ವಾಲ್ಮೀಕಿ ರಾಮಾಯಣದಲ್ಲಿ ಉಪೇಕ್ಷೆಗೆ ಪಾತ್ರವಾಗಿರುವ ಸ್ತ್ರೀ ಪಾತ್ರಗಳಲ್ಲಿ ಮಂಡೋದರಿಯದೂ ಒಂದು. ಅವಳು ಪಂಚಮಹಾಪತಿವ್ರತೆಯರಲ್ಲೊಬ್ಬಳೆಂದು ಪ್ರಕೀರ್ತಿತಗಳಾಗಿರುವುದೇನೋ ನಿಜ. ಆ ಕೀರ್ತಿಯನ್ನು ಸಮರ್ಥವಾಗಿ ಸಮರ್ಥಿಸುವಂಥ ಕಾರಣಗಳು ಆ ಮಹಾ ಕೃತಿಯಲ್ಲಿ ದೊರೆಯುವುದಿಲ್ಲ. ಮಹಾಲಂಪಟನೋರ್ವನ ಮಡದಿಯಾಗಿದ್ದು ಪಾತಿವ್ರತ್ಯ ಧರ್ಮವನ್ನುಳಿಸಿಕೊಂಡದ್ದರಿಂದ ಅಂಥ ಖ್ಯಾತಿಗೆ ಭಾಜನಳಾಗಿ ಇರಬಹುದೆ ಎಂಬ ಶಂಕೆಯೂ ಮೂಡುತ್ತದೆ. ರಾಮರಾವಣರ ರಣದ ಕೋಲಾಹಲದಲ್ಲಿ, ಸೀತೆಯ ಸಂಕಟದ ದಳ್ಳುರಿಯ ಮರೆಯಲ್ಲಿ ಅವಳು ಅದೃಶ್ಯಳಾದಂತೆ ತೋರುತ್ತದೆ. ಕಥಾನಾಯಿಕೆ ಸೀತೆಯ ಬಗ್ಗೆ ಬಹು ಉದಾರವಾಗಿರುವ ಮಹರ್ಷಿಗಳ ಲೇಖನಿ ಪ್ರತಿನಾಯಿಕೆ ಮಂಡೋದರಿಯ ವಿಷಯದಲ್ಲಿ ಅತಿ ಕೃಪಣವಾಗಿರುವಂತೆ ಸಹೃದಯರಿಗೆ ತೋರದಿರದು. ಅಯೋಧ್ಯೆಯ ಅರಮನೆಯಲ್ಲಿ ಹೆಪ್ಪುಗಟ್ಟಿದಂತಿದ್ದ ಸವತಿಮಾತ್ಸರ್ಯ ತ್ರಿಲೋಕವಿಜಯಿ ಬಹುದಾರಾವಲ್ಲಭ ರಾವಣನ ಅರಮನೆಯಲ್ಲಿದ್ದಂತೆ ಕಾಣುವುದಿಲ್ಲ. ಹೋದೆಡೆಯಲ್ಲೆಲ್ಲ ಕಣ್ಣಿಗೆ ಬಿದ್ದ ರೂಪಸಿಯರನ್ನು ಬಲಾತ್ಕಾರದಿಂದಲೋ ಪ್ರೇಮ ಸಾಕ್ಷಾತ್ಕಾರದಿಂದಲೋ ಎಳೆದು ತಂದು ರಾವಣ ತನ್ನ ಅಂತಃಪುರಕ್ಕೆ ಸೇರಿಸಿಕೊಂಡ ನಂತರ ಅವರು ಅವನ ಪರಾಕ್ರಮ ವಿಕ್ರಮಶ್ರೀಗಳಿಗೆ ಮಣಿದೋ ಹೆದರಿಯೋ ಅನ್ಯೋನ್ಯವಾಗಿ ಬಾಳುತ್ತಿದ್ದಿರಬೇಕೆಂದು ಸೀತಾನ್ವೇಷಣ ಸಮಯದಲ್ಲಿ ಹನುಮಂತನಿಗೆ ಕಾಣಿಸಿದ ಶಯನಾಗಾರದ ದೃಶ್ಯದಿಂದ ಅಭಿವ್ಯಕ್ತವಾಗುತ್ತದೆ. ಇಡೀ ರಾಮಾಯಣದಲ್ಲೆಲ್ಲ ಮಂಡೋದರಿ ಕಾಣಿಸಿಕೊಳ್ಳುವ ಸಂದರ್ಭಗಳು ಎರಡೋ ಮೂರೋ ಇರಬಹುದು. ಕಥಾ ಕ್ರಿಯೆಯ ನಡಗೆ ಅಥವಾ ತಿರುವಿಗಾಗಲಿ, ಸನ್ನಿವೇಶಗಳ ಪೂರಣಕ್ಕಾಗಲಿ, ಅನ್ಯ ಪಾತ್ರಗಳ ಮೇಲಣ ಪ್ರಭಾವದ ದೃಷ್ಟಿಯಿಂದಾಗಲಿ ಅವಳ ಪಾತ್ರಕ್ಕೆ ಏನೇನೂ ಪ್ರಾಮುಖ್ಯವಿಲ್ಲ. ಅಷ್ಟೇ ಅಲ್ಲ, ಅದೊಂದು ಜಡ ಅಥವಾ ಸ್ಥಗಿತ ಪಾತ್ರವೆಂದು ಹೇಳಬಹುದಾಗಿದೆ. ಈಗಿರುವ ಸ್ಥಿತಿಯಲ್ಲಿ ಆ ಪಾತ್ರವನ್ನು ಕೈಬಿಟ್ಟಿದ್ದರೂ ಕತೆಗೆ ಅಪಾಯವೊದಗುತ್ತಿರಲಿಲ್ಲ.

ಸೀತೆಯಂಥ ಹೆಣ್ಣನ್ನು “ಕಂಡಾಗಲೆಲ್ಲ ನನ್ನ ರಾಜ್ಯಭಾರ ಹಾಗೂ ಜೀವನ ನಿನ್ನನ್ನ ವಲಂಬಿಸಿದೆ. ನೀನು ನನ್ನ ಪ್ರಾಣಕ್ಕಿಂತಲೂ ಅಧಿಕವಾಗಿದ್ದೀಯೆ. ನನ್ನ ಅಂತಃಪುರದಲ್ಲಿ ಸುಂದರಿಯರು ತುಂಬಿದ್ದಾರೆ. ನನ್ನ ಭಾರ್ಯೆಯಾದ ಕೂಡಲೇ ಅವರಿಗೆಲ್ಲರಿಗೂ ನೀನು ಸ್ವಾಮಿನಿಯಾಗುವೆ”

[1] ಎಂದು ರಾವಣ ಅಂಗಲಾಚುವಾಗ ಮಂಡೋದರಿಯನ್ನು ಮರೆತಂತೆ ಕಾಣುತ್ತದೆ. ಸೀತೆಯನ್ನು ಹುಡುಕುವ ಸಲುವಾಗಿ ಹನುಮಂತ ರಾವಣನ ಅಂತಃಪುರದಲ್ಲಿ ಅಡ್ಡಾಡುವಾಗ ನೂರಾರು ಸ್ತ್ರೀಯರ ನಡುವಿದ್ದ ಮಂಡೋದರಿ ಕಣ್ಣಿಗೆ ಬೀಳುತ್ತಾಳೆ. ಅವಳು ಕನಕವರ್ಣೆ. ರಾವಣನ ಅಂತಃಪುರದ ಸ್ವಾಮಿನಿ. ಅವಳಂತೆ ಸುಂದರವಾದ ಸ್ತ್ರೀಯರು ಅಲ್ಲಿರಲಿಲ್ಲ. ಯೌವನ ಸಂಪತ್ತಿನಿಂದ ವಸ್ತ್ರಾಲಂಕಾರ ಭೂಷಿತೆಯಾಗಿ ರಾರಾಜಿಸುತ್ತಿದ್ದ ಅವಳನ್ನು ಹನುಮಂತ ಸೀತೆಯೆಂದೇ ಭ್ರಮಿಸಿ, ತನ್ನ ಬಾಲವನ್ನು ಚುಂಬಿಸುತ್ತ, ಹಾಡುತ್ತ ಅತ್ತಿಂದಿತ್ತ ಅಡ್ಡಾಡುತ್ತ, ಕಂಬದ ಮೇಲೆ ಹತ್ತಿ ಕುಣಿದಾಡುತ್ತ ನಲಿದಾಡುತ್ತಾನೆ. ಮರುಕ್ಷಣ ದಲ್ಲಿಯೇ ಸೀತೆ ರಾಮನಂಥ ಪತಿತ ವ್ಯಕ್ತಿಯ ಬಳಿ ಸಂಭ್ರಮದಿಂದ ಒರಗಿರಲಾರಳೆಂದು ನಿಶ್ಚಯಿಸಿ ಮುಂದುವರಿಯುತ್ತಾನೆ.[2] ಅನಂತರ ಮಂಡೋದರಿಯನ್ನು ಮತ್ತೆ ಕಾಣುವುದು ರಾವಣ ಸತ್ತನಂತರ, ಅವನ ಶವದ ಬಳಿ ಗೋಳಾಡುವ ಸ್ಥಿತಿಯಲ್ಲಿ. ಆಗವಳು ರಾವಣನ ಗುಣಾವಗುಣಗಳನ್ನು, ದೋಷ ದೌರ್ಬಲ್ಯಗಳನ್ನು ಕೊಂಡಾಡುತ್ತ, ಉನ್ಮತ್ತಳಂತೆ ಗ್ರಾಮೀಣ ಸ್ತ್ರೀಯಂತೆ ಗೋಳ್ಗರೆಯುತ್ತಾಳೆ.

“ಜನಸ್ಥಾನದಲ್ಲಿ ಖರ ಮೊದಲಾದ ಅನೇಕಾನೇಕ ರಾಕ್ಷಸರನ್ನು ಕೊಂದನಂತರ ಶ್ರೀ ರಾಮ ಸಾಧಾರಣ ಮನುಷ್ಯನಲ್ಲವೆಂಬ ಭಾವನೆ ನನ್ನ ಮನಸ್ಸಿನಲ್ಲುಂಟಾಯಿತು. ರಘುನಾಥನೊಡನೆ ವೈರ ಸಲ್ಲದೆಂದು ನಾನು ಹಲವು ಪರಿಯಾಗಿ ಕೇಳಿಕೊಂಡೆ. ನೀವು ನನ್ನ ಮಾತನ್ನು ಮಾನ್ಯಮಾಡಲಿಲ್ಲ. ಆದ್ದರಿಂದಲೇ ಈ ದಿನ ಅದರ ಫಲ ದೊರೆತಿದೆ. ಸೀತೆಯ ಮೇಲಣ ಕಾಮಾಸಕ್ತಿಯಿಂದ ಐಶ್ವರ್ಯಹಾನಿ, ಶರೀರವಿನಾಶ ಮತ್ತು ಸೃಜನಹನನಗಳು ಘಟಿಸುತ್ತಿವೆ. ಸೀತಾದೇವಿ ಆರುಂಧತಿ ಮತ್ತು ರೋಹಿಣಿಯರಿಗಿಂತ ಶ್ರೇಷ್ಠಳಾದ ಪವಿತ್ರೆ ಯಾಗಿದ್ದಾಳೆ. ತನ್ನ ಸ್ವಾಮಿಯಲ್ಲಿ ಅವಳಿಗೆ ಅನನ್ಯ ಅನುರಾಗವಿದೆ. ಇಂಥ ಪಾಪಕಾರ್ಯಕ್ಕೆ ತಕ್ಕ ಫಲ ದೊರೆಯಲೇಬೇಕು. ಕುಲ ರೂಪ ಗುಣಗಳಲ್ಲಿ ಮೈಥಿಲಿ ನನಗಿಂತ ಉತ್ತಮಳಲ್ಲ. ಈಗ ನಾನು ಸುತ್ತ ಮುತ್ತಣ ಜನರಿಂದ ದೂಷ್ಯಳಾಗಿ. ಕಾಮಭೋಗಗಳಿಂದ ವಂಚಿತಳಾಗಿ ಅನೇಕ ವರ್ಷಗಳ ಕಾಲ ಶೋಚನೀಯಾವಸ್ಥೆಯಲ್ಲಿರಬೇಕಾಗಿದೆ. ಮುಖದ ಪರದೆ ಇಲ್ಲದೆ ನಗರದ ಮುಖಾಂತರ ಬಂದಿದ್ದೇನೆಂದು ಈಗ ನನ್ನ ಬಗ್ಗೆ ಕೋಪ ಬೇಡಿ ಸ್ವಾಮಿ”.[3] ಹೀಗೆ ಪತಿಯ ಶವದ ಮೇಲುರುಳಿಕೊಂಡು ನಾನಾ ಬಗೆಯಾಗಿ ಪ್ರಲಾಪಿಸುತ್ತಾಳೆ. ಈ ಪ್ರಲಾಪ ಒಂದು ಸಂಧಿಯಷ್ಟು ದೀರ್ಘವಾಗಿ ಹರಿದಿದೆ.

‘ಶ್ರೀರಾಮಚಂದ್ರಚರಿತ ಮಾನಸ’ದ ಮಂಡೋದರಿ ರಾಮಭಕ್ತೆ, ಶುದ್ಧಾತ್ಮೆ, ಸುಸಂಸ್ಕೃತೆ, ಪತಿಗೆ ಸಕಾಲದಲ್ಲಿ ವಿವೇಕ ಹೇಳುವ ಮನೀಷೆ, ಸದಾಕಾಲದಲ್ಲಿಯೂ ಅವಳಿಗೆ ರಾವಣನ ಹಾಗೂ ಲಂಕೆಯ ಕ್ಷೇಮಕಾತರತೆ. ಅದಕ್ಕಾಗಿ ಅವಳು ಶ್ರೀರಾಮನನ್ನು ಪ್ರಾರ್ಥಿಸುತ್ತಾಳೆ. ರಾವಣನಿಗೆ ನೂರಾರು ಮಂದಿ ಮಡದಿಯರಿದ್ದರೂ ಇವಳೇ ಸ್ವಾಮಿನಿ, ಇವಳೇ ಪಟ್ಟ ಮಹಿಷಿ, ಇವಳೇ ಅಗ್ರಗಣ್ಯೆ; ಗಂಡ ಸಹ ಇವಳ ಮಾತಿಗೆ ತುಂಬ ಬೆಲೆ ಕೊಡುತ್ತಾನೆ. ತನ್ನ ಮನಸ್ಸಿಗೆ ತೋಚಿದ್ದನ್ನು ಹಿಂದೆಮುಂದೆ ನೋಡದೆ ಸ್ಪಷ್ಟವಾಗಿ ಹೇಳಿ ಬಿಡುವ ಮಹಾಸಾಧ್ವಿ. ರಾವಣ ಸೀತೆಯನ್ನು ಮರುಳುಗೊಳಿಸುವ ಸಲುವಾಗಿ ನಾನಾ ಸ್ತ್ರೀಸಮೂಹಪರಿವೇಷ್ಟಿತನಾಗಿ ಅಶೋಕವನಕ್ಕೆ ಬಂದು “ಕೇಳು, ಸುಂದರಿ, ನೀನೊಮ್ಮೆ ಕೃಪಾಕಟಾಕ್ಷವನ್ನು ನನ್ನ ಮೇಲೆ ಹರಿಸಿದರೆ ಸಾಕು, ಮಂಡೋದರಿ ಹಾಗೂ ಇತರ ರಾಣಿಯರು ನಿನಗೆ ಅಡಿಯಾಳಾಗಿರುವಂತೆ ಅಜ್ಞೆ ಮಾಡುತ್ತೇನೆ”.[4] ಎಂದು ಸೀತೆಯ ಮುಂದೆ ಬಿನ್ನಹ ಮಾಡಿಕೊಳ್ಳುವಾಗ. ಅವನು ಮಂಡೋದರಿಗೆ ಸಾಕಷ್ಟು ಪ್ರಾಶಸ್ತ್ಯ ನೀಡಿರುವುದಾಗಿ ತಿಳಿಯುತ್ತದೆ. ಸೀತೆ ಅವನ ಬಿನ್ನಹವನ್ನು ಧಿಕ್ಕರಿಸುವಾಗ, ಅವನು ಕತ್ತಿಹಿರಿದು ಅವಳ ಮೇಲೆ ನುಗ್ಗುತ್ತಾನೆ. ಆಗ ಮಯನಂದನೆ ಗಂಡನಿಗೆ ವಿವೇಕ ಹೇಳಿ, ಸಂಭವಿಸಬೇಕಾಗಿದ್ದ ಅನಾಹುತವನ್ನು ತಪ್ಪಿಸುತ್ತಾಳೆ.

