ಶ್ರೀರಾಮಾಯಣದರ್ಶನಂ ಮಹಾಕಾವ್ಯದ ಪ್ರಾರಂಭದ ನಿವೇದನ ವಿಭಾಗದಲ್ಲಿ ಬರುವ

ಶ್ರೀಕುವೆಂಪುವ ಸೃಜಿಸಿದೀ ಮಹಾಛಂದಸ್ಸಿನ
ಮೇರುಕೃತಿ, ಮೇಣ್ ಜಗದ್ಭವ್ಯ ರಾಮಾಯಣಂ

ಎಂಬ ಸಾಲುಗಳಲ್ಲಿ ಕಾಣುವ ಉಕ್ತಿವೈಚಿತ್ರ್ಯಗಳು ಕೇವಲ ಸಾಲಂಕಾರವಾಗಿರದೆ ಸಹಜ ಸುಂದರವಾಗಿ ಶ್ರೀ ಕುವೆಂಪು ಅವರ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿದಂತಿವೆ. ಕಾಯಕ ಭಕ್ತನನ್ನು ಊರ್ಧ್ವಮುಖಗೊಳಿಸುವಂತೆ, ಸ್ವಾತಂತ್ರ್ಯ ಸಂಗ್ರಾಮ ಗಾಂಧಿಯೆಂಬ ಶಕ್ತಿಯನ್ನು ರೂಪಿಸಿ ದಂತೆ, ಕಾಳಿಕಾ ದೇವಾಲಯದ ಪೌರೋಹಿತ್ಯ ಶ್ರೀ ರಾಮಕೃಷ್ಣರಲ್ಲಿ ಪರಮಹಂಸತ್ವವನ್ನು ಪ್ರಬೋಧಗೊಳಿಸಿದಂತೆ, ನಿಸರ್ಗಸೌಂದರ್ಯ, ಪೌರ್ವಪಾಶ್ಚಾತ್ಯ ತತ್ತ್ವಚಿಂತನೆ ಮತ್ತು ಶ್ರೀ ರಾಮಕೃಷ್ಣ ದಿವ್ಯದರ್ಶನಗಳು ‘ಜಗದ ಕವಿ’ಯೂ ‘ಯುಗದ ಕವಿ’ಯೂ ಆಗಿ ಮಹಾಕವಿಗೆ ಪರ್ಯಾಯನಾಮವಾಗಿರುವ ಶ್ರೀಕುವೆಂಪುವನ್ನು ಕಡೆದು, ಕಂಡರಿಸಿ, ರೂಪಿಸಿವೆ. ಅವರ ಜೀವನದ ಮಹಾಧ್ಯೇಯ ಸೂತ್ರಗಳಾದ ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ, ಮನುಜಮತ ಮತ್ತು ವಿಶ್ವಪಥಗಳು ಅವರ ಗೊಮ್ಮಟಸದೃಶ ವ್ಯಕ್ತಿತ್ವವನ್ನು ಪೋಷಿಸಿವೆ.

ಕೋಗಿಲೆಯಿಂಪು ಸಂಪಿಗೆಯ ಕಂಪು ಕಮಲದ ತಂಪು ಸಂತತಂ
ರಾಗದಲಂಪು ಜೇನ್ಗೊಡದ ನುಣ್ಪು ದಿನೇಶನ ಪೆಂಪು ಸಂಜೆಯಾ
ರಾಗದ ಕೆಂಪು ಪೂಬನದ ಸೊಂಪು ವಿಲಾಸದ ಗುಣ್ಪು ಸರ್ವಮಂ
ವಾಗಧಿದೇವಿ ತಾನೆ ಸಮೆದಳ್ ಮನದಂದು ಕುವೆಂಪು (ಜನ್ಮಮಂ)

[1]

ಮಲೆನಾಡಿನ ಪ್ರತಿಯೊಂದು ಪ್ರಕೃತಿ ವ್ಯಾಪಾರವೂ ಅಲ್ಲಿಯ ಜನಜೀವನವೂ ಅವರ ಉಸಿರಿನಲ್ಲಿ ಉಸಿರಾಗಿ ಬೆರೆತು, ಅವರ ನೆತ್ತರಿನ ಕಣಕಣಗಳಲ್ಲಿ ಹರಿದು, ಅವರ ಬಾಳನ್ನು ತಿದ್ದಿವೆ. ಸೌಂದರ್ಯಾರಾಧನೆ ಮತ್ತು ಜ್ಞಾನೋಪಾಸನೆಗಳ ಮೂಲಕ ಅವರು ಅಧ್ಯಾತ್ಮ ಕ್ಷೇತ್ರವನ್ನು ಪ್ರವೇಶಿಸುತ್ತಾರೆ. ಬಾಲ್ಯದಲ್ಲಿಯೇ ಅವರು ನೋಡಿದ ಯಕ್ಷಗಾನಗಳ, ಓದಿದ ರಾಮಾಯಣ ಭಾರತ ಮತ್ತು ಜೈಮಿನಿ ಭಾರತಗಳು ಅವರ ಮನಸ್ಸಿನ ಮೇಲೆ ಅಳಿಸಲಾಗದ ಭಾರತೀಯತ್ವವನ್ನು ಮುದ್ರೆಯೊತ್ತುತ್ತವೆ. ಕ್ರಿಸ್ತ ಧರ್ಮೋಪದೇಶದ ವ್ಯಾಸಂಗದಿಂದ ಅವರ ಮನೋಭಾವ ವಿಶಾಲವಾಗುತ್ತದೆ. ಮಲೆನಾಡಿನಲ್ಲಿ ಜನಿಸಿದವರೆಲ್ಲ, ರಾಮಾಯಣ ಕ್ರಿಸ್ತೋಪದೇಶಗಳನ್ನು ಓದಿದವರೆಲ್ಲ ಕವಿಗಳಾಗಿಲ್ಲ. ಷಡಕ್ಷರದೇವ ಹೇಳುವಂತೆ ಮಾರಾರಿಯ ಕೃಪೆಯಿಲ್ಲದವನಿಗೆ ನವಕವಿತಾ ಚಿಂತಾರತ್ನ ದೊರೆಕೊಳ್ಳುವುದಿಲ್ಲ. ಕುವೆಂಪು ಅವರು ಶ್ರೀ ಗುರುಕೃಪೆಗೆ ಪಾತ್ರರಾದ ಪುಣ್ಯಪುರುಷರು. ಆ ಕೃಪೆಯಿಂದಾಗಿ, ಅವರ ನಿರಂತರ ಸಾಧನೆಯಿಂದಾಗಿ ಇಂದ್ರಿಯ ಗಮ್ಯವಾದ ವಸ್ತುಗಳ ಸತ್ಯಸ್ವರೂಪದರ್ಶನವೂ, ಸ್ಥಾಣು ವಾದರೂ ಸದಾ ಜಾಗೃತವಾದ ಅಂತಶ್ಚಕ್ಷುವಿನ ಪ್ರಭೆಯಿಂದಾಗಿ ಅಪಾರ ಲೋಕಾನುಭವವೂ ಅವರಿಗೆ ಲಭ್ಯವಾಗಿವೆ.

ಲೋಅರ್ ಸೆಕೆಂಡರಿ ಪರೀಕ್ಷೆಯಲ್ಲಿ ಉತ್ತೀರ್ಣರಾದನಂತರ ಮುಂದಿನ ವ್ಯಾಸಂಗಕ್ಕೆಂದು ಅವರು ಮೈಸೂರಿಗಾಗಮಿಸಿದ ಘಟನೆ ಅವರ ಬಾಳಿನಲ್ಲೊದು ಮಹತ್ತರವಾದ ತಿರುವೆಂದೇ ಹೇಳಬೇಕು, ಮಲೆನಾಡಿನಲ್ಲಿ ಮೊಗ್ಗಾದ ಅವರ ಕಾವ್ಯ ಮಂದಾರ ಮೈಸೂರಲ್ಲರಳುತ್ತದೆ. ಸಹ್ಯಶಿಶುವಿಗೆ ಚಾಮುಂಡಿಯೆ ಸ್ತನ್ಯವಾಗುತ್ತದೆ. ಗ್ರಂಥಾಲಯಗಳು ಅವರ ದೇಗುಲ ಗಳಾಗುತ್ತವೆ. ಲಲಿತಾದ್ರಿ ಕಾರಂಜಿಗಳು ಅವರ ನಿತ್ಯಯಾತ್ರಾ ಸ್ಥಳಗಳಾಗುತ್ತವೆ. ಗುರುಕೃಪೆ ಯಿಂದ ಅವರಿಗೆ

ಬಾನಾದುದು ಭಗವಂತನ ಮಾನಸ ಚಿದ್ರೂಪ
ಬುವಿಯಾದುದು ಭಗವತಿಯಾ ಮೈತ್ರಿಯ ಮೃದ್ರೂಪ;
ಜಗವೆಲ್ಲವು ತಾನಾದುದು ರಸಲೀಲಾರೂಪ:

ಸಂತೆಪೇಟೆಯಲ್ಲಿರುವಾಗಲೂ ಅವರ ಕಣ್ಮುಂದೆ ಮಲೆನಾಡಿನ ದೃಶ್ಯಗಳು ಸುಳಿದಾಡು ತ್ತವೆ. ಕುಕ್ಕನಹಳ್ಳಿ ಕೆರೆಯೇರಿಯ ಮೇಲೆ ನಡೆಯುವಾಗ ನೆನಹಿನ ಬುತ್ತಿಯನ್ನು ಬಿಚ್ಚಿ ಮಲೆಸೀಮೆಯ ಸೌಂದರ್ಯ ರಸಾಸ್ವಾದನೆಯಲ್ಲಿ ತಲ್ಲೀನರಾಗುತ್ತಾರೆ. ಅವರ ಧಮನಿ ಧಮನಿಗಳಲ್ಲಿ ಕವಿಶೈಲ ನವಿಲುಕಲ್ಲುಗಳು, ಕೇದಗೆ ಬಳುಕ ಮಲ್ಲಿಗೆಗಳು, ದೊಡ್ಡು ಕಡ ಮಿಗ ಮುಸಿಯಗಳು, ತೇನೆ ಗಿಳಿ ಕಾಮಳ್ಳಿಗಳು ಮುಳುಗೇಳುತ್ತವೆ.

ಬೇಸರಾಗಿದೆ ಬಯಲು ಸೀಮೆಯ ಬೋಳು ಬಯಲಿನ ಬಾಳಿದು
ಬಿಸಿಲು, ಬೇಸಗೆ, ಬೀಸುವುರಿಸೆಕೆ ತಾಳಲಾರದ ಗೋಳಿದು;

ಎಂಬ ಭಾವನಾ ವೀಚಿಗಳು ಅವರ ಮನಸ್ಸಿನಲ್ಲಿ ಆಗಾಗ್ಗೆ ಮೊರೆಯುವುದುಂಟು. ಆದರೂ ಮಲೆನಾಡಿನ ಉತ್ತುಂಗ ಶಿಖರಗಳಿಗೆಣೆಯಾಗಿ ಜ್ಞಾನದ ಧವಳಶೃಂಗಗಳನ್ನು ಪಡೆದಿರುವ ಮೈಸೂರು ಅವರಿಗೆ ಎರಡನೆಯ ತವರಾಗುತ್ತದೆ. ಶ್ರೀರಾಮಕೃಷ್ಣಾ ಶ್ರಮವನ್ನು ಹುಗಿಸಿ, ದಕ್ಷಿಣೇಶ್ವರಕ್ಕೊಯ್ದು ತಮಗೆ ದೀಕ್ಷಾಸ್ನಾನ ಮಾಡಿಸಿದ ಸ್ವಾಮಿ ಸಿದ್ದೇಶ್ವರಾನಂದರ ಸಂಪರ್ಕ ಅವರ ಜೀವನದ ಮಹದ್ಘಟನೆಗಳಲ್ಲೊಂದಾಗುತ್ತದೆ. ಜೀವಾನಂದ ಬ್ರಹ್ಮಾನಂದ ಕಾವ್ಯಾನಂದಗಳನ್ನು ಅಂತಃಕರಣದಲ್ಲಿ ತುಂಬಿಕೊಳ್ಳುತ್ತ ಹಕ್ಕಿಯಂತೆ ಸುಖವಾಗಿ ಹಾಡುತ್ತಾರೆ. ಶ್ರೀರಾಮ ಕೃಷ್ಣಾಶ್ರಮದಲ್ಲಿ ಕುಳಿತುಕೊಂಡೇ ವಿಶ್ವಪಥದ ಮೂಲಕ ಲೋಕಪರ್ಯಟನೆ ಕೈಗೊಳ್ಳುತ್ತಾರೆ.

