅವರ ಬದುಕಿನ ಭಾಗವಾಗಿ ಪ್ರವಹಿಸುತ್ತವೆ.

ತಾರುಣ್ಯದಲ್ಲಿಯೇ ಪರಿಪಕ್ವವಾಗಿ ಒಂದು ನೆಲೆಗೆ ನಿಂತ ಅವರ ಬದುಕು ಅವರ ಕೃತಿಗಳಲ್ಲಿ ಸುಸ್ಪಷ್ಟವಾಗಿ ಅಭಿವ್ಯಕ್ತವಾಗುತ್ತದೆ “Foot Prints on the Sand” ಎಂಬ ಗದ್ಯ ಭಾಗವನ್ನು ಓದಿದಾಗ ಅವರಿಗಾದ ಅನುಭವ ಅತೀಂದ್ರಿಯ ಸದೃಶವಾಗಿರುತ್ತದೆ. ಬಾಲಕೃಷ್ಣ ಅವರ ಕೈಯಿಂದ ದೋಸೆ ತಿನ್ನಿಸಿಕೊಂಡ ಪ್ರಸಂಗ ನಡೆದಾಗ ಅವರಿಗೆ ಇಪ್ಪತ್ತು ವರ್ಷ. ಆ ಹೊತ್ತಿಗಾಗಲೇ ಇಂಗ್ಲಿಷ್ ಭಾಷೆಯಲ್ಲಿ ಸಾಕಷ್ಟು ಕವನರಚನೆ ನಡೆದಿರುತ್ತದೆ; ಅಧ್ಯಾತ್ಮ ಸಾಧನೆಯೂ ಮುಂದುವರಿದಿರುತ್ತದೆ. ಸುಂದರವಾದ ಪುಷ್ಪವನ್ನು ದರ್ಶಿಸಿದಾಗ, ಕಮನೀಯ ದೃಶ್ಯವನ್ನು ಕಂಡಾಗ, ಸೂರ್ಯೋದಯ ಸೂರ್ಯಾಸ್ತಗಳನ್ನು ನೋಡಿದಾಗ, ಒಟ್ಟಿನಲ್ಲಿ ನಿಸರ್ಗವನ್ನು ಸೌಂದರ್ಯವನ್ನು ಎದುರುಗೊಂಡಾಗ ಅವರು ತಲ್ಲೀನರಾಗುತ್ತಾರೆ, ಧ್ಯಾನಸ್ಥರಾಗುತ್ತಾರೆ. ಆವಾಗಲೇ ಅವರು ಲೌಕಿಕಾಸಕ್ತಿಗಳ ಕಡೆಗೆ ವಿಮುಖರಾಗಿರುತ್ತಾರೆ. ತಾಯಿ ತೀರಿಕೊಂಡ ಸುದ್ದಿ ತಂತಿಯ ಮೂಲಕ ತಿಳಿದಾಗ ಅವರು ಇಸ್ಪೀಟಾಟದಲ್ಲಿ ತಲ್ಲೀನರಾಗಿರುತ್ತಾರೆ. ಆ ದುರಂತವಾರ್ತೆ ಅವರ ಮನಸ್ಸಿನ ಮೇಲೆ ಏನೇನೂ ಪರಿಣಾಮ ಬೀರುವುದುಲ್ಲ. ಉತ್ತರಕ್ರಿಯೆಯ ಸಮಯದಲ್ಲಿ ಮೌಢ್ಯಮಯ ಸಂಪ್ರದಾಯಕ್ಕೆ ವಿರುದ್ಧವಾಗಿ ಅವರು ವ್ಯಕ್ತಪಡಿಸಿದ ಪ್ರತಿಕ್ರಿಯೆ ಅವರ ವಿಚಾರಪರತೆಗೆ ಅನುಗುಣವಾಗಿದೆ. ‘ಸಾಕ್ಷಾತ್ಕಾರಕ್ಕಾಗಿ, ತತ್ತ್ವದರ್ಶನಕ್ಕಾಗಿ, ಅನಂತಜ್ಞಾನಕ್ಕಾಗಿ ಇನ್ನು ಏನೇನಕ್ಕೊ ಆಗಿ ಹಂಬಲಿಸುತ್ತೇನೆ ನಾನು…. ಬೌದ್ದಿಕವಾಗಿ ನಾನು ಆ ಪೂರ್ಣವನ್ನು ಅರಿಯಲಾರದಿರ ಬಹುದು, ಆದರೂ ನನ್ನ ಅಂತರಂಗ ಶ್ಚೇತನದಲ್ಲಿ ನನಗೆ ಒಂದು ಅನಿರ್ವಚನೀಯ ಮಹಾ ಆನಂದವನ್ನು ನೀಡುತ್ತಿರುತ್ತದೆ. ಅಚಿಂತ್ಯಸ್ವರೂಪದ ಆ ಏನೋ ಒಂದು’[9] ಎಂಬುದಾಗಿ ೮.೧೨.೧೯೨೫ ರಂದು ಅವರು ಬರೆದಿರುವ ದಿನಚರಿಯ ಈ ಭಾಗ ಅವರ ಮುಂದಿನ ಬಾಳಿಗೆ ಕನ್ನಡಿ ಹಿಡಿದಂತಿದೆ. ಶೃಂಗೇರಿಗೆ ಹೋಗಿದ್ದಾಗ ‘ಜಗತ್ತಿನ ತತ್ವಜ್ಞರಲ್ಲಿ ಕಿರೀಟ ಸದೃಶನಾಗಿ ವಿಶ್ವ ವಿಶಾಲವಾದ ಅದ್ವೈತ ತತ್ತ್ವವನ್ನು ಬೋಧಿಸಿದ’ ಶಂಕರಾಚಾರ್ಯರ ಕೇಂದ್ರ ಸ್ಥಾನ ‘ಸಂಕುಚಿತ ಜಾತಿ ಭಾವನೆಯ ಗೂಬೆಗತಿಯಾಗಿದೆ’ ಎಂಬುದನ್ನು ನನೆದು ಪರಿತಪಿಸುತ್ತಾರೆ. ಪೂಜೆ ಪ್ರಸಾದಗಳ ಗೋಜಿಗೆ ಹೋಗದೆ ಶಾಂಕರ ದೇವಾಲಯದ ಪ್ರಾಚೀನ ಪ್ರಶಾಂತಿಯಲ್ಲಿ ಪರಿಚಿಂತನ ಶೀಲರಾಗಿರುತ್ತಾರೆ. ‘ಈ ದೇವಾಲಯಗಳ ಸ್ವರೂಪವೆ ಬದಲಾಗದಿದ್ದರೆ’ ಶ್ರುತ್ಯಂಶದ ವೇದಾಂತ ದರ್ಶನವನ್ನಾಶ್ರಯಿಸಿ’ ಸ್ಮೃತ್ಯಾಂಶದ ಧರ್ಮಶಾಸ್ತ್ರ ಪುರಾಣಾದಿಗಳ ಕಾಲ ದೇಶಾಚಾರಗಳ ಅನಿತ್ಯಾಂಶಗಳನ್ನು ತ್ಯಜಿಸದಿದ್ದರೆ ಹಿಂದೂ ಧರ್ಮದ ವಿನಾಶ ಇಂದಲ್ಲ ನಾಳೆ ಸ್ವತಃಸಿದ್ಧ! ವರ್ಣಾಶ್ರಮ, ಜಾತಿ ಪದ್ಧತಿ, ಚಾತುರ್ವರ್ಣ್ಯ ಮೊದಲಾದ ಮೂಢನಂಬಿಕೆಗಳ ಪುರೋಹಿತಶಾಹಿಯಿಂದ ಸಂಪೂರ್ಣವಾಗಿ ಪಾರಾದಂದೇ ಹಿಂದೂ ಮತವು ವೇದಾಂತ ದರ್ಶನವಾಗಿ, ವಿಶ್ವಧರ್ಮವಾಗಿ, ಸರ್ವಧರ್ಮಗಳನ್ನು ಒಳಕೊಂಡು, ನಿಜವಾದ ವಿಶ್ವಧರ್ಮವಾಗುತ್ತದೆ. ಅಲ್ಲಿಯವರೆಗೂ ಅದು, ಶೂದ್ರ ಪೀಡನಕರವಾಗಿ ಪುರೋಹಿತ ಪೀಡೆಯ ‘ಬ್ರಾಹ್ಮಣ್ಯ’ ಮಾತ್ರವಾಗಿರುತ್ತದೆ; ಮತ್ತು ಬುದ್ದಿಯುಳ್ಳವರಿಗೆ ಜುಗುಪ್ಸೆ ಉಂಟು ಮಾಡುವ ಅಸಹ್ಯವಾಗಿರುತ್ತದೆ’ ಎಂಬ ಭಾವನೆ ಅವರ ಮನಸ್ಸಿನಲ್ಲಿ ಅಂದೇ ೨೪.೪.೧೯೨೭ ರೂವಿಕ್ಕುತ್ತದೆ. ತಾನು ಕನ್ನಡ ಎಂ.ಎ ತರಗತಿಗೆ ಸೇರಿದ ಘಟನೆಯ ಮಹೋದ್ದೇಶ ತತ್ಕಾಲದಲ್ಲಿ ಬುದ್ದಿಗ್ರಾಹ್ಯವಾಗುವಂತಿರಲಿಲ್ಲವೆಂದು ತಿಳಿಸುತ್ತಾರೆ. ಜೋಗಜಲಪಾತಕ್ಕೆ ಹೋಗಿದ್ದಾಗ, ಮೈಲಿಯೆದ್ದು, ಕೆಲವು ದಿನ ಬಾಹ್ಯಪ್ರಜ್ಞೆಯಿಲ್ಲದೆ ಬಿದ್ದಿದ್ದುದನ್ನು ಕುರಿತು ಅವರೇ ‘ಬಹಿರಂಗದ ಈ ರೋಗನಾಟಕದ ತೆರೆಯ ಹಿಂದೆ ಅಂತರಂಗದ ಒಂದು ಯೋಗ ನಾಟಕ’ ನಡೆಯುತ್ತಿತ್ತೆಂದು ಬಣ್ಣಿಸುತ್ತಾರೆ.[10] ದಕ್ಷಿಣೇಶ್ವರದ ಕಾಳಿಕಾಪ್ರಸಾದವನ್ನು ಕೊಟ್ಟಾಗ ಶೀರ್ಣದೇಹಿಯಾಗಿ ನಿತ್ರಾಣಸ್ಥಿತಿಯಲ್ಲಿದ್ದ ಅವರು ಜೈಗುರುಮಹಾರಾಜ್! ಜೈಮಹಾಕಾಳಿ! ಎಂದು ಅದನ್ನು ಹಣೆಗಿಟ್ಟುಕೊಂಡು ಜೋಪಡಿ ಹಾರಿಹೋಗುವಂತೆ ಭಯಂಕರವಾಗಿ ಉಗ್ಗಡಿಸಿದರಂತೆ. ಭೂತದ ಚೇಷ್ಟೆಯೆಂದು ಹಿರಿಯರು ಕೋಳಿಹುಂಜವನ್ನು ಬಲಿಗೊಡಲು ಹವಣಿಸಿದಾಗ, ಅವರಲ್ಲೊಬ್ಬರ ಕಪಾಲಕ್ಕೆ ಪಠೀರನೆ ಹೊಡೆಯುತ್ತಾರೆ. ಆಗಾಗ್ಗೆ ‘ಪುಟ್ಟಪ್ಪ ಸತ್ತುಹೋದ ನಾನು ವಿವೇಕಾನಂದ’ ಎಂದು ಆರ್ಭಟಿಸುತ್ತಾರೆ. ಸಚ್ಚಿದಾನಂದ ಜಗನ್ಮಾತೆಯ ಅರಿವು ಅವರಿಗಾಗುತ್ತದೆ. ಪಾಂಚಜನ್ಯದ ಕವಿತೆಗಳನ್ನು ರಚಿಸುತ್ತಿರುವಾಗಲೇ ಅವರಿಗೆ ಸ್ವಾಮಿ ಶಿವಾನಂದರಿಂದ ದೀಕ್ಷೆದೊರೆಯುತ್ತದೆ.

ಕುವೆಂಪು ಪ್ರಪ್ರಥಮವಾಗಿ ಬೇಲೂರಿಗೆ ಹೋಗಿ ಶಿವಾನಂದರನ್ನು ನೋಡಿದಾಗ ಅವರ ಮನಸ್ಸಿನಲ್ಲಿ ಮೂಡಿದ ಭಾವತರಂಗಗಳನ್ನು ಬರವಣಿಗೆಯಲ್ಲಿ ಹೀಗೆ ವಿವರಿಸುತ್ತಾರೆ; ‘ನಾನು ಸ್ವಲ್ಪ ವಿಮರ್ಶಕ ದೃಷ್ಟಿಯುಳ್ಳವನು. ತರ್ಕಶಾಸ್ತ್ರ ಅಧ್ಯಾತ್ಮಶಾಸ್ತ್ರಗಳನ್ನು ಓದಿದವನಾದುದ ರಿಂದ ಯಾವುದನ್ನೂ ನೋಡದೆ ನುಂಗಿಬಿಡುವುದಿಲ್ಲ; ಎಲ್ಲಿಯಾದರೂ ಗುಳುಮ್ಮನೆ ಹಾರಿಬಿಡುವುದಿಲ್ಲ. ಆದರೆ ನಾನು ಕವಿಯೂ ಅಹುದು, ರಸಯೋಗಿಯೂ ದಿಟ, ಆದ್ದರಿಂದ ತರ್ಕವರಿಯದ ಕೇವಲ ಆತ್ಮಾನುಭವಗಳನ್ನು ಅರಿಯಬಲ್ಲ ಶಕ್ತಿಯಿದೆ…. ಆದ್ದರಿಂದ ನಾನು ಮಹಾಪುರುಷಜಿಯ ಬಳಿಗೆ ಹೋಗುವಾಗ ತತ್ವಜ್ಞನಾಗಿಯೂ ಹೋದೆ’[11] ಮಂತ್ರದೀಕ್ಷೆಯನ್ನು ಪಡೆದನಂತರ ಬಳಿಯಿದ್ದ ಸ್ವಾಮಿಯೊಬ್ಬರು ಬಂದು ಜಪಮಾಲೆಯನ್ನು ಇಟ್ಟುಕೊಳ್ಳುವಂತೆ ಅವರಿಗೆ ತಿಳಿಸುತ್ತಾರೆ. ‘ನನ್ನ ಕವಿಚೇತನಕ್ಕೆ ಅಂತಹ ಸಂಪ್ರದಾಯದ ಸಂಕೋಲೆಯ ಶಿಸ್ತು ಹಿಡಿಸುವುದಿಲ್ಲವಾದ್ದರಿಂದ ಒಲ್ಲೆ’ ಎಂದು ಬಿಡುತ್ತಾರೆ.

ಜೀವನವನಿತುಂ ಜಪವೆನಗಾಗಿರೆ
ಜಪಗಿಪ ಮಣಿಗಿಣಿ ಮಾಲೆಯದೇಕೆ?
ಸುಂದರ ಜಗ ಶಿವ ಮಂದಿರವಾಗಿರೆ
ಅಂಧತೆಕವಿದಿಹ ದೇಗುಲವೇಕೆ?

ಎಂಬ ಕವಿತೆಯ ಮೂಲಕ ತಮ್ಮ ಮನೋಧರ್ಮವನ್ನು ಪ್ರಕಟಿಸಿ, ಕವಿಯ ಸಾಧನ ಮಾರ್ಗವೆ ಬೇರೆ, ಸನ್ಯಾಸಿಯ ಸಾಧನ ಮಾರ್ಗವೇ ಬೇರೆ ಎಂದು ನಿರ್ದಾಕ್ಷಿಣ್ಯವಾಗಿ ನುಡಿಯುತ್ತಾರೆ. ‘ಧ್ರುವತಾರೆ’, ‘ಕುಕ್ಕನಹಳ್ಳಿಯ ಕೆರೆಯಾಚೆ’ ಎಂಬ ಅಧ್ಯಾತ್ಮ ಭಾವನೆಯ ಕವಿತೆಗಳ ಜತೆಜತೆಯಲ್ಲಿಯೇ ‘ರಕ್ತಧುನಿ’, ‘ಬೈಗುಗೆಂಪು’ ಎಂಬ ಸ್ವಾತಂತ್ರ್ಯಾಂದೋಲನಕ್ಕೆ ಸಂಬಂಧಿಸಿದ ಕವನಗಳೂ ಕವಿಲೇಖನಿಯಿಂದ ಸಿಡಿಯುತ್ತವೆ.

ವಸ್ತುವೊಂದರ ನಿಖರವಾದ ಪೂರ್ಣಜ್ಞಾನವೇ ವಿಜ್ಞಾನ. ನೂರಾರೇಕೆ, ಸಹಸ್ರ ಸಹಸ್ರ ವರ್ಷಗಳಿಂದ ಲಕ್ಷೋಪಲಕ್ಷ ವಿಜ್ಞಾನಿಗಳು ವಿಶ್ವರಹಸ್ಯ ಭೇದನಶೋಧಗಳಲ್ಲಿ ತೊಡಗಿದ್ದರೂ ಅದರ ಅಂಚನ್ನು ಸಹ ಮುಟ್ಟಲಾಗಿಲ್ಲ. ಸಹಸ್ರ ವರ್ಷಗಳನಂತರವೂ ಇದೇ ಪರಿಸ್ಥಿತಿ ಉಳಿದಿರುತ್ತದೆ. ದಿನೇ ದಿನೇ ವಿದ್ಯುದ್ವೇಗದಲ್ಲಿ ವಿಶ್ವ ವಿಕಾಸ ಹೊಂದುತ್ತಿದೆ, ವಿಜ್ಞಾನಿ ಬಸವನ ಹುಳುವಿನ ಹಾಗೆ ತೆವಳುತ್ತಿದ್ದಾನೆ. ಇಂಥ ಸನ್ನಿವೇಶದಲ್ಲಿ ತತ್ತ್ವಶಾಸ್ತ್ರದ ಪ್ರಾಮುಖ್ಯವನ್ನು ಅಲ್ಲಗಳೆಯಲಾಗದು. ಸತ್ಯಾನ್ವೇಷಣೆಯೇ ಅದರ ಮುಖ್ಯಗುರಿ. ವಿಜ್ಞಾನದ ಆಲಿಂಗನಕ್ಕೊಳಗಾಗದ, ಮಾನವನನ್ನು ದಿನ ದಿನವೂ ಎದುರಿಸುತ್ತಿರುವ ಅನೇಕಾನೇಕ ಸಮಸ್ಯೆಗಳು ತತ್ವಜ್ಞಾನದ ಮುಖೇನ ತಾತ್ಕಾಲಿಕವಾಗಿಯಾದರೂ ಬಗೆಹರಿಯುತ್ತವೆಂಬುದನ್ನು ಮರೆಯುವಂತಿಲ್ಲ. ವಿಜ್ಞಾನ ತತ್ವಜ್ಞಾನದ ಜಾಡಿನಲ್ಲಿ ಹೆಜ್ಜೆಹಾಕುತ್ತ, ಅದರಿಂದ ಸೂಚಿತವಾಗುವ ಪ್ರಮೇಯಗಳನ್ನು ಪರೀಕ್ಷಿಸುತ್ತ, ತೇರ್ಗಡೆಯಾಗದ್ದನ್ನು ತಿರಸ್ಕರಿಸುತ್ತ, ಜತೆ ಜತೆಯಲ್ಲಿಯೇ ಆಕ್ಷೇತ್ರವನ್ನು ಹಸನುಗೊಳಿಸುತ್ತ ಮುಂದುವರಿಯುತ್ತದೆ. ಮೌಲ್ಯಗಳಿಗೆ ಸಂಬಂಧಿಸಿದ ಪ್ರಶ್ನೆಗಳ ಅಂದರೆ ಸದಸದ್ವಿಚಾರಗಳ ಅಂತಿಮ ನಿರ್ಣಯಕ್ಕಾಗಿ ತತ್ತ್ವಶಾಸ್ತ್ರ ವನ್ನು ಆಶ್ರಯಿಸಬೇಕಾಗುತ್ತದೆಯೇ ಹೊರತು, ವಿಜ್ಞಾನವನ್ನಲ್ಲ[12]ವೆಂಬ, ತತ್ತ್ವಶಾಸ್ತ್ರದ ಗುರಿ ಜಗತ್ತಿನ ಅರಿವೇ ಹೊರತು, ಅದರ ರೂಪಾಂತರವಲ್ಲವೆಂಬ,[13] ಬರ್‌ಟ್ರೆಂಡ್‌ರಸೆಲ್ಲನ ಅಭಿಪ್ರಾಯ ಅಂಗೀಕಾರಾರ್ಹವಾಗಿದೆ. ಭಾವನೆಗಳನ್ನು ತಾರ್ಕಿಕ ಅಣುಗಳೆಂದು ಕರೆಯುವ ಅವನು ತನ್ನನ್ನು ತಾರ್ಕಿಕ ಅಣುವಿಜ್ಞಾನಿಯೆಂದು ಘೋಷಿಸಿಕೊಳ್ಳುತ್ತಾನೆ. ರಸೆಲ್ ಮತ್ತು ಹಕ್‌ಸ್ಲೆ ಮೊದಲಾದ ಜಗತ್ತಿನ ಮಹಾತತ್ತ್ವಜ್ಞಾನಿಗಳ ವರ್ಗಕ್ಕೆ ಕುವೆಂಪು ಸೇರುತ್ತಾರೆಂಬುದಕ್ಕೆ ಅವರ ಅನೇಕ ಕೃತಿಗಳು ಸಾಕ್ಷಿಯಾಗಿವೆ. ಭಾರತೀಯ ಆರ್ಷಸಂಸ್ಕೃತಿಯ ಹಿನ್ನೆಲೆಯಲ್ಲಿ ಬೆಳೆದಿರುವ ಇವರು ಅವರಿಗಿಂತ ತೀರ ಭಿನ್ನವಾಗಿದ್ದಾರೆ. ವಿಶಿಷ್ಟವಾಗಿದ್ದಾರೆಂಬುದನ್ನಂತು ಮರೆಯುವಂತಿಲ್ಲ.

೧೯೩೨ರಷ್ಟು ಹಿಂದೆಯೇ, ಇಡೀ ಸಮಾಜ ಗೊಡ್ಡು ಸಂಪ್ರದಾಯಗಳ ನರಕದಲ್ಲಿ ಮುಲುಕುತ್ತಿದ್ದಾಗಲೇ ಕುವೆಂಪು ಮಲೆನಾಡಿನ ಯುವಕರನ್ನುದ್ದೇಶಿಸಿ ಮಾತಾಡುತ್ತ, ಆರೋಗ್ಯ ಸಾಧನೆಗೆ ಅಡ್ಡ ಬಂದಿದ್ದ ಗೊಡ್ಡು ಆಚಾರಗಳನ್ನೂ ಕುರುಡು ನಂಬುಗೆಗಳನ್ನೂ, ಧರ್ಮದೇವರು ಮತ್ತು ದೇವರ ಪೂಜೆಗಳ ಹೆಸರಿನಲ್ಲಿ ನಡೆಯುತ್ತಿದ್ದ ಅನಾಚಾರಗಳನ್ನೂ ಮದ್ಯಪಾನ ಬಾಲ್ಯವಿವಾಹ ಕೋರ್ಟು ವ್ಯವಹಾರಗಳನ್ನೂ, ಪುಣ್ಯಾಪುಣ್ಯ ಕಾರ್ಯಗಳಿಗಾಗಿ ಮಾಡುತ್ತಿದ್ದ ದುಂದುವೆಚ್ಚವನ್ನೂ ಖಂಡತುಂಡವಾಗಿ ಖಂಡಿಸುತ್ತಾರೆ. ‘ಅಲ್ಲಿಯ ಒಕ್ಕಲಿಗರು ಇತರ ಶೂದ್ರವರ್ಗದವರಂತೆ ಬ್ರಾಹ್ಮಣರೊಡ್ಡಿದ ಮತಾಚಾರದ ಮೌಢ್ಯ ಸಂಕುಲಗಳ ಬೋನಿನೊಳಗೆ ಸಿಕ್ಕಿಬಿದ್ದ ಇಲಿಗಳಾಗಿದ್ದರು. ಆ ಇಲಿಗಳನ್ನು ಬೋನಿನಿಂದ ಬಿಡಿಸಲು ಕ್ರೈಸ್ತಪಾದ್ರಿಗಳು ತಮ್ಮ ರೀತಿಯ ಪ್ರಯತ್ನಗಳನ್ನು ಮಾಡಿ, ಆ ಬೋನಿನಿಂದ ಹೊರಬಂದವುಗಳನ್ನು ಹಿಡಿದು ಹಾಕಿಕೊಳ್ಳಲು; ತಮ್ಮದೇ ಆಗಿರುವ ಬೇರೆ ರೀತಿಯ ಬೋನುಗಳನ್ನು ಒಡ್ಡಿಕೊಂಡಿದ್ದರು… ಎರಡೂ ಪುರೋಹಿತ ಶಾಹಿಗಳೇ! ಎರಡೂ ಪುರೋಹಿತಶಾಹಿಗಳು ಬೋನಿನೊಳಗೆ ಇಲಿಗಳನ್ನಾಕರ್ಷಿಸಲು ಇಡುತ್ತಿದ್ದ ತಿಂಡಿಗಳು ರೂಪದಲ್ಲಿ ಬೇರೆ ಬೇರೆಯಾಗಿದ್ದರೂ ಸ್ವರೂಪದಲ್ಲಿ ಒಂದೇ ತರಹದ್ದಾಗಿದ್ದುವು; ದೇವರು, ಧರ್ಮ, ಪಾಪ, ಪುಣ್ಯ, ಸ್ವರ್ಗ, ನರಕ ಇತ್ಯಾದಿ ಆಧ್ಯಾತ್ಮಿಕವೇಷದ ಮತನಾಮಕ ಗರುಡ ಪುರಾಣದಂತಹ ಸರಕುಗಳು!’[14] ಅವರನ್ನು ಇಂಥ ಮೌಢ್ಯಗಳಿಂದ ಪಾರು ಮಾಡಿ, ‘ವೈಚಾರಿಕತೆಯನ್ನೂ ವೈಜ್ಞಾನಿಕತೆಯನ್ನೂ ಅವರಿಗೆ, ನೀಡಿ ನಿಜವಾದ, ಉಪನಿಷತ್ ಪ್ರಣೀತವಾದ ವೇದಾಂತದ ಅಧ್ಯಾತ್ಮಶ್ರೀಯೆಡೆಗೆ ಅವರನ್ನು ಕರೆದೊಯ್ಯಬೇಕೆಂಬುದೇ ಕುವೆಂಪು ಅವರ ಜೀವನದ ಗುರಿಗಳಲ್ಲೊಂದಾಗುತ್ತದೆ.

೧೯೩೪ರ ಡಿಸೆಂಬರ್ ತಿಂಗಳಲ್ಲಿ ಶ್ರೀರಂಗಪಟ್ಟಣದ ಯುವಜನ ಸಮ್ಮೇಳನದ ಅಧ್ಯಕ್ಷ ಪೀಠದಿಂದ ಅವರು ಮಾಡಿದ ಭಾಷಣ ಇಂದಿಗೂ ನವೋನವವಾಗಿ, ಮುಂದೆಯೂ ದಾರಿದೀಪವಾಗಿ, ಚಿರಂತನ ಮೌಲ್ಯಗಳಿಂದ ಕೂಡಿದುದಾಗಿದೆ. ಆ ಭಾಷಣದಿಂದ ಕೆಲವು ವಾಕ್ಯಗಳನ್ನುದ್ಧರಿಸದಿದ್ದರೆ ಅದರ ಮಹತ್ವವನ್ನು ಮನದಟ್ಟು ಮಾಡಿಕೊಟ್ಟಂತಾಗುವುದಿಲ್ಲ. ‘ಯಾವ ಕಾಲದಲ್ಲಿಯೋ, ಯಾವ ಸಮಾಜಕ್ಕಾಗಿಯೋ ಮನು ಬರೆದಿಟ್ಟ ಕಟ್ಟಳೆಗಳು ಇಂದಿಗೂ ನಮ್ಮನ್ನಾಳಬೇಕೆಂದು ಹೇಳಿದರೆ ತಲೆದೂಗಬೇಡಿ. ನಂಬುಗೆ ಪುರಾತನವಾದ ಮಾತ್ರಕ್ಕೆ ಸತ್ಯವಾದುದೆಂದು ಭಾವಿಸಬೇಡಿ. ವೇದ ಪೂರೈಸಿದ ಗ್ರಂಥವಲ್ಲ. ಅದು ಇಂದಿಗೂ ನಾಳೆಗೂ ಮುಂದುವರಿಯುತ್ತದೆ. ಹಾಗೆಯೇ ಋಷಿಗಳೂ ಆಚಾರ್ಯರೂ ಅಂದಿಗೇ ಪೂರೈಸಿಲ್ಲ, ಕೊನೆಗೊಂಡಿಲ್ಲ. ಹೊಸ ಋಷಿಗಳ ಹೊಸ ವೇದವಾಕ್ಯಗಳನ್ನು ಕಿವಿಗೊಟ್ಟು ಕೇಳಿ’. ಮತ ಭ್ರಾಂತಿಯೂ ಮೌಢ್ಯವೂ ವೈಜ್ಞಾನಿಕ ಪ್ರಗತಿಗೆ ಹೇಗೆ ಮಹಾಕಂಟಕಗಳಾದುವು ಎಂಬುದಕ್ಕೆ ಗೆಲಿಲಿಯೋವಿನ ನಿದರ್ಶನ ನೀಡುತ್ತಾರೆ. ಪರ್ಜನ್ಯ ಜಪಮಾಡಿ ಮಳೆ ಬರಿಸುವುದೆ ಅಹುದಾದರೆ ಪುರೋಹಿತರನ್ನು ಸಹರಾ ಭೂಮಿಗೆ ಕಳಿಸಿ, ಅದನ್ನೇಕೆ ಫಲವತ್ತಾದ ಪ್ರದೇಶವನ್ನಾಗಿ ಪರಿವರ್ತಿಸಬಾರದು ಎಂದು ಪ್ರಶ್ನಿಸುತ್ತಾರೆ. ಅಸ್ಪೃಶ್ಯರು ಪುರೋಹಿತರಿಂದ ಅವಮಾನಿಸಿಕೊಂಡು ದೇವಸ್ಥಾನಕ್ಕೆ ಹೋಗದಿದ್ದರೆ ಏನಾಗುತ್ತದೆ? ಗುಡಿಯ ಕಲ್ಲಿನಲ್ಲಿ ದೇವರಿದ್ದಾನೆ ಎಂಬ ಭ್ರಾಂತಿ ಏಕೆ? ತಮ್ಮ ಸಹೋದರರಿಗಾದ ಅವಮಾನ ತಮ್ಮದೆಂದು ಭಾವಿಸಿ ಸ್ಪೃಶ್ಯ ಯುವಕರು ದೇವಾಲಯಗಳಿಗೆ ಹೋಗುವುದನ್ನೇ ಏಕೆ ಬಿಡಬಾರದು? ಎಂದು ಸವಾಲೆಸೆದು ‘ಅಸ್ಪೃಶ್ಯರನ್ನು ದೇವಾಲಯಗಳಿಗೆ ಪ್ರವೇಶ ಮಾಡಲು ಬಿಡಬೇಕೆಂದು ಹೇಳುತ್ತಿರುವುದು ಉಚ್ಚವರ್ಗದ ಹಿಂದುಗಳ ಪರಿಶುದ್ಧತೆಗಾಗಿ ಮತ್ತು ದೃಷ್ಟಿ ವೈಶಾಲ್ಯ ಸಾಧನೆಗಾಗಿಯೇ ಹೊರತು ಹರಿಜನರ ಮೋಕ್ಷಕ್ಕಾಗಿಯಲ್ಲ’ ಎಂದು ಸಾರುತ್ತಾರೆ. ನಿರಂಕುಶಮತಿಗಳಾಗದ ಹೊರತು ಯುವಕರಿಗೆ ದಿವ್ಯದರ್ಶನದ ಪ್ರಾಪ್ತಿಯಿಲ್ಲವೆಂದೂ, ದಾಸ್ಯಬುದ್ದಿ ತೊಲಗದೆ, ಸ್ವಾವಲಂಬನ ಶಕ್ತಿಯಿಲ್ಲದೆ ನಿರಂಕುಶಮತಿ ಸಾಧ್ಯವಿಲ್ಲವೆಂದೂ ಅವರು ನಿರ್ಣಾಯಕವಾಗಿ ನಿರ್ಬೀಢೆಯಿಂದ ಹೇಳಿ ಬಿಡುತ್ತಾರೆ.

ವಿದ್ಯಾರ್ಥಿ ಸಮೂಹಕ್ಕೆ ಹೋದಾಗಲೆಲ್ಲ ಅವರು ಮತಿ ಗೌರವದ ಅವಶ್ಯಕತೆಯನ್ನೂ ಅದಕ್ಕೂ ಆತ್ಮಗೌರವಕ್ಕೂ ಇರುವ ನಿಕಟವಾದ ಸಂಬಂಧವನ್ನೂ ಒತ್ತಿಹೇಳುತ್ತಾರೆ; ಆತ್ಮಶ್ರೀ ಸಾಧಕನಾದ ವಿದ್ಯಾರ್ಥಿಯೂ ಒಬ್ಬ ತಪಸ್ವಿಯೆಂದೂ, ಮಹದ್ಭಾವಗಳನ್ನೂ ಮಹದಾಲೋ ಚನೆಗಳನ್ನೂ ಮಹದನುಭವಗಳನ್ನಾಗಿ ಪರಿವರ್ತಿಸಿ ಆತ್ಮಶ್ರೀಯನ್ನು ಪ್ರೋಮಾಡುವ ಸಾಧನ ವಿಧಾನವೆ ಧ್ಯಾನವೆಂದೂ[15] ಅವರು ವಿವರಿಸುತ್ತಾರೆ. ನಿರಂಕುಶಮತಿತ್ವ ಮತ್ತು ಧ್ಯಾನಗಳು ಅಧ್ಯಾತ್ಮಿಕತೆ ವೈಚಾರಿಕತೆ ಹಾಗೂ ವೈಜ್ಞಾನಿಕತೆಯ ಮೂಲಭೂತ ತತ್ವತ್ರಯಗಳ ವಿಕಾಸಕ್ಕೆ ಕಾರಣವೆಂದು ವಿಶದಪಡಿಸುತ್ತಾರೆ.

ಅವರ ರೀತಿಯಲ್ಲಿ ವೈಚಾರಿಕತೆಯ ಸ್ವರೂಪವನ್ನು ಗ್ರಹಿಸಿದಾಗ, ಅವರ ನಡೆ ನುಡಿಗಳಲ್ಲಿ ಕವಡನ್ನಾಗಲಿ ಕಂದಕವನ್ನಾಗಲಿ ಗೊಂದಲ ಅನುಮಾನಗಳನ್ನಾಗಲಿ ಎಂಥ ರಂಧ್ರಾನ್ವೇಷಿಯೂ ಕಾಣಲಾರ. ಆದರೆ ತಾವೇ ನಿರ್ಣಯಿಸಿಕೊಂಡ ಅರ್ಥದ, ಕಟ್ಟಿಕೊಂಡ ಪಟ್ಟಿಯ ವೈಚಾರಿಕತೆಯ ಹಿನ್ನೆಲೆಯಲ್ಲಿ ಕುವೆಂಪು ಅವರ ವೈಚಾರಿಕತೆಯನ್ನು ಪರಿಶೀಲಿಸಿದಾಗ ಕೆಲವರಿಗೆ ನಿರಾಶೆಯಾಗಬಹುದು. ಆದರೆ ಕುವೆಂಪು ಅವರ ವೈಚಾರಿಕತೆ ಆಧ್ಯಾತ್ಮಿಕತೆಯ ದೃಢ ತಳಹದಿಯ ಮೇಲೆ ನಿಂತಿದೆಯೆಂಬುದಂತು ಸ್ಪಷ್ಟ. ‘ನಾನು ಪೂಜೆಯ ಸಲುವಾಗಿ ದೇವಸ್ಥಾನಗಳಿಗೆ ಕೂಡ ಹೋಗದೆ ಕಾಲು ಶತಮಾನಕ್ಕಿಂತಲೂ ಹೆಚ್ಚಾಯಿತೆಂದು ತೋರುತ್ತದೆ. ನಾನು ಜಾತಕ ಪಂಚಾಂಗ ಇತ್ಯಾದಿಗಳ ಕಡೆ ಎಂದೂ ಮುಖ ಹಾಕಿದವನಲ್ಲ. ನನಗೆ ರಾಹುಕಾಲ ಗುಳಿಕಕಾಲಗಳ ಅರ್ಥವೂ ಗೊತ್ತಿಲ್ಲ. ಪಿತೃಗಳಿಗೆ ಶ್ರಾದ್ಧ ಮಾಡುವುದು, ಪಿಂಡ ಅರ್ಪಿಸುವುದು ಇತ್ಯಾದಿಗಳನ್ನು ಕೇಳಿ ಬಲ್ಲೆನೇ ಹೊರತು ಮಾಡುವ ಗೋಜಿಗೆ ಹೋದವನಲ್ಲ. ಹಿಂದೂ ಧರ್ಮಕ್ಕೆ ಸೇರಿದವು ಎಂದು ಹೇಳಿಕೊಂಡು ಅನೇಕರು ಆಚರಿಸುವ ಕ್ರಿಯೆಗಳಲ್ಲಿ ಮುಕ್ಕಾಲು ಮೂರು ವೀಸಕ್ಕಿಂತಲೂ ಹೆಚ್ಚು ಪಾಲಿಗೆ ನಾನು ಸ್ವಭಾವತಃ ವಿಮುಖವಾಗಿದ್ದೇನೆಂದು ತೋರುತ್ತದೆ’[16] ಎನ್ನುವ ಅವರ ಮಾತಿನಲ್ಲಿ ಪೂರ್ಣಸತ್ಯವಿದೆಯೆಂಬುದು ಅವರನ್ನು ಹತ್ತಿರದಿಂದ ನೋಡಿದವರಿಗೆ ತಿಳಿಯುತ್ತದೆ. ಅವರ ಮಕ್ಕಳ ಮದುವೆಗಳೆಲ್ಲ ಅಸಾಂಪ್ರ ದಾಯಕವಾಗಿ ನಡೆದಿರುವುದೇ ಈ ಮಾತಿಗೆ ಸಾಕ್ಷಿಯಾಗಿದೆ. ಅವರು ಉಪನಿಷನ್ಮಂತ್ರಗಳನ್ನು ಆಶ್ರಯಿಸುವುದಾಗಲೀ ಶ್ರೀ ರಾಮಕೃಷ್ಣ ಮಂದಿರಕ್ಕೆ ಹೋಗುವುದಾಗಲೀ, ಮಂತ್ರ ಮಾಂಗಲ್ಯದ ಕಲ್ಪನೆಯಾಗಲೀ ಅವರ ವಿಚಾರವಾದಕ್ಕೆ ವಿರುದ್ಧವಾಗಿಲ್ಲವೆಂಬುದು ಪೂರ್ವಗ್ರಹ ಪೀಡಿತರಲ್ಲದ ಅಹಂಕಾರವರ್ಜಿತರಾದ ವಿವೇಕಿಗಳಿಗೆ ಅರ್ಥವಾಗುತ್ತದೆ. ಅವರು ದೇವಾಲಯಗಳ ಅಥವಾ ತೀರ್ಥಯಾತ್ರೆಗಳ ಮಿತ ಪ್ರಯೋಜನವನ್ನು ಅಲ್ಲಗಳೆಯುವುದಿಲ್ಲ ವಾದರೂ, ಸ್ವಾರ್ಥಕ್ಕಾಗಿ, ಪ್ರದರ್ಶನಕ್ಕಾಗಿ, ಶೋಷಣೆಗಾಗಿ ಅವುಗಳನ್ನು ಬಳಸಿಕೊಳ್ಳುವ ವಿನಾಶಕಾರಕ ವಿಧಾನವನ್ನು ಖಂಡಿಸುತ್ತಾರೆ.

