ಈಚೀಚೆಗೆ ಕೆಲವು ಸಾಹಿತಿಗಳ ಉಪನ್ಯಾಸಗಳಲ್ಲಿ ಮತ್ತು ಮಾತುಕತೆಗಳಲ್ಲಿ ‘ಬುದ್ದಿಜೀವಿ’ ‘ವೈಚಾರಿಕತೆ’, ‘ವಿಜ್ಞಾನಬುದ್ದಿ’ ಎಂಬಿವೇ ಮೊದಲಾದ ವರ್ಣರಂಜಿತ ಶಬ್ಧಗಳು ಯುಗಾದಿ ದಿನ ಮನೆಗಳ ಮೇಲೆ ವರ್ಷಿಸುವ ಹುಣೆಸೆ ಬೀಜಗಳಂತೆ ಬೇಕು ಬೇಕಾದ ಹಾಗೆ ತೂರಾಡುತ್ತವೆ. ಅವುಗಳನ್ನು ಬಳಸದ ಉಪನ್ಯಾಸ ನೀರಸ ನಿಷ್ಪ್ರಯೋಜಕವೆಂಬ ಭ್ರಾಂತಿಯೂ ಅಣುಕು ಜೀವಿಗಳ ಮನಸ್ಸನ್ನಾಕ್ರಮಿಸಿಕೊಂಡಂತಿದೆ. ವಿಚಾರವಾದೀಭ ಸಿಂಹರೆಂದು ಸ್ವಯಂ ಬಿರುದಾಂಕಿತರೂ, ಪರಸ್ಪರ ಪ್ರಶಂಸಾ ಸಂಘದ ಸದಸ್ಯರೂ ಆದ ಕೆಲವು ಮಾನ್ಯರು ಅವುಗಳು ಶೂದ್ರರಿಗತೀತವಾದ ತಮ್ಮಹಕ್ಕುದಾರಿಕೆಯ ಪಿತ್ರಾರ್ಜಿತ ಆಸ್ತಿಯೆಂದು ತಿಳಿದುಕೊಂಡಿದ್ದಾರೆ. ಸಾವಿರಾರು ವರ್ಷಗಳ ಹಿಂದಿನಿಂದ ‘ಓಂ ಸಹನಾವವತು ಸಹನೌಭುನಕ್ತು’ ‘ಸರ್ವೇಭವಂತು ಸುಖಿನಃ’ ಎಂದು ಬಾಯಲ್ಲಿ ಮಂತ್ರ ಪಠನ ಮಾಡುತ್ತಾ, ಕ್ರಿಯೆಯಲ್ಲಿ ದೀನದಲಿತರನ್ನು ತುಳಿಯುತ್ತ ಬಂದವರ ಸಂತಾನವೇ ಹೊಸ ಮಂತ್ರಗಳನ್ನು ಪಠಿಸುವಂತೆ ತೋರುತ್ತದೆ. ಪ್ರಾಚೀನ ಪಿತೃಗಳಂತೆ ಸುಖ ಜೀವನಕ್ಕಾಗಿ ಹೊಸ ಮಂತ್ರ ತಂತ್ರಗಳನ್ನಾಶ್ರಯಿಸುತ್ತ, ಅನುಷ್ಠಾನವನ್ನು ಮರೆಯುತ್ತ, ಸಾಮಾನ್ಯರಿಗೆ, ದಾಸ್ಯಬುದ್ದಿಯ ದಡ್ಡರಿಗೆ ಟೋಪಿ ಹಾಕುವ ವಂಚನೆಯ ಜಾಲ ವಿಶಾಲವಾಗಿ ಹರಡಿದಂತಿದೆ. ಘೋಷಣೆ ಗಳನ್ನು ಕಾರ್ಯಗತಗೊಳಿಸಿದಾಗ ಮಾತ್ರ ಅವುಗಳು ಅರ್ಥಪೂರ್ಣವಾಗುತ್ತವೆ. ನುಡಿದಂತೆ ನಡೆಯುವ ಬುದ್ಧ ಬಸವ ಗಾಂಧಿಯಂಬೇಡ್ಕರರು ಈ ನಾಡಿನಲ್ಲಿ ಎಷ್ಟು ಮಂದಿ ಇದ್ದಾರೆ?.

ಇದ್ದಾರೆ. ಅಂಥ ಹಿಡಿ ಮಂದಿಯಲ್ಲಿ ಕುವೆಂಪು ಅವರೊಬ್ಬರು. ಸಾಮಾಜಿಕ ಮತೀಯ ಮೌಢ್ಯಾಚಾರ ಸಂಪ್ರದಾಯಗಳ ಮೇಲೆ, ಅವುಗಳ ಪ್ರಚಾರದಿಂದ ಬೌದ್ದಿಕ ಭ್ರಷ್ಠಾಚಾರದಿಂದ, ಆಧ್ಯಾತ್ಮಿಕ ಕೃತ್ರಿಮತೆಯಿಂದ ಡೊಳ್ಳು ಬೆಳೆಸಿಕೊಳ್ಳುತ್ತಿರುವ ಆಚಾರ್ಯೋತ್ತಮರ ಮತ್ತು ಜಗದ್ಗುರುಗಳ ಮೇಲೆ, ಸ್ವಾರ್ಥಕ್ಕಾಗಿ, ರಾಜಕೀಯಕ್ಕಾಗಿ, ಜಾತೀಯತೆಯ ವಿಷವೃಕ್ಷಕ್ಕೆ ಸುಳ್ಳು ತಟವಟ ಲಂಚ ಮೊದಲಾದ ಆಸುರೀ ಗುಣಗಳ ನೀರುಣಿಸಿ, ಗೊಬ್ಬರಹಾಕಿ, ಆ ವೃಕ್ಷದ ನೆರಳಲ್ಲಿ ಪ್ರಮತ್ತರಾಗಿ ಮೆರೆಯುತ್ತಿರುವ ನೈತಿಕ ದಿವಾಳಿಗಳ ಮೇಲೆ, ದೊಡ್ಡದಾಗಿ ತತ್ವಬೋಧೆ ಮಾಡುತ್ತ ಸಾಧುಸಂತರಂತೆ ನಟಿಸುತ್ತ, ಭ್ರಷ್ಟಾಚಾರ ನಿರತರಾದ ಸರ್ವಾಧಿಕಾರಿ ಗಳನ್ನು ಬೆಂಬಲಿಸುವ ರಾಜಕೀಯ ಸನ್ಯಾಸಿಗಳ ಮೇಲೆ, ಧರ್ಮದ ಹೆಸರಿನಲ್ಲಿ ಸಾಮಾನ್ಯ ಜನತೆಯ ಮೌಢ್ಯವನ್ನು ಸಂಪನ್ಮೂಲವಾಗಿ ಪರಿವರ್ತಿಸಿಕೊಳ್ಳುತ್ತಿರುವ ಪುರೋಹಿತಶಾಹಿಯ ಮೇಲೆ ಅವರು ಯಾವಾಗಲೂ ವೀರಾವೇಶದಿಂದ ಖಂಡನೆಯ ಖಡ್ಗ ಬೀಸಿದ್ದಾರೆ. ಅರ್ಧಶತಮಾನದಷ್ಟು ಹಿಂದೆಯೇ ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ‘ವಿದ್ಯಾರ್ಥಿಗಳಲ್ಲಿ ಮತಿ ಗೌರವದ ಅವಶ್ಯಕತೆ’, ‘ವಿದ್ಯಾರ್ಥಿಗಳಿಗೇಕೆ ಆತ್ಮಶ್ರೀ’? ಎಂಬ ತಲೆ ಹೆಸರನ್ನಿಟ್ಟು ಕೊಂಡು, ವಿದ್ಯಾರ್ಥಿವೃಂದದ ದಾಸ್ಯಬುದ್ದಿಯನ್ನು ನಿರ್ಮೂಲಗೊಳಿಸಿ, ಅವರಲ್ಲಿ ವಿಚಾರಶೀಲತೆಯನ್ನು ಮೊಳೆಯಿಸುವ ಸಲುವಾಗಿ ಊರೂರುಗಳಿಗೆ ಹೋಗಿ ಕ್ರಾಂತಿಯ ಕಹಳೆಯನ್ನು ಮೊಳಗಿಸಿದ್ದುಂಟು. ತಮ್ಮ ಕತೆ ಕವನ ಕಾದಂಬರಿ ನಾಟಕಗಳ ಮೂಲಕ, ಸಂಭಾಷಣೆಯ ಮೂಲಕ, ಅವಕಾಶ ಸಿಕ್ಕಿದಾಗಲೆಲ್ಲ ತಾವು ದೃಢವಾಗಿ ನೆಮ್ಮಿ ಬಾಳಿದ ತತ್ವಗಳನ್ನು ಸಮುನ್ನತ ಕಂಠದಿಂದ ಘೋಷಿಸಿದರು. ಅವರು ನಡೆದು ನುಡಿದರೇ ಹೊರತು, ನುಡಿದು ಮರೆತವರಲ್ಲ; ನಾಟಕದ ವೇಷಧಾರಿಯಂತೆ ಡಂಗುರ ಹೊಯ್ದವರಲ್ಲ. ಆಚಾರ ವಿಚಾರಗಳನ್ನು ದೂರವಿರಿಸಿದವರಲ್ಲ. ವೇದ ಪುರಾಣೋಕ್ತವಾಗಿರಲಿ, ಬ್ರಹ್ಮೋಕ್ತವಾಗಿರಲಿ ಗೊಡ್ಡು ಸಂಪ್ರದಾಯಗಳು ನೂರು ಮೈಲಿಯಾಚೆ ಅವರೆಡೆಗೆ ಕಿಡಿಗಣ್ಣಾಗಿ ನಿಲ್ಲುತ್ತವೆ. ಅವರು ನಾಸ್ತಿಕರಲ್ಲ. ಆಸ್ತಿಕರಲ್ಲಿ ಆಸ್ತಿಕರು; ಅವರ ಆಸ್ತಿಕತೆಯ ಹಿಂದೆ ವೈಜ್ಞಾನಿಕ ಮನೋಧರ್ಮವಿದೆ, ವೈಚಾರಿಕ ದೃಷ್ಟಿಯಿದೆ, ಅಧ್ಯಾತ್ಮಿಕತೆಯ ವೈಭವವಿದೆ. ಆದ್ದರಿಂದ ರಾಜಕೀಯಾಧಿಕಾರದ ಕ್ರೌರ್ಯವನ್ನೂ, ಮತೀಯ ಮಠೀಯಾಧಿಕಾರದ ದರ್ಪವನ್ನೂ, ಜಾತಿ ಮದಾಂಧತೆಯ ದಬ್ಬಾಳಿಕೆಯನ್ನೂ ನಿಷ್ಫಲಗೊಳಿಸುವ ಸುದರ್ಶನ ಶಕ್ತಿಯಿದೆ, ಅವರ ವಾಕ್ಸಂಪತ್ತಿನಲ್ಲಿ. ಧ್ರಾಂ ಧ್ರೀಂ ಧ್ರೂಂ ಮೊದಲಾದ ಕವನಗಳನ್ನೋದಿದ ಮಹೀಸುರರು ಅವರನ್ನು ಮರೆಯಲ್ಲಿ ಮಾರಾಮಾರಿಯಾಗಿ ಬಯ್ದು ಶಪಿಸಿದರು; ‘ವಿಚಾರ ಕ್ರಾಂತಿಗೆ ಆಹ್ವಾನ’ ಎಂಬ ಅವರ ಬೆಂಗಳೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವ ಭಾಷಣವನ್ನು ಓದಿದ ಸದಾ ಭ್ರಷ್ಟಾಚಾರನಿರತರೂ ನೀತಿಬಾಹಿರರೂ ಆದ ರಾಜಕೀಯ ಮುಖಂಡರು ತಂತಮ್ಮ ಹೆಗಲು ಮುಟ್ಟಿಕೊಂಡು, ತಮ್ಮ ಚೇಲ ಅಥವಾ ಚಂಚಗಳ ಕೂಟದಲ್ಲಿ ಮಾತಿನ ಕಿಡಿಸುರಿಸಿ ಗತ ಪೌರುಷರಂತೆ ತೆಪ್ಪಗಾದರು; ‘ಸಂಸ್ಕೃತಿ ಕ್ರಾಂತಿಗೆ ಕಹಳೆ ನಾಂದಿ’ ಎಂಬ ಬರಹಗಾರರ ಒಕ್ಕೂಟದ ಭಾಷಣವನ್ನೋದುತ್ತಿದ್ದಂತೆ ಮತಿಗತಿಸಿದ ಜಾತೀಯತಾ ಭ್ರಾಂತಿ ಗೊಳಗಾದ ಮತಾಚಾರ್ಯ ವಿದ್ವಾಂಸರು ತಮ್ಮ ಕುಲದ ಬಳಗದಲ್ಲಿ ಗುಲ್ಲೆಬ್ಬಿಸಿ, ಅವರನ್ನು ಕೋರ್ಟಿಗೆಳೆದು ಸೆರೆಮನೆಗೆ ನೂಕುವ ಸನ್ನಾಹಕ್ಕೂ ಸಿದ್ಧರಾದರು.

ಇತ್ತೀಚಿನ ಆ ಒಂದು ಪ್ರಕರಣವನ್ನು ಗಮನಿಸಿದಾಗ ನವನಾಗರಿಕತೆಯ ಆಧುನಿಕ ಯುಗದಲ್ಲಿಯೂ ನಮ್ಮ ನಾಡಿನ ಹೃದಯದ ಮೂಲೆ ಮೂಲೆಗಳಲ್ಲಿ ಗುಪ್ತ ಸುಪ್ತವಾಗಿರುವ ಪೈಶಾಚಿಕ ಪ್ರವೃತ್ತಿಯ ಬರ್ಬರತೆ ಆಗಾಗ್ಗೆ ಹೆಡೆಯೆತ್ತಿ ರಾಷ್ಟ್ರೀಯತೆಯ ಅಧ್ಯಾತ್ಮಿಕತೆಯ ಮತ್ತು ಧಾರ್ಮಿಕತೆಯ ಬುಡವನ್ನೇ ಅಲ್ಲಾಡಿಸುತ್ತಿರುವಂತೆ ತೋರದಿರದು. ಕುವೆಂಪು ಅವರ ಜೀವನ ಧ್ಯೇಯಗಳಲ್ಲೊಂದು, ವಿನಾಶಕಾರೀ ಕೃತ್ಯದಂತಿರುವ ಮೌಢ್ಯವನ್ನು ತೊಲಗಿಸಿ, ಮಾನವನನ್ನು ಊರ್ಧ್ವಮುಖಗೊಳಿಸುವ ವೈಚಾರಿಕ ಸತ್ಯ ಸ್ವರೂಪದ ಶಾಶ್ವತ ಮೌಲ್ಯಗಳ ಕಡೆಗೆ ಸಮಾಜದ ಗಮನವನ್ನು ಸೆಳೆಯುವುದು. ಅದಕ್ಕಾಗಿ ಅವರು ನಿರಂತರ ಕ್ರಿಯಾಶೀಲ ರಾಗಿದ್ದಾರೆ, ಬದ್ಧಕಂಕಣರಾಗಿದ್ದಾರೆ. ಅವರ ಈ ಮನೋಧರ್ಮದ ಹಿನ್ನೆಲೆಯಲ್ಲಿ ಅವರ ವಿಚಾರ ಧಾರೆಯನ್ನು ಸಹಾನುಭೂತಿಯಿಂದ ಪೂರ್ವಗ್ರಹದೂರರಾಗಿ ಗ್ರಹಿಸುವುದಾದರೆ ದುರಾಗ್ರಹದೂಷ್ಯವಾದ ಪ್ರಕ್ಷೋಭೆಗೊಳಗಾಗಬೇಕಾದ್ದಿಲ್ಲ. ಅವರು ಬರಹಗಾರರ ಒಕ್ಕೂಟದಲ್ಲಿ ಮಂಡಿಸಿದ ವಿಚಾರಧಾರೆಯಿಂದ ಕೆಲವು ಹೃದಯಗಳಲ್ಲಿ ಕೋಲಾಹಲದ ಬಿರುಗಾಳಿಯೆದ್ದದ್ದು ವಿಷಾದದ ಸಂಗತಿಯಾಗಿದೆ. ಬೌದ್ದಿಕ ದಾಸ್ಯ ತೊಲಗಬೇಕು, ಪುರೋಹಿತಶಾಹಿ ನಿರ್ನಾಮವಾಗಬೇಕು, ಜಾತೀಯತೆ ಮಾಯವಾಗಬೇಕು, ವರ್ಣಾಶ್ರಮ ಬಹಿಷ್ಕೃತಗೊಳ್ಳಬೇಕು, ಅವಿವೇಕ ಅವಿಚಾರಗಳನ್ನು ಗಡೀಪಾರು ಮಾಡಬೇಕು-ಇವು ಅವರು ಪ್ರಸ್ತಾಪಿಸಿದ ವಿಚಾರಗಳು. ಈ ವಿಚಾರಗಳ ಸಮರ್ಥನೆಗಾಗಿ ನಿದರ್ಶನ ರೂಪದಲ್ಲಿ ಮಾಧ್ವಮತದ ಪ್ರಸ್ತಾಪವೂ ಬಂತು. ಮಕ್ಕಳ ಪುಸ್ತಕಗಳಲ್ಲಿ ಮೌಢ್ಯ ಪ್ರಸಕ್ತಿಯ ಕತೆಗಳಿರಬಾರ ದೆಂದು ‘ಜಯತೀರ್ಥರು’ ಎಂಬ ಹೊತ್ತಿಗೆಯಿಂದ ಕೆಲವು ಉದಾಹರಣೆಗಳನ್ನೆತ್ತಿ ತೋರಿಸಿದರು. ಜಯತೀರ್ಥರ ಜನ್ಮಸಂಬಂಧವಾದ ಕತೆಗಳು ಅವರ ವ್ಯಕ್ತಿತ್ವಕ್ಕೆ ಗೌರವ ತರುವಂಥವಲ್ಲವೆಂದು ಖಚಿತಪಡಿಸಿದವರು. ಅವರು ದೂರಿದ್ದು ಸಮಾಜದ ತಾರತಮ್ಯಗಳಿಗೆ ಕಾರಣವಾದ ವರ್ಣಮಾರ್ಗಗಳನ್ನೆ ಹೊರತು, ಬ್ರಾಹ್ಮಣರನ್ನಲ್ಲ. ಬ್ರಾಹ್ಮಣ ಕುಲದಲ್ಲಿ ಹುಟ್ಟಿದ ಗುರುಗಳಲ್ಲಿ ಅಪಾರ ಗೌರವವಿದೆ. ಶ್ರೀ ಪರಮಹಂಸರಲ್ಲಿ ಭಕ್ತಿಭಾವವಿದೆ. ಅವರು ದ್ವೇಷಿಸುವುದು ಬ್ರಾಹ್ಮಣ್ಯಕ್ಕಂಟಿಕೊಂಡು ಬಂದಿರುವ ಕೆಲವು ವಿಚಾರಹೀನ ಸಂಪ್ರದಾಯ ಗಳನ್ನು ಮತ್ತು ನಂಬಿಕೆಗಳನ್ನು.