ರಾಮದೂತನಾಗಿ ಸೀತಾನ್ವೇಷಣೆಗೆಂದು ಬಂದ ಹನುಮಂತನ ಕೈಯಿಂದ ಅನೇಕಾನೇಕ ರಾಕ್ಷಸರು ಕೊಲೆಯಾದಾಗ “ಒಬ್ಬ ದೂತನಿಂದ ಲಂಕೆಗಿಷ್ಟು ಕೇಡು ಒದಗುವುದಾದರೆ, ದೊರೆಯೇ ದಂಡೆತ್ತಿಬರುವಾಗ ಏನಪಾಯ ಕಾದಿದೆಯೋ” ಎಂದು ನಗರವಾಸಿಗಳು ದುಃಖಾಕ್ರಾಂತರಾಗುತ್ತಾರೆ. ಆ ಸುದ್ದಿ ಮಂಡೋದರಿಯ ಕಿವಿಗೆ ಬಿದ್ದಾಗ, ಅವಳು ಏಕಾಂತದಲ್ಲಿ ತನ್ನ ಪತಿಯ ಪಾದಗಳಿಗೆ ಪೊಡಮಟ್ಟು “ಶ್ರೀ ಹರಿಯ ಜತೆ ಕಲಹ ಬೇಡ. ನನ್ನ ಬುದ್ದಿ ವಾದವನ್ನು ತಿರಸ್ಕರಿಸಬೇಡ. ಆತ್ಮಸುಖದ ಬಗ್ಗೆ ಬಯಕೆಯಿರುವುದಾದರೆ ಸಚಿವನೊಬ್ಬನ ಜತೆಯಲ್ಲಿ ಶ್ರೀರಾಮನ ಮಡದಿಯನ್ನು ಕಳಿಸಿಬಿಡು. ಒಬ್ಬ ದೂತನ ಅವಾಂತರವೇ ರಾಕ್ಷಸ ಸ್ತ್ರೀಯರ ಗರ್ಭಪಾತಕ್ಕೆ ಕಾರಣವಾಗಿದೆ. ಕಮಲದ ವಿನಾಶಕ್ಕೆ ಮಾಗಿಯಿರುಳು ಮೂಲವಾಗುವಂತೆ ನಿನ್ನ ವಂಶಕ್ಕೆ ಸೀತೆ ಪೀಡೆಯಾಗಿದ್ದಾಳೆ. ಸೀತೆಯನ್ನು ಮರಳಿಸದಿದ್ದರೆ ಶಂಭುವಾಗಲಿ ಬ್ರಹ್ಮನಾಗಲಿ ನಿನ್ನ ಸಹಾಯಕ್ಕೆ ಬರಲಾರರು”[5] ಎಂದು ಬಗೆಬಗೆಯಾಗಿ ವಿವೇಕ ಹೇಳುತ್ತಾಳೆ. ಗರ್ವಾಂಧನಾದ ರಾವಣ ಗಹಗಹಿಸಿ ನಗುತ್ತ “ಅಬಲೆ ಎಂದಿದ್ದರೂ ಅಂಜುಕುಳಿ. ಶುಭಸಂದರ್ಭದಲ್ಲಿಯೂ ಬೆದರುತ್ತಾಳೆ. ಕಪಿಸೈನ್ಯವು ಬಂದದ್ದಾದರೆ ರಾಕ್ಷಸರಿಗೆ ಔತಣವಾಗುತ್ತದೆ. ನನ್ನ ಹೆದರಿಕೆಯಿಂದ ಮೂರು ಲೋಕಗಳು ತಲ್ಲಣಿಸುವಾಗ ನಿನ್ನ ಅಂಜುಕುಳಿತನದಿಂದ ನಾಚಿಕೆಯಾಗುತ್ತದೆ”[6] ಎಂದು ನುಡಿದು, ಅವಳನ್ನಪ್ಪಿ ಮುದ್ದಿಸಿ, ದೈತ್ಯಸಭೆಗೆ ಹೊರಡುತ್ತಾನೆ. ವಿಧಿ ತನ್ನ ಪತಿಗೆ ವಿರೋಧವಾಗಿದೆಯೆಂದು ತಿಳಿದು ಅವಳು ಚಿಂತಾಕುಲಳಾಗುತ್ತಾಳೆ.

ಶ್ರೀರಾಮ ಆಟದ ರೀತಿಯಲ್ಲಿ ಸೇತುವೆ ಕಟ್ಟಿ ಲಂಕೆಗೆ ಬಂದ ಕೂಡಲೇ ಮಂಡೋದರಿ ತನ್ನ ಪತಿಯ ಕೈಹಿಡಿದು ತನ್ನರಮನೆಗೆ ಕೊಂಡೊಯ್ದು, ಅವನ ಪಾದಗಳಿಗೆ ಮಣಿದು, ಅತ್ಯಂತ ಮಧುರವಾಗಿ “ನಾಥ, ಕ್ರೋಧವಶರಾಗದೆ ನನ್ನ ಮಾತು ಕೇಳಿ. ಸೂರ್ಯ ಮತ್ತು ಮಿಂಚು ಹುಳುವಿಗಿರುವ ಅಂತರದಂತಿದೆ, ಶ್ರೀರಾಮನಿಗೂ ನಿನಗೂ ಇರುವ ಅಂತರ, ಹಿರಣ್ಯಕಶಿಪು ಹಿರಣ್ಯಾಕ್ಷರನ್ನು ಕೊಂದ ಶಕ್ತಿಯೇ ಭೂಭಾರವನ್ನಿಳುಹುವ ಸಲುವಾಗಿ ಅವತರಿಸಿದ್ದಾನೆ. ಕಾಲನಿಯತಿ ಮತ್ತು ಆತ್ಮಗಳ ವಿಭುವಾದ ಅವನನ್ನು ವಿರೋಧಿಸಬಾರದು. ಶ್ರೀರಾಮನಡಿದಾವರಗಳಿಗೆ ಮಣಿದು, ಜಾನಕಿಯನ್ನು ಮರಳಿಸಿ, ನಿನ್ನ ಮಗನಿಗೆ ರಾಜ್ಯಭಾರ ವನ್ನು ವಹಿಸಿ, ವಾನಪ್ರಸ್ಥಾಶ್ರಮವನ್ನು ಸ್ವೀಕರಿಸಿ ರಘುರಾಮನನ್ನು ಭಜಿಸುವುದು ಶ್ರೇಯಸ್ಕರ. ಪ್ರಾಣನಾಥ, ಸೃಷ್ಟಿಸ್ಥಿತಿಲಯಗಳಿಗೆ ಕಾರಣನಾದ ಶ್ರೀರಾಮನನ್ನು ಆರಾಧಿಸಬೇಕು. ಸಂಸಾರಬಂಧನಗಳನ್ನು ತೊಡೆದು ಹಾಕಿ ಭಕ್ತಪರಾಧೀನನೂ ರಘುಕುಲಾನ್ವಯಭೂಷಣನೂ ಆದ ದಶರಥರಾಮನನ್ನು ಭಕ್ತಿಯಿಂದ ಪೂಜಿಸಬೇಕು”[7] ಎಂದು ನುಡಿದಳು. ಅಶ್ರುಜಲನ ಯನೆಯಾಗಿ ಅಂಗಾಂಗಗಳೆಲ್ಲ ನಡುಗುತ್ತಿರಲು ಅವನ ಪಾದಗಳ ಮೇಲೆ ದಿಂಡುರುಳಿ “ಪ್ರಭು, ನಮ್ಮಿಬ್ಬರ ಮಿಲನ ಶಾಶ್ವತವಾಗುವಂತೆ ರಘೂದ್ವಹನನ್ನು ಪ್ರಾರ್ಥಿಸೋಣ” ಎಂದು ವಿಜ್ಞಾಪಿಸಿಕೊಂಡಳು. ರಾವಣ ಮಯನಂದನೆಯ ತಲೆಯನ್ನು ಹಿಡಿದೆತ್ತಿ, ಅಷ್ಟದಿಕ್ಪಾಲಕರನ್ನು ಸದೆಬಡಿದ ತನಗೆ ದೇವದಾನವ ಮಾನವರಿಂದ ಮರಣವಿಲ್ಲವೆಂದೂ ಭಯ ಅನಾವಶ್ಯಕವೆಂದೂ ಗರ್ವದಿಂದ ಒದರಿದನು. ಗರ್ವಾಂಧತೆಯೇ ಪತಿಯ ಸಾವಿಗೆ ಮೂಲವೆಂದು ಮಂಡೋದರಿ ನಿಶ್ಚಯಿಸಿಕೊಂಡಳು.

ಲಂಕೆಯಲ್ಲಿ ಬೀಡುಬಿಟ್ಟನಂತರ ಒಂದು ದಿನ ರಾಮ ಮಿಂಚುಗುಡುಗುಗಳಿಂದ ಕೂಡಿದ ಮೋಡವನ್ನು ಗಮನಿಸುತ್ತಾನೆ. ಅಕಾಲದಲ್ಲಿ ಮೋಡಕ್ಕೆ ಕಾರಣವೇನೆಂದು ಅವನು ವಿಭೀಷಣನನ್ನು ಕೇಳಿದಾಗ, ಅದು ರಾವಣನ ಛತ್ರಿಯೆಂದೂ, ಮಂಡೋದರಿಯ ಕರ್ಣಾ ಭರಣಗಳ ಹೊಳಪೇ ಮಿಂಚೆಂದೂ, ಅವರು ಎತ್ತರದ ಸಭಾಭವನದಲ್ಲಿ ಕುಳಿತಾಗ ಸದಾ ಕಾಣುವ ದೃಶ್ಯವೆಂದೂ ವಿಭೀಷಣ ಹೇಳುತ್ತಾನೆ. ಶ್ರೀರಾಮ ಬಿಲ್ಲಿಗೆ ಹೆದೆಯೇರಿಸಿ, ಬಾಣಪ್ರಯೋಗ ಮಾಡುತ್ತಾನೆ. ಒಂದೇ ಎಸೆತಕ್ಕೆ ಅರಸುಕೊಡೆಯೂ ಕರ್ಣಾಭರಣಗಳೂ ನೆಲಕ್ಕೆ ಬೀಳುತ್ತವೆ. ಭೂಕಂಪವಾಗಲಿ ಜಂಝಾವಾತವಾಗಲಿ ಇಲ್ಲದೆ ಅವು ಭೂಪತನ ಹೊಂದಿದುದಕ್ಕಾಗಿ ದುಶ್ಯಕುನವಿರಬೇಕೆಂದು ಪುರಜನರು ಭಾವಿಸಿದರು. ಆಗ ಮಂಡೋದರಿ “ಪ್ರಾಣವಲ್ಲಭ, ನನ್ನ ಪ್ರಾರ್ಥನೆಯನ್ನು ಕೇಳಿ, ಶ್ರೀರಾಮ ಮರ್ತ್ಯನಲ್ಲ ಅವನೊಡನೆ ವೈರ ಬೇಡ. ಹಟವನ್ನು ತ್ಯಜಿಸಿ”[8] ಎಂದು ನುಡಿದು, ಅವನು ಹೇಗೆ ವಿಶ್ವಾತ್ಮ ಎನ್ನುವುದನ್ನು ವಿವರಿಸುತ್ತಾಳೆ. “ನೀನೀಗ ಶತ್ರುವಿನ ವಿಶ್ವರೂಪವನ್ನು ವರ್ಣಿಸಿದ್ದೀಯೆ. ವಿಶ್ವವೇ ನನ್ನ ಹತೋಟಿಯಲ್ಲಿರುವ ವಿಷಯ ನಿನ್ನ ಕೃಪೆಯಿಂದಾಗಿ ನನಗೀಗ ಅರಿವಾಗಿದೆ. ನಿನ್ನ ಚತುರತೆ ಪರಿಚಯವಾಗಿದೆ. ನೀನೀಗ ವರ್ಣಿಸಿದ್ದು ನನ್ನ ಹಿರಿಮೆ. ನಿನ್ನ ಮಾತು ಕೇಳಿದಾಗ ನನಗೆ ಆನಂದವಾಗಿ ಭಯ ನಿವಾರಣೆಯಾಗಿದೆ”[9] ಎಂದು ರಾವಣ ತಾನೇನು ಹೇಳುತ್ತಿದ್ದೇನೆನ್ನುವುದು ಸಹ ತಿಳಿಯದೆ ಬಾಯಿಗೆ ಬಂದಂತೆ ಮಾತಾಡಿದನು. ಸನ್ನಿಹಿತವಾಗಿರುವ ಸಾವು ಅವನನ್ನು ಮರುಳುಗೊಳಿಸಿರಬೇಕೆಂದು ಮಂಡೋದರಿ ಮನದಂದುಕೊಂಡಳು.