ಪೂರ್ವೋಕ್ತ ತತ್ತ್ವತ್ರಯಗಳು ತಮ್ಮ ಬಾಳಿನ ಉಸಿರಾಗಲಾಗಿ, ಬದುಕಿನ ಸಾರಸರ್ವಸ್ವ ವಾಗಲಾಗಿ, ಪರಮ ಚರಮ ಗಂತವ್ಯವಾಗಲಾಗಿ, ಅವರ ಬದುಕಾಗಲಾಗಿ, ಕವನ ಕತೆ ಕಾದಂಬರಿ ಭಾಷಣ ನಾಟಕ ಮಹಾಕಾವ್ಯ, ಎಲ್ಲೆಂದರಲ್ಲಿ ಅಭಿವ್ಯಕ್ತವಾಗುತ್ತವೆ. ಅವರು ಸತ್ಯಾರಾಧಕರಾದ್ದರಿಂದ, ಉಜ್ವಲ ದೇಶಾಭಿಮಾನಿಗಳಾದ್ದರಿಂದ, ನಾಡಿನ ಐಕ್ಯ ಸಾಮಗ್ರ್ಯ ಮತ್ತು ಕ್ಷೇಮಗಳಲ್ಲಿ ಅನವರತ ಆಸಕ್ತಿಯುಳ್ಳವರಾದ್ದರಿಂದ, ಅಜ್ಞಾನ ಮೂಲವಾದ ಮೌಢ್ಯ ದಾರಿದ್ರ್ಯಗಳು ನಿರ್ಮೂಲನವಾಗದೆ ದೇಶದಲ್ಲಿ ಶಾಂತಿ ಸಾಮರಸ್ಯಗಳು ನೆಲೆಗೊಳ್ಳಲಾರವೆಂಬ ಕಟು ಸತ್ಯ ಅವರ ದಾರ್ಶನಿಕ ದೃಷ್ಟಿಗೆ ಹೊಳೆದದ್ದರಿಂದ ಮೌಢ್ಯಖಂಡನೆಗೆ ಕಾವ್ಯಮಾಧ್ಯಮ ವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಾರೆ. ಸಹಸ್ರ ಸಹಸ್ರ ವರ್ಷಗಳಿಂದ ಶ್ರೀ ಸಾಮಾನ್ಯನನ್ನು ಅಜ್ಞಾನದ ಅಂಧಕಾರದಲ್ಲಿರಿಸಿ, ದೇಶವನ್ನು ಪರಕೀಯರಿಗೆ ವಶಪಡಿಸಿ, ಇಂದಿಗೂ ನಾಡಿನ ಭವಿಷ್ಯಕ್ಕೆ ಅಡ್ಡಿಯಾಗಿರುವ ಸಾಮಾಜಿಕ ಅನ್ಯಾಯ ದೋಷಗಳ ಬಗ್ಗೆ ಆತಂಕ ಕಾತರತೆ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸದಿರುವ, ಅವುಗಳ ಕಡೆಗೆ ನಿರ್ಲಕ್ಷ್ಯದಿಂದಿರುವ, ಅಷ್ಟೇ ಅಲ್ಲ, ಗೊಡ್ಡು ಸಂಪ್ರದಾಯಗಳಿಗೆ ಅಂಟಿಕೊಂಡಿರುವ ಲೇಖಕ ಇದ್ದರೂ ಸತ್ತಂತೆಯೇ ಸರಿ; ಅವನ ಸಾಹಿತ್ಯ ಭೂತಕಾಲದ ಗೋರಿಗಳ ಪ್ರತಿಧ್ವನಿಯಾಗುತ್ತದೆ, ಪಿಶಾಚಿಗಳ ಕರ್ಕಶ ಶಬ್ದಸಮೂಹವಾಗುತ್ತದೆ. ಅನ್ಯಾಯ ಅಧರ್ಮಗಳನ್ನು ಕಂಡಾಗ ಕುವೆಂಪು ಅವರ ಮಾತು ಪಾಂಚಜನ್ಯವಾಗುತ್ತದೆ, ಲೇಖನಿ ಖಡ್ಗವಾಗುತ್ತದೆ; ಲೋಕಕಾರುಣ್ಯ ಭೂತದಯಾ ಪಶ್ಚಾತ್ತಾಪಗಳಿಂದ ಪ್ಲಾವಿತವಾದ ಅವರ ಅಂತಃಕರಣ ಸಿಡಿಲಿನ ಪಿಂಡವಾಗುತ್ತದೆ.

ನೂರು ದೇವರನೆಲ್ಲ ನೂಕಾಚೆ ದೂರ
ಭಾರತಾಂಬೆಯೆ ದೇವಿ ನಮಗಿಂದು ಪೂಜಿಸುವ ಬಾರ!
ಶತಮಾನಗಳು ಬರಿಯ ಜಡ ಶಿಲೆಯ ಪೂಜಿಸಾಯ್ತು,
ಪಾವ್ಗಳಿಗೆ ಪಾಲೆರೆದು ಪೋಷಿಸಾಯ್ತು!
ಬಿಸಿಲು ಮಳೆ ಗಾಳಿ ಬೆಂಕಿಯನೆಲ್ಲ ಬೇಡಿಯಾಯ್ತು;
ದಾಸರನು ಪೂಜಿಸಿಯೆ ದಾಸ್ಯವಾಯ್ತು;
ಗುಡಿಯೊಳಗೆ ಕಣ್ ಮುಚ್ಚಿ ಬೆಚ್ಚಗಿರುವರನೆಲ್ಲ
ಭಕ್ತ ರಕ್ತವ ಹೀರಿಕೊಬ್ಬಿಹರನೆಲ್ಲ,
ಗಂಟೆಜಾಗಟೆಗಳಿಂದ ಬಡಿದು, ಕುತ್ತಿಗೆ ಹಿಡಿದು
ಕಡಲಡಿಗೆ ತಳ್ಳಿರೈಶಂಖದಿಂ ನುಡಿದು!

ಈ ಕವಿತೆಯನ್ನೋದಿ, ಅವರ ಧ್ಯಾನ ಪ್ರಾರ್ಥನಾದಿ ಆಧ್ಯಾತ್ಮಿಕ ಸಾಧನೆಗಳನ್ನು ಗಮನಿಸಿದ ಜನ ಅವರಿಗೆ ಸೀಳು ವ್ಯಕ್ತಿತ್ವವನ್ನು ಆರೋಪಿಸುವುದುಂಟು. ಅಂಥವರಿಗೆ ಕಾವ್ಯಾರ್ಥಗ್ರಹಣ ಶಕ್ತಿಯಿಲ್ಲವೆಂದೇ ಹೇಳಬೇಕು. ‘ಜ್ಯೋತಿಯಾದರೂ ತಮೋಲೀಲೆಯಲಿ ಜಡದ ಮುದ್ರೆ’ಯಾಗುತ್ತದೆಂಬ, ಸಾಧನೆಯಿಂದ ಕಲ್ಲಿನಲ್ಲಿಯೂ ಚೈತನ್ಯದಲೀಲೆಯನ್ನು ಕಾಣಬಹುದೆಂಬ ಸತ್ಯದ ಅರಿವು ಕುವೆಂಪು ಅವರಿಗೆ ಇಲ್ಲದಿಲ್ಲ. ಪರಮಹಂಸರಂಥವರಿಗೆ ಭವತಾರಣೀ ವಿಗ್ರಹ ಚಿನ್ಮಯ ಮೂರ್ತಿಯಾಗಿ ತೋರುತ್ತದೆ. ಸಾಧಕನಲ್ಲದೆ, ದುಷ್ಕರ್ಮನಿರತನಾದ, ಶೋಷಕ ಪೂಜಾರಿಯಿಂದಾಗಿ ಗುಡಿಯ ದೇವರು ಬರಿಯ ಕಲ್ಲಾಗದೆ ವಿಶ್ವ ಚೈತನ್ಯದ ಮೂರ್ತಿಯಾಗಲಾರದು, ಅರ್ಚಾವತಾರವಾಗಲಾರದು. ಅವು ಚೈತನ್ಯದ ಮೂರ್ತಿಗಳಾಗಿದ್ದ ಪಕ್ಷದಲ್ಲಿ ಭರತಖಂಡ ಪರಕೀಯರ ಆಕ್ರಮಣಕ್ಕೆ ಗುರಿಯಾಗುತ್ತಿತ್ತೆ?

ಘಜನಿಮಹಮೂದನ ದಂಡಯಾತ್ರೆಯ ಪ್ರಕರಣವೊಂದನ್ನು ಉದಾಹರಿಸಿದರೆ ಸಾಕು, ಪೂಜಾರಿಗಳ ಹಾಗೂ ದೇವರುಗಳ ಬಣ್ಣ ಬಯಲಾಗುತ್ತದೆ. ಅವನ ಪ್ರತಾಪದ ಸಿಡಿಲಿಗೆ ರಾಜಾಸ್ಥಾನದ ರಾಜ್ಯಗಳೆಲ್ಲ ಭೂಗತವಾಗುತ್ತವೆ. ಐಶ್ವರ್ಯದಲ್ಲಿ ಅಲಕಾವತಿ ಅಮರಾವತಿ ಗಳನ್ನು ಮೀರಿಸುತ್ತಿದ್ದ ಗುಜರಾತಿನ ಸೋಮನಾಥ ದೇವಾಲಯ ಅವನ ದೃಷ್ಟಿಗೆ ಬೀಳುತ್ತದೆ. ತಮ್ಮ ಮಂತ್ರ ತಂತ್ರಗಳ ಮಹಿಮೆಯಿಂದಾಗಿ ತಮ್ಮ ಕಡೆಗೆ ಕಣ್ಣು ಹಾಕಲಾರರೆಂದು ಪೂಜಾರಿಗಳು ಹೊಟ್ಟೆ ಬೆಳೆಸಿಕೊಂಡಿರುತ್ತಾರೆ. ತುರುಕರ ಧಾಳಿ ಸನ್ನಿಹಿತವಾದಾಗ

ಒಡನೆಯೆ ಆರ್ಚಕರೆಲ್ಲಾ ಸೇರಿ
ಮಂತ್ರಾಲೋಚನೆ ಮಾಡಿದರು;
ಶಾಸ್ತ್ರವನೆಲ್ಲಾ ಕೇರಿ ತೂರಿ
ಬಹುಸಂಶೋಧನೆ ಮಾಡಿದರು.
ಅಸ್ತ್ರಶಸ್ತ್ರಗಳ ಸೇರಿಸಲಿಲ್ಲ;
ರಣದಾಳುಗಳನು ಕೂಡಿಸಲಿಲ್ಲ.
ಶತ್ರುವಿನಾಶಕ ಮಂತ್ರವನೊಂದನು
ಹಗಲಿರುಳೂ ಹುಡುಕಿದರೆಲ್ಲ!

ಕಡೆಗೆ ಪೂಜಾರಿಯೊಬ್ಬನಿಗೆ ಧ್ರಾಂ ಧ್ರೀಂ ಧ್ರೂಂ ಎಂಬ ಭೀಷಣ ಮಂತ್ರ ಪ್ರತ್ಯಕ್ಷವಾಗುತ್ತದೆ.

ಮಂತ್ರೋಚ್ಚಾರದಿ ಮಂತ್ರಾಕ್ಷತೆಯನು
ಬೀರಿದ ಕೂಡಲೆ ಮುಸಲರು ಚಿತೆಯನು
ಸೇರುವರಯ್ಯ ಸೇರುವರು;
ಸುಮ್ಮನೆ ಚೀರುವರು!

ಕೂಡಲೆ ಯಾಗಕುಂಡವನ್ನು ರಚಿಸುತ್ತಾರೆ; ಅಗ್ನಿದೇವನನ್ನು ಸಂಸ್ಥಾಪನೆಗೈಯುತ್ತಾರೆ; ಮೇಷವನ್ನು ಕೊಂದು, ತಿಂದು ತೇಗುತ್ತಾರೆ. ತುರುಕರು ನುಗ್ಗಿ ಬಂದಾಗ, ಧ್ರಾಂ ಧ್ರೀಂ ಧ್ರೂಂ ಎಂದು ಅರ್ಚಕಹಿಂಡು ತಾರಸ್ವರದಿಂದ ಉಚ್ಚರಿಸುತ್ತಾರೆ; ಶತ್ರುಗಳ ಭಲ್ಲೆಗೆ ಬಲಿಯಾಗುತ್ತಾರೆ; ವಿಗ್ರಹಗಳು ಪುಡಿಪುಡಿಯಾಗುತ್ತವೆ.

ನಶ್ವರ ಕಾಂಚನ ಹೋದರೆ ಹೋಯಿತು!
ಮಂತ್ರದ ಸಾಮರ್ಥ್ಯವು ಸ್ಥಿರವಾಯಿತು!
ಎಂತೆನೆ, ಮಂತ್ರಕೆ ಕುಂದೆಲ್ಲಿ?
ಆ ಖಲಮ್ಲೇಚ್ಛರು ಸತ್ತೇಸತ್ತರು!
ಬಹುಕಾಲಾನಂತರದಲ್ಲಿ[17]!

ಎಂದು ಕವಿ ಕರ್ತವ್ಯಚ್ಯುತರೂ ಜಾತಿಸಂಮೂಢರೂ ಆದ ಪೂಜಾರಿಗಳ ಕುಲವನ್ನು ವಿಡಂಬಿಸುತ್ತಾರೆ.

ದೇಶ ದಾಸ್ಯದ ನರಕದಲ್ಲಿ ಬಿದ್ದು ಒದ್ದಾಡುತ್ತಿರುವಾಗ, ಅದರಿಂದ ಪಾರು ಮಾಡುವ ಹರುವವನ್ನು ನೆನೆಯದೆ ಪುರೋಹಿತರು ಮೌಢ್ಯಪ್ರಸಾರದಲ್ಲಿ ತೊಡಗಿದ್ದುದನ್ನೂ, ಆ ಪ್ರಸಾರಕ್ಕೆ ಗುಡಿಗಳೊಗಿನ ದೇವರುಗಳು ಬೆಂಬಲವಾಗಿದ್ದುದನ್ನೂ, ಗುಡಿಗಳು ಶೋಷಣೆಯ ಕೇಂದ್ರಗಳಾಗಿದ್ದುದನ್ನೂ ಕಂಡು ಕವಿ ರೋಸಿ ಹೋಗಿ ರೋಷಗೊಳ್ಳುತ್ತಾರೆ. ಸ್ವಾತಂತ್ರ್ಯಾಂದೋಳನ ಸಮಯದ ಧಮನಿಧಮನಿಗಳಲ್ಲಿ ದೇಶಾಭಿಮಾನ ಉಕ್ಕಿ ಹರಿಯುವಾಗ ಸಹಜವಾಗಿಯೇ ಅವರು

ಸತ್ತ ಕಲ್ಗಳ ಮುಂದೆ ಅತ್ತು ಕರೆದುದು ಸಾಕು,
ಜೀವದಾತೆಯನಿಂದು ಕೂಗ ಬೇಕು!

ಎಂದು ಚಡಪಡಿಸುತ್ತಾರೆ. ‘ಭಾರತಿಯೆ ನಮಗಿಂದು ಜೀವನದ ದೇವತೆಯು’ ‘ನಾವೆ ದೇವತೆಗಳೈ! ಭಾರತವೆ ಸ್ವರ್ಗವೈ’ ಎಂದು ಉತ್ಸಾಹದಿಂದ ಘೋಷಿಸುತ್ತಾರೆ. ವಿಚಾರವಂತಿಕೆ ಹೇಗೆ ದೇಶಾಭಿಮಾನವಾಗಿ ಪ್ರಕಟವಾಗುತ್ತದೆಂಬುದನ್ನಿಲ್ಲಿ ಗಮನಿಸಬಹುದು.

ಪ್ರಜೆಗಳಿಗೆ ಶಾಸಕರೆಂತು ಪ್ರತಿನಿಧಿಗಳೊ, ದೇವರಿಗಂತು ಪೂಜಾರಿ ಪ್ರತಿನಿಧಿ, ಚುನಾವಣೆ ಮುಗಿದ ನಂತರ ಪ್ರಜೆಗಳೆಂತು ಬಾಯಿ ಮುಚ್ಚಿಕೊಂಡಿರಬೇಕೊ ಅಂತೆಯೇ ಪೂಜಾರಿಯ ನೇಮಕವಾದನಂತರ ದೇವರು ಮಾತಾಡಬಾರದು. ಅವನ ಪರವಾಗಿ ಪೂಜಾರಿಯೇ ಮಾತಾಡುತ್ತಾನೆ; ಅವನೇ ಭಕ್ತರಿಗೆ ವರ ನೀಡುತ್ತಾನೆ; ಶಾಪ ಕೊಡುತ್ತಾನೆ. ನಿಗ್ರಹಾನುಗ್ರಹ ಸಾಮರ್ಥ್ಯ ಅವನಿಗೆ ಲಬ್ಧವಾಗುವುದರಿಂದ ದೇವರು ಅವನ ಬಂದಿಯಾಗುತ್ತಾನೆ.

ದೇವರು ಸೆರೆಯಾಳ್, ದೇಗುಲ ಸೆರೆಮನೆ,
ಕಾವಲು ಪೂಜಾರಿ![18]

ಪೂಜಾರಿ ಇರಿಸಿದ ಕಡೆ, ಇರಿಸಿದಂತೆ ದೇವರಿರಬೇಕು; ಭಕ್ತರನ್ನವನು ನೋಡುವಂತೆಯೂ ಇಲ್ಲ, ಪುರೋಹಿತ ನಿರ್ಮಿಸಿದ ಕಟ್ಟುಪಾಡುಗಳನ್ನು ದೈವದತ್ತವೆಂದೇ ಭಾವಿಸಿ ಚಾಚೂತಪ್ಪದೆ ಭಕ್ತ ಅನುಸರಿಸಬೇಕು. ಹೀಗಾಗಿ ದೇವರು ಅಸ್ವತಂತ್ರ; ತನ್ನ ಹೆಸರಿನಲ್ಲಿ ನಡೆಯುವ ಅನ್ಯಾಯ ಅಧರ್ಮಗಳನ್ನೆಲ್ಲ ಕಣ್ಣು ಮುಚ್ಚಿಕೊಂಡು ಸಹಿಸಿಕೊಳ್ಳಬೇಕು.

ಭಗವಂತನ ನಿಕಟವರ್ತಿ ಎಂದು, ಅವನ ದಳ್ಳಾಳಿ ಎಂದು ಕರೆದುಕೊಳ್ಳುವ ಈ ಪೂಜಾರಿಗೆ ಭಕ್ತಿಯ ಗಂಧವೂ ಇಲ್ಲ, ಮಂತ್ರದ ನಿರ್ಬಂಧವೂ ಇಲ್ಲ. ದೇವರಿಗೆ ಆರತಿ ಬೆಳಗುವಾಗಲೆಲ್ಲ ಅವನ ದೃಷ್ಟಿ ಭಕ್ತರ ಗಂಟಿನ ಮೇಲೆ, ಲಲನೆಯರ ದೇಹಶ್ರೀಯ ಮೇಲೆ ನಾಟಿರುತ್ತದೆ.

ದೇವರ ಗುಡಿ ಎಂಬುವ ಸೆರೆಯಲ್ಲಿ
ಸ್ವಾತಂತ್ರ್ಯದ ಶವಸಂಸ್ಕಾರದ ಪರದೆಯ ಮರೆಯಲ್ಲಿ
ಪೂಜೆಯ ನಕಲಿಯ ಪರಿಹಾಸ್ಯ!

ನಿಜಕ್ಕೂ ಪೂಜೆ ಎಂಬುದು ಹಣ ಕಸಿಯುವ ಒಂದು ಓಜೆ. ಅವನ ಕೊಳಕು ಬಟ್ಟೆಗೆ, ಹರಿಯುವ ಬೆವರಿನ ದುರ್ವಾಸನೆಗೆ, ಸೊಂಟದ ಡಬ್ಬಿಗೆ, ಮೂಗಿನ ತುದಿಯ ಕಾವೇರಿಗೆ ಹೆದರಿ ದೇವರು ಗುಡಿಯಿಂದ ಓಟ ಕೀಳುತ್ತಾನೆ.

ದೇವರ ಗುಡಿಯಲಿ
ಪೂಜಾರಿಯೆ ದಿಟದ ನಿವಾಸಿ!
ದೇವರೆ ಪರದೇಶಿ!

ಕವಿ ಹೇಳಿದರೇನು, ಬಿಟ್ಟರೇನು, ಜನತೆಯಲ್ಲಿ ವಿಚಾರೋದಯವಾಗಿ ಅಜ್ಞಾನ ತೊಲ ಗುವನತಕ ನಿರ್ಘೃಣ ಶೋಷಣೆ ವಂಚನೆಗಳು ಇಂತೆಯೇ ಮುಂದುವರಿಯುತ್ತವೆ.

ಗುಡಿಯೊಳಗಣ ಶಿವನನ್ನು ನೇರವಾಗಿ ಪೂಜಿಸುವ ಅಧಿಕಾರ ಭಕ್ತನಿಗಿಲ್ಲ. ಸಚರಾಚರ ವಸ್ತುಗಳಲ್ಲಿ ಶಿವನನ್ನು ಕಾಣುವ ಯೋಗ್ಯತೆಯಿದ್ದರೂ ಅಸ್ಪೃಶ್ಯನಾದವನು ಗುಡಿಯ ಪರಿಸರಕ್ಕೆ ಕಾಲಿಡಕೂಡದೆಂದು ಸವರ್ಣೀಯರ ಕಟ್ಟಾಜ್ಞೆ. ಇದು ವಿಚಾರವಂತರ ಜ್ಞಾನವೈಖರಿ! ಜಲಗಾರನಂಥ ನಿಜವಾದ ಭಕ್ತ ಶಿವನನ್ನು ಎಲ್ಲೆಡೆಯೂ ಕಾಣುತ್ತಾನೆ.

ಶಿವಗುಡಿಯ ಶಿವನು ಜೋಯಿಸರ ಶಿವನಂತೆ;
ನನ್ನ ಶಿವನೀ ಮಣ್ಣಿನಲ್ಲಿಹನು. ನನ್ನ ಶಿವ
ಕೊಳೆತ ಕಸದೊಳಗಿಹನು. ಕಪ್ಪುರದೊಳಿಲ್ಲ;
ಮಂಗಳಾರತಿಯೊಳಿಲ್ಲ ಹೂಗಳಲಿಲ್ಲ.
ಯಾವೆಡೆಯೊಳಾನಿಹೆನೊ ಅವನಲ್ಲಿಯೇ ಇಹನು[19]

ಇದು ನಿಜವಾದ ವೈಚಾರಿಕ ಮನೋಧರ್ಮ. ಈ ಮನೋಧರ್ಮ ಭಾರತೀಯರ ಬದುಕಿನ ಭಾಗವಾಗಿದ್ದರೆ ಭಾರತ ವಿದೇಶೀಯರ ಆಕ್ರಮಣಕ್ಕೆ ತುತ್ತಾಗುತ್ತಿರಲಿಲ್ಲ; ಇಂದಿಗೂ ಸಂಪತ್ಸಮೃದ್ದಿಯಿಂದ ಮುಂದುವರಿದ ರಾಷ್ಟ್ರಗಳಿಗೆ ಹೆಗಲೆಣೆಯಾಗಿ ಮೆರೆಯಬಹುದಿತ್ತು. ಜಲಗಾರನ ಈ ವಿವೇಕವನ್ನು ರೈತನಲ್ಲಿಯೂ ಕಾಣುವಂತಿಲ್ಲ.

ಶಿವನ ಕಾಣಲು ನೀನು
ಗುಡಿಗೆ ಹೋಗುವೆಯೇನು? ನಿನ್ನ ನೇಗಿಲ ಗೆರೆಯ
ದಿವ್ಯ ದೇವಾಲಯದಿ ಶಿವನ ಕಾಣೆಯ ನೀನು?
ಉಳುವಾಗ, ನೆಡುವಾಗ ಪೂಜೆಮಾಡುವೆ ನೀನು.
ದೇಗಲುದ ಪೂಜಕನು ಬೈಗಿನಲಿ ಬೆಳಕಿನಲಿ
ಪೂಜಿಸಿದರೇನಂತೆ? ನಮ್ಮ ಜೀವವೆ ನಿಚ್ಚ
ಪೂಜೆ. ನಮ್ಮ ಕರ್ಮವೆ ನಿತ್ಯ ಯೋಗ[20]

ವಿಶ್ವಚಿದ್ರೂಪದ ಶಿವನೇ ಜಲಗಾರನ ಮೂಲಕ ಭಾರತಕ್ಕೆ ನೀಡುವ ಶಾಶ್ವತ ಸಂದೇಶವಿದು. ಶತಶತಮಾನಗಳ ದಾಸ್ಯದ ಭಾರದಿಂದ ಕುಸಿದು ಕುಗ್ಗಿರುವ, ಅಸ್ಪೃಶ್ಯತೆಯ ಅವಮಾನದಿಂದ ಲೋಕದ ತಿರಸ್ಕಾರದಿಂದ ಪಶುವಿಗಿಂತ ಕಡೆಯಾಗಿ ಜೀವಚ್ಛವವಾಗಿರುವ ನರಳುದನಿಯಿದು. ಶ್ರೀಮಂತರ ಅಟ್ಟಹಾಸವನ್ನೂ ಪುರೋಹಿತರ ನಿಷ್ಕರುಣಸರ್ವಾಧಿಕಾರ ಮನೋಬಾವವನ್ನೂ ಕಂಡು ಬೆಸತ್ತು, ರೋಸಿ ಹೋದ ಶಿವನೇ ಜಲಗಾರನ ವಾಣಿಯ ಮೂಲಕ ಅವತರಿಸಿ ಲೋಕಕ್ಕೆ ಮುನ್ನೆಚ್ಚರಿಕೆಯನ್ನೂ ಮುಂದಾಗುವುದನ್ನೂ ಪ್ರಕಟಪಡಿಸುವಲ್ಲಿ ವಿಶೇಷೌಚಿತ್ಯ ವಿದೆಯೆಂದೇ ಹೇಳಬಹುದು.

ಕೆಲವು ದೇವಾಲಯಗಳ ಹುಂಡಿಗೆ ಬಂದು ಬೀಳುತ್ತಿರುವ, ಅಂತೆಯೇ ಅಂಚೆಯ ಮುಖಾಂತರ ಹರಕೆ ಮುಡಿಪುಗಳ ರೂಪದಲ್ಲಿ ಸಂಗ್ರಹವಾಗುತ್ತಿರುವ ಹಣದ ಮೊತ್ತವನ್ನು ನೋಡಿದಾಗ ದೇವರು ಸಹ ಬಡಜನರ ರಕ್ತವನ್ನು ಹೀರುವ ಜಿಗಣೆಯೆಂದೂ, ಕಪ್ಪು ಹಣವನ್ನು ಶೇಖರಿಸುವ ಕಾಳಸಂತೆಕೋರನೆಂದೂ ಭ್ರಮೆಯುಂಟಾಗುತ್ತದೆ. ಪ್ರಾಯಶಃ ಅಂಥ ದೇವರ ಬಗ್ಗೆ ಅವಿದ್ಯಾವಂತನಿಗೂ ಅವಿಶ್ವಾಸ ಮೂಡಿದರೆ ಆಶ್ಚರ್ಯವಾಗದು. ‘ಸಾಲಮಾಡಿ ಯಾದರೂ ತಿರುಪತಿ ವೆಂಕಟರಮಣನ ಕಿರೀಟಕ್ಕೆ ಎರಡು ಕೋಟಿ ರೂಪಾಯಿಗಳದ್ದೇನೊ ವಜ್ರದ ಕಿರೀಟ ಮಾಡಿಸಿದ್ದಾರಂತೆ. ಅದೇನೋ ಪಾದುಕೆಗಳಂತೆ. ಅದೆಷ್ಟೋ ಲಕ್ಷ ರೂಪಾಯಿನದ್ದು ಪಾದುಕೆ ಮಾಡಿಸಿದ್ದಾರಂತೆ…. ಅದರ ಬದಲು ಸುತ್ತಮುತ್ತ ಇದ್ದ ಹಳ್ಳಿಗಳಲ್ಲಿ ಬಾವಿಗಳನ್ನು ತೋಡಿಸಬಾರದಿತ್ತೇಕೆ?’[21] ದೇವರಿಗೆ ವಜ್ರವೈಢೂರ್ಯ ಯಾವುದೂ ಬೇಡ. ಅವನ ಹೆಸರಿನಲ್ಲಿ ನಡೆಯುತ್ತಿರುವ ಸುಲಿಗೆ ನಿಂತಷ್ಟೂ ಸಮಾಜಕ್ಕೆ ಕ್ಷೇಮ, ಬಡವರಿಗೆ ಶುಭ.

ಪುರೋಹಿತ ಎಲ್ಲಿಯೇ ಇರಲಿ, ಯಾವ ಜನಾಂಗದವನೇ ಆಗಿರಲಿ, ಯಾವ ವೇಷವನ್ನೆ ತೊಟ್ಟಿರಲಿ, ಯಾವ ಭಾಷೆಯನ್ನೆ ಬಳಸುತ್ತಿರಲಿ, ಅವನು ವೈಚಾರಿಕತೆಯ ವಿರೋಧಿಯೆಂಬು ದಂತು ಸತ್ಯ. ವಿಜ್ಞಾನಿಗಳನ್ನೂ ವಿಚಾರವಂತರನ್ನೂ ಮತ್ತೆ ಮತ್ತೆ ವಿಚಾರಿಸಿಕೊಳ್ಳುತ್ತ ಅಜ್ಞಾನ ಮೌಢ್ಯ ಪ್ರಸಾರದ ಮೂಲಕ, ದೇಶದ ಬಹುಭಾಗ ಜನತೆಯನ್ನು ಅಜ್ಞಾನಕೂಪದಲ್ಲಿ ಸೆರೆಗೈದು, ವಿಜ್ಞಾನದ ಜ್ಯೋತಿ ಅವರಿಗೆ ಮುಟ್ಟದಂತೆ ಜಾಗೃತನಾಗಿರುತ್ತ ಅವರಿಂದ ನಿತ್ಯ ಕೈಂಕರ್ಯವನ್ನು ಪಡೆಯುತ್ತ ತನಗೆದುರಾದವರನ್ನು ನಿರ್ನಾಮ ಗೈಯುತ್ತ ಭಗವಂತನ ಅವತಾರವೆಂಬಂತೆ, ನಿಗ್ರಹಾನುಗ್ರಹ ಸಮರ್ಥನಂತೆ ತಾನೇ ತಾನಾಗಿ ಮೆರೆಯುತ್ತಾನೆ. ಅವನೇ ಮನುಕುಲದ ಮನು, ದೊರೆಗಳ ದೊರೆ, ಸಂತರಲ್ಲಿ ಸಂತ, ದಾಸರಲ್ಲಿ ದಾಸ, ದೇವರ ದೇವ. ವರ್ಣಾಶ್ರಮ ಚಾತುರ್ವಣ್ಯ ಜಾತಿ ಭೇದಗಳನ್ನು ತಾನೇ ಸೃಷ್ಟಿಸಿ, ಭಗವಂತನ ಹೆಸರಿಗೆ ದಾಖಲೆಮಾಡುವವನು ಅವನೇ; ಧರ್ಮಶಾಸ್ತ್ರಗಳನ್ನು ರಚಿಸಿ ಭಗವಂತನ ಮುಖದಿಂದ ಉದ್ಭವಿಸಿದುವೆಂದು ಕತೆ ಕಟ್ಟಿ ಸಾಮಾನ್ಯರನ್ನು ಮೂಕಗೊಳಿಸುವವನು ಅವನೇ; ಪಟಿಂಗ ಪಾಳೆಯಗಾರರನ್ನು ಸಿಂಹಾಸನಕ್ಕೇರಿಸಿ, ರಾಜನೆಂದು ನಾಮಕರಣಮಾಡಿ, ಅನೇಕಾನೇಕ ಬಿರುದುಗಳನ್ನು ಹೊರಿಸಿ, ಅವನೇ ಪ್ರತ್ಯಕ್ಷ ದೇವರೆಂದು ಘೋಷಿಸಿ, ತಾನೇ ರಚಿಸಿದ ಕಾನೂನು ರಕ್ಷಣೆಗೆ ಅವನನ್ನೆ ಹೊಣೆಮಾಡಿ, ಅವನು ತನ್ನ ಮೇಲೆ ಎಗರಿ ಬಿದ್ದಾಗ ಮತ್ತೊಬ್ಬನನ್ನು ಅವನ ಮೇಲೆತ್ತಿ ಕಟ್ಟಿ ಅವರಿಬ್ಬರನ್ನೂ ಹೆಸರಿಲ್ಲದಂತೆ ಅಳಿಸಿ ವಿಧೇಯನಾದ ಮೂರನೆಯವನನ್ನು ತಂದು ಪಟ್ಟಕಟ್ಟಿ, ಅವನ ಮೂಲಕ ರಾಜ್ಯವಾಳುವವನು, ದೇಶದ ಹಣೆಬರಹವನ್ನು ತಿದ್ದುವವನೂ ಅವನೆ. ದೊರೆಯ ಪಟ್ಟಾಭಿಷೇಕಕ್ಕೆ ಅರಮನೆಯ ಶುಭಾಶುಭ ಕರ್ಮಗಳಿಗೆ ತಿಥಿ ತಿದ್ದುವನು ಅವನು; ಮಂತ್ರಿತ್ವ ವಹಿಸಿಕೊಳ್ಳುವಾಗ ಕಾಲನಿರ್ಣಯ ಮಾಡುವವನು ಅವನು; ಚುನಾವಣೆಗಳಲ್ಲಿ ಸೋಲುಗೆಲವುಗಳ ಬಗ್ಗೆ ಭವಿಷ್ಯ ನುಡಿಯುವವನು ಅವನೇ; ವಿಮಾನ ಹಾರುವ ಸಮಯ ಗೊತ್ತುಮಾಡುವವನೂ ಅವನೇ; ವರ್ತಕ, ರಾಜಕಾರಣಿ, ವಿದ್ಯಾರ್ಥಿ, ಅಧ್ಯಾಪಕ, ಮಂತ್ರಜ್ಞ, ವಿಜ್ಞಾನಿ ಈ ಎಲ್ಲರ ಆಗುಹೋಗು ಗಳನ್ನು ನಿರ್ಧರಿಸುವವನೂ ಅವನೇ. ಅವನು ತಾಳುವ ರೂಪಗಳೂ, ಎತ್ತುವ ಅವತಾರಗಳೂ, ಕಟ್ಟುವ ವೇಷಗಳೂ ಕಡಮೆಯೇನಲ್ಲ; ಕಾನೂನು ತಜ್ಞನಾಗಿ, ಪಂಚಾಂಗ ಕರ್ತನಾಗಿ, ಜೋತಿಷಿಯಾಗಿ, ಪೂಜಾರಿಯಾಗಿ, ಜೋಯಿಸನಾಗಿ, ಮಂತ್ರವಾದಿಯಾಗಿ, ಮಾಟಗಾರನಾಗಿ, ಆಸ್ಥಾನ ಪಂಡಿತನಾಗಿ, ಆಪ್ತಸಚಿವನಾಗಿ, ಕೊನೆಯ ದುಃಖಾರ್ತರ ಸಲಹೆಗಾರನಾಗಿ, ಅಧ್ಯಾಪಕನಾಗಿ ಒಂದೇ ಎರಡೇ ಹಲವಾರು ರೂಪಗಳಲ್ಲಿ ಮೈದೋರುತ್ತಾನೆ. ಗೋಸುಂಬೆ ಯಂತೆ ಬಣ್ಣ ಬದಲಾಯಿಸುತ್ತಾನೆ, ಪಾತ್ರಿಯಂತೆ ಪಾತ್ರಕ್ಕನುಗುಣವಾದ ವೇಷ ತೊಡುತ್ತಾನೆ. ಅವನು ಇಲ್ಲದ ನಾಡಿಲ್ಲ; ಜಪಾನಿನಲ್ಲಿದ್ದಾನೆ, ಅಮೆರಿಕೆಯಲ್ಲಿದ್ದಾನೆ, ಆಫ್ರಿಕೆಯಲ್ಲಿದ್ದಾನೆ.

ಅವನು ಕ್ಷತ್ರಿಯ ವೈಶ್ಯರ ಮೇಲಿರಲಿ ಶೂದ್ರಾತಿ ಶೂದ್ರರ ಮೇಲೂ ಪ್ರಭಾವ ಬೀರುತ್ತಾನೆ; ರಾಜದಂಡನಾಯಕರ ಮೇಲೆಂತೋ ಅಂತೆಯೆ ಕವಿ ಮನೀಷಿಗಳ ಮೇಲೆಯೂ ಮೋಹದ ಜಾಲ ಬೀಸುತ್ತಾನೆ. ನಮ್ಮ ಕವಿಗಳ ಬಗ್ಗೆ ಕುವೆಂಪು ಏನನ್ನುತ್ತಾರೆ ಕೇಳಿ ನೋಡಿ. ‘ನಮ್ಮ ಎಷ್ಟೋ ಕವಿಗಳು ಬರಿಯ ಪದ್ಯರಚಕರು; ಅವರ ಆಲೋಚನೆಯ ಮಟ್ಟ ಅಷ್ಟೇನೂ ಮೇಲಿನ ವರ್ಗದ್ದಲ್ಲ. ತಮ್ಮ ಮತ, ತಮ್ಮ ಜಾತಿ, ತಮ್ಮವರ ಹಿತಾಸಕ್ತಿಗಳನ್ನು ದಾಟಿ ಅವರು ಹೋಗಲಾರರು. ಸರ್ವೋದಯ ಸಮನ್ವಯ ಪೂರ್ಣದೃಷ್ಟಿ ವಿಶ್ವಮಾನವತೆ ಮೊದಲಾದ ಭಾವನೆಗಳೆಲ್ಲ ಅಲ್ಲಲ್ಲಿ ತುಸು ತೋರಿದಂತೆ ತೋರಿದರೂ ಅದರ ವ್ಯಾಪ್ತಿ ತಮ್ಮ ತಮ್ಮ ಜಾತಿಗೆ ಮಾತ್ರ ಸೀಮಿತವಾಗಿರುತ್ತದೆ. …ನಮ್ಮ ಕವಿಗಳಲ್ಲಿ ಒಬ್ಬ ಅತ್ಯಂತ ಶ್ರೇಷ್ಠನನ್ನೆ ತೆಗೆದುಕೊಳ್ಳಿ……ಅವನ ಭಾರತದಲ್ಲಿ ನಿಜವಾದ ಕಾವ್ಯಕ್ಕೆ ಅತ್ಯಂತ ಅವಶ್ಯಕವಲ್ಲದ ಎಷ್ಟೋ ನೀತಿಗಳು ರಾಶಿ ರಾಶಿ ಬರುತ್ತವೆ…..ಬ್ರಾಹ್ಮಣಶಕ್ತಿಯಿಂದಲೇ ಈ ಕ್ಷಾತ್ರ ತೇಜ ಸ್ಫುರಿಸುತ್ತದೆ ಎಂದು ಹೇಳುತ್ತಾನೆ. ವೈರಿರಾಯನನ್ನು ಜಯಿಸಿ ಅಲ್ಲೆಲ್ಲಾ ಸೂರೆ ಮಾಡಿ, ಐಶ್ವರ್ಯವನ್ನು ತರಬೇಕಂತೆ; ತಂದು ಇಲ್ಲಿ ಬ್ರಾಹ್ಮಣರಿಗೆ ಹಂಚ ಬೇಕಂತೆ….ಅರಸನಾದವನು ಯಾವಾಗಲೂ ವರ್ಣೋತ್ತಮರಿಗೆ ಹೆದರಿಕೊಂಡಿರ ಬೇಕು….ಒಂದೆರಡು ಉದಾಹರಣೆಗಳನ್ನು ಹೇಳಿದ್ದಾನೆ, ಅಷ್ಟೆ. ಆದರೆ ಇಂಥದ್ದು ನಮ್ಮಲ್ಲಿ ರಾಶಿರಾಶಿಯಾಗಿದೆ’[22] ಕುಮಾರವ್ಯಾಸನಂಥ ಮಹಾಕವಿಯೂ ಸಂಕುಚಿತ ಮನೋಧರ್ಮದ ಬ್ರಾಹ್ಮಣ್ಯವನ್ನು ಮೀರಿ ಮೇಲೇರಲು ಸಾಧ್ಯವಾಗಿಲ್ಲ.