ಇಂತೆಯೇ ಅವರು ಯಾವ ಮತವನ್ನಾಗಲೀ ಮತಾಚಾರ್ಯರನ್ನಾಗಲೀ ನಿಂದಿಸುವುದಿಲ್ಲ. ಅವರ ಆಗ್ರಹವಿರುವುದು ಮತಗಳಿಗಂಟಿಕೊಂಡು ಬಂದಿರುವ ಅವೈಜ್ಞಾನಿಕ ಶುಷ್ಕ ಸಂಪ್ರದಾಯಗಳ ಮೇಲೆ. ಅವುಗಳು ಬೋಧಿಸುವ ನಿತ್ಯಸತ್ಯಗಳನ್ನೆಂದೂ ಅವರು ಧಿಕ್ಕರಿಸುವು ದಿಲ್ಲ. ಅವರು ವಿದ್ಯಾರ್ಥಿ ದೆಶೆಯಲ್ಲಿ ಓದಿದ್ದು ಪ್ರಾಚ್ಯ ಪಾಶ್ಚಾತ್ಯ ತತ್ವಶಾಸ್ತ್ರ; ರಾಮಕೃಷ್ಣ ವಿವೇಕಾನಂದ ಅರವಿಂದ ಸಾಹಿತ್ಯೋಪಾಸಕರು, ಅವರು ನಿತ್ಯಸತ್ಯಾರಾಧಕರೂ ಅಹುದು; ಪ್ರವೃತ್ತಿಯಿಂದ ಸಾಧಕರು; ಮನುಜಮತ ವಿಶ್ವಪಥ ಸರ್ವೋದಯಗಳಲ್ಲಿ ಪೂರ್ಣನಿಷ್ಠೆ ಯುಳ್ಳವರು. ಪಾಶ್ಚಾತ್ಯ ತತ್ವಶಾಸ್ತ್ರವನ್ನು ಭಾರತೀಯ ವಿದ್ವಾಂಸರು, ಅದ್ವೈತವನ್ನು ದ್ವೈತಿಗಳು, ಒಂದು ಸಿದ್ಧಾಂತವನ್ನು ಮತ್ತೊಬ್ಬ ಸಿದ್ಧಾಂತಿ ವಿಮರ್ಶಿಸುವಂತೆ, ಕುವೆಂಪು ಅವರು ಮಾಧ್ವಮತದ ಹಲವು ಸಿದ್ಧಾಂತಗಳಲ್ಲಿ ಒಂದನ್ನೆತ್ತಿಕೊಂಡು ಟೀಕಿಸಿದರೇ ಹೊರತು, ಮಧ್ವಾಚಾರ್ಯರನ್ನು ದೂರಲಿಲ್ಲ. ಸಿದ್ಧಾಂತವನ್ನು ಚರ್ಚಿಸುವಾಗ ಸಿದ್ಧಾಂತಿಯ ಹೆಸರು ಅನಿವಾರ್ಯವಾಗಿ ನುಸುಳಿದ್ದರೆ ಅವರ ಅವಹೇಳನಕ್ಕಲ್ಲವೆಂದು ನಿರ್ಮತ್ಸರಿಗಳಾದವರು ಅರಿಯಬೇಕಾಗುತ್ತದೆ. ಸಿದ್ಧಾಂತದ ಹಿಂದಿರುವ ‘ಕಳಪೆ’ಯೆಂಬ ವಿಶೇಷಣ ಮುಂದಿನ ಹಗರಣಕ್ಕೆ ಕಾರಣವಾಯಿತೆಂದು ತೋರುತ್ತದೆ. ಪ್ರಾಯಶಃ ಅದೊಂದು ಪದ ಕಳಚಿಕೊಂಡಿ ದ್ದರೆ ಯಾರೂ ಬೆರಳೆತ್ತುವಂತಿರಲಿಲ್ಲ. ಮಾಧ್ವಮತ ಜೀವರುಗಳನ್ನು ಮೂರು ಪಂಗಡಗಳಾಗಿ ವಿಂಗಡಿಸಿ, ಜಗತ್ತಿನ ಶೇಕಡ ೯೯.೯೯ ಭಾಗ ಜನರನ್ನು ನಿತ್ಯ ನರಕಕ್ಕೆ ನೂಕುತ್ತದೆ. ಆ ವಿಭಜನೆಯ ಹಿಂದಿರುವ ತತ್ವವನ್ನು ವೈಜ್ಞಾನಿಕ ದೃಷ್ಟಿಯಿಂದ ಸಕಾರಣವಾಗಿ ವಿಶ್ಲೇಷಿಸಿ, ಅದನ್ನು ಸ್ವಾಮಿ ವಿವೇಕಾನಂದರ ಚಿಕಾಗೊ ಭಾಷಣದೊಡನೆ ಹೋಲಿಸಿ, ಅದರ ಅಪಾಯದ ಸ್ವರೂಪವನ್ನು ಸ್ಪಷ್ಟಪಡಿಸಿದ್ದಾರೆ. ಆಚಾರ್ಯರು ಅನೇಕ ನಿತ್ಯಸತ್ಯಗಳನ್ನು ಪ್ರತಿಪಾದಿಸಿದ್ದಾರೆ ನಿಜ. ಆದರೆ ಅವುಗಳ ಜೊತೆಗೆ ಸೇರಿಕೊಂಡಿರುವ ಕಳಪೆ ಸಂಗತಿಗಳನ್ನು ಬೇರ್ಪಡಿಸದಿದ್ದರೆ ಅವುಗಳ ಬೆಲೆ ಕುಸಿಯುತ್ತದೆ. ಅಪ್ಪ ಹಾಕಿದ ಆಲದ ಮರವೆಂದು ನೇಣುಹಾಕಿಕೊಳ್ಳುವುದು ವಿವೇಕದ ಲಕ್ಷಣವಲ್ಲ. ಅನೇಕ ಆರ್ಷೇಯ ವಿಚಾರಗಳು ಇಂದು ಅನುಷ್ಠಾನದಲ್ಲಿಲ್ಲ. ಮುತ್ತಜ್ಜನ ಕಾಲದ ನಡವಳಿಗಳಿಗೂ ಅವರ ಆಧುನಿಕ ಸಂತಾನದ ಆಚಾರಗಳಿಗೂ ಸಂಬಂಧವೇ ಇಲ್ಲ. ಪ್ರಾಚೀನ ಸಾಹಿತ್ಯವನ್ನು ಆಧುನಿಕ ವಿಮರ್ಶಾ ತತ್ವಗಳ ಒರೆಗಲ್ಲಿಗೆಂತು ಒಡ್ಡುತ್ತೇವೆಯೋ ಪೌರಾಣಿಕ ಮತೀಯ ಸಂಗತಿಗಳನ್ನೂ ವೈಜ್ಞಾನಿಕ ಪರೀಕ್ಷೆಗೊಡ್ಡಬೇಕಾ ಗುತ್ತದೆ. ಆಗ ಮಾತ್ರ ಸಮಾಜದ ಆರೋಗ್ಯ ಸ್ವಚ್ಛವಾಗಿರುತ್ತದೆ. ಶೂದ್ರರೆಲ್ಲ-ಬ್ರಾಹ್ಮಣ ಸ್ತ್ರೀಯರೂ ಸೇರಿಕೊಂಡು ನಿತ್ಯನಾರಕಿಗಳೆಂದು ಕರೆಸಿಕೊಂಡು ತಾಳ್ಮೆಯಿಂದಿರಲು ಸಾಧ್ಯವೇ? ಅದಕ್ಕಿಂತ ಕ್ರೂರವಾದ ನಿಂದೆ ಮತ್ತೊಂದುಂಟೆ? ಶತ ಶತಮಾನಗಳ ಸುದೀರ್ಘಾವಧಿಯಲ್ಲಿ ಜ್ಞಾನ ವಿಜ್ಞಾನಗಳಿಂದ ವಂಚಿತರಾಗಿ, ಸರ್ವದಾಸ್ಯಗಳ ಭಾರದಿಂದ ಜರ್ಝರಿತರಾಗಿ, ಬದುಕಿದ್ದಾಗಲೇ ನರಕವನ್ನನುಭವಿಸಿದ ಜನ ಅಂಥ ಅಮಾನವೀಯ ಅವಹೇಳನಾತ್ಮಕವಾದ ಮಾತು ಗಳನ್ನು ಕೇಳಿ ಸಿಡಿದೆದ್ದಾಗ ಮತದ ಹೆಸರಿನಲ್ಲಿ ಸರ್ವಸುಖಗಳನ್ನನುಭವಿಸಿದ ‘ಉಚ್ಚಸಂಸ್ಕೃತಿ’ಯ ಸಜ್ಜನರು ತಾಳ್ಮೆ ಕಳೆದುಕೊಳ್ಳುವುದು ತರವಲ್ಲ.

[1] ಮೇಲಾಗಿ ಕುವೆಂಪು ಮಾತಾಡಿದ್ದು ಮಾಧ್ವ ಸಾಹಿತ್ಯವನ್ನು ಕುರಿತಲ್ಲ; ಮಧ್ವಾಚಾರ್ಯರ ಕೆಲವು ಭಾವನೆಗಳು ಈಗಿನ ಸಮಾಜಕ್ಕೆ ಹೊಂದುವುದಿಲ್ಲ ಎಂದು. ಅವರ ಭಾಷಣವನ್ನು ಈ ಅರ್ಥದಲ್ಲಿ ಗ್ರಹಿಸಿಕೊಂಡಿ ದ್ದರೆ ಕಳವಳಕ್ಕೆ ಕಾರಣವಿರುತ್ತಿರಲಿಲ್ಲ.

ಇರಲಿ, ಮುಂದೇನಾಯಿತು? ೨೦.೪.೭೪ರಂದು ಕುವೆಂಪು ಅವರು ಮೈಸೂರಲ್ಲಿ ಮಾಡಿದ ಭಾಷಣವನ್ನು ತಂತಮ್ಮ ಸಂಸ್ಕಾರ ಮನೋಧರ್ಮಗಳಿಗನುಗುಣವಾಗಿ ಅನೇಕರು ಅನೇಕ ರೀತಿಗಳಲ್ಲಿ ಅರ್ಥ ಕಲ್ಪಿಸಿಕೊಂಡರು, ಹೌಹಾರಿದರು, ಧೂಳೆಬ್ಬಿಸಿದರು, ಕೋಲಾಹಲದಿಂದ ಹಾಲಾಹಲವನ್ನು ಹೊರತಂದರು, ಕಡೆಗೆ ತೆಪ್ಪಗಾದರು. ಧೂಳೆಬ್ಬಿಸಿದವರೆಲ್ಲ ಸಾಮಾನ್ಯವಾಗಿ ಒಂದು ಪಂಥಕ್ಕೆ ಸೇರಿದವರು; ಅವರ ಟೀಕೆಗಳಿಗೆ ಪ್ರತಿಭಟನೆ ಸಲ್ಲಿಸಿ, ಕುವೆಂಪು ಅವರ ನಿಲುವನ್ನು ಸಮರ್ಥಿಸಿಕೊಂಡವರು ಅನೇಕ ಪಂಥಗಳಿಗೆ ಸೇರಿದವರು. “ಈ ನಿಮ್ಮ ಹೇಳಿಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೇಲೆ ತಾವು ಮಾಡಿರುವ ಆಪಾದನೆ ಆಗಿದೆ; ಎಂದು ಅತ್ಯಂತ ಸೌಜನ್ಯದಿಂದ ಬರೆದ ದೂರವಾಣಿ ನಗರದ ತಿರುಮಲರಾಯರ[2] ಪತ್ರ (೨೩.೪.೭೪)ಕ್ಕೆ ಉತ್ತರವಾಗಿ “ಶ್ರೀ ಕುವೆಂಪು ಅವರು ಮೂಢನಂಬಿಕೆಗಳನ್ನು ಜಾತೀಯತೆ ಯನ್ನೂ ತಿರಸ್ಕರಿಸುತ್ತಾರೆಯೇ ಹೊರತು ಅಮೂಲ್ಯವಾದ ತತ್ವಗಳನ್ನುಳ್ಳ ಸನಾತನ ಧರ್ಮವನ್ನಲ್ಲ. ಮೂಢನಂಬಿಕೆಗಳನ್ನು ಬೆಳೆಸುವಂತಹ ಪುಸ್ತಕಗಳನ್ನು ಕುರಿತು ಮಾತನಾಡುತ್ತ ಶ್ರೀ ಕುವೆಂಪು ಅವರು ಒಂದು ಉದಾಹರಣೆಯನ್ನು ನೀಡಿದರು ಅಷ್ಟೆ” ಎಂದು ಪ್ರಭು ಶಂಕರರು[3] ಕುವೆಂಪು ಅವರ ಪರವಾಗಿ ಬರೆದರು. ಕುವೆಂಪು ಅವರನ್ನು ಗುರು ಸ್ಥಾನದಲ್ಲಿಟ್ಟು ಕೊಂಡಿರುವ ಚಾಮರಾಜ ಪೇಟೆಯ ರಾಮಕುಲಕರ್ಣಿಯವರು ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಕಟನೆಗಳ ವಿಷಯದಲ್ಲಿ ಅವರು ಮಂಡಿಸಿದ ಟೀಕೆಗಳು ಉಚಿತವಲ್ಲವೆಂದು ನಮ್ರತೆಯಿಂದ ತಿಳಿಸಿದ್ದಾರೆ.[4] ಚಾಮರಾಜಪೇಟೆ ವೈದಿಕ ಸಾಹಿತ್ಯ ಪ್ರಕಾಶನ ಸಮಿತಿಯ ಸುಧಾಕರ ಚತುರ್ವೇದಿ ಯವರು[5] “ವರ್ಷ ವರ್ಷಗಳೇ ಉರುಳಿ ಹೋದಮೇಲೆ ತಮಗೆ ಬರೆಯತೊಡಗಿದ್ದೇನೆ; ಇಷ್ಟು ದೀರ್ಘಕಾಲಾನಂತರವೂ ತಮಗೆ ಬರೆಯುವಾಗ, ವಿವಾದಗ್ರಸ್ತವಾದ ವಿಷಯವನ್ನೇ ಹಿಡಿದು ಬರೆಯಬೇಕಾಯಿತಲ್ಲ, ಎಂದು ಸ್ವಲ್ಪ ವಿಷಾದವಾಗುತ್ತಿದೆ…..ಎಲ್ಲ ಸಾಹಿತ್ಯಗಳಲ್ಲಿಯೂ[6] ೧೦೦ಕ್ಕೆ ೯೦ರಷ್ಟು ಭಾಗ ಕಳಪೆ ಸಾಹಿತ್ಯವೇ ಆಗಿರುವುದೆಂಬ ಬಗೆಗೆ ಸಂದೇಹವೇ ಇಲ್ಲ. ಸ್ಥಿತಿ ಹೀಗಿರುವಾಗ ಯಾರೋ ಒಬ್ಬ ಸಾಂಪ್ರದಾಯಿಕ ಆಚಾರ್ಯರ ಕಡೆ ಬೆರಳು ಮಾಡಿ ತೋರಿಸಿ ‘ಕಳಪೆ ಸಾಹಿತ್ಯವೆಂಬ ಉಪಾಧಿಗೆ ಪೂರ್ಣತಃ ಅಧಿಕಾರಿಯೆಂದರೆ ಅವರದೇ!’ ಎನ್ನುವುದು ಪ್ರಾಯಶಃ ಉಚಿತವೆನ್ನಿಸದು” ಎಂದು ಬರೆದಿದ್ದಾರೆ. “ನನಗರಿವಿಲ್ಲ ದೆಯೇ ತಮ್ಮ ಬಗ್ಗೆ ಇರುವ ಗೌರವ ಭಾವನೆ ಕಡಿಮೆಯಾಗುತ್ತಿದೆ….. ಕುವೆಂಪು ಶಿಷ್ಯ ಎಂದು ಸ್ನೇಹಿತರು ತಮಾಷೆ ಮಾಡುತ್ತಿದ್ದ ನನಗೆ ಈಗ ಎಲ್ಲರೂ ಪ್ರಶ್ನಿಸುವವರೇ?”[7] “ತಾವು ಮಹಾಕವಿಯೆಂದು ಹೆಸರು ಪಡೆದರೂ ತಮಗೆ ಪೂರ್ವಗ್ರಹಪೀಡಿತವಾದ ಸಂಕುಚಿತ ಮನೋವೃತ್ತಿ ಒಂದು ಸುಪ್ತವಾಗಿ ಬೆಳೆದು ಇದೀಗ ಮರದ ರೂಪದಲ್ಲಿ ಇದೆ ಎಂದು ಅನ್ನಿಸುತ್ತದೆ” ಎಂದು ಖಾರ ಕಾರಿದವರು ಉಡುಪಿಯ ಕೆ.ಎಸ್.ಅಚ್ಯುತಬಲ್ಲಾಳ ಅವರು.[8] ಅವರಿಗೆ ೧೦.೫.೭೪ರಂದು ಬರೆದ ಉತ್ತರದ ಕೆಲವು ಎತ್ತಿಕೆಗಳಿವು.

“ಈ ಕೊನೆಯವರು ನಿತ್ಯನರಕ ಭಾಜನರು. ಇವರಿಗೆ ಉದ್ಧಾರವೇ ಇಲ್ಲ. ಯಾವ ಜೀವವೂ ತನ್ನ ಸ್ವರೂಪವನ್ನು ಮೀರುವುದಾಗಲಿ ಬದಲಾಯಿಸುವುದಾಗಲಿ ಸಾಧ್ಯವಿಲ್ಲ. ಇಂತಹ ಸಮಾಜದ್ರೋಹ ಪ್ರಚೋದಕವಾದ ಭಾವನೆಗಳನ್ನು ಪ್ರತಿಪಾದಿಸಿರುವವರು ಯಾರೇ  ಆಗಲಿ. ಅವರನ್ನು ದೊಡ್ಡ ಆಚಾರ್ಯರೆಂದು ಪರಿಗಣಿಸಲು ಶ್ರೀ ಕುವೆಂಪು ಅವರು ಸರ್ವದಾ ಸಿದ್ಧರಾಗಿಲ್ಲ.

“ಇನ್ನೂ ನೀವು ಹೆಸರಿಸಿರುವ ಗುರುಗಳಿಂದ ಜ್ಞಾನವನ್ನು ಪಡೆಯುವ ವಿಚಾರ ಅವರಿಗಿಂತ ಕೋಟಿಪಾಲು ದೊಡ್ಡವರಾದ ಗುರುಗಳಿಂದ ಅವರು ಜ್ಞಾನವನ್ನು ಪಡೆದದ್ದಾಗಿದೆ. ಆದ್ದರಿಂದ ಅದರ ಅಗತ್ಯ ಅವರಿಗಿಲ್ಲ”.

“ನಿಮಗೆಲ್ಲರಿಗೂ ಮಧ್ವ ಸಿದ್ಧಾಂತದಲ್ಲಿ ನಿಜವಾಗಿ ಆಸ್ಥೆ ಇದ್ದು ನಿಮ್ಮ ಆಚಾರ್ಯರನ್ನು ದೊಡ್ಡವರನ್ನಾಗಿ ಮಾಡಬೇಕೆಂಬ ಶ್ರದ್ಧೆಯಿದ್ದರೆ ಮಧ್ವ ಸಿದ್ಧಾಂತದ ಈ ಅವಿವೇಕದ ಅಂಶಗಳನ್ನು ತೆಗೆದು ಹಾಕಲು ಶ್ರಮಿಸಬೇಕೆಂದು ಸೂಚಿಸುತ್ತೇನೆ”.

ಈ ದಿಟ್ಟ ವಿವೇಕಯುತವಾದ ಉತ್ತರದಲ್ಲಿ ಕುವೆಂಪು ಅವರ ವಿಚಾರ ಧಾರೆಯ ಸ್ವರೂಪವನ್ನು ಗ್ರಹಿಸಬಹುದು. ಈ ಪತ್ರಕ್ಕೆ ಪ್ರತ್ಯುತ್ತರ ಬರೆಯುತ್ತಾ ಬಲ್ಲಾಳರು “ಅಂತೂ ಕುವೆಂಪು ಅವರು ಮಧ್ವಾಚಾರ್ಯರ ಯಾವ ತತ್ವಕ್ಕೆ ವಿರೋಧ ಎಂಬುದಂತೂ ಸ್ಪಷ್ಟವಾಯ್ತು… ಕೇವಲ ತ್ರಿವಿಧ ಜೀವಿಗಳ ಬಗ್ಗೆ ಮಾತ್ರ ಮಧ್ವಾಚಾರ್ಯರ ಸಾಹಿತ್ಯ ಕಳಪೆ ಎಂದು ಹೇಳಿದರೆ ಯಾವ ಮಾಧ್ವನೂ ಬೇಸರಿಸಲಾರ. ಮಧ್ವರ ಬಗ್ಗೆ ಮತ್ತು ಅವರ ತತ್ವದ ಬಗ್ಗೆ ದೂರುವುದಾಗಲೀ ದ್ವೆಷಿಸುವುದಾಗಲೀ ಮಾಡುವುದೂ ಒಂದೆ ಸೂರ್ಯನನ್ನು ಕುರಿತು ಉಗುಳುವುದೂ ಒಂದೇ”[9] ಎಂದಿದ್ದಾರೆ. ಇದನ್ನೋದಿದವರಿಗೆ ಅದರಲ್ಲಿರುವ ವಿರೋಧಾಭಾಸಗಳು ಗೊತ್ತಾಗದಿರಲಿಕ್ಕಿಲ್ಲ. ಚಾತುರ್ವರ್ಣಗಳು ವೇದಗಳ ಕಾಲದಿಂದಲೂ ಅಸ್ತಿತ್ವ ದಲ್ಲಿವೆಯೆಂದು ಹೇಳಿ, ಅವುಗಳ ಪರವಾಗಿ ಮತ್ತೊಬ್ಬರು ವಾದಿಸಿದ್ದಾರೆ.[10]