ಅಂಗದ ಬಂದು ರಾವಣನ ಗರ್ವವನ್ನು ಭಂಗ ಪಡಿಸಿ ಹಿಂದಿರುಗಿದ ನಂತರ ಮತ್ತೆ ಮಂಡೋದರಿ ರಾವಣನಿಗೆ ವಿವೇಕ ಹೇಳುತ್ತಾಳೆ. ರಾಮನ ಸಾಹಸಕೃತ್ಯಗಳನ್ನೆಲ್ಲ ವಿವರಿಸು ತ್ತಾಳೆ. ತಮ್ಮ ಮಕ್ಕಳು ಹತವಾದ, ರಾಜಧಾನಿ ಸುಟ್ಟು ಭಸ್ಮವಾದ ಪ್ರಕರಣಗಳನ್ನು ನೆನಪಿಗೆ ತಂದುಕೊಡುತ್ತಾಳೆ. ಕೃಪಾಸಿಂಧುವಾದ ರಘುರಾಮವನ್ನು ಭಜಿಸಿ ವಿಮಲ ಯಶಸ್ಸನ್ನು ಪಡೆಯುವಂತೆ ಕೇಳಿಕೊಳ್ಳುತ್ತಾಳೆ.[10]

ತನ್ನ ಪತಿಯ ಶಿರಸ್ಸುಗಳು ಭೂಮಿಯ ಮೇಲೆ ಬಿದ್ದುದನ್ನು ಕಂಡ ಮಂಡೋದರಿ ದುಃಖದಿಂದ ಮೂರ್ಛಿತಳಾಗಿ ತಿರೆಯ ಮೇಲೊರಗುತ್ತಾಳೆ. ಇತರ ರಾಣಿಯರು ಮಂಡೋದರಿಗೆ ಊರೆಯಾಗಿ ಅವಳನ್ನು ಕರೆದುಕೊಂಡು ರಾವಣನ ಶವವಿದ್ದೆಡೆಗೆ ಬರುತ್ತಾರೆ. ಅವನನ್ನು ನಾನಾವಿಧವಾಗಿ ಹೊಗಳುತ್ತ ಸಾಹಸಕೃತ್ಯಗಳನ್ನು ನೆನೆಯುತ್ತ ಪ್ರಲಾಪಿಸುತ್ತಾರೆ. “ರಾಕ್ಷಸಾನ್ವಯಕ್ಕೆ ದಾವಾನಲನಾದ ಶ್ರೀಹರಿಯನ್ನು ಮಾನವನೆಂದೆಣಿಸಿದೆ. ಆ ದಯಾಮಯ ನನ್ನು ನೀನು ಆರಾಧಿಸಲಿಲ್ಲ. ಈ ನಿನ್ನ ಶರೀರ ಹುಟ್ಟಿದಾಗಿನಿಂದ ಇತರರಿಗೆ ತೊಂದರೆಮಾಡು ವುದರಲ್ಲಿಯೇ ಹರ್ಷಗೊಂಡಿತು. ಅದು ಅಸಂಖ್ಯಾತ ಪಾಪಗಳ ಕೂಪವಾಯಿತು. ಆದರೂ ಶ್ರೀರಾಮ ನಿನ್ನನ್ನು ತನ್ನಲ್ಲಿ ಸೇರಿಸಿಕೊಂಡಿದ್ದಾನೆ. ಅವಿನಾಶಿಯೂ ಪರಬ್ರಹ್ಮಸ್ವರೂಪನೂ ಆದ ಅವನಿಗೆ ನಾನು ಮಣಿಯುತ್ತೇನೆ”[11] ಎಂದು ಮಂಡೋದರಿಯೂ ಇತರರೂ ಹಂಬಲಿಸುತ್ತಾರೆ. ಶವಸಂಸ್ಕಾರದ ನಂತರ ಎಲ್ಲರೂ ಅರಮನೆಗೆ ಹಿಂದಿರುಗುತ್ತಾರೆ.

‘ಶ್ರೀರಾಮಚರಿತಮಾನಸ’ ರಚಿತವಾದದ್ದು ಮುಖ್ಯವಾಗಿ ರಾಮಮಹಿಮೆಯನ್ನು ಲೋಕದಲ್ಲಿ ಪಸರಿಸುವ ಸಲುವಾಗಿ. ಆದ್ದರಿಂದ ಆ ಕೃತಿಯಲ್ಲಿ ಬರುವ ಪ್ರತಿಯೊಂದು ಪಾತ್ರವೂ ರಾಮಸ್ತುತಿಯಲ್ಲಿ ತಲ್ಲೀನವಾಗುತ್ತವೆ. ಗೋಸ್ವಾಮಿ ತುಲಸಿದಾಸ ತನ್ನ ಅಂತರಂಗದ ಭಕ್ತಿಯ ವಿವಿಧ ರೂಪಗಳನ್ನು ಬೇರೆ ಬೇರೆ ಪಾತ್ರಗಳ ಮೂಲಕ ಪ್ರಕಾಶ ಪಡಿಸುತ್ತಾನೆ. ರಾವಣನಿಗೂ ಸಹ ರಾಮನ ಮಹಿಮೆ ಗೊತ್ತಿಲ್ಲದಿಲ್ಲ. ಆದ್ದರಿಂದಲೇ ಮಂಡೋದರಿ ರಾಮನನ್ನು ವಿಧವಿಧವಾಗಿ ಬಣ್ಣಿಸುವಾಗ ಅವನು ಉದ್ರೇಕಗೊಳ್ಳುವುದಿಲ್ಲ. ಒಂದು ರೀತಿಯಲ್ಲಿ ಅವಳು ಹೇಳಿದ್ದನ್ನೆಲ್ಲ ಸದ್ದಿಲ್ಲದೆ ಒಪ್ಪಿಕೊಳ್ಳುತ್ತಾನೆ. ಪತಿಯಮೇಲಣ ಅವಳ ಪ್ರಭಾವ ಅದಮ್ಯವಾದದ್ದೆಂದೇ ಹೇಳಬಹುದಾಗಿದೆ. ರಾವಣನ ಪರವಾಗಿ ಪರಿಶೀಲಿಸಿದಾಗ ರಾಮನನ್ನು ಕುರಿತ ಅವಳ ಸ್ತುತಿ ತುಸು ಕಠಿನವಾಯಿತೇನೋ ಎನ್ನಿಸುತ್ತದೆ. ಆದರೆ ರಾವಣನ ಮೇಲಿನ ಪ್ರೇಮ ಹಾಗೂ ಅವನನ್ನು ಕುರಿತ ಕ್ಷೇಮ ಕಾತರತೆ ರಾಮನ ಮೇಲಣ ಭಕ್ತಿಯಾಗಿ ಪರಿಣಾಮಗೊಂಡಿತ್ತೆಂದರೆ ತಪ್ಪಾಗಲಾರದು. ವಾಲ್ಮೀಕಿ ಮಹರ್ಷಿಯ ಉಪೇಕ್ಷೆಕೆ ಗುರಿಯಾಗಿದ್ದ ಮಂಡೋದರಿಯನ್ನು ತುಲಸೀದಾಸ ಉದ್ಧಾರಮಾಡಿದ್ದಾನೆಂದು ಧಾರಾಳವಾಗಿ ಹೇಳಬಹುದು.

‘ಶ್ರೀರಾಮಾಯಣದರ್ಶನಂ’ ಮಹಾಕಾವ್ಯದ ಮಂಡೋದರಿ ನಿಜಕ್ಕೂ ಪುಣ್ಯಶಾಲಿ. ಕವಿಯ ಔದಾರ್ಯದಿಂದಾಗಿ ಅವಳು ಮಹಾಪತಿವ್ರತೆಯಾಗಿದ್ದಾಳೆ, ಸಾಧಕಳಾಗಿದ್ದಾಳೆ, ಪತಿಹಿತೈಷಿಯಾಗಿದ್ದಾಳೆ. ಧರ್ಮದೇವತೆಯಾಗಿದ್ದಾಳೆ. ರಾವಣನ ಸಾಧನೆಗೆ, ಅವನ ಹಿರಿಮೆಗೆ, ಅವನ ವಿಜಯಕ್ಕೆ ಅವಳೇ ಸರ್ವಕಾರಣ. ಶ್ರೀರಾಮಸತಿ ಮೈಥಿಲಿ ಸಹ ಅವಳ ಪ್ರಭಾವದಿಂದ ಮಹಾತಪಸ್ವಿನಿಯಾಗುತ್ತಾಳೆ. ಕ್ರಮಕ್ರಮವಾಗಿ ರಾವಣನ ಅವಗುಣಗಳ ನಂಜನ್ನು ಹೀರಿ, ಅವನ ಸಾಧನೆಗೆ ನೆರವಾಗಿ, ಅವನನ್ನು ಊರ್ಧ್ವಮುಖಗೊಳಿಸಿದ್ದಲ್ಲದೆ, ಲಂಕಿಗರ ಆಸುರೀ ಶಕ್ತಿಯನ್ನು ವಿನಾಶಗೊಳಿಸಿ, ಅವರಲ್ಲಿ ದೈವೀಶಕ್ತಿಯನ್ನು ಪ್ರತಿಷ್ಠಾಪಿಸಿ, ಇಡೀ ಲಂಕೆಯನ್ನು ಉದ್ಧರಿಸಿದ ಮಹಾತಾಯಿ ಅವಳು. ಈ ಕಾವ್ಯದ ಹಿರಿಮೆಗೆ ಸೀತೆಯೆಷ್ಟು ಕಾರಣಳೋ ಮಂಡೋದರಿಯೂ ಅಷ್ಟೇ ಕಾರಣ. ರಾವಣನನ್ನು ಪ್ರತಿನಾಯಕ ಎಂದು ಕರೆಯಬಹು ದಾದರೂ ಮಂಡೋದರಿಯನ್ನು ‘ಪ್ರತಿ ನಾಯಿಕೆ’ ಎಂದು ಕರೆಯುವುದು ಕಷ್ಟವಾಗುತ್ತದೆ. ಸೀತೆ ಮಂಡೋದರಿಯರಿಬ್ಬರೂ ಈ ಕಾವ್ಯದ ಚಾಲಕಶಕ್ತಿಗಳು, ಪ್ರೇರಕಶಕ್ತಿಗಳು. ಇಲ್ಲಿಯೂ ರಾವಣನಿಗೆ ಹಲವಾರು ಹೆಂಡಿರಿದ್ದಾರೆ. ಆದರೆ ಮಂಡೋದರಿ ಅವರಲ್ಲೊಬ್ಬಳಾಗಿಲ್ಲ. ಇವಳಂತೆ ಗಂಡಂದಿರನ್ನು ಅಂಕೆಯಲ್ಲಿಟ್ಟುಕೊಂಡ ಸವತಿ ಬೇರೊಬ್ಬಳಿಲ್ಲ. ಸೀತೆಯಾಗಲೀ ಧಾನ್ಯಮಾಲಿನಿಯಾಗಲೀ ಅವರೆಲ್ಲರೂ ಮಂಡೋದರಿಗೆ ದಾಸಿಯರಿದ್ದಂತೆ. “ನಿನಗೆ ದಾಸಿಯಂ ಮತ್ತೊರ್ವಳಂ ತರ್ಪೆನಾ ಜನಕಜಾತೆಯಂ ನೆಲದರಿಕೆವೆಸರ ಆ ಸೀತೆಯಂ!”[12] ಎಂದು ರಾವಣ ಹೇಳುವಲ್ಲಿ ಮಂಡೋದರಿಯ ಹಿರಿತನ, ಅವಳ ಸ್ಥಾನಮಾನಗಳು ಮತ್ತು ಪ್ರಭಾವ ವ್ಯಕ್ತವಾಗುತ್ತವೆ.

ಸೀತೆಯನ್ನು ಅಪಹರಿಸಿಕೊಂಡುಬರುವ ಸಲುವಾಗಿ ಮಾರೀಚಾಶ್ರಮಾಭಿಮುಖವಾಗಿ ಹೊರಡುವ ಮುನ್ನ ರಾವಣ ತನ್ನ ಮಡದಿಯ ಅನುಜ್ಞೆಯನ್ನು ನಿರೀಕ್ಷಿಸುತ್ತಾನೆ. ಮೊದಲೇ ನಿಷ್ಕರ್ಷೆಯಾಗಿದ್ದ ವನಭೋಜನವನ್ನು ಹಠಾತ್ತನೆ ಒದಗಿದ ರಾಜಕಾರಣದ ಪ್ರಯುಕ್ತ ಮುಂದೆ ತಳ್ಳುವಂತೆ ಅವಳನ್ನು ಕೇಳಿಕೊಳ್ಳುತ್ತಾನೆ. ಔತಣಕ್ಕಿಂತ ಶ್ರೇಷ್ಠವಾದ ಉದ್ಯೋಗ ಯಾವುದಿದೆ ಎಂದು ಮಡದಿ ಪ್ರಶ್ನಿಸುತ್ತಾಳೆ. ಜನಸ್ಥಾನ ಅಜನವಾದ ಬಗೆಯನ್ನೂ, ಖರದೂಷಣರು ಮಡಿದು ತಂಗಿಗೆ ಅವಮಾನವಾದ ವಿಷಯವನ್ನೂ, ಹಿಂದಿನ ಸೀತಾ ಸ್ವಯಂವರ ಕಥೆಯನ್ನೂ, ಆಗ ತನಗಾದ ಸಂಕಟವನ್ನೂ, ದಾಕ್ಷಿಣಾತ್ಯರ ಬಗ್ಗೆ ಔತ್ತರೇಯರು ನಡೆಸುತ್ತಿದ್ದ ಉದ್ಧಟತನವನ್ನೂ ವಿವರಿಸಿ, “ಸೀತೆ ಗೋಸುಗಮೆ ನಾಂ ತಪದಿಂ ಪಡೆದೆನೆನಿತೊ ಶಕ್ತಿಯಂ; ತವಿಯಲಾ ಸಂಪದಂ ಸೀತೆಗಾಗಿಯೆ!” ಎಂದು ತನ್ನ ಶಠತನವನ್ನು ವ್ಯಕ್ತ ಪಡಿಸುತ್ತಾನೆ. ಮಂಡೋದರಿಯ ತುಟಿ ಮಿಡುಕುವುದಿಲ್ಲ; ಕಣ್ಣೀರು ತುಳುಕುತ್ತದೆ; ಅಲ್ಲಿ ನಿಲ್ಲಲಾರದೆ ದೇವರ ಕೋಣೆಗೆ ನಡೆಯುತ್ತಾಳೆ.