ಆಂಗ್ಲ ಸಾಹಿತ್ಯಾಕಾಶದಲ್ಲಿ ಗರಿಗೆದರಿ ಹಾರಾಡಿದ ಕುವೆಂಪು ಅವರು ಸಹಜವೋ ಎಂಬಂತೆ ಆಂಗ್ಲ ಭಾಷೆಯಲ್ಲಿ ನೂರಾರು ಕವನಗಳನ್ನು ರಚಿಸುತ್ತಾರೆ. ಐರಿಷ್ ಕವಿ ಜೇಮ್ಸ್ ಕಸಿನ್ಸರು ಮೈಸೂರಿಗೆ ಬಂದಿದ್ದಾಗ ಕುವೆಂಪು ಅವರು ತಮ್ಮ ಕವಿತೆಗಳನ್ನವರಿಗೆ ತೋರುತ್ತಾರೆ. ಕಸಿನ್ಸ್ ಕೇಳಿದ ಪ್ರಶ್ನೆಗಳಿಗವರು ಉತ್ತರಿಸುತ್ತ, ಗಹನವಾದ ಭಾವಾಲೋಚನೆಗಳಿಗೆ ವಾಹನವಾಗಬಲ್ಲ ಸಾಮರ್ಥ್ಯ ಕನ್ನಡಕ್ಕಿಲ್ಲವೆಂದು ನುಡಿಯುತ್ತಾರೆ. ಕಸಿನ್ಸರಿಂದ ಬೀಳ್ಕೊಂಡು ತಮ್ಮ ಕೋಣೆಗೆ  ಹೋಗುವಾಗ, ದಾರಿಯಲ್ಲಿಯೆ April ಎಂಬ ತಮ್ಮ ಕವನವನ್ನು ಕನ್ನಡಕ್ಕೆ ತರ್ಜುಮೆಮಾಡಿ, ಮತ್ತೆ ಮತ್ತೆ ಓದಿಕೊಂಡು, ಗೆಳೆಯರಿಂದ ಅದನ್ನು ಹಾಡಿಸಿದಾಗ, ತುಂಬ ಮೋಹಕವಾಗಿ ಕಾಣುತ್ತದೆ. ಅಂದಿನಿಂದ ಅವರ ಸಾಹಿತ್ಯ ಜೀವನದಲ್ಲಿ ನೂತನಾ ಧ್ಯಾಯವೊಂದು ಪ್ರಾರಂಭವಾಯಿತೆಂದೇ ಹೇಳಬಹುದು. ಆಂಗ್ಲಭಾಷೆಯೊಡ್ಡುತ್ತಿದ್ದ ಮಾಯಾಮೋಹಗಳಿಗೆ ಬಲಿಯಾಗದೆ ರೂಪಾಂಶ ಸಂಬಂಧವಾದ ತಂತ್ರ ವಿಧಾನಗಳನ್ನು ಮಾತ್ರ ಸ್ವೀಕರಿಸಿಕೊಂಡು, ಕನ್ನಡಕ್ಕೆ ವರವಾಗಿ ಪರಿಣಮಿಸುತ್ತಾರೆ. ಕನ್ನಡ ಕೆಲವರ ಭಾಷೆ, ಇಂಗ್ಲಿಷ್ ಹಲವರ ಭಾಷೆ ಆದ್ದರಿಂದ ಆಂಗ್ಲ ಭಾಷೆಯಲ್ಲಿ ಕವನ ರಚನೆ ಮಾಡಿದ್ದಾದರೆ ದೇಶ ವಿದೇಶಗಳಲ್ಲಿ ತಮ್ಮ ಕೀರ್ತಿ ಮೊಳಗುತ್ತದೆಂಬ ಆಶೆ ಆಮಿಷಗಳು ಅವರನ್ನು ಕಾಡುವುದಿಲ್ಲ.

ನನ್ನ ಕನ್ನಡ ಕವನಗಳ ಯಶಸ್ಸಿನ ವ್ಯಾಪ್ತಿ
ಲಂಡನ್ನಿನೊಳಗೂದಬೇಕಿಲ್ಲ ತುತ್ತೂರಿ:
ನಮ್ಮ ಸೊಡರಿಗೆ ಮನೆಯ ಬೆಳಗುವುದೆ ಮೊದಲಗುರಿ;
ದೂರದ ನೆಲವ ಬೆಳಗಲಿಲ್ಲೆಂದು ಕೊರಗುವರೆ?

ಎಂದವರು ಪ್ರಶ್ನಿಸುತ್ತಾರೆ. ಇದು ಬರಿಯ ಪ್ರಶ್ನೆಯಲ್ಲ, ಅವರ ದೃಢ ನಿಲುವು. ತಮ್ಮ ಸೊಡರು ದೂರದ ನೆಲವನ್ನು ಬೆಳಗುವುದಾದರೆ ಸಂತೋಷವೆ, ಬೆಳಗಲಿಲ್ಲ ದುಃಖಪಡ ಬೇಕಾಗಿಲ್ಲವೆಂದು ಸ್ಪಷ್ಟಪಡಿಸುತ್ತಾರೆ.

ದೂರದ ಲಂಡನ್ನಿನಲ್ಲಿ ತಮ್ಮ ಕಾವ್ಯಸಂಗೀತವನ್ನು ಕೇಳುವವರಿಲ್ಲವೆಂಬ ಕಾರಣದಿಂದ ಅದರ ಮಹತ್ತಿಗೆ ಕುಂದುಂಟಾಯಿತೆಂದು ಅವರೆಂದೂ ಭಾವಿಸಿದವರಲ್ಲ. ಕನ್ನಡ ಕಾವ್ಯಕ್ಷೇತ್ರ ದಲ್ಲಿ ತಿಪ್ಪ ತಿಪ್ಪ ಹೆಜ್ಜೆಯಿಡುತ್ತಿರುವಾಗಲೇ ತಾವು ಮುಂದೆ ಮಹಾಕವಿಯಾಗುವ ಆತ್ಮ ಪ್ರತ್ಯಯವನ್ನು ವ್ಯಕ್ತಪಡಿಸಿದ್ದುಂಟು. ಅದು ಕವಿಯ ಸೊಲ್ಲೆನ್ನುವುದಕ್ಕಿಂತ ಸರಸ್ವತಿಯೇ ಅವರ ಬಾಯಲ್ಲಿ ಆ ಮಾತು ಹೇಳಿಸಿರಬೇಕೆಂದು ತೋರುತ್ತದೆ. ಈ ಆತ್ಮಪ್ರತ್ಯಯ ಅವರ ವ್ಯಕ್ತಿತ್ವದಲ್ಲಿ ಹಾಗೂ ಅವರ ಸಾಹಿತ್ಯದಲ್ಲಿ ಕಂಡುಬರುವ ಅನ್ಯಾದೃಶ ಲಕ್ಷಣ.

ಇಂಗ್ಲಿಷಿಗೆ ತರ್ಜುಮೆ ಮಾಡಿದರೆ
ದೊರೆವುದು ನೋಬೆಲ್ ಬಹುಮಾನ

ಎಂದು ಅವರು ಎಂದೋ ಬರೆದ ಮಾತುಗಳು ಅವರ ಮಹಾಕಾವ್ಯ ಮಹಾಕಾದಂಬರಿ ಗಳನ್ನೋದಿದವರಿಗೆ ವಾಸ್ತವ ಸತ್ಯವೆನ್ನುವಂತೆ ತೋರದಿರಲಾರವು. ಆದರೆ ಅವರು ಕೀರ್ತಿಶನಿಯನ್ನು ಬೆನ್ನುಹತ್ತಿದವರಲ್ಲ. ಬಿರುದು ಬಾವಲಿ ಬಹುಮಾನಗಳಿಗಾಗಿ ಹಾತೊರೆದು ಕೊರಗಿದವರಲ್ಲ, ಪ್ರತಿಷ್ಠರ ಮುಂದೆ ದೈನ್ಯದಿಂದ ಅಂಗಲಾಚಿದವರಲ್ಲ, ಬಹುಮಾನ ಸಮಿತಿಯ ಸದಸ್ಯರ ಮನೆಬಾಗಿಲನ್ನು ಕಾದವರಲ್ಲ, ಸರ್ಕಾರ ನೀಡುವ ಪಿಂಚಣಿಗಾಗಿ ತಮ್ಮ ತತ್ತ್ವಗಳನ್ನು ಒತ್ತೆಯಿಟ್ಟವರಲ್ಲ. ಆದರೂ ಒಬ್ಬ ಭಾರತೀಯ ಮಹಾಕವಿ ಅಪೇಕ್ಷಿಸ ಬಹುದಾದ ಅಥವಾ ನಿರೀಕ್ಷಿಸಬಹುದಾದ ಸಕಲ ಬಹುಮಾನ ಯಶಸ್ಸುಗಳು ಅವರನ್ನು ಹಿಂಬಾಲಿಸಿದುವು. ಅವು ಹಿಂಬಾಲಿಸಿದಾಗ ಅವರು ಯಾರನ್ನು ಕೊಂಡು ಕೊನೆಯುವುದಿಲ್ಲ, ನನೆಕೊನೆಯೇರುವುದಿಲ್ಲ.

ಕೋಗಿಲೆಯ ಕಂಠಕ್ಕೆ ಸ್ವರ್ಣಪದಕವ ತೊಡಿಸಿ
ನೇಣು ಬಿಗಿಯುವುದೇಕೆ ಬಹುಮಾನವೆಂದು?

ಎಂದು ಮುಕ್ತಕಂಠದಿಂದ ನುಡಿದು, ‘ದಿವ್ಯನಿರ್ಲಕ್ಷತೆಯೆ ವರಕವಿಯ ಪಂಥ’ವೆಂದು ಸಾರುತ್ತಾರೆ.

ಅವರ ಬದುಕೆಲ್ಲ ಎಂತು ತಪಸ್ಸಾಗಿದೆಯೋ ಅಂತೆಯೇ ಮಹಾಕಾವ್ಯವಾಗಿದೆ. ಕಾವ್ಯಜೀವನ ಮತ್ತು ನಿಜಜೀವನಗಳ ನಡುವೆ ದೊಡ್ಡ ಕಮರಿಯಿರುವುದನ್ನು ಅನೇಕ ಕವಿಗಳಲ್ಲಿ ಕಾಣಲುಂಟು. ಸಾಹಿತ್ಯ ಕೃತಿಗಳ ಆಧಾರದ ಮೇಲೆ ಅವರ ವ್ಯಕ್ತಿತ್ವದ ಸ್ವರೂಪ ಲಕ್ಷಣಗಳನ್ನು ನಿರ್ಣಯಿಸಲಾಗದು. ಸಮತಾವಾದದ ಮಂತ್ರವನ್ನು ಮೂರು ಹೊತ್ತು ಜಪಿಸುವ ಸಾಹಿತಿ ಕಟ್ಟುಗ್ರ ಶೋಷಕನಾಗಿರಬಹುದು. ದೀನದಲಿತೋದ್ಧಾರದ ಬಗ್ಗೆ ಕವನ ಕಟ್ಟುವ ಜನ ಪಾನಪ್ರಮತ್ತರಾಗಿ ಜೂಜುಕಟ್ಟೆಯಲ್ಲಿ ಕಾಲಹರಣಮಾಡಬಹುದು. ತತ್ತ್ವ ನೀತಿಗಳ ಬಗ್ಗೆ ಗಂಟಲೊಣಗಿಸಿಕೊಳ್ಳುವ ಕವಿಗಳು ವ್ಯಭಿಚಾರ ಭ್ರಷ್ಟಾಚಾರಗಳಲ್ಲಿ ಸರ್ವದಾ ತಲ್ಲೀನರಾಗಿರಬಹುದು. ತಮ್ಮ ರಕ್ತದ ಕಣಕಣಗಳಲ್ಲಿ ವೈಚಾರಿಕತೆ ಮಿಡಿಯುತ್ತದೆಂದು ವೇದಿಕೆಗಳಿಂದ ಘೋಷಿಸುವವರು ತಮ್ಮ ಮಠಗಳ ಮತ್ತು ಸ್ವಾಮಿಗಳ ಬಗೆಗೆ ಚಕಾರವೆತ್ತು ವುದಿಲ್ಲ. ಆದರೆ ಕುವೆಂಪು ಅವರ ಜೀವನದಲ್ಲಿ ಇಂಥ ವಿಪರ್ಯಾಸವನ್ನು ಕಾಣಲಾಗದು. ಚಿಕ್ಕಂದಿನಲ್ಲಿಯೇ ಉಪನಿಷತ್ತಿನ ಸಾರವನ್ನುಂಡ ಹಾಗೂ ಶ್ರೀ ರಾಮಕೃಷ್ಣ ವಿವೇಕಾನಂದರ ಪ್ರಭಾವಕ್ಕೊಳಗಾದ ಫಲವಾಗಿ, ಅಂತೆಯೇ ಸ್ವತಂತ್ರ ಚಿಂತನಮಥನಗಳ ಪರಿಣಾಮವಾಗಿ ಮಾಡಿದ ತಾತ್ತ್ವಿಕ ದೃಷ್ಟಿಗೂ ಅವರ ಜೀವನ ವಿಧಾನಕ್ಕೂ ಇರುವ ಅಭೇದವೇ ಅವರ ವ್ಯಕ್ತಿತ್ವದ ವೈಶಿಷ್ಟ್ಯವಾಗಿದೆ.

ಅವರ ಬದುಕಿಗೆಂತೋ ಅಂತೆಯೇ ಅವರ ಕಾವ್ಯಕ್ಕೂ ಚಿರಂತನ ಮೌಲ್ಯಗಳುಳ್ಳ ತತ್ತ್ವಗಳೇ ತಳಹದಿ. ಆರ್ಷೇಯ ಮೌಲ್ಯಗಳೂ, ಪಾಶ್ಚಾತ್ಯ ದಾರ್ಶನಿಕರ ಚಿಂತನೆಗಳೂ ಅವರ ಮೇಲೆ ಗಾಢವಾದ ಪ್ರಭಾವ ಬೀರಿರುವುದು ನಿಜ. ಆದರೆ ಅವುಗಳನ್ನು ತಮ್ಮ ಅನುಭವದ ಒರೆಗಲ್ಲಿಗೆ ಹಚ್ಚದೆ, ಕೇವಲ ಆರಾಧನಾಭಾವದಿಂದ ಬುದ್ದಿಗುರುಡರಾಗಿ ಸ್ವೀಕರಿಸುವುದಿಲ್ಲ. ದೇಶಕಾಲಾತೀತವಾದ ಮೌಲ್ಯಗಳನ್ನೊಳಗೊಂಡಿರುವ ತತ್ತ್ವಗಳನ್ನು ತಮ್ಮ ಬದುಕಿನಲ್ಲಳವಡಿಸಿಕೊಂಡು, ಕ್ಷಣಭಂಗುರವೂ ಜೀರ್ಣವೂ ಆದ ತತ್ತ್ವಗಳು ಸಮಾಜದ ಗೌರವಕ್ಕೆ ಪಾತ್ರವಾಗಿದ್ದರೂ ಅವುಗಳನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸುತ್ತಾರೆ. ಅಥವಾ ಅವುಗಳನ್ನು ಪರಿಷ್ಕರಿಸಿ ನೂತನ ಜೀವ ದಾನ ಮಾಡುತ್ತಾರೆ. ಜತೆಗೆ ತಮ್ಮ ದಾರ್ಶನಿಕ ದೃಷ್ಟಿಗೆ ಗೋಚರವಾದ ಹೊಸ ತತ್ತ್ವಗಳಿಗೆ ಆತ್ಮತೇಜಸ್ಸನ್ನು ಧಾರೆಯೆರೆದು ಚಲಾವಣೆಗೆ ತರುತ್ತಾರೆ. ಹೀಗೆ ಅವರ ಮತಿಕೃತಿಗಳಲ್ಲಿ ಮೌಲ್ಯ ನಿರ್ಮಾಣ ಕಾರ್ಯ ಮೂರು ವಿಧಾನಗಳಲ್ಲಿ ಸಾಗುತ್ತದೆ: ಪುರಾತನ ಮೌಲ್ಯಗಳ ಪುನರುಜ್ಜೀವನ, ಜೀರ್ಣತತ್ತ್ವಗಳ ಪರಿಷ್ಕರಣ ಹಾಗೂ ನೂತನ ಮೌಲ್ಯಗಳ ಸೃಜನ. ಈ ಮೂರು ವಿಧದ ಮೌಲ್ಯಗಳಿಗೂ ಶ್ರೀರಾಮಾಯಣ ದರ್ಶನದಲ್ಲಿ ಸಾಕಷ್ಟು ಸಾಕ್ಷಿ ದೊರೆಯುತ್ತವೆ. ಇಂಥ ಮೌಲ್ಯ ನಿರ್ಮಾಣ ಕಾರ್ಯ ದರ್ಶನದೀಪ್ತ ಋಷಿ ಚೇತನವುಳ್ಳ ಪ್ರವಾದಿಯಿಂದ ಮಾತ್ರ ಸಾಧ್ಯವೆಂಬುದಕ್ಕೆ ಬುದ್ಧ ಬಸವೇಶ್ವರ ವಿವೇಕಾನಂದ ಟಾಲಸ್ಟಾಯ್‌ರಂಥ ಜೀವನಗಳೇ ನಿದರ್ಶನವಾಗಿವೆ.