೧೯೭೪ರ ಮೇ ತಿಂಗಳ ‘ತತ್ವವಾದ’ ಎಂಬ ಪತ್ರಿಕೆಯಲ್ಲಿ ಪೇಜಾವರ ಫಲಿಮಾರು ಬಾಳಿಗಾರು ಶ್ರೀಗಳವರು ಪ್ರಕಟಿಸಿರುವ ಪ್ರತಿಕ್ರಿಯೆ ಶಿಖರಪ್ರಾಯವಾಗಿವೆಯೆಂದೂ, ಅವು ಆ ಪಂಥದ ಪ್ರಾತಿನಿಧಿಕ ಭಾವನೆಗಳೆಂದೂ ಹೇಳಬಹುದಾಗಿದೆ. ಆ ಹೇಳಿಕೆಗಳ ಮುಖ್ಯಾಂಶಗಳಿವು : ಇಡೀ ಮಧ್ವ ತತ್ವಜ್ಞಾನ ಮತ್ತು ಸಾಹಿತ್ಯದ ಅವಹೇಳನವನ್ನು ಮಾಡಿದ ಕೆ.ವಿ. ಪುಟ್ಟಪ್ಪನವರ ಹೇಳಿಕೆಗೆ ಜನತೆಯು ಯಾವ ಬೆಲೆಯನ್ನೂ ನೀಡುವುದಿಲ್ಲವೆಂದು ನಂಬಿದ್ದೇವೆ. ಕುವೆಂಪು ಅವರು ಮಾಧ್ವತತ್ವವನ್ನು ಆಳವಾಗಿ ಅಭ್ಯಾಸ ಮಾಡಿಲ್ಲ. ಅವರ ವಾದದಲ್ಲಿ ಹುರುಳಿದ್ದರೆ ನಮ್ಮ ಕ್ಷೇತ್ರಕ್ಕೆ ಬಂದು ವಾದಿಸಿ ಗೆಲ್ಲಲಿ[11] ಈ ಗುರುಗಳು ಜೀವತ್ರಯದ ಬಗ್ಗೆ ಚಕಾರವೆತ್ತಿಲ್ಲ. ಕುವೆಂಪು ಅವರು ಇಡೀ ಮಾಧ್ವ ತತ್ತ್ವವನ್ನು ಬೇರೆಸಿಲ್ಲ ವೆಂಬುದು ಅವರ ದಿವ್ಯಮತಿಗೆ ಹೊಳೆದಿಲ್ಲ. ಕುವೆಂಪು ಅವರ ಹೇಳಿಕೆಗೆ ಎಂಥ ಬೆಲೆಯಿದೆ ಎನ್ನುವ ಸಂಗತಿ ಕನ್ನಡ ನಾಡಿನಲ್ಲಿ ಜಗಜ್ಜಾಹೀರಾಗಿದೆ. ಕುವೆಂಪು ಅವರು ತಮ್ಮ ವಾದದಲ್ಲಿ ಗೆಲವು ಪಡೆದದ್ದಾದರೆ “ನಾನೂ ಸಹ ದ್ವೈತಮತವನ್ನು ಬಿಟ್ಟು ದ್ವೈತಮತದವರೆಲ್ಲರನ್ನೂ ಅನ್ಯ ಮತೀಯರನ್ನಾಗಿ ಮಾಡಲು ಸಂಪೂರ್ಣವಾಗಿ ಪ್ರಯತ್ನಿಸುತ್ತೇನೆ. ಇದಾಗದ ಪಕ್ಷದಲ್ಲಿ….ಜನತೆಯ ಕ್ಷಮೆಯಾಚಿಸಬೇಕು” ಎಂದು ಬೆಂಗಳೂರಿನ ನ.ಕೃ. ವರದೇಂದ್ರ[12] ಎನ್ನುವವರು ಸವಾಲೆಸೆದಿದ್ದಾರೆ. ಈಗಾಗಲೇ ಕುವೆಂಪು ಅವರು ವಾದ ಮಂಡಿಸಿದ್ದಾಗಿದೆ. ಅದಕ್ಕೆ ಯಾರೂ ಸಮರ್ಪಕವಾಗಿ ಉತ್ತರ ಕೊಟ್ಟಿಲ್ಲ. ಪಂಥವೊಂದರ ಮಠವಲ್ಲ, ಅನೇಕ ಮಠಗಳನ್ನೊಳಗೊಂಡ ಕನ್ನಡನಾಡು ನ್ಯಾಯ ಸಮ್ಮತವಾದ ತೀರ್ಪು ನೀಡಬೇಕಾಗುತ್ತದೆ, ನೀಡಿಯೂ ಆಗಿದೆ.

ಆಮೇಲೆ ಮೈಸೂರಿನ ವಕೀಲರಾದ ಆರ್. ನಾಗರಾಜರಾವ್ ಅವರು ೨೪.೫.೭೪ರಂದು ಅವರ “ಕಕ್ಷಿಗಾರರಾದ ಮಾಧ್ವಮತಾನುಯಾಯಿಯಾದ ಎಚ್.ಎನ್. ನಾಗರಾಜರಾವ್ ಅವರ ಇರಾದೆ ಮೇರೆ” ಕುವೆಂಪು ಅವರ ಮೇಲೆ ನಾಲ್ಕು ಆಪಾದನೆಗಳನ್ನು ಹೊರಿಸಿ, “ಈ ನೋಟೀಸು ತಲುಪಿದ ಒಂದು ವಾರದಲ್ಲಿ ನೀವು ಬಹಿರಂಗವಾಗಿ ಪತ್ರಿಕೆಯಲ್ಲಿ ಪ್ರಕಟಣೆ ಕೊಡುವುದರ ಮೂಲಕ, ನೀವು ೨೦.೪.೭೪ರ ಭಾಷಣದಲ್ಲಿ ಶ್ರೀ ಮಾಧ್ವತತ್ವದ ಬಗ್ಗೆ ಮತ್ತು ಶ್ರೀಜಯತೀರ್ಥರ ಬಗ್ಗೆ ಅವಹೇಳನ ಮಾತುಗಳನ್ನು ಆಡಿದ ಬಗ್ಗೆ ‘ಕ್ಷಮಾಪಣೆ’ ಯನ್ನು ಕೇಳತಕ್ಕದ್ದು. ತಪ್ಪಿದ್ದಲ್ಲಿ ನೀವು ಕ್ರಿಮಿನಲ್ ಪ್ರಾಸಿಕ್ಯೂಷನ್ನಿಗೆ ಗುರಿಯಾಗಬೇಕಾಗುತ್ತ ದೆಂದು ಸಕಾಲದಲ್ಲಿ ತಿಳಿಸಿ ಎಚ್ಚರಿಸಿರುತ್ತೆ”. ಎಂಬುದಾಗಿ ಕುವೆಂಪು ಅವರ ಮೇಲೆ ನೋಟೀಸು ಜಾರಿಮಾಡಿದರು. ೩.೬.೧೯೭೪ರಂದು ಕುವೆಂಪು ಅವರ ಪರವಾಗಿ ಲಾಯರ್ ಪಿ.ಎಂ. ಚಿಕ್ಕಬೋರಯ್ಯನವರು ಫಿರ್ಯಾದಿಯ ವಕೀಲರಿಗೆ ಕಳಿಸಿದ ಉತ್ತರದ ಮುಖ್ಯಾಂಶಗಳಿವು : “ಅಂದಿನ ಭಾಷಣದಲ್ಲಿ ಆದ ಟೀಕೆಗಳು, ಖಂಡನೆಗಳು,ಶ್ಲಾಘನೆಗಳು ಮುಂತಾದುವೆಲ್ಲ ನಡೆದದ್ದು ಸಮಾನತಾವಾದಿಯ ದೃಷ್ಟಿಯಿಂದಲೇ ಹೊರತು ಯಾವುದೇ ವ್ಯಕ್ತಿಯ, ಜಾತಿಯ ಅಥವಾ ಪಂಥದ ಮೇಲಣ ದ್ವೇಷದಿಂದಲ್ಲ. ಲೇಖಕರ ಹೊಣೆಯನ್ನು ಕುರಿತು ಮಾತನ್ನಾ ಡುತ್ತಾ ನಮ್ಮ ಕಕ್ಷಿದಾರರು ಜಯತೀರ್ಥರ ಜೀವನ ಚರಿತ್ರೆಯು ಬರೆಯಲ್ಪಟ್ಟಿರುವ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಅಷ್ಟೇ ಹೊರತು ಜಯತೀರ್ಥರ ವ್ಯಕ್ತಿತ್ವದ ಬಗ್ಗೆ ಅವರು ಟೀಕಿಸಿಲ್ಲ. ಅಲ್ಲದೆ ನಮ್ಮ ಕಕ್ಷಿದಾರರು ಟೀಕಿಸಿರುವ ಜೀವತಾರತಮ್ಯ ತತ್ವವು ಪ್ರಜಾಸತ್ತೆಗೂ ರಾಜ್ಯಾಂಗಕ್ಕೂ, ಮಾನವ ವ್ಯಕ್ತಿತ್ವಕ್ಕೂ, ಸಭ್ಯತೆಗೂ ಅವಮಾನಕರವಾಗಿವೆ. ಆದ್ದರಿಂದ ಅಂತಹುಗಳನ್ನು ಕಿತ್ತು ಹಾಕಿದರೆ ಯಾವುದೇ ಧರ್ಮವಾಗಲಿ ಶ್ರೇಷ್ಠತೆಯನ್ನು ಪಡೆದುಕೊಳ್ಳುತ್ತದೆ ಎಂದು ನಮ್ಮ ಕಕ್ಷಿದಾರರು ಹೇಳಿದ್ದಾರೆ. ನಮ್ಮ ಕಕ್ಷಿದಾರರ ಮೇಲೆ ಮಾಡಿರುವ ಅನೇಕ ಆರೋಪಣಗಳು ಉದ್ದೇಶಪೂರ್ವಕವಾಗಿ ನಮ್ಮ ಕಕ್ಷಿದಾರರಿಗೆ ಅವಮಾನ ಮಾಡಬೇಕೆಂಬ ದೃಷ್ಟಿಯಿಂದ ಕೂಡಿರುವುದರಿಂದ ಅವು Perse Defamatory ಆಗಿರುತ್ತವೆಯಾದ್ದರಿಂದ ನಿಮ್ಮ ಕಕ್ಷಿದಾರರ ಮೇಲೆ ನಮ್ಮ ಕಕ್ಷಿದಾರರು ಕಾನೂನು ಪ್ರಕಾರ ಸೂಕ್ತಕ್ರಮ ಕೈಗೊಳ್ಳುವವರಾಗಿದ್ದಾರೆಂದು ತಿಳಿಸಿರುತ್ತೆ”. ಬೆಂಗಳೂರಿನ ಎಂ.ಡಿ. ನಂಜುಂಡಸ್ವಾಮಿಯವರೂ ೪.೬.೧೯೭೪ರಂದು ನಾಗರಾಜ್‌ರಾವ್ ಅವರಿಗೆ ನೋಟೀಸು ಜಾರಿಮಾಡಿ “ವೈಚಾರಿಕ ಟೀಕೆಗಳಿಗೆ ದುರುದ್ದೇಶವನ್ನು ಆರೋಪಿಸುವುದಕ್ಕೆ ಕಾನೂನಿನ ತಳಹದಿ ಇರುವುದಿಲ್ಲ” ಎಂದು ಸ್ಪಷ್ಟಪಡಿಸಿದರು. ಈ ನೋಟೀಸುಗಳಿಗೆ ಪ್ರತಿಯಾಗಿ ನಾಗರಾಜರಾವ್ ಅವರಿಂದ ಜವಾಬು ಬಂದಂತಿಲ್ಲ. ಕುವೆಂಪು ಅವರನ್ನು ಕೋರ್ಟಿಗೆಳೆದದ್ದಾರೆ ಅವರ ಪರವಾದಿಸುವಸಲುವಾಗಿ ಬೆಂಗಳೂರಿನ ವಕೀಲರಾದ ಎಚ್.ಜಿ. ಬಾಲಕೃಷ್ಣ ಅವರ ಚಾಲಕತ್ವದಲ್ಲಿ ಮೂವತ್ತೆರಡು ಮಂದಿ ನಾಡಿನ ಶ್ರೇಷ್ಠ ವಕೀಲರನ್ನೊಳಗೊಂಡ ಮಂಡಲಿ ಯೊಂದು ರಚನೆಗೊಂಡಿತು. ಅದು ಜಾತ್ಯತೀತವಾದ, ನ್ಯಾಯ ನಿಷ್ಠವಾದ ಸಂಸ್ಥೆ. ಆ ಮಂಡಲಿ ಪ್ರಕಟಿಸಿದ ಪತ್ರಿಕಾ ಹೇಳಿಕೆಯ ಕೆಲವು ಮಾತುಗಳಿವು. Dr. Kuvempu’s stand is indicative of the modern Scientific urge to rationalise religious doctrines and traditional Concepts which impede social Progress. Every Philosophy relates to human affairs and human conduct. No philosophy could refuse to admit of a change and remain static and stagnant. Viewed from this prespective Dr. Kuvempu’s views could be regarded as reformative of the Madhva Philosophy. The essence of religion or philosophy is harmonious adjustment to the changing human and social values. Regidity is an abstacle to a progressive society.[13] ಯಾವ ಸ್ವಾಮಿಭಕ್ತರೂ ಈ ಹೇಳಿಕೆ ರೂಪದ ನೋಟೀಸುಗಳಲ್ಲಿ ಎತ್ತಿರುವ ಸವಾಲುಗಳಿಗೆ ಜವಾಬು ನೀಡದಿರುವುದು ಸಂಶಯದ ಹಾಗೂ ಸೋಜಿಗದ ಸಂಗತಿಯಾಗಿದೆ. ಇದೇ ಸಂದರ್ಭದಲ್ಲಿ ವಿ.ಟಿ. ರಾಜಶೇಖರಶೆಟ್ಟರಂಥ ಪತ್ರಿಕಾಕರ್ತರೂ ಕುವೆಂಪು ಅವರಿಗೆ ಬೆಂಬಲ ಸೂಚಿಸಿ ಪತ್ರ ಬರೆದದ್ದಲ್ಲದೆ, ಅವರ ವಾದದ ಪರವಾಗಿ ಸಾಕಷ್ಟು ಪ್ರಚಾರ ನಡೆಸಿದರು.[14] ಮಂಡಲಿ ರಚನೆಯಾದ ನಂತರ ಕುವೆಂಪು ಅವರು ಬಾಲಕೃಷ್ಣ ಅವರಿಗೆ ಬರೆದ ಪತ್ರದಲ್ಲಿ ಅವರ ಬದುಕಿನ ಹಂಬಲದ ಪ್ರಾಮಾಣಿಕ ಅಭಿವ್ಯಕ್ತಿಯಿದೆ.[15] “ನಮ್ಮ ಜನ ಶತಮಾನಗಳ ಮೌಢ್ಯವನ್ನೂ ಮಾನಸಿಕ ದಾಸ್ಯವನ್ನೂ, ತಾವು ಮೇಲು ಎಂದು ತಿಳಿದುಕೊಂಡಿರುವ ವರ್ಗಗಳ ತುಳಿತವನ್ನೂ ಕಳೆದುಕೊಳ್ಳಬೇಕು, ವಿಚಾರ ಪರರಾಗಬೇಕು ಎಂಬುದು ನನ್ನ ತೀವ್ರವಾದ ಹಂಬಲ. ಇಂತಹ ಉದ್ದೇಶದಿಂದ ಮಾಡಿದ ಟೀಕೆಯನ್ನು ಮಂದಗಾಮಿಗಳೂ ಪ್ರಗತಿ ವಿರೋಧಿಗಳೂ ಹೇಗೆ ಪ್ರತಿಭಟಿಸುತ್ತಾರೆ ಎಂಬುದಕ್ಕೆ ಇಂತಹ ಪ್ರಸಂಗಗಳೇ ಸಾಕ್ಷಿಯಾಗಿವೆ. ದಲಿತ ವರ್ಗದ ಜನ ಈಗಲಾದರೂ ಎಚ್ಚತ್ತುಕೊಳ್ಳದಿದ್ದರೆ ಎಂದೆಂದಿಗೂ ಎಚ್ಚತ್ತುಕೊಳ್ಳುವುದೇ ಇಲ್ಲ ಎಂಬುದರಲ್ಲಿ ಸಂದೇಹವೇ ಇಲ್ಲ”.