ಜಗತ್ತಿನ ಎಲ್ಲ ದೇಶಗಳಲ್ಲಿಯೂ ಪುರೋಹಿತಶಾಹಿ ತನ್ನ ಸಹಸ್ರ ಪೀಡಕ ಬಾಹುಗಳನ್ನು ಸಾಮಾನ್ಯಜನತೆಯ ಮೇಲೆ ಚಾಚಿದೆ, ನಿಜ. ಆದರೆ ರಾಜರನ್ನು ಪ್ರತ್ಯಕ್ಷ ದೇವರೆಂದು, ಪುರೋಹಿತರನ್ನು ಭೂಸುರರೆಂದು ಆರಾಧಿಸಿದ ದೇಶವಿದ್ದಂತಿಲ್ಲ. ವಿಜ್ಞಾನಯುಗದಲ್ಲಿಯೂ ಅವರ ಕಾಟ ತಪ್ಪಿಲ್ಲ. ಪ್ರಪಂಚ ಬದಲಾಯಿಸಿದರೂ ಅವರು ಬದಲಾಯಿಸಿಲ್ಲ, ದೇಶಕ್ಕೆ ಆಂಗ್ಲರಿಂದ ಸ್ವಾತಂತ್ರ್ಯ ಗಿಟ್ಟಿಸಿಕೊಳ್ಳಲು ಸಾಧ್ಯವಾದರೂ ಈ ಪುರಾತನ ದೇವತೆಗಳಿಂದ ಪಾರಾಗಲು ಸಾಧ್ಯವಿಲ್ಲವಾಗಿದೆ, ನಿಜ. ಆದರೆ ಹೊಸದೊರೆಗಳ ಮರ್ಜಿಯನ್ನರಿತುಕೊಂಡು, ಅಭಿನಯ ಭಂಗಿಯನ್ನು ಮಾತ್ರ ವ್ಯತ್ಯಾಸ ಮಾಡಿಕೊಂಡಿದ್ದಾರೆ. ‘ಧನ್ವಂತರಿ ಚಿಕಿತ್ಸೆ’ ಇಂದಿನ ಪುರೋಹಿತನ ಕಾರುಬಾರುಗಳನ್ನೂ, ಅವನ ವ್ಯವಸ್ಥಿತವಾದ ಶೋಷಣೆಯನ್ನೂ ಮಾರ್ಮಿಕವಾಗಿ ವಿಡಂಬಿಸುತ್ತದೆ. ರೋಗಿಯೊಬ್ಬನ ಹೆಂಡತಿಗೆ ಡಾಕ್ಟರಲ್ಲಿ ಸ್ವಲ್ಪವೂ ವಿಶ್ವಾಸವಿಲ್ಲ. ಯಾವುದೋ ರಣಪಿಶಾಚಿಯ ಚೇಷ್ಟೆಯೇ ಅವನ ರೋಗಕ್ಕೆ ಕಾರಣವಿರ ಬೇಕೆಂದು ಆಕೆ ಪುರೋಹಿತನನ್ನು ಕರೆಸುತ್ತಾಳೆ. ಪುರೋಹಿತ ಮಾಯಮಂತ್ರ ಮಾಡಿ, ಚೀಟಿ ಕಟ್ಟಿ, ಚಿನ್ನದ ನಾಣ್ಯಗಳನ್ನು ದಕ್ಷಿಣೆ ತೆಗೆದುಕೊಂಡು ತೃಪ್ತನಾಗಿ ಹೋಗುತ್ತಾನೆ. ಆಗ ಭೂಲೋಕದ ಈ ಭಯಂಕರ ದೃಶ್ಯವನ್ನು ನೋಡಲೆಂದು ಬಂದಿದ್ದ ವಿಶ್ವಾಮಿತ್ರ ಪರಶುರಾಮನನ್ನು ಕುರಿತು “ಈ ಪುರೋಹಿತರ ಗುಂಪೆಲ್ಲವೂ ಒಂದೇ ಸುಲಿಗೆ! ಸುಲಿಗೆ! ಸುಲಿಗೆ! ಹಿಂದೆ ಆ ವಸಿಷ್ಠ ಸುಲಿದ ಹಾಗೆಯೇ ಇಂದು ಈ ಭಟ್ಟನೂ ಸುಲಿಯುತ್ತಿದ್ದಾನೆ! ಅವನಂತೂ ರಘುವಂಶಕ್ಕೆ ಶನಿ ಹಿಡಿದ ಹಾಗೆ ಹಿಡಿದುಬಿಟ್ಟಿದ್ದ’[23] ಪುರೋಹಿತರ ಶೋಷಕಪ್ರವೃತ್ತಿಯನ್ನು ಇದಕ್ಕಿಂತ ಪರಿಣಾಮಕಾರಿಯಾಗಿ ಮನದಟ್ಟು ಮಾಡಿಕೊಡುವುದು ಕಷ್ಟ.

ವಿಜ್ಞಾನಯುಗದಲ್ಲಿಯೂ ಪುರೋಹಿತರ ದಾಂಧಲೆ ಮಿತಿಮೀರಿ, ಯಾಗ ಯಜ್ಞಗಳನ್ನು ನಡೆಸಿ, ಬಡವರಿಗೆ ಉಪಯೋಗವಾಗುತ್ತಿದ್ದ ವಸ್ತುಗಳನ್ನೆಲ್ಲ ಬೆಂಕಿಯಲ್ಲಿ ಸುಡುವಾಗ ಕುವೆಂಪು ಸಿಡಿಲಾಗುತ್ತಾರೆ; ಅವರ ಲೇಖನಿ ಬೆಂಕಿಯಾಗುತ್ತದೆ; ಮಸಿ ಲಾವಾರಸವಾಗುತ್ತದೆ.

ಎತ್ತಿ ಋತ್ವಿಕ್ಕರನು ಎಸೆ ಹೋಮಕುಂಡಕ್ಕೆ
ಅಷ್ಟಗ್ರಹಕೂಟ ದೋಷ ಪರಿಹಾರಕ್ಕೆ!
ಓ ಬೆಪ್ಪ,
ತುಪ್ಪವನು ಬೆಂಕಿಗೆಸೆಯಲು ಶಮನವಾಗುವೊಡೆ ಗ್ರಹದ ಪೀಡೆ
ಪುಷ್ಟನಪ್ಪಾ ಪುಹೋಹಿತನನಾಹುತಿ ಮಾಡೆ
ಮತ್ತಷ್ಟು ಪರಿಹಾರ ದೊರೆಯದೇನ್ ಕೇಡೆ?[24]

ವಾಲ್ಟೇರ್ ಡಿಡಿರಾಟ್ ರಸೆಲ್ ಇಂಗರ್ ಸಾಲರು ಸಹ ಇಷ್ಟು ಕಠಿನವಾಗಿ ನುಡಿದಿರಲಾರರು. ಒಂದೊಂದು ರೋಗಕ್ಕೆ ಒಂದೊಂದು ಮದ್ದು ಬೇಕಷ್ಟೆ. ಅಂತೆಯೇ ಪರಸ್ಪರ ಭಿನ್ನವಾದ ಸಂಸ್ಕೃತಿಗಳುಳ್ಳ ದೇಶ ಸಮಾಜ ಜನಾಂಗಗಳ ಸಮಸ್ಯೆಗಳಿಗೆ ಭಿನ್ನ ಭಿನ್ನ ರೀತಿಯ ಪರಿಹಾರಗಳನ್ನು ಹುಡುಕಬೇಕಾಗುತ್ತದೆ. ಆಹಾರ ಎಷ್ಟೇ ಒಳ್ಳೆಯದಾದರೂ ಒಂದು ದೇಹಕ್ಕೊಗ್ಗುವಂಥದು ಮತ್ತೊಂದು ದೇಹಕ್ಕೆ ಒಗ್ಗುವುದಿಲ್ಲ. ಸಾಮಾನ್ಯ ರೋಗಕ್ಕೆ ಅನ್ನನಾಳದ ಮುಖಾಂತರ ಕೊಡುವ ಔಷಧಿಯೆ ಸಾಕು; ಅರ್ಬುದ ರೋಗಕ್ಕೆ ಶಸ್ತ್ರಚಿಕಿತ್ಸೆಯೇ ಬೇಕು.

ಮಾಡಿರಯ್ ಯಾಗಗಳ! ತಿನ್ನಿರಯ್ ಭಕ್ಷ್ಯಗಳ!
ಭೋಜನವೆ ಯೋಜನೆಯ ಮುಖ್ಯ ಅಂಗ!
ಮಂಕು ಮಂದಿಗೆ ಮೌಢ್ಯಮದ್ಯವನು ಕುಡಿಸಿರಯ್;
ಸುಳ್ಳು, ಭಯವನು ಬಿತ್ತಿ ಚೆನ್ನಾಗಿ ದುಡಿಸಿರಯ್,
ಕತ್ತೆಗಳಿರುವುದೇಕೆ? ನಮ್ಮ ಮಡಿ ಹೊರುವುದಕೆ
ಕತ್ತೆಗಳಿಗುತ್ತಮತೆ ಇತ್ತರಾಯ್ತೆಮ್ಮಗತಿ![25]

ಕತ್ತೆಗಳೆಂದು ಕರೆದರೂ ಸಾಮಾನ್ಯರಿಗೆ ಅರ್ಥವಾಗುವುದಿಲ್ಲ. ಸಾಮಾನ್ಯರೆಂದರೆ ಅವಿದ್ಯಾ ವಂತರು ಮಾತ್ರವಲ್ಲ. ಕೆಲವೊಮ್ಮೆ ವಿದ್ಯಾವಂತರಿಗಿಂತ ಅವಿದ್ಯಾವಂತರೇ ಮೇಲು. ಅವರು ಸಾಮೀಲಾಗದೆ ಅಷ್ಟಗ್ರಹಯೋಗಗಳು ನಡೆಯುವಂತೆಯೇ ಇಲ್ಲ. ಅವುಗಳಲ್ಲಿ ಪಾಲ್ಗೊಳ್ಳಲು ವಿಜ್ಞಾನಿಗಳೆ ಮುಂದಾಗುತ್ತಾರೆಂದರೆ ಅನ್ಯದೇಶದ ಜನ ಚೋದ್ಯಗೊಳ್ಳದಿರುತ್ತಾರೆಯೆ?

ಕಾನೂರು ಹೆಗ್ಗಡಿತಿಯಲ್ಲಿ ಚಿತ್ರಿತವಾಗಿರುವ ಅಗ್ರಹಾರದ ಜೋಯಿಸರು ವೆಂಕಪ್ಪಯ್ಯನವರು ಪುರೋಹಿತ ಕುಲದ ಸರ್ವೋಚ್ಚ ಪ್ರತಿನಿಧಿಯಾಗಿದ್ದಾರೆ. ಶೂದ್ರರ ಮನೆಯ ಜಮಖಾನ ಮೊದಲಾದ ವಸ್ತ್ರಾದಿಗಳನ್ನು ಮುಟ್ಟಿದರೆ ಮೈಲಿಗೆಯಾಗುತ್ತಿದ್ದು ದರಿಂದ, ಚಂದ್ರಯ್ಯಗೌಡರ ಮನೆಗೆ ಬಂದಾಗ ಮಣೆಯ ಮೇಲೆ ಕೂರುತ್ತಾರೆ. ‘ಅವರ ಉದ್ಯೋಗಗಳಲ್ಲಿ ಮುಖ್ಯವಾದುವೆಂದರೆ ದೇವರಪೂಜೆ, ನಿಮಿತ್ತನೋಡುವುದು, ಭವಿಷ್ಯ ಹೇಳುವುದು, ಜಾತಕ ಬರೆಯುವುದು ಮತ್ತು ನೋಡುವುದು, ಲಗ್ನಕ್ಕೆ ಮುಹೂರ್ತ ಇಟ್ಟುಕೊಡುವುದು, ಶೂದ್ರರ ಭೂತಾದಿಗಳಿಗೆ ರಕ್ತದ ಬಲಿ ಕೊಡುವ ಮೊದಲು ಹಣ್ಣ ಕಾಯಿ ಮಾಡುವುದು, ಮಂತ್ರದಿಂದ ದೆವ್ವಗಳನ್ನು ಬಿಡಿಸುವುದು ಮತ್ತು ಹಿಡಿಸುವುದು, ಇತ್ಯಾದಿ[26] ವಯಸ್ಸಿನಿಂದ, ಸಂಪತ್ತಿನಿಂದ, ಜ್ಞಾನದಿಂದ ಶೂದ್ರನೊಬ್ಬ ಜೋಯಿಸರಿಗಿಂತ ಮಿಗಿಲಾಗಿದ್ದರೂ ಅವರು ಶೂದ್ರನನ್ನು ಏಕವಚನದಲ್ಲಿಯೇ ಮಾತಾಡಿಸುತ್ತಾರೆ. ತಮಗೆ ಹಣ ಬೇಕಾದಾಗ , ದೇವರ ಪ್ರಸಾದವೆಂದು ಹಣ್ಣುಕಾಯಿ ಕುಂಕುಮಗಳನ್ನು ತಂದು ಗೌಡರ ಮುಂದಿಟ್ಟು, ಉಪಾಯವಾಗಿ ತಮ್ಮ ಕೆಲಸ ಗಿಟ್ಟಿಸಿಕೊಳ್ಳುತ್ತಾರೆ. ತಂದು ಹಾಕುತನದಲ್ಲಿಯೂ ಅವರು ನಿಸ್ಸೀಮರು. ಗೌಡರ ಮಕ್ಕಳು ವಿದ್ಯಾವಂತರಾಗುವುದನ್ನವರು ಸಹಿಸರು. ಅವರಿಂದ ತಮ್ಮ ಸ್ಥಾನಮಾನಗಳಿಗೆ ಧಕ್ಕೆಯೊದಗಬಹುದೆಂಬ ಶಂಕೆ. ‘ನಾನು ಹೇಳಿದ್ದೆ ನಿನಗೆ ಮೊದಲೇ, ಈಗಿನ ವಿದ್ಯಾಭ್ಯಾಸ ಹುಡುಗರನ್ನು ಹಾಳು ಮಾಡಿ ಬಿಡುತ್ತದೆ ಎಂದು! ದೇವರು ದಿಂಡರು ಭಕ್ತಿಗಿಕ್ತಿ ಎಲ್ಲ ನಿರ್ನಾಮ! ಜೊತೆಗೆ ನೂರಾರು ಹವ್ಯಾಸಗಳನ್ನು ಬೇರೆ ಕಲಿತು ಬಿಡುತ್ತಾರೆ. ನಿನ್ನ ಮನೆ, ಜಮೀನು ಉಳಿಯಬೇಕಾದರೆ ಅವರ ಓದು ನಿಲ್ಲಿಸಿ, ಮದುವೆ ಗಿದುವೆ ಮಾಡಿ ಕೆಲಸಕ್ಕೆ ಹಚ್ಚು….ಈ ಶೂದ್ರ ಮಕ್ಕಳಿಗೆಲ್ಲ ಉಪನಿಷತ್ತು, ಭಗವದ್ಗೀತೆ ಗಂಧವಾದರೂ ಗೊತ್ತಾಗುತ್ತದೆಯೆ? ನಮಗೇ ಗೊತ್ತಾಗುವುದಿಲ್ಲ.,’ ಜೋಯಿಸರ ಏಕವಚನಾತ್ಮಕವಾದ ಸಂಬೋಧನೆಯಿರಲಿ, ಅವರ ನಿಂದಾತ್ಮಕ ನುಡಿಗಳನ್ನೂ ವರಪ್ರಸಾದವೆಂದೇ ಗೌಡರು ಸ್ವೀಕರಿಸುತ್ತಾರೆ. ಹಳ್ಳಿಗರ ಮೌಢ್ಯ ನಿವಾರಣೆಗೆ ಹೂವಯ್ಯ ಮಾಡುತ್ತಿದ್ದ ಪ್ರಯತ್ನಗಳನ್ನು ಜೋಯಿಸರು ಖಂಡಿಸುತ್ತಾರಲ್ಲದೆ, ಹಿರಿಯರ ಕಿವಿಯಲ್ಲಿ ಚಾಡಿ ಚುಚ್ಚುತ್ತಾರೆ.

ಚಂದ್ರಯ್ಯಗೌಡರು ರೋಗ ಪೀಡಿತರಾದಾಗ, ರೋಗ ಯಾವುದೆಂದು ತಿಳಿಯದಿದ್ದರೂ ಜೋಯಿಸರು ತಮಗೆ ತಿಳಿದಿದ್ದ ಮದ್ದುಗಳನ್ನು ಮಂತ್ರಪೂರ್ವಕವಾಗಿ ಪ್ರಯೋಗಿಸಿ ಹಾದಿದಾನ ಬೀದಿದಾನ ಯಂತ್ರತಂತ್ರಗಳೇ ಮೊದಲಾದ ದೈವಿಕ ವಿಧಾನಗಳನ್ನು ಪೂರೈಸುತ್ತಾರೆ. ಸೀಮೆ ವೈದ್ಯರು ಕೊಟ್ಟ ಔಷಧಿಯಿಂದಾಗಿ ಗೌಡರು ಗುಣ ಮುಖರಾದರೂ, ಜೋಯಿಸರು ತಮ್ಮ ಯಂತ್ರಮಂತ್ರಗಳ ಮಹಿಮೆಯನ್ನೇ ಸಮರ್ಥಿಸಿಕೊಳ್ಳುತ್ತಾರೆ. ಸುಳ್ಳು ಜಾತಕ ಬರೆಯುವುದರಲ್ಲಂತು ಅವರದು ಎತ್ತಿದ ಕೈ. ಚಂದ್ರಯ್ಯ ಗೌಡರಿಂದ ಭೂರಿದಾನ ದಕ್ಷಿಣೆಗಳನ್ನು ಪಡೆದ ಅವರು ಸೀತೆರಾಮಯ್ಯರ ಜಾತಕ ಸರಿಯಾಗಿಲ್ಲದಿದ್ದರೂ, ಹೊಂದಿಸಿಕೊಡುತ್ತಾರೆ. ಆ ಹಳ್ಳಿಯಲ್ಲಿ ಅವರದೇ ಅಂತಿಮ ನಿರ್ಣಯ ತಾನೆ. ತನಗಿಷ್ಟವಿಲ್ಲದ ಮದುವೆ ನಿರ್ಣಯವಾದದ್ದಕ್ಕಾಗಿ ಸೀತೆ ಮನೋವಿಕಾರಕ್ಕೊಳಗಾಗುತ್ತಾಳೆ. ಆಗ ಜೋಯಿಸರೇ ಅವಳಿಗೆ ವಿಭೂತಿ ಕುಂಕುಮಗಳನ್ನು ಹಚ್ಚಿ, ಅವಳು ಮಲಗುತ್ತಿದ್ದ ಜಾಗದ ಮೇಲ್ಚಾವಣಿಗೆ ಮಂತ್ರಿಸಿದ ತೆಂಗಿನಕಾಯಿ ಕಟ್ಟುತ್ತಾರೆ. ಮುಹೂರ್ತಸಮಯದಲ್ಲಿ ರಾಮಯ್ಯ ಮಂಕು ಹಿಡಿದವನಂತೆ ನಿಂತಿರಲಾಗಿ, ಜೋಯಿಸರೇ ಅವನ ಕೈಯಿಂದ ಜಗುಳಿ ಬಿದ್ದ ಮಾಂಗಲ್ಯ ವನ್ನೆತ್ತಿಕೊಂಡು ಶವಸದೃಶವಾಗಿ ಪಕ್ಕದವರ ಊರೆಯ ಮೇಲೆ ಒರಗಿದ್ದ ಸೀತೆಯ ಕೊರಳಿಗೆ ಕಟ್ಟುತ್ತಾರೆ.

ಸೀತೆಗೆ ದೆವ್ವ ಹಿಡಿದಿದೆ ಎಂದು ತಿಳಿದು ದೇವರ ಮತ್ತು ಜೋಯಿಸರ ಆಶೀರ್ವಾದ ಪಡೆದು ಬರುವ ಸಲುವಾಗಿ ಚಂದ್ರಯ್ಯಗೌಡರೂ ಶ್ಯಾಮಯ್ಯಗೌಡರೂ ತಂತಮ್ಮ ಸಂಸಾರಗಳೊಂದಿಗೆ ಅಗ್ರಹಾರದ ದೇವಸ್ಥಾನಕ್ಕೆ ಹೋದಾಗ, ಪೂಜಾದಿ ವಿಧಿಗಳು ಮುಕ್ತಾಯಗೊಂಡನಂತರ, ಶೂದ್ರ ಅತಿಥಿಗಳಿಗೆ ಮಾಮೂಲಿನಂತೆ ಕಿರು ಜಗಲಿಯಲ್ಲಿ ಎಲೆ ಹಾಕಿ ಊಟ ಬಡಿಸುತ್ತಾರೆ. ತಮ್ಮ ತಂತ್ರ ಮಂತ್ರ ವೈದ್ಯಗಳಿಗೆ ಸೀತೆಯ ಮೈತುಂಬಿಕೊಂಡಿದ್ದ ದೆಯ್ಯ ಅಲ್ಲಾಡದಿರಲು, ‘ಇದು ನಿಜವಾಗಿಯೂ ಗ್ರಹದ ಅಥವಾ ದೈವದ, ಕಾಟವಾಗಿದ್ದ ಪಕ್ಷದಲ್ಲಿ ನಾನು ಹಾಕಿದ ಮಂತ್ರಗಳ ಮುಂದೆ ನಿಲ್ಲುತ್ತಿರಲಿಲ್ಲ. ಹುಡುಗಿಗೆ ಯಾರೋ ಹೇಳಿಕೊಟ್ಟಿರಬೇಕು….ದೆಯ್ಯ ಬಿಟ್ಟು ಹೋಗುವವರೆಗೂ ದಿನಕ್ಕೆ ಒಂದೊಂದು ಬರೆ ಎಳೆದೇ ಬಿಡು! ಒಂದೆರಡೇ ದಿನದಲ್ಲಿ ಎಲ್ಲ ಸರಿಹೋಗ್ತದೆ’ ಎಂದು ವೆಂಕಪ್ಪಯ್ಯ ಚಂದ್ರಯ್ಯಗೌಡರೊಡನೆ ಗುಟ್ಟಾಗಿ ಹೇಳುತ್ತಾರೆ. ಚಂದ್ರಯ್ಯಗೌಡರೇ ಸೀತೆಗೆ ಬರೆ ಎಳೆಯುತ್ತಾರೆ. ಅವರು ಸತ್ತನಂತರ ಮನೆಯಲ್ಲಿ ಏನು ಮುಟ್ಟುಚಿಟ್ಟಾದರೂ ಜೋಯಿಸರೇ ಪರಿಹಾರ ಸೂಚಿಸಿ, ಹಣ ಗೋರುತ್ತಾರೆ. ಚಿನ್ನಯ್ಯನಿಗೆ ಮಗುವಾದಾಗ ‘ಕರಿಯಣ್ಣ’ ಎಂದು ಅವರೇ ಹೆಸರಿಟ್ಟು, ಮಾಮೂಲಿ ವಸೂಲಿ ಮಾಡಿಕೊಳ್ಳುತ್ತಾರೆ. ‘ಈ ಹಾರುವರ ದೆಸಯಿಂದ ನಮಗೆ ಉಳಿಗಾಲವಿಲ್ಲ’ ಎಂಬ ಚಿನ್ನಯ್ಯನ ಮಾತು ಭರತಖಂಡದಲ್ಲಿ ಎಲ್ಲ ಕಾಲಗಳಿಗೂ ಅನ್ವಯಿಸುವ  ಸತ್ಯವಾಗಿದೆ.

ಭರತ ಖಂಡದ ಪತನಕ್ಕೆ, ಸಾಮಾನ್ಯ ಜನರ ರಿಕ್ತಸ್ಥಿತಿಗೆ, ಇಲ್ಲಿಯ ಬೌದ್ದಿಕ ದಾರಿದ್ರ್ಯಕ್ಕೆ, ಇಲ್ಲಿಯ ಅನೈಕ್ಯಕ್ಕೆ ಪುರೋಹಿತರು ಹಾಗೂ ಕ್ಷತ್ರಿಯರೆ ಕಾರಣವೆಂದು ಮೊದಲು ಹೇಳಿದವರು ಸ್ವಾಮಿ ವಿವೇಕಾನಂದರು. ಪುರೋಹಿತವರ್ಗದವರ ಅಧಿಕಾರ ಬಲದಿಂದ ವಿದ್ಯಾಬುದ್ದಿಗಳ ಸರ್ವಸ್ವಾಮ್ಯವೂ ಅತ್ಯಲ್ಪ ಸಂಖ್ಯೆಯ ಕೆಲವೇ ಕೆಲವು ಬ್ರಾಹ್ಮಣರ ಹಸ್ತಗತವಾದದ್ದು’[27] ಎಂದು ಅವರು ನಿರ್ಭಯವಾಗಿ ಉಗ್ಗಡಿಸುತ್ತಾರೆ. ಪ್ರವಾದಿಯಂತೆ ಅದೇ ವಿಚಾರಸೂತ್ರವನ್ನು ಮುಂದುವರಿಸಿ ಉಚ್ಚವರ್ಗದ ಪತನ ಬಹುದೂರವಿರಲಾರದೆಂದು ಘೋಷಿಸುತ್ತಾರೆ; ಪುರೋಹಿತ ವರ್ಗದ ಪತನಕ್ಕೆ ಯಾವನಾದರೊಬ್ಬ ವ್ಯಕ್ತಿಯ ಅಥವಾ ಯಾವುದಾದರೊಂದು ಗುಂಪಿನ ಹೊಣೆಹೊರಿಸುವ ಯಾರೇ ಆಗಲಿ ತಿಳಿಯಬೇಕು, ಕರ್ಮತತ್ವದ ಅನಿವಾರ್ಯ ನಿಯತಿಗೆ ವಿಧೇಯವಾಗಿ, ಬ್ರಾಹ್ಮಣ ಜಾತಿ ತನ್ನ ಗೋರಿಯನ್ನು ತಾನೇ ತನ್ನ ಕೈಯಿಂದಲೆ ಕಟ್ಟಿಕೊಳ್ಳುತ್ತಿದೆ ಎಂದು, ಮತ್ತು ಹಾಗಾಗತಕ್ಕದೇ ಸರಿ ಎಂದೂ ಉಚ್ಚವರ್ಣದ ಮತ್ತು ಉಚ್ಚವರ್ಗದ ಪ್ರತಿಯೊಂದು ಜಾತಿಯೂ ತನ್ನ ಕೈಯಿಂದಲೇ ತನ್ನ ಶ್ಮಶಾನಚಿತೆಯನ್ನು ರಚಿಸಿಕೊಳ್ಳುವುದು ಅದರ ಪ್ರಧಾನ ಕರ್ತವ್ಯವೆ ಆಗಬೇಕಾಗುತ್ತದೆ![28] ವಿವೇಕಾನಂದರ ಭವಿಷ್ಯವಾಣಿ ಇಷ್ಟು ಬೇಗ ನಿಜವಾಗುತ್ತದೆಂದು ಆಗ ಯಾರೂ ನಂಬಿರಲಿಲ್ಲ. ಕೇವಲ ದ್ವೇಷದಿಂದ ಪುರೋಹಿತ ವರ್ಗದ ದಬ್ಬಾಳಿಕೆಯನ್ನು ವಿಫಲಗೊಳಿಸಲಾಗದೆಂದೂ, ಅಹಿಂಸಾಮಾರ್ಗದ ವಿವೇಕ ಪ್ರಸಾರದ ಮೂಲಕ ಮಾತ್ರ ಅದರ ಶೀಘ್ರಪತನ ಸಾಧ್ಯವೆಂದೂ ಕುವೆಂಪು ಸ್ಪಷ್ಟಪಡಿಸುತ್ತಾರೆ. ‘ಈ ದೇಶದಲ್ಲಿ ಹಿಂದೂ ಧರ್ಮದ ಪುರೋಹಿತಶಾಹಿ ಎಲ್ಲೋ ಶೇಕಡ ೫ರಷ್ಟು ಇದ್ದಾರೆ. ಅವರಿಗೆಲ್ಲಾ ಬೆಂಬಲ ಎಲ್ಲಿಂದ ಬರುತ್ತದೆ? ಬಾಕಿಯವರಿಂದ ಬರುತ್ತದೆ. ನೀವು ಈ ಬಾಕಿಯವರ ಮನಸ್ಸನ್ನು ತಿದ್ದಿ ತಿರುಗಿಸಿದರೆ ಅದು ತನ್ನಷ್ಟಕ್ಕೆ ತಾನೆ ಒಣಗಿಹೋಗುತ್ತದೆ. ಈ ಶೂದ್ರಶಕ್ತಿಯ ಬೆಂಬಲ ತಪ್ಪಿ ಆ ಪುರೋಹಿತಶಾಹಿ ತನಗೆ ತಾನೆ ಬಾಡಿ ಬೀಳುತ್ತದೆ. ಅವರು ಅಡ್ಡಪಲ್ಲಕ್ಕಿಯ ಮೇಲೆ ಕುಳಿತುಕೊಂಡು ಬರಬಹುದು. ಆದರೆ ನಾಲ್ಕು ಐದು ಜನ ಅವರವರೇ ಬರಬೇಕು, ಎದುರುಗೊಳ್ಳಲು’.[29] ಎಷ್ಟು ಜನ ಕುವೆಂಪು ಅವರ ಈ ಶಕ್ತಿ ಸೂತ್ರವನ್ನು ಅನುಷ್ಠಾನದಲ್ಲಿ ತಂದಾರು? ಸಾಮಾನ್ಯರಿರಲಿ, ವಿದ್ಯಾವಂತ ಶೂದ್ರರೇ ಬ್ರಾಹ್ಮಣರಿಗಿಂತ ಮುಂದಾಗಿ ಫಲಪುಷ್ಪ ತಾಂಬೂಲಗಳನ್ನು ಹೊತ್ತುಕೊಂಡು ಸುಂಕದಕಟ್ಟೆಯ ಬಳಿ ಅಗ್ರಪಂಕ್ತಿಯಲ್ಲಿ ನಿಂತಿದ್ದು, ಸ್ವಾಮಿಗಳ ಕಾರು ನಿಂತ ಕೂಡಲೇ ಪಾದಮುಟ್ಟಿ ನಮಸ್ಕರಿಸಿ, ನಜರುಮುಜರೆಗಳನ್ನೊಪ್ಪಿಸಿ, ಪ್ರಕ್ಷಾಳಿತ ಪಾದ ತೀರ್ಥವನ್ನು ನಾಲಗೆಯಿಂದ ಚಪ್ಪಿರಿಯುತ್ತ, ಧನ್ಯೋಸ್ಮಿತಾಭಾವದಿಂದ ಮನೆಗೆ ಹಿಂದಿರುಗುತ್ತಾರೆ.

ಈ ಪುರೋಹಿತ ಪ್ರಜ್ಞೆ ಹಿಂದೂ ಧರ್ಮದ ಸನ್ಯಾಸಿಗಳಲ್ಲಿ ಪ್ರಖರವಾಗಿರುವ ಛದ್ಮವೇಷದ ಅತ್ಯಂತ ಅಪಾಯಕಾರಿಯಾದದ್ದೆಂಬ ಸಂಗತಿ ಕುವೆಂಪು ಅವರಿಗೆ ಮಾತ್ರ ವೇದ್ಯ. ಲೌಕಿಕಾಸಕ್ತಿಗಳಿಂದ ನಿರ್ಮುಕ್ತರಾಗಬೇಕಾದ ಈ ಕಾಷಾಯವಸ್ತ್ರಧಾರಿಗಳ ಬೋಳು ಮಂಡೆಯೊಳಗೆ ಎಂಥ ಭಯಂಕರವೂ ಪ್ರಲಯಕಾರಿಯೂ ಆದ ಪೈಶಾಚಿಕ ಭಾವನಾಲೋಚನೆ ಗಳು ಕಾಮನೆ ಕಾಷ್ಠ ವ್ಯಸನಗಳು ತುಂಬಿವೆಯೋ ಭಗವಂತನೇ ಬಲ್ಲ. ಅಧ್ಯಾತ್ಮ ಸಾಧನೆಯೇ ಮುಖ್ಯ ಗುರಿಯಾಗಬೇಕಾದ ಅವರಲ್ಲಿ ಲೌಕಿಕಪ್ರಜ್ಞೆ ಸದಾ ಎಚ್ಚತ್ತಿರುವಂತೆ ತೋರುತ್ತದೆ. ಈ ಮಾತಿಗೆ ಅವರ ದೈನಂದಿನ ವ್ಯವಹಾರಗಳೇ ಸಾಕ್ಷಿ ನುಡಿಯುತ್ತವೆ. ಮನುಷ್ಯರನ್ನು ಪಶುಗಳನ್ನಾಗಿ ಅಸ್ವತಂತ್ರರನ್ನಾಗಿ ಪರಿವರ್ತಿಸುವ ಅಂಧಕಾರಯುಗದ ಅಸಹ್ಯ ಸಂಸ್ಕಾರ ಸಂಪ್ರದಾಯಗಳನ್ನು ಚಾಚೂತಪ್ಪದಂತೆ ಮುಂದುವರಿಸಿಕೊಂಡು ಬರುತ್ತಿರುವರಲ್ಲದೆ, ಚಾತುರ್ವರ್ಣ್ಯ ಪದ್ಧತಿಯನ್ನೂ ಜಾತೀಯತೆಯನ್ನೂ ಲಾಲಿಸಿ, ಪೋಷಿಸಿ, ರಕ್ಷಿಸಿಕೊಂಡು ಬರುತ್ತಿದ್ದಾರೆ. ಜಾತಿನಿರ್ಮೂಲನದ ಮೂಲಕ ಭಾವೈಕ್ಯವನ್ನು ಕುದುರಿಸಿ, ಅಧ್ಯಾತ್ಮ ಬೋಧೆಯ ಮೂಲಕ ಮನುಷ್ಯ ಚೇತನವನ್ನು ಊರ್ಧ್ವಮುಖಗೊಳಿಸಿ, ತಪಶ್ಯಕ್ತಿಯ ಮೂಲಕ ರಾಷ್ಟ್ರಕುಂಡಲಿಯನ್ನೆಚ್ಚರಿಸುವ ಬದಲು ಅವರು ಮನುಕುಲವನ್ನು ಛಿದ್ರ ವಿಚ್ಛಿದ್ರಗೊಳಿಸುವ ಮೂಲಕ ಬ್ರಹ್ಮನಿರ್ಮಿತ ಸುಂದರ ವಸುಂಧರೆಯನ್ನು ವಿರೂಪಗೊಳಿಸುವ ಆಣಿ ಹವಣಿನಲ್ಲಿ ತೊಡಗಿದ್ದಾರೆ.

ಇತ್ತೀಚೆಗೆ ತಾನೆ ಕರ್ನಾಟಕ ಸರ್ಕಾರದ ಅರ್ಥಸಚಿವರಾದ ಶ್ರೀ ವೀರಪ್ಪಮೊಯಿಲಿಯವರು ಜಾತೀಯತೆಯ ನಿರ್ಮೂಲನಕ್ಕಾಗಿ ಮಠಗಳು ಹಾಗೂ ಸನ್ಯಾಸಿಗಳು ಕಂಕಣ ತೊಡಬೇಕೆಂದೂ ಮೈಸೂರಿನ ಸಮಾರಂಭವೊಂದರಲ್ಲಿ ನುಡಿದಂತೆಯೂ, ಅಲ್ಲಿದ್ದ ಸ್ವಾಮಿಯೊಬ್ಬರು ‘ಜಾತೀಯತೆ ಹೋಗಬೇಕಾದರೆ ಯೋಗ್ಯತೆಯ ಮೇಲೆ ಸರ್ಕಾರಿ ಹುದ್ದೆಗಳನ್ನು ಹಂಚ ಬೇಕೆಂದು ನುಡಿದಂತೆಯೂ ಪತ್ರಿಕೆಗಳಲ್ಲಿ ವರದಿಯಾಗಿದೆ. ಮತ್ತೊಂದೆಡೆ ಅದೇ ಸ್ವಾಮಿ ‘ಜಾತೀಯತೆ ಅಳಿಸಬೆಕೆನ್ನುವವರು ತಮ್ಮ ಹೆಣ್ಣು ಮಕ್ಕಳನ್ನು ಬೇರೆ ಜಾತಿಯ ಗಂಡುಗಳಿಗೇಕೆ ಮದುವೆ ಮಾಡಿಕೊಡಬಾರದು?’ ಎಂದು ಪ್ರಶ್ನಿಸಿದರಂತೆ. ಇಂಥ ಮಾತಿನಿಂದ ಅವರ ಅಲ್ಪತನ ಬೆಳಕಿಗೆ ಬರುವುದೊಂದೇ ಅಲ್ಲ, ನಾಡಿನ ಅವನತಿಗೆ ಅಂಥವರೇ ಕಾರಣ ಎಂಬುದೂ, ಅವರೇ ಜಾತಿಗಳನ್ನು ಹುಟ್ಟು ಹಾಕಿದರೆನ್ನುವುದೂ ಸ್ಪಷ್ಟವಾಗುತ್ತದೆ. ಪುರೋಹಿತ ಪ್ರಜ್ಞೆ ಕಾವಿಯ ವೇಷ ತೊಟ್ಟು, ಜಾತೀಯತೆಯನ್ನುಳಿಸಿಕೊಂಡು, ದೇಶವನ್ನು ಅಧೋಗತಿಗೆ ತಳ್ಳುವ ಸನ್ನಾಹದಲ್ಲಿದೆ. ಜಗತ್ತು ಯಾವ ದಿಕ್ಕಿನಲ್ಲಿ ಸಾಗುತ್ತಿದೆಯೆನ್ನುವ ವ್ಯಾವಹಾರಿಕ ಜ್ಞಾನವೂ ಅದಕ್ಕಿಲ್ಲವೆಂದು ತೋರುತ್ತದೆ.