ಕೂಸುತನದಿಂದಲೇ ನಿಸರ್ಗದ ಮಡಿಲಲ್ಲಿ ಅದರ ಅವಿಭಾಜ್ಯಾಂಗವೆಂಬಂತೆ ಅದರಿಂದಲೇ ಆತ್ಮ ಪೋಷಕದ್ರವ್ಯವನ್ನು ಹೀರಿಕೊಂಡು ಬೆಳೆದ ಅವರ ದೃಷ್ಟಿಯಲ್ಲಿ ಜಡವೆಂಬುದೇ ಮಿಥ್ಯೆ; ಜಡವೆಂಬುದೆಲ್ಲ ಚೇತನದ ನಟನೆಯ ಲೀಲೆ; ಚಿನ್ಮಯ ಪ್ರಜ್ಞೆ ಹೆಪ್ಪುಗಟ್ಟಿದಾಗ ಕಲ್ಲಾಗುತ್ತದೆ. ನಿಸರ್ಗದ ಪ್ರತಿಯೊಂದು ವಸ್ತುವೂ ಭಗವಂತ ಆವಿರ್ಭವಿಸುವ ಶರೀರ ವಾಗುತ್ತವೆ. ಅದರ ಒಂದೊಂದು ವ್ಯಾಪಾರವೂ ಅವನ ಲೀಲೆಯಾಗುತ್ತದೆ. ಇಂಥ ದರ್ಶನ ದೃಷ್ಟಿ ಅನುಭಾವಿಗೆ ಮಾತ್ರ ಲಭ್ಯ. ನೀಲ ವ್ರೋಬೆಳ್ಳಕ್ಕಿಯ ಪಂಕ್ತಿ ಅವನ ಕಣ್ಣಿಗೆ ದೇವರ ರುಜುವಾಗಿ ಕಂಡರೆ ಅನುಭಾವಿಯಲ್ಲದವನಿಗೆ ಅದು ಅರ್ಥಹೀನವಾಗಿ ತೋರುತ್ತದೆ. ಈ ಅನುಭಾವವೆಂಬುದು ಬುದ್ದಿ ಭಾವ ದರ್ಶನ ಪ್ರತಿಭೆಗಳ ವಿದ್ಯುದಾಲಿಂಗನದಿಂದ ಮತ್ತು ಮಾಯಾಲೋಕದ ನಿಸ್ಸಂಗತ್ವದಿಂದ ಸಂಲಬ್ಧವಾಗುವ ಅಪೂರ್ವ ಅಲೌಕಿಕಾನುಭವ.

ಈ ತಾತ್ತ್ವಿಕ ಹಾಗೂ ಅಧ್ಯಾತ್ಮದೃಷ್ಟಿ ಹಾಲಿನಲ್ಲಿ ಲೀನವಾಗಿರುವ ಸಕ್ಕರೆಯಂತೆ, ಮಧುವಿನಲ್ಲಿ ಬಯ್ಚಿಟ್ಟುಕೊಂಡಿರುವ ಸಿಹಿಯಂತೆ, ಹೂವಿನಲ್ಲಿ ಹುದುಗಿರುವ ಪರಿಮಳದಂತೆ ಕುವೆಂಪು ಅವರ ಕೃತಿಸಮಸ್ತವನ್ನು ವ್ಯಾಪಿಸಿಕೊಂಡಿದೆ. ಸಾಹಿತ್ಯ ಕೇವಲ ಮನರಂಜಕ ವಸ್ತುವೆಂದು ರಾಗವೆಳೆಯುವ ಜೀವನಶ್ರದ್ಧೆಯಿಲ್ಲದ ವಿದೂಷಕ ಪ್ರವೃತ್ತಿಯ ವಿಲಾಸಿಗಳಿಗೆ ತತ್ತ್ವಸಮೃದ್ಧವಾದ ಕೃತಿಗಳು ಕಣ್ಕಿಸುರಾಗುತ್ತವೆ. ವ್ಯಾಸ ವಾಲ್ಮೀಕಿ ಕಾಳಿದಾಸ ಮಿಲ್ಟನ್ ವರ್ಡ್ಸ್‌ವರ್ತ್ ಟಾಲಸ್ಟಾಯ್ ಮೊದಲಾದ ಸಾಹಿತಿಗಳ ತಾತ್ತ್ವಿಕತೆಯ ಗಟ್ಟಿಹಂದರದ ಮೇಲೆ ಕಾವ್ಯದ ಬಳ್ಳಿಯನ್ನು ಹಬ್ಬಿಸದಿದ್ದರೆ ಜಗತ್ತಿನ ಶ್ರೇಷ್ಠ ಚಿರಂತನ ಕವಿಗಳೆಂಬ ಬಿರುದಿಗೆ ಪಾತ್ರರಾಗುತ್ತಿರಲ್ಲಿಲ್ಲ. ಬೀರಬಲ್ಲ, ತೆನಾಲಿ ರಾಮಕೃಷ್ಣ ಜನಪ್ರಿಯ ಪ್ರತಿಭಾವಂತರು ನಿಜ, ಆದರೆ ತಿರುವಳ್ಳುವರ್, ಬಸವೇಶ್ವರ, ವೇಮನ, ಸರ್ವಜ್ಞರಂತೆ ಅವರು ಸಾರ್ವದೇಶಿಕ ಸಾರ್ವಲೌಕಿಕ ತಾರಕ ಶಕ್ತಿಯಾಗುಳಿಯಲಾರರು. ಸಮಾಜದ ಪೋಷಣೆಗೆ ಬೇಕಾದ್ದು ನೊರೆಯಲ್ಲ, ಗಷ್ಟವಲ್ಲ, ತಿರುಳು. ತಿಲೋತ್ತಮೆಗೆ ಬೇಕಾದ್ದು ಬೆಡಗು ಬಿನ್ನಾಣಗಳು, ಸೀತೆಗೆ ಬೇಕಾದ್ದ ಗರಿಮೆ ಗಾಂಭೀರ್ಯಗಳು. ಉತ್ತಮ ಕಾವ್ಯ ಹಾಲಿನಂತೆ ಸ್ವಾದುವಾಗಿರಬೇಕು, ಅಂತೆಯೇ ಜೀವಾತುವಾಗಿರಬೇಕು.

ಆಧ್ಯಾತ್ಮ ಸಾಧನೆ ಅವರ ಬದುಕಿನ ಪ್ರಧಾನ ಧ್ಯೇಯ, ಪ್ರಾರ್ಥನೆ ತಪಸ್ಸುಗಳೇ ಅವರ ಜೀವನ ವ್ಯಾಪಾರ. ಅದು ಎಳವೆಯಲ್ಲಿಯೇ ಕೆರೆ ತೊರೆಗಳಲ್ಲಿ ಮೀಯುವಾಗ, ಸಂಜೆಯ ಹೊತ್ತು ಪುರಿ ಬಾಳೆ ಹಣ್ಣುಗಳನ್ನು ಮೆಲ್ಲುತ್ತ ಕ್ಯಾಟ್ ಬಿಲ್ ಹಿಡಿದು ಕಾಡಿನಲ್ಲಿ ಏಕಾಕಿಯಾಗಿ ತಿರುಗಾಡುವಾಗ, ಬೇಟೆಗಾರರ ಜತೆ ಕಾಡಿನಲ್ಲಿ ಮರಸುಕೂರುವಾಗ, ನಿಸರ್ಗ ಸೌಂದರ್ಯ ವನ್ನೀಂಟುವಾಗ ಅವರಿಗೇ ಅರಿವಿಲ್ಲದಂತೆ ಪ್ರಾರಂಭವಾಗಿರಬೇಕು. ಶ್ರೀ ರಾಮಕೃಷ್ಣ ಸ್ವಾಮಿ  ವಿವೇಕಾನಂದರೊಡನೆ ಮಾನಸಿಕ ಸಂಪರ್ಕ ಗಾಢವಾದಂತೆಲ್ಲ ಆ ಸಾಧನೆ ತೀವ್ರಗೊಂಡಿರಬೆಕು. ಅದರ ವಿಕಾಸನದ ಅನಿವಾರ್ಯ ಫಲಿತವೆಂಬಂತೆ ಅದರ ಜತೆ ಜತೆಯಲ್ಲಿಯೇ ಅವರ ಕಾವ್ಯಸಿದ್ದಿ ಕೈಗೂಡುತ್ತದೆ. ಅಧ್ಯಾತ್ಮಸಾಧನೆ, ಕಾವ್ಯಕ್ರಿಯೆ ಹಾಗೂ ಅವರ ಜೀವನ ಇವು ಮೂರು ಒಂದರೊಡನೊಂದು ಬೆಸೆದುಕೊಂಡು, ಅವು ಅಭೇದವೆಂಬಂತೆ, ಏಕವಾಹಿನಿಯಾಗಿ ಪ್ರವಹಿಸುತ್ತವೆ. ಶಿವಶರಣರ ಜೀವನವೂ ಇದೇ ಸ್ವರೂಪದ್ದೆಂಬುದನ್ನು ಮರೆಯಲಾಗದು. ಅಂತೆಯೇ ಕುವೆಂಪು ಅವರ ಜೀವನದ ಹಾಗೂ ಕಾವ್ಯದ ಕಣ್ಣು ದರ್ಶನವೆಂದೇ ಬಗೆಯಬೇಕಾಗುತ್ತದೆ. ಆದರೆ ಈ ದರ್ಶನ ಅಥವಾ ತಾತ್ತ್ವಿಕ ಸಂಗತಿಗಳು ಅನುಭವಪೂರ್ಣ ವಾಗಿಯೇ ಕಾವ್ಯದಲ್ಲಿ ಹೊರಹೊಮ್ಮುತ್ತವೆಂಬುದನ್ನೂ, ಕುವೆಂಪು ಸಾಹಿತ್ಯದ ವೈಶಿಷ್ಟ್ಯಕ್ಕೆ ಕಾರಣವೆಂಬುದನ್ನೂ ಮರೆಯಲಾಗದು.

ಸುತ್ತಮುತ್ತಣ ಪ್ರಪಂಚವನ್ನು ಸಂವೀಕ್ಷಿಸುವಾಗ, ಅವರ ಆಲೋಚನೆಗಳನ್ನು ರೂಪಿಸುವಾಗ ದರ್ಶನ ಪ್ರತಿಭೆ ಸದಾ ಜಾಗೃತವಾಗಿರುತ್ತದೆ. ನಿಸ್ಸಂಗತ್ವ, ನಿರ್ಲಿಪ್ತತೆ ಮತ್ತು ಸಂಯಮಗಳಿಂದಾಗಿ ಅವರು ಪ್ರಪಂಚವನ್ನು ಸಾಕ್ಷೀ ಪ್ರಜ್ಞೆಯಿಂದ ನಿರ್ವಿವಾದ ಮನೋಭಾವ ದಿಂದ ವೀಕ್ಷಿಸಲನುಕೂಲವಾಗುತ್ತದೆ. ಈ ಕಾರಣದಿಂದಾಗಿ ಅವರ ಆಲೋಚನೆಗಳಲ್ಲಿ ಶಾಶ್ವತಮೌಲ್ಯಗಳ ನಿರಂತರತೆಯನ್ನು ಕಾಣಬಹುದಾಗಿದೆ. ಇದೆಲ್ಲ ದೇಶ ಪರ್ಯಟನ ದಿಂದಾಗಲೀ, ಪ್ರಾಪಂಚಿಕ ಜಂಝಾಟದ ಪ್ರಸಕ್ತಿಯಿಂದಾಗಲೀ ಲಭ್ಯವಾಗುವಂಥದಲ್ಲ. ಬದುಕೆಲ್ಲವೂ ತಪಸ್ಸಾದ ದಾರ್ಶನಿಕರಿಗೆ ಮಾತ್ರ ಸಾಧ್ಯ. ಪ್ರಾರ್ಥನೆ ತಪಸ್ಸುಗಳ ಮಹಿಮೆ ಕುವೆಂಪು ಸಾಹಿತ್ಯದಲ್ಲೆಲ್ಲ ಹರಡಿಕೊಂಡಿದೆ. ‘ನಾನೃಷಿಃ ಕುರುತೇ ಕಾವ್ಯಂ, ಋಷಿಶ್ಚಕಿಲ ದರ್ಶನಾತ್’ ಎಂಬ ಸೂಕ್ತಿ ಅವರಿಗೆ ಸಮುಚಿತವಾಗಿ ಸಲ್ಲುತ್ತದೆ.