ನಾಡಿನ ಪ್ರಗತಿಶೀಲ ವಿಚಾರವಾದಿಗಳ ವೈಜ್ಞಾನಿಕ ವಿವರಣೆ ಚಿಂತನ ದಾರಿದ್ರ್ಯದ ಸಂಪ್ರದಾಯವಾದಿಗಳಿಗೆ ಹಿಡಿಸದಿದ್ದುದು ದುರ್ದೈವವೆಂದೇ ಹೇಳಬೇಕು. ೧೬.೫.೧೯೭೪ ರಂದು ಮದ್ರಾಸಿನ ರಘುಪತಿರಾಯರು ಬರೆದ ಪತ್ರ ಆ ಗುಂಪಿನ ಮುಖವಾಣಿಯಂತಿದೆ. “ಆತ್ಮಚಿಂತನೆಯೊಂದನ್ನೇ ಅವಲಂಬಿಸಿರುವ ‘ಪ್ರಜ್ಞಾವಾದಿ’ಗಳೆಂಬ “ಬಿರುದನ್ನು ಅವರು ಕುವೆಂಪು ಅವರಿಗೆ ದಯಪಾಲಿಸಿದ್ದಾರೆ”. ಯಾರೊ ಅವರ ಮೇಲೆ ಅಧಿಕಾರ ಹೊರಿಸಿದರು, ಆ ಸ್ಥಾನ ಬಲದಿಂದ ತಾವು ಹೇಳಿದ್ದೇ ಅಧಿಕಾರವಾಣಿಯೆಂದು ತಿಳಿದಿದ್ದಾರೆ. ಅವರಿಗೆ ಸಂಸ್ಕೃತದ ಓನಾಮವೂ ಗೊತ್ತಿಲ್ಲ. ಚತುರ್ವರ್ಣಗಳನ್ನು ಸೃಷ್ಟಿಸಿದ್ದು ಭಗವಂತ; ಭಗವಂತ ನನ್ನು ಪ್ರಶ್ನಿಸುವ ಅಧಿಕಾರ ಅವರಿಗಿದೆಯೆ? ವಿಶ್ವಪ್ರಜ್ಞೆ ಎನ್ನುವುದರ ಅರ್ಥ ಅವರಿಗೆ ತಿಳಿದಿದೆಯೆ? ವೈದಿಕ ಸಂದೇಶ ಅವರಿಗರ್ಥವಾಗದಿದ್ದರೆ ತೆಪ್ಪಗಿರುವುದು ಮೇಲು; ಅದನ್ನು ಹಳಿದು ದುಃಖಕ್ಕೀಡಾಗುವುದು ಬೇಡ. ಹೀಗೆಲ್ಲ ಹೇಳುವವರು ರಾಷ್ಟ್ರಕವಿ ಬಿರುದಿಗೆ ಅರ್ಹರೆ?” ಇದು ಅವರ ಆಂಗ್ಲ ಪತ್ರದ ಸಾರಾಂಶ. ಅವರಿಗೆ ಬರೆದ ಉತ್ತರ ತುಂಬ ಸೌಮ್ಯವಾಗಿತ್ತು. ಮುಂದಿನ ತಮ್ಮ ಪತ್ರದಲ್ಲಿ[16] ರಘುಪತಿರಾಯರು ಕುವೆಂಪು ಅವರನ್ನು ಅರುಳು ಮರುಳರೆಂದು ಕರೆದರು. ಕುದುರೆ ನೆಲದ ಮೇಲೆ ಹೊರಳಾಡಿ ಎಬ್ಬಿಸಿದ ಧೂಳು ಸೂರ್ಯನನ್ನು ಮುಸುಕುವುದೆ? ಗೂಗೆ ಬೆಳಗುವ ಸೂರ್ಯನ ಮಹಿಮೆಯನ್ನರಿಯಬಲ್ಲುದೆ? ಎಂದು ಪ್ರಶ್ನಿಸಿದರು. “ನಿಮ್ಮ ನಂಬಿಕೆಗಳೆಲ್ಲವನ್ನು ಸಿದ್ಧಾಂತಗಳೆಂದು ಭಾವಿಸಿದ್ದೀರಿ. ಸಿದ್ಧಾಂತಗಳೇ ಆದರೂ ಅವೂ ಕೂಡ ಖಂಡನೆಗೆ ಅರ್ಹವಾಗಿರುತ್ತವೆಯಷ್ಟೆ. ಶಂಕರ ರಾಮಾನುಜರ ಸಿದ್ಧಾಂತಗಳನ್ನು ಮಧ್ವರು, ಮಧ್ವ ಸಿದ್ಧಾಂತಗಳನ್ನು ಇತರ ವಾದಿಗಳೂ ಖಂಡಿಸಿದ್ದಾರೆ ಎಂಬುದನ್ನು ನೀವು ಬಲ್ಲಿರಿ. ಹೀಗಿದ್ದೂ ರಭಸ ಕೋಪ, ಉದ್ವೇಗಗಳು ಅದರಲ್ಲೂ ಈ ೨೦ನೆಯ ಶತಮಾನದ ಕೊನೆಯ ಭಾಗದಲ್ಲಿ ವಿವೇಕಿಗಳಾದ ಯಾರಿಗೇ ಆದರೂ ಸಲ್ಲತಕ್ಕವಲ್ಲ” ಎಂದವರಿಗೆ ಪ್ರತ್ಯುತ್ತರವಾಗಿ[17] ತಿಳಿಸಲಾಯಿತು. ಬುದ್ಧನಿಂದ ಮಧ್ವರವರೆಗೆ ಪೂರ್ವತಾತ್ವಿಕರೆಲ್ಲ ತಮಗಿಂತ ಹಿಂದಿನ ಆಚಾರ್ಯರ ಬೋಧನೆಗಳನ್ನು ಖಂಡಿಸಿದ್ದಾರೆಂಬುದನ್ನು ಒಪ್ಪಿಕೊಂಡ ರಘುಪತಿರಾಯರು ಮಧ್ವಸಿದ್ಧಾಂತ ಪರಿಪೂರ್ಣ ವಾದ್ದರಿಂದ ಈಚಿನವರಾರು ಖಂಡಿಸಿಲ್ಲವೆಂದೂ ಅದೇ ಪರಮ ಪ್ರಮಾಣವೆಂದೂ, ಕುವೆಂಪು ಅವರು ಅಜ್ಞಾನವಶರಾಗಿ ಟೀಕಿಸುತ್ತಿರುವರೆಂದೂ ಮಾರುತ್ತರ[18] ಕಳಿಸಿದರು. ಅವರ ವಾದ ಎಷ್ಟು ಜಳ್ಳೆಂಬುದು ಅವರ ಮಾತಿನಿಂದಲೇ ವೇದ್ಯವಾಗುತ್ತದೆ. ೨೬.೬.೭೪ರಂದು ಬರೆದ ಪ್ರತ್ಯುತ್ತರದಲ್ಲಿ ಕುವೆಂಪು ಅವರ ವಾದಕ್ಕೆ ನಾಡಿನಲ್ಲಿ ದೊರೆಯುತ್ತಿರುವ ಬೆಂಬಲದ ಪ್ರಮಾಣವನ್ನೂ, ಹೀಗೆಯೇ ವಾದ ವಿವಾದಗಳು ಮುಂದುವರಿದಲ್ಲಿ ಪರಿಸ್ಥಿತಿ ಕೈಮೀರುವು ದೆಂಬುದನ್ನೂ ಅವರಿಗೆ ಸ್ಪಷ್ಟಪಡಿಸಲಾಯಿತು. ಯಶವಂತಪುರದ ಕೃಷ್ಣಗಿರಿ ಮುರುಳೀಧರರು ೪.೬.೧೯೭೪ರಂದು ಬರೆದ ತಮ್ಮ ಪತ್ರದಲ್ಲಿ[19] ಕಟುವಾಗಿ, ಆದರೆ ಮರ್ಯಾದೆಯ ಎಲ್ಲೆ ಮೀರದೆ, ಕುವೆಂಪು ಅವರನ್ನು ಟೀಕಿಸಿದರು. ಅವರಿಗೆ ಸೂಕ್ತ ಉತ್ತರ ನೀಡಿದನಂತರ[20] “ನಿಮ್ಮ ಮನಸ್ಸು ನಿರ್ಮಲ, ನಿಮ್ಮ ವಿಚಾರ ಹಿಮವತ್ ಪರ್ವತ ಸದೃಶ, ನಿಮ್ಮ ಅಭಿಮಾನ ನಿರಂತರ ಪವಿತ್ರವೆಂಬ ಅರಿವು ನನಗಿದೆ”[21] ಎಂದವರು ಕುವೆಂಪು ಅವರಿಗೆ ಬರೆದರು. ಶಿವಮೊಗ್ಗೆಯ ಇಂಗ್ಲಿಷ್ ಪ್ರಾಧ್ಯಾಪಕ ಕುಷ್ಟಗಿ ಕೃಷ್ಣಮೂರ್ತಿಯವರು ೨೩.೬.೭೪ರ ಕಂಠೀರವ ಪತ್ರಿಕೆಯಲ್ಲಿ ಬರೆದ ಲೇಖನ ಅಚ್ಯುತ ಬಲ್ಲಾಳ ಮೊದಲಾದವರು ಎತ್ತಿದ ಅಕ್ಷೇಪಗಳನ್ನೇ ಪುನರುಕ್ತಿಸಲಾಗಿದೆ.[22] ೧೫.೬.೭೪ರಂದು The times of India ಪತ್ರಿಕೆ ಯಲ್ಲಿ ಎಸ್.ಎನ್. ರಾವ್ ಅವರ ಪತ್ರವೊಂದಿತ್ತು. ಹಿಂದೆ ಮಾಧ್ವಸಿದ್ಧಾಂತದ ಮೇಲೆ ನ್ಯಾಯಸಮ್ಮತವಾದ ಟೀಕೆಗಳು ಬಂದಿದ್ದುವೆಂದೂ, ವಿಶ್ವವಿದ್ಯಾನಿಲಯ ಮತ್ತು ಸಂಪರ್ಕ ಮಾಧ್ಯಮಗಳನ್ನು ಹತೋಟಿಯಲ್ಲಿಟ್ಟುಕೊಂಡಿರುವ ಬಹುಸಂಖ್ಯಾತ ಒಕ್ಕಲಿಗ ಕೋಮಿಗೆ (ಲಿಂಗಾಯತರನ್ನೂ ಹೆಸರಿಸಿದ್ದಾರೆ) ಸೇರಿದ ಪುಟ್ಟಪ್ಪನವರು ದುರ್ಬಲರೂ ಅಲ್ಪಸಂಖ್ಯಾತರೂ ಆದ ಬ್ರಾಹ್ಮಣರ ಮೇಲೆ ಮಧ್ವ ಸಿದ್ಧಾಂತವನ್ನು ದೂರುವ ಮೂಲಕ ಖಡ್ಗವೆತ್ತಿದ್ದಾರೆಂದೂ, ನಲವತ್ತು ವರ್ಷಗಳ ಶುದ್ಧ ಸಾಹಿತ್ಯಿಕ ಜೀವನದಲ್ಲಿ ಅವರಿಂಥ ಮಟ್ಟಕ್ಕಿಳಿದಿರಲಿಲ್ಲವೆಂದೂ ಅವರು ಆಕ್ಷೇಪವೆತ್ತಿದ್ದಾರೆ. ಅಷ್ಟೇ ಅಲ್ಲ, ಅವರು ಬಸವಲಿಂಗಪ್ಪನವರನ್ನೂ ನಿಷ್ಕಾರಣವಾಗಿ ಬಯಲಿಗೆಳೆದಿದ್ದಾರೆ. ವಿಶ್ವವಿದ್ಯಾನಿಲಯ ಮತ್ತು ಸಂಪರ್ಕ ಸಾಧನಗಳು ಯಾರ ಆಸ್ತಿಗಳಾಗಿವೆ ಯೆಂಬ ವಿಷಯದಲ್ಲಿ ಜಗತ್ತಿಗೆ ಪಾಠ ಕಲಿಸಬೇಕಾಗಿಲ್ಲವೆಂದು ಅದೇ ಪತ್ರಿಕೆಯ ೧೯.೭.೭೪ ನೆಯ ದಿನಾಂಕದ ಸಂಚಿಕೆಯಲ್ಲಿ ಸೂಕ್ತವಾಗಿ ಉತ್ತರ ಕೊಡಲಾಗಿದೆ. ಹೊಸಕೋಟೆಯ ಫ್ರೀಡಂಫೈಟರ್ ಎಂ.ಎಸ್. ಆಚಾರ್ಯರವರ ಪತ್ರವಂತು ಪತ್ರವಲ್ಲ, ಎಚ್ಚರಿಕೆ ನೋಟೀಸು[23] ಕುಲವನು ನಾಲಗೆಯ ರುಹಿತೆಂಬ ಗಾದೆಗೆ ಸಾಕ್ಷಿಯಾಗಿದೆ. ಅದರ ಪ್ರಕಾರ ಕುವೆಂಪು ಅವರ ಕವಿತೆಯಲ್ಲಾಗಲಿ, ವಾಕ್ಪಟುತ್ವದಲ್ಲಾಗಲಿ ವ್ಯಾಕರಣ ಶುದ್ಧವಿಲ್ಲವಂತೆ. ‘ತ್ರಿಮತಸ್ತರ ಧರ್ಮ ತತ್ವಗಳನ್ನು ಯಾವ ರಾಜನಾಗಲೀ ರಾಜ್ಯಾಂಗ ಶಾಸನಗಳಾಗಲಿ, ರಾಜಕೀಯ ವ್ಯಕ್ತಿಗಳಾಗಲೀ ಟೀಕೆ ಮಾಡುವ ಅಧಿಕಾರವಿಲ್ಲ’ವಂತೆ. ‘ಆದ್ದರಿಂದ ನಿಮಗೆ ಬಹಿಷ್ಕಾರ ಹಾಕಿ ಬಿರುದುಬಾವಲಿ ಗಳನ್ನು ಕಸಿದುಕೊಳ್ಳಬೇಕಾಗಿದೆ. ಇಲ್ಲಾ ಕ್ಷಮಾಪಣೆ ಬೇಡಿ’ ಮುಕ್ತಿ ಪಡೆಯಬೇಕಂತೆ. ಇನ್ನು ಕೆಲವರು ಅಶ್ಲೀಲ ಭಾಷೆಯನ್ನು ಸಹ ಬಳಸಿದ್ದಾರೆ. ಕೊಲ್ಲುವುದಾಗಿ ಬೆದರಿಕೆ ಹಾಕಿ ದ್ದಾರೆ. ಇಂಥ ಕ್ಷುಲ್ಲಕ ಪತ್ರಗಳು ಉತ್ತರಕ್ಕರ್ಹವಲ್ಲ, ಸ್ಪರ್ಶಕ್ಕೂ ಯೋಗ್ಯವಲ್ಲ. ಉಚ್ಚವರ್ಗ ದವರೆಂದು ಹೇಳಿಕೊಳ್ಳುತ್ತಿರುವ ಕೆಲವು ಜನರ ಮನೋಧರ್ಮವನ್ನು ಬಹಿರಂಗಪಡಿಸುವುದೇ ಈ ಉದ್ಧರಣೆಗಳ ಉದ್ದೇಶ.

ಇಂಥ ವೈಯಕ್ತಿಕ ಪತ್ರಗಳ ಜತೆಗೆ ಅನೇಕ ಮಾಧ್ವ ಸಂಘಗಳು ಸಭೆ ಸೇರಿ ಕುವೆಂಪು ಅವರಿಗೆ ವಿರುದ್ಧವಾಗಿ ಖಂಡನಾ ನಿರ್ಣಯಗಳನ್ನು ಅಂಗೀಕರಿಸಿ, ವಿವಾದ ವೇದಿಕೆಗೆ ಆಹ್ವಾನ ನೀಡಿದ್ದುಂಟು, ಕ್ಷಮೆಯಾಚಿಸುವಂತೆ ಕೋರಿದ್ದುಂಟು.[24] ಖಂಡನಾ ನಿರ್ಣಯಗಳಿಂದ ಆದದ್ದೇನು? ಎರಡು ಮೂರು ದಶಕಗಳ ಹಿಂದೆಯೇ ಅವರ ಕವನಗಳನ್ನೋದಿ ಕುಪಿತರಾದ ಮಠಾಧಿಪತಿಗಳು ವಕೀಲರಿಂದ ನೋಟೀಸು ಕೊಡಿಸಿದ್ದುಂಟು. ಅವರ ಸ್ವತಂತ್ರವಿಚಾರ ಗಳಿಗಾಗಿ ಸರ್ಕಾರ ಎಚ್ಚರಿಕೆ ನೀಡಿದ್ದೂ ಉಂಟು. ಇರಲಿ. ವಿಚಾರ ಪರರೆಂದೂ ದೀನವತ್ಸಲ ರೆಂದೂ ಹೆಸರು ಮಾಡಿರುವ ಪೇಜಾವರ ಮಠದ ಶ್ರೀಗಳವರೂ ೪.೬.೭೪ರಂದು ಬರೆದ ಪತ್ರದಲ್ಲಿ ‘ನಮ್ಮ ಪರಮಪ್ರಿಯರಾದ ಕನ್ನಡದ ವರಕವಿಗಳೂ ದಾರ್ಶನಿಕ ಕವಿಗಳೂ ಆಗಿ ಜನತೆಯ ಪ್ರೀತ್ಯಾದರಪಾತ್ರರಾದ ಶ್ರೀ ಕೆ.ವಿ. ಪುಟ್ಟಪ್ಪನವರಿಗೆ’ ಎಂದು ಸಂಬೋಧಿಸಿ, “ನಿಮ್ಮ ಭಾಷಣದ ಟೇಪ್ ರಿಕಾರ್ಡನ್ನು ಕೇಳಿದೆವು. ನಮ್ಮ ಮನಸ್ಸಿಗೆ ಬಹಳ ಆಶ್ಚರ್ಯವೂ ವಿಷಾದವೂ ಆಯಿತು. ಉಳಿದವುಗಳಿಗಿಂತಲೂ ಉದಾರವಾದ ಎಷ್ಟೋ ವಿಷಯಗಳು ಮಧ್ವ ತತ್ವಜ್ಞಾನದಲ್ಲಿ ಅಡಕವಾಗಿವೆ” ಎಂದು ತಿಳಿಸಿ ಮೈಸೂರಲ್ಲಿ ಭೇಟಿಮಾಡಿ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಬಹುದೆಂದು ತಿಳಿಸಿದರು. ೭.೬.೭೪ರಂದು ಸ್ವತಃ ಕುವೆಂಪು ಅವರೇ ಬರೆದ ಉತ್ತರದಲ್ಲಿ, ತಾವು ಪ್ರಸ್ತಾಪಿಸಿದ ವಿಷಯ ಜೀವತಾರತಮ್ಯಕ್ಕೆ ಮತ್ತು ಜಯತೀರ್ಥರ ಜೀವನ ಚರಿತ್ರೆಗೆ ಮಾತ್ರ ಸೀಮಿತವಾದದ್ದೆಂದೂ, ಪ್ರಾಚೀನ ಋಷಿ ಪರಂಪರೆಯ ಯಾವ ಅಮೂಲ್ಯ ತತ್ವಗಳನ್ನು ತರುಣರು ನಿರ್ಲಕ್ಷಿಸಬಾರದೆಂಬ ಸಂಗತಿಗೆ ಸಂಬಂಧವುಳ್ಳ ದ್ದಾಗಿತ್ತೆಂದೂ ವಿವರಿಸಿದರು. “ವಿಚಾರ, ವಿವೇಕ, ವೈರಾಗ್ಯ, ಪರೋಪಕಾರ, ಜನಸಾಮಾನ್ಯ ರನ್ನು ಮೇಲಕ್ಕೆತ್ತುವ ತೀವ್ರವಾದ ಉದ್ಯಮಗಳಿಂದ ಮೊದಲಿನಿಂದಲೂ ನೀವು ನನ್ನ ಗೌರವ ವಿಶ್ವಾಸಗಳಿಗೆ ಪಾತ್ರರಾಗಿದ್ದೀರಿ. ಇಂತಹ ಪ್ರಕ್ಷುಬ್ಧ ವಾತಾವರಣದಲ್ಲಿಯೂ ಶಾಂತವಾದ ರೀತಿಯಲ್ಲಿ ನೀವು ಪ್ರತಿಕ್ರಿಯೆ ತೋರಿಸಿರುವುದರಿಂದ ನಿಮ್ಮ ವಿಷಯದಲ್ಲಿ ನನಗಿದ್ದ ಅಭಿಮಾನ ಇನ್ನಷ್ಟು ಹೆಚ್ಚಾಗಿದೆ” ಎಂದು ತಿಳಿಸಿದರು. ಸ್ವಾಮಿಗಳು ಮತ್ತೆ ೧೨.೬.೭೪ರಂದು ಬರೆದ ಪತ್ರದಲ್ಲಿ[25] ‘ಅನೇಕ ಅಂಶಗಳಲ್ಲಿ ನಮ್ಮ ನಿಮ್ಮ ಅಭಿಪ್ರಾಯದಲ್ಲಿ ಸಾಮರಸ್ಯವಿದೆ ಯೆಂದೂ’ ‘ಶ್ರೀ ಮಧ್ವಾಚಾರ್ಯರು ಮತ್ತು ಜಯತೀರ್ಥರ ಬಗ್ಗೆ ನೀವು ಮಾಡಿದ ಅನುದಾರ ಉದ್ಗಾರ ಮತ್ತು ವ್ಯಂಗ್ಯ ಮಾತುಗಳ ಬಗ್ಗೆ ಮಾತ್ರ ನಮಗೆ ನೋವಾಗಿದೆ” ಎಂದೂ ಅಭಿಪ್ರಾಯಪಟ್ಟರು. ೧೮.೬.೭೪ರಂದು ಬರೆದ ಪತ್ರದಲ್ಲಿ ಕುವೆಂಪು ಅವರು “ಮಧ್ವರ ತತ್ತ್ವಗಳ ಒಂದು ವಿಭಾಗವನ್ನು ಕುರಿತು ಮಾತ್ರ ನಾನು ಟೀಕಿಸಿದ್ದೇನೆ. ದಾರ್ಶನಿಕರ ತತ್ತ್ವಗಳನ್ನು ವಿಮರ್ಶಿಸುವುದೇ ಅವರಿಗೆ ಅವಹೇಳನ ಮಾಡಿದಂತೆ ಎಂದು ಭಾವಿಸುವುದು ಸರಿಯಲ್ಲ”; “ಅಲ್ಲಿ ನಾನು ಮಧ್ವರನ್ನಾಗಲಿ, ಜಯತೀರ್ಥರನ್ನಾಗಲಿ ಕುರಿತು ಮಾತಾಡಲೇ ಇಲ್ಲ. ಆ ವಿಚಾರದಲ್ಲಿ ನಾನು ಸಂಪೂರ್ಣ ಅನಾಸಕ್ತ” ಎಂದು ವಿಶದಪಡಿಸಿದರು. ಇದೇ ಸಂದರ್ಭದಲ್ಲಿ ೧೦.೬.೭೪ರ ದಿನಾಂಕ ಸಂಯುಕ್ತ ಕರ್ನಾಟಕದಲ್ಲಿ ದಧೀಚಿಯವರು ಬರದ ಲೇಖನವನ್ನು ಮರೆಯದಿರುವುದೊಳ್ಳೆಯದು. “ಉಡುಪಿಯ ಅಷ್ಟ ಮಠಾಧಿಪತಿಗಳಿಂದ ಹಿಡಿದು ಕಡೆಯ ಮಾಧ್ಯ ಶಿಷ್ಯನವರೆಗೆ ಟೀಕೆ ಟಿಪ್ಪಣಿಗಳನ್ನು ಮಾಡಿ ರಾಷ್ಟ್ರಕವಿಗಳ ಭಾಷಣ ಗಳನ್ನು ವಿರೋಧಿಸಿ ಅವರನ್ನು ಬಹಿರಂಗವಾಗಿ ವಾದಕ್ಕೆ ಕರೆದ ಅಂಶವು ಎಲ್ಲರಿಗೂ ತಿಳಿದ ವಿಷಯ….ಕೆಲವು ವಿಷಯಗಳನ್ನು ಚರ್ಚಿಸುವಾಗ ಕಹಿಯಾದ ವಾದಗಳು ಮಂಡಿಸಲ್ಪಟ್ಟಾಗ, ಅವುಗಳನ್ನು ಸಹನೆಯಿಂದ ಕಾಣುವ ತಾಳ್ಮೆ ನಮ್ಮಲ್ಲಿರಬೇಕು. ರಾಷ್ಟ್ರಕವಿ ಪುಟ್ಪಪ್ಪನವರನ್ನು ಹತ್ತಿರದಲ್ಲಿ ಕಂಡವರಿಗೆ, ಅವರು ಹಾಗೆ ಮಾತನಾಡಿಯಾರು ಎಂದು ಕನಸಿನಲ್ಲಿಯೂ ಎಣಿಸಲಿಕ್ಕಿಲ್ಲ” ಎಂಬ ಮಾತುಗಳಲ್ಲಿ ತೂಕವಿದೆ, ಘನತೆಯಿದೆ.