ಅಂದು ತೊಡಗಿದ ಕಣ್ಣೀರು ಕೊನೆಯತನಕ ಇಂಗುವುದಿಲ್ಲ; ಕಣ್ಣೀರಲ್ಲಿ ಕೂಳುಣ್ಣು ತ್ತಾಳೆ. ಪತಿಯ ಆತ್ಮೋದ್ಧಾರಕ್ಕಾಗಿ ತನ್ನ ತಪಶ್ಶಕ್ತಿಯನ್ನೆಲ್ಲ ಒತ್ತೆಯಿಡುತ್ತಾಳೆ. “ಜನಕ ಮಹಾರಾಜ ಲೋಕದ ಸಕಲ ಶೋಕವನ್ನೊಟ್ಟುಗೂಡಿಸಿ ನನ್ನ ರೂಪದಲ್ಲಿ ರಾಮನಿಗಿತ್ತನು” ಎಂದೊಮ್ಮೆ ಸೀತೆ ತ್ರಿಜಟೆಗೆ ಹೇಳುತ್ತಾಳೆ. ಆದರೆ ಈ ಮಾತು ಸೀತೆಗಿಂತ ಮಿಗಿಲಾಗಿ ಮಂಡೋದರಿಗನ್ವಯವಾಗುತ್ತದೆ. ಗಂಡನಿಂದ ದೂರವಾಗಿ ಸುಖತ್ಯಕ್ತಳಾಗಿ ಅಶೋಕವನ ದಲ್ಲಿ ಏಕಾಕಿಯಾಗಿರುವ ಸಂಕಟ ಸೀತೆಯದು. ಆದರೆ ಅವಳೆಲ್ಲಿದ್ದರೂ ರಾಮರಕ್ಷೆಯಿದ್ದೇ ಇದೆ. ಲೋಕದ ಶಿಷ್ಟರನ್ನಂಡಲೆದು ಪತಿವ್ರತೆಯರನ್ನು ಗೋಳ್ಗರೆಯಿಸುವ ರಾವಣನಂಥ ಆಸುರೀಶಕ್ತಿ ಸಂಪನ್ನನನ್ನು ಪತಿಯನ್ನಾಗಿ ಪಡೆದ ದುರ್ದೈವಿ ಮಂಡೋದರಿ. ಒಬ್ಬಳಾದ ಮೇಲೊಬ್ಬಳನ್ನು ತಂದು ಸವತಿಯ ಸ್ಥಾನದಲ್ಲಿರಿಸುವುದಿರಲಿ, ಆ ಹೆಂಗಳೆಯರ ಹೊಟ್ಟೆಯುರಿ ಯನ್ನು ಕಣ್ಣಾರೆ ಕಂಡು ದುಃಖವನ್ನನುಭವಿಸುವ ಪಾಡು ಅವಳದು. ಪ್ರಾಯಶಃ ಅವಳಂಥ ಮಂದಭಾಗಿನಿ ಯಾವ ಕಾಲದಲ್ಲಿಯೂ ಲೋಕದಲ್ಲಿ ಹುಟ್ಟಿಲ್ಲವೆಂದೇ ಹೇಳಬಹುದು. ಅರಮನೆಯಲ್ಲಿದ್ದರೂ ಅವಳಿಗೆ ಸುಖವಿಲ್ಲ, ಕೈಲಾಸವನ್ನಲುಗಿಸಿದ ಚಕ್ರವರ್ತಿಯ ಮಡದಿಯಾಗಿದ್ದರೂ ಕಣ್ಣೀರು ಆರುವುದಿಲ್ಲ. ಅಳಲೇ ಅವಳಿಗೆ ನೆಲೆಯಾಗುತ್ತದೆ, ಗುಡಿಯೇ ತಪೋನಿಕೇತನವಾಗುತ್ತದೆ. ಅವಳು ಪ್ರಥಮತಃ ಸೀತೆಯನ್ನು ಸಂದರ್ಶಿಸಿ, ತನ್ನನ್ನವಳಿಗೆ ಪರಿಚಯಿಸಿಕೊಡುವಾಗ ಸೀತೆಗೆ ಹೇಳುವ ಮಾತಿನಿಂದ ಈ ಸಂಗತಿ ವಿದಿತವಾಗುತ್ತದೆ.

ನಾನಕ್ಕನೆನ್
ನಿನಗೆ ತಂಗೆ, ವಯಸ್ಸಿನಿಂದಂತೆ ದುಕ್ಕದಿಂ!
ನನ್ನವೋಲತಿ ದುಃಖಿ, ಲಂಕೆಯೊಳಗಂತಿರ್ಕೆ,
ಸೃಷ್ಟಿಯೊಳಗಿಲ್ಲಮೆಂದರಿ………..[13]

ಅಂಥ ಮಡದಿ ಇದ್ದದ್ದರಿಂದಲೇ ರಾವಣ ಅಜೇಯನಾಗಿ ದುರುದುಂಬಿತನದಿಂದ ವರ್ತಿಸಬಲ್ಲವನಾಗುತ್ತಾನೆ.

ಸೀತೆಯನ್ನು ತಂದು ಅಶೋಕವನದಲ್ಲಿರಿಸಿದನಂತರ ಮಂಡೋದರಿಯ ಸಂಕಟ ಬಹುಗುಣವಾಗುತ್ತದೆ. ಸಾಮಾನ್ಯ ಸ್ತ್ರೀಯಾದ ಪಕ್ಷದಲ್ಲಿ ಅವಳಷ್ಟು ಉಬ್ಬೆಗಗೊಳೊಳ್ಳು ತ್ತಿರಲಿಲ್ಲ. ಹದಿಬದೆತನ ದುಃಖಕ್ಕೊಳಗಾದರೆ ಲೋಕಕ್ಕೆ ಕ್ಷೇಮವಿಲ್ಲವೆನ್ನುವುದು ಅವಳ ಮತ. ಸೀತೆಯನ್ನು ಕಾಣಬೇಕೆಂಬ ಹಂಬಲ ಅವಳಿಗೆ. ಹಾಗಾಗಬಾರದೆಂಬ ಕಳವಳ ರಾವಣನಿಗೆ. ಅವಳ ದೈನ್ಯಾವಸ್ಥೆ ಕಂಡ ರಾವಣ ಹನಿಗಣ್ಣಾಗಿ “ದೇವಿ, ನಿನ್ನರಕೆಯೇಂ? ಬೆಂದಪಳಿಳಾ ರಮಣಿ ನಿನ್ನ ಬಿಸುಗಣ್ಬನಿಯ ಸೋಂಕಿಂಗೆ” ಎಂದು ಸಂತೈಸುವಾಗ ಅವನು ಅಷ್ಟದಿಕ್ಪಾಲಕರನ್ನು ಭಂಗಪಡಿಸಿದ, ಅನೇಕ ಪತಿವ್ರತೆಯರನ್ನು ಕದ್ದುತಂದ ಕೇಡಿಯಲ್ಲ ವೆಂದೆನಿಸುತ್ತದೆ. ಸತಿಯ ಕಂಬನಿಗೆ ಅವನ ಕಲ್ಲೆದೆ ಕಾಲಕ್ರಮೇಣ ಕರಗುತ್ತಿದ್ದುದನ್ನೂ ಗಮನಿಸಬಹುದಾಗಿದೆ. ಇಲ್ಲಿ ಇಳಾರಮಣಿ ಸೀತೆಯ ತಾಯಿಯೆನ್ನುವುದನ್ನು ಮರೆಯ ಲಾಗದು. “ರಾಣಿ ಓಲೆ ಭಾಗ್ಯಮೆ ಕಂಪಿಸುವವೋಲೆ” ಭಾವೋದ್ವಿಗ್ನೆಯಾಗಿ “ಸತಿಗರಕೆಯೇಂ, ಜೀವೇಶ? ಪತಿಹೃದಯಮಂ ಪಡೆವುದಲ್ಲದೆಯೆ ಬೇರಾವುದರಕೆ?”[14] ಎಂದು ತನ್ನ ಹೃದಯವನ್ನು ತೋಡಿಕೊಳ್ಳುತ್ತಾಳೆ. “ನಿನ್ನವನೆ ನಾನೇಗಳುಂ” ಎಂದು ರಾವಣ ಮಾರ್ನುಡಿಯುತ್ತಾನೆ. ಇದು ಬೂಟಾಟಿಕೆಯ ಮಾತಲ್ಲ. ಆದರೂ “ಅಯ್ಯೋ ಆ ಪುಣ್ಯಮೆಂದಿಂಗೊ!” ಎಂದು ತನ್ನ ಶಂಕೆಯನ್ನು ಸತಿ ಹೊರಗೆಡಹುತ್ತಾಳೆ. ಇಬ್ಬರಿಗೂ ಪರಸ್ಪರ ಹೃದಯಗಳ ಅರಿವಿದೆ. ಅವಳ ಮಾತಿಗೆ ಅವನು ಮರುಮಾತು ಒಡ್ಡುತ್ತಾನೆ.

…….ರಾವಣನೊಲ್ಮೆ ಸಂಪೂರ್ಣಮೇಗಳುಂ;
ಪಚ್ಚುಗೊಂಡುದರಿಂದಮೇಂ ಅದಕಿನಿತಪೂರ್ಣತೆಯ
ಕೊರೆಯಿಲ್ಲ, ಕರೆ ಸಲ್ಲ.[15]

ಎಂದು ವ್ಯಂಗ್ಯವಾಗಿ ನುಡಿಯುತ್ತಾನೆ. ಸಾತ್ವಿಕಶಿರೋಮಣಿ ಪುಣ್ಯವತಿ ಪವಿತ್ರೆ ಮಂಡೋದರಿ ಗಂಡನಿಗನುರೂಪೆಯಾದ ಮಡದಿಯಲ್ಲವೆ? ಅವನ ಕಣ್ಣಲ್ಲಿ ಕಣ್ಣಿಟ್ಟು

………ಉಸಿರುಸಿರಿನಲಿ ಬೆಸೆದು ಒಲಿದೆದೆಗಳಂ
ಕಿತ್ತೆಳೆದು ತಂದು ಯುಕ್ತಿಯನಿಂತು ಗಳಪುವರೆ,
ನಿಶಿತಮತಿ? ಹದಿಬದೆಯ ಹೃದಯದುರಿ ಲಂಕೆಯಂ
ದಹಿಸದೆ? ಕುಲಕ್ಷಯಕೆ ಕೂಣಿಯೊಡ್ಡಿದೆ ಮಿಳ್ತು[16]

ಎಂದು ಜಾಡಿಸುತ್ತಾಳೆ. ನೈತಿಕ ಶಕ್ತಿಯ ಅಧ್ಯಾತ್ಮಸಾಧನೆಯ ಬೆಂಬಲವಿರದಿದ್ದರೆ ಅವಳಿಂತು ದಿಟ್ಟತನದಿಂದ ನುಡಿಯಲು ಶಕ್ಯವಾಗುತ್ತಿರಲಿಲ್ಲ. ರಾವಣನ ತರ್ಕಶಕ್ತಿ ಉಡುಗಿರುವಾಗ ಮತ್ತೇನು ಹೇಳಿಯಾನು? ಅದೇ ಹಳೆಯ ದನಿಯೆಳೆಯುತ್ತಾನೆ : “ಮತ್ತೆ ಮತ್ತದೆ ಮಾತು ಹದಿಬದೆಯ ಹೃದಯದುರಿ?” ಸತಿಯ ಕ್ರೋಧಸಂಕಟ ಉಕ್ಕೇರುತ್ತದೆ. ಮೆದುಮಾತಿನಿಂದ ಅವನ ಹೃದಯದ ರೂಕ್ಷಶಿಲೆಯನ್ನು ರೂಪಿಸುವುದು ಸಾಧ್ಯವಿಲ್ಲವೆಂದರಿತ ಆಕೆ

ಪ್ರಾಣೇಶ, ದೈತ್ಯೇಂದ್ರ,
ಮತ್ತೊರ್ವನಿದ್ದಿದ್ದರೀ ತೆರನ ರಾವಣಂ
ತೋರುತಿರ್ದಳ್ ನಿನಗೆ ಹದಿಬದೆಯರಿರ್ಪುದಂ,
ಹದಿಬದೆತನದ ಹಿರಿಮೆಯಂ, ಈ ನಿನ್ನ ಮಯನ
ಮಗಳಬಲೆ[17]

ಅವಳ ಈ ಚುಚ್ಚುನುಡಿಗೆ ದಿಟ್ಟನೋಟಕ್ಕೆ ದನಿಯ ದಾರ್ಢ್ಯಕ್ಕೆ, ಧರ್ಮ ಧೈರ್ಯಕ್ಕೆ ದನುಜನೆದೆಗೆ ದಿಗಿಲಾಗುತ್ತದೆ. ಅವನ ಅಟಾಟೋಪವೆಲ್ಲ ಜಗಪಾಲದಿಗುಪಾಲರೊಡನೆ ನಡೆಯುವಂಥದೇ ಹೊರತು, ಸತಿಯ ಮುಂದಲ್ಲ.

ನಿನ್ನೊಲ್ಮೆ
ಹುಬ್ಬುಗಂಟಿಕ್ಕೆ ಧೈರ್ಯಚ್ಯುತಂ, ದೆಸೆಗೇಡಿ, ತಾನ್
ಪರದೇಶಿ, ಮೇಣ್ ಶೂನ್ಯಚಿತ್ತನ್! ನೀನೆನಗೆ ಶಾಂತಿ,
ಸತ್ತ್ವಮಾತ್ಮಂ, ನೀನೆನಗೆ ತುತ್ತತುದಿಯಾಸೆ,
ನೆಲೆ, ನೆಚ್ಚು, ಸೈಪು! ದೇವನೆ ಪೇಸಿ ಬಿಟ್ಟೊಡಂ
ಕೆಟ್ಟನಲ್ಲೆನ್; ಪ್ರೇಮಮಯಿ ನೀಂ ತೊರೆಯೆ,ಅಯ್ಯ,
ಶೂನ್ಯನೆಂ[18]

ಹಿಂದೆಂದೂ ರಾವಣ ಯಾರ ಮುಂದೆಯೂ ತಪ್ಪೊಪ್ಪಿಕೊಂಡದ್ದಿಲ್ಲ. ಸೀತೆಯನ್ನು ಹೊತ್ತು ತಂದಾಗಿನಿಂದ ಅವನ ಮನಸ್ಸು ಒಳತೋಟಿಯ ರಣರಂಗವಾಗಿದೆ. ಅವಳ ತಪಸ್ಸಿನ ಫಲವೆನ್ನುವಂತೆ “ಬಿರಿಯೊತ್ತಿ ತಡೆಯುತಿದೆ ತೃಷೆಯ ಮನ್ಮಥರಥದ ತೇರ್ಗಾಲಿಯಂ ಶಿವವ‰” ಆಗ ಆ ಸತಿ ಶಿರೋಮಣಿ ಸೀತೆಯನ್ನು ನೋಡಬೇಕೆಂಬ ಹಂಬಲವನ್ನು ವ್ಯಕ್ತಪಡಿಸುತ್ತಾಳೆ. ರಾವಣ ಅವಳ ಹಂಬಲದೀಡೇರಿಕೆಗೆ ಒಪ್ಪುವುದಿಲ್ಲ. “ನಿನ್ನ ದರ್ಶನದಿಂದ ಪಾಣ್ಬೆಗಕ್ಕುಂ ಮಹಾಪತಿವ್ರತೆಯ ದೃಢತೆ ಸೀತೆಯ ಮಾತದಂತಿರ್ಕೆ”[19] ಸ್ತ್ರೀತನುವಿನ ರುಚಿವೈವಿಧ್ಯವನ್ನು ಬಲ್ಲ, ನೂರಾರು ಹೆಣ್ಣುಗಳ ನಡೆನುಡಿಗಳನ್ನರಿತ, ಅನೇಕ ತರುಣಿಯರ ಅಂತರಂಗವನ್ನು ಸೂಕ್ಷ್ಮವಾಗಿ ತಿಳಿದ ರಾವಣನಿಗಿಂತ ಬೇರೆ ಸಾಕ್ಷಿಬೇಕಿಲ್ಲ, ಮಂಡೋದರಿಯ ಪಾವಿತ್ರ್ಯ ಮಾಪನಕ್ಕೆ. ಸೀತೆಯ ಪರಿಚರ್ಯೆಗೆ ಸೊಸೆಯನ್ನು ನೇಮಿಸುವಂತೆ ಕೇಳಿಕೊಳ್ಳುವಲ್ಲಿ ಅವಳು ಉಚ್ಚಸಂಸ್ಕೃತಿಯ ಪ್ರತೀಕವೆಂದು ತಿಳಿಯದಿರಲಾರದು. ಆದರೆ ರಾವಣನ ಸಾಧನೆ ಇನ್ನೂ ಸಿದ್ದಿಸಿಲ್ಲ; ತಾನು ಸಾರ್ವಭೌಮ ಎನ್ನುವ ಪ್ರತಿಷ್ಠೆಯನ್ನು ಮರೆತಿಲ್ಲ. ಮಗನ ಹೆಂಡತಿಯನ್ನು ಬೇರೊಬ್ಬಳಿಗೆ ದಾಸಿ ಮಾಡುತ್ತಾನೆಯೆ? ಅವನು ಲೋಕ ವ್ಯವಹಾರಜ್ಞನೂ ಅಹುದು, ಸಂಸಾರಕಲಾಕುಶಲನೂ ಅಹುದು. ತಾರಾಕ್ಷಿಯನ್ನು ಸೀತೆಯ ಬಳಿಯಿಟ್ಟರೆ ತನ್ನಾಸೆ ಪೂರೈಸುವುದಿಲ್ಲವೆನ್ನುವುದೂ ಅವನಿಗೆ ಗೊತ್ತು. ಸೀತೆ ಎಂದೆಂದಿಗೂ ತನ್ನ ಗಂಡನಿಗೆ ಸೋಲಲಾರಳೆಂದು ಅವಳು ಸ್ಪಷ್ಟಪಡಿಸುತ್ತಾಳೆ. ಅವಳು ಕೊಟ್ಟ ಪ್ರಸಾದವನ್ನು ಹಣೆಗೊತ್ತಿ ಕೊಂಡು

ನೀಂ ಮಹಿಮಳಾನಲ್ಪನೆಂ, ದೇವಿ. ನಿನ್ನೊಳ್ಪು
ಶಿಕ್ಷಿಸಲಿ ರಕ್ಷಿಸಲಿ ಧನ್ಯನಾಂ[20]

ಎಂದು ಹೇಳುವಾಗ ರಾವಣನ ಉದ್ಧಾರಾಕಾಂಕ್ಷೆ ಸುವ್ಯಕ್ತವಾಗುತ್ತದೆ; ಮಂಡೋದರಿಯ ಆತ್ಮಶಕ್ತಿ ಪ್ರಕಟವಾಗುತ್ತದೆ.