ಆದರೆ ಅವರು ಲೋಕ ಮಾಯೆಯೆಂದು, ಬದುಕು ಮಿಥ್ಯೆಯೆಂದು ಬಗೆದವರಲ್ಲ. ನಿಸ್ಸಂಗತ್ವದಿಂದ ಸತ್ಯದರ್ಶನವಾಗುತ್ತದೆ ಮಾತ್ರವಲ್ಲ, ಜೀವನದ ಸುಖವನ್ನು ತನಿತನಿಯಾಗಿ ಸವಿಯಬಹುದೆಂಬುದಕ್ಕೆ ಅವರೇ ನಿದರ್ಶನವಾಗಿದ್ದಾರೆ. ಜಲದೊಳಗಣ ತಾವರೆಯಂತಿರು ವುದರಿಂದ ಅರಿಷಡ್ವರ್ಗಾದಿ ಲೋಪದೋಷಗಳು ಅವರ ಬಳಿ ಸುಳಿಯುವುದಿಲ್ಲ. ಇತರರು ಇವರ ಬಗ್ಗೆ ಅಸೂಯೆಯ ಮನೋಭಾವ ತಾಳಿದರೂ, ಇವರು ಮಾತ್ರ ನಿರಸೂಯರಾಗಿ ಸ್ಥಿತಪ್ರಜ್ಞರಂತೆ ಇದ್ದುಬಿಡುತ್ತಾರೆ. ಅವರಿವರ ಕ್ರೋಧಪೂರ್ಣ ಟೀಕೆ ಟಿಪ್ಪಣಿಗಳಾಗಲೀ, ಲಘುತರನಿಂದೆಯಾಗಲೀ, ಇವರನ್ನು ಮುಟ್ಟುವುದಿಲ್ಲ. ಇವರಿಗೆ ಜನ ಜಂಗುಳಿ ಯೆಂದರಾಗದು, ಪ್ರವಾಸ ಸೇರದು. ತಮ್ಮ ಸಂಕಲ್ಪವನ್ನೂ ಉಚ್ಚಾದರ್ಶಗಳನ್ನೂ ಭಂಗಗೊಳಿಸುವ ಲೌಕಿಕ ವ್ಯವಹಾರಗಳು ಇವರ ಜಾಯಮಾನಕ್ಕೊಗ್ಗುವುದಿಲ್ಲ. ಇವರ ಆತ್ಮಪ್ರತ್ಯಯ ನಿರ್ಲಕ್ಷ್ಯತೆ ಮತ್ತು ನಿವೃತ್ತಿ ಸ್ವಭಾವದಿಂದಾಗಿ ಅಹಂಕಾರಿಯೆಂದೂ, ಲೋಕ ವಿರೋಧಿಯೆಂದೂ, ದಂತಗೋಪುರ ನಿವಾಸಿಯೆಂದೂ ಇವರ ನಿಕಟ ಪರಿಚಯವಿಲ್ಲದ ಅಸೂಯಾಪರರು ಕರೆಯುವುದುಂಟು. ಈಶ್ವರೋಪಾಸಕರು, ಶ್ರೀರಾಮಕೃಷ್ಣ ಮಾನಸಪುತ್ರರೂ, ಸರ್ವತ್ರ ಭಗವದ್ದರ್ಶಿಯೂ ಆದ ಕುವೆಂಪು ಅವರನ್ನು ಅಹಂಕಾರಿಯೆಂದು ಕರೆಯುವುದು ಮೂರ್ಖತನವಾಗುತ್ತದೆ. ಅವರು ಊರುಬಿಟ್ಟು ಹೊರಗೆ ಹೋಗುವುದಿಲ್ಲ, ನಿಜ. ಉದಯರವಿ ತಪೋಮಂದಿರದಲ್ಲಿಯೇ ಕುಳಿತು ವಿಶ್ವಸಂಚಾರ ಕೈಗೊಳ್ಳುತ್ತಾರೆ. ಪರಕಾಯ ಪ್ರವೇಶ ಮಾಡುತ್ತಾರೆ, ಜಗತ್ತಿನ ಆಗುಹೋಗುಗಳನ್ನು ಗ್ರಹಿಸುತ್ತಾರೆ. ಶರೀರ ಸ್ಥಾವರವಾದರೂ ಮನಸ್ಸು ಜಂಗಮವಾಗುತ್ತದೆ. ವಿಯದ್ ಯಾತ್ರಿಯಾಗುತ್ತದೆ. ಕಾಲಹರಣ ಮಾಡುವ ಕಾಡುಹರಟೆಯೆಂದರೆ ಅವರಿಗಾಗದು. ಕಳೆದ ಕಾಲವನ್ನು ಕೂಡಿಸಿ ಕೊಡಲು ಯಾರಿಂದಲೂ ಸಾಧ್ಯವಿಲ್ಲದಾಗ ಕಾಲದ ಕೊಲೆ ಸಲ್ಲದೆಂಬುದೇ ಅವರ ಮತ, ಅವರೆಂಥ ಸರಸಿ ಎಂಬುದು ಅವರ ಅನೇಕ ಕತೆ ಕಾದಂಬರಿ ನಾಟಕಗಳಿಂದ ಮಾತ್ರವಲ್ಲ, ಕೆಲವು ನಿಮಿಷಗಳ ಸಂದರ್ಶನದಿಂದಲೇ ಸ್ಪಷ್ಟವಾಗುತ್ತದೆ. ಗೈರಿಕವಸನಧಾರಿಯಾದ ಮಾತ್ರಕ್ಕೆ ಸನ್ಯಾಸಿಯೆನಿಸಿಕೊಂಡವನು ಗೌರವಾದರಗಳಿಗೆ ಪಾತ್ರನಾಗಲಾರನೆಂದೂ, ಸಂಸಾರ ಬಂಧನವೂ ಅಲ್ಲ, ಅಸಾರವಾದುದೂ ಅಲ್ಲ, ಆ ಮೂಲಕ ಆತ್ಮ ಸಾಕ್ಷಾತ್ಕಾರ ಸಹ ಸಾಧ್ಯವೆಂದೂ ಅವರು ಕಾರ್ಯತಃ ತೋರಿಸಿಕೊಟ್ಟಿದ್ದಾರೆ. ಜಡವೂ ಕೂಡ ಚೇತನದ ಲೀಲೆಯೆಂದು ತಿಳಿದವರಿಗೆ, ಸರ್ವತ್ರ ಭಗವಂತನ ಆವಿರ್ಭಾವವನ್ನು ದರ್ಶಿಸುವವರಿಗೆ, ಸರ್ವವ್ಯವಹಾರ ಗಳಲ್ಲಿಯೂ ಭಗವಲ್ಲೀಲೆಯನ್ನೆ ಕಾಣುವವರಿಗೆ ಸ್ತ್ರೀಯ ಅಂಗಾಂಗಗಲ್ಲಿಯೂ ಶಿವತತ್ತ್ವ ವನ್ನು ಗ್ರಹಿಸುವವರಿಗೆ ಸಂಸಾರವೂ ಮೋಕ್ಷದ ದಾರಿಯಾಗುತ್ತದೆ. ಜಗದೀಶ್ವರನೇ ಸಂಸಾರಿ ಯಾಗಿರುವಾಗ ಭಗವಂತನೇ ಹೆಣ್ಣು ಗಂಡುಗಳನ್ನು ಸೃಷ್ಟಿಸಿರುವಾಗ ಸಂಸಾರ ಹೇಯವಾಗದೆ ಗ್ರಾಹ್ಯವಾಗುತ್ತದೆ. ವಿಷಯ ಲಂಪಟನಿಗೆ ಅದು ಭಾರವಾಗಿ ಅಧಃಪತನಕ್ಕೆ ಮಾರ್ಗವಾಗಿ ಕಾಣಬಹುದೇ ಹೊರತು ಬಳಸಿಯೂ ಬ್ರಹ್ಮಚಾರಿಯಾದ ಸಂಯಮಿಗೆ, ಹೆಣ್ಣಲ್ಲಿಯೇ ಮುಕ್ತಿಲಕ್ಷ್ಮಿಯನ್ನು ಕಾಣುವ ಕಣ್ಣುಳ್ಳ ಋಷಿಚೇತನರಿಗೆ ಅದು ಸಿದ್ದಿಗೆ ಮಾಧ್ಯಮವಾಗುತ್ತದೆ. ಅವರ ಪ್ರೇಮಗೀತೆಗಳಲ್ಲಿ ಸಂಸಾರ ಸಂಹಿತೆಯ ಸ್ವರೂಪ ಸ್ಪಷ್ಟವಾಗಿ ಅಭಿವ್ಯಕ್ತಗೊಂಡರೆ, ಅವರ ಕಾದಂಬರಿ ಮಹಾಕಾವ್ಯಗಳಲ್ಲಿ ‘ಯಮನ ಸೋಲು’ ಅಂಥ ನಾಟಕದಲ್ಲಿ ಅದಕ್ಕೆ ನಿದರ್ಶನವೊದಗುತ್ತದೆ. ಅಷ್ಟೇ ಅಲ್ಲ, ಸರ್ವವಿನಾಶದ ನಡುವೆಯೂ ತಾವು ಆಶಾವಾದಿ ಯೆಂದು ಘೋಷಿಸುವ ಕುವೆಂಪು ಅವರನ್ನು ಕಂಡಾಗ ‘ದೇವಲೋಕ ಮರ್ತ್ಯಲೋಕವೆಂಬುದು ಬೇರಿಲ್ಲ ಕಾಣಿ ಭೋ’ ಎಂಬ ಶಿವಶರಣರ ನೆನಪು ಮರುಕಳಿಸುತ್ತದೆ.

ಅವರು ನಿರ್ಲಿಪ್ತರಾದರೂ ಕ್ರಿಯಾವಿಮುಖರಲ್ಲ, ಕರ್ತವ್ಯಬಾಹಿರರಲ್ಲ. ಅವರ ಪ್ರತಿಯೊಂದು ಲೌಕಿಕ ವ್ಯವಹಾರದಲ್ಲಿಯೂ ಶುದ್ಧ ಸಾತ್ತ್ವಿಕ ದೈವೀಶ್ರದ್ಧೆ ಎದ್ದು ಕಾಣುತ್ತದೆ. ಕಾವ್ಯಕ್ಷೇತ್ರವೆಂತೊ ಅಂತೆಯೇ ಶಿಕ್ಷಣ ಕ್ಷೇತ್ರವೂ ಶಿಷ್ಯಕೋಟಿಯಲ್ಲಿ ದೈವೀಶಕ್ತಿಯನ್ನು ಪ್ರಚೋದಿಸುವ ಸಾಧನವಾಗುತ್ತದೆ. ಕುಲಪತಿ ಪದವಿ ಲೋಕಸಂಗ್ರಹಕ್ಕನುವಾಗುವ ಪ್ರಣಾಳಿಕೆಯಾಗುತ್ತದೆ. ತಾವು ನೆಟ್ಟು ಬೆಳೆಸುವ ಉದ್ಯಾನವೆಂತು ಭಗವಂತನ ಆವಾಹನೆಗೆಂದು ನಿರ್ಮಿಸಿದ ದೇವಾಲಯವಾಗುತ್ತದೆಯೊ, ಅಂತೆಯೇ ತಾವು ಕೊಂಡ ಕಾರು ಸೌಂದರ್ಯ ಸ್ಥಾನಗಳಿಗೊಯ್ಯುವ, ಈಶ್ವರೋಪಾಸನೆಗೆ ನೆರವಾಗುವ ದೈವೀಯಂತ್ರವಾಗುತ್ತದೆ, ಮಹಾಶಕ್ತಿಯ ಆವಿರ್ಭಾವಕ್ಕೆ ನೆರವಾಗುವ ಸಾಧನವಾಗುತ್ತದೆ. ಪ್ರಸಾರಾಂಗದ ವಿಕಾಸ ಮಾನಸ ಗಂಗೋತ್ರಿಯ ಸ್ಥಾಪನೆ ಹಾಗೂ ಕನ್ನಡ ಮಾಧ್ಯಮ ಪ್ರಚಾರವೇ ಅವರ ಕರ್ತವ್ಯ ಪರತೆಗೆ ಚಿರಸಾಕ್ಷಿಯಾಗುಳಿದಿವೆ.

ಶ್ರೀರಾಮಾಯಣದರ್ಶನಂ ಮಹಾಕಾವ್ಯ ಅವರ ದರ್ಶನವೈಭವಕ್ಕೆಂತು ನಿದರ್ಶನವಾಗಿದೆಯೋ ಎರಡು ಮಹಾ ಕಾದಂಬರಿಗಳು ಹಾಗೂ ನಾಟಕಗಳು ಅಂತೆಯೇ ಅವರ ಲೋಕಾನುಭವಸಂಪತ್ತಿನ ಖನಿಗಳಾಗಿವೆ. ಅವುಗಳನ್ನು ಪ್ರವೇಶಿಸಿದವರಿಗೆ ಮಾನವ ಜೀವನದ ವಿಶ್ವರೂಪದರ್ಶನ ಲಭಿಸುತ್ತದೆ; ಪಾತ್ರ ಪರಿಸರಗಳ ನಿರೂಪಣೆಯಲ್ಲಿ ಪ್ರತಿ ಬಿಂಬಗೊಂಡಿರುವ ಅವರ ವೀಕ್ಷಣ ಸಾಮರ್ಥ್ಯ ಅವರ ಕೃತಿಗಳಲ್ಲಿ ಕಾಣುವ ಅದ್ಭುತ ಗಳಲ್ಲೊಂದಾಗಿದೆ.