ರಾಜರ ಸಿಂಹಾಸನವುರುಳಿ ಕಿರೀಟ ಪುಡಿಪುಡಿಯಾಗಿದೆ; ಆದರೂ ಈ ಸರ್ವಶಕ್ತರೂ ಸರ್ವಜ್ಞರೂ, ದೂರ್ವಾಸ ಸದೃಶರೂ, ವೈರಾಗ್ಯ ಶಿರೋಮಣಿಗಳೂ ಆದ ಸನ್ಯಾಸಿಗಳ ಸಿಂಹಾಸನವಾಗಲಿ, ಅವರ ಮಣಿಮಕುಟವಾಗಲಿ, ಅಡ್ಡಪಲ್ಲಕ್ಕಿಯಾಗಲಿ, ಅಂಗರಕ್ಷದಳ ವಾಗಲಿ ಅಥವಾ ಅವರ ಅಟ್ಟಹಾಸವಾಗಲಿ ಹೋಗದಿರುವುದು ಸನ್ಯಾಸಿಧರ್ಮಕ್ಕೇ ವಿಸಂಗತವಾಗಿದೆ. ಮೇಲಾಗಿ ಅವರು ಬಳಸುವ ‘ನಾವು’ ಕಾಲೋಚಿತವಾಗಿಲ್ಲ. ನಾನತ್ವ ಹೋಗುವ ತನಕ ಸಿದ್ದಿ ಲಭಿಸುವುದಿಲ್ಲವೆನ್ನುವವರೇ ನಾವತ್ವ ಉಳಿಸಿಕೊಂಡಿದ್ದಾರೆ. ಸರ್ವವಿರಕ್ತರಾಗಬೇಕಾದವರಲ್ಲಿಯೇ ಸರ್ವಾನುರಕ್ತಿಯನ್ನು ಕಾಣಬಹುದಾಗಿದೆ. ಜಾತಿ ಕುಲಗಳಿಂದ ದೂರವಾಗಿರಬೇಕಾದವರೇ ಜಾತೀಯತೆಯ ಉದ್ಧಾರಕರಾಗಿದ್ದಾರೆ. ತ್ಯಾಗದ ಔದಾರ್ಯದ ಪ್ರೇಮದ ಅಹಿಂಸೆಯ ನಿರಹಂಕಾರದ ನಿರ್ಲಿಪ್ತತೆಯ ಸಂಕೇತವಾಗಿರಬೇಕಾದ ಕಾವಿ ಭೋಗದ ದ್ವೇಷದ ಅಹಂಕಾರದ ಮನೋವಿಕಾರದ ಅನಾಚಾರದ ಪ್ರತೀಕವಾಗು ತ್ತಿರುವುದು ದುರ್ದೈವದ ಸಂಗತಿಯಾಗಿದೆ. ಮತ್ತೊಂದು ನಗೆಪಾಟಲಿನ ಸಂಗತಿ ಎಂದರೆ ಸಭೆ ಸಮಾರಂಭಗಳಲ್ಲಿ ರಾಷ್ಟ್ರಪತಿ ಬಂದಾಗಲೂ ಈ ಸನ್ಯಾಸಿಗಳು ಸಭಿಕರಂತೆ ಮೇಲೆದ್ದು, ಅವರಿಗೆ ಮರ್ಯಾದೆ ಸಲ್ಲಿಸದಿರುವುದು. ಒಂದು ರಾಷ್ಟ್ರದ ಸರ್ವೋಚ್ಚ ಪ್ರತಿನಿಧಿ ರಾಷ್ಟ್ರಪತಿ; ರಾಷ್ಟಧ್ವಜದಂತೆ ಅವನೂ ರಾಷ್ಟ್ರದ ಸಂಕೇತ.  ರಾಷ್ಟ್ರದಲ್ಲಿ ಅವನಿಗಿಂತ ದೊಡ್ಡವರು ಯಾರೂ ಇಲ್ಲ; ಇರಬಾರದು. ಸನ್ಯಾಸಿಗಳಿದ್ದ ಕಡೆ ರಾಷ್ಟ್ರಪತಿ ಹೋಗದಿರುವುದು ಶ್ರೇಯಸ್ಕರ; ಹೋಗಬೇಕಾದರೆ ಸ್ಥಾನದ ಮಾನ ಗೌರವಗಳನ್ನು ಕಾಪಾಡಿ ಕೊಳ್ಳಬೇಕಾದ್ದು ಅದರ ಧರ್ಮ. ಕುವೆಂಪು ಅವರ ಸಾತ್ವಿಕ ಕ್ರೋಧಕ್ಕೆ ಇಷ್ಟೇ ಅಲ್ಲ, ಇನ್ನೆಷ್ಟೋ ಪ್ರೇರಣೆ ಪ್ರಚೋದನೆಗಳಿವೆ ಯೆಂಬುದನ್ನು ಲೋಕಾನುಭವವುಳ್ಳವರು ಬಲ್ಲವರಾಗಿದ್ದಾರೆ.

ಪುರಾಣಾಗಮ ಶಾಸ್ತ್ರಗಳಲ್ಲಿ ಹೇಳಿರುವುದೆಲ್ಲ ನಿಜವಲ್ಲ; ಅವುಗಳಲ್ಲಿ ಸುಳ್ಳಿನ ಕಂತೆಯೂ ಹಾಸುಹೊಕ್ಕಾಗಿ ಹೆಣೆದುಕೊಂಡು ಸತ್ಯವನ್ನು ಮರೆಮಾಚುತ್ತದೆ. ಮಠಾಧಿಪತಿಗಳು ಆ ಸುಳ್ಳಿನ ಕಂತೆಗೆ ಮತ್ತಷ್ಟು ಸುಳ್ಳು ಸೇರಿಸಿ, ವಂಚನೆ ಕುಯುಕ್ತಿಗಳ ಮಾರ್ಗಹಿಡಿದು, ಜನರಿಗೆ ಮಂಕುಬೂದಿ ಎರಚಿ, ಅವರ ಮನೋರಾಜ್ಯದಲ್ಲಿ ಸರ್ವಾಧಿಕಾರವನ್ನು ಸಂಸ್ಥಾಪಿಸುತ್ತಾರೆ.

ಸುಳ್ಳಿನ ಮಾಲೆಯ ಕೊರಳಿಗೆ ಸೂಡಿ
ಕಳ್ಳನೊಬ್ಬನನು ಗುರುವನು ಮಾಡಿ
ಬಡವರ ಹೊನ್ನನು ಕಾಣಿಕೆ ನೀಡಿ
ಧರ್ಮವ ಮೆರೆವರ ನೋಡಯ್ಯ![30]

ಮಠಾಧಿಪತಿಗಳ ವ್ಯಕ್ತಿತ್ವವನ್ನು ಕುವೆಂಪು ಅವರಂತೆ ಸ್ಪಷ್ಟವಾಗಿ ನೈಜವಾಗಿ ಮತ್ತಾರೂ ಚಿತ್ರಿಸಲಾರರು.

ಧರ್ಮದ ಮುಸುಕಿನಲ್ಲಿ ಅಧರ್ಮವನ್ನು ಹರಡುವ ದೈವದ್ರೋಹಿಗಳು ಅವರು. ಅವರು ಕಳ್ಳರು ಮಾತ್ರವಲ್ಲ, ಢಕಾಯಿತರು ಕೂಡ. ಸಹಸ್ರಾರು ವರ್ಷಗಳಿಂದ ಕಾಲೊತ್ತಿಸಿಕೊಂಡು ಅಡ್ಡಪಲ್ಲಕ್ಕಿ ಮೆರೆವಣಿಗೆ ಮಾಡಿಸಿಕೊಳ್ಳುತ್ತಿದ್ದ ಈ ಜನಕ್ಕೆ, ಕಾಲೊತ್ತುವ ಅಡ್ಡಪಲ್ಲಕ್ಕಿ ಹೊರುವ ಜನರಿಲ್ಲದೆ ಹೋಗಿಬಿಟ್ಟರೆ ಗತಿಯೇನು ಎಂಬ ದಿಗಿಲು ಮೂಲ ಕಾರಣವಾಗಿ ಇವರು ಹರಿಜನರ ಕೇರಿಗಳಿಗೆ ಹೋಗುತ್ತಿರುವುದು, ಬೇರೇನೂ ಇಲ್ಲ, ಬರೀ ಸ್ವಾರ್ಥ,[31] ಎಂದು ಕೆಲವು ಸ್ವಾಮಿಗಳನ್ನು ಹೆಸರಿಸಿ ತೀಕ್ಷ್ಣವಾಗಿ ಖಂಡಿಸಿದ್ದಾರೆ.

ಪುರೋಹಿತಶಾಹಿ ಕೇವಲ ಹಿಂದೂ ಧರ್ಮಕ್ಕೆ ಸೀಮಿತವಾದದ್ದಲ್ಲ, ಇಡೀ ಮನುಕುಲಕ್ಕೆ ಅಂಟಿಕೊಂಡು ಬಂದ ಶಾಪವೆಂದು ಕುವೆಂಪು ಮತ್ತೆ ಮತ್ತೆ ಸ್ಪಷ್ಟಪಡಿಸಿದ್ದಾರೆ. ಹಿಂದೂಮತದ ಬೇರೆ ಬೇರೆ ಶಾಖೆಗಳಲ್ಲಿ ಅದರ ಕರಾಳನೃತ್ಯ ನಡೆದಿದ್ದರೂ ಮೂಲತಃ ಬ್ರಾಹ್ಮಣರೇ ಅದರ ಮೂಲ ಪುರುಷರೆಂದೂ, ಆ ಕುಟಿಲ ಕಲೆಯಲ್ಲಿ ಅವರು ಸಿದ್ಧಹಸ್ತರೆಂದೂ ಅವರು ಭಾವಿಸಿದ್ದಾರೆ. ಅವರು ಬ್ರಾಹ್ಮಣ ಎನ್ನುವ ಪದವನ್ನು ಸಾಮಾನ್ಯವಾಗಿ ಪುರೋಹಿತ ಪದಕ್ಕೆ ಪರ್ಯಾಯವಾಗಿ ಬಳಸುವಂತೆ ತೋರುತ್ತದೆ. ಈ ಪುರೋಹಿತ ಬ್ರಾಹ್ಮಣರೇ ರಕ್ತಪಿಪಾಸುಗಳು, ಶೋಷಕರು, ಕೌಟಿಲ್ಯರು. ಈ ಹೊತ್ತು ಚಾತುರ್ವರ್ಣ್ಯದ ಬಗ್ಗೆ ಸಮರ್ಥನೆಯನ್ನು ನೀಡುವ ಪಂಡಿತ ದಿಗ್ಗಜರೂ ಕವಿ ಸಾರ್ವಭೌಮರೂ ಪುರೋಹಿತ ಸಂಪ್ರದಾಯಕ್ಕೆ ಸೇರಿದವರೇ. ಮಹಾವಿಚಾರವಾದಿಯೆಂದು ಹೆಸರಾಗಿರುವ ಗಾಂಧೀಜಿ ಸಹ ಈ ವಿಷಯದಲ್ಲಿ ಮುಗ್ಗರಿಸಿದ್ದಾರೆ. ಪ್ರಾಯಶಃ ಬ್ರಾಹ್ಮಣ ವರ್ಗದ ಅಷ್ಟಪಾದಿ ಮುಷ್ಟಿಯಿಂದ ಪಾರಾಗಲಾರದೆ ವರ್ಣಚತುಷ್ಟಯವನ್ನೊಪ್ಪಿಕೊಂಡಂತೆ ತೋರುತ್ತದೆ.

ಕುವೆಂಪು ಸಾಹಿತ್ಯದಲ್ಲಿ ಬರುವ ಬ್ರಾಹ್ಮಣವರ್ಗದ ಶಿಖರ ಪ್ರತಿನಿಧಿ ‘ಶೂದ್ರತಪಸ್ವಿ’ ನಾಟಕದಲ್ಲಿ ಬರುವ ‘ಬ್ರಾಹ್ಮಣ’. ‘ಶೂದ್ರನ ತಪಕೆ ಮುನಿದ ಧರ್ಮಶಾಪಂ’ ತನ್ನ ಮಗನಿಗೆ ತಟ್ಟಿ ಮೃತನಾದನೆಂದು ಅವನು ಭಾವಿಸುತ್ತಾನೆ.

ಶೂದ್ರನ್ ತಪಂಗೆಯ್ವಂದು ಅಧರ್ಮಕ್ಕೆ,
ವರ್ಣಾಶ್ರಮ ಧರ್ಮದುಲ್ಲಂಘನೆಯ ಪಾಪಕ್ಕೆ,
ನಿನ್ನ ಬಾಲ ಪ್ರಜೆಯೊರ್ವನ್ ಬಲಿಯಾದನ್[32]

ಎಂದು ಬ್ರಾಹ್ಮಣ ಶ್ರೀರಾಮಚಂದ್ರನ ವ್ಯಂಗ್ಯವಾಣಿಯನ್ನು ಲೆಕ್ಕಿಸದೆ ನಾಲಗೆಯನ್ನು ಬೆಳೆಸುತ್ತಾನೆ. ಶಂಬುಕನಂಥ ಮಹಾಯೋಗಿಯನ್ನು ಹೀಯಾಳಿಸುವ ವರ್ಣಗರ್ವಾಂಧನಿಗೆ, ಶಾಸ್ತ್ರ ಮೂರ್ಖನಿಗೆ ಬುದ್ದಿಕಲಿಸುವುದೆಂತು ಎಂದು ಶ್ರೀರಾಮ ಚಿಂತಿಸುತ್ತಾನೆ. ‘ಅಧರ್ಮಸಂಹಾರಮೆ ಮೃತ್ಯುವಿಜಯಂ’ ಎನ್ನುವ ಅವರ ಮಾತಿನಲ್ಲಿ ಅಧರ್ಮವನ್ನೆಸಗುವ ಬ್ರಾಹ್ಮಣನಾಗಲಿ ಕ್ಷತ್ರಿಯನಾಗಲಿ ನಿರ್ನಾಮ ಹೊಂದುತ್ತಾನೆನ್ನುವ ಋತನಿಯಮದ ಅಭಿವ್ಯಕ್ತಿ ಇದೆ. ತಪಸ್ಸು ಪೂಜ್ಯಕರ್ಮ, ತಪಸ್ಸು ಮಾಡುವವನು ಪೂಜ್ಯ, ಪೂಜ್ಯಹನನ ಪಾಪಕರವೆಂದು ಒಪ್ಪಿಕೊಂಡ ಬ್ರಾಹ್ಮಣನೇ

ತರ್ಕಕೆ ಮಿಗಿಲ್ ಶ್ರುತಿ ವಾಕ್ಯಮೈಸೆ!
ತಪಕ್ಕನಧಿಕಾರಿ ಶೂದ್ರನ್
ಎಂಬುದದು ಶಾಸ್ತ್ರ ಪ್ರಸಿದ್ಧಂ.
…………………..
ಪಾಲ್ ಪೂಜ್ಯಮಾಡೊಡಂ,
ಜೀವಾತುವಾದೊಡಂ,
ತ್ಯಾಜ್ಯಮಾ ನಾಯ ಪಾಲ್
ನಾಯ ಪಾಲ್ಗೆಣೆ ಶೂದ್ರನ ತಪಂ![33]

ಎಂದು ತನ್ನ ಪಾಂಡಿತ್ಯದ ಗಂಟನ್ನು ಶ್ರೀರಾಮನ ಮುಂದೆ ಬಿಚ್ಚುತ್ತಾನೆ. ಶೂದ್ರರು ತಪಸ್ಸು ಮಾಡುವುದಾದರೆ, ವಿದ್ಯೆ ಕಲಿಯುವುದಾದರೆ, ಗೀತೋಪನಿಷತ್ತುಗಳನ್ನು ಓದುವುದಾದರೆ, ಕಲಿಯುಗದಲ್ಲಿ ಧರ್ಮ ಒಂಟಿಕಾಲಿನಲ್ಲಿ ಕುಂಟಿ, ತತ್ತರಿಸಿ, ಸಾಯುತ್ತದೆಂದು ಅವನು ಸಾರುತ್ತಾನೆ. ಶ್ರೀರಾಮನೇ ಬಂದು ಮುಂದೆ ನಿಂತರೂ ಕಲಿಯುಗದ ಬ್ರಾಹ್ಮಣ ತನ್ನ ಹೀನಗುಣವನ್ನು ಬಿಟ್ಟುಕೊಡಲಾರ. ಔದಾರ್ಯದಿಂದ ವರ್ತಿಸಲಾರ ಎಂಬ ಸಂಗತಿಗೆ ಈ ಪ್ರಕರಣ ಸಾಕ್ಷಿಯಾಗಿದೆ. ‘ಸನ್ಮತಿಯ ಸತ್ಕೃತಿಗೆ ಶಾಸ್ತ್ರದನೆರಂ’ ಬೇಕೆ? ಎನ್ನುವಲ್ಲಿ ವೈಚಾರಿಕತೆ ಶುದ್ಧರೂಪದಲ್ಲಿ ಎದ್ದುಕಾಣುತ್ತದೆ. ಇಷ್ಟುಭಾವಪೂರ್ಣವಾಗಿ, ಕಾವ್ಯಮಯವಾಗಿ, ಅತ್ಯಂತನಾಟಕೀಯವಾಗಿ ಗೊಡ್ಡು ಸಂಪ್ರದಾಯದ ಸಮಸ್ಯೆಯನ್ನು ವಿಶ್ಲೇಷಿಸಿ, ಸಮಾಜೋ ದ್ಧಾರದ ಹಾಗೂ ವ್ಯಕ್ತಿ ಕಲ್ಯಾಣದ ಮಾರ್ಗವನ್ನು ತೋರಿಸುವಂತಿರುವ ಮೌಢ್ಯವನ್ನು ವೈಚಾರಿಕ ಕ್ರಾಂತಿಗೆ ಪರಿವರ್ತಿಸುವಲ್ಲಿ ಈ ನಾಟಕ ತುಂಬ ಯಶಸ್ವಿಯಾಗಿದೆ. ಇಲ್ಲಿ ಕಾಣುವುದು ಬ್ರಾಹ್ಮಣದ್ವೇಷವಲ್ಲ, ಬ್ರಾಹ್ಮಣನ ಉದ್ಧಾರ; ಶೂದ್ರತಪಸ್ವಿಯ ವಿಜಯ ಮಾತ್ರವಲ್ಲ, ಬ್ರಾಹ್ಮಣನ ವಿಜಯವೂ ಅಹುದು. ‘ಆರಾದರೇನ್? ಆರಾಧ್ಯರ್ ತಪೋದನರ್’ ಎನ್ನುವ ಬ್ರಾಹ್ಮಣ ಶತಶತಮಾನಗಳಿಂದ ಅಂಟಿಕೊಂಡು ಬಂದಿದ್ದ ಮೌಢ್ಯದಕಾಳಿಕೆಯನ್ನು ಕಳೆದುಕೊಂಡು, ಆತ್ಮತೇಜನಾಗಿ, ಕಲಿಯುಗದ ಹಾರುವನಂತಲ್ಲದೆ ಆರ್ಷೇಯ ಕಾಲದ ಅಪ್ಪಟ ಬ್ರಾಹ್ಮಣನಾಗಿ ವಿರಾಜಿಸುತ್ತಾನೆ. ಅಂದ ಮೇಲೆ ಈ ನಾಟಕದಲ್ಲಿ ದಿಟದ ದ್ವಿಜನನ್ನು ಗುರುತಿಸುವ ಪ್ರಯತ್ನ ನಡೆದಿದೆಯೆಂದೇ ಹೇಳಬೇಕು.

‘ಬ್ರಾಹ್ಮ ನಾಯಿ ಶೂದ್ರ ಕೋಳಿ’ ಎಂಬ[34] ಕವಿತೆ ಬ್ರಾಹ್ಮಣರ ಕ್ರೂರವರ್ತನೆಯನ್ನೂ ಕಟಪಪ್ರವೃತ್ತಿಯನ್ನೂ ನಿರ್ದಾಕ್ಷಿಣ್ಯವಾಗಿ ವಿಡಂಬಿಸುತ್ತದೆ.

ಶೂದ್ರ ಕೋಳಿ ಮೇಯುತಿತ್ತು
ಗಲ್ಲಿಯಲ್ಲಿ;
ಬ್ರಾಹ್ಮನಾಯಿ ಹೊಂಚುತಿತ್ತು
ಅಲ್ಲಿ ಇಲ್ಲಿ

ಶೂದ್ರ ‘ಕೋಳಿ’ ಮತ್ತು ‘ಬ್ರಾಹ್ಮನಾಯಿ’ ಎಂಬ ಸಮಸ್ತ ಪದಗಳನ್ನಿಲ್ಲಿ ರೂಪಕಾರ್ಥ ದಲ್ಲಿಯೂ ಕರ್ಮಧಾರಯ ಸಮಾಸದಲ್ಲಿಯೂ ಬಳಸಿದೆಯೆಂಬುದನ್ನು ಓದುಗರು ಗ್ರಹಿಸಬೇಕು. ‘ಶೂದ್ರ ಕೋಳಿಗೇನು ಗೊತ್ತು, ಪಾಪ, ನಾಯಿ ಬ್ರಾಹ್ಮ ಎಂದು?’ ಎಂಬ ಮುಂದಿನ ಸಾಲುಗಳಲ್ಲಿ ಈ ವಿವರಣೆಗೆ ಸಮರ್ಥನೆ ದೊರೆಕುತ್ತದೆ. ಶೂದ್ರರ ಮನೆಗಳ ನಾಯಿ ಕುರಿ ಕೋಳಿಗಳಲ್ಲಿ ದ್ವೇಷಕ್ಕೆಡೆಯಿಲ್ಲ, ಒಟ್ಟಿಗೆ ಒಂದೇ ತೊಟ್ಟಿಯಲ್ಲಿ ನೀರು ಕುಡಿಯುತ್ತವೆ, ಅನ್ನ ಮುಕ್ಕುತ್ತವೆ, ಸಸ್ನೇಹವಾಗಿ ಆಟವಾಡುತ್ತವೆಯೆಂಬುದೂ, ಕುರಿ ಕೋಳಿಗಳಿಗೆ ಅಪಾಯವೊದಗದಂತೆ ನಾಯಿ ಕಾವಲಾಗಿರುತ್ತದೆಂಬುದೂ ಬಲ್ಲವರಿಗೆ ತಿಳಿದ ವಿಷಯವಾಗಿದೆ. ‘ತಮ್ಮ ಮನೆಯ ನಾಯಿಯಂತೆ ಎಂದು’ ಶೂದ್ರ ಕೋಳಿ ನಿರಾಳವಾಗಿ ಮೇಯುತ್ತಿರುತ್ತದೆ.

ಬ್ರಾಹ್ಮನಾಯಿ ಅಪ್ಪಟ ಕಂತ್ರಿ
ಆದರೇನು? ಕಪಟ ಕುತಂತ್ರಿ!
ಕೊರಳಿನಲ್ಲಿ ಜನ್ನ ಪಟ್ಟೆ;
ಒಡಲಿನಲ್ಲಿ ಖಾಲಿ ಹೊಟ್ಟೆ!
ಮೆಲ್ಲ ಮೆಲ್ಲ ಸುಳಿದು ಸುತ್ತಿ
ಹತ್ತೆ ಬಂತು;
ಸಾಧು ಎಂದು ಶೂದ್ರಕೋಳಿ
ನೋಡೆ ನಿಂತು,
ಹಾರಿ ನೆಗೆದು ಹಿಡಿದುಕೊಂಡು
ಓಡಿ ಹೋಯ್ತು!

ಹಾರುವರ ಬೀಡಿನ ಗೋಡೆಯ ಮರೆಯಲ್ಲಿ ತಿಂದು ತೇಗುತ್ತದೆ. ಈ ಹೊತ್ತು ಗುಡಾಣ ಗಟ್ಟಲೆ ಹೆಂಡ ಕುಡಿದು, ಸೇರುಗಟ್ಟಲೆ ಮಾಂಸ ಗೋಮಾಂಸವಾದರೂ ಸರಿಯೆ, ಸೂಕರಮಾಂಸವಾದರೂ ಸರಿಯೆ ತಿಂದು, ಶೃಂಗೇರಿ ಉಡುಪಿ ಮಠಗಳಿಂದ ತೀರ್ಥಪ್ರಸಾದಗಳ ಮೂಲಕ ಪಾವಿತ್ರ್ಯವನ್ನುಳಿಸಿ ಕೊಂಡಿರುವ ಆಧುನಿಕ ಬ್ರಾಹ್ಮಣರು ಹಲವರಿದ್ದಾರೆಂಬುದು ವಾಸ್ತವ ಸತ್ಯ. ಅವರು ಮಾಂಸತಿಂದರೂ ಬ್ರಾಹ್ಮಣ್ಯಕ್ಕೆ ಸೂತಕವಿಲ್ಲ, ಹೆಂಡ ಕುಡಿದರೂ ಸಂಪ್ರದಾಯ ಬುದ್ದಿಗೆ ಮುಟ್ಟು ಚಿಟ್ಟಲ್ಲ. ಹುಂಜನನ್ನು ಚಿಕ್ಕಂದಿನಿಂದ ಸಾಕಿ ಸಲಹಿದ ಶೂದ್ರ ಹುಡುಗಿ ಗೋಳ್ಗರೆಯುವಾಗ ಹಾರುವರ ಹುಡುಗಿಯರು ಅವಳನ್ನು ಗೇಲಿಮಾಡಿ, ನಗುತ್ತಾರಂತೆ. ಎದ್ದ ಹಾರುವರ, ಬಿದ್ದ ಶೂದ್ರರ ಇಂದಿನ ಸಾಮಾಜಿಕ ಪರಿಸ್ಥಿತಿಗೆ, ಹಾರುವರ ನೃಶಂಸತ್ವಕ್ಕೆ ಈ ಕವಿತೆ ಕನ್ನಡಿಹಿಡಿಯುತ್ತದೆ.

ಶೂದ್ರನ ಕವಿತಾರಚನೆಗಿಂತ ಧರ್ಮವಧೆ ಬೇರಿಲ್ಲವೆನ್ನುವ ಜನ ಜಗತ್ತಿನ ಮಹಾಕವಿಗಳೆಲ್ಲ ಸಾಮಾನ್ಯವಾಗಿ ಶೂದ್ರರೆನ್ನುವುದನ್ನು ಮರೆಯುತ್ತಾರೆ. ವ್ಯಾಸ ವಾಲ್ಮೀಕಿ ಕಾಳಿದಾಸ ಹೋಮರ್ ವರ್ಜಿಲ್ ಮುಂತಾದವರು ಶೂದ್ರರಲ್ಲವೆ? ಕುವೆಂಪು ಅವರ ಕಾವ್ಯ ಜೀವನದ ಪ್ರಾರಂಭದಲ್ಲಿ ಕೆಲವು ಬ್ರಾಹ್ಮಣರು ‘ಈ ಶೂದ್ರನಿಂದ ಕಾವ್ಯರಚನೆ ಹೇಗಪ್ಪ ಸಾಧ್ಯ ವಾದೀತು?’ ಎಂದು ಆಡಿ ಕೊಂಡದ್ದೂ ಉಂಟು. ವೆಂಕಟಕೃಷ್ಣಯ್ಯನವರೇ ಅವರನ್ನು ಕರೆಸಿ, ಮಾತಾಡಿ, ಒಕ್ಕಲಿಗರೆಂದು ತಿಳಿದ ಕೂಡಲೇ ‘ಯಾವ ಹುತ್ತದಲ್ಲಿ ಎಂಥ ಹಾವಿದೆಯೋ’ ಎಂದು ಉದ್ಗಾರ ತೆಗೆದರಂತೆ.

‘ಕವಿತೆ ಭೂಪಾಲರರಮನೆಯಲ್ಲಿ ಕೈಕೆಸರು
ಮಾಡಿಕೊಳದೆಯೆ ಮೊಸರನುಣುತಿರ್ದ ಪಂಡಿತರ
ದಿವ್ಯಜಿಹ್ವಾಲಸದ್ರಂಗದಲಿ ಕುಣಿದಾಡಿ
ಸುಳಿದಾಡಿ ನಲಿದಾಡಿದಾ ನೀನು, ಹಾ! ಇಂದು
ಕೊಳೆತು ನಾರುವ ರೈತನೊಡಗೂಡಿ ಒದ್ದಾಡಿ,
ಗಂಧ ಪುನುಗು ಜವಾದಿ ಕಸ್ತುರಿಗಳನುಳಿದು
ಸೆಗಣಿ ಗಂಪಾಘ್ರಾಣಿಪಂತಾಯ್ದೆ?
…………………….
ಅಬ್ಬಬ್ಬ, ಕವಿ ಕಾಲಕೇನಾದರಾಗುತದೆ![35]

ಎಂದು ಶೂದ್ರಾತಿ ಶೂದ್ರರ ಏಳ್ಗೆಯನ್ನು ಕಂಡರಾಗದ ಜನ ಕಲಿಯುಗದಲ್ಲಿ, ಧರ್ಮ ಗ್ಲಾನಿಯಾಗಿ, ಆಕಾಶವೇ ಕಳಚಿಬಿದ್ದಂತೆ ಉಗ್ಗಡಿಸುತ್ತಾರೆ. ಚಾರಿತ್ರಕ ಪ್ರಜ್ಞೆಯಿಲ್ಲದ, ಸತ್ಯನಿಷ್ಠೆಯಿಲ್ಲದ ಅವರು ಜಗತ್ತಿನಲ್ಲಿ ನಡೆಯುವ ಮಹಾಕಾರ್ಯಗಳೆಲ್ಲ ತಮ್ಮಿಂದಲೇ ನಡೆದುವೆಂಬಂತೆ ಭುಜತಟ್ಟಿಕೊಳ್ಳುತ್ತಾರೆ. ಸ್ವಾತಿಯ ಮುತ್ತಿನಲ್ಲಿ ಮಾತ್ರ ಬಿದ್ದ ಮಳೆ ಮುತ್ತಾಗುತ್ತದೆಯೇ ಹೊರತು, ಊಷರಭೂಮಿಯಲ್ಲಿ ಬಿದ್ದದ್ದು ವ್ಯರ್ಥವಾಗುತ್ತ ದೆನ್ನುವುದನ್ನು ಅವರರಿಯರು. ಮತ್ತೆ ಕುವೆಂಪು ಪ್ರವಾದಿಯಂತೆ ಅವರಿಗೆ ಅವರ ಮಾತಿನಲ್ಲಿಯೆ ಉತ್ತರ ಕೊಡುತ್ತಾರೆ.

ನಾಮಮುದ್ರೆವಿಭೂತಿಗಳ ಬಳಿದುಕೊಂಬವರು
ಕತ್ತೆಯಂದದಿ ಗದ್ದೆಯಲಿ ಗೆಯ್ದು ಮೈ ಬೆವರು
ಸುರಿಸಿ ಗೊಬ್ಬರ ಮಣ್ಣು ಬಳಿದು ಕೊಂಬರಿಗಿಂತ
ಮೇಲೆಂಬ ಭಾವ ತಲೆಕೆಳಗಾಗಿ ಹೋಗುತಿದೆ

ಸುತ್ತಮುತ್ತಣ ಸಮಾಜದಲ್ಲಿ ಕಣ್ಣಿಗೆ ರಾಚುವ ಅನ್ಯಾಯಗಳು; ಸಾಂಪ್ರದಾಯಕ ಸಮಾಜ ಭಕ್ಷಕರ ಅಹಂಕಾರಮೂಲವಾದ ಹಾನಿಕಾರಕ ಕ್ರೂರ ಕೃತ್ಯಗಳು ‘ಗೊಬ್ಬರ’ ವೆಂಬ ಯಃಕಶ್ಚಿತ್ ವಿಷಯವನ್ನು ವಸ್ತುವಾಗುಳ್ಳ ಕವಿತೆಯಲ್ಲಿ ನಿರಾಡಂಬರವಾಗಿಯಾದರೂ ವ್ಯಂಗ್ಯವಾಗಿ ಪ್ರತಿಬಿಂಬಿತವಾಗಿರುವುದು ಕವಿಯ ಔಚಿತ್ಯ ಪ್ರಜ್ಞೆಗೂ, ಕವಿತೆಯ ಸಫಲತೆಗೂ ಸಾಕ್ಷಿಯಾಗಿದೆ. ಮುಂಬರುವ ಕ್ರಾಂತಿಯ ಉಷಃಕಾಂತಿ ಕವಿಯ ವೈಚಾರಿಕ ಪ್ರತಿಭೆಗೆ ಸ್ಪಷ್ಟಗೋಚರವಾಗುತ್ತದೆ.

ಮತ ಮಾನವನ ಸಂಸ್ಕೃತೀಕರಣಕ್ಕೆ, ಅವನನ್ನು ಅಧ್ಯಾತ್ಮದ ಕಡೆಗೆ ಮುಖ ಮಾಡಿಸುವುದಕ್ಕೆ ತುಸುಮಟ್ಟಿಗೆ ಕಾರಣವೆಂದೊಪ್ಪಿಕೊಂಡರೂ ಅದು ಸೃಷ್ಟಿಸಿರುವ ಸಮಸ್ಯೆಗಳಿಗೆ, ಒಟ್ಟಯಿಸಿರುವ ಕೇಡುಗಳಿಗೆ,ಹರಡಿರುವ ಮೌಢ್ಯಕ್ಕೆ ಒಡ್ಡಿರುವ ದಾಸ್ಯಕ್ಕೆ, ಪ್ರಚೋದಿಸಿರುವ ಯುದ್ಧಗಳಿಗೆ, ಹಬ್ಬಿಸಿರುವ ಭೇದಭಾವನೆಗಳಿಗೆ ಪಾರವಿಲ್ಲ. ಆದರಿಂದಾಗಿ ದೇಶ ದೇಶಗಳ ನಡುವೆ, ಜನ ಜನರ ನಡುವೆ ಬಿಟ್ಟ ಬಿರುಕು ದಿನೇ ದಿನೇ ಆಗಲವಾಗತೊಡಗಿದೆ. ಅದು ಬರಬರುತ್ತ ಅಜ್ಞಾನ ದಾರಿದ್ರ್ಯಗಳನ್ನು ಪೋಷಿಸುತ್ತ, ಶೋಷಣೆಯ ಸಂಕೇತವಾಗಿದೆ. ಅದು ವೈಚಾರಿಕತೆಗೆ ಉರುಳಾಗಿ, ವಿಜ್ಞಾನದ ಬೆಳೆವಣಿಗೆಗೆ ಅಡಚಣೆಯಾಗಿದೆ. ಅದು ಮುಗ್ಧ ಜನರನ್ನು ಮರುಳು ಮಾಡಿ, ನಿರಂತರ ಮಾತ್ರವಲ್ಲ ಆನುವಂಶಿಕ ದಾಸ್ಯಕ್ಕೆ ಸಿಕ್ಕಿಸುತ್ತದೆ. ಅದು ವಿಚಾರ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತದೆ. ಶಾರೀರಕ ದಾಸ್ಯಕ್ಕಿಂತ ಮಾನಸಿಕ ದಾಸ್ಯವೇ ಅದರ ಗುರಿ. ರಾಜಕೀಯ ದಾಸ್ಯಕ್ಕಿಂತಲೂ ಮತೀಯ ದಾಸ್ಯ ಅಪಾಯಕಾರಿಯೆಂಬ ಸಂಗತಿ ಸಾವಿರಾರು ವರ್ಷಗಳಿಂದ ದಾಸ್ಯವಿನಾ ಸ್ವಾತಂತ್ರ್ಯದ ರುಚಿಯನ್ನನುಭವಿಸದ ಮತ ಸಂಮೂಢರಿಗೆ ಅರ್ಥವಾಗುವುದಿಲ್ಲ.

ಮತ ಮೂಲದಲ್ಲಿ ಅಧ್ಯಾತ್ಮ ಸಾಧನೆಯ ಮಾರ್ಗವಾದರೂ, ದೇವತಾಶಾಸ್ತ್ರ, ತತ್ವಶಾಸ್ತ್ರ, ಮನಶ್ಶಾಸ್ತ್ರಾದಿ ಜ್ಞಾನಶಾಖೆಗಳ ಉಗಮಕ್ಕೆ ಕಾರಣವಾದರೂ, ಕಾಲ ಕ್ರಮೇಣ ಪುರೋಹಿತರ ಹಾಗೂ ರಾಜಕಾರಣಿಗಳ ಕೈಗೊಂಬೆಯಾಗುತ್ತದೆ, ಅವರ ಊಳಿಗದ ದಾಸಿಯಾಗುತ್ತದೆ. ಮತ ಮೌಢ್ಯವೆಂಬ ನಿತ್ಯರೋಗ ಅವರ ನಾಡಿ ನಾಡಿಗಳಲ್ಲಿ ಮಾತ್ರವಲ್ಲ, ಎಲುಬಿನಲ್ಲಿಯೂ ಸೇರಿಕೊಂಡಿದೆ. ‘ದೊರೆ ಮತ್ತು ಪುರೋಹಿತ ಕೂಡಿದಾಗ ಹುಟ್ಟಿತು ಮತ!’ ‘ಜಲಗಾರ’ದ ಎರಡನೆಯ ತರುಣ ಹೇಳುವ ಮಾತಿನಲ್ಲಿ ಲೋಕ ವ್ಯಾಪಿಯಾದ ಸತ್ಯ ಅಡಗಿದೆ.