ಪತಿಯ ಕ್ಷೇಮಕ್ಕಾಗಿ, ಆತ್ಮಸಂತೋಷಕ್ಕಾಗಿ ಮಂಡೋದರಿ ಸೀತೆಯ ಸಂದರ್ಶನಕ್ಕಾಗಿ ಹಾತೊರೆಯುತ್ತಾಳೆ. ಆರೇಳಿರುಳು ದೂರದಲ್ಲಿ ನಿಂತು ರೋದಿಸಿ, ನಮಸ್ಕರಿಸಿ ಮರಳುತ್ತಾಳೆ. ಎಂಟನೆಯ ರಾತ್ರಿ ಅವಳ ಗೋಳನ್ನು ಸಹಿಸಲಾರದೆ, ರಾಕ್ಷಸ ಎಳೆತಂದಿರಬಹುದಾದ ಮತ್ತೊಬ್ಬಳು ಅದೃಷ್ಟಹೀನೆಯೆಂದು ಬಗೆದು “ಈ ಲಂಕೆಯೊಳಗೆನಿತು ದುಃಖಿಗಳ್ ನಮ್ಮನ್ನರೊಳರೊ?”[21] ಎಂದು ಸೀತೆ ಕನಿಕರದಿಂದ ಮಾತಾಡಿಸುತ್ತಾಳೆ; ತನಗಿಂತ ಕಡುದುಃಖಿ ಬೇರೊಬ್ಬಳಿರಲಾರಳೆಂದು ನುಡಿಯುತ್ತಾಳೆ.

ಸೀತೆಗಿಂತತಿ ದುಃಖಿ
ನಾನ್. ಎನಿತೊ ಸೀತೆಯರಳಲ ಪೊತ್ತಿಸಿರ‌್ಪಂಗೆ ನಾಂ
ಮಡದಿಯೆನ್[22]

ಎಂದು ಮಂಡೋದರಿ ತನ್ನಳಲ ಬೇಗೆಯ ತೀವ್ರತೆಯನ್ನು ವ್ಯಕ್ತಪಡಿಸುತ್ತಾಳೆ. ಸೀತೆಯನ್ನು ತಂಗಿಯೆಂದು ಪ್ರೀತಿಯಿಂದ ಕರೆದು, ಅವಳನ್ನು ಸಾಂತ್ವನಗೊಳಿಸುವ ಸಲುವಾಗಿ ಎಂಬಂತೆ ತನ್ನ ಪತಿಯ ವರ್ತನೆಯನ್ನು ಟೀಕಿಸುತ್ತಾಳೆ. ಮೊದಲೇ ಮಂಡೋದರಿಯ ಕೀರ್ತಿಯನ್ನು ಕೇಳಿದ್ದ ಸೀತೆ ಅವಳಿಗೆ ನಮಸ್ಕರಿಸುತ್ತಾಳೆ. “ನಾನುಸುರಿ. ನಮಿಸದಿರೆ ನಗೆ, ಆರ್ಯೆ!” ಎಂದು ಮಂಡೋದರಿ ಅವಳನ್ನು ತಡೆಯುತ್ತಾಳೆ. “ನಿನಗಾಂ ನಮಿಸೆ ಶೀಘ್ರದಿಂದೆನಗೆ ಮಂಗಳಮಪ್ಪು ದೆಂದು ನಾಂ ಬಲ್ಲೆನ್” ಎಂದು ಸೀತೆ ಗೌರವವನ್ನು ವ್ಯಕ್ತಪಡಿಸುತ್ತಾಳೆ. ತಾನು ಮೊದಲೇ ಬಂದು ಅವಳನ್ನು ನೋಡದಿದ್ದುದಕ್ಕೆ ಮಂಡೋದರಿ ವಿಷಾದಿಸುತ್ತಾಳೆ.

………………………..ಹದಿಬದೆತನಕೆ ಮೀರ್ವ
ಸಾಧನೆಯಿಲ್ಲ, ತಂಗಿ…..ಕೊಳೆಗೆ ತಗುಳಲ್ಕಗ್ನಿ
ಕೊಳೆಯುಮುರಿಯಪ್ಪುದಂತೆಯೆ ನಿನ್ನ ನೋಂಪಿಯಿಂ
ಕಿಡುಗೆನ್ನ ಪತಿಯ ಹೃದಯದ ಪಾಪ ಕಿಲ್ಬಿಷಂ
ಸನ್ಮತಿಯುದಿಸಿ ಶಾಂತಿ ಸುಖಮಕ್ಕೆ ಸರ್ವರಿಗೆ[23]

ಎಂದು ಹಾರೈಸುತ್ತಾಳೆ. ಸೀತೆಗಾದರೊ “ಪೌಲಸ್ತ್ಯಜನ ಲಂಕೆ ಮಂಡೋದರಿಯ ಲಂಕೆಯಾಯಿತ್ತು”[24] ರಾವಣ ಮಂಡೋದರಿಯ ಪತಿಯಾಗಿ ಅವನ ಬಗ್ಗೆ ಕರುಣೆ ಮೂಡುತ್ತದೆ.

ಮುಂದೆ ಸೀತಾನ್ವೇಷಣಕಾತರನಾಗಿ ಹನುಮಂತ ರಾವಣನ ಅರಮನೆಯ ದೇವಕುಟಯ ಬಳಿಸಾರಿದಾಗ ಅಲ್ಲಿಯ ಪವಿತ್ರ ವಾತಾವರಣವೇ ಅವನಲ್ಲಿ ಬುದ್ದಿಗತೀತವಾದ ನವಾನುಭವಗಳನ್ನು ಮೂಡಿಸುತ್ತದೆ. ಆ ತನಕ ಲಂಕೆಯಲ್ಲೆಲ್ಲಿಯೂ ಅಂಥ ಅನುಭವಗಳು ಅವನಿಗಾಗಿರಲಿಲ್ಲ. ತನ್ನ ಸಾಗರಲಂಘನದ ಗಗನಸಾಹಸದ ಗಂತವ್ಯಲಕ್ಷ್ಮಿಯನ್ನು ಅಲ್ಲಿ ಕಾಣಬಹುದೆಂದವನು ನಿರೀಕ್ಷಿಸುತ್ತಾನೆ. ಶಿವ ಶಿವಾಣಿಯರಿಗೆ ತಲೆಬಾಗಿದ ಬೆಳ್ಳುಡೆಯ ಶೋಕಾರ್ತೆ ಕೃಶಾಂಗಿಯನ್ನು ನೋಡಿ, ಸೀತೆಯೆಂದೇ ಭ್ರಮಿಸುತ್ತಾನೆ. ವಾಸ್ತವವಾಗಿ ಸೀತೆ ಮಂಡೋದರಿಯರು ಬೇರೆ ಬೇರೆಯಲ್ಲ, ನಡೆನುಡಿಗಳಲ್ಲಿ ರೀತಿನೀತಿಗಳಲ್ಲಿ ಧ್ಯೇಯಸಾಧನೆಗಳಲ್ಲಿ ಮನೋಧರ್ಮದಲ್ಲಿ ಅವರಿಬ್ಬರೂ ಏಕವ್ಯಕ್ತಿಯಂತೆ ತೋರುತ್ತಾರೆ.

…………ಹೇ ಮನ್ಮಥಾರಿ,
ಮದನ ಚಿತೆಗೆನ್ನ ಪತಿ ಬೇಳ್ವೆಯಾಗದ ತೆರದೆ
ರಕ್ಷಿಸೆನ್ನಯ್ದೆತನಮಂ, ತಾಯೆ, ಗಿರಿಜಾತೆ,
ಕಲ್ಯಾಣಿ, ನೀಂ ತಪಂಗೈದೆಂತು ಪಡೆದೆಯೋ
ನಿನ್ನೆರೆಯನಂ, ನಾನಂತೆ ಪಡೆವವೋಲೆನ್ನ
ಮನದನ್ನನಾತ್ಮಮಂ ಕೃಪೆಗೆಯ್[25]

ಎಂಬ ಮಂಡೋದರಿಯ ಆರ್ತನಾದ ಸೀತೆಯದೆಂದೇ ತಿಳಿದು ಅವಳನ್ನು ಸಂತೈಸುವ ಸಲುವಾಗಿ “ರಾಮಚಂದ್ರಂ ಗೆಲ್ಗೆ! ಜನಕನಂದಿನಿ ಬಾಳ್ಗೆ!” ಎಂದು ಆಂಜನೇಯ ಉಗ್ಗಡಿಸು ತ್ತಾನೆ. ಆ ಉಗ್ಗಡಣೆಗೆ ಮಂಡೋದರಿ ಚೀರುತ್ತಾಳೆ. ಆ ಚೀರುಲಿಹವನ್ನು ಕೇಳಿದ ರಾವಣ ದೇವಕುಟಿಗೆ ಬಂದಾಗ ಅವನೊಬ್ಬ ಮಹಾಪುರುಷನಿರಬೇಕೆಂದು ಮರುತ್‌ಸುತ ದಿಗ್ಭ್ರಮೆ ಗೊಳ್ಳುತ್ತಾನೆ. ತನ್ನ ಕಿವಿಗೆ ಬಿದ್ದ ಉಗ್ಗಡಣೆಯ ವಿಷಯವನ್ನು ಮಂಡೋದರಿ ತನ್ನ ಗಂಡನಿಗೆ ತಿಳಿಸುತ್ತಾಳೆ. ಮನಸ್ಸಿನಲ್ಲಿ ನೆನೆದದ್ದೇ ಕಿವಿಯಲ್ಲಿ ಕೇಳಿಸಿದುದಾಗಿ ವ್ಯಂಗ್ಯ ವಾಡುತ್ತಾನೆ, ರಾವಣ. ಅವಳು ಸೀತಾರಾಮರ ಕಲ್ಯಾಣಕ್ಕೋಸ್ಕರ ಪ್ರಾರ್ಥಿಸುತ್ತಿರುವುದಾಗಿ ಅವನು ಚುಚ್ಚುತ್ತಾನೆ. ಅವನಿಗೆ ಕೊಡುವ ನಿಷ್ಕಪಟವಾದ ಉತ್ತರದಲ್ಲಿ ಆತ್ಮಸಿದ್ದಿಪಡೆದ ಮಹಾವ್ಯಕ್ತಿಯ ಲೋಕಕಾರುಣ್ಯ ಅಭಿವ್ಯಕ್ತಗೊಳ್ಳುತ್ತದೆ. ಅವಳು ಸ್ವಾರ್ಥಿಯಲ್ಲ; ತನ್ನ ಗಂಡನಿಗೆ ಮಾತ್ರ ಕ್ಷೇಮವನ್ನು ಕೋರುವ ಸಂಕೋಚ ಪ್ರವೃತ್ತಿಯವಳಲ್ಲ.

ಸರ್ವರ್ಗೆ ಶುಭಮಿರ್ಕೆ. ಪ್ರಭೂ,
ಕಲ್ಯಾಣಕಲ್ಪತರು, ಲೋಕಗುರು, ಶಿವನಿದಿರ್
ಪ್ರಾರ್ಥನೆಗೆ ಕಾರ್ಪಣ್ಯವೇಕೆ[26]

ಸೀತೆ ತನಗಿಂತ ಕಿರಿಯವಳಾದರೂ ಅವಳನ್ನು ಮಂಡೋದರಿ ಪೂಜ್ಯೆ ಎಂದು ಗೌರವಿಸುತ್ತಾಳೆ.