ಕುವೆಂಪು ಅವರ ಕೃತಿಗಳನ್ನವಲೋಕಿಸಿ, ಅವರನ್ನು ಹತ್ತಿರದಿಂದ ನೋಡಿದಾಗ ಅವರ ಸಾಹಿತ್ಯಕ್ಕಿಂತಲೂ ಅವರ ಬದುಕು ದೊಡ್ಡದೆಂಬ, ಅವೆರಡರ ನಡುವೆ ಹುರುಡು ಸಮನಿಸಿ, ಅವೆರಡೂ ಪರಸ್ಪರ  ಪ್ರಭಾವಕ್ಕೊಳಗಾಗಿವೆಯೆಂಬ, ಅವರ ವ್ಯಕ್ತಿತ್ವದ ಮಹತ್ತಿಗೆ ಪೂರ್ಣ ದೃಷ್ಟಿಯ ಸಮನ್ವಯ ಮನೋಭಾವವೇ ಕಾರಣವೆಂಬ ಭಾವನೆ ಹೊಳೆಯದಿರದು. ಬುದ್ದಿಭಾವಗಳ, ಗದ್ಯ ಪದ್ಯಗಳ, ದೇವಮಾನವರ, ಲೌಕಿಕಾಲೌಕಿಕಗಳ ಸಾಮಾನ್ಯ ಅಸಾಮಾನ್ಯಗಳ, ಭಕ್ತಿ ಜ್ಞಾನಮಾರ್ಗಗಳ, ಪರಂಪರೆ ಪ್ರಗತಿಗಳ, ಪಾಂಡಿತ್ಯ ಪ್ರತಿಭೆಗಳ ಹೀಗೆಯೇ ಇನ್ನೂ ಅನೇಕ ವಿಚಾರಗಳ ಸಮನ್ವಯವನ್ನು ಅವರ ಬಾಳಿನಲ್ಲಿ ಕಾಣಬಹುದಾಗಿದೆ. ಈ ಸಮನ್ವಯ ದೃಷ್ಟಿ ಯಾರ ಬಾಳಿನ ಸ್ಫೂರ್ತಿಯಾಗಿ ಪರಿಣಮಿಸುತ್ತ ದೆಯೋ ಅಂಥವರು ಮನೋವಿಕಾರ ದೌರ್ಬಲ್ಯಗಳಿಂದ ದೂರವಾಗಿರುತ್ತಾರೆ. ಅವರ ಚಿತ್ತದಲ್ಲಿ ಸಮಸ್ಥಿತಿ ನೆಲಸುತ್ತದೆ; ಶಮ ದಮ ಧೃತಿ ಮೊದಲಾದ ದೈವೀ ಗುಣಗಳು ಸ್ಫುರಿಸಿ, ಅವರ ಬದುಕು ಕಾಂತಿಯುಕ್ತವಾಗುತ್ತದೆ, ಹಸನಾಗುತ್ತದೆ.

ಕುವೆಂಪು ಅವರ ತಾತ್ತ್ವಿಕ ದೃಷ್ಟಿಗೆ ಅಧ್ಯಾತ್ಮ ಸಾಧನೆಯೇ ತಳಹದಿಯೆಂಬ, ಅಧ್ಯಾತ್ಮಿಕ ಶ್ರದ್ಧೆಗೆ ವೈಚಾರಿಕತೆ ಮತ್ತು ವೈಜ್ಞಾನಿಕ ದೃಷ್ಟಿಗಳು ವಿರೋಧವಲ್ಲವೆಂಬ ಭಾವನೆ ಗಣ್ಯವಾದದ್ದು. ಆದ್ದರಿಂದಲೇ ಅವರು ರೂಪಿಸುವ ತತ್ತ್ವಗಳಿಗೆ ಸಾರ್ವತ್ರಿಕತೆಯಿದೆ, ಅಪೂರ್ವಮೌಲ್ಯದ ಮಹತ್ತ್ವವಿದೆ. ‘ಪರಂಪರಾಗತವಾದ ಉಪನಿಷತ್ಪ್ರಣೀತವಾದ ಆರ್ಷೇಯ ತತ್ತ್ವಗಳಲ್ಲಿ ಅವರು ಮಿಂದಿರುವವರಾದರೂ, ಅವುಗಳನ್ನೆಲ್ಲ ಬುದ್ದಿಯನ್ನು ವಂಚಿಸಿ ಅನಾಮತ್ತಾಗಿ ಸ್ವೀಕರಿಸುವಂಥವರಲ್ಲ. ಅವುಗಳನ್ನು ವೈಜ್ಞಾನಿಕವಾಗಿ ಗ್ರಹಿಸಿ ವಿವೇಕದ ಒರೆಗಲ್ಲಿನಲ್ಲಿ ಪರೀಕ್ಷಿಸಿ ಸಮಕಾಲೀನ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು, ವಿಶ್ವಮೌಲ್ಯದ ಮಟ್ಟಕ್ಕೆ ಬರುವಂಥವನ್ನು ಮಾತ್ರ ಪರಿಷ್ಕರಣಕ್ರಿಯೆಯ ಮೂಲಕ ರಕ್ಷಿಸುತ್ತಾರೆ. ವೈಚಾರಿಕ ಮೌಲ್ಯ ನಿರ್ಮಾಣಕಾರ್ಯದಲ್ಲಿ ಅವರ ಮಟ್ಟಕ್ಕೇರುವ ಜನ ವಿರಳ. ಅವರ ಸ್ವತಂತ್ರ ಮನೋಧರ್ಮಕ್ಕೆ ಅವರ ವೈಚಾರಿಕ ಕ್ರಾಂತಿಗೆ ಅವರು ಸಂಪ್ರದಾಯಸ್ಥರೂ ಲಾಂಛನಾಚಾರಬದ್ಧರೂ ಆದ ಶಾಸ್ತ್ರ ಸಂಮೂಢರ ಮನೆಯಲ್ಲಿ ಹುಟ್ಟದಿರುವುದೇ ಮುಖ್ಯಕಾರಣ. ಹಾಗೆ ಹುಟ್ಟಿದ ಪಕ್ಷದಲ್ಲಿ ಅವರು ಪ್ರಾರಬ್ಧ ವಾಸನೆಯಿಂದಾಗಿ ಲೋಕಕಲ್ಯಾಣಕಾರಕವೂ ಮೌಢ್ಯವರ್ಜಿತವೂ ಶಾಂತಿನಿಷ್ಠವೂ ಆದ ಸಾಹಿತ್ಯವನ್ನು ನಿರ್ಮಾಣಮಾಡಲಾಗುತ್ತಿರಲಿಲ್ಲ. ಶೂದ್ರತಪಸ್ವಿಯಂಥ ನಾಟಕವನ್ನು ರಚಿಸುತ್ತಿರಲಿಲ್ಲ. ಧ್ರಾಂ ಧ್ರೀಂ ಧ್ರೂಂ, ಯಾವಕಾಲದ ಶಾಸ್ತ್ರವೇನು ಹೇಳಿದರೇನು? ಓ ಬನ್ನಿ ಸೋದರರೆ, ಬೇಗ ಬನ್ನಿ, ಇಂದಿನ ದೇವರು, ಇವೇ ಮೊದಲಾದ ಕವನಗಳನ್ನು ರೂಪಿಸುವ ಎದೆಗಾರಿಕೆಯನ್ನು ತೋರಿಸುತ್ತಿರಲಿಲ್ಲ. ಈ ವೈಚಾರಿಕತೆಯಂತು ಪಿತ್ರಾರ್ಜಿತ ಆಸ್ತಿಯೂ ಅಲ್ಲ. ಪರರಿಂದ ಎರವಲು ಪಡೆದದ್ದೂ ಅಲ್ಲ. ಅದು ಅವರ ಸ್ವಯಾರ್ಜಿತ ಆಸ್ತಿ. ಅದು ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಎಂಬ ಅವರ ಬಹುಹಿಂದಿನ ಲೇಖನ ಸಂಗ್ರಹದಲ್ಲಿಯೇ ಘನೀಭೂತವಾಗಿ ಮೈವೆತ್ತಿರುವುದನ್ನು ಕಾಣಬಹುದಾಗಿದೆ. ಅವರು ಸೃಷ್ಟಿಸಿರುವ ವಿಚಾರಸಾಹಿತ್ಯ ಗುಣ ಗಾತ್ರಗಳಲ್ಲಿ ಸಮೃದ್ಧವಾಗಿರುವುದಲ್ಲದೆ ಸಂಪ್ರದಾಯವಾದಿಗಳ ಹೃದಯವನ್ನು ಜರ್ಝರಗೊಳಿಸಿ, ಬಹುಜನರಲ್ಲಿ ವಿವೇಕವನ್ನು ಕೆರಳಿಸಿ ಅವರನ್ನು ಕ್ರಾಂತಿಪಥದಲ್ಲಿ ಕೊಂಡೊಯ್ಯುತ್ತಿದೆ. ಅವರ ವೈಚಾರಿಕತೆಯ ಹಿನ್ನೆಲೆಯಲ್ಲಿ ವೈಜ್ಞಾನಿಕ ದೃಷ್ಟಿ ಗಾಢವಾಗಿದೆಯೆನ್ನುವುದನ್ನು ಮರೆಯಲಾಗದು.

ಸಮಾಜದಲ್ಲಿ ತಾಂಡವವಾಡುತ್ತಿರುವ ಸರ್ವಮೌಢ್ಯಗಳ ಬಗ್ಗೆ ಅವರು ಖಡ್ಗವೆತ್ತಿದ್ದಾರೆ. ದೇವರ ಹಾಗೂ ಪುರಾತನ ಋಷಿಗಳ ಹೆಸರಿನಲ್ಲಿ ನಡೆಯುತ್ತಿರುವ ಅನಾಚಾರ ಭ್ರಷ್ಟಾಚಾರ ಗಳನ್ನು ತೀವ್ರವಾಗಿ ಖಂಡಿಸಿದ್ದಾರೆ. ವೇದಪುರಾಣಾಗಮ ಶಾಸ್ತ್ರಗಳ ನೆಪವೊಡ್ಡಿ ಆಚರಿಸುವ ಕಂದಾಚಾರಗಳನ್ನು ನಿರ್ದಾಕ್ಷಿಣ್ಯವಾಗಿ ಬಯಲಿಗೆಳೆದಿದ್ದಾರೆ. ವಿಚಾರ ಪರಿಪ್ಲುತವಾದ ಲೇಖನ ಭಾಷಣಗಳು ತಮ್ಮ ಲೇಖನಿಯಿಂದ ಹೊರಬಿದ್ದಾಗಲೆಲ್ಲ ಅವರು ಸಂಪ್ರದಾಯ ಜಡರ ನಿಂದಾವಮಾನಗಳಿಗೆ ಮಾತ್ರವಲ್ಲ, ಪ್ರಾಣಭಯಕ್ಕೂ ಗುರಿಯಾಗಿದ್ದಾರೆ. ಆದರೆ ಹಿಡಿ ಸಂಖ್ಯೆಯ ಆ ವಿಚಾರಹೀನ ಠಕ್ಕರ ಕಿರುಕುಳ ತೀವ್ರವಾದಂತೆಲ್ಲ ಸಾಮಾನ್ಯ ಜನರ ವಿವೇಕ ಜಾಗೃತಗೊಳ್ಳುತ್ತದೆಂಬ, ಕ್ರಾಂತಿಯ ಮದ್ದುಸಿಡಿಯುತ್ತದೆಂಬ, ಆ ಜನರ ಅಪಪ್ರಚಾರವೇ ಪ್ರಚಾರಸಾಧನವಾಗುತ್ತದೆಂಬ ಕಠೋರ ಸತ್ಯಕ್ಕೆ ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಒಕ್ಕೂಟದಲ್ಲಿ ಮಾಡಿದ ಕುವೆಂಪು ಅವರ  ಭಾಷಣವೂ, ಅನಂತರ ನಾಡಿನಲ್ಲಿ ತಲೆದೋರಿದ ಪ್ರಕ್ಷುಬ್ಧ ಪರಿಸ್ಥಿತಿಯೂ ನಿದರ್ಶನವಾಗಿವೆ. ತತ್ವದರ್ಶನವೆಂತೋ ವೈಚಾರಿಕತೆಯೂ ಅವರ ಬಾಳಿನ ಒಂದು ಭಾಗವಾಗಿದೆಯೆಂಬುದು ಸತ್ಯಸ್ಯ ಸತ್ಯ.