ಮೊದಲ ಠಕ್ಕನು ಮೊದಲ ಬೆಪ್ಪನಂ ಸಂಧಿಸಲು
ಸಂಭವಿಸಿತೆಂಬರೀ ಮತ ಎಂಬ ಮತಿ ವಿಕಾರಂ
ದೊರೆ ಪುರೋಹಿತರ್ ಅವಳಿ ಮೊಲೆಯೂಡಿ ಸಲಹಿದರದಂ
ಮತದ ಮದಿರೆಯನೀಂಟಿ ಮಂಕು ಬಡಿದಿದೆ ಜನಕೆ   ಪುಟ. ೧೯

ವಂಚನೆಯ ಪ್ರಚ್ಛನ್ನ ರೂಪವೇ ಮತ, ಅದು ದೇವರ ಹೆಸರಿನಲ್ಲಿ ಮೌಢ್ಯವನ್ನು ಹರಡುತ್ತಿದೆ; ಅದನ್ನು ಏಳ್ಗೆಯ ಏಣಿಯನ್ನಾಗಿ ಮಾಡಿಕೊಂಡು, ರಾಜರನ್ನೂ ದಂಡಾಧಿಪರನ್ನೂ ನಿಯಂತ್ರಿಸುತ್ತ ಪುರೋಹಿತರು ನಿರಂಕುಶವಾಗಿ, ಕ್ರೂರವಾಗಿ ವರ್ತಿಸುತ್ತಿದ್ದಾರೆಂದು ಎಡ್ಮಂಡ್ ಬರ್ಕ್‌ ಮುಂತಾದ ಆಲೋಚಕರು ಸ್ಪಷ್ಟಪಡಿಸಿದ್ದಾರೆ. ಯಾರೂ ಕಾಣದ, ಯಾರೂ ಹೋಗಿ ಹಿಂದಿರುಗದಿರುವ ಪರಲೋಕದ ವಸ್ತುಗಳನ್ನೂ ಆಮೋದ ಪ್ರಮೋದಗಳನ್ನೂ ವೈಭವಗಳನ್ನೂ ಮುಗ್ಧ ಅಜ್ಞಾನಿಗಳ ಮುಂದೆ ಪುರೋಹಿತರು ಮಾರಾಟಕ್ಕಿಟ್ಟಿದ್ದಾರೆ; ಮತವೊಂದು ಮಾರುಕಟ್ಟೆಯಾಗಿದೆ; ದೇವರು ಅಜ್ಞಾನಗಳೇ ಅವರ ಮೂಲ ಧನವಾಗಿವೆ. ಮತದಿಂದ ಅನೇಕ ವಿಪತ್ತುಗಳು ಸಂಭವಿಸಿವೆ ಎಂದು ಕ್ರಿಸ್ತಪೂರ್ವದಲ್ಲಿಯೇ ಲುಕ್ರೀಸ್‌ಯಸ್ ಎಂಬ ರೋಮನ್ ಕವಿ ಉಗ್ಗಡಿಸಿದ್ದುಂಟು. ಅದು ಜನರ ಅಫೀಮೆಂದು, ದಲಿತ ಜನರ ನಿಟ್ಟುಸಿರೆಂದು ಕಾರ್ಲ್ ಮಾರ್‌ಕ್ಸ್ ನುಡಿದರೆ ಅದು ಶ್ರೀಸಾಮಾನ್ಯನ ಆಧ್ಯಾತ್ಮಿಕ ವಿಕಾಸವನ್ನು ಸ್ಥಗಿತಗೊಳಿಸುವ ಮಾಧ್ಯಮಗಳಲ್ಲೊಂದೆಂದು ಲೆನಿನ್ ನುಡಿಯುತ್ತಾನೆ. ಗಾಂಧಿ ಐನ್‌ಸ್ಟೀನ್‌ರಂಥ ಮಹಾನುಭಾವರು ಮತದ ಅವಶ್ಯಕತೆಯನ್ನು ಒತ್ತಿ ಹೇಳುತ್ತಾರೆ, ನಿಜ. ಆದರೆ ಮಠದ ಬಗೆಗಿನ ಅವರ ಕಲ್ಪನೆಯೇ ಬೇರೆ. ಇಂದು ವೈರ ದ್ವೇಷ ಅಸಹನೆ ಕ್ರೌರ್ಯ ಭಿನ್ನ ಭಿನ್ನ ಮತೀಯರಿಗೆ ಸೀಮಿತವಾಗದೆ ಸ್ವಮತೀಯರಲ್ಲಿಯೂ ಪ್ರಖರವಾಗಿವೆಯೆಂಬ ಸಂಗತಿಗೆ ಅಮೆರಿಕೆಯ ಬಿಳಿಯರೂ ಕರಿಯರೂ ಸಾಕ್ಷಿಯಾಗಿದ್ದಾರೆ. ಆದ್ದರಿಂದ ಮತ ನ್ಯಾಯಕ್ಕಿಂತ ಅನ್ಯಾಯಕ್ಕೆ, ನೀತಿಗಿಂತ ಅನೀತಿಗೆ, ಅಧ್ಯಾತ್ಮವಿಕಾಸಕ್ಕಿಂತ ಪಾಪಕರ್ಮಗಳಿಗೆ ಹೆಚ್ಚು ಪ್ರೋನೀಡುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಅದು ನಿಜಕ್ಕೂ ಮದಿರೆಯಾಗಿದೆಯೆ ಹೊರತು ಮಧುವಾಗಿಲ್ಲ, ಸುಧೆಯಾಗಿಲ್ಲ.

ಪಾಶ್ಚಾತ್ಯ ರಾಷ್ಟ್ರಗಳಲ್ಲಿ ವೈಜ್ಞಾನಿಕ ಪ್ರಗತಿಯೊಂದಿಗೆ ವಿಚಾರ ಕ್ರಾಂತಿಯೂ ಅಗ್ನಿ ಪ್ರವಾಹವಾಗಿ ಮನಮನಗಳನ್ನೆಲ್ಲ ವ್ಯಾಪಿಸಿ, ಮೌಢ್ಯದಹನಮಾಡಿದ ನಂತರ, ಹಿಂದೆ ಇನ್ನೂರು ವರ್ಷಗಳಲ್ಲಿ ಆಗಬಹುದಾಗಿದ್ದ ಪ್ರಗತಿ ಕೇವಲ ಇಪ್ಪತ್ತೇ ವರ್ಷಗಳಲ್ಲಿ ಫಲಿಸುವಂತಾಗಿದೆ. ನಿರಂತರ ಪರಿವರ್ತನೆಯೇ ನಿಸರ್ಗಧರ್ಮ. ಹಳತು ಹೊಸದಾಗಬೇಕು. ಮಡುನಿಂತ ನೀರು ಆವಿಯಾಗಿ, ಮುಗಿಲಾಗಿ, ಮತ್ತೆ ಪರಿಶುದ್ಧ ಜಲವಾಗಿ ಭೂಮಿಯ ಮೇಲೆ ಬೀಳುತ್ತದೆ. ಜೀವಂತವಾದ ಬದುಕಾಗಲೀ ಸಮಾಜವಾಗಲೀ ದಿನದಿನವೂ ಹೊಸದಾಗುತ್ತಿರಬೇಕು. ಹೊಸಕಾಲಕ್ಕೆ ತಕ್ಕಂತೆ ಆಚಾರ ವಿಚಾರಗಳನ್ನು ಅಳವಡಿಸಿಕೊಳ್ಳ ದಿದ್ದರೆ ಮಾನವ ಅಧೋಗತಿಯನ್ನು ಕಾಣಬೇಕಾಗುತ್ತದೆ. ಪಶ್ಚಿಮದ ರಸಪೂರ್ಣ ಹೊಸ ಗಾಳಿಯಿಂದ ಭಾರತ ಜೀವನ ವೃಕ್ಷದ ಹಣ್ಣೆಲೆಯುದುರಿ, ಅದರ ಕೊಂಬೆ ಕೊಂಬೆಗಳಲ್ಲಿ ನವಚೈತನ್ಯ ಸಂಚಾರವಾಗಬೇಕೆಂಬುದು ಕುವೆಂಪು ಅವರ ಅಪೇಕ್ಷೆ.

ಹಳೆಮತದ ಕೊಳೆಯೆಲ್ಲ ಹೊಸಮತಿಯ ಹೊಳೆಯಲ್ಲಿ
ಕೊಚ್ಚಿ ಹೋಗಲಿ; ಬರಲಿ; ವಿಜ್ಞಾನಬುದ್ದಿ[36]

ಎಂದು ತರುಣರನ್ನು ಜಾಗೃತಗೊಳಿಸುತ್ತಾರೆ.

ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರ ಬನ್ನಿ,
ಬಡತನವ ಬುಡಮುಟ್ಟ ಕೀಳ ಬನ್ನಿ.
ಮೌಢ್ಯತೆಯ ಮಾರಿಯನು ಹೊರದೂಡಲೈತನ್ನಿ,
ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ.
ಸಿಲುಕದಿರಿ ಮತವೆಂಬ ಮೋಹದಜ್ಞಾನಕ್ಕೆ;
ಮತಿಯಿಂದ ದುಡಿಯಿರೈ ಲೋಕಹಿತಕೆ.
ಆ ಮತದ ಈ ಮತದ ಹಳೆ ಮತದ ಸಹವಾಸ
ಸಾಕಿನ್ನು ಸಾರಿರೈ ಮನುಜಮತಕೆ[37]

ಎಂದು ಸೋದರ ಮಾವನವರಿಗೆ ಕರೆ ಕೊಡುತ್ತಾರೆ. ಮತ ಧರ್ಮಗಳ ಭೇದವನ್ನು ಸ್ಪಷ್ಟಪಡಿಸಿ, ಧರ್ಮ ಮತಕ್ಕಿಂತ ದೊಡ್ಡದೆಂದು ಸ್ಪಷ್ಟಪಡಿಸುತ್ತಾರೆ. ಯಾವುದಾದರೂ ಒಂದು ಮತಕ್ಕೆ ಸೇರಿದ್ದಾದರೆ ಪ್ರತಿಯೊಬ್ಬ ವ್ಯಕ್ತಿಯೂ ತನ್ನತನವನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತಾನೆ; ಆಲೋಚನಾಸ್ವಾತಂತ್ರ್ಯವನ್ನು ಒತ್ತೆಯಿಡುತ್ತಾನೆ. ಮತಿ ಮತಕ್ಕೆ ಶರಣಾಗುತ್ತದೆ. ಮತಿ ಸ್ಥಗಿತಗೊಂಡು ಕೂಡಲೇ ವ್ಯಕ್ತಿಯ ಬೆಳೆವಣಿಗೆ ನಿಂತು ಹೋಗುತ್ತದೆ, ಪಶುವಿಗೆ ಸಮನಾಗುತ್ತಾನೆ. ಹಿಂದೂ ಮತದಲ್ಲಿ ಮಾತ್ರ ಅಷ್ಟಿಷ್ಟು ಸ್ವಾತಂತ್ರ್ಯವಿದೆಯೆಂಬುದನ್ನೊಪ್ಪಿ ಕೊಂಡು ಅನೆಕ ನಿದರ್ಶನಗಳನ್ನವರು ನೀಡುತ್ತಾರೆ. ಮತಗಳು ಯಾವಾಗಲೂ ವಿಧೇಯತೆಯನ್ನು ನಿರೀಕ್ಷಿಸುತ್ತವೆ. ಫ್ರೀ ಥಿಂಕಿಂಗ್ ಅಲ್ಲಿ ಬೆಳೆಯುವುದೇ ಇಲ್ಲ. ನಮಗಿಂತಲೂ ದರಿದ್ರಸ್ಥಿತಿಯಲ್ಲಿದ್ದ ರಷ್ಯಾ ಕೇವಲ ಕೆಲವೇ ವರ್ಷಗಳಲ್ಲಿ ಭಾರತೀಯರು ಊಹಿಸಿಕೊಳ್ಳಲೂ ಸಾಧ್ಯವಾಗದ ಎತ್ತರಕ್ಕೆ ಬೆಳೆದದ್ದು ಹೇಗೆ ಗೊತ್ತೆ? ಅನಿಷ್ಟಗಳಲ್ಲಿ ಬಹಳ ಮುಖ್ಯವಾದ ಮತಮೌಢ್ಯ ತಮ್ಮ ಮಕ್ಕಳ ಹತ್ತಿರಕ್ಕೆ ಕೂಡ ಸುಳಿಯದಂತೆ ನೋಡಿ ಕೊಂಡದ್ದು ಒಂದು. ಇನ್ನೊಂದೇನೆಂದರೆ, ಎಳೆಯ ಪೀಳಿಗೆಯ ನೂರಕ್ಕೆ ನೂರು ಜನರನ್ನು ಅಕ್ಷರಸ್ಥರನ್ನಾಗಿ ಮಾಡಿದ್ದು,[38] ಮೇಲಣ ಕವಿತಾಭಾಗಕ್ಕೆ ಇದಕ್ಕಿಂತ ಬೇರೆ ವ್ಯಾಖ್ಯಾನ ಅನಗತ್ಯ.

ನಮ್ಮ ಪ್ರಜಾಸತ್ತೆ ಕಲುಷಿತವಾಗಲು ಹಣದಂತೆ ಮತವೂ ಕಾರಣವೆಂದು ಕುವೆಂಪು ನಿಖರವಾದ ನಿರ್ಣಯಕ್ಕೆ ಬಂದಿದ್ದಾರೆ. ಮಠಾಧಿಪತಿಗಳನ್ನು ತೀರ ಹತ್ತಿರದಿಂದ ನೋಡಿದವರಿಗೆ ಈ ನಿರ್ಣಯ ನೂರಕ್ಕೆ ನೂರು ಪಾಲು ಸರಿ ಎಂದೆನಿಸದಿರಲಾರದು. ‘ಅದು ಹಾಕಿಕೊಂಡಿರುವ ವೇಷದಿಂದ ತುಂಬ ಸಾಧು ಮತ್ತು ಪೂಜ್ಯ ಎಂಬಂತೆ ತೋರುತ್ತದೆ. ಅದು ಭಾವರೂಪಿಯಾದುದರಿಂದ ಅತಿ ಸೂಕ್ಷ್ಮವಾಗಿ ಹೃದಯ ಪ್ರವೇಶಮಾಡಿ ನಮ್ಮನ್ನು ಆಕ್ರಮಿಸುತ್ತದೆ. ಮತ್ತು ನಮ್ಮಲ್ಲಿ ನಿಜವಾಗಿಯೂ ಇರುವ ಒಂದು ಅನಿರ್ವಚನೀಯ, ಅತ್ಯಂತ ಅಂತರತಮ, ಸತ್ಯಸ್ಯ ಸತ್ಯವಾದ ಅಧ್ಯಾತ್ಮವೆಂಬ ಸನಾತನ ತತ್ತ್ವಕ್ಕೆ ಅದು ತನ್ನ ಬಾಂಧವ್ಯವನ್ನು ಘೋಷಿಸುತ್ತಾ ಬಂದಿರುವುದರಿಂದಲೂ ಮತ್ತು ಅದನ್ನೇ ತಾನು ಪೋಷಿಸುತ್ತಿರುವುದಾಗಿ ಹೇಳುತ್ತಲೂ ಇರುವುದರಿಂದಲೂ ಅದರ ಪ್ರಚ್ಛನ್ನ ವಂಚನೆಯ ಮುಷ್ಟಿಯಿಂದ ತಪ್ಪಿಸಿಕೊಳ್ಳುವುದೂ ಕಷ್ಟ ಸಾಧ್ಯವಾಗಿದೆ. ಅದರ ಹೆಸರು ‘ಮತ’! ಈ ಮತ ಭ್ರಾಂತಿಯಿಂದ ಲೋಕಕ್ಕೆ ಆಗಿರುವಷ್ಟು ಹಾನಿ ಮತ್ತಾವುದರಿಂದಲೂ ಆಗಿಲ್ಲ ಎಂದು ತೋರುತ್ತದೆ. ಇನ್ನು ಮುಂದೆಯಾದರೂ ನೀವು ಅಧ್ಯಾತ್ಮವನ್ನು ಉಳಿಸಿಕೊಂಡು ಮತ ಮತ್ತು ಅದರಿಂದ ಜನ್ಯವಾದ ಮತಭ್ರಾಂತಿ ಮತ್ತು ಮತ ಮೌಢ್ಯಗಳನ್ನು ನಿರಾಕರಿಸದಿದ್ದರೆ ನಿಜವಾದ ಪ್ರಜಾಸತ್ತೆಯಾಗಲಿ ಸಮಾಜವಾದವಾಗಲಿ ಸಮಾನತಾಭಾವ ಸ್ಥಾಪನೆಯಾಗಲಿ ಎಂದೆಂದಿಗೂ ಸಾಧ್ಯವಾಗುವುದಿಲ್ಲ.[39] ಹೊಟ್ಟೆಗೆ ಹಿಟ್ಟಿಲ್ಲದ, ಮೈಗೆ ಬಟ್ಟೆಯಿಲ್ಲದ, ನಿಲ್ಲಲು ನೆಲೆಯಿಲ್ಲದ ಬೀದಿಯ ಭಿಕಾರಿಗೆ, ಬೆಳಗಿನಿಂದ ಸಂಜೆಯತನಕ ಅನುಗಾಲ ದುಡಿದರೂ ಹೊಟ್ಟೆ ತುಂಬದ ರೈತನಿಗೆ ಅಥವಾ ಕಾರ್ಮಿಕನಿಗೆ, ಓದು ಬರಹ ಬಾರದ ದೇವರೆಂದರೇ ನಂದರಿಯದ ಮೂಕ ಪ್ರಾಣಿಯಂತೆ ಬದುಕು ಸಾಗಿಸುತ್ತಿರುವ ಹಳ್ಳಿಯ ಗಾಂಪನಿಗೆ ಯಾವಮತವಿದೆ? ಅವರಿಗೆ ಬೇಕಾದ್ದು ಅನ್ನದೇವರೇ ಹೊರತು ಅನ್ಯದೇವರಲ್ಲ.

ಮನುಷ್ಯ ಜಾತಿಯೊಂದೆ ಎಂಬ ವಿಶ್ವತತ್ವವನ್ನು ಮತ ಮರೆಯಿಸುತ್ತದೆನ್ನುವುದಕ್ಕೆ ಸಾಕ್ಷಿ ಪುರಾವೆಗಳ ಉಲ್ಲೇಖ ಇಲ್ಲಿ ಅನಗತ್ಯ. ಇತಿಹಾಸ ಅಸಂಖ್ಯ ನಿದರ್ಶನಗಳನ್ನೊದಗಿಸ ಬಲ್ಲದು; ಕಣ್ಣು ಹರಿಸಿದ ಕಡೆ ರಾಶಿ ರಾಶಿಯಾಗಿ ಉದಾಹರಣೆಗಳು ಕಾಣುತ್ತವೆ. ಜಗತ್ತಿನ ಅಶಾಂತಿಗೆ ರಾಜಕೀಯಾರ್ಥಿಕ ವಿಚಾರಗಳೆಂತೋ ಅಂತೆಯೇ ಮತವೂ ಕಾರಣವೆಂಬ ಸಂಗತಿ ಸರ್ವವೇದ್ಯ. ಮತದ ಹುಟ್ಟು ಬೆಳವಣಿಗೆಗಳಿಗೆ ಕಾರಣರಾದವರಲ್ಲಿ ಒಬ್ಬನಂತು ಈಗ ಉಳಿದಿಲ್ಲ.

ದೊರೆ ಮತ್ತು ಪೂರೋಹಿತ
ಕೂಡಿದಾಗ ಹುಟ್ಟಿತು ಮತ[40]

ಈಗ ಪುರೋಹಿತ ಮಾತ್ರ ಉಳಿದಿದ್ದು, ದೊರೆಯ ಸ್ಥಾನವನ್ನು ಆಕ್ರಮಿಸಿಕೊಂಡಂತೆ ತೋರುತ್ತದೆ. ರಷ್ಯಾದಂಥ ಕಮ್ಯೂನಿಸ್ಟ್ ರಾಷ್ಟ್ರಗಳಲ್ಲಿ ಅವನೂ ಸತ್ತು ಬಹುದಿನಗಳಾದುವು.

ಕಡೆಯ ಪುರೋಹಿತನ ಕರುಳು
ಕಡೆಯ ದೊರೆಯ ಕೊರಳಿಗುರುಳು
ಬಿಗಿದ ಹೊರತು ಬರಿಯ ನೆರಳು
ಸ್ವಾತಂತ್ರ್ಯದ ಸ್ವರ್ಗವು![41]

ಈ ಕ್ರಾಂತಿಮಂತ್ರ ನಿಜಜೀವನವನ್ನು ಪ್ರವೇಶಿಸಿದಾಗ ಮಾತ್ರ ಸ್ವಾತಂತ್ರ್ಯ ಪ್ರಾಪ್ತವಾಗುತ್ತದೆಂಬ ಕವಿಯ ಹೇಳಿಕೆ ಯಥಾರ್ಥವಾದುದೆ. ಮತದ ಸ್ಥಾನದಲ್ಲಿ ಬೇರೊಂದು ವಿಧಾನ ತಲೆಯೆತ್ತಿ, ಸ್ವಾತಂತ್ರ್ಯಹರಣ ಸಾಧನವಾಗುವ ಶಂಕೆಯೂ ಇಲ್ಲದಿಲ್ಲ. ಆದರೆ ಮತಿಯನ್ನು ಕತ್ತಲಿಸುವ ಮತೀಯತೆಯಾಗಲೀ ವಿಚಾರಸಾಮರ್ಥ್ಯವನ್ನು ಕುಂಠಿತಗೊಳಿಸುವ ಯಾವ ಷಾಹಿಯೇ ಆಗಲೀ ಸರ್ವಾಥಾ ತ್ಯಾಜ್ಯವೆಂಬುದೇ ಕವಿಯ ಮತ. ಹಳೆಯ ಜಾಡನ್ನು ಹಿಡಿಯುವ ಹೊಸವಿಧಾನವೂ ಅಂತೆಯೇ ಬಹಿಷ್ಕಾರ ಯೋಗ್ಯವೆಂಬುದನ್ನು ಮರೆಯುವಂತಿಲ್ಲ.

ಮತಗಳೇ ಅನೇಕಾನೇಕ ‘ಧರ್ಮಶಾಸ್ತ್ರ’ಗಳ ಸೃಷ್ಟಿಗೆ ಕಾರಣವಾಗಿದ್ದು, ಪ್ರಪಂಚದ ಬಹುಪಾಲು ಜನತೆಯನ್ನು ಅಜ್ಞಾನದಾಸ್ಯದಲ್ಲಿರಿಸಿರುವ ಸಂಗತಿ ಇತಿಹಾಸವನ್ನೋದಿದವರಿಗೆ ಹೊಸದೇನಲ್ಲ. ಸಹಸ್ರ ಸಹಸ್ರ ವರ್ಷಗಳಿಂದ ಪ್ರಾಣಿಗಳಿಗಿಂತ ಕಡೆಯಾಗಿ ಉಸಿರೆಳೆಯುತ್ತಿ ರುವ ಭರತಖಂಡದ ಶೂದ್ರಾತಿ ಶೂದ್ರರ ದುಸ್ಥಿತಿಗೆ ಮತಗಳ ಹೆಸರಿನಲ್ಲಿ ರಚನೆಗೊಂಡ ಶಾಸ್ತ್ರ ಸೂತ್ರಗಳೇ ಕಾರಣವೆಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಮನುಧರ್ಮ ಶಾಸ್ತ್ರವನ್ನೋದಿದವರಿಗೆ ಅನ್ಯಸಾಕ್ಷಿಯನ್ನು ಉದ್ಧರಿಸಬೇಕಾಗಿಲ್ಲ. ನಡೆದಷ್ಟು ದಿನ ನಡೆಯಲಿ ಎಂಬ ಸ್ವಾರ್ಥದಿಂದ ಅದನ್ನೇ ಇಂದಿನ ಜೀವನಕ್ಕೂ ಅನ್ವಯಿಸಲು ಪ್ರಯತ್ನಿಸುತ್ತಿರುವುದು ಮೂರ್ಖತನದ ಪರಾಕಾಷ್ಠೆಯನ್ನು ಎತ್ತಿ ತೋರಿಸುತ್ತದೆ.

ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?
ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?
ಎಂದೊ ಮನು ಬರೆದಿಟ್ಟುದಿಂದೆಮಗೆ ಕಟ್ಟೇನು?
ನಿನ್ನೆದೆಯ ದನಿಯೆ ಋಷಿ! ಮನು ನಿನಗೆ ನೀನು![42]

ಎಂಬ ಕವಿವಾಣಿ ಧ್ಯೇಯಮಂತ್ರವಾದಾಗ ಮಾತ್ರ ವಿಚಾರ ಸ್ವಾತಂತ್ರ್ಯಕ್ಕೆ ಪಟ್ಟಕಟ್ಟಿದಂತಾ ಗುತ್ತದೆ. ನೀರಡಸಿ ಬಂದವರಿಗೆ ನೀರು ಕೊಡುವಾಗ ಶಾಸ್ತ್ರದ ವಹಿಗಳನ್ನು ಬಿಚ್ಚಿ, ಹುಡುಹುಡುಕಿ ಮಂಜೂರಾತಿಗಾಗಿ ಬೆವರು ಸುರಿಸಬೇಕಾಗಿಲ್ಲ; ನೊಂದವರ ಕಂಬನಿಯ ನ್ನೊರಸುವಲ್ಲಿ ಶಾಸ್ತ್ರ ಪ್ರಮಾಣಕ್ಕಾಗಿ ಕಾಯಬೇಕಾಗಿಲ್ಲ. ನೀರಿನಲ್ಲಿ ಮುಳುಗುತ್ತಿರುವ ಪಂಚಮರ ಶಿಶುವನ್ನು ಮೇಲೆತ್ತುವಲ್ಲಿ ಜನಿವಾರ ಅಡ್ಡಬರಬಾರದು. ಇಂಥ ಕಟ್ಟು ಪಾಡುಗಳನ್ನು ಮನುವೇನಾದರೂ ವಿಧಿಸಿದ್ದರೆ, ಸ್ವರ್ಗ ಹೋಗಲಿ, ನರಕ ಬರಲಿ, ಅವನನ್ನು ಆ ಶಾಸ್ತ್ರಗಳಿಂದಲೇ ಬಿಗಿದು ಹೊರಗೆ ಬಿಸಾಡಬೇಕೆಂದು ಕವಿ ಗುಡುಗುತ್ತಾರೆ.

ಮತ ವಿಚಾರ ಶಕ್ತಿಯನ್ನು ಸ್ತಬ್ಧಗೊಳಿಸುವುದು ಮಾತ್ರವಲ್ಲ, ಹೊರಗಿನಿಂದ ಬರುವ ಹೊಸ ವಿಚಾರಗಳನ್ನು ತಡೆಯುತ್ತದೆ. ವಿಜ್ಞಾನಿಯ ಆವಿಷ್ಕಾರಗಳನ್ನು ಸಹ ಅಲ್ಲಗೈಯುವ ಸಾಮರ್ಥ್ಯ ಅದಕ್ಕಿದೆ. ಅದರ ಮುಂದೆ ಕಮ್ಮೂನಿಸಮ್ಮು ಸಹ ತತ್ತರಿಸಿ, ಮುದುಡಿ ಮರೆಯಾಗುತ್ತದೆ. ಭರತಖಂಡದಲ್ಲಂತು ಅದಕ್ಕೆ ಜಾಗವೇ ಇಲ್ಲ. ಏಕೆಂದರೆ

ನಮ್ಮ ದೇಶಕೆ ಏನು ಬಂದರೇನಂತೆ
ಕೊನೆಗೆ
ಕಮ್ಯೂನಿಜಂ ಏ ಬಂದರೂ
ಹಾಕುವೆವು ಅದಕೂ ಮೂರು ನಾಮ!
ಅದರ ಹೆಗಲಿಗೂ ಬೀಳುವುದು ಜನಿವಾರ !
ಅದಕ್ಕೂ ಕಟ್ಟುವೆವು ಲಿಂಗ !
ಕ್ರಾಸು ತಗಲಿಸಿದರೂ ಆಶ್ಚರ್ಯವಿಲ್ಲ[43]

ಹೊಸ ಆರ್ಥಿಕ ವಿಚಾರವಾಗಲಿ, ರಾಜಕೀಯ ವಿಚಾರವಾಗಲಿ ಅದು ಹತ್ತಿರ ಬರದಂತೆ, ಬಂದರೂ ಅದು ತಲೆಯೆತ್ತದಂತೆ, ತಲೆಯೆತ್ತಿದರೂ ಮುಂದೆ ಹೆಜ್ಜೆ ಇಡದಂತೆ ಸ್ತಂಭನ ಗೈಯುವ ಮಾಂತ್ರಿಕ ಶಕ್ತಿ ಅದಕ್ಕಿದೆ.

ಆತ್ಮಶ್ರೀ ಸಾಧನೆಗೆ ಹಾಗೂ ವಿಚಾರ ಸ್ವಾತಂತ್ರ್ಯಕ್ಕೆ ಅಡ್ಡಿಬರುವ ಅಜ್ಞಾನಜನ್ಯ ಮೌಢ್ಯದಾಸ್ಯಗಳ ವಿರುದ್ಧವಾಗಿ ಕುವೆಂಪು ಅವರ ಸಾತ್ವಿಕಕ್ರೋಧ ಹೆಡೆಯೆತ್ತಿ ಬುಸುಗುಟ್ಟುತ್ತ ದೆಯೆ ಹೊರತು, ಯಾವೊಂದು ವ್ಯಕ್ತಿ ಜಾತಿ ಮತಲಾಂಛನ ದೇವಾಲಯಗಳ ವಿರುದ್ಧವಲ್ಲವೆಂಬುದನ್ನು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಬಹುದಾಗಿದೆ. ಅಕಸ್ಮಾತ್ತಾಗಿ ಅವರು ಯಾವುದಾದರೂ ವ್ಯಕ್ತಿಯನ್ನು ಹೆಸರಿಸುವುದಾದರೆ ಒಂದು ಸಂಪ್ರದಾಯದ ಪ್ರತಿನಿಧಿಯೆಂಬ ಕಾರಣಕ್ಕಾಗಿಯೇ ಹೊರತು ವ್ಯಕ್ತಿದ್ವೇಷದಿಂದಲ್ಲವೆಂಬುದನ್ನು ಮರೆಯಬಾರದು. ಮಾನವನನ್ನು ಅಧೋಗತಿಯಿಂದ ಊರ್ಧ್ವಗತಿಯ ಕಡೆಗೆ ಪ್ರಚೋದಿಸುವ ಶಕ್ತಿಯನ್ನಾಗಲೀ ವ್ಯಕ್ತಿಯನ್ನಾಗಲೀ ವ್ಯವಸ್ಥೆಯನ್ನಾಗಲೀ ದೇವಾಲಯವನ್ನಾಗಲೀ ಅವರು ಅಲ್ಲಗಳೆಯು ವುದಿಲ್ಲ. ಭಕ್ತಿಯ ಹೆಸರಿನಲ್ಲಿ ಚಿತ್ತ ದಾಸ್ಯಕ್ಕೀಡಾಗಬಾರದು; ಶಾಸ್ತ್ರದ ಆಚಾರದ ಮತದ ಕಬ್ಬಿಣನೇಣಿನಲ್ಲಿ ಮಾನವನ ಅಮೃತಾತ್ಮದ ಗೋಣು[44] ಸಿಕ್ಕಿಕೊಂಡು ನರಳಬಾರದೆಂಬುದೇ ಅವರ ನಿಶ್ಚಿತ ಮತ. ಸನ್ಯಾಸಿ ವೇಷಧರಿಸಿದ ಪುರೋಹಿಷಾಹಿಯ ಬಗ್ಗೆ ಅವರು ಕಿಡಿಕಾರು ತ್ತಾರೆಯೇ ಹೊರತು ಸ್ವಾಮಿಸಿದ್ದೇಶ್ವರಾನಂದರಂಥ ಸಾಧಕರ ವಿರುದ್ಧವಲ್ಲ. ಸಿದ್ಧೇಶ್ವರಾ ನಂದರಂಥವರು ಅವರಿಗೆ ಯಾವಾಗಲೂ ಮಾನ್ಯರು, ಹಾಗೂ ಆರಾಧ್ಯರು. ಕತ್ತೆಕೆಂಗಾವಿಯ ಬಣಬೆಯಲ್ಲಿ ಹೊರಳಾಡಿದರೆ ಎಂತು ಕುದುರೆಯಾಗುವುದಿಲ್ಲವೋ ಅಂತೆಯೇ ಕಾವಿ ಉಟ್ಟವರೆಲ್ಲ ಸಾಧಕರಾಗಲಾರರೆಂಬುದು ಅವರ ಅನುಭವಕ್ಕೆ ಬಂದಿರುವ ಸಂಗತಿ.

ಕಾವಿ ಬರಿ ಮಣ್ಣಲ್ಲ ಕಾಣಯ್ಯ; ಅದು ಬೆಂಕಿ!
ಅಧಿಕಾರಿ ಉಟ್ಟರದು ಉರಿಗಣ್ಣು; ನಿನ್ನಂಥ
ಮದ ಮೋಹಿ ಧರಿಸಿದರೆ ಕೆಮ್ಮಣ್ಣು!

ಎಂದವರು ವಂಚಕರನ್ನು ನ್ಯಾಯವಾಗಿಯೇ ಲೇವಡಿಮಾಡುತ್ತಾರೆ. ಚಾತುರ್ವರ್ಣ್ಯವನ್ನು ಅವಿವೇಕವಾಗಿ ವ್ಯಾಖ್ಯಾನಿಸಿರುವ ಆಚಾರ್ಯರು ಅವರ ಖಂಡನೆಯ ಖಡ್ಗಕ್ಕೆ ಬಲಿಯಾಗು ತ್ತಾರೆಯೇ ಹೊರತು, ಶ್ರೀರಾಮಕೃಷ್ಣಾರವಿಂದರಂಥ ಯೋಗ ಪುರುಷರಲ್ಲ. ಅವರು ಶಂಕರಾಚಾರ್ಯರನ್ನು ಜಗತ್ತಿನ ಮಹಾಜ್ಞಾನಿಗಳಲ್ಲೊಬ್ಬರೆಂದೂ, ಅದ್ವೈತವನ್ನು ಶ್ರೇಷ್ಠ ಸಿದ್ಧಾಂತವೆಂದೂ ಒಪ್ಪಿಕೊಳ್ಳುತ್ತಾರೆ. ಬ್ರಾಹ್ಮಣನೆಂಬ ಕಾರಣದಿಂದ ನಾರಣಪ್ಪನ ಕಾವ್ಯವನ್ನು ಅಧ್ಯಯನ ಮಾಡದಿದ್ದರೆ ನಷ್ಟ ಓದದ ಜನರಿಗೇ ಹೊರತು, ಬರೆದವನಿಗಲ್ಲವೆಂದೂ ಬ್ರಾಹ್ಮಣರಲ್ಲಿ ಉತ್ತಮವಾದದ್ದನ್ನು ಸ್ವೀಕರಿಸಬೇಕೆಂದೂ ಅವರು ವಾದಿಸುತ್ತಾರೆ. ವೈಜ್ಞಾನಿಕ ಮನೋಧರ್ಮಕ್ಕೆ ವೈಚಾರಿಕತೆಯೇ ತಾಯಿ ಬೇರಾದದ್ದರಿಂದ, ಪೂರ್ಣಸ್ವಾತಂತ್ರ್ಯಕ್ಕೆ ಹಾಗೂ ವ್ಯಕ್ತಿತ್ವದ ಪೂರ್ಣ ವಿಕಾಸಕ್ಕೆ ಅವೆರಡೂ ಸಂಜೀವಿನೀ ಶಕ್ತಿಗಳಾದದ್ದರಿಂದ, ಅಜ್ಞಾನಮೂಲ ವಾದ, ವಿಚಾರವಿರೋಧವಾದ ಎಲ್ಲ ಭಾವ ಭಾವನೆ ಆಚಾರವ್ಯವಹಾರಗಳನ್ನು ಧ್ವಂಸಮಾಡುವ ಸಲುವಾಗಿ ಅವರ ಲೇಖನಿ ಆಟಂಬಾಂಬಾಗುತ್ತದೆ.

ಮಹಾತ್ಮರ ವಾಣಿಯೆ ಪಾಪಿಯನ್ನುದ್ಧರಿಸುವ ಧರ್ಮವಾಗಿ, ಮಹಾತ್ಮರ ಶಿಷ್ಯರ ಕೈಗೆ ಸಿಕ್ಕಿದ ಧರ್ಮವೇ ಮೂಲಸತ್ವವನ್ನು ನೀಗಿಕೊಂಡು ನಾರು ಬೇರು ಕಸ ಕಡ್ಡಿಗಳನ್ನು ಕೂಡಿಕೊಂಡು ಮತವಾಗಿ ಪರಿಣಮಿಸಿ, ಮುನ್ನಿನ ಉಪಯುಕ್ತತೆಯನ್ನು ಕಳೆದುಕೊಂಡು, ಒಂದು ಹಲವಾಗಿ ರಾಜಕೀಯ ಪಕ್ಷಗಳಂತೆ ಒಡೆದು, ಪ್ರಲಯಕ್ಕೆ ಕಾರಣವಾಗಿವೆಯೆಂಬ ಭಾವನೆ ಶ್ರೀರಾಮಾಯಣದರ್ಶನಂ ಮಹಾಕಾವ್ಯದ ಅಭಿಷೇಕ ವಿರಾಡ್‌ದರ್ಶನಂ ಎಂಬ ಸಂಚಿಕೆ(ಸಾಲು ೧೪೭-೧೫೨)ಯಲ್ಲಿ ಅಭಿವ್ಯಕ್ತಗೊಂಡಿದೆ. ಮನಸ್ಸನ್ನು ವಿಕಾರಗೊಳಿಸುವ, ಸೋದರರಲ್ಲಿಯೇ ಕಲಹ ಹೊತ್ತಿಸುವ ಮತ ಬೇಡ, ಅದರ ಅಗತ್ಯತೆ ಮುಗಿದಿದೆ, ಆದ್ದರಿಂದ ಎಲ್ಲ ಮತಗಳಲ್ಲಿಯ ಸಾರ್ವದೇಶಿಕ ಸಾರ್ವಕಾಲಿಕ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಮೌಲ್ಯಗಳ ಸಾರವನ್ನು ಗ್ರಹಿಸಿಕೊಂಡು ಅದರ ಬೆಳಕಿನಲ್ಲಿ ಬೋಧೆಯಾಗುವ ವಿಶ್ವಪಥವನ್ನೂ ನೆಮ್ಮಿ, ಯಾವ ಗುಂಪಿಗೂ ಬಂದಿಯಾಗದೆ, ಸ್ವತಂತ್ರವಾಗಿ ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗುವುದೇ ಶ್ರೇಯಸ್ಕರವೆಂದು ಕುವೆಂಪು ವಿಶದಪಡಿಸುತ್ತಾರೆ. ಎಲ್ಲ ಮತಗಳ ಸಾರಸರ್ವಸ್ವವಾಗಿ ಸಂಸ್ಕಾರ ರೂಪವಾಗಿ ಆವಿರ್ಭವಿಸುವ ಮತವನ್ನು ಅವರು ಮನುಜಮತ ವೆಂದು ಕರೆದಿದ್ದಾರೆ. ಶ್ರೀ ರಾಮಕೃಷ್ಣಪರಮಹಂಸರ ಸಾಧನಾ ವಿಧಾನದಲ್ಲಿ, ಅವರ ಸರ್ವಧರ್ಮ ಸಮನ್ವಯ ಕಾರ್ಯದಲ್ಲಿ ಆ ಮತದ ತಾಯಿ ಬೇರುಗಳನ್ನು ಗುರುತಿಸಬಹುದು. ಅವರ ಜೀವನ ಸಂದೇಶವೆ ಸ್ವಾಮಿ ವಿವೇಕಾನಂದರ ಮುಂದಿನ ಮಾತುಗಳಲ್ಲಿ ಮೂರ್ತತ್ವ ವನ್ನು ಪಡೆದಿದೆ : ಪ್ರತಿಯೊಬ್ಬನೂ ಹುಟ್ಟುವಾಗ ವಿಶ್ವಮಾನವನಾಗಿ ಹುಟ್ಟುತ್ತಾನೆ; ಪ್ರತಿಯೊಬ್ಬ ವ್ಯಕ್ತಿ ಆತ್ಮದಲ್ಲಿ ಅವನ ಮತವಿದೆ; ಜಗತ್ತಿನಲ್ಲೆಷ್ಟು ಮಾನವರಿದ್ದಾರೆಯೋ ಅಷ್ಟೆ ಮತಗಳಿರಲಿ’[45] ಮನುಜಮತವೆಂಬುದು ಸೃಷ್ಟಿ ಮತವೂ ಅಹುದು. ಸಮಷ್ಟಿ ಮತವೂ ಅಹುದು. ಅದು ಹಳೆಯ ಮತಗಳಿಗೆ ವಿರೋಧವಾದದ್ದಲ್ಲ; ಅವೆಲ್ಲವನ್ನೂ ಒಳಗೊಂಡದ್ದು; ಅದು ಸನಾತನವೂ ಅಹುದು, ನಿತ್ಯನೂತನವೂ ಅಹುದು. ಆದರಿಂದ ವ್ಯಕ್ತಿ ಸ್ವಾತಂತ್ರ್ಯಕ್ಕೆ ಚ್ಯುತಿಯಿಲ್ಲ, ಸಮಷ್ಟಿತನಕ್ಕೆ ದಕ್ಕೆಯಿಲ್ಲ.