ದೀರ್ಘಲಂಘನಕ್ರೀಡೆಯಲ್ಲಿ ಆಟಗಾರ ಮೊದಲು ಸುಮಾರಾಗಿ ಓಡುತ್ತಿದ್ದು ಗುರಿ ಹತ್ತಿರವಾಗುವಾಗ ದಮ್ಮು ಕಟ್ಟಿ ಕೊನೆ ಜಿಗಿತಕ್ಕೆ ಸಿದ್ಧವಾಗುವಂತೆ ದಶಾನನ ಕೊಟ್ಟ ಕೊನೆಯದಾಗಿ ಸೀತೆಯನ್ನು ಪರೀಕ್ಷಿಸಲು ಹವಣಿಸುತ್ತಾನೆ. ತಾನೂ ಅವನೊಡೆನೆ ಹೋಗುವುದಾಗಿ ಬೇಡುತ್ತಾಳೆ. ಅವಳ ಬೇಡಿಕೆಯನ್ನು ಗಂಡ ನಿರಾಕರಿಸಿದಾಗ ಅವನ ಕಾಮವಿಕಾರದ ನುಡಿಗಳಿಗೆ ಹೆದರಿ, ಓಡೋಡಿ ಮುನ್ನುಗ್ಗಿ ಅವನ ಕಾಲುಗಳನ್ನು ತಬ್ಬಿ ಕೊಳ್ಳುತ್ತಾಳೆ. ರಾಕ್ಷಸ ರಾಜನ ಹೃದಯ ಬಿರಿಯುವಂತೆ, ಲೋಕದ ಪತಿವ್ರತೆಯರೆಲ್ಲರ ಅಂತಸ್ಥ ಭಾವನೆಗಳಿಗೆ ನಾಲಗೆಯಾದಂತೆ, ಜಗನ್ಮಾತೆ ಶಿವಾಣಿಯೇ ಶಾಶ್ವತಧರ್ಮದ ತಿರುಳನ್ನು ಬೋಧಿಸುವಂತೆ ಗಾಂಭೀರ್ಯ ದೈನ್ಯಗಳಿಂದ ಗಂಡನಿಗೆ ವಿವೇಕ ಹೇಳುತ್ತಾಳೆ:

ಬೇಡ ಬೇಡೀ ಹಠದ
ಸಾಹಸಂ, ರಾಜೇಂದ್ರ. ರುಚಿಗೆ ಕೈಕೊಂಡುದಂ
ಛಲಕೆ ಮುಂಬರಿವುದೇಂ ಸುಖವೆ, ಸರಸವೆ, ಮತಿಯೆ,
ಸಚ್ಚರಿತ್ರವೆ, ಜೀವಿತೇಶ್ವರ? ಪತಿವ್ರತೆಯ
ಸುವ್ರತದ ಮಹಿಮೆಯಿಂ ಸಂಯಮವನೆರ್ದೆಗೊಳಲ್
ಸೋಲೆಂಬರೇನದಂ ಸುಕೃತಮತಿಗಳ್? ಶಿವಕೆ
ಶರಣಾದರದು ಸೋಲೆ? ………….
……………………………………..
…………. ಸೋಲು ಸತ್ಯಕ್ಕೆ;
ನಮಗದುವೆ ಗೆಲ್. ಸೋಲು ಧರ್ಮಕ್ಕೆ; ನಮಗದುವೆ
ಗೆಲ್………………..[27]

ಮಹಾಶಿಲ್ಪಿಯ ಉಳಿಯೇಟಿಗೆ ಕಗ್ಗಲ್ಲು ಚಾರುರೂಪವನ್ನು ತಾಳುವಂತೆ ಮಂಡೋದರಿಯ ತಪಶ್ಶಕ್ತಿಗೆ ರಾವಣ ಕಾಲಕ್ರಮೇಣ ಹಣ್ಣಾಗುತ್ತಾನೆ. ಸೂರ್ಯತಾಪಕ್ಕೆ ಮಂಜುಗಡ್ಡೆ ನೀರಾಗು ವಂತೆ ಅವಳ ಮಾತಿನೆರಕಕ್ಕೆ ರಾವಣನ ಹೃದಯ ಕರಗಿ ಕಣ್ಣೀರಾಗಿ ಹರಿಯುತ್ತದೆ. “ಸೀತೆಯನ್ ಮೊದಮೊದಲ್ ಚೆಲುವಿಗೊಲಿದೆನ್. ಮಸುಳಿಸಿದಳದನ್, ತೊರೆದು ನಲ್ ಉಣಿಸು ಮೀಹಂಗಳಂ… ಛಲಮೆ ಮೋಹಿಪುದಿಂದು ನನ್ನ ಛಲಮಂ”[28] ಎಂದು ತನ್ನ ಅಂತಸ್ಥವನ್ನು ಹೊರಗೆಡಹಿ ತನ್ನನ್ನಾವರಿಸಿದ ಭೀತಿಯನ್ನು ತಿಳಿಸುತ್ತಾನೆ. ಅವನ ಮಾತನ್ನಾಲಿಸಿದ ರಾಮದೂತನಿಗೂ ಅವನ ಮೇಲೆ ಕರುಣೆ ಉಕ್ಕುತ್ತದೆ. ಮಂಡೋದರಿಯಂಥ ಸತಿಯ ತನುಮನಗಳನ್ನು ಪಡೆದವನು ಆ ಈ ಊ ಸತಿಯರನ್ನು ಮೋಹಿಸಿದ್ದಕ್ಕೆ ದುರ್ವಿಧಿಯೇ ಕಾರಣವೆಂಬ ಆಂಜನೇಯನ ಮಾತು ಅವಳ ಗುಣ ಸ್ವಭಾವಗಳಿಗೊಂದು ಭಾಷ್ಯದಂತಿದೆ.

ಮತ್ತೆ ಮಂಡೋದರಿಯನ್ನು ನೋಡುವುದು ದೈತ್ಯಸಭೆ ಮುಗಿದನಂತರ, ರಾವಣನ ಶಯನಾಗಾರದಲ್ಲಿ, ವಿಭೀಷಣನ ಸಮ್ಮುಖದಲ್ಲಿ, ವಿಭೀಷಣನ ನೀತಿವಾಕ್ಯಗಳಿಂದ ದುಃಖತಪ್ತನಾಗಿ, ವಿಕಾರಮನಸ್ಕನಾಗಿ, ಸ್ವಪ್ನಸುಷುಪ್ತಿ ಜಾಗ್ರದವಸ್ಥೆಗಳ ನಡುವೆ ತೂಗುಯ್ಯಲೆ ಯಾಗಿದ್ದ ರಾವಣನನ್ನು ಅನಲೆಯೊಡನೆ ಉಪಚರಿಸುವ ಸಂದರ್ಭದಲ್ಲಿ. ಆಗವಳ ಬಾಯಿಂದ ಒಂದಕ್ಷರವೂ ಹೊರಡುವುದಿಲ್ಲ. ತುಟಿಪಿಟಕ್ಕೆನ್ನದೆ ಶಿಲಾಮೌನಿಯಾಗಿ ಕರುಣಾಜನಕವೂ ರುದ್ರ ಭೀಕರವೂ ಆದ ದೃಶ್ಯಗಳನ್ನು ನ್ಯಾಯದೇವತೆಯಂತೆ ಈಕ್ಷಿಸುತ್ತಿರುತ್ತಾಳೆ. ಯುದ್ಧದ ಎರಡನೆಯ ದಿನದ ಆ ಹೊತ್ತಿಗೆ ಎರಡು ಕಡೆಯೂ ಅಪಾರಸಂಖ್ಯೆಯ ಸೈನಿಕರು ಸತ್ತಿದ್ದಾರೆ. ಯುದ್ಧಭೂಮಿಯಿಂದ ಮೇಲಿಂದ ಮೇಲೆ ಶುಭಾ ಶುಭವಾರ್ತೆ ಬರುತ್ತಿದೆ. ಮಂಡೋದರಿಗೆ ಆ ವಾರ್ತೆ ಸಿಗುವ ಬಗೆ ಹೇಗೆ? ರಣದ ಕೋಲಾಹಲದ ನಡುವೆ ಪತಿಯ ದರ್ಶನ ದೊರೆಯುವು ದಾದರೂ ಸಾಧ್ಯವೆ? ಯುದ್ಧವೆಂದು ಊಟ ನಿಲ್ಲುದಿಲ್ಲವಷ್ಟೆ. ಊಟದ ಸಮಯದಲ್ಲಿ ಅವಳು ಯುದ್ಧ ಸಂಗತಿಗಳನ್ನು ತಿಳಿಯಲಾಶಿಸುತ್ತಾಳೆ. ಅವನ್ನು ತಿಳಿಸುತ್ತ ತಿಳಿಸುತ್ತ ರಾವಣ ಬೆವರುತ್ತಾನೆ. ಮಂಡೋದರಿಯ ಕಣ್ಣುಗಳಿಂದ ನೀರು ಚಿಮ್ಮುತ್ತದೆ. ಹಣೆಯ ಬೆವರನ್ನು ಬಟ್ಟೆಯಿಂದೊರಸುತ್ತಾಳೆ. “ನನ್ನ ಹಣೆಯಿರಲಿ; ನಿನ್ನ ಕಣ್ಣೊರಸಿಕೊಳ್, ಲಂಕೇಶ್ವರಿ”[29] ಎಂದು ಅವಳನ್ನು ಸಮಾಧಾನ ಪಡಿಸಲು ಯತ್ನಿಸುತ್ತಾನೆ. ವೇದವತಿ ಚಿತೆಯೇರಿದಂತೆ ಕಂಡ ಕನಸನ್ನು ವಿವರಿಸುತ್ತಾನೆ. ದೈತ್ಯೇಶ್ವರಿ ಮನೋವಿಜ್ಞಾನಿಯಂತೆ “ಮನದಾಳದಿಂದಾತ್ಮ ಧರ್ಮಮಿತ್ತೆಳ್ಚರಿಕೆ ಕನಸಿನಂದದಿ ಬಂದುದಲ್ತೆ?”[30] ಎಂದು ಎಚ್ಚರಿಸಿ, ಆ ಎಚ್ಚರಿಕೆಗೆ ಪೋಷಕವಾಗುವಂಥ ಅನಲೆ ಕಂಡು ವಿವರಿಸಿದ ಸೀತೆಯ ವಿಶ್ವರೂಪವನ್ನು ವರ್ಣಿಸುತ್ತಾಳೆ. ತಲೆಗೆಟ್ಟನಲೆ ಕಟ್ಟಿದ ಕತೆಯನ್ನು ನಂಬದಿರೆಂದು ಹೇಳುವ ಹೊತ್ತಿಗೆ ಸುದ್ದಿಚಾರ ಪ್ರತ್ಯಕ್ಷನಾಗಿ ರಾವಣ ಪಕ್ಷದ ವಿಜಯ ವರದಿಯನ್ನು ಮಂಡಿಸುತ್ತಾನೆ. ಊಟವನ್ನು ಮುಗಿಸಿ, ಪತ್ನಿಯನ್ನು ಇಂಗಿತಕಟಾಕ್ಷದಿಂದ ನೋಡಿ, ರಣಾಭಿಮುಖವಾಗಿ ಧಾವಿಸುತ್ತಾನೆ.

ಸಂಗ್ರಾಮಮಾರಿಯಿಂದೊದಗಬಹುದಾದ ಕಷ್ಟನಷ್ಟಗಳನ್ನು ತಪ್ಪಿಸುವ ಸಲುವಾಗಿ ಮಂಡೋದರಿ ಶಕ್ತಿಮೀರಿ ಪ್ರಯತ್ನಿಸುತ್ತಾಳೆ. ಆಧ್ಯಾತ್ಮಿಕ ತೇಜಸ್ಸನ್ನು ಸಹ ನಿವೇದಿಸಲು ಸಿದ್ಧಳಾಗಿದ್ದಾಳೆ. ಗಂಡನ ಹಟದ ಪರಿಣಾಮವಾಗಿ ಯುದ್ಧ ಮಸಗಿ, ಮೇಘನಾದನಂಥ ಮಕ್ಕಳು, ಪ್ರಹಸ್ತನಂಥ ಮಂತ್ರಿಗಳು ಬೇಳ್ವೆಯಾಗುತ್ತಾರೆ. ತನ್ನೊಬ್ಬನೇ ಮಗ ಸಿಂಹಾಸನದ ಸುಖವನ್ನನುಭವಿಸದೆಯೆ ಅಕಾಲಮರಣಕ್ಕೆ ತುತ್ತಾದಾಗ ತಂದೆಯಿರಲಿ, ತಾಯಿಯಾದವಳ ಎದೆ ಬಿರಿಯದಿರುವುದೇ ಆಶ್ಚರ್ಯ. ಚಿರದುಃಖಿನಿ ದೇವತಾತ್ಮೆ ಮಯಕುಮಾರಿಯನ್ನು ತಬ್ಬಿಕೊಂಡು ತಾನೂ ರೋದಿಸುತ್ತ ಅವಳನ್ನು ಸಂತೈಸಲನುವಾಗುತ್ತಾನೆ. ತಮ್ಮ ಸಂಕಟಕ್ಕೆ ಕಾರಣವಾದ ಸೀತೆಯನ್ನು ಕೊಲ್ಲವುದಾಗಿ ನುಡಿಯುತ್ತಿದ್ದಂತೆಯೇ ಅವನ ಕೊರಳ ಸೆರೆ ಬಿಗಿಯುತ್ತದೆ. ಈ ಬಿರುನುಡಿಯನ್ನು ಕೇಳಿದ್ದೇ ತಡ ಮಗನ ಸಾವಿನ ದುಃಖ ಮರೆತು ಸೀತೆಯ ಕ್ಷೇಮ ಕಾತರತೆ ತೀವ್ರವಾಗುತ್ತದೆ. ಮೂಕಶೋಕೆಯಾಗಿ, ವಿಕಾರಮುಖಿಯಾಗಿ, ಭೀತಚೇತಸೆಯಾಗಿ ಕಂಪಿಸುತ್ತಾಳೆ. ಆ ಮೂಕತೆ ವಿಕಾರಗಳು ಅನಿರ್ವಚನೀಯವಾದ ಸಂಕಟ ವನ್ನು ವ್ಯಕ್ತಪಡಿಸುತ್ತವೆ. ಅವಳನ್ನು ನಖ ಶಿಖಾಂತವಾಗಿ ಬಲ್ಲ ರಾವಣನೊಬ್ಬನಿಗೆ ಮಾತ್ರ ಅವಳ ಹೃತ್ತಾಪ ಅರ್ಥವಾಗುತ್ತದೆ. ಭುವನತ್ರಯಗಳಲ್ಲಿ ಯಾರಿಗೂ ಜಗ್ಗದ, ಯಾರಿಗೂ ಸೋಲದ ಆ ದೈತ್ಯ ಚಕ್ರವರ್ತಿ “ತಪ್ಪಾಯ್ತು, ಕೊಲ್ಲೆನವಳಂ, ಕ್ಷಮಿಸು”[31] ಎಂದು ಬೇಡುವಾಗ ಆ ಇಬ್ಬರ ವ್ಯಕ್ತಿತ್ವಗಳು ಪ್ರಜ್ವಲಿಸುತ್ತವೆ. ರಾವಣನ ರಾಕ್ಷಸತ್ವ ಸಂಪೂರ್ಣವಾಗಿ ಲುಪ್ತವಾಗುತ್ತದೆ. ಮಂಡೋದರಿ ಅವನ ಕಾಲುಹಿಡಿಯುವಾಗ ಅವನು ಪಾವನನಾಗುತ್ತಾನೆ. ಅಷ್ಟರಲ್ಲಿ ಧಾನ್ಯಮಾಲಿನಿಯ ಮರಣಸ್ಥಿತಿಯ ಸುದ್ದಿ ತಲುಪಿ, ರಾವಣ ಅಲ್ಲಿಂದ ಮೇಲೆದ್ದದ್ದು ಪರಿಸ್ಥಿತಿಯ ಗಾಂಭೀರ್ಯವನ್ನೂ ಘೋರಸಂಕಟವನ್ನೂ ತೀವ್ರಗೊಳಿಸುತ್ತದೆ.