ಕುವೆಂಪು ಅವರ ವಾದದ ವಿರೋಧವಾಗಿ ಬಂದ ಪ್ರತಿಭಟನೆಗಳು ಒಂದೇ ಕೋಮಿಗೆ ಸೇರಿದುವಾದರೆ, ಅದರ ಪರವಾಗಿ ಬಂದ ಬೆಂಬಲಗಳು, ಹೇಳಿಕೆಗಳು, ಸಂಪಾದಕೀಯಗಳು, ನಿರ್ಣಯಗಳು ಹಲವಾರು ಕೋಮಿನ ತರುಣರಿಂದ ಮತ್ತು ಮುಖಂಡರಿಂದ ಉದ್ಭವವಾದುವೆಂಬುದನ್ನು ಗಮನಿಸಿದಾಗ, ಆ ವಾದದ ಸತ್ಯಾಸತ್ಯತೆಗಳೂ, ನಾಡಿನ ಒಲವು ನಿಲವುಗಳೂ, ನೂತನ ಸಮಾಜ ರಚನೆಯ ಹಂಬಲಗಳೂ ಅಭಿವ್ಯಕ್ತಗೊಳ್ಳುತ್ತವೆ. ಆಧುನಿಕ ಶಿಕ್ಷಣದಿಂದ ಜ್ಞಾನದ ಕ್ಷಿತಿಜಗಳು ವಿಸ್ತೃತವಾಗುತ್ತಿವೆ, ಬುದ್ದಿ ತೀಕ್ಷ್ಣವಾಗುತ್ತಿದೆ, ಜಿಜ್ಞಾಸೆಯ ಪ್ರವೃತ್ತಿ ವಿಕಾಸಗೊಳ್ಳುತ್ತಿದೆ, ಸಾಮೂಹಿಕ ಪ್ರಜ್ಞೆ ಜಾಗೃತವಾಗುತ್ತಿದೆನ್ನುವುದಕ್ಕೆ ಈ ವಾದ ವಿವಾದಗಳು ಸಾಕ್ಷಿಯಾಗಿವೆ. ಅಷ್ಟೇ ಅಲ್ಲ, ಪ್ರತಿಗಾವಿೂ ಶಕ್ತಿಗಳೆಂತು ವಿಷಕಾರುತ್ತಿವೆಯೆಂಬ ಅಂಶವು ಅವುಗಳಿಂದ ಸ್ಪಷ್ಟವಾಗುತ್ತದೆ. ವೇದವೇ ಸರ್ವಪ್ರಮಾಣವೆನ್ನುವ ಮಾತು ಆಧುನಿಕ ವಿಚಾರಮತಿಗೆ ಒಪ್ಪುವಂಥದಲ್ಲ. ಜ್ಞಾನ ನಿಂತ ಮಡುವಲ್ಲ, ಹರಿಯುವ ನದಿಯೆಂಬುದನ್ನು ಪ್ರತಿಗಾಮಿಗಳು ಅರಿತಾಗ ಎಷ್ಟೋ ಸಮಸ್ಯೆಗಳು ಬಗೆಹರಿಯುತ್ತವೆ. ಮತಿಯಲ್ಲಿ ಮಣ್ಣನ್ನೂ, ಹೃದಯದಲ್ಲಿ ವಿಷವನ್ನೂ, ಬಾಯಲ್ಲಿ ರೊಚ್ಚನ್ನೂ ತುಂಬಿಕೊಂಡು ಮಾತಾಡುವವರಲ್ಲಿ ತಾರ್ಕಿಕ ಬುದ್ದಿ ಸಂಸ್ಕೃತಿಗಳು ಲುಪ್ತಗೊಂಡಿರುತ್ತವೆ. ಸಗಣಿಯವನೊಡನೆ ಸರಸವಾಡುವುದ ಕ್ಕಿಂತ ಗಂಧದವನೊಡನೆ ಗುದ್ದಾಡುವುದು ಮೇಲು. ಶ್ರೇಷ್ಠ ಭಾವನೆಗಳು ಅವಿವೇಕಿ ವಿದ್ಯಾ ವಂತನಿಗೆ ಅಪಥ್ಯ, ವಿವೇಕಿ ಅವಿದ್ಯಾವಂತನಿಗೆ ಪಥ್ಯ. ನರಿಯ ಊಳು ಗಗನಮುಟ್ಟದು. ಹಳೆಯದೆಲ್ಲ ಹೊನ್ನಲ್ಲ, ಹೊಸದೆಲ್ಲ ಮಣ್ಣಲ್ಲ; ಹಳತು ನುಸಿದು ಹೊಸತು ಮಸಗಬೇಕಾದ್ದು ಪ್ರಕೃತಿ ಧರ್ಮ; ಅದಕ್ಕೆ ವಿರುದ್ಧವಾಗಿ ವರ್ತಿಸುವ ಹಳತರ ಮಾದಕತೆಯಲ್ಲಿಯೇ ಮೈಮರೆತಿರುವ ಮಾನವನಿಗೆ ವರ್ತಮಾನ ಸುಖ ಮೊಲದ ಕೋಡು ಭವಿಷ್ಯದ ಗಗನ ಕುಸುಮ. ವರ್ತಮಾನದಲ್ಲಿ ಬಿಗಿಯಾಗಿ ಕಾಲೂರಿ ಭೂತವನ್ನು ಮರೆಯದೆ ಭವಿಷ್ಯದ ಕಡೆಗೆ ಕಣ್ಣಾಗಿರುವವನೇ ಮಹಾಪ್ರಾಜ್ಞ. ಕ್ರಾಂತದರ್ಶಿತ್ವವೇ ಪ್ರಾಜ್ಞತೆಯ ಕುರುಹು, ಅದೇ ಜೀವಂತಿಕೆಯ ಲಕ್ಷಣ.

ಈ ಹಿನ್ನೆಲೆಯಲ್ಲಿ ಕುವೆಂಪು ಅವರ ವಿಚಾರಧಾರೆಯನ್ನು ಒರೆಗಿಕ್ಕಿ ಪರೀಕ್ಷಿಸಬೇಕಾಗಿದೆ. ವಿಚಾರಶೀಲರಾದ ಪಾಟೀಲ ಪುಟ್ಟಪ್ಪನವರು ಈ ಬಗೆಗೆ ಮಂಡಿಸಿರುವ ಮುಖ್ಯಾಭಿಪ್ರಾಯ ಗಳನ್ನು ಹೀಗೆ ಸಂಗ್ರಹಿಸಬಹುದು. “ತಪ್ಪಿರಲಿ ಒಪ್ಪಿರಲಿ ನನ್ನ ಜಾತಿ ನನ್ನ ಧರ್ಮ ಎನ್ನುವ ಕರ್ಮಠತನವು ಮಧ್ಯಯುಗಕ್ಕೆ ಸರಿಹೋಗಬಹುದಲ್ಲದೆ ಇಪ್ಪತ್ತನೆಯ ಶತಮಾನದ ಈ ಪ್ರಾಜ್ಞ ಯುಗಕ್ಕೆ ಸರಿಹೋಗುವುದಿಲ್ಲ, ಕುವೆಂಪುರವರಿಗೆ ಯಾವುದು ನ್ಯೂನತೆ ಎಂದು ಕಂಡಿದೆಯೋ ಅದು ಮಾಧ್ವ ಸಿದ್ಧಾಂತದ ಅಭ್ಯಾಸುಗಳಿಗೆ ಒಬ್ಬರಿಗೂ ಕಂಡಿಲ್ಲವೆ? ಬಸವಣ್ಣನವರು ನಿರೂಪಿಸಿದರೆಂದು ವೀರಶೈವರಲ್ಲಿ ಇರುವುದೆಲ್ಲವೂ ಈ ಶತಮಾನದ ತಿಳಿವಳಿಕೆಗೆ ಸ್ವೀಕಾರಾರ್ಹವೆಂದೇನೂ ಅಲ್ಲ. ಮಧ್ವಾಚಾರ್ಯರಾಗಲಿ ಬಸವಣ್ಣನವರಾಗಲಿ ನಿರೂಪಿಸಿದ ಸಿದ್ಧಾಂತವು ಅವರಿದ್ದ ಕಾಲ ಸನ್ನಿವೇಶ ಹಾಗೂ ಪರಿಸರಕ್ಕೆ ಯೋಗ್ಯವಾಗಿರ ಬಹುದು. ಅವರ ಬೋಧೆಯಲ್ಲಿಯ ಕೆಲಭಾಗ ಪ್ರಚಲಿತ ಕಾಲಕ್ಕೆ ಸರಿಹೋಗುವುದಿಲ್ಲ ವಾದರೆ, ಅದರಿಂದ ಬಸವಣ್ಣನವರ ಇಲ್ಲವೆ ಮಧ್ವಾಚಾರ್ಯರ ವ್ಯಕ್ತಿತ್ವಕ್ಕೇನೂ ಊನವಿಲ್ಲ. ಬಹಳಷ್ಟು ಓದಿದ ಜನರು, ಬಹಳಷ್ಟು ಓದಿದವರ ನಡೆನುಡಿಯನ್ನು ತೋರಿಸಬೇಕು. ಅದನ್ನು ಬಿಟ್ಟು ತಲೆಯ ಕೆಲಸ ಇರುವಲ್ಲಿ ತೋಳುಗಳನ್ನು ಮುಂದೆ ಮಾಡಿದರೆ ಅದು ಪ್ರಾಜ್ಞತೆ ಎನಿಸುವುದಿಲ್ಲ. ಹೊಸವಿಚಾರವಾದವು ನಮ್ಮ ಎಷ್ಟೋ ಸ್ವೀಕೃತ ನಂಬುಗೆಗಳನ್ನು ಬುಡಮೇಲುಮಾಡಿದೆ. ಭೇದವು ಬೋಧೆಯಲ್ಲಿಯೆ ಇರಲಿ, ಬದುಕಿನಲ್ಲಿಯೇ ಇರಲಿ, ಅದು ತ್ಯಾಜ್ಯ. ಸರ್ವಗ್ರಾಹ್ಯವೆನಿಸುವುದು ಮಾತ್ರವೇ ಶಾಶ್ವತ. ಆ ಭಾವನೆಯೇ ಜೀವದಾಯಕ, ಪ್ರಾಣ ಪೋಷಕ. ದೊಡ್ಡ ಬಾಯಿಮಾಡಿ ಕೂಗಿದರೆ ಯಾವ ವಾದವನ್ನೂ ಗೆದ್ದಂತೆ ಆಗುವುದಿಲ್ಲ. ಕೂಪ ಮಂಡೂಕ ಜೀವನ ಬೇಡ. ನಮ್ಮದೇ ಶ್ರೇಷ್ಠವೆನ್ನುವುದು ಮೊಂಡತನ ಅಥವಾ ಬಾಲಿಶತನವೆ ಹೊರತು ವಿವೇಕವಲ್ಲ. ಕ್ರಾಂತಿ ಆಗುವುದಕ್ಕೆ ಮುಂಚೆ ವಿಚಾರ ನಡೆಯಬೇಕು. ಆದರೆ ಅದನ್ನು ತಡೆಯುವ ಬಂಡೆಗಳು ಇಲ್ಲಿ ಹಾದಿಯುದ್ದಕ್ಕೂ ಬಿದ್ದಿವೆ. ಭೂಮಿಯು ಸೂರ್ಯಮಂಡಲದ ಕೇಂದ್ರ ಬಿಂದು ಎಂಬ ತಿಳಿವಳಿಕೆಯನ್ನು ಕೋಪರ್ನಿಕಸನು ತಲೆಮೆಟ್ಟಿ ನಿಂತನು. ಆದರೆ ಭೂಮಿಯೇ ಕೇಂದ್ರಬಿಂದು ಎಂದು ಸಾಧಿಸುವವರು ಇದ್ದೇ ಇದ್ದಾರೆ. ಮಾಧ್ವ ಸಿದ್ಧಾಂತವು ಬೇರೆ ಯಾರಿಗೂ ಪ್ರವೇಶ ಕೊಡಲಿಲ್ಲದ ವಿಶಿಷ್ಟ ಸಿದ್ಧಾಂತ ವಾಗಿದೆ. ಮಾಧ್ವರು ಮಾಧ್ವ ಸಿದ್ಧಾಂತ ತಿಳಿಯದಿದ್ದರೂ ಮಾಧ್ವರೆಂದು ಜನ್ಮವೆತ್ತಿದ ಕಾರಣ ದಿಂದ ಮಾಧ್ವರಾಗಿಯೇ ಉಳಿಯುತ್ತಾರೆ. ಮಾಧ್ವ ಸಿದ್ಧಾಂತವನ್ನು ಅರೆದು ನುಂಗಿದ ಹರಿಜನರನ್ನು ಒಳಗೆ ಸೇರಿಸುವುದಿಲ್ಲ. ಬೌದ್ಧ ಸೀಖ್ ವೀರಶೈವ ಇಸ್ಲಾಂ ಕ್ರಿಸ್ತಮತಗಳ ಪರಿಯೇ ಬೇರೆ. ವಿಶ್ವಾಮಿತ್ರನಂಥವನಿಗೆ ತ್ರಿಶಂಕುವೇ ಗತಿಯಾಯಿತು. ಗೊತ್ತುವಳಿಗಳಿಂದ ಟೀಕೆಯ ಯಥಾರ್ಥತೆಯನ್ನು ಅಲ್ಲಗಳೆದಂತಾಗುವುದಿಲ್ಲ. ಮಾಧ್ವತತ್ವ ಸರ್ವೋದಯ ದರ್ಶನಕ್ಕನುಗುಣವಾಗಿದೆಯೆಂದು ಯಾರಾದರು ಸಕಾರಣವಾಗಿ ತೋರಿಸಿದ್ದಾದರೆ ಕುವೆಂಪು ಅವರ ವಾದ ತನ್ನಷ್ಟಕ್ಕೆ ತಾನೇ ಹುಸಿಯೆನಿಸುತ್ತದೆ” ಪುಟ್ಟಪ್ಪನವರು ಸೂತ್ರಪ್ರಾಯದ ಸರಳ ಮಧುರ ವಾಣಿಯಲ್ಲಿ ಉಪನಿಷದ್ರಹಸ್ಯದಂತಿರುವ ಶಾಶ್ವತಮೌಲ್ಯಗಳನ್ನು ವಿಚಾರಪೂರ್ಣ ವಾಗಿ ನಿಷ್ಕಪಟವಾಗಿ ನಿರ್ದಾಕ್ಷಿಣ್ಯವಾಗಿ ನಿಷ್ಪಕ್ಷಪಾತವಾಗಿ ವಿವರಿಸಿದ್ದಾರೆ.[26]

ಮುಂಬಯಿಯ ಬಹು ಬಿರುದಾಂಕಿತರೊಬ್ಬರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಿರ್ಣಯದ ಬಗ್ಗೆ ಬರೆಯುತ್ತ ಪುಟ್ಟಪ್ಪನವರು ಅವರೆಲ್ಲ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ಕೊಟ್ಟಿದ್ದಾರೆ[27] “ಕುವೆಂಪುರವರು ‘ಇಲ್ಲ’ವೆಂದು ಹೇಳಿರುವುದನ್ನು ‘ಇದೆ’ಯೆಂದು ತೋರಿಸುವ ಕೆಲಸವನ್ನು ಯಾವ ಮಾಧ್ವಪಂಡಿತನೂ ಇದುವರೆಗೆ ಮಾಡಿಲ್ಲ. ಮಾಧ್ವಸಿದ್ಧಾಂತ ದಿಂದ ನೀತ್ಸೆ ಪ್ರಚೋದನೆ ಪಡೆದು ಅತಿಮಾನವ ಸಮಾಜದ ಬಗೆಗೆ ಪ್ರತಿಪಾದಿಸಿದ. ಆ ಬೋಧೆ ಹಿಟ್ಲರನ, ಶ್ರೇಷ್ಠ ಮಾನವರ ಫ್ಯಾಶಿಸ್ಟ್ ತತ್ವಜ್ಞಾನಕ್ಕೆ ಮಾರ್ಗ ಮಾಡಿಕೊಟ್ಟಿತು. ಕೆಲವರು, ಅಂದರೆ ಮಾಧ್ವರು ಶ್ರೇಷ್ಠರು; ಇನ್ನು ಕೆಲವರು, ಅಂದರೆ ಇನ್ನುಳಿದವರು, ನಿಕೃಷ್ಟರು ಎನ್ನುವುದೇ ಆ ಸಿದ್ಧಾಂತದ ತಳಹದಿಯಾಗಿರುವಾಗ, ಅದನ್ನು ಸಿದ್ಧಮಾಡಿ ತೋರಿಸು ಎನ್ನುವುದು ಹುಚ್ಚಾಸ್ಪತ್ರೆಯ ಸಮೀಪ ಇರುವವನೇ ಹೇಳಬೇಕಾದ ಮಾತು ಎನಿಸುತ್ತದೆ. ಪೇಜಾವರ ಮಠದ ಶ್ರೀಗಳವರು ಬೆಳಗಾವಿಯಲ್ಲಿ ಉಪನ್ಯಾಸ ಮಾಡುತ್ತ ತಾರತಮ್ಯ ಸಿದ್ಧಾಂತವೇ ಸರಿ ಎಂದಿದ್ದಾರೆ. ಅವರ ಮಾತನ್ನೇ ಎತ್ತಿಕೊಂಡು ಪರಿಶೀಲಿಸಿದರೆ, ಕುವೆಂಪು ಆಕ್ಷೇಪಿಸಿದ ಭಿನ್ನತೆಯೇ ಸಹಜಸ್ಥಿತಿ ಎಂದು ವ್ಯಕ್ತಪಡುತ್ತದೆ. ‘ಜಗದ ಜೀವಿಗಳು ಯಂತ್ರ ಇದ್ದಂತೆ. ಯಂತ್ರಗಳು ಭಿನ್ನ ಇರುತ್ತವೆ! ಹಾಗಾದರೆ ಈ ಭಿನ್ನತೆ ಎನ್ನುವುದು ವ್ಯಕ್ತಿಗತ ವಾದುದೋ ಜಾತಿಗತವಾದುದೋ? ಇದನ್ನೆಲ್ಲ ಕೇಳಿದಾಗ, ಕುವೆಂಪು ಅವರನ್ನು ಸಮರ್ಥಿಸು ವವರು ಹೆಚ್ಚು ಜನರಿದ್ದಾರಲ್ಲದೆ, ಪೇಜಾವರ ಶ್ರೀಗಳನ್ನು ಸಮರ್ಥಿಸುವವರು ಹೆಚ್ಚು ಜನರಿಲ್ಲ. ಯಾರಿಗೂ ಬೆಳಕು ಕೊಡಲಿಲ್ಲದ ಈ ವಾದದಿಂದ, ಅಜ್ಞರಾದ ಮಾಧ್ವರನ್ನು ವೈಚಾರಿಕ ಪ್ರಗತಿಪಥದಿಂದ ವಿಮುಖರನ್ನಾಗಿ ಮಾಡಿ, ಅಡ್ಡ ಹಾದಿ ಹಿಡಿಸಿದುದೊಂದೇ ನಿಜವೆನಿಸುತ್ತದೆ’. ಬೆಳಕಿನಂತೆ ಸ್ಪಷ್ಟವಾಗಿರುವ ಆಣಿಮುತ್ತಿನಂಥ ಅಭಿಪ್ರಾಯಕ್ಕೆ ವ್ಯಾಖ್ಯಾನ ಅನಗತ್ಯ. ಕುವೆಂಪು ಅವರ ಬಗ್ಗೆ ಎತ್ತಿರುವ ಸಕಲಾರೋಪಗಳಿಗೂ ಇಲ್ಲಿ ಉತ್ತರ ದೊರೆಯು ತ್ತದೆ.[28]

ಮಧ್ವಮತ ಸಂಭವರೆಲ್ಲರೂ ಕುವೆಂಪು ಅವರ ಬಗೆಗೆ ದ್ವೇಷಕಾರಿಲ್ಲ; ಅವರಲ್ಲಿಯೂ ಸುಜ್ಞಾನಿಗಳಿದ್ದಾರೆ, ಪ್ರಕಾಂಡ ಪಂಡಿತರಿದ್ದಾರೆ, ಗಾಂಧಿವಾದಿಗಳಿದ್ದಾರೆ, ಸತ್ಯ ಶೋಧಕರಿ ದ್ದಾರೆ. ಅಂಥವರಲ್ಲಿ ನಿಟ್ಟೂರು ಶ್ರೀನಿವಾಸರಾಯರೊಬ್ಬರು. ಅವರು ಭರತ ಖಂಡದಲ್ಲಿಯೇ ಹೆಸರಾದ ನ್ಯಾಯಮೂರ್ತಿಗಳು. “ಮಾಧ್ವ ಸಿದ್ಧಾಂತದ ರೀತ್ಯಾ ಕೆಲವರು ಶ್ರೇಷ್ಠರೆಂದು ಪುರಸ್ಕೃತರೂ, ಇನ್ನೂ ಕೆಲವರು ನಿಕೃಷ್ಟರೆಂದು ತಿರಸ್ಕೃತರೂ ಆಗಿರುವರೆಂದ ಮೇಲೆ ಮಾಧ್ವ ಸಿದ್ಧಾಂತದಲ್ಲಿ ಈ ಭೇದ ಇದೆಯೆಂದು ಬೇರೆಯವರು ಬೆರಳು ಮಾಡಿ ತೋರಿಸಿದರೆ, ಅವರು ತೋರಿಸುತ್ತಾರೆಂದು ಮಾಧ್ವರು ಸಿಡಿಮಿಡಿಗೊಳ್ಳಬೇಕಾದ ಕಾರಣವೇ ಇಲ್ಲ”ವೆಂದು ಅವರು ಖಡಾಖಂಡಿತವಾಗಿ ನುಡಿದಿದ್ದಾರೆ.[29] ಹಾಗೆ ಅವರು ನುಡಿದಿದ್ದು ವಿ. ಸೀತಾರಾಮಯ್ಯನವರ ಸಮ್ಮುಖದಲ್ಲಿ ಬೀಚಿಯವರ ಹಾಜರಿಯಲ್ಲಿ. ಅವರ ಮಾತನ್ನು ಇವರೂ ಬೆಂಬಲಿಸಿ ದ್ದುಂಟು. ಎಂದಿದ್ದರೂ ಹುಳು ಹುಳುವೇ, ಸಿಂಹ ಸಿಂಹವೇ! ನಿಟ್ಟೂರರಿಗೂ ಸಂಧ್ಯಾ ವಂದನೆಯ ಅರ್ಥ ಸಹ ತಿಳಿಯದ ಸಣ್ಣವರಿಗೂ ಎಲ್ಲಿಗೆಲ್ಲಿಯ ಸಂಬಂಧ!