ತಾತ್ತ್ವಿಕ ಚಿಂತನೆಯ ಸಮಸ್ತವೂ ವೈಚಾರಿಕತೆಯ ತೆಕ್ಕೆಯಲ್ಲಿ ಸೇರ್ಪಡೆಗೊಳ್ಳುತ್ತದೆ. ಬೌದ್ಧ ಧರ್ಮ ಜೈನಧರ್ಮ ಲೋಕಾಯತಮಾರ್ಗ ನಾಸ್ತಿಕವಾದದಿಂದ ಹಿಡಿದು ಸಿಖ್ ಮತ್ತು ವೀರಶೈವ ಪಂಥಗಳವರೆಗೆ, ಭೌತಿಕವಾದ ನಿಸರ್ಗವಾದ ಆದರ್ಶವಾದ ವಾಸ್ತವವಾದ ಪ್ರಯೋಜನವಾದಗಳಿಂದ ಹಿಡಿದು ಅಸ್ತಿತ್ವವಾದ ವೈಜ್ಞಾನಿಕ ಸಮಾಜವಾದ ಹಾಗೂ ಸರ್ವೋದಯ ಮಾರ್ಗಗಳವರೆಗೆ, ಆದಿಮಾನವ ಸಮಾಜದಿಂದ ತೊಡಗಿ ಪ್ರಜಾಸತ್ತೆಯ ತನಕ ಸಕಲ ವಾದ ತತ್ತ್ವ ಪಂಥಗಳು ಹುಟ್ಟಿದ್ದೇ ಮಾನವನ ಬೌದ್ದಿಕ ಹಾಗೂ ವೈಚಾರಿಕ ವಿಕಾಸದ ಪರಿಣಾಮವಾಗಿ ಎಂಬುದನ್ನೂ, ಅವು ವಿಕಾಸತತ್ತ್ವದ ವಿವಿಧ ಹಂತಗಳೆಂಬುದನ್ನೂ, ಯಾವೊಂದೂ ಪೂರ್ಣಸತ್ಯವಲ್ಲವೆಂಬುದನ್ನೂ, ಅವುಗಳ ಸಮನ್ವಯ ಮಾತ್ರ ಪೂರ್ಣ ಸತ್ಯದ ಕಡೆಗೆ ಮಾನವನನ್ನು ಕೊಂಡೊಯ್ಯುತ್ತವೆಂಬುದನ್ನೂ ಮನುಕುಲ ಅರಿತುಕೊಂಡಾಗ, ಇದು ಅದಕ್ಕೆ ಸವಾಲಾಗಿ ಅಪಾಯಕಾರಿಯಾಗಿ ಕಣ್ಣೆಗೆದರಿ ನಿಂತಿರುವ ಸಮಸ್ಯೆಗಳು ತಾವಾಗಿಯೇ ಪರಿಹಾರವಾಗುತ್ತವೆ. ಈ ದಿಶೆಯಲ್ಲಿ ಶ್ರೀ ರಾಮಕೃಷ್ಣಪರಮಹಂಸ, ಶ್ರೀ ಅರವಿಂದೊ, ಸ್ವಾಮಿ ವಿವೇಕಾನಂದ ಮೊದಲಾದ ಹಿರಿಯರು ಮಾರ್ಗದರ್ಶನ ಮಾಡಿದ್ದಾರೆ. ಯಾವುದೋ ಒಂದು ಕಾಲಕ್ಕೆ ಯಾವುದೋ ಒಂದು ವಾದ ಅಥವಾ ಧರ್ಮ ತಲೆಯೆತ್ತುತ್ತದೆ; ಅದು ತನ್ನ ಉದ್ದೇಶವನ್ನು ಈಡೇರಿಸಿಕೊಂಡು, ಜೀರ್ಣವಾದನಂತರ ಅದರ ಜಾಗದಲ್ಲಿ ಮತ್ತೊಂದು ತಲೆಯೆತ್ತುತ್ತದೆ. ಅದು ಹಾಗೆ ತಲೆಯೆತ್ತಲು ವೈಚಾರಿಕ ಪರಂಪರೆಯೇ ಕಾರಣ. ಯಾವುದೋ ಒಂದು ವ್ಯವಸ್ಥೆ ಹಳಸಿತೆಂದರೆ ವೈಚಾರಿಕತೆ ಅದನ್ನು ಹಿನ್ನೂಕಿ, ಹೊಸದರ ಆವಿರ್ಭಾವಕ್ಕೆ ಎಡೆಮಾಡಿಕೊಡುತ್ತದೆ. ಸಮಾಜದ ಜೀವಂತಿಕೆಗೆ ಅದೇ ಅಮೃತಪ್ರಾಯ ವಾಗಿದೆ, ಅದರ ಪ್ರಗತಿಗೆ ಅದೊಂದೇ ಸ್ಫೂರ್ತಿಶಕ್ತಿಯಾಗಿದೆಯೆಂಬುದಕ್ಕೆ ಇಲ್ಲಿ ಉಲ್ಲೇಖ ಗೊಂಡಿರುವ ನಾನಾ ಪಂಥಗಳೆ ಸಾಕ್ಷಿಯಾಗಿವೆ.

ಕುವೆಂಪು ಅವರು ಪ್ರತಿಪಾದಿಸುವ ಪಂಚಮಂತ್ರಗಳು ಆರ್ಷೇಯ ಕಾಲದಿಂದಲೂ ಅನೇಕ ಮಹಾತ್ಮರಿಂದ ಪ್ರಣೀತವಾಗಿ, ಕಾಲಕಾಲಕ್ಕೆ ಹೊಸ ಹೊಸ ಅರ್ಥಮೌಲ್ಯಗಳನ್ನು ಸ್ವೀಕರಿಸುತ್ತ, ನವೋನವವಾಗುತ್ತಿರುವ ನಿತ್ಯಸತ್ಯಗಳು. ಉಳಿದೆಲ್ಲ ಮೌಲ್ಯಗಳಿಗೆ ಅವು ಮಾತೃಮೌಲ್ಯಗಳಿದ್ದಂತೆ ಎಂದು ಭಾವಿಸಬಹುದು. ಅವುಗಳ ಪರಮಾರ್ಥವನ್ನೂ, ಪರಸ್ಪರ ಸಂಬಂಧವನ್ನೂ ಗ್ರಹಿಸಿ, ಮನುಜಮತದೊಡನೆ ಬೆಸೆದದ್ದು ಅವರ ದೂರ ದೃಷ್ಟಿಯ ಹಾಗೂ ಲೋಕಕ್ಷೇಮಕಾತರತೆಯ ಫಲ. ಹಿಂದೂಮತದಲ್ಲಿ ವಿಚಾರ ಸ್ವಾತಂತ್ರ್ಯಕ್ಕೆ ವರಿಷ್ಠಾವಕಾಶ ವಿದ್ದರೂ, ಅದು ಅನೇಕ ಧರ್ಮಗಳ ಸಾರವನ್ನು ಗರ್ಭೀಕರಿಸಿ ಕೊಂಡಿದ್ದರೂ, ಅದರ ಶ್ರೇಷ್ಠ ಮೌಲ್ಯಗಳು ಸಿಪ್ಪೆ ಹೊಟ್ಟುಗಳಲ್ಲಿ ಹುದುಗಿಕೊಂಡು ಸಾಮಾನ್ಯರಿಗೆ ಉಪಯೋಗ ವಾಗುತ್ತಿಲ್ಲವೆಂಬ ಕಾರಣಕ್ಕಾಗಿ, ತಾವು ಹಿಂದೂ ಮತವನ್ನೂ ತ್ಯಜಿಸಿರುವುದಾಗಿ ಆಗಿಂದಾಗ್ಗೆ ಅವರು ಘೋಷಿಸುತ್ತಾರೆ. ಅವರು ಮತವನ್ನು ಬಹಿಷ್ಕರಿಸಿದ್ದಾರೆಯೇ ಹೊರತು, ಧರ್ಮವನ್ನಲ್ಲ, ಆಧ್ಯಾತ್ಮಿಕ ವಿಚಾರಗಳನ್ನಲ್ಲ. ಧರ್ಮಶಾಸ್ತ್ರದ ಕಟ್ಟುಪಾಡಿಗೊಳಗಾಗದವನು ಹೇಗೆ ತಾನೇ ಹಿಂದುವಾದಾನು? ವಾಸ್ತವವಾಗಿ ಹಳ್ಳಿಯವರನ್ನು ಹಿಂದೂ ಮತದ ಅನುಯಾಯಿಗಳೆಂದು ಕರೆಯುವುದೇ ಸಾಧುವಲ್ಲ. ಅವರು ಮುಖ್ಯವಾಗಿ ಮಾರಿ ಮಸಣಿ ಮೊದಲಾದ ಜಾನಪದ ದೇವತೆಗಳ ಉಪಾಸಕರು. ಹಿಂದುವಾದವನು ಅನುಸರಿಸಬೇಕಾದ ಅನೇಕ ರೂಢಿ ಸಂಪ್ರದಾಯಗಳಿಗೂ ಅವರಿಗೂ ಧ್ರುವಾಂತರ. ಅವರು ಹರಿಹರರಿಗಲ್ಲದೆ ಬಾಬಯ್ಯನಿಗೂ ನಮಸ್ಕಾರ ಹಾಕುತ್ತಾರೆ; ಮಾರಿಯಮ್ಮನಿಗೂ ಕರ್ಪೂರ ಹಚ್ಚುತ್ತಾರೆ. ಈಗ ನಾಗರಿಕ ಸೌಕರ್ಯ ಸೌಲಭ್ಯಗಳು ಪಟ್ಟಣಿಗರಿಗೆ ಮೀಸಲಾಗಿರುವಂತೆ ಹಿಂದೂ ಮತದ ಲಾಭ ಲೋಭಗಳೆಲ್ಲ ಕೆಲವರಿಗೆ ಮಾತ್ರ ಮೀಸಲಾಗಿರುವುದರಿಂದ, ಅದು ಜಾತೀಯತೆ ಮತ್ತು ಅಸ್ಪೃಶ್ಯತೆಯನ್ನು ಮಾನ್ಯಮಾಡುವುದರಿಂದ ಕುವೆಂಪು ಅವರಂಥ ವಿಚಾರಶೀಲರು ಹಿಂದುವೆಂದು ಹೇಳಿಕೊಳ್ಳಲು ಲಜ್ಜೆಪಡಬೇಕಾಗಿದೆ. ಅದೊಂದು ಜನಾಂಗವಾಚಕವೆಂದು ಹೇಳುವ ಜನರಿಗೆ ಅದ್ಯತನ ಪ್ರಜ್ಞೆಯೇ ಇಲ್ಲವೆಂದು ಹೇಳಬೇಕಾಗಿದೆ. ತನ್ನ ತಾನರಿದವಗೆ ಅರಿವೆ ಗುರು, ಮತ, ಧರ್ಮ, ‘ವೇದಶಾಸ್ತ್ರ ಪುರಾಣಾಗಮಂಗಳೆಲ್ಲ ಕೊಟ್ಟಣವ ಕುಟ್ಟುತ್ತ ನುಚ್ಚು ತೌಡು ಕಾಣಿಭೋ. ಇವ ಕುಟ್ಟಲೇಕೆ? ಅತ್ತಲಿತ್ತ ಹರಿವ ಮನದ ಶಿರವನರಿದಡೆ ಬಚ್ಚಬರಿಯ ಬಯಲು’ ಎಂಬ ಅಕ್ಕಮಹಾದೇವಿಯ ಮಾತು ಈ ಸಂದರ್ಭದಲ್ಲಿ ಗಮನಾರ್ಹ. ತನ್ನ ತಾನರಿದ ಶರಣಂಗೆ ಮಠ ಬೇಡ, ಧ್ಯಾನ ಮೌನ ಜಪತಪ ಬೇಡ, ಮತವೂ ಬೇಡ. ಬಹುರೂಪಿ ಚೌಡಯ್ಯನಂತೆ ‘ನನಗೆ ನಾನೇ ಗುರುವಾದೆನಯ್ಯ! ನನಗೆ ನಾನೇ ಲಿಂಗವಾದೆನಯ್ಯ’ ಎಂದು ಹೇಳಿಕೊಳ್ಳುವ ಗಟ್ಟಿತನವಿದ್ದವನಿಗೆ ಯಾವ ಮತವೂ ಬೇಡ. ಜೀವಾತ್ಮ ಪರಮಾತ್ಮರಿಬ್ಬರೂ ಮತಾತೀತರು, ಶ್ರೀರಾಮಕೃಷ್ಣರಂಥ ಅವತಾರ ಪುರುಷರಿಗೆ ಯಾವ ಮತವೂ ಇಲ್ಲವೆಂಬುದನ್ನು ವಿವೇಕಿಗಳು ಮನದಂದುಕೊಳ್ಳಬೇಕು. ಬುದ್ಧ ಯೇಸು ಕನ್‌ಪೂಷಿಯಸ್ ಬಸವ ವಿವೇಕಾನಂದ ಗಾಂಧಿ, ಲೆನಿನ್, ವ್ಯಾಸ ವಾಲ್ಮೀಕಿ, ಹರಿಹರ, ಶೇಕ್ಸ್‌ಪಿಯರ್ ನ್ಯೂಟನ್ ಐನ್‌ಸ್ಟೀನ್ ಇವರೇ ಮೊದಲಾದ ಜಗತ್ತಿನ  ವಿಭೂತಿಪುರುಷರು ಯಾವ ಮತಕ್ಕೆ ಸೇರಿದವರು? ಅವರು ಎಲ್ಲವನ್ನು ಮೆಟ್ಟಿನಿಂತವರು. ಅವರನ್ನು ಯಾವುದಾದರೂ ಮತದ ಬಂದಿಖಾನೆಯಲ್ಲಿ ಸೇರಿಸುವ ಪ್ರಯತ್ನ ಮೂರ್ಖತನವಾಗುತ್ತದೆ. ಯಾರೇ ಆಗಲಿ ಈ ದೃಷ್ಟಿಯಿಂದ ಕುವೆಂಪು ಅವರ ವಿಚಾರಧಾರೆ ಯನ್ನು ಗ್ರಹಿಸಬೇಕೇ ಹೊರತು, ಅವರವರ ಪೂರ್ವಗ್ರಹಗ್ರಸ್ತ ಸಂಕುಚಿತ ಮನೋಭಾವ ದಿಂದಲ್ಲ. ಪ್ರತಿಯೊಬ್ಬ ಮಾನವನ ಚೇತನವೂ ಅನಿಕೇತನವಾಗಬೇಕೆಂಬುದು ಅವರ ಹಾರೈಕೆ; ಅವನು

ನೂರು ಮತದ ಹೊಟ್ಟ ತೂರಿ
ಎಲ್ಲತತ್ತ್ವದೆಲ್ಲೆ ಮೀರಿ,
ನಿರ್ದಿಂಗತವಾಗಿ ಏರಿ[46]
ಅನಂತವಾಗಬೇಕೆಂಬುದು ಅವರ ಆಸೆ.

ಮಾನವನ ಅಳಿವುಳಿವುಗಳು ಸಸ್ಯಕೋಟಿಯ ಹಾನಿವೃದ್ದಿಗಳನ್ನವಲಂಬಿಸಿವೆ. ಸಕಲಪ್ರಾಣಿಗಳಿಗೆ ಪ್ರಾಣಾಧಾರವಾದ ಆಹಾರಮಾತ್ರವಲ್ಲ, ಪ್ರಾಣವಾಯುವೂ ಸಸ್ಯಗಳಿಂದಲೇ ಒದಗಬೇಕು. ಮನುಷ್ಯನಿಗೆ ಬೇಕಾದ ಬಟ್ಟೆಯೊಂದೇ ಅಲ್ಲ. ಸಕಲ ಅವಶ್ಯಕತೆಗಳೂ ಅವುಗಳಿಂದಲೇ ಪೂರೈಸಬೇಕು. ಸಸ್ಯಗಳಿಲ್ಲದಿದ್ದರೆ ಪ್ರಾಣಿಕೋಟಿ ಒಂದು ಕ್ಷಣವೂ ಬದುಕಲಾರದು. ಅಂಥ ಸಸ್ಯಗಳನ್ನು ಬೆಳೆಯುವವನು ರೈತ. ಅಂದ ಮೇಲೆ ನಾಡಿನ ಸಕಲ ಸಂಪತ್ತುಗಳ ಉತ್ಪತ್ತಿಗೆ ಅವನೇ ಮೂಲ ಎಂಬ ಮಾತು ಸತ್ಯಸ್ಯ ಸತ್ಯ. ಸಂಸ್ಕೃತಿಯ ಮೂಲ ಪುರುಷನೂ ಅವನೇ. ಎಂದು ಕೃಷಿ ಪ್ರಾರಂಭವಾಯಿತೋ ಅಂದೇ ಸಂಸ್ಕೃತಿ ನಾಗರಿಕತೆಗಳಿಗೆ ಭದ್ರಬುನಾದಿ ನಿರ್ಮಾಣವಾದಂತಾಗುತ್ತದೆ. ಅವನಿಲ್ಲದಿದ್ದರೆ, ಅವನು ಕೃಷಿ ಮಾಡದಿದ್ದರೆ, ಅನುಗಾಲ ದುಡಿಯದಿದ್ದರೆ ಸಮಾಜದ ಸಮತೋಲನವೇ ತಲೆಕೆಳಗಾಗುತ್ತದಲ್ಲದೆ, ನೈಸರ್ಗಿಕ ವೈಪರೀತ್ಯಗಳೂ ಕಾಣಿಸಿಕೊಳ್ಳುವ ಸಂಭವವುಂಟು. ಅವನ ಕೈಕಾಲು ಆಡಿದರೆ ಮಾತ್ರ ಸಿಂಹಾಸನ ಮೆರೆಯುತ್ತದೆ. ಸರ್ಕಾರದ ಯಂತ್ರ ಚಲಿಸುತ್ತದೆ, ಆಟಂಬಾಂಬು ತಯಾರಾ ಗುತ್ತದೆ, ಮಾನವ ಚಂದ್ರಲೋಕಕ್ಕೆ ಹೋಗುವಂತಾಗುತ್ತದೆ, ಬೃಹದ್ಯಂತ್ರಗಳು ಉತ್ಪತ್ತಿ ಕಾರ್ಯದಲ್ಲಿ ತೊಡಗುತ್ತವೆ, ರಾಜಕಾರಣಿ ಅಟ್ಟಹಾಸಗೈಯುತ್ತಾನೆ, ಪ್ರಾಧ್ಯಾಪಕ ಪಾಠ ಹೇಳುತ್ತಾನೆ, ಪುರೋಹಿತನ ಬೊಜ್ಜು ಬೆಳೆಯುತ್ತದೆ, ಸನ್ಯಾಸಿಯ ಕಾರುಬಾರು ನಡೆಯುತ್ತವೆ.

ಇಷ್ಟಾದರೂ ಸಾವಿರಾರು ವರ್ಷಗಳಿಂದ ರಾಜಮಹಾರಾಜರು ಮಾತ್ರವಲ್ಲ ಕವಿಋಷಿ ಸಂತರೂ ಅವನನ್ನು ಕಡೆಗಂಡಿದ್ದಾರೆ. ಯಾರೂ ಅವನ ಬಗ್ಗೆ ಒಂದು ಒಳ್ಳೆಯ ಮಾತು ಆಡಿದ್ದಿಲ್ಲ. ಬೊಕ್ಕಸಕ್ಕೆ ಹಣ ಬೇಕು. ರೈತರನ್ನು ಸುಲಿ; ಸೈನ್ಯಕ್ಕೆ ಆಹಾರ ಸಾಮಗ್ರಿ ಬೇಕು ಅವನನ್ನು ಬಡಿ. ಅವನಿಗೆ ಮತ್ತು ಅವನ ಮಡದಿ ಮಕ್ಕಳಿಗೆ ಇರಲಿ ಬಿಡಲಿ, ಅದು ರಾಜನ ಅಥವಾ ದಂಡನಾಯಕನ ಹೊಣೆಯಲ್ಲ. ಒಂದು ಹಸುವಿಂದ ಹಾಲು ಕರೆದುಕೊಳ್ಳಬೇಕಾದರೆ ಒಡೆಯರು ತಿಂಡಿ ಹಿಂಡಿ ಗಡದ್ದಾಗಿ ಹಾಕುತ್ತಾರೆ; ಕರೆದನಂತರವೂ ಅದಕ್ಕೆ ಹುಲ್ಲು ಮೇವು ನೋಡಿಕೊಳ್ಳುತ್ತಾರೆ, ನೀರು ಕುಡಿಸುತ್ತಾರೆ, ರೋಗ ಬಂದರೆ ಆತಂಕ ಪಡುತ್ತಾರೆ. ರೈತ ಹಸುವಿಗಿಂತಲೂ ಕಡೆ. ಅವನನ್ನು ಹಿಸುಕಿ ಹಿಪ್ಪೆಮಾಡಿದ ಮೇಲೆ ಆ ಕಡೆ ಯಾರೂ ತಿರುಗಿ ನೋಡುವುದಿಲ್ಲ. ರೈತನಾದರೊ ಸಮಾಜದ ಶೋಷಣೆ ನಿರ್ಲಕ್ಷ್ಯಗಳನ್ನು ಗಮನಕ್ಕೆ ತಂದುಕೊಳ್ಳದೆ, ಮೂಕನಂತೆ ತನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಾನೆ.

ಲೋಕದೊಳೇನೇ ನಡೆಯುತಲಿರಲಿ
ತನ್ನೀಕಾರ್ಯವ ಬಿಡನೆಂದೂ;
ರಾಜ್ಯಗಳುದಿಸಲಿ ರಾಜ್ಯಗಳಳಿಯಲಿ,
ಹಾರಲಿ ಗದ್ದುಗೆ ಮಕುಟಗಳು,
ಮುತ್ತಿಗೆ ಹಾಕಲಿ ಸೈನಿಕರೆಲ್ಲ,
ಬಿತ್ತುಳುವುದನವ ಬಿಡುವುದೆ ಇಲ್ಲ[47]

ಪ್ರಾಯಶಃ ಗೀತಾಕಾರ ಅವನನ್ನು ನೋಡಿಯೇ ಕರ್ಮಯೋಗದ ಸಿದ್ಧಾಂತವನ್ನು ನಿರೂಪಿಸಿದ ನೆಂದೇ ಹೇಳಬೇಕು. ‘ಕರ್ಮವೆ ಇಹಪರ ಸಾಧನ’ ತತ್ತ್ವವನ್ನು ಮೊದಲು ಅರಿತವನು ರೈತ. ಅವನು ಯಾರ ಬಿರುದು ಬಾವಲಿಗಳಿಗೂ, ಸನ್ಮಾನ ಸಮಾರಂಭಕ್ಕೂ ಪ್ರಶಂಸೆಗೂ ತಾಮ್ರಪತ್ರಕ್ಕೂ ಕೃಪೆಗೂ ಕಾಯುವುದಿಲ್ಲ. ಅವನಿಗೆ ಹೆಸರು ಬೇಕಿಲ್ಲ, ಭೋಗ ವೈಭವವೂ ಬೇಡ, ಚರಿತ್ರೆಯಲ್ಲಿ ಮೆರೆಯುವ ಬಯಕೆಯೂ ಇಲ್ಲ.

ಸ್ವಾತಂತ್ರ್ಯಾನಂತರವೂ ರೈತನ ಬವಣೆ ತಪ್ಪಿದ್ದಲ್ಲ, ಸುಖ ಕಂಡವನಲ್ಲ; ಅವನ ಪ್ರತಿನಿಧಿಯೂ ಅವನ ಕಡೆಗೆ ತಿರುಗಿ ನೋಡಿದವನಲ್ಲ. ಸಾವಿರಾರು ವರ್ಷಗಳ ಇತಿಹಾಸ ಒತ್ತಟ್ಟಿಗಿರಲಿ, ಅಂದಿನಿಂದ ಹಿಡಿದು ಈ ಹೊತ್ತಿನ ತನಕ ತನ್ನ ಕೃತಿಗಳಲ್ಲಿ ಒಮ್ಮೆಯಾದರೂ ಅನ್ನದಾತನನ್ನು ನೆನೆಯುವ ಕಷ್ಟ ಕಾರ್ಯಕ್ಕೆ ಯಾವ ಕವಿಯೂ ಮನಸ್ಸು ಮಾಡಿದಂತೆ ಕಾಣುವುದಿಲ್ಲ. ಕುವೆಂಪು ಅವರೊಬ್ಬರೇ ಸಾವಿರಾರು ವರ್ಷಗಳ ರೈತ ಕುಲದ ಪ್ರತಿನಿಧಿಗಳಾಗಿದ್ದಾರೆ. ರೈತ ಬಾಂಧವರನ್ನೂ ಕಂಡು ಮಾತಾಡಿಸಿದ್ದಾರೆ, ಅವರೊಡನೆ ಬದುಕಿದ್ದಾರೆ, ಅವರೊಡನೆ ಕಷ್ಟಸುಖಗಳನ್ನು ಹಂಚಿಕೊಂಡಿದ್ದಾರೆ; ಅವರ ಗೋಳನ್ನು ಕಂಡು ಮರುಗಿ, ಅವಕಾಶವಾದಾಗಲೆಲ್ಲ ತಮ್ಮ ಕೃತಿಗಳಲ್ಲಿ ಅದಕ್ಕೆ ಅಭಿವ್ಯಕ್ತಿ ನೀಡಿದ್ದಾರೆ. ಕನ್ನಡ ಕವಿಕುಲಕ್ಕಂಟಿಕೊಂಡಿದ್ದ ಕಳಂಕವನ್ನು ನಿವಾರಿಸಿದ್ದಾರೆ. ರೈತನನ್ನು ಮೊದಲು ನೇಗಿಲಯೋಗಿ ಯೆಂದು ಕರೆದವರು ಅವರೆ; ಇಡೀ ಜಗತ್ತಿನ ಭಾರವನ್ನು ಹೊತ್ತಿರುವ ವ್ಯಕ್ತಿಯೆಂದು ನಾನಾ ವಿಧಗಳಲ್ಲಿ ತೋರಿಸಿಕೊಟ್ಟವರು ಅವರು;

ನೇಗಿಲ ಕುಳದೊಳಗಡಗಿದೆ ಕರ್ಮ
ನೇಗಿಲ ಮೇಲೆಯೆ ನಿಂತಿದೆ ಧರ್ಮ

ಎಂದು ಘೋಷಿಸಿದವರು ಅವರು; ರಂಗ ಹಿರಗ ಕಿಟ್ಟಯ್ಯ ಕರಿಸಿದ್ಧ ಮೊದಲಾದವರಿಗೆ ಸಾಹಿತ್ಯದಲ್ಲಿ ತಾವು ಕೊಟ್ಟವರು ಅವರು. ಅವನನ್ನು ಕಲ್ಪವೃಕ್ಷ ಕಾಮಧೇನುವೆಂದು ಕರೆದವರೂ ಅವರೇ; ಕೊನೆಗೂ ಶ್ರೀರಾಮಾಯಣದರ್ಶನಂ ಅಂಥ ಮಹಾಕಾವ್ಯದಲ್ಲಿಯೂ ಅವರು ರೈತನನ್ನು ಮರೆಯುವುದಿಲ್ಲ. ಅವರ ಕಿಟ್ಟಯ್ಯ ಸ್ವಾತಂತ್ರ್ಯಪೂರ್ವಕಾಲದ ಆದರ್ಶರೈತ ಸಮಾಜದ ನಿಜವಾದ ಪ್ರತಿನಿಧಿಯಾಗಿದ್ದಾನೆ. ಅವನೊಬ್ಬ ಸ್ಥಿತಪ್ರಜ್ಞ. ಕುವೆಂಪು ಅವರ ಕಾವ್ಯದಲ್ಲಿ ಹೂವಿಗೆಂತಂತೆ ಗೊಬ್ಬರಕ್ಕೂ ಸ್ಥಾನವುಂಟು; ಹೂವಯ್ಯನಿಗೆಂತೂ ಅಂತೆ ಗುತ್ತಿಗೂ ಬೆಲೆಯುಂಟು.

ಕವಿ ಕುಳದ ಗೆರೆಯಲ್ಲಿ ನಾಡಹಣೆಯ ಬರಹವನ್ನು ಕಾಣುತ್ತಾರೆ. ದೇಶದ ಮೊದಲ ರಕ್ಷೆ ಸೇನೆಯಲ್ಲ, ರೈತ ಎಂಬ ಸತ್ಯ ರಾಜಕಾರಣಿಗೆ ಹೊಳೆಯದಿರುವುದು ಖೇದದ ಸಂಗತಿಯಾಗಿದೆ.

ಹೊಲದ ಗಾಂಧಿ, ನೆಲದ ಗಾಂದಿ,
ನೀನೆ ರಾಷ್ಟ್ರಶಕ್ತಿ;
ನೆಹರುಗೇನು ಕಡಮೆಯೇನು
ನಿನ್ನ ದೇಶ ಭಕ್ತಿ?
ಅವರೊ ಹೆಸರು; ನೀನೊ ಉಸಿರು
ನಾಡದೇವಿಗೆ[48]

ಎನ್ನುವಲ್ಲಿ ಅವನ ಹಿರಿಮೆ ವ್ಯಕ್ತವಾಗುತ್ತದೆ. ಇಲ್ಲಿ ಗಾಂಧಿ ಅಥವಾ ನೆಹರೂ ಒಬ್ಬೊಬ್ಬ ವ್ಯಕ್ತಿಯಲ್ಲ; ರಾಷ್ಟ್ರ ನಿರ್ಮಾಪಕರನ್ನು ರಾಜಕಾರಣಿಗಳನ್ನು ಪ್ರತಿನಿಧಿಸುವ ಸಾಮುದಾಯಕ ಶಕ್ತಿಯ ಸಂಕೇತಗಳು; ಆ ಶಕ್ತಿಗಿಂತಲೂ ರೈತಶಕ್ತಿ ಮಿಗಿಲಾದುದೆನ್ನುವ ಭಾವನೆ ಇಲ್ಲಿದೆ.

ರೈತ ಸ್ಥಿತಪ್ರಜ್ಞ ನಿಜ. ಕಷ್ಟವೋ ಸುಖವೋ ಹಸಿವೋ ದಾಹವೋ ಅವನು ನಿತ್ಯತೃಪ್ತ. ನೆರೆಯವ ಎಳನೀರಿನಲ್ಲಿ ಕೈ ಕಾಲು ಮುಖ ತೊಳೆದು, ಅಮೃತಾಹಾರವನ್ನುಣ್ಣುತ್ತಿದ್ದರೂ ಅವನು ಕರುಬುವುದಿಲ್ಲ. ಆದ್ದರಿಂದಲೇ ಭರತಖಂಡದಲ್ಲಿ ಕ್ರಾಂತಿ ಸಾಧ್ಯವಾಗಿಲ್ಲ. ಅವನ ಸಹಕಾರವಿಲ್ಲದೆ ಕ್ರಾಂತಿ ಸಾಧಿಸುವ ಕಾರ್ಯ ಬ್ರಹ್ಮನಿಗೂ ಎಟಕುವಂತಿಲ್ಲ. ಆ ಕಾರಣ ಕ್ಕಾಗಿಯೇ ಆಳುವ ಜನ ಹಿಂದಿನಿಂದ ಅವನನ್ನು ನಿರ್ಲಕ್ಷಿಸುತ್ತ ಬಂದಿದ್ದಾರೆ. ಪ್ರಜಾಪ್ರತಿ ನಿಧಿಗಳು ಸಹ ಸಮ್ರಾಟರಂತೆ ವರ್ತಿಸುತ್ತಿದ್ದಾರೆ.

ಕರಿಯರದೊ ಬಿಳಿಯರದೊ ಯಾರದಾದರೆ ಏನು?
ಸಾಮ್ರಾಜ್ಯವಾವಗಂ ಸುಲಿಗೆ ರೈತರಿಗೆ!
ವಿಜಯನಗರವೊ ಮೊಗಲರಾಳ್ವಿಕೆಯೊ ಇಂಗ್ಲಿಷರೊ?
ಎಲ್ಲರೂ ಜಿಗಣೆಗಳೆ ನನ್ನ ನೆತ್ತರಿಗೆ![49]

ಎನ್ನುವ ಮಾತು ಇಂದಿಗೂ ಕಟ್ಟಾ ಸತ್ಯವಾಗಿರುವ ಸಂಗತಿ ಲೋಕವೇದ್ಯ. ಕುವೆಂಪು ಅವರು ಐವತ್ತು ವರ್ಷಗಳ ಹಿಂದೆ ನುಡಿದ ಭವಿಷ್ಯ ಈ ಹೊತ್ತಿಗೂ ನಿಜವಾಗಿ ತೋರುತ್ತದೆ.

ಸೋಮಾರಿಗಳಿಗೆ ಸುಖಿಗಳಿಗೆ ರಸಿಕರಿಗಲ್ತೆ
ಸಾಮ್ರಾಜ್ಯವೆಂಬುವುದು ಕಾಮಧೇನು?

ಈ ಹೊತ್ತು ಭರತಖಂಡದ ಪರಿಸ್ಥಿತಿ ಇದಕ್ಕಿಂತ ಬೇರೆಯಾಗಿಲ್ಲ. ಪ್ರಜಾಪ್ರಭುತ್ವದ ಹೆಸರಿನಲ್ಲಿ ಪ್ರಜಾಪ್ರತಿನಿಧಿಗಳು ಸಮ್ರಾಟರಿಗಿಂತ ಮಿಗಿಲಾಗಿ ಮೆರೆಯುತ್ತಿದ್ದಾರೆ, ರೈತನ ಹಣ ಹತ್ತು ಹಲವಾರು ವಿಧಗಳಲ್ಲಿ ವಿಶೇಷವಾಗಿ ಶೋಕಿಯ ಬಾಬ್ತುಗಳಿಗೆ, ಪೋಲಾಗುತ್ತಿದೆ. ದೇಶದಲ್ಲಿ ಶೇಕಡ ೪೯ ಭಾಗ ಜನ ದಾರಿದ್ರ್ಯರೇಖೆಯ ಕೆಳಗೆ ಜೀವನ ನಡುಸುತ್ತಿದ್ದಾರೆಂದು ಹೇಳಲಾಗಿದೆ. ಅವರೆಲ್ಲ ಮುಖ್ಯವಾಗಿ ರೈತರೇ. ಶೇಕಡ ೯೦ ಭಾಗ ವಿದ್ಯುಚ್ಛಕ್ತಿ ನಗರಗಳಲ್ಲಿ ಬಳಕೆಯಾಗುತ್ತದೆಂದು ಅಂಕಿ ಅಂಶಗಳು ತಿಳಿಸುತ್ತವೆ. ಪಟ್ಟಣದ ರಸಿಕರಿಗೆ ಟೀವಿ ಬೇಕು; ಅಲ್ಲಿಯ ಸೋಮಾರಿಗಳಿಗೆ ಕ್ರೀಡಾ ವಿನೋದಗಳು ಬೇಕು. ಇಂಥ ಖಾಲಿ ಶೋಕಿಗಳಿಗಾಗಿ, ಒಣ ಪ್ರತಿಷ್ಠೆಗಳಿಗಾಗಿ ಖರ್ಚು ಮಾಡುವ ಹಣವನ್ನು ರೈತರ ಯೋಗಕ್ಷೇಮಕ್ಕಾಗಿ ಬಳಸಬಾರದೇಕೆ? ರೈತರ ಅಜ್ಞಾನ ಹಾಗೂ ಅನೈಕ್ಯ ಶೋಷಕರ ಮೂಲಧನವಾಗಿದೆ.

ಕುಯ್ಗುರಿಯನೆಂತಂತೆ ಸಾವು ಬದುಕಿನ ನಡುವೆ
ಕರುಣೆಗರಗಸದಿಂದ ಸೀಳುವರು ಬೆಲೆಗೆ

ರೈತ ತನ್ನುದ್ಧಾರವನ್ನು ತಾನು ಕಂಡುಕೊಳ್ಳಬೇಕೇ ಹೊರತು, ಪರರ ಅನುಗ್ರಹಕ್ಕಾಗಿ ಕಾದು ಕುಳಿತರೆ, ಶತಶತಮಾನಗಳಾದರೂ ಪರಿಸ್ಥಿತಿ ಉತ್ತಮವಾಗುವುದಿಲ್ಲ. ಸಾಮಾನ್ಯ ಪ್ರಜ್ಞೆಯ ಕವಿಗೆ ಕಾಣದ ಲೋಕದ ಅನ್ಯಾಯ ಅನಿಷ್ಟಗಳೆಲ್ಲ ಕುವೆಂಪು ಅವರಂಥ ವಿಚಾರಶೀಲ ಪ್ರವಾದಿ ಕವಿಯ ಸೂಕ್ಷ್ಮಪ್ರಜ್ಞೆಗೆ ಸುಲಭವಾಗಿ ಗೋಚರವಾಗುತ್ತವೆಂಬುದಕ್ಕೆ ರೈತನ ಸ್ಥಿತಿಗತಿಗಳಿಗೆ ಸಂಬಂಧಿಸಿದ ಅವರ ಕಾತರತೆಯೆ ನಿದರ್ಶನವಾಗಿದೆ.