ತನ್ನವರೆಲ್ಲ ರಣದೇವತೆಗೆ ಆಹುತಿಯಾದನಂತರ ರಾವಣ ಶತ್ರುವಿಧ್ವಂಸನವರಗಳನ್ನು ಪಡೆಯುವ ಸಲುವಾಗಿ ದುರ್ಗೆಯನ್ನು ಪೂಜಿಸುತ್ತಾನೆ. ಪೂಜಾಮಧ್ಯದಲ್ಲಿ ನಿದ್ರೆಯನ್ನಪ್ಪಿ ಸ್ವಪ್ನಲೋಕದಲ್ಲಿ ವಿಹರಿಸುತ್ತಾನೆ. ದುಃಸ್ವಪ್ನಚೇಷ್ಟೆಯಿಂದಾಗಿ ಅವನು ನಿದ್ದೆಯಲ್ಲಿಯೇ “ಮಂಡೋದರೀ ಮಯಾತ್ಮಜೇ ಪ್ರಿಯೇ ರಕ್ಷಿಸೆನ್ನನ್!” ಎಂದು ಕೂಗಿಕೊಳ್ಳುತ್ತಾನೆ. ಪೂಜಾ ಗೃಹದಲ್ಲಿದ್ದ ಮಂಡೋದರಿ ಓಡಿಬಂದು ಅವನನ್ನು ಸಂತೈಸುತ್ತಾಳೆ. ಕನಸಿನ ಕತೆಯನ್ನು ಕೇಳಿ, ಸೀತಾದೇವಿಯ ಪರವಾದ ಭಾವಶುದ್ದಿಯೇ ಸ್ವಪ್ನಪ್ರತಿಮೆಯಾಗಿ ಮೂಡಿದೆಯೆಂದು ಅವಳು ತಿಳಿಯಹೇಳುತ್ತಾಳೆ. ರಾವಣನಿಗೀಗ ಶಿವಾಣಿ ಬೇರೆಯಲ್ಲ, ಮಂಡೋದರಿ ಬೇರೆಯಲ್ಲ. ನಿರಂತರ ಸಾಧನೆಯಿಂದಾಗಿ ಅವನು ಆತ್ಮಸಿದ್ದಿಯನ್ನು ಪಡೆದಿದ್ದಾನೆ, ಅವನನ್ನು ಕಾಡುತ್ತಿದ್ದ ಪಾಪಾಂಶ ಸಂಪೂರ್ಣವಾಗಿ ಸುಟ್ಟುಹೋಗಿದೆ. ರಾಮನಿಂದು ಹಗೆಯಲ್ಲ, ಮಗಳನ್ನು ಅಳಿಯನಿಗೆ ಕಾಣಿಕೆಯಾಗಿ ಕೊಡುವ ಮಾವನಂತೆ ಸೀತೆಯನ್ನರ್ಪಿಸಲು ಸಿದ್ಧನಾಗಿದ್ದಾನೆ. ಅವಳು ಮಗಳಲ್ಲ, ದೇವತೆ ನಿಜ. ಅವನ ಮನಃಪರಿವರ್ತನೆಗೆ, ಅವನ ಸರ್ವಸಿದ್ದಿಗೆ ಮಂಡೋದರಿಯೇ ಪ್ರಮುಖ ಕಾರಣ. “ಪಾಪಿಯಂ ಕೈಬಿಡದೆ ಪುಣ್ಯಕೊಯ್ಯುವ ದೇವಿ ನನಗೆ ನೀನೊರ್ವಳೆಯೆ ದಲ್!”[32] ಎಂದು ಹೇಳುವಾಗ ಮಂಡೋದರಿ ಸಹ ತನ್ನ ತಪಸ್ಸು ಸಿದ್ದಿಸಿತೆಂದು ಆನಂದ ತುಂದಿಲಳಾಗುತ್ತಾಳೆ.

…ನಿನಗಿಂ ಮಿಗಿಲ್ ಸೀತೆ
ನನಗೆ ದೆವತೆ, ಮಾತೆ! ಶ್ರದ್ಧೆಗೆಟ್ಟಿರ್ದೆನಗೆ
ಶ್ರದ್ಧೆಯಂ ಮರುಕೊಳಿಸುತಾತ್ಮದುದ್ಧಾರಮಂ
ತಂದ ದೇವತೆ, ಪುಣ್ಯಮಾತೆ!

ಎಂದು ರಾವಣ ಘೋಷಿಸಿದಾಗ ಮಂಡೋದರಿ ಮಚ್ಚರಿಸುವುದಿಲ್ಲ. ಅವನ ಆ ಘೋಷಣೆ ಮಗನ ಸಾವನ್ನೂ ಲಂಕೆಯ ದುರಂತವನ್ನೂ ಮರೆಯಿಸುತ್ತದೆ. ಒಂದು ಆತ್ಮದ ಉದ್ಧಾರಕ್ಕಾಗಿ ಎಷ್ಟು ಜನ ಆಹುತಿಯಾಗಬೇಕೋ? ರಾವಣನಂಥ ವ್ಯಕ್ತಿ ಉದ್ಧಾರವಾದಾಗ ಉಳಿದ ಕಿರುಕುಳವೆಲ್ಲ ಉದ್ಧಾರವಾದಂತೆಯೇ, ಸರ್ವರುದ್ಧಾರವೇ ಮಂಡೋದರಿಯ ನಿರ್ಧಾರ. ಸರ್ವಕ್ಷೇಮವೇ ಅವಳ ನೇಮ. ಆ ನೇಮ ಕೈಗೂಡಿದಾಗ ಅವಳ ಮನಸ್ಸು ಪ್ರಶಾಂತ ವಾಗುತ್ತದೆ. ಧನ್ಯತೆಯ ಭಾವನೆಯಿಂದ ನಿರಾಳವಾಗುತ್ತದೆ,

ನಾ ಧನ್ಯೆ ದಲ್!
ಬಾಳ್ ಸಾರ್ಥಕಂ ಸಾವೊ ಬದುಕೊ? ಇನ್ನೆನಗಿರದು
ವ್ಯಥೆ! ತಿಳಿದೊಡೀ ನಿನ್ನ ಹೃದಯಂ ತ್ರಿಮೂರ್ತಿಗಳೆ
ಬಂದು ಮೀಯರೆ ಅಲ್ಲಿ![33]

ಮುಂದೇನಾದರೂ ಆಗಲಿ, ತನ್ನಿಷ್ಟಾರ್ಥ ಸಿದ್ದಿಸಿದುದರಿಂದ ಅವಳಿಗೆ ಯೋಚನೆಯಿಲ್ಲ, ರಾವಣನ ಈಗಿನ ದಿವ್ಯಸ್ಥಿತಿ ಇಬ್ಬರಿಗೆ ಮಾತ್ರ ಗೊತ್ತು, ಚಂದ್ರನಖಿಗೆ ಮತ್ತು ಮಂಡೋದರಿಗೆ, ಇದು ಇತರರಿಗೆ ತಿಳಿಯಬೇಡವೇ? ರಾವಣನಂಥ ಮುಕ್ತಾತ್ಮನಿಗೆ ಆ ಪ್ರದರ್ಶನ ಅನವಶ್ಯ. ತನ್ನ ಮಾಂಗಲ್ಯಸ್ಥಿರತೆಯ ದೃಷ್ಟಿಯಿಂದಾದರೂ ಅದು ಇತರರಿಗೆ ತಿಳಿಯಲಿ ಎಂದು ಮಂಡೋದರಿ ಆಶಿಸುತ್ತಾಳೆ, ರಾಮನನ್ನು ಸೋಲಿಸಿ, ತನ್ನುದ್ಧಾರಕ್ಕೆ ಕಾರಣಳಾದ ಸೀತಾಮಾತೆಗೆ ಅವನನ್ನು ಕಪ್ಪವನ್ನಾಗಿ ಅರ್ಪಿಸಬೇಕೆಂಬುದೇ ಅವನ ಇಚ್ಛೆ. ಅವನ ಪೂಣ್ಕೆ. ಆ ಪೂಣ್ಕೆ ಸಿದ್ದಿಯಾಗುವ ತನಕ “ಸೀತೆಯಂ ಸೇವಿಸುತ್ತಿರು ರಾಮನಂ ಗೆಲ್ದು ಸೆರೆವಿಡಿದು ತರ್ಪನ್ನೆಗಂ”[34] ಎಂದು ಮಡದಿಗೆ ಬಿನ್ನವಿಸಿಕೊಳ್ಳುತ್ತಾನೆ. ಸೀತೆಯ ಸೇವೆಗೆ ಸೊಸೆಯನ್ನು ಕಳಿಸುವುದಿಲ್ಲವೆಂದು ಹಟ ಹಿಡಿದಿದ್ದ ಅವನು ಮಡದಿಯನ್ನರ್ಪಿಸಲು ಸಿದ್ಧನಾಗಿದ್ದಾನೆ. ಈ ಪರಿವರ್ತನೆಯೇ ಒಂದು ಪವಾಡ!

ರಾಮಬಾಣಕ್ಕೆ ಗುರಿಯಾಗಿ, ರಾಮಬಾಣವನ್ನೇ ರಾಮನೆಂದು ಬಗೆದು ಸತಿಯ ಸನಿಹಕ್ಕೆ ಹಿಂದಿರುಗಿದ ಮೂರ್ಛಿತಸ್ಥಿತಿಯ ರಾವಣನನ್ನು ಕಂಡು ಮಂಡೋದರಿ “ಹಾ ಸ್ವಾಮಿ, ಪೂಣ್ಕೆ ಸಂದುದೆ? ತೋರು ತೋರನಗೆ ಸೆರೆಹಿಡಿದ ಮೈಥಿಲೀನಾಥನಂ”[35] ಎಂದು ಆಕ್ರಂದಿಸುತ್ತ ಶೈತ್ಯೋಪಚಾರ ನಡೆಸುತ್ತಾಳೆ. ಜಾಗ್ರದವಸ್ಥೆಗೆ ಬಂದರೂ ಭ್ರಾಂತಿ ಸ್ಥಿತಿಯಲ್ಲಿದ್ದ ರಾವಣ ತಾನು ಸೆರೆಹಿಡಿದು ತಂದಿದ್ದ ರಾಮನನ್ನು ಸೀತೆಗರ್ಪಿಸುವಂತೆ ಮಡದಿಯನ್ನು ಕೇಳಿಕೊಳ್ಳುತ್ತಾನೆ. “ನೀಂ ಪಿಡಿದುದಿದು ಬಾಣಪುಂಖಂ, ಮಹಾಮತಿ; ರಘೂತ್ತಮನ ಗಾತ್ರಮೆಂಬೀ ಭ್ರಾಂತಿಯಿಂ ಬರಿದೆ ಕಿಳ್ತೆಸೆಯಲರ್ಹವಾದುದನಿಂತು ಬಿಗಿದಪ್ಪಿ ತಪ್ಪುತಿರ್ಪಯ್”[36] ಎಂದವಳು ಎಚ್ಚರಿಸಿದಾಗ “ಭ್ರಾಂತಿಯಾರ್ಗೆಲೆಗೆ?” ಎಂದು ಕರ್ಬುರೇಶ್ವರ ರೇಗಾಡಿ, ರಾಮನ ಶರ ಶರೀರವನ್ನು ಹೊರದೆಗೆಯುವಂತೆ ಆಜ್ಞಾಪಿಸುತ್ತಾನೆ. ಅದನ್ನು ಕಿತ್ತದ್ದೆ ತಡ ರಾವಣನಪ್ರಾಣ ರಾಮನ ಆತ್ಮದಲ್ಲಿ ಮೋಕ್ಷಹೊಂದುತ್ತದೆ. ಕೆಲವು ಚಣಗಳಲ್ಲಿಯೇ ಸತಿಯ ಆತ್ಮ ಪತಿಯ ಆತ್ಮವನ್ನು ಹಿಂಬಾಲಿಸುತ್ತದೆ.

‘ಶ್ರೀರಾಮಾಯಣದರ್ಶನ’ದ ಸ್ತ್ರೀಪಾತ್ರಗಳಲ್ಲಿ ಮಂಡೋದರಿಯ ಸ್ಥಾನ ವಿಶಿಷ್ಟವಾದದ್ದು. ಕುವೆಂಪು ಅವರ ದಾರ್ಶನಿಕ ಪ್ರತಿಭೆಯಿಂದ ಹೊರಹೊಮ್ಮಿರುವ ಮಂಡೋದರಿಗೂ ವಾಲ್ಮೀಕಿಯ ಮಂಡೋದರಿಗೂ ಅಜಗಜಾಂತರ. ಕೇವಲ ನಾಮ ಮಾತ್ರವಾಗಿ, ಅಥವಾ ಗ್ರಾಮೀಣಮುಗ್ಧತೆಯಂತೆ ತೋರುವ ಆ ಮಂಡೋದರಿ ಇಲ್ಲಿ ಸದ್ಗೃಹಿಣಿಯಾಗಿ, ಮಹಾ ಪತಿವ್ರತೆಯಾಗಿ, ತಪಸ್ವಿನಿಯಾಗಿ, ಮಹಾಸಾಧಕಿಯಾಗಿ, ಪರಮಗುರುವಾಗಿ, ಜಗನ್ಮಾತೆಯ ಪ್ರತಿರೂಪವಾಗಿ, ಸೀತೆಗೆ ಸರಿಗಟ್ಟುವ ಮಹಾಸಾಧ್ವಿಯಾಗಿ, ರಾಕ್ಷಸರ ಮುಕ್ತಿಗೆಂತೊ, ಅಂತೆಯೇ ಲೋಕಕ್ಷೇಮಕ್ಕೂ ಕಾರಣಳಾಗಿ ಸದಾ ಕಾಲ ಸರ್ವರೂ ಆರಾಧಿಸಬಹುದಾದ ಪವಿತ್ರ ವ್ಯಕ್ತಿಯಾಗಿ, ನಾಮಸ್ಮರಣ ಮಾತ್ರದಿಂದಲೇ ಪುಣ್ಯವನ್ನು ಪ್ರಚೋದಿಸುವ ತೇಜಸ್ವಿಯಾಗಿ ರಾರಾಜಿಸುತ್ತಾಳೆ. ಶಾಪಗ್ರಸ್ತರಾದ ಜಯವಿಜಯರೇ ರಾವಣ ಕುಂಭಕರ್ಣರಾಗಿ ಜನಿಸಿ, ಶಾಪಾವಧಿ ಮುಗಿದ ನಂತರ ಮತ್ತೆ ವೈಕುಂಠಕ್ಕೆ ತೆರಳುತ್ತಾರೆಂಬುದು ಪೌರಾಣಿಕ ಕಥೆ. ಅದರಲ್ಲಿ ವಿಶೇಷವೇನೂ ಇಲ್ಲ. ಆಧುನಿಕ ವೈಜ್ಞಾನಿಕಮತಿಗೆ ಆ ಕಥೆ ಹಿಡಿಸುವಂಥದಲ್ಲ. ಮಹತ್ಸಾಧನೆ ಪ್ರತಿಯೊಬ್ಬ ಮಾನವನ ಕೊನೆಯ ಗುರಿ. ಅದಕ್ಕಾಗಿ ನಾನಾ ರೀತಿಗಳಲ್ಲಿ ಪ್ರಯತ್ನ ನಡೆಸುತ್ತಾನೆ. ಆ ಪ್ರಯತ್ನಕ್ಕೆ ಸಾತ್ವಿಕರ ಹರಕೆ, ಸುತ್ತಮುತ್ತಣ ವರ ಬೆಂಬಲ, ಪರಿಸರದ ಆಸರೆ ಅತ್ಯಾವಶ್ಯಕವಾಗುತ್ತವೆ. ರಾವಣನ ಜೀವನದ ಈ ಅವಶ್ಯಕತೆಗಳನ್ನೆಲ್ಲ ಮಂಡೋದರಿಯೊಬ್ಬಳೇ ಪೂರೈಸಿಕೊಂಡು, ಅವನನ್ನು ಧನ್ಯನನ್ನಾಗಿಸುತ್ತಾಳೆ, ರಾಮತ್ವಕ್ಕೇರಿಸುತ್ತಾಳೆ, ರಾಮಾಯಣವನ್ನು ರಾವಣವಿಜಯಕಥೆಯನ್ನಾಗಿ ಮಾರ್ಪಡಿಸುತ್ತಾಳೆ.