ಕುವೆಂಪು ಅವರ ವಿಚಾರಧಾರೆಯನ್ನು ಊರೂರುಗಳಲ್ಲಿ ಪ್ರಸಾರ ಮಾಡುವ, ಅವರಿಗಾಗಿ ಎಂಥ ತ್ಯಾಗಕ್ಕಾದರೂ ಸಿದ್ಧರಾಗಿರುವ ವೀರಸತ್ಯವಾದಿಗಳು ಕನಾರ್ಟಕದ ಕೇರಿ ಕೇರಿಗಳಲ್ಲೆಲ್ಲ ತುಂಬಿದ್ದಾರೆ. ಆ ಕಾಲದಲ್ಲಿ ಕುವೆಂಪು ಅವರಿಗೆ ಪ್ರತಿನಿತ್ಯ ಬರುತ್ತಿದ್ದ ನೂರಾರು ಕಾಗದಗಳೇ ಈ ಮಾತಿಗೆ ಸಾಕ್ಷಿ. ಕೇವಲ ಪ್ರಾತಿನಿಧಿಕವಾಗಿ ಕೆಲವು ಪತ್ರಗಳ ಸಾರಾಂಶವನ್ನಿಲ್ಲಿ ಉದ್ಧರಿಸಲಾ ಗುತ್ತದೆ. ಬೆಂಗಳೂರಿನ (ಜಯನಗರ) ಕಣಗಾಲ್ ಪ್ರಭಾಕರಶಾಸ್ತ್ರಿಗಳು ೪.೬.೭೪ರಂದು ಬರೆದ ಪತ್ರದಲ್ಲಿ “ತಮ್ಮಂಥ ರಹಸ್ಯಾತಿ ರಹಸ್ಯ ಶ್ರೀ ವಿದ್ಯಾಸಿದ್ಧಾರ್ಥರಾದ ಧೀಮಂತ ಪ್ರಾಜ್ಞರನ್ನು ಅಪಮಾನಗೊಳಿಸಬೇಕೆಂಬ ಆಸುರೀ ಪ್ರವೃತ್ತಿ ತಾವು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದುಕೊಂಡಾರಭ್ಯ ಒಳಗೊಳಗೇ….ಹಾರಮಡಿ ತೂರಮಡಿ ನೀರಮಡಿ ಆಚಾರಿಗಳಲ್ಲಿ ಹೊಗೆಯಾಡುತ್ತಲೇ ಇದೆ… ತಾವು ಮಹಾಕವಿ ಪ್ರಕಾಂಡ ಪಾಂಡಿತ್ಯವುಳ್ಳ ಖಂಡಿತವಾದಿ. ಲೋಕ ವಿರೋಧವಾದರೂ ಸತ್ಯವನ್ನು ಸತ್ಯವೆಂದು ಸಮಾಜಕ್ಕೆ ಸಾರಿ ಹೇಳುವ ಸರ್ವತಂತ್ರ ಸ್ವಾತಂತ್ರ್ಯ ಪೂರ್ಣಪ್ರಜ್ಞೆಯುಳ್ಳ ಕಾಲ ಪುರುಷರು….ತಮ್ಮನ್ನು ನ್ಯಾಯಾಲಯಕ್ಕೂ ವಾದ ಭೂಮಿಗೂ ತೊಡೆತಟ್ಟಿ ಕರೆಯುತ್ತಿರುವ ಜನ ಮೊದಲು ನಿಮ್ಮ ಭಾಷಣದಲ್ಲಿ ಬಳಸಿರುವ ಶಬ್ದಗಳ ಅರ್ಥ ವಿವರಣೆಯನ್ನು ನೀಡಲಿ…ತಾವೇನು ನನ್ನಂತೆ ಹುಟ್ಟು ಹೆಸರಿಗೆ ಹಾರುವರಲ್ಲ; ಬ್ರಹ್ಮಜ್ಞಾನೇತಿ ಬ್ರಾಹ್ಮಣಃ; ಕನ್ನಡದ ಏಕಮೇಮದ್ವೈತ ಪುಣ್ಯಶಕ್ತಿ; ಮಹಾಪುರುಷಾವತಾರರು; ನಿಮ್ಮ ಕರ್ತವ್ಯ ಷಣ್ಮತಸ್ಥರಲ್ಲಿಯೂ ತುಂಬಿರುವ ಶುಂಭ ನಿಶುಂಭರ ಚಂಡ ಮುಂಡರ ರಕ್ತ ಬೀಜದ ಸಂಹಾರ”[30] ಎಂದು ಗುಡುಗಿದ್ದಾರೆ, ದೇವದತ್ತವನ್ನೂದಿದ್ದಾರೆ. ಹಳೆ ಹುಬ್ಬಳ್ಳಿಯ ಮುಕುಂದ ಆರ್. ಹಳ್ಯಾಳ ಅವರು “ಅವರು ಮಾಧ್ವರು ತಿಳಿಗೇಡಿ ಮಾನವರ ಮುಂದೆ ಭಗವಂತನ ಏಕರೂಪವನ್ನು ಮತ್ತಷ್ಟು ಭಿನ್ನ ಭಿನ್ನ ಮಾಡಿ ಜನರ ಬುದ್ದಿಯನ್ನು ಮತ್ತಷ್ಟು ಗೊಂದಲಕ್ಕೆ ಹಾಕಿದರೇ ಹೊರತು ವೈವಿಧ್ಯದಲ್ಲಿ ಐಕ್ಯತೆಯನ್ನು ಮಾಡಿರಲಿಲ್ಲ. ನೀವು ಇದ್ದದ್ದನ್ನು ಇದ್ದಂತೆ ಆಡಿದ್ದರಿಂದ ಮಾಧ್ವ ಕುಲಜರಿಗೆ ಕೋಪ ಬಂದಿರುವುದು ಸ್ವಾಭಾವಿಕವೇ. ವಾದಕ್ಕೆ ಆಹ್ವಾನಿಸಿರುವ ಮಾಧ್ವಕುಲೋತ್ತಮರಿಗೆ ಸರಿಯಾದ ಉತ್ತರ ಕೊಡಲು ಇದೊಂದು ಸುಸಂಧಿಯಾಗಿದೆ” ಎಂದು ಡಿಂಡಿಮ ಬಾರಿಸಿದ್ದಾರೆ.[31] “ತಮ್ಮದು, ಒಂದು ಐತಿಹಾಸಿಕ ಭಾಷಣವಾಗಿ ಉಳಿಯುವುದರಲ್ಲಿ ಯಾವ ಸಂದೇಹವೂ ಇಲ್ಲ. ಧಾರವಾಡದ ವಿಚಾರವಂತರೆಲ್ಲರೂ ತಮ್ಮ ವಿಚಾರಧಾರೆಯನ್ನು ಒಪ್ಪಿಕೊಂಡಿದ್ದಾರೆ. ಕುರುಡು ಸಂಪ್ರದಾಯವಾದಿಗಳು ಮಾತ್ರ ಒಪ್ಪುತ್ತಿಲ್ಲ[32] ಎಂಬುದಾಗಿ ಧಾರವಾಡದ ಎಮ್.ವಿ. ಶಹಾಪೂರಕರ ಅವರು ಬರೆದಿದ್ದಾರೆ. ಗುರಣ್ಣಾ ಭಾವಿಯವರು ಸಾಧುಗೆ ಸಾಧು, ಬಾಧಿಪ್ಪ ಕಲಿಗೆ ಕಲಿಯುಗ ವಿಪರೀತನ್; ಪ್ರೇಮಕ್ಕೆ ಧರ್ಮಕ್ಕೆ ಮಣಿಯುವ, ಅಧರ್ಮಕ್ಕೆ ಅಹಂಕಾರಕ್ಕೆ ಸಿಡಿಯುವ ವೀರ ತರುಣರು. ಅವರ ಸಾತ್ವಿಕ ಕ್ರೋಧವನ್ನು ನಿಯಂತ್ರಿಸಬೇಕಾದರೆ ಕುವೆಂಪು ಅವರಿಗೆ ಸಾಕೋಸಾಕಾಯಿತು. “ಮೇ ತಿಂಗಳ ಒಂಬತ್ತನೆಯ ದಿನಾಂಕದ ಪತ್ರದಲ್ಲಿ ನಿಮ್ಮಯ ಉಪದೇಶಪರ ಸಲಹೆಯನ್ನು ಮನ್ನಿಸಿ ಇಲ್ಲಿಯತನಕ ರೇಗಿಕೊಳ್ಳದೆ ಶಾಂತನಾಗಿದ್ದೆ. ಕ್ಷಮಿಸು ಗುರುವೆ, ಕ್ಷಮಿಸು. ಕೋಪಾಗ್ನಿ ಲಾವಾರಸ ತಡೆ ಹಿಡಿಯಲಿಕ್ಕಾಗುತ್ತದೆಯೆ? ಬಹಿರಂಗ ಸಭೆ ಇಟ್ಟು ಜಾತಿ ಕರ್ಮಠರಿಗೆ ಪ್ರತಿ ಖಂಡನೆಯ ಉತ್ತರಕೊಟ್ಟು ಅವರ ಸದ್ದು ಅಡಗಿಸಲು ಪ್ರಯತ್ನಿಸುವೆ. ನನ್ನಲ್ಲಿ ಸಹ ಮಾಧ್ವರ ಪೂಜೆಗೆ ಪುಷ್ಪಗಳಿವೆ. ನಿಮ್ಮನ್ನು ಖಂಡಿಸಿದ ಮಾಧ್ವರು ನಿಮಗೆ ಕ್ಷಮೆ ಕೇಳಿಕೊಳ್ಳುವವರೆಗೆ ಹೋರಾಟ ನಡೆಸುವೆ. ಬಹುಶಃ ನನ್ನ ಕೃತಿ ನಿಮಗೆ ಮೆಚ್ಚುಗೆಯಾಗಲಾರದು ನಿಜ. ನಿಮ್ಮ ತೇಜೋವಧೆ ನಾನು ಸಹಿಸಬೇಕೆ?”[33] ಎಂದವರು ಕುವೆಂಪು ಅವರ ಮೇಲೆಯೇ ಆಕ್ಷೇಪವೆತ್ತಿದರು. ಮತ್ತೆ ಕುವೆಂಪು ಅವರು ಗುರಣ್ಣ ಅವರಿಗೆ ಪತ್ರ ಬರೆದು ಸುಮ್ಮನಿರಿಸಬೇಕಾಯಿತು.

೬.೭.೭೪ನೆಯ ದಿನಾಂಕದ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಎಸ್.ಎನ್.ರಾವ್ ಅವರು ಪ್ರಕಟಿಸಿದ ಪತ್ರಕ್ಕೆ ಪ್ರತಿಕ್ರಿಯೆಯ ರೂಪದಲ್ಲಿ ಬಿ. ಬಸವಲಿಂಗಪ್ಪನವರು ೭.೭.೭೪ರಂದು ಕುವೆಂಪು ಅವರಿಗೊಂದು ಪತ್ರ ಬರೆದು, ವಿವೇಕಶೂನ್ಯ ತತ್ತ್ವಶಾಸ್ತ್ರಗಳ ಪೀಡನೆ, ನಿರಂತರ ಶೋಷಣೆ ಮತ್ತು ಸಾಮಾಜಿಕ ದಬ್ಬಾಳಿಕೆಗಳಿಂದ ನಿರ್ವೀರ್ಯರಾಗಿರುವ ಜನ ಅವರ ಭಾಷಣದಿಂದ ಪ್ರಚೋದಿತರಾಗದಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು. ಕರ್ನಾಟಕದಲ್ಲಿ ಶೋಷಿತ ಜನಾಂಗಗಳ ಪರವಾಗಿ ದಿಟ್ಟತನದಿಂದ, ಅದಮ್ಯ ಪರಾಕ್ರಮದಿಂದ, ಹೋರಾಡುತ್ತಿರುವ ಕೆಲವೇ ಕೆಲವು ಗಣ್ಯರಲ್ಲಿ ಅವರು ಅಗ್ರಗಣ್ಯರು. ಕೊನೆಯಲ್ಲಿ ಅವರು ಹೇಳಿದ್ದಿಷ್ಟು : “Your Works and ideas will stay in the memories of all Kannadigas in eternity. You preferred not to insult the truth for fear of man. I only wish that you should be resolute and with a sense to laugh at the mischief and narrowminded religionists and others and carry on the mission you have undertaken in your life”.

ಅನೇಕ ಯುವಕ ಸಂಘಗಳು ಕುವೆಂಪು ಅವರ ನಿಲವನ್ನು ಸಮರ್ಥಿಸಿ, ಅಭಿನಂದಿಸಿ, ನಿರ್ಣಯಗಳನ್ನಂಗೀಕರಿಸಿದುವು, ತಂತಿಗಳನ್ನು ಕಳಿಸಿದುವು. ಸ್ಥಳಸಂಕೋಚದಿಂದ, ಅವರ ಕ್ಷಮೆಕೋರಿ ಅವುಗಳನ್ನು ಕೈಬಿಡಲಾಗಿದೆ. ಆಗ ಬೇಸಗೆಯ ರಜಕ್ಕೋಸ್ಕರ ಶಿಕ್ಷಣ ಸಂಸ್ಥೆ ಗಳೆಲ್ಲ ಮುಚ್ಚಿದ್ದುವು; ಕೆಲವು ಕಡೆ ಪರೀಕ್ಷೆಗಳು ನಡೆಯುತ್ತಿದ್ದುವು. ವಿದ್ಯಾರ್ಥಿ ಮುಖಂಡರು ಗುಂಪು ಗುಂಪಾಗಿ ಬಂದು (ನಾನಾಗ ಕುಲಪತಿಯಾಗಿದ್ದೆ), ಕಾಲೇಜುಗಳು ಪುನರಾರಂಭವಾದ ಕೂಡಲೇ ಕುವೆಂಪು ನಿಂದಕರ ಅಸಹ್ಯ ಪ್ರಚಾರವನ್ನು ಪ್ರತಿಭಟಿಸಿ ಮುಷ್ಕರ ಹೂಡುವು ದಾಗಿಯೂ, ಆಸುರೀ ಶಕ್ತಿಗಳು ಪ್ರಬಲವಾದ ಪಕ್ಷದಲ್ಲಿ ತಾವು ಹಿಂಸಾಕೃತ್ಯಗಳಿಗೂ ಹಿಂಜರಿ ಯದೆ ಸಂಬಂಧಪಟ್ಟವರಿಗೆ ಸರಿಯಾದ ಪಾಠ ಕಲಿಸುವುದಾಗಿಯೂ ಕೂಗಾಡಿದರು. “ಮಾಧ್ವ ರಲ್ಲಿಯೂ ವಿವೇಕಿಗಳಿದ್ದಾರೆ. ಸಜ್ಜನರಿದ್ದಾರೆ. ಯಾರೋ ಕೆಲವರು ಕುಹಕಿಗಳು ರಚ್ಚೆಬ್ಬಿಸಿ, ರಾದ್ದಾಂತಮಾಡಿ, ತಮ್ಮ ಬಣ್ಣವನ್ನು ಪ್ರದರ್ಶಿಸಿಕೊಂಡಿದ್ದಾರೆ. ಕೆಲವೇ ಕೆಲವು ಪಟ್ಚಭದ್ರ ಹಿತಾಸಕ್ತಿಗಳು ಪ್ರಾಚೀನ ಕಾಲದಿಂದ ವೇದ ಪುರಾಣ ಧರ್ಮ ಶಾಸ್ತ್ರಗಳನ್ನು ಮೌಢ್ಯ ಸಂಪ್ರದಾಯಗಳನ್ನು ಬಂಡವಾಳ ಮಾಡಿಕೊಂಡು ಹೇಗೆ ಭಾರತೀಯ ಸಮಾಜದ ಅವನತಿಗೆ ಕಾರಣರಾಗಿದ್ದಾರೆಂಬುದು ಸ್ಪಷ್ಟವಾಗುತ್ತದೆ. ಈ ಹಗರಣ ನಡೆಯದಿದ್ದರೆ ಅವರ ಬಣ್ಣ ಬಯಲಿಗೆ ಬರುತ್ತಿರಲಿಲ್ಲ. ನೀವು ಹಿಂಸಾಕೃತ್ಯಕ್ಕೆ ತೊಡಗುವುದಾದರೆ ಕುವೆಂಪು ಅವರಿಗೆ ನೋವಾಗುತ್ತದೆ, ಕಳಂಕವೊದಗುತ್ತದೆ. ಅದರ ಬದಲು ಊರೂರಿಗೆ ಹೋಗಿ ಅವರ ವಿಚಾರ ಧರೆಯನ್ನು ಜನರಿಗೆ ಬೋಧಿಸಿ, ಅಂಥ ಪ್ರಚಾರಕ್ಕಿಂತ ಆಸುರೀ ಶಕ್ತಿಗಳನ್ನು ದಮನ ಗೊಳಿಸುವ ಸಾಧನ ಮತ್ತೊಂದಿಲ್ಲ, ಕುವೆಂಪು ಅವರಿಗೆ ಗೌರವ ತೋರಿಸುವ ದಾರಿ ಬೇರೊಂದಿಲ್ಲ”. ಹೀಗೆ ಹೇಳಿ ಅವರನ್ನು ಸಮಾಧಾನಗೊಳಿಸಲಾಯಿತು.