ಅವರ ವೈಚಾರಿಕತೆಯ ತೆಕ್ಕೆಯಲ್ಲಿ ಬರುವ ಜಾತಿ-ವರ್ಣ, ಮತ ಮತ್ತು ಪುರೋಹಿತ ಷಾಹಿಗಳನ್ನು ಕುರಿತ ಮೂರು ಮೂಲಭೂತ ಸಂಗತಿಗಳ ಕಡೆಗೆ ಭರತಖಂಡದ ಹಿತದೃಷ್ಟಿಯಿಂದ ನಾಯಕರು, ಸುಧಾರಕರು ಹಾಗೂ ಬುದ್ದಿಜೀವಿಗಳು ಆದ್ಯಗಮನಹರಿಸ ಬೇಕಾಗಿದೆ. ಭಾರತೀಯ ಸಮಾಜವನ್ನು ಛಿದ್ರ ವಿಚ್ಛಿದ್ರಗೊಳಿಸುವ ಮೂಲಕ ಅದನ್ನು ದುರ್ಬಲಗೊಳಿಸಿ, ಅನ್ಯಾಕ್ರಮಣಕ್ಕೂ ಅನ್ಯಮತಗಳ ಪ್ರಾಬಲ್ಯಕ್ಕೂ ಎಡೆ ಮಾಡಿಕೊಟ್ಟು, ಅದರ ಸತ್ತ್ವವನ್ನು ಹೀರಿಬಿಟ್ಟ, ಜನತೆಯನ್ನು ಗುಲಾಮಗಿರಿಯ ರಸಾತಲಕ್ಕೆ ತಳ್ಳಿದ ಜಾತಿವರ್ಣವ್ಯವಸ್ಥೆಯ ಹಾನಿಕಾರಕ ಪರಿಣಾಮಗಳನ್ನು ಅವಕಾಶ ಸಿಕ್ಕಿದಾಗಲೆಲ್ಲ ಉಗ್ರವಾಗಿ ಖಂಡಿಸುತ್ತಾರೆ. ಆ ವ್ಯವಸ್ಥೆ ತೀರ ಅಸಹಜವೆಂದೂ ಅದು ಕೊನೆಗೊಳ್ಳದ ಹೊರತು ಭರತ ಖಂಡ ಏಕರಾಷ್ಟ್ರವಾಗಿ ಬಾಳಿ ಪ್ರಗತಿ ಸಾಧಿಸಲಾರದೆಂದೂ ಸಕಾರಣವಾಗಿ ವಾದಿಸಿದ್ದಾರೆ. ಕೇವಲ ಕೆಲವು ಮಂದಿ ತಮ್ಮ ಉತ್ತಮಿಕೆಯನ್ನು ಕಾಪಾಡಿಕೊಳ್ಳುವ ಸಲುವಾಗಿ ಅನೇಕ ಆಚಾರ ಪದ್ಧತಿಗಳನ್ನೂ ದೇವರು ದೇವಾಲಯಗಳನ್ನೂ ಸೃಷ್ಟಿಸಿ ಸಮಾಜದ ಜೀವನಾಡಿ ಯಂತಿರುವ ಶೂದ್ರಾತಿಶೂದ್ರರನ್ನು ಸಾವಿರಾರು ವರ್ಷಗಳಿಂದ ಬಹಿಷ್ಕರಿಸಿದ್ದಕ್ಕಾಗಿ ಅಪರಿಹಾರ್ಯವಾದ ಸಮಸ್ಯೆಗಳು ಭೂತಾಕಾರವಾಗಿ ಬಾನ್ನೆಲಗಳ ಅಗಲಕ್ಕೆ ಬಾಯಿತೆರೆದು ನಿಂತಿವೆಯೆಂದು ಸ್ಪಷ್ಟಪಡಿಸಿದ್ದಾರೆ. ಕಂದಾಚಾರಗಳ ಹಾಗೂ ಮೂಢನಂಬಿಕೆಗಳ ವಿನಾಶಕಾರೀ ಪರಿಣಾಮಗಳು ಜಲಗಾರ ನಾಟಕದಲ್ಲಿ ಕಾನೂರು ಹೆಗ್ಗಡತಿ ಹಾಗೂ ಮಲೆಗಳಲ್ಲಿ ಮದುಮಗಳು ಕಾದಂಬರಿಗಳಲ್ಲಿ ಪ್ರತಿಧ್ವನಿಗೊಳ್ಳುತ್ತವೆ. ವರ್ಣಪದ್ಧತಿಯನ್ನು ಪ್ರಶಂಸಿಸುವ ಮೂರ್ಖರು ಈ ವೈಜ್ಞಾನಿಕಯುಗದಲ್ಲಿಯೂ ಬೇರೂರಿ ಕುಳಿತಿರುವುದು ರಾಷ್ಟ್ರದ ದುರ್ದೈವವೆಂದು ಹೇಳಬೇಕು. ಗಾಂಧೀಜಿಯಂಥ ಸಜ್ಜನರು ಸಹ ವರ್ಣಾಶ್ರಮವನ್ನು ತಿರಸ್ಕರಿಸದಿದ್ದುದು ಸೋಜಿಗವಾಗುತ್ತದೆ. ಜಾತಿವರ್ಣಗಳನ್ನು ಸಂಪೂರ್ಣವಾಗಿ ಬಹಿಷ್ಕರಿಸದಿದ್ದರೆ ಈ ನಾಡಿಗೆ ಮುಕ್ತಿಯಿಲ್ಲವೆಂದು ಅಂಬೇಡ್ಕರ್ ಎಚ್ಚರಿಕೆಯಿತ್ತದ್ದುಂಟು. ‘ವರ್ಣಾಶ್ರಮವನ್ನು ತಿದ್ದುವುದಲ್ಲ. ಅದನ್ನು ಸಂಪೂರ್ಣವಾಗಿ ತೊಲಗಿಸಬೇಕು. ಅಂದರೆ ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರ ಅಂತ್ಯಜ ಇತ್ಯಾದಿ ವಿಭಜನೆಯನ್ನು ನಿರ್ನಾಮ ಮಾಡಬೇಕು ಎಂದು ಕುವೆಂಪು ಮುಂದಿನ ಪೀಳಿಗೆಗೆ ಕರೆಯಿತ್ತಿದ್ದಾರೆ.

ಯಾವುದೇ ಮತದಲ್ಲಿರುವ ಚಿರಂತನಮೌಲ್ಯಗಳುಳ್ಳ ಧಾರ್ಮಿಕ ತತ್ತ್ವಗಳನ್ನು ಎಲ್ಲರೂ ಒಪ್ಪಲೇಬೇಕು. ಆದರೆ ಅಂಥ ತತ್ತ್ವಗಳು ಕನಿಷ್ಠ ಪ್ರಮಾಣದಲ್ಲಿರುತ್ತವೆ. ಅದರ ಸುತ್ತ ಬೆಳೆಯುವ ಕಳೆ ಸತ್ತೆಗಳು ಅವುಗಳನ್ನು ಸಂಪೂರ್ಣವಾಗಿ ಮರೆ ಮಾಡುತ್ತವೆ. ಹುರುಳಿಲ್ಲದ ಮೌಢ್ಯ ಸಂಪ್ರದಾಯಗಳು ಸರ್ವತ್ರ ವಿಜೃಂಭಿಸುತ್ತವೆ. ಮತ ಮೇಲೆ ಮೇಲೆ ಪೂಜ್ಯವೆಂಬಂತೆ ತೋರುತ್ತದೆ; ಸಾಧುತ್ವವನ್ನು ನಟಿಸುತ್ತದೆ; ಅದರೊಳಗೊಮ್ಮೆ ಪ್ರವೇಶಿಸಿದ್ದಾದರೆ ಅಭಿಮನ್ಯುವಿನ ಗತಿಯೊದಗುತ್ತದೆ. ಕಾಪಟ್ಯ ವಂಚನೆಗಳಿಗೆ ಬಲಿಯಾಗಬೇಕಾಗುತ್ತದೆ. ‘ಮತ ಮೌಢ್ಯಗಳನ್ನು ನಿರಾಕರಿಸದಿದ್ದರೆ ನಿಜವಾದ ಪ್ರಜಾಸತ್ತೆಯಾಗಲಿ ಸಮಾಜವಾದವಾಗಲಿ ಸಮಾನತಾ ಭಾವ ಸ್ಥಾಪನೆಯಾಗಲಿ ಎಂದೆಂದಿಗೂ ಸಾಧ್ಯವಾಗುವುದಿಲ್ಲ’ ಎಂದು ಕುವೆಂಪು ಅವರು ಆರ್ಭಟಿಸುತ್ತಾರೆ. ನೂರಾರು ಭೇದ ಭಾವನೆಗಳು ಬಿರುಕು ಒಡಕುಗಳಿಗೆ ಮತವೇ ಕಾರಣವೆಂದು ಸ್ಪಷ್ಟಪಡಿಸಿದ್ದಾರೆ.ಮತ ಜನ ಜೀವನಗಳ ನಡುವೆ ಗೋಡೆ ನಿರ್ಮಿಸುತ್ತದೆ. ಭಾವೈಕ್ಯಕ್ಕೆ ಅಡ್ಡಿಯಾಗುತ್ತದೆ. ಭ್ರಾತೃತ್ವಕ್ಕೆ ಶಾಪವಾಗುತ್ತದೆ. ರಾಷ್ಟ್ರೈಕ್ಯಕ್ಕೆ ಶೂಲವಾಗುತ್ತದೆ. ಮಾನವನನ್ನು ಅಧ್ಯಾತ್ಮದ ಕಡೆಗೆ ಒಯ್ಯಬೇಕಾದ ಅದು ಅಜ್ಞಾನದ ಕೂಪಕ್ಕೆ ತಳ್ಳುತ್ತಿದೆ. ವಿಶ್ವಭ್ರಾತೃತ್ವವನ್ನು ಸಾಧಿಸಬೇಕಾದ ಅದು ಗುಂಪುಗಾರಿಕೆಗೆ ಪ್ರೋನೀಡಿ, ಸಮಾಜವನ್ನು ಕುರುಕ್ಷೇತ್ರಗೊಳಿಸುತ್ತದೆನ್ನುವುದಕ್ಕೆ ನಿನ್ನೆ ಮೊನ್ನೆ ತಾನೆ ಉತ್ತರ ಭಾರತದಲ್ಲಿ ನಡೆದ ಅಕಾಲಿ- ನಿರಂಕಾರಿಗಳ, ಷಿಯಾ-ಸುನ್ನಿಗಳ ನಡುವಣ ಕಾಳಗವೇ ಸಾಕ್ಷಿಯಾಗಿದೆ. ಎಂದೋ ಮನು ಬರೆದಿಟ್ಟ ಶಾಸ್ತ್ರವನ್ನು ಪವಿತ್ರವೆಂದು ನಾವೀಗ ಸ್ವೀಕರಿಸಬೇಕಾಗಿಲ್ಲ. ‘ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?’ ಪಂಚಮರ ಶಿಶು ಕೆರೆಯಲ್ಲಿ ಮುಳುಗಿದಾಗ ಬ್ರಹ್ಮತ್ವ ಕೆಟ್ಟು ಹೋದೀತೆಂಬ ಭಯದಿಂದ ಅದನ್ನು ಮುಟ್ಟದಿರುವುದು ನ್ಯಾಯವೆ? ಶಾಸ್ತ್ರ ಸಮ್ಮತವೆ?

ಅಂತು ಮನು ತಾನು ಹೇಳಿರಲಾರನಯ್ಯಯ್ಯ!
ಹೇಳಿದ್ದರವನನೂ ಶಾಸ್ತ್ರದೊಳೆ ಸುತ್ತಿ
ಸ್ವರ್ಗ ಹೋಗಲಿ ಮತ್ತೆ ನರಕ ಬಂದರು ಬರಲಿ
ಎದೆಯ ಧೈರ್ಯವ ಮಾಡಿ ಬಿಸುಡಾಚೆಗೆತ್ತಿ!

ಎಂದು ಕುವೆಂಪು ಉದ್ಘೋಷಿಸುತ್ತಾರೆ; ಈ ರೀತಿ ಸಮಾಜಘಾತಕರನ್ನು ಮಾನವ ದ್ವೇಷಿಗಳನ್ನು ಧರ್ಮದ್ರೋಹಿಗಳನ್ನು ಖಂಡ ತುಂಡವಾಗಿ ದಿಟ್ಟತನದಿಂದ ಟೀಕಿಸಿದ ಸಾಹಿತಿ ಮತ್ತೊಬ್ಬನಿಲ್ಲ. ಪವಿತ್ರವೆಂದು ಪರಿಗಣಿತವಾಗಿರುವ ನಮ್ಮ ಪ್ರಾಚೀನ ಗ್ರಂಥಗಳಲ್ಲಿ ಇಂಥ ವಿಚಾರಹೀನ ಸತ್ಯದೂರವಾದ ಸಂಗತಿಗಳು ಎಷ್ಟೋ ಸೇರಿಕೊಂಡಿರುವಾಗ ಯಾವುದೊಂದು ಗ್ರಂಥವೂ ಏಕೈಕ ಪರಮ ಪೂಜ್ಯ ಧರ್ಮಗ್ರಂಥವಾಗಬಾರದು. ಪ್ರತಿಯೊಬ್ಬ ವ್ಯಕ್ತಿಯೂ ತನಗೆ ಸಾಧ್ಯವಾದವುಗಳನ್ನೆಲ್ಲ ಓದಿ ತಿಳಿದು ತನ್ನ ದರ್ಶನವನ್ನು ತಾನೆ ನಿರ್ಣಯಿಸಿ ಕಟ್ಟಿಕೊಳ್ಳಬೇಕು ಎಂದವರು ಸ್ಪಷ್ಟಪಡಿಸಿದ್ದಾರೆ. ಅನೇಕ ಅನಾಹುತಗಳಿಗೆ ಮತವೇ ಕಾರಣವಾದ್ದರಿಂದ ಯಾವ ಒಂದು ಮತಕ್ಕೂ ಸೇರದೆ, ಪ್ರತಿಯೊಬ್ಬನೂ ತಾನು ಕಂಡು ಕೊಳ್ಳುವ ‘ತನ್ನ’ ಮತಕ್ಕೆ ಮಾತ್ರ ಸೇರಬೇಕು ಎಂದವರು ಕರೆಕೊಟ್ಟು ಮನುಜಮತದ ಪ್ರವರ್ತಕರಾಗಿದ್ದಾರೆ.

ಸಿಲುಕದಿರಿ ಮತವೆಂಬ ಮೋಹದಜ್ಞಾನಕ್ಕೆ
ಮತಿಯಿಂದ ದುಡಿಯಿರೈ ಲೋಹಿತಕೆ
ಆ ಮತದ ಈ ಮತದ ಹಳೆಮತದ ಸಹವಾಸ
ಸಾಕಿನ್ನು ಸೇರಿರೈ ಮನುಜಮತಕೆ
ಓ ಬನ್ನಿ ಸೋದರರೆ, ವಿಶ್ವಪಥಕೆ.

ಮತವೆಂಬ ಅಜ್ಞಾನದ ಬೆಳವಣಿಗೆಗೆ ಗೊಬ್ಬರವಾಗಿರುವ, ಪ್ರಗತಿಗೆ ಕಂಟಕಪ್ರಾಯ ವಾಗಿರುವ ಅಂತೆಯೇ, ಮೌಢ್ಯ ಪ್ರಸಾರಕ್ಕೆ ಸರ್ವನಿಮಿತ್ತವಾಗಿರುವ ಪುರೋಹಿತಷಾಹಿ ನಿಶ್ಶೇಷವಾಗುವ ತನಕ ಸಮಾಜದಲ್ಲಿ ವೈಜ್ಞಾನಿಕ ದೃಷ್ಟಿಯಾಗಲೀ ವೈಚಾರಿಕ ಮನೋಭಾವ ವಾಗಲೀ ಉದಿಸುವುದಿಲ್ಲವೆಂದೂ, ಅವು ಉದಯವಾಗುವ ತನಕ ಜ್ಞಾನಾಭಿವೃದ್ದಿಯಾಗಲಿ ಆತ್ಮವಿಕಾಸವಾಗಲಿ ಸ್ವಾತಂತ್ರ್ಯ ರಕ್ಷಣೆಯಾಗಲಿ ಸಾಧ್ಯವಿಲ್ಲವೆಂದೂ ಅವರು ಘೋಷಿಸಿ ದ್ದಾರೆ.