 

[1]     ಯದಿದಂ ರಾಜ್ಯತಂತ್ರಂ ಮೇ ತ್ವಯಿ ಸರ್ವಂ ಪ್ರತಿಷ್ಠಿತಮ್
ಜೀವಿತಂ ಚ ವಿಶಾಲಾಕ್ಷೀ ತ್ವಂ ಮೇ ಪ್ರಾಣೈರ್ಗರೀಯಸೀ
ಬಹ್ವೀನಾ ಮುತ್ತಮಸ್ತ್ರೀಣಾಂ ಮಮ ಯೋsಸೌ ಪರಿಗ್ರಹಃ
ತಾಸಾಂ ತ್ವಮೀಶ್ವರೀ ಸೀತೇ ಮಮ ಭಾರ್ಯಾಭವ ಪ್ರಿಯೇ
– (ಅರಣ್ಯ ಕಾಂಡ ೫೫ : ೧೬-೧೭)

[2]     ಗೌರೀಂ ಕನಕವರ್ಣಾಭಾಮಿಷ್ಟಾಮಂತಃಪುರೇಶ್ವರೀಮ್
ಕಪಿರ್ಮಂದೋದರೀಂ ತತ್ರ ಶಯಾನಾಂ ಚಾರುರೂಪಿಣೀಮ್
ಸತಾಂ ದೃಷ್ಟ್ವಾ ಮಹಾಬಾಹುರ್ಭೂಷಿತಾಂ ಮರುತಾತ್ಮಜಃ
ತರ್ಕಯಾ ಮಾಸ ಸೀತೇತಿ ರೂಪಯೌವನಸಂಪದಾ
ಹರ್ಷೇಣ ಮಹತಾ ಯುಕ್ತೋ ನನಂದ ಹರಿಯೂಥಪಃ
ಆಸ್ಪೋಟಯಾಮಾಸ ಚುಚುಂಬ ಪುಚ್ಛಂ
ನನಂದ ಚಿಕ್ರೀಡ ಜಗೌ ಜಗಾಮ
ಸ್ತಂಭಾನರೋಹನ್ನಿಪಪಾತ ಭೂಮೌ
ನಿದರ್ಶಯನ್ ಸಾವಂ ಪ್ರಕೃತಿಂ ಕಪೀನಾಮ್
– (ಸುಂದರಕಾಂಡ ೧೦ : ೫೨-೫೪)

[3]     ಯದೈವ ಹಿ ಜನಸ್ಥಾನೇ ರಾಕ್ಷಸೈರ್ಬಹುಭಿರ್ವೃತಃ
ಖರಸ್ತು ನಿಹತೋ ಭ್ರಾತಾ ತದಾ ರಾಮೋ ನ ಮಾನುಷಃ – (ಯುದ್ಧಕಾಂಡ ೧೧೧ : ೧೬)
ಕ್ರಿಯತಾಮವಿರೋಧಶ್ಚ ರಾಘವೇಣೇತಿ ಯನ್ಮಯಾ
ಉಚ್ಯಮಾನೋ ನ ಗೃಹ್ಣಾ ಸಿ ತಸ್ಯೇಯಂ ವ್ಯಷ್ಟಿರಾಗತಾ (೧೮)
ಅಕಸ್ಮಾಚ್ಚಾಭಿಕಾಮೋsಸಿ ಸೀತಾಂ ರಾಕ್ಷಸಪುಂಗವ
ಐಶ್ವರ್ಯಸ್ಯ ವಿನಾಶಾಯ ದೇಹಸ್ಯ ಸ್ವಜನಸ್ಯ ಚ  (೧೯)
ಅರುಂಧತ್ಯಾ ವಿಶಿಷ್ಟಾಂ ತಾಂ ರೋಹಿಣ್ಯಾಶ್ಚಾಪಿ ದುರ್ಮತೇ (೨೦)
ಸೀತಾಂ ಘರ್ಷಯತಾ ಮಾನ್ಯಾಂ ತ್ವಯಾ ಹ್ಯಸದೃಶಂ ಕೃತಮ್
ವಸುಧಾಯಾ ಹಿ ವಸುಧಾಂ ಶ್ರಿಯಾಃ ಶ್ರೀಂ ಭರ್ತೃವತ್ಸಲಾಮ್ (೨೧)
ಅವಶ್ಯಮೇವ ಲಭತೇ ಫಲಂ ಪಾಪಸ್ಯ ಕರ್ಮಣಃ
ಭರ್ತಃ ಪ್ತರ್ಯಾಗತೇ ಕಾಲೇ ಕರ್ತಾ ನಾಸ್ತ್ಯತ್ರ ಸಂಶಯಃ (೨೫)
ನ ಕುಲೇನ ನ ರೂಪೇಣ ನ ದಾಕ್ಷಿಣ್ಯೇನ ಮೈಥಿಲೀ
ಮಯಾಧಿಕಾ ವಾತುಲ್ಯಾ ವಾತತ್ ತು ಮೋಹಾನ್ನ ಬುದ್ಧ್ಯಸೇ (೨೮)
ಸಾಹಂ ಬಂಧುಜನೈರ್ಹೀನಾ ಹೀನಾ ನಾಥೇನ ಚ ತ್ವಯಾ
ವಿಹೀನಾ ಕಾಮಭೋಗೈಶ್ಚ ಶೋಚಿಷ್ಯೇ ಶಾಶ್ವತೀಃ ಸಮಾಃ (೫೮)
ದೃಷ್ಟ್ವಾನ ಖಲ್ವಭಿಕ್ರುದ್ದೋ ಮಾಮಿಹಾನವಗುಂಠಿತಾಮ್
ನಿರ್ಗತಾಂ ನಗರದ್ವಾರಾತ್ ಪದ್‌ಭ್ಯಾಮೇವಾಗಂ ಪ್ರಭೋ (೬೧)

[4]     ಕಹ ರಾಮನು ಸುನು ಸುಮುಖಿ ಸಯಾನೀ
ಮಂದೋದರಿ ಆದಿ ಸಬ್ ರಾನೀ
ತನ ಅನುಚರೀಂ ಕರಉಪನ ಮೋರಾ
ಏಕ ಬಾರ್ ಬಿಲೋಕು ಮಮ ಓರಾ
– (ಸುಂದರಕಾಂಡ ೮:೨-೩)

[5]     ದೂತಿನ್ಹ‘ಸತ್’ಸುನಿ ಪುರಜನ ಬಾನೀ
ಮಂದೋದರೀ ಅಧಿಕ ಅಕುಲಾನೀ
ರಹಸಿ ಜೋರಿ ಕರ ‘ಪತಿ ಪಗ’ ಲಾಗೀ
ಬೋಲಿ ಬಚನ ‘ನೀತಿ ರಸಪಾಗೀ
ಕಂತ’ ಕರಷ ‘ಹರಿ ಸನ’ ಪರಿಹರಹೂ
ಮೋರ ಕಹಾ ಅತಿ ಹಿತಿ ಹಿಯ ಧರ ಹೂ
ಸಮಯುಥ ಜಾಸು ದೂತ ಕಇ ಕರನೀ
ಸ್ರವಹೀಂ ಗರ್ಭ ರಜನೀಚರ ಘರನಿ
ತಾಸು ನಾರಿ ನಿಚ ಸಚಿವ ಬೋಲಾಈ
ಪಠವಹು ಕಂತ ಜೋ ಚಹಹು ಭಲಾಈ
ತಬ್ ಕುಲ್ ಕಮಲ್ ಬಿಪಿನ್ ದುಖದಾಈ
ಸೀತಾ ಸೀತ ನಿಸಾ ಸಮ ಆಈ
ಸುನಹು ನಾಥ ಸೀತಾ ಬಿನು ದೀನ್ಹೇಂ
ಹಿತ ನ ತುಮ್ಹಾರ ಸಂಭು ಅಜ್ ಕೀನ್ಹೇಂ – (ಅದೇ, ೩೫:೨-೫)

[6]     ಶ್ರವನ್ ಸುನೀ ಸರ್ ತಾಕರಿಭಾನೀ
ಬಿಹಸಾ ಜಗತ್ ಬಿದಿತ್ ಅಭಿಮಾನೀ
ಮಂಗಲ ಮುಹುಂ ಭಯ ಮನ್ ಅತಿ ಕಾಚಾ
ಜೌಂ ಅವ ಈ ಮರ್ಕಟ ಕಟ್ ಕಾಈ
ಜಿಅಹಿಂ ಬಿಚಾರೇ ನಿಸಿಚರ್ ಖಾಈ
ಕಂಪಹಿಂ ಲೋಕಪ್ ಜಾಆಆಕೇಂ ತ್ರಾಸಾ
ತಾಸು ನಾರಿ ಸಭೀತ್ ಬಡಿ ಹಾಸಾ
ಅಸಕಹಿ ಬಿಹಸಿ ತಾಹಿ ಉರ್ ಲಾಈ
ಚಲೇಉ ಸಭಾ ಮಮತಾ ಅಧಿಕಾಈ
ಮಂದೋದರೀ ಹೃದಯ ಕರ್ ಚಿಂತಾ
ಭಯಉ ಕಂತ್ ಪರ್ ಬಿಧಿ ಬಿಪರೀತಾ

[7]     ಕರ್ ಗಹಿ ಪತಿಹಿ ಭವನ್ ನಿಜ ಅನೀ
ಬೋಲೀ ಪರಮ್ ಮನೋಹರ್ ಬಾನೀ
ಚರನ್ ನಾ ಈ ಸಿರು ಅಂಚಲು ರೋಪಾ
ಸುನಹು ಬಚನ್ ಪಿಯ ಪರಿಹರಿ ಕೋಪಾ
ನಾಥ ಬಯರು ಕೀಜೇ ತಾಹೀ ಸೋಂ
ಬುಧಿಬಲ್ ಸಕಿಅ ಜೀತಿ ಜಾಹೀ ಸೋಂ
ತಮ್ಹಹಿ ರಘುಪತಿಹಿ ಅಂತರ್ ಕೈಸಾ
ಖಲು ಖದ್ಯೋತ್ ದಿನಕರ್ ಹಿ ಜೈಸಾ
………………………………
ಸೋಇ ಅವತರೇವು ಹರನ್ ಮಹಿ ಭಾರಾ
ತಾಸು ವಿರೋಧ್ ನ ಕೀಜಿಅ ನಾಥಾ
ಕಾಲ ಕರಮ್ ಜಿವ ಜಾಕೇಂ ಹಾಥಾ       – (ಲಂಕಾಕಾಂಡ ೫:೧-೫)

[8]     ಸಜಲ್ ನಯನ್ ಕಹ್ ಜುಗ್ ಕರ್ ಜೋರೀ
ಸುನಹು ಪ್ರಾನಪತಿ ಬಿನತೀ ಮೋರೀ
ಕಂತ ರಾಮ್ ಬಿರೋಧ ಪರಿಹರಿಹೂ
ಜಾನಿ ಮನುಜ ಜನಿ ಹಠ ಮನ್ ಧರ್ ಹೂ                            – (ಅದೇ, ೧೩ AB:೪)
ಬಿಸ್ವರೂಪ ರಘುಬಂಸ ಮನಿಕರ ಹು ಬಚನ ಬಿಸ್ವಾಸು
ಲೋಕ ಕಲ್ಪನಾ ಬೇದ ಕರ್ ಅಂಗ ಅಂಗ ಪ್ರತಿ ಜಾಸು            – (ಅದೇ, ೧೪)

[9]     ಸೋಸಬ್ ಪ್ರಿಯಾ ಸಹಜ್ ಬಸ್ ಮೋರೇಂ
ಸಮಝೀ ಪರಾ ಪ್ರಸಾದ್ ಅಬ್ ತೋರೇಂ
ಜಾನಿಉ ಪ್ರಿಯಾ ತರೀ ಚತುರಾ ಈ
ಏಹಿ ಬಿಧಿ ಕಹಹು ಮೋರಿ ಪ್ರಭುತಾಈ
ತವ ಬತ್ ಕಹೀ ಗೂಢ್ ಮೃಗಲೋಚನಿ
ಸಮಝತ್ ಸುಖದ ಸುನತ್ ಬ್ ಮೋಚನಿ
ಮಂದೋದರಿ ಮ ಮಹು ಅಸ ಠಯಊ
ಪಿಯ್‌ಹಿಕಾಲ್ ಬಸ್ ಮತಿಭ್ರಮ್ ಭಯ್‌ಊ                             – (ಅದೇ, ೧೫ AB ೩-೪)

[10]    ಕೃಪಾಸಿಂಧು ರಘುನಾಥ್ ಭಜಿನಾಥ್ ಬಿಮಲ್ ಜಸು ಲೇಹು      – (ಅದೇ, ೩೭)

[11]    ಜಾನ್ಯೋ ಮನುಜ ಕರಿ ದನುಜ ಕಾನನ್ ದಹನ್ ಪಾವತ್ ಹರಿಸ್ವಯಂ
ಜೇಹಿ ನಮತ್ ಸಿವ ಬ್ರಹ್ಮಾದಿ ಸುರ ಪ್ರಿಯ ಭುಜೇಹು ನಹಿಂ ಕರುಣಾಮಯಂ
ಅಜನ್ಮತೇ ಪರದ್ರೋಹ ರತ್ ಪಾಪೌಘಮಯ ತವತನು ಅ
ತುಮ್ ಹೂ ದಿಯೋ ನಿಜಧಾಮ ರಾಮ್ ನಮಾಮಿ ಬ್ರಹ್ಮನಿರಾಮಯಂ   – (ಅದೇ, ೧೦೪)

[12]    ಶ್ರೀರಾಮಾಯಣ ದರ್ಶನಂ, ಪುಟ ೨೧೩

[13]    ಶ್ರೀರಾಮಾಯಣದರ್ಶನಂ, ಪುಟ. ೩೩೬

[14]    ಅದೇ, ಪುಟ. ೩೨೭

[15]    ಅದೇ, ಪುಟ. ೩೨೮

[16]    ಅದೇ, ಪುಟ. ೩೨೮-೨೯

[17]    ಅದೇ, ಪುಟ ೩೨೮-೨೯

[18]    ಅದೇ, ಪುಟ ೩೨೮-೨೯

[19]    ಅದೇ

[20]    ಅದೇ

[21]    ಅದೇ, ಪುಟ. ೩೩೦

[22]    ಅದೇ, ಪುಟ. ೩೩೬

[23]    ಅದೇ, ಪುಟ. ೩೩೭

[24]    ಅದೇ, ಪುಟ. ೩೩೮

[25]    ಅದೇ, ಪುಟ. ೪೬೬

[26]    ಅದೇ, ಪುಟ. ೪೬೮

[27]    ಅದೇ, ಪುಟ. ೪೬೯

[28]    ಅದೇ, ಪುಟ. ೪೭೦

[29]    ಅದೇ, ಪುಟ. ೬೫೧

[30]    ಅದೇ, ಪುಟ. ೬೫೩

[31]    ಅದೇ, ಪುಟ. ೭೩೬

[32]    ಅದೇ, ಪುಟ. ೭೭೭

[33]    ಅದೇ, ಪುಟ. ೭೭೮

[34]    ಅದೇ, ಪುಟ. ೭೮೦

[35]    ಅದೇ, ಪುಟ. ೮೧೧

[36]    ಅದೇ, ಪುಟ. ೮೧೨