ಕನ್ನಡ ಸಾಹಿತ್ಯದ ಸುದೀರ್ಘ ಇತಿಹಾಸದಲ್ಲಿ ವಿಚಾರ ಕ್ರಾಂತಿಗೆ ನೆರವಾಗುವ ಸಾಹಿತ್ಯ ಬೇಕೆಂದರೆ ವಚನ ಸಾಹಿತ್ಯದ ನಂತರ ಹಿರಿಯ ತಲೆಮಾರಿನ ಕಾರಂತರನ್ನೂ ಇತ್ತೀಚಿನ ಚಂದ್ರಶೇಖರ ಪಾಟೀಲರಂಥವರನ್ನು ಬಿಟ್ಟರೆ ಕುವೆಂಪು ಕೃತಿಗಳಿಗೆ ಶರಣು ಹೊಗಬೇಕು, ಕುವೆಂಪು ಅವರು ತೋರ್ಕೆಗಾಗಿ, ಪ್ರಚಾರಕ್ಕಾಗಿ, ಉದ್ರೇಕಕ್ಕಾಗಿ, ಅವರಿವರ ನಿಂದಾ ಸ್ತುತಿಗಳಿಗಾಗಿ ಕ್ರಾಂತಿ ಸಾಹಿತ್ಯವನ್ನು ರಚಿಸಿದವರಲ್ಲ. ಕ್ರಾಂತಿ ಅವರ ಉಸಿರು, ಅವರ ರಕ್ತ, ಶಕ್ತಿ, ಜೀವಧಾತು. ಅದು ಇತರರಲ್ಲಿ ಸಂಚಾರೀ ಭಾವವಾದರೆ ಇವರಲ್ಲಿ ಸ್ಥಾೂಭಾವ. ಪ್ರೌಢಶಾಲೆಯ ಮೆಟ್ಟಲನ್ನು ಹತ್ತುತ್ತಿದ್ದಾಗಲೇ ಅವರಲ್ಲಿ ವೈಚಾರಿಕ ಬುದ್ದಿ ಅಂಕುರಿಸುತ್ತದೆ, ಸಾಹಿತ್ಯಕ್ಷೇತ್ರದಲ್ಲಿ ಅಂಬೆಗಾಲಿಡುತ್ತಿದ್ದಾಗಲೇ ಅದು ಗಿಡವಾಗಿ, ಕ್ರಮೇಣ ವಟವೃಕ್ಷ ವಾಗುತ್ತದೆ. ಅವರ ಪ್ರಾರಂಭಕಾಲದ ಕವಿತೆಗಳಲ್ಲಿ, ಭಾಷಣಗಳಲ್ಲಿ, ಕತೆ ಕಾದಂಬರಿಗಳಲ್ಲಿ ಅದರ ಪ್ರಾಬಲ್ಯ ಸ್ಪಷ್ಟ ಗೋಚರವಾಗುತ್ತದೆ. ಆದ್ದರಿಂದ ಅವರು ತಮ್ಮ ಸಾಹಿತ್ಯ ಜೀವನದ ಆದಿಕಾಲದಿಂದಲೇ ಪ್ರತಿಷ್ಠಿತ ವರ್ಗದ ಮನೀಷಿಗಳ ಕುಹಕಿಗಳ ವಕ್ರದೃಷ್ಟಿಗೆ, ಕ್ರೂರಟೀಕೆ ಗಳಿಗೆ, ಅನ್ಯಾಯ ಹಿಂಸೆಗಳಿಗೆ, ಎದೆಯೊಡ್ಡಬೇಕಾಗುತ್ತದೆ. ಜಾತ್ಯತೀತರಾದರೂ ಅವರು ಬ್ರಾಹ್ಮಣ ದ್ವೇಷಿಯೆಂದು ಅವರ ಮೇಲೆ ಗೂಬೆ ಕೂರಿಸುವುದುಂಟು. ಕುತ್ಸಿತ ಬುದ್ದಿಯಿಂದ, ಪೂರ್ವಗ್ರಹ ಪೀಡಿತವಾದ ವಿಮರ್ಶೆಯಿಂದ ಅವರ ಸಾಹಿತ್ಯವನ್ನು ಅವಹೇಳನ ಮಾಡಿದ ಧೀರ ಧೀಮಂತರಿದ್ದಾರೆ. ಅವರೆಲ್ಲರೂ ಸಾಮಾನ್ಯವಾಗಿ ಒಂದೇ ಗುಂಪಿಗೆ ಸೇರಿದವರು. ಇವರು ಕವಿಯಲ್ಲ, ಉತ್ತಮ ಗದ್ಯ ಲೇಖಕರೆಂದು ಆ ಗುಂಪಿನ ಕವಿಗಳೂ ಇವರು ಶ್ರೇಷ್ಠ ಗದ್ಯ ಲೇಖಕರಲ್ಲ ಉತ್ತಮ ಕವಿಗಳೆಂದು ಅದೇ ಗುಂಪಿನ ಗದ್ಯ ಲೇಖಕರೂ ತಮಗನುಕೂಲ ವಾಗುವಂತೆ ಟೀಕಿಸಿದ್ದಾರೆ. ಯಾರಾದರೂ ಕೆಲವರು ಇವರ ಸಾಹಿತ್ಯದ ಬಗ್ಗೆ ಒಂದೆರಡು ಒಳ್ಳೆಯ ಮಾತಾಡಿದರೆ ಅವರನ್ನು ಹೊಗಳು ಭಟ್ಟರೆಂದು ಕರೆದು ‘ಏನಾದರೂ ಮಾಡುತಿರು ತಮ್ಮ’ ಎಂದು ವಿಡಂಬಿಸುತ್ತಾರೆ. ಇದು ಜಾತಿ ರಾಜಕೀಯವಲ್ಲದೆ ಏನು? ಇಷ್ಟೆಲ್ಲ ವಿರೋಧ ವನ್ನು ಅವರು ಏಕಾಕಿಯಾಗಿಯೇ ಎದುರಿಸುತ್ತ ಬಂದಿದ್ದಾರೆ. ವೆಂಕಣ್ಣಯ್ಯ ಪರಮೇಶ್ವರ ಭಟ್ಟರಂಥ ನ್ಯಾಯ ನಿಷ್ಠೆಯ ಸಜ್ಜನರು ಇರಲಿಲ್ಲವೆಂದಲ್ಲ. ಆದರೆ ಕುವೆಂಪು ಅವರ ಕೀರ್ತಿಗೆ ಮಸಿ ಬಳಿಯಬೇಕೆಂದು ಗುಂಪೊಂದು ಸದಾ ಸಜ್ಜಾಗಿತ್ತೆಂಬುದನ್ನು ಮರೆಯುವಂತಿಲ್ಲ. ಈಗ ಪರಿಸ್ಥಿತಿ ಬದಲಾವಣೆಯಾಗಿರುವುದೂ ನಿಜ. ಆದರೆ ಇಪ್ಪತ್ತನೆಯ ಶತಮಾನದಲ್ಲಿಯೂ ಮತಾಂಧರ ಕುಯುಕ್ತಿ ಕುಚೇಷ್ಠೆಗಳಿಂದಾಗಿ ವಿಚಾರ ಸ್ವಾತಂತ್ರ್ಯಕ್ಕೆ ಅವಕಾಶವಿಲ್ಲದಿರುವುದು ದುರ್ದೈವದ ಸಂಗತಿಯಾಗಿದೆ. “ಆನೆಯು ಆ ದಾರಿಯಲ್ಲಿ ಹೋಯಿತ್ತೆಂದಡೆ, ಆಡು ಆ ದಾರಿಯಲ್ಲಿ ಹೋಯಿತ್ತೆನ್ನಬಹುದೆ” ಎಂಬ ಶರಣರ ವಚನ ಈ ಸಂದರ್ಭದಲ್ಲಿ ನೆನಪಿಗೆ ಬರುತ್ತದೆ.

ಯಾವಾಗಲೂ ಹೀಗೆಯೇ! ಸುಳ್ಳು ಹೇಳಿ, ಮೋಸಮಾಡಿ, ಅನಾಚಾರವೆಸಗಿ, ಅನ್ಯಾಯ ಗೈದು, ಎದೆ ತುಟಿಗಳಲ್ಲಿ ನಂಜು ಜೇನಿರಿಸಿಕೊಂಡು ಜೀವನಯಾಪನೆ ಮಾಡುವ ಜನ ನಿರ್ವಿಘ್ನವಾಗಿ ಮೆರೆಯುತ್ತಾರೆ; ಸತ್ಯಧರ್ಮಗಳಿಗೆ ಶರಣಾದವರ, ಅನ್ಯಾಯವೆಸಗದವರ, ಸದಾಚಾರದಲ್ಲಿ ಆಸಕ್ತರಾದವರ ದಾರಿಯಲ್ಲಿ ಕಂಟಕಗಳು ಸಾವಿರಾರು. ಮಹಾತ್ಮರು ಯಾವಾಗಲೂ ಒಂಟಿ. ಸತ್ಯಸಂಧರ ನಡೆನುಡಿ ಡಂಭಾಚಾರದ ಜನಕ್ಕಾಗವು. ಕುವೆಂಪು ಅವರ ಸ್ಥಿತಿಯೂ ಇದೇಯೆ.

ನ್ಯಾಯ ನಿಷ್ಠುರಿ, ದಾಕ್ಷಿಣ್ಯಪರನು ನಾನಲ್ಲ;
ಲೋಕ ವಿರೋಧಿ, ಶರಣನಾರಿಗಂಜುವನಲ್ಲ
ಕೂಡಲಸಂಗಮದೇವ ರಾಜತೇಜಲ್ಲಿಪ್ಪನಾಗಿ

ಬಸವಣ್ಣನವರು ತಮ್ಮನ್ನು ಮಾತ್ರ ಕುರಿತು ಉದ್ಗರಿಸಿದ್ದಲ್ಲ ಈ ವಚನ. ತಮ್ಮಂಥ ಅಂಬೇಡ್ಕರ್ ಅವರಂಥ ಅಪರೂಪದ ವ್ಯಕ್ತಿಗಳ ಪಾಡನ್ನು ನೆನೆದು ಹಾಡಿದ್ದು. ಇದು ನಿತ್ಯ ಸತ್ಯ. ಅಂದು ಅವರಾಡಿದ ಮಾತು ಕುವೆಂಪು ಅವರಿಗೂ ಸಮುಚಿತವಾಗಿ ಅನ್ವಯಿಸುತ್ತದೆ.

ಕುವೆಂಪು ಅವರು ಅಧಿಕಾರಶ್ರೇಣಿಯಲ್ಲಿ ಹೇಗೆ ಹೇಗೂ ಮೇಲೆ ಬಂದರೆಂದು ಕೆಲವು ಕೀಳು ಜನ ಕ್ಯಾತೆ ತೆಗೆದಿದ್ದಾರೆ. ಅವರೆಂದು ಯಾವುದಕ್ಕೂ ಒಬ್ಬರ ಮನೆ ಬಾಗಿಲು ಕಾದವರಲ್ಲ, ಅಠಾರಾ ಕಚೇರಿಯ ಕಂಬ ಸುತ್ತಿದವರಲ್ಲ; ಸುತ್ತಿದ್ದಿರಲಿ. ಪ್ರಾಯಶಃ ಅದು ಇರುವ ಜಾಗ ಗೊತ್ತಿದೆಯೋ ಇಲ್ಲವೋ ಕಾಣೆ. ರಾಜ ಮಹಾರಾಜರ ಮುಂದೆ ಡೊಗ್ಗು ಸಲಾಮು ಹಾಕಿದವರಲ್ಲ, ನೇಮಕ ಸಮಿತಿಯ ಸದಸ್ಯರ ಮುಂದೆ ಹಲ್ಲುಗಿಂಜಿದವರಲ್ಲ. ಅವರಂಥ ಆತ್ಮಗೌರವವುಳ್ಳ ಸ್ವಾಭಿಮಾನಿಗಳು ವಿರಳ. ಕನ್ನಡ ಏಕೀಕರಣ ಚಳುವಳಿಯ ಕಾಲದಲ್ಲಿ ಸರ್ಕಾರದಿಂದ ಎಚ್ಚರಿಕೆಯ ಪತ್ರ ಬಂದಾಗಲೂ ಜಗ್ಗದೆ ನಡು ಬಗ್ಗಿಸದೆ ಎದೆಯುಬ್ಬಿಸಿ, ‘ಅಖಂಡ ಕರ್ನಾಟಕ’ ಕವಿತೆಯನ್ನು ರಚಿಸಿ ಪ್ರಕಟಿಸಿದರು; ‘ಕವಿಗರಸು ಗಿರಸುಗಳ ಋಣವಿಲ್ಲ’ ಎಂದು ರಾಜಾ ರೋಷಾಗಿ ಘೋಷಿಸಿದರು. ಧೀಶಕ್ತಿ ಆತ್ಮಶಕ್ತಿ ಪ್ರತಿಭಾ ಸಾಮರ್ಥ್ಯಗಳೇ ಅವರ ಮೇಲೇರಿಕೆಗೆ ಕಾರಣವೆನ್ನುವುದು ಕುಹಕಿಗಳಿಗೆ ಹೇಗೆ ತಿಳಿದೀತು? ಬೆಂಗಳೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವ ಭಾಷಣವೋದಿದ ಆಗಿನ ಮಂತ್ರಿಯೊಬ್ಬರು ದಿ.ಕೆ. ಪುಟ್ಟಸ್ವಾಮಿಯವರ ಬಳಿ ಮಾತಾಡುತ್ತ “ಕುವೆಂಪು ಅವರ ಸಹವಾಸ ಬೇಡಪ್ಪ. ಅವರು ಬೆಂಕಿ, ಬೆಂಕಿ” ಎಂದರಂತೆ. ಹೀಗಿರುವಾಗ ಎಂಥೆಂಥ ಜನ ನಮ್ಮ ನಡುವೆ ಇದ್ದಾರೆಂಬುದನ್ನು ನೆನೆದಾಗ ಮನಸ್ಸಿಗೆ ಯಾತನೆಯಾಗುತ್ತದೆ. ಕುವೆಂಪು ಅವರಿಗಂತು ಯಾತನೆಯೂ ಇಲ್ಲ, ಕೋಪವೂ ಇಲ್ಲ; ನಿರ್ಲಿಪ್ತರಂತಿರುತ್ತಾರೆ.

ಇಂಥ ಸಂದಿಗ್ಧಯಾತನಾ ಸಮಯದಲ್ಲಿ ಮನೋನೇತ್ರದ ಮುಂದೆ ಭಾರತೀಯ ಇತಿಹಾಸ ಸುಳಿದು, ಪ್ರಶ್ನೆ ಮಾಲೆಯನ್ನು ನೇಯ್ದ ನೆನಪಿನಲ್ಲುಳಿಸಿ ಹಿಂದೆ ಸರಿಯುತ್ತದೆ.  ಬುದ್ಧನ ಅವತಾರೋದ್ದೇಶವೇನು? ಬೌದ್ಧ ಮತವನ್ನು ಈ ದೇಶದಿಂದ ಉಚ್ಛಾಟನೆ ಮಾಡಿದವರಾರು? ಏಕೆ? ಕ್ರಿಸ್ತ ಮತ್ತು ಇಸ್ಲಾಂ ಮತಗಳು ಈ ನಾಡಿನ ಮೂಲೆ ಮೊಡಕುಗಳಲ್ಲಿ ಹರಡಲು ಕಾರಣವೇನು? ಯಾರದಕ್ಕೆ ಜವಾಬ್ದಾರರು? ಹಲವು ಮತಗಳಿದ್ದಾಗ ಸೀಖ್ ಮತ ಉದಿಸಿ ದ್ದೇಕೆ? ಬಹುಮತ ಬಹುದೇವತೋಪಾಸನೆಗಳಿಂದ ರಾಷ್ಟ್ರೀಯತ್ವಕ್ಕೆ ಧಕ್ಕೆ ಬರಲಿಲ್ಲವೆ? ವರ್ಣಗಳನ್ನೂ ಶೂದ್ರರನ್ನೂ ಅಸ್ಪೃಶ್ಯರನ್ನೂ ಸೃಷ್ಟಿಸಿದವರು ಯಾರು? ಸ್ತ್ರೀಸಮೂಹವನ್ನು ಶೂದ್ರವರ್ಗಕ್ಕೆ ದಾಖಲು ಮಾಡಿದವರಾರು? ಶ್ರೀ ಸಾಮಾನ್ಯನನ್ನು ಜ್ಞಾನದಿಂದ ವಂಚಿಸಿದವರು ಯಾರು? ಬಸವಣ್ಣನವರ ಕೊಲೆಗೆ ಅಥವಾ ಸಾವಿಗೆ ಕಾರಣವೇನು? ಯಾರು ಕಾರಣ? ರಾಮಾನುಜರು ತಮಿಳು ನಾಡಿನಿಂದ ಕರ್ನಾಟಕಕ್ಕೆ ಓಡಿ ಬಂದದ್ದೇಕೆ? ಅಂಬೇಡ್ಕರ್ ಅವರನ್ನು ದೂರವಿರಿಸಿದ್ದೇಕೆ? ಗಾಂಧೀಜಿಯವರ ಕೊಲೆಗೇನು ಕಾರಣ? ರಾಮಸ್ವಾಮಿ ನಾಯಕರಂಥವರು ಹುಚ್ಚರೆ? ಡಿ.ಎಂ.ಕೆ ಹುಟ್ಟಿದ್ದೇಕೆ? ಅವರೆಲ್ಲ ಸಂಕುಚಿತ ದೃಷ್ಟಿಯುಳ್ಳವರೆ? ದೇಶದ್ರೋಹಿ ಗಳೇ? ನಾನಾ ಭಾಷೆಗಳು ಹುಟ್ಟಿಕೊಂಡದ್ದೆಕೆ? ಇವು ಕೂಡಲೇ ನೆನಪಿಗೆ ಬರುವ ಪ್ರಶ್ನೆಗಳು. ಇವುಗಳಿಗೆ ಸಮರ್ಪಕವಾಗಿ ಉತ್ತರ ಕೊಡುವ ಸೂಕ್ಷ್ಮ ವಿಚಾರಮತಿಗಳು ಯಾರು?

ಪುರೋಹಿತರು, ಧರ್ಮಾಧಿಕಾರಿಗಳು, ವಿದ್ಯಾವಂತರು ಮತ್ತು ರಾಜಕೀಯ ನಾಯಕರು ಶ್ರೀಸಾಮಾನ್ಯರ ಮೌಢ್ಯವನ್ನೇ ಬಂಡವಾಳ ಮಾಡಿಕೊಂಡು, ಅವನು ನಿರಕ್ಷರಿಯಾಗಿರುವ ತನಕ ತಮ್ಮ ಸುಖ ಕಟ್ಟಿಟ್ಟ ಬುತ್ತಿಯೆಂದು ತಿಳಿದು, ಮಜ ಮಾಡುತ್ತಿದ್ದಾರೆ. ಸಾಮಾನ್ಯ ಜನತೆ ಪುರಾತನ ಮೌಲ್ಯಗಳಿಂದ ಪಾರಾಗಲಾರದೆ. ಹಾನಿಕರವಾದ ಮೌಢ್ಯಗಳಿಂದ ತಪ್ಪಿಸಿ ಕೊಳ್ಳಲಾರದೆ. ತಮ್ಮ ಪಾಲಿಗೆ ಬಂದದ್ದೇ ಪಂಚಾಮೃತವೆಂದು ಭಾವಿಸಿ, ಪಶುಗಳಂತೆ ಕಾಲಯಾಪನೆ ಮಾಡುತ್ತಿದ್ದಾರೆ. ಇದರಿಂದಾಗಿ ಮತೀಯ ಸಾಮಾಜಿಕ ರಾಜಕೀಯ ಕ್ಷೇತ್ರ ಗಳಲ್ಲಿ ನಿರಂಕುಶಾಧಿಕಾರವೂ, ಆರ್ಥಿಕ ಕ್ಷೇತ್ರದಲ್ಲಿ ಅಸಮಾನತೆಯೂ ತಾಂಡವವಾಡುತ್ತಿವೆ. ಅವರಲ್ಲಿ ಆಧುನಿಕ ಪ್ರಜ್ಞೆ ಮತ್ತು ವೈಚಾರಿಕ ಜಾಗೃತಿಗಳು ಮೂಡುವ ತನಕ ಸಮಾನತೆ ಸ್ವಾತಂತ್ರ್ಯ ಮತ್ತು ಭ್ರಾತೃತ್ವಗಳು, ಅಂತೆಯೇ ಪ್ರಜಾಪ್ರಭುತ್ವ ಮೊಲದ ಕೋಡಾಗುತ್ತ ವೆಂಬುದು ಕುವೆಂಪು ಅವರ ಖಚಿತಾಭಿಪ್ರಾಯ. ವಿದ್ಯಾವಂತರು ವಿಚಾರವಂತರಾದರೆ ಸಾಲದು, ಸಾಮಾನ್ಯ ಜನತೆ ವಿಚಾರ ಪರರಾಗಬೇಕು; ಅವರು ಸಾಕ್ಷರರಾಗುವ ತನಕ ಕಾಯುವುದು ತರವಲ್ಲ. ವಿದ್ಯಾರ್ಥಿಗಳು ಆಗಾಗ್ಗೆ ಹಳ್ಳಿಗಳಿಗೆ ಹೋಗಿ, ಶಕುನ ನಿಮಿತ್ತ ಮುಡಿಪು ಕಾಣಿಕೆ ಮಂತ್ರ ಮಾಟ ಇವೇ ಮೊದಲಾದ ಮೌಢ್ಯ ಸಂಪ್ರದಾಯಗಳ ಅಪಾಯವನ್ನವರಿಗೆ ಮನವರಿಕೆ ಮಾಡಿಕೊಡಬೇಕು; ಪುರೋಹಿತಶಾಹಿಯ ಹಿಡಿತದಿಂದ ಬಿಡುಗಡೆಹೊಂದುವಂತೆ ಅವರಿಗೆ ತಿಳಿವಳಿಕೆ ನೀಡಬೇಕು. ಅಂಥ ಪವಿತ್ರ ಕರ್ತವ್ಯಪಾಲನೆಗಾಗಿ ಒಂದು ವಿಚಾರವೇದಿಕೆ ಏರ್ಪಡಿಸಿಕೊಳ್ಳಬೇಕು ಎಂಬುದಾಗಿ ಅವರು ವಿದ್ಯಾರ್ಥಿಗಳಿಗೆ ಕರೆ ಕೊಟ್ಟಿದ್ದಾರೆ, ‘ಜನತಾ ಪ್ರಜ್ಞೆ ಮತ್ತು ವೈಚಾರಿಕ ಜಾಗೃತಿ’ ಎಂಬ ಭಾಷಣದಲ್ಲಿ.