ಕವಿ ಲೇಖನಿಯ ಕೃಪಾಶ್ರೀ ರೈತರನ್ನು ಮಾತ್ರವಲ್ಲ. ಸಮಸ್ತ ಶ್ರೀಸಾಮಾನ್ಯರನ್ನು ಬಾಚಿ ತಬ್ಬಿಕೊಂಡಿದೆ. ಶ್ರೀಸಾಮಾನ್ಯರ ದೀಕ್ಷಾಗೀತೆ ಸರ್ವ ಸಮಾನತೆಯ ಅಗತ್ಯತೆಯನ್ನು, ಸರ್ವಸ್ವಾತಂತ್ರ್ಯದ ಶ್ರೀತಂತ್ರವನ್ನು ಜಗತ್ತಿಗೆ ಸಾರುತ್ತದೆ. ದೀನದಲಿತ ರಕ್ಷಕನೂ ಪತಿತಪಾವನನೂ ಆದ ಭಗವಂತನಿಗೆ ಶ್ರೀಸಾಮಾನ್ಯನೆ ಮಾನ್ಯಂ. ಸರ್ವೋದಯ ಸಮಾಜದ ವ್ಯವಸ್ಥೆಯಲ್ಲಿ ಮೇಲು ಕೀಳುಗಳಿರಲಾಗದು. ಅದು ರಾಮರಾಜ್ಯಕ್ಕಿಂತ ಮುಂದುವರಿದದ್ದು. ಅದರಲ್ಲಿ ಆಳುವವರು ಆಳಿಸಿಕೊಳ್ಳುವವರು ಯಾರೂ ಇಲ್ಲ, ಅದರಲ್ಲಿ ಎಲ್ಲ ಕಾಯಕವೂ ಪೂಜ್ಯ. ಅಧ್ಯಕ್ಷ ಕಮ್ಮಾರನ ಅಥವಾ ಸೇನಾನಿ ಚಮ್ಮಾರನ ನಡುವೆ ಯಾವ ಅಂತರವೂ ಇಲ್ಲ. ಅಹಮಹಮಿಕೆಗಾಗಲಿ ತರತಮಗಳಿಗಾಗಲಿ ಅಲ್ಲಿ ಅವಕಾಶವಿಲ್ಲ. ಅಲ್ಲಿ ಆಶೆ ಆಮಿಷಗಳೇ ಸೊನ್ನೆ, ‘ಅಖ್ಯಾತಿಯೆ ಸಾಮಾನ್ಯರ ಶ್ರೀಮಾನ್ ಮಾರ್ಗಂ’.

ಕುವೆಂಪು ಅವರ ವೈಚಾರಿಕತೆ ಕೇವಲ ಸಾಂಸ್ಕೃತಿಕ ಕ್ಷೇತ್ರಕ್ಕೆ ಸೀಮಿತವಾಗಿರದೆ ಆರ್ಥಿಕ ಕ್ಷೇತ್ರಕ್ಕೂ ತನ್ನ ಕ್ರಾಂತಿಯ ನಾಲಗೆಯನ್ನು ಚಾಚಿದೆ. ಸರ್ವಸಮಾನತೆಯನ್ನು ಧ್ಯೇಯವಾಗುಳ್ಳ ರಾಜಮಹಾರಾಜರನ್ನು ಭೂತಕಾಲದ ಗೋರಿಗೆ ಸೇರಿಸಿದ, ಮತಜಾಡ್ಯಕ್ಕೆ ಕುರಿತೇಟಾದ ಮದ್ದರೆದ ಕಮ್ಯೂನಿಸಮ್ ಬಗ್ಗೆ ಅವರಿಗೆ ಪಕ್ಷಪಾತ. ತರತಮವನ್ನು ಮುರಿಯುವ ಸಲುವಾಗಿ ಕಲ್ಕಿಯೇ ಲೆನಿನ್ನನ ರೂಪದಲ್ಲಿ ಕಾಣಿಸಿಕೊಂಡಿರಬೇಕೆನ್ನುವ ಕಲ್ಪನೆ ಅವರದು. ಶ್ರೀಮಂತ ದರಿದ್ರರ ನೈಜಸ್ಥಿತಿ ‘ಕಲ್ಕಿ’ಯಲ್ಲಿ ಕರುಣ ಭಯಂಕರವಾಗಿ ಚಿತ್ರಿತವಾಗಿದೆ. ಕನಸಿನಲ್ಲಿ ಕಂಡ ಮಾಯದ ಊರಿನಲ್ಲಿ ಕಲ್ಕ್ಯವತಾರಕ್ಕೆ ಅಗತ್ಯವಾದ ಪೂರ್ವಸಿದ್ಧತೆಗಳು ನಡೆದಿವೆ. ಅಂದರೆ ಕ್ರಾಂತಿ ಅನಿವಾರ್ಯವೆಂಬ ಮುನ್ಸೂಚನೆಯಿದೆ. ಕವಿಯ ದೃಷ್ಟಿಯಲ್ಲಿ ಜಗತ್ತಿನ ವ್ಯವಹಾರಗಳು ಅವಾಸ್ತವವಾಗಿದ್ದು, ಭವಿಷ್ಯತ್ತಿನ ವಿಪತ್ತುಗಳನ್ನು ಸೂಚಿಸುವ ಧೂಮಕೇತುಗಳಂತಿವೆ. ಧನಿಕ ದರಿದ್ರರ ಮಹದಂತರವೇ ಇಲ್ಲಿಯ ಅವಾಸ್ತವತೆ. ಮನುಷ್ಯ ಮನುಷ್ಯರ ನಡುವೆ ನೆಲಬಾನಗಲದ ಅಂತರವಿರುವುದು ಯಾರಿಗೂ ಶ್ರೇಯಸ್ಕರವಲ್ಲವೆಂಬ, ಅದರಿಂದ ಸಂಘರ್ಷ ಅನಿವಾರ್ಯವೆಂಬ ಭಾವನೆ ಕವಿತೆಯಲ್ಲಿ ಉದ್ದಕ್ಕೂ ಗುಪ್ತವಾಗಿ ಹರಿಯುತ್ತದೆ. ಅಲ್ಲಿಯ ಒಂದೊಂದು ಪಂಕ್ತಿಯೂ ಒಂದೊಂದು ದೃಶ್ಯದಂತಿದ್ದು ಜಗನ್ನಾಟಕವೇ ಅದರಲ್ಲಿ ಪ್ರತಿಫಲಿಸುವಂತಿದೆ.

ಧನಿಕರ ಮನೆಗಳು ಒಂದೆಡೆ ನಿಂತಿವೆ,
ಬಡವರ ಗುಡಿಸಲು ಒಂದೆಡೆ ನಿಂತಿವೆ,
ಜ್ಯೋತಿಯ ಮಣಿದೀಪಗಳಲ್ಲಿ;
ಕತ್ತಲು, ಕಗ್ಗತ್ತಲು ಇಲ್ಲಿ!
ಹಾಡಿನ ನುಣ್ದನಿಯತ್ತ!
ಗೋಳಿನ ನೀಳ್ದನಿಯಿತ್ತ!
ಕೂಳನು ಹೆಮ್ಮೆಗೆ ಬಿಸುಡುವರಲ್ಲಿ,
ಹೊಟ್ಟೆಗೆ ಇಲ್ಲದೆ ಕೊರಗುವರಿಲ್ಲಿ!
ಆ ಕಡೆ ಉದ್ಯಾನ,
ಈ ಕಡೆ ಸ್ಮಶಾನ![50]

ಒಂದೊಂದು ದೃಶ್ಯವೂ ಪರಸ್ಪರ ವಿರೋಧವಾದ ಭಾವನೆಗಳಿಗೆ ಪ್ರತೀಕದಂತಿದ್ದು ಅನಿಶ್ಚಿತವೂ ಭಯಾನಕವೂ ಆದ ಪರಿಣಾಮದ ಕಡೆಗೆ ತೀವ್ರಗತಿಯಿಂದ ಸಾಗುತ್ತವೆ. ಅಲ್ಲಿ ಇಲ್ಲಿ ಎಂಬ ಸ್ಥಾನ ವಾಚಕಗಳ ಪ್ರಯೋಗದಿಂದ ಕವಿಯ ಒಲವು ಯಾರ ಪರವಾಗಿದೆಯೆಂಬುದು ಸ್ಪಷ್ಟವಾಗುತ್ತದೆ. ಬಡಬಗ್ಗರ ವಿಪನ್ನಾವಸ್ಥೆಗಾಗಿ, ಅವರ ಮೂಕ ಸಂಕಟಕ್ಕಾಗಿ ಅವರು ಮರುಕಗೊಳ್ಳುತ್ತಾರೆ. ಆ ಮರುಕವೇ ಕ್ರೋಧವಾಗಿ ಮಸಗುತ್ತದೆ, ಮಸೆಯುತ್ತದೆ. ಒಂದಲ್ಲ ಒಂದು ದಿನ ಬಡವರ ಜಠರಾಗ್ನಿಗೆ ಶ್ರೀಮಂತರು ಬೇಳ್ವೆಯಾಗಬೇಕೆಂಬುದೇ ಈ ಕವಿತೆಯ ಸಂದೇಶ; ಆ ಸಂದೇಶ ನಿಜವಾಗುವ ಕಾಲ ಬಹುದೂರವಿಲ್ಲವೆಂಬುದೂ ಸುಸ್ಪಷ್ಟ. ಬಡವರ ಸಿಟ್ಟಿಗೆ ಬಡಬಾಗ್ನಿಯೂ ನಾಚಿ ತಲೆತಗ್ಗಿಸುವಂತಾಗುತ್ತದೆ. ಬಡವನೆ ಕಲಿಯುಗದಂತ್ಯದ ಕಲ್ಕಿ; ಆ ಕಲ್ಕಿಯೆ ಕ್ರಾಂತಿ ರೂಪದಲ್ಲಿ ಮೈದೋರುತ್ತಾನೆ. ಮೇಲಿಂದ ಮೇಲೆ ಬರುವ ರಕ್ತದ ದೃಶ್ಯಗಳಂತು ಕ್ರಾಂತಿಯ ಸಂಕೇತಗಳೇ ಆಗಿವೆ.

ಋಷಿಕವಿ ಪ್ರವಾದಿಯಾಗಿ ಮುಂದಾಗುವುದನ್ನು ಬಹು ಮುಂಚಿತವಾಗಿಯೇ ಲೋಕಕ್ಕೆ ಸಾರುತ್ತಾನೆ. ಅಹಂಕಾರವಶರಾದ ಜನ ಅದನ್ನು ಕಡೆಗಣಿಸಿ ಬಡವರನ್ನು ಸುಲಿಯುವ ನೀಚಕೃತ್ಯದಲ್ಲಿ ಮುಂದುವರಿಯುತ್ತಾರೆ. ಅವರಿಗೆ ಇಂದಿನ ಮೋಜೇ ಮೋಜು; ನಾಳೆಯ ಗೋಜು ಬೇಡ.

ಬಡವ;
ತಿರುಗಿ ನಿಂತರೆ ವಡಬ!
ಬಡವ ವಡಬನಾಗುವ ತನಕ ಕಾಯಬೇಕೆ?[51]

ಎಂದು ಕವಿಯೇ ಅಂಥವರನ್ನು ಪ್ರಶ್ನಿಸುತ್ತಾರೆ. ಭೋಗ ವೈಭವಗಳಿಂದ ಜ್ಞಾನದೃಷ್ಟಿಯನ್ನು ಕಳೆದುಕೊಂಡು ಜನ ಆ ಪ್ರಶ್ನೆಯನ್ನು ಸಹ ಕೇಳಿಸಿಕೊಳ್ಳುವುದಿಲ್ಲ. ತನ್ನ ಕಾಣ್ಕೆಯನ್ನು ಅಭಿವ್ಯಕ್ತಗೊಳಿಸಬೇಕಾದ್ದು ಕವಿಯ ಧರ್ಮ; ಅದನ್ನರಿಯಲೆಳಸದಿರುವುದು ಜನರ ಕರ್ಮ. ಈ ಮುಂಗಾಣ್ಕೆಯೂ ಕುವೆಂಪು ಅವರ ವೈಚಾರಿಕತೆಯ ಒಂದು ಮುಖವೆನ್ನಬಹುದಾಗಿದೆ.

‘ಕಲ್ಕಿ’ಯಲ್ಲಿ ಪ್ರತಿಬಿಂಬಿತವಾದ ಮುಂಗಾಣ್ಕೆಯೇ ‘ಹೊಸ ಬಾಳಿನ ಗೀತೆ!’ಯಾಗಿ ಹೊರ ಹೊಮ್ಮುತ್ತದೆ. ‘ಸರ್ವರಿಗೆ ಸಮಬಾಳು! ಸರ್ವರಿಗೆ ಸಮಪಾಲು’[52] ಎಂಬ ನವಯುಗವಾಣಿಗೆ ಕಿವಿಗೊಡುವಂತೆ ಕವಿ ಬಡ ಜನರಿಗೆ ಕರೆ ಕೊಡುತ್ತಾರೆ. ಶ್ರೀಮಂತರಿಗೆ ಮೃತ್ಯುವಾಗಿ ಬಡವರಿಗೆ ಧೈರ್ಯವಾಗಿ ಬರುತ್ತಿರುವ ವಿಪ್ಲವದ ಕಾಳಿಯನ್ನು ಸ್ವಾಗತಿಸಲು ಸಿದ್ಧರಾಗುವಂತೆ ಅವರು ಮೊಳಗುತ್ತಾರೆ. ‘ಇಂದ್ರಸಿಂಹಾಸನಕೆ ಬಂದಿಹುದು ಕೊನೆಗಾಲ’ ಎಂಬ ಅವರ ಕಣಿ, ಅಂದರೆ ಅವರ ಕಾಣ್ಕೆ ಎಂದೋ ನಿಜವಾಯಿತೆಂಬುದನ್ನು ಮರೆಯುವಂತಿಲ್ಲ. ಆಶ್ಲೀಲಮೋದದಲ್ಲಿ ತಲ್ಲೀನರಾಗಿರುವ ದೇವತೆಗಳ ನಾಶವೂ ಸನ್ನಿಹಿತವಾಗಿದೆ. ‘ದೇವರನ್ಯಾಯವನು ಮಾನವರೆ’ ತಿದ್ದಬೇಕಾದೀತೆಂದೂ ಬಡವರಲ್ಲಿ ಸುಪ್ತವಾಗಿರುವ ಪೌರುಷ ತೇಜಸ್ಸುಗಳನ್ನು ಪ್ರಚೋದಿ ಸುತ್ತಾರೆ.

ಕೈಲಾಗದವರೆಂಬ ನಾವು ಕೀಳೆಂದೆಂಬ
ಹಣೆಬರಹವೆಂದೆಂಬ ಮೂಢತೆಯ ನೀಗಿ
ಯುಗ ಚಕ್ರ ಪರಿವರ್ತನೆಗೆ ಸರ್ವರೂ ಸೇರಿ
ಹೆಗಲು ಕೊಟ್ಟೊಮ್ಮನಸು ಮಾಡಿ ನೆರವಾಗಿ!

ಎಂದು ಅವರ ನರನರಗಳಲ್ಲಿ ನವಚೈತನ್ಯವನ್ನುದ್ದೀಪಿಸಲು ಅವರ ಶ್ರೀ ಕಂಠವಾಣಿ ಪ್ರಯತ್ನಗೈದಿದೆ. ‘ಸಂಸ್ಕೃತಿಯ ಹೆಸರಿಂದೆ ಶ್ರೀಮಂತರೊಡ್ಡುವಾ ಬಲೆ ನಿಮಗೆ ಮೃತ್ಯು!’ ವೆಂದೂ ಮುಂದಿನ ಪೀಳಿಗೆ ಹಸನಾಗಿ ಬದುಕಬೇಕೆಂಬ ದೃಷ್ಟಿಯಿಂದ ಇಂದಿನವರು

“ಇಂದು ರಕ್ತದ ಬಿಂದು ಮುಂದೆ ಸೌಖ್ಯದ ಸಿಂಧು”
ಎಂದು ಸಾಹಸಕೇಳಿ, ಹಿಂಜರಿಯ ಬೇಡಿ
ಎಂದೂ ಅವರು ಬಡಜನರನ್ನು ಹುರಿದುಂಬಿಸುತ್ತಾರೆ.

ಜಾತೀಯತೆ ಮತೀಯತೆ ಶ್ರೀಮಂತತೆಗಳ ಪೈಶಾಚಿಕ ನರ್ತನಕ್ಕೆ ಹೇಸುವ ಕವಿ ಅವುಗಳಿಂದ ವಿಮೋಚನೆ ಪಡೆಯಲು ಕಮ್ಯೂನಿಸಂ ಪ್ರಬಲಮಾರ್ಗವೆಂದು ಪ್ರಶಂಸಿಸುತ್ತಾರೆ. ಸರ್ವೋ ದಯ ಕಮ್ಯೂನಿಸಮ್ಮಿನ ಮುಂದುವರಿದ ಪರಿಪೂರ್ಣವೂ ನಿಶ್ರೇಯಸವೂ ಆದ ವ್ಯವಸ್ಥೆ ಯೆಂಬುದು ಅವರ ನಿಶ್ಚಿತಾಭಿಪ್ರಾಯ. ನಿಜಕ್ಕೂ ಸರ್ವೋದಯವೆಂಬುದು ಒಂದು ವ್ಯವಸ್ಥೆಯಲ್ಲ; ಅದೊಂದು ಮಾರ್ಗ; ಅದೊಂದು ಮಾನವ ಸಾಧಿಸಬೇಕಾದ ಧ್ಯೇಯವೂ ಅಹುದು. ‘ಓರೊರ್ವರ ಗರ್ವದ ಕಾಲ’ ಕೊನೆಗೊಂಡು ‘ಸರ್ವರಕಾಲ’ ಬರಬೇಕೆಂಬುದು ಅವರ ಹೆಬ್ಬಯಕೆ. ಅವರ ‘ಯುಗಮಂತ್ರ’ಗಳಲ್ಲಿ ಸರ್ವೋದಯವೂ ಒಂದು. ಅದೇ ಸ್ವಾತಂತ್ರ್ಯದ ಶ್ರೀತಂತ್ರವಾಗಬೇಕೆಂಬ ಹಾರೈಕೆ ಅವರದು.

ಕುವೆಂಪು ಅವರ ರಾಜಕೀಯಾರ್ಥಿಕ ಭಾವನೆಗಳಾಗಲೀ, ಸಾಮಾಜಿಕಾನುಭವಗಳಾಗಲೀ ಅವರ ವೈಚಾರಿಕತೆಗೂ ವೈಜ್ಞಾನಿಕ ದೃಷ್ಟಿಗೂ ನಿದರ್ಶನಗಳಾಗಿ ಪ್ರತಿಭಾ ಮೂಷೆಯಿಂದ ಹೊರಬರುವಾಗ ಕಲಾನುಭವಗಳಾಗಿ ಪರಿವರ್ತನೆ ಹೊಂದಿ, ವಾಚ್ಯ ವ್ಯಂಗ್ಯ ವಿಡಂಬನೆ ಮೊದಲಾದ ಸಕಲ ಕಾವ್ಯತಂತ್ರ ಪರಿಕರಗಳನ್ನು ಬಳಸಿಕೊಂಡು, ಹೊರ ಹೊಮ್ಮುವಾಗ ಅವರ ಸರ್ವಭೂತಹಿತರತ ಮನೋಧರ್ಮ ಪೂರ್ಣವಾಗಿ ಅಭಿವ್ಯಕ್ತವಾಗುತ್ತದೆ. ಅವರು ನಿಸರ್ಗೋಪಾಸಕರಾಗಿ ಶುಕಪಿಕ ವಸಂತಗಳನ್ನು ಕುರಿತು ಹಾಡಿದ್ದಾರೆ; ದ್ರಷ್ಟಾರರಾಗಿ ಅಧ್ಯಾತ್ಮ ಸಾಧಕರಾಗಿ ಆತ್ಮಕಾವ್ಯಗಳನ್ನು ರಚಿಸಿದ್ದಾರೆ; ಸಾಮಾಜಿಕ ಕವಿಯಾಗಿ ‘ಸಾಮಾನ್ಯ’ ಕವಿಯಾಗಿ ಸಮಕಾಲೀನ ಸಾಮಾಜಿಕ ಸ್ಥಿತಿಗತಿಗಳ ಮೇಲೆ ಕ್ಷಕಿರಣ ಹಾಯಿಸಿ, ಅದರ ರೋಗರುಜಿನಗಳನ್ನು ಕಂಡುಂಡು. ಅಲ್ಲಿಯ ನಗ್ನ ಸತ್ಯವನ್ನು ನಿರ್ದಾಕ್ಷಿಣ್ಯವಾಗಿ ನಿರ್ಭೀತಿಯಿಂದ ಹೊರಗೆಡಹಿದ್ದಾರೆ. ‘ಬಡತನಂ, ಗೊಬ್ಬರಂ, ಕತ್ತಿ, ಗುದ್ದಲಿ, ಹಾರೆ, ಬೆವರು, ನೆತ್ತರ್ಗಳಂ ಗಾನಗೈವುದು’[53] ತಮ್ಮ ಆದ್ಯಕರ್ತವ್ಯವೆಂದೂ. ಅವನ್ನು ಮರೆತವನು, ದ್ರೋಹಿಯೆಂದೂ ಅವರು ಬಗೆದವರು. ಪ್ರಚಲಿತ ಸಮಸ್ಯೆಗಳನ್ನು ಕುರಿತು ಇವರಷ್ಟು  ವ್ಯಾಪಕವಾಗಿ, ಮಾರ್ಮಿಕವಾಗಿ ಹಾಡುಕಟ್ಟಿದ ಕವಿಗಳು ಕನ್ನಡ ಸಾಹಿತ್ಯದಲ್ಲಿಯೇ ವಿರಳ ಎಂದೇ ಹೇಳಬಹುದು. ಅವರ ದೃಷ್ಟಿಯಲ್ಲಿ ಯಾವುದೂ ಕ್ಷುದ್ರವಾಗಿ ಕಾವ್ಯಬಾಹಿರವಾಗಿ ಕಾಣು ವುದಿಲ್ಲ. ದಾರಿದ್ರ್ಯ ಅಜ್ಞಾನಗಳಿಗೆ ಸಂಬಂಧಿಸಿದ ಸಮಸ್ಯೆಗಳಿರುವಂತೆ ಭಾಷಾಸಮಸ್ಯೆಯೂ ರಾಜಕಾರಣಿಗಳ ದೂರದೃಷ್ಟಿರಾಹಿತ್ಯ ಹಾಗೂ ಪಕ್ಷಪಾತ ದೃಷ್ಟಿಯಿಂದಾಗಿ ಇಂದು ಕಗ್ಗಂಟಾಗಿದೆ. ಒಬ್ಬಿಬ್ಬರು ವಿನಾ, ಉಳಿದ ಸಾಹಿತಿಗಳು ಆ ಕಡೆಗೆ ಕೃಪಾಕಟಾಕ್ಷವನ್ನು ಹರಿಸಿಲ್ಲ. ವಿಚಾರವಾದಿಗಳೆಂದು ಹೇಳಿಕೊಳ್ಳುವವರೂ ಈ ವಿಷಯದಲ್ಲಿ ಸಾಕಷ್ಟು ವಿಶ್ಲೇಷಣೆ ನಡೆಸಿಲ್ಲ; ಸಮಸ್ಯೆಯ ಪರಿಹಾರಕ್ಕೆ ಕ್ರಮಬದ್ಧವಾದ ಪ್ರಯತ್ನಗಳನ್ನು ಮಾಡಿಲ್ಲ. ಕುವೆಂಪು ಅವರಂತೆ ಆಳವಾಗಿ ಆಲೋಚಿಸಿದವರು’ ಆ ಸಮಸ್ಯೆಯ ಹತ್ತು ಮುಖಗಳನ್ನು ಪದರ ಪದರವಾಗಿ ವಿಶ್ಲೇಷಿಸಿ, ಪರಿಹಾರಗಳನ್ನು ಕಂಡು ಕೊಂಡವರು, ಅವುಗಳನ್ನು ಪ್ರಾಮಾಣಿಕವಾಗಿ ಕಾರ್ಯರೂಪಕ್ಕೆ ತರಲು ಪ್ರಯತ್ನಿಸಿದವರು ಕರ್ನಾಟಕದಲ್ಲೇಕೆ, ಭಾರತದಲ್ಲಿಯೇ ವಿರಳ ಎಂದು ಹೇಳಬಹುದು.

ನೃಪತುಂಗನ ಕಾಲದಿಂದ ಈ ಸಮಸ್ಯೆ ಒಂದಲ್ಲ ಒಂದು ರೂಪದಲ್ಲಿ ಜೀವಂತವಾಗಿದ್ದು, ವಿದೇಶೀಯರ ರಾಜ್ಯಭಾರದಲ್ಲಿ ಹಲವು ಮುಖಗಳನ್ನು ಪಡೆದುಕೊಂಡು ಗುಲಾವಿೂ ಮನೋಭಾವದ ಸ್ವದೇಶೀಯರ ಕೈಯಲ್ಲಿ ಅದು ಜಟಿಲವಾಗಿದೆ. ಅವಕಾಶ ದೊರೆತಾಗಲೆಲ್ಲ, ಕೊನೆಗೆ ಔಚಿತ್ಯವಿಲ್ಲದೆಡೆಯೂ, ಸರ್ಕಾರದ, ವಿಶ್ವವಿದ್ಯಾಲಯದ, ಅಥವಾ ಯಾವುದೇ ಸಂಸ್ಥೆಯ ವೇದಿಕೆಯಾದರೂ ಸರಿಯೆ, ಶ್ರೋತೃಗಳಿಗೆ ಹಿಡಿಸಲಿ, ಬಿಡಲಿ, ಭಾಷಾ ಸಮಸ್ಯೆ ಯನ್ನು ಕುರಿತು, ಒಮ್ಮೊಮ್ಮೆ ಭಾವಾವೇಶದಿಂದ ಪ್ರಸ್ತಾಪಿಸುತ್ತಾರೆ. ಅವರ ಆ ಆವೇಶದಲ್ಲಿ ದೇಶಕ್ಷೇಮ ದೃಷ್ಟಿಯೂ ಸಾಮಾನ್ಯನ ಹಿತಾನುರಕ್ತಿಯೂ ಇವೆಯೆಂಬುದನ್ನು ಮರೆಯು ವಂತಿಲ್ಲ. ಶಿಕ್ಷಣ ಯಶಸ್ವಿಯಾಗಬೇಕಾದರೆ ಆಡಳಿತ ಸುಗಮವಾಗಬೇಕಾದರೆ, ಪ್ರಾದೇಶಿಕ ವೈಶಿಷ್ಟ್ಯ ಸುರಕ್ಷಿತವಾಗಬೇಕಾದರೆ’, ನಾಡಿನ ಗಡಿ ಭದ್ರವಾಗಬೇಕಾದರೆ ಕನ್ನಡನಾಡಿನಲ್ಲಿ, ನಾಡಿನ ರಾಜಧಾನಿಯಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿರಬೇಕೆಂದು ಅಬ್ಬರಿಸುತ್ತಾರೆ; ವಿಚಾರ ಕ್ರಾಂತಿಗೆ, ಜ್ಞಾನ ವಿಜ್ಞಾನಗಳ ಪೂರ್ಣವಿಕಾಸಕ್ಕೆ, ಶ್ರೀಸಾಮಾನ್ಯನ ಉತ್ಥಾನಕ್ಕೆ ಕನ್ನಡ ಮಾಧ್ಯಮ ಅನಿವಾರ್ಯವೆಂದೂ, ಅದನ್ನು ಕಾರ್ಯಗತಗೊಳಿಸಲು ಕದನವಾದರೂ ಸರಿಯೆ ಸಜ್ಜಾಗಬೇಕೆಂದೂ ನಾಡವರಿಗೆ ಎಚ್ಚರಿಕೆ ಕೊಡುತ್ತಾರೆ. ಶಾಲಾ ಕಾಲೇಜುಗಳಲ್ಲಿ ದ್ವಿಭಾಷಾ ಸೂತ್ರವೇ ಸಾಕೆಂಬುದು ಅವರ ವಾದ; ಒಂದುಪಕ್ಷ ಹೆಚ್ಚು ಭಾಷೆಗಳ ಕಲಿಕೆ ಯಾವುದಾದರೂ ಕಾರಣದಿಂದ ಅನಿವಾರ್ಯವೆನಿಸುವುದಾದರೆ ಬಹುಭಾಷೆಗಳಲ್ಲಿ ಮೂರು ಭಾಷೆಗಳನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯ ವಿದ್ಯಾರ್ಥಿಗಿರಬೇಕೆಂದೂ, ಕನ್ನಡದ ಕಲಿಕೆ ಕಡ್ಡಾಯವಾಗ ಬೇಕೆಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಬಲಾತ್ಕಾರದ ಇಂಗ್ಲೀಷಿನಿಂದ ಪ್ರಚ್ಛನ್ನ ಭ್ರಷ್ಟಾಚಾರ ನಡೆಯುತ್ತಿದೆಯೆಂದು ಹೇಳುವಲ್ಲಿ ಅವರು ಯಾರ ಅಟ್ಟಹಾಸ ನಿಂದೆಗಳಿಗೂ ಅಂಜುವವರಲ್ಲ. ಆಂಗ್ಲರು ಈ ದೇಶದಿಂದ ಕಾಲುಕಿತ್ತರೂ, ಆಂಗ್ಲಾಲಿಂಗನಾನುರಕ್ತಿಯಿಂದಾಗಿ, ಈ ನಾಡಿನ ಜನರ ವಿಚಾರಶಕ್ತಿ ವರ್ಧಿಸುತ್ತಿಲ್ಲ, ಅವರ ಮೌಢ್ಯ ಸಂಪತ್ತು ದಿನೇ ದಿನೇ ಪಾರ್ಥೀನಿಯಂ ಕಳೆಯಂತೆ ಅಧಿಕವಾಗುತ್ತಿದೆಯೆಂಬುದು ಸುಸ್ಪಷ್ಟ. ಆಂಗ್ಲಪೂತನಿಯಿಂದ ಪಾರಾಗುವಂತೆ ಮಕ್ಕಳಿಗೆ ಬೋಧಿಸುತ್ತಾರೆ.

ಪಾರುಮಾಡೆಮ್ಮನೀ ಇಂಗ್ಲೀಷಿನಿಂದ
ಪೂತನಿಯ ಅಸುವೀಂಟಿ ಕೊಂದ ಗೋವಿಂದ[54]

ಎಂದು ಮೊರೆಯಿಡುವಂತೆ ಅವರಿಗೆ ಕರೆ ನೀಡುತ್ತಾರೆ. ಅಧಿಕಾರದಲ್ಲಿರುವ ಜನರಿಗೆ ಕರುಣೆಯಿಲ್ಲವಾದರೆ ಗೋವಿಂದನ ಕೃಪೆಗಾದರೂ ಕೈಯೊಡ್ಡಬೇಕಾಗುತ್ತದೆ, ಅಂತಿಮ ಪ್ರಯತ್ನವಾಗಿ ತನ್ನ ಹೊಟ್ಟೆಯಲ್ಲಿ ಸುರಕ್ಷಿತವಾಗಿರುವಂತೆ ಆಂಗ್ಲತೋಳ ಕನ್ನಡ ಕುರಿ ಮರಿಯನ್ನು ಆಹ್ವಾನಿಸುವ ಪರಿಯಲ್ಲಿ ವ್ಯಂಗ್ಯ ತುಂಬಿತುಳುಕುತ್ತದೆ. ತನ್ನತನವನ್ನು ಸೂರೆಗೊಟ್ಟು, ಮತ್ತೊಬ್ಬನಿಗೆ ದಾಸಾನುದಾಸನಾಗಿ ಸೇವೆ ಸಲ್ಲಿಸುವಲ್ಲಿ, ‘ಭಾವೈಕ್ಯತೆ’ ಪರಾಕಾಷ್ಠೆಯನ್ನು ಕಾಣಬಹುದೆಂಬುದರಲ್ಲಿ ಖಾರವಾದ ವಿಡಂಬನೆಯಿದೆ.

ಬೇರೆಯಾಗಿ ದೂರ ನಿಂತು
ಏಕೆ ಪಾಡು ಪಡುವೆ ಇಂತು?
ಬಾ, ಬಾ, ಬಳಿಗೆ ಬಾ:
ನನ್ನೊಳೈಕ್ಯವಾಗು ಬಾ
ಐಕ್ಯದೊಳೇ ಇಹುದು ಬಾಳು:
ಅನೈಕ್ಯತೆಯೆ ನೋವು, ಗೋಳು[55]

ಈ ಮಾತು ಭಾಷಾನೀತಿಗೆಂತೊ ಮತಾಂತರಕ್ಕೂ ಅಂತೆಯೇ ಅನ್ವಯವಾಗುತ್ತದೆ. ಇಂಗ್ಲಿಷಿನ ಮರುಭೂಮಿಯಲ್ಲಿ ಮಕ್ಕಳ ಶಕ್ತಿ ಇಂಗಿಹೋಗುತ್ತಿದೆಯೆಂದವರು ಕೊರಗುತ್ತಾರೆ.

ಗಾಂಧಿಯಿಂದಿಂಗ್ಲಿಷರ ದಾಸ್ಯದಿಂ ಪಾರಾದೆ
ಅವನ ಕೊಂದಿಂಗ್ಲಿಷಿಗೆ ದಾಸಿಯಾದೆ
ಓ ತಾಯಿ ಭಾರತಿಯೆ, ಚೀಣೀಯರನೆ ಮೀರಿ
ಹಿಂಡುತಿದೆ ಕಂದರನು ಇಂಗ್ಲಿಷಿನ ಮಾರಿ[56]

ಎಂದು ರೋಷಗೊಳ್ಳುತ್ತಾರೆ. ಇಂಗ್ಲಿಷಿನ ಬಗ್ಗೆ ಅವರಿಗೆ ದ್ವೇಷವಿಲ್ಲ. ಅದರಿಂದ ತಾವು ಪಡೆದಿರುವ ಉಪಕಾರವನ್ನು ಕೃತಜ್ಞತೆಯಿಂದ ಸ್ಮರಿಸುತ್ತಾರೆ. ಆದರೆ ಬಲಾತ್ಕಾರ ಕಾರಣಕ್ಕಾಗಿ ಮಾತ್ರ ಅವರ ಕೋಪ ಗುಡುಗು ಸಿಡಿಲುಗಳಂತೆ ಅಬ್ಬರಿಸುತ್ತದೆ. ಇಂಗ್ಲಿಷ್ ಹೇರಿಕೆ ಪ್ರಚ್ಛನ್ನ ಭ್ರಷ್ಠಾಚಾರವೆಂದು ಗುಡುಗುತ್ತಾರೆ. ‘ಇಂಗ್ಲಿಷ್ ಭಾಷೆ ಬಲಾತ್ಕಾರದ ಸ್ಥಾನದಿಂದ ಐಚ್ಛಿಕ ಸ್ಥಾನಕ್ಕೆ ನಿಯಂತ್ರಣಗೊಳ್ಳದಿದ್ದರೆ, ಇಂಗ್ಲಿಷ್ ಶಿಕ್ಷಣ ಮಾಧ್ಯಮ ತೊಲಗಿ ಪ್ರಾದೇಶಿಕ ಭಾಷೆಗೆ ಆ ಸ್ಥಾನ ಲಭಿಸದಿದ್ದರೆ, ನಮ್ಮ ದೇಶ ಹತ್ತೇ ವರ್ಷಗಳಲ್ಲಿ ಸಾಧಿಸಬೇಕಾದುದನ್ನು ಇನ್ನೊಂದು ನೂರು ವರ್ಷಗಳಲ್ಲಿಯೂ ಸಾಧಿಸಲಾರದೆ ನಿತ್ಯರೋಗಿಯಂತಿರಬೇಕಾಗುತ್ತದೆ. ಅಲ್ಲದೆ ಮತ್ತೂ ಒಂದನ್ನು ಕಂಡಂತೆ ಹೇಳುತ್ತೇನೆ. ತಮಗ್ಯೆ ನಮ್ಮ ಕಾರ್ಖಾನೆಗಳನ್ನೆಲ್ಲ ನಿಲ್ಲಿಸಿ ಅಣೆಕಟ್ಟುಗಳನ್ನೆಲ್ಲ ತಡೆಹಿಡಿದು, ಪ್ರಯೋಗಶಾಲೆ ಸಂಶೋಧನಾಗಾರಗಳನ್ನೆಲ್ಲ ವಜಾಮಾಡಿ, ಹಲವು ಪಂಚವಾರ್ಷಿಕ ಯೋಜನೆಗಳ ಆ ಹಣವನ್ನೆಲ್ಲ ಇಂಗ್ಲಿಷ್ ಸ್ಟಾಂಡರ್ಡ್‌ಅನ್ನು ಉತ್ತಮಗೊಳಿಸುವುದಕ್ಕಾಗಿಯೇ ವೆಚ್ಚ ಮಾಡಿದರೂ, ಇನ್ನು ನೂರು ವರ್ಷಗಳ ಅನಂತರವೂ ನಮ್ಮ ಮಕ್ಕಳ ಇಂಗ್ಲಿಷಿನ ಮಟ್ಟ ಈಗಿರುವುದಕ್ಕಿಂತ ಮೇಲೇರುವುದಿಲ್ಲ”[57] ಕುವೆಂಪು ಅವರ ಈ ಮಾತಿನಲ್ಲಿ ಘೋರಸತ್ಯ ಅಡಗಿದೆಯೆಂಬುದಕ್ಕೆ ಇಂದಿನ ವಿದ್ಯಾರ್ಥಿ ಸಮುದಾಯದ ದಾರುಣ ಸ್ಥಿತಿಯೆ ನಿದರ್ಶನವಾಗಿದೆ. ನೂರಕ್ಕೆ ಎಪ್ಪತ್ತು ಮಂದಿ ವಿದ್ಯಾರ್ಥಿಗಳು ಅದರಲ್ಲಿಯೂ ಹಳ್ಳಿಯ ವಿದ್ಯಾರ್ಥಿಗಳು ಬೇತೇರ್ಗಡೆಯಾಗಲು ಕಾರಣಗಳೇನೆಂಬುದನ್ನು ಕಂಡು ಹಿಡಿದು, ಸೂಕ್ತ ಪರಿಹಾರಗಳನ್ನು ಒದಗಿಸಲಾರದ ಶಿಕ್ಷಣತಜ್ಞರು ಇದ್ದರೂ ಒಂದೇ ಇಲ್ಲದಿದ್ದರೂ ಒಂದೇ. ವಿದ್ಯಾರ್ಥಿ ವೃಂದದ ನಿರಾಶೆಗೆ ಈ ಬೇತೇರ್ಗಡೆಯೇ ಕಾರಣ. ನಿರಾಶಾಭೂತಗ್ರಸ್ತ ತರುಣರು ಸಮಾಜಕ್ಕೆ ಸಮಸ್ಯೆ, ದೇಶಕ್ಕೆ ಹೊರೆಯಾಗುತ್ತಾರೆಂಬ ಕಠೋರ ಸತ್ಯವನ್ನಿನ್ನೂ ನಮ್ಮ ನಾಯಕರು ಅರಿಯಬೇಕಾಗಿದೆ.

೧೦

ಕುವೆಂಪು ಅವರ ಪ್ರಕೃತಿ ಗೀತೆಗಳಲ್ಲಿಯೂ ವೈಚಾರಿಕತೆಯ ಹರಹನ್ನು ಗುರುತಿಸಬಹುದು. ಕವಿಯೊಡನೆ ರಸಯಾತ್ರಿಯಾಗಿ, ಕಲ್ಪನೆಯ ವಿಮಾನದಲ್ಲಿ ಕುಳಿತು ಅವನ ಅನುಭವಗಳಲ್ಲಿ ಭಾಗಿಯಾದಾಗ ಮಾತ್ರ ಅಲ್ಲಿಯ ವೈಚಾರಿಕತೆಯ ಮಹತ್ವ ವೇದ್ಯವಾಗುತ್ತದೆ. ಶರತ್ಕಾಲದ ಸೂರ್ಯೋದಯ ಸಮಯದಲ್ಲಿ ಕೋಟ್ಯಂತರ ಜನ ಹೊರಗಡೆ ಬಯಲಿನಲ್ಲಿ ಅಡ್ಡಾಡುವುದು ಉಂಟಷ್ಟೆ. ಹುಲ್ಲಿನ ಮೇಲೆ ಹರಡಿರುವ ‘ಇಬ್ಬನಿರಾಶಿ’ಯ ಕಡೆಗೂ ಅವರ ದೃಷ್ಟಿ ಹರಿಯುತ್ತದೆ. ಆದರೆ ಉರಿ ಕಿಡಿಯ “ಕಿಡಿ-ಉರಿ”ಯ ಅನುಭವವನ್ನು ಪಡೆಯುವ ಭಾಗ್ಯ ಎಷ್ಟು ಮಂದಿಗಿರುತ್ತದೆ?