ಕೊನೆಯ ಪುರೋಹಿತನ ಕರುಳು
ಕೊನೆಯ ದೊರೆಯ ಕೊರಳಿಗುರುಳು
ಬಿಗಿಯದಿದ್ದರಲ್ಲಿ ತಿರುಳು
ಪೃಥ್ವೀ ಸ್ವಾತಂತ್ರ್ಯಕೆ?

ಎಂದವರು ಫ್ರಾನ್ಸಿನ ಕ್ರಾಂತಿಕಾರ ದಿದೋರೆಯೊಡನೆ ದನಿಗೂಡಿಸುತ್ತಾರೆ. ಯಾವ ದೇಶದಲ್ಲಿಯೇ ಆಗಲೀ ಸ್ವಾತಂತ್ರ್ಯಾಪಹರಣದ ಹಾಗೂ ಸಾಮಾಜಿಕ ಶೋಷಣೆಯ ಹೇಯ ಕೃತ್ಯಗಳಲ್ಲಿ ಪುರೋಹಿತನಿಗೆ ದೊರೆ ಸಾಮೀಲೆಂದೂ, ಅವರಿರುವ ತನಕ ಸರ್ವೋದಯ ಸಾಧ್ಯವಿಲ್ಲವೆಂದೂ ಇತಿಹಾಸ ಬಹುನಿದರ್ಶನಗಳನ್ನು ನೀಡುತ್ತದೆ,

ತುಪ್ಪವನು ಬೆಂಕಿಗೆಸೆಯಲು ಶಮನವಾಗುವೊಡೆ ಗ್ರಹದ ಪೀಡೆ
ಪುಷ್ಟನಪ್ಪಾ ಪುರೋಹಿತನನಾಹುತಿ ಮಾಡೆ
ಮತ್ತಷ್ಟು ಪರಿಹಾರ ದೊರೆಯದೇನ್ ಕೇಡೆ?

ಎಂದು ಪುರೋಹಿತನನ್ನು ಹಂಗಿಸುವಾಗ, ಯಾಗಯಜ್ಞ ಅಷ್ಟಗ್ರಹಕೂಟ ಮೊದಲಾದ ಮೌಢ್ಯಮೂಲದ ಶೋಷಕ ವ್ಯಾಪಾರಗಳೆಲ್ಲ ಸ್ತಂಭನಗೊಳ್ಳದಿದ್ದರೆ ನಾಡಿಗೆ ಉಳಿಗಾಲವಿಲ್ಲ ವೆಂದು ಪ್ರವಾದಿಯಂತೆ ನುಡಿಯುತ್ತಾರೆ.

ಜಾತೀಯತೆಯ ಜಾಡ್ಯವೆಂತೋ ಬಹುದೇವತೋಪಾಸನೆಯೂ ಅಂತೆಯೇ ಭಾವೈಕ್ಯಕ್ಕೂ ರಾಷ್ಟ್ರೈಕ್ಯಕ್ಕೂ ಮಾರಕವೆಂಬುದು ಕಟುಸತ್ಯವಾಗಿದೆ. ಆದ್ದರಿಂದಲೇ ಭಾರತದಲ್ಲಿ ಎಷ್ಟು ಜಾತಿಗಳಿವೆಯೋ ಅಷ್ಟು ರಾಷ್ಟ್ರಗಳಿವೆ. ಎಷ್ಟು ದೇವರುಗಳಿವೆಯೋ ಅಷ್ಟು ಜಾತಿಗಳಿವೆಯೆಂಬ ಹೇಳಿಕೆ ವಾಸ್ತವ ಸತ್ಯದಿಂದ ದೂರವಾಗಿಲ್ಲ. ಇಷ್ಟೊಂದು ದೇವತೆಗಳ ಸೃಷ್ಟಿಗೆ ಪುರೋಹಿತನ ಫಲವತ್ತಾದ ಬುದ್ದಿಯೇ ಕಾರಣವೆಂಬ ಮಾತು ಹುಸಿಯಲ್ಲ. ಕಲ್ಲಾಗಿ ಬಿದ್ದಿರುವ ದೇವರು ಗಳನ್ನೆಲ್ಲ ಕಡಲತಡಿಗೆ ತಳ್ಳಬೇಕೆಂದು ಕುವೆಂಪು ಗರ್ಜಿಸುತ್ತಾರೆ.

ನೂರು ದೇವರನೆಲ್ಲ ನೂಕಾಚೆ ದೂರ
ಭಾರತಾಂಬೆಯೆ ದೇವಿ ನಮಗಿಂದು ಪೂಜಿಸುವ ಬಾರ

ದೇವನೊಬ್ಬ ನಾಮ ಹಲವು ಎಂದು ದೊಡ್ಡವರು ಹೇಳಿದ್ದುಂಟು. ಅವರು ಹಾಗೆ ನಡೆದದ್ದೂ ಉಂಟು. ಹಾಗೆ ತಿಳಿದು ನಡೆದ ಪರಮಹಂಸರಂಥವರು ಯುಗಕ್ಕೊಬ್ಬ ಸಿಕ್ಕಿದರೆ ಹೆಚ್ಚು. ಒಬ್ಬೊಬ್ಬ ದೇವರೂ ಸರ್ವತಂತ್ರ ಸ್ವತಂತ್ರ ಸಾಮ್ರಾಜ್ಯವನ್ನು ಸಂಸ್ಥಾಪಿಸಿಕೊಂಡು ಜನರನ್ನು ಕದನಕ್ಕೆ ಕಲಿಮಾಡಿ ಛೂ ಬಿಡುತ್ತಾನೆ. ಪ್ರಾಯಶಃ ಇಷ್ಟೊಂದು ದೇವರಿರುವ, ದೇವರ ಬಗ್ಗೆ ಇಷ್ಟೊಂದು ಗೊಠಾಳೆಯಿರುವ ನಾಡು ಮತ್ತೊಂದಿಲ್ಲವೆಂದೇ ಹೇಳಬಹುದು. ಇದೆಲ್ಲ ಆದಿಮಾನವ ಸ್ಥಿತಿಯ ಲಕ್ಷಣ. ಯೇಸು ಮಹಮ್ಮದರಂತೆ ಬಸವೇಶ್ವರರು ಏಕದೇವತಾ ಪ್ರತಿಷ್ಠಾಪನೆಗಾಗಿ ಮಾಡಿದ ಪ್ರಯತ್ನ ನಿಷ್ಫಲಗೊಂಡದ್ದು ನಾಡಿನ ದುರ್ದೈವವೆಂದೇ ಹೇಳಬೇಕು.

ಅಧ್ಯಾತ್ಮ ಸಾಧನೆಯೇ ಜೀವನದ ಪರಮಗಂತವ್ಯವಾಗಿರುವ ಕುವೆಂಪು ನಾಸ್ತಿಕರೂ ಅಲ್ಲ, ವಿಗ್ರಹ ಭಂಜಕರೂ ಅಲ್ಲ. ‘ಸರ್ವಂ ಖಲ್ವಿದಂ ಬ್ರಹ್ಮಂ’ ‘ಅಹಂ ಬ್ರಹ್ಮಾಸ್ಮಿ’ ಎಂಬಿವೇ ಮೊದಲಾದ ವಿಶ್ವಸಮ್ಮತವಾದ ತತ್ತ್ವಗಳನ್ನು ಸ್ವಾನುಷ್ಠಾನ ಮತ್ತು ಸ್ವಾನುಭಾವದ ಮೂಲಕ ಪುನರುಜ್ಜೀವನಗೊಳಿಸಿದ್ದಾರೆ. ಕಾಲಕಾಲಕ್ಕೆ ಕವಿಗಳ ಮತ್ತು ಸಾಧುಸಂತರ ಅನುಭವಮೂಷೆಯನ್ನು ಹೊಕ್ಕು ಹೊರಬಂದಾಗ ಅವುಗಳಿಗೆ ಚಿರಂಜೀವತ್ವ ಸಮನಿಸಿದಂತಾಗುತ್ತದೆ. ಶಿವ ಸತ್ಯಸೌಂದರ್ಯಗಳ ಅಪ್ರತ್ಯೇಕತೆಯನ್ನು ವೈಜ್ಞಾನಿಕವಾಗಿ ಮನದಟ್ಟು ಮಾಡಿಕೊಂಡು, ಅವುಗಳ ಉಪಾಸನೆಯಲ್ಲಿ ತೊಡಗಿರುವ ಕುವೆಂಪು ಅವರು ಬಹುದೇವತೋಪಾಸನೆಯ ಮೂಲಕ ದೇಶದಲ್ಲಿ ನಡೆಯುತ್ತಿರುವ ಅನ್ಯಾಯ ಪರಂಪರೆ ಗಳನ್ನು ಸಹಿಸಲಾರರು. ವೈವಾಹಿಕ ಕರ್ಮಗಳಿಂದ ಹಿಡಿದು ಕಾವ್ಯರಚನೆಯ ತನಕ ಪ್ರತಿಯೊಂದು ಲೌಕಿಕಾಲೌಕಿಕ ಘಟನೆಯೂ ಅವರಿಗೆ ಅಧ್ಯಾತ್ಮಸಾಧನೆಯ  ಸಾಧನ ವಾಗುತ್ತದೆ. ಬದುಕಿನ ಪ್ರತಿಯೊಂದು ಘಟನೆಯೂ ಅಧ್ಯಾತ್ಮ ಸಾಧನೆಯ ಮಾರ್ಗವೆಂಬು ದನ್ನರಿತಾಗ ರವಿ ಶಶಿ ಗಗನ ತಾರಾವೃಂದ ಸಾಗರ ನದಿ ವನಗಿರಿ ಮೊದಲಾದುವನ್ನುಳ್ಳ ಈ ಲೋಕ ಸಾಧಕನಿಗೆ ತಪೋಭೂಮಿಯಾಗುತ್ತದೆ. ಮಂಗಳದಂಗಳವಾಗುತ್ತದೆ. ಅಧ್ಯಾತ್ಮ ಕ್ಷೇತ್ರದಲ್ಲಿ ಅವರು ಪಡೆದಿರುವ ಸಿದ್ದಿಗೆ ಶ್ರೀ ರಾಮಾಯಣದರ್ಶನಂ ಕಾವ್ಯವೇ ಒಂದು ಪ್ರತಿಮೆಯಾಗಿದೆ.

ಈ ಅಧ್ಯಾತ್ಮ  ಸಿದ್ದಿಯ ಬೇರೊಂದು ಮುಖವೆಂಬಂತೆ ಕುವೆಂಪು ಅವರು ಸಾಹಿತ್ಯ ಕ್ಷೇತ್ರದಲ್ಲಿ ಪಡೆದಿರುವ ಸಿದ್ದಿ ಅನುಪಮವಾದುದು. ಅವರು ಸಾಹಿತ್ಯದ ಸರ್ವಪ್ರಕಾರ ಗಳಲ್ಲಿಯೂ ಕೈಯಾಡಿಸಿ ಶಿಖರೋನ್ನತವಾದ ಶ್ರೇಯಸ್ಸನ್ನು ಸಂಪಾದಿಸಿದ್ದಾರೆ. ಅವರ ಪ್ರತಿಭಾಗ್ನಿ ಸಂಸ್ಪರ್ಶದಿಂದ ಪದ್ಯಗದ್ಯಗಳೆರಡೂ ಸಿದ್ದಿಯ ಪರಾಕಾಷ್ಠೆಯನ್ನು ಮೆರೆದಿವೆ. ಕತೆ ಕಾದಂಬರಿ ಪ್ರಬಂಧ ನಾಟಕಗಳಲ್ಲಿ ಗದ್ಯದ ವಿಶ್ವರೂಪದರ್ಶನ ಸಂಲಬ್ಧವಾಗುವಂತೆ ಅವರ ಕಾವ್ಯಗಳಲ್ಲಿ ಛಂದಸ್ಸಿನ ನಾನಾವಿಲಾಸಗಳು ಗೋಚರವಾಗುತ್ತವೆ. ಛಂದೋ ರಚನೆಯ ಸಕಲ ಸಾಧ್ಯತೆಗಳಲ್ಲಿ ಪ್ರಯೋಗಗೊಂಡಿರುವುದಲ್ಲದೆ, ನಾಟ್ಯಛಂದಸ್ಸು ಮೊಟ್ಟಮೊದಲಿಗೆ ಪರಿಣಾಮಕಾರಿಯಾಗಿ ಬಳಕೆಗೊಂಡಿರುವುದೂ, ಸರಳ ರಗಳೆ ಮಹಾಛಂದಸ್ಸಾಗಿ ವಿಕಾಸ ಗೊಂಡಿರುವುದೂ ಈ ಕ್ಷೇತ್ರದಲ್ಲಿ ಅವರು ಸಾಧಿಸಿರುವ ಸಿದ್ದಿಗೆ ಸಾಕ್ಷಿಯಾಗಿವೆ.