‘ಮಕ್ಕಳಿಗೇಕೆ ವೈಚಾರಿಕತೆ?’, ‘ಮಕ್ಕಳ ಸಾಹಿತ್ಯಕ್ಕೆ ಆಧುನಿಕ ಮೌಲ್ಯಗಳು’ ಎಂಬ ಉಪನ್ಯಾಸಗಳಲ್ಲಿ ಮೊದಲೇ ಮಕ್ಕಳ ಮನಸ್ಸಿನಲ್ಲಿ ವೈಚಾರಿಕ ಮನೋಧರ್ಮವನ್ನು ಬಿತ್ತಬೇಕಾದ ಅವಶ್ಯಕತೆಯನ್ನೂ, ಮಕ್ಕಳ ಸಾಹಿತ್ಯದಲ್ಲಿ ಮೌಢ್ಯ ಸಂಗತಿಗಳನ್ನು ಹೆಸರಿಸದೆ. ವೈಜ್ಞಾನಿಕ ದೃಷ್ಟಿಯ ಆಧುನಿಕ ಮೌಲ್ಯಗಳನ್ನು ಸಮಾವೇಶಗೊಳಿಸಬೇಕಾದ ಅಗತ್ಯತೆಯನ್ನೂ ಅವರು ಒತ್ತಿಹೇಳಿದ್ದಾರೆ. ಚಿಕ್ಕಂದಿನಲ್ಲಿ ಅಂಟಿಕೊಂಡ ಮೌಢ್ಯಭಾವನೆಗಳನ್ನು ದೊಡ್ಡವರಾದ ನಂತರವೂ ತೊಡೆಯಲಾಗದು; ಅವು ಸಾಂಕ್ರಾಮಿಕ ರೋಗಗಳಂತೆ ಸಮಾಜದಲ್ಲಿ ಬಹುಬೇಗನೆ ವ್ಯಾಪಿಸುತ್ತವೆ. ಕಳೆಯನ್ನು ಎಳೆತನದಲ್ಲಿ ಚಿವುಟದಿದ್ದರೆ, ಇಡೀ ಗದ್ದೆಯೇ ನಾಶವಾಗುತ್ತದೆ. ಮೌಢ್ಯಗಳೂ ಅಷ್ಟೇ. ಅವುಗಳಿಂದ ಪಾರಾದ ಮಕ್ಕಳು ನಿರ್ಭೀತರಾಗಿ, ವಿಚಾರಪರರಾಗಿ, ಧೀಮಂತರಾಗಿ ಲೋಕದ ಸಮಸ್ಯೆಗಳನ್ನೆದುರಿಸಲು ಶಕ್ತರಾಗುತ್ತಾರೆ. ಹೊಸ ಸಮಾಜವನ್ನು ನಿರ್ಮಿಸಬಲ್ಲವರಾಗುತ್ತಾರೆ. ಜನಜೀವನದ ಸಮಸ್ತ ಸ್ತರಗಳಲ್ಲಿಯೂ ವೈಚಾರಿಕ ಪ್ರಜ್ಞೆ ಸದಾ ಎಚ್ಚತ್ತಿರಬೇಕೆಂಬುದು ಕುವೆಂಪು ಅವರ ಮಹದಾಶೆ. ಆದ್ದರಿಂದ ಅವರು ಅವಕಾಶ ವೊದಗಿದಾಗಲೆಲ್ಲ ನಿರ್ಭಯವಾಗಿ, ಬೇಸರವಿಲ್ಲದೆ ಆ ವಿಷಯವಾಗಿ ಮಾತಾಡುತ್ತಾರೆ, ಚರ್ಚಿಸುತ್ತಾರೆ. ಅವರ ಈ ಎಲ್ಲ ಕಳಕಳಿಯ ಹಿನ್ನೆಲೆಯಲ್ಲಿ ಆಧ್ಯಾತ್ಮನಿಷ್ಠೆ, ಸಾಮಾಜಿಕ ಕ್ಷೇಮಕಾತರತೆ ಮತ್ತು ದೇಶ ಕಲ್ಯಾಣಾಕಾಂಕ್ಷೆಗಳು ಪ್ರವಹಿಸುತ್ತಿರುವುದನ್ನು ಗಮನಿಸ ಬಹುದು.

ತೆರೆದ ಮನಸ್ಸಿನಿಂದ, ನಿರ್ವಿಕಾರ ಬುದ್ದಿಯಿಂದ ವಿಚಾರಪರವಾದ ಅವರ ಲೇಖನ ಮತ್ತು ಗ್ರಂಥಗಳನ್ನು ವ್ಯಾಸಂಗಮಾಡಿ, ಸರಿಯಾದ ಅರ್ಥದಲ್ಲಿ ಗ್ರಹಿಸದೆ ದುರ್ಬುದ್ದಿಯಿಂದ ಅಪಾರ್ಥಕಲ್ಪಿಸಿಕೊಂಡರೆ ನಷ್ಟವಾಗುವುದು ಅವರಿಗಲ್ಲ ಎಂಬ ಸತ್ಯಸಂಗತಿಯನ್ನು ಓದುಗರು ತಿಳಿದುಕೊಂಡದ್ದಾದರೆ ವೈರಸ್ಯ ತಲೆಯೆತ್ತಲಾರದು.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)


[1]     ಚಾತುರ್ವರ್ಣಗಳ ವಿಭಜನೆ, ಜಾತೀಯತೆ, ಅಸ್ಪೃಶ್ಯತೆ ಇವುಗಳ ಹುಟ್ಟಿಗೆ ಕಾರಣಗಳನ್ನೂ, ಅವುಗಳಿಂದಾಗಿ ಭರತಖಂಡ ಶತಶತಮಾನಗಳಿಂದ ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಎದುರಿಸಬೇಕಾದ ಗಂಡಾಂತರಗಳನ್ನೂ, ಅದರ ನೈತಿಕ ಪತನವನ್ನೂ, ಅವು ಗಳಿಂದಾಗಿ ಪ್ರಜಾಪ್ರಭುತ್ವ ಕೇವಲ ಅಣಕವಾಗಿದೆಯೆಂಬುದನ್ನೂ, ರಾಷ್ಟ್ರದ ಏಳೆಂಟು ಮಂದಿ ಅಗ್ರಗಣ್ಯ ನಾಯಕರಲ್ಲೊಬ್ಬರೂ ಆಧುನಿಕ ಮನುವೆಂಬ ಅಭಿದಾನಕ್ಕೆ ಪಾತ್ರರಾದವರೂ ಆದ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಕಾರಣವಾಗಿ, ತರ್ಕಬದ್ಧವಾಗಿ ಸಂದೇಹದೂರವಾಗಿ ತಮ್ಮ ಅನೇಕ ಲೇಖನ ಮತ್ತು ಗ್ರಂಥಗಳಲ್ಲಿ ಪ್ರತಿಪಾದಿಸಿದ್ದಾರೆ. ಅವರ Annihilation of caste, Who are the Shudras? The Untouchables ಮೊದಲಾದ ಗ್ರಂಥಗಳನ್ನು ಆಮೂಲಾಗ್ರವಾಗಿ ವ್ಯಾಸಂಗ ಮಾಡುವುದಾದರೆ ಪ್ರತಿಗಾಮೀ ಮನೋಭಾವದ ಜನರ ಅಜ್ಞಾನಾಂಧಕಾರ ನಿವಾರಣೆಯಾದೀತು. ಕುವೆಂಪು ಅವರ ವಿಚಾರ ಧೋರಣೆಗೆ ಅಲ್ಲಿ ಸಾಕಷ್ಟು ಪುಷ್ಟಿ ದೊರಕಲಿದೆ.

[2]     ಪತ್ರಗಳ ಪೂರ್ಣಪಾಠಗಳನ್ನಿಲ್ಲಿ ಕೊಡುತ್ತಿಲ್ಲ. ಒಂದೋ ಎರಡೋ ಉಚಿತವಾಕ್ಯಗಳನ್ನು ಮಾತ್ರ ಉದ್ಧರಿಸಲಾಗುತ್ತದೆ; ಇದು ಅಂತರ್ದೇಶೀಯ ಹಾಳೆಯಲ್ಲಿ ಮೂರು ಪುಟದಷ್ಟಿದೆ.

[3]     ಕುವೆಂಪು ಅವರಿಗೆ ಬಂದ ಪತ್ರಗಳಿಗೆ ಉತ್ತರ ಬರೆಯುತ್ತಿದ್ದವರು ಪ್ರಭುಶಂಕರ ಅವರು. ಕುವೆಂಪು ಅವರ ಅಭಿಪ್ರಾಯ ತಿಳಿದುಕೊಂಡು, ಕರಡು ಸಿದ್ಧಪಡಿಸಿ, ಅವರಿಗೆ ತೋರಿಸಿ, ಅನಂತರ ಪ್ರಭುಶಂಕರರು ಅಂಚೆಗೆ ರವಾನಿಸುತ್ತಿದ್ದರು. ಅವರು ಲಿಪಿಕಾರರಷ್ಟೆ. ಆದ್ದರಿಂದ ಪ್ರಭುಶಂಕರ ಹೆಸರಿನಲ್ಲಿರುವ ಪತ್ರಗಳನ್ನು ಕುವೆಂಪು ಬರೆದುವೇ ಎಂದು ಮುಂದೆ ಪರಿಗಣಿಸಲಾಗುತ್ತದೆ.

[4]     ೨೪.೪.೭೪ರ ಈ ಪತ್ರ ಫೂಲ್‌ಸ್ಕೇಪ್ ಆಕಾರದ ಹಾಳೆಯಲ್ಲಿ ಎರಡೂವರೆ ಪುಟದಷ್ಟಿದೆ.

[5]     ಈ ಪತ್ರವನ್ನು ೨೩.೪.೭೪ರಂದು ತಾವು ಬಿಡದಿಮಾಡಿಕೊಂಡಿದ್ದ ಉಡುಪಿಯ ಕುಂಜಿ ಬೆಟ್ಟದಿಂದ ಬರೆದಿದ್ದಾರೆ. ಎರಡು ಪುಟವಿದೆ.

[6]     ಶ್ರೀ ರಾಮಕೃಷ್ಣ, ವಿವೇಕಾನಂದ ಸಾಹಿತ್ಯವನ್ನು ಸೇರಿಸಿದ್ದಾರೆ, ತಮ್ಮ ಪಟ್ಟಿಯಲ್ಲಿ.

[7]     ೫.೫.೭೪ರಂದು ಕೆಂಪೇಗೌಡ ನಗರದ ಮಧುಕರ ಅವರು ಕಾರ್ಡಿನ ಎರಡು ಕಡೆಯೂ ಬರೆದಿದ್ದಾರೆ.

[8]     ೩೦.೪.೭೪ರ ಅಂತರ್ದೇಶೀಯ ಪತ್ರ. ಮೂರು ಕಡೆಯೂ ಬರೆದಿದೆ.

[9]     ೧೭.೫.೭೪ರ ಅಂತರ್ದೇಶೀಯ ಪತ್ರ ತಪ್ಪುಗಳಿವೆ. ಇಂಥದೇ ಮತ್ತೊಂದು ಪತ್ರವನ್ನು ೭.೬.೭೪ರಂದು ಬರೆದಿದ್ದಾರೆ.

[10]    ಎನ್.ಟಿ. ಜಕಟಿ, ಮಂಗಳವಾರ ಪೇಟೆ, ಧಾರವಾಡ, ೧೮.೫.೭೪ರ ಅಂತರ್ದೇಶೀಯ ಪತ್ರದ ಮೂರು ಪುಟಗಳೂ ತುಂಬಿವೆ.

[11]    ಈ ಸ್ವಾಮಿಗಳ ಹೇಳಿಕೆ ೩.೫.೭೪ರ ಉದಯವಾಣಿಯಲ್ಲಿಯೂ ಪ್ರಕಟಗೊಂಡಿದೆ.

[12]    ೨೨.೫.೭೪ರಂದು ಮೇಲ್ಕಂಡ ಸ್ವಾಮಿಗಳ ಅಚ್ಚಾದ ಹೇಳಿಕೆಗಳನ್ನು ಲಗತ್ತಿಸಿ ಪತ್ರ ಬರೆದಿದ್ದರು.

[13]    ಈ ನೋಟೀಸು, ಪ್ರತಿನೋಟೀಸು ಮತ್ತು ವಕೀಲ ಮಂಡಲಿಯ ಹೇಳಿಕೆಗಳು ಕನ್ನಡ ಪ್ರಭಾ ೪.೬.೭೪, ಪ್ರಜಾವಾಣಿ ೫.೬.೭೪, ೬.೬.೭೪, ಲೋಕವಾಣಿ ೬.೬.೭೪ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

[14]    ೧೦.೬.೭೪ ವಕೀಲ ಮಂಡಲಿ ರಚನೆಯಾದದ್ದು. ಆತ್ಮಪ್ರೇರಣೆಯಿಂದ ಎಂದು ಬಾಲಕೃಷ್ಣರು ತಮ್ಮ ೧೭.೬.೭೪ರ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

[15]    ೧೨.೫.೭೪ ಮತ್ತು ೮.೬.೭೪ರಂದು ಬರೆದ ಅವರ ಪತ್ರಗಳು ಇಂಗ್ಲಿಷಿನಲ್ಲಿವೆ.

[16]    ೧೦.೬.೭೪ ೧೬ಅ ೩೧.೫.೭೪.

[17]    ೧೨.೬.೭೪

[18]    ೧೫.೬.೭೪ ಅವರ ಪತ್ರಗಳೆಲ್ಲ ಇಂಗ್ಲಿಷಿನಲ್ಲಿವೆ.

[19]    ಫೂಲ್‌ಸ್ಕೇಪ್ ಆಕಾರದ ನಾಲ್ಕು ಪುಟಗಳು.

[20]    ೧೨.೬.೭೪

[21]    ೧೫.೬.೭೪ ಎರಡು ಪತ್ರಗಳಿವೆ.

[22]    ೨೩.೬.೭೪, ೧.೯.೭೪ ಮತ್ತು ೧೨.೮.೭೪ರಂದು ಅಚ್ಯುತ ಬಲ್ಲಾಳರು ಬರೆದಿರುವ ಪತ್ರಗಳಲ್ಲಿ ಹೊಸದೇನೂ ಇಲ್ಲ. ೧೬.೬.೭೪ರಂದು ಹುನಗುಂದದ ಮಿತ್ರರೊಬ್ಬರು (ಸಹಿಯಿಂದ ಹೆಸರಿನ ಪತ್ತೆ ಸಾಧ್ಯವಿಲ್ಲ) ಫೂಲ್‌ಸ್ಕೇಪ್ ಆಕಾರದ ನಾಲ್ಕು ಪುಟಗಳು, ೨೭.೬.೭೪ ರಂದು ಆಲೂರು, (ಕರ್ನೂಲು) ಉಪ್ಪರಹಾಳ್ ರಾಮಮೂರ್ತಿಯವರು (ಇಂಗ್ಲಿಷಿನಲ್ಲಿ) ೪.೭.೭೪ರಂದು ಬೆಂಗಳೂರಿನ ಕೆ.ಜಿ. ಶರ್ಮರೂ, ೧೮.೭.೭೪ರಂದು ಕುಷ್ಟಗಿರಿಯ ಕೃಷ್ಣರಾವ್ ನಿಲೊಗಲ್ ಅವರೂ, ೧೬.೭.೭೪ರಂದು ಬೆಂಗಳೂರಿನ ಅಡ್ವೋಕೇಟ್ ಎನ್.ಕೆ. ವೆಂಕಟೇಶಮೂರ್ತಿಯವರೂ(ಇಂಗ್ಲಿಷಿನಲ್ಲಿ), ೩೦.೯.೭೪ರಂದು ಮಾಲೂರಿನ ‘ಮಾಧ್ವ ಬ್ರಾಹ್ಮಣ’ ಎಂ.ಎಸ್. ರಾಮಮೂರ್ತಿಯವರು (ಇವರು ವಾದಕ್ಕೆ ಆಹ್ವಾನವಿತ್ತಿದ್ದಾರೆ) ೧೮.೬.೭೪ರಲ್ಲಿ ಚಾಮರಾಜಪೇಟೆಯ ಎಸ್.ವಿ. ಭೀಮಭಟ್ಟರೂ. ಇವರಿಂದ ಖಾರವಾದ ಪತ್ರಗಳು ಬಂದಿವೆ. ಇವೆಲ್ಲ ಒಂದರ ನಕಲು ಮತ್ತೊಂದು. ಒಂದರಲ್ಲಿಯೂ ಹುರುಳಿಲ್ಲ, ವಿಷವಿದೆ. ಹೆಸರುಗಳಿಂದ ಇವರೆಲ್ಲ ಯಾವ ಕೋಮಿಗೆ ಸೇರಿದವರೆಂಬುದನ್ನು ಸುಲಭವಾಗಿ ಪತ್ತೆ ಹಚ್ಚಬಹುದು.

[23]    ೨೪.೭.೭೪

[24]    ಈ ರೀತಿ ಠರಾವು ಅಂಗೀಕರಿಸಿದ ಜಗದ್ಗುರು ಶ್ರೀ ಮನ್ಮಧ್ವಾಚಾರ್ಯರ ಮತಾನುಯಾಯಿಗಳ ಯಾದಿ.

೧. ಮೈಸೂರು ಉತ್ತರಾಧಿಮಠ ೨೬.೫.೭೪ (ತತ್ವವಾದ, ಜೂನ್, ಪುಟ ೨೧)
೨. ಮುಂಬಯಿ ಸತ್ಯಧ್ಯಾನ ಪೀಠ ಮತ್ತು ವಾಣಿವಿಹಾರ ಸಂಸ್ಕೃತ ಮಹಾವಿದ್ಯಾಲಯ ೧೬.೬.೭೪
೩. ವಿಜಾಪುರದ ವೈದಿಕ ಧರ್ಮಗ್ರಂಥಾಲಯ ೧೭.೬.೭೪
೪. ಮಂಡ್ಯದ ಶ್ರೀ ಮನ್ಮಾಧ್ವ ಸಂಘ, ೧೮.೬.೭೪
೫. ಗುಲ್ಬರ್ಗದ ಮಾಧ್ವಮಹಾಮಂಡಲ ೧೮.೬.೭೪
೬. ಉಡುಪಿಯ ಅಖಿಲ ಭಾರತ ಮಧ್ವಮಹಾಮಂಡಲಿ, ೧೯.೧.೭೬ (ಹೈದರಾಬಾದು ಸಮ್ಮೇಳನದಲ್ಲಿ)

[25]    ಇದು ಮಿರಜ್‌ನಿಂದ ಬರೆದದ್ದು. ಇಂತೆಯೇ ಹುಬ್ಬಳ್ಳಿಯಿಂದ ೧೧.೬.೭೪ ಮತ್ತು ೨೨.೬.೭೪ರಂದು ಎರಡು ಪತ್ರ ಬರೆದಿದ್ದರು.

[26]    ವಿಶ್ವವಾಣಿಯ ೧೭.೬.೭೪ ಮತ್ತು ೨೪.೬.೭೪ನೆಯ ದಿನಾಂಕಗಳ ಸಂಚಿಕೆಗಳಲ್ಲಿ ಸುವಿಸ್ತಾರವೂ ಸರ್ವಗ್ರಾಹ್ಯವೂ ಸ್ಫಟಿಕ ಸ್ಪಷ್ಟವೂ ಆದ ವಿಚಾರ ತರಂಗಗಳು ಅಚ್ಚಾಗಿವೆ. ಇಲ್ಲಿಯ ಸಂಗ್ರಹದಲ್ಲಿ ಅನೇಕ ವಿಷಯಗಳು ಬಿಟ್ಟು ಹೋಗಿವೆ. ಕುತೂಹಲವುಳ್ಳವರು ಅವುಗಳನ್ನೋದಬಹುದು.

[27]    ೮.೭.೭೪ರ ವಿಶ್ವವಾಣಿಯ ಸಂಚಿಕೆ

[28]    ಪ್ರಪಂಚ ೭.೭.೭೪

[29]    ಇದೇ ಸಂದರ್ಭದಲ್ಲಿ ಬಿಜಾಪುರದ ಗುರಣ್ಣಾಭಾವಿಯವರು ೧೦.೫.೭೪ನೆಯ ದಿನಾಂಕದ ‘ಉದಯ’ ಪತ್ರಿಕೆಯಲ್ಲಿ ಬರೆದ ಲೇಖನವನ್ನು ಓದಬಹುದು. ಅವರು ಸತ್ಯಪ್ರೇಮಿ, ನ್ಯಾಯನಿಷ್ಠುರಿ. ಪಾರಮಾರ್ಥಿಕ ಪೀಠದ ತಪಸ್ವಿಗಳು ಲೌಕಿಕ ವ್ಯಾಜ್ಯಗಳಿಗಿಳಿಯಬಾರ ದೆಂಬುದು ಅವರ ಮತ. ಅವರು ಈ ವಿಷಯದಲ್ಲಿ ಕುವೆಂಪು ಅವರಿಗೆ ಅನೇಕ ಕಾಗದಗಳನ್ನು ಬರೆದಿದ್ದಾರೆ.  “His (Dr. Puttappa’s) main purpose is not to hurt anyone’s feelings, but to mobilise opinion against the strangle hold of upper castes on the mass media including the newspapers, radios, films and books. Does this mean the beginning in Karnataka of something like the DK or the DMK of TamilNadu?” A Times of India Note book, ೧೭.೬.೭೪ ಕುವೆಂಪು ಅವರ ಕನಸಿಗೂ ಸಹ ಹೊಳೆಯದ ಸಂಗತಿಗಳನ್ನು ಊಹಿಸಿಕೊಂಡು, ತಮ್ಮ ಮನಸ್ಸನ್ನು ಪ್ರತಿಬಿಂಬಿಸುವ ಇಂಥ ಬರಹಗಾರರೂ ಇದ್ದಾರೆ.

[30]    ಕ್ರೌನ್ ಚತುರ್ದಳಾಕಾರದ ಈ ಪತ್ರದಲ್ಲಿ ಆರು ಪುಟಗಳಿವೆ ಅತ್ಯುಗ್ರವಾಗಿದೆ.

[31]    ಫೂಲ್‌ಸ್ಕೇಪ್ ಆಕಾರದ ಹಾಳೆಯಲ್ಲಿ ೬ ಪುಟಗಳು, ೧೦.೫.೭೪

[32]    ೨೧.೬.೭೪

[33]    ೧೦.೭.೭೪ರ ಪತ್ರ, ಅದರಿಂದ ಕೆಲವು ವಾಕ್ಯಗಳನ್ನು ಮಾತ್ರ ಉದ್ಧರಿಸಲಾಗಿದೆ.