ಹಚ್ಚನೆ ಪಚ್ಚನೆ ವೇದಿಕೆಯಲ್ಲಿ
ಸಾಸಿರಗಟ್ಟಲೆ ಮುತ್ತನು ಚೆಲ್ಲಿ,
ರನ್ನದ ಕಿರುಹಣತೆಗಳಲ್ಲಿ
ಶ್ಯಾಮಲ ತೈಲದಿ ಹೊನ್ನಿನ ಬತ್ತಿ;
ಕಾಮನ ಬಿಲ್ಲಿನ ಬೆಂಕಿಯು ಹೊತ್ತಿ
ಸೊಡರುರಿಯುತ್ತಿವೆ ಅಲ್ಲಲ್ಲಿ![58]

ಕಲ್ಪನಾ ವಿಲಾಸ ಭಾವತರಂಗ ಮತ್ತು ವಿಚಾರ ಶ್ರೀಯ ಸುಂದರ ಸಂಗಮವಿಲ್ಲಿದೆ. ವಿಚಾರ ಮಾಡುತ್ತ ಹೋದಂತೆಲ್ಲ ಓದುಗರ ಕಲ್ಪನೆ ಗರಿಗೆದರಿ ಭಾವಾಕಾಶದಲ್ಲಿ ಹಾರಾಡುತ್ತ, ಕವಿ ಹೃದಯದೊಡನೆ ಸಮಾಗಮ ಹೊಂದುತ್ತದೆ.

ಚೇತನ ಮೂರ್ತಿಯು ಆ ಕಲ್ಲು;
ತೆಗೆ! ಜಡವೆಂಬುದೆ ಬರಿ ಸುಳ್ಳು!

ಎಂಬುದು ಬರಿಯ ಭಾವಸತ್ಯ ಮಾತ್ರವಲ್ಲ, ವೈಜ್ಞಾನಿಕ ಸತ್ಯವೂ ಅಹುದೆಂಬ ಭಾವನೆ ವೈಚಾರಿಕತೆಯ ಮೂಲಕ ಮನದಟ್ಟಾಗುತ್ತದೆ.

ನವರಾತ್ರಿ ಸಮಯದಲ್ಲಿ ಯಾವ ಕಡೆಗೆ ಕಣ್ಣು ಹಾಯಿಸಿದರೂ ಹಸುರಿನ ಸೊಂಪು ಕಣ್ಣಿಗೆ ಮುತ್ತುತ್ತದಷ್ಟೆ. ರಾತ್ರಿ ರಾಣಿ ಅರಳಿದಾಗ ಪರಿಸರದ ಗಿಡಮರಗಳು ಮಾತ್ರವಲ್ಲ, ಸಕಲ ಜಡವಸ್ತುಗಳೂ ಸುಗಂಧವನ್ನು ಹೊರಸೂಸುವಂತೆ ಯಾರಿಗಾದರೂ ಅನುಭವ ವಾಗದಿರದು. ಪೈರು ಬೆಳೆದು ನಿಂತಿರುವ ಗದ್ದೆ ಹೊಲಗಳ ತೆವರಿಯ ಮೇಲೆ ನಿಂತಾಗ ಹಲವು ಬಗೆಯ ‘ಹಸುರುಗಳ’ ವಾಸನೆ ಅಡರದಿರುವುದಿಲ್ಲ. ಅಂತೆಯೇ ಹಸುರಿನ ಪರಿಸರ ಬಳಿಯ ವಸ್ತುಗಳ ಮೇಲೆಲ್ಲ ಪರಿಣಾಮ ಬೀರದಿರದು. ಹಸುರೆಂದರೆ ಅದರ ವರ್ಣ ವೈವಿಧ್ಯ ಮಾತ್ರವಲ್ಲ, ಅದರ ವಾಸನಾವೈವಿಧ್ಯ ರೂಪವೈವಿಧ್ಯವೂ ಸೇರುತ್ತದೆ. ಆ ಹಸುರಿನ ವೈಭವವನ್ನನುಭವಿಸುವವನ ನಾಡಿ ನಾಡಿಗಳಲ್ಲಿ ಹಸುರಿನ ಸಂಚಾರವಾಗುತ್ತದೆ; ಈ ಅನುಭವ ಸಹ ತೀವ್ರ ಸಂವೇದನೆಯಿಂದ ಹಾಗೂ ವೈಚಾರಿಕತೆಯಿಂದ ಲಬ್ಧವಾಗು ವಂಥದು. ರಸಪಾನ ಸ್ನಾನದಿಂದ ಕವಿಯ ಆತ್ಮವೇ ಹಸುರಾಗುತ್ತದೆ. ಇಲ್ಲಿ ಹಸುರು ರಸರೂಪದ ಮೂಲಕ ಕವಿಯ ಚಿತ್ತಕೋಶವನ್ನು ಪ್ರವೇಶಿಸುತ್ತದೆ.

ಹಸುರಾಗಸ ಹಸುರು ಮುಗಿಲು;
ಹಸುರು ಗದ್ದೆಯಾ ಬಯಲು;
ಹಸುರಿನ ಮಲೆ ಹಸುರು ಕಣಿವೆ;
ಹಸುರು ಸಂಜೆಯಾ ಬಿಸಿಲು[59]

ಆಕಾಶ ಕೆರೆಕೊಳಗಳಲ್ಲಿ ಪ್ರತಿಫಲಿಸುವಂತೆ, ನೆಲದ ಹಸುರು ಬಾನ್ ಮುಗಿಲುಗಳಲ್ಲಿ ಕೆರೆ ಕೊಳಗಳಲ್ಲಿ ಪ್ರತಿಬಿಂಬಿಸುತ್ತದೆ. ಸಂಜೆಯ ಬಿಸಿಲಿಗೂ ಹಸುರಿನ ಹುಚ್ಚು ತಟ್ಟದಿಲ್ಲ. ಸಚರಾಚರ ವಸ್ತುಗಳೆಲ್ಲ ಹಸುರಿನಲ್ಲಿ ಮಿಂದು ನವೋನವವಾಗಿ ರಾರಾಜಿಸುತ್ತಿವೆ. ಹಸುರು ಜೀವಂತಿಕೆಯ, ಚೈತನ್ಯದ ಹಾಗೂ ಪ್ರಗತಿಯ ಸಂಕೇತವೆಂಬುದನ್ನಿಲ್ಲಿ ನೆನೆಸಿಕೊಳ್ಳಬಹುದು.

ಇಂಥ ಹಲವಾರು ಕವಿತೆಗಳನ್ನು ವೈಚಾರಿಕತೆಯ ಹಿನ್ನೆಲೆಯಲ್ಲಿ ವಿಶ್ಲೇಷಿಸಬಹುದಾಗಿದೆ. ಕೇವಲ ನಿದರ್ಶನಾರ್ಥವಾಗಿ ಮಾತ್ರ ಒಂದೆರಡು ಕವಿತೆಗಳನ್ನು ಮಾತ್ರ ವ್ಯಾಖ್ಯಾನಿಸಿ, ಈ ಭಾಗವನ್ನು ವಿರಾಮಗೊಳಿಸಬಹುದು.

೧೧

ವೈಚಾರಿಕತೆಗೂ ಹಲವು ಮುಖಗಳುಂಟು, ಮಗ್ಗುಲುಗಳುಂಟೆಂಬುದನ್ನು ಈವರೆಗಿನ ವಿವರಣೆ ಸಾಬೀತುಗೊಳಿಸುತ್ತದೆ. ನಂಬಿಕೆಗಳಿಗೂ ಅವೈಚಾರಿಕತೆಗೂ ನಂಟು ಗಂಟು ಹಾಕುವುದುಂಟಷ್ಟೆ. ಯಾವುದು ಗ್ರಾಹ್ಯ, ಯಾವುದು ತ್ಯಾಜ್ಯ ಎಂಬುದನ್ನು ಸಹ ವಿಶ್ಲೇಷಣೆ ಮಾರ್ಗದಿಂದ ನಿರ್ಣಯಿಸಬೇಕಾಗುತ್ತದೆ. ಒಬ್ಬನಿಗೆ ಹಿಡಿಸದ ಅಥವಾ ಅರ್ಥವಾಗದ ಸಂಗತಿಗಳೆಲ್ಲ ಮೌಢ್ಯಜನ್ಯವೆಂದು ಸಾರುವುದು ಮೂರ್ಖತನವಾಗುತ್ತದೆ. ಕಾರ್ಯಕಾರಣ ಸಂಬಂಧವಿಲ್ಲದ, ಮತಿಯ ಒರೆಗಲ್ಲಿನಲ್ಲಿ ತೇರ್ಗಡೆಯಾಗದ ಸಂಗತಿಗಳೆಲ್ಲ ತ್ಯಾಜ್ಯವೆಂದು ಧಾರಾಳವಾಗಿ ಹೇಳಬಹುದು, ನಿಜ. ಆದರೆ ಈ ಮತಿಯೂ ಮನುಷ್ಯನಿಂದ ಮನುಷ್ಯನಿಗೆ ವ್ಯತ್ಯಾಸವಾಗುತ್ತದೆಂಬುದನ್ನು ಮರೆಯುವಂತಿಲ್ಲ. ಬುದ್ಧ, ಬಸವೇಶ್ವರ, ಅಂಬೇಡ್ಕರ್, ಪೆರಿಯಾರರಂತೆ, ರಸೆಲ್ ಇಂಗರ್‌ಸಾಲ್ ಹಕ್‌ಸ್ಲೆಯರಂತೆ ನಿರಂಕುಶ ಮತಿತ್ವವುಳ್ಳ ಆಚಾರ್ಯರು ವಿರಳವೆಂದೇ ಹೇಳಬಹುದು. ಬುದ್ಧನ ಪುನರ್ಜನ್ಮ ವಿಚಾರವನ್ನು ಸಾಕ್ಷ್ಯಾಧಾರ ಗಳಿಲ್ಲವೆಂಬ ಕಾರಣದಿಂದ ತಿರಸ್ಕರಿಸುವ ಮಡಿವಂತ ವಿಚಾರ ಶೀಲರೂ ಇಲ್ಲದಿಲ್ಲ. ಆಧ್ಯಾತ್ಮಿಕ ಕ್ಷೇತ್ರದಲ್ಲಿ ಪ್ರವೇಶವಿಲ್ಲದ ಅವಿಚಾರಿಗಳು ಶ್ರೀರಾಮಕೃಷ್ಣ ಪರಮಹಂಸ ಶ್ರೀ ಅರವಿಂದರ ವಿಚಾರಧಾರೆಯನ್ನು ಅಗ್ರಾಹ್ಯವೆಂದು ತಿರಸ್ಕರಿಸಬಹುದು. ಯಾವ ವ್ಯಕ್ತಿಯೇ ಆಗಲಿ ತನಗೆ ಪ್ರವೇಶವಿಲ್ಲದ ಕ್ಷೇತ್ರದ ಬಗ್ಗೆ ಅಭಿಪ್ರಾಯ ನೀಡುವುದು ಅಸಂಗತವಾಗುತ್ತದೆ. ಅಂದಮೇಲೆ ವಿಚಾರವಾದಿಗಳ ಅಭಿಪ್ರಾಯವನ್ನು ಸ್ವೀಕರಿಸುವ ಮುನ್ನ ಅವರ ಅರ್ಹತೆಯನ್ನು ಪರೀಕ್ಷಿಸಬೇಕಾಗುತ್ತದೆ.

ಕುವೆಂಪು ಈ ಶತಮಾನದ ಅಗ್ರಗಣ್ಯ ವಿಚಾರವಾದಿಗಳೆಂದು ಘೋಷಿಸುವ ವಿದ್ವನ್ಮಣಿಗಳೇ ಹಿಂದುಗಡೆಯಿಂದ ಅವರ ಕೆಲವು ನಂಬಿಕೆಗಳ ಬಗ್ಗೆ ಶಂಕೆ ವ್ಯಕ್ತಪಡಿಸುವು ದುಂಟು. ‘ನೂರಾರು ದೇವರನೆಲ್ಲ ನೂಕಾಚೆ ದೂರ’ ಎಂದು ಅಬ್ಬರಿಸಿದವರು ದೇವರಪೂಜೆ ಬಿಟ್ಟಿಲ್ಲ; ಮಠಶಾಹಿ ಪುರೋಹಿತಶಾಹಿಗಳನ್ನು ಉಗ್ರವಾಗಿ ಟೀಕಿಸಿದವರು ಶ್ರೀರಾಮಕೃಷ್ಣಾ ಶ್ರಮಕ್ಕೆ ಹೋಗುವುದನ್ನು ನಿಲ್ಲಿಸಿಲ್ಲ; ಪ್ರಮಾಣರಹಿತವಾದ ವಿಚಾರಗಳನ್ನು ನಂಬಬಾರ ದೆಂದು ಉಪದೇಶ ಮಾಡುವವರು ಪುನರ್ಜನ್ಮವನ್ನು ನಂಬುತ್ತಾರೆ’. ಹೀಗೆ ಕೆಲವರು ಅವರ ಮೇಲೆ ಟೀಕಾಸ್ತ್ರಗಳನ್ನು ಎಸೆಯುತ್ತಾರೆ. ಶೋಷಣೆ, ಶೋಷಕ ಹಾಗೂ ಶೋಷಕ ಮಾರ್ಗಗಳೆಂದರೆ ಅವರಿಗಾಗದು. ದೇವಾಲಯಗಳು ಅನ್ಯಾಯ ಅಧರ್ಮಗಳ ಬೀಡಾಗಿರುವ ಸಂಗತಿ ಸರ್ವವೇದ್ಯ. ಜತೆಗೆ ಐಕ್ಯ ಭಂಗಕಾರಿಯಾದ ಬಹು ದೇವತೋಪಾಸನೆ ಅವರಿಗೆ ಹಿಡಿಸದು. ಮಾನವನ ಆತ್ಮೋದ್ಧಾರಕ್ಕೆ ದೇವಾಲಯಗಳು ಸಾಧನವಾಗುವುದಾದರೆ ಅವರು ಬೇಡವೆನ್ನುವುದಿಲ್ಲ. ಶ್ರೀರಾಮಕೃಷ್ಣಾಶ್ರಮ ಇತರ ಆಶ್ರಮಗಳಂತೆ ಯಾವುದೋ ಮತದ ಚೌಕಟ್ಟಿಗೆ ಸೀಮಿತವಾದದ್ದಲ್ಲ. ಮತ ಪ್ರಸಾರ ಅದರ ಗುರಿಯಲ್ಲ; ಮತಾಂಧತೆಗೂ ಅದಕ್ಕೂ ಬಹುದೂರ; ಯಾರ ಹೆಸರಿನಲ್ಲಿ ಅದು ಸಂಸ್ಥಾಪನೆ ಗೊಂಡಿದೆಯೋ ಆ ವಿಭೂತಿ ಪುರುಷ ಸರ್ವಧರ್ಮಸಮನ್ವಯಾಚಾರ್ಯರೆಂಬುದನ್ನು ಮರೆಯುವಂತಿಲ್ಲ; ಶೋಷಣೆಗೂ ಅದಕ್ಕೂ ಎಣ್ಣೆ ಸೀಗೆಕಾಯಿಯ ನಂಟು.

ಪುನರ್ಜನ್ಮ ಹಾಗೂ ಅತೀಂದ್ರಿಯ ವ್ಯಪಾರಗಳ ಬಗ್ಗೆ ಕುವೆಂಪು ಅವರಿಗೆ  ನಂಬಿಕೆ ಯಿರುವುದಲ್ಲದೆ, ಅವುಗಳನ್ನು ತಮ್ಮ ಕಾದಂಬರಿಗಳಲ್ಲಿ, ಮುಖ್ಯವಾಗಿ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ವಿಶದವಾಗಿ ವಿವರಿಸುತ್ತಾರೆ. ಅಲ್ಲಿಯ ಗಡ್ಡದಯ್ಯ ಅತೀಂದ್ರಿಯ ವ್ಯಾಪಾರಗಳಿಗೆ ಪ್ರತೀಕವಾಗಿದ್ದಾನೆ. ಮುಕುಂದಯ್ಯ ಚಿನ್ನಮ್ಮರು ಹೋದ ಜನ್ಮದಲ್ಲಿ ದಂಪತಿಗಳಾಗಿದ್ದರೆಂದೂ, ಈ ಜನ್ಮದಲ್ಲಿಯೂ ಅದೇ ಸಂಬಂಧ ಮುಂದುವರಿ ಯುತ್ತದೆಂದೂ ಗಡ್ಡದಯ್ಯ ನುಡಿಯುತ್ತಾನೆ. ಇಂಥ ಹಲವಾರು ಪ್ರಸಂಗಗಳು ಕಾದಂಬರಿ ಯಲ್ಲಿ ಬರುತ್ತವೆ. ಜ್ಞಾನೇಂದ್ರಿಯ ಪಟುತ್ವವಿಲ್ಲದ ಗುತ್ತಿ ಐತರಂಥವರಿಗೆ ಅತೀಂದ್ರಿಯ ಶಕ್ತಿ ಲಭಿಸದಿದ್ದರೂ ಹೋಗಲಿ, ಅದನ್ನು ಗ್ರಹಿಸುವ ಶಕ್ತಿಯಾದರೂ ಎಲ್ಲಿಂದ ಬರಬೇಕು? ಮನಸ್ಸಿನ ವಿಶ್ವರೂಪದರ್ಶನವಾಗಲಿ, ಅತೀಂದ್ರಿಯ ವ್ಯಾಪಾರದ ಅದ್ಭುತವಾಗಲಿ ಇನ್ನೂ ಮಾನವನಿಗೆ ಪೂರ್ತಿ ಲಭ್ಯವಾಗಿಲ್ಲ. ಜಗತ್ತಿನ ಪರಾಮನೋವಿಜ್ಞಾನಿಗಳು ಇದೆ ತಾನೆ ಅಂಬೆಗಾಲಿಡುತ್ತಿದ್ದಾರೆ. ಎಡ್ಗರ್ ಕೇಸಿಯಂಥ ವಶೀಕರಣ ವಿದ್ಯಾತಜ್ಞನ ‘ಜೀವನಪಾಠ’ (Life Readings)ಗಳನ್ನು ನೋಡಿ ಬಂದವರಿಗೆ, ಜೀನ ಶರ್ಮಿನಾರರ ‘Many mansions’ ಎಂಬ ಗ್ರಂಥವನ್ನು ಅಧ್ಯಯನ ಮಾಡಿದವರಿಗೆ ಪವಾಡಗಳ ಹಾಗೂ ಅತೀಂದ್ರಿಯ ವಿಚಾರಗಳ ಬಗೆಗೆ ಸ್ಪಷ್ಟವಾದ ಕಲ್ಪನೆ ಮೂಡಬಹುದಾಗಿದೆ. ಪುನರ್ಜನ್ಮದ ಬಗ್ಗೆ ಅವರು ಕೊಡುವ ನಿದರ್ಶನಗಳು ತಿರಸ್ಕರಿಸುವಂಥವಲ್ಲ. ಈ ಕಾರಣದಿಂದ ಕುವೆಂಪು ಅವರು ವರ್ಣಿಸಿರುವ ಅತೀಂದ್ರಿಯ ವ್ಯಾಪಾರಗಳು ವೈಚಾರಿಕತೆಗೆ ವಿರೋಧವೆಂದು ಹೇಳಲಾಗದು.

ಕುವೆಂಪು ಅವರ ವೈಚಾರಿಕ ಪ್ರಜ್ಞೆ ಅವರ ಕಾದಂಬರಿಗಳಲ್ಲಿ ಹಲವೆಡೆ ಮೈದೋರಿರುವು ದನ್ನು ಗಮನಿಸಬಹುದು. ಅನ್ಯರ ರಕ್ತಕ್ಕೆ ಜಿಗಣೆಯಾಗಿರುವ ಪುರೋಹಿತಶಾಹಿಯನ್ನು ಖಂಡಿಸುವಷ್ಟೇ ತೀಕ್ಷ್ಣತೆಯಿಂದ ಬ್ರಾಹ್ಮಣೇತರರ ಅರ್ಥಹೀನ ಸಂಪ್ರದಾಯಗಳನ್ನು ಬಯಲಿಗೆಳೆಯುತ್ತಾರೆ. ಶೂದ್ರ ಸಂಘದ ಮಹಾಸಭೆಯಂತು ಒಕ್ಕಲಿಗರ ಬೆಪ್ಪುತಕ್ಕಡಿ ತನವನ್ನು ಸಮರ್ಥಿಸುವ ಪ್ರಬಲ ಸಾಧನವಾಗಿದೆ. ಬ್ರಾಹ್ಮಣರು ಮಾತ್ರವಲ್ಲ, ಅವಕಾಶ ಸಿಕ್ಕಿದರೆ ಯಾರು ಬೇಕಾದರೂ ಶೋಷಕರಾಗಬಲ್ಲರೆಂಬುದಕ್ಕೆ ತಿಮ್ಮಪ್ಪ ಹೆಗ್ಗಡೆಯೇ ನಿದರ್ಶನವಾಗಿದ್ದಾನೆ. ಬ್ರಾಹ್ಣಣರು ಶೂದ್ರರನ್ನು ಸುಲಿಗೆ ಮಾಡುತ್ತಿದ್ದಂತೆ, ಒಕ್ಕಲಿಗರು ಹೊಲೆಯರನ್ನು ಮಾತ್ರವಲ್ಲ ಒಕ್ಕಲಿಗರನ್ನೇ ಶೋಷಿಸುತ್ತಾರೆ. ಕಾದಂಬರಿ ಕಥೆಗಳಲ್ಲಿ ಸಮಕಾಲೀನ ಮೌಢ್ಯ ಸಂಪ್ರದಾಯಗಳನ್ನು ನಿರೂಪಿಸುವ ಮೂಲಕ ಕುವೆಂಪು ಅವರು ಅವುಗಳನ್ನು ಅಪಹಾಸ್ಯಕ್ಕೆ ಗುರಿಮಾಡಿ ಅವುಗಳ ಅರ್ಥಹೀನತೆಯನ್ನು ಹೊರಗೆಡಹುತ್ತಾರೆ. ‘ಆ ನಾಡಿನ ವಾಡಿಕೆಯಂತೆ ಪ್ರತಿಯೊಂದು ಮನೆಯವರೂ ಹತ್ತಾರು ಅಂತರ ಬೆಂತರ ಭೂತ ಪಿಶಾಚಿಗಳನ್ನು ಪೂಜಿಸುವುದುಂಟು…. ಅವುಗಳಲ್ಲಿ ಭಕ್ತಿಗಿಂತಲೂ ಭಯವೆ ಹೆಚ್ಚು. ಭಯವನ್ನೇ ಭಕ್ತಿ ಎಂದೂ ಕರೆದುಬಿಡುತ್ತಾರೆ.[60] ದೆಯ್ಯದ ಹರಕೆಯ ವರ್ಣನೆಗಾಗಿಯೇ ಕಾನೂರು ಹೆಗ್ಗಡಿತಿಯಲ್ಲೊಂದು ಪರಿಚ್ಛೇದ ಮೀಸಲಾಗಿದೆ.[61] ವಿಡಂಬನೆಯೇ ಆ ವರ್ಣನೆಯ ಗುರಿಯೆಂಬುದು ಸ್ಪಷ್ಟ. ಮುಡಿಪು ಕಾಯಿಮುಟ್ಟಿಸುವುದು ಯಂತ್ರತಂತ್ರ, ದೇವರಾಣೆ, ಪ್ರಮಾಣ, ಮೊದಲಾದ ಮೌಢ್ಯ ಸಂಪ್ರದಾಯಗಳ ನಿರೂಪಣೆ ಮೇಲಿಂದ ಮೇಲೆ ಬರುತ್ತದೆ. ತೆಂಗಿನ ಕಾಯಿಯ ಮಂತ್ರ ಶಕ್ತಿಯದೇ ಒಂದು ಅಧ್ಯಾಯವುಂಟು.[62] ನಾಗಮ್ಮ ಕಾಯಿಲೆ ಬಿದ್ದಾಗಲೂ ಮಗ ಹೂವಯ್ಯನ ಮಾತು ಕೇಳದೆ ತಮಗೆ ತಿಳಿದಿದ್ದ ದೆವ್ವ ಭೂತಗಳಿಗೆಲ್ಲ ಹರಕೆ ಹೇಳಿಕೊಳ್ಳುವುದು; ಆ ಭಟ್ಟರಿಂದ, ಈ ಜೋಯಿಸರಿಂದ, ಕೂಳೂರಿಂದ, ಸಿದ್ಧರಮಠದಿಂದ ಚೀಟಿ ವಿಭೂತಿ, ಅಂತ್ರ ತಂತ್ರ, ಮಂತ್ರ ತರಿಸುವುದು ಹೀಗೆಲ್ಲ ಮಾಡುತ್ತ ಬಂದರು…. ಒಮ್ಮೊಮ್ಮೆ ಅವರಿವರ ಹತ್ತಿರ ಹೂವಯ್ಯನು ಸಾಕಿದ್ದ ಬಲೀಂದ್ರ ಹೋತದ ಭೂತದ ಚೇಷ್ಟೆಯೇ ತಮ್ಮ ಕಾಯಿಲೆಗೆ ಕಾರಣವೆಂದೂ, ಅದನ್ನು ಬಲಿಕೊಟ್ಟರೆ ಎಲ್ಲ ಸರಿಹೋಗುತ್ತದೆಂದೂ ಗೊಣಗುತ್ತಿದ್ದರು’[63] ಕಾನೂರು ಹೆಗ್ಗಡಿತಿಯ ಪಾತ್ರ ಸಮುದಾಯವೆಲ್ಲ ಅಜ್ಞಾನಾಂಧಕಾರದಲ್ಲಿ ಮೌಢ್ಯಗಳ ಸೆರೆಯಲ್ಲಿ ಪರಿತಪಿಸುತ್ತಿರುವಾಗ ಹೂವಯ್ಯನೊಬ್ಬನೇ ವಿಚಾರದ ಬೆಳಕನ್ನು ಚೆಲ್ಲುವ ದಾರಿದೀಪವಾಗಿದ್ದಾನೆ.

ವೈಚಾರಿಕತೆ, ವೈಜ್ಞಾನಿಕತೆ ಹಾಗೂ ಆಧ್ಯಾತ್ಮಿಕತೆಗಳ ಸಮನ್ವಯಕ್ಕೆಂದೇ ಹುಟ್ಟಿದ ಕೃತಿ ಶ್ರೀರಾಮಾಯಣದರ್ಶನಂ ಮಹಾಕಾವ್ಯ. ಪ್ರೇಮದ ಮೂಲಕ ಆಸುರೀ ಶಕ್ತಿಯನ್ನು ದೈವೀಶಕ್ತಿಯನ್ನಾಗಿ ಪರಿವರ್ತಿಸಬಹುದೆಂಬುದೇ ಅಲ್ಲಿ ವ್ಯಕ್ತವಾಗುವ ಆಧ್ಯಾತ್ಮಿಕ ಸಂದೇಶ. ರಾವಣನ ಆತ್ಮಯಾತ್ರೆಯ ಕಥೆ ವೈಜ್ಞಾನಿಕ ವಿಧಾನದಲ್ಲಿಯೇ ಮುಂದೆ ಮುಂದೆ ಸಾಗುತ್ತದೆ. ಮೂಲ ರಾಮಾಯಣದ ವಾಲಿಯ ಪ್ರಸಂಗ ಮತ್ತು ಸೀತೆಯ ಅಗ್ನಿಪ್ರವೇಶದಂಥ ಘಟನೆಗಳಲ್ಲಿ ತಲೆದೋರುವ ಸಂದೇಹ ಅಸಾಂಗತ್ಯಗಳನ್ನು ಹೊಂದಾಣಿಕೆಗೊಳಿಸುವಲ್ಲಿ ವೈಚಾರಿಕತೆ ಪ್ರಖರವಾಗಿ ಗೋಚರಿಸುತ್ತದೆ.

ಒಟ್ಟಿನಲ್ಲಿ ಕುವೆಂಪು ಅವರ ಜೀವನದಲ್ಲೆಂತೂ ಅಂತೆಯೇ ಅವರ ಸಾಹಿತ್ಯದಲ್ಲಿಯೂ ಈ ಮೌಲ್ಯತ್ರಯಗಳು ದಟ್ಟವಾಗಿ ವ್ಯಾಪಿಸಿಕೊಂಡಿವೆಯೆಂದೇ ಹೇಳಬಹುದು. ವೈಚಾರಿಕತೆಯೇ ಅವರ ಬಾಳ ಉಸಿರು; ವೈಜ್ಞಾನಿಕತೆಯೇ ಅವರ ಜೀವನವಿಧಾನ, ಆಧ್ಯಾತ್ಮಿಕತೆಯೇ ಅವರ ಬದುಕಿನ ಗುರಿ. ಈ ಮೂರು ಗುಣಗಳು ಬಾಲ್ಯದಿಂದಲೇ ಅವರ ಬದುಕಿನ ಪ್ರಧಾನ ಭಾಗವಾಗಿ, ಅವರ ಉಸಿರಿನ ಉಸಿರಾಗಿ ಅವರ ಸಕಲ ಸಾಹಸೋದ್ಯಮಗಳ ನೆಲೆ ಬೆಲೆಗಳಾಗಿ, ಅವರ ಬಾಳಿಗೆ ಆಸರೆಯಾಗಿ ಅವರ ಸಹಜ ಧರ್ಮಗಳೆಂಬಂತೆ ಉಳಿದು ಬಂದಿವೆಯೆಂಬ ಸಂಗತಿ ಸ್ಥೂಲವೂ ಸಂಕ್ಷೇಪವೂ ಆದ ಮೇಲಣ ವ್ಯಾಖ್ಯಾನದಿಂದ ವೇದ್ಯವಾಗದಿರದು. ಒಂದೆರಡು ಮಹಾಪ್ರಬಂಧಗಳಿಗೆ ವಸ್ತುವಾಗಬಹುದಾದ ವ್ಯಾಪ್ತಿಯುಳ್ಳ ವಿಚಾರವನ್ನು ಆರುಂಧತಿ ದರ್ಶನ ನ್ಯಾಯದಿಂದ ಪರಿಶೀಲಿಸುವಾಗ ಅನೇಕ ವಿಷಯಗಳು ಲುಪ್ತವಾಗಿವೆಯೆಂಬ ಅರಿವಿನೊಡನೆ ಈ ಅವಲೋಕನವನ್ನು ಮುಕ್ತಾಯಗೊಳಿಸಲಾಗಿದೆ.

 

 [1]     Lectures and essays by Colonel R.G. Ingcrsoll, First series, P.p. ೧೦೯

[2]     ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ ಕುವೆಂಪು, ಪುಟ ೨

[3]     ಷಷ್ಟಿ ನಮನ, ಪುಟ ೨೪೯

[4]     ಷಷ್ಟಿ ನಮನ, ಪುಟ ೨೪೯೨೫೦

[5]     ಜನತಾ ಪ್ರಜ್ಞೆ ಮತ್ತು ವೈಚಾರಿಕ ಜಾಗೃತಿ, ಪುಟ ೧೮

[6]     ಅದೇ, ಪುಟ ೧೯

[7]     ಷಷ್ಟಿನಮನ, ಪುಟ ೨೫೨-೨೫೩

[8]     ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ, ಕುವೆಂಪು, ಪುಟ ೪

[9]     ನೆನಪಿನ ದೋಣಿಯಲ್ಲಿ, ಪುಟ ೫೫೧

[10]    ನೆನಪಿನ ದೋಣಿಯಲ್ಲಿ, ಪುಟ ೭೮೬

[11]    ಅದೇ, ೮೭೦

[12]    There are a number of things that science can’t deal with All questions of Values, for example, Science won’t tell you what is good and what is bad. What is good or bad as an end not just as a means-Betrand Russel speaks his mind, p. ೧೧

[13]    I Should say the business of a philosopher is not to change the world but to understand it. Ibd.೧೨.

[14]    ನೆನಪಿನ ದೋಣಿಯಲ್ಲಿ, ಪುಟ ೯೬೯

[15]    ಅದೇ, ಪುಟ ೫೮

[16]    ಷಷ್ಟಿ ನಮನ, ಪುಟ ೮೧

[17]    ಕೋಗಿಲೆ ಮತ್ತು ಸೋವಿಯತ್ ರಷ್ಯಾ (ಧ್ರಾಂ ಧ್ರೀಂ ಧ್ರೂಂ), ಪುಟ ೧೮-೨೧

[18]    ಅದೇ, ಪುಟ ೫೭

[19]    ಜಲಗಾರ, ಪುಟ ೧೦

[20]    ಅದೇ, ಪುಟ ೧೦-೧೧

[21]    ಜನತಾ ಪ್ರಜ್ಞೆ ಮತ್ತು ವೈಚಾರಿಕ ಜಾಗೃತಿ, ಪುಟ ೨೭

[22]    ಅದೇ, ಪುಟ ೨೧-೨೪

[23]    ನನ್ನ ದೇವರು ಮತ್ತು ಇತರ ಕಥೆಗಳು, ಪುಟ ೯೧

[24]    ಪ್ರೇತಕ್ಯೂ (ಮೌಢ್ಯಮೇಧ), ಪುಟ ೪೭

[25]    ಅದೇ (ಅಷ್ಟಗ್ರಹಯೋಗಸಿದ್ದಿ), ಪುಟ ೫೦

[26]    ಕಾನೂರು ಹೆಗ್ಗಡತಿ, ಪುಟ ೮೬-೮೭

[27]    ಕಾನೂರು ಹೆಗ್ಗಡತಿ, ಪುಟ ೯೮

[28]    ವಿಚಾರ ಕ್ರಾಂತಿಗೆ ಆಹ್ವಾನ, ಪುಟ ೭೩

[29]    ಅದೇ, ಪುಟ ೬೧

[30]    ಕದರಡಕೆ (ಮಠಾಧಿಪತಿ), ಪುಟ ೭೮

[31]    ೧.೧೧.೧೯೮೧ರಂದು ಲಂಕೇಶ್ ಪತ್ರಿಕೆಯಲ್ಲಿ ಅಚ್ಚಾಗಿರುವ ಬೋರಲಿಂಗಯ್ಯನವರ ಲೇಖನದಿಂದ.

[32]    ಶೂದ್ರತಪಸ್ವಿ, ಪುಟ ೨೩

[33]    ಶೂದ್ರತಪಸ್ವಿ, ಪುಟ ೨೯

[34]    ಪ್ರೇತಕ್ಯೂ, ಪುಟ ೧೭-೧೮

[35]    ಕಬ್ಬಿಗನ ಕೈಬುಟ್ಟಿ (ಗೊಬ್ಬರ), ಪುಟ ೪೧

[36]    ಕೋಗಿಲೆ ಮತ್ತು ಸೋವಿಯಟ್ ರಷ್ಯಾ (ತರುಣರಿರ, ಎದ್ದೇಳಿ), ಪುಟ ೨೩

[37]    ಅದೇ, ಪುಟ ೨೩-೨೪

[38]    ೧.೧೧.೧೯೮೧ರ ಲಂಕೇಶ್ ಪತ್ರಿಕೆಯಲ್ಲಿ ಬೋರಲಿಂಗಯ್ಯನವರು ಬರೆದ ಲೇಖನದಿಂದ ಉದ್ಧೃತ.

[39]    ವಿಚಾರ ಕ್ರಾಂತಿಗೆ ಅಹ್ವಾನ, ಪುಟ ೬-೭

[40]    ಮಂತ್ರಾಕ್ಷತೆ, ಪುಟ ೪೧

[41]    ಕದರಡತೆ, ಪುಟ ೮೧

[42]    ಕೋಗಿಲೆ ಮತ್ತು ಸೋವಿಯಟ್ ರಷ್ಯಾ (ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?) ಪುಟ ೨೧-೨೨

[43]    ಪ್ರೇತ-ಕ್ಯೂ (ಅಲ್ಲಿ-ಇಲ್ಲಿ), ಪುಟ ೩೯-೪೦

[44]    ಕೋಗಿಲೆ ಮತ್ತು ಸೋವಿಯಟ್ ರಷ್ಯಾ (ದೇವರು-ಪೂಜಾರಿ), ಪುಟ ೫೬

[45]    No man is born to any religion; every man has his religion in his soul. Let there be as many religions as benings human this world; ೧.೧೧.೧೯೮೧ರ ಲಂಕೇಶ ಪತ್ರಿಕೆಯಲ್ಲಿಯ ಬೋರಲಿಂಗಯ್ಯನವರ ಲೇಖನದಿಂದ ಉದ್ಧೃತ.

[46]    ಆನಿಕೇತನ.

[47]    ಕೊಳಲು (ನೇಗಿಲಯೋಗಿ), ಪುಟ ೨೮

[48]    ಪ್ರೇತ-ಕ್ಯೂ (ಕುಳದ ಕಲಿಗೆ), ಪುಟ ೧೫

[49]    ಕೋಗಿಲೆ ಮತ್ತು ಸೋವಿಯಟ್ ರಷ್ಯಾ, ಪುಟ ೧೩

[50]    ಪಾಂಚಜನ್ಯ (ಕಲ್ಕಿ), ಪುಟ ೭೦

[51]    ಮಂತ್ರಾಕ್ಷತೆ, ಪುಟ ೨೫

[52]    ಕೋಗಿಲೆ ಮತ್ತು ಸೋವಿಯಟ್ ರಷ್ಯಾ, ಪುಟ ೨೪-೨೫

[53]    ಕೃತ್ತಿಕೆ (ಕ್ರಾಂತಿಕಾಳಿ), ಪುಟ ೬೩

[54]    ಪ್ರೇತಕ್ಯೂ, ಪುಟ ೪೮

[55]    ಅದೇ (ಭಾವೈಕ್ಯತೆ), ಪುಟ ೫೧

[56]    ಅದೇ, ಪುಟ ೬೦

[57]    ಮನುಜಮಥ ವಿಶ್ವಪಥ, ಪುಟ ೧೧

[58]    ಶರತ್ಕಾಲದ ಸೂರ್ಯೋದಯದಲಿ (ಪಕ್ಷಕಾಶಿ), ಪುಟ ೬

[59]    ಹಸುರು ಅದೇ, ಪುಟ ೩೩

[60]    ಕಾನೂರು ಹೆಗ್ಗಡತಿ, ಪುಟ ೧೭೦

[61]    ಅದೇ, ಪುಟ ೩೧೪-೩೨೨

[62]    ಅದೇ, ಪುಟ ೪೪೦-೪೯

[63]    ಅದೇ, ಪುಟ ೭೦೫