ಭಾರತೀಯ ಕಾವ್ಯಮಿಮಾಂಸೆಗೆ ಹಾಗೂ ವಿಮರ್ಶಾಕ್ಷೇತ್ರಕ್ಕೆ ಕುವೆಂಪು ಅವರು ಸಲ್ಲಿಸಿರುವ ಕೊಡುಗೆ ಅಪೂರ್ವ ಮಾತ್ರವಲ್ಲ, ಅತ್ಯಮೂಲ್ಯವಾದುದು. ‘ರಸಾನುಭವದ ಅಲೌಕಿಕತೆ’, ‘ಸಾಹಿತ್ಯದಲ್ಲಿ ಪ್ರತಿಮಾ’, ‘ಭೂಮಾನುಭೂತಿ ಮತ್ತು ಭವ್ಯತಾ ಅನುಭವದ ಮಿಮಾಂಸೆ’, ‘ರಸೋವೈಸಃ’, ‘ಪ್ರತಿಮಾ ಮತ್ತು ಪ್ರತಿಕೃತಿ’, ‘ಮಹೋಪಮೆ’, ‘ನಾಟಕ ಕಲೆಯಲ್ಲಿ ಪ್ರತಿಕೃತಿ ಮತ್ತು ಪ್ರತಿಮಾ ವಿಧಾನಗಳು’- ಇವೇ ಮೊದಲಾದ ಪ್ರಬಂಧಗಳಲ್ಲಿ ನೂತನ ಕಾವ್ಯತತ್ತ್ವಗಳನ್ನು ಪ್ರತಿಪಾದಿಸಿರುವರಲ್ಲದೆ, ತಮ್ಮ ಕೃತಿಗಳಲ್ಲಿ ಅವುಗಳಿಗೆ ವಿಪುಲ ನಿದರ್ಶನಗಳನ್ನೊದಗಿಸಿದ್ದಾರೆ. ದರ್ಶನಧ್ವನಿಯಂತು ಜಗತ್ತಿನ ಕಾವ್ಯಮಿಮಾಂಸೆಗೆ ಅವರು ನೀಡಿದ ಕಾಣಿಕೆಯೆಂದೇ ಹೇಳಬಹುದು. ‘ಮಹಾಶ್ವೇತೆಯ ತಪಸ್ಸು’ ಮುಂತಾದ ಲೇಖನಗಳ ಮೂಲಕ ಕನ್ನಡದಲ್ಲಿ ಮೊಟ್ಟಮೊದಲ ಬಾರಿಗೆ ಪ್ರಾಯೋಗಿಕ ವಿಮರ್ಶೆಯ ಮಾದರಿಯನ್ನು ಕಲ್ಪಿಸಿದ್ದಾರೆ. ಜಗತ್ತಿನ ವಿಮರ್ಶಾ ಕ್ಷೇತ್ರಕ್ಕೆ ಅವರು ನೀಡಿರುವ ಮತ್ತೊಂದು ಕೊಡುಗೆ ‘ದರ್ಶನವಿಮರ್ಶೆ’. ತಮ್ಮ ಹಲವಾರು ಲೇಖನಗಳಲ್ಲಿ ಅದರ ಸ್ವರೂಪ ಲಕ್ಷಣಗಳನ್ನು ವಿವರಿಸಿದ್ದಾರೆ.

ಸಂಸ್ಕೃತ ಭಂಡಾರವನ್ನು ಸೂರೆಗೊಂಡು, ಪ್ರಾಚೀನ ನಿಘಂಟುಕಾರರು ಕನಸಿನಲ್ಲಿಯೂ ಕಾಣದಿದ್ದ, ಅವರ ಕಲ್ಪನೆಗೂ ಬಾರದ ಶಬ್ದಗಳನ್ನು ಟಂಕಿಸಿ ಕಿಟೆಲ್ ಮೊದಲಾದ ಪಂಡಿತರ ದೃಷ್ಟಿಗೆ ಬೀಳದ ಹಲವಾರು ಮಣ್ಣಿನ ಪದಗಳನ್ನು ಕಾವ್ಯದ ಗದ್ದುಗೆಗೇರಿಸಿ, ಕನ್ನಡ ಭಾಷೆಯನ್ನು ನಾನಾ ವಿಧವಾಗಿ ಶ್ರೀಮಂತಗೊಳಿಸುವ ಹಾಗೂ ಸಕಲ ಸಾಧ್ಯತೆಗಳನ್ನು ಸಲೀಲವಾಗಿ ಕೊಳ್ಳೆಹೊಡೆಯುವ ಮೂಲಕ ಅದಕ್ಕೆ ಹೊಸಚೈತನ್ಯವನ್ನು ನೀಡಿದ ಶಬ್ದಬ್ರಹ್ಮ ರವರು. ಪದನಿರ್ಮಾಣ ಕಾರ್ಯದಲ್ಲಿಯೂ ಅವರ ಕವಿಪ್ರತಿಭೆ ವಿರಾಟ್ ಶಕ್ತಿಯಾಗಿ ಕ್ರಿಯಾಶೀಲವಾಗುತ್ತದೆ. ಮೃತ್ಯುಮಾಧುರ್ಯ, ಸಾಧುಭೈರವ, ಅಗ್ನಿ ಜಲರಾಶಿ, ದೇವಕೇತು, ಮುಕ್ತಿರಾಹು, ಕರುಣಾಕೇತು, ಮಮತಾಫಣಿ, ಬೆಂಕಿ ಮಲ್ಲಿಗೆ, ಅಗ್ನಿಸ್ನಾನ, ತೃಣಸುಂದರಿ, ರವಿಸಂಗಿ, ಅರಿಲುಗಳೂರು, ಸರೋವೇಷ, ಬೆಂಕಿದೇರ್ ಇಂಥ ಸಾವಿರಾರು ಪದಗಳು ಅವರ ಅಕ್ಷಯ ಶಬ್ದಕೋಶದಲ್ಲಿವೆ. ಕನ್ನಡ ಭಾಷೆಯ ಮರ್ಜಿಯನ್ನರಿತು ಅದರ ಹೊಗರು ಕಸುವುಗಳನ್ನು ಸಂವರ್ಧನಗೊಳಿಸಿ ಅದಕ್ಕೆ ಹಲವು ರೀತಿಯ ಬಾಗುಬಳುಕುಗಳನ್ನೊದಗಿಸಿದ ಕೀರ್ತಿ ಅವರಿಗೆ ಸಲ್ಲಬೇಕಾಗಿದೆ. ಮಕ್ಕಳು, ಹುಡುಗರು, ಹೆಂಗಸರು, ಗೌಡರು, ಆಳುಗಳು, ಶಿಷ್ಯರು ಹೀಗೆ ನಾನಾವಯಸ್ಸಿನ, ಕಸುಬಿನ ಹಾಗೂ ಸಂಸ್ಕೃತಿಯ ಜನರ ಮಾತು ಅವರ ಭಾಷೆಯ ಶ್ರೀಮಂತಿಕೆಯನ್ನು ವೃದ್ದಿಗೊಳಿಸಿವೆ. ಅಷ್ಟೇ ಅಲ್ಲ, ಅವರ ಕೃತಿಗಳಲ್ಲಿ ಚಂಪೂ, ವಚನ, ಕಥನ, ಚೋದಕ, ಶೈಲಿಗಳ ಸಮ್ಮಿಶ್ರಣದಿಂದ ಪರಿಪಾಕಗೊಂಡ ಸಂಕೀರ್ಣ ಭವ್ಯಶೈಲಿಯ ಸಿದ್ದಿಯನ್ನು ಗುರುತಿಸಬಹುದಾಗಿದೆ.

ಲೌಕಿಕ ಕ್ಷೇತ್ರದಲ್ಲಿ ಕುವೆಂಪು ಗಳಿಸಿರುವ ಸಿದ್ದಿ ಸಹ ಅಪೂರ್ವವಾದದ್ದೆಂದೇ ಹೇಳ ಬಹುದು. ಯಾವ ನಾಡಿಗಾದರೂ ಯಾವ ಸಾಹಿತ್ಯ ಕ್ಷೇತ್ರಕ್ಕಾದರೂ ಪರೋಕ್ಷ ಶಿಷ್ಯರ ಸಂಖ್ಯೆ ಲೆಕ್ಕಕ್ಕೆಟಕುವಂಥದಲ್ಲ. ಸಾಹಿತ್ಯ ಕೃತಿಗಳಂತೆಯೇ ಶಿಷ್ಯವೃಂದವೂ ಅವರು ಕನ್ನಡನಾಡಿಗೆ ನೀಡಿದ ಅಮೂಲ್ಯ ಕೊಡುಗೆಯಾಗಿದೆ. ಶಿಕ್ಷಕರಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಅವರು ನಡೆಸಿದ ದೇಶಭಾಷಾ ಮಾಧ್ಯಮದ ಆಂದೋಳನ ಈಗೀಗ ಫಲ ನೀಡುತ್ತಿದೆ. ಕನ್ನಡ ನಾಡಿನಲ್ಲಿ ಅವರಷ್ಟು ತೀಕ್ಷ್ಣವಾಗಿ ಹಾಗೂ ಯಶಸ್ವಿಯಾಗಿ ಇಂಥದೊಂದು ಆಂದೋಳನಕ್ಕೆ ಚಾಲನೆ ಕೊಟ್ಟವರು ವಿರಳ. ವಿಶ್ವವಿದ್ಯಾನಿಲಯದಲ್ಲಿ ಆಡಳಿತಗಾರರಾಗಿ ಅವರು ಪಡೆದ ಯಶಸ್ಸಿಗೆ ಮಾನಸಗಂಗೋತ್ರಿಯ ನಿರ್ಮಾಣವೇ ಜ್ವಲಂತ ನಿದರ್ಶನವಾಗಿದೆ. ಸ್ವಾತಂತ್ರ್ಯ ಚಳುವಳಿಯ ಕಾಲದಲ್ಲಿ ಅವರು ಜೈಲಿಗೆ ಹೋಗದಿದ್ದರೂ, ಅವರ ಕವನಗಳು ಹೋರಾಟಗಾರರನ್ನು ಸೃಷ್ಟಿಸಿದ್ದು ಮಾತ್ರವಲ್ಲ, ಅವರನ್ನು ಸರ್ವತ್ಯಾಗಗಳಿಗೆ ಸಿದ್ಧಗೊಳಸಿದು ವೆಂಬುದನ್ನು ಮರೆಯುವಂತಿಲ್ಲ. ಅವರ ಸಾಹಿತ್ಯ ಕೃತಿಗಳು ಹೋರಾಟದ ಸಂಕೇತಗಳು ಮಾತ್ರವಲ್ಲ, ಅವು ಅದರ ಪ್ರಕಾರಾಂತರಗಳೆಂದೇ ಹೇಳಬಹುದು. ಹೇಡಿಗಳ ಕಣ ಕಣಗಳಲ್ಲಿ ಧೈರ್ಯ ಚೈತನ್ಯಗಳನ್ನುಕ್ಕಿಸಿದ ಕವನಗಳು ಹೋರಾಟದ ಬೀಜಮಂತ್ರಗಳೆ ಹೊರತು ನಿರ್ಜೀವ ಲಿಪಿಸಮೂಹವಲ್ಲ. ಕರ್ನಾಟಕ ಏಕೀಕರಣ ಚಳುವಳಿಯ ಇತಿಹಾಸದಲ್ಲಂತು ಅವರು ಹೆಸರು ಚಿರಸ್ಥಾಯಿಯಾಗಿ ನಿಲ್ಲುತ್ತದೆ. ಅವರು ಬಳಿಗೆ ಬಂದವರಿಗೆಲ್ಲ ಕರ್ನಾಟಕ ಮಂತ್ರ ದೀಕ್ಷೆ ನೀಡಿದರು. ವಿರೋಧಿಗಳಿಗಾಸ್ಫೋಟಕವಾಗಿ ಗುಡುಗಿದರು. ಹೀಗಾಗಿ ಅವರು ಕರ್ನಾಟಕ ಶಿಲ್ಪಿಗಳಲ್ಲೊಬ್ಬರೆನ್ನಲಡ್ಡಿಯಿಲ್ಲ.

ಕುವೆಂಪು ಅವರ ಬಹುಮುಖ ಪ್ರತಿಭೆಗೆ ಹಾಗೂ ಅವರ ಸಾಹಸ ಸಿದ್ದಿಗಳಿಗೆ ಅಯಾಚಿತವಾಗಿ ಅವರಿಗೆ ಲಭಿಸಿರುವ ಬಿರುದು ಬಾವಲಿಗಳೇ ಸಾಕ್ಷಿಯಾಗಿವೆ. ವೈಚಾರಿಕತೆ, ವೈಜ್ಞಾನಿಕ ದೃಷ್ಟಿ ಹಾಗೂ ಸಮಾನತಾವಾದ ಅವರ ಜೀವನದ ದಾರಿದೀಪಗಳಾಗಿವೆ. ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ, ಮನುಜಮತ ಮತ್ತು ವಿಶ್ವಪಥಗಳು ಅವರ ಧ್ಯೇಯ ಮಂತ್ರಗಳಾಗಿವೆ. ಪುರಾತನ  ಮೌಲ್ಯಗಳ ಪುನರುಜ್ಜೀವನ, ಜೀರ್ಣತತ್ತ್ವಗಳ ಪರಿಷ್ಕರಣ, ನೂತನ ಮೌಲ್ಯಗಳ ಸೃಜನೆ ಅವರ ಕಾವ್ಯಸಿದ್ದಿಯ ನಿಕೇತನಗಳಾಗಿವೆ. ನಿರ್ಜಾತೀಯ ನಿರ್ಮತೀಯ ಸಮಾಜಸೃಷ್ಟಿ ಅವರ ಕನಸಾಗಿದೆ. ಅಂಥ ಕನಸು ನನಸಾದಾಗ ಕವಿಚೇತನಕ್ಕೆ ತೃಪ್ತಿಯಾಗುತ್ತದೆ. ಕವಿ ಋಷಿ ಸಂತರ ಹಾರೈಕೆಯಿಂದ ಅಂಥ ಸಮಾಜದ ನಿರ್ಮಾಣ ನಿಕಟಸ್ಥವಾಗುವುದೆ‘?[2]

 


[1]     ಡಾ. ಕೃಷ್ಣಮೂರ್ತಿಯವರ ರಚನೆ : ಕೊನೆಯ ಪದ ‘ಕಾವ್ಯಮಂ’ ಎಂಬುದನ್ನಿಲ್ಲಿ ಜನ್ಮಮಂ ಎಂದು ತಿದ್ದಿಕೊಂಡಿದೆ.

[2]     ೬.೧.೭೯ ರಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಆಚರಿಸಿದ ಶ್ರೀ ಕುವೆಂಪು ಅವರ ೭೫ನೆಯ ಜನ್ಮೋತ್ಸವ ಕಾರ್ಯಕ್ರಮದಲ್ಲಿ ಮಾಡಿದ ಭಾಷಣ.